Tuesday, 9 May 2017

ತಥಾಗತ..







ವೈಶಾಖ ಹುಣ್ಣಿಮೆಯ ಇರುಳು.

ಬೆಟ್ಟಬೇಣಗಳಲಿ  ಬೆಳದಿಂಗಳಲ್ಲಿ
ಪದಗಳು ಕೊಚ್ಚಿ ಹೋಗುತ್ತಿದ್ದವು
ಅವ ಕಣ್ಣ ದೋಣಿಯಲೆ ದಡಕೆ ತಂದ

ಪದಗಳು ಮೌನದುಸುಬಿನಲಿ ಮುಳುಗುತಿದ್ದವು
ಕಿರುಬೆರಳಲೆತ್ತಿ ಸಂತೈಸಿ
ಎದೆಯೊಳಗೆ ಉಸಿರು ತುಂಬಿದ

ಪದಗಳು ಭಾರವಾಗಿದ್ದವು
ಕಾಲ ರೆಕ್ಕೆ ಕಟ್ಟಲಾಗಿತ್ತು
ಗಂಟು ಸಡಿಲಿಸಿ ಬಿಚ್ಚಿದ

ಪದಗಳು ತೋಯ್ದು ನೆನೆದು
ಒದ್ದೆ, ಪತಪತ ನೀರಿಳಿವಷ್ಟು
ಗಾಳಿಗೆ ಹರಡಿ, ವಿರಮಿಸಿದ

ತಥಾಗತ, ಭಂತೇ,
ಪದಗಳ ಮೇಲೂ ಪ್ರೇಮವೆ?!

‘ಚೆಲುವಾದ ಸತುವಾದ ಪದಗಳು
ಎಲ್ಲಿ ಹೋದಾವು ಕಾಯವಿಲ್ಲದವು?
ಆಡಲಿ ಯಾವ ನಾಲಿಗೆ ಮೇಲಾದರೂ’

ಅಮ್ಮ ಬಾರದೆ ಗುಟುಕು ತಾರದೆ
ಕಂಗೆಟ್ಟ ಮರಿಯ ಆರ್ತ ಕೂಗು
ಪದವಾಯಿತು, ಪದ್ಯವಾಯಿತು

ಯುದ್ಧಕೆ ಅಯ್ಯನ ಕಳಕೊಂಡವಳು
ಎದೆಯ ನೋವಿಗೆ ಕುಸಿಯುತಿದ್ದಳು
ಗಾಯ ಪದವಾಯಿತು, ಪದ್ಯವಾಯಿತು

ಹಕ್ಕಿ ಉಲಿ, ಕೂಸಿನಳು, ಚಿಗುರ ಸಂಭ್ರಮ,
ಬೇರಿನ ಆತಂಕ, ಬೀಜದ ಧಾವಂತ
ಎಲ್ಲವೂ ಪದಗಳಾಗಿ ರೆಕ್ಕೆಯಗಲಿಸಿದವು.





ಗಾಳಿಯೇ, ಹಾರಿಸು, ಪದ ಪಟವನ್ನು
ಹಾರಿಸು, ಪಟ ಹರಿದರೂ ಪದಗಳನ್ನು

ಮಳೆಯೇ ತೇಲಿಸು ಪದ ನಾವೆಯನ್ನು
ತೇಲಿಸು, ನಾವೆ ಮುಳುಗಿದರೂ ಪದಗಳನ್ನು

ನೆಲವೇ ಹೀರಿಕೋ, ಪದ ಸ್ಮೃತಿ ಸಾರವನ್ನು
ಹೀರಿಕೋ, ಸ್ಮೃತಿಯಳಿದರೂ ಪದದ ಸಾರವನ್ನು

ತಥಾಗತನೇ,
ಒಂದು ಪದವಾಗಿಸು ನನ್ನನು.
ವಿಶ್ವ ಹೃದಯವೇ,
ಬರಿದೆ ಒಂದು ಪದವಾಗಿಸು ನನ್ನನು.



(ಚಿತ್ರಗಳು: ಕೃಷ್ಣ ಗಿಳಿಯಾರ್)

Friday, 28 April 2017

ಅಜಂತಾ - ಈ ಚಿತ್ರಪಟಗಳಿನ್ನೂ ಹಾಡುತ್ತಿವೆ..





(ಬುದ್ಧ ಭಾರತದ ಮುಖ್ಯ ಸ್ಥಳಗಳಲ್ಲಿ ಅಜಂತಾ ಗುಹೆಗಳಿಗೆ ಮಹತ್ವದ ಸ್ಥಾನವಿದೆ. ವಿಶ್ವದ ಅತಿ ಹಳೆಯ ಬೌದ್ಧ ಮಂದಿರ-ವಿಹಾರಗಳ ತಾಣವಾಗಿರುವ; ಭಾರತದ ಪ್ರಾಚೀನ ಕಲಾಶಾಲೆಯಾಗಿರುವ ಅಜಂತಾ ಗುಹೆಗಳು ಒಮ್ಮೆ ನೋಡಲೇಬೇಕಾದ ಸ್ಥಳಗಳು. ಮಹಾರಾಷ್ಟ್ರದ ಔರಂಗಾಬಾದ್ ಬಳಿಯಿರುವ ಅಜಂತಾ, ಎಲ್ಲೋರಾಗಳೆಂಬ ಬೌದ್ಧ ತಾವುಗಳಿಗೆ ನಾವು ಹೋಗಿದ್ದೆವು. ನೀವೂ ಒಮ್ಮೆಯಾದರೂ ಹೋಗಿಬನ್ನಿ. ಒಮ್ಮೆ ಹೋಗಿಬಂದಿದ್ದರೆ ಮತ್ತೊಮ್ಮೆ ಹೋಗಿಬನ್ನಿ. ಸದ್ದು ಮಾಡದೆ ತಿರುಗಾಡಿ ಕಣ್ಮನ ತುಂಬಿಕೊಂಡು ಬನ್ನಿ... )

ಕಿಚಕಿಚ ಎನ್ನುತ್ತ ಸರಸರ ಹತ್ತಿಳಿವ ಅಳಿಲುಗಳು, ಅಸಂಖ್ಯ ಕರಿ ಪಿಕಳಾರ ಹಕ್ಕಿಗಳು, ಸಂಗಾತಿಯ ಬೆನ್ನಿನ ಹೇನು ಹೆಕ್ಕುವುದರಲ್ಲಿ ಮಗ್ನವಾಗಿ ದೇಶಕಾಲ ಮರೆತ ಕಪಿ ದಂಪತಿಗಳು, ಹರಿವ ಪಾತ್ರ ಕಾಣುವಂತೆ, ಸವೆದ ಕಲ್ಲು ಬಂಡೆ ಕಾಣುವಂತೆ ಡಿಸೆಂಬರಿಗೇ ಒಣಗಿದ ವಾಘೋರಾ ನದಿಯ ತಿರುವು, ಮಧ್ಯಭಾರತದ ಸಹ್ಯಾದ್ರಿ ಬೆಟ್ಟಸಾಲುಗಳ ಗುಹೆಗಳಲ್ಲಿ ಎಂದೋ ಸಹಸ್ರಮಾನಗಳ ಹಿಂದೆ ವಿಸ್ಮಯಗೊಳಿಸುವಷ್ಟು ಕೌಶಲದಿಂದ ರೂಪಿಸಿದ ಚಿತ್ರ-ಶಿಲ್ಪಗಳು, ಪದಭಾವಭಂಗಿಗಳಲಿ ಆಡುತ್ತಿರುವಂತೆ ಹಾಡುತ್ತಿರುವಂತೆ ಕಾಣುವ ಚಿತ್ರಗಳಿರುವ, ತನ್ನ ಕಾಲದೊಳಗೆ ನಮ್ಮನ್ನು ಲೀನಗೊಳಿಸಲು ಶಕ್ತವಾಗಿರುವ ಕತ್ತಲುಬೆಳಕಿನ ಗುಹೆಗಳು...

ಇದು ಅಜಂತಾ. ಭಾರತದ, ಅಷ್ಟೇ ಏಕೆ ವಿಶ್ವದ ಅತಿ ಹಳೆಯ ಬೌದ್ಧಗುಹೆಗಳಿರುವ ತಾಣ ಅದು.

ಅಲ್ಲಿದ್ದ ಮುವ್ವತ್ತೊಂದೂ ಗುಹೆಗಳು ಜಗದ ಮರೆವಿಗೆ ಸಂದಿದ್ದವು. ಒಂದೂವರೆ ಸಾವಿರ ವರ್ಷ ಯಾರು ನೋಡಿದರೂ ನೋಡದಿದ್ದರೂ; ಮೆಚ್ಚಿದರೂ ಬೆಚ್ಚಿದರೂ ಅವು ಅಲ್ಲೇ ಇದ್ದವು. ಯಾರು ಅನುಯಾಯಿಗಳಿದ್ದರೋ ಇಲ್ಲವೊ ಶಿಲ್ಪಗಳ ಮುಖದ ಮಂದಸ್ಮಿತ ಮಾಸದೇ ಉಳಿದಿತ್ತು. ಹೊರಗಿನವರು ಅಲ್ಲಿ ಕಾಲಿಡದಂತೆ ತಡೆದ ಭಿಲ್ಲ ಸಮುದಾಯ, ಸ್ವೇಚ್ಛೆಯಾಗಿ ತಿರುಗಿಕೊಂಡಿದ್ದ ಹುಲಿಗಳು, ಸೊಕ್ಕಿ ಬೆಳೆದ ಕಾಡುಗಿಡಮರಬಳ್ಳಿ ಆ ಗುಹೆಗಳನ್ನು ರಕ್ಷಿಸಿದ್ದವು.

ಸಮಸ್ತ್ತ ಜೀವರಾಶಿಯನ್ನು ಎರಡೂ ಕೈಗಳಲ್ಲಿ ಬಾಚಿ ತಬ್ಬಿಕೊಳ್ಳುವಷ್ಟು ಪ್ರೇಮವನ್ನು ಕಣಕಣದಲ್ಲು ತುಂಬಿಕೊಂಡ ಭೂಮಿ ಮೇಲಿನ ಶ್ರೇಷ್ಠ ಮನುಷ್ಯ ಬುದ್ಧ ಅಲ್ಲಿ ಚಿತ್ರವಾಗಿದ್ದ, ಶಿಲ್ಪವಾಗಿದ್ದ. ತನ್ನ ಪೂಜಿಸಲು, ಮೂರ್ತಿಯಾಗಿಸಲು, ಗುರುವಾಗಿಸಲು, ದೇವರಾಗಿಸಲು, ದೇವಸುತನನ್ನಾಗಿಸಲು, ದೈವಸಂದೇಶವಾಹಕನನ್ನಾಗಿಸಲು ಕೊನೆತನಕ ಒಪ್ಪದ ಸ್ವಯಂನಿರಾಕರಣೆಯ ಮನುಷ್ಯ ಅಲ್ಲಿನ ಚಿತ್ರಗಳ ಜೀವವಾಗಿದ್ದ. ಕಗ್ಗತ್ತಲ ಗುಹೆಗಳ ಆಳದಲ್ಲಿ, ‘ನಿನ್ನ ಬೆಳಕು ನೀನೇ, ನಿನಗೆ ನೀನೇ ಬೆಳಕು’ ಎಂಬ ಅರಿವಿನ ಬೆಳಕು ಬೀರುತ್ತ ತನ್ನಷ್ಟಕ್ಕೆ ತಾನಿದ್ದ.

ಬೌದ್ಧಗ್ರಂಥಗಳು ರಚನೆಯಾಗುವ ಪೂರ್ವದಲ್ಲೆ ಈ ಗುಹೆಗಳು ರೂಪುಗೊಳ್ಳಲು ಶುರುವಾಗಿದ್ದವು. ಅನುಯಾಯಿಗಳು ಒಂದೆಡೆ ಸೇರಿ ಧಾರ್ಮಿಕ ಆಚರಣೆ ಕೈಗೊಳ್ಳಲು ರಚಿಸಲಾದ ಏಷಿಯಾದ ಮೊದಲ ರಚನೆಗಳು ಅವು. ಅಜಂತಾ ಗುಹೆಗಳು ರೂಪುಗೊಳ್ಳುವ ಹೊತ್ತಿಗೆ ಭಿಕ್ಷುಗಳು ಸಂಪೂರ್ಣ ಅಲೆಮಾರಿತನ ತೊರೆದು ಸಾಂಸ್ಥಿಕಗೊಳಲು, ಸ್ಥಾವರಗೊಳಲು ಶುರು ಮಾಡಿದರು. ಇದು ಕ್ರಮೇಣ ಬೌದ್ಧ ಧರ್ಮಾಚರಣೆಯ ಪಲ್ಲಟಗಳಿಗೂ ಕಾರಣವಾಯಿತು.

ಯಾರೂ ನೋಡದ ಮಧ್ಯಭಾರತದ ಮೂಲೆಯಲ್ಲಿ ಇಂಥ ಅಪೂರ್ವ ಚಿತ್ರ-ಶಿಲ್ಪಗಳು ಸಾವಿರಾರು ವರ್ಷಗಳ ಕೆಳಗೆ ಏಕೆ ರೂಪುಗೊಂಡವೆಂದು ಈಗ ಆ ಜಾಗದಲ್ಲಿ ನಿಂತವರಿಗೆ ಅನಿಸಿಬಿಡುತ್ತದೆ. ಆದರೆ ಅದು ಮೂಲೆಯಲ್ಲ, ಅತ್ಯಂತ ಆಯಕಟ್ಟಿನ ಜಾಗವಾಗಿತ್ತು ಎನ್ನುವುದು ಮೊದಲ ಸಹಸ್ರಮಾನದ ಚರಿತ್ರೆ ಬಲ್ಲವರಿಗೆ ತಿಳಿದಿರುತ್ತದೆ. ಮೊದಲ ಸಹಸ್ರಮಾನದ ಆದಿಭಾಗ ಅಂತಾರಾಷ್ಟ್ರೀಯ ವ್ಯಾಪಾರ-ವ್ಯವಹಾರದ ಉಚ್ಛ್ರಾಯ ಕಾಲ. ಆಗ ಕಾಂಭೋಜ (ಆಫ್ಘನಿಸ್ತಾನ)-ದ್ವಾರಾವತಿ(ಗುಜರಾತ್) ನಡುವೆ ಬಿರುಸಿನ ವಹಿವಾಟು ನಡೆಯುತ್ತಿತ್ತು. ಎಬೊನಿ, ತೇಗ, ಗಂಧ, ದಂತ, ದಾಲ್ಚಿನ್ನಿ, ಕರಿಮೆಣಸು, ರೇಶಿಮೆ ಹೊತ್ತು ಕ್ಯಾರವಾನುಗಳು ಈ ಗುಹೆಗಳಿರುವ ದಾರಿಯಲ್ಲೇ ಕರಾವಳಿಯತ್ತ ಸಾಗುತ್ತಿದ್ದವು. ಜ್ಯೂ ಮತ್ತು ಗ್ರೀಕ್ ದಲ್ಲಾಳಿಗಳು ಇಲ್ಲೆಲ್ಲ ತಿರುಗಿ ವಸ್ತುಗಳನ್ನು ಪಡೆಯುತ್ತ, ಕಾಂಭೋಜ, ಕೆಂಪು ಸಮುದ್ರ, ರೋಮಿನತ್ತ ಅವನ್ನು ಕೊಂಡೊಯ್ಯುತ್ತಿದ್ದರು.

ಕಾಲ ಮಹಿಮೆ. ಅಷ್ಟು ಪ್ರಸಿದ್ಧವಾದದ್ದು, ಕೇಂದ್ರವಾದದ್ದು ಕೊನೆಗೆ ಅಂಚಿಗೆ ಸರಿದಿತ್ತು. ಮತ್ತವು ಬೆಳಕಿಗೆ ಬಂದದ್ದು ಆಧುನಿಕ ಆಕಸ್ಮಿಕಗಳಲ್ಲೊಂದು ಎಂದೇ ಹೇಳಬೇಕು.

೧೮೧೯ರಲ್ಲಿ ಬ್ರಿಟಿಷ್ ಸೇನಾಧಿಕಾರಿ ಜಾನ್ ಸ್ಮಿತ್ ಹುಲಿ ಬೇಟೆಗೆ ಹೊರಟ. ಔರಂಗಾಬಾದಿನ ಆಸುಪಾಸು ಹುಲಿಗಳ ಜಾಡನರಸುತ್ತ ವಾಘೋರಾ ನದಿ ತಿರುವಿನ ಕಣಿವೆ ಹೊಕ್ಕ. ದೂರದ ಬೆಟ್ಟಗಳ ಪಾರ್ಶ್ವದಲ್ಲಿ ತೂತುಕಂಡಿಗಳ ಕಂಡಂತಾಯಿತು. ಕುರಿಗಾಹಿ ಹುಡುಗನೊಬ್ಬನೊಡನೆ ಸಮೀಪದವರೆಗು ಹೋಗಿ ನೋಡಿದ. ಅವು ಅತಿ ಪುರಾತನವಾದ ಮಾನವನಿರ್ಮಿತ ಗುಹೆಗಳ ಬಾಯಿ ಎಂದು ಸ್ಪಷ್ಟವಾಯಿತು. ಹತ್ತಿರದ ಅಜಿಂತಾ ಹಳ್ಳಿಯವರನ್ನು ತಮಟೆ, ಕೊಡಲಿ, ಡೋಲು, ದೊಂದಿಗಳೊಡನೆ ಕರೆದೊಯ್ದು ಹುಲ್ಲಿಗೆ ಬೆಂಕಿ ಹಚ್ಚಿ ಉರಿಸಿ ಒಳಗೆಲ್ಲ ನೋಡಿದ. ಅವನು ಪ್ರವೇಶಿಸಿದ ಮೊದಲ ಗುಹೆ - ಇವತ್ತು ಅದಕ್ಕೆ ೧೦ನೇ ನಂ. ಗುಹೆ ಎಂದು ಹೆಸರಿಡಲಾಗಿದೆ - ಕಸಕಡ್ಡಿ ಮುಳ್ಳುಕಂಟಿಯಿಂದ ತುಂಬಿ ಹೋಗಿತ್ತು. ಗುಹೆಯ ನೆಲದಿಂದ ಐದಡಿ ಎತ್ತರ ಕಸರಾಶಿ ಬಿದ್ದಿತ್ತು. ಅದರ ಮೇಲೆ ನಿಂತು ಒಂದು ಬೋಧಿಸತ್ವನ ಚಿತ್ರದ ಮೇಲೆ ತನ್ನ ಹೆಸರು, ಅವತ್ತಿನ ದಿನಾಂಕ ಕೆತ್ತಿ ಬಂದ.

ಅಲ್ಲಿಂದಾಚೆ ಅಜಿಂತಾ ಹಳ್ಳಿ ಬಳಿಯಿದ್ದ ‘ಅಜಂತಾ ಗುಹೆಗಳು’ ವಿಶ್ವದ ಗಮನ ಸೆಳೆದವು.



ಅಲೆಮಾರಿಗಳ ನೆಲೆ ಅಜಂತಾ

‘ನೀನೇ ಮಾರ್ಗವಾಗದೆ ನೀನು ಆ ಮಾರ್ಗದಲ್ಲಿ ಕ್ರಮಿಸಲಾರೆ’ ಎಂದ ಬುದ್ಧ ಅಲೆಮಾರಿ ಚಿಂತಕನಾಗಿದ್ದ. ಬದುಕಿಡೀ ಅಲೆಮಾರಿಯಾಗೇ ಬಾಳಿದ. ಆದರೆ ಮಳೆಗಾಲದಲ್ಲಿ ಎತ್ತರದ ಸ್ಥಳದಲ್ಲಿ, ಹುಲ್ಲುಸೂರಿನ ತಾವುಗಳಲ್ಲಿ ನೆಲೆಗೊಳಲು ಭಿಕ್ಕುಗಳಿಗೆ ಅವಕಾಶ ನೀಡಿದ್ದ. ಪರ್ವತ ಪ್ರದೇಶಗಳಲ್ಲಿ ವಾಸಿಸುವ, ಅರಣ್ಯವಾಸಿ ಭಿಕ್ಕುಗಳು ಗುಹೆಗಳಲ್ಲಿ ಇರಬಹುದೆಂದೂ ಸೂಚಿಸಿದ್ದ. ಏಕಾಂತ ಎಲ್ಲರೂ ಅನುಭವಿಸಲೇಬೇಕಾದ ಸ್ಥಿತಿಯಾಗಿತ್ತು. ಅಂತಹ ನೆಲೆಗಳಲ್ಲೆ ಮೊದಲ ಬೌದ್ಧಮಠಗಳು ರೂಪುಗೊಂಡವು.

ಭಿಕ್ಕುಗಳು ಮಳೆಗಾಲದಲ್ಲಿ, ಏಕಾಂತವಾಸದಲ್ಲಿ ವಾಸಿಸುವ ತಾಣವಾಗಿದ್ದ ಅಜಂತಾ ಬೌದ್ಧ ಮಠವಾಗಿತ್ತು. ಅಲ್ಲಿ ಒಟ್ಟು ೩೦ ಗುಹೆಗಳಿದ್ದು ಗೋಡೆ, ಕಂಬಗಳ ಮೇಲಿರುವ ಪಾಲಿ, ಸಂಸ್ಕೃತದ ಬರಹ-ಶಾಸನಗಳು ಅವುಗಳ ಕಾಲ, ಉದ್ದೇಶ ಎರಡನ್ನೂ ತಿಳಿಸುತ್ತವೆ. ಅವು ಎರಡು ಕಾಲಮಾನಗಳಲ್ಲಿ ಕೆತ್ತಲ್ಪಟ್ಟಿವೆ. ಬುದ್ಧ ಮರಣಿಸಿದ ೨೦೦ ವರ್ಷಗಳ ನಂತರ ಅಂದರೆ ಕ್ರಿ.ಪೂ. ೨ನೇ ಶತಮಾನದಿಂದ ಕ್ರಿಶ ೧ನೇ ಶತಮಾನದ ನಡುವಿನ ಅವಧಿಯಲ್ಲಿ ಮೊದಲ ಐದು ಗುಹೆಗಳು ರೂಪುಗೊಂಡರೆ, ಉಳಿದವು ಕ್ರಿ.ಶ. ೫ನೇ ಶತಮಾನದಲ್ಲಿ ರೂಪುಗೊಂಡಿವೆ. ಪ್ರತಿ ಗುಹೆಯಲ್ಲೂ ಚಿತ್ರಗಳು, ಶಿಲ್ಪಗಳು ಸಮೃದ್ಧವಾಗಿವೆ. ಅವನ್ನೆಲ್ಲ ಕೇವಲ ಇಪ್ಪತ್ತು ವರ್ಷಗಳಲ್ಲಿ ರೂಪಿಸಲಾಗಿದೆ.

  • ಅಶೋಕನ ಕಾಲಾನಂತರ, ಮೌರ್ಯ ಸಾಮ್ರಾಜ್ಯ ಪತನಾನಂತರ ಶಾತವಾಹನರ ಕಾಲದಲ್ಲಿ ಅಜಂತಾದ ಮೊದಲ ಐದು ಗುಹೆಗಳು (ಸಂಖ್ಯೆ ೯, ೧೦, ೧೨, ೧೩, ೧೫ಎ) ರಚನೆಯಾದವು. ಅವು ಹೀನಾಯಾನ ಪಂಥದವು. ಅದರಲ್ಲಿ ೯ ಮತ್ತು ೧೦ನೇ ಸಂಖ್ಯೆಯ ಗುಹೆಗಳು ಪ್ಯಾರಾಬೋಲಾ (ಕೆಥೆಡ್ರಲ್) ಆಕಾರದ ಹೀನಾಯಾನ ಪೂಜಾ ಸ್ಥಳಗಳು (ಚೈತ್ಯಗೃಹ). ಪೂಜಾರ್ಹವಾಗಿ ಬುದ್ಧನ ಮೂರ್ತಿಯ ಬದಲು ಬೃಹತ್ ಸ್ತೂಪ ಆಕೃತಿಗಳಿವೆ. ಅಲಂಕಾರಿಕ ಕೆತ್ತನೆ, ಕಮಾನು, ಪ್ರವೇಶ ದ್ವಾರ ಹೊಂದಿವೆ. ಉಳಿದ ಮೂರು ಗುಹೆಗಳು ಬೌದ್ಧ ಸನ್ಯಾಸಿಗಳು ತಂಗುವ, ಪ್ರಾರ್ಥಿಸುವ ವಿಹಾರಗಳಾಗಿದ್ದು ಹಜಾರಗಳಲ್ಲಿ ಬುದ್ಧ, ದೇವಾನುದೇವತೆಗಳು, ಯಕ್ಷಯಕ್ಷಿಯರು, ನಾಗರ ಮೂರ್ತಿಗಳಿವೆ. ಹಜಾರದ ಆಚೀಚೆ ಭಿಕ್ಕುಗಳು ತಂಗುತ್ತಿದ್ದ ಕೋಣೆಗಳಿವೆ. ಕೆಲವು ಗುಹೆಗಳು ಒಂದಕ್ಕಿಂತ ಹೆಚ್ಚು ಮಹಡಿಯವಾಗಿವೆ. 







  • ಎರಡನೆಯ ಕಾಲಮಾನದ ಗುಹೆಗಳು ಮಹಾಯಾನ ಬೌದ್ಧ ಗುಹೆಗಳು. ಹ್ಯೂಯೆನ್ ತ್ಸಾಂಗ್ ಭೇಟಿಯಿತ್ತಾಗ ಗಮನಿಸಿರುವಂತೆ, ಬೌದ್ಧ ತಜ್ಞರು ಒಪ್ಪುವಂತೆ ಮಹಾಯಾನವು ದಕ್ಷಿಣ ಭಾರತದಲ್ಲಿ, ಅದರಲ್ಲೂ ನಾಗಾರ್ಜುನ, ಧಿಗ್‌ನಾಗ, ಚಂದ್ರಕೀರ್ತಿ, ಆರ್ಯದೇವ, ಭವವಿವೇಕ ಮೊದಲಾದವರು ಇದ್ದ ಆಂಧ್ರದಲ್ಲಿ ರೂಪುಗೊಂಡಿತು. ಅವರೆಲ್ಲ ಬೌದ್ಧ ಸಮಾಜದಲ್ಲಿ ಬದುಕುತ್ತಲೇ ತಮ್ಮ ಅನುಭವಗಳ ಹರಳುಗಟ್ಟಿಸಿಕೊಂಡು ಮಹಾಯಾನವೆಂಬ ಹೊಸಪಂಥ ಶುರುಮಾಡಿದರು. ಈ ಗುಹೆಗಳು ಆ ಪ್ರದೇಶವನ್ನು ಆಳುತ್ತಿದ್ದ ಹಿಂದೂ ದೊರೆ ವಾಕಟಕ ವಂಶದ ಹರಿಸೇನ (ಕ್ರಿ.ಶ. ೪೭೫-೫೦೦)ನ ಕಾಲದಲ್ಲಿ ರೂಪುಗೊಂಡವು. ಅದರಲ್ಲಿ ಕೆಲವು ಚೈತ್ಯಗೃಹಗಳು, ಉಳಿದವು ವಿಹಾರಗಳು. ಮಹಾಯಾನ ಚೈತ್ಯಗಳ ಒಳಗೆ ಕುಳಿತ, ನಿಂತ, ವಿವಿಧ ಮುದ್ರೆಗಳ ಬುದ್ಧ ಮೂರ್ತಿಗಳಿವೆ. 




