Tuesday, 10 June 2025

ಮನೋಜ್ ಬೊಗಾಟಿ: ಕವಿಗೆ, ಕವಿತೆಗೆ ಪಾಲಿಟಿಕ್ಸ್ ಗೊತ್ತಿಲ್ಲ ಅಂದ್ರೆ ಮತ್ಯಾರಿಗೆ ಗೊತ್ತಿದೆ?

 




(ಇತ್ತೀಚೆಗೆ ಮೇ ೧೭, ೧೮ರಂದು ಸಿಂಧನೂರಿನ ಸತ್ಯಾ ಗಾರ್ಡನ್ನಿನಲ್ಲಿ ನಡೆದ ಮೇ ಸಾಹಿತ್ಯ ಮೇಳದ ಕವಿಗೋಷ್ಟಿಯ ಆಶಯ ಮಾತುಗಳನ್ನಾಡಲು ಡಾರ್ಜಿಲಿಂಗಿನ ಕವಿ ಮನೋಜ ಬೊಗಾಟಿ ಬಂದಿದ್ದರು. ಎದೆಯ ದನಿಯನ್ನು ಮಾತಾಗಿಸುವ ಕವಿಯನ್ನು ೨೨೬೦ ಕಿಲೋಮೀಟರ್ ದೂರದಿಂದ ಸಿಂಧನೂರಿಗೆ ಕರೆಸಿಕೊಂಡದ್ದೇ ಒಂದು ಕಥನವಾಗಬಲ್ಲದು. ಗಡಿಯಾರದ ಹಿಂದೋಡುವ ಗುಣವೇ ಇಲ್ಲದ ಈತ ಕಳಿಸಿದ್ದು ನೋಡಿರುವುದೂ ಇಲ್ಲ, ಮಾಹಿತಿ-ಸೂಚನೆ ಕೇಳಿರುವುದೂ ಇಲ್ಲ, ಕವಿಗೋಷ್ಟಿಯ ಆಶಯ ಎಂದು ದಿರಿಸಿನಲ್ಲಿ ತಯಾರಾಗುವುದೂ ಇಲ್ಲ. ಸದಾ ತನ್ನದೇ ಅಕ್ಷರ ಲೋಕದ ಸೃಷ್ಟಿಕ್ರಿಯೆಯ ಗುಂಗಿನಲ್ಲಿ ಮುಳುಗಿರುವಂತೆ ಕಾಣುವ ಬರಹಗಾರ ಮನೋಜ್, ಹೇಗಿದ್ದರೋ ಹಾಗೇ ಬಂದು ವೇದಿಕೆಯೇರಿದರು. ಸರಳ ವ್ಯಕ್ತಿತ್ವದ, ಬೆಟ್ಟ ಪ್ರದೇಶ ಡಾರ್ಜಿಲಿಂಗಿನ ಕೆಳವರ್ಗದಿಂದ ಬಂದ ಕವಿ ತಮ್ಮ ಸಾಂದ್ರ ಅನುಭವದ ಮಾತು, ಕವಿತೆ, ಕ್ರಾಂತಿಕಾರಿ ಹುಮ್ಮಸ್ಸಿನ ಮಾತುಗಳಿಂದ ನೆರೆದವರ ಗಮನ ಸೆಳೆದರು.

46 ವರ್ಷದ ಮನೋಜ್ ಡಾರ್ಜಿಲಿಂಗಿನ ಡಾಲ್ಗಾಂವ್ ಪ್ರಾಂತ್ಯದ ರೊಂಗೊದವರು. ಅವರು ಪಡೆದ ಔಪಚಾರಿಕ ಶಿಕ್ಷಣ ಕಡಿಮೆ. ಶೈಕ್ಷಣಿಕ, ಸಾಹಿತ್ಯಿಕ ಹಿನ್ನೆಲೆಯದಲ್ಲದ ಶ್ರಮಿಕ ಕುಟುಂಬದಿಂದ ಬಂದ ಅವರಿಗೆ ನಿಯತಕಾಲಿಕಗಳ ಓದು ಮತ್ತು ಒಡನಾಟದಿಂದ ಸಾಹಿತ್ಯದ ಒಲವು ಬೆಳೆಯಿತು. ಸೂಕ್ಷ್ಮ ಗ್ರಹಿಕೆ ಮತ್ತು ವಿಸ್ತೃತ ಓದು ಅವರನ್ನು ಕವಿ ಮತ್ತು ಪತ್ರಕರ್ತನನ್ನಾಗಿಸಿದವು. ಕ್ರಾಂತಿಕಾರಿ ಕವಿತೆ ಮತ್ತು ಬರಹಗಳಿಂದ ಕೆಳವರ್ಗದ ಜನರ ಧ್ವನಿಯಾದರು. ೨೦೦೮ರಲ್ಲಿ ‘ಬಿಂಬಗೋಷ್ಠಿ’ ಎಂಬ ಮೊದಲ ಕವನ ಸಂಕಲನ ಹೊರತಂದಿರುವ ಬೊಗಾಟಿ, ತಮ್ಮ ದೀರ್ಘ ಕವನಗಳ ಸಂಕಲನ ‘ಫೌಕ ರಂಗಾರು’ (‘ಬಣ್ಣಗಳ ಗಾಯಗಳು’)ವಿಗೆ 2012ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದಿದ್ದಾರೆ. ಆರು ಕವನ ಸಂಕಲನಗಳಲ್ಲದೆ ಒಂದು ಕಥಾ ಸಂಕಲನ ಹಾಗೂ ಒಂದು ಪ್ರಬಂಧ ಸಂಕಲನವನ್ನೂ ಪ್ರಕಟಿಸಿದ್ದಾರೆ. ಒಂದು ಕೃತಿಯನ್ನು ಹಿಂದಿಯಿಂದ ನೇಪಾಳಿಗೆ ಅನುವಾದಿಸಿದ್ದಾರೆ. ಪ್ರಸ್ತುತ ಕಾಲಿಂಪಾಂಗ್‌ನಲ್ಲಿ ಬಾಳಸಂಗಾತಿ ಭಕ್ತಿ ರೈ ಅವರೊಡನೆ ನೆಲೆಸಿರುವ ಮನೋಜ್ ಬುದ್ಧಾನುಯಾಯಿ. ಸಿಂಧನೂರಿನಲ್ಲಿ ಭಾವಾಭಿನಯದ ಏರಿಳಿತದೊಂದಿಗೆ ಹಿಂದಿಯಲ್ಲಿ ಅವರು ಮಾಡಿದ ಭಾಷಣ, ಅವರೊಡನೆ ಆಡಿದ ಮಾತುಕತೆಯ ಸಾರ ಇಲ್ಲಿದೆ.)

‘ನಾನು ಭಾಷಣಕಾರ ಅಲ್ಲ. ಆಡುವುದನ್ನೆಲ್ಲ ಕವಿತೆಯಲ್ಲೇ ಆಡುವವನು. ಅಷ್ಟೆಲ್ಲ ಮಾತಾಡಲಿಕ್ಕೆ ಬರಲ್ಲ. ನನ್ನ ಮಾತೃಭಾಷೆ ನೇಪಾಳಿ. ಕನ್ನಡ ವಾತಾವರಣದ ನನಗಿಲ್ಲಿ ನಿಮ್ಮ ಭಾಷೆಯಲ್ಲಿ ಮಾತನಾಡುವಂತಿದ್ದರೆ ಅನಿಸಿದೆ. ಎಲ್ಲ ಅಪರಿಚಿತವೇ ಆದರೂ ಕುತೂಹಲ ಸೆಳೆಯುತ್ತಿದೆ. ನಿನ್ನೆಯ ಕವಿಗೋಷ್ಟಿ ಕೇಳಿಸಿಕೊಂಡೆ. ಅರೆ, ನಾವು ಬಳಸುವ ಎಷ್ಟೊಂದು ಪದಗಳನ್ನು ಇವರೂ ಬಳಸುವರಲ್ಲ ಎನಿಸಿತು. ಅರ್ಥವಾಗದಿದ್ದರೂ ಅವರ ಲಯ, ದೇಹದ ಭಾಷೆಯಿಂದ ಒಂದಷ್ಟು ಅರ್ಥವಾಯಿತು. ಕವಿತೆ ಎಂದರೆ ಹಾಗೇ, ಅಲ್ಲವೇ?

ಬಗದಾದಿನ ಕವಿ ಸಿನಾನ್ ಅಂತೋನ್ ಬರೆದ ಕವಿತೆ ಇದು:

‘ರಕ್ತದಲ್ಲದ್ದಿದ ಕುಂಚದಿಂದ
ಗೋಡೆಯ ಮೇಲೆ ಬರೆದೆ,
ಅಲ್ಲೊಂದು ಕಿಟಕಿ ಮೂಡಿತು.
ಕಂಡದ್ದು ಎರಡು ದೃಶ್ಯಗಳು:
ಯುದ್ಧ ಮತ್ತು ಅವ್ವ.
ಅವದವ ತನ್ನ ಗರ್ಭಸ್ಥ ಮಗುವಿನ
ಶವದ ಬಟ್ಟೆ ಅರಸುತ್ತಿದ್ದಳು..’


ಈಗ ನಮ್ಮ ದೇಶದಲ್ಲಿ, ಅಷ್ಟೇ ಅಲ್ಲ ಎಲ್ಲ ಕಡೆಯೂ ನಾವಂದುಕೊಂಡ ಹಾಗೆ ಏನೂ ಆಗದಂತೆ ಆಗಿದೆ. ನಾವು ಒಂದು ತರಹ ಯಂತ್ರಗಳಂತಾಗಿದೇವಾ ಅನಿಸುತ್ತಿದೆ. ನಮ್ಮಲ್ಲೂ ಯುದ್ಧ ಶುರು ಆಗೇ ಬಿಡ್ತು ಅಂದರು. ಆಮೇಲೆ ಈಗೇನೋ ವ್ಯಾಪಾರದ ಧಮಕಿ ಹಾಕಿ ಯುದ್ಧ ನಿಲ್ಲಿಸಿದೀವಿ ಅಂತಿದ್ದಾರೆ. ಎಲ್ಲರಲ್ಲೂ ಯಾರೋ ನಮ್ಮನ್ನು ನಿಯಂತ್ರಿಸುತ್ತಿರುವ ಭಾವನೆ ಇದೆ.

ಈಗ ಮನುಷ್ಯರು ಕಣ್ಣಿನಿಂದ, ಮನಸ್ಸಿನಿಂದ ನೋಡುವುದನ್ನು ನಿಲಿಸಿದ್ದಾರೆ. ಈಗ ಮನುಷ್ಯರು ಕಣ್ಣಿನಿಂದ, ಮನದಿಂದ ಕೇಳುವುದನ್ನು ನಿಲಿಸಿದ್ದಾರೆ. ಈಗ ಮನುಷ್ಯರು ಕಣ್ಣಿನಿಂದ, ಮನದಿಂದ ಯೋಚಿಸುವುದನ್ನು ನಿಲಿಸಿದ್ದಾರೆ. ತಮ್ಮ ಕಣ್ಣಿನಿಂದ ಕಣ್ಣೀರು ಸುರಿಸಿ ಅಳುವುದನ್ನೂ ಬಿಟ್ಟು ಬಿಟ್ಟಿದ್ದಾರೆ. ಮನುಷ್ಯರು ಯಂತ್ರ, ರೊಬಾಟ್ ಆಗಿದಾರೆ. ಯಾಕೆ ಹೀಗಾಯ್ತು? ಏನು ಮಾಡುವುದು? ಈ ಸಮಯದಲ್ಲಿ ನಾನೇನು ಮಾಡಲಿ? ದೋಸ್ತೋ, ಈ ಸಂಕಟದ ಸಮಯದಲ್ಲಿ ನಾನು ಕವಿತೆಯ ಜೊತೆ ಇರಲು ಇಷ್ಟಪಡುತ್ತೇನೆ.

ಸಂಕಟದಲ್ಲಿ ನಮ್ಮ ಜೊತೆ ಇರುವುದು ಕವಿತೆ. ನಮ್ಮ ಚೇತನಕ್ಕೆ ಅವಿನಾಭಾವ ಅಂತ ಜೊತೆಯಿರುವುದು ಕವಿತೆ ಮಾತ್ರವೇ. ಜೀವನದಿಂದ ವಿಮುಖರಾದಾಗ ಮತ್ತೆ ಬದುಕಿನ ವಿವೇಕ ಮರಳುವಂತೆ ಮಾಡುವುದು ಕವಿತೆ. ಕುರುಡು ಕಣ್ಣಿಗೆ ದಿಟ್ಟಿ ಮರಳಿಸುವುದು ಕವಿತೆ. ಇದೆಲ್ಲ ಕವಿತೆಗೆ ಮಾತ್ರ ಸಾಧ್ಯವಿದೆ. ಅದಕ್ಕೇ ಕವಿಯಾಗುವುದು, ಕವಿತೆ ಬರೆಯುವುದು ಎಂದರೆ ಸುಮ್ಮನಲ್ಲ, ಅದು ದೊಡ್ಡ ಜವಾಬ್ದಾರಿ.

ನನಗೀಗ ನಲವತ್ತಾರು ವರ್ಷ. ಈ ಲೋಕವನ್ನು ನೋಡುವುದು ಹೇಗೆ ಎನ್ನುವುದನ್ನು ಕವಿತೆಯೇ ಕಲಿಸಿತು. ಪ್ರಕೃತಿ-ಮನುಷ್ಯರು, ಮನುಷ್ಯ ಮನುಷ್ಯರ ನಡುವಿನ ಸಂಬಂಧ ಏನು ಎನ್ನುವುದನ್ನು ಕವಿತೆಯೇ ಕಲಿಸಿತು. ಪ್ರೇಮ ಎಂದರೇನು ಎನ್ನುವುದನ್ನು ಕವಿತೆಯೇ ಕಲಿಸಿತು. ನನ್ನ ನಾನು ನೋಡಿಕೊಳ್ಳುವುದನ್ನೂ ಕವಿತೆಯೇ ಕಲಿಸಿತು. ಅದಕ್ಕೇ ಇವತ್ತು ಯಾವುದೋ ದೂರದ ಗುಡ್ಡಗಾಡಿನ ಮೂಲೆಯ ನಾನು ಇಲ್ಲಿ ನಿಮ್ಮ ನಡುವೆ ಬಂದು ನಿಂತಿದ್ದೇನೆ.

ನಾನು ಯಾರು? ಎಲ್ಲಿಂದ ಬಂದಿದೀನಿ? ನಮ್ಮ ಪ್ರದೇಶ, ಗುರುತುಗಳು ಸಂಕಟಗಳು ಏನು ಅಂತ 99% ಜನರಿಗೆ ಗೊತ್ತಿಲ್ಲ. ಭಾರತೀಯರಿಗಂತೂ ಗೊತ್ತೇ ಇಲ್ಲ. ನಮ್ಮ ಬಗೆಗೆ ದೇಶ ಏನಂದುಕೊಂಡಿದೆ? ಫೀಲ್ಡ್ ಮಾರ್ಶಲ್ ಸ್ಯಾಮ್ ಮಾಣೆಕ್ ಶಾ ಅವರ ಒಂದು ಹೇಳಿಕೆ ಇದೆ: ‘ಯಾರಾದರೂ ನನಗೆ ಸಾಯಕ್ಕೆ ಭಯ ಇಲ್ಲ ಅಂದ್ರೆ ಒಂದೋ ಅವರು ಸುಳ್ಳು ಹೇಳ್ತಿದಾರೆ ಅಥವಾ ಅವರು ಗೂರ್ಖಾ ಆಗಿದಾರೆ ಅಂತ ಅರ್ಥ.’ ನೋಡಿದಿರಾ ಡಾರ್ಜಿಲಿಂಗಿನ ಗೂರ್ಖಾಗಳ ಬಗೆಗಿನ ತಿಳುವಳಿಕೆ? ಇಲ್ಲ, ಯುದ್ಧ ಎಂದರೆ ಧೈರ್ಯದಿಂದ ಎದೆ ಕೊಟ್ಟು ನಿಲ್ಲುವ ನಮಗೂ ಉಳಿದ ಮನುಷ್ಯರಂತೆ ಹೆದರಿಕೆಯಿದೆ, ಸಂಕಟಗಳಿವೆ. ಅಂದರೆ ಮಾಣೆಕ್ ಶಾ ಸುಳ್ಳು ಹೇಳುತ್ತಿದ್ದಾರೆ ಎಂದೇ? ಇದರರ್ಥ ಏನು? ಇದರರ್ಥ ಯಾರಿಗೂ ಗೂರ್ಖಾಗಳ ಪರಿಸ್ಥಿತಿ, ಸಂಕಟ ಗೊತ್ತಿಲ್ಲ ಅಂತ. ಅದಕ್ಕೇ ನನ್ನ ನೆಲ ಡಾರ್ಜಿಲಿಂಗ್, ಜಾತಿ ಗೂರ್ಖಾ, ಭಾಷೆ ನೇಪಾಳಿ, ಅಲ್ಲಿಯ ಅಸಮಾನತೆ ಸಂಕಟಗಳ ಬಗೆಗೇ ಮಾತನಾಡಲು ಬಯಸುತ್ತೇನೆ.

ಈ ತಿಂಗಳ 25ಕ್ಕೆ ನಮ್ಮೂರಿನಲ್ಲಿ ಒಂದು ಕವಿಗೋಷ್ಟಿ ಇದೆ. ಅಲ್ಲಿ ಹೇಳುತ್ತಾರೆ, ಅಯ್ಯೋ, ಕವಿಗೋಷ್ಟಿಗೆ ಜನರೇ ಬರಲ್ಲ ಅಂತ. ತುಂಬ ಅಭಿವೃದ್ಧಿ ಆದ ಊರು ಅದು. ಆದರೆ ಕವಿಗೋಷ್ಟಿಗಳೇ ಆಗುತ್ತಿಲ್ಲ. ಆದರೂ ಕಷ್ಟಪಟ್ಟು ನನ್ನ ಗೆಳೆಯರು ಕವಿಗೋಷ್ಟಿ ಆಯೋಜನೆ ಮಾಡಿದ್ದಾರೆ. ಅವತ್ತು ನಾನು ‘ಸಾಹೇಬರಿಗೆ ಜೀವಂತ ಮನುಷ್ಯರೆಂದರೆ ಇಷ್ಟವಿಲ್ಲ’ (ಸಾಹೇಬ್ ಕೊ ಜಿಂದಾ ಇನ್ಸಾನ್ ಪಸಂದ್ ನಹೀಂ) ಎಂಬ ಕವಿತೆ ಓದಲಿದ್ದೇನೆ. ಈ ಕವಿತೆ ಓದದಂತೆ ಸಾಹೇಬ್ ನನ್ನನ್ನು ಹೆದರಿಸಬಹುದು. ಆದರೆ ಅದನ್ನೇ ಓದುತ್ತೇನೆ ಮತ್ತು ಕವಿತೆ ಕೇಳಲು ನೀವು ಮುದ್ದಾಂ ಬರಲೇಬೇಕು.

ಆಯೋಜಕರು ನನಗೆ ಫೋನ್ ಮಾಡಿ ಹೇಳಿದರು: ನಿಮ್ಮ ಮಾತು, ಕವಿತೆಗಳಲ್ಲಿ ಸ್ವಲ್ಪ ಪಾಲಿಟಿಕ್ಸ್ ಇದೆಯಲ್ಲ? ಕವಿತೆಗೇಕೆ ರಾಜಕಾರಣ? ಅದನ್ನೆಲ್ಲ ತೆಗೆದುಬಿಡಬಹುದಲ್ಲ? ಕಾರ್ಯಕ್ರಮದಲ್ಲಿ ಕವಿತೆ ಬಗ್ಗೆ ಮಾತ್ರ ಮಾತಾಡಿ ಎಂದರು. ಆಯೋಜಕರ ಪರಿಸ್ಥಿತಿ ನನಗರ್ಥವಾಗುತ್ತದೆ. ಆದರೂ ಕೇಳಿದೆ: ಅರೆ ಭಾಯ್, ಕವಿಗೆ ರಾಜಕಾರಣ ಗೊತ್ತಿಲ್ಲ ಅಂದರೆ ಸಮಾಜಕ್ಕೆ ಸರಿಯಾದ ದಿಕ್ಕು ದಾರಿ ತೋರಿಸುವುದಾದರೂ ಹೇಗೆ? ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಆಡಳಿತ ಎಲ್ಲ ಸೇರಿ ಡಾರ್ಜಿಲಿಂಗನ್ನು ನಾಶ ಮಾಡಿದರು. ಆದರೂ ಕವಿ ರಾಜಕಾರಣದ ಮಾತಾಡಬಾರದೇ? ಕೇಂದ್ರ ಸರ್ಕಾರ ರಾಜಕಾರಣ ಮಾಡಿದರೆ ಅದು ಸರಿ ಎನ್ನುವಿರಿ. ರಾಜ್ಯ ಸರ್ಕಾರ ರಾಜಕಾರಣ ಮಾಡಿದರೆ ಅದೂ ಸರಿ ಎನ್ನುವಿರಿ. ಸ್ಥಳೀಯ ಆಡಳಿತ ರಾಜಕಾರಣ ಮಾಡಿದರೂ ಸರಿ ಎನ್ನುವಿರಿ. ಎಲ್ಲರೂ ಪಾಲಿಟಿಕ್ಸ್ ಮಾಡಬಹುದಂತೆ. ಕವಿ ಮಾತ್ರ ಮಾಡಬಾರದು ಅಂದ್ರೆ ಹೇಗೆ? ಯಾರು ಹೇಳಿದ್ದು ಹಾಗೆ? ಸಂವಿಧಾನದಲ್ಲಿ ಹಾಗಂತ ಬರೆದಿದಾರಾ? ಕವಿತೆಗೆ ಪಾಲಿಟಿಕ್ಸ್ ಗೊತ್ತಿಲ್ಲ ಅಂದ್ರೆ ಮತ್ಯಾರಿಗೆ ಗೊತ್ತಿದೆ? ಮತ್ತೇನು ಗೊತ್ತಿದೆ?

ಹೀಗೆ ಆಳುವವರು ಮತ್ತು ಸಮಾಜ ಕವಿಯನ್ನು ಭಯಪಡಿಸುತ್ತಾರೆ. ಕವಿತೆಯನ್ನು ಭಯಪಡಿಸುತ್ತಾರೆ. ಡಾರ್ಜಿಲಿಂಗಿನಲ್ಲಿ ಈಗ ಲೋಕತಂತ್ರದ ಪರಿಸ್ಥಿತಿ ಹೇಗಿದೆ ಎಂದರೆ ಒಂದು ಸಾಧಾರಣ ಕಾರ್ಯಕ್ರಮವನ್ನೂ ನಮ್ಮಿಷ್ಟದಂತೆ ಮಾಡಲು ಸಾಧ್ಯವಿಲ್ಲ. ಅದರಲ್ಲೂ ಗೂರ್ಖಾಗಳಿಗೆ ಪ್ರತ್ಯೇಕ ರಾಜ್ಯ ಕೇಳುವ ನಾವಂತೂ ಏನನ್ನೂ ಮಾಡಲು ಸುಲಭವಿಲ್ಲ. ಅಧಿಕಾರಿಗಳು ಎಲ್ಲಿ, ಯಾವಾಗ, ಏನು ಅಪ್ಪಣೆ ಮಾಡುತ್ತಾರೋ ಎನ್ನುವ ಭಯದಲ್ಲೇ ಮಾಡಬೇಕು, ಪರಿಸ್ಥಿತಿ ಹಾಗಿದೆ.

ಆದರೆ ಗೆಳೆಯರೇ ನೆನಪಿಡಿ, ಭಯಗ್ರಸ್ತ ಕವಿಗಳು ಸಮಾಜವನ್ನು ಪುಕ್ಕಲು ಮಾಡುತ್ತಾರೆ. ತಾವು ಪುಕ್ಕಲರಾಗಿ ಕ್ರಾಂತಿಕಾರಿ ಕವಿತೆ ಬರೆದರೆ ಅಂತಹ ಕವಿ ಪಾಖಂಡಿ, ವಂಚಕರಾಗಬಹುದೇ ಹೊರತು ಕವಿ ಆಗಲಾರರು. ಅಂತಹ ಕವಿ ತನ್ನನ್ನು ತಾನು ಕೊಂದುಕೊಳ್ಳುವುದಷ್ಟೇ ಅಲ್ಲ, ಸಾಮಾಜಿಕ, ಸಾಂಸ್ಕೃತಿಕ, ಸಂಘಟನಾತ್ಮಕವಾದ ಎಲ್ಲವನ್ನೂ ಕೊಲ್ಲುತ್ತಾರೆ. ಆದರೆ ಯಾವ ಕವಿತೆಯ ಮೇಲೆ ವಿಶ್ವಾಸ ಇಟ್ಟಿರುವಿರೋ ಅದನ್ನು ಬರೆದ ಕವಿ ಪಾಖಂಡಿಯಾಗಿದ್ದರೆ? ಪಾಖಂಡಿ ಕವಿಯ ಕವಿತೆ ಏನಾಗುವುದು? ನಾನು ಕವಿತೆಯ ಮೇಲೆ ವಿಶ್ವಾಸ ಇಡುತ್ತೇನೆ. ಕವಿ ತಾನು ಹೆದರಿದ್ದರೂ ಕವಿತೆ ಹೆದರಬೇಡಿ ಎನ್ನುತ್ತಿರುತ್ತದೆ. ಅದು ಪಾಖಂಡಿ ಆಗಲಾರದು. ಕವಿತೆ ಹೇಗಾದರೂ ಕವಿಯ ಪಾಖಂಡಿತನವನ್ನು ತಿಳಿಸಿಬಿಡುವುದು. ಹೀಗೆ ಸಮಾಜ ನಾಶವಾಗುವುದನ್ನು ತಪ್ಪಿಸುವುದು ಕವಿತೆಯೇ ಆಗಿದೆ. ಅದಕ್ಕೇ ಪ್ರಪಂಚದಲ್ಲಿ ಎಲ್ಲರೂ ಕವಿತೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

ನಾನು ೧೯೯೬ರಿಂದ ಮೂವತ್ತು ವರ್ಷಗಳಿಂದ ಬರೆಯುತ್ತ ಇದ್ದೇನೆ. ಸಾವಿರಾರು ಕಷ್ಟಗಳ ಜೊತೆ, ಕನಸುಗಳ ಜೊತೆ, ದುಃಖದ ಜೊತೆ ನನ್ನ ಸಮುದಾಯದ ಕತೆ ಬರೆಯುತ್ತ ಇದ್ದೇನೆ. ಕವಿತೆ ಅಂದರೆ ಬರಿಯ ಟೈಂ ಪಾಸ್, ಮನರಂಜನೆ ಅಲ್ಲ. ಈ ದೇಶ ನಮ್ಮಂತಹ ಸಣ್ಣ ಸಮುದಾಯಗಳಿಗೆ, ಆದಿವಾಸಿಗಳಿಗೆ, ಮಹಿಳೆಯರಿಗೆ ಅಸುರಕ್ಷಿತ. ಅದಕ್ಕೇ ನಾವು ಕವಿತೆ ಬರೆಯಬೇಕಿದೆ, ಹೋರಾಡಬೇಕಿದೆ. ಯಾರೋ ಅರ್ನೆಸ್ಟ್ ಹೆಮಿಂಗ್ವೇ ಹತ್ತಿರ ಬಂದು ಕೇಳಿದರಂತೆ: ‘ನಾನೂ ನಿಮ್ಮಂತೆ ಬರೆಯಬೇಕಲ್ಲ, ಹೇಗೆ?’ ಎಂದು. ಹೆಮಿಂಗ್ವೆ ಅದಕ್ಕೆ, ‘ನಿನ್ನ ಹತ್ರ ಗಾಯ ಇವೆಯಾ? ಇದ್ದರೆ ನೀನು ಬರೆಯಬಲ್ಲೆ.’ ಎಂದರು. ಕವಿಗೆ ಒಳಗಿನಿಂದ ಏನೋ ಆಗಬೇಕು, ಕುದಿಯಬೇಕು, ಉರಿಯಬೇಕು, ಭಾವನೆಗಳು ಹುಟ್ಟಬೇಕು. ಆಗ ಕವಿತೆ ಹುಟ್ಟುತ್ತದೆ.

ನಾನು ಮೊದಲು ‘ಸಪನ’ ಎಂಬ ಕತೆ ಬರೆದೆ, ಪ್ರಕಟವಾಯಿತು. ಬಳಿಕ ನನ್ನ ಮೊದಲ ಕವಿತೆ ‘ಘರ್ ಫರ್ಕನಲೈ’ (ಮನೆಗೆ ಮರಳಲು) ಪ್ರಕಟವಾಯಿತು. ಆಗ ಭೂತಾನಿನಲ್ಲಿ ಒಂದು ರಾಷ್ಟ್ರ, ಒಂದು ನೀತಿ ತತ್ವದಡಿ ಒಂದು ಲಕ್ಷ ಎಂಟು ಸಾವಿರ ನೇಪಾಳಿ ಮಾತಾಡುವ ಗೂರ್ಖಾ ಜನರನ್ನು ಹೊರಹಾಕಿದ್ದರು. ಯಾಕೆ? ಅವರು ಕೇಳಿದ್ದೇನು? ತಮ್ಮ ಭಾಷೆಗೆ ಮಾನ್ಯತೆ ಸಿಗಲಿ, ತಮ್ಮ ಸಾಂಸ್ಕೃತಿಕ ಅಸ್ಮಿತೆ ಉಳಿಯಲಿ ಎಂದು. ಆದದ್ದೇನು? ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಯುಎನ್‌ಎಚ್‌ಆರ್‌ಸಿ ಮಧ್ಯ ಪ್ರವೇಶಿಸಿ ಭೂತಾನ್ ಹೊರದಬ್ಬಿದ ನೇಪಾಳಿ ಭಾಷಿಕ ಗೂರ್ಖಾಗಳನ್ನು ಅಮೆರಿಕ, ಕೆನಡ, ಡೆನ್ಮಾರ್ಕ್, ನಾರ್ವೆ, ಯುಕೆ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾಗಿ ಎಲ್ಲೆಲ್ಲಿಗೋ ಕಳಿಸಿದರು. ಯಾವ ಜನ ತಮ್ಮ ಭಾಷೆ, ಸಾಂಸ್ಕೃತಿಕ ಅಸ್ಮಿತೆಗಾಗಿ ಹೋರಾಡುತ್ತಿದ್ದರೋ ಅವರು ಹೋದಲ್ಲೆಲ್ಲ ಅಲ್ಲಲ್ಲೆ ಕಳೆದು ಹೋದರು. ತಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಕಳೆದುಕೊಂಡರು. ನೆದರ್ಲೆಂಡಿನಲ್ಲಿ ನೇಪಾಳಿ ನಡೆಯುತ್ತಾ? ಅಮೆರಿಕದಲ್ಲಿ ನೇಪಾಳಿ ನಡೆಯುತ್ತಾ? ವಿದೇಶದಲ್ಲಿ ನಿಮ್ಮ ಮಾತೃಭಾಷೆ ನಡೆಯುತ್ತಾ? ಇಲ್ಲ. ಅವರು ಹೋರಾಡಿದ್ದು ತಮ್ಮ ಭಾಷೆಗಾಗಿ, ಸಂಸ್ಕೃತಿಗಾಗಿ. ಎಲ್ಲ ಸತ್ವನಾಶವಾಯಿತು. ಹಾಗೆ ಹೋದವರಲ್ಲಿ ನನ್ನ ಆಪ್ತ ಬಳಗದವರೂ ಕೆಲವರಿದ್ದರು. ಅವರ ಸಂಕಟ ಕೇಳಿ ನನ್ನ ಮೊದಲ ಕವಿತೆ ‘ಮನೆಗೆ ಹಿಂತಿರುಗಲು..’ ಬರೆದೆ. ಅವರಿನ್ನೂ ಹಿಂತಿರುಗಿಲ್ಲ. ಲಡಾಯಿ ಜಾರಿಯಲ್ಲಿದೆ.

ಈ ದೇಶದಲ್ಲಿ ಈಶಾನ್ಯ ರಾಜ್ಯಗಳ ಜನರಿಗೆ ನೆಲೆಯಾಗಲು ಕಷ್ಟವಿದೆ. ಇದು ನಿಮಗೂ ಗೊತ್ತು, ನನಗೂ ಗೊತ್ತು. ನಮ್ಮ ಮುಖಚಹರೆ ಬೇರೆಯಿದೆ. ನಮ್ಮನ್ನು ನೋಡಿದರೆ ಸಾಕು, ಚಿಂಗಿ, ಮಿಂಗಿ, ಮೊಮೊ, ಕೊರೊನಾ ಮುಂತಾಗಿ ಏನೇನೋ ಕರೆಯುತ್ತಾರೆ. ಗೂರ್ಖಾಗಳನ್ನು ನೇಪಾಳದಿಂದ ಬಂದ ವಲಸಿಗರು, ಆತಂಕವಾದಿಗಳು, ನುಸುಳುಕೋರರು ಎಂದು ಭಾವಿಸುತ್ತಾರೆ. ಯಾಕೆಂದರೆ ನಾವು ನೇಪಾಳಿ ಭಾಷೆ ಮಾತಾಡುತ್ತೇವೆ. ಬಂಗಾಳಿ ಭಾಷೆಯನ್ನು ಬಾಂಗ್ಲಾ ದೇಶದಲ್ಲೂ, ಪಶ್ಚಿಮ ಬಂಗಾಳದಲ್ಲೂ ಮಾತಾಡ್ತಾರೆ. ಬಂಗಾಳಿ ಭಾಷಿಕರನ್ನು ಬಾಂಗ್ಲಾ ದೇಶೀಯರು ಎನ್ನುವುದಿಲ್ಲ. ಆದರೆ ನೇಪಾಳಿ ಭಾಷೆಯನ್ನು ಮಾತನಾಡುವ ಭಾರತೀಯ ಗೂರ್ಖಾಗಳನ್ನು ಮಾತ್ರ ನೇಪಾಳದ ನುಸುಳುಕೋರರು ಎಂದೇ ಭಾವಿಸುತ್ತಾರೆ. ಇದೆಷ್ಟು ಸರಿ? ನನ್ನನ್ನು ಪರಿಚಯಿಸುವಾಗ ಹಲವರು ನೇಪಾಳಿ ಕವಿ ಎನ್ನುತ್ತಾರೆ. ನಾನು ನೇಪಾಳಿ ಭಾಷೆಯ ಭಾರತೀಯ ಗೂರ್ಖಾ ಕವಿ. ನಮ್ಮ ನೆಲವನ್ನು ಭಾರತ, ನೇಪಾಳ, ಭೂತಾನ, ಚೀನಾ ಎಲ್ಲ ದೇಶಗಳೂ ಕಬಳಿಸಿವೆ. ಭಾರತ ಸ್ವತಂತ್ರವಾದರೂ ನಾವು ಸ್ವತಂತ್ರ ದೇಶದೊಳಗಣ ಮೂಲೆಯ ಸಮುದಾಯವಾಗಿಯೇ ಉಳಿದಿದ್ದೇವೆ. ಇಂಥ ಹತ್ತು ಹಲವು ತಪ್ಪು ಕಲ್ಪನೆಗಳು, ಐಡೆಂಟಿಟಿಯ ಸಂಕಟಗಳು ನಮ್ಮನ್ನು ಅಂಚಿಗೆ ತಳ್ಳಿವೆ. ನೀವು ಅಂಚಿಗೆ ದೂಡಲ್ಪಟ್ಟಾಗ ಸಭ್ಯತೆಯ ಸೋಗು ಹಾಕಲಾರಿರಿ, ಆಕ್ರಮಣಕಾರಿಯಾಗಿಯೇ ಇರಬೇಕಾಗುತ್ತದೆ. ನಿಮ್ಮ ಸಮಾಜವನ್ನು ಅಂಚಿಗೆ ದೂಡಿದಾಗ ಅದು ಸಭ್ಯವಾಗಿರುವುದಿಲ್ಲ, ಉದ್ರೇಕಕಾರಿಯಾಗಿರುತ್ತದೆ. ಎಂದೇ ನನ್ನ ಬರಹ ಆವೇಗ, ಉದ್ವೇಗದಿಂದ ತುಂಬಿದೆ. ಅದು ನಮಗೆ ಸಹಜವಾಗಿಬಿಟ್ಟಿದೆ.

ಡಾರ್ಜಿಲಿಂಗ್ ಈಗ ಪಶ್ಚಿಮ ಬಂಗಾಳದಲ್ಲಿದೆ. ನಮ್ಮ ರಾಜ್ಯ ಭಾಷೆ ಬಂಗಾಳಿ. ನಾವು ಮಾತನಾಡುವುದು ನೇಪಾಳಿ. ಆದರೆ ನಮ್ಮ ಊರಿನಲ್ಲಿ ನಮ್ಮನ್ನು ಆಳುವವರಿಗೆ ನಮ್ಮ ಭಾಷೆಯೇ ಬರುವುದಿಲ್ಲ. ಅವರು ನಮ್ಮ ಭಾಷೆ ಕಲಿಯಬೇಕಲ್ಲವೇ? ಅದರ ಬದಲು ನಾವು ಬಂಗಾಳಿ, ಹಿಂದಿ, ಇಂಗ್ಲಿಷ್ ತ್ರಿಭಾಷೆ ಕಲಿತು ನಮ್ಮ ಭಾಷೆ ಮರೆಯುವಂತಾಗಿದೆ. ಇದು ದಬ್ಬಾಳಿಕೆಯ ಆಳ್ವಿಕೆಗೆ ಕಾರಣವಾಗಿದೆ. ನಮಗಾಗಿ ಮಾಡುವ ಕಾನೂನು, ಯೋಜನೆಗಳು ನಮಗರ್ಥವಾಗದೇ ಹೋಗಿವೆ. ಈ ಭಾಷೆಯ ಸಮಸ್ಯೆ ಇಂದು ನಿನ್ನೆಯದಲ್ಲ. ನೂರಾರು ವರ್ಷಗಳಿಗಿಂತ ಹಳೆಯದು. ಸದ್ಯ ನಮ್ಮ ಹೋರಾಟಕ್ಕೆ ಒಂದು ಜಯ ಸಂದಿದೆ. ಮೊದಲು ಬಂಗಾಳಿಯನ್ನೇ ಕಲಿಯಬೇಕಿತ್ತು. ಆದರೆ ಸಾಂವಿಧಾನಿಕ ಭಾಷೆಯಾಗಿ ನೇಪಾಳಿ ಇರುವಾಗ ಅದನ್ನೇ ಮೊದಲ ಭಾಷೆಯಾಗಿ ಮಾಡಬೇಕೆಂದು ಪಟ್ಟುಹಿಡಿದು ವಿಜಯಿಗಳಾಗಿದ್ದೇವೆ. ಆದರೆ ಹೋರಾಟ ಚಾಲ್ತಿಯಲ್ಲಿದೆ. ಒಂದಲ್ಲ ಒಂದು ಸಮಸ್ಯೆ ಇರುತ್ತದೆ, ಅದಕ್ಕೆ ಆಕ್ರೋಶದ ದನಿ ಕೇಳಿ ಬರುತ್ತದೆ. ಅಲ್ಲಿ ನಾನೊಬ್ಬನೇ ಅಲ್ಲ, ನೀವು ಯಾರನ್ನು ಮಾತನಾಡಿಸಿದರೂ ಹೀಗೇ ಮಾತಾಡುತ್ತ್ತಾರೆ. ಅಂಚಿಗೆ ನಿಂತವರ ದನಿ ಗಡುಸಾಗಿಯೇ ಕೇಳುತ್ತದೆ.

200 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನಮ್ಮ ಹಿರೀಕರು ಡಾರ್ಜಿಲಿಂಗಿನಲ್ಲಿದ್ದಾರೆ. ಬ್ರಿಟಿಷರು ಬಂದರು. ಆಡಳಿತದ ಅನುಕೂಲಕ್ಕಾಗಿ ನಮ್ಮನ್ನು ಬಂಗಾಳದಲ್ಲಿ ಸೇರಿಸಿದರು. ಹೋದರು. ಅವರು ಹೋದರೂ ನಾವಿನ್ನೂ ಇಲ್ಲಿಯೇ, ಮೊದಲಿದ್ದ ಹಾಗೆಯೇ ಯಾರವರೂ ಅಲ್ಲದೇ ಉಳಿದಿದ್ದೇವೆ. ಮೊದಲಿನಿಂದ ಇದು ಸಂಕೀರ್ಣ ಸಮಸ್ಯೆಗಳನ್ನುಳ್ಳ ಪ್ರದೇಶ. ೧೯೫೪ರಲ್ಲೇ ಅದನ್ನೊಂದು ಪ್ರತ್ಯೇಕ ಪ್ರದೇಶವಾಗಿ ಕಾಯಿದೆ ತಂದರು. ಆದರೆ ಈಗಲೂ ಅದು ಸಂಕೀರ್ಣ ಸಮಸ್ಯೆಗಳ ಪ್ರದೇಶವಾಗಿಯೇ ಮುಂದುವರೆದಿದೆ. ಹೋರಾಟ ತೀವ್ರವಾದಾಗ ಡಾರ್ಜಿಲಿಂಗ್ ಗೂರ್ಖಾ ಹಿಲ್ ಕೌನ್ಸಿಲ್ ಮಾಡಿದರು. ಪ್ರಾಧಿಕರಣ ಮಾಡ್ತೀವಿ, ರಾಜ್ಯ ಕೊಡಕ್ಕೆ ಆಗಲ್ಲ ಅಂದರು. ನಾಲ್ಕು ದೇಶಗಳು ಸುತ್ತುವರೆದ ಆಯಕಟ್ಟಿನ ಭೂಭಾಗ ನಿಯಂತ್ರಣದಲ್ಲಿಟ್ಟುಕೊಳ್ಳಲು ನಮ್ಮನ್ನು ಸದಾ ಬಡವರನ್ನಾಗಿಟ್ಟು ಆಳಲು ನೋಡುತ್ತಿದ್ದಾರೆ. ಅಲ್ಲಿನ 70% ಜನ ಕೂಲಿ ಕಾರ್ಮಿಕರು. ಪ್ರತಿ ದಿನ 250 ರೂಪಾಯಿ ಕೂಲಿಗೆ ಕೆಲಸ ಮಾಡುತ್ತಾರೆ. ಅವರು ದುಡಿದಿದ್ದು ದಿನಕ್ಕೆ ಐವತ್ತು ಸಾವಿರ ರೂಪಾಯಿ ಬೆಲೆಬಾಳುವ ವಸ್ತುವಾಗಿದ್ದರೂ ಅವರಿಗೆ ದೊರೆಯುವುದು ಬರೀ ಇನ್ನೂರೈವತ್ತು ರೂಪಾಯಿ. ಪ್ರಪಂಚದಲ್ಲಿ ಎಂಟು ಔಷಧೀಯ ಸಸ್ಯಗಳ ಪ್ರಮುಖ ತಾಣಗಳಿವೆ. ಅದರಲ್ಲಿ ಡಾರ್ಜಿಲಿಂಗ್ ಅರಣ್ಯ ಪ್ರದೇಶವೂ ಒಂದು. ಅಲ್ಲಿನ ಚಹಾ, ಔಷಧೀಯ ಸಸ್ಯ, ಮರಮುಟ್ಟುಗಳು ತುಂಬ ದುಡ್ಡು ತಂದುಕೊಡುವ ಸಂಪನ್ಮೂಲಗಳು. ಅಲ್ಲಿನ ನದಿ, ಕಾಡು, ಬೆಟ್ಟ, ಮಣ್ಣು, ಮರ ಎಲ್ಲವೂ ಭಾರೀ ಸಂಪನ್ಮೂಲಗಳು. ಒಂದು ಪ್ರತ್ಯೇಕ ರಾಜ್ಯವಾದರೂ ನಮ್ಮನ್ನು ಸುಸ್ಥಿರವಾಗಿಡಬಲ್ಲ ಸಂಪನ್ಮೂಲಗಳು ಅಲ್ಲಿವೆ. ಆದರೆ ಯಾವುದೂ ಸಂಪನ್ಮೂಲವಾಗಿ ನಮಗೆ ಸಿಗದಂತಾಗಿದೆ. ಯಾಕೆ ಈ ತರಹದ ಆರ್ಥಿಕ ದಮನ ಮಾಡುತ್ತಿದ್ದಾರೆ? ಚೀನಾ, ಭೂತಾನ, ಬಾಂಗ್ಲಾ, ನೇಪಾಳ ಎಂಬ ನಾಲ್ಕು ದೇಶಗಳಿಂದ ಸುತ್ತುವರೆದ ಅಪಾಯಕರ ಪ್ರದೇಶದಲ್ಲಿ ನಾವಿದ್ದೇವೆ. ಏನಾದರೂ ಚಕಮಕಿ ಆದರೆ ಹೋರಾಡಲು ಸಾವಿಗೆ ಹೆದರದ ಗೂರ್ಖಾ ಜನರು ಬೇಕಾಗಿದ್ದೇವೆ.

ಇವೆಲ್ಲ ಇಷ್ಯೂ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಬೇಕೆಂಬ ಹೋರಾಟ ರೂಪಿಸಿದೆವು. ಅದನ್ನು ದಮನಿಸಲು ಎಲ್ಲಾ ಪ್ರಯತ್ನ ನಡೆಯಿತು. ಸಂಘಟನೆಗಳನ್ನು ಒಡೆಯಲಾಯಿತು. ಸಂಘಟನೆಯ ಕೆಲವು ವ್ಯಕ್ತಿಗಳಿಗೆ ಆಮಿಷವೊಡ್ಡಲಾಯಿತು. ಬಂಧನ, ಪ್ರಕರಣ, ಕೋರ್ಟು, ಅಲೆದಾಟ, ಎಲ್ಲ ಆಯಿತು ಆಗುತ್ತಲೇ ಇದೆ. ಹೋರಾಟ ಚಾಲ್ತಿಯಲ್ಲಿದೆ. ಕೊನೆಗೆ ಪ್ರತಿಯೊಬ್ಬರಿಗೂ ಐದು ಡೆಸಿಮಲ್ ಭೂಮಿ ಕೊಡೋದು ಅಂತ ಆಯಿತು. ಹೊರಗಿನಿಂದ ಬಂದು ನೆಲೆಸಿದ ಭಾರೀ ಪ್ಲಾಂಟರುಗಳಿಗೆ ಸಾವಿರಾರು ಎಕರೆ ಜಮೀನು. ಅಲ್ಲಿನವರೇ ಆದ ನಮಗೆ ಐದು ಡೆಸಿಮಲ್ ಜಮೀನು. ಇದು ತಂದಿಡುವ ಡೆಮಾಗ್ರಫಿಕ್, ಎಕನಾಮಿಕಲ್ ಬದಲಾವಣೆಯನ್ನು ಊಹಿಸಿ. ಇದರ ವಿರುದ್ಧ ಹೋರಾಡದೇ ಇರುವುದಾದರೂ ಹೇಗೆ? ಕವಿ ಆಗಿ ಇದನ್ನು ನೋಡಿ ಹೇಗೆ ಸುಮ್ಮನಿರಲಿ? ನನ್ನ ನೆಲ, ನನ್ನ ಜಮೀನು, ನನ್ನ ಪರ್ವತ ಪ್ರದೇಶದ ಕಾಡು, ಬೆಟ್ಟಗುಡ್ಡ, ನದಿಗಳೆಲ್ಲ ಸಿರಿವಂತರ ಎಸ್ಟೇಟುಗಳಾಗಿ, ರೆಸಾರ್ಟುಗಳಾಗಿ, ವಿಹಾರಧಾಮಗಳಾಗಿರುವಾಗ ನಾನು ಮಾತ್ರ ಐದು ಡೆಸಿಮಲ್ ಜಾಗಕ್ಕೆ ತೃಪ್ತಿ ಹೊಂದಬೇಕೇ?

ನಾನು ಇದುವರೆಗೆ ಆರು ಕವನ ಸಂಕಲನ ಒಂದು ಕಥಾ ಸಂಕಲನ ಪ್ರಕಟಿಸಿದ್ದೇನೆ. ಸಣ್ಣ ಊರಿನ ಪತ್ರಕರ್ತನಾಗಿ ಖಬರ್ ಮತ್ತು ಕಾಂತಿಪುರ ಎಂಬ ಎರಡು ಪತ್ರಿಕೆ ನಡೆಸುತ್ತಿರುವೆ. ಅದರಲ್ಲಿ ನನ್ನ ಜನರ ಸಂಕಟ ಕುರಿತೇ ಬರೆಯುತ್ತೇನೆ. ೨೦೨೩ರಲ್ಲಿ ಸಿಕ್ಕಿಂನಲ್ಲಿ ತೀಸ್ತಾ ಡ್ಯಾಂ ಒಡೆಯಿತು. ಸಾವಿರಾರು ಜನ ಬಾಧೆಗೊಳಗಾದರು. ಜಮೀನು ಮುಳುಗಿತು. ಊರು ಮನೆ ಮುಳುಗಿದವು. ಪುನರ್ವಸತಿ ಆಗಬೇಕಲ್ಲ. ಈ ವಿಚಾರವಾಗಿ ಬರೆದೆ. ಆದರೆ ಅದು ಪ್ರಾಕೃತಿಕ ವಿಪತ್ತು ಎಂದು ಪರಿಗಣಿತವಾಗಲೇ ಇಲ್ಲ. ರಾಷ್ಟ್ರೀಯ ವಿಕೋಪ ಎಂದೂ ಪರಿಗಣನೆಗೆ ಬರಲಿಲ್ಲ. ಎಂದೇ ಯಾವ ಸಹಾಯ, ಹಣವೂ ಬರಲಿಲ್ಲ. ಅದರ ವಿರುದ್ಧ ಬರೆದೆ, ದನಿಯೆತ್ತಿದೆ. ನನ್ನ ಮೇಲೆ ಆಕ್ರಮಣವಾಯಿತು. ಪ್ರಾಣಾಪಾಯ ಆಗುವಷ್ಟು ಗೂಂಡಾಗಳಿಂದ ಹಲ್ಲೆ ಆಯಿತು.

ಪಶ್ಚಿಮ ಬಂಗಾಳದಲ್ಲಿ ೨೩ ಜಿಲ್ಲೆಗಳಿವೆ. ಅದರ ೩೦% ರೆವಿನ್ಯೂ ಡಾರ್ಜಿಲಿಂಗಿನಿಂದ ಬರುತ್ತಿದೆ. ಅಲ್ಲಿ ಏನಿಲ್ಲ? ಎಲ್ಲ ಇದೆ. ಆದರೆ ನನ್ನ ಜನರಿಗೆ ಏನು ಸಿಕ್ಕಿದೆ? ಏನೂ ಇಲ್ಲ. ಇದನ್ನು ಕೇಳಿದರೆ ನನ್ನ ಮೇಲೆ ಆಕ್ರಮಣವಾಗುತ್ತದೆ. ಕೇಸು ಹಾಕುತ್ತಾರೆ. ಇದುವರೆಗೆ ನನ್ನ ಮೇಲೆ 17 ಪ್ರಕರಣ ದಾಖಲಿಸಿದ್ದಾರೆ. ಒಬ್ಬ ಬಡ ಕವಿ, ಪತ್ರಕರ್ತ ಏನು ಮಾಡಬಹುದು? ಒಂದು ಪ್ರಕರಣಕ್ಕೆ ಎಷ್ಟು ಖರ್ಚಾಗುತ್ತದೆ ನಿಮಗೆ ಗೊತ್ತು. ಬಾಯಿ ಮುಚ್ಚಲಿ ಎಂದು ಪ್ರಕರಣದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಡಾರ್ಜಿಲಿಂಗಿನಲ್ಲಿ ಇರುವವರು ಜೀವಂತ ಇದ್ದಾರೆ. ನನ್ನ ಜನ ನನಗಾಗಿ ಕೆಲಸ ಮಾಡುತ್ತಾರೆ. ನೀವು ಭಯಪಡದೆ ದನಿಯೆತ್ತುವವರಾಗಿದ್ದರೆ ನಿಮ್ಮ ಪರವಾಗಿ ನಿಲ್ಲುವವರು ಇದ್ದೇ ಇರುತ್ತಾರೆ. ಜನ ನಿಮಗಾಗಿ ಬರುತ್ತಾರೆ. ಅದಕ್ಕೇ ಹೇಳಬೇಕಾದ್ದನ್ನು ಭಯವಿಲ್ಲದೆ ಹೇಳಬೇಕು, ಬರೆಯಬೇಕು. ಪ್ರಕರಣಗಳ ಸಂಖ್ಯೆ ಹೆಚ್ಚುತ್ತ ಹೋಗಬಹುದು, ಹೋಗಲಿ. ಅದರಿಂದಲೇ ಈ ನಾನು ಆಗಿದೀನಿ ಅಲ್ವಾ? ನನಗೆ ನಾನೇ ರೂಪುಗೊಳ್ಳಲು ಸಾಧ್ಯವಿಲ್ಲ, ನನ್ನ ಭಾಷೆಯಿಂದ, ಜನರಿಂದ ನಾನಾಗಿದ್ದೇನೆ. ನಾನು ನನಗಾಗಿ ಬದುಕುವೆನೋ ಜನರಿಗಾಗಿ ಬದುಕುವೆನೋ? ಎಂದು ನಿರ್ಧರಿಸುವುದು ನನ್ನ ಕೈಯಲ್ಲೇ ಇದೆ. ಬಹಳಷ್ಟು ಜನ ಸುರಕ್ಷತೆ, ಸಂಸಾರ ಸುಖ ಎಲ್ಲ ಸಿಗುತ್ತದೆ ಅಂತ ತಮಗಾಗಿ ಮಾತ್ರ ಬದುಕುತ್ತಾರೆ. ನಾನು ನನ್ನ ಬದುಕು ಸಮಾಜಕ್ಕೆ, ಜನರಿಗೆ ಅಂತ ನಿರ್ಧರಿಸಿದ್ದೇನೆ.

ನಿಮಗನಿಸಬಹುದು, ಇವ ಕವಿ. ಕವಿತೆ ಬಿಟ್ಟು ಇದೇನು ಮಾತಾಡ್ತಿದಾನೆ ಅಂತ. ಇದೇನು ಪಾಲಿಟಿಕ್ಸ್ ಮಾತಾಡುತ್ತಿದಾನಲ್ಲ ಅಂತ. ನಾನು ಅಂಟುನಂಟು ಹೊಂದಿರುವ ನನ್ನ ನೆಲ ನನ್ನದಲ್ಲದಿದ್ದರೆ ಕವಿತೆ ಹೇಗೆ ಬರೆಯಲಿ? ನನ್ನ ಜನರ ಕಷ್ಟ ಅರ್ಥವಾಗದಿದ್ದರೆ ಕವಿತೆ ಯಾಕೆ ಬರೆಯಲಿ? ನಾವು ಏನೋ ಅದನ್ನೇ ಕವಿತೆಯಾಗಿ ಬರೆಯಬೇಕು. ನಮಗೇನಾಗುತ್ತಿದೆಯೋ ಅದನ್ನೇ ಬರೆಯಬೇಕು. ಆದ್ದರಿಂದ ನಾನು ಈ ತರಹದ ಕವಿತೆ ಬರೆಯುತ್ತಿದ್ದೇನೆ. ಅದರಿಂದ ಹೊರಬರಲಾರದವನಾಗಿದ್ದೇನೆ. ಯಾಕೆಂದರೆ ನನಗೆ ಕಾಲ್ಪನಿಕವಾದದ್ದು ಬರೆಯಲು ಗೊತ್ತಿಲ್ಲ. ನನಗೆ ನನ್ನದು ಗೊತ್ತು. ನನ್ನ ಸುತ್ತಮುತ್ತಿನದು ಗೊತ್ತು. ಮತ್ತು ನಾನು ಅದನ್ನೇ ಬರೆಯುವವನು. ಕಾಲ್ಪನಿಕವಾದದ್ದನ್ನು ಬರೆದರೆ ನನ್ನ ಜನರಿಗೇನು ಸಿಗುತ್ತದೆ? ನನಗೇನು ಸಿಗುತ್ತದೆ? ಕವಿಯೂ ಒಂದು ಮನುಷ್ಯ ಜೀವಿ. ಅವರಿಗೆ ಸಂವೇದನೆ ಇರಬೇಕು. ಸುತ್ತ ನಡೆಯುವುದು ಏನೂ ಕಾಣುತ್ತಿಲ್ಲ ಅಂದರೆ ಅಂತಹವರು ಸತ್ತ ಮನುಷ್ಯರು. ಮಿಡಿಯುವ ಹೃದಯ ಇಲ್ಲದಿದ್ದರೆ ಜೀವವಿಲ್ಲದ ಶವದಂತೆ ಆ ಬದುಕು. ಕವಿಗಳಿಗಿದು ಗೊತ್ತಿರಬೇಕು: ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಮಾಜವನ್ನು ತೆರೆದ ಕಣ್ಣುಗಳಿಂದ ನೋಡಬೇಕು. ಆಗ ನಮ್ಮನ್ನು ಜೀವಂತವಾಗಿಡಲು ಕೇವಲ ಕವಿತೆ ಸಾಕು. ಜಿಂದಾ ರಖನೆ ಕೇ ಲಿಯೆ ಪೊಯೆಟ್ರಿ ಕಾಫೀ ಹೈ. ನಾನು ಇದನ್ನೇ ಮಾಡುತ್ತಿದ್ದೇನೆ.

ಧನ್ಯವಾದ. ನಿಮ್ಮ ಪ್ರೀತಿ ನನ್ನಲ್ಲಿ ಕಣ್ಣೀರು ತುಂಬಿಸುತ್ತಿದೆ. ನಮಸ್ಕಾರ.




ಮನೋಜ್ ಬೊಗಾಟಿ, ಡಾರ್ಜಿಲಿಂಗ್.
(ಕನ್ನಡ ರೂಪ: ಡಾ. ಎಚ್. ಎಸ್. ಅನುಪಮಾ)

Thursday, 22 May 2025

ಬೋಧ ಗಯಾ ಬೌದ್ಧರದು

 


ಬಣ್ಣಗಳೆಲ್ಲ ಪತಾಕೆಗಳಾಗಿ ಹಾರುತ್ತಿವೆಯೋ ಎನ್ನುವಂತಿದ್ದ ತಾಣದಲ್ಲಿ ಈ ವರ್ಷದ ಹೋಳಿಹುಣ್ಣಿಮೆಯ ದಿನ ಕಳೆದೆವು. ಒಂದೆಡೆ ಪಶ್ಚಿಮ ದಿಗಂತದಲ್ಲಿ ಸೂರ್ಯ ಕೆಳಗಿಳಿಯುತ್ತಿದ್ದ ಹಾಗೆ ಪೂರ್ವದಲ್ಲಿ ಚಂದಿರ ನಾ ಬಂದೆನೆಂದು ತೋರಿಸಿಕೊಳ್ಳಲು ಹವಣಿಸುತ್ತಿತ್ತು. ಮಹಾಬೋಧಿ ದೇವಾಲಯದ ಆವರಣವು ಭಿಕ್ಕುಗಳಿಂದ, ದೇಶ ವಿದೇಶಗಳ ಉಪಾಸಕ, ಉಪಾಸಿಕೆಯರಿಂದ, ಪ್ರವಾಸಿಗಳಿಂದ ತುಂಬಿ ತುಳುಕುತ್ತಿತ್ತು. ಕೆಲವು ಭಿಕ್ಕುಗಳು ಹೊರಗಣ ಯಾವ ಗದ್ದಲವೂ ತಮ್ಮನ್ನು ತಾಗದಷ್ಟು ಆಳ ಧ್ಯಾನದಲ್ಲಿ ಮುಳುಗಿದ್ದರು. ಮತ್ತೆ ಕೆಲವರದು ಪಠಣ. ಇನ್ನು ಹಲವರು ಗುಂಪಾಗಿ ವ್ಯಾಯಾಮದಂತಹ ಚಲನೆಯ ಮೂಲಕ ನಮಸ್ಕರಿಸುತ್ತ ಏಳುತ್ತ ಇದ್ದರು. ಗಂಟೆ, ಜಾಗಟೆ ಮುಂತಾಗಿ ಯಾವ ಸದ್ದೂ ಇಲ್ಲದ ಮಹಾ ಮೌನ. ಸದ್ದಿಲ್ಲದೆ ನಡೆದು ದೇವಾಲಯದ ಆವರಣಕ್ಕೊಂದು ಸುತ್ತು ಹಾಕಿ ಬುದ್ಧನ ಮೂರ್ತಿಯೆದುರು ನಿಂತೆವು. 

ನೆಲದ ಸಾಕ್ಷಿಯಾಗಿ ಲೋಕದರಿವು ಕಂಡುಕೊಂಡ ಗುರುವೇ, ಭೂಮಿ ಮೇಲಣ ಆಗುಹೋಗುಗಳ ಸಮ್ಮಾದಿಟ್ಟಿಯಲಿ ನೋಡುವ ಮಾರ್ಗ ತಿಳಿಸಿಕೊಡು, ವಂದನೆ.




ಬೋಧಗಯಾ. ಬುದ್ಧಾನುಯಾಯಿಗಳು ನೋಡಲೇಬೇಕೆಂದು ಬಯಸುವ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದು. ಕ್ರಿ.ಪೂ. ೬೨೩ರ ಸುಮಾರು ನೇರಂಜಾರ ನದಿಯ ದಡದಲ್ಲಿ ಬೋಧಿ ವೃಕ್ಷ(ಅರಳಿ ಮರ)ದಡಿ ಶಾಕ್ಯಮುನಿ ಗೌತಮನು ಜ್ಞಾನೋದಯ ಹೊಂದಿದ್ದು; ಪರಿವ್ರಾಜಕನಾದ ಆರು ವರ್ಷಗಳ ಬಳಿಕ ಲೋಕವನ್ನು ಅದಿರುವಂತೆ ಅರಿಯಲು ಪ್ರಜ್ಞಾ, ಕರುಣಾ, ಮೈತ್ರಿ ಭಾವಗಳಿಂದ ಜೀವರೆಲ್ಲ ನೆಮ್ಮದಿಯಿಂದ ಬಾಳಬಹುದಾದ ಮಾರ್ಗವನ್ನು ಕಂಡುಕೊಂಡು ಬುದ್ಧನಾದದ್ದು ಅಲ್ಲಿಯೇ. ಬುದ್ಧ ಕುಳಿತ ತಾಣವೆಂದು ಗುರುತಿಸಲಾದ ಒಂದು ವೃಕ್ಷ, ಆಸನ ಅಲ್ಲಿದೆ. ಭೂಮಿಸ್ಪರ್ಶ ಮುದ್ರೆಯ ಬುದ್ಧನ ಮೂರ್ತಿಯಿರುವ ಮಹಾಬೋಧಿ ದೇವಾಲಯವಿದೆ.

ಜ್ಞಾನೋದಯದ ಬಳಿಕ ಬುದ್ಧ ಅಲ್ಲಿ ಏಳು ವಾರ ಕಳೆದನೆಂದು ಬೌದ್ಧ ಗ್ರಂಥಗಳಲ್ಲಿ ದಾಖಲಿಸಲಾಗಿದೆ. ಬೋಧಿ ಮರದ ಕೆಳಗೆ ಕುಳಿತು ಮೊದಲ ವಾರ ಕಳೆದ. ಅನತಿ ದೂರದಲ್ಲಿ ಅನಿಮೇಷಲೋಚನನಾಗಿ (ಕಣ್ರೆಪ್ಪೆ ಮಿಟುಕಿಸದೆ) ಬೋಧಿವೃಕ್ಷ ನೋಡುತ್ತ ಎರಡನೆಯ ವಾರ ನಿಂತ. ಅಲ್ಲಿ ಅನಿಮೇಷಲೋಚನ ಬುದ್ಧ ಶಿಲ್ಪವಿದೆ. ಬೋಧಿವೃಕ್ಷದ ಒಂದು ಪಕ್ಕ ಹಿಂದೆಮುಂದೆ ನಡೆಯುತ್ತ (ಚಂಕಮಾನ) ಮನನ, ಧ್ಯಾನ ಮಾಡುತ್ತ ಮೂರನೆಯ ವಾರ ಕಳೆದ. ಅದನ್ನು ಪ್ರತಿನಿಧಿಸುವಂತೆ ಎತ್ತರದ ಕಟ್ಟೆಯ ಮೇಲೆ ಹದಿನೆಂಟು ಪದ್ಮಶಿಲ್ಪಗಳಿವೆ. (ಇದು ಒಂದನೆಯ ಶತಮಾನದಲ್ಲಿ ನಿರ್ಮಾಣವಾಗಿದೆ.) ನಾಲ್ಕನೆಯ ವಾರ ಆಳಧ್ಯಾನದಲ್ಲಿ ನಿರತನಾದ ಅವನ ಮೈಯಿಂದ ಏಳು ಬಣ್ಣಗಳು ಹೊರಬಿದ್ದುವೆಂದು ‘ರತ್ನಘರ ಚೈತ್ಯ’ ನಿರ್ಮಿಸಿದ್ದಾರೆ. ಸೂರಿಲ್ಲದ ಪುಟ್ಟ ಗುಡಿ ಅಲ್ಲಿದೆ. ಐದನೆಯ ವಾರ ಕುರಿಗಾಹಿಗಳು ಬಂದು ತಂಗುತ್ತಿದ್ದ ಆಲದ ಮರ ‘ಅಜಪಾಲ ನಿಗ್ರೋಧ’ದ ಅಡಿ ಕಳೆದ. ಅಲ್ಲಿಯೇ ಒಬ್ಬ ಬ್ರಾಹ್ಮಣನಿಗೆ, ‘ಜನ್ಮದಿಂದ ಯಾರೂ ಬ್ರಾಹ್ಮಣರಾಗಲು ಸಾಧ್ಯವಿಲ್ಲ; ಕ್ರಿಯೆಯಿಂದ ಆಗಬಹುದು’ ಎಂದು ಹೇಳಿದ. ಈಗ ಮರವಿದ್ದ ತಾಣದಲ್ಲಿ ಒಂದು ಸ್ತಂಭವಿದೆ. ಆರನೆಯ ವಾರ ಭಾರೀ ಬಿರುಗಾಳಿ ಮಳೆ ಶುರುವಾದರೂ ಗಮನಿಸದೆ ಒಂದೆಡೆ ಕುಳಿತ ಬುದ್ಧನಿಗೆ ಸರ್ಪರಾಜ ಮುಚುಲಿಂದ ಆಶ್ರಯ ನೀಡಿದನೆಂದು ಗುರುತಿಸುವ ತಾಣವಿದೆ. ರಾಜ ಅಶೋಕನ ಕಾಲದಲ್ಲಿ ನಿರ್ಮಾಣವಾದ ಒಂದು ಕೊಳ ಅಲ್ಲಿದೆ. ಏಳನೆಯ ವಾರ ರಾಜಾಯತನ ಮರದ ಬಳಿಯಿರುವಾಗ ಬರ್ಮಾದ ವ್ಯಾಪಾರಿಗಳಾದ ತಪುಸ್ಸ ಮತ್ತು ಭಲ್ಲಿಕಾ ಬುದ್ಧನನ್ನು ಕಂಡು ನುಚ್ಚನ್ನ ಮತ್ತು ಜೇನುತುಪ್ಪಗಳನ್ನು ಬೆರೆಸಿ ಮಾಡಿದ ಆಹಾರ ನೀಡಿದರು. ಬುದ್ಧನ ನಡೆಗೆ, ನುಡಿಗೆ ಮಾರು ಹೋಗಿ ಬುದ್ಧಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ ಎಂದರು. ಮುಂದೆ ಅದೇ ಧಮ್ಮವನ್ನು ಸ್ವೀಕರಿಸಿದ ಕುರುಹಾಗಿ ಹೇಳುವ ಉದ್ಘೋಷವಾಯಿತು. ಅವರು ಹಿಂತಿರುಗುವಾಗ ಬುದ್ಧನ ತಲೆಗೂದಲನ್ನು ತಮ್ಮ ದೇಶಕ್ಕೆ ಒಯ್ದರು. ಯಾಂಗೂನಿನ ಶ್ವೆದಗನ್ ಪಗೋಡದಲ್ಲಿರುವುದು ಅದೇ ಕೂದಲು ಎಂದು ನಂಬಲಾಗಿದೆ. 



vajrasana


Buddha Statue



Chankamana



Maha Bodhi Tree

ಸಾಮ್ರಾಟ ಅಶೋಕನ ಮಕ್ಕಳಾದ ಮಹಿಂದ ಮತ್ತು ಸಂಘಮಿತ್ರೆ ಧರ್ಮ ಪ್ರಚಾರಕ್ಕೆ ಶ್ರೀಲಂಕೆಗೆ ಹೋಗುವಾಗ ಗಯಾದ ಬೋಧಿವೃಕ್ಷದ ಸಸಿ ಒಯ್ದಿದ್ದರು. ಮೂಲ ವೃಕ್ಷದ ಐದನೆಯ ತಲೆಮಾರಿನ ಸಸಿಯನ್ನು ಶ್ರೀಲಂಕಾದ ಅನುರಾಧಪುರದಿಂದ ಮತ್ತೆ ತಂದು ಬೋಧಗಯಾದಲ್ಲಿ ನೆಡಲಾಯಿತು. ಅದೀಗ ವೃಕ್ಷವಾಗಿ ಬೆಳೆದು ನಿಂತಿದೆ.

ಮಹಾಬೋಧಿ ವಿಹಾರದಲ್ಲಿ ಐದು ಅಡಿ ಎತ್ತರದ ಭೂಮಿಸ್ಪರ್ಶ ಮುದ್ರೆಯಲ್ಲಿ ಕುಳಿತ ಬುದ್ಧ ಮೂರ್ತಿಯಿದೆ. ಅದಕ್ಕೆ ಬಂಗಾರದ ಕವಚ ಹೊದಿಸಲಾಗಿದೆ. ಹೊರಾವರಣದಲ್ಲಿ ಅಶೋಕ ಸ್ತಂಭವಿದೆ. ಮುಖ್ಯ ವಿಹಾರದ ಸುತ್ತಮುತ್ತ ಬೇರೆಬೇರೆ ಕಾಲಮಾನದಲ್ಲಿ ಬೇರೆಬೇರೆಯವರು ನಿರ್ಮಿಸಿದ ನೂರಾರು ಸಣ್ಣಪುಟ್ಟ ಸ್ತೂಪಗಳೂ, ಬುದ್ಧ ಶಿಲ್ಪಗಳೂ ಇವೆ. ಶ್ರೀಲಂಕಾ, ವಿಯೆಟ್ನಾಂ, ಥೈಲ್ಯಾಂಡ್, ಬಾಂಗ್ಲಾ, ಬರ್ಮಾ, ಕಾಂಬೋಡಿಯಾ, ಭೂತಾನ್, ನೇಪಾಳ, ಚೀನಾ ಮುಂತಾಗಿ ವಿಶ್ವದ ಬಹುತೇಕ ಬೌದ್ಧ ದೇಶಗಳ ವಿಹಾರಗಳು ಮಹಾಬೋಧಿ ದೇವಾಲಯದ ಸುತ್ತಮುತ್ತ ಇವೆ. 

ಈಗ ಮಹಾಬೋಧಿ ವಿಹಾರದಲ್ಲಿ ನಾವು ನೋಡುವುದು ಇಷ್ಟು. ಇಲ್ಲಿ ದೊರೆತ ಹಲವು ವಸ್ತುಗಳನ್ನು ಜತನದಿಂದ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಇಷ್ಟನ್ನು ಹೀಗೆ ನೋಡಲು ಹಲವರ ಶ್ರಮ, ಬದ್ಧತೆ, ಹೋರಾಟ, ಇತಿಹಾಸದ ಅರಿವು ಕಾರಣವಾಗಿದೆ. 

ಬುದ್ಧನ ಮಹಾಪರಿನಿರ್ವಾಣದ ೨೧೮ ವರ್ಷಗಳ ಬಳಿಕ ಜ್ಞಾನೋದಯವಾದ ತಾಣವನ್ನು ಮೊದಲು ಗುರುತಿಸಿದ ಸಾಮ್ರಾಟ ಅಶೋಕನು ತುದಿಯಲ್ಲಿ ನಿಂತ ಆನೆಯಿರುವ ಸ್ತಂಭವನ್ನು ನಿಲ್ಲಿಸಿದ. ಬೋಧಿವೃಕ್ಷದ ಸುತ್ತಲೂ ಕೆಂಪುಕಲ್ಲಿನ ಆವಾರ ನಿರ್ಮಿಸಿದ. ಬುದ್ಧ ಕುಳಿತ ತಾಣದ ಕಲ್ಲುಹಾಸನ್ನಲಂಕರಿಸಿ, ‘ವಜ್ರಾಸನ’ವೆಂದು ಗುರುತಿಸಿ, ಅದು ‘ಭೂಮಿಯ ನಾಭಿ’ ಎಂದು ಕರೆದ. ಒಂದರಿಂದ ಆರನೆಯ ಶತಮಾನದ ಒಳಗೆ ಮಹಾಬೋಧಿ ದೇವಾಲಯ ನಿರ್ಮಾಣವಾಯಿತು. ಬುದ್ಧ ಮೂರ್ತಿಯನ್ನು ೧೧ನೆಯ ಶತಮಾನದ ಪಾಲ ವಂಶಸ್ಥರು ನಿರ್ಮಿಸಿದರು. ವಿಶ್ವದ ಬಹುದೇಶಗಳ ಉಪಾಸಕರು, ರಾಜರು ದೇವಾಲಯಕ್ಕೆ ತಮ್ಮ ಸಂಪತ್ತು, ದಾನ ಧಾರೆಯೆರೆದರು. 

ಹುಟ್ಟಿದ ನೆಲದಲ್ಲಿ ವೈದಿಕ ಧರ್ಮದ ಪುರೋಹಿತಶಾಹಿಗಳಿಂದ, ೬೨ ‘ಅನ್ಯ ತೀರ್ಥೀಯ’ ಪರಂಪರೆಗಳಿಂದ ಬೌದ್ಧ ಧಮ್ಮವು ಸಂಚು-ಸ್ಪರ್ಧೆ ಎದುರಿಸಿತು. ಪರಕೀಯರ ಆಕ್ರಮಣ, ಸ್ವಮತ ರಕ್ಷಣೆ-ಅನ್ಯಮತ ನಾಶದ ಉನ್ಮಾದವೇ ಮೊದಲಾದ ಕಾರಣಗಳಿಂದ ಏಳುಬೀಳುಗಳನ್ನು ಕಂಡಿತು. ೧೯ನೆಯ ಶತಮಾನದ ವೇಳೆಗೆ ಬ್ರಿಟಿಷ್ ಪುರಾತತ್ವಶಾಸ್ತ್ರಜ್ಞರ ಆಸಕ್ತಿ, ಕೆಲಸಗಳಿಂದ ಬೌದ್ಧತಾಣಗಳು ಮರುಜೀವ ಪಡೆದವು. ಇಂದಿನ ಭಾರತ, ಪಾಕಿಸ್ತಾನ, ಆಫ್ಘನಿಸ್ತಾನ, ಬರ್ಮಾ, ಶ್ರೀಲಂಕಾಗಳ ಬೌದ್ಧ ತಾಣಗಳ ಸಂರಕ್ಷಣೆ, ದುರಸ್ತಿ ಮತ್ತು ಪುನರುಜ್ಜೀವನಕ್ಕೆ ಸರ್ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ ಮತ್ತವರಂತಹ ಅಧಿಕಾರಿಗಳ ಕೊಡುಗೆ ಸ್ಮರಣೀಯವಾದುದು. ೨೦೧೩ರಲ್ಲಿ ಥೈಲ್ಯಾಂಡಿನ ರಾಜಪ್ರಭುತ್ವ ಮತ್ತು ಪ್ರಜೆಗಳು ಬುದ್ಧ ಜಯಂತಿಯ ೨೬೦೦ನೇ ವರ್ಷಾಚರಣೆಯ ಸಂದರ್ಭದಲ್ಲಿ ಮಹಾಬೋಧಿ ದೇವಾಲಯಕ್ಕೆ ಚಿನ್ನದ ಕಲಶ ಕೊಡುಗೆಯಾಗಿ ನೀಡಿದ್ದಾರೆ. ಬೌದ್ಧ ಉಪಾಸಕರ ಮನೆಮನೆಗಳಿಂದ ಚಿನ್ನ ಸಂಗ್ರಹಿಸಿ, ಕರಗಿಸಿ ೨೮೯ ಕೆಜಿ ಚಿನ್ನದ ರೇಕನ್ನು ಭಾರತಕ್ಕೆ ತಂದು ಮಹಾಬೋಧಿ ದೇವಾಲಯ ಗೋಪುರದ ತುತ್ತತುದಿಗೆ, ಎರಡು ಮೀಟರ್ ಅಗಲ ನಾಲ್ಕೂವರೆ ಮೀಟರ್ ಎತ್ತರದ ಚಿನ್ನದ ಕಲಶ ಹೊದಿಸಿದ್ದಾರೆ.


ಬುದ್ಧ ಭಾರತದ ಏಳುಬೀಳಿನ ಕತೆ

ಬೌದ್ಧ ಜೀವನಕ್ರಮದಲ್ಲಿ ಯಾವುದೇ ಆಚರಣೆಗಳಿರಲಿಲ್ಲ. ಪುರೋಹಿತರಿಗೆ ಸ್ಥಾನವೇ ಇರಲಿಲ್ಲ. ಬೌದ್ಧ ಸಾಮ್ರಾಟರಾಗಿದ್ದ ಮೌರ್ಯರ ನಂತರ ಬಂದ ಶುಂಗರು ಬ್ರಾಹ್ಮಣಧರ್ಮವನ್ನು ಲಿಖಿತ ಶಾಸ್ತ್ರವಾಗಿಸಿದರು. ವರ್ಣಾಶ್ರಮವನ್ನು ಜಾತಿಪದ್ಧತಿಯಾಗಿ ಗಟ್ಟಿಗೊಳಿಸಿ ಭಾರತೀಯ ಸಮಾಜವನ್ನು ಖಾಯಂ ಶ್ರೇಣೀಕರಣಕ್ಕೊಳಪಡಿಸಿದ ಮನುಸ್ಮೃತಿ ಬಂದದ್ದು ಪುಷ್ಯಮಿತ್ರ ಶುಂಗನ ಕಾಲದಲ್ಲಿ. ಶ್ರೇಣಿಯ ಅಗ್ರಸ್ಥಾನದಲ್ಲಿದ್ದ ಬ್ರಾಹ್ಮಣರು ಸಕಲ ಸವಲತ್ತುಗಳನ್ನು ಅನುಭವಿಸುತ್ತ, ಧಾರ್ಮಿಕ ಆಚರಣೆಗಳನ್ನು ನೆರವೇರಿಸಲು ದಾನದಕ್ಷಿಣೆಮನ್ನಣೆ ಪಡೆಯುತ್ತಾ, ಸ್ಥಳೀಯ ಉತ್ಪಾದನೆ, ವಿತರಣೆಯ ಮೇಲೆ ಅಲಿಖಿತ ಹಿಡಿತ ಸಾಧಿಸಿದ್ದೇ ಅಲ್ಲದೆ ದೇವರ ಜೊತೆ ನೇರ ಸಂವಾದ ಸಾಧ್ಯವೆಂಬ ಭ್ರಮೆ ಸೃಷ್ಟಿಸಿದರು. ಯಜ್ಞಯಾಗ, ಬಲಿ, ಭಜನೆಗಳಲ್ಲಿ ಜನಸಾಮಾನ್ಯರು ಆಚರಣೆಯೇ ಧರ್ಮವೆಂದು ಬಗೆದರು. 

ಅದೇವೇಳೆಗೆ ಐದರಿಂದ ಎಂಟನೇ ಶತಮಾನದ ಅವಧಿಯಲ್ಲಿ ಮಧ್ಯ ಏಷ್ಯಾ ಕಡೆಯಿಂದ ಆಕ್ರಮಣ ಮಾಡಿದ ಅಲೆಮಾರಿ ಬಿಳಿಯ ಹೂಣರು ಬೌದ್ಧಧರ್ಮದ ಅನುಯಾಯಿಗಳಾಗಿದ್ದ ಭಾರತದ ಗುಪ್ತ ಸಾಮ್ರಾಜ್ಯಕ್ಕೆ ದೊಡ್ಡ ಹೊಡೆತ ಕೊಟ್ಟರು. ಭಾರತದ ವಾಯವ್ಯ ಹೆಬ್ಬಾಗಿಲನ್ನು ಆಕ್ರಮಿಸಿ, ರೋಮನ್ನರೊಡನೆ ವ್ಯಾಪಾರ ನಿಲ್ಲಿಸಿ, ಚೀನಾ ಮತ್ತು ಅರಬ್ಬರ ವ್ಯಾಪಾರಕ್ಕೆ ಬಾಗಿಲು ತೆರೆದರು. ಹೂಣರು ಹಿಂದೂ ಶೈವರಾದ ಬಳಿಕ ಬೌದ್ಧ ಸ್ಮಾರಕ, ಮಠಗಳನ್ನು ನಾಶಮಾಡಿದರು. ಅನ್ಯಮತದ ಆಳ್ವಿಕರು, ಸ್ಥಳೀಯ ಪುರೋಹಿತಶಾಹಿಗಳ ಕೈಗೆ ಸಿಲುಕಿ ಬೌದ್ಧ ಧರ್ಮದ ಸಾಂಸ್ಥಿಕ ಚಹರೆಗಳು ವಿರೂಪಗೊಂಡವು, ನಾಶವಾಗತೊಡಗಿದವು. 



ಭಾರತಕ್ಕೆ ಬಂದ ಅಲ್ ಬೈರೂನಿ, ಫಾಹೀನ್, ಹ್ಯೂಯೆನ್ ತ್ಸಾಂಗರಂತಹ ವಿದೇಶಿ ಯಾತ್ರಿಕ ಪ್ರವಾಸಿಗಳು ಕುಂದುತ್ತಿರುವ, ನಾಶವಾಗುತ್ತಿರುವ ಬೌದ್ಧಸಂಘಗಳ ಬಗೆಗೆ ಬರೆದಿದ್ದಾರೆ. ಬೌದ್ಧಶಾಸ್ತ್ರ ಗ್ರಂಥಗಳನ್ನು ಅದರ ಮೂಲಸ್ವರೂಪದಲ್ಲಿ ಹುಡುಕುತ್ತ ಹದಿನೇಳು ವರ್ಷ ಭಾರತದಲ್ಲಿ ಅಲೆದಾಡಿದ ಭಿಕ್ಕು ಹ್ಯೂಯೆನ್ ತ್ಸಾಂಗ್, ವಾಯವ್ಯ ಭಾರತದ ಲಕ್ಷಾಂತರ ಬೌದ್ಧಮಠಗಳು ನಾಶವಾದವು ಎಂದು ದಾಖಲಿಸಿದ್ದಾನೆ. ಅವ ಸಂಚರಿಸುತ್ತಿದ್ದ ಪ್ರದೇಶಗಳಲ್ಲಿ ಬೌದ್ಧಧರ್ಮವು ತನ್ನ ವೈಭವದ ದಿನಗಳನ್ನು ಕಳೆದುಕೊಂಡಿತ್ತು. ಸಂಘ, ವಿಹಾರ, ಸ್ತೂಪಗಳನ್ನು ನಡೆಸಲು ನಂಬಿದ್ದ ಧನಮೂಲಗಳು ಕ್ಷೀಣಗೊಳ್ಳತೊಡಗಿದ್ದವು. ಅರಬ್ ವ್ಯಾಪಾರಸ್ಥರ ಪ್ರಭಾವ ಹೆಚ್ಚುತ್ತ ಹೋದಂತೆ ಇಸ್ಲಾಂ ಮತ್ತು ಹಿಂದೂ ವ್ಯಾಪಾರಸ್ಥರನ್ನು ಬೌದ್ಧಸಂಘಗಳು ನೆಚ್ಚಬೇಕಾದ ಪರಿಸ್ಥಿತಿಯಿತ್ತು. ಮೊದಲ ಸಹಸ್ರಮಾನದ ಕೊನೆಯ ವೇಳೆಗೆ ಬ್ರಾಹ್ಮಣ ಧರ್ಮ ಹಾಗೂ ಸ್ಥಳೀಯ ಕುಲ/ಮತಗಳು ಮೇಲುಗೈ ಪಡೆಯುತ್ತ ಹೋದಂತೆ ದಕ್ಷಿಣೋತ್ತರ ಭಾರತದಲ್ಲಿ ಬೌದ್ಧ ಧರ್ಮ ಕ್ಷೀಣವಾಯಿತು. ಹನ್ನೆರಡನೆಯ ಶತಮಾನದಲ್ಲಿ ಬೌದ್ಧ ಪಾಲ ವಂಶವು ಹಿಂದೂ ಸೇನಾ ವಂಶಕ್ಕೆ ಸೋತಿತು. ಆಕ್ರಮಣಕಾರಿ ಮುಸ್ಲಿಂ ರಾಜರ ಆಳ್ವಿಕೆ ಶುರುವಾಯಿತು. ಅದು ಬೌದ್ಧ ಧರ್ಮ ಸಂಪೂರ್ಣ ಹಿನ್ನೆಲೆಗೆ ಸರಿದ ಅವಧಿ. ಕ್ರಿ.ಶ.೧೨೩೦ರ ಹೊತ್ತಿಗೆ ಮಹಾಬೋಧಿ ದೇವಾಲಯವು ಶೈವ ಆರಾಧನಾ ಸ್ಥಳವಾಗಿ ಮಾರ್ಪಟ್ಟಿತು. ಆದರೂ ಅಲ್ಲಿ ಹದಿನಾರನೆಯ ಶತಮಾನದವರೆಗೂ ಧ್ಯಾನ, ಪಠಣಗಳಂತಹ ಬೌದ್ಧ ಆಚರಣೆಗಳು ಯಾತ್ರಾರ್ಥಿಗಳ ದಾನದಿಂದ ನಡೆಯುತ್ತಿದ್ದವು. ಭಾರತ, ಭೂತಾನ್, ಬರ್ಮಾ, ನೇಪಾಳ, ಶ್ರೀಲಂಕಾ, ಟಿಬೆಟ್ ಮುಂತಾದ ದೇಶಗಳಿಂದ ಯಾತ್ರಿಕರು ಬರುತ್ತಿದ್ದರು. ೧೯ನೆಯ ಶತಮಾನವು ಭಾರತದಲ್ಲಿ ಬೌದ್ಧ ಧರ್ಮ ಪುನರುಜ್ಜೀವನಗೊಳ್ಳಲು ಪೂರಕವಾದ ಅನೇಕ ಘಟನೆಗಳಿಗೆ ಸಾಕ್ಷಿಯಾಯಿತು. ೧೮೭೪ರಲ್ಲಿ ಬರ್ಮಾದ ಆಳ್ವಿಕರು ಮಹಾಬೋಧಿ ದೇವಾಲಯದ ದುಃಸ್ಥಿತಿಗೆ ಮರುಗಿ ದುರಸ್ತಿ ಕಾರ್ಯ ನಡೆಸಿದರು. ೧೮೮೪ರ ವೇಳೆಗೆ ಸರ್ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ ಉತ್ಖನನ ಕಾರ್ಯ ಕೈಗೊಂಡು ದೇವಾಲಯಕ್ಕೆ ಈಗಿರುವ ರೂಪ ಕೊಟ್ಟನು. 



ಹಿಂದೂ ದೇವರನ್ನಿಟ್ಟು ಪೂಜಿಸುತ್ತಿದ್ದ ಮಹಾಂತರು ತಮ್ಮದೆಂದು ಸಾಧಿಸುತ್ತಿದ್ದ ಮಹಾಬೋಧಿ ದೇವಾಲಯವು ಬೌದ್ಧರಿಗೆ ಸೇರಬೇಕೆಂದು ೧೮೯೧ರಲ್ಲಿ ಕಾನೂನು ಹೋರಾಟ ಶುರು ಮಾಡಿದವರು ಶ್ರೀಲಂಕಾದ ಭಿಕ್ಕು ಅನಾಗಾರಿಕ ಧರ್ಮಪಾಲ. ಅದಕ್ಕೆ ಭಾಗಶಃ ಜಯ ಸಿಕ್ಕಿದ್ದು ಅವರ ಮರಣದ ೧೬ ವರ್ಷಗಳ ನಂತರ ೧೯೪೯ರಲ್ಲಿ. ಮಹಾಬೋಧಿ ದೇವಸ್ಥಾನ ಕಾಯ್ದೆ ಜಾರಿಯಾಯಿತು. ಅದುವರೆಗೆ ಕೇವಲ ಹಿಂದೂಗಳೇ ಇದ್ದ ಸಮಿತಿಯಲ್ಲಿ ಬೌದ್ಧರಿಗೂ ಸ್ಥಾನ ದೊರೆಯಿತು. ವಿವಾದ ಶಮನಗೊಳಿಸಲು ತಾತ್ಕಾಲಿಕವಾಗಿ ಬೋಧಗಯಾ ಟೆಂಪಲ್ ಆಕ್ಟ್-೧೯೪೯ ಜಾರಿಯಾಯಿತು. 

ಆ ಕಾಯ್ದೆಯ ಪ್ರಕಾರ ಬಿಹಾರ ರಾಜ್ಯ ಸರ್ಕಾರ ರಚಿಸುವ ‘ಮಹಾಬೋಧಿ ದೇವಾಲಯದ ಆಡಳಿತ ಮತ್ತು ಆಸ್ತಿ ನಿರ್ವಹಣಾ ಸಮಿತಿ’ಯು ಅದರ ಮೇಲ್ವಿಚಾರಣೆ ವಹಿಸಿಕೊಳ್ಳುವುದು. ರಾಜ್ಯಸರ್ಕಾರವು ಸಮಿತಿಗೆ ನೇಮಿಸುವ ಎಂಟು ಸದಸ್ಯರಲ್ಲಿ ನಾಲ್ಕು ಜನ ಹಿಂದೂಗಳಿರಬೇಕು. ಮೂರು ವರ್ಷದ ಅವಧಿಯ ಒಂಭತ್ತು ಜನರ ಆಡಳಿತ ಮಂಡಳಿಯಲ್ಲಿ ಬಿಹಾರ ಸರ್ಕಾರದ ಪರವಾಗಿ ಗಯಾ ಜಿಲ್ಲಾ ಮ್ಯಾಜಿಸ್ಟ್ರೇಟರು ಎಕ್ಸ್ ಅಫಿಶಿಯೊ ಅಧ್ಯಕ್ಷರು. ಅವರು ಹಿಂದೂ ಅಲ್ಲದಿದ್ದರೆ ರಾಜ್ಯ ಸರ್ಕಾರ ಹಿಂದೂ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿಕೊಳ್ಳುತ್ತದೆ. ಅಲ್ಲಿಯ ಶಂಕರಾಚಾರ್ಯ ಮಠದ ಸ್ವಾಮಿ ಸಹ ಮತ್ತೊಬ್ಬ ಎಕ್ಸ್ ಅಫಿಶಿಯೊ ಸದಸ್ಯರು. ಆದರೆ ಹಳೆಯ ಕಾಯ್ದೆ ಹಾಗೆಯೇ ಮುಂದುವರೆಯಿತೇ ಹೊರತು ಬೌದ್ಧರಿಗೆ ನ್ಯಾಯಯುತ ಪ್ರಾತಿನಿಧ್ಯ, ಹಕ್ಕುಗಳು ದಶಕಗಳು ಕಳೆದರೂ ದೊರೆಯಲಿಲ್ಲ. ಸಾಕಷ್ಟು ಸಂಘರ್ಷದ ಬಳಿಕ ೨೦೧೩ರಲ್ಲಿ ಹಿಂದೂಯೇತರರು ಅಧ್ಯಕ್ಷರಾಗಬಹುದೆಂದು ಕಾನೂನು ಬದಲಾಯಿತು. ಆದರೆ ಅದೇ ೨೦೧೩ರಲ್ಲಿ ಮಹಾಬೋಧಿ ದೇವಸ್ಥಾನದ ಮೇಲೆ ಬಾಂಬ್ ದಾಳಿಯಾಯಿತು. ದಾಳಿಯ ಹೊಣೆಯನ್ನು ಇಂಡಿಯನ್ ಮುಜಾಹಿದೀನ್‌ಗಳೇ ಹೊತ್ತುಕೊಂಡರೆಂಬ ವರದಿ ಬಂತು. ಬುದ್ಧ ಕುಳಿತು ಸಾಕ್ಷಾತ್ಕಾರ ಪಡೆದ ವೃಕ್ಷದ ಟೊಂಗೆಗಳನ್ನು ಅಕ್ರಮವಾಗಿ ಕಡಿದು ವಿದೇಶೀ ಬೌದ್ಧರಿಗೆ ಮಾರಿ ಹಣ ಗಳಿಸಿದ ಆರೋಪವಿರುವ ಇನ್ನೂ ಒಂದು ವಿವಾದ ತಲೆದೋರಿತು. ಅಲ್ಲಿನ ಮುಖ್ಯ ಅರ್ಚಕರನ್ನು ಬಂಧಿಸಲಾಯಿತು. 

ಮಹಾಬೋಧಿ ದೇವಾಲಯ ಆಡಳಿತ ಸಮಿತಿ ಕುರಿತ ನ್ಯಾಯಾಲಯದ ವ್ಯಾಜ್ಯ ರಾಮಜನ್ಮಭೂಮಿ ವಿವಾದದಷ್ಟೇ ಹಳೆಯದು. ಆದರೆ ಭಾರತದಲ್ಲಿ ಪುರಾಣದ ಕತೆಗಳಿಗೆ ಐತಿಹಾಸಿಕ ಸಾಕ್ಷ್ಯಗಳನ್ನು ಸೃಷ್ಟಿಸಿ ನ್ಯಾಯ ಕೊಡುವಷ್ಟು ಸುಲಭವಾಗಿ ಕಣ್ಣೆದುರು ರಾಚುವ ಐತಿಹಾಸಿಕ ವಾಸ್ತವಗಳಿಗೆ ನ್ಯಾಯ ಸಿಗಲಾರದು. ನ್ಯಾಯದೇವತೆಯ ಕಣ್ಣಿಗೆ ಪಟ್ಟಿ ಹಚ್ಚಿ ನಿಲ್ಲಿsಸಿರುವುದರಿಂದಲೇ ೨೦೦೨ರಲ್ಲಿ ಯುನೆಸ್ಕೊದಿಂದ ‘ವಿಶ್ವ ಪರಂಪರೆಯ ತಾಣ’ ಎಂದು ಗುರುತಿಸಲ್ಪಟ್ಟ ಮಹಾಬೋಧಿ ದೇವಾಲಯವು ೨೦೨೫ನೆಯ ಇಸವಿಯಲ್ಲೂ ಬೌದ್ಧರ ನಿಯಂತ್ರಣಕ್ಕೆ ಸಿಗದಂತೆ ಆಗಿದೆ. ದೇಶಭಾಷೆ ಮರೆತು ಬೌದ್ಧರೆಲ್ಲ ಸೇರಿ ನಡೆಸುತ್ತಿರುವ ಹೋರಾಟವು ಹಿಂದುತ್ವವನ್ನು ಎಲ್ಲರ ಮೇಲೆ ಹೇರುತ್ತಿರುವ ಆಳ್ವಿಕರಿಂದ ದಮನಕ್ಕೊಳಗಾಗಿದೆ. 


‘ಮೂಲನಿವಾಸಿ’ಗಳ ಮಾತು

ಬೇಸಿಗೆ ಕಾಲಿಡದ ಮಾರ್ಚ್ ತಿಂಗಳ ತಂಪು ಮುಂಜಾನೆ. ಬೆಳಿಗ್ಗೆ ಆರಕ್ಕಾಗಲೇ ಬೋಧಗಯಾದ ಬೀದಿಗಳಲ್ಲಿ ರಿಕ್ಷಾಗಳು ಓಡಾಡುತ್ತಿದ್ದವು. ತಂತಮ್ಮ ದೇಶದ ಸಂಘಾರಾಮಗಳಲ್ಲಿ ಭಿಕ್ಕುಗಳು ಚಟುವಟಿಕೆ ಆರಂಭಿಸಿದ್ದರು. ಹೊರಡುವ ಮುನ್ನ ಮತ್ತೆ ಸ್ವಲ್ಪ ತಿರುಗಿ ಬರೋಣವೆಂದು ಅಂದು ಬೇಗನೆದ್ದು ಸರ್ಕೀಟ್ ಹೊರಟೆವು. ಒಂದಷ್ಟು ದೂರ ನಡೆದೇ ತಿರುಗಿದೆವು. ಬಳಿಕ ಸ್ಥಳೀಯರೊಡನೆ ಸಂಪರ್ಕ ಆದಂತಾಗುವುದೆಂದು ಸೈಕಲ್ ಆಟೋ ಹುಡುಕಿದೆವು. ಅಲ್ಲೆಲ್ಲ ಮೂರು ಚಕ್ರದ, ಸೌರ ಶಕ್ತಿ ಬಳಸುವ ತೆರೆದ ಆಟೋಗಳಿರುತ್ತವೆ. ತ್ರಿಚಕ್ರದ ಬೈಕಿಗೆ ಬಾಡಿ ಕಟ್ಟಿದಂತಿದ್ದು ಅಗಲ ಕಡಿಮೆಯಿರುವುದರಿಂದ ಸಣ್ಣಗಲ್ಲಿಗಳಲ್ಲೂ ಆರೇಳು ಜನರನ್ನು ಒಯ್ಯಬಲ್ಲವು. ಒಬ್ಬ ಆಟೋ ಅಣ್ಣನನ್ನು ಹಿಡಿದೆವು. ಅವರು ವಿನಯ್. ಲೋಕಾಭಿರಾಮ ಮಾತಿಗೆಳೆದಾಗ ನಡುನಡುವೆ ‘ಮೂಲ್‌ನಿವಾಸಿ’ ಪದವನ್ನು ಒಂದೆರೆಡು ಸಲ ಬಳಸಿದರು. ನನ್ನ ಊಹೆ ಸರಿಯಾಗಿತ್ತು, ಅವರು ಬಾಮ್ಸೆಫ್‌ನವರು. ಹೌದಾ ಎಂದು ಕೇಳಿದ ಒಂದು ಪ್ರಶ್ನೆ ನಮ್ಮನ್ನು ಎಷ್ಟು ಆಪ್ತವಾಗಿಸಿತೆಂದರೆ ಸಾಕುಸಾಕೆಂದರೂ ಬಿಡದೇ ಎಲ್ಲೆಲ್ಲೋ ಒಯ್ದು ಎಲ್ಲವನ್ನು ತೋರಿಸಿ ಕರೆತಂದರು. 


  Srilankan Monk Anagarika Dhammapala Bust


Sleeping Buddha Statue


Great Buddha Statue


Japan Monastery


Srilakan Monastery


Metta Buddha Mandir

ಕೆಲವು ಮೊನಾಸ್ಟರಿಗಳು ಇನ್ನೂ ಬಾಗಿಲು ತೆರೆದಿರಲಿಲ್ಲ. ಜಪಾನಿನದು ಮಾತ್ರ ತೆರೆದಿತ್ತು. ಮೆಟ್ಟಿಲುಗಳ ಹತ್ತಿ ವಿಶಾಲ ಆವರಣ ಪ್ರವೇಶಿಸಿದರೆ ಸೂಜಿಮೊನೆ ಬಿದ್ದರೂ ಕೇಳುವಂತಹ ನಿಶ್ಶಬ್ದ. ಒಬ್ಬ ಉಪಾಸಕರು ಧ್ಯಾನದಲ್ಲಿ ತೊಡಗಿದ್ದರು. ಅಲ್ಲಿಂದ ನೇರಂಜಾರ ನದಿ ದಂಡೆಗೆ ಹೋದೆವು. ಇದೇನಾ ಸುಜಾತ ಘನಪಾಯಸ ನೀಡಿದ, ಉರುವೆಲ-ಗಯೆ-ನದಿ ಎಂಬ ಕಶ್ಯಪ ಸೋದರರ ಭೇಟಿಯಾದ, ಘನಪಾಯಸ ಸೇವಿಸಿದ ಬಳಿಕ ಶಕ್ತನಾಗಿ ಗೌತಮನು ದಾಟಿದ ನದಿ? ಸಂಪೂರ್ಣ ಒಣಗಿ ನಿಂತಿದ್ದ ನದಿಯ ತಳದ ಮರಳ ಬಯಲು, ಅತಿಕ್ರಮಣಕ್ಕೆ ಒಳಗಾಗಿ ಹೋಟೆಲು, ರೆಸಾರ್ಟು, ರಸ್ತೆಗಳಿಗೆ ಜಾಗ ಮಾಡಿಕೊಟ್ಟಿರುವ ನದಿಯ ಹರಹು ವಿಷಾದ ಹುಟ್ಟಿಸಿತು. ಅಲ್ಲಿ ಹೆಚ್ಚು ನಿಲ್ಲಲಾಗದೇ ಹೊರಟು ಬಿಳಿಯ ಬುದ್ಧನ ಕಂಡೆವು. ಮಲಗಿದ ಬುದ್ಧನ ನೋಡಿದೆವು. ಥೈಲ್ಯಾಂಡಿನವರು ನಿರ್ಮಿಸಿದ ಎಂಬತ್ತು ಅಡಿ ಎತ್ತರದ ಬುದ್ಧ ಪ್ರತಿಮೆಯ ಬಳಿಗೆ ಹೋದೆವು. ದೂರದಿಂದಲೇ ಭವ್ಯ ಮೂರ್ತಿ ಕಾಣಿಸುತ್ತಿತ್ತು. ಒಬ್ಬ ವ್ಯಕ್ತಿ ಇಬ್ಬರು ಮಕ್ಕಳೊಂದಿಗೆ ಮೂರ್ತಿಯೆದುರು ಕುಳಿತಿದ್ದರು. ಮಕ್ಕಳು ಪ್ರಶ್ನೆ ಕೇಳುತ್ತ ಅವರ ತಲೆಮೇಲೆ, ತೊಡೆ ಮೇಲೆ ಹತ್ತಿಳಿಯುತ್ತಿದ್ದವು. ಅವರು ಸಾವಧಾನವಾಗಿ ಆನಂದನ ಕತೆ ಹೇಳುತ್ತಿದ್ದರು. ಅವರು ಸುರೇಂದರ್. ಮಾತನಾಡಿಸಿದಾಗ ಅವರೂ ಬಾಮ್ಸೆಫ್‌ನವರು ಎಂದು ತಿಳಿದುಬಂತು. ಚಾಮರಾಜನಗರದ ಬಿಎಸ್ಪಿ ಬಳಗದಲ್ಲಿ ಅವರಿಗೆ ಪರಿಚಿತರಿದ್ದರು. ಹೊರಗೆ ನಿಂತಿದ್ದ ಆಟೋ ಅಣ್ಣ ವಿನಯ್ ಅವರ ಪರಿಚಯಸ್ಥರು. ಸಿಕ್ಕ ಕೆಲವೇ ಸಮಯದಲ್ಲಿ ಚುರುಕಾದ ಮಾತುಕತೆಯಾಯಿತು. ಮಹಾಬೋಧಿ ದೇವಾಲಯವನ್ನು ಸಂಪೂರ್ಣವಾಗಿ ಬೌದ್ಧರ ನಿಯಂತ್ರಣಕ್ಕೆ ಕೊಡಬೇಕು ಎಂದು ಭಂತೇಜಿಗಳು, ಉಪಾಸಕರು ಸರದಿ ಉಪವಾಸ ಕುಳಿತಿರುವ ಬಗೆಗೆ ಮಾತು ಹರಿಯಿತು. ದೇಶದ ಎಲ್ಲ ಕಡೆಯಿಂದ ಬೌದ್ಧ ಜನ ಬೆಂಬಲಿಸಿ ಬರುತ್ತಿದ್ದಾರೆ; ಆದರೆ ಭಂತೇಜಿಗಳನ್ನು ದೇವಾಲಯದ ಆವರಣದಿಂದ ಮೂರೂವರೆ ಕಿಲೋಮೀಟರ್ ದೂರದ ಸ್ಥಳಕ್ಕೆ ಕಳಿಸಲಾಗಿದೆ ಎಂದು ಆರೋಪಿಸಿದರು. ಬೀಳ್ಕೊಂಡ ಬಳಿಕವೂ ಭೂತಾನ್, ಕಾಂಬೋಡಿಯಾ ವಿಹಾರಗಳ ನೋಡಿ ಹೊರಬರುವಾಗ ಮತ್ತೆ ಸಿಕ್ಕರು. ಅವರೊಂದಿಗೆ, ಮಕ್ಕಳೊಂದಿಗೆ ಪಟ ತೆಗೆಸಿಕೊಂಡದ್ದಾಯಿತು. ಇಬ್ಬರು ಬೌದ್ಧಾನುಯಾಯಿಗಳನ್ನು ಭೇಟಿ ಮಾಡಿ ಬೋಧಗಯಾದ ಪ್ರಯಾಣ ಸಫಲವಾಯಿತೆನಿಸಿತು. ಅವರಿಬ್ಬರೊಡನೆ ನಡೆಸಿದ ಮಾತುಕತೆಯ ಸಾರಾಂಶವಿದು: 


With Bamcef`s Surendar, Kids and Vinod

‘ತಮ್ಮ ಪೂಜಾ ಸ್ಥಾನಗಳಲ್ಲಿ ಸರ್ವಾಧಿಕಾರ ಚಲಾಯಿಸುತ್ತ ಬೇರೆ ಧರ್ಮದವರು ಬರಬೇಡಿ; ಮಹಿಳೆಯರು ಬರಬೇಡಿ; ಇಂತಿಂಥ ಜಾತಿಯವರು ಇಂತಿಂಥಲ್ಲಿ ಇರಿ ಎಂದು ಬೋರ್ಡು ಹಾಕುವಷ್ಟು ಅಸಾಂವಿಧಾನಿಕ ನೀತಿನಿಯಮ ರೂಪಿಸಿಕೊಂಡ ಹಿಂದೂಗಳು ಅಲ್ಪಸಂಖ್ಯಾತ ಬೌದ್ಧ ಧರ್ಮದ ಮೇಲೆ ದಬ್ಬಾಳಿಕೆ ಹೇರುತ್ತಿದ್ದಾರೆ.’ 

‘ಪ್ರಪಂಚದಲ್ಲಿ ಯಾವ ಧಾರ್ಮಿಕ ಸ್ಥಳವೂ ಅನ್ಯ ಧರ್ಮದವರ ಆಡಳಿತದಲ್ಲಿಲ್ಲ. ಆದರೆ ಭಾರತ ಮಾತ್ರ ಬುದ್ಧನ, ಬೌದ್ಧರ ವಿಷಯದಲ್ಲಿ ಹೀಗೆ ನಡೆದುಕೊಂಡು ಬಂದಿದೆ. ಈಗ ಅದೇ ಮುಂದುವರೆಯುತ್ತಿದೆ. ವ್ಯಾಟಿಕನ್ ಅನ್ನು ಕ್ರಿಶ್ಚಿಯನ್ನರು, ಮೆಕ್ಕಾವನ್ನು ಮುಸ್ಲಿಮರು, ಗ್ರಂಥ ಸಾಹೀಬ್ ಅನ್ನು ಸಿಖ್ಖರು, ಕಾಶಿ-ತಿರುಪತಿಗಳಂತಹ ಅಸಂಖ್ಯ ಕ್ಷೇತ್ರಗಳನ್ನು ಹಿಂದೂಗಳು ನಿರ್ವಹಿಸುವರಾದರೆ ಮಹಾಬೋಧಿ ದೇವಾಲಯವನ್ನು ಬೌದ್ಧರಲ್ಲದೆ ಬ್ರಾಹ್ಮಣರೇಕೆ ನಿರ್ವಹಿಸಬೇಕು?’ 

‘ಬೌದ್ಧರು ಶಾಂತಿಪ್ರಿಯರು. ನಾವು ಯಾವುದೇ ಧರ್ಮದ ವಿರುದ್ಧ ಮಾತನಾಡುತ್ತಿಲ್ಲ. ಯಾವುದು ನಮ್ಮದೋ ಅದು ನಮಗೆ ಸಿಗಬೇಕು ಅಷ್ಟೇ.’  

‘ಭಾರತದ ಎಷ್ಟೋ ಗುಡಿಗಳನ್ನು ಬೌದ್ಧ ವಿಹಾರಗಳ ಮೇಲೆ ಕಟ್ಟಲಾಗಿದೆ. ಬುದ್ಧನ ಮೂರ್ತಿಗೆ ಬಟ್ಟೆ, ಬಂಗಾರಗಳಿಂದ ಅಲಂಕಾರ ಮಾಡಿ ಹಿಂದೂ ದೇವರುಗಳ ಹೆಸರಿಡಲಾಗಿದೆ. ಅವೆಲ್ಲವನ್ನು ನಮಗೆ ಕೊಡಿ ಎಂದು ನ್ಯಾಯದ ಜಗಳಕ್ಕಿಳಿದರೆ ದೇಶದಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ. ಆದರೆ ನಾವೇನೂ ಹಾಗೆ ಕೇಳುತ್ತಿಲ್ಲ. ಮಹಾಬೋಧಿಯಂತಹ ಬೌದ್ಧರ ಪವಿತ್ರ ತಾಣದ ಮೇಲ್ವಿಚಾರಣೆ, ಆಡಳಿತಗಳನ್ನು ಬೌದ್ಧರಿಗೇ ಕೊಡಿ ಎನ್ನುತ್ತಿದ್ದೇವೆ. ಇದು ನ್ಯಾಯಯುತವಾದದ್ದು, ಆಗಲೇಬೇಕಾದದ್ದು.’

‘ಬುದ್ಧ ಮತ್ತು ಧಮ್ಮ ಲೋಕಕ್ಕೇ ಸೇರಿದ್ದು ನಿಜ. ಅದನ್ನು ಓದಲು, ತಿಳಿಯಲು, ಅನುಸರಿಸಲು ಜಾತಿ, ವರ್ಣ, ವರ್ಗ ಮುಂತಾಗಿ ಯಾವುದೇ ಭೇದವಿಲ್ಲ. ಆದರೆ ಧಮ್ಮದ ಅನುಯಾಯಿಗಳಿಗೆ ಮಹಾಬೋಧಿ ವೃಕ್ಷ, ದೇವಾಲಯ ಅತ್ಯಂತ ಪವಿತ್ರವಾದವು. ಅವು ಬೌದ್ಧಾನುಯಾಯಿಗಳ ಸುಪರ್ದಿನಲ್ಲೇ ಇರಬೇಕು. ನೋಡಿ, ಮಹಾಬೋಧಿ ದೇವಾಲಯದ ಪಕ್ಕದಲ್ಲೇ ಹಿಂದೂ ದೇವರ ಗುಡಿ ಮಾಡಿದ್ದಾರೆ. ರಾಮ, ಲಕ್ಷ್ಮಣ, ಹನುಮನನ್ನಿಟ್ಟಿದ್ದಾರೆ. ಹೀಗೇ ಮುಂದುವರೆದರೆ ಬೌದ್ಧ ಧರ್ಮವನ್ನು ಒಡೆದು ಸ್ವರ್ಗನರಕ, ಪುನರ್ಜನ್ಮಗಳ ತುರುಕಿ ಬುದ್ಧನನ್ನು ಅವತಾರ ಪುರುಷನೆಂದು ಮಾಡಿದ ವೈದಿಕ ಪುರೋಹಿತಶಾಹಿಗಳು ಸದ್ಯವೇ ಬುದ್ಧನ ಹೆಸರಿನಲ್ಲಿ ಕುಂಕುಮಾರ್ಚನೆ, ಹಣ್ಣುಕಾಯಿ, ಹೋಮಹವನಗಳನ್ನು ಮಹಾಬೋಧಿ ಗುಡಿಯ ಆವರಣದಲ್ಲಿ ಆರಂಭಿಸುತ್ತಾರೆ.’ 

‘ವಿಶ್ವದ ಎಲ್ಲಾ ಬೌದ್ಧ ದೇಶದವರು ಕಟ್ಟಿರೋ ಮೊನಾಸ್ಟರಿ ಇಲ್ಲಿದಾವೆ. ಅವುಗಳ ಆಚೀಚೆ ನೋಡಿ. ಕಸ, ಗಲೀಜು ರಾಶಿ. ಇಂಟರ್‌ನ್ಯಾಷನಲ್ ಟೂರಿಸ್ಟ್ ಬರೋ ಜಾಗದ ತರಹ ಇದೆಯಾ ಇದು? ಇದನ್ನು ಹಾಳುಗೆಡವಬೇಕಂತನೇ ಹೀಗಿಟ್ಟಿರೋದು.’

‘೨೦೧೩ರಲ್ಲಿ ಒಂದು ಬಾಂಬ್ ಸ್ಫೋಟ ಆಯ್ತು. ಈಗ ಯಾರೂ ಫೋಟೋ ತೆಗೆಯುವಂತಿಲ್ಲ. ಸಮಾಜದೆದುರು ಸಾಕ್ಷ್ಯ ಸಮೇತ ಹೇಳಲು ಆಗುತ್ತಿಲ್ಲ. ವಿದೇಶಗಳಿಂದ ಬರುವ ಯಾತ್ರಿಕರಿಗೆ, ಪ್ರವಾಸಿಗಳಿಗೆ ಗೈಡ್‌ಗಳು ಮತ್ತು ವ್ಯಾಪಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬುದ್ಧನ ಜೊತೆಗೆ ಅದು ರಾಮನ, ಪಂಚಪಾಂಡವರ ತಾಣ; ಬುದ್ಧನು ವಿಷ್ಣುವಿನ ಅವತಾರ; ಪಂಚವರ್ಗೀಯ ಭಿಕ್ಕುಗಳೆಂದರೆ ಪಂಚ ಪಾಂಡವರು ಅಂತೆಲ್ಲ ಸುಳ್ಳು ಕತೆ ಹೇಳುತ್ತಿದ್ದಾರೆ. ಉದುರಿದ ಅರಳಿ ಮರದೆಲೆಗಳನ್ನು ಇಟ್ಟುಕೊಂಡು ಇಲ್ಲಿಯ ಬೋಧಿ ವೃಕ್ಷದ್ದೆಂದು ವ್ಯಾಪಾರ ಮಾಡುತ್ತಾರೆ. ಅದಕ್ಕೆಲ್ಲ ಸಮಿತಿಯವರು ಆಸ್ಪದ ನೀಡಿದ್ದಾರೆ. ಸಮಿತಿಯೊಳಗಿರುವ ಬ್ರಾಹ್ಮಣ ಪುರೋಹಿತರು ಹಿಂದೂ ಆಚರಣೆಗಳನ್ನು ಬೌದ್ಧ ದೇವಾಲಯದೊಳಗೆ ತುರುಕುತ್ತಿದ್ದಾರೆ’

ಅವರು ಹೇಳಿದ್ದು ನಿಜ. ಹಿಂದಿನ ದಿನ ಮಹಾಬೋಧಿ ದೇವಾಲಯದ ಆವರಣದಲ್ಲಿ ಸುತ್ತಾಡುವಾಗ ನಾವದನ್ನು ಗಮನಿಸಿದ್ದೆವು. ಸಹಿಷ್ಣುತೆ, ಮೈತ್ರಿ ಭಾವವನ್ನು ಹೀಗೆ ದುರುಪಯೋಗಪಡಿಸಿಕೊಳ್ಳಬಹುದೇ ಎಂದು ದಿಗ್ಭ್ರಮೆಗೊಳ್ಳುವಷ್ಟು ಹಿಂದೂಗಳು (ಅದರಲ್ಲೂ ಬ್ರಾಹ್ಮಣರು) ಅಲ್ಲಿ ಮೂಗು ತೂರಿಸಿದ್ದಾರೆ. ಇದಕ್ಕೆ ಶತಮಾನಗಳಿಂದಲೂ ವಿರೋಧ ಬಂದಿದೆ. ಅನಾಗಾರಿಕ ಧಮ್ಮಪಾಲ ೧೮೯೧ರಲ್ಲಿ ಈ ಬಗೆಗೆ ದನಿಯೆತ್ತಿದ್ದರು. ೧೯೯೨ರಲ್ಲಿ ಒಮ್ಮೆ, ನಂತರ ೨೦೦೨-೦೩ರಲ್ಲೂ ಇದು ಮುನ್ನೆಲೆಗೆ ಬಂದಿತ್ತು. ೨೦೦೭ರಲ್ಲಿ ಜಪಾನಿನ ಭಿಕ್ಕು ಭದಂತ ನಾಗಾರ್ಜುನ ಸಹಾ ಹೋರಾಡಿದ್ದರು. ೨೦೧೭ರಲ್ಲಿ ಅಖಿಲ ಭಾರತ ಭಿಕ್ಕು ಮಹಾಸಂಘದ ಅಧ್ಯಕ್ಷರೂ, ಬೋಧಗಯಾ ಮುಕ್ತಿ ಆಂದೋಲನ್ ಸಮಿತಿಯ ಅಧ್ಯಕ್ಷರೂ ಆಗಿದ್ದ ಭಂತೆ ಆನಂದ ಮತ್ತೆ ಅಖಿಲ ಭಾರತ ಮಟ್ಟದಲ್ಲಿ ಅದನ್ನೊಂದು ಮುಖ್ಯ ವಿಷಯವನ್ನಾಗಿಸಿ ಹೋರಾಟ ರೂಪಿಸಿದ್ದರು. ದಲೈ ಲಾಮಾ ಈ ವಿಷಯದ ಬಗೆಗೆ ವಹಿಸಿದ ಮೌನವನ್ನು ಪ್ರಶ್ನಿಸಿದ್ದ ಭಂತೆ ಆನಂದ, ಅವರು ಬೌದ್ಧರ ನಾಯಕರಲ್ಲ ಎಂಬ ಕಟು ವಿಮರ್ಶೆಗೂ ಮುಂದಾಗಿದ್ದರು. ಈಗ ಅಖಿಲ ಭಾರತ ಬೌದ್ಧ ಭಿಕ್ಕುಗಳ ಸಮಿತಿಯು ೧೯೪೯ರ ಕಾಯ್ದೆಯ ಬಗೆಗೇ ತಕರಾರು ಎತ್ತಿದೆ. ಅದು ರದ್ದಾಗಿ ಹೊಸ ಕಾಯ್ದೆ ಬರಬೇಕೆಂದು ಹೇಳುತ್ತಿದೆ. ಹಳೆಯ ಕಾಯ್ದೆ ಬದಲಿಸದಿರುವುದರಲ್ಲಿ ಪುರೋಹಿತಶಾಹಿ ಹುನ್ನಾರವಿದೆ ಎಂದು ವಂಚಿತ್ ಬಹುಜನ್ ಅಘಾಡಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಮೊದಲಾದ ಸಂಘಟನೆಗಳು ಆರೋಪಿಸುತ್ತಿವೆ. ಶಾಂತಿಯುತವಾಗಿ ಉಪವಾಸ ಕುಳಿತಿದ್ದ ಭಿಕ್ಕುಗಳನ್ನು ಪೊಲೀಸರು ಎಳೆದಾಡಿ, ಅವರನ್ನು ದೇವಾಲಯದ ಆವರಣದಿಂದ ದೂರದ ತಾಣಕ್ಕೆ ಸ್ಥಳಾಂತರಿಸಿದ ದೌರ್ಜನ್ಯದ ಬಗೆಗೆ ತೀಕ್ಷ್ಣ ಪ್ರತಿಕ್ರಿಯೆ ಬರುತ್ತಿದೆ.

ಭಾರತ ಬಹುತ್ವದ, ವೈವಿಧ್ಯತೆಯ ದೇಶವಾಗಬೇಕು ನಿಜ. ಆದರೆ ಐತಿಹಾಸಿಕವಾಗಿ ಧೃಢಪಟ್ಟಿರುವಂತೆ ಧಾರ್ಮಿಕ ಕ್ಷೇತ್ರವೊಂದು ಆಡಳಿತಾತ್ಮಕವಾಗಿ ಆಯಾ ಧರ್ಮದ ಉಪಾಸಕ, ಉಪಾಸಕಿಯರ ಮೇಲ್ವಿಚಾರಣೆಯಲ್ಲೇ ಇರಬೇಕು. ಇತಿಹಾಸ, ಪುರಾತತ್ವ, ವಿದೇಶಿ ಯಾತ್ರಿಕರ ನೆನಪು, ಸಾಹಿತ್ಯಿಕ ಗ್ರಂಥಗಳ ಉಲ್ಲೇಖ, ವಿದೇಶಕ್ಕೆ ಹೋದ ಬೌದ್ಧ ಧರ್ಮದ ಪಠ್ಯಗಳ ದಾಖಲೆಗಳನ್ನೆಲ್ಲ ನೋಡಿದರೆ ಮಹಾಬೋಧಿ ದೇವಾಲಯವು ಬುದ್ಧ ಸಾಕ್ಷಾತ್ಕಾರ ಹೊಂದಿದ ತಾಣವೆನ್ನುವುದು ಖಚಿತವಾಗಿದೆ. ಅದು ಬೌದ್ಧರ ನಿಯಂತ್ರಣಕ್ಕೆ, ಆಡಳಿತಕ್ಕೆ ಒಳಪಡಬೇಕೆನ್ನುವುದು ನ್ಯಾಯವೇ ಆಗಿದೆ. 



ಹೊರಡುವ ದಿನ ಬೆಳಿಗ್ಗೆ..

ದೂರದಲ್ಲಿ ಮಹಾಬೋಧಿ ದೇವಾಲಯದ ಚಿನ್ನದ ಕಳಶ ಹೊಳೆಯುತ್ತಿತ್ತು. ಎಲೆ ಉದುರಿಸಿ ಬೋಳಾದ ಅರಳಿಮರಗಳ ಗೆಲ್ಲುಗೆಲ್ಲುಗಳಲ್ಲಿ ಜ್ವಾಲೆಯಂತೆ ಕಾಣುವ ಕೆಂದಳಿರು ಮೇಲೇಳುತ್ತಿದ್ದವು. ಗಲ್ಲಿಮೂಲೆ, ಚರಂಡಿ, ಕೊಳ, ನದಿ, ಸಂದಿಗೊಂದಿ ಎಲ್ಲಿ ನೋಡಿದರೂ ಪ್ಲಾಸ್ಟಿಕ್, ಕಸ ಚೆಲ್ಲಾಡಿ ಬಿದ್ದಿತ್ತು. ಬೌದ್ಧ ತಾಣಗಳಲ್ಲೇ ಅತಿ ಪವಿತ್ರ ಎನಿಸಿಕೊಂಡ ತಾಣದಲ್ಲಿ ನದಿ ಒಣಗಿ, ನೆಲದ ಮೇಲೆಲ್ಲ ಕಸಕೊಳೆಗಳೇ ಎದ್ದು ಕಾಣುತ್ತಿದ್ದವು. ಮಹಾಬೋಧಿ ದೇವಾಲಯದ ಹೊರಾವರಣದಲ್ಲಿ ನೂರಾರು ಮಕ್ಕಳು, ಮಹಿಳೆಯರು, ಹಿರಿಯ ಜೀವಗಳನ್ನು ಒಂದೆಡೆ ಸೇರಿಸಿ ಒಬ್ಬ ಭಿಕ್ಕುಣಿ ಏನೋ ಹೇಳಿಕೊಡುತ್ತಿದ್ದರು. ನಿನ್ನೆ ಸಂಜೆ ದೇವಾಲಯದಿಂದ ಹೊರಬೀಳುವ ದ್ವಾರದಲ್ಲಿ ನಮ್ಮನ್ನು ಬೀಳ್ಕೊಡುವವರಂತೆ ಸಾಲಾಗಿ ಭಿಕ್ಷೆ ಕೇಳುತ್ತ, ಸಂಕಟ ಹುಟ್ಟಿಸುವಂತೆ ಯಾಚನೆಯ ನೋಟ ಬೀರುತ್ತ ಕುಳಿತವರು ಇವರೇನೇ? 

ಬದಲಾವಣೆಯ ಚಕ್ರ ಒಳಿತಿನೆಡೆಗೆ ಉರುಳುವಂತೆ ಹರಸು ಬೋಧಿಯೇ. 

                                                                                                    ಡಾ. ಎಚ್. ಎಸ್. ಅನುಪಮಾ

                                                                                                      

Monday, 12 May 2025

ನೇರಂಜಾರ: ಒಂದು ಒಣಗಿದ ನದಿಯ ಕತೆ

 



೧

ಒಂದು ಕಲ್ಲನ್ನು ನೀರಿನೊಳಗೆ ಹಾಕಿದರೆ? ತಕ್ಷಣ ಶಂಕೆಯಿಲ್ಲದೆ ನೀರ ತಳ ಸೇರುತ್ತದೆ. ಆಳದ ಮೌನದಲ್ಲಿ ಹುದುಗಿ ನೆಲೆಯಾಗಿಬಿಡುತ್ತದೆ. ಅಲ್ಲಿ, ಓ ಅಲ್ಲಿ, ಅಂದು ಸಂಜೆ, ಬೋಧಗಯಾದ ಮಹಾಬೋಧಿ ವಿಹಾರದ ಸುತ್ತಲ ಆವರಣದಲ್ಲಿ ಕಣ್ಣುಮುಚ್ಚಿ ನಿಶ್ಚಲವಾಗಿ, ಮೌನವಾಗಿ ಕುಳಿತ ಭಿಕ್ಕುಗಳು ನೀರ ತಳದ ಕಲ್ಲಿನಂತೆ ಕಂಡುಬಂದರು. ಹೊರಗಣ ನೆರೆದ ಸಂತೆಗೆ ಒಳಗಣ ಮೌನವು ಕಸಿವಿಸಿ ಹುಟ್ಟಿಸದಿರಲಿ ಎಂಬಂತೆ ಆಗೀಗ ಕೇಳುವ ಹಕ್ಕಿಗಳ ಸದ್ದು. ಯಾವ ಬೋಧಿವೃಕ್ಷದಡಿ ಕುಳಿತು ಬುದ್ಧಗುರು ಲೋಕದರಿವ ಪಡೆದುಕೊಂಡನೋ, ಅದರ ಆಸುಪಾಸಿನಲ್ಲಿ ನೂರಾರು ಭಿಕ್ಕು ಭಿಕ್ಕುಣಿಯರು, ಉಪಾಸಕ ಉಪಾಸಿಕೆಯರು ಆಳ ಧ್ಯಾನದಲ್ಲಿದ್ದರು. ಸುತ್ತ ನೆರೆದಿರುವುದು, ನಡೆಯುತ್ತಿರುವುದು ಗಮನಕ್ಕೇ ಬರದಂತಹ ಮಗ್ನತೆ. ಭಾರೀ ಗೋಪುರದ ಕೆಳಗೆ ಮಹಾಬೋಧಿ ದೇವಾಲಯದ ಸುತ್ತ ಹಾಸಿರುವ ಮೌನದ ರತ್ನಗಂಬಳಿ ಮೇಲೆ ಹೆಜ್ಜೆ ಸಪ್ಪಳವಾಗದಂತೆ ನಾವು ನಡೆಯುತ್ತಿದ್ದೆವು.

ಬಣ್ಣಗಳೆಲ್ಲ ಬೀದಿಗೆ ಬಂದು ಓಲಾಡಿದ ದಿನ, ಚಳಿಯ ಹವೆಯಿನ್ನೂ ಪೂರ್ತಿ ನೀಗದ ಫಾಲ್ಗುಣದ ಮಾರ್ಚ್ ತಿಂಗಳಲ್ಲಿ ಬೋಧಗಯಾದಲ್ಲಿದ್ದೆವು. ಅದು ಶಾಕ್ಯಮುನಿ ಗೌತಮನು ಸಂಬೋಧಿಯನ್ನು ಪಡೆದು ಬುದ್ಧನಾದ ನೆಲ. ನಾವಿಳಿದುಕೊಂಡ ಹೋಟೆಲ್ ರೂಮಿನ ಕಿಟಕಿಯಿಂದ ಮಹಾಬೋಧಿ ವಿಹಾರದ ಚಿನ್ನದ ಕಳಶ ಹೊಳೆಹೊಳೆಯುತ್ತ ಕಾಣುತ್ತಿತ್ತು. ಧೀರೋದಾತ್ತವಾಗಿ ಮುಗಿಲೆಡೆಗೆ ಚಾಚಿ ನಿಂತ ಗೋಪುರ ಕರೆದ ಭಾಸವಾಗುತ್ತಿತ್ತು. ಬಂದವರೇ ಬುದ್ಧ ಬುದ್ಧನಾದ ತಾವಿನೆಡೆಗೆ ಹೊರಟಿದ್ದೆವು. ವಿವಿಧ ವರ್ಣ ಛಾಯೆಯ ಚೀವರ ಧರಿಸಿದ ಅನೇಕ ದೇಶಗಳ ಭಿಕ್ಕುಗಳು ಅಲ್ಲಿದ್ದರು. ಕೆಲವರು ವ್ಯಾಯಾಮದಂತಹ ದೀರ್ಘದಂಡ ನಮಸ್ಕಾರವನ್ನು ಗುಂಪಾಗಿ, ಸಾಲಾಗಿ ಮಾಡುತ್ತಿದ್ದರು. ಕೆಲವರು ಅನತಿ ದೂರದಲ್ಲಿ ಗುಂಪಾಗಿ ಕುಳಿತು ಹಕ್ಕಿಯುಲಿದಷ್ಟೇ ಮೆಲುವಾಗಿ ಏನನ್ನೋ ಪಠಿಸುತ್ತಿದ್ದರು. ಬೇರೆಬೇರೆ ದೇಶಗಳ ಜನರು ಒಂದೇ ಮರದಡಿ ಕುಳಿತು ಒಟ್ಟಿಗೇ ಧ್ಯಾನಿಸುವುದನ್ನು, ಒಟ್ಟಿಗೇ ನೆರೆದು ಪಠಿಸುವುದನ್ನು ಸಾಧ್ಯ ಮಾಡಿದ ಬುದ್ಧ ಎಲ್ಲ ಲೋಹಗಳ ಕರಗಿಸುವ ಕುಲುಮೆಯಂತೆ ಕಾಣಿಸಿದ.




ಪರಿಕ್ರಮಣದ ಬಳಿಕ ಗರ್ಭಗುಡಿಯೊಳಗಣ ಮೂರ್ತಿಯೆದುರು ನಿಂತೆವು. ‘ಗಂಗಾ, ಯಮುನಾ, ಅಚಿರಾವತಿ, ಮಾಹಿ, ಸರಯೂ ಮುಂತಾದ ನದಿಗಳು ಸಮುದ್ರ ಸೇರಿದ ಮೇಲೆ ಗುರುತು ಕಳೆದುಕೊಳ್ಳುವ ಹಾಗೆ ಧಮ್ಮ ಮಾರ್ಗಕ್ಕೆ ಬಂದವರಿಗೆ ಭೇದದ ಗುರುತುಗಳಿಲ್ಲ. ಎಲ್ಲರೂ ಒಂದೇ’ ಎಂದವನೆದುರು; ಪ್ರಜ್ಞಾ, ಕರುಣಾ, ಮತ್ತು ಮೈತ್ರಿಗಳ ಮೂಲಕ ಸಮತೆಯ ಹಾದಿ ಹಿಡಿಯಿರಿ ಎಂದ ಬುದ್ಧ ಗುರುವಿನೆದುರು ನತಮಸ್ತಕರಾಗಿ ನಿಂತಿದ್ದೆವು. ಐದಡಿ ಎತ್ತರದ ಮೂರ್ತಿಯ ಅರೆನಿಮೀಲಿತ ನೇತ್ರ ಮತ್ತು ಮಂದಸ್ಮಿತಗಳು ‘ನಾನು’ ನೇಯ್ದುಕೊಂಡ ಹುಸಿ ದುಕೂಲವ ಕಳಚುತ್ತಿರುವಂತೆ, ಸುಳಿಯೊಂದರತ್ತ ಸೆಳೆದುಕೊಳ್ಳುತ್ತಿರುವಂತೆ ಭಾಸವಾಯಿತು.

‘ಹಾಗೆಂದು ಸದಾ ಧ್ಯಾನಸ್ಥನಲ್ಲ ನಾನು’ ಎಂದ ಅವನು. ಸ್ವ ನಿಯಂತ್ರಣ, ಮಗ್ನತೆ ಮತ್ತು ಧೃಢತೆಯನ್ನು ಸಾಧಿಸಿದ ಕುರುಹಾಗಿ ಜ್ಞಾನೋದಯದ ಬಳಿಕ ಕಣ್ಣು ರೆಪ್ಪೆ ಮಿಟುಕಿಸದೆ ಒಂದು ವಾರ ಕಾಲ ಬೋಧಿವೃಕ್ಷ ನೋಡುತ್ತ ಅನಿಮೇಷಲೋಚನನಾದ. ಆ ತಾಣ ಗುರುತಿಸುವ ಸಲುವಾಗಿ ಸ್ವಲ್ಪ ಆಚೆ ಅನಿಮೇಷನ ಲೋಚನ ಮಂದಿರವಿದೆ. ದೇವಾಲಯದ ಸುತ್ತಲೂ ಸಾವಿರಾರು ಸಣ್ಣ, ದೊಡ್ಡ ಸ್ತೂಪಗಳೂ, ಬುದ್ಧ ಮೂರ್ತಿಗಳೂ ಇವೆ.

೨

ಆ ಹರಿವಿಗೆ ನೇರಂಜಾರ ಅಥವಾ ಲೀಲಾಜನ ಅಥವಾ ನೀಲಾಂಜನ ಅಥವಾ ನಿರಂಜನಾ ಎಂಬ ಹೆಸರು. ಇದೇ ನೇರಂಜಾರ ತೀರದಲ್ಲಿ ಸಿದ್ಧಾರ್ಥ ಗೌತಮನು ಮೂರು ವಸ್ತುಗಳನ್ನು ನೋಡಿದನು: ಒಂದು ನೀರಿನಲ್ಲಿ ತೇಲುತ್ತಿದ್ದ ಹಸಿ ಮರದ ದಿಮ್ಮಿ. ಮತ್ತೊಂದು ದಂಡೆಯಲ್ಲಿ ಬಿದ್ದಿದ್ದ ಹಸಿ ಮರದ ದಿಮ್ಮಿ. ಮಗದೊಂದು ಅಡವಿಯಲ್ಲಿ ಒಣ ಕೊರಡಿನಂತೆ ಬಿದ್ದ ಮರದ ದಿಮ್ಮಿ. ಬುದ್ಧನಿಗೆನಿಸುತ್ತದೆ: ‘ಸಂಸಾರಿಗರ ಸ್ಥಿತಿ ನದಿಯಲ್ಲಿ ತೇಲುತ್ತಿರುವ ಹಸಿ ದಿಮ್ಮಿಯಂತಹುದು. ಜ್ಞಾನವುಂಟಾದರೂ ಅರಿವಿನ ಬೆಂಕಿ ಹೊತ್ತಲಾರದಷ್ಟು ಮುಳುಗಿ ಒದ್ದೆಯಾಗಿರುವಂತಹುದು. ನದಿದಂಡೆಯಲ್ಲಿ ಬಿದ್ದುಕೊಂಡ ದಿಮ್ಮಿಯೂ ನದಿಯನ್ನು ತೊರೆದರೂ ಹಸಿತನವ ಬಿಟ್ಟುಕೊಡಲಾರದ ಕಾರಣ ಉರಿಯಲಾರದು. ಹುಸಿ ಆಚರಣೆಗಳ ಬೆನ್ನು ಹಿಡಿದ ಆಶ್ರಮವಾಸಿ ಋಷಿಮುನಿಗಳಂತೆ ಅದು. ಆದರೆ ಎಲ್ಲ ಬಂಧಗಳಿಂದ ಕಳಚಿಕೊಂಡು ಅಡವಿಯಲ್ಲಿ ಬಿದ್ದಿರುವ ಒಣಗಿದ ಕೊರಡು ಮಾತ್ರ ಹೊತ್ತಲು, ಉರಿಯಲು ಸಿದ್ಧವಾಗಿರುವುದು. ನಾನು ಅದರಂತೆ ಆಗಬೇಕು’.

ಎರಡೂವರೆ ಸಾವಿರ ವರ್ಷಗಳ ಕೆಳಗೆ ಇದೇ ನದಿ ದಡದ ಆಸುಪಾಸಿನಲ್ಲಿ ಆರು ವರ್ಷಗಳ ಕಾಲ ಲೋಕಸತ್ಯವನ್ನರಸುತ್ತ ಶಾಕ್ಯ ಯುವಕ ಸಿದ್ಧಾರ್ಥ ಅಲೆದಾಡಿದನು. ಸಾಕ್ಷಾತ್ಕಾರ ಹೊಂದುವ ಹಲವು ಮಾರ್ಗಗಳನ್ನು ಹೊಕ್ಕು ಬಂದನು. ಇದರ ತಟದ ಉರುವೆಲ ಎಂಬ ಗ್ರಾಮದಲ್ಲಿ ಅತಿ ಕಠೋರ ತಪಸ್ಸಿನಿಂದ, ಉಪವಾಸದಿಂದ ಎಲುಬು ಚಕ್ಕಳದಂತಾಗಿದ್ದ ಶಾಕ್ಯ ಮುನಿಗೆ ನಂದ ಬಾಲೆ ಸುಜಾತ ಘನಪಾಯಸ ನೀಡಿದಳು. ಇಲ್ಲಿಯೇ ಸಾಲವೃಕ್ಷದಡಿ ಕುಳಿತು ಘನಪಾಯಸವನ್ನು ತುತ್ತುಗಳಾಗಿ ಸೇವಿಸಿ ಜ್ಞಾನೋದಯ ಪಡೆದೇ ಸಿದ್ಧವೆಂದು ಶಪಥ ತೊಟ್ಟು ನೇರಂಜಾರ ಹೊಳೆಯನ್ನವ ದಾಟಿದ್ದು. ಇದೇ ನದಿ ದಡದ ಬೋಧಿವೃಕ್ಷದಡಿಯಲ್ಲೇ ಜ್ಞಾನೋದಯ ಪಡೆದು ಬುದ್ಧನಾದದ್ದು. ಇದೇ ದಡದ ಉರುವೆಲ, ಗಯೆ, ನದಿ ಎಂಬ ಜಟಿಲ ಕಶ್ಯಪ ಸೋದರರ ಭೇಟಿಯಾಗಿ, ಚರ್ಚೆ ವಾಗ್ವಾದ ನಡೆಸಿ ಅವರನ್ನು ಅನುಯಾಯಿಗಳನ್ನಾಗಿ ಪಡೆದದ್ದು.

ಅಂತಹ ನಿರಂಜನಾ ನದಿಯ ತೀರದಲ್ಲಿ ನಾವು ನಿಂತಿದ್ದೆವು. ಪರ್ವತರಾಜ್ಯ ಜಾರ್ಖಂಡ್‌ನಲ್ಲಿ ಹುಟ್ಟುವ ನದಿಯು ಬಿಹಾರಕ್ಕೆ ಬರುವ ವೇಳೆಗೆ ಕಲ್ಲುಬಂಡೆಗಳ ಬೆಟ್ಟಸಾಲುಗಳನ್ನೂ, ಕಣಿವೆಯನ್ನೂ ಹಿಂದೆ ಬಿಟ್ಟು ಮರಳಿನ ಬಯಲನ್ನು ಪ್ರವೇಶಿಸುತ್ತದೆ. ಕಣಿವೆಯಲ್ಲಿ ಭೋರೆಂದು ಹರಿದ ಹರಿವು ಮರಳ ಬಯಲಿನಲ್ಲಿ ನಿಧಾನ ಹರಿಯತೊಡಗುತ್ತದೆ. ಗಯೆಯಿಂದ ಹತ್ತು ಕಿಮೀ ಮುಂದೆ ಮೋಹನಾ ನದಿಯೊಡನೆ ಸೇರಿದ ಬಳಿಕ ಫಲ್ಗುಣಿ ಎನಿಸಿಕೊಳ್ಳುತ್ತದೆ. ಆದರೆ ಈಗ ಎಲ್ಲಿಂದ ಎಲ್ಲಿಯವರೆಗೆ ನೋಡಿದರೂ ಕಣ್ಣಿಗೆ ರಾಚುವುದು ಮರಳು ತುಂಬಿದ ನೀರೊಣಗಿದ ನದಿ ಬಯಲು. ಕಡುಬಿಸಿಲು ಸೂಸುವ ಇದೇ ಋತುವಿನಲ್ಲಿ ನದಿ ಅಂದು ಹರಿಯುತ್ತಿತ್ತು. ಶಾಕ್ಯಮುನಿ ಗೌತಮ ಅದನ್ನು ದಾಟಿದ್ದ. ಆದರೆ ನದಿ ಈಗ ಬತ್ತಿ ಹೋಗಿದೆ. ಅಂದಲ್ಲಿ ನಮಗೆ ಸಿಕ್ಕ ಸಾರಥಿ ‘ಮೂಲನಿವಾಸಿ’ ವಿನಯ್ ಪ್ರಕಾರ ನದಿ ತುಂಬಿ ಹರಿದಿದ್ದನ್ನು ಅವರು ಜೀವಮಾನದಲ್ಲಿ ಒಂದೋ ಎರಡೋ ಸಲ ನೋಡಿದ್ದಾರೆ ಅಷ್ಟೇ!






ಏರತೊಡಗಿದ ಬಿಸಿಲು. ಕಣ್ಣೆದುರು ರಣರಣ ಎನ್ನುವ ಒಣಗಿದ ನದಿ ಬಯಲು. ನೋಡುವ ಎಂದು ಕಾಲಿಟ್ಟರೆ ಮುಳ್ಳುಜಡ್ಡು ಚುಚ್ಚಿ ಸ್ವಾಗತಿಸುತ್ತಿದೆ. ನದಿಯ ಬಯಲನ್ನೇ ನುಂಗಿ ಭಾರೀ ಆಕರ್ಷಕ ಹೆಸರುಗಳ ರೆಸಾರ್ಟು, ಹೋಟೆಲುಗಳು ದಂಡೆಯ ಆಚೀಚೆ ತಲೆಯೆತ್ತಿವೆ. ಊರ ಕಸ, ಕಲ್ಮಶವನ್ನೆಲ್ಲ ಒಣಗಿದ ನದಿಯೊಡಲಿಗೆ ತಂದು ತುಂಬಲಾಗುತ್ತಿದೆ.

ನೀರ ತಳದ ಸವೆದ ಬಿಳಿಗಲ್ಲುಗಳು ಮೌನ ಧ್ಯಾನದಲ್ಲಿ ಮುಳುಗಿದ ಬುದ್ಧ ಮಾರ್ಗಿಗಳಂತೆ ಕಂಡವು. ಒಣಗಿದ ಹರಿವಿನ, ಬಿರು ಬಿಸಿಲಿನ, ಅರಿವಿನ ನೂರೊಂದು ಕತೆ ಹೇಳುತ್ತಲಿದ್ದವು.

೩

ಬುದ್ಧ ಜ್ಞಾನೋದಯ ಪಡೆದ ತಾಣದಲ್ಲಿ ನೆಲೆಯಾದ ಎಲ್ಲರೂ ಅರಿವುಗೊಳ್ಳುವರೆಂದು ಹೇಳಲಾಗದು. ಮಹಾಬೋಧಿಯ ಬಳಿ ಒಣಗಿ ಉದುರಿದ ಅರಳಿ ಎಲೆಯ ಕೈಯಲ್ಲಿ ಹಿಡಿದು ಕಣ್ಣಲ್ಲೇ ಸನ್ನೆ ಮಾಡಿ ಕರೆವ ವ್ಯಾಪಾರಿಗಳಿದ್ದರು. ಪುಟ್ಟ ಎಲೆತಟ್ಟೆಯಲ್ಲಿ ಹೂವಿಟ್ಟು ಶಾಕ್ಯಮುನಿಗೆ ಕೊಂಡು ಹೋಗಿ ಎಂದು ಒತ್ತಾಯಿಸುವವರಿದ್ದರು. ಯಾವುದು ಅವನಲ್ಲವೋ ಅದೇ ಅವನೆಂದು ಸಾರುವ ಗೈಡುಗಳಿದ್ದರು. ಅವನನ್ನರಿಯದೆ ಎತ್ತೆತ್ತಲೋ ಹೆಜ್ಜೆಯಿಟ್ಟು ತಾವು ಅನುಯಾಯಿಯೆಂದುಕೊಂಡವರ ಸಂಕುಲವೂ ಅಲ್ಲಿತ್ತು. ಬುದ್ಧನ ಬಳಿಯೇ ಜಗನ್ನಾಥನೂ ಗುಡಿ ಕಟ್ಟಿಸಿಕೊಂಡು ಕುಳಿತಿದ್ದ.

ಬದಲಾಗದ ಯಾವುದೂ ಲೋಕದಲ್ಲಿ ಇಲ್ಲ ಎಂದವನಲ್ಲವೇ ಅವ? ಈ ಎರಡೂವರೆ ಸಾವಿರ ವರ್ಷಗಳಲ್ಲಿ ಬುದ್ಧ ದಾಟಿದ ನದಿಯ ಜಾಡಿನಲ್ಲಿ ಅದೆಷ್ಟೋ ನೀರು ಬಂದು ಹೋಗಿದೆ. ಒಳಿತಿನೆಡೆಗೆ ಹರಿವನ್ನು ತಿರುಗಿಸುವುದೂ, ಸುಮ್ಮನಿರುವುದೂ ನಮ್ಮ ಕೈಯಲ್ಲೇ ಇದೆ.

ಬುದ್ಧನೊಡನೆ ನಡೆಯುವುದು ಎಂದರೆ ಏಕಕಾಲಕ್ಕೆ ಭೂತ ಮತ್ತು ವರ್ತಮಾನಗಳಲ್ಲಿ ಬದುಕುತ್ತ ಭವಿಷ್ಯದೆಡೆಗೆ ನಡೆಯುವುದು. ಬುದ್ಧ ಗುರುವಿನೊಡನೆ ಸಂವಾದಿಸುವುದು ಎಂದರೆ ‘ಸ್ವ’ ಅರಿವನ್ನೂ, ಲೋಕದರಿವನ್ನೂ ಒಟ್ಟೊಟ್ಟಿಗೆ ಪಡೆದುಕೊಳ್ಳುವುದು.

ಹರಸು ಭಂತೇ.

                                                                                                 ಡಾ. ಎಚ್. ಎಸ್. ಅನುಪಮಾ

Friday, 28 February 2025

ಝಕಿಯಾ ಸೋಮನ್: ‘ಧರ್ಮದಾವರಣದೊಳಗಿದ್ದು ಆಂತರಿಕ ವಿಮರ್ಶೆ ಮಾಡುವುದೂ ಮುಖ್ಯ

 



-    

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾರ್ಚ್ ೭, ೮ರಂದು ನಡೆಯಲಿರುವ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ೧೩ನೇ ಸಮಾವೇಶದ ಹಕ್ಕೊತ್ತಾಯ ಜಾಥಾದಲ್ಲಿ ಲೇಖಕಿ, ಬರಹಗಾರ್ತಿ, ಸಂಘಟಕಿ ಝಕಿಯಾ ಸೋಮನ್ ಪಾಲ್ಗೊಳ್ಳಲಿದ್ದಾರೆ. ಗುಜರಾತಿನ ಅಹಮದಾಬಾದಿನ ಝಕಿಯಾ ೨೦೦೨ರಲ್ಲಿ ಗುಜರಾತನ್ನು ಬಾಧಿಸಿದ ಕೋಮುದಳ್ಳುರಿಯ ಸಮಯದಲ್ಲಿ ಕ್ರಿಯಾಶೀಲರಾದರು. ಬಡ, ಅಧಿಕಾರಹೀನ, ಅನಕ್ಷರಸ್ಥ ಮುಸ್ಲಿಂ ಮಹಿಳೆಯರೂ ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲುವುದನ್ನು ನೋಡಿ ಹಿಂಸಾತ್ಮಕವಾಗಿದ್ದ ತನ್ನ ವಿವಾಹ ಬಂಧನದಿಂದ ಹೊರಬಂದರು. ಮಗ ಅರಸ್ತುವಿನೊಡನೆ ಏಕಾಂಗಿಯಾಗಿ ಹೊಸ ಬದುಕು ಕಟ್ಟಿಕೊಂಡರು. ಸಾಮಾಜಿಕ ಹೋರಾಟದ ಬದುಕಿಗೆ ತೆರೆದುಕೊಂಡರು. ಬೋಧನೆಯ ಕೆಲಸ ಬಿಟ್ಟು ಪೂರ್ಣಕಾಲಿಕ ಹೋರಾಟಗಾರ್ತಿಯಾದರು. ಕೋಮುಗಲಭೆಯ ಸಂತ್ರಸ್ತರ ಪರಿಹಾರ, ಪುನರ್ವಸತಿಗಾಗಿ, ನ್ಯಾಯಕ್ಕಾಗಿ, ಸಾಮಾಜಿಕ ಸಾಮರಸ್ಯಕ್ಕಾಗಿ, ಮುಸ್ಲಿಂ ಮಹಿಳೆಯರ ಸಮಾನ ಹಕ್ಕುಗಳ ಹೋರಾಟಕ್ಕಾಗಿ ‘ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್ವನ್ನು (ಬಿಎಂಎಂಎ) ಸಹಭಾಗಿಗಳೊಂದಿಗೆ ಆರಂಭಿಸಿದರು. ಮುಂಬೈಯ ಪ್ರಸಿದ್ಧ ಹಾಜಿ ಅಲಿ ದರ್ಗಾದಲ್ಲಿ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧ ತೆರವುಗೊಳಿಸಲು ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿ ೨೦೧೬ರಲ್ಲಿ ಪ್ರವೇಶಾವಕಾಶದ ತೀರ್ಪು ಪಡೆದರು. ತ್ರಿವಳಿ ತಲಾಖ್‌ನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ ಅರ್ಜಿದಾರರಲ್ಲಿ ಅವರೂ ಒಬ್ಬರು. ಸಂಘಟಿತ ಹೋರಾಟದ ಫಲವಾಗಿ ೨೦೧೭ರಲ್ಲಿ ನ್ಯಾಯಾಲಯವು ತ್ರಿವಳಿ ತಲಾಖನ್ನು ಅಮಾನ್ಯ ಮಾಡಿತು. ಪ್ರಸ್ತುತ ೫೦ ಸಾವಿರ ಸದಸ್ಯರಿರುವ ಬಿಎಂಎಂಎ, ಸೂಕ್ತ ಧಾರ್ಮಿಕ ಶಿಕ್ಷಣ ನೀಡಿ ೩೦ ಮಹಿಳಾ ಖಾಜಿಗಳನ್ನು ರೂಪಿಸಿದೆ.

ಪ್ರಸ್ತುತ ಮಹಿಳೆಯರ ಹಕ್ಕುಗಳು, ಮಾನವ ಹಕ್ಕುಗಳು, ಕೋಮುಸೌಹಾರ್ದದ ಸಲುವಾಗಿ ವಿಭಿನ್ನ ನೆಲೆಗಳಲ್ಲಿ ಸಂಘಟನೆ, ವ್ಯಕ್ತಿಗಳೊಡನೆ ಕೆಲಸ ಮಾಡುತ್ತಿದ್ದಾರೆ. ‘ಸೆಂಟರ್ ಫಾರ್ ಪೀಸ್ ಸ್ಟಡೀಸ್ (ಸಿಪಿಎಸ್) ಆರಂಭಿಸಿದ್ದಾರೆ. ದಕ್ಷಿಣ ಏಷ್ಯಾ ಬಡತನ ನಿರ್ಮೂಲನಾ ಮೈತ್ರಿ ಕೂಟದ ಭಾರತ ಕೇಂದ್ರ ಸಮಿತಿಯ ಸದಸ್ಯರಾಗಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್, ಹಿಂದೂಸ್ತಾನ್ ಟೈಮ್ಸ್, ಫ್ರಂಟ್‌ಲೈನ್ ಮುಂತಾದ ಪತ್ರಿಕೆ, ನಿಯತಕಾಲಿಕ, ಸಾಮಾಜಿಕ ಜಾಲತಾಣಗಳಲ್ಲಿ ಅಂಕಣಕಾರ್ತಿಯಾಗಿದ್ದಾರೆ. ಡಾ. ನೂರ್‌ಜಹಾನ್ ಸಫಿಯಾ ನಿಯಾಜರೊಡನೆ ಸಮುದಾಯ ಮಟ್ಟದ ಸಂಶೋಧನಾತ್ಮಕ ಅಧ್ಯಯನ ನಡೆಸಿ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ಅವರಿಬ್ಬರೂ ಪ್ರಕಟಿಸಿರುವ ಸಂಶೋಧನಾತ್ಮಕ ಪುಸ್ತಕಗಳಿವು:

೧. ರಿಕ್ಲೇಮಿಂಗ್ ಸೇಕ್ರೆಡ್ ಪ್ಲೇಸಸ್: ಮುಸ್ಲಿಂ ವಿಮೆನ್ಸ್ ಸ್ಟ್ರಗಲ್ ಫಾರ್ ಎಂಟ್ರಿ ಇನ್ ಟು ಹಾಜಿ ಅಲಿ ದರ್ಗಾ. (೨೦೧೭).

೨. ಇಂಡಿಯನ್ ಮುಸ್ಲಿಂ ವಿಮೆನ್ಸ್ ಮೂವ್ಮೆಂಟ್: ಫಾರ್ ಜಂಡರ್ ಜಸ್ಟಿಸ್ ಅಂಡ್ ಈಕ್ವಲ್ ಸಿಟಿಜನ್‌ಶಿಪ್. ೨೦೨೦.

೩. ಕರೇಜ್ ಅನ್ಲಾಕಡ್:  ೨೦೨೧.

೪. ಸ್ಟೇಟಸ್ ಆಫ್ ವಿಮೆನ್ ಇನ್ ಪಾಲಿಗೆಮಸ್ ಮ್ಯಾರೇಜಸ್ ಅಂಡ್ ನೀಡ್ ಫಾರ್ ಲೀಗಲ್ ಪ್ರೊಟೆಕ್ಷನ್. (೨೦೨೨).

೫. ಸೀಕಿಂಗ್ ಜಸ್ಟಿಸ್ ವಿದಿನ್ ಫ್ಯಾಮಿಲಿ: ಎ ನ್ಯಾಷನಲ್ ಸ್ಟಡಿ ಆನ್ ಮುಸ್ಲಿಂ ವಿಮೆನ್ಸ್ ವ್ಯೂಸ್ ಆನ್ ರಿಫಾರ್ಮ್ಸ್ ಇನ್ ಮುಸ್ಲಿಂ ಪರ್ಸನಲ್ ಲಾ. (೨೦೨೩).

ಝಕಿಯಾ ಅವರೊಡನೆ ದೂರವಾಣಿ ಮೂಲಕ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ:

ನಿಮ್ಮ ಬಾಲ್ಯ, ಕುಟುಂಬ, ವಿದ್ಯಾಭ್ಯಾಸ, ವಿವಾಹ..

ತಂದೆಮನೆಯ ಅಜ್ಜ ಬಟ್ಟೆಗಿರಣಿಯ ನೌಕರರಾಗಿದ್ದರು. ತಾಯಿಮನೆಯವರದು ಎಜುಕೇಶನಿಸ್ಟ್ಸ್ ಕುಟುಂಬ. ಮುತ್ತಜ್ಜಿ ಮುಖ್ಯೋಪಾಧ್ಯಾಯಿನಿಯಾಗಿದ್ದರು. ಅಜ್ಜ, ಅಜ್ಜಿಯರೂ ಶಿಕ್ಷಕವೃತ್ತಿಯಲ್ಲಿದ್ದರು. ತಂದೆ ಕಾಲೇಜೊಂದರ ಪ್ರಾಂಶುಪಾಲರಾಗಿದ್ದರು. ಅಮ್ಮ ಪ್ರೌಢಶಾಲೆಯ ಶಿಕ್ಷಕಿಯಾಗಿದ್ದರು. ನಾಲ್ಕು ಮಕ್ಕಳಲ್ಲಿ ನಾನು ಹಿರಿಯವಳು. ಅತಿ ಸಾಂಪ್ರದಾಯಿಕವಲ್ಲದ, ಆಧುನಿಕತೆಗೆ ತೆರೆದುಕೊಂಡ ಕುಟುಂಬ ನಮ್ಮದು. ಗುಜರಾತಿ ಮಾಧ್ಯಮದಲ್ಲಿ ಓದಿದೆ. ಬಳಿಕ ಇಂಗ್ಲಿಷ್ ಮೇಜರ್ ತೆಗೆದುಕೊಂಡೆ. ಗುಜರಾತ್ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಬೋಧಿಸತೊಡಗಿದೆ. ಮೇಲ್ವರ್ಗದ ವ್ಯಕ್ತಿಯೊಂದಿಗೆ ಮದುವೆಯಾಯಿತು. ಅವಮಾನ, ಹೀಗಳಿಕೆ, ಹಿಂಸೆ, ಭಯೋತ್ಪಾದನೆಯ ನರಕಸದೃಶ ಬದುಕನ್ನು ಕುಟುಂಬ ಮರ್ಯಾದೆ ಕಾಪಾಡಲು ಹಲ್ಲುಕಚ್ಚಿ ಸಹಿಸಿದೆ. ಹೊರಬರುವುದೂ ಸುಲಭವಿರಲಿಲ್ಲ. ಸಮಾಜ, ಸಂಸ್ಕೃತಿ, ಪರಂಪರೆ, ಧರ್ಮ ಎಲ್ಲವೂ ಹೆಣ್ಣು ಮೌನವಾಗಿರಲು, ಇರುವುದನ್ನು ಒಪ್ಪಿಕೊಳ್ಳಲು ಒತ್ತಾಯಿಸುತ್ತವೆ. ಆ ವಿಷವರ್ತುಲದಿಂದ ಹೊರಬರಲು ಹದಿನಾರು ವರ್ಷ ಹಿಡಿಯಿತು. ಬದುಕಿನ ಅಮೂಲ್ಯ ಭಾಗ, ಅರಸ್ತುವಿನ ಸಂಪೂರ್ಣ ಬಾಲ್ಯ ಹಿಂಸೆ, ಭಯದ ಉಸಿರುಗಟ್ಟಿಸುವ ವಾತಾವರಣದಲ್ಲಿ ಕಳೆದುಹೋಯಿತು.

೨೦೦೨ರಲ್ಲಿ ಗುಜರಾತ್ ಕೋಮುಗಲಭೆ ಸಂಭವಿಸಿದಾಗ ನೂರಾರು ಅತ್ಯಂತ ಬಡ, ಅಸಹಾಯಕ ಮಹಿಳೆಯರು ನನ್ನ ಬಳಿ ಬಂದರು. ಅವರಿಗಾಗಿ ಕೆಲಸ ಮಾಡುತ್ತ ಒಳಗಿನಿಂದ ಧೈರ್ಯ ಎದ್ದುಬಂತು. ನೊಂದ ಮಹಿಳೆಯರ ಹೋರಾಟದ ಕೆಚ್ಚು ನನ್ನನ್ನು ಸಾಮಾಜಿಕ ಕಾರ್ಯಕರ್ತೆಯಾಗಿ ಬದಲಾಯಿಸಿತು. ಲೋಕದೆದುರು ಭ್ರಮೆಯ ‘ಸುಖೀ ಕುಟುಂಬದ ಬದುಕನ್ನು ತೋರಿಸಲು ಕೌಟುಂಬಿಕ ದೌರ್ಜನ್ಯ ಸಹಿಸಿ ಮೌನವಾಗಿರುವುದು ಅಸಾಧ್ಯವೆನಿಸಿತು. ಹಿಂಸಾತ್ಮಕ ವಿವಾಹ ಬಂಧನದಿಂದ ಹೊರಬರಲು ನಿರ್ಧರಿಸಿದೆ. ೨೦೦೩ರಲ್ಲಿ ವಿಚ್ಛೇದನೆ ಪಡೆದೆ. ಬಳಿಕ ಕೇರಳ ಮೂಲದ ಸೋಮನ್ ನಂಬಿಯಾರರ ಭೇಟಿಯಾಯಿತು. ನಾನೇನಾಗಬೇಕೆಂದು, ಮಾಡಬೇಕೆಂದು ಬಯಸುವೆನೋ ಅದೆಲ್ಲಕ್ಕೂ ಬೇಷರತ್ ಬೆಂಬಲ ನೀಡುವ, ನನ್ನನ್ನು ಅರ್ಥ ಮಾಡಿಕೊಂಡ ಬಾಳಸಂಗಾತಿ ದೊರಕಿದರು. ಹದಿನೆಂಟು ವರ್ಷಗಳಿಂದ ಖುಷಿಯಿಂದ ಜೊತೆಗಿದ್ದೇವೆ. ನನ್ನ ಮಗ, ಅವರ ಮಗಳು ನಮಗಿಬ್ಬರು ಮಕ್ಕಳು. ಮಗನಿಗೆ ಹೆಸರಿನಿಂದಲೇ ಜಾತಿ ಗುರುತಿಸಲಾಗದಂತಹ ಹೆಸರಿಟ್ಟಿದ್ದೆ. ಅರಿಸ್ಟಾಟಲನ ಪೌರ್ವಾತ್ಯ ಹೆಸರು ಅರಸ್ತು. ವಿಚ್ಛೇದನದ ಬಳಿಕ ಕಾನೂನು ಹೋರಾಟ ಮಾಡಿ ನನ್ನ ಹೆಸರನ್ನು ತನ್ನ ಹೆಸರಿನ ಮುಂದೆ ಹಾಕಿಕೊಂಡ. ಒಂದು ಮೊಮ್ಮಗು ಬಂದಿದೆ. ಇನ್ನೊಂದು ಬರುವ ಹಾದಿಯಲ್ಲಿದೆ. ಕುಟುಂಬದವರು ನನ್ನಿಂದ ಯಾವ ಸೇವೆಯನ್ನೂ, ಕೆಲಸವನ್ನೂ ನಿರೀಕ್ಷಿಸುವುದಿಲ್ಲ. ಊಟತಿಂಡಿ, ಮನೆಯ ಒಪ್ಪಓರಣ, ಹಬ್ಬ, ನೆಂಟರ ಉಪಚಾರ, ಯಾತ್ರೆ ಮುಂತಾದ ಯಾವ ಜವಾಬ್ದಾರಿ, ನಿರೀಕ್ಷೆಗಳೂ ಇಲ್ಲ. ನಾನೇ ಕೆಲವೊಮ್ಮೆ ಹೋರಾಟದ, ಸಂಘಟನೆಯ ಹಾದಿಯಲ್ಲಿ ಕುಟುಂಬಕ್ಕೆ ಸಮಯ ಕೊಡಲಾಗುತ್ತಿಲ್ಲವಲ್ಲ ಎಂದು ಆತಂಕಗೊಳ್ಳುವುದಿದೆ. ‘ನೀವು ಮಾಡುತ್ತಿರುವ ಕೆಲಸ ತುಂಬ ಮುಖ್ಯವಾದದ್ದು. ಇದೆಲ್ಲದರ ಬಗೆಗೆ ತಲೆ ಕೆಡಿಸಿಕೊಳ್ಳಬೇಡಿ, ಮುಂದುವರೆಯಿರಿ ಎಂದು ನನ್ನ ಸಂಗಾತಿ ಮತ್ತು ಮಗ-ಸೊಸೆ ಒತ್ತಾಸೆಯಾಗಿ ನಿಲ್ಲುತ್ತಾರೆ. ಇಂತಹ ಅಪೂರ್ವ ಬೆಂಬಲ ಹೋರಾಟಗಾರ್ತಿಯರಿಗೆ ಸಿಗುವುದು ಬಲುವಿರಳ.

ನಿಜ ಹೇಳಬೇಕೆಂದರೆ ನೀವಿಂದು ಕಾಣುವ ಝಕಿಯಾ ಹುಟ್ಟಿದ್ದು ೨೦೦೩ರಲ್ಲಿ. ವಿಚ್ಛೇದನೆ ಪಡೆದ ದಿನವನ್ನು ಹುಟ್ಟಿದ ದಿನವೆಂದು ಭಾವಿಸಿರುವೆ. ನನಗೀಗ ೨೨ ವರ್ಷ ಅಷ್ಟೇ, ಇನ್ನೂ ಯುವತಿ ಅನಿಸುತ್ತಿದೆ. (ನಗು). ಮನೆಗೆಲಸದವಳಂತಿದ್ದ ಹಿಂದಿನ ಬದುಕಿಗಿಂತ ಈ ಬದುಕು ಸಂಪೂರ್ಣ ಭಿನ್ನವಾಗಿದೆ.



ನಿಮ್ಮ ಹೋರಾಟ, ಸಂಘಟನೆಗೆ ಆದರ್ಶ, ಸ್ಫೂರ್ತಿ ಯಾರು? 

ಮೌನ ಮುರಿದು ದೌರ್ಜನ್ಯದ ವಿರುದ್ಧ ಎದ್ದು ನಿಲ್ಲುವವರೆಲ್ಲರೂ ನನ್ನ ಸ್ಫೂರ್ತಿಯಾಗಿದ್ದಾರೆ. ಒಮ್ಮೆ ಒಂದು ಮಹಿಳೆಯರ ಗುಂಪಿನೊಡನೆ ಮಾತನಾಡುವಾಗ, ‘ನೀ ಕಲಿತಾಕಿ ನಮ್ಮಂತೋರಿಗೆಲ್ಲ ಏನಾರಾ ಸಹಾಯ ಆಗಂತದು ಮಾಡಬೇಕು ಎಂದೊಬ್ಬಾಕೆ ಸೂಚಿಸಿದಳು. ಆ ಕ್ಷಣವೇ ನಾನು ಬದಲಾದೆ.

ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ (ಬಿಎಂಎಂಎ) ಹೋರಾಟಕ್ಕೆ ಭಾರತದ ಸಂವಿಧಾನ ಮತ್ತು ಕುರಾನ್ ಸ್ಫೂರ್ತಿ ಮೂಲಗಳು. ವಿಶ್ವಭ್ರಾತೃತ್ವವನ್ನು ಪ್ರತಿಪಾದಿಸಿದ ಗಾಂಧಿ (ಈಗಾಗಿದ್ದರೆ ವಿಶ್ವ ಸೋದರಿತ್ವ ಎನ್ನುತ್ತಿದ್ದರೇನೋ, ಅಷ್ಟು ಹೆಣ್ಣು ಗುಣ ಅವರಲ್ಲಿತ್ತು) ನಮಗೆ ತುಂಬ ಇಷ್ಟ. ನಮ್ಮ ಹೋರಾಟಕ್ಕೊಂದು ನೆಲೆಗಟ್ಟನ್ನೊದಗಿಸಿರುವ ಬಾಬಾಸಾಹೇಬರಿಗೆ ಆಲ್ ಸಾಲ್ಯೂಟ್ಸ್. ಎಲ್ಲ ಸ್ವಾತಂತ್ರ್ಯ ಹೋರಾಟಗಾರರು, ನ್ಯಾಯಕ್ಕಾಗಿ ಹೋರಾಡುತ್ತಿರುವವರು ನಮ್ಮ ಸ್ಫೂರ್ತಿ. ನಮ್ಮ ವಿಷನ್: ಹೋರಾಡುವ ಗುಂಪುಗಳೊಡಗೂಡಿ ಕೆಲಸ ಮಾಡುವುದು.

ಗುಜರಾತಿನ ಜನಪರ/ಸ್ತ್ರೀವಾದಿ ಮತ್ತಿತರ ಚಳವಳಿ, ಹೋರಾಟಗಳ ಬಗೆಗೆ.

ಅಭಿವ್ಯಕ್ತಿ ಸ್ವಾತಂತ್ರ್ಯ ತೀರಾ ಹತ್ತಿಕ್ಕಲ್ಪಟ್ಟ, ದಮನ ಮುಚ್ಚಿಡಲ್ಪಟ್ಟ ರಾಜ್ಯ ಗುಜರಾತ್. ಇಲ್ಲಿ ಜನಚಳುವಳಿ ಕಟ್ಟುವುದು ಅಸಾಧ್ಯವೆನ್ನುವಂತಹ ಪರಿಸ್ಥಿತಿಯಿದೆ. ವರ್ಷಗಟ್ಟಲೆಯಿಂದ ಸೆ. ೧೪೪ ಚಾಲ್ತಿಯಲ್ಲಿದೆ. ಸಾರ್ವಜನಿಕವಾಗಿ ಏನನ್ನೂ ಮಾಡುವುದು ಕಷ್ಟ. ಇದು ಚಳವಳಿ, ಹೋರಾಟದ ಬಲವನ್ನು ಹೊಸಕಿ ಹಾಕಿದೆ. ಪ್ರತಿರೋಧದ ವಿವಿಧ ಮಾರ್ಗಗಳನ್ನು, ಸತ್ಯಾಗ್ರಹವನ್ನು ರೂಪಿಸಿದ ಗಾಂಧಿ ಹುಟ್ಟಿದ ರಾಜ್ಯ ಹೀಗಾಗಿರುವುದು ವರ್ತಮಾನದ ವ್ಯಂಗ್ಯವೆನ್ನಬಹುದು. ಆದರೆ ಇದರ ನಡುವೆಯೂ ಕೆಲವರು ದಿಟ್ಟ ಪ್ರತಿರೋಧ ತೋರಿಸುತ್ತಿದ್ದಾರೆ. ಜೈಲು ಪಾಲಾಗುತ್ತಿದ್ದಾರೆ. ಅವರಿಗೆ ಸಾವಿರದ ಸಲಾಮು.

ಗುಜರಾತ್ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ಎನ್ನುತ್ತಾರೆ, ನಿಜವೇ?

ಹೌದು. ಇದು ಮಹಿಳೆಯರಿಗೆ ಅತ್ಯಂತ ಸುರಕ್ಷಿತ ರಾಜ್ಯ. ನಡುರಾತ್ರಿ ಹೊತ್ತಿನಲ್ಲೂ ನೀವು ಆರಾಮವಾಗಿ ಯಾವ ಹೆದರಿಕೆಯಿಲ್ಲದೆ ಹೊರಗೆ ಬೈಕಿನಲ್ಲಿ, ಸ್ಕೂಟಿಯಲ್ಲಿ, ನಡೆದುಕೊಂಡು ಓಡಾಡಬಹುದು. ನೀವು ಮುಸ್ಲಿಂ ಅಲ್ಲದಿದ್ದರೆ, ಪ್ರಶ್ನಿಸುವವರಲ್ಲದಿದ್ದರೆ ಮಹಿಳೆಯರಿಗಿದು ಸುರಕ್ಷಿತ ನೆಲವಾಗಿದೆ.

ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಧರ್ಮದ ಆಧಾರದಲ್ಲಿ ಸಂಘಟನೆಯಾಗತೊಡಗಿದರೆ, ‘ಹಿಂದೂ ಫೆಮಿನಿಸ್ಟ್, ‘ಮುಸ್ಲಿಂ ಫೆಮಿನಿಸ್ಟ್, ‘ಕ್ರಿಶ್ಚಿಯನ್ ಫೆಮಿನಿಸ್ಟ್ ಎಂದುಕೊಂಡರೆ ಅದು ಸೋದರಿತ್ವವನ್ನು ಒಡೆಯುವ ಭಯವಿಲ್ಲವೆ?

ನಾನು ನನ್ನನ್ನು ಇಸ್ಲಾಮಿಕ್ ಫೆಮಿನಿಸ್ಟ್ ಎಂದು ಕರೆದುಕೊಳ್ಳಬಯಸುವುದಿಲ್ಲ. ನಾನು ಮಹಿಳಾ ಸಮಾನತೆಯನ್ನು ನಂಬುವಂತೆಯೇ ಮಾನವ ಸಮಾನತೆಯನ್ನೂ ನಂಬುತ್ತೇನೆ.

ಕೆಲವು ಸ್ತ್ರೀವಾದಿ ಹೋರಾಟಗಾರರು ಯಾಕೆ ಕುರಾನ್, ಷರಿಯ ಅಂತೀರಿ? ಅದರಾಚೆ ಬನ್ನಿ ಎನ್ನುತ್ತಾರೆ. ನಾನದನ್ನು ಒಪ್ಪುವುದಿಲ್ಲ. ನ್ಯಾಯಕ್ಕಾಗಿ ಹೋರಾಡುವ ಎಷ್ಟೊಂದು ಸಂಘಟನೆ, ಗುಂಪುಗಳಿದ್ದಾಗ್ಯೂ ಮಹಿಳೆಯರಿಗೆಂದೇ ಬೇರೆ ಯಾಕೆ ಬೇಕು? ಅದೇ ಕಾರಣಕ್ಕೆ ಮುಸ್ಲಿಂ ಮಹಿಳೆಯರಿಗೂ ಬೇರೆ ಸಂಘಟನೆ ಬೇಕು. ಸಂವಿಧಾನವೇ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿರುವಾಗ ನಂನಮ್ಮ ಧರ್ಮ ಅನುಸರಿಸುತ್ತಲೇ ಅದರೊಳಗಿರುವ ಸಮಾನತೆ, ಹಕ್ಕುಗಳನ್ನು ಕೇಳಬಹುದು. ಧರ್ಮದ ಆವರಣ ಪ್ರವೇಶಿಸಿ ನಿಮ್ಮ ಹಕ್ಕುಗಳನ್ನು ಕೇಳುವುದು ಸುಲಭವಿಲ್ಲ. ಮೋಸ್ಟ್ ಚಾಲೆಂಜಿಂಗ್ ಅದು. ಫೆಮಿನಿಸ್ಟ್ ಗ್ರೂಪ್ಸ್ ಹ್ಯಾವ್ ಶೈಡ್ ಅವೇ ಫ್ರಂ ದಿಸ್. ಇದು ಧರ್ಮದ ಆವರಣದೊಳಗೆ ಸ್ತ್ರೀವಾದಿ ಚಿಂತನೆಗಳಿರದ ಹಾಗೆ, ದಿಟ್ಟ ಮಹಿಳೆಯರಿರದ ಹಾಗೆ ಮಾಡಿದೆ. ಈ ಖಾಲಿ ಬಳಸಿಕೊಂಡು ಪ್ರತಿ ಧರ್ಮವೂ ಮಹಿಳೆಯರನ್ನು ದಾಳದಂತೆ ಬಳಸಿಕೊಳ್ಳುತ್ತಿದೆ. ಮಹಿಳೆಯರಿಗೆ ಸಾಕಷ್ಟು ಹಕ್ಕುಗಳನ್ನು ಕೊಟ್ಟ ಧರ್ಮ ಇಸ್ಲಾಂ. ಆದರೆ ಸಂಪ್ರದಾಯವಾದಿ ಪುರುಷರ ನೆರಳಿನಲ್ಲಿ ಅರಳುವ ಧಾರ್ಮಿಕ ಸಂಘಟನೆಗಳ ಮಹಿಳೆಯರು ಪುರುಷರ ಭಾಷೆಯನ್ನೇ ಮಾತಾಡುತ್ತಾರೆ. ಬೇರೆ ಯೋಚನೆಗಳೇ ಅವರಿಗೆ ಬರುವುದಿಲ್ಲ. ಸ್ವತಂತ್ರವಾಗಿ ಮಾತನಾಡುವಷ್ಟು, ತಮ್ಮದೇ ಅಭಿಪ್ರಾಯ ಹೇಳುವಷ್ಟು, ಪ್ರಶ್ನಿಸುವಷ್ಟು ಮುಂದಾಳ್ತಿಯರಾಗುವ ಅವಕಾಶ ಸಿಗುವುದೇ ಇಲ್ಲ. ಸೂಕ್ಷ್ಮ ಸಂವೇದನೆ, ಅನುಭವ ಪ್ರಾಮಾಣ್ಯ, ಭಾವುಕತೆ, ಸೋದರಿತ್ವಗಳನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಮೌನವಾಗಿ, ಹೌದಮ್ಮಗಳಾಗಿ ‘ಉತ್ತಮ ಮಹಿಳೆಯರಾಗಿದ್ದಾರೆ. ಎಲ್ಲ ಧರ್ಮಗಳ ವ್ಯವಸ್ಥೆಯೊಳಗೆ ಸಂಘಟಿತರಾದ ಮಹಿಳೆಯರ ಸ್ಥಿತಿ ಹೀಗೆಯೇ ಇದೆ. ಹಾಗಾಗದಿರಲು ಸ್ಟ್ರಾಟೆಜಿಕ್ ಆಗಿ ನಾವು ಧರ್ಮದ ಅಸ್ಮಿತೆಯನ್ನು ಬಳಸಿಕೊಂಡು ಒಳ ಹೊಕ್ಕಬೇಕು.

ನಾನು ನಾಸ್ತಿಕಳೋ, ಆಜ್ಞೇಯವಾದಿಯೋ ಆಗಿರಬಹುದು. ಆದರೆ ಧರ್ಮ-ದೇವರನ್ನು ನಂಬುವ ಅಸಂಖ್ಯ ಸಾಮಾನ್ಯ ಮಹಿಳೆಯರಿದ್ದಾರೆ. ತಮ್ಮನ್ನು ಪುರುಷರಿಗೆ ಸಮನಾಗಿ ಸೃಷ್ಟಿ ಮಾಡಲಾಗಿದೆ ಮತ್ತು ದೇವರು ತಾರತಮ್ಯ ಎಸಗಲು ಸಾಧ್ಯವೇ ಇಲ್ಲ ಎಂದವರು ಧೃಢವಾಗಿ ನಂಬಿದ್ದಾರೆ. ಬಹುತೇಕ ಬಡ, ಅನಕ್ಷರಸ್ಥ, ಅಧಿಕಾರವಂಚಿತ ಮುಸ್ಲಿಂ ಮಹಿಳೆಯರ ನಂಬಲರ್ಹ ಬಂಧು, ಶಕ್ತಿ ಅಲ್ಲಾ ಮಾತ್ರ. ದೇವರ ಜೊತೆಗಿನ ಅವರ ಸಂಬಂಧ ವೈಯಕ್ತಿಕ ನೆಲೆಯದು ಮತ್ತು ಅಧ್ಯಾತ್ಮಿಕವಾದದ್ದು. ಒಬ್ಬ ಫೆಮಿನಿಸ್ಟ್, ಸೆಕ್ಯುಲರ್ ವ್ಯಕ್ತಿಯಾಗಿ ನಾನು ಅವರ ಈ ನಿಲುವನ್ನು ಗೌರವಿಸುತ್ತೇನೆ. ನನ್ನ ಪ್ರಕಾರ ಮಿಕ್ಕವರ ವಿಶ್ವಾಸವನ್ನು ಅರ್ಥ ಮಾಡಿಕೊಂಡು ಸಹಬಾಳ್ವೆಯಿಂದ ಬದುಕುವುದೇ ಸೆಕ್ಯುಲರಿಸಂನ ನಿಜವಾದ ಅರ್ಥ. ಸಂವಿಧಾನ ಹೇಳುವುದೂ ಅದನ್ನೇ. ದೇಶ ಧರ್ಮನಿರಪೇಕ್ಷವಾಗಿದೆ. ಯಾವುದೇ ಒಂದು ಧರ್ಮಕ್ಕೂ ವಿಶೇಷ ಸ್ಥಾನಮಾನವಿಲ್ಲ, ಯಾವುದೂ ಸರ್ಕಾರವನ್ನು ಪ್ರಭಾವಿಸುವಂತಿಲ್ಲ. ಆದರೆ ದೇಶದ ಪ್ರತಿ ವ್ಯಕ್ತಿಗೂ ವೈಯಕ್ತಿಕವಾಗಿ ತನಗಿಷ್ಟ ಬಂದ ಧರ್ಮವನ್ನು ಆಯ್ಕೆ ಮಾಡಿಕೊಂಡು ಬದುಕುವ ಸ್ವಾತಂತ್ರ್ಯವಿದೆ.

ನಾವು ಭಾರತದ ಪ್ರಜೆಗಳು. ಅದು ನಮ್ಮ ಮೊದಲ ಅಸ್ಮಿತೆ. ಸಂವಿಧಾನ ಹಕ್ಕುಗಳನ್ನು ಕೊಟ್ಟಿದೆ. ಅದನ್ನು ಪಡೆದು, ಧಾರ್ಮಿಕ ಚೌಕಟ್ಟಿನೊಳಗೂ ನಮ್ಮ ಹಕ್ಕುಗಳನ್ನು ಪಡೆಯೋಣ, ಕರ್ತವ್ಯಗಳನ್ನು ನಿಭಾಯಿಸೋಣ; ಅಲ್ಪಸಂಖ್ಯಾತ ಅಸ್ಮಿತೆಯನ್ನು ದಮನಿತ ಅಸ್ಮಿತೆಯಾಗಿ ಮಾತ್ರ ಮಾಡಿಕೊಳ್ಳದೆ ಹಕ್ಕುಜಾಗೃತಿಯ ಅಸ್ಮಿತೆಯನ್ನಾಗಿ ರೂಪಿಸಿಕೊಳ್ಳೋಣ ಎನ್ನುವುದು ಬಿಎಂಎಂಎ ನಿಲುವು. ಎಂದೇ ನಮ್ಮ ಸಂಘಟನೆಯ ಮುಸ್ಲಿಂ ಐಡೆಂಟಿಟಿಯು ಧರ್ಮದ ಆಧಾರದಲ್ಲಿ ಮಹಿಳೆಯರನ್ನು ಪ್ರತ್ಯೇಕಿಸಲೆಂದು ಅಲ್ಲ, ಕಾರ್ಯತಂತ್ರದ ಭಾಗವಾಗಿ ಅಡಕವಾಗಿದೆ. ಧರ್ಮದೊಳಗಿನ ಆವರಣದ ಅನ್ಯಾಯವನ್ನು ಹೆಚ್ಚೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯ ಮಾಡಿದೆ. ಪಾವ್ಲೋ ಫ್ರೇರೆ ಹೇಳುವಂತೆ ದಮನಿತರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಲು ತಾವೇ ಎದ್ದು ನಿಲ್ಲುವಷ್ಟು ಬಿಡುಗಡೆ ಪಡೆಯದಿದ್ದರೆ ಬದಲಾವಣೆಯ ಯಾವುದೇ ಭರವಸೆಯಿಡಲು ಸಾಧ್ಯವಿಲ್ಲ. ಎಂದೇ ನಮ್ಮ ಧಾರ್ಮಿಕ ಅಸ್ಮಿತೆಯು ಸಂಘಟಿಸಲು, ವಿಶೇಷ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸಲು ಮುಖ್ಯವಾಗಿದೆ.

ಅದೇ ಹೊತ್ತಿಗೆ ಮುಸ್ಲಿಂ ಮಹಿಳೆಯರಲ್ಲದೆ ಮುಸ್ಲಿಮೇತರ ಮಹಿಳೆಯರ ಕಷ್ಟಗಳಿಗೂ ದನಿಗೂಡಿಸಲು ಅದು ಸಿದ್ಧವಾಗಿದೆ. ನಿಮಗೆ ಅಚ್ಚರಿಯಾಗಬಹುದು ಅನುಪಮಾ, ನಾವು ಮಾಡುವ ‘ಔರತೋಂಕಿ ಷರಿಯತ್ ಅದಾಲತ್ನಲ್ಲಿ ೨೦% ಹಿಂದೂ ಮಹಿಳೆಯರೂ ಭಾಗವಹಿಸಿ ಕಾನೂನು ಸಲಹೆ ಪಡೆಯುತ್ತಾರೆ.

ನೀವು ಮತ್ತು ನಿಮ್ಮ ಸಂಘಟನೆ ಎದುರಿಸಿದ ದೊಡ್ಡ ಸವಾಲು.

ಸಾಕಷ್ಟು ಸವಾಲು ಎದುರಿಸಿದ್ದೇವೆ. ಮುಸ್ಲಿಮರದು ಮೊದಲಿನಿಂದಲೂ ಅತಿಕಷ್ಟದ ಬದುಕನ್ನು ಕಟ್ಟಿಕೊಂಡ ಸಮುದಾಯ. ಇಂಡೋನೇಷ್ಯಾದ ನಂತರ ವಿಶ್ವದಲ್ಲಿ ಅತಿ ಹೆಚ್ಚು ಮುಸ್ಲಿಮರಿರುವುದು ಭಾರತದಲ್ಲಿ. ಆದರೆ ಶಿಕ್ಷಣ, ಆದಾಯ, ರಾಜಕೀಯ ಪ್ರಾತಿನಿಧ್ಯ, ಉದ್ಯೋಗ ಮೊದಲಾದ ಎಲ್ಲ ಕ್ಷೇತ್ರಗಳಲ್ಲೂ ಅಂಚಿಗೆ ಸರಿಸಲ್ಪಟ್ಟ ಸಮುದಾಯ. ಅತ್ಯಂತ ಸಾಂಪ್ರದಾಯಿಕ ಮನಸ್ಥಿತಿ ಇದಕ್ಕೆ ಕಾರಣವೂ, ಪರಿಣಾಮವೂ ಆಗಿದೆ. ಸಮುದಾಯದ ಆಲೋಚನೆಯಲ್ಲಿ ಪ್ರಜಾಪ್ರಭುತ್ವ, ಲಿಂಗಸಮಾನತೆ, ಮಹಿಳಾ ಹಕ್ಕುಗಳ ಅರಿವುಗಳನ್ನು ತರುವುದೇ ಕಷ್ಟವಾಗಿದೆ. ಸಮುದಾಯದ ನಾಯಕತ್ವವಾದರೂ ಎಂತಹದು? ಒಂದೋ ಸಂಪ್ರದಾಯವಾದಿ ಧಾರ್ಮಿಕ ವಲಯದ್ದು ಅಥವಾ ಸ್ವಾರ್ಥಿ ರಾಜಕಾರಣಿಗಳದು. ಅವರಿಬ್ಬರೂ ಒಂದೇ, ಸಮಾನ ಅಪಾಯಕಾರಿಗಳವರು. ಇಲ್ಲಿ ಸೆಕ್ಯುಲರ್ ಲೀಡರ್‌ಶಿಪ್ ಇಲ್ಲ. ಎಲ್ಲ ವರ್ಗದ ಮುಸ್ಲಿಮರು, ಅದೂ ಪುರುಷರು ಒಟ್ಟು ಸೇರುವುದು ಮಸೀದಿಯಲ್ಲಿ ಮಾತ್ರ. ಬೇರೆಕಡೆ ಸೆಕ್ಯುಲರ್ ಸ್ಪೇಸ್‌ನಲ್ಲಿ ಅವರು ಸೇರುವುದೇ ಇಲ್ಲ. ಇದು ಅವರನ್ನು ಸಂಘಟಿಸಲು ದೊಡ್ಡ ಸವಾಲಾಗಿದೆ.

ತ್ರಿವಳಿ ತಲಾಖ್ ಸಮಯದಲ್ಲಿ ಅದು ಹೇಗೋ ಇದನ್ನು ದಾಟಿದೆವು. ಸಾವಿರಾರು ಸಭೆ, ಸೆಮಿನಾರು, ಕಾರ್ಯಾಗಾರ, ಚರ್ಚೆ ನಡೆಸಿದೆವು. ಇರುವ ವಿಷಯ ತಿಳಿಸಿದೆವು. ಮಹಿಳೆಯರಿಂದ ಅಗಾಧ ಬೆಂಬಲ ಬಂತು. ಪುರುಷರೂ ಕೈಜೋಡಿಸಿದರು. ತ್ರಿವಳಿ ತಲಾಖನ್ನು ಕುರಾನಿನಲ್ಲಿ ಹೇಳಿಲ್ಲ; ಇಸ್ಲಾಮಿಕ್ ದೇಶಗಳಾದ ಬಾಂಗ್ಲಾ-ಪಾಕಿಸ್ತಾನದಲ್ಲೂ ಇಲ್ಲ; ಭಾರತದಲ್ಲಿ ಮಾತ್ರ ಇಟ್ಟುಕೊಂಡಿದ್ದೇವೆಂದು ಜನರಿಗೆ ತಿಳಿಸಿ ಹೇಳಿದೆವು.

ದುರಂತವೆಂದರೆ ಸಾಂಪ್ರದಾಯಿಕ ಶಕ್ತಿಗಳಷ್ಟೇ ಮುಸ್ಲಿಂ ಗಣ್ಯವರ್ಗದಿಂದಲೂ ಬಿಎಂಎಂಎಯನ್ನು ಮೂಲೆಗೊತ್ತುವ, ಅಪಖ್ಯಾತಿಗೊಳಿಸುವ ಯತ್ನ ನಡೆಯಿತು. ನಾವೊಂದು ಅಧ್ಯಯನ ನಡೆಸಿ ೧೨೦ ತ್ರಿವಳಿ ತಲಾಖ್ ಪ್ರಕರಣಗಳನ್ನು ಪರಿಶೀಲಿಸಿ ಬರೆದಿದ್ದೆವು. ಅದಕ್ಕೆ, ‘ಬರೀ ೧೨೦ ಜನ ತ್ರಿವಳಿ ತಲಾಖ್ ತೆಗೆದುಕೊಂಡದ್ದಕ್ಕೆ ಷರಿಯ ಬದಲಿಸಬೇಕೇ? ಎಂದು ಬರೆದರು. ೧೨೦ ಎನ್ನುವುದು ನಾವು ತೆಗೆದುಕೊಂಡ ಸ್ಯಾಂಪಲ್ ಆಗಿತ್ತಷ್ಟೇ. ಇನ್ನೆಷ್ಟೋ ಸಾವಿರಾರು ಮಹಿಳೆಯರು ಅದರಿಂದ ನೊಂದಿದ್ದರು. ಇಂತಹ ವಾಸ್ತವಗಳ ಪರಿಚಯವಿರದ ಪರಿಚಿತ, ಕುಲೀನ ಮುಸ್ಲಿಂ ಮಹಿಳೆಯೊಬ್ಬರು, ‘ನೀವು ಇಸ್ಲಾಮನ್ನು ಕಟಕಟೆಗೆ ತಂದು ನಿಲ್ಲಿಸಿದಿರಿ ಎಂದು ಮೂದಲಿಸಿದರು.

ಈಗ ಸಿಎಎ, ಬುಲ್ಡೋಜರ್ ಧ್ವಂಸ, ಹಿಜಾಬ್-ನಮಾಜ್-ಅಜಾನ್-ಗೋಮಾಂಸ ಎಲ್ಲವೂ ಇಷ್ಯೂಗಳೇ ಆಗಿರುವಾಗ ಮಹಿಳೆಯರನ್ನು ಸಂಘಟನೆ ಮಾಡುವುದು ತುಂಬ ಕಷ್ಟವಾಗಿದೆ. ಮುಸ್ಲಿಂದ್ವೇಷದ ವಾತಾವರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿರುವ ನಮ್ಮ ಬಹುಪತ್ನಿತ್ವ ನಿಷೇಧ ಅರ್ಜಿಯು ಮುಂದೆ ಹೋಗಲು ಅಥವಾ ಅದಕ್ಕಾಗಿ ಜನರನ್ನು ಒಟ್ಟುಗೂಡಿಸಿ ಹೋರಾಡಲು ಅಸಾಧ್ಯವಾಗಿದೆ. ಯಾವುದೇ ಪ್ರಶ್ನೆಯು ಇಸ್ಲಾಂ ವಿರೋಧದಂತೆ, ವಿದ್ರೋಹದಂತೆಯೇ ಕೇಳಿಸುತ್ತ ಸುಧಾರಣೆ ಕಷ್ಟಸಾಧ್ಯವಾಗಿದೆ.


ಸಂವಿಧಾನಾತ್ಮಕ ಹಕ್ಕುಗಳು ಮತ್ತು ಕುರಾನಿನ ಹಕ್ಕುಗಳು ಇವೆರೆಡನ್ನು ಒಗ್ಗೂಡಿಸಿ ಸಾಧಿಸಿಕೊಳ್ಳುವ ಬಗೆ ಹೇಗೆ?

ನಮ್ಮ ಸಂವಿಧಾನದ ಅನನ್ಯತೆ ಎಂದರೆ ಅದು ಧರ್ಮನಿರಪೇಕ್ಷವಾಗಿರುತ್ತಲೇ ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ. ಈ ಅಂಶವು ನಾಗರಿಕರಾಗಿರುವ ಮಹಿಳೆಯರನ್ನು ತಂತಮ್ಮ ಧರ್ಮದಡಿ ನ್ಯಾಯಕ್ಕೆ ಅರ್ಹರನ್ನಾಗಿ ಮಾಡುತ್ತದೆ. ಮಹಿಳೆಯರು ಎರಡೂ ಮೂಲಗಳಿಂದ ಉಪಯೋಗ ಪಡೆಯಬಹುದಾಗಿದೆ. ಆದರೆ ಪುರುಷ ಪ್ರಾಧಾನ್ಯ ಮತ್ತು ರಾಜಕಾರಣಗಳು ಈ ಎರಡೂ ನೆಲೆಗಳಲ್ಲೂ ನ್ಯಾಯ ಸಿಗದಂತೆ ಮಾಡಿವೆ.

ನಾನು ಸಮಾನ ನಾಗರಿಕ ಸಂಹಿತೆಯನ್ನು ಸ್ವಾಗತಿಸುತ್ತೇನೆ. ಹೀಗೆಂದ ಕೂಡಲೇ ಯಾವ ಬಿರುದು ಸಿಗಲಿದೆಯೆಂಬ ಅರಿವಿದೆ. ಸ್ವಾತಂತ್ರ್ಯ ಹೋರಾಟಗಾರರು, ಬಾಬಾಸಾಹೇಬರು ಎಲ್ಲರೂ ಸಮಾನ ನಾಗರಿಕ ಸಂಹಿತೆಯ ಪರವಾಗಿದ್ದರು. ಈಗ ಆ ಮಾತೆತ್ತುವುದೇ ಕಷ್ಟವೆನ್ನುವಂತೆ ರಾಜಕೀಕರಣಗೊಂಡುಬಿಟ್ಟಿದೆ. ಹಾಗೆ ನೋಡಿದರೆ ಭಾರತದ ಎಲ್ಲ ಮಹಿಳೆಯರಿಗೂ ನ್ಯಾಯಯುತ ಬದುಕು ನಡೆಸಲು ಸಮಾನ ನಾಗರಿಕ ಸಂಹಿತೆ ಬರಲೇಬೇಕಾಗಿದೆ. ಆದರೆ ಅದನ್ನು ತರಲು ಪಟ್ಟು ಹಿಡಿದು ಪ್ರಯತ್ನಿಸುತ್ತಿರುವವರಾರು? ನಮ್ಮ ವಿರೋಧಿ ಪಕ್ಷ. ದುರಾದೃಷ್ಟ, ಆದರೆ ವಾಸ್ತವ.

ಆದರ್ಶಮಯ ಪರಿಸರದಲ್ಲಿ ಧರ್ಮನಿರಪೇಕ್ಷ ಕಾನೂನುಗಳೇ ಅತ್ಯುತ್ತಮ. ಆದರೆ ನಾವೀಗ ಆ ವಾಸ್ತವದಿಂದ ತುಂಬ ದೂರವಿದ್ದೇವೆ. ನನ್ನ ಜೀವಿತಾವಧಿಯಲ್ಲಂತೂ ಕಾಣಲು ಸಾಧ್ಯವಿಲ್ಲದಷ್ಟು ಅದು ದೂರವಿದೆ. ಏಕರೂಪ ನಾಗರಿಕ ಸಂಹಿತೆ ಎನ್ನುವುದನ್ನು ಅತಿ ರಾಜಕೀಕರಣಗೊಳಿಸಿದ್ದಾರೆ. ಹೀಗಿರುತ್ತ ಕುರಾನಿನಲ್ಲಿ ಕೊಡಲ್ಪಟ್ಟ ಮಹಿಳೆಯರ ಹಕ್ಕುಗಳು ಭಾರತದ ಕಾನೂನಾಗಿ ಪರಿಗಣಿತವಾಗಿ ಮಹಿಳೆಯರಿಗೆ ಹಕ್ಕುಗಳು ಸಿಗುವುದು ಅನಿವಾರ್ಯವಾಗಿದೆ.

ಧರ್ಮದೊಳಗೆ ಹಕ್ಕು ಕೇಳುತ್ತ ನಡೆಸುವ ಹೋರಾಟವು ಧರ್ಮದ ಸಂಕಷ್ಟ ಕಾಲದಲ್ಲಿ ಎಸಗುವ ದ್ರೋಹದಂತೆ ಕೇಳುವುದಿಲ್ಲವೆ? ಸ್ತ್ರೀಪುರುಷರನ್ನು ಒಡೆಯಲು ಎದುರಾಳಿ ನಡೆಸುವ ತಂತ್ರದಿಂದ ಬೆಂಬಲ ಪಡೆಯುವುದಿಲ್ಲವೆ? ಇವೆರೆಡನ್ನು ಹೇಗೆ ನಿಭಾಯಿಸುತ್ತಿರುವಿರಿ?


