Friday, 12 June 2026

ಕನ್ಹೇರಿ Kanheri Caves - ‘ಸದಾ ಸ್ವಸ್ಥವಾಗಿರುವ ಬುದ್ಧನಿದ್ದಾನೆ..’

 



ಒಂದು ಚದರ ಕಿಲೋಮೀಟರಿಗೆ ಇಪ್ಪತ್ತೈದು ಸಾವಿರ ಜನರು ವಾಸಿಸುವ ಮಹಾನಗರವೊಂದರಲ್ಲಿ ೧೦೩ ಚದರ ಕಿಲೋಮೀಟರ್ ವಿಸ್ತೀರ್ಣದ ರಕ್ಷಿತಾರಣ್ಯ ಇರುವುದು ಸಾಮಾನ್ಯ ಸಂಗತಿಯಲ್ಲ. ಅದರೊಳಗೆ ಎರಡು ಸಾವಿರ ವರ್ಷ ಹಳೆಯ ಗುಹೆಗಳಿರುವುದು, ಸಾವಿರ ವರ್ಷಗಳ ಕಾಲ ಬೌದ್ಧ ಭಿಕ್ಕುಗಳು ಅಲ್ಲಿ ವಾಸಿಸಿದ್ದರೆನ್ನುವುದಂತೂ ಇನ್ನೂ ಅಸಾಮಾನ್ಯ ಸಂಗತಿಯೇ. ಮುಂಬಯಿಯ ಬೊರಿವಿಲಿಯಿಂದ ೩೦ ಕಿಲೋಮೀಟರ್ ದೂರದ ಸಾಲ್ಸೆಟ್ ದ್ವೀಪದಲ್ಲಿರುವ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನವನದ ಕನ್ಹೇರಿ ಅಂತಹ ವಿಶಿಷ್ಟ ತಾಣವಾಗಿದೆ. 


ಸುತ್ತ ಎತ್ತೆತ್ತ ನೋಡಿದರತ್ತ ಕರಿ ಹೆಬ್ಬಂಡೆಗಳ ತೋರಿಸುತ್ತ ನಿಂತ ಪರ್ವತ ಸಾಲು; ಚಿಗುರಲು ಅಣಿಯಾಗಿರುವ ಉದುರೆಲೆ ಹಾಸಿಕೊಂಡ ನೆಲದ ದಟ್ಟ ಕಾಡು; ಮುದಿತ ಹಕ್ಕಿಗಳ ಕೂಗು; ಕೀಚುಕೀಚೆನ್ನುತ್ತ ಬಂಡೆಯಿಂದ ಬಂಡೆಗೆ ಹಾರುತ್ತ ತಾಯ ಮೊಲೆ ಚೊಟ್ಟನ್ನು ಕಚ್ಚಿ ಹಿಡಿದು ಜೋತಾಡುತ್ತ ಹೇನು ಹೆಕ್ಕಿಸಿಕೊಳ್ಳುವ ಸುಖದಲ್ಲಿ ಮೈಮರೆತ ಮಂಗಗಳು; ಮಹಾನಗರದ ಗದ್ದಲ, ಗಡಿಬಿಡಿಗಳ ಸೋಂಕೇ ಇಲ್ಲದೆ ಕಾಲವು ಕಾಲು ಮುರಿದುಕೊಂಡು ಬಿದ್ದಂತೆ, ಯಾವುದೋ ಆದಿಮ ಯುಗಕ್ಕೆ ಬಂದೆವೋ ಎನಿಸುವಂತೆ ತಣ್ಣಗಿರುವ ಗುಹೆಗಳು - ಇದು ಹೋದವರನ್ನೆಲ್ಲ ಪ್ರಕೃತಿಯ ಮಡಿಲಿಗೊಪ್ಪಿಸುವ ಕನ್ಹೇರಿ. ಮರಗಳು ಎಲೆಯುದುರಿಸಿ ಬೋಳು ನಿಂತು ಚಿಗುರು ಹೊಮ್ಮಿಸಲು ಸಿದ್ಧವಾಗಿದ್ದ ಚೈತ್ರ ಕಾಲದಲ್ಲಿ ನಾವಲ್ಲಿದ್ದೆವು. ಉರಿಬಿಸಿಲಿನಲ್ಲಿ ರಣರಣ ಎನ್ನುವ ಬೆಟ್ಟದ ಮೇಲೆ ಓಡಾಡಿದರೂ ಕತ್ತಲು-ನಿಶ್ಶಬ್ದ ಆವರಿಸಿರುವ ಗುಹೆಗಳು ಆಯಾಸ ಕಾಣದಂತೆ ಮಾಡಿದವು. 


ಕನ್ಹೇರಿ




ಭಾರತದ ೧೨೦೦ ಬೌದ್ಧ ಗುಹಾಲಯಗಳಲ್ಲಿ ಸಾವಿರಕ್ಕೂ ಹೆಚ್ಚು ಮಹಾರಾಷ್ಟ್ರದಲ್ಲಿವೆ. ಸಾಮ್ರಾಟ ಅಶೋಕನು ಎಂಟು ದಿಕ್ಕಿಗೆ ಧಮ್ಮ ಪ್ರಚಾರಕ ಭಿಕ್ಕುಗಳನ್ನು ಕಳುಹಿಸಿದಾಗ ಮಹಾ ಧಮ್ಮರಖ್ಖಿತನನ್ನು ಮಹಾರಾಷ್ಟ್ರಕ್ಕೆ ಕಳಿಸಿದ. ಕರಾವಳಿಯಲ್ಲಿ ನೆಲೆನಿಂತು ದಕ್ಷಿಣದಲ್ಲೆಲ್ಲ ಧಮ್ಮ ವಿಸ್ತಾರವಾಗಿ ಹರಡಿಕೊಂಡಿತು. ಭಿಕ್ಕುಗಳು ಗಾಂಧಾರದಿಂದ ಶ್ರೀಲಂಕೆಯವರೆಗೆ ನಿರಂತರವಾಗಿ ಸಂಚರಿಸಿದ್ದರಿಂದ ಬೌದ್ಧ ಗುಹಾಲಯಗಳು ಕರಾವಳಿಯ ಬೆಟ್ಟಸಾಲುಗಳಲ್ಲಿ ರೂಪುಗೊಂಡವು. ಅಜಂತಾದಿಂದ ಕೊಂಕಣದವರೆಗೆ ೮೦ ತಾಣಗಳಲ್ಲಿ ೧೨೦೦ ಗುಹೆಗಳು ನಿರ್ಮಾಣವಾದವು. ಮಹಾರಾಷ್ಟ್ರದ ನಾಲಾ ಸೋಪಾರ, ಕನ್ಹೇರಿ, ಅಜಂತಾ ಎಲ್ಲೋರ, ಎಲಿಫೆಂಟಾ, ಮಹಾಕಾಳಿ, ಕೊಂಡನ, ಬೇಡ್ಸೆ, ಕಾರ್ಲಾ, ಖೇಡ್, ನಾಸಿಕ್, ಔರಂಗಾಬಾದ್, ಶಿವನೇರಿ, ಶಿರವಾಳ, ಲೇಣ್ಯಾದ್ರಿ ಮೊದಲಾದ ವಿಹಾರ, ವರ್ಷಾವಾಸ ಕೇಂದ್ರಗಳು ಮೈದಳೆದವು. ದಖ್ಖನ್ ಪ್ರಸ್ಥಭೂಮಿಯ ಹಗುರ ಮತ್ತು ಮೃದುವಾದ ಬಸಾಲ್ಟ್ ಅಗ್ನಿಶಿಲೆ ಕೆತ್ತನೆಗೆ ಸೂಕ್ತ ಎಂದು ಗುರುತಿಸಿ ಗುಹೆಗಳ ಕೊರೆಯಲಾಗಿದೆ. ಬಂಡೆಯಲ್ಲಿ ಗುಹೆಯನ್ನು, ಸೂಕ್ಷ್ಮ ಕೆತ್ತನೆಯ ವಿಗ್ರಹಗಳನ್ನು ಕಲ್ಪಿಸಿಕೊಂಡು ಗುಹಾಲಯ ರೂಪಿಸಿರುವುದರ ಹಿಂದೆ ಅಪಾರ ಕೌಶಲ್ಯವಿದೆ.


೧೦೯ ಗುಹೆಗಳಿರುವ ಕನ್ಹೇರಿ ಭಾರತದ ಅತಿ ದೊಡ್ಡ ಬೌದ್ಧ ಪುರಾತತ್ವ ತಾಣಗಳಲ್ಲಿ ಒಂದಾಗಿದೆ. ಭಿಕ್ಕುಗಳ ವರ್ಷಾವಾಸವಾಗಿ, ಆರಾಮ-ವಿಹಾರವಾಗಿ, ಚೈತ್ಯವಾಗಿ, ಶೈಕ್ಷಣಿಕ ಕೇಂದ್ರವಾಗಿ ಒಂದು ಸಾವಿರ ವರ್ಷ ಬಳಕೆಯಲ್ಲಿದ್ದ ಕನ್ಹೇರಿ ಗುಹೆಗಳು ದಕ್ಷಿಣ, ಪಶ್ಚಿಮ ಭಾರತದಲ್ಲಿ ಬೌದ್ಧ ಧಮ್ಮ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಭಿಕ್ಕುಗಳ ಸಂಘ, ಬದುಕು, ಗುಹೆಯ ವಾಸ್ತುಶಿಲ್ಪ, ಆ ಕಾಲದ ಇತಿಹಾಸಗಳ ಬಗೆಗೆ ಬೆಳಕು ಚೆಲ್ಲುವುದಲ್ಲದೇ ಬೌದ್ಧ ಧಮ್ಮದ ಸ್ಥಿತ್ಯಂತರವನ್ನು ಅಭ್ಯಸಿಸುವ ದೃಷ್ಟಿಯಿಂದಲೂ ಗುಹೆಗಳು ಮುಖ್ಯವಾಗಿವೆ. 


