Saturday, 16 August 2014

ವಾರಿಸ್ ಡೆರಿ: ಮರುಭೂಮಿಯ ಹೂವಿನ ಕತೆ






ಇತ್ತೀಚೆಗೊಂದು ಸಿನಿಮಾ ನೋಡಿದೆವು: ಸೋಮಾಲಿಯಾ ಮೂಲದ ಖ್ಯಾತ ಅಮೆರಿಕನ್ ರೂಪದರ್ಶಿ ವಾರಿಸ್ ಡೆರಿ ಎನ್ನುವ ಮಹಿಳೆಯ ಆತ್ಮಕತೆಯಾಧರಿಸಿ ತೆಗೆದ ‘ಡೆಸರ್ಟ್ ಫ್ಲವರ್.’ ಸಿನಿಮಾದ ತಾಂತ್ರಿಕತೆ, ವಾರಿಸ್ ನಿರೂಪಣೆ, ಅವಳ ಪಾತ್ರಧಾರಿ ಲಿಯಾ ಕೆಬೆಡೆಯ ಅಭಿನಯ ಹೇಗಿದೆಯೆಂದರೆ ನಗ್ನತೆ ನಗ್ನತೆಯೆನಿಸುವುದಿಲ್ಲ; ಅಶ್ಲೀಲದ ಕಲ್ಪನೆ ಮನಸಿನಲ್ಲಿ ಸುಳಿಯುವುದಿಲ್ಲ. ಸೋಮಾಲಿಯಾದ ಮರುಭೂಮಿಯ, ಅಲೆಮಾರಿ ಜನಸಮುದಾಯಗಳ, ಹಳ್ಳಿಪಟ್ಟಣಗಳ ನಿರೂಪಣೆ ನೈಜವಾಗಿದ್ದು ಸಹಾರಾ ಮರುಭೂಮಿಯಲ್ಲೊಮ್ಮೆ ತಿರುಗಾಡಿ ಬಂದ ಅನುಭವ ಹುಟ್ಟಿಸುತ್ತದೆ. ನಡುನಡುವೆ ಕಣ್ಣು ಒದ್ದೆ ಮಾಡಿಕೊಳ್ಳುತ್ತ, ನೋಡಲಾಗದೇ ಕಣ್ಣು ಮುಚ್ಚಿಕೊಳ್ಳುತ್ತಾ ಅಯ್ಯೋ ಹೆಣ್ಣು ಜೀವವೇ ಎಂದು ನಿಟ್ಟುಸಿರಾಗುವಂತೆ ಮಾಡುತ್ತದೆ. ಲವಲವಿಕೆ, ಸಂಭ್ರಮದ ಕ್ಷಣಗಳಿದ್ದರೂ ಗಾಢ ವಿಷಾದದ ಛಾಯೆ ಮುತ್ತಿಕೊಳ್ಳುತ್ತದೆ. ಈ ಸಿನಿಮಾವನ್ನು ನೀವೆಲ್ಲ ಒಮ್ಮೆ ನೋಡಬೇಕು, ಅಥವಾ ‘ಡೆಸರ್ಟ್ ಫ್ಲವರ್’ (ಕನ್ನಡದಲ್ಲಿ ‘ಮರುಭೂಮಿಯ ಹೂವು’ - ಅನು: ಡಾ. ಎನ್. ಜಗದೀಶ್ ಕೊಪ್ಪ) ಓದಬೇಕು.

ಸಹಾರಾ ಮರುಭೂಮಿಯ ಗುಡ್ಡಬೆಟ್ಟ ಪ್ರದೇಶಗಳಲ್ಲಿ ಅಲೆಮಾರಿ ಸಮುದಾಯವಾಗಿರುವ; ಕುರಿ, ಮೇಕೆ, ಒಂಟೆ ಮಂದೆಯನ್ನಿಟ್ಟುಕೊಂಡು ಕಾಲ್ನಡಿಗೆಯಲ್ಲಿ ಮೇವು, ನೀರನ್ನರಸುತ್ತ ತಿರುಗುವ ಮುಸ್ಲಿಂ ಬುಡಕಟ್ಟು ಸಮುದಾಯದ ಹೆಣ್ಣುಮಗಳು ವಾರಿಸ್. ಅವಳ ತಾಯಿ ಸೋಮಾಲಿಯಾ ರಾಜಧಾನಿ ಮೊಗದಿಶುವಿನ ಶ್ರೀಮಂತ, ಶಿಕ್ಷಿತ ಕುಟುಂಬಕ್ಕೆ ಸೇರಿದವಳಾದರೂ ಅಲೆಮಾರಿ ಯುವಕನ ಪ್ರೀತಿಸಿ ಅವನೊಡನೆ ಬಂದಿರುತ್ತಾಳೆ. ಮರುಭೂಮಿಯಲ್ಲಿ ಒಂದಾದ ಮೇಲೊಂದು ಮಕ್ಕಳನ್ನು ಹೆರುತ್ತ, ಪ್ರಾಣಿಗಳೊಂದಿಗೆ ಊರೂರು ಅಲೆಯುತ್ತಾ ಜೀವನ ಸಾಗಿಸುತ್ತಿದ್ದವಳ ಅನೇಕ ಮಕ್ಕಳಲ್ಲಿ ವಾರಿಸ್ ಡೆರಿ ಒಬ್ಬಳು.

ವಾರಿಸ್ ಶಾಲೆ, ಶಿಕ್ಷಣದ ಪರಿವೆಯಿಲ್ಲದೆ ಮರುಭೂಮಿಯಲ್ಲಿ ತಮ್ಮತಂಗಿಯರೊಂದಿಗೆ ಅಲೆಯುತ್ತ, ಆಡಿಕೊಂಡಿರುವಾಗ ಅವಳ ಅಕ್ಕ ಮರುಭೂಮಿ ಬದುಕಿಗೆ ಬೇಸತ್ತು ತಾನು ಮೆಚ್ಚಿದವನೊಂದಿಗೆ ಮೊಗದಿಶುಗೆ ಹೋಗಿಬಿಡುತ್ತಾಳೆ. ಆಗ ಸಪಾಟು ಬಾಯಿಯ ಪುಟ್ಟ ಚೆಲುವೆ ವಾರಿಸ್ ಓಡಿಹೋಗುವ ಮುನ್ನವೇ ಭರ್ಜರಿ ವಧುದಕ್ಷಿಣೆ ಪಡೆದು ಮದುವೆ ಮಾಡುವ ಅಪ್ಪನ ಹವಣಿಕೆ ಶುರುವಾಗುತ್ತದೆ. ಹದಿಮೂರು ವರ್ಷದ ಹುಡುಗಿಗೆ ಐದು ಒಂಟೆ ಕೊಡುತ್ತೇನೆಂದ ಅರವತ್ತು ವರ್ಷದ ಸಿರಿವಂತನಿಗೆ ಅವಳ ಕೊಡಲೊಪ್ಪಿ ಮರುದಿನವೇ ಮದುವೆ ನಿಶ್ಚಯಿಸಿಬಿಡುತ್ತಾನೆ.

ಆದರೆ ಮುದುಕ ವರನನ್ನು ನೋಡಿ ಗಾಬರಿಯಾದ ವಾರಿಸ್ ತಾನು ಮನೆ ಬಿಟ್ಟು ಹೋಗುವುದಾಗಿ ತಾಯಿಯ ಬಳಿ ಹೇಳುತ್ತಾಳೆ. ಅಮ್ಮ ಅದಕ್ಕೆ ಸಮ್ಮತಿಸಿ ಮದುವೆಯ ದಿನ ಬೆಳಕು ಹರಿವ ಮೊದಲೇ ಎಬ್ಬಿಸಿ ಕಳಿಸಿಬಿಡುತ್ತಾಳೆ. ಆ ದೊಡ್ಡ ಮರುಭೂಮಿಯಲ್ಲಿ ಕೈಯಲ್ಲಿ ನೀರಿಲ್ಲದೇ, ದಾರಿ ಗೊತ್ತಿಲ್ಲದೇ, ಎಲ್ಲಿಗೆ ಹೋಗುವುದೆಂಬ ನಿಶ್ಚಯವಿಲ್ಲದೆ, ಚಪ್ಪಲಿಯಿಲ್ಲದೇ ಅಂಗಾಲಿನಲ್ಲಿ ರಕ್ತ ಹರಿವಷ್ಟು ನಡೆದು ಬಳಲುತ್ತಾಳೆ. ಹಸಿವಿನಿಂದ ಎಚ್ಚರ ತಪ್ಪಿ ಮಲಗಿದಾಗ ಸಿಂಹ ಮೂಸಿ ಎಚ್ಚರಗೊಳ್ಳುತ್ತಾಳೆ. ತಾನು ಸತ್ತೇ ಹೋಗುವೆ, ಅದೇ ಒಳ್ಳೆಯದು ಎಂದು ಅಂದುಕೊಳುವಾಗ ಸಿಂಹ ಅವಳ ಕೃಶ ದೇಹದ ಬಳಿ ಕೊಂಚ ಹೊತ್ತು ಕೂತು ನಂತರ ಎದ್ದುಹೋಗುತ್ತದೆ. ಕೊನೆಗೊಂದು ಟ್ರಕ್ ಹತ್ತಿ, ಅತ್ಯಾಚಾರಕ್ಕೊಳಗಾಗುವುದರಿಂದ ಹೇಗೋ ಪಾರಾಗಿ ಅಂತೂ ಮೊಗದಿಶುವಿನ ಅಜ್ಜಿ ಮನೆ ಸೇರುತ್ತಾಳೆ. ಅವಳ ಚಿಕ್ಕಮ್ಮನ ಗಂಡ ಲಂಡನ್ನಿನಲ್ಲಿ ಸೋಮಾಲಿಯಾ ರಾಯಭಾರಿಯಾಗಿದ್ದು ಅವರಿಗೆ ಮನೆಗೆಲಸದವರ ಅವಶ್ಯಕತೆಯಿದ್ದು ವಾರಿಸಳನ್ನು ಲಂಡನಿಗೆ ಕಳಿಸಲಾಗುತ್ತದೆ. ಅಲ್ಲಿ ಆರು ವರ್ಷ ಗೃಹ ಬಂಧನದಲ್ಲಿದ್ದು, ಗುಲಾಮಳಿಗಿಂತ ಕಡೆಯಾಗಿ ಬರೀ ಚಾಕರಿ ಮಾಡುತ್ತ, ಇಂಗ್ಲಿಷ್ ಕಲಿಯಲಾಗದೇ, ಹೊರಹೋಗಲಾಗದೇ, ಚಿಕ್ಕಮ್ಮನ ಮಗನಿಂದ ಅತ್ಯಾಚಾರ ಪ್ರಯತ್ನಕ್ಕೊಳಪಡುತ್ತಾಳೆ. ಅವರು ನಿವೃತ್ತರಾಗಿ ಲಂಡನ್ ಬಿಟ್ಟು ಮೊಗದಿಶುಗೆ ಹೊರಟಾಗ ಇವಳು ಅಲ್ಲೇ ಉಳಿಯುತ್ತಾಳೆ. ಮುಂದಿನದೆಲ್ಲ ಹೋರಾಟ.

[waris2.jpg]

ಬಿಳಿ ಜಿರಲೆಯಂತಹ ರೂಪದರ್ಶಿಗಳ ಫೋಟೋ ತೆಗೆತೆಗೆದು ಬೇಸತ್ತಿದ್ದ ಒಬ್ಬ ಫೋಟೋಗ್ರಾಫರನ ಕಣ್ಣಿಗೆ ಬೀಳುತ್ತಾಳೆ. ಕಪ್ಪುಕಲ್ಲಿನಲ್ಲಿ ಕಡೆದಿಟ್ಟ ವಿಗ್ರಹದಂತಹ ಇವಳನ್ನು ನೋಡಿದ್ದೇ ಆತನ ಕಣ್ಣಿಗೆ ಒಬ್ಬ ಮಾಡೆಲ್ ಕಾಣುತ್ತಾಳೆ. ಹೀಗೆ ಮಾಡೆಲಿಂಗ್ ಜಗತ್ತಿಗೆ ಪರಿಚಯವಾದವಳು ಮುಂದೆ ರೆವ್ಲಾನ್, ಅಲ್ಯೂರ್ ಮುಂತಾದ ಬ್ರಾಂಡುಗಳ ರೂಪದರ್ಶಿಯಾಗಿ ಮಿಲಿಯಾಧಿಪತಿಯಾಗುತ್ತಾಳೆ. ನಡೆವ ದಾರಿಯಲ್ಲಿ ಹಲವರು ಸಹಾಯ ಮಾಡುತ್ತಾರೆ, ಮೋಸ ಹೋಗುತ್ತಾಳೆ. ಪ್ರಖ್ಯಾತ ಮಾಡೆಲ್ ಆದವಳನ್ನು ಬಿಬಿಸಿ ಒಮ್ಮೆ ಸಂದರ್ಶನ ಮಾಡುತ್ತದೆ. ಅವಳ ಬದುಕಿನ ಅತ್ಯಂತ ನಿರ್ಧಾರಕ ಘಳಿಗೆ ಯಾವುದು ಎಂದು ಕೇಳಿದಾಗ ತಾನು ಅನುಭವಿಸಿದ ನರಕ ಯಾತನೆ ಕಣ್ಣೆದುರು ಬಂದು ಹೇಳಿಬಿಡುತ್ತಾಳೆ.

ಹೌದು, ಆಫ್ರಿಕಾದ ಬಹುತೇಕ ಎಲ್ಲ ಹೆಣ್ಣುಗಳಂತೆ ಅವಳೂ ‘ಆ ನಿರ್ಧಾರಕ ಘಳಿಗೆ’ಯ ಅಪಾಯ ಹಾದುಬಂದಿರುತ್ತಾಳೆ. ಐದು ವರ್ಷದ ಪುಟ್ಟ ಹುಡುಗಿಯಾಗಿದ್ದಾಗ ಜನನಾಂಗ ವಿರೂಪ ಕ್ರಿಯೆಗೆ ಒಳಪಟ್ಟಿರುತ್ತಾಳೆ. ಜನನೇಂದ್ರಿಯದ ಹೊರಭಾಗ ಕತ್ತರಿಸಿ ಎಲ್ಲವನ್ನು ಸೇರಿಸಿ ಹೊಲಿದುಬಿಡುವುದು ಅಲ್ಲಿ ಕನ್ಯತ್ವದ, ಹೆಣ್ತನದ ಮುಖ್ಯ ಲಕ್ಷಣ ಎಂದು ಭಾವಿಸಲಾಗಿರುತ್ತದೆ. ಅವಳ ಜನನಾಂಗದ ‘ಸುನ್ನತಿ’ ಮಾಡಲು ಮಾಟಗಾತಿಯಂತಹ ಮುದುಕಿಯೊಬ್ಬಳು ಬಂದು ಬಡ್ಡಾದ ಬ್ಲೇಡು, ಚೂರಿಯಲ್ಲಿ ರಕ್ತ ಕೋಡಿ ಹರಿಸಿರುತ್ತಾಳೆ. ತೊಡೆ ನಡುವಿನ ರಕ್ತ ಸೋರುವ ಗಾಯ, ಅದು ನಂಜಾಗಿ, ಬಾತು, ಕೊಡುವ ತೀವ್ರ ಯಾತನೆಯನ್ನೆಲ್ಲ ಮಗು ವಾರಿಸ್ ಅನುಭವಿಸುತ್ತದೆ. ಅಂತೂ ಕೊನೆಗೆ ಗಾಯ ಗುಣವಾಗಿ ಸಾಯದೆ ಬದುಕುತ್ತಾಳೆ. ಆದರೆ ಮೂತ್ರ ಮಾಡುವುದು ಹಾಗೂ ಮುಟ್ಟಿನ ಸ್ರಾವ ಅತಿ ನೋವಿನ ದಿನಗಳಾಗಿರುತ್ತವೆ. ಹೆಣ್ಣಾದ ಮೇಲೆ ಜಗತ್ತಿನ ಎಲ್ಲರೂ ಹೀಗೇ ಮಾಡಿಕೊಂಡಿರುತ್ತಾರೆ ಎಂದುಕೊಂಡವಳಿಗೆ ಲಂಡನ್ನಿನ ಬಿಳಿಯ ಗೆಳತಿಯಿಂದ ಹಾಗೆ ಮಾಡಿಕೊಳ್ಳದವರೂ ಇದ್ದಾರೆ, ಮಾಡದಿದ್ದರೂ ಹೆಣ್ಮಕ್ಕಳಿಗೆ ಏನೂ ಆಗುವುದಿಲ್ಲ ಎಂದು ತಿಳಿದು ವಿಸ್ಮಯ ಲೋಕವೊಂದು ತೆರೆಯುತ್ತದೆ. ತಾನನುಭವಿಸಿದ, ತನ್ನಂತಹ ಹಲವರು ಅನುಭವಿಸುತ್ತಿರುವ ಭೀಭತ್ಸ ಕಂಗೆಡಿಸುತ್ತದೆ. ಜನನಾಂಗ ಸುರೂಪಗೊಳಿಸುವ ಶಸ್ತ್ರಚಿಕಿತ್ಸೆಗೊಳಗಾಗಿ, ಮದುವೆಯಾಗಿ, ಮಗನ ಹೆರುತ್ತಾಳೆ.

ರೆವ್ಲಾನ್ ಸೇರಿದಂತೆ ಹಲವು ಜಾಗತಿಕ ಬ್ರ್ಯಾಂಡುಗಳ ವಿಖ್ಯಾತ ಮಾಡೆಲ್ ಆದವಳು ಮುಂದೆ ಆಕ್ಟಿವಿಸ್ಟ್ ಆಗಿ ಬದಲಾಗಿ ವಿಶ್ವಸಂಸ್ಥೆ ಜನನಾಂಗ ವಿರೂಪಗೊಳಿಸುವಿಕೆ ವಿರುದ್ಧ ಹಾಕಿಕೊಂಡ ಕಾರ್ಯಕ್ರಮದಲ್ಲಿ ರಾಯಭಾರಿಯಾಗುತ್ತಾಳೆ. ಡೆಸರ್ಟ್ ಫ್ಲವರ್ ಎಂಬ ಆತ್ಮಕತೆ ಬರೆಯುತ್ತಾಳೆ. ಅದು ಚಲನಚಿತ್ರವಾಗುತ್ತದೆ. ಹೆಣ್ಮಕ್ಕಳ ಜನನಾಂಗ ವಿರೂಪ ತಡೆಗಟ್ಟಲು ಡೆಸರ್ಟ್ ಫ್ಲವರ್ ಫೌಂಡೇಷನ್ ಸ್ಥಾಪಿಸುತ್ತಾಳೆ. ಹೀಗೆ ಮರುಭೂಮಿಯ ಮುಳ್ಳುಕಂಟಿಗಳ ಒಣನೆಲದಲ್ಲಿ ಅರಳುವ ಹೂಗಳ ನೋವಿನ ಕತೆಯನ್ನು ಜಗತ್ತೇ ಕಿವಿಯಾಗಿ ಕೇಳುತ್ತದೆ.



ಆದರೆ,

ಲಕ್ಷಗಟ್ಟಲೆ ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿರುವ; ಸಂಪದ್ಭರಿತವಾಗಿದ್ದೂ ಅಂತರ್ಯುದ್ಧದಿಂದ ತತ್ತರಿಸುತ್ತಿರುವ ನೆಲದಿಂದ ತಪ್ಪಿಸಿಕೊಂಡು ಬಂದ ಹುಡುಗಿ ರೆವ್ಲಾನ್ ಮತ್ತಿತರ ಬಹುರಾಷ್ಟ್ರೀಯ ಕಂಪನಿ ಸೌಂದರ್ಯವರ್ಧಕಗಳ ಮಾಡೆಲ್ ಆದದ್ದನ್ನು; ಕಣ್ಕಟ್ಟಿನ ಜಗತ್ತಿಗೆ ಪ್ರತಿನಿಧಿಯಾಗಿ ಇಂಚು-ಗ್ರಾಂ ಲೆಕ್ಕದಲ್ಲಿ ಸೋಲುಗೆಲುವುಯಶಸ್ಸುಗಳ ನಿರ್ಧರಿಸುವ ವೃತ್ತಿ ಆಯ್ದುಕೊಂಡದ್ದನ್ನು ಬಿಡುಗಡೆಯೆಂದು ಭಾವಿಸಬೇಕೆ? ಯಾಕೋ ಅನುಮಾನ ಸುಳಿಯುತ್ತದೆ..

ಅನಾದಿ ಆಚರಣೆ

ಇಂದು ಹಲವು ಪಾರಂಪರಿಕ ಜ್ಞಾನಗಳು ವಿಜ್ಞಾನದ ಒರೆಗಲ್ಲಿನಲ್ಲಿ ಶೋಭಿಸುತ್ತ, ಮತ್ತೆ ಕೆಲವು ನಿಂದನೆಗೊಳಗಾಗುತ್ತ ಇವೆ. ಅಂಥ ಒಂದು ಆಚರಣೆ ಜನನಾಂಗ ವಿರೂಪಗೊಳಿಸುವಿಕೆ. ಅದಕ್ಕೆ ಐದುಸಾವಿರ ವರ್ಷಗಳಷ್ಟು ಇತಿಹಾಸವಿದೆ. ಕ್ರಿ.ಪೂ. ೧೩೬೦ರ ಈಜಿಪ್ಟಿನ ಗೋಡೆ ಕೆತ್ತನೆಗಳ ಮೇಲೆ, ಮಮ್ಮಿಗಳ ಸಾಕ್ರೋಫೇಗಸ್ ಮೇಲೆ ಈ ಪ್ರಕ್ರಿಯೆ ನಡೆಯುತ್ತಿರುವುದನ್ನು ಕೆತ್ತಲಾಗಿದೆ. ಪಿರಮಿಡ್‌ಗಳ ಹಲವು ಮಮ್ಮಿಗಳು ಮುಂಜಿಯಾದ ಕುರುಹು ಹೊಂದಿವೆ. ಆಫ್ರಿಕಾ, ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ, ಇಂಡೋನೇಷಿಯಾ, ದಕ್ಷಿಣ ಅಮೆರಿಕಾ ಮತ್ತು ಕೊರಿಯಾದ ಕೆಲ ಬುಡಕಟ್ಟು ಸಮುದಾಯಗಳು ಇಂದೂ ಧಾರ್ಮಿಕ ಕಟ್ಟುಪಾಡಿನಿಂದ ಹೊರತಾಗಿ ಅದನ್ನು ಮುಂದುವರೆಸಿವೆ. ಈಗ ಮುಸ್ಲಿಮರು ಹಾಗೂ ಜ್ಯೂಗಳು ಮಾತ್ರ ಸುನ್ನತಿಗೊಳಗಾಗುತ್ತಿದ್ದರೂ ವಿಶ್ವಾದ್ಯಂತ ಗಂಡಸರಲ್ಲಿ ಮೂರನೆಯ ಒಂದು ಭಾಗದಷ್ಟು ಜನ ಈ ಕ್ರಿಯೆಗೊಳಗಾಗುತ್ತಾರೆ. ಇದಕ್ಕೆ ‘ಸುನ್ನ’ ಎಂದು ಹಲವು ಪಂಗಡಗಳು ಕರೆಯುತ್ತವೆ, ಹಾಗೆಂದರೆ ‘ಮುಹಮದರ ಪರಂಪರೆಯ ಅನುಯಾಯಿಗಳು’ ಎಂದರ್ಥ. ಇಸ್ಲಾಮಿನಲ್ಲಿ ಹೆಣ್ಣುಮಕ್ಕಳಿಗೆ ಸುನ್ನ ಮಾಡಬೇಕೆಂದು ಹೇಳಿಲ್ಲವಾದರೂ ಬುಡಕಟ್ಟು ಆಚರಣೆ ಹಾಗೇ ಉಳಿದುಕೊಂಡು ಬಂದಿದೆ. ಧಾರ್ಮಿಕ ತ್ಯಾಗ, ಫಲವತ್ತತೆ ವೃದ್ಧಿ, ಗುರುತು, ಪುರುಷತ್ವ ಸಂಕೇತ, ಶತ್ರುಗಳಿಗೆ ಮತ್ತು ಗುಲಾಮರಿಗೆ ಅವಮಾನ ಮಾಡಲು - ಹೀಗೆ ನಾನಾ ಕಾರಣಗಳಿಗಾಗಿ ಈ ಪದ್ಧತಿ ರೂಢಿಯಲ್ಲಿದೆ. ಗಂಡಸಿನ ಮುಂದೊಗಲು ಅವನಿಗೆ ‘ಹೆಣ್ತನ’ದ ಗುಣ ಲಕ್ಷಣ ನೀಡುವುದೆಂದು ಅದನ್ನು ಕತ್ತರಿಸಿ ತೆಗೆಯಲಾಗುತ್ತದೆ! ಸುನ್ನತಿಯ ನಂತರ ಚರ್ಮ ಇಲ್ಲದ ಶಿಶ್ನದ ತುದಿಭಾಗವು ಹೆಚ್ಚು ಸುಖಾನುಭವ ನೀಡುತ್ತದೆ ಎಂದೂ ನಂಬಲಾಗಿದೆ.

