Saturday, 16 August 2014

ವಾರಿಸ್ ಡೆರಿ: ಮರುಭೂಮಿಯ ಹೂವಿನ ಕತೆ


ಇತ್ತೀಚೆಗೊಂದು ಸಿನಿಮಾ ನೋಡಿದೆವು: ಸೋಮಾಲಿಯಾ ಮೂಲದ ಖ್ಯಾತ ಅಮೆರಿಕನ್ ರೂಪದರ್ಶಿ ವಾರಿಸ್ ಡೆರಿ ಎನ್ನುವ ಮಹಿಳೆಯ ಆತ್ಮಕತೆಯಾಧರಿಸಿ ತೆಗೆದ ‘ಡೆಸರ್ಟ್ ಫ್ಲವರ್.’ ಸಿನಿಮಾದ ತಾಂತ್ರಿಕತೆ, ವಾರಿಸ್ ನಿರೂಪಣೆ, ಅವಳ ಪಾತ್ರಧಾರಿ ಲಿಯಾ ಕೆಬೆಡೆಯ ಅಭಿನಯ ಹೇಗಿದೆಯೆಂದರೆ ನಗ್ನತೆ ನಗ್ನತೆಯೆನಿಸುವುದಿಲ್ಲ; ಅಶ್ಲೀಲದ ಕಲ್ಪನೆ ಮನಸಿನಲ್ಲಿ ಸುಳಿಯುವುದಿಲ್ಲ. ಸೋಮಾಲಿಯಾದ ಮರುಭೂಮಿಯ, ಅಲೆಮಾರಿ ಜನಸಮುದಾಯಗಳ, ಹಳ್ಳಿಪಟ್ಟಣಗಳ ನಿರೂಪಣೆ ನೈಜವಾಗಿದ್ದು ಸಹಾರಾ ಮರುಭೂಮಿಯಲ್ಲೊಮ್ಮೆ ತಿರುಗಾಡಿ ಬಂದ ಅನುಭವ ಹುಟ್ಟಿಸುತ್ತದೆ. ನಡುನಡುವೆ ಕಣ್ಣು ಒದ್ದೆ ಮಾಡಿಕೊಳ್ಳುತ್ತ, ನೋಡಲಾಗದೇ ಕಣ್ಣು ಮುಚ್ಚಿಕೊಳ್ಳುತ್ತಾ ಅಯ್ಯೋ ಹೆಣ್ಣು ಜೀವವೇ ಎಂದು ನಿಟ್ಟುಸಿರಾಗುವಂತೆ ಮಾಡುತ್ತದೆ. ಲವಲವಿಕೆ, ಸಂಭ್ರಮದ ಕ್ಷಣಗಳಿದ್ದರೂ ಗಾಢ ವಿಷಾದದ ಛಾಯೆ ಮುತ್ತಿಕೊಳ್ಳುತ್ತದೆ. ಈ ಸಿನಿಮಾವನ್ನು ನೀವೆಲ್ಲ ಒಮ್ಮೆ ನೋಡಬೇಕು, ಅಥವಾ ‘ಡೆಸರ್ಟ್ ಫ್ಲವರ್’ (ಕನ್ನಡದಲ್ಲಿ ‘ಮರುಭೂಮಿಯ ಹೂವು’ - ಅನು: ಡಾ. ಎನ್. ಜಗದೀಶ್ ಕೊಪ್ಪ) ಓದಬೇಕು.

ಸಹಾರಾ ಮರುಭೂಮಿಯ ಗುಡ್ಡಬೆಟ್ಟ ಪ್ರದೇಶಗಳಲ್ಲಿ ಅಲೆಮಾರಿ ಸಮುದಾಯವಾಗಿರುವ; ಕುರಿ, ಮೇಕೆ, ಒಂಟೆ ಮಂದೆಯನ್ನಿಟ್ಟುಕೊಂಡು ಕಾಲ್ನಡಿಗೆಯಲ್ಲಿ ಮೇವು, ನೀರನ್ನರಸುತ್ತ ತಿರುಗುವ ಮುಸ್ಲಿಂ ಬುಡಕಟ್ಟು ಸಮುದಾಯದ ಹೆಣ್ಣುಮಗಳು ವಾರಿಸ್. ಅವಳ ತಾಯಿ ಸೋಮಾಲಿಯಾ ರಾಜಧಾನಿ ಮೊಗದಿಶುವಿನ ಶ್ರೀಮಂತ, ಶಿಕ್ಷಿತ ಕುಟುಂಬಕ್ಕೆ ಸೇರಿದವಳಾದರೂ ಅಲೆಮಾರಿ ಯುವಕನ ಪ್ರೀತಿಸಿ ಅವನೊಡನೆ ಬಂದಿರುತ್ತಾಳೆ. ಮರುಭೂಮಿಯಲ್ಲಿ ಒಂದಾದ ಮೇಲೊಂದು ಮಕ್ಕಳನ್ನು ಹೆರುತ್ತ, ಪ್ರಾಣಿಗಳೊಂದಿಗೆ ಊರೂರು ಅಲೆಯುತ್ತಾ ಜೀವನ ಸಾಗಿಸುತ್ತಿದ್ದವಳ ಅನೇಕ ಮಕ್ಕಳಲ್ಲಿ ವಾರಿಸ್ ಡೆರಿ ಒಬ್ಬಳು.

ವಾರಿಸ್ ಶಾಲೆ, ಶಿಕ್ಷಣದ ಪರಿವೆಯಿಲ್ಲದೆ ಮರುಭೂಮಿಯಲ್ಲಿ ತಮ್ಮತಂಗಿಯರೊಂದಿಗೆ ಅಲೆಯುತ್ತ, ಆಡಿಕೊಂಡಿರುವಾಗ ಅವಳ ಅಕ್ಕ ಮರುಭೂಮಿ ಬದುಕಿಗೆ ಬೇಸತ್ತು ತಾನು ಮೆಚ್ಚಿದವನೊಂದಿಗೆ ಮೊಗದಿಶುಗೆ ಹೋಗಿಬಿಡುತ್ತಾಳೆ. ಆಗ ಸಪಾಟು ಬಾಯಿಯ ಪುಟ್ಟ ಚೆಲುವೆ ವಾರಿಸ್ ಓಡಿಹೋಗುವ ಮುನ್ನವೇ ಭರ್ಜರಿ ವಧುದಕ್ಷಿಣೆ ಪಡೆದು ಮದುವೆ ಮಾಡುವ ಅಪ್ಪನ ಹವಣಿಕೆ ಶುರುವಾಗುತ್ತದೆ. ಹದಿಮೂರು ವರ್ಷದ ಹುಡುಗಿಗೆ ಐದು ಒಂಟೆ ಕೊಡುತ್ತೇನೆಂದ ಅರವತ್ತು ವರ್ಷದ ಸಿರಿವಂತನಿಗೆ ಅವಳ ಕೊಡಲೊಪ್ಪಿ ಮರುದಿನವೇ ಮದುವೆ ನಿಶ್ಚಯಿಸಿಬಿಡುತ್ತಾನೆ.

