Monday, 2 July 2018

ವೈದ್ಯರ ದಿನಾಚರಣೆ: ಕಾಲ ಕಂದಕ ದಾಟಿದ ಡಾ. ಮುತ್ತುಲಕ್ಷ್ಮಿ ರೆಡ್ಡಿ





ಹೆಣ್ಣಾಗಿ ಹುಟ್ಟಿದ ಮೇಲೆ ಮದುವೆಯಾಗಿ, ಮಕ್ಕಳ ಹೆತ್ತು, ಮನೆಯನ್ನು ಒಪ್ಪ ಓರಣಗೊಳಿಸುತ್ತ, ಮನೆಯವರ ತನುಮನಗಳ ತಣಿಸುತ್ತ ಕಾಲ ಕಳೆಯುವುದೇ ಗತಿ ಎನ್ನುವುದು ಸಮಾಜ ನಿರ್ಮಿತಿ. ಕಾಲ ಸೃಷ್ಟಿಸಿದ ಈ ಕಂದಕವನ್ನು ಯಶಸ್ವಿಯಾಗಿ ದಾಟಿದ ಮಹಿಳೆಯರು ಬಲು ಅಪರೂಪ. ಇವತ್ತಿಗೂ ತನ್ನಿಷ್ಟದ ಶಿಕ್ಷಣ, ವೃತ್ತಿ, ಬಾಳಸಂಗಾತಿ, ಹವ್ಯಾಸವನ್ನು ಆಯ್ಕೆ ಮಾಡಿಕೊಂಡು ಸ್ವತಂತ್ರ ಆಲೋಚನೆಯ ಮಹಿಳೆಯಾಗಿ ಬದುಕುವುದು ಸುಲಭವಿಲ್ಲ. ಆದರೆ ಲಿಂಗ ಪೂರ್ವಗ್ರಹದ ಭಾರತೀಯ ಸಮಾಜದಲ್ಲಿ ಕಾಲ ಸೃಷ್ಟಿಸಿದ ಕಂದಕವನ್ನು ನೂರು ವರ್ಷ ಹಿಂದೆಯೇ ಒಬ್ಬ ಹುಡುಗಿ ಯಶಸ್ವಿಯಾಗಿ ದಾಟಿದಳು. ದೇವದಾಸಿ ಮನೆತನದ ತಾಯಿಯ ಮಗಳಾಗಿ; ಬಾಲ್ಯ ವಿವಾಹ ವಿರೋಧಿಸಿ ಓದಿ ವೈದ್ಯೆಯಾಗಿ; ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ರಾಜಕಾರಣಿಯಾಗಿ; ಮಹಿಳಾ ಜಾಗೃತಿಗೆ ಮುಡಿಪಿಟ್ಟುಕೊಂಡವಳಾಗಿ; ಕ್ಯಾನ್ಸರ್ ರೋಗಿಗಳಿಗೆ, ಪರಿತ್ಯಕ್ತ ಮಹಿಳೆಯರಿಗೆ ಆಸರೆ ನೀಡುವ ನೆರಳಾಗಿ ಬೆಳೆದ ಆ ಮಹಿಳೆ ಡಾ. ಮುತ್ತುಲಕ್ಷ್ಮಿ ರೆಡ್ಡಿ. ಅವರು ಮದರಾಸ್ ವಿವಿಯ ಮೊದಲ ಮಹಿಳಾ ವೈದ್ಯ ಪದವೀಧರೆ. ಮದರಾಸಿನಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದ ಮೊದಲ ಮಹಿಳೆ. ವಿಶ್ವದಲ್ಲೇ ವಿಧಾನ ಪರಿಷತ್ ಉಪಸಭಾಪತಿಯಾದ ಮೊದಲ ಮಹಿಳೆ. ವೈದ್ಯೆಯಾಗಿ, ರಾಜಕಾರಣಿಯಾಗಿ, ಸಮಾಜ ಸುಧಾರಕಳಾಗಿ 20ನೇ ಶತಮಾನದ ಆರಂಭದ ದಶಕಗಳಲ್ಲಿ ಮಹಿಳಾ ಅಸ್ಮಿತೆ ಮತ್ತು ಹಕ್ಕುಗಳಿಗಾಗಿ ಹೋರಾಡಿದ ಅನನ್ಯ ವ್ಯಕ್ತಿ.

ತಮಿಳುನಾಡಿನ ಪುದುಕೊಟ್ಟೈ ಸಂಸ್ಥಾನದಲ್ಲಿ ಬ್ರಾಹ್ಮಣ ಸಮುದಾಯದ ನಾರಾಯಣ ಸ್ವಾಮಿ, ಇಸಾ ವೆಳ್ಳಾಲರ್ ಸಮುದಾಯದ ಚಂದ್ರಮ್ಮಾಳ್ ಮಗಳಾಗಿ 1886ರಲ್ಲಿ ಜನಿಸಿದ ಮುತ್ತುಲಕ್ಷ್ಮಿ ಸ್ವತಂತ್ರ ಆಲೋಚನಾ ಪ್ರವೃತ್ತಿಯ ಬಾಲಕಿ. ದೇವದಾಸಿ ಮನೆತನದ ಚಂದ್ರಮ್ಮಾಳ್ ಅವರನ್ನು ಮದುವೆಯಾದದ್ದಕ್ಕೆ ನಾರಾಯಣ ಸ್ವಾಮಿಯವರ ಕುಟುಂಬ ದೂರವಾಗಿತ್ತು. ಹಾಗಾಗಿ ಎಳೆಯ ಮುತ್ತುಲಕ್ಷ್ಮಿಗೆ ತಾಯಿ ಕಡೆಯ ಸಂಬಂಧಿಗಳ ಒಡನಾಟವೇ ಹೆಚ್ಚಿತ್ತು. ಮನೆಯಲ್ಲಿ ತಂದೆಯೇ ಪಾಠ ಹೇಳಿಕೊಟ್ಟು ಹುಡುಗಿ ಇಂಟರ್ ಪಾಸು ಮಾಡಿದಳು. ಆ ವೇಳೆಗೆ ಮುತ್ತುಲಕ್ಷ್ಮಿಯ ಮದುವೆ ತಯಾರಿ ಶುರುವಾಯಿತು. ಆದರೆ ಎಳೆಯಬಾಲೆ ಓದುವೆನೆಂದು ಹಠ ಹಿಡಿದಳು. 1902ರಲ್ಲಿ ಮೆಟ್ರಿಕ್ಯುಲೇಷನ್ ಪಾಸಾದಳು. ನಂತರ ಪುದುಕೊಟ್ಟೈಯ ಮಹಾರಾಜಾ ಕಾಲೇಜು ಸೇರಲು ಹೋದಾಗ ಕೋಲಾಹಲ. ಹುಡುಗಿಯರು ಕಾಲೇಜಿಗೆ ಬಂದರೆ ಹುಡುಗರು ಹಾಳಾಗಿಬಿಡುತ್ತಾರೆಂದು ವಿದ್ಯಾರ್ಥಿಗಳ ಪೋಷಕರಾದಿಯಾಗಿ ಎಲ್ಲರೂ ವಿರೋಧಿಸಿದರು. ಕೊನೆಗೆ ಆಧುನಿಕತೆಗೆ ತೆರೆದುಕೊಂಡಿದ್ದ ಪ್ರಾಂತ್ಯದ ಮಹಾರಾಜರೇ ಮುತ್ತುಲಕ್ಷ್ಮಿಗೆ ಅಡ್ಮಿಷನ್ ದೊರಕಿಸಿದರು. ಹುಡುಗರ ಕಾಲೇಜಿನ ಮೊದಲ ಹುಡುಗಿಯಾಗಿ ಮುತ್ತುಲಕ್ಷ್ಮಿ ಕಲಿಯತೊಡಗಿದಳು.

1907ರಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜು ಸೇರಿದ ಮುತ್ತುಲಕ್ಷ್ಮಿ, 1912ರಲ್ಲಿ ಮದರಾಸು ವಿವಿಯಿಂದ ಪದಕ, ಪಾರಿತೋಷಕಗಳೊಂದಿಗೆ ವೈದ್ಯ ಪದವಿ ಪಡೆದರು. ಹಾಗೆ ಪದವೀಧರೆಯಾದ ಮೊದಲ ವೈದ್ಯೆ ಆಕೆ. ಎಗ್ಮೋರಿನ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೆಲಸ ಮಾಡತೊಡಗಿದಾಗ ಹೌಸ್ ಸರ್ಜನ್ ಆದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು. ವೈದ್ಯೆಯಾದ ಕೂಡಲೇ ವೆಟ್‌ನರ್ಸ್ ಆಗುವಿಕೆಯನ್ನು ತಡೆಯುವ ಜಾಗೃತಿ ಶುರುಮಾಡಿದರು. ಮೇಲ್ಜಾತಿ ತಾಯಂದಿರ ಕೂಸುಗಳಿಗೆ ತಳಸಮುದಾಯದ ಮಹಿಳೆಯರು ಎದೆಹಾಲು ಕುಡಿಸಿ ಸಾಕುವುದು ಅಂದಿಗೆ ಸಾಮಾನ್ಯವಾಗಿತ್ತು. ಆದರೆ ಸಾಕುತಾಯಿಯ ಮಕ್ಕಳಾದರೋ ಮೊಲೆಹಾಲಿನಿಂದ ವಂಚಿತರಾಗಿ ಆರೋಗ್ಯ ಸಮಸ್ಯೆಗಳಿಗೀಡಾಗುತ್ತಿದ್ದರು. ಅದರ ವಿರುದ್ಧ ಮುತ್ತುಲಕ್ಷ್ಮಿ ತಳಸಮುದಾಯದ ಮಹಿಳೆಯರಲ್ಲಿ ಜಾಗೃತಿ ಮೂಡಿಸತೊಡಗಿದರು.

28 ವರ್ಷದವರಾಗಿದ್ದ ಮುತ್ತುಲಕ್ಷ್ಮಿ ಸಮಾನ ಮನಸ್ಕ ಸಂಗಾತಿಯನ್ನು ತಾವೇ ಆಯ್ಕೆಮಾಡಿಕೊಂಡರು. 1914ರಲ್ಲಿ ನೇಟಿವ್ಸ್ ಮ್ಯಾರೇಜ್ ಆಕ್ಟ್ - 1872 ಪ್ರಕಾರ ಡಾ. ಸುಂದರ ರೆಡ್ಡಿಯವರನ್ನು ಮದುವೆಯಾದರು. ತಮ್ಮನ್ನು ಸಮಾನಳಂತೆ ಭಾವಿಸಬೇಕು ಮತ್ತು ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ದಾರಿಯಲ್ಲಿ ಎಂದೂ ಅಡ್ಡಬರಬಾರದು ಎಂಬ ಷರತ್ತಿನೊಂದಿಗೆ ಬ್ರಹ್ಮ ಸಮಾಜದ ರೀತ್ಯಾ ವಿವಾಹವಾದರು.

1917ರಲ್ಲಿ ಅನಿಬೆಸೆಂಟ್, ಮಾರ್ಗರೆಟ್ ಕಸಿನ್ಸ್, ಸರೋಜಿನಿ ನಾಯ್ಡು ಮೊದಲಾದವರೊಡನೆ ವಿಮೆನ್ಸ್ ಇಂಡಿಯಾ ಅಸೋಸಿಯೇಷನ್ ಶುರು ಮಾಡಿದರು. ಅವರೆಲ್ಲ ಸಾಮಾಜಿಕ ಅನಿಷ್ಟಗಳ ವಿರುದ್ಧ ದನಿಯೆತ್ತುತ್ತಲೇ ಲಿಂಗತಾರತಮ್ಯ, ಲಿಂಗ ದೌರ್ಜನ್ಯಗಳನ್ನು ವಿರೋಧಿಸಿದರು. ಮುನ್ಸಿಪಾಲ್ಟಿ ಹಾಗೂ ಶಾಸನ ಸಭೆಯ ಚುನಾವಣೆಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಬೇಕೆಂದು ಕೇಳಿದರು.

1925-26ರಲ್ಲಿ ಡಾ. ಮುತ್ತುಲಕ್ಷ್ಮಿ ಮಹಿಳೆ ಮತ್ತು ಮಕ್ಕಳ ಆರೋಗ್ಯ ವಿಷಯದಲ್ಲಿ ಹೆಚ್ಚುವರಿ ಅಧ್ಯಯನಕ್ಕಾಗಿ ಲಂಡನ್ನಿಗೆ ಹೋದರು. ೧೯೨೭ರಲ್ಲಿ ಮದರಾಸು ವಿಧಾನ ಪರಿಷತ್ ಸದಸ್ಯೆಯಾಗಿ, ನಂತರ ಉಪಸಭಾಪತಿಯಾಗಿ ಅವಿರೋಧ ಆಯ್ಕೆಯಾದರು. ವಿಧಾನ ಪರಿಷತ್ ಸದಸ್ಯೆಯಾಗಿದ್ದ ಮೂರು ವರ್ಷ ಅವಧಿಯಲ್ಲಿ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಿಸುವ ನಾನಾ ಕಾಯ್ದೆಗಳ ಜಾರಿಮಾಡಲು ಶ್ರಮಿಸಿದರು. ಒಪ್ಪಿಗೆ ವಯಸ್ಸಿನ ಕುರಿತು ಇದ್ದ ಶಾರದಾ ಕಾಯ್ದೆ ಜಾರಿಯಾಗಿ ಮದುವೆಗೆ ಕನಿಷ್ಟ ವಯಸ್ಸು ಹುಡುಗರಿಗೆ 21, ಹುಡುಗಿಯರಿಗೆ 16 ಇರಬೇಕೆಂದು ಒತ್ತಾಯಿಸಿದರು. ಅನೈತಿಕ ಮಾನವ ಸಾಗಾಟ ನಿಯಂತ್ರಿಸುವ ಕಾಯ್ದೆ ಅವರ ಅವಧಿಯಲ್ಲೇ ಬಂದದ್ದು. ಮಹಿಳೆಯರ ವಾರ್ಡಿನಂತೆಯೇ ಮಕ್ಕಳಿಗೆ ವಿಶೇಷ ವಾರ್ಡು-ಆಸ್ಪತ್ರೆ ಇರಬೇಕು, ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು, 8ನೇ ತರಗತಿಯವರೆಗೆ ಹುಡುಗಿಯರಿಗೆ ಉಚಿತ ಶಿಕ್ಷಣ ಸಿಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ವೇಶ್ಯಾಗೃಹಗಳನ್ನು ನಿಲ್ಲಿಸುವುದು, ಮುಸ್ಲಿಂ ಮತ್ತು ಹರಿಜನ ಹುಡುಗಿಯರಿಗಾಗಿ ಹಾಸ್ಟೆಲು ಶುರುಮಾಡುವುದೇ ಮೊದಲಾದ ವಿಶಿಷ್ಟ ಆಲೋಚನೆಗಳನ್ನು ಕಾರ್ಯಗತಗೊಳಿಸಿದರು. ಸರ್ ಫಿಲಿಪ್ ಹರ್ಟೋಗ್ ನೇತೃತ್ವದಲ್ಲಿ ಶೈಕ್ಷಣಿಕ ಯೋಜನೆಗಳ ಪರಿಶೀಲನಾ ಸಮಿತಿಯ ಸದಸ್ಯೆಯಾದರು.



ದೇವದಾಸಿಯರು ಮತ್ತವರ ಮಕ್ಕಳ ಸಂಕಷ್ಟ-ಅವಮಾನಗಳನ್ನು ಹತ್ತಿರದಿಂದ ಬಲ್ಲವರಾಗಿದ್ದ ಮುತ್ತುಲಕ್ಷ್ಮಿ ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಕಟಿಬದ್ಧರಾಗಿದ್ದರು. ಅದು ನಿಷೇಧಗೊಳ್ಳಲು ಕಾಯ್ದೆಯ ಬೆಂಬಲ ಇರಬೇಕೆಂಬುದು ಅವರ ಅಭಿಮತವಾಗಿತ್ತು. ಆದರೆ ಅದಷ್ಟು ಸುಲಭವಿರಲಿಲ್ಲ. ತಮಿಳುನಾಡಿನಲ್ಲಿ ಬಹುವಾಗಿ ಚಾಲ್ತಿಯಲ್ಲಿದ್ದ ದೇವದಾಸಿ ಪದ್ಧತಿ ನಿಲಿಸುವಂತೆ ಮದರಾಸ್ ಹಿಂದೂ ರಿಫಾರ್ಮ್ ಅಸೋಸಿಯೇಷನ್ 1893ರಲ್ಲಿಯೇ ಸರ್ಕಾರವನ್ನು ಒತ್ತಾಯಿಸಿತ್ತು. ಬ್ರಿಟಿಷ್ ಅಧಿಕಾರಿಗಳೂ ಪಾಲ್ಗೊಳ್ಳುತ್ತಿದ್ದ ಖಾಸಗಿ ಹಾಗೂ ದೇವಾಲಯದ ಕಾರ್ಯಕ್ರಮಗಳಲ್ಲಿ ದೇವದಾಸಿಯರನ್ನು ಮನರಂಜನೆಗಾಗಿ ಬಳಸಲಾಗುತ್ತಿತ್ತು. 1900ರಲ್ಲಿ ಕಾಂಚೀಪುರದ ಆರ್ಯ ಮಿಷನಿನ ಎಂ. ರಾಮಚಂದ್ರನ್ ಈ ಬಗ್ಗೆ ಪತ್ರಿಕೆಗಳಲ್ಲಿ ಬರೆದು, ಕರಪತ್ರ ಹಂಚಿ ಹೋರಾಡಿದ್ದರು. 1913ರಲ್ಲಿ 16 ವರ್ಷದೊಳಗಿನ ಹುಡುಗಿಯರನ್ನು ದೇವರಿಗೆ ಬಿಡುವುದನ್ನು ನಿಷೇಧಿಸುವ ಮಸೂದೆ ಮಂಡಿಸಲ್ಪಟ್ಟರೂ ಅದು ಬಿದ್ದುಹೋಗಿತ್ತು. 1927ರಲ್ಲಿ ವಿ. ಆರ್. ಪಂತುಲು ಹೆಣ್ಮಕ್ಕಳನ್ನು ದೇವರಿಗೆ ಬಿಡುವ ಅನಿಷ್ಟಪದ್ಧತಿ ನಿಲ್ಲಬೇಕೆಂದು ವಿಧಾನ ಪರಿಷತ್ತಿನಲ್ಲಿ ಗೊತ್ತುವಳಿ ಸ್ವೀಕರಿಸಿದ್ದರು. ಆ ವೇಳೆಗೆ ಮುತ್ತುಲಕ್ಷ್ಮಿ ರೆಡ್ಡಿ ವಿಧಾನ ಪರಿಷತ್ ಪ್ರವೇಶಿಸಿ ಉಪಸಭಾಪತಿಯಾದರು.

ದೇವದಾಸಿ ಪದ್ಧತಿ ನಿಷೇಧ ಮಸೂದೆ ಮಂಡಿಸುವ ಮೊದಲು ಮುತ್ತುಲಕ್ಷ್ಮಿಯವರು ನೂರಾರು ದೇವದಾಸಿಯರನ್ನು ಸಂದರ್ಶಿಸಿ, ಹಲವು ಕಡೆ ಸಭೆ, ಸಮಾವೇಶ ನಡೆಸಿದರು. ತಂಜಾವೂರು ಮತ್ತು ಮಾಯಾವರಂನ ಇಸಾ ವೆಳ್ಳಲಾರ್ ಸಂಗಂ, ಕೊಚಿನ್ನಿನ ದೇವದಾಸಿಯರು ಮಸೂದೆ ಬೆಂಬಲಿಸಿ ಮೆರವಣಿಗೆ ಮಾಡಿದರೆ; ದೊರೈಕಾಣ್ಣು ಅಮ್ಮಾಳ್ ನೇತೃತ್ವದಲ್ಲಿ ಜಾರ್ಜ್‌ಟೌನಿನ ದೇವದಾಸಿಯರು ಮತ್ತು ಬೆಂಗಳೂರು ನಾಗರತ್ನಮ್ಮ ಮಸೂದೆಯನ್ನು ವಿರೋಧಿಸಿದರು. ಕಾಂಗ್ರೆಸ್ಸಿನ ಸತ್ಯಮೂರ್ತಿ ಅಯ್ಯರ್ ಮೊದಲಾದವರಿಂದಲೂ ಮಸೂದೆಗೆ ವಿರೋಧ ಬಂತು.

ಮುತ್ತುಲಕ್ಷ್ಮಿಯವರು ಗಾಂಧಿ ಮತ್ತು ಕಾಂಗ್ರೆಸ್‌ಗೆ ಬಹಿರಂಗ ಪತ್ರ ಬರೆದು, ‘ವಿಶ್ವದ ಎಲ್ಲ ದೇಶಗಳ ಸ್ವಾತಂತ್ರ್ಯ ಬೆಂಬಲಿಸುವ ಕಾಂಗ್ರೆಸ್ ನಾಯಕರು ಹೆಣ್ಮಕ್ಕಳ ಚಿಂತನಶೀಲತೆಯನ್ನೇ ಮೊಟಕುಗೊಳಿಸಿರುವ ಭಾರತದ ಸಾಮಾಜಿಕ ಅನಿಷ್ಠಗಳ ಬಗೆಗೇಕೆ ಪ್ರಶ್ನೆ ಎತ್ತುವುದಿಲ್ಲ? ಹಿಂದೂ ಧಾರ್ಮಿಕ ಆಚರಣೆಗಳ ಮುಖವಾಡ ಹೊತ್ತು ಚಾಲ್ತಿಯಲ್ಲಿರುವ ದುಷ್ಟತನಗಳ ಬಗೆಗೇಕೆ ಕಾಂಗ್ರೆಸ್ ಹೋರಾಡುವುದಿಲ್ಲ’ ಎಂದು ಪ್ರಶ್ನಿಸಿದರು. ಅವರ ಬೆಳವಣಿಗೆಯಲ್ಲಿ ಗಾಂಧಿ ಮತ್ತು ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮುತ್ತುಲಕ್ಷ್ಮಿ ಕಾಂಗ್ರೆಸ್ಸಿನೊಳಗಿದ್ದ ಲಿಂಗ ಅಸೂಕ್ಷ್ಮತೆಯ ಬಗೆಗೆ ಖೇದಗೊಂಡು ಕಹಿ ಪ್ರಶ್ನೆಗಳನ್ನೆತ್ತುತ್ತಿದ್ದರು.

1930ರಲ್ಲಿ ಲಂಡನ್ನಿಗೆ ತೆರಳಿ ಮೂರನೇ ದುಂಡುಮೇಜಿನ ಪರಿಷತ್ತಿನಲ್ಲಿ ಮಹಿಳಾ ಪ್ರತಿನಿಧಿಯಾಗಿ ಭಾಗವಹಿಸಿದರು. ಮಹಿಳೆಯರೂ ಸೇರಿದಂತೆ ಎಲ್ಲ ವಯಸ್ಕರಿಗೂ ಮತದಾನದ ಹಕ್ಕು ನೀಡುವುದೇ ನಿಜವಾದ ಪ್ರಾತಿನಿಧ್ಯ ನೀಡುವ ವಿಧಾನ ಎಂದು ವಾದಿಸಿದರು. ನಿಮ್ನವರ್ಗಗಳು ಮತ್ತು ಮಹಿಳೆಯರು ಸ್ವಾತಂತ್ರ್ಯ, ಅಧಿಕಾರ ಮತ್ತು ಜವಾಬ್ದಾರಿ ಪಡೆದರೆ ಸಾಮಾಜಿಕ ಅನಿಷ್ಟಗಳನ್ನು ಕೊನೆಗೊಳಿಸಲು ತಾವೇ ಕ್ರಮ ಕೈಗೊಳ್ಳುತ್ತಾರೆಂದು ವಾದಿಸಿದರು. ಆ ಹೊತ್ತಿಗೆ ದಂಡಿ ಉಪ್ಪಿನ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಗಾಂಧಿ ಬಂಧನವಾಯಿತು. ಬ್ರಿಟಿಷ್ ಸರ್ಕಾರದ ನಡೆಯನ್ನು ವಿರೋಧಿಸಿ ಮುತ್ತುಲಕ್ಷ್ಮಿಯವರೂ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ತಂತಮ್ಮ ಸ್ಥಾನಗಳಿಗೆ ರಾಜೀನಾಮೆಯಿತ್ತು ಹೊರಬಂದರು.

ಮುತ್ತುಲಕ್ಷ್ಮಿ ಅವರು ಬರಹಗಾರ್ತಿಯಾಗಿದ್ದರು. ಶಾಸಕಿಯಾಗಿ ನನ್ನ ಅನುಭವಗಳು ಎಂಬ ಹೊತ್ತಗೆ ಹಾಗೂ ಆತ್ಮಚರಿತ್ರೆ ಬರೆದಿದ್ದಾರೆ. ರೋಶಿನಿ ಎಂಬ ಜರ್ನಲ್‌ನ ಸಂಪಾದಕಿಯೂ ಆಗಿದ್ದರು. 1931-40ರವರೆಗೆ ಸ್ತ್ರೀ ಧರ್ಮ ಎಂಬ ಇಂಗ್ಲಿಷ್ ಜರ್ನಲ್‌ನ ಸಂಪಾದಕಿಯಾಗಿದ್ದರು.

ಅವೈ ಹೋಂ

ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಎಡೆಬಿಡದೆ ತೊಡಗಿಕೊಂಡರು. ಕ್ಯಾನ್ಸರ್ ಆಸ್ಪತ್ರೆ ಮತ್ತು ಅವೈ ಹೋಂ ಸ್ಥಾಪನೆ, ಸ್ಲಮ್ಮುಗಳಲ್ಲಿ ಆರೋಗ್ಯ ಕಾರ್ಯಕ್ರಮ, ಟಾಯ್ಲೆಟ್ಟುಗಳ ನಿರ್ಮಾಣ ಮತ್ತು ಬಳಕೆ ಕುರಿತು ತಿಳಿಸುವ ಯೋಜನೆಗಳನ್ನು ಹಮ್ಮಿಕೊಂಡರು. ಅಮೆರಿಕ, ಪ್ಯಾರಿಸ್, ಇಂಗ್ಲೆಂಡುಗಳ ಮಹಿಳಾ ಹೋರಾಟಗಾರರೊಡನೆ ಸಂಪರ್ಕ ಇಟ್ಟುಕೊಂಡಿದ್ದರು. ಅಂತಾರಾಷ್ಟ್ರೀಯ ಮಹಿಳಾ ಸಮಾವೇಶಗಳಲ್ಲೂ ಭಾಗವಹಿಸಿದರು.

ದೇವದಾಸಿ ಪದ್ಧತಿ ನಿರ್ಮೂಲನಾ ಕಾಯ್ದೆ ಇನ್ನೇನು ನಿಷೇಧಗೊಂಡುಬಿಡುತ್ತದೆ ಎನ್ನುವ ಕಾಲದಲ್ಲಿ ಅವರ ಮನೆಗೆ ಒಂದು ಬೆಳಿಗ್ಗೆ ಮೂವರು ಎಳೆಯ ಹುಡುಗಿಯರು ಬಂದರು. ಅವರು ದೇವದಾಸಿಯರಾಗಲು ಒಲ್ಲದ ಮಕ್ಕಳು. ಅವರ ನಿರ್ಧಾರವನ್ನು ಯಾರೂ ಬೆಂಬಲಿಸದಿದ್ದರಿಂದ ಮುಂದೇನು ಮಾಡುವುದೆಂದು ತಿಳಿಯದೆ ಮುತ್ತುಲಕ್ಷ್ಮಿಯವರ ಮನೆಗೆ ಬಂದಿದ್ದರು. ಆಗ ಮದರಾಸಿನಲ್ಲಿ ಎರಡೇ ಮಹಿಳಾ ನಿಲಯಗಳಿದ್ದವು - ಒಂದು ಬ್ರಾಹ್ಮಣ ಮಹಿಳೆಯರಿಗೆ, ಮತ್ತೊಂದು ಅಬ್ರಾಹ್ಮಣ ಮಹಿಳೆಯರಿಗೆ. ಎರಡೂ ಕಡೆ ಈ ಬಾಲೆಯರನ್ನು ಸೇರಿಸಿಕೊಳ್ಳದೆ ಅವು ಅಳುತ್ತ ವಾಪಸಾದವು. ಅವರನ್ನು ಮುತ್ತುಲಕ್ಷ್ಮಿ ತಮ್ಮ ಮನೆಯಲ್ಲೇ ಇಟ್ಟುಕೊಂಡು ಶಾಲೆಗೆ ಸೇರಿಸಿದರು. ಶಿಕ್ಷಣ ಆ ಮೂವರ ಬದುಕಿನ ದಿಕ್ಕುಗಳನ್ನು ಬದಲಿಸಿತು. ಅವರು ಮುಂದೆ ವೈದ್ಯೆ, ಸ್ಟಾಫ್ ನರ್ಸ್ ಮತ್ತು ಶಿಕ್ಷಕಿಯಾದರು. ಅಂತಹ ದೇವದಾಸಿ ಮಕ್ಕಳಿಗೆ, ಮಹಿಳೆಯರಿಗೆ ಆಶ್ರಯತಾಣವಾಗಿ ‘ಅವೈ ಹೋಂ’ನ್ನು 1936ರಲ್ಲಿ ಶುರು ಮಾಡಿದರು. ಶಾಲೆಯೂ ಶುರುವಾಯಿತು. ಮೂರು ದಶಕ ಕಾಲ ಮುತ್ತುಲಕ್ಷ್ಮಿ ಅದರ ಕಾರ್ಯದರ್ಶಿಯಾಗಿದ್ದರು.



1922ರಲ್ಲಿ ಅವರ ಸೋದರಿ ದೊಡ್ಡಕರುಳಿನ ಕ್ಯಾನ್ಸರಿಗೆ ಬಲಿಯಾಗಿದ್ದರು. ಆಗ ಭಾರತದಲ್ಲಿ ಕ್ಯಾನ್ಸರ್ ಎಂದರೆ ಸಾಯಲು ಬರುವ ಕಾಯಿಲೆ ಎಂದೇ ಭಾವಿಸಲಾಗಿತ್ತು. ಆದರೆ ಮುತ್ತುಲಕ್ಷ್ಮಿ 1954ರಲ್ಲಿ ಅಡ್ಯಾರಿನಲ್ಲಿ ಸಾರ್ವಜನಿಕ ದೇಣಿಗೆ ಸಹಾಯದಿಂದ ಕ್ಯಾನ್ಸರ್ ಆಸ್ಪತ್ರೆ ತೆರೆದರು. ಅದೀಗ ದೇಶದ ಅತ್ಯುತ್ತಮ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರಗಳಲ್ಲೊಂದಾಗಿದೆ. ಪ್ರತಿವರ್ಷ 80,000 ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರವಾಗಿದೆ.

