Sunday, 7 October 2018

ಲಿಂಗತ್ವ ಪ್ರಯೋಗದ ಬಲಿಪಶು: ಬ್ರೂಸ್ ಬ್ರೆಂಡಾ ಡೇವಿಡ್ ರೀಮರ್




(ಬ್ರೂಸ್ ಬ್ರೆಂಡಾ ರೀಮರ್)

ಲಿಂಗ (ಸೆಕ್ಸ್) ಜನ್ಮಜಾತವಾಗಿದ್ದು, ಗಂಡು-ಹೆಣ್ಣು ಎಂದು ಜೈವಿಕವಾಗಿ ವ್ಯಾಖ್ಯಾನಿಸಲ್ಪಟ್ಟಿದ್ದರೆ, ಲಿಂಗತ್ವ (ಜೆಂಡರ್) ಸಾಂಸ್ಕೃತಿಕವಾಗಿ ನಿರೂಪಿಸಲ್ಪಟ್ಟದ್ದು. ಲಿಂಗತ್ವ ಅಲ್ಪಸಂಖ್ಯಾತರ ಆತ್ಮಕಥನಗಳು ಹಾಗೂ ಅನುಭವ ಕಥನಗಳನ್ನು ಗಮನಿಸಿದರೆ ಅವರ ಆಯ್ಕೆಯ ಲಿಂಗತ್ವಕ್ಕಿಂತ ಆರೋಪಿಸಲ್ಪಟ್ಟ ಲಿಂಗತ್ವಕ್ಕೆ ತಕ್ಕಂತೆ ನಡೆದುಕೊಳ್ಳಲು ಅಪಾರ ಒತ್ತಡ ಬಂದಿರುತ್ತದೆ. ತಮ್ಮ ಮಗುವಿಗೆ ದ್ವಂದ್ವಮಯ ಲೈಂಗಿಕ ಅಂಗಾಂಗಗಳಿದ್ದರೂ ಪಾಲಕರು ಮಗುವಿನ ಲಿಂಗತ್ವ ಆಯ್ಕೆಯನ್ನು ನಿರಾಕರಿಸುತ್ತಾರೆ. ವಿದ್ಯೆ ಕಲಿತವರೂ ಸಹ ಹಿಜ್ರಾಗಳನ್ನು, ‘ಚಿಕ್ಕಂದಿನಲ್ಲೇ ತಾಯ್ತಂದೆಯರು ‘ಸರಿ’ಯಾಗಿ ಬುದ್ಧಿ ಕಲಿಸಿದ್ದರೆ ವಿಚಿತ್ರವಾಗಿ, ಅತಿಯಾಗಿ ಆಡುವ ಈ ಗಂಡುಗಳು ಹೀಗಾಗುತ್ತಿರಲಿಲ್ಲ’ ಎಂದು ಹಗುರವಾಗಿ ವ್ಯಾಖ್ಯಾನಿಸುವುದನ್ನು ಕೇಳುತ್ತೇವೆ. ಇಂಥ ಧೋರಣೆಯ ಹಿಂದೆ ಐಚ್ಛಿಕ ಲಿಂಗತ್ವದಂತೆ ಮಗುವನ್ನು ಬಾಲ್ಯದಿಂದಲೇ ಬೆಳೆಸಬಹುದು ಎಂಬ ಅಭಿಪ್ರಾಯವಿರುತ್ತದೆ. ಇಂಥ ಅಭಿಪ್ರಾಯವನ್ನು ಜನಸಾಮಾನ್ಯರಂತೆ ಮನೋವಿಜ್ಞಾನಿಗಳೂ ನಂಬಿದ್ದರು. ಅವರ ನಿಲುವುಗಳನ್ನು ಬದಲಿಸಲು ಒಬ್ಬ ಹುಡುಗನ ಬಲಿ ತೆಗೆದುಕೊಂಡ ತುಟ್ಟಿ ಪ್ರಯೋಗ ಕಾರಣವಾಯಿತು.

ಜೈವಿಕವಾಗಿ ಗಂಡಾಗಿ ಹುಟ್ಟಿದವರ ಮೇಲೆ ಹೆಣ್ತನವನ್ನು ಹೇರಿದರೆ ಮನಸಿಗೊಗ್ಗದ ಲಿಂಗತ್ವದಂತೆ ಬದುಕು ಸವೆಸಲು ದುರ್ಭರ ನೋವು ಅನುಭವಿಸಬೇಕಾಗುತ್ತದೆ. ತೃತೀಯ ಲಿಂಗಿಗಳ ಒಳಸಂಕಟಗಳು ಇಂಥ ದಾರುಣ ಬದುಕಿನ ಒಂದು ತುದಿಯಾದರೆ, ಎಳಸು ಗಿಡವಾಗಿದ್ದಾಗಲೇ ಬಗ್ಗಿಸಿದರೆ ಹುಡುಗನನ್ನು ಹುಡುಗಿಯಾಗಿಸಬಹುದು ಎಂಬ ಪ್ರಯೋಗಕ್ಕೀಡಾದ ಒಬ್ಬ ನತದೃಷ್ಟ ಹುಡುಗನ ಬದುಕು ಅದರ ಮತ್ತೊಂದು ತುದಿಯಾಗಿದೆ. ಬೇಕೆಂದ ಹಾಗೆ ಲಿಂಗತ್ವವನ್ನು ಬದಲಾಯಿಸಬಹುದೆಂಬ ಪ್ರಯೋಗಕ್ಕೀಡಾದ ಹುಡುಗ/ಹುಡುಗಿ ಬ್ರೂಸ್ ಬ್ರೆಂಡಾ ಡೇವಿಡ್ ರೀಮರ್ (1965-2004). ಆ ಬದುಕಿನ ವಿವರಗಳಲ್ಲಿ ಮನಕಲಕುವ ಕಥನವಷ್ಟೇ ಅಲ್ಲ, ಕಣ್ತೆರೆಸುವ ಪಾಠಗಳೂ ಅಡಗಿವೆ.

ಹುಡುಗ ಬ್ರೂಸ್ ಹುಡುಗಿ ಬ್ರೆಂಡಾ ಆದ ಕಥೆಯು

ಐವತ್ತು ವರ್ಷ ಕೆಳಗೆ ಕೆನಡಾದ ರೀಮರ್ ದಂಪತಿಗಳಿಗೆ ಬ್ರೂಸ್ ಮತ್ತು ಬ್ರಿಯಾನ್ ಎಂಬ ತದ್ರೂಪಿ (ಐಡೆಂಟಿಕಲ್) ಅವಳಿ ಗಂಡುಮಕ್ಕಳು ಹುಟ್ಟಿದವು. ಮುದ್ದಾದ, ಆರೋಗ್ಯವಂತ ಮಕ್ಕಳು ಉಚ್ಚೆ ಹಾರಿಸುವಾಗ ಅಸಹಜತೆ ಇದೆಯೆಂದು ಗಮನಿಸಿದ ರೀಮರ್ ದಂಪತಿಗಳು ಯುರಾಲಜಿಸ್ಟ್ ಬಳಿ ಕರೆದೊಯ್ದರು. ಅವಕ್ಕೆ ಗಂಡು ಹಸುಗೂಸುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ, ಮೂರ‍್ನಾಲ್ಕು ವರ್ಷವಾಗುವ ಹೊತ್ತಿಗೆ ತಂತಾನೇ ಸರಿಯಾಗುವ ಫೈಮೋಸಿಸ್ ಎಂಬ ಸಮಸ್ಯೆಯಿತ್ತು. (ಫೈಮೋಸಿಸ್ ಇದ್ದವರಿಗೆ ಶಿಶ್ನದ ತುದಿಯ ಚರ್ಮವನ್ನು ಹಿಂದೆಮುಂದೆ ಸರಿಸಲು ಕಷ್ಟವಿರುತ್ತದೆ.) ಆರು ತಿಂಗಳ ಕೂಸುಗಳಿಗೆ ಸರ್ಕಮ್ಸಿಷನ್ (ಮುಂಜಿ ಶಸ್ತ್ರಚಿಕಿತ್ಸೆ) ಮಾಡಿಸಲು ಯುರಾಲಜಿಸ್ಟ್ ಸಲಹೆ ಕೊಟ್ಟರು. ಬ್ರೂಸನಿಗೆ ಆಪರೇಷನ್ ಆಯಿತು. ಶಿಶ್ನದ ಮುಂದೊಗಲು ತೆಗೆವ ಈ ಸರಳ ಶಸ್ತ್ರಚಿಕಿತ್ಸೆ ಕೋಟ್ಯಂತರ ಮುಸ್ಲಿಂ ಗಂಡುಮಕ್ಕಳಿಗೆ ಸುಲಲಿತವಾಗಿ ನಡೆಯುತ್ತಿರುತ್ತದೆ. ಆದರೆ ಬ್ರೂಸ್‌ನ ಶಸ್ತ್ರಚಿಕಿತ್ಸೆ ವೇಳೆ ರಕ್ತಸ್ರಾವ ತಡೆಗಟ್ಟಲು ಬಳಸಿದ ಎಲೆಕ್ಟ್ರೋಕಾಟರಿಯಿಂದ ರಕ್ತನಾಳಗಳು ಎಷ್ಟು ಸುಟ್ಟುಹೋದವೆಂದರೆ ಶಿಶ್ನ ಕರ್ರಗಾಗಿ ಚಿರುಟಿಹೋಯಿತು. ಹೆದರಿದ ಸರ್ಜನ್ ಮತ್ತು ಪಾಲಕರು ಮತ್ತೊಬ್ಬ ಅವಳಿ ಸೋದರ ಬ್ರಿಯಾನನಿಗೆ ಶಸ್ತ್ರಚಿಕಿತ್ಸೆ ಮಾಡಲಿಲ್ಲ. ಅವನಿಗೆ ನಂತರ ತಾನೇ ಸರಿಹೋಯಿತು.


(ಬ್ರೂಸ್-ಬ್ರಿಯಾನ್ ತದ್ರೂಪಿ ಅವಳಿಗಳು)

ಶಿಶ್ನವಿಲ್ಲದ ಗಂಡುಮಗುವಿನ ಭವಿಷ್ಯದ ಲೈಂಗಿಕ ಬದುಕಿನ ಕುರಿತು ಪಾಲಕರು ಆತಂಕಗೊಂಡರು. ಅದೇವೇಳೆಗೆ ಟಿವಿ ಶೋ ಒಂದರಲ್ಲಿ ಲಿಂಗತ್ವ ಅಸ್ಮಿತೆ, ದ್ವಂದ್ವ ಲಿಂಗತ್ವವಿರುವವರ ಕುರಿತು ಸಂಶೋಧನೆ ನಡೆಸಿದ್ದ ಪ್ರೊ. ಜಾನ್ ಮನಿ ಎಂಬ ಪ್ರಖ್ಯಾತ ಮನಃಶ್ಶಾಸ್ತ್ರಜ್ಞನ ಸಂದರ್ಶನ ಬಂತು. ಆತ ಲಿಂಗತ್ವ ಅಸ್ಮಿತೆ ಬಾಲ್ಯದ ಸಾಮಾಜಿಕ ಕಲಿಕೆಯಿಂದ ಬರುವಂಥದು, ಅದನ್ನು ಸೂಕ್ತ ಗುಣಸ್ವಭಾವ ಹೊಂದಾಣಿಕೆಗಳ ಮೂಲಕ ಬದಲಾಯಿಸಬಹುದು ಎಂದು ಪ್ರತಿಪಾದಿಸಿದ್ದ. ಅದು ಅಂದಿಗೂ, ಇಂದಿಗೂ ಜನಪ್ರಿಯ ಅಭಿಪ್ರಾಯವೇ ಆಗಿದೆ. ಅವನ ಬಳಿ ರೀಮರ್ ದಂಪತಿಗಳು ಮಗುವನ್ನು ಕರೆದೊಯ್ದರು.




ಬಾಲ್ಟಿಮೋರಿನ ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತ ದ್ವಂದ್ವಲಿಂಗಿ ಮಕ್ಕಳ ಬಗೆಗೆ ಸಂಶೋಧನೆ ಮಾಡುತ್ತಿದ್ದ ಮನಿ ಮತ್ತು ಸಂಗಡಿಗರು, ಶಿಶ್ನವನ್ನು ಮರುರೂಪಿಸುವುದು ಅಸಾಧ್ಯ; ಆದರೆ ಯೋನಿಯನ್ನು ಮರುರೂಪಿಸಬಹುದು; ಅದು ಸುರಕ್ಷಿತ ಮತ್ತು ಸೂಕ್ತ ಎಂದು ಪ್ರತಿಪಾದಿಸುತ್ತಿದ್ದರು. ಖಚಿತ ಲೈಂಗಿಕ ಅಂಗಗಳಿಲ್ಲದೆ ಹುಟ್ಟಿದ ಮಕ್ಕಳಿಗೆ, ಸಂತಾನೋತ್ಪತ್ತಿ ಸಾಧ್ಯವಾಗದ ವ್ಯಕ್ತಿಗಳಿಗೆ ಲಿಂಗತ್ವ ಹೊಂದಾಣಿಕೆ ಪ್ರಯೋಗ ಮಾಡುತ್ತಿದ್ದರು. ಬ್ರೂಸನನ್ನು ಪರೀಕ್ಷಿಸಿದ ಆ ಮನೋವಿಜ್ಞಾನಿಗಳ ತಂಡ, ಗಂಡಾಗುವುದಕ್ಕಿಂತ ಹೆಣ್ಣಿನಂತೆ ಲೈಂಗಿಕ ಪ್ರಬುದ್ಧತೆ ಸಾಧಿಸುವುದು ಮಗು ಬ್ರೂಸನಿಗೆ ಅತ್ಯುತ್ತಮ ಆಯ್ಕೆ ಎಂದು ಹೇಳಿದರು. ತದ್ರೂಪಿ ಅವಳಿ ಗಂಡುಮಕ್ಕಳಲ್ಲಿ ಒಬ್ಬನನ್ನು ಗಂಡಿನಂತೆ, ಒಬ್ಬನನ್ನು ಹೆಣ್ಣಿನಂತೆ ಬೆಳೆಸಿ ನೋಡುವ ಪ್ರಯೋಗ, ಜೈವಿಕವಾಗಿ ಪರಿಪೂರ್ಣ ಗಂಡನ್ನು ಹೆಣ್ಣು ಲಿಂಗತ್ವದೊಂದಿಗೆ ಬೆಳೆಸುವ ಪ್ರಯೋಗ ಶುರುವಾಯಿತು.

ಇಲ್ಲಿಂದ ಬ್ರೂಸ್ ಎಂಬ ಮುದ್ದು ಹುಡುಗನನ್ನು ಬ್ರೆಂಡಾ ಎಂಬ ಹುಡುಗಿಯಾಗಿಸುವ ಕತೆ ಶುರುವಾಗುತ್ತದೆ.

22 ತಿಂಗಳ ಮಗು ಬ್ರೂಸನ ವೃಷಣ ಮತ್ತು ಬೀಜ (ಟೆಸ್ಟಿಸ್) ಕತ್ತರಿಸಿ ಹಾಕಲಾಯಿತು. ವೃಷಣದ ಹೊರಭಾಗದ ಚರ್ಮವನ್ನು ಮರುರೂಪಿಸಿ ಹೆಣ್ಣಿನ ಲೈಂಗಿಕ ಅಂಗದ ಹೊರಭಾಗದಂತೆ ಕಾಣುವ ಹಾಗೆ ರೂಪಿಸಲಾಯ್ತು. ಬ್ರೂಸನನ್ನು ಇನ್ನುಮುಂದೆ ಬ್ರೆಂಡಾ ಎಂಬ ಹುಡುಗಿಯಾಗಿ ಬೆಳೆಸುತ್ತಾ ಲಿಂಗತ್ವ ಮರುರೂಪಿಸುವ ಜವಾಬ್ದಾರಿ ತಾಯ್ತಂದೆಯರ ಮೇಲೆ ಬಿತ್ತು. ಬ್ರೂಸ್ ಯಾನೆ ಬ್ರೆಂಡಾ ಹೊಟ್ಟೆಯಲ್ಲಿ ಮಾಡಿದ ತೂತಿನಿಂದ ಉಚ್ಚೆ ಹುಯ್ಯಬೇಕಿತ್ತು. ಸ್ತನ ಬೆಳೆಯಲೆಂದು ಈಸ್ಟ್ರೋಜೆನ್ ಕೊಡಲಾಯಿತು. ಪ್ರತಿವರ್ಷ ರೀಮರ್ ದಂಪತಿಗಳು ಮಾನಸಿಕ ಬೆಂಬಲ ಮತ್ತು ಸಲಹೆಗಾಗಿ ಜಾನ್ ಮನಿಯನ್ನು ಭೇಟಿಯಾಗುತ್ತಿದ್ದರು.

ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿ ವೈದ್ಯಲೋಕದ ಗಮನ ಸೆಳೆಯಿತು. ಪ್ರಯೋಗದ ಯಶಸ್ಸು ಹೋಲಿಸಲು ಒಂದೇ ಮನೆಯ, ಒಂದೇ ತಾಯ್ತಂದೆಯರಿಗೆ ಹುಟ್ಟಿ, ಅದೇ ಪರಿಸರದಲ್ಲಿ ಗಂಡಾಗಿ ಬೆಳೆಸಲ್ಪಡುತ್ತಿರುವ ಅವಳಿ ಸೋದರ ಸಿಕ್ಕಿದ್ದ. ಹುಟ್ಟುತ್ತ ಯಾವುದೇ ಲಿಂಗವೈಕಲ್ಯ, ಅಸಹಜತೆಯಿರದ ಗಂಡೊಬ್ಬನನ್ನು ಹೆಣ್ಣಾಗಿಸುವ ಮೊದಲ ಪ್ರಯತ್ನ ಇದಾಗಿತ್ತು.

ಬ್ರೆಂಡಾಗೆ ಹುಡುಗಿಯ ಪಾತ್ರ ರೂಢಿಯಾಗಲು ಬಾಲ್ಯದ ಲೈಂಗಿಕ ಆಟಗಳನ್ನು ಸೂಚಿಸಲಾಯಿತು. ಬಟ್ಟೆ ಬಿಚ್ಚಿ ಬ್ರೆಂಡಾ ಮತ್ತು ಬ್ರಿಯಾನ್ ಪರಸ್ಪರರ ಲೈಂಗಿಕ ಅಂಗಗಳ ನೋಡಿಕೊಳ್ಳುವಂತೆ ಉತ್ತೇಜಿಸಲಾಗುತ್ತಿತ್ತು. ಬ್ರೆಂಡಾ ಕೆಳಗಿರುವ ಭಂಗಿಯಲ್ಲಿ ಒಬ್ಬರ ಮೇಲೊಬ್ಬರು ಮಲಗುವಂತೆ, ಚತುಷ್ಪಾದಿಯ ರೀತಿ ಬ್ರೆಂಡಾ ನಿಂತು ಬ್ರಿಯಾನ್ ಹಿಂದಿನಿಂದ ಒತ್ತುವಂತೆ, ಬ್ರೆಂಡಾ ಕಾಲು ಅಗಲಿಸಿ ಮಲಗುವಂತೆ ಸಲಹೆ ನೀಡಲಾಯಿತು. ಮಕ್ಕಳು ಈ ಚಟುವಟಿಕೆಯಲ್ಲಿ ತೊಡಗಿದಾಗ ದಾಖಲೀಕರಣಕ್ಕೆಂದು ಕನಿಷ್ಠ ಒಮ್ಮೆ ಫೋಟೋ ತೆಗೆಯಲಾಯಿತು. ಬಾಲ್ಯದ ಲೈಂಗಿಕ ರಿಹರ್ಸಲ್ ಆಟಗಳು ವಯಸ್ಕರಾದ ನಂತರ ಆರೋಗ್ಯಕರ ಲಿಂಗತ್ವ ಅಸ್ಮಿತೆ ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ ಎನ್ನುವುದು ಜಾನ್ ಮನಿಯ ಅಭಿಮತ.


(ಬ್ರೆಂಡಾ ಎಂಬ ಹುಡುಗಿಯಾದ ಬ್ರೂಸ್ ಎಂಬ ಹುಡುಗ)


ರೀಮರ್ ಕುಟುಂಬ ಮತ್ತು ಜಾನ್ ಮನಿ.


(ಬ್ರಿಯಾನ್-ಬ್ರೆಂಡಾ ಅವಳಿಗಳು)

ಪ್ರೊ. ಮನಿ ಇದನ್ನು ‘ಜಾನ್/ಜೋನ್ ಪ್ರಕರಣ’ (ಗಂಡನ್ನು ಹೆಣ್ಣಾಗಿಸಿದ ಲಿಂಗತ್ವ ಮರುಹೊಂದಾಣಿಕೆ ಪ್ರಕರಣ) ಎಂದು ಕರೆದು ‘ಪುಟ್ಟ ಹುಡುಗಿ ತನ್ನ ಸೋದರನಿಗಿಂತ ತುಂಬ ಭಿನ್ನವಾಗಿ ಬೆಳೆಯುತ್ತಿದ್ದಾಳೆ’ ಎಂದು ಅಧ್ಯಯನ ವರದಿಗಳ ಕಳಿಸುತ್ತಲೇ ಹೋದ. ಪ್ರಯೋಗ ಯಶಸ್ವಿಯಾಗಿದೆ ಎಂದೇ ಭಾವಿಸಿ ದ್ವಂದ್ವಲಿಂಗ ಹೊಂದಿರುವವರನ್ನು ಶಸ್ತ್ರಚಿಕಿತ್ಸೆ ಮತ್ತು ಲಿಂಗತ್ವ ಮರುಹೊಂದಾಣಿಕೆ ಮೂಲಕ ಸರಿ ಮಾಡಬಹುದೆಂದು ಸೂಚಿಸಿದ. ರೀಮರ್ ದಂಪತಿಗಳೂ ಸಹ ಎಲ್ಲ ಯಶಸ್ವಿಯಾಗಿ ನಡೆದಿದೆ ಎಂದೇ ವೈದ್ಯರಿಗೆ ಹೇಳುತ್ತಿದ್ದರು.

ಆದರೆ ಸುರಳೀತವಾಗಿ ಎಲ್ಲವೂ ನಡೆದಿಲ್ಲ ಎಂದು ಅವರಿಗೆ ಗೊತ್ತಿತ್ತು.

ಪ್ರಕೃತಿ ಅದೆಲ್ಲೆಲ್ಲಿ ಲಿಂಗತ್ವ ಗುಣಗಳನ್ನು ಅಡಗಿಸಿಟ್ಟಿರುತ್ತದೆಯೋ!? ಹೊರಲೋಕ ಬ್ರೂಸನನ್ನು ಬ್ರೆಂಡಾ ಎಂಬ ಹುಡುಗಿಯಂತೆಯೇ ನಡೆಸಿಕೊಳ್ಳುತ್ತಿದ್ದರೂ, ಬ್ರೆಂಡಾ ತೀವ್ರ ತಳಮಳದ ಹುಡುಗಿಯಾದಳು. ನೀನು ಹುಡುಗಿ ಎಂದು ಸಮಾಜ ಒತ್ತಿಒತ್ತಿ ಹೇಳುತ್ತಿದ್ದರೂ, ಬೆಳೆಯುತ್ತಿರುವ ಮಗುವಿನ ತಲ್ಲಣಗಳ ಲೋಕ ಬೇರೆಯದೇ ಒಳಸತ್ಯ ತಿಳಿಸುತ್ತಿತ್ತು.

ಬ್ರೆಂಡಾಗೆ 13 ವರ್ಷವಾದಾಗ ಖಿನ್ನತೆ ಶುರುವಾಯಿತು. ಆತ್ಮಹತ್ಯೆಯ ಯೋಚನೆ ಪದೇಪದೇ ಬರತೊಡಗಿತು. ಅಗಲ ಭುಜ, ಕಟ್ಟುಮಸ್ತಾದ ಮೈಕಟ್ಟು ಬೆಳೆಯತೊಡಗಿ ಸಹಪಾಠಿಗಳೆಲ್ಲ ‘ಕಾಡುಹೆಣ್ಣು’ ಎಂದು ಲೇವಡಿ ಮಾಡುತ್ತಿದ್ದರು. ಪದೇಪದೇ ಆಸ್ಪತ್ರೆ, ಲೈಂಗಿಕ ಅಂಗಾಂಗಗಳ ಪರೀಕ್ಷೆ, ಶಸ್ತ್ರಚಿಕಿತ್ಸೆ, ಚಿಕಿತ್ಸೆ ಇವೆಲ್ಲದರಿಂದ ಬ್ರೆಂಡಾಳ ಎಳೆಯ ಮನಸು ರೋಸಿಹೋಗಿ ಬಾಲ್ಟಿಮೋರ್ ಆಸ್ಪತ್ರೆಗೆ ಹೋಗುವುದೆಂದರೆ ಹೇವರಿಕೆ, ನಡುಕ ಶುರುವಾಗಿತ್ತು. ಯೋನಿ ರೂಪಿಸುವ ಶಸ್ತ್ರಚಿಕಿತ್ಸೆಗೆ ಬರುವಂತೆ ವೈದ್ಯರ ತಂಡ ಹೇಳಿದಾಗ ಆಸ್ಪತ್ರೆಗೆ ಬರಬೇಕೆಂದು ಒತ್ತಾಯ ಮಾಡಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹುಡುಗಿ ಬೆದರಿಸಿದಳು. ಅಲ್ಲಿಗೆ ರೀಮರ್ ಕುಟುಂಬವು ಜಾನ್ ಮನಿ ತಂಡದ ಬಳಿ ಹೋಗುವುದನ್ನೇ ನಿಲ್ಲಿಸಿಬಿಟ್ಟಿತು.

