Monday, 4 August 2014

ದಿಟನಾಗರ ಕಂಡರೆ...







     ಬೆಳಗಾತ ಎದ್ದು, ಬೆಟ್ಟಕ್ಕೆ ಸೊಪ್ಪು ಕಡಿಯಲು ಹೋಗಿದ್ದ ಮಾದೇವ ಕೊನೆಯ ಕಂತು ಸೊಪ್ಪು ಕಡಿದು ಮರದಿಂದ ಕೆಳಗಿಳಿಯುತ್ತಿದ್ದ. ಇನ್ನೇನು ಹೊರೆಕಟ್ಟಿ ಸೊಪ್ಪು ಹೊತ್ತು ಮನೆಗೆ ಹೊರಡುವ ಹೊತ್ತು. ಬಳ್ಳಿ ಎಳೆದು ಗಂಟು ಬಿಗಿ ಮಾಡುತ್ತಾ ಇದ್ದವನ ಕೈಗೆ ಏನೋ ಕಟಂ ಎಂದು ಕುಟ್ಟಿದಾಗಲೇ ಗೊತ್ತಾದದ್ದು ಏನೋ ಕಡಿದಿರಬೇಕು ಎಂದು. ನೋಡಲೆಂದು ಸೊಪ್ಪು ಅತ್ತಿತ್ತ ಸರಿಸುತ್ತಾನೆ, ಎದುರಿಗೆ ಬುಸುಗುಡುತ್ತ ಎದ್ದು ಹೆಡೆಯಾಡಿಸಿತೊಂದು ಕಪ್ಪುಹಾವು! ‘ಅಯ್ಯೋ ಹಿರೇಹಾವು’ ಎಂಬೊಂದು ಉದ್ಗಾರ ಹೊರಟಿತು. ಅಂತಿಂಥ ಹಾವಲ್ಲ ಅದು. ಅದನ್ನು ನೋಡಿದರೇ ಹೆದರಿ ಉಚ್ಚೆ ಹೊಯ್ದುಕೊಳ್ಳಬೇಕು, ಅಂಥಾ ಹತ್ತಡಿ ಉದ್ದದ ಕಾಳಿಂಗ ಸರ್ಪ. ದಟ್ಟ ಮಳೆಕಾಡಿನ ಅತಿ ವಿಷಪೂರಿತ ಹಾವು ಅದು. ಕಡಿದು ರಾಶಿ ಹಾಕಿದ್ದ ಸೊಪ್ಪಿನಲ್ಲಿ ಹೇಗೋ ಸೇರಿ ಹಗ್ಗದ ಬಿಗಿ ತಾಗಿದಾಗ ಅವನನ್ನು ಕಚ್ಚಿತ್ತು. ಅವನಾಗಲೇ ಮನೆಯಿಂದ ಮೂರು ಮೈಲು ದೂರ ಬಂದುಬಿಟ್ಟಿದ್ದ. ಅವನ ಜೊತೆಗೇ ಬೆಟ್ಟಕ್ಕೆ ಸೊಪ್ಪಿಗೆ ಬಂದಿದ್ದ ಗೆಳೆಯನನ್ನು ಒಂದು ‘ಕೂ ಹೊಯ್’ ಕೂಗಿನಲ್ಲಿ ಕರೆದ. ಗೆಳೆಯ ವಿಷಯ ತಿಳಿದು ದಂಗಾಗಿ, ಕತ್ತಿಯಿಂದ ಗಾಯ ದೊಡ್ಡ ಮಾಡಿ, ಹತ್ತಿರವಿದ್ದ ಮರಾಠಿಕೊಪ್ಪವೊಂದಕ್ಕೆ ನುಗ್ಗಿದ. ಅಲ್ಲಿನ ಹಿರಿಯ ತನ್ನ ಕೋಳಿಗೂಡಿನಿಂದ ಕೊಟ್ಟ ಎರಡು ಎಳೇ ಮರಿಯ ಕುಂಡೆಯನ್ನು ಗಾಯದ ಮೇಲೆ ಒತ್ತಿ ಹಿಡಿದ. ಮಾದೇವನಿಗೆ ‘ನಿದ್ದೆಮಾಡಬೇಡ, ಕಣ್ಣು ಮಾತ್ರ ಮುಚ್ಚಬೇಡ’ ಎಂದು ಪದೇಪದೇ ಎಚ್ಚರಿಸುತ್ತಾ, ಹತ್ತಿರವಿದ್ದ ಒಂದು ಲಡಕಾಸಿ ಮೋಟರುಸೈಕಲ್ಲಿನ ಮೇಲೆ ಕೂರಿಸಿಕೊಂಡು ಅವನನ್ನು ಆಸ್ಪತ್ರೆಗೆ ಕರೆತಂದ. ಇಷ್ಟೆಲ್ಲ ಆಗಿ ಅವರು ಆಸ್ಪತ್ರೆಗೆ ಬಂದಾಗ ಗಂಟೆ ಇನ್ನೂ ಬೆಳಗಿನ ಏಳು!