  • ಹರಿಸೇನನ ಸಾವಿನೊಂದಿಗೆ ಗುಹಾನಿರ್ಮಾಣ ಸ್ಥಗಿತಗೊಂಡರೂ ಅವನ ನಂತರ ಬಂದ ಅಸ್ಮಾಕರು ಕೆಲಕಾಲ ಕೆಲಸ ಮುಂದುವರೆಸಿದರು. ಆದರೆ ಆರೇಳನೇ ಶತಮಾನದ ವೇಳೆಗೆ ಬೌದ್ಧಧರ್ಮದ ಹಾಗೂ ಗುಹೆಗಳ ಜನಪ್ರಿಯತೆ, ಜನಬಳಕೆ ಕುಸಿಯತೊಡಗಿತು. ಆದರೂ ಸ್ಥಳೀಯರಿಗೆ ಈ ಗುಹೆಗಳ ಬಗೆಗೆ ತಿಳಿದಿತ್ತು. ೪ನೇ ಶತಮಾನದಲ್ಲಿ ಭಾರತಕ್ಕೆ ಬಂದ ಫಾಹೀನ್, ೭ನೇ ಶತಮಾನದಲ್ಲಿ ಬಂದ ಹ್ಯೂಯೆನ್ ತ್ಸಾಂಗ್, ೧೭ನೇ ಶತಮಾನದಲ್ಲಿ ಐನ್-ಎ-ಅಕ್ಬರಿ ಬರೆದ ಅಬು ಫಜಲ್ ಇವರೆಲ್ಲ ಈ ಗುಹಾದೇವಾಲಯಗಳ ಕುರಿತು ಉಲ್ಲೇಖಿಸಿದ್ದಾರೆ. ಅದು ಅಲೆಮಾರಿ ಭಿಕ್ಕುಗಳ ತಂಗುದಾಣವಾಗಿತ್ತೆಂದು ಹೇಳಿದ್ದಾರೆ.


ಗುಹಾ ಕಾರಣ - ‘ಸೂರ್ಯಚಂದ್ರರಿರುವವರೆಗೆ..’

ಕುದುರೆ ಲಾಳಾಕಾರದ ನದೀ ತಿರುವಿನ ಬೆಟ್ಟದ ಬಂಡೆಗಳಲ್ಲಿ ಕೊರೆದ ತೂತುಗಳಂತೆ ಗುಹೆಗಳು ಕಾಣುತ್ತವೆ. ಒಳಹೊಕ್ಕರೆ ಪುರಾತನ ಕಾಲದಲ್ಲಿ ಸಂಚರಿಸಿ ಬಂದ ಅನುಭವವಾಗುತ್ತದೆ. ಅಲ್ಲಿ ನೋಡಿದ್ದನ್ನು ಅರಗಿಸಿಕೊಳ್ಳಲು, ಒಳಗಿಳಿಸಿಕೊಳ್ಳಲು ಸಮಯ ಬೇಕು. ಏಕೆಂದರೆ ಅಜಂತಾದ ಪ್ರತಿ ಗುಹೆಯೂ ಭಿನ್ನವಾಗಿದೆ, ಸಮೃದ್ಧವಾಗಿದೆ. ಕಮಾನು, ಕಂಭ, ಮೂರ್ತಿ, ಕಿಟಕಿ, ಶಿಲ್ಪಗಳನ್ನೆಲ್ಲ ಬಂಡೆಗಲ್ಲನ್ನು ಬೆಣ್ಣೆಯೇನೋ ಎನ್ನುವಂತೆ ಸಲೀಸಾಗಿ ಎಬ್ಬಿಸಿ ಕೊರೆದು ರೂಪಿಸಿದಂತೆ ಕಾಣುತ್ತವೆ. ಕಲ್ಲುಕುಟಿಗರ ರಚನಾ ಕೌಶಲ್ಯ ಗುಹೆಗಳ ಆಕಾರ, ರಚನೆಯಲ್ಲಿ ಎದ್ದು ಕಾಣುತ್ತದೆ. ಗುಹೆಗಳ ಗೋಡೆ ಸೂರು ಸ್ಥಂಭಗಳ ಮೇಲೆಲ್ಲ ವರ್ಣಚಿತ್ರಗಳಿವೆ. ಚಿತ್ರಗಳಲ್ಲಿ ಮೈದಳೆದ ಜನರ ಮುಖಚಹರೆ, ಸಮೃದ್ಧ ಆಭರಣ, ಕೇಶ-ವಸ್ತ್ರವಿನ್ಯಾಸ, ವಾದ್ಯ, ಚಟುವಟಿಕೆಗಳು ಆ ಕಾಲದ ಜನಜೀವನವನ್ನು ನೈಜವಾಗಿ ಕಣ್ಣೆದುರು ತಂದು ನಿಲಿಸುತ್ತ ಆ ಕಾಲಮಾನದ ಅಮೂಲ್ಯ ಮಾಹಿತಿಗಳನ್ನೊದಗಿಸುತ್ತವೆ.

ಅಜಂತಾ ಗುಹೆಗಳ ಗೋಡೆ-ಸ್ಥಂಭಗಳ ಮೇಲಿರುವ ಬರಹ-ಶಾಸನಗಳು ಹೇಳುವಂತೆ ಬಹಳಷ್ಟು ದಾನಿಗಳು ಸಿರಿವಂತ ಭಿಕ್ಕುಗಳು ಮತ್ತವರ ರಕ್ತಸಂಬಂಧಿಗಳೇ ಆಗಿದ್ದರು. ೧೦ನೇ ಗುಹೆಗೆ ಧರ್ಮದೇವ, ಬುದ್ಧಿನಾಗ, ಸಿಖಾಭದ್ರ ಇತ್ಯಾದಿ ಸಣ್ಣ ಮೊತ್ತದ ದಾನ ನೀಡಿದ ಹಲವು ಭಿಕ್ಕುಗಳಿದ್ದಾರೆ. ಆ ಕಾಲದ ಭಿಕ್ಕುಗಳು ಭಿಕ್ಷಾಪಾತ್ರೆ ಹಿಡಿದು ಬೇಡುವ ಸರ್ವಸಂಗ ಪರಿತ್ಯಾಗಿಗಳಷ್ಟೇ ಆಗಿರದೆ ವಣಿಕರು, ವ್ಯಾಪಾರಿಗಳು, ಟಂಕಸಾಲೆ ನಡೆಸುವವರೂ ಇದ್ದರು. ಅವರು ಸಂಸಾರಿಗಳಂತೆ ಬದುಕಿದರು. ಸಾಲ ಕೊಡುತ್ತಿದ್ದರು. ಉತ್ತರಾಧಿಕಾರ, ಆಸ್ತಿವ್ಯಾಜ್ಯ, ಔಷಧಿ, ಕಾಮಕಲೆಗಳ ಕುರಿತು ಬರೆದರು, ಬರೆಸಿದರು. ಜನರೊಡನೆ ಜನಮಿತ್ರರಾಗಿ ಬದುಕಿದರು.

ಪ್ರತಿ ಗುಹೆಗೂ ಒಬ್ಬ ದೊಡ್ಡ ದಾನಿಯಿದ್ದ. ಮಧ್ಯಮವರ್ಗದ ವ್ಯಾಪಾರಿಗಳು ಮತ್ತು ದಲ್ಲಾಳಿಗಳು ಮೊದಲ ಕಾಲದ ಗುಹೆಗಳ ದಾನಿಗಳಾಗಿದ್ದರು. ಕೆಲ ಗುಹೆಗಳು ಯವನ(ಗ್ರೀಕ್)ರಿಂದ ದಾನ ಪಡೆದು ರೂಪುಗೊಂಡವು. ಹೀಗೆಂದೇ ಅಜಂತಾ ಗುಹಾಚಿತ್ರಗಳಲ್ಲಿ ವಿವಿಧ ಸಂಸ್ಕೃತಿಯ ಜನ ಕಾಣುತ್ತಾರೆ. ಚರ್ಮದ ಬಣ್ಣ, ಒಡವೆ, ಕೇಶಶೈಲಿ, ಮುಖಚಹರೆಗಳಲ್ಲಿ ವಿಭಿನ್ನ ಜನಾಂಗಗಳನ್ನು ಗುರ್ತಿಸಬಹುದು. ಚಿತ್ರಗಳಲ್ಲಿ ಬಳಸಿದ ನೀಲಿ ಬಣ್ಣವೂ ಸ್ಥಳೀಯವಾದದ್ದಲ್ಲ. ಅದು ಪರ್ಷಿಯ, ಆಫ್ಘನಿಸ್ತಾನಗಳಲ್ಲಿ ಸಿಗುವ ಗಾಢ ನೀಲಿ ಬೆಣಚುಕಲ್ಲಿನ ಪುಡಿ ಲೇಪಿಸ್ ಲಜುಲಿಯಿಂದ ಮಾಡಿದ ಬಣ್ಣ. ಇವೆಲ್ಲ ಆ ಪ್ರದೇಶಕ್ಕಿದ್ದ ವಿದೇಶಿ ಸಂಪರ್ಕವನ್ನು ದೃಢಪಡಿಸುತ್ತವೆ.

ಒಂದನೇ ಗುಹೆಗೆ ರಾಜನೇ ದಾನಿ. ಅದು ರಾಜವೈಭವದ್ದಾಗಿದೆ. ಚಿತ್ರಗಳಲ್ಲಿ ಮೂಡಿರುವ ಜಾತಕ ಕತೆಗಳು ಬುದ್ಧನು ರಾಜನಾಗಿ ಆಳಿದವುಗಳೇ ಆಗಿವೆ. ಆ ಗುಹೆಯಲ್ಲಿ ಆಳೆತ್ತರದ ಪದ್ಮಪಾಣಿ, ವಜ್ರಪಾಣಿ ಅವರ ಚಿತ್ರಗಳಿವೆ. ಗುಹೆಯ ಸೂರು, ಆಚೀಚಿನ ಗೋಡೆಗಳು ವರ್ಣಚಿತ್ರಗಳಿಂದ ತುಂಬಿವೆ.

ಎರಡನೆಯ ಗುಹೆ ಮಹಿಳೆಯೊಬ್ಬಳ ದತ್ತಿಯಿಂದ, ಅದರಲ್ಲೂ ಹರಿಸೇನನಿಗೆ ಹತ್ತಿರವಿದ್ದ ಮಹಿಳೆಯಿಂದ ತಯಾರಾಗಿರಬೇಕೆಂದು ಊಹಿಸಲಾಗಿದೆ. ಅದು ಹೆಚ್ಚು ಹೆಣ್ಣು ಚಿತ್ರಗಳಿಂದ, ಸ್ಥಿತಿವಂತ ಜನರ ಚಿತ್ರಗಳಿಂದ ತುಂಬಿದೆ. ಜಾತಕ ಕತೆಗಳೂ ಹೆಣ್ಣುಮಕ್ಕಳವೇ ಆಗಿವೆ. ಸಂತಾನ ದೇವತೆ ಹರೀತಿಯ ಶಿಲ್ಪವಿದೆ. ಮಕ್ಕಳು ಶಾಲೆಯಲ್ಲಿ ಕೂತಿರುವ ಒಂದು ಚಿತ್ರವಿದ್ದು ಮುಂದಿರುವವರು ಪಾಠ ಕೇಳುತ್ತಿದ್ದರೆ ಹಿಂದಿರುವವರು ಕೀಟಲೆ, ಚೇಷ್ಟೆ ಮಾಡುತ್ತಿದ್ದಾರೆ. ನೆಲಹಾಸು ಬಿಟ್ಟರೆ ಇಡೀ ಆವರಣ ಚಿತ್ರಗಳಿಂದ ತುಂಬಿದೆ.




ಉಳಿದಂತೆ ಚೈತ್ಯಗೃಹಗಳೂ, ಬುದ್ಧ ಮುದ್ರೆಗಳೂ, ಸಾಲುಸಾಲು ಬೃಹತ್ ಬುದ್ಧ ಶಿಲ್ಪಗಳೂ ಗುಹೆಯೊಳಹೊಕ್ಕವರ ಕಣ್ಣು ಮನಸು ತುಂಬಿಕೊಳ್ಳುತ್ತವೆ. ಎಲ್ಲಕ್ಕಿಂತ ಮನಸೂರೆಗೊಳ್ಳುವುದು ಕೊನೆಯ ಗುಹೆಯ ಮಲಗಿದ ಬುದ್ಧ. ೨೪ ಅಡಿ ಉದ್ದದ ಮಹಾಪರಿನಿರ್ವಾಣ ಸ್ಥಿತಿಯ ಬುದ್ಧಶಿಲ್ಪ ಗುಹೆಯ ಎಡಭಾಗದ ಇಡೀ ಗೋಡೆಯನ್ನಾವರಿಸಿದೆ. ಇಷ್ಟು ತಣ್ಣಗೆ ಸಾವನ್ನು ಎದುರುಗೊಳಬಹುದೆ ಎಂದು ಅಚ್ಚರಿಪಡುವಂತೆ ಬುದ್ಧ ಚಹರೆಯಿದೆ. ತನ್ನ ಕೊನೆಗಾಲವನ್ನು ಮಂದಸ್ಮಿತದೊಡನೆ ಎದುರುಗೊಳುವ ಬುದ್ಧ ಶಾಂತ, ನಿರುದ್ವಿಗ್ನ, ಸಮಚಿತ್ತದ ಮುಖಭಾವ ಹೊಂದಿದ್ದಾನೆ. ಶಿಲ್ಪದ ಕೆಳಭಾಗದಲ್ಲಿ ಶೋಕಿಸುವ ಭೂಮಿಯ ಜನರಿದ್ದಾರೆ. ಮೇಲ್ಭಾಗದಲ್ಲಿ ಅವನ ಆಗಮನ ಎದುರು ನೋಡುತ್ತ ಹರ್ಷಿಸುತ್ತಿರುವ ಆಕಾಶವಾಸಿಗಳಿದ್ದಾರೆ.

ಈ ಗುಹೆಗಳಿಗೆ ಹರಿಸೇನನ ಮರಣಾನಂತರ ನೂರಾರು ಹೊಸ ಚಿತ್ರಗಳು ಸೇರಿವೆ. ದೇವಾಲಯಗಳ ನಡುವೆ ಮರಿದೇವಳಗಳು, ಗೋಪುರಗಳು ತಲೆಯೆತ್ತಿವೆ. ಪುಣ್ಯಾರ್ಜನೆಯ ಆಸೆಯಿಂದ ದುಡ್ಡಿದ್ದ ಹಲವರು ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿ ಹೆಸರು ಕೆತ್ತಿಸಿಕೊಂಡಿದ್ದಾರೆ. ೧೦ ನೇ ಗುಹೆ ಒಂದರಲ್ಲೇ ಹಾಗೆ ಸೇರಿಸಲ್ಪಟ್ಟ ೩೦೦ಕ್ಕಿಂತ ಹೆಚ್ಚು ಚಿತ್ರಗಳಿವೆ. ಅವುಗಳನ್ನು ಬರೆಸಿದವರ ಕುರಿತ ಶಾಸನ ಮಾಹಿತಿಗಳಿವೆ.

ಸಿಖಾಭದ್ರ ಎಂಬಾತ ‘ತನ್ನ ತಾಯಿ ಮತ್ತು ಸೋದರನ ಗೌರವಾರ್ಥ’ ಈ ಕಾರ್ಯದಲ್ಲಿ ಭಾಗಿಯಾದೆನೆಂದು ಹೇಳಿದ್ದಾನೆ. ಒಂದು ಸ್ತಂಭದ ಮೇಲೆ, ‘ಗುರು ಸಚ್ಚಿವ ಅವರಿಗೆ ಈ ಅಮೂಲ್ಯ ಕೊಡುಗೆ. ಇದರ ಪುಣ್ಯವು ಸರ್ವಜನಹಿತಕ್ಕೆ ವಿನಿಯೋಗವಾಗಲಿ’ ಎಂದು ಬರೆದಿದೆ. ೨೬ನೇ ಗುಹೆಯ ದಾನಿ ಬುದ್ಧಭದ್ರ ಎಂಬ ಸನ್ಯಾಸಿ. ಆತ ಸಿರಿವಂತ. ಅವ ತನ್ನನ್ನು ‘ರಾಜಸ್ನೇಹಿ’ ಎಂದು ವರ್ಣಿಸಿಕೊಂಡಿದ್ದಾನೆ. ಮತ್ತೆ ಕೆಲ ಶಾಸನಗಳು ಹೀಗಿವೆ:

  • ‘ಈ ಚೈತ್ಯವು ಒಂದು ಕಲ್ಪದವರೆಗೆ ಬಾಳುತ್ತದೆ’ (ಸ್ತಂಭದ ಮೇಲಿನ ಬರಹ)
  • ‘ಜನನ, ತಾರುಣ್ಯ, ಸುಖಸಂಪತ್ತುಗಳೆಲ್ಲ ಕ್ಷಣಿಕ ಎಂದು ತಿಳಿದು ಸಜ್ಜನ ಸಂತಸನ್ಯಾಸಿಗಳಿಗಾಗಿ ಹರಿಸೇನನ ಮಂತ್ರಿ ವರಾಹದೇವ ಇದನ್ನು ಕಟ್ಟಿಸಿದ. ಇದು ಇಂದ್ರನ ಅಮರಾವತಿಯಂತಿದೆ. ಒಂದೇಒಂದು ಕುಂದಿಲ್ಲದ ಈ ಗುಹೆ ಇಂದ್ರನ ಮಕುಟಮಣಿಯಾಗಿ ಆಚಂದ್ರಾರ್ಕವಾಗಿ ಬೆಳಗಲಿ ಎಂದು ಹಾರೈಸಲಾಗಿದೆ.’
  • ‘ಇಲ್ಲಿ ಅರ್ಪಿಸಿದ ಪ್ರತಿ ಹೂವೂ ಮುಕ್ತಿದಾಯಕವಾಗಿದ್ದು ಸ್ವರ್ಗ, ಮೋಕ್ಷಗಳೆಂಬ ಫಲ ಕೊಡುತ್ತವೆ. ಎಲ್ಲಿಯವರೆಗೆ ಒಬ್ಬ ವ್ಯಕ್ತಿ ಭೂಮಿಯ ಮೇಲಿರುವವರ ನೆನಪಿನಲ್ಲಿ ಹಸಿರಾಗಿರುತ್ತಾನೋ ಅಲ್ಲಿಯವರೆಗೆ ಆತ ಸ್ವರ್ಗದಲ್ಲಿರುತ್ತಾನೆ. ಆದ್ದರಿಂದ ಈ ಬೆಟ್ಟಗಳ ಮೇಲೆ ಸೂರ್ಯಚಂದ್ರರಿರುವ ತನಕ ಉಳಿಯುವ ಸ್ಮಾರಕಗಳ ನಿಲಿಸಲಾಗಿದೆ’


ಪ್ರಾಚೀನ ಭಾರತದ ಆರ್ಟ್ ಗ್ಯಾಲರಿ

ಜೆಸಿಬಿ, ಡ್ರಿಲ್ಲರುಗಳಿರದ ಕಾಲದಲ್ಲಿ, ಹರಿತ ಅಯುಧಗಳೂ ಇರದ ಕಾಲದಲ್ಲಿ ಬೃಹತ್ ಶಿಲಾಬೆಟ್ಟಗಳಲ್ಲಿ ಗುಹೆಗಳನ್ನು ಹೇಗೆ ಕೊರೆದರು? ಸಾವಿರಾರು ವರ್ಷವಾದರೂ ಮಾಸದ ಚಿತ್ರಗಳನ್ನು, ಬಣ್ಣಗಳನ್ನು ಅದು ಹೇಗೆ ತಯಾರಿಸಿದರು? ಇದು ಹಲವರ ಕುತೂಹಲದ ಪ್ರಶ್ನೆಯಾಗಿ ಸುದೀರ್ಘ ವಿಶ್ಲೇಷಣೆಗೆ ಕಾರಣವಾಯಿತು. ಅರೆಬರೆ ಮಾಡಿ ಬಿಟ್ಟ, ಕೆಲಸ ನಿಲಿಸಿದ ಮೂರ್ನಾಲ್ಕು ಗುಹೆಗಳನ್ನು ನೋಡಿದಾಗ ಅಜಂತಾ ಗುಹೆಗಳನ್ನು ಮೇಲಿನಿಂದ ಕೆಳಗೆ ಕೆತ್ತಲಾಗಿದೆ; ಮೊದಲು ಮೇಲೊಂದು ಕಾಲುವೆ ಕೊರೆದು ನಂತರ ಕೆಳಗೆ ಕೊರೆಯುತ್ತ ಹೋಗಲಾಗಿದೆ ಎಂದು ತಿಳಿದುಬಂತು. ಮೇಲಿಂದ ಕೆಳಗೆ ಕೆತ್ತುತ್ತ, ಶಿಲ್ಪಗಳ ಮೂಡಿಸುತ್ತ, ಮುಂಭಾಗಕ್ಕೊಂದು ಭವ್ಯ ಪ್ರವೇಶ ಕೆತ್ತಿ ಬಿಡಿಸುತ್ತ ಕೊನೆಗೆ ಗುಹೆ ಪೂರ್ಣಗೊಂಡಾದಮೇಲೆ ವರ್ಣಚಿತ್ರ ಕಲಾವಿದರು ಚಿತ್ರ ಬಿಡಿಸಿದ್ದಾರೆ.

ಅಜಂತಾದಲ್ಲಿ ಚಿತ್ರಗಳು ಅರಳಿದ ಕಾಲ ಭಾರತೀಯ ಚಿತ್ರಕಲೆಯ ಸುವರ್ಣ ಯುಗ. ಪ್ರಾಚೀನರ ಆರ್ಟ್ ಗ್ಯಾಲರಿಯಂತಿರುವ ಈ ಗುಹಾದೇವಾಲಯಗಳು ಭಾರತೀಯ ಚಿತ್ರ ಕಲಾವಿದರು ಜನಸಮೂಹ ಚಿತ್ರಿಸುವಲ್ಲಿ ಹೊಂದಿದ್ದ ಪರಿಣತಿಯನ್ನು ಎತ್ತಿ ತೋರಿಸುತ್ತವೆ. ಹುಬ್ಬು, ಗಲ್ಲ, ತುಟಿ, ಕಣ್ಣುಗಳಿಗೆ ವಿಶೇಷ ಒತ್ತು ಕೊಟ್ಟು ಬಣ್ಣ ಹಾಕುವ ಮೂಲಕ ಭಾವಭಂಗಿಗಳಿರುವ ಮೂರು ಆಯಾಮಗಳ ಚಿತ್ರ ಬಿಡಿಸಿರುವುದು ವಿಶೇಷವಾಗಿದೆ. ವರ್ಣಚಿತ್ರಗಳು ದೇಹದ ಚೆಲುವನ್ನು ಸಂಭ್ರಮಿಸುತ್ತಿವೆಯೋ ಎನ್ನುವಂತೆ ಇವೆ. ಮೈಕೈ ತುಂಬಿಕೊಂಡ ಗಂಡುಹೆಣ್ಣುಗಳ ಪ್ರೇಮ, ಸಾಂಗತ್ಯ, ಬೇಟೆ, ಸನ್ಯಾಸ, ಯುದ್ಧ, ಕಾಮಚೇಷ್ಟೆಗಳೆಲ್ಲ ಚಿತ್ರಿತಗೊಂಡಿವೆ. ಬುದ್ಧನ ಜೀವನ ವಿವರಗಳು, ಅವನ ಹಿಂದಿನ ಜನ್ಮಗಳ ಜಾತಕ ಕತೆಗಳು ಚಿತ್ರವಾಗಿ, ಶಿಲ್ಪವಾಗಿ ಅರಳಿವೆ. ಆಭರಣಗಳಿದ್ದ ಕಡೆ ಮಣಿಗಳೇ ಕೂರಿಸಲ್ಪಟ್ಟಿವೆ!

ಆಗ ಭಾರತದಲ್ಲಿ ಒಂದಕ್ಕಿಂತ ಹೆಚ್ಚು ಧಾರೆಯ ಕಲಾವಿನ್ಯಾಸ ಚಾಲ್ತಿಯಲ್ಲಿದ್ದಿರಬಹುದು. ಅಜಂತಾ ಗುಹೆಗಳಲ್ಲಿ ದೇಶದೆಲ್ಲೆಡೆಯ ನುರಿತ ಚಿತ್ರ ಕಲಾವಿದರು ಕೆಲಸ ಮಾಡಿದ್ದಾರೆ. ಕೆತ್ತಿದ ಗುಹೆಗಳ ಗೋಡೆ, ಕಂಭ, ಸೂರುಗಳಿಗೆ ಒಂದೇ ಸಲ ಮಣ್ಣುಗಾರೆ-ಸುಣ್ಣಗಾರೆ ಮೆತ್ತಿ, ಒಣಗಿಸಿ, ಚಿತ್ರ ಬರೆವ ಕೆಲಸ ಮಾಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ದೇಶದೆಲ್ಲೆಡೆಯ ನೂರಾರು ಕಲಾವಿದರ ಸೇರಿಸಿ ಎರಡನೆಯ ಹಂತದ ಗುಹೆಗಳ ಚಿತ್ರದ ಕೆಲಸ ಮುಗಿಸಲಾಗಿದೆ.

ಚಿತ್ರಗಳನ್ನು ಒಣಗಾರೆ ಮೇಲೆ ಬರೆಯಲಾಗಿದೆ. ಮಣ್ಣುಗಾರೆ, ಸುಣ್ಣಗಾರೆ, ಜೇಡಿಗಾರೆ ಬಳಸಲಾಗಿದೆ. ನಯಸು ಕಲ್ಲು ಸಿಕ್ಕಲ್ಲಿ ತೆಳು ಗಾರೆ, ಒರಟು ಕಲ್ಲಿರುವಲ್ಲಿ ಕೆಲವು ಇಂಚುಗಳಷ್ಟು ದಪ್ಪದ ಗಾರೆ ಮೆತ್ತಲಾಗಿದೆ. ಮಣ್ಣಿನ ಜೊತೆ ಭತ್ತದ ಹೊಟ್ಟು, ಬೀಜಗಳು, ಗಿಡದ ನಾರುಗಳನ್ನೂ ಸೇರಿಸಲಾಗಿದೆ. ನೀರಿನಲ್ಲಿ ಬಣ್ಣ ಕಲೆಸಿ ಒಣಗಾರೆಯ ಮೇಲೆ ಮೆತ್ತಲಾಗಿದೆ. ಬಣ್ಣ ಕಲೆಸಿದ ಗುಂಡಿಯ ಗುರುತು ಕೆಳಗೆ ನೆಲದ ಮೇಲಿದೆ. ರೆಡ್ ಓಕರ್, ಯೆಲ್ಲೊ ಓಕರ್, ಗ್ರೀನ್ ಅರ್ಥ್, ಲೇಪಿಸ್ ಲಜುಲಿ, ಕಾರ್ಬನ್ ಬ್ಲ್ಯಾಕ್, ಶಂಖದ ಪುಡಿ ಮತ್ತು ಕ್ಯಾವೊಲಿನ್ ಸುಣ್ಣವನ್ನು ಬಣ್ಣಕ್ಕಾಗಿ ಬಳಸಲಾಗಿದೆ. ಚಿತ್ರಗಳ ಹೊರಾವರಣವನ್ನು ಕಾರ್ಬನ್ ಬ್ಲ್ಯಾಕ್ ಅಥವಾ ಕೆಂಪು ಓಕರ್‌ನಲ್ಲಿ ಬಿಡಿಸಿದ್ದು ಗೋಡೆಗೆ ಚಿತ್ರ ಅಂಟಿ ಹಿಡಿಯುವಂತೆ ಮೊಟ್ಟೆಲೋಳೆ ಬಳಸಲಾಗಿದೆ.




