Friday, 19 June 2015

ಯಾರಿಗೂ ಬೇಡದವರು - ರೊಹಿಂಗ್ಯಾ ಮುಸ್ಲಿಮರು







ರಂಜಾನ್ ಉಪವಾಸ ಶುರುವಾಗಿದೆ. ಉಳ್ಳವರು, ಇಲ್ಲದವರು ಎನ್ನದೆ ಎಲ್ಲರೂ ಪುಣ್ಯಸಂಚಯದ ಸಂಭ್ರಮದಲ್ಲಿ ತಂತಮ್ಮದೇ ನೆಲೆಯಲ್ಲಿ ಉಪವಾಸದ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಕಳ್ಳಸಾಗಾಣಿಕೆದಾರರ ದೋಣಿಗಳಲ್ಲಿ ನೀರಮೇಲೆ ತೇಲುತ್ತ ಎತ್ತ ಹೋಗುವುದೆಂದು ತಿಳಿಯದೆ ಎಲುಬು ಹಂದರವಾದ ದೇಹವನ್ನು ಎಳೆದೊಯ್ಯುತ್ತಿರುವ ಸಾವಿರಾರು ನಿರಾಶ್ರಿತ ಮುಸ್ಲಿಮರಿಗೆ ರಂಜಾನಿನ ನೆನಪು ಯಾವ ಭಾವ ಹುಟ್ಟಿಸುತ್ತದೆ!? ಹೌದು, ಈ ಭೂಮಿಯೆಂಬ ೭೦೦ ಕೋಟಿ ಜನ ವಾಸಿಸುತ್ತಿರುವ ಸುವಿಶಾಲ ಬಯಲಲ್ಲಿ ತಾವು ನೆಲೆಯಾಗಲು ಒಂದು ಮೆಟ್ಟು ಜಾಗವೂ ಸಿಗದೆ ಸಮುದ್ರದ ಮೇಲೆ ತೇಲುವ ನಿರಾಶ್ರಿತರಿದ್ದಾರೆ! ಅವರೇ ಬರ್ಮಾದ ರೊಹಿಂಗ್ಯಾ ಮುಸ್ಲಿಮರು. ವಿಶ್ವಸಂಸ್ಥೆಯಿಂದ ಪ್ರಪಂಚದಲ್ಲೆ ಅತಿ ಹೆಚ್ಚು ದಮನಿತ ಅಲ್ಪಸಂಖ್ಯಾತ ಸಮುದಾಯವೆಂದು ಗುರುತಿಸಲ್ಪಟ್ಟ, ಅರ್ಧಶತಮಾನದಿಂದ ಸ್ಥಳಾಂತರಗೊಳ್ಳುತ್ತಲೇ ಇರುವ ಅವರ ಬಿಕ್ಕಟ್ಟು ಎರಡನೆಯ ಸಹಸ್ರಮಾನ ದಾಟಿದ ಬಳಿಕ ತೀರ ಉಲ್ಬಣಿಸಿದೆ. ಅದರಲ್ಲೂ ಕಳೆದ ವರ್ಷ ಸುಮಾರು ೬೫,೦೦೦ ಜನ ಎಲ್ಲಿ ಇಳಿಯುವುದೆಂದೇ ಗೊತ್ತಿಲ್ಲದೆ ಕಳ್ಳಸಾಗಾಣಿಕೆದಾರರ ದೋಣಿಗಳಲ್ಲಿ ಬರ್ಮಾದಿಂದ ನೆರೆಯ ಥೈಲ್ಯಾಂಡ್, ಮಲೇಷ್ಯಾ, ಇಂಡೋನೇಷ್ಯಾ ತೀರಗಳತ್ತ ಹೋಗಿದ್ದರೆ ಈ ವರ್ಷ ಇಷ್ಟು ಹೊತ್ತಿಗಾಗಲೇ ೩೦,೦೦೦ ಜನ ಬರ್ಮಾ ತೊರೆದಿದ್ದಾರೆ.

ಬುದ್ಧನ ಧರ್ಮ ರಾಷ್ಟ್ರೀಯ ಧರ್ಮವಾಗಿರುವ ದೇಶ ಬರ್ಮಾದಲ್ಲಿ ಕೋಮು ದ್ವೇಷವೆ! ಹೌದು. ಬರ್ಮಾದ ಕೋಮುಘರ್ಷಣೆಗೆ ಬರ್ಮಾ ಸ್ವಾತಂತ್ರ ಪಡೆದಷ್ಟೇ ವರ್ಷಗಳ ಇತಿಹಾಸವಿದೆ. ಅದು ಬೌದ್ಧ-ಮುಸ್ಲಿಂ ಘರ್ಷಣೆ ಅಥವಾ ಬರ್ಮೀ-ರೊಹಿಂಗ್ಯಾ ಬಿಕ್ಕಟ್ಟು.

ಬರ್ಮಾದಲ್ಲಿ ೧೦ ಲಕ್ಷ ಮುಸ್ಲಿಮರಿದ್ದು ಅವರಲ್ಲಿ ೮೦% ಜನ ಬಾಂಗ್ಲಾದೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮದ ರಖಿನೆ ಪ್ರಾಂತ್ಯದಲ್ಲಿದ್ದಾರೆ. ತಮ್ಮ ಭಾಷೆಯಲ್ಲಿ ರೂಯಿಂಗಾ ಎಂದರೆ ‘ಬೆಟ್ಟಪ್ರದೇಶದಿಂದ ಬಂದವರು’ ಎಂದು ಸೂಚಿಸುವ ರೊಹಿಂಗ್ಯಾ ಹೆಸರಿನಿಂದ ಕರೆದುಕೊಳ್ಳುತ್ತಾರೆ. ಅವರು ಬರ್ಮಾದ ಬೌದ್ಧರಿಗಿಂತ ಜನಾಂಗೀಯವಾಗಿ, ಧಾರ್ಮಿಕವಾಗಿ, ಭಾಷಿಕವಾಗಿ ಭಿನ್ನರು. ಅವರಲ್ಲಿ ಬಹುಪಾಲು ಜನರಿಗೆ ಬರ್ಮಾ ಪೌರತ್ವ ನೀಡಲು ನಿರಾಕರಿಸಿದೆ. ೨೦೧೪ರಲ್ಲಿ ಬರ್ಮಾ ಜನಗಣತಿ ೩೦ ವರ್ಷ ಬಳಿಕ ನಡೆದಾಗ ಬಹುಸಂಖ್ಯಾತ ಬೌದ್ಧರ ಒತ್ತಡದ ಮೇರೆಗೆ ಮುಸ್ಲಿಮರು ತಮ್ಮನ್ನು ಬೆಂಗಾಲಿ ಎಂದು ಗುರುತಿಸಿಕೊಳ್ಳಲು ಮಾತ್ರ ಅವಕಾಶ ನೀಡಿ ರೊಹಿಂಗ್ಯಾ ಅಸ್ಮಿತೆ ನಿರಾಕರಿಸಲಾಯಿತು. ಫೆ. ೨೦೧೫ರಲ್ಲಿ ಅವರಿಗೆ ಕೊಟ್ಟ ತಾತ್ಕಾಲಿಕ ಗುರುತು ಕಾರ್ಡನ್ನು ಹಿಂತೆಗೆದುಕೊಂಡು ಮತದಾನ ಹಕ್ಕನ್ನೂ ನಿರಾಕರಿಸಲಾಯಿತು. ಬರ್ಮಾದ ೧೩೫ ಬುಡಕಟ್ಟು ಸಮುದಾಯಗಳಲ್ಲಿ ರೊಹಿಂಗ್ಯಾರಿಗೆ ಸ್ಥಾನ ಕೊಡಲು ನಿರಾಕರಿಸಲಾಯಿತು. ಬರ್ಮೀ ಮುಸ್ಲಿಂ ಮದುವೆಗಳಲ್ಲಿ ಸೈನ್ಯದ ಪ್ರತಿನಿಧಿಯಿರಬೇಕು; ಮೊದಲೇ ಗುರುತು ಚೀಟಿ ತೋರಿಸಿ ಒಪ್ಪಿಗೆ ಪಡೆಯಬೇಕು; ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿಲ್ಲ; ಕುಟುಂಬ ಯೋಜನೆ ಅನುಸರಿಸಬೇಕು ಮುಂತಾದ ಕಟ್ಟುಪಾಡುಗಳನ್ನು ಸರ್ಕಾರವೇ ವಿಧಿಸಿ ವ್ಯವಸ್ಥಿತವಾಗಿ ಅವರನ್ನು ಅಂಚಿಗೆ ತಳ್ಳುತ್ತಿದೆ. ಅತಿಕಡಿಮೆ ಕೂಲಿಯ, ಹೀನಾಯ ಕೆಲಸಗಳಷ್ಟೇ ಅವರಿಗುಳಿದು, ಒಲ್ಲೆನೆಂದರೆ ಅದೂ ಇಲ್ಲದ ಹೀನಾಯ ಬಡತನದಲ್ಲಿ ಬದುಕುತ್ತಿದ್ದಾರೆ.

ಅವರು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು, ೬೦ ವರ್ಷಗಳಿಂದೀಚೆಗೆ ಒಳನುಸುಳಿರುವವರಿಗೆ ಪೌರತ್ವ ಕೊಡಲು ಸಾಧ್ಯವಿಲ್ಲ; ರೊಹಿಂಗ್ಯಾ ಎನ್ನುವ ಹೆಸರನ್ನು ೫೦ರ ದಶಕದ ನಂತರ ಇತ್ತೀಚೆಗೆ ಬಳಸಲಾಗುತ್ತಿದೆಯೇ ಹೊರತು ಅದು ಅವರ ಸಾಂಸ್ಕೃತಿಕ ಅಸ್ಮಿತೆ ಅಲ್ಲ; ಅವರಿಗೆ ಅಸಲಿಗೆ ಬರ್ಮಾ ನೆಲದ ಮೇಲೆ ಹೃತ್ಪೂರ್ವಕ ಪ್ರೇಮವೇ ಇಲ್ಲ ಎನ್ನುವುದು ಬರ್ಮಾ ಸರ್ಕಾರ ನಾಗರಿಕ ಹಕ್ಕು ನಿರಾಕರಣೆಗೆ ಕೊಡುವ ಕಾರಣ. ಬರ್ಮಾ ಸರ್ಕಾರದ ವ್ಯಾಖ್ಯಾನಗಳು ಬಹುಸಂಖ್ಯಾತರ ಯಾಜಮಾನ್ಯ ನೆಲೆಯವಾದರೂ ಕೆಲ ಸಂಗತಿಗಳು ಸತ್ಯವೇ ಇರಬಹುದು. ಆದರೆ ಅದು ಇಷ್ಟು ಅಮಾನವೀಯವಾಗಿ ತನ್ನ ನೆಲದಲ್ಲಿರುವವರನ್ನು ನಡೆಸಿಕೊಳ್ಳಲು ಕಾರಣವಾಗಬಾರದು.


ಅಶಿನ್ ವಿರತು ಎಂಬ ೪೬ ವರ್ಷದ ಬೌದ್ಧ ಭಿಕ್ಕು ಎರಡು ದಶಕಗಳಿಂದ ಬುದ್ಧನ ಧರ್ಮವನ್ನು ಮೂಲಭೂತವಾದಿ ವ್ಯಾಖ್ಯಾನಗಳಿಗೆ ಸರಿ ಹೊಂದಿಸಿ ‘೯೬೯ ಚಳುವಳಿ’ ಕಟ್ಟಿದ್ದಾರೆ. ಅದು ಮುಸ್ಲಿಮರು ಬೌದ್ಧರಿಗಿಂತ ಸಂಖ್ಯೆಯಲ್ಲಿ ಮಿಗಿಲಾಗುವುದನ್ನು ತಪ್ಪಿಸುವ, ಅವರನ್ನು ಶಿಕ್ಷಿಸುವುದನ್ನು ಸಮರ್ಥಿಸುವ ಮೂಲಭೂತವಾದಿ ಧಾರ್ಮಿಕ ಚಳುವಳಿ. ಆತ ಕೋಮುಗಲಭೆ ಹುಟ್ಟುಹಾಕಿದ್ದಕ್ಕಾಗಿ ೭ ವರ್ಷ ಜೈಲುವಾಸ ಅನುಭವಿಸಿ ಬಂದರೂ ಬೌದ್ಧರ ಅಸಹನೆಗೆ, ಅಸಹಿಷ್ಣುತೆಯ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಲೆ ಬಂದಿದ್ದಾರೆ. ೨೦೧೨ರಲ್ಲಿ ರೊಹಿಂಗ್ಯ ಯುವಕ ಬೌದ್ಧ ಹುಡುಗಿಯೊಬ್ಬಳನ್ನು ಅತ್ಯಾಚಾರ ಮಾಡಿ ಕೊಂದ ಬಳಿಕ ಕೋಮುಘರ್ಷಣೆ ಹೆಚ್ಚಾಯಿತು. ನೂರಾರು ರೊಹಿಂಗ್ಯಾ ಮನೆಗಳನ್ನು ಸುಟ್ಟು, ೨೮೦ ಜನರನ್ನು ಕೊಲ್ಲಲಾಯಿತು. ಆ ವರ್ಷ ೧,೨೦,೦೦ ಜನ ಪ್ರಾಣಭಯದಿಂದ ಬರ್ಮಾ ತೊರೆದಿದ್ದಾರೆ. ಬರ್ಮಾದಲ್ಲಿಯೇ ತಮ್ಮ ಊರು, ಮನೆಮಠ ತೊರೆದು ಒಂದೂವರೆ ಲಕ್ಷ ರೊಹಿಂಗ್ಯಾ ಜನ ನಿರಾಶ್ರಿತರ ಶಿಬಿರಗಳಲ್ಲಿ ಬದುಕುತ್ತಿದ್ದಾರೆ. ಜೀವಕಾರುಣ್ಯ ಬೋಧಿಸಿದವನ ನೆಲದಲ್ಲಿ ಸಿಗದ ಕರುಣೆಯನ್ನು ಹುಡುಕುತ್ತ ಎಲ್ಲೆಲ್ಲೋ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಪಾಯದ ಭಯವಿದ್ದರೂ ನಿರಾಶ್ರಿತರಾಗಿ ವಿದೇಶಗಳಿಗೆ ವಲಸೆ ಹೋಗತೊಡಗಿದ್ದಾರೆ.

ಪ್ರಸ್ತುತ ೮೦೦೦ಕ್ಕೂ ಮಿಗಿಲು ರೊಹಿಂಗ್ಯಾ ಮುಸ್ಲಿಮರು ಸಣ್ಣಪುಟ್ಟ ದೊಡ್ಡ ದೋಣಿಗಳಲ್ಲಿ ಬರ್ಮಾ ತೀರದಿಂದ ಹೊರಗೆ ಸಮುದ್ರದಲ್ಲಿ ತೇಲುತ್ತಿದ್ದಾರೆ. ಕುಡಿಯುವ ನೀರೂ ಇಲ್ಲದೆ ಉಚ್ಚೆ ಕುಡಿಯುತ್ತಿದ್ದಾರೆ ಎಂದು ವಿದೇಶಿ ವರದಿಗಾರನೊಬ್ಬ ಅವರನ್ನು ಭೇಟಿಯಾಗಿ ಬಂದು ಬರೆದ. ಅಷ್ಟೇ ಅಲ್ಲ, ಬೋಟ್ ಜನರ ಅನೇಕ ಫೋಟೋ, ವೀಡಿಯೋಗಳು ಹರಿದಾಡುತ್ತ ಅದರಲ್ಲಿರುವವರ ಚಹರೆಗಳೇ ಅಪೌಷ್ಟಿಕತೆ, ಬದುಕಿನ ಪರಿಸ್ಥಿತಿ, ಭವಿಷ್ಯ ಕುರಿತ ಆತಂಕ ಎಲ್ಲವನ್ನು ಹೇಳಿಬಿಟ್ಟವು.

ಕರೆಯದೆ ಬಂದ ಈ ನೆಂಟರ ಮೇಲೆ ಯಾರಿಗೂ ಪ್ರೀತಿಯಿಲ್ಲ, ಇದ್ದರೆ ಅಷ್ಟಿಷ್ಟು ಕರುಣೆ ಮಾತ್ರ. ಫಿಲಿಪೀನ್ಸ್ ಒಂದಷ್ಟು ನಿರಾಶ್ರಿತರಿಗೆ ತನ್ನಲ್ಲಿ ಆಶ್ರಯ ಕೊಟ್ಟಿದೆ. ಬಾಂಗ್ಲಾದೇಶವು ನಿರಾಶ್ರಿತರನ್ನು ‘ಮಾನಸಿಕ ಅಸ್ವಾಸ್ಥ್ಯ’ರೆಂದು ಕರೆದು ಇನ್ನು ಒಳಬಿಟ್ಟುಕೊಳ್ಳಲು ಜಾಗವಿಲ್ಲವೆಂದು ಖಡಾಖಂಡಿತ ನಿರಾಕರಿಸಿದೆ. ಭಾರತದ ಹಲವು ನಗರಗಳಲ್ಲಿ ಅವರು ಕಂಡುಬರುತ್ತಾರೆ. ತೀರ ಇತ್ತೀಚೆಗೆ ಅಂತಾರಾಷ್ಟ್ರೀಯ ನಿರಾಶ್ರಿತರ ಸಂಸ್ಥೆಯ ಮಧ್ಯಪ್ರವೇಶದ ನಂತರ ಥೈಲ್ಯಾಂಡ್ ಹಾಗೂ ಮಲೇಷ್ಯಾ ಅವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿವೆ. ಎಲ್ಲರಿಗೂ ನಿರಾಶ್ರಿತರ ಪ್ರವಾಹ ಹರಿದು ಬಂದರೆ ಹೇಗೆ ನಿಯಂತ್ರಿಸುವುದು ಎಂಬ ಆಂತರಿಕ ಭದ್ರತೆಯ ಆತಂಕ.

ಮಲೇಷ್ಯಾದಲ್ಲಿ ಈಗಾಗಲೇ ೧,೪೦,೦೦೦ ನಿರಾಶ್ರಿತರಿದ್ದಾರೆ. ಮೇ ೨೦೧೫ರಲ್ಲಿ ಸಮುದ್ರದಲ್ಲಿ ಸರ್ಚ್ ಆಪರೇಷನ್ ನಡೆಸಿ ಸಣ್ಣಪುಟ್ಟ ದೋಣಿಗಳಲ್ಲಿ ತೇಲುತ್ತಿದ್ದವರನ್ನು ರಕ್ಷಿಸಿ ಕರೆತರಲಾಯಿತು. ಎಲ್ಲ ತೆರನ ಮಾನವ ಸಾಗಾಣಿಕೆಗೆ ಮೊದಲೇ ಕುಖ್ಯಾತವಾದ ಥೈಲ್ಯಾಂಡ್ ಈ ಬಿಕ್ಕಟ್ಟಿನಿಂದ ರೊಹಿಂಗ್ಯಾಗಳಿಗೆ ಪ್ರವೇಶ, ನಿರ್ಗಮನ, ಮಾರ್ಗ ಎಲ್ಲವು ಆಗಿ ಮಾರ್ಪಟ್ಟಿದೆ. ಬರ್ಮಾ ಸೇರಿದಂತೆ ಇವೆಲ್ಲ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ ಸದಸ್ಯರೇ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಬಿಕ್ಕಟ್ಟು ಉಲ್ಬಣಿಸಲು ಕಾರಣವಾಗಿದೆ.

ಜೀವಕಾರುಣ್ಯ ಬೋಧಿಸಿದ ಬುದ್ಧನ ಧಮ್ಮದ ಭಿಕ್ಕುಗಳೇ ಏಕೆ ರೊಹಿಂಗ್ಯಾರನ್ನು ಕತ್ತು ಹಿಡಿದು ಹೊರದಬ್ಬುವಂತಾಯಿತು? ಬರ್ಮಾ ಸಮಾಜದಲ್ಲಿ ಮುಸ್ಲಿಮರ ಮೇಲೆ ಇಷ್ಟು ಅನುಮಾನ, ಅಪನಂಬಿಕೆ ಬೆಳೆದದ್ದು ಹೇಗೆ? ವಿಶ್ವಾದ್ಯಂತ ಶಾಂತಿದೂತೆ ಎಂದೇ ಬಿಂಬಿಸಲ್ಪಟ್ಟ ಸೂಕಿ ಮಧ್ಯ ಪ್ರವೇಶಿಸದೆ ಏಕೆ ಸುಮ್ಮನಿದ್ದಾರೆ? ಸಾಮಾನ್ಯ ಮುಸ್ಲಿಮರಿಗೆ ಈ ಕಷ್ಟ ತಂದೊಡ್ಡಿದ್ದು ಯಾರು?

ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ ರೊಹಿಂಗ್ಯಾ ಬಿಕ್ಕಟ್ಟಿನ ಇನ್ನೊಂದು ಮಗ್ಗುಲು ತಿಳಿಯುವುದೂ ಒಳ್ಳೆಯದೆನಿಸುತ್ತದೆ.

ಬರ್ಮಾದ ಕಾಶ್ಮೀರ ರಖಿನೆ ಪ್ರಾಂತ್ಯ

ಇದು ಒಂದು ಸಮುದಾಯದ ಭಾವನಾತ್ಮಕ/ಧಾರ್ಮಿಕ/ರಾಜತಾಂತ್ರಿಕ ಬಿಕ್ಕಟ್ಟು ಮಾತ್ರವಾಗಿರದೇ ಸಶಸ್ತ್ರ ಸಂಘರ್ಷದ ಹಿನ್ನೆಲೆಯನ್ನೂ ಹೊಂದಿದೆ.

೧೫ನೇ ಶತಮಾನದ ಬರ್ಮಾದ ರಾಜ ಮಿನ್ ಸಾ ಮೋನ್ ದೇಶಭ್ರಷ್ಟನಾಗಿ ೨೪ ವರ್ಷ ಬಂಗಾಳದಲ್ಲಿ ಕಳೆದು ನಂತರ ರಾಜ್ಯ ಪಡೆದ. ಆಗ ಅವನೊಂದಿಗೆ ಕೆಲ ಮುಸ್ಲಿಮರು ಬರ್ಮಾಗೆ ಬಂದರೆನ್ನಲಾಗುತ್ತದೆ. ೧೯, ೨೦ನೇ ಶತಮಾನದ ವಸಾಹತುಶಾಹಿ ಬ್ರಿಟಿಷ್ ಆಡಳಿತದ ಕಾಲದಲ್ಲಿ ಹೆಚ್ಚಿನವರು ವಲಸೆ ಬಂದರು. ಎರಡನೆಯ ಮಹಾಯುದ್ಧದ ವೇಳೆ ತಮ್ಮನ್ನು ಬೆಂಬಲಿಸಿದರೆ ಪ್ರತ್ಯೇಕ ರಾಜ್ಯ ರಚಿಸಿಕೊಡುವುದಾಗಿ ಹೇಳಿದ ಬ್ರಿಟಿಷರ ಮಾತು ನಂಬಿ ೧೯೪೨ರ ಸುಮಾರಿನಿಂದ ರೊಹಿಂಗ್ಯಾ ಮುಸ್ಲಿಮರ ಸಂಘಟನೆ ಮುಂಚೂಣಿಗೆ ಬಂದು ಶಸ್ತ್ರಸಜ್ಜಿತವಾಯಿತು. ಆದರೆ ಯುದ್ಧಾನಂತರ ೧೯೪೬ರಲ್ಲಿ ಬರ್ಮಾ ಸ್ವಾತಂತ್ರ್ಯ ಪಡೆಯುವ ಹೊಸ್ತಿಲಲ್ಲಿದ್ದರೂ ತಮ್ಮ ಕನಸು ಕೈಗೂಡುವ ಲಕ್ಷಣಗಳಿಲ್ಲದೆ ಹೋದಾಗ ಬಾಂಗ್ಲಾದೇಶದ (ಪೂರ್ವ ಪಾಕಿಸ್ತಾನ)ದ ಗಡಿಭಾಗ ರಖಿನೆ ಪ್ರಾಂತ್ಯದ ಮುಸ್ಲಿಮರು ತಾವಿರುವ ಪ್ರದೇಶವನ್ನು ಬಾಂಗ್ಲಾದೇಶಕ್ಕೆ ಸೇರಿಸಬೇಕೆಂಬ ಹೋರಾಟ ಶುರುಮಾಡಿದರು. ಆ ಕುರಿತು ಮೊಹಮದ್ ಅಲಿ ಜಿನ್ನಾ ಬಳಿಯೂ ಮಾತನಾಡಿದರು. ಅಂದಿನ ಬರ್ಮಾ ಸರ್ಕಾರ ಆ ಪ್ರಾಂತ್ಯವನ್ನು ಬಿಟ್ಟುಕೊಡಲು ಒಪ್ಪದಿದ್ದಾಗ ಕೂಡಲೇ ಮುಜಾಹಿದೀನ್‌ಗಳು ಸರ್ಕಾರದ ವಿರುದ್ಧ ಜಿಹಾದ್ ಘೋಷಿಸಿದರು. ೧೯೬೧ರವರೆಗೆ ಮುಜಾಹಿದೀನ್ ಬಂಡುಕೋರರು ಬಾಂಗ್ಲಾ ಜೊತೆಗೆ ವಿಲೀನವೇ ತಮ್ಮ ಗುರಿ ಎನ್ನುತ್ತಿದ್ದರು.

ಗಡಿಭಾಗದಲ್ಲಿ ಸಶಸ್ತ್ರ ಬಂಡುಕೋರರ ಉಪಟಳ ಹೆಚ್ಚುತ್ತಿದ್ದಂತೆ ಸ್ಥಳೀಯ ಬೌದ್ಧ ಸಮುದಾಯವು ಆ ಪ್ರದೇಶವನ್ನು ತೊರೆದು ಹೋಯಿತು. ಹೆಚ್ಚು ಕಮ್ಮಿ ಉತ್ತರ ಅರಕಾನ್ ಪ್ರಾಂತ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಬಂಡುಕೋರರು ಬಾಂಗ್ಲಾದೇಶದ ಅಕ್ರಮ ವಲಸಿಗರ ಪ್ರವೇಶವನ್ನು ಪ್ರೋತ್ಸಾಹಿಸಿದರು. ಬೌದ್ಧ ಆಸ್ತಿ, ವ್ಯಕ್ತಿಗಳನ್ನು ದಾಳಿಯ ಗುರಿಯನ್ನಾಗಿಸಿಕೊಂಡರು. ಇದರ ವಿರುದ್ಧ ಅರಕಾನಿನ ಬೌದ್ಧ ಭಿಕ್ಕುಗಳು ರಂಗೂನಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ನಂತರ ಮಿಲಿಟರಿಯು ಬೃಹತ್ ಕಾರ್ಯಾಚರಣೆ ನಡೆಸಿ ಬಂಡುಕೋರರನ್ನು ಸದೆಬಡಿಯಿತು. ೧೯೫೪ರಲ್ಲಿ ಕ್ಷೀಣಬಲರಾದ ಬಹುಪಾಲು ಮುಜಾಹಿದೀನ್ ಗುಂಪುಗಳು ಶಸ್ತ್ರ ತ್ಯಜಿಸಿ ಶಾಂತಿ ಮಾತುಕತೆಗೆ ಬಂದರೆ; ಉಳಿದ ಸಣ್ಣಪುಟ್ಟ ಬಂಡುಕೋರ ಗುಂಪುಗಳು ಗಡಿಯಲ್ಲಿ ಅಕ್ಕಿ/ಶಸ್ತ್ರಾಸ್ತ್ರ/ಮಾದಕವಸ್ತು/ಮಾದಕ ಕಳ್ಳಸಾಗಣೆಯನ್ನೆ ನೆಚ್ಚಿದರು. ವಿಪರ್ಯಾಸವೆಂದರೆ ೧೯೬೧ರವರೆಗೆ ಬರ್ಮಾದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರವಿದ್ದು ಅದರಲ್ಲಿ ರೊಹಿಂಗ್ಯಾ ಮಂತ್ರಿಗಳು, ಪ್ರತಿನಿಧಿಗಳಿದ್ದರು!


೧೯೭೧ರ ಬಾಂಗ್ಲಾ ವಿಮೋಚನಾ ಯುದ್ಧದ ನಂತರ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಯಿತು. ಯುದ್ಧದ ವೇಳೆ ಗಡಿಯಲ್ಲಿ ಅಳಿದುಳಿದ ಶಸ್ತ್ರಾಸ್ತ್ರ ಸಂಗ್ರಹಿಸಿದ ಬಂಡುಕೋರರು ರೊಹಿಂಗ್ಯಾ ಲಿಬರೇಷನ್ ಪಾರ್ಟಿ ಕಟ್ಟಿದರು. ಅವರ ಹೊಸ ಗುಂಪುಗಳು ಕಾಣಿಸಿಕೊಂಡವು. ನಾಯಕರಾಗಿ ವಕೀಲ ನೂರುಲ್ ಇಸ್ಲಾಂ ಮತ್ತು ವೈದ್ಯರಾಗಿದ್ದ ಮೊಹಮದ್ ಯೂನುಸ್ ಮುಂಚೂಣಿಗೆ ಬಂದರು. ೭೮ರ ವೇಳೆಗೆ ಬರ್ಮಾ ಮಿಲಿಟರಿಯು ಮತ್ತೆ ಕಾರ್ಯಾಚರಣೆ ನಡೆಸಿದಾಗ ಬರ್ಮಾದ ಮುಸ್ಲಿಂ ಜನಸಮುದಾಯ ಬರ್ಮಾ ಬಾಂಗ್ಲಾ ಗಡಿಯಲ್ಲಿ ಜಮೆಯಾಗಿ ಹತ್ತಾರು ಸಾವಿರ ರೊಹಿಂಗ್ಯಾಗಳು ಬಾಂಗ್ಲಾಗೆ ವಲಸೆ ಹೋದರು. ಮಾದಕ ವ್ಯಸನ, ಅಪರಾಧ ಚಟುವಟಿಕೆಗಳು ಹೆಚ್ಚತೊಡಗಿದವು.

೧೯೮೦ರ ನಂತರ ಭಾರತ, ಬಾಂಗ್ಲಾ, ಪಾಕಿಸ್ತಾನ, ಆಫ್ಘನಿಸ್ತಾನ, ಮಲೇಷ್ಯಾದ ಮುಸ್ಲಿಂ ಸಂಘಟನೆಗಳಿಂದ ಬೆಂಬಲ ದೊರೆತು ರೊಹಿಂಗ್ಯಾ ಸಾಲಿಡಾರಿಟಿ ಅಸೋಸಿಯೇಷನ್ ಬಲವಾಯಿತು. ಪತ್ಯೇಕ ದೇಶಕ್ಕಾಗಿ ಬೇಡಿಕೆ ಎದ್ದಿತು. ತಾಲಿಬಾನ್, ಅಲ್ ಖೈದಾ ಸೇರಿದಂತೆ ಹಲವು ಸಿರಿವಂತ ಮುಸ್ಲಿಂ ದೇಶ ಮತ್ತು ಸಂಘಟನೆಗಳು ತೆರೆಮರೆಯಲ್ಲಿ ಬಂಡುಕೋರರಿಗೆ ಬೆಂಬಲ ಕೊಟ್ಟವು. ಬರ್ಮಾದ ಬೌದ್ಧರ ಹಾಗೂ ಮಿಲಿಟರಿಯ ಕೆಂಗಣ್ಣಿಗೆ ಪದೇಪದೇ ಗುರಿಯಾದ ರೊಹಿಂಗ್ಯರು ಮತ್ತಷ್ಟು ಬೇರ್ಪಡುತ್ತ, ಅಂಚಿಗೆ ತಳ್ಳಲ್ಪಡುತ್ತ ಹೋದರು.



ಅದೇವೇಳೆ ಬರ್ಮಾ ಸೈನ್ಯವು ಗಡಿದಾಟಿ ಬಂದು ಬಾಂಗ್ಲಾದೇಶದ ಬಂಡುಕೋರರ ನೆಲೆಯ ಮೇಲೆ ದಾಳಿ ಮಾಡಿತು. ರೋಹಿಂಗ್ಯಾ ಪೇಟ್ರಿಯಾಟಿಕ್ ಫ್ರಂಟ್, ರೋಹಿಂಗ್ಯಾ ನ್ಯಾಷನಲ್ ಕೌನ್ಸಿಲ್, ರೊಹಿಂಗ್ಯಾ ನ್ಯಾಷನಲ್ ಆರ್ಮಿ, ರೊಹಿಂಗ್ಯಾ ಸಾಲಿಡಾರಿಟಿ ಆರ್ಗನೈಸೇಷನ್ ಇನ್ನಿತರ ಲೆಕ್ಕವಿಲ್ಲದಷ್ಟು ಸಂಘಟನೆಗಳು ಹುಟ್ಟಿಕೊಂಡವು. ಕೋಮು ಸಂಘರ್ಷ, ಮಿಲಿಟರಿ ಜೊತೆ ಸಂಘರ್ಷ ಮುಂದುವರೆದು ೨೦೧೨ರಲ್ಲಿ ದೇಶಭ್ರಷ್ಟ ಬಂಡುಕೋರ ಗುಂಪುಗಳು ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ರಹಮಾನ್ ಲ್ಯಾಂಡ್’ ಎಂದು ತಮ್ಮ ಪ್ರದೇಶವನ್ನು ಘೋಷಿಸಿಕೊಂಡಿವೆ. ಅದರ ಧ್ವಜವನ್ನು ಹಾರಿಸಿವೆ.


ಆದರೆ ರೊಹಿಂಗ್ಯಾ ಬಂಡುಕೋರರ ಸಶಸ್ತ್ರ ಸಂಘರ್ಷ ಬೌದ್ಧರೊಂದಿಗಿನ ಸೌಹಾರ್ದ ಸಂಬಂಧ ಹದಗೆಡಲು ಕಾರಣವಾಗಿ ಅವರು ದೇಶ ತೊರೆಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಒಟ್ಟಾರೆ ಸಾಮಾನ್ಯ ರೊಹಿಂಗ್ಯಾ ಮುಸ್ಲಿಮರ ಪಾಲಿಗೆ ಬದುಕು ದುರ್ಭರವಾಗುವಂತೆ ಮಾಡಿರುವುದರಲ್ಲಿ ಬರ್ಮಾ ಸರ್ಕಾರದ ಪಾಲು ಎಷ್ಟಿದೆಯೋ ಅಷ್ಟೇ ಸಶಸ್ತ್ರ ಬಂಡಾಯದ ಕೊಡುಗೆಯೂ ಇದೆ.



ಅನ್ನನೀರುಸೂರಿಲ್ಲದೆ ಸಾಗರದ ನಡುಮಧ್ಯ ಸಿಲುಕಿಕೊಂಡವರಿಗೆ; ತಾವು ಹುಟ್ಟಿ ಬೆಳೆದ ನೆಲದಲ್ಲೇ ಮಾನವ ಹಕ್ಕುಗಳಿಂದ ವಂಚಿತರಾದವರಿಗೆ ಕೂಡಲೇ ನ್ಯಾಯ ಸಿಗಬೇಕು. ಬೆಳೆಯುತ್ತಿರುವ ಸಿರಿಯಾದ ಐಎಸ್ ಉಗ್ರ ಸಂಘಟನೆಯ ಹಿನ್ನೆಲೆಯಲ್ಲಿ, ಬರ್ಮಾದ ಆಚೀಚಿನ ದೇಶಗಳೂ ಕೋಮುಆಧರಿತ ಸರ್ಕಾರಗಳನ್ನು ಹೊಂದುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ತಕ್ಷಣ ಅಂತಾರಾಷ್ಟ್ರೀಯ ಸಮುದಾಯ ಚುರುಕಾಗಬೇಕಾದ ಅವಶ್ಯಕತೆಯಿದೆ.

ಆದರೆ ಬರ್ಮಾದ ರಖಿನೆ ಪ್ರಾಂತ್ಯ ಭಾರತದ ಕಾಶ್ಮೀರವಿದ್ದಂತೆ. ಇದಕ್ಕೆ ಉತ್ತರ ಅಷ್ಟು ಸುಲಭದಲ್ಲಿ ಸಿಗುವಂತಿಲ್ಲ. ಜನಸಾಮಾನ್ಯರ ಬದುಕಿಗಿಂತ ಧರ್ಮದ, ರಾಷ್ಟ್ರೀಯ ಅಸ್ಮಿತೆಯ, ಪಕ್ಷ ರಾಜಕಾರಣದ ಹಿತಾಸಕ್ತಿಗಳೇ ಮೇಲುಗೈ ಪಡೆದಿರುವುದು ಬಿಕ್ಕಟ್ಟು ಹುಟ್ಟಲು ಹಾಗೂ ಉಲ್ಬಣಿಸಲು ಕಾರಣವಾಗಿವೆ. ಅದರ ಪರಿಹಾರವನ್ನು ಬದುಕು ಕಲಿಸಿದ ಅನುಭವದಿಂದ ಜನಸಾಮಾನ್ಯರೇ ಪಡೆದುಕೊಳ್ಳಬೇಕು. ಅದಕ್ಕಿಂತ ಮುನ್ನ ಇನ್ನೆಷ್ಟು ಅಮಾಯಕ ಜನಸಾಮಾನ್ಯರು ಧರ್ಮಾಂಧರು ನಡೆಸುವ ಅವಿವೇಕದ ಧರ್ಮಯುದ್ಧಗಳಿಗೆ ಬಲಿಯಾಗಬೇಕು?!