   ನಾನು ನೋಡುವ ಹೊತ್ತಿಗಾಗಲೇ, ಮುಚ್ಚಬೇಡ ಎಂದು ಹೇಳುತ್ತಿದ್ದರೂ ಅವನ ಕಣ್ಣು ಎಳೆದೆಳೆದು ಹೋಗುತ್ತಿತ್ತು. ಮೈಯೆಲ್ಲ ನೀಲಿಗಟ್ಟಿ ಮೇಲುಶ್ವಾಸ ಬಿಡುತ್ತಿದ್ದ. ಬಾಯಲ್ಲಿ ಬುರುಬುರು ನೊರೆ ಹೊರಬರಲು ಹವಣಿಸುತ್ತಿತ್ತು. ಮೈ ತಣ್ಣಗಾಗುತ್ತಾ ಸಾಗಿತ್ತು. ಹಾವು ಕಚ್ಚಿದ ಕೈಗೆ ಎಂಥ ಬಿಗಿ ಕಟ್ಟು ಹಾಕಿದ್ದರೆಂದರೆ ಕೈ ಸೆಟಗೊಂಡು ಹೋಗಿತ್ತು. ನಾನು ಕೇಳಿದ ಯಾವ ಪ್ರಶ್ನೆಗೂ ಅವನು ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಅವನನ್ನು ನೋಡಿ ಸರಸರ ಎಎಸ್‌ವಿ ಹಾಕಲು ತಯಾರಿ ಮಾಡಿದೆವು. ಆಂಬುಲೆನ್ಸ್ ಬರುವುದರಲ್ಲಿ ನಮ್ಮ ಬಳಿ ಇದ್ದ ಎಎಸ್‌ವಿ ಸ್ಟಾಕ್ ತೀರಿತು. ಪಟ್ಟಣ ಮುಟ್ಟುವುದರೊಳಗೆ ಅವನು ಪೂರ್ತಿ ನೀಲಿಯಾಗಿ ತಣ್ಣಗಾಗಿಬಿಟ್ಟ. ಇನ್ನೂ ಮದುವೆಯಾಗದ ಕಟ್ಟುಮಸ್ತಾದ ಮಾದೇವನ ಇಂತಹ ಸಾವು ಹಲವಾರು ದಿನ ಎಲ್ಲರ ಬಾಯ ವಿಷಾದವಾಗಿ ಸುಳಿದಾಡಿ, ನಾಗನಿಗೆ ಏನೋ ಕೋಪ ಬಂದಿದೆ ಎಂದು ಶಮನಗೊಳಿಸುವ ಹಲವು ವಿಧಿವಿಧಾನಗಳು ನಡೆದವು.

***

       ಜನತಾ ಮನೆಯ ಶಿವಮ್ಮ ತಾಯಿತಂದೆಯರಿಲ್ಲದ, ಅಜ್ಜಿಯ ಮನೆಯಲ್ಲಿ ಬೆಳೆಯುತ್ತಿದ್ದ ಏಳನೇ ತರಗತಿಯ ಹುಡುಗಿ. ಮಾವನ ಹೆಂಡತಿಯ ಕಟಿಪಿಟಿ ತಡೆಯಲಾರದೇ ಅಂದು ಶಾಲೆ ಮುಗಿಸಿ ಮನೆಗೆ ಬಂದವಳು ಒಂದು ಕಲ್ಲಿ ದರಕು(ಒಣ ಎಲೆ) ಗುಡಿಸಿ ತರಲು ಗೇರು ಹಾಡಿಗೆ ಹೋದಳು. ಏನೋ ಕಚ್ಚಿದಂತಾಯಿತು. ಆದರೂ ಬೇಗಬೇಗ ಕೆಲಸ ಮುಗಿಸಿ ಪರೀಕ್ಷೆಗಾಗಿ ಓದಿಕೊಳ್ಳುವ ಆತುರದಲ್ಲಿ, ಕಚ್ಚಿದ್ದು ಏನೆಂದು ಸರಿಯಾಗಿ ನೋಡದೇ ದರಕು ಗುಡಿಸಿ ತಂದು ಒಟ್ಟಿದಳು. ಕೈ ಬಾತು ನೋವು ಏರುತ್ತಲೇ ಹೋಯಿತು. ಅತ್ತೆಯ ಬಳಿ ಹೇಳಲು ಮನಸ್ಸಿಲ್ಲ. ಅಜ್ಜಿ ಒಡೆಯರ ಮನೆಯ ಕೆಲಸ ಮುಗಿಸಿ ಬರುವ ಹೊತ್ತಿಗೆ ಕೈಯೆಲ್ಲ ಬಾತು ನೋವು ತಡೆಯಲಾಗದೇ ಮುಚ್ಚಿ ಹಾಕಿಕೊಂಡು ಮಲಗಿಬಿಟ್ಟಿದ್ದಳು. ಮೊಮ್ಮಗಳಿಗೆ ಏನೋ ಕಚ್ಚಿದ ವಿಷಯ ತಿಳಿದಿದ್ದೇ ಹೌಹಾರಿದ ಅಜ್ಜಿ, ಶಿವಮ್ಮನ ಕೂಗಾಟವನ್ನೂ ಲೆಕ್ಕಿಸದೇ ಕಚ್ಚಿದ ಗಾಯವನ್ನು ಕೊಯ್ದು ದೊಡ್ಡ ಮಾಡಿದಳು. ತಾಸೆರೆಡು ತಾಸು ಕಳೆಯುವುದರಲ್ಲಿ ಆ ದೊಡ್ಡ ಗಾಯದಿಂದ ಒಂದೇ ಸಮ ರಕ್ತ ಸೋರತೊಡಗಿತು. ಗಾಬರಿ ಬಿದ್ದು ಆಗ ಆಸ್ಪತ್ರೆಗೆ ಕರೆತಂದಳು.

