Saturday 15 November 2014

ವೇಶ್ಯಾವೃತ್ತಿ: ದೀಪದ ಬೆಂಕಿಯೂ, ಪತಂಗವೂ..



ಚಿತ್ರ: ಪಿಕಾಸೊ

(೧)

ಸರಿಯಾಗಿ ಹತ್ತೂವರೆಗೆ ಅಲ್ಲಿರಬೇಕು. ಇವತ್ತು ಒಳ್ಳೆಯ ದಿನ, ಮೂರು ಅಪಾಯಿಂಟ್‌ಮೆಂಟುಗಳಿವೆ ಅಂದುಕೊಂಡಳು. ಮೂರೂ ಕಡೆ ಮುಗಿಸಿ ಸಂಜೆ ಐದೂವರೆಗೆ ಮನೆಗೆ ಹೊರಟುಬಿಡಬೇಕು. ಮಕ್ಕಳಿಗೆ ಟೆಸ್ಟ್ ನಡೆಯುತ್ತಿದೆ, ಓದಿಸಬೇಕು. ಅತ್ತೆಮಾವನ ಕೈಲಿ ಅದು ಸಾಧ್ಯವಿಲ್ಲ, ತಾನೇ ಹೋಗಬೇಕು. ಆಫೀಸಿಗೆ ಹೋಗುತ್ತಾಳೆ, ಒಳ್ಳೆಯ ಕೆಲಸಗಾರ್ತಿಯಾದ್ದರಿಂದ ಒಳ್ಳೆಯ ಸಂಬಳ ತರುತ್ತಾಳೆ ಎಂದು ಮನೆಯವರು ತಿಳಿದಿದ್ದಾರೆ. ಆದರೆ ತಾನು ಮಾಡುತ್ತಿರುವುದು ಸೆಕ್ಸ್‌ವರ್ಕ್ ಎಂದು ಹೋಟೆಲ್ ಕೆಲಸ ಮಾಡುವ ಗಂಡ ಮಾತ್ರ ಅರಿತಿದ್ದಾನೆ. 

ಆಕೆಯ ಭಯ ಇಷ್ಟೇ: ಪೊಲೀಸ್ ರೈಡ್‌ನಲ್ಲಿ ಸಿಕ್ಕಿಬಿದ್ದರೆ ಬಿಡುಗಡೆ ಮಾಡಲು ಆಧಾರ ಕಾರ್ಡು, ರೇಷನ್ ಕಾರ್ಡು ಮತ್ತಿತರ ಐಡೆಂಟಿಟಿ ಕಾರ್ಡ್ ಬೇಕೇಬೇಕೆನ್ನುತ್ತಾರೆ ಆಗ ತನ್ನ ಗುರುತು ಹತ್ತಿ ಮನೆಯಲ್ಲಿ ಮಕ್ಕಳಿಗೆಲ್ಲ ಅಮ್ಮನ ವೃತ್ತಿ ಗೊತ್ತಾಗಿಬಿಟ್ಟರೆ? ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ಈ ವೃತ್ತಿಯ ಕಷ್ಟ ತನಗೇ ಮುಗಿಯಬೇಕೆನ್ನುವುದು ಅವಳ ಮಹದಾಸೆ. 

ಪ್ರತಿ ಗಿರಾಕಿಗೆ ಬೆನ್ನುಹಾಕಿ ನಡೆಯುವಾಗಲೂ ಆದಷ್ಟು ಬೇಗ ಧಂಧೆ ಬಿಡಬೇಕೆನ್ನುವುದು ಸರಸರ ಚಲಿಸುವ ಅವಳ ಕಾಲುಗಳ ನಿರ್ಧಾರ.

(೨)

ಹೀಗೊಂದು ಬಯೋಡೇಟ್ರಾ: 

ಹೆಸರು: ನಿತ್ಯ ಸುಮಂಗಲಿ, ೨೫ ವರ್ಷ.
೯ನೇ ವರ್ಷ - ಅಪಹರಣ, ಮಾರಾಟ 
೧೦ನೇ ವರ್ಷ - ಅತ್ಯಾಚಾರ
೧೧ನೇ ವರ್ಷ - ಹಿಂಸೆ, ಹಸಿವು, ಹೊಡೆತ.
೧೨ನೇ ವರ್ಷ - ವೇಶ್ಯಾವೃತ್ತಿ
೧೩ನೇ ವರ್ಷ - ಮೊದಲ ಗರ್ಭಪಾತ
೧೮ನೇ ವರ್ಷ - ಎಚ್ಚೈವಿ ಪಾಸಿಟಿವ್, 
೨೫ನೇ ವರ್ಷ - ಬೀದಿ ಬದಿಗೆ ಮಾರುಕಟ್ಟೆ ವಿಸ್ತರಣೆ. ರೈಡ್‌ನಲ್ಲಿ ೨ ಸಲ ಬಂಧನ, ಬಿಡುಗಡೆ.

(೩)

ದೇವದಾಸಿಯರ ಕುರಿತ ತೆಲುಗಿನ ಅಜ್ಞಾತ ಕವಯಿತ್ರಿಯ ಸಾಲು:  

‘ನನ್ನ ಖ್ಯಾತಿ ಏನೆಂದರೆ, ನಾನು
ಸೂಳೆಯೆಂದು ಗುರುತಿಸಲ್ಪಟ್ಟಿದ್ದೇನೆ
ಹುಟ್ಟಾ ಸೂಳೆಯೆಂದು..
ನನ್ನ ನೋವಿನ ಕತೆ
ಈ ಸಂಸ್ಕೃತಿಯ ನಾಯಕನ ತಲೆಯನ್ನು 
ನಾಚಿಕೆಯಿಂದ
ಪಾತಾಳಕ್ಕೆ ಗದುಮಬಲ್ಲದು.
ಈ ದೇಶದ ಘನ ಇತಿಹಾಸದ
ಯಾವ ಅಧ್ಯಾಯದ ಯಾವ ಪುಟದಲ್ಲಿ
ನನ್ನ ಇತಿಹಾಸ ಬರೆಯುವಿರಿ ನೀವು?’


(೪)

ಆಕೆಯ ವಯಸ್ಸು ೨೩. ದೇಹಸೌಂದರ್ಯವನ್ನು ನೆಚ್ಚಿಕೊಂಡು ಸಿನಿಮಾ ಜಗತ್ತಿಗೆ ಬಂದು ಅವಕಾಶಗಳಿಗಾಗಿ ಪಡಬಾರದ ಪಾಡುಪಟ್ಟಳು. ಅಂತೂ ಕೆಲ ಧಾರಾವಾಹಿ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಳು. ಅವಕಾಶಕ್ಕೆ ಒದ್ದಾಡುತ್ತ, ಸಣ್ಣಪುಟ್ಟ ಪಾತ್ರ ಸಿಗಬೇಕಾದರೂ ಹಲ್ಲುಗಿಂಜಿ ನಿರ್ಮಾಪಕರ ಹಿಂದೆಮುಂದೆ ಓಡಾಡಿದಳು. ಥಳುಕಿನ ಜಗತ್ತು ಅಂದುಕೊಂಡಷ್ಟು ಕಾಸು ಹುಟ್ಟಿಸದೇ ರೋಸಿಹೋಗುತ್ತಿದ್ದಾಗ ಆ ‘ಆಫರ್’ ಬಂತು. ಗಂಟೆಗೆ ಒಂದು ಲಕ್ಷ. ಸೇಫ್ ಸೆಕ್ಸ್. ಎಲ್ಲ ಹೈ ಪ್ರೊಫೈಲ್ ಗಿರಾಕಿಗಳು. ಗುಪ್ತ. ಪೊಲೀಸ್ ರೈಡು ನಡೆಯುವ ಚೀಪ್ ಹೋಟೆಲುಗಳಲ್ಲ, ಎಲ್ಲ ಸ್ಟಾರ್ ಹೋಟೆಲುಗಳಲ್ಲಿ ಎನ್ನಲಾಯಿತು. ಲಕ್ಷ ಗಳಿಸುತ್ತ, ಸಂಸಾರದ ಪಿರಿಪಿರಿಯಿಲ್ಲದೆ ಕಾರು-ಮನೆ ಮಾಡಿಕೊಂಡು ‘ಸುಖ’ವಾಗಿಯೇ ಇದ್ದಳು. ನೀಗಲಾರದ ಒಂಟಿತನಕ್ಕೆ ಇತ್ತೀಚೆಗೆ ಕುಡಿತ, ಮಾದಕ ವಸ್ತುಗಳ ಬೆನ್ನು ಹತ್ತಿ ಅಲ್ಲೂ ‘ಸುಖ’ ಕಾಣುತ್ತ ಬದುಕಿದ್ದಳು. 