‘ಒಂದು ಕಲ್ಪ ಕಾಲ’ ಉಳಿಯುವಂತಹ, ಆಚಂದ್ರಾರ್ಕವಾಗಿ ಬೆಳಗುವಂತಹ ರಚನೆ ನಿರ್ಮಿಸುವ ಹಂಬಲದಿಂದ ಈ ಗುಹೆ, ಚಿತ್ರಗಳು ರೂಪುಗೊಂಡರೂ ಅವು ಮಬ್ಬಾಗಿವೆ, ಕಪ್ಪಾಗಿವೆ, ನಾಶವಾಗಿವೆ. ದೀಪಧೂಪದ ಪೂಜೆಯ ಕಾರಣವಾಗಿ ಹೊಗೆ, ಮಸಿ ಕೂತಿರುವ ಸಾಧ್ಯತೆ ಒಂದಾದರೆ; ಮಣ್ಣುಗಾರೆಯಲ್ಲಿದ್ದ ಬೀಜ-ಹೊಟ್ಟಿನ ಕಾರಣವಾಗಿ ಸಿಲ್ವರ್ ಫಿಶ್‌ನಂತಹ ಕ್ರಿಮಿಕೀಟಗಳು ಸಂದಿಮೂಲೆ ಕೊರೆದು, ಹೆಪ್ಪಳಿಕೆ ಉದುರಿಸಿವೆ. ಗುಹೆಗಳಲ್ಲಿ ಈಗ ಬಾವಲಿಯಿಲ್ಲದಿದ್ದರೂ, ಅವುಗಳ ಮಲಮೂತ್ರ ಸಾಕಷ್ಟು ಹಾನಿ ಮಾಡಿದೆ. ಚಿತ್ರಪ್ರತಿ ಮಾಡುವಾಗ ಉರಿಸಿದ ದೀಪ ಚಿತ್ರಗಳ ಮೇಲೆ  ಹೊಗೆ ಕೂರಿಸಿದೆ. ೧೯೨೦ರ ಹೊತ್ತಿಗೆ ನಿಜಾಮ ಕೈಗೊಂಡ ರಿಪೇರಿ ಕೆಲಸ ಚಿತ್ರಗಳನ್ನು ಮತ್ತಷ್ಟು ಹಾಳು ಮಾಡಿದೆ. ಇಟಾಲಿಯನ್ ತಜ್ಞರ ಸಹಾಯದಿಂದ ಪೋರ್ಟ್‌ಲ್ಯಾಂಡ್ ಲೈಮ್‌ನಿಂದ ಸಂದಿ, ಕಿಂಡಿಗಳ ತುಂಬಲಾಗಿತ್ತು. ಚಿತ್ರಗಳು ಬ್ಲೀಚ್ ಆಗದಿರಲಿ ಎಂದು ಶೆಲ್ಲಾಕ್ ವಾರ್ನಿಶ್ ಬಳಿಯಲಾಗಿತ್ತು. ಆದರೆ ಮರದಿಂದ ಒಸರುವ ರಾಳವಾದ ವಾರ್ನಿಶ್, ಭಾರತದ ಹವಾಮಾನಕ್ಕೆ ಕೆಂಪು ಬಣ್ಣವಾಯಿತು. ಚಿತ್ರಗಳ ಉಸಿರು ಕಟ್ಟಿಸಿ, ಹೆಪ್ಪಳಿಕೆ ಉದುರಿಸಿ, ಮತ್ತಷ್ಟು ಕಂಡಿ ಬಿಟ್ಟಿತು.

ಇಷ್ಟೆಲ್ಲ ನಾಶಗೊಳಿಸುವ ಶಕ್ತಿಗಳ ಎದುರೂ ಅಳಿದುಳಿದ ಚಿತ್ರಗಳು ನೋಡುಗರನ್ನು ಅಪೂರ್ವ ಅನುಭವದೆಡೆಗೆ ಕೊಂಡೊಯ್ಯುತ್ತವೆ.

‘ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ’

ಇವತ್ತು ಅಜಂತಾ ವಿಶ್ವಪರಂಪರೆಯ ತಾಣವಾಗಿರುವುದರ ಹಿಂದೆ, ಸುರಕ್ಷಿತವಾಗಿರುವುದರ ಹಿಂದೆ ಹಲವರ ನಿಸ್ವಾರ್ಥ, ಅವಿರತ ಶ್ರಮವಿದೆ.

ಕಾಡುಪಾಲಾಗಿದ್ದ, ಮರೆತ ಅಜಂತಾ ಗುಹೆಗಳು ಸ್ಮಿತ್ ಕಂಡ ನಂತರ ಒಂದಾದಮೇಲೊಂದು ಪತ್ತೆಯಾದವಷ್ಟೇ. ೧೮೨೨ರಲ್ಲಿ ವಿಲಿಯಂ ಎರ್ಸ್ಕಿನ್ ಗುಹೆಗಳ ಬಗೆಗೆ ವರದಿ ಮಾಡಿದ. ೧೮೨೯ರಲ್ಲಿ ರಾಯಲ್ ಏಷಿಯಾಟಿಕ್ ಸೊಸೈಟಿಯ ‘ಟ್ರಾನ್ಸಾಕ್ಷನ್’ ಪತ್ರಿಕೆಯಲ್ಲಿ ವಿವರ ಪ್ರಕಟವಾಯಿತು. ಕೂಡಲೆ ಎಲ್ಲ ಕಡೆಗಳಿಂದ ಆಸಕ್ತರು ಧಾವಿಸತೊಡಗಿದರು. ಆಗ ಆ ಪ್ರದೇಶ ಹೈದರಾಬಾದ್ ನಿಜಾಮರ ಆಡಳಿತದಲ್ಲಿತ್ತು. ಅಜಂತಾಗೆ ಹೋಗುವ ರಸ್ತೆ ನಿರ್ಮಿಸಿ ಚಿತ್ರಗಳನ್ನು ‘ಸರಿಪಡಿಸುವ’ ಕೆಲಸ ಶುರುವಾಯಿತು. ನಿಜಾಮರು ನೇಮಿಸಿದ ಕಾವಲುಗಾರ ಸಣ್ಣಪುಟ್ಟ ಲಂಚ ಪಡೆದು ನೋಡಲು ಬಂದವರಿಗೆ ಗೋಡೆಗಳಿಂದ ಹೆಪ್ಪಳಿಕೆ ಎಬ್ಬಿಸಿ ಚಿತ್ರಗಳ ಕಿತ್ತು ‘ನೆನಪಿನ ಕಾಣಿಕೆ’ಯಾಗಿ ಕೊಟ್ಟ! ಸಾಕಷ್ಟು ಚಿತ್ರಗಳು ಕಳುವಾದವು. ಹಲವು ಧೂಳಾದವು. ಕೆಲವನ್ನು ಇಡಿಇಡಿಯಾಗಿ ಕಿತ್ತು ಮಾರಾಟ ಮಾಡಲಾಯಿತು.

ಬೆಲೆಕಟ್ಟಲಾಗದ ಅಪೂರ್ವ ಚಿತ್ರಗಳು ನಾಶವಾಗುತ್ತಿರುವುದು ಜೇಮ್ಸ್ ಫರ್ಗ್ಯುಸನ್ ಎಂಬ ಕಲಾ ಚರಿತ್ರೆಕಾರನ ಗಮನಕ್ಕೆ ಬಂತು. ‘ಬೀದಿಯ ಸಾಲು ಮನೆಗಳಿಗೆ ಸಂಖ್ಯೆ ಕೊಡುವಂತೆ’ ಆತ ಗುಹೆಗಳಿಗೆ ಸಂಖ್ಯಾನಾಮ ಕೊಟ್ಟ. ಲೂಟಿಕೋರರು ಕಿತ್ತು, ಗೀರಿ, ಹಾಳು ಮಾಡುವ ಮೊದಲು ಮೂಲಚಿತ್ರಗಳ ಪ್ರತಿ ಮಾಡಬೇಕೆಂದು ರಾಯಲ್ ಏಷಿಯಾಟಿಕ್ ಸೊಸೈಟಿಗೆ ಸಲಹೆ ನೀಡಿದ. ೧೮೪೮ರಲ್ಲಿ ಸೊಸೈಟಿಯು ರಾಯಲ್ ಕೇವ್‌ಟೆಂಪಲ್ ಕಮಿಷನ್ ರಚಿಸಿ, ಮುಂಬೈ ಪ್ರೆಸಿಡೆನ್ಸಿಯ ಎಲ್ಲ ಗುಹೆಗಳ ಸ್ವಚ್ಛಗೊಳಿಸಿ ಅಲ್ಲಿರುವ ಚಿತ್ರ-ಶಿಲ್ಪಗಳ ದಾಖಲಿಸುವಂತೆ ಆದೇಶಿಸಿತು. ಅದೇ ಮುಂದೆ ೧೮೬೧ರಲ್ಲಿ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ಆಯಿತು.

ಸೊಸೈಟಿಯು ಮಿಲಿಟರಿ ಡ್ರಾಫ್ಟ್ಸ್‌ಮನ್ ಆಗಿದ್ದ ಮೇಜರ್ ರಾಬರ್ಟ್ ಗಿಲ್‌ನನ್ನು ೧೮೪೪ರಲ್ಲಿ ಅಜಂತಾ ಚಿತ್ರಗಳ ತದ್ರೂಪು ರಚಿಸಲು ಕಳಿಸಿತು. ಮದ್ರಾಸಿನಲ್ಲಿದ್ದ ರಾಬರ್ಟ್ ಗಿಲ್ ಅಜಂತಾಗೆ ಬಂದಾಗ ತಮ್ಮ ಪದಭಾವಭಂಗಿಗಳಿಂದ, ಭಾವವೈವಿಧ್ಯದಿಂದ ಚಿತ್ರಗಳು ಅವನ ಮನಸೆಳೆದವು. ಮಂತ್ರಮುಗ್ಧನಾದ ಗಿಲ್ ಮೆಟ್ಟಿಲಿರದ ಗುಹೆಗಳ ಬಳಿ ಹೋಗಲು ಹಗ್ಗದ ಏಣಿ ಹತ್ತಿ, ಮೈಕೈ ತರಚಿಕೊಂಡು, ಕಲ್ಲಿನ ಮೇಲೆ ಕೂತು ನೋಡಿದ್ದನ್ನು ಪ್ರತಿ ಮಾಡುತ್ತ ಹೋದ. ಸೆಕೆ, ಹುಲಿ, ಕತ್ತಲು, ಕ್ರಿಮಿಕೀಟಗಳ ನಡುವೆ ಅಪಾರ ಪರಿಶ್ರಮದಿಂದ ಚಿತ್ರಪ್ರತಿ ಮಾಡತೊಡಗಿದ.

ಹೀಗೆ ೨೨ ವರ್ಷ ಕಳೆಯಿತು!

೧೮೫೭ ಬಂತು, ಹೋಯಿತು. ಈಸ್ಟ್ ಇಂಡಿಯಾ ಕಂಪನಿ ಹೋಗಿ ವಿಕ್ಟೋರಿಯಾ ಯುಗ ಬಂದಿತು. ಗಿಲ್ ತನ್ನ ಪಾಡಿಗೆ ತಾನು ಚಿತ್ರ ಬರೆಯುತ್ತ ಹೋದ. ಕೊನೆಗೆ ಅವನ ೨೭ ಕ್ಯಾನ್ವಾಸುಗಳು ೧೮೬೬ರಲ್ಲಿ ಲಂಡನ್ನಿನ ಇಂಡಿಯನ್ ಕೋರ್ಟ್ ಆಫ್ ಕ್ರಿಸ್ಟಲ್ ಪ್ಯಾಲೇಸ್‌ನಲ್ಲಿ ಪ್ರದರ್ಶನಗೊಂಡವು. ದುರಾದೃಷ್ಟವೆಂದರೆ ಚಿತ್ರಪ್ರದರ್ಶನಗೊಂಡ ಕಟ್ಟಡ ಬೆಂಕಿಗೆ ಆಹುತಿಯಾಯಿತು. ಚಿತ್ರಗಳ ಫೋಟೋ ಕೂಡ ತೆಗೆದಿರಲಿಲ್ಲ. ಧೃತಿಗೆಡದ ಗಿಲ್ ಮತ್ತೆ ಅಜಂತಾಗೆ ಹೊಸ ಪರಿಕರಗಳೊಂದಿಗೆ ಬಂದ. ಈ ಬಾರಿ ಬ್ರಷ್ ಜೊತೆಗೆ ಕ್ಯಾಮೆರಾ ಹಿಡಿದು ಬಂದ. ಅಜಂತಾದಲ್ಲಿ ಚಿತ್ರ ಬಿಡಿಸುತ್ತಲೇ ೧೮೭೫ರಲ್ಲಿ ತೀರಿಕೊಂಡ.

೧೮೭೨ರಲ್ಲಿ ಬಾಂಬೆ ಸ್ಕೂಲ್ ಆಫ್ ಆರ್ಟ್ಸ್‌ನ ಪ್ರಿನ್ಸಿಪಾಲ್ ಜಾನ್ ಗ್ರಿಫಿತ್ಸ್ ತನ್ನ ವಿದ್ಯಾರ್ಥಿಗಳೊಂದಿಗೆ ಅಜಂತಾಗೆ ಬಂದ. ಅವನ ತಂಡ ೩೦೦ ಚಿತ್ರಪ್ರತಿಗಳ ತಯಾರಿಸಿತು. ಕೆಲವಂತೂ ಮೂರು ಮೀಟರ್ ಉದ್ದ, ಆರು ಮೀಟರ್ ಅಗಲ ಇದ್ದವು. ಅವನ್ನು ೧೮೮೫ರಲ್ಲಿ ವಿಕ್ಟೋರಿಯಾ ಆಲ್ಬರ್ಟ್ ಮ್ಯೂಸಿಯಮ್ಮಿಗೆ ಕಳಿಸಲಾಯಿತು. ಆದರೆ ಅರ್ಧಕ್ಕರ್ಧ ಚಿತ್ರಗಳು ಬೆಂಕಿಗಾಹುತಿಯಾದವು!

೧೯೦೯ರಲ್ಲಿ ಕ್ರಿಶ್ಚಿಯಾನಾ ಹೆರಿಂಗ್ಹ್ಯಾಮ್ ಕಲ್ಕತ್ತಾ ಸ್ಕೂಲ್ ಆಫ್ ಆರ್ಟ್ಸ್ ಸಹಾಯದಿಂದ ಚಿತ್ರಪ್ರತಿ ಕೆಲಸ ಶುರು ಮಾಡಿದಳು. ಆಕೆ ಅಪೂರ್ಣವಾದ ಅಜಂತಾ ಚಿತ್ರಗಳನ್ನು ತನ್ನದೇ ಶೈಲಿಯಲ್ಲಿ ಪೂರ್ಣಗೊಳಿಸಿದಳು. ೧೯೧೬ರಲ್ಲಿ ರವೀಂದ್ರನಾಥ ಟ್ಯಾಗೋರರಿಗೆ ಕ್ಯಾಲಿಗ್ರಫಿ ಕಲಿಸಲು ಜಪಾನಿನಿಂದ ಕೆಂಪೊ ಅರೈ ಬಂದರು. ಅವರು ತಮ್ಮ ಪರಂಪರೆಯಂತೆ ತೆಳುವಾದ ಟ್ರೇಸಿಂಗ್ ಹಾಳೆಗಳ ಮೇಲೆ ಅಜಂತಾ ಸ್ಕೆಚ್ ಬಿಡಿಸಿಕೊಂಡು ಹೋದರು. ಅಜಂತಾ ಚಿತ್ರಗಳ ಜಪಾನಿ ಪ್ರತಿರೂಪ ಟೋಕಿಯೋದ ಇಂಪೀರಿಯಲ್ ಯೂನಿವರ್ಸಿಟಿ ತಲುಪಿತು. ಆದರೆ ಕ್ಯಾಂಟೊದಲ್ಲಿ ಸಂಭವಿಸಿದ ಭೀಕರ ಭೂಕಂಪದ ವೇಳೆ ಅವೂ ಬೆಂಕಿಗಾಹುತಿಯಾದವು.

ಹೀಗೆ ಬಂದವರು, ಕಂಡವರು ಬಿಡಿಸಿದ್ದೆಲ್ಲ ಬೆಂಕಿ ಪಾಲಾಗುತ್ತಿರುವಾಗ ೧೯೨೦ರಲ್ಲಿ ಭಾರತೀಯ ಕಲಾ ಚರಿತ್ರೆಕಾರ ಗುಲಾಮ್ ಯಜ್ದಾನಿ ಫೋಟೋಗ್ರಫಿಕ್ ಸರ್ವೇ ಮಾಡಿದರು. ಅವು ೧೯೩೦-೫೫ರವರೆಗೆ ನಾಲ್ಕು ಸಂಪುಟಗಳಲ್ಲಿ ಪ್ರಕಟವಾದವು.

‘ನಮ್ಮೋರು ಹೋದ್ರೆ ಒಂದು ತಾಸು, ಹೆಚ್ಚೆಂದ್ರೆ ಎರಡು ತಾಸಲ್ಲಿ ವಾಪಸು ಬರ‍್ತಾರೆ. ಅದೇ ಫಾರಿನರ‍್ಸ್ ಬಂದ್ರೆ ಒಂದೊಂದು ಚಿತ್ರನೂ ದಿನಗಟ್ಲೆ ನೋಡ್ತ ಕೂರ‍್ತಾರೆ. ಇಲ್ಲಿ ಫರ‍್ದಾಪುರ ಅಂತ ಒಂದಿದೆ. ಅಲ್ಲೊಬ್ರು ಅಮೆರಿಕದೋರು ಇದಾರೆ. ನಾ ಹುಟ್ಟಕ್ಕಿಂತ ಮುಂಚಿಂದ ಅವರಿಲ್ಲಿದಾರೆ. ೩೦-೩೫ ವರ್ಷ ಆಯ್ತಂತೆ ಈ ಚಿತ್ರಗುಳ್ನ ನೋಡಕ್ಕೆ ಬಂದು. ಇನ್ನೂ ನೋಡ್ತನೇ ಇದಾರೆ, ಬುಕ್ ಬರಿತನೇ ಇದಾರೆ..’

ಡ್ರೈವರ್ ಈ ಮಾತು ಹೇಳಿದ್ದು ವಾಲ್ಟರ್ ಸ್ಪಿಂಕ್ ಬಗೆಗೆ. ಈಗ ಎಂಭತ್ತು ದಾಟಿರುವ ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದ ಸ್ಪಿಂಕ್ ದೀರ್ಘಕಾಲದಿಂದ ಅಜಂತಾದ ಇಂಚಿಂಚೂ ಪರಿಶೀಲಿಸಿ ವಿಶ್ಲೇಷಿಸುತ್ತಿದ್ದಾರೆ. ಇವತ್ತಿಗೂ ಗುಹೆಗಳಿಗೆ ಭೇಟಿ ಕೊಡುತ್ತ, ಸಂಶೋಧನಾಸಕ್ತರಿಗೆ ವಿವರಿಸುತ್ತಾರೆ. ಏಳು ಸಂಪುಟಗಳಲ್ಲಿ ‘ಅಜಂತಾ - ಹಿಸ್ಟರಿ ಅಂಡ್ ಡೆವಲಪ್‌ಮೆಂಟ್’ ಕುರಿತು ಬರೆದಿದ್ದಾರೆ.

ಆ ತಾವು, ಚಿತ್ರಗಳ ಸೆಳೆತವೇ ಹಾಗಿದೆ..

ಶಿಲೆಯಲ್ಲವೀ ಗುಡಿಯು..


ಹೀನಾಯಾನವು ಮಹಾಯಾನ ಆಗಿ, ಬೌದ್ಧಧರ್ಮವು ಹರಡಿ, ಮೆರೆದು, ಎಲ್ಲವು ಭವ್ಯ ಭಾರತದ ಮಣ್ಣಿಗೆ ಸಂದು ಇನ್ನೇನು ಮರೆತೇಹೋಯಿತು ಎನ್ನುವಾಗ ಮತ್ತೆ ಬುದ್ಧ ಭಾರತದ ಬೆಳಕಾಗಿದ್ದಾನೆ, ‘ಲೈಟ್ ಆಫ್ ಏಷಿಯಾ’ ಆಗಿದ್ದಾನೆ, ಜಗದ ಬೆಳಕೇ ಆಗಿದ್ದಾನೆ. ಅದಕ್ಕೇ ಬುದ್ಧನೆಂಬ ವಿಶ್ವಜೋತಿಯ ಪ್ರಭೆಗೆ ಅಜಂತಾ ಮತ್ತಷ್ಟು ತಾಜಾತನದಿಂದ ನೋಡಿದವರ ಕಣ್ಣುಗಳಲ್ಲಿ, ಮನಸುಗಳಲ್ಲಿ ಬೆಳೆಯುತ್ತಲಿದೆ.

ಸಹಸ್ರಮಾನಗಳಲ್ಲೆಲ್ಲೋ ಒಮ್ಮೆ ಅಂತಹ ದೀಪ ಬೆಳಗುತ್ತದೆ. ಸೂರ್ಯನಂಥ ದೀಪ. ಮತ್ತೆಮತ್ತೆ ತಾನೇ ತಾನಾಗಿ ಹೊತ್ತಿಬೆಳಗುವ ದೀಪ. ಉರಿಯನಲ್ಲ, ಬಿಸಿ ಬೆಳಕ ನೀಡುವ ದೀಪ. ಎಲ್ಲ ಕತ್ತಲ ಗವಿಗಳನ್ನೂ ಹೊಕ್ಕು ಹೊರಟು ಬರುವ ದೀಪ. ಅದರ ಬೆಳಕು ಕತ್ತಲಿಗೂ ಆಶಾಭಾವನೆ ಹುಟ್ಟಿಸಿ ಕತ್ತಲು ಬೆಳಕಿನ ಭೇದ ಅಳಿಸಿಬಿಡುತ್ತದೆ. ಸಮಾಧಿ ಸ್ಥಿತಿಗೆ ಮನಸನ್ನು ತಲುಪಿಸುತ್ತದೆ.

ಹಾಗೆ ಜನಸಾಮಾನ್ಯರಿಗೂ ಜಿಗಿತದ ಭಾವನೆ ಹುಟ್ಟಿಸುವ ತಾಣ ಅಜಂತಾ. ಅದು ತನ್ನ ಇರುವಿಕೆಯಿಂದ, ತಾನಿರುವ ತಾವಿನ ಸೌಂದರ್ಯದಿಂದ ವಿಶಿಷ್ಟ ಲೋಕಕ್ಕೆ ಪ್ರವಾಸಿಯ ಕರೆದೊಯ್ಯಬಲ್ಲ ತಾಣ. ಹಸಿರು ಕಾನನದ ನಡುವೆ ಹಾವಿನಂತೆ ಬಳುಕಿ ಹರಿಯುವ ವಾಘೋರಾ ನದಿಯ ತಿರುವಿನೊಳಗೆ ಇರುವ ಗುಹೆ, ಅದರಲ್ಲಿರುವ ಚಿತ್ರ, ಶಿಲ್ಪ, ಬುದ್ಧ, ಬೋಧಿಸತ್ವ, ಪಶುಪಕ್ಷಿಪ್ರಾಣಿಗಳು, ಯಕ್ಷಗಂಧರ್ವಕಿನ್ನರರು, ಸ್ತಂಭಗಳು, ಸ್ತೂಪಗಳು, ನಾವಾಡುವ ಎಲ್ಲ ಮಾತುಗಳಿಗೂ, ಪ್ರಶ್ನಾರ್ಥಕ ನೋಟಕ್ಕೂ ಶೀತಲ ಮೌನವನ್ನೇ ಹರಿಸುವ ಚಿತ್ರಪಟಗಳು,

‘ಬಾಗಿಲನು ಕೈಮುಗಿದು ಒಳಗೆ ಬಾ ಯಾತ್ರಿಕನೆ/ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು
ಕಂಬನಿಯ ಮಾಲೆಯನು ಹೃದಯ ಬಟ್ಟಲೊಳಿಟ್ಟು/ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ..’

ಎಂದು ಈಗಲೂ ಇನ್ನೂ ಹಾಡುತ್ತಿವೆ. ಪ್ರವಾಸಿಯಾಗಿ ಗದ್ದಲ ಎಬ್ಬಿಸದೆ ಮೌನವಾಗಿ ನಡೆಯುತ್ತ ಕಿವಿಗೊಟ್ಟು ಆಲಿಸಿದಲ್ಲಿ ಆ ಹಾಡು ಕೇಳಿಸುತ್ತದೆ..




Thursday, 13 April 2017

ಓ ಬಾಬಾಸಾಹೇಬಾ , ವಸ್ದೊಂದು ಲೋಕಾ ನಮ್ಗೆ ಬೇಕೇ ಬೇಕು..



ಖೈರ್ಲಾಂಜಿ

ಆಕಾಸ್ದಿಂದ ರಗತ ಬೆಳದಿಂಗ್ಳು ಸುರಿತು
ನೆಲ್ದ ಮಣ್ಣು ಮಾಂಸದ ಮುದ್ದೆ ಹಂಗಾತು
ಅವತ್ ರಾತ್ರಿ ಆಳೆತ್ರದ ನೀಲಿ ಮೂರ್ತಿ ಕಿರುಚಿ
ಆತ್ಮಗೌರವ ಅಂಬದು ಊ..ಂತ ಗೋಳಿಡ್ತು.

ಕಣ್ಣಲ್ಲಿ ರಕ್ತ ಇಲ್ಲದ್ ಈ ದೇಸ್ದಾಗೆ
ಎಷ್ಟ್ ಸುಲಬ ದಲಿತ್ರ ಕೊಚ್ಚಿ ಕೊಂದ್ ಬಿಸಾಡದು?
ದನಕುರಿ ಕಡಿಯೊ ಕೈಗಾದ್ರು ರವಷ್ಟು
ರುದಯ ಕರುಣೆ ಅಂತ ಇರಬೌದು;
ಮಾಂಸ ಕಡಿಯೊ ಕತ್ತಿಗೂ ಸೈತ
ಹಿಂಜರಿಕೆ, ಭಯ ಆಗಬೌದು.

ಹೂ ಕುಯ್ಯೊ ಕೈಯಿ
ದೇವ್ರುನ ಬೇಡ್ಕಳೊ ಕೈಯಿ
ಬೇರ‍್ಯೋರ್ಗೆ ಸಾಯ ಮಾಡೊ ಕೈಗುಳೆಲ್ಲ ಇದ್ವಲ
ಏನ್ ಕಡಿತಿದ್ವು ಅವೆಲ್ಲ ಆವಾಗ ಅಲ್ಲಿ?

ಯವ್ವೋ, ಯಕ್ಕೋ
ಬೇರೆ ಎಂಗಸ್ರ ಕೊಂದು ಕೊಚ್ಚಿ
ಸಾಯೂ ತಂಕ ಜಪ್ಪೊ ಹಂಗೆ
ಕ್ರೂರಪ್ರಾಣಿಗಳಂತ ನಿಮ್ ಗಣಸ್ರ
ಅದೆಂಗ್ ಎತ್ತಿ ಕಟ್ಟಿ ಸುಮ್ಕಿದ್ರವ್ವ?

ಎದೆ ಮೇಲ್ನ ಸೆರಗು ರವಷ್ಟು ಕೆಳಗ್ ಸರುದ್ರೆ ಸಾಕು
ಶೀಲನೆ ಹಾಳಾಯ್ತು ಅಂತ ಗಾಬ್ರಿಯಾಯ್ತಿರಿ
ಅಂತೋರು, ಅದೆಂಗೆ ನಿಮ್ಮಂತೋಳೆ ಒಬ್ಳ
ಮೊಲೆ ಕತ್ತರ‍್ಸಿ ಕಿತ್ ಬಿಸಾಡಿ
ತಾಯಿ ಮಗಳ್ನ ಎದ್ರಾಎದ್ರೆ ರೇಪ್ ಮಾಡ್ರಿ ಅಂತ
ನಿಮ್ ಗಣಸ್ರಿಗೆ ಚುಚ್ಚಿ ಕೊಟ್ರೆವ?
ಇಂಥಾ ಭಯಂಕರವಾದ್ದು ನಿಮ್ ಕಣ್ಣೆದ್ರೆ ನಡಿತಿದ್ರು
ಅದೆಂಗ್ ಅದಕ್ ಸಾಕ್ಷಿಯಾಗಿ ಸುಮ್ಮನಿದ್ರೆ ಯವ್ವ?