ದೇವರೇ ಹೇಳಬೇಕು..









Friday, 12 June 2015

ಕನಕ ಸಾಹಿತ್ಯ - ಮಹಿಳಾ ಪಾತ್ರಗಳು: ಹೆಣ್ತನದ ಕಣ್ಣಲ್ಲಿ..





೧೬ನೇ ಶತಮಾನದ ವೈಷ್ಣವ ಪಂಥದ ಭಕ್ತ ಕವಿ ಕನಕರ ವ್ಯಕ್ತಿತ್ವ ಮತ್ತು ಸಾಹಿತ್ಯ ಇತ್ತೀಚೆಗೆ ಬಹುಚರ್ಚಿತವಾಗುತ್ತಿದೆ. ಅಂತರಂಗ-ಬಹಿರಂಗವೆನ್ನದೆ ಮನುಷ್ಯ ಜೀವಿಯನ್ನು ಬಾಧೆಗೊಳಪಡಿಸುವ ಸಕಲ ವಿಷಯಗಳನ್ನೂ ಬಹುಸೂಕ್ಷ್ಮವಾಗಿ ವಿಮರ್ಶಿಸಿದ ಕನಕರು ವ್ಯವಸ್ಥೆಯ ತಾರತಮ್ಯ, ಜಾತಿವ್ಯವಸ್ಥೆಯ ಸಿಂಧುತ್ವವನ್ನು ನೇರವಾಗಿ, ಪರೋಕ್ಷವಾಗಿ ಇಷ್ಟದೈವದೆದುರು ದೂರಿದರು. ೧೧-೧೨ನೇ ಶತಮಾನದ ವಚನಕಾರರು ತಮ್ಮ ವಚನಗಳಲ್ಲಿ ತಾರತಮ್ಯವನ್ನು ನೇರವಾಗಿ ಹೇಳಿದ್ದರೆ; ಮೂರ‍್ನಾಲ್ಕು ಶತಮಾನ ನಂತರ ಬಂದ ಕನಕರು ಹೇಳಲೇಬೇಕಾದ ಸತ್ಯಗಳನ್ನು ಆಧ್ಯಾತ್ಮಿಕ ಪರಿಭಾಷೆಯಲ್ಲಿ ಕೀರ್ತನೆಗಳಾಗಿ ಹಾಡಿದರು. ಜನಪದದ ಲಯ-ಮಟ್ಟು-ಪದ-ಪರಿಭಾಷೆಗಳನ್ನು ತಮ್ಮ ಕೀರ್ತನೆ ಮತ್ತು ಕಾವ್ಯಗಳಲ್ಲಿ ಯಶಸ್ವಿಯಾಗಿ ಅಡಕಗೊಳಿಸಿದ ಕನಕ ಸಾಹಿತ್ಯ ಒಂದೇಟಿಗೆ ಆಪ್ತವೂ, ಅರ್ಥಪೂರ್ಣವೂ ಎನಿಸಿಬಿಡುತ್ತದೆ. ಎಂದೇ ಕವಿಯಾಗಿ, ಕೀರ್ತನಕಾರರಾಗಿ ಅವರ ರಚನೆಗಳು ಇಂದಿಗೂ ಜನಪ್ರಿಯವಾಗಿವೆ.

ಉಡುಪಿಯ ಕೃಷ್ಣನ ಮೂರ್ತಿಯನ್ನೇ ತಿರುಗಿಸಿದ ಭಕ್ತಿ ಮಹಿಮೆಯ ಜನಜನಿತ ಕತೆಯನ್ನು ಇಂದು ಹೊಸ ಬೆಳಕಿನಲ್ಲಿ ನೋಡಬೇಕಾದ ರಾಜಕೀಯ ಅನಿವಾರ್ಯತೆಯಿರುವ ಹೊತ್ತಿನಲ್ಲಿ ಕನಕರ ಕಾಲ, ಆ ಕಾಲದ ಸಾಮಾಜಿಕ ವಾತಾವರಣ, ಅವರ ಜೀವನಚರಿತ್ರೆ, ಕೃತಿಗಳನ್ನೆಲ್ಲ ಮತ್ತೆ ಅವಲೋಕಿಸಿ ಪುನರ್‌ರೂಪಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಅವರ ಮಾನವಪರತೆ, ಮಹಿಳಾಪರತೆ ವಿಶ್ಲೇಷಣೆಗೊಳಗಾಗುತ್ತಿವೆ.

ಕನಕರಷ್ಟೇ ಅಲ್ಲ, ಇವತ್ತು ನಮ್ಮೆಲ್ಲ ಪುರಾತನರು, ಅವರ ಕಲೆ-ಸಾಹಿತ್ಯ-ತತ್ವಗಳು ಜೀವಪರವಾಗಿವೆ ಎನ್ನಲು ಎರಡು ಅಗ್ನಿಪರೀಕ್ಷೆಗಳನ್ನು ಹಾದು ಬರಬೇಕಾಗಿದೆ:


  • ಅವರು/ಅವರ ಸಂವೇದನೆಗಳು ಶೋಷಿತಪರ, ಅಧಿಕಾರಹೀನರ ಪರವಾಗಿವೆಯೇ? 
  • ಅವು ಲಿಂಗ ಅಸಮಾನತೆ, ತಾರತಮ್ಯ ಗುರುತಿಸುವ ಲಿಂಗಸೂಕ್ಷ್ಮತೆಯನ್ನು ಹೊಂದಿವೆಯೇ? 


ಕನಕ ಸಾಹಿತ್ಯವನ್ನೂ ಈ ಎರಡು ನೆಲೆಗಳಿಂದ ನೋಡುವ ಅವಶ್ಯಕತೆಯಿದೆ.

ನ್ಯಾಯಸೂಕ್ಷ್ಮದ, ಸಾಮಾಜಿಕ ನ್ಯಾಯದ ಪ್ರಶ್ನೆಗಳನೆತ್ತುವ ಮೂಲಕ ಮೊದಲ ಅಗ್ನಿಪರೀಕ್ಷೆಯನ್ನು ಕನಕರು ಹಾದು ಬಂದಿದ್ದಾರೆ. ವೈಷ್ಣವ ಪಂಥ ಮತ್ತು ದಾಸಕೂಟ/ವ್ಯಾಸಕೂಟದ ಪ್ರಭಾವದಿಂದ ಅವರ ಚಿಂತನೆಗಳಿಗೆ ಕೊಂಚ ವೈದಿಕ ಮಿತಿ ಆವರಿಸಿಕೊಂಡಿದ್ದರೂ, ಜಾತಿ ಅಸಮಾನತೆಯ ವಿರುದ್ಧ ಉಳಿದವರಿಗಿಂತ ಭಿನ್ನವಾಗಿ, ಸ್ಫುಟವಾಗಿ ಆಡಿದ್ದಾರೆ. ಸಮಾಜದ ತಾರತಮ್ಯಗಳನ್ನು ಸೃಜನಶೀಲವಾಗಿ ರಾಮಧಾನ್ಯಚರಿತೆಯಲ್ಲಿ ಮಂಡಿಸಿದ್ದಾರೆ. ವಂಚಿತನಿಗೆ ಬೇಕಿರುವುದು ಕಾಲ ಮತ್ತು ಅವಕಾಶವೇ ಹೊರತು ಪಕ್ಷಪಾತವಲ್ಲ ಎಂದು ರಾಗಿಯ ಬಾಯಲ್ಲೇ ನುಡಿಸಿದ್ದಾರೆ.

ಆದರೆ ಇದೇ ಮಾನವಪರತೆ ಲಿಂಗಸೂಕ್ಷ್ಮ ವಿಷಯಗಳ ಬಗೆಗೆ ಕಾಣುವುದಿಲ್ಲ. ಕನಕರಲ್ಲಷ್ಟೇ ಅಲ್ಲ, ಸಾಮಾಜಿಕ ತಾರತಮ್ಯ ವಿರೋಧಿಸಿ, ಮೇಲ್ಜಾತಿ ಪಾರಮ್ಯವನ್ನು ಪ್ರಶ್ನಿಸಿ, ಜಾತಿನಾಶ ಪ್ರತಿಪಾದಿಸುವ ಬಹುತೇಕ ಪುರಾತನ ಹಾಗೂ ಸಮಕಾಲೀನ ಚೇತನಗಳು ಲಿಂಗತಾರತಮ್ಯ ವಿಷಯಕ್ಕೆ ಬಂದರೆ ಅದರ ವಿರುದ್ಧ ದನಿಯೆತ್ತುವುದಿರಲಿ, ಗ್ರಹಿಸಿರುವುದಕ್ಕೆ ಪುರಾವೆ ಸಿಗುವುದೂ ಕಷ್ಟವಾಗಿದೆ. ಏಕೆಂದರೆ ಪುರುಷಾಧಿಕಾರವನ್ನೆಲ್ಲ ಅನುಭವಿಸುವ ಗಂಡಿಗೆ ಲಿಂಗತಾರತಮ್ಯ ಅನುಭವಕ್ಕೆ ಬರುವುದು ಸುಲಭವಲ್ಲ. ಆ ದೃಷ್ಟಿಯಿಂದ ಚಳುವಳಿಯೊಂದನ್ನು ರೂಪಿಸುತ್ತಲೇ ಅದರಲ್ಲಿ ಎಲ್ಲ ಸಮುದಾಯದ ಮಹಿಳೆಯರನ್ನೊಳಗೊಂಡ ಬಸವಣ್ಣ, ಜ್ಯೋತಿಬಾ ಫುಲೆ ಮತ್ತು ಅಂಬೇಡ್ಕರ್ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ನಂತರ ಬುದ್ಧ, ಅಲ್ಲಮ, ರಾಮಕೃಷ್ಣ ಪರಮಹಂಸ ಇನ್ನಿತರರು ಕಣ್ಣೆದುರು ಸುಳಿಯುತ್ತಾರೆ.

ಇವರ ನಡುವೆ ಕನಕರು ಎಲ್ಲಿದ್ದಾರೆ? ನಮ್ಮೆದುರಿರುವ ಕನಕರ ಎರಡು ರೂಪಗಳಾದ ಭಕ್ತ ಕನಕ ಮತ್ತು ಕವಿ ಕನಕರು ಮಹಿಳಾ ವ್ಯಕ್ತಿತ್ವ ಪ್ರತಿಪಾದನೆಯನ್ನು ಹೇಗೆ ಮಾಡಿದ್ದಾರೆ? ಎಂದು ಪರಿಶೀಲಿಸುವುದು ಈ ಬರಹದ ಉದ್ದೇಶವಾಗಿದೆ.

೧೬ನೇ ಶತಮಾನದಲ್ಲಿ ಬದುಕಿದ ಕನಕರು ೨೧ನೇ ಶತಮಾನದ ಸ್ತ್ರೀಪರ ಧೋರಣೆಗಳನ್ನು ಹೊಂದಿರಬೇಕೆಂದು ಬಯಸುವುದು ಸರಿಯಲ್ಲ. ಅಥವಾ ಇವತ್ತಿನ ಸ್ತ್ರೀಕೇಂದ್ರಿತ ದೃಷ್ಟಿಕೋನದಿಂದ ಅವರನ್ನು, ಅವರ ಸಾಹಿತ್ಯವನ್ನು ಅಳೆಯುವುದೂ ಸರಿಯಲ್ಲ. ಆದರೆ ೨೧ನೇ ಶತಮಾನದಲ್ಲಿದ್ದರೂ ಹೆಜ್ಜೆಹೆಜ್ಜೆಗೂ ಲಿಂಗತಾರತಮ್ಯ ಅನುಭವಿಸುವಾಗ ಅದನ್ನು ಗುರುತಿಸುವ, ಮೂಲ ಎಲ್ಲಿದೆಯೆಂದು ಶೋಧಿಸುವ ನಾವು ಕನಕರನ್ನು ಪುರಾತನರೆಂಬ ಭಕ್ತಿಭಾವದಲ್ಲಷ್ಟೇ ನೋಡಬಾರದು. ಅಂದಿಗೆ ಕುಲಕುಲಕುಲವೆಂದು ಹೊಡೆದಾಡದಿರಿ ಎಂದು ಅಪರೂಪದ ತತ್ವ ಬೋಧಿಸಿದ ಕನಕರು ಹೆಣ್ಣನ್ನು ಹೇಗೆ ಪರಿಭಾವಿಸಿದ್ದರು ಎಂದು ಚಿಕಿತ್ಸಕ ದೃಷ್ಟಿಯಿಂದಲೇ ನೋಡಬೇಕು.

ಇದು ಸ್ತ್ರೀವಾದಿ ದೃಷ್ಟಿಕೋನ ಎಂದು ಒಂದು ‘ವಾದ’ಕ್ಕೆ ಸೀಮಿತಗೊಳ್ಳದಿರಲಿ. ಇದು ಹೆಣ್ತನದ ದೃಷ್ಟಿಕೋನ, ಜೀವಪರ ದೃಷ್ಟಿಕೋನ. ಹೆಣ್ತನ ಎನ್ನುವುದು ಜೈವಿಕ ಸತ್ಯವಷ್ಟೇ ಅಲ್ಲ, ತಿಳಿವಿನ ಸತ್ಯವೂ ಹೌದು. ಹೆಣ್ತನ ಎಂದರೆ ಪುರುಷ ದ್ವೇಷವಲ್ಲ. ಪುರುಷ ಪರಮಾಧಿಕಾರದ ಬದಲು ಮಹಿಳಾ ಪರಮಾಧಿಕಾರ ಸ್ಥಾಪಿಸಬಯಸುವ ಮನಸ್ಥಿತಿಯೂ ಅಲ್ಲ. ಹೆಣ್ತನವು ಗಂಡನ್ನು ಸದಾ ಬಯಸುತ್ತದೆ: ಗಂಡು ಇರುತ್ತಾನೆ, ಇರಬೇಕು ಜೊತೆಯಾಗಿ - ಸಖನಾಗಿ, ಮಗನಾಗಿ, ತಂದೆಯಾಗಿ, ಸಮನಾಗಿ; ಯಜಮಾನನಾಗಿ ಅಲ್ಲ. ಅಲ್ಲಿ ಗಂಡೆನ್ನುವುದು ಹೆಮ್ಮೆಯ ವಿಷಯವಲ್ಲ. ಹೆಣ್ಣೆನ್ನುವುದು ಅವಮಾನದ ವಿಷಯವೂ ಅಲ್ಲ.

***

ಜನಪದ ಸಂವೇದನೆಯಿರಲಿ, ವೇದಕಾಲದ ಮಾದರಿಯಿರಲಿ, ಇವತ್ತಿನ ಮಾನವ ಹಕ್ಕು ಪ್ರತಿಪಾದನೆಯ ಸಮಾಜವಿರಲಿ - ಹೆಣ್ಣನ್ನು, ಹೆಣ್ಣು ವ್ಯಕ್ತಿತ್ವವನ್ನು ಗ್ರಹಿಸುವ ಎರಡು ಮುಖ್ಯ ಮಾದರಿಯನ್ನು ಡಿ. ಆರ್. ನಾಗರಾಜ್ ಸೇರಿದಂತೆ ಬಹುಪಾಲು ವಿಮರ್ಶಕರು ಗುರುತಿಸಿದ್ದಾರೆ.

ಮೊದಲನೆಯದು ವೇದಕಾಲದ ಗೃಹದೇವತೆಯ ಮಾದರಿ ಅಥವಾ ಜನಪದರ ಗರತಿಯ ಮಾದರಿ ಅಥವಾ ಆಧುನಿಕ ಸಮಾಜದ ಫೀಲ್‌ಗುಡ್ ಹೌಸ್‌ವೈಫ್ ಮಾದರಿ. ಈ ಮಾದರಿಯ ಹೆಣ್ಣು ತನಗೆ ದತ್ತವಾಗಿರುವ ಪಾತ್ರವನ್ನು ಸಂಪೂರ್ಣ ಒಪ್ಪಿ ನಡೆಯುತ್ತಾಳೆ. ತನ್ನ ಪಾತ್ರವನ್ನು ತನ್ಮಯಳಾಗಿ ನಿಭಾಯಿಸುತ್ತಾಳೆ. ಮಗಳು, ತಂಗಿ, ಅಮ್ಮ, ಸತಿ, ಸಖಿ, ಯಜಮಾನಿ, ದೇವದಾಸಿ - ಹೀಗೆ ಯಾವ ಪಾತ್ರವೇ ದೊರೆಯಲಿ, ಎಲ್ಲ ಕಡೆ ಸಾಂಪ್ರದಾಯಿಕ ಚಹರೆಗಳನ್ನು ಪ್ರದರ್ಶಿಸಿ, ಪ್ರತಿಪಾದಿಸಿ ಹಾಗೇ ಬದುಕುತ್ತಾಳೆ.

ಎರಡನೆಯದು ವೇದ ಕಾಲದ ಗಾರ್ಗಿ ಮಾದರಿ, ಜನಪದರ ಗಯ್ಯಾಳಿ ಮಾದರಿ ಅಥವಾ ಇವತ್ತಿನ ಹಕ್ಕುಪ್ರಜ್ಞೆ ಜಾಗೃತಗೊಂಡ ಸ್ತ್ರೀವಾದಿ ಮಾದರಿ. ಅದು ಪ್ರಖರ ವೈಚಾರಿಕ ಮಾದರಿ. ಅದು ಅನ್ಯಾಯವೆನಿಸುವ ಎಲ್ಲವನ್ನು ಉಗ್ರವಾಗಿ ಪ್ರತಿಭಟಿಸುತ್ತದೆ, ಪ್ರಶ್ನಿಸುತ್ತದೆ, ವಿಷಾದಗೊಳ್ಳುತ್ತಲೇ ತನ್ನಂತಹ ಇತರರ ಬಗೆಗೆ ಯೋಚಿಸುತ್ತದೆ. ಅದಕ್ಕೆ ತನ್ನ ಬುದ್ಧಿವಂತಿಕೆ ಬಗೆಗೆ ಅಪಾರ ಹೆಮ್ಮೆ. ಅಧಿಕಾರವು ಯಾವುದನ್ನು, ಯಾವ ಗುಣ ಸ್ವಭಾವಗಳನ್ನು ಹೆಣ್ಣಿಗೆ ಶೋಭೆಯಲ್ಲ ಎಂದು ವಿವರಿಸುವುದೋ ಅದನ್ನು ಒಂದು ಅತಿಗೆ ಒಯ್ಯುತ್ತದೆ. ‘ಹೆಣ್ಣು ಚಂಚಲೆ, ಚಪಲೆ, ಅವರ ಬುದ್ಧಿ ಮೊಣಕಾಲ ಕೆಳಗೆ, ನೈತಿಕತೆ ಕಡಿಮೆ’ ಮುಂತಾದ ಗುಣವಿಶೇಷಣಗಳನ್ನು ಅಲ್ಲಗಳೆದು ಅಥವಾ ಅತಿಗೊಯ್ದು ಅದನ್ನೇ ಸರಿಯೆಂದು ಸಾಧಿಸಿತೋರುವ ಮಾದರಿ ಇದು.

ಈ ಎರಡು ಮಾದರಿಗಳಲ್ಲಿ ಗಾರ್ಗಿ-ಗಯ್ಯಾಳಿಯರ ಒಂದು ಉದಾಹರಣೆಯೂ ಕನಕರ ಸಾಹಿತ್ಯದಲ್ಲಿ ಕಂಡುಬರುವುದಿಲ್ಲ. ಭಕ್ತಿ ನೆಲೆಯಲ್ಲಿಯೂ ‘ಗಾರ್ಗಿ’ ಮಾದರಿಯ ಹೆಣ್ಣಿನ ಚಿತ್ರಣ ಸಾಧ್ಯವಿತ್ತು. ಆದರೆ ಅದನ್ನು ಕನಕರೇ ಕೈಯಾರ ಬಿಟ್ಟುಕೊಟ್ಟಿದ್ದಾರೆ. ದೇವನೆದುರು ಸಮಾನತೆಗಾಗಿ ಬಂಡೆದ್ದ ಹೆಣ್ಣು ಅವರ ಕಲ್ಪನೆಯಲ್ಲಿರಲಿಕ್ಕಿಲ್ಲ. ಅವರ ಹೆಣ್ಣು ಪಾತ್ರಗಳೆಲ್ಲ ಗರತಿಯ ಮಾದರಿಯವೇ.


ಕನಕರ ಭಕ್ತಿ ಸಾಹಿತ್ಯದಲ್ಲಿ ಹೆಣ್ಣು

ಹಾಗೆ ನೋಡಿದರೆ ಭಕ್ತಿಗೆ ನಿರ್ಲಿಂಗೀ ಸಂವೇದನೆಯಿರಬೇಕು. ಆದರೆ ಭಕ್ತಿಯನ್ನು ಸ್ತ್ರೀ ಸಂವೇದನೆ ಎಂದು ಗುರುತಿಸಲಾಗಿದೆ. ಹೆಣ್ಣೇ ಆಗಿಬಿಡುವುದು ಭಕ್ತಿ ಮಾರ್ಗದ ಮಾದರಿ. ದೇಶಕಾಲ ಭೇದವಿಲ್ಲದೆ ಹಾಫಿಜ್-ರೂಮಿ-ಬಸವಾದಿ ಶರಣರೆಲ್ಲ ತಮ್ಮನ್ನು ಹೆಣ್ಣೆಂದು, ದೇವರನ್ನು ಗಂಡೆಂದು ಭಾವಿಸಿದ್ದಾರೆ. ಆದರೆ ಅದರಲ್ಲೂ ಸಮಸ್ಯೆಗಳಿವೆ. ಏಕೆಂದರೆ ಭಕ್ತಿ ಎಂಬ ನೆಲೆಯೇ ಸಮರ್ಪಣಾಭಾವ, ಶರಣಾಗತಿ, ಅನುಯಾಯಿತ್ವವನ್ನು ಅಪೇಕ್ಷಿಸುವಂಥದು. ಭಕ್ತಿಯ ನೆಲೆ ಉದ್ದೀಪಿಸುವ ಶರಣಾಗತಿಗೆ ಅದನ್ನು ಸ್ತ್ರೀತ್ವದೊಡನೆ ಸಮೀಕರಿಸಿ ನೋಡುವುದು ಲಿಂಗರಾಜಕಾರಣದ ಇನ್ನೊಂದು ಮುಖ. ಶರಣ ಸತಿ, ಲಿಂಗಪತಿ ಎಂದು ವಚನಕಾರರು ಹೇಳಿದಂತೆ ಕನಕರ ಎಷ್ಟೋ ಕೀರ್ತನೆಗಳಲ್ಲಿ ತನ್ನನ್ನು ಹೆಣ್ಣೆಂದು, ಆದಿಕೇಶವ ಗಂಡೆಂದು ಭಾವಿಸಿ ವಿರಹದಿಂದ ಪರಿತಪಿಸುತ್ತಿರುವ ಹೆಣ್ಣೆಂಬಂತೆ ಚಿತ್ರಿಸಿಕೊಂಡ ರಚನೆಗಳಿವೆ. ಹೀಗೆ ಕನಕರು ‘ಅರಿವಿನ ಹೆಣ್ತನ’ ಅನುಭವಿಸಿದ್ದಾರೆ.

ಆದರೆ ‘ಅರಿವಿನ ಹೆಣ್ತನ’ ಸ್ತ್ರೀ ಪುರುಷ ಸಮಾನತೆಯ ಪ್ರಶ್ನೆ ಹುಟ್ಟಿಸಲಿಲ್ಲ. ಅವರಿಗಿಂತ ಮೂರ್ನಾಲ್ಕು ನೂರು ವರುಷ ಮೊದಲು, ಜನಪದರ ನಡುವೆ ತಿರುಗಿ, ತತ್ವ ಹೇಳಿ ಬಾಳಿದ ಶಿವಶರಣ-ಶಿವಶರಣೆಯರ ನೆಲವೇ ಕನಕರ ಕರ್ಮಭೂಮಿಯಾಗಿದ್ದರೂ ಶಿವಶರಣರ ಚಿಂತನೆಯ ಪ್ರಭಾವ ಅವರ ಮೇಲೆ ಆದಂತಿಲ್ಲ. ಭಕ್ತಿಯಲ್ಲಾಗಲೀ, ಭವದಲ್ಲಾಗಲೀ ಶಿವಶರಣೆಯರು ಎತ್ತಿದ ಎಷ್ಟೊಂದು ವಿಷಯಗಳು ಕನಕರನ್ನು ಪ್ರಭಾವಿಸಿದಂತಿಲ್ಲ. ವಚನ ಚಳುವಳಿಯಲ್ಲಿ ಮೇಲುಕೀಳೆನ್ನದೆ ಇಡಿಯ ಸಮಾಜ, ವಿಶೇಷವಾಗಿ ತಳಸಮುದಾಯಗಳು ತೊಡಗಿಕೊಂಡದ್ದಿರುವಾಗಲೂ ಶೈವ-ವೈಷ್ಣವ ಪಂಥಗಳ ತಿಕ್ಕಾಟ ಅವರನ್ನು ಆ ಚಿಂತನೆಗಳಿಂದ ದೂರವಿರಿಸಿತೇ ಎಂಬ ಅನುಮಾನ ಸುಳಿಯುತ್ತದೆ. ಅವರ ಮೋಹನ ತರಂಗಿಣಿಯಲ್ಲಿ ತ್ರೇತಾಯುಗದ ದ್ವಾರಕಾಪುರಿಯ ವರ್ಣನೆಯಲ್ಲಿ ೧೧ನೇ ಶತಮಾನದ ರಾಮಾನುಜರು ಬರುತ್ತಾರೆ, ಆದರೆ ಶಿವಭಕ್ತ ಬಾಣಾಸುರನ ನಗರಿಯಲ್ಲಿ ಶರಣರ ಸುಳಿವಿಲ್ಲ.

ಅವರ ರಚನೆಗಳಲ್ಲಿ ಪದೇಪದೇ ಪರಪುರುಷನಲ್ಲಿ ಅನುರಕ್ತಳಾದ ನಾರಿ, ಅಂಥವಳ ನಿಂದಿಸುವ ಮಾತು ಬರುತ್ತದೆ. ಅದರಲ್ಲೂ ಯಾರದೋ ಸ್ವತ್ತಾದ ಪರಸತಿ, ಪರಸ್ತ್ರೀಯರ ಕುರಿತೇ ಹೇಳಲಾಗಿದೆ. ಯಾರದೂ ಅಲ್ಲದ ಅಥವಾ ‘ಪರ’ನ ಸ್ವತ್ತಲ್ಲದ ಹೆಣ್ಣು ಕೇವಲ ಭೋಗದ ವಸ್ತು. ಇದು ವಚನಗಳಲ್ಲೂ, ಬುದ್ಧನ ಬೋಧನೆಗಳಲ್ಲೂ ಕಂಡುಬರುವುದು ನೋಡಿದರೆ ಎಷ್ಟೆಲ್ಲ ಸಾಮಾಜಿಕ ನಿರ್ಬಂಧಗಳ ನಡುವೆಯೂ, ಮದುವೆಯೆಂಬ ಸಂಸ್ಥೆ ಹೆಣ್ಣಿಗೆ ಹೊರಿಸಿರುವ ಜವಾಬ್ದಾರಿ ಕಟ್ಟುಪಾಡುಗಳ ನಡುವೆಯೂ ‘ಪರಪುರುಷ’ನೊಡನೆ ಸತಿ ಕೂಡುವುದು ಸರ್ವೇಸಾಮಾನ್ಯವಾಗಿದ್ದಿರಬೇಕು ಮತ್ತು ಅದು ಎಲ್ಲ ಕಾಲದ ಮಾನವ ಸಮಾಜದ ತಲ್ಲಣವಾಗಿರಬೇಕು ಎನಿಸುತ್ತದೆ. ಒಟ್ಟಾರೆ ಪ್ರಭಾವ, ಪಂಥಗಳ ಮಾತು ಒತ್ತಟ್ಟಿಗಿಟ್ಟು ನೋಡಿದರೂ ಭಕ್ತ ಕನಕರದು ಸಾಂಪ್ರದಾಯಿಕ, ಸನಾತನ ಮಹಿಳಾ ಮಾದರಿಯಾಗಿಯೇ ಕಂಡುಬರುತ್ತದೆ.

ಒಟ್ಟಾರೆ ಭಕ್ತ ಕನಕನನ್ನು ಐಹಿಕವಾಗಿಯೋ, ಆಧ್ಯಾತ್ಮಿಕವಾಗಿಯೋ ಲಿಂಗ ಅಸಮಾನತೆ/ಲಿಂಗ ಪ್ರಶ್ನೆ ಕಾಡಿದಂತಿಲ್ಲ. ಅವರ  ಕೆಲವು ಕೀರ್ತನೆ, ಕವಿತೆಗಳ ಸಾಲು ಹೀಗಿವೆ:


  • ಸೋತು ಹೆಣ್ಣಿಗೆ ಹೆದರಿ ನಾಚುವ ಪುರುಷನ್ಯಾತಕೆ/ಸನ್ನೆಯನರಿತು ನಡೆಯದಿರುವ ಸತಿಯು ಯಾತಕೆ
  • ಹೇವವಿಲ್ಲದ ಹೆಣ್ಣು ಗಜುಗ ಬೆಳೆದಾ ಕಣ್ಣು
  •       ಗಂಡಗಂಜದ ನಾರಿ ಅವಳೇ ಹೆಮ್ಮಾರಿ
  • ಪತಿವ್ರತೆಯರೆಂಬುವರು ಶತ ಸಹಸ್ರಕೊಬ್ಬರು/ಮಿತಿಮೀರಿ ಇಹರಯ್ಯ ಇತರ ಜನರು/ಮತಿಗೆಟ್ಟು ಮನಸೋತು ಅನ್ಯ ಪುರುಷರ ಕೂಡಿ/ಗತಿಗೆಟ್ಟು ಹೋಗುವರು ಮೂರು ತೊರೆದು
  • ಶರೀರ ಸೌಖ್ಯ ಶಮನಕ್ಕಾಗದ ಹೆಣ್ಣು/ ಊರಲಿದ್ದರೇನು ತೌರೂರಲಿದ್ದರೇನು?
  • ಮಾನಿನಿಯ ಮನಸು ನಿಧಾನವಿರದಿರೆ/ಮಾನಾಭಿಮಾನಗಳುಳಿದೀತೇ?
  • ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು
  • ಕಂಡರೆ ಸೇರದ ನಾರಿ ಕೆಂಡವನುಗುಳುವ ಮಾರಿ/ಉಂಡರೆ ಸೇರದ ತಾಯಿ ಉರಗನ ಮೆಕ್ಕೆ ಕಾಯಿ
  • ಪತಿ ಸೇವೆಗಿಂದಧಿಕ ಸೇವೆಯುಂಟೆ?


ಇಂಥ ಸಾಲುಗಳು ಹೇರಳವಾಗಿದ್ದು ಇಲ್ಲೆಲ್ಲ ಸಾಂಪ್ರದಾಯಿಕ ಯೋಚನಾಕ್ರಮಕ್ಕಿಂತ ಕನಕರ ಗ್ರಹಿಕೆ ಭಿನ್ನವಾಗಿಲ್ಲ. ಮಗನಿಂದೆ ಗತಿಯುಂಟೆ ಜಗದೊಳು ಎಂಬ ಕೀರ್ತನೆಯಲ್ಲಿ ಪುತ್ರನಿಲ್ಲದೆ ಗತಿಯಿಲ್ಲ ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ಪ್ರಶ್ನಿಸಿ ಅದರಲ್ಲಿ ಹುರುಳಿಲ್ಲವೆಂದವರು, ತತ್ವಾಗಮಗಳ ಓದಿನಿಂದ ಗತಿ ದೊರೆಯುವುದೆಂದು ಪ್ರತಿಪಾದಿಸುತ್ತಾರೆ. ಒಂದುವೇಳೆ ಮಗಳಿಂದಲೂ ಗತಿಯುಂಟು ಜಗದೊಳು ಎಂದು ಕನಕರೇನಾದರೂ ಹೇಳಿದ್ದರೆ ಆ ಒಂದೇಒಂದು ಸಾಲು ಸಾಕಿತ್ತು, ಅವರು ಆದರ್ಶ ಪುರಾತನರಾಗಿಬಿಡುತ್ತಿದ್ದರು.

ಆದರೂ,

  • ಸಂಸಾರ ಸಾಗರಮನುತ್ತರಿಸುವಡೆ/ಕಂಸಾರಿ ನಾಮವೊಂದೇ ಸಾಕು/ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆ/ವನಿತೆಯನು ಬಿಟ್ಟು ತಪವಿರಲು ಬೇಡ ಎನ್ನುತ್ತಾರೆ.
  • ಡಣಾಯಕನಾಗಿ ಯುದ್ಧ ಸೋತು, ವಿಜಯನಗರದವರ ಜೊತೆ ತನ್ನ ದೇಶಕೋಶ ಕಳಕೊಂಡು, ಹೆಂಡತಿಯ ತೌರಿನಲ್ಲಿದ್ದಾಗ ಅವಳೇ ಇವರ ತಳಮಳ ನೋಡಲಾರದೇ ದಾಸನಾಗಿಬಿಡು ಎಂದು ಹೇಳಿದಳೆಂದು ಜೀವನಚರಿತ್ರೆ ಹೇಳುತ್ತದೆ. ಆದದ್ದೆಲ್ಲ ಒಳಿತೇ ಆಯಿತು ಎಂಬ ಕೀರ್ತನೆಯಲ್ಲಿ ದಂಡಿಗೆ ಬೆತ್ತವ ಹಿಡಿದು ಆದಿಕೇಶವನ ದಾಸನಾಗಿಬಿಡು ಎಂದು ಹೇಳಿದ ಹೆಂಡತಿ ಕುರಿತು ಗೋಪಾಲ ಬುಟ್ಟಿ ಹಿಡಿವುದಕೆ/ಭೂಪಾಲನೆಂದು ಗರ್ವಿಸುತಿದ್ದೆ/ಆ ಪತ್ನೀ ಕುಲ ಸಾಸಿರವಾಗಲಿ/ಗೋಪಾಲ ಬುಟ್ಟಿ ಹಿಡಿಸಿದಳಯ್ಯಾ ಎಂದು ಹಾರೈಸುತ್ತಾರೆ.


ಎಂದೇ ಇಷ್ಟು ಹೇಳಬಹುದು, ಕನಕರು ಖಂಡಿತ ಮಹಿಳಾ ವಿರೋಧಿಯಲ್ಲ..


ಕವಿ ಕನಕರ ಕಣ್ಣಲ್ಲಿ ಹೆಣ್ಣು 

ಎಂದಿನಿಂದ ಹೆಣ್ಣಿನ ಕುರಿತು ಗಂಡಿಗಿರುವ ಕಾಮಾಸಕ್ತಿ, ಭೋಗಾಸಕ್ತಿಯ ನಿಲುವೇ ಕನಕರದೂ. ಅವರು ರಸಿಕ ಮತ್ತು ಸೌಂದರ್ಯಗ್ರಾಹಿ ಕವಿ. ಹೆಣ್ಣನ್ನು ಅವಳ ಅಂಗಾಂಗಗಳಿಂದಲೇ - ಮಿಕ್ಕೆಲ್ಲದಕ್ಕಿಂತ ಮೊಲೆಯ ಗಾತ್ರ, ಸ್ವರೂಪಗಳಿಂದಲೇ ಅಳೆಯುತ್ತಾರೆ. ದಾಸರಾದ ಮೇಲೂ ಒಂದು ಕೀರ್ತನೆಯಲ್ಲಿ ‘ಪೋಗದೋ ಚಳಿ ಪೋಗದೋ/ನಳಿನಾಕ್ಷಿಯ ತನ್ನ ತೊಡೆ ಮೇಗಡೆ ಇಟ್ಟು/ಕಳಸಕುಚದ ಮೇಲೆ ಕೈಯಿಕ್ಕಿದಲ್ಲದೆ’ ಎನ್ನುತ್ತಾರೆ! ಉಬ್ಬಿದ ಕುಚದ್ವಯದಲ್ಲಿ ತಾನು ಮೂಡಿಸಿದ ನಖಚಂದ್ರನ ಲಾಂಛನವನ್ನು ಅವರ ಗಂಡುಪಾತ್ರಗಳು ಹೆಮ್ಮೆಯಿಂದ ನೋಡುತ್ತಾವೆ.

