Sunday, 19 June 2016

ಮೊಚೆ - ಅಳಿದ ಕುಲದ ಕತೆ




ಪೆರು ಎಂದಕೂಡಲೆ ಇಂಕಾಗಳು ಕಣ್ಣೆದುರು ಬರುತ್ತಾರೆ. ತಪ್ಪೇನಲ್ಲ. ಸಣ್ಣಪುಟ್ಟ ಬುಡಕಟ್ಟು ರಾಜ್ಯಗಳನ್ನು ಗೆದ್ದು, ಆಂಡೀಸ್ ಸಾರಸಂಪತ್ತನ್ನೆಲ್ಲ ಹೀರಿ, ೧೨-೧೫ನೇ ಶತಮಾನದ ನಡುವೆ ಉತ್ತುಂಗ ತಲುಪಿದ ವಿಸ್ತಾರ ಸಾಮ್ರಾಜ್ಯ ಅವರದು. ಇಂಕಾಗಳು ಒಳ್ಳೆಯ ಆಡಳಿತಗಾರರು, ದಕ್ಷ ಕಾರ್ಯನಿರ್ವಾಹಕರಾದರೂ ಕಲೆ-ಕೃಷಿ-ಸಂಸ್ಕೃತಿ ಔನ್ನತ್ಯವನ್ನೆಲ್ಲ ನೂರಿನ್ನೂರು ವರ್ಷ ಅವಧಿಯಲ್ಲಿ ತಲುಪಿರಲಾರರು. ಇಂಕಾಪೂರ್ವ ಕಾಲದ ಹಲವು ಜನಾಂಗಗಳ ಜ್ಞಾನ ಆಂಡಿಯನ್ ಸಂಸ್ಕೃತಿಯನ್ನು ರೂಪಿಸಿದೆ.

ಆದರೆ ಹಾಗಂತ ನಿರೂಪಿಸುವುದು ಹೇಗೆ? ಯಾಕೆಂದರೆ ಹತ್ತು ಸಾವಿರ ವರ್ಷ ಹಿಂದಿನಿಂದ ಮನುಷ್ಯವಾಸದ ಸ್ಥಳವಾಗಿರುವ ಪೆರು ದೇಶದ ಲಿಖಿತ ಚರಿತ್ರೆ ಬರೀ ೫೦೦ ವರ್ಷ ಹಳೆಯದು. ಅದರ ಅಲಿಖಿತ ಚರಿತ್ರೆಯನ್ನು ಮೌಖಿಕ ಕಥನಗಳ ಆಧಾರದಲ್ಲಿಯೂ ತಿಳಿಯಲಾಗದು. ವಸಾಹತುಶಾಹಿ ಭಾಷೆಯ ಯಜಮಾನಿಕೆಗೆ ಸಾವಿರಾರು ಸ್ಥಳೀಯ ಭಾಷೆಗಳೂ, ಅವುಗಳ ತಿಳುವಳಿಕೆಯೂ ಮಾಯವಾದ ನೆಲ ಅದು. ಎಂದೇ ಇಂಕಾ ನಾಡು ಎಂದು ನಾವೀಗ ಕರೆಯುವ ಪೆರು ಹಲವು ಅಜ್ಞಾತ, ಅಳಿದುಹೋದ ಭಾಷೆ-ಕುಲಗಳ ಕೊಲಾಜ್ ಎನ್ನಬಹುದು.

ಪೆರುವಿನಲ್ಲಿ ಈಗ ಕೆಚುವಾ, ಉರಾರಿನಾ, ಮಾತ್ಸೆ, ಮಾಟಿ, ಕೊರುಬೊ, ಬೋರಾ, ಚಿಂಚಾ, ಹ್ವಾಂಬಿಟೊ, ಜಿಗಿಟಾ, ಜ಼ಪಾರೋ ಮೊದಲಾದ ನೂರಾರು ಸ್ಥಳೀಯ ಕುಲಗಳಿವೆ. ಒಂದಾನೊಂದು ಕಾಲದಲ್ಲಿ ಅಲ್ಲಿ ಎರಡು ಸಾವಿರಕ್ಕೂ ಮಿಕ್ಕಿ ಅಲೆಮಾರಿ ಬುಡಕಟ್ಟುಗಳಿದ್ದವು. ಸ್ಪ್ಯಾನಿಶ್ ಆಕ್ರಮಣದ ನಂತರ ೧೫೦೦ ಕುಲಗಳು ನಶಿಸಿಹೋದವು. ಕಲೆ, ವಿಜ್ಞಾನ, ನಿರ್ಮಾಣ, ಸಮಾಜರಚನೆಗಳಲ್ಲಿ ಉತ್ತುಂಗಹಂತ ತಲುಪಿದ್ದರೂ ರಂಗದಿಂದ ತನ್ನ ಪಾತ್ರಪೋಷಣೆ ಮುಗಿದ ನಟ ಹಠಾತ್ತಾಗಿ ನಿರ್ಗಮಿಸುವಂತೆ ಕೆಲ ಕುಲಗಳು ಇದ್ದಕ್ಕಿದ್ದಂತೆ ನಿರ್ಗಮಿಸಿ ಹೇಳಹೆಸರಿಲ್ಲದೆ ಹೋದವು.

ಮೊದಲ ಸಹಸ್ರಮಾನದಲ್ಲಿ ಆಗಿಹೋದ ಅಂತಹ ಒಂದು ಇಂಕಾಪೂರ್ವ ಕುಲ ಮೊಚೆ.


ಮೊಚೆಗಳು ಕ್ರಿ. ಶ. ೧೦೦-೮೦೦ ರ ಅವಧಿಯಲ್ಲಿ ಪೆರುವಿನ ಉತ್ತರ ಭಾಗದಲ್ಲಿ (ಈಗಿನ ಟ್ರುಜಿಲೊ) ೨೫೦ ಮೈಲು ಕಡಲತೀರ ಹಾಗೂ ೫೦ ಮೈಲು ಒಳನಾಡು ಪ್ರದೇಶವನ್ನು ನೆಲೆಯಾಗಿಸಿ ಬದುಕಿದ ಸಮುದಾಯ. ನೀರಾವರಿ, ಸ್ಮಾರಕನಿರ್ಮಾಣ, ಪಿಂಗಾಣಿ ಹಾಗೂ ಲೋಹಶಿಲ್ಪಕ್ಕೆ ಮೊಚೆ ಜನಾಂಗ ಹೆಸರುವಾಸಿ. ಕೊಂಚ ಭಿನ್ನವಾದ ಎರಡು ಭಾಷೆ, ಸಂಸ್ಕೃತಿಗಳನ್ನು ಹೊಂದಿದ್ದ, ತಮ್ಮದೇ ಅನನ್ಯ ಶಿಲ್ಪಕಲೆ, ಸಂಗೀತ, ಕೃಷಿ ವಿಧಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದ ಕುಲ ಅದು.

ಮೊಚೆಗಳ ಕುರಿತು ತಿಳಿದುಬಂದದ್ದೇ ಒಂದು ಆಕಸ್ಮಿಕ. ಮಚುಪಿಚು ಪ್ರಸಿದ್ಧವಾಗಿ ಪೆರುವಿನ ಅಳಿದುಳಿದ ಪುರಾತತ್ವ ಅವಶೇಷಗಳ ಕುರಿತು ಅಂತಾರಾಷ್ಟ್ರೀಯ ಆಸಕ್ತಿ ಹೆಚ್ಚತೊಡಗಿದಾಗ ಟ್ರುಜಿಲೊ ಬಳಿ ಒಂದು ಮಣ್ಣುದಿಬ್ಬ ಉತ್ಖನನಕಾರರನ್ನು ಸೆಳೆಯಿತು. ಅದು ಮೊಚೆ ನದಿಯ ಪಾತ್ರ ಬದಲಾಯಿಸಿ ಸ್ಪ್ಯಾನಿಶ್ ಆಕ್ರಮಣಕಾರರು ಲೂಟಿಹೊಡೆದಿದ್ದ ಸೂರ್ಯದೇವಾಲಯ. ನೋಡಿದರೆ ೫೦ ಮೀಟರ್ ಎತ್ತರದ ನೈಸರ್ಗಿಕ ದಿಬ್ಬದಂತೆ ಕಾಣುತ್ತಿದ್ದ ಅದು ಮಿಲಿಯಗಟ್ಟಲೆ ಮಣ್ಣುಇಟ್ಟಿಗೆಗಳಿಂದ ಕಟ್ಟಿದ ಸೂರ್ಯದೇವಾಲಯ ಹ್ವಾಕಾ ಡೆಲ್ ಸೋಲ್ ಎಂದು ತಿಳಿದುಬಂತು. ಬಂಗಾರಕ್ಕಾಗಿ ಅಗೆದ ಲೂಟಿಕೋರರು ‘ಬೆಲೆಯಿರದ’ ವಸ್ತುವೆಂದು ಪಿಂಗಾಣಿ ಪಾತ್ರೆ, ಬಟ್ಟೆ, ವಸ್ತು, ಉಪಕರಣಗಳನ್ನು ಹೇರಳವಾಗಿ ಬಿಟ್ಟುಹೋಗಿದ್ದರು. ಅದರ ಪಕ್ಕದಲ್ಲೆ ಇದ್ದ ಮತ್ತೊಂದು ಪುಟ್ಟದಿಬ್ಬವೂ ಉತ್ಖನನಗೊಂಡಾಗ ಅದು ಚಂದ್ರದೇವಾಲಯ ಹ್ವಾಕಾ ಡಿ ಲ ಲುನ ಎಂದು ತಿಳಿಯಿತು. ಅದು ಸುರಕ್ಷಿತವಾಗಿತ್ತು.


(lady of cao bundle)


(lady of cao)

೧೯೮೭ರಲ್ಲಿ ಸಿಪನ್ ಎಂಬಲ್ಲಿ ರಾಜಗೋರಿಯೊಂದು ಪತ್ತೆಯಾಯಿತು. ಲೂಟಿಗೊಳಗಾಗಿದ್ದ ಕ್ರಿ.ಶ. ಮೊದಲನೆ ಶತಮಾನದ ಗೋರಿ ಅದು. ಆಸುಪಾಸಿನ ಹಳ್ಳಿಗಳಲ್ಲಿ ಅಂತಹ ಹಲವು ಗೋರಿಗಳು ಪತ್ತೆಯಾದವು. ಮಮ್ಮಿಗಳು, ಚಿನ್ನ-ಬೆಳ್ಳಿಯ ಆಭರಣ, ತೆಳು ಲೋಹಹಾಳೆ ಹೊದೆಸಿದ ಮುಖವಾಡ, ಪ್ರತಿಮೆ, ಉಪಕರಣ, ಪಾತ್ರೆ, ಮಣಿ ಮತ್ತಿತರ ವಸ್ತುಗಳು ಪತ್ತೆಯಾದವು. ೨೦೦೬ರಲ್ಲಿ ಲೇಡಿ ಆಫ್ ಕ್ಯಾವೊ ಎಂಬ ಮಹಿಳೆಯ ಅತಿ ಸುರಕ್ಷಿತ ಪಿರಮಿಡ್ ಸಿಕ್ಕಿತು. ಹೆರಿಗೆ ಅಥವಾ ತತ್ಸಂಬಂಧಿ ಕಾಲದಲ್ಲಿ ಅಸುನೀಗಿದ್ದ ಇಪ್ಪತ್ತರ ಆಸುಪಾಸಿನ ಕುಲೀನ ಮನೆತನದ ರಾಣಿ ಅವಳು. ಅವಳೊಡನೆ ಮತ್ತೂ ಆರು ಮಾನವರ, ಕೆಲ ಪ್ರಾಣಿಗಳ ಅವಶೇಷಗಳು ದೊರೆತವು. ೨೦೧೩ರಲ್ಲಿ ಮಹಿಳೆಯರ ಆರು ಪಿರಮಿಡ್ ಪತ್ತೆಯಾದವು. ಅದುವರೆಗೆ ಕೇವಲ ಪುರುಷರಿಗಷ್ಟೆ ಅಧಿಕಾರಸ್ಥಾನ ಹಾಗೂ ಪಿರಮಿಡ್ ರಚನೆ ಎಂಬ ಅಭಿಪ್ರಾಯ ಇದ್ದಿದ್ದು ಮಹಿಳೆಯರ ಸರಣಿ ಗೋರಿ ಪತ್ತೆಯಾದ ಬಳಿಕ ಬದಲಾಯಿತು. ಮೊಚೆಗಳು ಒಬ್ಬರಾದಮೇಲೊಬ್ಬರಂತೆ ಪುರೋಹಿತ-ರಾಣಿಯರಿಂದ ಆಳಲ್ಪಟ್ಟರು ಎಂದು ತಿಳಿದುಬಂತು.

ಬೆಸೆಯುವುದು, ತೆಳು ಲೋಹದ ಹಾಳೆಗಳ ಮಾಡುವುದು ತಿಳಿದಿದ್ದ ಕುಶಲಕರ್ಮಿಗಳು ನಾನಾ ವಿನ್ಯಾಸ ಹಾಗೂ ಉಪಯುಕ್ತತೆಯ ಬೆಳ್ಳಿ, ಬಂಗಾರ, ತಾಮ್ರಗಳ ಪಾತ್ರೆ, ಆಭರಣ ತಯಾರಿಸಿದ್ದರು. ಜೊತೆಗೆ ಬಟ್ಟೆ, ಚಾಕು, ಹೂಜಿ, ಲೋಹ, ವಿಕುನ ಮತ್ತು ಅಲ್ಪಾಕ ಪ್ರಾಣಿಗಳ ತುಪ್ಪಳದಿಂದ ನೇಯ್ದ ಬಟ್ಟೆತುಂಡು, ಮರ ಮತ್ತು ಪಿಂಗಾಣಿ ಪಾತ್ರೆಗಳೂ ಸಿಕ್ಕವು. ಪಿಂಗಾಣಿ ಪಾತ್ರೆಗಳಂತೂ ಅಮೂಲ್ಯ ನಿಧಿಯೇ ಸರಿ. ಸಂಗೀತಗಾರರು, ಬಂಧಿತರು, ಪುರೋಹಿತರ ಪ್ರತಿಕೃತಿಗಳು; ಹಾವು, ಕಪ್ಪೆ, ಹಕ್ಕಿ, ಮೀನು, ಏಡಿ, ಜಿಂಕೆ ಮೊದಲಾದ ಪ್ರಾಣಿಗಳ ಮೂರ್ತಿಗಳು; ಬೇಟೆ, ಯುದ್ಧ, ಯೋಧ, ಸೋಲು, ದಿನನಿತ್ಯದ ಜೀವನ, ಕೃಷಿ ಮುಂತಾದವು ಪಿಂಗಾಣಿ ಕಲೆಯಾಗಿ ಅರಳಿದ್ದವು.

ಬಟ್ಟೆ, ಮಡಕೆ ಮತ್ತು ಆಚೀಚಿನ ಗೋಡೆಗಳ ಮೇಲೆ ಇದ್ದ ಚಿತ್ರಗಳ ಪ್ರಕಾರ ಅವರ ಸೃಷ್ಟಿಕರ್ತ ಆಕಾಶ ದೇವತೆ. ಭಯಾನಕ ಶಕ್ತಿಶಾಲಿಯಾದ ಅವನನ್ನು ಸಂಪ್ರೀತಗೊಳ್ಳಲು ನರಬಲಿ ಕೊಡಬೇಕು. ಚಂದ್ರ ಹೆಣ್ಣುದೇವತೆ. ಮಳೆ, ಗಾಳಿ, ಋತುವಿನ ಅಧಿದೇವತೆ. ಅವಳು ಸೂರ್ಯನಿಗಿಂತ ಶಕ್ತಿಶಾಲಿ ಏಕೆಂದರೆ ಹಗಲು-ರಾತ್ರಿ ಎರಡೂ ಕಾಲಗಳಲ್ಲಿ ಕಾಣಬಲ್ಲಳು. ಮತ್ತೊಬ್ಬ ಶಿರಚ್ಛೇದನ ಮಾಡುವ ದೇವತೆ. ಒಂದು ಕೈಲಿ ದೊಡ್ಡ ಕೊಡಲಿ, ಮತ್ತೊಂದು ಕೈಯಲ್ಲಿ ಕಡಿದ ರುಂಡ ಇರುವ ಅರೆಮಾನವ ಅರೆ ಚಿರತೆ ದೇಹದ ದೇವ ಅವನು.

ದೇಹದೊಳಗಿನ ದ್ರವ ಪವಿತ್ರ ಎಂಬ ನಂಬಿಕೆ ಅವರದು. ನೀರಾವರಿಯೇ ಮೂಲವಾದ ಕುಲಕ್ಕೆ ಹರಿವು ಒಂದು ಮೌಲ್ಯ. ಎಂದೇ ತೊಟ್ಟುತೊಟ್ಟಾಗಿ ರಕ್ತದ ಹನಿಗಳನ್ನು ಬಲಿ ನೀಡುವ ರಕ್ತಬಲಿಯ ಚಿತ್ರಗಳು ಕಂಡುಬಂದವು. ಸೋಲು ಎಂದರೆ ಎಲ್ಲ ರಂಧ್ರಗಳಿಂದ ದ್ರವ ಸೋರಿಸುವುದು ಅಥವಾ ಪ್ರಾಣಿ, ಹಕ್ಕಿ ಅಥವಾ ಮನುಷ್ಯರಿಂದ ಕಣ್ಣು, ಗುಪ್ತಾಂಗ ಕೀಳಿಸಿಕೊಳ್ಳುವುದು. ಹಾಗೆ ಸೋತ ಯೋಧರ, ವಧಾಸ್ಥಾನಕ್ಕೆ ಮೆರವಣಿಗೆಯಲ್ಲಿ ಒಯ್ಯುತ್ತಿರುವವರ ಚಿತ್ರಗಳೂ ಅಲ್ಲಿ ಸಿಕ್ಕವು.



ಸೆರೆಯಾಳುಗಳ ಹಾಗೂ ಹರಕೆಯ ನರಬಲಿ ಸಾಮಾನ್ಯವಾಗಿತ್ತು. ಬಲಿಗಿಂತ ಮೊದಲು ಅತಿಹಿಂಸೆ ನೀಡಿ ದುರ್ಬಲಗೊಳಿಸಲಾಗುತ್ತಿತ್ತು. ಅದರ ಭಾಗವಾಗಿ ನರಮಾಂಸ ಭಕ್ಷಣೆಯೂ ನಡೆಯುತ್ತಿತ್ತು. ಇದಕ್ಕೆ ಪುರಾವೆಯೊದಗಿಸುವ ಅನೇಕ ಚಿತ್ರಣಗಳು ಕಂಡುಬರುತ್ತವೆ. ಹ್ವಾಕಾ ಡೆಲ್ ಸೋಲ್ ಬುಡದಲ್ಲಿ ೩೦ ವರ್ಷಕ್ಕಿಂತ ಕಡಿಮೆ ವಯಸಿನ ೪೦ ತರುಣರ ಅಸ್ಥಿಪಂಜರಗಳು ಸಿಕ್ಕವು. ಕೀಲುಸಂದು ತಪ್ಪಿದ, ದವಡೆ ಎಲುಬು ಇಲ್ಲದ, ಎಲುಬು ಮುರಿದ ಅಸ್ಥಿಪಂಜರಗಳವು. ಅವರು ಹಿಂಸೆ ಅನುಭವಿಸಿ ಬಲಿಯಾದವರು.

ಹೀಗೆ ಇಂಕಾಪೂರ್ವ ಮೊಚೆಗಳ ಕತೆಯನ್ನು ಬಟ್ಟೆ, ಚಿತ್ರ, ಲೋಹವಸ್ತು, ಪಿಂಗಾಣಿಗಳೇ ತಿಳಿಸಿಬಿಟ್ಟವು.

ಲೈಂಗಿಕ ಅಭಿವ್ಯಕ್ತಿ 

ಲೀಮಾದ ಲಾರ್ಕೋ ಮ್ಯೂಸಿಯಂ ಹಾಗೂ ಇನ್ನೂ ಕೆಲ ಪುರಾತತ್ವ ಮ್ಯೂಸಿಯಂಗಳ ಮೊಚೆ ಕಾಲದ ಪಿಂಗಾಣಿ ವಸ್ತುಗಳು ಕೆಲವು ವಿಶೇಷಗಳಿಂದ ಥಟ್ಟನೆ ಗಮನ ಸೆಳೆಯುತ್ತವೆ.

ಒಂದೇ ಅಚ್ಚಿನಿಂದ ಎರಕ ಹೊಯ್ಯುವುದು ಅವರಿಗೆ ಗೊತ್ತಿತ್ತು. ಒಂದೇ ತರಹದ ಸಾವಿರಾರು ಪಿಂಗಾಣಿ ಪಾತ್ರೆಗಳು ಅಲ್ಲಿವೆ. ಕಂದು, ಕೆಂಪು, ಹಳದಿ ಬಣ್ಣಗಳು ಸಾಮಾನ್ಯವಾಗಿ ಬಳಕೆಯಾಗಿವೆ. ಮನುಷ್ಯರ ತದ್ರೂಪ ಮೂರ್ತಿಗಳು ಆ ಕಾಲದ ಯಾರದೊ ವ್ಯಕ್ತಿಯದಿರಬೇಕು, ಏಕೆಂದರೆ ಅವು ಪದೇಪದೇ ಕಾಣಿಸಿಕೊಂಡಿವೆ.

ಪಿಂಗಾಣಿ ಕಲೆಯ ಮತ್ತೊಂದು ವಿಶೇಷತೆಯೆಂದರೆ ಒಂದಲ್ಲ ಒಂದು ಕ್ರಿಯೆಯಲ್ಲಿ, ಚಲನೆಯಲ್ಲಿ ತೊಡಗಿರುವ ಮೂರ್ತಿ-ಚಿತ್ರಗಳನ್ನೇ ಅವು ಹೊಂದಿರುವುದು. ಇದುವರೆಗೆ ಸಿಕ್ಕ ೮೦,೦೦೦ಕ್ಕೂ ಮೀರಿದ ಪಿಂಗಾಣಿ ವಸ್ತುಗಳಲ್ಲಿ ಯುದ್ಧ, ಬೇಟೆ, ನೇಯುವಿಕೆ, ಲೈಂಗಿಕ ಕ್ರಿಯೆ ಹೀಗೆ ಒಂದಲ್ಲ ಒಂದು ಕ್ರಿಯೆಯಲ್ಲಿ ತೊಡಗಿದ ಮನುಷ್ಯರಿದ್ದಾರೆ. ಅದರಲ್ಲೂ ೫೦೦ಕ್ಕೂ ಮಿಕ್ಕಿದ ಪಿಂಗಾಣಿ ಮಾದರಿಗಳು ಢಾಳಾಗಿ ಲೈಂಗಿಕತೆಯನ್ನು, ಲೈಂಗಿಕ ಕ್ರಿಯೆಯನ್ನು ಪ್ರದರ್ಶಿಸುತ್ತವೆ! ಪುಟ್ಟ ಪಿಂಗಾಣಿ ಪಾತ್ರೆಗಳ ಲೈಂಗಿಕ ಶಿಲ್ಪಗಳನ್ನು ನೋಡುತ್ತಿದ್ದರೆ ಎರಡನೇ ಶತಮಾನದಲ್ಲಿ ವಾತ್ಸಾಯನ ಬರೆದ ಕಾಮಸೂತ್ರ, ಖಜುರಾಹೊ ದೇವಾಲಯಗಳ ಕಾಮಶಿಲ್ಪ ನೆನಪಾಗುತ್ತವೆ.



ಲೈಂಗಿಕ ಚಿತ್ರಣವಿದ್ದ ಪಿಂಗಾಣಿ ಹೂಜಿ-ಪಾತ್ರೆಗಳೆಲ್ಲ ಬಳಕೆಯಲ್ಲಿದ್ದ, ಬಳಸಬಹುದಾದಂತಹ, ದ್ರವಪದಾರ್ಥವನ್ನು ಸುರಿಯಲು ಬಳಸುತ್ತಿದ್ದಂತಹ ಪಾತ್ರೆಗಳು. ಮಾನವ ದೇಹದ ರಂಧ್ರಗಳಿಂದ ದ್ರವ ಹೊರಹರಿಯುವಂತೆ ತೋರಿಸುವ ಆಕಾರಗಳಿವೆ. ಎರಡು ಶಿಶ್ನಗಳನ್ನು ದ್ರವ ಸುರಿವ ದಾರಿಯಾಗಿ ಆಚೀಚೆ ಹೊಂದಿರುವ ಪಾತ್ರೆಯಿದೆ. ಬಹುಪಾಲು ಪಿಂಗಾಣಿ ಪಾತ್ರೆಗಳಲ್ಲಿ ಗುದ ಸಂಭೋಗ ಹಾಗೂ ಮುಖಸಂಭೋಗಗಳು ಚಿತ್ರಿಸಲ್ಪಟ್ಟಿವೆ! ಮನುಷ್ಯರ ಲೈಂಗಿಕ ರಂಧ್ರಗಳನ್ನು, ಅಂಗಾಂಗಗಳನ್ನು ಸ್ಪಷ್ಟವಾಗಿ, ಕೊಂಚ ಉತ್ಪ್ರೇಕ್ಷಿಸಿ ಕೆತ್ತಲಾಗಿದೆ. ಗುದಸಂಭೋಗ ಗಂಡುಗಂಡುಗಳ ನಡುವೆ ಅಷ್ಟೇ ಅಲ್ಲ, ಗಂಡುಹೆಣ್ಣುಗಳ ನಡುವೆಯೂ ಇದೆ! ಯೋನಿ ಸಂಭೋಗ ಚಿತ್ರಣ ಇಲ್ಲವೆನ್ನುವಷ್ಟು ಕಡಿಮೆ. ಮಗು ಮೊಲೆ ಹಾಲು ಕುಡಿಯುತ್ತಿರುವಾಗ ದಂಪತಿಗಳು ಗುದ ಸಂಭೋಗದಲ್ಲಿ ತೊಡಗಿರುವ ಚಿತ್ರ, ಹೆರಿಗೆಯಾಗುತ್ತಿರುವ ಶಿಲ್ಪ, ಹಸ್ತಮೈಥುನದಲ್ಲಿ ತೊಡಗಿರುವ ಗಂಡು ಮತ್ತು ಅವನಿಗೆ ಸಹಕರಿಸುತ್ತಿರುವ ಹೆಣ್ಣು ಶಿಲ್ಪಗಳೂ ಇವೆ. ಅತಿಯಾಗಿ ತೆರೆದುಕೊಂಡ ಲೈಂಗಿಕ ರಂಧ್ರಗಳು ಹಾಗೂ ಅವುಗಳಿಂದ ಸೋರುವ ದ್ರವ ಇರುವವರು ಲೈಂಗಿಕ ಗುಲಾಮರು. ಕುರಿಜಾತಿಯ ಹೆಣ್ಣು ಇಲ್ಲಮಾ ಪ್ರಾಣಿಯನ್ನು ಕುರಿಗಾಹಿ ಸಂಭೋಗಿಸುತ್ತಿರುವ, ಮಹಿಳೆಯನ್ನು ಪಶು, ಮನುಷ್ಯ ಮಿಶ್ರಿತ ವಿಚಿತ್ರ ಜೀವಿಯೊಂದು ಸಂಭೋಗಿಸುತ್ತಿರುವ ದೃಶ್ಯವೂ ಇದೆ.