ಮುಂಬಯಿಯ ಶತಶಷ್ಠಿ ದ್ವೀಪವು (ಬ್ರಿಟಿಷರ ಬಾಯಲ್ಲಿ ‘ಸಾಲ್ಸೆಟ್ ಐಲ್ಯಾಂಡ್’) ಸಾವಿರಾರು ವರ್ಷಗಳಿಂದ ವ್ಯಾಪಾರ, ವಾಣಿಜ್ಯ ಕೇಂದ್ರವಾಗಿದ್ದ ಸ್ಥಳ. ದ್ವೀಪದ ಪರ್ವತ ಶ್ರೇಣಿಯು ಕಪ್ಪು ಅಗ್ನಿಶಿಲೆಯ ಭಾರೀ ಬಂಡೆಗಳನ್ನೂ, ದಟ್ಟ ಅರಣ್ಯವನ್ನೂ ಹೊಂದಿದ ಕೃಷ್ಣಗಿರಿ, ಅಥವಾ ಬಾಯಿ ಮಾತಿನಲ್ಲಿ ಕನ್ಹೇರಿ. ಶಾತವಾಹನ ದೊರೆ ವಾಶತಿಪುತ್ರ ಪುಲುಮಾವಿಯ ಪ್ರಾಕೃತ ಶಾಸನ(ನಾಸಿಕ್)ದಲ್ಲಿ ಆ ತಾಣವನ್ನು ಕನ್ಹಗಿರಿ ಎಂದು ವರ್ಣಿಸಿದ್ದರೆ ಸಂಸ್ಕೃತದಲ್ಲಿ ಕೃಷ್ಣಗಿರಿ ಎಂದು ಕರೆಯಲಾಗಿದೆ. ಒಂಬತ್ತನೆಯ ಶತಮಾನದ ಬೌದ್ಧ ಭಿಕ್ಕು ಬುದ್ಧ ಗ್ಯಾನಪಾದನ ಆತ್ಮಚರಿತ್ರೆಯಲ್ಲಿ ಕನ್ಹೇರಿಯನ್ನು, ‘ಕನೋಜಿನಿಂದ ಮುನ್ನೂರು ಯೋಜನ (೧೨೦೦ ಮೈಲಿ) ದೂರದಲ್ಲಿ ಪಶ್ಚಿಮ ದಿಕ್ಕಿಗೆ ಕೊಂಕಣ ದೇಶವಿದೆ. ಕೊಂಕಣದಲ್ಲಿ ಖನ್ಹೇರಿ ಎಂಬ ತಾಣವಿದೆ. ಆ ಗುಹೆಗಳು ಆಗಸ(ಖ)ಕ್ಕೆ ಹಬ್ಬಿದ ಬೇರು ಇಲ್ಲದ ಬಳ್ಳಿ (ಅನ್ಹೇರಿ)ಯ ಹಾಗೆ ಇವೆ’ ಎಂದು ವರ್ಣಿಸಲಾಗಿದೆ. ನೇಪಾಳದ ಕಠ್ಮಂಡು ಕಣಿವೆಯ ಹನ್ನೊಂದನೆಯ ಶತಮಾನದ ‘ಅಷ್ಟಸಹಸ್ರಿಕ ಪ್ರಜ್ಞಾಪಾರಮಿತ’ ಎಂಬ ತಾಳೆಗರಿ ಬರಹದಲ್ಲಿ ‘ಕನ್ಹ (ಕಪ್ಪು) ಶಿಲೆಯಿಂದ ರೂಪುಗೊಂಡ ಗಿರಿ ಗುಹೆ’ ಎಂದು ಕನ್ಹೇರಿಯನ್ನು ಚಿತ್ರಿಸಲಾಗಿದೆ.


ಕನ್ಹೇರಿ ಗುಹೆಗಳು ಹಲವು ವಿಶಿಷ್ಟತೆಗಳಿಂದ ಗಮನ ಸೆಳೆಯುತ್ತವೆ. 


ದಾನಶಾಸನ


ಪ್ರತಿ ಗುಹೆಯ ಹೊರಭಾಗದಲ್ಲೂ ದಾನಶಾಸನವಿದೆ. ಒಟ್ಟು ೧೦೦ಕ್ಕಿಂತ ಹೆಚ್ಚು ಶಾಸನಗಳಿವೆ. ಒಂದು ಗುಹೆಯಲ್ಲಿ ಪಹ್ಲವಿ (ಅರಬ್) ಮತ್ತು ಜಪಾನೀ ಭಾಷೆಯ ಬರಹಗಳಿವೆ. ಗುಹೆಗಳನ್ನು ಕೊರೆಯಲು ಮತ್ತು ನೀರಿನ ತೊಟ್ಟಿ, ಮೆಟ್ಟಿಲು, ಸ್ತಂಭ, ಅಡ್ಡಣಿಗೆ, ಕೋಣೆ, ದಾರಿ, ಗೋಡೆಗಳನ್ನು ರೂಪಿಸಲು ದಾನ ನೀಡಿದವರ ವಿವರಗಳನ್ನು ಗಮನಿಸಿದರೆ ದಕ್ಷಿಣ ಮತ್ತು ವಾಯವ್ಯ ಭಾರತದಲ್ಲಿ ಬೌದ್ಧ ಧಮ್ಮ ಹರಡಲು ರಾಜಾಶ್ರಯದಷ್ಟೇ ವ್ಯಾಪಾರಿಗಳು, ಅಕ್ಕಸಾಲಿಗಳಂತಹ ಕುಶಲಕರ್ಮಿಗಳ ಒಕ್ಕೂಟಗಳು, ಭೂಮಾಲೀಕರು, ಅಧಿಕಾರಿಗಳ ಆರ್ಥಿಕ ಬೆಂಬಲ ಕಾರಣವಾಗಿದ್ದುದು ತಿಳಿದುಬರುತ್ತದೆ. ಕನ್ಹೇರಿಯು ಮಹಾರಾಷ್ಟ್ರದ ಪ್ರಮುಖ ಬಂದರು ಪಟ್ಟಣಗಳಾಗಿದ್ದ ಸೊಪಾರಾ, ಚೆಮುಲ (ಇಂದಿನ ಟ್ರಾಂಬೆ), ಕಲ್ಯಾಣ, ವಾಸೈ, ಥಾಣೆ, ಘೋಡಬಂದರಗಳಿಗೆ ಹತ್ತಿರ ಇದ್ದದ್ದು ವರ್ತಕರ ಸಂಪರ್ಕಕ್ಕೆ ಬರಲು ಕಾರಣವಿರಬಹುದೆನಿಸುತ್ತದೆ.


ಮಳೆನೀರು ನಿರ್ವಹಣೆ

ಕನ್ಹೇರಿ ಗುಹೆಗಳಿರುವುದು ಮಳೆ ಬೀಳುವ ಕರಾವಳಿ ತೀರದಲ್ಲಿ. ಸೂಕ್ತ ಮಳೆನೀರು ನಿರ್ವಹಣೆ ಮಾಡದಿದ್ದರೆ ಗುಹೆಗಳೆಲ್ಲ ಕೊಳಗಳಾಗುವುದು ಖಚಿತ. ಅದನ್ನು ಮುಂದಾಲೋಚಿಸಿ ಪ್ರತಿ ಗುಹೆಯ ನೀರಿನೋಟಕ್ಕೆ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಕಿರುಕಾಲುವೆಗಳನ್ನು ಕೊರೆದು ಮೇಲಿಂದ ಹರಿದು ಬಂದ ನೀರು ಗುಹೆಯ ಬಾಯಿಯ ಬಳಿ ತೋಡಿದ ಭಾರೀ ತೊಟ್ಟಿಗೆ ತುಂಬುವಂತೆ, ಹೆಚ್ಚಾದದ್ದು ಆಚೀಚಿನ ತೊಟ್ಟಿಗಳ ತುಂಬಿಸುವಂತೆ, ಅಷ್ಟಾಗಿಯೂ ಮಿಕ್ಕಿದ್ದು ಬೆಟ್ಟದ ಮೇಲಿನಿಂದ ಇಳಿದು ಬರುವ ಅಬ್ಬಿಯನ್ನು ಸೇರಿಕೊಳ್ಳುವಂತೆ ಯೋಜಿಸಲಾಗಿದೆ. ಹಳ್ಳಕ್ಕೆ ಕಟ್ಟೆ, ಅಣೆಕಟ್ಟೆ ಕಟ್ಟಿದ ಕುರುಹು, ದಾಖಲೆಗಳಿವೆ.  