ಕೊನೆಗೆ 1980ರಲ್ಲಿ ತಾಯ್ತಂದೆಯರು ಬ್ರೆಂಡಾಳಿಗೆ ನಿಜ ಏನೆಂದು ಸವಿಸ್ತಾರವಾಗಿ ಹೇಳಿದರು. ಅವಳು ಅವಳಲ್ಲವೆಂದೂ, ಅವನೆಂದೂ, ಅದಕ್ಕಾಗಿಯೇ ಹಾರ್ಮೋನು ಮಾತ್ರೆ-ಇಂಜೆಕ್ಷನ್ನು-ಶಸ್ತ್ರಚಿಕಿತ್ಸೆ ನಡೆಯಬೇಕಾಯಿತೆಂದೂ ಕಟುಸತ್ಯ ಹೇಳಿಬಿಟ್ಟರು.




ಮರುಪಯಣ - ಡೇವಿಡ್ ಆದ ಬ್ರೆಂಡಾ

ನಿಜ ಅರಿವಾದ ತಕ್ಷಣ ಬ್ರೆಂಡಾಳ ಒಳಗಿದ್ದ ಗಂಡು ಧಿಗ್ಗನೆದ್ದ. ಹಳೆಯ ಎರಡೂ ಹೆಸರು ಬಿಟ್ಟು ಡೇವಿಡ್ ಎಂಬ ಹೊಸ ಹೆಸರಿಟ್ಟುಕೊಂಡ. ತನ್ನೆಲ್ಲ ಮಾನಸಿಕ ಅಲ್ಲೋಲಕಲ್ಲೋಲಗಳ ಮೂಲ ಎಲ್ಲಿದೆಯೆಂದು ತಿಳಿದಿದ್ದೇ, ಹೆಣ್ಣು ಲಕ್ಷಣಕ್ಕೆ ಕಾರಣವಾಗಿದ್ದ ಎಲ್ಲವನ್ನು ಕಿತ್ತುಹಾಕಲು ನಿರ್ಧರಿಸಿದ. ಹೆಣ್ಣು ಹಾರ್ಮೋನುಗಳ ಥೆರಪಿ ನಿಂತು ಹೋಯಿತು. ಎರಡೂ ಕಡೆಯ ಸ್ತನಗಳನ್ನು ಶಸ್ತ್ರಚಿಕಿತ್ಸೆ ಮಾಡಿಸಿ ತೆಗೆದು ಹಾಕಲಾಯಿತು. ವೃಷಣದ ತದ್ರೂಪು ಸೃಷ್ಟಿಸಲು ಯತ್ನಿಸಲಾಯಿತು. ಎರಡು ಶಸ್ತ್ರಚಿಕಿತ್ಸೆಗಳಿಂದ ಶಿಶ್ನ ಭಾಗವನ್ನು ಮರುರೂಪಿಸಲು ಯತ್ನಿಸಲಾಯ್ತು. ಗಂಡಾಗಿ-ಹೆಣ್ಣಾಗಿದ್ದ 22 ವರ್ಷದ ಡೇವಿಡ್ ಈಗ ಮತ್ತೆ ಗಂಡಾಗಲು, ಲಿಂಗತ್ವವನ್ನು ಮರು-ಮರುಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧನಾದ. ‘ಟೆಸ್ಟೋಸ್ಟಿರಾನ್’ ಎಂಬ ಗಂಡು ಹಾರ್ಮೋನಿನ ಇಂಜೆಕ್ಷನ್ ತೆಗೆದುಕೊಳ್ಳತೊಡಗಿದ. ಬರಿಯ ಗಂಡಿನಂತೆ ಕಂಡರೆ ಸಾಲದು, ಗಂಡಿನದೆಂದು ಪರಿಗಣಿಸಲ್ಪಟ್ಟ ಎಲ್ಲವನ್ನು ಅನುಭವಿಸುವೆನೆಂದು ಪಣತೊಟ್ಟ. 25 ವರ್ಷ ಆದಾಗ ತನಗಿಂತ ಹಿರಿಯಳಾಗಿದ್ದ ಜೇನ್ ಮೊಂಟೇನಳನ್ನು ಮದುವೆಯಾದ. ಅವಳ ಮೂರು ಮಕ್ಕಳನ್ನು ದತ್ತು ಪಡೆದ.


ಡೇವಿಡ್ ರೀಮರ್ ಮತ್ತು ಜೇನ್


ಇತ್ತ.. ಬ್ರೂಸನ ಮೇಲೆ ನಡೆದಿದ್ದ ಪ್ರಯೋಗ ಯಶಸ್ವಿಯಾಗಿದ್ದು, ಬಾಲ್ಯದಿಂದಲೇ ಪ್ರಯತ್ನಿಸಿದರೆ ಲಿಂಗತ್ವ ಮರುಹೊಂದಾಣಿಕೆ ಸಾಧ್ಯವೆಂಬ ಜಾನ್ ಮನಿಯ ವರದಿಯಿಂದ ವೈದ್ಯಕೀಯ ಜಗತ್ತು ಬೆಚ್ಚಿಬಿದ್ದಿತ್ತು. ದ್ವಂದ್ವಲಿಂಗಿ ಮಕ್ಕಳು ಮತ್ತು ಕೆಲವು ರೋಗಿಗಳಲ್ಲಿ ಲಿಂಗತ್ವ ಮರುಹೊಂದಾಣಿಕೆ ಮಾಡುವ ಪ್ರಯತ್ನಗಳು ನಡೆಯತೊಡಗಿದವು.

ಆದರೆ 1997ರಲ್ಲಿ ಜಾನ್ ಮನಿಯ ಪ್ರತಿಸ್ಪರ್ಧಿ, ಮನೋರೋಗತಜ್ಞ ಮಿಲ್ಟನ್ ಡೈಮಂಡ್‌ಗೆ ‘ಜಾನ್/ಜೋನ್ ಪ್ರಕರಣ’ದ ಸತ್ಯಾಸತ್ಯತೆ ತಿಳಿಯಿತು. ಕೂಡಲೇ ಡೇವಿಡ್ ರೀಮರ್ ಲೋಕದೆದುರು ಸತ್ಯ ಬಿಚ್ಚಿಡಬೇಕೆಂದು, ಆ ಮೂಲಕ ಇನ್ನಷ್ಟು ತಪ್ಪು ಪ್ರಯೋಗಗಳನ್ನು ನಿಲ್ಲಿಸಬಹುದೆಂದು ಹೇಳಿದ. ರೀಮರ್ ತನ್ನ ಬದುಕಿನ ಕಥೆಯನ್ನು ಎಳೆಎಳೆಯಾಗಿ ಬಿಡಿಸಿ ಓಪ್ರಾ ವಿನ್‌ಫ್ರೇ ಎದುರು ಹೇಳುತ್ತಿದ್ದರೆ ಕೇಳುಗರ ಕಣ್ಣಾಲಿಗಳಲ್ಲಿ ಸಂತಾಪದ ಹೊಳೆ ಹರಿಯಿತು. ತುಂಬು ನೆರಿಗೆಯ ಉಡುಪುಗಳಾಗಲೀ, ಹಾರ್ಮೋನು ಇಂಜೆಕ್ಷನ್ನುಗಳಾಗಲೀ, ಕೃತಕವಾಗಿ ಉಬ್ಬಿಸಿಕೊಂಡ ಸ್ತನಗಳಾಗಲೀ ತಾನು ಹೆಣ್ಣು ಎಂದು ಭಾವಿಸುವಂತೆ ಮಾಡಲಿಲ್ಲ ಎಂಬ ಆಘಾತಕಾರಿ ಸತ್ಯವನ್ನು ಡೇವಿಡ್ ಜಗತ್ತಿನೆದುರು ಬಿಚ್ಚಿಟ್ಟ. ಅವನ ಜೀವನಕಥನ ರೋಚಕ ಕತೆಯಾಯಿತು. ಟಿವಿ ಸರಣಿ ಬಂತು, ಜೀವನ ಚರಿತ್ರೆ ಸಾಕ್ಷ್ಯಚಿತ್ರ, ಸಿನಿಮಾ ಎಲ್ಲ ಬಂದವು. ಜಾನ್ ಮನಿ ಇದು ಸ್ತ್ರೀವಾದಿ ವಿರೋಧಿಗಳ ಕೆಲಸ ಎಂದ, ಟ್ರಾನ್ಸ್‌ಜೆಂಡರ್‌ಗಳ ವಿರುದ್ಧ ಇರುವವರ ಪಿತೂರಿ ಎಂದ. ಆದರೆ ವೈಯಕ್ತಿಕವಾಗಿ ತಪ್ಪು ಪ್ರಯೋಗದ ಹೊಣೆಗಾರನಾಗಿ ಅದಕ್ಕೆ ಬಂದ ಕಟುಟೀಕೆಗಳಿಗೆ ಜರ್ಝರಿತನಾಗಿಹೋದ.

ಹೆಣ್ತನ-ಗಂಡಸುತನ ಬೆಳೆಸಿಕೊಳ್ಳುವ ದೈಹಿಕ, ಮಾನಸಿಕ ತಿಕ್ಕಾಟದಲ್ಲಿ ಡೇವಿಡ್‌ನ ವ್ಯಕ್ತಿತ್ವ ಛಿದ್ರಗೊಂಡಿತ್ತು. ಅವ ಆಸ್ಪತ್ರೆ, ವೈದ್ಯರು, ಔಷಧಿ ಇವೆಲ್ಲದರ ಕುರಿತು ಸಂಪೂರ್ಣ ವಿಶ್ವಾಸ ಕಳೆದುಕೊಂಡ. ಜೀವನ ಪರ್ಯಂತ ತಾಯ್ತಂದೆಯರೊಂದಿಗೆ ಸಂಘರ್ಷಮಯ ಸಂಬಂಧ ಇಟ್ಟುಕೊಂಡ. ಶಿಕ್ಷಣ ಪೂರೈಸಲಾಗದೆ, ಕೆಲಸ ಸಿಗದೆ ನಿರುದ್ಯೋಗಿಯಾದ. ಸಿಝೋಫ್ರೇನಿಯಾದಿಂದ ನರಳುತ್ತಿದ್ದ ಸೋದರ ಬ್ರಿಯಾನ್ ಅತಿಯಾಗಿ ಖಿನ್ನತೆಯ ಔಷಧಿ ಸೇವಿಸಿ ೨೦೦೨ರಲ್ಲಿ ತೀರಿಕೊಂಡರೆ, ಹೆಂಡತಿ ಜೇನ್ ೨೦೦೪ರಲ್ಲಿ ವಿಚ್ಛೇದನ ಪಡೆದಳು. ಅದಾದ ಎರಡೇ ದಿವಸದಲ್ಲಿ ಕಿರಾಣಿ ಅಂಗಡಿಯ ಪಾರ್ಕಿಂಗ್ ಲಾಟಿಗೆ ಕಾರು ನುಗ್ಗಿಸಿದ ಡೇವಿಡ್, ತನ್ನ ತಲೆಗೆ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ.



ಡೇವಿಡ್ ರೀಮರ್

ನಾಲ್ಕು ದಶಕಕಾಲ ಕಾಲ ತಾನು ಹೆಣ್ಣೋ, ಗಂಡೋ ಎಂದು ಅರಿಯುವುದರಲ್ಲಿ, ಅದರಂತೆ ಅಂಗಾಂಗಗಳನ್ನು, ಲೈಂಗಿಕ ಸಾಮರ್ಥ್ಯವನ್ನು ರೂಪುಗೊಳಿಸಿಕೊಳ್ಳುವುದರಲ್ಲಿ, ಹಾಗೆಂದು ಲೋಕಕ್ಕೆ ಸಾಬೀತುಪಡಿಸುವಲ್ಲಿ ಬಲಿಪಶುವಾಗಿ, ಪ್ರಯೋಗಪಶುವಾಗಿ ದೇಹವನ್ನು ಅತಿಗಳಿಗೆ ಒಡ್ಡುವಂತಾದ ಬ್ರೂಸ್ ಬ್ರೆಂಡಾ ಡೇವಿಡ್ ರೀಮರ್‌ನ ಸಂಘರ್ಷಮಯ ಬದುಕು ಹೀಗೆ ದಾರುಣ ಅಂತ್ಯ ಕಂಡಿತು.

ಇಲ್ಲಿ ತಪ್ಪು ಯಾರದು? ಎಳೆಮಗುವಿನ ಶಿಶ್ನ ಸುಟ್ಟು ಹಾಕಿದ ಶಸ್ತ್ರಚಿಕಿತ್ಸಕರದೇ? ಗಂಡನ್ನು ಹೆಣ್ಣು ಮಾಡಲು ಹೋದ ಜಾನ್ ಮನಿಯ ತಂಡದ್ದೇ? ತಮ್ಮ ಮಗುವಿಗೆ ಹೇಗಾದರೂ ಸಹಾಯ ಮಾಡಬೇಕೆಂಬ ಧಾವಂತದಲ್ಲಿ ಅದರ ಹಿತಾಸಕ್ತಿಗೆ ವಿರುದ್ಧವಾಗಿದ್ದ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತ ಹೋದ ಆತಂಕಿತ ಪಾಲಕರದ್ದೇ?

ತಪ್ಪು ಯಾರದಾದರೂ ಆಗಿರಲಿ, ಶಿಕ್ಷೆ ಅನುಭವಿಸಿದ್ದು ಮಾತ್ರ ನಿರಪರಾಧಿ ಎಳೆಯ ಮಗು ಬ್ರೂಸ್. ಒಂದು ದುರಂತ ಕೊನೆಯಲ್ಲದೆ ಬದುಕು ಬೇರೆ ಯಾವ ದಾರಿಯನ್ನು ಅವನಿಗುಳಿಸಿತ್ತು?



***

ಮನುಷ್ಯರ ಕೇಂದ್ರಪ್ರಜ್ಞೆ ಲೈಂಗಿಕತೆ. ಸ್ವಭಾವ, ವ್ಯಕ್ತಿತ್ವ, ಸಂಬಂಧಗಳ ಸ್ವರೂಪ, ಯಶಸ್ಸು, ವಿಫಲತೆ, ಸಂಘರ್ಷ ಇವೆಲ್ಲವನ್ನು ರೂಪಿಸುವಲ್ಲಿ ಲೈಂಗಿಕತೆಯ ಪಾತ್ರ ದೊಡ್ಡದು. ಅದು ಕೇವಲ ಜೈವಿಕ ಕ್ರಿಯೆಯಲ್ಲ. ಕೇವಲ ಮನೋವ್ಯಾಪಾರವೂ ಅಲ್ಲ. ಕಾನೂನಾತ್ಮಕ/ಆರ್ಥಿಕ/ಸಾಮಾಜಿಕ/ಧಾರ್ಮಿಕ/ಆಧ್ಯಾತ್ಮಿಕ/ಸಾಂಸ್ಕೃತಿಕ ವಿಷಯವಷ್ಟೇ ಅಲ್ಲ. ಒಂದು ಪರಿಸರದಲ್ಲಿ ಬೆಳೆಯುವ ಪ್ರತಿಯೊಬ್ಬ ವ್ಯಕ್ತಿ ತನ್ನ ಸುತ್ತಮುತ್ತಣ ವ್ಯಕ್ತಿಗಳೊಡನೆಯ ಸಂಬಂಧ ಕಟ್ಟಿಕೊಳ್ಳುವಾಗ ವ್ಯಕ್ತಿಯ ಲೈಂಗಿಕತೆ ಪ್ರಭಾವ ಬೀರುತ್ತದೆ. ಮನುಷ್ಯನ ಚಿಂತನೆ, ನಂಬಿಕೆ, ಭ್ರಮೆ, ಕನಸು, ಗುಣ, ನಡತೆ ಮುಂತಾದ ಎಲ್ಲದರಲ್ಲೂ ಅದರ ಪ್ರಭಾವವಿದ್ದೇ ಇದೆ. ಆದರೆ ದೇಹದ ನಿಜವನ್ನು ನೈತಿಕ ನಿಜ ಎಂದು ಒಪ್ಪಲು ಸಮಾಜ ಯಾವತ್ತೂ ಸಿದ್ಧವಿರುವುದಿಲ್ಲ. ಸಂತಾನೋತ್ಪತ್ತಿಯಾಚೆಗಿನ ಲೈಂಗಿಕತೆಯ ಅವಶ್ಯಕತೆಯನ್ನು ಗೌರವದಿಂದ ಕಾಣುವುದಿಲ್ಲ.

ಮನೋವಿಜ್ಞಾನಿಗಳಲ್ಲಿದ್ದ ಮುಖ್ಯ ಪ್ರಶ್ನೆ ಲಿಂಗತ್ವ ಹುಟ್ಟಿನಿಂದ ಬರುವುದೋ ಅಥವಾ ಪರಿಸರ-ಸಮಾಜಗಳು ವ್ಯಕ್ತಿಯಲ್ಲಿ ಹೇರುವುದೋ? ಅದು ತೊಡೆ ನಡುವೆ ನಿರ್ಧಾರವಾಗುವುದೋ ಅಥವಾ ಕಿವಿಗಳ ನಡುವೆ ನಿರ್ಧರಿಸಲ್ಪಡುವುದೋ? ಎಂಬುದಾಗಿತ್ತು. ವ್ಯಕ್ತಿತ್ವ ಬೆಳವಣಿಗೆಯಲ್ಲಿ ನಿರ್ಧಾರಕ ಪಾತ್ರ ವಹಿಸುವ ಲಿಂಗತ್ವವನ್ನು ನಮ್ಮಿಷ್ಟದಂತೆ ಬದಲಾಯಿಸಲಾಗದು ಎಂದು; ಪೋಷಣೆಪಾಲನೆಗಿಂದ ಪ್ರಕೃತಿಯೇ ಹೆಚ್ಚು ಲಿಂಗತ್ವ ನಿರ್ಧಾರಕ ಎನ್ನುವುದನ್ನು ರೀಮರ್ ಪ್ರಕರಣ ಎತ್ತಿ ತೋರಿಸಿತು. ಅವನ ಬದುಕಿನ ಕಥೆ ಲಿಂಗತ್ವವೆಂಬ ಸೂಕ್ಷ್ಮ ವಿಷಯ ಕುರಿತು, ಬಯಕೆ-ಲಿಂಗತ್ವ-ನಡವಳಿಕೆಗಳ ಸಹಜತೆ ಕುರಿತು ಲೋಕದ ಕಣ್ಣು ತೆರೆಸಿತು. ಅಷ್ಟೇ ಅಲ್ಲ, ಮನೋವೈದ್ಯಲೋಕಕ್ಕೂ ಹಲವು ಪಾಠಗಳನ್ನು ಕಲಿಸಿತು.

ಮಾತನಾಡಬಾರದ, ಮುಚ್ಚಿಟ್ಟ, ಮಡಿ ವಿಷಯವೊಂದರ ಕುರಿತು ಲಿಂಗತ್ವ ಅಲ್ಪಸಂಖ್ಯಾತ ಬಂಧುಗಳ ದೆಸೆಯಿಂದ ಈಗಷ್ಟೇ ಮಾತನಾಡತೊಡಗಿದ್ದೇವೆ. ಒಂದಲ್ಲಾ ಒಂದು ದಿನ, ಸಭ್ಯತೆ-ನಾಗರಿಕತೆ ಎಂಬಿತ್ಯಾದಿ ಕಟ್ಟುಕತೆಗಳ ಆಚೆ ಸರಿಸಿ ಮನುಷ್ಯರು ಕೇವಲ ಮನುಷ್ಯರಂತೆ ಬದುಕಲು ಸಾಧ್ಯವಾಗುವ ದಿನಗಳು ಬಂದಾವೆಂದು ಹಾರೈಸಬಹುದು ಅಷ್ಟೆ.








Saturday, 29 September 2018

ಗಾಂಧಿ ಚಿಂತನೆ: ಋಣಭಾರ





Image result for gandhi at iisc




ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿ ‘ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್’ (ಓIಖಈ) ಇತ್ತೀಚೆಗೆ ಬಿಡುಗಡೆಯಾಯಿತು. ಅಲ್ಲಿ ಪರಿಗಣಿಸಲ್ಪಟ್ಟ ೪೦೦೦ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಮೊದಲ ಸ್ಥಾನದಲ್ಲಿದೆ. (ದೆಹಲಿಯ ಜೆಎನ್ಯು ಎರಡನೆಯ ಸ್ಥಾನ, ಬನಾರಸ್ ಹಿಂದೂ ವಿವಿ ಮೂರನೆಯ ಸ್ಥಾನ, ಅಣ್ಣಾ ವಿವಿ ಚೆನ್ನೈ ನಾಲ್ಕನೆಯ ಸ್ಥಾನ, ಕರ್ನಾಟಕದ ಕುವೆಂಪು ವಿವಿ ೭೮ನೇ ಸ್ಥಾನ, ಮೈಸೂರು ವಿವಿ ೧೨೬ ಹಾಗೂ ವಿಟಿಯು ೧೪೮ನೇ ಸ್ಥಾನದಲ್ಲಿವೆ.)

ಅಮೆರಿಕ ಮತ್ತು ಚೀನಾ ನಂತರ ವಿಶ್ವದ ಮೂರನೇ ಅತಿ ದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆ ಭಾರತದಲ್ಲಿದೆ. ಸ್ವತಂತ್ರ ಬಂದ ತರುವಾಯ ೧೯೫೦-೫೧ರ ವೇಳೆಗೆ ಭಾರತದಲ್ಲಿ ೩೦ ವಿಶ್ವವಿದ್ಯಾಲಯಗಳು ಮತ್ತು ೬೯೫ ಕಾಲೇಜುಗಳಿದ್ದರೆ, ೨೦೧೩-೧೪ರ ವೇಳೆಗೆ ೭೦೦ ವಿಶ್ವವಿದ್ಯಾಲಯಗಳು, ೩೫,೫೩೯ ಕಾಲೇಜುಗಳು ಭಾರತದಲ್ಲಿವೆ. ಇದರಲ್ಲಿ ೭೩% ಕಾಲೇಜು, ೪೦% ವಿಶ್ವವಿದ್ಯಾಲಯಗಳು ಖಾಸಗಿ ವಲಯದ್ದು. ಶಿಕ್ಷಣಸಂಸ್ಥೆಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತ ಈಗ ಇನ್ನೂ ಹೆಚ್ಚಾಗಿರಬಹುದು. ಆದರೂ ಜನಸಂಖ್ಯಾ ಏರಿಕೆಯ ಪ್ರಮಾಣಕ್ಕೆ ಇದು ತುಂಬ ಕಡಿಮೆಯೇ.

ಭಾರತ ಎಂಥ ವೈರುಧ್ಯಗಳ ದೇಶ ನೋಡಿ: ಒಂದೆಡೆ ಹಣ-ಸಂಪನ್ಮೂಲ-ಬದ್ಧತೆಯ ಕೊರತೆಯಿಂದ ಮೂಲಭೂತ ಶಿಕ್ಷಣ ಒದಗಿಸುವುದು ಅಸಾಧ್ಯವಾಗಿದ್ದರೆ, ಮತ್ತೊಂದೆಡೆ ಯುಜಿಸಿ, ಎಂಎಚ್‌ಆರ್‌ಡಿಗಳು ಉನ್ನತ ಶಿಕ್ಷಣಕ್ಕಾಗಿ ಕೋಟ್ಯಂತರ ಹಣ ವ್ಯಯಿಸುತ್ತಿದ್ದರೂ ಗುಣಮಟ್ಟದ ಶಿಕ್ಷಣ-ಸಂಶೋಧನೆ ಸಾಧ್ಯವಾಗದೇ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವುದು ಕಷ್ಟವಾಗಿದೆ. ಒಂದೆಡೆ ಸಾಕಷ್ಟು ಸಂಖ್ಯೆಯ ಅರ್ಹ ಯುವಜನತೆ ವಿಶ್ವವಿದ್ಯಾಲಯಗಳಲ್ಲಿ ಉದ್ಯೋಗಾವಕಾಶ ಇಲ್ಲದೇ ನಿರುದ್ಯೋಗ ಎದುರಿಸುತ್ತಿದ್ದರೆ ಮತ್ತೊಂದೆಡೆ ವಿಶ್ವವಿದ್ಯಾಲಯಗಳು ತೀವ್ರವಾಗಿ ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಉನ್ನತ ಶಿಕ್ಷಣದ ವೆಚ್ಚ ಏರುತ್ತಿದ್ದು ಎಷ್ಟೋ ಆಸಕ್ತ ತರುಣ ಜನತೆಗೆ ಅದಿನ್ನೂ ನಿಲುಕದ ನಕ್ಷತ್ರವಾಗತೊಡಗಿದೆ. ಜಾತಿ, ಧರ್ಮ, ಭಾಷೆ, ಪ್ರಾಂತೀಯತೆ ಮೊದಲಾಗಿ ಮನುಷ್ಯ ಪ್ರಜ್ಞೆಯನ್ನು ಸಂಕುಚಿತಗೊಳಿಸುವ ವಿಷಯಗಳು ವಿಶ್ವವಿದ್ಯಾಲಯಗಳನ್ನು ಆಳುತ್ತ ನಿಜವಾದ ಅರ್ಥದಲ್ಲಿ ವ್ಯಕ್ತಿತ್ವ ವಿಕಸನಗೊಳ್ಳುವುದು ಕಷ್ಟವಾಗಿದೆ. ಅಕ್ಷರವಂತರ ಸಂಖ್ಯೆ ಏರುತ್ತಲೇ ಇದ್ದರೂ ಸಾಮಾಜಿಕ ಅನಿಷ್ಟಗಳು ಇಳಿಮುಖವಾಗಿಲ್ಲದಿರುವುದು; ಮೌಢ್ಯ, ದೌರ್ಜನ್ಯಗಳು ಸಂಭವಿಸುತ್ತಲೇ ಇರುವುದು ಮತ್ತು ಅದರಲ್ಲಿ ಅಕ್ಷರವಂತರೂ ಪಾಲುದಾರರಾಗಿರುವುದು ವಿಷಾದಕರವಾಗಿದೆ.