ಫ್ರೇ ಡೊಮಿಂಗೊ ಡಿ ಸ್ಯಾಂಟೊ ಟಾಮಾಸ್ ಎಂಬ ಸ್ಪೇನಿನ ಪಾದ್ರಿ ಕ್ರಿ. ಶ. ೧೫೬೦ರಲ್ಲಿ ಟ್ರುಜಿಲೊಗೆ ಬಂದಾಗ ಎಲ್ಲಿ ನೋಡಿದರಲ್ಲಿ ಕಾಣುವ ಸಲಿಂಗರತಿಯ ಶಿಲ್ಪಗಳು; ಹೆಣ್ಣಿನಂತೆ ಅಲಂಕರಿಸಿಕೊಂಡು ವರ್ತಿಸುವ ಗಂಡುಗಳ ನೋಡಿ ಹೇವರಿಕೆ ವ್ಯಕ್ತಪಡಿಸುತ್ತ ಅವರ ದೇಹದಲ್ಲಿ ಸೈತಾನ ನೆಲೆಸಿದ್ದಾನೆಂದು ಹೇಳಿದ್ದ. ಸಲಿಂಗಕಾಮ ಕೆಲ ಆಂಡಿಯನ್ ಸಮುದಾಯಗಳಲ್ಲಿ ಸಂಪೂರ್ಣ ಒಪ್ಪಿಗೆ ಪಡೆದಿದ್ದರೆ ಮತ್ತೆ ಕೆಲ ಸಮುದಾಯಗಳಲ್ಲಿ ಬಹಿಷ್ಕಾರಕ್ಕೀಡಾಗಿತ್ತು. ಮೊಚೆಗಳಂತೆ ಸಲಿಂಗಕಾಮ ಬಳಸುತ್ತಿದ್ದ ಬೇರೆ ಕುಲಗಳೂ ಅಲ್ಲಿದ್ದವು. ಸಲಿಂಗರತಿ ಇಂಕಾಗಳಿಂದ ನಿಷೇಧಕ್ಕೊಳಗಾಗಿತ್ತು. ಆದರೆ ಇಂಕಾಪೂರ್ವ ಚಿಂಚಾ ಕುಲ ಸಲಿಂಗಕಾಮ ಬಳಸುತ್ತಿತ್ತು. ಎಂದೇ ಇಂಕಾಗಳು ಯಾವುದೇ ಸಲಿಂಗರತಿಯ ಕುರುಹು-ನೆನಪು ತನ್ನ ಪ್ರಜೆಗಳಿಗೆ ಉಳಿಯಬಾರದೆಂದು ಚಿಂಚಾಗಳನ್ನು ಗೆದ್ದ ಕೂಡಲೇ ಅವರನ್ನು ಜೀವಂತ ಸುಟ್ಟು ಹಾಕಿದರು. ಅವರ ಮನೆ ಕೆಡವಿ; ಹೊಲಗದ್ದೆಗಳ ಗಿಡಮರಗಳನ್ನು ಬುಡಮೇಲಾಗಿಸಿ ಅತ್ಯಂತ ಕ್ರೂರವಾಗಿ ಸಮುದಾಯವನ್ನೇ ನಾಶಮಾಡಿದರು.

ಇವತ್ತಿಗೂ ಯೋನಿಯೇತರ ಸಂಭೋಗ ಹಾಗೂ ಸಲಿಂಗಕಾಮ ಅನೈಸರ್ಗಿಕ ಕ್ರಿಯೆ ಎಂದು ಬಹುಪಾಲು ಸಾಂಸ್ಥಿಕ ಧರ್ಮಗಳು, ದೇಶದ ಕಾನೂನುಗಳು ನಿಷೇಧ ಹೇರಿವೆ. ಅಂತಹ ಲೈಂಗಿಕತೆಯ ಫಲಿತಾಂಶವಾಗಿ ಸಂತಾನೋತ್ಪತ್ತಿ ಆಗದಿರುವುದರಿಂದ ಅದು ಅನೈಸರ್ಗಿಕ ಹಾಗೂ ನಿಷಿದ್ಧ ಎನ್ನುವುದು ಅವರ ವ್ಯಾಖ್ಯಾನ. ಹಾಗಾದರೆ ಮೊಚೆಗಳ ಲೈಂಗಿಕ ರೂಢಿ ಯಾಕೆ ಈ ರೀತಿ ಇತ್ತು? ಅವನ್ನು ಪಿಂಗಾಣಿ ಕಲೆಯಲ್ಲಿ ಏಕೆ ಸೃಷ್ಟಿಸಲಾಯಿತು ಎನ್ನುವುದು ಅಧ್ಯಯನಕ್ಕೊಳಗಾಯಿತು. ಮೆಲನೇಷಿಯಾ, ಟೊಬ್ರಿಯಾಂಡ್ ದ್ವೀಪ ವಾಸಿಗಳಲ್ಲಿ ಸಮಾಜಶಾಸ್ತ್ರಜ್ಞ ಮೆಲಿನೋವ್ಸ್ಕಿ ನಡೆಸಿದ ಅಧ್ಯಯನ, ಇವತ್ತಿಗೂ ಆ ದ್ವೀಪಗಳಲ್ಲಿರುವ ಕೆಲ ಆಚರಣೆ, ನಂಬಿಕೆಗಳನ್ನು ಇದರೊಟ್ಟಿಗೆ ಇಟ್ಟು ಅಧ್ಯಯನಗಳು ನಡೆದವು.



ಸಲಿಂಗಕಾಮ ಒಪ್ಪಿತವಾಗಿದ್ದ ಆದಿಮ ಕುಲಗಳು ಲೈಂಗಿಕತೆ ಮತ್ತು ಸಂತಾನೋತ್ಪತ್ತಿ ಎರಡೂ ಬೇರೆಬೇರೆ ಎಂದು ನಂಬಿರಬಹುದು. ಸಂತಾನೋತ್ಪತ್ತಿ ಎಂದರೆ ಕೆಲ ಚಣಗಳಲ್ಲಿ ವೀರ್ಯವನ್ನು ಯೋನಿಯೊಳ ಸ್ರವಿಸಿ ಮುಗಿಸಿಬಿಡುವ ಸರಳ ಆಚರಣೆಯಲ್ಲ; ಗುದ, ಮುಖ ಸಂಭೋಗಗಳೂ ಲೈಂಗಿಕತೆಯ ಒಂದು ಭಾಗ ಎಂದು ಭಾವಿಸಿದ್ದಿರಬಹುದು.

ಮೆಲನೇಷಿಯ ಮತ್ತು ಟೊಬ್ರಿಯಾಂಡ್ ವಾಸಿಗಳಲ್ಲಿ ಪ್ರಚಲಿತವಿರುವ ನಂಬಿಕೆಯೆಂದರೆ ಸಂತಾನೋತ್ಪತ್ತಿ ಶಕ್ತಿಯನ್ನು ಹಿರಿಯ ಗಂಡಸು ಕಿರಿಯ ಗಂಡು-ಹೆಣ್ಣುಗಳಿಗೆ ತನ್ನ ವೀರ್ಯವನ್ನು ಅವರ ರಂಧ್ರಗಳಲ್ಲಿ ಸೇರಿಸುವ ಮೂಲಕ ಉದ್ದೀಪಿಸಬೇಕು. ಎಂದೇ ಹಿರಿಯ ಗಂಡಸು ಕಿರಿಯ ಗಂಡಿನೊಡನೆ, ಆ ಕಿರಿಯ ಗಂಡು ತನ್ನ ಹೆಣ್ಣಿನೊಡನೆ ಕೇವಲ ಯೋನಿ ಮೂಲಕ ಮಾತ್ರವಲ್ಲದೆ ಇತರ ದೇಹದ್ವಾರಗಳ ಮೂಲಕವೂ ಸಂಭೋಗ ಕ್ರಿಯೆಯಲ್ಲಿ ತೊಡಗಬೇಕು. ಹೆಣ್ಣಿನ ಮೊಲೆಹಾಲು ಮತ್ತು ಗಂಡಿನ ವೀರ್ಯ ಇವೆರೆಡೂ ಸಂತಾನೋತ್ಪತ್ತಿ ದ್ರವಗಳು ಹಾಗೂ ಅವು ಅಮರ ದ್ರವಗಳು ಎಂದೇ ಅವರು ಭಾವಿಸುತ್ತಾರೆ. ಗಂಡುಹೆಣ್ಣೆನ್ನದೆ ಎಲ್ಲ ಮಕ್ಕಳು ಮೊಲೆಹಾಲು ಸೇವಿಸುವಂತೆ ವೀರ್ಯಸೇವನೆ ಕೂಡ ಚಾಲ್ತಿಯಲ್ಲಿತ್ತು.

ಇಂಕಾಗಳ ಕಾಲದಲ್ಲಿ ಬಸುರಿಯೊಡನೆ ಹಾಗೂ ಎರಡು ವರ್ಷದೊಳಗಿನ ಎದೆಹಾಲು ಕುಡಿವ ಮಗುವಿನ ತಾಯಿಯೊಡನೆ ಯೋನಿಸಂಪರ್ಕ ಶಿಕ್ಷಾರ್ಹವಾಗಿದ್ದುದನ್ನು ಗಮನಸಿದರೆ ಯೋನಿಯೇತರ ಸಂಭೋಗ ಮತ್ತು ಸಲಿಂಗಕಾಮ ಕುಟುಂಬ ಯೋಜನಾ ವಿಧಾನವೂ ಆಗಿರಬಹುದು ಎನಿಸುತ್ತದೆ.

ಇಂತಹ ಲೈಂಗಿಕತೆಯನ್ನು ಕಲೆಯಲ್ಲಿ ಮೂಡಿಸಿದ ಉದ್ದೇಶ ಬಹುಶಃ ಮನರಂಜನೆ ಮತ್ತು ಲೈಂಗಿಕ ಶಿಕ್ಷಣ ಎರಡೂ ಆಗಿರಬಹುದು. ಅಥವಾ ಸೃಷ್ಟಿ, ಲೈಂಗಿಕತೆಯ ಆನಂದ, ರೀತಿನೀತಿಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಲಿಪಿಯಿರದ ಸಮುದಾಯ ಕಲೆಯ ಮಾರ್ಗ ಬಳಸಿರಬಹುದು.

ಈ ವಿವರಗಳನ್ನೆಲ್ಲ ಓದಿ ಶಿಷ್ಟ, ಮಡಿವಂತ ಮನಸುಗಳು ಮುಜುಗರ ಅನುಭವಿಸಬಹುದು. ವೀರ್ಯಶಕ್ತಿ ಕುರಿತು ಮೊಚೆಗಳಿಗೆ ಮೂಢನಂಬಿಕೆಯಿತ್ತು; ಅವರ ಲೈಂಗಿಕತೆ ವಿಕೃತವಾಗಿತ್ತು ಎಂದು ಒಂದೇ ಸಾಲಿನ ತೀರ್ಪು ನೀಡಬಹುದು. ಆದರೆ ವೈಜ್ಞಾನಿಕ ಆವಿಷ್ಕಾರಗಳಿರದ ಕಾಲದಲ್ಲಿ ಯುದ್ಧ, ಸೇನೆ, ಸಾವುಗಳ ನಡುವೆಯೇ ಮನರಂಜನೆ, ಕುಟುಂಬ ಯೋಜನೆ ಎರಡನ್ನೂ ತೂಗಿಸಿಕೊಳ್ಳಲು ಅವರಿಗೆ ಏನು ಅನಿವಾರ್ಯವಾಗಿತ್ತೋ ನಾವು ಹೇಗೆ ನಿರ್ಧರಿಸುವುದು? ಅದು ಸುಲಭವಲ್ಲ, ಸಾಧುವೂ ಅಲ್ಲ.

ಹಠಾತ್ ನಿರ್ಗಮನ

ಇಷ್ಟು ಸುಸಂಸ್ಕೃತ ಕುಲಕ್ಕೆ ಆಮೇಲೇನಾಯಿತು? ಏಕೆ ನಾಶವಾಯಿತು? ಇದು ವರ್ಷಗಟ್ಟಲೆ ದಕ್ಷಿಣ ಅಮೆರಿಕದ ಅತಿದೊಡ್ಡ ಪುರಾತತ್ವಶಾಸ್ತ್ರ ಒಗಟಾಗಿತ್ತು. ಈಗದಕ್ಕೆ ಉತ್ತರ ಸಿಗತೊಡಗಿದೆ.

ಕ್ರಿ. ಶ. ೫೩೬-೫೯೪ರ ಅವಧಿಯಲ್ಲಿ ಸಂಭವಿಸಿದ ಆಂಡೀಸ್ ‘ಸೂಪರ್ ಎಲ್‌ನಿನೊ ಫಿನಾಮೆನನ್’ ಅವರ ನಾಶಕ್ಕೆ ಕಾರಣವಾಯಿತು ಎನ್ನಲಾಗಿದೆ. ೩೦ ವರ್ಷ ಅತಿ ಮಳೆ, ನಂತರ ೩೦ ವರ್ಷ ಮಳೆಯೇ ಇಲ್ಲದ ಅತಿದುರ್ಭರ ಬರಗಾಲ ತಂದೊಡ್ಡಿದ ಮಹಾನ್ ವಾತಾವರಣ ಬದಲಾವಣೆಗೆ ಇಡೀ ಮೊಚೆ ಸಮಾಜ ಛಿದ್ರಗೊಂಡಿತು. ಎಷ್ಟು ಪ್ರಾಣಿಬಲಿ, ನರಬಲಿ ಕೊಟ್ಟರೂ ಕಡಿಮೆಯಾಗದ ನಿರಂತರ ಪ್ರವಾಹ, ದಶಕಗಟ್ಟಲೆ ಪ್ರತಿಕೂಲ ಕೃಷಿ ಪರಿಸ್ಥಿತಿಯಿಂದ ಆಹಾರ ಕೊರತೆ ಎದುರಾಯಿತು. ೩೦ ವರ್ಷ ಸುರಿದ ಮಳೆ ಕಡಿಮೆಯಾಯಿತು ಎನ್ನುವಾಗ ಭೀಕರ ಬರಗಾಲ ಶುರುವಾಗಿ ಸಮಾಜದಲ್ಲಿ ಕ್ಷೋಭೆ, ಅಶಾಂತಿ, ದಂಗೆ, ಲೂಟಿ ಮತ್ತಿತರ ಸಮಸ್ಯೆಗಳು ಉದ್ಭವಿಸಿದವು. ಸಂಪನ್ಮೂಲ, ಆಹಾರದ ಪೈಪೋಟಿಯಿಂದ ಸಂಭವಿಸಿದ ನಾಗರಿಕ ಯುದ್ಧದಲ್ಲಿ ಹಾಗೂ ಹಸಿವಿನಲ್ಲಿ ಬಹುಪಾಲು ಜನ ನಾಶವಾದರು. ಆದರೂ ಕ್ರಿ. ಶ. ೬೫೦ರವರೆಗೂ ಅವರ ಇರುವಿಕೆ ಇತ್ತೆಂದು ಅವಶೇಷಗಳು ತಿಳಿಸುತ್ತವೆ. ಬರಬರುತ್ತ ಗ್ರಾಮಗಳು ನಾಶವಾದವು. ಕೃಷಿ ನಾಶವಾಯಿತು. ಮೊಚೆ ಸಮುದಾಯ ನಗರೀಕರಣಗೊಂಡಿತು.

ಪ್ರಕೃತಿ ಅವರಿಗೆ ಸುಧಾರಿಸಿಕೊಳ್ಳಲಾಗದ ಹೊಡೆತ ಕೊಟ್ಟಿತು. ಇದರಿಂದ ಪ್ರಕೃತಿ ಆರಾಧಕರಾಗಿದ್ದ ಅವರ ನಂಬಿಕೆ ಛಿದ್ರವಾಯಿತು. ಬದುಕಿನ ಔನ್ನತ್ಯ ಕುರಿತ ಆಸಕ್ತಿ, ಕುತೂಹಲ, ಆಸೆ ಅಳಿಸಿಹೋಯಿತು. ಆಚೀಚಿನ ನಾಡುಗಳಿಗೆ ವಲಸೆ ಹೋದರು. ಆದರೆ ಹಾಗೆ ಹೋದಲ್ಲಿ ಆ ಮೊದಲೇ ನೆಲೆಯಾಗಿದ್ದ ಕುಲಗಳಿಂದ ಭೀಕರ ದಾಳಿಗೊಳಗಾಗಿ ಅಳಿದುಳಿದ ಜನರೂ ನಾಶವಾದರು. ಕೆಲವರು ಪಕ್ಕದ ವಿರು, ರೆಕ್ವಾಯ್‌ಗಳೊಂದಿಗೆ ಕಾದಾಡಿ ಆ ಕುಲಗಳೊಡನೆ ಲೀನವಾದರು.

ಮೊಚೆಗಳ ಮುನ್ನ ವಿರುಗಳಿದ್ದರು. ಮೊಚೆಗಳ ನಂತರ ಹ್ವಾರಿ, ಟಿವನಾಕು, ನಜಕಾ, ಲೀಮಾ ಸಂಸ್ಕೃತಿಗಳು ಬಾಳಿದವು. ಅವರ ನಂತರ ಚಿಮುಗಳು ಬಂದರು. ಆಮೇಲೆ ಅವರನ್ನೆಲ್ಲ ಸೋಲಿಸಿ ಇಂಕಾಗಳು ಬಂದರು. ಆಮೇಲೆ ಅವರನ್ನೂ ಸೋಲಿಸಿ ವಸಾಹತುಶಾಹಿ ಸ್ಪೇನ್ ಬಂತು. ಈಗ ಪೆರುವಿಗರ ತಲೆಮೇಲೆ ಜಾಗತಿಕ ದೊಡ್ಡಣ್ಣ ಕೂತಿದ್ದಾನೆ..

ಇದರಲ್ಲಿ ಯಾರು ಗೆದ್ದವರು? ಯಾರು ಸೋತವರು? ಯಾರು ಆಕ್ರಮಿಸಿದವರು? ಯಾರು ಆಕ್ರಮಿಸಲ್ಪಟ್ಟವರು? ಕೇಳಬಾರದ ಈ ಪ್ರಶ್ನೆಗಳ ವಿಶೇಷವೇನೆಂದರೆ ಅವಕ್ಕೆ ಉತ್ತರ ಇಲ್ಲವೆನ್ನುವುದು.


(ಚಿತ್ರಗಳು ಅಂತರ್ಜಾಲದಿಂದ)

Friday, 17 June 2016

ದಕ್ಷಿಣ ಅಮೆರಿಕಾ: ಅಳಿದ ಕುಲಗಳ ನಾಡು






(ಇತ್ತೀಚೆಗೆ ನಾವು ಅಲೆದಾಡಿ ಬಂದ ದಕ್ಷಿಣ ಅಮೆರಿಕ ಕುರಿತು ಬರೆವ ಒತ್ತಡದ ಫಲ ಈ ಬರಹ. ಅಲ್ಲಿ ನನ್ನ ಸೆಳೆದ, ಕಲಕಿದ ಕೆಲ ವಿಷಯಗಳಲ್ಲಿ ಆ ಖಂಡದ ಅಳಿದ, ಅಳಿಯುತ್ತಿರುವ, ಅಪಾಯದಂಚಿನಲ್ಲಿರುವ ಕುಲಗಳ ಕತೆಯೂ ಸೇರಿದೆ. ಅಂಥ ಮೂರು ಕುಲಗಳು ಕ್ರಮವಾಗಿ ಮೊಚೆ, ಗ್ವರಾನಿ ಹಾಗೂ ಮಾಪುಚೆ. ಗ್ವರಾನಿಗಳ ಕುರಿತ ಬರಹ ಇದು.)


ದಕ್ಷಿಣ ಅಮೆರಿಕವನ್ನು ಹಲವು ದೃಷ್ಟಿಗಳಿಂದ ಉಳಿದ ಜಗತ್ತು ಇವತ್ತು ನೋಡುತ್ತಿದೆ. ಸಮೃದ್ಧ ನೈಸರ್ಗಿಕ ಸಂಪತ್ತಿರುವ ನೆಲವಾಗಿ; ಜಾಗತೀಕರಣದ ದುಷ್ಪರಿಣಾಮಗಳನ್ನು ಮೊದಲು ಅನುಭವಿಸಿ, ಹೋರಾಟ ಕಟ್ಟಿದ ನಾಡಾಗಿ; ಕಮ್ಯುನಿಸಂ ಸರ್ಕಾರಗಳನ್ನು ಹೊಂದಿರುವ ದೇಶಗಳ ಖಂಡವಾಗಿ; ಉತ್ತರ ಅಮೆರಿಕದ ಪಕ್ಕದಲ್ಲೆ ಇದ್ದರೂ ಅದರ ಏಕಸ್ವಾಮ್ಯಕ್ಕೆ ಸಡ್ಡು ಹೊಡೆದ ಪುಟ್ಟ ದೇಶಗಳ ಆತ್ಮಾಭಿಮಾನದ ನೆಲವಾಗಿ - ಹೀಗೇ ಹಲವು ನೆಲೆಗಳಲ್ಲಿ ಅದರ ಸ್ವರೂಪವನ್ನು ಗ್ರಹಿಸಬಹುದು. ಇವು ವರ್ತಮಾನದ ವ್ಯಾಖ್ಯಾನಗಳಾದರೆ ಐತಿಹಾಸಿಕವಾಗಿ ದಕ್ಷಿಣ ಅಮೆರಿಕ ಹಲವು ವಿಶಿಷ್ಟ ಕುಲ-ನೆಲೆ-ದೇಶ-ನಾಗರಿಕತೆಗಳು ರೂಪುಗೊಂಡ ಸಂಸ್ಕೃತಿ ಪಾಕಶಾಲೆಯೂ ಹೌದು. ಇವೆಲ್ಲದರ ಜೊತೆಗೇ ಅಥವಾ ಇವೆಲ್ಲಕ್ಕಿಂತ ಮುಖ್ಯವಾಗಿ ಅದು ಅಳಿದುಹೋದ, ಅಳಿಯುತ್ತಿರುವ ಸಾವಿರಾರು ಭಾಷೆಗಳ ನಾಡೂ ಆಗಿದೆ.

ಅಪಾಯದಂಚಿನಲ್ಲಿರುವ ಅಂಥ ಒಂದು ಭಾಷೆಯ, ಅದನಾಡುವ ಜನರ ಮುಖಾಮುಖಿ ಅಚ್ಚರಿದಾಯಕವಾಗಿ ಆಯಿತು..

ದ. ಅಮೆರಿಕದ ಅರ್ಜೆಂಟೀನಾ, ಬ್ರೆಜಿಲ್ ಮತ್ತು ಪರಗ್ವೆ ದೇಶಗಳ ಗಡಿಯಲ್ಲಿ ರುದ್ರರಮಣೀಯ ಇಗ್ವಾಸು ಜಲಪಾತವಿದೆ. ಕಾಸಿಗೆ ಕಾಸು ಸೇರಿಸಿ, ಹತ್ತಾರು ಸಾವಿರ ಮೈಲಿ ಕ್ರಮಿಸಿ, ದುಬಾರಿ ಪ್ರವೇಶ ಶುಲ್ಕ ತೆತ್ತು ನೋಡಿಬಂದರೂ ಪರವಾಗಿಲ್ಲ, ಕಣ್ಣಿದ್ದು ಸಾರ್ಥಕವಾಯಿತು ಎನಿಸುವಂತೆ ಮಾಡುವ ಪ್ರಕೃತಿ ವಿಸ್ಮಯ ಇಗ್ವಾಸು. ಜಲಪಾತದ ನೋಟ, ಶಬ್ದ, ರಮಣೀಯತೆ ನಮ್ಮ ಒಳಹೊರಗನೆಲ್ಲ ತುಂಬಿಕೊಂಡು ಅದನ್ನರಗಿಸಿಕೊಳ್ಳಲು ಇನ್ನೆಷ್ಟು ಕಾಲ ಬೇಕೋ ಅನಿಸುತ್ತಿರುವಾಗ, ಇಗ್ವಾಸು ನ್ಯಾಷನಲ್ ಪಾರ್ಕಿನ ಕಾಡಿನಲ್ಲಿ ಪಂಚತಾರಾ ಹೋಟೆಲ್ ಶೆರಟನ್ ಕಾಣಿಸಿತು! ಅದರ ಆವಾರ ದಾಟಿದರೆ ಅಲ್ಲಲ್ಲಿ ತಿನ್ನಲು, ಕುಡಿಯಲು, ವಿದೇಶೀ ವಿನಿಮಯ ಮಾಡಿಕೊಳಲು, ವ್ಯಾಪಾರ ಮಾಡಲು ಅವಕಾಶವಿರುವ ಸ್ಥಳಗಳು ಕಂಡವು. ನಮ್ಮೊಡನಿದ್ದ ಇನ್ನೊಂದು ಗುಂಪು ಬರುವವರೆಗೆ ಎರಡು ತಾಸು ಕಾಯಲೇಬೇಕಿತ್ತು. ಕಣ್ಣು ತುಂಬಿಕೊಂಡದ್ದನ್ನು ಮೆಲುಕು ಹಾಕುತ್ತ, ಆಕಾಶ ನೋಡುತ್ತ, ಒಂದೊಳ್ಳೆ ಊಟ ಸಿಕ್ಕಿದ್ದರೆ ತಿರುಗಿಬಂದ ಸುಸ್ತೆಲ್ಲ ಮಾಯವಾಗುತ್ತಿತ್ತೋ ಏನೋ ಎಂದು ಹಂಬಲಿಸುವಾಗ ದೂರದಲ್ಲೆಲ್ಲೋ ಸುಶ್ರಾವ್ಯ ಸಮೂಹ ಗಾಯನ ಕೇಳಿಬಂತು.

ಕಿವಿಗೊಟ್ಟು ಕೇಳಲು ದನಿ ಬಂದ ದಿಕ್ಕು ತಿಳಿಯಿತು, ಲಯ ಮತ್ತು ನಾದ ಥಟ್ಟನೆ ಮನ ಸೆಳೆದವು..



ಎತ್ತರದ ಮರಗಳ ನಡುವೆ ಒಂದು ಬದಿಯಲ್ಲಿ ಶೃತಿಬದ್ಧ, ಲಯಬದ್ಧ ಮಧುರ ಹಾಡು ಹಾಡುತ್ತ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ನಿಂತಲ್ಲೆ ನರ್ತಿಸುತ್ತಿದ್ದ ತಂಡ ಕಾಣಿಸಿತು. ತಲೆಗೆ ಹಕ್ಕಿಗರಿ ಸಿಗಿಸಿಕೊಂಡ ಅಪ್ಪ (?), ಅವನೊಡನೆ ಆರು ಮಕ್ಕಳು - ನಾಲ್ವರು ಪುಟ್ಟವರು, ಇಬ್ಬರು ಹದಿವಯದ ಹುಡುಗರು ಹಾಡುತ್ತಿದ್ದರು. ಒಬ್ಬೊಬ್ಬರ ಕೈಲಿ ಒಂದೊಂದು ವಾದ್ಯ. ಅಪ್ಪ ನಾಲ್ಕಾರು ಬಿದಿರ ಕೊಳವೆಗಳ ತರಹದ್ದನ್ನು ಜೋಡಿಸಿ ತುಟಿಗಿಟ್ಟು ಸ್ವರ ಹೊರಡಿಸುತ್ತ, ನಡುನಡುವೆ ಹಾಡುತ್ತ ಇದ್ದರೆ; ಹುಡುಗನೊಬ್ಬ ಡೋಲು ಬಾರಿಸುತ್ತಿದ್ದ. ಮತ್ತೊಬ್ಬ ಕಂಜರ ತಿರುಗಿಸುತ್ತಿದ್ದ. ಎಳಸು ಚೆಲುವೆಯರು ಚಪ್ಪಾಳೆ ತಟ್ಟುತ್ತ ತಾರಕ ಶೃತಿಯಲ್ಲಿ ಮಧುರ ಸ್ವರ ಹೊರಡಿಸುತ್ತಿದ್ದರು. ಹಾಡಿನ ಭಾಷೆ ಅರ್ಥವಾಗದಿದ್ದರೂ ಹಾದು ಹೋಗುವವರನ್ನು ಚಣಕಾಲ ನಿಲಿಸುವಷ್ಟು ಇಂಪಾದ ಹಾಡು..

ಅವರಿಂದ ಅಷ್ಟು ದೂರ, ಮರದ ಕೆಳಗಿನ ಕಟ್ಟೆ ಮೇಲೆ ಅಡ್ಡಾದೆವು..