ಬೈಬಲಿನಲ್ಲಿ ಈ ರೀತಿ ಇದೆ: “ಅಬ್ರಾಮನಿಗೆ ಸರ್ವೇಶ್ವರನು ಕಾಣಿಸಿಕೊಂಡು ‘ನಿನಗೆ ೯೯ ವರ್ಷವಾಗಿದ್ದರೂ ಅಧಿಕಾಧಿಕ ಸಂತತಿ ಕೊಡುತ್ತೇನೆ. ಅನೇಕ ರಾಷ್ಟ್ರಗಳಿಗೆ ಮೂಲಪುರುಷನನ್ನಾಗಿ ಮಾಡುತ್ತೇನೆ. ಆದರೆ ನನ್ನ ಜೊತೆಗೊಂದು ಚಿರ ಒಡಂಬಡಿಕೆ ಮಾಡಿಕೊಳ್ಳಬೇಕು’ ಎಂದು ಕೇಳಿದಾಗ, ಅದಕ್ಕೆ ಅಬ್ರಾಮ ಒಪ್ಪುತ್ತಾನೆ. ದೇವನು, ‘ನೀನೂ ನಿನ್ನ ಸಂತತಿಯವರೂ ತಲೆತಲಾಂತರಕ್ಕೂ ನಡೆಸಿಕೊಂಡು ಬರಬೇಕಾದ ಒಡಂಬಡಿಕೆ ಇದು: ಪ್ರತಿಯೊಬ್ಬ ಗಂಡಸಿಗೂ ಸುನ್ನತಿಯಾಗಬೇಕು. ಅದು ನಿನಗೂ ನನಗೂ ಆದ ಒಡಂಬಡಿಕೆಯ ಗುರುತು. ಸುನ್ನತಿ ಮಾಡಿಸಿಕೊಳ್ಳದವ ಒಡಂಬಡಿಕೆಯನ್ನು ಉಲ್ಲಂಘಿಸಿದ ಕಾರಣ ಆತ ಕುಲದಿಂದ ಬಹಿಷ್ಕೃತನಾಗಬೇಕು’ ಎನ್ನುತ್ತಾನೆ. ಇದಕ್ಕೊಪ್ಪಿದ ಅಬ್ರಾಮ ತನಗೂ, ತನ್ನ ಗಂಡುಮಕ್ಕಳಿಗೂ, ಕ್ರಯಕ್ಕೆ ಕೊಂಡುತಂದ ಗುಲಾಮರಿಗೂ ಸುನ್ನತಿ ಮಾಡಿಸಿದನು.”

ಸುನ್ನತಿ ಅಥವಾ ಸರ್‌ಕಮ್‌ಸಿಷನ್: ವೈದ್ಯಕೀಯ ವಿವರಣೆ 

ವೈದ್ಯಕೀಯವಾಗಿ ಕೆಲವರಿಗೆ ಸುನ್ನತಿ ಅಥವಾ ‘ಸರ್‌ಕಮ್‌ಸಿಷನ್’ ಮಾಡಲಾಗುತ್ತದೆ. ಪುರುಷ ಜನನೇಂದ್ರಿಯದ ಮುಂಭಾಗದ ಚರ್ಮ ಎಲಾಸ್ಟಿಕ್ ಆಗಿದ್ದು ಜನನಾಂಗ ಹಿಗ್ಗಿಕುಗ್ಗಿದಾಗ ತಾನೂ ಹಿಂದೆ ಮುಂದೆ ಸರಿಯುವಂತಿರುತ್ತದೆ. ಕೆಲವರಲ್ಲಿ ‘ಫೈಮೋಸಿಸ್’ ಅಥವಾ ಜನನೇಂದ್ರಿಯದ ಮುಂದೊಗಲ ದ್ವಾರ ತುಂಬ ಕಿರಿದಾಗಿದ್ದು ತುದಿಭಾಗದ ಚರ್ಮ ಜನನೇಂದ್ರಿಯದ ತುದಿಯಲ್ಲಿ ಮುಂದೆಹಿಂದೆ ಚಲಿಸಲಾಗುವುದಿಲ್ಲ. ಇದು ಜನನಾಂಗದ ಸೋಂಕು, ಮೂತ್ರದ ಸೋಂಕು ಉಂಟುಮಾಡುತ್ತದೆ ಹಾಗೂ ಲೈಂಗಿಕ ಕ್ರಿಯೆಗೆ ತೊಂದರೆ ಕೊಡುತ್ತದೆ. ಅಂಥವರಿಗೆ ಸರ್‌ಕಮ್‌ಸಿಷನ್ ಅವಶ್ಯವಾಗುತ್ತದೆ. ನೋವು ತಿಳಿಯದ ಹಾಗೆ ಲೋಕಲ್ ಅನಸ್ತೇಷಿಯಾ ಕೊಟ್ಟು, ಮುಂಭಾಗದ ಚರ್ಮವನ್ನೆಳೆದು ಕತ್ತರಿಸಿ ಹಿಮ್ಮಡಚಿ ಹೊಲಿಯಲಾಗುತ್ತದೆ. ಹೊಲಿಗೆಗಳು ವಾರದಲ್ಲಿ ತಂತಾನೇ ಕರಗಿ ಉದುರಿ ಹೋಗುತ್ತವೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವ ಅವಶ್ಯಕತೆಯಿಲ್ಲದ, ೧೦-೨೦ ನಿಮಿಷದಲ್ಲಿ ಮಾಡಿ ಮುಗಿಸುವ ಅತಿ ಸರಳ ಆಪರೇಷನ್ನನ್ನು ಫೈಮೋಸಿಸ್ ಇಲ್ಲದವರಿಗೆ ಮಾಡಿದರೂ ಹಾನಿಯಿಲ್ಲ.

‘ಸ್ಮೆಗ್ಮ’ ಎಂದು ಕರೆಸಿಕೊಳ್ಳುವ ಬಿಳಿಯ ಸ್ರಾವವೊಂದು ಪುರುಷ ಜನನೇಂದ್ರಿಯದ ಮುಂದೊಗಲ ಚರ್ಮದಡಿ ಸಂಗ್ರಹವಾಗುತ್ತದೆ. ಸ್ಮೆಗ್ಮವು ಕ್ಯಾನ್ಸರ್‌ಕಾರಕವೆಂದು, ಸ್ತ್ರೀಯರ ಗರ್ಭಕೊರಳ ಕ್ಯಾನ್ಸರ್‌ಗೆ ಕಾರಣವೆಂದು ವೈಜ್ಞಾನಿಕವಾಗಿ ಧೃಢಪಟ್ಟಿದೆ. ಸುನ್ನತಿಯಲ್ಲಿ ಪುರುಷ ಜನನೇಂದ್ರಿಯದ ಮುಂದೊಗಲನ್ನು ತೆಗೆಯುವುದರಿಂದ, ವಿಶೇಷ ಕಾಳಜಿಯಿಲ್ಲದೆಯೂ ಒಳಾಂಗ ಸ್ವಚ್ಛಗೊಳ್ಳುತ್ತದೆ. ಹೀಗಾಗಿ ಅವರ ಪತ್ನಿಯರಿಗೆ ಸ್ಮೆಗ್ಮದಿಂದ ಅಪಾಯವೊದಗುವ ಸಂಭವ ಕಡಿಮೆ. ಎಂದೇ  ಸುನ್ನತಿಯಾದವರಿಗೆ ಶಿಶ್ನ ಕ್ಯಾನ್ಸರಿನ ಸಾಧ್ಯತೆ ಕಡಿಮೆ; ಏಡ್ಸ್ ತಗುಲುವ ಅಪಾಯ ೮ ಪಟ್ಟು ಕಡಿಮೆ; ಸುನ್ನತಿಯಾದ ಗಂಡಸರ ಪತ್ನಿಯರಿಗೆ ಗರ್ಭಕೊರಳ ಕ್ಯಾನ್ಸರಿನ ಪ್ರಮಾಣ ಕಡಿಮೆ ಎಂದು ವೈದ್ಯಕೀಯ ಸಂಶೋಧನೆಗಳು ಸಾಬೀತು ಮಾಡಿವೆ.

ಆದರೆ ಹೆಂಗಸರ ‘ಜನನಾಂಗ ವಿರೂಪಗೊಳಿಸುವಿಕೆ’ಗೆ ಯಾವ ಕಾರಣವೂ ಇಲ್ಲ. ಧಾರ್ಮಿಕ ಪುಸ್ತಕದಲ್ಲಿ ಕಟ್ಟಳೆಯಾಗಿ ಉಲ್ಲೇಖವಿಲ್ಲದಿದ್ದರೂ ಸೆನೆಗಲ್‌ನಿಂದ ಈಥಿಯೋಪಿಯಾದವರೆಗೆ, ಈಜಿಪ್ಟಿನಿಂದ ಟ್ಯಾಂಝಾನಿಯಾದವರೆಗೆ, ಇಡಿಯ ಆಫ್ರಿಕಾ ಖಂಡದ ಬಹುಪಾಲು ರಾಷ್ಟ್ರಗಳಲ್ಲಿ ಹಾಗೂ ಮಧ್ಯಪ್ರಾಚ್ಯದ ಕೆಲವೆಡೆ ಈಗಲೂ ಸ್ತ್ರೀ ಜನನಾಂಗ ವಿರೂಪಗೊಳಿಸುವಿಕೆ (ಫೀಮೇಲ್ ಜೆನೈಟಲ್ ಮ್ಯುಟಿಲೇಷನ್ - ಎಫ್‌ಜಿಎಂ) ನಡೆಯುತ್ತಿದೆ.

ಆದರೆ ಆಫ್ರಿಕಾ ಮತ್ತಿತರ ದೇಶಗಳಲ್ಲಿ ಅವ್ಯಾಹತವಾಗಿ ಈ ಆಚರಣೆ ನಡೆಯುತ್ತಿದೆ. ಮಹಿಳೆಯ ಜನನಾಂಗಗಳು ಕುರೂಪದಿಂದಿವೆ; ಅವು ಅವಳಿಗೆ ಪುರುಷತನ ನೀಡುವಂತಿವೆ; ಅದು ಚಪ್ಪಟೆಯಾಗಿ, ಒಣ ಆಗಿದ್ದರೆ ಗಂಡಿಗೆ ಉತ್ತಮ ಮುಂತಾದ ಕಾರಣಗಳಿಗೆ ಎಫ್‌ಜಿಎಂ ಅನ್ನು ಮುಂದುವರೆಸಿಕೊಂಡು ಬರಲಾಗಿದೆ. ಅದರಲ್ಲೂ ಜನನಾಂಗದ ಕ್ಲಿಟೋರಿಸ್ ಭಾಗದ ಕುರಿತು ಏನೇನೋ ಊಹೆ ಚಾಲ್ತಿಯಲ್ಲಿವೆ. ೧೯ನೇ ಶತಮಾನದವರೆಗೂ ಯೂರೋಪ್ ಮತ್ತು ಅಮೆರಿಕದಲ್ಲಿ ಎಫ್‌ಜಿಎಂ ಧಾರ್ಮಿಕ ಕಾರಣಗಳಿಗಾಗಲ್ಲ, ಸಾಮಾಜಿಕ ಕಾರಣಗಳಿಗೆ ನಡೆಯುತ್ತಿತ್ತು. ಯಾವುದೇ ಹುಡುಗಿ ಹಸ್ತಮೈಥುನದಲ್ಲಿ ತೊಡಗಿದ್ದು ನೋಡಿದರೆ ಅವಳಿಗೆ ಕ್ಲಿಟೋರಿಸ್ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿತ್ತು. ಬ್ರಿಟನಿನ ಖ್ಯಾತ ಗೈನಕಾಲಜಿಸ್ಟ್ ಒಬ್ಬ ತಲೆಕೆಟ್ಟಂತೆ ವರ್ತಿಸುವ ಹೆಣ್ಣುಗಳ ಕ್ಲಿಟೋರಿಸ್ ತೆಗೆದು ಹಾಕುತ್ತಿದ್ದ. ಅವನ ಪ್ರಕಾರ ಹೆಂಗಸರ ದುಷ್ಟತನವೆಲ್ಲ ಜನನಾಂಗದ ಆ ಪುಟ್ಟ ಭಾಗದಲ್ಲಿ ಅಡಗಿಕೊಂಡಿದೆ. ‘ಅದು ಬೆಳೆಯುತ್ತಲೇ ಹೋಗಿ ಗಂಡಸರಷ್ಟು ದೊಡ್ಡ ಆಗುತ್ತದೆ, ಹೆರಿಗೆ ಸಮಯದಲ್ಲಿ ಕಷ್ಟವಾಗುತ್ತದೆ, ಮಗುವಿನ ನೆತ್ತಿಗೆ ತಾಗಿದರೆ ಅಪಾಯವಿದೆ, ಇತ್ಯಾದಿ ತಪ್ಪುಕಲ್ಪನೆಗಳು ಈಗಲೂ ಚಾಲ್ತಿಯಲ್ಲಿವೆ.

ಎಫ್‌ಜಿಎಂನಲ್ಲಿ ಸ್ತ್ರೀ ಜನನೇಂದ್ರಿಯದ ಹೊರಭಾಗವನ್ನು ಗಾಯಗೊಳಿಸಿ ನಂತರ ಹೊಲಿದು ಮುಚ್ಚಿಬಿಡಲಾಗುತ್ತದೆ. ಇದರಲ್ಲಿ ಮೂರು ತೆರನ ತೀವ್ರತೆಯ ಆಚರಣೆಯಿದೆ. ಮೊದಲನೆಯ ಅಥವಾ ಫಸ್ಟ್ ಡಿಗ್ರಿ ಎಫ್‌ಜಿಎಂನಲ್ಲಿ ಜನನಾಂಗದ ಸೂಕ್ಷ್ಮ ಸಂವೇದಿ ಭಾಗವಾದ ಕ್ಲಿಟೋರಿಸ್ ಅನ್ನು ಕತ್ತರಿಸಿ ತೆಗೆದು ಯೋನಿಯ ಕೆಲ ಭಾಗವನ್ನು ಹೊಲಿದು ಮುಚ್ಚಲಾಗುತ್ತದೆ. ಸೆಕೆಂಡ್ ಡಿಗ್ರಿಯಲ್ಲಿ ಕ್ಲಿಟೋರಿಸ್ ಜೊತೆಗೆ ಯೋನಿಯ ಆಚೀಚಿನ ಚರ್ಮವನ್ನೂ ಕತ್ತರಿಸಿ ಹೊಲೆಯುತ್ತಾರೆ. ಅತಿಭೀಕರ ಮೂರನೆಯ ಡಿಗ್ರಿಯಲ್ಲಿ ಹೊರಭಾಗದ ಜನನಾಂಗವನ್ನು ಪೂರಾ ಕತ್ತರಿಸಿ ಕೇವಲ ಮೂತ್ರ ಮತ್ತು ಮುಟ್ಟಿನ ರಕ್ತ ಹೊರಹೋಗುವಷ್ಟು ಚೂರು ಜಾಗ ಬಿಟ್ಟು, ಉಳಿದೆಲ್ಲ ಭಾಗವನ್ನು ಹೊಲಿದುಬಿಡುತ್ತಾರೆ. ಇದನ್ನು ಮಾಡಿದವರು ಅತಿ ಶುದ್ಧ ಹೆಣ್ಣುಗಳೆಂದು ಅವರಿಗೆ ತುಂಬ ಡಿಮ್ಯಾಂಡು. ಹೆಚ್ಚೆಚ್ಚು ಒಂಟೆ-ದುಡ್ಡಿನ ವಧುದಕ್ಷಿಣೆ ಸಿಗುತ್ತದೆ. ವಾರಿಸ್‌ಗೆ ಮಾಡಿದ್ದು ಮೂರನೆಯ ಡಿಗ್ರಿ ಎಫ್‌ಜಿಎಂ.

ಒಂದೇ ಚಾಕು, ಬ್ಲೇಡಿನಿಂದ ೩೦ ಹುಡುಗಿಯರ ಜನನಾಂಗ ಕೊಯ್ಯುವ ಕುಲದ ಹಿರಿಯ ಹೆಂಗಸಿಗೆ ಸೋಂಕು-ಶುದ್ಧತೆ ಇತ್ಯಾದಿ ಯಾವ ತಲೆಬಿಸಿಯೂ ಇರುವುದು ಸಾಧ್ಯವಿಲ್ಲ. ಎಷ್ಟೋ ಎಳೆಯ ಮಕ್ಕಳು ನಂಜಾಗಿ ಸಾಯುತ್ತವೆ. ತಿಂಗಳ ಸ್ರಾವ ಹರಿದುಹೋಗಲೂ ಅತೀವ ಯಾತನೆ ಪಡುತ್ತವೆ. ಮದುವೆಯಾದ ಹೆಣ್ಣುಮಕ್ಕಳಿಗೆ ಪ್ರಥಮ ಸಂಪರ್ಕ ಏರ್ಪಡಲು ಕೆಲವೊಮ್ಮೆ ತಿಂಗಳುಗಟ್ಟಲೆ, ವರ್ಷಗಟ್ಟಲೆ ಹಿಡಿಯುವುದೂ ಇದೆ. ೧೫% ಹೆಣ್ಣುಮಕ್ಕಳಿಗೆ ಗಂಡನೊಡನೆ ದೈಹಿಕ ಸಂಪರ್ಕ ಕೊನೆಗೂ ಸಾಧ್ಯವಾಗುವುದಿಲ್ಲ. ಕೆಲವು ಪತಿರಾಯರು ಮೊದಲ ರಾತ್ರಿ ಯಾವ ಅನಸ್ತೇಶಿಯಾ ಇಲ್ಲದೇ, ಪುಟ್ಟ ಚಾಕುವಿನಿಂದ ಜನನಾಂಗ ಕೊಯ್ದು ಪ್ರವೇಶದ್ವಾರವನ್ನು ಹಿರಿದುಮಾಡಿಕೊಳ್ಳುತ್ತಾರೆ. ಗಂಡ ಹೆಚ್ಚೆಚ್ಚು ಕಷ್ಟಪಟ್ಟಷ್ಟೂ, ಹೆಣ್ಣು ಹೆಚ್ಚೆಚ್ಚು ತೊಂದರೆ ಅನುಭವಿಸಿದಷ್ಟೂ ಇಲ್ಲಿಯವರೆಗೆ ಅವಳು ಪರಿಶುದ್ಧಳಾಗಿದ್ದಳೆಂಬ ಖಾತ್ರಿ ಹೆಚ್ಚುತ್ತ ಹೋಗುತ್ತದೆ. ಇಂಥ ಕಷ್ಟಗಳೆಲ್ಲ ಹೆಮ್ಮೆಯ ವಿಷಯಗಳು! ಗಂಡಸಿನ ಪುರುಷತ್ವದ ಅಳತೆಗೋಲು! ಹೊಲಿದಿದ್ದನ್ನೆಲ್ಲ ಹರಿದು ಮಗು ಹೊರಬಂದಾದ ಮೇಲೂ ಮುಕ್ತಿಯಿಲ್ಲ, ಹೆರಿಗೆಯ ನಂತರ ಹೊಲಿದು ತಮ್ಮ ಹೆಣ್ಣುಮಕ್ಕಳ ಶೀಲವನ್ನು ಸಮಾಜ ಭದ್ರವಾಗಿ ಕಾಯುತ್ತದೆ. ವಿಚಿತ್ರವೆಂದರೆ ಇದನ್ನೆಲ್ಲ ನೆರವೇರಿಸುವವರು ಕುಲದ ಹಿರಿಯ ಹೆಣ್ಣುಮಕ್ಕಳೇ. ಗುಟ್ಟಿನಿಂದ ಆಧುನಿಕ ಆಸ್ಪತ್ರೆಗಳಲ್ಲಿಯೂ ಇದು ನಡೆಯುತ್ತಲಿದೆ.

ಆಫ್ರಿಕನ್ ಗುಲಾಮೀ ಹೆಂಗಸರ ವಿರೂಪಗೊಂಡ ಜನನೇಂದ್ರಿಯಗಳನ್ನು ನೋಡಿದಾಗಲೇ ಉಳಿದ ಜಗತ್ತಿಗೆ ಇದರ ಬಗೆಗೆ ತಿಳಿದಿದ್ದು. ನಂತರ ಸುರೂಪಗೊಳಿಸುವ, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ತೀವ್ರ ಪ್ರಯತ್ನಗಳು ಶುರುವಾದವು. ೧೯೨೯ರಿಂದಲೇ ಕೆನ್ಯಾ ಮಿಷನರಿ ಕೌನ್ಸಿಲ್ ಈ ಅಮಾನುಷ ಆಚರಣೆಯನ್ನು ನಿಲ್ಲಿಸುವಂತೆ ಅಭಿಯಾನ ಕೈಗೊಂಡಿತ್ತು. ಆದರೆ ಈ ಅಭಿಯಾನದ ಒಬ್ಬ ಸನ್ಯಾಸಿನಿಯನ್ನು ಅಪಹರಿಸಿ, ಅವಳ ಜನನಾಂಗ ವಿರೂಪಗೊಳಿಸಿ ಕೊಲೆ ಮಾಡಲಾಯಿತು. ಸ್ವಾತಂತ್ರ್ಯ ಹೋರಾಟದ ನೆಪದಲ್ಲಿ ಕೀನ್ಯಾದಲ್ಲಿ ಬಂಡುಕೋರ ಬುಡಕಟ್ಟುಗಳು ‘ತಮ್ಮ ಹಕ್ಕುಗಳ ಒತ್ತಾಯಪೂರ್ವಕ ಉಲ್ಲಂಘನೆ’ ಎಂದು ಬಣ್ಣಿಸಿ ಎಫ್‌ಜಿಎಂ ಪರ ಹೋರಾಟ ನಡೆಸಿದವು! ಜೋಮೋ ಕೆನ್ಯಾಟಾ ಕೂಡಾ ಅದನ್ನು ಮಹಿಳೆಯರ ಪಾರಂಪರಿಕ ಹಕ್ಕು ಎಂದು ಕರೆದರು!