ಸಂವಹನ 


ಕೆಲವು ಗುಹೆಗಳ ಹೊರಭಾಗದಲ್ಲಿ ನಿಂತು ಕೂಗು ಹಾಕಿದರೆ ಎಲ್ಲ ಗುಹೆಗಳಿಗೂ ಕೇಳಿಸುತ್ತದೆ. ವಿವಿಧ ಹಂತಗಳಲ್ಲಿರುವ ಕಾವಲಿನವರು ಇವತ್ತಿಗೂ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಎಲ್ಲಕ್ಕಿಂತ ಮೇಲಿರುವ ಗುಹೆಯಲ್ಲಿ ಮೊದಲು ಬೆಂಕಿ ಉರಿಸುತ್ತಿದ್ದರಂತೆ. ದೂರದಿಂದ ಬರುವವರಿಗೂ ಯಾವ ಬೆಟ್ಟದಲ್ಲಿ ಗುಹೆ ಇದೆಯೆಂದು ತಿಳಿಯಲು ಹಾಗೆ ಮಾಡುತ್ತಿದ್ದರು. ಹಲವು ಗುಹೆಗಳು ಪ್ರತಿಧ್ವನಿಸುವ ಸಾಮರ್ಥ್ಯ ಹೊಂದಿವೆ. ಗುಹೆಯೊಳಗೆ ಆಡಿದ ಮಾತು ಪ್ರತಿಧ್ವನಿಸಿ ಮೈಕ್ ಪರಿಣಾಮ ಕೊಡುತ್ತದೆ. ಗುರುಹಿರಿಯರು ಆಡಿದ್ದು ಭಿಕ್ಕುಗಣಕ್ಕೆ, ಉಪಾಸಕರಿಗೆ ಕೇಳಿಸುವಂತಾಗಲು ಈ ವ್ಯವಸ್ಥೆ ಮಾಡಿದಂತಿದೆ.


ಶಿಲ್ಪ ಸಮೃದ್ಧಿ


ಕೆಲವು ಗುಹೆಗಳು ಪ್ರಾರ್ಥನೆ ಸಲ್ಲಿಸುವ ಚೈತ್ಯಗಳಾದರೆ ಮತ್ತೆ ಕೆಲವು ವಿಹಾರಗಳು. ಎಲ್ಲಿ ಒಳಗೆ ಬುದ್ಧನ ಮೂರ್ತಿ ಅಥವಾ ಸ್ತೂಪ ಇದೆಯೋ ಆ ಗುಹೆಯ ಹೊರಗಿನ ಮೆಟ್ಟಿಲು ಅರ್ಧ ವೃತ್ತಾಕಾರದಲ್ಲಿ ಇದೆ (ಚಂದ್ರಶಿಲೆ). ಬುದ್ಧನ ಜನ್ಮ ವೃತ್ತಾಂತ, ಜಾತಕ ಕಥೆಗಳು, ಬುದ್ಧನ ಅನುಯಾಯಿಗಳು, ಶಿಷ್ಯರು, ಬೌದ್ಧ ಪಂಥಗಳ ದೇವಾನುದೇವತೆಗಳನ್ನು ತೋರಿಸುವ ಶಿಲ್ಪಗಳಿವೆ. ಅಭಯ ಮುದ್ರೆ, ಧರ್ಮಚಕ್ರ ಪ್ರವರ್ತನ ಮುದ್ರೆ, ಧ್ಯಾನ ಮುದ್ರೆ, ಭೂಮಿಸ್ಪರ್ಶ ಮುದ್ರೆ, ವರದ ಮುದ್ರ, ವಿತರ್ಕ ಮುದ್ರೆಯೇ ಮೊದಲಾದ ಹಸ್ತ ಮುದ್ರೆಗಳ ವಿವಿಧ ಭಂಗಿಗಳ ಸಾವಿರಾರು ಬುದ್ಧ ಶಿಲ್ಪಗಳಿವೆ. ಭೂಮಿಸ್ಪರ್ಶ ಮುದ್ರೆಯಲ್ಲಿ ಅಂಗೈ ಮುಂದೆ ಮಾಡಿ ಕಿರುಬೆರಳನ್ನು ನೆಲಕ್ಕೆ ತಾಗಿಸುತ್ತಿರುವ ಬುದ್ಧ; ಕೆಲವೆಡೆ ಶಿಲ್ಪ-ಗೋಡೆಗಳ ಮೇಲೆ ಉಳಿದುಕೊಂಡಿರುವ ಅಂದಿನ ಬಣ್ಣ; ಪೀಠದ ಮೇಲೆ ಕಾಲಿಳಿಬಿಟ್ಟುಕೊಂಡು ಬೋಧನಾ ಶೈಲಿಯಲ್ಲಿ ಕುಳಿತ ಅಸಂಖ್ಯ ಬುದ್ಧ ಶಿಲ್ಪಗಳು; ಅವಲೋಕಿತೇಶ್ವರರ, ದೀಪಂಕರ ಬುದ್ಧರ, ಮುಚಲಿಂದ ನಾಗರ, ಧ್ಯಾನಿಬುದ್ಧರ ಶಿಲ್ಪಗಳು; ೨೩ ಅಡಿಯ ಎರಡು ಭಾರೀ ಬುದ್ಧ ಮೂರ್ತಿಗಳು; ಸಣ್ಣ ಗುಹೆಯಲ್ಲಿ ಸಣ್ಣದಾಗಿ ಕೆತ್ತಿದ ನೂರಾರು ಬುದ್ಧ ಮೂರ್ತಿಗಳು; ವಜ್ರಯಾನದ ಹನ್ನೊಂದು ತಲೆಗಳ ಏಕಾದಶ ಬುದ್ಧ, ಮೈತ್ರೇಯ ಬುದ್ಧರು, ತಾರಾ, ಭ್ರಕುಟಿ, ನಿಂತ ಕುಳಿತ ಬೋಧಿಸತ್ವರು, ಪಶುಪಕ್ಷಿ ತರುಲತೆಗಳ ಶಿಲ್ಪಗಳು ವಿಶೇಷವೆನಿಸಿದವು. 


ಪರಿವರ್ತನೆಯ ಕಾಲದ ಸಾಕ್ಷಿ







ಹೀನಾಯಾನ ಕಾಲದಲ್ಲಿ ರೂಪುಗೊಂಡ ಕೆಲವು ಚೈತ್ಯ ಗುಹೆಗಳು ಮಹಾಯಾನ ಕಾಲದಲ್ಲಿ ಅಲಂಕೃತಗೊಂಡಿವೆ. ಮೊದಲು ಬುದ್ಧನನ್ನು ಸ್ತೂಪ, ಪಾದ, ಅರಳಿಮರ, ಬೆಳ್ಗೊಡೆಯ ಮೂಲಕ ಚಿತ್ರಿಸಿದ್ದರೆ, ನಂತರ ಬುದ್ಧನ ಮೂರ್ತಿಗಳನ್ನು ಕೆತ್ತಲಾಗಿದೆ. ವಜ್ರಯಾನದ ಸಂಕೇತ, ದೇವತೆ, ಮೂರ್ತಿಗಳಂತೂ ವಿಪುಲವಾಗಿವೆ. ಕಾಲಕ್ರಮೇಣ ಬೌದ್ಧ ಧಮ್ಮವು ತನ್ನ ಸ್ವರೂಪ, ಆಚರಣೆಯಲ್ಲಿ ಮಾಡಿಕೊಂಡ ಬದಲಾವಣೆಯನ್ನು ಗುಹೆಗಳು ಸೂಚಿಸುತ್ತವೆ.


ಕೆಲವು ಗುಹೆಗಳ ವಿವರ:


ಒಂದು ಹಳ್ಳದ ಆಚೀಚೆ ಅರ್ಧ ಕಿಲೋಮೀಟರ್ ಉದ್ದದ ಬಂಡೆಯೊಳಗೆ ಒಟ್ಟಾರೆ ಮೂರು ಹಂತಗಳಲ್ಲಿ ೧೦೯ ಗುಹೆಗಳು ಹರಡಿಕೊಂಡಿವೆ. ಒಂದರ ಪಕ್ಕ ಒಂದು ಇವೆಯೆಂದು ಅಲ್ಲ, ಹೇಗೆ ಪತ್ತೆಯಾದವೋ ಹಾಗೆ ೧, ೨, ೩, ೪ ಸಂಖ್ಯೆ ನೀಡಲಾಗಿದೆ. ೪೨ರ ಪಕ್ಕ ೭೨ ಇದೆ. ಕೆಲ ಗುಹೆಗಳು ಚೈತ್ಯಗಳು. ಚೈತ್ಯದೊಳಗೆ ಗರ್ಭಗುಡಿ, ನಂತರ ಹಜಾರ ಹಾಗೂ ಹೊರಗೆ ಅಂಗಳವಿರುತ್ತದೆ. ಹತ್ತಿಬರುವ ಮೆಟ್ಟಿಲುಗಳ ಆಚೀಚೆ ನೀರುಕಾಲುವೆಗಳು ತೋಡಲ್ಪಟ್ಟಿವೆ. ವಿಹಾರಗಳಲ್ಲಿ ಪುಟ್ಟ ಕೋಣೆಗಳಿವೆ. ಹೊರಗೆ ಕಂಬಗಳ ಹಜಾರವಿದೆ. ಮತ್ತೂ ಹೊರಗೆ ಅಂಗಳವಿದ್ದು ಕೂರಲು ಅಡ್ಡಣಿಗೆಗಳಿವೆ. 


ಕೆಳಹಂತದಲ್ಲಿ ನಾಲ್ಕು ಗುಹೆಗಳಿವೆ. ಗುಹೆ-೧ರ ನಿರ್ಮಾಣ ಪೂರ್ತಿಯಾದಂತಿಲ್ಲ. ನಂತರದ ಗುಹೆ-೨ರಲ್ಲಿ ಮೂರು ಸ್ತೂಪಗಳಿವೆ. ಬುದ್ಧನ ಕೆತ್ತನೆಯಿದೆ. ನೀರು ಸಂಗ್ರಹಿಸುವ ಕಾಲುವೆಯ ಬಳಿಯ ದಾನ ಶಾಸನವಿದೆ. ನಿರ್ಮಾಣ ಕಾರ್ಯಕ್ಕೆ ನಾಸಿಕದ ನಕನಾಕ, ಜಲಸಂಗ್ರಹಣೆಗೆ ಕಲ್ಯಾಣದ ಸ್ವಾಮಿದತ್ತ ಎಂಬ ಅಕ್ಕಸಾಲಿ ಕೊಟ್ಟ ಕೊಡುಗೆಯನ್ನು ಅಲ್ಲಿರುವ ಐದು ಶಾಸನಗಳು ತಿಳಿಸುತ್ತವೆ. 