ನಮ್ಮ ವಿರೋಧಿ ಪಕ್ಷದ ಸರ್ಕಾರವಿರುವಾಗ ತ್ರಿವಳಿ ತಲಾಖ್ ವಿರುದ್ಧ ಮಾತನಾಡಿದೆವೆಂದು ನಮ್ಮ ವಿರುದ್ಧ ಟೀಕೆಗಳಿದ್ದವು. ಆದರೆ ಅನ್ಯಾಯ ನಿರಂತರವಾಗಿ ಸಂಭವಿಸುತ್ತಲೇ ಇರುವಾಗ ನ್ಯಾಯ ಮತ್ತು ಸಮಾನತೆಯನ್ನು ಪಡೆದುಕೊಳ್ಳಲು ‘ಸೂಕ್ತ ಸಮಯ ಅಂತ ಯಾವುದೂ ಇಲ್ಲ. ಕೇವಲ ಷರಿಯತ್ ಇಸ್ಲಾಮಿಕ್ ಕಾನೂನು ಆಗಲಾರದು. ಅದನ್ನು ಸೂಕ್ತವಾಗಿ ಕ್ರೋಢೀಕರಿಸಬೇಕು. ಎಲ್ಲ ಮುಸ್ಲಿಂ ದೇಶಗಳೂ ಮುಸ್ಲಿಂ ವೈಯಕ್ತಿಕ ಕಾನೂನನ್ನು ವ್ಯವಸ್ಥಿತವಾಗಿ ಕ್ರೋಢೀಕರಿಸಿವೆ. ವಿವಾಹ-ಒಪ್ಪಿಗೆ-ಮದುವೆ ವಯಸ್ಸು-ಆಸ್ತಿ-ವಿಚ್ಛೇದನೆ-ಜೀವನಾಂಶ ಇತ್ಯಾದಿಗಳ ಬಗೆಗೆ ಸ್ಪಷ್ಟವಾದ, ಈ ಕಾಲಕ್ಕೂ ಅನ್ವಯವಾಗಬಲ್ಲಂತಹ ಕಾನೂನುಗಳನ್ನು ರೂಪಿಸಿವೆ. ಆದರೆ ಭಾರತದಲ್ಲಿ ಏನೂ ಮಾಡಿಲ್ಲ. ನೋಡಿ: ಇಸ್ಲಾಮಿನಲ್ಲಿ ಮದುವೆ ಎನ್ನುವುದು ಒಂದು ಸಾಮಾಜಿಕ ಒಪ್ಪಂದ. ಒಪ್ಪಂದ ಮಾಡಿಕೊಳ್ಳುವಾಗ ವಧುವಿನ ಸಮ್ಮತಿ ಅತ್ಯಗತ್ಯ. ಆದರೆ ಸಾಮಾಜಿಕ ಒಪ್ಪಂದವನ್ನು ಅರ್ಥ ಮಾಡಿಕೊಂಡು ಮದುವೆಗೆ ಅನುಮತಿ ಕೊಡಲು ಒಂದು ಹೆಣ್ಣುಮಗುವಿಗೆ ಹೇಗೆ ಸಾಧ್ಯ? ಎಂದರೆ ಇಸ್ಲಾಮಿನಲ್ಲಿ ಬಾಲ್ಯವಿವಾಹ ಮಾಡುವ ಹಾಗೆಯೇ ಇಲ್ಲ. ಆದರೂ ಬಾಲ್ಯವಿವಾಹ ನಡೆಯುತ್ತಿದೆ. ಇಸ್ಲಾಂ ಹುಟ್ಟಿದ ಸಮಯದಲ್ಲಿ ಯುದ್ಧ, ಜಗಳ, ದಂಗೆಗಳು ನಡೆದು ಬಹುತೇಕ ಗಂಡಸರು ಹತರಾಗುತ್ತಿದ್ದರು. ಹೆಣ್ಣುಗಳು ಹೆಚ್ಚುವರಿಯಾಗಿದ್ದರು. ಆ ಕಾರಣದಿಂದ ಬಹುಪತ್ನಿತ್ವವನ್ನು ಮಾನ್ಯ ಮಾಡಿದ್ದರು. ಆದರೆ ಪ್ರೋತ್ಸಾಹಿಸಲಿಲ್ಲ. ಒಂದಕ್ಕಿಂತ ಹೆಚ್ಚು ಮಹಿಳೆಯರು ಪತ್ನಿಯರಾದರೆ ಅವರಿಗೆ ಎಲ್ಲವನ್ನು ಸಮಾನವಾಗಿ ಹಂಚಬೇಕು; ಐಹಿಕ ಸಂಪತ್ತುಗಳನ್ನು ಸಮಾನವಾಗಿ ಹಂಚಿದಂತೆ ಪ್ರೀತಿಯನ್ನು, ಕಾಳಜಿ ಗೌರವಗಳನ್ನು ಹಂಚುವುದು ಕಷ್ಟವೆಂದು ಪ್ರವಾದಿಯವರೇ ಹೇಳಿದ್ದಾರೆ. ಈಗವರಿದ್ದಿದ್ದರೆ ಏಕಪತ್ನಿ ವಿವಾಹವನ್ನೇ ಕಡ್ಡಾಯಗೊಳಿಸುತ್ತಿದ್ದರು. ಆದರೆ ನಮ್ಮ ಪುರುಷರು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆಗಳನ್ನು ತಿರುಚಿದರು. ಈಗಲೂ ಬಹುಪತ್ನಿತ್ವ ಚಾಲ್ತಿಯಲ್ಲಿದೆ.

ಈಗ ಕಂಡುಬರುತ್ತಿರುವ ‘ವಹಾಬಿ ಶುದ್ಧ ಇಸ್ಲಾಮಿನ ವರಸೆಯಲ್ಲಿ ‘ಇದಿಲ್ಲ, ಅದಿಲ್ಲ, ಹೀಗಿಲ್ಲ, ಹಾಗಿಲ್ಲ, ಹೀಗೆ ಮಾಡಬೇಡ, ಹಾಗೆ ಇರಬೇಡ ಎಂಬ ನೋನೋಗಳೇ ತುಂಬಿಹೋಗಿವೆ. ತೈಲದೇಶಗಳ ಡ್ರೆಸ್‌ಕೋಡ್ ಸೇರಿದಂತೆ ಎಲ್ಲವನ್ನೂ ಹೇರುತ್ತಿದ್ದಾರೆ. ಎಂತಹ ಬಟ್ಟೆ, ಎಲ್ಲಿ, ಯಾವಾಗ ಧರಿಸಬೇಕು? ಕೂದಲು ಹೇಗೆ ಬಿಡಬೇಕು? ದೇಹ ಹೇಗೆ ಮುಚ್ಚಬೇಕು? ಮುಂತಾದ ಅಮುಖ್ಯ ವಿಷಯಗಳ ಬಗೆಗೆ, ಸಂಕೇತಗಳ ಬಗೆಗೆ ಎಂದೂ ಬದಲಾಗದ ಕಠೋರ ನಿಯಮಗಳ ರೂಪಿಸಿ, ವ್ಯಕ್ತಿತ್ವ ತಂತಾನೇ ಸಹಜವಾಗಿ ಅರಳುವ ಅವಕಾಶವನ್ನೇ ಕೊಡದೆ ಧರ್ಮಕ್ಕೆ ಅಪಚಾರ ಎಸಗುತ್ತಿದ್ದಾರೆ. ಇಸ್ಲಾಂ ವ್ಯಕ್ತಿತ್ವ ಅರಳಬೇಕು (ಇವಾಲ್ವ್ ಆಗಬೇಕು) ಎನ್ನುವ ಧರ್ಮ. ಕರುಣೆ, ಅನುಭೂತಿ, ನ್ಯಾಯ, ವಿವೇಕಗಳು ಇಸ್ಲಾಮಿನ ತಳಹದಿಗಳು. ಎಂದರೆ ಕಾಲಕ್ಕೆ ತಕ್ಕಂತೆ ಮಹಿಳೆಯರಿಗೂ ಪುರುಷರಿಗಿರುವ ಎಲ್ಲ ಹಕ್ಕುಗಳನ್ನು ಕೊಡಬೇಕಿತ್ತು. ಮಹಿಳೆಯರಿಗೆ ಅಲ್ಲಾ ಕೊಟ್ಟದ್ದನ್ನು ಪುರುಷರು ಕಿತ್ತುಕೊಂಡರು. ಮಹಿಳೆಯರಿಗೆ ಹಕ್ಕುಗಳ ಅರಿವೇ ಇಲ್ಲದಂತೆ ಮಾಡಿದರು. ಸಮುದಾಯದ ಪುರುಷರು, ಧಾರ್ಮಿಕ ಮುಖಂಡರು ಕುರಾನಿನಲ್ಲಿ ಹೇಳಿದಂತೆ ನಡೆಯದೆ ಅಪ್ರಾಮಾಣಿಕತೆ ತೋರಿಸಿದರು. ಅದಕ್ಕಾಗಿ ಇವರು ಕಿತ್ತುಕೊಂಡದ್ದನ್ನು ಅವರ ವಿರೋಧಿಗಳೇ ಬಾಣ ಮಾಡಿ ಎಸೆಯುವಂತಾಗಿದೆ. ಇದೊಂದು ಅಬರೆಷನ್ ಹೌದು, ಆದರೆ ಬದಲಾವಣೆ ಸ್ವಾಗತಾರ್ಹವಾದುದೆನ್ನದೇ ವಿಧಿಯಿಲ್ಲ. ದುರಾದೃಷ್ಟವೆಂದರೆ ನಮ್ಮ ಹೋರಾಟದಲ್ಲಿ ಕಾಂಗ್ರೆಸ್‌ನಂತಹ ಸೆಕ್ಯುಲರ್ ಪಕ್ಷಗಳು ಮೌನವಾಗುಳಿದವು. ಆ ಮೌನವು ಸುಧಾರಣೆಯ ಎಲ್ಲ ಯಶಸ್ಸನ್ನು ಬಿಜೆಪಿ ತೆಗೆದುಕೊಳ್ಳುವಂತೆ ಮಾಡಿತು. ನಾವು ಸದಾ ವಿರೋಧಿಸುತ್ತ ಬಂದ, ದಾರುಣ ಸ್ಥಿತಿಗೆ ನಮ್ಮನ್ನು ದೂಡಿದ ಪಕ್ಷ ನಮ್ಮ ದಾರಿಯನ್ನು ಸುಗಮಗೊಳಿಸಿರುವುದು ವಿಪರ್ಯಾಸವಾದರೂ ಸತ್ಯವಾಗಿದೆ.

ನಿಮ್ಮ ಅಭಿಪ್ರಾಯ ಸೆಕ್ಯುಲರ್, ಡೆಮಾಕ್ರೆಟಿಕ್ ಭಾರತದಲ್ಲಿ ಇಸ್ಲಾಂ ಧರ್ಮಕ್ಕೆ ಸುಧಾರಣೆಯ ಅವಕಾಶಗಳು ಹೆಚ್ಚು ಇವೆಯೆಂದೇ?

ಹೌದು. ಬಹುಧರ್ಮಗಳ ಸೆಕ್ಯುಲರ್ ಪ್ರಜಾಪ್ರಭುತ್ವವಿರುವ ಭಾರತದಲ್ಲಿ ನ್ಯಾಯಯುತ ಧಾರ್ಮಿಕ ಸಮಾಜ ಹೇಗಿರಬಹುದೆಂಬ ಮಾದರಿಯಾಗಿ ಇಸ್ಲಾಮನ್ನು ರೂಪಿಸುವ ಎಲ್ಲ ಅವಕಾಶಗಳಿದ್ದವು. ಹಾಗೆ ಮಾಡಲಿಲ್ಲ.

ಇಸ್ಲಾಂ ಮಹಿಳೆಯರಿಗೆ ನ್ಯಾಯ, ಸಮಾನತೆ ಕೊಟ್ಟಿರುವ ಧರ್ಮ. ಆದರೆ ಮುಸ್ಲಿಂ ಮಹಿಳೆ ಸದಾ ಒಬ್ಬರಲ್ಲ ಒಬ್ಬ ಪುರುಷನಿಗೆ ಅಧೀನಳಾಗಿಯೇ ಇರಬೇಕಾಗಿದೆ. ಮುಸ್ಲಿಂ ವೈಯಕ್ತಿಕ ಕಾನೂನುಗಳು ಕಾಲಕ್ಕೆ ತಕ್ಕಂತೆ ಸುಧಾರಣೆಗೊಳ್ಳದೇ ಮುಸ್ಲಿಂ ಮಹಿಳೆ ಹೆಚ್ಚು ತಾರತಮ್ಯ ಎದುರಿಸುವಂತಾಗಿದೆ. ಹಿಂದೂ, ಸಿಖ್, ಕ್ರೈಸ್ತ ಮಹಿಳೆಯರು ಭಾರತ ಸಂವಿಧಾನದ ಪ್ರಕಾರ ಮದುವೆ, ವಿಚ್ಛೇದನೆ, ಆಸ್ತಿ ಹಕ್ಕು, ಪೋಷಕತ್ವ, ಪಾಲಕತನದ ಹಕ್ಕುಗಳನ್ನು ಪಡೆದಿದ್ದಾರೆ. ಆದರೆ ಮುಸ್ಲಿಂ ಮಹಿಳೆಯರಿಗೆ ಸುಧಾರಿತ ಕಾನೂನು ಸವಲತ್ತು ಸಿಗಲಿಲ್ಲ. ಭಾರತ ವಿಭಜನೆ ಮತ್ತು ಸ್ವಾತಂತ್ರ್ಯದ ಬಳಿಕ ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನು ಸರಿಪಡಿಸುವ ಪ್ರಯತ್ನಗಳಿಗೆ ಒಂದು ಹಿಂಜರಿಕೆ ಅಥವಾ ಅದಕ್ಕೆ ‘ಧಾರ್ಮಿಕ ಭಾವನೆ, ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಎಂಬ ನೆಪ ಸಿಕ್ಕಿಬಿಟ್ಟಿತು. ಸುಧಾರಣೆಯ ಮಾತು ಬಂದದ್ದೇ ಧಾರ್ಮಿಕ ನಾಯಕರು ತಮ್ಮ ಧಾರ್ಮಿಕ ನಂಬಿಕೆಯೊಳಗೆ ಕೈಹಾಕಬೇಡಿ ಎಂದು ಕೂಗೆಬ್ಬಿಸಿದರು. ಈಗ ಹಿಂದೂ ಬಹುಸಂಖ್ಯಾತ ರಾಷ್ಟ್ರೀಯತೆಯ ಮಾತು ಮೇಲೆ ಬಂದಿರುವಾಗ ಮುಸ್ಲಿಂ ಸಮುದಾಯ ಅಂಚಿಗೆ ದೂಡಲ್ಪಟ್ಟಿರುವಾಗ ಮುಸ್ಲಿಂ ಮಹಿಳೆ ಎಲ್ಲ ದಿಕ್ಕಿನಿಂದಲೂ ಒತ್ತಡ ಎದುರಿಸುವಂತಾಗಿದೆ. ಪಿತೃಪ್ರಾಧಾನ್ಯ ಮತ್ತು ರಾಜಕಾರಣಗಳು ಮುಸ್ಲಿಂ ಮಹಿಳೆಯರಿಗೆ ಧರ್ಮದ ಒಳಗೂ, ಹೊರಗೂ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲಾಗದಂತೆ ಮಾಡಿವೆ.

ಭಾರತದ ಅರ್ಧಭಾಗ ಜನಸಂಖ್ಯೆ ಮಹಿಳೆಯರಿದ್ದೇವೆ. ಆದರೆ ಒಡೆದುಹೋಗಿದ್ದೇವೆ. ನಮ್ಮ ರಾಜಕಾರಣಿಗಳು, ಪುರೋಹಿತಶಾಹಿ-ಅಧಿಕಾರಶಾಹಿಗಳಲ್ಲಿ ಪುರುಷ ಪ್ರಾಧಾನ್ಯ, ಸಾಂಪ್ರದಾಯಿಕತೆ, ಸ್ತ್ರೀದ್ವೇಷ ತುಂಬಿಹೋಗಿದೆ. ಇಂಥ ಕಾಲದಲ್ಲಿ ಮಹಿಳೆಯರು ಸಂವಿಧಾನವನ್ನು ಎದೆಗೊತ್ತಿ ಹಿಡಿಯಬೇಕು. ಅದನ್ನು ರಕ್ಷಿಸುತ್ತ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು.

ಸಮುದಾಯ ಎದುರಿಸುವ ಬಿಕ್ಕಟ್ಟುಗಳಿಗೆ ಹೊರದಾರಿಗಳೇನು?

ಹೆಣ್ಣುಮಕ್ಕಳ ಭವಿಷ್ಯ ನೆನೆದರೆ ಒಮ್ಮೊಮ್ಮೆ ಭಯವೆನಿಸುತ್ತದೆ. ಆದರೆ ಈ ತಲೆಮಾರೇ ಹೊರಬರುವ ದಾರಿ ಕಂಡುಕೊಳ್ಳಬೇಕು. ನನಗನಿಸುವ ಮಟ್ಟಿಗೆ ಯುವಜನರು ಬದಲಾವಣೆಗೆ ತೆರೆದುಕೊಳ್ಳುತ್ತಿದ್ದಾರೆ. ಬದಲಾವಣೆಗೆ ಸಿದ್ಧವಾಗಿದ್ದಾರೆ. ಅವರ ಮೇಲೆ ಹಿಡಿತ ಹೊಂದಿರುವ ಸಾಂಪ್ರದಾಯಿಕ ಹಳೆಯ ತಲೆಮಾರು ಬದಲಾವಣೆಯ ಅವಕಾಶ ಕೊಡುತ್ತಿಲ್ಲ. ಯುವಜನರ ನಡುವೆ ಒಂದು ನಾಯಕತ್ವ ಮೂಡಬೇಕು. ಸ್ವಾರ್ಥವಿಲ್ಲದ ಸೆಕ್ಯುಲರ್ ವ್ಯಕ್ತಿಗಳಿಗೆ ರಾಜಕೀಯ ನಾಯಕತ್ವ ದೊರೆಯಬೇಕು. ಆಗ ಜಡಗೊಂಡಿರುವವೆಲ್ಲ ಬದಲಾವಣೆ ಆಗಿಯೇ ಆಗುತ್ತವೆ. ಅದನ್ನು ನಮಗೇ ಮಾಡಲು ಆಗುತ್ತದೆಂದಲ್ಲ. ನಾವಿಷ್ಟು ಮಾಡಿದೆವು. ಮುಂದೆ ಯಾರೋ ಬರುತ್ತಾರೆ, ಮತ್ತೆರೆಡು ಹೆಜ್ಜೆ ಮುಂದೊಯ್ಯುತ್ತಾರೆ. ಅದು ಆಗೇ ಆಗುತ್ತದೆ. ನಾಗರಿಕ ಹಕ್ಕು ಹೋರಾಟಗಾರರು, ಸ್ತ್ರೀವಾದಿಗಳು, ಕಲಾವಿದರು, ಮಾಧ್ಯಮ, ಅಧಿಕಾರಿವರ್ಗ ಎಲ್ಲರೂ ಸೇರಿ ಕೆಲಸ ಮಾಡಬೇಕಿದೆ.

ಸಂದರ್ಶನ ಮತ್ತು ಅನುವಾದ: ಡಾ. ಎಚ್. ಎಸ್. ಅನುಪಮಾ


 

Tuesday, 11 February 2025

ನಾಗರಾಜ ನೂರಿಯಾದ ವೃತ್ತಾಂತವು (ಕಥೆ)

 


ಅರಬ್ಬಿ ಸಮುದ್ರ ದಂಡೆಯ ಅಪಾರ್ಟ್‌ಮೆಂಟಿನಲ್ಲಿ ನೂರಿಯ ಪುಟ್ಟ ಚೆಲುವಾದ ಮನೆ. ಒಪ್ಪವಾಗಿ, ಓರಣವಾಗಿ ಇಟ್ಟುಕೊಂಡ ಮನೆ. ಮನೆಯಿಡೀ ಬಣ್ಣಬಣ್ಣದ ವಸ್ತುಗಳು. ತಟ್ಟೆ, ಲೋಟ, ಪರದೆ, ಹೂಜಿ, ಟವೆಲ್ಲು, ಗಾಜು, ಹೂದಾನಿ, ಗೋಡೆ ಎಲ್ಲವೂ ಢಾಳಾದ ಬಣ್ಣ ಬಳಿದುಕೊಂಡು ಕಣ್ಣಿಗೆ ಹೊಡೆಯುತ್ತಿದ್ದವು. ಅಡುಗೆಮನೆಗೆ ಹೊಂದಿಕೊಂಡಂತಿದ್ದ, ಕಡಲು ಕಾಣುತ್ತಿದ್ದ ಬಾಲ್ಕನಿಯಲ್ಲಿ ಕೂತು ಮಗಳಿಗಾಗಿ ಕೊಂಡಿದ್ದ ‘ಎಲ್ಮರ್ ದಿ ಎಲಿಫೆಂಟ್’ ಕಾಮಿಕ್ ಪುಸ್ತಕವನ್ನು ತಿರುವಿ ಹಾಕುತ್ತಿದ್ದೆ. ತನ್ನ ಭಿನ್ನವರ್ಣದ ಕಾರಣದಿಂದ ಗುಂಪಿನಿಂದೆಲ್ಲಿ ದೂರವಾದೇನೋ ಎಂದು ಆತಂಕಗೊಂಡು ಉಳಿದವರ ಬಣ್ಣವನ್ನೇ ತಾನೂ ಹಚ್ಚಿಕೊಂಡು ಕಷ್ಟಪಟ್ಟ ಆನೆಯ ಕತೆ ಅದು. 

ಕಡಲಲ್ಲಿ ಮುಳುಗಿದ ಸೂರ್ಯಚೆಂಡು ಉಪ್ಪುನೀರು ಕುದಿಸಿ ಬಿಸಿ ಗಾಳಿ ಎರಚುತ್ತಿತ್ತು. ಬೇಗಬೇಗ ಊಟ ಮುಗಿಸಿ ಸಮುದ್ರ ಕಾಣುತ್ತ ಬಾಲ್ಕನಿಯಲ್ಲಿ ಕೂತು ಹಾಡುವ, ಹರಟುವ ಪ್ಲಾನ್ ಮಾಡಿಕೊಂಡಿದ್ದೆವು. ‘ಕಿಕ್ ಆಗುವಂತದು ಏನೂ ಅಲ್ಲ, ಸೆಕೆ ದಿನ್ಕೆ ಚೆನಾಗಾಗುತ್ತೆ’ ಎಂದು ತರತರಹದ ಹಣ್ಣುಗಳಿಂದ ತಾನೇ ತಯಾರಿಸಿದ ವೈನಿನ ಬಾಟಲಿಗಳನ್ನು ನೂರಿ ಊಟದ ಟೇಬಲಿನ ಮೇಲೆ ಸಾಲಾಗಿ ಜೋಡಿಸಿದ್ದಳು. ಒಂದು ಚಿತ್ರಾನ್ನ ಮಾಡ್ಕಳ್ಳುವ, ಸಾಕು ಎಂದರೂ ಕೇಳದೆ ನನ್ನನ್ನು ಸುಮ್ಮನೆ ಕೂರಲು ಹೇಳಿ, ಬಗೆಬಗೆಯ ಅಡುಗೆ ತಯಾರಿಯಲ್ಲಿ ತೊಡಗಿದ್ದಳು. ‘ಈ ಮುಂಡೇರದ್ದು ಏನ್ಗೊತ್ತ ಅಕ್ಕ. ಹೆಂಗ್ಸಿನಂಗೆ ತೋರುಸ್ಕಬೇಕು, ಹೆಂಗ್ಸು ಅಂತ ಅನುಸ್ಕಬೇಕು ಅಂತ ನೀವೇನೇನ್ ಮಾಡ್ತೀರೋ ಅದ್ನೆಲ್ಲ ಮಾಡಕ್ಕೆ ಒದ್ದಾಡ್ತಿರ‍್ತಿವಿ’ ಎನ್ನುತ್ತ, ಮಾತಾಡುತ್ತ ಆಡುತ್ತ ಕುಕರ್ ಏರಿಸಿದಳು. ಹೆಚ್ಚಿದಳು, ಹುರಿದಳು, ಕಾಸಿದಳು, ಬೇಯಿಸಿದಳು. ಅಡುಗೆ ಮುಗಿಸಿ ಚೊಂಬು, ಚಮಚ, ತಟ್ಟೆ, ಇಕ್ಕಳಗಳನ್ನೆಲ್ಲ ತಿಕ್ಕಿ ತೊಳೆದು, ಅಡುಗೆ ಕಟ್ಟೆ ಒರೆಸಿಟ್ಟಳು.

ಅವಳ ಪದ್ಯಗಳ ಕಟ್ಟು ಹಿಡಿದು ನಾನು ‘ಪದ್ಯಪಾನ’ದಲ್ಲಿ ತೊಡಗಿದ್ದರೆ, ಅವಳು ಕೇಳಿಸಿಕೊಳ್ಳುತ್ತ ವೈನುಪಾನದಲ್ಲಿ ತೊಡಗಿದ್ದಳು. ‘ಮದುವೆ, ದಾಂಪತ್ಯ, ತಾಯ್ತನದಂತಹ ಚೌಕಟ್ಟೆಲ್ಲ ಸಾಕಾಗಿದೆ. ಜೆಂಡರ್‌ಲೆಸ್ ಆಗಿ ಬದುಕೋದ್ನ ಟ್ರಾನ್ಸ್‌ಜೆಂಡರ‍್ಸ್ ನೋಡಿ ಕಲಿಬೇಕು ಅಂತ ನಾವಂದುಕೊಳ್ತೀವಿ. ನೀವು ನೋಡಿದ್ರೆ ಪಕ್ಕಾ ಹೆಣ್ಣು ಅನುಸ್ಕಬೇಕಂತ ಅದೇ ಚೌಕಟ್ಟಿನೊಳಗೆ ತುರುಕ್ಕತೀರಲ್ಲೇ?’ ಕಿಚಾಯಿಸಿದೆ.

‘ನಿಮ್ಗೆ ಚೌಕಟ್ಟು ಇದೆ, ಬೇಡ ಅಂತಿರ. ನಮ್ಗೆ ಏನೂ ಇಲ್ಲಲ, ಅದ್ಕೇ ನಾವು ತುರುಕ್ಕತೀವಿ, ತುರುಕುಸ್ಕಂತೀವಿ..’ ಕಣ್ಣು ಹೊಡೆದು ಗಟ್ಟಿಯಾಗೊಮ್ಮೆ ನಕ್ಕಳು. ಎದುರಾಎದುರು ಕೂತು ಮಾತಾಡುತ್ತ ಉಂಡೆವು. ಪದ್ಯ ಓದಿದೆವು. ನಗುವ ಬೆಳದಿಂಗಳ ಸಾಕ್ಷಿಯಾಗಿ, ಭೋರ್ಗರೆವ ಸಮುದ್ರ ಸಾಕ್ಷಿಯಾಗಿ, ನೊರೆಯಲೆಗಳ ಸಾಕ್ಷಿಯಾಗಿ ಆರಡಿ ಎತ್ತರದ ಬಲಿಷ್ಟ ದೇಹದ ನೂರಿ ತನ್ನ ಎದೆನದಿಯ ಹರಿಯಬಿಟ್ಟಳು. ಹುಟ್ಟುವಾಗ ನಾಗರಾಜ ಎಂಬ ಹುಡುಗನಾಗಿದ್ದವ ನೂರಿಯೆಂಬ ಹುಡುಗಿಯಾದ ವೃತ್ತಾಂತ ಅಡೆತಡೆಯಿಲ್ಲದೇ ಹರಿಯಿತು.. 

ನೀವದನ್ನು ಅವಳ ಬಾಯಲ್ಲೇ ಕೇಳಬೇಕು.. 




ಉಳಪಳ, ಗಿಡಮರ, ಮನುಶ್ರು, ಪಶುಪಕ್ಷಿ ಪ್ರಾಣಿಗಳಂಗೆ ನಾನೂ ಒಂದಿನ ಉಟ್ದೆ ಕನಕ್ಕ. ಮದ್ಲೆಲ್ಲ ಉಳದೋರ‍್ಗೆ ಗೊತ್ತಾಗೂ ಹಂಗೆ ಏನೂ ಐಬಿರ‍್ಲಿಲ್ಲ. ನಂಗೂ ನಂಗೇನ್ ಕಮ್ಮಿ ಅಂತ ಗೊತ್ತಾಗ್ತ ಇರ್ಲಿಲ್ಲ. ಮಕ್ಳಿಗೆ ತಾವ್ ಗಂಡುಎಣ್ಣು ಅಂತ ಏನು ಬಾವ್ನೆ ಇರುತ್ತೇಳು? ಎಲ್ಲ ಒಂದೇ ತರ‍್ಕೆ ಇರ‍್ತವೆ, ಒಂದೇ ತರ‍್ಕೆ ಆಡ್ತವೆ. ಆಮೇಲೇ, ಹತ್ತನ್ನೇಡು ವರ್ಷಾಗಿ ದೊಡ್ಡ ಆಗ್ತಾಗ್ತ ಶುರ‍್ವಾಯ್ತ್ ನೋಡು. ನಾನು ವಿಚಿತ್ರವಾಗಿ ಆಡ್ತಿನಿ ಅಂತ ಅವ್ರು ಅನ್ನರು. ಏನುಎತ್ತ ಅನ್ನದ್ ತಿಳಿದೆ ನಾನೂ ಎಂಗೆಂಗೋ ಆಡುವೆ. ಇಂಗಿರ‍್ತ, ಒಂದಿನ ನಂ ದೊಡಪ್ಪ ನನ್ ಲಿಂಗ ಪರೀಕ್ಷೆ ಮಾಡನ ಅಂತ ಎಲ್ಲರೆದ್ರು ಚಡ್ಡಿ ಬಿಚ್ಬಿಟ್ಟ. ಎಲ್ಲ ಬಿದ್‌ಬಿದ್ ನಗ್ತಿದಾರೆ, ನಾನು ಅಳ್ತಾ ಕೈಮುಗಿತಾ ನಿಂತಿದೀನಿ. ಅಬ್ಬಾ, ನಂಗೆ ಎಂಗಾಯ್ತು ಅಂದ್ರೆ ಅವುನ್ನ ಸುಟ್ ಬೂದಿ ಮಾಡಿ ಅಲ್ಲೆ ಮಾಯ ಆಗ್ಬಿಡ್ಬೇಕು ಅನಿಸ್ತು. ಕೂಗಿ ಕಿರುಚಿ ಪರಚಿ ಅವ್ನ ಪಂಚೇನ ಎಳ್ದಾಕ್ಬುಟ್ಟೆ. 

ಅಷ್ಟೆ. ಉದುರಿಬಿದ್ದ ಅವನ ಪಂಚೆ ನಂಗೆ ಸತ್ಯದರ್ಶನ ಮಾಡಿಸ್ತು. ಐವತ್ತಕ್ಕಿಂತ ಹೆಚ್ಚು ವರ್ಷ ವಯಸ್ಸಾದ ಅವ್ನಿಗೆ ಅದೇಷ್ಟ್ ದೊಡ್ಡ ಸಾಮಾನಿತ್ತು ಅಂತಿಯ ಅಕ್ಕಾ!? ಅಬ್ಬಾ, ಇವತ್ಗು ಅವ್ನ ಲಿಂಗನ ನೆನುಸ್ಕಂಡ್ರೆ ಮೈಮೇಲೆ ಮುಳ್ಳು ಏಳ್ತವೆ. ಅವತ್ತೇ ನಂಗೇನಿದೆ, ಏನಿಲ್ಲ ಅಂತ ಅರ್ಥಾಗೋಯ್ತು. ನಾನು ದೊಡ್ಡಪ್ಪನಂತ ಗಂಡು ಅಲ್ವೇ ಅಲ್ಲ, ಆದ್ರೆ ಹೆಣ್ಣು ಅಂತ ಇವ್ರಿಗೆ ಗೊತ್ತಿಲ್ಲ. ಹುಡ್ಗಿಯಾಗಿ ಬಂದು ಇವರೆಲ್ರಿಗು ತೋರುಸ್ತಿನಿ ಅಂತ ನಿಚ್ಚಯಿಸಿ ಅವತ್ತೇ ಮನೆ ಬಿಟ್ಟೆ.

ಮನೆ ಏನೋ ಬಿಟ್ಟೆ. ಹೊಟ್ಟೆ ಅಂತೊಂದಿದೆಯಲ್ಲ? ಹಸಿವು ತಡಿಲಾರ‍್ದೆ ಒಂದ್ ಹೋಟ್ಲಲ್ಲಿ ಕದ್ದೆ. ಅವ್ರು ಪಾತ್ರೆ ತಿಕ್ಕ ಕೆಲ್ಸಕ್ ಹಾಕ್ಕಂಡ್ರು. ಯಾವಾಗ ಹೋಟ್ಲು ಹುಡುಗ್ರೆಲ್ಲ ಚಡ್ಡಿ ಬಿಚ್ಸಿ ಸವಾರಿ ಮಾಡುದ್ರೊ, ಜಾಗ ಖಾಲಿ ಮಾಡ್ದೆ. ಏನೇನೋ ಕೆಲ್ಸ ಮಾಡ್ದೆ. ನಾನು ಹೆಣ್ಣೋ, ಗಂಡೋ ಏನು ಅಂತ ನಂಗೇ ಗೊತ್ತಿಲ್ಲ ಅಂದ್ರೆ ಸಮಾಜ, ‘ಅದ್ಕೆ ನಾವ್ ಹೇಳದು, ನೀನು ಸರಿ ಇಲ್ಲ’ ಅಂತ ಹೇಳ್ತು. ಆ ಸಮಾಜನೇ ನಿನ್ನಂಗಿರೋರು ಆ ಊರಲ್ಲಿ ಅವ್ರಿದ್ದಾರೆ, ಈ ಊರಲ್ಲಿ ಇಂಥೋರು ಇದಾರೆ ನೋಡು ಅಂತ ತೋರಿಸ್ತು. ಹಿಂಗೆ ನಂಗೊತ್ತಿಲ್ಲದಂಗೆ ನನ್ನಂಗೆ ಇರೋರ ಪರಿಚಯ ಆಗ್ತಾ ಹೋಯ್ತು. ನಮ್ಮೋರ ಗುಂಪು ಸಿಕ್ತು. ಆದ್ರೆ, ‘ನೀನಿನ್ನೂ ಸಣ್ಣೋನು, ಸೊಲ್ಪ ದಿನ ಬಿಟ್ಬಾ, ನಾವಿಂತಲ್ಲಿ ಇರ‍್ತಿವಿ’ ಅಂತೇಳಿ ಅವರು ಬಿಟ್ಟು ಹೋದ್ರು. ವಾಪ್ಸು ಮನೆಗೋದೆ. 

ಮತ್ತೆ ಅದೆ ರಾಮಾಯ್ಣ. ಮನೆಬಿಟ್ ಓಡೋದೆ. 

ಗುರುನ ಹುಡಿಕ್ಕಂಡೋದೆ. ಅಲ್ಲಿ ನಂ ಗುರು ಜೊತೆ ಇದ್ದೋರೆಲ್ಲ ಹೆಚ್ಚಾಗಿ ಬಡವ್ರು, ನನ್ನಂಗೇ ತಳ ಜಾತಿಯೋರೇ ಆಗಿದ್ರು. ಮೇಲ್ಜಾತ್ಯೋರು ಮತ್ತು ಶ್ರೀಮಂತ್ರು ಓದ್ತಾರೆ, ದುಡಿತಾರೆ, ಇಂಗ್ಲಿಷ್ ಮಾತಾಡ್ತ ಚಿತ್ರವಿಚಿತ್ರ ಬಟ್ಟೆ ಹಾಕ್ತಂಡಿರ‍್ತಾರೆ. ನಮ್ಮಂಗೆ ನಿರ್ವಾಣನೂ ಆಗಲ್ಲ, ಸೀರೆನೂ ಉಡಲ್ಲ. ಮನೆ ಬಿಟ್ ಬರೋರು ಹೆಚ್ಚಿನಂಶ ಕೆಳ್ ಜಾತ್ಯೋರು, ಬಡುವ್ರೇ ಆಗಿರ‍್ತಾರಕ್ಕ. ಇರ್ಲಿ, ನಿರ್ವಾಣದ್ ವಿಷ್ಯ ಹೇಳ್ತಿದ್ದೆ. ಗುರು ಕೇಳುದ್ರು, ನಿರ್ವಾಣ ಮಾಡ್ಕಳ್ದಿರ ಏನು ಬೆಲೆಯಿಲ್ಲ, ಹೆಂಗ್ಸಾಗ್ತಿಯ ಅಂತ. ಹೆಂಗ್ಸಾಗದೇ ನನ್ನ ಗುರಿ, ಆಸೆ ಎಲ್ಲನು ಆಗಿತ್ತಲ್ವ? ಊಂ ಅಂದೆ. ಆದ್ರೆ ಭಯವಾಗ್ತಿತ್ತು. ನಿರ್ವಾಣ ಮಾಡ್ಕಳದ್ನ ಮುಂದೂಡ್ತ ಇದ್ದೆ. ನಿಮ್ಗೆ ಗೊತ್ತಿರಲ್ಲ ಅಂತ ಹೇಳ್ತಿದಿನಿ, ನಮ್ಮಲ್ಲಿ ಜಾತಿಗೀತಿಗಿಂತ್ಲು ನಿರ್ವಾಣ ಆದವರ‍್ಗೆ ಜಾಸ್ತಿ ಗೌರವ. ಒಂದ್ಸಲ ಏನಾಯ್ತು ಗೊತ್ತ? ಧರ್ಮಸ್ಥಳಕ್ಕೆ ನಾವೆಲ್ಲ ಬಸ್ಸಲ್ಲಿ ಹೋಗ್ತಿದ್ವಿ. ಉಚ್ಚೆಗಂತ ಬಸ್ ನಿಲಿಸ್ದ. ನನ್ ಫ್ರೆಂಡು, ‘ಕೆಳಗೆ ಕೂತು ಉಚ್ಚೆ ಮಾಡ್ಬೇಡ, ಲಿಂಗ ನೆಲಕ್ ತಾಗುತ್ತೆ’ ಅಂತಂದು ಕಿಸಕ್ ಅನ್ಬೇಕಾ? ಎಷ್ಟ್ ಅವಮಾನ ಆಯ್ತು ಅಂದ್ರೆ ಆಗ್ಲೆ ಎಳ್ದು ಕತ್ರುಸ್ಕಂಡ್ ಬಿಡ್ಲ ಅನಿಸ್ತು. ಕೊನ್ಗೆ ಭಯ ಬಿಟ್ಟು ಕೊಯ್ಸಿಕಂಡೆ. ತುಂಬ ನೋವು, ತುಂಬ ಹಿಂಸೆ. ಆದ್ರೆ ಏನ್ಮಾಡದು, ಒಂದು ಹೆಣ್ಣು ಅನುಸ್ಕಳೋ ಆಸೆಗೇ ಕೊಯ್ಸಿಕೊಂಡೆ. ರಕ್ತ ಹರೀತ್ತೆ, ಪ್ರಾಣನೂ ಹೋಗಬಹುದು ಅಂತ ಗೊತ್ತಿದ್ರೂ ಬ್ಯಾಡ್ದೆ ಇರೊ ಲಿಂಗಾನ, ಅರೆಬರೆ ಅಂಗಾನ ಕತ್ರುಸಿ ಹಾಕ್ಲೇಬೇಕೂಂತ ರೊಚ್ಚಿಗೆ ಕೊಯ್ಸಿಕೊಂಡೆ. ನನ್ನತ್ರ ದುಡ್ಡಿರ್ಲಿಲ್ಲ. ಆಸ್ಪತ್ರೆಗೆ ಹೋಗಲಿಲ್ಲ, ಗುರುನೇ ಕತ್ತರ‍್ಸಿದ್ರು..

ನೋವು, ಭಯ, ಅನಾಥ ಅನ್ಸೊ ಭಾವ.. ಅಬ್ಬಬ್ಬಾ.. ಅದು ತುಂಬ ಭಯಾನಕ ಕ್ಷಣ.

ಕೊಯ್ಯುವಾಗ ಮಾತಾಮಾತಾ ಅಂತಿರು ಅಂದ್ರು ನಮ್ಮೋರು. ಉಸುರು ಬಿಡದೆ ಮಾತಾಮಾತಾಮಾತಾ ಅಂತಿದ್ದೆ. ಬರ‍್ತಬರ‍್ತ ಕಣ್ಣು ಕಪ್ಪಾಗಿ ದನಿ ಸಣ್ಣ ಆಗಿ ಕಣ್ಣೆದುರು ಮಾತಾ ಕಂಡೇಬಿಟ್ಟಳು. ನಿಜ ಅಕ್ಕಾ. ನಾನೂ ಮೊದ್ಲು ನಂಬ್ತಿರ್ಲಿಲ್ಲ. ನಿರ್ವಾಣ ಆಪ್ರೇಷನ್ ಆಗುವಾಗ ಯುದ್ಧ ಮಾಡೋ ಮಾತಾ ಕಂಡೇಬಿಟ್ಳು. ಮಾತಾ ಕಾಣೋ ಆ ಮುಮೆಂಟ್ ಇದ್ಯಲ್ಲ, ಬಿಡ್ಬಾರ್ದು ಅದ್ನ, ಅದು ತುಂಬ ಮುಖ್ಯ ಅಂತ ಹೇಳಿದ್ರು. ಅದ್ನ ತಪ್ಪೋಗಕ್ಕೆ ಬಿಟ್ರೆ ಸತ್ತೋಗ್ತಾರೆ ಅಂದಿದ್ರು. ಆದ್ರೆ ನಂಗೆ ಮಾತಾ ಕಂಡೇಬಿಟ್ಟು ಸಮಾಧಾನ ಆಯ್ತು. ಇನ್ನು ನಾನು ಸಾಯಲ್ಲ ಅಂತ ಧೈರ್ಯ ಬಂತು. ಲಿಂಗ ಕತ್ತರ‍್ಸಿ ರಕ್ತ ಸುರೀತ ಇತ್ತು. ಆ ರಕ್ತನ ಮೈಗೆಲ್ಲ ಬಳಿದ್ರು. ಹಂಗ್ಮಾಡಿದ್ರೆ ಮತ್ತೆ ಗಂಡಸ್ರ ತರ ಕೂದ್ಲು ಹುಟ್ಟಲ್ಲ ಅಂತೆ. 

ಹಿಂಗೆ ನಾಗರಾಜ ನೂರಿ ಆದೆ. ನಮ್ಮೋರಲ್ಲಿ ಬಾಳ ಜನ ಮುಸ್ಲಿಂ ಹೆಸ್ರು ಇಟ್ಕತಾರೆ. ನಿಂಗೆ ಆಚ್ಚರ‍್ಯ ಆಗ್ಬೋದು, ನಮ್ಮಲ್ಲಿ ಮುಸಲಮಾನರಿಗೆ ಹೆಚ್ಚು ಗೌರವ. ಎಲ್ರು ರಂಜಾನ್ ಆಚರುಸ್ತಿವಿ. ಮತಾಂತರ ಆಗಿ ಗಂಡ್ಸಾಗಿ ಲುಂಗಿ ಪಂಚೆ ಉಟ್ಕಂಡು ಹಜ್‌ಗೆ ಹೋಗ್ತಿವಿ! ಬಾಂಬೇಲಿ ನಮ್ಮೋರು ಇರೋ ಕಡೆ ಒಳಗೋಗುವಾಗ ಟಿಕ್ಲಿ ಕಿತ್ತಾಕಿ ಹೋಗ್ತಿವಿ. 

ಎಷ್ಟೋ ವರ್ಷ ಕಳೀತು. ಅವ್ವನ ನೆನಪು, ಅವ್ಳ ಕೈ ಅಡ್ಗೆ ನೆನಪು ಬರ‍್ತನೇ ಇತ್ತು. ಆದ್ರೆ ಹೆಂಗೆ ಹೋಗ್ಲಿ ಅನ್ನೋ ಭಯ. ಕೊನೆಗೊಂದಿನ ಧೈರ್ಯ ಮಾಡಿ ಸೀರೆ ಉಟ್ಕಂಡು, ಹುವ್ವ ಮುಡ್ಕಂಡು ಮನೆಗೋದೆ. ನಮ್ಮವ್ವ ಗುರ‍್ತನೆ ಹಿಡಿಲಿಲ್ಲ. ‘ನಾನ್ ಕನವ್ವ ನಾಗ್ರಾಜ, ಈಗ ಚೇಂಜಾಗಿ ನೂರಿ ಆಗಿ ಬಂದಿನಿ ನೋಡು’ ಅನ್ನುತ್ಲೆ ತಲೆ ತಿರ‍್ಗಿ ಬಿದ್ಲು. ನಮ್ಮಯ್ಯ ಅಂತೂ ಬಲು ಎಗರಾಡಿದ. ಸಿಕ್‌ಸಿಕ್ ಬೈಗಳನೆಲ್ಲ ಬೈದ. ವದ್ದ, ಹೊಡ್ದ. ಚುಚ್ಚಿದ. ಅವ್ರ ದುಕ್ಕ ನಂಗೆ ಅರ್ಥ ಆಗತ್ತೆ ಅಕ್ಕ. ಆದ್ರೆ ನಾನೇನು ಮಾಡ್ಲಿ? ಕೊನ್ಗೆ ಅವ್ರಿಗೆ ಸೀರೆ ಎತ್ತಿ ತೋರ‍್ಸೆಬಿಟ್ಟೆ - ನೋಡಿ, ಗಂಡ್ಸು ಅನ್ನಂತದು ಈಗ ಏನು ಇಲ್ಲ ಅಂತ. ನನ್ ಹುಟ್ಸಿದ್ದು ಅವ್ರೆ ಅಲ್ವ? ನಂದು ಅಲ್ದೆ ಇರೊ ಲಿಂಗ ಅಂಟಿಸಿದ್ ಅವುರೇ ಅಲ್ವ? ನೋಡ್ಲಿ ಈಗೇನಾಗಿದೆ ಅಂತ ಸೀರೆ ಎತ್ತಿ ತೋರ‍್ಸಿದ್ದೆ. ಅಯ್ಯ ಮಕ ಕಿವಿಚಿ ಹೊಡೆಯಕ್ ಬಂದ ಗಳಿಗೆನ ಯಾವತ್ತೂ ಮರ‍್ಯಕ್ಕಾಗಲ್ಲ ಅಕ್ಕ. ಕನಸಲ್ಲೂ ಅದೇ ಮಕ ಬಂದು ಬೆಚ್ಚಿ ಬೀಳ್ತಿರ್ತೀನಿ..

ಅವ್ರೇನಾರಾ ಅಂದ್ಕಳ್ಳಿ, ಮನೆಲೇ ಇದ್ದೆ. ಮಾತೇ ಇಲ್ಲ ನನ್ಜೊತೆ. ಮನೆಯವ್ರ ಮರ‍್ಯಾದೆ ಕಳಿಬಾರ್ದು ಅಂತ ಬೆಳಿಗ್ಗೆ ಐದರ ವಳ್ಗೆ ಮನೆ ಬಿಡದು. ರಾತ್ರಿ ೧೦ರ ಮೇಲೇ ಬರದು. ಹಿಂಗೇ ನಡಿತು. ನಾ ಹೋದ್ರೆ ಅಯ್ಯ ಮನೆಗೇ ಬರ‍್ತಿರಲಿಲ್ಲ. ಮನೇಲಿ ಮಲಗ್ತಿರಲಿಲ್ಲ. ಎರಡೊರ್ಷ, ಮತ್ತೆ ಮನೆ ಬಿಟ್ಟೆ. ಆವಾಗೀವಾಗ ಹೋಗಿ ಕಾಸು ಕೊಟ್ಟು ನಮ್ಮವ್ವನ ಕೈ ಅಡ್ಗೆ ಉಂಡು ಬರ‍್ತಿದ್ದೆ. ಒಂದ್ಸಲ ಮನ್ಗೆ ಇಬ್ರು ಫ್ರೆಂಡ್ಸ್‌ನ ಕರ‍್ಕಂಡು ಹೋಗಿದ್ದೆ. ಅವ್ರುನ್ನೆಲ್ಲ ನೋಡಿದ್ದೇ ನಮ್ಮವ್ವ, ‘ಒಬ್ನೆ ಮಗ ಹುಟ್ಟಿದ್ದ. ಸೀರೆ ಉಟ್ಕಂಡು ಇಂಗಾದ. ನಮ್ ಮನೆ ದೀಪ ಆರ‍್ಸಿಬಿಟ್ರಿ ನೀವು’ ಅಂತ ಗೋಳಾಡಿದ್ಲು. ಅವ್ಳು ಗೋಳಾಡದು, ನನ್ ಫ್ರೆಂಡ್ಸ್ ಬಿದ್ದುಬಿದ್ದು ಪಕಪಕ ನಗೋದು. ಅದಾದ ಒಂದು ವಾರಕ್ಕೆ ತನ್ನ ಮನೆಯೋರ ಅವಮಾನ ತಡಿಲಾರ‍್ದೆ ನನ್ ಫ್ರೆಂಡು ಬಾವಿಗ್ ಬಿದ್ದು ಸತ್ತೋದ್ಲು. ಬೇಕೂಂತ ಅವ್ವನ ಕಿವಿಮೇಲೆ ಈ ವಿಷ್ಯ ಹಾಕ್ದೆ. ಮೊದ್ಲುಮೊದ್ಲು ‘ನೀ ಸತ್ರು ಬೇಜಾರಿಲ್ಲ, ನೆಗ್ದ್ ಬಿದ್ದೋಗು’ ಅಂತಿದ್ದೋಳು ಕೊನ್ಗೆ ನಿಜವಾಗೂ ಎಲ್ಲಿ ಸಾಯ್ತಿನೋಂತ ಸುಮ್ಗಾದ್ಲು.

ಆದ್ರು ಈಗ್ಲೂ ಅನ್ಸುತ್ತೆ. ಅವ್ರು ನನ್ ಒಪ್ಕಂಡ್ ಸುಮ್ನಿದಾರೊ? ಅತ್ವಾ ದುಡ್ದ್ ಕಾಸು ಕೊಡ್ತಿನಿ ಅಂತ ಸುಮ್ನಿದಾರೊ? ನಾನೇ ಒಂದ್ ಮನೆ ಕಟ್ಟುಸ್ಕೊಟ್ಟಿದಿನಿ. ಜಾತ್ರೆಗ್ ದುಡ್ಡೆಲ್ಲ ನಾನೇ ಕೊಟ್ಟಿರ‍್ತಿನಿ. ಆದ್ರು ನಮ್ಮವ್ವ, ‘ಆ ಎರ‍್ಡ್ ದಿವ್ಸ ಮನೆಗ್ ಬರ‍್ಬೇಡ, ನೆಂಟ್ರು ಇಸ್ಟ್ರು ಬತ್ತರೆ, ಅವರ ಎದ್ರು ಮರ‍್ವಾದೆ ಹೋಯ್ತದೆ, ಆಮೇಲ್ ಬಾ, ನಿಂಗಿಷ್ಟುದ್ ಎಲ್ಲ ಮಾಡಾಕ್ತಿನಿ’ ಅನ್ನುತ್ತೆ. ಕಳ್ತನ ಮಾಡಿ ಬಂದ ಮಕ್ಳನ್ನ, ಕೊಲೆ ರೇಪು ಮಾಡಿರೊ ಮಕ್ಳನ್ನ, ಹ್ಯಾಂಡಿಕ್ಯಾಪ್ ಮಕ್ಳನ್ನ ಅಪ್ಪ ಅಮ್ಮ ಒಪ್ಕಂತಾರೆ. ಆದ್ರೆ ನಮ್ಮುನ್ನ ಬಿಲ್ಕುಲ್ ಒಪ್ಪಲ್ಲ, ನಮ್ಮ ಮೊದ್ಲ ಶತ್ರುಗಳು ನಮ್ಮನೆ ಜನನೇ ಆಗಿರ‍್ತಾರೆ. ಈಗ ಸ್ವಲ್ಪ ಪರಿಸ್ತಿತಿ ಸುದಾರ‍್ಸಿದೆ. ಬಿಡಿಸಿ ನಾ ಎಲ್ಲ ಹೇಳಿದ್ಮೇಲೆ ನಂ ನೆಂಟ್ರಿಷ್ಟ್ರು ಕೆಲವ್ರು ಅರ್ಥ ಮಾಡ್ಕಂಡಿದಾರೆ. 

ಕಾಲ ಇಂಗೇ ಕಳಿತಾ ಇರುವಾಗ ಒಂದು ಸ್ವಯಂಸೇವಾ ಸಂಸ್ಥೆಯಿಂದ ನಿಜಕ್ಕೂ ಬಾಳಾ ಸಹಾಯ ಸಿಕ್ತು ಅಕ್ಕ. ಅವರು ಬಿಎ ಮಾಡ್ಸಿದ್ರು. ಕಂಪ್ಯೂಟರ್ ಕಲ್ಸಿದ್ರು. ಒಂದ್ ಆಫೀಸ್ನಲ್ಲಿ ಕೆಲ್ಸ ಕೊಡ್ಸಿದ್ರು. ಈಗಿರೋ ಮನೆ ಕೊಡ್ಸಿದ್ರು. ಸೆಕ್ಸ್‌ವರ್ಕ್ ಧಂಧೆ ಮಾಡೋರು ನನ್ನ ಸಂಬ್ಳದ ಹತ್ರಷ್ಟು ದುಡಿತಿರಬೋದು. ಆದ್ರೆ ಅದು ನಂಗೆ ಬ್ಯಾಡ. ನಂಗೆ ಘನತೆ, ಸ್ವಾತಂತ್ರ್ಯ, ಧೈರ್ಯದಿಂದ ಬದ್ಕೋ ಅವಕಾಶ ಸಿಕ್ಕು ನೆಮ್ಮದಿಯಾಗಿದೀನಿ..’



 

ನೂರಿಯ ಮಾತಿನ ನದಿ ಹರಿಯುತ್ತಲೇ ಇತ್ತು. ಟೇಬಲಿನೆದುರು ಇಟ್ಟದ್ದು ಯಾವಾಗಲೋ ಖಾಲಿಯಾಗಿತ್ತು. ಸೆಕೆಗೋ, ಉದ್ವೇಗಕ್ಕೋ ಅವಳ ವಿಶಾಲ ಹಣೆಮೇಲೆ ಮೂಡಿದ್ದ ಬೆವರ ಹನಿಗಳು ಒಂದರೊಡನೊಂದು ಸೇರಿ ಕೆಳಗೆ ಧುಮುಕುವ ಆಟದಲ್ಲಿ ತೊಡಗಿದ್ದವು. ತಾನೇ ಎಲ್ಲ ಪಾತ್ರೆ ತೊಳೆದು ಒರೆಸಿಟ್ಟಳು. 

ಈಗೇನೋ ನೂರಿಯಂತಹವರ ಗುಂಪುಗಳು, ಬೆಂಬಲಿಸುವ ಸಂಘ-ಸಂಸ್ಥೆ-ಕಾನೂನುಗಳು ರೂಪುಗೊಂಡಿವೆ. ಆದರೆ ಮೊದಲೆಲ್ಲ ಇವರು ಹೇಗಿದ್ದರೋ ಎಂದು ಆಶ್ಚರ‍್ಯಪಡುವಾಗ ಇದ್ದಕ್ಕಿದ್ದಂತೆ ನನ್ನ ಬಾಲ್ಯದ ನೆನಪು ಸುಳಿದು ಹೋಯಿತು..

ನಮ್ಮ ಹಳ್ಳಿಯಲ್ಲಿ ಜೋಗಪ್ಪಗಳಿದ್ದರು, ಅವರಿಗೆ ಗೌರವ ಇತ್ತು. ಫಕ್ಕನೆ ನೆನಪಿಗೆ ಬರುವುದು ತಿಮ್ಮಕ್ಕ ಯಾನೆ ತಿಮ್ಮಪ್ಪ. ಅವರನ್ನು ಅವಳು ಇವಳು ಅನ್ನುವುದಕ್ಕಿಂತ ಅದು-ಇದು ಅಂತಲೇ ಎಲ್ಲ ಕರೆಯುತ್ತಿದ್ದದ್ದು. ಪ್ರತಿ ಶನಿವಾರ ಸಂತೆಯಲ್ಲಿ ವಾಲೆ ಬೆಲ್ಲ, ರುದ್ರಾಕ್ಷಿ, ವಿಭೂತಿ, ಲೋಬಾನ, ಮಣಿಸರ ಹೀಗೇ ಏನೇನೋ ಯಾರೂ ಇಡದ ಸಾಮಾನು ಇಟ್ಟುಕೊಂಡು ಮಾರುತ್ತ ಕೂತಿರುತ್ತಿದ್ದರು. ಗಡ್ಡ ಮೀಸೆಯೂ ಇರುತ್ತಿತ್ತು, ಸೀರೆಯನ್ನೂ ಉಡುತ್ತಿದ್ದರು. ನಮ್ಮಮ್ಮ ಸಂತೆಪೇಟೆಗೆ ಸುತ್ತಾಡಲು ಹೋಗುವ ಮುನ್ನ ನನ್ನನ್ನು ಮತ್ತು ತಂಗಿಯನ್ನು ಅವರತ್ರ ಕೂರಿಸಿ, ‘ಇಲ್ಲೇ ಕೂತಿರಿ ಮಕ್ಳಾ, ಸಾಮಾನು ತಗಂಬರ‍್ತಿನಿ’ ಅಂತ ಹೇಳಿ ಚೀಲಗಳ ಹಿಡಿದು ಹೋಗುತ್ತಿದ್ದಳು. ಅಷ್ಟು ನಂಬಿಕೆ. ಅವರು ಕೊಡೊ ಬೆಲ್ಲದ ಚೂರು ತಿನ್ನುತ್ತಾ, ಮೀಸೆ ಮತ್ತು ಸೀರೆ ಎರಡೂ ಒಟ್ಟು ಹೇಗಿರಲು ಸಾಧ್ಯ ಅಂತ ಕಣ್ಣರಳಿಸಿ ನೋಡುತ್ತಿದ್ದಿದ್ದು ನೆನಪಾಯಿತು. ತನ್ನ ಅಪ್ಪನ ಮನೆ ಪಕ್ಕದಲ್ಲೇ ಇನ್ನೊಂದು ಸಣ್ಣ ಬಿಡಾರ ಹಾಕಿಕೊಂಡು ಇದ್ದರು. ಆವಾಗೀವಾಗ ನಮ್ಮನೆಗೆ ಬರುತ್ತಿದ್ದರು. ಅಮ್ಮನಿಗೆ ಆಪ್ತಬಂಧು ತರಹ. ಇಬ್ಬರೂ ಕಷ್ಟಸುಖ ಮಾತಾಡುತ್ತ ಎಷ್ಟೋ ಹೊತ್ತು ಕಳೆಯುತ್ತಿದ್ದರು. 

ಹಾಗಾದರೆ ಅದು ಯಾವಾಗ ಅವರ ಮೇಲಿನ ಗೌರವ ಹೋಗಿ ಹುಳಗಳ ಹಾಗೆ ನೋಡಲು ಸಮಾಜ ಶುರುಮಾಡಿತು? ನಾನು ಈ ಅಚ್ಚರಿಯಲ್ಲಿ ಮುಳುಗಿರುವಾಗ ನೂರಿ ಒಂದಷ್ಟು ಫೋಟೋಗಳ ಹಿಡಿದು ಬಂದಳು. ಅದರಲ್ಲಿ ನಾಗರಾಜ ಅವನ ಅಪ್ಪ ಅಮ್ಮನೊಡನೆ ನಿಂತಿದ್ದ. ತನ್ನವರೊಡನೆ ನಿಂತ ನೂರಿಯಿದ್ದಳು. ಅವಳ ಅರ್ಧದಷ್ಟಿದ್ದ ಸಣಕಲು ವ್ಯಕ್ತಿಯೊಡನೆ ಸರ್ವಾಲಂಕಾರ ಭೂಷಿತೆಯಾಗಿ ನಿಂತ ಫೋಟೋ ಗಮನ ಸೆಳೆಯಿತು. 




ಅಕ್ಕಾ, ಇವುನ್ಯಾರು ಗೊತ್ತ? ನನ್ ಕೊನೇ ಗಂಡ. ನಿಜಕ್ಕೂ. ನಾವ್ ನೋಡಕ್ಕೆ ಹೆಣ್ಣಿನಂಗಾರ ಕಾಣ್ಲಿ, ಗಂಡಿನ್ತರನಾದ್ರು ಇರ್ಲಿ, ನಮ್ ದೇಹ ಮಾತ್ರ ಗಂಡ್ಸೇ ಬೇಕು ಅನ್ನುತ್ತೆ. ಅದೂ ಎಂಥಾ ಗಂಡ್ಸು? ಪಕ್ಕಾ ಗಂಡ್ಸು. ಪಕ್ಕಾ ಗಂಡನೇ ಬೇಕು. ಏನಾಗುತ್ತೆ ಗೊತ್ತ? ನಮ್ಮುನ್ನ ಹೆಂಗ್ಸು, ಹೆಂಡ್ತಿ ಅಂತ ಒಪ್ಕಳೋರು ನಮ್ಗಿಂತ ಬಾಳ ಚಿಕ್ಕೋರೇ ಆಗಿರ‍್ತಾರೆ. ಹಂಗಾಗಿ ಸಾದಾರ‍್ಣ ನಮ್ಗಿಂತ ಸಣ್ಣೋರ‍್ನೆ ಹುಡಿಕ್ಕತಿವಿ. ಅವ್ರೇನು ನಮ್ಮೇಲಿನ ಪ್ರೀತಿಗ್ ಬಂದಿರ‍್ತಾರೋ, ಒತ್ತಾಯಕ್ ಬಂದಿರ‍್ತಾರೊ, ಕುತೂಹಲಕ್ ಬಂದಿರ‍್ತಾರೊ ಅತ್ವ ಇನ್ಯಾರು ಸಿಗ್ಲಿಲ್ಲ ಅಂತ ನಮ್ಮತ್ರ ಬಂದಿರ‍್ತಾರೋ, ಅಂತೂ ಹಿಂಗ್ ಬಂದೋರು ಹಂಗ್ ಹೊಂಟೋಯ್ತರೆ, ಇದು ಮಾತ್ರ ಸತ್ಯ. ಅವ್ರುನ್ನ ಮಕ್ಕಳಂಗೆ ನೋಡ್ಕತಿವಿ. ಸಾಲಸೋಲ ಮಾಡಿ ಬಟ್ಟೆಬರೆ ತಂದ್ಕೊಡ್ತಿವಿ. ಚಿಕನ್ನು, ಮಟನ್ನು, ಕಬಾಬು ಎಲ್ಲ ಮಾಡಿಮಾಡಿ ಸೇವೆ ಮಾಡ್ತಿವಿ. ಉಣ್ಣದು, ಉಡದು, ಕುಡಿಯದು ಎಲ್ಲಾದ್ರಲ್ಲು ಅವ್ರಿಗೇ ಮೊದಲ ಪ್ರಿಫರೆನ್ಸ್. ಅಷ್ಟಾದ್ರೂ ಹನಿ ನೀರು ಕೊಟ್ಟು ಸಮುದ್ರನೇ ವಾಪಸ್ ಬರ‍್ಲಿ ಅಂತ ಬಯಸ್ತಾರೆ. ಸ್ವಲ್ಪೇ ದಿನದಲ್ಲಿ ಯಾರ ಹಿಂದೋ ಹೋಗ್ಬಿಡ್ತಾರೆ. ನಮಗಿಂತ ಪಕ್ಕಾ ಆಗಿರೊ ಹೆಣ್ಣು ಸಿಗತ್ತ ಅಂತ ಬೇರೆ ಕಡೆ ನೋಡ್ತನೇ ಇರ್ತಾರೆ. ಆಗ ನಾವೂನೂ ಮತ್ತೊಬ್ಬುನ್ನ ಹುಡುಕಕ್ ಶುರು ಮಾಡ್ತಿವಿ. ನನ್ ಜೀವ್ನದಲ್ಲಿ ಹಂಗೆ ಐದಾರ್ ಜನ ಬಂದಿರಬೌದು ಅಕ್ಕ. ಮೊದ್ಲುಮೊದ್ಲು ಇದ್ದ ಗಂಡ ಬಿಟ್ಟಾಗ ತುಂಬ ಬೇಸ್ರ ಆಗ್ತಿತ್ತು. 

ನಮ್ಗೆ ಬೇಕಾದ್ದು ಪ್ರೀತಿ. ಹುಚ್ಚು ಹಿಡಿಯೋವಷ್ಟು ಪ್ರೀತಿ. ಅದು ಮನೆಯೋರಿಂದ ಸಿಕ್ಕಿರಲ್ಲ. ಅಕ್ಕಪಕ್ಕದೋರಿಂದ್ಲು ಸಿಕ್ಕಿರಲ್ಲ. ಒಡಹುಟ್ಟಿದೋರಿಂದ, ಶಾಲೆಕಾಲೇಜು ಫ್ರೆಂಡ್ಸಿಂದ ಸಿಕ್ಕಿರಲ್ಲ. ಎಲ್ರಿಗು ನಾವು ಗೇಲಿ, ಕುತೂಹಲದ ವಸ್ತುಗಳಾಗಿರ‍್ತಿವೇ ಹೊರ‍್ತು ಯಾರಿಗೂ ಕ್ಲೋಸ್ ಆಗಿರಲ್ಲ. ಅದೆಂಗೊ ನಮ್ಮುನ್ ನೋಡಿದ್ದೇ ‘ಕೋತಿ’ ‘ಹಿಜ್ರ’ ಅಂತ ಗುರ‍್ತು ಹಿಡ್ದೇ ಬಿಡ್ತಾರೆ. ಹಂಗಾಗಿ ನಮ್ಮಂತೋರ ಗುಂಪನ್ನೇ ಸೇರ‍್ಬೇಕಾಗುತ್ತೆ. ಲಿಂಗ ಕತ್ರುಸ್ಕಂಡು ಹೆಣ್ಣು ಅನ್ಕತಿವಿ, ‘ನಾನು ಹೆಣ್ಣು’ ಅಂತ ಸಮಾಜಕ್ಕೆ ತೋರ‍್ಸಕ್ಕೆ ಒದ್ದಾಡ್ತಿವಿ. ಹೆಣ್ಣು ಅಂದ್ರೆ ಹೇಗಿರ‍್ಬೇಕು ಅಂತ ಸಮಾಜ ಹೇಳುತ್ತೋ ಅದನ್ನೆಲ್ಲ ಊಹೆ ಮಾಡ್ಕಂಡು ಹಂಗೇ ಇರಕ್ಕೆ ನೋಡ್ತಿವಿ. ವಯ್ಯಾರದಿಂದ ನಡಿತಿವಿ. ಒನಿತಿವಿ. ಢಾಳಾಗಿ ಅಲಂಕಾರ ಮಾಡ್ಕತಿವಿ, ಹೂ ಮುಡ್ಕತಿವಿ, ಸೀರೆ ಉಟ್ಕತಿವಿ, ಲಿಪ್‌ಸ್ಟಿಕ್ಕು-ವಡವೆ-ಕಾಲುಂಗುರ-ಗೆಜ್ಜೆ ಎಲ್ಲದ್ನು ಹೇರ‍್ಕತಿವಿ. ಒಟ್ಟಾರೆ ಹೆಂಗಾದ್ರು ಹೆಣ್ಣಿನಂಗೆ ಕಂಡು ಒಂದ್ ಗಂಡಿನ ಪ್ರೀತಿ ಗಳಿಸ್ಕೊಬೇಕೂಂತ ಒದ್ದಾಡ್ತೀವಿ. ಸಿಕ್ಕಿದ್ದಕ್ಕಿಂತ ಹೆಚ್ಚು, ಇನ್ನೂ ಹೆಚ್ಚು ಅಂತ ಹುಡುಕ್ತಾ ಹೋಗ್ತೀವಿ. ಒಂದಾದ್ಮೇಲೊಂದು ಸ್ನೇಹ. 

ಆದ್ರೆ ನಂಗೆ ಗಂಡ ಅನುಸ್ಕಳೋರ ಒರಿಜಿನಲ್ ಬುದ್ಧಿ ಏನಂತ ಅರ್ಥವಾಗಿದ್ದೇ ಒಂದ್ಕತೆ..

ಈ ಫೋಟೋದಲ್ಲಿದಾನಲ, ಅವ ಗಂಡನಾಗಿ ಸಿಕ್ದ. ಅದುವರ‍್ಗೆ ಮೂರ್ನಾಕು ಜನ ಕೈಕೊಟ್ಟು ಯಾರೂ ಜೊತೆಯಿಲ್ದೆ ಒಬ್ಳೇ ಆಗಿ ಬೇಜಾರಲ್ಲಿದ್ದೆ. ಈ ನನ್ಮಗ ಸಿಕ್ಕ. ನಂಗಿಂತ ವಯಸ್ನಲ್ಲೂ, ಅಳತೇಲ್ಲೂ ಸಣ್ಣೋನು. ಬಲು ಪ್ರೀತಿ ಮಾಡಿದ್ದೆ ಕಣಕ್ಕ. ತುಂಬ ಅಂದ್ರೆ ತುಂಬನೆ. ನೋಡು, ಈ ಫೋಟೋ ತೆಗೀವಾಗ ಅವುನ್ನ ಒಂದ್ ಬಾಕ್ಸ್ ಮೇಲೆ ನಿಲ್ಸಿ ನನ್ನಷ್ಟ್ ಎತ್ರ ಮಾಡಿದ್ದೆ. ಆದ್ರೆ ಮಾಮೂಲು, ಒಂದೆರೆಡ್ ವರ್ಷದಲ್ಲಿ ಕೈ ಬಿಟ್ಟ. ಸಿಕ್ಕಾಪಟ್ಟೆ ಬೇಜಾರಾಗಿ ಗಂಗಾನದೀಲಿ ಬಿದ್ದು ಸಾಯ್ಬೇಕು, ಮುಂದಿನ ಜನ್ಮದಲ್ಲಾದ್ರೂ ನಂಬಬಲ್ಲಂತ ಒಳ್ಳೇ ಗಂಡ, ಎಲ್ಲರಂತಾ ಬದುಕು ಸಿಗ್ಬೋದೂಂತ ಹೋದೆ. ಅಲ್ಲೊಬ್ಳು ನಮ್ಮೋಳು, ಪೂನಾದೋಳು ಸಿಕ್ಲು. ನಿಜಕ್ಕು ನನ್ ಕಣ್ಣು ತೆರೆಸಿದ ಗುರು ಅವ್ಳು. ಅವಳ ಹತ್ರ ಮಾತಾಡ್ತ ನಂಗೆ ಜ್ಞಾನೋದಯ ಆಯ್ತು, ಗಂಡಸ್ರಿಗೆ ಬೇಕಿರದು ಹೆಂಗಸ್ರೇ ಹೊರ‍್ತು ಹಿಜ್ಡಾಗಳಲ್ಲ ಅಂತ. ನಾವ್ ಹೆಂಗೆ ಪಕ್ಕಾ ಗಂಡ್ಸು ಗಂಡ ಆಗ್ಲಿ ಅಂತ ಇಷ್ಟಪಡ್ತಿವೊ ಹಂಗೆ ಅವ್ರೂ ಯೋನಿ ಇರೋಳು, ಗರ್ಭಚೀಲ ಇರೋಳು, ಮಕ್ಳನ್ನು ಹೆರೋಳು ಹೆಂಡ್ತಿಯಾಗಿ ಬೇಕು ಅಂತ ಆಸೆಪಡ್ತರೆ. ಅದು ತಪ್ಪಲ್ಲ. ಆದ್ರೆ ಅವ್ರು ನಮ್ಗೆ ಮೋಸ ಮಾಡ್ತಾರಲ್ಲ ಅದು ತಪ್ಪು. ನಂ ವೀಕ್ನೆಸ್ ಕಂಡುಹಿಡ್ದು ಬ್ಲ್ಯಾಕ್‌ಮೇಲ್ ಮಾಡ್ತಾರಲ, ಅದು ತಪ್ಪು. ದೈಹಿಕವಾಗಿ ಹಿಂಸೆ ಕೊಡೋದು, ನಾವು ಸೆಕ್ಸ್‌ವರ್ಕ್ ಮಾಡಿ ದುಡಿಯಕ್ ಬಿಟ್ಟು ಅದ್ನ ಬಾಚ್ಕಂಡ್ ಹೋಗದು ತಪ್ಪು. ಇದೆಲ್ಲ ಹೊಳೆದಿದ್ದೇ ನಿಜಾನ ಮನಸು ಒಪ್ಕಂಬಿಡ್ತು. ಎಷ್ಟೋ ಬೇಜಾರು ಕಮ್ಮಿ ಆದಂಗನಿಸ್ತು. ಸಾಯಕ್ಕಂತ ಹೋದೋಳು ಮನ್ಸು ಗಟ್ಟಿ ಮಾಡ್ಕಂಡ್ ವಾಪಸ್ ಬಂದೆ. 

ಆದ್ರೆ ಬಿಟ್ಟೋಗಿದ್ದೋನು ಮತ್ತೆ ಬಂದ. ಅವ್ನ ಮದ್ವೆ ಆಗೋ ಹುಡ್ಗಿ ಮನೆಗೋಗಿ ರಂಪ ಮಾಡಿ ಮದ್ವೆ ನಿಲ್ಸಿದ್ನಲ ನಾನು. ಬೇರೆ ಗತಿ ಇಲ್ಲಾಂತ ಆಮೇಲೂ ಏಳು ವರ್ಷ ಒಟ್ಗೆ ಇದ್ದ. ಕೊನೆಗೆ ಒಂದಿನ ಎಲ್ಲನು ತಗಂಡು ಹೋದ. ಮಕ್ಳಾಗ್ದೆ ಇರೋರನ್ನ, ತಮ್ ಬೀಜಕ್ಕೆ ಮಕ್ಳ ಹೆರದೆ ಇರೋರ‍್ನ ತನ್ನ ಹೆಂಗ್ಸು ಅಂತ ಗಂಡಸ್ರು ಬಾವಿಸೋದೇ ಇಲ್ಲ ಅಂತ ಪೂನಾದ ಅಕ್ಕ ಹೇಳಿದ್ದು ನಿಜ. ಈಗ ಬುದ್ಧಿ ಬಂದಿದೆ. ನೀವೆಲ್ಲ ಹೇಳ್ತಿರ್ತೀರಲ್ಲ, ಮದ್ವೆ ಅನ್ನೋದೇ ಹೆಂಗಸ್ರನ್ನ ಕಟ್ಟಿಹಾಕದು ಅಂತ, ನಂಗೂ ಹೌದನ್ಸಿದೆ. ಅದ್ರ ಸುದ್ದಿ ಬ್ಯಾಡ ಅಂತ ಕೈಬಿಟ್ಟು ನನ್ನ ನಾನೇ ಪ್ರೀತಿ ಮಾಡದು ಕಲ್ತಿದಿನಿ.

ಒಳಗೊಳ್ಗೆ ಏನ್ನೋ ಕಳಕಂಡಿದಿವಿ ಅನ್ನೋದು ಕಾಡ್ತ ಇರುತ್ತೆ. ಏನ್ನ ಕಳಕೊಂಡಿದಿವಿ? ಕಳ್ಕಂಡಿದ್ದು ಕುಟುಂಬನಾ? ಹುಟ್ಟಿದ ಲಿಂಗದ ಗುರ‍್ತುಗಳನ್ನಾ? ಗೌರವ, ಅಂತಸ್ತನ್ನಾ? ಗೊತ್ತಿಲ್ಲ. ಇದ್ದಿದ್ದನ್ನ ಕತ್ತರ‍್ಸೋದು ಸುಲಭ. ಇಲ್ದಿದ್ನ ಕೂಡ್ಸಕ್ಕಾಗತ್ತ? ಗರ್ಭಕೋಶ ಅಂಟುಸ್ಕಳಕಾಗ್ದೆ ಒದ್ದಾಡ್ತಿವಿ. ಪಿಲ್ಸ್ ನುಂಗಿನುಂಗಿ ಮೊಲೆ ಬರುಸ್ಕಳಕ್ಕೆ ನೋಡ್ತಿವಿ. ನೀವೆಲ್ಲ ಮಕ್ಳು ಬ್ಯಾಡಂತ ಪಿಲ್ಸ್ ದಿನ್ಕೆ ಒಂದು ನುಂಗಿದ್ರೆ ನಾವು ಆರೇಳು ನುಂಗ್ತಿವಿ. ಊಂ ಕನಕ್ಕ, ಪಿಲ್ಸ್ ಕಂಪ್ನಿ ಉದ್ದಾರಾಗಿರದೆ ನಮ್ಮೋರಿಂದ ತಿಳ್ಕ. ಮೊಲೆ ಬಂದಂಗಾಗುತ್ತೆ, ಆದ್ರೆ ಅದು ಅದಲ್ಲ, ಬರೀ ಕೊಬ್ಬು. ಕೊನ್ಗೆ ಮೈ ಹೇರ‍್ಕಂಡು, ಡಯಾಬಿಟೀಸು ಅದೂಇದೂ ಶುರುವಾಗುತ್ತೆ.

ಮುಟ್ಟು ಅಂದ್ರೆ ನೀವ್ ಬೇಸ್ರ ಮಾಡ್ಕೊತೀರ. ಅಯ್ಯೊ, ತಿಂಗ್‌ತಿಂಗ್ಳ ಕೂತು ಬೇಸ್ರ ಆಗೋಯ್ತು, ಹೊಟ್ಟೆ ನೋವು, ಯಾವಾಗ್ ನಿಲ್ಲುತ್ತೊ ಅಂತಿರ. ಆದ್ರೆ ಅದು ನಮ್ ಕನಸು. ಇದ್ಕಿದ್ದಂಗೆ ಏನೋ ಕನಸು ಬಿದ್ದಂಗಾಗುತ್ತೆ. ಇದ್ಕಿದ್ದಂಗೆ ಹೊಟ್ಟೆನೋವು ಬಂದು ಈಗ ಮುಟ್ಟಾಗೇ ಬಿಡ್ತಿನೇನೋ ಅಂತ ಆಸೆ ಆಗುತ್ತೆ. ಮಾತಾ ದೇವಿ ಏನಾದ್ರು ಗರ್ಭಚೀಲ ಇಟ್ಬಿಟ್ಳ ವಳ್ಗೆ ಅಂತ ಆಸೆ ಆಗುತ್ತೆ. ಕಾಲಿನ ಮಧ್ಯ ಉಚ್ಚೆ ಹರಿದ್ರು ಮುಟ್ಟಿನ್ ರಕ್ತ ಇರ‍್ಬೋದ ಅಂತ ಮುಟ್ಟಿ ನೋಡ್ಕಳೊ ಹಂಗೆ ಆಗುತ್ತೆ. ನಿಮ್ಗೆ ನಗು ಬರ‍್ಬೋದು. ಆದ್ರೆ ಹೆಂಗೆ ನಿರ್ವಾಣ ಆದ್ಮೇಲೆ ಮಾತಾ ಆಶೀರ್ವಾದದಿಂದ ಹುಡ್ಗ ಇದ್ದೋನು ಹೆಂಗ್ಸಾದ್ನೊ ಹಂಗೆ ಏನೋ ಪವಾಡ ನಡ್ದು, ಏನಾರ ಮಾಯಮೋಡಿ ಆಗಿ ಹೊಟ್ಟೆ ಒಳಗೊಂದ್ ಚೀಲ ಕೂತ್ಬಿಡುತ್ತಾ ಅಂತ ಅನಿಸ್ತಿರುತ್ತೆ. ಹಂಗೇನು ಆಗಲ್ಲ, ಗೊತ್ತು. ಆದ್ರೂ.. ಒಂದಾಸೆ, ಬದ್ಕಕ್ಕೆ ಏನಾರ ಬೇಕಲ, ಅದ್ಕೆ.

ಮಕ್ಳು ಬೇಕೂಂತ ಆಸೆ ಇಟ್ಕಂಡಿರ‍್ತೀವಲ, ಅದ್ಕೆ ನಮ್ಗೆ ಚೇಲಾಗಳ್ನ ಮಾಡ್ತಾರೆ. ನಂಗೆ ಅಂತೋರು ಇಬ್ರು ಚೇಲಾ ಇದಾರೆ. ನಾವು ಒಟ್ಗೆ ಇರ‍್ತಿವಿ, ಒಟ್ಗೆ ವಾಸ ಮಾಡ್ತಿವಿ. ನಾನೂ ದುಡಿತಿನಿ, ಅವ್ರೂ ದುಡೀತಾರೆ. ಮನೆ ಬಾಡ್ಗೆ, ಕರ್ಚು ಎಲ್ಲ ಡಿವೈಡ್ ಮಾಡ್ಕತಿವಿ. ನಾನು ನನ್ ಚೇಲಗಳ ಮನ್ಗೆ ಹೋಗಿ ಅವ್ರ ಅಪ್ಪ ಅಮ್ಮನ್ನ ಒಪ್ಸಕ್ಕೆ ಅಂತ ಪ್ರಯತ್ನ ಪಟ್ಟಿದಿನಿ. ನನ್ ಪ್ರಕಾರ ನಮ್ಮಂತೋರನ್ನ ಅವ್ರವ್ರ ಮನೆಯೋರೇ ಒಪ್ಕಂಡು ಬೆಳೆಸಿದ್ರೆ ಸಮಸ್ಯೆನೇ ಇರಲ್ಲ. ಹಂಗಾಗ್ತಿಲ್ಲ ಅನ್ನದೇ ಎಲ್ಲ ಪ್ರಾಬ್ಲಂಗೆ ಕಾರಣ. ಮನೇಲಿದ್ರೆ ಎಜುಕೇಷನ್ ಮುಂದುವರೆಸ್ಬೋದು, ಸೆಕ್ಸ್‌ವರ್ಕಿಗೆ ಬೀದಿಗಿಳಿಯೋ ಸಮಸ್ಯೆ ಇರಲ್ಲ. ನಾನಿರೋ ಸಂಘಟನೆ ಮುಖ್ಯವಾಗಿ ಕೆಲಸ ಮಾಡ್ತಿರೋದೇ ಈ ವಿಷಯದ ಬಗ್ಗೆ. ಅಂಗವಿಕಲ ಮಗೂನ ಹೇಗೆ ನೋಡ್ಕೊತೀರೋ, ಕಾಯಿಲೆ ಬಿದ್ದೋರನ್ನ ಹೇಗೆ ಆರೈಕೆ ಮಾಡ್ತಿರೋ ಹಾಗೆ ಇಂತಾ ಮಕ್ಳನ್ನೂ ನಿಂನಿಮ್ಮ ಮನ್ಲೇ ಇಟ್ಕಂಡು ಜವಾಬ್ದಾರಿ ತಗಳಿ ಅಂತ ಹೇಳ್ತಿನಿ. ಒಂದಷ್ಟು ಜನ ಕನ್ವಿನ್ಸ್ ಆಗ್ತಾರೆ. ಕೆಲವ್ರನ್ನ ಏನು ಮಾಡಿದ್ರೂ ಒಪ್ಸಕ್ಕಾಗಲ್ಲ, ಮನೆಗೆ ಬಂದ್ರೆ ಕೊಲ್ತೀವಿ, ಕತ್ರುಸ್ತೀವಿ ಅಂತಾರೆ.

ಹಿಂಗೇ ಕಣಕ್ಕ, ಆದ್ರೆ ಆ ದೇವ್ರು ಅಂಬೋ ಲೌಡಿಮಗ, ನಮ್ ಹೊಟ್ಟೆ ವಳಗೊಂದ್ ಚೀಲ ಇಡದ್ ಮರ‍್ತು ಬಾರಿ ಅನ್ಯಾಯ ಮಾಡ್ದ ಕಣಕ್ಕ. ಹೊರ‍್ಗಿನ ರೂಪ ಹೆಂಗಾರ ಇರ್ಲಿ, ಅದೊಂದ್ ಇದ್ದಿದ್ರೆ ನಮ್ ಎಲ್ಲಾ ಕಷ್ಟಗಳು ಮಟಾಮಾಯ ಆಗ್ತಿದ್ವು ಅಲ್ವ? ಏನೋ.. ಯಾವ್ದ್ರಿಂದ ಯಾವ್ದು ಅಂತ ತಿಳಿಲಾರ‍್ದ ಹಂಗೆ ನಂ ಪರಿಸ್ತಿತಿ. ಏನೇನೋ ಮನ್ಸಲ್ಲಿ ಕೊರಿತಾ ಇರುತ್ತೆ. ಅದ್ನ ಮರೆಯಕ್ಕೆ ಕುಡಿತಿವಿ. ಅಷ್ಟೇಯ.’

***

ಮಾತಾಡಿ ಆಡಿ ಸುಸ್ತಾದಳೇನೋ ಎನ್ನುವಂತೆ ನೂರಿ ಎದ್ದು ಆಚೆ ಹೋದಳು. ಒಂದಾದಮೇಲೊಂದು ಚೊಂಬು ನೀರನ್ನು ಮುಖದ ಮೇಲೆ ಸುರಿದುಕೊಳ್ಳುತ್ತಲೇ ಇದ್ದಳು. ಮೊಬೈಲು ತೆಗೆದು ಒಂದು ಹಾಡು ಹಚ್ಚಿದಳು, ‘ನಾನೇ ಭಾಗ್ಯವತಿ, ಇನ್ನು ನಾನೇ ಪುಣ್ಯವತಿ..’ ತೇಲಿಬಂತು. 

‘ಹೌದು ನೂರಿ, ನೀನು ಭಾಗ್ಯವತಿ. ನಿನ್ನಿಷ್ಟದ ಬದುಕನ್ನು ಆಯ್ಕೆ ಮಾಡಿಕೊಂಡಿದ್ದೀ. ಮನೆ ಇಲ್ಲದೆ ಎಷ್ಟು ಜನ ನಿಮ್ಮವರು ಒದ್ದಾಡಲ್ವ? ಹಂಗಿರ‍್ತ ಕಡಲ ದಂಡೆಯಲ್ಲಿ ಪದ್ಯ ಬರಿತಾ, ಹಾಡು ಕೇಳ್ತಾ ನಿನ್ನಷ್ಟಕ್ಕೆ ನೀನಿರಬಹುದಾದಂಥ ಒಂದು ಸೂರನ್ನ ನಿನ್ನ ಕಷ್ಟ, ಪರಿಶ್ರಮದಿಂದ ಗಳಿಸಿದ್ದೀ. ನಂಗಂತೂ ನಿನ್ನ ನೋಡಿ ಖುಶಿಯಾಗುತ್ತೆ ಕಣೆ’ ಎಂದೆ. ಆದರೆ ಅದನ್ನು ಕೊಡಿಸಲು ಅವಳ ಸಂಘಟನೆಯವರು ಎದುರಿಸಿದ ವಿರೋಧವೇನು ಕಡಿಮೆಯಲ್ಲವೆಂದು ಅವಳು ವಿವರಿಸಿದ ಮೇಲೇ ಗೊತ್ತಾಗಿದ್ದು.

***

ಬಾಳ ಜನ ಬೇಗ ಸ್ಕೂಲು ಬಿಡ್ತಾರೆ. ಎಲ್ಲ ರೇಗ್ಸೋದ್ರಿಂದ ಕಾಲೇಜು ಬಿಡ್ತಾರೆ. ಯಾರೂ ಕೆಲ್ಸಕ್ ಕರೆಯಲ್ಲ. ಉದ್ಯೋಗ ನಂ ಓದಿಗ್ ಸಿಕ್ಕಲ್ಲ. ಭಿಕ್ಷೆ ಎತ್ತಕ್ ಹೋದ್ರೆ ಕೈಕಾಲ್ ಗಟ್ಟಿ ಇದೆ, ಕೆಲ್ಸ ಮಾಡ್ರಿ ಅಂತಾರೆ ಹೊರ‍್ತು ಯಾರೂ ಕೆಲ್ಸ ಕೊಡಲ್ಲ. ಹೊಟ್ಟೆಪಾಡ್ಗೆ ಮನೆ ಬಿಟ್ ಬಂದ್ಮೇಲೆ ಏನ್ಮಾಡದು? ಅನಿವಾರ್ಯವಾಗಿ ಸೆಕ್ಸ್‌ವರ್ಕ್‌ಗೆ ಹೋಗ್ಬೇಕಾಗುತ್ತೆ. 

ಏನ್ ವಿಚಿತ್ರ ಅಂತಂದ್ರೆ ಸಮಾಜ ‘ನೀ ಗಂಡಲ್ಲ, ಹೆಣ್ಣಂತೂ ಅಲ್ವೇ ಅಲ್ಲ’ ಅನ್ನುತ್ತೆ. ಆದ್ರೆ ಮಲಿಕ್ಕ ಬಾ ಅಂತ ಕರೆಯುತ್ತೆ! ಹಸಿವು ಎಂತಾದ್ದು ಅಂದ್ರೆ ಎಷ್ಟೋ ಸಲ ಒಂದ್ ಬಿರ್ಯಾನಿ ಪ್ಯಾಕೆಟ್ಟಿಗೆ ಸೆಕ್ಸ್‌ವರ್ಕ್ ಮಾಡ್ಬೇಕಾಗುತ್ತೆ. ಎಂತೆಂತೋರ ಜೊತೆನೋ ಮಲಿಕ್ಕ ಬೇಕಾಗುತ್ತೆ. ಕಮ್ಮಿ ದುಡ್ಡಿರೋರು ಸಿನಿಮಾ ಟಾಕೀಸ್ಗೆ ಹೋಗಣ ಅಂತರೆ. ಅಲ್ಲಿ ಹಿಂದಿನ್ ಸೀಟ್ನ ಮೂಲೆ ಹಿಡ್ದು ಕೂತು ಸಿನಿಮಾ ನೋಡ್ತ ಸೆಕ್ಸ್‌ವರ್ಕ್ ಮಾಡದು. ಲಾಡ್ಜ್‌ಗೆ ಹೋದ್ರೆ ಸ್ವಲ್ಪ ಹೆಚ್ಚು ದುಡ್ಡು ಬರುತ್ತೆ ನಿಜ. ಆದ್ರೆ ಅಲ್ಲಿ ಬಾರೀ ಹಿಂಸೆ. ಒಳ್ಳೇರು ನಮ್ಮತ್ರ ಬರದು ಕಮ್ಮಿ. ಇಲ್ಲದ್ ತೀಟೆ ಇಟ್ಕಂಡೋರು, ಕ್ರೂರಿಗಳು, ಕಾಯ್ಲೆ ಹತ್ತುಸ್ಕಂಡೋರು, ಏನೂ ಗೊತ್ತಿಲ್ದೆ ಕೆಟ್ ಕುತೂಹಲ ಇರೋರು, ಕಾಸಿಲ್ದೋರೇ ನಮ್ಮತ್ರ ಬರೋದು. ಆದ್ರೆ ನಮ್ಗೆ ಬಾಡಿಗೆಗೆ, ಕೊಳ್ಳಲಿಕ್ಕೆ ಮನೆ ಸಿಗದೆ ಇರಕ್ಕೆ ಸೆಕ್ಸ್‌ವರ್ಕೇ ಮುಖ್ಯ ಕಾರಣ. ಸಿಕ್ಕಾಪಟ್ಟೆ ಬಾಡ್ಗೆ ಹೇಳಕ್ಕೂ ಇದೇ ಕಾರಣ. ಗಿರಾಕಿಗಳು, ತಲೆ ಹಿಡಿಯೋರು, ಪೊಲೀಸ್ರು ಎಲ್ಲ ಮನೆ ಹತ್ರ ಬಂದ್ ಗಲಾಟೆ ಎಬ್ಸದಕ್ಕೆ ಯಾರೂ ನಮ್ಮುನ್ನ ಇರಕ್ ಬಿಡಲ್ಲ. ಹೆಚ್ಚು ಬಾಡ್ಗೆ ಕೊಡ್ತಿವಿ ಅಂದ್ರೂ ಕೊಡಲ್ಲ. ವೋಟ್ ಕೇಳಕ್ ಬರ‍್ತಿರಿ ಈಗ ಸಹಾಯ ಮಾಡ್ರಿ ಅಂತ ಕಾರ್ಪೊರೇಟ್ರ ಹತ್ರ ಹೋಗ್ತೀವಿ. ಅವ್ರು ಸ್ಲಮ್ಮೋ ಗಿಮ್ಮೋ ತೋರುಸ್ತರೆ. ಇಲ್ಲಾ ಯಾವ್ದಾದ್ರೂ ಅಡ್ಡಾದೊಳ್ಗೆ ಬಿಡ್ತಾರೆ. ಅತ್ವಾ ಯಾವ್ದಾದ್ರು ದೆವ್ವದ ಮನೆ, ಭೂತದ ಮನೆ, ವಾಸ್ತು ಸರಿಯಿಲ್ದಿದ್ ಮನೆ ಇರುತ್ತಲ, ಅಲ್ಲಿ ಬಿಡ್ತರೆ. ಅಂತೂ ಕೊನೆಗೆ ಗೂಂಡಾಗಳೇ ಗತಿ ಅನ್ನಂಗಾಗುತ್ತೆ.

ಎಲ್ಲಿ ಹೋದ್ರು ಈಗಾಗ್ಲೆ ಅಲ್ಲಿರೋ ನಮ್ಮೋರು, ‘ಇದು ನಮ್ಮ ಏರಿಯಾ, ಬರಬೇಡಿ’ ಅಂತ ಜಗಳ ತೆಗೀತಾರೆ. ಆ ಜಗಳಕ್ಕೆ ರೋಸಿ ಸುತ್ತಮುತ್ಲ ಮನೆಯೋರು ನಿಮ್ಮಂಥೋರು ನಂ ಪಕ್ಕ ಇರದೇ ಬೇಡ ಅಂತಾರೆ. ಎಷ್ಟೋ ಸಲ ಗಲಾಟೆನೇ ಆಗೋಗಿದೆ. ಸುತ್ತಮುತ್ತ ಇದ್ದೋರು ಹೊಡ್ದುಬಡ್ದು ಮನೇಲಿದ್ದಿದ್ನ ಹೊರಗೆ ಬಿಸಾಕಿದ್ದೂ ಇದೆ. ಕೆಲವ್ರಂತೂ ನಾವಂದ್ರೆ ಒಂತರ ಹುಳ ನೋಡ್ತಾರಲ್ಲ ಅಸಯ್ಯವಾಗಿ, ಹಂಗೆ ನೋಡ್ತಾರಕ್ಕ. ಕಣ್ಣಲ್ಲಿ, ಮಾತಲ್ಲಿ ಅಷ್ಟು ತಿರಸ್ಕಾರ. ಒಂದ್ಸಲ ಅಂತೂ ನನ್ ಕೈಕಾಲು ಕಟ್ಟಿ ಹೊರಗೆ ಎಳ್ದು ಬೀದೀಲಿ ಬಿಸಾಕಿದ್ರು. ಸುತ್ತಮುತ್ತ ಎಲ್ಲ ನೋಡ್ತ ಓಡಾಡ್ತಾರೆ ಹೊರ‍್ತು ಯಾರೂ ಬಂದು ನನ್ ಮುಟ್ಲೂ ಇಲ್ಲ. ಏನಾಯ್ತೂಂತ ಕೇಳ್ಲೂ ಇಲ್ಲ. ನಾವು ಹೆಣ್ಣುಹೆಣ್ಣು ಅಂದ್ಕತೀವಿ. ಆದ್ರೆ ಆ ಹೆಂಗುಸ್ರೋ ನಮ್ಮುನ್ ಮುಟ್ಟದ್ಕೂ ರೆಡಿ ಇಲ್ಲ. ಅಂಗ್ಡಿ ಕಟ್ಟೆ ಮೇಲೆ ಮಲಗಿದ್ರೆ ಯಾರೋ ಚಕ್ಕಾ ಅಂತ ಕೋಲಲ್ಲಿ ತಿವ್ದು ಮಾತಾಡುಸ್ತಾರೇ ಹೊರ‍್ತ ಅಜ್ಜಿಗಳೂ ಸೈತ ಮುಟ್ಟಲ್ಲ. ಯಾಕಿಂತ ಅಸಯ್ಯವೋ ನಮ್ಮೇಲೆ? ಇಂತಾ ಸೃಷ್ಟಿ ಆಗಿದ್ದು ಯಾರಿಂದ? ನಾವೇ ಮಾಡ್ಕಂಡಿದ್ದ?

ನೋಡಕ್ಕೆ ಹಿಂಗ್ ದೈತ್ಯರಂಗೆ ಕಾಣ್ತಿವಿ. ದನಿ ಗಡಸು. ಆದ್ರೆ ನಮ್ಮಷ್ಟು ಅಳ್ಳೆದೆಯೋರು ಯಾರಿಲ್ಲ ಅಕ್ಕ. ಹೆದ್ರಿಹೆದ್ರಿ ಅರ್ಧ ಸತ್ತಂಗೇ ಇರ‍್ತಿವಿ. ಧೈರ್ಯ ಬರದು ಕುಡುದ್ರೆ ಮಾತ್ರ. ಅವ್ರು ಬಂದು ಹೊಡೀತಾ ಇರ‍್ತಾರಲ್ಲ, ಆಗ ಸುಮ್ನೆ ಹೊಡುಸ್ಕತ ನಿಂತಿರ‍್ತಿವಿ. ಹೆದರ‍್ಕೆ ಮರೀಲಿಕ್ಕೆ ದೊಡ್ಡ ಗಂಟ್ಲಲ್ಲಿ ಕೂಗ್ತಿವಿ, ಕುಡಿತಿವಿ. ಹಳಳೇ ಚಿತ್ರಗೀತೆ, ಭಾವಗೀತೆನ ಗಟ್ ಹೊಡ್ದು ಹಾಡ್ತೀವಿ. ಹಿಂದಿ ತಮಿಳು ತೆಲುಗು ಕನ್ನಡ ಎಲ್ಲಾ ಭಾಷೆ ಹಾಡ್ನೂ ಹಾಡ್ತೀವಿ. ಆದ್ರೆ ಯಾವಾಗ್ಲು ಹೆದ್ರಿಕೆ. 

ಸಂಭ್ರಮನೂ ಇಲ್ದೆ ಇಲ್ಲ. ವರ್ಷಕ್ಕೊಂದ್ಸಲ ವಿಳಿಪುರಂ ಅಂತೊಂದು ಊರಿದೆ ತಮಿಳ್ನಾಡಲ್ಲಿ. ಅಲ್ಲಿ ಚಿತ್ರೈ ಮಾಸ್ದಲ್ಲಿ ಅಂದ್ರೆ ಬೇಸ್ಗೆನಲ್ಲಿ ಹದಿನೈದ್ ದಿನ ನಮ್ಮೋರ ಉತ್ಸವ ನಡೀತ್ತೆ. ಅಲ್ಲಿಗೆ ಹೋಗಕ್ಕೆ ಕಾಯ್ತಿರ‍್ತೀವಿ. ಮಾಭಾರತದಲ್ಲಿ ನಾಗದೇವ್ತೆ ಉಲೂಪಿನ ಅರ್ಜುನ ಮದ್ವೆ ಆಗ್ತಾನಲ, ಅವರಿಗೆ ಅರಾವಣ ಅಂತ ಮಗ ಹುಟ್ತಾನೆ. ಅರಾವಣನು ಯುದ್ಧದಲ್ಲಿ ಪಾಂಡವ್ರಿಗೆ ಗೆಲುವು ಸಿಗ್ಲಿ ಅಂತ ತನ್ನ ತಲೆ ತಾನೆ ಕತ್ರುಸ್ಕಂಡ್ ಕಾಳಿಗೆ ಬಲಿ ಕೊಟ್ಕಳಕೆ ಹೋಗ್ತಾನೆ. ಆಗ ಕೃಷ್ಣ ಪರಮಾತುಮ ‘ಮೆಚ್ದೆ ನಿನ್ ಭಕ್ತಿಗೆ, ಏನ್ ವರ ಬೇಕು’ ಅನ್ನುತ್ಲೆ, ನಂಗೆ ಮೂರು ವರ ಕೊಡು: ವೀರನ ಕೈಲಿ ಸಾಯ್ಬೇಕು, ಕಡ್ದ ನನ್ನ ತಲೆ ಮಾಭಾರತ ಯುದ್ಧನ ಪೂರ್ತಿ ನೋಡ್ಬೇಕು, ಸಾಯದ್ರಲ್ಲಿ ಮದ್ವೆ ಆಗ್ಬೇಕು ಅಂತನೆ. ಇನ್ನೇನ್ ಈಗ ಸಾಯೊ ಗಂಡ್ಸನ್ನ ಯಾವ್ ಹೆಂಗ್ಸು ಮದ್ವೆ ಆಯ್ತಳೆ? ಯಾರೂ ಸಿಗಲ್ಲ. ಕೊನೆಗೆ ಕೃಷ್ಣನೇ ಮೋಹಿನಿ ಆಗಿ ಅವ್ಳುನ್ನ ಮದ್ವೆ ಆಯ್ತನೆ. 

ಮೋಹಿನಿ ಅಂದ್ರೆ ಯಾರಂದ್ಕಂಡೆ? ನಾವೇ ಕನಕ್ಕ.

ಅರಾವಣ ಕೂಡ್ಲೆ ಸಾಯದ್ರಿಂದ ಮೋಹಿನಿ ಮುಂಡೆ ಆಗ್ಬೇಕಾಗುತ್ತೆ. ಜಾತ್ರೆ ದಿವ್ಸ ಅಲ್ಲಿ ನಾವು ಮೋಹಿನೀರು ಅರಾವಣನ್ನ ಮದ್ವೆ ಆಗ್ತೀವಿ. ಹದ್ನೆಂಟು ದಿನ ಯುದ್ಧದ ಉತ್ಸವ ಆದ್ಮೇಲೆ ವಿಧವೆ ಆಗೋ ಶಾಸ್ತ್ರ. ಬಳೆ ಒಡ್ಕಂಡು, ಎದೆ ಬಡ್ಕಂಡ್ ಅತ್ತು, ಕುಂಕ್ಮ ಅಳ್ಸಿ, ಎಲ್ಲ ಮಾಡ್ತಾರೆ. ಸೇಮು, ಗಂಡ ಸತ್ರೆ ಮಾಡಲ್ವ, ಅಂಗೇ. ಗಂಡ್ನು ಇಲ್ಲ, ಸತ್ತೂ ಇಲ್ಲ, ಸುಮ್‌ಸುಮ್ನೆ ನಾಟ್ಕ ಅಂತ ಎಲ್ರಿಗು ಗೊತ್ತು, ಆದ್ರೂ ವರ್ಷೊರ್ಷನೂ ನಿಜಾನ್ನೋವಷ್ಟು ದುಕ್ಕದಿಂದ, ಬಲೇ ಚನಾಗಿ ಮಾಡ್ತಿವಿ, ಎಂಜಾಯ್ ಮಾಡ್ತಿವಿ. ಇನ್ನು ಆರು ತಿಂಗ್ಳಿರುವಾಗಲೆ ವಿಗ್ಗು, ಇನ್ನೂ ಮೂರ‍್ತಿಂಗಳಿರುವಾಗ್ಲೆ ಸೀರೆ ತಗಂಡು ಕಾಯ್ತ, ಆ ದಿನ ನಮ್ಮೋರೆಲ್ಲ ಓಡೋಡಿ ಬರ‍್ತಾರೆ. ಕುಡದು ಕುಣ್ದು ಸೀರೆ ಉಟ್ಕಂಡು ವಿಗ್ ಹಾಕ್ಕಂಡು ಕೊನೇಗ್ ಅಳ್ತ ಮನೆಗೆ ಹೋಗ್ತಾರೆ. ಬಲವಂತಕ್ಕೆ ಮದುವೆಯಾಗಿರೋ ನಮ್ಮೋರು ಕೆಲವ್ರು ಅಲ್ಲಿಗೆ ಹರಕೆ ನೆಪ ಕಟ್ಕಂಡು ಬತ್ತಾರೆ. ಅವ್ರು ನಮ್ಮಂಗೆ ಹೊರ‍್ಗೆ ಬಂದಿರಲ್ಲ, ಒತ್ತಾಯದಲ್ಲಿ ಮದ್ವೆ ಮಾಡಿರ‍್ತಾರೆ. ತಂ ಮಗ ಚಕ್ಕ ಆದ್ರು ಪಂಚೆ ಉಟ್ಕಂಡ್ ಗಂಡ್ಸಂಗೇ ಇರ‍್ಬೇಕು ಹೊರ‍್ತ ಸೀರೆ ಉಡ್ಬಾರ್ದು ಅನ್ನುತ್ತೆ ಸಮಾಜ. ಏನ್ಮಾಡನ..’

***

ಮಾತಾಡುತ್ತ ಆಡುತ್ತ ತಲೆ ಮೇಲಿನ ಗಂಟು ಬಿಚ್ಚಿದಳು. ಸುರುಳಿ ಸುತ್ತಿದ್ದ ಕೂದಲು ಅಲೆಅಲೆಯಾಗಿ ನಿಧಾನ ಜಾರುತ್ತ ಕೆಳಗಿಳಿಯುತ್ತ ಕಪ್ಪು ಕಡಲು ಅವಳ ಬೆನ್ನ ಮೇಲೆ ಹರಡಿಕೊಂಡಿತು. ದಡಕ್ಕೆ ಅಲೆಗಳ ಅಪ್ಪಳಿಸುತ್ತ ಭೋರಿಡತೊಡಗಿತು..

‘ನೋಡು, ಇದು ತಂತಾನೇ ಬೆಳದಿರೋ ತಲೆ ಕೂದ್ಲು. ಹದ್ನೈದು ವರ್ಷಕ್ಕೆ ಎಲ್ಲ ಕಣ್ಣಾಕೋವಷ್ಟು ಉದ್ದಾಗಿದೆ. ಆದ್ರೆ ಈಗ ಹಣೆ ದೊಡ್ಡ ಆಗಕ್ ಶುರುವಾಗಿದೆ. ನಮ್ಮೋರಲ್ಲಿ ತುಂಬ ಜನ್ಕೆ ವಯಸ್ಸು ನಲವತ್ ದಾಟ್ತಿದ್ದಂಗೇ ಬಾಲ್ಡ್ ಆಗಕ್ ಶುರುವಾಗುತ್ತೆ, ಜಡೆ ಹಾಕಕ್ಕಾಗಲ್ಲ, ವಿಗ್ ಶುರುವಾಗುತ್ತೆ. ಮತ್ತಷ್ಟು ಕೃತಕ ಹೆಣ್ಣುಗಳಂತೆ ಕಾಣ್ತಿವಿ. ಜನ ನಂ ವೇಷ, ಭಾಷೆ ಎಲ್ಲಾ ನಾಟ್ಕ ಅಂತ್ಲೆ ತಿಳ್ಕತಾರೆ. ‘ಇವ್ರುದ್ದು ಎಲ್ಲ ಅತಿ’ ಅಂತ ಸಿಟ್ಟಾಗ್ತಾರೆ. ಒಂದ್ವಿಷ್ಯ ಒಪ್ಕಬೇಕು, ನಮ್ದು ಸ್ವಲ್ಪ ಅತಿನೇ. ಏನೇನೋ ಅತಿಗಳ ವಳ್ಗೇ ನಾವು ಬದುಕಿರದು. ಅದುಕ್ಕೋ ಏನೋ ಸೆಕ್ಸ್ ಅಂದ್ರೆ ನಮ್ಮೋರ‍್ಗೆ ಬಾಳಾ ಪ್ರೀತಿ. ಬಾಯ್ಬಿಟ್ರೆ ಅವೇ ಮಾತು, ಅವೇ ಪದ, ಅವೇ ಜೋಕು. ನಾನು ಆಗಾಗ ನಂ ಮೀಟಿಂಗಲ್ಲಿ ಹೇಳ್ತಿರ‍್ತೀನಿ, ಸೆಕ್ಸ್ ಬಗ್ಗೆನೇ ಮಾತಾಡದ್ನ ಕಮ್ಮಿ ಮಾಡಣ; ಬದುಕು ಅಂದ್ರೆ ಅನ್ನ ಇದ್ದಂಗೆ. ಸೆಕ್ಸ್ ಅಂದ್ರೆ ಉಪ್ಪಿನಕಾಯಿ ಇದ್ದಂಗೆ. ಅನ್ನಕ್ಕಿಂತ ಉಪ್ಪಿನಕಾಯಿ ಹೆಚ್ಚು ತಿನ್ನಕ್ಕಾಗಲ್ಲ, ತಿನ್ಲೂಬಾರ್ದು ಅಂತ. ನಾವು ಮಾತೆತ್ತಿದ್ರೆ ಸೆಕ್ಸ್ ಅನ್ನೋದ್ ನೋಡಿ ಉಳದೋರು ನಮ್ಗೆ ಬೇಕಿರೋದು, ಗೊತ್ತಿರೋದು ಅದೊಂದೇ ಅಂತ ತಿಳ್ಕಂಡವ್ರೆ. ನಮ್ಗೆ ತೊಂದ್ರೆ ಇರೋದು, ಗೊಂದ್ಲ ಇರೋದು ಸೆಕ್ಸ್ ಬಗ್ಗೆನೇ ಅಲ್ವ? ಅದ್ಕೆ ಆ ವಿಷ್ಯನೆ ಎತ್ತೆತ್ತಿ ಮಾತಾಡ್ತಿವಿ. ಅಲ್ಲಿ ಸದಾ ಹಿಂಸೆ ಇರದ್ರಿಂದ ನಾವೂ ವಯಲೆಂಟ್ ಆಗಿರ‍್ತೀವಿ. 

ಗೊತ್ತಿಲ್ಲ, ಹಿಂಗೇ ಎಷ್ಟ್ ದಿನನೋ. ಇನ್ನೊಂದ್ ಜಲ್ಮ ಅಂತೇನಾರಾ ಇದ್ರೆ ಹಿಂಗ್ ಅರ್ಧಬರ್ಧ ಆಗಿ ಮಾತ್ರ ಹುಟ್ಟುಸ್ಬೇಡಪ್ಪ ಅಂತ ದೇವ್ರಲ್ಲಿ ಕೇಳ್ಕೊತೀನಿ. ಎಷ್ಟಂದ್ರು ನಾವ್ ಪೂರ್ಣ ಅಲ್ಲ, ಅರ್ಧ ಸರ್ಕಲ್ಲೆ ಅಕ್ಕಾ. ಇಂತಾ ಬದುಕು ಯಾರ‍್ಗೂ ಬ್ಯಾಡ..’

ಬರಬರುತ್ತ ಅವಳ ದಪ್ಪ ದನಿ ಗದ್ಗದವಾಯಿತು. ಏನೆಂದು ಸಮಾಧಾನಿಸಲಿ ಅವಳನ್ನು? ಉಸಿರು ಕಟ್ಟಿದಂತಾಗಿ ಮುಖಕ್ಕೆ ನೀರು ಹಾಕಿಕೊಳ್ಳಲು ಸಿಂಕಿನ ಬಳಿ ನಡೆದೆ. ಕನ್ನಡಿಯಲ್ಲಿ ನೋಡುತ್ತೇನೆ, ನನ್ನ ತುಟಿ ಮೇಲೂ ತೆಳುವಾದ ಮೀಸೆ! ದವಡೆಯ ಚೌಕಾಕಾರ, ರಟ್ಟೆಯ ಮಾಂಸದಲ್ಲೆಲ್ಲೊ ಒಪ್ಪಿತ ಲಿಂಗದ್ದಲ್ಲದ ಆಕಾರ!! ನೂರಿ ಹೇಳಿದ್ದು ನನ್ನ ಮಟ್ಟಿಗೂ ನಿಜವೇ?! ನಾನೂ ಅರ್ಧ ಸರ್ಕಲ್ಲೆ ..

‘ನೂರಿ, ಪರಿಪೂರ್ಣ ಗಂಡ್ಸು ಹೆಂಗ್ಸು ಅಂತ ಯಾರಿದಾರೆ ಹೇಳು? ಪಕ್ಕಾ ಹೆಂಗ್ಸು ಅಂದ್ಕಂಡಿರೋ ಹೆಣ್ಣನಲ್ಲು ದ್ವನಿ, ಮಾತು, ನಡಿಗೆ, ಕೂದಲು, ಕೈಕಾಲ್ನ ಆಕಾರ, ಗಡಸುತನ - ಹಿಂಗ್ ಯಾವ್ದೋ ಒಂದರಲ್ಲಿ ಗಂಡಸ್ತನ ಅಂತಾರಲ್ಲ ಅದು ಇದ್ದೇ ಇರುತ್ತೆ. ಎಲ್ಲಾ ಹೆಂಗಸರೂ ಹೆರಲ್ಲ ತಿಳ್ಕ. ಕೆಲವ್ರಿಗೆ ಗರ್ಭಕೋಶನೂ ಇರಲ್ಲ, ಆದ್ರೂ ಅವ್ರು ಹೆಂಗಸರೇ. ಹಂಗೇ ಗಂಡ್ಸರಲ್ಲು. ಮಕ್ಳನ್ನು ತಂ ಬೀಜಕ್ಕೆ ಹುಟ್ಸಕ್ಕಾಗ್ದಿರೋ ಎಷ್ಟು ಗಂಡಸ್ರು ಇಲ್ಲ? ಹೆಣ್ಣು, ಗಂಡು ಅನ್ನೋ ವ್ಯಾಖ್ಯಾನ ಅವರ ದೇಹ ರಚನೆ, ಕ್ರಿಯೆಯಿಂದ ಮಾತ್ರ ಅಳೆಯೋದಲ್ಲ ಅಂತ ನಿಮ್ಮಿಂದಲೇ ನಮ್ಗೆ ಅರ್ಥವಾಗಿದ್ದು. ಜೆಂಡರ್ ಬಗ್ಗೆ ಹೊಸ್ತನ್ನ ನಿಮ್ಮ ವಿಚಾರಗಳಿಂದ್ಲೇ ನಾವು ಕಲೀತಿರೋದು. ಅಪೂರ್ಣ, ಅರ್ಧ ಸರ್ಕಲ್ಲು ಅಂತೆಲ್ಲ ಇಲ್ಲ ಅಂತ ನೀವೇ ನಮ್ಗೆ ಹೇಳಿಕೊಟ್ಟಿರೋದು. ಪೂರ್ಣ ಅನ್ನೋದೊಂದು ಬಿಂದು ಕಣೆ. ಅದಕ್ಕೆ ಅರ್ಧ ಗಿರ್ಧ ಇಲ್ಲ, ಅಲ್ವಾ?’

ಒಂದು ನಿಟ್ಟುಸಿರಿನೊಂದಿಗೆ ನೂರಿ ಮುಂದುವರೆದಳು. ‘ನೀನೇಳದೂ ಸರಿನೇ. ಪ್ರಕೃತಿ ನೋಡೇ ನಾವು ಸಮಾಧಾನ ಮಾಡ್ಕಳದು. ಅಲ್ಲೂ ಹೂಬಿಡದ ಬಳ್ಳಿ, ಹಣ್ಣು ಬಿಡದ ಮರ ಇಲ್ವೆ? ಅದೂ ಸೃಷ್ಟೀಲಿ ಸಹಜನೇ ಅಲ್ವೆ? ಹಂಗೇ ನಾವೂ ಅಂತ ಸಮಾಧಾನ ಮಾಡ್ಕತೀವಿ. ಏನೋ ಮಾತಾಡ್ತ ಆಡ್ತ ನಿನ್ನೆದ್ರು ದುಕ್ಕ ಬಂದು ಹಂಗಂದೆ. ಮಕ್ಳಿಲ್ಲದ ಗಂಡಎಂಡ್ರು ಮಾಡಂಗೆ, ನಾನೀಗ ಒಂದು ಹುಡುಗಿನ ಅಡಾಪ್ಟ್ ಮಾಡ್ಕಂಡಿದೀನಿ. ಅವುಳ್ಗೆ ತಾಯ್ತಂದೆ ಇಲ್ಲ. ಮನ್ಲೇ ಇದ್ಲು. ನಮ್ಮವ್ವ ನೋಡ್ಕತಿತ್ತು. ಈಗ ೧೨ ವರ್ಷ ಆದ್ಮೇಲೆ ಬೋರ್ಡಿಂಗ್ ಸ್ಕೂಲ್ಗೆ ಹಾಕಿದೀನಿ. ರಜೇಲಿ ಇಲ್ಗೆ ಕರ‍್ಕಂಡ್ ಬತ್ತಿನಿ. ಆ ಉಡ್ಗಿ ಬಂದ್ಮೇಲೆ ನಮ್ಮವ್ನು ಬಲು ಕುಶಿಯಾಗಿದಾಳೆ. ಅದ್ಕೇನು ಬಟ್ಟೆ, ಬಳೆ, ಬಂಗಾರ ಅಂತ ಒದ್ದಾಡ್ತ ಇರ್ತಾಳೆ.

ಈ ಕಡೆ ನಾನು ಸಂಸ್ಥೆಯೋರು ಕೊಡಿಸಿದ ಕೆಲಸಕ್ಕೆ ಹೋಗ್ತ, ಸಂಘಟನೆ ಮಾಡ್ತ, ಜೊತೆಗೆ ನಾಟ್ಕ ಪಾಟ್ಕ ಅಂತ ಶುರು ಹಚ್ಕಂಡಿದಿನಿ. ನನ್ನ ಕತೆನೇ ಬರ‍್ಕಂಡೆ. ಅದ್ರಲ್ಲೇನ್ ಇತ್ತೋ, ಕಾಣೆ. ಎಲ್ರಿಗು ಬಾರಿ ಇಷ್ಟಾಗೋಯ್ತು. ನಾಟ್ಕ ಮಾಡಿದ್ರು, ಸಿನ್ಮ ಮಾಡಿದ್ರು. ನಾಟ್ಕದಲ್ಲಿ ನನ್ ಪಾರ್ಟು ನಾನೆ ಮಾಡ್ತಿನಿ. ಒಂದ್ ಷೋಗಿಷ್ಟು ಅಂತ ಕೊಡ್ತರೆ. ಯಾವಾಗೊ ಬರಿಬೇಕನುಸ್ದಾಗ ಪದ್ಯನೂ ಬರೀವೆ. 

ಇಂಗೇ ಕಳ್ದಿದೆ ಕಾಲ.. ಎಲ್ರಿಗು ದಿನ ಸರಿಯಲ್ವೆ, ಅಕ ಅಂಗೆ, ನಂಗೂ ಆಗ್ತ ಇದೆ ಅಷ್ಟೆಯ.. 

ನೀ ನಿನ್ ಮಗುಳ್ಗೆ ತಗಂಡಿದಿಯಲ, ಎಲ್ಮರ್ ಆನೆ ಕತೆ, ಅದು ನಮ್ ಕತೆನೆ ಅಕ್ಕಾ. ಒಂದಲ್ಲಾ ಒಂದಿನ ಮನುಶ್ರು, ಸಮಾಜ ಅಂದ್ರೆ ಎರಡೇ ಬಣ್ಣ ಅಲ್ಲ, ಹಲವು ಬಣ್ಣಗಳ ಮಳೆಬಿಲ್ಲು ಅಂತ ಅರ್ಥ ಮಾಡ್ಕಂಡಾರು ಅಂತ ನಾವೂ ಕಾಯ್ತಿದೀವಿ ಕಣಕ್ಕಾ..’

***

ಅಲ್ಲಿ ದೂರದಲ್ಲಿ, ಕಡಲ ಬಯಲಲ್ಲಿ ತೇಲುವ ಬೋಟು. ಅದರೊಳಗೆ ಮಿಣಿಗುಟ್ಟುವ ಕ್ಷೀಣ ಬೆಳಕು. ಸುತ್ತುತ್ತಾ ಸುತ್ತುತ್ತಾ ಬರುವ ದೀಪಸ್ಥಂಭದ ಕೋಲುಮಿಂಚು.. 

ಮನೆ ತುಂಬೆಲ್ಲ ಒಂದಷ್ಟು ಕಾಲ ನೀರವ ಮೌನ. ಕಡಲ ಮೇಲಿಂದ ಬೀಸುವ ಗಾಳಿ ಸದ್ದು, ದೂರದಲ್ಲಿ ಊಳಿಡುವ ಹಕ್ಕಿ, ನಗರದ ಎದೆಯೊಳಗೆ ಕತ್ತಲ ರಾತ್ರಿ ಇಳಿಯುತ್ತಿರುವಂತೆ ಕ್ಷೀಣವಾಗುತ್ತಿರುವ ನಗರ ಸದ್ದುಗಳು.

ಹೆಣ್ತನದ ಸಂಕಲೆಯಾಚೆ ದಾಟಬೇಕೆಂಬ ನನ್ನ ಕನಸು, ಹೆಣ್ಣಾಗಬೇಕೆಂಬ ಅವಳ ಬಹುವರ್ಣದ ಕನಸಿನೆದುರು ಪೇಲವವಾಗಿತ್ತು. ಕೊನೆಗೂ ಸಂಕಲೆ ಯಾವುದು, ಬಿಡುಗಡೆ ಯಾವುದು ಎಂಬ ಪ್ರಶ್ನೆ ಕಡಲ ಮೇಲಿಂದ ಬೀಸಿ ಬರತೊಡಗಿತು. 

- ಡಾ. ಎಚ್. ಎಸ್. ಅನುಪಮಾ

(2017)