Friday 13 June 2014

ಕೆಂಡಮಾಸ್ತಿ








       ಹಗಲ ಮರಿ ಇನ್ನೇನು ಮೊಟ್ಟೆಯೊಡೆದು ಹೊರಬರುವ ಹೊತ್ತು..

   ಕೇರಿಯ ನಸುಗತ್ತಲಿನೊಳಗೆ ಕಾಲಿಟ್ಟಿದ್ದೇ ರೊಂಯ್ಞನೆ ಬೀಸಿಬಂದ ಕುಳಿಗಾಳಿಗೆ ಸ್ವೆಟರಿನೊಳಗೂ ನಡುಕ ಹುಟ್ಟಿತು. ಕೇರಿ ಆಗಲೇ ಎಚ್ಚೆತ್ತಿದೆ. ಮಡ್ಲು ಮಾಡಿನ ಕಂಡಿಗಳ ನಡುವಿಂದ ಹೊಗೆಯೇಳುವುದು ಅಸ್ಪಷ್ಟವಾಗಿ ಕಾಣುತ್ತಿದೆ. ಮನೆಗಳಿಂದ ಲಟಪಟ ಸದ್ದು. ದೂರದಲ್ಲಿ ಚೊಂಬು ಹಿಡಿದು ಇಳಿಜಾರು ಇಳಿಯುತ್ತಿರುವ ಆಕೃತಿ. ಕಾಲಡಿಯೇ ಸುಳಿಸುಳಿದು ಓಡುವ ಕೋಳಿಪಿಳ್ಳೆಗಳು. ‘ಸಂಕ್ರಾತಿಗೆ ಎಂಟು ದಿನಕೇ ಜಾತ್ರೆ, ಇನ್ ಮೂರ‍್ದಿನ ಉಳಿತಷ್ಟೇಯಾ. ಅಮ್ಮನೋರ ಮನಿ ನೋಡ್ಕಬರುಕೆ ಹೋಗುದಾದ್ರೆ ಮದ್ಲೇ ಬರಬೇಕು. ಬೆಳಕ್ಹರುದ್ರೆ ಚಪ್ಪರ, ಕೊಂಡ ತೋಡಣ ಅಂತ ಹುಡುಗ್ರು ಬಂದ್ಬಿಡ್ತಾರೆ, ನಂಗೂ ಕೆಲ್ಸಕೆ ತಡಾಯ್ತದೆ’ ಎಂದು ನಾಗಿ ಎಚ್ಚರಿಸಿದ್ದಳು. ಬೆಳಕು ಹರಿಯುವುದರಲ್ಲಿ ಕೇರಿ ತಲುಪಿದ್ದೆ.

   ಇಲ್ಲಿ ಯಾವುದು ನಾಗಿ ಮನೆ? ಕೇರಿಯ ಎಲ್ಲ ಬಿಡಾರಗಳೂ ಮಸುಕಾಗಿ ಒಂದೇರೀತಿ ಕಾಣುತ್ತಿವೆ. ಬಾಗಿಲ ಆಚೀಚಿನ ಗೋಡೆ ಮೇಲೆ ಮಂಡಲ ರಂಗೋಲಿಯಿರುವ ಓ ಆ ಮನೆ, ಅವಳದಿರಬೇಕು. ಮನೆಯೆದುರು ನಿಂತದ್ದೇ ಕೊಂಯ್ಞ್‌ಗುಡುತ್ತ ಬಾಗಿಲು ತೆರೆದುಕೊಂಡು ಹಬೆಯಾಡುವ ಮೈಯ ನಾಗಿ ಈಚೆ ಬಂದಳು. ‘ಸಾನ ಮಾಡ್ಕ ಬಂದಿದಿ ತಾನೆ? ಎಂತಕಂದ್ರೆ ಮೈಲಿಗಿಯೋರೆಲ್ಲ ಹೋಗಿ ಮುಟ್ಟುಚಿಟ್ಟು ಆದ್ರೆ ಏನಿಲ್ಲ ಮತ್ತೆ, ಮಾಸ್ತಮ್ಮಂಗೆ ಸಿಟ್ಟು ಬಂದು ಎಲ್ರೂ ಸರ್ವನಾಶ..’ ಎಂದಳು.

