ತುಂಬ ಸಂಪ್ರದಾಯಸ್ಥ ಕುಟುಂಬಕ್ಕೆ ಆ ಎಳೆಹುಡುಗಿಯನ್ನು ಮದುವೆ ಮಾಡಿಕೊಟ್ಟರು. ಮೊದಲ ರಾತ್ರಿಯ ಬಗ್ಗೆ ಆತಂಕಗೊಂಡು, ಕುತೂಹಲಗೊಂಡು ಗೆಳತಿಯರಿಂದ ಸರಿಯೋ, ತಪ್ಪೋ ಏನೇನೋ ಮಾಹಿತಿ ಪಡೆದಿದ್ದಳು.
ಅಂತಹ ಮೊದಲ ರಾತ್ರಿ ನಡೆದೇ ಹೋಯಿತು.
ಚುಮುಚುಮು ಬೆಳಕು ಹರಿಯುವಾಗ ಎಚ್ಚರವಾಯಿತು, ಅವನು ಟಾಯ್ಲೆಟ್ಟಿಗೆ ಎದ್ದುಹೋಗಿದ್ದ. ನೋಡುತ್ತಾಳೆ, ಹಾಸಿಗೆಯ ಮೇಲೆ ಏನೂ ಕಲೆಗಳಿಲ್ಲ! ಅಯ್ಯೋ! ತನ್ನ ಪಾವಿತ್ರ್ಯ, ತವರಿನ ಮರ್ಯಾದೆ ಗತಿಯೇನು? ತಲೆ ಧಿಂ ಎಂದಿತು. ಆ ಸಮುದಾಯದಲ್ಲಿ ಮೊದಲ ರಾತ್ರಿಯ ಮರುದಿನ ಬೆಡ್‌ಶೀಟ್ ತೆಗೆಯಬಂದವರು ರಕ್ತಕಲೆ ನೋಡುವರೆಂದೂ, ಯಾರ ಹಾಸಿಗೆಯಲ್ಲಿ ಕಲೆಗಳಿಲ್ಲವೋ ಅಂಥ ಹೆಣ್ಣು ಒಂದೋ ಗಂಡನಿಗೆ ಸರಿಯಾಗಿ ನಡೆದುಕೊಳ್ಳಲಿಲ್ಲ ಅಥವಾ ಅವಳು ಮದುವೆಯಾಗುವಾಗ ಕನ್ಯೆಯಾಗಿರಲಿಲ್ಲ ಎಂದು ನಿರ್ಧರಿಸಲಾಗುತ್ತದೆಂದೂ ಅವಳು ತಿಳಿದಿದ್ದಳು. ನಿನ್ನೆ ರಾತ್ರಿ ನೆನಪಾಯಿತು. ಅದು ತನ್ನ ಮೊದಲ ಅನುಭವ. ಆದರೂ ಏಕೆ ಹೀಗಾಯಿತು? ದೂರದಲ್ಲಿ ಹಣ್ಣು ಇಟ್ಟ ಟ್ರೇ, ಚಾಕು ಕಾಣಿಸಿತು. ತಡ ಮಾಡದೆ ತೊಡೆಯ ಬಳಿ ಒಮ್ಮೆ ಚರಕ್ ಎನಿಸಿಕೊಂಡಳು. ಅಬ್ಬಾ, ಅಂತೂ ರಕ್ತ ಹೊರಟಿತು.. ಏನೂ ಗೊತ್ತೇ ಇಲ್ಲದವಳಂತೆ ಹೊದ್ದು ಮಲಗಿದಳು.