ಆದರೆ ಗಿರಾಕಿಯೊಬ್ಬ ಕಾಸು ಕೊಡಲು ಸತಾಯಿಸಿ ಪೊಲೀಸರಿಗೆ ಮಾಹಿತಿ ನೀಡಿ ರೈಡಿನ ನಾಟಕವಾದಾಗ ಅವಳ ಯಶಸ್ವಿ ಜೀವನದ ಕತೆ ಜಗಜ್ಜಾಹೀರಾಯಿತು. ಒಂದು ವಾರವಿಡೀ ಟಿವಿ ಪರದೆಯ ಮೇಲೆ ಅವಕುಂಠನವತಿಯಾದ ಅವಳ ಮುಖ ಹರಿದಾಡಿತು.

(೫)

ಅವನಿಗೆ ಹೆಣ್ಣುದೇಹಕ್ಕಿಂತ ಗಂಡುದೇಹಗಳ ಮೇಲೇ ಎಂಥದೋ ಮೋಹ. ಆದರೆ ಬಲಿಷ್ಟರಾದವರ ಹಿಂಸೆ, ಅತಿರೇಕ ಸಹಿಸುವುದು ಆ ಸೂಕ್ಷ್ಮಜೀವಿಗೆ ಕಷ್ಟ. ಅದಕ್ಕೇ ತುಂಬ ಚೂಸಿಯಾಗಿ ಹೊಸಬರನ್ನು, ಸಣ್ಣ ಹುಡುಗರನ್ನು ಆಯ್ದುಕೊಳ್ಳುತ್ತಾನೆ. ಬರಬರುತ್ತ ಬೆಂಗಳೂರಿನಲ್ಲಿ ಪುರುಷ ಸೆಕ್ಸ್ ವರ್ಕರ್‌ಗಳ ಸಂಖ್ಯೆ ಹೆಚ್ಚುತ್ತಿರುವುದು ಅವನಿಗೆ ಸಮಾಧಾನದ ವಿಷಯ. ಆದರೂ ತನ್ನ ಅಭಿರುಚಿ, ಪರ್ಸ್‌ಗೆ ಸರಿಹೊಂದುವಂತಹ ಜೋಡಿಯನ್ನು ಆಯ್ದುಕೊಳ್ಳಲು ಬಿಎಂ ಆಡ್ಸ್ ಸಹಾಯ ಮಾಡುತ್ತದೆ. ೧೪೦ ರೂ. ಕೊಟ್ಟು ಪತ್ರಿಕೆ ತೆರೆದರೆ ಸಾಕು. ಎಂತೆಂಥ ಮಾಲು ಎಲ್ಲೆಲ್ಲಿದೆ, ಎಷ್ಟು ದರ ಎಂಬಿತ್ಯಾದಿ ಬಿಸಿಬಿಸಿ ವಿವರಗಳು ಸಂಪರ್ಕ ಸಂಖ್ಯೆಯ ಸಮೇತ ದೊರೆಯುತ್ತದೆ.

ಸಂಸಾರ ಜಂಜಾಟಕ್ಕಿಂತ ಬೇಕಾದಾಗ ಹಣಕೊಟ್ಟು ಹೀಗೆ ಸುಖಪಡೆಯುವುದರಲ್ಲಿ ಅವನಿಗೆ ಸಂಪೂರ್ಣ ತೃಪ್ತಿಯಿದೆ. ಸದ್ಯಕ್ಕೆ ಅವನ ಸಮಸ್ಯೆ ಅಕಸ್ಮಾತ್ ರೈಡಿನಲ್ಲಿ ಅಥವಾ ಮಾಲಿನ ತರಲೆಯಲ್ಲಿ ಸಿಕ್ಕಿಬಿದ್ದು ತಾನು ಹೀಗೆ ಎಂದು ಜಗಜ್ಜಾಹೀರಾದರೆ ಎನ್ನುವುದಷ್ಟೇ ಆಗಿದೆ.

***

ಮೇಲಿನ ನಿರೂಪಣೆಗಳನ್ನು ಓದುತ್ತ ನಿಮ್ಮ ಮನದಲ್ಲೊಂದು ಕಾಮನಬಿಲ್ಲಿನಂಥ ಭಾವಪರದೆ ಹಾದುಹೋಗಿರಬಹುದು. ಇಷ್ಟು ಮಾತ್ರ ಅರ್ಥಮಾಡಿಕೊಳ್ಳಬಹುದು: ಸೆಕ್ಸ್‌ವರ್ಕಿಗೆ ಹಲವು ಮುಖಗಳಿವೆ. ಹಲವು ಕಾರಣಗಳಿವೆ. ಹಲವು ಸಂಕಟಗಳಿವೆ. ಅದರಲ್ಲಿಯೂ ವರ್ಗವಿದೆ. ಬಾಧಿತರು, ಫಲಾನುಭವಿಗಳು ಯಾರು ಎಂದು ನಿರ್ಧರಿಸುವುದೇ ಕಷ್ಟವಿದೆ. ವೇಶ್ಯಾವೃತ್ತಿಯ ಸಮಸ್ಯೆಗಳನ್ನು ಗುರುತಿಸಿ ಪರಿಹಾರದ ಕುರಿತು ಮಾತನಾಡಹೊರಟರೆ ಅದನ್ನು ಉತ್ತೇಜಿಸಿದ ಹಾಗಾಗುತ್ತದೆ. ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿರುವ ವೃತ್ತಿ ಹೋಗಿಯೇಬಿಡಬೇಕು ಎಂದರೆ ಕಟುವಾಸ್ತವವು ನಿನ್ನನ್ನು ನೀನೇ ಮೂರ್ಖಳಾಗಿಸಿಕೊಳ್ಳುತ್ತಿರುವೆಯಾ ಎಂದು ಅಣಕಿಸುತ್ತದೆ. 

ವೇಶ್ಯಾವೃತ್ತಿಯ ಕಷ್ಟಗಳು ವೇಶ್ಯೆಯರ ದೃಷ್ಟಿಯಿಂದ ಒಂದು ರೀತಿಯಾದರೆ, ಅವರ ಗಿರಾಕಿಗಳ ದೃಷ್ಟಿಯಿಂದ ಬೇರೆಯೇ ಇದೆ. ಒಂದು ಬದಲಾವಣೆ, ಪ್ರಯೋಗ ಅಥವಾ ಕುತೂಹಲಕ್ಕೆ  ವೇಶ್ಯಾವಾಟಿಕೆ ಹೊಕ್ಕು ಹೊರಬರುವವರ ದೃಷ್ಟಿಯಿಂದ ಯೋಚಿಸಿದರೆ ವೃತ್ತಿ ಬೇರೆಯದೇ ರೂಪದಲ್ಲಿ ಕಾಣಿಸುತ್ತದೆ. ಆ ಜಾಲಕ್ಕೆ ಎಳೆತಂದವರ ಕಷ್ಟ-ಪರಿಹಾರಗಳೂ; ಹೈಪ್ರೊಫೈಲ್ ಸೆಕ್ಸ್ ವರ್ಕರುಗಳ ಸಮಸ್ಯೆ-ಪರಿಹಾರಗಳೂ; ಸಲಿಂಗಿ ಸೆಕ್ಸ್ ವರ್ಕರುಗಳ ಸಮಸ್ಯೆಗಳೂ ವಿಭಿನ್ನವಾಗಿವೆ. ಮುಗ್ಧತೆ, ಬಾಲ್ಯ ಕಳೆದುಕೊಂಡ ಬಾಲವೇಶ್ಯೆಯರ ಕುರಿತು ಯೋಚಿಸಿದರೆ ಸೆಕ್ಸ್‌ವರ್ಕ್ ಪರವಾದ ಮಾತುಗಳೆಲ್ಲ ಪುತಪುತನೆ ಉದುರಿಬೀಳುತ್ತವೆ. 