ಅವರ ಮೋಹನ ತರಂಗಿಣಿ ಒಂದು ಶೃಂಗಾರ ಕಾವ್ಯ. ಅಲ್ಲಿ ಹೆಣ್ಣು ಎಂದರೆ ಸೌಂದರ್ಯಾತಿಶಯ ಮತ್ತು ಗುಣಾತಿಶಯಗಳ ಮೊತ್ತ. ಅದನ್ನು ಬರೆದಾಗ ಅವರಿನ್ನೂ ದಾಸರಾಗಿರಲಿಲ್ಲ. ‘ಹೆಣ್ಣು ಮಾಯೆ’ಯೆನಿಸಿರಲಿಲ್ಲ. ಸ್ತನದ್ವಯಗಳ ವಿವರಿಸಲಂತೂ ಕನ್ನಡದ ಎಷ್ಟೆಷ್ಟು ಉಪಮೆ, ಅಲಂಕಾರ, ಪದ, ನೆಪ ಹುಡುಕಿ ಎಳತಂದಿದ್ದಾರೋ?! ಕೊಡಮೊಲೆ, ಗಡಿಗೆ ಮೊಲೆ, ನುಣ್ಮೊಲೆ, ಬಿಳ್ಮೊಲೆ, ಹೊನ್ನಮೊಲೆ, ದುಂಡುಮೊಲೆ, ಬಟ್ಟ ಬಲ್ಮೊಲೆ, ತೋರಮೊಲೆ, ಹೊಂದಾವರೆ ಮೊಗ್ಗು ಮೊಲೆ.. ಹೀಗೇ ಸಂಸ್ಕೃತ ನಾಚುವಷ್ಟು ಕನ್ನಡದ ನಾಮಪದ, ನಾಮವಿಶೇಷಣ, ಗುಣವಿಶೇಷಣಗಳು ಸುಳಿದುಹೋಗಿವೆ. ಆ ದೇಹಭಾಗದ ರೂಪ, ಗಾತ್ರ ಎಷ್ಟು ಮುಖ್ಯವೆಂದರೆ ರುಕ್ಮಿಣಿ ಕೃಷ್ಣನ ಬಳಿ, ‘ಪುತ್ರನಿಲ್ಲದೆ ಸದ್ಗತಿಯಿಲ್ಲ, ನನಗೊಬ್ಬ ಪುತ್ರನ ಕೊಡು’ ಎಂದು ಕೇಳಿದರೆ ಆ ಮಹರಾಯ, ‘ಮಗುವಾದರೆ ಬಿರುಮೊಲೆ ಜರಿದು ಜೋಲು ಬೀಳುತ್ತಾವೆ’ ಎಂದು ಬೇಡವೆನ್ನುತ್ತಾನೆ. ಅದಕ್ಕವಳು ಮಗು ಹಾಲು ಕುಡಿಯತೊಡಗಿದಾಗ ಸೊರ ಬಿಟ್ಟು ಮೊಲೆ ಇನ್ನೂ ಬಿಗಿಗೊಂಡು ದುಂಡಗೆ ಆಕರ್ಷಿಸುವುದು ಎಂದು ಅವನ ಒಪ್ಪಿಸಿ ಮಗುವನ್ನು ಪಡೆಯುತ್ತಾಳೆ! ಮೊಲೆ ಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ? ಎಂದು ಹೆಣ್ಣನ್ನು ಹಳಿಯಲು, ನಿರಾಕರಿಸಲು ಸ್ತನಕಾರಣ ಹೇಳುತ್ತಾರೆ. ತಮ್ಮ ಸಖಿಯರನಾಯ್ದುಕೊಳುವ ರಾಣಿಯರೂ ಗಮನ ಕೊಡುವುದು ತನ್ನಿನಿಯನನ್ನು ಸೆಳೆಯುವಂತಹ ಕೊಡಮೊಲೆಗಳು ಅವರಿಗಿವೆಯೇ ಇಲ್ಲವೇ ಎಂಬ ಬಗ್ಗೆ! ಒಟ್ಟಾರೆ ಗಂಡಿಗೆ ಎಣೆಯಿಲ್ಲದಷ್ಟು ಕಾಮಲೀಲೆಯ ಅವಕಾಶ, ಅವಶ್ಯಕತೆ ಎರಡೂ ಇದೆ; ಅದಕ್ಕೆಂದೇ ಹೆಣ್ಣುಗಳು ಸೃಷ್ಟಿಯಾಗಿದ್ದಾರೆ; ಹೆಣ್ಣಿನ ದೇಹ, ಬದುಕು, ಕ್ರಿಯೆಗಳೆಲ್ಲ ಕಾಮದಾಹ ತಣಿಸುವತ್ತಲೇ ಕೇಂದ್ರಿತವಾಗಿವೆ ಎನ್ನುವುದು ಕವಿ ಕನಕರ ಕಲ್ಪನೆ.

ಮೋಹನ ತರಂಗಿಣಿಯ ಸೌರಾಷ್ಟ್ರ ವರ್ಣನೆ, ದ್ವಾರಕಾಪುರ ವರ್ಣನೆಗಳಲ್ಲಿ ಹಸ್ತಿನಿ-ಚಿತ್ತಿನಿ-ಶಂಖಿನಿ-ಪದ್ಮಿನಿ ಜಾತಿಯ ಸ್ತ್ರೀಯರ ವರ್ಣನೆ ತುಂಬಿದೆ. ಆ ಪುರಗಳು ಹೇಗಿವೆ? ಅಲ್ಲಿ ಏನೇನಿವೆ? ಯಾರ‍್ಯಾರಿದ್ದಾರೆ? ಏನು ಮಾಡುತ್ತಿದ್ದಾರೆ?


  • ಸಡಿಲಿದ ಮುಡಿ, ಬೆವರ್ಮನಿ ತುಂಬಿ ತೊಟ್ಟಿಕ್ಕುವ ಮುಖ, ಅಲುಗಾಡುವ ಮೊಲೆಗಳ ಗಂಧ ತೇಯುವ ಹೆಣ್ಣುಗಳಿರುವ ಅಂಗಡಿ..
  • ರಾಗರಸದೊಳನವರತ ಕಾದಲರು ಸಂಭೋಗಕ್ಕೆ ಸಮವಾಗಲೆನುತ ಇರುವ ಪೋಡಿಯಡಕೆ ಅಂಗಡಿಗಳು
  • ಕಾಂತಿಯುಕ್ತ ಕನ್ನೆಯರ ಚಿಗುರು ಮೊಲೆ ನೋಡಿ ನಗುನಗುತ್ತ ಎಳೆವೆರಳ ಚಿಟುಕೊತ್ತಿ ಬಳೆ ತೊಡಿಸುವ ಬಳೆಗಾರರು
  • ಕೊಂಕು ಕಾಣಬೇಕಾದರೆ ಕೂದಲಿನಲ್ಲಿ, ತೊಂಡೆ ಹಣ್ತುಟಿಯಲ್ಲಿ, ಕುಟಿಲ ಕಾಂತೆಯರ ಗಡಿಗೆ ಮೊಲೆಗಳಲ್ಲಿ ಕಾಣಬಹುದೇ ವಿನಾ ಬೇರೆಡೆ ಕಂಡುಬರುವುದಿಲ್ಲ
  • ವೇಶ್ಯೆಯರ ಬಲ್ಮೊಲೆ ಹಿಡಿವರು, ಚೆಂದುಟಿಗಳ ಕಡಿವರು, ಚಿಗುರು ತುಟಿಯವರ ನಿರಿಗೆ ಸುಲಿವರೇ ವಿನಹ ಗರತಿಯರ ಮುಟ್ಟುವುದಿಲ್ಲ
  • ಕಳಶಮೊಲೆ, ಬಾಹುಮೂಲದ ಕಂಕುಳು ಕಾಣುವಂತೆ ತೋಳೆತ್ತಿ ನೀರೆರೆವಾಗ ದಾಹ ಅಡಗಿದ್ದರೂ ಇನ್ನೂ ಕುಡಿವ ನೆಪದಲ್ಲಿ ಹೆಂಗಳ ಮುದ್ದುಮುಖ ನೋಡುವರು
  • ಕಂಕುಳು ಒಡೆಯುವಂತಿರುವ ಭಾರಿ ಮೊಲೆಗಳ ಹೆಣ್ಣಾಳುಗಳ ರುಕ್ಮಿಣಿ ಸತ್ಯಭಾಮೆಯರು ತಮಗೆ ತಕ್ಕವರೆನಿಸಿದವರನ್ನು ತಂತಮ್ಮ ಪಕ್ಷಕ್ಕೆ ಹಂಚಿಕೊಂಡರು.
  • ಉಟ್ಟಬಟ್ಟೆ ತೊಯ್ದು ಬೊಗಸೆಗಣ್ಣ ಅಬಲೆಯರು ಶೈತ್ಯದಿಂದ ಗಡಗಡ ನಡುಗಿದರು ಮೊಲೆಗಳು ನರ್ತಿಸುವಂತೆ
  • ಪ್ರಿಯಕರನ ಎದೆಯ ಧೈರ್ಯವನ್ನು ಮೊಲೆಗೊಡದಿಂದ ಮೊಗೆಯುವಂತೆ ಮೇಲಕ್ಕೆ ಹತ್ತಿ ಬಂದರು ಅಬಲೆಯರು
  • ದುಂಬಿಗುರುಳ ಮೂರು ಸೀಳಾಗಿಸಿ ಗೋಪಾಂಗನೆಯರು ಜಡೆ ಹೆಣೆಯೆ ಅವು ಕೊಡಮೊಲೆಯ ಕೊಪ್ಪರಿಗೆಯ ನಿಧಿ ಕಾಯುವ ಸರ್ಪಗಳಂತೆ ಬೆನ್ನೇರಿದವು.
  • ಆಯಿತು, ಪುರದ ಕನ್ಯೆಯರು, ಅರಮನೆಯ ನಾರಿಯರು ಹೀಗಿದ್ದರು. ಕನ್ನೈದಿಲೆಯ ಕರಿ ಬಣ್ಣದಬಲೆಯರು, ವನದ ಚಿಂಚಿತಿಯರು, ರೈತ ಮಹಿಳೆಯರು ಹೇಗಿದ್ದರು? 
  • ಮದನ ಮಂದಿರದ ಬಾಗಿಲಿಗೆ ತೋರಣ ಕಟ್ಟಿದಂತೆ ತಳಿರ ಉಡುಗೆ ಕಂಗೊಳಿಸಲು ಹೃದಯ ಗೋಪುರದ ಜೋಡಿ ಕಳಶಗಳಂತೆ ಜೋಡಿ ಮೊಲೆಗಳಿದ್ದವು.
  • ಕಲ್ಲರೆಗಳ ಮೇಲೆ ಧುಮ್ಮಿಕ್ಕಿ ನೃತ್ಯವಾಡುವ ಬಿದಿರಕ್ಕಿ ಕುಟ್ಟುವ ಹೆಣ್ಣುಗಳ/ ತೋರ ನುಣ್ಮೊಲೆಯೆದೆ ದಿಗಿಲಾಂತು ಕಂಪಿಸಿತು
  • ಹಾಡುವರು ಅಕ್ಕಿ ಮಾಡುವರು ಬೇಟೆ ನೋಡುವರು ಬಿಲ್ಲುಬಾಣ ಹಿಡಿದು ನಿಂತರು. ಬಗೆಬಗೆಯ ಭಂಗಿಗಳಲಿ ನಿಂದ ಚಂದದ ಹೆಣ್ಣುಗಳು ಅನಿರುದ್ಧನ ಕಂಡದ್ದೇ ಅವರಿಗೆ ತಂತಮ್ಮ ಗಂಡಂದಿರ ಮೇಲಿನ ಪ್ರೀತಿ ಮುರಿದು ಮೂರು ತುಂಡಾಯಿತು.
  • ತುರುಬು ಹಾಗೂ ತೋರಮೊಲೆಯ ಭಾರದಿಂದ ಸಸಿಮಡಿ ಕಾವ ಬೇಡತಿಯರ ಬಡ ನಡು ಬಳುಕುತಿಹುದು


ಪುರವೋ, ವನವೋ, ಎಲ್ಲೂ ಹೆತ್ತುಹೆತ್ತು ಹೈರಾಣಾದ ಹೆಣ್ಣುಗಳು; ಗೇಯ್ದು ಮಾಸಿದ ಚಹರೆಗಳು; ಅಂಗವಿಕಲ, ಸುಂದರಿಯರಲ್ಲದ, ವೃದ್ಧ ಹೆಣ್ಣುಗಳು ಇಲ್ಲವೇ ಇಲ್ಲ. ವಾರಾಂಗನೆಯರ ಹಾಗೂ ವೇಶ್ಯೆಯರ ನಡೆನುಡಿ, ದೇಹಸಿರಿಯ ವರ್ಣನೆ ನೋಡಿದರೆ ದೇವದಾಸಿ ಪದ್ಧತಿ ಬಗೆಗಾಗಲೀ, ಆ ಹೆಣ್ಣುಗಳ ಕೊನೆಗಾಲದ ದುರಂತದ ಬಗೆಗಾಗಲೀ ಕವಿಗೆ ನೆನಪೇ ಇರುವಂತಿಲ್ಲ. ಯುದ್ಧ ಕುರಿತು, ವೀರ ರಸ, ಶೌರ್ಯದ ಕುರಿತು ವರ್ಣನೆಗಳಿವೆ, ಸತಿ ಹೋಗುವ ಹೆಂಗಸರ, ಆ ಕುಟುಂಬಗಳ ಬವಣೆ ಕಾಣುವುದಿಲ್ಲ. ಅವರು ಚೆನ್ನಕೇಶವನನ್ನು ಎದುರುಗೊಂಡು ತಿರುಗಾಡಿದ ಹಾಸನ, ಬೇಲೂರುಗಳ ಜನಮನದ ಬಾಯಲ್ಲಿರುವ ಮಾಸ್ತಿ ಕಥನಗೀತೆಗಳೆಂಬ ದುಃಖಾರ್ತ ಹಾಡುಗಳು ಅವರಿಗೆ ಮುಖಾಮುಖಿಯಾದವೋ ಇಲ್ಲವೋ ಗೊತ್ತಿಲ್ಲ.

ಆಯಿತು. ಕವಿತೆಯಲ್ಲಿ ಶೃಂಗಾರ-ಸೌಂದರ್ಯವಲ್ಲದೆ ಕುಂಟ-ಕುರುಡಿ-ಗೂನಿ-ಉಬ್ಬಲ್ಲು ಸುಬ್ಬಿಯರ ಸಂಕಟಗಳ ಬಗೆಗೆ ಬರೆಯಲಾದೀತೇ? ಇರಲಿ. ಅವರು ಸೃಷ್ಟಿಸಿದ ಮಹಿಳಾ ಪಾತ್ರಗಳ ಗಟ್ಟಿತನ ಯಾವುದರಲ್ಲಿದೆ?

ಚರಿತ್ರೆ ದಮಯಂತಿಯದೇ ಆಗಿದ್ದರೂ ಅದಕ್ಕೆ ನಳ ಚರಿತ್ರೆ ಎಂದು ಹೆಸರಿಡುವುದೇ ಪುರುಷ ಪರಮಾಧಿಕಾರ. ಏಕೆಂದರೆ ನಳ ಒಬ್ಬ ದುರ್ಬಲ ರಾಜ, ದುರ್ಬಲ ಗಂಡ. ಆತ ಅಶ್ವ ಹೃದಯ ಬಲ್ಲವನು. ಆದರೆ ಹೆಂಡತಿಯ ಹೃದಯ ಬಲ್ಲವನಲ್ಲ. ಅವ ಅಡಿಗೆಯ ಸೂಕ್ಷ್ಮಾತಿಸೂಕ್ಷ್ಮ ರಹಸ್ಯ ಅರಿತವನು. ಆದರೆ ಅಡಿಗೆ ಮಾಡುವ ಹೆಂಗಸರ ಒಳತೋಟಿ, ಒಳಸುಳಿಗಳ ಅರಿತವನಲ್ಲ. ನಮ್ಮ ಸಂಸ್ಕೃತಿಯಲ್ಲಿ ಹೊತ್ತುಗೊತ್ತಿಲ್ಲದೆ ಜೂಜಾಡಿ, ಸೋಲನ್ನು ವಿಧಿ-ರಾಕ್ಷಸರ ತಲೆಗೆ ಕಟ್ಟಿ, ತನ್ನದೆಲ್ಲವನ್ನು ಕಳೆದುಕೊಂಡು, ನಡುರಾತ್ರಿಯಲ್ಲಿ ಸತಿಸುತರ ಬಿಟ್ಟು ನಡೆದವರು ಮಹಾಪುರುಷರಾಗಿಬಿಟ್ಟಿದ್ದಾರೆ. ಅಂಥವರಲ್ಲಿ ನಡುರಾತ್ರಿಯಲ್ಲಿ ಹೆಂಡತಿಯನ್ನು ಕಾಡೆನ್ನದೆ, ಗುಡ್ಡಗವಿಯೆನ್ನದೆ ಬಿಟ್ಟು ನಡೆದ ಬೇಜವಾಬ್ದಾರಿಯ ನಳನೂ ಸೇರುತ್ತಾನೆ.

ದ್ಯೂತದಲ್ಲಿ ಸೋತು, ಎಲ್ಲವನ್ನು ಕಳಕೊಂಡು, ಮಕ್ಕಳನ್ನು ಅಜ್ಜನ ಮನೆಯಲ್ಲಿ ಬಿಟ್ಟು, ಹೆಂಡತಿಯೊಡನೆ ಕಾಡಿಗೆ ಬಂದ ನಳ ಉಟ್ಟ ದಟ್ಟಿ ಬಳಸಿ ಹಕ್ಕಿ ಹಿಡಿಯಲು ಹೋಗಿ ದಟ್ಟಿಯನ್ನೂ ಕಳಕೊಂಡು ನಗ್ನನಾಗುತ್ತಾನೆ. ಗಂಡನ ಮಾನ ಮುಚ್ಚಲು ದಮಯಂತಿ ಉಟ್ಟ ಸೀರೆ ಹರಿದು ಅರ್ಧ ಅವನಿಗೆ ಕೊಡುತ್ತಾಳೆ. ನಡುರಾತ್ರಿ ಅವಳ ಸೀರೆಯನುಟ್ಟ ನಳ ಅವಳನಲ್ಲೇ ಬಿಟ್ಟು ನಡೆಯುತ್ತಾನೆ. ಸರ್ಪದ ಬಳಿ ಕಚ್ಚಿಸಿಕೊಂಡು, ವಿಕೃತ ರೂಪದ ಬಾಹುಕನಾಗಿ, ಹೆಂಡತಿ ಮಕ್ಕಳ ಮರೆತು, ಸತಿಸುತರ ಜವಾಬ್ದಾರಿಯಿಲ್ಲದೆ ನಳ ಋತುಪರ್ಣ ರಾಜನ ಆಸ್ಥಾನದಲ್ಲಿ ಕುದುರೆತಜ್ಞನಾಗಿರುತ್ತಾನೆ. ಇತ್ತ ದಮಯಂತಿ ಅವನಿಗಾಗಿ ಜಗವೆಲ್ಲ ಹುಡುಕಾಡುತ್ತಾಳೆ. ಇನ್ನೇನು ಸರ್ಪದ ಬಾಯಿ ಹೊಗಲಿರುವ ಅವಳನ್ನು ಬೇಡನೊಬ್ಬ ರಕ್ಷಿಸಿ ಕಾಮಾತುರ ತೋರಿದಾಗ ಕನಕರ ದಮಯಂತಿ ಪುರಾಣದ ದಮಯಂತಿಗಿಂತ ಪ್ರಗತಿಪರ ನಡವಳಿಕೆ ತೋರುತ್ತಾಳೆ. ಅವಳು ತನ್ನ ಪಾತಿವ್ರತ್ಯ ಶಕ್ತಿಯಿಂದ ಬೇಡನನ್ನು ಸುಟ್ಟು ಹಾಕುವುದಿಲ್ಲ. ಬದಲಾಗಿ, ‘ಪ್ರಾಣ ರಕ್ಷಿಸಿದ ನೀನು ನನ್ನ ತಂದೆಗೆ ಸಮಾನ’ ಎಂದು ಬೇಡನ ಬಳಿ ವಾದಿಸಿ ಕೊನೆಗೆ ಕೋಪ ಬಂದರೆ ಶಪಿಸುವುದಾಗಿ ಧಮಕಿ ಹಾಕಿ ಪಾರಾಗುತ್ತಾಳೆ!

ಇಂಥ ಗಟ್ಟಿಗಿತ್ತಿ ಹೆಂಗಸು ಗಂಡನ ಮೈಮರೆವಿನಿಂದ, ಬೇಜವಾಬ್ದಾರಿತನದಿಂದ ಬಂದ ದುಸ್ಥಿತಿಯ ಲೋಪವನ್ನು ಮರೆಮಾಚಲು ವಿಧಿಯೆಂಬ ಅನೂಹ್ಯ ಶಕ್ತಿಯನ್ನು ನಂಬುತ್ತಾಳೆನ್ನುವಂತೆ ಚಿತ್ರಿಸಲಾಗಿದೆ. ಕರುಣಾಳು ನಳನ ತಪ್ಪಿಲ್ಲ, ಎಲ್ಲ ವಿಧಿಯಾಟ ಎಂದು ಅವಳ ಬಾಯಲ್ಲಿ ಹೇಳಿಸಲಾಗಿದೆ. ಅವಳ ಗಟ್ಟಿತನವೆಲ್ಲ ಗಂಡನನ್ನು ಹೇಗಾದರೂ ಮರಳಿ ಪಡೆಯಲು ಪ್ರಯತ್ನಿಸುವುದರಲ್ಲೇ ಖರ್ಚಾಗುತ್ತದೆ. ಒಮ್ಮೆ ಬಾಹುಕ, ‘ಪತಿಯ ತಪ್ಪೆಣಿಸುವ ಸತಿ ಪತಿವ್ರತೆಯೆ?’ ಎನ್ನುತ್ತಾನೆ. ನಮ್ಮ ಸತಿ ದಮಯಂತಿಯಾದರೋ, ಪತಿಯ ತಪ್ಪೆಣಿಸುವುದಿರಲಿ, ಉಳಿದ ಪಂಚಮಹಾಪತಿವ್ರತೆಯರು ಕಷ್ಟನಷ್ಟದಲಿ ಬೆಂದು ಒಂದಲ್ಲ ಒಮ್ಮೆ ತಂತಮ್ಮ ಪತಿರಾಯರಿಗೆ ಬಿರುನುಡಿಯನಾಡಿದ್ದರೂ ಇವಳೆಂದೂ ಒಂದೇ ಒಂದು ಅಂತಹ ಮಾತು ಆಡುವುದಿಲ್ಲ. ಸತಿಪತಿ-ಹೆಣ್ಣುಗಂಡು ಸಮಾನರೆಂದು ಕನಕರು ಚಿತ್ರಿಸಬೇಕಿರಲಿಲ್ಲ. ಕೊನೆಪಕ್ಷ ಹೆಣ್ಣಿಗೆ ಗಂಡಿನ ಹೊರತಾದ, ವ್ಯವಸ್ಥೆಯ ಚೌಕಟ್ಟಿನ ಹೊರತಾದ ಒಂದು ಸಫಲ ಬದುಕನ್ನು ಕಲ್ಪಿಸಿಕೊಳ್ಳಬಹುದಿತ್ತು, ಅದೂ ಅವರಿಗೆ ಸಾಧ್ಯವಾಗಿಲ್ಲ.

ಮೋಹನ ತರಂಗಿಣಿ ಯಲ್ಲಿ ಅನಿರುದ್ಧನ ಮೋಹಿಸಿದ ಕಥಾನಾಯಕಿ ಉಷೆಯ ಸಖಿ ಚಿತ್ರಲೇಖೆ ಎಂಬ ಒಂದು ಪಾತ್ರವಿದೆ. ವಿವಾಹದ ಚೌಕಟ್ಟನ್ನು ಉಲ್ಲಂಘಿಸಿ ಪ್ರೇಮಿಗಳನ್ನು ಒಂದುಮಾಡಿದ ಚಿತ್ರಲೇಖೆ ಸತ್ವಶೀಲ ವ್ಯಕ್ತಿತ್ವವುಳ್ಳ ಪಾತ್ರವಾಗಿ ಮಾತಿನಲ್ಲೂ ಕೃತಿಯಲ್ಲೂ ಚಿತ್ರಿಸಲ್ಪಟ್ಟಿದ್ದಾಳೆ. ಆದರೆ ಚಿತ್ರಲೇಖೆಯೂ ಸೇರಿದಂತೆ ಅಂತಃಪುರದಲ್ಲಿ ತುಂಬಿಕೊಂಡ ಸಾವಿರಾರು ದಾಸಿಯರ ದೇಹ ಕುರಿತ ವಿವರವಾದ ವರ್ಣನೆಯಿದೆಯೇ ಹೊರತು ಅವರಿಗೆಲ್ಲ ದಾಸಿತನದ ಹೊರತಾದ ಅಸ್ತಿತ್ವವೇ ಇಲ್ಲ. ಇಲ್ಲಿ ಕವಿಯ ಮಾನವೀಯ ಮತ್ತು ಸೃಜನಶೀಲ ಕಲ್ಪನೆ ವಿಸ್ತಾರಗೊಂಡಿಲ್ಲ.

ಒಟ್ಟಾರೆ ಕನಕರು ಸೃಷ್ಟಿಸಿದ್ದೆಲ್ಲ ಪ್ರಶ್ನೆಗಳೇ ಇಲ್ಲದ ಗೃಹದೇವತೆಗಳನ್ನು ಅಥವಾ ಗರತಿಯರನ್ನು. ಅದರಲ್ಲೂ ಹಿಂದುಮುಂದು ಮಾಂಸ ತುಂಬಿಕೊಂಡ ಮಾನಿನಿಯರನ್ನು. ಆದರೆ ಈ ಪಾತ್ರಗಳ ಒಳಾಂತರಂಗ ಬಗೆಯುವ ಯಾವ ಪ್ರಯತ್ನವನ್ನೂ ಅವರು ಮಾಡಿಲ್ಲ. ನಿಜಜೀವನದ ಹೆಂಡತಿಯರನ್ನು ಹತ್ತಿರದಿಂದ ನೋಡಿದರೇ ಗೊತ್ತಾಗುತ್ತದೆ: ಅವರಲ್ಲೂ ಪ್ರತಿರೋಧದ ಅಂಶವಿರುತ್ತದೆ. ಗರತಿಯೂ ಕೂಡಾ ಯಾವುದನ್ನೂ - ಪುರುಷಾಧಿಕಾರವನ್ನೂ ಸಹಾ ಒಂದು ಮಿತಿಯಾಚೆ ಹೋಗಲು ಬಿಡುವುದಿಲ್ಲ. ಅಕಸ್ಮಾತ್ ಅವಳ ತ್ಯಾಗ ವ್ಯರ್ಥವೆನಿಸಿದರೆ; ತಾನು ಆಹುತಿಗೊಳ್ಳುತ್ತಿರುವ ಭಾವ ಹುಟ್ಟಿದರೆ ತನ್ನ ಜೊತೆಗೆ ತನ್ನೊಡನಿರುವ ವ್ಯವಸ್ಥೆಯನ್ನೂ ಆಹುತಿಯಾಗಿಸುತ್ತಾಳೆ. ಹೆಣ್ಣಿನ ಈ ಒಳಸೂಕ್ಷ್ಮ ಕನಕರ ಅರಿವಿಗೆ ಬಂದಿಲ್ಲ.

ಮಹಿಳೆಯ ಅಥವಾ ಯಾವುದೇ ಶೋಷಿತ ವರ್ಗದ ಶಕ್ತಿ ಎಂದರೆ ಸ್ಥಾಪಿತ ಯಾಜಮಾನ್ಯದ ವಿರುದ್ಧ ಪ್ರತಿರೋಧವೇ ಆಗಬೇಕೆಂದಿಲ್ಲ. ಪ್ರತಿರೋಧಕ್ಕಿರುವಷ್ಟೇ ಶಕ್ತಿ ಸ್ವಾಯತ್ತತೆಯ ಬದುಕಿನಲ್ಲೂ ಇದೆ. ರೂಢಿ ವಿರೋಧಿ ಜೀವನ ಕ್ರಮ ಮತ್ತು ಉಲ್ಲಂಘನೆ - ಇವೂ ಪ್ರತಿರೋಧಗಳೇ. ಜನಪದ ರಾಮಾಯಣದ ಸೀತೆ ಪಟ್ಟವೇರಿದ ರಾಮ ಕಂಡವರ ಮಾತು ಕೇಳಿ ಬೆಂಕಿ ಹಾಯ್ದ ತನ್ನನ್ನು ಅನುಮಾನಿಸಿದಾಗ ರಾಜ್ಯ ಬಿಟ್ಟು ಹೋಗುತ್ತಾಳೆ. ರಾಮನ ಬಿಟ್ಟು ಕಾಡಿಗೆ ಹೋಗುತ್ತಾಳೆ. ಅವಳಿ ಮಕ್ಕಳ ಹೊತ್ತುಹೆತ್ತುಬೆಳೆಸಿ, ರಾಮನಿಲ್ಲದ ಒಂದು ಸ್ವಾಯತ್ತ ಬದುಕನ್ನು ಸಾಧ್ಯವಾಗಿಸಿಕೊಳ್ಳುತ್ತಾಳೆ. ಇನ್ನೊಂದು ಜನಪದ ರಾಮಾಯಣದಲ್ಲಿ ಶೂರ್ಪನಖಿ ಮೊಲೆಮೂಗುಗಳ ಕಳಕೊಂಡರೂ ಸುಂದರ ಉದ್ಯಾನವನ ನಿರ್ಮಿಸಿ, ವನಪಾಲಕಿಯಾಗಿ ಏಕಾಂಗಿಯಾಗಿ, ಸ್ವಾಯತ್ತವಾಗಿ ಬದುಕಿದಳು. ಅದನ್ನು ನೋಡಿಬಂದು ನಿಬ್ಬೆರಗಾದ ಲವಕುಶರು ತಮ್ಮಮ್ಮನ ಬಳಿ ಮೊಲೆಮೂಗುಗಳಿರದ ವಿಕಾರರೂಪದ ರಕ್ಕಸಿಯೊಬ್ಬಳ ಅತಿಸುಂದರ ಉದ್ಯಾನ ತಾವು ನೋಡಿದೆವೆಂದು ಬಣ್ಣಿಸುತ್ತಾರೆ. ಹೀಗೆ ಜನಪದದ ಸೀತೆ/ಶೂರ್ಪನಖಿಯರಿಗಿರುವ ಸ್ವಾಯತ್ತ ಬದುಕಿನ ಯಾವ ಅವಕಾಶವೂ ಕನಕರ ದಮಯಂತಿಗಳಿಗೆ ಸಿಗುವುದಿಲ್ಲ. ಬಹುಶಃ ಮಹಾಕಾವ್ಯ ಬರೆದವರೆಲ್ಲ ಪುರುಷರೇ ಆದ ಕಾರಣ ಅವರಿಗೆ ಪತಿವ್ರತೆಯರನ್ನು ಸೃಷ್ಟಿಸಲು ಸಾಧ್ಯವಾಯಿತೇ ಹೊರತು ಬಂಡಾಯದ ಹೆಣ್ಣನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ.

ಹಾಗೆ ನೋಡಿದರೆ ನಿಜಜೀವನದಲ್ಲಿ ಭಾರತೀಯ ಸಮಾಜದ ತಳಸಮುದಾಯದ ಹೆಣ್ಣುಗಳು ಹೆಚ್ಚು ಸ್ವಾಯತ್ತ ಬದುಕು ಸಾಗಿಸಿದ್ದಾರೆ, ಅದನ್ನು ಸಾಧ್ಯಮಾಡಿಕೊಂಡಿದ್ದಾರೆ. ಅದನ್ನು ತಳಸಮುದಾಯದ ಕವಿ ಕನಕ ಗ್ರಹಿಸಿರಬೇಕಿತ್ತು. ಕೊನೆಪಕ್ಷ ತಮ್ಮ ರಾಮಧಾನ್ಯ ಚರಿತೆಯಲ್ಲಿ ಧಾನ್ಯಗಳನ್ನು ಪುರುಷರ ಬದಲಾಗಿ ಸ್ತ್ರೀಯರಂತೆ ಸೃಷ್ಟಿಸಿದ್ದರೆ; ಬಿಳ್ಮೊಲೆಯ ವರ್ಸಸ್ ಕನ್ನೈದಿಲೆಯಂಥ ಕರಿಮೊಲೆಯ ಅಬಲೆಯರನ್ನು ಭತ್ತ-ರಾಗಿಗಳಂತೆ ಚಿತ್ರಿಸಿದ್ದರೆ ಆ ಕಾವ್ಯ ಬೇರೆಯದೇ ನೆಲೆಗೆ ಹೋಗಿ ಮುಟ್ಟುತ್ತಿತ್ತು. ಆದರೆ ಜಾತಿಪ್ರಶ್ನೆಯೊಂದನ್ನು ಹೊರತುಪಡಿಸಿ ಮಿಕ್ಕಂತೆ ವೈದಿಕ ಮತ್ತು ಸನಾತನ ಮೌಲ್ಯಗಳಿಗೇ ಕಟ್ಟುಬಿದ್ದ ಕನಕರು ಹೆಣ್ಣಿನ ವಿಷಯದಲ್ಲಿ ಜನಪದದ ಸ್ಮೃತಿ, ವಿವೇಚನೆಗಳನ್ನು ಕಡಿಮೆ ಬಳಸಿದ್ದಾರೆ. ಹೀಗೆ ಕನಕರ ಹೆಣ್ಣು ಪಾತ್ರಗಳು ದಾಸಿ, ಸಖಿ, ಪತಿವ್ರತೆಯ ಚೌಕಟ್ಟಿನಾಚೆ ಬೆಳೆಯದೇ ಪಾರಂಪರಿಕ ಮೌಲ್ಯಗಳನ್ನು ಗಟ್ಟಿಗೊಳಿಸುವುದರಲ್ಲೇ ಮಗ್ನವಾಗಿಬಿಡುತ್ತವೆ.


ಕನಕರೇ, ನೀವು ಸಖಿಗೀತ ಬರೆದಿರಿ. ಅವಳ ಪರವಾಗಿ ಹಾಡಿದಿರಿ, ಆಡಿದಿರಿ. ಆದರೆ ಸಖಿ ಮೌನವಾಗುಳಿದದ್ದನ್ನು ಗುರುತಿಸದೆ ಹೋದಿರಿ. ಎಂದೇ ಅವಳು ಒಳಮನಸು ತೆರೆಯದೆ ಮೊಲೆಜಘನಗಳ ತೋರಿಸುತ್ತ ಸುಮ್ಮನಿದ್ದುಬಿಟ್ಟಳು.

ಕ್ಷಮಿಸಿ, ಸಖಿಸತಿಯರಿಗೀಗ ಎದೆಬಿಚ್ಚಿ ಆಡಲೇಬೇಕಾದ ಕಾಲ ಬಂದಿದೆ..








Monday, 8 June 2015

ನಿಜಾರ್ ಖಬ್ಬಾನಿ ಕವಿತೆ




ನಮ್ಮ ನೆಲ ಸೀಳುವ, 
ನಮ್ಮ ಇತಿಹಾಸ ಒರೆಸಿಹಾಕುವ
ಇಸ್ರೇಲಿನ ಬುಲ್ಡೋಜರುಗಳಿಗೆ ತಲೆಕೊಟ್ಟು 
ಸಾಯಲು ನಿರಾಕರಿಸಿದೆವಾದರೆ
ಭಯೋತ್ಪಾದನೆಯ ಗುನ್ನೆ ನಮ್ಮ ತಲೆಗೆ ಕಟ್ಟಲಾಗುತ್ತದೆ..

ಈ ಬುವಿಯ ಮೇಲಿಂದ
ಉಜ್ಜಿ ಒರೆಸಿ ಅಳಿಸಿ ನಾಶಮಾಡಿಕೊಳಲು  
ನಾವು ನಿರಾಕರಿಸಿದರೆ
ಭಯೋತ್ಪಾದನೆಯ ಅಪರಾಧ ನಮ್ಮದಾಗುತ್ತದೆ..

ಸೀಸರನ ಸೀಸರನು 
ತನ್ನ ಬೇಳೆ ಬೇಯಿಸಿಕೊಳಲು
ಭದ್ರತಾ ಮಂಡಳಿಯೆಂಬ ಗಾಜಿನ ಮನೆಯ 
ವಶಮಾಡಿಕೊಂಡಿರುವಾಗ 
ಕಲ್ಲೊಗೆದ ನಮಗೆ
ಭಯೋತ್ಪಾದನೆಯ ಪಟ್ಟ ದೊರೆಯುತ್ತದೆ..

ತೋಳದೊಡನೆ ಒಪ್ಪಂದ ನಿರಾಕರಿಸಿದರೆ
ಭಯೋತ್ಪಾದನೆಯ ಗುನ್ನೆ ತಲೆಗೇರುತ್ತದೆ..

ನಮ್ಮ ನೆಲ, ಅದರ ಧೂಳಿನ ಮಾನ
ನಾವು ಕಾದುಕೊಂಡರೆ;
ನಮ್ಮವರ ಅತ್ಯಾಚಾರ 
ನಮ್ಮದೇ ಅತ್ಯಾಚಾರವ 
ದಿಟ್ಟವಾಗಿ ವಿರೋಧಿಸಿದರೆ;
ನಮ್ಮ ಆಗಸದ ಕೊನೆಯ ತಾರೆಗಳ
ಮುಚ್ಚಿಟ್ಟು, ಕಾಪಿಟ್ಟುಕೊಂಡರೆ;
ಭಯೋತ್ಪಾದನೆಯ ಕಿರೀಟ ತೊಡಿಸಲಾಗುತ್ತದೆ

ಇದು, ಇವು, ಈ ಭಯೋತ್ಪಾದನೆ
ಪಾಪವೇ ಆದಲ್ಲಿ
ಭಯೋತ್ಪಾದನೆ ಎಷ್ಟು ಸುಂದರ!
ನಾನು ಭಯೋತ್ಪಾದನೆಯ ಪರ.
ಎಲ್ಲಿಯವರೆಗೆ ಹೊಸ ಜಗತ್ತು
ನನ್ನ ಸಂತತಿಯ ಕೊಚ್ಚಿ ಕಡಿದು
ನಾಯಿಪಾಲು ಮಾಡುವುದೋ,
ನಾನು ದನಿಯೆತ್ತಿ ಹೇಳುವವನಿದ್ದೇನೆ ಅಲ್ಲಿಯತನಕ 
ನಾನು ಭಯೋತ್ಪಾದನೆಯ ಪರ..