ಬಹಳಷ್ಟು ದೇಶಗಳಲ್ಲಿ ೧೯೭೦ರಿಂದೀಚೆಗೆ ಎಫ್‌ಜಿಎಂ ನಿಷೇಧಕ್ಕೆ ಒಳಗಾಗಿದ್ದರೂ, ವಿಶ್ವಸಂಸ್ಥೆಯ ಪ್ರಯತ್ನಗಳ ಹೊರತಾಗಿಯೂ ವರ್ಷಕ್ಕೆ ಎರಡು ಮಿಲಿಯನ್‌ಗಿಂತ ಹೆಚ್ಚು ೪-೮ ವರ್ಷ ವಯಸ್ಸಿನೊಳಗಿನ ಹೆಣ್ಣು ಮಕ್ಕಳು ಜನನೇಂದ್ರಿಯ ವಿರೂಪಗೊಳಿಸುವಿಕೆಗೆ ಗುಟ್ಟಾಗಿ ಒಳಗಾಗುತ್ತಿದ್ದಾರೆ. ವಿಶ್ವಾದ್ಯಂತ ೧೨.೫ ಕೋಟಿ ಹೆಣ್ಣುಮಕ್ಕಳು, ಪ್ರತಿದಿನ ೬೦೦೦ ಹೆಣ್ಮಕ್ಕಳು ಈ ವಿಲಕ್ಷಣ ಆಚರಣೆಗೆ ಒಳಗಾಗುತ್ತಾರೆ. ಎರಿಟ್ರಿಯಾ, ಈಥಿಯೋಪಿಯಾ, ಸೂಡಾನ್ ಮತ್ತು ಸೊಮಾಲಿಯಾಗಳಲ್ಲಿ ಎಲ್ಲವನ್ನೂ ಕತ್ತರಿಸಿ ಹೊಲಿದು ಮುಚ್ಚುವ ತೀವ್ರ ಸ್ವರೂಪದ ವಿರೂಪಗೊಳಿಸುವಿಕೆ ೯೦%ಗಿಂತ ಹೆಚ್ಚು ಹೆಣ್ಮಕ್ಕಳಲ್ಲಿ ಕಂಡುಬರುತ್ತದೆ.

ಇಲ್ಲಿ ಒಂದೆರೆಡು ಕುತೂಹಲಕರ ಪ್ರಶ್ನೆಗಳೇಳುತ್ತವೆ: ಎಫ್‌ಜಿಎಂ ಭೂಮಧ್ಯ ರೇಖೆಯ ಆಸುಪಾಸಿನಲ್ಲಷ್ಟೇ ಏಕಿದೆ? ರಷ್ಯಾ, ಚೀನಾ ಸುತ್ತಮುತ್ತಲ ಭಾಗಗಳಲ್ಲಿ ಬುಡಕಟ್ಟುಗಳಿದ್ದರೂ, ಮುಸ್ಲಿಮರಿದ್ದರೂ ಅಲ್ಲಿ ಏಕಿಲ್ಲ? ಜಾತಿ, ಲಿಂಗದ ನೆಪದಲ್ಲಿ ನಾನಾ ರೀತಿಯ ನಿರ್ಬಂಧ ಅನುಭವಿಸಿರುವ ಭಾರತದ ಹೆಣ್ಣುಗಳು ‘ಚೇಸ್ಟಿಟಿ ಬೆಲ್ಟ್’ (ಪವಿತ್ರತೆ ಪಟ್ಟಿ) ಕಟ್ಟಿಕೊಂಡ ದಾಖಲೆ ಅಲ್ಲಿಲ್ಲಿ ಇದ್ದರೂ ಎಫ್‌ಜಿಎಂ ಎಂಬ ಅಮಾನವೀಯ ಪೊಲೀಸಿಂಗ್ ವ್ಯವಸ್ಥೆಯಿಂದ ಹೇಗೆ ಪಾರಾದರು?

ಯೋನಿಪೂಜೆ, ಶಿಶ್ನ ಪೂಜೆ ಮಾಡಿದ ಸಂಸ್ಕೃತಿಯ ವಕ್ತಾರರು ಇದನ್ನೂ ಸನಾತನ ಸಂಸ್ಕೃತಿಯ ಹಿರಿಮೆ ಎಂಬಂತೆ ಬಣ್ಣಿಸಬಹುದು!


ಗೋರಿಯವರೆಗೂ ಮೌನವಾಗಿ ಒಯ್ದ ನೋವು


ಹೆಣ್ಣುಮಕ್ಕಳು ತಮ್ಮ ಮುಚ್ಚಿಟ್ಟ ಗಾಯಗಳ ತೆರೆದು ತೋರಿಸತೊಡಗಿದರೆ ಈ ಜಗತ್ತಿನ ಎಲ್ಲ ಮಹಾನ್ ದೇಶಗಳು, ಸಂಸ್ಕೃತಿಗಳು, ನಾಗರಿಕತೆ-ಧರ್ಮಗಳು ತಲೆ ತಗ್ಗಿಸಿ ನಿಲ್ಲಬೇಕಾಗುತ್ತದೆ. ಪರ್ಯಾಯ ಸಂಸ್ಕೃತಿ, ಮಾತೃಮೂಲೀಯ ಸಂಸ್ಕೃತಿ ಎಂದು ಯಾವುದನ್ನೆಲ್ಲ ನಾವು ಎತ್ತಿ ಹಿಡಿಯುತ್ತೇವೋ ಅವನ್ನೂ ಸೇರಿಸಿದಂತೆ ಭೂಮಿ ಮೇಲಿನ ಎಲ್ಲ ಕುಲಧರ್ಮದೇಶಗಳೂ ನಾನಾ ಹೆಸರುಗಳಲ್ಲಿ ಹೆಣ್ಣನ್ನು ದಮನಿಸುತ್ತ ಬಂದಿವೆ. ದ್ವಿಪಾದಿ ಮನುಷ್ಯನ ತವರು, ಸಂಪದ್ಭರಿತ ನೆಲ ಆಫ್ರಿಕಾದ ಸಂಸ್ಕೃತಿ-ಸಾಧನೆಗಳೇನೇ ಇರಲಿ, ಜನನಾಂಗ ವಿರೂಪಗೊಳಿಸುವಿಕೆ ಎಂಬ ಗುನ್ನೆಯ ನುಸಿ ಸಾವಿರ ಚಿತ್ತಾರಗಳ ಮಸಿ ನುಂಗುವಷ್ಟು ಭೀಕರವಾಗಿದೆ.

ಒಂದು ಹೆಣ್ಣಿಗೆ ಸಂಭವಿಸಬಹುದಾದ ಅತ್ಯಂತ ಬರ್ಬರ ಆಘಾತ ಜನನಾಂಗ ವಿರೂಪಗೊಳಿಸುವಿಕೆ. ಇದು ಹೆಣ್ಣಿನ ಲೈಂಗಿಕತೆಯ ಮೇಲೆ ಹಿಡಿತ ಸಾಧಿಸಲು ಸಮಾಜ ಅನುಸರಿಸಿದ ಅನಾಗರಿಕ ಕ್ರೌರ‍್ಯ. ಧಾರ್ಮಿಕ ಕಾರಣ, ಅನಕ್ಷರತೆ, ಬಡತನ, ಮೂಢನಂಬಿಕೆ ಇವ್ಯಾವುವೂ ಜನನಾಂಗ ವಿರೂಪಗೊಳಿಸುವಿಕೆಗೆ ಪೂರಾ ಕಾರಣವಲ್ಲ. ಹೆಣ್ಣಿನ ಶೀಲ ಕುರಿತ ಪರಿಕಲ್ಪನೆಯ ಜೊತೆಗೆ ಗಂಡಸಿನ ಸಂಪರ್ಕ ಅವಳಿಗೆ ‘ಸುಖ’ ನೀಡದೇ ಎಂದಿಗೂ ನೋವಿನಿಂದ ಕೂಡಿರಬೇಕು ಎಂಬ ಉದ್ದೇಶವೇ ಅದಕ್ಕಿರುವ ಏಕೈಕ ಕಾರಣ.
ದುರಂತವೆಂದರೆ ಅಮ್ಮ, ಅಜ್ಜಿಯಂದಿರೇ ಪಟ್ಟು ಹಿಡಿದು ತಮ್ಮ ಹೆಣ್ಮಕ್ಕಳನ್ನು ಹಿಂಸೆಗೊಳಪಡಿಸಿ ಅವರನ್ನು ಹೆಣ್ಣುಗಳಾಗಿ ಸಿದ್ಧಗೊಳಿಸಿದ್ದಾರೆ.

ಯಾಕಾಗಿ ಒಂದು ಹೆಣ್ಣು ಜೀವವನ್ನು ಅಂಥ ಕ್ರೂರ ಸಂಕಟಕ್ಕೆ ಈಡುಮಾಡಲಾಗುತ್ತದೆ? ಸಾವಿರಾರು ವರ್ಷಗಳಿಂದ ಕೋಟಿಗಟ್ಟಲೇ ಹೆಣ್ಣುಮಕ್ಕಳು ಅನುಭವಿಸಿರಬಹುದಾದ ದೈಹಿಕ ಮಾನಸಿಕ ಯಾತನೆಯ ವಿರುದ್ಧ ಅವರೇಕೆ ಇದಿರಾಡಲಿಲ್ಲ?

ಅದಕ್ಕೆ ಕಾರಣ ಲಿಂಗರಾಜಕಾರಣ. ಪಳಗಿಸಲಾಗದ ಹೆಣ್ಣಿನ ಲೈಂಗಿಕತೆಯನ್ನು ತಮ್ಮಿಷ್ಟದಂತೆ ವ್ಯಾಖ್ಯಾನಿಸಿ, ನಿಯಂತ್ರಿಸಿ, ಕಟ್ಟುಪಾಡಿಗೊಳಪಡಿಸಲು ಸಮಾಜ ರೂಪಿಸಿದ ವ್ಯವಸ್ಥೆ ಅದು. ಇವತ್ತು ಹೆಣ್ಣಿನ ಮೇಲೆ ನಡೆಯುವ ಅಸಂಖ್ಯ ದೌರ್ಜನ್ಯಗಳ ಕಾರಣವೂ ನೈಸರ್ಗಿಕ ಲಿಂಗಭೇದವನ್ನು ಲಿಂಗ ತಾರತಮ್ಯವಾಗಿಸಿದ ಲಿಂಗ ರಾಜಕಾರಣವೇ. ಈ ಬೀಜವನ್ನು ಯಾರು ಬಿತ್ತಿದರು? ಯಾಕಾಗಿ ಬಿತ್ತಿದರೆಂದು ಅರ್ಥಮಾಡಿಕೊಳ್ಳಬೇಕೆಂದರೆ ಪುರುಷ ಹೆಣ್ಣಿನ ಲೈಂಗಿಕತೆಯನ್ನು ಹೇಗೆ ಪರಿಭಾವಿಸಿ ನಿಯಂತ್ರಿಸಬಯಸಿದ್ದಾನೆ ಎನ್ನುವುದನ್ನು ತಿಳಿಯಬೇಕಾಗುತ್ತದೆ.

ಯಾವಾಗ ಹೋಮೋಎರೆಕ್ಟಸ್ ಎಂಬ ಈ ಜೀವ ಪ್ರಭೇದ ಒಂದು ಕಡೆ ನೆಲೆ ನಿಂತು ಆಸ್ತಿಯ ಕಲ್ಪನೆ ಮೂಡಿತೋ ಆಗ ಉತ್ತರಾಧಿಕಾರಿ ಕಲ್ಪನೆ ಬಲವಾಯಿತು. ನಮ್ಮ ದೇಶದ ಮಟ್ಟಿಗೆ ಕ್ರಿ. ಪೂ. ೮ರಿಂದ ೫ನೇ ಶತಮಾನದ ಹೊತ್ತಿಗೆ ರಾಜ್ಯ-ರಾಜಕಾರಣ ಶುರುವಾಯಿತು. ಬುಡಕಟ್ಟುಗಳ ಕುಲಮೂಲ ಸಂಬಂಧ ನಾಶವಾಗಿ ಭೂಮಿ ಖಾಸಗಿ ಸ್ವತ್ತಾಯಿತು. ಪಿತೃಪ್ರಧಾನ ಆಸ್ತಿ, ಪಿತೃಪ್ರಧಾನ ಉತ್ತರಾಧಿಕಾರ ವ್ಯವಸ್ಥೆ ಚಾಲ್ತಿಗೆ ಬಂತು. ಆಗ ‘ಕ್ಷೇತ್ರ’ವನ್ನು ಶುದ್ಧತೆಗಾಗಿ ಕಾಯಬೇಕಾದ ಅನಿವಾರ್ಯತೆ ಹುಟ್ಟಿತು. ಆದ್ದರಿಂದ ಹೆಣ್ಣಿನ ಮಟ್ಟಿಗೆ ಮನುಷ್ಯನ ಅಲೆಮಾರಿತನ ಕಳೆದು ಆಸ್ತಿ ಪರಿಕಲ್ಪನೆ ಮೂಡಿದ ಕ್ಷಣ ಏನಿದೆಯೋ ಅದು ಅವಳ ಸುತ್ತ ಕಟ್ಟಿದ ಗೋಡೆಗೆ ಪಾಯ ತೋಡತೊಡಗಿದ ದಿನವೂ ಹೌದು. ಇನ್ನೂ ವಿಸ್ತರಿಸಿ ಹೇಳಬೇಕೆಂದರೆ ವಿವಾಹ ಸಂಸ್ಥೆ ಗಟ್ಟಿಗೊಂಡು ಒಳ ವಿವಾಹ ಚಾಲ್ತಿಗೆ ಬಂದ, ಜಾತಿವ್ಯವಸ್ಥೆ ಹುಟ್ಟಿಕೊಂಡ ಸಮಯವೂ ಅದೇ.

ಭಾರತದ ಕತೆ ಹೀಗಾಯಿತು. ಯಹೂದಿಗಳ ದಿನದ ಪ್ರಾರ್ಥನೆಯ ಒಂದು ಸಾಲು ನೋಡಿ:

ಗಂಡಸರು: ‘ಓ ದೇವರೇ, ನಿನಗೆ ನಮಸ್ಕಾರ, ಏಕೆಂದರೆ ನೀನು ನನ್ನನ್ನು ಹೆಣ್ಣಾಗಿ ಹುಟ್ಟಿಸಲಿಲ್ಲ.’
ಹೆಂಗಸರು: ‘ಓ ದೇವರೇ, ನಿನಗೆ ನಮಸ್ಕಾರ, ಏಕೆಂದರೆ ನೀನು ನನ್ನನ್ನು ನಿನ್ನ ಚಿತ್ತಕ್ಕೆ ತಕ್ಕಂತೆ ಸೃಷ್ಟಿಸಿರುವೆ.’

ಕನಸುಗಳನ್ನು ವಿಶ್ಲೇಷಣೆ ಮಾಡಿದ ಫ್ರಾಯ್ಡ್‌ನ ಹೆಣ್ಣಿನ ಮಾದರಿ ನೋಡಿದರೆ ಗಾಬರಿಯಾಗುತ್ತದೆ. ತನಗಿರದ ಯಾವುದೋ ಒಂದು ಅಂಗ ಗಂಡಸಿಗಿದೆ; ಎಂದೇ ಅವಳಿಗೆ ತನ್ನ ಮೇಲೆ ಕೀಳರಿಮೆ ಹಾಗೂ ಗಂಡಿನ ಮೇಲೆ ದ್ವೇಷ ಎಂದು ‘ಶಿಶ್ನದ್ವೇಷ’ವನ್ನು ಪ್ರತಿಪಾದಿಸಿದವ ಫ್ರಾಯ್ಡ್. ಮಾನಸಿಕ ಸ್ತರದಲ್ಲಿ ದ್ವೇಷ ಮನೆ ಮಾಡಿರುವುದರಿಂದ ಅವಳಿಗೆ ನ್ಯಾಯದ ಪರಿಕಲ್ಪನೆ ಅಷ್ಟಾಗಿರುವುದಿಲ್ಲ; ಗಂಡಸು ಹೇಳಿದಂತೆ ಕೇಳುವ ವಸ್ತುವಾಗದಿದ್ದರೆ ಅವಳಿಗೆ ಸುಖ ಸಿಗುವುದಿಲ್ಲ; ಹುಟ್ಟಿನಿಂದ ಅವನಿಗಿಂತ ತಾನು ಕಡಿಮೆ ಎಂದು ಒಪ್ಪಿಕೊಂಡರಷ್ಟೇ ಲೈಂಗಿಕ ಸಂತೃಪ್ತಿ ದೊರೆಯಲು ಸಾಧ್ಯ ಎಂದೂ ಫ್ರಾಯ್ಡ್ ಪ್ರತಿಪಾದಿಸುತ್ತಾನೆ. ನಿಷ್ಕ್ರಿಯತೆಯನ್ನು ಹೆಣ್ಣುತನಕ್ಕೂ, ಕ್ರಿಯಾಶೀಲತೆಯನ್ನು ಗಂಡುತನಕ್ಕೂ ಅವನ ಅನುಯಾಯಿಗಳು ಸಮೀಕರಿಸುತ್ತಾರೆ.

ಮನುವೋ, ಫ್ರಾಯ್ಡನೋ, ಮತ್ಯಾವ ಧರ್ಮ ಸಂಸ್ಥಾಪಕರೋ, ಒಟ್ಟಾರೆ ಹೆಣ್ಣಿನ ಕುರಿತು ಎಲ್ಲ ಹೇಳುವುದಿಷ್ಟೆ: ವ್ಯಕ್ತಿತ್ವವನ್ನೇ ಇಲ್ಲವಾಗಿಸಿಕೊಂಡು ತ್ಯಾಗ ಬಲಿದಾನಗಳನ್ನು ವಿಸ್ತರಿಸುತ್ತ ಸಂತೋಷ ಹಂಚುವುದೇ ಹೆಣ್ಣಿನ ಸುಖ. ಅಧೀನತೆಯೇ ಅವಳ ಮಾನವೀಯ ಸಂಬಂಧ. ಸ್ವಾತಂತ್ರ್ಯ, ಸಮಾನತೆಗಳು ಭಾಷಿಕ ಪದಗಳಷ್ಟೇ ಹೊರತು ಎಂದೂ ಹೆಣ್ಣಿನ ವಿಷಯದಲ್ಲಿ ವಾಸ್ತವ ಸತ್ಯಗಳಲ್ಲ..

ಆದರೆ ಲಿಂಗ ರಾಜಕಾರಣ ಸೃಷ್ಟಿಸಿರುವ ಸಾಮಾಜಿಕ ಚೌಕಟ್ಟಿನಲ್ಲಿ ಗಂಡೂ ಬಂಧಿಯೇ. ಅದು ತನಗೆ ಲಾಭದಾಯಕ, ಕ್ಷೇಮಕರ ಎಂದು ಮೇಲ್ನೋಟಕ್ಕೆ ಅನಿಸುತ್ತಿರಬಹುದು. ಅಧಿಕಾರ ತನ್ನಲ್ಲಿದೆ ಎಂಬ ಅಹಂಕಾರಕ್ಕೂ ಕಾರಣವಾಗಿರಬಹುದು. ಆದರೆ ಜೀವಮಾನವಿಡೀ ಒಂದಲ್ಲ ಒಂದು ಹೆಣ್ಣಿನೊಡನೆ ಕಳೆಯಬೇಕಾದ ಗಂಡು, ಅವಳು ಆತಂಕ-ಕಳವಳ-ಅಸಮಾಧಾನ-ತಳಮಳದಲ್ಲಿದ್ದರೆ; ಅವಳ ನಿಯಂತ್ರಣವೇ ನಿತ್ಯದ ತಲೆಬಿಸಿಯಾದರೆ ಹೇಗೆ ತಾನೇ ನೆಮ್ಮದಿಯಾಗಿರಬಲ್ಲ? ಅಧಿಕಾರ ಅಂತಸ್ತಿನ ಸೋಗಿನಲ್ಲಿ ಸುಖವನ್ನು ನಟಿಸಬಲ್ಲ ಅಷ್ಟೆ.

ಇಷ್ಟನ್ನು ಸಮಾಜ ತಿಳಿದ ದಿನ ಎಲ್ಲ ಲಿಂಗತಾರತಮ್ಯ-ದುಷ್ಟತನಗಳೂ ಹೋರಾಟವಿಲ್ಲದೇ ಕೊನೆಗೊಳ್ಳುತ್ತವೆ. ಅರಳಲಿರುವ ಹೂಗಳು ಅಂಥ ದಿನಗಳ ಕುರಿತು ಭರವಸೆ ಹೊಂದಿವೆ.



Wednesday, 13 August 2014

ನುಡಿಸಿರಿಯ ನೆಪದಲ್ಲಿ: ಸಾಹಿತಿಗಳ ಬೌದ್ಧಿಕ ದಿವಾಳಿತನ


ಸಾಲ್ವಡಾರ್ ಡಾಲಿ ಪೇಯಿಂಟಿಂಗ್

ಪ್ರತಿಸಲದಂತೆ ಈ ಬಾರಿಯೂ ನವೆಂಬರ್ ತಿಂಗಳಿನಲ್ಲಿ ಕನ್ನಡ ಮಹೋತ್ಸವಗಳು ಜರುಗಿವೆ. ಮೂಡಬಿದ್ರಿಯ ‘ಫೈವ್‌ಸ್ಟಾರ್’ ಕಾರ್ಯಕ್ರಮಕ್ಕೆ ಹೋಗಿಬಂದ ಕನ್ನಡ ಸಾಹಿತಿಗಳು ಕವಿತೆ ಓದಿ, ಕತೆ ಕೇಳಿಸಿ, ಸಂವಾದಿಸಿ ಅಲ್ಲಿನ ಶಿಸ್ತು, ಅಚ್ಚುಕಟ್ಟುಗಳನ್ನು ಕಂಡು ದಂಗಾಗಿ ಹಿಂದಿರುಗಿದ್ದಾರೆ. ಗುಜರಾತನ್ನೂ, ನರೇಂದ್ರ ಮೋದಿಯನ್ನೂ ಕಾವ್ಯ-ಕತೆಗಳಲ್ಲಿ ವಸ್ತುವಾಗಿಸಿ, ರೂಪಕವಾಗಿಸಿ ಬರೆದ ಮನಸುಗಳು ಅದೇ ತಾತ್ವಿಕತೆಯ ಸಾಹಿತ್ಯಿಕ ಮತ್ತು ಸಿವಿಲೈಜ್ಡ್ ರೂಪವಾದ ಸಮ್ಮೇಳನದಲ್ಲಿ ಭಾಗಿಯಾಗಿ ಪುಳಕಗೊಂಡಿವೆ. ಕೋಮುವಾದ ವಿರೋಧಿ, ಪ್ರಗತಿಪರ ಎಂದೆಲ್ಲ ಹಣೆಪಟ್ಟಿ ಅಂಟಿಸಿಕೊಂಡ ಹಿರಿಕಿರಿ ಸಾಹಿತಿಗಳು ಕೋಮುಹಿಂಸೆಗೆ ಕಾರಣವಾದವರನ್ನು ಅವರ ವೇದಿಕೆಯಲ್ಲೇ ಹೊಗಳಿ ಅಟ್ಟಕ್ಕೇರಿಸಿರುವುದು; ವಿರಾಟ್ ಹಿಂದೂ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರನ್ನು ಕೋಮುವಾದ ನಿಲ್ಲಿಸಿ ಎಂದು ಕೇಳಿಕೊಳ್ಳುವುದು ಸಾಹಿತ್ಯಿಕ ವಲಯದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.