ತಮ್ಮ ೮೨ನೇ ವಯಸ್ಸಿನವರೆಗೂ ಮಹಿಳಾ ಜಾಗೃತಿ, ಸಬಲೀಕರಣ ಯತ್ನಗಳಲ್ಲಿ ಕ್ರಿಯಾಶೀಲರಾಗಿದ್ದ ಡಾ. ಮುತ್ತುಲಕ್ಷ್ಮಿ ರೆಡ್ಡಿ ಅವರ ಸಾಮಾಜಿಕ ಕಾರ್ಯವನ್ನು ಗುರುತಿಸಿ ಸರ್ಕಾರವು 1956ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.

***

ಮಹಿಳಾ ಘನತೆಯನ್ನು ಕೀಳುಗೊಳಿಸುವ ಅನಿಷ್ಟಗಳು ಇಂದು ನಾನಾರೂಪದಲ್ಲಿ ಬಂದೆರಗುತ್ತಿವೆ. ಮಾರುಕಟ್ಟೆಯ ಭ್ರಮಾಲೋಕದಲ್ಲಿ ಮಹಿಳೆ ತನ್ನ ಹಕ್ಕು-ಜವಾಬ್ದಾರಿ-ಸ್ಥಿತಿಗತಿಯ ಬಗೆಗೆ ತಿಳಿದುಕೊಳ್ಳದೆ ವಿಸ್ಮೃತಿಯಲ್ಲಿದ್ದಂತಿದೆ. ರಾಜಕಾರಣ ಸಂಪೂರ್ಣ ಪುರುಷಮಯವಾಗುತ್ತ ನಡೆದಿದೆ. ದಿನದಿಂದ ದಿನಕ್ಕೆ ವೈದ್ಯ-ರೋಗಿ ಸಂಬಂಧ ರಕ್ತಸಿಕ್ತವಾಗುತ್ತಿದೆ. ರೋಗಿಗಳ ಅವಶ್ಯಕತೆಗಿಂತ ಬಂಡವಾಳದ ಹಿತಕಾಯಲು ಆಸ್ಪತ್ರೆ, ವೈದ್ಯರಿದ್ದಾರೆ ಎಂಬ ಆರೋಪ ದಟ್ಟವಾಗಿದೆ.

ಹೀಗಿರುತ್ತ ತಾಯ್ತನದ ಉತ್ಸಾಹದೊಂದಿಗೆ ಸಹಜೀವಿಗಳ ಬಗೆಗೆ ಯೋಚಿಸಿ ಕಾರ್ಯಪ್ರವೃತ್ತರಾಗಬೇಕಾದ ಪಾಠವಾಗಿ ಮುತ್ತುಲಕ್ಷ್ಮಿ ಮಾದರಿಯಾಗಿದ್ದಾರೆ. ವೈದ್ಯೆ, ರಾಜಕಾರಣಿ, ಸಮಾಜ ಸೇವಕಿಯಾಗಿದ್ದ ಡಾ. ಮುತ್ತುಲಕ್ಷ್ಮಿ ರೆಡ್ಡಿಯವರನ್ನು ವೈದ್ಯರ ದಿನಾಚರಣೆಯಂದು ನೆನೆಯುತ್ತಿರುವುದಕ್ಕೆ ಇದೇ ಕಾರಣವಾಗಿದೆ.








Friday, 22 June 2018

ನಾನೊಂದು ಮರವಾಗಿದ್ದರೆ..




‘ಪ್ರತಿದಿನವೂ ಭೂಮಿದಿನ’

ಕಳೆದ ತಿಂಗಳು ಆಸ್ಟ್ರೇಲಿಯಾದಲ್ಲಿದ್ದೆವು. ಅತಿ ನಗರೀಕೃತ ಖಂಡ-ದೇಶದಲ್ಲಿ ಸಿಡ್ನಿ, ಮೆಲ್ಬರ್ನ್ ಮೊದಲಾದ ಮಹಾನಗರಗಳ ಕಾಂಕ್ರೀಟ್ ಕಾಡಿನ ನಡುವೆ ಅರಣ್ಯಭರಿತ ಪಾರ್ಕುಗಳು ಗಮನ ಸೆಳೆದವು. ಆದಿಮ ಕಾಡುಗಳ ಕಡಿದು ನಗರ ಕಟ್ಟುವಾಗ ನಡುನಡುವೆ ಹಳೆಯ ಮರಗಿಡಗಳ ಉಳಿಸಿಕೊಂಡು ಊರು ಕಟ್ಟಿದ್ದಾರೆ. ಹಾಗಾಗಿ ಅಲ್ಲಿನ ಪಾರ್ಕುಗಳಲ್ಲಿ ಎತ್ತರೆತ್ತರದ ನೂರಾರು ವರ್ಷ ಹಳೆಯ ಮರಗಳಿದ್ದವು. ಒಂದೆಡೆ ‘ಪ್ರತಿದಿನವೂ ಭೂಮಿದಿನ’ ಎಂದು ಬರೆದಿದ್ದರು. ‘ಸಸ್ಯವು ನೀರು, ನೆಲ, ಬೆಳಕಿನಿಂದ ತನ್ನ ಆಹಾರ ತಾನೇ ತಯಾರಿಸಿಕೊಳ್ಳುವ ಸಂಪೂರ್ಣ ಸ್ವಾವಲಂಬಿ. ನೆಲಬಾನುಗಳ ನಡುವಿನ ನೀರಕೊಂಡಿ. ಇಂಗಾಲವನ್ನು ಆಮ್ಲಜನಕವಾಗಿಸುವ ಜರಡಿ. ಬೆಳಕುನೀರನ್ನು ಅನ್ನವಾಗಿಸುವ ಅಡಿಗೆಗುಡಿ. ಉಳಿದ ಜೀವರಾಶಿಗಳ ಬದುಕಿಸಲೆಂದೇ ಇರುವ ಮರಗಿಡಗಳಿಗೆ ಧನ್ಯವಾದಗಳು’ ಎಂಬ ಮತ್ತೊಂದು ಫಲಕವಿತ್ತು.

ಪ್ರತಿದಿನ ಭೂಮಿದಿನ! ನಿಜವೇ. ಕಾಂಗರೂ ನಾಡಿನವರ ಹಸಿರುಪ್ರಜ್ಞೆಗೆ ಶರಣುಶರಣು.

ಭೂಮಿಮೇಲಿನ ಕೆಲವು ಅತಿಹಳೆಯ ಮರಗಳು ಆಸ್ಟ್ರೇಲಿಯಾದಲ್ಲಿವೆ; ನ್ಯೂಸೌತ್‌ವೇಲ್ಸ್ ಪ್ರಾಂತ್ಯದಲ್ಲಿ 13, 000 ವರ್ಷ ಹಳೆಯ ರೇರ್ ಯೂಕಲಿಪ್ಟಸ್ ಎಂಬ ಜಾತಿಯ ಐದಾರು ನೀಲಗಿರಿ ಮರಗಳಿವೆ. ಅವನ್ನು ಯಾರ ಕಣ್ಣಿಗೂ ಬೀಳದಂತೆ ಗೌಪ್ಯವಾಗಿಟ್ಟು ಸಂರಕ್ಷಿಸಲಾಗಿದೆ. ಕಲ್ಪಿಸಿಕೊಳ್ಳಿ: 13 ಸಾವಿರ ವರ್ಷ ಹಳೆಯ ಮರಗಳು! ಆಸ್ಟ್ರೇಲಿಯಾ ಧ್ವಜದಲ್ಲಿ ಆರು ನಕ್ಷತ್ರಗಳಾಗಿರುವುದು ಆ ಆರು ಮರಗಳೇ ಇರಬೇಕು. ಅವು ಭೂತಕಾಲಕ್ಕೆ, ವರ್ತಮಾನ ಬೆಳೆದು ಭವಿಷ್ಯವಾಗುವ ಘಳಿಗೆಗಳಿಗೆ ಮರಸಾಕ್ಷಿಯಾಗಿರಬೇಕು.

ಈಗ ಭೂಗ್ರಹದ ನೆಲದ ಮೇಲೆ 40% ಕೃಷಿಭೂಮಿ, 37% ನಗರ ಆವರಿಸಿರುವುದರಿಂದ ಕೇವಲ 23% ಕಾಡು ಮಾತ್ರ ಉಳಿದಿದೆ. ನಾವೀಗ ಎಲ್ಲವೂ ತನ್ನ ಉಪಭೋಗಕ್ಕೇ ಇರುವುದೆಂದು ಬಗೆದ ಮನುಷ್ಯ ನಾಗರಿಕತೆಯ ಕಾಲಘಟ್ಟದಲ್ಲಿದ್ದೇವೆ. ಭೂಮಿ ಮೇಲಿನ ಚರಾಚರಗಳ ಬಗೆಗೆ ಕನಿಷ್ಠ ಕುತೂಹಲವೂ ಇಲ್ಲದ ಮನುಷ್ಯರ ಬುದ್ಧಿಬಡತನಕ್ಕೆ ಪ್ರಕೃತಿ ಬಲಿಯಾಗುತ್ತಿದೆ. ಸಾಕಷ್ಟು ಪ್ರಕೃತಿನಾಶವಾದ ಮೇಲೆ ಕೆಲ ದೇಶಗಳು ಎಚ್ಚೆತ್ತಿವೆ. ಭೂಮಿಮೇಲೆ ಬರಿಯ ಮನುಷ್ಯರಷ್ಟೆ ಇಲ್ಲ, ಇರುವುದೆಲ್ಲ ಬರಿಯ ಮನುಷ್ಯ ಮಾತ್ರರಿಗಲ್ಲ ಎಂದರಿತು ರಕ್ಷಿತಾರಣ್ಯಗಳ ರೂಪಿಸಲಾಗಿದೆ.

ಹಾಗೆ ಆಸ್ಟ್ರೇಲಿಯಾ ಪಶ್ಚಿಮತೀರದಲ್ಲಿ ಹವಳ ದಂಡೆಗಳ ಮಳೆಕಾಡು ರಕ್ಷಿತಾರಣ್ಯವಾಗಿದೆ. ಅದು ವಿಶ್ವದ ಅತಿಹಳೆಯ ಮಳೆಕಾಡು. 15 ಕೋಟಿ ವರ್ಷಗಳಿಂದ ಆ ಕಾಡು ನಿರಂತರ ರೂಪುಗೊಳ್ಳುತ್ತ ಬಂದಿದೆ. ಅದು ವಿಶ್ವದ ಮೊದಲ ಹೂಬಿಡುವ ಸಸ್ಯಗಳ, ಡೈನೋಸಾರುಗಳ ನೆಲೆಯೂ ಆಗಿತ್ತು. 5,000 ವರ್ಷಗಳಿಂದ ಮನುಷ್ಯರು ವಾಸವಾಗಿರುವ ಅಲ್ಲಿ ೨೦ಕ್ಕಿಂತ ಹೆಚ್ಚು ಆದಿವಾಸಿ ಕುಲಗಳಿವೆ. ಆಸ್ಟ್ರೇಲಿಯಾದ ಅರ್ಧದಷ್ಟು ಹಕ್ಕಿಗಳು, ಮೂರನೇ ಒಂದು ಭಾಗ ಸಿಹಿನೀರ ಮೀನು, ಕಾಲುಭಾಗ ಕಪ್ಪೆ, ಮೂರನೆ ಒಂದು ಭಾಗ ಸಸ್ತನಿ ಪ್ರಭೇದಗಳು ಅಲ್ಲಿವೆ. 2,260 ಸಸ್ಯ ಪ್ರಭೇದಗಳು, (ಅದರಲ್ಲಿ 678 ಮತ್ತೆಲ್ಲೂ ಇಲ್ಲದಂಥ ಜಾತಿಯವು), ಕಾಂಗರೂ, ಮಸ್ಕಿ ರ‍್ಯಾಟ್ ಕಾಂಗರೂ, ಚಿಟ್ಟೆಗಳು, ಹಾರಲಾಗದ ದೊಡ್ಡ ಹಕ್ಕಿ ಸದರ್ನ್ ಕ್ಯಾಸೊವೆರಿಯಂತಹ ಹಲವು ಅಪರೂಪದ, ವಿನಾಶದಂಚಿನ ಜೀವಿಗಳ ಕೊನೆಯ ನೆಲೆಯೂ ಆಗಿದ್ದು ಜೀವಂತ ಮ್ಯೂಸಿಯಂ ಎಂದು ಕರೆಯಲ್ಪಟ್ಟಿದೆ. ಆದರೆ ಮೊದಲು ಇಡಿಯ ಆಸ್ಟ್ರೇಲಿಯಾವನ್ನೇ ಆವರಿಸಿದ್ದ ಮಳೆಕಾಡುಗಳು ಈಗ ಕೇವಲ ಒಂಭತ್ತು ಲಕ್ಷ ಹೆಕ್ಟೇರ್ ಪ್ರದೇಶವನ್ನು ಎಂದರೆ ಒಟ್ಟೂ ವಿಸ್ತೀರ್ಣದ 0.12%ನಷ್ಟು ಮಾತ್ರ ಉಳಿದಿವೆ. ಎಂದೇ ಮಳೆಕಾಡುಗಳನ್ನು ಅದರ ಮೂಲಸ್ವರೂಪದಲ್ಲಿ ಬರಲಿರುವ ಪೀಳಿಗೆಗೆ ಉಳಿಸಬೇಕು, ಭೂತದ ಕೊಂಡಿಯಾಗಿ ಭವಿಷ್ಯಕ್ಕೂ ತಲುಪಿಸಬೇಕೆಂಬ ಉದ್ದೇಶದಿಂದ ಅದನ್ನು ‘ವಿಶ್ವ ಪಾರಂಪರಿಕ ತಾಣ’ವೆಂದು ಪರಿಗಣಿಸಲಾಗಿದೆ.

ಸ್ಕೈ ರೇಲ್ ಎಂಬ ಹಕ್ಕಿನೋಟ

ಕ್ವೀನ್ಸ್‌ಲ್ಯಾಂಡ್ ಪ್ರಾಂತ್ಯದ ಕೇರ್ನ್ಸ್ ಬಳಿಯಿರುವ ದಟ್ಟಾರಣ್ಯದಲ್ಲಿ ಕುರಂಡಾ ಆದಿವಾಸಿಗಳ ಹಳ್ಳಿಯಿದೆ. ಕುರಂಡಾದ ಆಸುಪಾಸು 9000 ಚ.ಕಿ.ಮೀ. ಪ್ರದೇಶ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಗಿದೆ. ಕುರಂಡಾ ರಕ್ಷಿತಾರಣ್ಯಕ್ಕೆ ಹೋಗಲು ಇರುವ 7.5 ಕಿಮೀ ಉದ್ದದ ರೋಪ್ ವೇ (ಸ್ಕೈ ರೇಲ್) 1995ರಿಂದ ಪ್ರವಾಸಿಗರನ್ನೊಯ್ಯುತ್ತಿದೆ. ವಿಮಾನದಲ್ಲಿ ಹಾರುತ್ತ ಕೆಳಗಿರುವ ಗುಡ್ಡಬೆಟ್ಟಗಳನ್ನು ನೋಡಿದ್ದೆವು. ಬೆಟ್ಟಗಳನ್ನು ಹೆಮ್ಮರಗಳ ತಲೆಮೇಲಿಂದ ಹಕ್ಕಿಯಂತೆ ದಾಟುತ್ತ ಮೇಲಿಂದ ಕಾಡು ನೋಡುವುದು ಹೊಸ ಅನುಭವ ನೀಡಿತು. ಪಕ್ಷಿಗಳ ಹಾಡು, ಕೀಟಗಳ ಸದ್ದು, ಪ್ರಾಣಿಗಳ ಚಲನೆ, ಹೂಬಿಟ್ಟ-ಚಿಗುರಿದ ಮರಬಳ್ಳಿಗಳ ಅಂದ ನೋಡುತ್ತ ಸಾಗುವುದು ಅವರ್ಣನೀಯ ಆನಂದ ತುಂಬಿತು.




ಅಲೆಕ್ಸಾಂಡ್ರಾ ಪಾಮ್, ಕೌರಿ ಪೈನ್, ಆಲ್ಪೈನ್ ಬೀಚ್, ಹೂಪ್ ಪೈನ್, ರೆಡ್ ಪೆಂಡಾ, ಆಲ, ಫಿಗ್, ಕಡಗಿ, ನಾನಾ ಆಕಾರ-ಗಾತ್ರ-ವಯಸ್ಸಿನ ನೀಲಗಿರಿ ಮರಗಳೇ ಮೊದಲಾದ ಸಾವಿರಾರು ಜಾತಿಯ ಗಿಡಮರಗಳು ಅಲ್ಲಿದ್ದವು. ನೀಲಗಿರಿಯ ಹೂವು ಇಷ್ಟು ಚಂದ ಎಂದು ಗೊತ್ತೇ ಇರಲಿಲ್ಲ. ಈಗದರ ತಲೆಮೇಲೆ ಸರಿದು ಹೋಗುವಾಗ ದುಂಬಿ ಮುತ್ತಿದ ಮಧುಭರಿತ ಹೂವಿನ ಚೆಲುವಿಗೆ ಮನಸೋತೆವು. ನೀಲಗಿರಿಯ ತವರು ಆಸ್ಟ್ರೇಲಿಯಾದಲ್ಲಿ ೭೦೦ ವಿವಿಧ ಜಾತಿಯ ನೀಲಗಿರಿ ಮರಗಳಿದ್ದು ಇಲ್ಲಿದ್ದ ಹಲವು ಪ್ರಭೇದಗಳು ಗಮನ ಸೆಳೆದವು.

ಅಲ್ಲಿನ ಮತ್ತೊಂದು ವಿಶೇಷ ಜರಿಗಿಡ. ಹೂಬಿಡದೆ ಸಂತಾನೋತ್ಪತ್ತಿ ಮಾಡುವ ಜರಿಗಿಡ (ಫರ್ನ್) ಹೆಮ್ಮರಗಳ ಮೈಮೇಲೆ, ಕೆಳಗೆ ಎಲ್ಲೆಲ್ಲು ಕಂಡವು. ಕೆಲವು ಹೆಮ್ಮರಗಳ ಕಾಂಡದ ಮೇಲೆ ಒಂದು ಗಿಡವಿಟ್ಟಂತೆ ಕೂತಿದ್ದರೆ ಮತ್ತೆ ಕೆಲವು ಮರವಿಲ್ಲದ ಚೂರು ಜಾಗದಲ್ಲಿ ನೆಲದ ಮೇಲೆಲ್ಲ ಹರಡಿದ್ದವು. ಕೂಪರ‍್ಸ್ ಫರ್ನ್ ನೆಲದ ಮೇಲಿಂದ ಕೋಲಿನಂತೆ ಮೇ..ಲೆ ಬಂದು ತುದಿಯಲ್ಲಿ ಚಂಡರಳಿಸಿಕೊಂಡು ಛತ್ರಿಯಂತೆ ನಿಂತಿತ್ತು. ಸ್ಟ್ಯಾಗ್ ಹಾರ್ನ್, ಬರ್ಡ್ಸ್ ನೆಸ್ಟ್ ಜರಿಗಿಡಗಳು ಹಕ್ಕಿಗೂಡೇನೋ ಎನುವಂತೆ, ಬುಟ್ಟಿ ಕೌಚಿಟ್ಟಂತೆ ಕಂಡವು. ಮರದ ಕಾಂಡಕ್ಕಂಟಿಕೊಂಡ ಬುಟ್ಟಿಯಲ್ಲಿ ಸಂಗ್ರಹವಾದ ಉದುರಿದೆಲೆಗಳು, ತೇವಾಂಶ, ಮಳೆನೀರು, ಮಂಜುಹನಿ ಜರಿಗಿಡಕ್ಕೆ ಸತ್ವ ಒದಗಿಸುವುದು.

ಹೆಮ್ಮರದ ಪಕ್ಕವಿದ್ದ ಕೆಲವು ಗಿಡಬಳ್ಳಿಗಳು ಮರದ ತುತ್ತತುದಿಯವರೆಗೂ ಹರಡಿ ಸೂರ್ಯಕಿರಣಗಳಿಗೆ ಪೈಪೋಟಿ ನಡೆಸಿದ್ದವು. ಕಾಡುಬಳ್ಳಿಗಳು ರಟ್ಟೆಗಾತ್ರದ ಹುರಿಹಗ್ಗದಂತೆ ಮರಗಳ ಸುತ್ತಿ, ಸಂಕಲೆಯಲ್ಲಿ ಕೊಂಬೆರೆಂಬೆಗಳ ಬಂಧಿಸಿ ಮರದ ಮೇಲ್ಭಾಗದಲ್ಲಿ ಬಲೆಯಂತೆ, ಚಾಮರದಂತೆ, ರೇಶಿಮೆ ಬಟ್ಟೆಯಂತೆ ಹರಡಿಕೊಂಡಿದ್ದವು. ಮೂಲಮರ ಕಾಣದಷ್ಟು ಎಲೆ, ಹೂವು ಅರಳಿಸಿದ್ದವು. ಒಂದೆಡೆ ಹಾಗೆ ಮುಚ್ಚಿದ್ದ ಬಳ್ಳಿ ಪೂರಾ ಒಣಗಿ ಮರದ ಮೇಲೆ ಗೋಣಿಬಲೆ ಹಾಸಿದಂತಿತ್ತು. ಹೆಮ್ಮರಗಳ ನಡುವೆ ತಾನೂ ಅಷ್ಟೇ ಎತ್ತರಕ್ಕೆ ಹಬ್ಬಿ ಬಿದಿರು (ಲಾಯರ್ ಕೇನ್) ಚಂಡರಳಿಸಿ ನಿಂತಿತ್ತು. ಒಣಮರ ಬಿದ್ದು ಅಷ್ಟು ಜಾಗ ಬೆಳಕಾಗಿದ್ದರೆ ಸಾಕು, ಅಕ್ಕಪಕ್ಕದ ಮರಗಿಡಬಳ್ಳಿಗಳೆಲ್ಲ ತಮ್ಮ ರೆಂಬೆಕೊಂಬೆಗಳ ಖಾಲಿಜಾಗಕ್ಕೆ ನುಗ್ಗಿಸಿದ್ದವು.







ಮಳೆಕಾಡುಗಳಲ್ಲಿ ಪಕ್ಕಪಕ್ಕ ನಿಂತಿರುವ ಸಸ್ಯಗಳ ನಡುವೆ ನೀರಿಗಾಗಿ ಅಲ್ಲ, ನೆಲಕ್ಕಾಗೂ ಅಲ್ಲ, ಸೂರ್ಯನ ಬೆಳಕಿಗಾಗಿ ತೀವ್ರ ಸ್ಪರ್ಧೆಯಿರುತ್ತದೆ. ಮಳೆಗಾಲಕ್ಕಿಂತ ವಿಪುಲ ಬೆಳಕಿನ ಬೇಸಿಗೆಯಲ್ಲೇ ಮಳೆಕಾಡುಗಳ ಬೆಳವಣಿಗೆ ಹೆಚ್ಚಿರುತ್ತದೆ. ಸಸ್ಯದ ಎಲೆಗಳಲ್ಲಿ ಬೆಳಕುಸಂವೇದಿ ರಾಸಾಯನಿಕ ಇದ್ದು ಎಷ್ಟು, ಹೇಗೆ, ಎಲ್ಲಿ, ಯಾವ ದಿಕ್ಕಲ್ಲಿ ಬೆಳೆಯಬೇಕೆಂಬ ಸೂಚನೆಯನ್ನು ಕಾಂಡಕ್ಕೆ ಕೊಡುವುದು ಬಿಸಿಲು ಹೀರಿಕೊಳ್ಳುವ ಎಲೆಗಳೇ ಆಗಿವೆ. ಪ್ರತಿಸಸ್ಯಕ್ಕೂ ಪಕ್ಕದವರಿಗಿಂತ ಬೇಗ ಬೆಳೆದು ಹೆಚ್ಚು ಬೆಳಕು ಪಡೆಯುವ ಗುರಿ. ವಾರೆ ಬಾಗಿದ ಬಿದಿರು, ಹಬ್ಬುತ್ತ ಮೇಲೆಮೇಲೆ ಹೋದ ಬಳ್ಳಿ, ಮರವೊಂದನ್ನು ಬಳ್ಳಿಯಂತೆ ಮೂರೂ ಸುತ್ತು ಆವರಿಸಿ ಅದಕಿಂತ ಮೇಲೆ ಹೋಗುವ ಇನ್ನೊಂದು ಮರ - ಇವರೆಲ್ಲ ಬೆಳಕಿನ ಪೈಪೋಟಿಗೆ ಬಿದ್ದು ನೆರಳಿನಿಂದಾಚೆ ಬರಲು ಪ್ರಯತ್ನಿಸಿದವರು. ಇದೆಲ್ಲದರ ಉದಾಹರಣೆಗಳೂ ಅಲ್ಲಿದ್ದವು.

ಅಲೆಲೆ! ಮೂಕಜೀವಿಗಳ ನಡುವೆ ಇಷ್ಟು ಸ್ಪರ್ಧೆ! ಬೆಳಕಿಗಾಗಿ ಹೂಡಿದ ಜೀವನ ನಾಟಕಗಳನ್ನು ಮೇಲಿಂದ ನೋಡುವಾಗ ಯಾಕೋ ಬಿ. ಜಿ. ಎಲ್. ಸ್ವಾಮಿ ನೆನಪಾದರು. ಜೊತೆಯಿರಬೇಕಿತ್ತು ಎನಿಸಿತು..

ವೃಕ್ಷವೈಭವ


ನಡುನಡುವೆ ಗೋಪುರ ತಂಗುದಾಣಗಳಲ್ಲಿ ಸ್ಕೈ ರೇಲ್ ನಿಲ್ಲುತ್ತದೆ. ಅಲ್ಲಿಂದ ಕಾಡಿನೊಳಹೊಕ್ಕು ಕಾಡುನಡಿಗೆಗೆ ಅವಕಾಶವಿದೆ. ಮರಗಳ ಕೆಳಗೆ, ದಾರಿಯುದ್ದಕ್ಕೂ ವಿವರಣೆಗಳ ಫಲಕ ಇದೆ. ಗೈಡ್ ಜೊತೆ ಹೋಗಿಬರಲೂ ಸಾಧ್ಯವಿದೆ. ಒಂದೆಡೆ ರೋಪ್‌ವೇನಿಂದ ಕೆಳಗಿಳಿದು ಕಾಡಿನೊಳಗೆ ನಡೆಯತೊಡಗಿದೆವು. ಕೇವಲ 1% ಸೂರ್ಯ ರಶ್ಮಿಯಷ್ಟೆ ನೆಲ ತಲುಪುವ ದಟ್ಟಕಾಡು..

ಕಾಳಬೆಳಕು. ಸುತ್ತಲೂ ಬೃಹತ್ ಮರಗಳು. ನೆಲತುಂಬಿದ ಸಣ್ಣಸಣ್ಣ ಸಸ್ಯಗಳು. ಆಲ್ಪೈನ್ ಬೀಚ್ ಮರಗಳು ಸಾಕಷ್ಟಿದ್ದವು. ಒರಟೊರಟಾದ ಅದರ ಮೈಮೇಲೆ ಶಿಲೀಂಧ್ರ, ಪಾಚಿ, ಹಾವಸೆ ಯಥೇಚ್ಛ ಬೆಳೆದು ತೊಗಟೆ ಮೇಲೆ ಮರಿಕಾಡನ್ನೇ ಸೃಷ್ಟಿಸಿದ್ದವು. ಅಲ್ಲಿದ್ದ ಬಹುಪಾಲು ಹೆಮ್ಮರಗಳ ಮೈಮೇಲೆಲ್ಲ ಸಸ್ಯರಾಶಿ. ಮರದ ಆಶ್ರಯ ಅರಸಿ ಬಂದವರಿಂದ ಒಂದು ಲಾಭ ಮರಕ್ಕಾದರೆ ಎರಡು ಲಾಭ ಬಂದವರಿಗೆ.

ಬೀಚ್ ಮರದ ಬುಡದಲ್ಲೆ ಹೊಟ್ಟೆಬಿರಿ ತಿಂದು ಜಡಗೊಂಡು ಬಿದ್ದ ಕುದ್ರಬಾಳ (ಹೆಬ್ಬಾವಿನ ಜಾತಿಯ ಹಾವು) ಇತ್ತು. ಕೆಲ ಹಕ್ಕಿ, ದೊಡ್ಡ ಜೇಡ, ನೀಲಿ ಚಿಟ್ಟೆ ಬಿಟ್ಟರೆ ನಮಗೆ ಹೆಸರೇ ಗೊತ್ತಿರದ ಅಸಂಖ್ಯ ಕ್ರಿಮಿಕೀಟ ಹಕ್ಕಿಗಳು ಅಲ್ಲಿದ್ದವು. ನಾನಾ ಸದ್ದುಗಳ ಹೊರಡಿಸುತ್ತಿದ್ದವು. ಹಣೆಮೇಲೆ ತಿಲಕವಿದ್ದ ನಾಮಗೋಳಿ, ಕಾಡುಕೋಳಿ ಹೀಗೆ ಕಂಡು ಹಾಗೆ ಮಾಯವಾಗುತ್ತಿದ್ದವು.

ನಡೆಯುತ್ತ, ನಡೆಯುತ್ತ ಒಂದು ಬೃಹತ್ ಕಾಂಡದೆದುರಿಗೆ ನಿಂತೆವು. ನಾವು ನಾಲ್ಕೂ ಜನ ಕೈಯಗಲಿಸಿ ನಿಂತರೂ ಅದರ ಕಾಂಡ ಸುತ್ತುವರೆಯಲಾಗುವುದಿಲ್ಲ. ಒಂದೂ ರೆಂಬೆಕೊಂಬೆಯಿಲ್ಲದೆ ನೇರ ಮೇಲೆ ಹೋಗಿ ಒಮ್ಮೆಲೆ ಛತ್ರಿಯಂತೆ ಅರಳಿಕೊಂಡಿದ್ದ ಮರ ನೋಡಲು ಪೂರಾ ಕುತ್ತಿಗೆ ಎತ್ತಿ ಹಿಂಬಾಗಬೇಕು. ಆಕಾಶಕ್ಕೆ ಸವಾಲೆಸೆದು ಬೆಳೆದಿದೆಯೋ ಎನ್ನುವಂತೆ ಮರ ನಿಂತಿತ್ತು. ಬೂದುಗುಲಾಬಿ ಬಣ್ಣದ, ನಯಸು ಕಾಂಡದ, ೬೦ ಮೀ (೧೫೦ ಅಡಿ) ಎತ್ತರದ ಕೌರಿ ಪೈನ್. ತೆಳುವಾಗಿ ಕಾಂಡದ ಸಿಪ್ಪೆ ಸುಲಿದಿತ್ತು. ಕೆಂಜಿಗೆಹಿಂಡು ಯಾವುದೋ ರಾಜಕಾರ್ಯದ ಅವಸರವೆಂಬಂತೆ, ಯಾರೋ ತುರ್ತೆಂದು ಹೇಳಿಕಳಿಸಿದರೋ ಎನುವಂತೆ, ದರುಶನಕ್ಕಾಗಿ ಸರದಿಯಲಿ ಹೋಗುವವರಂತೆ ಶಿಸ್ತಾಗಿ ಒಂದರ ಹಿಂದೊಂದು ಸರಸರ ಸಾಗಿದ್ದವು. ಪುಟ್ಟ ಕೆಂಪುಕಪ್ಪು ಬಣ್ಣದ ಕೀಟಗಳು ಮಿಲನಾನಂದದಲ್ಲಿ ತಲ್ಲೀನವಾಗಿದ್ದವು.