ಹೊಸಸಂಪರ್ಕ ಏರ್ಪಡುವ, ಕಾಣದೂರುಗಳಿಗೆ ಪ್ರಯಾಣ ಮಾಡುವ, ಎಲ್ಲಿಂದೆಲ್ಲಿಗೋ ಹೋಗಿ ‘ಮಜಾ’ ಮಾಡುವ ಲೌಕಿಕದ ಕಾಲಮಾನದಲ್ಲಿ ವೇಶ್ಯಾವೃತ್ತಿ ಕುರಿತ ಮನದ ಮಾತುಗಳೆಲ್ಲ ಪ್ಯೂರಿಟಾನಿಕಲ್ ಆಗಿ ಕೇಳುತ್ತವೆ. ಯಾವಾಗಲೂ ಹಾಗೇ ಮಾನವ ದೌರ್ಬಲ್ಯವನ್ನು ಸಮಸ್ಯೆಯಾಗಿ ಪರಿಗಣಿಸಿ ನೋಡಿದರೆ ಪರಿಹಾರದ ಎಲ್ಲ ಚೌಕಟ್ಟೂ ಕಿತ್ತು ಹಾರಿಹೋಗುತ್ತದೆ. 

ಆದರೆ ಇಷ್ಟು ಮಾತ್ರ ನಿಜ, ಎಲ್ಲ ದೇಶಕಾಲಗಳಲ್ಲಿಯೂ ಅತ್ಯಂತ ಹೀನಾಯವಾಗಿ ಬದುಕಿದವರು, ಹೊಟ್ಟೆಚೀಲ ತುಂಬಿಸಲೆಂದೋ ಅಥವಾ ಮದ ಇಳಿಸಲೆಂದೋ ತಮ್ಮ ಜೀವನಾಶ ಮಾಡಿಕೊಂಡವರು ವೇಶ್ಯೆಯರು. 

***

ಈಗಾಗಲೇ ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧ. ಆದರೆ ಅದಕ್ಕೆ ಸಂಬಂಧಿಸಿದ ಹಲವಾರು ಚಟುವಟಿಕೆಗಳು - ಸಾರ್ವಜನಿಕ ಸ್ಥಳದಲ್ಲಿ ಆಹ್ವಾನಿಸುವುದು, ವೇಶ್ಯಾವಾಟಿಕೆ ನಡೆಸುವುದು, ದಲ್ಲಾಳಿತನ, ತಲೆಹಿಡುಕತನ, ವೇಶ್ಯೆಯರನ್ನರಸುತ್ತ ಬೀದಿ ತಿರುಗುವುದು - ಇವೆಲ್ಲ ಕಾನೂನು ಬಾಹಿರ. ೧೯೫೬ರಲ್ಲಿ ಬಂದ ಸಪ್ರೆಷನ್ ಆಫ್ ಇಮ್ಮಾರಲ್ ಟ್ರಾಫಿಕಿಂಗ್ ಆಕ್ಟ್   ಸಾರ್ವಜನಿಕ ಸ್ಥಳಗಳ ೨೦೦ ಗಜದ ಒಳಗೆ ಲೈಂಗಿಕ ಕ್ರಿಯೆ ನಡೆಸುವುದು ಶಿಕ್ಷಾರ್ಹ ಎಂದಿತು. ಆದರೆ ಖಾಸಗಿಯಾಗಿ ನಡೆಸುವ ವೇಶ್ಯಾವೃತ್ತಿ, ಸ್ವಇಚ್ಛೆಯಿಂದ ವೈಯಕ್ತಿಕವಾಗಿ ಮಾಡುವ ಸೆಕ್ಸ್‌ವರ್ಕ್ ಕಾನೂನುಬಾಹಿರ ಅಲ್ಲ ಎಂದಿತು. ಈಗದು  ಪ್ರಿವೆನ್ಷನ್ ಆಫ್ ಇಮ್ಮಾರಲ್ ಟ್ರಾಫಿಕಿಂಗ್ ಆಕ್ಟ್  ಆಗಿ ಪರಿಷ್ಕೃತಗೊಂಡಿದೆ. 

ಆದರೆ ವೈಯಕ್ತಿಕವಾಗಿ, ವೇಶ್ಯಾಗೃಹಗಳಲ್ಲಿ ವೃತ್ತಿ ನಡೆಸಬಹುದು ಎಂದಿದ್ದರೂ ಐಪಿಸಿ ಸೆಕ್ಷನ್ ಅಡಿ ‘ಸಾರ್ವಜನಿಕ ಅಸಭ್ಯ ವರ್ತನೆ’, ಸಾರ್ವಜನಿಕ ಉಪದ್ರವವೆಂದು ವೇಶ್ಯಾವೃತ್ತಿಯಲ್ಲಿ ತೊಡಗಿರುವವರನ್ನು ಬಂಧಿಸಲಾಗುತ್ತಿದೆ. ಪಿಟಾ ಕಾಯ್ದೆಯ ಸೆ. ೮ ವೇಶ್ಯೆಯರನ್ನು ಬಂಧಿಸಲು ಮಾತ್ರ ಬಳಕೆಯಾಗುತ್ತಿದೆ.  

ವೇಶ್ಯಾವೃತ್ತಿಯಲ್ಲಿ ದೈಹಿಕ, ಮಾನಸಿಕ ಹಿಂಸೆ ಅಂತರ್ಗತವಾಗಿದೆ. ಗಿರಾಕಿಯೋ, ಗಂಡನೋ, ಜೊತೆಗಾರನೋ, ಪೊಲೀಸರೋ - ಒಬ್ಬರಲ್ಲಾ ಒಬ್ಬರಿಂದ ಅವರು ನಿರಂತರ ಹಿಂಸೆಗೊಳಗಾಗುತ್ತಾರೆ. ಒಂದು ಸರ್ವೇ ಪ್ರಕಾರ: ೭೬% ವೇಶ್ಯೆಯರು ಗಿರಾಕಿಗಳಿಂದ ಹಿಂಸೆಗೊಳಗಾಗುತ್ತಾರೆ. ೭೩% ಬಲವಂತವಾಗಿ ಇಷ್ಟವಿಲ್ಲದೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ೪೦% ವೇಶ್ಯೆಯರು ಗಿರಾಕಿಯ ಬಳಿ ಹೋಗುವ ಮೊದಲೇ ಹೆಂಡ ಕುಡಿಯುತ್ತಾರೆ. ಸೆಕ್ಸ್ ವರ್ಕರ್‌ಗಳಿಗೆ ಸಾಧಾರಣವಾಗಿ ಒಬ್ಬ ಪಾರ್ಟನರ್ ಅಥವಾ ಪ್ರೇಮಿ ಇದ್ದು ಬಹಳಷ್ಟು ಸಲ ಅವರನ್ನು ಎಲ್ಲ ರೀತಿಯಲ್ಲೂ ದೋಚುವವ ಈ ಪ್ರೇಮಿಯೇ ಆಗಿರುತ್ತಾನೆ. ಆದರೂ ಅವನಿಗೆ ತಮ್ಮ ‘ನಿಷ್ಠೆ’ಯನ್ನು ವೈವಿಧ್ಯಮಯವಾಗಿ ಪ್ರದರ್ಶಿಸುತ್ತಾ ೯೮% ಪ್ರಕರಣಗಳಲ್ಲಿ ಪ್ರೇಮಿಯಿಂದಲೂ ಹಿಂಸೆ ಅನುಭವಿಸುತ್ತಾರೆ. 

ಎಲ್ಲ ಹಿಂಸೆಗಿಂತ ಅವರಿಗೆ ಅತಿ ಭಯ ಹುಟ್ಟಿಸುವುದು ಪೊಲೀಸ್ ದೌರ್ಜನ್ಯ ಮತ್ತು ಸುಲಿಗೆ. ಪರ್ಸಿನಲ್ಲಿ ಕಾಂಡೋಂ ಇಟ್ಟುಕೊಂಡರೆ ಪೊಲೀಸರಿಂದ ಅವಮಾನ, ಹಫ್ತಾ ವಸೂಲಿಗೊಳಗಾಗುತ್ತಾರೆ. ಅತ್ಯಾಚಾರ, ಹಿಂಸೆಯಾಗಿದೆ ಎಂದು ದೂರು ಒಯ್ದರೆ ಪೊಲೀಸರಿಂದಲೇ ದೌರ್ಜನ್ಯ ಎದುರಿಸುತ್ತಾರೆ. ಪೊಲೀಸರಿಗೆ ಸೆಕ್ಸ್‌ವರ್ಕ್ ಮಾಡುವವರು ಮನುಷ್ಯರೆಂದೇ ಅನಿಸಿಲ್ಲ. ಕಂಡಕಂಡವರ ಜೊತೆ ಮಲಗುವವರು ತಮ್ಮ ಜೊತೆಯೂ ಪುಕ್ಕಟೆ ಮಲಗಲಿ ಎಂದು ಭಾವಿಸುತ್ತಾರೆನ್ನುವುದು ಸೆಕ್ಸ್ ವರ್ಕರ್‌ಗಳ ಅನುಭವ. 