   ನೀರಿಳಿಯುತ್ತಿದ್ದ ಕೂದಲನ್ನು ಒಟ್ಟುಮಾಡಿ ಗಂಟುಕಟ್ಟುತ್ತ ಒಳಹೋಗಿ ಮಾಗಿಮಲ್ಲಿಗೆ ದಂಡೆ ಸೂಡಿಕೊಂಡು ನನಗೊಂದು ತಂದಳು. ಕಾಡುಮಲ್ಲಿಗೆಯ ನವಿರು ಪರಿಮಳವೋ, ನಾಗಿಯ ಹಬೆ ಮೈ ಹೊರಸೂಸುತ್ತಿದ್ದ ಲೈಫ್‌ಬಾಯ್ ಸಾಬೂನಿನ ಪರಿಮಳವೋ ಅಂತೂ ಅಲೌಕಿಕ ಸುಗಂಧ ಅಲ್ಲೆಲ್ಲ ಹರಡಿತು. ಕಿರಿಗುಡುವ ಬಾಗಿಲು ಸರಿಸುತ್ತ, ಮಾಡಿಗೆ ಸಿಗಿಸಿದ ಕತ್ತಿ ಕೈಲಿ ಹಿಡಿದು ‘ಗಿರಕಿ ಮೆಟ್ಟಿನ ಸದ್ದಿಗೇ ನೀ ಬಂದಿದ್ದು ಗೊತ್ತಾತು..’ ಎನ್ನುತ್ತ ಮುಂದೆಮುಂದೆ ನಡೆದಳು. ಮಾಸಿದ ಕಗ್ಗೆಂಪು ಸೀರೆಯುಟ್ಟ ನಾಗಿಯ ಕಣ್ಣು ಕೆಂಪೇರಿದ್ದವು. ಅವಳ ನೀರಿಳಿಯುವ ಕೂದಲು ಒದ್ದೆ ಮಾಡಿದ ಬೆನ್ನು, ಸೊಂಟ, ಹಿಂತೊಡೆಗಳು ಕತ್ತಿಯೊಡನೆ ಲಯಬದ್ಧವಾಗಿ ಚಲಿಸುತ್ತಿದ್ದವು. ತೊನೆವ ಇಂಥ ಜೀವಕ್ಕೆಲ್ಲಿಯ ಮುಟ್ಟುಚಿಟ್ಟು?

   ‘ದೇವ್ರೆ ಮನುಷ್ಯನ್ನ ಮಾಡ್ದೋನು ಅಂದ್ಮೇಲೆ ಮುಟುಚಟ್ಟು ಅಂತೆಲ್ಲಿದೆ ನಾಗಿ’ ಎಂದೆ.

   ‘ಐ.. ಮುಟ್ಟಂತ ಈಗ ಮನೆಗ್ಯಾರು ಕುಂತಾರು? ತ್ವಾಟಗದ್ದೆ, ಸೊಪ್ಪುದರಕು ಅಂತ ಮಾಡದ್ನೆಲ್ಲ ಮಾಡದೇ. ಮುಟ್ಟಂತ ಮೂರ‍್ದಿನ ಗಂಜಿಗಸಿ ಕಾಸೂ ಕೆಲ್ಸಕಷ್ಟೇ ರಜೆ. ಒಳ್ಳೇದೇ ಬಿಡು. ಮಾಡ್ಕ ತಿಂದ್ರೆ ಅವಕ್ಕೂ ಗೊತ್ತಾಗುತ್ತೆ ಕಷ್ಟ.’

‘ಮಾಡಿ ತಿನಲಿ ಬಿಡು, ಈ ಕತ್ತಿ ಯಾಕ್ ಹಿಡ್ಕಂಡ್‌ಬಂದೆ ಭದ್ರಕಾಳಿ ಹಂಗೆ?’

‘ಅದೇನೋ ಅಮಾ, ಕತ್ತಿ ಯಾವಾಗೂ ನನ್ಜೊತೆ ಇರ‍್ಬೇಕು. ಮಲಿಕಳುವಾಗೂ ಪಕ್ಕ ಇದ್ರೇ ಸಮಾದಾನ. ನಮ್ಮವ್ವಿನೂ ಹಂಗೇ ಮಾಡ್ತಿತ್ತು. ಕಬ್ಣ ಹಿಡಿದ್ರೆ ದೆವ್ವ ಬರಲ್ಲ. ದೆವ್ವಗಿವ್ವ ಸಾಯ್ಲಿ, ಮನ್ನೆ ಟಿವಿಲಿ ತೋರ್ಸಿದಂಗೆ ಕೆಡಿಸಕ್ಬಂದರ‍್ನ ಕತ್ತರಸಿ ಅತ್ತ ಒಗೆಯಕ್ಕಾದ್ರೂ ಆದಾತು ಅಂತ..’

