Sunday, 24 October 2021

ಡಾ. ಎಚ್. ಎಸ್. ಅನುಪಮಾ - ಹೆಜ್ಜೆ ಜಾಡು (Autobiographical sketches)

 ಕಾಡು ತೊರೆಯ ಜಾಡು



ಇವತ್ತಿನ ನಾನು ನಾನಾದ ಕಾರಣ ಏನೆಂದು ಕೇಳಿದ್ದೀರಿ. ಇದುವರೆಗಿನ ಬದುಕಿನ ಸಾರಸಂಗ್ರಹದಲ್ಲಿ ನಿನ್ನ ಹೆಜ್ಜೆ ಜಾಡು ಗುರುತಿಸು ಎಂದಿರುವಿರಿ. ಇವೆಲ್ಲವನ್ನು ಓದಿದವರಿಗೆ ತಮ್ಮ ಬದುಕಿನಲ್ಲಿ ಹಾದು ಬಂದ ಹಂತಗಳೇ ಇವು, ಇದರಲ್ಲಿ ಹೊಸತೇನಿದೆ ಎಂದು ಅನಿಸಬಹುದು. ಹೌದು. ನನ್ನ ಬದುಕಿನಲ್ಲಿ ವಿಶೇಷವಾದದ್ದು ಏನೂ ಘಟಿಸಲಿಲ್ಲ. ಎಲ್ಲರಿಗೂ ಏನೆಲ್ಲ ಸಂಭವಿಸಬಹುದೋ ಅದಷ್ಟೇ ನನಗೂ ಸಂಭವಿಸಿತು. 

ಶಿಕ್ಷಕ ವೃತ್ತಿಯ, ಸಾಂಪ್ರದಾಯಿಕ ಮನಃಸ್ಥಿತಿಯ ತಾಯ್ತಂದೆಯರ ಮಗಳಾಗಿ ಹುಟ್ಟಿದೆ. ತಂದೆಯ ಊರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಬ್ಬಾಗಿಲು. ತಾಯಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಣಕಟ್ಟೆಯವರು. ಅವರಿಬ್ಬರು ಪ್ರೌಢಶಾಲೆಯಲ್ಲಿ ಶಿಕ್ಷಕ, ಶಿಕ್ಷಕಿಯರಾಗಿ ಕೆಲಸ ಮಾಡುತ್ತ ವರ್ಗಾವಣೆಗೊಳಗಾಗುತ್ತ ಇದ್ದದ್ದರಿಂದ ನನ್ನ ವಿದ್ಯಾಭ್ಯಾಸ ಮೂರ್ನಾಲ್ಕು ಜಿಲ್ಲೆಗಳ ಹಳ್ಳಿಗಳಲ್ಲಿ ಆಯಿತು. ತಂದೆ ಇದ್ದ ತರಳಬಾಳು ಮಠದ ಪ್ರೌಢಶಾಲೆಗಳು ಅತಿ ಹಿಂದುಳಿದ ಹಳ್ಳಿಗಳಲ್ಲಿದ್ದವು. ನಗರ ಪ್ರದೇಶಗಳಿಂದ ದೂರವಿರುವ ಹಳ್ಳಿಗಳ ಕನ್ನಡ ಮೀಡಿಯಂ ಶಾಲೆಗಳಲ್ಲಿ ನಾವು ಮೂವರು ಮಕ್ಕಳು ವಿದ್ಯಾಭ್ಯಾಸ ಮಾಡಿದೆವು. ಒಂದೇ ಕೋಣೆಯಲ್ಲಿ ಎರಡು ತರಗತಿಯಿದ್ದ, ದಿನಕ್ಕೊಬ್ಬರಂತೆ ಪಾಳಿ ಮೇಲೆ ಬೀಗ ತೆಗೆದು, ಕಸ ಹೊಡೆದು, ಶನಿವಾರ ನೆಲಕ್ಕೆ ಸಗಣಿ ಸಾರಿಸಿ ನಮ್ಮ ತರಗತಿ ನಾವೇ ಸಿದ್ಧಪಡಿಸಿಕೊಳ್ಳಬೇಕಾದಂತಹ ಶಾಲೆಗಳವು. ಅಂಕಗಳಿಕೆ ಸ್ಪರ್ಧೆಯಂತೂ ಇರಲೇ ಇಲ್ಲ. ನಾಲ್ಕೈದು ಮೈಲಿ ನಡೆದು ಬಸ್ ಹತ್ತಬೇಕಿದ್ದ, ಶೌಚಕ್ಕೆ ಚೊಂಬು ಹಿಡಿದು ಬಯಲಿಗೆ ಹೋಗಬೇಕಿದ್ದ ಆ ಹಳ್ಳಿಗಳು ವಿವಿಧ ಸಂಸ್ಕೃತಿ, ಉಪಭಾಷೆ, ಜಾತಿ, ಹವಾಮಾನ, ಆಹಾರಪದ್ಧತಿ, ಬದುಕಿನ ಮಜಲುಗಳನ್ನು ಪರಿಚಯಿಸಿದವು. ಬಹುತ್ವ ಸಹಜ ಅನುಭವವಾಗಿ ಒಳಗಿಳಿಯಿತು. ಹಳ್ಳಿಗಳಲ್ಲಿ ಬಾಡಿಗೆ ಮನೆಗಳೂ ಸಿಗುತ್ತಿರಲಿಲ್ಲವಾಗಿ ಯಾರದೋ ದೊಡ್ಡ ಮನೆಯ ಒಂದು ಭಾಗದಲ್ಲಿ ನಮಗಾಗಿ ಮಾಡಿದ ಪಾರ್ಟಿಶನ್ ಮನೆಯಲ್ಲಿ ಇರುತ್ತಿದ್ದೆವು. ಅಡುಗೆ ಮನೆಯ ಕೊಡುಕೊಳುವಿಕೆಯೂ ನಡೆಯುತ್ತಿತ್ತು. ನನ್ನ ಬಾಲ್ಯವೆಲ್ಲ ಹೀಗೆ ಕುಡಿಯುವ ನೀರು, ಮಿಕ್ಸರ್, ಗ್ಯಾಸ್, ಟಿವಿ, ಫೋನ್, ಬಸ್ಸು, ರೈಲು ಮುಂತಾಗಿ ಯಾವುದೂ ಇಲ್ಲದ ತಾವುಗಳಲ್ಲಿ ಕಳೆಯಿತು. ಗ್ರಾಮೀಣ ಬದುಕಿನ ಸ್ವರೂಪ, ಕುರೂಪ, ಸೌಂದರ್ಯಗಳ ಅರಿವಾಗಿ ನೀರೊಳಗೆ ಮೀನಿರುವಷ್ಟೇ ಸಹಜವಾಗಿ ಹಳ್ಳಿಯಲ್ಲಿ ಇರಲಿಕ್ಕೆ ಸಾಧ್ಯವಾಯಿತು. ಒಟ್ಟಾರೆ ಯಾವುದೋ ಒಂದು ಊರಿನ, ಒಂದು ಜಾತಿಯ ಕೇರಿಯಲ್ಲಿ ನಾನು ಬೆಳೆಯಲಿಲ್ಲ ಎನ್ನುವುದು ಬಾಲ್ಯಕಾಲ ನನಗಿತ್ತ ಕೊಡುಗೆಯೆಂದೇ ಭಾವಿಸಿದ್ದೇನೆ. 

ಅಂದಿನ ದಿನಗಳಲ್ಲಿ ನಮ್ಮ ಊರಿಗೆ ದಿನಪತ್ರಿಕೆ ಬರುತ್ತಿರಲಿಲ್ಲ, ಆದರೆ ಪ್ರಜಾಮತ, ವನಿತಾ, ಮಯೂರ, ತುಷಾರ, ಕಸ್ತೂರಿ ಹೀಗೆ ನಿಯತಕಾಲಿಕಗಳನ್ನು ಅವು ಹಳತಾದರೂ ಅಪ್ಪ ಕೊಂಡು ತರುತ್ತಿದ್ದರು. ಅವರಂತೆಯೇ ನಾನೂ ಸಿಕ್ಕಿದ್ದನ್ನೆಲ್ಲ ಓದುವುದು. ಆಗ ಶುರುವಾದ ಒಂದು ಪತ್ರಿಕೆ ತಂದೆಯವರ ಗಮನ ಸೆಳೆಯಿತು. ಸಂತೆಗೆ ಪ್ರತಿವಾರ ಪೇಟೆಗೆ ಹೋದಾಗ ತಪ್ಪದೇ ಆ ಹೊಸ ಪತ್ರಿಕೆ ತರಲು ಶುರುಮಾಡಿದರು. ಅದು ಲಂಕೇಶ್ ಪತ್ರಿಕೆ. ಸಿಹಿ ಖಾದ್ಯ ತಿನ್ನುತ್ತಿರುವೆನೋ ಎಂಬಷ್ಟು ಮಗ್ನಳಾಗಿ ಒಂದಕ್ಷರ ಬಿಡದೆ ಓದುತ್ತಿದ್ದೆ. ಲಂಕೇಶ್ ಎಂದರೆ ಅತೀವ ಆರಾಧನೆ ಬೆಳೆಯಿತು. ನನ್ನ ಯೋಚನೆಯ ದಿಕ್ಕು ಮತ್ತು ಓದುವ ರುಚಿಯನ್ನು ವಿಸ್ತರಿಸಿದವರು ಲಂಕೇಶ್. ಪತ್ರಿಕೆ ಓದುತ್ತ ಬರೆಯುವ ತುಡಿತವೂ ಆಗುತ್ತಿತ್ತು. ಎಷ್ಟು ಚೆನ್ನಾಗಿ ಬರೆದಿದ್ದಾರಲ್ಲ ಎಂಬ ಅಚ್ಚರಿ. ಉಳಿದವರ ಬರಹ ರುಚಿಸದಷ್ಟು ಲಂಕೇಶ್ ಆವರಿಸಿದರು. ರಾಜ್ಯ, ದೇಶಗಳ ರಾಜಕೀಯ, ಸಾಹಿತ್ಯಿಕ ವಿದ್ಯಮಾನವೆಲ್ಲ ನನಗೆ ಗೊತ್ತು ಅನ್ನುವಂತೆ ಅನಿಸತೊಡಗಿತು. ಏಳನೇ ತರಗತಿಯಲ್ಲಿ ಒಂದು ಪದ್ಯ ಬರೆದೆ. ನಮ್ಮ ಮನೆಯ ಪ್ರೀತಿಯ ಮೊಲ ಶೆಲ್ಲಿಯು ನಾಯಿ ಬಾಯಿಗೆ ತುತ್ತಾದಾಗ ದುಃಖದಿಂದ ಬರೆದದ್ದು. ಆ ಪದ್ಯವನ್ನು ತಂದೆ ‘ವನಿತಾ’ ಪತ್ರಿಕೆಗೆ ಕಳಿಸಿದರು. ಐದು ರೂಪಾಯಿ ಬಹುಮಾನದ ಸಂಭಾವನೆ ಗಳಿಸಿದೆ! ನಂತರ ಪದ್ಯ ಬರೆಬರೆದು ಒಟ್ಟಿದೆ. ಯಾರಿಗೂ ತೋರಿಸದೇ ಬಚ್ಚಿಟ್ಟುಕೊಂಡು ಡೈರಿ ತುಂಬಿಸುತ್ತ ಹೋದೆ. 

ಹೆಣ್ತನವೆಂಬ ಕಣ್ಕಟ್ಟು

ಬಾಲ್ಯದ ನೆನಪುಗಳಲ್ಲಿ ಅಜ್ಜನ ಮನೆ ಹಸಿರಾಗಿರುವ ಜಾಗ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಟ್ಟದ ಬೆಟ್ಟಗಳ ಸೆರಗಿನ ಎರಡೇ ಎರಡು ಮನೆಗಳ ‘ಊರು’ ಹೆಬ್ಬಾಗಿಲು. ಅಮ್ಮ, ಅಪ್ಪ ವಿಧಿಸದಿದ್ದ; ತರಳಬಾಳು ಶಾಲೆಯಿದ್ದ ಊರುಗಳಲ್ಲಿ ಕಾಣಿಸದ ಕೆಲವೊಂದು ಆಚರಣೆಗಳನ್ನು ಅಲ್ಲಿ ಕಂಡು ದಂಗಾಗುತ್ತಿತ್ತು. ಅಜ್ಜನೊಡನೆ ವಾದ ಮೊದಲಾಗುತ್ತಿತ್ತು. ಬೇಲಿ ತುದಿಯಲ್ಲಿ ನಿಂತು ಅಡಿಕೆ ಪಡೆವ ದನ ಕಾಯುವ ಸಣ್ಣಿ, ಅವಳ ಜೊತೆ ಬರುತ್ತಿದ್ದ ಚಡ್ಡಿಯಿಲ್ಲದ ಮಕ್ಕಳು, ಇಡಿಯ ಮನೆ ಸುತ್ತಿಬಳಸಿ ಮುಂಚೇಕಡೆಯಿಂದ ಹಿತ್ತಲಿಗೆ ಬಂದು ಬಳ್ಳೆ ಮೇಲೆ ಬಡಿಸಿದ ತಂಗಳನ್ನವನ್ನು ದೊಡ್ಡ ಪರಮಾನ್ನವೆಂಬಂತೆ ಸ್ವೀಕರಿಸುತ್ತಿದ್ದ ಅವರ ಬಡತನ ನನ್ನಲ್ಲಿ ಮ್ಲಾನತೆಯನ್ನು ಹುಟ್ಟಿಸುತ್ತಿತ್ತು. ಅಜ್ಜ ಸಿರಿವಂತರಾಗಿರಲಿಲ್ಲ. ಆದರೆ ಕ್ರೂರಿಯೂ ಅಲ್ಲ. ಅವರಿಗೆ ಈ ಜೀವಗಳ ಮೇಲೆ ಕನಿಕರವಿತ್ತು. ಆದರೆ ತಮ್ಮ ಚಾಕರಿ ಮಾಡಿದರು; ಪ್ರತಿಯಾಗಿ ಎಲಡಿಕೆ, ಬೆಲ್ಲ, ಬಾಯಾರು, ಅನ್ನ, ಭತ್ತ ಪಡೆದರು ಎನ್ನುವುದರ ಆಚೆಗೆ ಹೆಚ್ಚೇನೂ ನಂಟು ಇರಲಿಲ್ಲ. ಕಾರ್ಯಕಟ್ಲೆ ಇರುವಾಗ ಕರೆಯಬೇಕೆಂದಿಲ್ಲ, ಅವರ ಕೇರಿಗೆ ಕೇರಿಯೇ ಹಿತ್ತಿಲ ಓಳಿಯಲ್ಲಿ ಕುಳಿತಿರುತ್ತಿತ್ತು. ಎಲ್ಲ ಪಂಕ್ತಿಗಳೂ ಮುಗಿದ ಮೇಲೆ ಅವರ ಊಟ. ಉಳಿದಿದ್ದ ಸಿಹಿ, ಭಕ್ಷ್ಯ, ಕರಿದ ತಿಂಡಿಗಳನ್ನು ಎಡಗೈ, ಬಲಗೈ ಮುಂದೆ ಹಿಡಿದು, ಮನೆಯಲ್ಲಿರುವ ಅವರಿಗೆ ಕೊಡಿ, ಇವರಿಗೆ ಕೊಡಿ ಎಂದು ಕೇಳಿಕೇಳಿ ಪಡೆಯುತ್ತಿದ್ದರು. ಆ ಗಳಿಗೆಗಳು ಬಗೆಹರಿಯದ ದುಃಖ, ವಿಷಾದಗಳನ್ನು ಹುಟ್ಟಿಸುತ್ತಿದ್ದವು.  

ಹೆಣ್ಣು ಪ್ರಜ್ಞೆ ಜಾಗೃತಗೊಳ್ಳುವುದು ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದ ಭಾರತೀಯ ಹೆಣ್ಣಿಗೆ ಏನೂ ಕಷ್ಟವಿಲ್ಲ. ನನ್ನ ಮಟ್ಟಿಗೆ ಅಜ್ಜನ ಮನೆ ಅಂತಹ ‘ತನ’ಗಳನ್ನು ಜಾಗೃತಗೊಳಿಸಿದ ಸ್ಥಳಗಳಲ್ಲಿ ಅಗ್ರಸ್ಥಾನ ಪಡೆದಿದೆ. ಅಮ್ಮ ಅಲ್ಲಿ ಹೋದಾಗ ಮುಟ್ಟಾದರೆ ಹೊರಗೆ ಕೂರುತ್ತಿದ್ದಳು. ನನ್ನ ತಂದೆಯ ಇಬ್ಬರು ಸೋದರತ್ತೆಯರು (ನನಗೆ ಅಜ್ಜಿಯರು) ಬಾಲವಿಧವೆಯರು. ಒಬ್ಬರ ಗಂಡ ಮೈನೆರೆಯುವುದರೊಳಗೆ ತೀರಿಹೋಗಿ ಅವರ ಒಂಭತ್ತು ದಶಕದ ತುಂಬು ಬದುಕು ಬೋಳುತಲೆಯಲ್ಲಿ, ಕೆಂಪು ಸೀರೆಯಲ್ಲಿ, ಒಪ್ಪತ್ತು ಊಟದಲ್ಲಿ ಕ್ಷಯಿಸಿ ಹೋಗುವಂತಾಗಿತ್ತು. ಮತ್ತೊಬ್ಬರು ಹದಿನಾರು ಆಗುವುದರಲ್ಲಿ ಎರಡು ಹೆಣ್ಣು ಹೆತ್ತು, ಗಂಡ ಧನುರ್ವಾಯು ಬಂದು ತೀರಿಕೊಂಡಾಗ ಎರಡು ಕೈಗೂಸುಗಳೊಡನೆ ವಿಧವೆಯಾಗಿ ತವರು ಸೇರಿದ್ದರು. ಆ ಎರಡು ಜೀವಗಳು ಬದುಕಿದ್ದ ಪರಿಸ್ಥಿತಿ, ಅವರೆದುರಿಸುತ್ತಿದ್ದ ಅವಮಾನ-ಭರ್ತ್ಸನೆ-ಅಸಹಾಯಕತೆ, ಅವರಿಗಾಗುವ ಅನ್ಯಾಯಗಳೆಲ್ಲ ಹೆಣ್ಣುಪರವಾದ ಯೋಚನೆಗಳನ್ನು ಬಿತ್ತಿದವು. ಎಲ್ಲದಕ್ಕೂ ಅಜ್ಜನೇ ಕಾರಣ ಎನ್ನುವಂತೆ, ಅಜ್ಜ ಬದುಕಿದ್ದಷ್ಟು ದಿನವೂ ಅವರೊಡನೆ ವಾದ ವಾಗ್ವಾದ ಬಿಟ್ಟು ಬೇರೆ ಮಾತಾಡಲೇ ಇಲ್ಲ. ಮುಟ್ಟಾದರೂ ಹೇಳಲೇ ಇಲ್ಲ. ಹಾಗೆ ನೋಡಿದರೆ ಎಳೆತರಲ್ಲಿ ಇಬ್ಬರು ಹೆಂಡಿರನ್ನು ಜ್ವರದ ಗಡ್ಡೆಗೆ ಕಳೆದುಕೊಂಡ ವಿಧುರ ಅಜ್ಜ ಆರುಮಕ್ಕಳ ಸಂಸಾರವನ್ನು ಬಹು ಕಷ್ಟದಲ್ಲಿ ನಿಭಾಯಿಸಿದ್ದ. ಬಡತನದ ಅಜ್ಜನೂ ದುಃಖಿಯೇ ಆಗಿದ್ದ. ಯಾಕೋ ಅದು ಮನ ತಲುಪಿರಲಿಲ್ಲ. ಅಜ್ಜಿಯರ ದಾರುಣ ಬದುಕು ವಿಚಲಿತಗೊಳಿಸಿಬಿಟ್ಟಿತ್ತು. 

ನಾವಿದ್ದ ಹಳ್ಳಿಯಲ್ಲಿ ನೋಡಿದ ಆ ಹುಚ್ಚಿಯೂ ಅಷ್ಟೆ. ಮೈಮೇಲಿನ ಬಟ್ಟೆಯ ನೆದರಿಲ್ಲದೆ ಓಡಾಡುವವಳ ಕಾಲ ನಡುವೆ ರಕ್ತ ಸೋರಿಸುವ ಮಾಂಸದ ತುಂಡು ಜೋತಾಡುತ್ತಿತ್ತು. ಅದು ಕೆಳಜಗ್ಗಿದ ಗರ್ಭಕೋಶ ಎಂದು ತಿಳಿದದ್ದು ಮೆಡಿಕಲ್‌ಗೆ ಹೋದಮೇಲೆ. ಅವಳ ಮೇಲೆ ಬಲಾತ್ಕಾರವಾಗುತ್ತಿತ್ತು! ಅವಳು ಕಿರುಚುತ್ತಿದ್ದಳು. ಮಣ್ಣು ತೂರುತ್ತಿದ್ದಳು. ಆ ದಾರುಣವನ್ನು ಹೇಗೆ ವರ್ಣಿಸಲಿ?

ಮತ್ತೆ ಆ ಅವ, ರಾಕ್ಷನ ರೂಪಿ. ನಾವು ನೋಡನೋಡುತ್ತಲೇ ಒಂದಾದಮೇಲೊಂದು ಮೂರು ಮದುವೆಯಾಗಿ ಮೂವರು ಹೆಂಡಿರನ್ನು ಹೊಡೆದು, ಬಡಿದು, ಹಿಂಸಿಸಿ ಮಣ್ಣು ಮಾಡಿದ. ಆದರೂ ನಮ್ಮ ಕುಟುಂಬ ಆ ಹಳ್ಳಿ ಬಿಡುವ ಹೊತ್ತಿಗೆ ನಾಲ್ಕನೆಯ ಮದುವೆಗೆ ಸಿದ್ಧನಾಗಿದ್ದ! ಆ ಪರಮ ಹಿಂಸಾರೂಪಿಗೆ ಒಂದಾದಮೇಲೊಂದು ಹೆಣ್ಣುಗಳು ಸಿಗುವರಲ್ಲ?! ಅವರೇಕೆ ಇವನನ್ನು ಒಲ್ಲೆ ಎನ್ನರು? ಎನಿಸುತ್ತಿತ್ತು. ಒಂದು ರಜೆಯಲ್ಲಿ ವಾವೆಯಲ್ಲಿ ಅಕ್ಕನಾದವರ ಮನೆಗೆ ಹೋಗಿದ್ದೆವು. ನನಗಿಂತ ಹಿರಿಯಳಾದ, ತವರಿನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿ ಮಗುವಿದ್ದ ಅವರು ತಮ್ಮ ಮೇಲಾಗುವ ಹಿಂಸೆಯನ್ನು ಸಣ್ಣವಯಸ್ಸಿನ ನನ್ನ ಬಳಿ ಹೇಳಿ, ತೋರಿಸಿ ಭೋರಾಡಿ ಅತ್ತು ಬಿಟ್ಟಿದ್ದರು. ಪುಟ್ಟವಳಾದ ನನಗೆ ಹೇಳಿದರೆ ನಾನು ಯಾರಿಗೂ ಹೇಳುವುದಿಲ್ಲ ಎಂಬ ಧೈರ್ಯವೆ? ತವರುಮನೆ ತೊರೆದು ಬಂದಿದ್ದ ಆ ಅಕ್ಕನಿಗೆ ನನ್ನ ಹೊರತು ಹೇಳಿಕೊಳ್ಳಲೂ ಜನ ಸಿಕ್ಕಿರಲಿಲ್ಲವೆ? ನಾನಾದರೂ ಆ ಬಂಡೆಗಲ್ಲಿನಂತಹ ಭಾವನಿಂದ ಈ ಅಕ್ಕನನ್ನು ಹೇಗೆ ಪಾರಾಗಿಸಲಿ? ಅವರು ನನ್ನಮ್ಮನ ಬಳಿಯೂ ವಿಷಯ ಹೇಳಬೇಡವೆಂದದ್ದು ಯಾಕೆ? ಅಷ್ಟು ಬಡಿಯುವ ಭಾವನಿಗೆ ಮತ್ತೆ ಗಡಿಬಿಡಿಯಲ್ಲಿ ಬಿಸಿಬಿಸಿ ರೊಟ್ಟಿ ಮಾಡಿ, ಗರಿಮುರಿಯಿರುವಾಗಲೇ ತುಪ್ಪ, ಚಟ್ನಿ ಎಂದು ರುಚಿರುಚಿಯಾಗಿ ಯಾಕೆ ಅಕ್ಕ ಬಡಿಸುತ್ತಾರೆ?