ಒಂದು ಗುಂಪು ದೂರದಲ್ಲಿ ಬರುತ್ತಿರುವುದನ್ನು ಗಮನಿಸಿದ ಕೂಡಲೇ ಮಕ್ಕಳು ಹೆಜ್ಜೆ ಹಾಕುತ್ತ ಹಾಡು ಶುರು ಮಾಡುತ್ತಿದ್ದವು. ಅವರೆದುರಿಗಿನ ವಿಶಿಷ್ಟ ಆಕಾರದ ಬಿದಿರ ಬುಟ್ಟಿಯಲ್ಲಿ ಯೂರೋ, ಡಾಲರ್, ಪೆಸೊ, ರಿಯಲ್‌ಗಳು ಬೀಳುತ್ತಿದ್ದವು. ಜನರ ಗುಂಪು ಮರೆಯಾದದ್ದೇ ಎಳೆಯರು ಹಾಡು ನಿಲಿಸಿ ನಗುತ್ತ, ಸಿಟ್ಟುಗೊಳ್ಳುತ್ತ, ತಿವಿಯುತ್ತ, ಓಡಿ ತಿನಿಸು ಕೊಂಡುತಂದು ತಿನ್ನುತ್ತ ಗಲಾಟೆ ಹಾಕುತ್ತಿದ್ದವು. ಇನ್ನೊಂದು ಗುಂಪು ಕಂಡಾಗಲೇ ಮತ್ತೆ ಹಾಡು ಶುರುವಾಗುವುದು. ವಾದ್ಯ ನುಡಿಸುತ್ತ, ಎದುರಿದ್ದ ಬಿದಿರ ಬುಟ್ಟಿಯನ್ನು ಅರೆಗಣ್ಣಲ್ಲಿ ವಾರೆಯಾಗಿ ಗಮನಿಸುತ್ತ ನಿಂತಿದ್ದ ಅಪ್ಪ ಯಾವುದೋ ಸಮಾಧಿಯಲ್ಲಿದ್ದಂತಿದ್ದ.


ಅಲ್ಲೇ ಆಚೆ ಆದಿವಾಸಿ ಹೆಣ್ಮಕ್ಕಳು ಮತ್ತು ಗಂಡಸರು ಬಿಲ್ಲುಬಾಣ, ತೆರತೆರನ ವಾದ್ಯಗಳು, ಮರದ ಸಾಮಾನು, ಬುಟ್ಟಿ, ಚಾಪೆ, ಚೀಲ ಹೆಣೆಯುತ್ತ ಮಾರುತ್ತ ಕೂತಿದ್ದರು. ಅದು ಅವರ ವರ್ಕ್‌ಶಾಪ್ ಹಾಗೂ ಮಾರಾಟ ಮಳಿಗೆಯಂತೆ. ತರುಣಿಯೊಬ್ಬಳು ಫೆವಿಕ್ವಿಕ್ ಮತ್ತು ಬಣ್ಣ ಇಟ್ಟುಕೊಂಡು ಮರದ ಹಕ್ಕಿ ಮಾಡುತ್ತ ಕೂತಿದ್ದಳು.



ನೋಡನೋಡುತ್ತಿದ್ದಂತೆ ಅಗಲ ಮುಖದ ಅಪ್ಪ, ಮರಕ್ಕೆ ನೇತುಬಿಟ್ಟ ಪ್ಲಾಸ್ಟಿಕ್ ಚೀಲದಲ್ಲಿ ಏನನ್ನೋ ತುಂಬಿ ಬಂದ. ಬನ್ನುಗಳ ತರಹ ಉರೂಟು ಇರುವ ತಿನಿಸು ಗೋಣಿಚೀಲದಷ್ಟು ದೊಡ್ಡ ಚೀಲದಲ್ಲಿ ಅರ್ಧದಷ್ಟಿದೆ. ಎರಡು ಮೂರು ಸಲ ಎಲ್ಲಿಂದಲೋ ತಂದು ಅದರಲ್ಲಿ ಹಾಕಿಬಂದದ್ದು ನೋಡಿದೆವು. ಏನದು? ಎಲ್ಲಿಂದ ತಂದ? ತಿಂದು ಬಿಟ್ಟಿದ್ದು ಹೆಕ್ಕಿದನೋ? ಬೇಡಿ ಪಡೆದನೋ? ಗಳಿಕೆಯ ದುಡಿಮೆಯಿಂದ ಕೊಂಡು ತಂದನೋ? ಅಷ್ಟೊಂದು ಏಕೆ? ಏನೇನೋ ಊಹೆಗಳು.

ಸೂಕ್ಷ್ಮವಾಗಿರು ಎಂದು ಮಗು ಎಚ್ಚರಿಸಿತು..

ನನಗರಿವಿಲ್ಲದೆ ಅವರೆದುರು ನಿಂತಿದ್ದೆ. ಮಾಸಿದ ಬಿಳಿಯ ಮುಖ. ಅಷ್ಟೇನೂ ಒಪ್ಪವಾಗಿರದ ವೇಷ. ಆ ಮುಖಗಳಲ್ಲಿ ಬೇಸರ, ಬಳಲಿಕೆಯಿತ್ತೇ ವಿನಹ ನಗು ಇರಲಿಲ್ಲ. ಪ್ರತಿನಿತ್ಯ ಬರುವ ಪ್ರವಾಸಿಗರಿಗೆ, ಅಪರಿಚಿತರ ಎದುರು ಲವಲವಿಕೆಯಿಂದ ಹಾಡಬೇಕಾದ ಅನಿವಾರ್ಯತೆಗೆ ಅವರೆಷ್ಟು ಒಗ್ಗಿಕೊಂಡಿದ್ದಾರೆಂದರೆ ಆಪ್ತತೆ, ಸಹಜ ನಗುವಿನ ಒಂದೆಳೆಯೂ ಕಾಣದ ಯಾವುದೋ ಬಿಗು. ಅವರಲ್ಲೆಲ್ಲ ಸಣ್ಣ ಹುಡುಗಿ ತದೇಕವಾಗಿ ಅಕ್ಕನ ಸಂದಿಯಿಂದ ಮಗಳು ತೊಟ್ಟ ಟೋಪಿಯನ್ನೇ ನೋಡುತ್ತಿತ್ತು. ಯಾಕೋ ಆ ಗರಿಗರಿ ಪ್ಲಾಸ್ಟಿಕ್ ನೋಟುಗಳ ನಡುವೆ ಇರಲು ನಮ್ಮ ಕಾಗದದ ಗಾಂಧಿ ತಾತನಿಗೆ ಸಾಧ್ಯವಿಲ್ಲ ಎನಿಸಿತು. ಹುಡುಗರ ಬಳಿ ನಿಮ್ಮ ಶಾಲೆ ಎಲ್ಲಿದೆ ಎಂದು ಕನ್ನಡದಲ್ಲಿ ಕೇಳಿದೆವು. ಹೌದು, ಕನ್ನಡದಲ್ಲೇ ಅಲ್ಲಿ ಮಾತಾಡುತ್ತಿದ್ದೆವು. ಯಾಕೆಂದರೆ ಅಲ್ಲಿನವರಿಗೆ ಬರುವುದು ನಮಗೆ ಬರದ ಪೋರ್ಚುಗೀಸ್, ಸ್ಪ್ಯಾನಿಶ್ ಮಾತ್ರವಾದ್ದರಿಂದ ಅಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಎಲ್ಲ ಭಾಷೆಗಳೂ ಒಂದೇ. ಅವು ಕೆಂಪೇರಿ ತಂತಮ್ಮಲ್ಲೆ ಕಚಪಚ ಮಾತಾಡಿಕೊಂಡು ಏನೋ ಉತ್ತರ ಹೇಳಿದವು. ಅದು ಯಾವ ಭಾಷೆಯೋ ತಿಳಿಯಲಿಲ್ಲ. ಉಳಿದವರಾಡುವ ನುಡಿಗಿಂತ ಭಿನ್ನ ಎಂದಷ್ಟೆ ಗೊತ್ತಾಯಿತು.

ಅವರ ತಲೆ ಮೇಲೆ ಒಂದು ಬೋರ್ಡು ನೇತಾಡುತ್ತಿತ್ತು: ‘ಇದು ಗ್ವರಾನಿ ಕಾರ್ನರ್. ಇಲ್ಲಿ ಇನ್ನು ಮುಂದೆ ಪ್ರತಿದಿನ ಗ್ವರಾನಿ ಬುಡಕಟ್ಟಿನ ಮಕ್ಕಳು ಹಾಡಲಿದ್ದಾರೆ. ಅವರ ಇರುವಿಕೆ ಹಾಗೂ ಗಾಯನ ಇಗ್ವಾಸು ನ್ಯಾಷನಲ್ ಪಾರ್ಕಿಗೆ ರಂಗನ್ನು ತಂದುಕೊಡಲಿದೆ ಎಂಬ ಭರವಸೆಯಿದೆ’ ಎಂದು ಬರೆಯಲಾಗಿತ್ತು.

ಓ, ಗ್ವರಾನಿಗಳೇ ಇವರು?! ಒಂದು ಕಾಲದಲ್ಲಿ ಈ ನೆಲದ ಬಹುಸಂಖ್ಯಾತ, ಸಮೃದ್ಧ ಕುಲವಾಗಿದ್ದವರಿಗೆ ಇವತ್ತು ಬುಟ್ಟಿಯನಿಟ್ಟು ಭಕ್ಷೀಸು ಕೇಳುವ ಪರಿಸ್ಥಿತಿ ಬಂದಿತೆ? ಅವರ ಹಿಂದೆ ಅನತಿ ದೂರದಲ್ಲಿ ಕಾಣುತ್ತಿದ್ದ ಶೆರಟನ್ ಹೋಟೆಲಿನ ಬೃಹತ್ ಇಮಾರತು ಬೀದಿಗೆ ಬಂದು ಬಿದ್ದ ಮೂಲನಿವಾಸಿಗಳ ಅಣಕಿಸುತ್ತಿಲ್ಲವಷ್ಟೆ?


ಅಭಿವೃದ್ಧಿಗೆ ಬೆಲೆ ತೆತ್ತ ಕುಲ: ಗ್ವರಾನಿ 


ದೂರದ ನಾಡಿಗೆ ಹೋಗಿ, ರಟ್ಟೆ-ಶಸ್ತ್ರ ಬಲದಿಂದ ಅಲ್ಲಿದ್ದವರನ್ನು ಹೆದರಿಸಿ, ಅವರ ಜಾಗ ಒತ್ತರಿಸಿ, ತನ್ನದೆಂದು ಒಕ್ಕಲೆಬ್ಬಿಸಿ, ಆಕ್ರಮಿಸಿದವರು ಉತ್ತರೋತ್ತರ ಅಭಿವೃದ್ಧಿ ಹೊಂದಬಹುದು. ಅಷ್ಟೇ ಅಲ್ಲ, ‘ಆ ಕಾಡು ಮನುಷ್ಯರು ಹೋದಮೇಲೆ ಎಂಥ ರಸ್ತೆ, ಮಹಲು, ಅಣೆಕಟ್ಟು, ಕಾರ್ಖಾನೆಗಳ ಕಟ್ಟಿ ಅಭಿವೃದ್ಧಿ ಮಾಡಿದ್ದೇವೆ ನೋಡಿ’ ಎಂದು ಬೀಗಲೂಬಹುದು. ಆದರೆ ಈ ಅಭಿವೃದ್ಧಿಗೆ ಬೆಲೆ ತೆತ್ತವರು ಯಾರು? ಎಷ್ಟು? ಜಗತ್ತಿನೆಲ್ಲೆಡೆಯ ಆದಿವಾಸಿ ಸಮುದಾಯ ಎದುರಿಸುತ್ತಿರುವ ಸಂಕಷ್ಟಗಳಲ್ಲಿ ಈ ಪ್ರಶ್ನೆಯ ಮೂಲವಿದೆ. ಸಮೃದ್ಧ ಗಣಿ, ತೈಲ, ಕಾಡುಗಳಿದ್ದ ಪ್ರದೇಶದಲ್ಲಿ ವಾಸಿಸುತ್ತಿದ್ದ ದ. ಅಮೆರಿಕದ ಗ್ವರಾನಿ ಬುಡಕಟ್ಟು ಸಮುದಾಯದ ಐದು ಶತಮಾನಗಳ ಏಳುಬೀಳಿನ ಕತೆ ಈ ಪ್ರಶ್ನೆಗೆ ಉತ್ತರವಾಗುತ್ತದೆ. ಅವರ ಇಂದಿನ ದುಃಸ್ಥಿತಿ ಆಧುನಿಕ ಸಮಾಜದ ಆಕ್ರಮಣಶೀಲತೆ ಪ್ರಾಚೀನ ಬುಡಕಟ್ಟುಗಳನ್ನು ಅಸಹಾಯಕ ದುಸ್ತರ ಬದುಕಿಗೆ ತಂದೊಡ್ಡಿ ನಿಲಿಸಿರುವ ದುರಂತಕ್ಕೆ ಸಾಕ್ಷಿಯಾಗಿದೆ.

ಗ್ವರಾನಿ ದಕ್ಷಿಣ ಅಮೆರಿಕದ ಅತಿ ಹಳೆಯ ಬುಡಕಟ್ಟುಗಳಲ್ಲೊಂದು. ಈ ಹೆಸರು ಅವರಿಟ್ಟುಕೊಂಡದ್ದಲ್ಲ. ಅವರ ಹೆಸರು ‘ಅಬಾ’, ಅಂದರೆ ಜನ. ಜೆಸೂಟ್ ಪಾದ್ರಿಗಳು ಅವರನ್ನು ಕಯುವ (ಕಾಡುಜನ) ಕಂಯ್ಞುವಾ (ನಿರಾಕರಿಸುವವರು) ಎಂದು ಕರೆದರು. ಕೊನೆಗೆ ಕ್ವ-ರಾನಿ ಆಗಿ, ನಂತರ ಗ್ವ-ರಾನಿ ಆಯಿತೆನ್ನುವುದು ಒಂದು ವಿವರಣೆ.

೫೦೦ ವರ್ಷ ಕೆಳಗೆ ವಸಾಹತುಶಾಹಿ ಯೂರೋಪಿಯನ್ನರು ಮೊದಲು ಈ ನೆಲಕ್ಕೆ ಬಂದಿಳಿದಾಗ ಅವರ ಸಂಖ್ಯೆ ನಾಲ್ಕು ಲಕ್ಷದಷ್ಟಿತ್ತು. ಶಿಕಾರಿ, ಜೇನು ಕೀಳುವುದು, ಮೆಕ್ಕೆಜೋಳ ಬೆಳೆಯುವುದು, ಪಶುಸಂಗೋಪನೆಯೇ ಮೊದಲಾದ ಚಟುವಟಿಕೆಗಳಿಂದ ಶಾಂತ ಜೀವನ ನಡೆಸಿದ್ದ ಅರೆ ಅಲೆಮಾರಿ ಸಮುದಾಯ ಅವರದು. ಕ್ರಿ. ಶ. ೧೫೩೭ರಲ್ಲಿ ಗೊಂಜಾಲೊ ಮೆಂಡೋನ್ಸಾ ಮೊತ್ತ ಮೊದಲ ಬಾರಿಗೆ ಈಗಿನ ಪರಗ್ವೆ ಪ್ರದೇಶಕ್ಕೆ ಬಂದಿಳಿದು ಗ್ವರಾನಿ ಜನರಿಗೆ ಮುಖಾಮುಖಿಯಾದ. ಅಲೆಮಾರಿಗಳಿಗೊಂದು ನೆಲೆಯೆಂದು ಅಸುನ್ಸಿಯಾ ಪಟ್ಟಣ ಕಟ್ಟಿದ. ನಂತರ ಅದು ಪರಗ್ವೆ ಪ್ರಾಂತ್ಯದ ರಾಜಧಾನಿಯಾಯಿತು. ಯೂರೋಪಿಯನ್ ಮತ್ತು ಗ್ವರಾನಿ ಮಹಿಳೆಯರ ಸಂಪರ್ಕದಿಂದ ಮಿಶ್ರಕುಲದ ಮೆಸ್ಟಿಜೊಗಳು ಹುಟ್ಟಿದರು.

ಹೀಗೆ ಒಂದೆಡೆ ನೆಲೆಯಾದ ಗ್ವರಾನಿಗಳನ್ನು ಗುಲಾಮಿ ವ್ಯಾಪಾರ ನಡೆಸುತ್ತಿದ್ದ ಕಡಲ್ಗಳ್ಳರು ಹಾಗೂ ಜೆಸ್ಯೂಟ್ ಪಾದ್ರಿಗಳು ಸಮೀಪಿಸಿದರು. ಕ್ರೌರ್ಯವೇ ಮೈವೆತ್ತಂತಿದ್ದ ಕಡಲ್ಗಳ್ಳರಿಗೆ ಅವರನ್ನು ಹಿಡಿದು ಗುಲಾಮ ವ್ಯಾಪಾರ ಮಾಡುವ ಲಾಭದ ಲೆಕ್ಕಾಚಾರವಷ್ಟೆ ಇದ್ದರೆ, ಪಾದ್ರಿಗಳಿಗೆ ಗ್ವರಾನಿಗಳ ಮತಾಂತರದ ಜೊತೆಗೆ ಕಾಡುಮನುಷ್ಯರನ್ನು ನಾಗರಿಕರನ್ನಾಗಿಸುವ ಹಂಬಲವೂ ಇತ್ತು. ಬ್ರೆಜಿಲಿನ ಸಾವೋ ಪೋಲೋ ಪಟ್ಟಣ ಆಗ ಪೋರ್ಚುಗೀಸ್ ಮತ್ತು ಡಚ್ ಕಡಲ್ಗಳ್ಳರ ಗುಲಾಮಿ ವ್ಯಾಪಾರದ ಮೂಲ ನೆಲೆಯಾಗಿತ್ತು. ಕಡಲ್ಗಳ್ಳರು ಸ್ಥಳೀಯ ಇಂಡಿಯನ್ ಮತ್ತು ಆಫ್ರಿಕನ್ ಹೆಂಗಸರೊಡನೆ ಸಂಪರ್ಕ ಸಾಧಿಸಿ ಗಂಡಸರು ಹೆಂಗಸರೆನ್ನದೆ ಅವರ ಹಿಡಿದು ಗುಲಾಮರ ಸಂತೆಯಲ್ಲಿ ಮಾರಿದರು.


ಈ ಆಕ್ರಮಣ, ಅತಿಕ್ರಮಣದ ವಿರುದ್ಧ ಗ್ವರಾನಿಗಳ ಬಳಿ ಇದ್ದ ಅಸ್ತ್ರವಾದರೂ ಯಾವುದು? ಬಿಲ್ಲು-ಬಾಣ! ಅಂಥ ಅಸಹಾಯಕ ಪರಿಸ್ಥಿತಿಯಲ್ಲಿ ಸ್ಪೇನಿನ ಮಿಶನರಿಗಳು ಬಂದರು. ಅದರಲ್ಲಿಯೂ ಜೆಸ್ಯೂಟ್ ಪಾದ್ರಿಗಳು ಗುಲಾಮ ವ್ಯಾಪಾರವನ್ನು ವಿರೋಧಿಸಿದರು. ಯಾವುದೋ ಸ್ಪೇನಿನ ರಾಜನಿಂದ ಕಳಿಸಲ್ಪಟ್ಟು ತಮ್ಮ ಬೆಂಬಲಕ್ಕೆ ನಿಂತ, ತಮ್ಮ ಆರೋಗ್ಯ-ಆಹಾರ ಕುರಿತು ಚಿಂತಿಸಿದ ಮಿಶನರಿಗಳು ಗ್ವರಾನಿ ಜನರಿಗೆ ರಕ್ಷಕ ದೇವತೆಗಳಂತೆ ಕಾಣಿಸಿದರು. ಆದರೂ ಚರ್ಚ್ ಮತ್ತು ಕಡಲ್ಗಳ್ಳರ ನಡುವೆ, ಹಲವು ಬುಡಕಟ್ಟುಗಳ ನಡುವೆ, ಗ್ವರಾನಿ ಮತ್ತು ಜೆಸ್ಯೂಟ್ ಮಿಶನರಿಗಳ ನಡುವೆ ಸಂಘರ್ಷ ನಡೆಯುತ್ತಲೆ ಇತ್ತು. ಪ್ರತಿ ಭಾನುವಾರ ಚರ್ಚಿನ ಬಳಿ ಪ್ರಾರ್ಥನೆಗಾಗಿ ನೆರೆಯುತ್ತಿದ್ದ ಬುಡಕಟ್ಟುಗಳನ್ನು ಹೊತ್ತೊಯ್ಯಲು ಕಡಲ್ಗಳ್ಳರು ದಾಳಿಯಿಡುತ್ತಿದ್ದರು. ಕ್ರಿ. ಶ. ೧೬೩೦ರ ಸುಮಾರಿಗೆ ಹೀಗೆ ಭಾನುವಾರದ ಪ್ರಾರ್ಥನೆ ಸಮಯದಲ್ಲಿ ಅಪಹೃತರಾಗಿ ಗುಲಾಮರಾದವರ ಸಂಖ್ಯೆ ೬೦ ಸಾವಿರ ತಲುಪಿತು! ಶಸ್ತ್ರಸಜ್ಜಿತ ಲೂಟಿಯೆದುರು ಪಾದ್ರಿಗಳೂ ನಿಸ್ಸಹಾಯಕರಾಗಿದ್ದರು. ಪರಿಣಾಮ ನಾಲ್ಕು ಲಕ್ಷ ಗ್ವರಾನಿಗಳಲ್ಲಿ ಕೆಲವೇ ಸಾವಿರ ಜನ ಉಳಿದರು. ಪಾದ್ರಿಗಳು ಚರ್ಚಿನ ಪೋಪರಲ್ಲಿ, ಸ್ಪೇನಿನ ರಾಜನಲ್ಲಿ ವಿನಂತಿಸಿ, ವಾದಿಸಿ ಗುಲಾಮಗಿರಿ ನಿಲಿಸುವಂತೆ ಹಾಗೂ ಇನ್ನಷ್ಟು ಮಿಶನ್ನುಗಳ ಕಳಿಸುವಂತೆ ಮನವೊಲಿಸಿದರು. ೧೦ ಸಾವಿರ ದನಕರುಗಳನ್ನು ಬುಡಕಟ್ಟು ಜನರಿಗೆ ಹಂಚಲಾಯಿತು. ನಾನಾ ಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಯಿತು.

ಇದರ ಪರಿಣಾಮವಾಗಿ ೧೭೩೨ರ ವೇಳೆಗೆ ಎರಡು ಸಲ ಬಂದೆರಗಿದ ಸಿಡುಬು ಮಾರಿಗೆ ೪೨ ಸಾವಿರ ಜನ ಸತ್ತರೂ ಸಹಾ ಜನಸಂಖ್ಯೆಯಲ್ಲಿ ಏರಿಕೆ ಕಂಡಿತು. ೧೦೦ ವರ್ಷಗಳಲ್ಲಿ ಅವರ ಸಂಖ್ಯೆ ೧.೪ ಲಕ್ಷವಾಯಿತು.

ನಂತರ ಸ್ಪ್ಯಾನಿಶ್, ಪೋರ್ಚುಗೀಸ್ ಘರ್ಷಣೆ ಶುರುವಾಯಿತು. ಅವರು ತಂತಮ್ಮಲ್ಲಿ ಭೂಪ್ರದೇಶ ಹಂಚಿಕೊಳ್ಳುವಾಗ ಆಯಾ ಭೂಭಾಗದ ಮತಾಂತರಗೊಂಡ ಆದಿವಾಸಿ ಕುಲಗಳನ್ನೂ ಹಂಚಿಕೊಂಡರು. ಆದರೆ ಒಂದು ಆಳ್ವಿಕೆಯಿಂದ ಮತ್ತೊಂದಕ್ಕೆ, ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ, ಒಂದು ನೆಲೆಯಿಂದ ಮತ್ತೊಂದು ನೆಲೆಗೆ ಹೋಗಲು ಗ್ವರಾನಿಗಳು ಹಾಗೂ ಮತ್ತಿತರ ಸಣ್ಣಪುಟ್ಟ ಬುಡಕಟ್ಟುಗಳು ಒಪ್ಪಲಿಲ್ಲ. ಘರ್ಷಣೆ, ಒತ್ತಾಯದ ಒಕ್ಕಲೆಬ್ಬಿಸುವಿಕೆ ಶುರುವಾಯಿತು. ಆದಿವಾಸಿಗಳ ಒಳಬಂಡಾಯ, ನರಬಲಿಯಂತಹ ಮೌಢ್ಯಾಚರಣೆಗಳು, ಜೆಸ್ಯೂಟ್‌ಗಳ ಕೊಲೆ, ದಂಗೆ, ಸಿಡುಬು-ದಡಾರ-ಕ್ಷಯ-ಫ್ಲು ಮೊದಲಾದ ಯೂರೋಪಿಯನ್ ಕಾಯಿಲೆಗಳ ಸೋಂಕು, ಗುಲಾಮಿ ವ್ಯಾಪಾರಿಗಳ ಅಂತರ್ಯುದ್ಧ ಮುಂತಾದ ಸಾಮಾಜಿಕ ಕ್ಷೋಭೆಗಳು ಹಲವು ಸ್ಥಳೀಯ ಬುಡಕಟ್ಟುಗಳನ್ನು ಸಂಪೂರ್ಣ ನಾಶದಂಚಿಗೆ ತಳ್ಳಿದವು. ಅಸಹಾಯಕತೆ ಹುಟ್ಟಿಸಿದ ಸ್ಪರ್ಧೆಗೆ ಪರಸ್ಪರರನ್ನು ನಾಶ ಮಾಡಲು ಆ ಕುಲಗಳು ಸಿಡುಬು ಪೀಡಿತರ ಬಟ್ಟೆಯನ್ನು ಶತ್ರುಕುಲಕ್ಕೆ ದಾನ ನೀಡುವ ತಂತ್ರವನ್ನೂ ಬಳಸಿಕೊಂಡವು!

ಹೀಗೇ ಕೊನೆಮೊದಲಿರದ ನಾಶ ಪರಂಪರೆ ಮುಂದುವರೆದು ಇನ್ನೊಂದು ಶತಮಾನ ಕಳೆವ ಹೊತ್ತಿಗೆ, ೧೮೧೪ರ ವೇಳೆಗೆ ಎಷ್ಟೋ ಸಣ್ಣಪುಟ್ಟ ಸಮುದಾಯಗಳು ಸಂಪೂರ್ಣ ನಾಶವಾದವು. ಬರೀ ೮,೦೦೦ ಗ್ವರಾನಿಗಳು ಮಾತ್ರ ಉಳಿದಿದ್ದರು. ಅವರ ಮನೆ, ದನ, ಹೊಲ, ಭಾಷೆ, ಸಮಾಜ ಎಲ್ಲ ನಾಶವಾಗಿತ್ತು. ಹಾಗೆ ಬದುಕಿ ಉಳಿದ ಕೆಲವರು ೧೮೪೮ರ ವೇಳೆಗೆ ‘ಪೌರ’ ಎಂಬ ಹಣೆಪಟ್ಟಿ ಪಡೆದು ನಗರಕ್ಕೆ ಹೋಗಿ ನೆಲೆಯಾದರು. ನಗರದಲ್ಲಿ ಸಂಪತ್ತು ಗಳಿಸಿ ತಮ್ಮ ಮೂಲ ನೆಲೆ, ಭಾಷೆ, ಸಂಸ್ಕೃತಿ, ಸಂಘರ್ಷದ ಕತೆ ಮರೆತರು. ಹಲವರು ನಾಗರಿಕ ಜಗತ್ತಿಗೆ ಹೇಸಿ ಹಳೆಯ ನೆಲೆಗಳಲ್ಲಿ ದೂರವೇ ವಾಸಿಸಿದರು.

ಹೀಗೆ ಅರಣ್ಯವಾಸಿಗಳಾಗಿದ್ದ ಬ್ರೆಜಿಲ್‌ನ ಗ್ವರಾನಿಗಳು ಈಗ ೫೧,೦೦೦ ಜನರಿದ್ದಾರೆ. ಆ ದೇಶದ ದೊಡ್ಡ ಬುಡಕಟ್ಟು ಇದೇ. ಉಳಿದಂತೆ ಪರಗ್ವೆ, ಅರ್ಜೆಂಟೀನಾಗಳಲ್ಲಿ ಅವರು ಕೆಲವು ಸಾವಿರದಷ್ಟಿದ್ದಾರೆ.