ಇದೇಕೆ ಹೀಗಾಗಿದೆ? ಮೊದಲೆಲ್ಲ ಶಿಕ್ಷಣವೇ ಎಲ್ಲ ಸಾಮಾಜಿಕ ಕಾಯಿಲೆಗಳಿಗೂ ಮದ್ದು ಎಂದು ಭಾವಿಸಿದ್ದೆವು. ಈಗ ಸಾಕ್ಷರತೆ ಹೆಚ್ಚುತ್ತಿದ್ದರೂ ಸಾಮಾಜಿಕ ಸಮಸ್ಯೆಗಳೂ ಹೆಚ್ಚುತ್ತ ಹೋಗಿರುವುದೇಕೆ? ಆಧುನಿಕ ಶಿಕ್ಷಣ ಸಮಾಜಮುಖಿ ಮೌಲ್ಯವ್ಯವಸ್ಥೆ ರೂಪಿಸಲು ವಿಫಲವಾಗುತ್ತಿದೆಯೆ? ಈ ಪ್ರಶ್ನೆಗೆ ಉತ್ತರ ಬಯಸುವುದಾದರೆ ಆಧುನಿಕ ಶಿಕ್ಷಣ ಪದ್ಧತಿಯನ್ನು ಅನುಮಾನದಿಂದ ನೋಡುತ್ತಿದ್ದ ಗಾಂಧಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್-ಐಐಎಸ್‌ಸಿ)ಗೆ ಭೇಟಿಕೊಟ್ಟಾಗ ವ್ಯಕ್ತಪಡಿಸಿದ ಅಭಿಪ್ರಾಯ ಗಮನಿಸುವಂತಿದೆ.

ಭಾರತದ ಅತ್ಯುಚ್ಛ ಸಂಶೋಧನಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ಗೆ ೧೯೨೭ರಲ್ಲಿ ಬಂದಿದ್ದ ಗಾಂಧಿ ಅಲ್ಲಿನ ವಿಭಾಗಗಳ ಪರಿಚಯ ಮಾಡಿಕೊಂಡರು. ಮೌನವಾಗಿದ್ದ ಅವರ ಭಾವನೆಗಳೇನೆಂಬುದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದಾಗ ಸ್ಪಷ್ಟವಾಗಿತ್ತು.


‘ನಾನೆಲ್ಲಿಗೆ ಬಂದಿದ್ದೇನೆಂದು ಅಚ್ಚರಿಯಾಗುತ್ತಿದೆ. ನನ್ನಂತಹ ಹಳ್ಳಿಗನಿಗೆ ಇದು ಸರಿಯಾದ ಸ್ಥಳವಲ್ಲ. ನಾನು ಮಾತಿಲ್ಲದ ಬೆರಗಿನಿಂದ ನಿಲ್ಲಬೇಕಷ್ಟೇ. ನಾನು ಹೇಳಬೇಕೆಂದಿರುವುದಿಷ್ಟೇ; ನೀವಿಲ್ಲಿ ನೋಡುತ್ತಿರುವ ಬೃಹತ್ ಪ್ರಯೋಗಾಲಯಗಳು ಮತ್ತು ಅವುಗಳ ಉಪಕರಣಗಳು ಮಿಲಿಯಗಟ್ಟಲೆ ಜನರ ಶ್ರಮದ ಹಣದ ಫಲ. ಈ ಸಂಸ್ಥೆ ಕಟ್ಟಲು ನೀಡಲ್ಪಟ್ಟ ಟಾಟಾರ ಮೂವತ್ತು ಲಕ್ಷ ರೂಪಾಯಿಗಳಾಗಲೀ ಅಥವಾ ಮೈಸೂರು ಸರ್ಕಾರದ ಧನಸಹಾಯವಾಗಲೀ ಎಲ್ಲಿಂದಲೋ ಬಂದದ್ದಲ್ಲ. ಈ ದರಿದ್ರ ನಾಡಿನ ಜನರ ಶ್ರಮದಿಂದಲೇ ಬಂದದ್ದು.

ಹಳ್ಳಿಯ ಜನರನ್ನು ನಾವೇನಾದರೂ ಭೇಟಿಯಾಗಿ ನೀವು ಬೆವರು ಹರಿಸಿ ದುಡಿದುಕೊಟ್ಟ ಹಣವನ್ನು ಈ ಕಟ್ಟಡ ಮತ್ತು ಪ್ರಯೋಗಾಲಯಗಳ ನಿರ್ಮಾಣಕ್ಕಾಗಿ ಉಪಯೋಗಿಸುತ್ತೇವೆ, ಅವುಗಳಿಂದ ಮುಂದಿನ ತಲೆಮಾರಿಗೆ ಉಪಯೋಗವಾಗುತ್ತದೆ ಎಂದು ಹೇಳಿದರೆ ಅವರಿಗೆ ಅರ್ಥವಾದೀತೇ? ಅವರು ಬೆನ್ನು ತಿರುಗಿಸಿ ಹೊರಟುಹೋಗುತ್ತಾರೆ ಅಷ್ಟೇ. ನಾವೆಂದೂ ಹಳ್ಳಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ.

... ಈ ಪ್ರಯೋಗಾಲಯಗಳಲ್ಲಿ ಉಪಯೋಗಿಸುವ ರಾಸಾಯನಿಕ ವಸ್ತುಗಳನ್ನು ಪರಿಶೋಧಿಸಲು ವರ್ಷಾನುಗಟ್ಟಲೆ ಬೇಕೆಂದು ನಿಮ್ಮ ಪ್ರೊಫೆಸರರರು ನನಗೆ ಹೇಳಿದರು. ಆದರೆ ನಮ್ಮ ಹಳ್ಳಿಗಳನ್ನು ಪರಿಶೋಧಿಸುವವರು ಯಾರು? ನಿಮ್ಮ ಪ್ರಯೋಗಾಲಯಗಳಲ್ಲಿ ಇಪ್ಪತ್ನಾಲ್ಕು ಗಂಟೆಗಳೂ ಸಂಶೋಧನೆ ನಿರಂತರವಾಗಿ ನಡೆಯುತ್ತಿರುವಂತೆ ನಿಮ್ಮ ಹೃದಯದ ಒಂದು ಮೂಲೆಯಲ್ಲಿ ಮಿಲಿಯಗಟ್ಟಲೇ ಬಡಜನರ ಅಭಿವೃದ್ಧಿಯ ಸಂಗತಿ ಬಿಸಿಯಾಗಿರಲಿ. ‘ನಮ್ಮ ಕೈಲಾದ್ದನ್ನು ಮಾಡಿದ್ದೇವೆ, ಬನ್ನಿ ಇನ್ನು ಬಿಲಿಯರ್ಡ್ಸ್ ಮತ್ತು ಟೆನ್ನಿಸ್ ಆಡೋಣ’ ಎನ್ನುವ ಧೋರಣೆ ಬೇಡ. ಕ್ರೀಡಾಂಗಣದಲ್ಲಿ ಕೂಡ ನಿಮ್ಮನ್ನು ಋಣದ ಭಾರ ಕಾಡುತ್ತಿರಬೇಕು. ನಿಮ್ಮೆಲ್ಲರ ಸಂಶೋಧನೆಗಳ ಅಂತಿಮ ಗುರಿ ಬಡವರ ಉದ್ಧಾರವಾಗಿರಬೇಕು. ಇಲ್ಲದಿದ್ದರೆ ನಿಮ್ಮ ಪ್ರಯೋಗಾಲಯಗಳಿಗೂ ಸೈತಾನನ ಕಾರ್ಯಾಗಾರಗಳಿಗೂ ಯಾವ ವ್ಯತ್ಯಾಸವೂ ಇರುವುದಿಲ್ಲ.’

ಹೀಗೆ ಹೇಳಿದ ಗಾಂಧಿ ವಿಜ್ಞಾನ ವಿರೋಧಿಯಾಗಿರಲಿಲ್ಲ. ಸಮಾಜ-ವಿಜ್ಞಾನ ಜ್ಞಾನಶಿಸ್ತುಗಳು ಪರಸ್ಪರ ಪೂರಕವಾಗಿರಬೇಕು; ವಿಜ್ಞಾನಿ ಸಮಾಜದ ಸಂಕಷ್ಟಗಳ ಅರಿವಿನಲ್ಲಿ ಸಂಶೋಧನೆ ನಡೆಸಬೇಕು ಎನ್ನುವುದು ಅವರ ಇಂಗಿತವಾಗಿತ್ತು. ‘ಪ್ರತಿ ಮನುಷ್ಯನೊಳಗು ಒಳ್ಳೆಯತನ ಬೆಳೆಸುವುದೇ ಶಿಕ್ಷಣ. ಒಳ್ಳೆಯತನವೆಂದರೆ ತನ್ನ ಸುತ್ತಮುತ್ತಲ ಬಗೆಗೆ ಅರಿವಿಟ್ಟುಕೊಂಡು ಸ್ಪಂದಿಸುವುದು. ಒಳ್ಳೆಯ ರಾಜಕೀಯ ವ್ಯವಸ್ಥೆ ಬರಬೇಕಾದರೆ ಸಮಾಜದ ಪ್ರತಿ ಮನುಷ್ಯನಲ್ಲಿ ಒಳ್ಳೆಯತನ ಬೆಳೆಯಬೇಕು’ ಎಂದು ಗಾಂಧಿ ಭಾವಿಸಿದ್ದರು.

೧೯೩೬ರಲ್ಲಿ ವೈದ್ಯರ ಸಲಹೆಯಂತೆ ಸಂಪೂರ್ಣ ವಿಶ್ರಾಂತಿ ಪಡೆಯಲು ಗಾಂಧಿ ಬೆಂಗಳೂರು ಬಳಿಯ ನಂದಿ ಹಿಲ್ಸ್‌ಗೆ ಬಂದಿದ್ದರು. ಗಾಂಧಿ ಅಭಿಮಾನಿಯೂ, ಸಂಸ್ಥೆಯ ನಿರ್ದೇಶಕರೂ ಆಗಿದ್ದ ಸಿ. ವಿ. ರಾಮನ್ ತಮ್ಮ ಹೆಂಡತಿ ಲೋಕಸುಂದರಿ ಅವರೊಡನೆ ಗಾಂಧೀಜಿಯವರನ್ನು ಭೇಟಿಯಾಗಿ ಐಐಎಸ್ಸಿಗೆ ಬರುವಂತೆ ಆಹ್ವಾನಿಸಿದರು. ತಮ್ಮ ಎರಡನೆಯ ಭೇಟಿಯಲ್ಲಿ ಗಾಂಧಿ ಯುವವಿಜ್ಞಾನಿಗಳ ಬಳಿ ಮಾತನಾಡುತ್ತ ತಂತ್ರಜ್ಞಾನದ ಬಗೆಗೆ ತಮ್ಮ ಭಿನ್ನಾಭಿಪ್ರಾಯ ತಿಳಿಸಿದ್ದರು. ಅವರು ವಿಜ್ಞಾನವನ್ನು ಒಪ್ಪಿದರೂ ತಂತ್ರಜ್ಞಾನ ಮತ್ತು ಉಪಕರಣಗಳು ಮನುಷ್ಯರ ಕೆಲಸ ಕದಿಯುತ್ತವೆ ಎಂದೇ ಭಾವಿಸಿದ್ದರು. ಗಾಂಧಿಯ ತಂತ್ರಜ್ಞಾನ ವಿರೋಧ ಮತ್ತು ಅಹಿಂಸಾ ತತ್ವದ ಬಗೆಗೆ ಸಿ. ವಿ. ರಾಮನ್ ಭಿನ್ನಮತ ಹೊಂದಿದ್ದರೂ, ಗಾಂಧಿತತ್ವಗಳ ಬಗೆಗೆ ಅಪಾರ ಗೌರವ ಹೊಂದಿದ್ದರು. ಎಂದೇ ಯುವ ವಿಜ್ಞಾನಿಗಳಿಗೆ ಕಿವಿಮಾತು ಹೇಳಲು ಅವರನ್ನು ಕರೆತಂದಿದ್ದರು.

Image result for gandhi at iisc

***

‘ಸಾಮ್ರಾಜ್ಯಶಾಹಿ ವಂಚಕನ ಅಗತ್ಯಗಳಿಗಿಂತ ಹೆಚ್ಚು ಹಳ್ಳಿಗರ ಅಗತ್ಯಗಳಿಗೆ ತಕ್ಕಂತೆ ವಿದ್ಯೆಯನ್ನು ಕ್ರಾಂತಿಕಾರಕಗೊಳಿಸಬೇಕು. ಬಡವರು, ಅಂಚಿನಲ್ಲಿರುವವರ ಸಮಸ್ಯೆ ವಿಜ್ಞಾನ ಸಂಶೋಧನೆಯ ಕೇಂದ್ರಬಿಂದುವಾಗಿರಬೇಕು’ ಎಂದು ಗಾಂಧಿ ಕನಸು ಕಂಡಿದ್ದರು. ಆದರೆ ತಾರತಮ್ಯವನ್ನೇ ಉಸಿರಾಡುವ ಭಾರತೀಯ ಸಮಾಜದ ಶಿಕ್ಷಣವ್ಯವಸ್ಥೆ ತಾರತಮ್ಯದ ಬುನಾದಿ ಮೇಲೇ ನಿಂತಿರುವುದರಿಂದ ಶಿಕ್ಷಣ ವ್ಯವಸ್ಥೆ ಕುರಿತ ಗಾಂಧೀಜಿ ಕನಸು ಇವತ್ತು ಹೇಗೆ ಹುಸಿ ಹೋಗಿದೆ ಎನ್ನುವುದು ನಮ್ಮ ಕಣ್ಣ ಮುಂದಿದೆ.

ಗಾಂಧಿ ಹುಟ್ಟಿ ಒಂದೂವರೆ ಶತಮಾನ ಸಂದ ಈ ಸಂದರ್ಭದಲ್ಲಿ ಅವರೆತ್ತಿದ ಋಣಭಾರದ ಪ್ರಶ್ನೆಯನ್ನು ಆಳವಾಗಿ ಪರಿಗಣಿಸಬೇಕಾಗಿದೆ. ದೇಶದ ಸಂಪನ್ಮೂಲವನ್ನು ಇಡಿಯ ಜನತೆಗೆ ಹಂಚಿದಾಗ ಬರುವ ನಮ್ಮ ತಲಾವಾರು ಪಾಲಿಗಿಂತ ಹೆಚ್ಚು ಪಾಲು ಸಂಪತ್ತನ್ನು ನಾವು ಅನುಭವಿಸುತ್ತಿದ್ದರೆ ಅದು ಋಣಭಾರ. ಸದಾ ಈ ಋಣಭಾರದ ನೆನಪಿಟ್ಟುಕೊಳ್ಳುವುದು ಅವಶ್ಯವಾಗಿದೆ. ಇದು ಎಲ್ಲರೂ ಹಾದುಹೋಗಬೇಕಾದ ಒಳಗಣ ಅಗ್ನಿಪರೀಕ್ಷೆ. ಪ್ರತಿ ವಿದ್ಯಾರ್ಥಿಯೂ ‘ನನ್ನ ಮೇಲೆ ಸರ್ಕಾರ ಇಷ್ಟು ಖರ್ಚು ಮಾಡುವಾಗ ಯಾವ ಬೆಲೆ ತೆತ್ತು, ಯಾರ ಬೆಲೆ ತೆತ್ತು ನಾನಿಲ್ಲಿ ಇರುವೆ’ನೆಂದು ಕೇಳಿಕೊಳ್ಳಬೇಕು. ಪಡೆಯುವವರೆಗೆ ಶಿಕ್ಷಣ ನಮ್ಮ ಮೂಲಭೂತ ಹಕ್ಕು. ಪಡೆದ ನಂತರ ಜನಹಿತಕಾರಿಯಾಗಬೇಕಾದದ್ದು ವಿದ್ಯಾವಂತರ ಜವಾಬ್ದಾರಿ. ಒಬ್ಬ ವಿದ್ಯಾರ್ಥಿ ಎಂಬಿಬಿಎಸ್ ಮುಗಿಸಿ ಹೊರಬರಲು ಬಡವರ ಭಾರತ ಸರ್ಕಾರ ೩೦ ಲಕ್ಷ ರೂಪಾಯಿಗಳನ್ನು ಮೂಲಸೌಕರ್ಯ, ಸಿಬ್ಬಂದಿ ವೇತನ ವಗೈರೆಗಳಿಗೆ ಖರ್ಚು ಮಾಡುತ್ತದೆ. ಅದರಿಂದ ಈ ದೇಶಕ್ಕೇನು ಉಪಯೋಗವಿದೆ? ಎಂಬಿಬಿಎಸ್ ಇರಲಿ, ಕನಿಷ್ಠ ಆರೋಗ್ಯ ಸೇವೆಯೂ ದೊರಕದ ಕೋಟ್ಯಂತರ ಬಡವರ ಈ ದೇಶದಲ್ಲಿ ಒಬ್ಬ ವಿದ್ಯಾರ್ಥಿ ಡಾಕ್ಟರ್ ಆಗುವುದೆಂದರೆ ಆರೋಗ್ಯ ವಂಚಿತರಿಗೆ ಸೌಲಭ್ಯ ಒದಗಿಸಲೇಬೇಕಾದ ಜವಾಬ್ದಾರಿ ಹೊತ್ತುಕೊಳ್ಳುವುದಾಗಿದೆ.

ಈ ಹಿನ್ನೆಲೆಯಲ್ಲಿ ‘ವಿಶ್ವವಿದ್ಯಾಲಯ ಶಿಕ್ಷಣದ ನಿಜವಾದ ಗುರಿ ದೇಶದ ಸ್ವಾತಂತ್ರ್ಯಕ್ಕಾಗಿ ಸಾವು-ಬದುಕು ಎರಡಕ್ಕೂ ಸಿದ್ಧವಾಗಿರುವ ಸೇವಕರನ್ನು ರೂಪಿಸುವುದು’ ಎಂದ ಗಾಂಧಿಯ ಮಾತು ಉನ್ನತ ಶಿಕ್ಷಣ ಪಡೆದಿರುವ ನಾವೆಲ್ಲ ನೆನಪಿಡಬೇಕಾದ ಎಚ್ಚರದ ಮಾತು. ಉಚ್ಛಶಿಕ್ಷಣ ಪಡೆದವರೆಲ್ಲ ಅಂಥ ಬದ್ಧತೆಯ ಜನಸೇವಕರಾದ ದಿನ ಮಲದ ಗುಂಡಿಯಲ್ಲಿ ಪೌರಕಾರ್ಮಿಕರು ಸಾವನ್ನಪ್ಪುವುದು; ಬಿಲಗಳಂತಹ ಕಲ್ಲಿದ್ದಲು ಗಣಿಗಳಲ್ಲಿ ಬಾಲಕಾರ್ಮಿಕರು ಉಸಿರುಗಟ್ಟಿ ಸಾಯುವುದು, ಅಪೌಷ್ಟಿಕತೆಯಿಂದ ತಾಯಿ-ಹಸುಗೂಸುಗಳು ಮರಣಹೊಂದುವುದನ್ನು ತಡೆಯಬಹುದಾಗಿದೆ.

ಅಂತರಾತ್ಮನ ಸಂಶೋಧನೆ ಎಂದರೆ ಇದೇ. ದೇಶಭಕ್ತಿ ಎಂದರೂ ಇದೇ. ಗಾಂಧೀಜಿ ನೆನಪಿನಲ್ಲಿ ನಾವೆಲ್ಲ ತೋರಿಸಬೇಕಿರುವ ದೇಶಭಕ್ತಿಯ ಅಸಲಿಯತ್ತು ಇದೇ ಆಗಿದೆ.


Wednesday, 12 September 2018

`ಪ್ರೀತಿಯ ನಲವತ್ತು ನಿಯಮಗಳು’ - ಎಲ್ಲೋ ಜೋಗಪ್ಪ ನಿನ್ನರಮನೆ..?






ಫ್ರಾನ್ಸ್ ಸಂಜಾತೆ ಟರ್ಕಿಶ್ ಲೇಖಕಿ ಎಲಿಫ್ ಶಫಾಕ್ ಬರೆದ ಕಾದಂಬರಿ ‘ಫಾರ್ಟಿ ರೂಲ್ಸ್ ಆಫ್ ಲವ್’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಸ್ಟ್ ಸೆಲ್ಲರ್ ಎನಿಸಿಕೊಂಡಿದೆ. ಅದನ್ನು ಕನ್ನಡದ ಹಿರಿಯ ಕವಿ ಮಮತಾ ಸಾಗರ್ ‘ಪ್ರೀತಿಯ ನಲವತ್ತು ನಿಯಮಗಳು’ ಎಂದು ಕನ್ನಡಕ್ಕೆ ತಂದಿದ್ದಾರೆ. ಪುರಾತನ ತತ್ವಶಾಸ್ತ್ರದಲ್ಲಿ ಉಲ್ಲೇಖಿಸಲ್ಪಟ್ಟ ಪ್ರೀತಿಯ ನಲವತ್ತು ನಿಯಮಗಳನ್ನು ಈ ಕಾದಂಬರಿ ಎರಡು ಬದುಕುಗಳ ಪರಿವರ್ತನೆಯ ಕಥನದ ಮೂಲಕ ಸಾದರಪಡಿಸುತ್ತದೆ. ‘ಪ್ರತಿಯೊಬ್ಬರಲ್ಲೂ ಪ್ರೇಮವಿದೆ; ಮತಧರ್ಮಗಳಾಚೆ ಪ್ರೇಮವೇ ಮನುಷ್ಯರನ್ನು ಬೆಸೆಯುತ್ತದೆ; ಪ್ರೇಮವೇ ದೇವರು-ಧರ್ಮವಾಗಿದೆ; ಮತ್ತೆಲ್ಲಿ ಕಾಣದಿದ್ದರೂ ಪ್ರೇಮಿಯ ಹೃದಯಲ್ಲಿ ದೇವರನ್ನು ಕಾಣಬಹುದಾಗಿದೆ’ ಎಂದು ಪ್ರೀತಿಯ ನಿಯಮಗಳು ಪ್ರತಿಪಾದಿಸುತ್ತವೆ.

ಇಂದು ಬರಗಾಲ ಇರುವುದು ಹೌದಾದಲ್ಲಿ ಅದು ನೀರಿಗಾಗಿ ಅಲ್ಲ, ಅನ್ನಕ್ಕಾಗಿ, ನೆಲಕ್ಕಾಗಿ, ಹಣಕ್ಕಾಗಿ ಅಲ್ಲ. ಒಂದು ಬೊಗಸೆ ಪ್ರೀತಿಗಾಗಿ ಬರಗಾಲವಿದೆ. ಹೌದು. ಒಂದು ಹಿಡಿ ನಿರ್ದುಷ್ಟ, ನಿಷ್ಕಾರಣ, ನಿಷ್ಕಳಂಕ ಪ್ರೇಮಕ್ಕೆ ವಿಶ್ವದೆಲ್ಲೆಡೆ ಹಾಹಾಕಾರ ಇದೆ. ಜನರ ಭಾವುಕ ಅಗತ್ಯಗಳನ್ನು ಪೂರೈಸಲೆಂದೇ ಹುಟ್ಟಿಕೊಂಡ ಮತಧರ್ಮಗಳು ಜನರನ್ನು ಬೆಸೆಯುವ ಬದಲು ಅವರ ನಡುವಿನ ಗೋಡೆ, ಕಂದಕಗಳಾಗಿರುವುದು; ಕೌಟುಂಬಿಕ ಸಂಬಂಧದ ಮಾಧುರ್ಯವನ್ನು ಜವಾಬ್ದಾರಿ-ನಿರೀಕ್ಷೆಗಳು ಹೊಸಕಿ ಹಾಕಿರುವುದು ಇದಕ್ಕೆ ಕಾರಣ. ಎಂದೇ ಪ್ರೇಮದ ನಿಯಮಗಳನ್ನು ತಿಳಿಯಪಡಿಸುವ ಈ ಕಾದಂಬರಿಯ ಪ್ರಸ್ತುತತೆ ಇವತ್ತು ಹೆಚ್ಚಿದೆ.

‘ಪ್ರೀತಿಯ ನಲವತ್ತು ನಿಯಮಗಳು’ ಪುಸ್ತಕದಲ್ಲಿ ಒಂದರೊಳಗೊಂದು ಎರಡು ಕಾದಂಬರಿಗಳು ಹೆಣೆದುಕೊಂಡಿವೆ. ೨೧ನೇ ಶತಮಾನದ ಯೆಲ್ಲಾ ಎಂಬ ಗೃಹಿಣಿಯ ಕತೆಯೂ, 13ನೇ ಶತಮಾನದ ಪ್ರಖ್ಯಾತ ಇಸ್ಲಾಮಿಕ್ ಚಿಂತಕ ಜಲಾಲುದ್ದೀನ್ ರೂಮಿಯು ಸೂಫಿ ಕವಿಯಾದ ಬಗೆಗೂ ಕಾದಂಬರಿ ಹೇಳುತ್ತದೆ. ಎರಡೂ ಕಥಾನಕದ ಸುರುಳಿಗಳು ಒಂದಾದಮೇಲೊಂದು ಅನಾವರಣಗೊಳ್ಳುತ್ತ ಕೊನೆಗೆ ೧೩ನೇ ಶತಮಾನದ ರೂಮಿಯ ಪ್ರೇಮ ಸಂಬಂಧ ೨೧ನೇ ಶತಮಾನದ ಯೂರೋಪಿನ ಯೆಲ್ಲಾ ಎಂಬ ಗೃಹಿಣಿಯ ಬದುಕಿನ ತನಕ ಸಾತತ್ಯವನ್ನು ಪಡೆಯುತ್ತದೆ. ಅಷ್ಟೇ ಏಕೆ ಓದುವ ಪ್ರತಿಯೊಂದು ಮನಸಿನೊಳಗೂ ಒಂದು ದಿವ್ಯಪ್ರೇಮದ ಹಂಬಲವನ್ನು ಸೃಷ್ಟಿಸುತ್ತದೆ.


