Wednesday, 30 July 2014

ಸೈಬರ್ ರೇಪ್ ಮಟ್ಟಹಾಕಿ..



ಮೊನ್ನೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ದಶಕಗಳಿಂದ ಜನಪರ, ಮಹಿಳಾಪರ ಹೋರಾಟಗಳಲ್ಲಿ ಕ್ರಿಯಾಶೀಲರಾಗಿರುವ ಎನ್ ಪ್ರಭಾ ಒಂದು ಸ್ಟೇಟಸ್ ಹಾಕಿದ್ದರು. ಹಲವು ಜನರ ಸಂಶೋಧನೆ-ಪ್ರಯತ್ನದ ಫಲವಾಗಿ ಉಪಗ್ರಹ, ರಾಕೆಟ್, ಮಂಗಲಯಾನ, ಚಂದ್ರಯಾನಗಳಂತಹ ವೈಜ್ಞಾನಿಕ ಆವಿಷ್ಕಾರಗಳಾಗಿರುವ ಕಾಲದಲ್ಲಿ ಮಂತ್ರತಂತ್ರಹೋಮಹವನ ಎಂದು ಪುರೋಹಿತಶಾಹಿಗಳು ಹಳ್ಳಿಯಿಂದ ದಿಲ್ಲಿ ದರಬಾರಿನವರೆಗೂ ಹರಡಿಕೊಂಡಿರುವುದು ಆಧುನಿಕ ಸಮಾಜದ ದುರಂತ ಎಂದು ಬಣ್ಣಿಸಿದ್ದರು. ಈ ಟೀಕೆಯಿಂದ ಕೆರಳಿದ ವಿ. ಆರ್. ಭಟ್ ಎಂಬ ವ್ಯಕ್ತಿ ಕೂಡಲೇ ‘ಎದೆಗೆ ಬಿದ್ದ ಅಕ್ಷರಗಳನ್ನು ಹೇಳಿದ ಓರಾಟಗಾರ್ತಿ’ಗೆ ಯಾರಾದರೂ ಒಬ್ಬ ರೇಪಿಸ್ಟ್ ಜುಟ್ಟು ಹಿಡಿದು ರೇಪ್ ಮಾಡಬೇಕೆಂದು ಅಪ್ಪಣೆ ಕೊಡಿಸಿದ!

ಗಮನಿಸಿ, ಯಾರೋ ಅನಾಮಧೇಯ ಹೀಗೆ ಬರೆಯಲಿಲ್ಲ. ಓದಿ ನೌಕರಸ್ಥನಾಗಿ ಮಧ್ಯವಯಸ್ಸು ದಾಟುತ್ತಿರುವ ಒಬ್ಬ ಸುಶಿಕ್ಷಿತ ವ್ಯಕ್ತಿ ಎಲ್ಲರೂ ಓದಲೆಂದು ಬಹಿರಂಗವಾಗಿ ಹೀಗೆ ಕಮೆಂಟಿಸಿದ್ದ. ಆತನನ್ನು ಬೆಂಬಲಿಸಿ ಹಲವರು ಮತ್ತಷ್ಟು ಬರೆದರು.

ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡ ಮಹಿಳೆ ನೇರವಾಗಿ ಪ್ರಶ್ನಿಸಿದ್ದಕ್ಕೆ ಬಂದ ದುಷ್ಟ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಸೈಬರ್ ಲೋಕಕ್ಕೆ ಅಮರಿಕೊಂಡ ಸನಾತನ ಸಂಸ್ಕೃತಿಯೆಂಬ ವೈರಸ್‌ನ ಪರಿಚಯವಾಗುತ್ತದೆ. ಪುರಾತನ ನಾಗರಿಕತೆಯ ಈ ಮಹಾನ್ ದೇಶ ಮಹಿಳೆ ‘ಭಾರತೀಯ ನಾರಿ’ಯಂತಿದ್ದರೆ ಕಿರೀಟಗಳ ತಲೆಗೆ ಕಟ್ಟುತ್ತದೆ. ಅದೇ ವಾಸ್ತವದ ಹುಳುಕುಗಳ ತೋರಿಸತೊಡಗಿದರೆ ಕೆರಳಿ ಮಾನಭಂಗಕ್ಕೆ ಯತ್ನಿಸುತ್ತದೆ.

ಆದರೆ ‘ಹೆಂಗಸ್ರದ್ದು ಹೆಚ್ಚಾಯ್ತು’ ಎಂದು ಹೆಚ್ಚಾದದ್ದನ್ನು ಕಡಿಮೆ ಮಾಡಲು ಚಡ್ಡಿ ಬಿಚ್ಚಿ ಹೊರಟಿರುವ ಈ ಎಲ್ಲ ಬಾಲಕರಿಗೆ ಹೆದರಬಾರದು. ಬದಲಾಗಿ ಅವರನ್ನು ಪೂರಾ ಬೆತ್ತಲಾಗಿಸಿ, ಅವರು ಸೇರಬೇಕಾದ ಜಾಗ ತಲುಪಿಸುವುದೊಂದೇ ಈಗ ಉಳಿದಿರುವ ದಾರಿ. ‘ಹಿತ ವಚನ, ಮಿತ ವಚನ, ಮೃದು ವಚನ’ಗಳನ್ನು ಪ್ರತಿಪಾದಿಸುವ ಸನಾತನಿಗಳ ಮುಖವಾಡ ಕಳಚುವ; ಶೀಲ-ಅಶ್ಲೀಲಗಳ, ಮಾನ-ಅವಮಾನದ ವ್ಯಾಖ್ಯೆ ಬದಲಿಸುವ ಜವಾಬುದಾರಿಯೂ ನಮ್ಮ ಮೇಲೇ ಇದೆ. ಇಲ್ಲದಿದ್ದರೆ ಮತ್ತೆ ಮರ್ಯಾದೆಗಂಜಿ ಮೌನಕ್ಕೆ ಶರಣಾದ ತ್ರೇತಾಯುಗದ ರಾಮರಾಜ್ಯಕ್ಕೆ ಮರಳಬೇಕಾಗುತ್ತದೆ.

ಮಹಿಳಾ ಒಕ್ಕೂಟವು ಈ ಸಂದರ್ಭದಲ್ಲಿ ಸೈಬರ್ ಅತ್ಯಾಚಾರ ಬೆದರಿಕೆಗೆ ಒಳಗಾದ ಅಸಂಖ್ಯ ಹೆಣ್ಣುಮಕ್ಕಳು ಹಾಗೂ ಅವರ ಬೆದರಿಕೆಗೆ ಮಣಿಯದೆ ನಿಂತು ಕೇಸು ಹಾಕಿರುವ ದಿಟ್ಟ ಗೆಳತಿಯ ಪರವಾಗಿ ನಿಲ್ಲುತ್ತದೆ. ಜೊತೆಗೆ ರೇಪ್ ಎಂಬ ಹುಚ್ಚುನಾಯಿ ಕಡಿತಕ್ಕೊಳಗಾದ ಸಮಾಜಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸೈಬರ್ ಅತ್ಯಾಚಾರ ಎಸಗಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಬಯಸುತ್ತದೆ.

- ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ.



Monday, 28 July 2014

ಇಟ್ಟರೆ ಬೆರಣಿಯಾದೆ, ತಟ್ಟಿದರೆ ಕುರುಳಾದೆ..

ಎಂಟನೇ ಅದ್ಭುತದ ಸುತ್ತಮುತ್ತ 

ಬೇಸಿಗೆಯಿಡೀ ಕರಾವಳಿಯಲ್ಲಿ ಉರಿದಿದ್ದು ಸಾಲದೆಂಬಂತೆ ಇಲ್ಲಿ ಮಳೆ ಶುರುವಾಗುವ ಹೊತ್ತಿಗೆ ಉತ್ತರದ ಕಡೆ ಹೊರಟೆವು. ಉತ್ತರವೆಂದರೆ ಹಿಮಾಲಯಕ್ಕಲ್ಲ, ಬಿರುಬೇಸಿಗೆಯಲ್ಲಿ ಬೇಯುತ್ತಿರುವ ರಾಜಸ್ಥಾನಕ್ಕೆ, ದೆಹಲಿ-ಆಗ್ರಾ ಮಾರ್ಗವಾಗಿ. ದೆಹಲಿಯಿಂದ ಯಮುನಾ ನದಿಯ ಪೂರ್ವ ದಂಡೆಗುಂಟ ಚಲಿಸುತ್ತಿದ್ದೆವು. ಗಂಟೆ ಬೆಳಗಿನ ಹತ್ತಷ್ಟೇ, ಹೊರಗೆ ಕಾಲಿಟ್ಟರೆ ಕುಲುಮೆಯೊಳಗೆ ಇಳಿದ ಅನುಭವ.

ಆ ಬಿರುಬಿಸಿಲ ರಸ್ತೆಯಲ್ಲಿ ಹಲವು ವಿಸ್ಮಯಗಳು ಎದುರಾದವು.

ಅದು ಆರು ಲೇನುಗಳ ದೇಶದ ಅತಿ ದೊಡ್ಡ ರಸ್ತೆ - ಯಮುನಾ ಎಕ್ಸ್‌ಪ್ರೆಸ್ ವೇ. ದೆಹಲಿ ಎಷ್ಟು ಜನಭರಿತವೋ ಈ ಹೈವೇ ಅಷ್ಟೇ ಭಣಗುಡುತ್ತಿತ್ತು. ಆಚೀಚಿನ ಬಯಲುಗಳಲ್ಲಿ ಕಳ್ಳಿ ಗಿಡ, ಮರ ಜಾಲಿ, ಬಳ್ಳಾರಿ ಜಾಲಿ, ಎಕ್ಕದ ಗಿಡ, ಬೇವಿನ ಗಿಡ ಕಂಡವು. ವಿಸ್ತಾರವಾದ, ಫಲವತ್ತಾದ ಗಂಗಾಯಮುನಾ ನದೀಬಯಲುಗಳು ಮರುಭೂಮಿಯಾಗುತ್ತಿವೆಯೇ ಎಂದು ದಿಗಿಲಾಗುವಂತೆ ಮುಳ್ಳುಕಂಟಿ ಗಿಡಗಳೇ ಹೆಚ್ಚೆಚ್ಚು ಕಾಣತೊಡಗಿದವು.




ರಸ್ತೆಯ ಆಚೀಚೆ ಬಿತ್ತನೆಗೆ ಸಿದ್ಧವಾದ ಉತ್ತ ಹೊಲಗಳಿದ್ದವು. ನಡುನಡುವೆ ನಮ್ಮ ತಿರಿ, ಬಣವೆಗಿಂತ ಆಕೃತಿಯಲ್ಲಿ, ವಿನ್ಯಾಸದಲ್ಲಿ ಕೊಂಚ ಭಿನ್ನವಾದ, ಆಕರ್ಷಕವಾಗಿ ಕಟ್ಟಿದ ಧಾನ್ಯಸಂಗ್ರಹಗಳು ಕಂಡವು. ಬಣವೆಯ ಜೊತೆಗೇ ಮತ್ತೊಂದು ಆಕೃತಿ ಗಮನ ಸೆಳೆಯಿತು. ಉಳುಮೆಯಾದ ಹೊಲದ ಬದುಗಳಲ್ಲಿ, ಹಳ್ಳಿ ಮನೆಗಳ ಅಕ್ಕಪಕ್ಕದಲ್ಲಿ, ದಿಬ್ಬದ ಮೇಲೆ, ಕಂಪೌಂಡ್‌ಗೆ-ಬೇಲಿಗೆ ತಾಗಿದಂತೆ ವಿವಿಧ ಆಕಾರಗಳ ಮಣ್ಣುಬಣ್ಣದ ಪುಟ್ಟ ಗುಡ್ಡಗಳಿದ್ದವು. ದೆಹಲಿ, ನೋಯ್ಡಾ ದೂರದೂರವಾದ ಹಾಗೆ ಪ್ರತಿ ಮನೆ, ಹೊಲದಲ್ಲೂ ಅಂಥ ಹಲವು ಗೋಪುರ ಕಾಣತೊಡಗಿದವು. ಕೆಲವು ಸೂರು ಹೊದ್ದುಕೊಂಡಿದ್ದರೆ ಮತ್ತೆ ಕೆಲವು ಗೋಡೆಮೇಲೆ ಚಿತ್ತಾರ ಬರಕೊಂಡಿದ್ದವು. ಏನಿದು? ಡ್ರೈವರ್ ಕೇಳಿದರೆ ಉತ್ಸಾಹದಿಂದ ವಿವರಿಸಿದ್ದೇ ಅಲ್ಲದೆ ಸರಿಯಾಗಿ ಫೋಟೋ ತೆಗೆದುಕೊಳ್ಳಿ ಎಂದು ಒಂದೆರೆಡು ಕಡೆ ನಿಲ್ಲಿಸಿದರು.

ಅವು ಬಿಟೌಡಾ. ಸಗಣಿ ಬೆರಣಿಯ ಗೋಪುರಗಳು. ಕರ್ನಾಟಕದ ಬಯಲು ನಾಡಿನಲ್ಲಿ ಬೆರಣಿ ರಾಶಿ ಹಾಕಿದ್ದು ನೋಡಿದ್ದರೂ ಇಲ್ಲಿಯಷ್ಟು ಬೃಹತ್ ಪ್ರಮಾಣದ ಕಲಾತ್ಮಕ ಗೋಪುರಗಳನ್ನು ನೋಡಿದ ನೆನಪಾಗಲಿಲ್ಲ. ಮುಂದೆ ಮುಂದೆ ಹೋದಂತೆ ರಚನೆಯ ವಿವಿಧ ಹಂತಗಳಲ್ಲಿರುವ, ವಿಭಿನ್ನ ಆಕಾರ-ಚಿತ್ತಾರ-ಎತ್ತರ-ವಿನ್ಯಾಸ-ಬಣ್ಣದಲ್ಲಿರುವ ಗೋಪುರಗಳು ಕಾಣಿಸಿದವು. ಒಣಗಿದ ಕುಳ್ಳನ್ನು ಅಲ್ಯುಮಿನಿಯಂ ಬುಟ್ಟಿಗಳಲ್ಲಿ ತಲೆಮೇಲೆ ಹೊತ್ತು ಬ್ಯಾಲೆನ್ಸ್ ಮಾಡಿ ನಡೆವ ಹುಡುಗಿಯರು ಕಂಡರು.

ಮಲೆನಾಡು ಮತ್ತು ಘಟ್ಟದ ಸೆರಗಿನಲ್ಲಿ ಸಮೃದ್ಧ ಗಿಡಮರಗಳ ನಡುವೆ ಬದುಕುವವರಿಗೆ ಬೆರಣಿಯನ್ನು ಉರುವಲಾಗಿ ಕಲ್ಪಿಸಿಕೊಳ್ಳಲು ಕಷ್ಟ. ಆದರೆ ಭಾರತವಷ್ಟೇ ಅಲ್ಲ, ಪ್ರಪಂಚದಲ್ಲೇ ಅತ್ಯಂತ ಜನಪ್ರಿಯ ಗ್ರಾಮೀಣ ಇಂಧನ, ಬಡವರ ಇಂಧನ ಬೆರಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸುಲಭವಾಗಿ ಸಿಗುವ; ಅತ್ಯಂತ ಕಡಿಮೆ ಬೆಲೆಗೆ ಸಿಗುವ; ನಿಶ್ಚಿತವಾಗಿ ಸಿಗುವ; ಬೇಕೆಂದಾಗ ಒಲೆ ಹೊತ್ತಿಸಿ, ಆರಿಸಬಹುದಾದ; ಮನೆಯಲ್ಲಿ ಜಾನುವಾರಿಲ್ಲದಿದ್ದರೂ ಬೀದಿಯಲ್ಲಿ ಸಗಣಿಯಾಗಿ, ಮಾರುಕಟ್ಟೆಯಲ್ಲಿ ಬೆರಣಿಯಾಗಿ ಸಿಗುವ ಈ ಇಂಧನವನ್ನು ನಮ್ಮ ದೇಶದ ಹಳ್ಳಿಗಳ ಮುಕ್ಕಾಲುಪಾಲು ಜನಸಂಖ್ಯೆ ಈಗಲೂ ನೆಚ್ಚಿದ್ದಾರೆ. ಒಮ್ಮೆ ಬೆರಣಿ ಒಲೆಯಲ್ಲಿ ಮಾಡಿದ ಅಡಿಗೆ ರುಚಿ ನೋಡಿದರೆ ಗ್ಯಾಸ್-ಕರೆಂಟ್-ಸೀಮೆಎಣ್ಣೆ ಒಲೆಗಳನ್ನು ಬಿಟ್ಟು ನೀವೂ ಅದನ್ನೇ ಬಳಸುತ್ತೀರಿ ನೋಡಿ ಎಂದು ನಮ್ಮ ಡ್ರೈವರ್ ಹೇಳಿದ್ದು ಉತ್ಪ್ರೇಕ್ಷೆಯಿರಬಹುದಾದರೂ ಅವರ ಮಾತುಗಳಿಂದ ಸಗಣಿಯ ಪ್ರಾಮುಖ್ಯತೆ, ಉರುವಲಾಗಿ ಬೆರಣಿ ಬಳಕೆ ಎಷ್ಟು ಸಾಮಾನ್ಯ ಎಂದು ತಿಳಿದುಬಂತು.





ಪ್ರತಿ ಬೆರಣಿಯ ಮೇಲೂ, ಬೆರಣಿ ಗೋಪುರದ ಮೇಲೂ ಕಂಡುಬರುತ್ತಿದ್ದವು ಕೈಬೆರಳ ಗುರುತುಗಳು. ವಿಶೇಷವಾಗಿ ಹೇಳುವುದು ಬೇಡ, ಅವು ಹೆಣ್ಮಕ್ಕಳವೇ. ಯಾಕೆಂದರೆ ಅಡಿಗೆ ಕೆಲಸ ಯಾರದೋ, ಇಂಧನ ಹೊಂದಿಸುವ ಜವಾಬ್ದಾರಿಯೂ ಅವರದೇ ಎನ್ನುವುದು ಅಲಿಖಿತ ನಿಯಮ. ಕೃಷಿ-ಕೂಲಿ ಕೆಲಸ ಮುಗಿಸಿ ಬರುವಾಗ ದಾರಿಯಲ್ಲಿ ಒಂದು ಒಣರೆಂಬೆ ಕಂಡರೂ ಹೆಣ್ಮಕ್ಕಳು ಮನೆಗೆ ಹೊತ್ತು ತರುವವರೇ. ಮೂರು ಹೊತ್ತೂ ಹೊಟ್ಟೆಯ ಬೆಂಕಿ ತಣಿಸಲು ಏನು ಅಡಿಗೆ ಬೇಯಿಸಲಿ ಎನ್ನುವುದು ಎಷ್ಟು ತಲೆಬಿಸಿಯ ವಿಚಾರವೋ, ವರ್ಷಾವಧಿಗಾಗುವಷ್ಟು ಉರುವಲು ಸಂಗ್ರಹ ಮಾಡುವುದೂ ಅವರಿಗೆ ಅಷ್ಟೇ ದೊಡ್ಡ ಚಿಂತೆ.

ಸಗಣಿ ಸಂಗ್ರಹಿಸಿ, ಬೆರಣಿ ತಟ್ಟಿ, ಎರಡೂ ಬದಿ ಒಣಗಿಸಿ, ಅವನ್ನು ಕಲಾತ್ಮಕವಾಗಿ ಸುರುಳಿಸುರುಳಿಯಲ್ಲಿ ಜೋಡಿಸಿಡುವ ಕೆಲಸ ಮಾಡುತ್ತಿದ್ದ ಹೆಂಗಸರು, ಮಕ್ಕಳು ಕಾಣಿಸಿದರು. ಬಹುಶಃ ಬೇಸಿಗೆ ಒಣ ಉರುವಲು ಕೂಡಿಕೊಳ್ಳುವ ಕಾಲವಾದ್ದರಿಂದ ಈ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಬರೀ ಸೆಗಣಿಯದಾದರೆ ಉರಿಯಲು ಕಷ್ಟ ಎಂದು ಅದರೊಡನೆ ಧಾನ್ಯಗಳ ಹೊಟ್ಟು, ಹುಲ್ಲು, ಇದ್ದಿಲ ಪುಡಿಯನ್ನೂ ಸೇರಿಸುತ್ತಾರಂತೆ. ಮೂರ್ನಾಲ್ಕು ದಿನ ಒಣಗಿಸಿ, ಬೆರಣಿಯನ್ನು ವಿಶಿಷ್ಟವಾಗಿ ಜೋಡಿಸಿ, ಮೇಲೊಂದು ದಪ್ಪನೆಯ ಪದರ ಸಗಣಿಯ ಗಿಲಾಯಿ ಮಾಡುತ್ತಿದ್ದರು. ಸಗಣಿ ವಾಟರ್‌ಪ್ರೂಫ್ ಆದ್ದರಿಂದ ಹೊರಗಣ ಪದರ ಮಳೆಗಾಲದಲ್ಲೂ ಉರುವಲು ಒದ್ದೆಯಾಗದಂತೆ ತಡೆಯುತ್ತದೆ. ಕೆಲವೆಡೆ ಮಾತ್ರ ಆರೆಂಟು ಅಡಿ ಎತ್ತರದ ಗೋಪುರಗಳ ಮೇಲೆ ದಂಟಿನ ಸೂರು ಹೊದೆಸಲಾಗಿತ್ತು. ಅದರ ಗೋಡೆಗಳ ಮೇಲೆ ಥರಥರದ ಚಿತ್ರ ಚಿತ್ತಾರಗಳು, ಜನಪದ ಕಲೆಯ ವಿವಿಧ ವಿನ್ಯಾಸಗಳು ಅರಳಿದ್ದವು. ಗೋಪುರಗಳ ಕೆಳಭಾಗದಲ್ಲಿ ಸುಣ್ಣ ಬಳಿದ ಒಂದು ತಗ್ಗು ಇರುತ್ತದೆ. ಅದು ಬೆರಣಿ ಹೊರತೆಗೆಯಬೇಕಾದ ಸ್ಥಳ. ಅಲ್ಲಿಂದ ಒಂದೊಂದೇ ಬೆರಣಿ ತೆಗೆದರೆ ಗೋಪುರ ಕುಸಿಯದೇ ಅದನ್ನು ಖಾಲಿ ಮಾಡಬಹುದು ಎಂದರು.





ಕಳೆದವರ್ಷ ಗ್ಯಾಸ್ ಸಿಲಿಂಡರ್ ಬಳಕೆಯನ್ನು ನಿರ್ಬಂಧಕ್ಕೊಳಪಡಿಸಿ ಸಬ್ಸಿಡಿ ಸಿಲಿಂಡರುಗಳ ಸಂಖ್ಯೆ ವಾರ್ಷಿಕ ಆರು ಎಂದು ನಿಗದಿಗೊಳಿಸಲಾಯಿತು. ಬೇಯಿಸಿ-ಹುರಿದು-ಕರಿದು ತಿನ್ನುವ ಭಾರತೀಯ ಅಡಿಗೆ ಶೈಲಿಗೆ ವರ್ಷಕ್ಕೆ ಆರು ಸಿಲಿಂಡರ್ ಏನೇನೂ ಸಾಲದು. ಅದಕ್ಕಿಂತ ಹೆಚ್ಚು ಬೇಕಾದವರು ಪ್ರತಿ ಸಿಲಿಂಡರಿಗೆ ೯೫೨ ರೂ. ಕೊಡಬೇಕು ಎಂದು ಸರ್ಕಾರ ಪ್ರಕಟಿಸಿತು. ಆಗ ಬೆರಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿತಂತೆ. ತಿಪ್ಪೆಗೆ ಹೋಗುವ ಸಗಣಿಯೆಲ್ಲ ಬೆರಣಿಯಾಗಿ ಒಂದು ಬೆರಣಿಗೆ ಒಂದೂವರೆ ರೂಪಾಯಿಯಂತೆ ಮಾರಾಟವಾಯಿತು. ಅದುವರೆಗೆ ನಾಕಾಣೆಗೆ ಸಿಗುತ್ತಿದ್ದ ಬೆರಣಿಯೂ ತುಟ್ಟಿಯಾಯಿತು, ಕಟ್ಟಿಗೆಯಂತೂ ಕೆಜಿಗೆ ಎಂಟು ರೂಪಾಯಿಯಾಯಿತು ಎಂದರು ನಮ್ಮ ಡ್ರೈವರ್.

ಒಟ್ಟಾರೆ ಗಿಡಮರಗಳಿಲ್ಲದ ಬಯಲು ನಾಡಿನ ಜನ ಉರುವಲಿಗೆ ಮಾಡಿಕೊಂಡ ಸುಲಭ ವ್ಯವಸ್ಥೆ, ಗಿಲಾಯಿ, ಚಿತ್ತಾರ, ವಾಪಸು ತೆಗೆಯಲು ಅನುಕೂಲವಾಗುವ ಜೋಡಣೆ ಇವೆಲ್ಲ ನಾವು ನೋಡಹೊರಟ ಜಗತ್ತಿನ ಎಂಟನೇ ಅದ್ಭುತಕ್ಕೆ ಸಮನಾಗಿವೆ ಎನಿಸಿತು.

ನೀನಾರಿಗಾದೆಯೋ ಎಲೆ ಮಾನವಾ?

ಪಶುಗಣತಿ ಪ್ರಕಾರ ಭಾರತದಲ್ಲಿ ಅಂದಾಜು ೨೮.೩ ಕೋಟಿ ದನ, ಎಮ್ಮೆಗಳಿವೆ. ಅವುಗಳಿಂದ ಅಜಮಾಸು ಪ್ರತಿದಿನ ೭೦ ಕೋಟಿ ಟನ್ ಸಗಣಿ ಉತ್ಪತ್ತಿಯಾಗುತ್ತದೆ. ಸಗಣಿಯ ವ್ಯವಸ್ಥಿತ ವಿಲೇವಾರಿಗೆ ಬೆರಣಿ ಉರುವಲು ಸಹಾಯಕವಾಗಿದೆ. ಇಲ್ಲದಿದ್ದರೆ ಕಂಡಕಂಡಲ್ಲಿ ದೇಹಬಾಧೆ ತೀರಿಸಿಕೊಳ್ಳುವ ಭಾರತೀಯರ ಅಭ್ಯಾಸದಿಂದ ದುರ್ನಾತ ಬೀರುವ ಊರುಕೇರಿಗಳು ಸಗಣಿ ತೊಪ್ಪೆಯಿಂದ ತುಂಬಿ ಹೋಗುತ್ತಿದ್ದವು.

ಭಾರತದ ಗ್ರಾಮೀಣ ಮಹಿಳೆಯರಿಗೆ ಈಗಲೂ ಗ್ಯಾಸ್ ತುಟ್ಟಿ. ಕರೆಂಟನ್ನು ನಂಬಲು ಸಾಧ್ಯವಿಲ್ಲ. ಸೋಲಾರ್ ಎಂದರೆ ಏನೋ ಎಂಥದೋ. ೧೧೦ ಕೋಟಿ ಜನಸಂಖ್ಯೆಯ ದೇಶಕ್ಕೆ ಇಂಧನ ಒದಗಿಸುವುದು ಸುಲಭದ ಮಾತಲ್ಲ. ಹಾಗಿರುವಾಗ ಬೆರಣಿಯು ಕಡಿಮೆ ಖರ್ಚಿನ, ನಿಸರ್ಗ ಸ್ನೇಹಿ, ಮರುಪೂರಣಗೊಳ್ಳಬಹುದಾದ ಇಂಧನವಾಗಿ ಒದಗಿ ಬಂದಿದೆ. ಬೆರಣಿಯನ್ನು ಉರುವಲಿಗೆ ಬಳಸುವುದರಿಂದ ಮರಗಿಡಗಳೂ ಉಳಿಯುತ್ತವೆ. ಸುಟ್ಟ ಬೂದಿ ಕ್ರಿಮಿನಾಶಕವಾಗಿ ಬಳಕೆಯಾಗುತ್ತದೆ.

ಆದರೆ ಪರಿಸರ ಸ್ನೇಹಿಯಾದ ಬೆರಣಿ ಅಷ್ಟೇನೂ ಬಳಕೆದಾರ ಸ್ನೇಹಿ ಅಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ. ಸಗಣಿಯಲ್ಲಿ ಅಸಂಖ್ಯ ಶಿಲೀಂಧ್ರ, ರೋಗಾಣುಗಳಿರುತ್ತವೆ. ಬರಿಗೈಲಿ ಮುಟ್ಟುವುದರಿಂದ ಕೆಲ ಚರ್ಮರೋಗಗಳು ಬರಬಹುದಾಗಿದೆ. ಇತ್ತೀಚೆಗೆ ಕೃಷಿಯಲ್ಲಿ ಬಳಸುತ್ತಿರುವ ರಾಸಾಯನಿಕದ ಪ್ರಮಾಣ ಮೇಲ್ಮೈ ನೀರು ಕಲುಷಿತಗೊಳಿಸುವಷ್ಟು ಅತಿಯಾಗಿದೆ. ಕೀಟನಾಶಕ ಸಿಂಪಡಿಸಿದ ಹುಲ್ಲು ತಿಂದ ಜಾನುವಾರುಗಳ ಸಗಣಿಯಲ್ಲೂ ಆರ್ಸೆನಿಕ್ ಅಂಶ ಪತ್ತೆಯಾಗಿದೆ. ಅದನ್ನು ಉರಿಸಿದಾಗ ಬರುವ ಹೊಗೆಯಲ್ಲೂ ಆರ್ಸೆನಿಕ್ ಅಂಶ ಹೆಚ್ಚಿರುವುದು ಗಂಗಾ-ಮೇಘನಾ-ಬ್ರಹ್ಮಪುತ್ರ ನದೀಬಯಲಿನ ಪ್ರದೇಶಗಳಲ್ಲಿ ನಡೆದ ಸಂಶೋಧನೆಯಿಂದ ಧೃಢಪಟ್ಟಿದೆ. ಒಲೆ ಮುಂದೆ ಕೂತು ಅದರ ಹೊಗೆ ಕುಡಿಯುವವರು ಶ್ವಾಸಕೋಶ ಸಂಬಂಧಿ ಕಾಯಿಲೆ, ಕಣ್ಣಿನ ಕಾಯಿಲೆಗೆ ತುತ್ತಾಗುತ್ತಾರೆ. ಮೊದಲೇ ಅಡಿಗೆ ಮನೆ ಎಂದರೆ ಕಿಷ್ಕಿಂಧೆ. ಬೆಳಕಿರುವುದಿಲ್ಲ, ಗಾಳಿಯಿರುವುದಿಲ್ಲ. ಅದರ ನಡುವೆ ಹೊಗೆಯೂ ತುಂಬಿಕೊಂಡರೆ ಅಲರ್ಜಿ ಅಸ್ತಮಾ, ದಮ್ಮು, ಟಿಬಿ, ಶ್ವಾಸಕೋಶ ಕ್ಯಾನ್ಸರಿನಂತಹ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರತಿವರ್ಷ ವಿಶ್ವಾದ್ಯಂತ ೧೬ ಲಕ್ಷ ಜನ ಮನೆಯೊಳಗಿನ ವಾಯುಮಾಲಿನ್ಯದ ಕಾರಣಕ್ಕೆ ಸಾಯುತ್ತಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು.

ಸಗಣಿ ಇಂಧನ ಬಳಕೆದಾರ ಸ್ನೇಹಿ ಆಗುವಂತೆ ಮಾಡಲು ಒಂದು ಮಾರ್ಗವಿದೆ: ಸಗಣಿಯನ್ನು ಗೋಬರ್ ಗ್ಯಾಸ್ ಆಗಿ ಪರಿವರ್ತಿಸುವುದು. ಕೈಗೆಟುಕುವ ದರ, ವಿಧಾನದಲ್ಲಿ ಗೋಬರ್ ಗ್ಯಾಸ್ ಉತ್ಪಾದಿಸಿಕೊಳ್ಳಲು; ಅದನ್ನು ಪ್ರೋತ್ಸಾಹಿಸಲು ಯೋಜನೆ ಹಮ್ಮಿಕೊಳ್ಳಬೇಕು. ಈಗ ಮನೆಯಲ್ಲಿ ನಾಲ್ಕೈದು ಜಾನುವಾರುಗಳಿದ್ದವರು ಸಬ್ಸಿಡಿ ಹಣದೊಂದಿಗೆ ಹತ್ತು ಸಾವಿರ ರೂಪಾಯಿ ಸೇರಿಸಿದರೆ ಒಂದು ಬಯೋಗ್ಯಾಸ್ ಪ್ಲಾಂಟ್ ಹಾಕಬಹುದು. ಗ್ಯಾಸ್ ತಯಾರಿ ನಂತರದ ಸ್ಲರಿಯನ್ನು ಗೊಬ್ಬರಕ್ಕೆ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ಸಗಣಿಯನ್ನು ಇಂಧನ ಮತ್ತು ಗೊಬ್ಬರ ಎರಡೂ ಆಗಿ ಬಳಸಲು ಸಾಧ್ಯವಾಗುವುದು ಈ ವಿಧಾನದ ಹೆಚ್ಚುಗಾರಿಕೆ ಎನ್ನಬಹುದು.

ಬೇರೆ ದೇಶಗಳಲ್ಲೂ ಬೆರಣಿ ಬಳಸುವರೇ ಎಂಬ ಪ್ರಶ್ನೆ ತೂರಿ ಬಂತು. ಗ್ರಾಮೀಣ ಈಜಿಪ್ಟ್‌ನ ಮನೆಯ ಗೋಡೆಗಳ ಮೇಲೆ ಬೆರಣಿ ನೋಡಿದ ನೆನಪಾಯಿತು. ಅದು ಒಂಟೆ ಸಗಣಿಯದು. ವಿಶ್ವ ಮಾಹಿತಿ ಜಾಲಾಡಿದರೆ ಬೆರಣಿಯನ್ನು ಇರಾನ್, ಚೀನಾ, ಮಂಗೋಲಿಯಾ, ಪ್ಯಾಲೆಸ್ಟೀನ್ ಸೇರಿದಂತೆ ಹಲವು ದೇಶಗಳಲ್ಲಿ ಜನ ಉರುವಲಾಗಿ ಬಳಸುತ್ತಿದ್ದಾರೆ. ವಿಶ್ವಾದ್ಯಂತ ಎರಡು ಬಿಲಿಯನ್ ಜನರ ಉರುವಲು ಸಗಣಿಯೇ ಆಗಿದೆ!

ದಿನನಿತ್ಯ ರಸ್ತೆಮೇಲೆ ಓಡಾಡುವ ವಾಹನಗಳು ಹೆಚ್ಚುತ್ತಿವೆ. ಪೆಟ್ರೋಲ್-ಡೀಸೆಲ್ ದಿನದಿನಕ್ಕೆ ತುಟ್ಟಿಯಾಗುತ್ತ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿದೆ. ಇದೇ ದರದಲ್ಲಿ ವಾಹನ-ಅಡಿಗೆ ಎರಡಕ್ಕೂ ಹೈಡ್ರೋಕಾರ್ಬನ್ ಇಂಧನ ಬಳಸಿದರೆ ಇನ್ನು ಅರ್ಧ ಶತಮಾನವೂ ಅದು ಬಾಳುವುದಿಲ್ಲ. ಮಿಲಿಯಗಟ್ಟಲೆ ವರ್ಷಗಳ ಕೆಳಗೆ ತಯಾರಾಗಿ ನೆಲದಡಿಯ ನಿದಾನವಾಗಿರುವ ತೈಲವನ್ನು, ನಮ್ಮ ಮಕ್ಕಳು-ಮೊಮ್ಮಕ್ಕಳು-ಮರಿಮಕ್ಕಳ ಪಾಲಿನ ತೈಲವನ್ನು ನಾವೀಗಲೇ ಕಬಳಿಸುತ್ತಿದ್ದೇವೆ. ತೈಲಕ್ಕಾಗಿ ಯುದ್ಧ ನಡೆಯುತ್ತಿದೆ. ತೈಲಕ್ಕಾಗಿ ಸರ್ಕಾರಗಳು ಉರುಳುತ್ತಿವೆ. ತೈಲಭರಿತ ಬಡದೇಶಗಳ ಅಧ್ಯಕ್ಷರು ‘ಹೇಳಿದ ಮಾತು’ ಕೇಳದಿದ್ದರೆ ಅವರ ವಿಮಾನ ಪತನವಾಗುತ್ತದೆ. ಹೀಗಿರುವಾಗ ಒಂದು ಪರ್ಯಾಯ ಇಂಧನ ಸೃಷ್ಟಿಸಿಕೊಳ್ಳುವುದು ಮನುಷ್ಯಕುಲದ ಉಳಿವಿಗೆ, ನಾಗರಿಕತೆಯ ಉಳಿವಿಗೆ ಅನಿವಾರ್ಯವಾಗಿದೆ. ಕಡಿಮೆ ದರದ ನಿಸರ್ಗ ಸ್ನೇಹಿ ಇಂಧನ ಪೂರೈಕೆಯ ವ್ಯವಸ್ಥೆಯನ್ನು ಜಗತ್ತಿನ ಎಲ್ಲ ದೇಶಗಳ ನಾಯಕರು, ವಿಜ್ಞಾನಿಗಳು ಅಭಿವೃದ್ಧಿಪಡಿಸಬೇಕಿದೆ.

‘ಸೇವ್ ಫ್ಯುಯೆಲ್’ ಎಂಬ ಸ್ಲೋಗನ್ನಿನೊಡನೆ ಪರ್ಯಾಯವನ್ನೂ ಸೂಚಿಸುವ ಕಾಲ ಈಗ ಬಂದಿದೆ.



Saturday, 26 July 2014

ನಿನ್ನ ಬಳಿ ಬಂದೂಕಿದೆ ನನ್ನಲ್ಲಿ ಹಸಿವೆ





ನಿನ್ನ ಬಳಿ ಬಂದೂಕಿದೆ
ನನ್ನಲ್ಲಿ ಹಸಿವೆ

ನಿನ್ನ ಬಂದೂಕು
ನಾ ಹಸಿದಿರುವೆನೆಂದೇ
ನಿನ್ನ ಬಳಿಯಿದೆ

ನಿನ್ನ ಬಳಿ ಬಂದೂಕಿದೆ
ಎಂದೇ ನಾನು ಹಸಿದಿದ್ದೇನೆ

ನೀನು ಇಟ್ಟುಕೊಳ್ಳಬಹುದು
ಒಂದು ಬಂದೂಕು
ಒಂದು ಸಾವಿರ ಬುಲೆಟುಗಳು,
ಮೇಲೆ ಇನ್ನೂ ಒಂದು ಸಾವಿರ
ಸುರಿಯಬಹುದು ಅವನೆಲ್ಲ, ವೃಥಾ ನನ್ನ ಬಡಕಲು ದೇಹದ ಮೇಲೆ
ಒಮ್ಮೆ, ಎರಡು ಸಲ, ಮೂರುಸಲ
ಸಾವಿರ ಸಲ, ಏಳು ಸಾವಿರ ಸಲ ನನ್ನ ಕೊಲ್ಲಬಹುದು
ಆದರೆ ನೆನಪಿರಲಿ,
ಕಾಲದ ದೀರ್ಘ ಓಟದಲ್ಲಿ
ನಾನು ನಿನಗಿಂತ ಶಸ್ತ್ರಸಜ್ಜಿತ.

ನಿನ್ನ ಬಳಿ ಬಂದೂಕಿರಬಹುದು
ಆದರೆ ನನ್ನಲ್ಲಿ
ಬರೀ ಹಸಿವೆ..

-ಒಟೊ ರೆನೆ ಕ್ಯಾಸ್ಟಿಲೊ

(ಒಟೋ ರೇನೆ ಕ್ಯಾಸ್ಟಿಲೊ (೧೯೩೪-೧೯೬೭) ಗ್ವಾಟೆಮಾಲಾದ ಕವಿ ಮತ್ತು ಕ್ರಾಂತಿಕಾರಿ. ೧೯೫೪ರಲ್ಲಿ ಗ್ವಾಟೆಮಾಲಾದಲ್ಲಿ ಅಮೆರಿಕದ ಪರವಾಗಿ ಕ್ಷಿಪ್ರಕ್ರಾಂತಿ ನಡೆದಾಗ ಒಟ್ಟೋ ರೆನೆ ಕ್ಯಾಸ್ಟಿಲೋ ತಪ್ಪಿಸಿಕೊಂಡು ಎಲ್ ಸಾಲ್ವಡಾರ್‌ಗೆ ಹೋದ. ೧೯೬೬ರಲ್ಲಿ ಗ್ವಾಟೆಮಾಲಾಗೆ ವಾಪಸಾಗಿ ‘ರೆಬೆಲ್ ಆರ್ಮಡ್ ಫೋರ್ಸ್’ ನೊಂದಿಗೆ ಗೆರಿಲ್ಲಾ ಯುದ್ಧ ಸೇರಿದ. ೧೯೬೭ರಲ್ಲಿ ಆತನನ್ನು ಸೆರೆಹಿಡಿಯಲಾಯಿತು. ನಾಲ್ಕು ದಿನಗಳ ನಂತರದ ಹಿಂಸೆಯ ಬಳಿಕ ಆತನನ್ನು ಜೀವಂತ ಸುಡಲಾಯಿತು.)

Tuesday, 22 July 2014

ಕಲಿಯುಗ ಅಲ್ಲ, ಅತ್ಯಾಚಾರ ಯುಗ..








ಬೆಂಗಳೂರಿನಲ್ಲಿ ನಡೆದ ಸರಣಿ ಅತ್ಯಾಚಾರ ಪ್ರಕರಣಗಳು ಸುದ್ದಿಪತ್ರಿಕೆಗಳ ಮುಖಪುಟ ತುಂಬುತ್ತ, ಸದನದಲ್ಲಿ ಗದ್ದಲವಾಗುತ್ತ, ಟೀವಿ ಚಾನೆಲ್ಲುಗಳ ಬಿಸಿಬಿಸಿ ಚರ್ಚೆ-ಸಂವಾದಕ್ಕೆ ಗ್ರಾಸವಾಗುತ್ತ ಇರುವಾಗಲೇ ಹೊಸಹೊಸ ಪ್ರಕರಣಗಳು ಸಂಭವಿಸುತ್ತಿವೆ. ಬೆಂಗಳೂರಷ್ಟೇ ಅಲ್ಲ, ದೇಶಾದ್ಯಂತ ವರ್ಗ, ಜಾತಿ, ಸ್ಥಳ, ವಯಸ್ಸು ಎಂಬ ಭೇದವಿಲ್ಲದೇ ಒಂದಾದ ಮೇಲೊಂದು ಸಂಭವಿಸುತ್ತಿರುವ ಅತ್ಯಾಚಾರಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದೇ ತಿಳಿಯದೇ ಜೀವ ಮರಗಟ್ಟಿ ಹೋಗಿದೆ. ಮಾತನಾಡುವಾಗ ನಡು ಬೆರಳೆತ್ತಿದರೆ ಏನೋ ಅಪಾರ್ಥ, ಅಕಸ್ಮಾತ್ ಸೆರಗು ಸರಿದರೆ ಇನ್ನೇನೋ ವಿಪರೀತಾರ್ಥವಾಗುವ ಕಾಲದಲ್ಲಿ; ಸರಿರಾತ್ರಿ ಒಬ್ಬಳೇ ಬಸ್ ಕಾಯುವಾಗ ಆಚೀಚೆ ಠಳಾಯಿಸುತ್ತ ತಿರುಗಾಡುವವರ ಮೇಲೆ ಭಯಮಿಶ್ರಿತ ಅನುಮಾನ ಸುಳಿಯುವ ದಿನಗಳಲ್ಲಿ; ಹೆಣ್ಮಕ್ಕಳು ಮನೆಯಿಂದ ಹೊರಹೋಗುವುದೇ ಅಪಾಯ, ಮನೆಯೊಳಗಿರುವುದೇ ಕ್ಷೇಮ ಎಂಬ ಪಾಲಕರ ಅನಿಸಿಕೆಯಲ್ಲಿ ಕಾಲಚಕ್ರ ಹಿಮ್ಮುಖ ತಿರುಗುತ್ತಿರುವ ಭಾಸವಾಗುತ್ತಿದೆ. 

ಭೀಭತ್ಸ, ದಿಙ್ಮೂಢ, ಆಕ್ರೋಶ, ದಿಗ್ಭ್ರಮೆ - ಮುಂತಾದ ನಮ್ಮ ಡಿಕ್ಷನರಿಯ ಎಲ್ಲ ಪದಗಳೂ ಸವಕಲಾಗಿ ಸತ್ತೇ ಹೋಗಿರುವಾಗ ಅತ್ಯಾಚಾರವನ್ನು, ಅದರ ಕಾರಣಗಳನ್ನು ಹೊಸದಾಗಿಯೇ ವಿಶ್ಲೇಷಿಸಬೇಕಿದೆ. ಏಕೆಂದರೆ ಆರೋಪ, ಆರೋಪಿ, ಗುನ್ನೆ, ಶಿಕ್ಷೆ ಈ ಎಲ್ಲದರ ಬಗೆಗೆ ಎಷ್ಟು ದಿವಸಗಳಿಂದ ಮಾತನಾಡುತ್ತಿದ್ದೇವೆ? ಆದರೂ ಯಾಕೆ ಈ ಭೀಭತ್ಸವನ್ನು ತಡೆಗಟ್ಟಲಾಗಿಲ್ಲ? ಯಾಕೆ ಬಾಲಾಪರಾಧಿಗಳ ಸಂಖ್ಯೆ ಹೆಚ್ಚುತ್ತಿದೆ? ಇಷ್ಟೆಲ್ಲ ಕಠಿಣ ಕಾನೂನುಗಳು ಬಂದರೂ, ಜನರ ಆಕ್ರೋಶವನ್ನು ಕಣ್ಣಾರೆ ಕಂಡರೂ  ಅತ್ಯಾಚಾರ ನಡೆಸಬೇಕೆಂದು ಅನಿಸುವುದಾದರೂ ಏತಕ್ಕೆ? ಮಾತು-ಚರ್ಚೆ-ಪ್ರತಿಭಟನೆಗಳು ದೌರ್ಜನ್ಯದ ವಿರುದ್ಧ ಜನಾಭಿಪ್ರಾಯವಾಗಿ ರೂಪುಗೊಂಡು ಹೆಣ್ಣಿಗೊಂದು ಸುರಕ್ಷಿತ ಬದುಕನ್ನು ಕೊಡಲು ಸಾಧ್ಯವಾಗದಂತೆ ಮಾಡಿರುವುದಾದರೂ ಯಾವುದು? ಅತ್ಯಾಧುನಿಕ ತಂತ್ರಜ್ಞಾನ, ಅಪ್ಲಿಕೇಷನ್‌ಗಳು ಜನಸಾಮಾನ್ಯರಿಗೆ ದೊರಕಿದ್ದೇ ಅನಗತ್ಯವಾಗಿತ್ತೇ? ಅಪಾಯಕಾರಿಯಾಯಿತೇ? 

ಅತ್ಯಾಚಾರದ ಸಾಮಾಜಿಕ, ಸಾಂಸ್ಕೃತಿಕ, ಲಿಂಗ ರಾಜಕಾರಣದ ಮುಖಗಳ ಬಗೆಗೆ ಸಾಕಷ್ಟು ಚರ್ಚೆ ನಡೆದಿದೆ. ಎಂದೇ ಒಂದೆರೆಡು ಪ್ರಮುಖ ವಿಷಯಗಳತ್ತ ಮಾತ್ರ ಗಮನ ಸೆಳೆಯಬಯಸುವೆ.  

ದೃಶ್ಯಮಾಧ್ಯಮಗಳು ಅತ್ಯಾಚಾರ ಪ್ರಕರಣಕ್ಕೆ ಪ್ರಚಾರ ಕೊಟ್ಟು ಮುನ್ನೆಲೆಗೆ ಬರುವಂತೆ ಮಾಡಲು ಎಷ್ಟು ಕಾರಣವೋ ಅಷ್ಟೇ ಅತ್ಯಾಚಾರ ನಡೆಯಲೂ ಕಾರಣವಾಗಿವೆ. ಇದು ಬೀಸು ಹೇಳಿಕೆಯೆನಿಸಬಹುದು, ಆದರೂ ಇವತ್ತಿನ ಅಸಂಖ್ಯ ಟಿವಿ ಚಾನೆಲ್ಲುಗಳ ಅಸಂಖ್ಯ ಸೀರಿಯಲ್ಲುಗಳು, ಕೆಟ್ಟ ಸಿನಿಮಾಗಳು, ರಿಯಾಲಿಟಿ ಶೋಗಳು, ಜಾಹೀರಾತುಗಳು ಹೆಣ್ಣು ಎನ್ನುವುದು ರುಚಿ ನೋಡಬೇಕಾದ ಖಾದ್ಯ ಎನ್ನುವಂತೆ ಬಿಂಬಿಸುತ್ತ ಸರಕಿನ ಮಾರಾಟಕ್ಕೆ ಪೂರಕವಾಗಿಸಿರುವುದನ್ನು ನೋಡಿದರೆ ಈ ಆರೋಪದ ಹುರುಳು ಅರ್ಥವಾಗುತ್ತದೆ. ಒಳ್ಳೆಯದು-ಕೆಟ್ಟದ್ದು, ಅವಶ್ಯ-ಅನವಶ್ಯ ಎನ್ನುವುದಕ್ಕಿಂತ ರೋಚಕವಾಗಿ ಜನರನ್ನು ಸೆಳೆದರಷ್ಟೇ ಲಾಭ ಎಂಬ ಯಶಸ್ಸಿನ ಕಳ್ಳದಾರಿಯನ್ನು ಮೀಡಿಯಾಗಳು ಕಂಡುಕೊಂಡಿವೆ. ದೃಶ್ಯ ಜಗತ್ತಿನ ಈ ವ್ಯಾವಹಾರಿಕ ದೃಷ್ಟಿಕೋನ ಬದಲಾಗದ ಹೊರತು ಯಾವ ಟಾಕ್ ಷೋ, ಸಂವಾದ, ಸ್ಟಿಂಗ್ ಆಪರೇಷನ್ನಿನಿಂದ ನಯಾ ಪೈಸೆಯಷ್ಟೂ ಉಪಯೋಗವಿಲ್ಲ ಎಂದು ಅವರಿಗೆ ತಿಳಿಸುವುದು ಒಳಿತು. 

ಭಾರತದಲ್ಲಿ ನೀಲಿಚಿತ್ರ ವೀಕ್ಷಣೆ ನಿಷೇಧಿತವಾಗಿದ್ದರೂ ಬೀಡಿ, ಸಿಗರೇಟಿನಷ್ಟೇ ಸುಲಭಕ್ಕೆ ಎಲ್ಲಿ ಬೇಕಾದರೂ ಅದರ ಸಿಡಿ, ಡಿವಿಡಿಗಳು ಸಿಗುತ್ತವೆ. ಇದು ೧೦೦ ಕೋಟಿಗೂ ಮೀರಿದ ವಹಿವಾಟಿರುವ ನೀಲಿಚಿತ್ರಗಳ ಯಶಸ್ಸಿನ ಓಪನ್ ಸೀಕ್ರೆಟ್. ಬರೀ ಎರಡು ರೂಪಾಯಿ, ಐದು ರೂಪಾಯಿ ಕೊಟ್ಟರೆ ಬ್ಲ್ಯೂ ಫಿಲಂಗಳನ್ನು, ಕಾಮಕೇಳಿಯ ದೃಶ್ಯಗಳನ್ನು ಮೊಬೈಲಿಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಥವಾ ತಮ್ಮ ಮೊಬೈಲ್ ಕ್ಯಾಮೆರಾದಿಂದ ‘ಲೈವ್’ ಆಗಿ ಸೆರೆಹಿಡಿದು ಉಳಿದವರಿಗೆ ಕಳಿಸಬಹುದು. ಮೊಬೈಲು, ಸಿಮ್‌ಗಳ ಲಭ್ಯತೆಗಂತೂ ಯಾವುದೇ ರೆಗ್ಯುಲೇಷನ್ ಇಲ್ಲ. ಯಾರ ಬಳಿ ಎಷ್ಟು ಮೊಬೈಲ್ ಸೆಟ್ ಇರಬೇಕೆನ್ನುವುದಕ್ಕೆ ಅವರವರ ಆಸೆಗಳೇ ನಿರ್ಧಾರಕಗಳು. ಅಂತರ್ಜಾಲ ತಾಣಗಳು ಹಳ್ಳಿಯ ಮೂಲೆಮೂಲೆ ತಲುಪಿ ವೇಗವಾಗಿ ಮೆಸೇಜುಗಳನಷ್ಟೇ ಅಲ್ಲ, ವೀಡಿಯೋಗಳನ್ನೂ ಕಳಿಸಲು ವಾಟ್ಸಪ್ ಸೌಲಭ್ಯ ಸಿಕ್ಕಿಬಿಟ್ಟಿದೆ. ಯಾವುದೇ ಅಂತರ್ಜಾಲ ತಾಣ ತೆರೆಯಿರಿ, ಬಿರಿದ ಎದೆಯನ್ನು ತೋರಿಸುತ್ತ ನಿಮ್ಮ ಬಳಿ ಸಖ್ಯ ಬೆಳೆಸಲು ಉತ್ಸುಕರಾಗಿರುವ ಹುಡುಗಿಯರ ಫೋಟೋ, ಫೋನ್ ನಂಬರ್ ಕಣ್ಣೆದುರು ಮಿನುಗುತ್ತವೆ. ಆ ಹುಡುಗಿಯರ ಪ್ರೊಫೈಲ್ ನೋಡಿದರೆ ಗಾಬರಿಯಾಗುತ್ತೀರಿ, ಅವರ ಹವ್ಯಾಸ ಸೆಕ್ಸ್! ಕಾಲಯಾಪನೆ ಫೋನಿನಲ್ಲಿ ಪ್ರಚೋದಕ ಮಾತನಾಡುವುದು!! ಫೋನ್ ಮತ್ತು ಅಂತರ್ಜಾಲ ಸೇವೆ ಒದಗಿಸುವವರು ಪೈಪೋಟಿಗೆ ಬಿದ್ದು ಹೀಗೆ ಬೇಕಿದ್ದು, ಬೇಡದಿದ್ದನ್ನೆಲ್ಲ ವಿವೇಚನೆಯಿಲ್ಲದೇ ಒದಗಿಸಿಕೊಟ್ಟರೆ ಏನಾಗುತ್ತದೆ ಎನ್ನಲು ಈಗ ಹೆಚ್ಚುತ್ತಿರುವ ಅಪರಾಧಗಳೇ ಸಾಕ್ಷಿಯಾಗಿವೆ. 



ಬಹಳಷ್ಟು ಅತ್ಯಾಚಾರ ಅಪರಾಧಿಗಳು ಒಪ್ಪಿಕೊಂಡಂತೆ ಅವರೆಲ್ಲ ನೀಲಿಚಿತ್ರಗಳ ವೀಕ್ಷಣೆಯಿಂದ ಪ್ರಚೋದನೆ, ಧೈರ್ಯ ಪಡೆದಿದ್ದಾರೆ. ಬರೀ ಬೆತ್ತಲೆ ಹೆಣ್ಣಿನ ದೇಹ ನೋಡುವ ಚಟಕ್ಕೆ ಬಿದ್ದಂಥವರು ಹೆಣ್ಣನ್ನು ಎದೆಮನಸುಗಳಿರುವ ಒಂದು ಜೀವಿಯಾಗಿ ನೋಡಲಾರರು. ಅವರಿಗೆ ಹೆಣ್ಣುದೇಹ ಕೇವಲ ತನ್ನ ಕಾಮದಾಹ ತಣಿಸುವ ಒಂದು ವಸ್ತು. ಜೊತೆಗೆ ಮದ್ಯಪಾನ, ಮಾದಕ ವಸ್ತುಗಳು ಹಾಗೂ ಸಮಾನ ವಯಸ್ಕ, ಮನಸ್ಕರು ಸೇರಿದರೆ ಕಾಮ ಕೆರಳಿಸುವುದು ಏನೂ ಕಷ್ಟವಿಲ್ಲ. ಆದರೆ ಕಾಮವನ್ನು ಶಮನಗೊಳಿಸಿಕೊಳ್ಳುವುದು, ನಿಯಂತ್ರಿಸುವುದು ಸುಲಭವಲ್ಲ ಎಂದು ತಿಳಿಹೇಳುವವರು ಯಾರು? ಸಾಮಾಜಿಕ-ನೈತಿಕ-ಧಾರ್ಮಿಕ ನಿಯಂತ್ರಣಗಳೆಲ್ಲ ಸಡಿಲವಾಗಿರುವ ಈ ಕಾಲದಲ್ಲಿ ದೇಹವೆಂಬ ಮೌಲ್ಯದ ಕುರಿತು ತಿಳಿಸುವವರಾರು? ಪುರುಷ ಸಮಾಜ ತನ್ನ ಅಸಹಾಯಕತೆ, ಆಕ್ರೋಶಗಳನ್ನು ಹೆಣ್ಣಿನ ಮೇಲೆ ದೌರ್ಜನ್ಯ ಎಸಗುವುದರ ಮೂಲಕ ತೀರಿಸಿಕೊಳ್ಳುವಂತೆ ಆದದ್ದು ಹೇಗೆ? ಇದು ಸಮಾಜ ವಿಶ್ಲೇಷಿಸಬೇಕಿರುವ ಅತಿ ಮುಖ್ಯ ವಿಚಾರವಾಗಿದೆ.  

ಎಂದರೆ ಅತ್ಯಾಚಾರ ಹೆಚ್ಚುತ್ತ ಹೋಗಲು ಸಿನಿಮಾವನ್ನೊಳಗೊಂಡಂತೆ ವಿಷುವಲ್ ಮೀಡಿಯಾ, ಮೊಬೈಲ್ ಬಳಕೆ ಮತ್ತು ಉನ್ನತ ತಂತ್ರಜ್ಞಾನ ನೇರ ಕಾರಣವಾಗಿವೆ. ಅದರ ಮೇಲೆ ನಿರ್ಬಂಧ ಹೇರದ ಹೊತು ಮಹಿಳಾ ಸುರಕ್ಷೆ ಎನ್ನುವುದು ಭಾಷಿಕ ಪದವಾಗಿ ಉಳಿಯುವುದೇ ವಿನಹ ವಾಸ್ತವವಾಗುವುದಿಲ್ಲ. ಎಂದೇ ಮೊಬೈಲು ಮತ್ತು ಅಂತರ್ಜಾಲ ಬಳಕೆ ಮೇಲೆ ಕಟ್ಟುನಿಟ್ಟಾದ ಕಣ್ಗಾವಲು ಮತ್ತು ನಿರ್ಬಂಧ ಅನಿವಾರ್ಯವಾಗಿದೆ. 

ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿ ಸಮಯ ಮಿತಿಯೊಳಗೆ ತೀರ್ಪು ನೀಡಬೇಕೆಂಬ ಬೇಡಿಕೆ ಹಳೆಯದು. ಆದರೆ ಅಷ್ಟೇ ಅಲ್ಲ, ಕಾಲಕಾಲಕ್ಕೆ ತನಿಖೆಯ ಪ್ರಗತಿ ಹಾಗೂ ನ್ಯಾಯಾಲಯ ಕಲಾಪಗಳ ಕುರಿತು ಸಾರ್ವಜನಿಕರಿಗೆ ತಿಳಿಸುವುದೂ ಕಡ್ಡಾಯವಾಗಬೇಕು. ಆರೋಪ ಮೇಲ್ನೋಟಕ್ಕೇ ಸಾಬೀತಾಗುವಂತಿದ್ದರೆ ಕೂಡಲೇ ಆರೋಪಿಯ ಹೆಚ್ಚುವರಿ ನಾಗರಿಕ ಸೌಲಭ್ಯಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು: ಉದಾ: ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಬ್ಯಾಂಕ್ ಖಾತೆ, ಗುರುತು ಕಾರ್ಡು ಇತ್ಯಾದಿ. ಮನುಷ್ಯನನ್ನು ಅವನ ಮಾನವ ಹಕ್ಕುಗಳಿಂದ ವಂಚಿಸುವುದು ಕ್ರೂರವೇ ಆದರೂ ಒಬ್ಬ ನಾಗರಿಕ ವ್ಯಕ್ತಿ ಎಸಗಬಹುದಾದ ಗುನ್ನೆಗಳಲ್ಲಿ ಅತ್ಯಾಚಾರಕ್ಕಿಂತ ದೊಡ್ಡ ಗುನ್ನೆ ಇಲ್ಲ. ಎಂದೇ ಬೆನೆಫಿಟ್ ಆಫ್ ಡೌಟ್ ಅತ್ಯಾಚಾರ ಆರೋಪಿಗೆ ಸಿಗದಂತೆ ನೋಡಿಕೊಳ್ಳಬೇಕು. 

ಈ ದಿಕ್ಕಿನಲ್ಲಿ ಸಮಾಜ ಮತ್ತು ಕಾನೂನು ನಿರ್ಮಾತೃಗಳು ಯೋಚಿಸುವುದು ಅವಶ್ಯ ಎನಿಸುತ್ತಿದೆ.  

***

ಉತ್ತರ ಪ್ರದೇಶದ ಬದಾವೂಂನಲ್ಲಿ ಇಬ್ಬರು ದಲಿತ ಬಾಲಕಿಯರ ಮೇಲೆ ಅತ್ಯಾಚಾರವಾಗಿ ನೇಣಿಗೇರಿಸಿದರು. ಅದಾದ ಒಂದು ವಾರದಲ್ಲಿ, ತಿಂಗಳಲ್ಲಿ ಮತ್ತೆಮತ್ತೆ ದಲಿತ ಹೆಣ್ಮಕ್ಕಳು ಅತ್ಯಾಚಾರಕ್ಕೊಳಪಟ್ಟರು. ಅದು ಕೊಂಚ ಸುದ್ದಿಯಾಯಿತಾದರೂ ದೇಶಾದ್ಯಂತ ಪ್ರತಿಭಟನೆಯ ಅಲೆ ಎಬ್ಬಿಸಲಿಲ್ಲ. ನಿರ್ಭಯಾ ಪ್ರಕರಣದಂತಹ ‘ಹೈ ಪ್ರೊಫೈಲ್’ ಕೇಸಿಗೆ ದೇಶವೇ ಎದ್ದು ಕುಣಿಯುತ್ತದೆ, ಆದರೆ ದಲಿತ ಬಾಲಕಿಯರ ಅತ್ಯಾಚಾರ ಕೊಲೆ ನಡೆದರೆ ಸಾರ್ವಜನಿಕರು, ಮಾಧ್ಯಮಗಳಷ್ಟೇ ಅಲ್ಲ, ಮಹಿಳಾ ಸಂಘಟನೆಗಳೂ ಸುಮ್ಮನಿರುತ್ತವೆ ಎಂಬ ಆರೋಪ ಕೇಳಿಬಂತು. ಅತ್ಯಾಚಾರ ಕುರಿತ ಮಾತು-ಚರ್ಚೆ-ಸಂವಾದಗಳಲ್ಲಿ ಇಂಥ ಕೆಲ ಪ್ರಶ್ನೆಗಳು ಎತ್ತಲ್ಪಟ್ಟವು. 

ನಿಜ, ಮಹಿಳಾ ಹೋರಾಟಗಾರರು ಖೈರ್ಲಾಂಜಿಯಂತಹ ಅತ್ಯಂತ ಬರ್ಬರ ಅತ್ಯಾಚಾರ ಮತ್ತು ಹತ್ಯಾಕಾಂಡದ ಸಮಯದಲ್ಲಿ ಮೌನ ವಹಿಸಿದ್ದು ಅಕ್ಷಮ್ಯ. ಜೊತೆಗೇ ಮೊದಲ ಹಂತದ ಮಹಿಳಾ ಚಳುವಳಿಯು ಜಾತಿ ಪ್ರಶ್ನೆಯನ್ನು ಎತ್ತಿಕೊಳ್ಳದೇ ಇದ್ದುದೂ ನಿಜ. ಆದರೆ ದಲಿತ ಮಹಿಳೆಯರ ಕುರಿತು ಮಹಿಳಾ ಚಳುವಳಿ ಪೂರ್ಣ ಮೌನ ವಹಿಸುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಎರಡನೇ ಹಂತದ ಮಹಿಳಾ ಚಳುವಳಿ ಹುಟ್ಟಿಕೊಂಡಿದ್ದೇ ಮಥುರಾ ಎಂಬ ಅಜ್ಞಾತ ಆದಿವಾಸಿ ಬಾಲಕಿಯ ಅತ್ಯಾಚಾರ ಪ್ರಕರಣದ ಸಮಯದಲ್ಲಿ. ಮಹಿಳಾ ದೌರ್ಜನ್ಯ ತಡೆ ಕಾನೂನನ್ನು ಗಮನಾರ್ಹವಾಗಿ ಬದಲಿಸಲು ಕಾರಣವಾದ ಲ್ಯಾಂಡ್‌ಮಾರ್ಕ್ ಕೇಸುಗಳಲ್ಲಿ - ಮಥುರಾ, ಭನವಾರಿ ದೇವಿ, ಕರ್ನಾಟಕದ ಅನಸೂಯಮ್ಮ ಮತ್ತಿತರ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದವರು ತಳಸಮುದಾಯಗಳ ಅಸಹಾಯಕ ಮಹಿಳೆಯರೇ ಆಗಿದ್ದರು ಹಾಗೂ ಅವರ ಪರವಾಗಿ ಮಹಿಳಾ ಮತ್ತಿತರ ಪ್ರಗತಿಪರ ಸಂಘಟನೆಗಳು ಹೋರಾಡಿವೆ. ಜೊತೆಗೇ ಉಮಾ ಚಕ್ರವರ್ತಿ, ಶರ್ಮಿಳಾ ರೇಗೆಯಂತಹ ಹಲವರು ಮಹಿಳಾ ಚಳುವಳಿಯಲ್ಲಿ ಜಾತಿ ಪ್ರಶ್ನೆಯನ್ನು ತುಂಬ ಗಂಭೀರವಾಗಿ ಎತ್ತಿದರು. ದಲಿತ ಮಹಿಳಾ ಸ್ತ್ರೀವಾದದ ಇರುವಿಕೆಯನ್ನೂ, ಅದರ ಪ್ರಾಮುಖ್ಯತೆಯನ್ನೂ ತೋರಿಸಿ ಕೊಟ್ಟರು. 

ನಿಜ, ನಿರ್ಭಯಾ ಪ್ರಕರಣ ಎಬ್ಬಿಸಿದ ಅಲೆಯನ್ನು ಇತ್ತೀಚಿನ ಯಾವ ದೌರ್ಜನ್ಯವೂ, ದುರುಳತನವೂ ಎಬ್ಬಿಸಿರಲಿಲ್ಲ. ಇದಕ್ಕೆ ಕಾರಣ ಹಲವಿವೆ. ಆ ಪ್ರಕರಣ ಏಕಾಏಕಿ ಎಲ್ಲರ ಗಮನ ಸೆಳೆದದ್ದು ಅದು ದೇಶದ ರಾಜಧಾನಿಯಲ್ಲಿ, ಅದೂ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಸಂಭವಿಸಿತು ಎಂಬ ಕಾರಣಕ್ಕೆ. ಜೊತೆಗೆ ಆ ಕಾಲದಲ್ಲಿ ಅರವಿಂದ ಕೇಜ್ರಿವಾಲ್ ಅಲೆಯಿದ್ದು ಆಮ್‌ಆದ್ಮಿ ಪಕ್ಷ ಪ್ರತಿಭಟನೆಗೆ ಬೆಂಬಲ ಸೂಚಿಸಿತ್ತು. ಆ ಪ್ರಕರಣದ ಬರ್ಬರತೆ ಎಷ್ಟಿತ್ತೆಂದರೆ ಅದು ಮಾಧ್ಯಮಗಳಿಗೆ ಅತಿರೋಚಕ ‘ಸ್ಟೋರಿ’ಯಾಗಿ ಕಾಣಿಸಿತು. ಹೀಗೆ ಮೀಡಿಯಾಗಳ ಅತಿ ಬಿಂಬಿಸುವಿಕೆಗೆ ಒಳಗಾಗಿ ಪ್ರತಿಭಟನೆ ಕಾವು ಪಡೆಯಿತು. ಜೊತೆಗೆ ಆ ಹುಡುಗಿ ತೀರಿಕೊಂಡ ಮೇಲೆ ದೊರಕಿದ ವಿವರಗಳಿಂದ ಕ್ರೌರ್ಯದ ಬರ್ಬರತೆಗೆ ದೇಶವೇ ಬೆಚ್ಚಿಬೀಳುವಂತಾಯಿತು. ಯುವ ಜನತೆ ವಿಶೇಷವಾಗಿ ಬೀದಿಗಿಳಿಯಿತು. 

ನಿರ್ಭಯಾ ಮೇಲೆ ಅತ್ಯಾಚಾರವಾದಾಗ ಅವಳ ಜಾತಿ ಯಾರಿಗೂ ಗೊತ್ತಿರಲಿಲ್ಲ. ಅವಳು ಕೆಳ ಮಧ್ಯಮ ವರ್ಗದ ಮೇಲ್ಜಾತಿ ಹುಡುಗಿಯಾಗಿದ್ದಳು ಎಂದು ಬಹಳ ಕಾಲದ ನಂತರ ತಿಳಿಯಿತು. ಅವಳು ಯಾವ ಜಾತಿ-ವರ್ಗದವಳೇ ಆಗಿರಲಿ: ಸಾಯುವ ಗಳಿಗೆಯಲ್ಲೂ ಸಾಕ್ಷ್ಯ ಒದಗಿಸಿದಳು, ತ್ವರಿತವಾಗಿ ವರ್ಮಾ ಸಮಿತಿಯ ವರದಿ ಹೊರಬಂತು, ಕಳೆದ ಏಪ್ರಿಲಿನಲ್ಲಿ ಅತ್ಯಾಚಾರ ಕಾಯ್ದೆ ತಿದ್ದುಪಡಿಯಾಯಿತು. ಅವಳ ನೆಪದಲ್ಲಿ ಸಂಭವಿಸಿದ ಜಾಗೃತಿ, ಬದಲಾವಣೆಯ ಕಾರಣಕ್ಕಾಗಿ ಪ್ರಾಣಬಿಟ್ಟ ಆ ಹುಡುಗಿಯನ್ನು ಅವಳ ಜಾತಿ ಯಾವುದಾದರೇನು, ಎಲ್ಲರೂ ನೆನೆಯಲೇಬೇಕು.

ದೆಹಲಿಯ ನಂತರ ಗಮನ ಸೆಳೆದ ಮುಂಬಯಿ ಪತ್ರಕರ್ತೆಯ ಪ್ರಕರಣ, ಈಗ ಬೆಂಗಳೂರಿನ ಪ್ರಕರಣ ಗಮನಿಸಿದರೆ ಒಂದು ವಿಷಯ ಗಟ್ಟಿಯಾಗುತ್ತದೆ: ಅತ್ಯಾಚಾರ ಸಂಭವಿಸುವ ಸ್ಥಳ ಮತ್ತು ದೌರ್ಜನ್ಯಕ್ಕೆ ಈಡಾದವರ/ಆರೋಪಿಗಳ ವರ್ಗ ಖಂಡಿತವಾಗಿಯೂ ತನಿಖೆ, ತೀರ್ಪು, ಮಾಧ್ಯಮದವರ ಪ್ರತಿಕ್ರಿಯೆ ಎಲ್ಲದರ ಮೇಲೂ ಪ್ರಭಾವ ಬೀರುತ್ತವೆ. ಯಾವುದೋ ಹಳ್ಳಿಯ ಮೂಲೆಯಲ್ಲಿ ಸಂಭವಿಸಿದ ಯಾವುದೋ ಹೆಣ್ಣಿನ ಅತ್ಯಾಚಾರಕ್ಕೆ ಮೀಡಿಯಾಗಳು ಹೆಚ್ಚುಕಾಲ ಸ್ಪಂದಿಸುವುದಿಲ್ಲ, ದೇಶವೇ ಎದ್ದು ಬೀದಿಗಿಳಿಯುವುದಿಲ್ಲ, ಅಂಥವು ಯಾರ ಗಮನಕ್ಕೂ ಬರದೇ ಹೋಗುವ ಸಾಧ್ಯತೆಯೇ ಹೆಚ್ಚು.

ವರ್ಗ/ಜಾತಿ ತಾರತಮ್ಯ ಹಂತಹಂತವಾಗಿ ಅಸಹಾಯಕರನ್ನು ಬಲಿ ತೆಗೆದುಕೊಳ್ಳುವ ವ್ಯವಸ್ಥೆಯಲ್ಲಿ ಅತ್ಯಾಚಾರವನ್ನು ಹೇಗೆ ನಿಗ್ರಹಿಸಬೇಕು ಎಂಬ ಪ್ರಶ್ನೆ ಏಳುತ್ತದೆ. ನಮಗನಿಸುವಂತೆ ಈ ದೇಶದ ಎಲ್ಲ ಪ್ರಜ್ಞಾವಂತರಿಗೆ ಒಂದೇಒಂದು ದಾರಿ ಉಳಿದಿದೆ: ನಮ್ಮ ಸುತ್ತ ಯಾವುದೇ ಹೆಣ್ಣುಜೀವ ದೌರ್ಜನ್ಯಕ್ಕೊಳಗಾಗಿದ್ದು ತಿಳಿದರೂ ನಮ್ಮ ಬಳಿ ಸಾಧ್ಯವಾದ ಎಲ್ಲ ರೀತಿಯಲ್ಲೂ ದನಿಯೆತ್ತಬೇಕು. ಭಾಷಣ, ಬರಹ, ಸಂಘಟನೆ ಇನ್ನಿತರ ರೂಪದಲ್ಲಿ ಒತ್ತಡ ತರಲು ಪ್ರಯತ್ನಿಸಬೇಕು. ಯಾವುದೋ ನಾಯಕ, ಸಂಘಟನೆ, ಆಯೋಗದ ಅಧ್ಯಕ್ಷರು, ಕೋರ್ಟು, ಪೊಲೀಸರು ಅವರಾಗೇ ನಮ್ಮ ಬಳಿ ಬಂದು ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆಯನ್ನು ಜನಸಾಮಾನ್ಯರು ಇಟ್ಟುಕೊಳ್ಳದೇ ತತ್‌ಕ್ಷಣದ ಪ್ರತಿಕ್ರಿಯೆ ಜನರಿಂದಲೇ, ಸ್ಥಳೀಯರಿಂದಲೇ ಬರಬೇಕು. ಆರೋಪಿಯನ್ನು ಪತ್ತೆ ಹಚ್ಚುವಲ್ಲಿ, ದೌರ್ಜನ್ಯ ತಡೆಯುವಲ್ಲಿ ಈ ತೆರನ ನಾಗರಿಕ ಜಾಗೃತಿ ಅತ್ಯಂತ ಅವಶ್ಯವಾಗಿದೆ ಹಾಗೂ ಏಕೈಕ ಮಾರ್ಗವಾಗಿದೆ.


Monday, 21 July 2014

ಕೇದಾರನಾಥ ದುರಂತ: ಅಭಿವೃದ್ಧಿಯ ಮಹಾ ಬಲಿ





ಜುಲೈ ೧೬-೧೭, ೨೦೧೩. ಉತ್ತರಾಖಂಡ ರಾಜ್ಯದಲ್ಲಿ ಮೇಘಸ್ಫೋಟ ಸಂಭವಿಸಿ ಮಂದಾಕಿನಿ ನದಿ ಉಕ್ಕಿತು. ಹರಿವಿನ ದಿಕ್ಕು ಬದಲಿಸಿ ಸರಸ್ವತಿ ನದಿಯೊಂದಿಗೆ ಕೂಡಿಕೊಂಡಿತು. ಕೇದಾರನಾಥ ಕಣಿವೆಯ ಎರಡೂ ಕಡೆ ನದಿ ಆವರಿಸಿತು. ೪೨೦೦ ಹಳ್ಳಿಗಳು ಬಳಿದುಕೊಂಡು ಹೋದವು. ೧೪೫ ಸೇತುವೆ ಕೊಚ್ಚಿ ಹೋದವು. ಸುಮಾರು ೩೦೦೦ ಮನೆಗಳು ನೆಲ ಕಚ್ಚಿದವು. ಕೆಟ್ಟ ಹವಾಮಾನದಲ್ಲಿ ಅನ್ನ ನೀರಿಲ್ಲದೇ ಎಲ್ಲೆಲ್ಲೋ ಸಿಕ್ಕಿಹಾಕಿಕೊಂಡ ಒಂದು ಲಕ್ಷ ಜನರನ್ನು ಭಾರತೀಯ ರಕ್ಷಣಾ ಪಡೆಯ ಯೋಧರು ಆಕಾಶಮಾರ್ಗದ ಮೂಲಕ ಸುರಕ್ಷಿತ ಸ್ಥಳ ತಲುಪಿಸಿದರು. ಹಲವರು ಮರುಜನ್ಮ ಪಡೆದವರಂತೆ ಅಪಾಯದಿಂದ ಪಾರಾಗಿ ಬಂದರೂ, ೧೨ ಸಾವಿರಕ್ಕಿಂತ ಹೆಚ್ಚು ಜನ, ೮-೯ ಸಾವಿರ ಜಾನುವಾರು ಪ್ರಾಣ ಕಳೆದುಕೊಂಡರು. ಎಷ್ಟೋ ದಿನಗಳವರೆಗೂ ಶವಗಳು, ದೇಹದ ಅರೆಬರೆ ಕೊಳೆತ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. 

ಈಗಲೂ ಆ ದಾರಿಯಲ್ಲಿ ಮಾನವ ಅಸ್ಥಿಪಂಜರಗಳು ಸಿಗುತ್ತಲಿವೆ, ಸತ್ತ ಎಷ್ಟೋ ಕಾಲದ ನಂತರ ಅಂತ್ಯ ಸಂಸ್ಕಾರಕ್ಕೊಳಗಾಗುತ್ತಲೇ ಇವೆ..

ಹಿಮಾಲಯ ಪ್ರದೇಶದಲ್ಲಿ ಭೂ ಕುಸಿತ ಎಂದಿನಿಂದ ಸಂಭವಿಸುತ್ತಲೇ ಇದೆ. ಮೇಘಸ್ಫೋಟ, ಪ್ರವಾಹವೂ ಅಷ್ಟೇ. ಆದರೆ ಆಗೆಲ್ಲ ಹತ್ತಾರು, ನೂರಾರು ಜನ ಪ್ರಾಣ ಕಳೆದುಕೊಂಡಿದ್ದರೇ ಹೊರತು ಇಂಥ ಭಾರೀ ಅನಾಹುತ ಸಂಭವಿಸಿರಲಿಲ್ಲ. ಕಳೆದ ವರ್ಷ ಮಾತ್ರ ಈ ಮೊದಲು ಕಂಡು ಕೇಳರಿಯದ ಪ್ರಮಾಣದಲ್ಲಿ ಸಾವುನೋವು ಸಂಭವಿಸಿತ್ತು. ಎಂದೂ ಇಷ್ಟು ಕೋಪಗೊಳ್ಳದ ‘ಗಂಗಾಜಿ’ ಈಗೇಕೆ ಮುನಿದಳೆಂದು ಕೆಲವರು ಕಾರಣ ಹುಡುಕತೊಡಗಿದರು. ನೇಪಾಳಿಗಳು ತಮ್ಮ ಜೊತೆ ಹೆಂಡ, ಮಾಂಸ, ಹೆಂಗಸರನ್ನು ಕರೆತಂದು ಈ ಪ್ರದೇಶವನ್ನು ಅಪವಿತ್ರಗೊಳಿಸಿದ್ದಕ್ಕೇ ಗಂಗಾಮಾತೆಗೆ ಸಿಟ್ಟು ಬಂತು ಎಂದರು. ಧಾರ್ಮಿಕ ಮನೋಭಾವದ ಜಗತ್ತು ಹುಡುಕುವ ನೆಪಗಳೇನೇ ಇರಲಿ, ಉತ್ತರಾಖಂಡದಲ್ಲಿ ಆದದ್ದು ಕೇವಲ ಪ್ರಕೃತಿ ವಿಕೋಪವಲ್ಲ, ಅದು ಪ್ರಕೃತಿಯನ್ನು ಹೇಗೆಂದರೆ ಹಾಗೆ ಗಾಸಿಗೊಳಿಸಿದರೆ ಕೊನೆಗೆ ಅದರ ಅಪಾಯಕರ ದವಡೆಯಲ್ಲಿ ಸಿಲುಕಿ ಮನುಷ್ಯ ಹೇಗೆ ನುಚ್ಚು ನೂರಾಗುತ್ತಾನೆ ಎಂಬ ಎಚ್ಚರಿಕೆಯ ಪಾಠ. 

ದೇವಪ್ರಯಾಗ, ರುದ್ರ ಪ್ರಯಾಗ, ಗೌರೀಕುಂಡ, ಕೇದಾರನಾಥಗಳೆಂಬ ನಾಲ್ಕು ಧಾಮಗಳು ಹಿಮಾಲಯದ ಘರವಾಲ್ ಪರ್ವತಶ್ರೇಣಿಯ ಧಾರ್ಮಿಕ ಶ್ರದ್ಧಾ ಸ್ಥಳಗಳು. ಅದರಲ್ಲಿ ೧೨ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದೆಂದು ಬಣ್ಣಿಸಲ್ಪಡುವ, ೮ನೇ ಶತಮಾನದಲ್ಲಿ ಶಂಕರಾಚಾರ್ಯರಿಂದ ಪುನರುಜ್ಜೀವನಗೊಂಡದ್ದೆಂದೂ ಹೇಳಲಾಗುವ ಕೇದಾರನಾಥ ದೇವಾಲಯ ಬಹಳಷ್ಟು ಆಸ್ತಿಕರನ್ನು ಸೆಳೆಯುತ್ತದೆ. ಕೇದಾರನಾಥ ದೇವಾಲಯ ಸಮುದ್ರ ಮಟ್ಟದಿಂದ ೧೧,೭೫೫ ಅಡಿ ಎತ್ತರದಲ್ಲಿದೆ. ಹವಾಮಾನ ವೈಪರೀತ್ಯದಿಂದ ವರ್ಷದ ಆರು ತಿಂಗಳು ಏಪ್ರಿಲ್‌ನಿಂದ ನವೆಂಬರ್‌ವರೆಗೆ, ಅಕ್ಷಯ ತದಿಗೆಯಿಂದ ಕಾರ್ತೀಕ ಹುಣ್ಣಿಮೆಯವರೆಗೆ ಮಾತ್ರ ತೆರೆದಿರುತ್ತದೆ. ಉಳಿದ ಆರು ತಿಂಗಳು ಮೂರ್ತಿಯನ್ನು ಉಖಿ ಮಠಕ್ಕೆ ತಂದು ಪೂಜಿಸಲಾಗುತ್ತದೆ. ಕುತೂಹಲದ ವಿಷಯವೆಂದರೆ ಹಿಮಾಚ್ಛಾದಿತ ಶಿಖರಗಳಿಂದ ಆವೃತವಾದ ಕೇದಾರದ ಪ್ರಧಾನ ಅರ್ಚಕರು ಕರ್ನಾಟಕದ ಮಲ್ಲು ವೀರಶೈವ ಜಂಗಮ ಸಮುದಾಯದವರು. ಪರಂಪರಾನುಗತವಾಗಿ ಅಲ್ಲಿ ಕರ್ನಾಟಕದ ಅರ್ಚಕರೇ ಇದ್ದಾರೆ. ಮಂತ್ರವನ್ನು ಕನ್ನಡದಲ್ಲೂ ಹೇಳಲಾಗುತ್ತದೆ. ಈಗ ಪ್ರಧಾನ ಅರ್ಚಕರಾಗಿರುವವರು ಹರಿಹರ ತಾಲೂಕಿನ ಬಾನುವಳ್ಳಿ ಎಂಬ ಹಳ್ಳಿಯ ವಾಗೀಶ ಲಿಂಗಾಚಾರ್ಯ ಎಂಬುವವರು. 

ಈ ನಾಲ್ಕು ಧಾಮಗಳು ದೇವಲೋಕಕ್ಕೆ ಸೇರಿದವೆಂದೇ ಹಿಂದೂಗಳ ನಂಬಿಕೆ. ದೇವಪ್ರಯಾಗದ ಆಚೆ ದೇವರಿದ್ದಾರೆಂದು ನಂಬಲಾಗಿದೆ. ಹಿಂದೂ ಪ್ರವಾಸಿಗಳು ಇತ್ತೀಚೆಗೆ ಆ ಧಾಮಗಳಿಗೆ ಎಷ್ಟು ಸಂಖ್ಯೆಯಲ್ಲಿ ಭೇಟಿ ನೀಡತೊಡಗಿದರೆಂದರೆ ಬಹುಶಃ ದೇವರು ನಿಜವಾಗಿ ಅಲ್ಲಿದ್ದಿದ್ದರೆ ಖಂಡಿತ ಓಡಿಹೋಗಿರುತ್ತಾನೆ. ದುರಂತ ಸಂಭವಿಸಿದಾಗ ಆ ಪ್ರದೇಶದಲ್ಲಿದ್ದ ಯಾತ್ರಿಗಳ ಅಧಿಕೃತ ಸಂಖ್ಯೆ ೭೧,೪೪೦! ಅಲ್ಲಿನ ಯಾವ ಪರ್ವತವೂ ೩,೦೦೦ಕ್ಕಿಂತ ಹೆಚ್ಚು ಜನರನ್ನು ಹಿಡಿಸಲಾರದು. ಜೊತೆಗೆ ಹಿಮಾಲಯ ಪರ್ವತ ಉಕ್ಕಿನ ಬೆಟ್ಟ ಅಲ್ಲ. ಅದು ಇತ್ತೀಚೆಗೆ ಉದ್ಭವಿಸಿದ ಪರ್ವತ. (ಹೋಲಿಕೆಗಾಗಿ ಹೇಳುವುದಾದರೆ ಹಿಮಾಲಯ ೧ ಕೋಟಿ ವರ್ಷ ಹಳೆಯದು, ಅರಾವಳಿ ಪರ್ವತ ಶ್ರೇಣಿ ೧೦೦ ಕೋಟಿ ವರ್ಷ ಹಳೆಯದು!) ಅದರ ಗಾತ್ರ ಭಾರೀ ಆದರೂ ಅದು ತೀರ ಸಡಿಲ ಮಣ್ಣಿನ ಪ್ರದೇಶ. 



ಇತ್ತೀಚಿನವರೆಗೂ ಆ ಎತ್ತರದ ಹಿಮಾಲಯ ಪರ್ವತಶ್ರೇಣಿಯ ಇಳಿಜಾರುಗಳಲ್ಲಿ ಕೆಲವೇ ಜನ ವಿಶಿಷ್ಟ ಸ್ಥಳೀಯ ವಿನ್ಯಾಸದ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಆದರೆ ಈಗ ಪ್ರವಾಸೋದ್ಯಮ ಲಾಭದಾಯಕ ಉದ್ದಿಮೆಯಾಗಿ ಬೆಳೆಯತೊಡಗಿದ ಮೇಲೆ ದಿನನಿತ್ಯ ಸಾವಿರಾರು ಪ್ರವಾಸಿಗಳು ಬರತೊಡಗಿದರು. ಎಷ್ಟು ಜನ ಎಂದರೆ ಕೇದಾರನಾಥ ದೇವಾಲಯವೊಂದರಲ್ಲೇ ೧೦೦ ಜನ ಪುರೋಹಿತರಿದ್ದರು! ಆಚೀಚಿನ ಸಣ್ಣಪುಟ್ಟ ದೇವಾಲಯಗಳನ್ನು ಸೇರಿಸಿದರೆ ಒಟ್ಟು ೧೦೦೦ ಜನ ನೇಮಕಗೊಂಡಿದ್ದರು. ದಿನಾಲೂ ಬೇಸ್ ಕ್ಯಾಂಪಿನಿಂದ ನೋಂದಾಯಿಸಲ್ಪಟ್ಟ ೫,೫೦೦ ಕುದುರೆಗಳು, ನಾಲ್ಕು ಮನುಷ್ಯರು ಹೆಗಲ ಮೇಲೆ ಹೊತ್ತೊಯ್ಯುವ ಲೆಕ್ಕವಿಲ್ಲದಷ್ಟು ಡೋಲಿಗಳು ೧೪ ಕಿ.ಮೀ ಎತ್ತರದಲ್ಲಿರುವ ದೇವಸ್ಥಾನಕ್ಕೆ ಭಕ್ತಾದಿಗಳನ್ನು ಒಯ್ಯುತ್ತಲಿದ್ದವು. ಕಳೆದ ೧೦ ವರ್ಷಗಳಲ್ಲಿ ಯಾತ್ರೆಗಾಗಿ ಬರುವವರ ಸಂಖ್ಯೆ ಮೂರು ಪಟ್ಟು ಹೆಚ್ಚಿತ್ತು. ಇಷ್ಟು ಜನರ ಅವಶ್ಯಕತೆ ಪೂರೈಸಲು ನದಿದಡದಲ್ಲಿ ಸಾವಿರಾರು ಹೋಟೆಲು, ಅಂಗಡಿ, ಮುಂಗಟ್ಟುಗಳು ತಲೆಯೆತ್ತಿದ್ದವು. ಅಲ್ಲಿ ಪ್ರವಾಹ, ಭೂ ಕುಸಿತ ತುಂಬ ಸಾಮಾನ್ಯ. ಆದರೂ ಗಟ್ಟಿಯಿಲ್ಲದ ನೆಲದಲ್ಲಿ ಪಿಲ್ಲರನ್ನು ನೆಚ್ಚಿ ನದೀ ದಡದಲ್ಲೇ ಕಾಂಕ್ರೀಟ್ ಕಟ್ಟಡಗಳ ಕಾಡು ಎದ್ದಿತ್ತು.



ಕೇದಾರನಾಥವಷ್ಟೇ ಅಲ್ಲ, ಎಲ್ಲೆಲ್ಲಿ ನೋಡಿದರೂ ಅಭಿವೃದ್ಧಿಯೋ ಅಭಿವೃದ್ಧಿ. ಹಿಮಾಲಯದಲ್ಲಿ ಸಾರ್ವಜನಿಕರ ಮತ್ತು ಪರಿಸರ ತಜ್ಞ/ವಿಜ್ಞಾನಿಗಳ ವಿರೋಧದ ಹೊರತಾಗಿಯೂ ಅಣೆಕಟ್ಟುಗಳು ತಲೆಯೆತ್ತತೊಡಗಿದವು. ಗಂಗಾ ನದಿ ಮತ್ತದರ ಉಪನದಿಗಳಿಗೆ ಒಟ್ಟೂ ೬೦೦ ಅಣೆಕಟ್ಟುಗಳು ಕಟ್ಟಲ್ಪಟ್ಟವು ಅಥವಾ ನಿರ್ಮಾಣ ಹಂತದಲ್ಲಿದ್ದವು. ಹಿಮಾಲಯದ ಬಹುತೇಕ ನದಿಗಳ ಪಾಡು ಇದೇ ಆಯಿತು. ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ’ ವತಿಯಿಂದ ಮೂಲೆಮೂಲೆಯ ಹಳ್ಳಿಗಳಿಗೂ ರಸ್ತೆಯಾಯಿತು. ಜೊತೆಗೆ ದಿನದಿನಾ ಹೆಚ್ಚೆಚ್ಚು ಸಂಖ್ಯೆಯಲ್ಲಿ ಬರತೊಡಗಿದ ವಾಹನಗಳಿಗೆ ಅನುಕೂಲ ಕಲ್ಪಿಸಲು ರಸ್ತೆ ಅಗಲೀಕರಣ ನಡೆಯಿತು. ಇವೆಲ್ಲ ಕಾಮಗಾರಿಗೆ ಟೆಂಡರ್ ಕರೆಯುವುದರಲ್ಲಿ ಕಾಂಟ್ರಾಕ್ಟರುಗಳು ಓಡೋಡಿ ಬಂದರು. ಬೆಟ್ಟ ಕುಸಿದೀತೋ, ನದಿ ಉಕ್ಕೀತೋ - ಯಾವ ವೈಜ್ಞಾನಿಕ ಜ್ಞಾನವಿಲ್ಲದೆ; ಪರಿಸರದ ಮೇಲೆ ಕಾಳಜಿಯಿಲ್ಲದೆ ಬೇಕೆಂದಲ್ಲೆಲ್ಲ ಬಂಡೆಗಳನ್ನು ಡೈನಮೈಟ್ ಇಟ್ಟು ಒಡೆಯಲಾಯಿತು. ಸಿಡಿವ ಬಂಡೆ ತನ್ನ ಸುತ್ತಲ ಮಣ್ಣನ್ನು ಸಡಿಲಗೊಳಿಸಿ ಮಳೆ ಸುರಿದಾಗ ಭೂಮಿ ಧಸದಸ ಕುಸಿಯುವ ಸಾಧ್ಯತೆ ಹೆಚ್ಚಾಯಿತು. ಆದರೆ ಈ ತಲೆಬಿಸಿ ಕಾಮಗಾರಿ ಮುಗಿಸುವ ತರಾತುರಿಯ ಕಂಟ್ರಾಕ್ಟರುಗಳಿಗೆ ಅಥವಾ ಪರ್ಸೆಂಟೇಜು ಲೆಕ್ಕದಲ್ಲಿ ರಸ್ತೆಯ ಟಾರು, ಜಲ್ಲಿ, ಕಲ್ಲು ಎಲ್ಲವನ್ನೂ ತಿನ್ನುವ ಅಧಿಕಾರಿಗಳಿಗೆ ತಟ್ಟಲಿಲ್ಲ. ಅವೈಜ್ಞಾನಿಕವಾಗಿ ನಡೆಯುತ್ತ ಹೋದ ನಿರ್ಮಾಣ ಕಾಮಗಾರಿಯ ಕಾರಣದಿಂದ ಭೂಕುಸಿತ ಪ್ರತಿ ವರ್ಷ ಸಂಭವಿಸತೊಡಗಿತು. 



ಹೀಗೆ ಮನಸೋ ಇಚ್ಛೆ ಹಸ್ತಕ್ಷೇಪ ಮಾಡಿದ್ದಕ್ಕೆ ಪ್ರತಿಕ್ರಿಯೆಯೋ ಎನ್ನುವಂತೆ ಮಹಾ ಮೇಘಸ್ಫೋಟ ಸಂಭವಿಸಿತು. ಇದ್ದಕ್ಕಿದ್ದಂತೆ ಊಹಿಸಿಕೊಳ್ಳಲಾಗದಷ್ಟು ದೊಡ್ಡ ಪ್ರಮಾಣದಲ್ಲಿ ಭಾರೀ ಮಳೆಯಾಯಿತು. ಹಿಮನದಿ ಉಕ್ಕಿತು. ಮಂದಾಕಿನಿ ಸೊಕ್ಕಿತು. ಎಲ್ಲೆಲ್ಲೂ ನೀರೇ ನೀರು. ತಕ್ಷಣಕ್ಕೆ ಬಂದು ಏರಿದ ಪ್ರವಾಹ ಕೇದಾರನಾಥ ಕಣಿವೆಯಲ್ಲಿ ಮರಗಿಡ, ಬಂಡೆಕಲ್ಲು, ಕಸಕಡ್ಡಿ, ಪಶುಪಕ್ಷಿಮನುಷ್ಯರಾದಿಯಾಗಿ ದಾರಿಗಡ್ಡ ಬಂದದ್ದನ್ನೆಲ್ಲ ಕೊಚ್ಚಿ ಹಾಕಿತು. ದೇವಸ್ಥಾನ ಮತ್ತೆ ರಿಪೇರಿಯಾಗದೇನೋ ಎನ್ನುವಷ್ಟು ಹಾಳಾಯಿತು. ರಸ್ತೆ, ಮನೆ, ಹೋಟೆಲುಗಳು ನಾಶಗೊಂಡವು. ಎಲ್ಲೆಡೆ ಮೃತದೇಹಗಳೂ, ಕಸವೂ, ಕೆಸರೂ, ಕಲ್ಲುಬಂಡೆಗಳೂ ತುಂಬಿಕೊಂಡವು. ಕೇದಾರ ಕಣಿವೆ ಕೆಮ್ಮಣ್ಣಿನ ನೀರು ಕೊಚ್ಚಿತಂದ ಅವಶೇಷಗಳಡಿಯಲ್ಲಿ ಹೂತು ಹೋಯಿತು. 




ಕಳೆದ ವರ್ಷ ಅಷ್ಟೆಲ್ಲ ಆದರೂ ಪೂರ್ತಿ ಪುನರ್‌ನಿರ್ಮಾಣ ಕಾಮಗಾರಿ ಆಗುವ ಮೊದಲೇ ಈ ವರ್ಷವೇ ಭಕ್ತರಿಗೆ ಭೇಟಿಯ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ೨೫೦ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದುವರೆಗೆ ೨೬ ಸಾವಿರಕ್ಕಿಂತ ಹೆಚ್ಚು ಭಕ್ತರು ಕೇದಾರನಾಥಕ್ಕೆ ಬಂದಿದ್ದಾರೆ. ಈಗ ಅಲ್ಲಿ ನದಿಯ ನೀರಿನಂತೆಯೇ ಕೋಟಿಗಟ್ಟಲೆ ಹಣ ಭರಪೂರ ಹರಿದು ಬರುತ್ತಿದೆ. ರೂಪಾಯಿಯಲ್ಲಿ, ಡಾಲರುಗಳಲ್ಲಿ ಸಹಾಯವೆಂದೋ, ಸಾಲವೆಂದೋ ಕೋಟ್ಯಂತರ ಹಣ ಸಂಗ್ರಹವಾಗಿದೆ. ಎಲ್ಲೆಡೆ ಪುನರ್‌ನಿರ್ಮಾಣದ ಕೆಲಸ ನಡೆಯುತ್ತಿದೆ. 

ಆದರೆ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಭವಿಷ್ಯದಲ್ಲಿ ಇಂಥದನ್ನು ತಡೆಯಲು ಸೂಕ್ತ ಯೋಜನೆ ಹಾಕಿಕೊಳ್ಳಬೇಕು. ಯಾತ್ರಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸಬೇಕು. ಸಾಹಸ, ಜಲಕ್ರೀಡೆ, ಟ್ರೆಕಿಂಗ್ ಎಂದು ಹಿಮಾಲಯಕ್ಕೆ ಹೋಗುವವರ ಬಗ್ಗೆ ನಿಗಾ ಇಡಬೇಕು. ಬೇಸ್‌ಕ್ಯಾಂಪಿನಲ್ಲೇ ಸಾಧ್ಯವಾದಷ್ಟು ನಿಯಂತ್ರಣ, ಮಾಹಿತಿ ನೀಡಬೇಕು. ಜನರ ಮನವೊಲಿಸಿ ಅಪಾಯಕರ ಪ್ರದೇಶದಿಂದ ಸುರಕ್ಷಿತ ಸ್ಥಳಗಳಿಗೆ ಅವರನ್ನು ಕಳಿಸಬೇಕು.

ಪ್ರಕೃತಿಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಅದನ್ನು ತನಗಿಷ್ಟ ಬಂದಂತೆ ಬದಲಿಸಿ, ಮುರಿದು, ಮತ್ತೆ ಕಟ್ಟುವುದೇ ಅಭಿವೃದ್ಧಿ ಎಂದು ಮನುಷ್ಯ ಭಾವಿಸಿದ್ದಕ್ಕೆ ಸಂಭವಿಸಿದ್ದು ಕೇದಾರನಾಥ ದುರಂತ. ನಮ್ಮ ಅಭಿವೃದ್ಧಿ ಮಾದರಿ ಕುರಿತ ಕಲ್ಪನೆಗಳನ್ನು ನಿಕಷಕ್ಕೊಡ್ಡಿಕೊಳ್ಳಬೇಕಿದೆ ಎಂದು ಪ್ರಕೃತಿ ಕೊಟ್ಟ ಎಚ್ಚರಿಕೆ ಕೇದಾರನಾಥ ದುರಂತ. 

ಧರ್ಮ ಮತ್ತು ದೇವರು ಎಂದಿನಂತೆ ಈಗಲೂ ಅಲೌಕಿಕವಾದದ್ದಕ್ಕಿಂತ ಲೌಕಿಕ ಪ್ರಾಪ್ತಿಗೇ ಹೆಚ್ಚು ಬಳಕೆಯಾಗುವವರು. ಆಧುನಿಕ ಕಾಲದಲ್ಲಿ ಅಭಿವೃದ್ಧಿ, ಸಂಪರ್ಕ, ಹಣ, ತಂತ್ರಜ್ಞಾನ ಎಲ್ಲವೂ ಅವುಗಳ ಉತ್ಕರ್ಷದ ಪರಿಕರಗಳಾಗಿವೆ. ಧರ್ಮ, ದೇವರ ಹೆಸರಿನಲ್ಲಿ ಅನ್ಯಾಯ, ಅಕ್ರಮಗಳು ಹಿಂದೆಂದಿಗಿಂತ ಹೆಚ್ಚು ಸಂಭವಿಸುತ್ತಿರುವಾಗ ‘ಎನ್ನ ಕಾಲೇ ಕಂಭ, ದೇಹವೇ ದೇಗುಲ’ ಎಂಬ ಉನ್ನತ ಆಧ್ಯಾತ್ಮಿಕತೆಯನ್ನು ಜನರಿಗೆ ಅರ್ಥ ಮಾಡಿಸುವವರಾರು? ಕೇವಲ ತೀರ್ಥಕ್ಷೇತ್ರಗಳ ದರ್ಶನದಿಂದ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ ಎಂದು ಬೋಧಿಸುವವರಾರು? ಅಸಂಖ್ಯ ಸ್ವಾಮಿ-ಮಠ-ಧಾರ್ಮಿಕ ಚಾನೆಲ್ಲುಗಳು ಜನಸಾಮಾನ್ಯರಿಗೆ ಚಮಚದಲ್ಲಿ ಉಣಬಡಿಸುತ್ತಿರುವ ಆಧ್ಯಾತ್ಮಿಕತೆಯಾದರೂ ಎಂಥದು? ಉಳ್ಳವರು, ಅಧಿಕಾರ ಹಿಡಿದವರು ದೇವರು-ಧರ್ಮ-ಬಂಡವಾಳ ಈ ಮೂರರ ಮೇಲೂ ಹಿಡಿತ ಹೊಂದಿರುವಾಗ ಜನರಿಗೆ ನೈಜ ಧಾರ್ಮಿಕತೆಯನ್ನು ತಿಳಿಸಿ ಹೇಳುವವರು ಯಾರು? 

ಸಂಭವಾಮಿ ಯುಗೇಯುಗೇ ಎಂದ ಭಗವಂತ ಇಂಥ ಅಂತರಂಗದ ದುರಸ್ತಿ ಕೆಲಸಕ್ಕಾಗಿ ಮತ್ತೆ ಹುಟ್ಟಿ ಬಂದಿದ್ದರೆ ಚೆನ್ನಾಗಿತ್ತು. ಆದರೆ ಇದು ಕಲಿಯುಗ. ಮಾಡಬೇಕಾದದ್ದು ಏನಿದ್ದರೂ ನಾವೇ ಮಾಡಿಕೊಳ್ಳಬೇಕು, ನರಮನುಷ್ಯರು.. 

Thursday, 17 July 2014

ಎಮಿಲಿ ಡಿಕಿನ್ಸನ್ ಕವಿತೆ ಅನುವಾದ



ಭರವಸೆಗೆ ರೆಕ್ಕೆಗಳಿವೆ
ಆ ಹಕ್ಕಿ ಆತ್ಮದಲಿಳಿದು ತಂಗುತ್ತದೆ
ಹಾಡುವುದು, ಪದಗಳೇ ಇರದ ಹಾಡು
ಎಂದೆಂದೂ ನಿಲುಗಡೆಯಾಗದ ಹಾಡು..

ಅತಿಮಧುರ ದನಿ ಕೇಳಿಸುವುದು, ಬಿರುಗಾಳಿ
ಭಯಾನಕವಾಗಿ ಬೀಸುವಾಗಲೂ.
ಎಷ್ಟೆಷ್ಟೋ ಜೀವಗಳ ಬೆಚ್ಚಗಿಟ್ಟ
ಪುಟ್ಟ ಹಕ್ಕಿಯ ಗಾಳಿ ದಿಗಿಲುಗೊಳಿಸಬಹುದು

ಕೇಳಿರುವೆ ಆ ದನಿಯ, ಯಮಚಳಿಯ ತಾವುಗಳಲಿ
ತೇಲುತ್ತ ಅಪರಿಚಿತ ಕಡಲುಗಳಲಿ
ಆದರೂ, ಎಂದೂ, ಯಾವ ಸಂಕಟದ ಚಣದಲೂ
ಬಯಸಲಿಲ್ಲ ಅದು, ನನ್ನಿಂದ ರೊಟ್ಟಿಯ ಒಂದು ತುಣುಕನ್ನೂ.



- ಎಮಿಲಿ ಡಿಕಿನ್ಸನ್ (೧೮೩೦-೧೮೮೬)

Wednesday, 16 July 2014

ಬಸವನಹುಳು: ಅವಸರವೆಂದರೇನೆಂದೇ ತಿಳಿಯದ ಜೀವಿ!



ಮಳೆಯಿಲ್ಲ, ಮಳೆಯೇ ಬರಲಿಲ್ಲ, ಇಷ್ಟು ಕ್ಷೀಣ ಮಳೆಗಾಲವನ್ನು ಜೀವಮಾನದಲ್ಲೇ ನೋಡಿರಲಿಲ್ಲ ಎಂದು ಕರಾವಳಿಯ ಜನ ಗೊಣಗುವಾಗಲೇ ಒಂದು ತಿಂಗಳು ತಡವಾಗಿ ಜೋರು ಮಳೆಗಾಲ ಕಾಲಿಟ್ಟಿದೆ. ಮೃಗಶಿರಾ, ಆರಿದ್ರಾಗಳು ಕೈಕೊಟ್ಟರೂ ಪುನರ್ವಸು ನೆಲಕ್ಕೆ ಮರುಜೀವ ತಂದುಕೊಟ್ಟಿದೆ. ಒಂದೇ ಸಮ ಸುರಿಯುವ ಮಳೆಗೆ ಗೋಡೆ, ಸೂರು, ಬೇಲಿ ಎಲ್ಲವೂ ಬೂಸಲು ಹಿಡಿದು ಕಂದಾಗಿ, ಹಸಿರಾಗಿ ಕಂಗೊಳಿಸುವುದು ಒಂದು ಕಡೆಯಾದರೆ; ಅತಿ ಮಳೆಯ ಈ ದಿನಗಳಲ್ಲಿ ಕೆಲ ಅತಿಥಿಗಳು ಮನೆಯೊಳ ಹೊರಗೆಲ್ಲ ಸುಳಿದಾಡುತ್ತಿರುವುದು ನಿಮ್ಮ ಗಮನಕ್ಕೂ ಬಂದಿರುತ್ತದೆ. ಅಂತ ಒಬ್ಬ ಅತಿಥಿ ಚೇರಟೆಯಾದರೆ ಮತ್ತೊಂದು ಬಸವನಹುಳು ಅಥವಾ ಇಸ್ಕ. ಚೇರಟೆಗೆ ನಮ್ಮಂತೇ ಸದಾ ಧಾವಂತ, ಗಡಿಬಿಡಿ. ಅದು ನಿಧಾನ ಓಡಾಡಿದ್ದನ್ನು ಯಾರೂ ನೋಡಿರಲಿಕ್ಕಿಲ್ಲ. ಆದರೆ ಬಸವನಹುಳುವಿಗಾದರೋ ಅವಸರವೆಂದರೇನೆಂದೇ ಗೊತ್ತಿಲ್ಲ! ಸದಾ ಘನಗಂಭೀರ ಗಜಗಮನ. 

ನಮ್ಮ ಆಹ್ವಾನ, ವಿದಾಯ ಇಲ್ಲದೆ ಬಂದುಹೋಗುವ, ಇಷ್ಟವೋ ಅನಿಷ್ಟವೋ ನಿಯಮಿತವಾಗಿ ಸುತ್ತ ಸುಳಿವ ಎಷ್ಟೋ ಜೀವಿಗಳ ಇರವಿನ ಬಗೆಗೆ ನಮಗೆ ಗಮನವೇ ಇರುವುದಿಲ್ಲ. ಕನಿಷ್ಠ ಕುತೂಹಲವೂ ಕೆಲವೊಮ್ಮೆ ಹುಟ್ಟುವುದಿಲ್ಲ. ಅದಕ್ಕೆ ಕಾರಣ ಈ ಬದುಕಿನ ಧಾವಂತ ಮತ್ತು ನಿರ್ಲಕ್ಷ್ಯ. ಕಣ್ಣುಪಟ್ಟಿ ಕಟ್ಟಿಕೊಂಡ ಕುದುರೆ ಕಣ್ಣೆದುರು ಕಾಣುವಷ್ಟು ದೂರದ ರಸ್ತೆ ಕ್ರಮಿಸಲು ನಾಗಾಲೋಟದಲ್ಲಿ ಕ್ರಮಿಸುವ ಹಾಗೆ ದಿನರಾತ್ರಿಗಳನ್ನು ಕಳೆಯುತ್ತಿದ್ದೇವೆ. 

ಆದರೆ ಅಂಥ ಧಾವಂತದ ಒತ್ತಡಗಳಿಂದ ನಡುನಡುವೆ ಪಾರಾಗುವುದು ತುಂಬ ಅವಶ್ಯವಿದೆ. ಅದಕ್ಕೆ ಕಣ್ಣಿಗೆ ಕಾಣಬರುವ ಸಂಗತಿಗಳತ್ತ ಒಂದು ಸಣ್ಣ ಕುತೂಹಲವನಿಟ್ಟುಕೊಂಡು ಬೆನ್ನತ್ತಿದರೆ ಸಾಕಾಗುತ್ತದೆ. 

ಹಾಗಾದರೆ ಮೆಲುಜೀವಿ, ಮೃದ್ವಂಗಿ ಬಸವನಹುಳದ ಬದುಕಿನ ಕಡೆಗೊಮ್ಮೆ ನೋಡೋಣವೇ?

ಇಸ್ಕ: ವಿಸ್ಮಯ ಪ್ರಪಂಚ

ಈ ಕಡೆ ‘ಇಸ್ಕ’ ಎನುವ, ಘಟ್ಟದ ಮೇಲೆ ಬಸವನ ಹುಳ, ಸೂಳೆಹುಳ ಎನ್ನುವ ಜೀವಿ ಮೃದ್ವಂಗಿಗಳ ಗುಂಪಿಗೆ ಸೇರಿದ್ದು. ಅವು ಬೆನ್ನು ಹುರಿಯಿಲ್ಲದ, ವಿಭಾಗಗಳ ದೇಹವುಳ್ಳ ಜೀವಿಗಳು. ಅವು ಮನುಷ್ಯನಿಗಿಂತ ೫೦ ಕೋಟಿ ವರ್ಷ ಕೆಳಗೇ ಭೂಮಿ ಮೇಲೆ ಉದಯಿಸಿದವು. ಅವು ತಮ್ಮ ಸುತ್ತ ಎಂತಹ ಪರಿಸ್ಥಿತಿಯಿದೆಯೋ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುವ ಅದ್ಭುತ ಜೀವಿಗಳು. ಅದರಲ್ಲೂ ಇಸ್ಕ ಸರ್ವಾಂತರ್ಯಾಮಿ. ಎಲ್ಲ ವಾತಾವರಣಗಳಲ್ಲೂ, ಪ್ರದೇಶಗಳಲ್ಲೂ ಅದನ್ನು ಕಾಣಬಹುದು. ಅವಕ್ಕೆ ಸೂರ್ಯನ ಬೆಳಕೆಂದರೆ ಅಷ್ಟು ಇಷ್ಟವಿಲ್ಲ. ಎಂದೇ ಮೋಡಕವಿದ ದಿನಗಳಲ್ಲಿ ಚಟುವಟಿಕೆಯಿಂದಿರುತ್ತವೆ. ಬಿಸಿಲಿರುವ ದಿನಗಳಲ್ಲಿ ಚಿಪ್ಪಿನೊಳಗೆ ಅಡಗಿ ಹೆಚ್ಚುಕಾಲ ಕಳೆಯುತ್ತವೆ. 

ಒಂದಿಲ್ಲೊಂದು ಪಶುಪಕ್ಷಿಕ್ರಿಮಿಕೀಟ ಕಳವಳಗೊಳಿಸುವ ಈ ಮನೆಯಲ್ಲಿ ಗೊದ್ದ ಇದ್ದರೆ ಇರುವೆ ಬರುವುದಿಲ್ಲ; ಇರುವೆ ಎದ್ದರೆ ಇಸ್ಕ ಇರುವುದಿಲ್ಲ. ಜೀವಿಗಳೆಲ್ಲ ಅಂತಹ ಆಂತರಿಕ ಹೊಂದಾಣಿಕೆಯಲ್ಲಿ ಬದುಕುತ್ತಿದ್ದರೂ ಕಳೆದಬಾರಿಯ ಅತಿ ಮಳೆಗೆ ಎಲ್ಲಿ ನೋಡಿದರಲ್ಲಿ ಇಸ್ಕದ ಸಾಮ್ರಾಜ್ಯವಾಗಿತ್ತು. ಮನೆಯ ಗೋಡೆಗಳ ಮೇಲೆ, ಮರಗಿಡಗಳ ಕಾಂಡದ ಮೇಲೆ ನೇಯ್ದಿಟ್ಟ ಹಾಗೆ ಇಸ್ಕದ ಮರಿಗಳು ಕಂಡುಬರುತ್ತಿದ್ದವು. ಕೈತೊಳೆಯಲು ನಲ್ಲಿ ತಿರುಗಿಸಿದರೆ ಅದರ ಬಾಯಲ್ಲಿ ಇಸ್ಕವಿದೆ. ಮೆಟ್ಟಿಲಿಳಿಯುವಾಗ ಆಚೀಚಿನ ಸರಳು ಹಿಡಿದುಕೊಂಡರೆ ಅಲ್ಲೊಂದು ಇಸ್ಕವಿದೆ. ಒದ್ದೆ ಕೊಡೆಯ ಬಿಚ್ಚಿ ಹಿಡಿದರೆ ಹಿಡಿಕೆಯಲ್ಲಿ ಇಸ್ಕವಿದೆ. ಎಲ್ಲೋ ನೋಡುತ್ತ ಕಾಲು ತೂರಿಸಿದ ಚಪ್ಪಲಿಯೊಳಗೆ ಇಸ್ಕ ತಣ್ಣಗೆ ಸೇರಿಕೊಂಡಿದೆ. ಒಣಹಾಕಿ ವಾರವಾದರೂ ಒಣಗದ ದಪ್ಪ ಜೀನ್ಸ್ ಪ್ಯಾಂಟಿನಲ್ಲಿ ಇಸ್ಕವಿದೆ.. 

ಎಲ್ಲೆಂದರಲ್ಲಿ ಕಾಣುವ ಇಸ್ಕ ಎಂದರೆ ಕೆಲವರಿಗೆ ಕುತೂಹಲ, ಪ್ರೀತಿ. ಹಲವರಿಗೆ ವಾಕರಿಕೆ. ಮೃದುವಾದ, ಒದ್ದೆಒದ್ದೆಯಾದ, ನಯಸಾದ, ಮೈಮೇಲೆ ಚಿಪ್ಪೂ ಇಲ್ಲದ ಕರಾವಳಿ ಇಸ್ಕಗಳು ಚಂದವೋ, ಕುರೂಪವೋ ಎನ್ನುವುದು ವ್ಯಾಖ್ಯಾನಕ್ಕೆ ಸಿಗದ ಗೊಂದಲ. ನಮ್ಮನೆಯ ಬೆಕ್ಕಿನಮರಿಗಾದರೋ ಅದರ ಬಗ್ಗೆ ನಮಗೆಷ್ಟೋ ಅಷ್ಟೇ ಕುತೂಹಲ. ಗೋಡೆ ಮೇಲಿನ ಹಲ್ಲಿ ಎಷ್ಟೊತ್ತಿಗೆ ಕೆಳಗೆ ಬಂದೀತು ಎಂದು ಅರೆತೆರೆದ ಕಣ್ಣುಗಳಲ್ಲಿ ಕನಸುತ್ತ ಕೂರುವ ಬೆಕ್ಕಿನ ಮರಿಗೆ ಎರಡು ಕೊಂಬು ಮೇಲೇರಿಸಿಕೊಂಡು ನಿಧಾನ ವಾಲಾಡುತ್ತ ಹರಿವ ಆ ಜೀವ ಜೀವವೇ ಹೌದೋ ಅಲ್ಲವೋ ಎಂಬ ಅಚ್ಚರಿ. ಆಡಿಸಬೇಕೆಂದರೆ ಆಡುವುದಿಲ್ಲ, ಚೋಟು ಹಾಕಿದರೂ ತಾಗುವುದಿಲ್ಲ. ತನ್ನ ಪಂಜಾ ಮುಟ್ಟುತ್ತಲೇ ನೆಲದ ಮೇಲೆ ಉರುಳಾಡುವುದಿಲ್ಲ, ಹೊರಳಾಡುವುದಿಲ್ಲ, ಹಾರಿ ಬೀಳುವುದಿಲ್ಲ. ಅದಕ್ಕೆ ಯಾವಾಗಲೂ ತಣ್ಣಗೆ ಹರಿವ ಈ ಜೀವಿಯ ಕುರಿತು ಭಯ, ಕುತೂಹಲ. ತಿನ್ನುವುದೋ ಬಿಡುವುದೋ ಅನುಮಾನ. ಆದರೂ ಛಲ ಬಿಡದೆ ಒಮ್ಮೆ ಅದನ್ನು ಮೂಸಿಮೂಸಿ ಕಾಲಲ್ಲಿ ಹಿಂದೆಮುಂದೆ ತಿರುಗಿಸಿ ಅದು ಡಬ್ಬ ಬೀಳುವಂತೆ ಮಾಡಿ ಬಾಯಿಗೆ ಹಾಕೇ ಬಿಟ್ಟಿತು. ಕುತ್ತಿಗೆಯನ್ನು ಆಚೆ ತಿರುಗಿಸಿ, ಈಚೆ ತಿರುಗಿಸಿ ಜಗಿದೇ ಬಿಟ್ಟಿತು. ಎಲ ಎಲಾ ಎಂದುಕೊಳುವಾಗಲೇ ಅದರ ಬಾಯೆಲ್ಲ ಸುಂಬಳವಾಯಿತಿರಬೇಕು, ಕ್ಯಾಕರಿಸಿ ವಾಂತಿ ಮಾಡಿ ಉಗಿಯಿತು. ಅದಾದನಂತರ ಬೆಕ್ಕು ಇಸ್ಕದ ಸುದ್ದಿಗೆ ಹೋದರೆ ಕೇಳಿ. 

ನೆಲದ ಮೇಲೆ ಬಣ್ಣಬಣ್ಣದ, ವಿವಿಧ ಸೈಜಿನ ಇಸ್ಕಗಳನ್ನು ನೋಡಬಹುದಾದರೂ ನೀರಿನಲ್ಲಿ ಅದಕ್ಕಿಂತ ಹೆಚ್ಚು ಪ್ರಭೇಧಗಳನ್ನು ಕಾಣಬಹುದು. ಸಿಹಿನೀರಿನ ಇಸ್ಕ ಹಾಗೂ ಉಪ್ಪು ಕಡಲಿನ ಇಸ್ಕ ಬೇರೆಬೇರೆ. ಸಮುದ್ರದ ಕೆಲ ಇಸ್ಕಗಳು ೧೫ ಇಂಚಿನಷ್ಟು ಬೆಳೆಯುತ್ತವೆ, ಎರಡು ಪೌಂಡಿನಷ್ಟು ತೂಗುತ್ತವೆ. ಕರಾವಳಿ-ಮಲೆನಾಡಿನಲ್ಲಿ ಕಾಣಬರುವ ಇಸ್ಕಗಳಿಗೆ ಬೆನ್ನ ಮೇಲೆ ಚಿಪ್ಪು ಇರುವುದಿಲ್ಲ. ಇದು ಇಸ್ಕದಲ್ಲೇ ಕಂಡು ಬರುವ ಇನ್ನೊಂದು ಪ್ರಭೇದ. 

ನೆಲದ ಮೇಲೆ ಕಾಣುವ ಇಸ್ಕಗಳಲ್ಲಿ ಗಂಡು ಹೆಣ್ಣು ಬೇರೆಬೇರೆ ಅಲ್ಲ. ಅವು ಎರಡೂ ಆಗಿರುತ್ತವೆ. ಎಂದರೆ ಅಂಡವನ್ನೂ, ವೀರ್ಯಾಣುವನ್ನೂ ಹೊಂದಿರುತ್ತವೆ. ಜೀವ ಪ್ರಭೇಧದ ಆದಿಮ ಹಂತಗಳಲ್ಲಿ ಜೀವಿಗಳು ದ್ವಿಲಿಂಗಿಗಳಾಗಿರುತ್ತವೆ. ಎರಡರ ನಡುವೆ ಸಂತಾನೋತ್ಪತ್ತಿಗಾಗಿ ಕೂಡಾಟ ನಡೆಯುವಾಗ ಒಂದರ ಗರ್ಭ ಕಟ್ಟಿಸುತ್ತಲೇ ಇನ್ನೊಂದು ತಾನೂ ಗರ್ಭ ಕಟ್ಟುತ್ತದೆ. ಒಂದು ಇನ್ನೊಂದರ ಅಂಡವನ್ನು ಫಲಿತಗೊಳಿಸುತ್ತದೆ. ಎರಡು ಇಸ್ಕಗಳ ಮೇಟಿಂಗ್ ಕಾಲಾವಧಿ ಎರಡು ತಾಸು! ಗರ್ಭ ಕಟ್ಟಿದ ಮೇಲೆ ಒದ್ದೆಯಿರುವ, ನೆರಳಿರುವ, ಸಂದುಮೂಲೆಗಳಲ್ಲಿ ಮೊಟ್ಟೆಯಿಡುತ್ತದೆ. ಒಂದು ತಿಂಗಳ ನಂತರ ಮರಿ ಹೊರಬರುತ್ತದೆ. ಮರಿಗೆ ತನ್ನ ಬೆನ್ನ ಮೇಲಿನ ಚಿಪ್ಪು ಬೆಳೆಸಿಕೊಳ್ಳಲು ಕ್ಯಾಲ್ಶಿಯಂನ ಅವಶ್ಯಕತೆಯಿರುತ್ತದೆ. ಎಂದೇ ಆ ಕ್ಯಾಲ್ಶಿಯಂಗಾಗಿ ಒಡೆದು ಬಂದ ಚಿಪ್ಪನ್ನೇ ತಿಂದುಹಾಕುತ್ತದೆ. ಜೊತೆಗೆ ಆಚೀಚೆ ಉಳಿದ ಮೊಟ್ಟೆಗಳು ಕಂಡರೆ ಅದನ್ನೂ ತಿನ್ನುತ್ತದೆ. ಇಸ್ಕದ ಚಿಪ್ಪು ಕ್ಯಾಲ್ಶಿಯಂ ಕಾರ್ಬೋನೇಟಿನಿಂದಾಗಿದ್ದು ಅದು ಜೀವಮಾನ ಪರ್ಯಂತ ಬೆಳೆಯುತ್ತದೆ.

ಅದರ ನಾಲಗೆಯ ಎರಡೂ ಕಡೆ ಹಲ್ಲುಗಳಂತಹ ಅತಿಸೂಕ್ಷ್ಮ ರಚನೆಗಳಿದ್ದು ಅದು ಇಬ್ಬಾಯ ಗರಗಸದಂತೆ ಕೆಲಸ ಮಾಡುತ್ತದೆ. ಇಸ್ಕವು ನೆಕ್ಕುವುದೆಂದರೆ ಕಚ್ಚುವುದು, ನಾಲಗೆಯಿಂದ ಸವರುವುದೆಂದರೆ ಜಗಿಯುವುದು. ಕಾಲಿಲ್ಲದ ಅದು ಹೊಟ್ಟೆಯನ್ನು ನೆಲದ ಮೇಲೆ ಎಳೆಯುತ್ತ ಚಲಿಸುತ್ತದೆ. ಹಾಗೆ ಚಲಿಸುವಾಗ ಚಲನೆ ಸುಲಭವಾಗಲೆಂದು, ಮೃದು ದೇಹ ಗಾಸಿಗೊಳ್ಳದಿರಲೆಂದು ಅಂಟುದ್ರವ ಸ್ರವಿಸುತ್ತದೆ. ತನ್ನ ದಾರಿಯನ್ನು ತಾನೇ ರೂಪಿಸಿಕೊಂಡು ನಡೆಯುತ್ತದೆ. ಎಂದೇ ಅದಕ್ಕೆ ತಲೆಕೆಳಗಾಗಿ ಚಲಿಸುವುದೂ, ನೇರ ಚಲಿಸುವುದೂ ಭಿನ್ನವಲ್ಲ. ಅವಕ್ಕೆ ಕಿವಿಯಿರುವುದಿಲ್ಲ. ಆದರೆ ಕಣ್ಣು ಮತ್ತು ವಾಸನೆ ಗ್ರಹಿಸುವ ಅಂಗಗಳಿವೆ. ತಲೆಮೇಲೆ ಚಾಚಿದ ಎರಡು ಉದ್ದನೆಯ ಕೋಡು ಕಣ್ಣನ್ನು ಅದರ ತುದಿಯಲ್ಲಿ ಹೊಂದಿದ್ದರೆ; ಅದರ ಕೆಳಗಿನ ಎರಡು ಸಣ್ಣ ಚೂಪುಗಳು ವಾಸನೆ ಗ್ರಹಿಸುವ ಅಂಗವನ್ನು ಹೊಂದಿರುತ್ತವೆ.

ರಾತ್ರಿ ಮತ್ತು ಬೆಳಗಿನ ಜಾವ ಅವು ತುಂಬ ಚಟುವಟಿಕೆಯಿಂದಿರುತ್ತವೆ. ಏನು ಸಿಗುವುದೋ ಅದನ್ನೇ ತಿನ್ನುವುದನ್ನು ರೂಢಿಸಿಕೊಳ್ಳುತ್ತವೆ. ಪಾಚಿ, ಚಿಗುರು, ಹೂವು, ಎಲೆಗಳನ್ನಲ್ಲದೆ ಸಣ್ಣಪುಟ್ಟ ಕ್ರಿಮಿಕೀಟಗಳನ್ನೂ ಇಸ್ಕ ತಿನ್ನುತ್ತದೆ. ಅದರ ಸರಾಸರಿ ಆಯಸ್ಸು ೧೫ ವರ್ಷ. ಎರಡು ವರ್ಷದ ಹೊತ್ತಿಗೆ ಪ್ರೌಢಾವಸ್ಥೆಗೆ ಬಂದಿರುತ್ತದೆ. ಮಳೆಗಾಲದಲ್ಲಿ ಹೊರಬೀಳುವ ಇಸ್ಕಗಳ ಕೆಲ ಪ್ರಭೇದಗಳು ಬೇಸಿಗೆಯಲ್ಲಿ, ಮತ್ತೆ ಕೆಲವು ಅತಿಚಳಿಯಲ್ಲಿ ಮೈಸುತ್ತ ಸುಂಬಳದ ಒಂದು ಪದರ ಸ್ರವಿಸಿಕೊಂಡು ನೆಲದಾಳದಲ್ಲಿ ಅಡಗಿ ಕುಳಿತಿರುತ್ತವೆ. ಹೀಗೆ ಕುಳಿತಾಗ ತನ್ನ ದೇಹದ ಕೊಬ್ಬಿನಂಶವನ್ನೇ ಬಳಸಿಕೊಂಡು ಬದುಕುಳಿಯುತ್ತವೆ. ಅವು ಹೆಚ್ಚೇನೂ ಆಹಾರವಿಲ್ಲದೆಯೂ ಬದುಕಬಲ್ಲವೆಂದೇ ಮಿಲಯಗಟ್ಟಲೆ ವರ್ಷದಿಂದ ಉಳಿದುಬಂದಿವೆ. ಆದರೂ ಅಷ್ಟು ಮಾಂಸಲವಾಗಿದ್ದು, ದೇಹದ ತೇವವನ್ನು ಹೇಗೆ ಕಾಪಾಡಿಕೊಳ್ಳುತ್ತದೆ ಎನ್ನುವುದೊಂದು ವಿಸ್ಮಯವೇ ಸರಿ.

ಈ ಜೀವಿಗಳು ಅತ್ಯಂತ ಮೃದು, ಅತ್ಯಂತ ನಿಧಾನ. ವಯಸ್ಕ ಬಸವನಹುಳು ಸೆಕೆಂಡಿಗೆ ಒಂದು ಮಿಲಿಮೀಟರಿನಷ್ಟು ಮಾತ್ರ ಮುಂದೆ ಚಲಿಸಬಲ್ಲದು. ನಿಧಾನ ಆದರೂ ನಿಯಮಿತವಾಗಿ ಗಂಟೆಗಟ್ಟಲೆ ಚಲಿಸುತ್ತದೆ. ಮಳೆಗಾಲದಲ್ಲಿ ಎಲ್ಲೆಲ್ಲೂ ಕಾಣುವ ಚೇರಟೆ ತಾಗಿದರೆ, ದೇಹರಸ ಹನಿದರೆ ಗುಳ್ಳೆ, ಉರಿ, ತುರಿಕೆ ಎಲ್ಲ ಶುರುವಾಗುತ್ತದೆ. ಆದರೆ ಇಸ್ಕ ಸ್ರವಿಸುವ ಸುಂಬಳದಂತಹ ದ್ರವಕ್ಕೆ ಯಾವ ರಿಯಾಕ್ಷನ್ನೂ ಆಗುವುದಿಲ್ಲ. ಅದರ ಆಕಾರ, ಚಲನೆ, ನಿಧಾನ, ಬಣ್ಣ ಇವೆಲ್ಲ ಒಂದು ಜಿಗುಪ್ಸೆಯ ಭಾವ ಹುಟ್ಟಿಸಬಹುದೇ ಹೊರತು ಅದರಿಂದ ಅಪಾಯವಿಲ್ಲ. 


ಮನುಷ್ಯ ಜೀವಕ್ಕೆ ಅಪಾಯವಿಲ್ಲವಾದರೂ ಗಿಡಮರಗಳಿಗೆ ಲಗ್ಗೆಯಿಟ್ಟು ಬೆಳೆಹಾನಿ ಮಾಡುತ್ತದೆ. ಆಫ್ರಿಕಾದಲ್ಲಿ ದೈತ್ಯ ಬಸವನಹುಳುವಿನ ಒಂದು ಪ್ರಭೇದವಿದ್ದು ಅದು ಸುತ್ತಲ ಪರಿಸರದ ಜೀವಿಗಳಿಗಷ್ಟೇ ಅಲ್ಲ, ಮನುಷ್ಯರಿಗೂ ಅಪಾಯಕರವಾಗಿದೆ. ಅವು ಮನುಷ್ಯರಲ್ಲಿ ಮೆನಿಂಜೈಟಿಸ್ ಎಂಬ ಮಿದುಳಿನ ಪೊರೆಯ ಸೋಂಕಿಗೆ ಕಾರಣವಾದ ರೋಗಾಣುಗಳ ವಾಹಕಗಳಾಗಿವೆ. ಅಲ್ಲದೇ ವ್ಯಾಪಕ ಬೆಳೆನಾಶ ಮಾಡಬಲ್ಲವು. ಗಿಡಮರಗಳ ಹೂ, ಹಣ್ಣು, ಮಿಡಿ, ಕಾಯಿ, ಚಿಗುರು, ಎಲೆ ಎಲ್ಲವನ್ನೂ ತಿನ್ನಬಲ್ಲವು. ತೂತು ಕೊರೆದು ಫಸಲನ್ನು ಹಾಳುಗೆಡವಬಲ್ಲವು. ಅಮೆರಿಕಾ, ಯೂರೋಪಿನ ವಿಮಾನ ನಿಲ್ದಾಣ, ಹಡಗುಕಟ್ಟೆಗಳಲ್ಲಿ ಕೃಷಿ ಇಲಾಖೆಯು ಅಂಥ ಹುಳುಹುಪ್ಪಟೆಗಳು ವಿದೇಶದಿಂದ ತಮ್ಮ ದೇಶಕ್ಕೆ ಬಂದಿವೆಯೇ ಎಂದು ಕಣ್ಣಿಟ್ಟು ಕಾಯುತ್ತವೆ. ಭಾರತದ ಬಹುತೇಕ ರಾಜ್ಯಗಳಿಗೆ ಅವು ಆಗಲೇ ಬಂದಿದ್ದು ಸ್ಥಳೀಯ ಪರಿಸರಕ್ಕೆ ಮಾರಕವಾಗಲಿವೆ ಎಂಬ ಮುನ್ಸೂಚನೆಯನ್ನು ಕೊಡಲಾಗಿತ್ತು. ಕಳೆದ ವರ್ಷ ಕೇರಳದಲ್ಲಿ ಅಪಾಯಕಾರಿ ಮಟ್ಟದಲ್ಲಿ ಎಲ್ಲೆಲ್ಲೂ ಆವರಿಸಿಕೊಂಡ ಇಸ್ಕಗಳನ್ನು ಹಿಡಿದು ಉಪ್ಪುನೀರಿನಲ್ಲಿ ಹಾಕಿ ಎಂಬ ಸಲಹೆ ನೀಡಲಾಗಿತ್ತು. 


ಅವನ್ನು ನಿಗ್ರಹಿಸುವ ಸುಲಭ ಉಪಾಯ ಅವು ನೆಲೆಗೊಳ್ಳುವ, ಅಡಗಿಕೊಳ್ಳುವಂತಹ ಜಾಗಗಳ ಸಂಖ್ಯೆ ಮತ್ತು ವಿಸ್ತಾರವನ್ನು ಕಡಿಮೆ ಮಾಡುವುದು. ಜೊತೆಗೆ ಅವನ್ನು ನಾಶಮಾಡಲು ಉಪ್ಪನ್ನು, ಉಪ್ಪು ನೀರನ್ನು ಬಳಸಲಾಗುತ್ತದೆ. ಏಕೆಂದರೆ ಉಪ್ಪು ಉದುರಿಸಿದರೆ ಅವು ಸಾಯುತ್ತವೆ, ಉಪ್ಪು ಇರುವ ಪದಾರ್ಥ ತಿಂದರೂ ಸಾಯುತ್ತವೆ. ಉಪ್ಪನ್ನು ಜೀರ್ಣಿಸಿಕೊಳ್ಳುವ, ತಡೆದುಕೊಳ್ಳುವ ವ್ಯವಸ್ಥೆ ಅದರ ದೇಹದಲ್ಲಿಲ್ಲ.



ಫ್ರಾನ್ಸ್ ದೇಶದಲ್ಲಿ ಇಸ್ಕವನ್ನು ಸಾಕಿ, ಬೆಳೆಸಿ, ರುಚಿರುಚಿಯಾದ ತಿನಿಸು ತಯಾರಿಸುತ್ತಾರೆ. ಅದು ಜಗಿಜಗಿದು ತಿನ್ನಬೇಕಾದ ತುಂಬ ರುಚಿಯಾದ ಮಾಂಸವಂತೆ. ನಮ್ಮ ದೇಶದ ಈಶಾನ್ಯ ರಾಜ್ಯಗಳಲ್ಲೂ ಅದರಿಂದ ಖಾದ್ಯ ತಯಾರಿಸುವರಂತೆ. ಬೇರೆ ದೇಶಗಳಲ್ಲೂ ಅದರ ರುಚಿ ಜನಪ್ರಿಯ. ಅದರಲ್ಲೂ ಬಡವರ ಆಹಾರ ಎಂದೇ ಜನಪ್ರಿಯ. ನನಗೆ ತಿಳಿದಮಟ್ಟಿಗೆ ಮೀನು, ಮಾಂಸ, ತರಕಾರಿಗೆ ಬರಗಾಲವಿಲ್ಲದ ನಮ್ಮೂರಿನಲ್ಲಿ ಅದನ್ನು ಖಾದ್ಯವಾಗಿ ಬಳಸುತ್ತಿಲ್ಲ.

***

ಈ ಭೂಮಿ ಮೇಲೆ ಎರಡು ಕಾಲಿನವರಿಗಷ್ಟೇ ಅಲ್ಲ, ನಾಲ್ಕು ಕಾಲಿನವರು, ಆರು-ಎಂಟು-ನೂರು-ಸಾವಿರ ಕಾಲಿರುವವರಿಗೂ ಸಮಾನ ಅವಕಾಶವುಂಟು. ಹಾಗೇ ರೆಕ್ಕೆಗಳಿರುವವರು, ಕಿವಿರುಗಳಿರುವವರು, ಇಲ್ಲದಿರುವವರಿಗೂ ಬದುಕುವ ಸಮಾನ ಹಕ್ಕುಗಳುಂಟು. ಕಾಲಿಲ್ಲದ ಇಸ್ಕವನ್ನು ಸಹಸ್ರಪದಿ ಕೀಳಾಗಿ ನೋಡುವುದಿಲ್ಲ. ರೆಕ್ಕೆಯಿಲ್ಲದ ಮೀನನ್ನು ಹಕ್ಕಿ ಕಡೆಗಣಿಸುವುದಿಲ್ಲ. ನೀರಿನಲ್ಲಿ ಮೀನು ಮುಕ್ತ. ಆಗಸದಲ್ಲಿ ಹಕ್ಕಿ ಮುಕ್ತ. ಯಾರ‍್ಯಾರು ಎಲ್ಲೆಲ್ಲಿರುತ್ತಾರೋ ಅಲ್ಲಲ್ಲಿಗೆ ಅವರವರೇ ರಾಜರು.

ಕಲಿಯಬೇಕಾದ ಎಷ್ಟೊಂದು ಪಾಠಗಳಿವೆ ಪ್ರಕೃತಿ ಎಂಬ ಈ ವಿಸ್ಮಯದಲ್ಲಿ?!

Monday, 14 July 2014

ಇದು ಕತೆಯಲ್ಲ: ಸಿಝೋಫ್ರೇನಿಯಾ..




ಕೆಲ ವ್ಯಕ್ತಿಚಿತ್ರಗಳು ಮರೆಯಲಾರದಂತೆ ನೆನಪಲ್ಲಿ ಉಳಿದುಬಿಟ್ಟಿವೆ.

ಅವನ ಹೆಸರು ಬಸ್ಲಿಂಗಪ್ಪ. ಸದಾ ಫುಲ್ ಡ್ರೆಸ್‌ನಲ್ಲಿರುತ್ತಿದ್ದ, ಆತನ ವಿರಳ ಬಿಳಿ ತಲೆಕೂದಲು ಬೆವರು, ಎಣ್ಣೆ, ಧೂಳು ಸೇರಿ ಮಂಕಾಗಿರುತ್ತಿದ್ದವು. ಅವನ ಚರ್ಮ, ಬಟ್ಟೆ ತಮ್ಮ ಮೇಲಿನ ನಾನಾ ಕಲೆ, ಗುರುತುಗಳಿಂದ ತೊಳೆದು ತಿಂಗಳುಗಟ್ಟಲೆ ಆಗಿದೆಯೆಂದು ತಿಳಿಸುತ್ತಿದ್ದವು. ಕೈಲೊಂದು ಕೋಲು ಹಿಡಿದು ತಲೆ ತಗ್ಗಿಸಿಕೊಂಡು ಪಿಟಿಪಿಟಿ ನಡೆಯತೊಡಗಿದನೆಂದರೆ ಯಾವುದೋ ತುರ್ತು ಕೆಲಸಕ್ಕೆ ಹೊರಟಂತೆ ಕಾಣುತ್ತಿತ್ತು. ಒಂದೊಂದು ಕಾಲಿಗೆ ಒಂದೊಂದು ತೆರನ ಚಪ್ಪಲಿ-ಬೂಟು ಧರಿಸಿ, ವಿಶಿಷ್ಟ ಕಮಟು ನಾತ ಬೀರುತ್ತ ಓಡುತ್ತಿದ್ದ ಆತನ ಗಾಡಿ ಇದ್ದಕ್ಕಿದ್ದಂತೆ ನಿಂತಿತೆಂದರೆ ಅವನು ನಮ್ಮ ಮನೆ ಮುಂದೆ ಅಥವಾ ಶಾಲೆ ಮುಂದೆ ಇದ್ದಾನೆ ಅಥವಾ ತಲೆಯೆತ್ತಿ ಆಕಾಶ ನೋಡುತ್ತ ಗಹಗಹಿಸಿ ನಗುವಂಥದೇನೋ ಅವನಿಗೆ ಹೊಳೆದಿದೆ ಎಂದೇ ಅರ್ಥ.

ನಾನಾಗ ಆರನೆತ್ತೆ ಕಲಿಯುತ್ತಿದ್ದೆ. ಬಸ್ಲಿಂಗಪ್ಪನೆಂದರೆ ಒಂಥರಾ ಭಯ, ಒಂಥರಾ ಕುತೂಹಲ. ಬೊಗಳತೊಡಗುವ ನಾಯಿಗಳ ಗಲಾಟೆಯಿಂದ ಅವನು ಬಂದನೆಂದು ತಿಳಿಯುತ್ತಿತ್ತು. ಒಮ್ಮೊಮ್ಮೆ ‘ಹ..ಚಾ’ ಎಂದು ತನ್ನದೇ ಶೈಲಿಯಲ್ಲಿ ಕೂಗುತ್ತ ಬಂದು ನಮ್ಮ ಜಗಲಿ ಮೇಲೆ ಆಸೀನನಾಗಿ ಏನಾದರೂ ಸದ್ದು ಮಾಡಿ ಅಮ್ಮನನ್ನು ಕರೆಯುತ್ತಿದ್ದ. ಅದು ಬೆಳಗು ಅಥವಾ ಬೈಗಿನ ಸಮಯವಾಗಿರುತ್ತಿತ್ತು. ಬೆಳಗಾದರೆ ಅಮ್ಮ ಸ್ವಲ್ಪ ತಿಂಡಿ ಕೊಡುತ್ತಿದ್ದಳು. ಬೈಗಾದರೆ ಒಂದು ಗೆರೆ ಸೋಪು ಕೊಟ್ಟು ಸ್ನಾನ ಮಾಡಿ ಬಾ, ಊಟ ಮಾಡುವಂತೆ ಎಂದೋ; ಅಣ್ಣನ ಹಳೆಯ ಪ್ಯಾಂಟುಶರಟು ಕೊಟ್ಟು ಬಟ್ಟೆ ತೊಳಕೊಂಡು ಬಾ ಎಂದೋ ಕಳಿಸುತ್ತಿದ್ದಳು. ಒಂದೆರೆಡು ಬಾರಿ ಹರಿಯುವ ವರದೆಯಲ್ಲಿ ಗಂಟೆಗಟ್ಟಲೆ ಮಿಂದು ಶುಭ್ರನಾಗಿ ಬಂದಿದ್ದ. ಉಳಿದಂತೆ ಕೊಟ್ಟ ಸೋಪನ್ನೂ, ತಿಂಡಿಯನ್ನೂ ಒಟ್ಟಿಗೇ ಕೋಟಿನ ಕಿಸೆಗೆ ತುರುಕಿ ಇವರ ಸಾವಾಸ ಸಾಕೆಂಬಂತೆ ಮುಖಮಾಡಿ ನಡೆಯುತ್ತಿದ್ದ.

ಮನೆ ಮುಂಬಾಗಿಲಿಂದ ಒಳಗಿಣುಕಿ ಒಂದೇ ಕೋಣೆಯ ಆ ಪುಟ್ಟ ಮನೆಯಲ್ಲಿ ನಾವು ಓದಿಕೊಳ್ಳುತ್ತಿರುವುದು ಕಂಡು ಮಾತಿಗೆಳೆಯುತ್ತಿದ್ದ. ಊರ ಜಾತ್ರೆಯಲ್ಲಿ ಸ್ವಾಮಿಗಳಿಂದ ಭೇಷೆನಿಸಿಕೊಂಡ ಗುರುತಿಟ್ಟುಕೊಂಡು, ‘ನೀ ಶ್ಯಾಣಿ ಅಂತಾರ ಮಂದಿ, ಹಂಗಾರ ನನ್ ಪ್ರಶ್ನೆಗೆ ಉತ್ತರ ಹೇಳು’ ಎನ್ನುತ್ತ ಒಗಟೊಂದನ್ನು ಎಸೆಯುತ್ತಿದ್ದ. ಅವನೆದುರು ನನ್ನ ಶ್ಯಾಣೇತನ ಕರಗಿ ನೀರಾಗುತ್ತಿತ್ತು ಎಂದು ಬೇರೆ ಹೇಳಬೇಕಿಲ್ಲ.

ಮಾತಾಡುತ್ತ ಆಡುತ್ತ ಒಮ್ಮೊಮ್ಮೆ ಹಡೆ ಪದ, ಸಾಲು, ಪದ್ಯಗಳನ್ನು ಸಟಕ್ಕನೆ ಹೇಳಿಬಿಡುತ್ತಿದ್ದ.

‘ಕಾರು ಭರ್ ಭರ್ ಭರ್
ಮೋಟರು ಟರ್ ಟರ್ ಟರ್
ಅವರೆಕಾಳು ತಿಂದೋರ ಮುಕಳಿ ಢರರರರರ..’

ಹೀಗೆ ಹೇಳಿ ಗಹಗಹಿಸಲು ಮೊದಲು ಮಾಡಿದರೆ ಎಷ್ಟೊತ್ತಾದರೂ ಅವನ ನಗು ನಿಲ್ಲುತ್ತಿರಲಿಲ್ಲ. ಕಟಬಾಯಿಯಲ್ಲಿ ಎಂಜಲು ನೊರೆ ಕೆಳಗಿಳಿದು ಸೋರುತ್ತಿದ್ದರೂ ಲೆಕ್ಕಿಸದೆ ನಾನ್‌ಸ್ಟಾಪ್ ಮಾತಾಡುತ್ತಿದ್ದವ ನಗೆ ಶುರುವಾದಾಗಲೇ ಮಾತು ನಿಲ್ಲಿಸುತ್ತಿದ್ದಿದ್ದು.

‘ಎಂಟು ಟ ಸೇರಿದವನು ಜಂಟಲ್ ಮ್ಯಾನ್. ಎಂಟು ಟ ಯಾವುವು?’ ಇದು ಅವನ ಒಂದು ಪ್ರಶ್ನೆ. ಕಾದುಕಾದು ಕೊನೆಗೆ, ‘ಪ್ಯಾಂಟ ಬೂಟ ಶರಟ ಜ್ಯಾಕೇಟ ಕೋಟ ಹ್ಯಾಟ ಸೆಂಟ ಕೈಯಾಗೊಂದು ಲಕ್ಷ್ಮೀ ಬ್ರಾಂಡ ಸಿಗರೇಟ’ ಎಂದು ತನ್ನ ವಿವರಣೆ ಮುಗಿಸಿ ಎದ್ದು ನಡೆಯುತ್ತಿದ್ದ. ಕೆಲವೊಮ್ಮೆ ಅವನ ಹರಕು ಚೀಲದಿಂದ ಮುದುರಿ ಮುದ್ದೆಯಾಗಿದ್ದ ನಾನಾಭಾಷೆಯ ನ್ಯೂಸ್ ಪೇಪರುಗಳನ್ನು ತೆಗೆದುಕೊಟ್ಟು ‘ಹಂಗಾರ ಇವನ ಓದು ನೋಡತೇನಿ’ ಎನ್ನುತ್ತಿದ್ದ. ಲಿಪಿ ಯಾವುದೆಂದೇ ತಿಳಿಯದ ಅಕ್ಷರಗಳು ನನ್ನಲ್ಲಿ ಗಾಬರಿ ಹುಟ್ಟಿಸುತ್ತಿರುವಾಗಲೇ ‘ನೀನೆಂಥಾ ಶಾಣ್ಯಾಕಿ ಆದಂಗಾತು?’ ಎಂದು ಅಣಕಿಸಿ ತಾನು ಅದನ್ನು ಓದತೊಡಗುತ್ತಿದ್ದ. ಅವನು ಸುಳ್ಳುಸುಳ್ಳೇ ಓದುತ್ತಿದ್ದನೋ, ನಿಜಕ್ಕೂ ಆ ಭಾಷೆ ಬರುತ್ತಿತ್ತೋ, ಆ ಪತ್ರಿಕೆಗಳನ್ನು ಎಲ್ಲಿಂದ ಸಂಗ್ರಹಿಸಿದನೋ ಯಾರಿಗೂ ಗೊತ್ತಿಲ್ಲ. ನನಗಂತೂ ಅವನ ಶ್ಯಾಣೇತನದ ಬಗ್ಗೆ ಯಾವ ಅನುಮಾನವೂ ಇರಲಿಲ್ಲ.

ಎಲ್ಲರಂತೆ ಏಕವಚನದಲ್ಲಿ ಸಂಬೋಧಿಸಿದರೂ ಆತನ ವಯಸ್ಸಿಗೆ ತಕ್ಕಂತೆ ಬಹುವಚನದಲ್ಲಿ ಮಾತಾಡಬೇಕಲ್ಲವೆ ಎಂಬ ಗೊಂದಲ ಮೂಡಿಸುತ್ತಿದ್ದ ಆ ವ್ಯಕ್ತಿ  ಹುಚ್ಚು ಬಸ್ಲಿಂಗಪ್ಪ. ಅದು ಅವನ ಹೆಸರೋ ಅಥವಾ ಹೆಸರೇ ನೆನಪಿಲ್ಲದವನಿಗೆ ಊರ ಜನ ಇಟ್ಟ ಹೆಸರೋ ಗೊತ್ತಿಲ್ಲ. ಅವ ತುಂಬ ಜಾಣನಾಗಿದ್ದನಂತೆ. ತುಂಬ ಓದಿ ಬೊಂಬಾಯಲ್ಲೋ, ಗುಜರಾತಲ್ಲೋ ಕೆಲಸ ಮಾಡುತ್ತಿದ್ದನಂತೆ. ಅವನ ಹೆಂಡತಿ ಯಾರ ಜೊತೆಗೋ ಓಡಿಹೋದ ಮೇಲೆ ಹೀಗಾದನಂತೆ - ಎಂದೆಲ್ಲ ಊಹಾಪೋಹಗಳು ಅವನ ಬಗ್ಗೆ ಹಬ್ಬಿದ್ದವು. ಅವನು ಮಾತ್ರ ಕೇಳಿದ ಯಾವ ಪ್ರಶ್ನೆಯನ್ನೂ ಅರ್ಥ ಮಾಡಿಕೊಂಡು ಉತ್ತರಿಸಿದವನಲ್ಲ. ಮೂರೋ ಆರೋ ತಿಂಗಳಿಗೊಮ್ಮೆ ನಮ್ಮೂರಿಗೆ ಬರುತ್ತಿದ್ದವ ಬಂದರೆ ಹತ್ತು ಹದಿನೈದು ದಿನ ಅಲ್ಲಿಲ್ಲಿ ತಂಗಿ ನಂತರ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿದ್ದ. ಮತ್ತೆ ಬರುವವರೆಗೂ ಅವನ ಇಲ್ಲದಿರುವಿಕೆ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ.

ನಾನು ಕೈಗೆ ಸಿಕ್ಕಿದ್ದನ್ನೆಲ್ಲ ಓದುವುದು ಕಂಡು ಅಮ್ಮ, ‘ಸಿಕ್ಕಾಪಟ್ಟೆ ಓದಬೇಡ, ಹುಚ್ಚು ಹಿಡಿಯುತ್ತೆ ಅಷ್ಟೆ’ ಎಂದು ಹೆದರಿಸುತ್ತಿದ್ದಳು. ಏನೇನೋ ವಿಚಾರಗಳು ತಲೆ ತುಂಬಿಕೊಂಡಾಗ ನನಗೂ ಒಮ್ಮೊಮ್ಮೆ ‘ಬಸ್ಲಿಂಗಪ್ಪನಂತೆ ಹುಚ್ಚು ಹಿಡಿದುಬಿಟ್ಟರೆ’ ಎಂಬ ಹೆದರಿಕೆಯಾಗುತ್ತಿತ್ತು.

ನಂತರ ನಾನು ಊರು ಬಿಟ್ಟೆ. ಹುಚ್ಚಿನ ಹೆದರಿಕೆ ಬಿಟ್ಟಿತು. ಆದರೆ ಅವ ಏನಾದನೋ?

***

ಈಗಲೂ ಆಕೆ ಹೆಣ್ಣು, ಹೆಣ್ತನ ಕುರಿತ ಭೀಭತ್ಸಗಳನ್ನೆಲ್ಲ ನೆನಪಿಸುತ್ತಾಳೆ..

ಬಸ್ಲಿಂಗಪ್ಪನ ಸಮಕಾಲೀನಳಾಗಿ ಆಕೆ ಬರುತ್ತಿದ್ದಳು. ಅವಳೂ, ಬಸ್ಲಿಂಗಪ್ಪನೂ ಎದುರಾದರೆ ಹೇಗಿರಬಹುದು ಎಂಬ ಮಾತು ಆವಾಗೀವಾಗ ನಮ್ಮ ಮಾತಿನಲ್ಲಿ ಸುಳಿಯುತ್ತಿತ್ತು. ಆದರೆ ಎಂದೂ ಹಾಗಾಗಲಿಲ್ಲ.