ಕೌರಿಪೈನ್ ಆ ನೆಲದ ವೃಕ್ಷವಿಶೇಷ. ಆದರೀಗ ಕೌರಿ ನಾಶದಂಚಿನಲ್ಲಿರುವ, ರಕ್ಷಿಸಲ್ಪಟ್ಟ ಪ್ರಭೇದ. ಅದು ಬಲು ಮೃದು. ರೆಂಬೆಗಳಿಲ್ಲದೆ ಇರುವುದರಿಂದ ಅತಿ ಉದ್ದದ, ಅಗಲದ ಹಲಗೆ, ತೊಲೆಗಳ ಮಾಡಬಹುದು. ಒಳ್ಳೆ ಪಾಲಿಶ್ ಹಿಡಿಯುತ್ತದೆ. ಎಂದೇ ಎಗ್ಗಿಲ್ಲದೆ ಕಡಿದರು. ಹುಡುಹುಡುಕಿ ದೊಡ್ಡದೊಡ್ಡ ಹಳೆಮರಗಳ ಕಡಿದು ಪೀಠೋಪಕರಣ, ಮನೆ, ಬೇಲಿ, ಹಡಗು ಕಟ್ಟಲು ಬಳಸಿದರು. ಒಂದಾನೊಂದು ಕಾಲದಲ್ಲಿ ಎಲ್ಲೆಲ್ಲು ಕಾಣುತ್ತಿದ್ದ ಶತಮಾನಗಟ್ಟಲೆ ಹಳೆಯ ಕೌರಿ ಪೈನ್ ರಕ್ಷಿತಾರಣ್ಯಕ್ಕೆ ಸೀಮಿತವಾದವು.




ಆ ಜೀವಚೇತನವನ್ನು ಏನೆಂದು ವರ್ಣಿಸುವುದು? ಐದೂವರೆ ಅಡಿಯ ನನ್ನ ದೇಹವು ೧೫೦ ಅಡಿಯ ವೃಕ್ಷವೈಭವದೆದುರು ನಿಂತು ಅಚ್ಚರಿ, ಆನಂದ ಮತ್ತಿನ್ನೇನೇನನ್ನೋ ಅನುಭವಿಸತೊಡಗಿತು. ತನ್ನ ಅಸಂಖ್ಯ ಬೆರಳೆಲೆಗಳ ಆಡಿಸುತ್ತ ಅದು ಮಾತನಾಡುವಾಗ ಮರ ನೋಡುತ್ತ ಹೀಗೇ ನಿಲ್ಲಬೇಕೆನಿಸಿತು.

ಜೀವವುಕ್ಕುವ ಮರಗಳು ಬೆಂಕಿ, ನೀರು, ಗಾಳಿಯಂತೆ ನಿರ್ಜೀವವೆಂದು ಬಗೆದಿದ್ದೆವಲ್ಲ ನಾವು!? ಹೆಚ್ಚೆಂದರೆ ನೂರು ವರ್ಷ ಬದುಕುವ ನಮಗೆ ಸಸ್ಯಗಳಿಗೂ ಜೀವ ಇದೆ ಎಂದು ತಿಳಿಯಲು ಸಾವಿರಾರು ವರುಷ ಬೇಕಾಯಿತಲ್ಲ!

ಮರ ಎಂದರೆ ಜೀವಚೈತನ್ಯ. ಮರ ಎಂದರೆ ಪ್ರೀತಿ, ಸಹನೆ, ಸಹಬಾಳ್ವೆ. ನಾನೊಂದು ಮರವಾದರೂ ಆಗಿದ್ದರೆ..?..

ನಾನೊಂದು ಮರವಾಗಿದ್ದರೆ
ನಿಂತಲ್ಲೆ ಚಲಿಸಬಹುದಿತ್ತು.
ಪಾಚಿ, ಹಲ್ಲಿ, ಹಕ್ಕಿ, ಹಾವು,
ಚಿಟ್ಟೆ, ಹುಳಗಳೊಡನೆ ಒಟ್ಟೆ ಬಾಳಬಹುದಿತ್ತು.
ಚಳಿಗೆ ಮರಗಟ್ಟಿ ಎಲೆ ಹಳದಿಯಾದರೂ
ವಸಂತಕ್ಕೆ ಹಸಿರೆಲೆಗಳ ಚಿಗುರಿಸಬಹುದಿತ್ತು.
ಗಡಿಯಾರ ಕಟ್ಟದೇ, ಕ್ಯಾಲೆಂಡರು ನೋಡದೇ
ವರುಷವರುಷ ಹೂಹಣ್ಣು ತಳೆಯಬಹುದಿತ್ತು.
ಕೊನೆಯುಸಿರಿನವರೆಗೂ ಬೆಳೆಯಬಹುದಿತ್ತು.
ಸಾವು ಬರುವನಕ ಹೊಸದಾಗಲು ಬೆಳೆಯಬಹುದಿತ್ತು..

ಮರ ಎಂದೂ ವಿಷಾದಿಸುವುದಿಲ್ಲ.
ಮರ ಎಂದೂ ಕೋಪಗೊಳ್ಳುವುದಿಲ್ಲ.
ಮರ ಎಂದೂ ದೂರುವುದಿಲ್ಲ.
ಸಂತಸಕೆ ಹುಚ್ಚೆದ್ದು ಕುಣಿಯುವುದಿಲ್ಲ.
ಆರ್ತವಾಗಿ ಮೊರೆಯಿಡುವುದಿಲ್ಲ.
ನೊಂದರೆ ಕಣ್ಣೀರು ಸುರಿಸುವುದಿಲ್ಲ.
ಗಾಯಗೊಂಡರೆ ರಕ್ತ ಹರಿಸುವುದಿಲ್ಲ.
ವಿಕೋಪಕ್ಕೆ ಬೆದರಿ ಓಡುವುದಿಲ್ಲ
ಅಪಾಯವೆಂದು ಮೇಲೆರಗುವುದಿಲ್ಲ
ಸಾಯುವಾಗ ನಿಶ್ಶಬ್ದ, ಸತ್ತಮೇಲೂ ನಿಶ್ಶಬ್ದ.
ಎಂದೆಂದೂ ಗಂಭೀರ, ಮಹಾಮೌನ.

ಎಂಥ ಘನತೆಯ ಬದುಕು ಮರವೇ..
ನಾನೊಂದು ಮರವಾದರೂ ಆಗಿದ್ದರೆ..

***

ಬರಿಯ ೧೦೦ ವರ್ಷ ಬದುಕುವ ಮನುಷ್ಯರು ಕ್ಷೀಣಾಯುಗಳು. ಓಡಾಡುವ ಪ್ರಾಣಿಗಳು ಹೆಚ್ಚೆಂದರೆ 200 ವರ್ಷದ ಆಚೀಚೆ ಬದುಕಬಲ್ಲವು. ಆದರೆ ಸಸ್ಯಗಳು ಸಾವಿರಾರು ವರ್ಷ ಬದುಕಿಯಾವು. ಚಿಲಿಯ ಅಟಕಾಮ ಮರುಭೂಮಿ, ನಮೀಬಿಯಾದ ಮರುಭೂಮಿಗಳಲ್ಲಿ 2000 ವರ್ಷ ಹಳೆಯ ಮುಳ್ಳುಕಂಟಿಗಳಿವೆ. ದ. ಆಫ್ರಿಕಾದ ಬೇಯೋಬಾಬ್ 2000 ವರ್ಷ, ಕ್ಯಾಲಿಫೋರ್ನಿಯಾದ ಬ್ರಿಸಲ್‌ಕೋನ್ ಪೈನ್ 5000 ವರ್ಷ ಹಳೆಯವು. ಆಸ್ಟ್ರೇಲಿಯಾದ ರೇರ್ ಯೂಕಲಿಪ್ಟಸ್ 13,000 ವರ್ಷದಿಂದ ನಿಂತಿದೆ. ಸ್ಪೇನಿನ ಮೆಡಿಟರೇನಿಯನ್ ಸಮುದ್ರದಾಳದ ಪೊಸಿಡೊನಿಯಾ ಹುಲ್ಲುಗಾವಲು ಒಂದು ಲಕ್ಷ ವರ್ಷ ಹಳೆಯದು!

ಅದ್ಭುತ! ಈ ಭೂಮಿಗ್ರಹ ನನ್ನದು, ನನ್ನದಷ್ಟೆ ಅಲ್ಲ, ಇನ್ನೆಷ್ಟೊ ಪಶುಪಕ್ಷಿ ಕ್ರಿಮಿಕೀಟಗಳದೂ ಹೌದು ಎಂಬ ಅರಿವು ಹುಟ್ಟುವ ಗಳಿಗೆ ಇನ್ನೂ ಅದ್ಭುತ. ಅಂಥ ಅರಿವು ಹುಟ್ಟಿಸಿದ ಮಳೆಕಾಡಿಗೆ ಶರಣು.. ಹವಳದಂಡೆಗೆ ಶರಣು..

‘ಒತ್ತಾಯವಿಲ್ಲದೆ ಬೆಳೆಯುವ, ವಸಂತವು ಬರುವುದೋ ಎಂಬ ಆತಂಕವಿಲ್ಲದ, ಬೇಗಬೇಗ ಬೆಳೆಯಬೇಕೆಂಬ ಆತುರವಿಲ್ಲದ ಮರದ ಹಾಗಿರಬೇಕು ಕಲಾವಿದ’ ಎನ್ನುತ್ತಾನೆ ರಿಲ್ಕ್. ಕಲಾವಿದರಷ್ಟೆ ಅಲ್ಲ, ಮನುಷ್ಯರೆಲ್ಲ ಹಾಗೇ ಇರಬೇಕು. ಮರದ ಬದುಕು ಪಾಠವಾಗಿ ನಮ್ಮಾಳಕಿಳಿಯಲಿ. ಹಸಿರು ಅವಿರತ ಪ್ರಜ್ಞೆಯಾಗಲಿ.


(Photos: Dr Prithvi K A)

Monday, 4 June 2018

ಪ್ಲಾಸ್ಟಿಕ್ ಎಂಬ ಮೋಹಿನಿಯೂ, ಭಸ್ಮಾಸುರರಾದ ನಾವೂ..







ಉತ್ತರ ಕನ್ನಡದ ಬೆಟ್ಟಕಾಡುಗಳ ಹಳ್ಳಿಗೆ ಇಪ್ಪತ್ತೈದು ವರ್ಷ ಕೆಳಗೆ ನಾವು ಬಂದಾಗ ಬಹುತೇಕ ಎಲ್ಲರೂ ಕಾಲುಗಾಡಿ ನೆಚ್ಚಿಕೊಂಡಿದ್ದರು. ಗುಡ್ಡ ಹತ್ತಿಳಿದು, ಕೊಡ್ಲು ದಾಟಿ, ರಸ್ತೆ ಬದಿಯ ಪೇಟೆಗೆ ಬರುವುದೆಂದರೆ ಅವರ ತಲೆ ತುಂಬ ತರಬೇಕಾದ ಸಾಮಾನುಗಳ ಯಾದಿಯಿರುತ್ತಿತ್ತು. ವಸ್ತುಗಳ ಹೊತ್ತು ತರಲು ಹಳೆಪಂಚೆ, ಟವೆಲ್ಲು, ಗೋಣಿಚೀಲ, ಗೊಬ್ರದ ಚೀಲಗಳ ಕಟ್ಟು ಕೈಲಿರುತ್ತಿತ್ತು. ಒಂದೇ ಪಂಚೆ ಹಾಸಿ ಅದರ ನಾಲ್ಕಾರು ಮೂಲೆಗಳಲ್ಲಿ ನಾಲ್ಕಾರು ಸಾಮಾನು ಹಾಕಿಸಿ ಗಂಟು ಕಟ್ಟಿ ಕಂತೆಯನ್ನು ಗೋಣಿ/ಸಿಮೆಂಟು ಚೀಲದಲ್ಲಿ ತುಂಬಿ ತಲೆಮೇಲಿಟ್ಟು ಹೊರಡುತ್ತಿದ್ದರು. ಮಳೆಯ ದಿನವಾದರೆ ಗಂಟಿನ ಮೇಲೊಂದು ಛತ್ರಿ. ಹಿಡಿದು ಗದ್ದೆಬದು, ಇಳಿಜಾರುಗಳಲ್ಲಿ ಭಾರ ಹೊತ್ತು ಸಾಗುತ್ತಿದ್ದರು.

ಈಗ ಸರ್ರನೆ ಹೋಗಿ ಭರ್ರನೆ ಬರುವ ಕಾಲ ಬಂದಿದೆ. ಖಾಲಿ ಕೈಯಲ್ಲಿ ಮನೆಯಿಂದ ಹೊರಟವರು ವಾಪಸು ಬರುವಾಗ ಹತ್ತಾರು ಪ್ಲಾಸ್ಟಿಕ್ ಚೀಲ ಹಿಡಿದು ಬರುತ್ತಾರೆ. ದಾರಿ ಮೇಲೆ ಬಾಯಾರಿಕೆಯಾದರೆ ಅರ್ಧ ಲೀಟರು ನೀರೋ, ತಂಪು ಪೇಯವನ್ನೋ ಕುಡಿದು ಬಾಟಲಿ ಅಲ್ಲೇ ಬಿಸಾಡುತ್ತಾರೆ. ಹಸಿವೆಯಾದರೆ ಒಂದು ಪ್ಯಾಕೆಟ್ ತಿನಿಸು ಕೊಂಡು ಕವರನ್ನು ಅಲ್ಲಾಚೆ ಎಸೆಯುತ್ತಾರೆ.

ಮೊದಲೆಲ್ಲ ಮುಟ್ಟಾಗಿ ತೊಳೆದ ಬಟ್ಟೆ ಒಣಗದೆ ಒದ್ದಾಡಬೇಕಿತ್ತು, ಈಗ ರಕ್ತ ಸೋರದ ಪ್ಲಾಸ್ಟಿಕ್ ಪದರಿರುವ ನ್ಯಾಪ್ಕಿನ್ ಬಂದಿದೆ. ಮಕ್ಕಳ, ವಯಸ್ಸಾದವರ ಮಲಮೂತ್ರಾದಿಗಳ ಹೀರಿಕೊಳಲು ಅಂಥದ್ದೇ ಡಯಾಪರ್ ಬಂದಿದೆ. ಮೊದಲೆಲ್ಲ ಏನೇ ಸರ್ಕಸ್ಸು ಮಾಡಿದರೂ ಸಕ್ಕರೆ ಜಿನುಗುತ್ತಿತ್ತು, ಅಕ್ಕಿಯಲ್ಲಿ ಕುಟ್ಟೆ ಹರಿಯುತ್ತಿತ್ತು, ಹಿಟ್ಟು ಮುಗ್ಗಲಾಗುತ್ತಿತ್ತು, ತುಪ್ಪ ಜಂಬು ಹಿಡಿಯುತ್ತಿತ್ತು. ತೇವಾಂಶ ಒಂದಷ್ಟೂ ತಾಗದಂತೆ ಉಪ್ಪಿನಕಾಯಿ-ಬೆಣ್ಣೆ-ಎಣ್ಣೆ-ತುಪ್ಪ ವಗೈರೆ ವಸ್ತುಗಳ ರಕ್ಷಿಸುವುದು ಕಷ್ಟವಿತ್ತು. ಈಗ ಪ್ಲಾಸ್ಟಿಕ್ ಡಬ್ಬಿ, ಬಾಟಲಿ ಬಂದ ಮೇಲೆ ಎಲ್ಲವೂ ಬಲೇ ಸುಲಭವಾಗಿದೆ. ಬಡಗಿಗೆ ನಮ್ಮಿಷ್ಟದ ಡಿಸೈನನ್ನು ಮನವರಿಕೆ ಮಾಡಿ, ಒಳ್ಳೆಯ ಮರತಂದು ಕುರ್ಚಿಮೇಜು ಮಾಡಿಸಲು ಅಪ್ಪನಿಗೆ ತಿಂಗಳುಗಟ್ಟಲೆ ಹಿಡಿಯುತ್ತಿತ್ತು. ಈಗ? ಅಲಲಾ! ಮರದ ಪೀಠೋಪಕರಣದ ಖರ್ಚಿನ ಕಾಲುಭಾಗದಲ್ಲಿ ಹೀಗೆ ಹೋಗಿ ಹಾಗೆ ಬರುತ್ತ ಮನೆಗೆ ಕುರ್ಚಿ, ಮೇಜು, ಟೀಪಾಯಿ, ಸ್ಟೂಲು ಎಲ್ಲ ಪ್ಲಾಸ್ಟಿಕ್ಕಿನದು ತಂದಾಯಿತು. ಹೊಲಗದ್ದೆಗಳ ಧಾನ್ಯರಾಶಿಯನ್ನು ಮಳೆ-ಇಬ್ಬನಿಯಿಂದ ರಕ್ಷಿಸಲು ಹುಲ್ಲು, ಸೋಗೆ ನೆಯ್ದು ಶ್ರಮಪಡಬೇಕಿತ್ತು. ಈಗ ಏನಿಲ್ಲ, ದೊಡ್ಡ ಪ್ಲಾಸ್ಟಿಕ್ ಶೀಟು ಹಾಸಿದರಾಯಿತು. ಮೊದಲು ಚಳುವಳಿಕಾರರು ಕೈಯಲ್ಲಿ ಬ್ಯಾನರು ಬರೆಸಬೇಕಿತ್ತು, ಮಳೆಬಂದೀತೋ ಎಂದು ಆತಂಕಪಡಬೇಕಿತ್ತು. ಈಗ ಕ್ಷಣಮಾತ್ರದಲ್ಲಿ ಬಣ್ಣಬಣ್ಣದ ಬೃಹತ್ ಬ್ಯಾನರುಗಳ ಪ್ರಿಂಟಿಸಿ ತಂದರಾಯಿತು. ‘ಹಳೇ ಕೂದ್ಲಾ, ಪಿನ್ನಾ, ಟಿಕ್ಲಿ’ ಎಂದು ಜೋಳಿಗೆ ನೇಲಿಸಿಕೊಂಡು ಬರುತ್ತಿದ್ದ ಅಲೆಮಾರಿಗಳ ವಿನಿಮಯ ವಸ್ತು ಪ್ಲಾಸ್ಟಿಕ್ ಆಯಿತು. ಉತ್ತರ ಧ್ರುವದ ಬೃಹತ್ ಮಂಜುಗಡ್ಡೆಯಡಿಯ ನೀರಿನಿಂದ ಹಿಡಿದು ಯಾವುದೋ ನಿರ್ಮಾನುಷ ದ್ವೀಪದ ತೀರದವರೆಗು ಪ್ರಪಂಚದ ಯಾವುದೇ ಜನನಿಬಿಡ, ನಿರ್ಜನ ಸ್ಥಳವನ್ನೂ ಪ್ಲಾಸ್ಟಿಕ್ ತಲುಪಿತು. ಅತಿ ಕಡಿಮೆ ದರದಲ್ಲಿ ಸಿಗುವ, ಅತಿ ವೇಗವಾಗಿ ಉತ್ಪಾದಿಸಬಹುದಾದ, ಸುಲಭದಲ್ಲಿ ಎಲ್ಲೆಡೆ ಸಿಗುವ ಪ್ಲಾಸ್ಟಿಕ್ ವಸ್ತುಗಳು ಯಾವ ಜಾಹೀರಾತಿಲ್ಲದೆ ಜನಪ್ರಿಯಗೊಂಡವು.

ಪೆಟ್ರೋಕೆಮಿಕಲ್ಸ್ ಮೂಲಧಾತುವಿನಿಂದ ತಯಾರಾಗುವ ಪ್ಲಾಸ್ಟಿಕ್ ಅನ್ನು ೧೯೦೭ರಲ್ಲಿ ಮೊದಲು ನ್ಯೂಯಾರ್ಕಿನ ವಿಜ್ಞಾನಿ ಲಿಯೋ ಬೆಕೆಲ್ಯಾಂಡ್ ಕಂಡುಹಿಡಿದ. ಅದಕ್ಕೂ ಮುನ್ನ ರಬ್ಬರ್ ಮತ್ತಿತರ ನಾರು, ಅಂಟಂಟು ವಸ್ತುಗಳನ್ನು ಬಳಸಿ ಪ್ಲಾಸ್ಟಿಕ್‌ನಂತಹ ವಸ್ತು ತಯಾರಿಸಲಾಗುತ್ತಿತ್ತು. ಯಾವ ಆಕಾರ, ಗಾತ್ರ, ದಪ್ಪವಾದರೂ ಆಗಬಲ್ಲ, ನೀರಿಗೆ ಒದ್ದೆಯಾಗದ, ಯಾವ ಆಕಾರದಲ್ಲಾದರೂ ಅತಿವೇಗವಾಗಿ ತಯಾರಿಸಬಹುದಾದ ವಂಡರ್ ವಸ್ತು ‘ಪ್ಲಾಸ್ಟಿಕ್ ಮೋಹಿನಿ’ಗೆ ಎಲ್ಲರೂ ಮನಸೋತರು. ಆ ಕಾಲದಲ್ಲಿ ಸಂಭವಿಸಿದ ಮಹಾಯುದ್ಧಗಳು, ಕೈಗಾರಿಕಾ ಕ್ರಾಂತಿಯು ವೇಗದ, ಹೊಸಹೊಸ ವೈಜ್ಞಾನಿಕ ಆವಿಷ್ಕಾರಕ್ಕೆ ಕಾರಣವಾದವು. ಬಿಎಎಸ್‌ಎಫ್, ಡವ್ ಕೆಮಿಕಲ್ಸ್ ಮೊದಲಾದ ಬೃಹತ್ ರಾಸಾಯನಿಕ ಕೈಗಾರಿಕಾ ಸಂಸ್ಥೆಗಳು ಕೋಟ್ಯಂತರ ಬಂಡವಾಳ ಹೂಡಿದವು. ಪ್ಲಾಸ್ಟಿಕ್ ತಯಾರಿಕೆ ಲಕ್ಷಕೋಟಿ ಡಾಲರ್ ವಹಿವಾಟಿನ ಬೃಹತ್ ಇಂಡಸ್ಟ್ರಿಯಾಗಿ ಬೆಳೆಯಿತು. ಹೊಸವಸ್ತುವಿನ ಜೊತೆಗಿನ ನಮ್ಮ ಸಂಬಂಧ ಬಲುಬೇಗ ಕುದುರಿಬಿಟ್ಟಿತು.

ಪ್ಲಾಸ್ಟಿಕ್ ಹೊಸದಾಗಿ ಪರಿಚಯವಾದಾಗ ಅಲ್ಲಾವುದ್ದೀನನ ದೀಪದೊಳಗಿಂದ ಬಂದ ವರವೋ ಎಂಬಂತೆ ಭಾಸವಾಗಿದ್ದು ಸುಳ್ಳಲ್ಲ. ಏನಿದೇನಿದು! ಕುರ್ಚಿ, ಮೇಜು, ಬುಟ್ಟಿ, ಬಾಚಣಿಕೆ, ತಟ್ಟೆ, ಲೋಟ, ಚಮಚ, ಡಬ್ಬಿ, ಚೊಂಬು, ಬಕೆಟು, ಫೈಲು, ಪೆನ್ನು, ಫ್ಯಾನು, ಫೋನು! ಎಲ್ಲ ಅಂದರೆ ಎಲ್ಲವೂ ಪ್ಲಾಸ್ಟಿಕ್ ಪರದೆಯೊಂದಿಗೆ ಫಳಫಳ ಹೊಳೆಯುತ್ತ ಚಂದಚಂದ ಮಾಡಿಕೊಂಡು ಮೋಹಗೊಳಿಸತೊಡಗಿದವು. ಅದಿಲ್ಲದೆ ನಮ್ಮ ಅಡಿಗೆಮನೆಯೂ ಇಲ್ಲ, ಬಚ್ಚಲು ಮನೆಯೂ ಇಲ್ಲ ಎಂಬಂತಾಯಿತು.

ಎಲ್ಲಿದ್ದರೂ ಕಸ





ಇಂತಿಪ್ಪ ಪ್ಲಾಸ್ಟಿಕ್ ದೇವತೆಯ ಪಾದಾರವಿಂದದಲ್ಲಿ ಹೊರಳಿ ಎಲ್ಲ ಸುಖವಾಗಿರುತ್ತಿರಲಾಗಿ ಬರಸಿಡಿಲಿನಂತೆ ಸತ್ಯಗಳು ಬಂದೆರಗತೊಡಗಿದವು. ನಾವು ಕುಡಿದದ್ದು ಮೊಲೆಹಾಲಲ್ಲ, ವಿಷ ಎಂದು ಗೊತ್ತಾಗತೊಡಗಿತು. ಸುಲಭಕ್ಕೆ ಹರಿಯದ ಗಟ್ಟಿತನ, ಬಾಗುವಿಕೆ, ಬಳುಕುವಿಕೆ, ತೆಳುಹಾಳೆ ತಯಾರಿಕೆ ಸಾಧ್ಯವಾಗುವುದು ಪ್ಲಾಸ್ಟಿಕ್‌ನ ಗುಣವಿಶೇಷಗಳು. ವಿಪರ್ಯಾಸವೆಂದರೆ ಪ್ಲಾಸ್ಟಿಕ್‌ನ ಹೆಗ್ಗಳಿಕೆಗೆ ಯಾವ ವಿಶಿಷ್ಟ ಗುಣಗಳು ಕಾರಣವೋ ಅದರ ವಿಷಯುಕ್ತತೆಗೂ ಅವೇ ಕಾರಣವಾಗಿವೆ. ಪ್ಲಾಸ್ಟಿಕ್ ತಯಾರಿಯಲ್ಲಿ ಬಳಕೆಯಾಗುವ ಬಿಸ್‌ಫಿನಾಲ್-ಎ ಮತ್ತು ಥ್ಯಾಲೇಟ್ಸ್ ಅತ್ಯಂತ ವಿಷಕಾರಕ ವಸ್ತುಗಳು ಎಂಬ ಸತ್ಯ ತಿಳಿದುಬಂತು. ದನಕರುಗಳ ಖಾಯಂ ಉಬ್ಬಿದ ಹೊಟ್ಟೆಯಲ್ಲಿರುವುದು ಪ್ಲಾಸ್ಟಿಕ್; ಹೆಚ್ಚತೊಡಗಿರುವ ಕ್ಯಾನ್ಸರ್ ಕಾಯಿಲೆಯ ಬಹುಮುಖ್ಯ ಕಾರಣ ಪ್ಲಾಸ್ಟಿಕ್; ಜನ್ಮಜಾತ ಅಂಗವೈಕಲ್ಯ, ಕುಂಠಿತ ರೋಗನಿರೋಧಕ ಶಕ್ತಿ, ಎಂಡೋಕ್ರೈನ್ ಕಾಯಿಲೆಗಳಿಗೆ ಕಾರಣ ಪ್ಲಾಸ್ಟಿಕ್ ಎಂದು ತಿಳಿಯಿತು.

ಪ್ಲಾಸ್ಟಿಕ್ ಸಣ್ಣಸಣ್ಣ ಕಣವಾಗಿ ವಿಭಜನೆಗೊಂಡು ಆಹಾರ ಸರಪಳಿಯ ಕೊಂಡಿ ಹಿಡಿದು ನಮ್ಮ ರಕ್ತ, ಅಂಗಾಂಶಗಳಲ್ಲಿ ಈಗಾಗಲೇ ಸೇರಿಹೋಗಿದೆ. ನಾಶವಾಗಬಾರದೆಂದೇ ಸೃಷ್ಟಿಯಾದ ವಸ್ತು ಪ್ಲಾಸ್ಟಿಕ್. 2000 ಸಾವಿರ ವರ್ಷಗಳವರೆಗೂ ಮಣ್ಣ ಅಡಿಯಲ್ಲಿ ಹಾಗೇ ಇರುವಂಥ ಅವಿನಾಶಿ ವಸ್ತು ಅದು. ಸಣ್ಣಸಣ್ಣ ಕಣಗಳಾಗುತ್ತ ವಿಷಕಾರಕ ವಸ್ತುವಾಗುತ್ತ ಹೋಗುವುದೇ ಹೊರತು ಅದು ಇಲ್ಲವಾಗುವುದಿಲ್ಲ. ಇಂಥ ಅಪಾಯಕಾರಿ ವಸ್ತುವನ್ನು ಎಗ್ಗಿಲ್ಲದೆ, ವಿವೇಕವಿಲ್ಲದೆ ಅತಿಬಳಸಿದೆವು. ಬಳಸಿ ಬಿಸಾಡಿದ್ದು ಎಲ್ಲಿ ಹೋಯಿತು, ಏನಾಯಿತು ಎಂದು ಒಂದಷ್ಟೂ ಗಮನಿಸದೇ ಇದ್ದೆವು. ಪರಿಸರಪ್ರಿಯರು ಪದೇಪದೇ ಎಚ್ಚರಿಸಿದರೂ ಕೆಪ್ಪರಂತಿದ್ದೆವು. ಈಗ ಪ್ಲಾಸ್ಟಿಕ್ ನಂಟನ್ನು ಕಡಿದುಕೊಳ್ಳಬೇಕಾದ ಕಾಲ ಬಂದಿದೆ ಎಂದು ವಿಶ್ವಸಂಸ್ಥೆ ಹೇಳತೊಡಗಿದೆ.