ಆಡಾಡುತ್ತ ಮಾತು ಮೊನ್ನೆಯಷ್ಟೇ ಅವರ ಕೇರಿಗೆ ಬಂದು ಶುದ್ಧ ಮಾಡಿಹೋದ ‘ದೊಡ್ಡ ಸ್ವಾಮಿಗೋಳ’ ಕಡೆ ತಿರುಗಿತು. ಸ್ವಾಮಿಗಳು ಬರುವಾಗ ಕೇರಿಗೆ ತೋರಣವಾಗಲು ಮೈಕೈ ತರಚಿಕೊಂಡ ಮಾವಿನಮರ ತೋರಿಸಿದಳು. ಸ್ವಾಮಿಗಳು ಬರುವುದರಿಂದ ಯಾರೂ ಗೌಲುಮಾಂಸ ತಿನ್ನಬಾರದೆಂದು ಕೇರಿಯ ಹಿರಿಯ ಕಟ್ಟು ಮಾಡಿದ್ದ. ಎಂದೇ ಅವಳಿಗೆ ಬಳಚು ವ್ಯಾಪಾರವಿರಲಿಲ್ಲ. ವಾರದ ಬಳಿಕ ನಿನ್ನೆಯಷ್ಟೇ ಬಳಚು ಹೆಕ್ಕಲು ಹೊಳೆ ಮುಳುಗಿದ್ದಳು. ಒಂದು ಹೆಗಲಿಗೆ ಹೊಂಯ್ಞಿಗೆ ಚೀಲ, ಇನ್ನೊಂದು ಹೆಗಲಿಗೆ ಬಳಚಿನ ಚೀಲ ನೇಲಿಸಿಕೊಂಡು ಹೊಳೆ ಮುಳುಗೇಳುವ ಅವಳ ಚಿತ್ರ ಕಣ್ಮುಂದೆ ಬಂತು. ಎರಡೂ ಹೆಗಲು ನೋಯುತ್ತಿರಬಹುದೇ ಎಂಬ ನನ್ನ ಯೋಚನೆಯನ್ನು ಅಣಕಿಸುವಂತೆ ಅವಳ ಕುತ್ತಿಗೆ ತುಂಬಿದ್ದ ಮಣಿಸರಗಳು ಕಿಲಕಿಲಗುಡಹತ್ತಿದವು. ಕುತ್ತಿಗೆ ಪೂರಾ ಮುಚ್ಚಿ ಗಲ್ಲಕ್ಕೆ ಕಚಗುಳಿಯಿಡುತ್ತಿದ್ದ ಮಣಿಸರಗಳೂ, ದಷ್ಟಪುಷ್ಟ ಮಾಂಸಖಂಡಗಳೂ ಅವಳ ಓಡುನಡಿಗೆಯ ಜೊತೆಗೆ ತಾವೂ ಹಾರಿಹಾರಿ ಬೀಳತೊಡಗಿದವು. ರವಿಕೆಯಿಲ್ಲದ ದೇಹಕ್ಕೆ ಚಳಿಯ ಹೆದರಿಕೆಯಿರಲಿಲ್ಲ. ನಡುಗುತ್ತ ನಾನು ಅವಳ ಹಿಂದೋಡಿದೆ.