ಇದು ಖಾಸಗೀಕರಣದ ಕಾಲ. ಆರ್ಥಿಕ-ಸಾಮಾಜಿಕ ಕ್ಷೇತ್ರಗಳಷ್ಟೆ ಅಲ್ಲ, ಕಲೆ-ಸಾಹಿತ್ಯ-ಭಾಷೆ-ಚಳುವಳಿಗಳೂ ಖಾಸಗೀಕರಣಗೊಂಡಿವೆ. ಕೆಲ ಮಹಾನ್‌ಪೋಷಕ ವ್ಯಕ್ತಿಗಳು ಸೃಷ್ಟಿಯಾಗಿದ್ದಾರೆ. ಅವರು ಧಾರ್ಮಿಕ ಸ್ಥಳವೊಂದನ್ನು ನಡೆಸುತ್ತ ಜನರಿಗೆ ಆಧ್ಯಾತ್ಮ ಹಂಚುತ್ತಾರೆ. ಶಿಕ್ಷಣ ಸಂಸ್ಥೆಗಳನ್ನೂ ಹುಟ್ಟುಹಾಕುತ್ತಾರೆ. ಸಾಹಿತ್ಯ ಸಮ್ಮೇಳನ ನಡೆಸಿ ಪ್ರಶಸ್ತಿ ನೀಡುತ್ತಾರೆ. ನೃತ್ಯ-ಸಂಗೀತ ದಿಗ್ಗಜರನ್ನು ಕರೆಸಿ ಪ್ರದರ್ಶನ ಏರ್ಪಡಿಸುತ್ತಾರೆ. ಜನಪದ ಕಲಾತಂಡಗಳನ್ನು ಕರೆಸಿ ಸನ್ಮಾನ ಮಾಡುತ್ತಾರೆ. ಕ್ರೀಡಾ ಕೂಟ ನಡೆಸುತ್ತಾರೆ. ನಾಟಿ ವೈದ್ಯ ಸಮಾವೇಶವನ್ನೂ, ರೈತ ಸಮಾವೇಶಗಳನ್ನೂ ಸಂಘಟಿಸುತ್ತಾರೆ. ಎಲ್ಲದರಲ್ಲೂ ಅಚ್ಚುಕಟ್ಟು. ಬಂದವರಿಗೆ ಯೋಗ್ಯತೆಗೆ ತಕ್ಕ ಸತ್ಕಾರ. ಯಾವ ಲೋಪವೂ ಎದ್ದು ಕಾಣದಂತಹ ಸಂಘಟನಾ ಕೌಶಲ. ಅವರ ಜಗಲಿ, ಹಿತ್ತಲುಗಳು ಸಾಂಸ್ಕೃತಿಕ ಲೋಕದ ಮಾಲ್‌ಗಳಂತೆ ಝಗಮಗಿಸುತ್ತವೆ.

ಸರ್ಕಾರಿಯೋ, ಖಾಸಗಿಯೋ, ಕಲೆ-ಶಿಕ್ಷಣ-ಸಂಸ್ಕೃತಿಗಳು ಸಿರಿವಂತರಿಂದಲೂ ಪುನರುಜ್ಜೀವನಗೊಳ್ಳುತ್ತಿದ್ದರೆ ಅದಕ್ಕೇಕೆ ತಕರಾರು ಎನಿಸಬಹುದು. ತಕರಾರುಗಳು ಸಕಾರಣ; ಸಂಘಟಕರ ಕುರಿತಷ್ಟೇ ಅಲ್ಲ, ಭಾಗವಹಿಸಿದವರ ಕುರಿತೂ.

ಏಕೆಂದರೆ ಈ ಮಹಾಪೋಷಕರು ಕಲೆಸಾಹಿತ್ಯಸಂಸ್ಕೃತಿಗಷ್ಟೇ ಅಲ್ಲ, ಫ್ಯೂಡಲ್ ವ್ಯವಸ್ಥೆಯ ಮಹಾಪೋಷಕರೂ ಹೌದು. ಕಣ್ಣು ಕೋರೈಸುವ ಸಂಘಟನಾ ಕೌಶಲದ ಹೊರತಾಗಿಯೂ ಫ್ಯೂಡಲ್ ವ್ಯವಸ್ಥೆಯ ಕುರುಹುಗಳು ಅಲ್ಲಿ ಕಣ್ಣಿಗೆ ರಾಚುತ್ತವೆ. ಅವರು ಸಂಘಟಿಸುವ ಪಲ್ಲಕ್ಕಿ ಮೆರವಣಿಗೆಯಲ್ಲಿ ಛತ್ರ ಚಾಮರ ಧ್ವಜ ಹಿಡಿಯುವವರು, ಶಿಸ್ತಾಗಿ ಎರಡೂ ಸಾಲಿನಲ್ಲಿ ನಿಂತು ಸ್ವಾಗತಿಸುವ ತರುಣ ತರುಣಿಯರು ಜನಸಮುದಾಯವೊಂದು ಒಟ್ಟಾಗಿ ನಡೆಸುವ ಸಂಭ್ರಮದ ಜಾತ್ರೆಯ ಭಾಗಿದಾರರಂತೆ ಕಾಣುವುದಿಲ್ಲ. ಬದಲಾಗಿ ಏಕಮಾತ್ರ ನಾಯಕನ ಆಜ್ಞೆಗನುಸಾರ ನಡೆವ ಸೇವಕರಂತೆ ಪಾಲ್ಗೊಂಡಿರುವುದು ಚಹರೆಗಳಿಂದ ತಿಳಿದು ಬರುತ್ತದೆ.

ಆಳುವವರು ಯಾರಾದರಾಗಲಿ, ಈ ಮಹಾಪೋಷಕರು ಅವರ ಕೃಪಾಕಟಾಕ್ಷ ಬಯಸುತ್ತಾರೆ. ಎಂದೇ ಇಂಥ ಸಮ್ಮೇಳನಗಳು ಚಾಲಾಕು ಬಂಡವಾಳ ಹೂಡಿಕೆದಾರನ ಶುದ್ಧ ವ್ಯಾಪಾರೀ ಹಿತಾಸಕ್ತಿಯಿಂದ ಸ್ಫೂರ್ತಿ ಪಡೆದು ನಡೆಯುತ್ತವೆ. ಅವರ ಬಂಡವಾಳವನ್ನು ಪವಿತ್ರೀಕರಿಸುವ, ಬಂಡವಾಳಕ್ಕೆ ಮಾನ್ಯತೆ, ಮೌಲ್ಯ ತಂದುಕೊಡುವ ಪ್ರಯತ್ನ ಅದು. ಈ ಮಾನ್ಯತೆ, ಮೌಲ್ಯಗಳು ಆಳುವವರನ್ನು, ವ್ಯವಸ್ಥೆಯನ್ನು ಆ ಬಂಡವಾಳಿಗನ ಕುರಿತು ಮಿದುಗೊಳಿಸಿ ನ್ಯಾಯನಿಷ್ಠುರತೆಯನ್ನು ಮಬ್ಬುಗೊಳಿಸುತ್ತವೆ. ಅಂಥ ವ್ಯಕ್ತಿಯ ವಿರುದ್ಧ ಮಾತಾಡುವುದು ಅಥವಾ ಕ್ರಮ ಕೈಗೊಳ್ಳುವುದು ಕಾನೂನು ಪ್ರಕಾರವೂ ಕಷ್ಟವಾಗುತ್ತದೆ. ಏಕೆಂದರೆ ಗಣ್ಯ ಬೆಂಬಲ ಅದಕ್ಕೆ ದಕ್ಕಿರುತ್ತದೆ. ಯಥಾಸ್ಥಿತಿ ಕಾಯ್ದುಕೊಳ್ಳಬಯಸುವುದೇ ತಾತ್ವಿಕತೆಯಾದ ರಾಜಕಾರಣವೂ ಇವರ ಬೆಂಬಲಕ್ಕೆ ಸದಾ ನಿಲ್ಲುತ್ತದೆ. ಇದೊಂದು ಮ್ಯೂಚುವಲ್ ಅಂಡರ್‌ಸ್ಟಾಂಡಿಂಗ್. ಬಂಡವಾಳ ಮತ್ತು ರಾಜಕಾರಣ ವಿವಿಧ ಸ್ತರಗಳಲ್ಲಿ ಮಾಡಿಕೊಂಡ ಅಪವಿತ್ರ ಮೈತ್ರಿಯ ಕುರುಹು.

ಇಂಥವರು ಸಾಹಿತ್ಯ ಜಗತ್ತಿನ ವಾರಸುದಾರರಾಗಿ ಅದಕ್ಕೆ ಸಾಹಿತಿಗಳ ಮುದ್ರೆಯೂ ದೊರೆತರೆ? ಅದು ಸಾಹಿತ್ಯ ಲೋಕದ, ಸಮಾಜದ ದುರಂತ. ಇದು ಅತಿಸೂಕ್ಷ್ಮ ಮನಸ್ಸುಗಳೆನಿಸಿರುವ ಸಾಹಿತಿಗಳಿಗೆ ಅರ್ಥವಾಗುವುದಿಲ್ಲವೆ?

ಗುಂಪಾಗಿ ಹೋಗಿ ಸಮ್ಮಾನಗೊಂಡು ಬರುವವರಲ್ಲಿ ಅತಿ ಹಿರಿಯ ಸಾಹಿತಿಗಳ ಬಗ್ಗೆ ತಕರಾರು ಎತ್ತಿ ಉಪಯೋಗವಿಲ್ಲ. ಏಕೆಂದರೆ ಅವರು ಗಣಿಕಳ್ಳರ ಲೂಟಿ ವಿರುದ್ಧ ನಡೆದ ಜಾಥಾದಲ್ಲಿ ಪಾಲ್ಗೊಂಡ ಮರುದಿನವೇ ಮತ್ತೊಬ್ಬ ಭೂಗಳ್ಳನ ಉಪವಾಸಕ್ಕೆ ಮನನೊಂದು ಮಾನವೀಯತೆಯ ಕಿತ್ತಳೆ ರಸ ಕುಡಿಸಿ ಬರುತ್ತಾರೆ. ಕೋಮುವಾದಿ ಎಂದು ಸರ್ಕಾರವನ್ನು ಟೀಕಿಸುತ್ತಲೇ ಅದು ನಡೆಸುವ ಸಮ್ಮೇಳನದ ಅಧ್ಯಕ್ಷಗಿರಿಯನ್ನು ಒಪ್ಪಿಕೊಳ್ಳುತ್ತಾರೆ. ತಮ್ಮ ಸಮಾಜವಾದಿ ಕ್ರಾಂತಿಯ ಕನಸಿನ ಕಡೆಯ ದಿನಗಳಲ್ಲಿ ಇಂಥ ವೈಭವಕ್ಕೆ ಅವರು ಸಾಕ್ಷಿಯಾಗಲಿ. ಅದರಿಂದ ಏನೂ ನಷ್ಟವಿಲ್ಲ.

ಆದರೆ ನಮ್ಮ ಸಮಕಾಲೀನರಾಗಿರುವ, ಪ್ರಸ್ತುತ ಸಾಮಾಜಿಕ-ರಾಜಕೀಯ ತಲ್ಲಣಗಳ ನಡುವೆ ಮಿದುಳು-ಮನಸ್ಸುಗಳನ್ನು ಶುದ್ಧವಾಗಿಟ್ಟುಕೊಂಡಿರುವ ಕೆಲವು ಸಂವೇದನಾಶೀಲ ಮಿತ್ರರೂ ಭಾವುಕವಾಗಿ ಅಲ್ಲಿ ಭಾಗವಹಿಸುವುದಷ್ಟೇ ಅಲ್ಲ, ಅದಕ್ಕೆ ಸಮಜಾಯಿಷಿ ನೀಡುತ್ತಿರುವುದು ವರ್ತಮಾನದ ವಿಪರ್ಯಾಸಗಳನ್ನು ಸಂಕೀರ್ಣಗೊಳಿಸಿದೆ. ವಿರಾಟ್ ಹಿಂದೂ ಸಮಾವೇಶಕ್ಕೆ ತನುಮನಧನ ಧಾರೆಯೆರೆಯುವವರನ್ನು ಕೋಮುವಾದ ನಿಲ್ಲಿಸಿ ಎಂದು ಭಾವದುಂಬಿ ಕೇಳುವುದೇನೋ ಸರಿಯೆ, ಆದರೆ ಅಂಥ ಉತ್ಸವದಲ್ಲಿ ಪಾಲ್ಗೊಳ್ಳುವಿಕೆ ಹಲವಾರು ಪ್ರಶ್ನೆಗಳನ್ನೆತ್ತಿದೆ.

ಜನರ ಸಂಪನ್ಮೂಲ, ಜನರ ತೆರಿಗೆಯಿಂದ ಬರುವ ಬೊಕ್ಕಸದ ಹಣವನ್ನು ನೆರೆಬರದ ಕಾಲದಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಖರ್ಚು ಮಾಡುವುದು ಸರಿಯಲ್ಲ ಎಂದು ತಕರಾರು ತೆಗೆಯುವ ನಾವು; ಹೆಚ್ಚುಕಡಿಮೆ ಅಷ್ಟೇ ಖರ್ಚು ಮಾಡಿ ವ್ಯಕ್ತಿಯೊಬ್ಬ ಸಂಘಟಿಸುವ ಕಾರ್ಯಕ್ರಮದ ಬಂಡವಾಳ ಮೂಲದ ಕುರಿತು, ನಡೆಸುವವರ ಆದ್ಯತೆಗಳ ಕುರಿತು ಯೋಚಿಸದೆ ಪಾಲ್ಗೊಳ್ಳಬಹುದೇ?

ಕೇವಲ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳನ್ನು ಟೀಕಿಸುವುದರಿಂದ ನಮ್ಮ ರಾಜಕೀಯ ನಿಲುವುಗಳು ವ್ಯಕ್ತವಾಗುವುದೇ? ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಹಾಗೂ ದ್ವಂದ್ವ-ಬಿಕ್ಕಟ್ಟುಗಳ ಸಂದರ್ಭದಲ್ಲಿ ನಾವು ಯಾರ ಜೊತೆಗಿದ್ದೇವೆ ಎನ್ನುವುದು ಕೂಡಾ ರಾಜಕೀಯ ನಿಲುವುಗಳನ್ನು ರೂಪಿಸುವುದಿಲ್ಲವೆ?

ಸಾಹಿತಿಗಳು ಬೀದಿಗಿಳಿದು ಹೋರಾಡುವ ಕಾಲ ದೂರವಾಗಿದೆ. ನನ್ನನ್ನೂ ಸೇರಿಸಿ ಹೇಳುವುದಾದರೆ ಇದು ಹೋರಾಡುವವರು ಮತ್ತು ಹೋರಾಟ ಸಾಹಿತ್ಯ ರಚಿಸುವವರು ಬೇರೆಬೇರೆಯಾಗಿರುವ ಕಾಲ. ಹೀಗಿರುತ್ತ ಅಂತರಾಳದಲ್ಲಿ ಒಂದು ಉರಿವ ಕಿಡಿಯಾದರೂ ಇಲ್ಲದೇ ಎಲ್ಲರೊಂದಿಗೂ ರಾಜಿಯಾಗಬಹುದಾದರೆ ಅಕ್ಷರ ಹೋರಾಟದ ಅರ್ಥ ಏನಾಯಿತು?

ಪಲ್ಲಕ್ಕಿಯಲ್ಲಿ ಸಾಗಿದ ಸಮ್ಮೇಳನಾಧ್ಯಕ್ಷರ ಚಿತ್ರ ಕಣ್ಣೆದುರು ಬರುವಾಗ ಐನ್‌ಸ್ಟೀನ್ ನೆನಪಾದರು. ನೊಬೆಲ್ ಪ್ರಶಸ್ತಿ ಬಂದ ಗೌರವಕ್ಕೆ ಅವರಿಗೆ ನ್ಯೂಯಾರ್ಕಿನ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ಆಯೋಜಿಸಲಾಗಿತ್ತು. ಆದರೆ ನಾಲ್ಕು ಜನರ ಹೆಗಲ ಮೇಲೆ ಕುಳಿತು ಹೋಗಲು ಸ್ಪಷ್ಟವಾಗಿ ನಿರಾಕರಿಸಿದ ಐನ್‌ಸ್ಟೀನ್ ಮೆರವಣಿಗೆಯಿಡೀ ನಡೆದೇ ಪಾಲ್ಗೊಂಡರು. ಭೌತವಿಜ್ಞಾನಿಗೆ ಹೊಳೆದ ಈ ಸರಳ ಸತ್ಯ ಮಾನವೀಯತೆಯನ್ನೇ ಬಂಡವಾಳವಾಗಿಸಿಕೊಂಡಿರುವ ಬರಹಗಾರರಿಗೆ ಏಕೆ ಹೊಳೆಯುವುದಿಲ್ಲ?

***

ಹಾಗಾದರೆ ಸಾಹಿತ್ಯ, ಕಲೆಗಳ ಸಮಾವೇಶವನ್ನು ಯಾರು ಸಂಘಟಿಸಬೇಕು? ಎಂಬ ಪ್ರಶ್ನೆಯೇಳುತ್ತದೆ. ಹಣಬಲ, ಜನಬಲವಷ್ಟೇ ಸಂಘಟಕನ ಪಟ್ಟ ಗಳಿಸಿಕೊಡುವುದಿಲ್ಲ. ಅಧಿಕಾರ-ಆಮಿಷಗಳಿಂದ ಮುಕ್ತವಾದ; ಸುತ್ತಮುತ್ತ ನಡೆಯುತ್ತಿರುವುದಕ್ಕೆ ಜನಪರವಾಗಿ ಸ್ಪಂದಿಸುವಷ್ಟಾದರೂ ಬದ್ಧತೆಯಿರುವ; ಜಾತಿ-ಧರ್ಮ-ವರ್ಗ-ಭಾಷೆಯ ಹೊರತಾಗಿ ಮಾನವಪರ ಕಾಳಜಿಯಿರುವ ವ್ಯಕ್ತಿ-ಸಂಘಟನೆಗಳು ಸಾಹಿತ್ಯ ಲೋಕದ ಸಂಚಾಲಕ ಶಕ್ತಿಗಳಾಗಬಲ್ಲರು.

ಈ ಸಮ್ಮೇಳನ ಸಾಹಿತ್ಯವನ್ನೊಂದು ಆನಂದ ಕೊಡುವ ಉತ್ಸವವನ್ನಾಗಿ ಬಿಂಬಿಸುವುದೇ ಹೊರತು ಸಾಮಾಜಿಕ ಸಮಸ್ಯೆಗಳ ಕುರಿತು ಚಕಾರವೆತ್ತುವುದಿಲ್ಲ. ಸಾಹಿತಿ ಕಲಾವಿದರನ್ನು ಅಷ್ಟು ಸಂಖ್ಯೆಯಲ್ಲಿ ಸೇರಿಸಿದರೂ ಕರಾವಳಿಯ ಬಿಕ್ಕಟ್ಟುಗಳ ಕುರಿತು ಚರ್ಚಾಗೋಷ್ಠಿ ನಡೆಯುವುದಿಲ್ಲ. ಆಯೋಜಕರು ತಮ್ಮ ಪಂಚೇಂದ್ರಿಯಗಳನ್ನು ತೆರೆದುಕೊಂಡಿದ್ದರೆ ಆ ಸಮ್ಮೇಳನದಲ್ಲಿ ಶೈಕ್ಷಣಿಕ ಸಂಸ್ಥೆಗಳ ಬುರ್ಖಾ ನಿಷೇಧದ ಗಲಾಟೆ, ಲವ್ ಜಿಹಾದ್ ಎಂಬ ಹುಯಿಲು, ಹೋಂ ಸ್ಟೇ ಪ್ರಕರಣ ಮತ್ತದನ್ನು ವರದಿ ಮಾಡಿದ್ದಕ್ಕೆ ಬಂಧಿಸಲ್ಪಟ್ಟ ನವೀನ್ ಸೂರಿಂಜೆ, ಎಸ್‌ಇಝಡ್‌ಗಾಗಿ ಭೂಮಿ ಕಳಕೊಂಡವರು, ವಿಠ್ಠಲ ಮಲೆಕುಡಿಯ ಬಂಧನ, ಮಂಗಳೂರು ವಿಶ್ವವಿದ್ಯಾಲಯದ ಗಾಂಧಿ ಬಂದ ಕೃತಿ ನಿಷೇಧದ ಪ್ರಯತ್ನ, ಮಡೆಸ್ನಾನ ವಿವಾದ -  ಇಂಥ ಎಲ್ಲ ಸಾಮಾಜಿಕ ಬಿಕ್ಕಟ್ಟುಗಳ ಕುರಿತು ಚರ್ಚೆ ನಡೆಯುತ್ತಿತ್ತು. ಸಂಘಟಕರ ನಿಲುವು-ಪ್ರತಿಕ್ರಿಯೆ ಏನೆಂದು ಗೊತ್ತಾಗುತ್ತಿತ್ತು. ಆದರೆ ಬಂಡವಾಳಿಗರಿಗೆ ಕಲೆ, ಸಾಹಿತ್ಯವೆಂದರೆ ಕಾವ್ಯ-ಗಾಯನ-ನರ್ತನವಷ್ಟೇ. ಬಂಡವಾಳವೆಂಬ ಮಾಯೆ ಸ್ಪರ್ಧೆ, ಮೇಲಾಟ, ಉನ್ಮಾದಗಳನ್ನೇ ಮುನ್ನೆಲೆಗೆ ತರುತ್ತದೆ. ಪ್ರತಿಯೊಂದು ಕ್ರಿಯೆ, ಚಿಂತನೆಯಲ್ಲೂ ಸ್ವಹಿತಾಸಕ್ತಿಯನ್ನು ತುರುಕುತ್ತದೆ. ಎಂದೇ ಅಲ್ಲಿ ಸಾಮಾಜಿಕ ಕಾಳಜಿಯನ್ನು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ.

ಬಹುಶಃ ಇವತ್ತಿನ ಲೇಖಕರಿಗಿರುವ ದೊಡ್ಡ ಸವಾಲೆಂದರೆ ವ್ಯವಸ್ಥೆಯ ಇಂಥ ಆಮಿಷಗಳಿಂದ ತಪ್ಪಿಸಿಕೊಳ್ಳುವುದು. ಏಕೆಂದರೆ ಹಿಂದೆಂದಿಗಿಂತ ಹೆಚ್ಚು ಸಂಖ್ಯೆಯ ಪ್ರಶಸ್ತಿ, ಪುರಸ್ಕಾರ ಸಮ್ಮಾನಗಳು ಆಯಕಟ್ಟಿನ ಜಾಗದಲ್ಲಿ ಕಾದು ಕುಳಿತು ಬಂಡೇಳುವ ಮನಸುಗಳನ್ನು ಭ್ರಷ್ಟಗೊಳಿಸಲು ಹೊಂಚುಹಾಕುತ್ತಿವೆ. ಹೌದು, ಇದು ರಾಜಿಯ ಕಾಲ. ನಾವೆಲ್ಲ ಒಂದಲ್ಲ ಒಂದು ಕಾರಣಕ್ಕೆ ರಾಜಿ ಮಾಡಿಕೊಂಡೇ ಬದುಕುತ್ತಿದ್ದೇವೆ. ಸಾಮಾಜಿಕ ಬದುಕು, ಜೀವನ ಶೈಲಿ, ರಾಜಕೀಯದ ನಡೆಗಳು, ಆದ್ಯತೆಗಳು ಎಲ್ಲವೂ ರಾಜಿಯಾಗುವಿಕೆಗೆ ಪೂರಕ ನೆಪಗಳಾಗಿವೆ. ವ್ಯಕ್ತಿತ್ವ, ನಡೆನುಡಿಗಳಲ್ಲಿಯೂ ಅದು ನುಸುಳಿದೆ.

ಆದರೆ ಆಂತರಿಕ ಒತ್ತಡದಿಂದ ಹುಟ್ಟುವ ಸೃಜನಶೀಲ ಕ್ರಿಯೆಯೂ, ಬರಹಗಾರನೂ ರಾಜಿಗೊಳಗಾಗಿ ಅವನ ಒಳದನಿ ಸಮಾಧಿಯಲ್ಲೇ ಹೊರಳಿದರೆ ಜನಪರವಾದದ್ದು ಯಾವುದೂ ಉಳಿಯುವುದಿಲ್ಲ. ಈ ದುರಂತ ತಡೆಯಲು ನಮ್ಮ ನಡೆ, ಬರಹ, ವಿಚಾರಗಳಲ್ಲಿ ಒಳಹೊಕ್ಕ ವಿಕಾರಗಳನ್ನು ನಾವೇ ಗಮನಿಸಿ ಕಿತ್ತುಹಾಕಬೇಕು. ವಿಮರ್ಶೆಯ ಎಚ್ಚರ ಸದಾ ಜಾಗೃತವಾಗಿರಬೇಕು. ಇಲ್ಲವಾದಲ್ಲಿ ತರಳಬಾಳು, ಪೇಜಾವರ, ಸುತ್ತೂರು ಮಠ, ಆರ್ಟ್ ಆಫ್ ಲಿವಿಂಗ್, ಇನ್ಫೋಸಿಸ್-ಟಾಟಾ ಕವಿಗೋಷ್ಠಿಗಳಲ್ಲಿ ಪ್ರತಿಭಟನಾ ಕಾವ್ಯ ವಾಚನ ಮಾಡಲು ಸಾಲಾಗಿ ನಿಂತ ಪ್ರಗತಿಪರ ಕವಿಗಳನ್ನು ನೋಡುವ ದಿನಗಳು ದೂರವಿಲ್ಲ!


(ಡಿಸೆಂಬರ್ ೨೦೧೨)


Sunday, 10 August 2014

ರೋಷದ ಬಣ್ಣಗಳು - ರಫೀಫಾ ಜಿಯಾದೇ ಕವಿತೆ


ಕಲಾವಿದ: ಥಾಮಸ್ ಫೆಡರೋ


ನನಗೆ ಅರಬಿಯಲ್ಲಿ ಮಾತಾಡಲು ಬಿಡಿ
ನನ್ನ ನುಡಿ ನಾಲಿಗೆಯನೂ ಅವರು ಆಕ್ರಮಿಸಿಕೊಳ್ಳುವ ಮೊದಲು
ನನಗೆ ತಾಯ್ನುಡಿಯಲ್ಲಿ ಮಾತಾಡಲು ಬಿಡಿ
ಅವಳ ನೆನಪುಗಳಲಿ ಅವರು ವಸಾಹತು ಕಟ್ಟುವ ಮೊದಲು
ನಾನು ಕಪ್ಪು ಅರಬ್ ಹೆಣ್ಣು
ರೋಷದ ಎಲ್ಲ ಬಣ್ಣಗಳ ತುಂಬಿಕೊಂಡವಳು
ನನ್ನಜ್ಜ ಮಾಡಿದ ಕೆಲಸ ಇಷ್ಟೇ ಇಷ್ಟು
ಬೆಳಬೆಳಗ್ಗೆ ಅಜ್ಜಿ ಮಂಡಿಯೂರಿ ಪ್ರಾರ್ಥಿಸುವುದು ನೋಡಿದ್ದು
ಜಫಾ ಮತ್ತು ಹೈಫಾಗಳ ನಡುವೆ ಒಂದೂರಲ್ಲಿ
ಆಲಿವ್ ಮರದ ಕೆಳಗೆ ನನ್ನಮ್ಮ ಹುಟ್ಟಿದ್ದು
ಅವರು ಹೇಳುತ್ತಾರೆ, ಆ ನೆಲವೀಗ ನಮ್ಮದಲ್ಲ ಎಂದು.
ಆದರೆ ಅವರ ತಡೆ, ಚೆಕ್ ಪಾಯಿಂಟುಗಳ,
ವರ್ಣಭೇದಗಳ ಬೇಲಿಯ ನಾ ದಾಟುತ್ತೇನೆ
ನನ್ನ ತಾಯ್ನೆಲಕೆ ಹಿಂದಿರುಗುತ್ತೇನೆ
ನಾನು ಕರಿಯ ಅರಬ್ ಹೆಣ್ಣು
ರೋಷದ ಎಲ್ಲ ಬಣ್ಣಗಳ ತುಂಬಿಕೊಂಡವಳು

ನಿನ್ನೆ ನನ್ನ ತಂಗಿ ಕಿರುಚಿದ್ದು ಕೇಳಿತೇ
ಚೆಕ್ ಪಾಯಿಂಟಿನಲಿ ಹೆತ್ತದ್ದು
ಅವಳ ತೊಡೆಗಳ ನಡುವೆ ಏನು ನಡೆಯುತ್ತಿದೆಯೆಂದು
ಇಸ್ರೇಲಿ ಸೈನಿಕರು ಕಣ್ಣರಳಿಸಿ ನೋಡಿದ್ದು?
ತಮ್ಮ ಭಾವೀ ಆತಂಕವಾದಿಯನು ಗಮನಿಸಿದ್ದು?
ಅವಳು ಮಗುವಿಗೆ ಜಾನೀನ್ ಎಂದು ಹೆಸರಿಟ್ಟಳು
ಕೇಳಿದಿರಾ
ಅವರ ಜೈಲುಕೋಣೆಯೊಳಗೆ ಅಶ್ರುವಾಯು ತುಂಬಿಸಿದಾಗ
ಅಮ್ನಿ ಮೋನಾ
ನಾ ವಾಪಸು ಹೋಗುತ್ತೇನೆಂದು ಕೂಗಿದ್ದು?

ನಾನು ಕಪ್ಪು ಅರಬ್ ಹೆಣ್ಣು
ರೋಷದ ಎಲ್ಲ ಬಣ್ಣಗಳ ತುಂಬಿಕೊಂಡವಳು.
ಗಡ್ಡದ, ಬಂದೂಕು ಹಿಡಿದ, ಶಿರವಸ್ತ್ರ ಸುತ್ತಿದ, ಮರುಭೂಮಿಯ ಕರಿಯ
ನಿಮ್ಮ ಭಾವೀ ಭಯೋತ್ಪಾದಕನ ಉತ್ಪಾದಿಸುವವಳು
ನಮ್ಮ ಆಗಸದಲ್ಲಿ ಹಾರುವ ನಿನ್ನ ಹೆಲಿಕಾಪ್ಟರು, ಎಫ್-೧೬ಗಳಿಗೆ
ಸಾಯಲೆಂದೇ ಮಕ್ಕಳ ಕಳಿಸುವವಳು.
ಅದೇನೋ ಭಯೋತ್ಪಾದನೆ ಅಂದೆಯಲ್ಲ,
ಆ ಕುರಿತು ಅರೆಚಣ ಮಾತಾಡೋಣವೇ?
ಅಲೆಂಡೆ ಲುಮುಂಬಾನ ಕೊಂದದ್ದು ಅಮೆರಿಕದ ಗುಪ್ತಚರರಲ್ಲವೇ?
ಅಷ್ಟಕ್ಕೂ ಒಸಾಮಾಗೆ ಮೊದಲು ತರಬೇತಿ ಕೊಟ್ಟವರಾರು?
ನನ್ನಜ್ಜ ಮುತ್ತಜ್ಜರು ಬಂದೂಕು ಹಿಡಿದು
ಬಿಳಿ ಟೋಪಿ, ದಿರಿಸು ಧರಿಸಿ ಕರಿ ಜನರ ಕುತ್ತಿಗೆ ಹಿಸುಕುತ್ತ
ಕೋಡಂಗಿಗಳಂತೆ ಅಲೆಯಲಿಲ್ಲ, ತಿಳಿದಿರಲಿ.

ನಾನು ಕಪ್ಪು ಅರಬ್ ಹೆಣ್ಣು
ರೋಷದ ಎಲ್ಲ ಬಣ್ಣಗಳ ತುಂಬಿಕೊಂಡವಳು.
‘ಪ್ರತಿಭಟನೆಯಲ್ಲಿ ಕಿರುಚುತ್ತಿದ್ದ ಕಪ್ಪು ಹೆಂಗಸು ಯಾರು?’
ಕ್ಷಮಿಸಿ, ಕಿರುಚಬಾರದೇ ನಾನು?
ನಿಮ್ಮ ಪೂರ್ವದ ಕನಸಾಗಿರಲು
ಬಾಟಲಿನಲ್ಲಿ ಮದ್ಯ, ಮೈ ಕುಣಿಸುವ ನರ್ತನ, ಅಂತಃಪುರದ ಹೆಣ್ಣು, ಮೆಲು ಮಾತಿನ ಅರಬ್ ಹೆಣ್ಣಾಗಿರಲು
ನನಗೆ ಮರೆತೇ ಹೋಯಿತು
ನಿಜ ದೊರೆಯೇ, ಇಲ್ಲ ದೊರೆಯೇ,
ನಿಮ್ಮ ಎಫ್-೧೬ಗಳಿಂದ ಮಳೆಯಂತೆ ಸುರಿಯುತ್ತಿರುವ
ಬೆಣ್ಣೆ, ಜಾಮುಗಳ ನಿಮ್ಮ ಸ್ಯಾಂಡ್‌ವಿಚ್‌ಗಾಗಿ ಧನ್ಯವಾದ.
ಹೌದು, ನನ್ನ ವಿಮೋಚನಾಕಾರರು ನನ್ನ ಮಕ್ಕಳ ಕೊಲ್ಲಲೆಂದೇ ಹುಟ್ಟಿದರು,
ಅದು ‘ವಗೈರೆ ಮರಣ’ವಾಗಿ ದಾಖಲಾಗುತ್ತಿರಲು..

ನಾನು ಕರಿಯ ಅರಬ್ ಹೆಣ್ಣು
ರೋಷದ ಎಲ್ಲ ಬಣ್ಣಗಳ ತುಂಬಿಕೊಂಡವಳು
ಹೇಳುತ್ತೇನೆ ಕೇಳು
ನನ್ನ ಹೊಟ್ಟೆಯೊಳಗಿನ ಚೀಲ
ಭಾವೀ ಬಂಡುಕೋರರನ್ನೇ ನಿನಗಾಗಿ ಸೃಷ್ಟಿಸುತ್ತದೆ
ಅವಳ ಒಂದು ಕೈಯಲ್ಲಿ ಕಲ್ಲುಬಂಡೆ ಇನ್ನೊಂದರಲ್ಲಿ ಪ್ಯಾಲೆಸ್ಟೀನ್ ಬಾವುಟ
ನಾನು ಕರಿಯ ಅರಬ್ ಮಹಿಳೆ
ನನ್ನ ರೋಷ.. ಹ್ಞಂ, ಎಚ್ಚರ ರೋಷದ ಬಗೆಗೆ..

ಪ್ಯಾಲೆಸ್ಟೀನ್, ಇಂಗ್ಲಿಷ್ ಮೂಲ: ರಫೀಫಾ ಜಿಯಾದೇ
ಕನ್ನಡಕ್ಕೆ: ಎಚ್. ಎಸ್. ಅನುಪಮಾ



Saturday, 9 August 2014

ಗುಡ್ಲಿಗೆ ಬೆಂಕಿ



ಗುಡುಸ್ಲಿಗೆ ಬೆಂಕಿ ಬಿದ್ದದೆ
ಅಯ್ಯೋ, ಹೌದಲ, ಅವು ಉರ‍್ದೋಗ್ತಿದಾವೆ!

ಅಯ್ಯಯ್ಯೋ, ಅವು ಯಾರ ಗುಡುಸ್ಲಾಗಿರಬೋದು?
ಅವು ದಲಿತರವೇ, ನಿಕ್ಕಿ ಹೇಳ್ತೆ ಬೇಕಾದ್ರೆ.
ಗುಡ್ಲು ಇನ್ಯಾರತ್ರ ತಾನೇ ಇರಕ್ಕೆ ಸಾಧ್ಯ ಹೇಳು?

ಇಲ್ಲಿ ಧರ್ಮನೇ ಹಂಗಿದೆ
ಅದ್ರ ಪ್ರಕಾರನೇ
ಲಕ್ಷಾಂತರ ಗುಡುಸ್ಲಿದಾವೆ, ತಿಳಕ,
ಇವು ವರ್ಷಕೊಂದ್ಸಲ ಸುಟ್ಟೋಗ್ತನೇ ಇರ‍್ತಾವೆ.

ಒಂದ್ಸಲ ಸುಟ್ಟೋಗಿದ್ದು
ಮತ್ತೆಮತ್ತೆ ಸುಡದೆಂಗಣ್ಣ?
ಅವೇನು ಮೊಳೀತಾವಾ?

ಹೌದು ಮತ್ತೆ,
ಮತ್ತೆಲ್ಲಿಂದ ಬರ್ತಾವೆ ಅವು
ಮೊಳಕೆ ಒಡೀದೇ?

ಇದೇ ನಂ ಧರ್ಮದ ಗುಟ್ಟು ಕಳ್ಲಾ
ಗುಡುಸ್ಲೂ ಅವತಾರ ಎತ್ತತಾವೆ!
ಮತ್ತೆ ಮತ್ತೆ
ಧರ್ಮ ಸಂಸ್ಥಾಪನೆಗಾಗಿ ಸುಟ್ಟೋಯ್ತವೆ
ಮತ್ತೆಮತ್ತೆ ಅವತಾರ ಎತ್ತಿ ಎದ್ದೇಳತಾವೆ!

ಸುಟ್ಟುರಿಯದು
ಮತ್ತೆ ಏಳದು
ಈ ವಿಷಚಕ್ರ ಎಷ್ಟ್ ಕಾಲ ತಿರುಗುತ್ತಪ ಹಂಗಾರೆ?
ಇದು ಹೀಗೇನೇ,
ಆ ಗುಡುಸ್ಲಾಗೆ ಇದಾರ‍್ನೋಡು
ಅವ್ರಿಗೆ
ಈ ಧರ್ಮ ರಹಸ್ಯ ತಿಳಿಯೋವರೆಗೆ..



- ತೆಲುಗು ಮೂಲ: ಬೋಯಿ ಭೀಮಣ್ಣ
(ಗುಡಿಸೇಲು ಕಾಲಿಪೋತುನ್ನಾಯಿ) (೧೯೨೧-೨೦೦೫)

Tuesday, 5 August 2014

ಅವರು ಪುರಾವೆ ಕೇಳುತ್ತಾರೆ ..



ತುಂಬ ಸಂಪ್ರದಾಯಸ್ಥ ಕುಟುಂಬಕ್ಕೆ ಆ ಎಳೆಹುಡುಗಿಯನ್ನು ಮದುವೆ ಮಾಡಿಕೊಟ್ಟರು. ಮೊದಲ ರಾತ್ರಿಯ ಬಗ್ಗೆ ಆತಂಕಗೊಂಡು, ಕುತೂಹಲಗೊಂಡು ಗೆಳತಿಯರಿಂದ ಸರಿಯೋ, ತಪ್ಪೋ ಏನೇನೋ ಮಾಹಿತಿ ಪಡೆದಿದ್ದಳು.

ಅಂತಹ ಮೊದಲ ರಾತ್ರಿ ನಡೆದೇ ಹೋಯಿತು.

ಚುಮುಚುಮು ಬೆಳಕು ಹರಿಯುವಾಗ ಎಚ್ಚರವಾಯಿತು, ಅವನು ಟಾಯ್ಲೆಟ್ಟಿಗೆ ಎದ್ದುಹೋಗಿದ್ದ. ನೋಡುತ್ತಾಳೆ, ಹಾಸಿಗೆಯ ಮೇಲೆ ಏನೂ ಕಲೆಗಳಿಲ್ಲ! ಅಯ್ಯೋ! ತನ್ನ ಪಾವಿತ್ರ್ಯ, ತವರಿನ ಮರ್ಯಾದೆ ಗತಿಯೇನು? ತಲೆ ಧಿಂ ಎಂದಿತು. ಆ ಸಮುದಾಯದಲ್ಲಿ ಮೊದಲ ರಾತ್ರಿಯ ಮರುದಿನ ಬೆಡ್‌ಶೀಟ್ ತೆಗೆಯಬಂದವರು ರಕ್ತಕಲೆ ನೋಡುವರೆಂದೂ, ಯಾರ ಹಾಸಿಗೆಯಲ್ಲಿ ಕಲೆಗಳಿಲ್ಲವೋ ಅಂಥ ಹೆಣ್ಣು ಒಂದೋ ಗಂಡನಿಗೆ ಸರಿಯಾಗಿ ನಡೆದುಕೊಳ್ಳಲಿಲ್ಲ ಅಥವಾ ಅವಳು ಮದುವೆಯಾಗುವಾಗ ಕನ್ಯೆಯಾಗಿರಲಿಲ್ಲ ಎಂದು ನಿರ್ಧರಿಸಲಾಗುತ್ತದೆಂದೂ ಅವಳು ತಿಳಿದಿದ್ದಳು. ನಿನ್ನೆ ರಾತ್ರಿ ನೆನಪಾಯಿತು. ಅದು ತನ್ನ ಮೊದಲ ಅನುಭವ. ಆದರೂ ಏಕೆ ಹೀಗಾಯಿತು? ದೂರದಲ್ಲಿ ಹಣ್ಣು ಇಟ್ಟ ಟ್ರೇ, ಚಾಕು ಕಾಣಿಸಿತು. ತಡ ಮಾಡದೆ ತೊಡೆಯ ಬಳಿ ಒಮ್ಮೆ ಚರಕ್ ಎನಿಸಿಕೊಂಡಳು. ಅಬ್ಬಾ, ಅಂತೂ ರಕ್ತ ಹೊರಟಿತು.. ಏನೂ ಗೊತ್ತೇ ಇಲ್ಲದವಳಂತೆ ಹೊದ್ದು ಮಲಗಿದಳು.

ಎಷ್ಟೋ ದಿನ ಕಳೆದ ಮೇಲೆ ಚೆಕಪ್ಪಿಗೆ ವೈದ್ಯರ ಬಳಿ ಹೋದಾಗ ಹೀಗಾಗಲು ಹೇಗೆ ಸಾಧ್ಯ ಎಂದು ಕೇಳಿ ಅನುಮಾನ ನಿವಾರಿಸಿಕೊಂಡಳು. ಇದು ಯಾವುದೋ ಸಿನಿಮಾ ಕತೆಯಲ್ಲ. ಇಂಥ ಆಚರಣೆಗಳು, ನಂಬಿಕೆಗಳು ೨೧ನೇ ಶತಮಾನದ ಇವತ್ತೂ ಜೀವಂತ ಇವೆ ಎಂದು ಹೇಳಿದರೆ ನೀವು ನಂಬಲೇಬೇಕು.

***



ಈಗ ಹದಿವಯಕ್ಕೆ ಕಾಲಿಟ್ಟ ಹುಡುಗಿ. ಆಡಲು ಪಕ್ಕದ ಓಣಿಯ ಗೆಳೆಯ ಬರುತ್ತೇನೆ ಎಂದಿದ್ದಾನೆ. ಇಬ್ಬರೂ ಅವತ್ತು ಏನೇನೋ ಆಡಬೇಕೆಂದು ಯೋಜನೆ ಹಾಕಿಕೊಂಡಿದ್ದಾರೆ. ಆದರೆ ಅಮ್ಮ ಬೆಳಗಾಗೆದ್ದವಳು ಹುಡುಗಿಯ ಲಂಗ ನೋಡುತ್ತಲೇ ಏನೋ ನಿರ್ಧರಿಸಿ ನೀನಿನ್ನು ಅವನ ಜೊತೆ ಆಡುವಂತಿಲ್ಲ ಎಂದುಬಿಟ್ಟಳು. ಅವಳ ಅಜ್ಜಿ ಬಂದರು. ಇವಳಿಗೆ ಗೊಂದಲ, ಏಕೆ ಆಡಬಾರದು? ಅಷ್ಟೊತ್ತಿಗೆ ಪುಟ್ಟ ಗೆಳೆಯನೂ ಆಟದ ಮನಸು ಹೊತ್ತು ಬಂದ. ಅವನಿಗೆ ಹೊರಗಿನಿಂದಲೇ ಆಕೆ ಇನ್ನು ಆಡಲು ಬರುವುದಿಲ್ಲವೆಂದು ಕೂಗಿ ಹೇಳಿದರೂ  ಅವನು ಅಷ್ಟಕ್ಕೆ ಸಮಾಧಾನಗೊಳ್ಳುತ್ತಿಲ್ಲ. ಹುಡುಗಿಯೂ ಹಠ ಮಾಡುತ್ತಾಳೆ. ಕೊನೆಗೆ ಅಮ್ಮ ಮಧ್ಯಾಹ್ನ ೧೨ರ ಒಳಗೆ ಆಡಿ ವಾಪಸು ಬರಬೇಕು, ಆಮೇಲೆ ಇನ್ನು ಯಾವತ್ತೂ ಆಡಲು ಬರುವುದಿಲ್ಲ ಎಂದು ಹೇಳಿಬರಬೇಕು ಎಂಬ ಷರತ್ತು ವಿಧಿಸಿ ಅವಳನ್ನು ಕಳಿಸುತ್ತಾಳೆ. ಕಳಿಸುವಾಗ ಒಂದು ಕಡ್ಡಿಕೋಲು ಕೊಟ್ಟು, ‘ಅದರ ನೆರಳು ಕಾಣದೆ ಹೋದರೆ ಮಧ್ಯಾಹ್ನ ೧೨ ಗಂಟೆಯಾಯಿತೆಂದು ಲೆಕ್ಕ. ನೋಡುತ್ತಲಿರು, ೧೨ ಗಂಟೆಯಾದದ್ದೇ ಮನೆಗೆ ಬಂದುಬಿಡು’ ಎಂದು ಎಚ್ಚರಿಸಿ ಕಳಿಸುತ್ತಾಳೆ. ಅಂದು ಆ ಹುಡುಗಿ ಹೆಣ್ಣಾಗಿರುತ್ತಾಳೆ, ಎಂದೇ ಅಮ್ಮಅಜ್ಜಿಯರ ಬೇಲಿ ಕಟ್ಟುವ, ಕೈಕಾಲು ಬಿಗಿಯುವ ಪ್ರಕ್ರಿಯೆ ಶುರುವಾಗುತ್ತದೆ.

ಆಡುವಾಗ ವಾಚಿಲ್ಲದ ಆ ಹುಡುಗಿ ಪದೇಪದೇ ಕಡ್ಡಿ ನೆಟ್ಟು ನೆರಳು ಎಷ್ಟು ಗಿಡ್ಡ ಆಗುತ್ತಲಿದೆ ಎಂದು ನೋಡುತ್ತ ಆತಂಕಪಡುತ್ತದೆ. ತನ್ನ ಸಮಯ ಮೀರುವುದರ ಒಳಗೆ ಅಂದುಕೊಂಡ ಆಟ ಮುಗಿಸಲು ತರಾತುರಿಗೊಳ್ಳುತ್ತದೆ. ಅಂತೂ ಕೊನೆಗೊಮ್ಮೆ ಕಡ್ಡಿಯ ನೆರಳು ಕಾಣದೇ ಹೋದಾಗ ಹನ್ನೆರೆಡು ಗಂಟೆಯಾಯಿತೆಂದು ಕೂಡಲೇ ಮನೆಗೆ ಓಡಿಬರುತ್ತಾಳೆ. ಮುಚ್ಚಿದ ಬಾಗಿಲುಗಳ ಹಿಂದೆ ನಡೆದರೂ ಗೋಡೆ ನಡುವಿನ ಕಿಟಕಿಯಿಂದ ಕೈತೂರಿ ಅವನನ್ನು ಕರೆದು ಲಾಲಿಪಾಪ್ ಹಂಚಿಕೊಳ್ಳುತ್ತಾಳೆ.

‘ದ ಡೇ ಐ ಬಿಕೇಮ್ ಅ ವುಮೆನ್’ ಎಂಬ ಇರಾನಿ ಚಿತ್ರ ಇದು..

***

ಮುಟ್ಟಿನ ಮೂರು ದಿನ ಹೆಣ್ಣು ಅಪವಿತ್ರಳು. ಆಗ ಪವಿತ್ರ ಕಾರ್ಯ, ಸ್ಥಾನಗಳ ಬಳಿ ಸುಳಿಯಬಾರದು. ಇದಕ್ಕೆ ತಪ್ಪಿದಲ್ಲಿ ದೇವರು ಸಿಟ್ಟಾಗಿ ಮನೆಮಂದಿ, ಊರುಕೇರಿಯೆಲ್ಲ ನಾಶವಾಗುತ್ತದೆ ಎಂದು ಹೆಣ್ಣುಮಕ್ಕಳ ತಲೆಯಲ್ಲಿ ಶತಮಾನಗಳಿಂದ ತಪ್ಪುಪಾಠ ತುಂಬಲಾಗಿದೆ. ಮದುವೆ ಕಾರ್ಯಗಳ ಸೀಸನ್ ಬಂತೆಂದರೆ ‘ಮುಟ್ಟು ಮುಂದೆ ಹೋಗುವ’, ‘ಹಿಂದೆ ಹೋಗುವ’ ಚರ್ಚೆ ಕೊನೆಮೊದಲಿಲ್ಲದೆ ನಡೆಯುತ್ತದೆ. ಅದರ ಲೆಕ್ಕಾಚಾರದಲ್ಲಿ ಹೆಣ್ಮಕ್ಕಳು ಖರ್ಚು ಮಾಡುವಷ್ಟು ಬುದ್ಧಿಯನ್ನು ತಮ್ಮ ದೇಹದ ಆರೋಗ್ಯದ ಬಗ್ಗೆ ಖರ್ಚು ಮಾಡಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ಕೆಲವೊಮ್ಮೆ ಮನೆಯಲ್ಲಿರುವ ಅಷ್ಟೂ ಹೆಣ್ಮಕ್ಕಳು ಮುಟ್ಟನ್ನು ‘ಮುಂದೆ’, ‘ಹಿಂದೆ’ ಮಾಡುವ ಕ್ರಿಯೆಯಲ್ಲಿ ತೊಡಗುತ್ತಾರೆ. ಓದಿ ಕೆಲಸದಲ್ಲಿರುವವರೂ ಸಹಿತ ‘ದೇವರ ಹತ್ರ ಹೋಗುವುದಲ್ವ? ಇಲ್ದಿದ್ರೆ ನಮಗೆ ಅದೆಲ್ಲ ತೊಂದ್ರೆ ಇರಲಿಲ್ಲ..’ ಎನ್ನುತ್ತ ರಾಗವೆಳೆಯುತ್ತಾರೆ. ಇದು ಆಸ್ತಿಕತೆ, ನಾಸ್ತಿಕತೆಯ ಪ್ರಶ್ನೆಯಲ್ಲ. ನಾವು ನಂಬುವವರಾದರೆ ಆ ದೇವರೇ ಸೃಷ್ಟಿಸಿದ ದೇಹವಲ್ಲವೆ ಇದು? ಅದು ಹೇಗೆ ಅಪವಿತ್ರವಾಗುತ್ತದೆ? ಇಂಥ ಯಾವುದೇ ವಿಚಾರ ನಮ್ಮ ಹೆಣ್ಮಕ್ಕಳ ತಲೆಯೊಳಗೆ ಹೋಗದೇ, ಕೊನೆಗೆ ‘ಹಂಗಾದ್ರೆ ಎಷ್ಟ್ ಗುಳಿಗೆ ಕೊಡ್ತಿರಾ?’ ಎಂದು ಮಾತು ಮುಗಿಸುತ್ತಾರೆ. ಹೋಗುವಾಗ ಕೊನೆಗೆ ‘ಏನೂ ತೊಂದ್ರೆ ಇಲ್ವಲ?’ ಎಂಬ ಪ್ರಶ್ನೆ ಎಸೆಯುತ್ತಾರೆ.

ಸುಳ್ಳು ಹೇಳಿದ ಅಪವಾದ ಬಂದರೂ ತೊಂದರೆಯಿಲ್ಲ, ಆ ಗುಳಿಗೆಗಳಿಂದ ಗರ್ಭಕೋಶಕ್ಕೆ ಪೆಟ್ಟು, ಇನ್ನು ಮೇಲೆ ತಗೊಳ್ಳಬೇಡಿ ಎಂದೇ ಸಲಹೆ ಕೊಡುತ್ತೇನೆ!

***


ಮೊನ್ನೆ ಸ್ನೇಹಿತೆಯೊಬ್ಬರು ಮಾತನಾಡುವಾಗ ‘ಕನ್ಯಾ ಪೊರೆ’ಯನ್ನು ಮರುಸೃಷ್ಟಿಸುವ ಆಪರೇಷನ್ ಚಾಲ್ತಿಯಲ್ಲಿದೆಯಂತಲ್ಲ, ಅದರ ಬಗ್ಗೆ ಒಂದು ಚರ್ಚೆಯನ್ನು ಗಮನಿಸಿದೆ ಎಂದು ಹೇಳಿದರು. ಈ ಇಪ್ಪತ್ತೊಂದನೆ ಶತಮಾನದ ಹೆಣ್ಣೂ ಕನ್ಯಾಪೊರೆಯನ್ನು ರಿಪೇರಿ ಮಾಡಿಸಿಕೊಂಡು ತನ್ನ ಪಾವಿತ್ರ್ಯ, ಶುದ್ಧತೆ ಯೋನಿಯಲ್ಲಿದೆ ಎಂದು ಭಾವಿಸುವುದು; ತನ್ನ ದೇಹವಿರುವುದು ಕೇವಲ ಕಾಮತೃಷೆ ತಣಿಸಲು ಎಂದು ಭಾವಿಸಿರುವುದು ವಿಷಾದದ ಸಂಗತಿ.

ಎಲ್ಲರೂ ತಿಳಿದಿರುವಂತೆ ಯೋನಿದ್ವಾರವನ್ನು ಮುಚ್ಚಿರುವ ಕನ್ಯಾಪೊರೆ ಪ್ರಥಮ ಲೈಂಗಿಕ ಸಂಪರ್ಕದ ವೇಳೆ ಹರಿಯುತ್ತದೆ. ಆದರೆ ಈಗ ಹೆಣ್ಣುಮಕ್ಕಳು ಬಾಹ್ಯ ಚಟುವಟಿಕೆಯಲ್ಲೂ ತೊಡಗಿಕೊಂಡಿರುವುದರಿಂದ ಎಷ್ಟೋ ಹುಡುಗಿಯರು ಕನ್ಯೆಯರಾಗಿದ್ದೂ ಕನ್ಯಾಪೊರೆ ಛಿದ್ರವಾಗಿರುತ್ತದೆ. ಕೆಲವು ಸಮುದಾಯಗಳಲ್ಲಿ ಇವತ್ತಿಗೂ ದಂಪತಿಗಳ ಮೊದಲ ಸಮಾಗಮದ ನಂತರ ರಕ್ತಸ್ರಾವವಾಗಿದ್ದರೆ ಮಾತ್ರ ಅಂಥ ಹೆಣ್ಣು ಪವಿತ್ರಳಾಗಿದ್ದಳು, ಕನ್ಯೆಯಾಗಿದ್ದಳು ಎಂದು ಭಾವಿಸುತ್ತಾರೆ. ಅಂಥ ಕಲ್ಪನೆ ನಿಜವಾಗಬೇಕಿಲ್ಲ ಎಂದು ತಿಳಿಸಿಕೊಡುವ ಬದಲು ಈಗ ಕನ್ಯಾಪೊರೆ ಹರಿದಿದ್ದರೆ ಹೊಲಿದುಕೊಡುವ ಪ್ಲಾಸ್ಟಿಕ್ ಸರ್ಜರಿ ಜನಪ್ರಿಯವಾಗತೊಡಗಿದೆ. ಸ್ವೇಚ್ಛಾಚಾರದ ಸಮಾಜ ಎಂದು ಪಶ್ಚಿಮವನ್ನು ತೆಗಳುವ ಭಾರತೀಯ ಸಂಸ್ಕೃತಿಯ ಪ್ರತಿಪಾದಕರು ಇತ್ತ ಗಮನ ಹರಿಸಬೇಕು: ಅಮೆರಿಕದಲ್ಲಿ ಕನ್ಯತ್ವ ಇದೆಯೇ ಇಲ್ಲವೇ ಎನ್ನುವುದು ಮಹಿಳೆಗೆ ಮುಚ್ಚುಮರೆಯ ವಿಷಯವಲ್ಲ. ಆದರೆ ಭಾರತದಲ್ಲಿ ಹೆಣ್ಣಿನ ಪಾವಿತ್ರ್ಯ ಎಷ್ಟು ಮುಖ್ಯವೆಂದರೆ ಹೈಮೆನೋಪ್ಲಾಸ್ಟಿಗಾಗಿ ಮಹಾನಗರಗಳ ಕ್ಲಿನಿಕ್‌ಗಳಲ್ಲಿ ಹೆಣ್ಣುಮಕ್ಕಳು ಪಾಳಿ ಹಚ್ಚಿ ಕಾಯುತ್ತಿದ್ದಾರೆ. ಇದು ಸಮಾಜದೆದುರು ಕನ್ಯತ್ವ ಸಾಬೀತುಪಡಿಸಲು ಮಾಡುವ ಮೋಸದಂತೆ ಕಂಡರೂ ಹೆಣ್ಣು ತನಗೆ ತಾನೇ ಮಾಡಿಕೊಳ್ಳುವ ಅವಮಾನವೂ, ಮೂರ್ಖತನವೂ ಆಗಿದೆ.

***

ಅಷ್ಟಕ್ಕೂ ಹೆಣ್ಣಿನ ವ್ಯಕ್ತಿತ್ವ, ಐಡೆಂಟಿಟಿ ಅವಳ ಕನ್ಯಾಪೊರೆಯಲ್ಲಿದೆಯೆ? ಅವಳು ಶುದ್ಧ ಅಶುದ್ಧಳೆಂದು ನಿರ್ಧರಿಸುವುದು ಸ್ರಾವವಿರುವ ಮತ್ತು ಇಲ್ಲದಿರುವ ಎಂದು ಗೆರೆ ಕೊರೆದುಕೊಂಡ ದಿನಗಳಲ್ಲೇ? ದೇಹದ ಒಂದು ಪುಟ್ಟ ಚರ್ಮದ ಚೂರು ಅವಳ ಪಾವಿತ್ರ್ಯ, ಶೀಲ ನಿರ್ಧರಿಸುವುದಾದರೆ ಆತ್ಮವೆಂದರೇನು? ಇಂತಹ ಸಣ್ಣ ವಸ್ತುನಿಷ್ಠ ಪ್ರಶ್ನೆಯೂ ಯಾರಿಗೂ ಬೇಡವಾಗಿದೆ. ಕುರುಡಾಗಿ ಅಪ್ಪ ತಿಥಿ ಮಾಡುವಾಗ ಕರಿಬೆಕ್ಕು ಕವುಚಿ ಹಾಕುತ್ತಿದ್ದನೆಂದು ಇವರೂ ಕರಿಬೆಕ್ಕು ಹುಡುಕಿ ತಂದು ಕವುಚಿ ಹಾಕುತ್ತಾರೆ!

ಎದೆಯೋನಿಕಿಬ್ಬೊಟ್ಟೆಗಳೇ ತನ್ನ ಹೆಣ್ತನ/ಪಾವಿತ್ರ್ಯ ಸಾಬೀತುಪಡಿಸುವ ಅಂಗಾಂಗಗಳು ಎಂದು ಹೆಣ್ಣನ್ನು ನಂಬಿಸಿರುವ ಸಮಾಜಕ್ಕೆ ಪೂರಕವಾಗಿ ವಿಜ್ಞಾನ/ತಂತ್ರಜ್ಞಾನಗಳೂ ಆ ನಂಬಿಕೆಗಳನ್ನು ಪೋಷಿಸುತ್ತಿವೆ. ವಿಜ್ಞಾನ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಬದಲು ತಂತ್ರಜ್ಞಾನದ ಮೂಲಕ ಅವರ ಹಳೆಯ ನಂಬಿಕೆ, ಮೂಢನಂಬಿಕೆಗಳ ಬೇರುಗಳನ್ನು ಗಟ್ಟಿಗೊಳಿಸುತ್ತಿದೆ. ಎಲ್ಲ ಅತಿಗಳು ಢಾಳಾಗಿ ಕಣ್ಣಿಗೆ ರಾಚುವ ಕಾಲವಿದು. ವಿಜ್ಞಾನ ಎಲ್ಲದನ್ನೂ ಮರುಸೃಷ್ಟಿ ಮಾಡಲು ಸಾಧ್ಯವೆ ಎಂದು ನೋಡುತ್ತದೆ. ವೈದ್ಯವಿಜ್ಞಾನವಂತೂ ಸೌಂದರ್ಯಕ್ಕೆ ಸಂಬಂಧಪಟ್ಟ ‘ವೈದ್ಯಕೀಯವಲ್ಲ ವೈದ್ಯಕೀಯ’ ವಿಭಾಗದಲ್ಲಿ ಶರವೇಗದಲ್ಲಿ ಬೆಳೆಯುತ್ತಿದೆ. ಮುಖದ ಸುಕ್ಕು ಕಾಣದಂತೆ, ಮೊಲೆ ಜೋತು ಬೀಳದಂತೆ, ಉದುರಿದ ಕೂದಲು ಮತ್ತೆ ಕೂರಿಸಲಿಕ್ಕೆ, ಚರ್ಮ ಬೆಳ್ಳಗಾಗಿಸಲಿಕ್ಕೆ, ಮೂಗು ನೇರವೋ ವಾರೆಯೋ ಮಾಡಲಿಕ್ಕೆ, ಹಲ್ಲು ಹೊಳೆಯುವಂತೆ ಮಾಡಲಿಕ್ಕೆ - ಒಟ್ಟಾರೆ ಹೀಗೇ ತನ್ನ ಸೌಂದರ್ಯಕ್ಕೆ ಏನೇನು ಊನವಾಗಿದೆ ಎಂದು ವ್ಯಕ್ತಿಯೊಬ್ಬ ಭಾವಿಸುವನೋ ಅದನೆಲ್ಲ ರಿಪೇರಿ ಮಾಡಿಕೊಡುವ ಗ್ಯಾರೇಜ್ ಆಸ್ಪತ್ರೆಗಳು ಮೈದಳೆಯುತ್ತಿವೆ.

೬೦೦ ಕೋಟಿ ಜನಸಂಖ್ಯೆಯ ಭೂಮಿ ಮೇಲೆ ಎಷ್ಟೋ ಲಕ್ಷಾಂತರ ಬಡವರು, ಮಕ್ಕಳು, ಬಸುರಿಯರು ಕನಿಷ್ಠ ಆರೋಗ್ಯ ಸೌಲಭ್ಯ, ಅನ್ನ ಸಿಗದೆ ದಿನಕಳೆಯುತ್ತ ಅಕಾಲ ಮರಣವನ್ನಪ್ಪುತ್ತಿದ್ದಾರೆ. ಆದರೆ ಸಿರಿವಂತರ ಖಯಾಲಿ, ಅಗತ್ಯಗಳಿಗನುಗುಣವಾಗಿ ಸಂಶೋಧನೆಯ ದಿಕ್ಕು ದೆಸೆ ಬದಲಾಗುತ್ತ ನಿರುಪಯೋಗಿ ಕ್ರಿಯೆಗಳಲ್ಲಿ ತೊಡಗಿಕೊಳ್ಳಲಾಗಿದೆ. ವಿಜ್ಞಾನ ಕೇವಲ ಜನಪ್ರಿಯವಾಗದೇ ಜನಪರವಾಗಬೇಕಿರುವುದು ಈ ಹೊತ್ತಿನ ಅಗತ್ಯವಾಗಿದೆ.

ಹೆಣ್ಣು, ಹೆಣ್ತನ, ಸೌಂದರ್ಯದ ಪರಿಕಲ್ಪನೆಗಳನ್ನು ಮಹಿಳೆ ತನಗೆ ತಾನೇ ಮರುವ್ಯಾಖ್ಯಾನಿಸಿಕೊಳ್ಳುವ ಅಗತ್ಯವಿರುವ ಈ ಕಾಲದಲ್ಲಿ ಮಾರುಕಟ್ಟೆ ಕೊಡಮಾಡುತ್ತಿರುವ ವ್ಯಾಖ್ಯಾನಗಳು ದಾರಿತಪ್ಪಿಸುವಂಥವಾಗಿವೆ. ಅದರ ಸೌಂದರ್ಯದ ವ್ಯಾಖ್ಯಾನ ಹೆಣ್ತನವನ್ನು ಮತ್ತದೇ ಪಾರಂಪರಿಕ ನೆಲೆಗೆ ಕಟ್ಟಿ ಹಾಕಲು ನೋಡುತ್ತಿದೆ. ಯಾವುದೇ ಸಿನಿಮಾ, ಧಾರಾವಾಹಿ ಅಥವಾ ಜಾಹೀರಾತಿನಲ್ಲಿ ಹೆಣ್ಣು ಅವಳ ವ್ಯಕ್ತಿತ್ವಕ್ಕಾಗಿ ಗೌರವಿಸಲ್ಪಡುವುದಿಲ್ಲ. ಬದಲಾಗಿ ಅವಳ ಅಂದಚೆಂದ ಅಲಂಕಾರ, ಚೌಕಟ್ಟಿನೊಳಗೇ ಬದುಕುವ ವಿನಯ, ಸಹನೆ, ಸಿರಿಸಂಪತ್ತು - ಇವುಗಳಿಂದ ಅಳೆಯಲ್ಪಡುತ್ತಾಳೆ.

ಜೈವಿಕ ಹೆಣ್ತನ ಬೇರೆ. ಹೆಣ್ತನದ ಅರಿವು ಹುಟ್ಟಿಸುವ ಹೆಣ್ತನ ಬೇರೆ. ಮಾರುಕಟ್ಟೆ ಜಗತ್ತು ಹೆಣ್ಣಿನಿಂದ ಈ ಎರಡೂ ವ್ಯಕ್ತಿತ್ವಗಳನ್ನು ದೂರ ಒಯ್ದು ಅವಳನ್ನು ಕೇವಲ ಆಹ್ಲಾದಕರ ವಸ್ತುವಾಗಿ ನೋಡುತ್ತಿರುವುದು ಹಾಗೂ ಸಮಾಜದ ಅಥವಾ ಮಾರುಕಟ್ಟೆ ಜಗತ್ತಿನ ಈ ವ್ಯಾಖ್ಯಾನವನ್ನು ಹೆಣ್ಣು ದುಸರಾ ಮಾತಿಲ್ಲದೆ ಒಪ್ಪಿ ಅದರಂತೆ ನಡೆಯುತ್ತಿರುವುದು ದುರಾದೃಷ್ಟವಾಗಿದೆ. ಪಾವಿತ್ರ್ಯ ಅಥವಾ ಶೀಲ ಕೇವಲ ಕನ್ಯಾಪೊರೆ ಅಥವಾ ಯೋನಿಯಲ್ಲಿಲ್ಲ. ಸೌಂದರ್ಯ ಮೈ ಬಣ್ಣದಲ್ಲಿಲ್ಲ, ವ್ಯಕ್ತಿತ್ವದ ಸಮಗ್ರತೆ ದೇಹದ ಆಕಾರದಲ್ಲಿಲ್ಲ. ಹೆಣ್ಣು ಎನ್ನುವುದು ಒಂದು ವ್ಯಕ್ತಿ. ಹೆಣ್ತನ ತನ್ನ ವ್ಯಕ್ತಿತ್ವದ ಒಂದು ಭಾಗ ಎಂದು ಮಹಿಳೆ ಅರಿಯಬೇಕು. ಆಗಷ್ಟೆ ಲಿಂಗ ಸಮಾನತೆಯ ಕುರಿತಾಗಲೀ, ಘನತೆ-ಗೌರವದ ವ್ಯಕ್ತಿಯಾಗಿಯಾಗಲೀ ಅವಳು ಸಮಾಜ ಬದಲಾವಣೆಗೆ ಪ್ರೇರೇಪಿಸಬಲ್ಲಳು ಹಾಗೂ ಸಮಾಜವೂ ಅವಳನ್ನು ಈ ಮೊದಲಿಗಿಂತ ಭಿನ್ನ ದೃಷ್ಟಿಕೋನದಲ್ಲಿ ನೋಡಲಾರಂಭಿಸುವುದು.



Monday, 4 August 2014

ದಿಟನಾಗರ ಕಂಡರೆ...







     ಬೆಳಗಾತ ಎದ್ದು, ಬೆಟ್ಟಕ್ಕೆ ಸೊಪ್ಪು ಕಡಿಯಲು ಹೋಗಿದ್ದ ಮಾದೇವ ಕೊನೆಯ ಕಂತು ಸೊಪ್ಪು ಕಡಿದು ಮರದಿಂದ ಕೆಳಗಿಳಿಯುತ್ತಿದ್ದ. ಇನ್ನೇನು ಹೊರೆಕಟ್ಟಿ ಸೊಪ್ಪು ಹೊತ್ತು ಮನೆಗೆ ಹೊರಡುವ ಹೊತ್ತು. ಬಳ್ಳಿ ಎಳೆದು ಗಂಟು ಬಿಗಿ ಮಾಡುತ್ತಾ ಇದ್ದವನ ಕೈಗೆ ಏನೋ ಕಟಂ ಎಂದು ಕುಟ್ಟಿದಾಗಲೇ ಗೊತ್ತಾದದ್ದು ಏನೋ ಕಡಿದಿರಬೇಕು ಎಂದು. ನೋಡಲೆಂದು ಸೊಪ್ಪು ಅತ್ತಿತ್ತ ಸರಿಸುತ್ತಾನೆ, ಎದುರಿಗೆ ಬುಸುಗುಡುತ್ತ ಎದ್ದು ಹೆಡೆಯಾಡಿಸಿತೊಂದು ಕಪ್ಪುಹಾವು! ‘ಅಯ್ಯೋ ಹಿರೇಹಾವು’ ಎಂಬೊಂದು ಉದ್ಗಾರ ಹೊರಟಿತು. ಅಂತಿಂಥ ಹಾವಲ್ಲ ಅದು. ಅದನ್ನು ನೋಡಿದರೇ ಹೆದರಿ ಉಚ್ಚೆ ಹೊಯ್ದುಕೊಳ್ಳಬೇಕು, ಅಂಥಾ ಹತ್ತಡಿ ಉದ್ದದ ಕಾಳಿಂಗ ಸರ್ಪ. ದಟ್ಟ ಮಳೆಕಾಡಿನ ಅತಿ ವಿಷಪೂರಿತ ಹಾವು ಅದು. ಕಡಿದು ರಾಶಿ ಹಾಕಿದ್ದ ಸೊಪ್ಪಿನಲ್ಲಿ ಹೇಗೋ ಸೇರಿ ಹಗ್ಗದ ಬಿಗಿ ತಾಗಿದಾಗ ಅವನನ್ನು ಕಚ್ಚಿತ್ತು. ಅವನಾಗಲೇ ಮನೆಯಿಂದ ಮೂರು ಮೈಲು ದೂರ ಬಂದುಬಿಟ್ಟಿದ್ದ. ಅವನ ಜೊತೆಗೇ ಬೆಟ್ಟಕ್ಕೆ ಸೊಪ್ಪಿಗೆ ಬಂದಿದ್ದ ಗೆಳೆಯನನ್ನು ಒಂದು ‘ಕೂ ಹೊಯ್’ ಕೂಗಿನಲ್ಲಿ ಕರೆದ. ಗೆಳೆಯ ವಿಷಯ ತಿಳಿದು ದಂಗಾಗಿ, ಕತ್ತಿಯಿಂದ ಗಾಯ ದೊಡ್ಡ ಮಾಡಿ, ಹತ್ತಿರವಿದ್ದ ಮರಾಠಿಕೊಪ್ಪವೊಂದಕ್ಕೆ ನುಗ್ಗಿದ. ಅಲ್ಲಿನ ಹಿರಿಯ ತನ್ನ ಕೋಳಿಗೂಡಿನಿಂದ ಕೊಟ್ಟ ಎರಡು ಎಳೇ ಮರಿಯ ಕುಂಡೆಯನ್ನು ಗಾಯದ ಮೇಲೆ ಒತ್ತಿ ಹಿಡಿದ. ಮಾದೇವನಿಗೆ ‘ನಿದ್ದೆಮಾಡಬೇಡ, ಕಣ್ಣು ಮಾತ್ರ ಮುಚ್ಚಬೇಡ’ ಎಂದು ಪದೇಪದೇ ಎಚ್ಚರಿಸುತ್ತಾ, ಹತ್ತಿರವಿದ್ದ ಒಂದು ಲಡಕಾಸಿ ಮೋಟರುಸೈಕಲ್ಲಿನ ಮೇಲೆ ಕೂರಿಸಿಕೊಂಡು ಅವನನ್ನು ಆಸ್ಪತ್ರೆಗೆ ಕರೆತಂದ. ಇಷ್ಟೆಲ್ಲ ಆಗಿ ಅವರು ಆಸ್ಪತ್ರೆಗೆ ಬಂದಾಗ ಗಂಟೆ ಇನ್ನೂ ಬೆಳಗಿನ ಏಳು!

   ನಾನು ನೋಡುವ ಹೊತ್ತಿಗಾಗಲೇ, ಮುಚ್ಚಬೇಡ ಎಂದು ಹೇಳುತ್ತಿದ್ದರೂ ಅವನ ಕಣ್ಣು ಎಳೆದೆಳೆದು ಹೋಗುತ್ತಿತ್ತು. ಮೈಯೆಲ್ಲ ನೀಲಿಗಟ್ಟಿ ಮೇಲುಶ್ವಾಸ ಬಿಡುತ್ತಿದ್ದ. ಬಾಯಲ್ಲಿ ಬುರುಬುರು ನೊರೆ ಹೊರಬರಲು ಹವಣಿಸುತ್ತಿತ್ತು. ಮೈ ತಣ್ಣಗಾಗುತ್ತಾ ಸಾಗಿತ್ತು. ಹಾವು ಕಚ್ಚಿದ ಕೈಗೆ ಎಂಥ ಬಿಗಿ ಕಟ್ಟು ಹಾಕಿದ್ದರೆಂದರೆ ಕೈ ಸೆಟಗೊಂಡು ಹೋಗಿತ್ತು. ನಾನು ಕೇಳಿದ ಯಾವ ಪ್ರಶ್ನೆಗೂ ಅವನು ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಅವನನ್ನು ನೋಡಿ ಸರಸರ ಎಎಸ್‌ವಿ ಹಾಕಲು ತಯಾರಿ ಮಾಡಿದೆವು. ಆಂಬುಲೆನ್ಸ್ ಬರುವುದರಲ್ಲಿ ನಮ್ಮ ಬಳಿ ಇದ್ದ ಎಎಸ್‌ವಿ ಸ್ಟಾಕ್ ತೀರಿತು. ಪಟ್ಟಣ ಮುಟ್ಟುವುದರೊಳಗೆ ಅವನು ಪೂರ್ತಿ ನೀಲಿಯಾಗಿ ತಣ್ಣಗಾಗಿಬಿಟ್ಟ. ಇನ್ನೂ ಮದುವೆಯಾಗದ ಕಟ್ಟುಮಸ್ತಾದ ಮಾದೇವನ ಇಂತಹ ಸಾವು ಹಲವಾರು ದಿನ ಎಲ್ಲರ ಬಾಯ ವಿಷಾದವಾಗಿ ಸುಳಿದಾಡಿ, ನಾಗನಿಗೆ ಏನೋ ಕೋಪ ಬಂದಿದೆ ಎಂದು ಶಮನಗೊಳಿಸುವ ಹಲವು ವಿಧಿವಿಧಾನಗಳು ನಡೆದವು.

***

       ಜನತಾ ಮನೆಯ ಶಿವಮ್ಮ ತಾಯಿತಂದೆಯರಿಲ್ಲದ, ಅಜ್ಜಿಯ ಮನೆಯಲ್ಲಿ ಬೆಳೆಯುತ್ತಿದ್ದ ಏಳನೇ ತರಗತಿಯ ಹುಡುಗಿ. ಮಾವನ ಹೆಂಡತಿಯ ಕಟಿಪಿಟಿ ತಡೆಯಲಾರದೇ ಅಂದು ಶಾಲೆ ಮುಗಿಸಿ ಮನೆಗೆ ಬಂದವಳು ಒಂದು ಕಲ್ಲಿ ದರಕು(ಒಣ ಎಲೆ) ಗುಡಿಸಿ ತರಲು ಗೇರು ಹಾಡಿಗೆ ಹೋದಳು. ಏನೋ ಕಚ್ಚಿದಂತಾಯಿತು. ಆದರೂ ಬೇಗಬೇಗ ಕೆಲಸ ಮುಗಿಸಿ ಪರೀಕ್ಷೆಗಾಗಿ ಓದಿಕೊಳ್ಳುವ ಆತುರದಲ್ಲಿ, ಕಚ್ಚಿದ್ದು ಏನೆಂದು ಸರಿಯಾಗಿ ನೋಡದೇ ದರಕು ಗುಡಿಸಿ ತಂದು ಒಟ್ಟಿದಳು. ಕೈ ಬಾತು ನೋವು ಏರುತ್ತಲೇ ಹೋಯಿತು. ಅತ್ತೆಯ ಬಳಿ ಹೇಳಲು ಮನಸ್ಸಿಲ್ಲ. ಅಜ್ಜಿ ಒಡೆಯರ ಮನೆಯ ಕೆಲಸ ಮುಗಿಸಿ ಬರುವ ಹೊತ್ತಿಗೆ ಕೈಯೆಲ್ಲ ಬಾತು ನೋವು ತಡೆಯಲಾಗದೇ ಮುಚ್ಚಿ ಹಾಕಿಕೊಂಡು ಮಲಗಿಬಿಟ್ಟಿದ್ದಳು. ಮೊಮ್ಮಗಳಿಗೆ ಏನೋ ಕಚ್ಚಿದ ವಿಷಯ ತಿಳಿದಿದ್ದೇ ಹೌಹಾರಿದ ಅಜ್ಜಿ, ಶಿವಮ್ಮನ ಕೂಗಾಟವನ್ನೂ ಲೆಕ್ಕಿಸದೇ ಕಚ್ಚಿದ ಗಾಯವನ್ನು ಕೊಯ್ದು ದೊಡ್ಡ ಮಾಡಿದಳು. ತಾಸೆರೆಡು ತಾಸು ಕಳೆಯುವುದರಲ್ಲಿ ಆ ದೊಡ್ಡ ಗಾಯದಿಂದ ಒಂದೇ ಸಮ ರಕ್ತ ಸೋರತೊಡಗಿತು. ಗಾಬರಿ ಬಿದ್ದು ಆಗ ಆಸ್ಪತ್ರೆಗೆ ಕರೆತಂದಳು.

      ಅಂಥ ನೋವಿನಲ್ಲೂ ಮೌನವಾಗಿ ಕಣ್ಣೀರು ಸುರಿಸುತ್ತಿದ್ದ ಶಿವಮ್ಮನ ಕೈ ಪೂರಿಯಂತೆ ಉಬ್ಬಿತ್ತು. ಕಚ್ಚಿದ ಗಾಯದಿಂದ ರಕ್ತ ಒಸರುತ್ತಿತ್ತು. ಅನುಮಾನವಾಗಿ ಹಲ್ಲು ತೋರಿಸು ಎಂದರೆ ವಸಡಿನ ಸಂದುಗಳಿಂದ ಕಂಡೂಕಾಣದಂತೆ ಹೊರಬರುತ್ತಿರುವ ರಕ್ತ. ಅವಳಿಗೆ ಧೂಳುಹಪ್ಪಡಿ ಎಂದು ಕರೆಯಲಾಗುವ ಒಂದು - ಒಂದೂವರೆ ಅಡಿ ಉದ್ದದ ಹಾವು ಕಚ್ಚಿದ್ದಿರಬೇಕು. ಕಚ್ಚಿದ ಸಣ್ಣ ಗಾಯದಿಂದಲ್ಲದೆ ವಸಡು, ಮೂತ್ರದಲ್ಲಿ, ಮೂಗು, ಗಂಟಲಿನಿಂದೆಲ್ಲ ರಕ್ತ ಒಸರಲು ಪ್ರಾರಂಭವಾಗಿತ್ತು. ಆ ಹಾವಿನ ವಿಷಕ್ಕೆ ರಕ್ತ ಹೆಪ್ಪುಗಟ್ಟುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಚಿಕಿತ್ಸೆಯಿಲ್ಲದೇ ಹಾಗೇ ಬಿಟ್ಟರೆ ಆಂತರಿಕ ರಕ್ತಸ್ರಾವವಾಗೇ ಸಾವನ್ನಪ್ಪುವ ಸಾಧ್ಯತೆಯಿರುತ್ತದೆ.

      ಅವಳನ್ನು ಕೂಡಲೇ ಅಡ್ಮಿಟ್ ಮಾಡಿದೆವು. ಆ ಪುಟ್ಟ ಹುಡುಗಿಯ ಕೈಬೆರಳನ್ನು ಆ ಹಾವು ಅದೇನೆಂದು ತಿಳಿದು ಕಚ್ಚಿತೋ, ಅದೆಷ್ಟು ವಿಷ ಒಳ ಹಾಕಿತ್ತೋ?! ರಾತ್ರಿ ಕಳೆದು ಬೆಳಗಾಗುವುದರೊಳಗೆ ಒಂಭತ್ತು ವಯಲ್ ಎಎಸ್‌ವಿ ಇಂಜೆಕ್ಷನ್ ಕೊಡುವಂತಾಯಿತು. ಒಂದು ಇಂಜೆಕ್ಷನ್‌ಗೆ ಆರುನೂರು ರೂಗಳು. ಜೊತೆಗೆ ನೋವಿಗೆ, ರಿಯಾಕ್ಷನ್ ಆಗದ ಹಾಗೆ, ನಂಜು ಆಗದ ಹಾಗೆ ಆಂಟಿಬಯಾಟಿಕ್ ಹಾಗೂ ಬೇರೆಬೇರೆ ಔಷಧಗಳು. ಅವಳ ಅಜ್ಜಿ ವರ್ಷವಿಡೀ ದರಕು ಹೊತ್ತರೂ ದುಡಿಯಲಾಗದಷ್ಟು ಸಾವಿರಾರು ರೂಗಳ ಬಿಲ್ ಒಂದು ರಾತ್ರಿ ಕಳೆದು ಬೆಳಗಾಗುವುದರಲ್ಲಿ ಆಯಿತು! ಬಿಲ್ ಬಂತೋ ಇಲ್ಲವೋ, ತಾಯ್ತಂದೆಯರಿಲ್ಲದ ಹುಡುಗಿಯ ಜೀವ ಉಳಿಸಿದ ತೃಪ್ತಿ ನಮ್ಮದು. ಅಂತೂ ಅಂದು ಆ ವಿಪತ್ತಿನಿಂದ ಪಾರಾದ ಅವಳೀಗ ಮಂಡಲ ಕೇಂದ್ರ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಾ ನೆಮ್ಮದಿಯಾಗಿ ಅಜ್ಜಿಯ ಜೊತೆಗಿದ್ದಾಳೆ.

***

   ಹಾವು ಕಚ್ಚಿದವರಿಗೆಲ್ಲ ವಿಷವೇರುವುದಿಲ್ಲ, ಹಾವು ಕಚ್ಚಿದವರಿಗೆಲ್ಲ ಸಾವು ಬರುವುದಿಲ್ಲ. ಆದರೆ ಹಾವಿನ ಬಗೆಗಿನ ತಿಳುವಳಿಕೆಗಿಂತ ಭಯಭೀತಿಯೇ ಹೆಚ್ಚಿರುವ ನಮಗೆ, ಹಾವು ಕಚ್ಚಿದರೆ ವಿಷದ ಆಘಾತಕ್ಕಿಂತ ಹತ್ತುಪಟ್ಟು ಭಯದ ಆಘಾತವಾಗುತ್ತದೆ. ಹಾವು ಎಂಬ ಪದವೇ ಬಹಳ ಜನರಲ್ಲಿ ಭಯ ಹುಟ್ಟಿಸುತ್ತದೆ. ಕೈಕಾಲು, ಕಿವಿ, ಕಿವಿತಮಟೆ, ಕಣ್ಣರೆಪ್ಪೆ ಇಲ್ಲದ, ವರ್ಷಕ್ಕೆ ಎರಡು ಮೂರು ಬಾರಿ ಗುಪ್ತಜಾಗಕ್ಕೆ ಹೋಗಿ ಪೊರೆ ಕಳಚುವ ಹಾವಿನ ವಿಲಕ್ಷಣ ಗುಣಗಳು; ವಿಷದ ಹಾವಿನ ಕಡಿತಕ್ಕೆ ಬಂದೆರಗುವ ತತ್‌ಕ್ಷಣದ ಸಾವು; ಸಾವು ತರುವುದರಿಂದಲೇ ಹುಟ್ಟಿಕೊಂಡಿರಬಹುದಾದ ಹಾವಿನ ಮೇಲಿನ ಭಕ್ತಿ, ಸೇಡಿನ ಕತೆಗಳು, ಶಕ್ತಿಯ ಬಗೆಗಿನ ಪುರಾಣಕತೆಗಳು - ಇವೆಲ್ಲ ಸೇರಿ ಹಾವು ಬಹುಪಾಲು ಜನರಿಗೆ ಬರೀ ಪ್ರಾಣಿಯಾಗಿ ಕಾಣದೇ ಅಲೌಕಿಕ ಭಯಹುಟ್ಟಿಸುವ ದೇವರಾಗಿ ತೋರುತ್ತದೆ. ರೆಪ್ಪೆಯಿಲ್ಲದ್ದಕ್ಕೆ ಹಾವು ಬಿರುನೋಟವುಳ್ಳ ಶೀಘ್ರಕೋಪಿಯಾಗಿ ಕಾಣುತ್ತದೆ. ಕಿವುಡು ಹಾವು ಪುಂಗಿಯ ಚಲನೆಗೆ ಅನುಗುಣವಾಗಿ ಹೆಡೆಯಾಡಿಸುವುದನ್ನು ನರ್ತನವೆಂದು ಭಾವಿಸುತ್ತೇವೆ.

   ಶಕ್ತಿ, ಯುಕ್ತಿ ಎರಡೂ ಅಷ್ಟಿಲ್ಲದ ಹಾವು ತನ್ನ ಅಸ್ತಿತ್ವಕ್ಕಾಗಿನ ಹೋರಾಟದಲ್ಲಿ ಎದುರಾಳಿಯೆದುರು ರಾಸಾಯನಿಕ ಸಮರ ನಡೆಸಲು ವಿಷವನ್ನು ಸ್ರವಿಸುತ್ತದೆ. ಇದರ ಸಲುವಾಗಿ ವಿಶೇಷ ಗ್ರಂಥಿಗಳನ್ನೂ ಹೊಂದಿದೆ. ಸಾಧಾರಣವಾಗಿ ವಿಷಗ್ರಂಥಿಗಳಿರುವ ಜೀವಿಗಳು ಕ್ರೂರವಾಗಿ ವರ್ತಿಸುವುದಿಲ್ಲ. ದ್ವೇಷ - ರೋಷದ ಕತೆಗಳೆಲ್ಲ ಕಟ್ಟುಕತೆಗಳೆನ್ನದೇ ವಿಧಿಯಿಲ್ಲ. ಅವು ತಮ್ಮ ಆತ್ಮರಕ್ಷಣೆಗಾಗಿ ಹಾಗೂ ಕೆಲವು ಬಾರಿ ಆಹಾರಕ್ಕಾಗಿ ಮಾತ್ರ ವಿಷವನ್ನು ಬಳಸುತ್ತವೆ.

    ಮಳೆಗಾಲದಲ್ಲಿ ಕೃಷಿ ಸಂಬಂಧಿ ಕೆಲಸ ಮಾಡುವಾಗ ಹಾವಿನ ಕಡಿತಕ್ಕೆ ಒಳಗಾಗಿ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚು. ಬಹುಪಾಲು ಹಳ್ಳಿಯ ಜನ ಏನೇ ಕಚ್ಚಲಿ, ಕಚ್ಚಿದ ಪ್ರಾಣಿಯನ್ನು ಹುಡುಕಿ ಕೊಂದು, ಒಂದು ಪ್ಲಾಸ್ಟಿಕ್ ಚೀಲಕ್ಕೆ ಹಾಕಿ ತರುವುದರಿಂದ ತರಹೇವಾರಿ ಹಾವುಹರಣೆಗಳು, ಜೇಡಗಳು, ಹುಳುಕೀಟಗಳನ್ನು ನೋಡಲು ನಮಗೆ ಸಾಧ್ಯವಾಗಿದೆ. ಆದರೆ ನಾಗರ ಹಾವು ಕಚ್ಚಿದರೆ ಹೊಡೆಯುವ ಮಾತು ಹಾಗಿರಲಿ, ಅದರ ಹೆಸರನ್ನು ಗಟ್ಟಿಯಾಗಿ ಬಾಯಲ್ಲಿ ಹೇಳುವುದೂ ಇಲ್ಲ! ಅದಕ್ಕೆ ಹಿರೇಹಾವು ಎಂಬ ಹೆಸರು. ಅದು ಕಣ್ಣಿಗೆ ಕಂಡರೆ ಸಾಕು, ಮರೆತ ಪೂಜೆ ನೆನಪು ಮಾಡಲೇ ಕಾಣಿಸಿಕೊಂಡಿದೆ ಎಂದು ಭಾವಿಸಿ, ಸುಬ್ರಹ್ಮಣ್ಯ ದೇವರಿಗೆ ಒಂದು ಹರಕೆ ಹೊತ್ತು ಬಾಳೆಗೊನೆ ಕೊಟ್ಟು, ಕಾಪಾಡಪ್ಪಾ ಅಂತ ಅಡ್ಡಬಿದ್ದು, ಭಯಭಕ್ತಿ ಪ್ರದರ್ಶಿಸುತ್ತಾರೆ. ಪ್ರತಿ ಮನೆಯಲ್ಲೂ ಒಬ್ಬನಾದರೂ ಹಿರೇಹಾವಿನ ಹೆಸರು ಹೊತ್ತವ ಇರಲೇಬೇಕು. ಅಪರೂಪಕ್ಕೆ ಎಲ್ಲಾದರೂ ಸತ್ತುಬಿದ್ದ ನಾಗರ ಹಾವು ಕಂಡರಂತೂ ನಾಮುಂದು ತಾಮುಂದು ಎಂದು ಓಡಿಹೋಗಿ ತಂದು, ಶಾಸ್ತ್ರೋಕ್ತ ಶವಸಂಸ್ಕಾರ ಮಾಡುತ್ತಾರೆ. ಹಾವಿಗಿರುವ ಭಾಗ್ಯ ಎಷ್ಟೋ ಮನುಷ್ಯರಿಗಿಲ್ಲದಿರುವ ಕಾಲದಲ್ಲಿ, ಮಣ್ಣಿನಲ್ಲಿ ಹಾವಿನ ಮೂರ್ತಿ ಮಾಡಿ, ಶವಸಂಸ್ಕಾರ ಮಾಡಿ, ಪುತ್ರಸಂತಾನಕ್ಕಾಗಿ ಪ್ರಾರ್ಥಿಸುತ್ತಾರೆ.

     ನಮ್ಮ ದೇಶದಲ್ಲಿ ಕೇವಲ ನಾಲ್ಕು ಜಾತಿಯ ಹಾವುಗಳು ಮಾತ್ರ ವಿಷಪೂರಿತವಾದವು. ನಾಗರ ಜಾತಿಯ ಹಾವುಗಳು(ನಾಗರ ಹಾವು ಹಾಗೂ ಕಾಳಿಂಗ ಸರ್ಪ), ಹಾಗೂ ಮಂಡಲ ಜಾತಿಯ ಹಾವುಗಳು(ವೈಪರ್ ಹಾಗೂ ಕ್ರೇಟ್ - ಧೂಳು ಹಪ್ಪಡಿ, ಕಂಚಪ್ಪಡಿ, ಬಳಗಂಡ, ಕೊಳಕು ಮಂಡಲ  ಇತ್ಯಾದಿ). ಉಳಿದ ಕೇರೆಹಾವು, ಹಸಿರುಹಾವು, ಎಲೆಹಾವು, ಕುಂಕುಮ ಹಾವು, ಹೆಬ್ಬಾವು, ಕುದ್ರಬಾಳ ಮತ್ತಿತರೆ ಹಾವುಗಳು ವಿಷಕಾರಕವಲ್ಲ. ಕೆಲವು ಹಾವುಗಳ ಮೇಲೆ ವಿಷಯುಕ್ತ ಗುಣವನ್ನು ಆರೋಪಿಸಲಾಗಿದೆ. ಮತ್ತೆ ಕೆಲವು ಹಾವುಗಳನ್ನು ಅವು ಕೋಳಿ ಹಿಡಿಯುತ್ತವೆಂದೋ, ಬೆಳೆಗಳ ಮೇಲೆ ವಿಷ ಉಗಿಯುತ್ತವೆಂದೋ ಆರೋಪಿಸಿ ಕೊಲ್ಲಲಾಗುತ್ತದೆ. ಹಾವನ್ನು ಕೊಂದರೆ ಸಾವನ್ನೇ ಕೊಂದು ಅಟ್ಟಿದ ತೃಪ್ತಿ ಕೆಲವರಿಗೆ!


 


ವಿಷದ ಹಾವಿಗೆ ದೇಹದ ಕೆಳಭಾಗದಲ್ಲಿ ದೊಡ್ಡ ಹುರುಪೆಗಳಿದ್ದು ಎರಡೇ ವಿಷದ ಹಲ್ಲುಗಳಿರುತ್ತವೆ. ಹಾವು ಕಚ್ಚಿದಾಗ ವಿಷವು ಸೆಕೆಂಡಿಗೆ ಮೂರು ಮೀಟರ್ ವೇಗದಲ್ಲಿ ಹರಡಬಲ್ಲದು. ಬಹುತೇಕ ಕಡಲ ಹಾವುಗಳು ವಿಷಕಾರಕ ಹಾಗೂ ನೆಲದ ಹಾವುಗಳಿಗಿಂತ ತೀಕ್ಷ್ಣ ವಿಷ ಹೊಂದಿರುತ್ತವೆ. ನೆಲದ ಹಾವುಗಳಲ್ಲಿ ನಾಗರಜಾತಿಯ ವಿಷ ಪ್ರಬಲವಾಗಿದ್ದು ಕೂಡಲೇ ಪರಿಣಾಮ ತೋರಿಸುತ್ತದೆ. ಅದು ನರಮಂಡಲ ಹಾಗೂ ಮಾಂಸಖಂಡಗಳ ಮೇಲೆ ಪರಿಣಾಮ ಬೀರಿ ನಿಶ್ಚೇಷ್ಟಿತಗೊಳಿಸುತ್ತದೆ.  ಮಾತು ತಡವರಿಸುತ್ತಾ, ಕೈಕಾಲು ಶಕ್ತಿಹೀನವಾಗಿ, ತಲೆ ಒಂದು ಬದಿಗೆ ಜೋತುಬೀಳುವುದು. ವಾಕರಿಕೆಯಾಗಿ ವಾಂತಿಯಾಗುವುದು. ಉಸಿರಾಟ ಕಷ್ಟವಾಗಿ ಕೊನೆಗೆ ನಿಂತೇ ಹೋಗುತ್ತದೆ.

   ಮಂಡಲ ಹಾವುಗಳದ್ದು ನಿಧಾನ ವಿಷ ಎನ್ನಬಹುದು. ಕೆಲವು ಬಾರಿ ಇಪ್ಪತ್ನಾಲ್ಕು ಗಂಟೆಗಳ ತರುವಾಯ ಅದರ ವಿಷ ಪರಿಣಾಮ ತೋರುತ್ತದೆ. ರಕ್ತದ ಹೆಪ್ಪುಗಟ್ಟುವ ಸಾಮರ್ಥ್ಯ ಕುಗ್ಗಿಸುವುದು ಈ ವಿಷದ ಗುಣ. ಕಚ್ಚಿದ ಜಾಗ ವಿಪರೀತ ಬಾತು ತೀವ್ರ ನೋವುಂಟುಮಾಡುತ್ತದೆ. ವಿಷ ಹೆಚ್ಚು ಪ್ರಮಾಣದಲ್ಲಿ ದೇಹದ ಒಳಸೇರಿದ್ದರೆ ಕಚ್ಚಿದ ಗಾಯದಿಂದ, ಇಂಜೆಕ್ಷನ್ ಚುಚ್ಚಿದ ಜಾಗದಿಂದ, ಒಸಡಿನಿಂದ, ಹಳೆಯ ಗಾಯಗಳಿಂದ, ಗಂಟಲಿನಿಂದ, ಮೂತ್ರದಲ್ಲಿ ರಕ್ತ ಒಸರಲು ಶುರುವಾಗುತ್ತದೆ. ಕಣ್ಣು ಮಂಜಾಗುತ್ತಾ ರೋಗಿ ಬಿಳಿಚಿಕೊಳ್ಳುತ್ತಾ ಹೋಗುತ್ತಾನೆ. ಸರಿಯಾದ ಚಿಕಿತ್ಸೆ ಲಭಿಸದೇ ಹೋದರೆ ಬಹು ಅಂಗಾಂಗಗಳ - ಅದರಲ್ಲೂ ಕಿಡ್ನಿಯ - ವೈಫಲ್ಯಕ್ಕೊಳಗಾಗಿ ಸಾವನ್ನಪ್ಪುತ್ತಾನೆ. ಕೆಲವು ಬಾರಿ ಕಚ್ಚಿದ ಜಾಗದಲ್ಲಿ ವಿಷ ಹಾಗೇ ಉಳಿದು ವಾರಗಳ ನಂತರ ಆ ಭಾಗ ಕೊಳೆಯಲು ಶುರುವಾಗಬಹುದು. ಕೊಳೆತ ಭಾಗವನ್ನು ಕತ್ತರಿಸುವುದು ಅನಿವಾರ್ಯವಾಗಲೂಬಹುದು.

    ಹಾವು ಕಚ್ಚಿದ ನಂತರ ಎಷ್ಟು ಪ್ರಮಾಣದ ವಿಷ ದೇಹದೊಳಗೆ ಸೇರಿದೆ ಎಂಬುದರ ಮೇಲೆ ಪರಿಣಾಮಗಳು ಉಂಟಾಗುತ್ತವೆ. ಆದರೆ ದೇಹ ಹೊಕ್ಕ ವಿಷದ ಪರಿಮಾಣ ಆ ಹಾವಿಗೆ ಮಾತ್ರ ಗೊತ್ತಿರುವುದರಿಂದ, ಲಕ್ಷಣಗಳ ತೀವ್ರತೆಯ ಮೇಲೇ ಚಿಕಿತ್ಸೆಯನ್ನು ನಿರ್ಧರಿಸಬೇಕಾಗುತ್ತದೆ. ಮನುಷ್ಯನಿಗೆ ಕಚ್ಚುವ ಮೊದಲು ಯಾವ ಬೇಟೆಯೂ ಸಿಕ್ಕದೇ ಹಾವಿನಲ್ಲಿ ವಿಷದ ಸಂಗ್ರಹ ಬಹಳವಿದ್ದರೆ ಕಡಿತದಿಂದ ತೀವ್ರತರ ಪರಿಣಾಮಗಳಾಗಬಹುದು. ಬೇಟೆಯಾಡಿದ ಕೂಡಲೇ ಕಚ್ಚಿದ್ದರೆ, ಅದರ ವಿಷವೆಲ್ಲ ಖಾಲಿಯಾಗಿರುತ್ತದಾಗಿ ಹೆಚ್ಚೇನೂ ತೊಂದರೆಯಾಗದೆಯೂ ಇರಬಹುದು. ಈ ಅನಿಶ್ಚಿತತೆಯೇ ಹಲವು ಚಿಕಿತ್ಸೆಗಳನ್ನು, ಹರಕೆಗಳನ್ನು, ಪದ್ಧತಿಗಳನ್ನು ಹುಟ್ಟುಹಾಕಿದೆಯೆಂದರೆ ತಪ್ಪಲ್ಲ.

    ವೈದ್ಯಕೀಯವಾಗಿ ಹಾವು ಕಚ್ಚಿದವರಿಗೆ ಎಎಸ್‌ವಿ(ಆಂಟಿ ಸ್ನೇಕ್ ವೆನಮ್) ಇಂಜೆಕ್ಷನ್ ನೀಡಲಾಗುತ್ತದೆ. ನಮ್ಮಲ್ಲಿ ಸಾವಿಗೆ ಕಾರಣವಾಗುವ ಕೆಲಜಾತಿ ಹಾವುಗಳ ವಿಷ ಹೊರತೆಗೆದು, ಅದನ್ನು ಕುದುರೆಗೆ ಸ್ವಲ್ಪಸ್ವಲ್ಪವೇ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ. ಕುದುರೆಯು ಸಾಯಬಾರದಷ್ಟು ಕಡಿಮೆ, ಆದರೆ ಆಂಟಿಬಾಡಿ ತಯಾರಿಸಲು ಅಗತ್ಯವಾದಷ್ಟು ಪ್ರಮಾಣದಲ್ಲಿ ವಿಷವನ್ನು ನೀಡಲಾಗಿರುತ್ತದೆ.  ಕುದುರೆಯ ರಕ್ತದಲ್ಲಿ ಹಾವಿನ ವಿಷವೆಂಬ ಆಂಟಿಜೆನ್‌ಗಳಿಗೆ ಪ್ರತಿಯಾಗಿ ಆಂಟಿಬಾಡಿ(ನಿರೋಧಕ ಕಣ)ಗಳು ಉತ್ಪತ್ತಿಯಾಗುತ್ತದೆ. ನಂತರ ಕುದುರೆಯ ರಕ್ತ ತೆಗೆದು, ಅದರಲ್ಲಿರುವ ಬೇರೆಯ ಅಂಶಗಳನ್ನೆಲ್ಲ (ಕೆಂಪುರಕ್ತಕಣ, ಬಿಳಿಯರಕ್ತಕಣ, ಪ್ಲೇಟ್‌ಲೆಟ್ ಇತ್ಯಾದಿ) ಬೇರ್ಪಡಿಸಿ, ಉಳಿದ ದ್ರವವನ್ನು ಶುಚಿಗೊಳಿಸಿ, ಘನೀಕರಿಸಿ, ಪೌಡರ್ ರೂಪದಲ್ಲಿ ಇಡಲಾಗುತ್ತದೆ. ಹೀಗೆ ತುಂಬಿಡಲಾದ ಘನೀಕರಿಸಿದ ಪೌಡರ್‌ನ್ನು ದ್ರವವನ್ನಾಗಿಸಿ ಇಂಜೆಕ್ಷನ್ ರೂಪದಲ್ಲಿ ಅಗತ್ಯವಿದ್ದವರಿಗೆ ನೀಡಲಾಗುತ್ತದೆ. ಒಂದು ಎಎಸ್‌ವಿ ತಯಾರಾಗಲು ಕುದುರೆ ಎಷ್ಟು ರಕ್ತದಾನ ಮಾಡಬೇಕೋ! ಹೀಗೇ ರಕ್ತ ಕೊಟ್ಟುಕೊಟ್ಟೇ ಕೊನೆಗೆ ಕುದುರೆ ಪ್ರಾಣವನ್ನೂ ಕೊಡುತ್ತದೆ.

   ಪ್ರಾಣಿದಯಾ ಸಂಘದವರು ಇದರ ಬಗ್ಗೆ ತಕರಾರೆತ್ತಿ ಕೋರ್ಟಿನಲ್ಲಿ ಮೊಕದ್ದಮೆ ಹಾಕಿದ್ದರ ಕಾರಣ, ಹಲವು ದಿನ ಎಎಸ್‌ವಿಯ ಪೂರೈಕೆ ನಿಂತು ಅದು ಬಹು ತುಟ್ಟಿಯಾಗಿತ್ತು. ಬೇರೆಬೇರೆ ವಿಧಾನದಲ್ಲಿ (ಬಯೋಟೆಕ್ನಾಲಜಿ) ಎಎಸ್‌ವಿ ತಯಾರಾಗುತ್ತಿರುವ ಈ ಕಾಲದಲ್ಲೂ ಅದರ ಬೆಲೆ ಏನೂ ಕಮ್ಮಿಯಾಗಿಲ್ಲ. ಒಂದು ಇಂಜೆಕ್ಷನ್ ವಯಲಿಗೆ ರೂ.೫೫೦ರ ಮೇಲೆಯೇ! ಸರಕಾರೀ ಆಸ್ಪತ್ರೆಗಳಲ್ಲಿಯೂ ಇತ್ತೀಚೆಗೆ ಈ ಇಂಜೆಕ್ಷನ್ ದಾಸ್ತಾನು ಉತ್ತಮವಾಗಿದೆಯೆಂಬುದೇ ಸಮಾಧಾನದ ಸಂಗತಿ.

    ನೆನಪಿಡಿ:

   ೧. ಹಾವು ಕಚ್ಚಿತೆಂದು ಗಾಬರಿಯಾಗಬೇಡಿ ಎಷ್ಟೋ ಬಾರಿ ಗಾಬರಿಯಿಂದಲೇ ರೋಗಿ ಸಾವನ್ನಪ್ಪಿರುತ್ತಾನೆ! ಆತಂಕವು ವಿಷ ಹರಡಲು ಸಹಾಯ ಮಾಡುತ್ತದೆ. ಹಾವು ಕಚ್ಚಿತೆನ್ನುವುದೇನೂ ಸಂಭ್ರಮಾಚರಣೆಯ ವಿಷಯವಲ್ಲ ಹೌದು, ಆದರೂ ಕಳವಳಗೊಳ್ಳದೇ ಮುಂದೇನು ಮಾಡಬೇಕೆಂಬ ಬಗ್ಗೆ ಕ್ಷಿಪ್ರವಾಗಿ ಚಿಂತಿಸಿ.

   ೨. ಕಚ್ಚಿದ ಭಾಗವನ್ನು ಅಲ್ಲಾಡದ ಹಾಗೆ ಇಟ್ಟುಕೊಳ್ಳಿ. ಕಾಲಿಗೆ ಕಚ್ಚಿದ್ದರೆ ವೇಗವಾಗಿ ಓಡುವುದು ಅಥವಾ ಜಾಸ್ತಿ ನಡೆಯುವುದು ಬೇಡ.

   ೩. ಕಚ್ಚಿದ ಭಾಗವನ್ನು ಕೊಯ್ದು ಮತ್ತೂ ದೊಡ್ಡ ಮಾಡುವುದು, ರಕ್ತ ಹೀರುವುದು, ತೀರ ಬಲವಾಗಿ ಕಟ್ಟು ಹಾಕುವುದು, ಐಸ್ ಇಡುವುದು - ಇದ್ಯಾವುದೂ ಮಾಡದಿರಿ. ಪ್ರಥಮ ಚಿಕಿತ್ಸೆ ಕೆಲಬಾರಿ ಅವಿವೇಕದ ಕ್ರಿಯೆಯಾಗಿ ಆತ್ಮಹತ್ಯಾತ್ಮಕವಾಗಿ ಮಾರ್ಪಡುತ್ತದೆ.

   ೪. ಕೂಡಲೇ ಸಮೀಪವಿರುವ ವೈದ್ಯರನ್ನು ಸಂಪರ್ಕಿಸಿ.

Saturday, 2 August 2014

ಜೈಲು ಕೋಣೆ - ಮಹಮೂದ್ ದರ್ವೇಶ್




ಇದು ಸಾಧ್ಯ
ಕೆಲವೊಮ್ಮೆ ಸಾಧ್ಯ
ವಿಶೇಷವಾಗಿ ಈಗ ಇದು ಸಾಧ್ಯ
ಜೈಲು ಕೋಣೆಯೊಳಗೇ
ಒಂದು ಕುದುರೆಯನೇರಿ
ಓಡಿ ಹೋಗುವುದು..

ಜೈಲು ಗೋಡೆಗಳು ಮಾಯವಾಗಬಲ್ಲವು
ಜೈಲೇ ರಣರಂಗವಿರದ
ದೂರದ ನಾಡಾಗಬಲ್ಲದು.

‘ಈ ಗೋಡೆಗಳನೇನು ಮಾಡಿದಿ?’
‘ಅವನ್ನು ಕಲ್ಲುಬಂಡೆಗಳಿಗೆ ತಿರುಗಿ ಕೊಟ್ಟುಬಿಟ್ಟೆ’
‘ಅದರ ಚಾವಣಿ?’
‘ಕುದುರೆಯ ಜೀನಾಗಿಸಿದೆ’
‘ನಿನ್ನ ಬಂಧಿಸಿದ ಸರಪಳಿ?’
‘ಅದನೊಂದು ಪೆನ್ಸಿಲ್ ಆಗಿ ಮಾಡಿದೆ.’

ಜೈಲು ಕಾವಲುಗಾರನಿಗೆ ಸಿಟ್ಟುಬಂತು.
ಮಾತು ನಿಲಿಸಿದ.
ತನಗೆ ಕವಿತೆಯೆಂದರೆ ನಿಕೃಷ್ಟ ಎಂದ.
ನನ್ನ ಜೈಲು ಕೋಣೆಯ ಚಿಲಕ ಹಾಕಿ ಹೋದ.

ಮರು ಬೆಳಿಗ್ಗೆ ನೋಡಲು ಬಂದ.
ಬೆಳಬೆಳಿಗ್ಗೆಯೇ
ನನ್ನ ನೋಡಿ ಕಿರುಚಿದ:

‘ಇಷ್ಟೆಲ್ಲ ನೀರು ಎಲ್ಲಿಂದ ಬಂತು?’
‘ನಾನು ನೈಲ್ ನದಿಯ ಬಳಿ ಕಡ ಪಡೆದೆ.’
‘ಈ ಮರಗಳು?’
‘ಡಮಾಸ್ಕಸಿನ ತೋಟಗಳದ್ದು.’
‘ಈ ಹಾಡು?’
‘ನನ್ನೆದೆ ಮಿಡಿತದಿಂದ..’

ಜೈಲು ಕಾವಲುಗಾರ ಹುಚ್ಚಾದ
ನನ್ನೊಡನೆ ಮಾತು ನಿಲಿಸಿದ.
ನನ್ನ ಕವಿತೆ ತನಗಿಷ್ಟವಿಲ್ಲ ಎಂದ.
ಜೈಲು ಕೋಣೆಯ ಬಾಗಿಲು ಹಾಕಿ ಹೋದ.

ಆದರೆ ಸಂಜೆಗೇ ಹಿಂದಿರುಗಿದ.

‘ಈ ಚಂದ್ರ ಎಲ್ಲಿಂದ ಬಂದ?’
‘ಬಾಗ್ದಾದಿನ ಇರುಳುಗಳಿಂದ.’
‘ಈ ವೈನ್?’
‘ಆಲ್ಜೀರಿಯಾದ ದ್ರಾಕ್ಷಾ ತೋಟಗಳಿಂದ.’
‘ಈ ಸ್ವಾತಂತ್ರ್ಯ?’
‘ಕಳೆದ ಇರುಳು ನೀನು ನನ್ನ ಕಟ್ಟಿದ ಈ ಸರಪಳಿಯಿಂದ..’

ಜೈಲು ಕಾವಲುಗಾರ ದುಃಖಿತನಾಗುತ್ತ ಹೋದ..
ಯಾಚಿಸತೊಡಗಿದ,
‘ನನ್ನ ಸ್ವಾತಂತ್ರ್ಯ ನನಗೆ ಮರಳಿ ಕೊಡು..’




- ಕನ್ನಡಕ್ಕೆ: ಅನುಪಮಾ

Friday, 1 August 2014

ನಾನು ಹಸಿದಿದ್ದೆ ಅದಕ್ಕೆ ನೀನು ಕಮ್ಯುನಿಸ್ಟರನ್ನು ದೂರಿದೆ..





ನಾನು ಹಸಿದಿದ್ದೆ
ಅದಕ್ಕೆ ನೀನು ಕಮ್ಯುನಿಸ್ಟರನ್ನು ದೂರಿದೆ
ನಾನು ಹಸಿದಿದ್ದೆ
ನೀನು ಚಂದ್ರನ ಒಂದು ಸುತ್ತು ಹಾಕಿ ಬಂದೆ
ನಾನು ಹಸಿದಿದ್ದೆ
ನೀನು ಕಾಯುವಂತೆ ಹೇಳಿದೆ
ನಾನು ಹಸಿದಿದ್ದೆ
ನೀನು ಹಸಿವಿಗೊಂದು ಕಮಿಷನ್ ರಚಿಸಿದೆ
ನಾನು ಹಸಿದಿದ್ದೆ
ನನ್ನ ಪೂರ್ವಿಕರೂ ಹೀಗೇ ಇದ್ದರು ಎಂದೆ
ನಾನು ಹಸಿದಿದ್ದೆ
ನೀನು ಮುವತ್ತೈದು ದಾಟಿದವರ ನೇಮಿಸುವುದಿಲ್ಲ ಎಂದೆ
ನಾನು ಹಸಿದಿದ್ದೆ
ನೀನೆಂದೆ, ‘ದೇವರು ಅವರಿಗೇ ನೆರವು ನೀಡುತ್ತಾನೆ, ಯಾರು..’
ನಾನು ಹಸಿದಿದ್ದೆ
ನೀನೆಂದೆ, ನನಗೆ ಹಸಿವಾಗಲೇಬಾರದು
ನಾನು ಹಸಿದಿದ್ದೆ
ಈಗ ಆ ಕೆಲಸ ಯಂತ್ರಗಳೇ ಮಾಡುತ್ತವೆಂದೆ
ನಾನು ಹಸಿದಿದ್ದೆ
ನಿನ್ನ ಕೈಲಿ ದಮಡಿ ಕಾಸೂ ಇರಲಿಲ್ಲ..
ನಾನು ಹಸಿದಿದ್ದೆ
ಹಸಿದವರು ಸದಾ ನಮ್ಮೊಂದಿಗಿದ್ದಾರೆ ಎಂದೆ

ದೇವಾ,
ನೀನು ಹಸಿದಿರುವುದನ್ನು ನಾವು ಎಂದಾದರೂ ನೋಡಿದ್ದೇವೆಯೇ?

- ಅಮೆರಿಕದ ಅನಾಮಧೇಯ ಕಪ್ಪು ಕವಿಯೊಬ್ಬನ ಕವಿತೆ

(ಇದು ಒಂದು ಮುಷ್ಟಿಯ ಪೋಸ್ಟರಿನ ಮೇಲೆ ೧೯೭೧ರಲ್ಲಿ ‘ದ ಪೋಸ್ಟ್ ಅಮೆರಿಕನ್’ನ ಮೊದಲ ಸಂಚಿಕೆಯಲ್ಲಿ ಬಂತು. ನಂತರ ಆ ಪತ್ರಿಕೆ ೧೯೭೫ರಲ್ಲಿ ಅಂತರರಾಷ್ಟ್ರೀಯ ಸೋಜರ್ನರ‍್ಸ್ ಸಂಸ್ಥೆಯು ಸ್ಥಾಪನೆಯಾದಾಗ ‘ಸೋಜರ್ನರ‍್ಸ್’ ಎಂದು ಬದಲಾಯಿತು. ಈ ಕವಿತೆಯ ಮೂಲ ಪಠ್ಯವು ಜೀಸಸ್ ‘ಮ್ಯಾಥ್ಯೂ ೨೫:೩೭’ ನಲ್ಲಿ ಹೇಳಿದ ಮಾತುಗಳನ್ನು ಆಧರಿಸಿ ಮಾರ್ಪಾಡುಗೊಂಡಿದೆ. ಕೊನೆಯ ಎರಡು ಸಾಲುಗಳು ಜೀಸಸ್ ಗೆ ಅನುಯಾಯಿಗಳು ಹೇಳಿದ ಮಾತುಗಳಾಗಿವೆ.)