ಎಷ್ಟೋ ದಿನ ಕಳೆದ ಮೇಲೆ ಚೆಕಪ್ಪಿಗೆ ವೈದ್ಯರ ಬಳಿ ಹೋದಾಗ ಹೀಗಾಗಲು ಹೇಗೆ ಸಾಧ್ಯ ಎಂದು ಕೇಳಿ ಅನುಮಾನ ನಿವಾರಿಸಿಕೊಂಡಳು. ಇದು ಯಾವುದೋ ಸಿನಿಮಾ ಕತೆಯಲ್ಲ. ಇಂಥ ಆಚರಣೆಗಳು, ನಂಬಿಕೆಗಳು ೨೧ನೇ ಶತಮಾನದ ಇವತ್ತೂ ಜೀವಂತ ಇವೆ ಎಂದು ಹೇಳಿದರೆ ನೀವು ನಂಬಲೇಬೇಕು.
***
ಈಗ ಹದಿವಯಕ್ಕೆ ಕಾಲಿಟ್ಟ ಹುಡುಗಿ. ಆಡಲು ಪಕ್ಕದ ಓಣಿಯ ಗೆಳೆಯ ಬರುತ್ತೇನೆ ಎಂದಿದ್ದಾನೆ. ಇಬ್ಬರೂ ಅವತ್ತು ಏನೇನೋ ಆಡಬೇಕೆಂದು ಯೋಜನೆ ಹಾಕಿಕೊಂಡಿದ್ದಾರೆ. ಆದರೆ ಅಮ್ಮ ಬೆಳಗಾಗೆದ್ದವಳು ಹುಡುಗಿಯ ಲಂಗ ನೋಡುತ್ತಲೇ ಏನೋ ನಿರ್ಧರಿಸಿ ನೀನಿನ್ನು ಅವನ ಜೊತೆ ಆಡುವಂತಿಲ್ಲ ಎಂದುಬಿಟ್ಟಳು. ಅವಳ ಅಜ್ಜಿ ಬಂದರು. ಇವಳಿಗೆ ಗೊಂದಲ, ಏಕೆ ಆಡಬಾರದು? ಅಷ್ಟೊತ್ತಿಗೆ ಪುಟ್ಟ ಗೆಳೆಯನೂ ಆಟದ ಮನಸು ಹೊತ್ತು ಬಂದ. ಅವನಿಗೆ ಹೊರಗಿನಿಂದಲೇ ಆಕೆ ಇನ್ನು ಆಡಲು ಬರುವುದಿಲ್ಲವೆಂದು ಕೂಗಿ ಹೇಳಿದರೂ ಅವನು ಅಷ್ಟಕ್ಕೆ ಸಮಾಧಾನಗೊಳ್ಳುತ್ತಿಲ್ಲ. ಹುಡುಗಿಯೂ ಹಠ ಮಾಡುತ್ತಾಳೆ. ಕೊನೆಗೆ ಅಮ್ಮ ಮಧ್ಯಾಹ್ನ ೧೨ರ ಒಳಗೆ ಆಡಿ ವಾಪಸು ಬರಬೇಕು, ಆಮೇಲೆ ಇನ್ನು ಯಾವತ್ತೂ ಆಡಲು ಬರುವುದಿಲ್ಲ ಎಂದು ಹೇಳಿಬರಬೇಕು ಎಂಬ ಷರತ್ತು ವಿಧಿಸಿ ಅವಳನ್ನು ಕಳಿಸುತ್ತಾಳೆ. ಕಳಿಸುವಾಗ ಒಂದು ಕಡ್ಡಿಕೋಲು ಕೊಟ್ಟು, ‘ಅದರ ನೆರಳು ಕಾಣದೆ ಹೋದರೆ ಮಧ್ಯಾಹ್ನ ೧೨ ಗಂಟೆಯಾಯಿತೆಂದು ಲೆಕ್ಕ. ನೋಡುತ್ತಲಿರು, ೧೨ ಗಂಟೆಯಾದದ್ದೇ ಮನೆಗೆ ಬಂದುಬಿಡು’ ಎಂದು ಎಚ್ಚರಿಸಿ ಕಳಿಸುತ್ತಾಳೆ. ಅಂದು ಆ ಹುಡುಗಿ ಹೆಣ್ಣಾಗಿರುತ್ತಾಳೆ, ಎಂದೇ ಅಮ್ಮಅಜ್ಜಿಯರ ಬೇಲಿ ಕಟ್ಟುವ, ಕೈಕಾಲು ಬಿಗಿಯುವ ಪ್ರಕ್ರಿಯೆ ಶುರುವಾಗುತ್ತದೆ.