ಆದರೆ, ಬ್ರೆಜಿಲಿನ ಎಲ್ಲ ಗ್ವರಾನಿಗಳನ್ನೂ ಅವರ ಪಾರಂಪರಿಕ ನೆಲದಿಂದ ‘ಅಭಿವೃದ್ಧಿ’ಯ ಹೆಸರಿನಲ್ಲಿ ಒಕ್ಕಲೆಬ್ಬಿಸಲಾಗಿದೆ. ಅಲ್ಲೆಲ್ಲ ಗಣಿ ಕಂಪನಿ, ವಿದ್ಯುದಾಗಾರಗಳು, ವಿಸ್ತಾರ ಕೃಷಿ ಪ್ರದೇಶಗಳು ತಲೆಯೆತ್ತಿ ಅವರ ನೆಲೆ ನಾಶವಾಗಿದೆ. ೧೯೯೩ರಲ್ಲೇ ಅವರಿಗೆ ಬೇರೆ ನೆಲ ಕೊಡುವುದಾಗಿ ಸರ್ಕಾರ ಘೋಷಿಸಿದ್ದರೂ ಅದು ಇನ್ನೂ ನೆರವೇರಿಲ್ಲ. ಹೆಚ್ಚಿನವರು ಹೆದ್ದಾರಿಗಳ ಪಕ್ಕ, ನಗರದ ಚೌಕ-ಫ್ಲೈ ಓವರುಗಳ ಕೆಳಗೆ, ನಗರದ ಹೊರಗೆ ಸ್ಲಮ್ಮುಗಳಾಚೆಯ ಸ್ಲಮ್ಮುಗಳಲ್ಲಿ ತಾತ್ಕಾಲಿಕ ಷೆಡ್ಡುಗಳಲ್ಲಿ ಬದುಕುತ್ತಿದ್ದಾರೆ. ಶಿಕ್ಷಿತರಲ್ಲದ; ಶಿಕಾರಿ-ಕೃಷಿ ಬಿಟ್ಟು ಮತ್ತೇನೂ ಗೊತ್ತಿಲ್ಲದ ಅವರು ದಶಕಗಳಿಂದ ಷೆಡ್ಡುಗಳಲ್ಲಿದ್ದಾರೆ. ನೈಸರ್ಗಿಕ ಆಹಾರ-ನೀರಿನ ಮೂಲವಿಲ್ಲದೆ; ರಕ್ಷಣೆ-ಆರೋಗ್ಯ-ಶಿಕ್ಷಣ-ಮನರಂಜನೆ ಮೊದಲಾದ ಯಾವ ನಾಗರಿಕ ವ್ಯವಸ್ಥೆಯೂ ಇಲ್ಲದೆ ಆತ್ಮಗೌರವ ಕಳೆದುಕೊಂಡ ಬದುಕಬೇಕಾದ ಅನಿವಾರ್ಯತೆ ಬಂಡಾಯವನ್ನೇನೋ ಸೃಷ್ಟಿಸಿತು. ಆದರೆ ಅದನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಯಿತು. ಅವರ ಅನೇಕ ಮುಖಂಡರು ಹತ್ಯೆಯಾದರು. ಈಗ ತಾತ್ಕಾಲಿಕ ಷೆಡ್ಡುಗಳಲ್ಲಿ ಒಂದು ತಲೆಮಾರೇ ಹುಟ್ಟಿ ಬಿಟ್ಟಿದೆ. ಅವರ ಹಸುಗೂಸುಗಳು ಅಪೌಷ್ಟಿಕತೆಯಿಂದ ಸಾಯುತ್ತಿವೆ, ಆತ್ಮಹತ್ಯೆಯ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ೩೪ ಪಟ್ಟು ಹೆಚ್ಚಿದೆ. ಉದ್ಯೋಗವಿಲ್ಲದೆ, ಶಿಕ್ಷಣವಿಲ್ಲದೆ ದಿಕ್ಕೆಟ್ಟ ತರುಣರು ಯಾರೂ ಮಾಡದ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಪಾರಂಪರಿಕ ಕೌಶಲ್ಯ, ಜ್ಞಾನಗಳು ಆಧುನಿಕತೆಯ ಎದುರು ಕಳಪೆಯಾಗಿಬಿಟ್ಟಿವೆ. ಅವರ ಮಾನವಹಕ್ಕು ಸಂರಕ್ಷಣೆಯನ್ನು ಆದ್ಯತೆಯ ಮೇರೆಗೆ ರಕ್ಷಿಸಬೇಕೆಂದು ವಿಶ್ವಸಂಸ್ಥೆ ಪದೇಪದೇ ಎಚ್ಚರಿಸುತ್ತಿರುವಾಗಲೂ, ಅವರ ಆಗಸದಲ್ಲಿ ಆಜಾದಿಯೆಂಬ ಸೂರ್ಯ ಇನ್ನೂ ಅಸ್ತಂಗತನಾಗಿಯೇ ಇದ್ದಾನೆ.

ಹೊಸ ಜಗತ್ತಿನ ಇಂಡಿಯನ್ನರು

ವಸಾಹತುಗಾರರು ತಾವು ಅನ್ವೇಷಿಸಿದ ‘ಹೊಸ ಜಗತ್ತಿನ’ ಸ್ಥಳೀಯರನ್ನೆಲ್ಲ ಇಂಡಿಯನ್ನರೆಂಬ ಒಂದೇ ಹೆಸರಿನಲ್ಲಿ ಕರೆದರೂ ಸಹ ದ. ಅಮೆರಿಕದಲ್ಲಿ ಇಂಥ ಸಾವಿರಾರು ಇಂಡಿಯನ್ ಕುಲಗಳಿದ್ದವು. ಯೂರೋಪಿನ ನಾವಿಕರು ಬಂದಿಳಿದಾಗ ಬ್ರೆಜಿಲ್ ಒಂದರಲ್ಲೇ ೨,೦೦೦ ಬುಡಕಟ್ಟು ಕುಲಗಳಿದ್ದವು. ಇವತ್ತಿಗೂ ಅತಿ ಹೆಚ್ಚು ಮನುಷ್ಯ ಸಂಪರ್ಕವಿರದ ಕುಲಗಳು (೬೭) ಬ್ರೆಜಿಲಿನಲ್ಲಿವೆ. ಅವರು ೧೮೮ ಸ್ಥಳೀಯ ಭಾಷೆಗಳನ್ನಾಡುತ್ತಾರೆ. ಅರ್ಜೆಂಟೀನಾದಲ್ಲಿ ಇಂಥ ೩೫ ಬುಡಕಟ್ಟುಗಳಿವೆ. ಬೊಲಿವಿಯಾದಲ್ಲಿ ಈ ಸಂಖ್ಯೆ ೩೬, ಎಂದರೆ ದೇಶದ ಜನಸಂಖ್ಯೆಯ ೬೨%. ಚಿಲಿಯಲ್ಲಿ ೪.೬% ಜನ ಬುಡಕಟ್ಟು ಎಂದು ಗುರುತಿಸಿಕೊಂಡವರು. ಪೆರುವಿನಲ್ಲಿ ೪೫% ಜನಸಂಖ್ಯೆ ‘ಇಂಡಿಯನ್ಸ್’ ಇದ್ದಾರೆ. ಕೊಲಂಬಿಯಾದಲ್ಲಿ ೩.೪% ಸ್ಥಳೀಯ ಕುಲಗಳಿವೆ. ವೆನಿಜುವೆಲಾದಲ್ಲಿ ೨೬ ಸ್ಥಳೀಯ ಕುಲಗಳಿವೆ.

ಇವರೆಲ್ಲ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರು. ಶಿಕಾರಿ, ಮೀನುಗಾರಿಕೆ, ಕೃಷಿ, ಅರಣ್ಯೋತ್ಪನ್ನ ಸಂಗ್ರಹ ಅವರ ಜೀವನಾಧಾರ. ಮೆಕ್ಕೆಜೋಳ, ಕೆಸಾವಾ, ಸೇಂಗಾ ಹಲವರ ಮುಖ್ಯ ಆಹಾರ. ಈ ಸಮುದಾಯಗಳು ಬುಡಕಟ್ಟು ಜನರೆಂದು ನೋಡಿದ ಕೂಡಲೇ ಹೇಳಬಹುದು. ಅಂಥ ಏನೋ ಒಂದು ‘ತನ’ ಆ ಚಹರೆಗಳಲ್ಲಿದೆ. ಅವರ ಮೈಬಣ್ಣ ತಿಳಿಕಂದು. ನೋಡಲು ಎಲ್ಲರೂ ಹೆಚ್ಚು ಕಡಿಮೆ ಒಂದೇ ತೆರನಾಗಿ ನಮ್ಮ ಅಸ್ಸಾಮಿ, ಮಣಿಪುರಿ ರಾಜ್ಯದವರ ಚಹರೆ ಹೊಂದಿರುವಂತೆ ಕಾಣುತ್ತಾರೆ. ಅದಕ್ಕೆ ಕಾರಣವಿದೆ: ದಕ್ಷಿಣ ಅಮೆರಿಕದ ಬಹುತೇಕ ಎಲ್ಲ ಬುಡಕಟ್ಟುಗಳು ೨೩,೦೦೦ ವರ್ಷ ಕೆಳಗೆ ಪೂರ್ವ ಏಷಿಯಾದಿಂದ, ಅದರಲ್ಲೂ ಸೈಬೀರಿಯಾದಿಂದ ಮೂರು ಹಂತಗಳಲ್ಲಿ ವಲಸೆ ಬಂದವರು. ಅವರ ಭಾಷೆಗಳ ಅಧ್ಯಯನ, ವಂಶವಾಹಿ ಅಧ್ಯಯನ ಹಾಗೂ ಜನಾಂಗೀಯ ಅಧ್ಯಯನಗಳು ಇದನ್ನು ಧೃಢಪಡಿಸಿವೆ.

ಇವತ್ತು ಈ ಬುಡಕಟ್ಟು ಕುಲಗಳಿಗೆ ಬದುಕು ಕಟ್ಟಿಕೊಳ್ಳಲು ಎದುರಾದ ಸವಾಲಿನಷ್ಟೆ ದೊಡ್ಡದಾದ ಮತ್ತೊಂದು ಅಪಾಯದ ಕತ್ತಿ ತಲೆಮೇಲೆ ತೂಗುತ್ತಿದೆ: ಅದು ಭಾಷೆಯ ಅಳಿವಿನದು. ತಮ್ಮ ಭಾಷೆಯಲ್ಲಿ ದಿನಗಟ್ಟಲೆ ಹಾಡುತ್ತ, ನರ್ತಿಸುವ ಮೂಲಕ ದೇವರೊಡನೆ ಸಂಪರ್ಕ ಸಾಧಿಸಬಹುದು ಎಂದವರು ಭಾವಿಸಿದ್ದರು. ಈಗ ಅವರ ಪವಿತ್ರ ಭಾಷೆಗಳೂ ನಶಿಸುತ್ತ ಹೋಗಿವೆ. ಬರಬರುತ್ತ ಶಕ್ತಿಶಾಲಿಗಳ ಭಾಷೆಯೇ ಶಕ್ತಿಶಾಲಿ ಭಾಷೆಯಾಗಿ ಗ್ವರಾನಿಗಳು ಗ್ವರಾನಿ ಮರೆತು ಇಂಗ್ಲಿಷ್-ಸ್ಪ್ಯಾನಿಶ್-ಪೋರ್ಚುಗೀಸ್ ಕಲಿತರೆ, ಆಗದು ವಸಾಹತುಶಾಹಿಗಳ ನಿಜವಾದ ವಿಜಯವಾಗುತ್ತದೆ. ಒಮ್ಮೆ ‘ಆ’ ಭಾಷೆ ಹಿಡಿತ ಸಾಧಿಸಿದರೆ ಮುಗಿಯಿತು, ತಮ್ಮ ಮೌಖಿಕ ಜ್ಞಾನ, ಪರಂಪರೆಯ ಮೇಲಿನ ಗೌರವ, ಭರವಸೆ ಎಲ್ಲ ಅಳಿಸಿ ‘ಆ’ ಭಾಷೆಯಲ್ಲಿರುವುದಷ್ಟೆ ಜ್ಞಾನ ಎಂಬ ಭಾವ ಹೊಸದಾಗಿ ಕಲಿತವನನ್ನು ಆವರಿಸಿಬಿಡುತ್ತದೆ. ಬರೆದಿಟ್ಟಿದ್ದಷ್ಟೆ ಜ್ಞಾನ ಎನಿಸಿಕೊಳ್ಳುತ್ತದೆ.

ಹಾಗಾಗದಂತೆ ಈಗ ದ. ಅಮೆರಿಕಾದ ಸರ್ಕಾರ-ಸಮಾಜಗಳು ಬುಡಕಟ್ಟು ಅಧ್ಯಯನದಲ್ಲಿ ಆಸಕ್ತಿ ತೋರಿವೆ. ಮುಂಬ್ಯ ಗ್ವರಾನಿ, ಜೊಪಾರಾ ಗ್ವರಾನಿ, ತುಪಿ ಗ್ವರಾನಿ ಮೊದಲಾದ ಭಾಷೆಗಳ ಅಧ್ಯಯನ ನಡೆಯುತ್ತಿದೆ. ಸ್ಥಳೀಯ ಭಾಷೆಗಳ ಜನಪದ ಕಲೆ, ಸಾಹಿತ್ಯ ಸಂಗ್ರಹವಾಗುತ್ತಿದೆ. ಬೊಲಿವಿಯಾದಲ್ಲಿ ಗ್ವರಾನಿ ವಿಶ್ವವಿದ್ಯಾಲಯವಿದೆ. ಪರಗ್ವೆ ದೇಶದಲ್ಲಿ ಸ್ಪ್ಯಾನಿಶ್ ಹಾಗೂ ಗ್ವರಾನಿ ಅಧಿಕೃತ ಭಾಷೆಗಳಾಗಿದ್ದು ಶಾಲೆಗಳಲ್ಲಿ ಕಲಿಸಲಾಗುತ್ತದೆ ಹಾಗೂ ನೆರೆಹೊರೆಯವರೊಡನೆ ಮಾತನಾಡುವುದನ್ನು ಉತ್ತೇಜಿಸಲಾಗುತ್ತಿದೆ.



ಅವರಿಂದ ನಾವೂ ಕಲಿಯಬೇಕಾದ ಪಾಠಗಳಿವೆ. ಏಕೆಂದರೆ ನಮ್ಮ ನೆಲಕ್ಕೆ ಬ್ರಿಟಿಷರಿಗಿಂತ ಅವರ ಭಾಷೆ ಅಪಾಯಕಾರಿಯಾಯಿತು. ೧೯೬೧ರ ಸೆನ್ಸಸ್‌ನಲ್ಲಿ ಭಾರತದಲ್ಲಿ ೧,೬೫೧ ಭಾಷೆ ಇದ್ದರೆ ೧೯೭೧ರಲ್ಲಿ ಆ ಸಂಖ್ಯೆ ೧೦೮ಕ್ಕಿಳಿಯಿತು! ೧೦ ಸಾವಿರಕ್ಕಿಂತ ಹೆಚ್ಚು ಜನ ಮಾತನಾಡುವ ಭಾಷೆಯಷ್ಟೆ ‘ಭಾಷೆ’ ಎಂದು ಕರೆಸಿಕೊಂಡಿತು. ೧೦೯ನೇ ಭಾಷೆ ಉಳಿದ ಎಲ್ಲ ಭಾಷೆಗಳು ಎಂದು ನಮೂದಾಯಿತು. ಈಗಲೂ ಭಾರತದ ಬಹುಪಾಲು ಭಾಷೆಗಳ ಹತ್ಯೆಗೆ ಇಂಗ್ಲಿಷ್ ಭಾಷೆ ಮೇಲಿನ ನಮ್ಮ ಮೋಹವೇ ಕಾರಣ ಎನ್ನುವುದು ನಿರ್ವಿವಾದವಾಗಿದೆ.

ಅಸಮ ಬಲದ ಯುದ್ಧಗಳು, ಕಾಯಿಲೆಗಳು, ಗುಲಾಮಗಿರಿ, ಮತಾಂತರ ಮೊದಲಾದ ದುಷ್ಟತನಗಳಿಗೆ ಸಂಪೂರ್ಣ ನಾಶವಾದ ಕುಲಗಳ, ಭಾಷೆಗಳ ಲೆಕ್ಕವಿಟ್ಟವರಾರು? ಆದರೆ ತಲೆತಲಾಂತರಗಳಿಂದ ಭಾಷೆ ಮೂಲಕ ಸಮಾಜವೊಂದು ಸಂಗ್ರಹಿಸಿಟ್ಟ ಜ್ಞಾನವು ನಾಶವಾದರೆ ಅಥವಾ ಜನಸಮುದಾಯ ತನ್ನ ಹಳೆಯ ಭಾಷೆ ಮರೆತು ಯಜಮಾನ ಭಾಷೆಗೆ ಒಗ್ಗಿಕೊಂಡುಬಿಟ್ಟರೆ ಆ ವಿಸ್ಮೃತಿ ಆ ಸಮುದಾಯದ ಬಹುದೊಡ್ಡ ಬಿಕ್ಕಟ್ಟಾಗಿ ಪರಿಣಮಿಸುತ್ತದೆ. ೨೦೧೨ರ ಏಪ್ರಿಲಿನಲ್ಲಿ ಅಂಡಮಾನಿನ ಬೊವಾ ವೃದ್ಧೆಯೊಬ್ಬಳು ತೀರಿಕೊಂಡಳು. ಆದರೆ ಇಷ್ಟೇ ಹೇಳಿದರೆ ಏನೂ ಹೇಳಿದಂತಾಗಲಿಲ್ಲ, ಅವಳೊಡನೆ ಒಂದು ಭಾಷೆಯೂ ಸಾವಿಗೀಡಾಯಿತು. ಬೊವಾ ಭಾಷೆ ಬಲ್ಲ ಏಕೈಕ ಮಹಿಳೆ ಅವಳಾಗಿದ್ದಳು. ತನ್ನ ಬದುಕಿನ ಕೊನೆಯ ದಿನಗಳಲ್ಲಿ ಮಾತನಾಡಲು ಯಾರೂ ಸಿಗದೆ ಹಕ್ಕಿಗಳೊಡನೆ ಬೊವಾ ಭಾಷೆಯಲ್ಲಿ ಅವಳು ಸಂಭಾಷಿಸುತ್ತಿದ್ದಳಂತೆ. ಅವಳೊಡನೆ ಆ ಭಾಷೆ, ತಲೆತಲಾಂತರದ ಅದರ ಜ್ಞಾನ ಎಲ್ಲವೂ ನಾಶವಾಯಿತು.

ಭಾಷಾಶಾಸ್ತ್ರಜ್ಞ, ಚಿಂತಕ ಜಿ. ಎನ್. ದೇವಿಯವರ ಪ್ರಕಾರ, ‘ಭಾಷೆಯ ಮೂಲಕ ನಮ್ಮದೇ ಆದ ಲೋಕವನ್ನೇ ಕಟ್ಟಿಕೊಳ್ಳಲು ಸಾಧ್ಯವಿದೆ. ಅಲ್ಲಲ್ಲಿನ ಹವಾಮಾನ, ವಿದ್ಯಮಾನ, ಬದುಕಿಗೆ ತಕ್ಕ ಹಾಗೆ ಭಾಷೆಯೂ ನುಡಿಗಟ್ಟೂ ಅದರ ಪದಕೋಶವೂ ರೂಪುಗೊಂಡಿರುತ್ತದೆ. ಸಂಸ್ಕೃತಿಯ ಬಹುಮುಖ್ಯ ಭಾಗ ಭಾಷೆಯೇ ಆಗಿರುತ್ತದೆ. ಇಂದಿನ ಜೊತೆಗೆ ನಿನ್ನೆ ನಾಳೆಯನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿದೆ. ಆದರೆ ಭಾಷೆಯೇ ಕಳೆದುಹೋದರೆ? ಭಾಷೆ ನಾಶವಾಗುವುದರೊಡನೆ ಆ ಭಾಷೆಯಲ್ಲಿದ್ದ ತಲೆತಲಾಂತರಗಳ ಜ್ಞಾನವೂ ಇಲ್ಲವಾಗುತ್ತದೆ. ಭಾಷೆ ಮನುಷ್ಯರಂತೆ ಹುಟ್ಟುತ್ತದೆ ಮತ್ತು ಸಾಯುತ್ತದೆ ಎನ್ನಲಾಗುತ್ತದೆ. ಆದರೆ ಭಾಷೆ ಹುಟ್ಟಬಹುದು, ಸಾಯಲಾರದು. ಅದನ್ನು ಕೊಲ್ಲಬಹುದು ಅಷ್ಟೆ..’


ಪಾರ್ಕಿನಿಂದ ಈಚೆ ಬಂದರೂ, ಅವರ ದೇಶ ಬಿಟ್ಟು ಬಂದರೂ ಆ ಮಕ್ಕಳ ತಾರಕ ಶ್ರುತಿಯ ಜೀವ ತುಂಬಿದ ಸುಶ್ರಾವ್ಯ ಹಾಡು, ಕರಾರುವಾಕ್ ಲಯದ ಪಾದ ಚಲನೆ, ತಂತಿವಾದ್ಯದ ಗುಂಗು ಕಿವಿಯಲ್ಲಿನ್ನೂ ರಿಂಗಣಿಸುತ್ತಲೆ ಇದೆ. ಜೊತೆಗೆ ಅವರದೆ ನೆಲದಲ್ಲಿ ಅವರನ್ನೊಂದು ಪ್ರದರ್ಶನದ, ಜನರ ಸೆಳೆಯುವ ಐಟಂ ಆಗಿಸಿದ ನಮ್ಮ ಅತಿಕ್ರಮಣಶೀಲತೆ, ಅವರ ದಿಕ್ಕೇಡಿತನಕ್ಕೆ ಕಾರಣವಲ್ಲವೆ ಎಂಬ ಪಾಪಪ್ರಜ್ಞೆಯೂ ಮುತ್ತುತ್ತಿದೆ. ಹೀಗಿರುತ್ತ ನಮ್ಮ ನಡುವೆಯೇ ಇರುವ ಇನ್ನೆಷ್ಟೋ ಬೊವಾಗಳು, ಗ್ವರಾನಿಗಳು ಲಯಗೊಳ್ಳದಿರುವಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಲ್ಲವೆ?




Sunday, 12 June 2016

ಶ್ರೀಲಂಕಾದ ಎರಡು ಕವಿತೆಗಳು



(ಜೂನ್ 1, 1981. ಶ್ರೀಲಂಕಾದ ತಮಿಳು ಪ್ರಾಬಲ್ಯದ ಪ್ರದೇಶ ಜಾಫ್ನಾದಲ್ಲಿ ಜಿಲ್ಲಾ ಅಭಿವೃದ್ಧಿ ಪ್ರಾಧಿಕಾರದ ಚುನಾವಣೆಯಿತ್ತು. ಬಿಗಿ ಬಂದೋಬಸ್ತು, ರಕ್ಷಣೆಯ ಹೆಸರಲ್ಲಿ ಮಫ್ತಿಯಲ್ಲಿದ್ದ ಸಿಂಹಳ ಪೊಲೀಸರು ಜಾಫ್ನಾದ ಪಬ್ಲಿಕ್ ಲೈಬ್ರರಿಯನ್ನು ಸುಟ್ಟುಹಾಕಿದರು. ಅಂದು ನಡೆದ ಹಿಂಸಾಚಾರದಲ್ಲಿ ತಮಿಳರ ಜೀವಗಳೂ ಬಲಿಯಾದವು. 1930ರಲ್ಲಿ ಸ್ಥಾಪಿಸಲಾದ ಆ ಲೈಬ್ರರಿಯಲ್ಲಿ 90,000ಕ್ಕಿಂತ ಹೆಚ್ಚು ತಮಿಳು ಪುಸ್ತಕಗಳಿದ್ದವು. ಅಪರೂಪದ ಓಲೆಗರಿಯ ಹಸ್ತಪ್ರತಿಗಳಿದ್ದವು. ಜೀವ ನಾಶವಷ್ಟೇ ಅಲ್ಲ, ಗ್ರಂಥಾಲಯ ಸುಡುವಿಕೆ ತಮ್ಮ ಬೌದ್ಧಿಕ ಅಸ್ಮಿತೆಯ ನಾಶ ಎಂದೇ ಶ್ರೀಲಂಕಾದ ತಮಿಳರ ಮನದಲ್ಲಿ ದಾಖಲಾಯಿತು. ಅಷ್ಟೇ ಅಲ್ಲ, ಜನಾಂಗೀಯ ಕಲಹ ಸಶಸ್ತ್ರ ಹೋರಾಟವಾಗಿ ಉಲ್ಬಣಗೊಳ್ಳಲು ಕಾರಣವಾಯಿತು.

ಈ ಘಟನೆ ಕುರಿತು ಶ್ರೀಲಂಕಾದ ಖ್ಯಾತ ತಮಿಳು ಕವಿಗಳಾದ ರುದ್ರಮೂರ್ತಿ ಚೇರನ್ ಬರೆದ ‘ಎರಡನೆಯ ಸೂರ್ಯೋದಯ’ ಹಾಗೂ ಅವರ ತಂದೆಯ ಗೆಳೆಯರಾಗಿದ್ದ ಎಂ. ಎ. ನುಹ್ಮನ್ ಬರೆದ ಪ್ರಸಿದ್ಧ ಕವಿತೆ ‘ಬುದ್ಧನ ಕೊಲೆ’ ಇಲ್ಲಿವೆ.)

 ಎರಡನೆಯ ಸೂರ್ಯೋದಯ


(ಜಾನ್ ವೈಟ್ ಅವರ ಕಲಾಕೃತಿ)

ಅಂದು ಎಂದಿನಂತೆ ಗಾಳಿ ಬೀಸಲಿಲ್ಲ

ಕಡಲಲೆಗಳ ಏರಿಳಿತವಿರಲಿಲ್ಲ

ಸತ್ತಂತೆ ಬಿದ್ದುಕೊಂಡ ಸಮುದ್ರ

 

ಕಡಲ ದಂಡೆಯಲಿ ನಡೆವಾಗ ಏಕೋ

ಮರಳ ಆಳಾಳಕ್ಕೆ ಕುಸಿದವು ಪಾದಗಳು

ಅರೆರೆ, ಇಂದು ಮತ್ತೊಂದು ಸೂರ್ಯೋದಯವೇ!

ಬಾರಿ ಅಲ್ಲಿ, ತೆಂಕಣ ದಿಕ್ಕಿನಲ್ಲಿ!

 

ಏನಾಗಿತ್ತು ಅಲ್ಲಿ ದಕ್ಷಿಣದಲ್ಲಿ?

 

ನನ್ನೂರು ಹೊತ್ತುರಿಯುತ್ತಿತ್ತು

ನನ್ನವರು ಮುಖ ಕಳೆದುಕೊಂಡಿದ್ದರು

ನೆಲ ನಮ್ಮದು, ನಾಡು ನಮ್ಮದೇ

ನೆಲದ ಮೇಲೆ ಬೀಸುವ ಗಾಳಿಗೆ

ಬೇಕಂತೆ ಪರಕೀಯರ ಮೊಹರು, ಅಪ್ಪಣೆ

 

ಯಾರಿಗಾಗಿ ಕಾಯುತ್ತಿರುವೆ ಗೆಳೆಯ?

ನಿನ್ನ ಕೈ ಕಟ್ಟಿರುವುದೇಕೆ ಬೆನ್ನ ಹಿಂದೆ?

ಹಾರುವ ಮೋಡಗಳ ಮೇಲೆ ಬೆಂಕಿಯ ನಾಲಗೆ

ತನ್ನ ಸಂದೇಶ ಬರೆಯುತ್ತಿದೆ

ಈಗಲೂ ಇನ್ನೂ ಕಾಯುವುದೇ?

ಎದ್ದೇಳು,

ಬೀದಿಯ ಇಕ್ಕೆಲಗಳಲ್ಲೂ

ಬೂದಿರಾಶಿಯೊಳಗಿಂದ ಹೊಗೆಯೇಳುತ್ತಿದೆ

ದಾಟು ದಿಟ್ಟವಾಗಿ, ಮುನ್ನುಗ್ಗು ಸಂಗಾತಿಯೇ.