ಇದರ ನಡುವೆ ವೇಶ್ಯೆಯರ ಕುರಿತು ಸಹಾನುಭೂತಿ, ಕರುಣೆ ಹೊಂದಿರುವವ ವರ್ಗವೊಂದು ವೇಶ್ಯಾವೃತ್ತಿಯನ್ನು ಕಾನೂನು ನಿಯಂತ್ರಣದಡಿ ತರುವ ಮಾತು ಹೇಳುತ್ತಿದೆ. ‘ವೃತ್ತಿ’ ಎಂದು ಪರಿಗಣಿಸಲ್ಪಟ್ಟರೆ ಗಿರಾಕಿಗಳಿಗೆ ಸೇವೆ ನಿರಾಕರಿಸುವ; ನಿರ್ದಿಷ್ಟ ಶುಲ್ಕ ವಿಧಿಸುವ; ಗೂಂಡಾಗಳ ನಿಯಂತ್ರಣ ತಪ್ಪಿಸಿಕೊಳ್ಳುವ, ಪೊಲೀಸ್ ದೌರ್ಜನ್ಯ ನಿಲ್ಲುವ ಸಾಧ್ಯತೆಯಿದೆ ಎನ್ನುವುದು ಅವರ ಅಭಿಪ್ರಾಯ. ನ.೮ರಂದು ಕೇಂದ್ರ ಮಹಿಳಾ ಆಯೋಗದ ಅಧ್ಯಕ್ಷರು ಸುಪ್ರೀಂಕೋರ್ಟ್ ರಚಿಸಿರುವ ಸಂಸದೀಯ ಸಮಿತಿ ಎದುರು ವೇಶ್ಯಾವೃತ್ತಿಯನ್ನು ಕಾನೂನಿನ ನಿಯಂತ್ರಣಕ್ಕೊಳಪಡಿಸುವ ಕುರಿತು ತಮ್ಮ ಸಲಹೆ ಸಲ್ಲಿಸಿದ್ದಾರೆ. 

ಆದರೆ ನಮ್ಮ ದೇಶದಲ್ಲಿ ಅತಿ ಕಠಿಣ ಕಾನೂನು ತಂದಮೇಲೂ ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಸಾರಾಯಿ ಬಳಕೆ, ಮಾದಕ ವಸ್ತು ಸಾಗಾಟ, ವರದಕ್ಷಿಣೆ, ಅತ್ಯಾಚಾರ, ಬಾಲಕಾರ್ಮಿಕರ ನೇಮಕ ಇತ್ಯಾದಿ ಸಾಮಾಜಿಕ ಸಮಸ್ಯೆಗಳು ಬಗೆಹರಿಯಲಿಲ್ಲ. ಕಾನೂನುಗಳು ಕಾಗದದ ಮೇಲಿನ ಅಕ್ಷರಗಳಾಗಿಯೇ ಉಳಿದಿವೆ. ಹೀಗಿರುವಾಗ ಕಾನೂನಿನ ಮೂಲಕ ವೇಶ್ಯೆಯರ ಬದುಕನ್ನು ಬದಲಾಯಿಸಲು ಸಾಧ್ಯವೇ ಎನ್ನುವುದರ ಬಗೆಗೆ ವಸ್ತುನಿಷ್ಠ ಚರ್ಚೆ ಅಗತ್ಯವಿದೆ. ಸೆಕ್ಸ್‌ವರ್ಕ್ ಎಂಬ ವಿಶಿಷ್ಟ ವೃತ್ತಿಯನ್ನು ಕಾನೂನುಬದ್ಧ ಯಾ ನಿಯಂತ್ರಣಕ್ಕೊಳಪಡಿಸುವ ಸಾಧಕ-ಬಾಧಕಗಳೇನು? ವೇಶ್ಯೆಯರ ಬದುಕಿನ ಹೊತ್ತಗೆಯಲ್ಲಿ ಘನತೆಯೆಂಬ ಶಬ್ದ ಯಾವ ಪುಟದ ಯಾವ ಸಾಲಿನಲ್ಲಾದರೂ ಸುಳಿಯಲು ಸಾಧ್ಯವಿದೆಯೇ? ಎನ್ನುವ ಕುರಿತು ಭಿನ್ನ ಆಯಾಮಗಳಿಂದ ಯೋಚಿಸಬೇಕಿದೆ. 

ಘನತೆಯ ಬದುಕು: ಕೆಲ ಪ್ರಶ್ನೆಗಳು 

ಕೆಲವೊಮ್ಮೆ ಬದುಕಿನ ದಾರುಣ ಘಳಿಗೆಗಳ ಅಸಹಾಯಕತೆ ಹಾಗೂ ಗಳಿಕೆಯ ಆಮಿಷಕ್ಕೆ ಹೆಣ್ಣು, ಗಂಡೆನ್ನದೇ ಎಲ್ಲರೂ ಪಕ್ಕಾಗಿಬಿಡುವ ಸಾಧ್ಯತೆಯಿದೆ. ಅದಕ್ಕಾಗಿ ಗಂಡನನ್ನೋ, ಹೆಂಡತಿಯನ್ನೋ, ಮಕ್ಕಳನ್ನೋ, ಬಂಧುವನ್ನೋ ಮಾರಿಯಾರು ಅಥವಾ ಕೊಂದಾರು. ವೇಶ್ಯಾವೃತ್ತಿಯಿಂದ ಸಾಕಷ್ಟು ಗಳಿಸಿ ತಾನು ಸುಖಿಯೆನುವ ಕೆಲ ಅಪವಾದಗಳ ಮಾತು ಬಿಟ್ಟರೆ ಉಳಿದಂತೆ ಬಹುಪಾಲು ಮಹಿಳೆಯರು ಕೌಟುಂಬಿಕ, ಆರ್ಥಿಕ ಸಂಕಷ್ಟಕ್ಕೆ ವೃತ್ತಿಗಿಳಿದವರು. ಹೆಚ್ಚಿನವರು ಗ್ರಾಮೀಣ ಭಾಗಗಳಿಂದ ಬಂದ ಬಡ, ತಳ ಸಮುದಾಯಗಳ ಅಸಹಾಯಕ ಹೆಣ್ಮಕ್ಕಳು. ವೇಶ್ಯೆಯರಲ್ಲಿ ೪೦% ಬಾಲ ವೇಶ್ಯೆಯರು. ೭೦% ನಿರಕ್ಷರಿಗಳು. ೬೧% ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರು. 

