Saturday, 4 March 2017

ರಂಜನಾ ಪಾಡಿ - ‘ಸ್ತ್ರೀವಾದವೆಂದರೆ..’




(ರೈತ ಆತ್ಮಹತ್ಯೆ ಸಂಭವಿಸಿದಾಗಲೆಲ್ಲ ಬೆಂಬಲ ಬೆಲೆ, ಬೆಳೆವಿಮೆ, ಸಾಲ-ಬಡ್ಡಿ ಮನ್ನಾ ಮೊದಲಾದ ವಿಷಯಗಳು ಮುನ್ನೆಲೆಯ ಚರ್ಚೆಗೆ ಬರುತ್ತವೆ. ಆದರೆ ಪಿತೃಪ್ರಧಾನ ಭಾರತೀಯ ಸಮಾಜದಲ್ಲಿ ಮಾರುಕಟ್ಟೆ ಸೃಷ್ಟಿಸಿರುವ ಕೃಷಿಬಿಕ್ಕಟ್ಟುಗಳನ್ನು ಆತ್ಮಹತ್ಯೆಯಾದ ರೈತಕುಟುಂಬದ ವಿಧವೆಯರ ದೃಷ್ಟಿಯಿಂದ ನೋಡಬೇಕು ಎಂದು ಒರಿಸ್ಸಾದ ಮಹಿಳಾ ಹೋರಾಟಗಾರ್ತಿ ರಂಜನಾ ಪಾಡಿ ಒತ್ತಾಯಿಸುತ್ತಾರೆ. ಮಾಳವಾದ ೧೦ ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ೧೨೫ ರೈತರ ಕುಟುಂಬಗಳ ವಿಸ್ತೃತ ಅಧ್ಯಯನ ನಡೆಸಿ ಅವರು ಬರೆದ ‘ದೋಸ್ ಹು ಡಿಡ್‌ನಾಟ್ ಡೈ’ ಪುಸ್ತಕವು ಕೃಷಿ ಬಿಕ್ಕಟ್ಟು ಕುರಿತ ಅನನ್ಯ ಒಳನೋಟಗಳನ್ನೊಳಗೊಂಡಿದೆ.

ಮಾಳವಾ ಪ್ರದೇಶ ಅತಿಹೆಚ್ಚು ರೈತ ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿರುವ, ಅತಿಹೆಚ್ಚು ವಿಧವೆಯರಿರುವ ಪ್ರದೇಶ. ರೈತನ ವಿಧವೆ ಜೀವಮಾನವಿಡೀ ಏಕಾಂಗಿಯಾಗಿ ತಂದೆಯಿಲ್ಲದ ಕುಟುಂಬದ ಗಹನ ಜವಾಬ್ದಾರಿಗಳಿಗೆ ಹೆಗಲು ಕೊಡಬೇಕು. ಗಂಡ ಮಾಡಿಹೋದ ಸಾಲಕ್ಕೂ ಹೊಣೆಗಾರಳಾಗಬೇಕು. ಸಮಾಜ, ಸರಕಾರಗಳು ರೂಪಿಸುವ ಕೃಷಿನೀತಿಗಳಲ್ಲಿ ರೈತನ ವಿಧವೆಯ ಭಾವನಾತ್ಮಕ ಬಿಕ್ಕಟ್ಟುಗಳಿಗೆ ಯಾವ ಪರಿಹಾರವೂ ಇರುವುದಿಲ್ಲ. ಇಂಥವೆಲ್ಲ ವಿಷಯಗಳನ್ನು ತಮ್ಮ ಪುಸ್ತಕದಲ್ಲಿ ಚರ್ಚಿಸಿರುವ ರಂಜನಾ ಸಂದರ್ಶನ ಇಲ್ಲಿದೆ.)

Displaying IMG_20170227_212046228.jpg

ಮಹಿಳಾ ಚಳುವಳಿ ನಿಮ್ಮನ್ನು ಸೆಳೆದದ್ದು ಹೇಗೆ?

ನಾನು ಒರಿಸ್ಸಾದವಳು. ೮೦ರ ದಶಕದ ಕೊನೆ ಭಾಗದಲ್ಲಿ ಸ್ನಾತಕೋತ್ತರ ಪದವಿಗೆ ಭುವನೇಶ್ವರ ಬಿಟ್ಟು ದೆಹಲಿ ಸೇರಿದೆ. ಆಗಲ್ಲಿ  ಸಹೇಲಿ, ಮಾನುಷಿ ಮೊದಲಾದ ಮಹಿಳಾಗುಂಪುಗಳು ಶಾಬಾನೊ ಪ್ರಕರಣ, ವರದಕ್ಷಿಣೆ ವಿರೋಧಗಳ ಸುತ್ತ ತೀವ್ರ ಚರ್ಚೆ ಹುಟ್ಟುಹಾಕಿದ್ದವು. ಏಕವ್ಯಕ್ತಿ ನಾಯಕತ್ವಕ್ಕಿಂತ ಸಾಮೂಹಿಕ ಪ್ರಯತ್ನದಲ್ಲಿ ಹೆಚ್ಚು ನಂಬಿಕೆಯಿದ್ದುದರಿಂದ ಸ್ವಾಯತ್ತ ಸಂಘಟನೆ ‘ಸಹೇಲಿ’ ಸೇರಿದೆ. ಆಗ ಮಹಿಳಾ ಸಂಘಟನೆಗಳು ಪ್ರತಿಯೊಬ್ಬ ಮಹಿಳೆಗೂ ತಾನು ಮುಕ್ತಳಾಗುವುದು ಸಾಧ್ಯವಾದರೆ, ಸಮಷ್ಟಿಯಲ್ಲೂ ಮಹಿಳೆಗೆ ಅದೇ ವಾಸ್ತವವಾಗುವುದೆಂದು ನಂಬಿದ್ದವು. ಅಲ್ಲಿ ಕೊಂಚ ನಿರಾಸೆಯಾಯಿತೆಂದೇ ಹೇಳಬೇಕು. ಅಕ್ಯಾಡೆಮಿಕ್ ಸಭೆ, ಸಮಾರಂಭಗಳಿಗೆ ಹೋದರೆ ಮೆಥಡಾಲಜಿ, ತಾತ್ವಿಕತೆ ಮುಂತಾದ ಮಾತುಗಳು ತಲೆಚಿಟ್ಟು ಹಿಡಿಸುತ್ತಿದ್ದವು. ಇದೆಲ್ಲದರಿಂದ ಸಾಮಾನ್ಯ ಮಹಿಳೆಗೆ, ರೈತ ಮಹಿಳೆಗೆ ಏನುಪಯೋಗ ಎಂಬ ಪ್ರಶ್ನೆ ಒಳಗನ್ನು ಕೊರೆಯುತ್ತಿತ್ತು. ಅದನ್ನೇ ಅಲ್ಲಿದ್ದವರಿಗೂ ಕೇಳಿದರೆ ತಬ್ಬಿಬ್ಬುಗೊಳ್ಳುತ್ತಿದ್ದರು.

ಆಗ ‘ಕ್ಲೀನ್ ಡೆಲ್ಲಿ, ಬ್ಯೂಟಿಫೈ ಡೆಲ್ಲಿ’ ಅಭಿಯಾನ ನಡೆಯುತ್ತಿತ್ತು. ರಸ್ತೆಬದಿಯ ಬಸ್ತಿಗಳ ಜನರನ್ನು, ಸಂದುಗೊಂದುಗಳಲ್ಲಿ ವಾಸಿಸುತ್ತಿದ್ದವರನ್ನು ಒಕ್ಕಲೆಬ್ಬಿಸಿದರು. ಅಂಗೈಯಗಲದ ಗೂಡುಗಳಲ್ಲೇ ಬದುಕು ಕಟ್ಟಿಕೊಂಡವರು ಏಕಾಏಕಿ ಅತಂತ್ರವಾದರು. ಆ ವರ್ಷ ದೀಪಾವಳಿಯಂದು ರಸ್ತೆಗೆ ಬಿದ್ದ ಬಸ್ತಿಗಳ ಜನರ ಕೊನೆಮೊದಲಿರದ ಕಷ್ಟದ ಬದುಕು ಕಣ್ಣೆದುರು ತಂತಾನೇ ಅನಾವರಣಗೊಂಡಿತು. ಅದ್ಯಾವುದರ ಪರಿವೆಯೇ ಇಲ್ಲದ ಸಿರಿವಂತರ ದೆಹಲಿ ಸಿಲ್ಕ್ ಸ್ಯಾರಿ-ಕಟೋರಿ ಚೋಲಿ ತೊಟ್ಟು, ಸಿಹಿಯುಂಡು, ಪಟಾಕಿ ಸುಟ್ಟು ಸಂಭ್ರಮಿಸಿತು. ನಾವು ಯಾರಿಗಾಗಿ ಹೋರಾಡುತ್ತಿದ್ದೇವೆ ಎಂದು ನನ್ನ ಮೇಲೆ ನನಗೇ ಅನುಮಾನವಾಯಿತು. ಜನಸಾಮಾನ್ಯ ಮಹಿಳೆಯರೊಡನೆಯೇ ಕೆಲಸ ಮಾಡಬೇಕೆಂಬ ನಿರ್ಧಾರ ಗಟ್ಟಿಯಾಯಿತು.

ರೈತ ಸಮುದಾಯದತ್ತ ಗಮನ ಕೇಂದ್ರೀಕರಿಸಲು ಕಾರಣವೇನು?

ವಿದರ್ಭ ಕುರಿತ ವರದಿಗಳು ಬರುತ್ತಿದ್ದವು. ದಕ್ಷಿಣದ ರಾಜ್ಯಗಳಲ್ಲೂ ರೈತ ಆತ್ಮಹತ್ಯೆ ಸಂಭವಿಸತೊಡಗಿದ್ದವು. ‘ಹಸಿರುಕ್ರಾಂತಿ’ಯ ಪಂಜಾಬಿನಲ್ಲೂ ರೈತ ಆತ್ಮಹತ್ಯೆ ಆಗುತ್ತಿದ್ದವು. ದೆಹಲಿಗೆ ಹತ್ತಿರವಿದ್ದ ಪಂಜಾಬಿಗೆ ‘ಪೈಲಟ್ ಸ್ಟಡಿ’ಗೆಂದು ಹೋದರೆ, ಭೇಟಿಯಾದ ಮಹಿಳೆಯರಲ್ಲಿ ಅರ್ಧಕ್ಕರ್ಧ ಜನ ನಿದ್ರೆ ಮಾತ್ರೆ ನುಂಗುತ್ತಿರುವುದಾಗಿ ಹೇಳಿದರು! ಒಂದು ಮನೆಯ ಪುಟ್ಟ ಹುಡುಗಿ ಬಹಳ ಹಚ್ಚಿಕೊಂಡಳು. ಹಿಂದೆಮುಂದೆ ಸುಳಿಯುತ್ತ ನನ್ನ ಮುಟ್ಟುತ್ತಿದ್ದಳು, ಪಕ್ಕವೇ ಕೂರುತ್ತಿದ್ದಳು, ಕೂದಲು ಸವರುತ್ತಿದ್ದಳು. ಕೊನೆಯ ದಿನ ತಾನೂ ನನ್ನ ಜೊತೆ ಬರುವೆನೆಂದು ಹಠ ಹಿಡಿದಳು. ‘ನೀನು ಬಂದರೆ ಅಮ್ಮನ ಜೊತೆ ಯಾರಿರುತ್ತಾರೆ ಪುಟ್ಟಿ?’ ಎಂದೆ. ಅವಳಮ್ಮ, ‘ನನ್ನ ಜೊತೆ ಇದ್ದರೆ ನನ್ನಂತೇ ಆದಾಳು. ನಿನ್ನ ಜೊತೆಯಿದ್ದರೆ ನಿನ್ನಂತಾದರೂ ಆಗುತ್ತಿದ್ದಳೇನೋ’ ಎಂದು ವಿಷಣ್ಣಳಾಗಿ ಹೇಳಿದಳು. ಒಬ್ಬ ತಾಯಿ ತನ್ನ ಬಗ್ಗೆ ತಾನು ಇದಕ್ಕಿಂತ ಅಸಹಾಯಕತೆ, ನೇತ್ಯಾತ್ಮಕ ಭಾವ ಹೊಂದಲು ಸಾಧ್ಯವೆ?

ನಿದ್ರಾಹೀನ, ವಿಷಣ್ಣ ತಾಯಂದಿರ ಕಂಡು ಇದು ಸಾಮಾನ್ಯ ಸಮಸ್ಯೆಯಾಗಿರಲಿಕ್ಕಿಲ್ಲ ಎನಿಸಿತು. ಜಾಗತೀಕರಣ, ಮುಕ್ತ ಮಾರುಕಟ್ಟೆ ತಂದೊಡ್ಡಿದ ಸಂಕಷ್ಟಗಳಿಗೆ ನಾವು ಮೂಕಸಾಕ್ಷಿಯಾದೆವೇ ಎಂಬ ಪಾಪಪ್ರಜ್ಞೆ ಆವರಿಸಿ ವಿಸ್ತೃತ ಅಧ್ಯಯನಕ್ಕೆಂದು ಪಂಜಾಬಿಗೆ ಹೊರಟುಬಿಟ್ಟೆ.

ನೀವು ರೈತ ಕುಟುಂಬದಿಂದ ಬಂದವರೇ?

ನಾನು ರೈತ ಕುಟುಂಬದವಳಲ್ಲ. ನಾನಷ್ಟೇ ಅಲ್ಲ, ಈಗ ‘ಅಕ್ಷರವಂತ’ರೆನಿಸಿಕೊಂಡರಲ್ಲಿ ಬಹಳಷ್ಟು ಜನ ರೈತ ಕುಟುಂಬದವರಲ್ಲ. ಅದೇ ‘ಯಾರ‍್ಯಾರ ತಾಯ್ತಂದೆಯರು ರೈತ ಕುಟುಂಬದವರು?’ ಎಂದು ಕೇಳಿನೋಡಿ, ಒಂದಷ್ಟು ಜನ ಸಿಗುತ್ತಾರೆ. ಅಜ್ಜಿ-ಅಜ್ಜ ರೈತರಾಗಿರುವವರು ಹಲವಷ್ಟು ಜನ ಸಿಗುತ್ತಾರೆ. ಎಂದರೆ ಕೃಷಿ ನೆಚ್ಚಿದವರ ಸಂಖ್ಯೆ ಕಡಿಮೆಯಾಗುತ್ತಿರುವುದರ ಸೂಚನೆಯಿದು. ಆದರೆ ನಾವು ರೈತರೊಂದಿಗೆ ಕನೆಕ್ಟ್ ಆಗಲೇಬೇಕು. ಅನ್ನ ಬೆಳೆವ ರೈತನ ಸಮಸ್ಯೆ ಎಲ್ಲರಿಗೂ ಸಂಬಂಧಿಸಿದ್ದೆಂದು ತಿಳಿದುಕೊಳ್ಳಬೇಕು.

ಕ್ಷೇತ್ರಕಾರ್ಯದ ವೇಳೆ ಮರೆಯಲಾಗದ ಕೆಲ ಸಂಗತಿಗಳು..?

ವಿಧವೆಯರ ಸ್ಥಿತಿಗತಿಗೆ ಜಾತಿಯ ಕೊಡುಗೆಯೂ ಸಾಕಷ್ಟಿದೆ. ಜಾಟ್ ಸಿಖ್ ಮತ್ತು ದಲಿತ ರೈತ ವಿಧವೆಯರನ್ನು ಕಂಡಮೇಲೆ ದಮನದ ನೆಲೆಗಳು, ಹೊರದಾರಿಗಳು ಮತ್ತು ಅವರವರ ಶಕ್ತಿಗಳು ಭಿನ್ನ ಎಂದರಿವಾಯಿತು. ಜಾತಿ-ವರ್ಗ ಕುರಿತ ನನ್ನ ತಿಳುವಳಿಕೆ ಈ ಅಧ್ಯಯನ ಮಾಡುವಾಗ ಪುಷ್ಟೀಕರಿಸಲ್ಪಟ್ಟಿತು.

ಒಂದು ಮನೆಯಲ್ಲಿ ವಿಧವೆಯ ಬಳಿ ಒಳಮನೆಯಲ್ಲಿ ಎಲ್ಲ ಮಾತು ಮುಗಿಸಿದ್ದೆ. ತಲೆಬಾಗಿಲಲ್ಲಿ ಕೂತ ಮಾವ, ‘ಎಲ್ಲ ಹೇಳಿದಳೇ?’ ಎಂದರು. ಅದು ಆರೋಪವೋ, ವಿಚಾರಣೆಯೋ ತಿಳಿಯದೇ, ‘ಅವಳು ಹೇಳಿದಳು. ನೀವೂ ಹೇಳಿ’ ಎಂದೆ. ಅವರು ಮುಂಬಾಗಿ ಮೆಲುದನಿಯಲ್ಲಿ ಮಾತನಾಡತೊಡಗಿದರು: ‘ಕೆಲಸ ಹುಡುಕುತ್ತ ನನ್ನ ಮಗ ಹಡಗು ಹತ್ತಿ ಕೆನಡಾಗೆ ಅಕ್ರಮ ವಲಸೆ ಹೊರಟಿದ್ದ. ದಾರಿಯಲ್ಲಿ ಡರ್ಬಾನಿನಲ್ಲಿ ಸಿಕ್ಕಿಕೊಂಡ. ಅಲ್ಲಿ ಗುರುದ್ವಾರದವರ ಕೈಗೆ ಸಿಕ್ಕು ಪುಣ್ಯವಶಾತ್ ಮರಳಿ ಬಂದ. ಬಂದಮೇಲೆ ಅವನು ಖಲಿಸ್ತಾನ್ ಟರರಿಸ್ಟ್ ಎಂದು ಬೆನ್ನುಹತ್ತಿದರು. ನನ್ನನ್ನು ಬಂಧಿಸಿ ಜೈಲಿಗೆ ಹಾಕಿದರು. ಕೊನೆಗೆ ವ್ಯವಸಾಯ ಶುರು ಮಾಡಿದ. ಕೈಹತ್ತಲಿಲ್ಲ. ಅವರೂ ಅವನ ಬೆನ್ನು ಬಿಡಲಿಲ್ಲ. ಅವನಿರುವಷ್ಟೂ ದಿನವೂ ಒಂದಿಲ್ಲ ಒಂದು ತೊಂದರೆ. ಕೊನೆಗೀಗ ಹೀಗೆ..’. ಮಾತಾಡುತ್ತ ಆಡುತ್ತ ಅಪ್ಪ ಗದ್ಗದರಾದರು.

ಒಂದೊಂದೂ ಬದುಕಿನ ಹಿಂದೆ, ಸಾವಿನ ಹಿಂದೆ ಅದೆಷ್ಟು ಗುಟ್ಟುಗಳು! ಒಳಸುಳಿಗಳು!!

ಇಂಥ ಎಷ್ಟನ್ನೋ ಪುಸ್ತಕದಲ್ಲಿ ದಾಖಲಿಸಲಾಗಿಲ್ಲ. ಆದರೆ ಅವು ಕಲಿಸಿದ ಪಾಠವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಬರಪೀಡಿತ, ಒಣನೆಲದ ಪ್ರದೇಶಗಳಿಗಿಂತ ನೀರಾವರಿ ಇರುವಲ್ಲೇ ರೈತ ಆತ್ಮಹತ್ಯೆ ಹೆಚ್ಚು ಸಂಭವಿಸುತ್ತಿದೆ. ಇದನ್ನು ಹೇಗೆ ಅರ್ಥೈಸುವಿರಿ? 

ನೀರಾವರಿ ಇರುವಲ್ಲಿ ಕೃಷಿಗೆ ಬಂಡವಾಳ ಹೂಡಿಕೆ ಇರುತ್ತದೆ. ಅಲ್ಲಿ ಜಮೀನೆಂದರೆ ಆಸ್ತಿ, ಅಂತಸ್ತು, ಶ್ರೇಣಿಯ ಸಂಕೇತ. ಜಾತಿ-ಲಿಂಗಗಳಿಗಿಂತ ಜಮೀನು ಕೊಡುವ ಅಂತಸ್ತೇ ದೊಡ್ಡ ಐಡೆಂಟಿಟಿ. ಕೊನೆಗೆ ಉತ್ಪಾದನೆಗಿಂತಲೂ ಭೂಮಿಯೇ ಹೆಮ್ಮೆಯ ಪ್ರತೀಕವಾಗಿಬಿಡುತ್ತದೆ. ಬಂಡವಾಳ ಒತ್ತಾಯಿಸುವ ಪುರುಸೊತ್ತಿಲ್ಲದ ಕೃಷಿಯ ದುಷ್ಪರಿಣಾಮಗಳು ಹೆಂಗಸರು, ಮಕ್ಕಳು, ಮುದುಕರು, ಕೃಷಿಕೂಲಿಗಳ ದಿನನಿತ್ಯದ ಬದುಕಿನಲ್ಲಿ ಆಗುತ್ತವೆ. ಇದು ಪುರುಷಪ್ರಾಧಾನ್ಯ ಹುಲುಸಾಗಿ ಬೆಳೆಯಲು ಇಂಬು ಕೊಟ್ಟು ಸ್ತ್ರೀಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು ಹೆಚ್ಚಲೂ ಕಾರಣವಾಗಿದೆ.

ಕೃಷಿ ಬಿಕ್ಕಟ್ಟು ಕೊನೆಗೊಳಿಸುವುದು ಹೇಗೆ?

ಸಾವಯವ ಕೃಷಿಯಿಂದ ಬೆಳೆ ಸಾಲ, ಬೀಜಸಾಲ ತಪ್ಪುತ್ತದೆ; ರೈತ ಆತ್ಮಹತ್ಯೆ ಕಡಿಮೆಯಾಗುತ್ತದೆನ್ನುತ್ತಾರೆ. ಆದರೆ ನನಗೆ ಹಾಗೆನಿಸುವುದಿಲ್ಲ. ಇಷ್ಟು ಬೃಹತ್ ದೇಶದ ಜನಸಂಖ್ಯೆಗೆ ಕೈಗೆಟುಕುವ ದರದಲ್ಲಿ ಪೌಷ್ಟಿಕಾಹಾರ ಒದಗಿಸುವುದು ಹಸಿರು ಕ್ರಾಂತಿಯ ನಂತರವೂ ಕಷ್ಟವಾಗಿರುವಾಗ ಆರೋಗ್ಯಕರ, ವೈಜ್ಞಾನಿಕ ಆಧುನಿಕ ಕೃಷಿಪದ್ಧತಿಯಷ್ಟೇ ಬಿಕ್ಕಟ್ಟಿಗೆ ಪರಿಹಾರವಾಗಬಲ್ಲದು. ಬಂಡವಾಳ ಕೃಷಿಯನ್ನು ಸರಕೀಕರಣಗೊಳಿಸಿದೆ. ಕೃಷಿ ಅತಿ ಯಾಂತ್ರೀಕರಣಗೊಂಡು, ಅನಗತ್ಯ ಖರ್ಚು ಸೃಷ್ಟಿಸಿ, ನಿರುದ್ಯೋಗಕ್ಕೆ ಕಾರಣವಾಗಿದೆ. ಅಧ್ಯಯನದ ವೇಳೆ ದಾಖಲಿಸಿರುವಂತೆ ಕೃಷಿ ಯಂತ್ರೋಪಕರಣಗಳಲ್ಲಿ ೮೧% ಅನವಶ್ಯಕವಾಗಿವೆ. ೧೯% ಮಾತ್ರ ಬಳಕೆಯಾಗುತ್ತಿವೆ. ೧೯% ಯಂತ್ರೋಪಕರಣಗಳಿಗೆ; ವರದಕ್ಷಿಣೆ, ಅನಾರೋಗ್ಯ ಮತ್ತಿತರ ಸಮಸ್ಯೆಗಳಿಗೆ ರೈತರ ಬಹುಪಾಲು ಲಾಭ ಸೂರೆಗೊಂಡು ಅವರು ಸಾಲಗಾರರಾಗಿದ್ದಾರೆ. ಎಂದೇ ಕೃಷಿಯ ಯಾಂತ್ರೀಕರಣ ಕಡಿಮೆಯಾಗಬೇಕಿದೆ. ಬೃಹತ್ ಬಂಡವಾಳಗಾರರು, ವ್ಯಾಪಾರಿ-ದಲ್ಲಾಳಿಗಳಿರದ ರೈತಸ್ನೇಹಿ ಕೃಷಿನೀತಿ ಅವಶ್ಯವಾಗಿದೆ.

ಮಹಿಳೆಯರ ಬಿಕ್ಕಟ್ಟುಗಳಿಗೆ ಪರಿಹಾರವೇನು? 

‘ನೀನು ಹುಡುಗಿ, ಓದಿದ್ದು ಸಾಕು, ಗಂಡು ಸಿಗುವುದಿಲ್ಲ, ನಿನ್ನ ವರದಕ್ಷಿಣೆಗೆ ಹಣ ಕೂಡಿಡಬೇಕು’ ಎನ್ನುವಂತಹ ಮಾತುಗಳು ಇವತ್ತಿಗೂ ಸಾಮಾನ್ಯವೇ ಆಗಿರುವಾಗ, ಜಾಗೃತಿಗಾಗಿ ಸಂಘಟಿತರಾಗುವುದೊಂದೇ ಮಹಿಳೆಯರಿಗಿರುವ ದಾರಿ. ಅದು ಇವತ್ತು ಆಗುತ್ತಿರುವ ರೀತಿಯಿಂದ, ಪ್ರಮಾಣದಿಂದ ಸಾಧ್ಯವಿಲ್ಲ. ಮಹಿಳಾ ಚಳುವಳಿಗೆ ಮಹಿಳೆಯರ ವ್ಯಕ್ತಿಗತ ಸಮಸ್ಯೆಗಳ ಬಗೆಗೆ ಗಮನ ಕಡಿಮೆಯಾಗುತ್ತಿದೆ ಎಂದು ನನಗೆ ಗಾಢ ಅಸಮಾಧಾನವಿದೆ. ನಾವು ಪಿತೃಪ್ರಾಧಾನ್ಯವನ್ನು ಸೂಕ್ತವಾಗಿ ಗುರುತಿಸಿದೆವು. ಸಮಾಜದ ಆಂತರಿಕ ರಚನೆ ಬದಲಾದರೆ ಎಲ್ಲವು ಸರಿಯಾಗುವುದೆಂದು ಹೋರಾಡಿದೆವು. ಆದರೆ ವರದಕ್ಷಿಣೆ ಆಗಲೂ ಇತ್ತು, ಈಗಲೂ ಇದೆ. ವರದಕ್ಷಿಣೆ ಬಗ್ಗೆ ನಾವು ಮಾತ್ರ ಮಾತನಾಡುವುದನ್ನೇ ನಿಲಿಸಿದ್ದೇವೆ. ನಮ್ಮ ಗ್ರಹಿಕೆ ವಿಶಾಲವಾಗುತ್ತ ಹೋದಂತೆ, ಹೆಣ್ಮಕ್ಕಳನ್ನು ಬುಡಮಟ್ಟ ಕಾಡುವ ಮೂಲಭೂತ ಪ್ರಶ್ನೆಗಳ ಕೈಬಿಟ್ಟು ಪಿತೃಪ್ರಾಧಾನ್ಯವೆಂಬ ಒಂದೇ ಎಳೆ ಹಿಡಿದು ಜಗ್ಗಾಡತೊಡಗಿದ್ದೇವೆ.

ಇವತ್ತು ಮಹಿಳಾ ಚಳುವಳಿಯ ದೊಡ್ಡ ಸಮಸ್ಯೆ ಅದು ಎನ್ಜಿಒಕರಣಗೊಂಡಿರುವುದು. ಎನ್ಜಿಒಗಳು ವ್ಯವಸ್ಥೆಯ ಆರ್ಥಿಕ, ರಾಜಕೀಯ ಲೋಪಗಳ ಕುರಿತು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಸರ್ಕಾರದ ‘ಸ್ತ್ರೀಶಕ್ತಿ’ ಕಾರ್ಯಕ್ರಮಗಳಾದರೋ ಹೆಣ್ಮಕ್ಕಳನ್ನು ಸುಮ್ಮನಿರಲು, ಇರುವಂತೇ ಇರಲು ಒತ್ತಾಯಿಸುತ್ತವೆಯೇ ಹೊರತು ಸಮಗ್ರ ಜಾಗೃತಿಗೆ ಕಾರಣವಾಗುತ್ತಿಲ್ಲ. ಎಂದೇ ಸಮಸಮಾಜ ಬಯಸುವ ಪ್ರಗತಿಪರ-ಪರಿಸರ-ಎಡಪಂಥೀಯ ಚಳುವಳಿಗಳೆಲ್ಲ ಮಹಿಳಾ ಸಮಸ್ಯೆಗಳನ್ನು ಮುಖ್ಯವೆಂದು, ತಮ್ಮದೆಂದು ಪರಿಗಣಿಸಬೇಕು. ಎಲ್ಲ ಸಮಸ್ಯೆಗಳ ಲಿಂಗಸಂಬಂಧಿ ಆಯಾಮ ಕುರಿತು ಚರ್ಚಿಸಬೇಕು. ಜೊತೆಗೆ ಮಹಿಳಾ ಚಿಂತನೆಯೂ ಎಲ್ಲ ವಾದಗಳ ಸತ್ವ ಹೀರಿ ಅದರಾಚೆ ಬೆಳೆಯಬೇಕು. ಕೊನೆಯ ಮಹಿಳೆ ಮುಕ್ತಳಾಗುವವರೆಗೂ, ನಡುರಾತ್ರಿಯೂ ಮಹಿಳೆ ನಿರ್ಭಯಳಾಗಿ ಓಡಾಡುವಂತೆ ಆಗುವವರೆಗೂ ಚಳುವಳಿ ಮುಂದುವರೆಯಬೇಕು. ಅದೊಂದೇ ಸಮತೆಯ ಕನಸನ್ನು ಬಿತ್ತುವ ಶಕ್ತಿಯಾಗಿದೆ.

