Wednesday 13 August 2014

ನುಡಿಸಿರಿಯ ನೆಪದಲ್ಲಿ: ಸಾಹಿತಿಗಳ ಬೌದ್ಧಿಕ ದಿವಾಳಿತನ


ಸಾಲ್ವಡಾರ್ ಡಾಲಿ ಪೇಯಿಂಟಿಂಗ್

ಪ್ರತಿಸಲದಂತೆ ಈ ಬಾರಿಯೂ ನವೆಂಬರ್ ತಿಂಗಳಿನಲ್ಲಿ ಕನ್ನಡ ಮಹೋತ್ಸವಗಳು ಜರುಗಿವೆ. ಮೂಡಬಿದ್ರಿಯ ‘ಫೈವ್‌ಸ್ಟಾರ್’ ಕಾರ್ಯಕ್ರಮಕ್ಕೆ ಹೋಗಿಬಂದ ಕನ್ನಡ ಸಾಹಿತಿಗಳು ಕವಿತೆ ಓದಿ, ಕತೆ ಕೇಳಿಸಿ, ಸಂವಾದಿಸಿ ಅಲ್ಲಿನ ಶಿಸ್ತು, ಅಚ್ಚುಕಟ್ಟುಗಳನ್ನು ಕಂಡು ದಂಗಾಗಿ ಹಿಂದಿರುಗಿದ್ದಾರೆ. ಗುಜರಾತನ್ನೂ, ನರೇಂದ್ರ ಮೋದಿಯನ್ನೂ ಕಾವ್ಯ-ಕತೆಗಳಲ್ಲಿ ವಸ್ತುವಾಗಿಸಿ, ರೂಪಕವಾಗಿಸಿ ಬರೆದ ಮನಸುಗಳು ಅದೇ ತಾತ್ವಿಕತೆಯ ಸಾಹಿತ್ಯಿಕ ಮತ್ತು ಸಿವಿಲೈಜ್ಡ್ ರೂಪವಾದ ಸಮ್ಮೇಳನದಲ್ಲಿ ಭಾಗಿಯಾಗಿ ಪುಳಕಗೊಂಡಿವೆ. ಕೋಮುವಾದ ವಿರೋಧಿ, ಪ್ರಗತಿಪರ ಎಂದೆಲ್ಲ ಹಣೆಪಟ್ಟಿ ಅಂಟಿಸಿಕೊಂಡ ಹಿರಿಕಿರಿ ಸಾಹಿತಿಗಳು ಕೋಮುಹಿಂಸೆಗೆ ಕಾರಣವಾದವರನ್ನು ಅವರ ವೇದಿಕೆಯಲ್ಲೇ ಹೊಗಳಿ ಅಟ್ಟಕ್ಕೇರಿಸಿರುವುದು; ವಿರಾಟ್ ಹಿಂದೂ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರನ್ನು ಕೋಮುವಾದ ನಿಲ್ಲಿಸಿ ಎಂದು ಕೇಳಿಕೊಳ್ಳುವುದು ಸಾಹಿತ್ಯಿಕ ವಲಯದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.

ಇದು ಖಾಸಗೀಕರಣದ ಕಾಲ. ಆರ್ಥಿಕ-ಸಾಮಾಜಿಕ ಕ್ಷೇತ್ರಗಳಷ್ಟೆ ಅಲ್ಲ, ಕಲೆ-ಸಾಹಿತ್ಯ-ಭಾಷೆ-ಚಳುವಳಿಗಳೂ ಖಾಸಗೀಕರಣಗೊಂಡಿವೆ. ಕೆಲ ಮಹಾನ್‌ಪೋಷಕ ವ್ಯಕ್ತಿಗಳು ಸೃಷ್ಟಿಯಾಗಿದ್ದಾರೆ. ಅವರು ಧಾರ್ಮಿಕ ಸ್ಥಳವೊಂದನ್ನು ನಡೆಸುತ್ತ ಜನರಿಗೆ ಆಧ್ಯಾತ್ಮ ಹಂಚುತ್ತಾರೆ. ಶಿಕ್ಷಣ ಸಂಸ್ಥೆಗಳನ್ನೂ ಹುಟ್ಟುಹಾಕುತ್ತಾರೆ. ಸಾಹಿತ್ಯ ಸಮ್ಮೇಳನ ನಡೆಸಿ ಪ್ರಶಸ್ತಿ ನೀಡುತ್ತಾರೆ. ನೃತ್ಯ-ಸಂಗೀತ ದಿಗ್ಗಜರನ್ನು ಕರೆಸಿ ಪ್ರದರ್ಶನ ಏರ್ಪಡಿಸುತ್ತಾರೆ. ಜನಪದ ಕಲಾತಂಡಗಳನ್ನು ಕರೆಸಿ ಸನ್ಮಾನ ಮಾಡುತ್ತಾರೆ. ಕ್ರೀಡಾ ಕೂಟ ನಡೆಸುತ್ತಾರೆ. ನಾಟಿ ವೈದ್ಯ ಸಮಾವೇಶವನ್ನೂ, ರೈತ ಸಮಾವೇಶಗಳನ್ನೂ ಸಂಘಟಿಸುತ್ತಾರೆ. ಎಲ್ಲದರಲ್ಲೂ ಅಚ್ಚುಕಟ್ಟು. ಬಂದವರಿಗೆ ಯೋಗ್ಯತೆಗೆ ತಕ್ಕ ಸತ್ಕಾರ. ಯಾವ ಲೋಪವೂ ಎದ್ದು ಕಾಣದಂತಹ ಸಂಘಟನಾ ಕೌಶಲ. ಅವರ ಜಗಲಿ, ಹಿತ್ತಲುಗಳು ಸಾಂಸ್ಕೃತಿಕ ಲೋಕದ ಮಾಲ್‌ಗಳಂತೆ ಝಗಮಗಿಸುತ್ತವೆ.

ಸರ್ಕಾರಿಯೋ, ಖಾಸಗಿಯೋ, ಕಲೆ-ಶಿಕ್ಷಣ-ಸಂಸ್ಕೃತಿಗಳು ಸಿರಿವಂತರಿಂದಲೂ ಪುನರುಜ್ಜೀವನಗೊಳ್ಳುತ್ತಿದ್ದರೆ ಅದಕ್ಕೇಕೆ ತಕರಾರು ಎನಿಸಬಹುದು. ತಕರಾರುಗಳು ಸಕಾರಣ; ಸಂಘಟಕರ ಕುರಿತಷ್ಟೇ ಅಲ್ಲ, ಭಾಗವಹಿಸಿದವರ ಕುರಿತೂ.

ಏಕೆಂದರೆ ಈ ಮಹಾಪೋಷಕರು ಕಲೆಸಾಹಿತ್ಯಸಂಸ್ಕೃತಿಗಷ್ಟೇ ಅಲ್ಲ, ಫ್ಯೂಡಲ್ ವ್ಯವಸ್ಥೆಯ ಮಹಾಪೋಷಕರೂ ಹೌದು. ಕಣ್ಣು ಕೋರೈಸುವ ಸಂಘಟನಾ ಕೌಶಲದ ಹೊರತಾಗಿಯೂ ಫ್ಯೂಡಲ್ ವ್ಯವಸ್ಥೆಯ ಕುರುಹುಗಳು ಅಲ್ಲಿ ಕಣ್ಣಿಗೆ ರಾಚುತ್ತವೆ. ಅವರು ಸಂಘಟಿಸುವ ಪಲ್ಲಕ್ಕಿ ಮೆರವಣಿಗೆಯಲ್ಲಿ ಛತ್ರ ಚಾಮರ ಧ್ವಜ ಹಿಡಿಯುವವರು, ಶಿಸ್ತಾಗಿ ಎರಡೂ ಸಾಲಿನಲ್ಲಿ ನಿಂತು ಸ್ವಾಗತಿಸುವ ತರುಣ ತರುಣಿಯರು ಜನಸಮುದಾಯವೊಂದು ಒಟ್ಟಾಗಿ ನಡೆಸುವ ಸಂಭ್ರಮದ ಜಾತ್ರೆಯ ಭಾಗಿದಾರರಂತೆ ಕಾಣುವುದಿಲ್ಲ. ಬದಲಾಗಿ ಏಕಮಾತ್ರ ನಾಯಕನ ಆಜ್ಞೆಗನುಸಾರ ನಡೆವ ಸೇವಕರಂತೆ ಪಾಲ್ಗೊಂಡಿರುವುದು ಚಹರೆಗಳಿಂದ ತಿಳಿದು ಬರುತ್ತದೆ.

ಆಳುವವರು ಯಾರಾದರಾಗಲಿ, ಈ ಮಹಾಪೋಷಕರು ಅವರ ಕೃಪಾಕಟಾಕ್ಷ ಬಯಸುತ್ತಾರೆ. ಎಂದೇ ಇಂಥ ಸಮ್ಮೇಳನಗಳು ಚಾಲಾಕು ಬಂಡವಾಳ ಹೂಡಿಕೆದಾರನ ಶುದ್ಧ ವ್ಯಾಪಾರೀ ಹಿತಾಸಕ್ತಿಯಿಂದ ಸ್ಫೂರ್ತಿ ಪಡೆದು ನಡೆಯುತ್ತವೆ. ಅವರ ಬಂಡವಾಳವನ್ನು ಪವಿತ್ರೀಕರಿಸುವ, ಬಂಡವಾಳಕ್ಕೆ ಮಾನ್ಯತೆ, ಮೌಲ್ಯ ತಂದುಕೊಡುವ ಪ್ರಯತ್ನ ಅದು. ಈ ಮಾನ್ಯತೆ, ಮೌಲ್ಯಗಳು ಆಳುವವರನ್ನು, ವ್ಯವಸ್ಥೆಯನ್ನು ಆ ಬಂಡವಾಳಿಗನ ಕುರಿತು ಮಿದುಗೊಳಿಸಿ ನ್ಯಾಯನಿಷ್ಠುರತೆಯನ್ನು ಮಬ್ಬುಗೊಳಿಸುತ್ತವೆ. ಅಂಥ ವ್ಯಕ್ತಿಯ ವಿರುದ್ಧ ಮಾತಾಡುವುದು ಅಥವಾ ಕ್ರಮ ಕೈಗೊಳ್ಳುವುದು ಕಾನೂನು ಪ್ರಕಾರವೂ ಕಷ್ಟವಾಗುತ್ತದೆ. ಏಕೆಂದರೆ ಗಣ್ಯ ಬೆಂಬಲ ಅದಕ್ಕೆ ದಕ್ಕಿರುತ್ತದೆ. ಯಥಾಸ್ಥಿತಿ ಕಾಯ್ದುಕೊಳ್ಳಬಯಸುವುದೇ ತಾತ್ವಿಕತೆಯಾದ ರಾಜಕಾರಣವೂ ಇವರ ಬೆಂಬಲಕ್ಕೆ ಸದಾ ನಿಲ್ಲುತ್ತದೆ. ಇದೊಂದು ಮ್ಯೂಚುವಲ್ ಅಂಡರ್‌ಸ್ಟಾಂಡಿಂಗ್. ಬಂಡವಾಳ ಮತ್ತು ರಾಜಕಾರಣ ವಿವಿಧ ಸ್ತರಗಳಲ್ಲಿ ಮಾಡಿಕೊಂಡ ಅಪವಿತ್ರ ಮೈತ್ರಿಯ ಕುರುಹು.

ಇಂಥವರು ಸಾಹಿತ್ಯ ಜಗತ್ತಿನ ವಾರಸುದಾರರಾಗಿ ಅದಕ್ಕೆ ಸಾಹಿತಿಗಳ ಮುದ್ರೆಯೂ ದೊರೆತರೆ? ಅದು ಸಾಹಿತ್ಯ ಲೋಕದ, ಸಮಾಜದ ದುರಂತ. ಇದು ಅತಿಸೂಕ್ಷ್ಮ ಮನಸ್ಸುಗಳೆನಿಸಿರುವ ಸಾಹಿತಿಗಳಿಗೆ ಅರ್ಥವಾಗುವುದಿಲ್ಲವೆ?

ಗುಂಪಾಗಿ ಹೋಗಿ ಸಮ್ಮಾನಗೊಂಡು ಬರುವವರಲ್ಲಿ ಅತಿ ಹಿರಿಯ ಸಾಹಿತಿಗಳ ಬಗ್ಗೆ ತಕರಾರು ಎತ್ತಿ ಉಪಯೋಗವಿಲ್ಲ. ಏಕೆಂದರೆ ಅವರು ಗಣಿಕಳ್ಳರ ಲೂಟಿ ವಿರುದ್ಧ ನಡೆದ ಜಾಥಾದಲ್ಲಿ ಪಾಲ್ಗೊಂಡ ಮರುದಿನವೇ ಮತ್ತೊಬ್ಬ ಭೂಗಳ್ಳನ ಉಪವಾಸಕ್ಕೆ ಮನನೊಂದು ಮಾನವೀಯತೆಯ ಕಿತ್ತಳೆ ರಸ ಕುಡಿಸಿ ಬರುತ್ತಾರೆ. ಕೋಮುವಾದಿ ಎಂದು ಸರ್ಕಾರವನ್ನು ಟೀಕಿಸುತ್ತಲೇ ಅದು ನಡೆಸುವ ಸಮ್ಮೇಳನದ ಅಧ್ಯಕ್ಷಗಿರಿಯನ್ನು ಒಪ್ಪಿಕೊಳ್ಳುತ್ತಾರೆ. ತಮ್ಮ ಸಮಾಜವಾದಿ ಕ್ರಾಂತಿಯ ಕನಸಿನ ಕಡೆಯ ದಿನಗಳಲ್ಲಿ ಇಂಥ ವೈಭವಕ್ಕೆ ಅವರು ಸಾಕ್ಷಿಯಾಗಲಿ. ಅದರಿಂದ ಏನೂ ನಷ್ಟವಿಲ್ಲ.

ಆದರೆ ನಮ್ಮ ಸಮಕಾಲೀನರಾಗಿರುವ, ಪ್ರಸ್ತುತ ಸಾಮಾಜಿಕ-ರಾಜಕೀಯ ತಲ್ಲಣಗಳ ನಡುವೆ ಮಿದುಳು-ಮನಸ್ಸುಗಳನ್ನು ಶುದ್ಧವಾಗಿಟ್ಟುಕೊಂಡಿರುವ ಕೆಲವು ಸಂವೇದನಾಶೀಲ ಮಿತ್ರರೂ ಭಾವುಕವಾಗಿ ಅಲ್ಲಿ ಭಾಗವಹಿಸುವುದಷ್ಟೇ ಅಲ್ಲ, ಅದಕ್ಕೆ ಸಮಜಾಯಿಷಿ ನೀಡುತ್ತಿರುವುದು ವರ್ತಮಾನದ ವಿಪರ್ಯಾಸಗಳನ್ನು ಸಂಕೀರ್ಣಗೊಳಿಸಿದೆ. ವಿರಾಟ್ ಹಿಂದೂ ಸಮಾವೇಶಕ್ಕೆ ತನುಮನಧನ ಧಾರೆಯೆರೆಯುವವರನ್ನು ಕೋಮುವಾದ ನಿಲ್ಲಿಸಿ ಎಂದು ಭಾವದುಂಬಿ ಕೇಳುವುದೇನೋ ಸರಿಯೆ, ಆದರೆ ಅಂಥ ಉತ್ಸವದಲ್ಲಿ ಪಾಲ್ಗೊಳ್ಳುವಿಕೆ ಹಲವಾರು ಪ್ರಶ್ನೆಗಳನ್ನೆತ್ತಿದೆ.

ಜನರ ಸಂಪನ್ಮೂಲ, ಜನರ ತೆರಿಗೆಯಿಂದ ಬರುವ ಬೊಕ್ಕಸದ ಹಣವನ್ನು ನೆರೆಬರದ ಕಾಲದಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಖರ್ಚು ಮಾಡುವುದು ಸರಿಯಲ್ಲ ಎಂದು ತಕರಾರು ತೆಗೆಯುವ ನಾವು; ಹೆಚ್ಚುಕಡಿಮೆ ಅಷ್ಟೇ ಖರ್ಚು ಮಾಡಿ ವ್ಯಕ್ತಿಯೊಬ್ಬ ಸಂಘಟಿಸುವ ಕಾರ್ಯಕ್ರಮದ ಬಂಡವಾಳ ಮೂಲದ ಕುರಿತು, ನಡೆಸುವವರ ಆದ್ಯತೆಗಳ ಕುರಿತು ಯೋಚಿಸದೆ ಪಾಲ್ಗೊಳ್ಳಬಹುದೇ?

ಕೇವಲ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳನ್ನು ಟೀಕಿಸುವುದರಿಂದ ನಮ್ಮ ರಾಜಕೀಯ ನಿಲುವುಗಳು ವ್ಯಕ್ತವಾಗುವುದೇ? ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಹಾಗೂ ದ್ವಂದ್ವ-ಬಿಕ್ಕಟ್ಟುಗಳ ಸಂದರ್ಭದಲ್ಲಿ ನಾವು ಯಾರ ಜೊತೆಗಿದ್ದೇವೆ ಎನ್ನುವುದು ಕೂಡಾ ರಾಜಕೀಯ ನಿಲುವುಗಳನ್ನು ರೂಪಿಸುವುದಿಲ್ಲವೆ?

ಸಾಹಿತಿಗಳು ಬೀದಿಗಿಳಿದು ಹೋರಾಡುವ ಕಾಲ ದೂರವಾಗಿದೆ. ನನ್ನನ್ನೂ ಸೇರಿಸಿ ಹೇಳುವುದಾದರೆ ಇದು ಹೋರಾಡುವವರು ಮತ್ತು ಹೋರಾಟ ಸಾಹಿತ್ಯ ರಚಿಸುವವರು ಬೇರೆಬೇರೆಯಾಗಿರುವ ಕಾಲ. ಹೀಗಿರುತ್ತ ಅಂತರಾಳದಲ್ಲಿ ಒಂದು ಉರಿವ ಕಿಡಿಯಾದರೂ ಇಲ್ಲದೇ ಎಲ್ಲರೊಂದಿಗೂ ರಾಜಿಯಾಗಬಹುದಾದರೆ ಅಕ್ಷರ ಹೋರಾಟದ ಅರ್ಥ ಏನಾಯಿತು?

ಪಲ್ಲಕ್ಕಿಯಲ್ಲಿ ಸಾಗಿದ ಸಮ್ಮೇಳನಾಧ್ಯಕ್ಷರ ಚಿತ್ರ ಕಣ್ಣೆದುರು ಬರುವಾಗ ಐನ್‌ಸ್ಟೀನ್ ನೆನಪಾದರು. ನೊಬೆಲ್ ಪ್ರಶಸ್ತಿ ಬಂದ ಗೌರವಕ್ಕೆ ಅವರಿಗೆ ನ್ಯೂಯಾರ್ಕಿನ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ಆಯೋಜಿಸಲಾಗಿತ್ತು. ಆದರೆ ನಾಲ್ಕು ಜನರ ಹೆಗಲ ಮೇಲೆ ಕುಳಿತು ಹೋಗಲು ಸ್ಪಷ್ಟವಾಗಿ ನಿರಾಕರಿಸಿದ ಐನ್‌ಸ್ಟೀನ್ ಮೆರವಣಿಗೆಯಿಡೀ ನಡೆದೇ ಪಾಲ್ಗೊಂಡರು. ಭೌತವಿಜ್ಞಾನಿಗೆ ಹೊಳೆದ ಈ ಸರಳ ಸತ್ಯ ಮಾನವೀಯತೆಯನ್ನೇ ಬಂಡವಾಳವಾಗಿಸಿಕೊಂಡಿರುವ ಬರಹಗಾರರಿಗೆ ಏಕೆ ಹೊಳೆಯುವುದಿಲ್ಲ?

***

ಹಾಗಾದರೆ ಸಾಹಿತ್ಯ, ಕಲೆಗಳ ಸಮಾವೇಶವನ್ನು ಯಾರು ಸಂಘಟಿಸಬೇಕು? ಎಂಬ ಪ್ರಶ್ನೆಯೇಳುತ್ತದೆ. ಹಣಬಲ, ಜನಬಲವಷ್ಟೇ ಸಂಘಟಕನ ಪಟ್ಟ ಗಳಿಸಿಕೊಡುವುದಿಲ್ಲ. ಅಧಿಕಾರ-ಆಮಿಷಗಳಿಂದ ಮುಕ್ತವಾದ; ಸುತ್ತಮುತ್ತ ನಡೆಯುತ್ತಿರುವುದಕ್ಕೆ ಜನಪರವಾಗಿ ಸ್ಪಂದಿಸುವಷ್ಟಾದರೂ ಬದ್ಧತೆಯಿರುವ; ಜಾತಿ-ಧರ್ಮ-ವರ್ಗ-ಭಾಷೆಯ ಹೊರತಾಗಿ ಮಾನವಪರ ಕಾಳಜಿಯಿರುವ ವ್ಯಕ್ತಿ-ಸಂಘಟನೆಗಳು ಸಾಹಿತ್ಯ ಲೋಕದ ಸಂಚಾಲಕ ಶಕ್ತಿಗಳಾಗಬಲ್ಲರು.

ಈ ಸಮ್ಮೇಳನ ಸಾಹಿತ್ಯವನ್ನೊಂದು ಆನಂದ ಕೊಡುವ ಉತ್ಸವವನ್ನಾಗಿ ಬಿಂಬಿಸುವುದೇ ಹೊರತು ಸಾಮಾಜಿಕ ಸಮಸ್ಯೆಗಳ ಕುರಿತು ಚಕಾರವೆತ್ತುವುದಿಲ್ಲ. ಸಾಹಿತಿ ಕಲಾವಿದರನ್ನು ಅಷ್ಟು ಸಂಖ್ಯೆಯಲ್ಲಿ ಸೇರಿಸಿದರೂ ಕರಾವಳಿಯ ಬಿಕ್ಕಟ್ಟುಗಳ ಕುರಿತು ಚರ್ಚಾಗೋಷ್ಠಿ ನಡೆಯುವುದಿಲ್ಲ. ಆಯೋಜಕರು ತಮ್ಮ ಪಂಚೇಂದ್ರಿಯಗಳನ್ನು ತೆರೆದುಕೊಂಡಿದ್ದರೆ ಆ ಸಮ್ಮೇಳನದಲ್ಲಿ ಶೈಕ್ಷಣಿಕ ಸಂಸ್ಥೆಗಳ ಬುರ್ಖಾ ನಿಷೇಧದ ಗಲಾಟೆ, ಲವ್ ಜಿಹಾದ್ ಎಂಬ ಹುಯಿಲು, ಹೋಂ ಸ್ಟೇ ಪ್ರಕರಣ ಮತ್ತದನ್ನು ವರದಿ ಮಾಡಿದ್ದಕ್ಕೆ ಬಂಧಿಸಲ್ಪಟ್ಟ ನವೀನ್ ಸೂರಿಂಜೆ, ಎಸ್‌ಇಝಡ್‌ಗಾಗಿ ಭೂಮಿ ಕಳಕೊಂಡವರು, ವಿಠ್ಠಲ ಮಲೆಕುಡಿಯ ಬಂಧನ, ಮಂಗಳೂರು ವಿಶ್ವವಿದ್ಯಾಲಯದ ಗಾಂಧಿ ಬಂದ ಕೃತಿ ನಿಷೇಧದ ಪ್ರಯತ್ನ, ಮಡೆಸ್ನಾನ ವಿವಾದ -  ಇಂಥ ಎಲ್ಲ ಸಾಮಾಜಿಕ ಬಿಕ್ಕಟ್ಟುಗಳ ಕುರಿತು ಚರ್ಚೆ ನಡೆಯುತ್ತಿತ್ತು. ಸಂಘಟಕರ ನಿಲುವು-ಪ್ರತಿಕ್ರಿಯೆ ಏನೆಂದು ಗೊತ್ತಾಗುತ್ತಿತ್ತು. ಆದರೆ ಬಂಡವಾಳಿಗರಿಗೆ ಕಲೆ, ಸಾಹಿತ್ಯವೆಂದರೆ ಕಾವ್ಯ-ಗಾಯನ-ನರ್ತನವಷ್ಟೇ. ಬಂಡವಾಳವೆಂಬ ಮಾಯೆ ಸ್ಪರ್ಧೆ, ಮೇಲಾಟ, ಉನ್ಮಾದಗಳನ್ನೇ ಮುನ್ನೆಲೆಗೆ ತರುತ್ತದೆ. ಪ್ರತಿಯೊಂದು ಕ್ರಿಯೆ, ಚಿಂತನೆಯಲ್ಲೂ ಸ್ವಹಿತಾಸಕ್ತಿಯನ್ನು ತುರುಕುತ್ತದೆ. ಎಂದೇ ಅಲ್ಲಿ ಸಾಮಾಜಿಕ ಕಾಳಜಿಯನ್ನು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ.