ಸೆಕ್ಸ್ ವರ್ಕರ್ ಆತ್ಮಕಥನಗಳನ್ನು ಓದಿದರೆ ಆ ಬದುಕಿನ ವಿವಿಧ ಮಗ್ಗುಲುಗಳ ಪರಿಚಯವಾಗುತ್ತದೆ. ಎಷ್ಟೋ ಮಕ್ಕಳು ತಾಯ್ತಂದೆಯರಿಂದ ಮಾರಲ್ಪಡುತ್ತವೆ. ಅವರನ್ನು ರೈಡ್‌ಗಳಲ್ಲಿ ರಕ್ಷಿಸಿ ಮನೆಗೆ ತಂದು ಬಿಟ್ಟರೆ ಪಾಲಕರು ಮತ್ತೊಬ್ಬ ದಲ್ಲಾಳಿಗೆ ಎರಡನೇ ಬಾರಿ ಮಾರುತ್ತಾರೆ! ಸೆಕ್ಸ್ ಎಂದರೇನೆಂದು ತಿಳಿಯದ ಅಪ್ರಾಪ್ತ ಬಾಲೆಯರ ಆಪೋಶನ ತೆಗೆದುಕೊಳ್ಳುವ; ಹಿಂಸೆ, ಮಾದಕ ವಸ್ತು, ಅಪರಾಧ ಇವೆಲ್ಲವೂ ತಳುಕು ಹಾಕಿಕೊಂಡಿರುವ ೮ ಬಿಲಿಯನ್ ಡಾಲರ್ ವಹಿವಾಟಿನ ದೊಡ್ಡ ಜಾಲ ವೇಶ್ಯಾವಾಟಿಕೆ. ನಮ್ಮ ದೇಶದಲ್ಲಿ ಸೆಕ್ಸ್ ವರ್ಕ್ ಮಾಡುವವರ ಸಂಖ್ಯೆ ೪೦ ಲಕ್ಷಕ್ಕಿಂತ ಹೆಚ್ಚು. ಅದರಲ್ಲಿ ೧೫ ಲಕ್ಷ ಬಾಲವೇಶ್ಯೆಯರು. ಪ್ರಪಂಚದ ಕಾಲುಭಾಗ ಬಾಲವೇಶ್ಯೆಯರು ಭಾರತದಲ್ಲಿದ್ದಾರೆ. ಮುಂಬಯಿಯ ಕಾಮಾಟಿಪುರ ಒಂದರಲ್ಲೇ ೨ ಲಕ್ಷ ವೇಶ್ಯೆಯರಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ೪೦೦೦೦ ಅಪಹರಣ ಪ್ರಕರಣ ದಾಖಲಾಗುತ್ತವೆ. ೧೧೦೦೦ ಮಕ್ಕಳು ಪತ್ತೆಯೇ ಆಗುವುದಿಲ್ಲ. ದೇಶದೊಳಗಿನವರಷ್ಟೇ ಅಲ್ಲ, ನೆರೆಕೆರೆಯ ಹೊರದೇಶದಿಂದಲೂ ಮಾನವ ಸಾಗಾಟ ನಡೆಯುತ್ತದೆ. ಒಟ್ಟು ೨ ಲಕ್ಷ ನೇಪಾಳಿ ಹುಡುಗಿಯರು ಭಾರತದ ವೇಶ್ಯಾಗೃಹಗಳಲ್ಲಿದ್ದಾರೆ. ಪ್ರತಿವರ್ಷ ೫-೭ ಸಾವಿರ ನೇಪಾಳಿ ಹುಡುಗಿಯರು ಭಾರತದ ವೇಶ್ಯಾಗೃಹಗಳಿಗೆ ಮಾರಲ್ಪಡುತ್ತಾರೆ. 


ಹೆಣ್ಣು, ಹೆಣ್ಣುಮಗು, ಮಕ್ಕಳು ಕಾಮದ ಆಟಿಕೆಯಾಗಿದ್ದಾರೆ. ಇತ್ತೀಚೆಗೆ ಶಾಲೆಗಳಲ್ಲಿ ಎಳೆಯ ಹುಡುಗಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದು ಅದನ್ನು ತಡೆಗಟ್ಟಲು ಕಠಿಣ ನೀತಿ ನಿಯಮಾವಳಿ ರೂಪುಗೊಂಡಿವೆ. ಅದರ ಪ್ರಕಾರ ಮಕ್ಕಳನ್ನು ಎಲ್ಲೆಲ್ಲೋ ಮುಟ್ಟುವುದು, ಚಿಗುಟುವುದು, ನೋಡುವುದು, ತಬ್ಬುವುದು ತಪ್ಪು. ವಿಪರ್ಯಾಸವೆಂದರೆ ಶಾಲೆಗೆ ಬರುವ ಮಕ್ಕಳಿಗೆ ನೆಪಮಾತ್ರದ ಕಾನೂನಾದರೂ ಇದೆ, ಆದರೆ ಶಾಲೆಗೆ ಬರದೇ ಮಾರಾಟವಾದ ಮಕ್ಕಳು ಧಂಧೆ ನಡೆಯುವ ಜಾಗಗಳಲ್ಲಿ ಎಷ್ಟು ಬೇಕಾದರೂ ಸಿಗುತ್ತಾರೆ. ಅವರನ್ನು ನೀವು ಹೇಗಾದರೂ ಕೂರಿಸಿ, ಬಾಗಿಸಿ, ಮಲಗಿಸಿ ಹಿಂಸಿಸಿದರೂ ತಪ್ಪಲ್ಲ. ಏಕೆಂದರೆ ನೀವು ಅದಕ್ಕೆಂದೇ ದುಡ್ಡು ತೆತ್ತಿದ್ದೀರಿ! 

ಹೀಗೆ ಹೇಳಲಾಗುತ್ತದೆ:

  • ಪ್ರವಾಸೋದ್ಯಮ ಬೆಳೆದರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
  • ವ್ಯಾಪಾರ ವಹಿವಾಟು ವೃದ್ಧಿಸಿದರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
  • ನ್ಯಾಷನಲ್ ಹೈವೇ, ರೈಲ್ವೇ ಲೈನು ಬಂದರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
  • ಯುದ್ಧ ಚಟುವಟಿಕೆ ತೀವ್ರಗೊಂಡರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
  • ಶಾಂತಿಕಾಲದಲ್ಲಿ ಮನೋರಂಜನೆಗೆಂದು ವೇಶ್ಯಾವಾಟಿಕೆ ಬೆಳೆಯುತ್ತದೆ.
  • ಬಡತನ, ನಿರುದ್ಯೋಗ, ಅಪರಾಧ ಹೆಚ್ಚಿದರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
  • ಶ್ರೀಮಂತ ನಗರ, ದೇಶಗಳಲ್ಲಿ ವೇಶ್ಯಾವಾಟಿಕೆ ಹೆಚ್ಚಿದೆ.

ಹಾಗಾದರೆ ವೇಶ್ಯಾವಾಟಿಕೆ ಯಾವುದರಿಂದ, ಯಾವಾಗ ಕಡಿಮೆಯಾಗುತ್ತದೆ?

ಸಂವಿಧಾನ ಬದುಕುವ ಹಕ್ಕು ಕೊಟ್ಟಿದೆ, ಆದರೆ ‘ನನ್ನ ದೇಹ, ನನ್ನ ಹಕ್ಕು’ ಎಂದು ಆತ್ಮಹತ್ಯೆಗೆಳಸಿದರೆ ಅಪರಾಧವಾಗುತ್ತದೆ. ಕಾಸಿಗಾಗಿ ಲೈಂಗಿಕತೆ ಸರಿಯೆನ್ನುವುದಾದರೆ ಕಾಸಿಗಾಗಿ ನನ್ನಿಷ್ಟದಂತೆ ನನ್ನ ದೇಹದ ಕಿಡ್ನಿಯನ್ನೋ, ಮತ್ತೊಂದನ್ನೋ ಮಾರುವುದು ಏಕೆ ಅಪರಾಧವಾಗುತ್ತದೆ? ಹೊಟ್ಟೆಪಾಡೋ, ಐಶ್ವರ್ಯ-ಐಷಾರಾಮವೋ, ಬಯಸಿದಂತಹ ಒಂದು ಬದುಕನ್ನು ಸಾಕಾರಗೊಳಿಸಿಕೊಳ್ಳಲು ಮನುಷ್ಯ ಕೈಗೊಂಡ ಮಾರ್ಗಗಳೆಲ್ಲ ಸರಿಯೇ ಎನ್ನುವುದಾದರೆ ಕಾನೂನಿನ ಅವಶ್ಯಕತೆ, ಅರ್ಥವ್ಯಾಪ್ತಿ ಏನಾಯಿತು? ವೇಶ್ಯಾವೃತ್ತಿ ಸರಿ ಎಂದರೆ ವ್ಯಭಿಚಾರದ ವ್ಯಾಖ್ಯೆ ಏನಾಯಿತು? ಬಹುಪತ್ನಿತ್ವ ಮತ್ತು ದೇವದಾಸಿ ಪದ್ಧತಿ ನಿಷೇಧಿಸುವ ಕಾನೂನಿನ ಉದ್ದೇಶ ಎಲ್ಲಿ ಹೋಯಿತು? ಒಬ್ಬ ವೇಶ್ಯೆ ಇದ್ದಾಳೆಂದರೆ ನೂರಾರು ವ್ಯಭಿಚಾರಿ ಗಂಡಸರಿರುತ್ತಾರೆಂದೇ ಅರ್ಥ. ಹಾಗಾದರೆ ದಾಂಪತ್ಯದ ವ್ಯಾಖ್ಯೆ ಏನಾಯಿತು? ವೇಶ್ಯಾವೃತ್ತಿ ಕಾನೂನಿನ ನಿಯಂತ್ರಣಕ್ಕೊಳಪಟ್ಟ ನಂತರ ತಲೆಹಿಡುಕರು-ದಲ್ಲಾಳಿಗಳು-ಪೂರೈಕೆದಾರರ ಡೆಸಿಗ್ನೇಷನ್ ಏನಾದೀತು? 