-

Thursday, 28 May 2015

‘ಹೂಗಳನ್ನು ಕಿತ್ತು ಹಾಕಬಹುದು, ಹೂವರಳಿಸಲಿರುವ ವಸಂತವನ್ನಲ್ಲ..’





‘ನೀನು ಹೇಳುವುದನ್ನು ನಾನು ಒಪ್ಪದಿರಬಹುದು, ಆದರೆ ಪ್ರಾಣ ಕೊಟ್ಟಾದರೂ ಸರಿ, ಹೇಳುವ ನಿನ್ನ ಹಕ್ಕನ್ನು ರಕ್ಷಿಸುತ್ತೇನೆ’ ಎಂದು ವಾಲ್ಟೇರ್ ಹೇಳಿದ ಕಾಲ ಸರಿದುಹೋಗಿದೆ. ಈಗ ಭಿನ್ನಮತ ಎತ್ತಿದವರ ಸದ್ದಡಗಿಸುವ, ಅಂಥವರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುವ ಘಟನೆಗಳು ಸಂಭವಿಸುತ್ತಿವೆ. ಮೂಢನಂಬಿಕೆಯ ವಿರುದ್ಧ, ಜನರ ದೌರ್ಬಲ್ಯಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರ ವಿರುದ್ಧ, ಎಲ್ಲ ರೀತಿಯ ಮೂಲಭೂತವಾದದ ವಿರುದ್ಧ ನಿರ್ಭಯವಾಗಿ ಮಾತನಾಡುತ್ತಿದ್ದ ಹಿರಿಯರ ಮೌನವಾಗಿಸಲು ಸರಣಿ ಹತ್ಯೆಗಳಾಗಿವೆ. ಪುಣೆಯ ನರೇಂದ್ರ ಧಾಬೋಲ್ಕರ್, ಆರ್‌ಟಿಐ ಆಕ್ಟಿವಿಸ್ಟ್ ಸತೀಶ್ ಶೆಟ್ಟಿಯವರ ಹತ್ಯೆಯ ಬೆನ್ನಿಗೇ ಕೊಲ್ಲಾಪುರದ ಕಾಮ್ರೇಡ್ ಗೋವಿಂದ ಪನ್ಸಾರೆ ಗುಂಡಿಗೆ ಬಲಿಯಾಗಿರುವುದು ಅಸಹನೆಯ ಕಾಲಮಾನಕ್ಕೆ ಸಾಕ್ಷಿಯಾಗಿದೆ.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇದೇ ಫೆಬ್ರುವರಿ ೧೬ರ ಬೆಳಿಗ್ಗೆ ೮.೩೦ರ ವೇಳೆಗೆ ವಾಕ್ ಮುಗಿಸಿ ಇನ್ನೇನು ಪತ್ನಿ ಉಮಾ ಅವರೊಡನೆ ಮನೆಯೊಳಗೆ ಹೋಗಲಿದ್ದ ೮೨ರ ಇಳಿವಯಸ್ಸಿನ ಗೋವಿಂದ ಪನ್ಸಾರೆ ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಲಾಯಿತು. ಎದೆ, ಕುತ್ತಿಗೆ, ಮೀನಖಂಡ ಹಾಗೂ ತಲೆಯನ್ನು ಗುಂಡುಗಳು ಪ್ರವೇಶಿಸಿದವು. ಆಘಾತಗೊಂಡ ನೆರೆಹೊರೆಯವರು ಕೂಡಲೇ ಆಸ್ಪತ್ರೆಗೆ ಒಯ್ದು ಶಸ್ತ್ರಚಿಕಿತ್ಸೆ ಮಾಡಿದರೂ ಕುತ್ತಿಗೆಯ ಗಾಯದ ರಕ್ತಸ್ರಾವ ನಿಲ್ಲದೇ ಹೋಯಿತು. ಕೊನೆಗೆ ಕೊಲ್ಲಾಪುರದಿಂದ ಮುಂಬೈನ ಬ್ರೀಚ್‌ಕ್ಯಾಂಡಿ ಆಸ್ಪತ್ರೆಗೆ ಒಯ್ಯಲಾಯಿತು. ಆದರೂ ಪರಿಸ್ಥಿತಿ ಸುಧಾರಿಸದೆ ಫೆ. ೨೦ರಂದು ಪನ್ಸಾರೆ ಕೊನೆಯುಸಿರೆಳೆದರು.


ಕೇವಲ ಒಂದೂವರೆ ವರ್ಷ ಕೆಳಗೆ ಪನ್ಸಾರೆಯವರ ಆಪ್ತ ಸ್ನೇಹಿತ ನರೇಂದ್ರ ಧಾಬೋಲ್ಕರರನ್ನು ಪುಣೆಯ ಹೊರಭಾಗದ ಅವರ ಮನೆಯ ಬಳಿ ಹೀಗೇ ಹತ್ಯೆ ಮಾಡಲಾಗಿತ್ತು. ಇದುವರೆಗೂ ಧಾಬೋಲ್ಕರ್ ಹಂತಕರನ್ನು ಹಿಡಿಯುವುದು ಒತ್ತಟ್ಟಿಗಿರಲಿ, ಪತ್ತೆ ಮಾಡಲೂ ಸಾಧ್ಯವಾಗಿಲ್ಲ. ವಿಪರ್ಯಾಸವೆಂದರೆ ವ್ಯವಸ್ಥೆಯ ವೈಫಲ್ಯವನ್ನು ಟೀಕಿಸಿದ್ದ ಪನ್ಸಾರೆಯವರೂ ಅದೇ ರೀತಿ ಹತ್ಯೆಯಾಗಿದ್ದಾರೆ. ಅವರ ಹಂತಕರ ಪತ್ತೆಗಾಗಿ ಕೂಡಲೇ ೧೦ ತನಿಖಾ ತಂಡಗಳನ್ನು ರಚಿಸಲಾಯಿತು. ಐವರನ್ನು ಸಂಶಯದ ಮೇಲೆ ಬಂಧಿಸಲಾಯಿತು. ಇಷ್ಟೆಲ್ಲ ಆದರೂ, ಹಂತಕರು ಕರ್ನಾಟಕಕ್ಕೆ ಪರಾರಿಯಾದರು ಎಂದು ನಂಬಲಾಗಿದ್ದರೂ, ಹತ್ಯೆ ಕುರಿತು ಯಾವುದೇ ಸುಳಿವು ಸಿಗದ ಕಾರಣ ವಿದೇಶೀ ತಜ್ಞರ ಸಹಾಯ ಪಡೆಯಲು ಸರ್ಕಾರ ನಿರ್ಧರಿಸಿದೆ.

ಅಂಗೈಯೊಳಗೇ ಬಚ್ಚಿಟ್ಟುಕೊಂಡಿರುವ ಹಂತಕರನ್ನು ಪತ್ತೆಹಚ್ಚಲು ಯಾವ ವಿದೇಶಿ ತನಿಖಾ ಏಜೆನ್ಸಿಯೂ ಬೇಡ. ಅದು ಬೇರೆ ಮಾತು. ಆದರೆ ಪನ್ಸಾರೆಯವರ ಹತ್ಯೆ ಮತ್ತದರ ಕಾರಣಗಳ ಕುರಿತು ನೆರೆಯ ಕರ್ನಾಟಕವೂ ಸೇರಿದಂತೆ ಎಲ್ಲಿಯೂ ಸಾರ್ವಜನಿಕ ಪ್ರತಿಭಟನೆ, ಚರ್ಚೆಗಳು ಹೆಚ್ಚು ನಡೆಯದೇ ಇರುವುದು ಆತಂಕದ ವಿಷಯವಾಗಿದೆ. ಭಾಷೆಗಾಗಿ, ನದಿ ನೀರಿಗಾಗಿ, ಗಡಿಗಾಗಿ, ಒಂದು ಸವಲತ್ತಿಗಾಗಿ ತಮ್ಮ ಮಿತ್ರತ್ವ-ಶತ್ರುತ್ವವನ್ನು ನವೀಕರಣಗೊಳಿಸಿ ಬಡಿದಾಡುವ ‘ಓರಾಟ’ಗಾರ ಸಂಘಟನೆಗಳು; ಸಾವಿನ ದಾರುಣತೆಯನ್ನೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸುವ ರಾಜಕಾರಣಿಗಳು ಇಂಥ ಅನ್ಯಾಯದ ಕೊಲೆಗಳ ಬಗೆಗೆ ಏಕೆ ದನಿಯೆತ್ತುವುದಿಲ್ಲ ಎಂದು ಜನ ಯೋಚಿಸಬೇಕಾಗಿದೆ.

ಒಂದು ವಿಷಯ ಸ್ಪಷ್ಟ: ಈ ಹತ್ಯೆಗಳ ಹಿಂದೆ ‘ಪ್ರಶ್ನೆ ಕೇಳಬೇಡಿ, ಸುಮ್ಮನಿರಿ’ ಎಂಬ ಸಂದೇಶ ಇದೆ. ಇಂಥ ಸಂದೇಶ ಯಾರಿಂದ ಬಂದಿದೆ? ಆದರೆ ಯಾಕೆ ಸುಮ್ಮನಿರಬಾರದು ಎಂದು ಎಲ್ಲರಿಗೂ ತಿಳಿಸಲೇಬೇಕಾಗಿದೆ. ಎಂದೇ ಸೌಹಾರ್ದದ ನಾಳೆಗಳ ಕನಸಿರುವವರು ಪನ್ಸಾರೆಯವರ ಬದುಕಿನ ಪಯಣ ಕುರಿತು ತಿಳಿಯುವುದು ಹೆಚ್ಚು ಪ್ರಸ್ತುತವಾಗಿದೆ.

***

ಸಾಮಾಜಿಕ ಕಾರ್ಯಕರ್ತ, ಮಾರ್ಕ್ಸ್‌ವಾದಿ ಹೋರಾಟಗಾರ, ಟ್ರೇಡ್ ಯೂನಿಯನ್ ಲಾಯರ್, ಬರಹಗಾರ ಗೋವಿಂದ ಪನ್ಸಾರೆ ೧೯೩೩ರಲ್ಲಿ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಕೊಲ್ಹಾರದ ಹಳ್ಳಿಯೊಂದರಲ್ಲಿ ಹುಟ್ಟಿದರು. ಅವರ ಹಿರೀಕರ  ಜಮೀನು ಲೇವಾದೇವಿಗಾರರ ಪಾಲಾದ ಕಾರಣ ಭೂಹೀನ ಕುಟುಂಬ ಬಡತನಕ್ಕೆ ತಳ್ಳಲ್ಪಟ್ಟಿತು. ಅವರ ತಾಯ್ತಂದೆಯರು ಸಣ್ಣಪುಟ್ಟ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಓದಿನಲ್ಲಿ ಮುಂದಿದ್ದ ಪನ್ಸಾರೆ ಕೊಲ್ಹಾರ, ಅಹ್ಮದ್ ನಗರ ಹಾಗೂ ನಂತರ ಕೊಲ್ಲಾಪುರದಲ್ಲಿ ಶಿಕ್ಷಣ ಮುಂದುವರೆಸಿದರು. ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಬಿಎ, ಎಎಲ್‌ಬಿ ಓದಿದರು. ತಮ್ಮ ಖರ್ಚನ್ನು ತಾವೇ ನಿಭಾಯಿಸಲು ಓದುತ್ತಿರುವಾಗಲೇ ವೃತ್ತಪತ್ರಿಕೆ ಮಾರಾಟ, ಮುನ್ಸಿಪಾಲ್ಟಿ ಪ್ಯೂನ್ ಕೆಲಸ, ಪ್ರಾಥಮಿಕ ಶಾಲೆಯಲ್ಲಿ ಪಾಠ, ೧೦ ವರ್ಷ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಬೋಧನೆ - ಎಲ್ಲವನ್ನೂ ಮಾಡಿದರು. ಕಾನೂನು ಪದವಿ ಪಡೆದ ನಂತರ ೧೯೬೪ರಿಂದ ವಕೀಲಿ ವೃತ್ತಿ ಆರಂಭಿಸಿದರು. ಹಲವು ವರ್ಷ ಕೊಲ್ಲಾಪುರ ಬಾರ್ ಅಸೋಸಿಯೇಷನ್ನಿನ ಅಧ್ಯಕ್ಷರಾಗಿದ್ದರು.

ಶಾಲಾ ದಿನಗಳಲ್ಲೇ ಕಮ್ಯುನಿಸ್ಟ್ ವಿಚಾರಧಾರೆಗೆ ತೆರೆದುಕೊಂಡಿದ್ದ ಅವರು ಸಿಪಿಐ ನಾಯಕ ಪಿ. ಬಿ. ಪಾಟೀಲರ ಪರವಾಗಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ೧೯೫೨ರಲ್ಲಿ ಪಕ್ಷ ಸೇರಿ ೧೦ ವರ್ಷ ಕಾಲ ಸಿಪಿಐನ ರಾಜ್ಯ ಕಾರ್ಯದರ್ಶಿಯಾಗಿದ್ದರು. ೧೯೬೨ರಲ್ಲಿ ಚೀನಾ ಯುದ್ಧದ ಸಂದರ್ಭದಲ್ಲಿ ಕಮ್ಯುನಿಸ್ಟರು ಚೀನಾ ಪರ ಸಹಾನುಭೂತಿಯುಳ್ಳವರೆಂದು ಬಂಧನಕ್ಕೊಳಗಾದಾಗ ಪನ್ಸಾರೆ ಕೂಡಾ ಜೈಲಿನಲ್ಲಿದ್ದರು. ಅಸಂಘಟಿತ ವಲಯದ ಕಾರ್ಮಿಕರ ಹತ್ತು ಹಲವು ಚಳುವಳಿಯಲ್ಲಿ ಭಾಗವಹಿಸಿದ್ದರು. ಕೃಷಿ ಕಾರ್ಮಿಕರು, ಮನೆಗೆಲಸದವರು, ಹಾಲು ತಯಾರಕರು, ಆಟೋರಿಕ್ಷಾ ಸಂಘದವರು, ಬೀದಿಬದಿ ವ್ಯಾಪಾರಿಗಳು, ಸ್ಲಂವಾಸಿಗಳ ಸಂಘಟನೆ - ಹೀಗೇ ಸಾಮಾನ್ಯ ಜನರ ಹಾಗೂ ಶೋಷಿತರ ಹೋರಾಟಗಳಲ್ಲಿ ಪನ್ಸಾರೆ ಸದಾ ಜೊತೆಯಿದ್ದರು.


೧೯೮೪ರಲ್ಲಿ ಪನ್ಸಾರೆ ‘ಶಿವಾಜಿ ಕೋಣ್ ಹೋತಾ?’ (ಶಿವಾಜಿ ಯಾರು?) ಎಂಬ ತಮ್ಮ ಮೊದಲ ಪುಸ್ತಕ ಬರೆದರು. ಮರಾಠಾ ಅಭಿಮಾನವನ್ನು ಬಡಿದೆಬ್ಬಿಸಲು ಸಾಂಸ್ಕೃತಿಕ ರಾಷ್ಟ್ರೀಯವಾದಿಗಳು ಹಾಗೂ ಬಲಪಂಥೀಯ ರಾಜಕಾರಣವು ಶಿವಾಜಿಯ ಚರಿತ್ರೆಯನ್ನು ತಿರುಚಿ ಆತ ಉಗ್ರ ಹಿಂದುತ್ವವಾದಿ ರಾಜನೆಂಬ ಹುಸಿ ಪ್ರಭಾವಳಿ ಕಟ್ಟಿದ್ದಾರೆನ್ನುವುದು ಪನ್ಸಾರೆ ಅಭಿಮತ. ಶಿವಾಜಿ ಎಂಬ ಮರಾಠಾ ರಾಜ ಮುಸ್ಲಿಂ ವಿರೋಧಿಯಾಗಿರಲಿಲ್ಲ; ರಕ್ತದಾಹದ ವೀರನಾಗಿರಲಿಲ್ಲ. ಗೋವು-ಬ್ರಾಹ್ಮಣರ ಮಹಾರಕ್ಷಕನಾದ ಹಿಂದೂ ಕ್ಷತ್ರಿಯ ರಾಜನಾಗಿರಲಿಲ್ಲ. ಬದಲಾಗಿ ಬಡಜನರ ಪರವಾಗಿದ್ದ, ಸಮಾಜ ಸುಧಾರಣೆ ತರಬಯಸಿದ, ರೈತ-ಮಹಿಳೆ-ಶೂದ್ರಾತಿಶೂದ್ರರ ಪರವಾಗಿದ್ದ ಗುಡ್ಡಗಾಡು ಅರಸನಾಗಿದ್ದ. ಶಾಂತಿ, ಸೌಹಾರ್ದದಿಂದ ತನ್ನ ರಾಜ್ಯದ ಜನತೆ ಬಾಳಬೇಕೆಂದು ಬಯಸಿದ್ದ. ಈ ವಿಷಯಗಳನ್ನು ಐತಿಹಾಸಿಕ ಸಾಕ್ಷ್ಯಗಳೊಂದಿಗೆ ಪ್ರತಿಪಾದಿಸಿದ ಅವರ ಪುಸ್ತಕ ಶಿವಾಜಿ ಸುತ್ತ ಕಟ್ಟಲಾದ ತಪ್ಪುಮಾಹಿತಿಯ ಹುತ್ತವನ್ನು ಕಿತ್ತೊಗೆದು ಅವನನ್ನೊಬ್ಬ ಜನಸ್ನೇಹಿ, ಸುಧಾರಣಾವಾದಿ ರಾಜ ಎಂದು ವಿವರಿಸಿ ಹೇಳಿತ್ತು. ಈ ಪುಸ್ತಕ ಪನ್ಸಾರೆಯವರಿಗೆ ಅಭಿಮಾನಿಗಳನ್ನೂ, ಅಸಂಖ್ಯ ವಿರೋಧಿಗಳನ್ನೂ ಸೃಷ್ಟಿಸಿತು.

೮೦ ಪುಟಗಳ ೩೦ ರೂಪಾಯಿಯ ಈ ಪುಸ್ತಕ ಅತ್ಯಂತ ಜನಪ್ರಿಯವಾಗಿದೆ. ಈಗಲೂ ಅದರ ಪ್ರಕಾಶಕರಾದ ಲೋಕ ವಾಙ್ಮಯ ಗೃಹ ಪ್ರಕಾಶನವು ನಾಲ್ಕೈದು ತಿಂಗಳಿಗೊಮ್ಮೆ ಆ ಪುಸ್ತಕದ ೩೦೦೦ ಪ್ರತಿ ಮುದ್ರಿಸುತ್ತದೆ. ಇದುವರೆಗೆ ೩೭ ಮುದ್ರಣಗಳನ್ನು ಕಂಡು ಒಂದೂವರೆ ಲಕ್ಷ ಪ್ರತಿ ಮಾರಾಟವಾಗಿದೆ. ಅವರು ಹತ್ಯೆಯಾದ ಮರುದಿನ ಒಂದೇ ದಿನದಲ್ಲಿ ಅದರ ೩೦೦೦ ಪ್ರತಿ ಮಾರಾಟವಾಗಿವೆ. ಕನ್ನಡ, ಉರ್ದು, ಗುಜರಾತಿ, ಹಿಂದಿ, ಇಂಗ್ಲಿಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ಅದರ ನಂತರ ಹಲವು ಪುಸ್ತಕಗಳನ್ನು ಅವರು ಬರೆದರು. ಮೀಸಲಾತಿ, ಮಾರ್ಕ್ಸ್‌ವಾದ, ಮುಸ್ಲಿಮರ ಸಮಸ್ಯೆಗಳು, ಆರ್ಟಿಕಲ್ ೩೭೦, ರಾಜರ್ಷಿ ಶಾಹೂ, ಕಾರ್ಮಿಕ ಕಾನೂನು, ಕಾರ್ಮಿಕ ನೀತಿಗಳು, ಜಾಗತೀಕರಣದ ಪ್ರಭಾವ, ಕೃಷಿಯ ಸಮಸ್ಯೆಗಳು - ಹೀಗೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿಗಳನ್ನು ರಚಿಸಿದರು. ಬಹುತೇಕ ಪುಸ್ತಕಗಳು ಮರು ಮುದ್ರಣ ಕಂಡಿವೆ.

೧೯೯೨ರಲ್ಲಿ ಬಾಬ್ರಿ ಮಸೀದಿ ಕೆಡವಲ್ಪಟ್ಟಾಗ ‘ಅಮ್ಹಿ ಭಾರತೀಯ’ ಎಂಬ ಅಭಿಯಾನ ಶುರುಮಾಡಿ ಕೋಮು ಸೌಹಾರ್ದಕ್ಕಾಗಿ ಶ್ರಮಿಸಿದರು. ನರೇಂದ್ರ ಧಾಬೋಲ್ಕರ್ ಮತ್ತು ಸಮಾನ ಮನಸ್ಕ ಗೆಳೆಯರ ‘ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ಯ ನಡೆಗಳನ್ನು ಬೆಂಬಲಿಸಿದ್ದರು. ಕೊಲ್ಲಾಪುರ ಗ್ರಂಥಾಲಯದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ನರೇಂದ್ರ ಧಾಬೋಲ್ಕರ್ ಮಾತನಾಡದಂತೆ ನಿರ್ಬಂಧ ಉಂಟಾದಾಗ ಕಾರ್ಮಿಕರಿಂದ ಹಣ ಸಂಗ್ರಹಿಸಿ ಶ್ರಮಿಕ ಪ್ರತಿಷ್ಠಾನದ ವತಿಯಿಂದ ಧಾಬೋಲ್ಕರರ ಸರಣಿ ಉಪನ್ಯಾಸ ಏರ್ಪಡಿಸಿದರು. ‘ವಿವೇಕ ಜಾಗೃತಿ’ ಎಂಬ ಮೂಢನಂಬಿಕೆ ವಿರೋಧಿ ಅಭಿಯಾನ ಶುರುಮಾಡಿದರು. ಫುಲೆ, ಶಾಹು, ಅಂಬೇಡ್ಕರರ ವಿಚಾರ ಕುರಿತು ೧೦೦ ಕಾಲೇಜುಗಳಲ್ಲಿ ಭಾಷಣ ಮಾಡಿದರು. ಪ್ರತಿವರ್ಷ ಕಾಮ್ರೇಡ್ ಅಣ್ಣಾಭಾವು ಸಾಠೆ ಸಾಹಿತ್ಯ ಸಮ್ಮೇಳನ ಸಂಘಟಿಸುತ್ತಿದ್ದರು. ಅವರಿಗೆ ೭೫ ವರ್ಷವಾಯಿತೆಂದು ಸನ್ಮಾನ ಏರ್ಪಡಿಸಿದಾಗ ಅದನ್ನು ಸುತರಾಂ ನಿರಾಕರಿಸಿದರು. ಅದರಬದಲು ಜನಪರ ಹೋರಾಟದಲ್ಲಿ ತೊಡಗಿಕೊಂಡ ೭೦ ಜನರ ಜೀವನಚರಿತ್ರೆ ಪ್ರಕಟಿಸಬೇಕೆಂದು ಸೂಚಿಸಿದರು. ತಮಿಳಿನ ಮುರುಗನ್ ಅವರು ‘ಸುಮ್ಮನಾದಾಗ’, ಸುಮ್ಮನಾಗಿಸುವ ಸಾಂಸ್ಕೃತಿಕ ರಾಜಕಾರಣ ಕುರಿತು ವಿಸ್ತೃತವಾಗಿ ಮಾತನಾಡಿದ್ದರು.

ತೀರಾ ಇತ್ತೀಚೆಗೆ ತಾವು ಕೆಲಸ ಮಾಡಿದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡುತ್ತ ಶಿವಾಜಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದರ ವಿರುದ್ಧ ದನಿಯೆತ್ತಿದ್ದರು. ‘ತಮ್ಮ ಮುಸ್ಲಿಂ ದ್ವೇಷ ಕಾರಿಕೊಳ್ಳಲು ಶಿವಾಜಿಯನ್ನು ಉಪಕರಣವಾಗಿ ಯಾರೂ ಬಳಸದಿರಲಿ. ಶಿವಭಕ್ತರು ಸೃಷ್ಟಿ ಮಾಡಿದ ಶಿವಾಜಿ ಇಮೇಜ್ ಅನ್ನು ಮುಸ್ಲಿಮರು ನಂಬದಿರಲಿ. ಅವರು ತಮ್ಮ ಇತಿಹಾಸ ತಾವೇ ವಿಶ್ಲೇಷಿಸಿ ಅರಿಯುವಂತಾಗಲಿ’ ಎಂದು ಹೇಳಿದ್ದೇ ಅಲ್ಲದೆ ಗಾಂಧಿಯನ್ನು ಕೊಂದ ಹಂತಕರ ಹೆಸರಿನಲ್ಲಿ ದೇವಾಲಯ ಕಟ್ಟಹೊರಟವರನ್ನು ಕಟುಮಾತುಗಳಲ್ಲಿ ಖಂಡಿಸಿದ್ದರು. ಆಗ ಅಲ್ಲಿನ ವಿದ್ಯಾರ್ಥಿ ನಾಯಕನೊಬ್ಬ ಕೆರಳಿ ಗದ್ದಲ ಎಬ್ಬಿಸಿದ್ದ. ಕೋರ್ಟಿನಲ್ಲಿ ಅವರನ್ನು ಎದುರಿಸುವುದಾಗಿಯೂ, ಗೋಡ್ಸೆ ಮಹಾನ್ ದೇಶಭಕ್ತ ಎಂದು ತಾನು ಸಾಧಿಸಿ ತೋರಿಸುವುದಾಗಿಯೂ ಸವಾಲು ಹಾಕಿದ. ‘ದಯವಿಟ್ಟು ಹಾಗೆ ಮಾಡಪ್ಪ, ಕೋರ್ಟಿಗೆ ಹೋದಾಗಲಾದರೂ ನಿಜವಾದ ವಿಷಯ ಏನೆಂದು ಪ್ರಚಾರವಾಗಲಿ’ ಎಂದು ತಣ್ಣಗೆ ಅವನಿಗೆ ಉತ್ತರಿಸಿ, ಮಾತು ಮುಗಿಸಿ ಬಂದಿದ್ದರು.

ಹೀಗೆ ಎಂಟು ದಶಕ ಬಾಳಿ, ಜಾತಿ/ಧರ್ಮ/ಭಾಷೆಗಳ ಹೆಸರಿನಲ್ಲಿ ಅಸಹನೆಯ ಅಂಧಾಭಿಮಾನ ಹುಟ್ಟಿಸುವವರನ್ನು ಶತಾಯಗತಾಯ ವಿರೋಧಿಸಿ, ಜೀವನದ ಇಳಿಸಂಜೆ ತಲುಪಿದ್ದರು ಕಾಮ್ರೇಡ್ ಗೋವಿಂದ ಪನ್ಸಾರೆ. ಎಂಭತ್ತರ ವಯಸ್ಸಿನಲ್ಲೂ ವಯೋಸಹಜ ಮರೆವು, ದಣಿವು, ನಿಶ್ಶಕ್ತಿಗಳನ್ನು ಎಂದೂ ತೋರಿದವರಲ್ಲ. ಯಾವುದೇ ಜನಪರ ಹೋರಾಟವಿದ್ದರೂ ಅಲ್ಲಿ ಕೂಡಲೇ ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಟೋಲ್‌ಗಳಲ್ಲಿ ಸುಂಕ ಸಂಗ್ರಹಿಸುವುದರ ವಿರುದ್ಧ ದನಿಯೆತ್ತಿದ್ದರು. ವರ್ಷಾನುಗಟ್ಟಲೆ ನಿರ್ಮಾಣ ಸುಂಕವನ್ನು ವಿಧಿಸುವುದು, ಸುಂಕ ಸಂಗ್ರಹಿಸುವುದೇ ಒಂದು ಧಂಧೆಯಾಗಿ ಮಾಡಿಕೊಂಡಿರುವುದನ್ನು ವಿರೋಧಿಸಿ ಸುಂಕ ಪಾವತಿಸಬಾರದೆಂದು ನಾಗರಿಕರಿಗೆ ಹೇಳುತ್ತಿದ್ದರು. ಕೊಲ್ಲಾಪುರದ ಈ ಹೋರಾಟ ಪನ್ಸಾರೆ ಬದುಕಿನ ಕೊನೆಯ ಹೋರಾಟವಾಯಿತು.

***

‘ಪ್ರಗತಿಪರ ಮಹಾರಾಷ್ಟ್ರ ಎನ್ನುವುದೊಂದು ಭ್ರಮೆ’ ಎನ್ನುತ್ತಿದ್ದ ಪನ್ಸಾರೆ ಮೂಲಭೂತವಾದದಲ್ಲಿ ಮುಳುಗೆದ್ದ ಪಶ್ಚಿಮ ಮಹಾರಾಷ್ಟ್ರದ ಎಡ-ಬಲ ಸಂಘರ್ಷವನ್ನು ದಶಕಗಳಿಂದ ನೋಡಿದ್ದವರು. ಪಕ್ಷಭೇದವಿಲ್ಲದೆ ರಾಜಕಾರಣವು ಬೆಳೆಸುತ್ತಿರುವ ಭಾಷೆ/ಧರ್ಮದ ಅಂಧಾಭಿಮಾನ, ಪ್ರಾಂತೀಯತೆಯ ಅಮಲುಗಳನ್ನು ಗಮನಿಸಿದ್ದರು. ಅಂಥವರ ಹತ್ಯೆಯಾಗಿದ್ದೇಕೆ? ಶಿವಾಜಿ ಯಾರು ಎಂದು ನಿಜ ಹೇಳಿದ್ದಕ್ಕೆ ಕಣ್ಮುಚ್ಚಿದರೋ? ಅಭಿವೃದ್ಧಿಗೆಂದು ಸರ್ಕಾರ ಖರ್ಚು ಮಾಡಿದ ಹಣಕ್ಕೆ ನಾಗರಿಕರು ಸುಂಕ ಕೊಡಬೇಕಿಲ್ಲ ಎಂದು ಟೋಲ್ ಸುಂಕ ವಿರೋಧಿಸಿದಕ್ಕಾಗಿ ಕೊನೆಯುಸಿರೆಳೆದರೋ? ಖಾಸಗೀಕರಣದ ಕಟ್ಟಾ ವಿರೋಧಿಯಾಗಿದ್ದಕ್ಕೆ ತಣ್ಣಗಾದರೋ?

ಫುಲೆ, ಅಂಬೇಡ್ಕರ್, ಹಮೀದ್ ದಳವಾಯಿಯಂತಹ ಸಮಾಜ ಸುಧಾರಕ ವಿಶ್ವಚೇತನಗಳನ್ನೂ; ಅವರಷ್ಟೇ ಸಂಖ್ಯೆಯ ಧಾರ್ಮಿಕ/ಭಾಷಿಕ ಮೂಲಭೂತವಾದಿಗಳನ್ನೂ ಸೃಷ್ಟಿಸಿದ ನೆಲ ಮಹಾರಾಷ್ಟ್ರ. ಭಕ್ತಿಪಂಥದ ಚಳುವಳಿಯಿಂದ ಹಿಡಿದು ಸಮಾನತೆಗಾಗಿ ಪ್ರತಿಪಾದಿಸುವ ಅನೇಕ ಚಳುವಳಿಗಳ ಬೀಜವನ್ನು ಆ ನೆಲವು ಮೊಳೆಯಿಸಿದೆ. ೧೯೬೦ರಲ್ಲಿ ರಾಜ್ಯವಾಗಿ ರೂಪುಗೊಂಡ ಮೇಲೆ ೨೦೧೪ರ ತನಕ, ನಡುವೆ ನಾಲ್ಕು ವರ್ಷ ಬಿಟ್ಟರೆ ಅಲ್ಲಿ ಸದಾ ಕಾಂಗ್ರೆಸ್ ಮುಖ್ಯಮಂತ್ರಿಯೇ ಆಡಳಿತ ನಡೆಸಿದ್ದಾರೆ. ಹೀಗಿದ್ದೂ ಸಂಯುಕ್ತ ಮಹಾರಾಷ್ಟ್ರಕ್ಕಾಗಿ ೧೯೬೦ರಲ್ಲಿ ಹೋರಾಡಿದ ವ್ಯಕ್ತಿ; ಫುಲೆ, ಅಂಬೇಡ್ಕರ್, ಶಾಹೂ ಅವರ ತತ್ವಗಳನ್ನು ಎದೆಗೆ ನಿಕಟವಾಗಿಟ್ಟುಕೊಂಡು ಹೋರಾಡಿದ ಪನ್ಸಾರೆ ಹತ್ಯೆಯಾಗಿದ್ದಾರೆ. ಸತ್ಯಶೋಧಕ ಸಮಾಜದ ಆಶಯಗಳು ಸಜೀವವಾಗಿ ಉಸಿರಾಡಿದ್ದ ಛತ್ರಪತಿ ಶಾಹೂ ಮಹಾರಾಜರ ಕೊಲ್ಲಾಪುರವೀಗ ಸತ್ಯವಿರೋಧಿಗಳ ನೆಲೆಯಾಗಿದೆ. ಸಾಂಸ್ಕೃತಿಕ, ಶೈಕ್ಷಣಿಕ ರಂಗಗಳಲ್ಲಿ ಮೂಲಭೂತವಾದ ನಿಧಾನಕ್ಕೆ ತನ್ನ ಬೇರುಗಳನ್ನು ಇಳಿಸಿ ಬಿಟ್ಟಿದೆ.

ಇದರ ಜೊತೆಗೆ ಖಾಸಗಿ ಬಂಡವಾಳದ ಮಾಲೀಕರು ಎಂದಿನಿಂದಲೂ ಆಳುವವರಿಗೆ ಹಾಗೂ ಮೂಲಭೂತವಾದಿಗಳಿಗೆ ಸಹಕಾರ ನೀಡುತ್ತ ಬಂದಿದ್ದಾರೆ. ಮುಕ್ತ ಮಾತು-ಚರ್ಚೆ ಎಂದರೆ ಅವರಿಗೆ ನಡುಕ ಹುಟ್ಟುತ್ತದೆ. ಜನಸಮುದಾಯ ಜಾಗೃತಿಗೊಳ್ಳತೊಡಗಿದರೆ ಅವರ ತೊಡೆಗಳು ಬಿದ್ದುಹೋಗುತ್ತವೆ. ಎಂದೇ ಜನರನ್ನು ಜಾಗೃತಿಗೊಳಿಸುವ, ಪ್ರಶ್ನಿಸುವ, ಮುಕ್ತ ಚರ್ಚೆ ಹುಟ್ಟುಹಾಕುವ ಜನರನ್ನು ‘ಬುದ್ಧಿಜೀವಿ’ಗಳೆಂದು ಹಳಿದು ಸುಮ್ಮನಿರಿಸಲಾಗುತ್ತದೆ. ಸಣ್ಣಪುಟ್ಟ ಆಮಿಷಗಳ ತೋರಿಸಿ ಬಡತನದಿಂದ ಹಸಿದ ದೊಡ್ಡ ಜನಸಮುದಾಯವನ್ನು ಕೋಮುವಾದ, ಭಾಷಾಭಿಮಾನಗಳತ್ತ ಸೆಳೆದುಕೊಳ್ಳಲಾಗುತ್ತಿದೆ. ಜನರಿಂದಲೇ ಜನಪರ ನಾಯಕರನ್ನು ಸುಮ್ಮನಿರಿಸುವ ಹುನ್ನಾರಗಳೂ ನಡೆಯುತ್ತಿವೆ.