 ‘ಸ್ವಾಮ್ಗುಳು ಬಂದೋರೇ ಕೇರಿಲೆಲ್ಲ ತಿರುಗಿ ಸುದ್ದ ಮಾಡಿದ್ರು. ನಾಕು ಮನೆ ಹೊಕ್ಕು ಪಾದಪೂಜೆ ಮಾಡಿಸ್ಕಂಡ್ರು. ನಮ್ಮ ಕೇರಿಯ ಅಷ್ಟೂ ಹೆಂಗುಸ್ರಿಗೆ ಸೀರೆ ಕುಂಕ್ಮ ಪ್ರಸಾದ, ಗಂಡುಸ್ರಿಗೆ ಪಂಜಿ ಅಕ್ಷತೆ ಕೊಟ್ಟೋದ್ರು. ‘ಇನ್ನು ಮ್ಯಾಲೆ ದೇವ್ರು ದಿಂಡ್ರಿಗೆ ರಕ್ತಗಿಕ್ತ ಬಲಿ ಕೊಡಬ್ಯಾಡ್ರಿ. ಅದು ಪರಮಾತ್ಮನಿಗೆ ಇಸ್ಟ ಆಗಲ್ಲ. ನೋಡ್ರಿ ನಂ ಪೈಕಿ ದೇವ್ರು ರಕ್ತ ಕೊಡದಿದ್ರೂ ನಮ್ಮುನ್ನೆಲ್ಲ ಉದ್ಧಾರ ಮಾಡ್ತಿಲ್ವ? ನಿಮ್ ಜಟಗನ ಮನೆ, ಮಾಸ್ತಿಚೌಡಿ ದೇವ್ರನ ಸುದ್ದ ಮಾಡಿಕೊಡ್ತೀನಿ, ಇನ್ಮೇಲೆ ಬಾಳೆಗೊನಿ, ತೆಂಗನಕಾಯಿ, ಗುಂಬಳಕಾಯಿ ಮಾತ್ರ ಕೊಡಿ ಸಾಕು, ಕೋಳಿ ಕುಯ್ಯದು ನಿಲ್ಸಿಬಿಡಿ’ ಅಂತಂದ್ರು....’

 ‘ಜಟಗನಿಗೆ ಕೋಳಿ ಕುಯ್ಯಬೇಡಿ ಅಂದ್ರೆ ನೀವು ಒಪ್ಪಿಬಿಟ್ರಾ?’

 ‘ಹೇಳ್ತಿನಿ ಕೇಳು. ಸ್ವಾಮಿಗುಳು ರಕ್ತಬಲಿ ಬ್ಯಾಡ ಅಂದಾಗ ಎಲ್ರ ಬಾಯಿ ಕಟ್ಟೋಯ್ತು. ಆದ್ರೆ ಈ ನಮಮ್ಮ ಇದಾಳಲ್ಲ, ಇವ್ಳು ಅಂತಿಂತೋಳಲ್ಲ. ಜಟಗನೂ ಅಷ್ಟೆ ಬಾರೀ ಸಿಟ್ಟಿನಾಂವಾ. ರಕ್ತಬಲಿ ಇಲ್ದಿದ್ರೆ ನಮ್ನೇ ಬಲಿ ತಗಂಡ್ ಬಿಡೋವಷ್ಟ್ ಸಿಟ್ಟು ಇವರದ್ದು. ಕೋಳಿ ಕುಯ್ಯೋ ದೇವ್ರ ಸಿಟ್ಟು ಬಾಳೆಹಣ್ಣಿನ ಗುರುಗುಳ್ಗೆ ಗೊತ್ತಾಗಲ್ಲ ಬಿಡು ಪಾಪ..’

ಮಾಸ್ತಿ, ಜಟಗರ ಗುಣಗಾನ ಮಾಡುತ್ತ ರಕ್ತಬಲಿ ಬೇಡ ಅಂದ ಸ್ವಾಮಿಗಳ ಅಜ್ಞಾನದ ಬಗ್ಗೆ ಮರುಗುತ್ತ ತಾನು ಹೇಳಿದ್ದು ಗಿಡಮರಗಳಿಗೆಲ್ಲ ಕೇಳಿಬಿಟ್ಟೀತೋ ಎಂದು ಮೆಲುದನಿಯಲ್ಲಿ ಮಾತನಾಡತೊಡಗಿದಳು. ನಿಧಾನವಾಗಿ ಒಂದು ಸಣ್ಣ ಗುಡ್ಡ ಏರತೊಡಗಿದ್ದೆವು. ಗುಡ್ಡದಾಚೆಯ ಆಕಾಶ ಕೆಂಪಾಗಿ ಇನ್ನೇನು ಸ್ಫೋಟಗೊಳ್ಳುವ ಜ್ವಾಲಾಮುಖಿಯಂತೆ ತೋರುತ್ತಿತ್ತು. ನಿರ್ಜನವಾಗಿದ್ದ ಬೆಟ್ಟದ ಮೇಲಿನಿಂದ ಕೆಳಗಿನ ಊರು ಕೇರಿ ಪುಟ್ಟದಾಗಿ ಕಾಣುತ್ತಾ ದೂರವಾಗತೊಡಗಿತ್ತು.

   ‘ನಾಗಿ, ಅಲ್ನೋಡು ಸೂರ್ಯ..’