ಇಂಥ ಹಲವು ಪ್ರಶ್ನೆಗಳಿಗೆ ಕಾನೂನಿನ ನಿಯಂತ್ರಣ ಉತ್ತರವಾಗುವುದಿಲ್ಲ. ಆದರೆ ಇಂಥ ವಿಷಯಗಳನ್ನೆಲ್ಲ ಭಾವುಕ ಎಂದು  ಅತ್ತ ಸರಿಸಲೂ ಬರುವುದಿಲ್ಲ.

ಆಷಾಢಭೂತಿತನ

ಚಿತ್ರ: ವಿನ್ಸೆಂಟ್ ವ್ಯಾನ್ ಗೊ

ಒಂದಂತೂ ಸ್ಪಷ್ಟ: ಲೈಂಗಿಕತೆ ಕುರಿತ ಸಮಾಜದ ವ್ಯಾಖ್ಯೆ ಆಷಾಢಭೂತಿತನದಿಂದ ತುಂಬಿದೆ. ಬೋಧಿಸುವುದಕ್ಕೂ, ನಡೆಯುತ್ತಲಿರುವುದಕ್ಕೂ, ನಡೆಯಲು ಅವಕಾಶ ಕೊಟ್ಟಿರುವುದಕ್ಕೂ ಅರ್ಥಾರ್ಥ ಸಂಬಂಧವಿಲ್ಲ. ಈ ಎಲ್ಲ ಸಹಸ್ರಮಾನಗಳಲ್ಲಿ ಹೆಣ್ಣಿನ ಮತ್ತು ಗಂಡಿನ ಲೈಂಗಿಕತೆಯ ಭಿನ್ನತೆಗಳನ್ನು, ಅದಕ್ಕೆ ತಕ್ಕ ಅವಶ್ಯಕತೆಗಳನ್ನು ಸಮಾಜ ಅರ್ಥಮಾಡಿಕೊಂಡಿಲ್ಲ. ತನ್ನ ಲೈಂಗಿಕತೆಯನ್ನೂ, ಅದರ ಅವಶ್ಯಕತೆಗಳನ್ನೂ ಸರಿಯಾಗಿ ವ್ಯಾಖ್ಯಾನಿಸಿಕೊಳ್ಳದೇ, ಅದಕ್ಕೆ ತಕ್ಕ ನಿಯಂತ್ರಣಗಳನ್ನೂ ಹೊಂದದೇ ಪುರುಷಕೇಂದ್ರಿತ ಸಮಾಜ ತನ್ನನ್ನು ತಾನು ಹಾಗೂ ಮಹಿಳೆಯನ್ನು ವಂಚಿಸುತ್ತ ಬಂದಿದೆ.  

ಪ್ರಾಣಿಗಳಲ್ಲಿ ಎಲ್ಲ ಕಾಲದಲ್ಲೂ ಗಂಡಿಗೆ ಲೈಂಗಿಕಾಪೇಕ್ಷೆ ಇರುತ್ತದೆ. ಆದರೆ ಹೆಣ್ಣು ‘ಸಿದ್ಧ’ವಾಗುವುದು ಈಸ್ಟ್ರಸ್ ಸೈಕಲ್ ಇರುವಾಗ ಮಾತ್ರ. ಮನುಷ್ಯರಲ್ಲೂ ಹೆಣ್ಣಿನ ಲೈಂಗಿಕತೆ ಪುರುಷನದಕ್ಕಿಂತ ಕೊಂಚ ಭಿನ್ನ. ಹಾರ್ಮೋನ್ ಏರುಪೇರುಗಳು ಋತುಚಕ್ರದ ಕಾರಣ ಪದೇಪದೇ ಬದಲಾಗುವುದರಿಂದ ಹೆಣ್ಣಿನ ಅಪೇಕ್ಷೆ ಸದಾಕಾಲ ಒಂದೇರೀತಿ ಇರುವುದಿಲ್ಲ. ಅರ್ಧಕ್ಕಿಂತ ಹೆಚ್ಚು ಪತ್ನಿಯರು ಜೀವಮಾನವಿಡೀ ಗಂಡನ ಜೊತೆ ಮಲಗೆದ್ದರೂ ಲೈಂಗಿಕ ಸುಖದ ಅನುಭವವೇ ಆಗದೇ ಇರುತ್ತಾರೆ. ಒಂದು ನೇವರಿಸುವಿಕೆಗೆ, ಬೆಚ್ಚನೆಯ ಸ್ಪರ್ಶಕ್ಕೆ, ಒಳ್ಳೆಯ ಮಾತಿಗೆ ದೊರೆವ ಸಮಾಧಾನದಿಂದ ಲೈಂಗಿಕತೆ ನೀಡುವ ತೃಪ್ತಿಯನ್ನು ಕಂಡುಕೊಂಡಿರುತ್ತಾರೆ. 

ಇತ್ತೀಚೆಗೆ ಒಂದು ಸಮೀಕ್ಷೆ ಹೇಳಿರುವಂತೆ ಗಂಡು ಪ್ರತಿದಿನ ಕನಿಷ್ಠ ೧೯ ಬಾರಿ ಲೈಂಗಿಕತೆ ಕುರಿತು ಯೋಚಿಸುತ್ತಾನೆ. ಆದರೆ ಅಷ್ಟು ಸಲ ತನ್ನ ಹೆಣ್ಣನ್ನು ಹಾಸಿಗೆಗೆ ಒಯ್ಯಲು ಅವಳೂ ಒಪ್ಪುವುದಿಲ್ಲ. ಅವನ ದೇಹವೂ ಸ್ಪಂದಿಸಲಾರದು. ದೇಹ, ಮನಸ್ಸು, ಲಭ್ಯತೆಗಳ ನಡುವಿನ ವಿಪರ್ಯಾಸಗಳನ್ನು ತೂಗಿಸಿಕೊಂಡುಹೋಗುವುದೇ ಕ್ರಿಯಾಶೀಲ, ಆರೋಗ್ಯವಂತ ಪುರುಷನ ದೊಡ್ಡ ಸವಾಲು. ಲೈಂಗಿಕತೆ ಹುಟ್ಟಿಸುವ ಅದಮ್ಯ ಒತ್ತಡ ಮತ್ತು ಶಕ್ತಿಯನ್ನು ಸದ್ಬಳಕೆಗಾಗಿ ಚಾನೆಲೈಸ್ ಮಾಡುವಂತೆ ನೋಡಿಕೊಳ್ಳಬೇಕಾದ್ದು ಸಮಾಜ, ಕುಟುಂಬ ವ್ಯವಸ್ಥೆ ಮತ್ತು ರಾಜಕಾರಣದ ಜವಾಬ್ದಾರಿಯಾಗಿದೆ. ಆದರೆ ವಿಪರ್ಯಾಸವೆಂದರೆ ಹೆಣ್ಣಿನ ಲೈಂಗಿಕತೆ-ಚಂಚಲತೆ ಬಗ್ಗೆ ಕತೆ ಕಟ್ಟಿ ಹೇಳಿದ ಸಮಾಜ ಗಂಡಿನ ಅಗತ್ಯಗಳನ್ನು, ನಿಯಂತ್ರಣವನ್ನು ಮುಚ್ಚುಮರೆಯಲ್ಲಿಟ್ಟು ಮುಕ್ತವಾಗಿ ಮಾತನಾಡದೇ ಹೋಯಿತು. ಕಾಮಸೂತ್ರ ವ್ಯಾಖ್ಯಾನವೂ ಸೇರಿದಂತೆ ಪುರುಷತ್ವದ ಶಕ್ತಿ ಹಾಗೂ ಅದನ್ನು ತಣಿಸುವ ವಿಧಾನಗಳ ಕುರಿತ ವೈಭವೀಕರಣ ನಡೆಯಿತು. ಗಂಡಿನ ವೈವಿಧ್ಯಮಯ ಲೈಂಗಿಕತೆಯ ಅವಕಾಶಕ್ಕೆ ಮುಕ್ತಚಲನೆಯ ರಹದಾರಿ ಸೃಷ್ಟಿಸಲಾಯಿತು. ಜೊತೆಗೆ ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮರಣ ಎಂಬ ಅಪ್ರಾಯೋಗಿಕ ಹುಸಿ ತತ್ವವನ್ನು ಗಂಡಸಿಗೆ ಬೋಧಿಸಿ, ಮುಷ್ಠಿ ಮೈಥುನದಂತಹ ವಿಷಯ ಕುರಿತು ತಪ್ಪು ಗ್ರಹಿಕೆಗಳನ್ನು ತುಂಬಿ, ಪುರುಷನ ಲೈಂಗಿಕ ಬದುಕು ಇನ್ನಷ್ಟು ಬಿಗಡಾಯಿಸುವಂತೆ ಮಾಡಿತು. ಬಹುಶಃ ಇವೆಲ್ಲ ಗಂಡಿನ ಮನಸ್ಥಿತಿಯಲ್ಲಿ, ಸಮಾಜದ ಪುರುಷ ವ್ಯಾಖ್ಯಾನದಲ್ಲಿ ಎಷ್ಟು ಆಳವಾಗಿ ಬೇರುಬಿಟ್ಟಿದೆಯೆಂದರೆ ವೇಶ್ಯಾವಾಟಿಕೆಯನ್ನು ಜೀವಂತವಾಗಿಟ್ಟಿರುವಲ್ಲಿ ಇವೆಲ್ಲ ಅಂಶಗಳು ಕೆಲಸ ಮಾಡಿವೆ. ಯಾವ ಜವಾಬ್ದಾರಿಯಿಲ್ಲದೇ ಹಣ ಮತ್ತು ಉಡುಗೊರೆಗೆ ಬದಲಾಗಿ ಲೈಂಗಿಕ ತೃಪ್ತಿ ಹೊಂದುವ ಪುರುಷನ ಬಯಕೆಗೆ ವೇಶ್ಯಾವೃತ್ತಿ ಸೃಷ್ಟಿಯಾಗಿ ಮುಂದುವರೆಯುತ್ತ ಬಂದಿದೆ. 