ಉತ್ತರವಿರದ ಪ್ರಶ್ನೆಗಳು. ಕೊನೆಮೊದಲಿರದ ಪ್ರಶ್ನೆಗಳು ತೆರೆಯಂತೆ ಏಳುತ್ತಲೇ ಹೋದವು. ದಂಡೆಗಪ್ಪಳಿಸಿ ಹಿಂದೆ ಹೋಗಿ, ಚಣ ಸುಮ್ಮನಾಗಿ ಮತ್ತೆ ಅಪ್ಪಳಿಸಲೆಂಬಂತೆ ನೊರೆಯೆಬ್ಬಿಸುತ್ತ ಬರುತ್ತಲೇ ಹೋದವು. 

ಹಾಸ್ಟೆಲಿನ ಪಾಠ

ಪಿಯುಸಿಗೆ ಶಿವಮೊಗ್ಗದ ಡಿವಿಎಸ್ ಕಾಲೇಜು ಸೇರಿದೆ. ಹಾಸ್ಟೆಲಿನ ಬದುಕು ಸಹಬಾಳ್ವೆಯ ಪಾಠ ಹೇಳಿಕೊಟ್ಟಿತು. ಕಾಲೇಜಿನಲ್ಲಿ ಕನ್ನಡ ಬೋಧಿಸುತ್ತಿದ್ದ ಶಿವಮೊಗ್ಗ ಮುನೀರ್, ರಹಮತ್ ತರೀಕೆರೆ ಸರ್ ಅವರು ವಿಜ್ಞಾನ ವಿಭಾಗದವಳಾದರೂ ಸಾಹಿತ್ಯಿಕ ಆಸಕ್ತಿ ಇಟ್ಟುಕೊಂಡಿದ್ದೆನೆಂದು ವಿಶೇಷ ಕಾಳಜಿ ತೋರಿಸಿದರು. ಕವನಸ್ಪರ್ಧೆ, ಭಾಷಣ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗೆ ಸೈನ್ಸ್ ವಿದ್ಯಾರ್ಥಿನಿಯನ್ನು ಕರೆದೊಯ್ದು ನನ್ನನ್ನು ಜೀವಂತವಾಗಿಟ್ಟರು. ನಂತರ ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪ್ರವೇಶ ದೊರೆಯಿತು. ಬಾಲ್ಯದನುಭವಗಳಂತೆಯೇ ಬಳ್ಳಾರಿಯ ದಿನಗಳು ಅವಿಸ್ಮರಣೀಯ ಅನುಭವ ನೀಡಿದವು. 

ಬಳ್ಳಾರಿಯ ಹಾಸ್ಟೆಲಿನಲ್ಲಿ ನಾವೈದು ಜನ ಹುಡುಗಿಯರಿದ್ದೆವು. ಸರಳ ಉಡುಪಿನ, ಕನ್ನಡ ಮಾತಾಡುವ, ‘ಬಜಾರಿ’ ಹುಡುಗಿಯರ ಗುಂಪು ಅದು. ಒಬ್ಬೊಬ್ಬರದು ಒಂದೊಂದು ಸ್ವಭಾವ, ಹಿನ್ನೆಲೆ. ಆದರೂ ಅದು ಹೇಗೋ ಆಪ್ತರಾಗಿದ್ದೆವು. ಹುಡುಗರು ನಮ್ಮನ್ನು ‘ಬಂಡಾಯ ಗುಂಪು’ ಎಂದು ಕರೆಯುತ್ತಿದ್ದರು. ಏಪ್ರನ್ ಮೇಲಿರುವುದರಿಂದ ಕಾಣುವುದಿಲ್ಲ ಎಂದೋ, ನಮ್ಮ ಬಳಿ ಅಷ್ಟು ಒಳ್ಳೊಳ್ಳೆಯವು ಇರಲಿಲ್ಲವೆಂದೋ ಅಥವಾ ಬಳ್ಳಾರಿಯ ಸೆಕೆಗೋ ಅಂತೂ ಬ್ರಾ ಧರಿಸದೆ ‘ಬ್ರಾ ಲೆಸ್ ಬಂಡಾಯಾಸ್’ ಎಂದು ಕರೆಸಿಕೊಂಡಿದ್ದೆವು! (ಹಾಗೆಂದು ಇತ್ತೀಚೆಗೆ ನಡೆದ ಅಲಮ್ನಿ ಮೀಟ್‌ನಲ್ಲಿ ತಿಳಿಯಿತು!) ನಡೆದು ಹೋಗುವಾಗ ಹಿಂದಿನಿಂದ ನನಗೆ ‘ಬಂಡಾಯ’ ಎಂದು ಚುಡಾಯಿಸುತ್ತ ಊಳಿಡುವಂತೆ ಕೂಗುತ್ತಿದ್ದರು. ಅಲ್ಲೇ ತಿರುಗಿ ನಿಂತು ಅವರನ್ನು ಬೈದು ಮುಂದೆ ಹೋಗುತ್ತಿದ್ದೆ. ಬಜಾರಿಯಂತೆ ಮಾತನಾಡುವೆನೆಂದು ಸಾಕಷ್ಟು ರ‍್ಯಾಗಿಂಗ್‌ಗೆ ಒಳಗಾದೆ. ಮೊದಲ ವರ್ಷವೆಲ್ಲ ಭಯದಲ್ಲಿ, ಬಂಡಾಯದಲ್ಲಿ, ಕುತೂಹಲದಲ್ಲಿ ಕಳೆಯಿತು. ಅಲ್ಲೊಂದು ವಾಲ್‌ಜರ್ನಲ್ ಇತ್ತು. ಅದಕ್ಕೆ ನನ್ನನ್ನು ಎಡಿಟರ್ ಮಾಡಿದರು. ಬರೆಯುವ ವಿದ್ಯಾರ್ಥಿಗಳ ಸಂಪರ್ಕವಾಯಿತು. ಬರೆದರೆ ಲಂಕೇಶ್ ತರಹ ಬರೆಯಬೇಕು ಎಂಬ ಬಯಕೆಯಿತ್ತಲ್ಲ, ದೊಡ್ಡ ಮನುಷ್ಯಳಂತೆ ಘನಗಂಭೀರವಾಗಿ ವಾಲ್‌ಜರ್ನಲಿಗೆ ಸಂಪಾದಕೀಯ ಬರೆಯತೊಡಗಿದೆ. ಹಾಸ್ಟೆಲು, ಬಳ್ಳಾರಿಯ ಬಿಸಿಲು, ಹೆಂಡ ಕುಡಿಯುವ ವೈದ್ಯ ವಿದ್ಯಾರ್ಥಿಗಳು, ಬಳ್ಳಾರಿಯ ಬಡತನ, ಅಪೌಷ್ಟಿಕ ಮಕ್ಕಳು ಮುಂತಾಗಿ ಇದ್ದದ್ದನ್ನು, ಕಂಡದ್ದನ್ನು ಕಂಡಹಾಗೆ ಬರೆದು ಅಂಟಿಸಿ ಬಿಡುತ್ತಿದ್ದೆ. ಆಗ ನನಗೆ ಹುಡುಗರು ಎಂದರೆ ಪುಂಡರು, ಪೋಕರಿಗಳು, ಕೆಟ್ಟವರು ಎಂಬ ಭಾವನೆಯಿತ್ತು. ಯಾವ ಅಹಿತಕರ ಅನುಭವವಾಗಿರದಿದ್ದರೂ ಹುಡುಗರು ಅಪಾಯಕಾರಿ ಜೀವಿಗಳು, ಅವರಿಂದ ದೂರವಿರುವುದೇ ಉತ್ತಮ ಎಂದು ಭಾವಿಸಿದ್ದೆ. ಅದರಲ್ಲೂ ನನ್ನ ಓರಗೆಯ ಹುಡುಗರು ಒಳ್ಳೆಯವರಿರಬಹುದೆಂದು ಅನಿಸಿರಲೇ ಇಲ್ಲ. ಹುಡುಗಿಯರ ಹಾಸ್ಟೆಲಿನ ಎದುರು ಕುಡಿದು ಬಂದು ಗಲಾಟೆ ಹಾಕುವ ಹುಡುಗರನ್ನು ಬೈದು ಒಂದು ವಾರ ಸಂಪಾದಕೀಯ ಬರೆದೆ. ಭಾವೀ ವೈದ್ಯರ ಬೇಜವಾಬ್ದಾರಿಯನ್ನು ಕಟುವಾಗಿ ಟೀಕಿಸಿದೆ. ತಗೋ, ಎಡಿಟೋರಿಯಲ್ ಅನ್ನು ಹರಿದು ಹಾಕಿದ ಹುಡುಗರು ಗ್ರಂಥಾಲಯದೆದುರು ನನ್ನನ್ನು ಅಟಕಾಯಿಸಿಕೊಂಡರು. ಸೀನಿಯರ್‌ಗಳೆಂದರೆ ಗೌರವ ಕೊಡಬೇಕೆಂದು ಗೊತ್ತಿಲ್ಲವೇ ಎನ್ನುತ್ತ ಮೈಮೇಲೆ ಬೀಳುವವರಂತೆ ಸುತ್ತುವರೆದರು. ಮಾತಿಗೆ ಮಾತು. ಚಕಮಕಿಯ ಪ್ರಶ್ನೆಗೆ ಕಿಡಿಯ ಉತ್ತರ. ಆ ಸಮಯದಲ್ಲಿ ಪರಿಚಯವಾದ ಕತೆಗಾರ ಕೃಷ್ಣ ಮುಂದೆ ಬಾಳಸಂಗಾತಿಯೂ ಆದ.  

ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ಮೂಲತಃ ಬಳ್ಳಾರಿಯವರೇ ಆದ, ಶಿವಮೊಗ್ಗದಲ್ಲಿ ನೆಲೆಸಿದ್ದ ಸಾಹಿತ್ಯಾಸಕ್ತ ಹಿರೇಹಾಳ ಇಬ್ರಾಹಿಂ ಸಾಹೇಬರು ಮತ್ತು ನನ್ನ ಗುರುಗಳಾದ ಮುನೀರ್ ಬಾಷಾ ಸೇರಿ ಶಿವಮೊಗ್ಗದಲ್ಲಿ ಮುಸ್ಲಿಂ ಸಾಹಿತ್ಯ ಸಂವೇದನೆ ಕುರಿತು ಸಮಾವೇಶ ಮಾಡಿದರು. ಕೊನೆಯ ದಿನದ ಕವಿಗೋಷ್ಠಿಯಲ್ಲಿ ಕವಿತೆ ಓದಲು ನನ್ನನ್ನು ಕರೆದರು. ಬಹುಶಃ ಇದು ಹಿರಿಯ ಕವಿಗಳ ಮಧ್ಯೆ ಕವಿ ಎಂದು ಕರೆಸಿಕೊಂಡು ಓದಿದ ನನ್ನ ಜೀವನದ ಮೊದಲ ಅನುಭವವಾಗಿತ್ತು. 

ಒಂದೇಸಮ ಗಿಜಿಗುಡುವ ರೋಗಿಗಳಿಂದ ತುಂಬಿರುತ್ತಿದ್ದ ಓಪಿಡಿ, ಕುಷ್ಠ-ಕ್ಷಯ-ಸುಟ್ಟಗಾಯದವರ ವಾರ್ಡುಗಳು, ಕೋಟೆಯ ಕೆಂಪುದೀಪ ಪ್ರದೇಶ, ಕೌಲ್‌ಬಜಾರ್, ಏಕಶಿಲಾಬಂಡೆ, ಹಾಸ್ಟೆಲ್ ಹಿಂದೆಯೇ ಇದ್ದ ರಿಮ್ಯಾಂಡ್ ಹೋಮಿನ ‘ಬಾಲಾಪರಾಧಿ’ ಮಕ್ಕಳ ಒಡನಾಟ, ಕಿವುಡು ಮೂಕ, ಕುರುಡ ಮಕ್ಕಳ ಶಾಲೆಗೆ ಭೇಟಿ, ಪರಿತ್ಯಕ್ತ ಮಹಿಳೆಯರ ಸ್ತ್ರೀಸೇವಾ ನಿಕೇತನಕ್ಕೆ ಭೇಟಿ ಮೊದಲಾದವು ನನ್ನೊಳಗಿನ ನನ್ನನ್ನು ಎಬ್ಬಿಸಿದವು. ಅದರಲ್ಲೂ ಕಾಫಿಸೀಮೆಗೆ ವಲಸೆ ಹೋಗುವವರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಆಗುವುದಿಲ್ಲವೆಂದು ಸುಳ್ಳು ಕಂಪ್ಲೇಂಟ್ ಮಾಡಿಸಿ, ತಮ್ಮ ಮಕ್ಕಳನ್ನು ರಿಮ್ಯಾಂಡ್ ಹೋಮಿನ ‘ಸೇಫ್ ಕಸ್ಟಡಿ’ಗೆ ತಂದು ಬಿಡುತ್ತಿದ್ದುದು ನಾನರಿಯದ ಬದುಕಿನ ಇನ್ನೊಂದು ಮುಖವನ್ನು ತೆರೆದು ತೋರಿಸಿತು. ಮಾತೆತ್ತಿದರೆ ಬಳಬಳ ಕಣ್ಣೀರು ಸುರಿಸುತ್ತಿದ್ದ ಆರನೇ ತರಗತಿಯ ಒಬ್ಬ ಹುಡುಗ ನನ್ನನ್ನು ಒದ್ದೆಮುದ್ದೆಯಾಗಿಸಿದ. ಗಾಂಧಿಯ ಪ್ರಭಾವ ದಟ್ಟವಾಗಿ ವಾರಕ್ಕೆರೆಡು ದಿನ ಉಪವಾಸ ಮಾಡತೊಡಗಿದೆ. ಬರಬರುತ್ತ ನಾಸ್ತಿಕಳಾದೆ. 

ಅಂದಿನ ದಿನಗಳಲ್ಲಿ ನಮ್ಮ ಹಾಸ್ಟೆಲ್‌ನಲ್ಲಿ ಬೇರೆ ಸಂಘ ಸಂಸ್ಥೆಗಳ ಒಡನಾಟ ಇದ್ದವರು ಹೆಚ್ಚಾಗಿದ್ದರು. ಡಿಎಸ್‌ಎಸ್‌ನಲ್ಲಿ ಸಕ್ರಿಯಳಾಗಿದ್ದ ಅರುಂಧತಿ ನನ್ನ ಆಪ್ತ ಗೆಳತಿಯಾಗಿದ್ದಳು. ಮೆಡಿಕಲ್ ಕಾಲೇಜಿಗೆ ಪೀಪಲ್ಸ್ ವಾರ್ ಸುದ್ದಿ ಬರುತ್ತಿತ್ತು. ಕಾಮ್ರೇಡ್‌ಗಳು ಬರುತ್ತಿದ್ದರು. ಕೆಲವು ವಿದ್ಯಾರ್ಥಿಗಳಿಗೆ ಅವರ ಸಂಪರ್ಕವಿದ್ದಿರಲೂಬಹುದು. ಬಂದ ವರ್ಷವೇ ನಮಗಿಂತ ತುಂಬ ಸೀನಿಯರ್ ಆಗಿದ್ದ ಹಾಸ್ಟೆಲ್‌ಮೇಟ್ ಒಬ್ಬರು ಚಳ್ಳಕೆರೆ ಬಳಿಯ ಗುಡ್ಡದ ಮೇಲೊಂದು ಶಿಬಿರಕ್ಕೆ ನಮ್ಮನ್ನು ಕರೆದೊಯ್ದರು. ಅವರೆಷ್ಟು ಒತ್ತಾಯಿಸಿದರೂ, ಮನವೊಲಿಸಿದರೂ ಆ ಹಿಂದುತ್ವವಾದಿ ಸಂಘಟನೆ ನಮಗೆ ಇಷ್ಟವಾಗಲೇ ಇಲ್ಲ. ಗಾಂಧಿ ಸೇವಾಶ್ರಮದವರು ‘ರಾಷ್ಟ್ರೀಯ ಏಕತಾ ಸದ್ಭಾವನಾ ಶಿಬಿರ’ವನ್ನು ಜಮ್ಮುವಿನಲ್ಲಿ ಏರ್ಪಡಿಸಿದಾಗ ನಾನದರ ಸದಸ್ಯೆಯಲ್ಲದಿದ್ದರೂ ಹದಿನೈದು ದಿನಗಳ ಶಿಬಿರಕ್ಕೆ ತಂಡದೊಡನೆ ಹೋಗಿ ಬರುವ ಅವಕಾಶ ದೊರೆಯಿತು. ಮುಮ್ತಾಜ್ ನನ್ನ ಅತ್ಯಾಪ್ತ ಗೆಳತಿಯಾಗಿದ್ದಳು. ಮುಸ್ಲಿಂ ಗೆಳತಿಯರ ಜೊತೆ ಅವರ ‘ಇಸ್ತಮಾ’ಗಳಿಗೆ ಹೋಗಿಬರುತ್ತಿದ್ದೆ. ಬಾಬರಿ ಮಸೀದಿ ಧ್ವಂಸ ಸಂಭವಿಸಿದ ಕಾಲ. ಎಲ್ಲ ಮುಸ್ಲಿಂ ಹುಡುಗಿಯರೂ ಒಂದೇಕಡೆ ಇರುತ್ತೇವೆ ಎಂದು ಮತ್ತೊಂದು ಬ್ಲಾಕಿಗೆ ಹೊರಟರು. ಸಾಂಪ್ರದಾಯಿಕಳಲ್ಲದ, ಬುರ್ಖಾ ಸ್ಕಾರ್ಫ್ ಧರಿಸದ ಮುಮ್ತಾಜ್ ಅಲ್ಲಿ ಹೋಗಲೂ ಆರಳು, ಹೋಗದೆಯೂ ಇರಲಾರಳು ಎನ್ನುವಂತಾದಾಗ ಅವಳ ಗೊಂದಲ ನನ್ನನ್ನು ಯೋಚಿಸಲು ಹಚ್ಚಿತು. ಕೊನೆಗೆ ಉಳಿದ ಮುಸ್ಲಿಂ ಹುಡುಗಿಯರ ಜೊತೆಗೆ ತಾನೂ ಹೋದದ್ದಲ್ಲದೆ, ನೀನೂ ಬಾರೆಂದು ಮುಮ್ತಾಜ್ ನನ್ನನ್ನೂ ಕರೆದೊಯ್ದಳು. ಅಲ್ಲಿದ್ದರೂ ಕ್ರಿಸ್ಮಸ್ ಮತ್ತು ಹೊಸವರ್ಷಕ್ಕೆ ಎಂದಿನಂತೆ ಚರ್ಚಿಗೆ ಹೋಗಿಬಂದೆವು. ಆಸ್ತಿಕ ಗೆಳತಿಯ ಜೊತೆ ಹನುಮಂತನ ಗುಡಿಗೂ ಹೋಗಿ ಬರುತ್ತಿದ್ದೆವು. ಹೀಗೆ, ಎಲ್ಲದರ ಒಳಹೊಗುವ ಕುತೂಹಲ. ಎಲ್ಲವನ್ನು ಗಮನಿಸುತ್ತ ಉಳಿದೆ. 

ವೈದ್ಯೆ ಸಾಹಿತಿ

ಮದುವೆಯಾಗಿ, ಹಳ್ಳಿಗೆ ಬಂದು, ವೃತ್ತಿ ಶುರುಮಾಡಿದ ಬಳಿಕ ಮತ್ತೊಂದು ಲೋಕಕ್ಕೆ ಪ್ರವೇಶವಾಯಿತು. ಈಗ ಸಂಸಾರಸ್ಥೆಯಾದ ನನ್ನ ಎರಡು ಕೈ ಹತ್ತು ಕೈಯಾಗಲೇಬೇಕಾಯಿತು. ಒಂದು ದಶಕ ಏನೂ ಬರೆಯಲು ಸಾಧ್ಯವಾಗಲಿಲ್ಲ. ಸಣ್ಣಮಕ್ಕಳು, ನೆಲೆಗೊಳಿಸಬೇಕಿದ್ದ ಸಂಸಾರ, ಆಸ್ಪತ್ರೆ-ಮನೆಯ ನಿಭಾವಣೆಗಳಲ್ಲಿ ಓದಿಗಷ್ಟೆ ಸಮಯ ಮೀಸಲಿಟ್ಟು, ಬರವಣಿಗೆ ಪೂರಾ ನಿಲ್ಲಿಸಿದೆ. ನನ್ನದೇ ಆದ ಸಮಯ ಸಿಗುತ್ತಿರಲಿಲ್ಲ. ಮನೆಗೆಲಸ, ವೃತ್ತಿಯಲ್ಲದೆ ಇನ್ನೂ ಏನೇನೋ ಮಾಡಬೇಕು, ಮಾಡಬಲ್ಲೆ ಎಂದು ಗೊತ್ತಿದ್ದರೂ ಅದಕ್ಕೆ ಬೇಕಾದ ಸಮಯ ಇಂದು ಸಿಕ್ಕೀತು, ನಾಳೆ ಸಿಕ್ಕೀತು ಎಂಬ ಮರೀಚಿಕೆಯ ಹಿಂದೆ ಆಶಾ ಭಾವನೆಯಿಂದ ಹೋಗುತ್ತಿದ್ದೆ. ಬರಬರುತ್ತ, ಯಾವುದನ್ನು ಅಮ್ಮ ಹೇಳಿದಾಗ ‘ಹೋಗಮ, ಅದು ನಿನ್ನ ಕಾಲದ ಕತೆ’ ಎನ್ನುತ್ತಿದ್ದೆನೋ, ಅವೆಲ್ಲ ನನ್ನ ಕಾಲಕ್ಕೂ, ನನಗೂ ನಿಜ ಎನ್ನುವುದು ಅರಿವಿಗೆ ಬಂತು. ಕೊಳೆಯಾದ ದಿಂಬು, ಧೂಳು ಹಿಡಿದ ಕಪಾಟು, ಆಗಬೇಕಿರುವ ಕೆಲಸ, ನಾಳಿನ ತಿಂಡಿಯ ಚಿಂತೆ ಎಲ್ಲ ನನ್ನದು ಮಾತ್ರವೇ. ಮನೆಯಿಂದ ಹೊರಬೀಳುವಾಗ ಹೇಗಿರುವುದೋ ಬರುವಾಗ ಮನೆ ಹಾಗೆಯೇ ಇರುವುದು. ನಾನು ಕೈಹಾಕದಿದ್ದರೆ ಒಂದು ಅಣು ಕಸವೂ ಅತ್ತ ಸರಿದು ಚೊಕ್ಕಗೊಳ್ಳುವುದಿಲ್ಲ! ಎಲ್ಲವನ್ನು ಮೈಮೇಲೆಳೆದುಕೊಂಡು ಹತ್ತು ಕೈಯ ಚಾಮುಂಡಾಂಬೆಯೆಂಬಂತೆ ಮಾಡಿದ್ದೇ ಮಾಡಿದ್ದು. ಕೊನೆಗೆ ತಿಳಿಯಿತು, ಓಹೋ! ಮಾಡುತ್ತಿರುವ ಈ ಎಲ್ಲದನ್ನು ಸಾಯುವ ತನಕ ಮಾಡಿದರೂ ಮುಗಿಯಿತು ಎಂದಾಗುವುದಿಲ್ಲ. ಪುರುಸೊತ್ತು, ವಿರಾಮ ನನಗೆಂದಿಗೂ ಸಿಗುವುದಿಲ್ಲ. ಮಾಡಬೇಕಿರುವುದನ್ನೆಲ್ಲ ಈಗಲೇ, ಈ ಜಂಜಾಟಗಳ ಜೊತೆಗೇ ಮಾಡಬೇಕೇ ಹೊರತು ಮುಂದೊಂದು ಸುವರ್ಣ ಯುಗ ಬರುವುದಿಲ್ಲ ಎಂದು ಹೊಳೆದು ಹೋಯಿತು. 