   ‘ಓ ನಮಪ್ನೇ, ಕೈ ಮುಗಿತೆ ಸ್ವಾಮಿಯೇ. ಅಮೋ, ನಾ ದರಕು ಉಡುಗಿ ವಾಪಸ್ ಹೋಗತ್ತಿಗೆ ಪ್ರತಿದಿನಾ ಹಿಂಗೇ ಕಾಣುಸ್ತಾನೆ ನೋಡು. ಈ ಸ್ವಾಮಿದೇವ್ರು ಜಗತ್ನ ಹೆಂಗೆ ಹುಟ್ಟುಸ್ದ, ಭೂಮಿ ಹೆಂಗ್ ಹುಟ್ತು, ಆಕಾಶ ಹೆಂಗ್ ಸುಷ್ಟಿ ಆಯ್ತು ಅಂತ ಹಳಬ್ರು ಹಾಡೋ ಹಾಡ್ನ ಕೇಳಿದೀಯಾ ನೀನು? ಈ ಭೂಮೆಲ್ಲಾ ಒಂದು ಮೊಟ್ಟೆ ಆಕಾರ‍್ದಾಗೆ ಹುಟ್ತಂತೆ. ಆಮೇಲೆ ಮೊಟ್ಯಾಗಿನ ಹಳದಿ ಸೂರ್ಯನಾಗಿ, ಬಿಳೀದು ಆಕಾಶವಾಗಿ ಹರಡತಂತೆ. ಯಾವ ರಾಯನ ಕಾಲ್ದಿಂದ್ಲು ನಮಗಾಗಿದ್ದುಕ್ಕೆ ಸಾಕ್ಷಿಯಾಗಿ ನಿಂತಾನೆ ಈ ಸ್ವಾಮಿ..’

   ಇದ್ದಕ್ಕಿದ್ದಂತೆ ನಾಗಿ ಮೌನವಾದಳು. ಇದೇ ಗುಡ್ಡದ ಮೇಲೇ ಅಲ್ಲವೇ ಶೌಚಕ್ಕೆ ಬಂದಿದ್ದ ಅವಳ ಅಂಗವಿಕಲ ಮಗಳನ್ನು ಪುಂಡುಹುಡುಗರು ಎಳೆದಾಡಿದ್ದು? ಇದೇ ಸೂರ್ಯಸಾಕ್ಷಿಯಾಗೇ ಅಲ್ಲವೆ ಅವಳು ರಣಚಂಡಿಯಂತೆ ಆ ಹುಡುಗರ ಮನೆಗಳೆದುರು ನಿಂತು ಅಬ್ಬರಿಸಿದ್ದು? ಬಸುರಾದ ಎಳೆಯ ಬುದ್ಧಿಮಾಂದ್ಯ ಜೀವ ಮತ್ತು ಅದಕ್ಕೆ ಹುಟ್ಟಬಹುದಾದ ಮಗುವನ್ನು ಸಾಕಿಯೇ ಸಿದ್ಧ ಎಂದ ಏಕಾಂಗಿ ನಾಗಿಯ ದಿಟ್ಟತನವೇ ಅಲ್ಲವೆ ನನ್ನಲ್ಲಿ ಮಲಗಿದ್ದ ಸ್ತ್ರೀವಾದವನ್ನು ಬಡಿದೆಬ್ಬಿಸಿದ್ದು? ನನ್ನಮ್ಮನಷ್ಟು ಹಿರಿಯಳಾದ ನಾಗಿ ಸರಸರ ಬೆಟ್ಟ ಹತ್ತುತ್ತಿದ್ದರೆ ನಾನು ಏದುಬ್ಬಸಪಡುತ್ತಿದ್ದೆ. ಈಗ ಐದಾರು ವರ್ಷವಿರಬಹುದಾದ ಆ ಮಗುವನ್ನು ಇತ್ತೀಚೆಗೆ ನೋಡಲಿಲ್ಲ. ಮಗಳನ್ನು ಅಕ್ಕನ ಮನೆಯಲ್ಲಿಟ್ಟಿರುವುದಾಗಿ ಹೇಳಿದ್ದಳು, ಮಗು?