ಕಾದಂಬರಿಯ ಆರಂಭಿಕ ಕಥಾ ಹಂದರ ಯೆಲ್ಲಾಳದು. ನಲವತ್ತರಂಚು ತಲುಪಿದ, ಮಸಾಚುಸೆಟ್ಸ್‌ನಲ್ಲಿ ದಂತವೈದ್ಯನ ಹೆಂಡತಿಯಾಗಿ ಮೂರು ಮಕ್ಕಳ ತಾಯಾಗಿರುವ, ಆಸ್ತಿ-ಅಂತಸ್ತು ವಗೈರೆ ಸಮಾಜದ ಕಣ್ಣಿನಲ್ಲಿ ಸಂತೃಪ್ತ ಕುಟುಂಬಕ್ಕೆ ಬೇಕಾಗಿರುವ ಎಲ್ಲವನ್ನೂ ಪಡೆದ ಗೃಹಿಣಿ ಯೆಲ್ಲಾ ರೂಬೆನ್‌ಸ್ಟೈನ್. ‘ಕಲಿನರಿ ಆರ್ಟ್ ಮೇಡ್ ಈಸಿ’, ‘ಫ್ಯುಷನ್ ಕುಕಿಂಗ್ ಕ್ಲಾಸಿ’ನ ಪಾಠಗಳಂತೆ ಹೊಸಹೊಸ ಅಡುಗೆ ತಯಾರಿಸಿ, ಮೇಜಿನ ಮೇಲೆ ಕಲಾತ್ಮಕವಾಗಿ ಊಟ ಜೋಡಿಸುವುದರಲ್ಲಿಯೇ ತನ್ನ ಕ್ರಿಯಾಶೀಲತೆಯನ್ನು ಸಂತೃಪ್ತಗೊಳಿಸಿಕೊಳ್ಳುತ್ತಿದ್ದ ಗೃಹಿಣಿ ಅವಳು. ಆದರೆ ನಲವತ್ತರ ಹೊತ್ತಿಗೆ ಬದುಕು ನಿಂತ ನೀರಹಾಗೆ. ಎಲ್ಲ ನಿರೀಕ್ಷಿತ, ಎಲ್ಲ ಊಹಿಸಬಹುದಾದ್ದು. ಪ್ರತಿ ತಿಂಗಳ ಆ ಶನಿವಾರ ಪ್ರವಾಸ, ಈ ಶನಿವಾರ ಡಿನ್ನರ್. ರವಿವಾರ ಅದು. ಶುಕ್ರವಾರ ಇದು. ಅತಿ ಪರಿಚಿತತೆ ಹುಟ್ಟಿಸುವ ನಿರ್ವಾತದಲ್ಲಿ ಹೊಸದೇನನ್ನೂ ಉಕ್ಕಿಸದ ಮನದ ಕಡಲು. ಹೀಗೆ ಎಲ್ಲವೂ ಅತಿ ಯಾಂತ್ರಿಕವಾಗಿರುವಾಗ ಒಳಗೊಂದು ಶೋಧ ಶುರುವಾಗುತ್ತದೆ. ಇಪ್ಪತ್ತು ವರ್ಷ ಮನೆಯೊಡತಿಯ ಪಾತ್ರದಲ್ಲಿ ತಾನು ಸಾಧಿಸಿರುವುದಾದರೂ ಏನು? ಬೆಳೆಯುತ್ತಿರುವ ಮಕ್ಕಳ ಭವಿಷ್ಯದ ಆತಂಕ, ಗಂಡನ ಹೆಮ್ಮೆ-ಬಯಕೆಗಳ ಕಾಪಿಡುವುದರಲ್ಲೇ ಕಳೆದುಹೋದೆನೆ? ಈ ಬದುಕು ತನ್ನ ಆಯ್ಕೆಯಾಗಿತ್ತೆ? ಮುಂತಾಗಿ ಹತ್ತುಹಲವು ಪ್ರಶ್ನೆಗಳು ಕಾಡತೊಡಗುತ್ತವೆ. ಇಂಥ ಹಳವಂಡ ಹುಟ್ಟಿದ ಒಂದು ಅಬ್ಜ ಘಳಿಗೆ ಮಹಾಜಿಗಿತ ಸಾಧಿಸಿಕೊಳ್ಳುವ ಹಲಗೆಯಾಗುತ್ತದೆ. ಬದುಕನ್ನು ನವೀಕರಿಸಿಕೊಳ್ಳಲು ಯತ್ನಿಸುತ್ತಾಳೆ.

ಯೆಲ್ಲಾ ಪ್ರಕಾಶನ ಸಂಸ್ಥೆಯಲ್ಲಿ ಪ್ರಕಟಣೆಗೆ ಬರುವ ಹಸ್ತಪ್ರತಿಗಳು ಪ್ರಕಟಿಸಲು ಅರ್ಹವೋ ಅಲ್ಲವೋ ಎಂದು ಶಿಫಾರ್ಸು ಮಾಡುವ ಕೆಲಸಕ್ಕೆ ಸೇರುತ್ತಾಳೆ. ಹಾಗೆ ಅವಳಿಗೆ ಬಂದ ಮೊದಲ ಹಸ್ತಪ್ರತಿ ಅಪರಿಚಿತ ಬರಹಗಾರ ಅಜೀಜ್ ಜಡ್. ಜಹಾರನ ಕಾದಂಬರಿ ‘ಮಧುರ ಧರ್ಮದ್ರೋಹ’ (ಸ್ವೀಟ್ ಬ್ಲಾಸ್ಫೆಮಿ). ಮೊದಮೊದಲು ತನಗಿಂತ ಭಿನ್ನ ಕಾಲದೇಶದ ಬರಹಗಾರನ ಕಾದಂಬರಿಯೊಂದನ್ನು ಓದಿ, ಟಿಪ್ಪಣಿ ಬರೆಯಲು ಅವಳಿಗೇನೂ ಆಸಕ್ತಿಯಿರುವುದಿಲ್ಲ. 13ನೇ ಶತಮಾನದಲ್ಲಿ ಬದುಕಿದ್ದ  ಮೌಲಾನಾ ಜಲಾಲುದ್ದೀನ್ ರೂಮಿಯನ್ನು ಕವಿಯಾಗಿ ಬದಲಿಸಿದ; ವಿದ್ವಾಂಸ ರೂಮಿಯ ಖ್ಯಾತಿ, ಪ್ರೌಢಿಮೆ, ಸ್ಥಾನಮಾನಗಳನ್ನೆಲ್ಲ ಕಳಚಿ ಕವಿ ರೂಮಿಯ ಹುಟ್ಟಿಗೆ ಕಾರಣವಾದ ಅಪರೂಪದ ಸಾಂಗತ್ಯ ಕುರಿತು ಆ ಕಾದಂಬರಿ ಇರುತ್ತದೆ. ಆದರೆ ಮಧುರ ಧರ್ಮದ್ರೋಹ ಕಾದಂಬರಿ ಓದುತ್ತ ಓದುತ್ತ ಯೆಲ್ಲಾಗೆ ತನ್ನ ಬದುಕಿನಲ್ಲಿ ಉದ್ಭವಿಸುತ್ತಿರುವ ಎಷ್ಟೋ ಸಂಕಟಮಯ ಸನ್ನಿವೇಶಗಳಿಗೆ, ಕೌಟುಂಬಿಕ ಅಲ್ಲೋಲಕಲ್ಲೋಲಗಳಿಗೆ ಆ ಕಾದಂಬರಿಯ ಪಾತ್ರಗಳಲ್ಲಿ ಉತ್ತರ ಇರುವಂತೆನಿಸತೊಡಗುತ್ತದೆ. ಕಾದಂಬರಿ ಮತ್ತು ಕಾದಂಬರಿಕಾರನ ಬಗೆಗೆ ಆಕರ್ಷಣೆಯುಂಟಾಗಿ ಅಜೀಜ್ ಜಹಾರನ ಜೊತೆ ಈಮೇಲ್ ಸಂಪರ್ಕ ಸಾಧಿಸುತ್ತಾಳೆ. ಸೂಫಿಯಾಗಿ ತನ್ನನ್ನು ತಾನು ಮಾರ್ಪಡಿಸಿಕೊಂಡ ಯೂರೋಪಿಯನ್ ವ್ಯಕ್ತಿ, ಕಾದಂಬರಿಕಾರ ಅಜೀಜ್ ಜಹಾರಾ ತನ್ನ ಪಾಲಿನ ಶಂಸನೆಂಬಂತೆ ಭಾಸವಾಗುತ್ತದೆ. ನಿಜ ಪ್ರೇಮದ ಹುಡುಕಾಟ ಶುರುವಾಗುತ್ತದೆ.

ಅಜೀಜನ ಕಾದಂಬರಿ ಓದುತ್ತ ತನ್ನ ಬದುಕಿನ ಚಲನೆಯ ದಿಕ್ಕನ್ನು ಬದಲಿಸಿಕೊಳ್ಳುವ ಗೃಹಿಣಿ ಯೆಲ್ಲಾ ಪ್ರೇಮದಲ್ಲಿ ತನ್ನ ತಾ ಕಳೆದುಕೊಳ್ಳುತ್ತಾಳೆ. ಪ್ರೇಮದಲ್ಲಿ ಹೊಸತೇ ಆಗಬಯಸುತ್ತಾಳೆ.

ಪ್ರೇಮ ಹುಡುಕಿಕೊಂಡು ಬರುವ ಒಂದು ಮಧುರ ಅನುಭವ. ಅದು ಹೀಗೆ ಬಂದು ಹಾಗೆ ಹೋಗುವ ಮಾಧುರ್ಯ. ಪ್ರೇಮಿಸಿದವನನ್ನೆಂದಿಗೂ ಹೆಂಗಸರು ಮದುವೆಯಾಗಲಾರರು ಎನಿಸತೊಡಗುತ್ತದೆ. ಅದುವರೆಗೆ ತಾನೇ ಕಟ್ಟಿಕೊಂಡ ಗೂಡಿನ ಸೂರೊಡೆದು ನೀಲಿಗೆ ಜಿಗಿಯುತ್ತಾಳೆ. ಭವಿಷ್ಯ, ಸುರಕ್ಷೆ, ರೂಢಿ, ನಿಯಮಗಳ ಮುರಿದು; ಅಭಿಪ್ರಾಯ ಆರೋಪಗಳ ಲೆಕ್ಕಿಸದೆ; ಘನತೆಯ ಸ್ವತಂತ್ರ ಬದುಕಿಗೆ ಹಂಬಲಿಸುತ್ತ; ಸಂಸಾರ-ಗಂಡನ ತೊರೆದರೆ ತೆರಬೇಕಾದ ಬೆಲೆಯನ್ನು ಅರಿತು ‘ಎಲ್ಲೋ ಜೋಗಪ್ಪ ನಿನ್ನರಮನೆ’ ಎಂದು ಸೂಫಿಯ ಸಾಂಗತ್ಯದಲ್ಲಿ ಹೊರಟುಬಿಡುತ್ತಾಳೆ.

ಈ ಬಟ್ಟೆ ಕಳಚಿ ಆ ಬಟ್ಟೆ ತೊಟ್ಟಷ್ಟು ಸಲೀಸಾಗಿ ಹೆಣ್ಣು ಒಂದು ವೈವಾಹಿಕ ಸಂಬಂಧದಿಂದ ಮತ್ತೊಂದಕ್ಕೆ ಪಲ್ಲಟಗೊಳ್ಳುವುದೇ!? ಇದು ಅಲ್ಲೋಲಕಲ್ಲೋಲ ಸೃಷ್ಟಿಸುವ ಸಂಗತಿಯಾಗಿದ್ದರೂ ಹೊಸತಲ್ಲ. ಬುದ್ಧನಿಂದ ಬಸವಣ್ಣ-ಕನಕನವರೆಗೆ ಸಾಮಾಜಿಕ ಮೌಲ್ಯಗಳನ್ನೆತ್ತಿಹಿಡಿದ ಹಲವರು ‘ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ’ ಎಂದು ಹೇಳುತ್ತಲೇ ಬಂದಿರುವುದು ನೋಡಿದರೆ ಇದು ಇವತ್ತು ನಿನ್ನೆಯ ಅನ್ನಾ ಕರೆನಿನಾಗಳ ಕತೆಯಲ್ಲ. ಇಂದು ನಿನ್ನೆಯ ಬಿರುಗಾಳಿಯಲ್ಲ. ಕಠೋರ ಶಿಕ್ಷೆ, ಧರ್ಮಬೋಧೆ, ಅಪಮಾನ ಎಲ್ಲದರ ಹೊರತಾಗಿ ನಡೆಯುತ್ತಲೇ ಬಂದ ಉಲ್ಲಂಘನೆ. ಪರಿಪೂರ್ಣ ಸಂಗಾತಿಗೆ, ಅರ್ಥಪೂರ್ಣ ಸಾಂಗತ್ಯಕ್ಕೆ ನಿರಂತರ ಹಂಬಲಿಸಿದ ಮನುಷ್ಯ ಮನದ ಒಳತುಡಿತ. ನೀತಿನಿಯಮ-ಕಟ್ಟಳೆಗಳು ಹತ್ತಿಕ್ಕಿದರೂ ಮತ್ತೆಮತ್ತೆ ಸಂಭವಿಸುತ್ತಲೇ ಇರುವ ಪ್ರವಾಹ. ಚೌಕಟ್ಟುಗಳ ಮುರಿಯುತ್ತಲೇ ಇರುವ ಮನುಷ್ಯ ಮನಸಿನ ಮಾಯಕ.

ಯೆಲ್ಲಾಳ ಬಾಳಕಥನ ಒಂದುಎಳೆಯಾದರೆ, ಆ ಕಾದಂಬರಿಯೊಳಗಣ ಇನ್ನೊಂದು ಕಾದಂಬರಿ ಮಧುರ ಧರ್ಮದ್ರೋಹ. ಅದು ಜಲಾಲುದ್ದೀನ್ ರೂಮಿ ಮತ್ತು ತಬ್ರೀಜಿನ ದರವೇಶಿ ಶಂಸ್ ನಡುವಿನ ಚಾರಿತ್ರಿಕ ಸಂಬಂಧದ ಒಳಸುಳಿಗಳನ್ನು ತೆರೆದಿಡುತ್ತದೆ. ಅದು 13ನೇ ಶತಮಾನದ ಬಾಗ್ದಾದ್, ಸಮರ್ಕಂಡ್, ಟರ್ಕಿಯ ಸಮಾಜ ಕುರಿತು ತಿಳಿಸುತ್ತದೆ. ಹಲವು ವ್ಯಕ್ತಿಚಿತ್ರ, ಭಾವಚಿತ್ರಗಳ ಮೂಲಕ ಆ ಕಾಲದ ರಾಜಕೀಯ-ಧಾರ್ಮಿಕ-ಸಾಮಾಜಿಕ ಪರಿಸರ, ಸಂಘರ್ಷ, ಸಂಬಂಧದ ಸ್ವರೂಪಗಳನ್ನು ವಿವರವಾಗಿ ಕಟ್ಟಿಕೊಡಲಾಗಿದೆ. ರೂಮಿಯ ಬದುಕಿನ ಹಲವು ಮಗ್ಗುಲುಗಳನ್ನು, ಅವನ ಮನೋಲೋಕ-ಭಾವಲೋಕದಲ್ಲಾದ ಬದಲಾವಣೆಗೆ ಪೂರಕವಾದ ಸಂಗತಿಗಳನ್ನು ಹಲವು ನೆಲೆಯಿಂದ ಹಲವರ ಮಾತುಗಳಲ್ಲಿ ಮೂಡಿಸಲು ಯತ್ನಿಸಲಾಗಿದೆ.

ಕಿರಿಯ ವಯಸ್ಸಿನಲ್ಲೇ ಅಪಾರ ಖ್ಯಾತಿ, ಸ್ಥಾನಮಾನ, ಸಂಪತ್ತು ಪಡೆದ ರೂಮಿ ಆಧ್ಯಾತ್ಮಿಕ ಗುರು ಎನಿಸಿಕೊಂಡಿರುತ್ತಾನೆ. ಅವನ ಧರ್ಮ ಪ್ರವಚನಗಳಿಗೆ ಸಾವಿರಾರು ಜನ ಸೇರುತ್ತಿರುತ್ತಾರೆ. ಆದರೂ ಸುಪ್ರಸಿದ್ಧ ಮೌಲಾನಾ ರೂಮಿಗೆ ಏನೋ ಒಂಟಿತನ, ಎಲ್ಲ ಇದ್ದೂ ಒಂದು ಶೂನ್ಯ. ಅದು ಸರಿಸಮ ಸಂಗಾತಿಯ ಹಂಬಲದಿಂದ ಹುಟ್ಟಿದ ಶೂನ್ಯ.



ಅದೇವೇಳೆಗೆ ಇಸ್ಲಾಮಿಕ್ ಮೌಲ್ಯಗಳನ್ನು ವಾಸ್ತವ ಬದುಕಾಗಿ ವ್ಯಾಖ್ಯಾನಿಸುವ, ನೇರಮಾತಿನ, ತಬ್ರೀಜಿನ ಸಂತ ಶಂಸ್ ಕೂಡ ಗುರುವೂ ಅಲ್ಲದ, ಶಿಷ್ಯನೂ ಅಲ್ಲದ ಸಂಗಾತಿಯ ಹುಡುಕಾಟದಲ್ಲಿರುತ್ತಾನೆ. ತನ್ನಲ್ಲಿರುವ ಎಲ್ಲ ಶಬ್ದಗಳನ್ನು, ಕತೆಗಳನ್ನು, ಜ್ಞಾನವನ್ನು, ಅರಿವನ್ನು ಹೀರಿಕೊಳ್ಳಬಲ್ಲ, ತಾನು ಆರಂಭಿಸಿದುದನ್ನು ಮುಂದುವರೆಸುವ ಸಂಗಾತಿಯ ಹುಡುಕುತ್ತಿರುತ್ತಾನೆ. ಶಂಸನ ಪ್ರೇಮವ್ಯಾಖ್ಯಾನದ, ಧರ್ಮದ ಸರಳ ವಿಶ್ಲೇಷಣೆಯ ಸೆಳವಿಗೆ ಸಿಕ್ಕಿದವರೆಲ್ಲ ಯಾರ‍್ಯಾರು? ಒಬ್ಬ ಭಿಕ್ಷುಕ, ಸುಲೇಮಾನ್ ಎಂಬ ಕುಡುಕ, ಗಡಂಗಿನ ವ್ಯಾಪಾರಿ, ವೇಶ್ಯಾವಾಟಿಕೆಗೆ ಮಾರಲ್ಪಟ್ಟ ಅನಾಥ ಹುಡುಗಿ, ಹೀಗೇ. ಸ್ವರ್ಗದಲ್ಲಿ ಮದಿರೆಯನ್ನು ಬಹುಮಾನವಾಗಿ ನೀಡುವುದಾದರೆ ಅದು ಭೂಮಿ ಮೇಲೇಕೆ ನಿಷಿದ್ಧ ಎಂದು ಕೇಳುವ ಮೂಲಕ ಲೋಕದ ಕಣ್ಣಲ್ಲಿ ಪಾಪಿ ಎನಿಸಿಕೊಂಡವರಿಗೂ ಶಂಸ್ ಪಾಪನಾಶ ಮಾಡುವವನಾಗಿರುತ್ತಾನೆ. ಕೊನೆಗಂತೂ ರೂಮಿ-ಶಂಸರ ಭೇಟಿಯಾಗುತ್ತದೆ. ಶಂಸ್ ಒಡನಾಟದಿಂದ ರೂಮಿಯ ಆಂತರಿಕ ವ್ಯಕ್ತಿತ್ವ ಅರಳತೊಡಗುತ್ತದೆ. ಅವರಿಬ್ಬರದು ಪರಸ್ಪರರನ್ನು ಪ್ರತಿಫಲಿಸುವ ಕನ್ನಡಿಯಂಥ ಸಾಂಗತ್ಯವಾಗುತ್ತದೆ.

ದೇವರನ್ನೂ, ಪ್ರೇಮಿಯನ್ನೂ ಹೃದಯ ಒಂದೇ ರೀತಿಯಲ್ಲಿ ಸ್ವೀಕರಿಸುತ್ತದೆ. ಎಂದೇ ಭಕ್ತಿ ಮತ್ತು ಪ್ರೇಮ ಈ ಎರಡರ ಪರಾಕಾಷ್ಠೆ ಒಂದೇ ಆಗಿದೆ ಎಂದು ನಂಬಿದವರು ಸೂಫಿಗಳು. ಸೂಫಿ ದರವೇಶಿ ಶಂಸನ ಭೇಟಿ ಅತಿಧಾರ್ಮಿಕ ರೂಮಿಯನ್ನು ಮಹತ್ತರವಾಗಿ ಬದಲಾಯಿಸುತ್ತದೆ. ಅದು ಅಂತಿಂಥ ಬದಲಾವಣೆಯಲ್ಲ. ಮೊದಲಿದ್ದ ರೂಮಿ ಅಕ್ಷರಶಃ ಇಲ್ಲವಾಗುತ್ತಾನೆ. ವಿಶ್ವದ ಸಕಲ ವ್ಯಾಪಾರಗಳೂ ಗೌಣವೆನಿಸಿ ಶಂಸ್ ಹೊರತಾಗಿ ಮತ್ತೇನೂ ಅವನನ್ನು ಸೆಳೆಯದಾಗುತ್ತದೆ. ಎರಡು ಮದುವೆಯಾಗಿ ಹೆಂಡತಿ ಮಕ್ಕಳಿದ್ದ; ಧಾರ್ಮಿಕ ಪಂಡಿತನಾಗಿ ವಿದ್ವಾಂಸನೆಂಬ ಹೆಸರು ಗಳಿಸಿದ್ದ; ಅರಸೊತ್ತಿಗೆಯ ಸಮೀಪವಿದ್ದು ಧನಕನಕ ಗಳಿಸಿದ್ದ ರೂಮಿ ಎಲ್ಲವನ್ನೂ ತೊರೆದು ಕೇವಲ ಶಂಸ್‌ಗಾಗಿ ಹಾತೊರೆಯುತ್ತಾನೆ. ರೂಮಿಯ ಬದುಕು ಈ ಸಂಬಂಧದಿಂದ ತೀವ್ರ ಸಂಘರ್ಷಕ್ಕೀಡಾಗುತ್ತದೆ. ದರವೇಶಿಯೊಬ್ಬನ ಸಂಗದಲ್ಲಿ ಮೌಲಾನಾ ತನ್ನ ಜವಾಬ್ದಾರಿ ಮರೆತು ತಿರುಗಾಡತೊಡಗಿದ್ದು ಕುಟುಂಬಕ್ಕೆ, ಅನುಯಾಯಿಗಳಿಗೆ ಸಹಿಸಲಾರದ ಆಘಾತ ನೀಡುತ್ತದೆ.




ವ್ಯಕ್ತಿಗತ ಉನ್ನತೀಕರಣಕ್ಕೆ ಎರಡು ಮಜಲುಗಳಿವೆ: ಒಂದು ಲೌಕಿಕ ನೆಲೆಯ ಅಧಿಕಾರ, ಆಸ್ತಿ, ಅಂತಸ್ತು ವಗೈರೆ ಹೊಂದುವುದು. ಮತ್ತೊಂದು ಆಧ್ಯಾತ್ಮಿಕ ನೆಲೆಯದು. ಇಲ್ಲಿ ರೂಮಿ ಮತ್ತು ಯೆಲ್ಲಾ ಸಾಧಿಸಿದ್ದು ಎರಡನೆಯ ನೆಲೆಯ ಉನ್ನತೀಕರಣ. ಯೆಲ್ಲ-ರೂಮಿ ಲೋಕರೂಢಿಗೆ ವಿರುದ್ಧವಾಗಿ ಆಯ್ದುಕೊಂಡ ಹಾದಿಯನ್ನು ಅರ್ಥಸಂಬಂಧಿಯಾಗಿ ನೋಡಿದರೆ ಹಿಂಚಲನೆ. ಅದೇ ಅಂತರಾಳದ ಶೀಲಸಂಬಂಧಿಯಾಗಿ ನೋಡಿದರೆ ಸ್ವಾತಂತ್ರ್ಯ, ಸ್ವಾಯತ್ತತೆ, ಆಂತರಿಕ ಚಲನೆ.

ನದಿಗೆ ಕಲ್ಲೆಸೆದರೆ, ಏನಾಗುತ್ತದೆ? ಫಳ್ ಎಂದು ಅಷ್ಟು ನೀರು ಹಾರುತ್ತದೆ. ತನ್ನೊಳಗಿನ ಹಲವು ಗೊಂದಲಗಳಲ್ಲಿ ಇದೂ ಒಂದೆಂದು ನದಿ ಮುಂದೆ ಸಾಗುತ್ತದೆ. ಆದರೆ ಅದೇ ನಿಂತ ಕೊಳಕ್ಕೆ ಕಲ್ಲೆಸೆದರೆ? ಅಲೆಅಲೆಯಾಗಿ ಒಂದರ ಹಿಂದೊಂದು ತರಂಗಗಳೆದ್ದು, ಎದ್ದ ಅಲೆಗಳು ದಡ ಮುಟ್ಟುವವರೆಗೂ ಕೊಳ ಮೊದಲಿನಂತಿರುವುದಿಲ್ಲ. ಮೇಲ್ನೋಟಕ್ಕೆ ಶಾಂತವೆಂಬಂತೆ ಕಾಣುವ ಯೆಲ್ಲ ಮತ್ತು ರೂಮಿಯೆಂಬ ಎರಡು ಕೊಳದೊಳಗೆ ಬಿದ್ದ ಪ್ರೇಮದ ಕಲ್ಲು ಅವರನ್ನು ಆತ್ಯಂತ ಬದಲಿಸಿ ಮೊದಲಿರುವುದಕ್ಕಿಂತ ಬೇರೆಯೇ ಆದ ವ್ಯಕ್ತಿತ್ವಗಳು ಉದಿಸುತ್ತವೆ. ಅದುವೇ ಪ್ರೇಮದ ಶಕ್ತಿ. ಅದನ್ನು ಇವೆರೆಡು ಕಥಾನಕಗಳ ಮೂಲಕ ‘ಪ್ರೀತಿಯ ನಲವತ್ತು ನಿಯಮಗಳು’ ಕಾದಂಬರಿ ತಿಳಿಸುತ್ತದೆ.