ದುಡಿಮೆಗೆ ಸಾವಿರ ದಾರಿಗಳಿವೆ. ಅದರಲ್ಲಿ ದೇಹ ಮಾರುವುದೂ ಒಂದು ಎಂದು ಅಂದುಕೊಳ್ಳುವಷ್ಟು ಸರಳವಲ್ಲ ಸೆಕ್ಸ್ ವರ್ಕ್. ಈಗಲೂ ಕುಟುಂಬವನ್ನು ಸಮಾಜದ ಯುನಿಟ್ ಎಂಬಂತೆ ನೋಡಲಾಗುತ್ತದೆ. ಅದರಲ್ಲಿ ವೇಶ್ಯೆಯರಿಗೆ ಸ್ಥಾನವೇ ಇಲ್ಲ. ವೇಶ್ಯೆಯರ, ವೇಶ್ಯಾವಾಟಿಕೆಯ ಹಾಗೂ ಅದರಿಂದ ನಲುಗುವ ಲಕ್ಷಾಂತರ ಕುಟುಂಬಗಳ ಆಳದ ಸಮಸ್ಯೆ ವಿಚಿತ್ರವಾಗಿದೆ. ವೇಶ್ಯೆಯರ ಸಮಸ್ಯೆಯ ಜೊತೆಗೆ ಅವರ ಗಿರಾಕಿಗಳ ಕುಟುಂಬ, ಆರೋಗ್ಯ ಕುರಿತೂ ಯೋಚಿಸಬೇಕಾದ ಅಗತ್ಯವಿದೆ. 

ಒಟ್ಟಾರೆ..

ಇತ್ತೀಚೆಗೆ ವೆಜೈನ ಟ್ಯಾಕ್ಸ್ ಎಂಬ ಪದ ಕೇಳಿಬಂತು. ಎಂದರೆ ಹೆಣ್ಣಾಗಿ ಹುಟ್ಟಿದ್ದಕ್ಕೆ ಕೊಡಲೇಬೇಕಾದ ತೆರಿಗೆ ಎಂಬರ್ಥದಲ್ಲಿ ಅದು ಬಳಸಲ್ಪಟ್ಟಿತ್ತು. ನಿಸ್ಸಂಶಯವಾಗಿ ಮಾನವ ಪ್ರಭೇದದ ಹೆಣ್ಣುಜೀವಿಯಾಗಿ ಹುಟ್ಟಿದ್ದಕ್ಕೆ ತೆರುತ್ತಿರುವ ಭಯಾನಕ ವೆಜೈನ ಟ್ಯಾಕ್ಸ್ ವೇಶ್ಯಾವೃತ್ತಿ. ಅದರ ಜೊತೆ ಎಚ್ಚೈವಿ ಮತ್ತು ಹಿಂಸೆ ಉಚಿತ ಬಳುವಳಿಗಳು. ಎಲ್ಲ ದೇಶಕಾಲಗಳಲ್ಲಿಯೂ ಅತ್ಯಂತ ಹೀನಾಯವಾಗಿ ಬದುಕಿದವರು ವೇಶ್ಯೆಯರು. 

ಆದರೆ ಹೆಣ್ಣು ತನ್ನ ದೇಹವನ್ನು ತನ್ನಿಷ್ಟದಂತೆ ಬಳಸಿಕೊಳ್ಳುವ ಹಕ್ಕಿದೆಯೆಂಬ ಪ್ರತಿಪಾದನೆ ಸ್ತ್ರೀವಾದ ಎನ್ನಲಾಗುತ್ತಿದೆ. ಕ್ಷಮಿಸಿ, ಹೊಟ್ಟೆಯ ಹಿಟ್ಟಿಗಾಗಿ; ಜುಟ್ಟಿನ ಮಲ್ಲಿಗೆ ಹೂವಿಗಾಗಿ ತಮ್ಮ ದೇಹ/ಆತ್ಮವನ್ನೇ ಮಾರಿಕೊಳ್ಳಬೇಕೆಂದು ಹೇಳುವುದು; ಹಕ್ಕಿನ ನೆಪವೊಡ್ಡಿ ತನ್ನ ಬದುಕನ್ನು ತಾನು ನಾಶ ಮಾಡಿಕೊಳ್ಳುವುದು ಸ್ತ್ರೀವಾದವಲ್ಲ. ಮಾನವತಾವಾದವೂ ಅಲ್ಲ. ಅದು ಕೇವಲ ಉಪಭೋಗ ಸಂಸ್ಕೃತಿಯನ್ನು ಉತ್ತೇಜಿಸುವ ವಿತಂಡವಾದ. ವೇಶ್ಯಾವೃತ್ತಿಯ ಸೋದರಿಯರ ಸಂಖ್ಯೆ ಸಾಧ್ಯವಾದಷ್ಟು ಕಡಿಮೆಯಾಗಲಿ; ಆ ವಿಷವರ್ತುಲಕ್ಕೆ ಅವರು ಬೀಳದಿರಲಿ ಎಂದೇ ಹೆಣ್ಣುಮನಸುಗಳು ಹಾರೈಸುತ್ತವೆ.

ಇವೆಲ್ಲ ಪ್ಯೂರಿಟಾನಿಕಲ್ ಅಟ್ಟಿಟ್ಯೂಡ್ ಎನಿಸಿದರೂ ಸರಿಯೇ, ನನಗನಿಸುವ ಪ್ರಕಾರ ಎಲ್ಲ ರೀತಿಯ ವೇಶ್ಯಾವಾಟಿಕೆಯೂ ಕೇವಲ ಎಕ್ಸ್‌ಪ್ಲಾಯ್ಟೇಷನ್. ತಲೆತಲಾಂತರದಿಂದ ನಮ್ಮ ಅಸಂಖ್ಯ ಸೋದರಿಯರನ್ನು, ತೃತೀಯ ಲಿಂಗಿಗಳನ್ನು, ಅಸಹಾಯಕ ಗಂಡಸರನ್ನೂ ನಿಕೃಷ್ಟ ಬದುಕಿಗೆ ಒಡ್ಡಿರುವ ಸೆಕ್ಸ್‌ವರ್ಕ್‌ಗೆ ಯಾವುದೇ ಸಮರ್ಥನೆಯಿಲ್ಲ. ಘನತೆಯ ಬದುಕೆಂಬ ನೀರಗುಳ್ಳೆಯನ್ನು ತಲೆಗೆ ಮುಡಿಯಲಾಗುವುದಿಲ್ಲ; ಕಾನೂನು ಅದನ್ನು ಹೆಕ್ಕಿಕೊಡುವುದೂ ಇಲ್ಲ. 