ಬೆಟ್ಟದ ದಾರಿಯಲ್ಲಿ ಏರುತ್ತಿದ್ದೆವು. ಬೆಟ್ಟದ ಮೇಲಿನಿಂದ ಅಬ್ಬಿ ಧಭಧಭ ಹಾರುತ್ತಿತ್ತು. ಅದನ್ನು ನೋಡನೋಡುತ್ತ ಕಾಡು ತೊರೆಯ ಜಾಡೇ ಪ್ರತಿ ಹೆಣ್ಣಿನದೂ ಎನಿಸಿತು. ಎಲ್ಲೋ ಹುಟ್ಟಿ, ಎಲ್ಲೆಲ್ಲೋ ಬೆಳೆದು, ಗುಂಡಿ ಸಿಕ್ಕಲ್ಲಿ ನಿಂತು, ಕಣಿವೆಯಿದ್ದರೆ ಹಾರಿ, ಆಚೀಚಿನ ಹಳ್ಳತೊರೆಗಳ ಕೂಡಿಕೊಂಡು ಅಂತಿಮ ಗಮ್ಯದತ್ತ ಹರಿಯುವುದು. ಅದನ್ನು ನೋಡಿ ಮತ್ತೆ ಬರವಣಿಗೆಯ ತುಡಿತ ಹುಟ್ಟಿತು. ಓದು ಎಷ್ಟೋ ಅಷ್ಟೇ ಬರವಣಿಗೆಯೂ ನನ್ನೊಡಲಾಳದ ಜೀವಚಿಲುಮೆ ಎನಿಸಿ ‘ಮಲೆಗಳಲ್ಲಿ ಮದುಮಗಳು’ ಎಂಬ ಕವಿತೆಯ ಜೊತೆಗೆ ಮತ್ತೆ ಕತೆ, ಕವಿತೆಗಳ ಬರವಣಿಗೆ ಪ್ರಾರಂಭವಾಯಿತು. ಸುತ್ತಲ ಆಗುಹೋಗುಗಳ ಬಗೆಗೆ ನನಗೆ ಖಚಿತ ವಿರೋಧಗಳು, ನಿಲುವುಗಳು ರೂಪುಗೊಳ್ಳತೊಡಗಿದವು. ನನ್ನ ಅನಿಸಿಕೆಗಳನ್ನು ಹೇಳಬೇಕು, ನನಗನ್ನಿಸಿದ್ದನ್ನು ಹಂಚಿಕೊಳ್ಳಬೇಕು ಅನಿಸಿದ್ದೇ ಸಂಘಟನೆಯ ಉತ್ಸಾಹ ಶುರುವಾಯಿತು. ಮಕ್ಕಳಿಬ್ಬರೂ ‘ತಮ್ಮ ಜಡೆ ತಾವು ಹೆಣೆದುಕೊಳ್ಳುವಷ್ಟು’ ದೊಡ್ಡವರಾಗಿ ಕೊಂಚ ಸಮಯ ಒದಗಿಸಿಕೊಳ್ಳಲು ಸಾಧ್ಯವಾಯಿತು. ಮತ್ತೆ ಇತ್ತಲ್ಲ, ರಾತ್ರಿಯೆಂಬ ಕರುಣಾಳು. ಓದುವ, ಬರೆಯುವ ಕೆಲಸಕ್ಕೆ ಲೇಬರ್ ರೂಮಿನ ಕಾಯುವಿಕೆಯ ಸಮಯವೂ ಉಪಯೋಗವಾಯಿತು. ‘ಕೆಂಡಸಂಪಿಗೆ’ಯಲ್ಲಿ ಬರೆದೆ. ಪತ್ರಿಕೆಗೆ ಬರೆಯಲು ಮೊದಲು ಮಾಡಿದೆ.

‘ವೈದ್ಯೆಯಾಗಿಯೂ ನೀವು ಇಷ್ಟೊಂದು ಸಾಹಿತ್ಯ ಕೃಷಿ..?’ ಮುಂತಾದ ಮಾತುಗಳನ್ನು ಪದೇಪದೇ ಕೇಳುತ್ತಿರುತ್ತೇನೆ. ಹಾಗೆ ನೋಡಿದರೆ ಸಾಹಿತ್ಯ ಮತ್ತು ವೈದ್ಯಕೀಯ ಎರಡೂ ಬೇರೆ-ಬೇರೆ ಅಲ್ಲ. ಅವು ಒಂದಕ್ಕೊಂದು ಪೂರಕ. ಏಕೆಂದರೆ ವೈದ್ಯರಿಗೆ ಸಾಹಿತ್ಯಕೃಷಿಗೆ ಬಿತ್ತಲು ಬೇಕಾದ ಅತ್ಯಮೂಲ್ಯ ಬೀಜಗಳು ವಿಪುಲವಾಗಿ ದೊರೆಯುತ್ತವೆ. ಬದುಕಿನ ಎಲ್ಲ ಬಣ್ಣಗಳನ್ನು, ಮನುಷ್ಯ ಸ್ವಭಾವಗಳನ್ನು ನೇರವಾಗಿ ಹತ್ತಿರದಿಂದ ನೋಡಲು ವೈದ್ಯವೃತ್ತಿಯಲ್ಲಿ ಸಾಧ್ಯವಿದೆ. ಸಾಹಿತಿ ಅಥವಾ ಸಾಹಿತಿಯ ಮುಖ್ಯ ಉದ್ದೇಶ ಸಮಾಜದಲ್ಲಿ ಇರುವ ನೋವು, ದುಃಖಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಜನಸಮುದಾಯಕ್ಕೆ ಹೇಳುವುದು. ವೈದ್ಯರು ಮಾಡುವುದೂ ಅದನ್ನೇ. ಹಾಗಾಗಿ ವೃತ್ತಿನಿರತರಾಗಿಯೂ ಆಕ್ಟಿವಿಸ್ಟ್ ಆಗಲು ಚಿಮ್ಮುಹಲಗೆಯಂತೆ ವೈದ್ಯಕೀಯವು ಒದಗಿಬರುತ್ತದೆ. ಹೀಗೆ ವೃತ್ತಿ ಕಾರಣವಾಗಿ ಪ್ರತಿನಿತ್ಯ ಹಳ್ಳಿಯ ಜನರ ಜೊತೆಗಿನ ಒಡನಾಟ ಓದುಗಳಾದ ನನ್ನನ್ನು ಬರಹಗಾರ್ತಿಯಾಗಿ, ಸಂಘಟಿತ ಚಟುವಟಿಕೆಯಲ್ಲಿ ವಿಶ್ವಾಸವುಳ್ಳವಳನ್ನಾಗಿ ರೂಪಿಸಿತು. 

೨೦೦೭-೦೮ರ ವೇಳೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೊನ್ನಾವರದಲ್ಲಿ ಸಂಘಟಿಸಲು ಶುರು ಮಾಡಿದೆವು. ಸಂಪರ್ಕ ಜಾಲ ಬೆಳೆಯುತ್ತ ಹೋಯಿತು. ಸಾಹಿತಿಗಳ, ಹೋರಾಟಗಾರರ, ಸಂಘಟನೆಗಳ ನಂಟು ಬೆಳೆಯುತ್ತ ಹೋದಹಾಗೆ ವೈಚಾರಿಕವಾಗಿ ನಾನೂ ಬೆಳೆದೆ. ಅಂಬೇಡ್ಕರ್ ಗಾಢವಾಗಿ ಪ್ರಭಾವಿಸಿದರು. ನಾಮದೇವ ಢಸಾಳ್ ಬೆಚ್ಚಿ ಬೀಳಿಸಿದರು. ಮತ್ತೆ ಓದಿದ ಚೆ, ಭಗತ್ ತಲ್ಲಣಿಸುವಂತೆ ಮಾಡಿದರು. ತೇಲ್ತುಂಬ್ಡೆ ಇಷ್ಟವಾದರು. ಈ ಹಂತದಲ್ಲಿ ಪರಿಚಯವಾದ ಲಡಾಯಿ ಪ್ರಕಾಶನದ ಬಸೂ ನನ್ನ ಯೋಚನೆಯ, ಬರಹದ-ಬದುಕಿನ ದಿಕ್ಕನ್ನೇ ಬದಲಿಸಿದ ಸಂಗಾತಿ. ಬಸೂವಿನ ಒಡನಾಟ, ಸಾಂಗತ್ಯ ಇಲ್ಲದಿದ್ದರೆ ಇಷ್ಟು ಬರಹ-ಪ್ರಕಟಣೆ ಸಾಧ್ಯವಾಗುತ್ತಿರಲಿಲ್ಲ. ನಾವು ಕನಸಿದ ಸಮಾವೇಶ, ಸಭೆ, ಸೆಮಿನಾರು, ಗೋಷ್ಠಿಗಳಿಗೆ ಲೆಕ್ಕವಿಲ್ಲ. ಚರ್ಚಿಸಿದ್ದು, ವಾದಿಸಿದ್ದು, ಮುನಿಸಿಕೊಂಡದ್ದು, ಹಂಚಿಕೊಂಡದ್ದಕ್ಕೆ ಎಣೆಯಿಲ್ಲ. ಆತನೊಂದಿಗಿನ ಕೊಡುಕೊಳುವಿಕೆ, ಜಗಳಗಳು ನನ್ನನ್ನೂ, ನನ್ನ ಚಿಂತನಾಲೋಕವನ್ನು ಇವತ್ತಿಗೂ ಸಜೀವವಾಗಿಟ್ಟಿವೆ. 

ಈ ಸಮಯದಲ್ಲೇ ದು. ಸರಸ್ವತಿ ಎಂಬ ಅಕ್ಕ ಪರಿಚಯವಾದಳು. ಬಸುವಿನಂತೆಯೇ ಅವಳೂ ಉಡಿಯಲ್ಲಿ ಕನಸಿನ ಬೀಜಗಳನ್ನಿಟ್ಟುಕೊಂಡು ಬಿತ್ತುವಾಕೆ. ಅವಳ ಕನಸಿನ ಹಕ್ಕಿಗೆ ರೆಕ್ಕೆ ಕಟ್ಟಿ ಹಾರಿಸಿದ ಸಬಿಹಕ್ಕ, ಗುಲಾಬಿ, ವಾಣಿ ಮತ್ತಿತರ ಗೆಳತಿಯರು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಹುಟ್ಟಿಗೆ ಕಾರಣರಾದರು. ನನ್ನನ್ನು ವಿನೀತಗೊಳಿಸಿದ್ದು, ಸೋದರಿತ್ವದ ಪ್ರಜ್ಞೆಯನ್ನು ಗಾಢವಾಗಿ ಬೆಳೆಸಿದ್ದು, ಚರ್ಚೆ ಮಾತುಕತೆಗಳ ಮೂಲಕ ಸ್ತ್ರೀವಾದದ ಆಚರಣಾ ಪಠ್ಯವನ್ನು ಅರ್ಥ ಮಾಡಿಸಿದ್ದು ಒಕ್ಕೂಟವೇ ಎನ್ನಬೇಕು. 

ಈಗ ನನ್ನ ಮಾತು-ಕ್ರಿಯೆಗಳ ಜೊತೆ ‘ಗುರುತಿಸಿಕೊಳ್ಳುವ’ ತಾಣ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಮತ್ತು ಲಡಾಯಿಯ ‘ಮೇ ಸಾಹಿತ್ಯ ಮೇಳ ಬಳಗ’. ಇವೆರೆಡೂ ಜೊತೆಗುಂಪುಗಳು ಸಂಘಟಿತ ಕ್ರಿಯೆಗಳ ಸ್ಥಾಪಿತ ಚೌಕಟ್ಟನ್ನು ಮುರಿದು, ಪ್ರಚಾರ-ತೋರುಗಾಣಿಕೆಯ ಹಪಾಹಪಿಯಿಲ್ಲದೆ ಕ್ರಿಯಾಶೀಲವಾಗಿ, ಅರ್ಥಪೂರ್ಣವಾದ ಕೆಲಸ ಮಾಡುವ ಬಗೆಗೆ ಯೋಚಿಸುವುದನ್ನು ಕಲಿಸಿದವು. ಬಿಕ್ಕಟ್ಟಿನ ಕಾಲದಲ್ಲೂ ಸೂಕ್ಷ್ಮವಾಗಿ ಚಿಂತಿಸುವುದು, ಕೆರಳದೇ ಪ್ರೀತಿಯಿಂದ ಕೆಲಸ ಮಾಡುವುದು ಸಾಧ್ಯ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟವು.

ಮರದೊಳಗೆ ಮರ ಹುಟ್ಟಿ

ಬದಲಾವಣೆ ವ್ಯಕ್ತಿಗತ ಮತ್ತು ಸಾಮಾಜಿಕ - ಎರಡೂ ನೆಲೆಯಲ್ಲಿ ಸಂಭವಿಸಬೇಕು. ಓದು, ಬರಹ, ಜನರ ಒಡನಾಟ, ಆಳದ ಧ್ಯಾನ, ಅನುಭವ, ಗ್ರಹಿಕೆ ಎಲ್ಲದರಿಂದ ವ್ಯಕ್ತಿಗತ ಬದಲಾವಣೆ ಸಂಭವಿಸುತ್ತದೆ. ಆದರೆ ಅಷ್ಟೇ ಸಾಲದು. ನಾವು ಯಾವ ಸಮೂಹದ ಭಾಗವೋ ಆ ಸಮೂಹವೂ ಬದಲಾಗಬೇಕು ಎಂದು ಪ್ರಯತ್ನಿಸುವುದು ಮುಖ್ಯ. ಸುತ್ತಮುತ್ತಲ ಸಮಾಜವೂ ನಾ ನಂಬಿದ ಬದಲಾವಣೆಯ ಕಡೆಗೆ ಗಮನ ಹರಿಸುವಂತೆ, ಆ ಕಡೆಗೆ ಚಲಿಸಲು ಉತ್ತೇಜಿಸುವಂತೆ ಮಾಡುವುದು ಅವಶ್ಯಕ. ಅದಕ್ಕೆ ನನ್ನ ವೃತ್ತಿ ಮತ್ತು ಬರಹ ಒದಗಿ ಬರುತ್ತಿವೆ. 

ಹೀಗೆ.. 

ಉತ್ತರವಿರದ ಪ್ರಶ್ನೆಗಳು ಎಂದು ನಾನಂದುಕೊಂಡ ಜಟಿಲ ಸಂಗತಿಗಳಿಗೆಲ್ಲ ಓದುಬರಹವು ತಿಳಿವಿನ ಮಾರ್ಗ ಹುಡುಕಿಕೊಟ್ಟಿದೆ. ಬದುಕನ್ನೇ ಉತ್ತರವಾಗಿಸಬೇಕು ಎಂದು ಹಲವು ಜೀವಗಳು ಹೇಳಿಕೊಟ್ಟಿವೆ. ಗಾಂಧಿ, ಬಸವಣ್ಣ, ಅಕ್ಕ, ಲಂಕೇಶ್, ಅಂಬೇಡ್ಕರ್, ರೂಮಿ, ಬುದ್ಧ, ಫುಲೆ, ಶಾಹೂ, ಮಾರ್ಕ್ಸ್, ಸಾವಿತ್ರಿಬಾಯಿ, ಕಸ್ತೂರಬಾ, ಗಿಬ್ರಾನ್, ರೋಗಿಗಳು, ಹೋರಾಟಗಾರರು - ಹೀಗೆ ನನ್ನೊಳಗಿಳಿದ, ಅರಳಿದ, ಬೆಳೆದ ಸರ್ವರೊಳಗಿಂದ ಒಂದೊಂದು ನುಡಿಗಲಿತು ನನ್ನ ಹೆಜ್ಜೆಗಳು ರೂಪುಗೊಳ್ಳುತ್ತಿವೆ. 

ಮರದೊಳಗೆ ಮರ ಹುಟ್ಟಿ, ಮರ ಚಿತ್ರ ಕಾಯಾಗುವ ಹಾಗೆಯೇ ಮನುಷ್ಯ ಮನವೊಂದು ಲೇಖಕಿ/ಕ ಆಗುವ ಪ್ರಕ್ರಿಯೆ ಸಂಭವಿಸುತ್ತದೆ. ಇಷ್ಟು ಬರೆದಾದಮೇಲೂ ಇವತ್ತಿನ ಅನುಪಮಾ ಆಗಿ ಯಾವಾಗ ಬದಲಾದೆ? ಹೇಗೆ? ಎನ್ನುವುದನ್ನು ಗುರುತಿಸಿದೆ ಎನ್ನಲಾರೆ. ಅದು ತೆನೆಯೊಳಗೆ ಹಾಲು ತುಂಬಿದ್ದು ಹೇಗೆ? ಯಾವಾಗ? ಎಂದು ಹೇಳುವಷ್ಟೇ ಕಷ್ಟದ್ದು, ಅಲ್ಲವೇ?


(‘ಟಿವಿ೯ ಕನ್ನಡ ಡಿಜಿಟಲ್’ಗೆ ಬರೆದದ್ದು) 


‘ಶಯ್ಯಾಗೃಹದ ಸುದ್ದಿಗಳು’


ಶೃಂಗಾರದ ಒಳಬಂಡಾಯ



ಶೋಭಾ ನಾಯಕ ಅವರ ಮೂರನೇ ಕವನ ಸಂಕಲನ ‘ಶಯ್ಯಾಗೃಹದ ಸುದ್ದಿಗಳು’. ಪುಟ ತಿರುವಿದರೆ ಬೆಚ್ಚಿಬೀಳಿಸಿ ಯೋಚನೆಗೆ ಹಚ್ಚುವಂತಹ ಐವತ್ತು ಕವಿತೆಗಳಿಲ್ಲಿವೆ. ವಸ್ತು, ಮಂಡನೆ, ಅಲ್ಲಿಲ್ಲಿ ಮಿಂಚುವ ಆಡುಭಾಷೆ, ಹೆಣ್ಣು ಅಭಿವ್ಯಕ್ತಿಯ ಪಾರದರ್ಶಕತೆಗಳ ಕಾರಣದಿಂದ ಇದು ಮಹಿಳಾ ಕಾವ್ಯಕ್ಕೊಂದು ಗಮನಾರ್ಹ ಸೇರ್ಪಡೆಯಾಗಿದೆ.

ಜೀವಿಗಳಿಗೆ ಕಾಮ ಒಂದು ಗುಂಗು. ಮನುಷ್ಯರಿಗೆ ಶೃಂಗಾರ ಒಂದು ವಿಸ್ಮಯ, ಭಾರತೀಯರಿಗದು ಗುಟ್ಟಿನ ಸುಖ. ಕಾಮದ ಬಗೆಗೆ ಭಾರತೀಯರು ವಿಪುಲವಾಗಿ ಬರೆದಿದ್ದಾರೆ. ಕವಿಗಳೂ, ಸಂತರೂ, ಯತಿವರೇಣ್ಯರೂ ಕುಂಭಕುಚಗಳ ಹೆಣ್ಣಿನ ದೇಹವರ್ಣನೆ ಮಾಡಿದ್ದಾರೆ. ಮಿಥುನ ಶಿಲ್ಪಗಳನ್ನು ಗುಡಿಯಲ್ಲೂ ಕೆತ್ತಿಸಿದ್ದಾರೆ. ಯೋನಿಯನ್ನು ಮನರಂಜನೆಯ ಅಂಗವಾಗಿ ನೋಡಿದಷ್ಟೇ ಫಲವತ್ತತೆಯ ಸಂಕೇತವಾಗಿ ಪೂಜಿಸಿದ್ದಾರೆ. ಸ್ತ್ರೀಪುರುಷ ಮಿಲನಕ್ಕೆ ಹೊಸ ಅರ್ಥ, ಸಾಧ್ಯತೆಗಳನ್ನು ಅಧ್ಯಾತ್ಮ ಪರಂಪರೆಗಳು ಕೊಟ್ಟಿದ್ದಾವೆ. ಇಲ್ಲೆಲ್ಲ ಗಂಡು ಕಣ್ಣೋಟದಲ್ಲಿ ಹೆಣ್ಣು ದೇಹವನ್ನು, ಕಾಮದನುಭವವನ್ನು ಕಟ್ಟಿಕೊಡಲಾಗಿದೆ. ಹೆಣ್ಣುಗಳಿಗೆ ಅದೊಂದು ಆಡಬಾರದ ಗುಟ್ಟಿನ ಸಂಗತಿಯಾಗಿ ಉಳಿದಿದೆ. ಮಾತನಾಡಿದರೂ ಒಂದೋ ಅನುಭಾವಿ ಹಿನ್ನೆಲೆಯಲ್ಲಿ ಅಥವಾ ಅಭಿಸಾರಿಕಾ ಮನೋವೃತ್ತಿಯಾಗಿ ಅರ್ಥೈಸಲಾಗುತ್ತದೆ. 

ಆದರೆ ಅಕ್ಕಮಹಾದೇವಿಯ ಕನ್ನಡ ನೆಲದ ಹೆಣ್ಣುಗಳು ದೇಹತುಮುಲಗಳನ್ನು ಸಂಕೇತಾರ್ಥದಲ್ಲಿ ಬಿಡಿಸಿಡುತ್ತಲೇ ಇದ್ದಾರೆ. ಎನ್. ವಿ. ಭಾಗ್ಯಲಕ್ಷ್ಮಿ ೧೯೭೦ರ ದಶಕದಲ್ಲಿ ‘ಬೆರಳ ಸಂದಿಯ ಬದುಕು’ ಸಂಕಲನದಲ್ಲಿ ‘ಹುಡುಗಿಯರು ಕಾಮದ ಬಗ್ಗೆ ಪದ್ಯ ಬರೆದರೆ..’ ಏನೇನು ಆಗುತ್ತದೆಂದು ಬರೆದರು. ಶೃಂಗಾರ, ಪ್ರೇಮ, ವಿರಹಗಳು ಕನ್ನಡ ಮಹಿಳಾ ಕಾವ್ಯದಲ್ಲಿ ಒಂದೇಸಮ ಕಂಡುಬರುತ್ತಿವೆ. ಈ ನಿಟ್ಟಿನಿಂದ ‘ಶಯ್ಯಾಗೃಹದ ಸುದ್ದಿಗಳು’ ದಿಟ್ಟವಾದೊಂದು ತಿರುವು ತೆಗೆದುಕೊಂಡಿದೆ. ಹೆಣ್ಣು ಬರೆದಿದ್ದನ್ನೆಲ್ಲ ಆತ್ಮಚರಿತ್ರಾತ್ಮಕವಾಗಿ ನೋಡಿ, ಅಲ್ಲಿರುವ ‘ಅವನು’ ಯಾರಿರಬಹುದೆಂದು ಭೂತಕನ್ನಡಿಯಲ್ಲಿ ಹುಡುಕುವ ಲೋಕಕ್ಕೆ ‘ಬಟ್ಟೆಯನ್ನಷ್ಟೇ ತೊಟ್ಟವರ ಮಾನ ಕಾಯಲು ತಾನು ಬೆತ್ತಲನ್ನುಟ್ಟಿ’ರುವುದಾಗಿ ಕವಿತೆ ಹೇಳುತ್ತದೆ. 

ಹೆಣ್ಣಿಗೆ ಲಜ್ಜೆಯೇ ಆಭರಣವೆಂದು ಕಾಮದ ನಿಷ್ಕ್ರಿಯ ಪಾಲುದಾರಳನ್ನಾಗಿಸಿರುವ ಸಮಾಜಕ್ಕೆ, ‘ಮುಟ್ಟಿನ ಹೊಲೆಗೆ, ಕಟ್ಟಿನ ಮೊಲೆಗೆ ಹುಟ್ಟಿದವನೇ, ಮುಟ್ಟಿದರೆ ಮುನಿವ ಎಲೆಯಂತೆ ಮುದುರಿಕೊಳ್ಳುವುದನು ಬಯಸಬೇಡ ನನ್ನಿಂದ’ ಎಂದು ಕವಿತೆಗಳ ನಾಯಕಿ ತನ್ನನ್ನು ಪರಿಚಯಿಸಿಕೊಳ್ಳುತ್ತಾಳೆ. ‘ಬ್ರೈಲ್ ಲಿಪಿಯಲ್ಲಿ ಬರೆದ ಶೃಂಗಾರ ಕಾವ್ಯ ನಾನು. ಆದರೆ ಓದುವ ನೀನು ಕುರುಡನಲ್ಲ’ ಎಂದು ಲಿಂಗಸಂಬಂಧದ ತಕರಾರುಗಳನ್ನು ಎತ್ತುತ್ತಾಳೆ. ‘ಶಯ್ಯಾಗೃಹದಲ್ಲಿ ಹೆಣ್ಣು ನರಳುವಾಗ ಗಂಡಸಿಗೆ ಸಿಗುವ ಸುಖದ ಹೆಸರು ಅಹಂ’ ಎನ್ನುತ್ತ ಪುರುಷ ಲೈಂಗಿಕತೆಯನ್ನು ಕಟುವಿಮರ್ಶೆಗೊಡ್ಡುತ್ತಾಳೆ. 