      ಅಂಥ ನೋವಿನಲ್ಲೂ ಮೌನವಾಗಿ ಕಣ್ಣೀರು ಸುರಿಸುತ್ತಿದ್ದ ಶಿವಮ್ಮನ ಕೈ ಪೂರಿಯಂತೆ ಉಬ್ಬಿತ್ತು. ಕಚ್ಚಿದ ಗಾಯದಿಂದ ರಕ್ತ ಒಸರುತ್ತಿತ್ತು. ಅನುಮಾನವಾಗಿ ಹಲ್ಲು ತೋರಿಸು ಎಂದರೆ ವಸಡಿನ ಸಂದುಗಳಿಂದ ಕಂಡೂಕಾಣದಂತೆ ಹೊರಬರುತ್ತಿರುವ ರಕ್ತ. ಅವಳಿಗೆ ಧೂಳುಹಪ್ಪಡಿ ಎಂದು ಕರೆಯಲಾಗುವ ಒಂದು - ಒಂದೂವರೆ ಅಡಿ ಉದ್ದದ ಹಾವು ಕಚ್ಚಿದ್ದಿರಬೇಕು. ಕಚ್ಚಿದ ಸಣ್ಣ ಗಾಯದಿಂದಲ್ಲದೆ ವಸಡು, ಮೂತ್ರದಲ್ಲಿ, ಮೂಗು, ಗಂಟಲಿನಿಂದೆಲ್ಲ ರಕ್ತ ಒಸರಲು ಪ್ರಾರಂಭವಾಗಿತ್ತು. ಆ ಹಾವಿನ ವಿಷಕ್ಕೆ ರಕ್ತ ಹೆಪ್ಪುಗಟ್ಟುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಚಿಕಿತ್ಸೆಯಿಲ್ಲದೇ ಹಾಗೇ ಬಿಟ್ಟರೆ ಆಂತರಿಕ ರಕ್ತಸ್ರಾವವಾಗೇ ಸಾವನ್ನಪ್ಪುವ ಸಾಧ್ಯತೆಯಿರುತ್ತದೆ.

      ಅವಳನ್ನು ಕೂಡಲೇ ಅಡ್ಮಿಟ್ ಮಾಡಿದೆವು. ಆ ಪುಟ್ಟ ಹುಡುಗಿಯ ಕೈಬೆರಳನ್ನು ಆ ಹಾವು ಅದೇನೆಂದು ತಿಳಿದು ಕಚ್ಚಿತೋ, ಅದೆಷ್ಟು ವಿಷ ಒಳ ಹಾಕಿತ್ತೋ?! ರಾತ್ರಿ ಕಳೆದು ಬೆಳಗಾಗುವುದರೊಳಗೆ ಒಂಭತ್ತು ವಯಲ್ ಎಎಸ್‌ವಿ ಇಂಜೆಕ್ಷನ್ ಕೊಡುವಂತಾಯಿತು. ಒಂದು ಇಂಜೆಕ್ಷನ್‌ಗೆ ಆರುನೂರು ರೂಗಳು. ಜೊತೆಗೆ ನೋವಿಗೆ, ರಿಯಾಕ್ಷನ್ ಆಗದ ಹಾಗೆ, ನಂಜು ಆಗದ ಹಾಗೆ ಆಂಟಿಬಯಾಟಿಕ್ ಹಾಗೂ ಬೇರೆಬೇರೆ ಔಷಧಗಳು. ಅವಳ ಅಜ್ಜಿ ವರ್ಷವಿಡೀ ದರಕು ಹೊತ್ತರೂ ದುಡಿಯಲಾಗದಷ್ಟು ಸಾವಿರಾರು ರೂಗಳ ಬಿಲ್ ಒಂದು ರಾತ್ರಿ ಕಳೆದು ಬೆಳಗಾಗುವುದರಲ್ಲಿ ಆಯಿತು! ಬಿಲ್ ಬಂತೋ ಇಲ್ಲವೋ, ತಾಯ್ತಂದೆಯರಿಲ್ಲದ ಹುಡುಗಿಯ ಜೀವ ಉಳಿಸಿದ ತೃಪ್ತಿ ನಮ್ಮದು. ಅಂತೂ ಅಂದು ಆ ವಿಪತ್ತಿನಿಂದ ಪಾರಾದ ಅವಳೀಗ ಮಂಡಲ ಕೇಂದ್ರ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಾ ನೆಮ್ಮದಿಯಾಗಿ ಅಜ್ಜಿಯ ಜೊತೆಗಿದ್ದಾಳೆ.

***

   ಹಾವು ಕಚ್ಚಿದವರಿಗೆಲ್ಲ ವಿಷವೇರುವುದಿಲ್ಲ, ಹಾವು ಕಚ್ಚಿದವರಿಗೆಲ್ಲ ಸಾವು ಬರುವುದಿಲ್ಲ. ಆದರೆ ಹಾವಿನ ಬಗೆಗಿನ ತಿಳುವಳಿಕೆಗಿಂತ ಭಯಭೀತಿಯೇ ಹೆಚ್ಚಿರುವ ನಮಗೆ, ಹಾವು ಕಚ್ಚಿದರೆ ವಿಷದ ಆಘಾತಕ್ಕಿಂತ ಹತ್ತುಪಟ್ಟು ಭಯದ ಆಘಾತವಾಗುತ್ತದೆ. ಹಾವು ಎಂಬ ಪದವೇ ಬಹಳ ಜನರಲ್ಲಿ ಭಯ ಹುಟ್ಟಿಸುತ್ತದೆ. ಕೈಕಾಲು, ಕಿವಿ, ಕಿವಿತಮಟೆ, ಕಣ್ಣರೆಪ್ಪೆ ಇಲ್ಲದ, ವರ್ಷಕ್ಕೆ ಎರಡು ಮೂರು ಬಾರಿ ಗುಪ್ತಜಾಗಕ್ಕೆ ಹೋಗಿ ಪೊರೆ ಕಳಚುವ ಹಾವಿನ ವಿಲಕ್ಷಣ ಗುಣಗಳು; ವಿಷದ ಹಾವಿನ ಕಡಿತಕ್ಕೆ ಬಂದೆರಗುವ ತತ್‌ಕ್ಷಣದ ಸಾವು; ಸಾವು ತರುವುದರಿಂದಲೇ ಹುಟ್ಟಿಕೊಂಡಿರಬಹುದಾದ ಹಾವಿನ ಮೇಲಿನ ಭಕ್ತಿ, ಸೇಡಿನ ಕತೆಗಳು, ಶಕ್ತಿಯ ಬಗೆಗಿನ ಪುರಾಣಕತೆಗಳು - ಇವೆಲ್ಲ ಸೇರಿ ಹಾವು ಬಹುಪಾಲು ಜನರಿಗೆ ಬರೀ ಪ್ರಾಣಿಯಾಗಿ ಕಾಣದೇ ಅಲೌಕಿಕ ಭಯಹುಟ್ಟಿಸುವ ದೇವರಾಗಿ ತೋರುತ್ತದೆ. ರೆಪ್ಪೆಯಿಲ್ಲದ್ದಕ್ಕೆ ಹಾವು ಬಿರುನೋಟವುಳ್ಳ ಶೀಘ್ರಕೋಪಿಯಾಗಿ ಕಾಣುತ್ತದೆ. ಕಿವುಡು ಹಾವು ಪುಂಗಿಯ ಚಲನೆಗೆ ಅನುಗುಣವಾಗಿ ಹೆಡೆಯಾಡಿಸುವುದನ್ನು ನರ್ತನವೆಂದು ಭಾವಿಸುತ್ತೇವೆ.

   ಶಕ್ತಿ, ಯುಕ್ತಿ ಎರಡೂ ಅಷ್ಟಿಲ್ಲದ ಹಾವು ತನ್ನ ಅಸ್ತಿತ್ವಕ್ಕಾಗಿನ ಹೋರಾಟದಲ್ಲಿ ಎದುರಾಳಿಯೆದುರು ರಾಸಾಯನಿಕ ಸಮರ ನಡೆಸಲು ವಿಷವನ್ನು ಸ್ರವಿಸುತ್ತದೆ. ಇದರ ಸಲುವಾಗಿ ವಿಶೇಷ ಗ್ರಂಥಿಗಳನ್ನೂ ಹೊಂದಿದೆ. ಸಾಧಾರಣವಾಗಿ ವಿಷಗ್ರಂಥಿಗಳಿರುವ ಜೀವಿಗಳು ಕ್ರೂರವಾಗಿ ವರ್ತಿಸುವುದಿಲ್ಲ. ದ್ವೇಷ - ರೋಷದ ಕತೆಗಳೆಲ್ಲ ಕಟ್ಟುಕತೆಗಳೆನ್ನದೇ ವಿಧಿಯಿಲ್ಲ. ಅವು ತಮ್ಮ ಆತ್ಮರಕ್ಷಣೆಗಾಗಿ ಹಾಗೂ ಕೆಲವು ಬಾರಿ ಆಹಾರಕ್ಕಾಗಿ ಮಾತ್ರ ವಿಷವನ್ನು ಬಳಸುತ್ತವೆ.