ಯಾವುದೇ ವೇಶ್ಯೆಯನ್ನು ಸಂದರ್ಶಿಸಿ ಕೇಳಿ, ಅವಳು ಈ ಕೆಲಸ ತನಗೇ ಸಾಕು, ತನ್ನ ಮಕ್ಕಳಿಗೆ ಆ ನರಕ ಬೇಡವೆಂದು ಹೇಳುತ್ತಾಳೆ. ನಾಶವಾದ ಲಕ್ಷಾಂತರ ಜೀವಗಳನ್ನು ಕಣ್ಣೆದುರು ಇಟ್ಟುಕೊಂಡು ವೇಶ್ಯೆಯರ ಬದುಕುವ ಮಾರ್ಗವನ್ನು ಕಾನೂನುಬದ್ಧಗೊಳಿಸುವ ಮಾತನಾಡುವುದೇ ಹೀನ. ಗಂಟೆಗೊಬ್ಬರಂತೆ ಹಲವರ ಜೊತೆ ತನ್ನ ಖಾಸಗಿ ಕ್ಷಣಗಳನ್ನು ಕಳೆಯಬೇಕಾದ ದುಡಿಮೆ ಹೆಣ್ಣಿಗೆ ಘನತೆ ತಂದುಕೊಡುವುದೆನ್ನುವುದೇ ಹಾಸ್ಯಾಸ್ಪದ. ಹೆಣ್ಣಿಗೊಂದು ಘನತೆಯ ಬದುಕನ್ನು ಒದಗಿಸಬೇಕಾದದ್ದು ಆಳುವವರ ಜವಾಬ್ದಾರಿ. ಅದಕ್ಕೆ ವೇಶ್ಯಾವಾಟಿಕೆಯನ್ನು ಕಾನೂನಿನ ನಿಯಂತ್ರಣದಡಿ ತರುವುದು ಉತ್ತರವಲ್ಲ. ವೇಶ್ಯಾವೃತ್ತಿಯನ್ನು ಜೀವಂತವಾಗಿಟ್ಟ ತನ್ನ ಪಾಪದ ಹೊರೆಯನ್ನು ಕಾನೂನಿನ ನಿಯಂತ್ರಣ ತರುವುದರಿಂದ ಸಮಾಜ ಕಳಚಿಕೊಳ್ಳಲಾಗುವುದಿಲ್ಲ. ಹಿಸಿದು ಹೋಗಿ, ವ್ರಣವಾಗಿ ಸೋರುವ, ನಾರುವ ಯೋನಿಗಳನ್ನು ಯಾವ ಕಾನೂನೂ ಕಾಪಾಡುವುದಿಲ್ಲ. 

ವೇಶ್ಯೆಯರ ಸಮಸ್ಯೆಗಳ ಬಗೆಗೆ ತಳಮಟ್ಟ ಕೆಲಸ ಮಾಡಿದ ಚೇತನಗಳು ಮನ್ನಿಸಲಿ: ಈಗ ವೇಶ್ಯೆಯರ ಪರವಾಗಿ ಕೆಲಸ ಮಾಡಲು ಲೆಕ್ಕವಿಲ್ಲದಷ್ಟು ಎನ್‌ಜಿಒಗಳು ಹುಟ್ಟಿವೆ. ಎಚ್ಚೈವಿಗಾಗಿ ಮೆಲಿಂಡಾ ಗೇಟ್ಸ್ ಫೌಂಡೇಷನ್ ೧೦೦ ಮಿಲಿಯನ್ ಡಾಲರನ್ನು ದೇಣಿಗೆ ನೀಡಿದ ಮೇಲೆ ಹಲವರಿಗೆ ಎಚ್ಚೈವಿ ರೋಗಿಗಳ, ವೇಶ್ಯೆಯರ ಮೇಲೆ ಇದ್ದಕ್ಕಿದ್ದಂತೆ ಪ್ರೀತಿ ಹುಟ್ಟಿದೆ. ಎನ್‌ಜಿಒಗಳನ್ನು ಕಟ್ಟಿ ಬೆಳೆಸುವುದೇ ಉದ್ಯೋಗವಾಗಿದೆ. ಆದರೆ ಈ ತೆರನ ಸಮಾಜಸೇವಕರಿಗೆ ಎಚ್ಚೈವಿಯೂ ಇರಬೇಕು, ವೇಶ್ಯಾವಾಟಿಕೆಯೂ ಇರಬೇಕು. ಇಲ್ಲದಿದ್ದರೆ ಅವರು ಕೆಲಸ ಕಳಕೊಳ್ಳುತ್ತಾರೆ. ವೇಶ್ಯೆಯರ ಸಮಸ್ಯೆ ಎಂದರೆ ಜನ ಅವರನ್ನು ಘನತೆಯಿಂದ ನೋಡದಿರುವುದು/ಪೊಲೀಸರು ದೌರ್ಜನ್ಯಕ್ಕೊಳಪಡಿಸುವುದು/ಸಂಘಟಿತರಾಗಲು ಸಾಧ್ಯವಾಗದಿರುವುದು ಎಂದಷ್ಟೇ ಬಿಂಬಿಸುತ್ತ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ಇದು ಯಾರನ್ನೋ ಬಾವಿಗೆ ದೂಡಿ ಅದರ ಆಳ ಅಳೆಯುವ ಕ್ರಮ. ಅಂಥವರ ಕುರಿತು ಸಮಾಜ ಎಚ್ಚರ ವಹಿಸಬೇಕಿದೆ. 

ಬೆಂಕಿಯನ್ನೇ ದೀಪವೆಂದೂ, ಬೆಳಕೆಂದೂ ಪತಂಗ ಭಾವಿಸಿ ಸುಟ್ಟುಕೊಳ್ಳುವುದು ಜೀವಸೃಷ್ಟಿಯ ನಿಯಮವೇ ಇರಬಹುದು. ಹಾಗೆಂದು ಇರುವುದೆಲ್ಲ ಹಾಗೇ ಇರಲಿ ಎನ್ನುವುದು ಸಾಧ್ಯವೇ? ಇದುವರೆಗೆ ಲೈಂಗಿಕತೆ ಮೂಲದ ಸಮಸ್ಯೆ ಎದುರಾದಾಗಲೆಲ್ಲ ಗಂಡಿಗೆ, ಅಧಿಕಾರಸ್ಥರಿಗೆ ಉಪಯೋಗವಾಗುವಂತಹ ಕ್ರಮಗಳನ್ನೇ ಕೈಗೊಳ್ಳುತ್ತ ಬರಲಾಗಿದೆ. ಈಗ ತರಲಿಚ್ಛಿಸುವ ಕಾನೂನು ಅಂತಹ ಮತ್ತೊಂದು ಕ್ರಮ ಆಗದಿರಲಿ. ಕಾನೂನು ಬರುವುದಾದರೆ ಮನುಷ್ಯ ಸಾಗಾಟ ತಡೆಯುವ ಕಠಿಣ ಕಾನೂನು, ಪತ್ತೆ ಜಾಲ ಸಿದ್ಧವಾಗಲಿ. ಪೊಲೀಸರ ವಸೂಲಿ, ಹಿಂಸೆ ನಿಲ್ಲಲಿ. ಅಸಲಿಗೆ ವೇಶ್ಯಾವೃತ್ತಿಗಿಳಿಯುವ ಅವಶ್ಯಕತೆಯೇ ಬರದಂತೆ ಮಹಿಳೆಗೆ, ಬಡವರಿಗೆ ಘನತೆಯ ಬದುಕಿನ ಅವಕಾಶ ಸಿಗಲಿ. 


2 comments: