Monday 9 June 2014

ಬಾನಾಡಿ ಗೆಳೆಯರು..




ಕಾಗೆ ಯಾವುದು, ಕೋಗಿಲೆ ಯಾವುದು ಎಂದು ತಿಳಿಯಲು ವಸಂತನೇ ಬರಬೇಕಿಲ್ಲ. ನಮ್ಮೂರಲ್ಲಿ ಈ ಎರಡೂ ಹಕ್ಕಿಗಳು ಸಾಕಷ್ಟಿವೆ, ಸದಾ ಗದ್ದಲ ಎಬ್ಬಿಸುತ್ತವೆ. ಈ ಸಲ ಮನೆ ಹಿಂದಿನ ಅಕೇಶಿಯಾ ಮರದ ತುದಿಯಲ್ಲಿ ಪುರುಳೆ, ಕಡ್ಡಿ, ಮುಳ್ಳು, ಚಳಾಹುರಿ ಎಲ್ಲ ಒಟ್ಟುಮಾಡಿ ಕಾಗೆ ಗೂಡು ಕಟ್ಟುವುದ ನೋಡಿದ್ದೆ. ಒಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಹೆಣ್ಣುಗಂಡು ಕೋಗಿಲೆಗಳ ಸ್ವರ ತಾರಕಕ್ಕೇರಿತು. ಆಚೆ ಈಚೆ ತಾರಾಡುತ್ತ; ಕುಹೂಕುಹೂ ಕ್ರೀಕ್‌ಕ್ರೀಕ್ ಎನ್ನುತ್ತ ಗಲಾಟೆ ಎಬ್ಬಿಸಿದವು. ಬಾಲ್ಕನಿಗೆ ಬಂದು ನೋಡಿದರೆ ಕಾಗೆಯ ಗೂಡಿನ ಸುತ್ತಮುತ್ತ ಅವು ಹಾರುತ್ತಿವೆ. ಅವನ್ನು ಓಡಿಸಲು ಗೂಡಿನಲ್ಲಿದ್ದ ಕಾಗೆ ಹೊರಹಾರಿತು. ಕೂಡಲೇ ಹೆಣ್ಣು ಕೋಗಿಲೆ ಕಾಗೆಯ ಗೂಡಲ್ಲಿ ಕೂತಿತು. ಇನ್ನೇನು, ಕಾಗೆ ಮೊಟ್ಟೆಯನ್ನೆಲ್ಲ ಕೆಂಗಣ್ಣಿನ ಕೋಗಿಲಮ್ಮ ತಿಂದುಹಾಕುತ್ತದೆ ಅಂದುಕೊಳ್ಳುತ್ತಿರುವಾಗ ಕೋಗಿಲೆ ಸುಮ್ಮನೆ ಅರೆಗಣ್ಣು ತೆರೆದು ರೆಕ್ಕೆಯಗಲಿಸಿ ಕೂತಿತು. ಮರಳಿ ಬಂದ ಅಮ್ಮಕಾಗೆ ಒಂದಷ್ಟು ಕೂಗಿತು, ಆದರೆ ಸುಮ್ಮನಾಯಿತು. ಹತ್ತು ಹದಿನೈದು ನಿಮಿಷ. ಕೋಗಿಲೆ ಕಾಗೆ ಗೂಡಿನಿಂದ ಹಾರಿಹೋಯಿತು. ಎಲ ಎಲಾ! ಕಾಗೆ ಗೂಡಿನಲ್ಲಿ ತನ್ನ ಮೊಟ್ಟೆ ಉದುರಿಸಲು ಇಷ್ಟು ನಾಟಕ ಮಾಡುವುದೇ ಈ ಪುಟ್ಟ ಹಕ್ಕಿ?

ಕಾಗೆಯ ಗೂಡಿನಲ್ಲಿ ಕೋಗಿಲೆ ಮೊಟ್ಟೆ ಇಡುತ್ತದೆ, ಕೋಗಿಲೆ ಮರಿಯನ್ನು ಕಾಗೆ ಸಾಕುತ್ತದೆ ಎನ್ನುವುದು ಎಲ್ಲರಿಗೆ ತಿಳಿದ ವಿಷಯ. ಆದರೆ ಕಾಗೆ ತನ್ನ ಗೂಡಿನಲ್ಲಿ ಮೊಟ್ಟೆ ಇಡಲು ಕೋಗಿಲೆಗೆ ಇಷ್ಟು ಸುಲಭದಲ್ಲಿ ಅವಕಾಶ ನೀಡುತ್ತದೆ ಎಂದು ತಿಳಿದಿರಲಿಲ್ಲ. ಈ ಕೋಗಿಲಮ್ಮ ಮಕ್ಕಳನ್ನು ತಾನಿದ್ದೂ ಏಕೆ ಪರಪುಟ್ಟರಾಗಿಸುತ್ತದೆ ಎಂದು ನೋಡುತ್ತ ಹೋದರೆ ಪಕ್ಷಿಲೋಕದ ವಿಸ್ಮಯಗಳು ತೆರೆದುಕೊಳ್ಳುತ್ತವೆ.

ಕೋಗಿಲೆಯನ್ನು ಮನುಷ್ಯ ಸೋಮಾರಿ ತಾಯಿ ಎನ್ನುವುದಿದೆ. ಆದರೆ ತಾಯಿ ಸೋಮಾರಿಯಾಗುವುದೂ ಸಂತತಿಯ ಉಳಿವಿಗೇ ಎನ್ನುವುದು ವಿಶಿಷ್ಟ ಸತ್ಯವಾಗಿದೆ. ಗೂಡು ಕಟ್ಟದ, ತನ್ನ ಮರಿ ತಾನೇ ಬೆಳೆಸಲಾಗದ ಅಸಹಾಯಕತೆಯಿದ್ದಾಗಲೂ ಕೋಗಿಲೆ ಅಳಿವಿನಂಚಿಗೆ ಸಾಗದೇ ಉಳಿದಿರುವುದರ ಹಿಂದಿನ ರಹಸ್ಯ ತನ್ನ ಮೊಟ್ಟೆಯಿಡಲು ಬೇರೆ ಗೂಡು ಆಯ್ದುಕೊಳ್ಳುವುದರಲ್ಲಿಯೇ ಅಡಗಿದೆ. ಕೋಗಿಲೆಯ ದೇಹ ತಾನಿಟ್ಟ ಮೊಟ್ಟೆಯನ್ನು ಒಡೆಸುವಷ್ಟು ಬೆಚ್ಚಗಿಲ್ಲ. ಜೊತೆಗೆ ರೆಕ್ಕೆಗಳು ಮಳೆನೀರನ್ನು ಸೋರದಂತೆ ತಡೆಯುವಷ್ಟು ದಟ್ಟವಾಗೂ ಇಲ್ಲ. ಹಾಗಿರುತ್ತ ತನ್ನ ಎಳಸು ಮರಿಗಳನ್ನು ರಕ್ಷಿಸಲು ಕೋಗಿಲೆ ಕುಟುಂಬದ ಬಹಳಷ್ಟು ಪಕ್ಷಿಗಳು ಮೊಟ್ಟೆಯನ್ನು ಬಹುಸಂಖ್ಯಾತ ಹಕ್ಕಿಯ ಗೂಡಿನಲ್ಲಿ ಇಡುತ್ತವೆ. ಭಾರತದಲ್ಲಿ ಕಾಗೆ ಹೆಚ್ಚಿರುವುದರಿಂದ ಇಲ್ಲಿ ಕಾಗೆ ಗೂಡಿನಲ್ಲಿ ಮೊಟ್ಟೆಯಿಡುತ್ತದೆ. ಬೇರೆಡೆ ಮೈನಾ, ಕಾಜಾಣ, ಮಡಿವಾಳ, ಅರಿಶಿನ ಬುರುಡೆಯಂತಹ ಹಕ್ಕಿಗಳಿಂದ ಹಿಡಿದು ಬಾಳೆಗುಬ್ಬಿ-ಹೂಗುಬ್ಬಿಯಂತಹ ಪುಟ್ಟಪುಟ್ಟ ಹಕ್ಕಿಗಳ ಗೂಡಿನಲ್ಲೂ ಮೊಟ್ಟೆಯಿಡುತ್ತದೆ. ಆ ಪುಟ್ಟ ಹಕ್ಕಿಗಳಾದರೋ ತಮಗಿಂತ, ತಮ್ಮ ಗೂಡಿಗಿಂತ ದೊಡ್ಡದಾಗಿ ಬೆಳೆವ ಕೋಗಿಲೆಯ ಮರಿಗೆ ಸತತ ಆಹಾರ ತಂದುಕೊಡುವುದರಲ್ಲೇ ದಿನ ಕಳೆಯಬೇಕಾಗುತ್ತದೆ. 

ಕೋಗಿಲೆ ಹೆಚ್ಚಾಗಿ ಒಂದೇ ಮೊಟ್ಟೆ ಇಡುತ್ತದೆ. ಅದನ್ನು ತೊರೆದುಹೋದ ಗೂಡುಗಳಲ್ಲಿ, ಖಾಲಿ ಗೂಡುಗಳಲ್ಲಿ ಇಡುವುದಿಲ್ಲ. ಒಂದು ಒಂದೂವರೆ ದಿನದಷ್ಟು ಹಳೆಯ ಮೊಟ್ಟೆಯಿರುವ ಗೂಡಿನಲ್ಲಷ್ಟೇ ಇಡುತ್ತದೆ. ಮೊಟ್ಟೆಯಿಡಲು ಅದಕ್ಕೆ ಅತ್ಯಂತ ಕಡಿಮೆ ಸಮಯ ಸಾಕು. ತಾನು ಮೊಟ್ಟೆಯಿಟ್ಟ ಗೂಡಿನಲ್ಲಾಗಲೇ ಬಹಳಷ್ಟು ಮೊಟ್ಟೆಗಳಿದ್ದರೆ ಕೆಲವನ್ನು ಅತ್ತ ಸರಿಸಿ ತನ್ನ ಮೊಟ್ಟೆಯಿಡುತ್ತದೆ. ಆ ಮೊಟ್ಟೆ ಗೂಡಿನ ಅಮ್ಮನಿಂದ ನಿರ್ಲಕ್ಷ್ಯಕ್ಕೆ ಒಳಗಾಗಬಾರದು ಎಂದು ಇಷ್ಟೆಲ್ಲ ಕಾಳಜಿ! ಮಾರ್ಚಿಯಿಂದ ಆಗಸ್ಟ್‌ವರೆಗೆ ಸಂತಾನೋತ್ಪತ್ತಿ ನಡೆಸುವ ಕೋಗಿಲೆಯ ಮೊಟ್ಟೆ ಒಡೆಯಲು ೧೨-೧೪ ದಿನ ಬೇಕು. ಅದು ಗೂಡಿನ ಹಕ್ಕಿಯ ಮೊಟ್ಟೆ ಒಡೆಯುವ ಒಂದೆರೆಡು ದಿನ ಮೊದಲೇ ಒಡೆಯುತ್ತದೆ, ಬಲುಬೇಗ ಬೆಳೆಯುತ್ತದೆ. ಮೊದಲಿಗೆ ಕೋಗಿಲೆಮರಿ ಕಾಗೆಮರಿ ತರಹವೇ ಇರುತ್ತದೆ, ಕೂಗುವುದೂ ಕಾಗೆಮರಿಯ ತರಹವೇ. ಬೆಳೆಯುತ್ತ ಹೋದಹಾಗೆ ಎಳೆಯ ಮಕ್ಕಳ ಕೂಗು ತಂತಮ್ಮ ಜಾತಿಗನುಗುಣವಾಗಿ ಬೇರೆಯಾಗುತ್ತದೆ. 

ಕಾಗೆಗೆ ತನ್ನ ಮೊಟ್ಟೆ ಯಾವುದು, ಕೋಗಿಲೆಯದು ಯಾವುದು? ತನ್ನ ಮರಿ ಯಾವುದು, ಕೋಗಿಲೆಯದು ಯಾವುದು ಎಂದು ತಿಳಿಯುವುದಿಲ್ಲವೇ? ಅಥವಾ ಕೋಗಿಲೆ ಮೊಟ್ಟೆ ಇಟ್ಟರೆ ಅದನ್ನೂ ಸೇರಿಸಿ ಕಾವು ಕೂರು ಎಂದು ಅದರ ಅಮ್ಮ ಸಹಬಾಳ್ವೆ ಬೋಧಿಸಿದೆಯೇ? ಇಲ್ಲ. ಪಕ್ಷಿಗಳ ತಾಯ್ತಂದೆಯರು ಮಕ್ಕಳಿಗೆ ಹಾರುವುದನ್ನಷ್ಟೇ ಕಲಿಸುತ್ತವೆ. ನೀತಿಪಾಠ ಬೋಧಿಸುವುದಿಲ್ಲ. ಎಲ್ಲ ಜ್ಞಾನವೂ ವಂಶಪಾರಂಪರ್ಯ, ರಕ್ತಗತ. ಕೋಗಿಲೆಯಷ್ಟೇ ಅಲ್ಲ, ಅದರಂತಹ ಸುಮಾರು ೧೦೦ ಪರಪುಟ್ಟ ಪ್ರಬೇಧಗಳು ಹೀಗೆ ಬೇರೆ ಗೂಡಿನಲ್ಲೇ ತಮ್ಮ ಮರಿಗಳನ್ನು ಬೆಳೆಸುತ್ತವೆ. ಈ ಸಹಜೀವನ ಅನಿವಾರ್ಯ ಎಂಬ ಅರಿವು ಅವಕ್ಕೆ ಹೇಗೋ ಮೂಡಿದೆ. 

ಅವತ್ತು ಕ್ರೀಕ್ರೀ ಎಂಬ ಶಬ್ದ ಕಿಟಕಿಯಿಂದ ತೂರಿ ಮನೆಯೊಳಗನ್ನೆಲ್ಲ ಆವರಿಸಿತು. ಇಣುಕಿ ನೋಡಿದರೆ ಎಳೆಯ ಕೋಗಿಲೆ ಮರಿ ತನ್ನ ದಾಸವಾಳ ಎಸಳಿನಂಥ ಬಾಯನ್ನು ಊರಗಲ ಹಿಗ್ಗಿಸಿ ಗುಟುಕಿಗಾಗಿ ಬೇಡುತ್ತಿದೆ. ಆ ಕೆಂಬಾಯಿ ನೋಡಿದರೇ ಯಾವ ಅಮ್ಮನಿಗಾದರೂ ಗುಟುಕು ನೀಡುವ ಎನಿಸಿಬಿಡಬೇಕು, ಹಾಗೆ ಬಾಯಿ ಕಳೆದುಕೊಂಡೇ ಕೂತಿತ್ತು. ಅಮ್ಮ ಕಾಗೆ ಹಾರಿಬಂದದ್ದೇ ಆ ಕಡೆ ಈ ಕಡೆ ನೋಡಿ ಬಾಯಲ್ಲಿರುವ ಎಂಥಾದ್ದನ್ನೋ ಅದರ ಬಾಯಲ್ಲಿ ಸುರುವಿ ತನ್ನ ರೆಕ್ಕೆ ಶುಚಿಗೊಳಿಸುತ್ತ ಕೂತಿತು. ಆದರೆ ಬಾಯಲ್ಲಿರುವುದನ್ನು ನುಂಗಿದ ಮರುಕ್ಷಣ ಮತ್ತೆ ಶುರುವಾದ ಕೋಗಿಲೆ ಮರಿಯ ಬೇಡುವ ಸ್ವರಕ್ಕೆ ಕಾಗಮ್ಮ ಹಾರಿಹೋಯಿತು. ಪರಪುಟ್ಟನ ಗಲಾಟೆಯ ನಡುವೆ ಕಾಗಮ್ಮನ ಮಕ್ಕಳ ಸದ್ದೂ ಗೂಡಿನಿಂದ ಕೇಳಿಬರುತ್ತಿತ್ತು. ಗುಟುಕು ಹೊತ್ತ ಕಾಗಮ್ಮ ಒಮ್ಮೆ ಈ ಕಡೆ, ಒಮ್ಮೆ ಆ ಕಡೆ..

ಕೋಗಿಲೆಯ ದನಿ ತಾಯ್ತನ ಎಂದರೆ ಏನೆಂಬ ಜಿಜ್ಞಾಸೆ ಹುಟ್ಟಿಸುತ್ತದೆ. ಅದರ ದನಿ ಕೇಳುವಾಗಲೆಲ್ಲ ತಾಯಿಲ್ಲದ ಆ ಹುಡುಗಿ ಕಣ್ಮುಂದೆ ಸುಳಿಯುತ್ತಾಳೆ. ಹನಿ ಪ್ರೀತಿ ಉಣಿಸುವವರನ್ನೇ ತಾಯಿ ಎಂದು ಭಾವಿಸುವ, ಅರಕೆಯಾದ ಪ್ರೀತಿಯನ್ನು ಎಲ್ಲೆಡೆಯಿಂದ ಬಾಚಿ ತುಂಬಿಕೊಳ್ಳುವ ಆ ಪುಟ್ಟಪೋರಿಯಂತೆ ಕೋಗಿಲೆಯೂ ಪರಪುಟ್ಟನಲ್ಲವೆ? ಅಷ್ಟಕ್ಕೂ ‘ಪರ ಎಂಬ ಪದಬಳಕೆ ಸರಿಯೆ? ತಂದೆಯೇ ತಾಯಿಯಾದ ಎಷ್ಟು ಉದಾಹರಣೆಗಳಿಲ್ಲವೆ? ಕಾವುಕೊಟ್ಟು, ಗುಟುಕು ಕೊಟ್ಟು, ಹಾರಲು ಕಲಿಸಿದ ಕಾಗೆಯೇ ಅದರಮ್ಮನಲ್ಲವೆ? ತಾಯ್ತನ ಎಂದರೆ ಯಾವುದು? ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ಮಲಗಿಸುವಾಗ ಲಾಲಿಹಾಡುವ; ಕೈತುತ್ತು ಉಣಿಸುತ್ತ ಕತೆ ಹೇಳುವ; ತಪ್ಪು ಮಾಡಿದರೂ ಕ್ಷಮಿಸಿ ಅನಿರ್ಬಂಧಿತ ಪ್ರೀತಿ ನೀಡುವ; ದುಷ್ಟ ಜಗತ್ತಿನಿಂದ ಸಂತತಿಯನ್ನು ರಕ್ಷಿಸಬೇಕೆಂಬ ಇನ್‌ಸ್ಟಿಂಕ್ಟ್ ಅನ್ನು ಸದಾ ಹೊಟ್ಟೆಯಲಿಟ್ಟುಕೊಂಡ ಹೆಣ್ಣುಜೀವದ ಕಕ್ಕುಲಾತಿಯಷ್ಟೇ ತಾಯ್ತನವೇ? ಅಷ್ಟಕ್ಕೆ ಹೆತ್ತತಾಯೇ ಬೇಕೆಂದಿಲ್ಲ, ಆರ್ದ್ರ ಹೃದಯದ ಯಾರು ಬೇಕಾದರೂ ಆಗಬಹುದು. ಬಹುಶಃ ತನ್ನ ಮಕ್ಕಳು ಏನಾಗಬಾರದೆಂಬ ಸ್ಪಷ್ಟ ನೋಟವಿಟ್ಟುಕೊಂಡು ಕೇಡು ಒಳ್ಳೆಯತನಗಳ ವ್ಯತ್ಯಾಸಗಳ ತಿಳಿಸಿಹೇಳುತ್ತ ಆತಂಕಪಡುವ; ತಪ್ಪಿದರೆ ಗದರುವ, ಬೈಯುವ; ಯಶಸ್ಸಿನ ನಡುವೆಯೂ ಅವರ ಭವಿಷ್ಯದ ಬಗೆಗೆ ತುದಿಗಾಲಲ್ಲಿ ನಿಂತು ಯೋಚಿಸುವ; ಬಿಡಿಸಿಕೊಂಡು ಓಡಬೇಕೆಂಬಂತಹ ಬಂಧನ ಸೃಷ್ಟಿಸಿ ಮಕ್ಕಳ ಸಿಟ್ಟಿಗೆ ಗುರಿಯಾಗುವ; ತನ್ನ ತಿಳುವಳಿಕೆಯನ್ನು ಧಾರೆಯೆರೆಯಬೇಕು ಎಂಬ ಜವಾಬ್ದಾರಿ ಹುಟ್ಟಿಸುವ ಮಾಯಕವೇ ತಾಯ್ತನ. ಗಣಿಕೆಲಸಗಾರನ ತಲೆಮೇಲಿನ ದೀಪವಾಗಿರುವಂತಹ, ತೋರುಗಾಣಿಕೆಗೆ ಅವಕಾಶವೇ ಇಲ್ಲದ ಎಚ್ಚರ ತಾಯ್ತನ. 

ಇವೆಲ್ಲ ಅಮ್ಮನಲ್ಲದೆ ಮತ್ತಾರಿಂದಲಾದರೂ ದೊರೆಯುವುದು ಅಸಾಧ್ಯವೇನಲ್ಲ. ಆದರೆ ಅಂಥ ಅಮ್ಮ ಪುಟ್ಟರಿಗೆ ಸಿಗುವುದೇ ಕಷ್ಟ, ಇನ್ನು ಪರಪುಟ್ಟರಿಗೆ ಸಿಕ್ಕಿಯಾರೆ? 

***

ಮನೆ ಎದುರಿನ ದೊಡ್ಡ, ಹಳೆಯ ಗೇರುಮರ ಕಾಂಡಕೊರೆವ ಪುಟ್ಟಹುಳಕ್ಕೆ ಪ್ರಾಣಬಿಡುತ್ತಿತ್ತು. ಇಷ್ಟು ದೊಡ್ಡ ಮರಕ್ಕೆ ಪ್ರಕೃತಿ ಯಾಕೆ ಜೀವರಕ್ಷಣಾ ಉಪಾಯವನ್ನಿಡಲಿಲ್ಲ ಎಂಬ ಹುಳ ನನ್ನನ್ನು ಕೊರೆಯತೊಡಗಿತ್ತು. ಈ ಬೇಸಿಗೆಯಲ್ಲಿ ಗುಡ್ಡದ ಮೇಲಿನ ಗೇರುಮರಗಳೂ ಕೆಂಪು ಮೇಣದಂತಹ ಏನನ್ನೋ ಕಣ್ಣೀರಿನಂತೆ ಸ್ರವಿಸಿದ್ದವು. ರಾಶಿರಾಶಿ ಮರದ ಪುಡಿ ನೆಲದ ಮೇಲೆ ಹರಡಿ ಸಾಮಿಲ್ ನೆನಪಿಸುತ್ತಿತ್ತು. ಬೆಳೆದು ನಿಂತ ಗೇರುಮರದ ಹಸಿರೆಲೆಗಳು ನೋಡನೋಡುತ್ತಿದ್ದಂತೆ ಹಳದಿಗೆ ತಿರುಗಿ ಕ್ರಮೇಣ ಮರ ಒಣಗಿ ಹೋಗುತ್ತಿತ್ತು. ಕಟ್ಟಿಗೆ ಮಾಡುವ ಹೆಂಗಸರಿಗೆ ಒಣಗಿದ ಗೇರುಮರಗಳೆಂದರೆ ಪ್ರಾಣ. ಭಾರೀ ಮಳೆಗಾಲದಲ್ಲೂ ಎಣ್ಣೆ ಅಂಶವಿರುವ ಗೇರುಕಟ್ಟಿಗೆ ಹೊಗೆಯಿಲ್ಲದೆ ಭರ್ ಎಂದು ಉರಿಯುತ್ತದೆ. ಅಂತಹ ಒಂದು ಮರ ಕಡಿದು ಒಪ್ಪ ಮಾಡಿಟ್ಟುಕೊಂಡರೆ ಮಳೆಗಾಲದ ಸೌದೆಯ ಚಿಂತೆ ಕಳೆಯುತ್ತದೆ. 
ಒಂದು ಬೆಳಿಗ್ಗೆ...  

ಆಗಷ್ಟೇ ಮಳೆ ನಿಂತಿತ್ತು. ನನ್ನೆದುರು ಒದ್ದೆಯಾಗಿ ನಿಂತಿದ್ದ ಒಣಮರದ ಕಾಂಡವನ್ನು ಕೊಕ್ಕಿನಲ್ಲಿ ಕುಟ್ಟಿಕುಟ್ಟಿ ನೋಡುತ್ತ, ಹುಡುಕುತ್ತ ಮರಕುಟಿಕ ಪ್ರತ್ಯಕ್ಷವಾಯಿತು! ನೆಲದ ಮೇಲೆ ಹರಿಯುವ, ಗಾಳಿಯಲ್ಲಿ ಹಾರಾಡುವ ಇಷ್ಟೊಂದು ಕ್ರಿಮಿಕೀಟಗಳಿರುವ ಮಳೆಗಾಲದಲ್ಲಿ ಅದನ್ನೆಲ್ಲ ಬಿಟ್ಟು ಕಾಂಡ ಕೊರೆವ ಹುಳವನ್ನೇ ಈ ಹಕ್ಕಿ ಹುಡುಕಿ ಹೊರಡುವುದು ಮರದ ರಕ್ಷಣೆಗೇ ಇರಬೇಕು. ಪ್ರಕೃತಿ ಮರ ಕುಟ್ಟುವಂತಹ ಕೊಕ್ಕನ್ನೂ, ಒಂದು ಕೋನದಲ್ಲಿ ವಾರೆಯಾಗಿ ಕಾಂಡದ ಮೇಲೆ ಕೂರಲು ತಕ್ಕ ಕಾಲುಗಳನ್ನೂ ಮರಕುಟಿಗದ  ಕಾಯಕದ ಅಗತ್ಯಕ್ಕೆ ತಕ್ಕಂತೆ ರೂಪಿಸಿ ಮರವನ್ನು ರಕ್ಷಿಸಿದೆಯೆ? ಎಲಎಲಾ! 

ನಾನು ಈ ಮೀಮಾಂಸೆಯಲ್ಲಿ ಮುಳುಗಿದ್ದರೆ ತನಗೆ ಅದ್ಯಾವುದೂ ಸಂಬಂಧವಿಲ್ಲವೆಂಬಂತೆ ಒಣಕಲು ಮರವನ್ನು ಅನನ್ಯ ಶ್ರದ್ಧೆಯಿಂದ ಕುಟುಕುತ್ತಾ ಮೇಲೇರುತ್ತಿತ್ತು ಮರಕುಟಿಕ. ಮಳೆ ನಿಂತ ಖುಷಿಯಲ್ಲಿ ರೆಕ್ಕೆ ಕೊಡವಿಕೊಳ್ಳುತ್ತ ಹತ್ತುಹಲವು ಹಕ್ಕಿಗಳು ಸುಂಯ್ಞಸುಂಯ್ಞನೇ ಅತ್ತಿಂದಿತ್ತ ಹಾರುತ್ತಿದ್ದವು. ಹೊಂಬಣ್ಣದ ಮೈ, ಕೆಂಪು ಮಕಮಲ್ಲು ಚೊಟ್ಟಿ ತಲೆ, ಐದಾರು ವರ್ಣಮಿಶ್ರಿತ ಅಪೂರ್ವ ಸೌಂದರ್ಯದ ಮರಕುಟಿಕವನ್ನೂ, ಅದರ ಹುಳ ಹುಡುಕುವ ತನ್ಮಯತೆಯನ್ನೂ, ಕುಟ್ಟುವ ಕಷ್ಟವನ್ನೂ ಗಮನಿಸುತ್ತಾ ಹೋದೆ. ನಾಲ್ಕಾರು ಕ್ಷಣ ಕಟಕಟಕಟಕಟ ಮರ ಕುಟ್ಟುತ್ತಾ, ನಡುನಡುವೆ ನಿಂತು ಸುತ್ತಮುತ್ತಲನ್ನು ಗಮನಿಸುತ್ತಾ ಮೇಲೆ ಸರಿಯುತ್ತಿತ್ತು. ಇಡೀ ಕಾಂಡ ಶೋಧಿಸಿ ತುದಿ ತಲುಪಿದರೂ, ಹತ್ತಿಪ್ಪತ್ತು ನಿಮಿಷಗಳಾದರೂ ಅದಕ್ಕೆ ಏನೂ ಸಿಕ್ಕಲಿಲ್ಲ. ಛೇ, ಒಂದು ಹುಳಕ್ಕೆ ಇಷ್ಟು ಕಷ್ಟಪಡುತ್ತದಲ್ಲ ಈ ಹಕ್ಕಿ, ಆ ಒಣಕಲು ಮರ ಕಡಿದು ಕತ್ತರಿಸಿ ಹುಳ ಹುಡುಕಿಕೊಡಬೇಕು ಎಂಬಷ್ಟು ಪ್ರೀತಿ, ಕರುಣೆ ಉಕ್ಕಿ ಬಂತು. 

ಮನುಷ್ಯನ ದುಂದು ಇದೇ ಅಲ್ಲವೆ? ಒಂದು ಹುಳಕ್ಕಾಗಿ ಒಂದು ಮರವನ್ನೇ ಕಡಿಯುವುದು? ತೋರಣಕ್ಕಾಗಿ ಮಾವಿನಮರವನ್ನೇ ಉರುಳಿಸುವುದು? ಆ ಒಣ ಮರವೊಂದು ಹಾಗೇ ನಿಂತಿದ್ದರೆ ಅದನ್ನು ಬಾರಿಬಾರಿ ಗೆದ್ದಲು ಮತ್ತಿತರ ಕ್ರಿಮಿಕೀಟಗಳು ಮುತ್ತಿ ಸಂತಾನೋತ್ಪತ್ತಿ ನಡೆಸುತ್ತವೆ. ಅವು ಎಷ್ಟೋ ಹಕ್ಕಿಗಳ ಆಹಾರವಾಗುತ್ತವೆ. ಒಮ್ಮೆಲೇ ಕಡಿದು ಹರಡಿಬಿಟ್ಟರೆ ಯಾರದೋ ಮನೆಯ ಸೌದೆಯಾಗಿ ಉರಿದುಹೋಗುತ್ತದೆ. ಪರಿಸರನಾಶಕ್ಕೆ ಇಂಥ ‘ಅತಿಯೇ ಕಾರಣವಲ್ಲವೇ?  

ಮರಕುಟಿಕ ಕೆಳಗಿಳಿಯತೊಡಗಿತು. ಕಾಂಡದ ಕೆಳಭಾಗದಲ್ಲಿ ಪೊಟರೆಯೊಳಗಿಂದ ಮೊಂಡು ಕೊಕ್ಕನ್ನು ಹೊರಚಾಚಿ ಬಾಯಿಕಳೆದು ಸೊಪ್ಪುಕುಟುರದ ಮರಿ ಕೂತಿತ್ತು. ಮರಕುಟಿಕ ಕುಟ್ಟುತ್ತ, ಕೆಳಗಿಳಿಯುತ್ತ ಕೊನೆಗೆ ಗೂಡೊಳಗಿರುವ ಈ ಮರಿಯನ್ನು ತಿಂದುಬಿಟ್ಟರೆ ಎಂದು ಅಂಜಿಕೆಯಾಗುತ್ತಿರುವಾಗಲೇ ಇದ್ದಕ್ಕಿದ್ದಂತೆ ಕಿಟಿಕಿಟಿಕಿಟಿಕಿಟಿ ಎಂಬ ಗಟ್ಟಿದನಿಯ ಖುಷಿಯ ಕೂಗು ಕೇಳಿಸಿತು. ಅದೇ ಹಕ್ಕಿ! ಕೂಗಿದ್ದು ಮರೆತವರ ಹಾಗೆ ಮತ್ತೆ ತಲ್ಲೀನವಾಗಿ ಕುಟ್ಟತೊಡಗಿತು. ಒಂದು ಹುಳ ಸಿಗದಿದ್ದರೂ ಹೀಗೆ ತಾಸುಗಟ್ಟಲೆ ಕುಟ್ಟುವುದು ಯೋಗ್ಯವೇ ಎಂದು ಸಮಯದ ಲಾಭನಷ್ಟದ ಕುರಿತು ಯೋಚಿಸತೊಡಗಿದೆ. ನಾನು ಮೂರ್ಖಳೆಂದು ಸಾಬೀತುಪಡಿಸಲೆಂಬಂತೆ ಕಂದು ಬಣ್ಣದ ಬೋಳು ಕಂಬಳಿಹುಳದಂತಹ ಹುಳವೊಂದನ್ನು ಹೊರಗೆಳೆದೇಬಿಟ್ಟಿತು! ಹುಳವನ್ನು ಮಸೆದು, ತಿಕ್ಕಿ ಗುಳುಂ ಮಾಡಿತು.  

ಒಂದು ಹುಳಕ್ಕಾಗಿ ಇಷ್ಟು ಶ್ರಮಪಡುವ ಹಕ್ಕಿಯ ಛಲಕ್ಕೂ, ಎಲ್ಲರನ್ನೂ ಪೊರೆವ ಪ್ರಕೃತಿಗೂ ಶರಣುಶರಣು..

***

ಹಕ್ಕಿಗಳ ಸಂಗದಲಿ ರೆಕ್ಕೆ ಮೂಡುವುದೆನಗೆ
ಹಾರುವುದು ಹೃತ್‌ಪಕ್ಷಿ ಲೋಕಗಳ ಕೊನೆಗೆ.
                                                    -ಕುವೆಂಪು

ಹಕ್ಕಿ ಭೂಮಿ ಮೇಲಿನ ವಿಶಿಷ್ಟ ಜೀವಿ. ಹಾರಲೆಂದೇ ವಿಶೇಷ ಆಕಾರ, ದೇಹರಚನೆ ಹೊಂದಿದ; ಮುಂಗೈಯನ್ನು ರೆಕ್ಕೆಯಾಗಿಸಿಕೊಂಡ; ದೇಹ ಹಗುರವಾಗಬೇಕೆಂದು ಎಲುಬಿನಲ್ಲೂ ಗಾಳಿಚೀಲವನಿಟ್ಟುಕೊಂಡು, ಬೇಗ ಆಹಾರ ಧ್ವಂಸವಾಗುವ ವ್ಯವಸ್ಥೆ ಮಾಡಿಕೊಂಡ ಜೀವಿ ಹಕ್ಕಿ. ಅವುಗಳ ಜೀವನಶೈಲಿ, ಬಣ್ಣ, ವಾಸ, ಗಾನ ವೈವಿಧ್ಯ, ಸಂತಾನೋತ್ಪತ್ತಿ ಬೆರಗು ಹುಟ್ಟಿಸುತ್ತದೆ. ಹಲವು ಪ್ರಭೇದಗಳು ನಡುವೆ ಎಲ್ಲೂ ನಿಲ್ಲದೇ ಸಾಗರ, ಖಂಡಗಳ ದಾಟಿ ನಾಲ್ಕಾರು ಸಾವಿರ ಮೈಲಿ ವಲಸೆ ಹೋಗಿ ಮೊಟ್ಟೆಯಿಟ್ಟು ಮರಿ ಮಾಡುತ್ತವೆ. ಆಕಾಶಗುಬ್ಬಿ (ಕಾಮನ್ ಸ್ವಿಫ್ಟ್) ಜೀವಮಾನವಿಡೀ ಹಾರುತ್ತಲೇ ಇರುತ್ತದೆ - ಊಟ, ಬೇಟ, ನಿದ್ರೆ ಎಲ್ಲವೂ ಹಾರುತ್ತಲೇ. ಇಡೀ ಆಯಸ್ಸಿನಲ್ಲಿ ಭೂಮಿಚಂದ್ರ ನಡುವಿನ ದೂರದ ಮೂರುಪಟ್ಟು ದೂರ ಹಾರಾಟ ನಡೆಸಿರುತ್ತದೆ! ಹಕ್ಕಿಗಳು ಗೂಡಿನಲ್ಲಿ ವಾಸಿಸುವುದಿಲ್ಲ. ಗೂಡು ಮೊಟ್ಟೆಯಿಟ್ಟು ಮರಿಮಾಡಲಷ್ಟೇ. ತಮ್ಮ ಸೈಜಿಗಿಂತ ಹಲವು ಪಟ್ಟು ದೊಡ್ಡ ಗೂಡನ್ನು ಎಷ್ಟು ಕಲಾತ್ಮಕವಾಗಿ ನೇಯುತ್ತವೆಂದರೆ ನಮಗೆ ಅದನ್ನು ಮರುಸೃಷ್ಟಿಸಲು ಸಾಧ್ಯವಿಲ್ಲ. ಗೂಡುಕಟ್ಟುವುದು ಹೆಚ್ಚಾಗಿ ಗಂಡು. ಗೂಡು ಮತ್ತು ಅದರೊಡೆಯನನ್ನು ಹೆಣ್ಣು ಆಯ್ದುಕೊಳ್ಳುತ್ತದೆ. ಮರಿ ಹಾರಿಸಿದ ಮೇಲೆ ಅವು ಅದರಲ್ಲಿರುವುದಿಲ್ಲ. ಮುಂದಿನ ಸಂತಾನೋತ್ಪತ್ತಿ ಕಾಲಕ್ಕೆ ಹೊಸ ಸಂಗಾತಿ, ಹೊಸ ಗೂಡು. ಬಹುಪಾಲು ಹಕ್ಕಿಗಳು ಒಂದು ಬ್ರೀಡಿಂಗ್ ಸೀಸನ್ನಿಗೆ ಒಂದೇ ಸಂಗಾತಿಯನ್ನು ಆರಿಸಿಕೊಳ್ಳುತ್ತವೆ. ಹತ್ತಾರು ಬಣ್ಣಗಳಲ್ಲಿರುವ ಹಕ್ಕಿಗಳಲ್ಲಿ ಗಂಡು ವರ್ಣಮಯ. ಸಂತಾನೋತ್ಪತ್ತಿ ಕಾಲದಲ್ಲಿ ಹೆಣ್ಣನ್ನು ಆಕರ್ಷಿಸಲು ಬಣ್ಣ ಗಾಢವಾಗುತ್ತದೆ. ಅವುಗಳ ಕೂಗು ನಾವಂದುಕೊಳ್ಳುವಂತೆ ‘ಹಾಡು ಅಲ್ಲ, ಸಂಕೇತ ಭಾಷೆ. ಅವು ಹೊರಡಿಸುವ ದನಿ ಅಪಾಯ, ಬೇಟ, ಪ್ರೀತಿ ಮತ್ತಿತರ ಹಲವು ಸಂಕೇತಗಳನ್ನೊಳಗೊಂಡಿರುತ್ತದೆ. ಹಕ್ಕಿಗಳ ನಿದ್ರೆಯೂ ವಿಚಿತ್ರ. ಅವು ಎರಡೂ ಕಣ್ಣು ಮುಚ್ಚಿ ನಿದ್ರಿಸುವುದಿಲ್ಲ. ಒಂದು ಕಣ್ತೆರೆದಿರುತ್ತವೆ ಅಥವಾ ಅರೆತೆರೆದ ಕಣ್ಣುಗಳಲ್ಲಿ ಅರೆಎಚ್ಚರದ ನಿದ್ರೆ ಮಾಡುತ್ತವೆ.

ಸ್ವಚ್ಛಂದ ಹಾರುವ ಹಕ್ಕಿಗೆ ಅದರ ರೆಕ್ಕೆಯ ಶಕ್ತಿಯೇ ಮಿತಿ. ಅವು ಸದಾ ಚಟುವಟಿಕೆಯ ಜೀವಗಳು. ಬೆಳಕು ಹರಿವ ಮೊದಲೇ ಚಿಲಿಪಿಲಿಯೆನ್ನುತ್ತ ಮೂಡಲಿಗೆ ಮುಖಮಾಡಿ ಸೂರ್ಯನ ಬರವಿಗೆ ಕಾಯುತ್ತವೆ. ನಂತರ ದಿನವಿಡೀ ಹಾರುತ್ತ, ಹಾಡುತ್ತ ಬೇಟೆಯಾಡುತ್ತ, ವಿರಮಿಸುತ್ತ, ರೆಕ್ಕೆ ಸ್ವಚ್ಛಗೊಳಿಸುತ್ತ, ಗೂಡು ಕಟ್ಟುತ್ತ, ಮರಿಮಾಡಿ ಹಾರಿಸುತ್ತ, ಜೀವನ ಕಳೆಯುತ್ತವೆ. ಎಲ್ಲ ಹಕ್ಕಿಗಳೂ ಒಂದೇ ರೀತಿ ಕಾಣುವುದರಿಂದ ಒಂದೇ ಹಕ್ಕಿಯನ್ನು ವರ್ಷಾನುಗಟ್ಟಲೆಯಿಂದ ನೋಡುತ್ತಿರುವಂತೆನಿಸುತ್ತದೆ. ಪರವೂರಿನಲ್ಲಿ ನೋಡಿದವೂ ಸಹಾ ನಮ್ಮೂರಿನಿಂದ ನಮ್ಮ ಜೊತೆಗೆ ಬಂದವೇನೋ ಎನಿಸಿಬಿಡುತ್ತದೆ. 

ಕುಂಟುತ್ತ, ಸೊಟ್ಟಪಟ್ಟ ಹಾರುತ್ತ ಇರುವ ಅನಾರೋಗ್ಯದ ಹಕ್ಕಿಗಳನ್ನು ನೋಡಲು ಸಿಗುವುದಿಲ್ಲ. ಹಕ್ಕಿ ಸತ್ತು ಕೊಳೆಯುತ್ತಾ ಬಿದ್ದಿದ್ದನ್ನೂ ನೋಡಲಾಗುವುದಿಲ್ಲ. ಅವುಗಳ ಜೀವಿತಾವಧಿ ಕಡಿಮೆ ಇರುವುದಕ್ಕೋ ಏನೋ, ಯಾವುದು ಮುದಿ, ಯಾವುದು ತಾರುಣ್ಯದ ಹಕ್ಕಿ ಎಂದೂ ತಿಳಿಯುವುದಿಲ್ಲ. ಒಂದು ಬೆಳಿಗ್ಗೆ ಹಾರಾರುತ್ತಾ ಮನಿಯಾಡಲು ಹಕ್ಕಿಯೊಂದು ‘ಪಟ್ ಎಂಬ ಶಬ್ದದೊಂದಿಗೆ ತೆಂಗಿನ ಮರದ ಬಳಿ ಬಿತ್ತು. ಏನಾಯಿತೆಂದೇ ತಿಳಿಯಲಿಲ್ಲ. ಅದರ ರೆಕ್ಕೆ, ಕಾಲು, ಕುತ್ತಿಗೆ ಎಲ್ಲ ಸರಿಯಾಗಿದ್ದು ಉಸಿರಾಡುತ್ತಿತ್ತು. ಕಣ್ಣು ಕೆಂಪಗಾಗಿತ್ತು. ಮುಟ್ಟಿದರೂ ಕುಕ್ಕಲಿಲ್ಲ. ಏನು ಹಾಕಿದರೂ ತಿನ್ನಲಿಲ್ಲ. ಸಂಜೆ ತನಕ ಅಲುಗಾಡಲಿಲ್ಲ. ಮರುಬೆಳಗಾಗುವುದರೊಳಗೆ ಸತ್ತುಹೋಗಿತ್ತು. ನರಳಲೂ ಇಲ್ಲ, ಕೊರಗುಡಲೂ ಇಲ್ಲ! ಮತ್ತೊಮ್ಮೆ ಹನಾಲು ಗುಬ್ಬಿ(ಇಂಡಿಯನ್ ಪಿಟ್ಟ) ಅನ್ನೂ, ಪಿಕಳಾರವೊಂದನ್ನೂ ತಂದು ಹೀಗೇ ಉಪಚಾರ ಮಾಡಿದ್ದೆವು. ಅವೂ ಅಷ್ಟೇ, ಹೆಚ್ಚು ಕಾಲ ಉಳಿಯಲಿಲ್ಲ. 

ಅನಾರೋಗ್ಯದಿಂದ ನರಳುತ್ತಿದ್ದರೂ ಔಷಧಿಯ ಮೇಲೆ ಕುಟುಕುಜೀವ ಹಿಡಿದು ಬಹುಕಾಲ ಬದುಕಬಯಸುವುದು ಮನುಷ್ಯನೇ ಇರಬೇಕು. ನಶ್ವರತೆಯ ಹೆದರಿಕೆ, ಅಮರತ್ವದ ಬಯಕೆ ಮಾನವನದು ಮಾತ್ರ ಅಲ್ಲವೆ?

***

ಮನುಷ್ಯನ ಸಣ್ಣತನ, ಬದುಕಿನ ಜಂಜಾಟಗಳನ್ನು ಚಣಹೊತ್ತು ಮರೆಸುವಂಥವರು ಬಾನಾಡಿ ಗೆಳೆಯರು. ಅವರು ದಿನನಿತ್ಯ ನಮ್ಮ ಸುತ್ತಮುತ್ತಲೇ ಸುಳಿಯುತ್ತ, ಉಲಿಯುತ್ತಲಿದ್ದರೂ ನೆರೆಹೊರೆಯ ಈ ಗೆಳೆಯರನ್ನು ನಾವು ಗಮನಿಸಿಯೇ ಇರುವುದಿಲ್ಲ. ಎಳೆಮರಿಗಳ ಬಾಯಿ ಕೆಂಪಗಿರುವುದೆಂದೂ ಎಷ್ಟೋ ಜನಕ್ಕೆ ತಿಳಿದಿರುವುದಿಲ್ಲ. ನಮ್ಮಿಂದ ತಿರುಗಿ ಏನನ್ನೂ ನಿರೀಕ್ಷಿಸದ ಭೂಮಿಯ ಈ ಸಹವಾಸಿಗಳನ್ನು ನಮ್ಮ ದಿನಚರಿಯಲ್ಲಿ ಸೇರಿಸಿಕೊಂಡುಬಿಟ್ಟರೆ ನಾವೂ ಬಾನಾಡಿ ಬಳಗದ ಸದಸ್ಯರಾಗುತ್ತೇವೆ. ಪ್ರತಿದಿನಾ ಮೂರನೇ ಅಂತಸ್ತಿನ ಮನೆಯ ಬಾಲ್ಕನಿಯಲ್ಲಿ ಮರಗಿಡಗಳ ತುದಿಯ ಸಮಕ್ಕೆ ನಿಂತು ಹಕ್ಕಿ ಗಮನಿಸುವುದು; ತೇಜಸ್ವಿ ಪುಸ್ತಕ ‘ಹಕ್ಕಿಪುಕ್ಕದ ಪುಟ ತಿರುಗಿಸಿ ಅದಾವುದೆಂದು ಹುಡುಕುವುದು ದಿನಚರಿಯಾಗಿ ಈಗ ಹಕ್ಕಿಗಳ ಹೆಸರು, ಕುಲಗೋತ್ರಗಳ ಬಗ್ಗೆ ಕೊಂಚ ತಿಳಿದಿದೆ. ಯಾವುದೋ ಒಂದು ಹೊಸ ಕೂಗು ಕೇಳಿದರೆ ಸಾಕು, ಹೊಸಬರು ಬಂದರೆಂದು ನೋಡಲು ಹೊರಓಡುತ್ತೇವೆ. ನಮಗೆ ಪ್ರತಿನಿತ್ಯ ಸಿಗುವ ಈ ಗೆಳೆಯರ ಪರಿಚಯ ನಿಮಗೂ..

ಭಾರತದಲ್ಲಿರುವ ಎಲ್ಲಾ ಹಕ್ಕಿಗಳ ಅರ್ಧದಷ್ಟು ಪ್ರಭೇದಗಳು ಕರಾವಳಿಯಲ್ಲಿದ್ದು ನಾವು ಅವರ ಜಾಗವನ್ನು ಅತಿಕ್ರಮಿಸಿ ಮನೆಕಟ್ಟಿದ್ದೇವೆ. ಎಂದೇ ಅವು ನಾವು ‘ಟ್ರೆಸ್ ಪಾಸರ‍್ಸ್ ಎಂದು ಸದಾ ನೆನಪಿಸುತ್ತಿರುತ್ತವೆ. ಅದರಲ್ಲೂ ಕಿಟಕಿ ಗಾಜಿನಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡು ಬಲಿಷ್ಠ ಕೊಕ್ಕಿನಿಂದ ಗಾಜು ಒಡೆವಂತೆ ಕುಕ್ಕುವ ಕದುಗ ಹಕ್ಕಿ ನಾವು ಅತಿಕ್ರಮಣ ಮಾಡಿದ ಅಪರಾಧ ಪ್ರಜ್ಞೆ ಹುಟ್ಟಿಸುತ್ತದೆ. ಕೆಂಬೂತದಷ್ಟು ದೊಡ್ಡದಿರುವ ಕದುಗನ ದಿನಚರಿಯಲ್ಲಿ ರೋಷಗೊಂಡು ಕಿಟಕಿಗಾಜು ಕುಕ್ಕುವುದೂ ಸೇರಿಕೊಂಡಿದೆ. ಎರಡನೇ ಮಹಡಿಮನೆಯ ಕಿಟಕಿ ಗಾಜು ಬದಲಿಸುವುದು ಹೇಗೆ? ಅದರ ಸಿಟ್ಟು ತಣಿಸುವುದು ಹೇಗೆ? 

ಜಗಲಿ ಲೈಟಿನ ನೇತಾಡುವ ವೈರಿನ ಆಧಾರದಲ್ಲಿ ಪುಟ್ಟ ಗೂಡು ಕಟ್ಟಿದ ಟುವ್ವಿಹಕ್ಕಿ (ಟೈಲರ್ ಬರ್ಡ್) ಒಂದುಕಣ್ಣಿನಲ್ಲಿ ನಿದ್ದೆಮಾಡುವ, ಅರೆಎಚ್ಚರ-ಅರೆನಿದ್ರೆಯ ಅದ್ಭುತವನ್ನು ತೋರಿಸಿಕೊಟ್ಟಿತು. ನಮ್ಮ ಕುಂಭಕರ್ಣತನವನ್ನೂ ಅಣಕಿಸಿತು. ದಿನಾ ಒಂದೊಂದರಂತೆ ಗೋಲಿಯಷ್ಟು ದೊಡ್ಡ ಮೊಟ್ಟೆ ಇಡುತ್ತಾ ಪೂರಾ ನಾಲ್ಕು ಇಟ್ಟಮೇಲೇ ಕಾವು ಕೂತಿತು. ಅಪ್ಪಅಮ್ಮ ಇಬ್ಬರೂ ಸರದಿಯಲ್ಲಿ ಕಾವು ಕೂರುತ್ತಿದ್ದರು, ಗುಟುಕು ತರುತ್ತಿದ್ದರು. ಯಾರು ಅಪ್ಪ, ಯಾರು ಅಮ್ಮ ತಿಳಿಯತ್ತಿರಲಿಲ್ಲ. ಮೊಟ್ಟೆಕವಚ ಒಡೆದು ಹೊರಬಂದ ಅದರ ಮರಿಗಳಾದರೋ ಕುರುಡರು, ಕಿವುಡರು, ಹಾರಲಾಗದವರು. ಜೊತೆಗೆ ಅಪ್ಪಅಮ್ಮರಂತೆ ಹಲ್ಲಿಲ್ಲದವರು. ಆದರೆ ಅವರದು ಯಮಹಸಿವು. ಇಡೀ ದಿನ ಕೂಗಿಕರೆದು ತಿಂದು, ಬೇಗ ಬೆಳೆದವು. ಉಚ್ಚೆಹೊಯ್ಯದ ಹಕ್ಕಿಗಳ ಪಿಷ್ಠೆಯಲ್ಲೇ ನೈಟ್ರಿಕ್ ಆಸಿಡ್ ಇರುವುದರಿಂದ ಪಾಲಕರು ಗೂಡು ಸ್ವಚ್ಛಗೊಳಿಸಿದರೂ ಹತ್ತಿರ ಹೋದರೆ ಘಾಟುವಾಸನೆ. ಇನ್ನೇನು ರೆಕ್ಕೆ ಬರತೊಡಗಿರುವ ಮಕ್ಕಳ ಹಾರಿಸಿಯಾವು ಅಂದುಕೊಳ್ಳುವಷ್ಟರಲ್ಲಿ ಕೆಂಬೂತಹಕ್ಕಿಯ ಹಸಿವಿಗೆ ಗೂಡುಸಮೇತ ಬಲಿಯಾದವು.

ಹಕ್ಕಿಯನ್ನು ನೋಡಿ ಸಂಭ್ರಮಿಸಿದೆವೇ ಹೊರತು ರಕ್ಷಣೆಗೆ ಗಮನ ಕೊಡಲಿಲ್ಲ ಎಂದು ಮನವು ಕೊರಗುವಾಗ ಆ ಪುಟ್ಟ ಹಕ್ಕಿ ಕಾಜಾಣದ ಗೂಡಿನ ಬಳಿಯಾದರೂ ಇದ್ದರೆ ಸುರಕ್ಷಿತವಾಗಿರುತ್ತಿತ್ತು ಎನಿಸಿತ್ತು. ಕಂಚಿನ ಕಂಠದಲ್ಲಿ ಪೋಲಿ ಹುಡುಗರ ಸಿಳ್ಳೆಯಂತೆ, ಕೊಳಲಿನಂತೆ, ಕೇಕೆಯಂತೆ, ವಿವಿಧ ನಮೂನೆಗಳಲ್ಲಿ ಕೂಗುವ ಕಾಜಾಣ (ರಾಕೆಟ್ ಟೇಲ್ಡ್ ಡ್ರೋಂಗೋ) ತನ್ನ ಸಿಟ್ಟಿಗೆ ಪ್ರಖ್ಯಾತ. ಕೋಗಿಲೆಯಷ್ಟು ದೊಡ್ಡದಾದ, ಅಚ್ಚ ಕಪ್ಪುಬಣ್ಣದ, ಸೀಳು ಗರಿಗೆ ತಂತಿಬಾಲ ಹಾಗೂ ಪುಚ್ಛ ಹೊಂದಿದ ಕಾಜಾಣ ತನಗಿಂತ ದೊಡ್ಡ ಹಕ್ಕಿಗಳೂ ತನ್ನ ಗೂಡಿನ ಬಳಿ ಸುಳಿಯದಂತೆ ಅಟ್ಟುತ್ತದೆ. ಹೀಗಾಗಿ ಸಣ್ಣಪುಟ್ಟ ಹಕ್ಕಿಗಳು ತಮ್ಮ ಗೂಡನ್ನು ಅದರ ಗೂಡಿನ ಬಳಿ ಕಟ್ಟಿಕೊಳ್ಳುತ್ತವೆ ಎಂದು ಬರೆದಿದ್ದಾರೆ ತೇಜಸ್ವಿ. ಅದು ಒಳ್ಳೆಯ ಮಿಮಿಕ್ರಿ ಕಲಾವಿದನೂ ಹೌದು. ಈ ಅನುದಿನದ ಬೆಳಗಿನ ಗೆಳೆಯನನ್ನು ಮನೆಗೆ ಬಂದ ನೆಂಟರಿಷ್ಟರಿಗೆ ಅತ್ಯುತ್ಸಾಹದಿಂದ ತೋರಿಸಿದರೆ, ‘ಅರೆ ಕಾಜಾಣ ಎಂದರೆ ಕಾಗೆಯೆಂದುಕೊಂಡಿದ್ದೆವು ಎಂದು ಅಚ್ಚರಿ ಪಡುವವರೇ ಹೆಚ್ಚು. 

ಬಾಲದಂಡೆ (ಬರ್ಡ್ ಆಫ್ ಪ್ಯಾರಾಡೈಸ್) ತುಂಬ ಆಕರ್ಷಕ ಹಕ್ಕಿ. ಎರಡು ಬಣ್ಣಗಳಲ್ಲಿ ಕಾಣಿಸುತ್ತವೆ. ಒಂದು ಕಪ್ಪುಕೇಸರಿ ಕಾಂಬಿನೇಷನ್ನಿನಲ್ಲಿದ್ದರೆ ಇನ್ನೊಂದು ಕಪ್ಪುಬಿಳಿ ಬಣ್ಣದಲ್ಲಿರುತ್ತದೆ. ಗುಬ್ಬಚ್ಚಿಯಷ್ಟು ದೊಡ್ಡ ಹಕ್ಕಿಗೆ ಅದರ ಮೂರುಪಟ್ಟು ಉದ್ದದ ಪುಕ್ಕವಿದ್ದು ಹಾರಾಡುವಾಗ ಎಲ್ಲಿ ಆ ಪುಕ್ಕ ಮರಗಳ ನಡುವೆ ಸಿಕ್ಕಿಹಾಕಿಕೊಳ್ಳುವುದೋ ಎಂದು ನಮಗೇ ಆತಂಕವಾಗುತ್ತದೆ.  

ಗುಲಗಂಜಿ (ಸ್ಕಾರ್ಲೆಟ್ ಮಿನವೆಟ್) ಮತ್ತೊಂದು ಚೆಂದದ ಹಕ್ಕಿ. ಗಂಡು ನಿಗಿನಿಗಿ ಕೆಂಡದ ಬಣ್ಣ ಹೊಂದಿದ್ದರೆ ಹೆಣ್ಣುಹಕ್ಕಿ ಹಳದಿ ಬಣ್ಣ ಇರುತ್ತದೆ. ಮೆಲುವಾಗಿ ವಯೊಲಿನ್ ನುಡಿಸಿದಂತೆ ಕೂಗುವ ಗುಲಗಂಜಿಯನ್ನು ಬೆಳಿಗ್ಗೆ ಸೂರ್ಯನ ಬಿಸಿಲು ಅದರ ಮೈಮೇಲೆ ಬಿದ್ದಾಗ ನೋಡಿದರೆ ಮತ್ತೆಂದೂ ಮರೆಯಲು ಸಾಧ್ಯವಿಲ್ಲ. ಯಾವಾಗಲೂ ಜೋಡಿ ಮೇಲೇ ಇರುವ ಇವು ಮನೆ ಗುಬ್ಬಿಗಳಿಗಿಂತ ಸ್ವಲ್ಪ ದೊಡ್ಡದಾಗಿರುತ್ತವೆ. 

ಹೈವೇ ಪಕ್ಕದ ಸಣ್ಣಪುಟ್ಟ ಹೊಂಡಗಳಲ್ಲಿ ಉದ್ದ ಕೊರಳಿನ ಕಪ್ಪು ಹಕ್ಕಿ ಒಂದು ಕಲ್ಲಮೇಲೋ, ಒಣಗಿದ ಗಿಡದ ಕಾಂಡದ ಮೇಲೋ ನೀರ ನಡುವೆ ರೆಕ್ಕೆಯಗಲಿಸಿಕೊಂಡು ಕೂತಿರುತ್ತದೆ. ಅದು ನೀರುಕಾಗೆ (ಇಂಡಿಯನ್ ಕಾರ್ಮೋರಾಂಟ್). ಗುಂಪುಗಳಲ್ಲಿ ಹಾರುವಾಗಲೂ ಕೂಗುತ್ತದೆ. ನೀರಲ್ಲಿ ಮುಳುಗೇಳುವುದರಿಂದ ಹೇನು-ಶಿಲೀಂಧ್ರಗಳ ಬೆಳವಣಿಗೆ ತಡೆಯಲು ಬಿಸಿಲು ಕಾಯಿಸುತ್ತದೆ. 

ಪಿಕಳಾರ (ಬುಲ್‌ಬುಲ್) ಎಲ್ಲ ಕಡೆ ಕಂಡುಬರುತ್ತವೆ. ಮನೆಗುಬ್ಬಿಗಿಂತ ಸ್ವಲ್ಪ ದೊಡ್ಡದಾಗಿರುವ ಪಿಕಳಾರವನ್ನು ತಲೆಮೇಲಿನ ಚೊಟ್ಟಿಯಿಂದ ಗುರುತಿಸಬಹುದು. ಐದಾರು ವಿವಿಧ ರೀತಿಯ ಪ್ರಭೇಧಗಳಿರುವ ಪಿಕಳಾರಗಳ ಧ್ವನಿ ಕೊಳಲಿನಂತೆ. ಗಣಿಗಣಿ ಎಂದು ಹಾಡುತ್ತಾ, ಜೊತೆಜೊತೆಯಲ್ಲೇ ಇರುವ ಇವು ಕೊಂಬೆ, ವೈರುಗಳ ಮೇಲೆ ಒತ್ತೊತ್ತಿ, ಮತ್ತೂ ಪಕ್ಕಪಕ್ಕ ಸರಿಯುತ್ತ ಕುಳಿತುಕೊಳ್ಳುವುದನ್ನು ನೋಡುವುದೇ ಚಂದ. ಒಂದರ ಹಿಂದೊಂದು ಸುಂಯ್ಯನೇ ಹಾರುತ್ತ, ಮಾತಿಗೆ ಮಾತು ಪ್ರಶ್ನೋತ್ತರ ನಡೆಸುತ್ತಿವೆಯೇನೋ ಎಂಬಂತೆ ಸಂಭಾಷಣೆ ನಡೆಸುವ ಅಪೂರ್ವ ಜೋಡಿ ಇವುಗಳದ್ದು. 

                                         ಚೊಟ್ಟಿ ಮೈನಾ

   
                                         ಟುವ್ವಿಹಕ್ಕಿ (ಟೈಲರ್ ಬರ್ಡ್) 


                                ಟುವ್ವಿಹಕ್ಕಿ (ಟೈಲರ್ ಬರ್ಡ್) ಮರಿ

ಕೇಕೆಹಾಕಿದಂತೆ ಕೂಗುವ ಉದ್ದ ವಾರೆಕೊಕ್ಕಿನ ಮಂಗಟ್ಟೆ (ಹಾರ್ನ್‌ಬಿಲ್) ಹಕ್ಕಿಯನ್ನು ಅದರ ನಿಧಾನ ಚಲನೆ, ಕರ್ಕಶ ಕೂಗು ಮತ್ತು ದಡ್ಡತನ(?)ಕ್ಕೆ ನಮ್ಮ ಕಡೆ ‘ಕೆಪ್ಪಹಕ್ಕಿ ಎಂದು ಕರೆಯುತ್ತಾರೆ. ಕಾಗೆಗಿಂತ ದೊಡ್ಡದಿರುವ ಈ ಬಳಗದ ಹೆಣ್ಣು ಗರ್ಭ ಧರಿಸಿದಾಗ ಅದರ ಮೈಯ ರೆಕ್ಕೆಪುಕ್ಕಗಳೆಲ್ಲ ಉದುರಿ ಬೋಳಾಗುತ್ತದೆ. ಎಂದೇ ಗಂಡು ಹೆಣ್ಣನ್ನು ಅದರ ಮೊಟ್ಟೆ ಸಮೇತ ದೊಡ್ಡ ಮರದ ಪೊಟರೆಯಲ್ಲಿಟ್ಟು ಕೊಕ್ಕಿಗಷ್ಟೇ ಜಾಗ ಬಿಟ್ಟು ಮುಚ್ಚಿಹಾಕುತ್ತದೆ. ಅಮ್ಮ, ಮಕ್ಕಳಿಬ್ಬರಿಗೂ ಇಡೀ ಸೀಸನ್ನಿನಲ್ಲಿ ಗುಟುಕು ತಂದುಕೊಡುತ್ತದೆ. ಅಪ್ಪನನ್ನು ಬೇಟೆಯಾಡಿದರೆ ಮುಗಿಯಿತು, ಗೂಡೊಳಗಿನ ಅಮ್ಮ ಮಕ್ಕಳು ಹಸಿವಿನಿಂದ ಸತ್ತುಹೋಗುತ್ತಾರೆ. ಮರಿಗಳಿಗೆ ರೆಕ್ಕೆ ಬೆಳೆಯುವ ಹೊತ್ತಿಗೆ ಅಮ್ಮನ ರೆಕ್ಕೆಯೂ ಬಲಿತು ಎಂಜಲು-ಮಣ್ಣು-ನಾರು ಸೇರಿಸಿ ರಕ್ಷಣಾಗೋಡೆಯಂತೆ ಅಪ್ಪ ಕಟ್ಟಿದ ಗೂಡು ಒಡೆದು ಎಲ್ಲವೂ ಹೊರಬರುತ್ತವೆ. ಈ ದೊಡ್ಡ ಹಕ್ಕಿಗಳನ್ನು ಬೇಟೆಯಾಡುವುದರಿಂದ ಅವು ಅಳಿವಿನಂಚಿನಲ್ಲಿದ್ದು ಪಶ್ಚಿಮಘಟ್ಟಗಳಲ್ಲಿ ‘ಹಾರ್ನ್‌ಬಿಲ್ ಸಂರಕ್ಷಣಾ ಯೋಜನೆ ಜಾರಿಯಲ್ಲಿದೆ. 

ಇವರಲ್ಲದೆ ಮಡಿವಾಳ, ಗಣಿಗಾರ್ಲು, ಗಿಜಗಾರ್ಲು, ಅರಿಶಿನಬುರುಡೆ, ಸೊಪ್ಪುಕುಟುರ, ಮೈನಾ, ಮಿಂಚುಳ್ಳಿ, ಗರುಡ, ಅನೇಕ ಜಾತಿಯ ಚಿಟಗುಬ್ಬಿ-ಹೂಗುಬ್ಬಿ-ಪೀಪಿಗಳು, ಗೂಬೆ, ಕುಂಡೆಕುಸ್ಕ, ಭರದ್ವಾಜ, ಗೀಜಗ ಇನ್ನಿತರ ಅನೇಕ ಹಕ್ಕಿಗಳು ನಮ್ಮ ಅನುದಿನದ ಸಂಗಾತಿಗಳು. ನವಿಲು, ಕಾಡುಕೋಳಿ ವಾಕಿಂಗ್ ದೋಸ್ತರು. 