ಒಂದೊಂದೇ ಹೆಜ್ಜೆ ಮೇಲೆ ಬರತೊಡಗಿದ ಎಳೆಯ ಸೂರ್ಯ. ಇಬ್ಬನಿಯ ಮಬ್ಬಿನ ನಡುವೆ ದೂರದಲ್ಲಿ ಗುಡಿಯ ಕಳಶ ಹೊಳೆಯತೊಡಗಿತ್ತು. ಮಂಜಿನ ಆಲಯಕೆ ಬಿಸಿಲ ಕಳಶ? ‘ಅಮೋ, ಬೇಗ್ಬೇಗ ಬಾ. ಕಳಸ ಕಾಣ್ತಿದೆ ನೋಡು. ಕಳಸಾನೂ ಆ ಸ್ವಾಮಿಗಳೇ ಕೊಟ್ಟುಂದು. ಆ ಕಳಸ, ಪೂಜೆ ಸಾಮಾನ, ದೊಡ್ಡ ದೀಪದಕಂಬ, ಒಂದು ಹಿತ್ತಾಳೆ ಗಂಟೆ ಎಲ್ಲ ಕೊಟ್ಟೋಗಿದಾರೆ. ಯಾರಾದ್ರೂ ಕದ್ದುಬಿಟ್ಟಾರು ಅಂತ ಗಂಟೆಗೊಂದು ಕೋಣೆ ಮಾಡಿ ಬೀಗ ಹಾಕಿಟ್ಟಿದಾರೆ. ಅಲ್ಲಾ? ಒಂದ್ಮಾತು ಕೇಳ್ತೀನಿ, ಅಂಥಾ ಒಳ್ಳೇ ಗಂಡಮಕ್ಳಿದಾರೆ. ಮನೆ ಇದೆ. ಎರಡು ಕಾರಿದೆ. ನಿಂಗ್ಯಾಕೆ ಈ ಮಾಸ್ತಿ ಗಿರ?’

    ‘ಅವರಿದ್ರೇನು, ಮಾಸ್ತಿನೂ ಜೊತೆ ಇರಬಾರದೇ? ನನಗಿರಲಿ, ನಿಂಗ್ಯಾಕೆ ಮಾಸ್ತಿ ಗಿರ?’

   ಚಣ ತಡೆದು ನಿಂತಳು. ಅವಳ ಗಂಡ ಬದುಕಿದ ಕಾಲದ ಕತೆ ಹೇಳಿದಳು. ಅವನದ್ದು ಮೀನು ಸಾರು ಸರಿಯಾಗ್ಲಿಲ್ಲ, ಹೊಸದಾಗಿ ಮಾಡಲಿಲ್ಲ ಅಂತ ಯಾವತ್ತೂ ಊಟ ತಿಂಡಿದೇ ಜಗಳವಂತೆ. ಒಂದಿನ ಮಕಮಾರೆ ನೋಡದೇ ಜಪ್ಪಿದ್ದನಂತೆ. ಸಿಟ್ಟಾಗಿ ಊಟತಿಂಡಿ ಬಿಟ್ಟು ಎರಡು ದಿನ ಮಲಗಿದ ಅವಳ ಮೈಮೇಲೆ ತಾಯಿ ಮನೆ ಕಡೆಯ ನಾಗದೇವ್ತೆ ಬರಲಿಕ್ಕೆ ಶುರುವಾಯಿತು. ಅದು ಬಾರೀ ಪವರಿನ ದೇವರಂತೆ. ಅದು ನಾಗಿಗೆ ಅನ್ನ ತಿನಬಾರ‍್ದು ಅಂತ ಕಟ್ಟು ಮಾಡಿತ್ತು. ಬರೀ ಸೀಯಾಳ, ಅವಲಕ್ಕಿ, ಹಣ್ಣು, ಉಪ್ಪಿಟ್ಟು ಇಂತಹದೇ ತಿನ್ನಬೇಕೇ ಹೊರತು ಅಕ್ಕಿದೇನೂ ತಿನ್ನುವಂತಿಲ್ಲ, ಮಾಂಸಗೌಲು ಮುಟ್ಟುವಂತಿಲ್ಲ. ಬರಬರುತ್ತ ಹುತ್ತದ ಮಣ್ಣೇ ತಿನ್ನಬೇಕನಿಸಲಿಕ್ಕೆ ಶುರುವಾಯಿತಂತೆ. ಆ ನಾಗದೇವರು ಮೈಮೇಲೆ ಬಂದ ಮೇಲೆ ಗಂಡನಿಗೆ ಅವಳ ಬಗ್ಗೆ ಭಯಭಕ್ತಿ ಹುಟ್ಟಿ ಸರಿಯಾದನೇನೋ ಹೌದು, ಆದರೆ ಅವಳೇ ಸೋಲತೊಡಗಿದ್ದಳು. ಅದು ಮೈದುಂಬದ ಹಾಗೆ ಮಾಡಲು ಯಾವ್ಯಾವ ದೇವರನ್ನು ಬೇಡಿಕೊಂಡರೂ, ತಿರುಪತಿ ದೇವರಿಗೆ ಮುಡಿ ಹರಕೆ ಕಟ್ಟಿದರೂ ಪ್ರಯೋಜನ ಆಗಿರಲಿಲ್ಲವಂತೆ.