ಆಡುವಾಗ ವಾಚಿಲ್ಲದ ಆ ಹುಡುಗಿ ಪದೇಪದೇ ಕಡ್ಡಿ ನೆಟ್ಟು ನೆರಳು ಎಷ್ಟು ಗಿಡ್ಡ ಆಗುತ್ತಲಿದೆ ಎಂದು ನೋಡುತ್ತ ಆತಂಕಪಡುತ್ತದೆ. ತನ್ನ ಸಮಯ ಮೀರುವುದರ ಒಳಗೆ ಅಂದುಕೊಂಡ ಆಟ ಮುಗಿಸಲು ತರಾತುರಿಗೊಳ್ಳುತ್ತದೆ. ಅಂತೂ ಕೊನೆಗೊಮ್ಮೆ ಕಡ್ಡಿಯ ನೆರಳು ಕಾಣದೇ ಹೋದಾಗ ಹನ್ನೆರೆಡು ಗಂಟೆಯಾಯಿತೆಂದು ಕೂಡಲೇ ಮನೆಗೆ ಓಡಿಬರುತ್ತಾಳೆ. ಮುಚ್ಚಿದ ಬಾಗಿಲುಗಳ ಹಿಂದೆ ನಡೆದರೂ ಗೋಡೆ ನಡುವಿನ ಕಿಟಕಿಯಿಂದ ಕೈತೂರಿ ಅವನನ್ನು ಕರೆದು ಲಾಲಿಪಾಪ್ ಹಂಚಿಕೊಳ್ಳುತ್ತಾಳೆ.
‘ದ ಡೇ ಐ ಬಿಕೇಮ್ ಅ ವುಮೆನ್’ ಎಂಬ ಇರಾನಿ ಚಿತ್ರ ಇದು..
***
ಮುಟ್ಟಿನ ಮೂರು ದಿನ ಹೆಣ್ಣು ಅಪವಿತ್ರಳು. ಆಗ ಪವಿತ್ರ ಕಾರ್ಯ, ಸ್ಥಾನಗಳ ಬಳಿ ಸುಳಿಯಬಾರದು. ಇದಕ್ಕೆ ತಪ್ಪಿದಲ್ಲಿ ದೇವರು ಸಿಟ್ಟಾಗಿ ಮನೆಮಂದಿ, ಊರುಕೇರಿಯೆಲ್ಲ ನಾಶವಾಗುತ್ತದೆ ಎಂದು ಹೆಣ್ಣುಮಕ್ಕಳ ತಲೆಯಲ್ಲಿ ಶತಮಾನಗಳಿಂದ ತಪ್ಪುಪಾಠ ತುಂಬಲಾಗಿದೆ. ಮದುವೆ ಕಾರ್ಯಗಳ ಸೀಸನ್ ಬಂತೆಂದರೆ ‘ಮುಟ್ಟು ಮುಂದೆ ಹೋಗುವ’, ‘ಹಿಂದೆ ಹೋಗುವ’ ಚರ್ಚೆ ಕೊನೆಮೊದಲಿಲ್ಲದೆ ನಡೆಯುತ್ತದೆ. ಅದರ ಲೆಕ್ಕಾಚಾರದಲ್ಲಿ ಹೆಣ್ಮಕ್ಕಳು ಖರ್ಚು ಮಾಡುವಷ್ಟು ಬುದ್ಧಿಯನ್ನು ತಮ್ಮ ದೇಹದ ಆರೋಗ್ಯದ ಬಗ್ಗೆ ಖರ್ಚು ಮಾಡಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ಕೆಲವೊಮ್ಮೆ ಮನೆಯಲ್ಲಿರುವ ಅಷ್ಟೂ ಹೆಣ್ಮಕ್ಕಳು ಮುಟ್ಟನ್ನು ‘ಮುಂದೆ’, ‘ಹಿಂದೆ’ ಮಾಡುವ ಕ್ರಿಯೆಯಲ್ಲಿ ತೊಡಗುತ್ತಾರೆ. ಓದಿ ಕೆಲಸದಲ್ಲಿರುವವರೂ ಸಹಿತ ‘ದೇವರ ಹತ್ರ ಹೋಗುವುದಲ್ವ? ಇಲ್ದಿದ್ರೆ ನಮಗೆ ಅದೆಲ್ಲ ತೊಂದ್ರೆ ಇರಲಿಲ್ಲ..’ ಎನ್ನುತ್ತ ರಾಗವೆಳೆಯುತ್ತಾರೆ. ಇದು ಆಸ್ತಿಕತೆ, ನಾಸ್ತಿಕತೆಯ ಪ್ರಶ್ನೆಯಲ್ಲ. ನಾವು ನಂಬುವವರಾದರೆ ಆ ದೇವರೇ ಸೃಷ್ಟಿಸಿದ ದೇಹವಲ್ಲವೆ ಇದು? ಅದು ಹೇಗೆ ಅಪವಿತ್ರವಾಗುತ್ತದೆ? ಇಂಥ ಯಾವುದೇ ವಿಚಾರ ನಮ್ಮ ಹೆಣ್ಮಕ್ಕಳ ತಲೆಯೊಳಗೆ ಹೋಗದೇ, ಕೊನೆಗೆ ‘ಹಂಗಾದ್ರೆ ಎಷ್ಟ್ ಗುಳಿಗೆ ಕೊಡ್ತಿರಾ?’ ಎಂದು ಮಾತು ಮುಗಿಸುತ್ತಾರೆ. ಹೋಗುವಾಗ ಕೊನೆಗೆ ‘ಏನೂ ತೊಂದ್ರೆ ಇಲ್ವಲ?’ ಎಂಬ ಪ್ರಶ್ನೆ ಎಸೆಯುತ್ತಾರೆ.
ಸುಳ್ಳು ಹೇಳಿದ ಅಪವಾದ ಬಂದರೂ ತೊಂದರೆಯಿಲ್ಲ, ಆ ಗುಳಿಗೆಗಳಿಂದ ಗರ್ಭಕೋಶಕ್ಕೆ ಪೆಟ್ಟು, ಇನ್ನು ಮೇಲೆ ತಗೊಳ್ಳಬೇಡಿ ಎಂದೇ ಸಲಹೆ ಕೊಡುತ್ತೇನೆ!
***
ಮೊನ್ನೆ ಸ್ನೇಹಿತೆಯೊಬ್ಬರು ಮಾತನಾಡುವಾಗ ‘ಕನ್ಯಾ ಪೊರೆ’ಯನ್ನು ಮರುಸೃಷ್ಟಿಸುವ ಆಪರೇಷನ್ ಚಾಲ್ತಿಯಲ್ಲಿದೆಯಂತಲ್ಲ, ಅದರ ಬಗ್ಗೆ ಒಂದು ಚರ್ಚೆಯನ್ನು ಗಮನಿಸಿದೆ ಎಂದು ಹೇಳಿದರು. ಈ ಇಪ್ಪತ್ತೊಂದನೆ ಶತಮಾನದ ಹೆಣ್ಣೂ ಕನ್ಯಾಪೊರೆಯನ್ನು ರಿಪೇರಿ ಮಾಡಿಸಿಕೊಂಡು ತನ್ನ ಪಾವಿತ್ರ್ಯ, ಶುದ್ಧತೆ ಯೋನಿಯಲ್ಲಿದೆ ಎಂದು ಭಾವಿಸುವುದು; ತನ್ನ ದೇಹವಿರುವುದು ಕೇವಲ ಕಾಮತೃಷೆ ತಣಿಸಲು ಎಂದು ಭಾವಿಸಿರುವುದು ವಿಷಾದದ ಸಂಗತಿ.