ಈ ಸಲದ ಪರಿಸರ ದಿನಾಚರಣೆಗೆ ವಿಶ್ವಸಂಸ್ಥೆ ಪ್ಲಾಸ್ಟಿಕ್ ಕಸದ ಕಡೆ ಗಮನ ಹರಿಸಿದೆ. ಪ್ರತಿನಿತ್ಯ ನಾವು ಬಳಸುತ್ತಿರುವ ಒಮ್ಮೆ ಬಳಸಿ ಬಿಸಾಡುವ ಡಿಸ್ಪೋಸಿಬಲ್ ಪ್ಲಾಸ್ಟಿಕ್ ಅನ್ನು ಬಳಸದಿರುವಂತೆ ಜಗತ್ತಿಗೆ ಸಲಹೆ ಇತ್ತಿದೆ. ಪ್ರತಿವರ್ಷ 5 ಲಕ್ಷಕೋಟಿ ಪ್ಲಾಸ್ಟಿಕ್ ಬ್ಯಾಗುಗಳನ್ನು ಬಳಸಿ ಬಿಸಾಡುತ್ತೇವೆ. 8 ಮಿಲಿಯನ್ ಟನ್ ಪ್ಲಾಸ್ಟಿಕ್ ಕಸವನ್ನು ಕಡಲಿಗೆ ಸೇರಿಸುತ್ತೇವೆ. ಕಳೆದ ಶತಮಾನವಿಡೀ ತಯಾರಿಸಿದ್ದಕ್ಕಿಂತ ಹೆಚ್ಚು ಪ್ಲಾಸ್ಟಿಕ್ ಅನ್ನು ಕಳೆದ ದಶಕದಲ್ಲಿ ತಯಾರಿಸಿದ್ದೇವೆ. ಗಾಜು, ಪಿಂಗಾಣಿ, ಮರ, ಲೋಹ, ಚರ್ಮ, ಕಲ್ಲು ಎಲ್ಲದರಿಂದ ತಯಾರಿಸಲ್ಪಡುತ್ತಿದ್ದ ವಸ್ತುಗಳನ್ನು ಪ್ಲಾಸ್ಟಿಕ್‌ನಲ್ಲಿ ತಯಾರಿಸಿ, ಬಳಸಿ, ಬಿಸಾಡಿದ್ದೇವೆ. ಪರಿಣಾಮವಾಗಿ ದಿನದಿಂದ ದಿನಕ್ಕೆ ಪ್ಲಾಸ್ಟಿಕ್ ಕಸ ಭೂಮಿಯ ಮೂಲೆಮೂಲೆಗಳನ್ನೂ, ಸಾಗರಗಳ ಆಳವನ್ನೂ, ಧ್ರುವ ಪ್ರದೇಶಗಳ ಹಿಮಗಡ್ಡೆಗಳನ್ನೂ ತಲುಪಿ ಕಲುಷಿತಗೊಳಿಸುತ್ತಿದೆ. ಪ್ರಾಣಿಪಕ್ಷಿ, ಜಲಚರಗಳೆಲ್ಲವನ್ನೂ ಪ್ಲಾಸ್ಟಿಕ್ ಆವರಿಸಿ ಉಸಿರುಗಟ್ಟಿಸುತ್ತಿದೆ. ಇನ್ನು ಎಚ್ಚೆತ್ತುಕೊಳ್ಳದಿದ್ದರೆ ಯಾರಿಗೂ ಉಳಿಗಾಲವಿಲ್ಲ ಎಂದು ನಿಸರ್ಗ ಕಠಿಣ ಎಚ್ಚರಿಕೆಯ ಸಂಕೇತಗಳ ಕಳಿಸತೊಡಗಿದೆ.



ಪ್ಲಾಸ್ಟಿಕ್ ನಿತ್ಯವೂ ಅಗಾಧ ಪ್ರಮಾಣದಲ್ಲಿ ಸಮುದ್ರ ಸೇರುತ್ತಿದ್ದು ಕಡಲ ಜೀವಿಗಳಿಗೂ ಮೃತ್ಯುಪ್ರಾಯವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್‌ನಲ್ಲಿರುವ ತೈಲಾಂಶ ನೀರನ್ನು ಅದು ಮುಟ್ಟಿಸಿಕೊಳ್ಳದಿರುವಂತೆ ಮಾಡಿವೆ. ಹಾಗಾಗಿ ಸಮುದ್ರಕ್ಕೆ ಸೇರಿದ ಟನ್ನುಗಟ್ಟಲೆ ಪ್ಲಾಸ್ಟಿಕ್ ನೀರಲ್ಲಿ ಕರಗದೆ ಸಣ್ಣಸಣ್ಣ ಕಣಗಳಾಗಿ ವಿಷಕಾರಕ ವಸ್ತುಗಳನ್ನೆಲ್ಲ ಅಂಟಿಸಿಕೊಂಡು ಇನ್ನಷ್ಟು ಅಪಾಯಕಾರಿ ವಸ್ತುವಾಗಿ ಸಾಗರಗಳಲ್ಲಿ ತೇಲುತ್ತ ಖಂಡಾಂತರ ಚಲಿಸತೊಡಗಿದೆ. ಸಾಗರ ತಳದಲ್ಲಿ ನಂಬಲಸಾಧ್ಯ ಪ್ರಮಾಣದ ಪ್ಲಾಸ್ಟಿಕ್ ಕಸದ ಪುಡಿ ಹರಡಿಕೊಂಡಿದೆ. ಮತ್ಸ್ಯಕ್ಷಾಮಕ್ಕೆ, ದಡಕ್ಕೆ ಬಂದು ಸತ್ತು ಬೀಳುವ ತಿಮಿಂಗಿಲಗಳ ಸಾವಿಗೆ ಪ್ಲಾಸ್ಟಿಕ್ ನೇರ ಕಾರಣವಾಗಿದೆ.

ತಿನ್ನುವ ವಸ್ತುವೆಂದು ಭಾವಿಸಿ ಪ್ಲಾಸ್ಟಿಕ್ ಸೇವಿಸುವುದರಿಂದ, ಚಲಿಸುವಾಗ ಪ್ಲಾಸ್ಟಿಕ್ ಎಳೆ-ವಸ್ತುಗಳೊಳಗೆ ಜೀವಿಗಳು ಸಿಲುಕುವುದರಿಂದ ವನ್ಯಜೀವಿಗಳಿಗೂ ಅಪಾಯ ಹೆಚ್ಚಿದೆ. ಜೀವಿಗಳ ಸಂತಾನೋತ್ಪತ್ತಿ ಶಕ್ತಿ ಕುಂಠಿತಗೊಂಡಿದೆ. ಅವು ಸುಮ್ಮನೇ ಗಾಯಗೊಳ್ಳುತ್ತಿವೆ. ಲಿವರ್ ಬರಬರುತ್ತ ಕುಸಿಯುತ್ತಿದೆ.

ಇವೆಲ್ಲ ಪರಿಸರ ಪ್ರೇಮಿಗಳ ಅತಿ ಉತ್ಪ್ರೇಕ್ಷಿತ ಮಾತುಗಳೆಂದು ಅತ್ತ ಸರಿಸಿ ಇಡುವಂತಿಲ್ಲ. ನೆಲದ ಮೇಲಿದ್ದರೂ, ನೆಲದೊಳಗೆ ಹುಗಿದರೂ, ಸುಟ್ಟು ಹೊಗೆಯಾಡಿದರೂ, ಬೂದಿಯಾದರೂ ವಿಷವೇ ಆಗಿರುವ ಪ್ಲಾಸ್ಟಿಕ್ ಸರ್ವಾಂಗವೂ ವಿಷಮಯವಾಗಿರುವ ವಸ್ತು. ನಾವೇ ಸೃಷ್ಟಿಸಿದ ವಸ್ತುಗಳಿಂದ ವಿನಾಶದ ಭೀತಿ ಎದುರಿಸುತ್ತಿರುವ ಕುಲ ನಮ್ಮದು.

ಕಂಡಕಂಡಲ್ಲಿ ಪ್ಲಾಸ್ಟಿಕ್ ಬಿಸಾಡಲು ನಾವು ನಿಸ್ಸೀಮರು. ಆದರೆ ನಮಗಿಂತ ಅತಿಹೆಚ್ಚು ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರಕ್ಕೆ ಸೇರಿಸುವವರಿದ್ದಾರೆ. ಸಮುದ್ರ ಸೇರುವ ಪ್ಲಾಸ್ಟಿಕ್ ಕಸದ 60% ಕೇವಲ 5 ದೇಶಗಳಿಂದ ಬರುತ್ತಿದೆ: ಅದರಲ್ಲಿ ಚೀನಾ ಮೊದಲ ಸ್ಥಾನದಲ್ಲಿ. ನಂತರ ಇಂಡೋನೇಷ್ಯಾ, ಫಿಲಿಪೀನ್ಸ್, ವಿಯೆಟ್ನಾಮ್ ಮತ್ತು ಥೈಲ್ಯಾಂಡ್‌ಗಳಿವೆ. ಅಮೆರಿಕವೂ ಕಡಿಮೆಯಿಲ್ಲ. ಕಡಿಮೆ ಜನಸಂಖ್ಯೆಯಿದ್ದರೂ ವರ್ಷಕ್ಕೆ 0.3 ಮೆಟ್ರಿಕ್ ಟನ್ನುಗಳಷ್ಟು ಕಸ ಸಮುದ್ರಕ್ಕೆ ಸೇರಿಸುತ್ತದೆ. (ಚೀನಾ 8.8 ಮೆಟ್ರಿಕ್ ಟನ್.) 2050ರ ಹೊತ್ತಿಗೆ ಸಮುದ್ರದಲ್ಲಿ ಮೀನಿಗಿಂತ ಹೆಚ್ಚು ಪ್ಲಾಸ್ಟಿಕ್ ಕಸವೇ ತುಂಬಲಿದೆ. ಕಳೆದ 6 ದಶಕದಲ್ಲಿ 830 ಮೆಟ್ರಿಕ್ ಟನ್ ಪ್ಲಾಸ್ಟಿಕ್ ಕಸ ತಯಾರಿಸಿದ್ದೇವೆ. ಅದರಲ್ಲಿ ಬಹುಪಾಲು ಮರುಬಳಕೆ ಮಾಡಲಾಗದ ಕೀಳುದರ್ಜೆಯ ವಿಷಕಾರಕ ಪ್ಲಾಸ್ಟಿಕ್ ಆಗಿವೆ.







ಹೀಗೆ ನಾವೀಗ ಭೂಮಿ ಮೇಲೆ, ಅಂತರಿಕ್ಷದಲ್ಲೂ ಸಾಕಷ್ಟು ಪ್ಲಾಸ್ಟಿಕ್ ಕಸವನ್ನು ಮೂಲೆಮೂಲೆ ತಲುಪಿಸಿದ ಕುಖ್ಯಾತಿಗೆ ಕಾರಣರಾಗಿದ್ದೇವೆ.

ಕಸದಿಂದ ರಸ

ಹಾಗಾದರೆ ಪ್ಲಾಸ್ಟಿಕ್ ಅನ್ನು ಏನು ಮಾಡುವುದು? ಒಂದು ಉತ್ತರ ಮರುಬಳಕೆ ಮಾಡುವುದು. ಆದರೆ ಅದೂ ಸರಳವಿಲ್ಲ.

ಅತಿ ಕಡಿಮೆ ಬೆಲೆಗೆ ಚೈನಾ ಮಾಲು ಎಲ್ಲೆಡೆ ಸಿಗುವುದಲ್ಲವೆ? ಅದಕ್ಕೆ ಕಾರಣ ಮರುಬಳಕೆಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬೇರೆ ದೇಶಗಳಿಂದ ಚೀನಾ ಆಮದು ಮಾಡಿಕೊಳ್ಳುತ್ತದೆ. ಹೌದು. ಕಸದಿಂದ ರಸವಾಗಿಸುವ ಅತಿ ಹೆಚ್ಚು ರೀಸೈಕಲ್ ಯುನಿಟ್‌ಗಳು ಚೀನಾದಲ್ಲಿವೆ. ಹಾಗಾಗಿ ಮರುಬಳಕೆಯ ವಸ್ತುಗಳಿಂದ ತಯಾರಾದ ಚೈನಾ ಮಾಲು ಅತಿ ಕಡಿಮೆ ಬೆಲೆಗೆ ಸಿಗುತ್ತದೆ. ಇಂಗ್ಲೆಂಡ್, ಯೂರೋಪಿಯನ್ ಯೂನಿಯನ್, ಅಮೆರಿಕ ಮತ್ತು ಜಪಾನುಗಳಿಂದ ಕಳೆದ ಒಂದು ವರ್ಷದಲ್ಲಿ ಚೀನಾದ ಪ್ಲಾಸ್ಟಿಕ್ ಮರುಬಳಕೆ ವಸ್ತುಗಳ ತಯಾರಕರು ೭.೮ ಮೆಟ್ರಿಕ್ ಟನ್ ಪ್ಲಾಸ್ಟಿಕ್ ಕಸವನ್ನು ಆಮದು ಮಾಡಿಕೊಂಡಿದ್ದಾರೆ. ಆದರೆ ಇತ್ತೀಚಿನ ಅಧ್ಯಯನ ವರದಿಯೊಂದು ವಿಶ್ವದ ಸಾಗರಗಳಿಗೆ ಅತಿಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಕಳಿಸುತ್ತಿರುವ ದೇಶಗಳ ಸಾಲಲ್ಲಿ ಮೊದಲ ಸ್ಥಾನ ಚೀನಾಗೆ ಕೊಟ್ಟ ನಂತರ ಮರುಬಳಕೆ ಪ್ಲಾಸ್ಟಿಕ್‌ನ ಸೂಕ್ತ ವಿಲೇವಾರಿ ಮಾಡಲು ಚೀನಾದ ಮೇಲೆ ವಿಶ್ವದ ಒತ್ತಡ ಹೆಚ್ಚತೊಡಗಿದೆ. ಆ ಹೊರೆ ಇಳಿಸಿಕೊಳ್ಳಲು ಚೀನಾ ಪ್ಲಾಸ್ಟಿಕ್ ತ್ಯಾಜ್ಯ ‘ಯಾಂಗ್ ಲಾಜಿ’ (ಆಮದು ಕಸ) ನಿಲ್ಲಿಸಬೇಕೆಂದು, ತನ್ನ ದೇಶದವರು ಬಳಸಿದ ಪ್ಲಾಸ್ಟಿಕ್ ಅನ್ನೇ ಮರುಬಳಕೆ ಮಾಡುವುದಾಗಿಯೂ ನಿರ್ಧರಿಸಿದೆ. ಅದು ೨೦೧೭ರಲ್ಲಿ ೨೪ ತರಹದ ಘನತ್ಯಾಜ್ಯಗಳ ತರಿಸಿಕೊಳ್ಳುವುದನ್ನು ನಿಲ್ಲಿಸಿತು. ಯೂರೋಪಿಯನ್ ಯೂನಿಯನ್ ಅತಿಹೆಚ್ಚು ತಲಾ ಕಸ ಉತ್ಪಾದಿಸುವ ನೆಲ. ಅವರ ೮೭% ಕಸ ಚೀನಾಗೇ ಹೋಗುತ್ತಿತ್ತು. ಇಷ್ಟುದಿನದವರೆಗೆ ಅಮೆರಿಕ, ಜಪಾನುಗಳೂ ಚೀನಾವನ್ನೇ ನಂಬಿದ್ದವು. ಇನ್ನು ಅವು ತಮ್ಮ ಕಸ ಬಿಸಾಡಲು ಬೇರೆ ದೇಶಗಳ ನೋಡಿಕೊಳ್ಳಬೇಕಾಗಿದೆ.


ಅತಿ ಹೆಚ್ಚು ತಲಾವಾರು ಪ್ಲಾಸ್ಟಿಕ್ ಬಳಸಿ ಬಿಸಾಡುವವರು ಮುಂದುವರಿದ ದೇಶಗಳೇ. ಬೃಹತ್ ಪ್ಲಾಸ್ಟಿಕ್ ತಯಾರಿಕಾ ಕಂಪನಿಗಳಲ್ಲಿ ಅರ್ಧ ಅಮೆರಿಕದಲ್ಲಿವೆ. ಮಿಕ್ಕವು ಜಪಾನ್, ಜರ್ಮನಿ ಮತ್ತಿತರ ಕಡೆಗಳಲ್ಲಿವೆ. ವಿಚಿತ್ರವೆಂದರೆ ಮೊದಲು ಪ್ಲಾಸ್ಟಿಕ್ ತಯಾರಿಸುವವರು ಸಿರಿವಂತ ‘ಮುಂದುವರಿದವರು’. ಅದರ ಕಸ ಮರುಬಳಕೆ ಮಾಡುವವರು ‘ಬಡ ಹಿಂದುಳಿದ ದೇಶ’ದವರು! ಪ್ಲಾಸ್ಟಿಕ್ ವಿಷದ ವಿಲೇವಾರಿ ಬಡವರ ಹೆಗಲ ಮೇಲೆ. ತಮ್ಮ ಪ್ಲಾಸ್ಟಿಕ್ ಕಸವನ್ನು ಬಡ ದೇಶಗಳಿಗೆ ಮಾರಿ ಸಿರಿವಂತ ದೇಶಗಳು ‘ಶುದ್ಧ’ರಾಗಿದ್ದಾರೆ!

ಆದರೆ ತಮ್ಮ ‘ಮುಂದುವರೆಯುವಿಕೆ’ ಮತ್ತು ‘ಅಭಿವೃದ್ಧಿ’ ಇಡಿಯ ಭೂಮಿಗೇ ತಲೆನೋವಾಗಿದೆ ಎಂದು ಆ ದೇಶಗಳು ಅರಿಯಬೇಕು; ತಮ್ಮ ಕಸಕ್ಕೆ ತಾವೇ ಜವಾಬ್ದಾರರು ಎನ್ನುವುದನ್ನು ಪ್ರತಿ ದೇಶ, ಪ್ರಜೆಯೂ ತಿಳಿದುಕೊಳ್ಳಬೇಕು.

***

ಯಾವುದೇ ಕಸ ವಿಲೇವಾರಿಗೆ ನಾವೀಗ ಅನುಸರಿಸುತ್ತಿರುವುದು ಒಂದೇ ನೀತಿ: ನಮ್ಮಲ್ಲಿರುವುದನ್ನು ದೂರ ಬಿಸಾಡುವುದು. ನಮ್ಮ ಮನೆಯ ಕಸವನ್ನು ಕಂಪೌಂಡಿನಾಚೆ ಬಿಸಾಡುವುದು. ನಮ್ಮ ಊರಿನ ಕಸವನ್ನು ಊರಗಡಿ ದಾಟಿಸಿ ಬಿಸಾಡುವುದು; ಕಣ್ಣಿಗೆ ಕಾಣದಂತೆ ಗುಡ್ಡ, ನದಿ, ಕಡಲುಗಳಲ್ಲಿ ಬಿಸಾಡುವುದು.. ಹೀಗೇ. ನಮ್ಮ ಈ ದುರ್ಗುಣದ ಕಾರಣವಾಗಿ ಎಲ್ಲೆಲ್ಲೂ ಅಸಹ್ಯವಾಗಿ ಕಸ ಗುಪ್ಪೆಗೊಂಡು, ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಾಣಬಹುದು.

ಆದರೆ ಇರುವುದೊಂದೇ ಭೂಮಿ, ಕುಡಿವುದೊಂದೇ ನೀರು. ಬಳಸಿ ಬಿಸಾಡಿದ್ದು ನಮ್ಮ ಹೊಟ್ಟೆಯೊಳಗೆ ಸೇರದಿರಲು ಸಾಧ್ಯವೇ? ಮಲಮೂತ್ರವಿರಲಿ, ಪ್ಲಾಸ್ಟಿಕ್-ಸೀಸವಿರಲಿ, ಸೂಕ್ತ ವಿಲೇವಾರಿ ಮಾಡದಿದ್ದ ಕಸ ಆಹಾರ ಸರಪಳಿ, ಗಾಳಿ, ನೀರಿನ ಮೂಲಕ ಹೇಗಾದರೂ ನಮ್ಮ ದೇಹ ಪ್ರವೇಶಿಸಿಯೇ ಪ್ರವೇಶಿಸುತ್ತವೆ.



ಈ ವಿಷದಿಂದ ಪಾರಾಗುವುದು ಹೇಗೆ? ಇದಕ್ಕೆ ಯಾವುದೇ ಸರಳ ಸೂತ್ರವಿಲ್ಲ. ಇದುವರೆಗೆ ನಾವು ರೂಢಿಸಿಕೊಂಡು ಬಿಟ್ಟಿರುವ ಸುಲಭ ಬದುಕಿನ ಅಡ್ಡದಾರಿಗಳನ್ನು ಬಿಟ್ಟು, ಕೊಂಚ ಶ್ರಮವಾದರೂ ಸರಿ, ಉತ್ತಮ ಹಾದಿ ಹಿಡಿಯಬೇಕಿದೆ. ಅದಕ್ಕಾಗಿ, ಗ್ರಾಹಕರಾಗಿ ನಮ್ಮ ನಡವಳಿಕೆ ಬದಲಿಸಿಕೊಳ್ಳಬೇಕು. ಆಳುವವರು ಮತ್ತು ಕೈಗಾರಿಕೆಗಳು ಪರಿಸರಸ್ನೇಹಿ ನೀತಿ ರೂಪಿಸಿಕೊಳ್ಳಬೇಕು.

ಈ ನಿಟ್ಟಿನಲ್ಲಿ ನಾಗರಿಕರ ಜವಾಬ್ದಾರಿಗಳೆಂದರೆ:




  • ಪ್ಲಾಸ್ಟಿಕ್ ಮಾಲಿನ್ಯದಲ್ಲಿ ಕೆಲವೇ ನಿಮಿಷ, ಗಂಟೆ ಬಳಸಿ ಬಿಸಾಡುವ ಚೀಲಗಳ ಪಾಲು ದೊಡ್ಡದಿದೆ. ಅಂಗಡಿಗೆ ಹೋಗುವಾಗ ಮನೆಯಿಂದ ಚೀಲ ಒಯ್ಯೋಣ. ನಮ್ಮ ಕೈಚೀಲವಿದ್ದಾಗಲೂ ಅವರು ಪ್ಲಾಸ್ಟಿಕ್ ಚೀಲದಲ್ಲಿ ಸಾಮಾನು ಕೊಡಬಂದರೆ ನಿರಾಕರಿಸೋಣ. 
  • ಮೊದಲು ನಾವು ಬಳಸಿದ್ದನ್ನೇ ಮತ್ತೆ ಬಳಸುತ್ತಿದ್ದೆವು. ಮತ್ತೆಮತ್ತೆ ಬಳಸಬಹುದಾದ ವಸ್ತುಗಳನ್ನೇ ಬಳಸುತ್ತಿದ್ದೆವು. ಈಗ ಆಧುನಿಕತೆಯ, ನಾಗರಿಕತೆಯ ಲಕ್ಷುರಿ ಎಂದರೆ ಒಮ್ಮೆ ಬಳಸುವುದು, ಬಿಸಾಡುವುದು ಎಂದು ಭಾವಿಸಿದ್ದೇವೆ. ಆದರೆ ಬರಿಯ ಪ್ಲಾಸ್ಟಿಕ್ ಅಷ್ಟೆ ಅಲ್ಲ, ಎಲ್ಲವನ್ನೂ ಮರುಬಳಸುವುದೇ ಪ್ರಕೃತಿಸ್ನೇಹಿ ಬದುಕಿನ ಮಾರ್ಗ. ಒಮ್ಮೆ ಬಳಸಿ ಬಿಸಾಡಲೇಬೇಕಾದ ಪ್ಲಾಸ್ಟಿಕ್ ಉತ್ಪನ್ನಗಳನ್ನು ತರುವುದೇ ಬೇಡ. ಅಕಸ್ಮಾತ್ ಮನೆಯೊಳಗೆ ಬಂದ ಪ್ಲಾಸ್ಟಿಕ್ ವಸ್ತುಗಳನ್ನು ಮತ್ತೆಮತ್ತೆ, ದೀರ್ಘಕಾಲ ಬಳಸೋಣ. 
  • ನಮ್ಮ ಅಂಗಳ ಸ್ವಚ್ಛವಿರಬೇಕು ನಿಜ. ಅದಕ್ಕೆ ಪಕ್ಕದ ಅಂಗಳ, ಗುಡ್ಡ, ಬೆಟ್ಟ, ಕಣಿವೆಗಳ, ಬಯಲುಗಳ ಕಸದ ತೊಟ್ಟಿಯಾಗಿಸದಿರೋಣ. 
  • ಯಾವ ಕಾರಣಕ್ಕೂ ಪ್ಲಾಸ್ಟಿಕ್ ಸುಡಬಾರದು. ಸುಟ್ಟಾಗ ಬಿಡುಗಡೆಯಾಗುವ ಡಯಾಕ್ಸಿನ್ ತೀರ ವಿಷಕಾರಿ. ಗಾಳಿಯಲ್ಲಿ ಡಯಾಕ್ಸಿನ್ ವಿಷ ತುಂಬಿದರೆ ಬಲು ಅಪಾಯಕಾರಿ. ಜೊತೆಗೆ ಸುಟ್ಟಬೂದಿ ಮೂಲಕ ಮಳೆನೀರಿನ ಮೂಲಕ ಕುಡಿವ ನೀರು ತಲುಪುವ ಪ್ಲಾಸ್ಟಿಕ್ ಹೊಟ್ಟೆ ಸೇರುತ್ತದೆ. ಎಂದೇ ಪ್ಲಾಸ್ಟಿಕ್ ಸುಡುವುದು ‘ಹಸಿರು ಅಪರಾಧ’ ಎಂದು ನೆನಪಿಡೋಣ.


ಆಡಳಿತದ ಜವಾಬ್ದಾರಿ

  • ಪ್ಲಾಸ್ಟಿಕ್ ಕಸ ಸಂಗ್ರಹಣೆ, ವಿಂಗಡಣೆ, ಮರುಬಳಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಪ್ಲಾಸ್ಟಿಕ್ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.
  • ಪ್ಲಾಸ್ಟಿಕ್‌ನ ಬೆಲೆಯನ್ನು ತುಂಬ ಏರಿಸಬೇಕು. ತಯಾರಿಯನ್ನು ಅತಿ ಮಿತಗೊಳಿಸಬೇಕು. ಆಗದು ‘ಅಮೂಲ್ಯ’ವಾಗಿ ಹಾದಿಬೀದಿಯಲ್ಲಿ ಕಸವಾಗುವುದು ನಿಲ್ಲುತ್ತದೆ. (ಗಂಧ, ಬಂಗಾರ, ವಜ್ರ ಬೀದಿಯಲ್ಲಿ ಕಾಣವು. ಯಾಕೆ!?)
  • ವಿಶ್ವಾದ್ಯಂತ ಅತಿಹೆಚ್ಚು ಪ್ಲಾಸ್ಟಿಕ್ ಬಳಕೆಯಾಗುವುದು ಪ್ಯಾಕೇಜಿಂಗ್ ಸಲುವಾಗಿ. ಅದರಲ್ಲಿ ಬರೀ ೨% ಪ್ಲಾಸ್ಟಿಕ್ ಮಾತ್ರ ಮರುಬಳಕೆಯಾಗುತ್ತಿದೆ. ಪ್ಲಾಸ್ಟಿಕ್ ಬದಲಾಗಿ ಸುಧಾರಿತ, ಪ್ಲಾಸ್ಟಿಕ್ ರಹಿತ ಪ್ಯಾಕೇಜಿಂಗ್ ವಿಧಾನಗಳ ಕಂಡುಹಿಡಿಯುವುದು; ಉತ್ತಮ ದರ್ಜೆಯ ಮರುಬಳಕೆಯಾಗುವ ಪ್ಲಾಸ್ಟಿಕ್, ಜೀರ್ಣವಾಗಬಲ್ಲ ಪ್ಲಾಸ್ಟಿಕ್ ಕಂಡುಹಿಡಿಯುವ ಬಗೆಗೆ ವಿಜ್ಞಾನಿಗಳು ಮತ್ತು ಕೈಗಾರಿಕೆಗಳು ಸಂಶೋಧನೆ ನಡೆಸಬೇಕು.
  • ಪೆಟ್ರೋಲಿಯಂ ಉಪಉತ್ಪನ್ನವಾದ ಪ್ಲಾಸ್ಟಿಕ್ ಅನ್ನು ಸುರಕ್ಷಿತವಾಗಿ ‘ಉರಿಸಿ’ ವಿದ್ಯುತ್ ತಯಾರಿಸುವ, ಬಳಕೆಯಲ್ಲೇ ಪ್ಲಾಸ್ಟಿಕ್ ಕಡಿಮೆ ಮಾಡುವ ಪ್ರಯತ್ನ ಶುರುವಾಗಿದೆ. ಪ್ಲಾಸ್ಟಿಕ್ ಅನ್ನು ಜೀರ್ಣಿಸಬಲ್ಲ ‘ಕಿಣ್ವ’ವೊಂದನ್ನು ಕಂಡುಹಿಡಿದಿದ್ದು ಪ್ರಯೋಗಗಳ ಚುರುಕುಗೊಳಿಸಬೇಕು. 


ಹೀಗೆ ಎಲ್ಲ ನೆಲೆಗಳಿಂದ ಪ್ಲಾಸ್ಟಿಕ್ ರಹಿತರಾಗಲು ನಾವು ಪ್ರಯತ್ನಿಸಿದರಷ್ಟೆ ಬರುವ ಪೀಳಿಗೆಗೆ ವಾಸಯೋಗ್ಯ ಭೂಮಿ ಬಿಟ್ಟುಹೋಗಲು ಸಾಧ್ಯವಿದೆ.

***

ಕಾಲದ ವೇಗವೋ ಮತ್ತೊಂದೋ ಹೇಗಿದೆ ಎಂದರೆ ಹತ್ತಿಪ್ಪತ್ತು ವರ್ಷದ ಹಿಂದಿನ ನಮ್ಮ ದಿನಚರಿ ನೆನೆಸಿಕೊಂಡರೆ ನಾವೇನಾ ಹೀಗಿದ್ದವರು ಎಂದು ಅಚ್ಚರಿಯಾಗುತ್ತದೆ. ಆದರೆ ಈ ಬದಲಾವಣೆ ಸ್ವವಿನಾಶದ ಹಾದಿಯಲ್ಲಿರುವುದು ತೀವ್ರ ಆತಂಕ ಹುಟ್ಟಿಸುವ ವಿಷಯವಾಗಿದೆ. ಎಂದೇ ನಾವೆಲ್ಲ ಎಚ್ಚೆತ್ತುಕೊಳ್ಳುವ: ಪ್ಲಾಸ್ಟಿಕ್ ರಕ್ತ ಬೀಜಾಸುರನಿದ್ದಂತೆ. ಅದು ಮಣ್ಣಿನಲ್ಲಿ ಕರಗದು; ನೀರಿನಲ್ಲಿ ನೆನೆಯದು; ಸುಟ್ಟರೂ ಹೊಗೆ ಬೂದಿಯ ವಿಷಗುಣ ಹೋಗದು.

ಪ್ಲಾಸ್ಟಿಕ್ ಹೂವು ಮುಡಿದರೆ ಅದು ತಲೆದಂಡವನ್ನೇ ಬೇಡುತ್ತದೆ. ನೆಲ, ಜಲ, ಜೀವ ರಕ್ಷಿಸುವುದು ಎಂದರೆ ಕಡಿಮೆ ಪ್ಲಾಸ್ಟಿಕ್ ಬಳಸುವುದೇ ಆಗಿದೆ.





(All Image courtesy: Internet)

Saturday, 5 May 2018

ಮಹಿಳೆ, ಮೀಸಲಾತಿ ಮತ್ತು ರಾಜಕೀಯ ಪ್ರಾತಿನಿಧ್ಯ






೧೫ನೇ ಕರ್ನಾಟಕ ವಿಧಾನಸಭೆಗೆ ಚುನಾವಣೆ ಇನ್ನೇನು ಹತ್ತಿರ ಬರುತ್ತಿದೆ. ಗಲ್ಲಿಗಲ್ಲಿಗಳಲ್ಲಿ, ಹಳ್ಳಿಹಳ್ಳಿಗಳಲ್ಲಿ ಜನ ತಂಡೋಪತಂಡವಾಗಿ ತಮ್ಮನ್ನು ಒಂದು ಪಕ್ಷ/ಅಭ್ಯರ್ಥಿಯ ಜೊತೆ ಗುರುತಿಸಿಕೊಂಡು ಮನೆಮನೆ ತೆರಳಿ ಮತ ಕೇಳುತ್ತಿದ್ದಾರೆ. ಹಾಗೆ ಮತ ಕೇಳುತ್ತ ತಿರುಗುವವರಲ್ಲಿ ಮಹಿಳೆಯರೇ ಹೆಚ್ಚಾಗಿದ್ದಾರೆ. ಪ್ರತಿ ಹಳ್ಳಿ, ತಾಲೂಕು, ಜಿಲ್ಲೆಗಳಲ್ಲೂ ಈಗ ಸಾಕಷ್ಟು ಮಹಿಳಾ ರಾಜಕಾರಣಿಗಳಿದ್ದಾರೆ. ಸ್ಥಳೀಯ ಸಂಸ್ಥೆಗಳ ೩೨ ಲಕ್ಷ ಪ್ರತಿನಿಧಿಗಳಲ್ಲಿ ೧೪ ಲಕ್ಷ ಮಹಿಳೆಯರೇ ಇದ್ದಾರೆ. ಪ್ರಸ್ತುತ ಸರ್ಕಾರದ ೩೩ ಜನರ ಮಂತ್ರಿಮಂಡಲದಲ್ಲಿ ಕನ್ನಡ, ಸಂಸ್ಕೃತಿ ಇಲಾಖೆಗೆ ಉಮಾಶ್ರೀ ಮತ್ತು ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಇಲಾಖೆಗೆ ಗೀತಾ ಮಹದೇವಪ್ರಸಾದ್ ಸಚಿವೆಯರಾಗಿದ್ದಾರೆ. ಓಹೋ, ಕನ್ನಡಮ್ಮನ ಹೆಣ್ಣುಮಕ್ಕಳು ರಾಜಕೀಯರಂಗದಲ್ಲಿ ಎಷ್ಟೊಂದು ಮೇಲಿದ್ದಾರಲ್ಲ ಎಂದು ಯಾರಿಗಾದರೂ ಅನಿಸಬಹುದು.

ಆದರೆ ತಡೆಯಿರಿ. ಮನೆಮನೆ ತಿರುಗಿ ಪ್ರಚಾರ ಮಾಡುವವರಲ್ಲಿ ಬಹುಪಾಲು ಹೆಣ್ಮಕ್ಕಳಿದ್ದಾರೆ. ಅದೇ ಮತ ಪಡೆಯುವ ಅಭ್ಯರ್ಥಿಯಾಗಿ, ಜಾಹೀರಾತು ಫಲಕಗಳಲ್ಲಿ ಕೈಮುಗಿಯುವ ರಾಜಕಾರಣಿಯಾಗಿ ಕ್ಷೇತ್ರಕ್ಕೊಬ್ಬ ಮಹಿಳೆಯೂ ಕಾಣುವುದಿಲ್ಲ. ಪ್ರತಿ ಪಕ್ಷದಲ್ಲಿರುವ ಸ್ಥಳೀಯ ಸಂಸ್ಥೆಗಳ ಮಹಿಳಾ ಪ್ರತಿನಿಧಿಗಳು ಒಂದಷ್ಟು ಬೆಂಬಲಿಗರನ್ನು ಹೊಂದಿದ ಗುಂಪುಗಳಾಗಿ ಪರಿಗಣಿಸಲ್ಪಟ್ಟಿದ್ದಾರೆ. ೨೨೪+೧ ಜನರ ಕರ್ನಾಟಕ ವಿಧಾನಸಭೆಗೆ ಸ್ಪರ್ಧಿಸಿರುವವರ ಅಂಕಿಅಂಶ ನೋಡಿದರೆ ಇದು ಖಾತ್ರಿಯಾಗುತ್ತದೆ.

೨೦೧೮ರ ಚುನಾವಣೆಯಲ್ಲಿ ೨೨೪ ಸ್ಥಾನಗಳಿಗೆ ಒಟ್ಟು ೨೬೫೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರಲ್ಲಿ ೨೧೯ ಮಹಿಳೆಯರು. ಬೆಂಗಳೂರು ೨೮ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು ಅದಕ್ಕಾಗಿ ಸೆಣಸುತ್ತಿರುವ ೪೫೦ ಸ್ಪರ್ಧಿಗಳಲ್ಲಿ ೩೭ ಮಹಿಳೆಯರಿದ್ದಾರೆ. ೨೦೧೩ರಲ್ಲಿ ೨೯೪೮ ಅಭ್ಯರ್ಥಿಗಳಲ್ಲಿ ೧೭೦ ಅಭ್ಯರ್ಥಿಗಳು ಮಾತ್ರ ಮಹಿಳೆಯರಿದ್ದರು. ಈ ಬಾರಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್ ೧೫ ಮಹಿಳೆಯರನ್ನು, ಬಿಜೆಪಿ ೮ ಮಹಿಳೆಯರನ್ನು, ಜೆಡಿಎಸ್ ೭ ಮಹಿಳೆಯರನ್ನು ಕಣಕ್ಕಿಳಿಸಿವೆ. (ಇದು ೨೦೧೩ರಲ್ಲಿ ಕ್ರಮವಾಗಿ ೧೧, ೭, ೯ ಇತ್ತು.) ೩೦ ಮಹಿಳೆಯರು ಮೂರು ಪ್ರಮುಖ ಪಕ್ಷಗಳಿಂದ ಸ್ಪರ್ಧಿಸಿದ್ದರೆ ೧೮೯ ಮಹಿಳೆಯರು ಇತರ ಪಕ್ಷಗಳಿಂದ/ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳು ಕೊಡುವ ಅವಕಾಶಕ್ಕಿಂತ ಹೆಚ್ಚು ಮಹಿಳೆಯರು ಪಕ್ಷೇತರರಾಗಿಯೇ ಸ್ಪರ್ಧಿಸಿದ್ದಾರೆ.

ಕರ್ನಾಟಕದ ೪೯% ಮತದಾರರು ಮಹಿಳೆಯರು. ಮತಗಟ್ಟೆಗೆ ಹೋಗುವವರಲ್ಲಿ ೭೦ ಶೇಕಡಾ ಮಹಿಳೆಯರು. ಆದರೂ ಮಹಿಳೆ ಗೆಲ್ಲಬಲ್ಲ ಅಭ್ಯರ್ಥಿಯಾಗಿ ಪಕ್ಷಗಳಿಗೆ ಕಾಣುತ್ತಿಲ್ಲ. ಈ ಧೋರಣೆಯ ಕಾರಣದಿಂದಲೇ ಇದುವರೆಗು ಕರ್ನಾಟಕಕ್ಕೆ ಒಬ್ಬ ಮಹಿಳೆ ಮುಖ್ಯಮಂತ್ರಿಯಾಗಿ ಬಂದಿಲ್ಲ. ಉಪಮುಖ್ಯಮಂತ್ರಿಯಾಗಿಯೂ ಬಂದಿಲ್ಲ. ಕೆ. ಎಸ್. ನಾಗರತ್ನಮ್ಮ ಮಹಿಳಾ ಸ್ಪೀಕರ್ ಆಗಿ, ಮೋಟಮ್ಮ ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದು ಬಿಟ್ಟರೆ ಹೆಚ್ಚಿನ ಸಂಸದೀಯ ಜವಾಬ್ದಾರಿ ಪಡೆಯಲೂ ಮಹಿಳೆಯರಿಗೆ ಸಾಧ್ಯವಾಗಿಲ್ಲ.

ಬರಬರುತ್ತ ಮಹಿಳೆಯರ ಗೆಲ್ಲುವ ದರ ಕುಸಿತ ಕಂಡಿದೆ. ಕಳೆದ ಸಲ ಮುಕ್ಕಾಲು ಪಾಲು ಮಹಿಳೆಯರು ಠೇವಣಿ ಕಳೆದುಕೊಂಡರು. ಕೊನೆಗೆ ಗೆದ್ದವರು ಬರಿಯ ಆರು ಜನ. ೫೦-೬೦ರ ದಶಕದಲ್ಲಿ ಗೆಲ್ಲುವವರ ಪ್ರಮಾಣ ಹೆಚ್ಚಿತ್ತು. ಕರ್ನಾಟಕ ರಾಜ್ಯದ ಮೊದಲ ವಿಧಾನಸಭೆಗೆ ೧೯೫೭ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ ೨೪ ಮಹಿಳೆಯರಲ್ಲಿ ೧೩ ಜನ ಗೆದ್ದಿದ್ದರು. ೧೯೬೨ರಲ್ಲಿ ೩೦ರಲ್ಲಿ ೧೮; ೧೯೬೭ರಲ್ಲಿ ೯ರಲ್ಲಿ ೫ ಮಹಿಳೆಯರು ಗೆದ್ದರು. ೧೯೭೨ ಬಂತು. ೨೮ ಜನ ನಿಂತರು. ಒಬ್ಬರೂ ಗೆಲ್ಲಲಿಲ್ಲ. ೧೯೭೨ರ ವಿಧಾನಸಭೆಯಲ್ಲಿ ದೇವರಾಜ ಅರಸು ನಾನಾ ಶ್ರಮಿಕ, ತಳಸಮುದಾಯದ ರಾಜಕಾರಣಿಗಳನ್ನು ಗುರುತಿಸಿ, ಟಿಕೆಟ್ ಕೊಟ್ಟು, ಗೆಲ್ಲಿಸಿದರು. ಆದರೆ ಆ ಕಾಲಾವಧಿಯಲ್ಲಿ ಒಬ್ಬರೇ ಒಬ್ಬರು ಮಹಿಳಾ ಪ್ರತಿನಿಧಿ ಇರಲಿಲ್ಲ. ಅದಾದ ನಂತರ ಮಹಿಳೆಯರ ಸಂಖ್ಯೆ ಕುಸಿಯುತ್ತ ಹೋಗಿರುವುದನ್ನು ಗಮನಿಸಬಹುದು. ೧೯೯೩ರಲ್ಲಿ ಪಂಚಾಯತ್ ರಾಜ್ ಕಾಯ್ದೆ ಬಂದು ಸ್ಥಳೀಯ ಸಂಸ್ಥೆಗಳಲ್ಲಿ ೫೦% ಮಹಿಳಾ ಮೀಸಲಾತಿ ಬಂದರೂ ಶಾಸಕಿಯರ ಸಂಖ್ಯೆಯಲ್ಲಿ ಏರಿಕೆ ಕಂಡಿಲ್ಲದಿರುವುದು ವಿಪರ್ಯಾಸವಾಗಿದೆ.

ಕೆಳಗಿನ ಅಂಕಿಅಂಶಗಳು ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ಪ್ರತಿಬಾರಿ ಆಯ್ಕೆಯಾದ ಮಹಿಳೆಯರ ಸಂಖ್ಯೆ ಸೂಚಿಸುತ್ತಿವೆ.

೧೯೫೭ - ೧೩ ಮಹಿಳೆಯರು
೧೯೬೨ - ೧೮ ಮಹಿಳೆಯರು
೧೯೬೭ - ೫ ಮಹಿಳೆಯರು
೧೯೭೨ - ೦ - ಒಬ್ಬರೂ ಇಲ್ಲ
೧೯೭೮ - ೮ ಮಹಿಳೆಯರು
೧೯೮೩ - ೮ ಮಹಿಳೆಯರು
೧೯೮೯ - ೧೦ ಮಹಿಳೆಯರು
೧೯೮೯ - ೭ ಮಹಿಳೆಯರು
೧೯೯೯ - ೬ ಮಹಿಳೆಯರು
೨೦೦೬ - ೬ ಮಹಿಳೆಯರು
೨೦೦೮ - ೫ ಮಹಿಳೆಯರು
೨೦೧೩ - ೬ ಮಹಿಳೆಯರು

ಸ್ಪರ್ಧಿಸಿದವರಲ್ಲಿ ೫% ಮಹಿಳೆಯರಷ್ಟೆ ಈಗ ಗೆಲ್ಲುತ್ತಿದ್ದಾರೆ. ಆ ಅಂದಾಜಿನ ಪ್ರಕಾರ ಈ ಸಲ ೧೦-೧೧ ಮಹಿಳೆಯರು ಆಯ್ಕೆಯಾಗಬೇಕು! ಹಾಗೇನಾದರೂ ಆದರೆ ೩೦ ವರ್ಷ ಬಳಿಕ ಮಹಿಳಾ ಪ್ರಾತಿನಿಧ್ಯ ಎರಡಂಕಿ ಮುಟ್ಟಲು ಸಾಧ್ಯವಾದದ್ದು ದೊಡ್ಡ ಸಾಧನೆಯೇ ಆಗಲಿದೆ.

ಅಯ್ಯೋ ಕನ್ನಡ ನೆಲವೇ, ೩೩% ಎಂದರೆ ೭೫ ಶಾಸಕಿಯರಿರಬೇಕಿತ್ತು. ಬರಿಯ ಹತ್ತು ಇದ್ದರೂ ಹೆಮ್ಮೆ ಪಡುವ ಕಾಲ ಬಂತು!

***

ಸಂವಿಧಾನ ಸಮಾನ ಹಕ್ಕುಗಳನ್ನು ಎಲ್ಲ ಪ್ರಜೆಗಳಿಗೂ ನೀಡಿದೆ. ಆದರೆ ಮಹಿಳೆಯರಿಗೆ ರಾಜಕೀಯ ಅವಕಾಶ ತುಂಬ ಕಡಿಮೆಯಿದೆ. ಮಾನವ ಅಭಿವೃದ್ಧಿ ಸೂಚ್ಯಂಕಗಳು ಉತ್ತಮವಾಗಿರುವ ದಕ್ಷಿಣದ ಕೇರಳ, ಕರ್ನಾಟಕ ರಾಜ್ಯಗಳಲ್ಲಿ ಮಹಿಳೆಯರು ಉಳಿದೆಲ್ಲ ವಿಷಯಗಳಲ್ಲಿ ಮಂದಿದ್ದಾರೆ. ರಾಜಕೀಯ ಪ್ರಾತಿನಿಧ್ಯ ಮಾತ್ರ ನಗಣ್ಯವೆನ್ನುವಷ್ಟು ಕಡಿಮೆಯಿದೆ. ಕೇರಳದ ಪ್ರಾತಿನಿಧ್ಯ ೫% ಇದ್ದರೆ ಕರ್ನಾಟಕದಲ್ಲಿ ೨.೬% ಇದ್ದು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಹಾಗೆ ನೋಡಿದರೆ ಭಾರತದಲ್ಲಿ ಅತಿಹೆಚ್ಚು ಮಹಿಳಾ ಶಾಸಕಿಯರನ್ನು ಹೊಂದಿರುವ ರಾಜ್ಯ ಬಿಹಾರ! ಹಿಂದುಳಿದ ರಾಜ್ಯ ಎನಿಸಿಕೊಂಡರೂ ಅಲ್ಲಿ ೧೩.೯೯% ಶಾಸಕಿಯರಿದ್ದಾರೆ! ಅದೇ ಮಿಜೋರಾಂ, ನಾಗಾಲ್ಯಾಂಡ್, ಪಾಂಡಿಚೆರಿಗಳಲ್ಲಿ ಒಬ್ಬ ಮಹಿಳೆಯೂ ಶಾಸನಸಭೆಯಲ್ಲಿಲ್ಲ.

ನಮಗೆ ಮಹಿಳಾ ಕಾನ್ಸ್‌ಟೇಬಲ್ ಬೇಕು, ಮಹಿಳಾ ಕಮಿಷನರ್ ಬೇಡ. ಮಹಿಳಾ ವರದಿಗಾರ್ತಿಯರು ಬೇಕು, ಮಹಿಳಾ ಎಡಿಟರ್ ಬೇಡ. ಚಂದದ ಗೊಂಬೆಯಂಥ ವಾಚಕಿಯರು ಬೇಕು, ಮಾಧ್ಯಮ ಒಡೆತನ ಮಹಿಳೆಗೆ ಕೊಡಲು ಸಾಧ್ಯವಿಲ್ಲ. ಸಂಘಟನೆಗೆ ಕಾರ್ಯಕರ್ತೆಯರು ಬೇಕು, ಮಹಿಳಾ ಅಧ್ಯಕ್ಷರು ಬೇಡ. ಸ್ವಾಗತ, ವಂದನಾರ್ಪಣೆಗೆ ಮಹಿಳೆಯರು ಸಾಕು, ಬೌದ್ಧಿಕ ವಿಚಾರ ಮಂಡನೆಗೆ ಬೇಡ. ಒಟ್ಟಾರೆ ಅಧಿಕಾರ ಕೇಂದ್ರಗಳತ್ತ ಬರದೆ ವ್ಯವಸ್ಥೆಯ ರಕ್ಷಕಳಾಗಿ, ಬೇಲಿಚೌಕಟ್ಟುಗಳ ಭದ್ರಗೊಳಿಸುವ ಶಿಸ್ತುಗಾರಳಾಗಿ ಇರುವ ಮಹಿಳೆಗೆ ಅವಕಾಶ, ಮನ್ನಣೆ, ಸ್ವಾಗತವಿದೆ. ಜನರನ್ನು ಆಕರ್ಷಿಸುವ ಬಿಂದುಗಳಾಗಿ, ನಿಶಾನೆ ಹಿಡಿದವರಾಗಿ ಅಧಿಕಾರದ ಬಯಲಿಗೆ ಸ್ವಾಗತಿಸಲ್ಪಡುವ ಮಹಿಳೆಯರು ಒಂದುವೇಳೆ ಅಧಿಕಾರದಲ್ಲಿ ಪಾಲು ಕೇಳಿದರೆ ಅವರ ಭವಿಷ್ಯ ಮಸುಕಾಗತೊಡಗುತ್ತದೆ.



ರಾಜಕೀಯ ಪಕ್ಷಗಳು ವಿನ್ನಬಿಲಿಟಿಯ ನೆಪದಲ್ಲಿ ಪ್ರಭಾವಿ ಸರ್‌ನೇಮ್‌ಗಳಿರುವ ಮಹಿಳೆಗೆ ಮಣೆ ಹಾಕುತ್ತವೆ. ಜನಪ್ರಿಯ ನಟಿಮಣಿಯರನ್ನು ಬರಮಾಡಿಕೊಳ್ಳುತ್ತವೆ. ಸುಂದರ, ವಾಚಾಳಿ ನಾಯಕಿಯರನ್ನು ಬೆಳೆಸುತ್ತವೆ. ಆದರೆ ಪಕ್ಷದ ಶಿಸ್ತು, ಚೌಕಟ್ಟಿನ ಹೊರಗೆ ಸ್ವಂತವಿಚಾರ ಹರಿಯಬಿಡದಂತೆ ನಿರ್ಬಂಧ ವಿಧಿಸುತ್ತವೆ. ಎಲ್ಲ ಪಕ್ಷಗಳಲ್ಲಿರುವ ಮಹಿಳೆಯರ ಮಹಿಳಾಪರತೆ ನೋಡಿದರೆ ಇದು ಗೊತ್ತಾಗುತ್ತದೆ.

ಕರ್ನಾಟಕ ಕಾಂಗ್ರೆಸ್ಸಿನ ಅನುಭವಿ ನಾಯಕಿ ಮೋಟಮ್ಮ ಯಾವುದೇ ಪಕ್ಷದ ಮಹಿಳೆಯರಿಗೆ ಶಾಸಕಿಯಾಗುವುದು ಎಷ್ಟು ಕಷ್ಟ ಎಂದು ಮನ ಮುಟ್ಟುವಂತೆ ಸಭೆಯೊಂದರಲ್ಲಿ ಹೇಳಿದ್ದಾರೆ. ಟಿಕೆಟ್‌ಗಾಗಿ ಲಾಬಿ ನಡೆಸಬೇಕು. ನಿರಂತರ ಮುಖ್ಯಸ್ಥರ ಮನೆಗಳಿಗೆ, ಕಚೇರಿಗಳಿಗೆ ಎಡತಾಕಿ ಟಿಕೆಟ್ ಕೊಡುವ ಒತ್ತಡ ಸೃಷ್ಟಿಸಬೇಕು. ಹಗಲು ರಾತ್ರಿಯೆನ್ನದೆ ನಾಯಕರನ್ನು ಭೇಟಿ ಮಾಡಬೇಕು, ಅವರಲ್ಲಿ ಒಳ್ಳೆಯ ಅಭಿಪ್ರಾಯ ಮೂಡುವಂತೆ ನಡೆದುಕೊಳ್ಳಬೇಕು. ಇದು ಒಂದು ತರಹದ ಕಷ್ಟ. ನಂತರ ನೀರಿನಂತೆ ಕ್ಷೇತ್ರದಲ್ಲಿ ಹಣ ಚೆಲ್ಲಬೇಕು. ಮುಖ್ಯ ವ್ಯಕ್ತಿ-ಗುಂಪುಗಳನ್ನು ಆಯ್ದು ಬೆಂಬಲಿಗರನ್ನಾಗಿಸಿಕೊಳ್ಳಬೇಕು. ಚುನಾವಣೆಯ ದಿನದ ತನಕವೂ ಇದು ಮುಂದುವರೆಯುತ್ತದೆ. ಗೆದ್ದ ಮೇಲೆಯೂ ಸುಲಭವಿಲ್ಲ. ಪಕ್ಷದ ಕಾರ್ಯಕರ್ತರನ್ನು ತೃಪ್ತಿಪಡಿಸುವುದು, ಭಿನ್ನಮತವನ್ನು ಹತ್ತಿಕ್ಕುವುದು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ದೊಡ್ಡ ಸವಾಲುಗಳೇ ಹೌದು.

ನಿಜ. ಚುನಾವಣಾ ರಂಗ ಸಂಪೂರ್ಣ ಪುರುಷಮಯವಾಗಿರುವ ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ ತೊಡಗುವುದು ಕಷ್ಟವೂ, ಅಸುರಕ್ಷಿತವೂ ಆಗಿದೆ. ಚುನಾವಣಾ ಗೆಲುವು ಒಂದು ಸವಾಲೇ ಆಗಿದೆ. ಹಾಗಾಗಿ ಪ್ರಜ್ಞಾವಂತ ಮಹಿಳೆಯರು ರಾಜಕಾರಣದಿಂದ ವಿಮುಖರಾಗಿದ್ದಾರೆ. ಆದರೆ ಚುನಾವಣೆಯಲ್ಲಿ ಗೆಲುವು ಸಾಧ್ಯವಿಲ್ಲ ಎಂದಾದರೆ ರಾಜಕೀಯ ಪಕ್ಷಗಳು ಸದಸ್ಯರ ನಾಮಕರಣ ಮಾಡುವಾಗ ಮಹಿಳೆಯರಿಗೆ ಅವಕಾಶ ಕೊಡಬಹುದಲ್ಲವೆ? ಆದರೆ ಆಗಲೂ ಹೆಣ್ಮಕ್ಕಳು ನೆನಪಾಗುವುದಿಲ್ಲ. ಮಹಿಳಾ ಮೀಸಲಾತಿಯ ಪರವಿರುವ ಪಕ್ಷಗಳಾಗಲೀ, ವಿರುದ್ಧ ಇರುವ ಪಕ್ಷಗಳಾಗಲೀ ಮಹಿಳಾ ನಾಯಕತ್ವ ಬೆಳೆಸುವ ಯಾವ ರಚನಾತ್ಮಕ ಕಾರ್ಯಕ್ರಮವನ್ನೂ ಹಾಕಿಕೊಂಡಿಲ್ಲ. ಗ್ರಾಮ, ತಾಲೂಕು, ಜಿಲ್ಲಾ ಮಟ್ಟದ ಮಹಿಳಾ ಪ್ರತಿನಿಧಿಗಳು ಉತ್ತಮ ಸಾಮರ್ಥ್ಯ ತೋರಿದರೂ ರಾಜ್ಯ, ರಾಷ್ಟ್ರಮಟ್ಟದ ತನಕ ಬೆಳೆಯುವ ಸಹಜ ವಿಕಾಸ ಕಾಣಿಸುತ್ತಿಲ್ಲ. ಹೀಗೆ ಮಹಿಳೆಯರನ್ನು ಆಕರ್ಷಿಸಲು ರಾಜಕಾರಣ ವಿಫಲವಾಗಿದ್ದರೆ, ಪ್ರಾತಿನಿಧ್ಯ ಕೊಡಲು ಪಕ್ಷಗಳು ನಿರಾಸಕ್ತವಾಗಿವೆ. ಎಂದೇ ಯಾವ ರಾಷ್ಟ್ರೀಯ ಪಕ್ಷದಲ್ಲೂ ೩೩% ಸ್ಥಾನಕ್ಕೆ ಸ್ಪರ್ಧಿಸಬಲ್ಲ ಮಹಿಳಾ ಅಭ್ಯರ್ಥಿಗಳೇ ಇಲ್ಲವಾಗಿದ್ದಾರೆ!

ಮಹಿಳಾ ಮೀಸಲಾತಿ 

ದೇಶಕಾಲಗಳ ವ್ಯತ್ಯಾಸವಿಲ್ಲದೆ ಹೆಣ್ಣಿನ ಧಾರ್ಮಿಕ-ಸಾಂಸ್ಕೃತಿಕ-ರಾಜಕೀಯ ಅಧಿಕಾರ ಕಡಿತಗೊಳಿಸಲು ಸಮಾಜಗಳು ಸತತವಾಗಿ ಪ್ರಯತ್ನಪಟ್ಟಿವೆ. ನಮ್ಮ ದೇಶದಲ್ಲಿ ಮಹಿಳೆಗೆ ರಾಜಕೀಯ ಮೀಸಲಾತಿ ಅಗತ್ಯ ಎಂದು ಪ್ರತಿಪಾದಿಸಬೇಕಾದ ಅನಿವಾರ್ಯತೆ ಏಕೆ ಸೃಷ್ಟಿಯಾಯಿತು ಎಂದು ಹುಡುಕುತ್ತ ಹೊರಟರೆ ಚಾರಿತ್ರಿಕ ಹಾಗೂ ವರ್ತಮಾನದ ವೈರುಧ್ಯಗಳು ಕಣ್ಣಿಗೆ ರಾಚುತ್ತವೆ. ಮಹಿಳೆಯ ರಾಜಕೀಯ ಚರಿತ್ರೆ ಎಂದರೆ ಮಹಿಳೆಯ ಅಧಿಕಾರ ದಮನಿಸುವ ಚರಿತ್ರೆ. ಆಳುವ ವರ್ಗವಾಗಿ, ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯುತ ನಾಯಕಿಯಾಗಿ ಮಹಿಳೆ ಕಾಣಿಸಿಕೊಂಡಿದ್ದು ಅಪರೂಪ. ಸಾವಿರಾರು ವರ್ಷಗಳಿಂದ ಸಾವಿರಾರು ರಾಜಮಹಾರಾಜರು ಈ ನೆಲವನ್ನಾಳಿದರು. ಆದರೆ ಎಷ್ಟು ರಾಣಿಯರು ಆಳಿದರು? ಧಾರ್ಮಿಕ, ಸಾಂಸ್ಕೃತಿಕ, ಜೈವಿಕ ನೆಪಗಳನ್ನೊಡ್ಡಿ ಹೆಣ್ಣಿಗೆ ಅಧಿಕಾರ ನಿರಾಕರಿಸುತ್ತ ಬರಲಾಗಿದೆ. ಮಹಿಳೆ ಆಳಿದ್ದೆಲ್ಲ ಹೃದಯ ಸಾಮ್ರಾಜ್ಯವನ್ನು. ಹಾಗಾಗಿಯೇ ಮಹಿಳೆಯ ನಿಜ ಸ್ಥಿತಿಗತಿಯೂ, ಅವಳಿಗೆ ಸಮಾಜ ನೀಡಿರುವ ಕಾಲ್ಪನಿಕ ಸ್ಥಾನದ ನಡುವೆಯೂ ಬಹಳ ವ್ಯತ್ಯಾಸವಿದೆ.

ಹೆಣ್ಣು ಜೈವಿಕವಾಗಿ ದುರ್ಬಲಳು, ಸುಮದಂತೆ ಕೋಮಲ ಎಂದು ಹೊಗಳಿ ಬಾಯ್ಮುಚ್ಚಿಸಲಾಗಿದೆ. ಬೆಳೆಯುವ ಹೆಣ್ಣುಮಗುವಿನ ಯೋಚನಾಕ್ರಮದಲ್ಲೇ ಇಂತಹ ಚಿಂತನೆಗಳು ಬೆರೆತು ಹೋಗುವುದರಿಂದ ಹೆಣ್ಣು ಅಧಿಕಾರ ನಿಭಾಯಿಸಬಲ್ಲಳು ಎಂದು ಯಾರೂ, ಸ್ವತಃ ಅವಳೂ ನಂಬುವುದಿಲ್ಲ. ಯಾವ ಹಿನ್ನೆಲೆಯೂ ಇಲ್ಲದ ನಿರಕ್ಷರಿ ಗಂಡು, ಕಾವಿ ತೊಟ್ಟ ಸ್ವಾಮಿಯಾದರೂ ಸೈ, ಅಧಿಕಾರ ನಿಭಾಯಿಸಬಲ್ಲ ಎಂದು ನಂಬುವ ಸಮಾಜ ಅಷ್ಟೇ ಅನನುಭವಿ ಮಹಿಳೆ ಅದನ್ನು ನಿಭಾಯಿಸಬಲ್ಲಳು ಎಂದು ವಿಶ್ವಾಸವಿಡುವುದಿಲ್ಲ. ಅಧಿಕಾರ ಗ್ರಹಣವೇ ತಮ್ಮ ಆತ್ಯಂತಿಕ ಗುರಿಯೆಂದುಕೊಂಡ ಯಾವ ರಾಜಕೀಯ ಪಕ್ಷವೂ, ಸಂಘಟನೆಯೂ ಈ ದೇಶದ ಅರ್ಧದಷ್ಟಿರುವ ಮಹಿಳಾ ಶಕ್ತಿಯನ್ನು ಓಟ್ ಬ್ಯಾಂಕಿನಾಚೆ ಪರಿಗಣಿಸುವುದಿಲ್ಲ. ಎಂದೇ ೨೦೧೮ನೇ ಇಸವಿಯಲ್ಲೂ ಲಿಂಗಸಮಾನತೆಯತ್ತ ಒಂದು ಹೆಜ್ಜೆಯಾಗಿ ಮಹಿಳಾ ಮೀಸಲಾತಿಯನ್ನು ಪ್ರತಿಪಾದಿಸಬೇಕಾಗುತ್ತದೆ.

ಆದರೆ ೩೩% ಅಧಿಕಾರ ಹೆಣ್ಣಿಗೆ ಬಿಟ್ಟುಕೊಡುವುದು, ಅಕಟಕಟಾ, ಅದೇನು ಅಷ್ಟು ಸುಲಭವೇ?