ಇದು ಹೊಸತಲ್ಲ. ಪ್ರಶ್ನಿಸುವ ತನ್ನ ಹಕ್ಕಿಗಾಗಿ ಸಾಕ್ರೆಟಿಸ್ ವಿಷ ಕುಡಿದು ಸಹಸ್ರಮಾನಗಳೇ ಸಂದುಹೋಗಿವೆ. ಪ್ರಾಣ ತೆಗೆದರೂ ಭಿನ್ನಮತ ಸಂಪೂರ್ಣ ನಿಲ್ಲುವುದಿಲ್ಲ ಎಂಬ ಸತ್ಯವನ್ನು ಆಳುವವರು ಅರಿಯಬೇಕಾಗಿದೆ. ಆದರೆ ಒಂದಂಶ ನೆನಪಿಡಬೇಕು: ಯಾವುದೇ ವಿಷಯಕ್ಕಾಗಿ ಜನರ ನಡುವೆ ಆಳದ ಅಸಹನೆ ಸೃಷ್ಟಿಸುವುದು ಪ್ರಜಾಪ್ರಭುತ್ವ ದೇಶಕ್ಕೆ ಒಳ್ಳೆಯದಲ್ಲ. ಇದು ಹೀಗೆಯೇ ಮುಂದುವರೆದಲ್ಲಿ ಸಂವಿಧಾನಬದ್ಧ ಕಾರ್ಯಾನಿರ್ವಹಣೆಯೂ ಸಾಧ್ಯವಾಗುವುದಿಲ್ಲ. ಮುಕ್ತವಾಗಿ ಮಾತನಾಡುವವರ ಹತ್ಯೆಗೈದು, ಬದುಕಿರುವವರ ಭಯಗೊಳಿಸುವ ಪ್ರಯತ್ನಗಳು ನಿಷ್ಕ್ರಿಯ, ಭಯಗ್ರಸ್ತ ಭಾವೀಪ್ರಜೆಗಳನ್ನು ಸೃಷ್ಟಿಸುತ್ತವೆ. ಆಗ ಜನರೆದುರು ಅಸತ್ಯವನ್ನು ಅದರ ಎಲ್ಲ ಮುಖಗಳೊಂದಿಗೆ ಬಿಚ್ಚಿಡುವವರು ಯಾರು? ಬಡವ, ಅಲ್ಪಸಂಖ್ಯಾತ, ಕಾರ್ಮಿಕರ ಪರ ಯೋಚಿಸುವವರನ್ನು ಬೆಂಬಲಿಸುವವರು ಯಾರು? ಸುಲಭದ ಪ್ರಚೋದನೆಗೆ ಜನ ಪಕ್ಕಾಗದಂತೆ ತಡೆಯುವುದಾದರೂ ಹೇಗೆ?

ಇವು ನಾವೆಲ್ಲ ಉತ್ತರಿಸಿಕೊಂಡು ಮುಂದಡಿಯಿಡಬೇಕಾದ ಪ್ರಶ್ನೆಗಳು. ಏಕೆಂದರೆ ನಡೆವ ನೆಲ ತನ್ನೊಡಲಲ್ಲಿ ನೆಲಬಾಂಬುಗಳ ಮುಚ್ಚಿಟ್ಟುಕೊಳ್ಳದೆ ಹೂವರಳಿಸುವಂತೆ ಮಾಡುವ ಜವಾಬ್ದಾರಿ ಚಲಿಸುವ ಪಾದಗಳ ಮೇಲೇ ಇದೆ..

-

Sunday, 10 May 2015

ನೇಪಾಳ : ಎಷ್ಟನೆಯ ಎಚ್ಚರಿಕೆ?



ಮನುಷ್ಯರಿಗೆ ಮನೆ, ಕಚೇರಿ, ಅರಮನೆ, ಸ್ಮಾರಕ ಎಂದರೆ ಅವರ ಬಯಕೆ, ನೆನಪು, ಅಹಮು, ಅಸ್ತಿತ್ವಗಳ ಮೊತ್ತ. ಆದರೆ ನೆಲಕ್ಕೆ? ಮನುಷ್ಯನ ಹೆಮ್ಮೆಯ ರಚನೆಗಳೆಲ್ಲ ಕೇವಲ ಇಟ್ಟಿಗೆ, ಮಣ್ಣು, ಗಾರೆ. ಹಾಗೆಂದು ಮೊನ್ನೆ ಏಪ್ರಿಲ್ ೨೫ರಂದು ಮತ್ತೆ ಸಾಬೀತಾಯಿತು.

ಕಠ್ಮಂಡು. ೨.೮ ಕೋಟಿ ಜನಸಂಖ್ಯೆಯ ನೇಪಾಳದ ರಾಜಧಾನಿ. ಆಧುನಿಕ ವೇಗದ ಜಗತ್ತಿಗೆ ಪುರಾತನ ಸಾಂಪ್ರದಾಯಿಕ ಲೋಕದ ಕೊನೆಯ ಕೊಂಡಿಯಂತೆ ತೋರುವ ಹಿಮಾಲಯದ ನಗರ ಪ್ರವಾಸಿಗರ ನೆಚ್ಚಿನ ತಾಣಗಳಲ್ಲೊಂದು. ಏಪ್ರಿಲ್ ೨೪, ಶುಕ್ರವಾರ ರಾತ್ರಿ ಕಠ್ಮಂಡುವಿನ ಬೀದಿ ಸಾವಿರಾರು ವಿದೇಶಿ ಪ್ರವಾಸಿಗರಿಂದ ತುಂಬಿತ್ತು. ನಡುರಾತ್ರಿ ಕಳೆದರೂ ನಗರ ಮಲಗದೇ ಬೆಳಗಿನ ಜಾವದವರೆಗೂ ಚಟುವಟಿಕೆಯಲ್ಲಿತ್ತು. ಬೆಳಗಾಯಿತು. ತಡವಾಗಿ ಎದ್ದರೂ ಒಂದು ಸುತ್ತು ತಿರುಗಲು ಹೊರಬಂದವರು ಬದುಕಿದರು. ನಡುಮಧ್ಯಾಹ್ನವಾದರೂ ಹೋಟೆಲು, ಮನೆಗಳೊಳಗೇ ಉಳಿದವರು ಇನ್ನಿಲ್ಲವಾದರು.

ಮಧ್ಯಾಹ್ನ ೧೨ಕ್ಕೆ ಇನ್ನು ೪ ನಿಮಿಷ ಇದೆ ಎನುವಾಗ ಭೂಮಿ ಒಮ್ಮೆ ಮೈಕೊಡವಿತು. ಅಷ್ಟೆ, ಬರೀ ೧೫ ಸೆಕೆಂಡು. ನೋಡನೋಡುತ್ತ ಹೋಟೆಲು, ಅಂಗಡಿ, ಕಟ್ಟಡ, ಸ್ಮಾರಕ, ಕಂಬಗಳು ನೆಲಕ್ಕುರುಳಿದವು. ಎಲ್ಲೆಲ್ಲೂ ಹಾಹಾಕಾರ, ಭಯದ ಕಿರಿಚಾಟ. ನೆಲವೇ ಅಲುಗತೊಡಗಿ ಬೀದಿಯ ಎರಡೂ ಕಡೆ ನಿಂತ ಎತ್ತರೆತ್ತರದ ಕಟ್ಟಡಗಳು ಕಲ್ಲುಇಟ್ಟಿಗೆಗಳನ್ನು ಗುಂಡಿನಂತೆ ಸಿಡಿಸಿ ನೆಲಕ್ಕುರುಳತೊಡಗಿದವು. ಏನಾಗುತ್ತಿದೆ? ಎಲ್ಲಿ ಹೋಗಿ ರಕ್ಷಣೆ ಪಡೆಯುವುದು? ಯಾರ ಬಳಿ ಕೇಳುವುದು? ನನ್ನವರು ತನ್ನವರು ಈಗೆಲ್ಲಿದ್ದಾರೆ? ಹತ್ತುಹಲವು ಪ್ರಶ್ನೆಗಳು ಜನರ ಮನದಲ್ಲಿ ಸುಳಿದು ‘ಆಕ್ಷನ್, ಕಟ್, ಟೇಕ್’ ಹೇಳುವುದರಲ್ಲಿ ಎಲ್ಲ ಮುಗಿದೇ ಹೋಯಿತು.

ಬೀದಿಯಲ್ಲಿದ್ದು ಬದುಕಿದವರು, ಅವಶೇಷಗಳಡಿ ಸಿಕ್ಕಿಹಾಕಿಕೊಂಡವರು, ಸತ್ತವರು, ಅನಾಥವಾದವರು, ವಿದೇಶೀಯರು - ಒಬ್ಬೊಬ್ಬರದು ಒಂದೊಂದು ತೆರನ ಸಂಕಟ, ಚೀರಾಟ. ಕಳ್ಳನೆನದೆ ಪೊಲೀಸನೆನದೆ; ಅಮ್ಮನೆನದೆ ಮಗುವೆನದೆ; ರೋಗಿಯೆನದೆ ಶುಶ್ರೂಷಕರೆನದೆ; ರಾಜನೆನದೆ ಸೇವಕನೆನದೆ ಎಲ್ಲರನ್ನೂ ನೆಲ ಒಂದೇ ರೀತಿ ಅಲುಗಾಡಿಸಿಬಿಟ್ಟಿತು. ಇಡಿಯ ಸಮಾಜವೇ ಹೀಗೆ ದಿಕ್ಕೆಟ್ಟು ನಿಂತ ಹೊತ್ತಲ್ಲಿ ಸಮವಸ್ತ್ರ ಧರಿಸಿದವರೂ ಕಿಂಕರ್ತವ್ಯವಿಮೂಢರಾಗಿ ನಿಂತರು. ಸಾವುನೋವಿನ ಸಂಖ್ಯೆ ಹೆಚ್ಚುತ್ತ, ಹೆಚ್ಚುತ್ತಲೇ ಹೋಯಿತು. ಗುಡ್ಡಗಾಡಿನ ಜನರಂತೂ ಅನ್ನನೀರುಸೂರಿಲ್ಲದೆ ವಾರ ಕಳೆಯುವಂತಾಯಿತು..



ಭಕ್ತಾಪುರ ಕಠ್ಮಂಡುವಿನ ಹೊರವಲಯದ ಜಿಲ್ಲೆ. ಆ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಒಂದು ಹಳ್ಳಿಯಿಡೀ ಇವತ್ತು ಕುಸಿದ ಬೆಟ್ಟಮನೆಕಲ್ಲುಮಣ್ಣುಗಳ ರಾಶಿ. ಅಂಥ ಒಂದು ಕುಸಿದ ಮಣ್ಣುಗುಪ್ಪೆಯೆದುರು ತಾಯ್ತಂದೆಯರು ನಿಂತು ರೋದಿಸುತ್ತಿದ್ದಾರೆ. ಆ ರಾಶಿಯೊಳಗಿಂದ ಅವ್ವಾ, ಅಪ್ಪಾ ಎಂಬ ದನಿ ಕೇಳುತ್ತಿದ್ದದ್ದು ಬರಬರುತ್ತ ಕ್ಷೀಣವಾಗಿ ಈಗ ನಿಂತೇ ಹೋಗಿದೆ. ಹಿರಿಯರೆಲ್ಲ ಕೆಲಸಕ್ಕೆ ಹೊರಹೋಗಿದ್ದಾಗ ಮನೆಯಲ್ಲಿದ್ದ ಪುಟ್ಟ ಹುಡುಗಿ ಕುಸಿದ ಭಾರದಡಿ ಎಲ್ಲೋ ಸಿಕ್ಕಿಹಾಕಿಕೊಂಡಿದ್ದಾಳೆ. ಅವಳನ್ನು ರಕ್ಷಿಸಬೇಕು. ಆದರೆ ಮುಟ್ಟಿದರೆ ಪಿಸಿಪಿಸಿ ಹಿಸಿದು ಬೀಳುವ ಮಣ್ಣು, ಕಲ್ಲು, ಹೆಂಚು, ಕಟ್ಟಿಗೆಯ ರಾಶಿಯನ್ನು ಎಲ್ಲಿಂದ ತೆಗೆದು ಎಲ್ಲಿ ಹಾಕುವುದು? ಹೇಗೆ ತೆಗೆಯುವುದು? ಇಡೀ ಊರಲ್ಲಿ ಎಲ್ಲರದು ಒಂದೇ ಕತೆಯಾಗಿರುವಾಗ ಸಹಾಯಕ್ಕೆ ಒದಗುವವರಾರು? ಹುಡುಗಿಯ ಅಜ್ಜಿ ಮನೆಯ ಸುತ್ತಮುತ್ತ ತಿರುಗುತ್ತ ಮೊಮ್ಮಗಳಿಗೆ ಕೂಗಿಕೂಗಿ ಹೇಳುತ್ತ ಏನೋ ನಿರ್ದೇಶನ ಮಾಡುತ್ತಿದ್ದಾಳೆ. ಅದು ಮಗುವಿಗೆ ಕೇಳುತ್ತಿರಬಹುದೇ? ತಾಯಿ ಎದೆಎದೆ ಬಡಿದುಕೊಂಡು ಅಳುತ್ತಿದ್ದರೆ ಅಪ್ಪ, ‘ನನಗೆ ನಮ್ಮ ಮಗಳು ಬೇಕು, ಅವಳೀಗ ಬದುಕಿಲ್ಲ, ಆದರೂ ಅವಳು ಬೇಕೇಬೇಕು. ಪರಿಹಾರ ಕಾರ್ಯಕರ್ತರು ಬರುವವರೆಗೆ ನಾನು ಏಳುವುದಿಲ್ಲ’ ಎನ್ನುತ್ತಿದ್ದಾನೆ.

ಕೆಲವೇ ತಾಸಿನ ಕೆಳಗೆ ತಮ್ಮ ಅಡಿಗೆ ಮನೆಯಾಗಿದ್ದ ಪ್ರದೇಶದಲ್ಲಿ ಮುದುಕಿಗೆ ಏನೋ ಕಾಣಿಸಿತು. ಹೊರಗೆಳೆದರೆ ಒಂದೆರೆಡು ಉಪ್ಪಿನಕಾಯಿ ಪ್ಯಾಕೆಟ್ಟು ಕೈಗೆ ಬಂದವು. ಕೈ ಕೊಂಚ ಮುಂದೊಯ್ದು ಏನಾದರೂ ಕೈಗೆಟುಕೀತೇನೋ ಎನ್ನುವಾಗ ಧಸಕ್ ಎಂದು ತೊಲೆಯೊಂದು ಕೈಮೇಲೆ ಬಿತ್ತು.

ಗಾಯದ ಕೈ ಹೊತ್ತು ಊರ ಹೊರಗೆ ನಡೆದ ಮುದುಕಿ ಬಯಲಲ್ಲಿ ನಿಂತು ಕೈಮುಗಿದು ಪರ್ವತ ದೇವರನ್ನು ಪ್ರಾರ್ಥಿಸುತ್ತಿದ್ದಾಳೆ: ‘ನಿಲ್ಲಿಸು, ದಯವಿಟ್ಟು ನಿಲ್ಲಿಸು. ನಮ್ಮನೇಕೆ ದೇವ ನೀ ಹೀಗೆ ಶಿಕ್ಷಿಸುವುದು? ನಿನ್ನ ಮಕ್ಕಳ ರಕ್ಷಿಸು..’

ಸಾವು, ಸರ್ವನಾಶ, ನಿರಾಶೆ, ಹಸಿವೆ, ಅಸಹಾಯಕತೆಗಳೆಲ್ಲ ಒಟ್ಟಾದರೆ ಮತ್ತೇನು ಮಾಡಬಹುದು ನರಮನುಷ್ಯ, ಪ್ರಾರ್ಥಿಸುವುದರ ಹೊರತು?



ಇದು ಪರ್ವತಾರೋಹಿಗಳಿಗೆ ಹಿಮಾಲಯದ ಶಿಖರಗಳ ಏರುವ ಉಮೇದಿನ ಕಾಲ. ಆಕಾಶಕ್ಕೆ ಏಣಿಯಂತೆ ನಿಂತ ಹಿಮಾಲಯದ ಧವಳಗಿರಿಗಳು ಸಾಹಸಪ್ರಿಯರನ್ನು ಇನ್ನಿಲ್ಲದಂತೆ ಸೆಳೆಯುತ್ತವೆ. ಅದರಲ್ಲೂ ಪ್ರಪಂಚದ ಅತ್ಯುನ್ನತ ಶಿಖರ ಎವರೆಸ್ಟಿನ ಬೇಸ್‌ಕ್ಯಾಂಪಿನಲ್ಲಿ ತೀವ್ರ ಚಟುವಟಿಕೆಯಿರುತ್ತದೆ. ಈ ಬಾರಿಯೂ ಹಾಗೇ. ಏಪ್ರಿಲ್ ಕೊನೆಯ ವಾರ ದೇಶವಿದೇಶಗಳ ಒಟ್ಟು ೩೫೦ ಚಾರಣಿಗರು ಎವರೆಸ್ಟ್ ಏರುವ ಹಾದಿಯ ನಾನಾಹಂತಗಳಲ್ಲಿದ್ದರು. ಪ್ರತಿ ಚಾರಣಿಗನ ಜೊತೆಯೂ ಅವರ ಸಾಮಾನು ಹೊತ್ತ ಗುಡ್ಡಗಾಡಿನ ಶೆರ್ಪಾ ಜನ. ಅವರಲ್ಲದೆ ಪರ್ವತಾರೋಹಿಗಳಿಗೆ ಸಹಾಯ ಮಾಡುವ ಸ್ಥಳೀಯ ಸಮುದಾಯ ಶೆರ್ಪಾಗಳ ಕುರಿತು ಜರ್ಮನಿಯ ಒಂದು ಕಂಪನಿ ಸಾಕ್ಷ್ಯಚಿತ್ರ ಚಿತ್ರೀಕರಣ ನಡೆಸುತ್ತಿತ್ತು.

ಆ ತಂಡದ ಕ್ಯಾಮೆರಾಮನ್‌ಗೆ ಇದ್ದಕ್ಕಿದ್ದಂತೆ ಯಾರೋ ದೂಡಿ ಬೀಳಿಸಿದಂತಾಯಿತು. ತ್ರಿಪಾದದ ಮೇಲೆ ಇಳಿಜಾರಿನಲ್ಲಿ ಗಟ್ಟಿಯಾಗಿ ನಿಲಿಸಿದ್ದ ಕ್ಯಾಮೆರಾ ಓಲಾಡಿ ಓಲಾಡಿ ನೆಲಕ್ಕುರುಳಿತು. ಆತ ಚತುರ. ತನಗೆ ಆಧಾರ ತಪ್ಪಿಸುತ್ತಿರುವುದು ನೆಲವೇ ಎಂದು ಕೂಡಲೇ ಅರ್ಥವಾಗಿ ಕೂಗಿಕೊಂಡ: ‘ಭೂಕಂಪವಾಗುತ್ತಿದೆ..’

ಎಲ್ಲರಿಗೂ ಕ್ಷಣಾರ್ಧದಲ್ಲಿ ಏನಾಗುತ್ತಿದೆಯೆಂದು ಅರ್ಥವಾಯಿತು. ಹತ್ತಿರದಲ್ಲೇ ಆಕಾಶಕ್ಕೆ ತಲೆಯೆತ್ತಿ ನಿಂತಂತಿದ್ದ ಶಿಖರದ ತುದಿಗಳಿಂದ ಹಿಮ, ಕಲ್ಲುಬಂಡೆ, ಮಣ್ಣು ಎಲ್ಲವೂ ಧಡಧಡ ಭಯಾನಕ ಸದ್ದಿನೊಂದಿಗೆ ಗಂಟೆಗೆ ೩೦೦ ಕಿಮೀ ವೇಗದಲ್ಲಿ ಕೆಳಗುರುಳುರುಳಿ ಬರತೊಡಗಿದವು. ಕೂಡಲೇ ಶೆರ್ಪಾಗಳ ಸೂಚನೆಯಂತೆ ಎಲ್ಲರೂ ವಿರುದ್ಧ ದಿಕ್ಕಿಗೆ ಓಡಿ ಹೆಬ್ಬಂಡೆಯೊಂದರ ಬಳಿ ನಿಂತರು. ನೋಡನೋಡುತ್ತಿದ್ದಂತೆ ಅವರ ಕಣ್ಣೆದುರೇ ಬೇಸ್ ಕ್ಯಾಂಪ್, ಚಿತ್ರೀಕರಣದ ಸೆಟ್ ಧೂಳಲ್ಲಿ ಹೂತುಹೋಯಿತು. ದೂರದ ಕಣಿವೆಯಿಂದ ಧೂಳಿನ ಮೋಡ ಮೇಲೇಳತೊಡಗಿತು. ಚಿತ್ರೀಕರಣ ತಂಡದಲ್ಲಿದ್ದ ಶೆರ್ಪಾಗಳಿಗೆ ಖಚಿತವಾಯಿತು, ತಮ್ಮ ಕಣಿವೆಯ ಹಳ್ಳಿಯೇ ಮಾಯವಾಗುತ್ತಿದೆ..

ಪರ್ವತದ ಮಕ್ಕಳ ಮಾಸದ ಕಿರುನಗೆಯ ಮುಖದಲ್ಲಿ ತಾಂಡವವಾಡುತ್ತಿರುವುದು ಭಯ, ಕೇವಲ ಭಯ..

ಸ್ಯಾಟಲೈಟ್ ಫೋನಿನಿಂದ ಕರೆಗಳೇನೋ ಹೋದವು. ಆದರೆ ಸಹಾಯಕ್ಕೆ ಯಾರಾದರೂ ಬರುವುದು ಹೇಗೆ ರಸ್ತೆಯೆಲ್ಲ ಕುಸಿದು ನಾಶವಾಗಿರುವಾಗ? ಭಯದಲ್ಲಿ, ಹಿಮದ ಕೊರೆತದಲ್ಲಿ ನಡುಗುತ್ತ, ಅನ್ನನೀರಿಲ್ಲದೆ ಕುಳಿತವರನ್ನು ಕೊನೆಗೆ ಭಾರತೀಯ ವಾಯುಸೇನೆಯ ಹೆಲಿಕಾಪ್ಟರುಗಳು ಹೊತ್ತೊಯ್ದವು. ಚಾರಣಿಗರಲ್ಲಿ ೨೨ ಜನ ಕೂಡಲೇ ಸತ್ತರು. ೧೦೦ ಜನ ಕಾಣೆಯಾದರು, ಲೆಕ್ಕ ಸಿಗದೆ ಕಳೆದು ಹೋದವರೆಷ್ಟೋ. ಕಾಲದೇಶಗಳ ಅಳತೆಗೆ ಸಿಗಲಾರದ ಬದುಕುಳಿದವರ ಸಂಕಟ, ಸಂಕಷ್ಟ ಇನ್ನೆಷ್ಟೋ..

***

೫೦ ಚದರ ಕಿಮೀ ವಿಸ್ತೀರ್ಣದ, ಭಾಗಮತಿ ನದಿ ದಂಡೆಯಲ್ಲಿರುವ, ಸುತ್ತ ಎತ್ತರದ ಬೆಟ್ಟಗಳಿಂದ ಸುತ್ತುವರೆದಿರುವ, ಎಂಟು ನದಿಗಳು ಹರಿವ ನಗರ ಕಠ್ಮಂಡು. ಶತಮಾನಗಳಿಂದ ಅದು ವ್ಯಾಪಾರ ವಾಣಿಜ್ಯದ ಕೇಂದ್ರ. ಭಾರತ ಮತ್ತು ಚೀನಾದ ನಡುವಿರುವ ಅದರ ಆಯಕಟ್ಟಿನ ಸ್ಥಾನ ಹಿಮಾಲಯದ ವಾಣಿಜ್ಯ ನಗರಿಯಾಗಲು ಕಾರಣವಾಗಿದೆ. ಫಲವತ್ತಾದ ಕಠ್ಮಂಡು ಕಣಿವೆಯ ಕೃಷಿ ಆಧಾರಿತ ಆರ್ಥಿಕತೆ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮದ ದಿಕ್ಕಿನಲ್ಲಿ ಗಮನಾರ್ಹವಾಗಿ ಬೆಳೆದಿದೆ. ಭಾರತ ಉಪಖಂಡದ ರಾಜಕೀಯ-ಧಾರ್ಮಿಕ ಹಿತಾಸಕ್ತಿಗಳು ನೇಪಾಳದ ಮೇಲೂ ಪ್ರಭಾವ ಬೀರಿವೆ.

೧೯೩೫ರಲ್ಲಿ ನೇಪಾಳ ಕಂಡ ಭಾರೀ ಭೂಕಂಪದ ನಂತರ ಆ ದೇಶವನ್ನು ಅಲುಗಾಡಿಸಿದ್ದು ಈ ಭೂಕಂಪ. ಲೆಕ್ಕ ಸಿಕ್ಕಿದ ಸತ್ತವರ ಸಂಖ್ಯೆ ಅಂದಾಜು ೧೦,೦೦೦. ನಿಜವಾಗಿ ಸತ್ತವರ ಸಂಖ್ಯೆ ಪಶುಪತಿನಾಥ ದೇವಸ್ಥಾನ ಆವರಣದ ಸ್ಮಶಾನದಲ್ಲಿ, ಭಾಗಮತಿಯ ದಂಡೆಯಲ್ಲಿ, ಕಳೆದೆರೆಡು ವಾರಗಳಿಂದ ನೂರಾರು ಹೆಣ ಸುಡುತ್ತಿರುವ ಅಪ್ಪ-ಮಗ ಬುಧಿರಾಮ-ಮಂಗಲರಿಗೂ ಗೊತ್ತಿಲ್ಲ; ಸರ್ಕಾರಕ್ಕೂ ಲೆಕ್ಕ ಸಿಕ್ಕಿಲ್ಲ. ೧೫ ಸೆಕೆಂಡಿನ ನೆಲದ ಸಿಟ್ಟಿಗೆ ಛಿದ್ರಗೊಂಡ ಸಾವಿರಾರು ಬದುಕುಗಳು ಮತ್ತೆ ರೂಪುಗೊಳಲು ಬೇಕಿರುವುದು ಇನ್ನೆಷ್ಟೋ ವರುಷ.


ಹೀಗೇಕಾಯಿತು? ನಡುಗಿದಲ್ಲಿಯೇ ಮತ್ತೆಮತ್ತೆ ಭೂಮಿ ಏಕೆ ಕಂಪಿಸಿತು?

ಸಿಡಿಯಲು ಕ್ಷಣಗಣನೆ ನಡೆಸುತ್ತಿರುವ ಸರ್ವಸನ್ನದ್ಧ ಜೀವಂತ ಬಾಂಬ್ ಈ ಹಿಮಾಲಯ. ಹಿಮಾಲಯ ಪ್ರತಿವರ್ಷ ಒಂದು ಸೆಂಮೀ ಎತ್ತರ ಬೆಳೆಯುತ್ತಿದೆ. ಅದಕ್ಕೆ ಕಾರಣವಿದೆ. ಐದು ಕೋಟಿ ವರ್ಷ ಕೆಳಗೆ ಪ್ರಪಂಚದ ಭೂಪಟ ಹೀಗಿರಲಿಲ್ಲ. ಆಗ ದಕ್ಷಿಣ ಭಾರತದ ಕೆಳಗಿನ ಭೂಭಾಗ, ಶ್ರೀಲಂಕಾ, ಆಫ್ರಿಕಾ, ಆಸ್ಟ್ರೇಲಿಯಾ ಎಲ್ಲವೂ ಒಟ್ಟಿಗಿದ್ದವು. ಅದನ್ನು ಗೊಂಡ್ವಾನ ಎನ್ನುತ್ತಿದ್ದರು. ಗೊಂಡ್ವಾನದ ಒಂದು ಭಾಗ - ಹಿಮಾಲಯದ ಕೆಳಗಿನ ಭಾರತ - ಚಲಿಸುತ್ತ ಚಲಿಸುತ್ತ ಮೇಲೆ ಹೋಗಿ ಇವತ್ತಿನ ಏಷ್ಯಾ-ಯೂರೋಪು ಭಾಗಕ್ಕೆ ಢಿಕ್ಕಿ ಹೊಡೆಯಿತು. ಆ ಘರ್ಷಣೆಯಿಂದ ಮಡಿಕೆಯಾಗಿ ಮೇಲೆದ್ದ ಭೂಮಿಯೇ ಹಿಮಾಲಯ. ಈಗಲೂ ನೆಲದಾಳದ ಭೂಭಾಗಗಳು ಚಲಿಸುತ್ತಲೇ ಇರುತ್ತವೆ. ಆಗಾಗ ಢಿಕ್ಕಿ ಹೊಡೆಯುತ್ತಲೇ ಇರುತ್ತವೆ. ಹೀಗೆ ಹುಟ್ಟುವ ಭಾರೀ ಒತ್ತಡಕ್ಕೆ ಭೂಮಿ ಕಂಪಿಸುತ್ತದೆ. ನಿಯಮಿತವಾಗಿ ೭೫-೧೦೦ ವರ್ಷಗಳಿಗೊಮ್ಮೆ ಒಂದು ದೊಡ್ಡ ಭೂಕಂಪ ಸಂಭವಿಸುತ್ತದೆ. ನಡುನಡುವೆ ಭೂಮಿ ಸಣ್ಣಪುಟ್ಟದಾಗಿ ನಡುಗಿ ಸುಮ್ಮನಾಗುತ್ತದೆ.

ಎಂದರೆ ಹಿಮಾಲಯ ಪ್ರದೇಶಕ್ಕೆ ಭೂಕಂಪ ಹೊಸದಲ್ಲ. ಹಿಮಾಲಯ ಶ್ರೇಣಿಯ ಉನ್ನತ ಪ್ರದೇಶದ ಕಣಿವೆಗಳಲ್ಲಿ, ಬಯಲುಗಳಲ್ಲಿ ಹರಡಿರುವ ನೇಪಾಳ ದೇಶಕ್ಕೂ ಭೂಕಂಪ ಹೊಸದಲ್ಲ. ಆದರೆ ಭೂಕಂಪಕ್ಕೆ ಜನ ಹೆದರಲಿಲ್ಲ. ಅಲ್ಲಿ ಹರಿವ ನದಿಗಳ ಬಯಲು, ಸಂಪದ್ಭರಿತ ಪ್ರಾಣಿಪಕ್ಷಿ ಸಂಕುಲ, ಪರ್ವತಗಳ ತಪ್ಪಲು ಜನರನ್ನು ಸೆಳೆದು ಹಿಮಾಲಯ ಜನಭರಿತವೂ ಆಯಿತು. ಈಗ ಯಾವಾಗ, ಎಲ್ಲಿ, ಎಷ್ಟು ಪ್ರಮಾಣದ ಭೂಕಂಪ ಸಂಭವಿಸುವುದರ ಮುನ್ಸೂಚನೆ ಊಹಿಸಬಹುದು, ಅದರ ಪರಿಮಾಣವನ್ನು ರಿಕ್ಟರ್ ಮಾಪಕದಲ್ಲಿ ಅಳೆಯಬಹುದು. ಭೂಕಂಪನ ನಿಲಿಸಲಾರೆವಾದರೂ ಭೂಕಂಪವಾದಾಗ ಸಾವುನೋವು ಕಡಿಮೆ ಮಾಡಬಲ್ಲ ಕಟ್ಟಡ ನಿರ್ಮಾಣ ಕೌಶಲ್ಯ ಉಪಯೋಗಿಸಬಹುದು.

ತಂತ್ರಜ್ಞಾನ ಈ ಪರಿ ಬೆಳೆಯುವ ಮೊದಲೂ ಬಹುಮಹಡಿಯ, ಭಾರೀ ಕಟ್ಟಡ ಕಟ್ಟುತ್ತಿದ್ದರು. ಆರೇಳು ಸಾವಿರ ವರ್ಷ ಹಳೆಯ ಪಿರಮಿಡ್‌ಗಳು ಇದಕ್ಕೆ ಉದಾಹರಣೆ. ಆಗ ಕಟ್ಟಡ ನಿರ್ಮಾಣದ ವೇಳೆ ಒಂದು ಸರಳ, ಅನುಭವಾಧಾರಿತ ಜ್ಞಾನ ಬಳಸಿ ಭೂಕಂಪವನ್ನು ತಡೆದುಕೊಳ್ಳಬಲ್ಲ ರಚನೆ ನಿರ್ಮಿಸುತ್ತಿದ್ದರು. ನಮ್ಮ ತಾಜಮಹಲು, ಕುತುಬ್ ಮಿನಾರು, ಎಷ್ಟೋ ದೇವಾಲಯಗಳು, ಪಿರಮಿಡ್ ಹೀಗೆ ಭೂಕಂಪ ನಿರೋಧಿ ವಿನ್ಯಾಸದಲ್ಲಿ ಸೃಷ್ಟಿಯಾದವು. ಈಗಲೂ ಜಪಾನ್ ದೇಶದ ವಿಶಿಷ್ಟ ಗೃಹನಿರ್ಮಾಣ ತಂತ್ರಜ್ಞಾನ ಭೂಕಂಪ ಮತ್ತಿತರ ನೈಸರ್ಗಿಕ ವಿಕೋಪಗಳಲ್ಲಿ ಸಾವುನೋವನ್ನು ಕಡಿಮೆಮಾಡುತ್ತದೆ. ಬಹುಮಹಡಿ ಕಟ್ಟಡಗಳೂ ಇದರಂತೆ ಕಟ್ಟಲ್ಪಡುತ್ತವೆ. ಆ ವಿನ್ಯಾಸ ಜಗತ್ತಿಗೇ ಮಾದರಿಯಾಗಬೇಕಿದೆ.

ಇತ್ತೀಚೆಗೆ ಅತಿ ವೇಗವಾಗಿ ಬೆಳೆದ ಕಠ್ಮಂಡು ನಗರದ ರಚನೆಗಳು ಇಂಥ ಯಾವ ಮುನ್ನೆಚ್ಚರಿಕೆಯನ್ನೂ ವಹಿಸಲಿಲ್ಲ. ತಮ್ಮದು ಹಿಮಾಲಯದ ದೇಶವೆನ್ನುವುದನ್ನು, ಹಳೆಯ ಭೂಕಂಪದ ನೆನಪುಗಳನ್ನು ಅದು ಇಟ್ಟುಕೊಳ್ಳಲಿಲ್ಲ. (ಈ ಮಾತು ಭಾರತಕ್ಕೂ ಅನ್ವಯಿಸುತ್ತದೆ!) ಕಠ್ಮಂಡು ಜನಸಂಖ್ಯೆ ೧೦ ಲಕ್ಷ +. ಜನಸಾಂದ್ರತೆ ಪ್ರತಿ ಚದರ ಕಿಮೀಗೆ ೨೦೨೮೮! ಏರುತ್ತಿರುವ ಜನಸಂಖ್ಯೆಗೆ ಪ್ರತಿಯಾಗಿ ಮನೆಮೇಲೆ ಮನೆ, ಮನೆಮೇಲೆಮನೆಮೇಲೆಮನೆ, ಮನೆಮೇಲೆಮನೆಮನೆಮೇಲೆಮನೆ - ಹೀಗೇ ಬಹುಮಹಡಿ ಕಟ್ಟಡ ತಲೆಯೆತ್ತಿದ ಕಾರಣಕ್ಕೇ ಇವತ್ತು ಸಾವುನೋವು ಲೆಕ್ಕಕ್ಕೆ ಸಿಗುವುದೂ ಕಷ್ಟವಾಗಿದೆ. ಆಧುನಿಕ ತಂತ್ರಜ್ಞಾನ ಕಾಲದ ಪರೀಕ್ಷೆಯಲ್ಲಿ ಸೋಲುತ್ತಲೇ ಬಂದಿದೆ.

ಅದಕ್ಕೆ ಸಾಕ್ಷಿಯಾಗಿ ಮನೆಮಾರುಗಳು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಕುಸಿದು ನಾಶವಾಗಿವೆ. ನೇಪಾಳ ಬ್ಯಾಂಕಿನ ಕಚೇರಿ, ಅದರ ಸ್ಟ್ರಾಂಗ್ ರೂಂ ನೆಲದಾಳ ಸೇರಿವೆ. ಅದರಲ್ಲಿದ್ದ ಕೋಟಿಗಟ್ಟಲೆ ರೂಪಾಯಿ ಹಣ, ಬಂಗಾರ ನೆಲದೊಡಲು ಸೇರಿದೆ. ಅದರಿಂದ ೨.೮ ಕೋಟಿ ರೂ. ಹುಡುಕಿ ತೆಗೆಯಲಾಗಿದ್ದರೆ ಉಳಿದಿದ್ದು ನಿಧಿಯಾಗಿ ಭೂತಳಕ್ಕೆ ಸರಿದಿದೆ. ಧರಹರಾ ಗೋಪುರ ೧೯೩೫ರಲ್ಲಿ ಭೂಕಂಪದಿಂದ ಭಾಗಶಃ ಹಾಳಾಗಿದ್ದರೂ ಅದನ್ನು ಮತ್ತೆ ದುರಸ್ತಿಗೊಳಿಸಲಾಗಿತ್ತು. ಅದೂ ಸಹಾ ನಿಮಿಷಾರ್ಧದಲ್ಲಿ ತನ್ನ ಮೈಮೇಲಿದ್ದ ಪ್ರವಾಸಿಗಳ ಸಮೇತ ನೆಲಕ್ಕುರುಳಿದೆ. ಯುನೆಸ್ಕೊ ತಾಣವೆಂದು ಗುರುತಿಸಲ್ಪಟ್ಟ ದರ್ಬಾರ್ ಚೌಕದ ೭ ರಲ್ಲಿ ೪ ನೆಲ ತಾಣಗಳು ನೆಲಕಚ್ಚಿವೆ. ಪಶುಪತಿನಾಥ ದೇವಾಲಯ ಭಾಗಶಃ ಹಾಳಾಗಿದೆ. ಕಠ್ಮಂಡುವಿಗೆ ಆ ಹೆಸರು ಬರಲು ಕಾರಣವಾದ ಕಷ್ಟಮಂಟಪವೂ ಸೇರಿ ಹಲವು ದೇವಾಲಯಗಳು ನೆಲಕ್ಕುರುಳಿವೆ.