ಮಾಳವಾದಲ್ಲಿ ಏಳನೇ ತರಗತಿಯ ಒಂದು ಹುಡುಗಿ ನನ್ನ ಹಿಂದೆಮುಂದೆ ಸುಳಿಯುತ್ತ ಮಾತು, ಬರವಣಿಗೆಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದಳು. ಕೊನೆಯ ದಿವಸ ‘ನೀನು ಮಹಿಳಾ ವಿಮೋಚನೆಗಾಗಿ ಕೆಲಸ ಮಾಡ್ತಿದೀಯಾ?’ ಎಂದಳು. ೧೨-೧೩ ವರ್ಷದ ಹುಡುಗಿಯ ಬಾಯಿಯಲ್ಲಿ ಆ ಪದ ಕೇಳಿ ನನಗೋ ಅತ್ಯಾಶ್ಚರ್ಯ. ಅವಳಿಗದು ಹೇಗೆ ಗೊತ್ತಾಯಿತೆಂದು ಕೇಳಿದೆ. ತನಗೆ ಸಮಾಜ ಪುಸ್ತಕದಲ್ಲಿ ಹಾಗೊಂದು ಪಾಠ ಇದೆಯೆಂದು ಹೇಳಿದಳು.

ಪಠ್ಯದಲ್ಲಿ ಇಂಥ ಸೂಕ್ಷ್ಮವಿಷಯಗಳನ್ನಿಟ್ಟರೆ, ಬೆಳೆಯುವ ಹುಡುಗಹುಡುಗಿಯರಲ್ಲಿ ಸಮತೆಯ ಭಾವ ತುಂಬಿದರೆ, ನಮ್ಮ ನಾಳೆಗಳು ಹೇಗಿದ್ದಾವು, ಊಹಿಸಿಕೋ..

ಸ್ತ್ರೀವಾದ ಎಂಬ ಪದ ಕೇಳಿದರೆ ಕೆಲವರಿಗೆ ಮೈಮೇಲೆ ಮುಳ್ಳುಗಳೇಳುತ್ತವೆ..

ಲಿಂಗತಾರತಮ್ಯದ ಫಲಸುಖಾನುಭವಿಗಳು ಅವರು. ಅವರಿಗೆ ಹಾಗೆನಿಸುವುದು ಸಹಜ. ದಲಿತನೊಬ್ಬ ಮೇಲ್ಜಾತಿಯವರೆದುರು ತನ್ನ ಹಕ್ಕುಗಳ ಕೇಳಿದಾಗ ಯಾವ ವಿರೋಧ ಬರುವುದೋ, ಹೆಣ್ಣು ತನ್ನ ಹಕ್ಕುಗಳ ಕುರಿತು ಖಚಿತವಾಗಿ ಮಾತನಾಡತೊಡಗಿದಾಗಲೂ ಅದೇ ಆಗುತ್ತದೆ. ಆದರೆ ಸಮಾಜ ತಿಳಿಯಲಿ: ಸ್ತ್ರೀವಾದ ಎಂದರೆ ಮಹಿಳೆ ಗಂಡಸರಿಂದ ಅಧಿಕಾರ ಕಸಿಯುವುದಲ್ಲ, ಅಧಿಕಾರದ ವ್ಯಾಖ್ಯೆ ಬದಲಿಸುವುದು. ಸ್ತ್ರೀವಾದ ಎಂದರೆ ಪುರುಷ ವಿರೋಧವಲ್ಲ; ಸಮತೆಯ, ಘನತೆಯ ಬದುಕನ್ನು ಪ್ರತಿಪಾದಿಸುವುದು.


(ಸಂದರ್ಶನದ ಬರಹ ರೂಪ: ಡಾ. ಎಚ್. ಎಸ್. ಅನುಪಮಾ)




Tuesday, 28 February 2017

ಸಶಬ್ದ




(ಚಿತ್ರ: ಅಂತರ್ಜಾಲ)
ಒಂದು ನಸುಕು
ಇನ್ನೂ ಮಬ್ಬುಗತ್ತಲು
ಭಾರೀ ಸದ್ದು!
ಬೇಲಿ ದೂಡಿ ಕಲ್ಲು ಝಾಡಿಸಿ
ಇದ್ದಲ್ಲೆ ಅತ್ತಿತ್ತ ಸರಿದು ಧೂಳು ಹಾರಿಸಿ
ಬೃಹದಾಕಾರದ ಮಿಶಿನು
ಬಂದೆನೆಂದು ಸಾರಿತು

ಮೇಲೆ ಗೂಡಿನಲಿ ಮಲಗಿದ್ದ ಜೋತಮ್ಮ
ಭಯಾನಕ ಸದ್ದಿಗೆ ಎಚ್ಚೆತ್ತು ಕಣ್ಣುಜ್ಜುತ್ತ
‘ಮಾಮ್, ವಾಟೀಸ್ ದಿಸ್’ ಎಂದಳು.
ಸಂಪಿಗೆ ಮರದ ತುತ್ತತುದಿ ಮಹಲಿನ
ಮರಿಕಾಗೆ, ಕಾಗಮ್ಮ
ಏನೋ ಆಗಿಹೋಯಿತೆಂದು
ಹುಯ್ಯಲಿಟ್ಟರು.
ಪುಟ್ಟ ಬೆಕ್ಕುಮರಿ ಕಂಗಾಲು
ಹಿಂದೆಮುಂದೆ ಸುಳಿಯುತ್ತ
ನನ್ನ ಕಾಲುಗಳತ್ತಲೇ ನೆಟ್ಟಿದೆ ಕಣ್ಣು..

ಕೊರೆವ ಸದ್ದು ಕಿವಿ ತುಂಬುತಿರಲು
ಹೊರಹೋಗಿ ನೋಡುತ್ತೇನೆ
ಬೀದಿಯಲಿ ಹೆಜ್ಜೆಗೊಂದೊಂದು ಗುರುತು
ನೆಲ ಕೊರೆದು ಆಳಬಾವಿ ತೋಡಲು.
ಗುರುಗುಡುತ್ತ ಬೀಡುಬಿಟ್ಟಿದೆ ಭಾರೀ ಮಿಶಿನು!

ಒಂದಿಡೀ ದಿವಸ ಕೊರೆದದ್ದೇ ಕೊರೆದದ್ದು
ಈ ಬೋರು ಆ ಬೋರು ಮತ್ತೊಂದು ಬೋರು
ನೂರಿನ್ನೂರು ಮುನ್ನೂರು ನಾನೂರು
ಕೊರೆದ ಅಡಿ ಇಂಚಿಗು ಲೆಕ್ಕ ಉಂಟು.
ಆದರೇನು, ಎಲ್ಲು ಇಲ್ಲ ನೀರು
ಕಿಸೆ ಕಂಗಾಲು
ಜನ ಕಂಗಾಲು
ಮಿಶಿನು ಕಂಗಾಲು
ಅಲ್ಲಿ ನೀರಿಲ್ಲ ಇಲ್ಲಿಯೂ ಇಲ್ಲ
ಸದ್ದು ಮಾಡಿದ್ದೇ ಬಂತು ನೀರೇ ಇಲ್ಲ
ಭುಸ್ಸೆಂದು ನಿಟ್ಟುಸಿರ್ಗರೆದು
ವಾಪಸು ಹೊರಟಿತು ಮಿಶಿನು
ಅಬಬ, ಏನು ಗದ್ದಲ ಏನಬ್ಬರ!
ಬರುವಂತೆ ಹೋಗುವಾಗಲೂ?

‘ಕೊರೆತವೇ ಹಾಗೆ,
ಸೋಲುಗೆಲುವು ಇರುವುದೇ
ಕೊರೆವ ಸದ್ದಿಗೆ ಬೆಚ್ಚದಿರಲು ಸಾಧ್ಯವೇ?’
ನನ್ನ ಅಚ್ಚರಿಗೆ
ಗೇರು ಮರದ ಕಾಂಡ ಕೊರೆವ ಹುಳು
ತೂತಿನಿಂದ ಹೊರಗಿಣುಕಿ ನಕ್ಕು
ಟ್ರೊಂಯ್ ಟ್ರೊಂಯ್ಯನೆ ಕೊರೆಯುತ್ತ
ಮತ್ತೆ ಒಳ ಸರಿಯಿತು.

ಹೌದಲ್ಲ ಹುಳವೇ,
ಕೊರೆವುದು ಎಂದಿಗು ಸಶಬ್ದ.
ಮೊಗೆವುದು, ನನದೆನುವುದು ಸಶಬ್ದ.
ಸಿಗಲಿಲ್ಲವೆನುವುದು ಸಶಬ್ದ.
ಕೊರಗುತ್ತ ಮರಳುವುದೂ ಸಶಬ್ದ..
ಯಂತ್ರವೆಂದಿಗು ಕರ್ಕಶ ಶಬ್ದ.

ಕೊಡುವಾಗ ಕೊಟ್ಟುಕೊಳುವಾಗ
ಅರಸುವಾಗ ಒಪ್ಪಿಸಿಕೊಳುವಾಗ
ನಿಶ್ಶಬ್ದವಾಗಿರಲು ಯಂತ್ರ ಹೆಣ್ಣಲ್ಲವಲ್ಲ?!


(ಅಂತರ್ಜಾಲ ಚಿತ್ರ)

Tuesday, 21 February 2017

ಲಾಲ್ ಪೇರಿ


ಬ್ರಿಟಿಷ್ ಲೇಖಕ ವಿಲಿಯಂ ಡ್ಯಾಲ್‌ರಿಂಪಲ್‌ನ ಏಳನೆಯ ಪುಸ್ತಕ ‘ನೈನ್ ಲೈವ್ಸ್.’ ಅವರು ದೆಹಲಿಯ ಬಗೆಗೆ, ಮುಘಲ್ ಕಾಲದ ಭಾರತದ ಬಗೆಗೆ ಆಸಕ್ತಿಯಿಂದ ಹಳೆಯ ಲೈಬ್ರರಿಗಳಲ್ಲಿ, ಖಾಸಗಿ ಸಂಗ್ರಹಗಳಲ್ಲಿ ದಾಖಲೆಗೆ ತಡಕಾಡಿ ಮೂರು ಅತ್ಯುತ್ತಮ ಎನ್ನಬಹುದಾದ, ಸಂಶೋಧನಾ ಗ್ರಂಥಗಳಾದರೂ ಕಾದಂಬರಿಯಷ್ಟು ಆಸಕ್ತಿಯಿಂದ ಓದಿಸಿಕೊಂಡು ಹೋಗಬಲ್ಲ ಪುಸ್ತಕಗಳನ್ನು ಬರೆದಿದ್ದಾರೆ. ‘ಸಿಟಿ ಆಫ್ ಜಿನ್ಸ್,’ ‘ಲಾಸ್ಟ್ ಮುಘಲ್’ ಹಾಗೂ ‘ವೈಟ್ ಮುಘಲ್ಸ್’ ಪುಸ್ತಕಗಳು ‘ಇಂಡೋಫಿಲ್’ ಎಂಬ ಬಿರುದನ್ನು ಅವರಿಗೆ ತಂದಿತ್ತರೂ ಕುರುಡು ಭಾರತ ಪ್ರೇಮ ಅವರದಲ್ಲ. ಹೆಚ್ಚು ಕಡಿಮೆ ಎರಡು ದಶಕ ಕಾಲ ಭಾರತದಲ್ಲೇ ಅಲೆಯುತ್ತ ಕಳೆದಿರುವ ಆತ ತನ್ನ ಮನೆಯೆಂದರೆ ‘ದೆಹಲಿ’ ಎಂಬಷ್ಟೇ ಆಗಿಹೋಗಿರುವುದಾಗಿ ಹೇಳಿಕೊಂಡಿದ್ದಾರೆ. ಬರೀ ಸಂಶೋಧನಕಾರನ ಚಿಕಿತ್ಸಕ ಬುದ್ಧಿಯಲ್ಲದೆ, ತೆರೆದ ಮನದ ವಿಶ್ಲೇಷಣೆ, ಕುತೂಹಲ, ಮಾನವ ಪ್ರೇಮ ಇವೆಲ್ಲ ತುಂಬಿರುವುದು ಆ ಪುಸ್ತಕಗಳನ್ನು ಓದುತ್ತ ಹೋದಂತೆ ಅರಿವಾಗುತ್ತದೆ. ಭಾರತ ಉಪಖಂಡದ ವಿವಿಧ ಪ್ರದೇಶ, ಭಾಷೆ, ಆಸಕ್ತಿ, ಧಾರ್ಮಿಕ ಹಿನ್ನೆಲೆಗಳ ಒಂಭತ್ತು ಜನರನ್ನು ಭೇಟಿಯಾಗಿ ಅವರ ಪೂರ್ವಾಪರ ಅರಿತು, ಅದನ್ನು ಭೂತ ವರ್ತಮಾನದ ಸಾಮಾಜಿಕ, ರಾಜಕೀಯ ವಿದ್ಯಮಾನಗಳ ಜೊತೆ ವಿಶ್ಲೇಷಿಸುವ ಅಪೂರ್ವ ಪ್ರವಾಸ ಕಥನ ‘ನೈನ್ ಲೈವ್ಸ್’.

ಪಾಶ್ಚಾತ್ಯ ಜಗತ್ತಿಗೆ ಭಾರತವೆಂದರೆ ಸದಾ ಪುರಾತನವಾದ, ಎಂದೂ ಬದಲಾಗದ ಧಾರ್ಮಿಕ ಜ್ಞಾನದ ನಾಡು. ಭಾರತದಲ್ಲಾದರೋ ಧಾರ್ಮಿಕ ಅಸ್ಮಿತೆ ಎಂಬುದು ಜಾತಿ - ಗುಂಪು - ಪ್ರದೇಶ - ವಂಶಗಳಿಗೆ ಅಂಟಿಕೊಂಡಿದ್ದು ಆ ಸಂಸ್ಥೆಗಳ ಜೊತೆಗೇ ಬದಲಾಗುತ್ತ ಸಾಗಿದೆ  ಎನ್ನುವುದು ಅವನ ಅಬ್ಸರ್ವೇಷನ್. ಬದಲಾವಣೆಯ ವೇಗಕ್ಕೆ ಒಂದಕ್ಕೊಂದು ಘರ್ಷಣೆಗೊಳಗಾಗಿರುವುದನ್ನು, ರಾಜಕೀಯ, ಕೋಮು ಹಿಂಸಾಚಾರಕ್ಕೆ ಬಲಿಯಾದವರು ಧರ್ಮದ ಮಬ್ಬಿನಲ್ಲಿ ಸಾಂತ್ವನ ಬಯಸುತ್ತಿರಬಹುದೇ ಎಂಬುದನ್ನು ತನ್ನ ತಿರುಗಾಟದ ವೇಳೆ ಆತ ಪರಿಶೀಲಿಸಿದ್ದಾನೆ. ಬದಲಾಗುತ್ತಿರುವ ಕಾಲದಲ್ಲಿ ಇನ್ನೂ ಪವಿತ್ರ, ಧಾರ್ಮಿಕ ಎಂಬುದಾಗಿ ಯಾವುದು ಉಳಿದಿದೆ? ಯಾವ ಸ್ವರೂಪದಲ್ಲಿ ಉಳಿದಿದೆ? ಯಾವ ಬದಲಾವಣೆಗೆ ಮುಖವೊಡ್ಡಿದೆ? ಎಂದೆಲ್ಲ ಪರಿಶೀಲಿಸುತ್ತ ೯ ಜನ ಧಾರ್ಮಿಕ ವ್ಯಕ್ತಿಗಳನ್ನು ಭೇಟಿಯಾಗಿದ್ದಾನೆ. ಅದಕ್ಕಾಗಿ ಈ ದೊಡ್ಡ ದೇಶವನ್ನು ಸುತ್ತಿದ ತನ್ನ ಎರಡು ದಶಕಗಳ ಅನುಭವವನ್ನೆಲ್ಲ ಬಳಸಿಕೊಂಡಿದ್ದಾರೆ. ಅವರು ಭೇಟಿ ಮಾಡಿದ ಒಂಭತ್ತು ಜನ  ಭಾರತ ಉಪಖಂಡದಲ್ಲಿ ಶೀಘ್ರ ಬದಲಾಗುತ್ತಿರುವ ಧಾರ್ಮಿಕ ಮುಖವನ್ನು ತೆರೆದು ತೋರಿಸುತ್ತಾ ವಾಸ್ತವವನ್ನು ಪ್ರತಿನಿಧಿಸಿದ್ದಾರೆ.

 ಅಂತಹವರಲ್ಲಿ ಒಬ್ಬಳು ಸೂಫಿ ಭಕ್ತೆ ಲಾಲ್ ಫೇರಿ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಷೆಹ್ವಾನ್ ಷರೀಫ್ ಸೂಫಿ ಸಂತ ಲಾಲ್ ಶಹಬಾಜ್ ಖಲಂದರ್ ಅವರ ದರ್ಗಾದಿಂದ ವಿಖ್ಯಾತವಾದುದು. ಖಲಂದರ್ ಸಂತರ ಭಕ್ತಾನುಯಾಯಿ ‘ಲಾಲ್ ಫೇರಿ’ ಉಳಿದ ಸೂಫಿಗಳ ಹಾಗೆಯೇ ಲೋಕರೂಢಿಯನ್ನು ಮುರಿದವಳು. ಹೆಣ್ಣಾದರೂ ಸೂಫಿಯಾದವಳು. ಬಿಹಾರದ ಕುಗ್ರಾಮವೊಂದರ ಹೀನಾ ಕೊನೆಗೆ ಪಾಕಿಸ್ತಾನದ ಸಿಂಧ್‌ನ ಖ್ಯಾತ ದರ್ಗಾವೊಂದರ ಅನುಯಾಯಿಯಾಗುವ ತನಕ ಸಾಗಿ ಬಂದ ದಾರಿ ಹಲವು ಅಪಘಾತ, ಆಕಸ್ಮಿಕ, ದುಃಖಮಯ ತಿರುವುಗಳಿಂದ ಕೂಡಿದೆ. ಅವಳಷ್ಟೇ ಅವಳು ನಂಬಿ ಬಂದ ಸೂಫಿ ಮಾರ್ಗವೂ ಇಂದು ಅಪಾಯದಲ್ಲಿದೆ. ಅದನ್ನು ಡ್ಯಾಲ್‌ರಿಂಪಲ್‌ನ ಟಿಪ್ಪಣಿ ಸಹಿತ ಅವಳ ಬಾಯಿಯಲ್ಲೇ ಕೇಳಬೇಕು:



‘ಭಾರತ ಬಾಂಗ್ಲಾ ಗಡಿ ಭಾಗದಲ್ಲಿರುವ ಬಿಹಾರದ ಸೋನೆಪುರ ಎಂಬ ಸಣ್ಣ ಹಳ್ಳಿಯವಳು ನಾನು. ಅಂದಿನ ನನ್ನ ಹೆಸರು ಹೀನಾ. ಕಾಡಿನಂಚಿನ ನಮ್ಮ ಹಳ್ಳಿ ಎಷ್ಟು ಫಲವತ್ತಾಗಿತ್ತೆಂದರೆ ಬಡವರಾಗಿದ್ದರೂ ಮಕ್ಕಳಾದ ನಾವೆಂದೂ ಹಸಿದಿರುತ್ತಿರಲಿಲ್ಲ. ನನ್ನ ಬಾಲ್ಯದ ನೆನಪೆಂದರೆ ಮರ ಹತ್ತಿ ಹಣ್ಣು ಕುಯ್ದಿದ್ದೇ. ಮಾವು, ನೇರಳೆ, ಪೇರಲೆ, ಖರ್ಜೂರ, ಸಿಹಿತೆಂಗು - ಹೀಗೆ ಅಂಗಡಿಯಿಂದ ಯಾವ ಹಣ್ಣನ್ನೂ ಕೊಳ್ಳಬೇಕಿರಲಿಲ್ಲ. ವರ್ಷದ ಹನ್ನೆರೆಡೂ ತಿಂಗಳೂ ಯಾವುದಾದರೊಂದು ಪುಕ್ಕಟೆ ದೊರೆಯುತ್ತಿತ್ತು. ಹಾಗೆಯೇ ಕಾಡಿನಲ್ಲೂ ಕಾಡುಕುರಿ ಹಾಗೂ ಜಿಂಕೆ ಹೇರಳವಾಗಿರುತ್ತಿದ್ದವು. ನನ್ನಪ್ಪ ಬೇಟೆಗೆ ಹೋದ ಒಂದು ತಾಸಿನಲ್ಲಿ ಏನಾದರೂ ಬೇಟೆ ಹಿಡಿದೇ ಮನೆಗೆ ಬರುತ್ತಿದ್ದ.

ನಾನು ಸಣ್ಣವಳಿರುವಾಗ ಹಿಂದೂ ಮುಸ್ಲಿಮರೆಲ್ಲ ಸೋದರರೇನೋ ಎಂಬಂತೆ ಎಲ್ಲ ಇದ್ದರು. ನಾವು ಖುರೇಶಿಗಳು. ನಮ್ಮ ಮನೆಯ ಹೆಂಗಸರನ್ನು ಕೂಲಿಗೆ ಕಳಿಸುತ್ತಿರಲಿಲ್ಲ. ನನ್ನ ಆತ್ಮೀಯ ಗೆಳತಿ ಹಿಂದೂ, ಬ್ರಾಹ್ಮಣರವಳು. ನನ್ನ ತಂದೆಗೂ ಅಷ್ಟೇ, ಹಿಂದೂ ಗೆಳೆಯರು. ದೇವಾಲಯ ಮತ್ತು ಮಸೀದಿ ಎರಡೂ ಅಕ್ಕಪಕ್ಕವೇ ಇದ್ದವು. ಜನ ಎರಡೂ ಕಡೆ ಹೋಗುತ್ತಿದ್ದರು.

ನನ್ನಪ್ಪ ಸತ್ತಾಗ ತೊಂದರೆಗಳು ಶುರುವಾದವು. ಅವನಿಗೆ ಟಿಬಿ ಕಾಯಿಲೆ ಬಂದು ಕೆಮ್ಮಿ ಕೆಮ್ಮಿ ರಕ್ತಕಾರಿ ತೀರಿಕೊಂಡ. ಅವನು ತೀರಿಕೊಂಡಿದ್ದೇ ನನ್ನ ಚಿಕ್ಕಪ್ಪ ಇದ್ದ ಸ್ವಲ್ಪ ಗದ್ದೆಯನ್ನು ಕಬಳಿಸಿದ್ದರಿಂದ ಅನಾಥರಾಗಿಬಿಟ್ಟೆವು. ಹೀಗೆ ಸೋದರಮಾವನ ಆಶ್ರಯಕ್ಕೆ ಬಂದೆವು. ಒಂದು ವರ್ಷದಲ್ಲಿ ಅಮ್ಮ ಮತ್ತೊಂದು ಮದುವೆಯಾದಳು. ನನ್ನ ಮಲತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ನಾನು ಹಾಗೂ ಅಣ್ಣಂದಿರೆಂದರೆ ಅವನಿಗೆ ಸಿಟ್ಟು. ಅದರಲ್ಲೂ ಕುರೂಪಿಯಾದ ನನ್ನಂಥವಳಿಗೆ ಅನ್ನ ಹಾಕಲು ತಾನೇಕೆ ದುಡಿಯಬೇಕೆಂಬುದು ಅವನ ತಕರಾರು. ಆದರೆ ಅಮ್ಮ ನನಗೆ ಯಾವಾಗಲೂ ಅರೆ ಹೊಟ್ಟೆಯಾಗಲು ಬಿಟ್ಟವಳಲ್ಲ.

ನನಗಾಗ ಹದಿಮೂರು ವರ್ಷ. ನನ್ನ ಆಪ್ತ ಗೆಳತಿ ಮುಸಲ್ಮಾನ ಹುಡುಗನನ್ನು ಪ್ರೀತಿಸಿ ಮದುವೆಯಾಗಲು ಸಾಧ್ಯವಾಗದೇ ಇದ್ದದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಳು. ಆಗ ನಮ್ಮೂರಲ್ಲಿ ವಾತಾವರಣ ಕಾವೇರತೊಡಗಿತು. ಹಿಂದೂಗಳು ಮುಸಲ್ಮಾನರನ್ನು ದ್ವೇಷಿಸತೊಡಗಿದರು. ಅದೇ ವೇಳೆಗೆ ಪೂರ್ವ ಪಾಕಿಸ್ತಾನ (ಬಂಗಾಳ) ದಲ್ಲಿ ಹಿಂದೂಗಳನ್ನು ಮುಸ್ಲಿಮರು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಬಗ್ಗೆ ವರದಿಗಳು ಬರುತ್ತಿದ್ದವು. ನಮಗೂ, ಬಾಂಗ್ಲಾದಲ್ಲಿ ನಡೆಯುವುದಕ್ಕೂ ಸಂಬಂಧವೇ ಇಲ್ಲದಿದ್ದರೂ ಮುಸಲ್ಮಾನರಾಗಿದ್ದಕ್ಕೆ ನಾವು ಶಿಕ್ಷೆ ಅನುಭವಿಸಬೇಕು ಎಂದು ಹಿಂದೂಗಳು ಹೇಳುತ್ತಿದ್ದರು. ‘ಮುಸ್ಲಿಮರನ್ನು ತರಿದು ರಾಶಿ ಹಾಕಿ, ಸೇತುವೆ ಕಟ್ಟಿ ರುಪ್ಶಾ ನದಿಯನ್ನು ದಾಟುತ್ತೇವೆ. ಅವರ ರಕ್ತದಲ್ಲಿ ಮೀಯುತ್ತೇವೆ’ ಎಂದು ಹಾಡು ಕಟ್ಟಿ ಹೇಳುತ್ತಿದ್ದರು.

ಹೀಗೇ ಪರಿಸ್ಥಿತಿ ಗಂಭೀರವಾಗುತ್ತಾ ಹೋಯಿತು. ಒಂದು ದಿನ ಮಸೀದಿಯಲ್ಲಿ ನಮಾಜು ನಡೆಯುತ್ತಿರುವಾಗ ಗೂಂಡಾಗಳು ಮಸೀದಿಯನ್ನು ಸುತ್ತುವರಿದರು, ‘ಮುಂಜಿ ಮಾಡಿಕೊಂಡ ಹೇಡಿಗಳೇ, ಹೊರಬನ್ನಿ’ ಎಂದು ಅಬ್ಬರಿಸತೊಡಗಿದರು. ಹೊರಬಂದ ಬಹುಪಾಲು ನಿಶ್ಶಸ್ತ್ರ ಗಂಡಸರನ್ನು ಕೊಂದರು. ನಾನು ಹೀಗೆ ನನ್ನ ಮಲತಂದೆ, ಚಿಕ್ಕಪ್ಪ, ಬಂಧುಗಳ ಹುಡುಗರನ್ನೆಲ್ಲ ಕಳೆದುಕೊಂಡೆ. ನನ್ನ ಸೋದರಮಾವನೊಬ್ಬ ಅಂದು ಮಸೀದಿಗೆ ಹೋಗದೇ ಉಳಿದುಕೊಂಡಿದ್ದ. ನಂತರ ನಾವೆಲ್ಲ ಹಗಲಲ್ಲಿ ಬಾಳೆಲೆ ಮುಚ್ಚಿದ ಗುಂಡಿಯೊಳಗೆ ಅವಿತು ಕುಳಿತು ಕಾಲ ತಳ್ಳತೊಡಗಿದೆವು.

ಹೀಗೇ ದಿನ ಕಳೆಯುತ್ತಿದ್ದವು. ಸನ್ನಿವೇಶ ತಿಳಿಯಾಗುವವರೆಗೆ ನಾವು ಆ ಊರನ್ನು ಬಿಟ್ಟುಬಿಡುವುದೆಂದೂ, ಗಡಿಯಾಚೆ ಬಾಂಗ್ಲಾದಲ್ಲಿದ್ದ ನಮ್ಮ ನೆಂಟರ ಮನೆಗೆ ಹೋಗುವುದೆಂದೂ ತೀರ್ಮಾನಿಸಿದೆವು. ಅಂತೂ ದಿನಗಟ್ಟಲೇ ಅಡವಿಯಲ್ಲಿ ನಡೆದು, ಒಂದು ದಿನ ಆ ಗಡಿ ತಲುಪಿದೆವು. ಗಡಿಕಾವಲು ಅಧಿಕಾರಿಗಳಿಗೆ ಚಿಕ್ಕಪ್ಪ ಲಂಚ ಕೊಟ್ಟಿದ್ದ. ಕಾವಲಿನವನ ಮನೆಯಲ್ಲೇ ಒಂದು ದಿನ ಉಳಿದೆವು. ಮರುಬೆಳಿಗ್ಗೆ ಅವನು ನಮ್ಮನ್ನು ಹೊಳೆ ದಾಟಿಸಿ ಆಚೆ ಕಳಿಸಿ, ಬಲಕ್ಕೆ ತಿರುಗಿ ಹೋಗಬೇಕೆಂದೂ, ಗುಂಡು ತಗುಲುವ ಸಾಧ್ಯತೆಗಳಿದ್ದು ಎಲ್ಲೂ ನಿಲ್ಲದೇ ಸುಮ್ಮನೇ ಓಡುತ್ತ ಹೋಗಬೇಕೆಂದೂ ತಿಳಿಸಿದ.



ಅಂತೂ ಎರಡು ದಿನ ಓಡಿ, ನಡೆದು, ನಮ್ಮ ನೆಂಟರ ಊರು ತಲುಪಿದೆವು. ನಮ್ಮನ್ನವರು ಆದರದಿಂದಲೇ ಕಂಡರು. ನಮಗಾಗಿ ಹೊಳೆದಂಡೆಯಲ್ಲಿ ಗುಡಿಸಲು ಹಾಕಿಕೊಟ್ಟರು. ಹೀಗೇ ಒಂದು ವರ್ಷ ಕಳೆಯಿತು. ನಮ್ಮ ಭಯ ಹೊಳೆಯ ಪ್ರವಾಹದ್ದಾಗಿತ್ತೇ ಹೊರತು ಜನರದ್ದಾಗಿರಲಿಲ್ಲ. ಅಲ್ಲೂ ನಮ್ಮೂರಿನ ಹಾಗೆಯೇ ಹಣ್ಣು ಹಂಪಲು, ನೀರು ಯಾವುದಕ್ಕೂ ಕೊರತೆಯಿರಲಿಲ್ಲ. ಮೊದಲ ಬಾರಿ ನಾನು ಶಾಲೆಗೂ ಸೇರಿದ್ದೆ.