ಬಹುಸಂಗಾತಿ ಸಂಬಂಧವನ್ನು ಗಂಡಸು ಹೆಮ್ಮೆಯಿಂದ ಹೇಳಿಕೊಂಡಂತೆ ಹೆಣ್ಣು ಹೇಳಿಕೊಂಡದ್ದಿಲ್ಲ. ಇಲ್ಲಿ ಕಾವ್ಯ ನಾಯಕಿಯು ತನ್ನಿನಿಯನಿಗೆ, ‘ನಾನು ಒಬ್ಬಳೇ ಅಲ್ಲ. ಕಣ್ಣಲ್ಲಿ ಕಣ್ಣೂರಿದಾಗ ನನ್ನೆಲ್ಲ ಪೂರ್ವಪ್ರೇಮಿಗಳನ್ನು ಭೇಟಿಯಾಗುವುದು, ಅವರೆಲ್ಲರೊಳಗೆ ನೀನೂ ಒಬ್ಬನಾಗುವುದು ಅನಿವಾರ್ಯ’ವೆಂದು ಬಹುಸಂಗಾತಿಗಳ ನಂಟನ್ನು ತೆರೆದಿಡುತ್ತಾಳೆ. ತನ್ನನ್ನು ಕಾಮುಕಿ ಎನ್ನುವ ಮತ್ತೊಬ್ಬನಿಗೆ, ‘ನಿನ್ನಂತೆ ನನಗೂ ಸೊಬಗು ಬೇಕು ಮಾರಾಯಾ’ ಎಂದುತ್ತರಿಸಿ ದಂಗುಬಡಿಸುತ್ತಾಳೆ. ಕಾಮವಿಲ್ಲದೆ ಬರಿಯ ಪ್ರೇಮಿಗಳಾಗಿರೋಣ ಎನ್ನುವ ಗೆಳೆಯನಿಗೆ, ‘ಅದು ಐಷಾರಾಮಿ ಕಲ್ಪನೆ; ತೊಗಲ ಆಯುಧಗಳೇ ವಾಸ್ತವ’ ಎನ್ನುತ್ತಾಳೆ. ಮುಟ್ಟು ನಿಂತ ನಂತರವೂ ಮುಟ್ಟುವವನು, ಮುಗಿಲಾಗಬಲ್ಲವನು, ಬೆನ್ನುಹಾಕಿ ಮಲಗದವನು ಇರಬಾರದಿತ್ತೇ ಎಂದು ಕನಲುತ್ತಾಳೆ.

ಒಟ್ಟಾರೆಯಾಗಿ ಶೃಂಗಾರ ಸಂಬಂಧದ ಸಾಂಪ್ರದಾಯಿಕ ಮಡಿವಂತಿಕೆಯ ಚೌಕಟ್ಟನ್ನು ಮುರಿಯಲು ಇಲ್ಲಿನ ಕವಿತೆಗಳು ಯತ್ನಿಸಿವೆ. ಮದುವೆ, ಪಾತಿವ್ರತ್ಯ, ಲಜ್ಜೆ ಮೊದಲಾಗಿ ಏಕಪಕ್ಷೀಯವಾಗಿ ಹೆಣ್ಣಿನ ಮೇಲೆ ಹೇರಲ್ಪಟ್ಟ ಮೌಲ್ಯಗಳನ್ನು ಮಿಕ್ಕು ಮೀರಿ ಒಳಬಂಡಾಯ ಹೂಡಿವೆ. ‘ತನ್ನದು ಮಾತ್ರ’ ಆದ ಜೀವವೊಂದನ್ನು ಪಡೆಯಲು ಗಂಡುಹೆಣ್ಣುಗಳು ಯತ್ನಿಸುವ ನಾಗರಿಕ ಸಮಾಜದಲ್ಲಿ ದೈಹಿಕ ಸಂಬಂಧ ಕುರಿತ ಈ ಧೋರಣೆಯನ್ನು ಎಲ್ಲರೂ ಒಪ್ಪಬೇಕೆಂದಿಲ್ಲ. ಒಪ್ಪುವುದೂ ಇಲ್ಲ. ನೀತಿಅನೀತಿಗಳ ಆಚೆಗೂ ಪ್ರಶ್ನೆಗಳಿಲ್ಲದೇ ಇಲ್ಲ. ಅದೇನೇ ಇರಲಿ, ಒಳ್ಳೆಯತನವೆಂಬ ರಥವನೇರಿರುವ ಹೆಣ್ಣುಗಳು ಇಂಥ ಕವಿತೆ ಬರೆಯುವುದು, ಪ್ರಕಟಿಸುವುದು ಎದೆಗಾರಿಕೆಯ ಮಾತೇ ಆಗಿದೆ. ಕವಿಗೆ ಸಾಧ್ಯವಾದ ಜಿಗಿತವು ಗಂಡು ಠೇಂಕಾರವನ್ನು ಕ್ಷೀಣಗೊಳಿಸಿ ಸಮಾಜವನ್ನು ಆತ್ಮಾವಲೋಕನಕ್ಕೆ ಹಚ್ಚುವಷ್ಟು ಶಕ್ತವಾಗಿದೆ.

ಆದರೆ ದೇಹವನ್ನು ಚಲಾವಣೆಯಲ್ಲಿಡಲು ತಾರುಣ್ಯ, ಸೌಂದರ್ಯಗಳೇ ನಾಣ್ಯವಾದರೆ ಮನುಷ್ಯರಿಗಿಂತ ವಸ್ತುಗಳೇ ಮುಖ್ಯವಾಗುವ ಅಪಾಯವಿದೆ. ಅದರಿಂದ ಪಾರಾಗಬೇಕೆಂದರೆ ದೇಹದ ಮೀರುವಿಕೆಯು ಬದುಕಿಗೂ ವಿಸ್ತರಿಸಿಕೊಳ್ಳಬೇಕಾಗುತ್ತದೆ. ಚೆಲುವಿಕೆಯ ವ್ಯಾಖ್ಯಾನಗಳನ್ನೂ ಮನುಷ್ಯ ಚೇತನ ಮೀರಬೇಕಾಗುತ್ತದೆ. ಯಾಕೆಂದರೆ ಸಮಾಜದ ಚೌಕಟ್ಟುಗಳು ಬರಿಯ ಹೆಣ್ಣನ್ನಷ್ಟೇ ಬಾಧಿಸಿಲ್ಲ. ಗೌರಿಯರ ದುಃಖ ಒಂದು ತರಹವಾದರೆ ಗಂಡು ದುಃಖದ ಆಳ ಬೇರೆಯದೇ ಆಗಿದೆ. ಗಡಸುದನಿ, ಬಲಿಷ್ಟ ದೇಹ, ಹುಚ್ಚು ಕೆಚ್ಚು ಇಲ್ಲದಿದ್ದಕ್ಕೆ; ಮೀಸೆ ಗಡ್ಡ ಮೂಡದಿದ್ದಕ್ಕೆ; ಬೇಗನೇ ಆರ್ದ್ರಗೊಂಡು ಕಣ್ಣೀರು ಮಿಡಿಯುವುದಕ್ಕೆ; ಅಂಗಾಂಗಗಳ ಉದ್ದಗಲ ಕಡಿಮೆಯಿರುವುದಕ್ಕೆ; ಹೆಣ್ಣಿನ ತನುಮನಧನಗಳ ದಾಹವನ್ನು ತೀರಿಸಲಾಗದ್ದಕ್ಕೆ ಗಂಡಸರೂ ಸಹ ಅವಮಾನ, ಕೀಳರಿಮೆಗಳನ್ನು ಅನುಭವಿಸುತ್ತಿದ್ದಾರೆ. ಹೆಣ್ಣುಗಳು ಹೆಣ್ಣುತನದ ಚೌಕಟ್ಟುಗಳನ್ನು ಕಿತ್ತು ಬಿಸಾಡುವಂತೆಯೇ ತನ್ನ ಜೊತೆಗಾರನ ಗಂಡಸುತನವೆಂಬ ಕಣ್ಕಟ್ಟನ್ನು ಕಿತ್ತು, ಅವರನ್ನೂ ಮುಕ್ತಗೊಳಿಸುವ ಕೆಲಸ ಮಾಡಬೇಕು. ಕರುಣಾ, ಮೈತ್ರಿ ಭಾವವನ್ನು ಬಂಡಾಯ ಗುಣದ ಜೊತೆಗೇ ಮಿಳಿತಗೊಳಿಸಿ ಸ್ತ್ರೀಪುರುಷ ಸಂಬಂಧಗಳು ಕೆಳೆತನದ ಬಯಲನ್ನು ತಲುಪಲು ಸಾಧ್ಯ ಮಾಡಬೇಕು.

ಆಗ ಮೀರುವಿಕೆಯ ಆಯಾಮ ಬೇರೆಯದೇ ಆಗಿರುತ್ತದೆ. ನಾವು ಕನಸುವ ಸಮತೆಯ ಬಯಲಿನೆಡೆಗೆ ಮನುಷ್ಯರನ್ನು ನಡೆಸುತ್ತದೆ. 

(ಪ್ರತಿಗಳಿಗಾಗಿ ಸಂಪರ್ಕ: ಮನೋರಮಾ ಬುಕ್ ಹೌಸ್, ಸೆಲ್: 8088380327, 9481451709)




‘ಪರ್ದಾ ಮತ್ತು ಪಾಲಿಗಮಿ’

 ಗಂಡು ಎಂಬ ಅಧಿಕಾರದ ತುಂಡು

ಮಹಿಳಾ ಚಳವಳಿ ಜಗತ್ತಿನ ಅತ್ಯಂತ ದೀರ್ಘ ವಿಮೋಚನಾ ಹೋರಾಟವಾಗಲಿರುವ ಬಗೆಗೆ ಯಾವುದೇ ಅನುಮಾನವಿಲ್ಲ. ಅದನ್ನು ಧೃಢಪಡಿಸುವಂತೆ ಇಕ್ಬಾಲುನ್ನಿಸಾ ಹುಸೇನ್ ಬರೆದ ‘ಪರ್ದಾ ಮತ್ತು ಪಾಲಿಗಮಿ’ ಕಾದಂಬರಿಯಿದೆ. ಭಾರತೀಯ ಸಮಾಜದಲ್ಲಿ ಗಂಡು ಎನ್ನುವುದೊಂದು ಅಧಿಕಾರದ ತುಂಡು. ಮನುಷ್ಯ ಸಂಬಂಧಗಳೆಲ್ಲ ಗಂಡಿನೊಡನೆಯ ಅಧಿಕಾರ ಸಂಬಂಧಗಳಾಗಿಯೇ ನಿರೂಪಿತವಾಗುತ್ತವೆ. ಮನೆಯೊಳಗಿನ ಗಂಡುಗಳನ್ನು ಪರೋಪಜೀವಿಯನ್ನಾಗಿ ಮಾಡಿದಷ್ಟೂ ತಮ್ಮ ಸ್ಥಾನಬೆಲೆ ಹೆಚ್ಚುವುದೆಂದು ಹೆಣ್ಣುಜೀವರು ಭಾವಿಸಿದ್ದಾರೆ. ಹೆಣ್ಣುಗಳ ಹುಳಿತೇಗಿನ ಮೂಲ ಗಂಡು ಅಧಿಕಾರದೊಂದಿಗೆ ನಡೆಸುವ ಪೈಪೋಟಿಯೇ ಆಗಿದೆ. ಸೆಣಸಾಟದ ಹೆಣ್ಣು ಬದುಕನ್ನು ೧೯೪೪ರಲ್ಲಿ ಇಂಗ್ಲಿಷ್‌ನಲ್ಲಿ ಬಂದ ಕಾದಂಬರಿ ‘ಪರ್ದಾ ಅಂಡ್ ಪಾಲಿಗಮಿ’ ಸಮರ್ಥವಾಗಿ ಚಿತ್ರಿಸಿದೆ. ದಾದಾಪೀರ್ ಜೈಮನ್ ಅದರ ಸಾಂಸ್ಕೃತಿಕ ಅನುವಾದವನ್ನು ಸಮರ್ಥವಾಗಿ ಮಾಡಿ ಕನ್ನಡದ್ದೇ ಆಗಿಸಿದ್ದಾರೆ. ಕನ್ನಡದ ಸೂಕ್ಷ್ಮ ಕತೆಗಾರ, ಉತ್ಸಾಹಿ ಪ್ರಕಾಶಕರಾದ ವಸುಧೇಂದ್ರ ತಮ್ಮ `ಛಂದ' ಪುಸ್ತಕದಿಂದ ಅನುವಾದವನ್ನು ಪ್ರಕಟಿಸಿದ್ದಾರೆ.



ಚಿಕ್ಕಬಳ್ಳಾಪುರದ ಇಕ್ಬಾಲುನ್ನಿಸಾ (ಜನನ ೧೮೯೭) ಹದಿವಯಸ್ಸಿನಲ್ಲಿ ಪೊಲೀಸ್ ಅಧೀಕ್ಷಕರಾಗಿದ್ದ ಸಯ್ಯದ್ ಹುಸೇನರನ್ನು ಮದುವೆಯಾದರು. ಬಳಿಕ ಓದು ಮುಂದುವರೆಸಿ, ಮಗನ ಜೊತೆಜೊತೆಗೆ ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಐದು ಮಕ್ಕಳನ್ನು ಭಾರತದಲ್ಲಿ ಬಿಟ್ಟು, ಕೈಗೂಸಿನೊಡನೆ ಲಂಡನ್ ಸೇರಿ ಲೀಡ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಮೊದಲ ಭಾರತೀಯ ಮಹಿಳೆಯಾದರು. ಪರ್ದಾ ತ್ಯಜಿಸಿದ್ದ ಇಕ್ಬಾಲುನ್ನಿಸಾ, ಸಾಮಾಜಿಕ ಕಾರ್ಯಕರ್ತೆ, ಲೇಖಕಿಯಾಗಿ ಬೆಳೆದರು. ಭಾರತೀಯ ಮುಸ್ಲಿಮರ ನಂಬಿಕೆ, ಮೂಢನಂಬಿಕೆ, ಶೋಕಿ, ಕಪಟ, ಅಮಾಯಕತೆ, ಅತಿಧಾರ್ಮಿಕತೆ, ಬಡತನ, ಹುಸಿಗರ್ವ, ಸಮುದಾಯಪ್ರಜ್ಞೆಗಳನ್ನು ತಮ್ಮ ಬರಹಗಳಲ್ಲಿ ಚಿತ್ರಿಸಿದರು.


‘ಪರ್ದಾ ಮತ್ತು ಪಾಲಿಗಮಿ’ ನಗರವೊಂದರ ಸಿರಿವಂತ ಮುಸ್ಲಿಂ ಕುಟುಂಬದ ಕಥೆ. ಉಮರ್, ಕಬೀರ್, ಅಕ್ರಮ್ ಎಂಬ ಮೂರು ತಲೆಮಾರಿನ ಗಂಡಸರ ಯಜಮಾನಿಕೆಯ ಏಳುಬೀಳಿನ ಕಥೆ. ಹಣ ಕೂಡಿಡುತ್ತ ಬದುಕು ಸವೆಸಿದ ಅತಿ ಸಂಪ್ರದಾಯವಾದಿ ಉಮರ್; ಹದಿಹರೆಯದಲ್ಲೇ ಸಿಕ್ಕ ಯಾಜಮಾನ್ಯವನ್ನು ಸ್ವೇಚ್ಛೆಗಾಗಿ ಬಳಸಿ ನಾಲ್ಕು ಮದುವೆಯಾಗುವ ಕಬೀರ್; ಆಧುನಿಕ ಬದುಕಿಗೆ ತೆರೆದುಕೊಂಡರೂ ಕುಟುಂಬದ ನಿಯಂತ್ರಣದಿಂದ ಹೊರಬರಲಾರದ ಅಕ್ರಮ್ ಎಂಬ ಮೂವರು ಗಂಡಸರ ಸುತ್ತ ಹೆಣೆದುಕೊಂಡ ‘ದಿಲ್ಖುಶ್’ ಮನೆಯ ಹೆಣ್ಣುಲೋಕದ ಕಥೆ. ಸಂಕೋಚದ ಮುದ್ದೆಯಂತಿರುವ ಹುಡುಗರಲ್ಲಿ ಅದು ಯಾವಾಗ ಗಂಡುಗರ್ವ ಸ್ಫೋಟಿಸಿ ಯಾಜಮಾನ್ಯದ ಚಹರೆ ಬೆಳೆಯುವುದೋ ಎಂಬ ಅಚ್ಚರಿಗೆ ಇಲ್ಲಿ ಉತ್ತರ ಸಿಗುತ್ತದೆ. 

‘ದಿಲ್ಖುಶ್’ ಮನೆಯಲ್ಲಿ ವಂಶೋದ್ಧಾರಕನನ್ನು ಹೆತ್ತ ಕಬೀರನ ಮೊದಲನೆಯ ಹೆಂಡತಿ ನಾಝ್ನಿಯು ಗುಣವಾಗದ ಕಾಯಿಲೆಗೆ ತುತ್ತಾಗಿ ಅಸಹಾಯಕತೆ, ಅಬಲತನವೇ ಮೈವೆತ್ತಂತಿರುವವಳು. ಮನೆಗೆಲಸ ಮಾಡಲೊಬ್ಬರು ಬೇಕೆಂದು ಮದುವೆಯಾದ ಎರಡನೆಯ ಹೆಂಡತಿ ‘ಕರಿಮುಸುಡಿ’ಯ ಬಡವಿ ಮುನೀರಾ, ಸಿರಿವಂತನ ಕೈಹಿಡಿವ ಭಾಗ್ಯ ಸಿಕ್ಕಿದ್ದಕ್ಕೆ ಕೃತಕೃತಾರ್ಥಳಾಗಿ ಗಂಡ-ಅತ್ತೆ-ಧರ್ಮ ವಿಧಿಸಿರುವುದನ್ನು ಒಂದಿಷ್ಟೂ ಬದಲಾಗಲು ಬಿಡದವಳು. ಭಾರೀ ಮೆಹೆರ್ ಪಡೆದು ಬಂದಿರುವ ಸುಂದರಿ, ಜಾಣೆ, ಕವಯಿತ್ರಿ ಮಕ್ಬೂಲ್ ಪ್ರತಿತಿಂಗಳ ಆದಾಯಕ್ಕೆ ದಾರಿ ಮಾಡಿಕೊಂಡು ಮೂರನೆಯ ಹೆಂಡತಿಯಾಗಿ ಬಂದವಳು. ಅಶುಭವನ್ನೇ ತಂದಿತ್ತ ಮೂರು ಎಂಬ ಸಂಖ್ಯೆಯನ್ನು ನಿವಾರಿಸಿ ‘ನಾಲ್ಕು’ ಮಾಡಿಕೊಳ್ಳಲು ಹದಿಹರೆಯದ ಸುಂದರ ನಿರ್ಗತಿಕ ಹುಡುಗಿ ನೂರ್‌ಜಹಾನ್ ನಾಲ್ಕನೆಯ ಹೆಂಡತಿಯಾಗಿ ಬಂದವಳು. ಇವರನ್ನೆಲ್ಲ ನಿಯಂತ್ರಿಸುವವಳು ಮುಳ್ಳುನಾಲಗೆಯ ನಿರ್ದಯಿ ಅತ್ತೆ ಜುಹ್ರಾ. ಇವರೆಲ್ಲ ಮನೆಯೊಡೆಯ ಕಬೀರನ ಅಧಿಕಾರ ಎತ್ತಿ ಹಿಡಿಯುವ ನೆಪದಲ್ಲಿ ತಮ್ಮ ಅಧಿಕಾರ ಸ್ಥಾಪಿಸಿಕೊಳ್ಳುವ ಹುಕಿಯಲ್ಲಿರುವವರು. ಒಬ್ಬರಿಗೊಬ್ಬರು ಹೆಣೆವ ಅಸಂಗತ ತರ್ಕಗಳ ಬಲೆಯಲ್ಲಿ ಸಿಲುಕಿ ಉಸಿರುಗಟ್ಟಿದ ಮನೆಯಲ್ಲಿ ಸಂಭ್ರಮಕ್ಕಿಂತ ಸಂಚೇ ಹೆಚ್ಚು. ನೆಮ್ಮದಿಗಿಂತ ಶಂಕೆಯೇ ಹೆಚ್ಚು. ಹೊಸದರ ಕನಸಿಗಿಂತ ಹಳೆಯದನ್ನು ಉಳಿಸುವ ಹಠವೇ ಹೆಚ್ಚು. ಇದ್ದಿದ್ದರಲ್ಲಿ ಸೇವಕಿಯರೇ ನಿರ್ಭೀತಿಯಿಂದ ಮಾತನಾಡುತ್ತಾರೆ. ಬಂಡೇಳುವ ಗುಣಕ್ಕಾಗಿಯೇ ನಿಂದೆಗೊಳಗಾಗುತ್ತಾರೆ. 

ಕಾದಂಬರಿಯ ಹೆಣ್ಣುಲೋಕದಲ್ಲಿ ಹೆಣ್ತನವೆಂದರೆ ಬಸುರು, ಅಡುಗೆ, ದಾಸ್ಯದ ಬದುಕು, ಪೈಪೋಟಿ, ಅಧಿಕಾರ ಸ್ಥಾಪನೆಯ ಗುದ್ದಾಟ ಅಷ್ಟೇ. ಕೂಪದೊಳಗಿನ ಜಿಗಿದಾಟದ ಬದುಕಿನಲ್ಲಿ ಕಳೆದುಕೊಂಡದ್ದರ ಬಗೆಗೆ ಯಾರಿಗೂ ಅರಿವಿಲ್ಲ. ಪ್ರಶ್ನೆಗಳು ಹುಟ್ಟುವುದಿಲ್ಲ. ಬದಲಾವಣೆಯ ಬಯಕೆಯಿಲ್ಲ. ಉಲ್ಲಂಘಿಸುವ ಧೈರ್ಯವಿಲ್ಲ. ಆರೋಗ್ಯಕರ ಧಾರ್ಮಿಕತೆಯೂ ಇಲ್ಲದ ಕುರುಡು ಅನುಯಾಯಿತ್ವದಲ್ಲಿ ಅಧ್ಯಾತ್ಮದ ಬಯಲಿಗೊಯ್ಯುವ ಬೆಳಕಿಲ್ಲ. ವೈಚಾರಿಕತೆ, ಸ್ವಾತಂತ್ರ್ಯ, ಸಮಾನತೆ, ಸ್ನೇಹಭಾವಗಳು ಅವರ ಪದಕೋಶದಲ್ಲಿಲ್ಲ. ಹಕ್ಕುಗಳಿಗಾಗಿ ಹೋರಾಡುವುದು ಒತ್ತಟ್ಟಿಗಿರಲಿ, ಸ್ವಾಯತ್ತ ಬದುಕಿನ ಕನಸೇ ಅವರಿಗಿಲ್ಲ. 