ಪಟ್ಟಿ ಮಾಡುತ್ತ ಹೋದರೆ ತಿಳಿಯುತ್ತದೆ, ನೆಲಕ್ಕುರುಳಿದ್ದು ಕಟ್ಟಡಗಳಲ್ಲ, ಮನುಷ್ಯ ಹೆಮ್ಮೆ ಮತ್ತು ತಲೆತಲಾಂತರಗಳಿಂದ ಕಟ್ಟಿಕೊಂಡ ಬದುಕು. ಉರುಳಿ ಬಿದ್ದ ಕಸರಾಶಿಯನ್ನು ತೆರವುಗೊಳಿಸುವುದು, ಅದರಡಿ ಸಿಲುಕಿರುವ ಜೀವಂತ ದೇಹ, ಶವ, ವಸ್ತು, ಹಣಗಳನ್ನು ಹೊರತೆಗೆಯುವುದು ಅತಿ ಪ್ರಯಾಸದ ಕೆಲಸ. ಕಟ್ಟುವುದರ ಜೊತೆಗೆ ಈ ವಿಲೇವಾರಿ ಕೆಲಸಕ್ಕೆ ಬಿಲಿಯನ್ನುಗಟ್ಟಲೆ ಹಣ ಬೇಕಾಗಿದೆ. ಕಲ್ಲುಗಾರೆಸುಣ್ಣಗಳು ಬಿದ್ದ ಕಟ್ಟಡಗಳನ್ನು ಕೆಲಸಮಯದಲ್ಲಿ ಎದ್ದು ನಿಲಿಸಬಹುದು. ಆದರೆ ಕಳೆದುಹೋದ ಜೀವಗಳು ಉಳಿಸಿಹೋದ ಒಡೆದ ಬದುಕು? ರಿಪೇರಿ ಮಾಡಲಾರದಂತೆ ಮುರಿದು ಬಿದ್ದ ಸಾವಿರಾರು ಕುಟುಂಬಗಳ ಬದುಕು ಬಹುಶಃ ಒಂದು ತಲೆಮಾರಿನ ಜೊತೆಜೊತೆಗೇ ತಾನೂ ನಾಶವಾಗಿದೆ.



ನಾವು ನೇಪಾಳದ ನೆರೆಯವರಲ್ಲವೇ? ಈ ವಿಪತ್ತಿಗೆ ಭಾರತ ಕೂಡಲೇ ಸ್ಪಂದಿಸಿತು. ಭುಜ್‌ನಂತಹ ಭಾರೀ ಭೂಕಂಪದ ನಂತರ ಪ್ರಾಕೃತಿಕ ವಿಕೋಪ ಪಡೆಯನ್ನೇ ಇಟ್ಟುಕೊಂಡವರು ನಾವು. ತಕ್ಷಣ ನಮ್ಮ ಯುದ್ಧ ವಿಮಾನಗಳು ಪೂರೈಕೆಯ ಸಾಮಗ್ರಿಗಳನ್ನು ಹೊತ್ತೊಯ್ದವು. ತಾವೇನು ಕಡಿಮೆ ಎಂದು ಚೀನಾ ಪಾಕಿಸ್ತಾನಗಳೂ ಮುಂದೆ ಬಂದವು. ಚೀನಾ ಒಂದು ಹೆಜ್ಜೆ ಮುಂದೆ ಹೋಗಿ ಭಾರತ ತನ್ನ ವಾಯುಗಡಿ ಉಲ್ಲಂಘಿಸುತ್ತಿದೆ ಎಂದು ನೇಪಾಳಕ್ಕೆ ದೂರಿತು. ವಿಶ್ವದ ಎಲ್ಲೆಡೆಯಿಂದ ಜನ-ಧನ-ಔಷಧಿ ಸಹಾಯ ಹರಿದುಬರುತ್ತಾ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಿಕ್ಕಿರಿದು ಹೋಯಿತು.

ಭಾರತೀಯ ಮಾಧ್ಯಮಗಳು ತಮ್ಮ ದೇಶ ಕೊಟ್ಟ ಸಹಾಯ, ಅದನ್ನು ಕೊಟ್ಟ ತಮ್ಮ ಮಹಾನ್ ನಾಯಕ, ನೇಪಾಳ ಸರ್ಕಾರದ ಅಸಾಮರ್ಥ್ಯದ ಕುರಿತು ಉತ್ಪ್ರೇಕ್ಷಿತ ವರದಿಗಳನ್ನು ಬರೆದವು. ಇದು ಸ್ವಾಭಿಮಾನಿ ನೇಪಾಳವನ್ನೂ, ನೇಪಾಳಿಗರನ್ನೂ ಕೆರಳಿಸಿತು. ನೇಪಾಳ ಸರ್ಕಾರ, ‘೧೦ ದಿನ ಕಳೆಯಿತು, ಸಹಾಯ ಮಾಡಬಂದವರಿಗೆ ಧನ್ಯವಾದ, ನೀವಿನ್ನು ಹೊರಡಿ’ ಎಂದು ಗೇಟ್‌ಪಾಸ್ ನೀಡಿತು.

ಯಾರೇ ಈ ದೇಶವನ್ನು ಆಳುತ್ತಿದ್ದರೂ ಭಾರತದ ವಿಪತ್ತು ನಿರ್ವಹಣಾ ಪಡೆ ಸರ್ವಸನ್ನದ್ಧ ಸ್ಥಿತಿಯಲ್ಲಿರುತ್ತದೆ. ಇಂಡೋನೇಷ್ಯಾ ಸುನಾಮಿ, ಪಾಕಿಸ್ತಾನದ ಭೂಕಂಪ, ಅಮೆರಿಕದ ಕತ್ರಿನಾ ದುರಂತ, ಮಾಲ್ಡೀವ್ಸ್ ಜಲ ವಿಕೋಪ ಮತ್ತಿತರ ಕಡೆಗಳಲ್ಲಿ ಎನ್‌ಜಿಒ ಆಧರಿತ ವಿದೇಶಿ ಸಹಾಯ ಬರುವುದರೊಳಗೆ ಭಾರತೀಯರು ಅಲ್ಲಿದ್ದರು. ಆದರೆ ಈ ಬಾರಿ ನಮ್ಮ ‘ಸೇವೆ’ಯನ್ನು ನಾವೇ ಅತಿಯಾಗಿ ಬಿಂಬಿಸಿ ದೇಶದ ಮಾನ ಕಳೆದೆವು.

ಸಹಾಯ ಮಾಡುವುದು ಪಡೆವವನ ಆತ್ಮವಿಶ್ವಾಸಕ್ಕೆ ಧಕ್ಕೆ ತರುವಂತಿರಬಾರದು ಎಂಬ ದಾನಮೀಮಾಂಸೆಯ ಮೊದಲ ಪಾಠವನ್ನು ಸನಾತನ ರಾಷ್ಟ್ರ ಭಾರತ ಮರೆಯಿತೇ?



ನಮ್ಮ ಸುತ್ತಲ ಪರಿಸರ ನಮ್ಮ ಮನೋಭಾವವನ್ನು ರೂಪಿಸುತ್ತದೆ ಎಂದು ಎಲ್ಲೋ ಓದಿದ ನೆನಪು. ನೇಪಾಳ ಪ್ರಕೃತಿ ವಿಕೋಪದಷ್ಟೇ ಧಾರ್ಮಿಕ-ಸಾಂಸ್ಕೃತಿಕ-ರಾಜಕೀಯ ಬಿಕ್ಕಟ್ಟುಗಳನ್ನೆದುರಿಸುತ್ತಲೇ ಬಂದಿದೆ. ರಾಜಮನೆತನ, ಬಂಡುಕೋರರು ಹಾಗೂ ಜನಪ್ರತಿನಿಧಿಗಳ ನಡುವೆ ಅಲ್ಲಿನ ಜನ ಬದುಕು ನಲುಗಿದೆ. ಆದರೂ ಹೇಗೆ ಹಿಮಾಲಯವು ಬೇಸಿಗೆಯಲ್ಲಿ ಕರಗಿ ಹರಿದು, ಚಳಿಗಾಲದಲ್ಲಿ ಹಿಮ ಪೇರಿಸಿಕೊಳ್ಳುತ್ತ ಮತ್ತೆ ಭವ್ಯವಾಗುವುದೋ ಹಾಗೆ ಅಲ್ಲಿಯ ಜನರ ಬದುಕು ಕಷ್ಟನಷ್ಟಪ್ರಕೋಪಗಳ ನಡುವೆಯೇ ಮುಂದುವರೆದಿದೆ. ಪರ್ವತಗಳ ನಾಡಿನ ನೇಪಾಳಿಗರು ಧೈರ್ಯಶಾಲಿಗಳು, ಸ್ವಾಭಿಮಾನಿಗಳು. ಈ ಭೂಕಂಪದಿಂದ ನೇಪಾಳ ಎದ್ದು ನಿಲ್ಲಲಿದೆ, ಪಶುಪತಿನಾಥನ ಸಾಕ್ಷಿ, ಭಾಗಮತಿ ನದಿ ಸಾಕ್ಷಿ, ಪುಡಿಯಾಗಿ ಮುಸುಕಿದ ಹಿಮಾಲಯ ಸಾಕ್ಷಿ ನೇಪಾಳ ಮತ್ತೆ ಮೊದಲಿನ ಸ್ಥಿತಿಗೆ ಮರಳಲಿದೆ. ಆದರೆ ನೆನಪಿಡುವ, ತಾಯಿ ಭೂಮಿಯನ್ನು ಹೇಗೆ ನಡೆಸಿಕೊಳ್ಳುತ್ತಿರುವೆವೆಂದು ಮರುಯೋಚಿಸುವ ಕಾಲ ಈಗ ಬಂದಿದೆ.





Monday, 4 May 2015

ಬುದ್ಧ ಮಾರ್ಗಿಯ ಮೊದಲ ತೊದಲು..




ಜಿಂಯ್ಞ್‌ಗುಡುವ ಸದ್ದಿನಲೇ
ಹುಟ್ಟು ಸಾವು ಕಾಮ ಕ್ರೋಧಗಳ ದಾಟುತ್ತ
ದೇಹ ನಾಲಿಗೆಯಾದ ಜೀರುಂಡೆಯೇ,
ಮೌನ ತಿಳಿಯದ ಮಾತು ನಿನಗೆ.
ಇವತ್ತು ವೈಶಾಖ ಹುಣ್ಣಿಮೆ.
ಕೇಳು ಹೇಳುತ್ತೇನೆ ಮೈಯೆಲ್ಲ ಕಿವಿಯಾದ ಬುದ್ಧನ ಕತೆ..

ಎರಡೂವರೆ ಸಾವಿರ ವರ್ಷಗಳ ಹಿಂದೆ ವೈಶಾಖ ಹುಣ್ಣಿಮೆಯ ದಿನ
ಕಪಿಲವಸ್ತುವಿನ ಮಾಯಾ ಶುದ್ಧೋದನರ ಮಡಿಲು
ಸಿದ್ಧಾರ್ಥ ಬೆಳಕಿನಿಂದ ತುಂಬಿಕೊಂಡಿತು.
ಲುಂಬಿನಿ ವನದಲ್ಲಿ ಹೆತ್ತ ಮರುಗಳಿಗೆ ಮಾಯಾ ಕೊನೆಯುಸಿರೆಳೆದಳು
ಚಿಕ್ಕಮ್ಮ ಪ್ರಜಾಪತಿಯ ಅಂಗೈಯ ಕೂಸಾಗಿ
ನೀಲಿಗಣ್ಣಿನ ಮಗು ಚಂದಿರನಂತೆ ಬೆಳೆಯಿತು
ಇಂದಿಗೆ ಚಿಕ್ಕವನು ನಾಳೆಗೆ ದೊಡ್ಡವನು ಆಯಿತು

ಎಲ್ಲ ಮಕ್ಕಳಿಗೆ ಹೇಗೋ ಹಾಗೇ ಪುಟ್ಟನಿಗೂ
ಕಾಡುಗಿಡಮರಪ್ರಾಣಿಪಕ್ಷಿ ಅಂದ್ರೆ ತುಂಬ ಇಷ್ಟ
ಕತೆ ಕೇಳೋದು, ಕತೆ ಹೇಳೋದು ಅಂದ್ರೆ ಇನ್ನೂ ಇಷ್ಟ
ಸುಮ್ಮನಿರುವವನೇ ಅಲ್ಲ
ಮಗು ಎಲ್ಲಿಂದ ಬರುತ್ತೆ? ಹುಟ್ಟೋದು ಹೇಗೆ?
ಸತ್ತೋರು ಏನಾಗ್ತಾರೆ? ಎಲ್ಲೋಗ್ತಾರೆ? ಯಾಕೆ ಎಲ್ರು ಹುಟ್ಟಿ ಸಾಯಬೇಕು?
ಹೀಗೇ ಏನೇನೋ ಪ್ರಶ್ನೆ ತಿರುಗಾ ಮುರುಗಾ.
ರಾಜ ಪರಿವಾರಕ್ಕೋ
ಇಷ್ಟು ಸಣ್ಣವ ಎಂತೆಂಥ ಪ್ರಶ್ನೆ ಕೇಳುವನಲ್ಲ ಎಂಬ ಸೋಜಿಗ
ಅದೇವೇಳೆ ಬಂದ ದೇಶಾವರಿಯ ಅಯ್ಯನೋರು
ಸಿದ್ಧಾರ್ಥ ಸರ್ವಸಂಗ ಪರಿತ್ಯಾಗಿ ಆಗ್ತಾನೆ ಅಂತ ಹೇಳಿಹೋದರು.

ನಡುಗಿ ಹೋಯಿತು ಅಂತಃಪುರ
ತಮ್ಮ ಏಕೈಕ ಕುವರ ಸರ್ವಸಂಗ ಪರಿತ್ಯಾಗಿ?

ಒಂದು ದಿನ ದೇವದತ್ತ, ಸಿದ್ಧಾರ್ಥ
ಈಜುವ ಚಂದದ ಹಂಸೆ ನೋಡಿದರು
ಸಿದ್ಧಾರ್ಥ ಮೌನವಾಗಿ ಮೈಮರೆತು ನೋಡುತ್ತ ನಿಂತರೆ
ದೇವದತ್ತ ಬಿಲ್ಲೆಳೆದ, ಬಾಣ ಬಿಟ್ಟ.
ಅಯ್ಯೋ, ರೆಕ್ಕೆ ಪಟಪಟಿಸಿ ವಿಲಗುಡುವ ಹಂಸ, ರಗುತಮಯ ಕೊಳ..
ಸಿದ್ಧಾರ್ಥನ ಕಣ್ಣಲ್ಲಿ ಒಂದು ಗೆರೆ ನೀರು
ಓಡಿದವನೇ ಹಕ್ಕಿಯನೆತ್ತಿ ಎದೆಗವಚಿ, ಬಾಣಕಿತ್ತು
ಕೀಚು ಗಂಟಲ ನೋವ ಸಂತೈಸಿದ
ದೇವದತ್ತ ಕೇಳಿದ: ಕೊಡು, ಅದು ನನ್ನದು, ನನ್ನ ಬಾಣಕ್ಕೆ ಗುರಿಯಾದದ್ದು.
ಸಿದ್ಧಾರ್ಥನಿಗೋ ನೊಂದ ಜೀವ ಬಿಡಲಾಗದ ನಂಟು

ಕೊನೆಗೆ ಹಿರಿಯರು ನ್ಯಾಯ ಹೇಳಿದರು:
ಪ್ರಾಣ ತೆಗೆಯಹೊರಟವನಿಗೆ ಸೇರುವುದಿಲ್ಲ, ಅದು ಉಳಿಸಿದವನದು.
ಅಂತೂ ಹಕ್ಕಿ ಜೀವವುಳಿಸಿದವನ ಕೈ ಸೇರಿತು.
ಪುಟ್ಟ ಸಿದ್ಧಾರ್ಥನಿಗೆ ರೆಕ್ಕೆಗಳ ಕರುಣಿಸಿ ಹಾರಿಹೋಯಿತು.

ಗಜತುರಗಕಾಲಾಳಿನ ಅಧಿಪತಿಯಾಗಲಿರುವ ರಾಜ
ಮುಳುವಾಗದೇ ಅವಗೆ ಈ ಜೀವಪರ ನ್ಯಾಯ?
ಕನಲಿದರು ಸೇನೆ ಪರಿವಾರದವರು.
ಹೇಗಾದರೂ ಅವಗೆ ಪ್ರಶ್ನೆಗಳ ಮರೆಸಬೇಕು, ಪ್ರಶ್ನೆ ಮರೆವಂತೆ ಮಾಡಬೇಕು

ಗಾಯನ ವಾದನ ನರ್ತನ ಭೋಜನ
ವೈಭೋಗ, ಸುಖ, ಸಂಪತ್ತುಗಳ ಅವನೆದುರು ಗುಡ್ಡೆಹಾಕಿದರು
ಚಿಗುರು ಮೀಸೆ ಮೊಳೆವುದರಲ್ಲಿ
ಚಂದುಳ್ಳಿ ಸುಗುಣೆ ಯಶೋಧರೆ ಜೋಡಿಯಾದಳು

ಅವ ಬೆಲ್ಲ ಕೇಳಿದ, ರುಚಿ ಹತ್ತಿತು, ತಿಂದ. ಮತ್ತೆ ಕೇಳಿದ, ಕೊಟ್ಟಷ್ಟನ್ನೂ ಮುಗಿಸಿದ.
ಮತ್ತಷ್ಟು ಕೇಳಿದ, ರುಚಿಯಾಗುತ್ತ ಹೋಯಿತು. ಇನ್ನಷ್ಟು, ಇನ್ನೂಇನ್ನೂ.. ಮತ್ತಷ್ಟು..
ಕೊನೆಗೆ ರುಚಿಯೇ ಹೊಟ್ಟೆ ನೋವಾಯಿತು.
ಆದರೂ ಬೇಕು, ಇನ್ನುಇನ್ನೂ, ಇನ್ನಷ್ಟು, ಮತ್ತಷ್ಟು..

ಸಿದ್ಧಾರ್ಥ ಹಗಲು ರಾತ್ರಿಗಳ ಮರೆತ
ನಿದ್ರೆ ಉಪವಾಸ ಮರೆತ
ಜನ, ಜವಾಬ್ದಾರಿ, ಜನಾದರಗಳ ಮರೆತ
ಮುಳುಗಿದ, ಯಶೋಧರೆಯ ನಸುಬಿಸಿಯ ಒಡಲ ಸಗ್ಗದಲ್ಲಿ
ಅವಳೀಗ ಕಾಯಿ ಜಗ್ಗಿದ ಬಳ್ಳಿ..

ಆದರೆ ಪ್ರಶ್ನೆಗಳ ಅಷ್ಟು ಸುಲಭಕ್ಕೆ ಮರೆಯಲಾದೀತೇ ಜೀರುಂಡೆ?
ಇಲ್ಲಿ ಮುಳುಗಿದವು ಅಲ್ಲಿ ಮೇಲೆದ್ದವು.
ಮುಳುಗಿದವನೂ ಅಷ್ಟೆ, ಒಂದಲ್ಲ ಒಮ್ಮೆ ಮೇಲೆ ಬರಲೇಬೇಕು
ಯಾಕೋ ಇದ್ದಕ್ಕಿದ್ದಂತೆ ಒಂದು ದಿನ,
ರಾಜಕುವರ ತಲ್ಲಣಿಸಿದ. ಉಸಿರುಕಟ್ಟುತ್ತಿದೆ.
ಯಾವುದರಲೂ ಖುಷಿ ಇಲ್ಲ. ಯಾವುದೂ ತೃಪ್ತಿ ನೀಡುತ್ತಿಲ್ಲ.
ಏಕೆ ಹೀಗೆ?
ಎಷ್ಟಿದ್ದರೂ ಇನ್ನೂ ಏನೋ ಬೇಕು, ಏನದು?
ಚೆನ್ನನೊಡನೆ ಹೊರ ಸಂಚಾರ ಹೊರಟ.
ಸುತ್ತ ಹೊಲ ಗದ್ದೆ ಹಸಿರು.
ಗೇಯುತ್ತಲೇ ಹೊಡೆಸಿಕೊಳುವ ರೈತನ ಎತ್ತು.
ಮರಕೆ ಹಬ್ಬಿದ ಬಳ್ಳಿ.
ಕುಕ್ಕಿಕುಕ್ಕಿ ಹುಳ ತಿನುವ ಗುಬ್ಬಿ.
ಗುಬ್ಬಿ ಹಿಡಿಯ ಹವಣಿಸುವ ಹದ್ದು
ಹೊರಗೆಲ್ಲ ತುಂಬಿರುವಾಗ ದುಃಖ ಇಷ್ಟೊಂದು
ವೈಭೋಗದಲಿ ನಾನೊಬ್ಬ ಹೇಗೆ ಸುಖವಾಗಿರುವುದು?
ದುಃಖ ಹುಟ್ಟುವುದು ಹೇಗೆ? ನೀಗಿಕೊಳ್ಳೋದು ಹೇಗೆ?
ಎಷ್ಟು ಕೇಳಿದರೂ ಚೆನ್ನನ ಬಳಿ ಉತ್ತರವಿಲ್ಲ.
‘ದೊರೆಮಗನೇ, ನಾ ಬಲ್ಲವನಲ್ಲ..’
ಸತ್ಯ ತಿಳಿಯಬೇಕು ಚೆನ್ನ. ಸತ್ಯ ತಿಳಿಯಬೇಕು..
ಒಂದು ದಿನ, ಮಗ ರಾಹುಲ ಹುಟ್ಟಿದ ದಿನ
ಹಾಲ್ದುಟಿಯ ಮಗುವಿಗೆ ಅವಳು ಮೊಲೆಯೂಡುತಿರುವಾಗ
ನಡುರಾತ್ರಿ ಎದ್ದ, ಹೊರಟೇಬಿಟ್ಟ..


ಊರೂರು ಅಲೆದ, ತಲೆಬೋಳಿಸಿದ, ಚಿಂದಿ ಉಟ್ಟ, ಗೌತಮನಾದ.
ಪಂಡಿತ ಪಾಮರರ ಕೇಳುತ್ತ ಹೋದ.
ಲೋಕದಲಿ ಇಷ್ಟೊಂದು ದುಃಖವಿದೆಯಲ್ಲ, ಅದರ ಮೂಲ ಯಾವುದು?
ಅದನ್ನ ನಿವಾರಿಸೋದು ಹೇಗೆ?
ಯಾರಿಗೆ ತಾನೇ ಗೊತ್ತು?
ಎಲ್ಲರೂ ಹುಡುಕಾಟ ನಡೆಸಿದ್ದರು
ಕೆಲವೊಮ್ಮೆ ಹಾಗೇ ಜೀರುಂಡೆ,
ಏನು ಹುಡುಕುತ್ತ ಇದೀವಿ ಅಂತ ಗೊತ್ತಿಲ್ಲದಿದ್ದರೆ
ಹುಡುಕುತ್ತಲೇ ಇರಬೇಕಾಗುತ್ತೆ..

ಆರು ವರುಷ ಕಠೋರ ತಪಸು ಮಾಡಿದ
ಘನಘೋರ ಉಪವಾಸ
ಅನ್ನ ಬಿಟ್ಟ ಹಾಲು ಬಿಟ್ಟ
ಹಣ್ಣುಹಂಪಲು ಬಿಟ್ಟ ಗೆಡ್ಡೆಗೆಣಸು ಬಿಟ್ಟ
ಬರಿ ಒಂದು ಎಲೆ, ಅಥವಾ ಒಂದು ಕಾಯಿ
ಕೆಲವೊಮ್ಮೆ ಅದೂ ಇಲ್ಲ
ನಿದ್ರೆಯಿಲ್ಲ, ನೆರಳಿಲ್ಲ, ಊಟವಿಲ್ಲ, ಮೆತ್ತೆಯಿಲ್ಲ
ಮಾತುಕತೆಗೆ ಗೆಳೆಯರಿಲ್ಲ
ಆರು ವರ್ಷ ಏಕಾಂಗಿ ಅಲೆದ, ಅರಸಿದ
ಶಿಥಿಲವಾಯಿತು ದೇಹ, ಆದರೂನು ಕಾಣಲಿಲ್ಲ ಸತ್ಯ.
ಒಂದು ಚಳಿಯ ಬೆಳಗು ಮೀಯಲೆಂದು ನಡುಗುತ್ತ ನದಿಗಿಳಿದವ
ಕಣ್ಣು ಕತ್ತಲಿಟ್ಟು ಕುಸಿದ
ಏನು ಎಂತು ಅರಿವು ತಪ್ಪಿ ಮುಳುಗಿದ, ತೇಲಿದ, ಮುಳುಗಿದ, ತೇಲಿದ
ಅಲ್ಲೇ ಆಚೆ ಅಡವಿಯ ಹಳ್ಳಿ ಹುಡುಗಿ ಸುಜಾತ
ನೀರಿಗಾಗಿ ಬಂದವಳು ದಂಡೆಯಲಿ ನಿಂದು ನೋಡುತ್ತಾಳೆ
ಏನೋ ಒಂದು ನದಿನೀರಲ್ಲಿ ಮುಳುಗುತ್ತಿದೆ, ತೇಲುತ್ತಿದೆ..
ಏನದು? ಒಣಕಾಷ್ಠವೋ? ಕೃಶದೇಹವೋ? ಪ್ರೇತವೋ?
ಒಂದೆಡೆ ಭಯ, ಮತ್ತೊಂದೆಡೆ ಮರುಕ. ಕೊನೆಗು ಕರುಣದ ಕೈ ಮೇಲಾಯಿತು.
ಎಲುಬಿನ ಹಂದರವ ಮೇಲೆತ್ತಿ ತಂದಳು.
ಓಹ್, ಹೊಟ್ಟೆಗೆ ಹತ್ತಿಕೊಂಡ ಬೆನ್ನು ಎದೆ. ಕ್ಷೀಣವಾಗಿ ಉಸಿರಾಡುತ್ತಿದೆ, ಇದು ಶವವಲ್ಲ
ಅರೆತೆರೆದ ಕಣ್ಣು ಮಿಟುಕಿಸುತ್ತಿದೆ, ಇದು ಪ್ರೇತವಲ್ಲ
ಕಂಗಳಲಿ ಎಂಥ ತೇಜಸ್ಸು! ಯಾರಿವನು ಕೃಶದೇಹಿ?
ಸೋಜಿಗಬಟ್ಟು ಓಡಿಹೋಗಿ ಪಾಯಸದ ಪಾತ್ರ ತಂದಳು
ಒಂದೊಂದೇ ಗುಟುಕು ಒಳಗಿಳಿದಂತೆ ಜೀವ ಸಂಚಾರವಾಯಿತು..

ಸುಜಾತ, ನದಿ, ನಾಲಿಗೆಯ ಮೇಲೆ ಸಿಹಿ
ಕಣ್ಣುಬಿಟ್ಟ ಗೌತಮನಿಗೆ ಹೊಸಲೋಕ ಕಂಡಂತಾಯಿತು
ಕಠೋರ ತಪಸ್ಸು ಸತ್ಯದರ್ಶನ ಮಾಡಿಸಲಾರದೆಂದು ಹೊಳೆದುಹೋಯಿತು
ದೇಹವ ಲಲ್ಲೆಗರೆದು ಮುದ್ದಿಸಿದರೆ ಸತ್ಯ ತಿಳಿಯುವುದಿಲ್ಲ
ದೇಹ ಲಯಗೊಳಿಸಿದರೂನು ಸತ್ಯ ಹೊಳೆಯುವುದಿಲ್ಲ
ಅತಿಯಾದುದೆಲ್ಲವೂ ವಿಷವೇ, ಅಮೃತವೂ ಸಹಾ..
ಮುವ್ವತ್ತೈದರ ಗೌತಮ ನಡೆದ ಮಧ್ಯಮಮಾರ್ಗದಲಿ
ದೇಹವೆಂಬ ವಾದ್ಯವ ಶೃತಿಗೊಳಿಸಿದ

ಧ್ಯಾನದತ್ತ ಈಗವನ ಚಿತ್ತ
ಹಿಡಿ ಮಾಂಸದ ದೇಹವೇ ಧ್ಯಾನವಾಗಿ ಅರಳಿಯ ಕೆಳಗೆ ಕುಳಿತ
ಉತ್ತರ ಸಿಗುವವರೆಗೆ ಏಳಲಾರೆನೆಂದು ನಿಶ್ಚಲನಾದ
ನಲವತ್ತೊಂಭತ್ತು ದಿನ.
ಬಿಳಲೊಂದು ಕೆಳಗಿಳಿಯಿತು
ಎಳೆ ಚಿಗುರು ಹೊರಗಿಣುಕಿತು
ಹೂವು ತೊಟ್ಟು ಕಳಚಿತು, ಕಾಯಿ ಕಚ್ಚಿ ತೂಗಿತು
ಹಗಲು ಸರಿಯಿತು ಇರುಳು ಹರಿಯಿತು
ನಲವತ್ತೊಂಭತ್ತನೇ ದಿನ
ಒಂದು ಎಲೆ
ಒಂದೇ ಒಂದು ಅರಳಿ ಎಲೆ
ಗಾಳಿಯಲ್ಲಿ ಬೆಳದಿಂಗಳಲ್ಲಿ ನಿಧಾ..ನ ಹೊಯ್ದಾಡುತ್ತ ತುಯ್ದಾಡುತ್ತ
ನಿಮೀಲಿತ ನೇತ್ರದೆದುರು ನೆಲ ಮುಟ್ಟಿತು..

ಅಕಾ, ಝಗ್ಗನೆ ಬೆಳಕಾಯಿತು!



ಈ ಲೋಕದಲಿ ಯಾವುದೂ ಅಳಿಯುವುದಿಲ್ಲ
ಎಲ್ಲವೂ ಬದಲಾಗುತ್ತವೆ
ಕ್ರಿಯೆಪ್ರತಿಕ್ರಿಯೆ ನಿರಂತರ ಸಂಭವಿಸುತ್ತಲೇ ಇರುತ್ತದೆ
ಯಾವ ಬೀಜ ಬಿತ್ತುವೆಯೋ ಅದೇ ಬೆಳೆ ಬರುತ್ತದೆ
ಇದು ಸತ್ಯ. ಸತ್ಯವನರಿಯದ ಆಸೆಯೇ ದುಃಖಕ್ಕೆ ಮೂಲ

ಸತ್ಯಗುಣ ಎಚ್ಚೆತ್ತು ಸಿದ್ಧಾರ್ಥ ಗೌತಮ ಬುದ್ಧನಾದ.
ಇರುವುದ ಇರುವ ಹಾಗೇ ತಿಳಿವ ಅರಿವು ಹುಟ್ಟಿ ಅರಹಂತನಾದ:

ಸಿದ್ಧಾರ್ಥ ಗೌತಮ ಬುದ್ಧನಾದ ಜೀರುಂಡೆ.
ತನ್ನೊಳಗೆ ಬೆಳಗಿದ ಹಣತೆಯಿಂದ ಮತ್ತೈದು ಹಣತೆ ಬೆಳಗಿದ
ಅವರೈವರು ಮತ್ತಷ್ಟು ಸೊಡರ ಹಚ್ಚಿದರು..
ಸಂಘ ಹುಟ್ಟಿತು
ಅವನ ಮಾತಿನಿಂದ ಅಸತ್ಯ ದೂರವಾಯಿತು
ತೆರೆದುಕೊಳ್ಳುತ್ತ ಹೋದ
ಸತ್ಯದ ಮೇಲಿನ ಮುಸುಕುಗಳು ತಂತಾನೆ ಜಾರತೊಡಗಿದವು

ಅವ ಕಿವಿಯಾದ
ಮೈಯಿಡೀ ಕಿವಿಯಾಗಿ ಕೇಳಿದ
ಅವ ಕಣ್ಣಾದ
ಪುಟ್ಟ ಇರುವೆಯ ನೋಟವಾದ
ಅವ ಕರುಣೆಯಾದ
ಮೈತ್ರಿಯೇ ಗಾಳಿಯಾಗಿ ಉಸಿರಾಡಿದ

ಕೊಲಬೇಡ, ಕಳಬೇಡ, ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ

ಕಸ ಬೀಳುತ್ತಲೇ ಇರುತ್ತದೆ; ಒಳಹೊರಗ ಗುಡಿಸುತ್ತಲೇ ಇರು 
ಅಣುವಿನಷ್ಟೂ ಕಸ ಬಿಡದೆ ಗುಡಿಸು, ಕಸದ ಬೆಟ್ಟ ಬೆಳೆಯಲಾರದು
ಒಳಗೆ ಗುಡಿಸಿ ಗುಡ್ಡೆಯಾದರೆ ಹಿಡಿ ಕಸ, ಹೊರಜಗ ಬೆಳಗಬಲ್ಲದು

ಉರಿವ ಹಣತೆ ಏನನೂ ಉಳಿಸುವುದಿಲ್ಲ ಬೆಳಕಿನ ಹೊರತು
ಬೆಳಗು, ಬೆಳಕಾಗು ಉಳಿಸದೆ ಏನನೂ ಬೆಳಕಿನ ಹೊರತು

ದುಃಖವಿದೆ, ದುಃಖ ಎಲ್ಲರಿಗೂ ಇದೆ
ದುಃಖ ಮೂಲ ನಾವೇ ಆಗಿದ್ದೇವೆ
ದುಃಖಮೂಲ ಕ್ರಿಯೆಯ ತ್ಯಜಿಸು
ಅರಿವೇ ದುಃಖ ಕೊನೆಗೊಳಿಸುವ ಮಾರ್ಗವಾಗಿದೆ

ಹೀಗೆ ಅವ ಕೇಳುತ್ತ ಹೋದ; ಹೇಳುತ್ತ ಹೋದ
ಆಡುತ್ತ ಹೋದ, ಅರಿಯುತ್ತ ಹೋದ
ನಲವತ್ತೈದು ವರುಷ ಗಂಗೆಯ ತಟದ ಗಾಳಿಯಾಗಿ ಬೀಸಿದ..