ಎಲ್ಲರೂ ತಿಳಿದಿರುವಂತೆ ಯೋನಿದ್ವಾರವನ್ನು ಮುಚ್ಚಿರುವ ಕನ್ಯಾಪೊರೆ ಪ್ರಥಮ ಲೈಂಗಿಕ ಸಂಪರ್ಕದ ವೇಳೆ ಹರಿಯುತ್ತದೆ. ಆದರೆ ಈಗ ಹೆಣ್ಣುಮಕ್ಕಳು ಬಾಹ್ಯ ಚಟುವಟಿಕೆಯಲ್ಲೂ ತೊಡಗಿಕೊಂಡಿರುವುದರಿಂದ ಎಷ್ಟೋ ಹುಡುಗಿಯರು ಕನ್ಯೆಯರಾಗಿದ್ದೂ ಕನ್ಯಾಪೊರೆ ಛಿದ್ರವಾಗಿರುತ್ತದೆ. ಕೆಲವು ಸಮುದಾಯಗಳಲ್ಲಿ ಇವತ್ತಿಗೂ ದಂಪತಿಗಳ ಮೊದಲ ಸಮಾಗಮದ ನಂತರ ರಕ್ತಸ್ರಾವವಾಗಿದ್ದರೆ ಮಾತ್ರ ಅಂಥ ಹೆಣ್ಣು ಪವಿತ್ರಳಾಗಿದ್ದಳು, ಕನ್ಯೆಯಾಗಿದ್ದಳು ಎಂದು ಭಾವಿಸುತ್ತಾರೆ. ಅಂಥ ಕಲ್ಪನೆ ನಿಜವಾಗಬೇಕಿಲ್ಲ ಎಂದು ತಿಳಿಸಿಕೊಡುವ ಬದಲು ಈಗ ಕನ್ಯಾಪೊರೆ ಹರಿದಿದ್ದರೆ ಹೊಲಿದುಕೊಡುವ ಪ್ಲಾಸ್ಟಿಕ್ ಸರ್ಜರಿ ಜನಪ್ರಿಯವಾಗತೊಡಗಿದೆ. ಸ್ವೇಚ್ಛಾಚಾರದ ಸಮಾಜ ಎಂದು ಪಶ್ಚಿಮವನ್ನು ತೆಗಳುವ ಭಾರತೀಯ ಸಂಸ್ಕೃತಿಯ ಪ್ರತಿಪಾದಕರು ಇತ್ತ ಗಮನ ಹರಿಸಬೇಕು: ಅಮೆರಿಕದಲ್ಲಿ ಕನ್ಯತ್ವ ಇದೆಯೇ ಇಲ್ಲವೇ ಎನ್ನುವುದು ಮಹಿಳೆಗೆ ಮುಚ್ಚುಮರೆಯ ವಿಷಯವಲ್ಲ. ಆದರೆ ಭಾರತದಲ್ಲಿ ಹೆಣ್ಣಿನ ಪಾವಿತ್ರ್ಯ ಎಷ್ಟು ಮುಖ್ಯವೆಂದರೆ ಹೈಮೆನೋಪ್ಲಾಸ್ಟಿಗಾಗಿ ಮಹಾನಗರಗಳ ಕ್ಲಿನಿಕ್‌ಗಳಲ್ಲಿ ಹೆಣ್ಣುಮಕ್ಕಳು ಪಾಳಿ ಹಚ್ಚಿ ಕಾಯುತ್ತಿದ್ದಾರೆ. ಇದು ಸಮಾಜದೆದುರು ಕನ್ಯತ್ವ ಸಾಬೀತುಪಡಿಸಲು ಮಾಡುವ ಮೋಸದಂತೆ ಕಂಡರೂ ಹೆಣ್ಣು ತನಗೆ ತಾನೇ ಮಾಡಿಕೊಳ್ಳುವ ಅವಮಾನವೂ, ಮೂರ್ಖತನವೂ ಆಗಿದೆ.