ಗುಹೆ-೩ ಎರಡಂತಸ್ತಿನ ಭಾರೀ ಚೈತ್ಯ ಗೃಹ. ಮೆಟ್ಟಿಲು ಹತ್ತಿದರೆ ಇಕ್ಕೆಲದಲ್ಲಿ ದ್ವಾರಪಾಲಕರು ಸ್ವಾಗತಿಸುತ್ತಾರೆ. ಒಳಗೆ ಅಂಗಳದ ಎರಡು ತುದಿಗಳಲ್ಲಿ ಭಾರೀ ಸ್ತಂಭಗಳಿವೆ. ಬಲಬದಿಯ ಸ್ತಂಭವು ಹೀನಾಯಾನ ಮಹಾಯಾನಗಳ ಸಂಕ್ರಮಣ ಕಾಲದ ಸಾಕ್ಷಿಯಂತಿದೆ. ಗೋಡೆಯ ಮೇಲೆ ಬುದ್ಧನನ್ನು ಸಂಕೇತಿಸುವ ಸ್ತೂಪದ ಕೆತ್ತನೆಯಿದ್ದರೆ ಪಕ್ಕ ಇರುವ ಸ್ತಂಭದ ಕೆಳಭಾಗದಲ್ಲಿ  ಚೀವರ ತೊಟ್ಟ, ತಲೆ ಹಿಂದೆ ಪ್ರಭಾವಳಿಯಿರುವ ಬುದ್ಧನಿದ್ದಾನೆ. ಇದು ಬುದ್ಧನನ್ನು ಮೂರ್ತೀಕರಿಸಿದ ಆರಂಭಿಕ ಪ್ರಯತ್ನಗಳಲ್ಲಿ ಒಂದೆಂದು ಗುರುತಿಸಲಾಗಿದೆ. ಅದೇ ಸ್ತಂಭದ ತುದಿಭಾಗದಲ್ಲಿ ಒಡೆದ ಸಿಂಹ ಮೂರ್ತಿಗಳು ಅಳಿದುಳಿದ ಸ್ಥಿತಿಯಲ್ಲಿವೆ. ಸ್ತಂಭಗಳ ದಾಟಿ ಒಳಹೋದರೆ ದೊಡ್ಡ ಪ್ರಾಂಗಣವಿದೆ. ಅದರ ಎರಡೂ ಕೊನೆಗಳಲ್ಲಿ ಭಾರೀ ಬುದ್ಧ ಮೂರ್ತಿಗಳಿವೆ. ಸೊಂಟದ ಬಳಿ ಸ್ವಲ್ಪವೇ ವಾಲಿದಂತೆ ನಿಂತ ಐದು-ಆರನೆಯ ಶತಮಾನದ ಗುಪ್ತರ ಕಾಲದ ಮೂರ್ತಿಗಳವು. ಒಳಗೆ ಹೋಗುವವರೆಗೂ ಕಾಣದಂತಹ ಸ್ಥಾನದಲ್ಲಿರುವ ಏಳು ಮೀಟರ್ (೨೩ ಅಡಿ) ಎತ್ತರದ ಭವ್ಯ ಮೂರ್ತಿಗಳು ರೋಮಾಂಚನಗೊಳಿಸುತ್ತವೆ. ಯಾವ ದಿಕ್ಕಿನಿಂದ ಪಟ ತೆಗೆದರೂ ಸಾಲದೆನಿಸುವಷ್ಟು ಚಂದದ, ಶಾಂತ, ಪ್ರಸನ್ನ ಮುಖಮುದ್ರೆಯ ಭಾರೀ ಮೂರ್ತಿಗಳವು. ಮುಖ್ಯದ್ವಾರದ ಇಕ್ಕೆಲಗಳಲ್ಲಿ ದಾನಿ ದಂಪತಿಗಳ ಶಿಲ್ಪಗಳಿವೆ. ಶಾಸನವು ಸೂಚಿಸುವಂತೆ ಕ್ರಿ. ಶ. ೧೮೦ರ ಆಸುಪಾಸು ಶಾತವಾಹನ ರಾಜ ಯಜ್ಞ ಸಾತಕರ್ಣಿಯ ಕಾಲದಲ್ಲಿ ಗಜಸೇನ ಮತ್ತು ಗಜಮಿತ್ರ ಎಂಬ ವ್ಯಾಪಾರಿ ಸೋದರರ ದಾನದಿಂದ ಚೈತ್ಯ ಸಿದ್ಧವಾಗಿದೆ. ೯೦ ಅಡಿ (೨೬ ಮೀ.) ಉದ್ದ, ೫೦ ಅಡಿ (೧೫ ಮೀ.) ಎತ್ತರ, ೪೦ ಅಡಿ (೧೨ ಮೀ.) ಅಗಲದ ಗುಹೆಯ ಒಳಾವರಣದಲ್ಲಿ ಐದಡಿ ಎತ್ತರದ ದೊಡ್ಡ ಸ್ತೂಪವಿದೆ. ೩೪ ಸ್ತಂಭಗಳಿವೆ. ಕೆಲವು ಅಲಂಕೃತವಾಗಿದ್ದರೆ ಕೆಲವು ಸಾದಾ ಇವೆ. ಸ್ತಂಭಗಳ ಮೇಲ್ಭಾಗದಲ್ಲಿರುವ ರಂಧ್ರಗಳನ್ನು ಗಮನಿಸಿದರೆ ಮೊದಲು ಮರದ ಮುಚ್ಚಿಗೆಯಿದ್ದಿರಬಹುದು ಅನಿಸುತ್ತದೆ. 






ಗುಹೆ-೪ ಮಹಾಚೈತ್ಯದ ಪಕ್ಕವಿರುವ ಒಬ್ಬರು ಹೊಗಬಹುದಾದ ಸಣ್ಣ ಚೈತ್ಯ. ಇಡೀ ಗುಹೆಯ ಒಳಗನ್ನು ಒಂದು ಸ್ತೂಪವು ತುಂಬಿದೆ. ಗೋಡೆಗಳ ಮೇಲೆ ಬೋಧನಾ ಮುದ್ರೆಯ ಬುದ್ಧ ಶಿಲ್ಪಗಳಿವೆ. ಅಕ್ಕಸಾಲಿಯಾಗಿದ್ದ ಧರ್ಮನಾಕನ ಪತ್ನಿ ಶಿವಪಾಲಿತಳು ಭಿಕ್ಕು ಧಮ್ಮಪಾಲನ ಪರಿನಿರ್ವಾಣದ ಗೌರವಾರ್ಥ ಗುಹಾ ದಾನ ನೀಡಿದ್ದನ್ನು ಶಾಸನವು ತಿಳಿಸುತ್ತದೆ. 


ಗುಹೆ-೭ ಒಂದು ವಿಹಾರ. ಒಳಗೆ ವಿರಮಿಸುವ ಸಣ್ಣ ಕೋಣೆಗಳು, ಹೊರಗೆ ಕೂರಲು ಅಡ್ಡಣಿಗೆ(ಬೆಂಚು)ಗಳು ಇವೆ. ರೋಹಿಣಿ ಮಿತ್ರ ಎಂಬ ಚೆಮುಲಿನ ಅಕ್ಕಸಾಲಿಯ ಮಗ ಸುಲಸದತ್ತನು ಗುಹೆಯ ನಿರ್ಮಾಣ ಕಾರ್ಯಕ್ಕೆ ಧನಸಹಾಯ ಮಾಡಿದನೆಂದು ನೀರಿನ ಸಂಗ್ರಹಾಗಾರದ ಬಳಿಯ ಎರಡನೆಯ ಶತಮಾನದ ಶಾಸನ ಹೇಳುತ್ತದೆ. ಮತ್ತೊಂದು ಶಾಸನವು ನೀರಿನ ತೊಟ್ಟಿಯನ್ನು ಸೊಪಾರಾದ ವರ್ತಕ ಉಪಾಸಕ ಸಮಿಕನು ತೋಡಿಸಿದ ಎಂದು ಹೇಳುತ್ತದೆ. 


ಈ ನಾಲ್ಕನ್ನು ನೋಡಿದ ಬಳಿಕ ಕಟೆದ ಮೆಟ್ಟಿಲುಗಳ ಹತ್ತಿ ಮತ್ತೊಂದು ಹಂತದ ಗುಹೆಗಳನ್ನು ನೋಡಬಹುದು. 