ಆದರೆ ಮುದುಕ ವರನನ್ನು ನೋಡಿ ಗಾಬರಿಯಾದ ವಾರಿಸ್ ತಾನು ಮನೆ ಬಿಟ್ಟು ಹೋಗುವುದಾಗಿ ತಾಯಿಯ ಬಳಿ ಹೇಳುತ್ತಾಳೆ. ಅಮ್ಮ ಅದಕ್ಕೆ ಸಮ್ಮತಿಸಿ ಮದುವೆಯ ದಿನ ಬೆಳಕು ಹರಿವ ಮೊದಲೇ ಎಬ್ಬಿಸಿ ಕಳಿಸಿಬಿಡುತ್ತಾಳೆ. ಆ ದೊಡ್ಡ ಮರುಭೂಮಿಯಲ್ಲಿ ಕೈಯಲ್ಲಿ ನೀರಿಲ್ಲದೇ, ದಾರಿ ಗೊತ್ತಿಲ್ಲದೇ, ಎಲ್ಲಿಗೆ ಹೋಗುವುದೆಂಬ ನಿಶ್ಚಯವಿಲ್ಲದೆ, ಚಪ್ಪಲಿಯಿಲ್ಲದೇ ಅಂಗಾಲಿನಲ್ಲಿ ರಕ್ತ ಹರಿವಷ್ಟು ನಡೆದು ಬಳಲುತ್ತಾಳೆ. ಹಸಿವಿನಿಂದ ಎಚ್ಚರ ತಪ್ಪಿ ಮಲಗಿದಾಗ ಸಿಂಹ ಮೂಸಿ ಎಚ್ಚರಗೊಳ್ಳುತ್ತಾಳೆ. ತಾನು ಸತ್ತೇ ಹೋಗುವೆ, ಅದೇ ಒಳ್ಳೆಯದು ಎಂದು ಅಂದುಕೊಳುವಾಗ ಸಿಂಹ ಅವಳ ಕೃಶ ದೇಹದ ಬಳಿ ಕೊಂಚ ಹೊತ್ತು ಕೂತು ನಂತರ ಎದ್ದುಹೋಗುತ್ತದೆ. ಕೊನೆಗೊಂದು ಟ್ರಕ್ ಹತ್ತಿ, ಅತ್ಯಾಚಾರಕ್ಕೊಳಗಾಗುವುದರಿಂದ ಹೇಗೋ ಪಾರಾಗಿ ಅಂತೂ ಮೊಗದಿಶುವಿನ ಅಜ್ಜಿ ಮನೆ ಸೇರುತ್ತಾಳೆ. ಅವಳ ಚಿಕ್ಕಮ್ಮನ ಗಂಡ ಲಂಡನ್ನಿನಲ್ಲಿ ಸೋಮಾಲಿಯಾ ರಾಯಭಾರಿಯಾಗಿದ್ದು ಅವರಿಗೆ ಮನೆಗೆಲಸದವರ ಅವಶ್ಯಕತೆಯಿದ್ದು ವಾರಿಸಳನ್ನು ಲಂಡನಿಗೆ ಕಳಿಸಲಾಗುತ್ತದೆ. ಅಲ್ಲಿ ಆರು ವರ್ಷ ಗೃಹ ಬಂಧನದಲ್ಲಿದ್ದು, ಗುಲಾಮಳಿಗಿಂತ ಕಡೆಯಾಗಿ ಬರೀ ಚಾಕರಿ ಮಾಡುತ್ತ, ಇಂಗ್ಲಿಷ್ ಕಲಿಯಲಾಗದೇ, ಹೊರಹೋಗಲಾಗದೇ, ಚಿಕ್ಕಮ್ಮನ ಮಗನಿಂದ ಅತ್ಯಾಚಾರ ಪ್ರಯತ್ನಕ್ಕೊಳಪಡುತ್ತಾಳೆ. ಅವರು ನಿವೃತ್ತರಾಗಿ ಲಂಡನ್ ಬಿಟ್ಟು ಮೊಗದಿಶುಗೆ ಹೊರಟಾಗ ಇವಳು ಅಲ್ಲೇ ಉಳಿಯುತ್ತಾಳೆ. ಮುಂದಿನದೆಲ್ಲ ಹೋರಾಟ.

[waris2.jpg]

ಬಿಳಿ ಜಿರಲೆಯಂತಹ ರೂಪದರ್ಶಿಗಳ ಫೋಟೋ ತೆಗೆತೆಗೆದು ಬೇಸತ್ತಿದ್ದ ಒಬ್ಬ ಫೋಟೋಗ್ರಾಫರನ ಕಣ್ಣಿಗೆ ಬೀಳುತ್ತಾಳೆ. ಕಪ್ಪುಕಲ್ಲಿನಲ್ಲಿ ಕಡೆದಿಟ್ಟ ವಿಗ್ರಹದಂತಹ ಇವಳನ್ನು ನೋಡಿದ್ದೇ ಆತನ ಕಣ್ಣಿಗೆ ಒಬ್ಬ ಮಾಡೆಲ್ ಕಾಣುತ್ತಾಳೆ. ಹೀಗೆ ಮಾಡೆಲಿಂಗ್ ಜಗತ್ತಿಗೆ ಪರಿಚಯವಾದವಳು ಮುಂದೆ ರೆವ್ಲಾನ್, ಅಲ್ಯೂರ್ ಮುಂತಾದ ಬ್ರಾಂಡುಗಳ ರೂಪದರ್ಶಿಯಾಗಿ ಮಿಲಿಯಾಧಿಪತಿಯಾಗುತ್ತಾಳೆ. ನಡೆವ ದಾರಿಯಲ್ಲಿ ಹಲವರು ಸಹಾಯ ಮಾಡುತ್ತಾರೆ, ಮೋಸ ಹೋಗುತ್ತಾಳೆ. ಪ್ರಖ್ಯಾತ ಮಾಡೆಲ್ ಆದವಳನ್ನು ಬಿಬಿಸಿ ಒಮ್ಮೆ ಸಂದರ್ಶನ ಮಾಡುತ್ತದೆ. ಅವಳ ಬದುಕಿನ ಅತ್ಯಂತ ನಿರ್ಧಾರಕ ಘಳಿಗೆ ಯಾವುದು ಎಂದು ಕೇಳಿದಾಗ ತಾನು ಅನುಭವಿಸಿದ ನರಕ ಯಾತನೆ ಕಣ್ಣೆದುರು ಬಂದು ಹೇಳಿಬಿಡುತ್ತಾಳೆ.

ಹೌದು, ಆಫ್ರಿಕಾದ ಬಹುತೇಕ ಎಲ್ಲ ಹೆಣ್ಣುಗಳಂತೆ ಅವಳೂ ‘ಆ ನಿರ್ಧಾರಕ ಘಳಿಗೆ’ಯ ಅಪಾಯ ಹಾದುಬಂದಿರುತ್ತಾಳೆ. ಐದು ವರ್ಷದ ಪುಟ್ಟ ಹುಡುಗಿಯಾಗಿದ್ದಾಗ ಜನನಾಂಗ ವಿರೂಪ ಕ್ರಿಯೆಗೆ ಒಳಪಟ್ಟಿರುತ್ತಾಳೆ. ಜನನೇಂದ್ರಿಯದ ಹೊರಭಾಗ ಕತ್ತರಿಸಿ ಎಲ್ಲವನ್ನು ಸೇರಿಸಿ ಹೊಲಿದುಬಿಡುವುದು ಅಲ್ಲಿ ಕನ್ಯತ್ವದ, ಹೆಣ್ತನದ ಮುಖ್ಯ ಲಕ್ಷಣ ಎಂದು ಭಾವಿಸಲಾಗಿರುತ್ತದೆ. ಅವಳ ಜನನಾಂಗದ ‘ಸುನ್ನತಿ’ ಮಾಡಲು ಮಾಟಗಾತಿಯಂತಹ ಮುದುಕಿಯೊಬ್ಬಳು ಬಂದು ಬಡ್ಡಾದ ಬ್ಲೇಡು, ಚೂರಿಯಲ್ಲಿ ರಕ್ತ ಕೋಡಿ ಹರಿಸಿರುತ್ತಾಳೆ. ತೊಡೆ ನಡುವಿನ ರಕ್ತ ಸೋರುವ ಗಾಯ, ಅದು ನಂಜಾಗಿ, ಬಾತು, ಕೊಡುವ ತೀವ್ರ ಯಾತನೆಯನ್ನೆಲ್ಲ ಮಗು ವಾರಿಸ್ ಅನುಭವಿಸುತ್ತದೆ. ಅಂತೂ ಕೊನೆಗೆ ಗಾಯ ಗುಣವಾಗಿ ಸಾಯದೆ ಬದುಕುತ್ತಾಳೆ. ಆದರೆ ಮೂತ್ರ ಮಾಡುವುದು ಹಾಗೂ ಮುಟ್ಟಿನ ಸ್ರಾವ ಅತಿ ನೋವಿನ ದಿನಗಳಾಗಿರುತ್ತವೆ. ಹೆಣ್ಣಾದ ಮೇಲೆ ಜಗತ್ತಿನ ಎಲ್ಲರೂ ಹೀಗೇ ಮಾಡಿಕೊಂಡಿರುತ್ತಾರೆ ಎಂದುಕೊಂಡವಳಿಗೆ ಲಂಡನ್ನಿನ ಬಿಳಿಯ ಗೆಳತಿಯಿಂದ ಹಾಗೆ ಮಾಡಿಕೊಳ್ಳದವರೂ ಇದ್ದಾರೆ, ಮಾಡದಿದ್ದರೂ ಹೆಣ್ಮಕ್ಕಳಿಗೆ ಏನೂ ಆಗುವುದಿಲ್ಲ ಎಂದು ತಿಳಿದು ವಿಸ್ಮಯ ಲೋಕವೊಂದು ತೆರೆಯುತ್ತದೆ. ತಾನನುಭವಿಸಿದ, ತನ್ನಂತಹ ಹಲವರು ಅನುಭವಿಸುತ್ತಿರುವ ಭೀಭತ್ಸ ಕಂಗೆಡಿಸುತ್ತದೆ. ಜನನಾಂಗ ಸುರೂಪಗೊಳಿಸುವ ಶಸ್ತ್ರಚಿಕಿತ್ಸೆಗೊಳಗಾಗಿ, ಮದುವೆಯಾಗಿ, ಮಗನ ಹೆರುತ್ತಾಳೆ.

ರೆವ್ಲಾನ್ ಸೇರಿದಂತೆ ಹಲವು ಜಾಗತಿಕ ಬ್ರ್ಯಾಂಡುಗಳ ವಿಖ್ಯಾತ ಮಾಡೆಲ್ ಆದವಳು ಮುಂದೆ ಆಕ್ಟಿವಿಸ್ಟ್ ಆಗಿ ಬದಲಾಗಿ ವಿಶ್ವಸಂಸ್ಥೆ ಜನನಾಂಗ ವಿರೂಪಗೊಳಿಸುವಿಕೆ ವಿರುದ್ಧ ಹಾಕಿಕೊಂಡ ಕಾರ್ಯಕ್ರಮದಲ್ಲಿ ರಾಯಭಾರಿಯಾಗುತ್ತಾಳೆ. ಡೆಸರ್ಟ್ ಫ್ಲವರ್ ಎಂಬ ಆತ್ಮಕತೆ ಬರೆಯುತ್ತಾಳೆ. ಅದು ಚಲನಚಿತ್ರವಾಗುತ್ತದೆ. ಹೆಣ್ಮಕ್ಕಳ ಜನನಾಂಗ ವಿರೂಪ ತಡೆಗಟ್ಟಲು ಡೆಸರ್ಟ್ ಫ್ಲವರ್ ಫೌಂಡೇಷನ್ ಸ್ಥಾಪಿಸುತ್ತಾಳೆ. ಹೀಗೆ ಮರುಭೂಮಿಯ ಮುಳ್ಳುಕಂಟಿಗಳ ಒಣನೆಲದಲ್ಲಿ ಅರಳುವ ಹೂಗಳ ನೋವಿನ ಕತೆಯನ್ನು ಜಗತ್ತೇ ಕಿವಿಯಾಗಿ ಕೇಳುತ್ತದೆ.ಆದರೆ,

ಲಕ್ಷಗಟ್ಟಲೆ ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿರುವ; ಸಂಪದ್ಭರಿತವಾಗಿದ್ದೂ ಅಂತರ್ಯುದ್ಧದಿಂದ ತತ್ತರಿಸುತ್ತಿರುವ ನೆಲದಿಂದ ತಪ್ಪಿಸಿಕೊಂಡು ಬಂದ ಹುಡುಗಿ ರೆವ್ಲಾನ್ ಮತ್ತಿತರ ಬಹುರಾಷ್ಟ್ರೀಯ ಕಂಪನಿ ಸೌಂದರ್ಯವರ್ಧಕಗಳ ಮಾಡೆಲ್ ಆದದ್ದನ್ನು; ಕಣ್ಕಟ್ಟಿನ ಜಗತ್ತಿಗೆ ಪ್ರತಿನಿಧಿಯಾಗಿ ಇಂಚು-ಗ್ರಾಂ ಲೆಕ್ಕದಲ್ಲಿ ಸೋಲುಗೆಲುವುಯಶಸ್ಸುಗಳ ನಿರ್ಧರಿಸುವ ವೃತ್ತಿ ಆಯ್ದುಕೊಂಡದ್ದನ್ನು ಬಿಡುಗಡೆಯೆಂದು ಭಾವಿಸಬೇಕೆ? ಯಾಕೋ ಅನುಮಾನ ಸುಳಿಯುತ್ತದೆ..

ಅನಾದಿ ಆಚರಣೆ

ಇಂದು ಹಲವು ಪಾರಂಪರಿಕ ಜ್ಞಾನಗಳು ವಿಜ್ಞಾನದ ಒರೆಗಲ್ಲಿನಲ್ಲಿ ಶೋಭಿಸುತ್ತ, ಮತ್ತೆ ಕೆಲವು ನಿಂದನೆಗೊಳಗಾಗುತ್ತ ಇವೆ. ಅಂಥ ಒಂದು ಆಚರಣೆ ಜನನಾಂಗ ವಿರೂಪಗೊಳಿಸುವಿಕೆ. ಅದಕ್ಕೆ ಐದುಸಾವಿರ ವರ್ಷಗಳಷ್ಟು ಇತಿಹಾಸವಿದೆ. ಕ್ರಿ.ಪೂ. ೧೩೬೦ರ ಈಜಿಪ್ಟಿನ ಗೋಡೆ ಕೆತ್ತನೆಗಳ ಮೇಲೆ, ಮಮ್ಮಿಗಳ ಸಾಕ್ರೋಫೇಗಸ್ ಮೇಲೆ ಈ ಪ್ರಕ್ರಿಯೆ ನಡೆಯುತ್ತಿರುವುದನ್ನು ಕೆತ್ತಲಾಗಿದೆ. ಪಿರಮಿಡ್‌ಗಳ ಹಲವು ಮಮ್ಮಿಗಳು ಮುಂಜಿಯಾದ ಕುರುಹು ಹೊಂದಿವೆ. ಆಫ್ರಿಕಾ, ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ, ಇಂಡೋನೇಷಿಯಾ, ದಕ್ಷಿಣ ಅಮೆರಿಕಾ ಮತ್ತು ಕೊರಿಯಾದ ಕೆಲ ಬುಡಕಟ್ಟು ಸಮುದಾಯಗಳು ಇಂದೂ ಧಾರ್ಮಿಕ ಕಟ್ಟುಪಾಡಿನಿಂದ ಹೊರತಾಗಿ ಅದನ್ನು ಮುಂದುವರೆಸಿವೆ. ಈಗ ಮುಸ್ಲಿಮರು ಹಾಗೂ ಜ್ಯೂಗಳು ಮಾತ್ರ ಸುನ್ನತಿಗೊಳಗಾಗುತ್ತಿದ್ದರೂ ವಿಶ್ವಾದ್ಯಂತ ಗಂಡಸರಲ್ಲಿ ಮೂರನೆಯ ಒಂದು ಭಾಗದಷ್ಟು ಜನ ಈ ಕ್ರಿಯೆಗೊಳಗಾಗುತ್ತಾರೆ. ಇದಕ್ಕೆ ‘ಸುನ್ನ’ ಎಂದು ಹಲವು ಪಂಗಡಗಳು ಕರೆಯುತ್ತವೆ, ಹಾಗೆಂದರೆ ‘ಮುಹಮದರ ಪರಂಪರೆಯ ಅನುಯಾಯಿಗಳು’ ಎಂದರ್ಥ. ಇಸ್ಲಾಮಿನಲ್ಲಿ ಹೆಣ್ಣುಮಕ್ಕಳಿಗೆ ಸುನ್ನ ಮಾಡಬೇಕೆಂದು ಹೇಳಿಲ್ಲವಾದರೂ ಬುಡಕಟ್ಟು ಆಚರಣೆ ಹಾಗೇ ಉಳಿದುಕೊಂಡು ಬಂದಿದೆ. ಧಾರ್ಮಿಕ ತ್ಯಾಗ, ಫಲವತ್ತತೆ ವೃದ್ಧಿ, ಗುರುತು, ಪುರುಷತ್ವ ಸಂಕೇತ, ಶತ್ರುಗಳಿಗೆ ಮತ್ತು ಗುಲಾಮರಿಗೆ ಅವಮಾನ ಮಾಡಲು - ಹೀಗೆ ನಾನಾ ಕಾರಣಗಳಿಗಾಗಿ ಈ ಪದ್ಧತಿ ರೂಢಿಯಲ್ಲಿದೆ. ಗಂಡಸಿನ ಮುಂದೊಗಲು ಅವನಿಗೆ ‘ಹೆಣ್ತನ’ದ ಗುಣ ಲಕ್ಷಣ ನೀಡುವುದೆಂದು ಅದನ್ನು ಕತ್ತರಿಸಿ ತೆಗೆಯಲಾಗುತ್ತದೆ! ಸುನ್ನತಿಯ ನಂತರ ಚರ್ಮ ಇಲ್ಲದ ಶಿಶ್ನದ ತುದಿಭಾಗವು ಹೆಚ್ಚು ಸುಖಾನುಭವ ನೀಡುತ್ತದೆ ಎಂದೂ ನಂಬಲಾಗಿದೆ.

ಬೈಬಲಿನಲ್ಲಿ ಈ ರೀತಿ ಇದೆ: “ಅಬ್ರಾಮನಿಗೆ ಸರ್ವೇಶ್ವರನು ಕಾಣಿಸಿಕೊಂಡು ‘ನಿನಗೆ ೯೯ ವರ್ಷವಾಗಿದ್ದರೂ ಅಧಿಕಾಧಿಕ ಸಂತತಿ ಕೊಡುತ್ತೇನೆ. ಅನೇಕ ರಾಷ್ಟ್ರಗಳಿಗೆ ಮೂಲಪುರುಷನನ್ನಾಗಿ ಮಾಡುತ್ತೇನೆ. ಆದರೆ ನನ್ನ ಜೊತೆಗೊಂದು ಚಿರ ಒಡಂಬಡಿಕೆ ಮಾಡಿಕೊಳ್ಳಬೇಕು’ ಎಂದು ಕೇಳಿದಾಗ, ಅದಕ್ಕೆ ಅಬ್ರಾಮ ಒಪ್ಪುತ್ತಾನೆ. ದೇವನು, ‘ನೀನೂ ನಿನ್ನ ಸಂತತಿಯವರೂ ತಲೆತಲಾಂತರಕ್ಕೂ ನಡೆಸಿಕೊಂಡು ಬರಬೇಕಾದ ಒಡಂಬಡಿಕೆ ಇದು: ಪ್ರತಿಯೊಬ್ಬ ಗಂಡಸಿಗೂ ಸುನ್ನತಿಯಾಗಬೇಕು. ಅದು ನಿನಗೂ ನನಗೂ ಆದ ಒಡಂಬಡಿಕೆಯ ಗುರುತು. ಸುನ್ನತಿ ಮಾಡಿಸಿಕೊಳ್ಳದವ ಒಡಂಬಡಿಕೆಯನ್ನು ಉಲ್ಲಂಘಿಸಿದ ಕಾರಣ ಆತ ಕುಲದಿಂದ ಬಹಿಷ್ಕೃತನಾಗಬೇಕು’ ಎನ್ನುತ್ತಾನೆ. ಇದಕ್ಕೊಪ್ಪಿದ ಅಬ್ರಾಮ ತನಗೂ, ತನ್ನ ಗಂಡುಮಕ್ಕಳಿಗೂ, ಕ್ರಯಕ್ಕೆ ಕೊಂಡುತಂದ ಗುಲಾಮರಿಗೂ ಸುನ್ನತಿ ಮಾಡಿಸಿದನು.”

ಸುನ್ನತಿ ಅಥವಾ ಸರ್‌ಕಮ್‌ಸಿಷನ್: ವೈದ್ಯಕೀಯ ವಿವರಣೆ 

ವೈದ್ಯಕೀಯವಾಗಿ ಕೆಲವರಿಗೆ ಸುನ್ನತಿ ಅಥವಾ ‘ಸರ್‌ಕಮ್‌ಸಿಷನ್’ ಮಾಡಲಾಗುತ್ತದೆ. ಪುರುಷ ಜನನೇಂದ್ರಿಯದ ಮುಂಭಾಗದ ಚರ್ಮ ಎಲಾಸ್ಟಿಕ್ ಆಗಿದ್ದು ಜನನಾಂಗ ಹಿಗ್ಗಿಕುಗ್ಗಿದಾಗ ತಾನೂ ಹಿಂದೆ ಮುಂದೆ ಸರಿಯುವಂತಿರುತ್ತದೆ. ಕೆಲವರಲ್ಲಿ ‘ಫೈಮೋಸಿಸ್’ ಅಥವಾ ಜನನೇಂದ್ರಿಯದ ಮುಂದೊಗಲ ದ್ವಾರ ತುಂಬ ಕಿರಿದಾಗಿದ್ದು ತುದಿಭಾಗದ ಚರ್ಮ ಜನನೇಂದ್ರಿಯದ ತುದಿಯಲ್ಲಿ ಮುಂದೆಹಿಂದೆ ಚಲಿಸಲಾಗುವುದಿಲ್ಲ. ಇದು ಜನನಾಂಗದ ಸೋಂಕು, ಮೂತ್ರದ ಸೋಂಕು ಉಂಟುಮಾಡುತ್ತದೆ ಹಾಗೂ ಲೈಂಗಿಕ ಕ್ರಿಯೆಗೆ ತೊಂದರೆ ಕೊಡುತ್ತದೆ. ಅಂಥವರಿಗೆ ಸರ್‌ಕಮ್‌ಸಿಷನ್ ಅವಶ್ಯವಾಗುತ್ತದೆ. ನೋವು ತಿಳಿಯದ ಹಾಗೆ ಲೋಕಲ್ ಅನಸ್ತೇಷಿಯಾ ಕೊಟ್ಟು, ಮುಂಭಾಗದ ಚರ್ಮವನ್ನೆಳೆದು ಕತ್ತರಿಸಿ ಹಿಮ್ಮಡಚಿ ಹೊಲಿಯಲಾಗುತ್ತದೆ. ಹೊಲಿಗೆಗಳು ವಾರದಲ್ಲಿ ತಂತಾನೇ ಕರಗಿ ಉದುರಿ ಹೋಗುತ್ತವೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವ ಅವಶ್ಯಕತೆಯಿಲ್ಲದ, ೧೦-೨೦ ನಿಮಿಷದಲ್ಲಿ ಮಾಡಿ ಮುಗಿಸುವ ಅತಿ ಸರಳ ಆಪರೇಷನ್ನನ್ನು ಫೈಮೋಸಿಸ್ ಇಲ್ಲದವರಿಗೆ ಮಾಡಿದರೂ ಹಾನಿಯಿಲ್ಲ.

‘ಸ್ಮೆಗ್ಮ’ ಎಂದು ಕರೆಸಿಕೊಳ್ಳುವ ಬಿಳಿಯ ಸ್ರಾವವೊಂದು ಪುರುಷ ಜನನೇಂದ್ರಿಯದ ಮುಂದೊಗಲ ಚರ್ಮದಡಿ ಸಂಗ್ರಹವಾಗುತ್ತದೆ. ಸ್ಮೆಗ್ಮವು ಕ್ಯಾನ್ಸರ್‌ಕಾರಕವೆಂದು, ಸ್ತ್ರೀಯರ ಗರ್ಭಕೊರಳ ಕ್ಯಾನ್ಸರ್‌ಗೆ ಕಾರಣವೆಂದು ವೈಜ್ಞಾನಿಕವಾಗಿ ಧೃಢಪಟ್ಟಿದೆ. ಸುನ್ನತಿಯಲ್ಲಿ ಪುರುಷ ಜನನೇಂದ್ರಿಯದ ಮುಂದೊಗಲನ್ನು ತೆಗೆಯುವುದರಿಂದ, ವಿಶೇಷ ಕಾಳಜಿಯಿಲ್ಲದೆಯೂ ಒಳಾಂಗ ಸ್ವಚ್ಛಗೊಳ್ಳುತ್ತದೆ. ಹೀಗಾಗಿ ಅವರ ಪತ್ನಿಯರಿಗೆ ಸ್ಮೆಗ್ಮದಿಂದ ಅಪಾಯವೊದಗುವ ಸಂಭವ ಕಡಿಮೆ. ಎಂದೇ  ಸುನ್ನತಿಯಾದವರಿಗೆ ಶಿಶ್ನ ಕ್ಯಾನ್ಸರಿನ ಸಾಧ್ಯತೆ ಕಡಿಮೆ; ಏಡ್ಸ್ ತಗುಲುವ ಅಪಾಯ ೮ ಪಟ್ಟು ಕಡಿಮೆ; ಸುನ್ನತಿಯಾದ ಗಂಡಸರ ಪತ್ನಿಯರಿಗೆ ಗರ್ಭಕೊರಳ ಕ್ಯಾನ್ಸರಿನ ಪ್ರಮಾಣ ಕಡಿಮೆ ಎಂದು ವೈದ್ಯಕೀಯ ಸಂಶೋಧನೆಗಳು ಸಾಬೀತು ಮಾಡಿವೆ.

ಆದರೆ ಹೆಂಗಸರ ‘ಜನನಾಂಗ ವಿರೂಪಗೊಳಿಸುವಿಕೆ’ಗೆ ಯಾವ ಕಾರಣವೂ ಇಲ್ಲ. ಧಾರ್ಮಿಕ ಪುಸ್ತಕದಲ್ಲಿ ಕಟ್ಟಳೆಯಾಗಿ ಉಲ್ಲೇಖವಿಲ್ಲದಿದ್ದರೂ ಸೆನೆಗಲ್‌ನಿಂದ ಈಥಿಯೋಪಿಯಾದವರೆಗೆ, ಈಜಿಪ್ಟಿನಿಂದ ಟ್ಯಾಂಝಾನಿಯಾದವರೆಗೆ, ಇಡಿಯ ಆಫ್ರಿಕಾ ಖಂಡದ ಬಹುಪಾಲು ರಾಷ್ಟ್ರಗಳಲ್ಲಿ ಹಾಗೂ ಮಧ್ಯಪ್ರಾಚ್ಯದ ಕೆಲವೆಡೆ ಈಗಲೂ ಸ್ತ್ರೀ ಜನನಾಂಗ ವಿರೂಪಗೊಳಿಸುವಿಕೆ (ಫೀಮೇಲ್ ಜೆನೈಟಲ್ ಮ್ಯುಟಿಲೇಷನ್ - ಎಫ್‌ಜಿಎಂ) ನಡೆಯುತ್ತಿದೆ.

ಆದರೆ ಆಫ್ರಿಕಾ ಮತ್ತಿತರ ದೇಶಗಳಲ್ಲಿ ಅವ್ಯಾಹತವಾಗಿ ಈ ಆಚರಣೆ ನಡೆಯುತ್ತಿದೆ. ಮಹಿಳೆಯ ಜನನಾಂಗಗಳು ಕುರೂಪದಿಂದಿವೆ; ಅವು ಅವಳಿಗೆ ಪುರುಷತನ ನೀಡುವಂತಿವೆ; ಅದು ಚಪ್ಪಟೆಯಾಗಿ, ಒಣ ಆಗಿದ್ದರೆ ಗಂಡಿಗೆ ಉತ್ತಮ ಮುಂತಾದ ಕಾರಣಗಳಿಗೆ ಎಫ್‌ಜಿಎಂ ಅನ್ನು ಮುಂದುವರೆಸಿಕೊಂಡು ಬರಲಾಗಿದೆ. ಅದರಲ್ಲೂ ಜನನಾಂಗದ ಕ್ಲಿಟೋರಿಸ್ ಭಾಗದ ಕುರಿತು ಏನೇನೋ ಊಹೆ ಚಾಲ್ತಿಯಲ್ಲಿವೆ. ೧೯ನೇ ಶತಮಾನದವರೆಗೂ ಯೂರೋಪ್ ಮತ್ತು ಅಮೆರಿಕದಲ್ಲಿ ಎಫ್‌ಜಿಎಂ ಧಾರ್ಮಿಕ ಕಾರಣಗಳಿಗಾಗಲ್ಲ, ಸಾಮಾಜಿಕ ಕಾರಣಗಳಿಗೆ ನಡೆಯುತ್ತಿತ್ತು. ಯಾವುದೇ ಹುಡುಗಿ ಹಸ್ತಮೈಥುನದಲ್ಲಿ ತೊಡಗಿದ್ದು ನೋಡಿದರೆ ಅವಳಿಗೆ ಕ್ಲಿಟೋರಿಸ್ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿತ್ತು. ಬ್ರಿಟನಿನ ಖ್ಯಾತ ಗೈನಕಾಲಜಿಸ್ಟ್ ಒಬ್ಬ ತಲೆಕೆಟ್ಟಂತೆ ವರ್ತಿಸುವ ಹೆಣ್ಣುಗಳ ಕ್ಲಿಟೋರಿಸ್ ತೆಗೆದು ಹಾಕುತ್ತಿದ್ದ. ಅವನ ಪ್ರಕಾರ ಹೆಂಗಸರ ದುಷ್ಟತನವೆಲ್ಲ ಜನನಾಂಗದ ಆ ಪುಟ್ಟ ಭಾಗದಲ್ಲಿ ಅಡಗಿಕೊಂಡಿದೆ. ‘ಅದು ಬೆಳೆಯುತ್ತಲೇ ಹೋಗಿ ಗಂಡಸರಷ್ಟು ದೊಡ್ಡ ಆಗುತ್ತದೆ, ಹೆರಿಗೆ ಸಮಯದಲ್ಲಿ ಕಷ್ಟವಾಗುತ್ತದೆ, ಮಗುವಿನ ನೆತ್ತಿಗೆ ತಾಗಿದರೆ ಅಪಾಯವಿದೆ, ಇತ್ಯಾದಿ ತಪ್ಪುಕಲ್ಪನೆಗಳು ಈಗಲೂ ಚಾಲ್ತಿಯಲ್ಲಿವೆ.

ಎಫ್‌ಜಿಎಂನಲ್ಲಿ ಸ್ತ್ರೀ ಜನನೇಂದ್ರಿಯದ ಹೊರಭಾಗವನ್ನು ಗಾಯಗೊಳಿಸಿ ನಂತರ ಹೊಲಿದು ಮುಚ್ಚಿಬಿಡಲಾಗುತ್ತದೆ. ಇದರಲ್ಲಿ ಮೂರು ತೆರನ ತೀವ್ರತೆಯ ಆಚರಣೆಯಿದೆ. ಮೊದಲನೆಯ ಅಥವಾ ಫಸ್ಟ್ ಡಿಗ್ರಿ ಎಫ್‌ಜಿಎಂನಲ್ಲಿ ಜನನಾಂಗದ ಸೂಕ್ಷ್ಮ ಸಂವೇದಿ ಭಾಗವಾದ ಕ್ಲಿಟೋರಿಸ್ ಅನ್ನು ಕತ್ತರಿಸಿ ತೆಗೆದು ಯೋನಿಯ ಕೆಲ ಭಾಗವನ್ನು ಹೊಲಿದು ಮುಚ್ಚಲಾಗುತ್ತದೆ. ಸೆಕೆಂಡ್ ಡಿಗ್ರಿಯಲ್ಲಿ ಕ್ಲಿಟೋರಿಸ್ ಜೊತೆಗೆ ಯೋನಿಯ ಆಚೀಚಿನ ಚರ್ಮವನ್ನೂ ಕತ್ತರಿಸಿ ಹೊಲೆಯುತ್ತಾರೆ. ಅತಿಭೀಕರ ಮೂರನೆಯ ಡಿಗ್ರಿಯಲ್ಲಿ ಹೊರಭಾಗದ ಜನನಾಂಗವನ್ನು ಪೂರಾ ಕತ್ತರಿಸಿ ಕೇವಲ ಮೂತ್ರ ಮತ್ತು ಮುಟ್ಟಿನ ರಕ್ತ ಹೊರಹೋಗುವಷ್ಟು ಚೂರು ಜಾಗ ಬಿಟ್ಟು, ಉಳಿದೆಲ್ಲ ಭಾಗವನ್ನು ಹೊಲಿದುಬಿಡುತ್ತಾರೆ. ಇದನ್ನು ಮಾಡಿದವರು ಅತಿ ಶುದ್ಧ ಹೆಣ್ಣುಗಳೆಂದು ಅವರಿಗೆ ತುಂಬ ಡಿಮ್ಯಾಂಡು. ಹೆಚ್ಚೆಚ್ಚು ಒಂಟೆ-ದುಡ್ಡಿನ ವಧುದಕ್ಷಿಣೆ ಸಿಗುತ್ತದೆ. ವಾರಿಸ್‌ಗೆ ಮಾಡಿದ್ದು ಮೂರನೆಯ ಡಿಗ್ರಿ ಎಫ್‌ಜಿಎಂ.

ಒಂದೇ ಚಾಕು, ಬ್ಲೇಡಿನಿಂದ ೩೦ ಹುಡುಗಿಯರ ಜನನಾಂಗ ಕೊಯ್ಯುವ ಕುಲದ ಹಿರಿಯ ಹೆಂಗಸಿಗೆ ಸೋಂಕು-ಶುದ್ಧತೆ ಇತ್ಯಾದಿ ಯಾವ ತಲೆಬಿಸಿಯೂ ಇರುವುದು ಸಾಧ್ಯವಿಲ್ಲ. ಎಷ್ಟೋ ಎಳೆಯ ಮಕ್ಕಳು ನಂಜಾಗಿ ಸಾಯುತ್ತವೆ. ತಿಂಗಳ ಸ್ರಾವ ಹರಿದುಹೋಗಲೂ ಅತೀವ ಯಾತನೆ ಪಡುತ್ತವೆ. ಮದುವೆಯಾದ ಹೆಣ್ಣುಮಕ್ಕಳಿಗೆ ಪ್ರಥಮ ಸಂಪರ್ಕ ಏರ್ಪಡಲು ಕೆಲವೊಮ್ಮೆ ತಿಂಗಳುಗಟ್ಟಲೆ, ವರ್ಷಗಟ್ಟಲೆ ಹಿಡಿಯುವುದೂ ಇದೆ. ೧೫% ಹೆಣ್ಣುಮಕ್ಕಳಿಗೆ ಗಂಡನೊಡನೆ ದೈಹಿಕ ಸಂಪರ್ಕ ಕೊನೆಗೂ ಸಾಧ್ಯವಾಗುವುದಿಲ್ಲ. ಕೆಲವು ಪತಿರಾಯರು ಮೊದಲ ರಾತ್ರಿ ಯಾವ ಅನಸ್ತೇಶಿಯಾ ಇಲ್ಲದೇ, ಪುಟ್ಟ ಚಾಕುವಿನಿಂದ ಜನನಾಂಗ ಕೊಯ್ದು ಪ್ರವೇಶದ್ವಾರವನ್ನು ಹಿರಿದುಮಾಡಿಕೊಳ್ಳುತ್ತಾರೆ. ಗಂಡ ಹೆಚ್ಚೆಚ್ಚು ಕಷ್ಟಪಟ್ಟಷ್ಟೂ, ಹೆಣ್ಣು ಹೆಚ್ಚೆಚ್ಚು ತೊಂದರೆ ಅನುಭವಿಸಿದಷ್ಟೂ ಇಲ್ಲಿಯವರೆಗೆ ಅವಳು ಪರಿಶುದ್ಧಳಾಗಿದ್ದಳೆಂಬ ಖಾತ್ರಿ ಹೆಚ್ಚುತ್ತ ಹೋಗುತ್ತದೆ. ಇಂಥ ಕಷ್ಟಗಳೆಲ್ಲ ಹೆಮ್ಮೆಯ ವಿಷಯಗಳು! ಗಂಡಸಿನ ಪುರುಷತ್ವದ ಅಳತೆಗೋಲು! ಹೊಲಿದಿದ್ದನ್ನೆಲ್ಲ ಹರಿದು ಮಗು ಹೊರಬಂದಾದ ಮೇಲೂ ಮುಕ್ತಿಯಿಲ್ಲ, ಹೆರಿಗೆಯ ನಂತರ ಹೊಲಿದು ತಮ್ಮ ಹೆಣ್ಣುಮಕ್ಕಳ ಶೀಲವನ್ನು ಸಮಾಜ ಭದ್ರವಾಗಿ ಕಾಯುತ್ತದೆ. ವಿಚಿತ್ರವೆಂದರೆ ಇದನ್ನೆಲ್ಲ ನೆರವೇರಿಸುವವರು ಕುಲದ ಹಿರಿಯ ಹೆಣ್ಣುಮಕ್ಕಳೇ. ಗುಟ್ಟಿನಿಂದ ಆಧುನಿಕ ಆಸ್ಪತ್ರೆಗಳಲ್ಲಿಯೂ ಇದು ನಡೆಯುತ್ತಲಿದೆ.

ಆಫ್ರಿಕನ್ ಗುಲಾಮೀ ಹೆಂಗಸರ ವಿರೂಪಗೊಂಡ ಜನನೇಂದ್ರಿಯಗಳನ್ನು ನೋಡಿದಾಗಲೇ ಉಳಿದ ಜಗತ್ತಿಗೆ ಇದರ ಬಗೆಗೆ ತಿಳಿದಿದ್ದು. ನಂತರ ಸುರೂಪಗೊಳಿಸುವ, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ತೀವ್ರ ಪ್ರಯತ್ನಗಳು ಶುರುವಾದವು. ೧೯೨೯ರಿಂದಲೇ ಕೆನ್ಯಾ ಮಿಷನರಿ ಕೌನ್ಸಿಲ್ ಈ ಅಮಾನುಷ ಆಚರಣೆಯನ್ನು ನಿಲ್ಲಿಸುವಂತೆ ಅಭಿಯಾನ ಕೈಗೊಂಡಿತ್ತು. ಆದರೆ ಈ ಅಭಿಯಾನದ ಒಬ್ಬ ಸನ್ಯಾಸಿನಿಯನ್ನು ಅಪಹರಿಸಿ, ಅವಳ ಜನನಾಂಗ ವಿರೂಪಗೊಳಿಸಿ ಕೊಲೆ ಮಾಡಲಾಯಿತು. ಸ್ವಾತಂತ್ರ್ಯ ಹೋರಾಟದ ನೆಪದಲ್ಲಿ ಕೀನ್ಯಾದಲ್ಲಿ ಬಂಡುಕೋರ ಬುಡಕಟ್ಟುಗಳು ‘ತಮ್ಮ ಹಕ್ಕುಗಳ ಒತ್ತಾಯಪೂರ್ವಕ ಉಲ್ಲಂಘನೆ’ ಎಂದು ಬಣ್ಣಿಸಿ ಎಫ್‌ಜಿಎಂ ಪರ ಹೋರಾಟ ನಡೆಸಿದವು! ಜೋಮೋ ಕೆನ್ಯಾಟಾ ಕೂಡಾ ಅದನ್ನು ಮಹಿಳೆಯರ ಪಾರಂಪರಿಕ ಹಕ್ಕು ಎಂದು ಕರೆದರು!

ಬಹಳಷ್ಟು ದೇಶಗಳಲ್ಲಿ ೧೯೭೦ರಿಂದೀಚೆಗೆ ಎಫ್‌ಜಿಎಂ ನಿಷೇಧಕ್ಕೆ ಒಳಗಾಗಿದ್ದರೂ, ವಿಶ್ವಸಂಸ್ಥೆಯ ಪ್ರಯತ್ನಗಳ ಹೊರತಾಗಿಯೂ ವರ್ಷಕ್ಕೆ ಎರಡು ಮಿಲಿಯನ್‌ಗಿಂತ ಹೆಚ್ಚು ೪-೮ ವರ್ಷ ವಯಸ್ಸಿನೊಳಗಿನ ಹೆಣ್ಣು ಮಕ್ಕಳು ಜನನೇಂದ್ರಿಯ ವಿರೂಪಗೊಳಿಸುವಿಕೆಗೆ ಗುಟ್ಟಾಗಿ ಒಳಗಾಗುತ್ತಿದ್ದಾರೆ. ವಿಶ್ವಾದ್ಯಂತ ೧೨.೫ ಕೋಟಿ ಹೆಣ್ಣುಮಕ್ಕಳು, ಪ್ರತಿದಿನ ೬೦೦೦ ಹೆಣ್ಮಕ್ಕಳು ಈ ವಿಲಕ್ಷಣ ಆಚರಣೆಗೆ ಒಳಗಾಗುತ್ತಾರೆ. ಎರಿಟ್ರಿಯಾ, ಈಥಿಯೋಪಿಯಾ, ಸೂಡಾನ್ ಮತ್ತು ಸೊಮಾಲಿಯಾಗಳಲ್ಲಿ ಎಲ್ಲವನ್ನೂ ಕತ್ತರಿಸಿ ಹೊಲಿದು ಮುಚ್ಚುವ ತೀವ್ರ ಸ್ವರೂಪದ ವಿರೂಪಗೊಳಿಸುವಿಕೆ ೯೦%ಗಿಂತ ಹೆಚ್ಚು ಹೆಣ್ಮಕ್ಕಳಲ್ಲಿ ಕಂಡುಬರುತ್ತದೆ.

ಇಲ್ಲಿ ಒಂದೆರೆಡು ಕುತೂಹಲಕರ ಪ್ರಶ್ನೆಗಳೇಳುತ್ತವೆ: ಎಫ್‌ಜಿಎಂ ಭೂಮಧ್ಯ ರೇಖೆಯ ಆಸುಪಾಸಿನಲ್ಲಷ್ಟೇ ಏಕಿದೆ? ರಷ್ಯಾ, ಚೀನಾ ಸುತ್ತಮುತ್ತಲ ಭಾಗಗಳಲ್ಲಿ ಬುಡಕಟ್ಟುಗಳಿದ್ದರೂ, ಮುಸ್ಲಿಮರಿದ್ದರೂ ಅಲ್ಲಿ ಏಕಿಲ್ಲ? ಜಾತಿ, ಲಿಂಗದ ನೆಪದಲ್ಲಿ ನಾನಾ ರೀತಿಯ ನಿರ್ಬಂಧ ಅನುಭವಿಸಿರುವ ಭಾರತದ ಹೆಣ್ಣುಗಳು ‘ಚೇಸ್ಟಿಟಿ ಬೆಲ್ಟ್’ (ಪವಿತ್ರತೆ ಪಟ್ಟಿ) ಕಟ್ಟಿಕೊಂಡ ದಾಖಲೆ ಅಲ್ಲಿಲ್ಲಿ ಇದ್ದರೂ ಎಫ್‌ಜಿಎಂ ಎಂಬ ಅಮಾನವೀಯ ಪೊಲೀಸಿಂಗ್ ವ್ಯವಸ್ಥೆಯಿಂದ ಹೇಗೆ ಪಾರಾದರು?

ಯೋನಿಪೂಜೆ, ಶಿಶ್ನ ಪೂಜೆ ಮಾಡಿದ ಸಂಸ್ಕೃತಿಯ ವಕ್ತಾರರು ಇದನ್ನೂ ಸನಾತನ ಸಂಸ್ಕೃತಿಯ ಹಿರಿಮೆ ಎಂಬಂತೆ ಬಣ್ಣಿಸಬಹುದು!


ಗೋರಿಯವರೆಗೂ ಮೌನವಾಗಿ ಒಯ್ದ ನೋವು


ಹೆಣ್ಣುಮಕ್ಕಳು ತಮ್ಮ ಮುಚ್ಚಿಟ್ಟ ಗಾಯಗಳ ತೆರೆದು ತೋರಿಸತೊಡಗಿದರೆ ಈ ಜಗತ್ತಿನ ಎಲ್ಲ ಮಹಾನ್ ದೇಶಗಳು, ಸಂಸ್ಕೃತಿಗಳು, ನಾಗರಿಕತೆ-ಧರ್ಮಗಳು ತಲೆ ತಗ್ಗಿಸಿ ನಿಲ್ಲಬೇಕಾಗುತ್ತದೆ. ಪರ್ಯಾಯ ಸಂಸ್ಕೃತಿ, ಮಾತೃಮೂಲೀಯ ಸಂಸ್ಕೃತಿ ಎಂದು ಯಾವುದನ್ನೆಲ್ಲ ನಾವು ಎತ್ತಿ ಹಿಡಿಯುತ್ತೇವೋ ಅವನ್ನೂ ಸೇರಿಸಿದಂತೆ ಭೂಮಿ ಮೇಲಿನ ಎಲ್ಲ ಕುಲಧರ್ಮದೇಶಗಳೂ ನಾನಾ ಹೆಸರುಗಳಲ್ಲಿ ಹೆಣ್ಣನ್ನು ದಮನಿಸುತ್ತ ಬಂದಿವೆ. ದ್ವಿಪಾದಿ ಮನುಷ್ಯನ ತವರು, ಸಂಪದ್ಭರಿತ ನೆಲ ಆಫ್ರಿಕಾದ ಸಂಸ್ಕೃತಿ-ಸಾಧನೆಗಳೇನೇ ಇರಲಿ, ಜನನಾಂಗ ವಿರೂಪಗೊಳಿಸುವಿಕೆ ಎಂಬ ಗುನ್ನೆಯ ನುಸಿ ಸಾವಿರ ಚಿತ್ತಾರಗಳ ಮಸಿ ನುಂಗುವಷ್ಟು ಭೀಕರವಾಗಿದೆ.

ಒಂದು ಹೆಣ್ಣಿಗೆ ಸಂಭವಿಸಬಹುದಾದ ಅತ್ಯಂತ ಬರ್ಬರ ಆಘಾತ ಜನನಾಂಗ ವಿರೂಪಗೊಳಿಸುವಿಕೆ. ಇದು ಹೆಣ್ಣಿನ ಲೈಂಗಿಕತೆಯ ಮೇಲೆ ಹಿಡಿತ ಸಾಧಿಸಲು ಸಮಾಜ ಅನುಸರಿಸಿದ ಅನಾಗರಿಕ ಕ್ರೌರ‍್ಯ. ಧಾರ್ಮಿಕ ಕಾರಣ, ಅನಕ್ಷರತೆ, ಬಡತನ, ಮೂಢನಂಬಿಕೆ ಇವ್ಯಾವುವೂ ಜನನಾಂಗ ವಿರೂಪಗೊಳಿಸುವಿಕೆಗೆ ಪೂರಾ ಕಾರಣವಲ್ಲ. ಹೆಣ್ಣಿನ ಶೀಲ ಕುರಿತ ಪರಿಕಲ್ಪನೆಯ ಜೊತೆಗೆ ಗಂಡಸಿನ ಸಂಪರ್ಕ ಅವಳಿಗೆ ‘ಸುಖ’ ನೀಡದೇ ಎಂದಿಗೂ ನೋವಿನಿಂದ ಕೂಡಿರಬೇಕು ಎಂಬ ಉದ್ದೇಶವೇ ಅದಕ್ಕಿರುವ ಏಕೈಕ ಕಾರಣ.
ದುರಂತವೆಂದರೆ ಅಮ್ಮ, ಅಜ್ಜಿಯಂದಿರೇ ಪಟ್ಟು ಹಿಡಿದು ತಮ್ಮ ಹೆಣ್ಮಕ್ಕಳನ್ನು ಹಿಂಸೆಗೊಳಪಡಿಸಿ ಅವರನ್ನು ಹೆಣ್ಣುಗಳಾಗಿ ಸಿದ್ಧಗೊಳಿಸಿದ್ದಾರೆ.

ಯಾಕಾಗಿ ಒಂದು ಹೆಣ್ಣು ಜೀವವನ್ನು ಅಂಥ ಕ್ರೂರ ಸಂಕಟಕ್ಕೆ ಈಡುಮಾಡಲಾಗುತ್ತದೆ? ಸಾವಿರಾರು ವರ್ಷಗಳಿಂದ ಕೋಟಿಗಟ್ಟಲೇ ಹೆಣ್ಣುಮಕ್ಕಳು ಅನುಭವಿಸಿರಬಹುದಾದ ದೈಹಿಕ ಮಾನಸಿಕ ಯಾತನೆಯ ವಿರುದ್ಧ ಅವರೇಕೆ ಇದಿರಾಡಲಿಲ್ಲ?

ಅದಕ್ಕೆ ಕಾರಣ ಲಿಂಗರಾಜಕಾರಣ. ಪಳಗಿಸಲಾಗದ ಹೆಣ್ಣಿನ ಲೈಂಗಿಕತೆಯನ್ನು ತಮ್ಮಿಷ್ಟದಂತೆ ವ್ಯಾಖ್ಯಾನಿಸಿ, ನಿಯಂತ್ರಿಸಿ, ಕಟ್ಟುಪಾಡಿಗೊಳಪಡಿಸಲು ಸಮಾಜ ರೂಪಿಸಿದ ವ್ಯವಸ್ಥೆ ಅದು. ಇವತ್ತು ಹೆಣ್ಣಿನ ಮೇಲೆ ನಡೆಯುವ ಅಸಂಖ್ಯ ದೌರ್ಜನ್ಯಗಳ ಕಾರಣವೂ ನೈಸರ್ಗಿಕ ಲಿಂಗಭೇದವನ್ನು ಲಿಂಗ ತಾರತಮ್ಯವಾಗಿಸಿದ ಲಿಂಗ ರಾಜಕಾರಣವೇ. ಈ ಬೀಜವನ್ನು ಯಾರು ಬಿತ್ತಿದರು? ಯಾಕಾಗಿ ಬಿತ್ತಿದರೆಂದು ಅರ್ಥಮಾಡಿಕೊಳ್ಳಬೇಕೆಂದರೆ ಪುರುಷ ಹೆಣ್ಣಿನ ಲೈಂಗಿಕತೆಯನ್ನು ಹೇಗೆ ಪರಿಭಾವಿಸಿ ನಿಯಂತ್ರಿಸಬಯಸಿದ್ದಾನೆ ಎನ್ನುವುದನ್ನು ತಿಳಿಯಬೇಕಾಗುತ್ತದೆ.