***
ಅಷ್ಟಕ್ಕೂ ಹೆಣ್ಣಿನ ವ್ಯಕ್ತಿತ್ವ, ಐಡೆಂಟಿಟಿ ಅವಳ ಕನ್ಯಾಪೊರೆಯಲ್ಲಿದೆಯೆ? ಅವಳು ಶುದ್ಧ ಅಶುದ್ಧಳೆಂದು ನಿರ್ಧರಿಸುವುದು ಸ್ರಾವವಿರುವ ಮತ್ತು ಇಲ್ಲದಿರುವ ಎಂದು ಗೆರೆ ಕೊರೆದುಕೊಂಡ ದಿನಗಳಲ್ಲೇ? ದೇಹದ ಒಂದು ಪುಟ್ಟ ಚರ್ಮದ ಚೂರು ಅವಳ ಪಾವಿತ್ರ್ಯ, ಶೀಲ ನಿರ್ಧರಿಸುವುದಾದರೆ ಆತ್ಮವೆಂದರೇನು? ಇಂತಹ ಸಣ್ಣ ವಸ್ತುನಿಷ್ಠ ಪ್ರಶ್ನೆಯೂ ಯಾರಿಗೂ ಬೇಡವಾಗಿದೆ. ಕುರುಡಾಗಿ ಅಪ್ಪ ತಿಥಿ ಮಾಡುವಾಗ ಕರಿಬೆಕ್ಕು ಕವುಚಿ ಹಾಕುತ್ತಿದ್ದನೆಂದು ಇವರೂ ಕರಿಬೆಕ್ಕು ಹುಡುಕಿ ತಂದು ಕವುಚಿ ಹಾಕುತ್ತಾರೆ!
ಎದೆಯೋನಿಕಿಬ್ಬೊಟ್ಟೆಗಳೇ ತನ್ನ ಹೆಣ್ತನ/ಪಾವಿತ್ರ್ಯ ಸಾಬೀತುಪಡಿಸುವ ಅಂಗಾಂಗಗಳು ಎಂದು ಹೆಣ್ಣನ್ನು ನಂಬಿಸಿರುವ ಸಮಾಜಕ್ಕೆ ಪೂರಕವಾಗಿ ವಿಜ್ಞಾನ/ತಂತ್ರಜ್ಞಾನಗಳೂ ಆ ನಂಬಿಕೆಗಳನ್ನು ಪೋಷಿಸುತ್ತಿವೆ. ವಿಜ್ಞಾನ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಬದಲು ತಂತ್ರಜ್ಞಾನದ ಮೂಲಕ ಅವರ ಹಳೆಯ ನಂಬಿಕೆ, ಮೂಢನಂಬಿಕೆಗಳ ಬೇರುಗಳನ್ನು ಗಟ್ಟಿಗೊಳಿಸುತ್ತಿದೆ. ಎಲ್ಲ ಅತಿಗಳು ಢಾಳಾಗಿ ಕಣ್ಣಿಗೆ ರಾಚುವ ಕಾಲವಿದು. ವಿಜ್ಞಾನ ಎಲ್ಲದನ್ನೂ ಮರುಸೃಷ್ಟಿ ಮಾಡಲು ಸಾಧ್ಯವೆ ಎಂದು ನೋಡುತ್ತದೆ. ವೈದ್ಯವಿಜ್ಞಾನವಂತೂ ಸೌಂದರ್ಯಕ್ಕೆ ಸಂಬಂಧಪಟ್ಟ ‘ವೈದ್ಯಕೀಯವಲ್ಲ ವೈದ್ಯಕೀಯ’ ವಿಭಾಗದಲ್ಲಿ ಶರವೇಗದಲ್ಲಿ ಬೆಳೆಯುತ್ತಿದೆ. ಮುಖದ ಸುಕ್ಕು ಕಾಣದಂತೆ, ಮೊಲೆ ಜೋತು ಬೀಳದಂತೆ, ಉದುರಿದ ಕೂದಲು ಮತ್ತೆ ಕೂರಿಸಲಿಕ್ಕೆ, ಚರ್ಮ ಬೆಳ್ಳಗಾಗಿಸಲಿಕ್ಕೆ, ಮೂಗು ನೇರವೋ ವಾರೆಯೋ ಮಾಡಲಿಕ್ಕೆ, ಹಲ್ಲು ಹೊಳೆಯುವಂತೆ ಮಾಡಲಿಕ್ಕೆ - ಒಟ್ಟಾರೆ ಹೀಗೇ ತನ್ನ ಸೌಂದರ್ಯಕ್ಕೆ ಏನೇನು ಊನವಾಗಿದೆ ಎಂದು ವ್ಯಕ್ತಿಯೊಬ್ಬ ಭಾವಿಸುವನೋ ಅದನೆಲ್ಲ ರಿಪೇರಿ ಮಾಡಿಕೊಡುವ ಗ್ಯಾರೇಜ್ ಆಸ್ಪತ್ರೆಗಳು ಮೈದಳೆಯುತ್ತಿವೆ.
೬೦೦ ಕೋಟಿ ಜನಸಂಖ್ಯೆಯ ಭೂಮಿ ಮೇಲೆ ಎಷ್ಟೋ ಲಕ್ಷಾಂತರ ಬಡವರು, ಮಕ್ಕಳು, ಬಸುರಿಯರು ಕನಿಷ್ಠ ಆರೋಗ್ಯ ಸೌಲಭ್ಯ, ಅನ್ನ ಸಿಗದೆ ದಿನಕಳೆಯುತ್ತ ಅಕಾಲ ಮರಣವನ್ನಪ್ಪುತ್ತಿದ್ದಾರೆ. ಆದರೆ ಸಿರಿವಂತರ ಖಯಾಲಿ, ಅಗತ್ಯಗಳಿಗನುಗುಣವಾಗಿ ಸಂಶೋಧನೆಯ ದಿಕ್ಕು ದೆಸೆ ಬದಲಾಗುತ್ತ ನಿರುಪಯೋಗಿ ಕ್ರಿಯೆಗಳಲ್ಲಿ ತೊಡಗಿಕೊಳ್ಳಲಾಗಿದೆ. ವಿಜ್ಞಾನ ಕೇವಲ ಜನಪ್ರಿಯವಾಗದೇ ಜನಪರವಾಗಬೇಕಿರುವುದು ಈ ಹೊತ್ತಿನ ಅಗತ್ಯವಾಗಿದೆ.