    ಮಳೆಗಾಲದಲ್ಲಿ ಕೃಷಿ ಸಂಬಂಧಿ ಕೆಲಸ ಮಾಡುವಾಗ ಹಾವಿನ ಕಡಿತಕ್ಕೆ ಒಳಗಾಗಿ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚು. ಬಹುಪಾಲು ಹಳ್ಳಿಯ ಜನ ಏನೇ ಕಚ್ಚಲಿ, ಕಚ್ಚಿದ ಪ್ರಾಣಿಯನ್ನು ಹುಡುಕಿ ಕೊಂದು, ಒಂದು ಪ್ಲಾಸ್ಟಿಕ್ ಚೀಲಕ್ಕೆ ಹಾಕಿ ತರುವುದರಿಂದ ತರಹೇವಾರಿ ಹಾವುಹರಣೆಗಳು, ಜೇಡಗಳು, ಹುಳುಕೀಟಗಳನ್ನು ನೋಡಲು ನಮಗೆ ಸಾಧ್ಯವಾಗಿದೆ. ಆದರೆ ನಾಗರ ಹಾವು ಕಚ್ಚಿದರೆ ಹೊಡೆಯುವ ಮಾತು ಹಾಗಿರಲಿ, ಅದರ ಹೆಸರನ್ನು ಗಟ್ಟಿಯಾಗಿ ಬಾಯಲ್ಲಿ ಹೇಳುವುದೂ ಇಲ್ಲ! ಅದಕ್ಕೆ ಹಿರೇಹಾವು ಎಂಬ ಹೆಸರು. ಅದು ಕಣ್ಣಿಗೆ ಕಂಡರೆ ಸಾಕು, ಮರೆತ ಪೂಜೆ ನೆನಪು ಮಾಡಲೇ ಕಾಣಿಸಿಕೊಂಡಿದೆ ಎಂದು ಭಾವಿಸಿ, ಸುಬ್ರಹ್ಮಣ್ಯ ದೇವರಿಗೆ ಒಂದು ಹರಕೆ ಹೊತ್ತು ಬಾಳೆಗೊನೆ ಕೊಟ್ಟು, ಕಾಪಾಡಪ್ಪಾ ಅಂತ ಅಡ್ಡಬಿದ್ದು, ಭಯಭಕ್ತಿ ಪ್ರದರ್ಶಿಸುತ್ತಾರೆ. ಪ್ರತಿ ಮನೆಯಲ್ಲೂ ಒಬ್ಬನಾದರೂ ಹಿರೇಹಾವಿನ ಹೆಸರು ಹೊತ್ತವ ಇರಲೇಬೇಕು. ಅಪರೂಪಕ್ಕೆ ಎಲ್ಲಾದರೂ ಸತ್ತುಬಿದ್ದ ನಾಗರ ಹಾವು ಕಂಡರಂತೂ ನಾಮುಂದು ತಾಮುಂದು ಎಂದು ಓಡಿಹೋಗಿ ತಂದು, ಶಾಸ್ತ್ರೋಕ್ತ ಶವಸಂಸ್ಕಾರ ಮಾಡುತ್ತಾರೆ. ಹಾವಿಗಿರುವ ಭಾಗ್ಯ ಎಷ್ಟೋ ಮನುಷ್ಯರಿಗಿಲ್ಲದಿರುವ ಕಾಲದಲ್ಲಿ, ಮಣ್ಣಿನಲ್ಲಿ ಹಾವಿನ ಮೂರ್ತಿ ಮಾಡಿ, ಶವಸಂಸ್ಕಾರ ಮಾಡಿ, ಪುತ್ರಸಂತಾನಕ್ಕಾಗಿ ಪ್ರಾರ್ಥಿಸುತ್ತಾರೆ.

     ನಮ್ಮ ದೇಶದಲ್ಲಿ ಕೇವಲ ನಾಲ್ಕು ಜಾತಿಯ ಹಾವುಗಳು ಮಾತ್ರ ವಿಷಪೂರಿತವಾದವು. ನಾಗರ ಜಾತಿಯ ಹಾವುಗಳು(ನಾಗರ ಹಾವು ಹಾಗೂ ಕಾಳಿಂಗ ಸರ್ಪ), ಹಾಗೂ ಮಂಡಲ ಜಾತಿಯ ಹಾವುಗಳು(ವೈಪರ್ ಹಾಗೂ ಕ್ರೇಟ್ - ಧೂಳು ಹಪ್ಪಡಿ, ಕಂಚಪ್ಪಡಿ, ಬಳಗಂಡ, ಕೊಳಕು ಮಂಡಲ  ಇತ್ಯಾದಿ). ಉಳಿದ ಕೇರೆಹಾವು, ಹಸಿರುಹಾವು, ಎಲೆಹಾವು, ಕುಂಕುಮ ಹಾವು, ಹೆಬ್ಬಾವು, ಕುದ್ರಬಾಳ ಮತ್ತಿತರೆ ಹಾವುಗಳು ವಿಷಕಾರಕವಲ್ಲ. ಕೆಲವು ಹಾವುಗಳ ಮೇಲೆ ವಿಷಯುಕ್ತ ಗುಣವನ್ನು ಆರೋಪಿಸಲಾಗಿದೆ. ಮತ್ತೆ ಕೆಲವು ಹಾವುಗಳನ್ನು ಅವು ಕೋಳಿ ಹಿಡಿಯುತ್ತವೆಂದೋ, ಬೆಳೆಗಳ ಮೇಲೆ ವಿಷ ಉಗಿಯುತ್ತವೆಂದೋ ಆರೋಪಿಸಿ ಕೊಲ್ಲಲಾಗುತ್ತದೆ. ಹಾವನ್ನು ಕೊಂದರೆ ಸಾವನ್ನೇ ಕೊಂದು ಅಟ್ಟಿದ ತೃಪ್ತಿ ಕೆಲವರಿಗೆ!


 


ವಿಷದ ಹಾವಿಗೆ ದೇಹದ ಕೆಳಭಾಗದಲ್ಲಿ ದೊಡ್ಡ ಹುರುಪೆಗಳಿದ್ದು ಎರಡೇ ವಿಷದ ಹಲ್ಲುಗಳಿರುತ್ತವೆ. ಹಾವು ಕಚ್ಚಿದಾಗ ವಿಷವು ಸೆಕೆಂಡಿಗೆ ಮೂರು ಮೀಟರ್ ವೇಗದಲ್ಲಿ ಹರಡಬಲ್ಲದು. ಬಹುತೇಕ ಕಡಲ ಹಾವುಗಳು ವಿಷಕಾರಕ ಹಾಗೂ ನೆಲದ ಹಾವುಗಳಿಗಿಂತ ತೀಕ್ಷ್ಣ ವಿಷ ಹೊಂದಿರುತ್ತವೆ. ನೆಲದ ಹಾವುಗಳಲ್ಲಿ ನಾಗರಜಾತಿಯ ವಿಷ ಪ್ರಬಲವಾಗಿದ್ದು ಕೂಡಲೇ ಪರಿಣಾಮ ತೋರಿಸುತ್ತದೆ. ಅದು ನರಮಂಡಲ ಹಾಗೂ ಮಾಂಸಖಂಡಗಳ ಮೇಲೆ ಪರಿಣಾಮ ಬೀರಿ ನಿಶ್ಚೇಷ್ಟಿತಗೊಳಿಸುತ್ತದೆ.  ಮಾತು ತಡವರಿಸುತ್ತಾ, ಕೈಕಾಲು ಶಕ್ತಿಹೀನವಾಗಿ, ತಲೆ ಒಂದು ಬದಿಗೆ ಜೋತುಬೀಳುವುದು. ವಾಕರಿಕೆಯಾಗಿ ವಾಂತಿಯಾಗುವುದು. ಉಸಿರಾಟ ಕಷ್ಟವಾಗಿ ಕೊನೆಗೆ ನಿಂತೇ ಹೋಗುತ್ತದೆ.

   ಮಂಡಲ ಹಾವುಗಳದ್ದು ನಿಧಾನ ವಿಷ ಎನ್ನಬಹುದು. ಕೆಲವು ಬಾರಿ ಇಪ್ಪತ್ನಾಲ್ಕು ಗಂಟೆಗಳ ತರುವಾಯ ಅದರ ವಿಷ ಪರಿಣಾಮ ತೋರುತ್ತದೆ. ರಕ್ತದ ಹೆಪ್ಪುಗಟ್ಟುವ ಸಾಮರ್ಥ್ಯ ಕುಗ್ಗಿಸುವುದು ಈ ವಿಷದ ಗುಣ. ಕಚ್ಚಿದ ಜಾಗ ವಿಪರೀತ ಬಾತು ತೀವ್ರ ನೋವುಂಟುಮಾಡುತ್ತದೆ. ವಿಷ ಹೆಚ್ಚು ಪ್ರಮಾಣದಲ್ಲಿ ದೇಹದ ಒಳಸೇರಿದ್ದರೆ ಕಚ್ಚಿದ ಗಾಯದಿಂದ, ಇಂಜೆಕ್ಷನ್ ಚುಚ್ಚಿದ ಜಾಗದಿಂದ, ಒಸಡಿನಿಂದ, ಹಳೆಯ ಗಾಯಗಳಿಂದ, ಗಂಟಲಿನಿಂದ, ಮೂತ್ರದಲ್ಲಿ ರಕ್ತ ಒಸರಲು ಶುರುವಾಗುತ್ತದೆ. ಕಣ್ಣು ಮಂಜಾಗುತ್ತಾ ರೋಗಿ ಬಿಳಿಚಿಕೊಳ್ಳುತ್ತಾ ಹೋಗುತ್ತಾನೆ. ಸರಿಯಾದ ಚಿಕಿತ್ಸೆ ಲಭಿಸದೇ ಹೋದರೆ ಬಹು ಅಂಗಾಂಗಗಳ - ಅದರಲ್ಲೂ ಕಿಡ್ನಿಯ - ವೈಫಲ್ಯಕ್ಕೊಳಗಾಗಿ ಸಾವನ್ನಪ್ಪುತ್ತಾನೆ. ಕೆಲವು ಬಾರಿ ಕಚ್ಚಿದ ಜಾಗದಲ್ಲಿ ವಿಷ ಹಾಗೇ ಉಳಿದು ವಾರಗಳ ನಂತರ ಆ ಭಾಗ ಕೊಳೆಯಲು ಶುರುವಾಗಬಹುದು. ಕೊಳೆತ ಭಾಗವನ್ನು ಕತ್ತರಿಸುವುದು ಅನಿವಾರ್ಯವಾಗಲೂಬಹುದು.

    ಹಾವು ಕಚ್ಚಿದ ನಂತರ ಎಷ್ಟು ಪ್ರಮಾಣದ ವಿಷ ದೇಹದೊಳಗೆ ಸೇರಿದೆ ಎಂಬುದರ ಮೇಲೆ ಪರಿಣಾಮಗಳು ಉಂಟಾಗುತ್ತವೆ. ಆದರೆ ದೇಹ ಹೊಕ್ಕ ವಿಷದ ಪರಿಮಾಣ ಆ ಹಾವಿಗೆ ಮಾತ್ರ ಗೊತ್ತಿರುವುದರಿಂದ, ಲಕ್ಷಣಗಳ ತೀವ್ರತೆಯ ಮೇಲೇ ಚಿಕಿತ್ಸೆಯನ್ನು ನಿರ್ಧರಿಸಬೇಕಾಗುತ್ತದೆ. ಮನುಷ್ಯನಿಗೆ ಕಚ್ಚುವ ಮೊದಲು ಯಾವ ಬೇಟೆಯೂ ಸಿಕ್ಕದೇ ಹಾವಿನಲ್ಲಿ ವಿಷದ ಸಂಗ್ರಹ ಬಹಳವಿದ್ದರೆ ಕಡಿತದಿಂದ ತೀವ್ರತರ ಪರಿಣಾಮಗಳಾಗಬಹುದು. ಬೇಟೆಯಾಡಿದ ಕೂಡಲೇ ಕಚ್ಚಿದ್ದರೆ, ಅದರ ವಿಷವೆಲ್ಲ ಖಾಲಿಯಾಗಿರುತ್ತದಾಗಿ ಹೆಚ್ಚೇನೂ ತೊಂದರೆಯಾಗದೆಯೂ ಇರಬಹುದು. ಈ ಅನಿಶ್ಚಿತತೆಯೇ ಹಲವು ಚಿಕಿತ್ಸೆಗಳನ್ನು, ಹರಕೆಗಳನ್ನು, ಪದ್ಧತಿಗಳನ್ನು ಹುಟ್ಟುಹಾಕಿದೆಯೆಂದರೆ ತಪ್ಪಲ್ಲ.

    ವೈದ್ಯಕೀಯವಾಗಿ ಹಾವು ಕಚ್ಚಿದವರಿಗೆ ಎಎಸ್‌ವಿ(ಆಂಟಿ ಸ್ನೇಕ್ ವೆನಮ್) ಇಂಜೆಕ್ಷನ್ ನೀಡಲಾಗುತ್ತದೆ. ನಮ್ಮಲ್ಲಿ ಸಾವಿಗೆ ಕಾರಣವಾಗುವ ಕೆಲಜಾತಿ ಹಾವುಗಳ ವಿಷ ಹೊರತೆಗೆದು, ಅದನ್ನು ಕುದುರೆಗೆ ಸ್ವಲ್ಪಸ್ವಲ್ಪವೇ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ. ಕುದುರೆಯು ಸಾಯಬಾರದಷ್ಟು ಕಡಿಮೆ, ಆದರೆ ಆಂಟಿಬಾಡಿ ತಯಾರಿಸಲು ಅಗತ್ಯವಾದಷ್ಟು ಪ್ರಮಾಣದಲ್ಲಿ ವಿಷವನ್ನು ನೀಡಲಾಗಿರುತ್ತದೆ.  ಕುದುರೆಯ ರಕ್ತದಲ್ಲಿ ಹಾವಿನ ವಿಷವೆಂಬ ಆಂಟಿಜೆನ್‌ಗಳಿಗೆ ಪ್ರತಿಯಾಗಿ ಆಂಟಿಬಾಡಿ(ನಿರೋಧಕ ಕಣ)ಗಳು ಉತ್ಪತ್ತಿಯಾಗುತ್ತದೆ. ನಂತರ ಕುದುರೆಯ ರಕ್ತ ತೆಗೆದು, ಅದರಲ್ಲಿರುವ ಬೇರೆಯ ಅಂಶಗಳನ್ನೆಲ್ಲ (ಕೆಂಪುರಕ್ತಕಣ, ಬಿಳಿಯರಕ್ತಕಣ, ಪ್ಲೇಟ್‌ಲೆಟ್ ಇತ್ಯಾದಿ) ಬೇರ್ಪಡಿಸಿ, ಉಳಿದ ದ್ರವವನ್ನು ಶುಚಿಗೊಳಿಸಿ, ಘನೀಕರಿಸಿ, ಪೌಡರ್ ರೂಪದಲ್ಲಿ ಇಡಲಾಗುತ್ತದೆ. ಹೀಗೆ ತುಂಬಿಡಲಾದ ಘನೀಕರಿಸಿದ ಪೌಡರ್‌ನ್ನು ದ್ರವವನ್ನಾಗಿಸಿ ಇಂಜೆಕ್ಷನ್ ರೂಪದಲ್ಲಿ ಅಗತ್ಯವಿದ್ದವರಿಗೆ ನೀಡಲಾಗುತ್ತದೆ. ಒಂದು ಎಎಸ್‌ವಿ ತಯಾರಾಗಲು ಕುದುರೆ ಎಷ್ಟು ರಕ್ತದಾನ ಮಾಡಬೇಕೋ! ಹೀಗೇ ರಕ್ತ ಕೊಟ್ಟುಕೊಟ್ಟೇ ಕೊನೆಗೆ ಕುದುರೆ ಪ್ರಾಣವನ್ನೂ ಕೊಡುತ್ತದೆ.

   ಪ್ರಾಣಿದಯಾ ಸಂಘದವರು ಇದರ ಬಗ್ಗೆ ತಕರಾರೆತ್ತಿ ಕೋರ್ಟಿನಲ್ಲಿ ಮೊಕದ್ದಮೆ ಹಾಕಿದ್ದರ ಕಾರಣ, ಹಲವು ದಿನ ಎಎಸ್‌ವಿಯ ಪೂರೈಕೆ ನಿಂತು ಅದು ಬಹು ತುಟ್ಟಿಯಾಗಿತ್ತು. ಬೇರೆಬೇರೆ ವಿಧಾನದಲ್ಲಿ (ಬಯೋಟೆಕ್ನಾಲಜಿ) ಎಎಸ್‌ವಿ ತಯಾರಾಗುತ್ತಿರುವ ಈ ಕಾಲದಲ್ಲೂ ಅದರ ಬೆಲೆ ಏನೂ ಕಮ್ಮಿಯಾಗಿಲ್ಲ. ಒಂದು ಇಂಜೆಕ್ಷನ್ ವಯಲಿಗೆ ರೂ.೫೫೦ರ ಮೇಲೆಯೇ! ಸರಕಾರೀ ಆಸ್ಪತ್ರೆಗಳಲ್ಲಿಯೂ ಇತ್ತೀಚೆಗೆ ಈ ಇಂಜೆಕ್ಷನ್ ದಾಸ್ತಾನು ಉತ್ತಮವಾಗಿದೆಯೆಂಬುದೇ ಸಮಾಧಾನದ ಸಂಗತಿ.

    ನೆನಪಿಡಿ:

   ೧. ಹಾವು ಕಚ್ಚಿತೆಂದು ಗಾಬರಿಯಾಗಬೇಡಿ ಎಷ್ಟೋ ಬಾರಿ ಗಾಬರಿಯಿಂದಲೇ ರೋಗಿ ಸಾವನ್ನಪ್ಪಿರುತ್ತಾನೆ! ಆತಂಕವು ವಿಷ ಹರಡಲು ಸಹಾಯ ಮಾಡುತ್ತದೆ. ಹಾವು ಕಚ್ಚಿತೆನ್ನುವುದೇನೂ ಸಂಭ್ರಮಾಚರಣೆಯ ವಿಷಯವಲ್ಲ ಹೌದು, ಆದರೂ ಕಳವಳಗೊಳ್ಳದೇ ಮುಂದೇನು ಮಾಡಬೇಕೆಂಬ ಬಗ್ಗೆ ಕ್ಷಿಪ್ರವಾಗಿ ಚಿಂತಿಸಿ.

   ೨. ಕಚ್ಚಿದ ಭಾಗವನ್ನು ಅಲ್ಲಾಡದ ಹಾಗೆ ಇಟ್ಟುಕೊಳ್ಳಿ. ಕಾಲಿಗೆ ಕಚ್ಚಿದ್ದರೆ ವೇಗವಾಗಿ ಓಡುವುದು ಅಥವಾ ಜಾಸ್ತಿ ನಡೆಯುವುದು ಬೇಡ.

   ೩. ಕಚ್ಚಿದ ಭಾಗವನ್ನು ಕೊಯ್ದು ಮತ್ತೂ ದೊಡ್ಡ ಮಾಡುವುದು, ರಕ್ತ ಹೀರುವುದು, ತೀರ ಬಲವಾಗಿ ಕಟ್ಟು ಹಾಕುವುದು, ಐಸ್ ಇಡುವುದು - ಇದ್ಯಾವುದೂ ಮಾಡದಿರಿ. ಪ್ರಥಮ ಚಿಕಿತ್ಸೆ ಕೆಲಬಾರಿ ಅವಿವೇಕದ ಕ್ರಿಯೆಯಾಗಿ ಆತ್ಮಹತ್ಯಾತ್ಮಕವಾಗಿ ಮಾರ್ಪಡುತ್ತದೆ.

   ೪. ಕೂಡಲೇ ಸಮೀಪವಿರುವ ವೈದ್ಯರನ್ನು ಸಂಪರ್ಕಿಸಿ.

No comments:

Post a Comment