ರುದ್ರಮೂರ್ತಿ ಚೇರನ್
ಅನುಡಾಎಚ್ಎಸ್ಅನುಪಮಾ

ಬುದ್ಧನ ಕೊಲೆ


(Art by Krishna GiLiyar)

ಕಳೆದ ರಾತ್ರಿ, ನನ್ನ ಕನಸಲ್ಲಿ

ಬುದ್ಧಗುರುವನ್ನು ಕೊಲ್ಲಲಾಯಿತು

ಮಫ್ತಿಯ ಪೊಲೀಸರು

ಬುದ್ಧನನು ಗುಂಡಿಟ್ಟು ಕೊಂದರು.

ಜಾಫ್ನಾ ಲೈಬ್ರರಿಯ ಮೆಟ್ಟಿಲುಗಳ ಮೇಲೆ

ರಕ್ತದ ಮಡುವಿನಲ್ಲಿ ಮುಳುಗಿ

ಅಂಗಾತ ಬಿದ್ದ ಬುದ್ಧನ ದೇಹ..

 

ರಾತ್ರಿಯ ಕಗ್ಗತ್ತಲಿನಲ್ಲೇ ಓಡೋಡಿ ಬಂದ

ಮಂತ್ರಿ ಕಂಡದ್ದೇ ಕೆಂಡಾಮಂಡಲ,

ಅವನ ಹೆಸರು ನಮ್ಮ ಯಾದಿಯಲ್ಲಿರಲಿಲ್ಲ,

ಯಾಕೆ ಯಾಕೆ? ಕೊಂದಿದ್ದು ಯಾಕೆ?’

 

ಇಲ್ಲ, ಇಲ್ಲ,’ ಪೊಲೀಸರೆಂದರು,

ಪ್ರಮಾದವೇನೂ ಆಗಿಲ್ಲ ಮಹೋದಯರೇ,

ಅವನ ಬುದ್ಧನ ಕೊಲ್ಲದೇ ಹೋಗಿದ್ದರೆ

ಒಂದೇ ಒಂದು ನೊಣವನ್ನೂ

ಕೊಲ್ಲಲಾಗುತ್ತಿರಲಿಲ್ಲ ನಮಗೆ.

ಎಂದೇ..’


ಆಯಿತು, ಆಯಿತು ನಿಲ್ಲಿಸಿ.

ಕೂಡಲೇ ಮಾಡಿ ಶವ ವಿಲೇವಾರಿ

ಕರಗಿ ಹೋದರು ಗುಡುಗಿದ ಮಂತ್ರಿ..

 

ಮಫ್ತಿಯ ಪೊಲೀಸರು

ಶವವನ್ನು ಒಳಗೆಳೆದು

ಬುದ್ಧನ ದೇಹವನ್ನು

ತೊಂಭತ್ತು ಸಾವಿರ ಪುಸ್ತಕಗಳಿಂದ ಮುಚ್ಚಿದರು.

ಸಿಕಲೋಕವಾದ ಸುತ್ತದಿಂದ ಬೆಂಕಿಯಿಟ್ಟರು

 

ಬುದ್ಧಗುರುವಿನ ದೇಹ ಬೂದಿಯಾಯ್ತು

ಅಂತೆಯೇ ಧಮ್ಮಪದವೂ..





- ಎಂ. ಎ. ನುಹ್ಮನ್

ಅನುಡಾಎಚ್ಎಸ್ಅನುಪಮಾ

Wednesday, 8 June 2016

ಥಾಮಸ್ ಪೇಯ್ನ್ (೧೭೩೭-೧೮೦೯) - ಹಲವು ನಾಡು ಕಟ್ಟಿದ ಮಹನೀಯ





  
ಭಾರತದಲ್ಲಿ ಬ್ರಿಟಿಷರು ಇಂಗ್ಲಿಷ್ ಶಿಕ್ಷಣ ಪದ್ಧತಿ ಶುರು ಮಾಡಿದ ನಂತರ ಹಲವು ಪಾಶ್ಚಾತ್ಯ ಸಾಹಿತಿ, ಚಿಂತಕರು ಇಲ್ಲಿನ ತರುಣ ಮನಸ್ಸುಗಳನ್ನು ಪ್ರಭಾವಿಸಿದರು. ಸನಾತನ ಚಿಂತನೆಯ ನೆರಳಿನಲ್ಲಿ ಸ್ಥಗಿತಗೊಂಡಿದ್ದ ಭಾರತೀಯ ವೈಚಾರಿಕತೆ ಮತ್ತು ಮುಕ್ತ ಚಿಂತನೆ ಪಾಶ್ಚಾತ್ಯ ಚಿಂತಕರ ಬರಹಗಳಿಂದ ಹೊಸ ಹೊಳಹನ್ನು, ಹೊರಳನ್ನು ಪಡೆದುಕೊಂಡಿತು. ಅಂಥ ಸಾಲಿನಲ್ಲಿ ಭಾರತದ ಸಾಮಾಜಿಕ-ರಾಜಕೀಯ ಸುಧಾರಣೆಗಳನ್ನು ಪ್ರಭಾವಿಸಿದ ಇಂಗ್ಲಿಷ್ ಅಮೆರಿಕನ್ ರಾಜಕೀಯ ಚಿಂತಕ, ತತ್ವಜ್ಞಾನಿ, ರಾಜಕೀಯ ತತ್ವವೇತ್ತ ಹಾಗೂ ಕ್ರಾಂತಿಕಾರಿ ಥಾಮಸ್ ಪೇಯ್ನ್ ಪ್ರಮುಖನೆನ್ನಬಹುದು. ಆತ ಅಮೆರಿಕ ಸಂಯುಕ್ತ ಸಂಸ್ಥಾನದ ಮೂಲಪುರುಷರಲ್ಲೊಬ್ಬ. ಅಮೆರಿಕನ್, ಫ್ರೆಂಚ್ ಕ್ರಾಂತಿಯ ಚಿಂತಕ ರೂವಾರಿಗಳಲ್ಲೊಬ್ಬ. ಮುಕ್ತಸಂವೇದನೆಯನ್ನು ಪ್ರತಿಪಾದಿಸುವವರೆಲ್ಲರ ಒಡನಾಡಿ.

ಪ್ರಜಾಪ್ರಭುತ್ವ ಎಂಬ ಕನಸನ್ನು ಮೊದಲು ಕಂಡ ಚಿಂತಕನೂ ಆದ ಪೇಯ್ನ್, ಜೋತಿಬಾ ಫುಲೆ, ಎಂ. ಜಿ. ರಾನಡೆ, ಭಗತ್ ಸಿಂಗ್, ಬಿ. ಆರ್. ಅಂಬೇಡ್ಕರ್ ಮೊದಲಾದ ಭಾರತದ ಮೇಧಾವಿ ಮನಸುಗಳನ್ನು ಆಳವಾಗಿ ಪ್ರಭಾವಿಸಿದ ಚಿಂತಕ. ಅದರಲ್ಲೂ ಭಾರತದ ಮೊತ್ತಮೊದಲ ಧಾರ್ಮಿಕ-ಸಾಮಾಜಿಕ-ರಾಜಕೀಯ ಕ್ರಾಂತಿಕಾರಿ ಜೋತಿಬಾ ಫುಲೆ ಹಾಗೂ ದಮನಿತರ ನಡುವಿನಿಂದ ಎದ್ದುಬಂದ ಅಕಳಂಕಿತ ನ್ಯಾಯಪ್ರಜ್ಞೆಯ ದನಿ ಬಿ. ಆರ್. ಅಂಬೇಡ್ಕರ್ ಅವರ ಬರಹ ಮತ್ತು ಚಿಂತನೆಗಳ ಮೇಲೆ ಪೇಯ್ನನ ಗಾಢ ಪ್ರಭಾವವಿದೆ. ಅಮೆರಿಕನ್ ಮಿಷನ್ನಿನ ಪ್ರಚಾರಕರ ದೆಸೆಯಿಂದ ಜೋತಿಬಾ ಫುಲೆ ಮತ್ತವರ ಗೆಳೆಯರಿಗೆ ಎಳವೆಯಲ್ಲೆ ಓದಲು ದೊರೆತ ಪೇಯ್ನ್ ಬರೆದ ‘ರೈಟ್ಸ್ ಆಫ್ ಮ್ಯಾನ್' ಎಂಬ ಪುಸ್ತಕ ಆ ತರುಣರ ಯೋಚನಾ ಧಾಟಿಯನ್ನೇ ಬದಲಿಸಿತು. ಭಾರತದಂತೆಯೇ ಜಾಗತಿಕವಾಗಿಯೂ ಹಲವು ಚಿಂತಕರು, ಬರಹಗಾರರು, ಜನನಾಯಕರನ್ನು ಗಾಢವಾಗಿ ಪ್ರಭಾವಿಸಿದ ವ್ಯಕ್ತಿ ಪೇಯ್ನ್.

ಮುಕ್ತ ಚಿಂತನೆಯನ್ನು ಕೊನೆತನಕ ಎತ್ತಿಹಿಡಿದ ಆತನ ಬದುಕೇ ಒಂದು ಓದಲೇಬೇಕಾದ ಪಾಠದಂತಿದೆ..

ಗ್ರಾಮೀಣ ಇಂಗ್ಲೆಂಡಿನಲ್ಲಿ ಜನಿಸಿದ ಪೇಯ್ನ್ ಶಿಕ್ಷಣದ ಕಲ್ಪನೆಯೇ ಸರಿಯಾಗಿ ಇರದಿದ್ದ ಕಾಲದಲ್ಲಿ ಗ್ರಾಮರ್ ಶಾಲೆಗೆ ಹೋಗಿ ಶಿಕ್ಷಣ ಪಡೆದ. ಅವರ ತಂದೆ ಹಡಗುಗಳಿಗೆ ಹಗ್ಗ ಹೊಸೆದು ಮಾರುವ ವ್ಯಕ್ತಿಯಾಗಿದ್ದರು. ಆರಂಭಿಕ ಶಿಕ್ಷಣದ ನಂತರ ತಂದೆಯ ಉದ್ಯೋಗದಲ್ಲಿ ಸಹಾಯಕನಾಗಿ, ಒಂದಾದಮೇಲೊಂದು ಹತ್ತಾರು ತಾತ್ಕಾಲಿಕ, ಕಡಿಮೆ ಸಂಬಳದ ಉದ್ಯೋಗ ಮಾಡಿದ ತರುಣ ಪೇಯ್ನ್ ಸಾಕಷ್ಟು ಏಳುಬೀಳುಗಳನ್ನು ಕಂಡು ನಿರುದ್ಯೋಗದ ಕಹಿಯನ್ನೂ ಅನುಭವಿಸಿದ. ಕೈಗೊಂಡ ಉದ್ಯೋಗಗಳೆಲ್ಲ ಒಂದಲ್ಲ ಒಂದು ಕಾರಣಕ್ಕೆ ಕೈ ಸುಟ್ಟು ದಿವಾಳಿಯಾದ ಹೊತ್ತಿನಲ್ಲಿ ಬಸುರಿ ಹೆಂಡತಿ ದಿನ ತುಂಬುವ ಮೊದಲೆ ಹೆತ್ತು, ಮಗುವಿನೊಂದಿಗೆ ತೀರಿಕೊಂಡಳು. ನಿರಂತರ ಉದ್ಯೋಗ ಹುಡುಕುತ್ತ ಅಲೆದಲೆದು ಕೊನೆಗೆ ಲಂಡನ್ ತಲುಪಿ ೧೭೭೩ರಲ್ಲಿ ಅಬಕಾರಿ ಇಲಾಖೆಯ ನೌಕರಿಗೆ ಸೇರಿದ. ಅಬಕಾರಿ ನೌಕರರಿಗೆ ಉತ್ತಮ ಸಂಬಳ ಮತ್ತು ಸೂಕ್ತ ಉದ್ಯೋಗ ಸುರಕ್ಷೆ ಒದಗಿಸಬೇಕೆಂದು ಪಾರ್ಲಿಮೆಂಟಿಗೆ ಪತ್ರ ಬರೆದದ್ದು ಅವನನ್ನು ನೌಕರರ ನಾಯಕನಾಗುವಂತೆ ಮಾಡಿತು. ಅದೇವೇಳೆ ಲಂಡನ್ನಿಗೆ ಬಂದ ಅಮೆರಿಕದ ರಾಜಕಾರಣಿ ಬೆಂಜಮಿನ್ ಫ್ರಾಂಕ್ಲಿನ್ ಪರಿಚಯವಾಯಿತು. ಆ ಪರಿಚಯ ಹಾಗೂ ಚರ್ಚೆ ಜೀವನದಲ್ಲಿ ದೊಡ್ಡ ತಿರುವಿಗೆ ಕಾರಣವಾಯಿತು.

ಪೇಯ್ನ್ ಬ್ರಿಟನ್ ತೊರೆಯಲು ನಿರ್ಧರಿಸಿ ೧೭೭೪ರಲ್ಲಿ ಅಮೆರಿಕದ ಫಿಲಡೆಲ್ಫಿಯಾ ಹಡಗು ಹತ್ತಿದ. ಆದರೆ ನೌಕಾಯಾನ ಮುಗಿಯುವುದರಲ್ಲಿ ಟೈಫಾಯ್ಡ್‌ನಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಪೇಯ್ನ್, ಅಮೆರಿಕದಲ್ಲಿಳಿದ ಕೂಡಲೆ ಫ್ರಾಂಕ್ಲಿನ್‌ನ ವೈದ್ಯರಲ್ಲಿ ಚಿಕಿತ್ಸೆ ಪಡೆದ. ಗುಣಮುಖನಾದದ್ದೇ ಅಮೆರಿಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡ. ಎಲ್ಲರಲ್ಲಿ ಸ್ಫೂರ್ತಿ ತುಂಬುವ ಅತ್ಯಂತ ಪ್ರಭಾವಶಾಲಿಯಾದ ಎರಡು ಕರಪತ್ರ ‘ಕಾಮನ್ ಸೆನ್ಸ್ ಮತ್ತು ‘ಅಮೆರಿಕನ್ ಕ್ರೈಸಿಸ್ ಬರೆದು ಪ್ರಕಟಿಸಿದ. ಹೆಚ್ಚುಕಡಿಮೆ ಪ್ರತಿ ಕ್ರಾಂತಿಕಾರಿಯೂ ‘ಕಾಮನ್ ಸೆನ್ಸ್ ಓದಿದ. ಅದರಲ್ಲಿ ಬ್ರಿಟನ್ ರಾಜಸತ್ತೆಯ ವೈಫಲ್ಯ, ಅಮೆರಿಕದ ರಾಜ್ಯಗಳಿಗೆ ಸ್ವಾತಂತ್ರ್ಯದ ಅವಶ್ಯಕತೆ ಕುರಿತು ವಿವರವಾಗಿ ಬರೆಯಲಾಗಿತ್ತು. ಪೇಯ್ನ್ ಪ್ರತಿಪಾದಿಸುತ್ತಿದ್ದ ‘ಮುಕ್ತ ಚಿಂತನೆ ಮತ್ತು ಪ್ರಜಾತಂತ್ರವಾದಿ ಧೋರಣೆ ತುಂಬಿದ್ದ ಬರಹ ಅದು. ಆ ಕಾಲಕ್ಕೆ ಬಹು ವಿನೂತನ ಪ್ರತಿಪಾದನೆಯ ಬರವಣಿಗೆಯಾಗಿ ಗಮನ ಸೆಳೆದು ಲಕ್ಞಾಂತರ ಪ್ರತಿ ಮಾರಾಟವಾಯಿತು.


ಆದರೆ ಹಲವು ರಾಜಭಕ್ತರು ಅವನ ವಿರುದ್ಧ ಕಿಡಿಕಾರಿದರು. ‘ರಾಜಸತ್ತೆ ಇಲ್ಲದಿದ್ದರೆ ಸಮಾಜ ಕೊನೆಗೆ ಪ್ರಜಾಪ್ರಭುತ್ವದಲ್ಲಿ ನಾಶವಾಗಿಹೋಗುತ್ತದೆ' ಎಂದು ಎಚ್ಚರಿಸಿದರು! ೧೭೭೬ರಲ್ಲಿ ಬರೆದ ‘ಅಮೆರಿಕನ್ ಕ್ರೈಸಿಸ್' ಕೂಡ ಕ್ರಾಂತಿಗೆ ಪೂರಕವಾಗಿಯೇ ಇತ್ತು. ಬರಹಗಾರ ಇಂಗರ್‌ಸಾಲ್ ವರ್ಣಿಸಿರುವಂತೆ, ‘ಕಾಮನ್ ಸೆನ್ಸ್' ಪ್ರಬಂಧ ಬರೆಯದಿದ್ದರೆ ಜಾರ್ಜ್ ವಾಷಿಂಗ್ಟನ್ ಕತ್ತಿ ಹಿರಿದಿದ್ದು ವ್ಯರ್ಥವಾಗಿ ಹೋಗುತ್ತಿತ್ತು.

ನಂತರ ೧೭೯೦ರ ಸುಮಾರಿಗೆ ಪೇಯ್ನ್ ಪ್ಯಾರಿಸಿಗೆ ಹೋದ. ಅಲ್ಲಿ ತನ್ನನ್ನು ಫ್ರೆಂಚ್ ಕ್ರಾಂತಿಯಲ್ಲಿ ಗಾಢವಾಗಿ ತೊಡಗಿಸಿಕೊಂಡು ಫ್ರೆಂಚ್ ಸಂವಿಧಾನ ಸಮಿತಿಯಲ್ಲಿ ಕೆಲಸ ಮಾಡಿದ. ಕಿಂಗ್ ಲೂಯಿಗೆ ಮರಣದಂಡನೆ ವಿಧಿಸಬಾರದು, ಬೇಕಾದರೆ ಅಮೆರಿಕಕ್ಕೆ ಗಡೀಪಾರು ಮಾಡಬಹುದು ಎಂದು ಕ್ರಾಂತಿಕಾರಿಗಳ ಬಳಿ ವಾದಿಸಿದ. ಆಗಲೇ ಆತ ‘ರೈಟ್ಸ್ ಆಫ್ ಮ್ಯಾನ್' (೧೭೯೧) ಬರೆದದ್ದು.

‘ರೈಟ್ಸ್ ಆಫ್ ಮ್ಯಾನ್' ಬಹಳಷ್ಟು ಸೂಕ್ಷ್ಮಜ್ಞರನ್ನು ವಿಶ್ವಾದ್ಯಂತ ಗಾಢವಾಗಿ ಪ್ರಭಾವಿಸಿದ ಕೃತಿ. ಅದನ್ನು ಓದಿದ ನೆಪೋಲಿಯನ್ ತಾನು ದಿಂಬಿನಡಿ ‘ರೈಟ್ಸ್ ಆಫ್ ಮ್ಯಾನ್' ಇಟ್ಟುಕೊಂಡು ಮಲಗುವುದಾಗಿಯೂ, ಯಾರಾದರೂ ಬಂಗಾರದ ಪುತ್ಥಳಿ ಮಾಡಿ ನಿಲ್ಲಿಸಲು ಗೌರವಿಸಲು ಯೋಗ್ಯ ವ್ಯಕ್ತಿ ಇದ್ದರೆ ಅದು ಪೇಯ್ನ್ ಮಾತ್ರ ಎಂದೂ ಹೇಳಿದ. (ಆದರೆ ನಂತರ ನೆಪೋಲಿಯನ್ ಸರ್ವಾಧಿಕಾರಿಯಾದಾಗ ಪೇಯ್ನ್ ಕಟುಪದಗಳಲ್ಲಿ ಅವನನ್ನು ಟೀಕಿಸಿದ.) ಫ್ರೆಂಚ್ ಭಾಷೆ ಬರದಿದ್ದರೂ ಫ್ರೆಂಚ್ ನ್ಯಾಷನಲ್ ಕನ್ವೆನ್ಶನ್‌ಗೆ ಆಯ್ಕೆಯಾದ. ಬ್ರಿಟಿಷ್ ಬರಹಗಾರ ಎಡ್ಮಂಡ್ ಬರ್ಕ್ ಫ್ರೆಂಚ್ ಕ್ರಾಂತಿಯ ವಿರುದ್ಧ ಬರೆದಾಗ ಅವನನ್ನು ಕಟುವಾಗಿ ಟೀಕಿಸಿದ. ದೇಶಬಾಂಧವನನ್ನು ಟೀಕಿಸಿದ್ದಕ್ಕಾಗಿ ಪೇಯ್ನ್ ಅನುಪಸ್ಥಿತಿಯಲ್ಲಿ ಬ್ರಿಟನ್ನಿನಲ್ಲಿ ವಿಚಾರಣೆ ನಡೆದು ಶಿಕ್ಷೆ ಪ್ರಕಟವಾಯಿತು.



 (ಎಡ್ಮಂಡ್ ಬರ್ಕ್ ಮತ್ತು ಪೇಯ್ನ್,  ಬ್ರಿಟನ್ನಿನ ೊಂದು ವ್ಯಂಗ್ಯ ಚಿತ್ರದಲ್ಲಿ)
ಇತ್ತ ಪ್ಯಾರಿಸಿನಲ್ಲಿ ಕ್ರಾಂತಿಕಾರರ ವಿರುದ್ಧ ಇದ್ದ ಆಳುವ ಪಕ್ಷದವರು ಫ್ರೆಂಚ್ ಸಭೆ, ಸಮಿತಿಗಳಲ್ಲಿ ವಿದೇಶೀಯರು ಇರಬಾರದೆಂಬ ನೀತಿ ರೂಪಿಸಿ ಪೇಯ್ನ್‌ನ್ನು ಬಂಧಿಸಿ ಜೈಲಿಗೆ ಕಳಿಸಿದರು. ಜೈಲಿನಲ್ಲಿ ಆತ ‘ಏಜ್ ಆಫ್ ರೀಸನ್' (೧೭೯೩) ಬರೆದ. ಫ್ರಾನ್ಸಿನಲ್ಲಿ ಪೇಯ್ನ್ ಬಂಧನಕ್ಕೊಳಗಾಗಿದ್ದು ಅಮೆರಿಕದಲ್ಲಿ ಹಾಹಾಕಾರವೆಬ್ಬಿಸಿತು. ಭಾವೀ ಅಧ್ಯಕ್ಷ ಜೇಮ್ಸ್ ಮನ್ರೊ ತನ್ನೆಲ್ಲ ಪ್ರಭಾವ ಬಳಸಿ ಅವನನ್ನು ಬಿಡುಗಡೆಗೊಳಿಸಿದ.

೧೭೯೭ರಲ್ಲಿ ಅಗ್ರೇರಿಯನ್ ಜಸ್ಟಿಸ್ (ಕೃಷಿ ನ್ಯಾಯ) ಬಗೆಗೆ ಬರೆದ ಪೇಯ್ನ್ ವೈಯಕ್ತಿಕ ಆಸ್ತಿ ಕಲ್ಪನೆ ಬಗೆಗೆ ಚರ್ಚಿಸಿದ. ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಜೀವನವನ್ನು ಸಮತೋಲಗೊಳಿಸಿ ಬದುಕಬೇಕಾದ ಅವಶ್ಯಕತೆ ಕುರಿತು ಬರೆದ. ಕನಿಷ್ಠ ಆದಾಯ, ಪಿಂಚಣಿಯನ್ನು ಸರ್ಕಾರ ಎಲ್ಲರಿಗು ನೀಡಬೇಕೆನ್ನುವುದು ಅದರ ಪ್ರತಿಪಾದನೆಯಾಗಿತ್ತು. ಪೇಯ್ನ್ ಬರೆದ ಕೊನೆಯ ಕರಪತ್ರ ‘ಅಗ್ರೇರಿಯನ್ ಜಸ್ಟಿಸ್, ಅಪೋಸ್ಡ್ ಟು ಅಗ್ರೇರಿಯನ್ ಲಾ ಅಂಡ್ ಟು ಅಗ್ರೇರಿಯನ್ ಮೊನಾಪಲಿ'. ಅದು ರೈಟ್ಸ್ ಆಫ್ ಮ್ಯಾನ್ ಮುಂದುವರಿಕೆಯಂತೆ ವಿಸ್ತರಣೆಯಂತೆ ಇದೆ. ಹೇಗೆ ಬಹುಸಂಖ್ಯೆಯ ಜನರು ಸಹಜ, ಸ್ವತಂತ್ರ ಬದುಕುವ ಹಕ್ಕುಗಳನ್ನು ಭೂಮಾಲೀಕತ್ವದ ಕಾರಣವಾಗಿ ಕಳೆದುಕೊಂಡಿದ್ದಾರೆ ಎಂದು ಅದು ವಿವರಿಸುತ್ತದೆ. ನಂತರ ಅಮೆರಿಕದಲ್ಲಿ ವೃದ್ಧಾಪ್ಯ ವೇತನ, ಕನಿಷ್ಠ ಆದಾಯ ಯೋಜನೆ ಜಾರಿಗೆ ಬರಲು ಈ ಪ್ರಬಂಧವೇ ಪ್ರೇರಣೆಯಾಗಿದೆ. ಪೇಯ್ನ್ ಪ್ರಕಾರ ಸರ್ಕಾರ ಒಂದು ರಾಷ್ಟ್ರೀಯ ನಿಧಿಯನ್ನು ರೂಪಿಸಬೇಕು. ಭೂ ಮಾಲೀಕತ್ವ, ಆಸ್ತಿಹಕ್ಕು ಮೊದಲಾದ ಸಿರಿವಂತ ಸ್ನೇಹಿ ಆಳ್ವಿಕರ ಕ್ರಮಗಳಿಂದ ಯಾರು ತಮ್ಮ ಸಹಜ ಮತ್ತು ಸ್ವತಂತ್ರ ಬದುಕುವ ಹಕ್ಕುಗಳನ್ನು ಕಳೆದುಕೊಂಡು ಬಡವರಾಗಿರುತ್ತಾರೋ ಅಂಥ ಎಲ್ಲ ಭೂಹೀನರಿಗೆ ವಾರ್ಷಿಕ ೧೫ ಪೌಂಡ್ ಸ್ಟರ್ಲಿಂಗ್ ಪರಿಹಾರ ಕೊಡಬೇಕು. ಹಾಗೆಯೇ ೫೦ ವರ್ಷ ದಾಟಿದ ಅಂಥ ಪ್ರತಿಯೊಬ್ಬರಿಗೂ ವಾರ್ಷಿಕ ೧೦ ಪೌಂಡ್ ಸ್ಟರ್ಲಿಂಗ್ ಹಣ ಕೊಡಬೇಕು. ಇದು ಸರ್ಕಾರ ಬಡವರಿಗೆ ಕೊಡುವ ದಾನವಲ್ಲ, ಇದು ಅವರ ಹಕ್ಕು. (ಅಂದಿನ ೧೦ ಪೌಂಡ್ ಎಂದರೆ ಈಗಿನ ಲೆಕ್ಕಾಚಾರದ ಪ್ರಕಾರ ೮೪ ಸಾವಿರ ರೂಪಾಯಿ, ೧೫ ಪೌಂಡ್ ಎಂದರೆ ೧.೪ ಲಕ್ಷ ರೂಪಾಯಿ.) ಸಮಾನತೆ ಹಾಗೂ ಸ್ವಾತಂತ್ರ್ಯದ ಸಲುವಾಗಿ ಖಾಸಗಿ ಭೂಮಾಲಿಕರ ಜವಾಬ್ದಾರಿಯನ್ನೂ ಪೇಯ್ನ್ ನೆನಪಿಸುತ್ತಾನೆ.

ಆತ ಅಜ್ಞಾತ ಹೆಸರಿನಲ್ಲಿ ಗುಲಾಮಗಿರಿಯ ವಿರುದ್ಧವೂ ಬರೆದ.