ಮಗ ಬುದ್ಧನಾದದ್ದು ಅರಿತು ಹಿಗ್ಗಿದ ಶುದ್ಧೋದನ, ಬಾರೆಂದು ಕರೆದ ಕಪಿಲವಸ್ತುವಿಗೆ
ಒಂದಲ್ಲ ಎರಡಲ್ಲ ಹತ್ತು ಸಲ, ಹತ್ತು ಸಲ ಕರೆ ಕಳಿಸಿದ
ಒಂಭತ್ತು ಸಲ ಕರೆಯ ಬಂದವರು ಕರೆಯನೇ ಮರೆತು ಸಂಘಮಿತ್ರರಾಗಿ ಅಲ್ಲೇ ನಿಂತರು
ಹತ್ತನೆಯ ಸಲ, ಅವನ ಬಾಲ್ಯದ ಗೆಳೆಯ ಕಲುದಾಯಿ, ತಂದೆಯ ಕಾತುರ ಅರುಹಿದ
ಹೊರಟಿತು ಬುದ್ಧ ಸಂಘ ಕಪಿಲವಸ್ತುವಿನ ಕಡೆಗೆ
ತಲುಪಿತು ಎರಡು ತಿಂಗಳ ಬಳಿಕ ಸಿಂಗರಗೊಂಡ ನಗರದ ಹೆಬ್ಬಾಗಿಲಿಗೆ
ರಾಜಕುವರ, ಅಲ್ಲಲ್ಲ ಸಿದ್ಧಾರ್ಥ ಬುದ್ಧನ ಎದುರುಗೊಳಲು ತವಕಿಸುತಿದೆ ಊರಿಗೂರೇ
ಬುದ್ಧಬಳಗಕ್ಕೆ ಉಣಿಸಲು ಎಡೆಬಿಡದೆ ದುಡಿಯುತಿದೆ ಅರಮನೆಯ ಪಾಕಶಾಲೆ
ಬುದ್ಧನಾದರೋ ಕಪಿಲವಸ್ತುವಿನ ಕೇರಿಗಳಲಿ ಎತ್ತುತ್ತಿದ್ದಾನೆ ಭಿಕ್ಷೆ
‘ಅಕ್ಕಯ್ಯಾ, ಬಂದಿರುವೆ ಮನೆ ಬಾಗಿಲಿಗೆ, ಕರುಣದ ಭಿಕ್ಷೆ ನೀಡು’
‘ಮಾವಯ್ಯಾ, ಬಂದಿರುವೆವು ನಿಮ್ಮ ಮನೆ ಬಾಗಿಲಿಗೆ, ಕರುಣದ ಕೋರಣ್ಯ ನೀಡು..’
ಕನಲಿ ಶುದ್ಧೋದನ ಓಡಿಬಂದು ನಿಂತ ಮಗನೆದುರಲಿ
ಅಯ್ಯೋ, ಎಷ್ಟು ಸೊರಗಿರುವೆ ಸಿದ್ಧಾರ್ಥ ಕುವರ?
ಅಹ, ಕಂಗಳ ಕಾಂತಿಯೇ, ನಿನಗೆ ನಮೋನಮಃ
‘ಮಗನೇ, ನಮ್ಮದು ವೀರಧೀರಕಲಿಗಳ ಪರಂಪರೆ
ನಾವು ನೀಡುವವರೇ ಹೊರತು ಬೇಡುವುದಿಲ್ಲ ಭಿಕ್ಷೆ’

ಶಾಂತನಾಗಿ ಉತ್ತರಿಸಿದ ತಥಾಗತ ಬುದ್ಧ
‘ರಾಜ, ಭಿಕ್ಷೆ ನಿನ್ನ ಪರಂಪರೆಯಲ್ಲ, ಇದು ಬುದ್ಧರ ಪರಂಪರೆ
ಸಾವಿರಾರು ಬುದ್ಧರು ಭಿಕ್ಷೆ ಬೇಡಿಯೇ ಬುದ್ಧರಾದರು’

ಬುದ್ಧನ ನೋಡಲು ನೆರೆಯಿತು ಇಡಿಯ ಕಪಿಲವಸ್ತುವೇ
ಬರದವಳು ಒಬ್ಬಳೇ ಯಶೋಧರೆ
ಬಂದು ಯಾರ ನೋಡುವುದು? ಏನು ಆಡುವುದು?
ಬಿಂಕವೋ ಭಕುತಿಯೋ ತಿಳಿಯದೆ ಕುಳಿತಳು ಒಳಗೆ

ಅರಮನೆಗೆ, ಹುಟ್ಟಿದ ಮನೆಗೆ ಬಾ ಸಿದ್ಧಾರ್ಥ - ತಂದೆಯ ಆಗ್ರಹ
ಬಂದ ಬುದ್ಧ ಅರಮನೆಗೆ, ಬಂದರು ಸಂಘಮಿತ್ರರು ಅರಮನೆಗೆ.
ಅರಮನೆಯ ಸುವರ್ಣ ಸಿಂಹಾಸನಗಳು ಆಪುಹುಲ್ಲಿನ ಚಾಪೆಗಳಾದವು
ಸೆಟೆದ ಹುರಿಮೀಸೆಗಳಲಿ ನಗುವು ಸುಳಿಯಿತು
ಪಂಜರದ ಸರಳು ಚಿಗುರಿ ಹಕ್ಕಿ ಹೊರಹಾರಿದವು

ಅರಮನೆಯ ಜೀವಗಳು ಸಂಘಮಿತ್ರರಾದರು
ಲೋಕಕ್ಕೆ ಗುರುವಾದವ ಗುರುವಾಗಲಿ ತನ್ನ ಮಗುವಿಗು
ಎಳೆಯ ರಾಹುಲನ ಕರೆತಂದು ಅಮ್ಮ ಹಿಂದೆ ಸರಿದು ನಿಂತಳು
ನಂದ ಅನಿರುದ್ಧ ಆನಂದ ರಾಹುಲ
ಸಂಘ ಬೆಳೆದೇ ಬೆಳೆಯಿತು
ಶಾಕ್ಯಕುಲದ ಅರಸೊತ್ತು ಶಾಕ್ಯಮುನಿಯ ಹಿಂದೆ ನಡೆಯಿತು
ಐದೇ ವರುಷ, ಶುದ್ಧೋದನನ ತರುವಾಯ
ಅಂತಃಪುರದ ಜೀವಗಳೂ ತೇರಿಯರಾದವು

ಇಂತು ನಡೆದಿದ್ದವಗೆ ಒಮ್ಮೆ
ದಾರಿಯಲಿ ಕಿಸಾಗೋತಮಿ ಸಿಕ್ಕಳು
ತನ್ನ  ಒಬ್ಬನೇ ಮಗನ ಸಾವಿನಿಂದ ಕನಲಿ ಕಂಗೆಟ್ಟು ಹುಚ್ಚಿಯಾದವಳು:
ಬುದ್ಧನ ಪಾದದ ಬಳಿ ಶವವಿಟ್ಟು ರೋದಿಸಿದಳು:
ಲೋಕಗುರುವೆ, ಸುಗತನೇ,
ಬದುಕಿಸಿಕೊಡು ನನ್ನ ಒಡಲ ಕುಡಿಯ ಭಂತೇ.

ಎಚ್ಚೆತ್ತವನ ಇರುಳು ದೀರ್ಘ
ದಣಿದವನ ದಾರಿಯೂ ದೀರ್ಘ
ಗೋತಮಿ, ಹಾವು ಪೊರೆ ಕಳಚುವಂತೆ
ಭೂತಕಾಲವ ಮತ್ತೆಮತ್ತೆ ಕಳಚಿಕೊಳ್ಳಬೇಕು
ಯಾವುದಕೆ ಅಂಟಿಕೊಂಡಿರುವೆವೋ ಅದನಷ್ಟೆ ನಾವು ಕಳಕೊಳ್ಳುವೆವು

ಸಾವು, ನೋವಿನಿಂದ ತಪ್ಪಿಸಿಕೊಂಡವರಾರೂ ಇಲ್ಲ
ಮೋಹಕಿಂತ ದೊಡ್ಡ ಬೆಂಕಿಯಿಲ್ಲ
ಹಗೆತನಕಿಂತ ವಿಷಜಂತುವಿಲ್ಲ
ಅವಿವೇಕಕಿಂತ ಪಾಶವಿಲ್ಲ
ದುರಾಸೆಗಿಂತ ದೊಡ್ಡ ಬಿರುಗಾಳಿಯಿಲ್ಲ

ಯಾವ ಹಿತನುಡಿಯೂ ಗೋತಮಿಯ ಒಡಲುರಿ ನಂದಿಸಲಿಲ್ಲ
ಅವಳದೊಂದೇ ಮಾತು: ಮಗನ ಜೀವ ಮರಳಿಸು
ಕೊನೆಗವಳ ಕೋರಿಕೆಯ ಮನ್ನಿಸಿದ ಬುದ್ಧ, ಆದರೊಂದು ಷರತ್ತು:
ನೀನು ಸಾವಿರದ ಮನೆಯ ಸಾಸಿವೆಕಾಳು ತರಬೇಕು.

ಮಗನ ಮರಳಿ ಪಡೆವ ಗಳಿಗೆ ನೆನೆನೆನೆದು ಹಿಗ್ಗಿದಳು
ಹೊರಟಳು, ಮಗುವಿನ ಶವವ ಎದೆಗಪ್ಪಿ ಹಿಡಿದು.
‘ಅವ್ವಾ, ಸಾವು ಬರದ ಮನೆಯವರು ಹಿಡಿ ಸಾಸಿವೆ ಕಾಳು ಕೊಡಿ,
ಅಯ್ಯಾ, ನೀವು ಕೊಡಬಲ್ಲಿರೇ ಹಿಡಿ ಸಾಸಿವೆ ಕಾಳು?
ಅಕ್ಕಾ, ನನಗೆ ಬೇರೇನೂ ಬೇಡ, ಒಂದೇ ಒಂದು ಹಿಡಿ ಸಾಸಿವೆಕಾಳು..’
ಒಂದು ಹಿಡಿ ಸಾಸಿವೆ ಕೊಡಲು ಎಲ್ಲರೂ ಸಿದ್ಧರು
ಆದರೆ ಎಲ್ಲವೂ ಸಾವು ಕಂಡ ಸೂರು.
ಸುತ್ತಿಸುತ್ತಿ ಬಳಲಿದವಳ ಅಂಗಾಲು ಕೆಂಪು ದಾಸಾಳ ಹೂವು
ಅಲೆದ ಗೋತಮಿಯ ಪಾದದರಿವು ಸತ್ಯ ತಿಳಿಸಿತು:
ಗಟ್ಟಿಯಾದಳು. ಶಕ್ತಿಯಾದಳು.
ಸಾವು, ನೋವಿನಿಂದ ತಪ್ಪಿಸಿಕೊಂಡವರಾರೂ ಇಲ್ಲ.
ಏಕೆ ಅಳಲಿ? ಏಕೆ ದುಃಖಿಸಲಿ? ನನ್ನಂತೆಯೇ ಎಲ್ಲ
ನಾನಿನ್ನು ಅಳುವುದಿಲ್ಲ, ನಾನಿನ್ನ ದುಃಖಿಸುವುದಿಲ್ಲ..

ಹೀಗೆ ಜೀರುಂಡೆ, ಮಗುವಿನ ದುಃಖದಲಿ ಕಂಗೆಟ್ಟವಳು ತೇರಿಯಾದಳು.
ಬುದ್ಧ ಕೇಳುತ್ತ ಹೋದ, ಹೇಳುತ್ತ ಹೋದ
ಆಡುತ್ತ ಹೋದ, ಅರಿಯುತ್ತ ಹೋದ..


ಒಮ್ಮೆ ಬುದ್ಧ ಮಾರ್ಗದಲಿ ಅಂಗುಲಿಮಾಲ ಎದುರಾದ.
ಜೀರುಂಡೆ, ದುರ್ಭರ ಕ್ಷಣಗಳು ಕಣ್ಣು ತೆರೆಸಬಲ್ಲವು, ಸಾಕ್ಷಿಗೀ ಕತೆ ಕೇಳು.

ಕೋಸಲ ರಾಜ್ಯದಲೊಂದು ಬೆಳಿಗ್ಗೆ ಬುದ್ಧ ಧ್ಯಾನ ಮುಗಿಸಿ ದಟ್ಟಡವಿಯತ್ತ ನಡೆದ
ದಾರಿಹೋಕರು, ರೈತರು ಕೂಗಿದರು
ಹೋಗಬೇಡ ಅತ್ತ, ಇದ್ದಾನಲ್ಲಿ ಅಂಗುಲಿಮಾಲನೆಂಬ ದೈತ್ಯ, ನರಹಂತಕ.
ಹೇಳಿದ್ದು ಕೇಳಿಯೇ ಇಲ್ಲದವನಂತೆ ಬುದ್ಧ ನಡೆದ, ಶಾಂತ, ನಿರ್ಲಿಪ್ತ
ಅನತಿ ದೂರ ನಡೆವುದರಲಿ ಕೇಳಿತು ನೆಲಕೆ ಹೆಜ್ಜೆಯಪ್ಪಳಿಸುವ ಶಬ್ದ
ಯಾರೋ ಓಡಿ ಬರುತ್ತಿದ್ದಾರೆ, ಸನಿಹ ಬರಬಯಸುತ್ತಾರೆ
ಬುದ್ಧ ನಿಧಾನಿಸಿದ. ಆದರೂ ಬೆಂಬತ್ತಿದವರು ಮುಟ್ಟದೇ ಹೋದರು.
‘ಏಯ್, ನಿಲ್ಲು ಯಾರದು’ ಎಂದವರು ಅನುವುದಕ್ಕೂ, ಬುದ್ಧ ನಿಲುವುದಕ್ಕೂ ಸರಿಹೋಯಿತು.

ಕೊರಳಲಿ ಬೆರಳಮಾಲೆ
ಕೊರಳ ಸುತ್ತ ರಗುತದ ಕಲೆ
ಏರಿಳಿವ ಎದೆ, ಕೆದರಿದ ತಲೆ, ಉಗ್ರ ಕಣ್ಣು, ಕಂಪಿಸುವ ಮೂಗಿನ ಹೊಳ್ಳೆ
ಸುತ್ತ ಪಸರಿಸಿತು ಹಸಿ ರಕ್ತ, ಬೆವರ ವಾಸನೆ.

‘ಏಕಿಷ್ಟು ಆತಂಕಗೊಂಡಿರುವೆ ಮಗೂ?’

ಮಗೂ..

ಮಗುವೆಂಬ ಪದ ಕೇಳಿದ್ದೇ ಆ ಭಯಾನಕ ಮಾಂಸದ ಬೆಟ್ಟ ಮೇಣದಂತೆ ಕರಗತೊಡಗಿತು. ಪುಟ್ಟ ಸೊಡರೊಂದು ಹೊತ್ತಿಕೊಂಡಿತು.

‘ನಾನು ತಕ್ಷಶಿಲೆಯವನು. ಗುರು ದಕ್ಷಿಣೆ ಕೊಡಲು ಸಾವಿರ ಬಲ ಕಿಬ್ಬೆರಳ ಸಂಗ್ರಹಿಸುತ್ತಿರುವವನು.
ಕಾಡಿ ಬೇಡಿ ಒಂದೊಂದನೇ ಪಡೆದು ಮರಕೆ ನೇತುಹಾಕಿದೆ. ಅವು ಹದ್ದುಕಾಗೆಗಳ ಪಾಲಾದವು.
ಈಗ ಕಾಡುವುದಿಲ್ಲ, ಬೇಡುವುದಿಲ್ಲ. ಕೊಲ್ಲುವುದು, ಪಾರಿತೋಷಕವ ಕೊರಳಲೇ ಧರಿಸುವುದು.
ನನ್ನ ಬಳಿಯೀಗ ಸಾವಿರಕೆ ಒಂದೇ ಒಂದು ಕಿರುಬೆರಳು ಕಡಿಮೆ.
ಗುರುದಕ್ಷಿಣೆ ನೀಡಿ ತಾಯ್ತಂದೆಯರ ನೋಡಹೋಗಲು ಒಂದೇ ಒಂದು ಕಿರುಬೆರಳು ಕಡಿಮೆ.
ಪಂಡಿತನಾಗಿ ಸತಿಸುತರೊಡನೆ ಬದುಕಲು ಒಂದೇ ಒಂದು ಕಿರುಬೆರಳು ಕಡಿಮೆ.
ಹಿಂಸ್ರಪಶುವಿನ ವನವಾಸ ತಪ್ಪಲು ಒಂದೇ ಒಂದು ಕಿರುಬೆರಳು ಕಡಿಮೆ.
ಒಂದು ಬೇಕು. ಒಂದೇ ಒಂದು. ನೀನಾಗಿಯೇ ಕೊಟ್ಟರೆ ಜೀವವುಳಿಯುತ್ತದೆ. ಇಲ್ಲವಾದಲ್ಲಿ ಬೆರಳೂ ಇಲ್ಲ, ಕೊರಳೂ ಇಲ್ಲ..’

‘ಮಗೂ ಒಂದೇಕೆ, ಎರಡನೂ ತಗೊ. ಕಿರುಬೆರಳೇಕೆ, ಹೆಬ್ಬೆರಳನೂ ತಗೋ.
ಬರೀ ಬೆರಳೇಕೆ, ಪಾದ ಕೈಗಳನೂ ತಗೋ. ಈ ಪ್ರಾಣವೂ ನಿನದೇ, ತಗೋ.
ಹೇಗಿದ್ದರೂ ಅಳಿಯಬೇಕು ಒಂದಲ್ಲ ಒಂದು ದಿನ ಎಲ್ಲವೂ..’

ಆಡುವವ, ಬರಿಯ ಮಾತನಾಡುವವ ಜ್ಞಾನಿಯಲ್ಲ
ಶಾಂತ, ನಿರ್ಭಯ, ಜೀವ ಪ್ರೀತಿಯ ಸತ್ಯನೇ ಜ್ಞಾನಿ

ದುರ್ಮಾರ್ಗದತ್ತ ಸೆಳೆಯಲು ಶತ್ರುಗಳು ಬೇಕಿಲ್ಲ, ನಿನ್ನ ಮನಸು ಸಾಕು.
ಮಾರ್ಗ ಆಗಸದಲಿಲ್ಲ, ನಿನ್ನ ಎದೆಯೊಳಗೇ ಇರುವುದು ಹುಡುಕು.
ಸಾವಿರ ಕದನಗಳ ಗೆಲುವುದಕಿಂತ ನಿನ್ನ ನೀ ಗೆಲ್ಲು,
ಆ ವಿಜಯವನಾರೂ ಕಸಿಯಲಾರರು.

ಕೋಪದ ಕೆಂಡ ಅಂಗೈಲಿ ಹಿಡಿದು ತೂರಹೊರಟರೆ
ಮೊದಲು ಅದು ನಿನ್ನ ಕೈಯನೇ ಸುಡುತ್ತದೆ
ನಿಜವ ಅರಿತುಕೊ, ಆಗ ನೈಜ ಪ್ರೇಮ ಅರಳುತ್ತದೆ

ಬುದ್ಧ ಹಸ್ತ ಅಂಗುಲಿಮಾಲನ ಬಳಿ ಚಾಚಿತು. ಮುಂಗುರುಳ ನೇವರಿಸಿ ಬೆವರ ಒರೆಸಿತು. ಕಿರುಬೆರಳು ಕೇಳಿದರೆ ಪ್ರಾಣವನೇ ಕೊಡಲೊಪ್ಪಿದವ; ಭಯಗೊಳದೆ ಬೆವರದೆ ಆತಂಕಗೊಳದೆ ಕೈಚಾಚುವವ, ಯಾರೀತ? ಯಾರೀತ?

ಓಹ್ ಬುದ್ಧನೇ ಇರಬೇಕು. ಮರುಕ್ಷಣ ಅಂಗುಲಿಮಾಲ ಸಂಘಮಿತ್ರನಾದ.

ಪ್ರಜಾಪಾಲಕನ ಕೆಲಸ ಪೀಡಕರ ದಂಡಿಸುವುದು ಎಂದು ತಿಳಿದವನೇ ರಾಜ.
ಕೋಸಲದ ಪ್ರಸೇನಜಿತು ಅಂಗುಲಿಮಾಲನ ಸಂಹರಿಸಲು ಬಂದ.
ಮಾರ್ಗಮಧ್ಯೆ ಬುದ್ಧಗುರುವಿನ ದರ್ಶನಕೆ ನಿಂದ.

ಬುದ್ಧನೆಂದ: ರಾಜ, ನೀ ಸಂಹರಿಸಹೊರಟ ಅಂಗುಲಿಮಾಲ ಭಿಕ್ಕುವಾಗಿದ್ದರೆ?

ಎಲ್ಲಿಯಾದರೂ ಉಂಟೆ? ನರಹಂತಕರು ಭಿಕ್ಕುವಾದಾರೇ ಬುದ್ಧ?

ಅವನನ್ನ ನಿನಗೆ ತೋರಿಸಿದರೆ?

ಅವ ಭಿಕ್ಕುವಾಗಿದ್ದರೆ ಸಿಗಲಿದೆ ಕ್ಷಮಾದಾನ.

ಹೌದೇ, ಹಾಗಾದರೆ ನೋಡಲ್ಲಿ, ಓ ಅಲ್ಲಿ ಧ್ಯಾನಸ್ಥನಾಗಿರುವ ಏಳು ಆನೆಗಳಷ್ಟು ಬಲಶಾಲಿ ತರುಣ, ಅವನೇ ಅಂಗುಲಿಮಾಲ, ಅಲ್ಲಲ್ಲ, ಅವನ ಕೊರಳಲೀಗ ಬೆರಳ ಮಾಲೆಯಿಲ್ಲ. ಅವನ ಹುಟ್ಟು ಹೆಸರು ಅಹಿಂಸಕ.

ಕಿವಿಯನ್ನು ನಂಬದಿದ್ದರೂ ಕಣ್ಣುಗಳ ನಂಬಲೇಬೇಕು. ಕಣ್ಣುಗಳನಲ್ಲದಿದ್ದರೂ ಬುದ್ಧನ ನಂಬಲೇಬೇಕು.
ಪ್ರಸೇನಜಿತು ಅಹಿಂಸಕನಿಗೆ ವಸ್ತ್ರಗಳ ನೀಡಿ ಹೊರಟ.

ಆದರೆ ಅಹಿಂಸಕನಿಗೆ ಪಶ್ಚಾತ್ತಾಪ, ಪಾಪಪ್ರಜ್ಞೆ.

‘ನರಹತ್ಯೆಗೇನು ಪ್ರಾಯಶ್ಚಿತ್ತ? ಶುದ್ಧಗೊಳಿಸುವೆಯ ಬುದ್ಧಗುರುವೆ ನನ್ನ?’

ಯಾರೂ ಯಾರನೂ ಪವಿತ್ರಗೊಳಿಸಲಾರರು, ಅಪವಿತ್ರಗೊಳಿಸಲೂ ಆರರು
ಪವಿತ್ರ, ಅಪವಿತ್ರಗಳು ನಿನ್ನಲೇ ಇವೆ
ಎಲ್ಲ ಜೀವಗಳನಿನ್ನು ಸಮನಾಗಿ ಪ್ರೀತಿಸು, ಅದುವೇ ಧರ್ಮ.

ಹೀಗೆ ಬುದ್ಧ ಹೇಳುತ್ತ ಹೋದ, ಕೇಳುತ್ತ ಹೋದ
ಮೈಯೆಲ್ಲ ಕಿವಿಯಾದ, ಕರುಣೆಯೇ ಉಸಿರಾದ..



ಕಾಲವೇ ಇರದವಗೆ ವಯಸ್ಸಾಗುವುದಿಲ್ಲ ಜೀರುಂಡೆ.
ಆದರೆ ಅರಳಿಯ ಎಲೆ ಹಳದಿಯಾಗತೊಡಗಿತು.
ಬುದ್ಧ ಕೇಳಿದ: ಕಾಯ ಕ್ಷೀಣಿಸುತ್ತಿದೆ, ಆಧಾರ ಬೇಕದಕೆ
ಯಾರಾದರೊಬ್ಬರು ಸಹಾಯಕರಾಗಬಲ್ಲಿರಾ ನನಗೆ?

ಲೋಕಗುರುವಿನ ಸಹಾಯಕೆ ಎಲ್ಲ ನಾಮುಂದೆ ತಾಮುಂದೆ..
ಆದರೆ ದೂರದಲಿ ಕುಳಿತಿದ್ದನೊಬ್ಬ ಸುಮ್ಮನೆ
ಅವ ಆನಂದ. ಸಿದ್ಧಾರ್ಥನ ಪೂರ್ವಾಶ್ರಮದ ಬಂಧು.

ಅರೆ ನೀನೇಕೆ ಅಷ್ಟು ದೂರ? ಸುಮ್ಮನಿರುವುದು?

ನಿನಗಾರು ಬೇಕೆಂದು ನಿನಗೇ ಗೊತ್ತಲ್ಲ ಬುದ್ಧ, ಮತ್ತೇಕೆ ನೀನು ಪ್ರಶ್ನಿಸುವುದು?

ಹಾಗಾದರೆ ಆಗಬಲ್ಲೆಯಾ ನನ್ನ ಸಹಾಯಕ ನೀನು?

ಯಾಕಿಲ್ಲ? ಆದರೆ ಕೆಲ ಷರತ್ತುಗಳಿಗೆ ನೀ ಒಪ್ಪಬೇಕು.

ಬುದ್ಧನಿಗೂ ಷರತ್ತೇ? ಆಯಿತು ಕೇಳೋಣ ಹೇಳು.

ನಿನಗಿತ್ತ ಆಹಾರ ನನಗೆ ಕೊಡಬಾರದು; ನಿನ್ನ ಕರೆದ ಮನೆಗೆ ನನ್ನ ಒಯ್ಯಬಾರದು; ನಿನಗಿತ್ತ ವಸ್ತ್ರಗಳ ನನಗೆ ನೀಡಬಾರದು; ಸಂಘದಲಿ ಸವಲತ್ತಿನ ಜಾಗ ಸಿಗಬಾರದು..

ಆಗಲಿ, ಆದರೆ ಇವೆಲ್ಲ ಏಕೆ?

ಆನಂದ ಸವಲತ್ತುಗಳಿಗಾಗಿ ಬುದ್ಧನ ಹಿಂದೆ ಬಿದ್ದ ಎಂದು ಯಾರೂ ಭಾವಿಸಬಾರದು, ಅದಕ್ಕೆ.

ಓಹೋ, ಆಯಿತು. ಒಪ್ಪಿದೆ. ಮುಗಿಯಿತೇ?

ನಿನ್ನ ನೋಡಬಂದವರ ನಾನೇ ಪರಿಚಯಿಸಲು ಬಿಡು; ನನ್ನ ಕರೆದಲ್ಲಿ ಬರಲೇಬೇಕು ನೀನು; ಧಮ್ಮ ಕುರಿತ ಶಂಕೆಗಳ ಕೇಳಲು ಅನುಮತಿಸಬೇಕು; ನಾನಿಲ್ಲದಾಗ ನೀಡಿದ ಉಪದೇಶವ ನನ್ನೆದುರು ಇನ್ನೊಮ್ಮೆ ಪುನರುಚ್ಛರಿಸಬೇಕು..

ಒಪ್ಪಿದೆ ಆನಂದ, ಒಪ್ಪಿದೆ.

ಬುದ್ಧ ಆನಂದರು ನಂತರ ಇಪ್ಪತ್ತೈದು ವರುಷ
ಗುರು ಶಿಷ್ಯರೋ ತಂದೆಮಗನೋ ತಾಯಿಮಗುವೋ
ಯಾರು ಗುರುವೋ ಯಾರು ಶಿಷ್ಯರೋ
ಯಾರು ತಂದೆಯೋ ಯಾರು ಮಗನೋ
ಯಾರು ತಾಯಿಯೋ ಯಾರು ಮಗುವೋ ತಿಳಿಯದಂತೆ
ಜೀವದ ಜೀವವಾಗಿ ಬದುಕಿದರು.
ಆನಂದ ಬುದ್ಧನ ಕಾಪಿಟ್ಟ, ಧಮ್ಮ ಬೋಧೆಗಳ ನೆನಪಿಟ್ಟ.

ಕಾಲವೇ ಇಲ್ಲದವಗೆ ವಯಸ್ಸಾಗುವುದಿಲ್ಲ ಜೀರುಂಡೆ.
ಆದರೆ ಅರಳಿ ಎಲೆಯ ತೊಟ್ಟು ಮುದುಡಿತು.
ಕೆಳಗುರುಳಿ ನೆಲದ ಸಾರವಾಗಲು ಬಯಸಿತು.

ಕಮ್ಮಾರ ಕುಂದನ ಕೈತುತ್ತೇ ಕಡೆಯದು
ಬುದ್ಧನ ದೇಹ ಕ್ಷೀಣಿಸತೊಡಗಿತು
ಪರಿನಿರ್ವಾಣದ ಸಮಯ ಸನ್ನಿಹಿತವಾಯಿತು
ಆನಂದನ ಮಡಿಲಲ್ಲಿ ಮೇಲುಸಿರೆಳೆಯುತ್ತ ಮಲಗಿದ್ದ ದೇಹ
ಅದು ಎಂಭತ್ತರ ವೃದ್ಧ ಬುದ್ಧನದಷ್ಟೇ ಆಗಿರಲಿಲ್ಲ:
ಎಳೆಯ ಮಗು, ಹದಿವಯದ ರಾಜಕುವರ, ಸುಂದರ ಪತಿ, ಲಾಲಿಸಿದ ಅಪ್ಪ,
ಅಲೆಮಾರಿ ಸುಮನ, ಬುದ್ಧ ಗುರು ಎಲ್ಲ ಅಲ್ಲಿದ್ದರು.
ಎಲ್ಲ ಭಿಕ್ಕುಗಳ ಕರೆಸಿದ, ಶಂಕೆಗಳಿವೆಯೇ ಕೇಳಿದ.
ನನಗೆ ಉತ್ತರಾಧಿಕಾರಿಗಳಿಲ್ಲ, ಸಂಘವೇ ನಿಮ್ಮ ದಾರಿ ಎಂದ.

ನನ್ನ ಕಲಿಕೆಯೇ ಮುಗಿದಿಲ್ಲ, ಗುರುವೇ ಹೊರಟುಬಿಟ್ಟೆಯಲ್ಲ
ಕೊನೆಯ ಮಾತೊಂದ ಹೇಳು, ಆನಂದ ಕಣ್ಣೀರುದುಂಬಿದ.
ಅರೆನಿಮೀಲಿತ ನೇತ್ರಗಳ ಬೆಳಕಲ್ಲಿ ಹೊರಟಿತು ಕೊನೆಯ ಮಾತು:


ಯಾವುದನ್ನೂ ಅಪ್ಪಿಕೊಳ್ಳಬೇಡ, ನಾಯಕನ ಹಿಂಬಾಲಿಸಬೇಡ.
ನೀನೇ ಸಂಘ, ನೀನೇ ಬೆಳಕು
ನಿನ್ನ ಆಶ್ರಯ ನೀನೇ,
ನಿನ್ನ ನೀನಲ್ಲದೆ ಮತ್ತಾರೂ ರಕ್ಷಿಸಲಾರರು
ನಿನ್ನ ಹಾದಿಯ ನೀನೇ ತುಳಿಯಬೇಕು
ನಿನ್ನ ಬೆಳಕು ನೀನೇ ನಿನಗೆ ನೀನೇ ಬೆಳಕು..

ಬುದ್ಧ ಮಹಾಮೌನದ ಬಯಲಾದ
ಎಲ್ಲ ಅರಿವಿನಾಚೆಯ ನಿರ್ವಾಣವಾದ
ಈಗ ಆನಂದ ಒಂಟಿ, ಏಕಾಂಗಿ
ಅಂದು ಯಶೋಧರೆ, ಪ್ರಜಾಪತಿಯರ ದುಃಖ ಇಂದು ಆನಂದನ ಕಾಡಿತು
ವಿನೀತೆ, ಧೈರ್ಯವಂತೆ ಯಶೋಧರೆ ನಡೆದುಬಿಟ್ಟಿದ್ದಳು ಬುದ್ಧನಿಗಿಂತ ಎರಡು ವರುಷ ಮೊದಲು
ಸಂತೈಸಿದಳು ಪ್ರಜಾಪತಿ, ಬುದ್ಧನ ನಂತರವೂ ಬದುಕಿದವಳು, ನೂರಿಪ್ಪತ್ತು ತುಂಬುವವರೆಗೂ

***

ಹೆತ್ತ ಮರುಗಳಿಗೆ ತಾಯ ಕಳಕೊಂಡವನಲ್ಲವೇ ಪುಟ್ಟ?
ದುಃಖ ಸಿದ್ಧಾರ್ಥನ ಜೊತೆಗೇ ಹುಟ್ಟಿತು
ಅವನೊಡನೇ ಬೆಳೆಯಿತು
ಗಾಯಗೊಂಡ ಹಂಸೆಗಾಗಿ ಅತ್ತವನಲ್ಲವೇ ಸಿದ್ಧಾರ್ಥ?
ಅರಿವು ಅವನೊಡನೇ ಹುಟ್ಟಿತು
ಅವನೊಡನೇ ಬೆಳೆಯಿತು

ಸಿದ್ಧಾರ್ಥ ಗೌತಮ ಬುದ್ಧನಾದ ಎಂದೇ
ಬುದ್ಧರು ಇನ್ನು ಇದ್ದಾರೆ ಎಂದೇ ಅಲ್ಲವೆ ಜೀರುಂಡೆ
ಭೂಮಿ ಗುಂಡಗಿರುವುದು? ಅದು ತಿರುಗುವುದು?
ಬರಬಿಸಿಲುಗಳ ನಡುವೆಯೂ ಮಳೆಬೆಳೆ ಆಗುವುದು?

ಎಲ್ಲ ಜೀವಿಗಳಲಿ ಕಾರುಣ್ಯವಿಡು, ಅದುವೇ ಧರ್ಮ
ಎಂದು ಬುದ್ಧ ಹೇಳಿ ಎರಡೂವರೆ ಸಾವಿರ ವೈಶಾಖ ಹುಣ್ಣಿಮೆ ಕಳೆದವು.
ಅವನ ದಾರಿ ನಡೆದ ಅಶೋಕ ಎಂಭತ್ನಾಲ್ಕು ಸಾವಿರ ಸ್ತೂಪಗಳ ಕಟ್ಟಿ
ಎರಡು ಸಾವಿರ ವೈಶಾಖ ಹುಣ್ಣಿಮೆ ಕಳೆದವು.
ಕಳಬೇಡ, ಕೊಲಬೇಡವೆಂದ ಬಸವ ಅಂತರಂಗ ಬಹಿರಂಗ ಶುದ್ಧಿಯ ಹೇಳಿ
ಎಂಟು ನೂರು ವೈಶಾಖ ಹುಣ್ಣಿಮೆ ಕಳೆದವು
ಧರ್ಮವು ಶೋಷಿತನ ನಿಟ್ಟುಸಿರು; ಹೃದಯಹೀನ ಲೋಕದ ಹೃದಯ; ಆತ್ಮಹೀನನ ಆತ್ಮ
ಎಂದು ಮಾರ್ಕ್ಸನು ಹೇಳಿ ನೂರರವತ್ತು ವೈಶಾಖ ಹುಣ್ಣಿಮೆ ಕಳೆದವು
ಘನತೆಯ ಬದುಕನರಸಿ ಬುದ್ಧ ದಾರಿಯಲಿ ಬಾಬಾ ನಡೆದು
ಅರವತ್ತು ವೈಶಾಖ ಹುಣ್ಣಿಮೆ ಕಳೆಯುತ್ತಿದೆ...
ಇಂತಿರುವಾಗ ಕರ್ಣಾಟ ದೇಶದೊಳು ಮೂರು ಲಕ್ಷ ಬೌದ್ಧರು
ಭರತ ಖಂಡದೊಳು ಎಂಭತ್ತು ಲಕ್ಷ ಬೌದ್ಧರು

ಆದರೂ ಭಂತೇ,
ಯಾಕೆ ಕಲ್ಲಾಗಿವೆ ಮನಸು?
ಯಾಕೆ ಹನಿ ನೀರಿಲ್ಲದ ಬಂಡೆಯಾಗಿದೆ ಕಣ್ಣು?
ಯಾಕೆ ಹೊರಳಲು ಮರೆತಿದೆ ಹೊಟ್ಟೆ ಕರುಳು?
ಯಾಕೆ ತಲೆ ಮೇಲೆ ಮಲ ಸುರಿಯಲಾಗುತ್ತದೆ ನೀರು ಎಂದು?
ಯಾಕೆ ಮುತ್ತು ಕಟ್ಟಿಸಿಕೊಳ್ಳುವುದು ಗುಳದಾಳಿಯ ಕೊರಳು?
ಯಾಕೆ ಚೋಮ ಕೊನೆಯುಸಿರೆಳೆಯುತ್ತಾನೆ ನೆಲ ಸಿಗದೆ ಚೂರೇಚೂರು?

ಯಾಕೆಂದರೆ ಜೀರುಂಡೆ,
ನಾವು ಬುದ್ಧನ ಭೇಟಿ ಆದೆವು, ಮುಂದೆ ಸಾಗಿದೆವು,
ಬೌದ್ಧರಾದೆವು, ಬುದ್ಧರಾಗದೇ ಹೋದೆವು
ಅದಕ್ಕೇ..

ಅದಕ್ಕೆ, ಅದಕ್ಕೇ,
ಜೀವಬಂಧುವೇ,
ಬಾ ಬುದ್ಧಮಾರ್ಗಿಯಾಗುವ
ಅವರ ಕರೆ, ಇವರನ್ನೂ ಕರೆ
ಎಡದವರ ಕರೆ, ಬಲದವರನ್ನೂ ಕರೆ
ಮೇಲಿರುವವರ ಕರೆ, ಕೆಳಗಿರುವವರನ್ನೂ ಕರೆ
ಹಿಂದಿರುವವರ ಕರೆ, ಮುಂದಿರುವವರನ್ನೂ ಕರೆ
ತರತಮವಿಲ್ಲ ಬುದ್ಧ ಬೆಳಕಿಗೆ, ಬೀರುತ್ತದೆ ಒಂದೇ ರೀತಿ ಎಲ್ಲ ಕಡೆಗೆ

ಬಾ ಬಂಧು ನಮ್ಮೊಡನೆ
ಬುದ್ಧಮಾರ್ಗದಲಿ ಸಾಗುವ
ಅದು ಕ್ಷಮೆಯ ಹಾದಿ
ಅದು ಮಿತದ ಹಾದಿ
ಅದು ಮಧ್ಯಮ ಹಾದಿ
ಅದು ಸಮಚಿತ್ತದ ಹಾದಿ
ನಿನ್ನೆದೆಯ ಅಂಗೈಲಿ ಹಿಡಿದು ನಡೆ
ಅದು ಕರುಣದ ಹಾದಿ..


(ಎಲ್ಲ ಚಿತ್ರಗಳು: ಕೃಷ್ಣ ಗಿಳಿಯಾರು)

Sunday, 26 April 2015

ಭಟಕಳದ ನವಾಯತರು







೨೨ ವರ್ಷ ಕೆಳಗೆ ಕರಾವಳಿಯ ಈ ಹಳ್ಳಿಗೆ ಬಂದ ಹೊಸತರಲ್ಲಿ ಕನ್ನಡ ಬರದ, ಉರ್ದು ಬರದ, ಇಂಗ್ಲೀಷ್ ಬರದ ಒಂದು ವಿಶಿಷ್ಟ ರಾಗ-ಶೈಲಿಯಲ್ಲಿ ಮಾತನಾಡುವ ಬುರ್ಖಾ ತೊಟ್ಟ ಹೆಣ್ಣುಮಕ್ಕಳು ನನಗೆ ಒಗಟಿನಂತೆ ಕಂಡಿದ್ದರು. ಅವರು ಕಾಲ್ಗೆಜ್ಜೆ ಧರಿಸುತ್ತಿರಲಿಲ್ಲ, ಕಾಲುಂಗುರವಿರಲಿಲ್ಲ, ಮೂಗು ಚುಚ್ಚಿಕೊಂಡಿರಲಿಲ್ಲ. ಎಲ್ಲರ ಕೊರಳಲ್ಲೂ ಕರಿಮಣಿಯಿರಲಿಲ್ಲ. ಮಗುವಿನಿಂದ ವೃದ್ಧೆಯವರೆಗೆ ಹೆಚ್ಚುಕಡಿಮೆ ಎಲ್ಲರೂ ನಾನಾ ನಮೂನೆಯ ಪರ್ದಾ ತೊಟ್ಟ ಸುಣ್ಣಬಿಳಿಯ ಬಣ್ಣದವರು. ಮುಸ್ಲಿಮರಿಗೆ ಉರ್ದು ತಿಳಿದಿರಲೇಬೇಕು ಎಂದುಕೊಳುವವರಿಗೆ ಆಘಾತವಾಗುವಂತೆ ಅವರು ಕೊಂಕಣಿಯನ್ನೇ ಸುಲಭವಾಗಿ ಮಾತನಾಡುವರೆಂದು ನಂತರ ತಿಳಿದಿತ್ತು. ಅವರ ವಿಶಿಷ್ಟ ಅರಬಿ ಸರ್‌ನೇಮ್‌ಗಳ ಜೊತೆಗೆ ಶ್ರಿಂಗೇರಿ, ಚಾಮುಂಡಿ, ಬರ್ಮಾವರ, ಲಂಕಾ, ಭಟಕಳ ತರಹದ ಸರ್‌ನೇಮುಗಳು ಇದ್ದವು. ಅವರ ಸಮುದಾಯ ಕುರಿತು ತಿಳಿಯಲು ಕುತೂಹಲಭರಿತ ಹುಡುಕಾಟವೊಂದು ನನ್ನೆಲ್ಲ ಮಾತುಗಳಲ್ಲಿರುತ್ತಿತ್ತು.