ಹೊಸಬದುಕಿನ ಹಂಬಲ?

ಇದು ಟಾಲ್‌ಸ್ಟಾಯ್ ಅವರ ಅನ್ನಾ ಕರೆನಿನಾ ಕಾದಂಬರಿಯನ್ನು ನೆನಪಿಸುವ ಕಾದಂಬರಿ. ಪ್ರೇಮವೆಂಬ ಬಿರುಗಾಳಿಗೆ ಸಿಲುಕಿದ ನಡುವಯಸ್ಸಿನ ಹೆಣ್ಣಿನ ಕತೆ. ಒಬ್ಬ ಸಾಮಾನ್ಯ ಹೆಣ್ಣುಮಗಳಾಗಿದ್ದ ಯೆಲ್ಲ, ಅಥವಾ ಅನ್ನಾಳ ಬದುಕಿನ ತಿರುವುಗಳು ಹಲವು ಪ್ರಶ್ನೆಗಳನ್ನು ಎತ್ತುತ್ತವೆ.

ಇರುವುದೆಲ್ಲವ ಬಿಟ್ಟು ಅನ್ನಾ ಆಗಲೀ, ಯೆಲ್ಲಾ ಆಗಲೀ ನಡೆದುಬಿಟ್ಟದ್ದೇಕೆ? ಇದೇನು ಪ್ರೇಮದ ಹುಡುಕಾಟವೋ? ಶುದ್ಧ ಸಾಂಗತ್ಯದ ಹಂಬಲವೋ? ತನ್ನ ತಾ ಒರೆಗೆ ಹಚ್ಚಿಕೊಳ್ಳುವ ಯತ್ನವೋ? ನೈತಿಕ-ಅನೈತಿಕಗಳಾಚೆ, ಸರಿತಪ್ಪುಗಳಾಚೆ ಸಂಭವಿಸುವ ಯಾವ ಮಾಯಕ ಅವರೊಳಗನ್ನು ಆ ಪರಿ ಅಲುಗಿಸಲು ಕಾರಣವಾಯಿತು? ಮದುವೆ ಎಂಬ ಸಂಸ್ಥೆಯ ಒಳಗಿನ ಅಗೋಚರ ಹಿಂಸೆ ಇದಕ್ಕೆ ಕಾರಣವೇ? ಕುಟುಂಬ, ಕೌಟುಂಬಿಕ ಜವಾಬ್ದಾರಿಗಳು ಹೆಣ್ಣಿನ ಅಂತಸ್ಸತ್ವವನ್ನು, ಕ್ರಿಯಾಶೀಲತೆಯನ್ನು ನಿರಂತರ ದಮನಿಸುವ ಕಾರಣ ಹೀಗಾಗುವುದೇ? ತಾಳಿಕೊಂಡಷ್ಟು ತಡೆದು ನಂತರ ಸಿಡಿಯುವ ಒಳಬಂಡಾಯವೇ ಇದು? ಏಕಸಂಗಾತಿ ಸಂಬಂಧ ಎನ್ನುವುದೇ ಹುಸಿ ಮೌಲ್ಯವೇ? ಯಾಕಾದರೂ ‘ನಿಷ್ಠೆ’ಯ ಆಚೆ ಮನಸ್ಸು ಚಲಿಸುತ್ತದೆ? ದಾಂಪತ್ಯ ಕುರಿತ ಅನಾದರ ವಿವಾಹೇತರ ಸಂಬಂಧಗಳಿಗೆ ಕಾರಣವೇ? ಕೊನೆಗೂ ಬೇಕಿರುವುದು ಸುರಕ್ಷತೆ, ಖಚಿತ ಆವರಣವೋ ಅಥವಾ ಸ್ವಾತಂತ್ರ್ಯವೋ?

ಬಹುಶಃ ದಾಂಪತ್ಯದ ಬಂಧ ಹೊಸನೆಲೆಗಳಲ್ಲಿ ನವೀಕರಣಗೊಳ್ಳದೆ ಸವಕಲಾಗುವುದು ಇಂಥ ತಿರುವುಗಳಿಗೊಂದು ಕಾರಣವಿರಬಹುದು. ವಿವಾಹದ ನಂತರ ಇದ್ದಕ್ಕಿದ್ದಂತೆ ಬದಲಾಗುವ ಹೆಣ್ಣಿನ ಸ್ಥಾನಮಾನ, ಜವಾಬ್ದಾರಿಗಳು ಒಂದಷ್ಟು ಕಾಲ ಅವಳಿಗೆ ಬೆಚ್ಚನೆಯ ಅನುಭವ ನೀಡಬಹುದು. ಆದರೆ ತಾಯ್ತನ ಸಂಭ್ರಮವಷ್ಟೆ ಅಲ್ಲ, ಉದ್ದಕ್ಕೂ ಆತಂಕ ಹುಟ್ಟಿಸುವ ಸಂಗತಿಯೂ ಹೌದು. ಹೆಂಡತಿ ಪಾತ್ರವೂ ಅಷ್ಟೆ. ದಂಪತಿಗಳ ನಡುವಿನ ಆಕರ್ಷಣೆ, ಲೈಂಗಿಕತೆ ಕೆಲಕಾಲ ಬೆಳಕಾಗಬಲ್ಲದು. ನಂತರ ಆ ದೀಪ ಮಬ್ಬಾಗತೊಡಗುತ್ತದೆ. ಹೊಸಬೆಳಕಿಗಾಗಿ ಇಬ್ಬರೂ ತೈಲವಾಗಬೇಕು. ಹಾಗಾಗದಿದ್ದರೆ ಯಾಂತ್ರಿಕಗೊಳ್ಳತೊಡಗಿದ ಬದುಕಿನಲ್ಲಿ ಆಚೆ ತೀರದ ಏನನ್ನೋ ಹುಡುಕುವ ಹಂಬಲ, ಮತ್ತೇನನ್ನೋ ಅರಸುವ ಉಮೇದು ಹುಟ್ಟಿಕೊಳ್ಳುತ್ತದೆ. ಸಿದ್ಧ ಮಾದರಿ ಸೂಕ್ತ ಮಾದರಿ ಇರಲಿಕ್ಕಿಲ್ಲ ಎನಿಸುತ್ತದೆ.

ಸಾಮಾನ್ಯವಾಗಿ ನಡು ವಯಸ್ಸು ತಲುಪುತ್ತಿದ್ದಂತೆ ಸ್ತ್ರೀಪುರುಷರ ಲೈಂಗಿಕತೆ ಮತ್ತು ಅಂತರಾಳದ ಚಲನೆ ವಿರುದ್ಧ ದಿಕ್ಕುಗಳಲ್ಲಿ ಸಂಭವಿಸುತ್ತದೆ. ಮನೆ-ಮಕ್ಕಳು-ಗಂಡನೆಂದು ಮೊದಮೊದಲು ಕೌಟುಂಬಿಕ ಜವಾಬ್ದಾರಿಗೆ ಹೆಚ್ಚು ತೆತ್ತುಕೊಂಡು ಮುದುರಿಕೊಂಡ ಹೆಣ್ಣುಮಕ್ಕಳು ೪೦ರ ನಂತರ ವ್ಯಕ್ತಿಗತವಾಗಿ ಬಹಿರ್ಮುಖ ಚಲನೆಗೊಳಗಾಗಿ ಅರಳಿಕೊಳ್ಳತೊಡಗುತ್ತಾರೆ. ಇದು ಕೌಟುಂಬಿಕ ಹೆಣ್ಣು ಸಾಮಾಜಿಕ ಹೆಣ್ಣಾಗಹೊರಡುವ ಸೂಚನೆ. ಆದರೆ ಮೊದಲು ಹರಡಿಕೊಂಡಿದ್ದರೂ ಗಂಡಸು ವಯಸ್ಸು ಕಳೆಯುತ್ತ ಹೋದಹಾಗೆ ಹೆಚ್ಚೆಚ್ಚು ಮನೆಗೆ, ಕುಟುಂಬಕ್ಕೆ ಅಂಟಿಕೊಳ್ಳತೊಡಗುತ್ತಾನೆ. ಸಾಮಾಜಿಕವಾಗಿದ್ದವರು ವೈಯಕ್ತಿಕವಾಗತೊಡಗುತ್ತಾರೆ. ಇದು ಒಳಚಲನೆ. ಆಳದೆಡೆ ಚಲನೆ. ಒಂದೇ ಕಾಲಮಾನದಲ್ಲಿ ಹೆಣ್ಣುಗಂಡಿನ ಬದುಕಿನಲ್ಲಿ ಸಂಭವಿಸುವ ವಿರುದ್ಧ ದಿಕ್ಕಿನ ಚಲನೆಗಳು ಯಾವುದೋ ಒಂದು ಮಧ್ಯ ಬಿಂದುವಿನಲ್ಲಿ ಸಂಧಿಸಬೇಕು. ಅದಕ್ಕೆ ಇಬ್ಬರೂ ಪರಸ್ಪರರ ಕಡೆಗೆ ಚಲಿಸಬೇಕು. ಇದಕ್ಕೆ ಸುಲಲಿತ ಸಂವಹನ ಇರಲೇಬೇಕು. ಅದಿಲ್ಲದಿದ್ದರೆ ಗಾಢಮೌನದಲ್ಲಿ ಸಮಾಧಿಯಾದ ಸಂಬಂಧಗಳು ಯೆಲ್ಲಳ, ಅನ್ನಾಳ ಬದುಕುಗಳಿಗೆ ಇಂಥ ತಿರುವು ನೀಡುತ್ತವೆ.



ಸುಪಾರಿ ಕೊಲೆ

13ನೇ ಶತಮಾನದಲ್ಲಿ ಶಂಸನ ಕೊಲೆಗೆ ಸುಪಾರಿ ಕೊಡಲಾಗುತ್ತದೆ. ಕುರಾನ್‌ನ ಆನ್ವಯಿಕ ಜ್ಞಾನವನ್ನು ಆದ್ಯಂತ ಹೊಂದಿದ ಸೂಫಿ ಶಂಸನ ಬಗೆಗೆ ಸಂಪ್ರದಾಯವಾದಿಗಳು ವಿಪರೀತ ಸಿಟ್ಟಾಗಿರುತ್ತಾರೆ. ಷರಿಯದ ಪ್ರಕಾರವೇ ಎಲ್ಲ ನಡೆಯಬೇಕೆಂದು ನ್ಯಾಯಾಸ್ಥಾನದಲ್ಲಿ ನ್ಯಾಯಾಧೀಶರು ಹೇಳುತ್ತಿರುವಾಗಲೇ, ‘ಷರಿಯವೆಂದರೆ ದೀಪವಿದ್ದ ಹಾಗೆ, ಅದೇ ಮಾರ್ಗವಲ್ಲ. ಅದರ ಬೆಳಕಿನಲ್ಲಿ ನಿನ್ನ ದಾರಿ ನೀನೆ ಹುಡುಕಿಕೊ’ ಎಂದು ಭಿನ್ನವಾಗಿ ವ್ಯಾಖ್ಯಾನಿಸುವ ಶಂಸನನ್ನು ಕಂಡರೆ ಸಂಪ್ರದಾಯವಾದಿಗಳಿಗೆ ನಡುಕ. ಎಲ್ಲ ಕಾಲದಲ್ಲಿಯೂ ಧರ್ಮರಕ್ಷಕರು ಬಯಸುವುದು ದಾಸರನ್ನೇ ಹೊರತು ಪ್ರಶ್ನಿಸುವವರನ್ನಲ್ಲ. ಪ್ರಶ್ನಿಸುವವರ ಕುರಿತು ಸಾಂಸ್ಥಿಕ ಧರ್ಮಕ್ಕೂ, ಆಳುವ ವ್ಯವಸ್ಥೆಗೂ ತೀವ್ರ ಅಸಹನೆ ಇರುತ್ತದೆ. ಹಾಗಾಗಿಯೇ ಅಂಥವರ ಬಾಯ್ಮುಚ್ಚಿಸುವ ಕೆಲಸ ನಿರಂತರ ಸಾಗಿದೆ. ಅಂದು ಶಂಸನ ಕೊಲೆಗೆ ಯಾವುದು ಕಾರಣವಾಯಿತೋ ಇವತ್ತು ನಡೆಯುತ್ತಿರುವ ವಿಚಾರವಾದಿಗಳ ಹತ್ಯೆಗೂ ಅದೇ ಕಾರಣವಾಗಿದೆ!

ಆಸ್ತಿ, ಅಧಿಕಾರಗಳಿರದ ಒಬ್ಬ ದರವೇಶಿ, ಸನ್ಯಾಸಿ, ವಿಚಾರವಾದಿ ಸಾಂಸ್ಥಿಕ ವ್ಯವಸ್ಥೆಗೆ ಅಪಾಯಕಾರಿ ಎನಿಸುವುದಾದರೂ ಯಾಕೆ?

ನಮ್ಮಲ್ಲಿ ಅಧಿಕಾರದ ಸ್ವರೂಪ, ಆಳ್ವಿಕೆಯ ಸ್ವರೂಪ ಕುರಿತು ಹಲವು ಸಿದ್ಧಾಂತ, ಪ್ರತಿಪಾದನೆಗಳಿವೆ. ದಾರಿಗಳಿವೆ. ಆದರೆ ಅಧಿಕಾರ ಅನೈತಿಕಗೊಳ್ಳದಿರಲು, ಪಿಪಾಸುತನದಲ್ಲಿ ಕೊನೆಯಾಗದಿರಲು ಮನಶ್ಶಾಸ್ತ್ರೀಯ ಪರಿಕಲ್ಪನೆಗಳನ್ನು ಮತಧರ್ಮಗಳು ಒದಗಿಸುತ್ತವೆ. ಅಧಿಕಾರವು ಹಿಂಸೆ ಸೃಜಿಸದ ಹಾಗೆ, ಸಮಾಜ-ವ್ಯಕ್ತಿತ್ವ ಛಿದ್ರಗೊಳ್ಳದ ಹಾಗೆ ನೋಡಿಕೊಳ್ಳುವ ತಾಳ್ಮೆಯ ಗುಣವನ್ನು ಆಧ್ಯಾತ್ಮ ನೀಡುತ್ತದೆ. ಮನುಷ್ಯನಿಗೆ ಬರಿಯ ಲೌಕಿಕ, ಭೌತಿಕ ಅಸ್ತಿತ್ವವೊಂದೇ ಅಲ್ಲ, ಆಧ್ಯಾತ್ಮಿಕ, ಆದಿಭೌತಿಕ, ಧಾರ್ಮಿಕ ವ್ಯಕ್ತಿತ್ವವೂ ಇರುತ್ತದೆ. ಶಂಸನಂಥ ಆಧ್ಯಾತ್ಮವಾದಿಗಳು ಅಧಿಕಾರದೆದುರು ಸಂಯಮಿಯಾಗಿಯೂ, ಸಂದೇಹಿಯಾಗೂ ಇರಬಲ್ಲದು. ಅವರು ಪ್ರಶ್ನಿಸಿ ಒಪ್ಪುವವರು. ಎಂದೇ ಒಳಬಂಡಾಯಗಾರ(ಕ್ರಿಟಿಕಲ್ ಇನ್‌ಸೈಡರ್) ಆಗಬಲ್ಲರು. ಬುದ್ಧ, ಸಾಕ್ರೆಟೀಸ್, ಬಸವ, ಕನಕ, ಶರೀಫ, ಕಬೀರ, ವಿವೇಕಾನಂದ, ನಿಡುಮಾಮಿಡಿ, ಸ್ವಾಮಿ ಅಗ್ನಿವೇಶ್ ಮೊದಲಾದವರು ಒಳಗಿನಿಂದಲೇ ಬುಡಮಟ್ಟದ ಪ್ರಶ್ನೆಗಳನ್ನೆತ್ತುವವರು. ಎಂದೇ ಸಾಂಸ್ಥಿಕ ಧರ್ಮಕ್ಕೂ, ಆಳುವ ವ್ಯವಸ್ಥೆಗೂ ಒಳಬಂಡಾಯಗಾರರಾಗಿ ಕೆಂಗಣ್ಣಿಗೆ ಗುರಿಯಾದರು.

ಎಲ್ಲ ಸಹಸ್ರಮಾನಗಳಲ್ಲೂ ಅಸಹಿಷ್ಣುತೆ ಇತ್ತು ನಿಜ. ಆದರೆ ಪ್ರಜಾಪ್ರಭುತ್ವ ಯುಗದಲ್ಲೂ, ಸ್ವಾತಂತ್ರ್ಯದ ಕಾಲದಲ್ಲೂ ಇದು ಮುಂದುವರೆದು, ಹೆಚ್ಚೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದೆ.

***

ದೇವಳದಲ್ಲಿ ಮಗು ಕೊಲೆಗೀಡಾಗುವುದು, ಚರ್ಚಿನ ಪಾದ್ರಿ-ಮಠದ ಸ್ವಾಮಿಯೇ ಅತ್ಯಾಚಾರ ಮಾಡುವುದು, ಜಿಹಾದಿಗಳು ಹೆಣ್ಮಕ್ಕಳನ್ನು ಲೈಂಗಿಕ ಗುಲಾಮರಂತೆ ಬಳಸಿ ಹಿಂಸಿಸುವುದು, ಶಾಲೆಯಲ್ಲಿ ಎಳೆಬಾಲೆ ಮಗು ಹೆರುವುದೇ ಮೊದಲಾದ ಭೀಭತ್ಸಗಳಿಗೆ ಕಾಲ ಒಗ್ಗಿಹೋಗಿದೆ. ಟೋಪಿ, ಪತಾಕೆ, ಗಡ್ಡ, ನಮಾಜು, ಉಪವಾಸ, ಚರ್ಚು, ಶಿಲುಬೆ, ಕಿರ್ಪಾಣ್, ಕೇಶ್, ಕಂಗನ್, ನಾಮಪಟ್ಟೆಗಳೆಂಬ ಬಾಹ್ಯದ ಚಹರೆಗಳನ್ನು ಧರ್ಮದ ಕುರುಹುಗಳೆಂದುಕೊಂಡಿದ್ದೇವೆ. ಕುರುಹುಗಳಾಚೆಗಿನ ನಿಜಧರ್ಮದ ಗುರುತು ಮರೆತೇಬಿಟ್ಟಿದ್ದೇವೆ.

ಹೀಗಿರುತ್ತ ‘ಮರಣದ ಬಳಿಕ ಗೋರಿಯೇಕೆ? ಮಾನವ ಹೃದಯವೇ ನನ್ನ ನೆಲೆ’ ಎಂದ ರೂಮಿಯನ್ನು ಮಹಾಕವಿಯಾಗಿ ರೂಪಿಸಿದ ಬದುಕಿನ ಕುರಿತ ಕಾದಂಬರಿ ‘ಪ್ರೀತಿಯ ನಲವತ್ತು ನಿಯಮಗಳು’ ಓದಲೇಬೇಕಾದ ಕೃತಿಯಾಗಿದೆ. ಇಡಿಯ ಕಾದಂಬರಿಯ ಭಾಷೆ ಕಾವ್ಯದ್ದು. ಅದನ್ನೊಂದು ಕವಿತೆಯಂತೆ ಓದಬಹುದು. ಕಾಗುಣಿತದ ತಪ್ಪುಗಳು, ಅನುವಾದದ ಕೆಲ ಕಿರಿಕಿರಿಗಳ ಹೊರತಾಗಿಯೂ ಕಾದಂಬರಿ ಕೆಳಗಿಟ್ಟ ಬಳಿಕ ಬಹುಕಾಲ ಓದಿನ ಸುಖ, ಕಾವ್ಯದ ಅಮಲು ಆವರಿಸುತ್ತದೆ. ಕಾವ್ಯಾಸಕ್ತಿ ಇಲ್ಲದವರಿಗೆ ಅನುವಾದದಲ್ಲಿ ಬಳಸಿರುವ ಕರ್ಮಣಿ ಪ್ರಯೋಗ ಕೊಂಚ ರಗಳೆಯೆನಿಸಲೂಬಹುದು. ಆದರೆ ಮಮತಾ ಮೇಡಂ ಅದನ್ನು ಅನುವಾದಿಸುವಾಗ, ಕೊನೆಯ ಸ್ವರೂಪ ಕೊಡುವಾಗ, ಚಿತ್ರಗಳ ಬರೆಸುವಾಗ ಅಪಾರ ಶ್ರಮ ಪಟ್ಟಿದ್ದಾರೆ. ೪೩೦ ಪುಟಗಳ ಬೃಹತ್ ಕಾದಂಬರಿ ಅನುವಾದಿಸಲು ದೇಶ ಸುತ್ತಿ, ಕೋಶ ಓದಿ, ಇನ್ನಿಲ್ಲದಷ್ಟು ಶ್ರಮಪಟ್ಟ ಕವಿ, ಅಕ್ಕ ಮಮತಾ ಸಾಗರ ಅವರಿಗೆ ಕನ್ನಡ ಓದುಗರ ಪರವಾಗಿ ಧನ್ಯವಾದಗಳು.


‘ಪ್ರೀತಿಯ ನಲವತ್ತು ನಿಯಮಗಳು’:
ಇಂಗ್ಲಿಷ್ ಮೂಲ: ಎಲಿಫ್ ಶಫಾಕ್
ಕನ್ನಡಕ್ಕೆ: ಮಮತಾ ಸಾಗರ
 ಪ್ರಕಾಶಕರು: ದೇಸಿ ಪುಸ್ತಕ. ಪುಟ: 444, ಬೆಲೆ: 400

(all images courtesy: Internet)

Tuesday, 11 September 2018

ಸಂಗಾತಿ..





ಕುಕ್ಕಿಕುಕ್ಕಿ ಹೊಟ್ಟುಹಾರಿಸಿ ಹಕ್ಕಿ ತಿರುಳು ಹೊರಗೆಳೆಯುತಿದೆ 
ಬೆಳಗಿನ ಮಂಜಿನಂತೆ ನನ್ನ ತುಟಿಗಳೂ ಸೆಟೆದುಕೊಂಡಿವೆ 
ಇಂದೋ ನಾಳೆಯೋ ಬರಲಿರುವ ವಸಂತನಿಗೆಂದು
ಎದೆಮರ ಎಲೆಯುದುರಿಸಿ ಹೊಂಚುಹಾಕಿದೆ 
ಅವಶೇಷದಡಿಯಿಂದ ಬುದುಂಗನೇಳಲು ಕನಸಿನಣಬೆ ಕಾದಿದೆ

ಕೋರೈಸುವ ಬೆಂಕಿ ಬೆಳಕಿಗೆ ಕಣ್ಣು ದಣಿದಿದೆ
ಪಾಪೆಯೊಳಗಷ್ಟು ತಂಪು ಕತ್ತಲನಿಳಿಸು ಸಂಗಾತಿ

ಬರಬರನೆ ನಡೆನಡೆದು ಕಾಲು ಸೋತಿದೆ
ಮಾಂಸಮಜ್ಜೆಗೆ ನಿಧಾನವನುಣಿಸು ಸಂಗಾತಿ

ನನ್ನ ನಾ ಕಾಣದ ಗೋಡೆಗಳೇ ಎದುರಿವೆ
ನಿನ್ನೆದೆ ಕನ್ನಡಿಯಲೊಮ್ಮೆ ಕಾಣಿಸು ಸಂಗಾತಿ

ಚೌಕಟ್ಟುಗಳಬ್ಬರಕೆ ಕುಸಿದಿದೆ ಪಿಸು ಮಾತು
ಜೀವಕೇಂದ್ರದ ಮೌನ ಕವಿತೆಯಾಗಿಸು ಸಂಗಾತಿ

ಮುಟ್ಟದವರ ಚಿತ್ರಗಳಲಿ ಬಣ್ಣವೇ ಇಲ್ಲ
ಸ್ಪರ್ಶ ಮಾತ್ರದಿ ಬಣ್ಣ ತುಂಬು ಸಂಗಾತಿ

ಕೆಂಬೂತದ ಕೊಕ್ಕಿನಲಿ ಹಸಿವೆ ಅರಳುವ ಹೊತ್ತು
ಇಣಚಿಯ ಕಿಚಕಿಚಕೆ ಇರುವೆಯಂಜದೆ ಹರಿವ ಹೊತ್ತು
ಗೊರವಂಕದಂಗಳದಲಿ ಕಾಮಿ ಸುಳಿದಾಡಿದ ಹೊತ್ತು
ಹೂದಂಟ ಮೇಲಣ ಹಕ್ಕಿ ಮಧು ಹೀರುವ ಹೊತ್ತು
ಮಂಜುಮಣಿ ಎಲೆಮೇಲೆ ಮುತ್ತಾಗುವ ಹೊತ್ತು..

ಶಬ್ದಸಮುದ್ರದಲಿ ಹುಸಿಹೋದದ್ದು ನಿಶ್ಶಬ್ದದಲಿ ಕೈಗೆಟುಕುತ್ತಿದೆ
ಜೀವಜೋಕಾಲಿಯಲಿ ಜೀಕುವ ಬಾ ಸಂಗಾತಿ

(line drawing: Krishna Giliyar)

Tuesday, 14 August 2018

ತಮ್ಮಾ ಒಮರ, ಇದು ಆಜಾದಿ ಬಂದ ದಿನ..