ಅದು ಲಿಂಗ ಮರೆತ ಉತ್ತುಂಗ ಸ್ಥಿತಿಯೋ, ಲಿಂಗವಿಲ್ಲದ ಶೈಶವವೋ? ತಾನುಟ್ಟ ಬಟ್ಟೆ, ಕಾಯಿಲೆ, ಹಸಿವು-ನಿದ್ರೆ-ಬಾಯಾರಿಕೆ ಯಾವುದೂ ಅರಿವಾಗದಂಥ ಸ್ಥಿತಿಯಲ್ಲಿದ್ದ ಆಕೆ ತನ್ನನ್ನು ಹೆಣ್ಣು ಎಂದು ತಿಳಿದಂತಿರಲಿಲ್ಲ. ನಮಗಾದರೂ ಆಕೆ ಹೆಣ್ಣೆಂದು ನೆನಪಾಗುತ್ತಿದ್ದಿದ್ದು ಜಡೆಗಟ್ಟಿದ ಕೂದಲು, ಜೋತು ಬಿದ್ದ ನಗ್ನ ಮೊಲೆಗಳನ್ನು ನೋಡಿದಾಗ ಅಲ್ಲ. ಬದಲಾಗಿ ಎರಡು ಕಾಲುಗಳ ನಡುವೆ ನೇತಾಡುವ ಅಂಗದಿಂದ ರಕ್ತಸ್ರಾವವಾಗಿ ಅವಳ ಹಿಂಭಾಗದ ಸೀರೆ ಕಂದು ಕಲೆಯಾಗಿರುವುದನ್ನು ಕಂಡಾಗ.

ನಡುಹರೆಯ ಮೀರಿದ ಅವಳು ಎಲ್ಲಿಯವಳೋ, ಯಾರ ಬಂಧುವೋ ಯಾರಿಗೂ ಗೊತ್ತಿಲ್ಲ. ಅವಳ ಮಕ್ಕಳು, ಸಂಸಾರದ ಬಗ್ಗೆ ಕೂಡಾ ತಿಳಿದಿರಲಿಲ್ಲ. ಅವಳನ್ನು ಆದಷ್ಟು ಬೇಗ ಊರಿನಿಂದ ಹೊರಕಳಿಸಲು ಕೆಲವು ಹೆಂಗಸರು, ಮುದುಕರು ಪ್ರಯತ್ನಿಸಿ ಕೋಲು ಹಿಡಿದು ಬೆರಸುತ್ತಿದ್ದರು. ಮೂರು ತಿಂಗಳಿಗೋ, ಆರು ತಿಂಗಳಿಗೋ ಒಮ್ಮೆ ಬರುತ್ತಿದ್ದ ಆಕೆ ತನ್ನ ಅಲೆಮಾರಿ ಹಾದಿಯಲ್ಲಿ ಒಂದಷ್ಟು ದಿನ ಒಂದು ಕಡೆ ತಂಗಿ ಮತ್ತೆ ಕಾಲು ಎಳೆದತ್ತ ನಡೆದುಬಿಡುತ್ತಿದ್ದಳು. ಹೀಗೆ ನಮ್ಮ ಹಳ್ಳಿಗೆ ಐದಾರು ಬಾರಿ ಬಂದದ್ದಿರಬಹುದು ಅಷ್ಟೆ. ಆದರೆ ತನ್ನ ದೇಹ, ಕಾಯಿಲೆಯ ಅರಿವೇ ಇರದ ಆ ನಡುವಯಸ್ಸಿನ ಮಹಿಳೆಯ ಮೇಲೆ ಅವಳ ಗರ್ಭಕೋಶ ಜಾರಿ ಕಾಲ ನಡುವೆ ನೇತಾಡುತ್ತಿದ್ದರೂ ಲೆಕ್ಕಿಸದೆ ಲೈಂಗಿಕ ದೌರ್ಜನ್ಯ ನಡೆಯುತ್ತಿತ್ತು ಎಂಬ ಸುದ್ದಿ ಹರಿದಾಡುತ್ತ ಕಿವಿ ತಲುಪಿದಾಗ ಸಿಟ್ಟು, ವಾಕರಿಕೆ, ಭಯ ಎಲ್ಲ ಒತ್ತೊತ್ತಿ ಬರುವಂತಾಗುತ್ತಿತ್ತು.

ಆ ಜೀವ ಗೊಣಗುಡುವುದು ಬಿಟ್ಟರೆ ಪ್ರತಿಕ್ರಿಯೆಯಾಗಿ ಒಂದು ಮಾತು ಆಡಿದ್ದನ್ನು ಯಾರೂ ಕೇಳಲಿಲ್ಲ. ಯಾರ ಮನೆ ಮುಂದೆ ನಿಂತೂ ಬೇಡುತ್ತಿರಲಿಲ್ಲ. ಅವಳೆದುರು ಇಟ್ಟದ್ದನ್ನು ಬಾಯಿ ಹರಿದುಹೋಗುವಂತೆ ತುರುಕಿಕೊಳ್ಳುತ್ತಿದ್ದಳು. ಹಸಿವಾದದ್ದೂ ಗೊತ್ತಾಗುವುದಿಲ್ಲ ಎಂದರೆ ಹುಚ್ಚು ಎಂದರೆ ಹೇಗಿರಬಹುದು ಎಂದು ತುಂಬ ಭಯವಾಗುತ್ತಿತ್ತು. ಆದರೆ ಅವಳಿಗೆ ಯಾವ, ಯಾರ ಭಯವೂ ಇದ್ದಂತಿರಲಿಲ್ಲ. ಅವಳಿಗೆ ಹಗಲು-ರಾತ್ರಿಗಳಿರಲಿಲ್ಲ. ನಿದ್ರೆ-ಎಚ್ಚರಗಳಿರಲಿಲ್ಲ. ಕನಸು-ಅವಮಾನಗಳಿರಲಿಲ್ಲ. ಸಿಟ್ಟು-ಸುಖದುಃಖಗಳಿರಲಿಲ್ಲ. ಗುರುತು-ಹೆಸರಿರಲಿಲ್ಲ. ಪ್ರಾಣಿಗಳಂತೆ ಅಥವಾ ಯಾವ ಬದುಕಿನೊಂದಿಗೂ ಹೋಲಿಸಲಾಗದಂತೆ ಬಾಳಿ ಸವೆದ ಆ ಜೀವ ಕೊನೆಗೆ ಏನಾಗಿ, ಎಲ್ಲಿ ಪ್ರಾಣ ಬಿಟ್ಟಿತೋ?

ತಿಳಿಯಲೇ ಇಲ್ಲ.

***

ತಲೆಗೊಂದು ತುಂಡು, ಮೈಗೊಂದು ಮುಂಡು ಸುತ್ತಿಕೊಂಡು ತನಗಿಂತ ದೊಡ್ಡ ಗಂಟು ಹೊತ್ತು ಅವಳು ಕ್ಲಿನಿಕ್ಕಿಗೆ ಬಂದರೆ ಒಂದು ಗಂಟೆ ಕಾಲ ನನಗೆ ಪುಕ್ಕಟೆ ಆಶೀರ್ವಾದ. ವಯಸ್ಕನೊಬ್ಬ ಕಲ್ಲು ಹೊಡೆದು ಅವಳನ್ನು ರೇಗಿಸಿದ್ದು, ಸ್ವಲ್ಪವೇ ಗಾಯಗೊಂಡರೂ ಆ ಇಡೀ ಊರಿಗೆ ಶಾಪ ಹಾಕಿ ಆಕೆ ಕೂಗಾಡಿದ್ದು ಎಲ್ಲವನ್ನು ಕಣ್ಣಾರೆ ಕಂಡಿದ್ದೆನಾಗಿ ಅವಳ ಮೇಲೊಂದು ಮರುಕವಿತ್ತು. ಅವಳು ಎಲ್ಲಿಯವಳು, ಬಂಧುಗಳಾರು ಎಂದು ತಿಳಿಯಲು ವಿಫಲ ಯತ್ನ ನಡೆಸಿದ್ದೆ. ಒಂದೆರೆಡು ಸಲ ಸೀರೆ, ಸ್ವಲ್ಪ ಕಾಸು, ಮದ್ದು ಕೊಟ್ಟು ಕಳಿಸಿದ್ದೆ. ಕೊನೆಗೆ ಅವೆಲ್ಲಕ್ಕಿಂತ ಒಂದು ಕವಳ, ಹೊಟ್ಟೆಗಷ್ಟು ಏನಾದರೂ ಕೊಟ್ಟರೆ ಅದೇ ಹೆಚ್ಚು ಉಪಯುಕ್ತ ಎಂದು ತಿಳಿದುಕೊಂಡಿದ್ದೆ.

ಅವಳಿಗೆ ಅವಶ್ಯವೋ, ಇಲ್ಲವೋ ಒಂದು ಇಂಜೆಕ್ಷನ್ ಹಾಕಿ ಎಂದು ಟೇಬಲ್ ಹತ್ತಿಬಿಡುತ್ತಿದ್ದಳು. ಕವಳ ಜಗಿಜಗಿದು ಕಂದು ಹತ್ತಿದ ಅಷ್ಟೂ ಹಲ್ಲು ತೋರಿಸಿ ಗಹಗಹಿಸಿ ನಗುತ್ತಿದ್ದಳು. ಕೆಲವೊಮ್ಮೆ ಮೌನವಾಗಿ ಕುತ್ತಿಗೆ ಕೊಂಕಿಸಿ ತಿವಿದುಬಿಡುವಂತೆ ನೋಡುತ್ತಿದ್ದಳು. ಕೆಲವರಿಗೆ ಅವಳ ಮೇಲೆ ಹೆದರಿಕೆ. ಇಡೀ ಹಣೆಗೆ ಕುಂಕುಮ ಬಳಿದುಕೊಂಡ ಅವಳ ಮೈಯಲ್ಲಿ ಈ ಸುತ್ತುಮುತ್ತಲ ಊರ ದೆವ್ವಗಳೆಲ್ಲ ಸೇರಿಕೊಂಡಿವೆ ಎಂದು ಭಾವಿಸಲಾಗಿತ್ತು. ಅವಳನ್ನು ಒಳಬಿಟ್ಟುಕೊಳ್ಳಬೇಡಿ, ಚಲೋದಲ್ಲ ಎಂಬ ಸಲಹೆಗಳು ಬಂದಿದ್ದವು.

ಅವಳೋ ಮಂತ್ರದ ಧಾಟಿಯಲ್ಲೇ ಗೊಣಗೊಣಮಣಮಣ ಅನ್ನುತ್ತ ಕೊನೆಗೆ ಕೈಲಿರುವ ಸೊಪ್ಪನ್ನು ನನ್ನ ತಲೆ ಮೇಲೆ ಹಾಕಿ, ತನ್ನ ಚೀಲದಿಂದ ಕುಂಕುಮ ತೆಗೆದು ಹಣೆ ತುಂಬ ಬಳಿದು, ಕೋಲಿನಿಂದ ಆಸ್ಪತ್ರೆಯ ಸಂದು ಮೂಲೆ ತಟ್ಟಿ ಹೋಗುತ್ತಿದ್ದಳು. ಅಸ್ತಮಾ ಪೇಶೆಂಟಾದ ಆಕೆ ಏದುಸಿರು ಬಿಡುತ್ತ ನಡೆದು ಬರುವುದು, ಕೆಮ್ಮಿಕೆಮ್ಮಿ ಉಸಿರುಕಟ್ಟಿ ಒದ್ದಾಡುವುದು ನೋಡಲಾಗದೇ ಮೊದಲ ಸಲ ಬಂದಾಗ ಔಷಧಿ ಕೊಟ್ಟು ಕಳಿಸಿದ್ದೆ. ಮತ್ತೊಮ್ಮೆ ಬಂದಾಗ ನಾನೇ ಕೆಮ್ಮಿದೆನೆಂದು ತನ್ನ ಚೀಲದೊಳಗಿಂದ ಅದೇ ಬಾಟಲಿ ತೆಗೆದು ನನಗೇ ಕೊಟ್ಟಳು! ಇದು ಅವಳು ಕಲಿಸಿದ ಪಾಠ. ಜೀವ ಮತ್ತೆಮತ್ತೆ ಕಲಿಸುತ್ತಿರುವ ಪಾಠ..

ಗುಣಪಡಿಸುವ ಮೊದಲು ನಮ್ಮ ಕಾಯಿಲೆ ನಾವು ಗುಣಪಡಿಸಿಕೊಳ್ಳಬೇಕು!

***

ಮೆಡಿಕಲ್ ಕಾಲೇಜಿನ ಹಾಸ್ಟೆಲಿನಲ್ಲಿ ನಮ್ಮ ಬ್ಲಾಕಿನಲ್ಲೇ ಮೂವರು ಮಾನಸಿಕ ಅಸ್ವಾಸ್ಥ್ಯ ವಿದ್ಯಾರ್ಥಿನಿಯರಿದ್ದರು. ಚಿಕಿತ್ಸೆ ಮೇಲಿದ್ದರಾದರೂ ಒಂದಷ್ಟು ದಿನ ಸರಿಯಿದ್ದರೆ ಕೆಲವು ಕಾಲ ಅವರ ನಡೆನುಡಿಗಳು ‘ಅತಿ’ ಮುಟ್ಟುತ್ತಿದ್ದವು. ನಿಯಮಿತವಾಗಿ ಔಷಧಿ ತೆಗೆದುಕೊಳ್ಳುತ್ತಿದ್ದರೋ ಇಲ್ಲವೋ ಎಂದು ಕೇಳುವಂತಿರಲಿಲ್ಲ, ಏಕೆಂದರೆ ಅವರು ನಮ್ಮ ಸೀನಿಯರ್‌ಗಳಾಗಿದ್ದರು. ಒಬ್ಬಾಕೆ ನನ್ನ ರೂಂ ಮೇಟ್ ಆಗಿದ್ದಾಕೆ. ಅವಳಿಗೆ ತನ್ನ ಕ್ಲಾಸ್‌ಮೇಟ್ ಒಬ್ಬನ ಮೇಲೆ ಹುಚ್ಚು ವ್ಯಾಮೋಹ. ಆದರೆ ಅದು ಒನ್‌ವೇ ಪ್ರೇಮ. ಅತಿ ಪೊಸೆಸಿವ್‌ನೆಸ್. ಅವನು ಯಾರೊಡನೆಯೂ ಮಾತಾಡುವಂತಿಲ್ಲ. ಅವನೊಡನೆ ಬೇರೆಯವರೂ ಮಾತಾಡುವಂತಿಲ್ಲ. ಒಮ್ಮೆ ಅವನ ಜೊತೆ ಮತ್ಯಾರೋ ಹುಡುಗಿ ಮಾತಾಡುವುದು ನೋಡಿ ರಸ್ತೆ ಮೇಲೇ ಜಗಳ ತೆಗೆದು ಗುದ್ದಾಡಿದ್ದಳು. ಭೂಮಿ ತಿರುಗುತ್ತಿರುವುದು, ಈ ಪ್ರಪಂಚ ನಡೆಯುತ್ತಿರುವುದು, ಮಳೆಬೆಳೆಸರ್ಕಾರ ಎಲ್ಲವೂ ಅವನಿಗಾಗೇ ಎಂಬ ಭಾವನೆ! ಉತ್ತರಭಾರತದ ಆಕೆಯ ಪಾಲಕರು ಬರುವ ತನಕ ರೂಮಿನಲ್ಲಿದ್ದ ನಮ್ಮ ತಲೆ ಚಟ್ನಿಯಾಗುತ್ತಿತ್ತು. ಇಂಥವಳೇ ಮತ್ತೊಬ್ಬಾಕೆಗೆ ಧ್ಯಾನದಿಂದ ಜಗತ್ತನ್ನೇ ಸರಿ ಮಾಡುವ ಆಸೆ. ರೂಮು ಬಾಗಿಲ ತಾಳ ಹಾಕಿ ಕುಳಿತರೆ ಗಂಟೆಗಟ್ಟಲೆ ಬಾಗಿಲು ತೆರೆಯುತ್ತಿರಲಿಲ್ಲ. ಒಮ್ಮೆ ಅವಳ ಧ್ಯಾನ ಒಂದು ದಿನ ದಾಟಿ ಅವಳ ರೂಂಮೇಟ್‌ಗಳು ವಾರ್ಡನ್‌ಗೆ ಹೇಳಿ ಬಾಗಿಲೊಡೆದು ಬೈಸಿಕೊಂಡಿದ್ದರು. ಮಗದೊಬ್ಬಾಕೆ ಹಾಸ್ಟೆಲಿನ ಸಣ್ಣಪುಟ್ಟ ಸಮಸ್ಯೆಗಳಿಗೂ ಸೀದಾ ಪ್ರೈಂ ಮಿನಿಸ್ಟರಿಗೇ ಕಾಗದ ಬರೆದು ಅಹವಾಲು ಸಲ್ಲಿಸುತ್ತಿದ್ದಳು. ಅವರುಗಳು ಸರಿಯಾದ ನಂತರವೂ ಅವರ ಹುಚ್ಚಾಟ ಕೆಲಕಾಲ ಜೋಕ್ ಆಗಿ ಚಾಲ್ತಿಯಲ್ಲಿರುತ್ತಿತ್ತು. ಅವರಿಗೇನನಿಸುತ್ತಿತ್ತೋ? ಯಾರು ಕೇಳಿದವರು?


***

ಹೀಗೆ ನಾವು ಅವರ ಅಸ್ತಿತ್ವವನ್ನು ಮರೆತೇಬಿಡುವ ಎಷ್ಟೊಂದು ಮಾನಸಿಕ ಅಸ್ವಸ್ಥತೆ/ಹುಚ್ಚು/ಸಿಝೋಫ್ರೇನಿಯಾ ಇರುವ ವ್ಯಕ್ತಿಗಳನ್ನು ನೋಡುತ್ತೇವಲ್ಲವೆ? ಎಷ್ಟೋ ಸಲ ಕತೆ ಬರೆಯ ಹೊರಟಾಗ ಅವರು ಪಾತ್ರಗಳಾಗಿ ನುಗ್ಗಿ ಬಂದದ್ದಿದೆ. ಆದರೆ ಅಂಥವರ ಕುರಿತು ಮನಮಿಡಿವ ಎಷ್ಟೊಂದು ಕತೆ, ಸಿನಿಮಾ ಎಲ್ಲ ಬಂದುಹೋಗಿವೆ. ಮತ್ತೆ ಕಥನ ವಸ್ತುವಾಗಿ ಅವರನ್ನು ಬಳಸಿಕೊಳ್ಳಬಾರದೆಂದು ಒತ್ತೊತ್ತಿ ಮುಂದೆ ಬರುವ ಅವರನ್ನು ಆಚೆ ಕಳಿಸಿದ್ದೆ. ಬರೆದು ಅವರಿಗಾಗುವುದಾದರೂ ಏನು ಎಂಬ ಪಾಪಪ್ರಜ್ಞೆಗೆ ಗೆರೆ ಎಳೆದುಕೊಂಡು ಕೂತಿದ್ದೆ.

ಮೊನ್ನೆ ಮಂಗಳೂರಿಗೆ ಹೋಗುವಾಗ ಸುರಿಯುವ ಮಳೆಯಲ್ಲೂ ಏನನ್ನೋ ಆಯ್ದು ತುಂಬಿಕೊಳ್ಳುವ ನಾಲ್ಕಾರು ಹುಚ್ಚರು ರಸ್ತೆ ಬದಿ ಕಾಣಿಸಿದರು. ಕರಾವಳಿಯ ಈ ಹೈವೇಗುಂಟ ಪಯಣಿಸಿದರೆ ಒಬ್ಬರಲ್ಲ ಒಬ್ಬರು ಕಣ್ಣಿಗೆ ಬೀಳುತ್ತಾರೆ. ನಮ್ಮೂರ ಜನ ಅವರನ್ನು ‘ಪಾಕಿಸ್ತಾನದ ಐಎಸ್ಸೈ ಗೂಢಚಾರರು, ಇಲ್ಲಿನ ಸುದ್ದಿ ತಿಳಿಸಲಿಕ್ಕೆ ಹೀಗೆ ವೇಷ ಮಾಡಿಕೊಂಡು ತಿರುಗುತ್ತಾರೆ’ ಎಂದು ಮಾತಾಡಿಕೊಳ್ಳುತ್ತಾರೆ. ಯಾವ ಪಾಕಿಸ್ತಾನವೋ, ಯಾವ ಗೂಢ ಚರ್ಯೆಯೋ, ತಮ್ಮ ಮೈಮೇಲೆ ದ್ಯಾಸವಿಲ್ಲದೆ ತಿರುಗುವ ಅವರನ್ನು ಅಂಥ ಪಾತ್ರಗಳಲ್ಲಿ ಕಲ್ಪಿಸಿಕೊಳ್ಳುವಂಥ ತರಬೇತಿ ಮನಸುಗಳಿಗೆ ಕೊಟ್ಟದ್ದು ಯಾವುದು ಎಂದು ಆತಂಕವಾಗುತ್ತ ಈ ಎಲ್ಲವನ್ನು ಬರೆಯಬೇಕೆನಿಸಿತು...

ಸಿಝೋಫ್ರೇನಿಯಾ



ನಾಳಿನ ಭಯದಿಂದ, ನಾಳೆಯೆಂಬ ಗುರಿಯಿಂದ ವ್ಯಕ್ತಿಯನ್ನು ಹುಚ್ಚುತನವು ವಿಮುಕ್ತಿಗೊಳಿಸುತ್ತದೆ. ಆದರೆ ಅಷ್ಟೇ ಅಲ್ಲ, ಅದು ಇವತ್ತಿನ ಶಕ್ತಿ, ಸಾಧ್ಯತೆಗಳನ್ನೂ ಬುಡಮಟ್ಟ ಹೀರಿಬಿಡುತ್ತದೆ. ಅವರಲ್ಲಿ ಚಿಂತನಾ ಪ್ರಕ್ರಿಯೆ ವಿಫಲವಾಗುತ್ತದೆ. ಸುತ್ತಮುತ್ತಲ ಆಗುಹೋಗುಗಳಿಗೆ ಸ್ಪಂದನ, ಭಾವುಕ ಪ್ರತಿಕ್ರಿಯೆ ನಾಶವಾಗುತ್ತದೆ. ಮಾತು-ಯೋಚನೆ-ಕ್ರಿಯೆಗಳು ಒಂದಕ್ಕೊಂದು ಸಂಬಂಧವಿಲ್ಲದೆ ಹೋಗುತ್ತವೆ. ದೈನಂದಿನ ಕ್ರಿಯೆಗಳ ಕುರಿತ ಗಮನವೂ ಕಡಿಮೆಯಾಗುತ್ತದೆ. ಯಾರಿಗೂ ಕಾಣದ್ದು ಕಾಣುತ್ತ, ಕೇಳದ್ದು ಕೇಳುತ್ತ ಒಂದು ತೆರನ ಭ್ರಮೆಯಲ್ಲಿ ತೇಲಿಸಿ ಮುಳುಗಿಸುತ್ತದೆ. ವಾಸ್ತವವನ್ನು ಅವರು ಬೇರೆಯೇ ಆಗಿ ಗ್ರಹಿಸುತ್ತಾರೆ. ವಿಶ್ಲೇಷಿಸುವ ಸಾಮರ್ಥ್ಯ ನಶಿಸುತ್ತದೆ. ಯಾರೋ ಬೈದಂತೆ, ತಮ್ಮನ್ನು ಕೊಲ್ಲಲು/ಜೈಲಿಗೆ ಹಾಕಲು/ಅಪಮಾನಿಸಲು ಹುನ್ನಾರ ಮಾಡುತ್ತಿರುವಂತೆ ಭ್ರಮೆ ಹುಟ್ಟುತ್ತದೆ. ಎಲ್ಲರನ್ನು ಅನುಮಾನಿಸುತ್ತಾರೆ. ಕಣ್ಣಿಗೆ ಏನೇನೋ ಕಾಣತೊಡಗುತ್ತದೆ. ಯಾರೋ ತನ್ನನ್ನು ನಿಯಂತ್ರಿಸುತ್ತ ನಾಶಮಾಡುತ್ತಿದ್ದಾರೆಂಬ ಭಾವ ಬಲಿಯುತ್ತದೆ. ಉದ್ಯೋಗ ಸಾಧ್ಯವಾಗುವುದಿಲ್ಲ. ಸಾಮಾಜಿಕ ಸಂಬಂಧ, ಬದುಕು ಸಾಧ್ಯವಾಗುವುದಿಲ್ಲ. ವ್ಯಕ್ತಿತ್ವ ಛಿದ್ರವಾಗುತ್ತದೆ. ನಡವಳಿಕೆ ಮತ್ತು ಭಾವುಕತೆಯ ತೊಂದರೆ ಮೊದಲೇ ಕಂಡುಬಂದು ನಂತರ ಪೂರ್ಣಪ್ರಮಾಣದ ಹುಚ್ಚುತನ ಆವರಿಸುತ್ತದೆ. ಕೆಲವರಲ್ಲಿ ಹಿಂಸಾ ಪ್ರವೃತ್ತಿ ತೀವ್ರವಾಗುತ್ತದೆ. ಮತ್ತೆ ಕೆಲವರು ದಿನ-ವಾರ-ತಿಂಗಳುಗಟ್ಟಲೇ ಅಲ್ಲಾಡದೇ ಕೂತು, ಊಟತಿಂಡಿಯನ್ನೂ ಬಿಟ್ಟು ಪ್ರಾಣ ಬಿಡುತ್ತಾರೆ.

ಸಾಧಾರಣವಾಗಿ ತಾರುಣ್ಯದಲ್ಲೇ ಇದು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಇಂಥದೇ ಎಂಬ ಒಂದು ಕಾರಣ ಇಲ್ಲವಾದರೂ ಗರ್ಭಸ್ಥ ಶಿಶುವಿನ ನರಮಂಡಲ ಬೆಳವಣಿಗೆಯ ಏರುಪೇರು, ನಂತರ ಜೀವನದ ಆಗುಹೋಗು ಇದಕ್ಕೆ ಕಾರಣವೆಂದು ಸಂಶೋಧನೆಗಳು ಹೇಳುತ್ತವೆ. ವಂಶಪಾರಂಪರ್ಯ ಗುಣ, ವಾತಾವರಣ, ಯೋಚನಾ ಪ್ರಕ್ರಿಯೆ ಹಾಗೂ ವ್ಯಕ್ತಿಯ ನ್ಯೂರೋ ಬಯಾಲಜಿ ಇವೆಲ್ಲದರ ಜೊತೆಗೆ ದೀರ್ಘಾವಧಿ ಒಂಟಿತನ, ನಿರುದ್ಯೋಗ, ಬಡತನ, ಅನಾಥ ಪ್ರಜ್ಞೆಗಳು ಒದಗಿಬಿಟ್ಟರೆ ಹುಚ್ಚುತನ ಆಕ್ರಮಿಸಿಬಿಡುತ್ತದೆ.

ಗಂಡಸರಲ್ಲಿ ೧೫-೨೫ ವರ್ಷಗಳು, ಮಹಿಳೆಯರಲ್ಲಿ ೨೫-೩೫ ವರ್ಷಗಳ ನಡುವಿನ ಅವಧಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ನಿಧಾನವಾಗಿ ಬಾಧಿತರ ವ್ಯಕ್ತಿತ್ವ ಬದಲಾಗುತ್ತ ಹೋಗುತ್ತದೆ. ವಿಶ್ವಾದ್ಯಂತ ಜನಸಂಖ್ಯೆಯ ಸರಾಸರಿ ೧% ವ್ಯಕ್ತಿಗಳು ಈ ಅಸ್ವಸ್ಥತೆಯಿಂದ ನರಳುತ್ತಾರೆ. ಮನೆ ಬಿಟ್ಟು ಊರು ತಿರುಗುವಂತಾದ ಮೇಲೆ ೧೦-೧೫ ವರ್ಷವಷ್ಟೇ ಜೀವಿಸುತ್ತಾರೆ. ಈ ಅಸ್ವಸ್ಥತೆ ಜೊತೆಗೆ ಕುಡಿತದಂತಹ ಚಟಗಳಿಗೆ ಬಲಿಯಾಗುವುದು, ಬೊಜ್ಜು, ಹೃದಯ ಕಾಯಿಲೆ, ಖಿನ್ನತೆ ಹಾಗೂ ಆತ್ಮಹತ್ಯೆಗಳು ಅವರ ಆಯಸ್ಸನ್ನೂ ೧೦-೧೫ ವರ್ಷ ಕಡಿಮೆ ಮಾಡುತ್ತದೆ. ಇಂಥ ಮನಸ್ಥಿತಿಯವರ ಕುರಿತು ಕುಟುಂಬವು ಕೆಲಕಾಲ ದುಃಖಿಸಿ, ಸಾಧ್ಯವಾದದ್ದನ್ನೆಲ್ಲ ಮಾಡಿ, ಸಹಜತೆಗೆ ತರಲೆತ್ನಿಸುತ್ತದೆ. ಮತ್ತೆಮತ್ತೆ ಮರುಕಳಿಸುವ, ಚಿಕಿತ್ಸೆ ಫಲಿಸದ ಅಸ್ವಸ್ಥತೆ ಕ್ರಮೇಣ ಅವರಲ್ಲಿ ಬೇಸರ ತರುತ್ತದೆ. ಆಗಲೇ ಅಂಥವರನ್ನು ಕೂಡಿ ಹಾಕುತ್ತಾರೆ. ಸರಪಳಿಯಲ್ಲಿ ಬಂಧಿಸಿಡುತ್ತಾರೆ, ಹೊಡೆಯುತ್ತಾರೆ. ತನ್ನನ್ನು ತಾನು ಮರೆತ ಅಸಹಾಯಕ ವ್ಯಕ್ತಿ ಬೇಗ ಇತರರಿಗೆ ಬೇಡದವನಾಗುತ್ತಾನೆ.

