Wednesday 11 June 2014

ಮರುಗು, ಅಂಥ ನೆಲಕಾಗಿ.. (ಖಲೀಲ್ ಗಿಬ್ರಾನ್ ಅನುವಾದಿತ ಕವಿತೆ)



cropped-Thunderchild-First-Nation.png


ನಂಬಿಕೆಯಲಿ ಕುರುಡಾದ ಧರ್ಮಹೀನ ನಾಡಿಗಾಗಿ ಮರುಗು.
ತಾನೇ ನೇಯದ ಬಟ್ಟೆ ತೊಡುವ
ತಾ ಬೆಳೆಯದ ಅನ್ನ ಉಣುವ ನೆಲಕಾಗಿ ಮರುಗು.

ಪುಂಡಪೋಕರಿಯ ಕಲಿವೀರನೆಂದು ಹೊಗಳುವ ನಾಡಿಗಾಗಿ ಮರುಗು,
ಅಯ್ಯೋ ಪಾಪ,
ಗೆದ್ದು ಎದೆಯುಬ್ಬಿಸುವವನ
ಉದಾರಿಯೆಂದು ತಿಳಿವ ದೇಶಕಾಗಿ ಮರುಗು.

ಮಸಣದ ದಾರಿಯಲಿ ಹೆಜ್ಜೆಯಿಡುವಾಗಲೂ
ದನಿಯೆತ್ತದ ನಾಡಿಗಾಗಿ ಮರುಗು.
ಪಾಳು ಅವಶೇಷಗಳಲ್ಲದೆ ಹೆಮ್ಮೆಪಡಲೇನೂ ಇರದ ನಾಡಿಗಾಗಿ ಮರುಗು.
ಕತ್ತಿ ಮೊನೆಗೆ ತಲೆಯೊಪ್ಪಿಸುವಾಗಲೂ ದಂಗೆಯೇಳದ ನಾಡಿಗಾಗಿ,
ಅಯ್ಯೋ ಪಾಪ, ಮರುಗು.

ತೋಳ ಮುತ್ಸದ್ದಿಯೆನುವ ನೆಲಕಾಗಿ ಮರುಗು.
ಜಾದೂಗಾರನೇ ತತ್ವಜ್ಞಾನಿ ಎನುವ ದೇಶಕಾಗಿ ಮರುಗು.
ತೇಪೆಹಚ್ಚಿ, ಅಣಕವಾಡುವುದೇ ಕಲೆಯೆನುವ ನಾಡಿಗಾಗಿ ಮರುಗು.

ಹೊಸ ನಾಯಕ ಬರುವಾಗ ಕೊಂಬುಕಹಳೆಯನೂದುವ ನಾಡಿಗಾಗಿ ಮರುಗು.
ಅವ ಹಿಂದಿರುಗುವಾಗ ಫೂತ್ಕರಿಸಿ ವಿದಾಯ ಹೇಳುತ್ತ
ಬರಲಿರುವ ಮತ್ತೊಬ್ಬ ನಾಯಕಗೆ ಕಹಳೆಯೂದುವ ಜನಕಾಗಿ ಮರುಗು.

ವರುಷಗಟ್ಟಲೆ ಮೂಕರಾಗುಳಿವ ಸಂತರ
ತೊಟ್ಟಿಲ ಕೂಸುಗಳಾಗೇ ಇರುವ ವೀರರ ನೆಲಕಾಗಿ ಮರುಗು.

ದೇಶ ಒಡೆದು ಚೂರುಚೂರಾದರೂ
ಒಡೆದ ಪ್ರತಿ ಚೂರೂ ತಾನೇ ದೇಶವೆನುವ ನೆಲಕಾಗಿ

ಅಯ್ಯೋ ಪಾಪ,
ಮರುಗು..

- ಖಲೀಲ್ ಗಿಬ್ರಾನ್, (ಪಿಟಿ ದ ನೇಷನ್ ಕವಿತೆ, ‘ದಿ ಗಾರ್ಡನ್ ಆಫ್ ದಿ ಪ್ರಾಫೆಟ್’ ಸಂಕಲನದದಿಂದ)
- ಕನ್ನಡಕ್ಕೆ: ಅನುಪಮಾ





No comments:

Post a Comment