ಬಡಿಯಿತು, ನಡುರಾತ್ರಿ ಹನ್ನೆರೆಡು
ಬಂದೇಬಿಟ್ಟಿತು ಮತ್ತೊಂದು ಪಂದ್ರಾ ಆಗಸ್ಟು
ರಾಜಪಥದಲಿ ಗುಂಡುಗೋವಿ ಮಿಸೈಲು
ವಾಘಾ ಬಾಗಿಲ ಬಳಿ ಉದ್ರೇಕದ ಕೂಗು
ಸಮವಸ್ತ್ರ ಸಂಭ್ರಮ ಉಬ್ಬಿದೆದೆಯ ಸೆಲ್ಯೂಟು
ಹಾರುವ ತಿರಂಗ, ಹೋಶಿಯಾರ್ ಬಹುಪರಾಕು..

ತಮ್ಮಾ ಒಮರ, ಇದು ಆಜಾದಿ ಬಂದ ದಿನ..

ಮೂರು ಸುತ್ತೂ ಮೊರೆವ ಕಡಲು
ಕನ್ನಡಿಯಂತೆ ಮುಗಿಲ ಬಿಂಬಿಸುತಿರಲು
ಕಠುವಾ, ಪಟನಾದ ಎಳೆಕೂಸುಗಳು,
ಮಾಲೂರು, ಹಾವೇರಿಯ ಪೋರಿಯರು
ಮಣ್ಣೊಳಗೆ ತಣ್ಣಗೆ ಮಲಗಿಬಿಟ್ಟಿದ್ದಾರೆ
ನೆಲಮುಗಿಲ ಸಂದುಗಳಲಿ
ಬೆಟ್ಟ ಬಯಲು ಬೀದಿಗಳಲಿ
ಮೊಲೆಯೋನಿಗಳ ಹಿಸಿಯಲಾಗುತ್ತಿದೆ
ಯುದ್ಧದಲ್ಲೂ ಶಾಂತಿಯಲ್ಲೂ
ನಿದ್ರೆಯಲ್ಲೂ ಎಚ್ಚರದಲ್ಲೂ
ಮಹಲುಗಳಲೂ ಮೋರಿಯಲ್ಲೂ
ಮಠಮಂದಿರಗಳಲೂ ಮಸಣದಲ್ಲೂ
ಲೆಕ್ಕವಿರದಷ್ಟು ಅಸ್ವತಂತ್ರ ಕುವರಿಯರು
ತೊಡೆ ನಡುವೆ ರಕ್ತ ಸುರಿಸಿದ್ದಾರೆ

ಭೀತಿಯರದ ನೆಲವೇ ಮಾತೃಭೂಮಿ
ಭಯವಿರದ ಬದುಕೇ ಆಜಾದಿ
ಹುಣ್ಣಿಮೆಯಂದು ಚಿಕ್ಕೆಗಳು ನೆಲಕಿಳಿದು
ಚಂದಿರನಿಗಾಗಿ ಹುಡುಕತೊಡಗಿರಲು
ನಾವು ದನಿಗೂಡಿಸುವುದಾದರೂ ಹೇಗೆ
ಅವರ ಜಯಘೋಷಗಳಿಗೆ?

ತಮ್ಮಾ ಒಮರ, ಇಂದು ಆಜಾದಿ ಬಂದ ದಿನ
ನಿಂತ ಹಾಗಿದೆ ತಿರಂಗದೊಳಗಿನ ಚಕ್ರ
ಹುಡುಕೋಣ ಬಾ ಅಂದು ಬಂದದ್ದು
ಅದೆಂದು ಕಳೆದುಹೋಯಿತು ಎಂದು
ಒಗ್ಗೂಡಿ ಅರಸೋಣ ಬಾ
ಬೆಸೆದದ್ದು ಹಿಸಿದು ಹೋಗಿದ್ದು ಹೇಗೆ ಎಂದು

ತಮ್ಮಾ ಒಮರ, ಇಂದು ಆಜಾದಿ ಬಂದ ದಿನ
ಎಷ್ಟು ಹುಡುಗಿಯರ ನೆತ್ತರ ಕುಡಿದಿದೆಯೋ ನೆಲ
ಎಲ್ಲೂ ಇಲ್ಲದಷ್ಟು ಕೆಂಪಾಗಿ ಅರಳಿದೆ ದಾಸವಾಳ



Related image

Monday, 30 July 2018

ನಕ್ಸಲೈಟ್ ಒಬ್ಬನ ಜೈಲು ವೃತ್ತಾಂತ: ಆ 13 ವರುಷಗಳು




ಅಮುಕ್ತರ ಹಸಿವಿನ ಕಥನ 

ಕಣ್ಣತೇವದೊಂದಿಗೆ ಇತ್ತೀಚೆಗೆ ಒಂದು ಪುಸ್ತಕ ಓದಿದೆ. ಅಂತರಾಳ ಕಲಕಿಬಿಡುವ, ನಮ್ಮ ವೈಚಾರಿಕ ಹುಸಿತನವನ್ನು ಎತ್ತಿ ತೋರಿಸುವ, ಉತ್ತರವಿಲ್ಲದ ಪ್ರಶ್ನೆಗಳ ಎತ್ತುವ ಇಂತಹ ಪುಸ್ತಕವನ್ನು ಇತ್ತೀಚೆಗೆ ಓದಿರಲಿಲ್ಲ. ಮಾನವಹಕ್ಕು, ನ್ಯಾಯವ್ಯವಸ್ಥೆ, ಹಿಂಸೆ, ಅಪರಾಧ, ಶಿಕ್ಷೆ, ಚಳುವಳಿ ಮೊದಲಾದ ವಿಷಯಗಳ ಬಗೆಗೆ ಮತ್ತೊಮ್ಮೆ ಯೋಚಿಸಲು ಹಚ್ಚಿದ ಆ ಪುಸ್ತಕ ದೆಹಲಿಯ ನವಯಾನ ಪಬ್ಲಿಷಿಂಗ್ ಪ್ರಕಟಿಸಿರುವ ‘ಥರ್ಟೀನ್ ಇಯರ‍್ಸ್: ಎ ನಕ್ಸಲೈಟ್ಸ್ ಪ್ರಿಸನ್ ಡೈರಿ’. ಬರೆದವರು ತನ್ನ ರಾಜಕೀಯ ನಂಬಿಕೆಗಳ ಕಾರಣವಾಗಿ ೧೩ ವರ್ಷ ಜೈಲುವಾಸ ಅನುಭವಿಸಿದ ಕಾಮ್ರೇಡ್ ರಾಮಚಂದ್ರ ಸಿಂಗ್.

ಜೈಲು ಸೇರುವವರಲ್ಲಿ ಹೆಚ್ಚಿನವರು ಸ್ವಂತ ಲಾಭಕ್ಕಾಗಿ ಸಮಾಜಕಂಟಕರಾಗಿ ಜೈಲು ಸೇರುತ್ತಾರೆ. ಮತ್ತೆ ಕೆಲವರು ಪ್ರಸ್ತುತದ ಕೇಡಿಗ ವ್ಯವಸ್ಥೆಯನ್ನು ಬದಲಿಸುವ ರಾಜಕೀಯ ಸಿದ್ಧಾಂತ ನಂಬಿ ಆಳುವವರ ಕೆಂಗಣ್ಣಿಗೆ ಗುರಿಯಾಗಿ ಜೈಲು ಸೇರುತ್ತಾರೆ. ಹಾಗೆ ಸಮಸಮಾಜ ಕಟ್ಟುವ ಕನಸು ಹೊತ್ತು, ನಕ್ಸಲನೆಂಬ ಹಣೆಪಟ್ಟಿ ಹೊತ್ತು, ಜೈಲು ಸೇರಿದ ತರುಣನೊಬ್ಬ ವ್ಯವಸ್ಥೆಯನ್ನು ಚಿಕಿತ್ಸಕ ದೃಷ್ಟಿಯಲ್ಲಿ ನೋಡಿದ ಫಲ ಈ ಪುಸ್ತಕ. ಕೆಳವರ್ಗದ ಖೈದಿಯಾಗಿ ಕಂಗೆಡಿಸುವ ಪರಿಸ್ಥಿತಿಯಲ್ಲಿದ್ದಾಗಲೂ ತನ್ನ ಜೀವನಪ್ರೀತಿ, ಸಾಮಾಜಿಕ ಕಾಳಜಿ, ಹೋರಾಟ ಮನೋಭಾವ, ಹಾಸ್ಯಪ್ರಜ್ಞೆಗಳನ್ನು ಬಿಟ್ಟುಕೊಡದೆ ಉಳಿದ ಖೈದಿಗಳ ಪರಿಸ್ಥಿತಿಯನ್ನು, ಜೈಲಿನ ಒಳಹೊರಗುಗಳನ್ನು, ಮನುಷ್ಯ ನಂಬಿಕೆಗಳ ಆಳಗಲಗಳನ್ನು ಮನಮುಟ್ಟುವಂತೆ ವಿಶ್ಲೇಷಿಸಿರುವ ‘..ಡೈರಿ’, ಒಂದು ಅಪೂರ್ವ ಜೈಲು ಆಖ್ಯಾನ. ಸಿಂಗ್ ಅವರ ನೋಟ ಜೈಲಿನ ತಳಸ್ತರದ ಖೈದಿಗಳು ಅನುಭವಿಸುವ ಯಾತನೆ, ದೈನ್ಯತೆ, ಅಸಹಾಯಕತೆ, ಪ್ರತಿರೋಧಗಳನ್ನು ಕಟ್ಟಿಕೊಡುವ ವಿಶಿಷ್ಟ ಕಥಾನಕವಾಗಿದೆ.

ಓದಿನನುಭವದಿಂದ ಹೇಳುವುದಾದರೆ ಕಾಮ್ರೇಡ್ ಸಿಂಗ್ ಅವರ ಬರಹದಲ್ಲಿ ಹುತಾತ್ಮನಾಗುವ, ಮಹಾತ್ಮನಾಗುವ, ಪ್ರಸಿದ್ಧನಾಗುವ ಕನವರಿಕೆ ಇಲ್ಲ. ಬರಹವು ನೇರವಾಗಿ, ಪ್ರಾಮಾಣಿಕವಾಗಿ ಇದೆ. ಭಾಷೆಯ ಸರಳತೆ, ವಿಚಾರದ ಸ್ಪಷ್ಟತೆ ಅಭಿವ್ಯಕ್ತಿ ಸೌಂದರ್ಯವನ್ನು ಹೆಚ್ಚಿಸಿದೆ. ತೀರ್ಮಾನಗಳನ್ನು ಹೇರದ ಮಾಗುವಿಕೆ ಇದೆ. ತಾನು ನಂಬಿದ ಸಿದ್ಧಾಂತ, ತತ್ವ, ಕಾರ್ಯಯೋಜನೆಗಳನ್ನು ಮರುಪರಿಶೀಲಿಸಿರುವ, ವಿಮರ್ಶೆಗೊಡ್ಡಿರುವ ಮುಕ್ತತೆಯೂ ಇದೆ.

ಇವೆಲ್ಲ ಕಾರಣಗಳಿಗಾಗಿ ಇದು ಓದಲೇಬೇಕಾದ ಪುಸ್ತಕವಾಗಿದೆ.

ಕ್ರಾಂತಿಯ ಕನಸು

ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ಬಂಗಾರ್‌ಮಾವ್ ಹಳ್ಳಿಯಲ್ಲಿ, ಅರಕ್ ಎಂಬ ಅತಿಸಣ್ಣ ಹಿಂದುಳಿದ ಸಮುದಾಯದ ಬಡಕುಟುಂಬದಲ್ಲಿ ಜನಿಸಿದ ರಾಮಚಂದ್ರ ಸಿಂಗ್ ಬಾಲ್ಯದಿಂದಲೇ ಕಮ್ಯುನಿಸ್ಟ್ ನಾಯಕರ ಪ್ರಭಾವಕ್ಕೊಳಗಾದರು. ಕಾನ್ಪುರದಲ್ಲಿ ಪ್ರೌಢಶಾಲೆ ಓದುವಾಗ ಸಮಸಮಾಜದ ಕನಸುಗಳಿಗೆ ಮತ್ತಷ್ಟು ಹತ್ತಿರವಾದರು. 14 ವರ್ಷದ ವಿದ್ಯಾರ್ಥಿಯಾಗಿದ್ದಾಗಲೇ ಸಿಪಿಐ(ಎಂ) ಸೇರಿದ ಹುಡುಗನನ್ನು ‘ಪಾರ್ಟಿ ಬಚ್ಚಾ’ (ಪಾರ್ಟಿ ಹುಡುಗ) ಎಂದೇ ಎಲ್ಲ ಪ್ರೀತಿಯಿಂದ ಕರೆಯುತ್ತಿದ್ದದ್ದು. ಸಿಪಿಐ(ಎಂ) ಜಿಲ್ಲಾ ಸಮಿತಿಯಲ್ಲಿದ್ದ ಸಿಂಗ್ ಪಕ್ಷ ಒಡೆದು ಹೋಳಾದ ನಂತರ ಸಿಪಿಐ-ಎಂಎಲ್ (ಮಾರ್ಕ್ಸಿಸ್ಟ್, ಲೆನಿನಿಸ್ಟ್) ಜೊತೆಯಿದ್ದರು. ಬಂಗಾಳದಲ್ಲಿ ಚಾರು ಮಜುಂದಾರರಿಂದ ನಕ್ಸಲ್‌ಬರಿ ಭೂಹೋರಾಟ ಶುರುವಾದಾಗ ಅದು ಕಾಮ್ರೇಡ್ ಸಿಂಗ್ ಅವರೂ ಸೇರಿದಂತೆ ಬಿಸಿರಕ್ತದ ತರುಣರನ್ನು ಸೂಜಿಗಲ್ಲಿನಂತೆ ತನ್ನೆಡೆಗೆ ಸೆಳೆಯಿತು. ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು, ತಕ್ಷಣದ ಬದಲಾವಣೆ ಸಾಧ್ಯವಾಗಿಸುವಂಥ ಆಯಕಟ್ಟಿನ ಕೆಲಸ ಮಾಡಬೇಕು ಎಂಬ ಗುಂಗಿನ ತರುಣ ಮನಸ್ಥಿತಿಗೆ ಚಾರು ಅವರ ‘ವರ್ಗಶತ್ರು ವಿನಾಶ ಅಭಿಯಾನ’ ಆಪ್ಯಾಯಮಾನವಾಯಿತು. ನಕ್ಸಲ್‌ಬಾರಿ ಎಂಬ ಪುಟ್ಟ ಊರಿನಿಂದ ಭೌಗೋಳಿಕವಾಗಿ ಬಲುದೂರವಿದ್ದ ಪ್ರದೇಶಗಳಿಗೂ ಹೋರಾಟದ ಸ್ಫೂರ್ತಿ, ಕಾವು ತಲುಪಿತು.

ಆಗ ಸ್ವತಂತ್ರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸಾವಿರಾರು ಎಕರೆ ಕೃಷಿಭೂಮಿ ಹೊಂದಿದ್ದ ಭಾರೀ ಭೂಮಾಲೀಕರಿಂದ ದುಡಿಯುವ ರೈತರ ಶೋಷಣೆ ನಡೆಯುತ್ತಿತ್ತು. ಜೀತದಾಳುಗಳಾಗಿ ದೈನೇಸಿ ಸ್ಥಿತಿಯಲ್ಲಿದ್ದ ರೈತರ ಬವಣೆ ಹೋರಾಟಗಾರರು, ವಿದ್ಯಾರ್ಥಿಗಳನ್ನು ಸೆಳೆಯಿತು. ಚಾರು ಅವರ ‘ವರ್ಗಶತ್ರು ವಿನಾಶ ಅಭಿಯಾನ’ಕ್ಕೆ ಬೆಂಬಲವಾಗಿ ಅಲ್ಲಲ್ಲಿ ಜಮೀನ್ದಾರರ ಹತ್ಯೆಗಳಾಗತೊಡಗಿದವು. ಜಮೀನ್ದಾರರ ಅಕ್ರಮ ಭೂಮಿಯನ್ನೆಲ್ಲ ರೈತರಿಗೆ ಹಂಚಲಾಯಿತು. ಹತ್ಯೆಯಲ್ಲಿ ಭಾಗಿಗಳಾದವರು ಕ್ರಾಂತಿಕಾರಿ ‘ನಕ್ಸಲೈಟ’ರೆಂದು ಕೆಲವೆಡೆ ರಾಬಿನ್‌ಹುಡ್ ಪಟ್ಟ ಪಡೆದರೆ, ಪ್ರಭುತ್ವ-ಪೊಲೀಸರಿಂದ ಉಗ್ರಗಾಮಿಗಳೆಂದು ಗುರುತಿಸಲ್ಪಟ್ಟರು.

ಅಂಥಕಾಲದಲ್ಲಿ ಕಾಮ್ರೇಡ್ ರಾಮಚಂದ್ರ ಸಿಂಗ್ ಅವರ 12 ಜನರ ತಂಡ ಬಂಗಾರ್‌ಮಾವ್‌ನಿಂದ ೧೫ ಕಿಮೀ ದೂರದಲ್ಲಿದ್ದ ಬಖೌರಾ ಹಳ್ಳಿಯ ಶೋಷಕ ಜಮೀನ್ದಾರನನ್ನು ‘ಇಲ್ಲ’ವಾಗಿಸಿದರು. ಬಖೌರಾದ ಸತ್ಯಪಾಲ ಕೂಡಾ ಹತ್ಯೆಯಲ್ಲಿ ಭಾಗಿಯಾಗಿದ್ದ. ಮೂರೇ ದಿನ, ಪೊಲೀಸರು ಹತ್ಯೆ ಮಾಡಿದವರನ್ನು ಬಂಧಿಸಿದರು. ಹರ್ದೋಯ್‌ನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸಿಂಗ್ ಅವರನ್ನು ಅರ್ಧ ಡಜನು ತನಿಖಾಧಿಕಾರಿಗಳು ಸಾಮ, ದಾನ, ಭೇದ, ದಂಡ ಉಪಾಯಗಳ ಬಳಸಿ ವಿಚಾರಣೆ ನಡೆಸಿದರು. ಮೈತುಂಬ ಗಾಯ, ನೋವುಗಳೊಡನೆ ಸಿಂಗ್ ಹರ್ದೋಯ್ ಜೈಲಿಗೆ ಬಂದಿಳಿದರು.

ಕ್ರಾಂತಿಯ ಕನಸಿನ ದಾರಿಯು ಸಿಂಗ್ ಅವರನ್ನು ಅಪರಾಧಿಯಾಗಿಸಿತು. ಬಖೌರಾ ಗ್ರಾಮವಾಸಿ ಸತ್ಯಪಾಲನಿಗೆ ಮರಣದಂಡನೆ ವಿಧಿಸಲ್ಪಟ್ಟರೆ, ಇತರರಿಗೆ ಜೀವಾವಧಿ ಜೈಲು ಶಿಕ್ಷೆಯಾಯಿತು. ಅವಮಾನ, ಹಿಂಸೆ, ಘೋರ ಅಪರಾಧಿ ಎಂಬ ಹಣೆ ಪಟ್ಟಿ, ಕಾಲುಗಳಿಗೆ 28 ತಿಂಗಳು ಕಬ್ಬಿಣದ ಸಂಕಲೆ, ಬೈಗುಳ, ಹಸಿವೆ.. ಇವೆಲ್ಲ ಅವರ ತಾರುಣ್ಯದ ದಿನಗಳನ್ನು ಕಸಿದುಕೊಂಡವು. ಒಂದೇ ಒಂದು ಹತ್ಯೆಯ ಭಾಗೀದಾರಿಕೆಯಿಂದ ಬದುಕನ್ನೇ ಮುಡಿಪಾಗಿಟ್ಟ ಹೋರಾಟಗಾರನ ಕನಸುಗಳೆಲ್ಲ ಕರಗಿಹೋದವು. 1970ರಿಂದ 1983ರವರೆಗೆ ತರುಣನೊಬ್ಬನ ಕ್ರಿಯಾಶೀಲತೆಯನ್ನು ಸ್ವತಂತ್ರ ಭಾರತದ ಜೈಲಿನ ಗೋಡೆಗಳು ಹೊಸಕಿ ಹಾಕಿದವು.

ಆದರೆ ಕಂಗೆಡದ ಸಿಂಗ್, ಜೈಲಿನ ಹಿಂಸೆಯನ್ನು ದಿಟ್ಟವಾಗಿ ಎದುರಿಸಿದರು. ಹಿಂಸಾರೂಪಿಗಳೇ ಆಗಿದ್ದ ಆಫೀಸರರೆದುರು ನೇರವಾಗಿ ನಿಂತು ಮಾತನಾಡಿದರು. ಪರಿಣಾಮವಾಗಿ ಇನ್ನಷ್ಟು ಶಿಕ್ಷೆ ಪಡೆದರು. ಘೋಷಣೆ ಕೂಗುತ್ತ ಜೈಲಿನೊಳಬಂದ ಗಾಯಾಳು ಸಿಂಗ್ ಮಹಾ ಅಪಾಯಕಾರಿ ಖೈದಿಯೆಂದು ಎರಡೂವರೆ ವರ್ಷ ಕಾಲಿಗೆ ಕೋಳ ತೊಡಿಸಿ ನಡೆಸಿದರು. ಇಂಥವೆಲ್ಲ ಅಸಹನೀಯ ಅನುಭವಗಳನ್ನು ಸಿಕ್ಕ ಹಾಳೆಗಳ ಮೇಲೆಲ್ಲ ಪುಟಗಟ್ಟಲೆ ಬರೆದಿಟ್ಟ ಸಿಂಗ್, ತಾವಿದ್ದ ಜೈಲುಗಳ ಪರಿಸ್ಥಿತಿ, ಅಧಿಕಾರಿಗಳು, ಕೆಟ್ಟ ಆಹಾರ, ಭ್ರಷ್ಟತೆ, ಅಷ್ಟಿಷ್ಟು ಅನುಕಂಪ ಎಲ್ಲವನ್ನೂ ದಾಖಲಿಸಿದರು. ಗುಟ್ಟಾಗಿ ಹತ್ತಿ ಲಡಿಗಳ ನಡುವೆ ಬರೆದದ್ದನ್ನು ಸಂರಕ್ಷಿಸಿ ಜೈಲಿನಿಂದ ಹೊರಗೆ ಕಳ್ಳಸಾಗಣೆ ಮಾಡಿದರು.

ಹೀಗೆ, 13 ವರ್ಷ ಕಾಲ ಈ ಜೈಲಿನಿಂದ ಆ ಜೈಲಿಗೆ; ನೆಲದಿಂದ ಕಲ್ಲು ಬೆಂಚಿಗೆ, ವಾರ್ಡಿನಿಂದ ಒಳಕೋಣೆಗಳಿಗೆ ತರುಣ ರಾಮಚಂದ್ರ ಸಿಂಗ್ ಅಡ್ಡಾಡಿದ. ಟಿಬಿ, ಜಾಂಡೀಸ್, ಅಪೌಷ್ಟಿಕತೆ, ಟೈಫಾಯ್ಡ್, ಹಸಿವೆ, ಪ್ರೇಮ, ವಿರಹ, ವಿಷಣ್ಣತೆ, ಕನಸು, ಆಸೆ, ಕೆಚ್ಚು ಎಲ್ಲವನ್ನು ನುಂಗಿ ಬದುಕಿದ. ಜೈಲುವಾಸಿಯಾಗಿದ್ದಾಗಲೇ ಮೊಗ್ಗಾಗಿದ್ದ ಪ್ರೇಮವರಳಿ ‘ಮುನ್ನಿ’ ರಾಮದುಲಾರಿಯನ್ನು ಮನಸ್ಸಾಕ್ಷಿಯಾಗಿ ವಿವಾಹವಾದ. ಕ್ರಾಂತಿಗೆ ಪ್ರೇಮ, ಹೆಣ್ಣು ಇವೆಲ್ಲ ಅಡ್ಡಿಯೆಂದು ಜೊತೆಗಾರರು ಟೀಕಿಸಿದಾಗ ಪ್ರೀತಿ ಮತ್ತು ಕ್ರಾಂತಿ ವಿರುದ್ಧ ಪದಗಳಾದರೆ ತಾನು ಕ್ರಾಂತಿಕಾರಿಯೇ ಅಲ್ಲವೆಂದು ವಾದಿಸಿದ. ಜೈಲಿನಲ್ಲಿದ್ದವನಿಗಾಗಿ ಮನೆಬಿಟ್ಟು ಓಡಿಬಂದಿದ್ದ ಪುಟ್ಟ ಗೆಳತಿ, ದೀರ್ಘಾವಧಿಯ ಜೈಲುಶಿಕ್ಷೆಗೆ ಬೇಸರಗೊಂಡೋ, ಭವಿಷ್ಯ ಕುರಿತು ಆತಂಕಗೊಂಡೋ ಅಂತೂ ಕಾರಣವನ್ನೂ ಹೇಳದೆ ಒಂದು ದಿನ ಅವರನ್ನು ತೊರೆದಳು. ಬೇರೊಬ್ಬರೊಡನೆ ಹೋಗಿಬಿಟ್ಟಳು. ಪ್ರೇಮವೈಫಲ್ಯದ ನೋವು, ಹತಾಶೆಯ ಜೊತೆಗೆ ದೈಹಿಕ ಕಾಯಿಲೆಯ ಸಂಕಟವನ್ನೂ ಅನುಭವಿಸುತ್ತ ಅತಿಕಷ್ಟದ ದಿನಗಳನ್ನು ಸಿಂಗ್ ಕಳೆದರು. ಜೈಲೆಂಬುದು ತನ್ನ ಪಾಲಿಗೆ ಎಂದೂ ಮುಗಿಯದ ನರಕ ಎನಿಸುವ ಹೊತ್ತಿಗೇ..