ಮೊದಮೊದಲು ಮಾನಸಿಕ ಅಸ್ವಸ್ಥರನ್ನು ಮನೆಯಿಂದ ಹೊರಗಿಡಲಾಗುತ್ತಿತ್ತು ಅಥವಾ ಅವರೇ ಮನೆ ಬಿಟ್ಟುಬಿಡುತ್ತಿದ್ದರು. ನಂತರ ಅಂಥವರನ್ನೆಲ್ಲ ಒಂದೆಡೆ ಕೂಡಿಹಾಕುವ ಅಸೈಲಮ್ ಕಟ್ಟಲಾಯಿತು. ಮಧ್ಯಯುಗದ ಇಸ್ಲಾಮಿನ ಆಳ್ವಿಕೆದಾರರು ಈಜಿಪ್ಟಿನಲ್ಲಿ ಅಂಥ ಅಸೈಲಮ್ಮುಗಳನ್ನು ಕಟ್ಟಿದರು. ಅದರಲ್ಲಿರುವವರಿಗೆ ತೋರಿಸುತ್ತಿದ್ದ ಕಾಳಜಿಗೆ ಯೂರೋಪಿಯನ್ ಪ್ರವಾಸಿಗಳು ಬೆರಗಾಗಿ ಆ ಕುರಿತು ಉಲ್ಲೇಖಿಸಿದ್ದಾರೆ. ಕ್ರಿ.ಶ.೮೭೨ರಲ್ಲಿ ಕೈರೋನಲ್ಲಿ ಅಹ್ಮದ್ ಟುಲನ್ ಅಂಥ ಮೊದಲ ಅಸೈಲಮ್ ಕಟ್ಟಿಸಿದ. ನಂತರ ಅಮೆರಿಕ, ಯೂರೋಪಿನಾದ್ಯಂತ ಅಂಥ ಹಲವು ಖಾಸಗಿ ಅಸೈಲಮ್ಮುಗಳೂ ಸಹ ತಲೆಯೆತ್ತಿದವು. ಹುಚ್ಚರನ್ನು ಒಂದೆಡೆ ಕೂಡಿಹಾಕುತ್ತಿದ್ದ ಅಸೈಲಮ್ಮುಗಳು ೧೯ನೇ ಶತಮಾನದಲ್ಲಿ ಜನಪ್ರಿಯವಾಗಿದ್ದವು. ಒಂದು ಹಂತದಲ್ಲಿ ಬ್ರಿಟನ್ನಿನ ಒಂದು ಲಕ್ಷ ಜನ ಇಂಥ ಅಸೈಲಮ್ಮುಗಳಲ್ಲಿದ್ದರು! ಸೈಕಿಯಾಟ್ರಿ ಎನ್ನು ವೈದ್ಯ ವಿಜ್ಞಾನ ಶಾಖೆ ಜನಪ್ರಿಯವಾದಂತೆ ಈ ಅಸೈಲಮ್ಮುಗಳು ಜೈಲುಗಳೆಂದೂ, ವೈದ್ಯ ಅಲ್ಲಿ ನ್ಯಾಯಾಧೀಶನೇ ಹೊರತು ವೈದ್ಯನಲ್ಲವೆಂದೂ ಟೀಕೆ ಕೇಳಿಬಂತು. ಕೊನೆಗೆ ಅಸೈಲಮ್ಮುಗಳು ಸೈಕಿಯಾಟ್ರಿ ಕ್ಲಿನಿಕ್‌ಗಳಾದವು. ಮಾನಸಿಕ ಅಸ್ವಾಸ್ಥ್ಯತೆಯ ಕಾರಣ, ಚಿಕಿತ್ಸೆಗಳು ಅಭಿವೃದ್ಧಿಗೊಂಡಂತೆ ಅಸೈಲಮ್ಮುಗಳು ಮುಚ್ಚತೊಡಗಿದವು.

ಹೀಗೇ ನಿಮಗೆ ಗೊತ್ತಿರುವ ನಿಮ್ಮೂರ ಬೀದಿಗಳ ಹುಚ್ಚರನ್ನೆಲ್ಲ ಕಲ್ಪಿಸಿಕೊಳ್ಳಿ. ಹೆಚ್ಚಾಗಿ ಅವರು ತಳವರ್ಗದವರಾಗಿರುವುದನ್ನು ಗಮನಿಸಬಹುದು. ಇದಕ್ಕೆ ಕಾರಣ ತಳವರ್ಗದ ವ್ಯಕ್ತಿಗೆ ಹುಚ್ಚು ಹಿಡಿಯಲು ಯಾವ ಸಾಮಾಜಿಕ ಸ್ಥಿತಿ/ಸಮಸ್ಯೆಗಳು ಕಾರಣವಾಗಿದ್ದವೋ ಅವು ಸಾಮಾನ್ಯವಾಗಿ ಅಪರಿಹಾರ್ಯವಾಗಿರುತ್ತವೆ. ವೈದ್ಯರಲ್ಲಿ ಒಯ್ದು ಚಿಕಿತ್ಸೆ ಕೊಡಿಸಬೇಕೆಂಬ ತಿಳುವಳಿಕೆ, ಆರ್ಥಿಕ ಸಾಮರ್ಥ್ಯ ಇಲ್ಲದ ಕಾರಣಕ್ಕೆ ಹುಚ್ಚುತನವನ್ನು ದೆವ್ವವೆಂದೋ, ಮಾಟಮಂತ್ರವೆಂದೋ ಅವರು ಭಾವಿಸುತ್ತಾರೆ. ಎಂದೇ ಬೀದಿಯಲ್ಲಿ ಕಾಣಸಿಗುವ ಹುಚ್ಚರು ಸಾಧಾರಣವಾಗಿ ತಳವರ್ಗದವರಾಗಿರುತ್ತಾರೆ.

ಈ ಕಾಯಿಲೆಗೂ ಔಷಧಿಯಿದೆ. ತುಂಬ ವಯಲೆಂಟ್ ಆಗಿರುವವರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಔಷಧಿಯು ಅವರನ್ನು ಭ್ರಮಾಧೀನ ಸ್ಥಿತಿಯಿಂದ ಬಿಡುಗಡೆ ಮಾಡುತ್ತದೆ. ಆದರೆ ಅದಷ್ಟೇ ಸಾಲದು. ಅದರ ಜೊತೆಗೆ ಕೌನ್ಸೆಲಿಂಗ್, ಕುಟುಂಬದ ಒತ್ತಾಸೆ ಹಾಗೂ ಆತ್ಮವಿಶ್ವಾಸ ಮೂಡಿಸುವಂತಹ ಉದ್ಯೋಗ-ವಾತಾವರಣದ ಅವಶ್ಯಕತೆ ತುಂಬ ಇದೆ.

೧೯೯೪ರಲ್ಲಿ ಅರ್ಥಶಾಸ್ತ್ರ ನೊಬೆಲ್ ಪಡೆದ ಜಾನ್ ನ್ಯಾಶ್ ಸಿಝೋಫ್ರೇನಿಯಾ ಚಿಕಿತ್ಸೆ ಮೇಲಿದ್ದವರು. ಅವರ ಬದುಕನ್ನು ಆಧರಿಸಿ ತೆಗೆದ ‘ಎ ಬ್ಯೂಟಿಫುಲ್ ಮೈಂಡ್’ ಚಿತ್ರ ೨೦೦೧ರಲ್ಲಿ ಅಕಾಡೆಮಿ ಪ್ರಶಸ್ತಿ ಪಡೆಯಿತು. ಸಿಝೋಫ್ರೇನಿಯಾ ಇರುವ ವ್ಯಕ್ತಿಗಳು ಬೌದ್ಧಿಕವಾಗಿ ಮೇಲ್ಮಟ್ಟದಲ್ಲಿರುತ್ತಾರೆ. ಉತ್ತಮ ನೆನಪಿನ ಶಕ್ತಿಯಿರುತ್ತದೆ. ಸೂಕ್ಷ್ಮಗ್ರಹಣ ಶಕ್ತಿಯಿರುತ್ತದೆ. ಆ ಮನಸುಗಳು ತಮ್ಮ ವಿಶ್ಲೇಷಣಾ ಸಾಮರ್ಥ್ಯವನ್ನೇನಾದರೂ ಉಳಿಸಿಕೊಂಡಲ್ಲಿ ಅದ್ಭುತವಾದುದನ್ನು ಸೃಷ್ಟಿಸಬಲ್ಲರು ಮತ್ತು ಸಾಧಿಸಬಲ್ಲರು. ಅವರಿಗೆ ಬೇಕಿರುವುದು ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಮತ್ತು ಪ್ರೀತಿಯ ಒತ್ತಾಸೆ.

ಬಯಲಲ್ಲಿದ್ದೂ ತನ್ನಿರವನ್ನು ಮರೆತ, ಪಂಜರದಲ್ಲಿರದೆಯೂ ಬಂದಿಯಾದ ಆ ಮನಸುಗಳು ಮುಕ್ತವಾಗುವುದು ಸುಲಭದ ಮಾತಲ್ಲ. ಆದರೆ ಮನುಷ್ಯ ನಿಘಂಟಿನಲ್ಲಿ ಅಸಾಧ್ಯವೆಂಬ ಯಾವುದೂ ಇಲ್ಲ.

ನೀಷೆ ಹುಚ್ಚುತನವೇ ಅನುಗ್ರಹ ಎನ್ನುತ್ತಾನೆ. ಊಂಹ್ಞೂಂ, ಅವನು ಸಿಝೋಫ್ರೇನಿಯಾಗೆ ಈ ಮಾತು ಹೇಳಿರಲಿಕ್ಕಿಲ್ಲ.




Sunday, 13 July 2014

ಅತ್ಯಾಚಾರ - ಬುನಾದಿಯಲ್ಲಿ ಹೂತು ಹೋಗಿರುವ ತಪ್ಪು ಕಲ್ಲು



ಈ ಸುಂದರವಾದ ಗ್ರಹ ಭೂಮಿ ಸಾವಿರಾರು ಕೋಟಿ ವರ್ಷಗಳ ಕೆಳಗೆ ಅಸ್ತಿತ್ವಕ್ಕೆ ಬಂತು. ಇನ್ನೆಷ್ಟೋ ಕೋಟ್ಯಂತರ ವರ್ಷಗಳ ಹಿಂದೆ ಕ್ರಿಮಿಕೀಟ ಪಶುಪಕ್ಷಿ ಪ್ರಾಣಿಗಳು ರೂಪುಗೊಂಡವು. ಮನುಷ್ಯನೆಂಬೋ ಎರಡು ಕಾಲಿನ ವಿಶಿಷ್ಟ ಪ್ರಾಣಿ ಹುಟ್ಟಿದ್ದು ಕೇವಲ ೪೦ ಸಾವಿರ ವರ್ಷಗಳ ಹಿಂದೆ. ಈ ಸಾವಿರಾರು ವರ್ಷಗಳಲ್ಲಿ ಅವನ ರೂಪ, ನಡೆ, ನುಡಿ, ಸಮಾಜ ಎಲ್ಲವೂ ಬದಲಾಗುತ್ತಲೇ ಬಂದಿದೆ. ವಿಕಾಸವಾದದ ತುತ್ತತುದಿಯಲ್ಲಿರುವ ಮನುಷ್ಯನ ಹೆಗ್ಗಳಿಕೆ ಏನೆಂದರೆ ಅವನ ಬೆನ್ನುಹುರಿ ನೆಟ್ಟಗಿದೆ ಹಾಗೂ ವಿಶ್ಲೇಷಣಾ, ವಿಚಕ್ಷಣಾ ಸಾಮರ್ಥ್ಯವಿರುವ ಮಿದುಳನ್ನು ಪಡೆದಿದ್ದಾನೆ ಎನ್ನುವುದು.

ಆದರೆ ವಿಕಾಸದ ಅತ್ಯುಚ್ಛ ಬಿಂದುವಿನಲ್ಲಿದ್ದೇನೆಂದುಕೊಳ್ಳುವ ಮಾನವ ಸಮಾಜ ಈ ೨೦೧೩ನೇ ಇಸವಿಯಲ್ಲಿ ಹೇಗಿದೆ?!

ಬಹುಶಃ ಇನ್ಯಾವ ಜೀವಿ ಪ್ರಭೇಧವೂ ತನ್ನ ಲಿಂಗಪ್ರಭೇಧವನ್ನು ನಡೆಸಿಕೊಳ್ಳದಷ್ಟು ದುಷ್ಟವಾಗಿ ಆತ ನಡೆಸಿಕೊಳ್ಳುತ್ತಿದ್ದಾನೆ. ಇನ್ಯಾವುದೇ ಜೀವಿಗಳ ಹೆಣ್ಣು ಗುಂಪು ದೌರ್ಜನ್ಯ ವಿರೋಧ, ಹಕ್ಕೊತ್ತಾಯ ಎಂದು ಸಂಘಟಿತವಾಗಬೇಕಾದ ಅಥವಾ ದನಿಯೆತ್ತಲು ಸೆಮಿನಾರು, ಬರಹ, ಪುಸ್ತಕಗಳನ್ನು ಸಿದ್ಧಗೊಳಿಸಬೇಕಾದ ಅವಶ್ಯಕತೆಯಿಲ್ಲ. ಮಿದುಳು ವಿಕಾಸವಾದಷ್ಟು ಹೃದಯ ವಿಕಾಸವಾಗದೇ ಹೋದ ಕಾರಣ ಮನುಷ್ಯ ಸಮಾಜದಲ್ಲಿ ಅತ್ಯಾಚಾರವೆಂಬ ಅನಾಗರಿಕ, ಬರ್ಬರ ಕ್ರಿಯೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಅದರ ಸ್ವರೂಪ ಅರಿಯುವಲ್ಲಿ, ವಿಶ್ಲೇಷಣೆಯಲ್ಲಿ, ತಡೆಯುವ ಕಾನೂನುಗಳಲ್ಲಿ ಏನೋ ಒಂದು ಘನಲೋಪವಾಗಿರಲೇಬೇಕು, ಏಕೆಂದರೆ ಅದು ನಿರಂತರ ನಡೆಯುತ್ತಿರುವ ಅಪರಾಧವಾಗಿದೆ.

ಅತ್ಯಾಚಾರ ಲಾ ಅಂಡ್ ಆರ್ಡರ್ ಸಮಸ್ಯೆ ಅಲ್ಲ. ಹಾಗೆಯೇ ಉಳಿದ ಅಪರಾಧಗಳನ್ನು ಚರ್ಚಿಸಿದಂತೆ ಚರ್ಚಿಸಲೂ ಬರುವುದಿಲ್ಲ. ಕಾರಣ ಅದು ಮನುಷ್ಯನ ಬೇಸಿಕ್ ಇನ್‌ಸ್ಟಿಂಕ್ಟ್‌ಗಳಲ್ಲೊಂದಾದ ಕಾಮದ ಜೊತೆ ಸಂಬಂಧ ಹೊಂದಿರುವಂಥದು. ಆ ಭೀಭತ್ಸವನ್ನು ಅತಿ ಭಾವುಕಗೊಳ್ಳದೆ, ವಿನಾಕಾರಣ ಸಿಟ್ಟಿಗೇಳದೇ ವರ್ಣಿಸುವುದು ಕಷ್ಟ. ಈ ಸಮಸ್ಯೆಯ ಸ್ವರೂಪ, ಪರಿಹಾರಗಳನ್ನು ನಿರ್ಧರಿಸುವುದರಲ್ಲಿ ಸಮಾಜದ ಆಂತರಿಕ ರಚನೆಯೂ ಕಾರಣವಾಗಿರುವುದರಿಂದ ಮತ್ತೆಮತ್ತೆ ಭಿನ್ನ ದೃಷ್ಟಿಕೋನಗಳಲ್ಲಿ ವಸ್ತುನಿಷ್ಠ ಚರ್ಚೆ ನಡೆಸುವುದು ಅನಿವಾರ್ಯ ಅಗತ್ಯವಾಗಿದೆ.

***

ಇಡೀ ಸಮಾಜ ವ್ಯವಸ್ಥೆ ಮತ್ತು ಕುಟುಂಬ ನಡೆಯುತ್ತಿರುವುದೇ ಲಿಂಗ ತಾರತಮ್ಯದ ಮೇಲೆ. ಅದರಲ್ಲೂ ಭಾರತೀಯ ಸಮಾಜ ಅರ್ಧ ಜನಸಂಖ್ಯೆಯಷ್ಟಿರುವ ಹೆಣ್ಣನ್ನು ನಾನಾ ರೀತಿ, ನೀತಿ, ನಿಯಮಗಳನ್ನು ಸೃಷ್ಟಿಸಿ ನಿಯಂತ್ರಣದಲ್ಲಿಟ್ಟುಕೊಳ್ಳುವುದರಲ್ಲೇ ರೂಪುಗೊಂಡಿರುವಂಥದು. ನಮ್ಮ ಸಮಾಜ ಮಹಿಳೆಯರನ್ನು ಎರಡೇ ದೃಷ್ಟಿಯಲ್ಲಿ ನೋಡುತ್ತದೆ: ಅವರು ಹೆಂಡತಿಯರು ಅಥವಾ ವೇಶ್ಯೆಯರು. ಈ ಎರಡನ್ನು ಬಿಟ್ಟು ಮೂರನೆಯ ಲೈಂಗಿಕ ಅಸ್ತಿತ್ವ ಅವಳಿಗಿಲ್ಲ. ಇದನ್ನು ಅವಳೂ ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಮಾಡಲಾಗಿದೆ.

ಲಿಂಗತಾರತಮ್ಯದ ಆತ್ಯಂತಿಕ ದೌರ್ಜನ್ಯ ಶೀಲ ಎಂಬ ಪರಿಕಲ್ಪನೆಯಲ್ಲಿದೆ. ಅವಳ ಗುಪ್ತಾಂಗಗಳಲ್ಲಿ ‘ಶೀಲ’ ಎಂಬ ಮೌಲ್ಯ ತುಂಬಿ ಅದನ್ನು ಕಾಪಾಡಿಕೊಳ್ಳಲು ಹೋರಾಡುವುದೇ ಬದುಕಿನ ಪರಮೋಚ್ಛ ಕರ್ತವ್ಯ ಎಂದು ಬಿಂಬಿಸಲಾಗಿದೆ. ಆದರೆ ಈ ಶೀಲದ ಪರಿಕಲ್ಪನೆ ಗಂಡಿಗೆ ಅನ್ವಯಿಸುವುದಿಲ್ಲ! ಆತನ ಗುಪ್ತಾಂಗಗಳ ಸಾಮರ್ಥ್ಯವಾದರೋ ಅವನ ಹೆಮ್ಮೆ ಮತ್ತು ಆಸ್ತಿ. ವಿನಯ, ಸಹನೆ, ಕರುಣೆ ಇತ್ಯಾದಿ ಉದಾತ್ತ ಗುಣಗಳೆಲ್ಲ ಇದ್ದರಷ್ಟೆ ಹೆಣ್ಣು ಎಂದು ಆರೋಪಿಸಿ, ಹೊಸ್ತಿಲ ಒಳಗಿನ ಕಾರ್ಯವನ್ನು ವೈಭವೀಕರಿಸಿ ಅವಳ ಮಾತು/ಹಕ್ಕು ಕಸಿದುಕೊಳ್ಳಲಾಗಿದೆ. ಮನೆ ಕೆಲಸ, ಮಕ್ಕಳನ್ನು ಹೆರುವುದು, ಗಂಡನಿಗೆ ಸುಖದಾಯಕವಾಗಿರುವುದು ಈ ಮೂರೂ ಅವಳ ಕರ್ತವ್ಯವೆಂಬಂತೆ ಬಿಂಬಿಸಲಾಗಿದೆ. ಎಷ್ಟು ಮಾಡಿದರೂ ಮುಗಿಯದ, ಯಾವ ಹೊಸತನ/ಕ್ರಿಯಾಶೀಲತೆ/ಆನಂದ ನೀಡದ ಮನೆಗೆಲಸವೆಂಬ ಬಾಂಡೆಡ್ ಲೇಬರ್‌ನ ಕಷ್ಟ, ಪ್ರಾಮುಖ್ಯತೆಯನ್ನು ಸಮಾಜವೂ ಅರಿಯದೇ; ಅವಳ ಕೆಲಸಕ್ಕೂ ಮತ್ತು ಸಮಾಜಕ್ಕೂ ಇರುವ ಸಂಬಂಧ ಅರ್ಥ ಮಾಡಿಕೊಳ್ಳದೆ ಸಾಮಾಜಿಕ-ಆರ್ಥಿಕ ವಿಚಾರಗಳಲ್ಲಿ ಮಹಿಳೆಯ ಪಾಲುದಾರಿಕೆ ಗುರುತಿಸಲು ಸಾಧ್ಯವಾಗದೇ ಹೋಗಿದೆ.

ಮಹಿಳೆಯೂ ಸಹಾ ಇವೆಲ್ಲದರ ಹೊರತಾಗಿ ತನಗೊಂದು ವ್ಯಕ್ತಿತ್ವವಿದೆ ಎಂದು ಭಾವಿಸಲೇ ಇಲ್ಲ. ತನ್ನನ್ನು ತಾನು ಪುರುಷ ದೃಷ್ಟಿಕೋನದಲ್ಲೇ ಅರ್ಥಮಾಡಿಕೊಂಡು ಇಂದಿಗೂ ಅವಳಿಗೆ ಅವಳೇ ಪರಕೀಯಳಾಗಿದ್ದಾಳೆ ಎಂದರೂ ತಪ್ಪಲ್ಲ.

ಇಂಥ ಸಮಾಜ ಅವಳನ್ನು ಸದಾ ಶರಣಾಗತ ಸ್ಥಿತಿಯಲ್ಲಿಡಲು ಅತ್ಯಾಚಾರ ಎಂಬ ಅಸ್ತ್ರ ಬಳಸಿಕೊಂಡು ಬಂದಿದೆ. ಅನಾದಿಯಿಂದಲೂ ಯುದ್ಧವಿರಲಿ, ದಂಗೆಯಿರಲಿ ಅಥವಾ ಕ್ರಾಂತಿಯಿರಲಿ; ಯಾವ ಪಕ್ಷವಾದರೂ ಸೋಲಲಿ ಅಥವಾ ಗೆಲ್ಲಲಿ - ಈ ಕ್ರೌರ್ಯ, ಉನ್ಮಾದಗಳ ಅಂತಿಮ ಬಾಧಿತಳು ಮಹಿಳೆಯೇ. ಗೆದ್ದವನಿಗೆ ಸೋತವನ ಹೆಣ್ಮಕ್ಕಳ ಮೇಲೆ ಅಸೀಮ ಅಧಿಕಾರ ತಂತಾನೇ ದಕ್ಕಿಬಿಡುತ್ತದೆ. ಸೈನಿಕರು ಹೆಣ್ಣುಗಳನ್ನು ಮನಸೋ ಇಚ್ಛೆ ಬಳಸಿಕೊಳ್ಳಬಹುದು. ಕೆಲ ಮಹಾಮಹಿಮ ರಾಜಕುಲಗಳಂತೂ ತಾವು ಯುದ್ಧಭೂಮಿಗೆ ಹೋಗುವ ಮೊದಲು ಹಣೆಗೆ ತಿಲಕವಿಟ್ಟ ಹೆಂಡತಿಯರನ್ನು ಚಿತೆಗೇರಿಸಿ ಹೋಗುತ್ತಿದ್ದವು! ಈಗಲೂ ನಾಗರಿಕ ಸಮಾಜ ಬೇರೆಬೇರೆ ಕಾರಣಗಳಿಗಾಗಿ ರೂಪಿಸಿಕೊಂಡಿರುವ ಸೈನ್ಯ/ಪೊಲೀಸ್ ಮತ್ತಿತರ ರಕ್ಷಣಾ ವ್ಯವಸ್ಥೆಗಳು ಮಹಿಳೆಯರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿವೆ. ರಕ್ಷಕ ವ್ಯವಸ್ಥೆಯೇ ಮಹಿಳಾ ವಿರೋಧಿ ವ್ಯವಸ್ಥೆಯಾಗಿ ಮಾರ್ಪಟ್ಟಿರುವುದು ನಾಗರಿಕ ಸಮಾಜದ ವಿಪರ್ಯಾಸವಾಗಿದೆ. ಹೀಗೆ ಬರೀ ಮಾನಸಿಕ, ಬೌದ್ಧಿಕ ಅತ್ಯಾಚಾರವಷ್ಟೇ ಅಲ್ಲ, ದೈಹಿಕ ಅತ್ಯಾಚಾರವನ್ನೂ ನಡೆಸಿ ಅವಳು ಪ್ರಶ್ನೆಯೆತ್ತದಂತಹ, ದಂಗೆಯೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಉಸಿರುಗಟ್ಟುವ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಅತ್ಯಾಚಾರವು ಕೇವಲ ಬಲವಂತದ ಲೈಂಗಿಕ ಕ್ರಿಯೆ ಅಲ್ಲ. ಒಬ್ಬ ವ್ಯಕ್ತಿಯಾಗಿ/ಮನುಷ್ಯಳಾಗಿ ಹೆಣ್ಣನ್ನು ನಾಶ ಮಾಡುವ; ಹೆಣ್ಣನ್ನು ನೀನು ಹೆಂಗಸು ಎಂದು ಬೆದರಿಸುವ; ಅಧಿಕಾರವಿರುವ ವರ್ಗ ಅಧಿಕಾರವಿಲ್ಲದ ವರ್ಗವನ್ನು ಹಿಡಿತದಲ್ಲಿಟ್ಟುಕೊಳ್ಳುವ ರಾಜಕೀಯ ಸಾಧನವಾಗಿದೆ. ಇಲ್ಲಿ ಪ್ರತಿಯೊಬ್ಬ ಗಂಡಸೂ ಅತ್ಯಾಚಾರ ಮಾಡಬಲ್ಲ, ಆದರೆ ಅವನು ಯಾಕೆ ಮಾಡಲಾರ ಎಂದರೆ ಕಾರಣ ಎರಡೇ - ಒಂದು ಅವನು ಕಾನೂನಿಗೆ ಹೆದರುತ್ತಾನೆ. ಸಿಕ್ಕಿಬಿದ್ದು ಶಿಕ್ಷೆ, ಅಪಮಾನವಾದರೆ ಎಂದು ಹೆದರುತ್ತಾನೆ. ಎರಡನೆಯದಾಗಿ ಅವನಿಗೆ ತನ್ನ ಶೀಲದ ಅಥವಾ ಹೆಣ್ಣಿನ ಶೀಲದ ಕುರಿತು ಗೌರವವಿದೆ.

ನಾವು ರೋಮ್ಯಾಂಟಿಕ್ ಆಗಿ ವರ್ಣಿಸುವ ಕಾಮಕ್ಕೂ, ಭೀಭತ್ಸವೆನ್ನುವ ಅತ್ಯಾಚಾರಕ್ಕೂ ನಡುವಿನ ಗೆರೆ ತುಂಬ ತೆಳುವಾಗಿದೆ. ಆ ಗೆರೆ ‘ಒಪ್ಪಿಗೆ’ ಎಂಬ ಮೋಸಗಾರ ಪದವನ್ನೊಳಗೊಂಡಿದೆ. ಮೋಸಗಾರ ಏಕೆಂದರೆ ಈ ದೇಶದಲ್ಲಿ ದೈಹಿಕ ಒಪ್ಪಿಗೆ, ಬುದ್ಧಿಪೂರ್ವಕ ಒಪ್ಪಿಗೆ, ಮನಃಪೂರ್ವಕ ಒಪ್ಪಿಗೆ ಬೇರೆಬೇರೆಯಾಗಿವೆ. ಮೌನವೂ ಒಪ್ಪಿಗೆಯೆಂದೇ ಪರಿಗಣಿಸಲ್ಪಡುತ್ತದೆ. ಅಷ್ಟೇ ಅಲ್ಲ, ಈ ಪದದ ವ್ಯಾಖ್ಯಾನವೇ ಗೊಂದಲದಿಂದ ಕೂಡಿ ಅಸ್ಪಷ್ಟವಾಗಿದೆ. ಕಾನೂನು ಪ್ರಕಾರ ೧೬ ವಯಸ್ಸಿನ ಬಾಲೆ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಬಹುದು. ಆದರೆ ಮದುವೆಯಾಗಲು ಕನಿಷ್ಠ ೧೮ ವರ್ಷವಾಗಿರಬೇಕು. ಹಾಗಾದರೆ ನಡುವಿನ ಈ ಎರಡು ವರ್ಷಗಳು ಏನು? ಮದುವೆ ಎನ್ನುವುದರ ವ್ಯಾಖ್ಯೆಯೇನು? ೧೯೮೭ರ ‘ಮಥುರಾ’ ಅತ್ಯಾಚಾರ ಕೇಸಿನ ತೀರ್ಪನ್ನು ನೋಡುವುದಾದರೆ, ಮಥುರಾ ಎಂಬ ೧೬ ವರ್ಷದ ಬುಡಕಟ್ಟು ಬಾಲೆಯ ಮೇಲೆ ಅತ್ಯಾಚಾರವಾಯಿತು. ಆಕೆಯ ಕೇಸನ್ನು ಪರಿಶೀಲಿಸಿದ ನ್ಯಾಯಾಲಯವು ಆ ಬಾಲೆಯ ಮೈಮೇಲೆ ಯಾವುದೇ ಹಿಂಸೆಯ ಕುರುಹುಗಳು ಇರಲಿಲ್ಲ, ಅವಳು ಪ್ರತಿರೋಧ ತೋರಿಲ್ಲ. ಆದ್ದರಿಂದ ಅವಳು ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಿರಬೇಕು, ಎಂದೇ  ಅದು ಅತ್ಯಾಚಾರವಾಗುವುದಿಲ್ಲ ಎಂದು ತೀರ್ಪು ನೀಡಿತು! ಒಪ್ಪಿಗೆ ಕುರಿತ ಇಂಥ ಎಲ್ಲ ಗೊಂದಲಗಳಿಂದ ದಾಖಲಾಗುವ ಬೆರಳೆಣಿಕೆಯಷ್ಟು ಕೇಸುಗಳಲ್ಲೂ ಅಪರಾಧಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಾಗುತ್ತಿದೆ.

ಇಲ್ಲಿ ಅತ್ಯಾಚಾರ ಯಾಕೆ ತಪ್ಪು? ಯಾಕೆಂದರೆ ಯಾವುದೋ ಗಂಡಿಗೆ ಸೇರಿದ ವಸ್ತುವಿನ ಮೇಲೆ ದುರಾಕ್ರಮಣ ಆಗಿದೆ ಎಂಬ ನೈತಿಕ ಕಾರಣಕ್ಕೆ. ಹೆಣ್ಣುಜೀವಕ್ಕೆ ಅಪಚಾರ ಆಗಿದೆಯೆಂದಾಗಲೀ, ಅವಳ ಇಚ್ಛೆಯ ವಿರುದ್ಧ ನಡೆದಿದೆ ಎಂದಾಗಲೀ ಅಥವಾ ಒಂದು ವ್ಯಕ್ತಿತ್ವ ನಾಶ ಮಾಡುವ ಕ್ರಿಯೆಯೆಂದಾಗಲೀ ಸಮಾಜ ಭಾವಿಸುವುದಿಲ್ಲ. ಕೇವಲ ಆಸ್ತಿಹಕ್ಕಿನ ಪ್ರಶ್ನೆಯೆಂಬಂತೆ ಅದು ಪರಿಗಣಿಸಲ್ಪಡುತ್ತದೆ. ಎಂದೇ ಯಾರದೂ ಆಸ್ತಿಯಲ್ಲದ ಅಥವಾ ಒಬ್ಬರಿಗಿಂತ ಹೆಚ್ಚು ಜನರ ಆಸ್ತಿಯಾಗಿರುವ ಹೆಣ್ಣಿನ ಮೇಲೆ ಅತ್ಯಾಚಾರ ನಡೆದರೆ ಅದು ಆಕಸ್ಮಿಕ, ಬರ್ಬರ ಎಂದು ಯಾರಿಗೂ ಅನಿಸುವುದಿಲ್ಲ. ಲೈಂಗಿಕ ಕಾರ್ಯಕರ್ತರು ಸಾಯುವಂಥ ಹಿಂಸೆ ಅನುಭವಿಸುತ್ತಾರೆ. ಅದರ ಬಗ್ಗೆ ನಾವ್ಯಾರೂ ಮಾತನಾಡುವುದಿಲ್ಲ. ಕೋರ್ಟುಗಳಲ್ಲಿ ಈ ತನಕ ಚಾಲ್ತಿಯಲ್ಲಿದ್ದ ಎರಡು ಬೆರಳ ಪರೀಕ್ಷೆ - ಟೂ ಫಿಂಗರ್ ಟೆಸ್ಟ್ - ಕೂಡಾ ಬಳಕೆಯಾಗುತ್ತಿರುವುದು ಅವಳು ಈ ಮೊದಲೇ ಲೈಂಗಿಕ ಸಂಪರ್ಕ ಹೊಂದಿರಬಹುದೇ? ಬಹಳ ಸಾರಿ ಹೊಂದಿರಬಹುದೇ? ಅವಳ ನಡತೆ ಹೇಗಿತ್ತು? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ. ಅವಳ ಮೊದಲಿನ ನಡತೆ, ಬೇರೆಯವರ ಜೊತೆ ಸಂಬಂಧ ಇವೆಲ್ಲ ಅತ್ಯಾಚಾರವೆಂಬ ಗುನ್ನೆ ಹಗುರವೋ ಭಾರವೋ ನಿರ್ಧರಿಸುವಂತಹ ಅಂಶಗಳಾಗಿವೆ!