ನಂತರ ಬಂದದ್ದು ‘ಏಜ್ ಆಫ್ ರೀಸನ್' ಎಂಬ ಕೃತಿ. ಅದರಲ್ಲಿ ಪ್ರಕೃತಿಧರ್ಮ ಅಥವಾ ಏಕದೇವೋಪಾಸನೆಯನ್ನು ಪ್ರತಿಪಾದಿಸಿದ್ದ ಹಾಗೂ ಕ್ರೈಸ್ತ ಧರ್ಮವೂ ಸೇರಿದಂತೆ ಸಾಂಸ್ಥಿಕ ಧರ್ಮದ ಅಪಾಯಗಳ ಕುರಿತು ಹೇಳಿದ್ದ. ಪೇಯ್ನ್ ತಾಯಿ ಆಂಗ್ಲಿಕನ್ ಚರ್ಚಿನವಳಾದರೂ ತಂದೆ ಕ್ವೇಕರ್ ಎಂಬ ಕ್ರಿಸ್ತೀಯ ಗೆಳೆಯರ ಸಂಘದ ಪಂಥದವರು. ಆ ಪಂಥದವರು ಚರ್ಚ್ ಅನ್ನು ನಂಬಿದವರಲ್ಲ. ಬಹುಶಃ ಇದು ಪೇಯ್ನ್ ಧಾರ್ಮಿಕತೆಯ ಮೇಲೆ ಪ್ರಭಾವ ಬೀರಿರಬಹುದು. ‘ನನಗೆ ರೋಮನ್, ಗ್ರೀಕ್, ಟರ್ಕಿಶ್, ಜ್ಯೂಯಿಷ್ ಯಾವ ಚರ್ಚಿನ ಮೇಲೂ ನಂಬಿಕೆಯಿಲ್ಲ. ನನಗೆ ಒಬ್ಬನೇ ದೇವರು, ಹೆಚ್ಚಿಲ್ಲ. ನನ್ನ ಮನಸೇ ನನ್ನ ಚರ್ಚ್. ಅಧಿಕಾರ ಮತ್ತು ಲಾಭದ ಆಸೆಗೆ ಮನುಷ್ಯ ಸೃಷ್ಟಿಸಿದ ಸಂಸ್ಥೆಗಳಿಗಿಂತ ಈಗಿರುವ ಚರ್ಚುಗಳು ಬೇರೆ ಎಂದು ನನಗನಿಸಿಲ್ಲ. ಬೈಬಲ್ ಮತ್ತು ಟೆಸ್ಟ್‌ಮೆಂಟ್‌ಗಳು ಜನರ ಬೌದ್ಧಿಕತೆಯ ಮೇಲಿನ ಹೇರಿಕೆಗಳು. ಮನುಷ್ಯನ ಅವನತಿ, ಜೀಸಸ್ ಎಂಬ ದೇವಸುತನ ಅವತಾರ, ದೇವರ ಕೋಪ ತಣಿಸಲು ಅವನ ಸಾವು, ಪುನರುತ್ಥಾನ  ಇವೆಲ್ಲ ಅದ್ಭುತ ಕಟ್ಟುಕತೆಗಳು. ದೇವರ ಜ್ಞಾನ ಮತ್ತು ಶಕ್ತಿಗೆ ಅವಮಾನ ಎಸಗುವಂತಹ ಸೃಷ್ಟಿಗಳು. ನಿಜವಾದ ಧರ್ಮ ಪ್ರಕೃತಿ ಧರ್ಮ, ಏಕೇಶ್ವರ ಧರ್ಮ. ಒಂದು ದೇವರ ನಂಬುವುದು ಮತ್ತು ತನ್ನ ನೈತಿಕ ಮೌಲ್ಯ-ಗುಣಗಳನ್ನು ನಂಬಿ ದೇವರ ಮೇಲೆ ಭಾರ ಹಾಕಿ ಬದುಕುವುದು, ಇದು ಪ್ರಕೃತಿ ಧರ್ಮ.. ಎಂದು ಪ್ರತಿಪಾದಿಸಿದ.

ಪೇಯ್ನ್ ಪ್ರತಿಪಾದನೆಗಳಲ್ಲಿ ಕೆಲವು ಹೀಗಿವೆ:

v  ‘ಈ ಜಗತ್ತೇ ನನ್ನ ದೇಶ. ಒಳಿತುಂಟು ಮಾಡುವುದೇ ನನ್ನ ಧರ್ಮ'.

v  ‘ತನ್ನ ಅತ್ಯುತ್ಕೃಷ್ಟ ಸ್ವರೂಪದಲ್ಲಿಯೂ ಸಹಾ ಸರ್ಕಾರ ಎನ್ನುವುದು ಒಂದು ಅವಶ್ಯ ಕೇಡು. ತನ್ನ ದುಷ್ಟ ಸ್ವರೂಪದಲ್ಲಿ ಅದು ಅಸಹನೀಯ ಕೇಡು.'

v  ‘ಒಬ್ಬ ಮನುಷ್ಯ ಸಂತೋಷವಾಗಿರಲು ತನಗೆ ತಾನು ಮಾನಸಿಕವಾಗಿ ವಿಧೇಯನಾಗಿರಬೇಕಾದ್ದು ಅಗತ್ಯ. ಅದು ದ್ರೋಹ, ನಂಬಿಕೆ, ಅಪನಂಬಿಕೆಗಳ ಪ್ರಶ್ನೆಯಲ್ಲ. ದ್ರೋಹ ಎಂದರೆ ನಾನು ನಂಬದಿರುವುದನ್ನು ಪ್ರತಿಪಾದಿಸುವುದು.'

v  ‘ಆಧುನಿಕ ವಿಶ್ವದ ಧಾರ್ಮಿಕ ಬಣ್ಣ ಹೀಗಿರಲು ಕಾರಣ ಜೆರುಸಲೇಮಿನಲ್ಲಿ ಒಂದು ಹುಚ್ಚಾಸ್ಪತ್ರೆ ಇಲ್ಲದಿರುವುದು.'

v  ‘ಯಾವುದೇ ಧಾರ್ಮಿಕ ವ್ಯವಸ್ಥೆ ಮಗುವನ್ನು ದಿಗ್ಭ್ರಮೆಗೆ ಒಳಪಡಿಸುವಂಥದೇನನ್ನಾದರೂ ಹೊಂದಿದ್ದರೆ ಅದು ಸತ್ಯವಾಗಿರಲು ಸಾಧ್ಯವಿಲ್ಲ'.

v  ‘ಯಾವುದೇ ಸಂಗತಿಯನ್ನು ಅದು ತಪ್ಪು ಎಂದು ವಿಶ್ಲೇಷಿಸದೆ ದೀರ್ಘಕಾಲ ಹಾಗೇ ಇದ್ದರೆ ಕ್ರಮೇಣ ಮೇಲ್ನೋಟಕ್ಕೆ ಅದು ಸರಿ ಎನಿಸತೊಡಗುತ್ತದೆ.'

v  ಸಹಿಷ್ಣುತೆ ಎನ್ನುವುದು ಅಸಹಿಷ್ಣುತೆಯ ವಿರುದ್ಧ ಪದವಲ್ಲ, ಅದರ ನಕಲಿ ರೂಪ. ಎರಡೂ ಸರ್ವಾಧಿಕಾರವೇ ಒಂದು ಮುಕ್ತಚಿಂತನೆಯನ್ನು ಒತ್ತಿ ಹಿಡಿಯುವ ಹಕ್ಕು ತನ್ನದೆಂದು ಊಹಿಸಿಕೊಳ್ಳುತ್ತದೆ, ಮತ್ತೊಂದು ಮುಕ್ತಚಿಂತನೆಯನ್ನು ಎತ್ತಿ ಹಿಡಿಯುವ ಹಕ್ಕು ತನ್ನದೆಂದು ಭಾವಿಸುತ್ತದೆ.'

v  ತನ್ನ ಸ್ವಾತಂತ್ರ್ಯ ರಕ್ಷಿಸಿಕೊಳ್ಳುವವನು ತನ್ನ ಶತ್ರುವು ದಮನಗೊಳ್ಳುವುದರ ವಿರುದ್ಧವೂ ಹೋರಾಡಬೇಕಾಗುತ್ತದೆ.'

v  ತರ್ಕ ಜ್ಞಾನ ಕಳೆದುಕೊಂಡವನ ಜೊತೆ ವಾದ ಮಾಡುವುದೆಂದರೆ ಶವಕ್ಕೆ ಚಿಕಿತ್ಸೆ ನೀಡಿದಂತೆ.'

ಆದರೆ ಯಾವಾಗ ‘ಏಜ್ ಆಫ್ ರೀಸನ್' ಬರೆದು ಕ್ರೈಸ್ತ ಧರ್ಮವನ್ನು ಟೀಕಿಸಿದನೋ ಆಗ ಪೇಯ್ನ್ ಕುಖ್ಯಾತನಾಗತೊಡಗಿದ. ಇಲ್ಲಸಲ್ಲದ ಆಪಾದನೆ, ಗೂಢಚರ್ಯೆಯ ಶಂಕೆ ಅವನನ್ನು ಸುತ್ತುವರಿದವು. ಬಹಳಷ್ಟು ಜನ ಅವನಿಂದ ದೂರ ಸರಿದರು. ಧರ್ಮ ಕುರಿತ ಕಟುಟೀಕೆ ಜನಪ್ರಿಯತೆಯನ್ನು ಜೀವಿತ ಕಾಲದಲ್ಲೇ ಕುಗ್ಗಿಸತೊಡಗಿತು. ತೀವ್ರ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡು ಅಮೆರಿಕ, ಫ್ರಾನ್ಸ್, ಬ್ರಿಟನ್, ನೆದರ್ಲೆಂಡ್ಸ್ ಮುಂತಾದ ದೇಶಗಳ ತಿರುಗುತ್ತ ಮುಕ್ತವಾಗಿ ಟೀಕಿಸುತ್ತ, ಮುಕ್ತಚಿಂತನೆಯನ್ನು ಬೆಂಬಲಿಸುತ್ತ, ದೈತ್ಯರನ್ನು ಬೀಳಿಸಿ, ನಿಸ್ವಾರ್ಥಿ ಜನನಾಯಕರ ಮೇಲೆತ್ತಿ ಕಟ್ಟಿದ ಪೇಯ್ನ್ ಗಡಿ, ದೇಶ, ಭಾಷೆಗಳ ಹಂಗಿಲ್ಲದೆ ಮಾನವಹಕ್ಕುಗಳ ಪ್ರತಿಪಾದಿಸಿದ್ದ. ಆದರೆ ಈಗ ಯಾವ ಕಾರಣಗಳಿಗೆ ಪ್ರಸಿದ್ಧನೋ ಆಗ ಅದೇ ಕಾರಣಕ್ಕೆ ಕುಖ್ಯಾತನೂ ಆಗಬೇಕಾಯಿತು. ಶತ್ರುಗಳನ್ನೂ ಪ್ರೀತಿಸಬೇಕೆನ್ನುವವರು ತಮ್ಮ ಮಿತ್ರನಾಗಿದ್ದ ಆತನನ್ನು ದ್ವೇಷಿಸಿದರು. ಅವನ ಸಾವಿಗಾಗಿ ಉಳಿದವರು ಅಸಹನೆಯಿಂದ ಕಾದರು. ಆತನ ಸೇವೆ ಮರೆತರು. ಟೀಕೆ, ಸ್ವವಿಮರ್ಶೆ ಎಂಬ ಮೌಲ್ಯಗಳನ್ನು ದುಷ್ಟತನ, ದ್ರೋಹವೆಂದು ಭಾವಿಸಿದರು. ೧೮೦೨ರಲ್ಲಿ ಅಮೆರಿಕಕ್ಕೆ ಹಿಂದಿರುಗಿದ ಮೇಲೆ ತನ್ನ ಜನಪ್ರಿಯತೆ ಕುಂದುತ್ತ ಸಾಗಿದ್ದನ್ನು ಪೇಯ್ನ್ ಗಮನಿಸಿದ. ಅನಾರೋಗ್ಯದಲ್ಲಿಯೂ ಏಕಾಂಗಿಯಾಗಿ ೧೮೦೯ರಲ್ಲಿ ತೀರಿಕೊಂಡ.


ಪೇಯ್ನ್ ತೀರಿಕೊಂಡಾಗ ಸಾವು ಅವನ ಏಕೈಕ ಆಪ್ತ ಗೆಳೆಯನಾಗಿತ್ತು..

ಕೇವಲ ಆರು ಜನ ಅವನ ಶವಯಾತ್ರೆಯಲ್ಲಿದ್ದರು. ಒಂದು ವಾಹನ, ಅದರ ಚಾಲಕ, ಅದರಲ್ಲಿ ವೃತ್ತಿಪರ ದುಃಖಿಸುವ ಮಹಿಳೆ ಮತ್ತವಳ ಮಗು, ಇಬ್ಬರು ಬರಿಗಾಲಿನ ನೀಗ್ರೋಗಳು ಮತ್ತು ಒಬ್ಬ ಕ್ವೇಕರ್ ಪಂಥದವನು. ಪೇಯ್ನ್ ಇಚ್ಛೆಯಂತೆ ಅಂತ್ಯಸಂಸ್ಕಾರ ನಡೆಸಲು ಸ್ಮಶಾನವೇ ಸಿಗದೇ ಹೋದಾಗ ಬಯಲಿನಲ್ಲಿದ್ದ ಒಂದು ವಾಲ್ನಟ್ ಮರದ ಕೆಳಗೆ ಶವವನ್ನು ಹೂಳಲಾಯಿತು.

ನ್ಯೂಯಾರ್ಕ್ ಪತ್ರಿಕೆಯಲ್ಲಿ ಪ್ರಕಟವಾದ ಬಹುಪಾಲು ಶ್ರದ್ಧಾಂಜಲಿಗಳು ‘ಥಾಮಸ್ ಪೇಯ್ನ್, ದೀರ್ಘ ಕಾಲ ಬಾಳಿದ. ಸ್ವಲ್ಪ ಒಳಿತನ್ನೂ, ಬಹಳ ಕೆಡುಕನ್ನೂ ಮಾಡಿ ತೀರಿಕೊಂಡ' ಎಂದಿದ್ದವು! ೧೮೧೯ರಲ್ಲಿ ಇಂಗ್ಲಿಷ್ ಪತ್ರಕರ್ತ ವಿಲಿಯಂ ಕಾರ್ಬೆಟ್ ಪೇಯ್ನ್‌ಗೆ ವೀರೋಚಿತ ಸಂಸ್ಕಾರವಾಗಬೇಕೆಂದು ಭಾವಿಸಿ ಅವನ ಮೂಳೆಗಳ ಇಂಗ್ಲೆಂಡಿಗೆ ಒಯ್ದ. ಆದರೆ ಇಂಗ್ಲೆಂಡಿನ ರಾಜಮನೆತನ, ರಾಜಕಾರಣಿಗಳು, ಧಾರ್ಮಿಕ-ಸಾಹಿತ್ಯಿಕ ಪ್ರಭಾವಿ ವ್ಯಕ್ತಿಗಳ ನಿರಂತರ ವಿರೋಧದಿಂದ ೨೦ ವರ್ಷ ಸರಿದರೂ, ಮೂಳೆ ಹೊತ್ತು ತಂದ ಕಾರ್ಬೆಟ್ ಸತ್ತರೂ ಪೇಯ್ನ್ ಮೂಳೆಗಳಿಗೆ ಗೌರವಾನ್ವಿತ ಜಾಗ ಸಿಗಲಿಲ್ಲ. ಆಮೇಲೆ ಅವು ಏನಾದವೋ ಯಾರಿಗೂ ಗೊತ್ತಿಲ್ಲ.


ದೇಹದ ಅವಶೇಷಗಳು ಏನಾದರೂ ಆಗಿರಲಿ, ಆದರೆ ಪೇಯ್ನ್ ಚಿಂತನೆಗಳು ಇವತ್ತಿಗೂ ಜಗತ್ತಿನ ಎಲ್ಲೆಡೆ ಹಲವು ದೇಶಗಳ ಕ್ರಾಂತಿ, ಹೋರಾಟ, ದಂಗೆಗಳ ಸ್ಫೂರ್ತಿಯಾಗಿ ಜೀವಂತವಾಗಿವೆ. ಸಮಾನತೆಯ ಸಮಾಜ, ಗಣರಾಜ್ಯ ಕಲ್ಪನೆ, ಮುಕ್ತ ಚಿಂತನೆ, ಪ್ರಕೃತಿ ಧರ್ಮೋಪಾಸನೆ  ಇವೆಲ್ಲ ಅವತ್ತಿಗೆ ಕ್ರಾಂತಿಕಾರಕ, ನವನವೀನ ವಿಚಾರಗಳಾಗಿದ್ದವು. ಪ್ರಜಾತಂತ್ರವಾದಿ ಚಿಂತನೆಗಳನ್ನು, ಸಮಾನತೆಯ ಆಧಾರದ ಸಮಾಜ ನಿರ್ಮಾಣದ ಕನಸನ್ನು ಮೊತ್ತಮೊದಲು ವ್ಯವಸ್ಥಿತವಾಗಿ ಪ್ರತಿಪಾದಿಸಿದ್ದು ಪೇಯ್ನ್. ಅವನ ಚಿಂತನೆಗಳಿಂದ ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಗಾಢವಾಗಿ ಪ್ರಭಾವಿತನಾಗಿ ಗುಲಾಮಗಿರಿಯನ್ನು ರದ್ದು ಮಾಡಿದ. ಅವನ ಚಿಂತನೆಗಳಿಂದ ಥಾಮಸ್ ಆಲ್ವಾ ಎಡಿಸನ್, ಬೆಂಜಮಿನ್ ಫ್ರಾಂಕ್ಲಿನ್, ಬರ್ಟ್ರಂಡ್ ರಸೆಲ್, ಇಂಗರ್‌ಸಾಲ್ ಸೇರಿದಂತೆ ಹಲವು ಅಮೆರಿಕನ್, ಬ್ರಿಟಿಷ್ ಬರಹಗಾರರು-ತತ್ವವೇತ್ತರು, ದ. ಅಮೆರಿಕದ ಕ್ರಾಂತಿಕಾರಿಗಳು ಸ್ಫೂರ್ತಿ ಪಡೆದರು. ಸಾಂಸ್ಥಿಕ ಧರ್ಮದ ಕುರಿತ ಆತನ ನೇರನುಡಿ ಹಾಗೂ ವೈಚಾರಿಕತೆ ಹಲವರನ್ನು ಪ್ರಭಾವಿಸಿತು. ಪೇಯ್ನ್ ಬರಹಗಳು ೧೮೧೧ರ ವೇಳೆಗೆ ಸ್ಪ್ಯಾನಿಶ್‌ಗೆ ಅನುವಾದಗೊಂಡು ಲ್ಯಾಟಿನ್ ಅಮೆರಿಕಾದ ಸ್ವಾತಂತ್ರ್ಯಪ್ರಿಯ ಕ್ರಾಂತಿಕಾರಿಗಳ ಬೈಬಲ್ ಆಯಿತು. ಉರುಗ್ವೆಯ ಸಂವಿಧಾನದಂತಿದೆ ಎಂದು ಕರೆಸಿಕೊಂಡ ಜೋಸ್ ಆರ್ಟಿಗಾಸ್‌ನ ಒಂದು ಬರಹ ಪೇಯ್ನ್ ವಿಚಾರಗಳಿಂದ ಗಾಢ ಪ್ರಭಾವಕ್ಕೊಳಗಾಗಿದೆ. ಭಾರತದಲ್ಲಿಯೂ ಪೇಯ್ನ್ ವಿಚಾರಗಳ ಗಾಢಪ್ರಭಾವವಿದೆ.

ಎಂದೇ ಇವತ್ತಿಗೂ ‘ಹಲವು ಹೊಸ ನಾಡುಗಳ ಕಟ್ಟಿದ ಮಹನೀಯ'ನೆಂದೇ ಪೇಯ್ನ್ ಗೌರವಿಸಲ್ಪಟ್ಟಿದ್ದಾನೆ.                 





Friday, 13 May 2016

ಸನ್ನತಿ: ಬುದ್ಧನ ಕಂಡು, ಅಶೋಕನ ಮುಟ್ಟಿ..




ಬುದ್ಧನೆಡೆಗೆ ರಾಜಮಾರ್ಗದಲ್ಲಿ ಸಾಗುವುದು ಸಾಧ್ಯವಿಲ್ಲ. ಕಲ್ಲುಮುಳ್ಳುಧೂಳಿನ ಅನುಭವದ ಹಾದಿಯಷ್ಟೇ ಇರುವುದು..

ಏಪ್ರಿಲ್ ತಿಂಗಳ ಕೊನೆಭಾಗದಲ್ಲಿ ಕಲಬುರಗಿ ಬಿಸಿಲಿನೊಡನೆ ಸಖ್ಯ ಬೆಳೆಸಿ ಒಂದಾನೊಂದು ಕಾಲದ ಅಶೋಕನ ನಾಡಾಗಿದ್ದ ಭೀಮಾ ನದಿ ತೀರಕ್ಕೆ ಹೊರಟಿದ್ದೆವು. ಬುದ್ಧನನ್ನು, ಅಶೋಕನನ್ನು ನೋಡಲು ದಾರಿ ಹೇಗಿದ್ದರೂ ನಡೆದುಬಿಡಲು ಸಿದ್ಧವಿದ್ದ ಸಂತೋಷ, ಪ್ರವೀಣ, ಗೀತ, ಸಂದೀಪ ಮೊದಲಾದ ಎಳೆಯ ಜೀವಗಳು ಜೊತೆಯಾಗಿದ್ದವು. ಮೌರ್ಯ ಸಾಮ್ರಾಟ ಅಶೋಕನ ಶಿಲಾಶಾಸನ ಕಲಬುರಗಿ ಜಿಲ್ಲೆಯ ಸನ್ನತಿಯ ಬಳಿ ದೊರೆತಿತ್ತು. ಅಶೋಕನ ಶಿಲ್ಪ, ಸ್ತೂಪದ ಉತ್ಖನನ ನಡೆದಿದೆಯೆಂಬ ವಿಷಯ ಕುತೂಹಲ ಕೆರಳಿಸಿತ್ತು. ೧೯೧೫ರಲ್ಲಿ ರಾಯಚೂರು ಬಳಿ ಚಿನ್ನದ ಅದಿರು ಅಗೆಯುವಾಗ ಬ್ರಿಟಿಷ್ ಇಂಜಿನಿಯರ್ ಬೀಡನ್‌ಗೆ ಸಿಕ್ಕ ಮಸ್ಕಿ ಬಂಡೆಶಾಸನದ ನಂತರ ಆಕಸ್ಮಿಕವಾಗಿ ಸಿಕ್ಕ ಮತ್ತೊಂದು ಶಿಲಾಶಾಸನ ಅಲ್ಲಿತ್ತು.

ಕಾರೆಮುಳ್ಳು, ನೆಗ್ಗಿಲುಮುಳ್ಳು, ಪಾಪಾಸುಕಳ್ಳಿ, ಹಸಿರು ಜಾಲಿ ಜೊತೆಗೆ ಹೆಸರು ಗೊತ್ತಿರದ ಅನೇಕ ಮುಳ್ಳುಗಿಡಗಳು ರಸ್ತೆಮೇಲೇ ಚಾಚಿಕೊಂಡು ಆ ದಾರಿಯಲ್ಲಿ ಇತ್ತೀಚೆಗೆ ಯಾರೂ ಸುಳಿದಿಲ್ಲವೆಂದು ಸಾಕ್ಷಿ ಹೇಳಿದವು. ಆಚೀಚೆ ಹರಡಿಕೊಂಡ ಕಟಾವಾಗಿ ನಿಂತ ಕಪ್ಪುಮಣ್ಣಿನ ಹೊಲಗಳು. ಕಲ್ಲುಪೆಂಟಿ, ಜಲ್ಲಿ, ಹೊಂಡ ಗುಂಡಿಗಳು ಇದು ರಸ್ತೆ ಹೌದೋ ಅಲ್ಲವೋ ಎಂದು ಅನುಮಾನಪಡುವಂತೆ ಮಾಡಿದ್ದವು.

ಇದ್ದಕ್ಕಿದ್ದಂತೆ ಹರಿವಿನ ಸಪ್ಪಳವೇ ಇಲ್ಲದ ಭೀಮಾ ನದಿ ಪ್ರತ್ಯಕ್ಷವಾಯಿತು. ಅರೆಅರೆ, ಸ್ತೂಪದ ಬಿಳಿಯ ಗುಮ್ಮಟವೂ, ಒಂದು ಸ್ತಂಭವೂ ಹತ್ತಿರದಲ್ಲೆ ಕಾಣಿಸುತ್ತಿದೆ! ಬಿಸಿಲಿನಲ್ಲಿ ಬಂದದ್ದಕ್ಕೂ ಸಾರ್ಥಕವಾಯಿತೆಂದು ಗುಮ್ಮಟದ ದಿಕ್ಕಿನತ್ತ ಹೊರಟೆವು. ಜಾಲಿಗಿಡ ಸರಿಸುತ್ತ, ಕಾಲುಸುಡುವ ಕಲ್ಲುಬಂಡೆಗಳ ದಾಟುತ್ತ ಮುಂದೆ ಹೋದರೆ ಬಿಕೋ ಎನುವ ಬಯಲಿನಲ್ಲಿ ಕಿರೀಟ ಕಳಚಿ ಪಕ್ಕಕ್ಕಿಟ್ಟುಕೊಂಡಿದ್ದ ಅಶೋಕ ಶಾಂತ ನಗೆ ಸೂಸುತ್ತ ಎದುರಾದ!

ನಂಬಿ, ನಮಗೆ ಸಿಕ್ಕಿದ್ದು ಮೌರ್ಯ ಸಾಮ್ರಾಟ ಅಶೋಕ! ರಣಬಿಸಿಲಿನಲ್ಲಿಯೂ ಅವನ ಮುಖದ ಮೇಲೆ ಸ್ನಿಗ್ಧ ನಗೆ..




ಮುಟ್ಟಿದರೆ ಕೆಂಡದಂತೆ ಸುಡುತ್ತಲಿದ್ದ ಲೋಹದ ಮೂರ್ತಿ. ಆದರೂ ಸೆಳೆವ ಮಾಯಕದ ನಗೆ. ಅಲ್ಲೇ ಆಚೆ ಆಶೋಕ ಸ್ತಂಭವೂ, ಅದರ ಹಿಂದೆ ಬಿಳಿಬಣ್ಣ ಮಾಸಲಾದ ಪಾಳುಬಿದ್ದ ಸ್ತೂಪವೂ ಕಂಡವು. ಸ್ತೂಪದ ಬಾಗಿಲು, ಬೀಗ ತೆರೆದು ಯಾವುದೋ ಕಾಲವಾಗಿದೆಯೆಂದು ಧೂಳು, ಬಲೆಗಳೇ ಹೇಳಿದವು. ಕಿಟಕಿಯಿಂದ ಇಣುಕಿದರೆ ಒಳಗೆ ಖಾಲಿ ಹಜಾರ. ಒಂದು ಕೋಣೆಯ ಗೋಡೆ ಮತ್ತು ಬಾಗಿಲುಗಳೆರಡೂ ಮುರಿದು ಬೀಳುವ ಸ್ಥಿತಿಯಲ್ಲಿದ್ದವು. ಅರ್ಧಮರ್ಧ ಕಟ್ಟಿಬಿಟ್ಟ ಜಗಲಿಯಲ್ಲಿ ಎಕ್ಕದ ವನ ಬೆಳೆಯತೊಡಗಿತ್ತು. ಕಂಭದ ಬುಡದಲ್ಲಿ ಗೆದ್ದಲು ಹುತ್ತ ಎಬ್ಬಿಸಿತ್ತು. ಇದಕ್ಕಿಂತ ಸುಸ್ಥಿತಿಯಲ್ಲಿದ್ದ ಕಟ್ಟಡ ಆಚೆ ಕಂಡರೂ ಮನುಷ್ಯರಾರೂ ಸುಳಿದ ಕುರುಹುಗಳಿರಲಿಲ್ಲ. ನದಿತೀರದಲ್ಲಿ ಮೂರು ಬೃಹತ್ ಶಿಲಾಫಲಕ ಕಂಡು ಅತ್ತ ಹೋದರೆ ಆ ಜಾಗವನ್ನು ‘ಅಭಿವೃದ್ಧಿ’ಪಡಿಸಿದ ಕಲಿಯುಗದ ಮಹನೀಯರು ತಮ್ಮ ಹೆಸರು, ಕೆಲಸದ ಮುಹೂರ್ತಗಳ ದಾಖಲಿಸಿ ಕಲ್ಲು ಹುಗಿಸಿದ್ದರು.