ಯಮೋ, ಭಾರತ್ ಮಾತೆ
ನಾವು ಸಂಕ್ಟ ಬಟ್ಟು ಅಳ್ತಿದಿವಿ ಕಮ್ಮೊ
ಯೋ ಗಾಂಧಿ
ನಾವ್ ಕಷ್ಟದಾಗಿದಿವಿ ಕಯ್ಯೊ
ಓ ಬಾಬಾಸಾಹೇಬಾ
ಸಿಟ್ನಿಂದ ನಾವ್ ಕುದಿತಿದಿವಿ ಕನಪ್ಪೊ.

ತಲೆಯೆತ್ತಿ ಬದ್ಕಕ್ಕೆ ನಮ್ಗೆ ವಸ್ದೊಂದು ಲೋಕಾನೆ ಬೇಕು
ಕೊನೆಪಕ್ಸ ನಂ ಯೋನಿ ಮೊಲೆನಾದ್ರು ಸುರಕ್ಷಿತವಾಗಿರೋವಂತ
ವಸ್ದೊಂದು ಲೋಕಾ ನಮ್ಗೆ ಬೇಕೇ ಬೇಕು..

ತೆಲುಗು ಮೂಲ: ಯೆಂಡ್ಲೂರಿ ಸುಧಾಕರ
ಇಂಗ್ಲಿಷ್ ಗೆ: ಕೆ. ಪುರುಷೋತ್ತಮ್
ಕನ್ನಡಕ್ಕೆ: ಎಚ್. ಎಸ್. ಅನುಪಮಾ

Saturday, 4 March 2017

‘ದೋಸ್ ಹು ಡಿಡ್‌ನಾಟ್ ಡೈ’: ಹೆಣ್ಣು ನೋಟದಲ್ಲಿ ಕೃಷಿ ಬಿಕ್ಕಟ್ಟು





ಈ ದೇಶದ ೭೭% ಜನ ದಿನಕ್ಕೆ ತಲಾ ೨೦ ರೂ. ಆದಾಯದಲ್ಲಿ ಬದುಕುತ್ತಿದ್ದರೆ ೩೦% ಜನ ಹಸಿದೇ ನಿದ್ದೆ ಹೋಗುತ್ತಿದ್ದಾರೆ.  ಹಸಿರುಕ್ರಾಂತಿಯನ್ನು ಸಾಕಾರಗೊಳಿಸಿದ ಅನ್ನ ಬೆಳೆವ ರೈತನೋ ಸಾಲ-ಸೋಲು-ಸಾವಿನ ಸುಳಿಗೆ ಸಿಲುಕಿದ್ದಾನೆ. ಬರಪೀಡಿತ ಪ್ರದೇಶಗಳಲ್ಲಷ್ಟೇ ಅಲ್ಲ, ‘ಭಾರತದ ಅನ್ನದ ಕಣಜ’ ಪಂಜಾಬಿನಲ್ಲಿ ಹಸಿರು ಕ್ರಾಂತಿಯ ಸಮೃದ್ಧಿಯನ್ನು ಪೋಸ್ಟರುಗಳಲ್ಲಿ ಬಿಂಬಿಸುವ ರೈತರೂ ಸಹಾ ಮುಕ್ತ ಮಾರುಕಟ್ಟೆಯ ಇಕ್ಕಳದಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಸಿರು ಕ್ರಾಂತಿ, ಜಾಗತೀಕರಣ, ಮುಕ್ತ ಆರ್ಥಿಕತೆಯ ನಂತರ ಹೆಚ್ಚುತ್ತಿರುವ ರೈತ ಆತ್ಮಹತ್ಯೆಗಳು ಕೃಷಿಯನ್ನು ಸರಕೀಕರಣಗೊಳಿಸಿರುವುದರ ವಿನಾಶಕಾರಿ ಪರಿಣಾಮಗಳ ಕುರಿತು ಹೇಳತೊಡಗಿವೆ.

ಸಾಧಾರಣವಾಗಿ ರೈತ ಆತ್ಮಹತ್ಯೆಗಳಾದಾಗಲೆಲ್ಲ ಕೃಷಿ ಬಿಕ್ಕಟ್ಟು, ಅದರ ಪರಿಹಾರ, ಬೆಂಬಲ ಬೆಲೆ, ನೀರಾವರಿ, ಬೆಳೆವಿಮೆ, ಸಾಲಬಡ್ಡಿ ಮನ್ನಾ ಮೊದಲಾದ ವಿಷಯಗಳು ಮುನ್ನೆಲೆಯ ಚರ್ಚೆಗೆ ಬರುತ್ತವೆ. ಆದರೆ ಪಂಜಾಬಿನಂತಹ ಅತಿ ಸಂಪ್ರದಾಯಶೀಲ ಮತ್ತು ಪಿತೃಪ್ರಾಧಾನ್ಯ ಸಮಾಜದಲ್ಲಿ ಮಾರುಕಟ್ಟೆ ಸೃಷ್ಟಿಸಿರುವ ಕೃಷಿಯ ಅವಾಂತರಗಳನ್ನು ಆತ್ಮಹತ್ಯೆಯಾದ ರೈತರ ಕುಟುಂಬಗಳ ದೃಷ್ಟಿಯಿಂದ ನೋಡಬೇಕು ಎಂದು ಪುಸ್ತಕವೊಂದು ಒತ್ತಾಯಿಸುತ್ತದೆ. ಅದು ರಂಜನಾ ಪಾಡಿ ಎಂಬ ಒರಿಸ್ಸಾದ ಮಹಿಳಾ ಹೋರಾಟಗಾರ್ತಿ ಪಂಜಾಬಿನ ರೈತ ಸಮುದಾಯವನ್ನು ವಿಸ್ತೃತ ಅಧ್ಯಯನಕ್ಕೊಳಪಡಿಸಿ ಬರೆದ ಪುಸ್ತಕ ‘ದೋಸ್ ಹು ಡಿಡ್‌ನಾಟ್ ಡೈ.’ ರೈತಮಹಿಳೆಯ ದೃಷ್ಟಿಯಿಂದ ರೈತನಿಲ್ಲದ ಕುಟುಂಬ ಮತ್ತು ಕೃಷಿ ಬಿಕ್ಕಟ್ಟನ್ನು ಆ ಪುಸ್ತಕ ಪರಿಶೀಲಿಸುತ್ತದೆ. ಪಂಜಾಬಿನ ಮಾಳವಾ ಪ್ರದೇಶ ಅತಿಹೆಚ್ಚು ರೈತ ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿರುವ ಪ್ರದೇಶ. ಅದು ಕ್ಯಾನ್ಸರ್ ಬೆಲ್ಟ್, ಡ್ರಗ್ ಬೆಲ್ಟ್, ಆಲ್ಕೊಹಾಲ್ ಬೆಲ್ಟ್ ಎನಿಸಿಕೊಂಡ ಪ್ರದೇಶವೂ ಹೌದು. ಮಾಳವಾದ ೧೦ ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ೧೨೫ ರೈತರ ಕುಟುಂಬಗಳ ಜೊತೆ ಒಡನಾಡಿ, ಸಂದರ್ಶಿಸಿ ಈ ಪುಸ್ತಕ ಸಿದ್ಧವಾಗಿದೆ.

ಕೆಲವರ ದೃಷ್ಟಿಯಲ್ಲಿ ಹೆಣ್ಣು ಎಂದರೆ ಆಸ್ತಿ, ಸರಕು. ಮತ್ತೆ ಕೆಲವರ ದೃಷ್ಟಿಯಲ್ಲಿ ಹೆಣ್ಣೆಂದರೆ ಹಿಂಸೆ, ಅನ್ಯಾಯ ಅನುಭವಿಸಲೆಂದೇ ಹುಟ್ಟಿರುವ ಜೀವ. ಸತ್ಯ ಇವೆರೆಡರ ನಡುವೆ ಎಲ್ಲೋ ಇದೆ. ಹೆಣ್ಣುಮಕ್ಕಳಿಗೆ ಇವೆರೆಡೂ ಅನುಭವಿಸುವ ಕಹಿ ವಾಸ್ತವಗಳಾಗಿವೆ. ಎಂದೇ ಹೆಣ್ಣು ದೃಷ್ಟಿಕೋನದಿಂದ ವಿಷಯಗಳನ್ನು ಕಾಣುವುದು, ವಿಶ್ಲೇಷಿಸುವುದು ಬಿಕ್ಕಟ್ಟನ್ನು ಬೇರೆಯೇ ಸ್ವರೂಪದಲ್ಲಿ ತೋರಿಸಿಕೊಡಬಲ್ಲವಾಗಿವೆ. ರಂಜನಾ ಪಾಡಿ ಅವರ ಪುಸ್ತಕ ಕೃಷಿ ಬಿಕ್ಕಟ್ಟನ್ನು ಮಹಿಳಾ ದೃಷ್ಟಿಕೋನದಿಂದ ವಿಶ್ಲೇಷಿಸಿರುವ ಒಂದು ಸಫಲ ಪ್ರಯತ್ನವಾಗಿದೆ.

ಇವತ್ತಿಗೂ ಭಾರತದ ಸಾಂಸ್ಕೃತಿಕ ಚಹರೆಗಳಲ್ಲಿ ಹೆಣ್ಣಿಗೆ ಮದುವೆಯೇ ಕೊನೆಯ ದಿಕ್ಕು ಎನ್ನುವ ಭಾವನೆ ತುಂಬಿದೆ. ಕುಟುಂಬ ಕೊಡುವ ಸುರಕ್ಷಿತ ಭಾವವನ್ನು ಮುಂದೆ ಮಾಡಿ ಇದನ್ನು ಪುಷ್ಟೀಕರಿಸಲಾಗುತ್ತಿದೆ. ಆದರೆ ಕುಟುಂಬವು ಸುರಕ್ಷಿತ ಭಾವ ನೀಡುವ ಜೊತೆಜೊತೆಗೇ ನೀಗಿಕೊಳ್ಳದ ಬಂಧಿತ ಸ್ಥಿತಿಯನ್ನು, ಅವಲಂಬಿತ ಮನಸ್ಥಿತಿಯನ್ನೂ ತಂದುಕೊಡುತ್ತದೆ. ಮಾಡಿಮಾಡಿ ಸವೆದರೂ ಮೊದಲೇ ಹೆಣ್ಣಿನ ಶ್ರಮ ಅದೃಶ್ಯ. ವಿಧವೆಯಾದ ಮೇಲಂತೂ ತನ್ನ ಶಕ್ತಿ, ಸಾಮರ್ಥ್ಯ ಎಲ್ಲ ಮರೆತು ಪೂರ್ಣ ಶ್ರಮವನ್ನು ಸಂಸಾರಕ್ಕೆ ವಿನಿಯೋಗಿಸುವಂತಾಗುತ್ತದೆ. ಭಾರತದಲ್ಲಿ ವಿಧುರನ ಪರಿಸ್ಥಿತಿಗಿಂತ ವಿಧವೆಯ ಸ್ಥಿತಿ ತುಂಬ ಭಿನ್ನ. ವಿಧುರ ವ್ಯಕ್ತಿಗೆ ಭಾವನಾತ್ಮಕ, ದೈಹಿಕ, ಕೌಟುಂಬಿಕ ಅಗತ್ಯಗಳಿಗೆ ಮತ್ತೊಬ್ಬ ಹೆಣ್ಣು ಒದಗುವುದು ಕಷ್ಟವೂ ಅಲ್ಲ, ವಿರಳವೂ ಅಲ್ಲ. ಆದರೆ ವಿಧವೆ ಮಾತ್ರ ಕುಟುಂಬ, ಮಕ್ಕಳು, ಅತ್ತೆಮಾವ, ಕೃಷಿ ಕೆಲಸ, ಮನೆಗೆಲಸವನ್ನು ಏಕಾಂಗಿಯಾಗಿ ಜೀವಮಾನವಿಡೀ ನಿಭಾಯಿಸಬೇಕು. ಗಂಡ ಮಾಡಿಟ್ಟ ಸಾಲಕ್ಕೂ ಬಾಧ್ಯಸ್ಥಳಾಗಬೇಕು. ಮದುವೆ ಎಂಬ ಸಂಸ್ಥೆಯನ್ನು ಕಾಪಿಡಬೇಕಾದ ಗಹನ ಜವಾಬ್ದಾರಿಗೆ ಹೆಗಲು ಕೊಡಬೇಕು. ಒಟ್ಟಾರೆ ವಿಧವಾ ಪಟ್ಟ ಡೆಡ್‌ಎಂಡ್ ಎನ್ನುವಂತಹ ಬದುಕಿನ ಕೊನೆಗೆ ಅವರನ್ನು ಮುಟ್ಟಿಸುತ್ತಿದೆ. ರಂಜನಾ ಭೇಟಿಯಾದ ೪೦% ವಿಧವೆಯರು ನಿದ್ರಾಹೀನತೆಯಿಂದ ಬಳಲುತ್ತ ನಿದ್ರೆಮಾತ್ರೆಗಳ ತೆಗೆದುಕೊಳ್ಳುತ್ತಿದ್ದರು ಎನ್ನುವ ಒಂದೇ ಅಂಕಿಅಂಶ ಅವರ ಮನೋವೇದನೆಯ ಆಳಗಲ ಎಷ್ಟೆಂದು ತಿಳಿಸುತ್ತದೆ.

ಪಂಜಾಬಿನಲ್ಲಿ ಅಂಥವರ ಸಂಖ್ಯೆ ದಿನೇದಿನೇ ಬೆಳೆಯುತ್ತಿದೆ. ಕೃಷಿಸಾಲ, ಬೆಳೆ ವೈಫಲ್ಯ ಹುಟ್ಟಿಸುವ ಸಾಮಾಜಿಕ, ಆರ್ಥಿಕ ಬಿಕ್ಕಟ್ಟುಗಳಿಗೆ ನಮ್ಮ ಸರಕಾರಗಳು ಕೃಷಿನೀತಿ ರೂಪಿಸುತ್ತವೆ. ಆದರೆ ವೈಧವ್ಯ ಹುಟ್ಟಿಸುವ ಭಾವನಾತ್ಮಕ ಬಿಕ್ಕಟ್ಟುಗಳಿಗೆ ಯಾವ ಕೃಷಿ ನೀತಿಯಲ್ಲಿ ಪರಿಹಾರವಿದೆ?

ವರದಕ್ಷಿಣೆ - ರೈತ ಆತ್ಮಹತ್ಯೆ: ನಿಕಟ ಸಂಬಂಧ

ಈ ಪುಸ್ತಕದ ಅಧ್ಯಯನವು ಹಲವು ಹೊಸ ವಿಚಾರಗಳತ್ತ ಬೆಳಕು ಚೆಲ್ಲುತ್ತದೆ. ಪಿತೃಪ್ರಾಧಾನ್ಯ ಮೌಲ್ಯಗಳು ಸುಖವಾಗಿ ವಿರಮಿಸಿರುವ ಗುಪ್ತತಾಣಗಳನ್ನೆಲ್ಲ ಹೊರಗೆಳೆದು ತೋರಿಸುತ್ತದೆ.

ಪಂಜಾಬಿನಲ್ಲಿ ೨೦೦೧ರಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ ೮೭೬ ಹೆಣ್ಣುಮಕ್ಕಳಿದ್ದರು. ಈಗ ೮೯೫ ಇದ್ದಾರೆ. ಇದು ರಾಷ್ಟ್ರೀಯ ಸರಾಸರಿ ೯೪೦ಕ್ಕಿಂತ ತುಂಬ ಕಡಿಮೆ. ಅಲ್ಲಿ ಸ್ತ್ರೀಭ್ರೂಣ ಹತ್ಯೆಯಿಂದ ಹೆಣ್ಣುಮಕ್ಕಳ ಸಂಖ್ಯೆ ಇಳಿಯುತ್ತಿದ್ದರೂ ವರದಕ್ಷಿಣೆ ಪಿಡುಗು ಎಗ್ಗಿಲ್ಲದೆ ಮುಂದುವರೆದಿದೆ. ವರದಕ್ಷಿಣೆ ಜೀವಂತವಾಗಿದೆ ಎನ್ನುವುದೇ ಈ ಸಮಾಜ ಹೆಣ್ಣಿಗೆ ನೀಡಿರುವ ಎರಡನೆಯ ದರ್ಜೆಯ ಸ್ಥಾನಮಾನವನ್ನು ಧೃಢಪಡಿಸುತ್ತದೆ. ಕೃಷಿಯ ಅನಿವಾರ್ಯ ಭಾಗವೇ ಆಗಿರುವ ಹೆಣ್ಣನ್ನು, ದುಡಿಯುವ ಒಂದು ಪುಕ್ಕಟೆ ಆಳನ್ನು ತಮ್ಮ ಮನೆಗೆ ತಂದುಕೊಳ್ಳಲು ವರದಕ್ಷಿಣೆ ಕೊಡಲೇಬೇಕೆಂದು ಹಿಂಸಿಸುವ ವರರ ಕುಟುಂಬಗಳು ವಧುವಿನ ಮುಖ್ಯ ಅರ್ಹತೆ ಅವಳು ತನ್ನೊಡನೆ ಹೊತ್ತು ತರುವ ಧನಕನಕವೆಂದು ಭಾವಿಸಿವೆ. ಆದರೆ ವರದಕ್ಷಿಣೆ ಒಂದಲ್ಲ ಒಂದು ರೀತಿ ಪ್ರತಿ ಕುಟುಂಬವನ್ನು ಬಾಧಿಸುತ್ತಿದ್ದರೂ ಹೊಸಿಲು ತುಳಿವ ಹೆಣ್ಣಿನೊಡನೆ ಹರಿದು ಬರುವ ಹಣಕ್ಕೆ ಎಲ್ಲರೂ ಬಾಯ್ತೆರೆದಿದ್ದಾರೆ. ಹೀಗಾಗಿಯೇ ಕುಟುಂಬಗಳಿಗೆ ಹೆಣ್ಣುಮಗುವೆಂದರೆ ದುಃಖ, ಅವಳು ಹೊರೆ. ಅವಳು ಬೇಡದವಳು.

ಅಂತಹ ಸಮಾಜದಲ್ಲಿ ಸಹಜವಾಗಿ ಆಗುವಂತೆ ಮಗಳ ಮದುವೆಯ ‘ವರದಕ್ಷಿಣೆ’ ಹಣ ಹೊಂದಿಸುವುದಕ್ಕಾಗಿಯೇ ಸಾಲಬಾಧೆ ಉಂಟಾಗಿದೆ. ಎಂದೇ ಬಹುಪಾಲು ರೈತ ಆತ್ಮಹತ್ಯೆಗಳು ಕೃಷಿ ಅಗತ್ಯಗಳಿಗಿಂತ ವರದಕ್ಷಿಣೆ ಸಾಲಕ್ಕಾಗಿಯೇ ಸಂಭವಿಸಿವೆ!

ಆಗಲೇ ಮಾಡಿದ ಬೆಳೆಸಾಲದ ಕಾರಣ ‘ವರದಕ್ಷಿಣೆ’ಗೆ ಮತ್ತೆ ಸಾಲ ಸಿಗದೆ ಹತಾಶರಾಗಿ ಜೀವತೆತ್ತ ಅಪ್ಪಂದಿರಿದ್ದಾರೆ. ಅಪ್ಪನಿಲ್ಲದ ಹೆಣ್ಣುಮಕ್ಕಳ ಮದುವೆ ಮಾಡಲು ಮಾಡಿದ ಸಾಲ ತೀರಿಸಲಾಗದೇ ಮಗನೂ ಆತ್ಮಹತ್ಯೆ ಮಾಡಿಕೊಂಡಿರುವ; ಶಾಲೆಗೆ ತುಂಬಲು ಫೀಸು ಹಣ ಇಲ್ಲವೆಂದು ೧೩ ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡಿರುವ; ಆತ್ಮಹತ್ಯೆ ಮಾಡಿಕೊಂಡ ಅಪ್ಪನ ಮಗಳಾಗಿ ವರದಕ್ಷಿಣೆಯಿಲ್ಲದೆ ಗಂಡನ ಮನೆಗೆ ಕಾಲಿಟ್ಟು ಅವಮಾನ ತಾಳಲಾರದೆ ಹುಡುಗಿಯೂ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಭರ ಕತೆಗಳು ಇಲ್ಲಿ ಅನಾವರಣಗೊಂಡಿವೆ.

ವಿಶೇಷವೆಂದರೆ ಸಾಲಬಾಧೆ ಗಂಡಸರನ್ನೇ ಹೆಚ್ಚು ಕಾಡಿದೆ. ಅದರಲ್ಲೂ ೨೧ರಿಂದ ೫೦ ವರ್ಷ ವಯೋಮಾನದ, ಅತ್ಯಂತ ಕ್ರಿಯಾಶೀಲ ವಯಸ್ಸಿನ ಗಂಡಸರಲ್ಲಿ ೮೦%ಗಿಂತ ಹೆಚ್ಚು ಆತ್ಮಹತ್ಯೆ ಸಂಭವಿಸಿದೆ.

ಹೀಗೇಕೆ?

ಲಿಂಗತಾರತಮ್ಯ ರೂಢಿಸಿಕೊಂಡ ಸಮಾಜವು ‘ಹೆಣ್ಣು-ಗಂಡು’ ಎಂಬ ಕಲ್ಪಿತ ಚೌಕಟ್ಟಿನೊಳಗೆ ಮನುಷ್ಯರನ್ನು ಬಂಧಿಸಿಟ್ಟು ಏನೇನು ಅವಾಂತರ ಸೃಷ್ಟಿಸಿದೆ ಎನ್ನಲು ಪ್ರಸಕ್ತ ಕಾಲಮಾನವೇ ಸಾಕ್ಷಿಯಾಗಿದೆ. ಹೆಣ್ಣನ್ನು ಕೀಳಾಗಿ ಕಾಣುವ ಗಂಡು ಸಮಾಜವು ಸಹಜವಾಗಿಯೇ ಗಂಡಸರನ್ನು ‘ಗಂಡುತನ’ದ ಚೌಕಟ್ಟಿನಲ್ಲಿ ಬಂಧಿಸುತ್ತದೆ. ವೈಭವೀಕರಿಸಲ್ಪಟ್ಟ ಆ ಪ್ರಮಾಣದ ಅಳತೆಗೆ ಸರಿಯಾಗಿ ತನ್ನನ್ನು ಹೊಂದಿಸಿಕೊಳ್ಳಲು ಗಂಡಸರ ಅಹಮು ನಿರಂತರ ಸೆಣಸಬೇಕಾಗುತ್ತದೆ. ಗಡಸು ದನಿಯ, ಎತ್ತರ ನಿಲುವಿನ, ಮಾಸಖಂಡಗಳು ಹುರಿಹುರಿಯಾಗಿರುವ, ಬಲಶಾಲಿಯಾದ, ಹೆದರದೆ ಮುನ್ನುಗ್ಗುವ, ಪೊರೆಯುವ ಎಂಬಿತ್ಯಾದಿ ಗುಣವಿಶೇಷಣಗಳು ಗಂಡಿಗೆ ಪ್ರಭಾವಳಿಯಂತೆ ಸುತ್ತುವರೆದಿದ್ದು ತನ್ನ ಹೆಣ್ಣನ್ನು, ಅವಳಿಂದ ವಿಸ್ತಾರವಾಗುವ ತನ್ನ ಸಂಸಾರವನ್ನು ಪೊರೆಯುವುದೇ ಗಂಡಸುತನ ಎಂಬ ಭಾವವನ್ನು ಸಮಾಜ ಗಂಡಸಿನಲ್ಲಿ ಬಿತ್ತಿದೆ. ಇದು ಅಪರಿಮಿತ ಜವಾಬ್ದಾರಿಯನ್ನೂ, ಅಸಹಾಯಕತೆಯನ್ನೂ ಗಂಡಸರಲ್ಲಿ ಹುಟ್ಟಿಸಿ ಹೆಣ್ಣುಜೀವಗಳ ಮೇಲಿನ ದಬ್ಬಾಳಿಕೆಗೂ ಕಾರಣವಾಗಿದೆ. ತನ್ನ ಪಾತ್ರ ನಿರ್ವಹಿಸಲು ತಾನು ಅಶಕ್ತ ಎಂಬ ಭಾವ ತಲೆದೋರಿದಾಗ ಖಿನ್ನತೆಯುಂಟಾಗಿ ಆತ್ಮಹತ್ಯೆಗಳು ಸಂಭವಿಸುತ್ತವೆ.

ಹಾಗೆ ನೋಡಿದರೆ ಇಲ್ಲದ ಹೆಮ್ಮೆಯನ್ನು, ಹುಸಿ ಶ್ರೇಷ್ಠತನವನ್ನು ಗಂಡಸುತನದೊಳಗೆ ತುಂಬಿದ ಸಮಾಜವೇ ಅಪ್ಪಅಣ್ಣತಮ್ಮಂದಿರ ಆತ್ಮಹತ್ಯೆಗಳಿಗೆ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ.

‘ಗಂಡು ದಿಕ್ಕಿಲ್ಲದ’ ಮನೆಗಳ ನಿಭಾಯಿಸಲು ವಿಧವೆಯರು ಅವಿರತ ಹೋರಾಟ ನಡೆಸಬೇಕು. ಜಾತಿ-ವರ್ಗಗಳು ವಿಧಿಸುವ ಚೌಕಟ್ಟು ಮೀರಿ, ಮನೆಯಾಚೆ ಬಂದು, ಸಗಣಿ ಹೆಕ್ಕಿ, ಹಾಲು ಮಾರಿ, ಬಟ್ಟೆ ಹೊಲಿದು, ಪಶುಸಾಕಣೆ ಮಾಡಿ, ನೇಕಾರಿಕೆಯಲ್ಲಿ ತೊಡಗಿ - ಅಂತೂ ಹೇಗೋ ಕುಟುಂಬ ಪೊರೆಯಬೇಕು. ಅಂಥವರ ಬದುಕಿನ ಧೀರ ಹೋರಾಟದ ಕತೆಗಳನ್ನು ಈ ಪುಸ್ತಕ ವಿಶದವಾಗಿ ಚಿತ್ರಿಸಿದೆ. ‘ಸಾಯದೇ ಇರುವವರು’ ಎಂಬ ಪುಸ್ತಕದ ಶೀರ್ಷಿಕೆಯೇ ಸಾಲ-ವರದಕ್ಷಿಣೆ-ಕೃಷಿ ವೈಫಲ್ಯ-ವಿಧವೆತನಗಳು ತಂದೊಡ್ಡುವ ಸಂಕಷ್ಟಗಳ ಸರಮಾಲೆಯನ್ನು ಅವರು ದಿಟ್ಟವಾಗಿ ಹೇಗೆ ಎದುರಿಸಿ ಬದುಕಿದ್ದಾರೆ ಎಂದು ವಿವರಿಸುತ್ತದೆ. ಈ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡ ರೈತನ ವಿಧವೆ ವಿಕ್ಟಿಮ್ ಅಲ್ಲ. ನಿಜಾರ್ಥದ ‘ಸರ್ವೈವರ್’ ಎನ್ನುವುದು ಪುಸ್ತಕದ ಸಂದೇಶವಾಗಿದೆ.