ಯಾವಾಗ ಹೋಮೋಎರೆಕ್ಟಸ್ ಎಂಬ ಈ ಜೀವ ಪ್ರಭೇದ ಒಂದು ಕಡೆ ನೆಲೆ ನಿಂತು ಆಸ್ತಿಯ ಕಲ್ಪನೆ ಮೂಡಿತೋ ಆಗ ಉತ್ತರಾಧಿಕಾರಿ ಕಲ್ಪನೆ ಬಲವಾಯಿತು. ನಮ್ಮ ದೇಶದ ಮಟ್ಟಿಗೆ ಕ್ರಿ. ಪೂ. ೮ರಿಂದ ೫ನೇ ಶತಮಾನದ ಹೊತ್ತಿಗೆ ರಾಜ್ಯ-ರಾಜಕಾರಣ ಶುರುವಾಯಿತು. ಬುಡಕಟ್ಟುಗಳ ಕುಲಮೂಲ ಸಂಬಂಧ ನಾಶವಾಗಿ ಭೂಮಿ ಖಾಸಗಿ ಸ್ವತ್ತಾಯಿತು. ಪಿತೃಪ್ರಧಾನ ಆಸ್ತಿ, ಪಿತೃಪ್ರಧಾನ ಉತ್ತರಾಧಿಕಾರ ವ್ಯವಸ್ಥೆ ಚಾಲ್ತಿಗೆ ಬಂತು. ಆಗ ‘ಕ್ಷೇತ್ರ’ವನ್ನು ಶುದ್ಧತೆಗಾಗಿ ಕಾಯಬೇಕಾದ ಅನಿವಾರ್ಯತೆ ಹುಟ್ಟಿತು. ಆದ್ದರಿಂದ ಹೆಣ್ಣಿನ ಮಟ್ಟಿಗೆ ಮನುಷ್ಯನ ಅಲೆಮಾರಿತನ ಕಳೆದು ಆಸ್ತಿ ಪರಿಕಲ್ಪನೆ ಮೂಡಿದ ಕ್ಷಣ ಏನಿದೆಯೋ ಅದು ಅವಳ ಸುತ್ತ ಕಟ್ಟಿದ ಗೋಡೆಗೆ ಪಾಯ ತೋಡತೊಡಗಿದ ದಿನವೂ ಹೌದು. ಇನ್ನೂ ವಿಸ್ತರಿಸಿ ಹೇಳಬೇಕೆಂದರೆ ವಿವಾಹ ಸಂಸ್ಥೆ ಗಟ್ಟಿಗೊಂಡು ಒಳ ವಿವಾಹ ಚಾಲ್ತಿಗೆ ಬಂದ, ಜಾತಿವ್ಯವಸ್ಥೆ ಹುಟ್ಟಿಕೊಂಡ ಸಮಯವೂ ಅದೇ.

ಭಾರತದ ಕತೆ ಹೀಗಾಯಿತು. ಯಹೂದಿಗಳ ದಿನದ ಪ್ರಾರ್ಥನೆಯ ಒಂದು ಸಾಲು ನೋಡಿ:

ಗಂಡಸರು: ‘ಓ ದೇವರೇ, ನಿನಗೆ ನಮಸ್ಕಾರ, ಏಕೆಂದರೆ ನೀನು ನನ್ನನ್ನು ಹೆಣ್ಣಾಗಿ ಹುಟ್ಟಿಸಲಿಲ್ಲ.’
ಹೆಂಗಸರು: ‘ಓ ದೇವರೇ, ನಿನಗೆ ನಮಸ್ಕಾರ, ಏಕೆಂದರೆ ನೀನು ನನ್ನನ್ನು ನಿನ್ನ ಚಿತ್ತಕ್ಕೆ ತಕ್ಕಂತೆ ಸೃಷ್ಟಿಸಿರುವೆ.’

ಕನಸುಗಳನ್ನು ವಿಶ್ಲೇಷಣೆ ಮಾಡಿದ ಫ್ರಾಯ್ಡ್‌ನ ಹೆಣ್ಣಿನ ಮಾದರಿ ನೋಡಿದರೆ ಗಾಬರಿಯಾಗುತ್ತದೆ. ತನಗಿರದ ಯಾವುದೋ ಒಂದು ಅಂಗ ಗಂಡಸಿಗಿದೆ; ಎಂದೇ ಅವಳಿಗೆ ತನ್ನ ಮೇಲೆ ಕೀಳರಿಮೆ ಹಾಗೂ ಗಂಡಿನ ಮೇಲೆ ದ್ವೇಷ ಎಂದು ‘ಶಿಶ್ನದ್ವೇಷ’ವನ್ನು ಪ್ರತಿಪಾದಿಸಿದವ ಫ್ರಾಯ್ಡ್. ಮಾನಸಿಕ ಸ್ತರದಲ್ಲಿ ದ್ವೇಷ ಮನೆ ಮಾಡಿರುವುದರಿಂದ ಅವಳಿಗೆ ನ್ಯಾಯದ ಪರಿಕಲ್ಪನೆ ಅಷ್ಟಾಗಿರುವುದಿಲ್ಲ; ಗಂಡಸು ಹೇಳಿದಂತೆ ಕೇಳುವ ವಸ್ತುವಾಗದಿದ್ದರೆ ಅವಳಿಗೆ ಸುಖ ಸಿಗುವುದಿಲ್ಲ; ಹುಟ್ಟಿನಿಂದ ಅವನಿಗಿಂತ ತಾನು ಕಡಿಮೆ ಎಂದು ಒಪ್ಪಿಕೊಂಡರಷ್ಟೇ ಲೈಂಗಿಕ ಸಂತೃಪ್ತಿ ದೊರೆಯಲು ಸಾಧ್ಯ ಎಂದೂ ಫ್ರಾಯ್ಡ್ ಪ್ರತಿಪಾದಿಸುತ್ತಾನೆ. ನಿಷ್ಕ್ರಿಯತೆಯನ್ನು ಹೆಣ್ಣುತನಕ್ಕೂ, ಕ್ರಿಯಾಶೀಲತೆಯನ್ನು ಗಂಡುತನಕ್ಕೂ ಅವನ ಅನುಯಾಯಿಗಳು ಸಮೀಕರಿಸುತ್ತಾರೆ.

ಮನುವೋ, ಫ್ರಾಯ್ಡನೋ, ಮತ್ಯಾವ ಧರ್ಮ ಸಂಸ್ಥಾಪಕರೋ, ಒಟ್ಟಾರೆ ಹೆಣ್ಣಿನ ಕುರಿತು ಎಲ್ಲ ಹೇಳುವುದಿಷ್ಟೆ: ವ್ಯಕ್ತಿತ್ವವನ್ನೇ ಇಲ್ಲವಾಗಿಸಿಕೊಂಡು ತ್ಯಾಗ ಬಲಿದಾನಗಳನ್ನು ವಿಸ್ತರಿಸುತ್ತ ಸಂತೋಷ ಹಂಚುವುದೇ ಹೆಣ್ಣಿನ ಸುಖ. ಅಧೀನತೆಯೇ ಅವಳ ಮಾನವೀಯ ಸಂಬಂಧ. ಸ್ವಾತಂತ್ರ್ಯ, ಸಮಾನತೆಗಳು ಭಾಷಿಕ ಪದಗಳಷ್ಟೇ ಹೊರತು ಎಂದೂ ಹೆಣ್ಣಿನ ವಿಷಯದಲ್ಲಿ ವಾಸ್ತವ ಸತ್ಯಗಳಲ್ಲ..

ಆದರೆ ಲಿಂಗ ರಾಜಕಾರಣ ಸೃಷ್ಟಿಸಿರುವ ಸಾಮಾಜಿಕ ಚೌಕಟ್ಟಿನಲ್ಲಿ ಗಂಡೂ ಬಂಧಿಯೇ. ಅದು ತನಗೆ ಲಾಭದಾಯಕ, ಕ್ಷೇಮಕರ ಎಂದು ಮೇಲ್ನೋಟಕ್ಕೆ ಅನಿಸುತ್ತಿರಬಹುದು. ಅಧಿಕಾರ ತನ್ನಲ್ಲಿದೆ ಎಂಬ ಅಹಂಕಾರಕ್ಕೂ ಕಾರಣವಾಗಿರಬಹುದು. ಆದರೆ ಜೀವಮಾನವಿಡೀ ಒಂದಲ್ಲ ಒಂದು ಹೆಣ್ಣಿನೊಡನೆ ಕಳೆಯಬೇಕಾದ ಗಂಡು, ಅವಳು ಆತಂಕ-ಕಳವಳ-ಅಸಮಾಧಾನ-ತಳಮಳದಲ್ಲಿದ್ದರೆ; ಅವಳ ನಿಯಂತ್ರಣವೇ ನಿತ್ಯದ ತಲೆಬಿಸಿಯಾದರೆ ಹೇಗೆ ತಾನೇ ನೆಮ್ಮದಿಯಾಗಿರಬಲ್ಲ? ಅಧಿಕಾರ ಅಂತಸ್ತಿನ ಸೋಗಿನಲ್ಲಿ ಸುಖವನ್ನು ನಟಿಸಬಲ್ಲ ಅಷ್ಟೆ.

ಇಷ್ಟನ್ನು ಸಮಾಜ ತಿಳಿದ ದಿನ ಎಲ್ಲ ಲಿಂಗತಾರತಮ್ಯ-ದುಷ್ಟತನಗಳೂ ಹೋರಾಟವಿಲ್ಲದೇ ಕೊನೆಗೊಳ್ಳುತ್ತವೆ. ಅರಳಲಿರುವ ಹೂಗಳು ಅಂಥ ದಿನಗಳ ಕುರಿತು ಭರವಸೆ ಹೊಂದಿವೆ.No comments:

Post a Comment