ಗುಹೆ-೧೧ ಒಂಬತ್ತನೆಯ ಶತಮಾನದ ಭಾರೀ ವಿಹಾರ. ಪ್ರಾಂಗಣದಲ್ಲಿ ಎಂಟು ದೊಡ್ಡ ಅಷ್ಟಭುಜಾಕೃತಿಯ ಸ್ತಂಭಗಳು ಆಕರ್ಷಿಸುತ್ತವೆ. ಒಳಗೆ ೩೦೦-೪೦೦ ಜನ ಕೂರಬಹುದಾದಷ್ಟು ದೊಡ್ಡ ‘ದರ್ಬಾರ್ ಹಾಲ್’ ಇದೆ. ಬಾಗಿಲಿಗೆದುರಾಗಿ ಕಟ್ಟೆಯ ಮೇಲೆ ಧರ್ಮಚಕ್ರ ಪ್ರವರ್ತನ ಮುದ್ರೆಯ ಬುದ್ಧ ಮೂರ್ತಿಯಿದೆ. ದರ್ಬಾರ್ ಹಾಲ್‌ಗೆ ಹನ್ನೆರೆಡು ವಿಶ್ರಾಂತಿ ಕೋಣೆಗಳ ಬಾಗಿಲುಗಳು ತೆರೆದುಕೊಳ್ಳುತ್ತವೆ. ಅವು ಹಿರಿಯ ಭಿಕ್ಕುಗಳು, ಥೇರರು ತಂಗುವ ಕೋಣೆಗಳು. ಕೆಳಗೆ ನೆಲದಲ್ಲಿ ರೈಲು ಹಳಿಗಳಂತೆ ಸಮಾನಾಂತರವಾಗಿ ಕಡೆದಿಟ್ಟ ಮಣೆಗಟ್ಟೆಗಳಿವೆ. ಭಿಕ್ಕುಗಳು ಸಾಲಾಗಿ ಕೂರಲು, ಉಣ್ಣಲು ಮಾಡಿರಬಹುದು. ಹಜಾರದ ಬಲಪಕ್ಕದಲ್ಲಿ ವ್ಯಾಖ್ಯಾನ ಮುದ್ರೆಯ ಮೂರು ಬುದ್ಧ ಮೂರ್ತಿಗಳಿವೆ. ಹೊರಗೆ ನೀರಿನ ತೊಟ್ಟಿಯ ಮೇಲಿನ ಶಾಸನವು ಶಿಲಾಹಾರ ದೊರೆ ಮೂರನೇ ಕಪರ್ದಿನ್ (ಕ್ರಿ.ಶ.೮೫೦-೮೮೦) ಕಾಲದಲ್ಲಿ ಗೌಡ ದೇಶದ (ಬಂಗಾಳ) ಸುಗತಾನುಯಾಯಿ ಅವಿಘ್ನಕಾರನು ಕೃಷ್ಣಗಿರಿಯ ಮಹಾರಾಜ ಮಹಾವಿಹಾರ ಧ್ಯಾನ ಕೇಂದ್ರ ನಡೆಸುವುದಕ್ಕೆ ಮತ್ತು ಭಿಕ್ಕುಗಳ ವಸ್ತ್ರಕ್ಕೆ ನೂರು ದ್ರಮಾಸುಗಳ ಖಾಯಂ ದೇಣಿಗೆ ನೀಡಿದನೆಂದು ಹೇಳುತ್ತದೆ. 



ಗುಹೆ-೨೧ ಶಾತವಾಹನ ದೊರೆ ಗೌತಮಿಪುತ್ರ ಸಾತಕರ್ಣಿಯ ಕಾಲದ್ದು. ಕಲ್ಯಾಣದ ವ್ಯಾಪಾರಿ ಉಪಾಸಕ ಅಪಪಪೆನು ಎನ್ನುವವನ ಪತ್ನಿ ಜುವರಿನಿಕ ಮತ್ತು ತಾಯಿ ಧರ್ಮದೇವಿ ಗುಹಾನಿರ್ಮಾಣಕ್ಕಾಗಿ ದಾನ ನೀಡಿದರು ಎಂದು ತಿಳಿಸುತ್ತದೆ.


ಗುಹೆ-೨೨ ಭಿಕ್ಕುಣಿಯ ದಾನದಿಂದ ನಿರ್ಮಾಣವಾದ ಸಣ್ಣ ಗುಹೆಯಾಗಿದೆ.


ಗುಹೆ-೩೨ ಸಣ್ಣದಾದರೂ ನಿರ್ಮಾಣ ಸಂಪೂರ್ಣವಾದ ವಿಹಾರ. ದಾನಶಾಸನವು ನಾಲ್ಕನೆಯ ಶತಮಾನದಲ್ಲಿ ಕಲ್ಯಾಣದ ವರ್ತಕ ಧರ್ಮ ಎಂಬವನು ಕಟ್ಟಿಸಿ, ಭಿಕ್ಕುಗಳ ವಸ್ತ್ರ ಮತ್ತು ಪಾದರಕ್ಷೆಯ ಶಾಶ್ವತ ವ್ಯವಸ್ಥೆಗಾಗಿ ದಾನ ನೀಡಿದ ಎಂದು ತಿಳಿಸುತ್ತದೆ. ಗುಹೆಯ ಮುಂದಿನ ಅಂಗಳದ ಎರಡೂ ಕಡೆ ಹತ್ತಾರು ಜನ ಕೂರಬಹುದಾದಷ್ಟು ಉದ್ದನೆಯ ಕಲ್ಲಿನ ಅಡ್ಡಣಿಗೆಗಳಿವೆ. ಸೂರಿನ ತುದಿಭಾಗವು ರಂಧ್ರಗಳನ್ನು ಹೊಂದಿದ್ದು ಅಂಗಳಕ್ಕೆ ಮರಮುಟ್ಟುಗಳ ಚಾವಣಿ ಇದ್ದಿರಬಹುದೆಂದು ಸೂಚಿಸುತ್ತದೆ. ಎದುರಿನ ಗೋಡೆಯಲ್ಲಿ ಜಾಲಂಧ್ರಗಳಿವೆ. ಈ ಗುಹೆಯಲ್ಲಿ ಮರದ ತಾರಾ ಮೂರ್ತಿ ದೊರಕಿದೆ. 

ಗುಹೆ-೩೪ ಹೊರಗಿನಿಂದ ಸಾಧಾರಣ ಗುಹೆಯಂತೆ ಕಾಣುತ್ತದೆ. ಒಳಹೊಕ್ಕು ಕತ್ತೆತ್ತಿ ನೋಡಿದರೆ ಅರ್ಧಂಬರ್ಧ ಬಿಡಿಸಿದ ಬುದ್ಧನ ಚಿತ್ರ ಕಾಣಿಸುತ್ತದೆ. ಕನ್ಹೇರಿ ಗುಹೆಗಳಲ್ಲಿ ವರ್ಣಚಿತ್ರ ಇರುವುದು ಇಲ್ಲಿ ಮಾತ್ರ. ಅಜಂತಾದಲ್ಲಿ ಚಿತ್ರ ತೆಗೆಸಿದ ವಾಕಟಕರ ನಂತರದ ಕಾಲದ್ದಿದು. ಬುದ್ಧನ ಆಳೆತ್ತರದ ಸುಂದರ ಶಿಲ್ಪಗಳಿವೆ. 


ಗುಹೆ-೩೬ ಸ್ತೂಪವೇ ತುಂಬಿಕೊಂಡಿರುವ ಒಂದು ಸಣ್ಣ ಗುಹೆ. ಸೂರಿನಲ್ಲಿ ಬಣ್ಣದ ಅವಶೇಷ ಈಗಲೂ ಕಾಣಿಸುತ್ತದೆ.


ಗುಹೆ-೪೧ ಸಂಪೂರ್ಣ ಕತ್ತಲ ಲೋಕ. ಒಳ ಹೊಕ್ಕ ಬಳಿಕ ಕಣ್ಣು ಮಂದಬೆಳಕಿಗೆ ಹೊಂದಿಕೊಂಡ ಮೇಲೆ ಅದ್ಭುತವೆನಿಸುವಷ್ಟು ಬುದ್ಧ ಮೂರ್ತಿಗಳಿವೆ. ಅತಿ ಸುಂದರವಾದ ಏಕಾದಶಮುಖ ಬುದ್ಧ (ಲೋಕೇಶ್ವರ) ಮೂರ್ತಿ ಈ ಗುಹೆಯ ವಿಶೇಷ. ಭಾರತದಲ್ಲಿ ಇಲ್ಲಿ ಮಾತ್ರ ಈ ಮೂರ್ತಿಯಿರುವುದು. ದಾನಶಾಸನವು ಸೊಪಾರಾದ ಪುನ್ನಾಕನು ಎರಡು ಗೋಡೆಗಳಿರುವ ಕಟ್ಟೆ ಕಟ್ಟಿಸಿ ಮಳೆನೀರನ್ನು ತಡೆದು ನೀರು ಪೂರೈಕೆಗೆ ನೆರವಾದನೆಂದು ತಿಳಿಸುತ್ತದೆ.

ಗುಹೆ-೬೭ ಒಂದು ವಿಹಾರ, ಚಿತ್ರಶಾಲೆ. ದ್ವಾರದ ಹೊರಗಡೆ ನಾಲ್ಕು ಅಷ್ಟಭುಜಾಕೃತಿಯ ಸ್ತಂಭಗಳಿವೆ. ಒಳಹೊಕ್ಕರೆ ನಾಲ್ಕೂ ಸುತ್ತಿನ ಗೋಡೆಯನ್ನು ನೂರಾರು ಶಿಲ್ಪಗಳು ತುಂಬಿಸಿವೆ. ಎಡಬಲಗಳಲ್ಲಿ ಎರಡೆರಡು ಕೋಣೆಗಳಿವೆ. ಕೆಲವಕ್ಕೆ ಬಣ್ಣ ಹಚ್ಚಿದ ಕುರುಹುಗಳಿವೆ. ಪ್ರಲಂಬ ಪಾದಾಸನದ ಬುದ್ಧ, ಧರ್ಮಚಕ್ರ ಪ್ರವರ್ತನ ಮುದ್ರೆಯ ಬುದ್ಧ, ಮಾನುಷಿ ಬುದ್ಧರು, ಮೈತ್ರೇಯ ಬುದ್ಧರು, ನಿಂತ ಕುಳಿತ ಬುದ್ಧರ ಶಿಲ್ಪಗಳು ನೋಡಿದಷ್ಟೂ ಕಡಿಮೆಯೆನಿಸುವಷ್ಟು ಸುಂದರವಾಗಿದ್ದು ಮುದ ನೀಡುತ್ತವೆ.



