Monday 23 June 2014

ದೇವರುಗಳ ಕಾಡಿನಲ್ಲಿ ಮೂಕಬಾಲೆಯ ಬಿಕ್ಕು ಅರಣ್ಯರೋದನವಾಗಿರುವ ಹೊತ್ತು ಈ ಕವಿತೆಗೆ ಶೀರ್ಷಿಕೆ ಇರುವುದಿಲ್ಲ..




ಉಟ್ಟಬಟ್ಟೆ ಹರಿದರೆ ತೇಪೆ ಹಾಕುತ್ತೇನೆ
ಮಲಿನವಾದರೆ ತೊಳೆಯುತ್ತೇನೆ
ಬಟ್ಟೆಯೇ ಸಿಗದಿದ್ದರೆ 
ನಿನ್ನಂತೆ ಬೆತ್ತಲಾದೇನು ಅಕ್ಕಾ
ತೊಡದ ಬಟ್ಟೆಯ ಕೊಳೆಯ ಹೇಗೆ ತೊಳೆಯಲೆ?

ಉಂಗುಷ್ಠ ಹರಿದರೆ ಹೊಲಿಯುತ್ತೇನೆ
ಒಂಟಿ ಜೋಡಾದರೆ ಅತ್ತ ಎತ್ತಿಡುತ್ತೇನೆ
ಕಲ್ಲುಮುಳ್ಳುಗಳ ಬರಿಗಾಲಲೂ ದಾಟಬಹುದು
ನಡೆವ ಹಾದಿಯೇ ಪಾದ ನುಂಗಿದರೆ 
ಹೆಜ್ಜೆಗಳನೆತ್ತ ಇಡಲೆ?

ಮೊಲೆಮುಡಿಕಿಬ್ಬೊಟ್ಟೆಗಳು ಕುಡಿಯೊಡೆದು 
ಅಂಗಾಂಗದೊಳಗೆ ಅನಂಗ ಹರಿದಾಡಿದ ಕ್ಷಣ
ಜೀವ ತತ್ತರ
ಮೈಮೇಲೆದ್ದವು ಹುತ್ತ
ಹುತ್ತದ ಬಾಯಿಗಳೆಲ್ಲ ಯೋನಿಗಳಾದವು
ಸದ್ದಿರದೆ ಒಳಹೊರಗೆ ಸರಿದಾಡಿದವು ಹಾವು
ಸಹಸ್ರ ಯೋನಿಗಳ ದೇಹ
ಸರ್ವಋತು ಸ್ರಾವ 

ಯುದ್ಧ ಅಲ್ಲೆಲ್ಲೋ ನಡೆಯುತ್ತಿಲ್ಲ
ಹಿಂಸೆ ಉಗ್ರಗಾಮಿಗಳ ಸ್ವತ್ತಲ್ಲ
ಗುಂಡಿನ ಸದ್ದಷ್ಟೆ ಎದೆ ನಡುಗಿಸುವುದಿಲ್ಲ
ಇಟ್ಟರೆ ಕೊಳೆಯುವ 
ಸುಟ್ಟರೆ ಬೂದಿಯಾಗುವ ಈ ದೇಹ
ಹೊರುವ ಹೆರುವ ತಣಿಸುವ ನೆಪದಲ್ಲಿ
ಗುಪ್ತಾಂಗಗಳ ಗುಟ್ಟಿನ ಸಂಕಟಗಳು 
ಕೈದು ಹಿಡಿದು ಕಾದುವ ಯುದ್ಧಭೂಮಿ

‘ಕಾಡೇ ಗೂಡೇ..’ ಎಂದು ಕಣ್ಮುಚ್ಚುವಾಗ ಭಯ
‘ನಮ್ಮಯ ಹಕ್ಕಿಯ’ ಬಿಟ್ಟೇ ಎನುವಾಗ ಭಯ
ಲಂಗ ಮೇಲೆತ್ತಿ ಕುಂಟೋಬಿಲ್ಲೆಯಾಡುತ್ತ  
ಮಿಡಿಮೊಲೆಗಳು ಹಾರಿ ಬೀಳುವಾಗ 
ಅಮ್ಮನಿಗೆ ಭಯವೋ ಭಯ

ಇದ್ದಳಂತೆ ಹಾಗೊಬ್ಬಳು
ದಿಟ್ಟವಾಗಿ ಬೆತ್ತಲಾಗಿ ಒಬ್ಬಂಟಿ ಅಲೆದವಳು
ಕೂಡದೆ ಹೆರದೆ ಲಿಂಗಸತಿಯಾದವಳು..
ಹಾಗೂ ಇದ್ದಳಂತೆ ಮಗದೊಬ್ಬಳು
ಸೂರ್ಯನ ನೆನಹಿಗೇ ಬಸಿರಾದವಳು.. 

ಓ ದೇವರೇ 
ಹೀಗೊಂದು ವರ ನೀಡು
ಮಾನವ ಸಂತತಿ ಅಯೋನಿಜವಾಗಲಿ.. 

***

ಕಣ್ಣ ಹನಿಗಳಲ್ಲಿ
ತಗ್ಗಿಸಿದ ತಲೆಯಲ್ಲಿ
ಪುಟ್ಟ ಬಾಲೆಯ ಭಯದ ಬಿಕ್ಕುಗಳಲ್ಲಿ
ಐಸಿಯುನ ನಿಟ್ಟುಸಿರುಗಳಲ್ಲಿ
ಅಡಗಿ ಉಠಬೈಸ್ ತೆಗೆವ ಹೇಡಿ ಶಬ್ದಗಳೇ
ಕಾಗೆ ಕಾವ್‌ಗುಡುವ
ಸರ್ಪ ಬುಸುಗುಡುವ 
ಹಂದಿ ಹ್ಞೂಂಕರಿಸುವ ಸದ್ದಿಗೂ
ಒಂದು ಅರ್ಥವಿದೆ
ಒಡಲುರಿಯ ಹಾಡಾಗಿಸದ ನಿಮಗೆ 
ಲಜ್ಜೆಯಿರುವುದೇ ಹೌದಾದಲ್ಲಿ  
ಅಗ್ನಿಪರ್ವತದ ಬಾಯೊಳಗೆ ಹಾರಿಬಿಡಿ.
ಏರು ಗಂಟಲ ದನಿಯಲ್ಲಿ
ಕಟ್ಟಿದ ಮುಷ್ಠಿಯಲ್ಲಿ
ದಿಟ್ಟ ನಡುಗೆಯಲ್ಲಿ 
ಮತ್ತೆ ಹುಟ್ಟಿಬನ್ನಿ..

No comments:

Post a Comment