ಹಿಂದಿನ ದಿನವಷ್ಟೆ ಕಲಬುರಗಿಯ ಖರ್ಗೆ ವಿಹಾರದಲ್ಲಿ ಪ್ರಶಾಂತತೆ ಎದೆಯೊಳಗೆ ಇಳಿದಂತೆನಿಸಿದ್ದರೆ, ಸನ್ನತಿಯ ೨,೩೦೦ ವರ್ಷಗಳ ಹಿಂದಿನ ಸ್ತೂಪದ ಬಗೆಗಿನ ನಿರ್ಲಕ್ಷ್ಯ ಎದೆ ಒಡೆಯುವಂತಿತ್ತು. ಉತ್ಖನನಗೊಂಡ ಅಶೋಕನ ಕಾಲದ ಬೌದ್ಧ ಸ್ತೂಪಕ್ಕಾಗಿ ನಮ್ಮ ಕಣ್ಣು ಹುಡುಕಾಡಿದವು. ಏನೂ ಕಾಣುತ್ತಿಲ್ಲ. ರಣಬಿಸಿಲು, ಬಯಲು. ಸಿಕ್ಕಿದ್ದೆಲ್ಲವನ್ನು ಗುಲ್ಬರ್ಗ ವಸ್ತುಸಂಗ್ರಹಾಲಯಕ್ಕೆ ಸಾಗಿಸಿಬಿಟ್ಟರೆ ಎಂಬ ಅನುಮಾನವೂ ಆಯಿತು.

ಎದೆ ಭಾರ ಮಾಡಿಕೊಂಡು ಹೊರಟವರಿಗೆ ಬಟ್ಟೆಪಾತ್ರೆ ತೊಳೆಯಲು ಹೊಳೆಗುಂಡಿಯತ್ತ ಹೊರಟಿದ್ದ ಹಳ್ಳಿಬಾಲೆ ಎದುರಾದಳು. ಸುಜಾತಾ. ‘ಇಲ್ಲಿ ಬುದ್ಧನ ವಿಗ್ರಹ ಸಿಕ್ಕೇತಂತಲ ಎಲ್ಲಬೆ?’ ಎಂದೆವು. ತಲೆ ಮೇಲಿನ ಕುಕ್ಕೆ ಕೆಳಗಿಳಿಸಿ ತನ್ನ ಸಪೂರ ಕೈಗಳ ಅಕಾ ಆ ದಿಕ್ಕಿನತ್ತ ಚಾಚಿ, ‘ಅಲ್ಲೈತ್ ನೋಡ್ರಿ. ಹಿಂಗಾಸಿ ಜರಾ ದೂರ್ ಹೋಗಾನ ಸಿಗತತಿ. ಬಿಸಲು ಬಾಳ ಅದಾವು, ಗಡಾನ ಹೋಗ್ರಿ’ ಎಂದು ನಾಚುತ್ತ ಹೇಳಿದಳು.

ಗಡಾನ ಮುಂದೆ ಹೋದದ್ದೇ ತಂತಿಬೇಲಿಯಿಂದ ಆವೃತವಾದ ವಿಶಾಲ ಆವರಣವೊಂದು ಕಾಣಿಸಿತು. ನಮ್ಮವರೆಲ್ಲ ಆ ಬಯಲು ವಸ್ತುಸಂಗ್ರಹಾಲಯದಲ್ಲಿ ಬಿಸಿಲ ಝಳ ಕುಡಿಯುತ್ತಲಿದ್ದರು. ನಮ್ಮ ಕಂಡದ್ದೇ ಇಬ್ಬರು ಕಾವಲುಗಾರರು ಎದ್ದು ಬಂದು ‘ಇಲ್ಲೆ ಪೋಟಗೀಟ ಹೊಡೆಂಗಿಲ್ರಿ’ ಎಂದರು. ಒಪ್ಪಿ, ನಮ್ಮ ಕುಲಗೋತ್ರಗಳನ್ನೆಲ್ಲ ಅವರ ದಫ್ತರದಲ್ಲಿ ಕಾಣಿಸಿ ಒಳಗಡಿಯಿಟ್ಟೆವು.



ದೂರದಲ್ಲಿ ಹರಡಿ ಬಿದ್ದ ಕಲ್ಲುಮಣ್ಣಿನ ರಾಶಿ. ಕಲ್ಲುಬೆಂಚಿನ ಮೇಲೆ ಕೂತಿದ್ದ ತರುಣ ‘ಪೋಟ ತಗಿಬ್ಯಾಡ್ರಿ’ ಎಂದ. ಪುಕ್ಕಟೆ ಒಳಬಿಟ್ಟುಕೊಂಡಿದ್ದರೂ ಇದೊಳ್ಳೆ ಕಾಟವಾಯಿತಲ್ಲ ಎಂದು ಮುಂದೆ ಹೋದೆವು. ಢಿಕ್ಕಿ ಹೊಡೆವಂತೆ ಆಳೆತ್ತರದ ಕಲ್ಲು ಎದುರೆ ಹಾಯಿತು. ಅರೆ, ಇದೇ ಅದು. ಅಶೋಕನ ಕಾಲದ ಬ್ರಾಹ್ಮಿಲಿಪಿಯ ಪ್ರಾಕೃತ ಶಿಲಾಶಾಸನ! ಆ ಶಾಸನ ಸಿಕ್ಕಿ ನಂತರ ಈ ಉತ್ಖನನ ನಡೆದದ್ದೇ ಚರಿತ್ರೆಯ ಒಂದು ಕುತೂಹಲಕರ ಅಧ್ಯಾಯ.

ತೀರ ಇತ್ತೀಚಿನವರೆಗೂ ಆ ಕಲ್ಲು ಭೀಮಾತೀರದ ಚಂದ್ರಲಾಂಬಾ ಗುಡಿ ಆವರಣದ ಕಾಳಿಕಾ ದೇವಿಯ ಪೀಠದ ಕಲ್ಲಾಗಿತ್ತು. ದೇವಿಯ ಪೀಠದ ಕಲ್ಲಿನ ಬೆಣೆಯನ್ನು ಈ ಕಲ್ಲಿನಲ್ಲಿ ಕಡೆದ ರಂಧ್ರದೊಳಗೆ ತೂರಿಸಿ ಲಾಕ್ ಮಾಡಿದ್ದರು. ಚಾವಣಿ ಕುಸಿದು ಕಾಳಿಶಿಲ್ಪ ಭಗ್ನಗೊಂಡಾಗ ಹೊಸ ಮೂರ್ತಿ ಸ್ಥಾಪಿಸಲು ಹಳೆಯ ಪೀಠ ಎಬ್ಬಿಸಲಾಯಿತು. ಸೂಕ್ಷ್ಮವಾಗಿ ನೋಡಿದಾಗ ಪೀಠದ ಕಲ್ಲುಚಪ್ಪಡಿ ಮೈಮೇಲೆ ಅಕ್ಷರಗಳಿದ್ದದ್ದು ಕಂಡುಬಂತು. ಯಾವುದೋ ಶಾಸನವೆಂದು ಇಲಾಖೆಗೆ ತಿಳಿಸಿ ಪೂರ್ತಿ ಚಪ್ಪಡಿ ಎಬ್ಬಿಸಿ ಬೆನ್ನು ತಿರುಗಿಸಿದರೆ ಅಲ್ಲೂ ಓದಲಾಗದ ಅಕ್ಷರಗಳು ತುಂಬಿದ್ದವು.

ಕೂಡಲೇ ಪುರಾತತ್ವ ಇಲಾಖೆಯವರು ಬಂದರು, ಅದು ಶಿಲಾಶಾಸನ ಎಂದರು. ಹೈದರಾಬಾದಿನ ತಜ್ಞರು ಬಂದರು, ಅದು ಬ್ರಾಹ್ಮಿಲಿಪಿ ಎಂದರು. ಅದರ ಒಂದು ಮುಖದಲ್ಲಿ ನಾಲ್ಕು ಸಾಲುಗಳಿದ್ದವು, ಮತ್ತೊಂದು ಮುಖದಲ್ಲಿ ೧೨ ಸಾಲುಗಳಿದ್ದವು. ಸಿಂಧೂ ನಾಗರಿಕತೆಯ ಲಿಪಿ ಓದುವ ವಿಶೇಷ ತಜ್ಞರು ಬಂದರು, ಅದು ಅಶೋಕನ ಕಾಲದ ಶಿಲಾಶಾಸನವೆಂದೂ, ಬರಹ ಪ್ರಾಕೃತದಲ್ಲಿದೆಯೆಂದೂ ತಿಳಿಸಿದರು. ಅಶೋಕನ ಕಾಲದ ಇಂತಹ ಶಾಸನಗಳು ಇದುವರೆಗೆ ಸಿಕ್ಕಿದ್ದು ಎರಡೇ ಎರಡು, ಅದೂ ಒರಿಸ್ಸಾದ ಕಳಿಂಗದಲ್ಲಿ. ಅಶೋಕನ ಇನ್ನೂ ೧೨೧ ಶಿಲಾಶಾಸನಗಳು ಪಾಕಿಸ್ತಾನ, ಆಫ್ಘನಿಸ್ತಾನ ಮತ್ತು ವಾಯವ್ಯ ಭಾರತದಲ್ಲಿವೆಯೆಂದು ಅಮೆರಿಕದ ವಿಶ್ವವಿದ್ಯಾಲಯ ಹೇಳುತ್ತಿರುವಾಗ ಸನ್ನತಿಯಲ್ಲೊಂದು ಆಕಸ್ಮಿಕವಾಗಿ ಸಿಕ್ಕಿದ್ದೇ ತಡ, ಪುರಾತತ್ವ ಹಾಗೂ ಬೌದ್ಧ ಜಗತ್ತು ಸನ್ನತಿಯೆಡೆಗೆ ನೋಡತೊಡಗಿತು. ದಕ್ಷಿಣಭಾರತದಲ್ಲಿ ಬೌದ್ಧಧರ್ಮದ ಇರುವಿಕೆಯ ಅನೇಕ ಕುರುಹುಗಳು ದೊರಕಿದ್ದರೂ ಇದು ಮೊದಲ ಶಿಲಾಶಾಸನವಾಗಿ ಗಮನ ಸೆಳೆಯಿತು.

ಸನ್ನತಿಯಲ್ಲಿ ಒಂದು ಸೇತುರಾಜನ ಕಟ್ಟೆ ಇದೆ. ೧೯೫೦-೫೫ರ ಸುಮಾರಿಗೆ ಅದು ಕಟ್ಟೆಯಲ್ಲ, ‘ಶಾತವಾಹನರ ಕೋಟೆ’ ಎಂತಲೂ; ಕಟ್ಟಿಸಿದ ರಾಜನ ಹೆಸರು ಬೇತುರಾಜನೆಂತಲೂ ಮೊದಲು ಗುರುತಿಸಿದ್ದವರು ಕಪಟ್ರಾವ್ ಕೃಷ್ಣರಾವ್. ಹಾಗೆಂದು ‘ಕನ್ನಡ ಸಂಸ್ಕೃತಿ ಸಂಶೋಧನ’ದಲ್ಲಿ ಲೇಖನ ಪ್ರಕಟಿಸಿಯೂ ಇದ್ದರು. ೧೯೬೬ರ ಸುಮಾರಿಗೆ ಉತ್ಖನನದ ಬಳಿಕ ಶಾತವಾಹನ ಪೂರ್ವ ಕಾಲದ ಕುಡಿಕೆಗಳು, ಮಣಿಗಳು, ಆಭರಣ, ಕೆರೆಕಟ್ಟೆ, ಒಂದು ಸಾಲಿನ ಶಾಸನವಿರುವ ಮೂರ್ತಿಗಳು ಸಿಕ್ಕಿದ ನಂತರ ಪುರಾತತ್ವ ತಜ್ಞ ಪಿ. ವಿ. ದೇಸಾಯಿ ಸನ್ನತಿಯ ಸುತ್ತಮುತ್ತಲ ಸ್ಥಳಗಳು ಬೌದ್ಧಕೇಂದ್ರಗಳಾಗಿದ್ದುವೆಂದು ಹೇಳಿದ್ದರು. ಆದರೆ ಅದನ್ನು ಸಾಕ್ಷ್ಯಾಧಾರಗಳೊಂದಿಗೆ ಸಾಧಿಸಿ ತೋರಿಸುವ ಕೆಲಸ ಆಗಿರಲಿಲ್ಲ. ಈಗ ಈ ಶಾಸನ ಸಿಕ್ಕ ನಂತರ ಅಂದಿನ ಅಭಿಪ್ರಾಯಗಳು ಗಟ್ಟಿಯಾದವು.



ಆ ಶಾಸನದಲ್ಲಿ ದೇವನಾಂಪ್ರಿಯ ಪ್ರಿಯದರ್ಶಿ ಧಾರ್ಮಿಕ ಸಹಿಷ್ಣುತೆ, ಮಾನವ ಕಳಕಳಿ, ಜನಸಾಮಾನ್ಯರನ್ನೂ ಧರ್ಮ ಹೇಗೆ ತಲುಪಬೇಕು ಎನ್ನುವುದರ ಬಗೆಗೆ ವಿವರವಾಗಿ ತಿಳಿಸಿದ್ದ.

ಒಂದು ಮುಖದ ನಾಲ್ಕು ಸಾಲುಗಳ, ಆರು ವಾಕ್ಯಗಳ ಅರ್ಥ:

‘ದಮ್ಮ ಕುರಿತ ಈ ದಾಖಲೆಯು ರಾಜ ದೇವನಾಂಪ್ರಿಯನಿಂದ ರೂಪಿಸಲ್ಪಟ್ಟಿದ್ದು
ಸ್ವಲ್ಪ, ಭಾಗಶಃ ಅಥವಾ ಪೂರ್ಣ
ಪೂರ್ಣ ಎಲ್ಲ ಕಡೆಗೂ ಸೂಕ್ತವಲ್ಲ
(ನನ್ನ) ರಾಜ್ಯ ವಿಸ್ತಾರ ಹಿರಿದು, ಬಹಳ ಬರೆಸಿ ಆಗಿದೆ, ಬರೆಸಬೇಕಾದದ್ದು ಇನ್ನೂ (ಬಹಳ) ಇದೆ
(ಕೆಲ) ವಿಷಯಗಳನ್ನು ಅವುಗಳ ಹೊಸತನಕ್ಕಾಗಿ ಮತ್ತೆಮತ್ತೆ ಹೇಳಿದ್ದೇನೆ, ಜನ ಹಾಗೆಯೇ ನಡೆಯಲಿ ಎಂದು
ಆದರೂ ಕೆಲವು (ವಿಷಯ) ಅರ್ಧಮರ್ಧವಾಗಿರಬಹುದು - ಸ್ಥಳದ ಕಾರಣದಿಂದ ಅಥವಾ (ನನ್ನ) ಆಶಯ ಬರೆದವನಿಗೆ ಇಷ್ಟವಾಗದೆ, ಅರ್ಥವಾಗದೆ ಹೋಗಿರುವುದರಿಂದ..’

ಮತ್ತೊಂದು ಮುಖದ ೧೨ ಸಾಲುಗಳು ಹೀಗಿವೆ:

‘ರಾಜ ಪ್ರಿಯದರ್ಶಿ, ದೇವನಾಂಪ್ರಿಯ, ಸರ್ವಧರ್ಮಿಗಳ ಗೌರವಿಸುವವ 
(ಗೃಹಸ್ಥ, ಸಾಧುಸಂತರೆನದೆ) ಎಲ್ಲರ ಗೌರವಿಸಿ, ಮನ್ನಣೆ ಕೊಡುವವ
ತನಗೆ ಗೌರವ, ಮನ್ನಣೆ ಸಿಗುವುದಕ್ಕಿಂತ ಸರ್ವ ಮತಾನುಯಾಯಿಗಳಲ್ಲಿ ಧರ್ಮ ನೆಲೆಯಾಗಬೇಕೆಂದು ಬಯಸುತ್ತಾನೆ 
ಧರ್ಮಪಾಲನೆ ಸಾಧ್ಯವಾಗುವುದು (ತಮ್ಮ) ಮಾತಿನ ಮೇಲೆ ನಿಯಂತ್ರಣವಿಟ್ಟುಕೊಂಡು ತನ್ನ ಮತವನ್ನು ಹೊಗಳಿಕೊಳ್ಳದೆ ಇತರ ಮತಗಳನ್ನು ದ್ವೇಷಿಸದೆ ಇರುವುದರಿಂದ..
ಪ್ರತಿ ಸಂದರ್ಭದಲ್ಲೂ ಅತಿಗೆ ಹೋಗದ ಮಧ್ಯಮ ಮಾರ್ಗಗಾಮಿಯಾಗಿರಬೇಕು
ಹೀಗೆ ನಡೆದುಕೊಳ್ಳುವವ ತನ್ನ ಮತಕ್ಕೂ ಪ್ರಯೋಜನಕಾರಿ, ಅನ್ಯಮತಗಳಿಗೂ ಹಿತಕಾರಿ
ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವ ತನ್ನ ಮತಕ್ಕೆ ಅತ್ಯಂತ ಅಪಾಯಕಾರಿ ಅಷ್ಟೇ ಅಲ್ಲ, ಅನ್ಯಮತಗಳಿಗೂ ಹಾನಿಕಾರಕನಾಗುತ್ತಾನೆ
ಅಂತಹ ನಡವಳಿಕೆಯನ್ನು ಸ್ವಮತ ಪ್ರೇಮದ ಭಕ್ತಿಯಿಂದ ಅಥವಾ ಸ್ವಮತದ ವೈಭವೀಕರಣದಿಂದ ಪ್ರದರ್ಶಿಸಿದರೆ ಅದರಿಂದ ತನ್ನ ಮತವನ್ನೇ ಆಳವಾಗಿ ಘಾಸಿಗೊಳಿಸುತ್ತಾನೆ
ಆದ್ದರಿಂದ ಮೈತ್ರಿಯೊಂದೇ ಉನ್ನತ ಮೌಲ್ಯ. ಎಂದರೆ ಎಲ್ಲರೂ ಪರಸ್ಪರರ ನೀತಿಯನ್ನು ಆಲಿಸಬೇಕು, ಪಾಲಿಸಬೇಕು. ಇದು ದೇವನಾಂಪ್ರಿಯನ ಬಯಕೆ
.. ..’

ಎಂತಹ ಮಾತುಗಳ ಹೇಳಿರುವ ರಾಜ! ದೇವನಾಂಪ್ರಿಯನೇ ಸೈ.

ಬರೀ ಶಾಸನವೊಂದೇ ಇರಲು ಸಾಧ್ಯವಿಲ್ಲ, ಸುತ್ತಮುತ್ತ ಸ್ತೂಪವೋ, ವಿಹಾರವೋ, ಚೈತ್ಯವೋ ಇದ್ದಿರಲೇಬೇಕೆಂದು ಸಪಾಟು ಹೊಲ, ಬಯಲುಗಳ ನಡುವೆ ಇರುವ ದಿಬ್ಬಗಳ ಶೋಧನೆ ಶುರುವಾಯಿತು. ಹಲವೆಡೆ ಬಗೆದರೂ ಏನೂ ಸಿಗಲಿಲ್ಲ. ಕೊನೆಗೆ ಆಗಷ್ಟೆ ಹತ್ತಿ, ತೊಗರಿ ಕಟಾವು ಮಾಡಿಕೊಂಡು ನಿಂತ ಕನಗನಹಳ್ಳಿಯ ಹೊಲದಲ್ಲಿ ಅಷ್ಟೇನೂ ಎತ್ತರವಿಲ್ಲದ ದಿಬ್ಬವೊಂದನ್ನು ಗುರುತಿಸಿ ಅಗೆಯತೊಡಗಿದರು. ಯಾವ ಭರವಸೆಯೂ ಇರದೆ ಉತ್ಖನನ ಶುರುವಾಯಿತು.

ಅಗೆಯುತ್ತ ಹೋದಂತೆ ಇತಿಹಾಸದ ನಿಧಿಯೇ ಅನಾವರಣಗೊಂಡಿತು. ಸಿಕ್ಕೀತೋ ಇಲ್ಲವೋ ಎಂದು ಅನುಮಾನಿಸಿದವರು ಬೆಚ್ಚಿಬೀಳುವಂತೆ ಅದ್ಭುತ ಉಬ್ಬುಶಿಲ್ಪ ಕಲಾಕೃತಿಗಳ ಸುಣ್ಣಕಲ್ಲು (ಲೈಮ್‌ಸ್ಟೋನ್) ಚಪ್ಪಡಿಗಳು ದೊರೆತವು. ನೆಲದಾಳದಿಂದ ಒಂದೊಂದೇ ತುಂಡುಗಳು ಹೊರಬಂದು, ಅವನ್ನು ಜೋಡಿಸುತ್ತ ಹೋದಂತೆ ‘ಅಧೋಲೋಕ ಮಹಾಚೈತ್ಯ ಸ್ತೂಪ’ ಕಣ್ಣೆದುರು ಸಾಕಾರಗೊಳ್ಳತೊಡಗಿತು.



ಪ್ರಬಲ ಭೂಕಂಪದಲ್ಲಿ ನೆಲಕಚ್ಚಿದ ಅವಶೇಷಗಳು ಒಂದು ಸಮುಚ್ಚಯಕ್ಕೆ ಸೇರಿದವಾಗಿದ್ದವು. ಅಧೋಲೋಕ ಮಹಾಚೈತ್ಯ, ಹರಕೆಯ ಸ್ತೂಪ, ಚೈತ್ಯಗೃಹ, ವಿಹಾರ ಸಮುಚ್ಚಯ, ಬುದ್ಧಪಾದ ಮತ್ತು ಶಿಲ್ಪಗಳ ಡೇರೆಗಳಿರುವ ಇಟ್ಟಿಗೆ ರಚನೆಗಳು ಅಲ್ಲಿದ್ದವು. ಸ್ತೂಪದ ವ್ಯಾಸ ೨೨ ಮೀಟರ್, ಎತ್ತರ ಐದು ಮಹಡಿ ಕಟ್ಟಡದಷ್ಟು ಅಂದರೆ ೧೭ ಮೀಟರ್. ವರ್ತುಲಾಕಾರದ ರಚನೆ, ಮೇಲೆ ಗುಮ್ಮಟ. ನಾಲ್ಕು ಬಾಗಿಲು, ಅದರ ಪ್ರವೇಶದ ಬಳಿ ಧಾರ್ಮಿಕ ವಿಧಿಗಳಿಗೆ ಪುಟ್ಟ ವೇದಿಕೆ. ಹೊರಭಾಗದ ಗೋಡೆಗೆ ಉಬ್ಬುಶಿಲ್ಪಗಳ ಚಪ್ಪಡಿ ಕೂಡಿಸಲಾಗಿತ್ತು. ಬುದ್ಧನ ಜೀವನದ ಘಟನಾವಳಿಗಳು, ಶಾತವಾಹನ ಅರಸರು ಮತ್ತು ಜನಸಾಮಾನ್ಯರು, ಚ್ಛದ್ದಂತ ಜಾತಕ, ಹಂಸಜಾತಕವೇ ಮೊದಲಾದ ಜಾತಕ ಕತೆಗಳನ್ನು ತೋರಿಸುವ ಶಿಲ್ಪಗಳು ಅಲ್ಲಿದ್ದವು. ಗುಮ್ಮಟದ ೬೦ ಶಿಲ್ಪಫಲಕಗಳೂ, ವರ್ತುಲಾಕಾರದ ಕೆಳಭಾಗದ ೭೨ ಫಲಕಗಳೂ ಸಿಕ್ಕವು. ಕಂಭಗಳ ತುಣುಕುಗಳು, ಗತಜನ್ಮ ವೃತ್ತಾಂತಗಳು, ಯಕ್ಷ-ಸಿಂಹ ಶಿಲ್ಪಗಳು, ಕಂಬಿಗಳ ಕೆತ್ತನೆಯ ಭಾಗಗಳು, ಸ್ತೂಪದ ಇತರ ಭಾಗಗಳು, ಬುದ್ಧನ ೧೦ ಶಾಸನಯುಕ್ತ ಪ್ರತಿಮೆಗಳು, ಸ್ತೂಪಕ್ಕೆ ನೀಡಿದ ದೇಣಿಗೆಯನ್ನೂ ಸೇರಿಸಿ ೨೫೦ ಬ್ರಾಹ್ಮಿ ಶಾಸನಗಳು ದೊರೆತವು. ಬುದ್ಧ ಸಂಕೇತ-ಮೂರ್ತಿಗಳ ಜೊತೆಗೆ ಆನೆ, ಸಿಂಹ, ಕಮಲಗಳು, ಬಿರುಗಾಳಿಯಿಂದ ಬುದ್ಧನನ್ನು ರಕ್ಷಿಸಿತೆನ್ನಲಾಗುವ ಏಳು ಹೆಡೆಯ ಸರ್ಪ ಮುಚುಲಿಂದ, ಭಗ್ನಗೊಂಡ ಏಳು ವಿಶ್ವಭೂ ಬುದ್ಧ ಮೂರ್ತಿಗಳು, ಶಾಸನ-ನಾಣ್ಯ-ಪಿಂಗಾಣಿ ಮೊದಲಾದ ಪುರಾತನ ವಸ್ತುಗಳು ಸಿಕ್ಕವು. ಸಿದ್ಧಾರ್ಥ ಹುಟ್ಟಿದ ಕೂಡಲೇ ತಾಯಿ ಮಾಯಾಳ ಬಟ್ಟೆಯ ಮೇಲೆ ಮೂಡಿರುವ ಏಳು ಪಾದಗಳ ಗುರುತು, ಗೌತಮನ ತಪಸ್ಸು, ಸಾಕ್ಷಾತ್ಕಾರ, ಬುದ್ಧನ ಮರಣಾನಂತರ ಚಿತಾಭಸ್ಮವನ್ನು ಕರಂಡಕಗಳಲ್ಲಿಟ್ಟು ಏಳು ಆನೆಗಳ ಮೇಲೆ ಸಾಗಿಸುತ್ತಿರುವುದು, ಶಾತವಾಹನ ರಾಜ ಪುಲುಮಾವಿಯು ಉಜ್ಜಯಿನಿಯನ್ನು ದಾನ ನೀಡುತ್ತಿರುವುದು, ಬೌದ್ಧಮಠ, ಅಶೋಕನು ಬೇರೆಡೆಗೆ ಕಳಿಸಿದ ಧರ್ಮ ಪ್ರಚಾರಕರು - ಹೀಗೆ ಅಪೂರ್ವ ಮಾಹಿತಿ ನೀಡಬಲ್ಲ ಶಿಲ್ಪಗಳ ಗಣಿಯೇ ಸಿಕ್ಕಿತು.