ಈ ಪುಸ್ತಕ ಬರೆದ ರಂಜನಾ ಪಾಡಿ ಒರಿಸ್ಸಾದ ಭುವನೇಶ್ವರದವರು. ಎಂಭತ್ತರ ದಶಕದಿಂದಲೂ ಸ್ವಾಯತ್ತ ಮಹಿಳಾ ಗುಂಪುಗಳೊಡನೆ ಕೆಲಸ ಮಾಡಿಕೊಂಡು ಬಂದವರು. ದೆಹಲಿಯ ಸಹೇಲಿ, ವರ್ಕರ್ರ‍್ಸ್ ಸಾಲಿಡಾರಿಟಿ, ಕಾಶಿಪುರ ಸಾಲಿಡಾರಿಟಿಯಂತಹ ಸಾಂಸ್ಥಿಕ ಧನಸಹಾಯ ಪಡೆಯದೆ ಕಾರ್ಯನಿರ್ವಹಿಸುವ, ಎನ್‌ಜಿಒದಂತೆ ರಾಚನಿಕ ಚೌಕಟ್ಟುಗಳಿಲ್ಲದ ಗುಂಪುಗಳಲ್ಲಿ ಕ್ರಿಯಾಶೀಲರು. ಅದರೊಡನೆ ಪ್ರಗತಿಪರ ಶಕ್ತಿಗಳ ಜೊತೆ ಪ್ರಭುತ್ವದ ದಮನ, ನಾಗರಿಕ ಹಕ್ಕು ದಮನ, ಸ್ಥಳಾಂತರ, ಸ್ಲಂ ನೆಲಸಮ, ಆದಿವಾಸಿಗಳ ಒಕ್ಕಲೆಬ್ಬಿಸುವಿಕೆ ಮೊದಲಾದ ವಿಷಯಗಳ ವಿರುದ್ಧ ಸಹಭಾಗಿಯಾಗಿ ಹೋರಾಡಿದ್ದಾರೆ. ಉದ್ಯೋಗವಾಗಿ ಐಟಿ ಕಂಪನಿಗಳ ಭಾಷಾ ತರಬೇತಿ ಹಾಗೂ ಸಂಪಾದನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಜಾತಿ ಮತ್ತು ವರ್ಗ ಇವೆರೆಡೂ ಮಹಿಳೆಯರನ್ನು ಮುಂದಡಿಯಿಡದಂತೆ ತಡೆಯಬಲ್ಲ ಕಂದಕಗಳಾಗಿರುವ ಕಾರಣ ಬರಿಯ ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದಾಗಲೀ ಅಥವಾ ಬರಿಯ ಸ್ತ್ರೀವಾದಿ ದೃಷ್ಟಿಕೋನದಿಂದಾಗಲೀ ಸಮಗ್ರವಾಗಿ ಸಮಸ್ಯೆ ಅರಿಯಲು, ಪರಿಹಾರದ ದಾರಿಗಳ ಹುಡುಕಲು ಸಾಧ್ಯವಾಗುವುದಿಲ್ಲ; ಸಮಗ್ರ ಮತ್ತು ವಿಸ್ತೃತ ಜೀವನ ದೃಷ್ಟಿಯನ್ನು ಮಹಿಳಾ ಹೋರಾಟಗಾರರು ಬೆಳೆಸಿಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯವಾಗಿದೆ.
ರಂಜನಾ ಪಾಡಿ ಈಗ ಕರ್ನಾಟಕಕ್ಕೆ ಬರುತ್ತಿದ್ದಾರೆ. ಇದೇ ಮಾರ್ಚಿ ೮, ೯ ರಂದು ಕೊಪ್ಪಳದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ನಡೆಸುವ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೊಪ್ಪಳಕ್ಕೆ ಎಲ್ಲ ಬನ್ನಿ, ಚರ್ಚೆಯಲ್ಲಿ ಪಾಲ್ಗೊಳ್ಳುವಾ.



ರಂಜನಾ ಪಾಡಿ - ‘ಸ್ತ್ರೀವಾದವೆಂದರೆ..’




(ರೈತ ಆತ್ಮಹತ್ಯೆ ಸಂಭವಿಸಿದಾಗಲೆಲ್ಲ ಬೆಂಬಲ ಬೆಲೆ, ಬೆಳೆವಿಮೆ, ಸಾಲ-ಬಡ್ಡಿ ಮನ್ನಾ ಮೊದಲಾದ ವಿಷಯಗಳು ಮುನ್ನೆಲೆಯ ಚರ್ಚೆಗೆ ಬರುತ್ತವೆ. ಆದರೆ ಪಿತೃಪ್ರಧಾನ ಭಾರತೀಯ ಸಮಾಜದಲ್ಲಿ ಮಾರುಕಟ್ಟೆ ಸೃಷ್ಟಿಸಿರುವ ಕೃಷಿಬಿಕ್ಕಟ್ಟುಗಳನ್ನು ಆತ್ಮಹತ್ಯೆಯಾದ ರೈತಕುಟುಂಬದ ವಿಧವೆಯರ ದೃಷ್ಟಿಯಿಂದ ನೋಡಬೇಕು ಎಂದು ಒರಿಸ್ಸಾದ ಮಹಿಳಾ ಹೋರಾಟಗಾರ್ತಿ ರಂಜನಾ ಪಾಡಿ ಒತ್ತಾಯಿಸುತ್ತಾರೆ. ಮಾಳವಾದ ೧೦ ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ೧೨೫ ರೈತರ ಕುಟುಂಬಗಳ ವಿಸ್ತೃತ ಅಧ್ಯಯನ ನಡೆಸಿ ಅವರು ಬರೆದ ‘ದೋಸ್ ಹು ಡಿಡ್‌ನಾಟ್ ಡೈ’ ಪುಸ್ತಕವು ಕೃಷಿ ಬಿಕ್ಕಟ್ಟು ಕುರಿತ ಅನನ್ಯ ಒಳನೋಟಗಳನ್ನೊಳಗೊಂಡಿದೆ.

ಮಾಳವಾ ಪ್ರದೇಶ ಅತಿಹೆಚ್ಚು ರೈತ ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿರುವ, ಅತಿಹೆಚ್ಚು ವಿಧವೆಯರಿರುವ ಪ್ರದೇಶ. ರೈತನ ವಿಧವೆ ಜೀವಮಾನವಿಡೀ ಏಕಾಂಗಿಯಾಗಿ ತಂದೆಯಿಲ್ಲದ ಕುಟುಂಬದ ಗಹನ ಜವಾಬ್ದಾರಿಗಳಿಗೆ ಹೆಗಲು ಕೊಡಬೇಕು. ಗಂಡ ಮಾಡಿಹೋದ ಸಾಲಕ್ಕೂ ಹೊಣೆಗಾರಳಾಗಬೇಕು. ಸಮಾಜ, ಸರಕಾರಗಳು ರೂಪಿಸುವ ಕೃಷಿನೀತಿಗಳಲ್ಲಿ ರೈತನ ವಿಧವೆಯ ಭಾವನಾತ್ಮಕ ಬಿಕ್ಕಟ್ಟುಗಳಿಗೆ ಯಾವ ಪರಿಹಾರವೂ ಇರುವುದಿಲ್ಲ. ಇಂಥವೆಲ್ಲ ವಿಷಯಗಳನ್ನು ತಮ್ಮ ಪುಸ್ತಕದಲ್ಲಿ ಚರ್ಚಿಸಿರುವ ರಂಜನಾ ಸಂದರ್ಶನ ಇಲ್ಲಿದೆ.)

Displaying IMG_20170227_212046228.jpg

ಮಹಿಳಾ ಚಳುವಳಿ ನಿಮ್ಮನ್ನು ಸೆಳೆದದ್ದು ಹೇಗೆ?

ನಾನು ಒರಿಸ್ಸಾದವಳು. ೮೦ರ ದಶಕದ ಕೊನೆ ಭಾಗದಲ್ಲಿ ಸ್ನಾತಕೋತ್ತರ ಪದವಿಗೆ ಭುವನೇಶ್ವರ ಬಿಟ್ಟು ದೆಹಲಿ ಸೇರಿದೆ. ಆಗಲ್ಲಿ  ಸಹೇಲಿ, ಮಾನುಷಿ ಮೊದಲಾದ ಮಹಿಳಾಗುಂಪುಗಳು ಶಾಬಾನೊ ಪ್ರಕರಣ, ವರದಕ್ಷಿಣೆ ವಿರೋಧಗಳ ಸುತ್ತ ತೀವ್ರ ಚರ್ಚೆ ಹುಟ್ಟುಹಾಕಿದ್ದವು. ಏಕವ್ಯಕ್ತಿ ನಾಯಕತ್ವಕ್ಕಿಂತ ಸಾಮೂಹಿಕ ಪ್ರಯತ್ನದಲ್ಲಿ ಹೆಚ್ಚು ನಂಬಿಕೆಯಿದ್ದುದರಿಂದ ಸ್ವಾಯತ್ತ ಸಂಘಟನೆ ‘ಸಹೇಲಿ’ ಸೇರಿದೆ. ಆಗ ಮಹಿಳಾ ಸಂಘಟನೆಗಳು ಪ್ರತಿಯೊಬ್ಬ ಮಹಿಳೆಗೂ ತಾನು ಮುಕ್ತಳಾಗುವುದು ಸಾಧ್ಯವಾದರೆ, ಸಮಷ್ಟಿಯಲ್ಲೂ ಮಹಿಳೆಗೆ ಅದೇ ವಾಸ್ತವವಾಗುವುದೆಂದು ನಂಬಿದ್ದವು. ಅಲ್ಲಿ ಕೊಂಚ ನಿರಾಸೆಯಾಯಿತೆಂದೇ ಹೇಳಬೇಕು. ಅಕ್ಯಾಡೆಮಿಕ್ ಸಭೆ, ಸಮಾರಂಭಗಳಿಗೆ ಹೋದರೆ ಮೆಥಡಾಲಜಿ, ತಾತ್ವಿಕತೆ ಮುಂತಾದ ಮಾತುಗಳು ತಲೆಚಿಟ್ಟು ಹಿಡಿಸುತ್ತಿದ್ದವು. ಇದೆಲ್ಲದರಿಂದ ಸಾಮಾನ್ಯ ಮಹಿಳೆಗೆ, ರೈತ ಮಹಿಳೆಗೆ ಏನುಪಯೋಗ ಎಂಬ ಪ್ರಶ್ನೆ ಒಳಗನ್ನು ಕೊರೆಯುತ್ತಿತ್ತು. ಅದನ್ನೇ ಅಲ್ಲಿದ್ದವರಿಗೂ ಕೇಳಿದರೆ ತಬ್ಬಿಬ್ಬುಗೊಳ್ಳುತ್ತಿದ್ದರು.

ಆಗ ‘ಕ್ಲೀನ್ ಡೆಲ್ಲಿ, ಬ್ಯೂಟಿಫೈ ಡೆಲ್ಲಿ’ ಅಭಿಯಾನ ನಡೆಯುತ್ತಿತ್ತು. ರಸ್ತೆಬದಿಯ ಬಸ್ತಿಗಳ ಜನರನ್ನು, ಸಂದುಗೊಂದುಗಳಲ್ಲಿ ವಾಸಿಸುತ್ತಿದ್ದವರನ್ನು ಒಕ್ಕಲೆಬ್ಬಿಸಿದರು. ಅಂಗೈಯಗಲದ ಗೂಡುಗಳಲ್ಲೇ ಬದುಕು ಕಟ್ಟಿಕೊಂಡವರು ಏಕಾಏಕಿ ಅತಂತ್ರವಾದರು. ಆ ವರ್ಷ ದೀಪಾವಳಿಯಂದು ರಸ್ತೆಗೆ ಬಿದ್ದ ಬಸ್ತಿಗಳ ಜನರ ಕೊನೆಮೊದಲಿರದ ಕಷ್ಟದ ಬದುಕು ಕಣ್ಣೆದುರು ತಂತಾನೇ ಅನಾವರಣಗೊಂಡಿತು. ಅದ್ಯಾವುದರ ಪರಿವೆಯೇ ಇಲ್ಲದ ಸಿರಿವಂತರ ದೆಹಲಿ ಸಿಲ್ಕ್ ಸ್ಯಾರಿ-ಕಟೋರಿ ಚೋಲಿ ತೊಟ್ಟು, ಸಿಹಿಯುಂಡು, ಪಟಾಕಿ ಸುಟ್ಟು ಸಂಭ್ರಮಿಸಿತು. ನಾವು ಯಾರಿಗಾಗಿ ಹೋರಾಡುತ್ತಿದ್ದೇವೆ ಎಂದು ನನ್ನ ಮೇಲೆ ನನಗೇ ಅನುಮಾನವಾಯಿತು. ಜನಸಾಮಾನ್ಯ ಮಹಿಳೆಯರೊಡನೆಯೇ ಕೆಲಸ ಮಾಡಬೇಕೆಂಬ ನಿರ್ಧಾರ ಗಟ್ಟಿಯಾಯಿತು.

ರೈತ ಸಮುದಾಯದತ್ತ ಗಮನ ಕೇಂದ್ರೀಕರಿಸಲು ಕಾರಣವೇನು?

ವಿದರ್ಭ ಕುರಿತ ವರದಿಗಳು ಬರುತ್ತಿದ್ದವು. ದಕ್ಷಿಣದ ರಾಜ್ಯಗಳಲ್ಲೂ ರೈತ ಆತ್ಮಹತ್ಯೆ ಸಂಭವಿಸತೊಡಗಿದ್ದವು. ‘ಹಸಿರುಕ್ರಾಂತಿ’ಯ ಪಂಜಾಬಿನಲ್ಲೂ ರೈತ ಆತ್ಮಹತ್ಯೆ ಆಗುತ್ತಿದ್ದವು. ದೆಹಲಿಗೆ ಹತ್ತಿರವಿದ್ದ ಪಂಜಾಬಿಗೆ ‘ಪೈಲಟ್ ಸ್ಟಡಿ’ಗೆಂದು ಹೋದರೆ, ಭೇಟಿಯಾದ ಮಹಿಳೆಯರಲ್ಲಿ ಅರ್ಧಕ್ಕರ್ಧ ಜನ ನಿದ್ರೆ ಮಾತ್ರೆ ನುಂಗುತ್ತಿರುವುದಾಗಿ ಹೇಳಿದರು! ಒಂದು ಮನೆಯ ಪುಟ್ಟ ಹುಡುಗಿ ಬಹಳ ಹಚ್ಚಿಕೊಂಡಳು. ಹಿಂದೆಮುಂದೆ ಸುಳಿಯುತ್ತ ನನ್ನ ಮುಟ್ಟುತ್ತಿದ್ದಳು, ಪಕ್ಕವೇ ಕೂರುತ್ತಿದ್ದಳು, ಕೂದಲು ಸವರುತ್ತಿದ್ದಳು. ಕೊನೆಯ ದಿನ ತಾನೂ ನನ್ನ ಜೊತೆ ಬರುವೆನೆಂದು ಹಠ ಹಿಡಿದಳು. ‘ನೀನು ಬಂದರೆ ಅಮ್ಮನ ಜೊತೆ ಯಾರಿರುತ್ತಾರೆ ಪುಟ್ಟಿ?’ ಎಂದೆ. ಅವಳಮ್ಮ, ‘ನನ್ನ ಜೊತೆ ಇದ್ದರೆ ನನ್ನಂತೇ ಆದಾಳು. ನಿನ್ನ ಜೊತೆಯಿದ್ದರೆ ನಿನ್ನಂತಾದರೂ ಆಗುತ್ತಿದ್ದಳೇನೋ’ ಎಂದು ವಿಷಣ್ಣಳಾಗಿ ಹೇಳಿದಳು. ಒಬ್ಬ ತಾಯಿ ತನ್ನ ಬಗ್ಗೆ ತಾನು ಇದಕ್ಕಿಂತ ಅಸಹಾಯಕತೆ, ನೇತ್ಯಾತ್ಮಕ ಭಾವ ಹೊಂದಲು ಸಾಧ್ಯವೆ?

ನಿದ್ರಾಹೀನ, ವಿಷಣ್ಣ ತಾಯಂದಿರ ಕಂಡು ಇದು ಸಾಮಾನ್ಯ ಸಮಸ್ಯೆಯಾಗಿರಲಿಕ್ಕಿಲ್ಲ ಎನಿಸಿತು. ಜಾಗತೀಕರಣ, ಮುಕ್ತ ಮಾರುಕಟ್ಟೆ ತಂದೊಡ್ಡಿದ ಸಂಕಷ್ಟಗಳಿಗೆ ನಾವು ಮೂಕಸಾಕ್ಷಿಯಾದೆವೇ ಎಂಬ ಪಾಪಪ್ರಜ್ಞೆ ಆವರಿಸಿ ವಿಸ್ತೃತ ಅಧ್ಯಯನಕ್ಕೆಂದು ಪಂಜಾಬಿಗೆ ಹೊರಟುಬಿಟ್ಟೆ.

ನೀವು ರೈತ ಕುಟುಂಬದಿಂದ ಬಂದವರೇ?

ನಾನು ರೈತ ಕುಟುಂಬದವಳಲ್ಲ. ನಾನಷ್ಟೇ ಅಲ್ಲ, ಈಗ ‘ಅಕ್ಷರವಂತ’ರೆನಿಸಿಕೊಂಡರಲ್ಲಿ ಬಹಳಷ್ಟು ಜನ ರೈತ ಕುಟುಂಬದವರಲ್ಲ. ಅದೇ ‘ಯಾರ‍್ಯಾರ ತಾಯ್ತಂದೆಯರು ರೈತ ಕುಟುಂಬದವರು?’ ಎಂದು ಕೇಳಿನೋಡಿ, ಒಂದಷ್ಟು ಜನ ಸಿಗುತ್ತಾರೆ. ಅಜ್ಜಿ-ಅಜ್ಜ ರೈತರಾಗಿರುವವರು ಹಲವಷ್ಟು ಜನ ಸಿಗುತ್ತಾರೆ. ಎಂದರೆ ಕೃಷಿ ನೆಚ್ಚಿದವರ ಸಂಖ್ಯೆ ಕಡಿಮೆಯಾಗುತ್ತಿರುವುದರ ಸೂಚನೆಯಿದು. ಆದರೆ ನಾವು ರೈತರೊಂದಿಗೆ ಕನೆಕ್ಟ್ ಆಗಲೇಬೇಕು. ಅನ್ನ ಬೆಳೆವ ರೈತನ ಸಮಸ್ಯೆ ಎಲ್ಲರಿಗೂ ಸಂಬಂಧಿಸಿದ್ದೆಂದು ತಿಳಿದುಕೊಳ್ಳಬೇಕು.

ಕ್ಷೇತ್ರಕಾರ್ಯದ ವೇಳೆ ಮರೆಯಲಾಗದ ಕೆಲ ಸಂಗತಿಗಳು..?

ವಿಧವೆಯರ ಸ್ಥಿತಿಗತಿಗೆ ಜಾತಿಯ ಕೊಡುಗೆಯೂ ಸಾಕಷ್ಟಿದೆ. ಜಾಟ್ ಸಿಖ್ ಮತ್ತು ದಲಿತ ರೈತ ವಿಧವೆಯರನ್ನು ಕಂಡಮೇಲೆ ದಮನದ ನೆಲೆಗಳು, ಹೊರದಾರಿಗಳು ಮತ್ತು ಅವರವರ ಶಕ್ತಿಗಳು ಭಿನ್ನ ಎಂದರಿವಾಯಿತು. ಜಾತಿ-ವರ್ಗ ಕುರಿತ ನನ್ನ ತಿಳುವಳಿಕೆ ಈ ಅಧ್ಯಯನ ಮಾಡುವಾಗ ಪುಷ್ಟೀಕರಿಸಲ್ಪಟ್ಟಿತು.

ಒಂದು ಮನೆಯಲ್ಲಿ ವಿಧವೆಯ ಬಳಿ ಒಳಮನೆಯಲ್ಲಿ ಎಲ್ಲ ಮಾತು ಮುಗಿಸಿದ್ದೆ. ತಲೆಬಾಗಿಲಲ್ಲಿ ಕೂತ ಮಾವ, ‘ಎಲ್ಲ ಹೇಳಿದಳೇ?’ ಎಂದರು. ಅದು ಆರೋಪವೋ, ವಿಚಾರಣೆಯೋ ತಿಳಿಯದೇ, ‘ಅವಳು ಹೇಳಿದಳು. ನೀವೂ ಹೇಳಿ’ ಎಂದೆ. ಅವರು ಮುಂಬಾಗಿ ಮೆಲುದನಿಯಲ್ಲಿ ಮಾತನಾಡತೊಡಗಿದರು: ‘ಕೆಲಸ ಹುಡುಕುತ್ತ ನನ್ನ ಮಗ ಹಡಗು ಹತ್ತಿ ಕೆನಡಾಗೆ ಅಕ್ರಮ ವಲಸೆ ಹೊರಟಿದ್ದ. ದಾರಿಯಲ್ಲಿ ಡರ್ಬಾನಿನಲ್ಲಿ ಸಿಕ್ಕಿಕೊಂಡ. ಅಲ್ಲಿ ಗುರುದ್ವಾರದವರ ಕೈಗೆ ಸಿಕ್ಕು ಪುಣ್ಯವಶಾತ್ ಮರಳಿ ಬಂದ. ಬಂದಮೇಲೆ ಅವನು ಖಲಿಸ್ತಾನ್ ಟರರಿಸ್ಟ್ ಎಂದು ಬೆನ್ನುಹತ್ತಿದರು. ನನ್ನನ್ನು ಬಂಧಿಸಿ ಜೈಲಿಗೆ ಹಾಕಿದರು. ಕೊನೆಗೆ ವ್ಯವಸಾಯ ಶುರು ಮಾಡಿದ. ಕೈಹತ್ತಲಿಲ್ಲ. ಅವರೂ ಅವನ ಬೆನ್ನು ಬಿಡಲಿಲ್ಲ. ಅವನಿರುವಷ್ಟೂ ದಿನವೂ ಒಂದಿಲ್ಲ ಒಂದು ತೊಂದರೆ. ಕೊನೆಗೀಗ ಹೀಗೆ..’. ಮಾತಾಡುತ್ತ ಆಡುತ್ತ ಅಪ್ಪ ಗದ್ಗದರಾದರು.

ಒಂದೊಂದೂ ಬದುಕಿನ ಹಿಂದೆ, ಸಾವಿನ ಹಿಂದೆ ಅದೆಷ್ಟು ಗುಟ್ಟುಗಳು! ಒಳಸುಳಿಗಳು!!

ಇಂಥ ಎಷ್ಟನ್ನೋ ಪುಸ್ತಕದಲ್ಲಿ ದಾಖಲಿಸಲಾಗಿಲ್ಲ. ಆದರೆ ಅವು ಕಲಿಸಿದ ಪಾಠವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಬರಪೀಡಿತ, ಒಣನೆಲದ ಪ್ರದೇಶಗಳಿಗಿಂತ ನೀರಾವರಿ ಇರುವಲ್ಲೇ ರೈತ ಆತ್ಮಹತ್ಯೆ ಹೆಚ್ಚು ಸಂಭವಿಸುತ್ತಿದೆ. ಇದನ್ನು ಹೇಗೆ ಅರ್ಥೈಸುವಿರಿ? 

ನೀರಾವರಿ ಇರುವಲ್ಲಿ ಕೃಷಿಗೆ ಬಂಡವಾಳ ಹೂಡಿಕೆ ಇರುತ್ತದೆ. ಅಲ್ಲಿ ಜಮೀನೆಂದರೆ ಆಸ್ತಿ, ಅಂತಸ್ತು, ಶ್ರೇಣಿಯ ಸಂಕೇತ. ಜಾತಿ-ಲಿಂಗಗಳಿಗಿಂತ ಜಮೀನು ಕೊಡುವ ಅಂತಸ್ತೇ ದೊಡ್ಡ ಐಡೆಂಟಿಟಿ. ಕೊನೆಗೆ ಉತ್ಪಾದನೆಗಿಂತಲೂ ಭೂಮಿಯೇ ಹೆಮ್ಮೆಯ ಪ್ರತೀಕವಾಗಿಬಿಡುತ್ತದೆ. ಬಂಡವಾಳ ಒತ್ತಾಯಿಸುವ ಪುರುಸೊತ್ತಿಲ್ಲದ ಕೃಷಿಯ ದುಷ್ಪರಿಣಾಮಗಳು ಹೆಂಗಸರು, ಮಕ್ಕಳು, ಮುದುಕರು, ಕೃಷಿಕೂಲಿಗಳ ದಿನನಿತ್ಯದ ಬದುಕಿನಲ್ಲಿ ಆಗುತ್ತವೆ. ಇದು ಪುರುಷಪ್ರಾಧಾನ್ಯ ಹುಲುಸಾಗಿ ಬೆಳೆಯಲು ಇಂಬು ಕೊಟ್ಟು ಸ್ತ್ರೀಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು ಹೆಚ್ಚಲೂ ಕಾರಣವಾಗಿದೆ.

ಕೃಷಿ ಬಿಕ್ಕಟ್ಟು ಕೊನೆಗೊಳಿಸುವುದು ಹೇಗೆ?

ಸಾವಯವ ಕೃಷಿಯಿಂದ ಬೆಳೆ ಸಾಲ, ಬೀಜಸಾಲ ತಪ್ಪುತ್ತದೆ; ರೈತ ಆತ್ಮಹತ್ಯೆ ಕಡಿಮೆಯಾಗುತ್ತದೆನ್ನುತ್ತಾರೆ. ಆದರೆ ನನಗೆ ಹಾಗೆನಿಸುವುದಿಲ್ಲ. ಇಷ್ಟು ಬೃಹತ್ ದೇಶದ ಜನಸಂಖ್ಯೆಗೆ ಕೈಗೆಟುಕುವ ದರದಲ್ಲಿ ಪೌಷ್ಟಿಕಾಹಾರ ಒದಗಿಸುವುದು ಹಸಿರು ಕ್ರಾಂತಿಯ ನಂತರವೂ ಕಷ್ಟವಾಗಿರುವಾಗ ಆರೋಗ್ಯಕರ, ವೈಜ್ಞಾನಿಕ ಆಧುನಿಕ ಕೃಷಿಪದ್ಧತಿಯಷ್ಟೇ ಬಿಕ್ಕಟ್ಟಿಗೆ ಪರಿಹಾರವಾಗಬಲ್ಲದು. ಬಂಡವಾಳ ಕೃಷಿಯನ್ನು ಸರಕೀಕರಣಗೊಳಿಸಿದೆ. ಕೃಷಿ ಅತಿ ಯಾಂತ್ರೀಕರಣಗೊಂಡು, ಅನಗತ್ಯ ಖರ್ಚು ಸೃಷ್ಟಿಸಿ, ನಿರುದ್ಯೋಗಕ್ಕೆ ಕಾರಣವಾಗಿದೆ. ಅಧ್ಯಯನದ ವೇಳೆ ದಾಖಲಿಸಿರುವಂತೆ ಕೃಷಿ ಯಂತ್ರೋಪಕರಣಗಳಲ್ಲಿ ೮೧% ಅನವಶ್ಯಕವಾಗಿವೆ. ೧೯% ಮಾತ್ರ ಬಳಕೆಯಾಗುತ್ತಿವೆ. ೧೯% ಯಂತ್ರೋಪಕರಣಗಳಿಗೆ; ವರದಕ್ಷಿಣೆ, ಅನಾರೋಗ್ಯ ಮತ್ತಿತರ ಸಮಸ್ಯೆಗಳಿಗೆ ರೈತರ ಬಹುಪಾಲು ಲಾಭ ಸೂರೆಗೊಂಡು ಅವರು ಸಾಲಗಾರರಾಗಿದ್ದಾರೆ. ಎಂದೇ ಕೃಷಿಯ ಯಾಂತ್ರೀಕರಣ ಕಡಿಮೆಯಾಗಬೇಕಿದೆ. ಬೃಹತ್ ಬಂಡವಾಳಗಾರರು, ವ್ಯಾಪಾರಿ-ದಲ್ಲಾಳಿಗಳಿರದ ರೈತಸ್ನೇಹಿ ಕೃಷಿನೀತಿ ಅವಶ್ಯವಾಗಿದೆ.

ಮಹಿಳೆಯರ ಬಿಕ್ಕಟ್ಟುಗಳಿಗೆ ಪರಿಹಾರವೇನು? 