ಹೀಗೆ, ಧಾರ್ಮಿಕ ಮೂಲಭೂತವಾದಿಗಳ ಬೆದರಿಕೆಗೆ ಜಗ್ಗದೆ ವಸ್ತುಸ್ಥಿತಿಯನ್ನು ನಿರೂಪಿಸುವ ಧೈರ್ಯ ತೋರುವ ಕಾದಂಬರಿಯಲ್ಲಿ ಸುಧಾರಣೆಯ ಉತ್ಸಾಹ ಇಲ್ಲವೆನ್ನುವಷ್ಟು ಕಡಿಮೆ. ವ್ಯಂಗ್ಯ, ವಿಡಂಬನೆಗಳು ತೆರೆಮರೆಯಲ್ಲಿದ್ದರೂ ನೇರ ಬಂಡಾಯದ ಪಾತ್ರಗಳು ಬಲುಕಡಿಮೆ. ಬಂಡೇಳುವ ಗುಣದ ಮಕ್ಬೂಲ್, ಅಡುಗೆಯ ಕೆಲಸದವಳ ಪಾತ್ರಗಳು ವಿಸ್ತಾರಗೊಳ್ಳಬಹುದಾದ ಸಾಧ್ಯತೆಗಳಿದ್ದರೂ ಅದೇಕೋ ಮೊಟಕುಗೊಂಡಿವೆ. ಅಕ್ರಮ್‌ನ ಗೆಳತಿ ರೋಸ್ ಎಂಬ ಆಧುನಿಕ ಕ್ರೈಸ್ತ ಹುಡುಗಿ ಭಿನ್ನವಾಗಿದ್ದರೂ ಅವಳ ‘ಕಾಫಿರ‍್ನಿ’ ಚಿಂತನೆಗಳು ಮುಸ್ಲಿಂ ಹೆಣ್ಣುಗಳಿಗೆ ಅಸ್ವೀಕೃತವೆಂಬಂತೆ ಮಾಡಲಾಗಿದೆ. ಕೌಟುಂಬಿಕ, ಧಾರ್ಮಿಕ ವ್ಯವಸ್ಥೆಯ ಟೊಳ್ಳುಗಳನ್ನು ಮನಸ್ಸಿನಲ್ಲೂ ಟೀಕಿಸದ ಹೆಣ್ಣು ಪಾತ್ರಗಳು, ಅನ್ಯಾಯ ಎಸಗುವ ಗಂಡು ಉತ್ತರದಾಯಿತ್ವವೇ ಇಲ್ಲದೆ ಪಾರಾಗುವುದು, ಯಥಾಸ್ಥಿತಿಗೆ ಎಲ್ಲವನ್ನೂ ಅಂಟಿಸುವ ಅಂತ್ಯವು ಇಕ್ಬಾಲುನ್ನೀಸಾರ ಕಾದಂಬರಿಯೆಂದು ಇಟ್ಟುಕೊಂಡ ಭರವಸೆಯನ್ನು ಹುಸಿಗೊಳಿಸುತ್ತವೆ. 

ಹೆಣ್ಣು ಕನಸುವ ಆದರ್ಶ ಸಮಾಜ ಹೇಗಿರಬೇಕು? ಮಹಿಳಾ ಹೋರಾಟದ ಅಂತಿಮ ಬಿಂದು ಯಾವುದು? ಹೆಣ್ಣಿನ ಜೈವಿಕ ಹಾಗೂ ಸಾಮಾಜಿಕ ಪಾತ್ರಗಳ ನಿಭಾವಣೆಯಲ್ಲಿ ಗಂಡಸಿನ ಪಾತ್ರವೇನು? ಲಿಂಗಾಧಾರಿತ ಪಾತ್ರಗಳ ತಿರುವುಮುರುವು ಮಹಿಳಾ ಹೋರಾಟದ ತುದಿಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಒಳನೋಟ ಮತ್ತು ದೂರದರ್ಶಿತ್ವವಿರುವ ಹೆಣ್ಣು ಬರಹಗಳಲ್ಲಿ ಉತ್ತರವಿರುತ್ತದೆ. ೧೯೦೫ರಲ್ಲಿ ಬಂಗಾಳದ ಬೇಗಂ ರುಖಿಯಾ ಶೆಖಾವತ್ ಹುಸೇನ್ ಬರೆದ ‘ಸುಲ್ತಾನಾಳ ಕನಸು’ ನೆನಪಾಗುತ್ತಿದೆ. ಅದನ್ನು ಓದತೊಡಗಿದರೆ ಸ್ತ್ರೀವಾದದ ನಾಳೆಯ ಕನಸುಗಳು ಬಿಚ್ಚಿಕೊಳ್ಳುತ್ತವೆ. ಈ ಕಾದಂಬರಿಯಲ್ಲಿ ಅಂತಹ ಆಶಾವಾದ, ಹೊರದಾರಿ, ಕನಸುಗಳು ಕಾಣಿಸುವುದಿಲ್ಲ. ಎಂದೇ ಇದನ್ನು ಸ್ತ್ರೀವಾದಿ ಕಾದಂಬರಿ ಎನ್ನುವುದಕ್ಕಿಂತ ಸ್ತ್ರೀವಾದ ಸಮಾಜಕ್ಕೆ ಯಾಕೆ ಅನಿವಾರ್ಯವೆಂದು ತಿಳಿಸುವ ಕೃತಿ ಎನ್ನಬಹುದು. ನಾವು ಹುಟ್ಟಿದ ಕುಟುಂಬ-ಜಾತಿ-ಧರ್ಮಗಳಲ್ಲಿ ಹೆಣ್ಣುಪ್ರಶ್ನೆಗಳನ್ನು ಎತ್ತದಿರುವ ಕಾರಣಕ್ಕೇ ಅವೆಲ್ಲ ಹೆಣ್ಣು ಬಂದೀಖಾನೆಗಳಾಗಿವೆಯೆಂದು ಎಚ್ಚರಿಸುವ ಕೃತಿ ಎನ್ನುವುದು ಸೂಕ್ತವಾಗುತ್ತದೆ. 

(ಪ್ರತಿಗಳಿಗಾಗಿ ಸಂಪರ್ಕ: ವಸುಧೇಂದ್ರ, ಛಂದ ಪುಸ್ತಕ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು - 560076. ಸೆಲ್: 9844422782)



Monday, 6 September 2021

ಟ್ರೆಡ್‌ಮಿಲ್‌ನ ಓಟ

 


                                  



ಕಾಲವನ್ನು ಕೋವಿಡ್ ಪೂರ್ವ, ಕೋವಿಡ್ ನಂತರ ಎಂದು ಅಳೆಯಬೇಕಾದ ಘಟ್ಟದಲ್ಲಿ ನಿಂತಿರುವಾಗ ಭಾರತದ ಎಲ್ಲ ಆರ್ಥಿಕ, ಸಮಾಜೋ ಸಾಂಸ್ಕೃತಿಕ ಸಮಸ್ಯೆಗಳ ಪರಿಹಾರ ಎಂಬಂತೆ ಬಿಂಬಿಸಲಾದ ಜಾಗತೀಕರಣದ ಪರಿಣಾಮಗಳೇನೆಂದು ನಾವು ಮಹಿಳೆಯರು ವಸ್ತುನಿಷ್ಠವಾಗಿ ಚರ್ಚಿಸಬೇಕಿದೆ. 


೧೯೯೦ರ ಬಳಿಕ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಬಂದಮೇಲೆ ಕಂಡು ಕೇಳರಿಯದ ಉದ್ಯೋಗಗಳಲ್ಲಿ ಮಹಿಳೆಯರು ತೊಡಗಿಕೊಂಡರು. ಮಹಿಳೆಯರ ಶಿಕ್ಷಣ, ಆದ್ಯತೆ, ಆಯ್ಕೆಗಳೇ ಬೇರೆಯಾದವು. ಶ್ರಮವು ಹೊಸ ವ್ಯಾಖ್ಯಾನಕ್ಕೊಳಗಾಯಿತು. ಮಹಿಳೆಯ ಕಾಲಿಗೆರೆಡು ಕಾಲು, ಕೈಗೆ ನಾಲ್ಕು ಕೈ ಸೇರಿ ಮಲ್ಟಿಟಾಸ್ಕಿಂಗ್ ಕಿರೀಟ ಭಾರವಾಯಿತು. ಸಂಪರ್ಕ ಕ್ರಾಂತಿಯು ತಮ್ಮಿಷ್ಟ ಬಂದದ್ದನ್ನು ನೋಡುವ, ಕೇಳುವ, ಹೇಳುವ, ಮಾಡುವ ಅವಕಾಶಗಳ ಹೊಸಮಾರ್ಗವನ್ನೇ ತೆರೆಯಿತು. ಅಮ್ಮ, ಅಜ್ಜಿಯಂದಿರು ‘ನಮ್ಮಂತಲ್ಲ ನಿಮ್ಮ ಪರಿಸ್ಥಿತಿ’ ಎನ್ನತೊಡಗಿದರು. 


ನಿಜ. ನಮ್ಮ ಸಂವಿಧಾನ, ಮಹಿಳಾ ಚಳವಳಿ ತಂದ ಹಕ್ಕೊತ್ತಾಯಗಳು, ಅದರಿಂದ ರೂಪುಗೊಂಡ ಕಾನೂನುಗಳ ಜೊತೆಗೆ ಜಾಗತೀಕರಣ ಕೊಡಮಾಡಿದ ಅವಕಾಶಗಳು ಒಂದಷ್ಟು ಬದಲಾವಣೆಗೆ ಕಾರಣವಾಗಿವೆ. ಮೊದಲು ಶಾಲೆಯ ಕನಸುಗಳೇ ಬೀಳುವಂತಿರಲಿಲ್ಲ. ಈಗ ಹುಡುಗಿಯರು ಶಾಲೆಗೆ ಬಂದರೆ ಬಹುಮಾನವಿದೆ. ಮಹಿಳಾ ಸಾಕ್ಷರತೆ ೬೫% ಇದೆ. ಬಾಲ್ಯವಿವಾಹಗಳ ಸಂಖ್ಯೆ ೨೧%ಗೆ ಇಳಿದಿದೆ. ಹೆರುವ ಯಂತ್ರಗಳಾಗಿದ್ದ ಮಹಿಳೆಯರಿಗೀಗ ಕುಟುಂಬ ಯೋಜನೆಯ ಅವಕಾಶವಿದೆ. ಅಡುಗೆ ಮನೆಗೆ ಬಂದ ಯಂತ್ರಗಳು ಶ್ರಮವನ್ನು ಮಾನವೀಯಗೊಳಿಸಿವೆ. ಅಷ್ಟಿಷ್ಟು ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಅಭಿವ್ಯಕ್ತಿಗೆ ಹೊಸ ಮಾರ್ಗಗಳು ತೆರೆದುಕೊಂಡಿವೆ. ಕೆಲಸ ಹುಡುಕಿ ವಲಸೆ ಹೋಗಲು ಸಾಧ್ಯವಾಗಿದೆ. ಮೊದಲೆಲ್ಲ ಹೆಣ್ಣುದುಡಿಮೆ ವೇತನರಹಿತ ಮನೆಗೆಲಸವಾಗಿತ್ತು. ಗಳಿಸಲು ಹೆಣ್ಣು ಹೊಸಿಲು ದಾಟಿದರೆ ಕುಟುಂಬ ಹಾಳಾಗುತ್ತದೆಂಬ ಭಾವವಿತ್ತು. ಈಗವಳು ಹೊರಗೂ ದುಡಿಯಲೇಬೇಕಾದ ಅನಿವಾರ್ಯತೆಯಿದೆ. ಹೆಣ್ಣು ದುಡಿಮೆಯಿಲ್ಲದಿದ್ದರೆ ಬಹುತೇಕ ಕುಟುಂಬಗಳು ‘ಬಡವ’ರಾಗುತ್ತವೆ. ಬಡತನದ ಮಹಿಳೀಕರಣದಿಂದ ಉದ್ಯೋಗದ ಮಹಿಳೀಕರಣವಾಗಿದೆ.


ಮಹಿಳೀಕರಣದ ಒಳಗುಟ್ಟು




ಉದ್ಯಮಗಳು ಮಹಿಳಾ ಕಾರ್ಮಿಕರನ್ನು ಹೊಂದಲು; ಸಿಬ್ಬಂದಿ ಕಡಿತವೆಂದು ಗಂಡಸರನ್ನು ತೆಗೆದು ಹೆಣ್ಣುಮಕ್ಕಳನ್ನು ಕೂರಿಸಲು ಉತ್ಸುಕವಾಗಿವೆ. ಮಹಿಳೆಯರು ಸಂಘಟಿತರಾಗಿ ತಿರುಗಿ ಬೀಳುವ ಸಾಧ್ಯತೆ ಕಡಿಮೆ; ವಿನಯದಿಂದ, ನಿಯತ್ತಿನಿಂದ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ; ಸುಲಭದಲ್ಲಿ ಕೆಲಸದಿಂದ ತೆಗೆಯಬಹುದು; ಅವಶ್ಯಬಿದ್ದರೆ ಲೈಂಗಿಕವಾಗಿ ಬಳಸಿಕೊಳ್ಳಬಹುದು ಮುಂತಾದ ಕಾರಣಗಳು ಇದರ ಹಿಂದಿವೆ. ಇದೇ ಧೋರಣೆಯು ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ, ಸ್ತ್ರೀದ್ವೇಷ, ಅಸಭ್ಯ ನಡವಳಿಕೆಗಳಾಗಿ ಮುಂದುವರೆಯುತ್ತವೆ.  


ವರ್ಲ್ಡ್ ಎಕನಾಮಿಕ್ ಫೋರಂ ಬಿಡುಗಡೆ ಮಾಡಿರುವ ‘ಜಾಗತಿಕ ಜಂಡರ್ ಗ್ಯಾಪ್-೨೦೨೧’ರ ಪ್ರಕಾರ: ಭಾರತದ ದುಡಿಯುವ ವರ್ಗದಲ್ಲಿ ಮಹಿಳೆಯರ ಸಂಖ್ಯೆ ೨೨.೩% ಇದೆ. ವೃತ್ತಿಪರ ಮತ್ತು ತಾಂತ್ರಿಕ ವಲಯದ ಉದ್ಯೋಗಗಳಲ್ಲಿ ೨೯.೨% ಮಹಿಳೆಯರಿದ್ದಾರೆ. ಮೇಲ್ಮಟ್ಟದ ನಿರ್ವಾಹಕ ಹುದ್ದೆಗಳಲ್ಲಿ (ಮ್ಯಾನೇಜರಿಯಲ್) ೧೪.೬% ಇದ್ದಾರೆ. ೨೦೧೭ರಲ್ಲಿ ಎನ್‌ಎಸ್‌ಇಯಲ್ಲಿ ದಾಖಲಾದ ೫೦೦ ಕಂಪನಿಗಳ ಬೋರ್ಡ್ ರೂಮುಗಳಲ್ಲಿ ೧೪% ಮಹಿಳೆಯರಿದ್ದರು. ಮಹಿಳೆಯರು ಮುಖ್ಯಸ್ಥಾನದಲ್ಲಿದ್ದು ನಡೆಸುವ ಉದ್ಯಮಗಳ ಸಂಖ್ಯೆ ೮-೯% ಇದೆ. ನಾಲ್ವರಲ್ಲಿ ಒಬ್ಬಳು ಒಂದಲ್ಲ ಒಂದು ಹಂತದಲ್ಲಿ ದೌರ್ಜನ್ಯ ಎದುರಿಸುತ್ತಾಳೆ. ‘ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ-೨೦೧೫’ರ ಪ್ರಕಾರ ೨೦೦೫-೦೬ರಲ್ಲಿ ಮದುವೆಯ ನಂತರವೂ ದುಡಿಯುವ ಮಹಿಳೆಯರ ಸಂಖ್ಯೆ ೪೩% ಇದ್ದದ್ದು ೨೦೧೫ರ ಹೊತ್ತಿಗೆ ೩೧%ಕ್ಕಿಳಿದಿದೆ. ಎಲ್ಲ ಕ್ಷೇತ್ರಗಳಲ್ಲಿ ಸ್ತ್ರೀಪುರುಷರ ನಡುವೆ ವೇತನ ತಾರತಮ್ಯವಿದೆ. ಮಹಿಳೆಯರು ೧೯% ಕಡಿಮೆ ವೇತನ ಪಡೆಯುತ್ತಾರೆ. ೯೫%ಕ್ಕಿಂತ ಹೆಚ್ಚು ಮಹಿಳೆಯರ ಹೆಸರಿನಲ್ಲಿ ಯಾವುದೇ ಆಸ್ತಿಯಿಲ್ಲ. ರಾಜಕಾರಣದಲ್ಲೂ ಇದು ಮುಂದುವರೆದು ೨೦೨೧ರಲ್ಲಿ ಭಾರತದಾದ್ಯಂತ ಮಹಿಳಾ ಮಂತ್ರಿಗಳು ೯.೧% ಇದ್ದಾರೆ.


ಮೇಲಿನ ಅಂಕಿಅಂಶಗಳು ಸ್ಪಷ್ಟವಾಗಿ ತಿಳಿಸುವಂತೆ ತಳಹಂತದ ಕೆಲಸಗಳಲ್ಲಿ; ಅಧಿಕಾರ, ಬಡ್ತಿ, ಭತ್ಯೆ, ರಜೆ, ಉನ್ನತೀಕರಣದ ಅವಕಾಶ, ವೇತನ ಕಡಿಮೆಯಿರುವ ಕೆಲಸಗಳಲ್ಲಿ ಹೆಚ್ಚೆಚ್ಚು ಮಹಿಳೆಯರಿದ್ದರೆ, ಶ್ರೇಣಿಯ ಮೇಲೇರುತ್ತ ಹೋದಂತೆ ವಿರಳವಾಗುತ್ತಾರೆ. ನಿರ್ಧಾರಕ, ಅಧಿಕಾರ ಸ್ಥಾನಗಳಲ್ಲಿ ಹೆಣ್ಣುಗಳು ಇಲ್ಲದಿರುವುದರಿಂದ ಎದ್ದು ಕಾಣುತ್ತಾರೆ. 



ಶಾಲೆಕಾಲೇಜುಗಳ ಪರೀಕ್ಷೆ, ಸ್ಪರ್ಧೆಗಳಲ್ಲಿ ಹುಡುಗಿಯರೇ ಚಿನ್ನದ ಪದಕ ಗೆಲ್ಲುತ್ತಾ, ಮುಂದಿರುತ್ತಾರಲ್ಲವೇ? ಉದ್ಯೋಗಸ್ಥಳದಲ್ಲಿ ಏಕೆ ಹೀಗೆ? ಎಲ್ಲಿ ಹೋದರು ಆ ‘ಚಿನ್ನದ ಹುಡುಗಿ’ಯರು?


ಗಾಣಕ್ಕೆ ಕಟ್ಟಿದ ಗೋವು




ಹುಡುಗಿಯರು ಉನ್ನತ ಶಿಕ್ಷಣಕ್ಕೆ ಹೋಗಬಯಸಿದರೆ ಮನೆಯಲ್ಲಿ ಒಬ್ಬರಲ್ಲ ಒಬ್ಬರಿಂದ ‘ನಿನಗಿಂತ ಹೆಚ್ಚು ಓದಿದವನನ್ನು ಎಲ್ಲಿ ಹುಡುಕುವುದು? ಹೆಚ್ಚು ವರದಕ್ಷಿಣೆ ಹೇಗೆ ತೆರುವುದು? ಓದು ಸಾಕು’ ಎನ್ನುವ ಮಾತು ಕೇಳಿಬರುತ್ತದೆ. ಮದುವೆಯೇ ಹೆಣ್ಣಿನ ಆತ್ಯಂತಿಕ ಗುರಿ, ಹೆರುವುದೇ ಪರಮೋಚ್ಛ ಸಾಧನೆ ಎಂಬ ಭಾವನೆಯನ್ನು ಉದ್ಯಮಗಳೂ, ಮಾರುಕಟ್ಟೆಯೂ ಬೆಳೆಸುತ್ತಿವೆ. ಹೆಂಗಸರಿಗೇ ಮೀಸಲಾದ ಸೋಪು, ಪೌಡರು, ಬಟ್ಟೆ, ಸುಗಂಧ ದ್ರವ್ಯ, ಬಣ್ಣಗಳಿವೆ. ಅವರಿಗೇ ಬೇರೆ ಡಿಸೈನಿನ ವಾಹನ. ಅವರದೇ ಬೇರೆ ಸಲೂನು, ಪಾರ್ಲರ್, ಜಿಮ್. ಅವನ್ನು ಬಳಸದಿದ್ದವರು, ಹಿಮ್ಮಡಿ ಒಡೆದವರು, ಮುಖ ಬೆಳ್ಳಗಿಲ್ಲದವರು, ಮೊಡವೆ ಕಲೆ ಇರುವವರು, ಕಪ್ಪಗಿರುವವರು ಅನರ್ಹ ಹೆಣ್ಣುಗಳು ಎಂದು ಜಾಹೀರಾತುಗಳು ಸಾರುತ್ತವೆ. ಹೆಣ್ಣು, ಹೆಣ್ತನ, ಗರ್ಭಕೋಶ, ಲೈಂಗಿಕತೆ, ಪ್ರೇಮ, ಮದುವೆ, ಕಣ್ಣೀರು ಎಲ್ಲವೂ ಮಾರುಕಟ್ಟೆಗೆ ಮುಖ್ಯವಾಗಿವೆ. ಹೆಣ್ಣುತನದ ಚೌಕಟ್ಟು ತಾಯ್ತನಕ್ಕೂ ಮುಂದುವರೆದಿದೆ. ಮಹಿಳಾ ಆರೋಗ್ಯ ಕ್ಷೇತ್ರಕ್ಕಿಂತ ಹೆಚ್ಚು ಬಂಡವಾಳವನ್ನು ಬಂಜೆತನ ಚಿಕಿತ್ಸೆಯ ಸಂಶೋಧನೆಗಳಿಗೆ ಹೂಡಲಾಗಿದೆ. 


ಸಮಾಜ ಹೆಣ್ಣು ಎಂದು ಯಾರನ್ನು ನೋಡುತ್ತಿದೆಯೋ ಅವಳು ನಿಜವಾದ ಹೆಣ್ಣಲ್ಲ. ಪುರುಷಪ್ರಧಾನ ಸಮಾಜ ನಿಯಂತ್ರಿಸುವ ಮಾರುಕಟ್ಟೆಯ ಕಲ್ಪನಾ ವಿಲಾಸ ಹೆಣ್ಣು ಹೇಗಿರಬೇಕೆಂದು ವ್ಯಾಖ್ಯಾನಿಸಿದೆಯೋ ಆ ಚೌಕಟ್ಟಿಗೆ ಸರಿಯಾಗಿ ತನ್ನನ್ನು ಕೂರಿಸಿಕೊಂಡ ಹೆಣ್ಣು. ಗೆರೆಯೆಳೆದು ನಿರ್ಬಂಧಿಸಿರುವವರಲ್ಲಿ ಕುಟುಂಬ-ಜಾತಿ-ಊರುಗಳಷ್ಟೇ ಅಲ್ಲ; ಬಂಡವಾಳಿಗರೂ ಸೇರಿದ್ದಾರೆ. ಚೌಕಟ್ಟನ್ನು ಮೀರುವ, ಅನುಕೂಲೆಯರಾಗದ ಹೆಣ್ಣುಗಳ ಮೇಲೆ ಸ್ತ್ರೀ ದ್ವೇಷ (ಮೀಸೋಗೈನಿ) ಹೆಚ್ಚುತ್ತಿದೆ. ಧರ್ಮ-ಜಾತಿ ಹೆಸರಿನಲ್ಲಿ ಲಿಂಗಾಧಾರಿತ ದೌರ್ಜನ್ಯಗಳು ಸಂಭವಿಸುತ್ತಿವೆ. 


ಜಾಗತೀಕರಣ ಕಾಲದ ಮಹಿಳೆಯರು ಗಾಣಕ್ಕೆ ಕಟ್ಟಿದ ಗೋವುಗಳಂತೆ. ಕೆಲವಕ್ಕೆ ಕಣ್ಣಿ ಉದ್ದ, ಕೆಲವಕ್ಕೆ ಗಿಡ್ಡ. ವರ್ಷಕ್ಕೊಂದು ದಿನ ಗೋ ಪೂಜೆ. ಮತ್ತೆಲ್ಲ ನಿರಂತರ ದುಡಿಮೆ. ಒಂದಷ್ಟು ಬೇಲಿಗಳು ತೆರವಾಗಿವೆ, ಮತ್ತೊಂದಷ್ಟು ಕಡಿದು ಬಿಸುಟ ಗೂಟಗಳು ಚಿಗುರಿ ಬಂಧನವನ್ನು ಗಟ್ಟಿಗೊಳಿಸುತ್ತಿವೆ.