ಎಲ್ಲ ಹಕ್ಕಿಗಳೂ ದಿನಾ ಬಾರವು. ಆದರೆ ಕೆಲವಾದರೂ ಬಾರದೇ ನಮ್ಮ ದಿನ ಕಳೆಯದು. 

ಇನ್ನು ಮೇಲೆ ಸುತ್ತ ಸುಳಿವ ಈ ಗೆಳೆಯರನ್ನು ಉಪಚರಿಸದಿದ್ದರೂ ಪರವಾಗಿಲ್ಲ, ಕನಿಷ್ಟ ಗುರುತು ಹಿಡಿಯುತ್ತೀರಲ್ಲವೆ?

*** 

ಮನುಷ್ಯಪ್ರಾಣಿ ಭೂಮಿ ಮೇಲೆ ಅವತರಿಸುವುದಕ್ಕಿಂತ ಕೋಟ್ಯಂತರ ವರ್ಷ ಮೊದಲೇ ಪಶುಪಕ್ಷಿಕ್ರಿಮಿಕೀಟಗಳು ಉದಯಿಸಿದವು. ಅವರು ನಮ್ಮ ಪುರಾತನರು. ಆದರೆ ಭೂಮಿತಾಯಿಯ ಕಿರಿಯಮಗು ಮಾನವ ಭೂಮಿ ಮೇಲಿರುವುದೆಲ್ಲ ತನ್ನ ಉಪಭೋಗಕ್ಕಾಗಿ ಮಾತ್ರ ಎಂದು ತಿಳಿದಂತಿದೆ. ತಾಯಿಯ ಎದೆಹಾಲನ್ನಲ್ಲ, ರಕ್ತ ಹೀರುತ್ತಿದೆ. ಮನುಷ್ಯನ ಅನ್ಯಾಯ, ನಿರ್ಲಕ್ಷ್ಯ, ತಿರಸ್ಕಾರಗಳಿಂದ ಲೆಕ್ಕವಿಲ್ಲದಷ್ಟು ಜೀವಿಪ್ರಭೇದಗಳು ಅಳಿದುಹೋಗಿವೆ. ಅಲ್ಲಿಲ್ಲಿ ಗುಬ್ಬಚ್ಚಿ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ ಮಾತು ಕೇಳಿಬರುತ್ತದೆ. ಅದಷ್ಟೇ ಅಲ್ಲ, ಹಕ್ಕಿಗಳ ಅಜಮಾಸು ೧೦ ಸಾವಿರ ಪ್ರಭೇದಗಳಲ್ಲಿ ೧೨೦-೧೩೦ ಪ್ರಭೇಧಗಳು ಅಳಿದಿವೆ. ೧೨೦೦ ಅಳಿವಿನಂಚಿನಲ್ಲಿವೆ. ಕೊಳ್ಳುಬಾಕತನ ಮತ್ತು ಉಪಭೋಗವನ್ನೇ ಸಂಸ್ಕೃತಿಯಾಗಿಸಿದ ಜಾಗತೀಕರಣ ಮತ್ತು ಆಧುನೀಕರಣದ ಹೊತ್ತಿನಲ್ಲಿ ನಮ್ಮ ಸುತ್ತಮುತ್ತಲ ಚರಾಚರ ವಸ್ತುಗಳನ್ನು ಗಮನಿಸುವುದನ್ನೇ ನಿಲಿಸಿದ್ದೇವೆ. ಲಕ್ಷಾಂತರ ಜೀವಿಗಳಲ್ಲಿ ಕೆಲವು ಅಳಿದರೆ ಏನಾಯಿತು ಎನಿಸಬಹುದು. ಭೂಮಿ ಮೇಲಿನ ಜೈವಿಕ ಪರಿಸರ ಎಷ್ಟು ಸೂಕ್ಷ್ಮ ಎಂದರೆ ಜೀವಿಯೊಂದರ ಅವಸಾನ ಅದಿನ್ನು ಕಾಣಸಿಗದು ಎನ್ನುವುದಕ್ಕಷ್ಟೇ ಅಲ್ಲ, ಹಲವು ಅಪಾಯಗಳ ಮುನ್ಸೂಚಕವೂ ಆಗಿದೆ.

ಮಾನವ ಹಕ್ಕುಗಳ ಬಗೆಗೆ ದನಿಯೆತ್ತುವವರು ಪರಿಸರ ಕುರಿತು ಸುಮ್ಮನಿರುತ್ತಾರೆ. ಪರಿಸರವಾದಿಗಳು ಮಾನವಪ್ರಶ್ನೆಯನ್ನು ಬದಿಗೆ ಸರಿಸುತ್ತಾರೆ. ಇದು ಗಣಿಗಾರಿಕೆ, ಕಾರ್ಖಾನೆ, ಎಸ್‌ಇಜಡ್, ಜಲವಿದ್ಯುತ್ ಯೋಜನೆ ಎಲ್ಲದರ ಕುರಿತೂ ಅನ್ವಯಿಸುತ್ತದೆ. ಆದರೆ ಸಮಗ್ರವಾಗಿ ನೆಲವನ್ನು ಅದರೆಲ್ಲ ಜೀವಿಗಳೊಂದಿಗೆ ಗ್ರಹಿಸದೇ ಇರುವಷ್ಟು ದಿನ, ಕಳ್ಳುಬಳ್ಳಿ ಸಂಬಂಧವನ್ನೇ ಮರೆತವರಿಂದ ಯಾರಿಗೂ ಪೂರ್ಣ ನ್ಯಾಯ ದೊರೆಯುವುದು ಸಾಧ್ಯವಿಲ್ಲ. ಎಂದೇ ಜೀವವೈವಿಧ್ಯ ಕುರಿತು ಕಾಳಜಿಯಿರುವವರು ಮನುಷ್ಯ ಸಂಕಟಗಳನ್ನೂ ಗ್ರಹಿಸಬೇಕು; ಮಾನವ ಸಂಕಟಗಳ ಕುರಿತು ಹೋರಾಡುವವರು ತಮ್ಮ ಸುತ್ತಮುತ್ತಲ ಚರಾಚರ ವಸ್ತುಗಳನ್ನೂ ಕುತೂಹಲ, ಪ್ರೀತಿ, ಕಾಳಜಿಯಿಂದ ನೋಡಬೇಕು.

ಈ ಭೂಮಿ ನಮಗೆಷ್ಟೋ ಅಷ್ಟೇ ಗೆದ್ದಲಿಗೆ, ಇರುವೆಗೆ, ನೊಣಕ್ಕೆ, ಗುಬ್ಬಿಗೆ, ಸಕಲ ಚರಾಚರಗಳಿಗೆ ಸೇರಿದ್ದು ಎಂದು ನೆನಪಿಡಬೇಕು.  




1 comment:

  1. ಅನುಪಮಾ ಅವರೆ, ನಿಮ್ಮ ಲೇಖನ ಬಹಳ ಇಷ್ಟವಾಯಿತು. ನನಗೂ ಮೊದಲಿನಿಂದಲೂ ಪ್ರಾಣಿ-ಪಕ್ಷಿಗಳ ಬಗೆಗೆ ತುಂಬಾ ಕುತೂಹಲ, ಆಸಕ್ತಿ. ನಾನು ಮಲೆನಾಡಿನಲ್ಲಿ ಹುಟ್ಟಿ ಬೆಳೆದಿರುವುದೂ ಇದಕ್ಕೆ ಕಾರಣವಿರಬಹುದು. ಸದಾಕಾಲ ಮನೆಯ ಸುತ್ತಮುತ್ತ ಕ್ಯಾಮೆರಾ, ಬೈನಾಕ್ಯುಲರ್ ಹಿಡಿದುಕೊಂಡು ಸುತ್ತುತ್ತಿದ್ದ ನನಗೆ ಕೆಲಸದ ನಿಮಿತ್ತ ಬೆಂಗಳೂರಿಗೆ ವರ್ಗವಾದಾಗ ಆಕಾಶವೇ ಕಳಚಿ ತಲೆಯಮೇಲೆ ಬಿದ್ದಂತಾಗಿತ್ತು. ಆದರೆ ಏಳು ತಿಂಗಳ ಬಳಿಕ ಮಲೆನಾಡಿನ ಮಡಿಲಲ್ಲಿರುವ ಮೂಡಿಗೆರೆಗೆ ಬಂದು ಈಗ ನಿರಾಳವಾಗಿದ್ದೇನೆ. ನಿಮ್ಮ ಬರಹದ ಶೈಲಿ, ವಿಷಯ ನಿರೂಪಣೆ ಎಲ್ಲವೂ ತುಂಬಾ ಚೆನ್ನಾಗಿದೆ. ಇದೇ ರೀತಿಯ ಬರವಣಿಗೆಯನ್ನು ಮುಂದುವರೆಸಿ. ನಮ್ಮ ಸುತ್ತಮುತ್ತ ಇಂದು ಏನು ನಡೆಯುತ್ತಿದೆ ಎಂದು ಗಮನಹರಿಸುವುದಕ್ಕೂ ವ್ಯವಧಾನವಿಲ್ಲದ ಗಡಿಬಿಡಿಯ ಯುಗದಲ್ಲಿ ನಿಮ್ಮ ಪ್ರಕೃತಿಯ ಬಗೆಗಿನ ಈ ಬರಹಗಳು ಮರಳುಗಾಡಿನಲ್ಲಿನ ಓಯಸಿಸ್ ಇದ್ದಂತಿವೆ.
    ಧನ್ಯವಾದಗಳೊಂದಿಗೆ,
    ಎಸ್ ವಿ ಶ್ರೀನಿವಾಸ ಮೂರ್ತಿ
    7411982346
    malabartrogon10@gmail.com

    ReplyDelete