‘ನೀನು ಹುಡುಗಿ, ಓದಿದ್ದು ಸಾಕು, ಗಂಡು ಸಿಗುವುದಿಲ್ಲ, ನಿನ್ನ ವರದಕ್ಷಿಣೆಗೆ ಹಣ ಕೂಡಿಡಬೇಕು’ ಎನ್ನುವಂತಹ ಮಾತುಗಳು ಇವತ್ತಿಗೂ ಸಾಮಾನ್ಯವೇ ಆಗಿರುವಾಗ, ಜಾಗೃತಿಗಾಗಿ ಸಂಘಟಿತರಾಗುವುದೊಂದೇ ಮಹಿಳೆಯರಿಗಿರುವ ದಾರಿ. ಅದು ಇವತ್ತು ಆಗುತ್ತಿರುವ ರೀತಿಯಿಂದ, ಪ್ರಮಾಣದಿಂದ ಸಾಧ್ಯವಿಲ್ಲ. ಮಹಿಳಾ ಚಳುವಳಿಗೆ ಮಹಿಳೆಯರ ವ್ಯಕ್ತಿಗತ ಸಮಸ್ಯೆಗಳ ಬಗೆಗೆ ಗಮನ ಕಡಿಮೆಯಾಗುತ್ತಿದೆ ಎಂದು ನನಗೆ ಗಾಢ ಅಸಮಾಧಾನವಿದೆ. ನಾವು ಪಿತೃಪ್ರಾಧಾನ್ಯವನ್ನು ಸೂಕ್ತವಾಗಿ ಗುರುತಿಸಿದೆವು. ಸಮಾಜದ ಆಂತರಿಕ ರಚನೆ ಬದಲಾದರೆ ಎಲ್ಲವು ಸರಿಯಾಗುವುದೆಂದು ಹೋರಾಡಿದೆವು. ಆದರೆ ವರದಕ್ಷಿಣೆ ಆಗಲೂ ಇತ್ತು, ಈಗಲೂ ಇದೆ. ವರದಕ್ಷಿಣೆ ಬಗ್ಗೆ ನಾವು ಮಾತ್ರ ಮಾತನಾಡುವುದನ್ನೇ ನಿಲಿಸಿದ್ದೇವೆ. ನಮ್ಮ ಗ್ರಹಿಕೆ ವಿಶಾಲವಾಗುತ್ತ ಹೋದಂತೆ, ಹೆಣ್ಮಕ್ಕಳನ್ನು ಬುಡಮಟ್ಟ ಕಾಡುವ ಮೂಲಭೂತ ಪ್ರಶ್ನೆಗಳ ಕೈಬಿಟ್ಟು ಪಿತೃಪ್ರಾಧಾನ್ಯವೆಂಬ ಒಂದೇ ಎಳೆ ಹಿಡಿದು ಜಗ್ಗಾಡತೊಡಗಿದ್ದೇವೆ.

ಇವತ್ತು ಮಹಿಳಾ ಚಳುವಳಿಯ ದೊಡ್ಡ ಸಮಸ್ಯೆ ಅದು ಎನ್ಜಿಒಕರಣಗೊಂಡಿರುವುದು. ಎನ್ಜಿಒಗಳು ವ್ಯವಸ್ಥೆಯ ಆರ್ಥಿಕ, ರಾಜಕೀಯ ಲೋಪಗಳ ಕುರಿತು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಸರ್ಕಾರದ ‘ಸ್ತ್ರೀಶಕ್ತಿ’ ಕಾರ್ಯಕ್ರಮಗಳಾದರೋ ಹೆಣ್ಮಕ್ಕಳನ್ನು ಸುಮ್ಮನಿರಲು, ಇರುವಂತೇ ಇರಲು ಒತ್ತಾಯಿಸುತ್ತವೆಯೇ ಹೊರತು ಸಮಗ್ರ ಜಾಗೃತಿಗೆ ಕಾರಣವಾಗುತ್ತಿಲ್ಲ. ಎಂದೇ ಸಮಸಮಾಜ ಬಯಸುವ ಪ್ರಗತಿಪರ-ಪರಿಸರ-ಎಡಪಂಥೀಯ ಚಳುವಳಿಗಳೆಲ್ಲ ಮಹಿಳಾ ಸಮಸ್ಯೆಗಳನ್ನು ಮುಖ್ಯವೆಂದು, ತಮ್ಮದೆಂದು ಪರಿಗಣಿಸಬೇಕು. ಎಲ್ಲ ಸಮಸ್ಯೆಗಳ ಲಿಂಗಸಂಬಂಧಿ ಆಯಾಮ ಕುರಿತು ಚರ್ಚಿಸಬೇಕು. ಜೊತೆಗೆ ಮಹಿಳಾ ಚಿಂತನೆಯೂ ಎಲ್ಲ ವಾದಗಳ ಸತ್ವ ಹೀರಿ ಅದರಾಚೆ ಬೆಳೆಯಬೇಕು. ಕೊನೆಯ ಮಹಿಳೆ ಮುಕ್ತಳಾಗುವವರೆಗೂ, ನಡುರಾತ್ರಿಯೂ ಮಹಿಳೆ ನಿರ್ಭಯಳಾಗಿ ಓಡಾಡುವಂತೆ ಆಗುವವರೆಗೂ ಚಳುವಳಿ ಮುಂದುವರೆಯಬೇಕು. ಅದೊಂದೇ ಸಮತೆಯ ಕನಸನ್ನು ಬಿತ್ತುವ ಶಕ್ತಿಯಾಗಿದೆ.

ಮಾಳವಾದಲ್ಲಿ ಏಳನೇ ತರಗತಿಯ ಒಂದು ಹುಡುಗಿ ನನ್ನ ಹಿಂದೆಮುಂದೆ ಸುಳಿಯುತ್ತ ಮಾತು, ಬರವಣಿಗೆಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದಳು. ಕೊನೆಯ ದಿವಸ ‘ನೀನು ಮಹಿಳಾ ವಿಮೋಚನೆಗಾಗಿ ಕೆಲಸ ಮಾಡ್ತಿದೀಯಾ?’ ಎಂದಳು. ೧೨-೧೩ ವರ್ಷದ ಹುಡುಗಿಯ ಬಾಯಿಯಲ್ಲಿ ಆ ಪದ ಕೇಳಿ ನನಗೋ ಅತ್ಯಾಶ್ಚರ್ಯ. ಅವಳಿಗದು ಹೇಗೆ ಗೊತ್ತಾಯಿತೆಂದು ಕೇಳಿದೆ. ತನಗೆ ಸಮಾಜ ಪುಸ್ತಕದಲ್ಲಿ ಹಾಗೊಂದು ಪಾಠ ಇದೆಯೆಂದು ಹೇಳಿದಳು.

ಪಠ್ಯದಲ್ಲಿ ಇಂಥ ಸೂಕ್ಷ್ಮವಿಷಯಗಳನ್ನಿಟ್ಟರೆ, ಬೆಳೆಯುವ ಹುಡುಗಹುಡುಗಿಯರಲ್ಲಿ ಸಮತೆಯ ಭಾವ ತುಂಬಿದರೆ, ನಮ್ಮ ನಾಳೆಗಳು ಹೇಗಿದ್ದಾವು, ಊಹಿಸಿಕೋ..

ಸ್ತ್ರೀವಾದ ಎಂಬ ಪದ ಕೇಳಿದರೆ ಕೆಲವರಿಗೆ ಮೈಮೇಲೆ ಮುಳ್ಳುಗಳೇಳುತ್ತವೆ..

ಲಿಂಗತಾರತಮ್ಯದ ಫಲಸುಖಾನುಭವಿಗಳು ಅವರು. ಅವರಿಗೆ ಹಾಗೆನಿಸುವುದು ಸಹಜ. ದಲಿತನೊಬ್ಬ ಮೇಲ್ಜಾತಿಯವರೆದುರು ತನ್ನ ಹಕ್ಕುಗಳ ಕೇಳಿದಾಗ ಯಾವ ವಿರೋಧ ಬರುವುದೋ, ಹೆಣ್ಣು ತನ್ನ ಹಕ್ಕುಗಳ ಕುರಿತು ಖಚಿತವಾಗಿ ಮಾತನಾಡತೊಡಗಿದಾಗಲೂ ಅದೇ ಆಗುತ್ತದೆ. ಆದರೆ ಸಮಾಜ ತಿಳಿಯಲಿ: ಸ್ತ್ರೀವಾದ ಎಂದರೆ ಮಹಿಳೆ ಗಂಡಸರಿಂದ ಅಧಿಕಾರ ಕಸಿಯುವುದಲ್ಲ, ಅಧಿಕಾರದ ವ್ಯಾಖ್ಯೆ ಬದಲಿಸುವುದು. ಸ್ತ್ರೀವಾದ ಎಂದರೆ ಪುರುಷ ವಿರೋಧವಲ್ಲ; ಸಮತೆಯ, ಘನತೆಯ ಬದುಕನ್ನು ಪ್ರತಿಪಾದಿಸುವುದು.


(ಸಂದರ್ಶನದ ಬರಹ ರೂಪ: ಡಾ. ಎಚ್. ಎಸ್. ಅನುಪಮಾ)




Tuesday, 28 February 2017

ಸಶಬ್ದ




(ಚಿತ್ರ: ಅಂತರ್ಜಾಲ)
ಒಂದು ನಸುಕು
ಇನ್ನೂ ಮಬ್ಬುಗತ್ತಲು
ಭಾರೀ ಸದ್ದು!
ಬೇಲಿ ದೂಡಿ ಕಲ್ಲು ಝಾಡಿಸಿ
ಇದ್ದಲ್ಲೆ ಅತ್ತಿತ್ತ ಸರಿದು ಧೂಳು ಹಾರಿಸಿ
ಬೃಹದಾಕಾರದ ಮಿಶಿನು
ಬಂದೆನೆಂದು ಸಾರಿತು

ಮೇಲೆ ಗೂಡಿನಲಿ ಮಲಗಿದ್ದ ಜೋತಮ್ಮ
ಭಯಾನಕ ಸದ್ದಿಗೆ ಎಚ್ಚೆತ್ತು ಕಣ್ಣುಜ್ಜುತ್ತ
‘ಮಾಮ್, ವಾಟೀಸ್ ದಿಸ್’ ಎಂದಳು.
ಸಂಪಿಗೆ ಮರದ ತುತ್ತತುದಿ ಮಹಲಿನ
ಮರಿಕಾಗೆ, ಕಾಗಮ್ಮ
ಏನೋ ಆಗಿಹೋಯಿತೆಂದು
ಹುಯ್ಯಲಿಟ್ಟರು.
ಪುಟ್ಟ ಬೆಕ್ಕುಮರಿ ಕಂಗಾಲು
ಹಿಂದೆಮುಂದೆ ಸುಳಿಯುತ್ತ
ನನ್ನ ಕಾಲುಗಳತ್ತಲೇ ನೆಟ್ಟಿದೆ ಕಣ್ಣು..

ಕೊರೆವ ಸದ್ದು ಕಿವಿ ತುಂಬುತಿರಲು
ಹೊರಹೋಗಿ ನೋಡುತ್ತೇನೆ
ಬೀದಿಯಲಿ ಹೆಜ್ಜೆಗೊಂದೊಂದು ಗುರುತು
ನೆಲ ಕೊರೆದು ಆಳಬಾವಿ ತೋಡಲು.
ಗುರುಗುಡುತ್ತ ಬೀಡುಬಿಟ್ಟಿದೆ ಭಾರೀ ಮಿಶಿನು!

ಒಂದಿಡೀ ದಿವಸ ಕೊರೆದದ್ದೇ ಕೊರೆದದ್ದು
ಈ ಬೋರು ಆ ಬೋರು ಮತ್ತೊಂದು ಬೋರು
ನೂರಿನ್ನೂರು ಮುನ್ನೂರು ನಾನೂರು
ಕೊರೆದ ಅಡಿ ಇಂಚಿಗು ಲೆಕ್ಕ ಉಂಟು.
ಆದರೇನು, ಎಲ್ಲು ಇಲ್ಲ ನೀರು
ಕಿಸೆ ಕಂಗಾಲು
ಜನ ಕಂಗಾಲು
ಮಿಶಿನು ಕಂಗಾಲು
ಅಲ್ಲಿ ನೀರಿಲ್ಲ ಇಲ್ಲಿಯೂ ಇಲ್ಲ
ಸದ್ದು ಮಾಡಿದ್ದೇ ಬಂತು ನೀರೇ ಇಲ್ಲ
ಭುಸ್ಸೆಂದು ನಿಟ್ಟುಸಿರ್ಗರೆದು
ವಾಪಸು ಹೊರಟಿತು ಮಿಶಿನು
ಅಬಬ, ಏನು ಗದ್ದಲ ಏನಬ್ಬರ!
ಬರುವಂತೆ ಹೋಗುವಾಗಲೂ?

‘ಕೊರೆತವೇ ಹಾಗೆ,
ಸೋಲುಗೆಲುವು ಇರುವುದೇ
ಕೊರೆವ ಸದ್ದಿಗೆ ಬೆಚ್ಚದಿರಲು ಸಾಧ್ಯವೇ?’
ನನ್ನ ಅಚ್ಚರಿಗೆ
ಗೇರು ಮರದ ಕಾಂಡ ಕೊರೆವ ಹುಳು
ತೂತಿನಿಂದ ಹೊರಗಿಣುಕಿ ನಕ್ಕು
ಟ್ರೊಂಯ್ ಟ್ರೊಂಯ್ಯನೆ ಕೊರೆಯುತ್ತ
ಮತ್ತೆ ಒಳ ಸರಿಯಿತು.

ಹೌದಲ್ಲ ಹುಳವೇ,
ಕೊರೆವುದು ಎಂದಿಗು ಸಶಬ್ದ.
ಮೊಗೆವುದು, ನನದೆನುವುದು ಸಶಬ್ದ.
ಸಿಗಲಿಲ್ಲವೆನುವುದು ಸಶಬ್ದ.
ಕೊರಗುತ್ತ ಮರಳುವುದೂ ಸಶಬ್ದ..
ಯಂತ್ರವೆಂದಿಗು ಕರ್ಕಶ ಶಬ್ದ.

ಕೊಡುವಾಗ ಕೊಟ್ಟುಕೊಳುವಾಗ
ಅರಸುವಾಗ ಒಪ್ಪಿಸಿಕೊಳುವಾಗ
ನಿಶ್ಶಬ್ದವಾಗಿರಲು ಯಂತ್ರ ಹೆಣ್ಣಲ್ಲವಲ್ಲ?!


(ಅಂತರ್ಜಾಲ ಚಿತ್ರ)

Tuesday, 21 February 2017

ಲಾಲ್ ಪೇರಿ


ಬ್ರಿಟಿಷ್ ಲೇಖಕ ವಿಲಿಯಂ ಡ್ಯಾಲ್‌ರಿಂಪಲ್‌ನ ಏಳನೆಯ ಪುಸ್ತಕ ‘ನೈನ್ ಲೈವ್ಸ್.’ ಅವರು ದೆಹಲಿಯ ಬಗೆಗೆ, ಮುಘಲ್ ಕಾಲದ ಭಾರತದ ಬಗೆಗೆ ಆಸಕ್ತಿಯಿಂದ ಹಳೆಯ ಲೈಬ್ರರಿಗಳಲ್ಲಿ, ಖಾಸಗಿ ಸಂಗ್ರಹಗಳಲ್ಲಿ ದಾಖಲೆಗೆ ತಡಕಾಡಿ ಮೂರು ಅತ್ಯುತ್ತಮ ಎನ್ನಬಹುದಾದ, ಸಂಶೋಧನಾ ಗ್ರಂಥಗಳಾದರೂ ಕಾದಂಬರಿಯಷ್ಟು ಆಸಕ್ತಿಯಿಂದ ಓದಿಸಿಕೊಂಡು ಹೋಗಬಲ್ಲ ಪುಸ್ತಕಗಳನ್ನು ಬರೆದಿದ್ದಾರೆ. ‘ಸಿಟಿ ಆಫ್ ಜಿನ್ಸ್,’ ‘ಲಾಸ್ಟ್ ಮುಘಲ್’ ಹಾಗೂ ‘ವೈಟ್ ಮುಘಲ್ಸ್’ ಪುಸ್ತಕಗಳು ‘ಇಂಡೋಫಿಲ್’ ಎಂಬ ಬಿರುದನ್ನು ಅವರಿಗೆ ತಂದಿತ್ತರೂ ಕುರುಡು ಭಾರತ ಪ್ರೇಮ ಅವರದಲ್ಲ. ಹೆಚ್ಚು ಕಡಿಮೆ ಎರಡು ದಶಕ ಕಾಲ ಭಾರತದಲ್ಲೇ ಅಲೆಯುತ್ತ ಕಳೆದಿರುವ ಆತ ತನ್ನ ಮನೆಯೆಂದರೆ ‘ದೆಹಲಿ’ ಎಂಬಷ್ಟೇ ಆಗಿಹೋಗಿರುವುದಾಗಿ ಹೇಳಿಕೊಂಡಿದ್ದಾರೆ. ಬರೀ ಸಂಶೋಧನಕಾರನ ಚಿಕಿತ್ಸಕ ಬುದ್ಧಿಯಲ್ಲದೆ, ತೆರೆದ ಮನದ ವಿಶ್ಲೇಷಣೆ, ಕುತೂಹಲ, ಮಾನವ ಪ್ರೇಮ ಇವೆಲ್ಲ ತುಂಬಿರುವುದು ಆ ಪುಸ್ತಕಗಳನ್ನು ಓದುತ್ತ ಹೋದಂತೆ ಅರಿವಾಗುತ್ತದೆ. ಭಾರತ ಉಪಖಂಡದ ವಿವಿಧ ಪ್ರದೇಶ, ಭಾಷೆ, ಆಸಕ್ತಿ, ಧಾರ್ಮಿಕ ಹಿನ್ನೆಲೆಗಳ ಒಂಭತ್ತು ಜನರನ್ನು ಭೇಟಿಯಾಗಿ ಅವರ ಪೂರ್ವಾಪರ ಅರಿತು, ಅದನ್ನು ಭೂತ ವರ್ತಮಾನದ ಸಾಮಾಜಿಕ, ರಾಜಕೀಯ ವಿದ್ಯಮಾನಗಳ ಜೊತೆ ವಿಶ್ಲೇಷಿಸುವ ಅಪೂರ್ವ ಪ್ರವಾಸ ಕಥನ ‘ನೈನ್ ಲೈವ್ಸ್’.

ಪಾಶ್ಚಾತ್ಯ ಜಗತ್ತಿಗೆ ಭಾರತವೆಂದರೆ ಸದಾ ಪುರಾತನವಾದ, ಎಂದೂ ಬದಲಾಗದ ಧಾರ್ಮಿಕ ಜ್ಞಾನದ ನಾಡು. ಭಾರತದಲ್ಲಾದರೋ ಧಾರ್ಮಿಕ ಅಸ್ಮಿತೆ ಎಂಬುದು ಜಾತಿ - ಗುಂಪು - ಪ್ರದೇಶ - ವಂಶಗಳಿಗೆ ಅಂಟಿಕೊಂಡಿದ್ದು ಆ ಸಂಸ್ಥೆಗಳ ಜೊತೆಗೇ ಬದಲಾಗುತ್ತ ಸಾಗಿದೆ  ಎನ್ನುವುದು ಅವನ ಅಬ್ಸರ್ವೇಷನ್. ಬದಲಾವಣೆಯ ವೇಗಕ್ಕೆ ಒಂದಕ್ಕೊಂದು ಘರ್ಷಣೆಗೊಳಗಾಗಿರುವುದನ್ನು, ರಾಜಕೀಯ, ಕೋಮು ಹಿಂಸಾಚಾರಕ್ಕೆ ಬಲಿಯಾದವರು ಧರ್ಮದ ಮಬ್ಬಿನಲ್ಲಿ ಸಾಂತ್ವನ ಬಯಸುತ್ತಿರಬಹುದೇ ಎಂಬುದನ್ನು ತನ್ನ ತಿರುಗಾಟದ ವೇಳೆ ಆತ ಪರಿಶೀಲಿಸಿದ್ದಾನೆ. ಬದಲಾಗುತ್ತಿರುವ ಕಾಲದಲ್ಲಿ ಇನ್ನೂ ಪವಿತ್ರ, ಧಾರ್ಮಿಕ ಎಂಬುದಾಗಿ ಯಾವುದು ಉಳಿದಿದೆ? ಯಾವ ಸ್ವರೂಪದಲ್ಲಿ ಉಳಿದಿದೆ? ಯಾವ ಬದಲಾವಣೆಗೆ ಮುಖವೊಡ್ಡಿದೆ? ಎಂದೆಲ್ಲ ಪರಿಶೀಲಿಸುತ್ತ ೯ ಜನ ಧಾರ್ಮಿಕ ವ್ಯಕ್ತಿಗಳನ್ನು ಭೇಟಿಯಾಗಿದ್ದಾನೆ. ಅದಕ್ಕಾಗಿ ಈ ದೊಡ್ಡ ದೇಶವನ್ನು ಸುತ್ತಿದ ತನ್ನ ಎರಡು ದಶಕಗಳ ಅನುಭವವನ್ನೆಲ್ಲ ಬಳಸಿಕೊಂಡಿದ್ದಾರೆ. ಅವರು ಭೇಟಿ ಮಾಡಿದ ಒಂಭತ್ತು ಜನ  ಭಾರತ ಉಪಖಂಡದಲ್ಲಿ ಶೀಘ್ರ ಬದಲಾಗುತ್ತಿರುವ ಧಾರ್ಮಿಕ ಮುಖವನ್ನು ತೆರೆದು ತೋರಿಸುತ್ತಾ ವಾಸ್ತವವನ್ನು ಪ್ರತಿನಿಧಿಸಿದ್ದಾರೆ.

 ಅಂತಹವರಲ್ಲಿ ಒಬ್ಬಳು ಸೂಫಿ ಭಕ್ತೆ ಲಾಲ್ ಫೇರಿ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಷೆಹ್ವಾನ್ ಷರೀಫ್ ಸೂಫಿ ಸಂತ ಲಾಲ್ ಶಹಬಾಜ್ ಖಲಂದರ್ ಅವರ ದರ್ಗಾದಿಂದ ವಿಖ್ಯಾತವಾದುದು. ಖಲಂದರ್ ಸಂತರ ಭಕ್ತಾನುಯಾಯಿ ‘ಲಾಲ್ ಫೇರಿ’ ಉಳಿದ ಸೂಫಿಗಳ ಹಾಗೆಯೇ ಲೋಕರೂಢಿಯನ್ನು ಮುರಿದವಳು. ಹೆಣ್ಣಾದರೂ ಸೂಫಿಯಾದವಳು. ಬಿಹಾರದ ಕುಗ್ರಾಮವೊಂದರ ಹೀನಾ ಕೊನೆಗೆ ಪಾಕಿಸ್ತಾನದ ಸಿಂಧ್‌ನ ಖ್ಯಾತ ದರ್ಗಾವೊಂದರ ಅನುಯಾಯಿಯಾಗುವ ತನಕ ಸಾಗಿ ಬಂದ ದಾರಿ ಹಲವು ಅಪಘಾತ, ಆಕಸ್ಮಿಕ, ದುಃಖಮಯ ತಿರುವುಗಳಿಂದ ಕೂಡಿದೆ. ಅವಳಷ್ಟೇ ಅವಳು ನಂಬಿ ಬಂದ ಸೂಫಿ ಮಾರ್ಗವೂ ಇಂದು ಅಪಾಯದಲ್ಲಿದೆ. ಅದನ್ನು ಡ್ಯಾಲ್‌ರಿಂಪಲ್‌ನ ಟಿಪ್ಪಣಿ ಸಹಿತ ಅವಳ ಬಾಯಿಯಲ್ಲೇ ಕೇಳಬೇಕು:



‘ಭಾರತ ಬಾಂಗ್ಲಾ ಗಡಿ ಭಾಗದಲ್ಲಿರುವ ಬಿಹಾರದ ಸೋನೆಪುರ ಎಂಬ ಸಣ್ಣ ಹಳ್ಳಿಯವಳು ನಾನು. ಅಂದಿನ ನನ್ನ ಹೆಸರು ಹೀನಾ. ಕಾಡಿನಂಚಿನ ನಮ್ಮ ಹಳ್ಳಿ ಎಷ್ಟು ಫಲವತ್ತಾಗಿತ್ತೆಂದರೆ ಬಡವರಾಗಿದ್ದರೂ ಮಕ್ಕಳಾದ ನಾವೆಂದೂ ಹಸಿದಿರುತ್ತಿರಲಿಲ್ಲ. ನನ್ನ ಬಾಲ್ಯದ ನೆನಪೆಂದರೆ ಮರ ಹತ್ತಿ ಹಣ್ಣು ಕುಯ್ದಿದ್ದೇ. ಮಾವು, ನೇರಳೆ, ಪೇರಲೆ, ಖರ್ಜೂರ, ಸಿಹಿತೆಂಗು - ಹೀಗೆ ಅಂಗಡಿಯಿಂದ ಯಾವ ಹಣ್ಣನ್ನೂ ಕೊಳ್ಳಬೇಕಿರಲಿಲ್ಲ. ವರ್ಷದ ಹನ್ನೆರೆಡೂ ತಿಂಗಳೂ ಯಾವುದಾದರೊಂದು ಪುಕ್ಕಟೆ ದೊರೆಯುತ್ತಿತ್ತು. ಹಾಗೆಯೇ ಕಾಡಿನಲ್ಲೂ ಕಾಡುಕುರಿ ಹಾಗೂ ಜಿಂಕೆ ಹೇರಳವಾಗಿರುತ್ತಿದ್ದವು. ನನ್ನಪ್ಪ ಬೇಟೆಗೆ ಹೋದ ಒಂದು ತಾಸಿನಲ್ಲಿ ಏನಾದರೂ ಬೇಟೆ ಹಿಡಿದೇ ಮನೆಗೆ ಬರುತ್ತಿದ್ದ.

ನಾನು ಸಣ್ಣವಳಿರುವಾಗ ಹಿಂದೂ ಮುಸ್ಲಿಮರೆಲ್ಲ ಸೋದರರೇನೋ ಎಂಬಂತೆ ಎಲ್ಲ ಇದ್ದರು. ನಾವು ಖುರೇಶಿಗಳು. ನಮ್ಮ ಮನೆಯ ಹೆಂಗಸರನ್ನು ಕೂಲಿಗೆ ಕಳಿಸುತ್ತಿರಲಿಲ್ಲ. ನನ್ನ ಆತ್ಮೀಯ ಗೆಳತಿ ಹಿಂದೂ, ಬ್ರಾಹ್ಮಣರವಳು. ನನ್ನ ತಂದೆಗೂ ಅಷ್ಟೇ, ಹಿಂದೂ ಗೆಳೆಯರು. ದೇವಾಲಯ ಮತ್ತು ಮಸೀದಿ ಎರಡೂ ಅಕ್ಕಪಕ್ಕವೇ ಇದ್ದವು. ಜನ ಎರಡೂ ಕಡೆ ಹೋಗುತ್ತಿದ್ದರು.

ನನ್ನಪ್ಪ ಸತ್ತಾಗ ತೊಂದರೆಗಳು ಶುರುವಾದವು. ಅವನಿಗೆ ಟಿಬಿ ಕಾಯಿಲೆ ಬಂದು ಕೆಮ್ಮಿ ಕೆಮ್ಮಿ ರಕ್ತಕಾರಿ ತೀರಿಕೊಂಡ. ಅವನು ತೀರಿಕೊಂಡಿದ್ದೇ ನನ್ನ ಚಿಕ್ಕಪ್ಪ ಇದ್ದ ಸ್ವಲ್ಪ ಗದ್ದೆಯನ್ನು ಕಬಳಿಸಿದ್ದರಿಂದ ಅನಾಥರಾಗಿಬಿಟ್ಟೆವು. ಹೀಗೆ ಸೋದರಮಾವನ ಆಶ್ರಯಕ್ಕೆ ಬಂದೆವು. ಒಂದು ವರ್ಷದಲ್ಲಿ ಅಮ್ಮ ಮತ್ತೊಂದು ಮದುವೆಯಾದಳು. ನನ್ನ ಮಲತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ನಾನು ಹಾಗೂ ಅಣ್ಣಂದಿರೆಂದರೆ ಅವನಿಗೆ ಸಿಟ್ಟು. ಅದರಲ್ಲೂ ಕುರೂಪಿಯಾದ ನನ್ನಂಥವಳಿಗೆ ಅನ್ನ ಹಾಕಲು ತಾನೇಕೆ ದುಡಿಯಬೇಕೆಂಬುದು ಅವನ ತಕರಾರು. ಆದರೆ ಅಮ್ಮ ನನಗೆ ಯಾವಾಗಲೂ ಅರೆ ಹೊಟ್ಟೆಯಾಗಲು ಬಿಟ್ಟವಳಲ್ಲ.

ನನಗಾಗ ಹದಿಮೂರು ವರ್ಷ. ನನ್ನ ಆಪ್ತ ಗೆಳತಿ ಮುಸಲ್ಮಾನ ಹುಡುಗನನ್ನು ಪ್ರೀತಿಸಿ ಮದುವೆಯಾಗಲು ಸಾಧ್ಯವಾಗದೇ ಇದ್ದದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಳು. ಆಗ ನಮ್ಮೂರಲ್ಲಿ ವಾತಾವರಣ ಕಾವೇರತೊಡಗಿತು. ಹಿಂದೂಗಳು ಮುಸಲ್ಮಾನರನ್ನು ದ್ವೇಷಿಸತೊಡಗಿದರು. ಅದೇ ವೇಳೆಗೆ ಪೂರ್ವ ಪಾಕಿಸ್ತಾನ (ಬಂಗಾಳ) ದಲ್ಲಿ ಹಿಂದೂಗಳನ್ನು ಮುಸ್ಲಿಮರು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಬಗ್ಗೆ ವರದಿಗಳು ಬರುತ್ತಿದ್ದವು. ನಮಗೂ, ಬಾಂಗ್ಲಾದಲ್ಲಿ ನಡೆಯುವುದಕ್ಕೂ ಸಂಬಂಧವೇ ಇಲ್ಲದಿದ್ದರೂ ಮುಸಲ್ಮಾನರಾಗಿದ್ದಕ್ಕೆ ನಾವು ಶಿಕ್ಷೆ ಅನುಭವಿಸಬೇಕು ಎಂದು ಹಿಂದೂಗಳು ಹೇಳುತ್ತಿದ್ದರು. ‘ಮುಸ್ಲಿಮರನ್ನು ತರಿದು ರಾಶಿ ಹಾಕಿ, ಸೇತುವೆ ಕಟ್ಟಿ ರುಪ್ಶಾ ನದಿಯನ್ನು ದಾಟುತ್ತೇವೆ. ಅವರ ರಕ್ತದಲ್ಲಿ ಮೀಯುತ್ತೇವೆ’ ಎಂದು ಹಾಡು ಕಟ್ಟಿ ಹೇಳುತ್ತಿದ್ದರು.

ಹೀಗೇ ಪರಿಸ್ಥಿತಿ ಗಂಭೀರವಾಗುತ್ತಾ ಹೋಯಿತು. ಒಂದು ದಿನ ಮಸೀದಿಯಲ್ಲಿ ನಮಾಜು ನಡೆಯುತ್ತಿರುವಾಗ ಗೂಂಡಾಗಳು ಮಸೀದಿಯನ್ನು ಸುತ್ತುವರಿದರು, ‘ಮುಂಜಿ ಮಾಡಿಕೊಂಡ ಹೇಡಿಗಳೇ, ಹೊರಬನ್ನಿ’ ಎಂದು ಅಬ್ಬರಿಸತೊಡಗಿದರು. ಹೊರಬಂದ ಬಹುಪಾಲು ನಿಶ್ಶಸ್ತ್ರ ಗಂಡಸರನ್ನು ಕೊಂದರು. ನಾನು ಹೀಗೆ ನನ್ನ ಮಲತಂದೆ, ಚಿಕ್ಕಪ್ಪ, ಬಂಧುಗಳ ಹುಡುಗರನ್ನೆಲ್ಲ ಕಳೆದುಕೊಂಡೆ. ನನ್ನ ಸೋದರಮಾವನೊಬ್ಬ ಅಂದು ಮಸೀದಿಗೆ ಹೋಗದೇ ಉಳಿದುಕೊಂಡಿದ್ದ. ನಂತರ ನಾವೆಲ್ಲ ಹಗಲಲ್ಲಿ ಬಾಳೆಲೆ ಮುಚ್ಚಿದ ಗುಂಡಿಯೊಳಗೆ ಅವಿತು ಕುಳಿತು ಕಾಲ ತಳ್ಳತೊಡಗಿದೆವು.

ಹೀಗೇ ದಿನ ಕಳೆಯುತ್ತಿದ್ದವು. ಸನ್ನಿವೇಶ ತಿಳಿಯಾಗುವವರೆಗೆ ನಾವು ಆ ಊರನ್ನು ಬಿಟ್ಟುಬಿಡುವುದೆಂದೂ, ಗಡಿಯಾಚೆ ಬಾಂಗ್ಲಾದಲ್ಲಿದ್ದ ನಮ್ಮ ನೆಂಟರ ಮನೆಗೆ ಹೋಗುವುದೆಂದೂ ತೀರ್ಮಾನಿಸಿದೆವು. ಅಂತೂ ದಿನಗಟ್ಟಲೇ ಅಡವಿಯಲ್ಲಿ ನಡೆದು, ಒಂದು ದಿನ ಆ ಗಡಿ ತಲುಪಿದೆವು. ಗಡಿಕಾವಲು ಅಧಿಕಾರಿಗಳಿಗೆ ಚಿಕ್ಕಪ್ಪ ಲಂಚ ಕೊಟ್ಟಿದ್ದ. ಕಾವಲಿನವನ ಮನೆಯಲ್ಲೇ ಒಂದು ದಿನ ಉಳಿದೆವು. ಮರುಬೆಳಿಗ್ಗೆ ಅವನು ನಮ್ಮನ್ನು ಹೊಳೆ ದಾಟಿಸಿ ಆಚೆ ಕಳಿಸಿ, ಬಲಕ್ಕೆ ತಿರುಗಿ ಹೋಗಬೇಕೆಂದೂ, ಗುಂಡು ತಗುಲುವ ಸಾಧ್ಯತೆಗಳಿದ್ದು ಎಲ್ಲೂ ನಿಲ್ಲದೇ ಸುಮ್ಮನೇ ಓಡುತ್ತ ಹೋಗಬೇಕೆಂದೂ ತಿಳಿಸಿದ.



ಅಂತೂ ಎರಡು ದಿನ ಓಡಿ, ನಡೆದು, ನಮ್ಮ ನೆಂಟರ ಊರು ತಲುಪಿದೆವು. ನಮ್ಮನ್ನವರು ಆದರದಿಂದಲೇ ಕಂಡರು. ನಮಗಾಗಿ ಹೊಳೆದಂಡೆಯಲ್ಲಿ ಗುಡಿಸಲು ಹಾಕಿಕೊಟ್ಟರು. ಹೀಗೇ ಒಂದು ವರ್ಷ ಕಳೆಯಿತು. ನಮ್ಮ ಭಯ ಹೊಳೆಯ ಪ್ರವಾಹದ್ದಾಗಿತ್ತೇ ಹೊರತು ಜನರದ್ದಾಗಿರಲಿಲ್ಲ. ಅಲ್ಲೂ ನಮ್ಮೂರಿನ ಹಾಗೆಯೇ ಹಣ್ಣು ಹಂಪಲು, ನೀರು ಯಾವುದಕ್ಕೂ ಕೊರತೆಯಿರಲಿಲ್ಲ. ಮೊದಲ ಬಾರಿ ನಾನು ಶಾಲೆಗೂ ಸೇರಿದ್ದೆ.

ಆಗ ಬಂತು ೧೯೭೧. ನಿಜಕ್ಕೂ ಕೆಟ್ಟ ವರ್ಷ. ಬಾಂಗ್ಲಾದೇಶೀಯರು ಪಾಕಿಸ್ತಾನದೊಂದಿಗೆ ಯುದ್ಧ ಶುರುಮಾಡಿದರು. ಈ ಯುದ್ಧದಲ್ಲಿ ಬಿಹಾರಿಗಳು ಪಾಕಿಸ್ತಾನಿಗಳ ಜೊತೆ ಸೇರಿದ್ದರು. ಇದು ನಮಗ್ಯಾರಿಗೂ ಸಂಬಂಧಿಸಿರಲಿಲ್ಲ. ಆದರೆ ಬಂಗಾಳಿಗಳು ಬಿಹಾರಿಗಳ ಮೇಲೆ ರೊಚ್ಚಿಗೆದ್ದರು. ದ್ರೋಹಿಗಳೆಂದು ಕರೆದು, ಅಪಹರಿಸಿ, ತಲೆ ಕಡಿದು ಬಿಸಾಡುತ್ತಿದ್ದರು. ಹೆದರಿ ಅಡಗಿಕೊಂಡ ನಮ್ಮ ಕಡೆಯ ಎಷ್ಟೋ ಜನ ಹಸಿವಿನಿಂದ ಸತ್ತರು. ನದಿಯಲ್ಲಿ ಹೆಣಗಳು ತೇಲತೊಡಗಿ ಮೀನು ತಿನ್ನುವುದನ್ನೂ ಬಿಟ್ಟೆವು. ಹುಟ್ಟಿದೂರು ಸೋನೆಪುರದಲ್ಲಿ ಹಿಂದೂಗಳು ಮುಸ್ಲಿಮರನ್ನು ಕೊಂದರು ನಿಜ. ಇಂದು ಮುಸ್ಲಿಮರೇ ಮುಸ್ಲಿಮರನ್ನೇಕೆ ಕೊಲ್ಲುತ್ತಿದ್ದಾರೆಂದು ನನಗೆ ಅರ್ಥವಾಗಲಿಲ್ಲ. ಜಗತ್ತೇ ರಕ್ತಮಯವಾಗಿದ್ದಂತೆ ಎನಿಸಿಬಿಟ್ಟಿತು.

ಹೀಗೇ ಪರಿಸ್ಥಿತಿ ಬಿಗಡಾಯಿಸುತ್ತ ಹೋದಾಗ ಪಾಕಿಸ್ತಾನ ಸರ್ಕಾರವು ಬಂಗಾಳದ ಬಿಹಾರಿಗಳು ಬರಲೊಪ್ಪಿದರೆ ಅವರಿಗೆ ಪಾಕಿಸ್ತಾನದ ದಕ್ಷಿಣ ಪಂಜಾಬ್‌ನಲ್ಲಿ ಭೂಮಿ ಕೊಡುವುದಾಗಿ ಹೇಳಿತು. ಯಾವ ಪಂಜಾಬ್? ಎಲ್ಲಿದೆ? ಏನೂ ಗೊತ್ತಿರದಿದ್ದರೂ ಪಂಜಾಬ್ ತುಂಬ ಸಮೃದ್ಧ ಎಂದಷ್ಟೇ ಕೇಳಿ ತಿಳಿದಿದ್ದೆವು. ಅಲ್ಲದೇ ನಾವಿದ್ದ ಬಂಗಾಳವು ಯುದ್ಧ, ಪ್ರವಾಹಗಳಿಂದ ತುಂಬ ಬಡ ನೆಲವಾಗಿತ್ತು. ಹೀಗಾಗಿ ತುಂಬ ಉತ್ಸುಕರಾಗಿ ಪಂಜಾಬಿಗೆ ಹೊರಟೆವು.

ಈಗ ನಮ್ಮ ಕುಟುಂಬ ಒಡೆಯಿತು. ತನಗೆ ವಯಸ್ಸಾದುದರಿಂದ ಪ್ರಯಾಣ ಸಾಧ್ಯವಿಲ್ಲವೆಂದು ಅಮ್ಮ ನಮ್ಮ ಜೊತೆ ಬರಲು ನಿರಾಕರಿಸಿದಳು. ನಾನೂ ನನ್ನ ತಮ್ಮನೂ ಪಾಕಿಸ್ತಾನಕ್ಕೆ ಹೊರಟೆವು. ಖುಲ್ನಾ ಕ್ಯಾಂಪ್ ಬಳಿಯ ಬಿಹಾರಿ ಸ್ವಯಂಸೇವಕರು ನಮ್ಮ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು. ಅವಶ್ಯವಿರುವ ದಾಖಲೆಗಳೊಂದಿಗೆ ಟ್ರಕ್ಕುಗಳಲ್ಲಿ ಮೊದಲು ಕಲಕತ್ತಾ, ನಂತರ ದೆಹಲಿ, ನಂತರ ಲಾಹೋರ್ ತಲುಪಿದೆವು. ಕೊನೆಗೆ ಮುಲ್ತಾನಿನ ಗಿರಣಿಗಳನ್ನು ಮುಟ್ಟಿದೆವು. ಭೂಮಿ ಸಿಗದಿದ್ದರೂ ಒಂದು ಸಣ್ಣ ಕೋಣೆ ಹಾಗೂ ಕೆಲಸ ದೊರೆಯಿತು.

ಅಲ್ಲಿ ಎಲ್ಲವೂ ಅಪರಿಚಿತ. ನಮಗೆ ಪಂಜಾಬಿ ಬರುತ್ತಿರಲಿಲ್ಲ. ಹತ್ತಿ ಗಿರಣಿಯ ಕೆಲಸ ಗೊತ್ತಿರಲಿಲ್ಲ. ಅನ್ನ ಮೀನು ತಿನ್ನುತ್ತಿದ್ದವರಿಗೆ ರೊಟ್ಟಿ ಮಾಂಸ ತಿಂದು ಗೊತ್ತಿರಲಿಲ್ಲ. ಆದರೆ ಅಲ್ಲಿ ರಕ್ಷಣೆಯಿತ್ತು. ನೆಲೆಯಿತ್ತು. ದಿನಕ್ಕೆ ಎಂಟು ಗಂಟೆ ದುಡಿದರೆ ೧೫ ರೂ. ಸಿಗುತ್ತಿತ್ತು. ಶಿಫ್ಟ್ ಕೆಲಸವಿಲ್ಲದಾಗ ಮುಲ್ತಾನಿನ ದರ್ಗಾಗಳಿಗೆ, ಫಕೀರರ ಬಳಿ ಹೋಗತೊಡಗಿದೆ. ಆಗಲೇ ನನಗೆ ಅಲೆಯುವ ಸೂಫಿಯಾಗಬೇಕೆಂಬ ಹಂಬಲ ಹುಟ್ಟಿದ್ದು.

ಈ ರೀತಿ ೧೦ ವರ್ಷ ಕಳೆಯಿತು. ಗಿರಣಿಯ ಕೆಲಸ ಮತ್ತು ಜೀವನಕ್ಕೆ ಹೊಂದಿಕೊಂಡುಬಿಟ್ಟಿದ್ದೆ. ಆಗಲೇ ಫ್ಯಾಕ್ಟರಿಯ ಅಪಘಾತದಲ್ಲಿ ನನ್ನ ತಮ್ಮ ತೀರಿಕೊಂಡ. ಅವನ ಹೆಂಡತಿ ನನ್ನ ಜೊತೆ ತುಂಬ ಕೆಟ್ಟದಾಗಿ ವರ್ತಿಸಿದಳು. ಅವನ ಹಣವನ್ನೆಲ್ಲ ನಾನೇ ಹಾಳು ಮಾಡಿದೆನೆಂದೂ, ನನ್ನ ದುರಾದೃಷ್ಟದಿಂದಲೇ ಅವನು ಸತ್ತಿದ್ದೆಂದೂ, ನಾನು ಮೂರ್ಖಳೂ, ಶಾಪಗ್ರಸ್ತಳೂ ಎಂದೂ, ಬಾಯಿಗೆ ಬಂದಂತೆ ಬೈದಳು. ನನ್ನ ಜೊತೆ ವಾಸಿಸುವ ಇಚ್ಛೆಯಿಲ್ಲವೆಂದು ಕೂಗಾಡಿದಳು. ಇಷ್ಟು ಕೇಳಿದ ಮೇಲೆ, ಮತ್ತಿನ್ನೇನು ಎಂದು ೪೦ನೆಯ ದಿನದ ಸೂತಕ ಕಳೆದಿದ್ದೇ ನಾನು ಮನೆ ಬಿಟ್ಟೆ.

ಅದಕ್ಕೆ ಮೊದಲು ಮುಲ್ತಾನಿನ ಶೇಕ್ ಬಹಾವುದ್ದೀನ್ ಝಕಾರಿಯಾ ದರ್ಗಾಕ್ಕೆ ಹೋಗಿದ್ದೆ. ಆ ರಾತ್ರಿ ಒಂದು ಕನಸಾಯಿತು. ಉದ್ದನೆಯ ಗಡ್ಡದ ವೃದ್ಧನೊಬ್ಬ ನನ್ನ ಹತ್ತಿರ ಬಂದು, ‘ನೀನೀಗ ಒಂಟಿಯಲ್ಲವೆ? ಹೆದರಬೇಡ, ನಾನು ನಿನ್ನನ್ನು ರಕ್ಷಿಸುವೆ. ಒಂದು ರೈಲು ಹತ್ತು. ಅದು ನಿನ್ನನ್ನು ನನ್ನ ಬಳಿ ತರುತ್ತದೆ. ಟಿಕೆಟ್ ಕೂಡಾ ಬೇಕಿಲ್ಲ. ಎಲ್ಲ ನಾನೇ ವ್ಯವಸ್ಥೆ ಮಾಡುತ್ತೇನೆ’ ಎಂದಂತಾಯಿತು.

ಕನಸಿನಲ್ಲಿ ಹೇಳಿದಂತೇ ನಡೆದುಕೊಂಡೆ. ಟಿಕೆಟ್ ಇಲ್ಲದೇ, ಕೈಯಲ್ಲಿ ಕಾಸಿಲ್ಲದೇ, ಪ್ರಯಾಣಿಸಿದರೂ ಊಟತಿಂಡಿಗೇನೂ ತೊಂದರೆಯಾಗಲಿಲ್ಲ. ಉರುಸ್ ನಡೆಯುವ ಸಮಯಕ್ಕೆ ಷೆಹ್ವಾನ್ ಷರೀಫ್ ತಲುಪಿದೆ. ‘ದಮ್ ದಮ್ ಮಸ್ತ್ ಖಲಂದರ್’ ಎಂದು ಹಾಡುತ್ತಾ ಸಾವಿರಾರು ಜನ ಪ್ರಯಾಣಿಸುತ್ತಿದ್ದರು. ಫಕೀರರೊಬ್ಬರು ಇದು ನಿನ್ನ ರಕ್ಷೆಗೆ ಎಂದು ಪದಕವೊಂದನ್ನು ಕೊಟ್ಟರು. ಅದರಲ್ಲಿದ್ದ ಚಿತ್ರವು ನನಗೆ ಕನಸಿನಲ್ಲಿ ಕಂಡ ವೃದ್ಧರದೇ ಆಗಿತ್ತು. ಅವರೇ ಲಾಲ್ ಷಹಬಾಜ್ ಖಲಂದರ್. ಹೀಗೆ ಷೆಹ್ವಾನ್ ಷೆರೀಫ್ ತಲುಪಿದ ನಾನು ವರ್ಷಕ್ಕೊಮ್ಮೆ ಬಿಟ್‌ಷಾದಲ್ಲಿ ಶಾಹ್ ಅಬ್ದುಲ್ ಲತೀಫ್ ಉರುಸಿಗೆ ಹೋಗುವುದು ಬಿಟ್ಟರೆ ಮತ್ತೆಲ್ಲೂ ಹೋಗದೇ ಇಲ್ಲೇ ಕಾಲ ಕಳೆಯುತ್ತಿದ್ದೇನೆ. ನನಗೀಗ ಲಾಲ್ ಖಲಂದರ್ ಬಾಬಾನೇ ಎಲ್ಲವೂ, ಎಲ್ಲರೂ..’


(ಶೆಹ್ವಾನ್ ಶರೀಫ್ - ಲಾಲ್ ಶಾಬಾಜ್ ಉರುಸ್)

(ಧಮಾಲ್ ನರ್ತನ)

ಡ್ಯಾಲ್‌ರಿಂಪಲ್ ಗಮನಿಸಿರುವಂತೆ, ಪಾಕಿಸ್ತಾನದ ಸಿಂಧ್ ಪ್ರಾಂತ್ಯವು ತುಂಬ ಹಿಂದುಳಿದ ಮರುಭೂಮಿ ಪ್ರದೇಶ. ಜಮೀನ್ದಾರೀ ಪಳೆಯುಳಿಕೆಯ ಭೂಮಾಲೀಕರ ಕೈಕೆಳಗೆ ಸಾವಿರಾರು ಜನ ಜೀತಕ್ಕಿರುವ, ಬಾಂಡೆಡ್ ಲೇಬರ್‌ಗಳಿರುವ ಸ್ಥಳ. ಈ ಪ್ರದೇಶದ ಭೌಗೋಳಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಸರ್ಕಾರಕ್ಕೆ ಒಂದು ಸವಾಲಾಗಿದ್ದರೆ, ಅವು ಸೃಷ್ಟಿಸಿರುವ ಹಾಗೂ ಮುಖ್ಯವಾಹಿನಿಯ ಸಮಾಜ ಮತ್ತು ಧರ್ಮದಿಂದ ಹೊರದೂಡಲ್ಪಟ್ಟ ಢಕಾಯಿತರು - ಧಾರ್ಮಿಕ ಪಂಥ ಪಂಗಡಗಳಿಗೆ ಇದು ಸುರಕ್ಷಿತ ಸ್ವರ್ಗವೂ ಆಗಿದೆ. ಈ ಎಲ್ಲ ಕಾರಣಗಳಿಂದ ಸಿಂಧ್ ಪ್ರಾಂತ್ಯವು ಹೇಗೆ ಹಿಂದೂ ಭಾರತ ಮತ್ತು ಮುಸ್ಲಿಂ ಮಧ್ಯಪ್ರಾಚ್ಯದ ನಡುವೆ ಭೌಗೋಳಿಕವಾಗಿ ಸೇತುವೆಯಾಗಿದೆಯೋ ಹಾಗೆಯೇ ಸಾಮಾಜಿಕವಾಗಿಯೂ ಹಿಂದೂ ಮುಸ್ಲಿಂ ಬಾಂಧವ್ಯ ಸಾರಿದ ಹಲವು ಸೂಫಿ ಸಂತರ ನಾಡಾಗಿದೆ. ಬರಡು ಮರುಭೂಮಿಯ ಧಗೆಯಲ್ಲಿ ದಕ್ಷಿಣ ಏಷಿಯಾದ ಎರಡು ಪ್ರಬಲ ಧರ್ಮಗಳ ನಡುವಿನ ತಿಕ್ಕಾಟಕ್ಕೆ ಕೊನೆಹಾಡುವ ಯತ್ನಗಳು ಜರುಗಿದ್ದು ಅಲ್ಲಿರುವ ಸೂಫಿ ದರ್ಗಾಗಳಿಂದ ತಿಳಿದುಬರುತ್ತದೆ.

‘ಶಿವ ಸ್ಥಾನ’ವಾಗಿದ್ದ, ಶೈವ ಕವಿ ಭರ್ತೃಹರಿಯ ಸ್ಥಳವಾಗಿದ್ದ ಜಾಗವು ಇಂದು ‘ಷೆಹ್ವಾನ್ ಷರೀಫ್’ ಆಗಿದೆ. ಲಾಲ್ ಶಾಹ್‌ಬಾಜ್ ಖಲಂದರ್ ಅವರ ದರ್ಗಾ ಇರುವ ಈ ಜಾಗಕ್ಕೆ ಹಿಂದೂ, ಮುಸ್ಲಿಂ ಭಕ್ತರಿಬ್ಬರೂ ನಡೆದುಕೊಳ್ಳುತ್ತಾರೆ. ಖಲಂದರ್ ಬಾಬಾನನ್ನು ‘ಜೂಲೆ ಲಾಲ್’ (ಸಿಂಧೂ ನದಿ ದೇವರು) ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ. ಮೊನ್ನೆಮೊನ್ನಿನ ತನಕ ದರ್ಗಾದಲ್ಲಿ ಶಿವಲಿಂಗವೊಂದು ಇದ್ದು, ಈಗದು ಬೀಗ ಹಾಕಿಟ್ಟ ಕೋಣೆ ಸೇರಿದೆ. ಯಾವ್ಯಾವ ವೈದ್ಯರಿಂದಲೂ ಗುಣ ಕಾಣದ ಖಾಯಿಲೆಗಳು ಖಲಂದರ್ ಬಾಬಾನಿಂದ ಗುಣ ಕಂಡಿದೆ ಎನ್ನುತ್ತ ಭಕ್ತರು ಗಡಿ ದಾಟಿ ಷೆಹ್ವಾನ್ ಷರೀಫ್‌ಗೆ ಹೋಗುತ್ತಾರೆ. ನಾಗಾ ಸಾಧುಗಳು ಮತ್ತು ತಾಂತ್ರಿಕರ ರೀತಿಯಲ್ಲಿಯೇ ರುದ್ರಾಕ್ಷಿ ಧರಿಸಿ ತಪಸ್ಸು ಮಾಡಿದ, ತಲೆಕೆಳಗಾಗಿ ಧ್ಯಾನ ಮಾಡಿದ, ಸೂಳೆಗೇರಿಗೆ ಹೋಗಿ ಅವರ ಮನಸ್ಸನ್ನೂ ಪರಿವರ್ತನೆ ಮಾಡಿದ ಹಠಯೋಗಿ ಖಲಂದರ್ ಬಾಬಾ ಪ್ರೇಮರಾಹಿತ್ಯದ ಖಾಯಿಲೆಗೆ ಒಂದು ಮದ್ದಾಗಿ ಆ ಪ್ರದೇಶಕ್ಕೆ ದೊರೆತವರು.

ಸೂಫಿ




ಇರಾನಿನ ತಬ್ರೀಜ್‌ನವರಾದ ಷೇಕ್ ಉಸ್ಮಾನ್ ಮರ‍್ವಂಡಿ ಹೆಚ್ಚುಕಡಿಮೆ ಜಲಾಲುದ್ದೀನ್ ರೂಮಿ ಆಫ್ಘನಿಸ್ತಾನ ತೊರೆದು ಟರ್ಕಿ ಸೇರಿದ ಕಾಲದಲ್ಲೇ ಮಂಗೋಲರ ಆಕ್ರಮಣಕ್ಕೆ ತುತ್ತಾಗಿ ಇರಾನನ್ನು ತೊರೆದರು. ಅವರು ಮೊದಲಿನಿಂದ ಪವಿತ್ರ ಹುಚ್ಚನ ತರಹ ಲೋಕರೂಢಿಯನ್ನು ತೊರೆದು ತಿರುಗಿದವರು. ಸಮಾಜದ ತಿರಸ್ಕಾರ ಮತ್ತು ಅಪಹಾಸ್ಯ ನಮ್ಮ ವ್ಯಕ್ತಿತ್ವದ ಶುದ್ಧತೆಗೆ ಅಳತೆಗೋಲು ಎಂದು ತಿಳಿದು, ಷರಿಯತ್ ಹಾಗೂ ಸಮಾಜದ ಎಲ್ಲ ಕಟ್ಟಳೆಗಳನ್ನೂ ಧಿಕ್ಕರಿಸಿದವರು. ತನ್ನ ಅನುಯಾಯಿಗಳಿಗೆ ಹಾಡು ಮತ್ತು ನರ್ತನದಿಂದ ಎಲ್ಲವನ್ನು ಮರೆತು ಭಗವಂತನಲ್ಲಿ ಲೀನವಾಗುವಂತೆ ಕರೆಯಿತ್ತವರು. ಬೆಂಕಿ ಎದುರು ಕತ್ತಿಯೆದುರು ಪ್ರಾಣವನ್ನು ಪಣಕ್ಕಿಟ್ಟು ಆಧ್ಯಾತ್ಮ ಸವಿದ ಹಠಯೋಗದ ದಾರಿಯವರು. ತನ್ನನ್ನೇ ತಾನು ಶಿಕ್ಷಿಸಿಕೊಳ್ಳುತ್ತಾ ಆಧ್ಯಾತ್ಮಿಕ ಅನುಭೂತಿ ಪಡೆಯಲು ಹಾಡು ನರ್ತನಗಳ ಮೊರೆ ಹೊಕ್ಕವರು.

ಧರ್ಮದ ನಡುವಿನ ಸೇತುವೆಯಂತೆ, ಗಾಯಕ್ಕೆ ತಂಪು ನೀಡುವ ಮುಲಾಮಿನಂತೆ ಹುಟ್ಟಿದ ಸೂಫಿ ಇಂದು ಅಪಾಯದಲ್ಲಿದೆ. ಸೂಫಿಗಳ ತತ್ವವನ್ನು ಇಸ್ಲಾಮಿನ ಮೌಲ್ಯ ಪ್ರತಿಪಾದಕರು ಒಪ್ಪುವುದಿಲ್ಲ. ಗೋರಿಪೂಜೆ, ಹಾಡು, ನೃತ್ಯ, ಹೆಂಗಸರು ದರ್ಗಾಗಳಿಗೆ ಬರುವುದು ಇವೆಲ್ಲ ಇಸ್ಲಾಮಿಗೆ ವಿರುದ್ಧ ಎಂದೇ ಅವರು ಭಾವಿಸುತ್ತಾರೆ. ದೇವ್‌ಬಂದ್‌ನವರು, ತಬ್ಲೀಗಿನವರು ಹಾಗೂ ಆಧುನಿಕ ವಹಾಬಿಗಳು ಸೂಫಿಗೆ ವಿರುದ್ಧವಾಗಿದ್ದಾರೆ.

ಡ್ಯಾಲ್‌ರಿಂಪಲ್ ದಾಖಲಿಸುವಂತೆ, ಸ್ವಾತಂತ್ರದ ಸಮಯದಲ್ಲಿ ಇದ್ದುದಕ್ಕಿಂತ ೨೭ ಪಟ್ಟು ಹೆಚ್ಚು ಮದ್ರಸಾಗಳು ಇಂದು ಪಾಕಿಸ್ತಾನದಾದ್ಯಂತ ಇವೆ. ಎಂಟು ಸಾವಿರಕ್ಕಿಂತ ಹೆಚ್ಚು ಇರುವ ಮದ್ರಸಾಗಳಲ್ಲಿ ಬಹುಪಾಲು ದರ್ಗಾಗಳ ಬಳಿ ತಲೆಯೆತ್ತುತ್ತಿವೆ. ಅವು ದರ್ಗಾಗಳು ಇಸ್ಲಾಮಿ ಸಂಸ್ಕೃತಿಯವಲ್ಲ ಎಂದು ಅಲ್ಲಗಳೆಯುತ್ತವೆ. ಷೆಹ್ವಾನ್ ಷರೀಫ್ ಬಳಿ ದೇವಬಂದೀ ಮದ್ರಸಾವೊಂದು ತಲೆಯೆತ್ತಿದೆ. ಅದಕ್ಕೆ ಹೆಚ್ಚು ಮಕ್ಕಳು ದಾಖಲಾಗಿಲ್ಲದಿದ್ದರೂ ತಾಳ್ಮೆಯಿಂದ ಕಾಯಬೇಕೆಂದು ಮದ್ರಸಾದ ಗುರು ಸಲೀಮುಲ್ಲಾ ಹೇಳುತ್ತಾರೆ. ಬಡ ಮಕ್ಕಳಿಗೆ ಉಚಿತ ಊಟ ಬಟ್ಟೆ ಕೊಟ್ಟು ಮೊದಲು ಮದ್ರಸಾಗಳತ್ತ ಅವರನ್ನು ಸೆಳೆಯಬೇಕು. ನೈಜ ಇಸ್ಲಾಂ ಎಂದರೇನೆಂದು ಅವರಿಗೆ ತಿಳಿಸಿ ವಿದ್ಯಾಭ್ಯಾಸ ಮಾಡಿಸಬೇಕು. ಒಮ್ಮೆ ಮಕ್ಕಳಿಗೆ ಸೂಫಿ ಇಸ್ಲಾಮಿಕ್ ಅಲ್ಲ ಎಂದು ತಿಳಿದುಬಿಟ್ಟರೆ ಉಳಿದ ಬದಲಾವಣೆಯೆಲ್ಲ ತಂತಾನೇ ಆಗಿ ಸತ್ಯ ಮಾತ್ರ ವಿಜೃಂಭಿಸುತ್ತದೆ ಎಂಬುದು ಸಲೀಮುಲ್ಲಾರ ನಂಬಿಕೆ. ಅವರ ಮಾತುಗಳಲ್ಲಿ ಹೇಳುವುದಾದರೆ:

‘ಸಂಗೀತ ಮನಸ್ಸನ್ನು ಚಂಚಲಗೊಳಿಸುತ್ತದೆ. ಅದು ಪಾಪಕರ, ನಿಷಿದ್ಧ. ಹಾಗಾಗಿ ಸಂಗೀತಗಾರರು ತಪ್ಪಿತಸ್ಥರು. ಕುರಾನ್ ಸತ್ತ ವ್ಯಕ್ತಿಗೆ ಪೂಜೆ ಮಾಡಿರೆಂದು, ಪ್ರಾರ್ಥನೆ ಸಲ್ಲಿಸಿರೆಂದು ಎಲ್ಲೂ ಹೇಳುವುದಿಲ್ಲ. ನಿಜವಾದ ಮುಸ್ಲಿಮ ಗೋರಿಗೆ ಹೋಗದೆ ಮಸೀದಿಗೆ ಹೋಗಬೇಕು. ಸತ್ತವನನ್ನು ಬೇಡುವುದಲ್ಲ, ಬದಲಿಗೆ ನೇರವಾಗಿ ದೇವರ ಬಳಿಯೇ ಬೇಡಿಕೊಳ್ಳಬೇಕು. ಸೂಫಿ ಇಸ್ಲಾಂ ಅಲ್ಲ. ಅದೊಂದು ತೆರನ ಮಾಟ, ಜಾದೂ. ಅದು ಮೂಢನಂಬಿಕೆ, ವಿಕೃತಿ, ಅಜ್ಞಾನ, ಮೂರ್ಖತನ ಈ ಎಲ್ಲದರ ಮಿಶ್ರಣ. ನಿರಕ್ಷರಿ ಫಕೀರರು ದೊಡ್ಡ ವಿದ್ವಾಂಸರಂತೆ ಮಾತನಾಡುತ್ತಾರೆ, ಆದರೆ ಅವರಿಗೆ ಕುರಾನ್ ಓದಲೂ ಬರುವುದಿಲ್ಲ. ಇದು ಹಿಂದೂ ಧರ್ಮದ ಸೋಂಕಿನಿಂದ ಹುಟ್ಟಿದ್ದು. ನಿಧಾನವಾಗಿಯಾದರೂ ಇದನ್ನು ತೆಗೆದು ಇಸ್ಲಾಮನ್ನು ಶುದ್ಧಗೊಳಿಸಬೇಕು.

ಸೂಫಿಯು ಸ್ವರ್ಗ ನಿನ್ನೊಳಗೇ ಇದೆಯೆನ್ನುತ್ತದೆ. ನಮ್ಮೊಳಗೇ ಸ್ವರ್ಗವೆ? ಇದೊಂದು ಭ್ರಮೆ ಮತ್ತು ಕನಸಷ್ಟೆ. ಕುರಾನಿನಲ್ಲಿ ಈ ಬಗ್ಗೆ ಯಾವ ಪುರಾವೆಯೂ ಇಲ್ಲ. ಮನುಷ್ಯನ ಹೃದಯ ದೇವನಿಗಾಗಿ ಬಹಳ ಸಣ್ಣದು. ಇನ್ನು ಸ್ವರ್ಗದ ಮಾತೆಲ್ಲಿ ಬಂತು? ಸ್ವರ್ಗ ಮನುಷ್ಯನ ಹೊರಗಿದೆ. ಅದು ನಮಗಾಗಿ ದೇವರ ಸೃಷ್ಟಿ.

ನೈಜ ಇಸ್ಲಾಂ ಎಂದರೆ ಶಿಸ್ತು. ಅದು ಮನಸ್ಸಿಗೆ ಬಂದ ಹಾಗೆ ವರ್ತಿಸುವುದಲ್ಲ. ಹೇಗೆ ತಿನ್ನಬೇಕು, ತೊಳೆಯಬೇಕು, ಮೀಸೆ ಹುರಿ ಮಾಡಿಕೊಳ್ಳಬೇಕು ಎಂಬುದೆಲ್ಲರ ಬಗ್ಗೆಯೂ ನೀತಿನಿಯಮಗಳಿವೆ. ಪ್ರವಾದಿಯವರು ಹೇಳಿರುವ ಈ ಕಟ್ಟಳೆಗಳನ್ನೆಲ್ಲ ಅನುಸರಿಸದ ಸೂಫಿಗಳು ಬರಿಯ ಪ್ರೀತಿ ಪ್ರೇಮವೆಂದು ಬಡಬಡಿಸಿದರೆ ಅದು ಅಸಮಂಜಸ.

ನೆನಪಿಡಿ. ತೀವ್ರವಾದಿಯಾದ ತಾಲಿಬಾನ್ ಈಗ ಬರುತ್ತಿದೆ. ಜನರೂ ಈಗಿರುವ ವ್ಯವಸ್ಥೆಯ ಬಗ್ಗೆ ಬೇಸತ್ತಿದ್ದಾರೆ. ಇಂಥ ಸಮಯದಲ್ಲಿ ತಾಲಿಬಾನ್ ಬಂದರೆ ಮತ್ತೆ ಖಲೀಫರ ಆಡಳಿತ ಬರುತ್ತದೆ. ಆಗ ಈ ಎಲ್ಲ ದರ್ಗಾಗಳೂ ಧ್ವಂಸವಾಗುವುದನ್ನು ನೋಡುತ್ತ ನಿಲ್ಲಬೇಕಷ್ಟೇ.’

ತರುಣ ಶಿಕ್ಷಕ ಸಲೀಮುಲ್ಲಾ ಸೂಫಿಸಂ ಬಗೆಗೆ ಹೀಗೆ ಇಷ್ಟು ನಿಷ್ಠುರವಾಗಿ ಮಾತನಾಡುತ್ತ ಬರಲಿರುವ ಸುದಿನಗಳ ಬಗೆಗೆ ಸಂತಸಪಡುತ್ತ ಇರುವಾಗಲೇ, ಭವಿಷ್ಯದ ಮುನ್ಸೂಚನೆಯೋ ಎಂಬಂತೆ ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ರೆಹಮಾನ್ ಬಾಬಾ ಅವರ ದರ್ಗಾ ಇತ್ತೀಚೆಗೆ ಅರೇಬಿಕ್ ಮದ್ರಸಾದ ವಿದ್ಯಾರ್ಥಿಗಳಿಂದ ಧ್ವಂಸಗೊಳಿಸಲ್ಪಟ್ಟಿತು. ಯಾರಿಗೂ ಪ್ರಾಣಾಪಾಯವಾಗಲಿಲ್ಲ ಅಷ್ಟೆ. ಆದರೂ ತಲೆತಲೆಮಾರುಗಳಿಂದ ಆ ದರ್ಗಾದಲ್ಲಿ ಹಾಡು ಹೇಳಿಕೊಂಡು ಬಂದಿದ್ದ ಕುಟುಂಬ ಮತ್ತು ಸಂತನನ್ನು ನಂಬಿದ್ದ ಪಾಶ್ತೋ ಬುಡಕಟ್ಟು ಜನರು ಇದರಿಂದ ನೆಲೆ ಕಳೆದುಕೊಡ ಅತಂತ್ರ ಸ್ಥಿತಿ ತಲುಪಿ ನೆಮ್ಮದಿ ಕಳೆದುಕೊಂಡಿದ್ದಾರೆ.


(ಶಾ ಅಬ್ದುಲ್ ಲತೀಫ್)
ಆದರೆ ಲಾಲ್ ಪೇರಿ ಈ ಅಪಾಯದ ಬಗೆಗೆ ಹೆದರುವುದಿಲ್ಲ. ಸಿಂಧ್ ಪ್ರಾಂತ್ಯದ ಜನ ಖಲಂದರ್ ಬಾಬಾನ ಮೇಲಿನ ನಂಬಿಕೆ ಎಂದೂ ಕಳೆದುಕೊಳ್ಳುವುದಿಲ್ಲ ಎನ್ನುತ್ತಾಳೆ. ತನ್ನ ಇಂದಿನ ಕರ್ತವ್ಯವೆಂದರೆ ಖಲಂದರ್ ಬಾಬಾ ಹಾಗೂ ಶಾಹ್ ಅಬ್ದುಲ್ ಲತೀಫ್ ಅವರ ದರ್ಗಾ ರಕ್ಷಿಸುವುದೇ ಆಗಿದೆ ಎನ್ನುತ್ತಾಳೆ. ಅವಳ ಪ್ರಕಾರ: ‘ಈ ಮುಲ್ಲಾಗಳು, ವಹಾಬಿಗಳು, ತಬ್ಲೀಗಿಗಳು, ಕಾನೂನು ಪುಸ್ತಕ ತಿರುವುತ್ತ, ಯಾರ ಗಡ್ಡ ಎಷ್ಟು ಉದ್ದ ಬೆಳೆಸಬೇಕೆಂದು ಕುರಾನಿನಲ್ಲಿ ಹೇಳಿದೆ ಎಂದು ವಾದಿಸುತ್ತಾ ಪ್ರವಾದಿಯವರ ನಿಜವಾದ ಸಂದೇಶ ಮರೆತಿದ್ದಾರೆ. ಸೈತಾನ ಮತ್ತು ಮುಲ್ಲಾ ಇಬ್ಬರೂ ಒಂದೇ.’

ಷೆಹ್ವಾನ್ ಷರೀಫ್‌ಗೆ ಸನಿಹದಲ್ಲಿರುವ ಬಿಟ್‌ಷಾದಲ್ಲಿ ಮತ್ತೋರ್ವ ಸೂಫಿ ಗುರು ಶಾಹ್ ಅಬ್ದುಲ್ ಲತೀಫ್ ಅವರ ದರ್ಗಾ ಇದೆ. ಸಂತರ ಒಂದು ಹಾಡು ಲಾಲ್‌ಫೇರಿಯ ಮಾತುಗಳನ್ನೇ ಧ್ವನಿಸುತ್ತದೆ. ಅದು ಹೀಗಿದೆ:

  ‘ನಿನ್ನನ್ನು ಪಂಡಿತನೆಂದೇಕೆ
  ಕರೆದುಕೊಳ್ಳುವೆ ಓ ಮುಲ್ಲಾ?

  ಶಬ್ದಗಳ ಗೊಂಡಾರಣ್ಯದಲ್ಲಿ
  ಕಳೆದುಹೋಗಿರುವೆ.
  ಅಸಂಬದ್ಧ ಮಾತುಗಳನಾಡುತ್ತ
  ನಿನ್ನನ್ನೇ ಪೂಜಿಸಿಕೊಳ್ಳುತ್ತಿರುವೆ.
  ಕಣ್ತೆರೆದು ದೇವರನ್ನು ಅರಸುವ ಬದಲು
  ಧೂಳಿನ ರಾಶಿಗೆ ಹಾರಿ ಬೀಳುತ್ತಿರುವೆ.
  ನಾವು ಸೂಫಿಗಳು
  ಪವಿತ್ರ ಕುರಾನಿನ ಮಿದು ಮಾಂಸ ಪಡೆದಿದ್ದೇವೆ.
  ನೀವು ನಾಯಿಗಳು ಕಚ್ಚಾಡುತ್ತಿದ್ದೀರಿ
  ಪರಸ್ಪರ ಕಿತ್ತೆಳೆಯುತ್ತಿದ್ದೀರಿ
  ಒಣ ಎಲುಬು ಕಡಿಯುವ ಅವಕಾಶ ಸಿಗಲೆಂದು..’

ಪಾಕಿಸ್ತಾನದ ವಾಯವ್ಯ ಪ್ರಾಂತದ ಸೂಫಿ ಸಂತ, ಪಾಶ್ತೋ ಬುಡಕಟ್ಟಿನ ಕವಿ, ರೆಹಮಾನ್ ಬಾಬಾ ಹಿಂಸೆಯನ್ನು ವಿರೋಧಿಸುವ, ಸಹಿಷ್ಣುತೆಯ ಕುರುಹಾಗಿರುವ ಸೂಫಿಯ ಸಾರವನ್ನೇ ತಮ್ಮ ಒಂದು ಉಕ್ತಿಯಲ್ಲಿ ಹೇಳಿಬಿಡುತ್ತಾರೆ:

   ನಾನೊಬ್ಬ ಪ್ರೇಮಿ, ಪ್ರೇಮದ ವ್ಯಾಪಾರಿ.
   ಹೂವನ್ನು ಬಿತ್ತು: ನಿನ್ನ ಸುತ್ತ ಉದ್ಯಾನ ಮೈದಳೆಯುತ್ತದೆ.
   ಮುಳ್ಳನ್ನು ಬಿತ್ತದಿರು: ಅವು ನಿನ್ನ ಕಾಲನ್ನೇ ಚುಚ್ಚುತ್ತವೆ.
   ನಮದೆಲ್ಲ ಒಂದೇ ದೇಹ.
   ಅವನ ಹಿಂಸಿಸಿದರೆ ನಮ್ಮ ದೇಹದಲ್ಲಿ ಗಾಯ.

ಷೆಹ್ವಾನ್ ಷರೀಫ್ ಮತ್ತೊಬ್ಬ ಸೂಫಿ ಕವಿ, ಮುಘಲ್ ಯುವರಾಜ ದಾರಾ ಶುಕೋನ ಗುರು ಮಿಯಾ ಮೀರ್‌ನ ಊರೂ ಹೌದು. ಹದಿನೇಳನೇ ಶತಮಾನದ ದಾರಾ ಶುಕೋ ಹಿಂದೂ ಮುಸ್ಲಿಂ ಬಾಂಧವ್ಯಕ್ಕಾಗಿ ಇನ್ನಿಲ್ಲದಂತೆ ಶ್ರಮಿಸಿದ, ಸೋದರ ಔರಂಗಜೇಬನಿಂದ ಹತ್ಯೆಗೀಡಾದ ಸೂಕ್ಷ್ಮ ಮನದ ಕವಿ. ಆತ ಹೀಗೆ ಬರೆಯುತ್ತಾನೆ:

   ಓ ದೇವರೇ,
   ನೀನು ಮೆಕ್ಕಾದ ಕಾಬಾದಲ್ಲಿರುವೆ
   ಸೋಮನಾಥದ ಲಿಂಗದಲ್ಲೂ ಇರುವೆ
   ಮಠದಲ್ಲಿರುವೆ
   ಪಡಖಾನೆಯಲ್ಲೂ ಇರುವೆ.

   ನೀನು ಒಮ್ಮೆಲೇ
   ದೀಪ ಮತ್ತು ಪತಂಗ
   ಮದಿರೆ ಮತ್ತು ಬಟ್ಟಲು
   ಸಂತ ಮತ್ತು ಮೂರ್ಖ
   ಸ್ನೇಹಿತ ಮತ್ತು ಅಪರಿಚಿತ
   ಗುಲಾಬಿ ಮತ್ತು ಕೋಗಿಲೆ
   ಎಲ್ಲವೂ ಆಗಿರುವೆ.


(ದಾರಾ ಶಿಕೊ ಮತ್ತು ಮಿಯಾ ಮಿರ್)

ಸೂಫಿ ತತ್ವದ ಅನುಯಾಯಿ, ಲಾಲ್ ಪೇರಿಯ ಗುರು ಮತ್ತು ಸ್ನೇಹಿತ ಎಲ್ಲವೂ ಆಗಿರುವ ಸೈನ್ ಫಕೀರ್ ಸೂಫಿಯೆಂದೊಡನೆ ಉತ್ಸಾಹದಿಂದ ಮಾತನಾಡುತ್ತಾರೆ. ಅವರ ಪ್ರಕಾರ,

‘ಸೂಫಿ ವಚನಗಳು, ಕಾವ್ಯಗಳು ಕುರಾನಿನ ಎಲ್ಲ ಮೌಲ್ಯವನ್ನೊಳಗೊಂಡಿವೆ. ಕುರಾನನ್ನು ಅರ್ಥೈಸುವುದು ಸುಲಭವಲ್ಲ. ಹಾಗಾಗಿ ಸಾಧಾರಣ ಮನುಷ್ಯರು ಪ್ರವಾದಿಯ ನಿಜ ಸಂದೇಶ ತಿಳಿದೇ ಇಲ್ಲ. ಸೂಫಿಗಳು ಮಾತ್ರ ಸತ್ಯದ ದಾರಿ ತಿಳಿದಿದ್ದಾರೆ, ಅದೇ ಪ್ರೇಮದ ದಾರಿ.

ಮುಲ್ಲಾಗಳು ವೈಯುಕ್ತಿಕ ಕಾರಣಗಳಿಗಾಗಿ ಪ್ರವಾದಿಯ ಮಾತುಗಳನ್ನು ತಿರುಚುತ್ತಾರೆ. ಅವರಂಥ ಕುರುಡರಿಗೆ ಬೆಳಗುವ ಸೂರ್ಯನೂ ಕಾಣಿಸುವುದಿಲ್ಲ. ಅದೊಂದು ಕ್ರೂರ ಜಾತಿ. ಅವರಿಗೆ ಮಾನವ ದೌರ್ಬಲ್ಯಗಳು ಅರ್ಥವಾಗುವುದಿಲ್ಲ. ಈ ಪ್ರಪಂಚದಲ್ಲಿ ಎಲ್ಲರೂ ಪಾಪ ಮಾಡುತ್ತಾರೆ. ಮಾನವ ದೌರ್ಬಲ್ಯವೆಂದರೇನೆಂದು ತಿಳಿದ ಸೂಫಿಗಳು ಅದಕ್ಕೆ ಕ್ಷಮೆ ನೀಡುತ್ತಾರೆ. ಜನ ಕ್ಷಮಿಸುವವರನ್ನು ಮೆಚ್ಚುತ್ತಾರೆ. ಜಿಯಾ ಲತೀಫ್. ಲತೀಫ್ ಬಾಬಾ ಹೇಳುವ ಹಾಗೆ,

   ಒಳ್ಳೆಯ ವಸ್ತು ವಿಷಯಗಳೊಂದಿಗೆ ಮಾತ್ರ ವ್ಯವಹರಿಸು.
   ಕಲ್ಲಿದ್ದಲು ಖರೀದಿಸಿದರೆ ಮೈಯೆಲ್ಲ ಕರಿಧೂಳು
   ಪುನುಗಿನ ವ್ಯವಹಾರದಲ್ಲಿ ಪರಿಮಳ ಎಲ್ಲವೂ.

ವಹಾಬಿಗಳು ಲಾಭಕ್ಕಾಗಿ ನಂಬಿಕೆಯನ್ನು ಮಾರುವ ವ್ಯಾಪಾರಿಗಳು. ನರಕದ ಬೆಂಕಿ ಹರಡುವ ಅವರು ನಿಜವಾದ ಮುಸ್ಲಿಮರಲ್ಲ. ಆದರೆ ಸೂಫಿ ಎಲ್ಲರನ್ನೂ ಪ್ರೀತಿಸುತ್ತದೆ - ಧರ್ಮಭ್ರಷ್ಟ, ಜಾರಿದ ಹೆಣ್ಣು, ಬಡವ, ಸಿರಿವಂತ, ಮುಸ್ಲಿಂ, ಮುಸ್ಲಿಂ ಅಲ್ಲದವ ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ.

ಮುಲ್ಲಾಗಳು ಜಿಹಾದ್‌ಗೆ ಕತ್ತಿ ಬಳಸುತ್ತಾರೆ. ಆದರೆ ನಿಜವಾದ ಜಿಹಾದ್ ನಡೆಯಬೇಕಾದದ್ದು ನಮ್ಮೊಳಗೆ. ನಮ್ಮ ಆಸೆಗಳ ಮೇಲೆ ಜಯ ಸಾಧಿಸಲು ಹೋರಾಡಬೇಕು. ದುಷ್ಟತನ ನಮ್ಮ ಹೃದಯದೊಳಗೆ ಸೃಷ್ಟಿಸುವ ನರಕದ ವಿರುದ್ಧ ಹೋರಾಡಬೇಕು. ಕತ್ತಿಯಿಂದ ಮಾಡುವ ಜಿಹಾದ್ ಕೀಳು ಮಟ್ಟದ್ದು. ನಿನ್ನೊಳಗೆ ನೀನೇ ಹೋರಾಡುವುದು ನಿಜವಾದ ಜಿಹಾದ್. ಲತೀಫ್ ಬಾಬಾ ಹೇಳಿದಂತೆ ಕಾಫಿರರನ್ನು ಕೊಲ್ಲಬೇಡ. ಮೊದಲು ನಿನ್ನ ಅಹಮನ್ನು ಕೊಲ್ಲು.

  ಒಂದು ನೆನಪಿಡು: ಎಲ್ಲವೂ ನಿನ್ನೊಳಗೇ ಇದೆ - ಸ್ವರ್ಗ ಮತ್ತು ನರಕ.’

***

ಹೀಗೆ ಭವಿಷ್ಯದ ಬಗೆಗೆ ಆಶಾವಾದಿಯಾದ ಫಕೀರ್ ಅಜ್ಜ ಮುಂದುವರೆದು, ‘ಒಳ್ಳೆಯ ಕೆಲಸವು ಒಳ್ಳೆಯ ಪ್ರತಿಫಲ ನೀಡುತ್ತದೆ. ಕೆಟ್ಟ ಕೆಲಸವು ಕೆಟ್ಟ ಫಲ ನೀಡುತ್ತದೆ. ಈ ವಹಾಬಿ ಜನ ಈಗ ತಮ್ಮನ್ನೇ ತಾವು ಕೊಂದುಕೊಳ್ಳುತ್ತಿದ್ದಾರೆ. ಇಸ್ಲಾಮಾಬಾದ್‌ನಲ್ಲಿ, ಸ್ವಾತ್‌ನಲ್ಲಿ, ಆಫ್ಘನಿಸ್ತಾನದಲ್ಲಿ, ಇರಾಕಿನಲ್ಲಿ ಈಗ ಇದೇ ಆಗುತ್ತಿದೆ. ಅವರ ಅಂತ್ಯದ ಶುರು ಇದು.’

ಸೈನ್ ಫಕೀರಜ್ಜನ ಭರವಸೆಯಂತೆ ‘ಅವರೇ’ ಅಂತ್ಯ ಕಾಣುತ್ತಾರೋ? ಲಾಲ್ ಫೇರಿಯ ಭಯವೇ ನಿಜವಾಗುವುದೋ? ಧಾರ್ಮಿಕ ಶುದ್ಧತೆಯ ಬಗೆಗೆ ಉಗ್ರ ನಿಲುವು ಹೊಂದಿದ ಸಂಪ್ರದಾಯವಾದಿಗಳ ಕೈ ಮೇಲಾಗುವುದೋ? ಸಹಿಷ್ಣುತೆಯ ಕುರುಹಾದ ಸೂಫಿ ವಿಜೃಂಭಿಸುವುದೋ?

ಉತ್ತರ ಕಾಲನ ಕೈಯಲ್ಲಿ..