ಆಗ ಬಂತು ೧೯೭೧. ನಿಜಕ್ಕೂ ಕೆಟ್ಟ ವರ್ಷ. ಬಾಂಗ್ಲಾದೇಶೀಯರು ಪಾಕಿಸ್ತಾನದೊಂದಿಗೆ ಯುದ್ಧ ಶುರುಮಾಡಿದರು. ಈ ಯುದ್ಧದಲ್ಲಿ ಬಿಹಾರಿಗಳು ಪಾಕಿಸ್ತಾನಿಗಳ ಜೊತೆ ಸೇರಿದ್ದರು. ಇದು ನಮಗ್ಯಾರಿಗೂ ಸಂಬಂಧಿಸಿರಲಿಲ್ಲ. ಆದರೆ ಬಂಗಾಳಿಗಳು ಬಿಹಾರಿಗಳ ಮೇಲೆ ರೊಚ್ಚಿಗೆದ್ದರು. ದ್ರೋಹಿಗಳೆಂದು ಕರೆದು, ಅಪಹರಿಸಿ, ತಲೆ ಕಡಿದು ಬಿಸಾಡುತ್ತಿದ್ದರು. ಹೆದರಿ ಅಡಗಿಕೊಂಡ ನಮ್ಮ ಕಡೆಯ ಎಷ್ಟೋ ಜನ ಹಸಿವಿನಿಂದ ಸತ್ತರು. ನದಿಯಲ್ಲಿ ಹೆಣಗಳು ತೇಲತೊಡಗಿ ಮೀನು ತಿನ್ನುವುದನ್ನೂ ಬಿಟ್ಟೆವು. ಹುಟ್ಟಿದೂರು ಸೋನೆಪುರದಲ್ಲಿ ಹಿಂದೂಗಳು ಮುಸ್ಲಿಮರನ್ನು ಕೊಂದರು ನಿಜ. ಇಂದು ಮುಸ್ಲಿಮರೇ ಮುಸ್ಲಿಮರನ್ನೇಕೆ ಕೊಲ್ಲುತ್ತಿದ್ದಾರೆಂದು ನನಗೆ ಅರ್ಥವಾಗಲಿಲ್ಲ. ಜಗತ್ತೇ ರಕ್ತಮಯವಾಗಿದ್ದಂತೆ ಎನಿಸಿಬಿಟ್ಟಿತು.

ಹೀಗೇ ಪರಿಸ್ಥಿತಿ ಬಿಗಡಾಯಿಸುತ್ತ ಹೋದಾಗ ಪಾಕಿಸ್ತಾನ ಸರ್ಕಾರವು ಬಂಗಾಳದ ಬಿಹಾರಿಗಳು ಬರಲೊಪ್ಪಿದರೆ ಅವರಿಗೆ ಪಾಕಿಸ್ತಾನದ ದಕ್ಷಿಣ ಪಂಜಾಬ್‌ನಲ್ಲಿ ಭೂಮಿ ಕೊಡುವುದಾಗಿ ಹೇಳಿತು. ಯಾವ ಪಂಜಾಬ್? ಎಲ್ಲಿದೆ? ಏನೂ ಗೊತ್ತಿರದಿದ್ದರೂ ಪಂಜಾಬ್ ತುಂಬ ಸಮೃದ್ಧ ಎಂದಷ್ಟೇ ಕೇಳಿ ತಿಳಿದಿದ್ದೆವು. ಅಲ್ಲದೇ ನಾವಿದ್ದ ಬಂಗಾಳವು ಯುದ್ಧ, ಪ್ರವಾಹಗಳಿಂದ ತುಂಬ ಬಡ ನೆಲವಾಗಿತ್ತು. ಹೀಗಾಗಿ ತುಂಬ ಉತ್ಸುಕರಾಗಿ ಪಂಜಾಬಿಗೆ ಹೊರಟೆವು.

ಈಗ ನಮ್ಮ ಕುಟುಂಬ ಒಡೆಯಿತು. ತನಗೆ ವಯಸ್ಸಾದುದರಿಂದ ಪ್ರಯಾಣ ಸಾಧ್ಯವಿಲ್ಲವೆಂದು ಅಮ್ಮ ನಮ್ಮ ಜೊತೆ ಬರಲು ನಿರಾಕರಿಸಿದಳು. ನಾನೂ ನನ್ನ ತಮ್ಮನೂ ಪಾಕಿಸ್ತಾನಕ್ಕೆ ಹೊರಟೆವು. ಖುಲ್ನಾ ಕ್ಯಾಂಪ್ ಬಳಿಯ ಬಿಹಾರಿ ಸ್ವಯಂಸೇವಕರು ನಮ್ಮ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು. ಅವಶ್ಯವಿರುವ ದಾಖಲೆಗಳೊಂದಿಗೆ ಟ್ರಕ್ಕುಗಳಲ್ಲಿ ಮೊದಲು ಕಲಕತ್ತಾ, ನಂತರ ದೆಹಲಿ, ನಂತರ ಲಾಹೋರ್ ತಲುಪಿದೆವು. ಕೊನೆಗೆ ಮುಲ್ತಾನಿನ ಗಿರಣಿಗಳನ್ನು ಮುಟ್ಟಿದೆವು. ಭೂಮಿ ಸಿಗದಿದ್ದರೂ ಒಂದು ಸಣ್ಣ ಕೋಣೆ ಹಾಗೂ ಕೆಲಸ ದೊರೆಯಿತು.

ಅಲ್ಲಿ ಎಲ್ಲವೂ ಅಪರಿಚಿತ. ನಮಗೆ ಪಂಜಾಬಿ ಬರುತ್ತಿರಲಿಲ್ಲ. ಹತ್ತಿ ಗಿರಣಿಯ ಕೆಲಸ ಗೊತ್ತಿರಲಿಲ್ಲ. ಅನ್ನ ಮೀನು ತಿನ್ನುತ್ತಿದ್ದವರಿಗೆ ರೊಟ್ಟಿ ಮಾಂಸ ತಿಂದು ಗೊತ್ತಿರಲಿಲ್ಲ. ಆದರೆ ಅಲ್ಲಿ ರಕ್ಷಣೆಯಿತ್ತು. ನೆಲೆಯಿತ್ತು. ದಿನಕ್ಕೆ ಎಂಟು ಗಂಟೆ ದುಡಿದರೆ ೧೫ ರೂ. ಸಿಗುತ್ತಿತ್ತು. ಶಿಫ್ಟ್ ಕೆಲಸವಿಲ್ಲದಾಗ ಮುಲ್ತಾನಿನ ದರ್ಗಾಗಳಿಗೆ, ಫಕೀರರ ಬಳಿ ಹೋಗತೊಡಗಿದೆ. ಆಗಲೇ ನನಗೆ ಅಲೆಯುವ ಸೂಫಿಯಾಗಬೇಕೆಂಬ ಹಂಬಲ ಹುಟ್ಟಿದ್ದು.

ಈ ರೀತಿ ೧೦ ವರ್ಷ ಕಳೆಯಿತು. ಗಿರಣಿಯ ಕೆಲಸ ಮತ್ತು ಜೀವನಕ್ಕೆ ಹೊಂದಿಕೊಂಡುಬಿಟ್ಟಿದ್ದೆ. ಆಗಲೇ ಫ್ಯಾಕ್ಟರಿಯ ಅಪಘಾತದಲ್ಲಿ ನನ್ನ ತಮ್ಮ ತೀರಿಕೊಂಡ. ಅವನ ಹೆಂಡತಿ ನನ್ನ ಜೊತೆ ತುಂಬ ಕೆಟ್ಟದಾಗಿ ವರ್ತಿಸಿದಳು. ಅವನ ಹಣವನ್ನೆಲ್ಲ ನಾನೇ ಹಾಳು ಮಾಡಿದೆನೆಂದೂ, ನನ್ನ ದುರಾದೃಷ್ಟದಿಂದಲೇ ಅವನು ಸತ್ತಿದ್ದೆಂದೂ, ನಾನು ಮೂರ್ಖಳೂ, ಶಾಪಗ್ರಸ್ತಳೂ ಎಂದೂ, ಬಾಯಿಗೆ ಬಂದಂತೆ ಬೈದಳು. ನನ್ನ ಜೊತೆ ವಾಸಿಸುವ ಇಚ್ಛೆಯಿಲ್ಲವೆಂದು ಕೂಗಾಡಿದಳು. ಇಷ್ಟು ಕೇಳಿದ ಮೇಲೆ, ಮತ್ತಿನ್ನೇನು ಎಂದು ೪೦ನೆಯ ದಿನದ ಸೂತಕ ಕಳೆದಿದ್ದೇ ನಾನು ಮನೆ ಬಿಟ್ಟೆ.

ಅದಕ್ಕೆ ಮೊದಲು ಮುಲ್ತಾನಿನ ಶೇಕ್ ಬಹಾವುದ್ದೀನ್ ಝಕಾರಿಯಾ ದರ್ಗಾಕ್ಕೆ ಹೋಗಿದ್ದೆ. ಆ ರಾತ್ರಿ ಒಂದು ಕನಸಾಯಿತು. ಉದ್ದನೆಯ ಗಡ್ಡದ ವೃದ್ಧನೊಬ್ಬ ನನ್ನ ಹತ್ತಿರ ಬಂದು, ‘ನೀನೀಗ ಒಂಟಿಯಲ್ಲವೆ? ಹೆದರಬೇಡ, ನಾನು ನಿನ್ನನ್ನು ರಕ್ಷಿಸುವೆ. ಒಂದು ರೈಲು ಹತ್ತು. ಅದು ನಿನ್ನನ್ನು ನನ್ನ ಬಳಿ ತರುತ್ತದೆ. ಟಿಕೆಟ್ ಕೂಡಾ ಬೇಕಿಲ್ಲ. ಎಲ್ಲ ನಾನೇ ವ್ಯವಸ್ಥೆ ಮಾಡುತ್ತೇನೆ’ ಎಂದಂತಾಯಿತು.

ಕನಸಿನಲ್ಲಿ ಹೇಳಿದಂತೇ ನಡೆದುಕೊಂಡೆ. ಟಿಕೆಟ್ ಇಲ್ಲದೇ, ಕೈಯಲ್ಲಿ ಕಾಸಿಲ್ಲದೇ, ಪ್ರಯಾಣಿಸಿದರೂ ಊಟತಿಂಡಿಗೇನೂ ತೊಂದರೆಯಾಗಲಿಲ್ಲ. ಉರುಸ್ ನಡೆಯುವ ಸಮಯಕ್ಕೆ ಷೆಹ್ವಾನ್ ಷರೀಫ್ ತಲುಪಿದೆ. ‘ದಮ್ ದಮ್ ಮಸ್ತ್ ಖಲಂದರ್’ ಎಂದು ಹಾಡುತ್ತಾ ಸಾವಿರಾರು ಜನ ಪ್ರಯಾಣಿಸುತ್ತಿದ್ದರು. ಫಕೀರರೊಬ್ಬರು ಇದು ನಿನ್ನ ರಕ್ಷೆಗೆ ಎಂದು ಪದಕವೊಂದನ್ನು ಕೊಟ್ಟರು. ಅದರಲ್ಲಿದ್ದ ಚಿತ್ರವು ನನಗೆ ಕನಸಿನಲ್ಲಿ ಕಂಡ ವೃದ್ಧರದೇ ಆಗಿತ್ತು. ಅವರೇ ಲಾಲ್ ಷಹಬಾಜ್ ಖಲಂದರ್. ಹೀಗೆ ಷೆಹ್ವಾನ್ ಷೆರೀಫ್ ತಲುಪಿದ ನಾನು ವರ್ಷಕ್ಕೊಮ್ಮೆ ಬಿಟ್‌ಷಾದಲ್ಲಿ ಶಾಹ್ ಅಬ್ದುಲ್ ಲತೀಫ್ ಉರುಸಿಗೆ ಹೋಗುವುದು ಬಿಟ್ಟರೆ ಮತ್ತೆಲ್ಲೂ ಹೋಗದೇ ಇಲ್ಲೇ ಕಾಲ ಕಳೆಯುತ್ತಿದ್ದೇನೆ. ನನಗೀಗ ಲಾಲ್ ಖಲಂದರ್ ಬಾಬಾನೇ ಎಲ್ಲವೂ, ಎಲ್ಲರೂ..’


(ಶೆಹ್ವಾನ್ ಶರೀಫ್ - ಲಾಲ್ ಶಾಬಾಜ್ ಉರುಸ್)

(ಧಮಾಲ್ ನರ್ತನ)

ಡ್ಯಾಲ್‌ರಿಂಪಲ್ ಗಮನಿಸಿರುವಂತೆ, ಪಾಕಿಸ್ತಾನದ ಸಿಂಧ್ ಪ್ರಾಂತ್ಯವು ತುಂಬ ಹಿಂದುಳಿದ ಮರುಭೂಮಿ ಪ್ರದೇಶ. ಜಮೀನ್ದಾರೀ ಪಳೆಯುಳಿಕೆಯ ಭೂಮಾಲೀಕರ ಕೈಕೆಳಗೆ ಸಾವಿರಾರು ಜನ ಜೀತಕ್ಕಿರುವ, ಬಾಂಡೆಡ್ ಲೇಬರ್‌ಗಳಿರುವ ಸ್ಥಳ. ಈ ಪ್ರದೇಶದ ಭೌಗೋಳಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಸರ್ಕಾರಕ್ಕೆ ಒಂದು ಸವಾಲಾಗಿದ್ದರೆ, ಅವು ಸೃಷ್ಟಿಸಿರುವ ಹಾಗೂ ಮುಖ್ಯವಾಹಿನಿಯ ಸಮಾಜ ಮತ್ತು ಧರ್ಮದಿಂದ ಹೊರದೂಡಲ್ಪಟ್ಟ ಢಕಾಯಿತರು - ಧಾರ್ಮಿಕ ಪಂಥ ಪಂಗಡಗಳಿಗೆ ಇದು ಸುರಕ್ಷಿತ ಸ್ವರ್ಗವೂ ಆಗಿದೆ. ಈ ಎಲ್ಲ ಕಾರಣಗಳಿಂದ ಸಿಂಧ್ ಪ್ರಾಂತ್ಯವು ಹೇಗೆ ಹಿಂದೂ ಭಾರತ ಮತ್ತು ಮುಸ್ಲಿಂ ಮಧ್ಯಪ್ರಾಚ್ಯದ ನಡುವೆ ಭೌಗೋಳಿಕವಾಗಿ ಸೇತುವೆಯಾಗಿದೆಯೋ ಹಾಗೆಯೇ ಸಾಮಾಜಿಕವಾಗಿಯೂ ಹಿಂದೂ ಮುಸ್ಲಿಂ ಬಾಂಧವ್ಯ ಸಾರಿದ ಹಲವು ಸೂಫಿ ಸಂತರ ನಾಡಾಗಿದೆ. ಬರಡು ಮರುಭೂಮಿಯ ಧಗೆಯಲ್ಲಿ ದಕ್ಷಿಣ ಏಷಿಯಾದ ಎರಡು ಪ್ರಬಲ ಧರ್ಮಗಳ ನಡುವಿನ ತಿಕ್ಕಾಟಕ್ಕೆ ಕೊನೆಹಾಡುವ ಯತ್ನಗಳು ಜರುಗಿದ್ದು ಅಲ್ಲಿರುವ ಸೂಫಿ ದರ್ಗಾಗಳಿಂದ ತಿಳಿದುಬರುತ್ತದೆ.

‘ಶಿವ ಸ್ಥಾನ’ವಾಗಿದ್ದ, ಶೈವ ಕವಿ ಭರ್ತೃಹರಿಯ ಸ್ಥಳವಾಗಿದ್ದ ಜಾಗವು ಇಂದು ‘ಷೆಹ್ವಾನ್ ಷರೀಫ್’ ಆಗಿದೆ. ಲಾಲ್ ಶಾಹ್‌ಬಾಜ್ ಖಲಂದರ್ ಅವರ ದರ್ಗಾ ಇರುವ ಈ ಜಾಗಕ್ಕೆ ಹಿಂದೂ, ಮುಸ್ಲಿಂ ಭಕ್ತರಿಬ್ಬರೂ ನಡೆದುಕೊಳ್ಳುತ್ತಾರೆ. ಖಲಂದರ್ ಬಾಬಾನನ್ನು ‘ಜೂಲೆ ಲಾಲ್’ (ಸಿಂಧೂ ನದಿ ದೇವರು) ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ. ಮೊನ್ನೆಮೊನ್ನಿನ ತನಕ ದರ್ಗಾದಲ್ಲಿ ಶಿವಲಿಂಗವೊಂದು ಇದ್ದು, ಈಗದು ಬೀಗ ಹಾಕಿಟ್ಟ ಕೋಣೆ ಸೇರಿದೆ. ಯಾವ್ಯಾವ ವೈದ್ಯರಿಂದಲೂ ಗುಣ ಕಾಣದ ಖಾಯಿಲೆಗಳು ಖಲಂದರ್ ಬಾಬಾನಿಂದ ಗುಣ ಕಂಡಿದೆ ಎನ್ನುತ್ತ ಭಕ್ತರು ಗಡಿ ದಾಟಿ ಷೆಹ್ವಾನ್ ಷರೀಫ್‌ಗೆ ಹೋಗುತ್ತಾರೆ. ನಾಗಾ ಸಾಧುಗಳು ಮತ್ತು ತಾಂತ್ರಿಕರ ರೀತಿಯಲ್ಲಿಯೇ ರುದ್ರಾಕ್ಷಿ ಧರಿಸಿ ತಪಸ್ಸು ಮಾಡಿದ, ತಲೆಕೆಳಗಾಗಿ ಧ್ಯಾನ ಮಾಡಿದ, ಸೂಳೆಗೇರಿಗೆ ಹೋಗಿ ಅವರ ಮನಸ್ಸನ್ನೂ ಪರಿವರ್ತನೆ ಮಾಡಿದ ಹಠಯೋಗಿ ಖಲಂದರ್ ಬಾಬಾ ಪ್ರೇಮರಾಹಿತ್ಯದ ಖಾಯಿಲೆಗೆ ಒಂದು ಮದ್ದಾಗಿ ಆ ಪ್ರದೇಶಕ್ಕೆ ದೊರೆತವರು.

ಸೂಫಿ




ಇರಾನಿನ ತಬ್ರೀಜ್‌ನವರಾದ ಷೇಕ್ ಉಸ್ಮಾನ್ ಮರ‍್ವಂಡಿ ಹೆಚ್ಚುಕಡಿಮೆ ಜಲಾಲುದ್ದೀನ್ ರೂಮಿ ಆಫ್ಘನಿಸ್ತಾನ ತೊರೆದು ಟರ್ಕಿ ಸೇರಿದ ಕಾಲದಲ್ಲೇ ಮಂಗೋಲರ ಆಕ್ರಮಣಕ್ಕೆ ತುತ್ತಾಗಿ ಇರಾನನ್ನು ತೊರೆದರು. ಅವರು ಮೊದಲಿನಿಂದ ಪವಿತ್ರ ಹುಚ್ಚನ ತರಹ ಲೋಕರೂಢಿಯನ್ನು ತೊರೆದು ತಿರುಗಿದವರು. ಸಮಾಜದ ತಿರಸ್ಕಾರ ಮತ್ತು ಅಪಹಾಸ್ಯ ನಮ್ಮ ವ್ಯಕ್ತಿತ್ವದ ಶುದ್ಧತೆಗೆ ಅಳತೆಗೋಲು ಎಂದು ತಿಳಿದು, ಷರಿಯತ್ ಹಾಗೂ ಸಮಾಜದ ಎಲ್ಲ ಕಟ್ಟಳೆಗಳನ್ನೂ ಧಿಕ್ಕರಿಸಿದವರು. ತನ್ನ ಅನುಯಾಯಿಗಳಿಗೆ ಹಾಡು ಮತ್ತು ನರ್ತನದಿಂದ ಎಲ್ಲವನ್ನು ಮರೆತು ಭಗವಂತನಲ್ಲಿ ಲೀನವಾಗುವಂತೆ ಕರೆಯಿತ್ತವರು. ಬೆಂಕಿ ಎದುರು ಕತ್ತಿಯೆದುರು ಪ್ರಾಣವನ್ನು ಪಣಕ್ಕಿಟ್ಟು ಆಧ್ಯಾತ್ಮ ಸವಿದ ಹಠಯೋಗದ ದಾರಿಯವರು. ತನ್ನನ್ನೇ ತಾನು ಶಿಕ್ಷಿಸಿಕೊಳ್ಳುತ್ತಾ ಆಧ್ಯಾತ್ಮಿಕ ಅನುಭೂತಿ ಪಡೆಯಲು ಹಾಡು ನರ್ತನಗಳ ಮೊರೆ ಹೊಕ್ಕವರು.

ಧರ್ಮದ ನಡುವಿನ ಸೇತುವೆಯಂತೆ, ಗಾಯಕ್ಕೆ ತಂಪು ನೀಡುವ ಮುಲಾಮಿನಂತೆ ಹುಟ್ಟಿದ ಸೂಫಿ ಇಂದು ಅಪಾಯದಲ್ಲಿದೆ. ಸೂಫಿಗಳ ತತ್ವವನ್ನು ಇಸ್ಲಾಮಿನ ಮೌಲ್ಯ ಪ್ರತಿಪಾದಕರು ಒಪ್ಪುವುದಿಲ್ಲ. ಗೋರಿಪೂಜೆ, ಹಾಡು, ನೃತ್ಯ, ಹೆಂಗಸರು ದರ್ಗಾಗಳಿಗೆ ಬರುವುದು ಇವೆಲ್ಲ ಇಸ್ಲಾಮಿಗೆ ವಿರುದ್ಧ ಎಂದೇ ಅವರು ಭಾವಿಸುತ್ತಾರೆ. ದೇವ್‌ಬಂದ್‌ನವರು, ತಬ್ಲೀಗಿನವರು ಹಾಗೂ ಆಧುನಿಕ ವಹಾಬಿಗಳು ಸೂಫಿಗೆ ವಿರುದ್ಧವಾಗಿದ್ದಾರೆ.

ಡ್ಯಾಲ್‌ರಿಂಪಲ್ ದಾಖಲಿಸುವಂತೆ, ಸ್ವಾತಂತ್ರದ ಸಮಯದಲ್ಲಿ ಇದ್ದುದಕ್ಕಿಂತ ೨೭ ಪಟ್ಟು ಹೆಚ್ಚು ಮದ್ರಸಾಗಳು ಇಂದು ಪಾಕಿಸ್ತಾನದಾದ್ಯಂತ ಇವೆ. ಎಂಟು ಸಾವಿರಕ್ಕಿಂತ ಹೆಚ್ಚು ಇರುವ ಮದ್ರಸಾಗಳಲ್ಲಿ ಬಹುಪಾಲು ದರ್ಗಾಗಳ ಬಳಿ ತಲೆಯೆತ್ತುತ್ತಿವೆ. ಅವು ದರ್ಗಾಗಳು ಇಸ್ಲಾಮಿ ಸಂಸ್ಕೃತಿಯವಲ್ಲ ಎಂದು ಅಲ್ಲಗಳೆಯುತ್ತವೆ. ಷೆಹ್ವಾನ್ ಷರೀಫ್ ಬಳಿ ದೇವಬಂದೀ ಮದ್ರಸಾವೊಂದು ತಲೆಯೆತ್ತಿದೆ. ಅದಕ್ಕೆ ಹೆಚ್ಚು ಮಕ್ಕಳು ದಾಖಲಾಗಿಲ್ಲದಿದ್ದರೂ ತಾಳ್ಮೆಯಿಂದ ಕಾಯಬೇಕೆಂದು ಮದ್ರಸಾದ ಗುರು ಸಲೀಮುಲ್ಲಾ ಹೇಳುತ್ತಾರೆ. ಬಡ ಮಕ್ಕಳಿಗೆ ಉಚಿತ ಊಟ ಬಟ್ಟೆ ಕೊಟ್ಟು ಮೊದಲು ಮದ್ರಸಾಗಳತ್ತ ಅವರನ್ನು ಸೆಳೆಯಬೇಕು. ನೈಜ ಇಸ್ಲಾಂ ಎಂದರೇನೆಂದು ಅವರಿಗೆ ತಿಳಿಸಿ ವಿದ್ಯಾಭ್ಯಾಸ ಮಾಡಿಸಬೇಕು. ಒಮ್ಮೆ ಮಕ್ಕಳಿಗೆ ಸೂಫಿ ಇಸ್ಲಾಮಿಕ್ ಅಲ್ಲ ಎಂದು ತಿಳಿದುಬಿಟ್ಟರೆ ಉಳಿದ ಬದಲಾವಣೆಯೆಲ್ಲ ತಂತಾನೇ ಆಗಿ ಸತ್ಯ ಮಾತ್ರ ವಿಜೃಂಭಿಸುತ್ತದೆ ಎಂಬುದು ಸಲೀಮುಲ್ಲಾರ ನಂಬಿಕೆ. ಅವರ ಮಾತುಗಳಲ್ಲಿ ಹೇಳುವುದಾದರೆ:

‘ಸಂಗೀತ ಮನಸ್ಸನ್ನು ಚಂಚಲಗೊಳಿಸುತ್ತದೆ. ಅದು ಪಾಪಕರ, ನಿಷಿದ್ಧ. ಹಾಗಾಗಿ ಸಂಗೀತಗಾರರು ತಪ್ಪಿತಸ್ಥರು. ಕುರಾನ್ ಸತ್ತ ವ್ಯಕ್ತಿಗೆ ಪೂಜೆ ಮಾಡಿರೆಂದು, ಪ್ರಾರ್ಥನೆ ಸಲ್ಲಿಸಿರೆಂದು ಎಲ್ಲೂ ಹೇಳುವುದಿಲ್ಲ. ನಿಜವಾದ ಮುಸ್ಲಿಮ ಗೋರಿಗೆ ಹೋಗದೆ ಮಸೀದಿಗೆ ಹೋಗಬೇಕು. ಸತ್ತವನನ್ನು ಬೇಡುವುದಲ್ಲ, ಬದಲಿಗೆ ನೇರವಾಗಿ ದೇವರ ಬಳಿಯೇ ಬೇಡಿಕೊಳ್ಳಬೇಕು. ಸೂಫಿ ಇಸ್ಲಾಂ ಅಲ್ಲ. ಅದೊಂದು ತೆರನ ಮಾಟ, ಜಾದೂ. ಅದು ಮೂಢನಂಬಿಕೆ, ವಿಕೃತಿ, ಅಜ್ಞಾನ, ಮೂರ್ಖತನ ಈ ಎಲ್ಲದರ ಮಿಶ್ರಣ. ನಿರಕ್ಷರಿ ಫಕೀರರು ದೊಡ್ಡ ವಿದ್ವಾಂಸರಂತೆ ಮಾತನಾಡುತ್ತಾರೆ, ಆದರೆ ಅವರಿಗೆ ಕುರಾನ್ ಓದಲೂ ಬರುವುದಿಲ್ಲ. ಇದು ಹಿಂದೂ ಧರ್ಮದ ಸೋಂಕಿನಿಂದ ಹುಟ್ಟಿದ್ದು. ನಿಧಾನವಾಗಿಯಾದರೂ ಇದನ್ನು ತೆಗೆದು ಇಸ್ಲಾಮನ್ನು ಶುದ್ಧಗೊಳಿಸಬೇಕು.

ಸೂಫಿಯು ಸ್ವರ್ಗ ನಿನ್ನೊಳಗೇ ಇದೆಯೆನ್ನುತ್ತದೆ. ನಮ್ಮೊಳಗೇ ಸ್ವರ್ಗವೆ? ಇದೊಂದು ಭ್ರಮೆ ಮತ್ತು ಕನಸಷ್ಟೆ. ಕುರಾನಿನಲ್ಲಿ ಈ ಬಗ್ಗೆ ಯಾವ ಪುರಾವೆಯೂ ಇಲ್ಲ. ಮನುಷ್ಯನ ಹೃದಯ ದೇವನಿಗಾಗಿ ಬಹಳ ಸಣ್ಣದು. ಇನ್ನು ಸ್ವರ್ಗದ ಮಾತೆಲ್ಲಿ ಬಂತು? ಸ್ವರ್ಗ ಮನುಷ್ಯನ ಹೊರಗಿದೆ. ಅದು ನಮಗಾಗಿ ದೇವರ ಸೃಷ್ಟಿ.

ನೈಜ ಇಸ್ಲಾಂ ಎಂದರೆ ಶಿಸ್ತು. ಅದು ಮನಸ್ಸಿಗೆ ಬಂದ ಹಾಗೆ ವರ್ತಿಸುವುದಲ್ಲ. ಹೇಗೆ ತಿನ್ನಬೇಕು, ತೊಳೆಯಬೇಕು, ಮೀಸೆ ಹುರಿ ಮಾಡಿಕೊಳ್ಳಬೇಕು ಎಂಬುದೆಲ್ಲರ ಬಗ್ಗೆಯೂ ನೀತಿನಿಯಮಗಳಿವೆ. ಪ್ರವಾದಿಯವರು ಹೇಳಿರುವ ಈ ಕಟ್ಟಳೆಗಳನ್ನೆಲ್ಲ ಅನುಸರಿಸದ ಸೂಫಿಗಳು ಬರಿಯ ಪ್ರೀತಿ ಪ್ರೇಮವೆಂದು ಬಡಬಡಿಸಿದರೆ ಅದು ಅಸಮಂಜಸ.

ನೆನಪಿಡಿ. ತೀವ್ರವಾದಿಯಾದ ತಾಲಿಬಾನ್ ಈಗ ಬರುತ್ತಿದೆ. ಜನರೂ ಈಗಿರುವ ವ್ಯವಸ್ಥೆಯ ಬಗ್ಗೆ ಬೇಸತ್ತಿದ್ದಾರೆ. ಇಂಥ ಸಮಯದಲ್ಲಿ ತಾಲಿಬಾನ್ ಬಂದರೆ ಮತ್ತೆ ಖಲೀಫರ ಆಡಳಿತ ಬರುತ್ತದೆ. ಆಗ ಈ ಎಲ್ಲ ದರ್ಗಾಗಳೂ ಧ್ವಂಸವಾಗುವುದನ್ನು ನೋಡುತ್ತ ನಿಲ್ಲಬೇಕಷ್ಟೇ.’