ಗುಹೆ ೮೪ ಮತ್ತು ೮೭ರ ಹೊರಗೆ ಒಂದರಿಂದ ಎರಡು ಮೀಟರ್ ವ್ಯಾಸವಿರುವ ಅರವತ್ತು ಇಟ್ಟಿಗೆಯ ಕರಂಡಕಗಳಂತಹ ಸ್ತೂಪಗಳಿವೆ. ಅದು ಅಂತ್ಯಸಂಸ್ಕಾರ ನಡೆಸುವ ತಾಣವಿರಬಹುದೆಂದು ಶಂಕಿಸಲಾಗಿತ್ತು. ಆದರೆ ಕೆಲವನ್ನು ಒಡೆದು ನೋಡಿದಾಗ ಅಂತಹ ಅವಶೇಷಗಳು ಸಿಗಲಿಲ್ಲ. ಇವೆರೆಡು ಗುಹೆಗಳ ಆಸುಪಾಸು ೪೪ ಸಣ್ಣಪುಟ್ಟ ಶಾಸನಗಳಿದ್ದು ವಿವಿಧ ಪ್ರದೇಶದ ಭಿಕ್ಕುಗಳು ಬೌದ್ಧ ಮಾರ್ಗದಲ್ಲಿ ತಲುಪಿದ ಅಧ್ಯಾತ್ಮಿಕ ಹಂತವನ್ನು ತಿಳಿಸುತ್ತವೆ. ಐದು-ಆರನೇ ಶತಮಾನದ ವೇಳೆಗೆ ಕನ್ಹೇರಿಯು ಧಮ್ಮ ಅನುಸಂಧಾನ ನಡೆಸುವ ತಾಣವಾಗಿತ್ತು ಎಂದು ಇದು ಸೂಚಿಸುತ್ತದೆ.


ಗುಹೆ-೮೯ ಸಣ್ಣದು. ಅದರಲ್ಲಿ ಬುದ್ಧನ ತಲೆಯ ಮೇಲೆ ಮಾವಿನ ಟೊಂಗೆಯಿರುವ ಒಂದು ಶಿಲ್ಪವಿದೆ. ಸಣ್ಣ ಅವಕಾಶದಲ್ಲೇ ಮಾವಿನಹಣ್ಣು ತಿನ್ನುವ ಗಿಳಿ, ಮಾವಿನ ಹಣ್ಣು ಚೀಪುವ ಮಂಗವನ್ನೂ ಕೆತ್ತಿದ್ದಾರೆ. ಪದ್ಮಪೀಠದಲ್ಲಿ ಕುಳಿತ ಬುದ್ಧ; ನಾಗ ಮುಚುಲಿಂದರು ಎತ್ತಿ ಹಿಡಿದ ಪದ್ಮದ ದಂಟು; ಬುದ್ಧನ ಎರಡೂ ಕಡೆಗಳಲ್ಲಿ ಪದ್ಮಪಾಣಿ ಮತ್ತು ಬೋಧಿಸತ್ವರು ನಿಂತ ಹಲವಾರು ಶಿಲ್ಪಗಳಿವೆ. ಎತ್ತೆತ್ತ ತಿರುಗಿದರತ್ತತ್ತ ಬುದ್ಧ ಸುಗತ! ನೋಡುತ್ತ ಹೋದಂತೆ ಸಮ್ಮೋಹಿತರಾದ ಅನುಭವವಾಗುತ್ತದೆ.    


ಗುಹೆ-೯೦ ಬಹಳ ಸಣ್ಣದು. ಒಳಗೆ ಅಷ್ಟೇನೂ ಬೆಳಕಿಲ್ಲದ ಗುಹೆಯೊಳಗೆ ಹೊಕ್ಕರೆ ಗವ್ಗತ್ತಲು ಎದುರಾಗುವುದು. ಕಣ್ಣು ಮಂದಬೆಳಕಿಗೆ ಹೊಂದಿಕೊಂಡದ್ದೇ ನೂರಾರು ಬುದ್ಧಶಿಲ್ಪಗಳು ಗೋಚರಿಸಿದವು. ನಿಂತ, ಕುಳಿತ, ಬೋಧಿಸುವ, ಚರ್ಚಿಸುವ, ಧ್ಯಾನಿಸುವ ಬುದ್ಧರು, ತಾರಾ ಮತ್ತು ಭ್ರಕುಟಿಯರು ಆಚೀಚೆ ಇರುವ, ಅಷ್ಟ ಮಹಾ ಭಯಗಳಿಂದ ಲೋಕವನ್ನು ಕಾಪಾಡುವನೆಂದು ಹೇಳಲ್ಪಡುವ ಅವಲೋಕಿತೇಶ್ವರರ ಮೂರ್ತಿಗಳಿವೆ, ಒಂದೇ ತರಹದ ಶಿಲ್ಪಗಳ ಚೌಕಟ್ಟುಗಳು ಒಂದಾದ ಮೇಲೊಂದು ಇದ್ದು ಅದು ಧ್ಯಾನದ ಸಲುವಾಗಿ ಬಳಸುವ ಮಂಡಲ ರಚನೆಯೆನ್ನುವುದು ಕೆಲವು ಬೌದ್ಧ ವಿದ್ವಾಂಸರ ಅಭಿಮತವಾಗಿದೆ. ಗುಹೆಯ ಹೊರಗಿನ ಪಹ್ಲವಿ ಭಾಷೆಯ ಶಾಸನವು ಪರ್ಷಿಯನ್ ವಲಸೆಕಾರರಿಂದ ಪಡೆದ ದಾನದ ಬಗೆಗೆ ಉಲ್ಲೇಖಿಸುತ್ತದೆ. 


ಗುಹೆ-೯೩ ಸಣ್ಣ, ಶಿಲ್ಪಭರಿತ ಗುಹೆ. ಕೆಲವೆಡೆ ಬಣ್ಣಗಾರಿಕೆಯ ಕುರುಹುಗಳಿವೆ. 


ಗುಹೆ-೯೯ ಮಿತಭೂತಿಯು ನೀಡಿದ ಕೊಡುಗೆ. ಅವನನ್ನು ಸಾಗರ ಪಲೋಗನಂ (ಸಮುದ್ರ ಗಮನಿಸುವವ) ಎಂದು ವರ್ಣಿಸಲಾಗಿದೆ. ಬಹುಶಃ ನಾವಿಕನಿರಬಹುದು.


ಎರಡನೆಯ ಹಂತದ ಗುಹೆಗಳ ನೋಡಿ ಮೇಲೇರಿದರೆ ಬೃಹತ್ ಬಂಡೆಯ ನೆತ್ತಿ ತಲುಪುತ್ತೇವೆ. ಅದು ನೂರಾರು ಜನ ಕೂರಬಹುದಾದ ದೊಡ್ಡ ಆವರಣ. ಧ್ಯಾನಿಬುದ್ಧ ಮೂರ್ತಿಯನ್ನಿಡಲು ಪೀಠವೂ, ಭಿಕ್ಕುಗಳು ಕುಳಿತುಕೊಳ್ಳಲು ಮೆಟ್ಟಿಲಿನಂತಹ ಆಸನಗಳಿರುವ ಗ್ಯಾಲರಿಯೂ, ಕಾಲು ತೊಳೆಯಲು ನೀರಿನ ಬಾನಿಯೂ ಇವೆ. ಅಲ್ಲಿ ನಿಂತು ನೋಡಿದರೆ ಕನ್ಹೇರಿಯ ಪಕ್ಷಿನೋಟ ದೊರೆಯುತ್ತದೆ. ಪಶ್ಚಿಮದಲ್ಲಿ ಕಡಲು ಕಾಣದಂತೆ ಮುಂಬಯಿಯ ಗಗನಚುಂಬಿ ಕಟ್ಟಡಗಳು ಮರೆಮಾಡಿವೆ.

ಈ ಗುಹೆಗಳನ್ನು ಕೆತ್ತಿದವರು ಭಿಕ್ಕುಗಳೋ, ಶಿಲ್ಪಿಗಳೋ ಸ್ಪಷ್ಟವಿಲ್ಲ. ಕನ್ಹೇರಿಯ ಪ್ರತಿ ರಚನೆಗೂ ದಾನಿಗಳಿರುವುದು ನೋಡಿದರೆ ಕೆತ್ತಿದವರು ಶಿಲ್ಪಿಗಳೇ ಇರಬೇಕು. ಆದರೆ ದಾನಿಗಳ ಹೆಸರು ಅಜರಾಮರವಾದಂತೆ ಕೆತ್ತಿದವರ ಹೆಸರು ಎಲ್ಲೂ ದಾಖಲಾಗಿಲ್ಲ. 