ಮಹಿಳೆಯ ಬದುಕನ್ನು ಸಹನೀಯಗೊಳಿಸುವ ಕ್ರಮಗಳು ಸಂಘರ್ಷವಿಲ್ಲದೆ ಸಮಾಜದ ಒಪ್ಪಿಗೆ ಪಡೆಯುತ್ತವೆ. ಎಲ್ಲಿ ಆಕೆಯನ್ನು ಬರೀ ಜೈವಿಕ ಮಹಿಳೆಯನ್ನಾಗಿ ನೋಡಲಾಗಿದೆಯೋ, ಎಲ್ಲಿ ಆಕೆ ಫಲಾನುಭವಿ ಮಾತ್ರವೋ (ಉದಾ: ಜನನಿ ಸುರಕ್ಷಾ, ತಾಯಿ ಕಾರ್ಡ್, ಭಾಗ್ಯಲಕ್ಷ್ಮಿ, ಹೆಣ್ಣುಮಕ್ಕಳಿಗೆ ಸೈಕಲ್ ಯೋಜನೆಗಳು) ಅಂಥ ಕ್ರಮಗಳು ಸ್ವಾಗತಿಸಲ್ಪಡುತ್ತವೆ. ಅವಳನ್ನು ನಾಗರಿಕ ವ್ಯಕ್ತಿಯಾಗಿ ಪರಿಗಣಿಸಿ ಅಧಿಕಾರ ಮರು ಹಂಚಿಕೆಯಾಗಬೇಕಾದಾಗ ಮಾತ್ರ ವಿವಾದ, ವಿಳಂಬ ಶುರುವಾಗುತ್ತದೆ. ಅಂಬೇಡ್ಕರ್ ತರಲುದ್ದೇಶಿಸಿದ್ದ ಹಿಂದೂ ಕೋಡ್ ಬಿಲ್ ಮಹಿಳೆಗೂ ಸಮಾನ ಆಸ್ತಿ ಹಕ್ಕು ಇದೆಯೆಂದು ಹೇಳಿದಾಗ ಸಾಂಪ್ರದಾಯಿಕ ಹಿಂದೂಸಮಾಜದಲ್ಲಿ ಅಲ್ಲೋಲಕಲ್ಲೋಲವಾಗಿತ್ತು. ಮಹಿಳಾ ಮೀಸಲಾತಿ ಮಸೂದೆಗೆ ಕಳೆದ ೨೦ ವರ್ಷಗಳಿಂದ ಇದೇ ಆಗುತ್ತಿದೆ. ಅಧಿಕಾರವನ್ನು ಹೆಣ್ಣಿಗೆ ಹಸ್ತಾಂತರಿಸಲು ಇರುವ ಅಸಮ್ಮತಿಯೇ ಮಹಿಳಾ ಮೀಸಲಾತಿ ಮಸೂದೆ ಬಿದ್ದುಹೋಗಲು ಮುಖ್ಯ ಕಾರಣವಾಗಿದೆ.

ಇದೇಕೆ ಹೀಗೆಂದು ಹೇಳಲು ಕಾಲಜ್ಞಾನದ ಅವಶ್ಯಕತೆಯಿಲ್ಲ. ಅಧಿಕಾರ ಎಂದಿಗೂ ಕೊರತೆಯ ಸಂಪನ್ಮೂಲ. ಅದರ ಸುತ್ತ ಠಳಾಯಿಸುತ್ತಲೇ ಇರುವುದು ಪುರುಷ ಪರಮಾಧಿಕಾರ. ಅಧಿಕಾರ ಬಿಟ್ಟುಕೊಡುವುದೂ, ಪ್ರಾಣ ಬಿಡುವುದೂ ಹೆಚ್ಚುಕಮ್ಮಿ ಒಂದೇ ಎಂದು ಭಾವಿಸಲಾಗಿದೆ. ಹಾಗಾಗಿ ಮೀಸಲಾತಿ ಕೊಡಲೇಬೇಕಾಗಿ ಬಂದಾಗಲೂ ಮಹಿಳೆಯರು ಸ್ವಾಯತ್ತವಾಗಿ ಕೆಲಸ ಮಾಡಲು ಹೋರಾಟ ನಡೆಸಬೇಕಿದೆ. ಸದ್ಯದ ಆಳುವ ವ್ಯವಸ್ಥೆ, ಸಾಮಾಜಿಕ-ಸಾಂಸ್ಕೃತಿಕ ವಾತಾವರಣ ಆಳದಲ್ಲಿ ಪುರುಷಪರವೂ, ಪುರುಷಾಧಿಪತ್ಯವನ್ನು ಪೋಷಿಸುವಂಥದೂ ಆಗಿರುವುದರಿಂದ ಮಹಿಳೆಗೆ ಸಿಗುವ ಅಧಿಕಾರ, ಬಲ ಕೇವಲ ಸಾಂಕೇತಿಕವಾಗಿ ಉಳಿದಿದೆ.

ಸಂಸತ್ತಿನಲ್ಲಿ, ವಿಧಾನಸಭೆಗಳಲ್ಲಿ ೯-೧೦%ನಷ್ಟಿರುವ ಮಹಿಳಾ ಪ್ರತಿನಿಧಿಗಳೂ ಸಹ ಮಹಿಳಾ ಸಮಸ್ಯೆಗಳನ್ನಾಗಲೀ, ಅದರ ಆದ್ಯತೆಗಳನ್ನಾಗಲೀ ಎತ್ತಿ ಹೋರಾಡಲು ಸಾಧ್ಯವಾಗದೇ ಇರುವುದು ಇದೇ ಕಾರಣಕ್ಕೆ. ಮಹಿಳಾ ಪ್ರತಿನಿಧಿಗಳು ತಂತಮ್ಮ ಪಕ್ಷದ ಹಿತಾಸಕ್ತಿಯ ಹೊರಗೆ ಬರಲಾರದವರಾಗಿದ್ದಾರೆ. ಇವೆಲ್ಲವೂ ಹೇಳುವುದಿಷ್ಟೇ: ರಾಜಕೀಯವಾಗಿ ಮಹಿಳೆಗೆ ಸಿಕ್ಕಿರುವ ಅವಕಾಶ ಪ್ರಾತಿನಿಧಿಕವೇ ಹೊರತು ಸಮಾನ ಗೌರವ, ಸಹಭಾಗಿತ್ವದ ನೆಲೆಯದಲ್ಲ.

ಎಂದೇ ಇನ್ನಾದರೂ ಮಹಿಳೆ ತನ್ನ ರಾಜಕೀಯ ಹಕ್ಕು ಪ್ರತಿಪಾದಿಸಿ ರಕ್ಷಿಸಿಕೊಳ್ಳುವುದು ಕಲಿಯಬೇಕು. ಮಹಿಳೆಯರ ನೆಪದಲ್ಲಿ ಸಿಗಬಹುದಾದ ೩೩% ಅಧಿಕಾರ ಪುರುಷ ರಾಜಕಾರಣದ ದಾಳವಾಗದಂತೆ ನೋಡಿಕೊಳ್ಳಬೇಕು. ಭಿನ್ನ ಜಾತಿ-ಧರ್ಮ-ವರ್ಗಗಳಿಗೆ ಸೇರಿದ ಮಹಿಳೆಯರೆಲ್ಲ ಇರುವಂತೆ ಗುಣಮಟ್ಟದ ಹಾಗೂ ಜವಾಬ್ದಾರಿಯುತ ಮಹಿಳಾ ನಾಯಕತ್ವ ಬೆಳೆಸಲು ರಾಜಕೀಯ ಪಕ್ಷಗಳು, ಜನಪರ ಸಂಘಟನೆಗಳು ಕೈ ಜೋಡಿಸಬೇಕು. ಜೊತೆಗೆ ಮೀಸಲಾತಿಯ ನೆಪದಿಂದ ಕೇಳುತ್ತಿರುವ ಅಧಿಕಾರ ನಿಸ್ಪೃಹವಾಗಿ ಹಂಚಿಕೊಳ್ಳಬೇಕಾದ ಸಂಪನ್ಮೂಲ ಎನ್ನುವುದನ್ನು ಮಹಿಳೆ ಎಂದಿಗೂ ಮರೆಯಬಾರದು. ಆಗಮಾತ್ರ ದಿನದಿಂದ ದಿನಕ್ಕೆ ಅರ್ಥ ಕಳೆದುಕೊಳ್ಳುತ್ತಿರುವ ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಹೊಸ ಉಸಿರು ದೊರೆತು ರಾಜಕಾರಣ ಜನಪರವಾಗಲು ಸಾಧ್ಯವಾದೀತು.






Wednesday, 2 May 2018

ಕಠುವಾದ ಎಳೆಬಾಲೆಗಾಗಿ: ಅಸ್ಮಾ ಅಂಜೂಮ್ ಖಾನ್ (ಆರ್ಕಿಟೆಕ್ಟ್ ಇಂಡಿಯಾ) ಕಳಿಸಿದ ಇಂಗ್ಲಿಷ್ ಕವಿತೆಯ ಅನುವಾದ.



ಕುದುರೆಗಳನ್ನ ಮನೆಗ್ ಕಳಸ್ದೆ..

ಅಮಾ.. ,
ಕುದುರೆಗಳ್ನ ಓಟ ಹೊಡ್ಸಿ ಮನೆಗ್ ಕಳಿಸ್ದೆ
ಅವು ದಾರಿ ಗುರ್ತು ಹಿಡಿದು ಮನೆ ಮುಟ್ಟಿದಾವೆ

ಆದ್ರೆ, ನಂಗೆ ಬರಕ್ಕಾಗ್ಲಿಲ್ಲ ಅಮಾ.
ಜಿಂಕೆಮರಿ ತರ ಇದೆ ಅಂತ 
ನೀನಂತಿದ್ಯಲ, ನನ್ ಕಾಲು
ಅವು, ಅವು ಮರಗಟ್ಟಿ ಹೋದ್ವು,
ಹೌದಮಾ, ಮರಾ ಆದಂಗ್ ಆಗೋದ್ವು..
ಆದ್ರೆ, ಆದ್ರೆ, ನಾನು ಕುದ್ರೆಗಳ್ನ ಮನೆಗೆ ಕಳ್ಸಿದೀನಿ, ಹ್ಞಂ.

ಅಮಾ, 
ಅವು ಅವು ಭೂತಗಳು
ಅವ್ರಿಗೆ ಕೊಂಬಿರ್ಲಿಲ್ಲ, ಕೋರೆದಾಡೆ ಹಲ್ಲಿರ್ಲಿಲ್ಲ
ಭಯಂಕರ ಊ..ದ್ದದ್ ಉಗುರೂ ಇರ್ಲಿಲ್ಲ.
ಆದ್ರೂ ನಂಗೆ ಎಷ್ಟ್ ನೋವು ಮಾಡಿದ್ರು ಗೊತ್ತ
ತುಂಬ ನೋವು ಮಾಡಿದ್ರು ಅಮಾ..
ನೀಲಿ ಹುವ್ವ
ಹಳದಿ ಚಿಟ್ಟೆ
ಎಲ್ಲಾವೂ ಅಲ್ಲೇ ಇದ್ವು
ಆದ್ರೆ ಏನೂ ಮಾಡಕ್ಕಾಗ್ದೆ ನಿಂತ್ಕಂಡ್ವು
ಆಗ ನಾನು ಕುದುರೆಗಳನ್ನ ಮನೆಗ್ ಕಳ್ಸಿಬಿಟ್ಟೆ 

ಅಮಾ
ಅಪ್ಪಂಗ್ ಹೇಳು, ನಂಗೊತ್ತು ಅಂತ
ನಂಗೊತ್ತು
ನಂಗೊತ್ತು ಅವ್ನು ನನ್ ಹುಡುಕ್ದ
ನನ್ ಹೆಸ್ರು ಕೂಗಿದ್ ಕೇಳ್ತು,
ಕಿರುಚಿ ಮತ್‌ಮತ್ ಕರ‍್ದಿದ್ದೂ ಕೇಳ್ತು
ಆದ್ರೆ
ನಂಗ್ ನಿದ್ದೆ ಎಳ್ದು ಹೋಗ್ತಿತ್ತು ಅಮಾ
ಸುಸ್ತಾಗಿತ್ತು
ಅವ್ರು, ಆ ಭೂತಗಳು
ತುಂಬ ಗಾಯ ಮಾಡಿದ್ರು, ತುಂಬ ನೋವು..

ಈಗ ನಾ ಹಿಂಗಂದ್ರೆ ನಿಂಗೇನನ್ಸುತ್ತೋ ಏನೋ
ನೀನೀಗ ಬೆಚ್ಚಗ್ ಅಪ್ಪಿ ಹಿಡ್ದಂಗ್ ಅನಿಸ್ತಿದೆ
ಈಗೇನು ನೋವಿಲ್ಲ
ರಕ್ತ ಎಲ್ಲ ಒಣಗೋಗಿದೆ
ಹುಲ್ಲುಗಾವಲಲ್ಲಿ ನಂಜೊತೆ ತೂಗಾಡ್ತಿದ್ದ
ನೀಲಿ ಹೂವಂಗೆ ಕಾಣ್ತಿದೆ
ಈಗ ನೋವೇ ಆಗ್ತಿಲ್ಲ ಕಣಮಾ..

ಅಮಾ
ಆ ಭೂತಗಳು, ಅವು, ಇನ್ನು ಅಲ್ಲೇ ಇದಾವೆ..
ಏನೇನೋ ಕತೆ ಹೇಳ್ತಾವಪ್ಪ.
ಅವುನ್ನೆಲ್ಲ ನೀನ್ ನಂಬಬೇಡ ಆಯ್ತಾ
ಕರುಳು ಕಿತ್ತೋಗೋ ಸಂಕ್ಟಾಗೋ 
ಅಂತ ಎಷ್ಟೋ ನೀ ನೋಡಿದಿಯ

ಅಮ್ಮಾ,
ಹ್ಞಾಂ, ಮರೆಯಕ್ ಮುಂಚೆ
ಅಲ್ಲೊಂದು ಗುಡಿ ಇದೆ.
ಅದ್ರಲ್ಲೊಂದ್ ದೇವ್ತೆನೂ ಇದೆ.
ಅದಕ್ ಶರಣು ಅಂತೇಳು
ಯಾಕ್ ಗೊತ್ತಾ, ಆ ದೇವ್ತೆನೇ ಸಹಾಯ ಮಾಡಿದ್ದು,
ಅದ್ಕೇ ಕುದ್ರೆಗಳು ಮನೆ ದಾರಿ ಹಿಡ್ದು ಹೋದ್ವು..


Monday, 9 April 2018

ಕಣ್ಣು ತೆರೆಸಿದ ಬೆಳಕು




ಅಂಬೇಡ್ಕರ್ ಮತ್ತು ನಾನು

ಹುಟ್ಟಿದಾಗಿನಿಂದ ಅಂಬೇಡ್ಕರ್ ಫೋಟೋವನ್ನು ಮನೆಯಲ್ಲಿ ನೋಡಿ ಬೆಳೆಯಲಿಲ್ಲ. ಶಾಲಾದಿನಗಳಲ್ಲಿ ಗಂಭೀರ, ತೆಳುನಗುವಿನ ಮುಖಚಹರೆಯ ಅಂಬೇಡ್ಕರರನ್ನು ನೋಡುತ್ತಿದ್ದೆನಾದರೂ ಚಿಂತನೆಗಳ ಆಳ ಪರಿಚಯವಾಗಿರಲಿಲ್ಲ. ೭೦ರ ದಶಕದ ಕರ್ನಾಟಕದ ಕುಗ್ರಾಮಗಳಲ್ಲೂ ಗಾಂಧಿ ವಿಪುಲವಾಗಿ ದೊರೆಯುತ್ತಿದ್ದರು. ಓದಲು, ಚರ್ಚಿಸಲು ಸಿಗುತ್ತಿದ್ದರು. ಆದರೆ ಅಂಬೇಡ್ಕರ್ ಕಾಣುತ್ತಿರಲಿಲ್ಲ, ಕೇಳುತ್ತಿರಲಿಲ್ಲ. ಶಾಲೆಯ ರಜೆ ಶುರುವಾದ ನಂತರ ಏಪ್ರಿಲ್ ೧೪ ಬರುತ್ತಿದ್ದುದರಿಂದ ಅಂಬೇಡ್ಕರ್ ಜಯಂತಿಯ ದಿನ ಕೇಳಲೇಬೇಕಾದ ಭಾಷಣ, ಮಾತುಗಳೂ ಕಿವಿ ಮೇಲೆ ಬೀಳುತ್ತಿರಲಿಲ್ಲ. ಕಾರಣ ಸರಳ. ಅಂಬೇಡ್ಕರ್ ‘ತಮ್ಮವರೆಂದು ಯಾವ ಜನವರ್ಗ ಭಾವಿಸಿತ್ತೋ ಅವರು ಉಳಿದವರ ಕಣ್ಣೆದುರಿಗಿದ್ದೂ ಅದೃಶ್ಯರಾಗಿದ್ದರು. ಅದಾಗಲೇ ಕೇರಿಯ ಮನ-ಮನೆಗಳೊಳಗೆ ದೀಪವಾಗಿ ಬೆಳಗತೊಡಗಿದ್ದ ಅಂಬೇಡ್ಕರ್, ಬರಿಯ ಹಣತೆಯಲ್ಲ, ಸೂರ್ಯನೆಂದು ಉಳಿದವರಿಗೆ ಗೊತ್ತೇ ಇರಲಿಲ್ಲ.

ಕತೆ, ಕಾದಂಬರಿ, ಲಂಕೇಶ್ ಪತ್ರಿಕೆ ಓದುತ್ತ; ವಿಜ್ಞಾನ, ಅದರಲ್ಲು ಖಗೋಳ ವಿಜ್ಞಾನವನ್ನು ಬಹುವಾಗಿ ಇಷ್ಟಪಡುತ್ತ; ಶೌಚಾಲಯ-ಬಸ್ಸು-ಕರೆಂಟೇ ಇಲ್ಲದ ಕುಗ್ರಾಮಗಳಲ್ಲಿದ್ದರೂ ಒಂದಲ್ಲ ಒಮ್ಮೆ ಬಾಹ್ಯಾಕಾಶಕ್ಕೆ ಹೋಗಬೇಕೆಂಬ ಕನಸನ್ನು ಕಾಪಿಡುತ್ತ ಇದ್ದಾಗ ಅಸ್ಪೃಶ್ಯತೆ ನನ್ನ ಗಮನಕ್ಕೆ ಬಂದಿರಲಿಲ್ಲ ಎಂದಲ್ಲ. ನನ್ನ ತಾಯ್ತಂದೆಯರು ಸಂಪ್ರದಾಯಸ್ಥರಾಗಿದ್ದರೂ ‘ಮಡಿವಂತರಲ್ಲ. ಅಸ್ಪೃಶ್ಯತೆ ತಪ್ಪೆಂಬ ಭಾವನೆಯನ್ನೇ ಹೊಂದಿದ್ದವರು. ರಜೆಯ ದಿನ ಕಳೆಯಲು ಮಲೆನಾಡಿನ ಅಜ್ಜನ ಮನೆಗೆ, ಬಯಲುಸೀಮೆಯ ಮತ್ತೊಂದು ಅಜ್ಜನ ಮನೆಗೆ ಹೋದಾಗ ಬಾಗಿಲಾಚೆ, ಬೇಲಿಯಾಚೆ ಅಕಾ ಅಷ್ಟು ದೂರದಲ್ಲಿ ಗದ್ದೆ, ತೋಟದ ದಂಡೆಯಲ್ಲಿ ನಿಂತಿರುತ್ತಿದ್ದ ನಗೆ ಸೂಸುವ ಜೀವಗಳು, ಉಭಯ ಕುಶಲೋಪರಿಯ ಒಂದು ಮಾತಿಗೆ ಆ ಕಣ್ಣುಗಳು ಪ್ರತಿಫಲಿಸುತ್ತಿದ್ದ ಹೊಳಪು ಈಗಲೂ ನೆನಪಾಗುತ್ತಿದೆ. ಸಂಕಟವಾದರೂ ಏನಾದರೂ ಹೇಳುವಷ್ಟು ಸ್ವಾತಂತ್ರ್ಯ, ಅಧಿಕಾರ ಇಲ್ಲದ ಪ್ರಾಯವದು. ಪಿಯುಸಿಗೆ ಶಿವಮೊಗ್ಗಕ್ಕೆ ಬಂದು ಡಿಬೇಟಿನ ಪಾಯಿಂಟುಗಳಿಗಾಗಿ ಮಾಸ್ತರ ಬಳಿ ಹೋದಾಗ ಏಕರೂಪ ನಾಗರಿಕ ಸಂಹಿತೆ, ಮೀಸಲಾತಿ ಮೊದಲಾದ ವಿಷಯಗಳ ಕುರಿತು ಪರ, ವಿರೋಧ ಭಾಷಣ ಕುಟ್ಟುವಾಗ ಅಂಬೇಡ್ಕರ್ ಸುಳಿದಾಡಿದ್ದರು.

ವೈದ್ಯಕೀಯಕ್ಕೆ ಬಂದಮೇಲೆ ದಲಿತ ಚಳುವಳಿಯ ಭಾಗವಾಗಿದ್ದ ತುಮಕೂರಿನ ಎಳೆಯ ವೈದ್ಯ ಜೋಡಿ ಮತ್ತವರ ಬಳಗ ಸ್ನೇಹಿತರಾದರು. ಒಂದು ಅಂತರ್ಜಾತಿ ಮಂತ್ರ ಮಾಂಗಲ್ಯ ಮದುವೆಗೂ ಹೋಗಿ ಬಂದೆ. ಅವರ ಯೋಚನೆಗಳು, ಸಂಘಟನೆಯ ವಿಷಯಗಳು ಹೊಸ ಯೋಚನಾಲೋಕವನ್ನೇ ತೆರೆದವು. ಎಲ್ಲ ಸೇರಿ ನಾಲ್ಕಾರು ಸಲ ಓದಿದ ಕುಸುಮಬಾಲೆ ಅನೂಹ್ಯ ಲೋಕಗಳಿಗೆ ಕರೆದೊಯ್ಯಿತು. ಜಾತಿ-ಧರ್ಮದ ಸಂಕೋಲೆ ಕಿತ್ತು; ಸಂಪ್ರದಾಯದ ಕೋಳ ಬಿಡಿಸಿಕೊಂಡು ಸಮಾನತೆಯ ಕನಸು ಕಾಣುತ್ತಿದ್ದವರು ಆಪ್ತರಾದರು. ಸುತ್ತುಮುತ್ತಿನ ಆಗುಹೋಗುಗಳು, ವೈದ್ಯಕೀಯದ ನಂತರ ನೆಲೆನಿಂತ ಊರಿನ ಸಮಾಜ ನನ್ನ ಯೋಚನೆಗಳ ದಿಕ್ಕನ್ನು ನೇರಗೊಳಿಸಿದವು. ಗಾಂಧಿ, ಲಂಕೇಶ್, ಕುವೆಂಪು ಅವರನ್ನು ಓದುತ್ತ; ಇನ್ನೇನು ವೃತ್ತಿ, ಸಂಸಾರ, ‘ಶುದ್ಧ ಸಾಹಿತ್ಯದಲ್ಲಿ ಮುಳುಗೇ ಹೋದೆನೆನ್ನುವಾಗ ಅಂಬೇಡ್ಕರ್ ಮತ್ತೆ ಎದುರಾದರು. ಬರವಣಿಗೆಯ ಹಂಬಲ ಒಳಒತ್ತಡವಾಗುತ್ತಿದ್ದ ಕಾಲದಲ್ಲಿ ಅಂಬೇಡ್ಕರರ ಜಾತಿ ವಿನಾಶ ಪುಸ್ತಕ ಕೈತಾಗಿತು.

ಅಷ್ಟೇ. ಹಸಿದವರ ಎದುರು ಊಟದ ತಟ್ಟೆ ಹರಡಿಟ್ಟ ಹಾಗೆ, ಅವರನ್ನೇ ಓದುತ್ತ ಹೋದೆ. ಅಕಳಂಕಿತ ಪ್ರಜ್ಞೆಯಾಗಿ ಅಂಬೇಡ್ಕರ್ ಅರಳತೊಡಗಿದರು. ಅವರ ಖಚಿತ ಮಾತು, ವಿಶಿಷ್ಟ ಶೈಲಿ, ಅದ್ಭುತ ಪ್ರೌಢಿಮೆ, ವಿಷಯ ಮಂಡನೆ, ಸುತ್ತು ಬಳಸಿಲ್ಲದೆ ಹೇಳುವ ಸ್ಪಷ್ಟಚಿಂತನೆ ಸರಕ್ಕನೆ ಸೆಳೆದುಕೊಂಡಿತು. ದಲಿತ ಸಂಘಟನೆಗಳೊಡನೆಯ ಒಡನಾಟ, ನನ್ನ ಮಾತು-ಭಾಷಣ-ಬರಹಗಳಿಗೆ ಸ್ಪಂದಿಸುತ್ತಿದ್ದ ಹಿರಿಕಿರಿಯ ಜೀವಗಳು ಅಂಬೇಡ್ಕರರನ್ನು ಇನ್ನಷ್ಟು ಹತ್ತಿರ ತಂದರು.  

ಅಂಬೇಡ್ಕರ್ ಯೋಚಿಸಲು ಹಚ್ಚಿದರು. ಏನನ್ನು, ಹೇಗೆ, ಎಷ್ಟು, ಯಾವಾಗ ಹೇಳಬೇಕೆಂದು ಕೈಹಿಡಿದು ಕಲಿಸಿದರು. ಭಾರತೀಯ ಸಮಾಜದ ಚದುರಂಗದ ಮನೆಗಳನ್ನು ಗೆರೆ ಕೊರೆದು ತೋರಿಸಿದರು. ನನ್ನ ಬದುಕಿಗಿಂತ ಸಂಪೂರ್ಣ ಭಿನ್ನ, ದುರ್ಭರ ಅನುಭವಗಳ ಹಲವು ಬದುಕುಗಳಿವೆ ಎಂಬ ವಾಸ್ತವವನ್ನು ಅರ್ಥ ಮಾಡಿಸಿದರು. ಮುದುರಿ ವಿನೀತಗೊಂಡು ಕುಳಿತಿದ್ದ ನನ್ನಾಳದ ಹೆಣ್ಣುಪ್ರಜ್ಞೆಯನ್ನು ಎಚ್ಚರಿಸಿ ಮುಕ್ತಗೊಳಿಸಿದರು. ಮಹಾತ್ಮಾ ಗಾಂಧೀಜಿಯನ್ನು ಗಾಂಧಿಯೆಂಬ ಮನುಷ್ಯನನ್ನಾಗಿ ನೋಡಲು ಕಲಿಸಿದರು. ಹಲವು ಪ್ರಶ್ನೆಗಳಿಗೆ ಉತ್ತರವಾದರು. ಮತ್ತಷ್ಟು ಪ್ರಶ್ನೆಗಳೇಳಲು ಕಾರಣವಾದರು. ಎಲ್ಲಕ್ಕಿಂತ ಮಿಗಿಲಾಗಿ ಬುದ್ಧ ಬೆಳಕಿನೆಡೆಗೆ ಕಿಂಡಿ ತೆರೆದರು.

ಪ್ರಿಯ ಬಾಬಾ ಅಂಬೇಡ್ಕರ್, ನೀವು ನನ್ನ ಗುರು. ನನ್ನ ತಂದೆ ಸಮಾನರು.
ಅಷ್ಟೇ ಅಲ್ಲ, ನಿಮ್ಮ ಕಂಡ ಕಣ್ಣುಗಳಲಿ ಬೆಳಕು ತುಂಬುವ ಸೂರ್ಯಸೊಡರು ನೀವು..

ನೀಲಿ ನಮನ


ಅಂಬೇಡ್ಕರ್ ಜೀವನ ಚರಿತ್ರೆಗಳು ಈವರೆಗೆ ಸಾಕಷ್ಟು ಬಂದಿವೆ. ಎಲ್ಲಾ ಭಾಷೆಗಳಲ್ಲೂ ಬಂದಿವೆ. ಎಲ್ಲ ಪ್ರಮುಖ ಚಿಂತಕರೂ ಅವರ ಚಿಂತನೆಗಳ ಪ್ರಸ್ತುತತೆ, ಹೋರಾಟ, ಬದುಕು-ಸಾಧನೆಯ ಕುರಿತು ಬರೆದಿದ್ದಾರೆ. ವಿದೇಶಿ ವಿದ್ವಾಂಸರೂ ಅಂಬೇಡ್ಕರ್ ಎಂಬ ಫಿನಾಮೆನಾ ಬಗೆಗೆ, ದಲಿತ ಚಳುವಳಿಯ ಬಗೆಗೆ ಬುಡಮಟ್ಟದ ಅಧ್ಯಯನ ನಡೆಸಿದ್ದಾರೆ. ಅವರ ಜೊತೆಗಿನ ಒಡನಾಟದ ಅನುಭವವನ್ನು ಹಲವರು ಹಂಚಿಕೊಂಡಿದ್ದಾರೆ. ಅವರ ಭಾಷಣ, ಬರಹ, ಪ್ರತಿಕ್ರಿಯೆಗಳೆಲ್ಲ ಬೃಹತ್ ಸಂಪುಟಗಳಾಗಿ ಓದಲು ಲಭ್ಯವಿವೆ. ಅವರ ಪ್ರಭಾವ ಯಾರ‍್ಯಾರ ಮೇಲೆ, ಯಾವ್ಯಾವ ಚಳುವಳಿಗಳ ಮೇಲೆ ಹೇಗೆಲ್ಲ ಆಗಿದೆ ಎಂಬ ಕುರಿತು ಅಸಂಖ್ಯ ಅಧ್ಯಯನಗಳಾಗಿವೆ. ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರಗಳಿವೆ. ಅವರು ಇದ್ದ, ಓದಿದ, ನಡೆದಾಡಿದ, ಕೆಲಸ ಮಾಡಿದ, ಭಾಷಣ ಮಾಡಿದ, ಮುಟ್ಟಿದ ತಾಣಗಳೆಲ್ಲ ಇವತ್ತು ಸ್ಮಾರಕಗಳಾಗಿವೆ. ಅವರ ಬಗೆಗೆ ವಿಷಕಾರುವವರು ಎಷ್ಟು ಇದ್ದಾರೋ ಅದಕ್ಕಿಂತ ನೂರುಪಟ್ಟು ಜನ ಅವರನ್ನು ದೇವರೆಂದು ಬಗೆದವರಿದ್ದಾರೆ. ಬಹುಶಃ ವಿಶ್ವದಲ್ಲಿ ಅತಿ ಹೆಚ್ಚು ಸ್ಥಾಪಿಸಲ್ಪಟ್ಟ ಮೂರ್ತಿಗಳು ಅಂಬೇಡ್ಕರರವೇ ಇರಬಹುದು.

ಇಷ್ಟಾದರೂ, ಇಷ್ಟೆಲ್ಲ ಓದಿ ಬರೆದ ನಂತರವೂ ಅಂಬೇಡ್ಕರರನ್ನು ಅನುಸಂಧಾನ ಮಾಡಿಕೊಂಡ ಪ್ರತಿಯೊಬ್ಬ ವ್ಯಕ್ತಿಗೂ ಅವರ ಬಗೆಗೆ ಪದ್ಯವೋ, ಕತೆಯೋ, ನಾಟಕವೋ, ಲೇಖನವೋ, ಚಿತ್ರವೋ ಅಂತೂ ತನಗನಿಸಿದ್ದನ್ನು ತಾನರಿತಂತೆ ದಾಖಲಿಸುವ, ಆ ಮೂಲಕ ಅವರನ್ನು ಇನ್ನಷ್ಟು ಒಳಗಿಳಿಸಿಕೊಳ್ಳುವ ತುಡಿತ ಹುಟ್ಟುತ್ತದೆ.

ಯಾಕೆಂದರೆ ಅಂಬೇಡ್ಕರ್ ಎನ್ನುವುದೊಂದು ವಿಸ್ಮಯ. ನಾನಂತೂ ಆ ವಿಸ್ಮಯಯವನ್ನು ನಿರಂತರ ಒಳಗುಮಾಡಿಕೊಳ್ಳಲು ಯತ್ನಿಸುತ್ತಿದ್ದೇನೆ. ಗೌರವ, ತಕರಾರು, ಕುತೂಹಲ, ಭಕ್ತಿಭಾವ, ವಿಮರ್ಶೆಗಳೊಂದಿಗೆ ಒಂದೇಸಮ ಅವರೊಡನೆ ಮಾತನಾಡುತ್ತೇನೆ. ಅವರ ಎಷ್ಟೋ ಅನುಯಾಯಿಗಳಿಗಿಂತ ಮುಕ್ತ ಮನಸಿನ ವ್ಯಕ್ತಿಯಾಗಿ ಸಂವಾದಕ್ಕೆ ಅವರು ಸಿಗುತ್ತಾರೆ. ಇವತ್ತು ಬಾಬಾ ನೀವಿದ್ದಿದ್ದರೆ ಚಾಟಿಯೇಟಿನಂತಹ ಮಾತುಗಳಿಂದ ಬೂಟಾಟಿಕೆಯ ಈ ಇವರನ್ನೆಲ್ಲ ನಿವಾಳಿಸುತ್ತಿದ್ದಿರಿ; ಸೋಗಲಾಡಿಗಳ ಜಾಲಾಡಿ ಗುಜರಿಗೆ ಕಳಿಸುತ್ತಿದ್ದಿರಿ ಎಂದು ಹೇಳಿಕೊಂಡಿದ್ದೇನೆ.

ಅಂಥ ವಿಸ್ಮಯದ ಚೇತನವನ್ನು ಅಕ್ಷರಗಳಲ್ಲಿ ಮೂಡಿಸುವಾಗ, ಈ ಪುಸ್ತಕ ಆಗುತ್ತಿರುವಾಗ ಅಳುಕು, ಅತೃಪ್ತಿ ತುಂಬಿಕೊಂಡಿದೆ. ಜೊತೆಗೆ ನನ್ನ ಕರ್ತವ್ಯ ಮಾಡುತ್ತಿರುವ ಸಮಾಧಾನವೂ ಇದೆ.

ಬೆಳಗು ತಾ ಬಂದೆನೆಂದು ಉದ್ಘೋಷಿಸಿಕೊಳ್ಳುವುದಿಲ್ಲ, ಕಿರುಚಿ ಹೇಳುವುದೂ ಇಲ್ಲ. ಬೆಳಗು ಆಗುತ್ತದೆ, ಅರಿವಿಗೆ ದಕ್ಕುತ್ತದೆ ಅಷ್ಟೆ. ಕೆಲವು ಚೇತನಗಳು ‘ಮಹಾನ್ ಆಗುವುದು ಈ ಗುಣದಿಂದಲೇ. ಅಂಥದೊಂದು ವ್ಯಕ್ತಿತ್ವ ರೂಪುಗೊಂಡ ಬಗೆಯನ್ನು, ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಭೀಮ ಬೆಳಕಾದ ಬಗೆಯನ್ನು ಇಲ್ಲಿ ಮೂಡಿಸಲು ಯತ್ನಿಸಿದ್ದೇನೆ. 

(ಅಂಬೇಡ್ಕರ್ ಜೀವನ ಚರಿತ್ರೆ `ವಿಮೋಚಕನ ಹೆಜ್ಜೆಗಳು'ವಿಗೆ ಬರೆದ ಲೇಖಕರ ಅರಿಕೆ ಮಾತು.)

Sunday, 4 March 2018

ಮಹಿಳಾ ದಿನ: ಕ್ರಾಂತಿ ಕೆಂಡ ದೀಪವಾಗಬೇಕು ಅಕ್ಕಾ..




ಜಗತ್ತಿನ ಎಲ್ಲ ಸಮಾಜಗಳಲ್ಲಿ ದಮನಿತ ವರ್ಗವಾಗಿಯೇ ಉಳಿದು ಬಂದವರು ಮಹಿಳೆಯರು. ದನಿಯಿರದವರಿಗೆ ದನಿ ಕೊಟ್ಟು ಜಾಗೃತಿ ಮೂಡಿಸಿ, ಹಕ್ಕುಗಳ ಪಡೆಯುವ ಹೋರಾಟ ಕಟ್ಟುತ್ತ ಮಹಿಳಾ ಚಿಂತನೆ, ಚಳುವಳಿ ಬೆಳೆದಿದೆ. ಪ್ರಪಂಚದ ಬಹುಪಾಲು ದೇಶಗಳಲ್ಲಿ ಸಂಭವಿಸಿದ ಮಹಿಳಾ ಹೋರಾಟಗಳು ಅವರಲ್ಲಿ ಹೊಸ ಕನಸುಗಳನ್ನು ಬಿತ್ತಿ ಬದಲಾವಣೆಯ ಪ್ರಯತ್ನಗಳಿಗೆ ನಾಂದಿ ಹಾಡಿವೆ. ಒಂದು ಶತಮಾನಕ್ಕೂ ಮಿಗಿಲಾದ ಇತಿಹಾಸವಿರುವ ಭಾರತದ ಮಹಿಳಾ ಚಳುವಳಿ, ಹೋರಾಟದ ಪ್ರತಿಫಲವಾಗಿ ಈಗ ಎಲ್ಲ ಜನಪರ ಚಳುವಳಿಗಳಲ್ಲಿ, ಎಲ್ಲ ರಂಗಗಳಲ್ಲಿ ಸ್ಫೂರ್ತಿದಾಯಕ ಮಹಿಳಾ ಮಾದರಿಗಳು ಕಂಡುಬರುತ್ತಿವೆ. ಇವತ್ತು ಭಾರತದಲ್ಲಿ ಎಲ್ಲ ಪಕ್ಷಗಳಲ್ಲೂ ಮಹಿಳಾ ಘಟಕಗಳಿವೆ. ಎಲ್ಲ ಸಂಘಟನೆಗಳಲ್ಲೂ ಮಹಿಳಾ ಸದಸ್ಯೆಯರಿದ್ದಾರೆ.

ಆದರೆ ರಾಜಕೀಯ ರಂಗವೇ ಇರಲಿ, ಸಮಸಮಾಜದ ಉದಾತ್ತ ಗುರಿ ಹೊತ್ತ ಚಳುವಳಿಗಳೇ ಆಗಲಿ, ಮಹಿಳೆಯರ ನಾಯಕತ್ವ ಎಷ್ಟಿದೆ ಎಂದು ಹುಡುಕಹೊರಟರೆ ನಿರಾಸೆಯಾಗುತ್ತದೆ. ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಲಿಂಗ ಸಮಾನತೆಯನ್ನು ಆಚರಣೆಗೆ ತರುವುದರಲ್ಲಿ ಪ್ರಭುತ್ವ, ಸಮಾಜಗಳು ದೂರವೇ ಉಳಿದಿರುವುದು ಕಂಡುಬರುತ್ತದೆ.

ಕೇರಳ ಭಾರತದ ಮುಂದುವರಿದ, ಮಾನವ ಅಭಿವೃದ್ಧಿ ಸೂಚ್ಯಂಕಗಳು ಉತ್ತಮವಾಗಿರುವ ಅಕ್ಷರಸ್ಥರ ರಾಜ್ಯ. ಅಲ್ಲಿ ಎಡಪಂಥೀಯ ಆಲೋಚನೆಗಳು ಬದುಕಿನ ಕ್ರಮವೇ ಆಗಿ ಹಾಸು ಹೊಕ್ಕಾಗಿವೆ. ಸ್ವತಂತ್ರ ಬಂದಾಗಿನಿಂದ ಹೆಚ್ಚುಕಮ್ಮಿ ಎಡಪಂಥೀಯ ಪಕ್ಷಗಳೇ ಆಳ್ವಿಕೆ ನಡೆಸಿವೆ. ಅಲ್ಲಿ ಅತಿ ಹೆಚ್ಚು ಕಾರ್ಮಿಕ ಸಂಘಟನೆಗಳಿವೆ. ಆದರೆ ಅವೆಲ್ಲದರಲ್ಲೂ ಮಹಿಳಾ ಪ್ರಾತಿನಿಧ್ಯ ಹೇಗಿದೆ? ವರ್ಗ ಸಮಾನತೆಯ ಮಾತುಗಳು ಕೇಳುವಲ್ಲಿ ಲಿಂಗ ಸಮಾನತೆ ಸಾಕಾರವಾಗಿದೆಯೆ? ಎಂಬ ಪ್ರಶ್ನೆಗಳು ಎಡಬಲಗಳ ರಕ್ತಸಿಕ್ತ ಕದನ ಶುರುವಾಗಿರುವ ಪ್ರಸಕ್ತ ಕಾಲದಲ್ಲಿ ಅಸಮಂಜಸ ಎನಿಸಬಹುದಾದರೂ, ಕಳೆದ ದಶಕದ ಬೆಳವಣಿಗೆಗಳು ಈ ಕುರಿತು ಗಮನ ಸೆಳೆಯುವಂತಿವೆ. ಕೇರಳದಲ್ಲಿ ಆಳವಾಗಿರುವ ಲಿಂಗತಾರತಮ್ಯ, ಮಹಿಳಾ ದೌರ್ಜನ್ಯ, ಸ್ತ್ರೀವಾದ ಕುರಿತ ತಪ್ಪು ಅಭಿಪ್ರಾಯಗಳು ಮಹಿಳೆಯರು ಸಂಘಟಿತರಾಗಿ ಮಾತನಾಡತೊಡಗಿದಮೇಲೆ ತಿಳಿದುಬರುತ್ತಿವೆ.

ತಾರತಮ್ಯವನ್ನು ಹುಟ್ಟಿದಾಗಿನಿಂದ ಅನುಭವಿಸುವ ಹೆಣ್ಣುಮನಸುಗಳು ಸದಾ ಬಂಡೆದ್ದ ಸ್ಥಿತಿಯಲ್ಲಿ, ಅದನ್ನು ಹತ್ತಿಕ್ಕಲ್ಪಟ್ಟ ಅವಸ್ಥೆಯಲ್ಲಿರುತ್ತವೆ. ಅದರಲ್ಲೂ ಶ್ರಮದ ದುಡಿಮೆಗೊಳಗಾಗುವ ಹೆಣ್ಮಕ್ಕಳು ಇಮ್ಮುಖ ಶ್ರಮಕ್ಕೆ ಈಡಾಗಿ ಆಕ್ರೋಶಗೊಂಡಂತೆ ಇರುತ್ತಾರೆ. ತಮ್ಮ ಅಸಹಾಯಕ ಘಳಿಗೆಗಳಲ್ಲಿ ಬೆಂಬಲ ನೀಡುವ ಸಂಘಟನೆ, ಮುಖಂಡರು ಕೂಡಾ ಲಿಂಗ ಪ್ರಶ್ನೆಯನ್ನೆತ್ತಿಕೊಳ್ಳದೇ ಹೋದಾಗ ಹೆಣ್ಣುಮನಸುಗಳು ಬಂಡೇಳುತ್ತವೆ. ಮಹಿಳಾ ಕಾರ್ಮಿಕರೇ ಪ್ರತ್ಯೇಕವಾಗಿ ಸಂಘಟನೆ ಕಟ್ಟಬೇಕಾಗುತ್ತದೆ.

ಹಾಗೆ ಮಹಿಳೆಯರೇ ಮುಂದಾಗಿ ಸಂಘಟನೆ ಕಟ್ಟುವುದರ ಏಳುಬೀಳುಗಳು, ಸವಾಲುಗಳು ಕಡಿಮೆಯದಲ್ಲ. ಆ ಕುರಿತು ತಿಳಿಯಲು ಕೇರಳದ ಕೋಯಿಕ್ಕೋಡ್ ಮತ್ತು ಮನ್ನಾರ್‌ನಲ್ಲಿ ರೂಪುಗೊಂಡ ಮಹಿಳಾ ಕಾರ್ಮಿಕ ಸಂಘಟನೆಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.

ಪೆಣ್ ಕೂಟ್ಟು- ಅಸಂಘಡಿತ ಮಗಿಳಾ ತೊಳಿಲಾಲಿ ಯೂನಿಯನ್ - (ಎಎಂಟಿಯು)

ಕೇರಳದ ಮೊದಲ ಮಹಿಳಾ ಕಾರ್ಮಿಕ ಸಂಘಟನೆ ಕೋಯಿಕ್ಕೋಡಿನ ‘ಅಸಂಘಡಿತ ಮೆಗಳಾ ತೊಳಿಲಾಲಿ ಯೂನಿಯನ್ (ಎಎಂಟಿಯು). ೨೦೦೯ರಿಂದಲೇ ‘ಪೆಣ್ ಕೂಟ್ಟು’ ಹೆಸರಿನಲ್ಲಿ ಮಹಿಳಾ ಪರ ಹೋರಾಟಗಳ ಕೈಗೆತ್ತಿಕೊಂಡ ಅದು ೨೦೧೬ರಲ್ಲಿ ನೋಂದಾಯಿಸಲ್ಪಟ್ಟಿತು. ಪೆಣ್ ಕೂಟ್ಟು ಈವರೆಗೆ ನಡೆದ ಹಾದಿ ಸ್ಫೂರ್ತಿದಾಯಕವಾಗಿದೆ.

ಕೋಯಿಕ್ಕೋಡಿನಲ್ಲಿ ‘ಮಿಠಾಯಿ ಬೀದಿ’ ಇದೆ. ಅದು ಪಟ್ಟಣದ ಹಳೆಯ, ಜನನಿಬಿಡ, ವ್ಯಾಪಾರಿ ಸ್ಥಳ. ರಸ್ತೆ ಬದಿಯಿದ್ದ ಗೂಡಂಗಡಿಗಳು, ದೂಡಂಗಡಿಗಳು ಎತ್ತಂಗಡಿಯಾಗಿ ಮಾಲ್‌ಗಳು ಮೇಲೆದ್ದು ನಗರದ ಚಹರೆ ಬದಲಾಗುವಾಗ ಮಿಠಾಯಿ ಬೀದಿಯ ಏಕೈಕ ‘ಪೇ ಅಂಡ್ ಯೂಸ್’ ಟಾಯ್ಲೆಟ್ ಮುಚ್ಚಿ ಹೋಯಿತು. ಅಲ್ಲಿದ್ದ ದುಡಿಯುವ ಮಹಿಳೆಯರ ಪಾಲಿಗದು ಕೆಟ್ಟ ಸುದ್ದಿ. ಆಗ ಅದೇ ಬೀದಿಯಲ್ಲಿ ಟೈಲರ್ ಆಗಿದ್ದ ಪಿ. ವಿಜಿ ಶೌಚಾಲಯ ತೆರವಿನ ವಿರುದ್ಧ ಟೊಂಕಕಟ್ಟಿ ನಿಂತರು. ಬೀದಿಯ ಹೆಣ್ಮಕ್ಕಳನೆಲ್ಲ ಸೇರಿಸಿ ಪ್ರತಿಭಟನೆ ನಡೆಸಿದರು. ‘ಪೆಣ್ ಕೂಟ್ಟು’ ಅಸ್ತಿತ್ವಕ್ಕೆ ಬಂತು. ಆ ಬೀದಿಯಲ್ಲಿದ್ದ ಸ್ವಚ್ಛತೆ ಕೆಲಸ ಮಾಡುವವರು, ಟೈಲರುಗಳು, ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ವುಮೆನ್ ಆಗಿರುವವರು ಅವರ ಜೊತೆ ಬಂದರು. ‘ರೈಟ್ ಟು ಪೀ’ (ಉಚ್ಚೆಹೊಯ್ಯುವ ಹಕ್ಕು) ಚಳುವಳಿ ಶುರುವಾಯಿತು. ಆ ಹೆಣ್ಮಕ್ಕಳು ಅಂಗಡಿ ಮಾಲೀಕರು, ಗೂಂಡಾಗಳನ್ನಷ್ಟೇ ಅಲ್ಲ, ಕೇರಳದ ಬಲಿಷ್ಠ ಟ್ರೇಡ್ ಯೂನಿಯನ್ನುಗಳನ್ನೂ ಎದುರು ಹಾಕಿಕೊಂಡಿದ್ದರು. ಆ ಹೊತ್ತಿನಲ್ಲಿ ವಿಜಿ ಸಹಾಯಕ್ಕೆ ನಿಂತವರು ‘ನಕ್ಸಲ್ ಮಹಿಳೆ’ ಅಜಿತಾ.


(ಪಿ. ವಿಜಿ)
ಕೊನೆಗೆ ಇವರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾಡಳಿತ ಆ ಶೌಚಾಲಯ ಉಳಿಸಿತು, ಅಷ್ಟೇ ಅಲ್ಲ ಮತ್ತೂ ೧೦ ಶೌಚಾಲಯಗಳನ್ನು ತೆರೆಯಿತು. ಅಸಂಘಟಿತ ವಲಯದ ಮಹಿಳೆಯರ ಹಕ್ಕು ಮತ್ತು ಸಮಸ್ಯೆಗಳ ಕುರಿತು ಚರ್ಚೆ ಶುರುವಾಯಿತು. ಬಟ್ಟೆ ಅಂಗಡಿಗಳಲ್ಲಿ ಸೇಲ್ಸ್ ವುಮೆನ್ ದಿನಕ್ಕೆ ೮ರಿಂದ ೧೨ ತಾಸು ನಿಂತೇ ಕೆಲಸ ಮಾಡಬೇಕಿತ್ತು. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿತ್ತು. ಅಲ್ಲದೇ ಕೆಲಸ ಅಭದ್ರತೆಯದಾಗಿತ್ತು. ಆರೋಗ್ಯ ತಪ್ಪಿ ಕೆಲವೇ ದಿನ ರಜೆ ಮಾಡಿದರೂ ಕೆಲಸ ಹೋಗುತ್ತಿತ್ತು. ದಿನಗೂಲಿ ಬರೀ ೫೦ರಿಂದ ೭೦ ರೂಪಾಯಿ. ಇಂತಹ ಬಟ್ಟೆ ಅಂಗಡಿಗಳ ವಿರುದ್ಧ, ಅದರಲ್ಲೂ ಕಲ್ಯಾಣ್ ಸ್ಯಾರೀಸ್ ಮಳಿಗೆಗಳ ವಿರುದ್ಧ ಪೆಣ್ ಕೂಟ್ಟುವಿನ ಐವರು ಸದಸ್ಯರು ೨೦೧೪ನೇ ಡಿಸೆಂಬರ್‌ನಲ್ಲಿ ಧರಣಿ ಕೂತರು. ೧೦೦ ದಿನಕ್ಕಿಂತ ಹೆಚ್ಚು ಕಾಲ ಮುಷ್ಕರ ನಡೆಯಿತು. ಕೊನೆಗೆ ಕೇರಳದ ಅಂಗಡಿ-ವಾಣಿಜ್ಯ ಮುಂಗಟ್ಟುಗಳ ೧೯೬೦ರ ಕಾಯ್ದೆಗೆ ತಿದ್ದುಪಡಿ ತಂದು ಬಟ್ಟೆ ಅಂಗಡಿಗಳಲ್ಲಿ ಕೂರುವ ವ್ಯವಸ್ಥೆ ಆಯಿತು. ದಿನಗೂಲಿ ೧೦೦ ರೂಪಾಯಿ ಮಾಡಲಾಯಿತು.

ಈ ಯಶಸ್ಸಿನಿಂದ ಸ್ಫೂರ್ತಿಗೊಂಡು ಪೆಣ್ ಕೂಟ್ಟು ಕೆಲಸ ಮುಂದುವರೆಸಿತು. ಬೀದಿಯಲ್ಲಿ ನಡೆಯುತ್ತಿದ್ದ ಚುಡಾಯಿಸುವಿಕೆ, ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತಿತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಒಂದು ವಾರ ‘ಕೂಟ್ಟು’ವಿನ ೧೦ ಮಹಿಳೆಯರ ಗುಂಪು ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಮಕ್ಕಳನ್ನು ಚುಡಾಯಿಸುವ, ದೌರ್ಜನ್ಯ ನಡೆಸುವ ಪುಂಡರನ್ನು ಅಲ್ಲಲ್ಲೇ ಹಿಡಿದು ಪೋಲೀಸರಿಗೊಪ್ಪಿಸಿತು. ಕೆಲವೆಡೆ ಅವರ ಮೇಲೇ ಗೂಂಡಾಗಳು ದಾಳಿ ಮಾಡಿದರು.

೨೦೧೧ರಲ್ಲಿ ಸಂಘಟನೆಯಾಗಿ ರೂಪುಗೊಂಡರೂ ಪೆಣ್ ಕೂಟ್ಟು ರಿಜಿಸ್ಟರ್ ಆಗಿರಲಿಲ್ಲ. ೨೦೧೨ರಲ್ಲಿ ಪ್ರಯತ್ನಿಸಿದರೂ ತಾಂತ್ರಿಕ ಕಾರಣಗಳಿಗಾಗಿ ತಿರಸ್ಕೃತವಾಗಿತ್ತು. ೨೦೧೩ರಲ್ಲಿ ಅನಿಮಾ ಮುಯರತ್ ಎಂಬ ಯುವವಕೀಲೆ ಕೋಯಿಕ್ಕೋಡ್‌ಗೆ ಬಂದರು. ಕೇರಳದ ನ್ಯಾಯಾಲಯಗಳಲ್ಲಿ ಅನುಭವಕ್ಕೆ ಬಂದ ಲಿಂಗಅಸೂಕ್ಷ್ಮತೆಯ ನಡೆಗಳಿಗೆ ಆಕೆ ಬೆಚ್ಚಿಬಿದ್ದರು. ಪೆಣ್ ಕೂಟ್ಟುವಿನ ಚಟುವಟಿಕೆ ಅವರ ಗಮನ ಸೆಳೆಯಿತು. ಅದು ನೋಂದಾವಣಿ ಆಗದೇ ರಿಜಿಸ್ಟರ್ ಆಫೀಸಿನಲ್ಲಿ ರಗಳೆಯಾಗುತ್ತಿದ್ದದ್ದು ತಿಳಿಯಿತು. ಜುಲೈ ೨೦೧೫ರಲ್ಲಿ ನೋಂದಾವಣೆಗಾಗಿ ಮತ್ತೆ ಅರ್ಜಿ ಸಲ್ಲಿಸಿದರು. ‘ಅಸಂಘಟಿತ’ ಪದ ಚರ್ಚೆಗೊಳಗಾಯಿತು. ಆ ಪದವನ್ನು ವ್ಯಾಖ್ಯಾನಿಸಲು ಬರುವುದಿಲ್ಲ, ಗುರುತಿಸಲೂ ಸಾಧ್ಯವಾಗುವುದಿಲ್ಲ; ಅದಕ್ಕಿಂತ ‘ಬಟ್ಟೆ ಅಂಗಡಿ ಕೆಲಸಗಾರರ ಸಂಘ’, ‘ಮಾಲ್ ಕೆಲಸಗಾರರ ಸಂಘ’ದಂತಹ ಖಚಿತ ಪದ ಬೇಕು ಎಂದು ಹೇಳಿದರು. ಕೊನೆಗೆ ಮಹಿಳೆಯರೇ ಇರುವ ಯೂನಿಯನ್ ನೋಂದಾಯಿಸಲು ಬರುವುದಿಲ್ಲ ಎಂದು ತಕರಾರು ತೆಗೆದರು! ಆಗ ೧೯೭೨ರಲ್ಲಿ ನೋಂದಾಯಿಸಲ್ಪಟ್ಟ ‘ಸೆಲ್ಫ್ ಎಂಪ್ಲಾಯ್ಡ್ ವಿಮೆನ್ಸ್ ಅಸೋಸಿಯೇಷನ್’ (ಸೇವಾ) ನೋಂದಣಿ ಕುರಿತು ಹೇಳಬೇಕಾಯಿತು. ಕೊನೆಗಂತೂ ೨೦೧೬ ಜನವರಿಯಲ್ಲಿ ಸಂಘಟನೆ ನೋಂದಣಿಯಾಯಿತು.

ಈ ಎಲ್ಲ ಆಗುಹೋಗುಗಳ ಸಮಯದಲ್ಲಿ ಯೂನಿಯನ್ನುಗಳು ಅವರನ್ನು ಬೆಂಬಲಿಸಲೂ ಇಲ್ಲ, ಗಂಭೀರವಾಗಿ ಪರಿಗಣಿಸಲೂ ಇಲ್ಲ.

ಈಗದಕ್ಕೆ ೧೦ ಸಾವಿರಕ್ಕಿಂತ ಹೆಚ್ಚು ಸದಸ್ಯೆಯರಿದ್ದಾರೆ. ಬಟ್ಟೆ ಅಂಗಡಿ, ನರ್ಸಿಂಗ್, ಅಂಗನವಾಡಿ-ಕುಡುಂಬಶ್ರೀ ಕಾರ್ಯಕರ್ತೆ ಮಹಿಳೆಯರು ಅದರ ಸದಸ್ಯೆಯರಾಗಿದ್ದಾರೆ. ಗಂಡಸರೂ ಸದಸ್ಯರಾಗಿದ್ದಾರೆ. ಕಾರ್ಯಕಾರಿ ಸಮಿತಿಯಲ್ಲಿ ೭೫% ಹೆಣ್ಮಕ್ಕಳಿದ್ದಾರೆ. ಅದರ ಮುಂದಾಳು ಪಿ. ವಿಜಿ, ‘ಸ್ತ್ರೀ ಪುರುಷರ ನಡುವೆ ವೇತನ ತಾರತಮ್ಯ ತೀವ್ರವಾಗಿದೆ. ಗಂಡಸರಿಗೆ ನಮಗಿಂತ ಎರಡರಷ್ಟು ಸಂಬಳ ಕೊಡುತ್ತಾರೆ. ಕುಟುಂಬವನ್ನು ಪೋಷಿಸುವವಳೇ ಮಹಿಳೆಯಾದರೂ ಅಧಿಕಾರವೆಲ್ಲ ಗಂಡಸಿನ ಕೈಯಲ್ಲಿ. ಹೆಣ್ಣಿಗೆ ಅಧಿಕಾರ ಇಲ್ಲದಿರುವುದೇ ಶೋಷಣೆಯ ಮೂಲವಾಗಿದೆ. ಹೆಣ್ಣುಮಕ್ಕಳಿಗೆ ಎಲ್ಲ ಸ್ತರಗಳಲ್ಲೂ ಅಧಿಕಾರ ಕೊಡಿಸಲೆಂದೇ ನಾವು ಹೋರಾಡುತ್ತಿದ್ದೇವೆ’ ಎನ್ನುತ್ತಾರೆ.

ಕೇರಳದಾದ್ಯಂತ ಪೆಣ್ ಕೂಟ್ಟು ಹಲವು ಮಹಿಳೆಯರಿಗೆ ಸ್ಫೂರ್ತಿಯಾಗಿದೆ.

ಪೆಂಬಿಲೈ ಒರುಮೈ


(ಲಿಜಿ ಸನ್ನಿ)
ಕೇರಳದ ಮನ್ನಾರ್ ಪ್ರವಾಸಿ ಕೇಂದ್ರವಾಗಿ, ದಕ್ಷಿಣದ ನಾಲ್ಕು ರಾಜ್ಯಗಳ ಶ್ರಮಿಕರನ್ನು ಸೆಳೆಯುವ ಚಹಾ ತೋಟಗಳಿಗಾಗಿ ಪ್ರಸಿದ್ಧ. ಅಲ್ಲಿರುವ ೧೩ ಸಾವಿರ ಚಹ ಕಾರ್ಮಿಕರಲ್ಲಿ ಬಹುಪಾಲು ಹೆಣ್ಮಕ್ಕಳೇ ಇದ್ದಾರೆ. ಮನ್ನಾರಿನಲ್ಲಿರುವ ಟಾಟಾ ಟೀ ನಿಯಂತ್ರಣದ ಕಣ್ಣನ್ ದೇವನ್ ಟೀ ಕಂಪನಿ (ಕೆಡಿಟಿಸಿ)ಯ ಮಹಿಳಾ ಕಾರ್ಮಿಕರು ೨೦೧೫ ಸೆಪ್ಟೆಂಬರಿನಲ್ಲಿ ೯ ದಿನಗಳ ಕಾಲ ಕೇರಳದ ಪ್ರವಾಸಿ ತಾಣ ಮನ್ನಾರ್ ಸ್ಥಬ್ಧವಾಗುವಂತೆ ಮಾಡಿದರು. ಕೆಡಿಟಿಸಿಯ ಆಡಳಿತವಾಗಲೀ, ಐಟಕ್, ಇಂಟಕ್, ಸಿಐಟಿಯು ಮೊದಲಾದ ಟ್ರೇಡ್ ಯೂನಿಯನ್ನುಗಳಾಗಲೀ ಸ್ವಲ್ಪವೂ ನಿರೀಕ್ಷಿಸದಿದ್ದ ಹಾಗೆ ಮಹಿಳಾ ಕಾರ್ಮಿಕ ಸಂಘಟನೆ ‘ಪೆಂಬಿಲೈ ಒರುಮೈ’ ಕಟ್ಟಿಯೇಬಿಟ್ಟರು.

ಕಷ್ಟದ ದುಡಿಮೆ, ಕಾರ್ಮಿಕ ನಾಯಕರ ನಿರ್ಲಕ್ಷ್ಯ ಮತ್ತು ಸೂಕ್ತ ವೇತನ ನಿರಾಕರಣೆ ಈ ಬಂಡೇಳುವಿಕೆಗೆ ಕಾರಣವಾಗಿತ್ತು.