ಕೊನೆಗೆ ತಿಳಿಯಿತು: ಹಿಂದೂ ಮಹಾ ಸಾಗರದೊಳಗೊಂದು ಅರಬ್ಬೀ ಸಮುದ್ರವಿದೆ, ಅವರು ಭಟಕಳದ ನವಾಯತರು ಎಂದು.

ಈ ಬಹುದೊಡ್ಡ ದೇಶ ಭಾರತದಲ್ಲಿ ಪ್ರತಿ ಊರಿನ, ಪ್ರತಿ ಸಮುದಾಯದ, ಪ್ರತಿ ವೃತ್ತಿಯವರ ಕಷ್ಟನಷ್ಟ, ಚಹರೆ, ಬದುಕು, ಆಹಾರ ಎಷ್ಟೊಂದು ಭಿನ್ನವಾಗಿದೆ!? ಸುಮ್ಮನೆ ಪತ್ರಿಕಾ ವರದಿಗಳನ್ನು ಗಮನಿಸಿದರೆ ಈ ವಿಷಯ ತಿಳಿಯುತ್ತದೆ. ಇತ್ತೀಚೆಗೆ ಭಟಕಳದ ಹುಡುಗರನ್ನು ಮದುವೆಯಾಗಿದ್ದ ಪಾಕಿಸ್ತಾನದ ಕೆಲ ಯುವತಿಯರು ತಮಗೆ ಖಾಯಂ ವೀಸಾ ಹಾಗೂ ಭಾರತದ ಪೌರತ್ವ ಕೊಡಬೇಕೆಂದು ಆಳುವವರಿಗೆ ಮನವಿ ಸಲ್ಲಿಸಿದ್ದರು. ದೇಶ ವಿಭಜನೆಯ ಕಾಲದಲ್ಲಿ ಭಾರತದಿಂದ, ಭಟಕಳದಿಂದ ಪಾಕಿಸ್ತಾನಕ್ಕೆ ಹೋದ ಎಷ್ಟೋ ಕುಟುಂಬಗಳಿದ್ದು ಅವರ ನಡುವೆ ಗಡಿದಾಟಿ ಸಂಬಂಧ ಏರ್ಪಡುತ್ತಲೇ ಇದೆ; ಆಚೀಚಿನ ಸತಿಪತಿಗಳು ವಿಸಿಟಿಂಗ್ ವೀಸಾದಲ್ಲೇ ಸಂಸಾರ ಸಾಗಿಸುತ್ತಾರೆ; ಬಂದವರು ಮೆಡಿಕಲ್ ಇನ್ನಿತರೆ ಕಾರಣಗಳ ಒಡ್ಡಿ ವೀಸಾ ಮುಂದುವರೆಸಲು ಪ್ರಯತ್ನಿಸುತ್ತಾರೆ ಎಂದು ಅವರ ಮಾತುಗಳಿಂದ ತಿಳಿಯಿತು!


(ಯಾಸೀನ್ ಭಟಕಳ)
ಕಳೆದ ತಿಂಗಳು ಯೆಮನಿನಲ್ಲಿದ್ದ ಭಟಕಳಿಗರು ಐಸಿಸ್ ಉಗ್ರರ ದಾಳಿಯ ಕಾರಣ ಅನ್ನನೀರಿಲ್ಲದೆ ಗೃಹಬಂಧನಕ್ಕೊಳಗಾಗಿ ಕಾಲ ಕಳೆಯುತ್ತಿದ್ದು ಆ ಕುಟುಂಬದವರ ಬಂಧುಗಳು ಇಲ್ಲಿ ಮಾಧ್ಯಮದೆದುರು ತಮ್ಮ ಆತಂಕ ತೋಡಿಕೊಂಡಿದ್ದರು. ಅದಕ್ಕೂ ಮುನ್ನ ತನ್ನ ಹೆಸರಿನ ಮುಂದೆ ಭಟಕಳವನ್ನು ಅಂಟಿಸಿಕೊಂಡ ಅಹ್ಮದ್ ಸಿದ್ಧಿ ಬಾಪ್ಪಾ ಭಯೋತ್ಪಾದಕನೆಂಬ ಪಟ್ಟ ಹೊತ್ತು ಭಟಕಳ ರಾಷ್ಟ್ರೀಯ ಸುದ್ದಿಯಲ್ಲಿ ಜಾಗ ಪಡೆದಿತ್ತು. ಆಗ ಕರಾವಳಿಯ ಈ ಊರಿನವರು ಯಾವ್ಯಾವ ಕಸಿವಿಸಿ ಅನುಭವಿಸಿದರೋ? ಅಂತೂ ಶತಮಾನಗಳ ಹಿಂದೆ ಮೂಲನೆಲೆ ಬಿಟ್ಟು ವಲಸೆ ಬಂದಿದ್ದ ಜನಾಂಗ ನೆಮ್ಮದಿಯಿಂದ ನೆಲೆಯೂರಿರುವ ನೆಲೆಯಲ್ಲಿ ಈಗ ಹಲವು ತಲ್ಲಣಗಳನ್ನು ಎದುರಿಸುತ್ತಲಿದೆ.

ನಮ್ಮ ನಿಮ್ಮ ನಡುವೆಯೇ ಇದ್ದರೂ ನಾವು ತಿಳಿಯದೇ ಇರಬಹುದಾದ ನವಾಯತ ಸಮುದಾಯ ಕುರಿತದ್ದು ಈ ಬರಹ:

ಉತ್ತರ ಕನ್ನಡದ ಭಟಕಳ ಹೇಗೆ ದಮ್ ಬಿರಿಯಾನಿ, ಸ್ಯಾಂಡೋ ಹಲ್ವಾಕ್ಕೆ ಪ್ರಸಿದ್ಧವೋ ಹಾಗೇ ಅಲ್ಲಿನ ನವಾಯತ ಸಮುದಾಯವೂ ಸಹಾ. ಅದು ಒಂದು ಲಕ್ಷ ಜನಸಂಖ್ಯೆಯ ಪುಟ್ಟ ಸಮುದಾಯ. ವ್ಯಾಪಾರವೇ ಅವರ ಮುಖ್ಯ ಉದ್ಯೋಗ. ಹೋಗಿ ನೆಲೆನಿಂತ ಸ್ಥಳವನ್ನೇ ಸರ್‌ನೇಮ್ ಆಗಿಯೂ ಇಟ್ಟುಕೊಳ್ಳುವ ಅವರ ಮೂಲ ಕುರಿತು ಹಲವು ವಿವರಣೆಗಳಿದ್ದರೂ ಅದು ಅರಬ್ ಜನಾಂಗ ಎಂಬ ಬಗ್ಗೆ ಎಲ್ಲರದೂ ಸಹಮತವಿದೆ.

ಪರ್ಷಿಯ, ಮೆಸಪಟೋಮಿಯಾ ಜೊತೆಗೆ ಕ್ರಿ.ಪೂ. ಕಾಲದಿಂದಲೇ ಭಾರತ ವ್ಯಾಪಾರ ಸಂಬಂಧ ಹೊಂದಿತ್ತು. ಇಸ್ಲಾಂ ಉದಯದ ನಂತರ ಸಮೀಕರಣಗಳು ಬದಲಾದರೂ ವ್ಯಾಪಾರ ಮುಂದುವರಿದಿತ್ತು. ೮ನೇ ಶತಮಾನದಲ್ಲಿ ಖಲೀಫ ಅಬ್ದ್ ಅಲ್ ಮಲಿಕ್ ಮಾರ‍್ವಾನ್‌ನ ಆಳ್ವಿಕೆಯ ಕಾಲದಲ್ಲಿ, ಹಜಾಜ್ ಬಿನ್ ಯೂಸುಫ್ ಎಂಬಾತ ಇರಾಕಿನ ಗವರ್ನರನಾಗಿ ಭಯಾನಕ ಸುಲಿಗೆಯ ಆಡಳಿತ ನಡೆಸುತ್ತಿದ್ದಾಗ ಹಲವು ಪ್ರತಿಷ್ಠಿತ, ಘನತೆವೆತ್ತ ವ್ಯಾಪಾರೀ ಕುಟುಂಬಗಳು ಮರಣಶಿಕ್ಷೆಗೆ ಹೆದರಿ ಪರ್ಷಿಯವನ್ನು ತೊರೆದವು. ಆಗ ಪರ್ಷಿಯನ್ನರು ಅರಬ್ಬರ ವ್ಯಾಪಾರೀ ದಾರಿಯ ಒಂದು ನೆಲೆಯಾದ ಭಾರತದ ಪಶ್ಚಿಮ ಕರಾವಳಿಗೆ ಬಂದಿಳಿದರು ಎನ್ನುವುದು ನವಾಯತರ ಮೂಲ ಕುರಿತ ವಿವರಣೆ. ಮತ್ತೆ ಕೆಲವರ ಪ್ರಕಾರ ವಲಸೆ ಬಂದ ಯೆಮನಿನ ಅಬ್ದಲ್ಲಾ ವಾಯತ್ ಎಂಬವನ ಪೀಳಿಗೆಗೆ ಸೇರಿದವರು ನವಾಯತ ಸಮುದಾಯದವರು. ಸ್ಥಳೀಯರು (ನವಾಯತೇತರರು) ವಿಜಯನಗರದ ರಾಜನಿಗೆ ಅರಬ್ಬೀ ಕುದುರೆಗಳ ಮಾರಲು ಬಂದು ಇಲ್ಲೇ ನೆಲೆ ನಿಂತ ವ್ಯಾಪಾರಸ್ಥರು ಅವರು ಎಂದು ಭಾವಿಸಿದ್ದರೆ, ನವಾಯತರ ಮೌಖಿಕ ಪರಂಪರೆ ತಮ್ಮನ್ನು ಹಡ್ರಾಮಿಗಳು (ಯೆಮನಿನ ಒಂದು ಸ್ಥಳ) ಎಂದು ನಂಬಿದೆ. ನವಾಯತಿ ಸರ್‌ನೇಮ್‌ಗಳಲ್ಲಿರುವ ಸ್ಥಳಗಳು ಯೆಮನಿನಲ್ಲಿವೆ. ಅಲ್ಲಿನವರ ಜೊತೆ ಈಗ ಯಾವುದೇ ಕೊಡುಕೊಳು ಇಲ್ಲದಿದ್ದರೂ ಯೆಮನ್ ಮೂಲದವರೆಂದು ತಮ್ಮನ್ನು ಭಾವಿಸಿಕೊಂಡಿದ್ದಾರೆ.

ಈ ಎಲ್ಲ ಶತಮಾನಗಳಲ್ಲಿ ಸಮುದ್ರ ಹಲವು ಬಾರಿ ಉಕ್ಕೇರಿದೆ, ಶಾಂತವಾಗಿದೆ. ಅಂತೇ ಭಟಕಳದ ನವಾಯತರ ಬದುಕು ಸಹಾ. ಭಟಕಳ ಹಲವು ಆಳ್ವಿಕೆಗಳನ್ನು ಕಂಡಿದೆ. ಮೊದಲ ಸಹಸ್ರಮಾನದ ಕೊನೆಯ ಭಾಗದಲ್ಲಿ ಚೋಳರಿಂದ ಆಳಿಸಿಕೊಂಡ ಕೊಂಕಣವು ಮುಂದೆ ಹೊಯ್ಸಳರು, ವಿಜಯನಗರದ ಅರಸರು, ಪೋರ್ಚುಗೀಸರು, ಸಾಳುವ ವಂಶದ ಹಾಡುವಳ್ಳಿ ಅರಸರು, ಕೆಳದಿ ನಾಯಕರು, ಟಿಪ್ಪು ಸುಲ್ತಾನ ಹಾಗೂ ಬ್ರಿಟಿಷರ ಆಳ್ವಿಕೆಗೆ ಒಳಗಾಗಿದೆ. ಯಾವುದೇ ಆಳ್ವಿಕೆಯ ಕಾಲದಲ್ಲೂ ವ್ಯಾಪಾರ, ವಹಿವಾಟು ಹಾಗೂ ಸಮುದ್ರಮಾರ್ಗ ವ್ಯಾಪಾರದ ತಮ್ಮ ಅನುಭವದ ಕಾರಣದಿಂದ ಅಂತಾರಾಷ್ಟ್ರೀಯ ಬಂದರಾಗಿದ್ದ ಭಟಕಳದಲ್ಲಿ ನವಾಯತರ ನೆಲೆಯು ಅಬಾಧಿತವಾಗಿ ಮುಂದುವರೆದಿದೆ.

ಎತ್ತರದ ನಿಲುವಿನ, ಸುಣ್ಣಬಿಳಿ ಬಣ್ಣದ ಈ ಸಮುದಾಯದವರು ಸುನ್ನಿ ಶಫಿ ಪಂಗಡದವರು. (ಉತ್ತರ ಭಾರತದ ಮುಸ್ಲಿಮರು ಸುನ್ನಿ ಹನಫಿ ಪಂಗಡದವರು.) ಈ ಸಮುದಾಯದ ರೀತಿರಿವಾಜು, ಅಡುಗೆ, ಅಲಂಕಾರ, ಭಾಷೆ, ಸರ್‌ನೇಮ್ ಎಲ್ಲವೂ ಉಳಿದ ಮುಸ್ಲಿಮರಿಗಿಂತ ಭಿನ್ನ. ೧೯೪೭ರ ದೇಶವಿಭಜನೆಯ ಕಾಲದಲ್ಲಿ ಬಹುಪಾಲು ನವಾಯತರು ಪಾಕಿಸ್ತಾನಕ್ಕೆ ಹೋಗಿ ಕರಾಚಿ ಹಾಗೂ ಸಿಂಧ್ ಪ್ರಾಂತ್ಯದ ಸುತ್ತಮುತ್ತ ನೆಲೆಯಾದರು. ಭಾರತದಲ್ಲಿ ಅವರು ಮುಖ್ಯವಾಗಿ ಭಟಕಳದಲ್ಲಿ ಹಾಗೂ ಕರಾವಳಿಯುದ್ದಕ್ಕೂ ಕುಮಟಾ, ಹೊನ್ನಾವರ, ಮುರ್ಡೇಶ್ವರ, ಮಂಕಿ, ಶಿರೂರು, ಬೈಂದೂರು, ಬಸರೂರು, ಮಲ್ಪೆ ಮುಂತಾದ ಊರುಗಳಲ್ಲಿದ್ದಾರೆ. ಅಲ್ಲದೆ ಹಾಸನ, ಕೋಲಾರ, ಗೋವಾ, ರತ್ನಗಿರಿ, ದಮನ್-ದಿಯು, ಹೈದರಾಬಾದ್, ತಮಿಳುನಾಡಿನ ಆರ್ಕಾಟ್, ಮಧ್ಯಪ್ರದೇಶದ ಇಂದೋರ್-ಉಜ್ಜಯಿನಿ ಮತ್ತಿತರ ಕಡೆಗಳಲ್ಲೂ ಚದುರಿದ್ದಾರೆ. ಉಳಿದ ಕಡೆಗಳಲ್ಲಿರುವವರು ಸ್ಥಳೀಯ ಭಾಷೆ, ಸಂಸ್ಕೃತಿಯಲ್ಲಿ ಕರಗಿ ಹೋಗಿದ್ದರೆ ಕರಾವಳಿಯ ಭಟಕಳಿಗರು ಮಾತ್ರ ತಮ್ಮ ಅನನ್ಯತೆಯನ್ನು ಹಾಗೇ ಮುಂದುವರೆಸಿಕೊಂಡು ಬಂದಿದ್ದಾರೆ.

ಅವರ ಭಾಷೆ ನವಾಯತಿ. ಅದು ಪರ್ಷಿಯನ್, ಅರೇಬಿಕ್, ಸಂಸ್ಕೃತ, ಮರಾಠಿಯ ಮಿಶ್ರಪಾಕವಾಗಿದ್ದರೂ ಮೂಲಧಾತು ಕೊಂಕಣಿಯೇ. ಅದಕ್ಕೆ ಲಿಪಿಯಿಲ್ಲ. ಅರೆಬಿಕ್ ಲಿಪಿಯನ್ನೇ ಬಳಸುತ್ತದೆ. ಆದರೆ ಉರ್ದು ಎಂಬ ಅರೆಬಿಕ್ ಲಿಪಿ ಹೊಂದಿದ ತನ್ನ ಕಿರಿಯ ಸೋದರಿಗಿಂತ ಏಳೆಂಟು ಶತಮಾನ ಮುಂಚೆಯೇ ರೂಪುಗೊಂಡಿರುವ ಭಾಷೆ ಒಂದೇಒಂದು ಸಮುದಾಯ ಮಾತ್ರ ಬಳಸಲ್ಪಡುವ ಭಾಷೆಯಾಗಿ, ಕಲೆಸಾಹಿತ್ಯವಾಗಿ ಅಭಿವ್ಯಕ್ತಗೊಳದೇ ಇದ್ದ ಭಾಷೆಯಾಗಿ ಹರಡಲು ಸಾಧ್ಯವಾಗಲಿಲ್ಲವೇ?

ಅಂತೂ ನವಾಯತರ ಮೂಲ, ಆಚಾರವಿಚಾರ, ಭಾಷೆ, ಸಂಸ್ಕೃತಿ, ಜಾನಪದದ ಬಗೆಗೆ ವಿಸ್ತೃತ ಸಂಶೋಧನೆ ನಡೆಯಬೇಕಿದೆ. ತಿಳಿಯಬೇಕಾದದ್ದು ಬಹಳವಿದೆ..

***

ಅಂತಾರಾಷ್ಟ್ರೀಯ ತೈಲ ಬೆಲೆ, ಗಲ್ಫ್ ರಾಷ್ಟ್ರಗಳ ಅಂತಾರಾಷ್ಟ್ರೀಯ ಸಂಬಂಧ, ಅರಬ್ ಜಗತ್ತಿನ ಆಗುಹೋಗುಗಳಲ್ಲಿ ಅಮೆರಿಕದ ಹಸ್ತಕ್ಷೇಪ - ಇವೆಲ್ಲ ಹುಟ್ಟಿಸುವ ಬದಲಾವಣೆಗಳು ನವಾಯತರ ಎದೆಯಂಗಳದ ತಲ್ಲಣಗಳಾಗಿ ರೂಪಾಂತರಗೊಳ್ಳುತ್ತವೆ. ಪರ್ಷಿಯನ್ ಗಲ್ಫಿನಲ್ಲಿ ಬೀಸುವ ಐಸಿಸ್ ಬಿರುಗಾಳಿ ಇಲ್ಲಿನವರನ್ನೂ ಬಾಧಿಸುತ್ತದೆ. ಏಕೆಂದರೆ ತನ್ನ ಯಂಗ್ ಅಂಡ್ ಎನರ್ಜೆಟಿಕ್ ತರುಣ ಪೀಳಿಗೆಯನ್ನು ಪ್ರತಿ ಮನೆಯೂ ಗಲ್ಫ್‌ನಲ್ಲಿ ಬಿಟ್ಟಿದೆ. ಇನ್ನೆಷ್ಟೋ ಹುಡುಗರ ಕಣ್ಣುಗಳಲ್ಲಿ ಆ ದೇಶಗಳ ವೀಸಾ ಪಡೆವ ಕನಸು ಹಸಿಯಾಗಿದೆ. ಇದರ ನಡುವೆ ಯಾಸೀನ್ ಭಟಕಳ ಎಂಬ ತರುಣ ಭಯೋತ್ಪಾದಕನಾಗಿ ಹುಟ್ಟಿಸಿರುವ ತಲ್ಲಣಗಳ ವಿಸ್ತಾರ ಬಹುಮುಖಿಯದಾಗಿದೆ. ಅಷ್ಟೇ ಅಲ್ಲ, ಶುದ್ಧ ಇಸ್ಲಾಮನ್ನು ಪ್ರತಿಪಾದಿಸುವವರು, ಇವತ್ತಿನ ಅಂತಾರಾಷ್ಟ್ರೀಯ ಬದಲಾವಣೆಗೆ ತಕ್ಕಂತೆ ಇಸ್ಲಾಮನ್ನು ಕಟ್ಟ ಹೊರಟಿರುವವರ ಕಾರಣದಿಂದ ಸಮುದಾಯ ಎದುರಿಸುತ್ತಿರುವ ಆತಂಕಗಳ ಸ್ವರೂಪವೂ ಬೇರೆಯಾಗಿದೆ. ಓವೈಸಿಗಳಿಗೆ ಅಬ್ಬರದ ಪ್ರಚಾರ ಸಿಗುತ್ತಿದೆ. ಈ ಸಿರಿವಂತ, ಶಾಂತ ಸಮುದಾಯ ಇವತ್ತು ಬಿಕ್ಕಟ್ಟಿನಲ್ಲಿದೆ.

ಈಗ ಮುಸ್ಲಿಮರ ಬಾಹುಳ್ಯವಿರುವ ಪ್ರದೇಶಗಳು ತಂತಾನೇ ‘ಸೂಕ್ಷ್ಮ’ ಎನಿಸಿಕೊಂಡುಬಿಟ್ಟಿವೆ. ಯಾಸೀನ್ ಭಟಕಳ ಬಂಧನವಾದ ಹೊತ್ತಿನಲ್ಲಿ ಖಾಸಗಿ ಸಾರಿಗೆ ಸಂಸ್ಥೆಯೊಂದು ತನ್ನ ಭಟಕಳ ರೂಟ್‌ನ ಎಲ್ಲ ಬಸ್ಸುಗಳನ್ನೂ ರದ್ದುಪಡಿಸಿರುವುದಾಗಿ ಘೋಷಿಸಿ ದೇಶಭಕ್ತಿ ಮೆರೆಯಿತು. ಆದರೆ ಕೋಮುಗಲಭೆ ದೃಷ್ಟಿಯಿಂದ ಸೂಕ್ಷ್ಮ ಎಂದು ಗುರುತಿಸಲ್ಪಟ್ಟಿದ್ದರೂ ಭಟಕಳ ಶತಮಾನಗಳಿಂದ ಜನ ಶಾಂತಿಯಿಂದ ಬದುಕಿದ ಪ್ರದೇಶ. ಜೈನ, ಕ್ರೈಸ್ತ, ಹಿಂದೂ ಮತ್ತು ಮುಸ್ಲಿಮರು ಈ ಎಲ್ಲ ವರ್ಷಗಳಲ್ಲಿ ಶಾಂತಯುತವಾಗಿ ಬದುಕಿ ಬಂದಿದ್ದಾರೆ. ಭಟಕಳ ನಗರದಲ್ಲಿಯೇ ೧೮ ದೇವಸ್ಥಾನಗಳಿವೆ. ೮೦ಕ್ಕಿಂತ ಹೆಚ್ಚು ಮಸೀದಿಗಳಿವೆ. ಚರ್ಚುಗಳು ಇವೆ. ಇರಾನಿ ಸ್ಮಶಾನವಿದೆ. ಇತ್ತೀಚಿನ ಬದಲಾದ ರಾಜಕೀಯ ಸಮೀಕರಣಗಳು ಮತ್ತು ಧರ್ಮ-ರಾಜಕೀಯದ ಅನೈತಿಕ ಮೈತ್ರಿಯಿಂದ ೧೯೭೦ರ ನಂತರ ಕೊಂಚ ಬದಲಾವಣೆ ಕಾಣತೊಡಗಿದೆ. ೧೯೯೩ರ ನಂತರ ಉತ್ತರ ಕರ್ನಾಟಕದ ಮುಸ್ಲಿಮರು ಮನೆ ಕೆಲಸ ಮತ್ತಿತರೆ ಮೇಲುವಸಿ ಕೆಲಸಕ್ಕೆಂದು ಇಲ್ಲಿಗೆ ವಲಸೆ ಬರುವುದು ಹೆಚ್ಚಾಗಿದೆ. ಆದರೆ ಇಂಥ ಕೆಲ ಸಣ್ಣ ಬದಲಾವಣೆ ಹೊರತುಪಡಿಸಿ ಈಗಲೂ ಪ್ರತಿ ಮುಸ್ಲಿಂ ಮನೆಯೂ ಹಿಂದೂ ಕೆಲಸಗಾರರು, ವ್ಯಾಪಾರಿಗಳೊಡನೆ ಸಂಪರ್ಕ ಹೊಂದಿದೆ. ಚನ್ನಪಟ್ಟಣದ ಹನುಮಂತ ದೇವರ ಉತ್ಸವದ ರಥ ಶಾಬಂದ್ರಿ ಕುಟುಂಬಕ್ಕೆ ಮೊದಲ ಗೌರವ ಸಲ್ಲಿಸಿಯೇ ಎಳೆಯಲ್ಪಡುತ್ತದೆ. ಒಂದಾನೊಂದು ಕಾಲದಲ್ಲಿ ರಥದ ಚಕ್ರ ಮುರಿದು ಹೋಗಿ ಅದನ್ನು ರಿಪೇರಿ ಮಾಡುವಷ್ಟು ಹಣವಿಲ್ಲದಾಗ ಅದನ್ನು ಶಾಬಂದ್ರಿ ಕುಟುಂಬ ಮಾಡಿಕೊಟ್ಟಿತ್ತಂತೆ. ಈಚೆಗೆ ಕೆಲವರು ಅದನ್ನು ನಿಲ್ಲಿಸಲು ಯತ್ನಿಸಿದರೂ ಅಬಾಧಿತವಾಗಿ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ.

ಈಗ ತಂಜೀಂನಂತಹ ಹಿರಿಯ ಸಂಸ್ಥೆ ಪುರಪ್ರಮುಖರೊಡನೆ ಭಟಕಳವನ್ನು ಶಾಂತಿಯತ್ತ ನಡೆಸಬೇಕಾದ ಕಾಲ ಬಂದಿದೆ. ಅದು ಐ. ಎಚ್. ಸಿದ್ದಿಕ್‌ರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು; ಎಂ. ಎಂ. ಸಿದ್ದಿಕ್‌ರಂತಹ ಸಮಾಜ ಸುಧಾರಣಾಕಾರರನ್ನು; ಮುಂಬೈ ಶಾಸನಸಭೆಯಲ್ಲಿ ಶಾಸಕರಾಗಿದ್ದ ಹಾಗೂ ಸೌದಿ ಅರೇಬಿಯಾಗೆ ರಾಯಭಾರಿಯಾಗಿದ್ದ ಎ. ಕೆ. ಹಾಫಿಜ್ಕಾರಂತಹವರನ್ನೂ; ಕರ್ನಾಟಕ ಸರ್ಕಾರದಲ್ಲಿ ೬ ವರ್ಷ ಮಂತ್ರಿಯಾಗಿದ್ದ ಜೆ. ಎಚ್. ಶಂಸುದ್ದೀನ್‌ರಂತಹವರನ್ನೂ; ಮೂರು ಬಾರಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದ ಎಸ್. ಎಂ. ಯಾಹ್ಯಾರನ್ನೂ ನೀಡಿದೆ. ಶತಮಾನ ಕಂಡ ತಂಜೀಂ ಸಂಸ್ಥೆ ಸಮುದಾಯದ ಮೇಲೆ ನಿಯಂತ್ರಣ ಹೊಂದಿ ಸಮಾಜಕ್ಕೆ ಉತ್ತಮ ಕೆಲಸ ಮಾಡುತ್ತಿದೆ. ಸಮಾಜಸೇವಾ ಕಾರ್ಯಗಳಲ್ಲಿ ಸಮುದಾಯ ಬಾಂಧವರು ತೊಡಗಿಕೊಳ್ಳಲು ಉತ್ತೇಜಿಸುತ್ತದೆ. ಸ್ಥಳೀಯ ಭಾಷೆ ಕಲಿಯಬೇಕಾದ ಅವಶ್ಯಕತೆ ಕುರಿತು ಇತ್ತೀಚೆಗೆ ಮಾತನಾಡಿದೆ.


(ಶಂಸುದ್ದೀನ್ ಜುಕಾಕು)
ಆದರೆ ಸಮುದಾಯದವರು ಉನ್ನತ ಶಿಕ್ಷಣ ಪಡೆವ ಕುರಿತು, ಅದರಲ್ಲೂ ಹೆಣ್ಣುಮಕ್ಕಳ ಕಲಿಕೆ ಕುರಿತು ಹಿರಿಯರು ಆಧುನಿಕ ಮನೋಭಾವ ಹೊಂದಬೇಕಾದ ಅವಶ್ಯಕತೆಯಿದೆ. ಭಟಕಳದಲ್ಲಿ ಅಂಜುಮನ್ ಸಂಸ್ಥೆಯು ನರ್ಸರಿ ಶಾಲೆಯಿಂದ ಹಿಡಿದು ಮ್ಯಾನೇಜ್‌ಮೆಂಟ್, ಇಂಜಿನಿಯರಿಂಗ್ ಕಾಲೇಜಿನವರೆಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ದೇಶದ ಸಾಕ್ಷರತೆಯ ಸರಾಸರಿಗಿಂತ ಹೆಚ್ಚು ಪುರುಷಮಹಿಳೆಯರ ಸಾಕ್ಷರತೆ ಭಟಕಳದಲ್ಲಿದೆ. ಆದರೂ ಸಾಮಾನ್ಯವಾಗಿ ನವಾಯತ ಹುಡುಗರು ಉನ್ನತ ಶಿಕ್ಷಣಕ್ಕಿಂತ ದುಡಿಮೆಗೆ ಗಮನ ಕೊಟ್ಟು ಹೊರದೇಶಗಳಿಗೆ ಹೋಗುವುದು ಕಂಡುಬರುತ್ತದೆ. ಉನ್ನತ ಶಿಕ್ಷಣ ಪಡೆದ ಹೆಣ್ಣುಮಕ್ಕಳ ಸಂಖ್ಯೆ, ಹೊರಗೆ ದುಡಿಯುವ ಮಹಿಳೆಯರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಿದೆ. ಮುಖದಲ್ಲಿ ಬಾಲ್ಯದ ಚಹರೆಗಳಿನ್ನೂ ಮಾಸಿರದ ಎಳೆಯ ಅಮ್ಮಂದಿರು ಹೊತ್ತು, ಹೆತ್ತು, ಕೂಡುಕುಟುಂಬಗಳ ನಿರ್ವಹಣೆಯಲ್ಲಿ, ಗಲ್ಫಿನಿಂದ ಬರಲಿರುವ ಗಂಡನ ಸಲುವಾಗಿ ಮಾಡಿಕೊಳ್ಳುವ ತಯಾರಿಯಲ್ಲಿ ಕಳೆದೇ ಹೋಗುವುದನ್ನು ನೋಡುವಾಗ ಎಷ್ಟು ವೈದ್ಯೆ-ಇಂಜಿನಿಯರ್-ಶಿಕ್ಷಕಿ-ವೃತ್ತಿನಿರತರನ್ನು ಸಮಾಜ ಕಳೆದುಕೊಂಡಿತಲ್ಲ ಎಂದು ಆತಂಕವಾಗುತ್ತದೆ.

ಶತಮಾನಗಳ ಹಿಂದೆ ಬಂದ ಜನಾಂಗವೊಂದು ಇವತ್ತಿಗೂ ತನ್ನ ಬಂಧುಬಾಂಧವರನ್ನು ದೂರದೂರದ ದೇಶಗಳಲ್ಲಿ ಉದ್ಯೋಗ ವ್ಯಾಪಾರಕ್ಕೆ ಕಳಿಸುವ ಸಂಪ್ರದಾಯ ಮುಂದುವರೆಸಿಕೊಂಡೇ ಬಂದಿದೆ. ವರುಷ, ಎರಡು ವರುಷಕ್ಕೊಮ್ಮೆ ಬರುವ ಪತಿ; ಕೂಡು ಕುಟುಂಬದ ಜವಾಬ್ದಾರಿ, ಸಂಕಟಗಳು; ಪರದೇಶದಲ್ಲಿರುವವರು ಎದುರಿಸುವ ಒಂಟಿತನ, ಅಭದ್ರತೆಗಳು; ಅದು ಕುಟುಂಬ ರಚನೆಯಲ್ಲಿ ಮಾಡಿರಬಹುದಾದ ಏರುಪೇರುಗಳು; ತಮ್ಮ ಗಂಡಸರನ್ನು ದೂರದೂರುಗಳಲ್ಲಿ ಬಿಟ್ಟು ಸಂಸಾರ ನಿಭಾಯಿಸಿದ ಮಹಿಳೆಯರ ಅನುಭವಗಳು - ಇವೆಲ್ಲ ಹೊರಜಗತ್ತಿಗೆ ತಿಳಿಯಬೇಕು. ಪೂರ್ಣ ಪರದೆಯೊಳಗೇ ಇರುವ ಹೆಣ್ಮಕ್ಕಳು ಮಾತನಾಡಬೇಕು. ಅವರಿಗೆ ಕನ್ನಡ ಕಲಿಸಬೇಕು. ಅಥವಾ ಉಳಿದವರು ನವಾಯತಿ ಕಲಿಯುವಂತಾಗಬೇಕು. ಅದು ಎಷ್ಟು ದೂರದ ಹಾದಿಯೋ ಗೊತ್ತಿಲ್ಲ, ಆದರೆ ಅದು ಕ್ರಮಿಸಲೇಬೇಕಾದ ಹಾದಿ.

ತಮ್ಮ ಅಸ್ಮಿತೆ, ಕುರುಹುಗಳ ಉಳಿಸಿಕೊಳ್ಳುತ್ತಲೇ ಉಳಿದ ಸಮುದಾಯಗಳ ಜೊತೆಗಿನ ಕೊಡುಕೊಳು ಸಂಬಂಧದಲ್ಲಿ ವ್ಯವಹಾರದ ಹೊರತಾದ ಆಪ್ತತೆ ಬೆಳೆಸಿಕೊಳ್ಳುವುದು; ಎತ್ತರದ ಕೋಟೆಗೋಡೆಯಂತಹ ಕಾಂಪೌಂಡುಗಳಾಚೆಗಿನ ಲೋಕವನ್ನು ಒಳಗಿನವರು ಗ್ರಹಿಸಬೇಕಾಗಿರುವುದು; ಒಟ್ಟೂ ಸಮಾಜದ ಎಲ್ಲ ಆಗುಹೋಗುಗಳಲ್ಲಿ ನವಾಯತ ಬಂಧುಗಳು ಭಾಗವಹಿಸುವುದು ಸದ್ಯದ ತುರ್ತಾಗಿದೆ. ಕಡಿಮೆ ಸಂಖ್ಯೆಯಲ್ಲಿರುವ ಸಮುದಾಯವು ಅನನ್ಯತೆ ಉಳಿಸಿಕೊಳ್ಳುವ ಭರದಲ್ಲಿ ‘ಶುದ್ಧತೆ’ಯನ್ನು ಪ್ರತಿಪಾದಿಸುತ್ತ ತನ್ನನ್ನು ಮಿತಿಗೊಳಿಸಿಕೊಳ್ಳಬೇಕೇ ಅಥವಾ ಕರಗಿ ಮಿಳಿತಗೊಳಬೇಕೇ? ನೀರಲ್ಲಿ ನೀರಾಗಿ ಬೆರೆಯಬೇಕೇ ಅಥವಾ ತೈಲ ಬಿಂದುವಾಗಿ ಉಳಿಯಬೇಕೇ?  

ಎಷ್ಟೋ ಸಮುದಾಯಗಳು ಎದುರಿಸಿದ, ಈಗಲೂ ಎದುರಿಸುತ್ತಿರುವ ಮಿಲಿಯನ್ ಡಾಲರ್ ಸವಾಲು ಇದು. ಕೊಲ್ಲಿ, ಖಾರಿ, ಸಮುದ್ರಗಳನ್ನೇ ದಾಟಿಕೊಂಡ ಬಂದ ಸಮುದಾಯ ಈ ಸವಾಲನ್ನೂ ದಾಟಿ ನಿಲ್ಲುವಂತಾಗಲಿ..