ಗುಹೆಗಳನ್ನು ನೋಡಿ ಇಳಿಯುವಾಗ ಕೆಲವು ಪ್ರಶ್ನೆಗಳು ಮೂಡುತ್ತವೆ. ಭಾರತದ ಮಿಕ್ಕ ಬೌದ್ಧ ಗುಹಾಲಯ/ತಾಣಗಳಷ್ಟು ಕನ್ಹೇರಿ ಪ್ರಸಿದ್ಧವಾಗದಂತೆ ಮಾಡಿರುವುದು ಯಾವುದು? ಅಜಂತಾ-ಎಲ್ಲೋರಾ-ಕಾರ್ಲಾ ಗುಹೆಗಳಲ್ಲಿ ಇರುವ ಸೂಕ್ಷ್ಮ ಮುಗಿತಾಯ (ಫಿನಿಶಿಂಗ್) ಇಲ್ಲಿಲ್ಲವಲ್ಲ, ಏಕೆ? ಈ ಗುಹೆಗಳಲ್ಲಿ ಬಣ್ಣ, ಚಿತ್ರ, ಹೊಳಪು, ಕುಸುರಿಗೆ ಅಗತ್ಯವಾದ ನೆರವು ಸಿಗಲಿಲ್ಲವೆ ಅಥವಾ ಈ ಶಿಲೆಯಲ್ಲಿ ಇಷ್ಟು ಮಾತ್ರ ಸಾಧ್ಯ ಎಂದು ಬಿಟ್ಟರೇ? ಕೆಲ ಗುಹಾಲಯಗಳು ಅರೆಬರೆಯಾದದ್ದು ನೋಡಿದರೆ ವ್ಯಾಪಾರಿಗಳಿಂದ ಬರುತ್ತಿದ್ದ ನೆರವು ಇದ್ದಕ್ಕಿದ್ದಂತೆ ನಿಂತು ಹೋಯಿತೇ? ಏರತೊಡಗಿದ ಜೈನ, ಶೈವ, ವೈಷ್ಣವ ಸಂಪ್ರದಾಯಗಳ ಪ್ರಭಾವ ಬೌದ್ಧ ಮತದ ಬೆಂಬಲಿಗರ ಸಂಖ್ಯೆಯನ್ನು ಕಡಿಮೆ ಮಾಡಿತೇ? ಅಷ್ಟಕ್ಕೂ ನಾವಿಕರು, ಅಕ್ಕಸಾಲಿಗರು, ವರ್ತಕರು ಬೌದ್ಧ ಮತವನ್ನು ಭಿಕ್ಕುಗಳನ್ನು ಬೆಂಬಲಿಸಿದ್ದು ಏಕೆ? ನಂತರ ಬೆಂಬಲ ನಿಂತಿದ್ದು ಏಕೆ?


ಬೋಧಿವೃಕ್ಷದ ಟಿಸಿಲು, ಕಸಿ 


ಮೊದಲ ಸಹಸ್ರಮಾನದ ಮೊದಲನೆಯ ಭಾಗದಲ್ಲಿ ಬೌದ್ಧ ಧರ್ಮ ವಿಸ್ತಾರಗೊಳ್ಳುತ್ತ ಹೋದಹಾಗೆ ಹೀನಯಾನ, ಮಹಾಯಾನ ಎಂಬ ಕೊಂಬೆಗಳು ಬೋಧಿವೃಕ್ಷದಲ್ಲಿ ಟಿಸಿಲೊಡೆದವು. ನಳಂದ, ತಕ್ಷಶಿಲಾ, ವಿಕ್ರಮಶಿಲಾ ಮೊದಲಾದ ವಿಶ್ವವಿದ್ಯಾಲಯಗಳಲ್ಲಿ ವಿಭಾಗೀಕರಣದ ನೆರಳು ಬಿದ್ದಿತು. ಮಥುರಾ, ಸಾರಾನಾಥಗಳಲ್ಲಿ ಬುದ್ಧನ ಮೂರ್ತಿಗಳು ಕಾಣಿಸಿಕೊಂಡವು. ಕಥನ, ಚಿತ್ರ, ಶಿಲ್ಪಗಳಲ್ಲಿ ಬೋಧಿಸತ್ವರು ಕಾಣಿಸಿಕೊಂಡರು. ಭಾರತೀಯರ ಅಧ್ಯಾತ್ಮಿಕ ಹಸಿವೆಯನ್ನು ತೀರಿಸಲು ಬೌದ್ಧ ಆಚರಣೆ, ವಿಚಾರಗಳಲ್ಲಿ ಬದಲಾವಣೆಗಳು ನುಸುಳಿದವು. ಮಂಡಲ, ಬೋಧಿಸತ್ವ, ಅವಲೋಕಿತೇಶ್ವರ, ಧ್ಯಾನಿಬುದ್ಧರೇ ಮೊದಲಾದ ಹೊಸಹೊಸ ಸಂಗತಿಗಳನ್ನು ಸೇರಿಸಿಕೊಂಡು ಮಹಾಯಾನ ಬೆಳೆದು, ತಂತ್ರ ರೂಪ ಪಡೆದು ವಜ್ರಯಾನ ಜನಪ್ರಿಯವಾಯಿತು. ಧಮ್ಮವು ಜನಸಾಮಾನ್ಯರ, ಆಳುವವರ ಭಾರೀ ಬೆಂಬಲ ಪಡೆದುಕೊಂಡಿತು. 


ಧಮ್ಮವು ಹೀನಾಯಾನ, ಮಹಾಯಾನ, ವಜ್ರಯಾನದೆಡೆಗೆ ಚಲಿಸಿದುದನ್ನು ಇಲ್ಲಿನ ಶಿಲ್ಪಗಳು ಧ್ವನಿಸುತ್ತವೆ. ಬಂಗಾಳ, ಬಿಹಾರ, ಒಡಿಶಾ, ಕಾಶ್ಮೀರಗಳಲ್ಲಿ ಎಂಟನೆಯ ಶತಮಾನದ ಬಳಿಕ ಮಂಡಲ ರಚನೆಗಳು ಕಲೆಯಲ್ಲಿ ಕಂಡುಬಂದರೆ ಕನ್ಹೇರಿಯಲ್ಲಿ ಅದಕ್ಕಿಂತ ಮೊದಲೇ ಬಂದಿವೆ. ಆರನೆಯ ಶತಮಾನದ ಬಳಿಕ ಮಹಾಯಾನವು ವಜ್ರಯಾನವಾಗಿ ತಂತ್ರವಾಗಿ ಹೇಗೆ, ಏಕೆ, ಎಲ್ಲಿ ರೂಪುಗೊಂಡಿತು ಎಂಬ ಇನ್ನೂ ಅಸ್ಪಷ್ಟವಾಗಿರುವ ವಿಷಯದ ಬಗೆಗೆ ಸಂಶೋಧನೆಗಳು ನಡೆಯಲು ಇಲ್ಲಿ ಸಾಕ್ಷ್ಯಗಳಿವೆ. ವಜ್ರಯಾನದ ವಿವಿಧ ಪಂಥಗಳಾದ ಮಹಾಸಾಂಘಿಕ, ಚೇತಿಯಾ, ಅಪರಸೆಲಿಯಾ, ಭದ್ರವಣಿಯಾ, ಧರ್ಮೋತ್ತರೀಯ, ಸದ್ಧರ್ಮ ಪುಂಡರೀಕಗಳು ಸಮಕಾಲೀನವಾಗಿ ಒಡನಾಡಿವೆ ಎನ್ನಲು ಕನ್ಹೇರಿಯಲ್ಲಿ ಪುರಾವೆಗಳಿವೆಯೆಂದು ವಿದ್ವಾಂಸರು ಗುರುತಿಸಿದ್ದಾರೆ.


ವಜ್ರಯಾನದ ತಂತ್ರ ಸಾಧಕರಾದ ಮಗಧದ ಬುದ್ಧಗ್ಯಾನಪಾದ (ಒಂಬತ್ತನೆಯ ಶತಮಾನ), ಬಂಗಾಳದ ದೀಪಂಕರ ಅತಿಷ (ಹನ್ನೊಂದನೆಯ ಶತಮಾನ) ಇಲ್ಲಿಗೆ ಬಂದಿದ್ದರು. ವಿಕ್ರಮಶಿಲಾ ಮಹಾವಿಹಾರ ಮುನ್ನಡೆಸಿದ ಮೊದಲ ಅಧ್ಯಕ್ಷ ‘ಗುಹ್ಯಸಮಾಜ ತಂತ್ರ’ದ ಲೇಖಕ ಬುದ್ಧ ಗ್ಯಾನಪಾದ. ಅವನ ಶಿಷ್ಯ ಪರಂಪರೆ ಇವತ್ತಿಗೂ ಟಿಬೆಟಿನಲ್ಲಿ ಮುಂದುವರೆದಿದೆ. ಗ್ಯಾನಪಾದನ ಗ್ರಂಥಗಳನ್ನು ಟಿಬೆಟಿನವರೇ ಕಾಪಾಡಿಕೊಂಡು ಬಂದಿದ್ದಾರೆ. ಸಾಕಷ್ಟು ಬರೆದ, ತಿರುಗಾಟ ಮಾಡಿದ ಭಿಕ್ಕು ಗ್ಯಾನಪಾದನು ಸಿದ್ಧ ಆಚಾರ್ಯ ರಕ್ಷಪಾದನ ಜೊತೆ ಅಧ್ಯಯನ ನಡೆಸಲು ಕೃಷ್ಣಗಿರಿಗೆ ಬಂದುದಾಗಿ, ಒಂಭತ್ತು ವರ್ಷಗಳ ಕಾಲ ಇದ್ದುದಾಗಿ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾನೆ. 