ಈ ಸ್ತೂಪವು ಕ್ರಿ. ಪೂ. ೩ನೇ ಶತಮಾದ ವೇಳೆಗೆ ನಿರ್ಮಾಣಗೊಂಡದ್ದು. ಶಾತವಾಹನರ ಕಾಲದವರೆಗು ಅಂದರೆ ಕ್ರಿ. ಶ. ೩ನೇ ಶತಮಾನದವರೆಗೂ ನಿರ್ಮಾಣ ಕಾರ್ಯ ಮುಂದುವರೆಯಿತು. ಆರಂಭದ ಬೌದ್ಧ ಕಲೆ ಮತ್ತು ಧರ್ಮ (ಹೀನಾಯಾನ) ಬುದ್ಧನನ್ನು ಸಂಕೇತಗಳಲ್ಲಿ ಚಿತ್ರಿಸಿತು. ಸ್ತೂಪ, ಮೊದಲ ಉಪದೇಶದ ನಂತರ ತಿರುಗತೊಡಗಿದ ದಮ್ಮಚಕ್ರ, ಅರಳಿಮರ, ಖಾಲಿ ಸಿಂಹಾಸನ, ಪಾದುಕೆ ಇವೆಲ್ಲ ಬುದ್ಧನ ಸಂಕೇತಗಳೇ ಆಗಿದ್ದವು. ಕ್ರಿ. ಶ. ೨, ೩ನೇ ಶತಮಾನದ ಹೊತ್ತಿಗೆ ಬುದ್ಧನನ್ನು ಮನುಷ್ಯನಾಗಿ ಚಿತ್ರಿಸುವ ಪರಿಪಾಠ ಬಂತು. ಇಲ್ಲಿನ ಕೆತ್ತನೆಗಳಲ್ಲಿ ಎರಡೂ ಶೈಲಿಗಳು ಕಂಡುಬರುತ್ತವೆ. ಈ ಶಿಲ್ಪಗಳ ಒಂದು ವಿಶೇಷವೆಂದರೆ ಇಲ್ಲಿ ಎಲ್ಲರೂ ಆಭರಣಗಳನ್ನು ಬಿಟ್ಟರೆ ಅಂಗಾಂಗಗಳ ತೋರಿಸುತ್ತ ಬೆತ್ತಲೆಯೇ ಇದ್ದಾರೆ! ಆನೆ, ಕುದುರೆಗಳಿಗೂ ಲೈಂಗಿಕ ಅಂಗಾಂಗಗಳನ್ನು ಸ್ಪಷ್ಟವಾಗಿ ಕೆತ್ತಲಾಗಿದೆ. ಜನರ ಮುಖಚಹರೆ ಸ್ಥಳೀಯರಿಗಿಂತ ಕೊಂಚ ಭಿನ್ನವಾಗಿದೆ.

ಎಲ್ಲಕ್ಕಿಂತ ಮುಖ್ಯ ಶೋಧ ದೇವನಾಂಪ್ರಿಯ ಪ್ರಿಯದರ್ಶಿ ‘ರಾಣ್ಯೊ ಅಶೋಕ’ (ರಾಜ ಅಶೋಕ) ಎಂಬ ಶೀರ್ಷಿಕೆ ಹೊತ್ತ ಅಶೋಕನ ಮೂರ್ತಿ. ಪಟ್ಟದ ರಾಣಿಯೊಡನೆ, ಛತ್ರ ಚಾಮರ ಹಿಡಿದ ದಾಸಿಯರೊಡನೆ ಅಶೋಕ ಇದ್ದ. ಇದುವರೆಗೆ ಸಿಕ್ಕ ಅಶೋಕನ ಮೊತ್ತಮೊದಲ ಶಿಲ್ಪ ಅದು. ಈ ಶಾಸನ, ಶಿಲ್ಪಗಳಿಂದ ಮೌರ್ಯ, ಶಾತವಾಹನ ಕಾಲ ಕುರಿತ ಇತಿಹಾಸಕಾರರ ತಿಳಿವೂ ವಿಸ್ತಾರವಾಯಿತು. ಆ ಕಾಲದ ಆಭರಣ, ಪೂಜಾ ಸಂಸ್ಕೃತಿ, ಕಲೆ, ಕಟ್ಟಡ ನಿರ್ಮಾಣ ಹಾಗೂ ಶಿಲ್ಪಕಲೆಯ ವಿಕಾಸ ಮುಂತಾದ ವಿಷಯಗಳ ಮೇಲೆ ಹೊಸಬೆಳಕು ಚೆಲ್ಲಿತು.


(ಶಾತವಾಹನ ರಾಜ ಪುಲುಮಾವಿ ಉಜ್ಜಯಿನಿಯನ್ನು ದಾನ(?) ಕೊಡುತ್ತಿರುವುದು)


(ಮುಚುಲಿಂದ)


(ಮಾಯಾ ಹೆತ್ತ ಬಟ್ಟೆ)


(ಚೆನ್ನ, ಕುದುರೆ ಕಂಥಕ)




(ರಾಣ್ಯೋ ಅಶೋಕ: ರಾಜ ಅಶೋಕ)


(ಬುದ್ಧ: ಸಂಕೇತ ರೂಪದಲ್ಲಿ)


(ಬುದ್ಧ - ಸಂಕೇತ ರೂಪಗಳಲ್ಲಿ)


ಹೊಸಹೊಸದು ಇನ್ನೂ ಸಿಗುತ್ತಲೇ ಇವೆ. ಜಪಾನ್, ಕೊರಿಯಾ ಸೇರಿದಂತೆ ವಿದೇಶಗಳ ಬೌದ್ಧಶಾಸ್ತ್ರಜ್ಞರು, ಪುರಾತತ್ವಶಾಸ್ತ್ರಜ್ಞರು ಭೇಟಿ ನೀಡುತ್ತಿದ್ದಾರೆ. ಇದುವರೆಗೆ ಸಿಕ್ಕ ವಸ್ತು, ಶಿಲ್ಪಗಳನ್ನು ನಾಲ್ಕು ಕೋಣೆ ಕಂ ಶೆಡ್ಡುಗಳಲ್ಲಿ ಸಂರಕ್ಷಿಸಿಡಲಾಗಿದೆ. ಕೆಲವು ಬೇವು, ಬನ್ನಿ ಮರಗಳ ಕೆಳಗೆ ಪಂಚಧಾತುಗಳಿಗೆ ಒಡ್ಡಿಕೊಂಡು ವಿರಮಿಸಿವೆ. ಅಶೋಕನೂ ಅಷ್ಟೆ, ಅಲ್ಲೇ ಆಚೆ ಬನ್ನಿ ಮರದ ಕೆಳಗೆ ಗಾಳಿಗೆ ಮೈಯೊಡ್ಡಿ ಆರಾಮ ನಿಂತಿದ್ದಾನೆ!

‘ಇದರಲ್ಲಿ ದೇವರಲ್ಲದೆ ಇನ್ನಾರೂ ಇರುವುದು ಸಾಧ್ಯವಿಲ್ಲ..’

ಈ ಉತ್ಖನನ ಕೆಲಸದಲ್ಲಿ ಹೆಚ್ಚುಕಡಿಮೆ ೩೦ ವಸಂತಗಳನ್ನು ಕಳೆದಿರುವ ವ್ಯಕ್ತಿ ಅಲ್ಲಿದ್ದಾರೆ. ಸಣ್ಣವರಿರುವಾಗಿನಿಂದ ಕಲ್ಲು ಕೆಲಸ ಮಾಡುತ್ತಿರುವ ಅವರು ಶಾಲೆಗಿಂತ ಹೆಚ್ಚು ಕನಗನಹಳ್ಳಿಯ ಈ ಬಯಲ ವಿಶ್ವವಿದ್ಯಾಲಯದಲ್ಲೇ ಕಲಿತಿದ್ದಾರೆ. ಬುದ್ಧನ ಜೀವನ ವೃತ್ತಾಂತಗಳನ್ನು ನಾವು ಚರ್ಚಿಸತೊಡಗಿದಾಗ ಆಸಕ್ತಗೊಂಡು ಹತ್ತಿರ ಬಂದರು. ಅವರಿಗೆ ಒಂದು ಸಂಖ್ಯೆ ಬಹುವಾಗಿ ಕಾಡುತ್ತಿತ್ತು: ಬುದ್ಧನ ಮರಣಾನಂತರ ಅಸ್ಥಿ ಅವಶೇಷವನ್ನು ಎಂಟು ಭಾಗ ಮಾಡಿದರೆನ್ನುತ್ತಾರೆ. ಆದರೆ ಇಲ್ಲಿನ ಶಿಲ್ಪಗಳಲ್ಲಿ ಏಳು ಆನೆಗಳ ಮೇಲೆ ಅಸ್ಥಿಅವಶೇಷ ಕರಂಡಕಗಳನ್ನು ಒಯ್ಯುವಂತೆ ಕೆತ್ತಲಾಗಿದೆ. ನಿಜ ಸಂಖ್ಯೆ ಏಳೋ, ಎಂಟೋ?

ನಿಜ ಸಂಖ್ಯೆ ಎಂಟು. ಆದರೆ ಕರಂಡಕ ಒಯ್ಯುವ ಆನೆಗಳು ಏಳು.

ಬುದ್ಧ ಮಲ್ಲರ ರಾಜ್ಯ ಕುಶಿನಾರದಲ್ಲಿ ತೀರಿಕೊಂಡ. ದೇಹವನ್ನು ಬಟ್ಟೆ, ಹತ್ತಿನೂಲುಗಳಿಂದ ಐನೂರು ಪದರ ಸುತ್ತಿ ಕಬ್ಬಿಣದ ಕಡಾಯಿಯ ಎಣ್ಣೆಯಲ್ಲಿ ಮುಳುಗಿಸಲಾಯಿತು. ಎಲ್ಲ ಮಲ್ಲ ಕುಟುಂಬಗಳೂ ದರ್ಶನ ಪಡೆದು, ಮಹಾಕಶ್ಶಪ ಸಂಘದೊಡನೆ ಕುಶಿನಾರ ತಲುಪಿ, ಬುದ್ಧ ಕೊನೆಯುಸಿರೆಳೆದ ಏಳು ದಿನಗಳ ಬಳಿಕ ಬುದ್ಧದೇಹವನ್ನು ಬೆಂಕಿಗೊಪ್ಪಿಸಲಾಯಿತು. ಎಲ್ಲ ಬದಲಾಗಬೇಕೆಂದ ಬುದ್ಧ ದೇಹ ಭಸ್ಮವಾಗಿ ಬದಲಾಯಿತು. ಲಿಚ್ಛವಿ, ಶಾಕ್ಯ, ಕೋಲ್ಯ, ಕೋಸಲ, ಬುಲಿ, ಪಾವದ ಮಲ್ಲರು, ಕುಶಿನಾರದ ಮಲ್ಲರು, ವೇತ್ತಾಧಿಪದ ಬ್ರಾಹ್ಮಣ.. ಈ ಎಲ್ಲರಿಗು ಬುದ್ಧ ಗುರುವಿನ ಚಿತಾಭಸ್ಮ ಬೇಕು. ಆದರೆ ಚಿತಾಭಸ್ಮವನ್ನು ಮಡಕೆಯಲಿ ತುಂಬಿಟ್ಟುಕೊಂಡ ಮಲ್ಲರು ಹಂಚಿಕೊಳ್ಳಲು ನಿರಾಕರಿಸಿದರು. ಯುದ್ಧ ಕಾರ್ಮೋಡ ಕವಿಯಿತು. ಕೊನೆಗೊಂದು ದಿನ ದ್ರೋಣನೆಂಬ ಪಂಡಿತ ಸ್ನೇಹಭಾವದಲ್ಲಿ ಸಮಸ್ಯೆ ಬಗೆಹರಿಸಿದ. ‘ತನ್ನದೆನುವ ಏನೂ ಇರದ ಮಹಾಭಿಕ್ಕು ಬುದ್ಧ ಯುದ್ಧ ತಪ್ಪಿಸಹೊರಟು ಬುದ್ಧನಾದವ, ಅವನ ಚಿತಾಭಸ್ಮಕೆ ಇನ್ನೊಂದು ಯುದ್ಧ ನಡೆಯಬೇಕೆ? ಮಲ್ಲರ ರಾಜ್ಯ ರಕ್ತ ಹರಿವ ರಣರಂಗವಾಗಬೇಕೆ? ಇದು ದುಃಖನಿವಾರಕನಿಗೆ ತೋರಿಸುವ ಅಗೌರವವಲ್ಲವೆ?’ ಎಂದು ಕೇಳಿದ.

ದ್ರೋಣನ ಮಾತಿಗೆ ಮಲ್ಲರ ಕಣ್ಣು ತೆರೆಯಿತು. ಕೊನೆಗೆ ಚಿತಾಭಸ್ಮವನ್ನು ಎಂಟು ಸಮಪಾಲು ಮಾಡಲು ಸಮ್ಮತಿಸಿದರು. ಹಂಚಿದ ನಂತರ ಖಾಲಿಯಾಗುವ ಕರಂಡಕವನ್ನು ತನಗೆ ಕೊಡಬೇಕೆಂಬ ಷರತ್ತಿನೊಂದಿಗೆ ದ್ರೋಣ ಎಂಟು ಪಾಲು ಮಾಡಿಕೊಟ್ಟ. ಏಳನ್ನು ರಾಜಪರಿವಾರಗಳು ಆನೆಯ ಮೇಲೆ ಒಯ್ದವು. ವೇತ್ತಾಧಿಪದ ಬ್ರಾಹ್ಮಣ ಹಾಗೇ ಒಯ್ದ. ದ್ರೋಣ ಖಾಲಿಯಾದ ಕರಂಡಕ ಇಟ್ಟುಕೊಂಡು ಅದರ ಮೇಲೇ ಸ್ತೂಪ ಕಟ್ಟಿದ..

ಈ ವಿವರಣೆ ಕೇಳಿ ಅವರಿಗೆಷ್ಟು ಸಮಾಧಾನವಾಯಿತು ಎಂದರೆ ಅರಳಿದ ಮುಖವೇ ಎಲ್ಲ ಹೇಳಿತು. ಜ್ಞಾನದಾಹವೇ ಅಂಥದು. ಮುಂದೆ ನಾವಿರುವಷ್ಟು ಹೊತ್ತು ನಮ್ಮ ಜೊತೆಯೆ ಬಂದು ಎಲ್ಲ ವಿವರಿಸಿದರು. ಚೂರುಗಳ ತೋರಿಸಿದರು, ವಿಶೇಷಗಳ ಗಮನಿಸಲು ಹೇಳಿದರು.

ತಮ್ಮ ಮೂರು ದಶಕಗಳ ಅನುಭವವನ್ನು ಕಥೆಯಂತೆ ಬಿಚ್ಚಿಟ್ಟರು. ಅವರು ಒಂದು ದಿನವೂ ರಜೆ ಮಾಡಬಯಸುವುದಿಲ್ಲ; ಪಜಲ್ ಆಟದಲ್ಲಿ ತೊಡಗಿರುವ ಮಕ್ಕಳಿಗೆ ಆಗುವ ಹಾಗೆ, ದಿನವೂ ಸಿಗುವ ಚೂರುಗಳು ಯಾವುದರ ಜೊತೆ ಎಲ್ಲಿ ಹೊಂದಿಕೊಂಡಾವು ಎನ್ನುವುದು ಅವರ ತಲೆಯಲ್ಲಿ ಗುಂಯ್ಞ್‌ಗುಡುತ್ತಿರುತ್ತದೆ. ಅದನ್ನಿಟ್ಟು, ಇದನ್ನಿಟ್ಟು, ಬದಲಿಸಿ, ಕೂಡಿಸಿ, ತೆಗೆದು ಸರಿಯಾದ ಮೇಲೆ ಜೋಡಿಸಿಡುತ್ತಾರೆ. ಅವು ‘ದೊಡ್ಡ ಸಾರ್’ ಬಂದು ಅವರಿಂದ ಓಕೆ ಆದಾಗ ಶಿಲ್ಪವಾಗಿ ಒಂದೆಡೆ ಸೇರಿ, ಚಿತ್ರೀಕರಣಗೊಳ್ಳುತ್ತವೆ.

ಒಳಾವರಣದ ಬೇವಿನ ಮರದ ಕೆಳಗೆ ಉತ್ಖನನಗೊಂಡ ನೆಲದಾಳದ ಶಿಲ್ಪಗಳ ನಡುವೆ ಚಾಮುಂಡೇಶ್ವರಿಯೂ ಅವತರಿಸಿಬಿಟ್ಟಿದ್ದಳು. ಕನಗನಹಳ್ಳಿಯಲ್ಲಿ ಸನಾತನ ಧರ್ಮದವರ ಗಲಾಟೆಗೆ ಕಾರಣವಾದ ಆ ಮೂರ್ತಿ ಕುಂಕುಮ ಪೂಸಿಕೊಂಡು ನಿಂತಿತ್ತು. ಅದನ್ನು ತೋರಿಸುವಾಗಲೂ ಇನ್ನಿಲ್ಲದ ಧಾರ್ಮಿಕ ಮಾಗುವಿಕೆ ಅವರ ಮಾತುಗಳಲ್ಲಿ ವ್ಯಕ್ತವಾಯಿತು. ‘ನೋಡ್ರಿ ಮೇಡಂ, ಎಲ್ಲಾದೂ ಕಲ್ಲೇ. ಕಲ್ನ್ಯಾಗ ಯಾವ ಮೂರ್ತಿನರೆ ಅಳ್ಳಸಬೋದು. ಎಲ್ಲಾವೂ ದೇವ್ರೆ. ನಾವು ಸುಮ್ನ ಅವ್ಕೆ ಬೇರೆ ಹೆಸರಿಟಗೊಂದು ಬಡಿದಾಡ್ಲಿಕ್ ಹತ್ತೇವಿ ಅಷ್ಟ’ ಎಂದರು. ಆ ಮನುಷ್ಯ ನಂಬುವ ಧರ್ಮವು ವಿಗ್ರಹಾರಾಧನೆ ಪಾಪ ಎನ್ನುತ್ತದೆ, ವಿಗ್ರಹಾರಾಧಕ ಕಾಫಿರ ಎನ್ನುತ್ತದೆ. ಆದರೆ ಸಾವಿರಾರು ವರ್ಷ ಕೆಳಗೆ ತನ್ನಂತಹ ಕಲ್ಲುಕುಟಿಗನೊಬ್ಬ ರೂಪಿಸಿರಬಹುದಾದ ಈ ಶಿಲ್ಪಗಳ ಒಳಗೆ ದೇವರಲ್ಲದೆ ಮತ್ತೇನೂ ಇರಲು ಸಾಧ್ಯವಿಲ್ಲ ಎನ್ನುವುದು ಅವರ ಧೃಢನಂಬಿಕೆ. ಆತನ ಧರ್ಮಕ್ಕೆ ಭಾರತದ ಸಮಾಜವು ವಿರೂಪಗೊಳಿಸಲ್ಪಟ್ಟ ಎಲ್ಲ ವಿಗ್ರಹಗಳ ದುರ್ಗತಿಯನ್ನು ತಳುಕು ಹಾಕುತ್ತಿದ್ದರೆ, ಆತ ಮಾತ್ರ ಅಶೋಕನ ಶಿಲಾಶಾಸನ ದೇವತೆಯ ಪೀಠವಾಗುವುದರ ಹಿಂದೆ ಧರ್ಮಕಾರಣ ಇಲ್ಲವೆನ್ನುತ್ತಿದ್ದರು. ‘ಈ ಸ್ತೂಪ ಒಡದು ಕಾಳಿ ಗುಡಿ ಕಟ್ಟಿಲ್ರಿ. ಸುಮ್ ಅನಬಾಡ್ದು. ಹಂಗಾಗಿದ್ರ ಅವ್ರು ಈ ಅಕ್ಷರ ಎಲ್ಲ ಅಳಸಿಹಾಕ್ತಿದ್ರು. ಹಿಂತ ಗಟ್ಟಿ ಕಲ್ಲು ಸಿಕ್ಕೇತಂದು ಅದ್ರಮ್ಯಾಗೆ ದೇವ್ರ ಕುಂಡುರ‍್ಸ್ಯಾರ ಅಷ್ಟ’ ಎಂದರು!

ಹೆಚ್ಚು ಕಡಿಮೆ ೨೦ ವರ್ಷಗಳಿಂದ ಪುರಾತತ್ವ ಇಲಾಖೆಯ ಉತ್ಖನನ ನಡೆಯುತ್ತಿದೆ. ವಿದೇಶಗಳ ತಜ್ಞರೂ ಬಂದುಹೋಗಿದ್ದಾರೆ. ಆದಷ್ಟು ಬೇಗ ಸ್ತೂಪ ನಿರ್ಮಾಣ ಕಾರ್ಯ ನಡೆಯಬೇಕೆನ್ನುವುದು ಅವರ ಅಭಿಪ್ರಾಯ. ‘ಈ ಕಲ್ಲುಮೂರ್ತಿ ನೆಲದೊಳಗ ಇದ್ರ ಇನ್ನಾ ನೂರಲ್ಲ ಐನೂರು ವರ್ಷ ಇರವಲ್ಯಾಕ, ಸರಿ ಇರತಿದ್ದುವ್ರಿ. ಈಗಿಲ್ಲಿ ಬಿಸಿಲಿಗ್ ಬಂದು ಬಿದ್ದು ಮಳಿ, ಧೂಳು, ಧಗಿಗೆ ಹಾಳಾಗತಾವ್ರಿ. ಶೆಡ್‌ನ್ಯಾಗಿಟ್ಟವಿ ಖರೆ. ಆದ್ರ ಸೆಕ್ಯುರಿಟಿಗಂತ ಇನ್ನು ಬ್ಯಾರೆ ಎಲ್ಲೊ ಸಾಗ್ಸಿ ಇಡತಾರಂತ. ಎತ್ತಿಟ್ಟೇ ಒಡದು ಹೋಕಾವವು. ಬೇಗ ಸ್ತೂಪಾ ಕಟ್ಟಬೇಕ್ರಿ. ಸಿಕ್ಕಿರೋ ಪೀಸದಾಗ ಪೂರಾ ಕಟ್ಟೂಕಾಗುದಿಲ್ಲ ಖರೆ, ಆದ್ರ ಭಾಳಷ್ಟು ಪೀಸ್ ಸಿಕ್ಕಾವ, ಹಂಗ ಜೋಡ್ಸಿ ಮುಗಿಸ್ಬೇಕಾಗೇತಿ. ನಾ ಸಾಯೂದರೊಳಗ ಇದನೇನು ಕಟ್ಟಿ ಮುಗಸ್ತರಿಲ್ಲೊ ಅನಿಸೇತಿ. ಜರಾ ಈ ಕುರಿತಂಗ ಹೋದೋದಲ್ಲೆ ಸ್ವಲ್ಪು ಬರ‍್ದು, ತಿಳದೋರಿಗೆ ಹೇಳ್ರಿ. ನಿಮ್ಮ ದೋಸ್ತರಿಗೆಲ್ಲ ಇಲ್ಲಿಗೆ ಬಂದ್ ನೋಡ್ ಹೋಗ್ರಿ ಅಂತನ್ನರಿ’ ಎಂದು ಅಲವತ್ತುಕೊಂಡರು.


(ಬುದ್ಧ ಮಲಗಿದ ಬೆಟ್ಟ, ಶಹಾಪುರ)

ಅಶೋಕ, ಕಳಿಂಗ ಯುದ್ಧ, ಅವನ ಕಿರಿಯ ಹೆಂಡತಿ, ಕುರುಡುಗೊಳಿಸಲ್ಪಟ್ಟ ಮಗ, ಭಿಕ್ಕುಗಳಾದ ಮಕ್ಕಳು, ರಾಜನೊಬ್ಬ ಬೌದ್ಧಧರ್ಮವನ್ನು ಒಳಗೊಳ್ಳಲು ಮಾಡಿದ ಪ್ರಯತ್ನ - ಎಲ್ಲವೂ ತಲೆಯೊಳಗೆ ಸುಳಿಯುತ್ತಿದ್ದವು. ಬಾಟಲಿಗಟ್ಟಲೆ ನೀರು ಕುಡಿದರು ಧಗೆಗೆ ಬಾಯಿ ಒಣಗಿಕೊಂಡೇ ಇತ್ತು. ಇಲ್ಲಿದ್ದ ಬುದ್ಧ ಎಲ್ಲರ ನೆನಪುಗಳಿಂದ ಹೀಗೆ ಮರೆಯಾಗಿಬಿಟ್ಟದ್ದು ಹೇಗೆ? ಆರಿಹೋಗುತ್ತಿರುವ ಬಾಯ ನೀರಪಸೆಯಂತೆಯೇ? ಹರಿವು ನಿಲಿಸಿ ಗುಂಡಿಯಾಗಿರುವ ಬೇಸಿಗೆಯ ಭೀಮೆಯಂತೆಯೆ? ಇಲ್ಲಿರುವ ಎಷ್ಟು ದಿಬ್ಬಗಳು ಇನ್ನೂ ಎಷ್ಟೆಷ್ಟು ರಹಸ್ಯಗಳ ಅಡಗಿಸಿಟ್ಟುಕೊಂಡಿವೆಯೋ ಏನೋ? ಎಂದೆಲ್ಲ ಅಂದುಕೊಳ್ಳುತ್ತ ಶಹಾಪುರದಲ್ಲಿ ಊಟಕ್ಕೆ ನಿಂತೆವು.

ಖಾನಾವಳಿಯ ರೊಟ್ಟಿ ಗಂಡಸರು ಬಡಿದದ್ದು ಎಂದು ಅದರ ಆಕಾರ, ದಪ್ಪಗಳೇ ಹೇಳಿದವು. ಊಟದ ಖಾರಕ್ಕೆ ಕಣ್ಣುಮೂಗುಗಳಿನ್ನೂ ನೀರು ಸುರಿಸುತ್ತಿರುವಾಗಲೇ ಅದರ ಮಾಲೀಕನ ಬಳಿ ತಮಾಷೆಯಾಗಿ ‘ರೊಟ್ಟಿ ಬಡ್ಯಾದ್ನು ಕಲ್ಕೊಬಿಟ್ಟಿರೇನು?’ ಎಂದು ಕೇಳಿದೆ. ‘ಕಾಲಕ್ಕ ತಕ್ಕಂಗ ಎಲ್ಲಾದೂ ಬದಲಾಗ್ಲೆ ಬೇಕಲ್ಲರಿ ಮೇಡಂ’ ಎಂದರು.

ಎಲ್ಲಾದೂ ಬದಲಾಗ್ಲೇ ಬೇಕು! ಅರೆ, ಬುದ್ಧ ಹೇಳಿದ್ದು ಇದನ್ನೇ ಅಲ್ಲವೆ?!

ಶಹಾಪುರದಿಂದ ಕಲಬುರಗಿಗೆ ಹೋಗುತ್ತ ಸನ್ನತಿ ಹತ್ತಿರದ ಹಳ್ಳಿಯವರಾದ ಸಂತೋಷ್ ತಮ್ಮ ಹಳ್ಳಿಗಳ ಜನ ದೂರದಿಂದ ಮನುಷ್ಯ ಮಲಗಿದಂತಿರುವ ಬೆಟ್ಟವೊಂದನ್ನು ‘ಬುದ್ದ ಮಲಗಿದ ಬೆಟ್ಟ’ ಎನ್ನುತ್ತಾರೆ ಎಂದು ವಾಹನ ನಿಲಿಸಿ ತೋರಿಸಿದರು. ಅರೆರೆ, ಹೌದಲ್ಲ, ಎಲ್ಲಕ್ಕು ಸಾಕ್ಷಿಯೆಂಬಂತೆ ಸಮಚಿತ್ತನಾಗಿ ಮಲಗಿಬಿಟ್ಟಿದ್ದ ಬುದ್ಧ ಬೆಟ್ಟವಾಗಿ!

ಅವನು ಮಲಗಿದ್ದ ಅಷ್ಟೆ, ಆದರೆ ಉಸಿರಾಡುತ್ತಿದ್ದ.
ಅವನು ವಿರಮಿಸಿದ್ದ ಅಷ್ಟೆ, ಆದರೆ ಎಚ್ಚರಿದ್ದ..



(ವಿ. ಸೂ.: ಇಲ್ಲಿನ ಕೆಲವು ಚಿತ್ರಗಳು ನನ್ನವು. ಉಳಿದ ಚಿತ್ರಗಳನ್ನು ಜರ್ನಿ ಅಕ್ರಾಸ್ ಕರ್ನಾಟಕ; ಬುದ್ಧಿಸ್ಟ್ ಡೋರ್.ನೆಟ್; ಫೋರಂ.ಸಂತಬಂತ.ಕಾಮ್ ಮೊದಲಾದ ಅಂತರ್ಜಾಲ ತಾಣಗಳಿಂದ ಪಡೆಯಲಾಗಿದೆ. ಅವರಿಗೆ ಧನ್ಯವಾದಗಳು. ಸನ್ನತಿಯಲ್ಲಿ ಛಾಯಾಚಿತ್ರ ತೆಗೆಯಬಯಸುವವರು ಮೊದಲೇ ಧಾರವಾಡದ ಪುರಾತತ್ವ ಕಚೇರಿಯಿಂದ ಅನುಮತಿ ಪತ್ರ ಒಯ್ಯಬೇಕಾಗುತ್ತದೆ.)