ಬಹುಶಃ ಇವತ್ತಿನ ಲೇಖಕರಿಗಿರುವ ದೊಡ್ಡ ಸವಾಲೆಂದರೆ ವ್ಯವಸ್ಥೆಯ ಇಂಥ ಆಮಿಷಗಳಿಂದ ತಪ್ಪಿಸಿಕೊಳ್ಳುವುದು. ಏಕೆಂದರೆ ಹಿಂದೆಂದಿಗಿಂತ ಹೆಚ್ಚು ಸಂಖ್ಯೆಯ ಪ್ರಶಸ್ತಿ, ಪುರಸ್ಕಾರ ಸಮ್ಮಾನಗಳು ಆಯಕಟ್ಟಿನ ಜಾಗದಲ್ಲಿ ಕಾದು ಕುಳಿತು ಬಂಡೇಳುವ ಮನಸುಗಳನ್ನು ಭ್ರಷ್ಟಗೊಳಿಸಲು ಹೊಂಚುಹಾಕುತ್ತಿವೆ. ಹೌದು, ಇದು ರಾಜಿಯ ಕಾಲ. ನಾವೆಲ್ಲ ಒಂದಲ್ಲ ಒಂದು ಕಾರಣಕ್ಕೆ ರಾಜಿ ಮಾಡಿಕೊಂಡೇ ಬದುಕುತ್ತಿದ್ದೇವೆ. ಸಾಮಾಜಿಕ ಬದುಕು, ಜೀವನ ಶೈಲಿ, ರಾಜಕೀಯದ ನಡೆಗಳು, ಆದ್ಯತೆಗಳು ಎಲ್ಲವೂ ರಾಜಿಯಾಗುವಿಕೆಗೆ ಪೂರಕ ನೆಪಗಳಾಗಿವೆ. ವ್ಯಕ್ತಿತ್ವ, ನಡೆನುಡಿಗಳಲ್ಲಿಯೂ ಅದು ನುಸುಳಿದೆ.

ಆದರೆ ಆಂತರಿಕ ಒತ್ತಡದಿಂದ ಹುಟ್ಟುವ ಸೃಜನಶೀಲ ಕ್ರಿಯೆಯೂ, ಬರಹಗಾರನೂ ರಾಜಿಗೊಳಗಾಗಿ ಅವನ ಒಳದನಿ ಸಮಾಧಿಯಲ್ಲೇ ಹೊರಳಿದರೆ ಜನಪರವಾದದ್ದು ಯಾವುದೂ ಉಳಿಯುವುದಿಲ್ಲ. ಈ ದುರಂತ ತಡೆಯಲು ನಮ್ಮ ನಡೆ, ಬರಹ, ವಿಚಾರಗಳಲ್ಲಿ ಒಳಹೊಕ್ಕ ವಿಕಾರಗಳನ್ನು ನಾವೇ ಗಮನಿಸಿ ಕಿತ್ತುಹಾಕಬೇಕು. ವಿಮರ್ಶೆಯ ಎಚ್ಚರ ಸದಾ ಜಾಗೃತವಾಗಿರಬೇಕು. ಇಲ್ಲವಾದಲ್ಲಿ ತರಳಬಾಳು, ಪೇಜಾವರ, ಸುತ್ತೂರು ಮಠ, ಆರ್ಟ್ ಆಫ್ ಲಿವಿಂಗ್, ಇನ್ಫೋಸಿಸ್-ಟಾಟಾ ಕವಿಗೋಷ್ಠಿಗಳಲ್ಲಿ ಪ್ರತಿಭಟನಾ ಕಾವ್ಯ ವಾಚನ ಮಾಡಲು ಸಾಲಾಗಿ ನಿಂತ ಪ್ರಗತಿಪರ ಕವಿಗಳನ್ನು ನೋಡುವ ದಿನಗಳು ದೂರವಿಲ್ಲ!


(ಡಿಸೆಂಬರ್ ೨೦೧೨)


No comments:

Post a Comment