ಅಂಗೈ ಹುಣ್ಣು




ಲಾಭವೇ ಮುಖ್ಯವಾದ ಮಾರುಕಟ್ಟೆಯು ಜಾತಿ-ಧರ್ಮ-ಲಿಂಗ ತಾರತಮ್ಯಗಳನ್ನು ಮರೆತು ಗ್ರಾಹಕ/ಕಿಯರನ್ನೆಲ್ಲ ಒಂದೇ ಆಗಿ ನೋಡಬಹುದೇನೋ ಎಂದು ತಳಸಮುದಾಯಗಳೂ, ಮಹಿಳೆಯರೂ ಆಶಿಸಿದ್ದರು. ಆದರೆ ಗಂಡುಹಿರಿಮೆಯ ಭಾರತೀಯ ಸಮಾಜವನ್ನು ಜಾಗತೀಕರಣ ಬದಲಿಸಲಿಲ್ಲ, ಬದಲಾಗಿ ಪೋಷಿಸಿಕೊಂಡು ಬಂತು. ಬಾಯಿಮಾತಿಗಷ್ಟೇ ಮಹಿಳಾ ಸ್ನೇಹಿಯಾಗಿರುವ ಬಂಡವಾಳಕ್ಕೆ ಲಿಂಗ ಪೂರ್ವಗ್ರಹ, ಲಿಂಗ ತಾರತಮ್ಯಗಳು ಸಮಸ್ಯೆಯೆಂದೇ ಅರಿವಾಗದೇ ಹೋಯಿತು. ಹಾಗಾಗಿ ಹೆಣ್ಣು ದುಡಿಮೆಯೊಂದಿಗೆ ಹೆಣ್ಣು ಘನತೆ ಹೆಚ್ಚಾಗಲಿಲ್ಲ. ಜಾಗತೀಕರಣದ ಬಳಿಕವೂ ಹಲವಾರು ಮಹಿಳಾ ಅಭಿವೃದ್ಧಿ ಸೂಚ್ಯಂಕಗಳು ಉತ್ತಮಗೊಳ್ಳಲಿಲ್ಲ. 


ಭಾರತದಲ್ಲಿ ಲಿಂಗಾನುಪಾತ ಒಂದೇಸಮ ಇಳಿಯುತ್ತಿದೆ. ಸ್ವಾತಂತ್ರ್ಯಾನಂತರ ೧೯೫೧ರಲ್ಲಿ ೧೦೦೦ ಗಂಡುಮಕ್ಕಳಿಗೆ ೯೮೩ ಹೆಣ್ಣುಮಕ್ಕಳಿದ್ದರು. ಅದು ೧೯೯೧ರಲ್ಲಿ ೯೪೫ಕ್ಕಿಳಿಯಿತು. ೨೦೦೧ರಲ್ಲಿ ೯೨೭ ಆದದ್ದು ೨೦೧೧ಕ್ಕೆ ೯೧೮ ಆಯಿತು. ಕಟ್ಟುನಿಟ್ಟಾದ ಕಾನೂನು ಜಾರಿಯಾದರೂ ಹೆಣ್ಣುಭ್ರೂಣ ಹತ್ಯೆ, ಹೆಣ್ಣುಶಿಶುಹತ್ಯೆ ಮುಂದುವರೆದಿವೆ. ಒಂದು ಅಂದಾಜಿನಂತೆ ೫೦ ಲಕ್ಷಕ್ಕಿಂತ ಹೆಚ್ಚು ಭ್ರೂಣ-ಶಿಶುಗಳು ಹೆಣ್ಣೆಂಬ ಕಾರಣಕ್ಕೆ ಪ್ರತಿವರ್ಷ ಮಾಯವಾಗುತ್ತಿವೆ.


ಶಿಕ್ಷಣವು ಮೂಲಭೂತ ಹಕ್ಕಾದರೂ ೩೪.೨% ಮಹಿಳೆಯರು ಅನಕ್ಷರಸ್ಥೆಯರಾಗಿದ್ದಾರೆ. ೬೫% ಭಾರತೀಯ ಗಂಡಸರು ಮನೆ ಸುಸೂತ್ರವಾಗಿ ನಡೆಸಲಿಕ್ಕೆ ಹೆಂಗಸರನ್ನು ಹೊಡೆಯಲೇಬೇಕೆಂದು, ಅದಕ್ಕವರು ಅರ್ಹರೆಂದು ನಂಬಿದ್ದಾರೆ. ೩೮% ಗಂಡಂದಿರು ಹೆಂಡತಿಯನ್ನು ಹೊಡೆಯುತ್ತಾರೆ. ಹೆಣ್ಣುಮಕ್ಕಳು ಜಾತಿ ಮೀರಿ ಪ್ರೇಮಿಸಿದರೆ ಅವರನ್ನು ಕೊಂದಾದರೂ ಜಾತಿ ಮರ್ಯಾದೆ ಉಳಿಸಿಕೊಳ್ಳಬೇಕೆಂದು ಪುರುಷಸಂಬಂಧಿಗಳು ಭಾವಿಸುತ್ತಾರೆ. ಜಾತಿದೌರ್ಜನ್ಯಗಳು ಹೆಣ್ಣಿನ ಮೇಲೇ ಜಾಸ್ತಿ ಸಂಭವಿಸುತ್ತಿವೆ. ವರದಕ್ಷಿಣೆಯ ಕಾರಣಕ್ಕೆ ಪ್ರತಿವರ್ಷ ೫೦೦೦ ಹೆಣ್ಣುಗಳ ಜೀವಹರಣವಾಗುತ್ತಿದೆ. ಪ್ರತಿ ೨೦ ನಿಮಿಷಕ್ಕೊಬ್ಬಳು ಅತ್ಯಾಚಾರಕ್ಕೊಳಗಾದ ದೂರು ದಾಖಲಾಗುತ್ತದೆ. ೫೦-೭೫% ಅತ್ಯಾಚಾರಗಳು ದಾಖಲಾಗದೇ ಮುಚ್ಚಿ ಹೋಗುತ್ತವೆ. 



ಮುಂದೇನು?




ಐಹಿಕ ಸುಖಭೋಗಗಳೇ ಆತ್ಯಂತಿಕ ಸತ್ಯ ಎನ್ನುವ ಮಾರುಕಟ್ಟೆ ಆರ್ಥಿಕತೆ ಒಂದೆಡೆ; ಮೊಲೆಮುಡಿ, ಕಿವಿಬಾಯಿ ಮುಚ್ಚಿಟ್ಟುಕೊಂಡರೆ ಹೆಣ್ಣುಗಳು ಸುರಕ್ಷಿತ ಎಂದು ನಂಬಿಸುವ ಧಾರ್ಮಿಕ ಮೂಲಭೂತವಾದಿಗಳು ಇನ್ನೊಂದು ಕಡೆ; ಕತ್ತಲಾದ ಮೇಲೆ ಮನೆಹೊರಗೆ ಚಂದದ ದಿರಿಸುಟ್ಟು ಬರಬೇಡಿರೆಂದು ಉಪದೇಶಿಸುವ ಮಂತ್ರಿಮಹೋದಯರು ಮಗದೊಂದು ಕಡೆ - ಈ ಬಲೆಯೊಳಗೆ ತಮಗರಿವಿಲ್ಲದೆ ಬೀಳುವ ಮಹಿಳೆಯರಿಗೆ ಲಿಂಗಪ್ರಶ್ನೆಯ ಅರಿವು ಮರೆಗೆ ಸರಿಯುತ್ತಿದೆ. 


ಸೂಕ್ತವಾದ ಸಾಮಾಜಿಕ, ಆರ್ಥಿಕ ವಾತಾವರಣವನ್ನು ಸೃಷ್ಟಿಸುವ ಯೋಜನೆಗಳಿದ್ದಿದ್ದರೆ ಜಾಗತೀಕರಣವು ಮಹಿಳೆಯರನ್ನು ಸಬಲೀಕರಣದ ಕಡೆ ಒಯ್ಯುತ್ತಿದ್ದಿರಬಹುದು. ಆದರೆ ಭಾರತದ ಬಹುಪಾಲು ಮಹಿಳೆಯರು ಸಂಪ್ರದಾಯಕ್ಕೆ ಕಟ್ಟಿಹಾಕಲ್ಪಟ್ಟವರು. ಅನುಕೂಲಕರ ಅಧಿಕಾರ ಹೊಂದಿಲ್ಲದವರು. ಇದ್ದಕ್ಕಿದ್ದಂತೆ ಅವರು ಜಾಗತೀಕರಣವೆಂಬ ಜಾರುಬಂಡಿಯಲ್ಲಿ ಅತಿವೇಗದಿಂದ ಚಲಿಸತೊಡಗಿದಾಗ ಸ್ಥಳಾಂತರ, ಸ್ಥಾನ ಬದಲಾವಣೆಗಳಿಗೆ ಹೊಂದಿಕೊಳ್ಳಲು ಎಲ್ಲರಿಗೂ ಕಷ್ಟವಾಯಿತು. ತಕ್ಷಣದ ಪಲ್ಲಟವು ಕುಟುಂಬ, ದಾಂಪತ್ಯ, ಗಂಡುಹೆಣ್ಣಿನ ಸಂಬಂಧಗಳನ್ನು ಬಿಕ್ಕಟ್ಟಿನಲ್ಲಿಟ್ಟಿತು. ಹಾಗಾಗಿ ಸಮಾನತೆಯ ಕಡೆಗಿನ ಮಹಿಳೆಯ ತುಡಿತವು ಸಮಾಜದ ಇಚ್ಛೆಯಾಗಿ ಬದಲಾಗದೇ ಹೋಗಿದೆ. ಭಾರತೀಯ ಮಹಿಳೆಯರ ಮೇಲೆ ಉದಾರೀಕರಣದ ಪ್ರಭಾವವು ಮನೆಯೊಳಗೇ ಟ್ರೆಡ್‌ಮಿಲ್ ಇಟ್ಟುಕೊಂಡು ಓಡಿದಂತೆ ಆಗಿದೆ. ಲೆಕ್ಕವಿಟ್ಟು ಸಾವಿರಾರು ಹೆಜ್ಜೆಗಳನ್ನಿಡುವುದು, ಬೆವರಿಳಿಸುವುದು, ಓಡುವುದು. ನಿಲ್ಲದ ಓಟ. ಮುಟ್ಟುವುದೆಲ್ಲಿಗೂ ಇಲ್ಲ! 

 

ಮಹಿಳಾ ಸಮುದಾಯದ ಜೊತೆಗೆ ತನ್ನ ತಾನು ಗುರುತಿಸಿಕೊಂಡು ಸ್ವಾಯತ್ತ, ಘನತೆಯ ಬದುಕನ್ನು ಹೆಣ್ಣು ಸಾಧ್ಯವಾಗಿಸಿಕೊಳ್ಳಬೇಕು. ಆ ಮೂಲಕ ಸಮಾಜವನ್ನೂ ಲಿಂಗಸೂಕ್ಷ್ಮ ಬದಲಾವಣೆಗೆ ಸಿದ್ಧಗೊಳಿಸಿ ನ್ಯಾಯದ ಕಣ್ಣು ತೆರೆಸಬೇಕು. ಆಗ ಮಾತ್ರ ಅಭಿವೃದ್ಧಿಯು ಅರ್ಥಪೂರ್ಣವಾಗಬಲ್ಲುದು. 


(All Images, sketches From Internet)


Tuesday, 8 June 2021

ಇನ್ನೊಂದು ಭಾರತದ ಕತೆ!





ಈ ಋತುವಿನಲ್ಲಿ ಪ್ರತಿ ವರ್ಷವೂ ವೈದ್ಯರಿಗೆ ಪುರುಸೊತ್ತಿರುವುದಿಲ್ಲ. ಬೇಸಿಗೆ, ಮಳೆಗಾಲಗಳು ಬ್ಯಾಕ್ಟೀರಿಯಾ, ವೈರಸ್‌ಗಳ ವಂಶಾಭಿವೃದ್ಧಿಗೆ ಪೂರಕವಾಗಿರುವುದರಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿರುತ್ತವೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದ ನನ್ನ ಕ್ಲಿನಿಕ್ ಕೂಡಾ ಇದರಿಂದ ಹೊರತಲ್ಲ. ಒಣಗಿದ ಗಂಟಲು ಒದ್ದೆಯಾಗಲಿಕ್ಕೂ ನಮಗೆ ಸಮಯ ಇಲ್ಲ.

ನಾನು ಹೇಳಹೊರಟಿರುವುದು ಇನ್ನೊಂದು ಭಾರತದ ಕತೆ. ಇಲ್ಲಿ ಆಕ್ಸಿಜನ್ ಸಮಸ್ಯೆಯಿಲ್ಲ. ಸುಲಿಗೆ ಮಾಡುವ ಆಸ್ಪತ್ರೆಗಳಿಲ್ಲ. ಹಾಸಿಗೆ ಕೊರತೆಯಿಲ್ಲ. ಹೆಣ ಸುಡಲು ಸರತಿಯಿಲ್ಲ. ಕಟ್ಟಿಗೆಗೆ ಬರವಿಲ್ಲ. ಯಾಕೆಂದರೆ ಇದು ರಾಜಧಾನಿಯಿಂದ ನಾಲ್ಕುನೂರು ಕಿಮೀ ದೂರದಲ್ಲಿರುವ ದೊಡ್ಡ ಹಳ್ಳಿಯಂತಹ ಉತ್ತರಕನ್ನಡ ಜಿಲ್ಲೆ. ಇಡೀ ಜಿಲ್ಲೆಗೊಂದು ಅತ್ಯಾಧುನಿಕ ಆಸ್ಪತ್ರೆ ಇಲ್ಲ. ಕೋವಿಡ್ ಇನ್ನೂ ಎಲ್ಲೋ ಯಾರಿಗೋ ಆಗುತ್ತಿರುವ ವಿಪತ್ತೇ ಹೊರತು ತಮ್ಮ ಮನೆಬಾಗಿಲಿಗೆ ಬಂದಿದೆ ಎಂದು ಜನ ಭಾವಿಸಿಲ್ಲ. ಎಲ್ಲಕ್ಕೂ ಅವರು ನಾಗರಿಕ ವ್ಯವಸ್ಥೆಯನ್ನು ಎಷ್ಟೋ ಅಷ್ಟೇ ಅಣ್ಣಪ್ಪ, ತಿಮ್ಮಪ್ಪ, ಚೌಡಿ, ಜಟಗ, ಆರೋಗ್ಯಮಾತೆಯರಂತಹ ದೈವಗಳನ್ನೂ, ಮಾಟ-ನೋಟ-ಯಂತ್ರ-ತಾಯಿತಗಳನ್ನೂ ನಂಬಿದ್ದಾರೆ. ಇವರಲ್ಲಿ ಒಬ್ಬರಲ್ಲ ಒಬ್ಬರು ತಮ್ಮ ತಲೆ ಕಾಯ್ವರೆಂದು ನಿಶ್ಚಿಂತರಾಗಿದ್ದಾರೆ. ತಪಾಸಣೆ ಮಾಡಿಸಿದರೆ ಕೊರೋನಾ ಪತ್ತೆಯಾಗುವುದರಿಂದ ತಪಾಸಣೆಯನ್ನೇ ಮಾಡಿಸದೆ ಥಂಡಿಜ್ವರವೆಂದು ಗುಣ ಮಾಡಿಕೊಳ್ಳುವುದು ಜಾಣತನವೆಂದು ನಂಬಿದ್ದಾರೆ! 

೧

ಗುಡ್ಡಗಾಡು ಪ್ರದೇಶವಾದ ನಮ್ಮೂರಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಒಂದೂಕಾಲು ವರ್ಷದಿಂದ ಇಲ್ಲ. ಮೂಲೆಮೂಲೆಗಳಿಂದ ಆಸ್ಪತ್ರೆಗೆ ಬರಲು ಖಾಸಗಿ ವಾಹನಗಳನ್ನೇ ನೆಚ್ಚಬೇಕು. ನನ್ನ ಕ್ಲಿನಿಕ್ ತಲುಪಲು ಹೊಳೆ ದಾಟಿ, ಕಾಲ್ದಾರಿಯಲ್ಲಿ ನಡೆದು, ಮರಳಿನ ಗಾಡಿಯಲ್ಲೋ, ರಿಕ್ಷಾದಲ್ಲೋ ೩೦-೩೫ ಕಿ.ಮೀ. ಕ್ರಮಿಸಿ ಬರುವ ರೋಗಿಗಳಿದ್ದಾರೆ. ನೆರೆಹೊರೆಯವರ ನಿನ್ನೆ, ಇವತ್ತು, ನಾಳೆಗಳ ಜಡ್ಡಿಗೆ ಔಷಧಿ ಒಯ್ಯುವ ಹೊಣೆ ಬಂದವರಿಗೆ ಇರುತ್ತದೆ. ಒಬ್ಬರ ಮೇಲೊಬ್ಬರು ಒತ್ತೊತ್ತಿ ನಾಲ್ಕಾರು ಜನ ಒಂದೇ ರಿಕ್ಷಾದಲ್ಲಿ ಬರುತ್ತಾರೆ. ಮಾಸ್ಕ್ ಹಾಕಿದ್ದರೆ ಕೊರೊನಾ ವೈರಸ್ಸಿನ ಪುಣ್ಯ. 

ಬಂದವರೇ ನಂಬರ್ ತೆಗೆದು, ರಿಪೇರಿಗೆ ಕೊಟ್ಟ ಮಿಕ್ಸಿ, ತರಕಾರಿ, ಕಿರಾಣಿ ಸಾಮಾನು, ಕ್ಷೌರ, ಹೊಲೆಯಲು ಕೊಟ್ಟ ಬಟ್ಟೆ, ಗೋಡಾಕ್ಟ್ರ ಬಳಿ ಗಂಟಿಕಾಯಿಲೆಗೆ ಮದ್ದು, ಜಾತಕ ತೋರಿಸುವುದು, ಮಂತ್ರಿಸಿದ ದಾರ ಪಡೆಯುವುದು ಮೊದಲಾದ ಕೆಲಸಗಳನ್ನು ಪೂರೈಸಿಕೊಳ್ಳಲು ಹೊರಡುತ್ತಾರೆ. ಅದರ ನಡುವೆ ತಮ್ಮ, ಮನೆಯವರ ಜ್ವರಜಾಪತ್ತಿಗೆ ಇಂಜೆಕ್ಷನ್, ಮಾತ್ರೆ, ಗ್ಲುಕೋಸುಗಳ ಚಿಕಿತ್ಸೆ ಪಡೆಯುತ್ತಾರೆ. ಗಂಟಲು ದ್ರವ ಪರೀಕ್ಷೆಗೆ ಕೊಡಿರೆಂದು ಎಷ್ಟು ಹೇಳಿದರೂ ‘ಇವತ್ ಪುರ್ಸತ್ತಿಲ್ರಾ ಅಮಾ, ನಾಳಿಗ್ ಹೋಗುದೇ ಸೈ’ ಎಂದು ನಡೆದುಬಿಡುತ್ತಾರೆ. ‘ನೀವು ಮುಟ್ಟಿದ್ರೆ ಸಾಕು, ಗುಣ’ ಎಂದು ನನ್ನನ್ನೇ ಉಬ್ಬಿಸುತ್ತಾರೆ! 

ನೂರಾರು ರೋಗಿಗಳಲ್ಲಿ ಹತ್ತು ಜನರೂ ಕೋವಿಡ್ ಟೆಸ್ಟಿಗೆ ಹೋಗುವುದಿಲ್ಲ. ಹೋಗಿ ಪಾಸಿಟಿವ್ ಆದವರು ಯಾಕಾದರೂ ಟೆಸ್ಟ್ ಮಾಡಿಸಿಕೊಂಡೆವೋ? ತಮ್ಮಷ್ಟೇ/ತಮಗಿಂತ ಹೆಚ್ಚೇ ರೋಗಲಕ್ಷಣ ಇರುವವರು ಆರಾಮದಲ್ಲಿ ಅಡ್ಡಾಡಿಕೊಂಡಿರುವಾಗ ಮೇಡಂ ಹೇಳಿದರೆಂದು ಮಾಡಿಸಿ ಬಂಧಿಯಾದೆನಲ್ಲ ಎಂದು ಪಶ್ಚಾತ್ತಾಪ ವ್ಯಕ್ತಪಡಿಸಿದವರೇ ಹೆಚ್ಚು. ಕೆಲವರು ‘ಆಶಾ ಬಂದು ಪೋಟ ಹೊಡ್ದು ನಂ ಮನೆ ಮರ್ಯಾದೆ ಎಲ್ಲ ಹೋತು’ ಎಂದು ದೂರಿದ್ದೂ ಇದೆ. 

೨

ಆ ಯುವತಿ ಗ್ರಾಮ ಚಾವಡಿಯ ಶ್ಯಾನುಭೋಗಳು. ಹತ್ತು ದಿನದಿಂದ ಜ್ವರ. ‘ಕೋವಿಡ್ ಟೆಸ್ಟ್ ಮಾಡ್ಸಿದಿರಾ?’ ಎಂಬ ಪ್ರಶ್ನೆ ಮುಗಿಯುವುದರಲ್ಲಿ, ‘ಅಯ್ಯೋ ಮೇಡಂ, ಕೋವಿಡ್ ಅಂಬೊ ಪದ ಕೇಳಿದ್ರೇ ಒಂತರ ವಾಂತಿ ಬರುವಂಗೆ, ಜ್ವರ ಬಂದಂಗೆ ಆಗ್ತದೆ ನಂಗೆ’ ಎಂದು ಕುಸಿದಳು. ‘ಈಗಂತೂ ಪಾಸಿಟಿವ್ ಇರೋರ ಮನೆಮನೆಗ್ ಹೋಗಿ ಅವ್ರ ಫೋಟೋ, ಕಾಂಟಾಕ್ಟ್ಸ್ ಫೋಟೋ ತರಬೇಕು. ಹೋದಹೋದಲ್ಲಿ ಬೈದು ಕಳಿಸ್ತಾರೆ. ಜಗಳ ಮಾಡ್ತಾರೆ. ಎಷ್ಟ್ ರಿಸ್ಕ್ ತಗಂಡು ಕೆಲ್ಸ ಮಾಡಿದ್ರೂ ಉಪಯೋಗಿಲ್ಲ. ಮನೇಲಿ ನೋಡಿದ್ರೆ ಊರೂರು ತಿರುಗಿ ನಾನೇ ಕೊರೊನ ತಗಂಡ್ ಬರ‍್ತಿನೆನೊ ಅನ್ನೋ ಹಂಗಾಡ್ತಾರೆ. ಈ ಪಗಾರೂ ಬೇಡ, ಕೆಲ್ಸನೂ ಬೇಡ, ರಿಸೈನ್ ಮಾಡುವ ಅನಿಸ್ತಿದೆ’ ಎನ್ನುತ್ತ ಗದ್ಗದಳಾದಳು. 

ಏಕತಾನತೆಯ ಕೆಲಸ, ಸಹಕಾರ-ಬೆನ್ನು ತಟ್ಟುವಿಕೆ ಇಲ್ಲದ ಒಂದೇಸಮ ದುಡಿತ - ಈ ದಣಿವು ಕೋವಿಡ್ ಸೋಂಕಿಗಿಂತ ಅಪಾಯಕಾರಿ. ಅವಳ ಟೆಸ್ಟ್‌ಗಳೇನೋ ನೆಗೆಟಿವ್ ಬಂದಿವೆ. ಆದರೆ ಮನದ ದಣಿವಿಗೆ ಮದ್ದು ಇದೆಯೆ?

೩

ಈ ಮುಂಚೆ ಅನುಮತಿ ನೀಡಿದವೆಂದು ನೂರಾರು ಮದುವೆಗಳು ಈಗಲೂ ನಡೆಯುತ್ತಿವೆ. ‘ನಮಗಾದ್ದು ಬರಿ ತಂಡಿಕೆಮ್ಮ, ಬೇರೆಯೋರಿಗಾದ್ದು ಕೊರೊನಾ’ ಎಂದೇ ಜನ ಭಾವಿಸಿರುವುದರಿಂದ ದೇವಕಾರ್ಯ, ಬಯಕೆ ಶಾಸ್ತ್ರ, ನಾಮಕರಣ, ಗಡಿಪೂಜೆ, ಚೌಡಿಪೂಜೆ, ಹುಟ್ಟುಹಬ್ಬ, ನಿಶ್ಚಿತಾರ್ಥಗಳಂತಹ ಸಣ್ಣಪುಟ್ಟ ಸಮಾರಂಭಗಳು ಬೇಕಾದಷ್ಟು ನಡೆಯುತ್ತಿವೆ. ಬಳಿಕ ಸೋಂಕು ಬರುವುದೂ, ಮನೆಯವರೆಲ್ಲ ಮಲಗುವುದೂ ಇದೆ. ಆದರೆ ರೋಗಲಕ್ಷಣ ಮುಚ್ಚಿಡುವುದೇ ಹೆಚ್ಚು. ಜ್ವರ ಸುಟ್ಟು ಹೋಗುವಂತಿದ್ದರೂ, ‘ಮೈಕೈನೋವು, ತಲೆಸುತ್ತು, ಸುಸ್ತು, ಊಟಸೇರಲ್ಲ’ ಅಂದಾರೇ ಹೊರತು ಜ್ವರದ ಸುದ್ದಿ ಎತ್ತುವುದಿಲ್ಲ! ‘ಅಯ್ಯಯ್ಯಯ್ಯ, ತಂಡಿಜ್ವರ ಎಂಥದೂ ಇಲ್ಲ, ಗಂಟಲು ನೋವಂತೂ ಕೇಳಬಾರ‍್ದು, ನುಂಗದೇ ಬಗೇಲಿ ಕಸ್ಟ, ಬಗ್ಗೇಲಿ ಸುಸ್ತು, ರಾತ್ರಿ ಕೆಮ್ಮ ಅಷ್ಟೇ ಶಿವಾಯಿ ಬೇರೇನಿಲ್ಲ’ ಎನ್ನುತ್ತಾರೆ. ಕೆಲವರ ಸ್ಥಿತಿ ಗಂಭೀರಗೊಂಡರೂ, ‘ಕಡೆಗ್ ಹೆಣನೂ ಕೊಡುದಿಲ್ಲಂತೆ’, ‘ಹೆಣುದ್ ಕಣ್ಣು, ಹಾರ್ಟು, ಕಿಡ್ನಿ ತೆಗಿತಾರಂತೆ’, ‘ಕೊರೊನ ಪೇಶೆಂಟ್ ಅಡ್ಮಿಟ್ ಆದ್ರೆ ತಲೆಗಿಷ್ಟು ಅಂತ ಅವ್ರಿಗೆಲ್ಲ ದುಡ್ಡು ಬರ‍್ತದಂತೆ’ ಮುಂತಾದ ಅಂತೆಕಂತೆಗಳನ್ನು ನಂಬಿ ಮನೆಯಲ್ಲೇ ಇಟ್ಟುಕೊಳ್ಳುತ್ತಾರೆ. ಎಷ್ಟು ಬಸುರಿಯರಿಗೆ ಅವಧಿಪೂರ್ವ ಹೆರಿಗೆಗಳು, ಗರ್ಭಪಾತಗಳು ಸಂಭವಿಸಿವೆಯೋ? ವೃದ್ಧರ, ಬಡವರ, ಅಸಹಾಯಕರ ಎಷ್ಟು ಸಾವುಗಳು ಕೋವಿಡ್‌ನಿಂದ ಸಂಭವಿಸಿವೆಯೋ? ‘ಬಾರೀ ಟೆನ್ಶನ್ನಾಗಿದ್ದ, ಅದ್ಕೆ ಹಾರ್ಟ್ ಅಟ್ಯಾಕ್ ಆತು’; ‘ಮೃತ್ಯು ಹೊಡೀತು’; ‘ಗ್ರಾಚಾರ ತಿರುಗತು’; ‘ಅವಳ ಅವ್ವಿ, ಅಬ್ಬೆನು ಹೀಂಗೆ ಸತ್ತದ್ದು, ಇದ್ಕು ಹಂಗೇ ಆತು’ ಮುಂತಾಗಿ ನಾನಾ ಕಾರಣಗಳ ಬೆನ್ನೇರಿ ಸಾವುನೋವುಗಳು ಲೆಕ್ಕದಿಂದ ತಪ್ಪಿಸಿಕೊಂಡಿವೆ. 

ನೀವೆಷ್ಟು ವಿವರಿಸಿ ಹೇಳಿದರೂ ಗಾಳಿಸುದ್ದಿಗಳನ್ನು ನಂಬುವಷ್ಟು ಸತ್ಯವನ್ನು ನಂಬಲಾರರು. ಹೆಚ್ಚು ಹೇಳಿದರೆ ನಿಮ್ಮನ್ನು ಬಿಟ್ಟು ಯಂತ್ರಕ್ಕೋ, ತಾಯಿತಕ್ಕೋ ಮೊರೆ ಹೋದಾರೆಯೇ ಹೊರತು ನಿಜವನ್ನು ಎದುರಿಸಲಾರರು. ಕೋವಿಡ್ ಭೀತಿಗಿಂತ ಅದರ ನಿರಾಕರಣೆ, ನಿಷ್ಕಾಳಜಿ ದಿಗ್ಭ್ರಮೆ ಹುಟ್ಟಿಸುತ್ತದೆ. ಇದೇಕೆ ಹೀಗೆ? ತಮಗೆ ಬಂದ ಕಾಯಿಲೆ ಗುಟ್ಟಾಗಿಯೇ ಇರಲೆಂದು ಮನುಷ್ಯರು ಬಯಸುವುದಾದರೂ ಏಕೆ? ಕಲ್ಪಿತ ‘ನಾನು’ವಿಗೂ, ನಿಜವಾದ ‘ನಾನು’ವಿಗೂ ಇರುವ ವ್ಯತ್ಯಾಸ ಲೋಲುಪ ಜಗತ್ತಿನಲ್ಲಿ ಹಿಗ್ಗುತ್ತಲೇ ಇರುವುದು ಈ ಮನಃಸ್ಥಿತಿಗೆ ಕಾರಣವೇ? ಕಾಯಿಲೆಯ ಕಾರಣಕ್ಕೆ ಮನೆಮಂದಿ ಗುರುತಿಸಲ್ಪಡುವುದು ನಾನು ಎಂಬ ಅಹಮಿಗೆ ಪೆಟ್ಟು ಕೊಡುವುದೇ? 

ಉತ್ತರವಿಲ್ಲದ ಪ್ರಶ್ನೆಗಳು. ಪ್ರಶ್ನೆ ಕೇಳಿಕೊಳ್ಳುವುದು ಮೂರ್ಖತನವೋ? ದೇಶವನ್ನು ಕರಾಳ ಭವಿಷ್ಯಕ್ಕೆ ದೂಡಿದ ಹೊಣೆಗೇಡಿ ಆಳುವವರ್ಗ ಮೂರ್ಖವೋ? ರೋಗಿಗಳನ್ನು ದೂರದಿಂದಲೇ ನೋಡಿ ಹಣ ಗಳಿಸಿ ಸುಮ್ಮನಿರುವುದು ಬಿಟ್ಟು ಇಂಥ ಅಪಾಯಕಾರಿ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿರುವ ನಾನೇ ಮೂರ್ಖಳೋ?

ಎಲ್ಲ ಅಯೋಮಯ. ಇದು ನನ್ನಂತಹ ಸಾವಿರಾರು ವೃತ್ತಿ ಬಾಂಧವರ ಅನುಭವ. ಪಾಸಿಟೀವೋ, ನೆಗೆಟೀವೋ, ಸುರಕ್ಷತೆಯ ಕ್ರಮಗಳೊಂದಿಗೆ ಎಲ್ಲರನ್ನು ಮುಟ್ಟಿ ಪ್ರೀತಿ ಹಂಚುವುದೊಂದೇ ಮಾರ್ಗ.


 

Wednesday, 28 April 2021

ಅಮ್ಮನೆಂಬ ಶಕ್ತಿ


ಅವಳು ಮುಟ್ಟಿದ್ದೇ 
ಎಲ್ಲ ಬದಲಾಗಿಬಿಡುತ್ತಿದ್ದವು!

ಬಿಡಿ ಮೊಗ್ಗು ಮಾಲೆಯಾಗುತ್ತಿತ್ತು!
ಇದ್ದಿಲು ಕೆಂಡವಾಗುತ್ತಿತ್ತು
ಅಕ್ಕಿ ಅನ್ನವಾಗುತ್ತಿತ್ತು
ನೀರು ಚಹವಾಗುತ್ತಿತ್ತು
ಹಿಟ್ಟು ಮುದ್ದೆಯಾಗುತ್ತಿತ್ತು

ಹಾಲು ಮೊಸರಾಗುತ್ತಿತ್ತು
ಬೆಣ್ಣೆ ತುಪ್ಪವಾಗುತ್ತಿತ್ತು
ಕೂದಲು ಹೆರಳಾಗುತ್ತಿತ್ತು
ತೆಳುನೂಲು ಪತ್ತಲದ ಹುವ್ವಾಗುತಿತ್ತು

ಅವಳು ಮುಟ್ಟಿದ್ದೇ 
ಲಿಂಬೆ ಉಪ್ಪಿನಕಾಯಾಗುತ್ತಿತ್ತು
ಸಿಪ್ಪೆ ಸಂಡಿಗೆಯಾಗುತಿತ್ತು
ಮೊಟ್ಟೆ ಮರಿಯಾಗುತ್ತಿತ್ತು
ಕರಿನೆಲ ಅಬ್ಬಲಿಗೆ ತೋಟವಾಗುತ್ತಿತ್ತು

ಮುಟ್ಟಿ ಬದಲಿಸುವವಳೇ ಅಮ್ಮ 
ಅರಿವಿನುಂಗುರದ ಬೆರಳಾಗಿರುವವಳು 
ಮುಟ್ಟಿಮುಟ್ಟಿ ಅದೆಷ್ಟು ಶಕ್ತಿ ಪಡೆದಿದ್ದಳೋ,
ಅವಳ ಮುಟ್ಟು ನಿಲಿಸಿದ್ದೇ ಆಗಿಬಿಟ್ಟೆ ನಾನು!
ಮುಟ್ಟಿ ಮುಟ್ಟಿ ಅದೆಂಥ ನೋವುಂಡಿದ್ದಳೋ,
‘ಹಿಜ್ಜಮಲ್ಲಿ, ನಗು ಸ್ವಲ್ಪ ಕಮ್ಮಿ ಮಾಡ್ಕಳೇ, 
ಯಾರ‍್ಗೂ ತಿಳಿಯಲ್ಲ ನಗೋರ ಒಳ ಬೇಗೆ’ 
ಎಂದು ಎಚ್ಚರಿಸಿದಳು!

ಮುಟ್ಟಿ ಹುಟ್ಟಿಸುವ ಮಾಯಕಾರ ಶಕ್ತಿಗಳೇ
ಲೋಕ ಪೊರೆವ ಜಗದ ಹೆಣ್ಣು, ಗಂಡು ಅಮ್ಮಗಳೇ
ನಿಮ್ಮ ಕರುಣದ ಅಮ್ಮತನಕೆ ಶರಣು,
ಬೆಚ್ಚನೆಯ ಮಡಿಲ ಬೆಳಕಿಗೆ ಶರಣು

 ರೇಖಾಚಿತ್ರ - ಕೃಷ್ಣ ಗಿಳಿಯಾರ್

Sunday, 5 July 2020

ಕೋವಿಡ್ ೧೯ ಆನ್‌ಲೈನ್ ಕ್ರಾಂತಿ: ತಂತ್ರಜ್ಞಾನ, ಯಂತ್ರೋಪಕರಣಗಳು ವೈದ್ಯರಿಗೆ ಪರ್ಯಾಯವಲ್ಲ




ಕೋವಿಡ್ ಮಹಾಪಿಡುಗು ವಿಶ್ವವನ್ನು ವ್ಯಾಪಿಸಿ ಇನ್ನೂ ತನ್ನ ಬಿರುಸು ಕಡಿಮೆ ಮಾಡಿಕೊಳ್ಳದೇ ಹಾಹಾಕಾರ ಸೃಷ್ಟಿಸಿರುವಾಗ ಅದು ಹೇಗೆ ಬಂತು, ಯಾರಿಂದ ಬಂತು ಎನ್ನುವ ಚರ್ಚೆಗಳು ಒಂದೆಡೆ ಕಾವೇರುತ್ತಿದ್ದರೆ; ಇನ್ನೊಂದೆಡೆ ನೋಡದೇ, ಮುಟ್ಟದೇ ಕೆಲಸ ಮಾಡುವ ಆನ್‌ಲೈನ್ ಸಂಸ್ಕೃತಿಯ ಬಗೆಗೆ ಜನ ಹೆಚ್ಚೆಚ್ಚು ಯೋಚಿಸತೊಡಗಿದ್ದಾರೆ. ಮುಟ್ಟದಿರಿ, ಮುಟ್ಟಿದರೆ ಕೈತೊಳೆಯಿರಿ ಎನ್ನುವ ಕಾಯಿಲೆ ಕೋವಿಡ್‌ಗೆ ಆನ್‌ಲೈನ್ ವ್ಯವಹಾರ ಹೇಳಿಮಾಡಿಸಿದಂತಿದೆ ನಿಜ. ಆದರೆ ಭವಿಷ್ಯದಲ್ಲೂ ಇದು ಬೇಕೇ? ಎಲ್ಲಿ, ಎಷ್ಟು ಬೇಕು? ವೈದ್ಯಕೀಯ ರಂಗದಲ್ಲಿ ಆನ್‌ಲೈನ್ ಸಾಧ್ಯತೆಗಳೇನು ಎನ್ನುವುದು ಚರ್ಚೆಯ ವಿಷಯವಾಗಿದೆ.

ನಿಸ್ತಂತು ಮಾಧ್ಯಮ ಜನಸಂಪರ್ಕ ಸಾಧನವಾಗಿ ಬಳಕೆಯಾಗತೊಡಗಿದ್ದೇ ಬಂಡವಾಳ ಹೂಡುವವರು ಅದರ ವ್ಯಾಪಾರಿ ಸಾಧ್ಯತೆಗಳನ್ನು ಶೋಧಿಸಿದಾಗ. ಈ ವಿಷಯದಲ್ಲಿ ಆರೋಗ್ಯ ಕ್ಷೇತ್ರದ ಬಂಡವಾಳಿಗರು ಮುಂದಿದ್ದಾರೆ. ಕೋವಿಡ್ ಬರುವ ಮೊದಲೇ ವೈದ್ಯಕೀಯವು ಆನ್‌ಲೈನ್ ಆಗಿದೆ. ಪ್ರತಿವರ್ಷ ವೈದ್ಯಕೀಯ ವೃತ್ತಿಗೆ ಇಳಿಯುವ ಸಾವಿರಾರು ಹೊಸ ತಲೆಮಾರಿನ ಡಾಕ್ಟರುಗಳು ತಮ್ಮೊಡನೆ ಹೊಸ ಆಲೋಚನೆಗಳು, ಹೊಸ ಉಪಕರಣಗಳು, ಹೊಸ ಮುನ್ನೋಟಗಳನ್ನು ತಂದಿದ್ದಾರೆ. ಭ್ರೂಣದ ಅಂಗಾಂಶ ಕಸಿ, ರೊಬೋಟುಗಳಿಂದ ಶಸ್ತ್ರಚಿಕಿತ್ಸೆಗೆ ಸಹಾಯವೇ ಮೊದಲಾದ ಹೊಚ್ಚ ಹೊಸಪ್ರಯೋಗಗಳು ನಡೆಯುತ್ತಿವೆ. ಬೇಕೋ ಬೇಡವೋ, ಒಳ್ಳೆಯದೋ ಕೆಟ್ಟದೋ, ಹೊಸತನ ವೈದ್ಯಕೀಯ ವೃತ್ತಿಯನ್ನು ತಂತಾನೇ ಪ್ರವೇಶಿಸುತ್ತಲಿದೆ. ಈಗಂತೂ ಆಟ, ಪಾಠ, ಪ್ರಾರ್ಥನೆ, ಮದುವೆ, ತಲಾಖ್, ಲೈಂಗಿಕತೆ, ಸಭೆಗಳು ಆನ್‌ಲೈನ್ ಆದಮೇಲೆ ಚಿಕಿತ್ಸೆ ಆಗದಿರುತ್ತದೆಯೆ? ಎಲ್ಲೋ ಕುಳಿತು ಇನ್ನೆಲ್ಲೋ ಇರುವ ರೋಗಿಗೆ ವೈದ್ಯಕೀಯ ಸಲಹೆ ಕೊಡಲು ಡಾಕ್ಟರರ ಸಮೂಹವೇ ಸಿದ್ಧವಾಗಿದೆ. ಒಂದೇ ರೋಗವನ್ನನುಭವಿಸುವ ರೋಗಿಗಳ ಜಾಲತಾಣ ಗುಂಪುಗಳಿದ್ದು ಅವರು ಚಿಕಿತ್ಸೆಯ ಸಫಲತೆ-ವಿಫಲತೆ, ರೋಗದ ಅನುಭವವನ್ನು ಹಂಚಿಕೊಳ್ಳುತ್ತಾರೆ. ಡಾಕ್ಟರನ್ನು ಕಾಣದೇ ಇಡಿಯ ದೇಹ ಚೆಕಪ್ ಮಾಡಿಕೊಳ್ಳಬೇಕೆ? ಕ್ಯಾನ್ಸರ್‌ಗೆ ಚಿಕಿತ್ಸೆ ಬೇಕೆ? ಚರ್ಮರೋಗಕ್ಕೆ ಪರಿಹಾರ ಬೇಕೆ? ಬಂಜೆತನ ನಿವಾರಣೆಯಾಗಬೇಕೆ? ಯಾವ ಚಿಕಿತ್ಸೆ, ಎಲ್ಲಿ, ಎಷ್ಟು % ಯಶಸ್ಸಿನೊಂದಿಗೆ, ಎಷ್ಟು ಖರ್ಚಿನಲ್ಲಿ ಆಗುತ್ತದೆಂದು ರೇಟಿಂಗ್‌ನೊಡನೆ ತಿಳಿಸುವ ಜಾಹೀರಾತು ತಾಣಗಳಿವೆ. ಯಾರಿಗೆ ಯಾವುದೆಂಬ ವಿವೇಚನೆಯೇ ಇಲ್ಲದೆ ಎಲ್ಲರಿಗೂ ಎಲ್ಲ ಟೆಸ್ಟ್ ಮಾಡಿಸಿ; ರಕ್ತ, ಮೂತ್ರ, ಎಕ್ಸ್‌ರೇ, ಸಿಟಿ-ಎಂಆರ್‌ಐ- ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ಗಳ ವರದಿಯನ್ನು ದೂರದೂರಿನ ಹೆಸರಾಂತ ತಜ್ಞರಿಗೆ ಕಳಿಸಿ ಸಲಹೆ ಪಡೆಯಬಹುದಾಗಿದೆ. ಮೂಗು, ಕಣ್ಣು, ಹೃದಯ, ಚರ್ಮ, ಕಿಡ್ನಿ, ಶ್ವಾಸಕೋಶ ಮತ್ತಿತರ ಅಂಗಾಂಗಗಳ ತಪಾಸಣಾ ವರದಿ ನೋಡಿ ಆಯಾಯಾ ತಜ್ಞರು, ವಿಶೇಷ ತಜ್ಞರು ಸಲಹೆ ಕೊಡುತ್ತಾರೆ. ಅವರೆಲ್ಲರ ತೀರ್ಪುಗಳನ್ನು ಸೇರಿಸಿ ಲ್ಯಾಬುಗಳು, ಆಸ್ಪತ್ರೆಗಳು ‘ನಿಲ್’ ವರದಿ ನೀಡಿ ರೋಗ, ನಿರೋಗಗಳನ್ನು ನಿಷ್ಕರ್ಷಿಸುತ್ತವೆ. ಮಿಗುವಷ್ಟು ದುಡ್ಡಿರುವ ಸಿರಿವಂತರಿಂದ ಬಡವರವರೆಗೆ, ನಗರವಾಸಿಗಳಿಂದ ಗ್ರಾಮೀಣ ಪ್ರದೇಶಗಳವರೆಗೆ ಕಾಸಿಗೆ ತಕ್ಕಂತೆ ಈ ಸೌಲಭ್ಯ ವಿಸ್ತರಿಸಿಕೊಂಡಿದೆ.

ವಾಹನ ಹಿಡಿದು, ಎಷ್ಟೋ ದೂರ ಪಯಣಿಸಿ, ಚೀಟಿ ಮಾಡಿ, ಕೂತು ಕಾದು, ಡಾಕ್ಟರನ್ನು ನೋಡುವ ಕಿರಿಕಿರಿಯೇ ಇಲ್ಲವೆಂದು ಆನ್‌ಲೈನ್ ಚಿಕಿತ್ಸೆ ಬಗೆಗೆ ಹಲವರು ಒಲವು ತೋರಿಸುತ್ತಿದ್ದಾರೆ. ಪುರುಸೊತ್ತಿಲ್ಲದ ಕಾಲದಲ್ಲಿ ನಿಸ್ತಂತು ಸಂಪರ್ಕವೇ ಸರಿಯೆಂಬ ಮಾತೂ ಕೇಳಿಬರುತ್ತಿದೆ.

ಹೌದೇ? ಆನ್‌ಲೈನ್ ವೈದ್ಯಕೀಯ ಸಲಹೆಯೇ ಈ ಕಾಲಕ್ಕೆ ಸೂಕ್ತವೇ? ಡಾಕ್ಟರ್ ಮತ್ತು ರೋಗಿಯ ದೃಷ್ಟಿಯಿಂದ ಅದರ ಸಾಧಕ, ಬಾಧಕಗಳೇನು?

ಕಹಿ ಸತ್ಯ


ಮನುಷ್ಯ ದೇಹಕ್ಕೆ ಬರುವ ನೂರಾರು ಆರೋಗ್ಯ ಸಮಸ್ಯೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು:

೧. ಮನೋಕ್ಲೇಷದಿಂದ ಬರುವ ಸಮಸ್ಯೆಗಳು: ದೈಹಿಕ ಕಾಯಿಲೆಯಿರದ ಈ ಸಮಸ್ಯೆಗಳಿಗೆ ಮಾತುಕತೆ-ಸಲಹೆ-ಸೂಕ್ತ ಔಷಧಿಯೇ ಪರಿಹಾರ.
೨. ಔಷಧಿ-ಮಾತ್ರೆ-ಪಥ್ಯದಿಂದ ಗುಣವಾಗುವ ಕಾಯಿಲೆಗಳು: ಉದಾಹರಣೆಗೆ ಅಸ್ತಮಾ, ಏರು ರಕ್ತದೊತ್ತಡ, ಸಕ್ಕರೆ ಕಾಯಿಲೆ, ಚರ್ಮದ ಕಾಯಿಲೆ, ಕೆಲವು ಹೃದ್ರೋಗಗಳು, ಜ್ವರ, ಇತ್ಯಾದಿ.
೩. ಶಸ್ತ್ರಚಿಕಿತ್ಸೆ ಮತ್ತು ಪೂರಕ ‘ಪ್ರೊಸೀಜರು’ಗಳೂ ಅಗತ್ಯವಿರುವಂಥವು: ಹೆರಿಗೆ, ಗರ್ಭಪಾತ, ಗರ್ಭಕೋಶ ಸಂಬಂಧಿ ತೊಂದರೆಗಳು, ಕ್ಯಾನ್ಸರ್ ಗೆಡ್ಡೆ/ಹುಣ್ಣು, ಮೂಳೆಮುರಿತ, ಲಿವರು-ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ತೊಂದರೆಗಳು, ಅಪೆಂಡಿಕ್ಸ್ ಉರಿಯೂತ, ಟಾನ್ಸಿಲ್ ಉರಿಯೂತ, ಕೀವು, ಬಾವು ಇತ್ಯಾದಿ.