1983, ಸೆ. 29. ಇದ್ದಕ್ಕಿದ್ದಂತೆ ಫೈಜಾಬಾದಿನ ಜೈಲರನು ಅವರು ಬಿಡುಗಡೆಯಾಗಿರುವುದಾಗಿ ತಿಳಿಸಿದಾಗ ನಂಬುವುದೇ ಕಷ್ಟವಾಯಿತು. ಜೈಲಿನಿಂದ ಬೇಲ್ ಮೇಲೆ ಹೊರಬಂದಿದ್ದ ಹಿರಿಯ ಕಾಮ್ರೇಡ್ ಹತ್ತಾರು ವರ್ಷ ಜೈಲಿನಲ್ಲಿ ಕಳೆದ ಸಂಗಾತಿಗಳನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಜೈಲಿನ ಆವರಣದಿಂದ ಹೊರಬಂದವರು ಬಿಡುಗಡೆಯು ನಿಜವೋ, ಕನಸೋ ಎಂದು ಮತ್ತೆಮತ್ತೆ ತಿರುಗಿ ನೋಡಿದರು. ಪೊಲೀಸರು ಇನ್ನೇನು ಅಟ್ಟಿಸಿಕೊಂಡು ಬರುವರೆಂಬ ಭ್ರಮೆಗೊಳಗಾದರು. ಆದರೆ ಇಲ್ಲ, ಬಿಡುಗಡೆಯೆಂಬ ಬಹುದಿನಗಳ ಕನಸು ನನಸಾಗಿತ್ತು.

ಜೈಲಿನಿಂದ ಹೊರಬಂದವರನ್ನು ಸ್ವಾಗತಿಸಲು ಮನೆಯವರಾಗಲೀ, ಪ್ರೇಮಿಯಾಗಲೀ ಯಾರೂ ಇರಲಿಲ್ಲ. ಏಕಾಂಗಿಯಾಗಿ ಕಾನ್ಪುರ ತಲುಪಿ ವೃದ್ಧೆ ತಾಯಿಯನ್ನು ಭೇಟಿಯಾದರು. ವಿವಾಹಿತನೊಬ್ಬನೊಡನೆ ದೆಹಲಿ ಸೇರಿ, ಹೆಸರು ಬದಲಿಸಿಕೊಂಡು ಒಂದು ಮಗುವಿನ ತಾಯಾಗಿದ್ದ ಮುನ್ನಿಯನ್ನು ಹುಡುಕಿ ಭೇಟಿಯಾದರು. ಆ ಸಂದರ್ಭವನ್ನು ಸಿಂಗ್ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅವಳಿಗೆ ಶುಭಹಾರೈಸಿ ಬಂದವರು ಬದುಕು ಕಟ್ಟಿಕೊಳ್ಳಲು ದುಡಿಮೆ ಮಾಡುತ್ತ ಪಕ್ಷಕ್ಕಾಗಿಯೂ ದುಡಿದರು. ಸಿಪಿಐ (ಎಂಎಲ್) ಜನಶಕ್ತಿಯಲ್ಲಿ ಕೆಲಕಾಲ ಇದ್ದ ಸಿಂಗ್ ನಂತರ ಸಿಪಿಐ (ಎಂಎಲ್) ರೆಡ್‌ಸ್ಟಾರ್‌ನಲ್ಲಿ ಕ್ರಿಯಾಶೀಲರಾದರು. ಮದುವೆಯಾಗಿ ಮಕ್ಕಳ ತಂದೆಯೂ ಆದರು.

ಬಿಡುಗಡೆಯಾಗಿ ಬಂದನಂತರ ಜೈಲು ಬರಹವನ್ನು ಧಾರಾವಾಹಿಯಾಗಿ ಹಿಂದಿ ನಿಯತಕಾಲಿಕದಲ್ಲಿ ಪ್ರಕಟಿಸಿದರು. ನಂತರ ‘ಸಮಕಾಲೀನ ದಸ್ತಾವೇಜ್’ ಎಂಬ ಜನಪರ ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಪೂರ್ಣಪಾಠವಾಗಿ ಪ್ರಕಟವಾಯಿತು. ಹಿಂದಿಯ ಬರಹವು 2017ರಲ್ಲಿ ಇಂಗ್ಲಿಷ್‌ಗೆ ಅನುವಾದಗೊಂಡು ‘ಥರ್ಟೀನ್ ಇಯರ್ಸ್: ಎ ನಕ್ಸಲೈಟ್ಸ್ ಪ್ರಿಸನ್ ಡೈರಿ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಮಾರ್ಚ್ 2, 2018ರಂದು ಬೆಳಗಿನ ಜಾವ ಕೊನೆಯುಸಿರೆಳೆದ ಸಿಂಗ್ ಅವರ ಹೋರಾಟದ ಬದುಕು ಕೆಂಪು ಪುಸ್ತಕದ ಒಂದು ಪುಟವಾಗಿ ಚರಿತ್ರೆಗೆ ಸಂದಿದೆ.



ಹಿಂಸಾವತಾರ




ಆಳುವ ವ್ಯವಸ್ಥೆಯ ಭಾಗವಾಗಿ ನ್ಯಾಯ ವ್ಯವಸ್ಥೆಯಿದೆ. ನ್ಯಾಯವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಶಿಕ್ಷೆ ನೀಡುವ ಜೈಲುಗಳಿವೆ. ಭಗತ್ ಸಿಂಗ್ ತನ್ನ ಜೈಲು ಡೈರಿಯಲ್ಲೊಂದು ಕಡೆ ಬರೆದಿರುವಂತೆ, ಸರಿತಪ್ಪುಗಳ ಕಾನೂನಿನಲ್ಲಿ ‘ಸರಿ’ಯನ್ನು ಉಲ್ಲಂಘಿಸುವ ವ್ಯಕ್ತಿ ಒಂದು ಸಾಲಕ್ಕೆ, ಋಣಕ್ಕೆ ಒಳಪಡುತ್ತಾನೆ. ನ್ಯಾಯವ್ಯವಸ್ಥೆ ಆ ಋಣ ಶಿಕ್ಷೆಯ ರೂಪದಲ್ಲಿ ಸಂದಾಯವಾಗಬೇಕು ಎನ್ನುತ್ತದೆ. ಅದರ ಉದ್ದೇಶ ಭಂಗಗೊಂಡ ಕಾನೂನನ್ನು ತೃಪ್ತಿಗೊಳಿಸುವುದು. ಶಿಕ್ಷೆ ಎನ್ನುವುದೇ ಒಂದು ‘ತಪ್ಪು’ ಆದರೂ ಒಳ್ಳೆಯದನ್ನು ಸಾಧಿಸಲು ಕೈಗೊಂಡ ‘ಸರಿ’ ಎಂಬ ಸಮರ್ಥನೆ ಅದಕ್ಕಿದೆ. ಬಹಳಷ್ಟು ಜನ ಶಿಕ್ಷೆ ಎನ್ನುವುದು ಎಸಗಲೇಬೇಕಾದ ಅವಶ್ಯಕ ತಪ್ಪು ಎಂದೇ ಭಾವಿಸಿದ್ದಾರೆ.

ಆದರೆ ಮನುಷ್ಯನ ಅಮಾನವೀಯತೆಯನ್ನು ನಿಯಂತ್ರಿಸಲು ತೆರೆಯಲ್ಪಟ್ಟ ಜೈಲುಗಳೇ ಪಾಶವೀ ಹಿಂಸಾಕೂಪಗಳಾಗಿರುವ ವೈರುಧ್ಯ ನಮ್ಮ ಮುಂದಿದೆ. ಕಠೋರ ಶಿಕ್ಷೆಯ ಪರಿಣಾಮವಾಗಿ ಅಪಾಯಕಾರಿ ಹಾಗೂ ಹತಾಶ ಅಪರಾಧಿಗಳ ಗುಂಪು ಉದ್ಭವವಾಗುತ್ತದೆ. ವಿಶ್ವಾದ್ಯಂತ ಎಲ್ಲ ದೇಶಗಳ ಜೈಲುವಾಸಿಗಳು ತಮ್ಮ ದಿನಚರಿ ಬರೆದಿಟ್ಟರೆ ಅದು ಶಿಕ್ಷಾವ್ಯವಸ್ಥೆಯ ನಿರುಪಯುಕ್ತತೆಯನ್ನೂ, ಅಪಾಯವನ್ನೂ ತಿಳಿಸಿಯಾವು. ಜೈಲಿನಿಂದ ಹೊರಬಂದ ವ್ಯಕ್ತಿತ್ವಗಳು ಏನೇನಾಗಿ ಬದಲಾದವು ಎಂದು ನೋಡಿದರೆ ವ್ಯವಸ್ಥೆಯ ಪೊಳ್ಳುತನ ಅರಿವಾಗುತ್ತದೆ. ಸಮಾಜಕ್ಕಾಗಲೀ, ಬಂಧಿತರಿಗಾಗಲೀ, ಅವರ ಕುಟುಂಬಗಳಿಗಾಗಲೀ ಜೈಲು ವ್ಯವಸ್ಥೆಯಿಂದ ಕಿಂಚಿತ್ ಉಪಯೋಗವಿಲ್ಲವೆಂದಾದರೆ ಅದು ಏಕೆ ಮುಂದುವರೆದುಕೊಂಡು ಬಂದಿದೆ? ಮಾನವಹಕ್ಕುಗಳ ಯುಗದಲ್ಲಿ ಭೂಮಿಮೇಲಿರುವ ಲಕ್ಷಾಂತರ ಜೈಲುಗಳಲ್ಲಿ ಇಂದಿಗೂ ಪ್ರಚ್ಛನ್ನ ಹಿಂಸೆ ಏಕೆ ತಾಂಡವವಾಡುತ್ತಿದೆ? ಎಲ್ಲ ತರಹದ ಮೋಸ, ದೌರ್ಜನ್ಯ, ಅನ್ಯಾಯಗಳು ಜೈಲಿನೊಳಗೇ ಸಂಭವಿಸುತ್ತಿದ್ದರೂ ಅದಕ್ಕೆ ನಿಯಂತ್ರಣವಿಲ್ಲವೇ?

ಇಂತಹ ಹಲವಾರು ಪ್ರಶ್ನೆಗಳನ್ನು ಈ ಪುಸ್ತಕ ಎತ್ತುತ್ತದೆ. ಜೈಲಿನ ಪರಿಸ್ಥಿತಿ, ಚಾಲ್ತಿಯಲ್ಲಿರುವ ಶಿಕ್ಷೆಯ ಕುರಿತು ಕೆಲವು ದಿಗ್ಭ್ರಮೆಗೊಳಿಸುವ ಮಾಹಿತಿ ನೀಡುತ್ತದೆ. ಭಗತ್ ಸಿಂಗ್ ಕಾಲಕ್ಕೂ, ಈ ಕಾಲಕ್ಕೂ ಜೈಲುಗಳ ಪರಿಸ್ಥಿತಿಯಲ್ಲಿ ವ್ಯತ್ಯಾಸವಿಲ್ಲ ಎಂದು ಮನದಟ್ಟಾಗುತ್ತದೆ.

ಜೈಲಿನ ಹಿಂಸಾವತಾರ, ಲಂಚಾವತಾರ ನಮ್ಮ ಊಹೆಗೂ ನಿಲುಕಲಾರದು. ಖೈದಿಯೇ ಇರಲಿ, ಸಿಬ್ಬಂದಿಯೇ ಇರಲಿ, ಅಲ್ಲಿ ಮನುಷ್ಯ ಮನಸು ವಿಕಾಸಗೊಂಡು ಅರಳಲು ಸಾಧ್ಯವೇ ಇಲ್ಲ. ಒಮ್ಮೆ ಅಪರಾಧಿಯಾಗಿ ಹೋದವ ಮುಂದೆಂದೂ ಅಪರಾಧಿಯಾಗಿಯೇ ಇರುವಂತೆ ಮನಃಪರಿವರ್ತನೆ ಮಾಡಿಸುವ ಪರಿಸ್ಥಿತಿ ಜೈಲುಗಳಲ್ಲಿದೆ. ಮಾನವೀಯ ಗುಣಗಳನ್ನು ಸಂಪೂರ್ಣ ಕಳೆದುಕೊಂಡ ಸಿಬ್ಬಂದಿಗಳು ಖೈದಿಗಳನ್ನು ಮನಬಂದಂತೆ ನಡೆಸಿಕೊಳ್ಳುತ್ತ, ಎಣೆಯಿಲ್ಲದಷ್ಟು ಹಿಂಸಿಸುತ್ತ, ಎಗ್ಗಿಲ್ಲದೆ ಅನ್ಯಾಯವೆಸಗುತ್ತ ಜೈಲಿರಬೇಕಾದದ್ದೇ ಹಾಗೆಂಬ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಕ್ರೌರ್ಯ ಎಷ್ಟು ಹಾಸುಹೊಕ್ಕಾಗಿದೆಯೆಂದರೆ ಲಾಠಿ, ಬೆತ್ತ, ಕೋಳ, ಬೂಟು, ಸಲಿಕೆಗಳೇ ಮನುಷ್ಯರಿಗಿಂತ ಹೆಚ್ಚು ಮಾತನಾಡುತ್ತವೆ. ನೇರ ನಿಲ್ಲಲಿಲ್ಲ, ಕೆಲಸ ಬೇಗಬೇಗ ಮಾಡುವುದಿಲ್ಲ, ಗುರಾಯಿಸುವಂತೆ ನೋಡಿದ, ಪೂರ್ತಿ ತಿನ್ನಲಿಲ್ಲ ಇತ್ಯಾದಿ - ತಪ್ಪೇ ಅಲ್ಲದ ತಪ್ಪಿಗೆ ಚರ್ಮ ಸುಲಿವಂತೆ ಹೊಡೆತ ತಿನ್ನಬೇಕು. ಮಾಂಸದ ತುಂಡು ಹಾರಿಬೀಳುವಂತೆ, ಎಲುಬು ಮುರಿಯುವಂತೆ ನಿಷ್ಕಾರಣವಾಗಿ ಹೊಡೆತ ತಿನ್ನಬೇಕು. ನೋವೆಂದು ನರಳಿ, ಕೆಲಸ ನಿಧಾನವಾದರೆ ಬೆಲ್ಟಿನಿಂದಲೋ, ಬೂಟುಗಾಲಿನಿಂದಲೋ ಗಾಯದ ಮೇಲೇ ಹೊಡೆತ ತಿನ್ನಬೇಕು. ದೇಹದ ಅಣುಕಣವೂ ನೋವಿನಿಂದ ಚೀರುವಾಗ ಮತ್ತೆಮತ್ತೆ ಆಗುವ ನೋವುಗಳು ತಿಳಿಯುತ್ತಲೇ ಇರಲಿಲ್ಲ ಎಂದು ಒಂದೆಡೆ ಸಿಂಗ್ ಬರೆದಿದ್ದಾರೆ. ತಲೆ ಕೆಳಗಾಗಿ ಮರಕ್ಕೆ ಕಟ್ಟಿ ಹೊಡೆಯುವುದು (ಗುಮ್ಟಿ), ಬರೆ ಹಾಕುವುದು, ಗುದ್ದುವುದು, ಮಲಮೂತ್ರ ತುಂಬಿ ನಾರುವ ಒಂಟಿಸೆಲ್‌ಗಳ ಕತ್ತಲ ಕೂಪದಲ್ಲಿ ಬಿಸಾಡಿ ಹೊಡೆಯುವುದು, ತಿಂದರೂ ಹೊಡೆತ, ತಿನ್ನದಿದ್ದರೂ ಹೊಡೆತ. ಸುಮ್ಮನಿದ್ದರೆ ಹೊಡೆತ, ಅಯ್ಯೋ ಎಂದರೂ ಹೊಡೆತ, ತಿರುಗಿಬಿದ್ದರೆ ಲೆಕ್ಕವಿಲ್ಲದಷ್ಟು ಹೊಡೆತ. ಇಷ್ಟೆಲ್ಲ ಆದಮೇಲೆ ಅಷ್ಟಿಷ್ಟು ಮುಲಾಮು ಸವರಿಕೊಂಡು ಕೂಡಲೇ ಕಠಿಣ ಶ್ರಮದ ಕೆಲಸಕ್ಕೆ ತೆರಳಬೇಕು. ರುಚಿಯಿಲ್ಲದ ಕೆಟ್ಟ ಊಟ ಉಣ್ಣಬೇಕು. ಮುಳ್ಳುಕಂಟಿಯಲ್ಲರಳಿದ ಹುವ್ವಿನಂತೆ, ಜೈಲಿನಲ್ಲೂ ಇಂಥವರು ಇರಬಹುದಾ ಎನುವಂತೆ ಹಿಂಸಾ ಮಹಾಸಾಗರದ ನಡುವೆ ಅಲ್ಲೊಬ್ಬರು, ಇಲ್ಲೊಬ್ಬರು ತೋರಿಸುವ ಹನಿ ಪ್ರೀತಿಯಲ್ಲಿ ಕುಟುಕುಜೀವ ಹಿಡಿದಿಟ್ಟುಕೊಳ್ಳಬೇಕು.

ಖೈದಿಗಳೆಂದರೆ ಸಮಾಜಕ್ಕೆಷ್ಟು ಅಸಡ್ಡೆಯಿದೆಯೋ ಅದರ ನೂರು ಪಟ್ಟು ಜೈಲುಸಿಬ್ಬಂದಿಗಳಿಗಿದೆ. ಖೈದಿಗಳ ಲೆಕ್ಕದ ಮೊಟ್ಟೆ, ಹಾಲು, ಬೇಳೆಕಾಳು, ಹಣ್ಣನ್ನೆಲ್ಲ ಕಬಳಿಸಿ, ನೀರು ಸಾರು, ಅರೆಬೆಂದ ಅನ್ನ-ಚಪಾತಿ, ಹುಳ-ಕುಟ್ಟೆ-ಜಿರಲೆ ತೇಲುವ ಸಾಂಬಾರು ಬಡಿಸುತ್ತಾರೆ. ಖೈದಿ ಘನತೆಯಿಂದ ನಿಂತು ಅನ್ಯಾಯವನ್ನು, ಹಿಂಸೆಯನ್ನು ಪ್ರಶ್ನಿಸಿದರೆ; ಧೈರ್ಯವಾಗಿ, ತಾರ್ಕಿಕವಾಗಿ ಮಾತನಾಡಲು ಸಾಧ್ಯವಾದರೆ ಸಿಬ್ಬಂದಿಗಳ ಹಿಂಸಾರತಿ ಇಳಿಯಬಹುದಿತ್ತು. ಅವರು ಮನುಷ್ಯರಾಗಿ ಗೇರು ಬದಲಿಸಿಕೊಳ್ಳಬಹುದಿತ್ತು. ಆದರೆ ಅಷ್ಟು ಧೈರ್ಯವೂ ಉಳಿಯದಂತೆ ಸಿಬ್ಬಂದಿಗಳ ವರ್ತನೆಯಿರುತ್ತದೆ. ನಿರಂತರ ಹಿಂಸೆಗೀಡಾಗಿ ಕೆಲವರು ಭಕ್ತರಾಗುತ್ತಾರೆ, ಕೆಲವರು ಗುಲಾಮರಾಗುತ್ತಾರೆ, ಸುಳ್ಳರಾಗುತ್ತಾರೆ, ತಾವೂ ಹಿಂಸೆಗಿಳಿಯುತ್ತಾರೆ, ತಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳದಿದ್ದಾಗ ಮನುಷ್ಯತ್ವವನ್ನೇ ಮರೆಯುತ್ತಾರೆ. ಒಮ್ಮೆ ಅಪರಾಧಿಯಾಗಿ ಜೈಲು ಹೊಕ್ಕವರು ಸದಾ ಅಪರಾಧಿಯಾಗಿ ಉಳಿಯುವಂತಾಗುವುದು ಹೀಗೆ.

ವಿಚಾರಣಾಧೀನ ಖೈದಿ ಮತ್ತು ಶಿಕ್ಷೆ ಅನುಭವಿಸುವ ಖೈದಿಗಳಿಗೆ ಕೊಡುವ ಇಂಥ ಹಿಂಸೆಯನ್ನು ನಿಯಂತ್ರಿಸಲು ಯಾವ ಕಾನೂನೂ ನೆರವಿಗೆ ಬರುವುದಿಲ್ಲ. ಖೈದಿಗಳನ್ನು ರಕ್ಷಿಸುವವರು ಯಾರೆಂದರೆ ಯಾರೂ ಇರುವುದಿಲ್ಲ. ಪ್ರಶ್ನಿಸುವವರಿಗೆ ನಕ್ಸಲೈಟರೆಂಬ ಹಣೆಪಟ್ಟಿ ಹಚ್ಚಿ, ಆದಷ್ಟು ಹೆಚ್ಚು ಕಾಲ ಜೈಲಿನಲ್ಲಿ ಕೂಡಿಹಾಕುವ ಹುನ್ನಾರ ಆಳುವ ವರ್ಗಕ್ಕಿರುತ್ತದೆ.

ಹಿಂಸೆಗೆ ಅದೆಷ್ಟು ಸಹಸ್ರ ಮುಖಗಳು! ಕ್ರೌರ್ಯಕ್ಕೆ ಅದೆಷ್ಟು ಅವತಾರಗಳು!!




ಹಸಿವು, ಲೈಂಗಿಕತೆ, ಜಾತಿ.. 

ಈ ಪುಸ್ತಕ ಓದುವಾಗ ಒಂದಂತೂ ಧೃಢವಾಯಿತು: ಜೈಲು ಕಥನ ಎಂದರೆ ಅಮುಕ್ತರ ಹಸಿವಿನ ಕಥನ. ಜೈಲಿನ ಹಸಿವಿಗೆ ಕಾರಣ ಪ್ರಾಕೃತಿಕ ಬರವಲ್ಲ, ಅದು ಶಿಕ್ಷೆಯೆಂದು ಒತ್ತಾಯವಾಗಿ ಹೇರಲ್ಪಟ್ಟ ವಿಪತ್ತು. ಎಂದೇ ತೀವ್ರತೆಯೂ ಹೆಚ್ಚು. ಈ ಜಗತ್ತು ಹಸಿವಿನಿಂದ ಕಂಗೆಟ್ಟಿದೆ. ಅದರಲ್ಲು ಜೈಲು ಹಸಿವಿನ ಕೂಪವೇ ಆಗಿದೆ. ಮನುಷ್ಯರ ಹಸಿವು ಅನ್ನನೀರಿಗಾಗಿ ಇದೆ, ಮಾತ್ರವಲ್ಲ, ಒಂದು ಮುಷ್ಟಿ ಪ್ರೀತಿಗೆ, ಮನ್ನಣೆಗೆ, ಕಾಳಜಿಗೆ, ಅಧಿಕಾರಕ್ಕೆ, ಗೌರವಕ್ಕೆ, ಘನತೆಯ ಬದುಕಿಗಾಗಿಯೂ ಇದೆ. ಇವನ್ನೆಲ್ಲ ಸ್ವತಂತ್ರ ಸಮಾಜದ ಮನುಷ್ಯರಷ್ಟೆ ಅಲ್ಲ, ಅಮುಕ್ತರಾದ ಜೈಲುವಾಸಿಗಳೂ ಬಯಸುತ್ತಾರೆ.



ಅರೆಹೊಟ್ಟೆ ತುಂಬುವಷ್ಟೇ ಆಹಾರ, ತಣಿಯದ ನಾಲಿಗೆ, ತಿನ್ನಬಾರದಷ್ಟು ಕೆಟ್ಟ ರುಚಿಯ ಕೂಳು - ಇದರಲ್ಲೆ ಹಗಲಿರುಳು ಸವೆಸುವ ಖೈದಿಗಳು ಒಂದು ಒಳ್ಳೆಯ ಊಟಕ್ಕೆ, ತಿಂಡಿಗೆ ತಿಂಗಳುಗಟ್ಟಲೆ ಕಾಯುತ್ತಾರೆ. ಒಂದು ಪಾಯಸದ ಭಾಗ್ಯಕ್ಕಾಗಿ ಆಗಸ್ಟ್ ೧೫, ಜನವರಿ ೨೬ಕ್ಕೆ ಹಪಹಪಿಸುತ್ತಾರೆ. ನಾಲಗೆ ತಣಿಯದೆ ಎಂಥ ದೈನೇಸಿ ಸ್ಥಿತಿ ಮುಟ್ಟುವರೆಂದರೆ ಸಣ್ಣಪುಟ್ಟ ಕುರುಕಲು ತಿನಿಸುಗಳೇ ಅತ್ಯಮೂಲ್ಯ ಸಂಪತ್ತು. ಅವಕ್ಕಾಗಿ ಯುದ್ಧಗಳೇ ನಡೆಯುತ್ತವೆ. ಘನಘೋರ ಕ್ರಿಮಿನಲ್ಲುಗಳೂ ಬೀಡಿಗಾಗಿ, ಬೆಲ್ಲಕ್ಕಾಗಿ ಜೈಲಿನ ವಾರ್ಡರು, ಜೈಲರುಗಳೆದುರು ದೈನ್ಯರಾಗುತ್ತಾರೆ. ಮನೆಯವರು ತಂದುಕೊಟ್ಟ ಸೇಂಗಾ, ಕಡಲೆಕಾಳು, ಬೆಲ್ಲದ ತುಂಡು, ಬೀಡಿಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಾರೆ.