‘ಕೊನೆಗೆ ಈ ಮಾಸ್ತಮ್ಮನಿಗೆ ವರ್ಷೊರ್ಷ ಕೊಂಡ ಹಾಯ್ತಿನಿ ಅಂತ ಹೇಳ್ಕಂಡ ಮೇಲೆ ನಾಗ ಮೈಮೇಲೆ ಬರೋದು ನಿಂತಿದ್ದು. ಅಂತಾ ಮಾಸ್ತಿ ಕಣಮ್ಮಾ ಇದು. ನಾಗನ್ನೂ ಹೊಡೆಯೊವಷ್ಟು ಪೋರ್ಸ್ ಇದೆ ಇವಳ್ಗೆ. ಇವ್ಳ ಹತ್ರನೇ ಜಟಗ ಇದಾನೆ. ಅವರಿಬ್ರಿಗೂ ವರ್ಷೊರ್ಷ ರಕ್ತಬಲಿ ಆಗ್ಲೇಬೇಕು. ಮನೆಗೊಂದ್ ಕೋಳಿ, ಬಂಡಿಹಬ್ಬ ಎಲ್ಲ ಮಾಡ್ಲೇಬೇಕು. ಇಲ್ದಿದ್ರೆ ಯಾರಿಗೂ ಏಳಗತಿ ಇಲ್ಲ. ಮಕ್ಕಳು ಮರಿಗೆ ಕಾಯ್ಲೆ, ದೆಯ್ಯದ ಕಾಟ, ಕೋಳಿ-ದನಕೆ ರೋಗ, ಮರದ ಕಾಯಿ ಉದುರದು, ತೆಂಗುಗೇರು ಮರಕೆ ಹೂಂಗೇ ಹಿಡೀದೇ ಇರದು - ಎಲ್ಲ ಸುರುವಾಗುತ್ತೆ. ಅದುಕ್ಕೆಯಾ..’

   ನಾಗಿ ದನಿ ತಗ್ಗಿಸಿ ಹತ್ತಿರವಾಗುತ್ತಿರುವ ಗುಡಿಯ ಹಿತ್ತಾಳೆಗಂಟೆಗೆ ಎಲ್ಲಿ ಕೇಳಿಬಿಡುವುದೋ ಎಂದು ನಿಧಾನ ಪಿಸುಗುಟ್ಟಿದಳು. ‘ಆ ದೊಡ್ಡಸ್ವಾಮಿಗಳು ಹೊಕ್ಕು ಹೋದ ನಾಕು ಮನೆಯೋರ‍್ನ ಬಿಟ್ಟು ಉಳದ ಮನೆಯೋರು ರಿವಾಜಿನ ಹಾಗೆ ವರ್ಷಾನೂ ಕೋಳಿಬಲಿ ಕೊಡಬೌದು ಅಂತ ಅಂದಿದಾನೆ ಹಿರಿಯ. ಆ ನಾಕು ಮನೆಯೋರು ಮಾತ್ರ ಮಾವ್ಸ ಬಲಿ ಮಾಡ್ದೆ ಸ್ವಾಮಿಗೋಳು ಹೇಳ್ದಂಗೆ ಪೂಜೆ ಮಾಡ್ಲಿ. ಅವರಲ್ಲಿ ವರ್ಷಕೊಬ್ರು ಮಾಸ್ತಿ ಪೂಜೆ ಮಾಡ್ಬೇಕೂಂತ ಮಾತಾಗಿದೆ. ಈ ವಿಚಾರ ಮಠದ ಸ್ವಾಮಿಗೋಳ ಹತ್ರ ಆಡದ್ಬ್ಯಾಡ ಅಂತ ನಿಚ್ಚಯ ಆಗಿದೆ.’