ತರುಣ ಶಿಕ್ಷಕ ಸಲೀಮುಲ್ಲಾ ಸೂಫಿಸಂ ಬಗೆಗೆ ಹೀಗೆ ಇಷ್ಟು ನಿಷ್ಠುರವಾಗಿ ಮಾತನಾಡುತ್ತ ಬರಲಿರುವ ಸುದಿನಗಳ ಬಗೆಗೆ ಸಂತಸಪಡುತ್ತ ಇರುವಾಗಲೇ, ಭವಿಷ್ಯದ ಮುನ್ಸೂಚನೆಯೋ ಎಂಬಂತೆ ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ರೆಹಮಾನ್ ಬಾಬಾ ಅವರ ದರ್ಗಾ ಇತ್ತೀಚೆಗೆ ಅರೇಬಿಕ್ ಮದ್ರಸಾದ ವಿದ್ಯಾರ್ಥಿಗಳಿಂದ ಧ್ವಂಸಗೊಳಿಸಲ್ಪಟ್ಟಿತು. ಯಾರಿಗೂ ಪ್ರಾಣಾಪಾಯವಾಗಲಿಲ್ಲ ಅಷ್ಟೆ. ಆದರೂ ತಲೆತಲೆಮಾರುಗಳಿಂದ ಆ ದರ್ಗಾದಲ್ಲಿ ಹಾಡು ಹೇಳಿಕೊಂಡು ಬಂದಿದ್ದ ಕುಟುಂಬ ಮತ್ತು ಸಂತನನ್ನು ನಂಬಿದ್ದ ಪಾಶ್ತೋ ಬುಡಕಟ್ಟು ಜನರು ಇದರಿಂದ ನೆಲೆ ಕಳೆದುಕೊಡ ಅತಂತ್ರ ಸ್ಥಿತಿ ತಲುಪಿ ನೆಮ್ಮದಿ ಕಳೆದುಕೊಂಡಿದ್ದಾರೆ.


(ಶಾ ಅಬ್ದುಲ್ ಲತೀಫ್)
ಆದರೆ ಲಾಲ್ ಪೇರಿ ಈ ಅಪಾಯದ ಬಗೆಗೆ ಹೆದರುವುದಿಲ್ಲ. ಸಿಂಧ್ ಪ್ರಾಂತ್ಯದ ಜನ ಖಲಂದರ್ ಬಾಬಾನ ಮೇಲಿನ ನಂಬಿಕೆ ಎಂದೂ ಕಳೆದುಕೊಳ್ಳುವುದಿಲ್ಲ ಎನ್ನುತ್ತಾಳೆ. ತನ್ನ ಇಂದಿನ ಕರ್ತವ್ಯವೆಂದರೆ ಖಲಂದರ್ ಬಾಬಾ ಹಾಗೂ ಶಾಹ್ ಅಬ್ದುಲ್ ಲತೀಫ್ ಅವರ ದರ್ಗಾ ರಕ್ಷಿಸುವುದೇ ಆಗಿದೆ ಎನ್ನುತ್ತಾಳೆ. ಅವಳ ಪ್ರಕಾರ: ‘ಈ ಮುಲ್ಲಾಗಳು, ವಹಾಬಿಗಳು, ತಬ್ಲೀಗಿಗಳು, ಕಾನೂನು ಪುಸ್ತಕ ತಿರುವುತ್ತ, ಯಾರ ಗಡ್ಡ ಎಷ್ಟು ಉದ್ದ ಬೆಳೆಸಬೇಕೆಂದು ಕುರಾನಿನಲ್ಲಿ ಹೇಳಿದೆ ಎಂದು ವಾದಿಸುತ್ತಾ ಪ್ರವಾದಿಯವರ ನಿಜವಾದ ಸಂದೇಶ ಮರೆತಿದ್ದಾರೆ. ಸೈತಾನ ಮತ್ತು ಮುಲ್ಲಾ ಇಬ್ಬರೂ ಒಂದೇ.’

ಷೆಹ್ವಾನ್ ಷರೀಫ್‌ಗೆ ಸನಿಹದಲ್ಲಿರುವ ಬಿಟ್‌ಷಾದಲ್ಲಿ ಮತ್ತೋರ್ವ ಸೂಫಿ ಗುರು ಶಾಹ್ ಅಬ್ದುಲ್ ಲತೀಫ್ ಅವರ ದರ್ಗಾ ಇದೆ. ಸಂತರ ಒಂದು ಹಾಡು ಲಾಲ್‌ಫೇರಿಯ ಮಾತುಗಳನ್ನೇ ಧ್ವನಿಸುತ್ತದೆ. ಅದು ಹೀಗಿದೆ:

  ‘ನಿನ್ನನ್ನು ಪಂಡಿತನೆಂದೇಕೆ
  ಕರೆದುಕೊಳ್ಳುವೆ ಓ ಮುಲ್ಲಾ?

  ಶಬ್ದಗಳ ಗೊಂಡಾರಣ್ಯದಲ್ಲಿ
  ಕಳೆದುಹೋಗಿರುವೆ.
  ಅಸಂಬದ್ಧ ಮಾತುಗಳನಾಡುತ್ತ
  ನಿನ್ನನ್ನೇ ಪೂಜಿಸಿಕೊಳ್ಳುತ್ತಿರುವೆ.
  ಕಣ್ತೆರೆದು ದೇವರನ್ನು ಅರಸುವ ಬದಲು
  ಧೂಳಿನ ರಾಶಿಗೆ ಹಾರಿ ಬೀಳುತ್ತಿರುವೆ.
  ನಾವು ಸೂಫಿಗಳು
  ಪವಿತ್ರ ಕುರಾನಿನ ಮಿದು ಮಾಂಸ ಪಡೆದಿದ್ದೇವೆ.
  ನೀವು ನಾಯಿಗಳು ಕಚ್ಚಾಡುತ್ತಿದ್ದೀರಿ
  ಪರಸ್ಪರ ಕಿತ್ತೆಳೆಯುತ್ತಿದ್ದೀರಿ
  ಒಣ ಎಲುಬು ಕಡಿಯುವ ಅವಕಾಶ ಸಿಗಲೆಂದು..’

ಪಾಕಿಸ್ತಾನದ ವಾಯವ್ಯ ಪ್ರಾಂತದ ಸೂಫಿ ಸಂತ, ಪಾಶ್ತೋ ಬುಡಕಟ್ಟಿನ ಕವಿ, ರೆಹಮಾನ್ ಬಾಬಾ ಹಿಂಸೆಯನ್ನು ವಿರೋಧಿಸುವ, ಸಹಿಷ್ಣುತೆಯ ಕುರುಹಾಗಿರುವ ಸೂಫಿಯ ಸಾರವನ್ನೇ ತಮ್ಮ ಒಂದು ಉಕ್ತಿಯಲ್ಲಿ ಹೇಳಿಬಿಡುತ್ತಾರೆ:

   ನಾನೊಬ್ಬ ಪ್ರೇಮಿ, ಪ್ರೇಮದ ವ್ಯಾಪಾರಿ.
   ಹೂವನ್ನು ಬಿತ್ತು: ನಿನ್ನ ಸುತ್ತ ಉದ್ಯಾನ ಮೈದಳೆಯುತ್ತದೆ.
   ಮುಳ್ಳನ್ನು ಬಿತ್ತದಿರು: ಅವು ನಿನ್ನ ಕಾಲನ್ನೇ ಚುಚ್ಚುತ್ತವೆ.
   ನಮದೆಲ್ಲ ಒಂದೇ ದೇಹ.
   ಅವನ ಹಿಂಸಿಸಿದರೆ ನಮ್ಮ ದೇಹದಲ್ಲಿ ಗಾಯ.

ಷೆಹ್ವಾನ್ ಷರೀಫ್ ಮತ್ತೊಬ್ಬ ಸೂಫಿ ಕವಿ, ಮುಘಲ್ ಯುವರಾಜ ದಾರಾ ಶುಕೋನ ಗುರು ಮಿಯಾ ಮೀರ್‌ನ ಊರೂ ಹೌದು. ಹದಿನೇಳನೇ ಶತಮಾನದ ದಾರಾ ಶುಕೋ ಹಿಂದೂ ಮುಸ್ಲಿಂ ಬಾಂಧವ್ಯಕ್ಕಾಗಿ ಇನ್ನಿಲ್ಲದಂತೆ ಶ್ರಮಿಸಿದ, ಸೋದರ ಔರಂಗಜೇಬನಿಂದ ಹತ್ಯೆಗೀಡಾದ ಸೂಕ್ಷ್ಮ ಮನದ ಕವಿ. ಆತ ಹೀಗೆ ಬರೆಯುತ್ತಾನೆ:

   ಓ ದೇವರೇ,
   ನೀನು ಮೆಕ್ಕಾದ ಕಾಬಾದಲ್ಲಿರುವೆ
   ಸೋಮನಾಥದ ಲಿಂಗದಲ್ಲೂ ಇರುವೆ
   ಮಠದಲ್ಲಿರುವೆ
   ಪಡಖಾನೆಯಲ್ಲೂ ಇರುವೆ.

   ನೀನು ಒಮ್ಮೆಲೇ
   ದೀಪ ಮತ್ತು ಪತಂಗ
   ಮದಿರೆ ಮತ್ತು ಬಟ್ಟಲು
   ಸಂತ ಮತ್ತು ಮೂರ್ಖ
   ಸ್ನೇಹಿತ ಮತ್ತು ಅಪರಿಚಿತ
   ಗುಲಾಬಿ ಮತ್ತು ಕೋಗಿಲೆ
   ಎಲ್ಲವೂ ಆಗಿರುವೆ.


(ದಾರಾ ಶಿಕೊ ಮತ್ತು ಮಿಯಾ ಮಿರ್)

ಸೂಫಿ ತತ್ವದ ಅನುಯಾಯಿ, ಲಾಲ್ ಪೇರಿಯ ಗುರು ಮತ್ತು ಸ್ನೇಹಿತ ಎಲ್ಲವೂ ಆಗಿರುವ ಸೈನ್ ಫಕೀರ್ ಸೂಫಿಯೆಂದೊಡನೆ ಉತ್ಸಾಹದಿಂದ ಮಾತನಾಡುತ್ತಾರೆ. ಅವರ ಪ್ರಕಾರ,

‘ಸೂಫಿ ವಚನಗಳು, ಕಾವ್ಯಗಳು ಕುರಾನಿನ ಎಲ್ಲ ಮೌಲ್ಯವನ್ನೊಳಗೊಂಡಿವೆ. ಕುರಾನನ್ನು ಅರ್ಥೈಸುವುದು ಸುಲಭವಲ್ಲ. ಹಾಗಾಗಿ ಸಾಧಾರಣ ಮನುಷ್ಯರು ಪ್ರವಾದಿಯ ನಿಜ ಸಂದೇಶ ತಿಳಿದೇ ಇಲ್ಲ. ಸೂಫಿಗಳು ಮಾತ್ರ ಸತ್ಯದ ದಾರಿ ತಿಳಿದಿದ್ದಾರೆ, ಅದೇ ಪ್ರೇಮದ ದಾರಿ.

ಮುಲ್ಲಾಗಳು ವೈಯುಕ್ತಿಕ ಕಾರಣಗಳಿಗಾಗಿ ಪ್ರವಾದಿಯ ಮಾತುಗಳನ್ನು ತಿರುಚುತ್ತಾರೆ. ಅವರಂಥ ಕುರುಡರಿಗೆ ಬೆಳಗುವ ಸೂರ್ಯನೂ ಕಾಣಿಸುವುದಿಲ್ಲ. ಅದೊಂದು ಕ್ರೂರ ಜಾತಿ. ಅವರಿಗೆ ಮಾನವ ದೌರ್ಬಲ್ಯಗಳು ಅರ್ಥವಾಗುವುದಿಲ್ಲ. ಈ ಪ್ರಪಂಚದಲ್ಲಿ ಎಲ್ಲರೂ ಪಾಪ ಮಾಡುತ್ತಾರೆ. ಮಾನವ ದೌರ್ಬಲ್ಯವೆಂದರೇನೆಂದು ತಿಳಿದ ಸೂಫಿಗಳು ಅದಕ್ಕೆ ಕ್ಷಮೆ ನೀಡುತ್ತಾರೆ. ಜನ ಕ್ಷಮಿಸುವವರನ್ನು ಮೆಚ್ಚುತ್ತಾರೆ. ಜಿಯಾ ಲತೀಫ್. ಲತೀಫ್ ಬಾಬಾ ಹೇಳುವ ಹಾಗೆ,

   ಒಳ್ಳೆಯ ವಸ್ತು ವಿಷಯಗಳೊಂದಿಗೆ ಮಾತ್ರ ವ್ಯವಹರಿಸು.
   ಕಲ್ಲಿದ್ದಲು ಖರೀದಿಸಿದರೆ ಮೈಯೆಲ್ಲ ಕರಿಧೂಳು
   ಪುನುಗಿನ ವ್ಯವಹಾರದಲ್ಲಿ ಪರಿಮಳ ಎಲ್ಲವೂ.

ವಹಾಬಿಗಳು ಲಾಭಕ್ಕಾಗಿ ನಂಬಿಕೆಯನ್ನು ಮಾರುವ ವ್ಯಾಪಾರಿಗಳು. ನರಕದ ಬೆಂಕಿ ಹರಡುವ ಅವರು ನಿಜವಾದ ಮುಸ್ಲಿಮರಲ್ಲ. ಆದರೆ ಸೂಫಿ ಎಲ್ಲರನ್ನೂ ಪ್ರೀತಿಸುತ್ತದೆ - ಧರ್ಮಭ್ರಷ್ಟ, ಜಾರಿದ ಹೆಣ್ಣು, ಬಡವ, ಸಿರಿವಂತ, ಮುಸ್ಲಿಂ, ಮುಸ್ಲಿಂ ಅಲ್ಲದವ ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ.

ಮುಲ್ಲಾಗಳು ಜಿಹಾದ್‌ಗೆ ಕತ್ತಿ ಬಳಸುತ್ತಾರೆ. ಆದರೆ ನಿಜವಾದ ಜಿಹಾದ್ ನಡೆಯಬೇಕಾದದ್ದು ನಮ್ಮೊಳಗೆ. ನಮ್ಮ ಆಸೆಗಳ ಮೇಲೆ ಜಯ ಸಾಧಿಸಲು ಹೋರಾಡಬೇಕು. ದುಷ್ಟತನ ನಮ್ಮ ಹೃದಯದೊಳಗೆ ಸೃಷ್ಟಿಸುವ ನರಕದ ವಿರುದ್ಧ ಹೋರಾಡಬೇಕು. ಕತ್ತಿಯಿಂದ ಮಾಡುವ ಜಿಹಾದ್ ಕೀಳು ಮಟ್ಟದ್ದು. ನಿನ್ನೊಳಗೆ ನೀನೇ ಹೋರಾಡುವುದು ನಿಜವಾದ ಜಿಹಾದ್. ಲತೀಫ್ ಬಾಬಾ ಹೇಳಿದಂತೆ ಕಾಫಿರರನ್ನು ಕೊಲ್ಲಬೇಡ. ಮೊದಲು ನಿನ್ನ ಅಹಮನ್ನು ಕೊಲ್ಲು.

  ಒಂದು ನೆನಪಿಡು: ಎಲ್ಲವೂ ನಿನ್ನೊಳಗೇ ಇದೆ - ಸ್ವರ್ಗ ಮತ್ತು ನರಕ.’

***

ಹೀಗೆ ಭವಿಷ್ಯದ ಬಗೆಗೆ ಆಶಾವಾದಿಯಾದ ಫಕೀರ್ ಅಜ್ಜ ಮುಂದುವರೆದು, ‘ಒಳ್ಳೆಯ ಕೆಲಸವು ಒಳ್ಳೆಯ ಪ್ರತಿಫಲ ನೀಡುತ್ತದೆ. ಕೆಟ್ಟ ಕೆಲಸವು ಕೆಟ್ಟ ಫಲ ನೀಡುತ್ತದೆ. ಈ ವಹಾಬಿ ಜನ ಈಗ ತಮ್ಮನ್ನೇ ತಾವು ಕೊಂದುಕೊಳ್ಳುತ್ತಿದ್ದಾರೆ. ಇಸ್ಲಾಮಾಬಾದ್‌ನಲ್ಲಿ, ಸ್ವಾತ್‌ನಲ್ಲಿ, ಆಫ್ಘನಿಸ್ತಾನದಲ್ಲಿ, ಇರಾಕಿನಲ್ಲಿ ಈಗ ಇದೇ ಆಗುತ್ತಿದೆ. ಅವರ ಅಂತ್ಯದ ಶುರು ಇದು.’

ಸೈನ್ ಫಕೀರಜ್ಜನ ಭರವಸೆಯಂತೆ ‘ಅವರೇ’ ಅಂತ್ಯ ಕಾಣುತ್ತಾರೋ? ಲಾಲ್ ಫೇರಿಯ ಭಯವೇ ನಿಜವಾಗುವುದೋ? ಧಾರ್ಮಿಕ ಶುದ್ಧತೆಯ ಬಗೆಗೆ ಉಗ್ರ ನಿಲುವು ಹೊಂದಿದ ಸಂಪ್ರದಾಯವಾದಿಗಳ ಕೈ ಮೇಲಾಗುವುದೋ? ಸಹಿಷ್ಣುತೆಯ ಕುರುಹಾದ ಸೂಫಿ ವಿಜೃಂಭಿಸುವುದೋ?

ಉತ್ತರ ಕಾಲನ ಕೈಯಲ್ಲಿ..

                     


Tuesday, 14 February 2017

Freedom Without Fear - ಭಯವಿರದ ಸ್ವಾತಂತ್ರ್ಯ - ಕವಿತಾ ಕೃಷ್ಣನ್


Displaying 3.jpg


(ಈ ಭೂಮಿಯ ಮೇಲೆ ಪ್ರತಿದಿನವೂ ಹುಟ್ಟುವ ಸೂರ್ಯನಷ್ಟೇ ನಿಶ್ಚಿತವಾದದ್ದು ಮಹಿಳಾ ದೌರ್ಜನ್ಯ. ಲಿಂಗತಾರತಮ್ಯ ತಲೆತಲಾಂತರಗಳಿಂದ ಅವ್ಯಾಹತವಾಗಿ ನಡೆಯುತ್ತ ಬಂದರೂ ದನಿಯಿಲ್ಲದವಳಾಗಿದ್ದ ಹೆಣ್ಣು ಇತ್ತೀಚೆಗೆ ತನ್ನ ಮೇಲಾಗುವ ಅನ್ಯಾಯವನ್ನು, ಅದರ ಕಾರಣಗಳನ್ನು ಗುರುತಿಸುವ, ದನಿಯೆತ್ತಿ ಪ್ರತಿಭಟಿಸುವ ದಾರಿಯಲ್ಲಿ ಮೊದಲ ಹೆಜ್ಜೆಗಳನ್ನಿಡುತ್ತಿದ್ದಾಳೆ. ಸಾಮಾಜಿಕ ನ್ಯಾಯದ ಚಳುವಳಿಗಳಲ್ಲಿ ಲಿಂಗಪ್ರಶ್ನೆಯೂ ಮುನ್ನೆಲೆಗೆ ಬಂದು ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಕರ್ನಾಟಕದಲ್ಲೂ ಅನೇಕ ಸಂಘ-ಸಂಘಟನೆ-ಚಳುವಳಿಗಳು ಮಹಿಳಾ ಸಮಸ್ಯೆಗಳನ್ನೆತ್ತಿಕೊಂಡು ದಶಕಗಳಿಂದ ಸಕ್ರಿಯವಾಗಿವೆ. ಕರ್ನಾಟಕದ ಅಂತಹ ಮಹಿಳಾಪರ ವ್ಯಕ್ತಿ-ಸಂಘ-ಸಂಘಟನೆಗಳ ಜಾಲವೇ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ. ಸಮತೆ-ಸೋದರಿತ್ವದ ಆಶಯ ಹೊತ್ತು ಅದು ಕಳೆದ ೫ ವರ್ಷಗಳಿಂದ ಪ್ರತಿ ವರ್ಷ ಕರ್ನಾಟಕದ ಒಂದೊಂದು ಜಿಲ್ಲಾಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಮಹಿಳಾ ಚೈತನ್ಯ ದಿನ’ವೆಂದು ಆಚರಿಸುತ್ತ ಬಂದಿದೆ. ಮಹಿಳಾಪರ, ಜಾತ್ಯತೀತ ಮನಸುಗಳ ಸಂಪರ್ಕ ಜಾಲವಾಗಿ ಮಹಿಳಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅದರ ಸಮಾವೇಶಗಳಲ್ಲಿ ಸಕ್ರಿಯ ಹೋರಾಟ-ಬರಹದಲ್ಲಿ ತೊಡಗಿಕೊಂಡ ಹೊರರಾಜ್ಯದ ಮಹಿಳೆಯರೂ ಪಾಲ್ಗೊಂಡಿದ್ದಾರೆ. ಈ ಬಾರಿ ಒಕ್ಕೂಟದ ವಾರ್ಷಿಕ ಸಮಾವೇಶವು ಮಾರ್ಚಿ ೮, ೯ರಂದು ಕೊಪ್ಪಳದಲ್ಲಿ ನಡೆಯಲಿದ್ದು ಮಾರ್ಚಿ ೯ರಂದು ನಡೆಯಲಿರುವ ಹಕ್ಕೊತ್ತಾಯ ಜಾಥಾ ಮತ್ತು ಸಾರ್ವಜನಿಕ ಸಮಾವೇಶದಲ್ಲಿ ದೆಹಲಿಯ ಕವಿತಾ ಕೃಷ್ಣನ್ ಪಾಲ್ಗೊಳ್ಳಲಿದ್ದಾರೆ. ಅವರ ಕಿರು ಪರಿಚಯ ಇಲ್ಲಿದೆ.) 



ಕವಿತಾ ಕೃಷ್ಣನ್ ‘ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ’ (ಆಲ್ ಇಂಡಿಯಾ ಪ್ರೊಗ್ರೆಸಿವ್ ವುಮೆನ್ಸ್ ಅಸೋಸಿಯೇಷನ್-ಐಪ್ವಾ)ದ ಜಂಟಿ ಕಾರ್ಯದರ್ಶಿ. ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ನಡೆದ ನಂತರ ಭುಗಿಲೆದ್ದ ಬೀದಿ ಹೋರಾಟಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಮುಂಚೂಣಿಗೆ ಬಂದ ಹೆಸರು. ಮಹಿಳೆಯರ ಹಕ್ಕುಗಳ ಕುರಿತು ಖಚಿತ ಮತ್ತು ಮುಕ್ತ ಅಭಿಪ್ರಾಯಗಳನ್ನು ಹೊಂದಿರುವ ಕವಿತಾ ತಮ್ಮ ಈ ಗುಣಗಳಿಂದಲೇ ತರುಣ ಪೀಳಿಗೆಯನ್ನು ಸೆಳೆದಿರುವ ನಾಯಕಿ.

ಮೂಲತಃ ತಮಿಳುನಾಡಿನ ಕೂನೂರಿನ ಕವಿತಾ ಹುಟ್ಟಿ ಬೆಳೆದಿದ್ದು ಭಿಲಾಯಿಯಲ್ಲಿ. ತಂದೆ ಉಕ್ಕು ಕಾರ್ಖಾನೆಯಲ್ಲಿ ಇಂಜಿನಿಯರ್. ತಾಯಿ ಇಂಗ್ಲಿಷ್ ಉಪನ್ಯಾಸಕಿ. ಮುಂಬಯಿಯಲ್ಲಿ ಪದವಿ ಓದುವಾಗ ಬೀದಿ ನಾಟಕಗಳಲ್ಲಿ, ವಿದ್ಯಾರ್ಥಿ ಚಟುವಟಿಕೆಗಳಲ್ಲಿ ಮುಂದಿದ್ದ ಕವಿತಾ ದೆಹಲಿಯ ಜವಾಹರ್‌ಲಾಲ್ ವಿವಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂಫಿಲ್ ಮಾಡಿದರು. ೧೯೯೪ರಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಶಿವಸೇನಾ ವಿದ್ಯಾರ್ಥಿ ಸಾಂಪ್ರದಾಯಿಕ ನಿಲುವು ತಳೆದು ಮಹಿಳಾವಿರೋಧಿ ಭಾಷಣ ಮಾಡಿದಾಗ ಅದಕ್ಕೆ ಪ್ರತಿಯಾಗಿ ಅವನೆದುರು ತುಂಡುಲಂಗ ತೊಟ್ಟು ಸಿಗರೇಟ್ ಎಳೆಯುತ್ತ ಕವಿತಾ ಮತ್ತವರ ಗೆಳತಿಯರು ತಿರುಗಾಡಿದ್ದರು. ‘ನೀನೇನಾದರೂ ಆಯ್ಕೆಯಾದರೆ ನಮ್ಮಂತಹ ಹುಡುಗಿಯರನ್ನು ಏನು ಮಾಡುತ್ತಿ?’ ಎಂದು ಪ್ರಶ್ನಿಸಿದಾಗ, ‘ಜೈಲಿಗೆ ಅಟ್ಟುತ್ತೇನೆ’ ಎಂದಿದ್ದ ಅವನು. ಅವನ ದರ್ಪದ ಮಾತು ಕವಿತಾ ಮತ್ತವರ ಗೆಳತಿಯರಲ್ಲಿ ರೊಚ್ಚು, ಕೆಚ್ಚು ಎರಡನ್ನೂ ಮೂಡಿಸಿತು.

ಆಗ ಕವಿತಾ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಷನ್’ನ ವಿದ್ಯಾರ್ಥಿ ಸಂಘಟನೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಐಸಾ) ಸೇರಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಪ್ರಸಾದ್ ಎಂಬ ಯುವನಾಯಕನ ಗಾಢ ಪ್ರಭಾವಕ್ಕೆ ಒಳಗಾದರು. ನಂತರ ಜೆಎನ್ಯು ವಿದ್ಯಾರ್ಥಿ ಸಂಘಕ್ಕೆ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಆದರೆ ವಿದ್ಯಾರ್ಥಿ ಮುಖಂಡರಾದ ಚಂದ್ರಶೇಖರ್ ಹಾಗೂ ಶ್ಯಾಂ ನಾರಾಯಣ್ ಯಾದವ್ ಬಿಹಾರದ ಸಿವನ್‌ನ ರ‍್ಯಾಲಿಯಲ್ಲಿ ಭಾಷಣ ಮಾಡುವಾಗ ಹತ್ಯೆಯಾದರು. ಅದಕ್ಕೆ ಕಾರಣರಾದ ಆರ್‌ಜೆಡಿ ಎಂಪಿ ಸೈಯದ್ ಶಹಾಬುದ್ದೀನ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದಾಗ ಕವಿತಾ ಜೈಲಿಗೆ ಹೋದರು.

ಹೀಗೆ ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯ ಜೀವನ ಆಯ್ದುಕೊಂಡ ಕವಿತಾ ಮುಂದೆಯೂ ಹಲವು ಬಾರಿ ಜೈಲುವಾಸಿಯಾದರು. ಈಗ ಅವರು ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಷನ್’ನ ಪಾಲಿಟ್ ಬ್ಯೂರೋ ಸದಸ್ಯೆ. ಪಕ್ಷದ ಮುಖವಾಣಿ ಪತ್ರಿಕೆ ‘ಲಿಬರೇಷನ್’ನ ಸಂಪಾದಕಿ. ತಮ್ಮ ಪಕ್ಷದ ಮಹಿಳಾ ಸಂಘಟನೆ ಆಲ್ ಇಂಡಿಯಾ ಪ್ರೊಗ್ರೆಸಿವ್ ವುಮೆನ್ಸ್ ಅಸೋಸಿಯೇಷನ್ (ಐಪ್ವಾ)ದ ಕಾರ್ಯದರ್ಶಿ. ಕರ್ನಾಟಕದ ಹಿರಿಯ ಮಹಿಳಾ ಹೋರಾಟಗಾರ್ತಿ ಮೈಸೂರಿನ ರತಿ ರಾವ್ ಈಗ ಐಪ್ವಾದ ಅಧ್ಯಕ್ಷರಾಗಿದ್ದಾರೆ.


ಐಪ್ವಾ, ಮಹಿಳೆಯರ ಮೇಲಾಗುವ ಎಲ್ಲ ರೀತಿಯ ಶೋಷಣೆ, ತಾರತಮ್ಯ ಮತ್ತು ಹಿಂಸೆಯನ್ನು ವಿರೋಧಿಸುತ್ತ ಹಕ್ಕು ಮತ್ತು ಸಮಾನತೆಯನ್ನು ಪ್ರತಿಪಾದಿಸಲು ಮಹಿಳೆಯರನ್ನು ಸಂಘಟಿಸುತ್ತದೆ. ಸಾಮಾಜಿಕ ಬದಲಾವಣೆಗಾಗಿ ಪ್ರಗತಿಪರ ಶಕ್ತಿಗಳ ಜೊತೆ ಕೈ ಜೋಡಿಸುತ್ತದೆ. ಮನೆ, ಉದ್ಯೋಗ ಸ್ಥಳ ಹಾಗೂ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ತಾರತಮ್ಯ, ದೌರ್ಜನ್ಯಕ್ಕೆ ಕಾರಣವಾದ ಪುರುಷ ಪ್ರಧಾನ ದಬ್ಬಾಳಿಕೆಯನ್ನು ಐಪ್ವಾ ವಿರೋಧಿಸುತ್ತದೆ. ಸಮಾಜವಾದ ನೆಲೆಗೊಂಡ ಸಮಾನತೆಯ ಸಮಾಜಕ್ಕಾಗಿ ಹೋರಾಡುತ್ತದೆ. ಜಾತಿ, ವರ್ಗ, ಪಿತೃಪ್ರಾಧಾನ್ಯಗಳು ಶೋಷಣೆಯ ಮೂರು ಮುಖಗಳೆಂದು ಗುರುತಿಸಿ, ಅವುಗಳ ವಿರುದ್ಧ ಹೋರಾಟದಲ್ಲಿ ಸಮಾಜದ ಎಲ್ಲ ಸ್ತರಗಳ ಮಹಿಳೆಯರು ಭಾಗಿಯಾಗಬೇಕೆಂದು ಬಯಸುತ್ತದೆ.

ಐಪ್ವಾ ಸರ್ಕಾರಿ-ವಿದೇಶಿ ಧನಸಹಾಯದಿಂದ ನಡೆಯುವ ಸಂಘಟನೆಯಲ್ಲ. ಅದು ತನ್ನ ಇರವಿಗೆ ಜನಸಾಮಾನ್ಯ ಮಹಿಳೆಯರ ಶಕ್ತಿಯನ್ನೇ ಅವಲಂಬಿಸಿದೆ. ೧೬ ವರ್ಷ ಮುಗಿದ, ಐಪ್ವಾದ ಸಂವಿಧಾನ-ಕಾರ್ಯಕ್ರಮಗಳ ಬಗೆಗೆ ಸಹಮತವುಳ್ಳ ಯಾರೇ ಆದರೂ ಅದರ ಸದಸ್ಯರಾಗಬಹುದು. ಸದಸ್ಯತ್ವ ಶುಲ್ಕ ೨ ರೂಪಾಯಿ ಮಾತ್ರ. ಸಹಮತವಿರುವ ವ್ಯಕ್ತಿಗಳು, ಜನಸಾಮಾನ್ಯರಿಂದ ಸಂಗ್ರಹಿಸುವ ಹಣವೇ ಅದರ ಕೆಲಸ ಕಾರ್ಯಗಳಿಗೆ ಆಧಾರ. ಇಂತಹ ಸಂಘಟನೆಗಳ ಸದಸ್ಯರಲ್ಲಿ ಸಹಜವಾಗಿ ಕಾಣುವ ಸರಳ, ನಿರ್ಭಯ, ದಿಟ್ಟ ವ್ಯಕ್ತಿತ್ವ ಕವಿತಾ ಅವರದು.

‘ಫ್ರೀಡಂ ವಿತೌಟ್ ಫಿಯರ್’

೨೦೧೨ರ ನಿರ್ಭಯಾ ಅತ್ಯಾಚಾರ ಪ್ರಕರಣದ ವೇಳೆ ಕವಿತಾ ತಮ್ಮ ಭಿನ್ನ ನಿಲುವು, ನಾಯಕತ್ವದ ಗುಣಗಳಿಂದ ಮುನ್ನೆಲೆಗೆ ಬಂದರು. ಜಂತರ್ ಮಂತರ್, ಇಂಡಿಯಾ ಗೇಟ್, ಶೀಲಾ ದೀಕ್ಷಿತ್ ಮನೆ ಎದುರು ಮತ್ತು ದೆಹಲಿಯ ಇತರ ಕಡೆಗಳಲ್ಲಿ ನಡೆದ ಅತ್ಯಾಚಾರ ವಿರೋಧಿ ಪ್ರತಿಭಟನೆಗಳಲ್ಲಿ ಅವರು ಮುಂಚೂಣಿಯಲ್ಲಿದ್ದರು. ‘ಅತ್ಯಾಚಾರವಾದದ್ದು ದೆಹಲಿಯಲ್ಲಾದರೆ, ಸಾವಿರಾರು ಜನ ಪ್ರತಿಭಟಿಸಿದರೆ, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೆ ಪ್ರಕರಣದ ವಿಚಾರಣೆ ತ್ವರಿತಗೊಂಡು ಕೂಡಲೇ ತೀರ್ಪು ಬರುತ್ತದೆ. ಇಲ್ಲದಿದ್ದರೆ ದಶಕಗಟ್ಟಲೆ ಕಳೆದ ನಂತರವೂ ‘ಸಾಕ್ಷ್ಯಾಧಾರಗಳಿಲ್ಲದೆ’ ಕೇಸು ಸಾಯುತ್ತದೆ. ಖೈರ್ಲಾಂಜಿಯಲ್ಲಿ, ನಾಗ್ಪುರದಲ್ಲಿ, ಮಣಿಪುರದಲ್ಲಿ ನಡೆದದ್ದು ಮುಚ್ಚಿ ಹೋಗುತ್ತವೆ. ಭಾರತದಲ್ಲಿ ನ್ಯಾಯ ಸಿಗುವುದು ಎಂದರೆ ಲಾಟರಿ ಹೊಡೆಯುವ ಹಾಗೆ’ ಎಂದು ಕವಿತಾ ನ್ಯಾಯವ್ಯವಸ್ಥೆಯ ವಿಳಂಬ ಮತ್ತು ಅದಕ್ಷತೆಯನ್ನು ಕಟುವಾಗಿ ಟೀಕಿಸಿದರು. ಬಲಿಪಶು ಆದವರ ಸಾಕ್ಷ್ಯ ನಂಬುವ ಬದಲು ಫೊರೆನ್ಸಿಕ್ ಸಾಕ್ಷ್ಯಗಳನ್ನೇ ಕೋರ್ಟು ಹೆಚ್ಚೆಚ್ಚು ನಂಬುತ್ತಿರುವುದು ನ್ಯಾಯವ್ಯವಸ್ಥೆಯ ದುರಂತ ಎಂದು ಬಣ್ಣಿಸಿದ ಕವಿತಾ, ಅತ್ಯಾಚಾರಿಗೆ ಮರಣದಂಡನೆ-ಪೌರುಷಹರಣ ಮಾಡುವುದನ್ನು ಖಂಡತುಂಡ ವಿರೋಧಿಸಿದರು.

‘ಅತ್ಯಾಚಾರವಾಗುವುದು ಲೈಂಗಿಕ ಬಯಕೆಯ ಕಾರಣದಿಂದಲ್ಲ. ಜ್ಯಾಕ್ ದ ರಿಪ್ಪರ್ ಎಂಬ ಸರಣಿ ಅತ್ಯಾಚಾರಿ-ಕೊಲೆ ಪಾತಕಿ ಷಂಡನಾಗಿದ್ದ. ಹೆಣ್ಣಿನ ಮೇಲೆ ಅತ್ಯಾಚಾರವೆಸಗಲು ಲೈಂಗಿಕ ಅಂಗವೇ ಬೇಕಿಲ್ಲ, ವಸ್ತುಗಳೂ ಸಾಕು. ಆದ್ದರಿಂದ ಪುರುಷತ್ವ ಹರಣ ಮಾಡುವುದು ಅತ್ಯಾಚಾರ ಕೊನೆಗೊಳಿಸುವುದಿಲ್ಲ. ೧೦೦ ಅತ್ಯಾಚಾರಿಗಳಲ್ಲಿ ೨೬ ಜನರಿಗೆ ಮಾತ್ರ ಶಿಕ್ಷೆಯಾಗುತ್ತಿರುವಾಗ ಮರಣದಂಡನೆ ಶಿಕ್ಷೆಯೂ ಅತ್ಯಾಚಾರ ತಡೆಗಟ್ಟಲಾರದು’ ಎಂದು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಕವಿತಾ ತಿಳಿಸಿದರು. ಹೆಣ್ಣಿಗೆ ಬೇಕಿರುವುದು ಬರಿಯ ರಕ್ಷಣೆಯಲ್ಲ, ಸ್ವಾತಂತ್ರ್ಯ, ಭಯವಿರದ ಸ್ವಾತಂತ್ರ್ಯ ಎನ್ನುತ್ತಾ, ‘ಫ್ರೀಡಂ ವಿತೌಟ್ ಫಿಯರ್’ ಎಂಬ ಘೋಷವಾಕ್ಯ ಚಾಲ್ತಿಯಲ್ಲಿಟ್ಟರು. ಹೆಣ್ಣಿಗೆ ಎಂದೆಂದೂ ನಿರಾಕರಿಸಲಾದ ಸ್ವಾತಂತ್ರ್ಯವನ್ನು ಎಲ್ಲ ದನಿಗಳೂ ಪ್ರತಿಪಾದಿಸಿದವು. ಅವರ ವಿಭಿನ್ನ ವಿಶ್ಲೇಷಣೆ ತರುಣ ಪೀಳಿಗೆಯನ್ನು ಸೆಳೆದು ಸಾಮಾಜಿಕ ಜಾಲತಾಣದ ಕಣ್ಮಣಿಯಾದರು.

ಎಲ್ಲರೂ ಮಹಿಳೆಯ ರಕ್ಷಣೆ-ಭದ್ರತೆಯ ಬಗೆಗೆ ಮಾತನಾಡಿದರೆ ಕವಿತಾ ಮಹಿಳಾ ಸ್ವಾತಂತ್ರ್ಯದ ಬಗೆಗೆ ಮಾತನಾಡಿದರು. ‘ಜಗತ್ತಿನ ಎಲ್ಲಕಡೆ ಹೆಣ್ಣನ್ನು ಆಸೆಯಿಂದಲೆ ನೋಡುತ್ತಾರೆ. ಎಲ್ಲಿ ಹೆಜ್ಜೆಯಿಟ್ಟರೂ ಹೆಣ್ಣು ಅವೇ ನೋಟಗಳ ಎದುರಿಸಬೇಕು. ಸುಂದರ ಹೆಣ್ಣುಗಳ ಚರ್ಮ, ಆಕಾರ, ಸ್ತನ, ನಿತಂಬಗಳಿಗೆ ಸೌಂದರ್ಯದ ಕಾರಣದಿಂದ ಜಾಹೀರಾತಿನಲ್ಲಿ ತೋರಿಸಿಕೊಳ್ಳುವ ಸ್ವಾತಂತ್ರ್ಯವಾದರೂ ಇದೆ. ಹಾಗಿಲ್ಲದಿರುವ ‘ಕುರೂಪಿ’ಗಳಿಗೆ ಯಾವ ಸ್ವಾತಂತ್ರ್ಯವಿದೆ? ಹೆಣ್ಣಿನ ಸಾಮಾಜಿಕ ಸ್ವಾತಂತ್ರ್ಯ, ಲೈಂಗಿಕ ಸ್ವಾತಂತ್ರ್ಯ ಬೇರೆ ಬೇರೆ ಅಲ್ಲ. ಯಾಕೆಂದರೆ ಲೈಂಗಿಕ ಸ್ವಾತಂತ್ರ್ಯ ಎಂದರೆ ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಆಗಿದೆ.’

ಅತ್ಯಾಚಾರದ ಸುತ್ತ, ಅಪರಾಧಿಗಳ ಸುತ್ತ, ಹುಡುಗಿಯರ ‘ನಡತೆ-ಬಟ್ಟೆ’ಗಳ ಸುತ್ತ ಗಿರಕಿ ಹೊಡೆಯುತ್ತಿದ್ದ ಚರ್ಚೆ-ಸಂವಾದಗಳನ್ನು ಕವಿತಾ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯದ ವಿಸ್ತೃತ ಆಯಾಮಗಳತ್ತ ಒಯ್ದರು. ‘ಭಯವಿಲ್ಲದೆ ಹೆಣ್ಣು ಹೊರಗೆಲ್ಲು ಮುಕ್ತವಾಗಿ ತಿರುಗದಂತಹ ಸನ್ನಿವೇಶ ನಿರ್ಮಾಣವಾಗಿದೆ. ಮಾಧ್ಯಮಗಳು ಹೆಣ್ಣು ಎಂದರೆ ಸತಿ ಸಾವಿತ್ರಿಯಂತೆ ತೋರಿಸಿ ‘ಪಢಿಯೆ ಗೀತಾ ಬನೀಯೆ ಸೀತಾ’ ಎನ್ನುವ ತಪ್ಪು ಮಾದರಿ ಸೃಷ್ಟಿಸಿವೆ. ನಾನು ಅಂಥ ಎಲ್ಲ ಮಾದರಿಗಳ ವಿರುದ್ಧ ನಿಲ್ಲಬಯಸುತ್ತೇನೆ. ರಾತ್ರಿ ಏಕೆ ಓಡಾಡಬೇಕು? ಹುಡುಗರೊಡನೆ ಏಕೆ ಅಡ್ಡಾಡಬೇಕು? ಎಂದೆಲ್ಲ ನಮ್ಮನ್ನು ಕೇಳಬೇಡಿ. ಹೆಂಗಸರಿಗೆ ಅಡ್ವೆಂಚರಸ್ ಆಗುವ ಎಲ್ಲ ಹಕ್ಕೂ ಇದೆ: ನಾವು ಹಾಗೇ ಇರುವವರು. ನಮಗೆ ಎಂತೆಂಥ ಬಟ್ಟೆ ಹಾಕಬೇಕು ಎಂದು ಸಲಹೆ ಕೊಡಬೇಡಿ. ಹಗಲು-ರಾತ್ರಿಗಳ ಯಾವ ಹೊತ್ತಿನಲ್ಲಿ ಸಂಚರಿಸುವುದು ಸುರಕ್ಷಿತ ಎಂದು ಹೇಳಬೇಡಿ. ಸುರಕ್ಷಿತವಾಗಿರಲು ಯಾರ ಜೊತೆ, ಎಷ್ಟು ಪುರುಷರ ಜೊತೆಗೆ ಅಡ್ಡಾಡಬೇಕು ಎಂಬ ಲೆಕ್ಕ ಕೊಡಬೇಡಿ. ಎಂಥ ದಿರಿಸು ತೊಡಬೇಕೆಂದು ನಮಗಲ್ಲ, ಅವರಿಗೆ ಹೇಳಿ. ಏಕೆ ಅತ್ಯಾಚಾರ ಮಾಡಬಾರದು ಎಂದು ಅವರಿಗೆ ತಿಳಿಸಿ. ಅಪರಿಚಿತರು, ಹೊರಗಿನವರೇ ಅತ್ಯಾಚಾರಿಗಳು ಎಂದು ಹೆಣ್ಮಕ್ಕಳನ್ನು ಹೆದರಿಸಲಾಗುತ್ತಿದೆ. ಅದು ಪೂರ್ಣ ಸತ್ಯವಲ್ಲ. ಪರಿಚಯಸ್ಥರು, ಬಂಧುಗಳು, ಗುರುಗಳು, ನಾವು ಗೌರವಿಸುವವರು, ರಕ್ಷಿಸುವವರೇ ಅತ್ಯಾಚಾರ ಎಸಗುವುದು ಹೆಚ್ಚಿರುವಾಗ ಯಾರಿಂದ ಯಾರನ್ನು ರಕ್ಷಿಸುತ್ತೀರಿ? ಸಿಸಿಟಿವಿಗಳಿಂದ ಎಷ್ಟು ಹೆಣ್ಮಕ್ಕಳನ್ನು ರಕ್ಷಿಸುತ್ತೀರಿ? ಅತ್ಯಾಚಾರಕ್ಕೊಳಗಾಗದ ಹಾಗೆ ಸದಾ ನಮ್ಮನ್ನು ನಾವೇ ಕಾಪಾಡಿಕೊಳ್ಳುತ್ತಿರಲು ಸಾಧ್ಯವಿಲ್ಲ. ನಮಗೆ ಸ್ವಾತಂತ್ರ ಬೇಕು. ಭಯವಿರದ ಸ್ವಾತಂತ್ರ್ಯ ಬೇಕು.’

ಸಹಜವಾಗಿ ಅವರಿಗೆ ಬೆಂಬಲಿಗರೆಷ್ಟೋ ಅಷ್ಟೇ, ವಿರೋಧಿಗಳೂ ಹುಟ್ಟಿಕೊಂಡರು. ಕೆಟ್ಟ ಮೆಸೇಜುಗಳು, ಟೀಕೆ, ಪ್ರತಿಕ್ರಿಯೆಗಳ ಸುರಿಮಳೆಯೇ ಆಯಿತು. ಮಹಿಳೆ ತನ್ನ ಹಕ್ಕುಗಳ ಬಗೆಗೆ, ಸ್ವಾತಂತ್ರ್ಯದ ಬಗೆಗೆ ಮಾತನಾಡಿದಾಗಲೆಲ್ಲ ಲೈಂಗಿಕ ಸ್ವೇಚ್ಛಾಚಾರಿ ಎಂಬ ಗೂಬೆ ಕೂರಿಸಿ, ‘ಸೂಳೆ’ ಎಂಬ ಪಟ್ಟ ಕಟ್ಟಿ ಬಾಯ್ಮುಚ್ಚಿಸಲಾಗುತ್ತದೆ. ‘ನಕ್ಸಲೈಟ್’ ಎಂದು ಜರೆಯಲಾಗುತ್ತದೆ. ಕವಿತಾಗೂ ಅವೇ ಟೀಕೆಗಳು ಕೇಳಿಬಂದವು.

ಒಬ್ಬನಂತೂ, ‘ಇಷ್ಟಪಟ್ಟವರ ಜೊತೆ ಮಲಗುವುದು ಹಕ್ಕು ಎನ್ನುತ್ತೀ. ನಿನ್ನಮ್ಮನೂ ಇಷ್ಟಪಟ್ಟವರ ಜೊತೆ ಮಲಗಿದ್ದಳೇ ಕೇಳು’ ಎಂದ. ‘ಹೌದು, ನನ್ನಮ್ಮ ಅವಳಿಷ್ಟಪಟ್ಟವರ ಜೊತೆಯೇ ಮಲಗಿದ್ದಳು. ಬಹುಶಃ ನಿನ್ನಮ್ಮನೂ ಸಹ. ಇಷ್ಟಪಟ್ಟವರ ಜೊತೆ ಮಲಗುವುದು ಮಾತ್ರ ಸೆಕ್ಸ್. ಉಳಿದದ್ದು ರೇಪ್, ತಿಳಕೊ’ ಎಂದು ಅವನಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು. ಕವಿತಾಗೆ ಪೂರಕವಾಗಿ ಅವರ ತಾಯಿ ಲಕ್ಷ್ಮಿ ಕೃಷ್ಣನ್, ‘ನಾನು ನನಗೆ ಬೇಕಾದಾಗ, ನನಗಿಷ್ಟ ಬಂದವರ ಜೊತೆ ಮಲಗಿದ್ದೇನೆ. ಪ್ರತಿ ಸ್ತ್ರೀಪುರುಷರಿಗು ಪರಸ್ಪರ ಒಪ್ಪಿಗೆ ಮೂಲಕ ಸೇರಲು ಇರುವ ಈ ಸ್ವಾತಂತ್ರ್ಯವನ್ನು, ಬಲವಂತವಿರದ, ಬಂಧನಗಳಿರದ ಲೈಂಗಿಕ ಸ್ವಾತಂತ್ರ್ಯವನ್ನು ಕೊನೆತನಕ ಎತ್ತಿ ಹಿಡಿಯುತ್ತೇನೆ’ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದರು!

***

ಒಟ್ಟಾರೆಯಾಗಿ ಹೇಳುವುದಾದರೆ ಸಂಪ್ರದಾಯನಿಷ್ಠ, ಬಲಾಢ್ಯ ವರ್ಗವು ಒಪ್ಪದ ವಿಷಯಗಳನ್ನು ಎತ್ತಿ ಆಡುವ, ಹಕ್ಕು ಪ್ರತಿಪಾದಿಸುವ ಕವಿತಾ ಕೃಷ್ಣನ್ ಒಬ್ಬ ಶಕ್ತ ಸಂಘಟಕಿ, ಮುಕ್ತ ನಿರ್ಭೀತ ಮಾತುಗಾರಿಕೆಯಿಂದ ಜನಸಾಮಾನ್ಯರ ಸೆಳೆವ ವಾಗ್ಮಿ. ಅವರ ವಿಚಾರಗಳ ಬಗೆಗೆ ಸಹಮತ ಇಲ್ಲದವರಿಗೂ ಅವರ ಹಿಂದಿನ ಬದ್ಧತೆ, ಕಳಕಳಿ, ಹೋರಾಟದ ಕೆಚ್ಚಿನ ಬಗೆಗೆ ಭಿನ್ನಮತವಿರಲು ಸಾಧ್ಯವಿಲ್ಲ. ಮಹಿಳಾಪರ ಮತ್ತು ಸಾಮಾಜಿಕ ಹೋರಾಟಗಾರ್ತಿಯಾಗಿ ತನ್ನದೇ ಹಾದಿ ರೂಪಿಸಿಕೊಳ್ಳುತ್ತಿರುವ ಕವಿತಾ ಭವಿಷ್ಯದ ಭರವಸೆಯ ನಾಯಕಿ ಎನ್ನುವುದರಲ್ಲಿ ಅನುಮಾನವಿಲ್ಲ.

ಹೆಜ್ಜೆ ಹಾಕಿ ಕವಿತಾ ಜೊತೆಗೆ; ಬನ್ನಿ ಎಲ್ಲರು ಕೊಪ್ಪಳದೆಡೆಗೆ..


Tuesday, 24 January 2017

ನ್ಯಾಯ ದೇವಿಯೆ, ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ?




ಬಹುಪಾಲು ಮಹಿಳಾಪರ ಸುಧಾರಣೆ-ಯೋಜನೆ-ಕಾನೂನುಗಳನ್ನು ರೂಪಿಸಿದವರು ತಾಯ್ತನದ ಮನಸಿನ ಪುರುಷರು. ಆದರೂ ವಿವಿಧ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಕೊಡುವ ತೀರ್ಪು-ಸಲಹೆಗಳಲ್ಲಿ; ವಕೀಲರ ವಾದ-ಪ್ರತಿವಾದ ಧೋರಣೆಗಳಲ್ಲಿ ಇಣುಕುವ ‘ಗಂಡು ಧೋರಣೆ’ ಕೆಲವೊಮ್ಮೆ ಚರ್ಚೆಗೆ ಬರುತ್ತದೆ. ತಾರತಮ್ಯ ರಹಿತವಾಗಿ ನ್ಯಾಯಾನ್ಯಾಯ ತೀರ್ಮಾನ ಮಾಡಬೇಕಾದ ನ್ಯಾಯಾಧೀಶರೇ ಪುರುಷ ಪಾರಮ್ಯ ಎತ್ತಿ ಹಿಡಿವಾಗ ಪ್ರಜ್ಞಾವಂತ ಮನಸುಗಳು ಬೆಚ್ಚಿಬಿದ್ದು ನ್ಯಾಯವ್ಯವಸ್ಥೆ ಮಹಿಳಾ ವಿರೋಧಿಯಾಗತೊಡಗಿದೆಯೆ ಎಂಬ ಚರ್ಚೆ ಶುರು ಮಾಡುತ್ತವೆ.

ಪ್ರಾತಿನಿಧಿಕವಾಗಿ ನ್ಯಾಯವ್ಯವಸ್ಥೆಯಲ್ಲಿ ಕಡಿಮೆ ಸಂಖ್ಯೆಯ ದಲಿತರಿದ್ದಾರೆ. ಕಡಿಮೆ ಸಂಖ್ಯೆಯ ಆದಿವಾಸಿಗಳಿದ್ದಾರೆ. ಕಡಿಮೆ ಸಂಖ್ಯೆಯ ಹಳ್ಳಿಗರಿದ್ದಾರೆ. ಕಡಿಮೆ ಸಂಖ್ಯೆಯ ಅಲ್ಪಸಂಖ್ಯಾತ ಸಮುದಾಯದವರಿದ್ದಾರೆ. ಆದರೆ ಅಲ್ಲಿರುವ ಮಹಿಳೆಯರ ಸಂಖ್ಯೆ ಅವರ ಜನಸಂಖ್ಯೆಗನುಗುಣವಾಗಿ ತುಂಬ ಕಡಿಮೆಯಿದೆ. ಕಣ್ಣುಪಟ್ಟಿ ಕಟ್ಟಿ ತಕ್ಕಡಿ ಹಿಡಿದು ನಿಲಿಸಿದ ನ್ಯಾಯದೇವತೆಯ ಮಟ್ಟಿಗಷ್ಟೇ ಮಹಿಳಾ ಭಾಗವಹಿಸುವಿಕೆ ಮುಗಿದು ಹೋಗುತ್ತಿದೆಯೇ ಎಂದು ಆತಂಕ ಹುಟ್ಟಿಸುವಂತೆ ವಾಸ್ತವವಿದೆ.


(ಫಾತಿಮಾ ಬೀವಿ)


(ಸುಜಾತಾ ಮನೋಹರ್)

(ಇಂದಿರಾ ಜೈಸಿಂಗ್)



ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಫಾತಿಮಾ ಬೀವಿ ಅಥವಾ ಸುಜಾತಾ ಮನೋಹರ್ ಇರಲಿ; ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಇರಲಿ; ಇತ್ತೀಚೆಗೆ ಬಾರ್ ಅಸೋಸಿಯೇಷನ್ ಪ್ರವೇಶಿಸಿ ದಿಟ್ಟ ಕಮೆಂಟುಗಳಿಂದ ಸುದ್ದಿ ಮಾಡಿದ ಅನಿಮಾ ಮುಯರತ್ ಇರಲಿ - ಸ್ವತಂತ್ರವಾಗಿ ವೃತ್ತಿ ಕೈಗೊಂಡ ಯಾವುದೇ ಮಹಿಳಾ ನ್ಯಾಯವಾದಿಯನ್ನು ಉದ್ಯೋಗ ಸ್ಥಳದಲ್ಲಿ ಅವರ ಸ್ಥಿತಿಗತಿ ಕುರಿತು ಕೇಳಿ ನೋಡಿ. ನ್ಯಾಯಾಸ್ಥಾನ ಪುರುಷ ಪ್ರಧಾನವಾಗಿರುವುದನ್ನು, ತಾವು ಪುರುಷ ದರ್ಪದ ಕಾರಣವಾಗಿ ಅನುಭವಿಸುತ್ತಿರುವ ಸಂಕಟಗಳನ್ನು ನೋವಿನಿಂದ ಹೇಳಿಕೊಳ್ಳುತ್ತಾರೆ. ಅಪರಾಧ-ಶಿಕ್ಷೆಯ ಭಾಷೆ ಮಾತ್ರ ಗೊತ್ತಿರುವ ಗಂಡುಮನಸುಗಳ ವಿರುದ್ಧ ದನಿಯೆತ್ತುವುದು, ಏನಾದರೂ ಬದಲಾವಣೆ ತರಬೇಕೆಂದು ಕನಸುವುದು ಸಾಧ್ಯವೇ ಇಲ್ಲವೆಂಬ ಸ್ಥಿತಿ ಇರುವುದನ್ನು ಹೆಸರು ಹಾಕಬಾರದೆಂಬ ಷರತ್ತಿನೊಂದಿಗೆ ಬಿಚ್ಚಿಡುತ್ತಾರೆ. ಬಹಿರಂಗವಾಗಿ ಟೀಕಿಸಿದ ಮಹಿಳೆಯರು ಪ್ರಭಾವಿಗಳಲ್ಲದಿದ್ದಲ್ಲಿ ಅವರ ವಿರುದ್ಧ ಊರೂರುಗಳಲ್ಲಿ ಮಾನನಷ್ಟ ಮೊಕದ್ದಮೆ ಜಡಿದು ಕೋರ್ಟು ಅಲೆಸಿ ಸುಸ್ತು ಮಾಡಲಾಗುತ್ತದೆ. ತಮಗೆ ಅನುಕೂಲೆಯಾಗಿರುವವರನ್ನು ಮೇಲೇರಿಸಿ, ತಮ್ಮ ದಿಕ್ತಟ ಮೀರುವ ಮಹಿಳಾ ವಕೀಲರನ್ನು ಅಲಿಖಿತ ಬಹಿಷ್ಕಾರ ಹಾಕಿ ಮೂಲೆಗುಂಪು ಮಾಡಲಾಗುತ್ತದೆ. ಕೈಬೆರಳೆಣಿಕೆಯಷ್ಟು ಮಹಿಳಾ ನ್ಯಾಯವಾದಿಗಳಷ್ಟೇ ಸ್ವತಂತ್ರವಾಗಿ, ಯಶಸ್ವಿಯಾಗಿ ಇಂಥ ಅಡೆತಡೆ ಎದುರಿಸಿ ಗೆದ್ದಿದ್ದಾರೆ. ಯಶಸ್ಸಿನ ಕಥೆಗಳಿಗಿಂತ ಸಾವಿರಪಟ್ಟು ಹೆಚ್ಚು ಮಹಿಳೆಯರು ಗಾಯಗೊಂಡ ಅನುಭವ ಹೊಂದಿದವರೇ ಇದ್ದಾರೆ.

ಇದೇಕೆ ಹೀಗಾಯಿತು? ಸಮಾನತೆಯ ಆಣೆ ಮಾಡಿ ಕಾನೂನು ಕಲಿತ ಕಾನೂನು ರಕ್ಷಕರೇಕೆ ಮಹಿಳಾ ವಿರೋಧಿ ಮನಸ್ಥಿತಿ ಹೊಂದಿದರು? ಮನುಷ್ಯನ ಮೂಲಸ್ವಭಾವವಾದ ತಾರತಮ್ಯ ಮತ್ತು ಕ್ರೌರ್ಯವನ್ನು ಬದಲಾಯಿಸಲು ಓದು ಮತ್ತು ವೃತ್ತಿ ವಿಫಲವಾಯಿತೆ? ಪುರುಷಾಧಿಕಾರವು ಅಲ್ಲಿರುವ ಮಹಿಳೆಯರ ಉಸಿರುಗಟ್ಟಿಸುತ್ತಿದೆಯೆ ಅಥವಾ ಗಮನಾರ್ಹ ಸಂಖ್ಯೆಯ ಮಹಿಳೆಯರಿಲ್ಲದಿರುವಿಕೆ ಲಿಂಗ ಸೂಕ್ಷ್ಮತೆ ಇಲ್ಲದಂತೆ ಮಾಡಿದೆಯೆ?

ನ್ಯಾಯಾಸ್ಥಾನದಲ್ಲಿರುವ ಮಹಿಳೆಯರ ಅಂಕಿಅಂಶ ಈ ಅನುಮಾನಗಳಿಗೆ ಪುಷ್ಟಿ ನೀಡುತ್ತದೆ.

                                                                                                                       (ಜ. ಭಾನುಮತಿ)


ಭಾರತದಲ್ಲಿ ೧೭ ಲಕ್ಷ ಲಾಯರುಗಳು ಬಾರ್ ಕೌನ್ಸಿಲಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ ೧೦-೧೫% ಮಾತ್ರ ಮಹಿಳೆಯರಿದ್ದಾರೆ. ಯಾವ ಕಾಲಘಟ್ಟದಲ್ಲೂ ಸುಪ್ರೀಂಕೋರ್ಟಿನಲ್ಲಿ ಇಬ್ಬರಿಗಿಂತ ಹೆಚ್ಚು ನ್ಯಾಯಾಧೀಶೆಯರಿಲ್ಲ. ಈಗ ಸುಪ್ರೀಂಕೋರ್ಟಿನ ೨೫ ನ್ಯಾಯಮೂರ್ತಿಗಳಲ್ಲಿ ಜಸ್ಟಿಸ್ ಆರ್. ಭಾನುಮತಿ ಒಬ್ಬರೇ ಮಹಿಳೆ. ಇದುವರೆಗೆ ಆರು ಜನ ಮಹಿಳೆಯರಷ್ಟೇ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾಗಿದ್ದಾರೆ. ಭಾರತದ ಮೊದಲ ಮಹಿಳಾ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಬಂದದ್ದು ೨೦೦೯ರಲ್ಲಿ. ಸ್ವತಂತ್ರ ಭಾರತದ ಮೊದಲ ಮಹಿಳಾ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅನ್ನಾ ಚಾಂಡಿ ೧೯೫೯ರಲ್ಲಿ ಬಂದರು. ಆದರೆ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಲು (ಫಾತಿಮಾ ಬೀವಿ (೧೯೮೯-೯೨)) ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಲು (ಲೀಲಾ ಸೇಥ್ (೧೯೯೧-೯೬)) ಮಹಿಳೆಯರು ನಾಲ್ಕೈದು ದಶಕ ಕಾಲ ಕಾಯಬೇಕಾಯಿತು. ಪ್ರಸ್ತುತ ಎರಡು ಹೈಕೋರ್ಟುಗಳಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಮಹಿಳೆಯರಿದ್ದಾರೆ (ಮುಂಬಯಿಯಲ್ಲಿ ಜ. ಮಂಜುಳಾ ಚೆಲ್ಲೂರ್ ಹಾಗೂ ದೆಹಲಿಯಲ್ಲಿ ಜ. ಜಿ. ರೋಹಿಣಿ).

ಗೊತ್ತೆ? ಭಾರತದ ಕೋರ್ಟುಗಳು ೧೯೨೪ರವರೆಗೆ ಮಹಿಳೆಯರಿಗೆ ತಮ್ಮ ಬಾಗಿಲು ಮುಚ್ಚಿಕೊಂಡಿದ್ದವು! ನ್ಯಾಯವಾದಿಗಳ ಸಹಾಯಕರಾಗಿ ಮಹಿಳಾ ಬ್ಯಾರಿಸ್ಟರುಗಳು ಕೆಲಸ ಮಾಡಿಕೊಡಬಹುದಿತ್ತೇ ವಿನಹ ಕೋರ್ಟಿನೊಳ ಹೊಕ್ಕು ವಾದಿಸುವಂತಿರಲಿಲ್ಲ. ಭಾರತದ ಮೊದಲ ಬ್ಯಾರಿಸ್ಟರ್ ಮಹಿಳೆ ೧೮೯೪ರಲ್ಲಿ ಇಂಗ್ಲೆಂಡಿನ ಆಕ್ಸ್‌ಫರ್ಡಿನಲ್ಲಿ ಪದವಿ ಪಡೆದರೂ ಕೋರ್ಟು ಪ್ರವೇಶಿಸಲು ೩೦ ವರ್ಷ ಕಾಯಬೇಕಾಯಿತು! ಹೌದು. ಕಾನೂನು ಅಭ್ಯಸಿಸಿ ಪದವಿ ಪಡೆದಿದ್ದರೂ ಹೆಣ್ಣು ಎಂಬ ಕಾರಣಕ್ಕೇ ಅವರ ಜ್ಞಾನ, ಬುದ್ಧಿಮತ್ತೆ ದಂಡವೆನಿಸಿತ್ತು.

ಕಾರ್ನೆಲಿಯಾ ಸೊರಾಬ್ಜಿ


ಭಾರತದ ಅಷ್ಟೆ ಅಲ್ಲ, ಬ್ರಿಟನಿನ ಮೊತ್ತಮೊದಲ ವಕೀಲೆ ಕಾರ್ನೆಲಿಯಾ ಸೊರಾಬ್ಜಿ (೧೮೬೬-೧೯೫೪). ಅವರು ಮಹಾರಾಷ್ಟ್ರದ ನಾಸಿಕ್‌ನವರು. ಪಾರ್ಸಿ ಕ್ರೈಸ್ತ ಮಿಷನರಿ ತಂದೆ ಸೊರಾಬ್ಜಿ ಕರ್ಸೆಡ್ಜಿ ಹಾಗೂ ಮಿಷನರಿಗಳಿಂದ ದತ್ತು ತೆಗೆದುಕೊಂಡು ಬೆಳೆಸಲ್ಪಟ್ಟ ಭಾರತೀಯ ಮೂಲದ ಫ್ರಾನ್ಸಿನಾ ಫೋರ್ಡ್ ಎಂಬ ತಾಯಿಯ ಒಂಭತ್ತು ಮಕ್ಕಳಲ್ಲಿ ಒಬ್ಬಳು ಆಕೆ. ಮನೆಯಲ್ಲಿ ಹಾಗೂ ಶಾಲೆಯಲ್ಲಿ ಕಾರ್ನೆಲಿಯಾ ಇಂಗ್ಲಿಷ್ ಶಿಕ್ಷಣ ಪಡೆದು ಬೆಳೆದಳು. ಅವಳ ತಾಯಿ ಮಹಿಳಾ ಶಿಕ್ಷಣದಲ್ಲಿ ನಂಬಿಕೆಯಿಟ್ಟು ಪುಣೆಯಲ್ಲಿ ಶಾಲೆ ತೆರೆಯಲು ಸಹಾಯ ಮಾಡಿದ್ದರು. ಅವರಮ್ಮನ ಬಳಿ ಸ್ಥಳೀಯ ಹೆಣ್ಣುಮಕ್ಕಳು ತಮ್ಮ ಆಸ್ತಿವ್ಯಾಜ್ಯ ಪರಿಹಾರಕ್ಕಾಗಿ ಸಲಹೆ ಪಡೆಯಲು ಬರುತ್ತಿದ್ದರು. ಆ ಮಾತುಕತೆಗಳು ಎಳೆಯ ಕಾರ್ನೆಲಿಯಾ ಮೇಲೆ ಪ್ರಭಾವ ಬೀರಿದವು.

೧೮೮೯ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಬಿಎ ಪದವಿ ಪಡೆದ ಕಾರ್ನೆಲಿಯಾ ಆ ವಿಶ್ವವಿದ್ಯಾಲಯದ ಮೊದಲ ಪದವಿ ಪಡೆದ ಮಹಿಳೆಯಾದರು. ೧೮೯೨ರಲ್ಲಿ ಆಕ್ಸ್‌ಫರ್ಡಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ದೇಶದ ಮೊದಲ ಕಾನೂನು ಪದವೀಧರೆ ಹಾಗೂ ಆಕ್ಸ್‌ಫರ್ಡ್ ಕಾನೂನು ಶಾಲೆ ಪ್ರವೇಶಿಸಿದ ಮೊತ್ತಮೊದಲ ಮಹಿಳೆ ಆದರು. ೧೮೯೪ರಲ್ಲಿ ಭಾರತಕ್ಕೆ ಮರಳಿದರೂ ಪೂರ್ಣ ಪ್ರಮಾಣದ ನ್ಯಾಯವಾದಿಯಾಗುವಂತಿರಲಿಲ್ಲ. ಸಣ್ಣಪುಟ್ಟ ಕೆಲಸಗಳಿಗೇ ತೃಪ್ತಿ ಪಡಬೇಕಿತ್ತು.

ಆಗ ಹಿಂದೂ ಸಮಾಜದ ಕೆಲವು ಪ್ರದೇಶ-ಪಂಗಡಗಳ ಮಹಿಳೆಯರು ಪರ್ದಾ ಅನುಸರಿಸುತ್ತಿದ್ದರು. ಅವರೆಲ್ಲ ಪರ್ದಾ ಹಿಂದೆಯೇ ಇದ್ದ ಅನಕ್ಷರಸ್ಥರು. ಮನೆಯ ಕೆಲ ಪುರುಷರನ್ನು ಬಿಟ್ಟರೆ ಬೇರೆ ಗಂಡಸರನ್ನು ನೋಡುವಂತಿಲ್ಲ. ಏನೇ ವ್ಯವಹಾರ ಮಾಡುವುದಾದರೂ ಅವರ ಪರವಾಗಿ ಒಬ್ಬ ಗಂಡಸು ಇದ್ದರಷ್ಟೇ ಅದು ಊರ್ಜಿತವಾಗುತ್ತಿತ್ತು. ಆ ಮಹಿಳೆಯರಿಗೆ ಆಸ್ತಿವಂಚನೆಯಾದರೂ ಕಾನೂನು ಸಲಹೆ ತೆಗೆದುಕೊಳ್ಳಲಾರದವರಾಗಿದ್ದರು. ಅವರ ಹಲವು ಹಕ್ಕುಗಳು ಹೆಣ್ಣು ಎಂಬ ಕಾರಣಕ್ಕೇ ಮೊಟಕುಗೊಂಡಿದ್ದವು. ಕಾಥೇವಾಡ ಮತ್ತು ಇಂದೋರ್ ಸಂಸ್ಥಾನಗಳ ಇಂಥ ‘ಪರ್ದಾ ನಶೀನ್’ ಹೆಂಗಸರ ಪರವಾಗಿ ಮಾತನಾಡಲು ಕಾರ್ನೆಲಿಯಾ ವಿಶೇಷ ಅನುಮತಿ ಪಡೆದರು. ಆದರೆ ಅವರ ವಿದೇಶಿ ಪದವಿಗೆ ಮಾನ್ಯತೆ ಸಿಗಲಿಲ್ಲ. ಕೊನೆಗೆ ೧೮೯೭ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಎಲ್‌ಎಲ್‌ಬಿಯನ್ನೂ, ೧೮೯೯ರಲ್ಲಿ ಅಲಹಾಬಾದ್ ಹೈಕೋರ್ಟಿನ ಪ್ಲೀಡರ್ ಪರೀಕ್ಷೆಯನ್ನೂ ಪಾಸು ಮಾಡಿದರು. ೧೯೦೨ರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಲಹಾಕಾರ್ತಿಯಾಗಿ ಇಂಡಿಯಾ ಆಫೀಸಿನಲ್ಲಿ ಕೆಲಸ ಮಾಡತೊಡಗಿದರು. ೧೯೦೪ರಲ್ಲಿ ಬಂಗಾಳದ ಕೋರ್ಟ್ ಆಫ್ ವಾರ್ಡ್ಸ್‌ಗೆ ಮಹಿಳಾ ಸಹಾಯಕಿಯಾಗಿ ಕೆಲಸ ಮಾಡಿದರು. ಮುಂದಿನ ೨೦ ವರ್ಷ ೬೦೦ಕ್ಕಿಂತ ಹೆಚ್ಚು ಮಹಿಳೆಯರ, ಅನಾಥ ಮಕ್ಕಳ ಕಾನೂನು ಹಕ್ಕಿಗಾಗಿ, ಎಷ್ಟೋ ಸಲ ಯಾವ ಶುಲ್ಕವೂ ಇಲ್ಲದೆ ಹೋರಾಡಿದರು. ರಾಷ್ಟ್ರೀಯ ಹೋರಾಟಕ್ಕೆ ಬೆಂಬಲ ನೀಡಿದರು. ಬಾಲ್ಯವಿವಾಹ ವಿರೋಧಿಸಿ ಮತ್ತು ವಿಧವೆಯರ ಹಕ್ಕುಗಳ ಎತ್ತಿಹಿಡಿದು ವಿಸ್ತೃತವಾಗಿ ಬರೆದರು.

೧೯೨೪ರಲ್ಲಿ ನ್ಯಾಯದೇವತೆ ನ್ಯಾಯಾಸ್ಥಾನದ ಬಾಗಿಲುಗಳನ್ನು ಮಹಿಳೆಯರಿಗೆ ತೆರೆಸಿದಳು. ಅಲಹಾಬಾದ್ ಹೈಕೋರ್ಟಿನಲ್ಲಿ ಕಾರ್ನೆಲಿಯಾ ವಕೀಲೆಯಾಗಿ ನೋಂದಣಿಯಾದರು. ಆದರೆ ಅಲ್ಲಿನ ವಾತಾವರಣ ಮಹಿಳಾ ನ್ಯಾಯವಾದಿಗೆ ಎಷ್ಟು ಪ್ರತಿಕೂಲವಾಗಿತ್ತು ಎಂದರೆ ೧೯೨೮ರಲ್ಲಿ ನಿವೃತ್ತಿ ಪಡೆದು ಇಂಗ್ಲೆಂಡಿಗೆ ಹೋಗಿಬಿಟ್ಟರು. ಕುಟುಂಬವೇ ಇಂಗ್ಲೆಂಡಿಗೆ ಹೋಯಿತು.

ಆಗ ರಾಷ್ಟ್ರೀಯತೆ ಹೋರಾಟ ಮತ್ತು ಗಾಂಧಿ ಬೆಂಬಲಿತ ನಾಗರಿಕ ಅಸಹಕಾರವನ್ನು ವಿರೋಧಿಸಿ ಬ್ರಿಟಿಷ್ ರಾಜಸತ್ತೆಗೆ ಬೆಂಬಲ ಸೂಚಿಸಿದರು. ಬ್ರಿಟಿಷ್ ಆಳ್ವಿಕರ ಅಡಿ ಸ್ವಾಯತ್ತ ಸನಾತನ ಭಾರತ ಇರುವ ಹಾಗೇ ಇರಬೇಕೆಂದು ಹೇಳಿ ರಾಷ್ಟ್ರೀಯ ಹೋರಾಟಗಾರರ ಅವಗಣನೆಗೆ ಗುರಿಯಾದರು. ಸಮಾಜ ಸುಧಾರಣೆಯ ಅವರ ಕನಸುಗಳು ಹಾಗೇ ಉಳಿದವು. ಅವರ ಎಲ್ಲ ಕೆಲಸ-ಸೇವೆಗಳೂ ಹಿನ್ನಲೆಗೆ ಸರಿದುಬಿಟ್ಟವು.

ಇತ್ತೀಚೆಗೆ ಆಕ್ಸ್‌ಫರ್ಡಿನ ಲಿಂಕನ್ ಇನ್‌ನಲ್ಲಿ ಅವರ ಮೂರ್ತಿ ಸ್ಥಾಪಿಸಲಾಗಿದೆ. ಆದರೆ ಭಾರತದ ಮಟ್ಟಿಗೆ ಅವರಿನ್ನೂ ಅಪರಿಚಿತರಾಗಿಯೇ ಉಳಿದಿದ್ದಾರೆ.

***

ನ್ಯಾಯವ್ಯವಸ್ಥೆಯಲ್ಲಿ ಬಡಿದಾಡಿದ ಕಾರ್ನೆಲಿಯಾ ಸಂಕಟಗಳು ಅವರ ಜೊತೆಗೆ ಕೊನೆಯಾಗಲಿಲ್ಲ. ಇವತ್ತಿಗೂ ಓದು ಮುಗಿಸಿ ನೂರಾರು ಕನಸುಗಳೊಂದಿಗೆ ನಾನಾಹಂತದ ಕೋರ್ಟುಗಳನ್ನು ಪ್ರವೇಶಿಸಿ ತಮ್ಮನ್ನು ಸ್ಥಾಪಿಸಿಕೊಳ್ಳಬಯಸುವ ವಕೀಲೆಯರಿಗೆ ಪರಿಸ್ಥಿತಿ ಪೂರಕವಾಗೇನೂ ಇಲ್ಲ. ಪುರುಷ ವೃತ್ತಿ ಬಾಂಧವರಿರಲಿ, ಕೋರ್ಟಿನೊಳಗಿರುವ ನ್ಯಾಯಾಧೀಶರಿರಲಿ, ಕೊನೆಗೆ ಕಕ್ಷಿದಾರರಿರಲಿ - ಹೆಚ್ಚಿನವರು ಮಹಿಳಾ ಲಾಯರುಗಳ ಬಗೆಗೆ ಅಸಡ್ಡೆ, ಅಸಮ್ಮತಿ, ಅವರ ಸಾಮರ್ಥ್ಯ ಕುರಿತ ಅನುಮಾನ, ಪೂರ್ವಗ್ರಹಗಳನ್ನೇ ಹೊಂದಿದ್ದಾರೆ. ಕಾನೂನು ಶಾಲೆ-ಕಾಲೇಜುಗಳಲ್ಲಿ ಸಾಕಷ್ಟು ಸಂಖ್ಯೆಯ ಹೆಣ್ಣುಮಕ್ಕಳು ಕಾನೂನು ಪದವಿ ಪಡೆದು ವೃತ್ತಿ ಆರಂಭಿಸಿದರೂ ಸ್ವತಂತ್ರವಾಗಿ ವೃತ್ತಿನಿರತರಾಗುವವರ ಸಂಖ್ಯೆ ಕಡಿಮೆ. ದೀರ್ಘಾವಧಿಯವರೆಗೆ ವೃತ್ತಿ ಮುಂದುವರೆಸಿದವರು ಅತಿ ಕಡಿಮೆ. ಹೆಚ್ಚಿನವರು ತಮ್ಮ ಕುಟುಂಬದ ಅಥವಾ ಸ್ನೇಹಬಳಗದ ಸೀನಿಯರುಗಳ ಸಹಾಯಕರಾಗಿಯೋ, ಕಾರ್ಪೋರೇಟ್ ಕಾನೂನು ಸಲಹಾಕಾರರಾಗಿಯೋ, ಬ್ಯಾಂಕುಗಳಲ್ಲೋ, ಲಾ ಫರ್ಮುಗಳಲ್ಲೋ ಕೆಲಸ ಮಾಡುತ್ತಾರೆ. ಕೌಟುಂಬಿಕ ಜವಾಬ್ದಾರಿಗಳು ಅದಕ್ಕೆ ಮುಖ್ಯ ಕಾರಣವಾದರೂ ನ್ಯಾಯಾಸ್ಥಾನದ ಒಳಹೊರಗಿರುವ ಮಹಿಳಾ ಸ್ನೇಹಿಯಲ್ಲದ ಅನುತ್ತೇಜಕ ವಾತಾವರಣವೂ ಮುಖ್ಯವಾಗಿದೆ ಎನ್ನಬಹುದು.

ದೆಹಲಿ ಹೈಕೋರ್ಟಿನ ಒಬ್ಬ ನ್ಯಾಯಾಧೀಶರು ವಕೀಲೆಯರ ವಾದ ಆಲಿಸಲು, ಅವರ ಪ್ರಕರಣಗಳ ತೀರ್ಪು ಹೇಳಲು ಪೂರ್ವಗ್ರಹ ಹೊಂದಿರುವವರೆಂದು ಪ್ರಖ್ಯಾತರು. ಅವರ ಬಳಿ ಹಿಯರಿಂಗ್ ಬಂದರೆ ವಕೀಲೆಯರು ಭಯಗೊಳ್ಳಬೇಕಾದ ಪರಿಸ್ಥಿತಿಯಿದೆಯಂತೆ. ಅಲಂಕಾರಗೊಂಡ ವಕೀಲೆಯರಿಗೆ, ‘ಪಾರ್ಟಿಗೆ ಹೋಗಲೆಂದು ಅಲಂಕಾರ ಮಾಡಿಕೊಂಡು ಬಂದಿರುವೆಯೆ?’, ‘ನಿನ್ನ ಅಲಂಕಾರದ ಮೇಲೆ ನಿನಗೆಷ್ಟು ಗಮನ ಎಂದರೆ ಮುಂದಿನ ಹಿಯರಿಂಗ್ ಡೇಟ್ ತೆಗೆದುಕೊಳ್ಳಲೂ ನಿನಗೆ ನೆದರಿಲ್ಲ’ ಎನ್ನುವ ಕಾಮೆಂಟುಗಳು ನ್ಯಾಯಾಧೀಶರಿಂದ ಬರುತ್ತವಂತೆ! ‘ನನ್ನ ಲಿಪ್‌ಸ್ಟಿಕ್ ನೋಡಬೇಡಿ, ಅದು ಹೇಳಲಿರುವ ಮಾತುಗಳ ಕೇಳಿಸಿಕೊಳ್ಳಿ’ ಎಂದು ಅವರಿಗೆ ಕಿರುಚಿ ಹೇಳಬೇಕೆನಿಸುವಂತಾಗುತ್ತದೆಂದು ಒಬ್ಬ ವಕೀಲೆ ಹೇಳಿದ್ದಾಳೆ.

ನ್ಯಾಯಾಧೀಶರ ಸ್ಥಳದಲ್ಲಿ ಮಹಿಳೆಯರ ಸಂಖ್ಯೆ ಮತ್ತಷ್ಟು ಕಡಿಮೆಯಿದೆ. ಬಾರ್ ಅಸೋಸಿಯೇಷನ್ನಿನಿಂದ ಯಶಸ್ವಿ ವಕೀಲೆಯರು ನ್ಯಾಯಾಧೀಶರ ಸ್ಥಾನಕ್ಕೆ ಶಿಫಾರ್ಸುಗೊಳ್ಳುವುದೇ ಕಡಿಮೆ. ಎಲ್ಲೋ ಕೆಲವರು ದೆಹಲಿ ಹೈಕೋರ್ಟಿನ ಮಾಜಿ ನ್ಯಾಯಮೂರ್ತಿ ಎ. ಪಿ. ಷಾ ತರಹದವರನ್ನು ಬಿಟ್ಟರೆ ಮಹಿಳೆಯರನ್ನು ನ್ಯಾಯಾಧೀಶರಾಗಿ ಶಿಫಾರ್ಸು ಮಾಡುವವರು ಇಲ್ಲವೆನ್ನುವಷ್ಟು ಕಡಿಮೆ. ಅದರಲ್ಲಿ ನೇಮಕವಾಗುವವರ ಸಂಖ್ಯೆ ಇನ್ನೂ ಕಡಿಮೆ. ಹೀಗಿರುವುದರಿಂದಲೇ ೧೯೨೪ರಿಂದ ೨೦೧೭ ಬಂದರೂ ಒಬ್ಬ ಮಹಿಳೆ ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಲು ಸಾಧ್ಯವಾಗಿಲ್ಲ. ಸದ್ಯ ಎಂಟು ರಾಜ್ಯಗಳ ಹೈಕೋರ್ಟುಗಳಲ್ಲಿ - ಮಣಿಪುರ, ತ್ರಿಪುರ, ಮೇಘಾಲಯ, ಹಿಮಾಚಲ ಪ್ರದೇಶ, ಜಾರ್ಖಂಡ್, ಛತ್ತೀಸ್‌ಘರ್, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಒಬ್ಬ ಮಹಿಳಾ ನ್ಯಾಯಮೂರ್ತಿಯೂ ಇಲ್ಲ. ದೇಶದ ೨೪ ಹೈಕೋರ್ಟುಗಳಲ್ಲಿ ೬೨೧ ನ್ಯಾಯಮೂರ್ತಿಗಳಿದ್ದರೆ ಅವರಲ್ಲಿ ೬೪ ಜನ ಮಾತ್ರ ಮಹಿಳೆಯರಿದ್ದಾರೆ. ದೇಶದ ಮೂರು ಪ್ರಮುಖ ನ್ಯಾಯಾಲಯಗಳು - ಸುಪ್ರೀಂಕೋರ್ಟು, ಮುಂಬಯಿ ಮತ್ತು ದೆಹಲಿ ಹೈಕೋರ್ಟುಗಳಲ್ಲಿ ಒಬ್ಬೊಬ್ಬರೇ ಸೀನಿಯರ್ ಅಡ್ವೊಕೇಟ್ ಮಹಿಳೆ ಇದ್ದಾರೆ.

೧೯೬೧ರಲ್ಲಿ ಸ್ಥಾಪನೆಯಾದ ಬಾರ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಸ್ಥಾನವನ್ನು ಇದುವರೆಗೆ ಮಹಿಳೆ ಅಲಂಕರಿಸಿಲ್ಲ. ಇವಾಗಿನ ಕೇಂದ್ರ ಬಾರ್ ಕೌನ್ಸಿಲಿನಲ್ಲಿ ಒಬ್ಬ ಮಹಿಳಾ ಸದಸ್ಯೆಯೂ ಇಲ್ಲ. ೧೨ ಬಾರ್ ಕೌನ್ಸಿಲುಗಳಲ್ಲಿ ಕರ್ನಾಟಕ(೧), ಆಂಧ್ರ(೨), ಉತ್ತರ ಪ್ರದೇಶ(೨), ದೆಹಲಿ(೨)ಗಳಲ್ಲಿ ಮಾತ್ರ ಮಹಿಳೆಯರಿರುವುದು. ಉಳಿದ ೮ರಲ್ಲಿ ಒಬ್ಬ ಮಹಿಳೆಯೂ ಇಲ್ಲ. ಎಂದರೆ ಬಾರ್ ಕೌನ್ಸಿಲಿನಲ್ಲಿ ಈಗಿರುವ ಮಹಿಳಾ ಸದಸ್ಯರು ೨.೮%. ೨೦೧೬ರಲ್ಲಿ ಮುಂಬಯಿ ಹೈಕೋರ್ಟು ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಆಲಿಸಿತು. ಬಾರ್ ಕೌನ್ಸಿಲುಗಳಲ್ಲಿ ಕನಿಷ್ಠ ೩೦% ಮಹಿಳಾ ಪ್ರಾತಿನಿಧ್ಯವಿರುವಂತೆ ೧೯೬೧ರ ಅಡ್ವೊಕೇಟ್ಸ್ ಆಕ್ಟ್‌ಗೆ ತಿದ್ದುಪಡಿ ತರಲು ಒತ್ತಾಯಿಸಿ, ಅದಕ್ಕಿರುವ ಸಾಂವಿಧಾನಿಕ ಅವಕಾಶಗಳ ಪ್ರಸ್ತಾಪಿಸಿ, ಬಾಂಬೆ ಲಾಯರ‍್ಸ್ ಅಸೋಸಿಯೇಷನ್ ಅರ್ಜಿ ಸಲ್ಲಿಸಿತ್ತು. ಅದನ್ನು ತಕ್ಷಣವೇ ಕೈಗೆತ್ತಿಕೊಂಡು ಅದಕ್ಕೆ ಬಾರ್ ಕೌನ್ಸಿಲು, ಸರ್ಕಾರ ಎಂಟು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರ್ಟು ಹೇಳಿತು. ಆದರೆ ಇನ್ನೂ ಅಂತಹ ಕ್ರಮಗಳು ಜರುಗಿದ ಸೂಚನೆಯಿಲ್ಲ. ನ್ಯಾಯವ್ಯವಸ್ಥೆಯೊಳಗೆ ಮೀಸಲಾತಿ ಬೇಕೇಬೇಡವೇ ಎಂಬ ಚರ್ಚೆ ನಡೆದಾಗಲೆಲ್ಲ ಜ್ಞಾನ, ಪರಿಣತಿ, ಸಾಮರ್ಥ್ಯ, ಬದ್ಧತೆ ಮುಂತಾದ ಭಾರವಾದ ಪದಗಳ ನೆಪದಲ್ಲಿ ಪ್ರಾತಿನಿಧ್ಯ ನಿರಾಕರಿಸಲಾಗುತ್ತದೆ.

ಇದರ ಜೊತೆಜೊತೆಗೆ ನ್ಯಾಯಾಲಯಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳೂ ಕಡಿಮೆಯಿಲ್ಲ. ‘ಅದು ಭಾರತದ ನ್ಯಾಯವ್ಯವಸ್ಥೆಯ ಹೊಲಸು ಗುಟ್ಟು’ ಎನ್ನುತ್ತಾರೆ ಭಾರತದ ಮೊದಲ ಸಾಲಿಸಿಟರ್ ಜನರಲ್ ಮಹಿಳೆ ಇಂದಿರಾ ಜೈಸಿಂಗ್. ಜೂನಿಯರುಗಳನ್ನು ಲೈಂಗಿಕ ಗುಲಾಮರಂತೆ ಬಳಸಿಕೊಳ್ಳುವುದನ್ನು ನೋಡಿ ರೋಸಿ ಹೋಗಿರುವುದಾಗಿ ಕರ್ನಾಟಕದ ಹಿರಿಯ ಮಹಿಳಾ ನ್ಯಾಯವಾದಿ ನೊಂದು ಹೇಳುತ್ತಾರೆ. ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಯಬೇಕೆಂದು ವಿಶಾಖಾ ಗೈಡ್‌ಲೈನ್ಸ್ ಅನ್ನು ೧೯೯೭ರಲ್ಲಿ ರೂಪುಗೊಳಿಸಿದ ಸುಪ್ರೀಂಕೋರ್ಟಿನಲ್ಲಿ ಮಹಿಳೆಯರ ದೂರು ಪರಿಶೀಲನಾ ಸಮಿತಿ ರೂಪುಗೊಂಡಿದ್ದು ೨೦೧೩ರಲ್ಲಿ! ಭಾರತದ ಬಹುಪಾಲು ಕಚೇರಿಗಳಂತೆ ನ್ಯಾಯಾಸ್ಥಾನಗಳ ಆವರಣಗಳಲ್ಲೂ ಲೈಂಗಿಕ ದೌರ್ಜನ್ಯ ದೂರು ನಿರ್ವಹಣಾ ಸಮಿತಿ ರಚನೆಯಾಗಿಲ್ಲ. ಸ್ವತಃ ದೌರ್ಜನ್ಯಕ್ಕೊಳಗಾಗಿ ದೂರು ನೀಡಿದ್ದ ಇಂದಿರಾ ಜೈಸಿಂಗ್ ಈಗ ಅಂತಹ ಎರಡು ಕೇಸುಗಳನ್ನು ತಾವೇ ವಾದಿಸುತ್ತಿದ್ದಾರೆ. ಹಕ್ಕುಗಳ ಕುರಿತು, ಕಾನೂನು ಬಳಸಿಕೊಳ್ಳಬಹುದಾದ ಅವಕಾಶಗಳ ಕುರಿತು ವಕೀಲೆಯರಿಗೆ ಅರಿವೂ ಇಲ್ಲ, ಧೈರ್ಯವೂ ಇಲ್ಲ ಎಂದವರು ವಿಷಾದಿಸುತ್ತಾರೆ.

ಈ ಎಲ್ಲ ಕಹಿ ವಾಸ್ತವಗಳ ನಡುವೆ ಉಪೇಂದ್ರ ಭಕ್ಷಿ, ಜ. ಎ. ಪಿ. ಷಾ, ಜ. ಜೆ. ಎಸ್. ವರ್ಮಾ ತರಹದ ತಾಯಿ ಮನಸಿನ ನ್ಯಾಯಾಧೀಶರಿರುವುದು ಭವಿಷ್ಯ ಕುರಿತು ಒಂದಷ್ಟು ಆಶಾಭಾವನೆ ಹೊಂದುವಂತೆ ಮಾಡಿದೆ. ಹಾಗೆಂದೇ ಎಲ್ಲ ಅಡೆತಡೆ ಮೀರಿಯೂ ಕೆಲವರಾದರೂ ಯಶಸ್ವಿ ವಕೀಲೆಯರು, ಮಹಿಳಾ ನ್ಯಾಯಾಧೀಶರು ಇದ್ದಾರೆ. ಉತ್ತಮ ಬೆಳವಣಿಗೆಯೆಂಬಂತೆ ಆಲ್ ಇಂಡಿಯಾ ಫೆಡರೇಷನ್ ಆಫ್ ವಿಮೆನ್ ಲಾಯರ‍್ಸ್ (ಫೆಡರೇಷನ್ ಆಫ್ ಇಂಟರ್ ನ್ಯಾಷನಲ್ ವಿಮೆನ್ ಲಾಯರ‍್ಸ್‌ನ ಭಾರತದ ಶಾಖೆ) ೨೦೦೭ರಲ್ಲಿ ರೂಪುಗೊಂಡಿದೆ. ಶೀಲಾ ಅನೀಶ್ ಅದರ ಸ್ಥಾಪಕ ಅಧ್ಯಕ್ಷೆ. ಬೆಂಗಳೂರು ಅದರ ಮುಖ್ಯಕೇಂದ್ರವಾಗಿದೆ. ಈಗ ಅಮಿ ಯಾಜ್ನಿಕ್ ಅಧ್ಯಕ್ಷೆ ಹಾಗೂ ಹೇಮಲತಾ ಮಹಿಷಿ ಉಪಾಧ್ಯಕ್ಷೆ ಆಗಿದ್ದಾರೆ.

ಮಹಿಳಾ ನ್ಯಾಯವಾದಿಗಳ ಸಂಘಟನೆ ಕಹಿ ವಾಸ್ತವಗಳತ್ತ ಗಮನ ಹರಿಸಿ ನ್ಯಾಯಕ್ಕಾಗಿ, ಹಕ್ಕಿಗಾಗಿ ಹೋರಾಡಬಹುದೆಂದು ಆಶಿಸಬಹುದಾಗಿದೆ.

ಆಸ್ಟಿಸಿಯ ಅಥವಾ ಥೆಮಿಸ್ ನ್ಯಾಯದೇವತೆ. ಅವಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಾಗಿರುವವಳು. ಅದು ಪಕ್ಷಪಾತರಹಿತ ಸ್ಥಿತಿಯ ಸೂಚಕ ಎನ್ನಲಾಗುತ್ತದೆ. ಭಯಗೊಳುವುದು, ಆಯ್ದವರಿಗೆ ಅನುಕೂಲ ಮಾಡುವುದನ್ನು ತಡೆಯಬಲ್ಲ ಸ್ಥಿತಿಯ ಕುರುಹಾಗಿ ಬಟ್ಟೆ ಕಟ್ಟಲಾಗಿದೆ. ನ್ಯಾಯದೇವತೆಯ ಎಡಗೈಯಲ್ಲಿ ತಕ್ಕಡಿಯಿದ್ದು ಅದು ವಿಷಯದ ಪರ ವಿರೋಧಗಳೆರಡನ್ನೂ ಸಮತೋಲನಗೊಳಿಸಿ ಆಲಿಸುವುದನ್ನು ಪ್ರತಿನಿಧಿಸುತ್ತದೆ. ಅವಳ ಬಲಗೈಯಲ್ಲಿ ಎರಡಲಗಿನ ಕತ್ತಿಯಿದೆ. ಅದು ತರ್ಕ ಮತ್ತು ವಿಶ್ಲೇಷಣೆ ಎಂಬ ಅಲಗುಗಳಿರುವ, ಶಿಕ್ಷೆಯನ್ನು ಪ್ರತಿನಿಧಿಸುವ ಕತ್ತಿ. ಭಾವುಕಳಾದರೂ ಸಮತೂಕದ ಯೋಚನೆಯಿರುವ; ತಾಯ್ತನದ ಮಮತೆಯಿದ್ದರೂ ತಪ್ಪಿದಲ್ಲಿ ಶಿಕ್ಷಿಸುವ ಹೆಣ್ಣು ನ್ಯಾಯಪರತೆಯ ಪ್ರತಿನಿಧಿಯಂತೆ ಎಂದಿನಿಂದಲೂ ಮನುಷ್ಯರಿಗೆ ಕಂಡಿದ್ದಾಳೆ. ನ್ಯಾಯದೇವತೆ ಪರಿಕಲ್ಪನೆ ರೂಪುಗೊಂಡಿದ್ದೂ ಹಾಗೆಯೇ.


ಆದರೆ ಇವತ್ತಿನ ಸಮಾಜಕ್ಕೆ ಹೆಣ್ಣಿನ ಶಕ್ತಿ, ಸಾಮರ್ಥ್ಯ, ಜ್ಞಾನದಲ್ಲಿ ನಂಬಿಕೆಯೇ ಇಲ್ಲವಾಗಿದೆ. ಒಂದೋ ಹೆಣ್ಣನ್ನು ಅಸಡ್ಡೆಯಿಂದ ಕಾಣುವುದು ಅಥವಾ ಅವರನ್ನು ತಮ್ಮ ರಕ್ಷಣಾ ಕೋಟೆಯೊಳಗೆ ತೆಗೆದುಕೊಂಡು ಪೊರೆಯುವುದು - ಇವೆರೆಡರಲ್ಲಿ ಒಂದು ಮಾತ್ರ ಹೆಣ್ಣಿನ ಕುರಿತು ಗಂಡಿಗಿರುವ ಸಾಮಾನ್ಯ ಧೋರಣೆ. ಅದರಾಚೆಗೆ ಸ್ನೇಹ-ಸಮಾನತೆ-ಸಮಾನ ಗೌರವದ ನೆಲೆಯಲ್ಲಿ ಸಹಬಾಳ್ವೆ ರೂಪಿಸುವುದು ಅವಶ್ಯವಾಗಿದೆ. ವಕೀಲಿಕೆಯೊ, ವೈದ್ಯಕೀಯವೊ, ರಾಜಕಾರಣವೋ, ಚಳುವಳಿಯೋ ಎಲ್ಲ ಕಡೆ ಮಹಿಳಾ ಭಾಗವಹಿಸುವಿಕೆಗೆ ಅವಕಾಶ ಮತ್ತು ಸಮಾನ ಗೌರವ ಇವತ್ತಿನ ತುರ್ತಾಗಿದೆ.

(ಈ ಬರಹದಲ್ಲಿ ‘ದ ವೀಕ್’ ಇಂಗ್ಲಿಷ್ ಸಾಪ್ತಾಹಿಕದ ಬರಹ ಮತ್ತು ಕಾನೂನು ಅಂತರ್ಜಾಲ ತಾಣಗಳ ಮಾಹಿತಿ ಬಳಸಿಕೊಳ್ಳಲಾಗಿದೆ.)


ಈಗ ಕ್ರಿಯಾಶೀಲರಾಗಿರುವ ಇಬ್ಬರು ಕನ್ನಡ ‘ನ್ಯಾಯದೇವತೆ’ಗಳ ಪರಿಚಯ:


ಕರ್ನಾಟಕ ಹೈಕೋರ್ಟಿನ ಮೊದಲ ನ್ಯಾಯಾಧೀಶೆ ಜಸ್ಟಿಸ್ ಮಂಜುಳಾ ಚೆಲ್ಲೂರ್. ಬಳ್ಳಾರಿಯ ಮಂಜುಳಾ ಪದವಿ ತನಕ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದರು. ನಂತರ ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದು, ಇಂಗ್ಲೆಂಡಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಿದರು. ವಾಪಸಾದ ಮೇಲೆ ಬಳ್ಳಾರಿ ಕೋರ್ಟುಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಎರಡೂ ಕೇಸುಗಳ ತೆಗೆದುಕೊಂಡರು. ಹಾಗೆ ಅಲ್ಲಿ ಕೇಸು ವಾದಿಸಿದ ಮೊದಲ ಮಹಿಳಾ ನ್ಯಾಯವಾದಿ ಅವರು. ೧೯೮೮ರಲ್ಲಿ ಕೋಲಾರ ಹಾಗೂ ನಂತರ ಮೈಸೂರಿನ ಸೆಷನ್ಸ್ ಜಡ್ಜ್ ಆದ ಅವರಿಗೆ ವಿಜಯಪುರದ ಮಹಿಳಾ ವಿವಿ ೨೦೧೨ರಲ್ಲಿ ಗೌರವ ಡಾಕ್ಟೊರೇಟ್ ನೀಡಿದೆ. ೨೦೦೦ನೇ ಇಸವಿಯಲ್ಲಿ ಕರ್ನಾಟಕ ಹೈಕೋರ್ಟಿನ ಜಡ್ಜ್ ಆದ ಅವರು ೨೦೧೨ರಲ್ಲಿ ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ, ೨೦೧೪ರಲ್ಲಿ ಕೋಲ್ಕತಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಆಗಿ ಈಗ ಮುಂಬೈ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಕೇರಳದಲ್ಲಿದ್ದಾಗ ರಾಜ್ಯಸಭೆಯ ಉಪಸಭಾಪತಿ ಪಿ. ಜೆ. ಕುರಿಯನ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸರ್ಕಾರ ತನಿಖೆ ನಡೆಸಿ ವರದಿ ಕೊಡುವಂತೆ ಆದೇಶಿಸಿದ್ದರು. ವಿರೋಧಪಕ್ಷದ ನಾಯಕ ವಿ. ಎಸ್. ಅಚ್ಯುತಾನಂದನ್ ಅವರಿಗೆ ಐಸ್ ಕ್ರೀಂ ಪಾರ್ಲರ್ ಪ್ರಕರಣದಲ್ಲಿ ‘ಬೇಗ ಹಿಯರಿಂಗ್ ಮುಗಿಸಿ ಹೋಗಲು’ ಅವಕಾಶ ಕೊಡದೆ ಎಲ್ಲರಂತೆ ಅವರ ಸರದಿ ಬರುವವರೆಗು ಕಾಯುವಂತೆ ಮಾಡಿ ಸುದ್ದಿಯಾಗಿದ್ದರು. ಒಟ್ಟಾರೆ ಹೈಪ್ರೊಫೈಲ್ ಪ್ರಕರಣಗಳನ್ನೂ ದಿಟ್ಟವಾಗಿ, ನ್ಯಾಯಯುತವಾಗಿ ಬಗೆಹರಿಸುವ ಜಸ್ಟಿಸ್ ಮಂಜುಳಾ ಚೆಲ್ಲೂರ್ ಮುಂದೊಂದು ದಿನ ಸುಪ್ರೀಂಕೋರ್ಟ್ ನ್ಯಾಯಯಮೂರ್ತಿ ಆದಾರು. ಅತ್ಯುಚ್ಛ ಸ್ಥಾನವೂ ಅವರಿಗೊಲಿದೀತೆಂದು ಆಶಿಸಬಹುದು.

ಮಂಗಳೂರು ಬಳಿಯ ಕದ್ರಿಯ ಫ್ಲೇವಿಯಾ ಆಗ್ನೆಸ್ (೧೯೪೭) ೧೯೮೮ರಿಂದ ಮುಂಬಯಿ ಹೈಕೋರ್ಟಿನಲ್ಲಿ ವೃತ್ತಿ ನಡೆಸುತ್ತಿರುವವರು. ಪ್ರೌಢಶಾಲೆಯವರೆಗೆ ಚಿಕ್ಕಮ್ಮನೊಡನೆ ಮಂಗಳೂರಿನಲ್ಲಿದ್ದು ವಿದ್ಯಾಭ್ಯಾಸ ಪಡೆವಾಗ ತಂದೆ ಯೆಮನಿನ ಆಡೆನ್ನಿನಲ್ಲಿದ್ದರು. ಆ ಹೊತ್ತಿಗೆ ಚಿಕ್ಕಮ್ಮ ತೀರಿಕೊಂಡರೆಂದು ತಂದೆಯ ಬಳಿ ಹೋದರೆ ಅವರೂ ಅಕಾಲ ಮರಣ ಹೊಂದಿದರು. ಕುಟುಂಬ ಮಂಗಳೂರಿಗೆ ಮರಳಿತು. ವಿದ್ಯೆ ಮೊಟಕುಗೊಳಿಸಿ ಅವರ ಮದುವೆ ಮಾಡಲಾಯಿತು. ಆದರೆ ಕೌಟುಂಬಿಕ ಬದುಕಿನಲ್ಲಿ ಸಾಕಷ್ಟು ಹಿಂಸೆ ಅನುಭವಿಸಿ, ಕ್ರೈಸ್ತ ಧರ್ಮದ ಪ್ರಕಾರ ವಿಚ್ಛೇದನೆಯೂ ಸಿಗದೆ, ಕೊನೆಗೆ ಕೋರ್ಟಿನ ಮೊರೆ ಹೋಗಿ ವಿಚ್ಛೇದನೆ, ಮಕ್ಕಳ ಕಸ್ಟಡಿ ಪಡೆದರು. ಸ್ವಂತ ಅನುಭವಗಳೇ ಅವರನ್ನು ಹೋರಾಟಗಾರ್ತಿಯಾಗಿ ರೂಪಿಸಿದವು.


ಮದುವೆಯಾಗುವಾಗ ಬರಿಯ ಎಸ್ಸೆಲ್ಸಿ ಪಾಸು ಮಾಡಿದ್ದವರು ನಂತರ ವಿದ್ಯಾಭ್ಯಾಸ ಮುಂದುವರೆಸಿದರು. ಡಿಗ್ರಿ ಮುಗಿಸಿ ಕಾನೂನು ಪದವಿ ಪಡೆದು ೧೯೮೮ರಲ್ಲಿ ಮುಂಬೈ ಹೈಕೋರ್ಟಿನಲ್ಲಿ ವಕೀಲಿಕೆ ಶುರು ಮಾಡಿದರು. ೧೯೯೨ರಲ್ಲಿ ಸ್ನಾತಕೋತ್ತರ ಎಲ್‌ಎಲ್‌ಎಂ ಪಡೆದು ನಂತರ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲಿನಲ್ಲಿ ಎಂ.ಫಿಲ್ ಮುಗಿಸಿ (೧೯೯೭) ಅಲ್ಲೇ ಗೌರವ ಪ್ರಾಧ್ಯಾಪಕರಾದರು. ಅವರು ಕೌಟುಂಬಿಕ, ವೈವಾಹಿಕ, ಆಸ್ತಿ ಕಾನೂನು ಪರಿಣಿತರು. ನಟಿ, ನಿರ್ದೇಶಕಿ, ಕಲಾವಿದೆ ಮಧುಶ್ರೀ ದತ್ತಾ ಅವರೊಡನೆ ೧೯೯೦ರಲ್ಲಿ ‘ಮಜ್ಲಿಸ್’ ಎಂಬ ಮಹಿಳೆ ಮತ್ತು ಕಾನೂನು ಸಲಹಾ ಕೇಂದ್ರ ನಡೆಸುತ್ತಿದ್ದಾರೆ. ಇದುವರೆಗೆ ೫೦ ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಅವರ ಸಂಸ್ಥೆ ಕಾನೂನು ಸಹಾಯ ನೀಡಿದೆ. ಅವರಲ್ಲಿ ಹೆಚ್ಚಿನವರು ಅನಾಥರು. ಇದರ ಮೂರುಪಟ್ಟು ಜನರಿಗೆ ಕಾನೂನು ಸಲಹೆ ನೀಡಿದ್ದಾರೆ. ನಿರ್ಭಯಾ ಪ್ರಕರಣ ಮತ್ತು ಶಕ್ತಿ ಮಿಲ್ ಅತ್ಯಾಚಾರ ಪ್ರಕರಣದ ವೇಳೆ ಆರೋಪಿಗಳಿಗೆ ಮರಣದಂಡನೆ ವಿಧಿಸಿದಾಗ ಅದನ್ನು ವಿರೋಧಿಸಿದರು. ಅಷ್ಟೇ ಅಲ್ಲ, ಮರಣದಂಡನೆ ಶಿಕ್ಷೆ ಪಡೆಯುವವರ ವರ್ಗ ಹಿನ್ನೆಲೆ ವಿಶ್ಲೇಷಿಸಿ ಅದು ರದ್ದಾಗಬೇಕೆಂದೂ ಕೋರಿದ್ದರು. ಇವತ್ತಿಗೂ ಮಹಿಳಾ ಪರ ಕಾನೂನು ಕುರಿತ ಚರ್ಚೆ ಬಂದರೆ ಅಲ್ಲಿ ಎದ್ದು ಕಾಣುವ ಹೆಸರು ಅವರದು.

(ಚಿತ್ರಗಳು: ಅಂತರ್ಜಾಲದವು)


Saturday, 31 December 2016

ಸರಿದ ವರುಷ ಮೂಡಿಸಿದ ಕೆಲ ಸಾಲುಗಳು..



ಕಸ ಬೀಳುವವರೆಗೂ ಕನ್ನಡಿಯಲಿ ಕಣ್ಣು ನೋಡಿಕೊಂಡಿರಲಿಲ್ಲ
ನವೆಯಾಗುವವರೆಗೂ ಚರ್ಮದ ಬಿರುಕು ಕಾಣಿಸಿರಲಿಲ್ಲ
ಮುಳ್ಳು ಚುಚ್ಚುವವರೆಗು ಪಾದದ ಧೂಳು ಗಮನಿಸಿರಲಿಲ್ಲ
ಧನ್ಯವಾದ, ನನ್ನ ನನಗೆ ತೋರಿಸಿದ್ದಕ್ಕೆ.
ಮನ್ನಿಸಿ,
ಗುರುಗಳೆಂದು ನಿಮ್ಮ
ಇಷ್ಟುದಿನ ಕರೆಯದೆ ಇದ್ದುದಕ್ಕೆ..


ಹುಣ್ಣಿಮೆಯ ರಾತ್ರಿ
ರಕ್ತ ಹಾಲಾಗಿ ಕೆಚ್ಚಲ ತುಂಬುವ ಹೊತ್ತು..
ಒಬ್ಬರ ಮೈಗೊಬ್ಬರು 
ಬೆಳದಿಂಗಳು ಸವರುತ್ತಾ ಕೂತಿದ್ದೆವು
ಬೆನ್ನ ಹುರಿಯೊಳಗೇನೋ ಇಳಿದಂತಾಗಿ 
ಚಂದ್ರ ಸಾಕ್ಷಿ
ಇದ್ದಕ್ಕಿದ್ದಂತೆ ಅವನೊಂದು ಹಣತೆಯಾದ
ಅನುದಿನ ಎದುರೆದುರೆ ಇದ್ದರು
ಆಡದೆ ಚರಿತ್ರೆಯಾದ ಮಾತುಗಳು
ಬೆಳಕಾಗಿ ನನ್ನ ಬೆರಳ ಹೊಕ್ಕವು
ಕಣ್ಣು ತುಂಬಿ
ಎದೆಯೊಳಗಿನ ಬೂದಿರಾಶಿಯ ನೇವರಿಸುತ್ತ
ಹರಿದ ನೆರೆ ಬೆಳಕು
ಕವಿತೆಯ ಸಾಲು ಪ್ರವೇಶಿಸಿತು
ಒಂದು ಹೆಜ್ಜೆ ಮುಂದಿಡಲು 
ಎರಡು ಹೆಜ್ಜೆ ಬೆಳಕಾಯಿತು

ಜೀವತೈಲ ಉರಿಸಿ ಉರಿದು
ಅವ ಬೆಳಕಾಗಲು
ಬೆಳಗದಿದ್ದೀತೇ ಕವಿತೆ?
ಬೆಳೆಯದಿದ್ದೀತೇ ಬದುಕು?



ಮರಳ ಮೇಲೆ ದಿನಗಳು ಮೂಡಿದವು
ತೊಳೆದು ಹೋದವು
ಕಡಲು ಕಿನಾರೆಗಳ ಫರಕೇ ತಿಳಿಯದಂತೆ 
ತೇಲಿಸಿತು ನಿನ್ನ ಬೆರಳು..

ಉಗುರು ನೋಯಿಸಿತು; ಬೆರಳು ತಾಗಿದ್ದು ಸುಳ್ಳಲ್ಲ
ದೀಪವಾರಿತು; ತೈಲವೆರೆದದ್ದು, ಬೆಳಕಾದದ್ದು ಸುಳ್ಳಲ್ಲ
ವಿರಹ ಬೇಯಿಸಿತು, ಎದೆಯ ಬಿಸಿಗೆ ಒಲಿದದ್ದು ಸುಳ್ಳಲ್ಲ
ಕಾಯ ದೂರಾಯಿತು, ಜೀವ ಜೀವವೇ ಆಗಿರುವುದು ಸುಳ್ಳಲ್ಲ
ನೆಲ ಒಣಗಿತು, ಬೀಜ ಕನಸಾಗಿ ಧೂಳಲಡಗಿರುವುದು ಸುಳ್ಳಲ್ಲ  

ನಿನ್ನ ಅಂಗೈ ತಾವಿಗೆ ಹಂಬಲಿಸುವ ಅದೃಶ್ಯ ಹಕ್ಕಿ ನಾನು


ಮಾತಿಗೆ ಮಾತು ಸೇರಿತು
ಕುಂಬಾರನ ಕೈಗೆ ಮಣ್ಣು ಸೇರಿತು

ಚಳಿಗೆ ಬಿಸಿಲು ಕಾಯಿಸುವ
ಘಟ್ಟದ ಬೆಟ್ಟಗಳ ಕಡು ಏಕಾಂತದಲ್ಲಿ
ನಕ್ಕವು ಶಬ್ದಗಳು..

‘ಆಡಲೇಬೇಕಾದ ಮಾತುಗಳನ್ನು
ಆಡುವಾಗ ಆಡದಿದ್ದರೆ
ಪಾಪನಿವೇದನೆಗೆಂದು ಕಾಲ
ಯಾವ ಅವಕಾಶವನ್ನೂ ಕೊಡುವುದಿಲ್ಲ..
ಉಸಿರು ಕಟ್ಟಿಸಬೇಡ ನಿನ್ನ ನಾಲಿಗೆಯೊಳಗೆ
ಉಸಿರು ಕಟ್ಟಬೇಡ ಬದುಕಿರುವಾಗಲೇ..’
(ಕಲೆ: ಕೃಷ್ಣ ಗಿಳಿಯಾರ್)

Saturday, 3 December 2016

ಟ್ಯಾಂಗೊ - ‘ಕಣ್ಣಲ್ಲಿ ಕಣ್ಣಿಟ್ಟು ನೋಡು’




ಜನಪದ ಕಲಾಪ್ರಕಾರಗಳ ಹುಟ್ಟು ಅರಸುವುದು ನದೀಮೂಲ ಹುಡುಕುವಂತೆಯೇ - ನಿಗೂಢ, ಕುತೂಹಲಕರ. ಆಯಾ ದೇಶಕಾಲಗಳ ಅಗತ್ಯಗಳಿಗೆ ತಕ್ಕಂತೆ ಅದರ ನಡುವಿನಿಂದಲೇ ಎದ್ದು ಬರುವ ಸಂಪತ್ತು ಜನಪದ ಕಲೆ. ವಲಸೆ, ಪರಕೀಯರ ಪ್ರಭಾವ, ಶಿಕ್ಷಣ, ಬದಲಾದ ಆದ್ಯತೆ-ಜೀವನ ಮೌಲ್ಯಗಳ ಈಚಿನ ಶತಮಾನಗಳಲ್ಲಿ ಹೊಸಹೊಸ ಜಾನಪದ ಕಲಾಪ್ರಕಾರಗಳು ಹುಟ್ಟುತ್ತಿವೆಯೆ ಎಂಬ ಕುತೂಹಲವಿತ್ತು. ಅರ್ಜೆಂಟೀನಾ ಎಂಬ ‘ಹೊಸ ನಾಡು’ ಸೃಷ್ಟಿಸಿದ ಜಾನಪದ ನರ್ತನ ಟ್ಯಾಂಗೊ ಕುರಿತ ಮಾಹಿತಿ ಅಂಥ ಕುತೂಹಲವನ್ನು ಇನ್ನಷ್ಟು ಪೋಷಿಸಿತು.

ಬ್ಯೂನಸ್ ಐರಿಸ್ ನಗರದ ಅತಿ ಹಳೆಯ ಬೀದಿ ಸ್ಯಾನ್ ಟೆಲ್ಮೊ ನೇಬರ್‌ಹುಡ್, ಬಂದರಿನ ಬಳಿಯಿದ್ದ ಲಾ ಬೊಕಾ ಸ್ಟ್ರೀಟ್, ಕಮಿನಿಟೊ ಸ್ಟ್ರೀಟ್ ಸುತ್ತುತ್ತಿದ್ದೆವು. ಅಲ್ಲಿ ಇಂಥ ೪೮ ನೇಬರ್‌ಹುಡ್‌ಗಳಿವೆ ಎಂದು ಗೈಡ್ ಹೇಳುತ್ತಿದ್ದರು. ಬಂದರಿನ ಸುತ್ತಮುತ್ತ, ಲಾ ಪ್ಲಾಟಾ ನದಿಯ ದಂಡೆಗಳಲ್ಲಿ ಮುಂಬಯಿಯ ಚಾಳುಗಳ ಒಂದು ಕೋಣೆಯ ಮನೆಗಳನ್ನು ನೆನಪಿಸಿದ ‘ಕಾಂಬಾಂಟಿಷಿಯೊ ಮನೆ’ಗಳು ವರ್ಣವೈವಿಧ್ಯತೆಯಿಂದ ಗಮನ ಸೆಳೆದವು. ನಗರದ ಉಳಿದೆಡೆ ಮನೆಗಳಿಗೆ ಹಚ್ಚದ ಗಾಢ, ದಟ್ಟ, ಕಡುಬಣ್ಣಗಳ ವಿಚಿತ್ರ ಕಾಂಬಿನೇಷನ್ನನ್ನು ಗೋಡೆ, ಬಾಗಿಲು, ಕಿಟಕಿಗಳಿಗೆ ಬಳಿದು ಅದರ ಮೇಲೆ ಚಿತ್ರ, ಘೋಷಣೆ, ಜಾಹೀರಾತುಗಳ ತುಂಬಿಸಲಾಗಿತ್ತು. ಗೊಂಬೆಗಳ ನಿಲಿಸಲಾಗಿತ್ತು. ಅದು ಬಡ, ಕೆಳ ಮಧ್ಯಮ ವರ್ಗದವರೆ ಹೆಚ್ಚಿಗೆ ವಾಸಿಸುವ, ದೂರದ ನಾಡುಗಳಿಂದ ವಲಸೆ ಬಂದವರ ಪ್ರದೇಶ. ತಮ್ಮಿಷ್ಟದಂತೆ ಮನೆ ಕಟ್ಟಿ, ಬಣ್ಣ ಬಳಿಯುವುದು ಅವರಿಗೆ ದುಬಾರಿ. ಎಂದೇ ಹಡಗು ಕಟ್ಟೆಯಿಂದ ಉಳಿದ ಮರಮುಟ್ಟು ತಂದು ಮನೆಕಟ್ಟಿದ್ದಾರೆ. ಉಳಿಕೆ ಬಣ್ಣಗಳ ತಂದು ಮನೆಗಳಿಗೆ ಬಳಿದಿದ್ದಾರೆ. ಒಂದು ಮನೆಯಲ್ಲಿ ಹಲವು ಕೋಣೆ. ಒಂದು ಕೋಣೆಯಲ್ಲಿ ಹಲವು ಜನ.




ಆ ನೇಬರ್‌ಹುಡ್‌ಗಳ ಮತ್ತೊಂದು ವಿಶೇಷ ರಸ್ತೆ ಮೇಲೆ ನರ್ತಿಸುವ ಜೋಡಿಗಳು. ಎತ್ತರದ, ದಪ್ಪದ, ಬಿಳಿಯ, ಕರಿಯ, ಎಳೆಯ, ನಡುಹರೆಯದ ಎಲ್ಲ ತರಹದ ನರ್ತಕ ನರ್ತಕಿಯರೂ ಬೀದಿಯಲ್ಲಿ ಕಂಡರು. ಬೀದಿಯಲ್ಲಿ ನರ್ತನವೇ ಎಂದುಕೊಳುವಾಗ ನಮ್ಮ ಬಳಿ ನರ್ತಿಸುವ ತಂಡವೇ ಬಂತು. ಟ್ಯಾಂಗೋದ ಒಂದೆರೆಡು ಭಂಗಿ ಹೇಳಿಕೊಟ್ಟು, ಫೋಟೋ ತೆಗೆಸಿಕೊಳ್ಳಲು ಪೋಸು ಕೊಟ್ಟರೆ ಮೂರು ಭಂಗಿಗೆ ೧೦೦ ಪೆಸೊ ಕೊಡಬೇಕೆನ್ನುತ್ತ ಒಲ್ಲೆಒಲ್ಲೆ ಎಂದರೂ ಬಿಡದೇ ಕುತ್ತಿಗೆ, ಸೊಂಟಕ್ಕೆ ಕೆಂಪು ಬಟ್ಟೆ ಬಿಗಿದು, ತಲೆಗೆ ಕೆಂಪು ಹ್ಯಾಟು ಇಟ್ಟು, ಮೊದಲ ಪಾಠ ಶುರುಮಾಡೇಬಿಟ್ಟರು.

‘ಇದು ಟ್ಯಾಂಗೊ. ಕಲಿಯಬೇಕೆ? ಹಾಗಾದರೆ ಮೊದಲ ಸ್ಟೆಪ್, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು. ಮೂಗಿಗೆ ಮೂಗು ತಾಗಿಸು.’

ತನ್ನ ಬಲಗೈ ಚಾಚಿ ಹೆಣ್ಣಿನ ಎಡಗೈ ಹಿಡಿದು ಅವಳ ನಡು ಬಳಸಿ ನಿಂತ ನರ್ತಕ ಹೇಳಿದ ಮೊದಲ ಮಾತು ಇದು! ಕಣ್ಣಲ್ಲಿ ಕಣ್ಣಿಟ್ಟು ನೋಡಲೆಂದೇ ಹುಟ್ಟಿದ ಯುಗಳ ನರ್ತನ ಟ್ಯಾಂಗೊ. ಅರ್ಜೆಂಟೀನಾ ಮತ್ತು ಉರಗ್ವೆ ದೇಶಗಳ ನಡುವೆ ಇರುವ ಪ್ರಾಕೃತಿಕ ಗಡಿ ‘ಲಾ ಪ್ಲಾಟಾ’ ನದಿಯ ಎರಡೂ ದಂಡೆಗಳ ಜನರಿಂದ ರೂಪುಗೊಂಡ ನರ್ತನ. ಇಂದು ವಿಶ್ವದ ಎಲ್ಲ ಭಾಗಗಳಿಗೂ ಹರಡಿ ಹಲವು ಶೈಲಿಗಳಲ್ಲಿ ಟ್ಯಾಂಗೊ ಚಾಲ್ತಿಯಲ್ಲಿದೆ. ಭಾರತದಲ್ಲೂ ಜನಪ್ರಿಯವಾಗಿದೆ.



ಹೆಣ್ಣುಗಂಡು ಜೊತೆಜೊತೆ ಮುಖಾಮುಖಿಯಾಗುವ ಮೂರೇ ಕಲಾಪ್ರಕಾರಗಳಿವೆ: ವಿಯೆನ್ನೀಸ್ ವಾಲ್ಟ್ಜ್ (೧೮೩೦), ಪೊಲ್ಕಾ (೧೮೪೦) ಹಾಗೂ ಟ್ಯಾಂಗೊ. ಅದರಲ್ಲಿ ತರುಣಪೀಳಿಗೆಯ ಅಚ್ಚುಮೆಚ್ಚಿನ ನರ್ತನ ಶೈಲಿ ಟ್ಯಾಂಗೊ. ಅದು ಪ್ರಣಯದ ಜೊತೆ ಸಾಂಸ್ಕೃತಿಕ ಸಂಬಂಧ ಹೊಂದಿರುವ ಕಲಾ ಪ್ರಕಾರ. ಅತಿಸಾಮೀಪ್ಯದಲ್ಲಿ ಅತ್ಯಂತ ಲಯಬದ್ಧವಾಗಿ ನರ್ತಕರು ಚಲಿಸುವುದರಿಂದ, ಶೃಂಗಾರಮಯ ಸಾಹಿತ್ಯದ ಕಾರಣದಿಂದ ಅದು ವೇಶ್ಯಾಗೃಹಗಳಲ್ಲಿ ಹುಟ್ಟಿದ ನರ್ತನ ಎಂಬ ಅಪಕೀರ್ತಿಗೆ ಪಾತ್ರವಾಗಿತ್ತು. ಅದನ್ನೆಲ್ಲ ಮೀರಿ ಟ್ಯಾಂಗೊ ಜನಪ್ರಿಯವಾದ ಬಗೆ ಒಂದು ಕಾಲಮಾನದ ಅಧ್ಯಯನದ ವಸ್ತುವಾಗಬಲ್ಲದು.
೧೯ನೇ ಶತಮಾನದ ಶುರುವಿಗೆ ಅರ್ಜೆಂಟೀನಾ ಸ್ಪ್ಯಾನಿಶ್ ವಸಾಹತುವಾಗಿದ್ದರೂ ಬ್ಯೂನಸ್ ಐರಿಸ್ ನಗರ ಬೆಳೆದಿರಲಿಲ್ಲ. ಯೂರೋಪಿನಿಂದ ದೂರವಿದ್ದ ದಕ್ಷಿಣ ಅಮೆರಿಕಾ ಮತ್ತು ಬ್ಯೂನಸ್ ಐರಿಸ್ ವಲಸಿಗರ ಗಮನ ಸೆಳೆದಿರಲಿಲ್ಲ. ಆ ವೇಳೆಗೆ ರೈಲುರಸ್ತೆ ನಿರ್ಮಿಸಲು ಅರ್ಜೆಂಟೀನಾಗೆ ಬಂದ ಬ್ರಿಟಿಷರ ಕಣ್ಣು ಅಲ್ಲಿನ ಕೃಷಿ ಸಮೃದ್ಧಿ, ಗಣಿ ಸಂಪತ್ತುಗಳ ಮೇಲೆ ಬಿದ್ದರೂ ಗುಲಾಮಗಿರಿ ನಿಷೇಧಿಸಲ್ಪಟ್ಟ ಕಾರಣ ಕೆಲಸ ಮಾಡಲು ಕೂಲಿಗಳಿರಲಿಲ್ಲ. ಆಗ ಅರ್ಜೆಂಟೀನಾ ಆಳ್ವಿಕರು ವಲಸಿಗರನ್ನು ಸೆಳೆಯಲು ವಿಪುಲ ಉದ್ಯೋಗ ಅವಕಾಶ, ಸುಲಭ ವೀಸಾ, ವಸತಿ ವ್ಯವಸ್ಥೆ, ಒಂದು ವಾರ ಉಚಿತ ರೇಷನ್ ಮೊದಲಾದ ಆಮಿಷಗಳನ್ನೊಡ್ಡಿದರು.

ಉದ್ಯೋಗವನ್ನರಸಿ ಜನಪ್ರವಾಹವೇ ಅರ್ಜೆಂಟೀನಾದತ್ತ ಹರಿಯಿತು. ಕುಟುಂಬರಹಿತರಾಗಿ ವಲಸೆ ಬಂದ ಒಂಟಿಪುರುಷರಿಂದ ಬ್ಯೂನಸ್ ಐರಿಸ್ ತುಂಬಿಹೋಯಿತು. ಬಂದರಿನ ಕೇರಿಗಳು ಕೆಲಸಗಾರರಿಂದ ಕಿಕ್ಕಿರಿದ ಗೂಡುಗಳಾದವು. ಆದರೆ ವಲಸಿಗರಿಗೆ ಕೈತುಂಬ ಕೆಲಸ ಸಿಗಲೂ ಇಲ್ಲ. ಸಿಕ್ಕ ಕೆಲಸದಿಂದ ಕೈತುಂಬ ಗಳಿಸಲೂ ಆಗಲಿಲ್ಲ. ಸಂಸಾರವಂದಿಗರಾಗುವ ಎಂದರೆ ಅಲ್ಲಿ ಹೆಣ್ಣುಗಳೇ ಇರಲಿಲ್ಲ. ಒಂದೆಡೆ ಕಿತ್ತು ತಿನ್ನುವ ಒಂಟಿತನ. ಮತ್ತೊಂದೆಡೆ ಬಡತನ. ಎಲ್ಲೆಲ್ಲು ನಿರಾಶ ಗಂಡಸರು. ಎಲ್ಲಿ ನೋಡಿದರೂ ಗಂಡಸರು.

ಒಬ್ಬಂಟಿತನವು ಗಲ್ಲಿಗಲ್ಲಿಗಳ ಉಸಿರುಕಟ್ಟಿಸುತ್ತಿದ್ದ ಕಾಲದಲ್ಲಿ ಅವರವರೆ ಹಾಡಿಕೊಂಡರು, ನರ್ತಿಸಿದರು. ಕೆಲವರು ಗಿಟಾರ್, ಕೊಳಲು, ಪಿಯಾನೊ ನುಡಿಸಿದರು. ಆಫ್ರಿಕನ್ ಗುಲಾಮರು ಮತ್ತು ಯೂರೋಪಿಯನ್ ಕೂಲಿಗಳ ಸಂಸ್ಕೃತಿಗಳು ಹದವಾಗಿ ಮಿಶ್ರಣಗೊಂಡು; ಆಫ್ರಿಕನ್ ನೃತ್ಯಲಯ, ಯೂರೋಪಿಯನ್ನರ ಹಾಡು ಮಿಳಿತಗೊಂಡು ಟ್ಯಾಂಗೊ ರೂಪುಗೊಂಡಿತು. ಬ್ಯೂನಸ್ ಐರಿಸ್ ಮತ್ತು ಮಾಂಟೆವಿಡಿಯೊ ನಗರಗಳ ಕೆಳವರ್ಗಗಳ ಜನವಸತಿ ಪ್ರದೇಶದಲ್ಲಿ ಟ್ಯಾಂಗೊ ಬೆಳೆಯಿತು.

ಯಾವುದೇ ಇತಿಹಾಸ ಬರೆದಿಡಲಾಗದ ಜನ ಟ್ಯಾಂಗೊವನ್ನು ಸೃಷ್ಟಿಸಿದರು. ಯುದ್ಧ-ಹಿಂಸೆ-ವಲಸೆ-ವಿಕೋಪಗಳಲ್ಲಿ ತಮ್ಮ ಪ್ರಾಣ ತೆರುವ ಹೊರತು ಮತ್ತಾವ ಚರಿತ್ರೆಯನ್ನೂ ಬರೆದಿಡಲಾರದ ಜನ ಟ್ಯಾಂಗೋವನ್ನು ಬೆಳೆಸಿದರು.

ಶ್ರಮಿಕ ವರ್ಗವನ್ನು ಕಾಡುವ ಒಂಟಿತನವು ಯಾವ್ಯಾವುದನ್ನು ನಾಗರಿಕ ಜಗತ್ತು ‘ಅಪರಾಧ’ ಎನ್ನುವುದೋ, ಅವೆಲ್ಲ ಅಲ್ಲಿ ಬೇರು ಬಿಡಲು ಕಾರಣವಾಯಿತು. ವೇಶ್ಯಾವಾಟಿಕೆ ವೇಗವಾಗಿ ಬೆಳೆಯಿತು. ವೇಶ್ಯೆಯರ ಸಂಖ್ಯೆ ಕಡಿಮೆಯಿದ್ದುದರಿಂದ ವೇಶ್ಯಾಗೃಹಗಳಲ್ಲಿ ಲೈನ್ ಹಚ್ಚಿ ಕ್ಯೂನಲ್ಲಿ ಕಾಯುವವರ ಸಂಖ್ಯೆ ಅದಕ್ಕಿಂತ ವೇಗವಾಗಿ ಬೆಳೆಯಿತು. ಕಾಯುವವರ ಬೇಸರ ಕಳೆಯಲು ವೇಶ್ಯಾಗೃಹಗಳ ಮಾಲೀಕರು ಸ್ಥಳೀಯ ಟ್ಯಾಂಗೊ ಸಂಗೀತಗಾರರನ್ನು, ನರ್ತನಕಾರರನ್ನು ನೇಮಿಸಿದರು.

ನರ್ತನ ಬಲುಬೇಗ ಜನಪ್ರಿಯವಾಯಿತು. ಏಕೆಂದರೆ ಆಗ ಹೆಣ್ಣಿನ ಸಾಮೀಪ್ಯಕ್ಕೆ ಇದ್ದದ್ದು ಎರಡೇ ದಾರಿ: ನರ್ತನ ಅಥವಾ ವೇಶ್ಯಾಗೃಹ. ಒಳ್ಳೆಯ ನರ್ತನ ಕಲಿತರೆ ಉತ್ತಮ ಹೆಣ್ಣುಗಳ ಜೊತೆ ನರ್ತಿಸಲು ಅವಕಾಶ ಸಿಗುತ್ತಿತ್ತು. ಉತ್ತಮ ನರ್ತಕರೊಡನೆ ನರ್ತಿಸಲು ಹೆಣ್ಣುಗಳೂ ಬಯಸುತ್ತಿದ್ದರು. ಹೀಗೆ ಹೆಣ್ಣಿನ ಸಂಪರ್ಕಕ್ಕೆ ಬರುವ ಏಕಮೇವ ಹಂಬಲದೊಂದಿಗೆ ತರುಣರು ಟ್ಯಾಂಗೊ ಕಲಿಯತೊಡಗಿದರು. ಎಲ್ಲೇ ಲೈವ್ ಸಂಗೀತ ಕೇಳಿದರೂ ತರುಣರು ಹೆಜ್ಜೆ ಹಾಕತೊಡಗಿದರು. ಮಧ್ಯಮ ವರ್ಗದವರು ಹೆಣ್ಣುಗಳೊಂದಿಗೆ ನರ್ತಿಸುವ ಕೆಳವರ್ಗದ ಹಾಡುಗಾರರನ್ನು ಮೊದಲು ನೋಡಿದ್ದು ವೇಶ್ಯಾಗೃಹಗಳಲ್ಲಿ. ಹಾಗಾಗಿ ಆ ವರ್ಗದ ಇತಿಹಾಸಕಾರರು ಟ್ಯಾಂಗೊ ವೇಶ್ಯಾಗೃಹದಲ್ಲಿ ಹುಟ್ಟಿತೆಂದು ಭಾವಿಸಿದರು. ಕೆಳವರ್ಗದವರಿಂದ ಶುರುವಾದ ಕಾರಣ ಸಮಾಜದ ಗಮನ ಸೆಳೆಯದೆ, ನಿಷೇಧ ದಾಟಲಾಗದೆ ಟ್ಯಾಂಗೊ ‘ಗೌರವಾನ್ವಿತ’ ಎನಿಸಿಕೊಳಲು ಬಹುಕಾಲ ಕಾಯಬೇಕಾಯಿತು.

ಅದಕ್ಕೆ ಸರಿಯಾಗಿ ಮೊದಮೊದಲು ಟ್ಯಾಂಗೊ ಸಾಹಿತ್ಯ ತಮಾಷೆಯ, ‘ಅಸಭ್ಯ’ ಎಂದು ಕರೆಸಿಕೊಳುವ ಪದ, ಸಾಲುಗಳಿಂದ ತುಂಬಿತ್ತು. ಆದರೆ ಯಾವಾಗ ಯೂರೋಪು ತಲುಪಿ, ಮತ್ತೆ ಅರ್ಜೆಂಟೀನಾಗೆ ಬಂದು ಮಧ್ಯಮವರ್ಗದ ಹುಡುಗ ಹುಡುಗಿಯರು ಕಲಿಯುವ ನರ್ತನವಾಯಿತೊ, ಆಗ ಸಾಹಿತ್ಯ ಬದಲಾಯಿತು. ಹೊಸ ವಾದ್ಯಗಳು ಸೇರ್ಪಡೆಯಾದವು. ಅತ್ಯುತ್ತಮ ಸಂಗೀತ, ಹಾಡುಗಾರರು ಬಂದರು. ಅರ್ಜೆಂಟೀನಾ ಮತ್ತು ಉರುಗ್ವೆ ಸೃಷ್ಟಿಸಿದ ಅತ್ಯುತ್ತಮ ಕವಿಗಳು ಟ್ಯಾಂಗೊ ಹಾಡು ಬರೆದರು.

ಅದು ಟ್ಯಾಂಗೊಗೆ ಉಚ್ಛ್ರಾಯ ಕಾಲ.

ನಂತರ ಮಿಲಿಟರಿ ಆಡಳಿತವು ಟ್ಯಾಂಗೋ ನಿಷೇಧಿಸಿದರೆ, ಅವರ ನಂತರ ಬಂದ ಪೆರೋನ್ ಪ್ರಚಾರಕ್ಕೆ ಟ್ಯಾಂಗೋವನ್ನು ಬಳಸಿ ಮಾನ್ಯತೆ ತಂದುಕೊಟ್ಟರು. ನಂತರ ಮತ್ತೆ ಬಂದ ಮಿಲಿಟರಿ ಸರ್ವಾಧಿಕಾರ ಅದನ್ನು ನಿಷೇಧಿಸಿತು. ಅದರ ಸಾಹಿತ್ಯ ಬದಲಾಯಿತು. ವಾದನಶೈಲಿ ಬದಲಾಯಿತು. ಕೊನೆಗೆ ವಿಶ್ವಕಪ್ ಫುಟ್ಬಾಲ್ ವೇಳೆ ಟ್ಯಾಂಗೊ ಮತ್ತೆ ಜನಪ್ರಿಯವಾಯಿತು.

ಆದರೆ ನಿಷೇಧವೋ, ಪ್ರೋತ್ಸಾಹವೋ, ನರ್ತನದ ಷೋಗಳಿಗೆ ಜನ ಹೋಗುವುದು ನಿಲ್ಲಲಿಲ್ಲ. ಏಳುಬೀಳು ಕಾಣುತ್ತ ಹೋದರೂ ಟ್ಯಾಂಗೊ ಜಗತ್ತಿನ ಅತ್ಯಂತ ಜನಪ್ರಿಯ ಕಲಾಪ್ರಕಾರಗಳಲ್ಲಿ ಒಂದು ಎನಿಸಿಕೊಳುವುದನ್ನು ಯಾರೂ ತಡೆಯಲಾಗಲಿಲ್ಲ.


‘ಕುಣೀಬೇಕ, ಮೈ ಮಣೀಬೇಕ..’

ಹೀಗೆ ಹಗಲಿಡೀ ತಲೆಯಲ್ಲಿ ಟ್ಯಾಂಗೊ ತುಂಬಿಕೊಂಡು ಬ್ಯೂನಸ್ ಐರಿಸ್ ಸುತ್ತಿದವರಿಗೆ ಆ ರಾತ್ರಿ ಡ್ಯಾನ್ಸ್ ಫ್ಲೋರಿನಲ್ಲಿ ಅವಿಸ್ಮರಣೀಯ ಅನುಭವವಾಯಿತು.

ಯಾವುದೋ ಹಾಲಿವುಡ್ ಸಿನಿಮಾ ದೃಶ್ಯವೊಂದರಲ್ಲಿ ನಾವಿಲ್ಲವಷ್ಟೆ ಎಂದು ಮತ್ತೆಮತ್ತೆ ಮುಟ್ಟಿ ನೋಡಿಕೊಂಡೆವು. ಜೆಟ್‌ಲ್ಯಾಗಿನಿಂದ ಉರಿಯುತ್ತಿದ್ದ ಕಣ್ಣುಗಳು, ಇಡಿಯ ದಿನ ತಿರುತಿರುಗಿ ದಣಿದ ಕಾಲುಗಳು ಇಲ್ಲ ಎಂದು ಹೇಳುತ್ತಿದ್ದವು. ಅದೊಂದು ಭವ್ಯ ಹೋಟೆಲಿನ ವೈಭವೋಪೇತ ವಿಶಾ..ಲ ಹಜಾರ. ಅಕೋ ಅಷ್ಟು ದೂರದಲ್ಲಿ ರಂಗಸ್ಥಳ. ಇಳಿಬಿಟ್ಟ ನೀಲಿ ಪರದೆಯ ಹಿಂದೆ ಥಳಥಳಿಸುವ ಲೈಟು. ಎದುರು ಬದುರು ೧+೧, ೨+೨, ೩+೩ ಜನ ಕೂರುವಂತೆ ಸಾಲುಸಾಲಾಗಿ ಟೇಬಲ್ಲು ಕುರ್ಚಿಗಳು. ಟೇಬಲ್ಲಿನ ಮೇಲೆ ಮುಟ್ಟಿದರೆ ಮಾಸುವುದೇನೊ ಅನ್ನಿಸುವಷ್ಟು ಬಿಳಿಯ ಕರ್ಚೀಫು. ಆಗಲೆ ಅಲ್ಲೊಬ್ಬರು ಇಲ್ಲೊಬ್ಬರು ಬಂದು ಕೂತಿದ್ದರು. ರಂಗ ಚೆನ್ನಾಗಿ ಕಾಣುವ ಒಂದು ಜಾಗ ಆರಿಸಿ ಮಬ್ಬು ಬೆಳಕಿನಲ್ಲಿ ನಾವೂ ಕುಳಿತೆವು. ತರಹೇವಾರಿ ಹ್ಯಾಟು, ಲಂಗ, ಮಿನಿಲಂಗ ತೊಟ್ಟು ತಂತಮ್ಮ ಪುರುಷರ ಕೈಹಿಡಿದು ಜೋಡಿಗಳು ಬಂದೇಬಂದವು. ಟೈಟಾನಿಕ್ ಸಿನಿಮಾದಲ್ಲಿ ಹಡಗು ಒಡೆಯುವ ಮುನ್ನ ರೋಸ್ ಮತ್ತು ಜ್ಯಾಕ್ ಬಾಲ್ ರೂಮಿಗೆ ಬಂದ ದೃಶ್ಯ ನೆನಪಾಯಿತು. ಬೃಹತ್ ಹಾಲಿನಲ್ಲಿ ೩೦೦-೪೦೦ ಜನ ತುಂಬಿದರು.

ನಮ್ಮ ಕಣ್ಣನ್ನು ರಂಗದ ಮೇಲೆ ಕೀಲಿಸಿಕೊಂಡೇ ಇದ್ದೆವು. ಪಿಸಿಪಿಸಿ ಮಾತನಾಡುತ್ತಿದ್ದ ಆಚೀಚಿನವರು ಟಣಟಣ ಸದ್ದು ಕೇಳಿದ್ದೇ ಮೌನವಾದರು. ಟ್ರಾಲಿಯಲ್ಲಿ ತರತರಹದ ಬಾಟಲಿ, ಗ್ಲಾಸು, ಚಮಚ ಫೋರ್ಕುಗಳು ಬಂದವು. ತಣ್ಣಗೆ ಕೊರೆವ ಎಸಿ ಹಾಲಿನಲ್ಲಿ ಒಂದೊಂದು ಟೇಬಲ್ಲಿಗೆ ಒಬ್ಬೊಬ್ಬ ಶಿಸ್ತಿನ ಸಹಾಯಕ ನಿಂತು ಕೇಳಕೇಳಿದ್ದನ್ನೆಲ್ಲ ಕ್ಷಣಾರ್ಧದಲ್ಲಿ ಕೊಡುತ್ತಿದ್ದ. ಒಂದೆರೆಡು ತಾಸಿನಲ್ಲಿ ಎಲ್ಲರ ಊಟ ಮುಗಿಯಿತು.

ತೆರೆ ಮೇಲೆದ್ದಿತು.

ಝಗಮಗಿಸುವ ರಂಗದೊಳಗಿನ ಬಾಲ್ಕನಿಯಲ್ಲಿ ಐದಾರು ಜನ ವಾದ್ಯ ಬಾರಿಸುತ್ತ ಕೂತಿದ್ದರು. ಅತ್ಯಾಕರ್ಷಕ ಮೈಮಾಟ, ದಿರಿಸಿನ ಒಂದು ಜೋಡಿ ರಂಗದ ಮೇಲೆ ಬಂತು. ಹಿನ್ನೆಲೆಯ ಲೈವ್ ಹಾಡಿಗೆ ನೃತ್ಯವೇ ಮೈವೆತ್ತಂತೆ ತನ್ಮಯವಾಗಿ ನರ್ತಿಸಿತು. ನಂತರ ಒಂದಾದಮೇಲೊಂದು ಐದಾರು ಜೋಡಿಗಳು ಒಂದೂವರೆ ತಾಸು ಕಾಲ ‘ನಾ ಕುಣೀಬೇಕ, ಮೈ ಮಣೀಬೇಕ’ ಎನ್ನುವಂತೆ ನರ್ತಿಸಿದರು.

ಎಲ್ಲ ಹಾಡೂ, ವಿವರಣೆಯೂ ಸ್ಪ್ಯಾನಿಶ್, ಪೋರ್ಚುಗೀಸಿನಲ್ಲೆ ಇತ್ತು. ಆ ಭಾಷೆ ಹಾಗೂ ಪಾಶ್ಚಾತ್ಯ ಸಂಗೀತ ಕುರಿತ ನಮ್ಮ ಅಜ್ಞಾನದ ಕಾರಣ ಆವೇಶಭರಿತರಾಗಿ, ಭಾವಭರಿತವಾಗಿ ಹಾಡುಗಾರ-ಹಾಡುಗಾರ್ತಿಯರು ಹಾಡಿದರೂ; ಎಲ್ಲ ಚಪ್ಪಾಳೆ ತಟ್ಟಿ ಉದ್ಗಾರ ಸೂಸುತ್ತಿದ್ದರೂ ಹಾಡು ವಿಶೇಷವೆನಿಸಲಿಲ್ಲ. ತಾರಕದ ಹಾಡು ಗಲಾಟೆಯಂತೆ ಕೇಳಿದರೆ, ಹಿನ್ನೆಲೆ ವಾದ್ಯದ ಆವೇಗ ಟಾಂ ಅಂಡ್ ಜೆರ್ರಿಯನ್ನು ನೆನಪಿಸಿತು. ಆದರೆ ಹಾಡು ಅರ್ಥವಾಗದಿದ್ದರೇನಂತೆ, ಸಾಮರಸ್ಯ ಮತ್ತು ಲಯ ಅನನ್ಯವಾಗಿ ಬೆರೆತ, ಲವಲೇಶದಷ್ಟೂ ಕುಂದಿಲ್ಲದ ನರ್ತನವು ಭಾಷೆಯ ಹಂಗಿಲ್ಲದೆ ಕಣ್ಮನ ತಣಿಸಿತು.

ನಮಗೆ ಹೊಚ್ಚಹೊಸದಾದ ಲಯ-ಭಂಗಿಗಳಲ್ಲಿ, ಅತಿ ವಿಶಿಷ್ಟವಾದ ಶೈಲಿಯಲ್ಲಿ ಕಲಾವಿದರು ಪ್ರದರ್ಶನ ನೀಡಿದರು. ಹುರಿಹುರಿಯಾದ ಸಪೂರ ಮೈಕಟ್ಟಿನ ನರ್ತಕ ನರ್ತಕಿಯರು ಥಳಥಳಿಸುವ ಬಟ್ಟೆ ತೊಟ್ಟು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ, ಅಪ್ಪಿ ಹಿಡಿದ ಭಂಗಿಯಲ್ಲಿ ನರ್ತಿಸುತ್ತಿದ್ದರು. ಅದರ ಮೂಲಭಂಗಿ ಅಬ್ರಾಜೊ (ಎಂಬ್ರೇಸ್) ಎಂದರೆ ಅಪ್ಪುಗೆ. ದುಃಖ, ಕಾತರ, ವಿಷಾದ, ಸಂತಸ, ವಿರಹಗಳ ತೀವ್ರ ಭಾವಾಭಿವ್ಯಕ್ತಿಗೂ ಆಂಗಿಕ ಅಭಿನಯಕ್ಕಿಂತ ಮಿಂಚಿನ ಚಲನೆಗೇ ಅಲ್ಲಿ ಆದ್ಯತೆ. ಎರಡು ದೇಹಗಳು ಒಂದೇ ರೀತಿ ಚಲಿಸಿದವು. ಇಬ್ಬರದೂ ಒಂದೇ ಪಾದವೇನೊ ಎನ್ನುವಷ್ಟು ಹೊಂದಾಣಿಕೆಯ ಲಾಲಿತ್ಯಪೂರ್ಣ ಚಲನೆ.

ಸಮತೋಲನದ ಲಯ ಮತ್ತು ವೇಗವೇ ಟ್ಯಾಂಗೋದ ಹೆಚ್ಚುಗಾರಿಕೆ. ಬಾಗುವುದು, ಬಳುಕುವುದು, ಬಗ್ಗಿಸುವುದು, ಬಿಸಾಡುವುದು, ದೂಡುವುದು, ಬೀಳಿಸುವುದು, ಎತ್ತುವುದು ಮೊದಲಾದ ಚಿತ್ರವಿಚಿತ್ರ ಚಲನೆಗಳನ್ನು ತೆರೆದ ಬಾಯಿ ಮುಚ್ಚದೇ ನೋಡಿದೆವು. ಒಲಿಸುವ, ಒಲಿಯುವ, ಆನಂದಮಯವಾಗುವ ಚಲನೆಗಳೇ ಇದ್ದಂತೆನಿಸಿತು. ಕಲಾವಿದರು ಸುತ್ತಲ ಪರಿವೆಯೇ ಇಲ್ಲದಂತೆ ನರ್ತಿಸಿ ಗಂಧರ್ವಲೋಕ ಸೃಷ್ಟಿಸಿದರು. ನೋಡುಗರೂ ಕಾಲದೇಶಗಳ ಮರೆವಂತೆ ಮಾಡಿದರು.



ಆ ಸಂಗೀತ ಮಾದಕ. ನರ್ತಿಸುವವರ ಮೈಮಾಟ ಮಾದಕ. ನರ್ತನ ಶೈಲಿ ಮಾದಕ. ಮತ್ತು ಏರಿಸಲು ಏನೇನು ಬೇಕೋ ಎಲ್ಲ ಅದರಲ್ಲಿದೆ. ಕೆನ್ನೆಗೆ ಕೆನ್ನೆ, ಎದೆಗೆ ಎದೆ, ತೊಡೆಗೆ ತೊಡೆ ತಾಗಿಸಿ ಕಾಲುಗಳ ನಡುವೆ ಕಾಲುಗಳ ಸರಾಗ ಹರಿದಾಡಿಸಿ ವೇಗವಾಗಿ ಚಲಿಸುವ ಜೋಡಿಗಳು ಅರ್ಧನಾರೀಶ್ವರರಂತೆ ಕಾಣಿಸಿದವು.

ಈ ಚಲನೆ, ಈ ನರ್ತನ ಏನು ಹೇಳುತ್ತಿದೆ? ಸಮಾಜ ಗಂಡುಗಂಡಾದರೆ ಎದುರಾಗುವ ಅಪಾಯಗಳ ಕುರಿತೆ? ಒಂಟಿ ದೇಹಮನಸುಗಳ ತೀವ್ರ ಭಾವಾಭಿವ್ಯಕ್ತಿಯನ್ನು ಚಲನೆಯಲ್ಲಿ ಮಣಿಸಬಹುದೆಂದೆ? ಸಾಂಗತ್ಯವು ಕಾಮಕೇಂದ್ರಿತವಾಗಷ್ಟೇ ಅಲ್ಲದೆ ಜೀವನೋತ್ಸಾಹದ ಸೆಲೆಯಾಗುವುದು ಹೇಗೆಂದು ಹೇಳುತ್ತಿದೆಯೆ?

ಏನಾದರೂ ಇರಲಿ, ಕಣ್ಣಲ್ಲಿ ಕಣ್ಣಿಟ್ಟು ನೋಡಲೂ ಪುರುಸೊತ್ತಿಲ್ಲದೆ ಸಂಬಂಧಗಳು ಹದಗೆಡುತ್ತಿರುವ ವೇಗದ ಕಾಲದಲ್ಲಿ ಕಣ್ಣಿಟ್ಟು ನೋಡುವುದನ್ನಾದರೂ ಕಲಿಸುವ ಕಲೆಗೆ ಮನುಷ್ಯ ಕುಲ ಋಣಿಯಾಗಿರಲಿ.