ಹೊಟ್ಟೆ ಹಸಿವಿನಂತೆಯೇ ಖೈದಿಗಳನ್ನು ಕಾಡುವ ಮತ್ತೊಂದು ಸಂಗತಿ ಲೈಂಗಿಕ ಹಸಿವು. ಈ ಕುರಿತು ಪುಸ್ತಕವು ಬೆಚ್ಚಿಬೀಳಿಸುವ ವಾಸ್ತವವನ್ನು ಹೊರಹಾಕಿದೆ. ಸರಳುಗಳ ಹಿಂದೆ ದೇಹವಾಂಛೆ ತಣಿಸುವ ದಾರಿಗಳಿಲ್ಲದ ಕಾರಣ ಅಸಹಜ, ವಿಕೃತ ಲೈಂಗಿಕತೆಗೆಳಸುವವರೇ ಹೆಚ್ಚು. ಗುಲಾಮರಾಗಿ, ಅವಮಾನಿತರಾಗಿ, ಹಸಿದವರಾಗಿ ಯಾವ ಸ್ವಾತಂತ್ರ್ಯವೂ ಇಲ್ಲದೆ ಹಿಂಸಾಸಾಗರದಲ್ಲಿ ಬದುಕುವವರ ಲೈಂಗಿಕ ತೃಪ್ತಿಯು ಹಿಂಸೆ, ವಿಕೃತಿಯ ದಾರಿಯನ್ನೇ ಹಿಡಿಯುವ ಸಾಧ್ಯತೆಯಿರುತ್ತದೆ. ಎಳೆಯ ಹುಡುಗರನ್ನು ಸಲಿಂಗ ರತಿಗೆ ಬಳಸುವುದು, ಅವ ತನಗಷ್ಟೆ ವಿಧೇಯನಾಗಿರಬೇಕೆಂದು ಒತ್ತಾಯ ಹೇರುವುದು, ಕೂಗಾಡುವ ಹುಡುಗರ ಇಷ್ಟಾನಿಷ್ಟ ಲೆಕ್ಕಿಸದೆ ಗುಂಪುಗುಂಪಾಗಿ ಸಲಿಂಗರತಿಗೆಳಸುವುದು ಜೈಲಿನಲ್ಲಿ ತುಂಬ ಸಾಮಾನ್ಯ. ಖೈದಿಗಳು ದಿನನಿತ್ಯ ಆಡುವ ಭಾಷೆಯಲ್ಲಿ ಉಳಿದ ಸಮಾಜ ಅಶ್ಲೀಲ ಎನ್ನುವ, ಊಹಿಸಲಾರದಷ್ಟು ಅಸಹ್ಯ ಲೈಂಗಿಕ ಪ್ರತಿಮೆ, ಸಂಕೇತ, ಹಾವಭಾವಗಳಿರುತ್ತವೆ. ಆಡುವ ಮೂಲಕವೇ ತೃಪ್ತಿ ಹೊಂದುವರೋ ಎನ್ನುವಂತೆ ಅಂಥ ಸನ್ನೆಗಳು ಬಳಸಲ್ಪಡುತ್ತವೆ. ಜೈಲಿನ ಪ್ರಭಾವಿ ಗೂಂಡಾ ಖೈದಿಗಳಿಗೆ ಬೇರೆಬೇರೆ ಸೆಲ್‌ಗಳಿಂದ, ಬ್ಯಾರಕ್‌ಗಳಿಂದ ಹುಡುಗರನ್ನು ಕೆಲವೊಮ್ಮೆ ಸಿಬ್ಬಂದಿಯೇ ಸಪ್ಲೈ ಮಾಡುವುದೂ ಇದೆಯಂತೆ!

ರಾಮಚಂದ್ರ ಸಿಂಗ್ ಗಮನಿಸಿರುವಂತೆ ಜೈಲಿನಲ್ಲೂ ಜಾತಿ ಕೆಲಸ ಮಾಡುತ್ತದೆ. ಗುಡಿಸುವ, ವರೆಸುವ, ಶೌಚಾಲಯ ಬಳಿಯುವ, ಚರಂಡಿ ತೊಳೆಯುವ ‘ಕೀಳು’ ಕೆಲಸಗಳನ್ನು ತಳಸಮುದಾಯದ, ಬಡ ಖೈದಿಗಳಿಂದ ಮಾಡಿಸಲಾಗುತ್ತದೆ. ಹಲ್ಲೆ-ಕೊಲೆ ಎಸಗಿ ಜೈಲು ಪಾಲಾಗಿರುವ ಪುರೋಹಿತರು, ಸಿರಿವಂತ ಜಮೀನ್ದಾರರಾಗಿದ್ದವರು ವಾರ್ಡರ್‌ಗೆ ತಲೆ ಲೆಕ್ಕ ಹಾಕಲು ಸಹಾಯ ಮಾಡುವುದು, ವಾಚ್‌ಮನ್‌ಗಳಿಗೆ ಸಹಾಯ ಮಾಡುವುದು, ಲೆಕ್ಕ ಇಡುವುದರಲ್ಲಿ ಸಹಾಯ ಮಾಡುವುದು, ಕೈದಿಗಳ ಸುದ್ದಿ ಸಂಗ್ರಹಿಸಿ ಹೇಳುವುದು ಮುಂತಾದ ಪ್ರಭಾವಿ ಕೆಲಸಗಳನ್ನು ಮಾಡುತ್ತಾರೆ. ಒಂದುದಿನ ಒಬ್ಬ ಬ್ರಾಹ್ಮಣ ಅಪರಾಧಿ ಹೂ ಕೊಯ್ದು ಜೈಲರನ ಎದುರಿಗಿಟ್ಟು, ಮಂತ್ರ ಹೇಳಿ ಆಶೀರ್ವದಿಸಿ, ತನಗೆ ಬರುವುದು ಇದೊಂದೇ ಕೆಲಸ; ತನಗೆ ಆ ಕೆಲಸವನ್ನೇ ಕೊಡಬೇಕೆಂದು ಪ್ರಾರ್ಥಿಸಿದ. ತಗೋ, ಆತನಿಗೆ ಜೈಲಿನ ದೇವರುಗಳ ಪೂಜಿಸುವ ಕೆಲಸ ಸಿಕ್ಕೇಬಿಡುತ್ತದೆ!

ಭಾರತೀಯ ಸಮಾಜದಲ್ಲಿ ಜಾತಿ ಎನ್ನುವುದು ಪರಮ ವಾಸ್ತವ. ಆ ಮಾತು ಜೈಲಿನಲ್ಲೂ ನಿಜ.

ಸಾಕ್ಷಾತ್ಕಾರ

ನಕ್ಸಲರು ಸಿರಿವಂತ ಜಮೀನ್ದಾರ, ರಾಜಕಾರಣಿ, ಬಂಡವಾಳಶಾಹಿ ಮತ್ತು ಪೊಲೀಸರ ಹತ್ಯೆ ಮಾಡುವುದು ವರ್ಗನಾಶದ ಒಂದು ಮಾರ್ಗವೆಂದು ನಂಬಿದರು. ಆ ಮಾರ್ಗ ಕುರಿತು ಎದ್ದ ಭಿನ್ನಮತಗಳು ಪಕ್ಷ ಒಡೆಯಲು ಕಾರಣವಾಯಿತೇ ಹೊರತು ಸಶಸ್ತ್ರ ಹೋರಾಟಕ್ಕಿದ್ದ ಒಲವು ಕಡಿಮೆಯಾಗಲಿಲ್ಲ. ಎಂದೇ ಕೆಲವೆಡೆಗಳಲ್ಲಿ ಸಶಸ್ತ್ರ ಹೋರಾಟ ಇನ್ನೂ ಮುಂದುವರೆದಿದೆ.

ಹಿಂಸೆಯ ಆಧಾರದ ಮೇಲೇ ನಡೆಯುವ ವ್ಯವಸ್ಥೆಯನ್ನು ಬದಲಿಸಲು ಹಿಂಸೆಯೇ ಸೂಕ್ತ ಮಾರ್ಗ ಎಂದು ಕಾಣಬಹುದು. ಹಿಂಸಾತ್ಮಕ ಸಮಾಜವನ್ನು ಬೆಚ್ಚಿ ಬೀಳಿಸಿ, ಗಾಬರಿ ಹುಟ್ಟಿಸಿ, ದಾರಿಗೆ ಬರುವಂತೆ ಮಾಡಲು ಹಿಂಸಾಮಾರ್ಗವೇ ಸುಲಭ ಎನಿಸಬಹುದು. ಆದರೆ ಹಿಂಸೆಯ ಗಿಡವನ್ನು ಯಾರು ನೆಟ್ಟರೂ ಅದರ ಫಲ ಅಮೃತವಾಗಿರುವುದಿಲ್ಲ. ಇದನ್ನು ಸಿಂಗ್ ಅರಿತರು.

ಕಮ್ಯುನಿಸಂಗೆ ಕಡೆತನಕ ನಿಷ್ಠರಾಗಿದ್ದ ಕಾ. ಸಿಂಗ್, ಅದನ್ನು ಕಾರ್ಯರೂಪಗೊಳಿಸುವುದರಲ್ಲಿ ಇರುವ ಸೈದ್ಧಾಂತಿಕ ಲೋಪ, ದ್ವಂದ್ವಗಳನ್ನು ಮತ್ತೆಮತ್ತೆ ಪ್ರಶ್ನಿಸಿಕೊಂಡಿದ್ದಾರೆ. ಈ ಕುರಿತು ಜೈಲಿನ ಹಿರಿಯ ಕಾಮ್ರೇಡುಗಳೊಂದಿಗೆ ವಾದಿಸಿದ್ದಾರೆ. ‘ವೈಯಕ್ತಿಕ ಹತ್ಯೆಗಳಿಂದ ಕ್ರಾಂತಿಯಾಗುವುದಿಲ್ಲ, ಅದು ಶೌರ್ಯ ಮತ್ತು ನಾಯಕತ್ವದ ವ್ಯಕ್ತಿಪೂಜೆಗೆ ಕಾರಣವಾದೀತು ಅಷ್ಟೆ ಎಂಬ ನನ್ನ ನಂಬಿಕೆಗೆ ನಾನು ಅಂಟಿಕೊಂಡಿದ್ದೆ. ಒಂದು ಕ್ರಾಂತಿ ಸಫಲವಾಗಬೇಕಾದರೆ ಜನಸಮುದಾಯಕ್ಕೆ ಸೈದ್ಧಾಂತಿಕ ವಿಚಾರ ಹರಡಿ ಜಾಗೃತಿ ಮೂಡಬೇಕು, ಕ್ರಾಂತಿ ಜನರ ಸಾಮೂಹಿಕ ಪ್ರಯತ್ನದಿಂದ ಆಗಬೇಕೇ ಹೊರತು ಬೆರಳೆಣಿಕೆಯಷ್ಟು ಕಾರ್ಯಕರ್ತರ ಅಸ್ಪಷ್ಟ, ಚದುರಿದ ಹೋರಾಟದಿಂದಲ್ಲ. ಚರಿತ್ರೆಯ ಗತಿಯನ್ನು ನಾವು ಒತ್ತಾಯದಿಂದ ಹೇರಲಾರೆವು. ಕ್ರಾಂತಿಯು ಸಂಭವಿಸುವುದಾದರೆ ಅದು ಒಂದು ಅನಿವಾರ್ಯವಾಗಿ ಬಂದೊದಗುತ್ತದೆ. ಎಂದೇ ಎಷ್ಟೇ ಸದುದ್ದೇಶವುಳ್ಳದ್ದಾಗಿದ್ದರೂ, ತಕ್ಷಣ ಗುರಿ ಮುಟ್ಟಿದ ಭ್ರಮೆ ಹುಟ್ಟಿಸಿದರೂ, ಇಡಿಯ ಸಮಾಜವನ್ನು ಬದಲಾವಣೆಗೆ ಪ್ರೇರೇಪಿಸಿ ಸಿದ್ಧಗೊಳಿಸದೆ ಹೋದಲ್ಲಿ ಎಲ್ಲ ಹತ್ಯೆ, ಬಲಿದಾನಗಳೂ ವಿಫಲವಾಗುವವು. ಆಗ ಸಮಸಮಾಜ ಎನ್ನುವುದು ಅನವರತದ ಕನಸಾಗಿಯೇ ಉಳಿಯುವುದು’ ಎಂಬ ಅಭಿಪ್ರಾಯ ದಾಖಲಿಸಿದ್ದಾರೆ.

ಕಾಮ್ರೇಡ್ ಸಿಂಗ್ ಅವರಿಗೆ ಜೈಲಿನಲ್ಲಿ ಸಾಕ್ಷಾತ್ಕಾರವಾದದ್ದಕ್ಕೆ ಈ ಪುಸ್ತಕವೇ ಸಾಕ್ಷಿಯಾಗಿದೆ. ನಾಯಕತ್ವದ ಬಗೆಗಿನ ಅಸಮಾಧಾನ, ಜೈಲಧಿಕಾರಿಗಳ ಮೇಲಿನ ಸಿಟ್ಟು, ವ್ಯವಸ್ಥೆ ಬಗೆಗಿನ ಸೇಡಿನಿಂದ ಅವರಿದನ್ನು ಬರೆಯಲಿಲ್ಲ. ತನ್ನ ಅರಿವಿನ ಪಯಣದ ಭಾಗವಾಗಿ ಬರೆದಿದ್ದಾರೆ. ತಾನು ನಂಬಿದ ಸಿದ್ಧಾಂತ ಮತ್ತು ಮಾರ್ಗ ಕವಲುದಾರಿಯಲ್ಲಿ ಹೊರಳುತ್ತ ಸಂಕಷ್ಟದಲ್ಲಿರುವಾಗ ಸಿಂಗ್ ತಮ್ಮ ದ್ವಂದ್ವಗಳನ್ನು ಬರಹದ ಮೂಲಕ ಬಗೆಹರಿಸಿಕೊಂಡಿದ್ದಾರೆ. ಜೈಲುವ್ಯವಸ್ಥೆಯ ಹಿಂಸೆಯನ್ನು ಪ್ರಶ್ನಿಸುತ್ತಲೇ, ನಕ್ಸಲರು ಎಸಗುವ ಹಿಂಸೆಯನ್ನೂ ನೆನೆಯುತ್ತಾರೆ. ನಕ್ಸಲ್ ಹೋರಾಟದ ಹೆಸರಿನಲ್ಲಿ ಸಂಘಟನೆಯ ಒಳನುಸುಳಿದ ಢಕಾಯಿತರು, ಕಳ್ಳರು, ವೈಯಕ್ತಿಕ ದ್ವೇಷ ಸಾಧನೆಗೆ ಬರುವವರಿಂದ ಕ್ರಾಂತಿಯ ಗುರಿ ದೂರಾಗುತ್ತ ಹೋಗಿರುವುದನ್ನು ವಿಷಾದದಿಂದ ಗಮನಿಸುತ್ತಾರೆ. ಅವರೊಡನೆ ಜೈಲು ಸೇರಿದ ಬಖೌರಾ ಪ್ರಕರಣದ ಮುಖ್ಯ ಆರೋಪಿ, ಮರಣದಂಡನೆ ಪಡೆದ ಸಹಚರಿ ಸತ್ಯಪಾಲ ಕೊನೆಗೆ ‘ಸತ್ಯಪಾಲ ಬಾಬಾ’ ಆಗಿದ್ದನ್ನು ವಿಷಣ್ಣರಾಗಿ ದಾಖಲಿಸಿದ್ದಾರೆ. ಜೈಲೊಳಗಿನ ಖೈದಿಗಳ ‘ದೇವಗುರು’ವಾಗಿ, ಯಾರ‍್ಯಾರೊಡನೆಯೋ ಕೈಜೋಡಿಸಿ ತತ್ವಕ್ಕೆ ವಿರುದ್ಧವಾಗಿ ನಡೆದ ಮಾಜಿ ಕ್ರಾಂತಿಕಾರಿಯ ಅವಕಾಶವಾದಿತನಕ್ಕೆ ಸಿಂಗ್ ಕಾರಣ ಹುಡುಕುತ್ತಾರೆ.

ಇಂಥ ಸೂಕ್ಷ್ಮ ಸಂಗತಿಗಳನ್ನು ಪ್ರಾಮಾಣಿಕವಾಗಿ ದಾಖಲಿಸಿರುವ ಕಾರಣಕ್ಕೆ ಸಿಂಗ್, ಕಠೋರ ಸಿದ್ಧಾಂತಿಯಂತೆ ಕಾಣದೇ ಮಾನವೀಯ ಗುಣವುಳ್ಳ ಸಾಮಾಜಿಕ ಕಾರ್ಯಕರ್ತನಂತೆ ಕಾಣಿಸುತ್ತಾರೆ.

ಸಮಸಮಾಜದ ಕನಸು

ನಿನ್ನ ಎರಡು ಕಣ್ಣುಗಳು
ಉಕ್ಕೇರುವ ನೋವಿನ ಕಡಲಲೆಗಳಂತೆ
ಬದಲಾಯಿಸೋಣ ಅಣ್ಣಾ ಈ ಜಗವ
ಎಷ್ಟು ಸಾಧ್ಯವೋ ಅಷ್ಟು ಬೇಗನೇ!
- ಗೋರಖ್ ಪಾಂಡೆ

19ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್ ಬಿತ್ತಿದ ಸಮಸಮಾಜದ ಕನಸು ವಿಶ್ವಾದ್ಯಂತ ಅಸಂಖ್ಯ ಕನಸುಗಾರರನ್ನೂ, ಹೋರಾಟಗಾರರನ್ನೂ ಸೃಷ್ಟಿಸಿತು. ಮಾರ್ಕ್ಸ್‌ನ ಕನಸು ಇಡಿಯ ವಿಶ್ವವನ್ನು ಹಲವು ಬಗೆಗಳಲ್ಲಿ ಪ್ರಭಾವಿಸಿತು. ನಾನಾ ಚಳುವಳಿ, ಹೋರಾಟ, ದಂಗೆ, ಸರ್ಕಾರಗಳ ರೂಪದಲ್ಲಿ ಆ ಕನಸು ಇಂದಿಗೂ ಜೀವಂತವಾಗಿದೆ. ಭಾರತದಲ್ಲಿ ೨೦ನೇ ಶತಮಾನದ ಆದಿಭಾಗದಿಂದ ಸ್ವಾತಂತ್ರ್ಯ ಹೋರಾಟದೊಂದಿಗೇ ಕಮ್ಯುನಿಸಂನ ಬೆಳವಣಿಗೆಯೂ ಆಗಿದೆ. ೧೯೨೫ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ಶುರುವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗೀದಾರಿಯಾಯಿತು. ಸ್ವಾತಂತ್ರ್ಯಾನಂತರ ಕೆಲವು ರಾಜ್ಯಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳು ದೀರ್ಘ ಆಳ್ವಿಕೆ ನಡೆಸಿದವು.

1960-70ರ ದಶಕದಲ್ಲಿ ಭಾರತ ಹಸಿವು, ಬಡತನ, ನಿರುದ್ಯೋಗ, ಭೂಹೀನತೆಯಂತಹ ಸಾಮಾಜಿಕ ಸಮಸ್ಯೆಗಳಲ್ಲಿ ತೊಳಲುತ್ತಿರುವಾಗ, ವಿಶ್ವದ ಕಮ್ಯುನಿಸ್ಟ್ ದೇಶಗಳಲ್ಲಿ ಆಂತರಿಕ ಸಂಘರ್ಷ ಮತ್ತು ಧೃವೀಕರಣ ಶುರುವಾಯಿತು. ರಷ್ಯಾ ಮತ್ತು ಚೀನಾ ಎರಡು ಬಣಗಳಾದವು. ಒಂದೆಡೆ ಬಂಡವಾಳಶಾಹಿ ಪಶ್ಚಿಮದೊಂದಿಗೆ ಸಹಬಾಳ್ವೆ ನಡೆಸುವುದು ಅನಿವಾರ್ಯ; ಕ್ರಾಂತಿಯನ್ನು ಹೇರಲಾಗದು, ಅದು ಜನಜಾಗೃತಿಯ ಮೂಲಕ ತಾನೇ ತಾನಾಗಿ ಸಂಭವಿಸಬೇಕು ಎಂದು ಹೇಳುವ ರಷ್ಯಾ; ಇನ್ನೊಂದೆಡೆ ಸಶಸ್ತ್ರ ಹೋರಾಟವೂ ಸೇರಿದಂತೆ ಕ್ರಾಂತಿಗೆ ಎಲ್ಲ ದಾರಿಗಳನ್ನು ಬಳಸಿಕೊಳ್ಳಬೇಕು ಎಂದು ಹೇಳುವ ಚೀನಾ ಕಮ್ಯುನಿಸ್ಟ್ ಜಗತ್ತು ಇಬ್ಭಾಗವಾಗಲು ಕಾರಣವಾದವು. ಭಾರತೀಯ ಕಮ್ಯುನಿಸ್ಟ್ ಪಕ್ಷ ಮೊದಲು ರಷ್ಯಾ ನಿಲುವನ್ನು ಬೆಂಬಲಿಸಿತು. ಆಗ 32 ಜನ ನಾಯಕರು ಅದನ್ನು ವಿರೋಧಿಸಿ ಹೊರಬಂದರು. ಅವರು 1964ರಲ್ಲಿ ಮಾರ್ಕ್ಸ್‌ವಾದಿ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಿದರು. ಅದರಿಂದಲೂ ನಿರಾಸೆ ಹೊಂದಿದ ಕೆಲವರು 1967ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಶುರು ಮಾಡಿದರು. ಮಾರ್ಕ್ಸ್‌ನ ಕನಸು ನನಸಾಗಲು ಸಶಸ್ತ್ರ ಹೋರಾಟದ ಬೆಂಬಲವೂ ಬೇಕು ಎಂದು ಯೋಚಿಸುವ ಮಾರ್ಕ್ಸ್‌ವಾದಿಗಳ ಗುಂಪು ಅದು. ಅದರ ಒಂದು ಧಾರೆಯು ರೂಪಿಸಿದ ಹೋರಾಟ ನಕ್ಸಲ್‌ಬಾರಿ ಹೋರಾಟ. ನಂತರ ಸಮಸಮಾಜದ ಕನಸು ಹೊತ್ತವರ ಹಲವು ಗುಂಪುಗಳಾಗಿ ಕಮ್ಯುನಿಸ್ಟ್ ಪಕ್ಷಗಳು ಒಡೆಯುತ್ತ ಬಂದು ಈಗ ಕಮ್ಯುನಿಸ್ಟ್ ಧಾರೆಯ 84 ಪಕ್ಷಗಳಿವೆ.

ಕಮ್ಯುನಿಸ್ಟ್ ತತ್ವಗಳಲ್ಲಿ ನಂಬಿಕೆಯಿಟ್ಟು ಅಸಮಾನ ಭಾರತವನ್ನು ಸಮಾನತೆಯ ನೆಲವಾಗಿಸಲು ಹೋರಾಡಿದವರ ದೀರ್ಘ ಚರಿತ್ರೆಯೇ ಭಾರತದಲ್ಲಿದೆ. ಭಗತ್‌ಸಿಂಗ್ ಕಾಲದಿಂದ ಇಂದಿನವರೆಗೂ ಯಾದಿ ಮುಂದುವರೆಯುತ್ತಲೇ ಇದೆ. ಆ ಸರಪಳಿಯ ಒಂದು ಕೊಂಡಿ ಕಾ. ರಾಮಚಂದ್ರ ಸಿಂಗ್. ನಾಕೈದು ದಶಕಗಳ ಇತಿಹಾಸವಿರುವ ನಕ್ಸಲ್ ಚಳುವಳಿಯ ಕಾವು, ಏಳುಬೀಳು, ದೋಷ, ಜೈಲುಪಾಲಾದವರ ತ್ಯಾಗ, ಅವರ ಕುಟುಂಬದವರ ಸಂಕಟಗಳನ್ನು ಮಾರ್ಕ್ಸ್ 200ನೇ ಜನ್ಮದಿನಾಚರಣೆ ವೇಳೆಗೆ ನೆನೆಯಲೇಬೇಕು. ಮಾರ್ಕ್ಸ್ ಬಿತ್ತಿದ ಕನಸು ಯಾವ ನೆಲದಲ್ಲಿ ಮೊಳೆತು ಎಂತಹ ಫಲಗಳನ್ನು ನೀಡಿತು ಎಂದು ಅವಲೋಕಿಸಲು ಇಂತಹ ಕಥನಗಳು ಆಕರವಾಗಿ ಬೇಕು.

ಕಮ್ಯುನಿಸ್ಟ್ ಕ್ರಾಂತಿಯ ಕನಸು ಭಾರತವನ್ನು ಪ್ರವೇಶಿಸಿ 100 ವರ್ಷವಾಗುತ್ತ ಬಂತು. ಸ್ವಾತಂತ್ರ್ಯ ಬಂದು ಏಳು ದಶಕ ಸಂದವು. ಆದರೂ ಈ ನೆಲದಲ್ಲಿ ನ್ಯಾಯ ಮತ್ತು ಸಮಾನತೆ ನೆಲೆಗೊಳ್ಳಬೇಕು ಎಂದು ಬಯಸುವುದು ಬಲುತುಟ್ಟಿ ಕನಸೇ ಆಗಿದೆ. ಇಂಥ ಸಂಕಟದ ಕಾಲದಲ್ಲಿ ಕಾಮ್ರೇಡ್ ಸಿಂಗ್ ಅವರ ಬದುಕು ಪಾಠವೂ, ಸ್ಫೂರ್ತಿಯೂ ಆಗಿದೆ.

ಎಷ್ಟೋ ತರುಣ ಬದುಕುಗಳು ಕಾಡಿನಲ್ಲಿ, ಜೈಲಿನಲ್ಲಿ ಅಮಾನವೀಯ ಹಿಂಸೆ ಎದುರಿಸುತ್ತ ಕಾಲ ಕಳೆಯುವಂತಾಗುತ್ತಿರುವುದು ಒಂದು ದೇಶಕ್ಕೆ ನಾಚಿಕೆಗೇಡು. ಎಂದಾದರೂ ಒಂದು ದಿನ ಜೈಲುಗಳಿಲ್ಲವಾಗಬೇಕು; ಎಲ್ಲರಿಗೂ ಒಂದು ಮುಷ್ಟಿ ಅನ್ನ, ಕೈತುಂಬ ಕೆಲಸ ಸಿಗಬೇಕು. ಅದುವೇ ಸಮಸಮಾಜ. ಅದುವೇ ಕ್ರಾಂತಿ. ಆ ಕನಸಿನತ್ತ ಪ್ರಾಮಾಣಿಕವಾಗಿ ನಡೆದ ಕಾಮ್ರೇಡ್ ರಾಮಚಂದ್ರ ಸಿಂಗ್ ಮತ್ತವರಂಥ ಅಸಂಖ್ಯ ಜೀವಗಳಿಗೆ ಕೆಂಪುವಂದನೆ..



(Images courtesy: Internet)