ಹೆಣ್ಣು, ಹೆಣ್ತನ, ಸೌಂದರ್ಯದ ಪರಿಕಲ್ಪನೆಗಳನ್ನು ಮಹಿಳೆ ತನಗೆ ತಾನೇ ಮರುವ್ಯಾಖ್ಯಾನಿಸಿಕೊಳ್ಳುವ ಅಗತ್ಯವಿರುವ ಈ ಕಾಲದಲ್ಲಿ ಮಾರುಕಟ್ಟೆ ಕೊಡಮಾಡುತ್ತಿರುವ ವ್ಯಾಖ್ಯಾನಗಳು ದಾರಿತಪ್ಪಿಸುವಂಥವಾಗಿವೆ. ಅದರ ಸೌಂದರ್ಯದ ವ್ಯಾಖ್ಯಾನ ಹೆಣ್ತನವನ್ನು ಮತ್ತದೇ ಪಾರಂಪರಿಕ ನೆಲೆಗೆ ಕಟ್ಟಿ ಹಾಕಲು ನೋಡುತ್ತಿದೆ. ಯಾವುದೇ ಸಿನಿಮಾ, ಧಾರಾವಾಹಿ ಅಥವಾ ಜಾಹೀರಾತಿನಲ್ಲಿ ಹೆಣ್ಣು ಅವಳ ವ್ಯಕ್ತಿತ್ವಕ್ಕಾಗಿ ಗೌರವಿಸಲ್ಪಡುವುದಿಲ್ಲ. ಬದಲಾಗಿ ಅವಳ ಅಂದಚೆಂದ ಅಲಂಕಾರ, ಚೌಕಟ್ಟಿನೊಳಗೇ ಬದುಕುವ ವಿನಯ, ಸಹನೆ, ಸಿರಿಸಂಪತ್ತು - ಇವುಗಳಿಂದ ಅಳೆಯಲ್ಪಡುತ್ತಾಳೆ.
ಜೈವಿಕ ಹೆಣ್ತನ ಬೇರೆ. ಹೆಣ್ತನದ ಅರಿವು ಹುಟ್ಟಿಸುವ ಹೆಣ್ತನ ಬೇರೆ. ಮಾರುಕಟ್ಟೆ ಜಗತ್ತು ಹೆಣ್ಣಿನಿಂದ ಈ ಎರಡೂ ವ್ಯಕ್ತಿತ್ವಗಳನ್ನು ದೂರ ಒಯ್ದು ಅವಳನ್ನು ಕೇವಲ ಆಹ್ಲಾದಕರ ವಸ್ತುವಾಗಿ ನೋಡುತ್ತಿರುವುದು ಹಾಗೂ ಸಮಾಜದ ಅಥವಾ ಮಾರುಕಟ್ಟೆ ಜಗತ್ತಿನ ಈ ವ್ಯಾಖ್ಯಾನವನ್ನು ಹೆಣ್ಣು ದುಸರಾ ಮಾತಿಲ್ಲದೆ ಒಪ್ಪಿ ಅದರಂತೆ ನಡೆಯುತ್ತಿರುವುದು ದುರಾದೃಷ್ಟವಾಗಿದೆ. ಪಾವಿತ್ರ್ಯ ಅಥವಾ ಶೀಲ ಕೇವಲ ಕನ್ಯಾಪೊರೆ ಅಥವಾ ಯೋನಿಯಲ್ಲಿಲ್ಲ. ಸೌಂದರ್ಯ ಮೈ ಬಣ್ಣದಲ್ಲಿಲ್ಲ, ವ್ಯಕ್ತಿತ್ವದ ಸಮಗ್ರತೆ ದೇಹದ ಆಕಾರದಲ್ಲಿಲ್ಲ. ಹೆಣ್ಣು ಎನ್ನುವುದು ಒಂದು ವ್ಯಕ್ತಿ. ಹೆಣ್ತನ ತನ್ನ ವ್ಯಕ್ತಿತ್ವದ ಒಂದು ಭಾಗ ಎಂದು ಮಹಿಳೆ ಅರಿಯಬೇಕು. ಆಗಷ್ಟೆ ಲಿಂಗ ಸಮಾನತೆಯ ಕುರಿತಾಗಲೀ, ಘನತೆ-ಗೌರವದ ವ್ಯಕ್ತಿಯಾಗಿಯಾಗಲೀ ಅವಳು ಸಮಾಜ ಬದಲಾವಣೆಗೆ ಪ್ರೇರೇಪಿಸಬಲ್ಲಳು ಹಾಗೂ ಸಮಾಜವೂ ಅವಳನ್ನು ಈ ಮೊದಲಿಗಿಂತ ಭಿನ್ನ ದೃಷ್ಟಿಕೋನದಲ್ಲಿ ನೋಡಲಾರಂಭಿಸುವುದು.
No comments:
Post a Comment