ಚಹಾ ಕಾರ್ಮಿಕರ ಕೆಲಸ ಕಷ್ಟದ್ದು, ಅಪಾಯದ್ದು. ದೂರದೂರದ ಬೆಟ್ಟಗಳ ಮೇಲಿನ ಚಹಾ ತೋಟಗಳಲ್ಲಿ ಬೆಳಿಗ್ಗೆ ೮ರಿಂದ ಸಂಜೆ ೫ರ ತನಕ ಚಳಿಯ ನಡುವೆ ಎಲೆ ಕೀಳಬೇಕು. ೭೫-೧೦೦ ಕೆಜಿ ಭಾರದ ಚೀಲಗಳ ಹೊತ್ತು ಬೆಟ್ಟವಿಳಿದು ಬರಬೇಕು. ನಡುವೆ ೧೨ ಗಂಟೆಯಿಂದ ೧ ಗಂಟೆಯವರೆಗೆ ವಿರಾಮವಿದ್ದರೂ ಬೆಳಿಗ್ಗೆಯೇ ಒಯ್ದ, ತಣ್ಣಗೆ ಕೊರೆಯುವ ಊಟವನ್ನೇ ಉಣಬೇಕು. ಜಿಗಣೆ-ಚಿರತೆ-ಆನೆ-ಹಾವುಗಳ ಕಾಟ, ಮಳೆ-ಚಳಿಯೆನದೆ ಕೆಲಸ, ಮೈಯೆಲ್ಲ ಗೀರು ಗಾಯ. ಚಿಕನ್, ಮೀನು ಎರಡೂ ಮನ್ನಾರಿನಲ್ಲಿ ತುಟ್ಟಿ. ಬರೀ ಅನ್ನ ಬೇಳೆಸಾರನ್ನೇ ತಿಂದು ಬಹುಪಾಲು ಕಾರ್ಮಿಕರು ಅಪೌಷ್ಟಿಕತೆ, ರಕ್ತಹೀನತೆಯಿಂದ ಬಳಲುತ್ತಿದ್ದರು. ೧೪, ೧೫ ವರ್ಷವಾಗುವುದರಲ್ಲಿ ಕೆಲಸಕ್ಕೆ ಸೇರಿ, ೫೮ ವರ್ಷಕ್ಕೆ ನಿವೃತ್ತಿಯಾಗುವವರೆಗೂ ದುಡಿದು, ನಾನಾ ಕಾಯಿಲೆಗಳಿಗೆ ತುತ್ತಾಗುವವರೇ ಹೆಚ್ಚು. ಕನಿಷ್ಟ ದಿನಕೂಲಿ ೨೩೨ ರೂಪಾಯಿ ಸಿಗಲು ಪ್ರತಿದಿನ ಕನಿಷ್ಟ ೨೧ ಕೆಜಿ ಎಲೆ ಕೊಯ್ಯಬೇಕು. ನಂತರ ಪ್ರತಿ ಹೆಚ್ಚುವರಿ ಕೆಜಿಗೆ ೫೦ ಪೈಸೆಯಿಂದ ೨ ರೂಪಾಯಿ ತನಕ ಹೆಚ್ಚುವರಿ ಹಣ. ೧೦೦ ಕೆಜಿ ಕಿತ್ತರೂ ದಿನದ ಗರಿಷ್ಠ ದುಡಿಮೆ ೩೦೮ ರೂಪಾಯಿ.

ಹೀಗೆ ರಕ್ತ ಬೆವರಾಗಿಸಿ ದುಡಿದರೂ, ಕಂಪನಿ ನಷ್ಟದಲ್ಲಿದೆಯೆಂದು ಕಾರ್ಮಿಕರಿಗೆ ೩ ವರ್ಷದಿಂದ ಸಂಬಳ ಏರಿಸಿರಲಿಲ್ಲ. ನಷ್ಟದ ಕಾರಣ ಹೇಳಿ ಬೋನಸ್ ಅನ್ನು ೧೯% ನಿಂದ ೧೦%ಗೆ ಇಳಿಸಲಾಗಿತ್ತು. ೧೭ ದಿನ ಮುಷ್ಕರ ನಡೆದು, ಆರು ಸಲ ಮಾತುಕತೆ ನಡೆದಿದ್ದರೂ ಕಾರ್ಮಿಕ ನಾಯಕರು ಮಹಿಳೆಯರನ್ನು ಸಭೆಗೆ ಕರೆದೊಯ್ದಿರಲಿಲ್ಲ. ದಿನದ ಕನಿಷ್ಟ ಸಂಬಳ ೫೦೦ ರೂ ಕೇಳಿದ್ದರೆ, ಯೂನಿಯನ್‌ನವರು ೩೦೧ ರೂಪಾಯಿಗೆ ಒಪ್ಪಿ ಮುಷ್ಕರ ನಿಲಿಸಿದರು. ಇದು ಕಾರ್ಮಿಕರಿಗೆ ಯೂನಿಯನ್ ನಾಯಕರು ಬಗೆದ ದ್ರೋಹ ಎನಿಸಿತು.

ಅದರಲ್ಲೂ ಮಹಿಳೆಯರು ತೀರಾ ಸಿಟ್ಟಿಗೆದ್ದರು. ಬೇಡಿಕೆಯ ಅರ್ಧದಷ್ಟು ಬೋನಸ್ ಎಂದಾಗ ಕೆರಳಿಹೋದರು. ಸಿಐಟಿಯುನ ಲಿಜಿ ಸನ್ನಿ, ಇಂಟಕ್‌ನ ಗೋಮತಿ ಅಗಸ್ಟಿನ್, ರಾಜೇಶ್ವರಿ, ಎಂ. ಇಂದ್ರಾಣಿ ಮೊದಲಾದವರು ಈ ನಿರ್ಧಾರದ ವಿರುದ್ಧ ಹೆಣ್ಮಕ್ಕಳ ಸಂಘಟನೆ ಕಟ್ಟಿದರು. ೨೦% ಆದರೂ ಬೋನಸ್ ಕೊಡಲೇಬೇಕೆಂದು ಮುಷ್ಕರ ಹೂಡಲು ನಿರ್ಧರಿಸಿದರು. ‘ಟ್ರೇಡ್ ಯೂನಿಯನ್ ನಾಯಕರು ಮಾಲೀಕರೊಡನೆ ಶಾಮೀಲಾಗಿ ದ್ರೋಹ ಬಗೆಯುತ್ತಿದ್ದಾರೆ. ಕಂಪನಿ ವತಿಯಿಂದ ಅವರಿಗೆ ಉಚಿತವಾದ ಉತ್ತಮ ಮನೆ, ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಇದೆ. ಅವರ ಮಕ್ಕಳಿಗೆ ಅಲ್ಲೇ ಕೆಲಸವೂ ಸಿಗುತ್ತದೆ. ಕಾರ್ಮಿಕ ನಾಯಕರಿಗೆ ಮೂವತ್ತಕ್ಕಿಂತ ಹೆಚ್ಚು ಉತ್ತಮ ಮನೆಗಳನ್ನು ಕೊಟ್ಟಿದ್ದರೆ ಕಾರ್ಮಿಕರಿಗೆ ಒಂದೇ ಕೋಣೆಯ ಮನೆಗಳು. ಕೆಲವು ನೂರು ವರ್ಷಕ್ಕಿಂತ ಹಿಂದೆ ಕಟ್ಟಿರುವಂಥವು. ಪ್ರತ್ಯೇಕ ಶೌಚಾಲಯವೂ ಇರದ ಸಾರ್ವಜನಿಕ ಶೌಚ ವ್ಯವಸ್ಥೆ ಹೊಂದಿರುವಂಥವು. ಕಾರ್ಮಿಕರಿಗೆ ಉಚಿತವಾಗಿ ಎಲ್ಲ ಕೊಡುತ್ತೇವೆನ್ನುತ್ತಾರೆ. ಆದರೆ ಎಲ್ಲದಕ್ಕು ಕಾಸು ಕೀಳುತ್ತಾರೆ. ೩ ತಿಂಗಳಿಗೆ ೭೫ ಕೆಜಿ ಅಕ್ಕಿ ಕೊಟ್ಟರೂ ಅದಕ್ಕೆ ಕಂಪನಿ ೭೫೦ ರೂಪಾಯಿ ಹಿಡಿದುಕೊಳ್ಳುತ್ತದೆ. ಸಂಬಳ ನಾಕು ಕಾಸು ಏರಿಸಿ, ಕಾರ್ಮಿಕರನ್ನು ತಣ್ಣಗಾಗಿಸಿ, ಕಾರ್ಮಿಕ ನಾಯಕರು ಕಂಪನಿಯಿಂದ ಪೂರ್ತಿ ಲಾಭ ಪಡೆಯುತ್ತಾರೆ’ ಎಂಬ ಕಟುವಾಸ್ತವ ಲಿಜಿ ಮತ್ತಿತರರಿಗೆ ಅರಿವಾಯಿತು. ಸಹಕಾರ್ಮಿಕರೆದುರು, ಮಾಧ್ಯಮದೆದುರು, ಜನರೆದುರು ಇವೆಲ್ಲ ಒಳಸುಳಿಗಳನ್ನು ವಿವರವಾಗಿ ಬಿಚ್ಚಿಟ್ಟರು.


ಮನ್ನಾರ್ ಆಡಳಿತ ಕಚೇರಿಯೆದುರು ಮುಷ್ಕರ ಶುರುವಾಯಿತು. ಮೊದಲು ಕೆಲವೇ ಜನರಿದ್ದರೂ ದಿನಗಳೆದಂತೆ ಸಾವಿರಾರು ಮಹಿಳಾ ಕಾರ್ಮಿಕರು ಬಂದರು. ಬೇರೆಬೇರೆ ಕಾರ್ಮಿಕ ಸಂಘಟನೆಗಳಿಗೆ, ರಾಜಕೀಯ ಪಕ್ಷಗಳಿಗೆ ಸೇರಿದ ಎಲ್ಲ ಮಹಿಳೆಯರೂ ಒಟ್ಟಾದರು. ಕೊಚ್ಚಿ - ಧನುಷ್ಕೋಟಿ ರಾಷ್ಟ್ರೀಯ ಹೆದ್ದಾರಿ ಮುಚ್ಚಿದರು. ಮನ್ನಾರಿಗೆ ಬಂದಿಳಿದ ಸಾವಿರಾರು ಮಹಿಳೆಯರ ಕಾರಣವಾಗಿ ಪ್ರವಾಸೋದ್ಯಮ ಬಂದ್ ಆಯಿತು. ಜನಜೀವನ ಅಸ್ತವ್ಯಸ್ತಗೊಂಡಿತು. ಮೊದಲು ಯೂನಿಯನ್ನುಗಳು ಹೆದರಿಸಿದವು. ‘ಬರೀ ಹೆಣ್ಣೆಂಗುಸ್ರೆ ಅದೇನ್ ಮಾಡ್ತೀರಿ? ನಿಮ್ಮ ಹಿಂದೆ ಗಂಡಸ್ರು ಇಲ್ದಿದ್ರೆ ಏನೂ ಮಾಡಕಾಗಲ್ಲ, ತಿಳ್ಕಳಿ’ ಎಂದರು. ‘ಹೋರಾಡ್ತಾರಂತೆ ಹೋರಾಟ’ ಅಂದು ಲೇವಡಿ ಮಾಡಿದರು. ‘ಮುಷ್ಕರ ಯಶಸ್ವಿಯಾಗಿ ಬೋನಸ್ ಸಿಕ್ಕಿಬಿಟ್ಟರೆ ಅರ್ಧ ಮೀಸೆ ಬೋಳಿಸ್ತೇವೆ’ ಎಂದು ಕೆಲವರೆಂದರು. ಮನ್ನಾರಿನ ಅಂಗಡಿಯವರಿಗೆ ಮುಷ್ಕರನಿರತ ಹೆಂಗಸರಿಗೆ ಕಾಳುಕಡಿ, ಸಾಲ ಕೊಡಬೇಡಿ ಅಂದರು.

ಹಾಗಂದವರೆಲ್ಲ ತಮ್ಮ ಮಾತು ತಾವೇ ತಿನ್ನುವಂತಾಯಿತು. ಮುಷ್ಕರ ೯ ದಿನ ನಡೆಯಿತು. ಇಡಿಯ ಕೇರಳದ ಪ್ರಜ್ಞಾವಂತ ಸಮಾಜ ಮಹಿಳೆಯರ ಬೆಂಬಲಕ್ಕೆ ನಿಂತಿತು. ಅತ್ಯಂತ ಶಿಸ್ತಿನಲ್ಲಿ ಹೋರಾಟ ನಡೆಯಿತು. ರಾಜಕೀಯ ಪಕ್ಷಗಳು, ಹಲವು ಮುಖಂಡರು ಬೇಳೆ ಬೇಯಿಸಿಕೊಳ್ಳಲು ಬಂದರು. ಆದರೆ ಹೆಣ್ಮಕ್ಕಳು ಎಲ್ಲರನ್ನೂ ದೂರ ಇಟ್ಟರು. ‘ನಮಗೆ ಕಾರ್ಮಿಕ ಸಂಘಟನೆಗಳು ಬೇಕು. ಆದರೆ ನಮ್ಮ ಮುಂದಾಳುಗಳು ಯಾರೆನ್ನುವುದನ್ನು ನಾವೇ ನಿರ್ಧರಿಸುತ್ತೇವೆ’ ಎಂದು ದಿಟ್ಟವಾಗಿ ಹೇಳಿದರು.

ಹೀಗೆ ಐದು ಸಾವಿರಕ್ಕಿಂತ ಹೆಚ್ಚು ಮಹಿಳೆಯರು ನಡೆಸಿದ ಒಂದೂವರೆ ತಿಂಗಳ ಹೋರಾಟದಲ್ಲಿ ಲಿಜಿ ಸನ್ನಿ, ಗೋಮತಿ ಅಗಸ್ಟಿನ್, ಎಂ. ಇಂದ್ರಾಣಿ, ರಾಜೇಶ್ವರಿ ಮೊದಲಾದ ನಾಯಕಿಯರು ಹೊರಹೊಮ್ಮಿದರು. ಕೊನೆಗೆ ೨೦% ಬೋನಸ್ ಮತ್ತು ಕನಿಷ್ಟ ೫೦೦ ರೂಪಾಯಿ ದಿನಗೂಲಿ ಪಡೆಯುವುದರೊಂದಿಗೆ ಮುಷ್ಕರ ಕೊನೆಯಾಯಿತು.

ದಶಕಗಳಿಂದ ಮನ್ನಾರಿನ ಮಂಜು ಮುಸುಕಿದ ಚಳಿಯ ಬೆಟ್ಟಗಳಲ್ಲಿ ಚಹಾ ಎಲೆ ಕಿತ್ತು ಸುಕ್ಕುಗಟ್ಟಿದ ಮೈ, ಸುಟ್ಟು ಹೋದ ಚರ್ಮದ ಸೋದರಿಯರು ಸೋದರಿತ್ವದ ಆಧಾರದ ಮೇಲೆ ಪಕ್ಷ-ಸಂಘಟನೆಯ ಭೇದ ಮರೆತು ಒಗ್ಗಟ್ಟಾಗಿ ‘ಪೊಂಬಿಲೈ ಒರುಮೈ’ ಕಟ್ಟಿದರು. ಅದು ಕಣ್ಣನ್ ದೇವನ್ ಕಂಪನಿ ವಿರುದ್ಧ ಮಾತ್ರವಲ್ಲ, ಟ್ರೇಡ್ ಯೂನಿಯನ್‌ಗಳಲ್ಲಿ ಬೀಡು ಬಿಟ್ಟಿರುವ ಗಂಡಸುಶಾಹಿಯ ವಿರುದ್ಧವಾಗಿತ್ತು. ಕಾರ್ಮಿಕ ಸಂಘಟನೆಗಳ ಹುಸಿ ಟ್ರೇಡ್ ಯೂನಿಯನಿಸಂ ವಿರುದ್ಧ ಮಹಿಳೆಯರ ಬಂಡಾಯವಾಗಿತ್ತು.

***

ಹೆಣ್ಮಕ್ಕಳು ಯಾವಾಗ ತಂತಮ್ಮ ಯೂನಿಯನ್ ಹಾಗೂ ಪಕ್ಷದ ಹಂಗು ತೊರೆದು ಒಗ್ಗಟ್ಟಾದರೋ ಆಗ ಅವರವರ ಸಂಘಟನೆಗಳಲ್ಲಿ ನಡುಕ ಮೊದಲಾಯಿತು. ಮಹಿಳೆಯರೆಲ್ಲ ಸೇರಿ ಒಂದಾಗಿ ಪಕ್ಷ ಕಟ್ಟಿದರೆ, ಮಹಿಳಾ ಕಾರ್ಮಿಕ ಸಂಘ ಕಟ್ಟಿದರೆ ಅದುವರೆಗೆ ನಿಂತ ರಚನೆಗಳೆಲ್ಲ ಪುತುಪುತು ಉದುರಿ ಬೀಳುತ್ತವೆ ಎಂದು ಖಚಿತವಾಯಿತು. ಒಗ್ಗಟ್ಟಾದರೆ ಹೆಂಗಸರು ಏನು ಬೇಕಾದರೂ ಮಾಡಿಯಾರೆಂದು ಎಲ್ಲರಿಗೂ ಗೊತ್ತಾಯಿತು.

ಎಂದೇ ಹಾಗಾಗದಂತೆ ನೋಡಿಕೊಳ್ಳಲಾಯಿತು.

ನವೆಂಬರ್ ೨೦೧೫ರಲ್ಲಿ ಮನ್ನಾರ್ ಗ್ರಾಮಗಳ ಪಂಚಾಯ್ತಿ ಚುನಾವಣೆ ನಡೆದವು. ಅದರಲ್ಲಿ ಪೊಂಬಿಲೈ ಒರುಮೈನ ಐವರು ಸ್ಪರ್ಧಿಸಿದರು. ಗುಡ್ಡ ಬೆಟ್ಟಗಳ ತಲೆಯಲ್ಲಿರುವ ಕ್ಯಾಂಪು ಸುತ್ತಿ ಮತಯಾಚನೆ ನಡೆಯಿತು. ಅವರಲ್ಲಿ ಮೂರು ಜನ ಗೆದ್ದರು! ಗೆಲ್ಲುವವರೆಗೆ ಎಲ್ಲ ಸರಿಯಿತ್ತು. ನಂತರ ಗೆದ್ದವರನ್ನು ಅವರವರ ಮೊದಲಿನ ಪಕ್ಷ, ಸಂಘಟನೆಗಳು ಕೈಬೀಸಿ, ಕೈಯೆಳೆದು ಕರೆಯತೊಡಗಿದವು. ಗೋಮತಿ ಸಿಪಿಐಎಂಗೆ ಹೋದರೆ ಮತ್ತೊಬ್ಬರು ಕಾಂಗ್ರೆಸ್‌ಗೆ ಹೋದರು.

ಲಿಜಿ ಹೇಳುತ್ತಾರೆ, ‘ನಾನು ಯಾವಾಗಲೂ ಅಳುವವಳಲ್ಲ. ಅವತ್ತು ಬಿಕ್ಕಿಬಿಕ್ಕಿ ಅತ್ತೆ. ಅಷ್ಟು ನಿರಾಸೆ, ಬೇಸರ, ದುಃಖ, ಸೋಲು ಎಲ್ಲವೂ ಆವರಿಸಿತು. ಮಹಿಳೆಯರದೇ ಗುಂಪು, ಯೂನಿಯನ್, ಸಂಘಟನೆ ಕಟ್ಟುವ ಏನೆಲ್ಲ ಕನಸು ಕಂಡಿದ್ದೆವು. ಎಲ್ಲ ಕರಗಿ ಹೋಗಿತ್ತು. ನಂತರ ನನಗೆ ತಿಳಿಯಿತು, ಒಂದು ರಾಜಕೀಯ ಪಕ್ಷದ, ಅಧಿಕಾರದ ಬೆಂಬಲ ಇಲ್ಲದಿದ್ದರೆ ಕೆಲಸ ಮಾಡುವುದು ಕಷ್ಟ ಎಂದು’. ಇವೆಲ್ಲ ಬೆಳವಣಿಗೆಗಳು ಮಹಿಳಾ ನಾಯಕತ್ವದಲ್ಲಿ ಜನ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿತು. ವಿಧಾನಸಭಾ ಚುನಾವಣೆಯಲ್ಲಿ ಪೆಂಬಿಲೈ ಅಭ್ಯರ್ಥಿಗೆ ಒಂದೂವರೆಲಕ್ಷ ಮತದಾರರ ಕ್ಷೇತ್ರದಲ್ಲಿ ಬರಿಯ ೫೦೦ ಮತಗಳು ಬಂದವು.

ಗೋಮತಿ ಅಗಸ್ಟಿನ್ ಸಿಪಿಐ(ಎಂ) ಪಕ್ಷ ಸೇರಿದ್ದು ಪೆಂಬಿಲೈಯ ಹಲವರಿಗೆ ವಿಶ್ವಾಸದ್ರೋಹವೆನಿಸಿತ್ತು. ಆದರೆ ಎರಡು ವರ್ಷಗಳಲ್ಲಿ ಗೋಮತಿ ಪಕ್ಷದ ಬಗೆಗೆ ನಿರಸನ ಹೊಂದಿ ಪಕ್ಷ ತೊರೆದು ಬಂದರು. ಪಕ್ಷ ಟೀ ತೋಟದ ಮಾಲೀಕರ ಹಿತಾಸಕ್ತಿಯನ್ನು ಕಾಯುತ್ತಿದೆಯೇ ಹೊರತು ಕಾರ್ಮಿಕರನ್ನಲ್ಲ ಎಂದು ತಿಳಿದಾಗ ಭ್ರಮನಿರಸನವಾಯಿತು ಎಂದವರು ಹೇಳಿಕೊಂಡರು. ಅವರಿದ್ದ ಪಕ್ಷದ ಮಂತ್ರಿ ಎಂ. ಎಂ. ಮಣಿ ಪೆಂಬಿಲೈ ಒರುಮೈ ಬಗೆಗೆ, ಅದರ ಹೋರಾಟದ ಸ್ವರೂಪದ ಬಗೆಗೆ ಕೀಳು ಮಟ್ಟದ ಕಮೆಂಟು ಮಾಡಿದ್ದರು. ಆ ಹೋರಾಟ ನಡೆಯುತ್ತಿದ್ದಾಗ ಸಮೀಪದ ಕಾಡಿನಲ್ಲಿ ವೇಶ್ಯಾವಾಟಿಕೆ, ಸಾರಾಯಿ ಸೇರಿದಂತೆ ಎಲ್ಲ ಅಕ್ರಮ ಚಟುವಟಿಕೆಗಳೂ ನಡೆದವು ಎಂದುಬಿಟ್ಟರು. ಇದು ಪೆಂಬಿಲೈ ಮಹಿಳೆಯರನ್ನು ತೀವ್ರವಾಗಿ ಕೆರಳಿಸಿತು. ಗೋಮತಿ ಮತ್ತಿತರರು ತಕ್ಷಣ ರಸ್ತೆಮೇಲೇ ಧರಣಿ ಕೂತರು. ಆ ಮಂತ್ರಿ ತಪ್ಪಾಯಿತು ಎನ್ನಬೇಕು, ಅಲ್ಲಿಯವರೆಗು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಆದರೆ, ಆ ಸಮಯದಲ್ಲಿ ಪೆಂಬಿಲೈ ಒಡಕು ತೀವ್ರವಾಗಿ ಮುನ್ನೆಲೆಗೆ ಬಂತು. ‘ಗೋಮತಿ ಪೆಂಬಿಲೈ ಬಿಟ್ಟುಹೋದಾಕೆ. ಈಗ ಹೇಗೆ ಅದರ ಭಾಗವಾಗಿ ಪ್ರತಿಭಟನೆ ಮಾಡುತ್ತಾರೆ?’ ಎಂದು ಲಿಜಿ ಸನ್ನಿ ಕೇಳಿದರು. ಆದರೆ ಪೆಂಬಿಲೈ ಸಂಚಾಲಕ ಸಮಿತಿಯ ೧೩ ಜನರಲ್ಲಿ ೭ ಜನ ಗೋಮತಿಯವರನ್ನು ಬೆಂಬಲಿಸಿದರು. ಅವರು ಕರೆದ ಸಭೆಗಳಿಗೆ ೯ ಸಲ ಬರಲಿಲ್ಲವೆಂದು ಲಿಜಿಯನ್ನೇ ಅಧ್ಯಕ್ಷ ಸ್ಥಾನದಿಂದ ಉಚ್ಛಾಟಿಸಿದರು.

ಹೀಗೆ, ಫ್ರೆಂಚ್ ಕ್ರಾಂತಿಗೆ ಮುನ್ನುಡಿ ಬರೆದಿದ್ದ ವರ್ಸೇಲ್ಸ್ ಮಹಿಳೆಯರ ಮೆರವಣಿಗೆ ಹೋರಾಟದ ನಂತರ ಮಹಿಳೆಯರೇ ಕಟ್ಟಿದ ಹೋರಾಟ ಎಂದು ವಿಶ್ವಾದ್ಯಂತ ಗಮನ ಸೆಳೆದ ಮನ್ನಾರ್ ಮಹಿಳಾ ಹೋರಾಟ, ಸಂಘಟನೆ ನಂತರ ಛಿದ್ರವಾಯಿತು.

ಹೆಣ್ಣುಚೇತನ ದೀಪವಾಗಿ ಉರಿಯಲಿ

ನೂರು ಜುಟ್ಟು ಕೂಡಿದರೂ ಮೂರು ಜಡೆ ಕೂಡುವುದಿಲ್ಲ ಮುಂತಾಗಿ ಹೆಣ್ಣುಮಕ್ಕಳ ಒಗ್ಗೂಡುವಿಕೆ ಅಸಾಧ್ಯ ಎಂದು ಸಾರುವ ಈ ಸಮಾಜದಲ್ಲಿ ಕೆಲ ಮಹಿಳೆಯರು ಜಾಗೃತಗೊಂಡು ಸಾವಿರಾರು ಮಹಿಳೆಯರ ಸೇರಿಸಿ ಸಂಘಟನೆ ಕಟ್ಟಿದ್ದು ಸಾಮಾನ್ಯವಲ್ಲ. ಇವತ್ತಿಗೂ ಬಹುಪಾಲು ಮಹಿಳಾ ಕಾರ್ಮಿಕರ ಯೂನಿಯನ್‌ಗಳ ನಾಯಕತ್ವ ಪುರುಷರ ಕೈಯಲ್ಲೇ ಇರುವಾಗ ಕೇರಳದ ಈ ಎರಡೂ ಉದಾಹರಣೆಗಳಲ್ಲಿ ಮಹಿಳೆಯರು ತಮ್ಮನ್ನು ತಾವೇ ಸಂಘಟಿಸಿಕೊಳ್ಳಲು ಸಾಧ್ಯ ಎಂದು ತೋರಿಸಿದರು. ಆದರೆ ಕಾಲದ ತುರ್ತಿಗೆ ಒಟ್ಟಾಗಿ ಹೋರಾಡುವ ಒಂದು ಗುಂಪು ನಂತರ ಒಟ್ಟಾಗಿಯೇ ಉಳಿಯಲು ಒಂದು ದೀರ್ಘಕಾಲೀನ ಗುರಿ, ಮುನ್ನೋಟ, ಆಶಯ ಇರಬೇಕಾಗುತ್ತದೆ. ಹಾಗಲ್ಲದಿದ್ದರೆ ಇದ್ದಕ್ಕಿದ್ದಂತೆ ಸಿಗುವ ಸ್ಟಾರ್‌ಗಿರಿಯು ವ್ಯಕ್ತಿತ್ವವನ್ನು, ಸಂಘಟನೆಯನ್ನು ಛಿದ್ರಗೊಳಿಸುತ್ತದೆ. ಉಲ್ಕೆಗಳಂತೆ ಬಂದವರು ಅಷ್ಟೇ ವೇಗವಾಗಿ ಮರೆಯಾಗಿಬಿಡುವುದನ್ನೂ ನೋಡುತ್ತಿದ್ದೇವೆ. ಅಧಿಕಾರದ ಎದುರು, ಅದು ಒಡ್ಡುವ ಆಮಿಷದೆದುರು ನಿಲ್ಲಲು ಮಾನಸಿಕ ತಯಾರಿ ತುಂಬ ಅಗತ್ಯ. ಅಧಿಕಾರದ ಬಗೆಗೆ ಅನಾಸಕ್ತಿ ಬೆಳೆಸಿಕೊಳ್ಳದಿದ್ದರೆ ಕುರ್ಚಿಯ ಹಪಾಹಪಿಯಲ್ಲಿ ಶಕ್ತಿ ವ್ಯಯವಾಗುತ್ತದೆ. ಇದು ಎಲ್ಲ ದಮನಿತರು, ಶೋಷಿತರಿಗೆ ಅಧಿಕಾರದ ಎದುರು ಇರಬೇಕಾದ ಎಚ್ಚರ. ಇಲ್ಲದಿದ್ದರೆ ಅಧಿಕಾರ ಉದಯಕಾಲದ ಮಂಜಿನಂತೆ, ಹೊತ್ತೇರಿದ್ದೇ ಕರಗಿಹೋಗುತ್ತದೆ.

ಆಗೊಮ್ಮೆ ಈಗೊಮ್ಮೆ ಈ ನೆಲದಲ್ಲಿ ಮಹಿಳೆಯರು ಸಹಜ ನಾಯಕಿಯರಾಗಿ ಹೊಮ್ಮಿದ್ದಾರೆ. ಸಂಘಟನೆ, ಚಳುವಳಿ, ಸಾಹಿತ್ಯ, ರಾಜಕೀಯ ಪಕ್ಷ - ಎಲ್ಲ ಕಡೆಗಳಲ್ಲಿಯೂ ನಾಯಕತ್ವದ ಅಪೂರ್ವ ಗುಣ ಹೊಂದಿದ ಮಹಿಳಾ ಮುಂದಾಳುಗಳು ಸೃಷ್ಟಿಯಾಗಿದ್ದಾರೆ. ಅಧಿಕಾರ ಮತ್ತು ಸ್ಥಾಪಿತ ವ್ಯವಸ್ಥೆಯ ಹಿತಾಸಕ್ತಿಗಳ ನಡುವೆ ಅವರು ತಮ್ಮತನವನ್ನು, ಹೆಣ್ಣುಗುಣವನ್ನು ಎಷ್ಟರಮಟ್ಟಿಗೆ ಉಳಿಸಿಕೊಳ್ಳಲು ಸಾಧ್ಯವಾಗಿದೆ? ತಮ್ಮಂತೆ ಮತ್ತೆಷ್ಟು ಮಹಿಳೆಯರನ್ನು ಬೆಳೆಸಲು ಸಾಧ್ಯವಾಗಿದೆ? ಸದ್ಯದ ತುರ್ತು ಈಡೇರಿದ ನಂತರ ಹೋರಾಟದ ಕಾವು ಉಳಿಸಿಕೊಳ್ಳಲು ಏಕೆ ಕಷ್ಟವಾಗಿದೆ? ಇವೆಲ್ಲ ಚರ್ಚಾರ್ಹ ವಿಚಾರಗಳಾಗಿವೆ. ಪ್ರತಿವರ್ಷ ಬಂದು ಹೋಗುವ ಮಹಿಳಾ ದಿನಾಚರಣೆಗಳ ನಡುವೆ ಈ ಕಡೆಗೆ ಗಮನ ಹರಿಸುವುದು ಆರೋಗ್ಯಕರ ಚಳುವಳಿ-ಸಮಾಜದ ದೃಷ್ಟಿಯಿಂದ ಅವಶ್ಯವಾಗಿದೆ.

ಹೌದು. ಕ್ರಾಂತಿ ಕೆಂಡದ ಕುಂಡ ಹೊತ್ತು ನಡೆಯುವುದೇನು ಸುಲಭವಲ್ಲ. ಕ್ರಾಂತಿಯು ಒಮ್ಮೆ ಜ್ವಾಲಾಮುಖಿಯಾಗಿ ಆಸ್ಫೋಟಗೊಂಡರೂ ನಂತರ ನಿರಂತರ ಉರಿಯುವಿಕೆಯಾಗಿ ದೀಪವಾಗಿ ಬದಲಾಗಬೇಕು. ಆಗಷ್ಟೇ ಪ್ರತಿ ಬೆಳಗಿನ ಬೆಳಕಿನ ಜೊತೆಗೆ ಸ್ವಾತಂತ್ರ್ಯ, ನ್ಯಾಯ, ಸಮಾನತೆಗಳು ದಮನಿತ ಜೀವಗಳನ್ನು ತಲುಪಿಯಾವು.