ಇದರಲ್ಲಿ ರೋಗಿಗೆ ಯಾವುದೇ ಒಂದು ವರ್ಗದ ಸಮಸ್ಯೆಯಿರಬಹುದು ಅಥವಾ ಎಲ್ಲವೂ ಒಟ್ಟೊಟ್ಟಿಗೆ ಇರಬಹುದು. ಕ್ಯಾನ್ಸರ್, ಸಕ್ಕರೆ ಕಾಯಿಲೆ ಇರುವವರಿಗೆ ಮಾನಸಿಕ ಕಾಯಿಲೆಯೂ ಇರಬಹುದು. ಅಸ್ತಮಾ ಇರುವ ಮಹಿಳೆಗೆ ಅತಿಸ್ರಾವವಾಗಬಹುದು. ರೋಗಿಗೆ ಯಾವ್ಯಾವ ತರಹದ ಸಮಸ್ಯೆಗಳಿವೆಯೆಂದು ಗುರುತಿಸಲು ಡಾಕ್ಟರರು ರೋಗಿಯನ್ನು ‘ನೋಡು’ವುದು ಮುಖ್ಯವಾಗಿದೆ. ನೋಡಿದ ನಂತರ ಅವಶ್ಯವಿರುವ ತಪಾಸಣೆಗಳನ್ನಷ್ಟೇ ಮಾಡಿಸಬೇಕು. ರೋಗಿಯ ಮುಖಭಾವ, ಪ್ರತಿಕ್ರಿಯೆ, ಪರಿಸ್ಥಿತಿ, ಚಲನೆಯ ವಿಧಾನ, ಆತಂಕ, ಅನುಮಾನ, ಪ್ರಶ್ನೆ, ಅವರ ಜೊತೆಗಿರುವವರನ್ನೆಲ್ಲ ‘ನೋಡಿದ’ ಡಾಕ್ಟರು ತಮ್ಮ ಭಾವುಕ, ಬೌದ್ಧಿಕ ಬಂಡವಾಳ ತೊಡಗಿಸಿದಾಗ ರೋಗ-ರೋಗಿ-ಚಿಕಿತ್ಸೆಯ ಸ್ಥೂಲ ಚಿತ್ರಣ ಮನಸ್ಸಿನಲ್ಲಿ ಮೂಡುತ್ತದೆ. ತಮ್ಮ ಹಿಂದಿನ ಅನುಭವ, ಸಹಾನುಭೂತಿಗಳ ಮೂಸೆಯಿಂದ ಆ ರೋಗಿಗೆ ಹೊಂದುವ ಒಂದು ಸೂಕ್ತ ಪರಿಹಾರವನ್ನು ಹೆಕ್ಕಿ ಹೊರತೆಗೆಯಲು ಈ ಚಿತ್ರಣ ಪ್ರೇರೇಪಿಸುತ್ತದೆ. ಡಾಕ್ಟರ್-ರೋಗಿಯ ಸಂಬಂಧ ಚೆನ್ನಾಗಿದ್ದಷ್ಟೂ ಉತ್ತಮ ಪರಿಹಾರಗಳು ಅನುಭವದ ಬುಟ್ಟಿಯಿಂದ ಎದ್ದು ಬರುತ್ತವೆ.

ಮನುಷ್ಯರೆಂಬ ಯಂತ್ರಗಳಲ್ಲದ ಯಂತ್ರಗಳು ನಡೆಯಲು ಶಕ್ತಿ ಸೆಲೆ ಎಷ್ಟು ಮುಖ್ಯವೋ ಭಾವಸೆಲೆಯೂ ಅಷ್ಟೇ ಮುಖ್ಯ. ರೋಗಿಯ ಜೀವಕೋಶಕ್ಕೆ ಔಷಧಿ ಎಷ್ಟು ಅಗತ್ಯವೋ, ಅವರ ಭಾವಕೋಶವನ್ನು ಮರುಪೂರಣ ಮಾಡುವುದೂ ಅವಶ್ಯವಾಗಿದೆ. ಈ ಕುರಿತು ರೋಗಿಗಳನ್ನು, ಸಮಾಜವನ್ನು ಎಚ್ಚರಿಸುತ್ತಲೇ ಡಾಕ್ಟರುಗಳು ತಾವೂ ಮಾನವೀಯಗೊಳ್ಳಬೇಕಾದ ಅವಶ್ಯಕತೆಯಿದೆ. ಮಾಹಿತಿಗೂ, ಜ್ಞಾನಕ್ಕೂ ಅಂತರವಿದೆ. ಓದಿಗೂ, ತಜ್ಞತೆಗೂ ಅಂತರವಿದೆ. ಜನರ ಒಡನಾಟದಿಂದಷ್ಟೇ ಮಾಹಿತಿ ಜ್ಞಾನವಾಗಿ, ವಿವೇಕವಾಗಬಲ್ಲದು; ಅನುಭವವು ಚಿಂತನೆಯಾಗಿ ಅರಳಬಲ್ಲದು. ರೋಗಿಯನ್ನು ನೋಡಿ, ಮುಟ್ಟಿದಾಗ ಡಾಕ್ಟರುಗಳಲ್ಲಿ ಮಾತಿಲ್ಲದೆ ಭಾವನೆಗಳನ್ನು ಪತ್ತೆ ಹಚ್ಚುವ, ಮುಖಚಹರೆ ಅರಿಯುವ ಹೆಣ್ಣುಗುಣ ಉದ್ದೀಪನಗೊಳ್ಳಲು ಸಾಧ್ಯವಿದೆ.

ಆನ್‌ಲೈನ್ ಸಂಪರ್ಕ ಇಂಥ ಎಲ್ಲ ಸಾಧ್ಯತೆಗಳನ್ನು ಮೊಟಕುಗೊಳಿಸುತ್ತದೆ. ಡಾಕ್ಟರ್-ರೋಗಿ ಸಂಬಂಧವನ್ನು ವ್ಯಾಪಾರಿ ಗ್ರಾಹಕ ಮಟ್ಟಕ್ಕಿಳಿಸುತ್ತದೆ. ಇದರಿಂದ ಆರ್ಥಿಕ ಲಾಭಗಳಿರಬಹುದು. ಆದರೆ ಜನದೇವರ ದರ್ಶನವಾಗದಿರುವುದು ಡಾಕ್ಟರುಗಳಿಗೆ ದೊಡ್ಡ ನಷ್ಟವೇ ಸರಿ.

ಆನ್‌ಲೈನ್ ಸೇವೆಯ ಇನ್ನೊಂದು ಆತಂಕ ಮಾಹಿತಿ ಸೋರಿಕೆಯದ್ದು. ರೋಗಿಯು ವಿವರ ನೀಡುತ್ತಿರುವುದು ಒಬ್ಬ ವೈದ್ಯರಿಗೇ ಹೊರತು ಹ್ಯಾಕರ್‌ಗೆ ಅಲ್ಲವೆಂದು, ಆನ್‌ಲೈನ್ ಸೇವೆಯಲ್ಲಿ ಬಹಿರಂಗವಾಗುವ ಖಾಸಗಿ ವಿವರಗಳು ಸೋರುವುದಿಲ್ಲವೆಂದು ನಿಶ್ಚಿತವಿರುವುದಿಲ್ಲ. ಆನ್‌ಲೈನ್ ಸೇವೆ ನೀಡುತ್ತಿರುವವರು ನಕಲಿ ಡಾಕ್ಟರುಗಳೋ ಅಲ್ಲವೋ ಎಂದು ತಿಳಿಯಲೂ ಕಷ್ಟವಿದೆ.

ಮನುಷ್ಯರನ್ನು ಬಿಟ್ಟು ಉಳಿದ ಪ್ರೈಮೇಟ್ ಪ್ರಬೇಧದ ಪ್ರಾಣಿಗಳು ದಿನದ ೨೦% ಸಮಯವನ್ನು ಒಂದನ್ನೊಂದು ಮುಟ್ಟುವುದರಲ್ಲಿ ಕಳೆಯುತ್ತವೆ. ನಾವು ಮಾತ್ರ ಆಧುನಿಕರಾಗುತ್ತ ಹೋದಂತೆ ಮುಟ್ಟದ, ಮುಟ್ಟಿಸಿಕೊಳ್ಳದವರಾಗುತ್ತಿದ್ದೇವೆ. ತುಂಬಿ ತುಳುಕಿ ಭೂಮಿ ನಡುಗುವಷ್ಟು ಜನ ತುಂಬಿಕೊಂಡಿದ್ದರೂ ಇನ್ನಿಲ್ಲದ ಒಂಟಿತನ ಮನುಷ್ಯರನ್ನು ಆವರಿಸಿದೆ. ಒಂಟಿತನವು ಖಿನ್ನತೆ ಹುಟ್ಟಿಸುತ್ತದೆ, ಕೀಳರಿಮೆ ಬೆಳೆಸುತ್ತದೆ, ನಗಣ್ಯ ದೈಹಿಕ ಕಿರಿಕಿರಿಗಳೂ ದೊಡ್ಡವೆನಿಸತೊಡಗುತ್ತವೆ, ಚಹರೆಯ ಏರುಪೇರುಗಳೇ ಕಾಯಿಲೆಯಂತೆ ಭಾಸವಾಗುತ್ತವೆ. ಹೆಚ್ಚುತ್ತಿರುವ ದೌರ್ಜನ್ಯಗಳಿಗೆ, ಅತಿಭಯ, ಮುಂಗೋಪ, ಉದ್ರೇಕ, ಅಪರಾಧಿ ಪ್ರವೃತ್ತಿಗಳಂತಹ ನಡತೆಗಳಿಗೆ ಒಂಟಿತನವೇ ಕಾರಣವಾಗಿದೆ. ಒಂಟಿತನದ ಮೂಲ ಸ್ಪರ್ಶ ಹಸಿವು. ಇದಕ್ಕೆ ‘ಆನ್‌ಲೈನ್ ಕ್ರಾಂತಿ’ ಸೃಷ್ಟಿಸುವ ಭ್ರಮಾವಾಸ್ತವ ಕಾರಣವಾಗಿದೆ.

ಒಟ್ಟಾರೆ ಹೇಳುವುದಾದರೆ, ತಂತ್ರಜ್ಞಾನ ಮನುಷ್ಯರಿಗೆ ಸಹಾಯ ಮಾಡಬಹುದು. ಸಣ್ಣಪುಟ್ಟ ಕಾಯಿಲೆಗಳಿಗೆ ಆನ್‌ಲೈನ್ ಸಲಹೆ ಪಡೆಯಬಹುದು. ಔಷಧಿಗಳನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳಬಹುದು. ನಿಮ್ಮ ಡಾಕ್ಟರುಗಳೊಡನೆ ನಿರಂತರ ಆನ್‌ಲೈನ್ ಸಂಪರ್ಕ ಇಟ್ಟುಕೊಂಡು ಆಪ್ತ ಬಾಂಧವ್ಯ ಬೆಳೆಸಿಕೊಳ್ಳಬಹುದು. ಡಾಕ್ಟರರು ತಮ್ಮ ರೋಗಿಗಳ ಜೊತೆ ಆನ್‌ಲೈನ್ ಸಂಪರ್ಕದಲ್ಲಿದ್ದು ಭರವಸೆ, ಮಾಹಿತಿ ನೀಡಬಹುದು. ಆದರೆ ಮನುಷ್ಯರ ಬದಲಾಗಿ ತಂತ್ರಜ್ಞಾನ ಉಪಯೋಗಿಸಲು ಬಾರದು. ಡಾಕ್ಟರಿಗಾಗಿ ಕಾಯುವುದು, ಅವರೆದುರು ಹೇಳಿಕೊಳ್ಳುವುದು, ಪರೀಕ್ಷಿಸಲ್ಪಡುವುದು ಎಷ್ಟೇ ಕಷ್ಟವಾದರೂ ಸಹ ಆಸ್ಪತ್ರೆಗೆ ಹೋದಾಗ ಸಿಗುವ ಜನ, ಅವರ ಅನುಭವ-ಸಾಂತ್ವನದ ನುಡಿಗಳು, ವಾಸ್ತವ ಮಾಹಿತಿಗಳು, ಡಾಕ್ಟರರ ಮೇಲಿನ ವಿಶ್ವಾಸಗಳು ಬದುಕಿನಲ್ಲಿ ಭರವಸೆ ತುಂಬಬಲ್ಲವು.

ಅತಿಗಳ ಫಲಿತ ಕೋವಿಡ್



ಹೆಚ್ಚು ಜನ ಒಂದೆಡೆ ಇರುವುದೇ ಹಿಂಸೆ. ಮುನ್ನೂರಕ್ಕಿಂತ ಹೆಚ್ಚು ಜನ ಒಂದೆಡೆ ಇರುವಲ್ಲಿ ಒಮ್ಮತ ಸಾಧ್ಯವಿಲ್ಲ, ಸಾವಿರ ಜನ ಒಟ್ಟಿಗೇ ಇರುವಲ್ಲಿ ಭಿನ್ನಮತೀಯ ಗುಂಪು ಹುಟ್ಟಿಯೇ ಹುಟ್ಟುತ್ತದೆ. ಹತ್ತು ಸಾವಿರ ಜನ ಹಿಂಸೆಯಿಲ್ಲದೆ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಮಾನವಶಾಸ್ತ್ರಜ್ಞರು. ಹೀಗಿರುತ್ತ  ಕೋಟ್ಯಂತರ ಜನರನ್ನು ಒಂದು ಸಣ್ಣ ಪ್ರದೇಶದಲ್ಲಿ, ಕಾಲ್ಪನಿಕ ಗೆರೆಯೆಳೆದು, ದೇಶ ರಾಜ್ಯ ಜಾತಿ ಧರ್ಮಗಳೆಂಬ ಅಸ್ಮಿತೆ ಕೊಟ್ಟು ನಿಯಂತ್ರಿಸುವುದು ಪ್ರಕೃತಿ ಸಹಜವಲ್ಲ. ಹೀಗೆ ನಿಸರ್ಗ ತತ್ತ್ವಕ್ಕೆ ವಿರುದ್ಧವಾಗಿ ಒಂದೆಡೆ ನೆರೆವ ಬೃಹತ್ ಜನಸಮೂಹವೇ ಸಾಂಕ್ರಾಮಿಕ ರೋಗಗಳ ಕಾರಣವಾಗಿದೆ. ಬರಿಯ ಸಾಂಕ್ರಾಮಿಕ ರೋಗಗಳಷ್ಟೇ ಅಲ್ಲ, ನಮ್ಮ ಬಹುಪಾಲು ಸಮಸ್ಯೆಗಳ ಮೂಲ ನಗರೀಕರಣ ಮತ್ತು ಜನದಟ್ಟಣೆಯೇ ಆಗಿದೆ. ಒತ್ತೊತ್ತಾಗಿ ಬದುಕುವ ಮನುಷ್ಯ ಜೀವಿಗಳು ಅತಿ ಸಂಪರ್ಕ, ಅತಿ ಬಳಕೆ, ಅತಿ ಆಸೆ, ಅತಿ ತಿರುಗಾಟ, ಅತಿ ಡಾಂಭಿಕತೆ, ಅತಿ ಅನುಭೋಗಕ್ಕೆ ಒಳಗಾಗಿ ತಮ್ಮ ಸುತ್ತಲ ಜೀವಿ, ಅಜೀವಿ ಪರಿಸರವನ್ನು ನಾಶಗೈದದ್ದರ ಫಲಿತವಾಗಿ ಕರೋನಾದಂತಹ ಕಾಯಿಲೆಗಳು ಬಂದಿವೆ. ಶಂಕೆಯೇ ಇಲ್ಲ, ನಮ್ಮ ಅತಿಗಳ ನೇರ ಫಲಿತ ಕೋವಿಡ್-೧೯.

ಈ ಕಾಲವು ಬುದ್ಧಿ ಮತ್ತು ಅನುಭವವನ್ನು ಪ್ರತ್ಯೇಕಿಸಿ ಇಟ್ಟಿದೆ. ನಮಗಾದ ಅನುಭವವನ್ನು ಅರ್ಥಮಾಡಿಕೊಳ್ಳುವ, ವಿಶ್ಲೇಷಿಸುವ ವ್ಯವಧಾನವೂ ಇಲ್ಲದ ಆತುರ ಜೀವಿಗಳಾಗಿದ್ದೇವೆ. ಹಾಗೆ ನೋಡಿದರೆ ರೋಗಗಳು ಬರುವುದೇ ನಮ್ಮ ಅತಿಗಳನ್ನು ಮಿತಿಗೊಳಿಸಲಿಕ್ಕೆ. ನಾವು ಯಕಃಶ್ಚಿತ್ ಜೀವಿಗಳು ಎಂದು ನೆನಪಿಸುವುದಕ್ಕೆ. ಅತಿಗಳನ್ನು ಮಿತಿಗೊಳಿಸಿಕೊಂಡರೆ ಆರೋಗ್ಯ ತಂತಾನೇ ಸರಿಯಾಗುತ್ತದೆ. ಆದರೆ ನಾವು ರೋಗದಿಂದ ಪಾಠ ಕಲಿಯದೆ ರೋಗಕ್ಕೇ ಪಾಠ ಕಲಿಸಹೊರಡುತ್ತೇವೆ. ಸಾರಾಯಿ ಉತ್ಪಾದನೆಗೆ ಸಬ್ಸಿಡಿ ಕೊಟ್ಟು, ಸಾರಾಯಿ ದುಡ್ಡಿನಿಂದಲೇ ಸರ್ಕಾರ ಬದುಕುವುದೆಂದು ಹೇಳಿ, ಮದ್ಯದೊರೆಯನ್ನು ದೇಶ ಬಿಟ್ಟು ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟು ಕೊನೆಗೆ ಸಾರಾಯಿ ನಿಷೇಧ ಕಾನೂನು ತರುತ್ತೇವೆ! ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುತ್ತಲೇ ಗುಟ್ಕಾ-ಬೀಡಿ-ಸಿಗರೇಟು ತಯಾರಿಸುತ್ತೇವೆ! ಇಂಥ ವೈರುಧ್ಯಮಯ ನಿಲುವು ಮತ್ತು ಬದುಕುಗಳಿಂದಲೇ ಇವತ್ತು ಅನಾರೋಗ್ಯ ಹೆಚ್ಚಾಗಿರುವುದು. ಆದರೂ ನಾವು ಕೋವಿಡ್‌ಗಳನ್ನು ಗೆಲ್ಲುವ ಭರವಸೆಯಲ್ಲಿದ್ದೇವೆ. ಹೆಚ್ಚೆಚ್ಚು ಆಸ್ಪತ್ರೆಗಳನ್ನು ತೆರೆಯುವ, ಲಸಿಕೆ-ಔಷಧಿ ಕಂಡುಹಿಡಿಯುವ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಸ್ತಾವಗಳು ಕಂಡುಬರುತ್ತಿವೆ. ನಮ್ಮ ಸರ್ಕಾರಗಳಾದರೋ ಕೋವಿಡ್ ಮಹಾಪಿಡುಗನ್ನು ಯುದ್ಧ ಸನ್ನಿವೇಶವೆಂದು ಭಾವಿಸಿವೆ. ಗಮನಿಸಿ, ವಾರಿಯರ‍್ಸ್, ಫ್ರಂಟ್‌ಲೈನ್ ಲೆಫ್ಟಿನೆಂಟ್ಸ್, ಲಾಕ್‌ಡೌನ್, ಕೌಂಟ್‌ಡೌನ್, ಮಿಷನ್ ಇತ್ಯಾದಿ ಯುದ್ಧಕಾಲದ ಭಾಷೆ ಬಳಕೆಯಲ್ಲಿದೆ. ಇದೆಲ್ಲದರ ಹಿಂದೆ ಅದಮ್ಯ ಜೀವನೋತ್ಸಾಹವಿದ್ದಂತೆ ಮನುಷ್ಯ ಮಿದುಳಿನ ಅಜೇಯತನದ ಅಹಂಕಾರವೂ ಇದೆ.

ಆದರೆ ರೋಗ ನಿವಾರಣೆಯೆಂದರೆ ಯುದ್ಧವಲ್ಲ. ಅದು ಎಲ್ಲರೂ ಒಟ್ಟಾಗಿ ಈಜಿ ದಾಟಬೇಕಾದ ವಿಷಮ ಪ್ರವಾಹ. ಪ್ರವಾಹದೆದುರು ಈಜಿ ದಡ ಸೇರಲು ಅನುಭೂತಿ, ಪ್ರೀತಿ, ಸಹಕಾರಗಳ ಜಂಟಿ ರಟ್ಟೆಬಲ ಬೇಕೇ ಹೊರತು ಶಸ್ತ್ರಾಸ್ತ್ರಗಳಲ್ಲ. ಒಗ್ಗಟ್ಟೇ ಮಂತ್ರ, ಪ್ರೀತಿಯೇ ಆಧಾರ. ಹೀಗಿರುತ್ತ ನಗರೀಕರಣ ಮತ್ತು ಅತಿಗಳ ಬದುಕನ್ನು ತ್ಯಜಿಸದೆ ಬರಿಯ ಲಸಿಕೆ, ಔಷಧಿ, ಸಾಮಾಜಿಕ ಅಂತರ ಎಂದುಕೊಳ್ಳುವುದರಿಂದ, ಆನ್‌ಲೈನ್ ಡಾಕ್ಟರುಗಳು ಸಿಗುವುದರಿಂದ ಕೋವಿಡ್ ದೂರವಾಗುವುದಿಲ್ಲ. ಕೋವಿಡ್-೧೯ ಹೋಗುತ್ತದೆ, ೨೦ ಬರುತ್ತದೆ ಅಷ್ಟೇ.

ನಿಜವಾದ ಕ್ರಾಂತಿ ಕೋವಿಡ್-೧೯ಕ್ಕೆ ಲಸಿಕೆ ಕಂಡುಹಿಡಿಯುವುದೋ, ಚಿಕಿತ್ಸೆ ಕಂಡುಹಿಡಿಯುವುದೋ ಅಲ್ಲ. ಆನ್‌ಲೈನ್, ಆಫ್‌ಲೈನಿನಲ್ಲಿ ಅಸಂಖ್ಯ ಡಾಕ್ಟರುಗಳನ್ನು ಗುಡ್ಡೆ ಹಾಕಿಕೊಳ್ಳುವುದೋ ಅಲ್ಲ. ಅಥವಾ ಗಲ್ಲಿಗಲ್ಲಿಗೂ ಆಸ್ಪತ್ರೆ, ಜಿಲ್ಲೆಜಿಲ್ಲೆಯಲ್ಲೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ತೆರೆಯುವುದಲ್ಲ. ಆರೋಗ್ಯ ಕ್ಷೇತ್ರದ ನಿಜವಾದ ಕ್ರಾಂತಿ ಎಂದರೆ ಡಾಕ್ಟರುಗಳು ನಿರುದ್ಯೋಗಿಗಳಾಗುವಷ್ಟು ಆರೋಗ್ಯ ಸಾಧಿಸುವುದು. ಅವಶ್ಯವಿದ್ದಾಗ ಗುರುವಿನಂತೆ ಸಂಪರ್ಕಿಸಲು ‘ನಮ್ಮ ಡಾಕ್ಟರನ್ನು’ ನಾವೇ ಹುಡುಕಿಕೊಳ್ಳುವುದು.

***

ಆಗಲೇ ಆಗಮಿಸಿರುವವರು, ನಿರ್ಗಮನದ ಹಾದಿಯಲ್ಲಿರುವವರು ನಾವು.
ಬರಲಿರುವವರಿಗೆ ಸುರಕ್ಷಿತ ನೆಲ ಬಿಟ್ಟುಹೋಗುವ ಹೊಣೆ ನಮ್ಮದು.
ಎಂದೇ ಮಿತಗೊಳಿಸಿಕೊಳ್ಳೋಣ, ಎಲ್ಲ ಅಂದರೆ ಎಲ್ಲವನ್ನೂ.
ನಮ್ಮ ಕಣ್ಣು ತೆರೆಸಲಿ ಕೋವಿಡ್, ಇನ್ನಾದರೂ.



(ವೈದ್ಯ ಎಂಬ ಕನ್ನಡ ಪದ ‘ರೋಗಿ’ ಪದದಂತೆ ಲಿಂಗತಟಸ್ಥ ಅಲ್ಲ. ಎಂದೇ ‘ಡಾಕ್ಟರ್’ ಪದ ಬಳಸಿರುವೆ.)

(‘ಸೋಂಕು ರೋಗ ಪ್ರೇರೇಪಿಸಿದ ಆನ್‌ಲೈನ್ ಕ್ರಾಂತಿ ಶಾಶ್ವತವೇ? ವೈದ್ಯಕೀಯ ರಂಗದಲ್ಲಿ ಏನಾಗುತ್ತಿದೆ? ಭವಿಷ್ಯದ ಸಾಧ್ಯತೆಗಳೇನು?’ ಸಮಾಜಮುಖಿ ಪತ್ರಿಕೆಗೆ ಬರಹ ಜುಲೈ ೨೦೨೦.)