ಹನ್ನೊಂದನೆಯ ಶತಮಾನದಲ್ಲಿ ತಂತ್ರಗುರು ರಾಹುಲಗುಪ್ತನಿಂದ ಸಾಧನೆಯ ಉಪದೇಶ ಪಡೆಯಲು ದೀಪಂಕರ ಅತಿಷನು ಬಂಗಾಳದಿಂದ ಕೃಷ್ಣಗಿರಿಗೆ ಬಂದನು. ಮೂರು ತಿಂಗಳು ಸಾಧನೆ ಮಾಡಿದ ಬಳಿಕ ಗುಹ್ಯ ಗ್ಯಾನವಜ್ರ ಎಂಬ ಹೆಸರು ಪಡೆದನು. ಕನ್ಹೇರಿಯ ಕೆಲವು ಗುಹೆಗಳಲ್ಲಿ ದ್ವಾರದೆದುರಿನ ಆಸನಗಳು ಖಾಲಿ ಇವೆ. ಅವು ವಜ್ರಯಾನದ ರಹಸ್ಯ ಬೋಧನೆ, ಉಪದೇಶಗಳು ಗುರುವಿನಿಂದ ಶಿಷ್ಯರಿಗೆ ತಲುಪುತ್ತಿದ್ದ ಸ್ಥಳವಾಗಿವೆ. ಒಂದು ಗುಹೆಯಲ್ಲಿ ತೆಗೆದೊಯ್ಯಬಹುದಾದಂತಹ ಬುದ್ಧ ಶಿಲ್ಪವಿದೆ. ವಿಶೇಷ ದಿನ, ಸಂದರ್ಭಗಳಲ್ಲಿ ಆ ಉತ್ಸವಮೂರ್ತಿಯ ಮೆರವಣಿಗೆ ನಡೆದು ಮೇಲಕ್ಕೆ ಹೊತ್ತೊಯ್ಯುತ್ತಿದ್ದರು. ಈ ಆರಾಧನಾ ಕ್ರಮ ವಜ್ರಯಾನದ ಲಕ್ಷಣವಾಗಿದೆ. 


ಹೀಗೆ ಹೀನಾಯಾನದಿಂದ ಮಹಾಯಾನ, ವಜ್ರಯಾನದವರೆಗೆ ಬೆಳೆದ, ನಂತರ ಹಿನ್ನಡೆ ಕಂಡ ಧಮ್ಮದ ಚಲನೆಯನ್ನು ಅಭ್ಯಸಿಸಲು ಕನ್ಹೇರಿ ಸೂಕ್ತ ತಾಣವಾಗಿದೆ. ಇಂತಹ ವ್ಯವಸ್ಥಿತ, ಪ್ರಾಚೀನ ಬೌದ್ಧ ತಾಣ ಏಳೆಂಟು ನೂರು ವರ್ಷ ಕಾಡಿನಲ್ಲಿ ಹೂತು ಹೋಗಲು ಕಾರಣಗಳನ್ನು ಕೆದಕುತ್ತ ಹೋದರೆ ಬುದ್ಧ ಭಾರತ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ. 


ಬುದ್ಧ ಮಾರ್ಗಿಗಳಿಗೆ, ಸ್ಥಳೀಯರಿಗೆ ಗುಹೆ, ಶಿಲ್ಪಗಳ ಮಾಹಿತಿಯಿತ್ತು. ಕ್ರಮೇಣ ಬೌದ್ಧೇತರ ಪಂಥಗಳ ಸಾಧುಸನ್ಯಾಸಿಗಳ ಆವಾಸ ಸ್ಥಾನವೂ ಆಗಿತ್ತು. ಮೇಲುಗಡೆ ಒಂದು ಶಿವನ ಗುಡಿಯೆದ್ದು ಶೈವ ಸಾಧುಗಳು ವಾಸಿಸತೊಡಗಿದ್ದರು. ಆದರೆ ೧೮ನೆಯ ಶತಮಾನದಲ್ಲಿ ಬ್ರಿಟಿಷ್ ಸಂಶೋಧನಾಕಾರರ ಕಣ್ಣಿಗೆ ಬಿದ್ದು, ಪುರಾತತ್ವ ಶೋಧಕ್ಕೆ ಒಳಗಾಗಿ, ಶಾಸನಗಳನ್ನು ಅರ್ಥೈಸಿದ ಮೇಲೆ ಕನ್ಹೇರಿ ಮತ್ತೆ ಪ್ರಾಮುಖ್ಯತೆ ಪಡೆದುಕೊಂಡಿತು. ವಿಶ್ವ ಪಾರಂಪರಿಕ ತಾಣವೆಂದು ಯುನೆಸ್ಕೋ ಗುರುತಿಸಿತು. 


ಆದರೆ ಅಲ್ಲಿಗೆ ಬರುವ ಮುಕ್ಕಾಲು ಮೂರುವೀಸ ಜನರಿಗೆ ವಿಶ್ವಪರಂಪರೆ ಎಂದರೇನೆಂದು ತಿಳಿದಿಲ್ಲ. ಗುಹೆಗಳ ಇತಿಹಾಸ, ಬೌದ್ಧ ಧಮ್ಮದ ಬಗೆಗೆ ಏನೇನೂ ಗೊತ್ತಿಲ್ಲ. ಕೇವಲ ಪಿಕ್ನಿಕ್, ಫೋಟೋ, ಚಾರಣಕ್ಕಾಗಿ ಬಂದು ಎಲ್ಲೆಲ್ಲೋ ಹತ್ತಿಳಿದು  ರೇಜಿಗೆಯಾಗುವಷ್ಟು ಗದ್ದಲ ಎಬ್ಬಿಸುತ್ತಾರೆ. ತಾಣದ ಘನತೆಯನ್ನು ಹಾಳುಗೆಡವುತ್ತಿದ್ದಾರೆ. ಅದರ ನಡುವೆಯೇ ಅಪರೂಪಕ್ಕೊಬ್ಬರು ಪುಸ್ತಕದ ಪುಟ ತಿರುಗಿಸುತ್ತ, ಬ್ರಾಹ್ಮಿ ಲಿಪಿಯ ಶಾಸನವನ್ನು ಪರೀಕ್ಷಿಸುತ್ತ, ಗೈಡ್ ಹೇಳುವುದನ್ನು ಕಣ್ಣರಳಿಸಿ ಕೇಳುತ್ತ ಓಡಾಡುವುದು ಕಂಡುಬರುತ್ತದೆ. 


ಬೇಕಿದ್ದು ಬೇಡದಿದ್ದುದು ಎಲ್ಲವೂ ಒಟ್ಟೊಟ್ಟಿಗೇ ಇರುತ್ತವೆ. ಅಗೋ ಅಲ್ಲಿ ದೂರದಲ್ಲಿ ಬೆಟ್ಟಸಾಲುಗಳ ಮೇಲೆ ಜೋಡಿಸಿಟ್ಟ ಹಾಗೆ ಮುಂಬಯಿಯ ಗಗನಚುಂಬಿ ಕಟ್ಟಡಗಳು ಕಡಲನ್ನು ಮರೆ ಮಾಡಿರುವಾಗ ಇಲ್ಲಿ ಬೆಟ್ಟ ಕೊರೆದು ಮಾಡಿದ ಗುಹೆಗಳು ಸಾವಿರಾರು ವರ್ಷಗಳಿಂದ ಮುಗುಮ್ಮಾಗಿ ಹಾಸಿಕೊಂಡಿವೆ. ನೆತ್ತಿ ಸುಡುವ ಬಿಸಿಲು ಚರ್ಮ ಕಂದಾಗಿಸುತ್ತಿದ್ದರೆ ಇತ್ತ ಕತ್ತಲನ್ನು ಸೀಳಿ ಮಾಡಿದ ಗುಹೆಗಳು ಚೂರುಚೂರೇ ಬೆಳಕು, ಬಿಸಿಯನ್ನು ಒಳಗೆ ಬಿಟ್ಟುಕೊಂಡು ತಣ್ಣಗಿವೆ. ಇದೆ ಇಲ್ಲಗಳ ಬೆಳಕಿನಲ್ಲಿ ನಮಗೆ ಬೇಕಿರುವುದನ್ನಷ್ಟೇ ಸ್ವೀಕರಿಸಲು ಕಲಿಯಬೇಕು ಅಷ್ಟೇ. 


ಇಡಿಯ ವಿಶ್ವವೇ ಯುದ್ಧೋನ್ಮಾದದಲ್ಲಿ ಸ್ವವಿನಾಶದತ್ತ ತೆರಳುತ್ತಿರುವಾಗ, ಬುದ್ಧ ಬೇಕಾಗಿದ್ದಾನೆ, ಧಮ್ಮ ಬೇಕಾಗಿದೆ, ಮೈತ್ರಿ-ಕರುಣೆಗಳ ಸಂಘ ಸಹಬಾಳುವೆಯ ಸತ್ವ ಮನುಷ್ಯರಿಗೆ ಅಗತ್ಯವಾಗಿದೆ. ಭಾರತದ ಮಿದುಳಿನ ತುಂಬ ಸ್ತೂಪಗಳೇ ಇವೆ. ಅದನ್ನೊಡೆದು ಮನಸ್ಸೊಡೆಯುವ ದೈವಗಳ ಪ್ರತಿಷ್ಠಾಪಿಸಲಾಗಿದೆ. ಬುದ್ಧ ಭಾರತ ಎಲೆಯುದುರಿದ ಕಾಡಿನಂತಾಗಿದೆ. ಆದರೆ ಚೈತ್ರ ಕಾಲ ಬಂದಿದೆ. ವೈದಿಕ-ಸಮಣ-ಶೂದ್ರ ಮತಧರ್ಮಗಳ ತತ್ವನಿಬಿಡ ಭಾರತದಲ್ಲಿ ಬೌದ್ಧ ಸತ್ವವನ್ನು ಗುರುತಿಸಿ ಅಪ್ಪಿಕೊಳ್ಳುವ ಕಾಲ ಆರಂಭವಾಗಿದೆ.


ಮತ್ತೆ ವೈಶಾಖ ಪೂರ್ಣಿಮೆಯನ್ನು ಇಳೆಯ ಜೀವರಾಶಿಗಳೆಲ್ಲ ಕಂಡೇ ಕಾಣುತ್ತವೆ.


ಡಾ. ಎಚ್. ಎಸ್. ಅನುಪಮಾ


No comments:

Post a Comment