‘ಮಾಸ್ತಮ್ಮ ಅಂದ್ರೆ ಯಾರ‍್ಗೊತ್ತಾ ನಾಗಿ? ಸತ್ತ ಗಂಡನ ಸುಡುವಾಗ ತಾನೂ ಅದೇ ಬೆಂಕಿಗೆ ಹಾರಿದೋಳು.’

‘ಹೌದು, ಅವ್ಳು ದೇವ್ತೆಯಾಗಿ ಆಕಾಶಕೋದವಳು. ಅದ್ರ ಸಲುವಾಗೇ ವರ್ಷೊರ್ಷ ಕೆಂಡಸೇವೆ ಮಾಡ್ತಾ ಇರದು. ಗಂಡ ಸತ್ತ ಮೇಲೆ ಬೇವರ್ಸಿಗಳ ಕೈಗೆ ಸಿಕ್ಕು ಸಾಯಕಿಂತ ಅದೇ ಚಲೋ ಬಿಡು. ಮಕ್ಳುಮರಿನ ಬೆಂಕಿಗೆ ದೂಡ್ದೋರೇ ನೋಡ್ಕಳ್ಳಿ.’ ಚಿಟಿಚಿಟಿ ಕೆಂಡದಂತೆ ಸಿಡಿದವು ಅನುಭವಜನ್ಯ ಮಾತುಗಳೇ?

ಅಕಾ! ಬಂದೇ ಬಿಟ್ಟಿತು ಮಾಸ್ತಿಗುಡಿ!



ಒಣಗಿದ ಚಪ್ಪರದೊಳಗಿನಿಂದ ನಿನ್ನೆ ಸಂಜೆ ಹಚ್ಚಿದ ದೀಪ ಗರ್ಭಗುಡಿಯಲ್ಲಿ ಇನ್ನೂ ಮಿಣಿಗುಡುತ್ತ ಉರಿಯುತ್ತಿತ್ತು. ಅಭಯ ಮುದ್ರೆಯಲ್ಲಿ ಕೈಯೆತ್ತಿ ನಿಂತ, ತುಂಬುಎದೆ, ತುಂಬುಮೈಯ ಹೆಣ್ಣು ಆಕೃತಿ ಕುಂಕುಮದಲ್ಲಿ ಮುಳುಗಿಹೋಗಿತ್ತು. ಶಿಲ್ಪದ ಹೊರಗೂ ಚೆಲ್ಲಾಡಿದ ರಕ್ತಕೆಂಪು ಕುಂಕುಮ. ಬಾಗಿ ನೆಲಮುಟ್ಟಿ ಒಳಹೋದ ನಾಗಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದಳು. ಒಳಬರದೇ ಅನುಮಾನಿಸುತ್ತ ದೂರ ನಿಂತ ನನ್ನನ್ನು ಎಚ್ಚರಿಸಿದಳು:

‘ಅಮೋ, ಈ ಮಾಸ್ತಮ್ಮ ಉಳಿದ ದೇವ್ರ ಥರ ಅಲ್ಲ. ತಾನು ಸುಟಕಂಡು ನಮ್ಮನ್ನ ಬೆಚ್ಚಗಿಟ್ಟಿರೋಳು. ಅವಳ ಹತ್ರ ಬರದಿದ್ರೆ ಕೇಳಲ್ಲ. ಆದರೆ ಬಂದ್ಮೇಲೆ ಮನಸು ಗಟ್ಟಿ ಇಟ್ಕಂಡು ಮುಟ್ಟಬೇಕು. ಇವ್ಳು ಕೆಂಡಮಾಸ್ತಿ. ಮುಟ್ಟಿದ್ರೆ ಕೈ ಸುಡಬೋದು. ಮುಟ್ಟದೇ ಇದ್ರೆ ಇಡೀ ಮೈಯೇ ಸುಟ್ಟೋಗುತ್ತೆ, ತಗೋ...’  

ಚಾಚಿದ ನಾಗಿಯ ಅಂಗೈ ತುಂಬ ಕೆಂಪು ಕುಂಕುಮ. ಅದು ಮೈ ಸುಡುವ ಬೆಂಕಿಯಾಗುವ ಮೊದಲೇ ತುದಿಬೆರಳಲ್ಲಿ ಒತ್ತಿಹಿಡಿದೆ, ಹಣೆಮೇಲೆ ಬೆಳಗುವ ಉರಿಗಣ್ಣಾಯಿತು...




No comments:

Post a Comment