ಆಳದಲ್ಲಿ ಈ ಸಮಾಜ ರಚನೆ ಅತ್ಯಾಚಾರವನ್ನು ಒಪ್ಪಿಕೊಂಡಿದೆ. ಅತ್ಯಾಚಾರ ಹೆಚ್ಚುತ್ತಲೇ ಇರುವುದಕ್ಕೆ ಇದು ಕಾರಣವಾಗಿದೆ.

***

ಅತ್ಯಾಚಾರ ಎಂಬ ಮಾತು ಕೇಳಿದ ಕೂಡಲೇ ಬಹಳಷ್ಟು ಜನ ಹೆಣ್ಮಕ್ಕಳಿಗೆ ಪ್ರಚೋದಕ ಉಡುಪು ಧರಿಸದಂತೆ, ನಡುರಾತ್ರಿ, ನಿರ್ಜನ ಕತ್ತಲ ಪ್ರದೇಶಗಳಲ್ಲಿ ಒಬ್ಬರೇ ಓಡಾಡದಂತೆ; ಬಾರ್-ಪಬ್‌ಗಳಿಗೆ ಹೋಗದಂತೆ; ಗೆಳೆಯರ ಜೊತೆ ಸುತ್ತಾಡದಂತೆ ಬುದ್ಧಿ ಹೇಳಿ ಎಂಬ ಸಲಹೆ ಕೊಡುತ್ತಾರೆ. ಮಹಿಳಾ ಆಯೋಗವೂ ಸಹಿತ ಹೆಣ್ಣುಮಕ್ಕಳಿಗೆ ವಸ್ತ್ರಸಂಹಿತೆ ಬೋಧಿಸಿ ಕತ್ತಲಾದ ಮೇಲೆ ಒಬ್ಬೊಬ್ಬರೇ ತಿರುಗಬೇಡಿ ಎಂದು ಸೂಚಿಸುತ್ತದೆ. ಇಂಥ ಸಲಹೆಸೂಚನೆಗಳಿಂದ ಮತ್ತೆ ಹೆಣ್ಣನ್ನು ನಾಲ್ಕು ಗೋಡೆಗಳೊಳಗೆ ಸುರಕ್ಷಿತವಾಗಿರಿಸುವ, ಅದು ಸುರಕ್ಷಿತವೆಂದು ನಂಬಿಸುವ ಪ್ರಯತ್ನ ಶುರುವಾಗಿದೆ. ಆತ್ಮರಕ್ಷಣೆಗಾಗಿ ಕರಾಟೆ ಕಲಿಯಬೇಕು ಎಂಬಿತ್ಯಾದಿ ಮಾತು ಕೇಳಿಬರುತ್ತಿದೆ. ಇವೆಲ್ಲ ವ್ಯಕ್ತಿಗತವಾಗಿ ಎಲ್ಲೋ ಕೆಲವರಿಗೆ ಸಾಧ್ಯವಾಗಬಹುದು. ಆದರೆ ಪ್ರಚೋದನೆ ಮತ್ತು ಪರಿಹಾರ ಎರಡರಲ್ಲೂ ಇರುವುದು ಕೇವಲ ಹೆಣ್ಣಿನ ಪಾತ್ರವಲ್ಲ ಎಂದು ಸಮಾಜಕ್ಕೆ ನೆನಪಿಸಬೇಕಿದೆ.

ನಗ್ನಚಿತ್ರಗಳನ್ನು ಬಿಡಿಸುವ ಒಬ್ಬ ಕಲಾವಿದನನ್ನು ನಿಮಗೆ ಸ್ಫೂರ್ತಿ ಯಾರು ಎಂದು ಕೇಳಿದರು. ಅದಕ್ಕೆ ಆತ ನನ್ನೆದುರು ಬರುವ ಪ್ರತಿ ಹೆಣ್ಣನ್ನೂ ನಾನು ನಗ್ನವಾಗಿ ಕಲ್ಪಿಸಿಕೊಳ್ಳುತ್ತೇನೆ ಎಂದು ಹೇಳಿದ! ನೋಡುವ ಕಣ್ಣು ನಿಮ್ಮನ್ನು ನಗ್ನವಾಗಿ ಕಲ್ಪಿಸಿಕೊಳ್ಳಬಲ್ಲದಾದರೆ ಎಂಥ ಉಡುಪು ತೊಟ್ಟರೇನು? ಶಾಲೆಗೆ ಹೋಗುವ ಎಳೆಯ ಮಕ್ಕಳು, ಕೂಲಿ ಕೆಲಸ ಮಾಡುವ ಹೆಣ್ಮಕ್ಕಳು, ಶಿಫ್ಟಿನಲ್ಲಿ ದುಡಿಯುವ ಇನ್ನೆಷ್ಟೋ ಉದ್ಯೋಗಸ್ಥ ಮಹಿಳೆಯರು, ಅಸಹಾಯಕ ಮುದುಕಿಯರ ಮೇಲೆಲ್ಲ ಅತ್ಯಾಚಾರವಾಗುತ್ತಿದೆ. ಅವರೆಲ್ಲ ಸುರಕ್ಷೆಯ ನೆಪದಲ್ಲಿ ಮನೆಯಲ್ಲಿರಬೇಕೆ? ರೈಲು, ಬಸ್ಸು, ಕಾರು, ವಿಮಾನದಲ್ಲಿಯೂ ಅತ್ಯಾಚಾರ ನಡೆಯುತ್ತಿದೆ. ಅಪರಿಚಿತ ಹೆಣ್ಮಕ್ಕಳನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತದೆ? ಅವಳ ಪ್ರತಿ ನಡೆ, ಚಹರೆಗಳನ್ನೂ ಲೈಂಗಿಕಾರ್ಥದಲ್ಲಿ ನೋಡಲಾಗುತ್ತದೆ. ಸೆರಗೆಳೆದುಕೊಳ್ಳುವುದು, ಸೆರಗು ಎಳೆದುಕೊಳ್ಳದಿರುವುದು, ಸೀರೆ ನೆರಿಗೆ ಸರಿ ಮಾಡಿಕೊಳ್ಳುವುದು, ಕೂದಲು ನೇವರಿಸುವುದು, ತುಟಿ ಸವರಿಕೊಳ್ಳುವುದು ಹೀಗೆ ಪ್ರತಿ ನಡೆಯಲ್ಲೂ ಲೈಂಗಿಕ ಸಂಕೇತಗಳನ್ನು ಹುಡುಕಲಾಗುತ್ತದೆ. ಹೀಗಿರುವಾಗ ಪ್ರಚೋದನೆಗೆ ಕಾರಣ ಅವಳನ್ನು ಪ್ರಚೋದಿಸುವ, ಆಹ್ಲಾದ ನೀಡುವ ವಸ್ತುವನ್ನಾಗಿ ಬಿಂಬಿಸಿ, ಬಳಸಿಕೊಳ್ಳುತ್ತಿರುವ ವ್ಯವಸ್ಥೆಯದೇ ಆಗಿದೆ.

ಪ್ರಚೋದನೆ ಅತಿಯಾದ ಸಂಪರ್ಕದಿಂದ ಬರುತ್ತಿದೆ. ನಾವಿಂದು ಯಾವುದನ್ನು ಮಾಹಿತಿ ಕ್ರಾಂತಿ ಅಥವಾ ಸಂಪರ್ಕ ಕ್ರಾಂತಿ ಎಂದು ಕರೆಯುತ್ತೇವೋ ಅದು ನಿಜಾರ್ಥದಲ್ಲಿ ಕ್ರಾಂತಿಯ ವಿರುದ್ಧ ನಡೆದಿರುವ ಪ್ರಾಸೆಸ್. ಸಂಪರ್ಕ ಕ್ರಾಂತಿ ಮನುಷ್ಯನಿಂದ ಮನುಷ್ಯತ್ವವನ್ನು, ಮಾನವೀಯ ಸಂಬಂಧಗಳನ್ನು ಕಸಿಯುತ್ತಿರುವ ಹಾಗೂ ಮನುಷ್ಯನನ್ನು ಕೈಕಾಲಾಡಿಸುವ ಯಂತ್ರವಾಗಿಸುತ್ತಿರುವ ಎಲ್ಲ ನಿದರ್ಶನಗಳಿವೆ.

ವಿಜ್ಞಾನ ಜೀವಪರವಾಗದೆ ಜೀವವಿರೋಧಿಯಾಗುತ್ತಿರುವುದಕ್ಕೆ ಮುಖ್ಯ ಕಾರಣ ಅದು ಜನರಲ್ಲಿ ಸೈಂಟಿಫಿಕ್ ಟೆಂಪರ್ ಬೆಳೆಸದೆ ವಿಜ್ಞಾನದ ಕೂಸಾದ ತಂತ್ರಜ್ಞಾನವನ್ನು ಅವರ ಕೈಲಿಡುತ್ತಿರುವುದು. ವಿವೇಚನೆಯಿಲ್ಲದೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ, ಅದರಲ್ಲೂ ದುಷ್ಟ ಕಾರಣಗಳಿಗಾಗಿ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಉದಾಹರಣೆಗೆ ಇತ್ತೀಚೆಗೆ ಕಾರವಾರದಲ್ಲಿ ಬಹಳ ಜನರ ಮೊಬೈಲಿನಲ್ಲಿ ಒಂದು ವೀಡಿಯೋ ಕ್ಲಿಪಿಂಗ್ ಹರಿದಾಡುತ್ತಿತ್ತೆಂದು ಪೊಲೀಸರು ತನಿಖೆ ನಡೆಸಿದರು. ತಮಿಳುನಾಡಿನ ಸಮುದ್ರ ತೀರದಲ್ಲಿ ಹೆಣ್ಣೊಬ್ಬಳಿಗೆ ಅಮಲು ಬರಿಸಿ, ಬೆತ್ತಲಾಗಿಸಿ, ಐದಾರು ಜನ ಸಾಮೂಹಿಕವಾಗಿ ಸಂಭೋಗಿಸಿದ ವೀಡಿಯೋ ಅದರಲ್ಲಿತ್ತು. ಅದನ್ನು ಡೌನ್‌ಲೋಡ್ ಮಾಡಿ, ತಮಿಳು ಸಂಭಾಷಣೆಗೆ ಕನ್ನಡ ಸಂಭಾಷಣೆ ಅಳವಡಿಸಿ, ಮೊಬೈಲಿನಿಂದ ಮೊಬೈಲಿಗೆ ಕಳಿಸಲಾಗುತ್ತಿತ್ತು. ಆದರೆ ತಮಿಳುನಾಡಿನ ಅದೇ ಸಮುದ್ರ ತೀರದಲ್ಲಿ ಸಾವಿರಾರು ಜನ ಸುನಾಮಿಗೆ ಕೊಚ್ಚಿ ಹೋಗಿದ್ದರು. ಅಲ್ಲಿ ಇನ್ನೆಷ್ಟೋ ಜಾತಿದೌರ್ಜನ್ಯಗಳು ಸಂಭವಿಸುತ್ತಿವೆ. ಅವನ್ನು ಡೌನ್‌ಲೋಡ್ ಮಾಡಿ, ಕನ್ನಡ ಮಾತು ಅಳವಡಿಸಿ ಎಲ್ಲರಿಗೂ ಹಂಚುವ, ತಂತ್ರಜ್ಞಾನವನ್ನು ಜನಜಾಗೃತಿಗೆ ಬಳಸಬೇಕೆನ್ನುವ ಯೋಚನೆ ಏಕೆ ಬರುತ್ತಿಲ್ಲ?

ಬೇರೆಯವರು ನಡೆಸುವ ಕಾಮಕ್ರಿಯೆ ನೋಡಿ ಪ್ರಚೋದನೆ ಪಡೆಯುವುದನ್ನು ವಾಯೂರಿಸಂ ಎನ್ನುತ್ತಾರೆ. ಅದೊಂದು ವಿಕೃತಿ. ಬ್ಲೂ ಫಿಲಂಗಳು ಹಾಗೂ ಮೊಬೈಲಿನಲ್ಲೂ ಹರಿದಾಡುವ ವೀಡಿಯೋ ಕ್ಲಿಪಿಂಗ್ಸ್ ವಾಯೂರಿಸಂ ಎಂಬ ವಿಕೃತಿಯನ್ನು ಹಾಗೂ ಎಳೆಯರಲ್ಲಿ ಕಾಮ ಕುರಿತ ದುಷ್ಟ ಕುತೂಹಲ/ತಪ್ಪು ಗ್ರಹಿಕೆಗಳನ್ನು ಬೆಳೆಸುತ್ತಿರುವುದು ಅತ್ಯಾಚಾರ ಹೆಚ್ಚಾಗಲು ಒಂದು ಮುಖ್ಯ ಕಾರಣವಾಗಿದೆ. ಬೆಂಗಳೂರಿನಲ್ಲಿ ಗಾರ್ಮೆಂಟ್ ಕೆಲಸ ಮಾಡುವ ೪೫ ವರ್ಷದ ಮಹಿಳೆಯೊಬ್ಬರು ಏಳು ವರ್ಷದ ಕೆಳಗೆ ಅತ್ಯಾಚಾರಕ್ಕೊಳಗಾದರು. ವಾರದ ಕೊನೆಯಲ್ಲಿ ತನ್ನೂರು ಮೈಸೂರಿಗೆ ಹೋಗುತ್ತಿದ್ದವರ ಮೇಲೆ ಏಳು ಜನರ ಗುಂಪು ರಾತ್ರಿ ಒಂಭತ್ತೂವರೆಯಿಂದ ಎರಡರ ತನಕ ಅತ್ಯಾಚಾರ ನಡೆಸಿತು. ಆಕೆಗೆ ಮೊಬೈಲಿನಲ್ಲಿದ್ದ ವೀಡಿಯೋ ಕ್ಲಿಪಿಂಗ್ಸ್ ತೋರಿಸಿ ಹೀಗೆ ಮಲಗು, ಹಾಗೆ ಮಾಡು ಎಂದು ಹೇಳುತ್ತಿದ್ದರಂತೆ. ಅವರಲ್ಲೊಬ್ಬ ೧೬-೧೭ ವರ್ಷದವ. ೨೦ ವರ್ಷದ ಮಗನಿದ್ದ ಆಕೆ ನಾನು ನಿಮ್ಮಮ್ಮನ ಹಾಗೆ ಅನಿಸುವುದಿಲ್ಲವೇನೋ ಎಂದರೆ ಆ ಹುಡುಗ, ‘ಅಂಥ ಪುರಾಣನೆಲ್ಲ ವದರಬೇಡ, ಮೊದ್ಲು ನಾ ಹೇಳಿದಂಗೆ ಸುಮ್ನೆ ಮಲ್ಕ’ ಎಂದನಂತೆ!

ವಿಜ್ಞಾನ ವೈಜ್ಞಾನಿಕ ಮನೋಭಾವನ್ನಾಗಲೀ, ನೈತಿಕತೆಯನ್ನಾಗಲೀ ಬೆಳೆಸುತ್ತಿಲ್ಲ. ನೈತಿಕತೆಯ ಹಳೆಯ ವ್ಯಾಖ್ಯಾನಗಳನ್ನು ಬಿಟ್ಟುಬಿಡೋಣ. ನೈತಿಕತೆ ಎಂದರೆ ಕನಿಷ್ಟ ನಿಗ್ರಹ, ಬಳಸುವುದರ ಮುನ್ನ ಕೊಂಚ ವಿವೇಚನೆ. ಅದೇಕೆ ತಂತ್ರಜ್ಞಾನ ಬಳಸುವಾಗ ಸಾಧ್ಯವಾಗುತ್ತಿಲ್ಲ? ಮಾಹಿತಿ ಕ್ರಾಂತಿಯು ಜಗತ್ತನ್ನು, ಅದಲ್ಲಿರುವ ಬಾಧಿತರೆಲ್ಲರನ್ನು ಒಟ್ಟು ತಂದು ಇನ್ನೊಂದು ಕ್ರಾಂತಿ ನಡೆದು ಹೋಗಬೇಕಿತ್ತು. ಆದರೆ ಜೀವವಿರೋಧಿ ಮಾಹಿತಿ ಹಂಚಿಕೊಳ್ಳಲು ಅದು ಬಳಕೆಯಾಗುತ್ತಿದೆ. ಅಂತರ್ಜಾಲ ಬಳಕೆ ಮತ್ತು ವಿಸ್ತರಣೆ ನಾವು ಊಹಿಸಲಾರದ ವೇಗದಲ್ಲಿ ಆಗುತ್ತಿದೆ ಹಾಗೂ ಅದು ಯುವ ಪೀಳಿಗೆಯನ್ನು ನಮ್ಮಿಂದ ಬಲುದೂರ ಒಯ್ಯುತ್ತಿದೆ. ಇದನ್ನು ತಡೆಗಟ್ಟಲು ನಮ್ಮ ಬಳಿ ಯಾವ ಸುರಕ್ಷಾ ಕ್ರಮಗಳಿವೆ?

ಬರೀ ಮೊಬೈಲು ಬಳಕೆ ಅಷ್ಟೇ ಅಲ್ಲ, ವೈದ್ಯಕೀಯ ವಿಜ್ಞಾನವೂ ಇಂಥ ದುಷ್ಟತನದಲ್ಲಿ ಹಿಂದೆ ಬಿದ್ದಿಲ್ಲ. ಹಿಮೋಫೀಲಿಯಾದಂತಹ ಲಿಂಗ ಕ್ರೋಮೋಸೋಮುಗಳ ಜೊತೆ ಬರುವ ಕಾಯಿಲೆಗಳನ್ನು ಪತ್ತೆ ಹಚ್ಚಿ ಗರ್ಭ ತೆಗೆಯುವ ಸಲುವಾಗಿ ಅಭಿವೃದ್ಧಿಯಾದ ಲಿಂಗಪತ್ತೆ ತಂತ್ರಜ್ಞಾನ ಕೋಟಿಗಟ್ಟಲೆ ಹೆಣ್ಣುಭ್ರೂಣಗಳು ಭೂಮಿಗೆ ಬರುವುದರಲ್ಲೆ ಕಣ್ಮುಚ್ಚುವಂತೆ ಮಾಡಿವೆ. ಸುಟ್ಟುಕೊಂಡವರಿಗೆ, ಅಂಗಾಂಗ ಕಳೆದುಕೊಂಡವರಿಗೆ ಬಳಕೆಯಾಗಬೇಕಿದ್ದ ಪ್ಲಾಸ್ಟಿಕ್ ಸರ್ಜರಿ ಇವತ್ತು ಮುಖಮೈಚರ್ಮದ ಅಂದಚಂದ ಹೆಚ್ಚಿಸಲೆಂದೇ ಹೆಚ್ಚು ಬಳಕೆಯಾಗುತ್ತಿದೆ. ತೀರಾ ಆಘಾತಕಾರಿ ಎಂದರೆ ಹೈಮೆನೋಪ್ಲಾಸ್ಟಿ ಇತ್ತೀಚೆಗೆ ಜನಪ್ರಿಯವಾಗುತ್ತಿರುವುದು. ಕನ್ಯತ್ವ ಎಂದರೆ ಹೈಮೆನ್ ಅಥವಾ ಕನ್ಯಾಪೊರೆ ಇರುವುದು ಎಂದು ನಂಬುವ ‘ಕನ್ಯೆ’ಯರಿಗೆ ಯಾವ ಸ್ತ್ರೀವಾದ ಬೋಧಿಸುವುದು? ಹೇಗೆ ಇಂಥ ವೈದ್ಯಕೀಯವನ್ನು ಜೀವವುಳಿಸುವ ವಿಜ್ಞಾನದ ಒಂದು ಶಾಖೆ ಅನ್ನುವುದು?

ನೈತಿಕ ಪ್ರಜ್ಞೆ ಹಾಗೂ ವೈಚಾರಿಕತೆಯ ಅಧಃಪತನಕ್ಕೆ ತಂತ್ರಜ್ಞಾನ ನೇರ ಹೊಣೆಯಾಗಿದೆ. ಅತ್ಯಾಚಾರ ಪ್ರಕರಣ ಸಂಭವಿಸುತ್ತಲೇ ಇರುವುದಕ್ಕೆ ಇದೂ ಕಾರಣವಾಗಿದೆ.

***

ಸಮಾಜದ ಬುನಾದಿಯಲ್ಲಿ ಹೂತ ಕಲ್ಲುಗಳೇ ತಪ್ಪು ಗ್ರಹಿಕೆಗಳಿಂದ ಕೂಡಿವೆ. ಅದಕ್ಕೆ ಪರಿಹಾರವೇನು?

ಒಂದು ಹಂತದವರೆಗೆ ತಪ್ಪಿತಸ್ಥರನ್ನು ಹಿಡಿಯುವುದು, ತಕ್ಷಣದಲ್ಲಿ ಸೂಕ್ತ ಶಿಕ್ಷೆ ನೀಡುವುದು ಅತ್ಯಾಚಾರ ನಿಗ್ರಹದಲ್ಲಿ ಪಾತ್ರ ವಹಿಸಬಹುದು. ಆದರೆ ನೆನಪಿಡೋಣ, ಕಾನೂನು ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸುತ್ತದೆ. ತಪ್ಪು ಮತ್ತೆಮತ್ತೆ ಜರುಗದಂತೆ ಮಾಡುವುದು ಕಾನೂನಿನ ಹೊರತಾದ ವಿಶಾಲ ಸಾಮಾಜಿಕ ನೆಲೆಯ ಪ್ರಕ್ರಿಯೆಯೇ ಆಗಿದೆ.

ಆವೇಶದಲ್ಲಿ ಕೆಲ ಮಹಿಳಾ ಸಂಘಟನೆಗಳು ಹಾಗೂ ಹೋರಾಟಗಾರರು ಅತ್ಯಾಚಾರಿಯನ್ನು ಗಲ್ಲಿಗೇರಿಸಬೇಕೆಂದು, ಅಂಥವರ ಗುಪ್ತಾಂಗವನ್ನು ಕತ್ತರಿಸಬೇಕೆಂದು ಸಲಹೆ ನೀಡುತ್ತಾರೆ. ಆದರೆ ಇದು ಅಮ್ಮ ನೀಡಬಹುದಾದ ಸಲಹೆಯಲ್ಲ. ಅಮ್ಮನೊಳಗಿನ ಪುರುಷ ವ್ಯವಸ್ಥೆ ರೂಪಿಸಿದ ಮನಸ್ಸಷ್ಟೆ ಹೀಗೆ ಯೋಚಿಸಬಲ್ಲದು. ಧನಂಜಯ ಚಟರ್ಜಿಯನ್ನು ಗಲ್ಲಿಗೇರಿಸಿದ ಮೇಲೆ ಬಂಗಾಳದಲ್ಲಿ ಅತ್ಯಾಚಾರ ಕಡಿಮೆಯಾಗಿದೆಯೆ?

ಪ್ರತಿಭಟನೆಗೆ ನಮ್ಮೆದುರು ಎರಡು ಮಾದರಿಗಳಿವೆ - ಒಂದು ಇರೋಂ ಶರ್ಮಿಳಾ ಮಾದರಿ, ಇನ್ನೊಂದು ಭನವಾರಿ ದೇವಿಯದು. ಮಣಿಪುರದಲ್ಲಿ ಸೈನ್ಯದಂತಹ ಬಲಶಾಲಿ ವ್ಯವಸ್ಥೆ ನಡೆಸಿರುವ ಅತ್ಯಾಚಾರಗಳ ವಿರುದ್ಧ ದನಿಯೆತ್ತಿ ಹೋರಾಟಕ್ಕೆ ಚಾಲನೆ ನೀಡಿದ್ದು ಇರೋಂ ಶರ್ಮಿಳಾ. ಆದರೆ ಆ ಮಾದರಿಯ ದೀರ್ಘಕಾಲೀನತೆ ಕೇವಲ ಸಂಕೇತ ಮಾತ್ರವಾದರೆ ಆ ಸಂಕೇತವನ್ನು ವ್ಯವಸ್ಥೆಯೇ ಪೋಷಿಸಿ ನುಂಗಿಬಿಡುವ ಅಪಾಯವನ್ನು ಮರೆಯುವಂತಿಲ್ಲ. ಇರೋಂ ಶರ್ಮಿಳಾ ಎಂಬ ಆಕ್ಟಿವಿಸ್ಟ್ ಅನ್ನು ಉಪವಾಸ ಕಸಿದುಕೊಂಡಿದೆ ಎಂದೇ ನನ್ನ ವೈಯಕ್ತಿಕ ಅಭಿಪ್ರಾಯ. ಇನ್ನು ಭನವಾರಿ ದೇವಿ ಎಂಬ ಬಡ, ತಳ ಸಮುದಾಯದ ದಿಟ್ಟ ಹೆಣ್ಣುಮಗಳು ಕಳೆದ ೨೧ ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆಯುತ್ತಿದ್ದರೂ ಇನ್ನೂ ಕೇಸು ಇತ್ಯರ್ಥವಾಗಿಲ್ಲ. ಏಳು ಆರೋಪಿಗಳಲ್ಲಿ ಮೂವರು ಆಗಲೇ ಸತ್ತು ಹೋಗಿದ್ದಾರೆ. ನೀರಜಾ ಭಾನೋಟ್ ಪ್ರಶಸ್ತಿ ಬಂದಾಗ ಭನವಾರಿ ಪ್ರಶಸ್ತಿಯಿಂದ ಹೊಟ್ಟೆ ತುಂಬುವುದಿಲ್ಲ, ನ್ಯಾಯ ಸಿಕ್ಕಾಗ ತುಂಬುತ್ತದೆ ಎಂದು ಹೇಳಿದ್ದರು.

ಈ ಎರಡೂ ದಾರಿಗಳು - ಉಪವಾಸ ಸತ್ಯಾಗ್ರಹದಂತಹ ಸಾಂಕೇತಿಕ ಮಾದರಿ ಹಾಗೂ ಕಾನೂನು ಹೋರಾಟ - ಪ್ರತಿರೋಧದ ಮೊದಲ ಹೆಜ್ಜೆಗಳು ಎಂದು ಭಾವಿಸುವುದಾದರೆ ನಂತರದ ಹೆಜ್ಜೆ ಮಹಿಳೆ ಸಂಘಟಿತಳಾಗುವುದರಲ್ಲಿದೆ. ಈಗ ನಮ್ಮ ಬಹುಪಾಲು ಹೆಣ್ಣುಮಕ್ಕಳು ಜೈವಿಕ ಮಹಿಳೆಯರಷ್ಟೆ ಆಗಿದ್ದಾರೆ. ಆ ಜಾಗದಲ್ಲಿ ಸಾಮಾಜಿಕ, ರಾಜಕೀಯವಾಗಿ ಸ್ಪಂದಿಸಿ ಕ್ರಿಯಾಶೀಲಳಾಗಬಲ್ಲ ಮಹಿಳೆ ಹುಟ್ಟಿಕೊಳ್ಳಬೇಕು. ಪುರುಷ ದೃಷ್ಟಿಕೋನದಲ್ಲಿ ಅಲಂಕಾರಿಕ ವಸ್ತುವಾಗಿ ತನ್ನ ವ್ಯಕ್ತಿತ್ವ ಗ್ರಹಿಸಿಕೊಳ್ಳುವುದನ್ನು ನಿಲ್ಲಿಸಿ ತನ್ನತನವನ್ನು ತಾನು ಕಂಡುಕೊಳ್ಳಬೇಕು.

ಆಗ ಮಹಿಳೆಗೆ ದಕ್ಕುವ ಒಳನೋಟಗಳೇ ಬೇರೆ.

ಮಹಿಳೆಯರ ಮುಂದೊಂದು ಸುಲಭದ ಮಾರ್ಗವಿದೆ. ಅದಕ್ಕೆ ಗಟ್ಟಿ ಮನಸ್ಸು, ದಿಟ್ಟ ವ್ಯಕ್ತಿತ್ವ ರೂಪುಗೊಳ್ಳಬೇಕು. ಅದೇ ನಿರಾಕರಣ ತತ್ವ. ನಿರಾಕರಣೆ ಎಂದರೆ ಯಾವ ವಸ್ತು, ವ್ಯಕ್ತಿ, ವಿಷಯ, ಸಿದ್ಧಾಂತ, ಪಕ್ಷದಿಂದ ಮಹಿಳೆಯ ಘನತೆಗೆ, ಮಹಿಳಾ ಗೌರವಕ್ಕೆ ಕುಂದು ಬರುತ್ತಿದೆಯೋ ಅಂಥ ಎಲ್ಲವನ್ನು ಸಾರಾ ಸಗಟಾಗಿ ಅವರು ನಿರಾಕರಿಸಬೇಕು. ನಮ್ಮ ಜನಪ್ರತಿನಿಧಿಗಳದು ಜೆಂಡರ್ ಇನ್‌ಸೆನ್ಸಿಟಿವ್ ವರ್ಗ. ತಾವೇನೋ ಮಹತ್ತರವಾದದ್ದನ್ನು ಸಾಧಿಸುತ್ತಿದ್ದೇವೆ, ಇದೆಲ್ಲ ಹೆಣ್ಣುಕುಲಕ್ಕೆ ಅರ್ಥವಾಗುವುದಿಲ್ಲ ಎಂದೇ ಅವರ ಭಾವನೆ. ರಾಜಕೀಯದಲ್ಲಿ ಮಹಿಳೆಯರಿಗೆ ನೀಡಿರುವ ಸ್ಥಾನಮಾನ ಮತ್ತು ಪ್ರಾತಿನಿಧ್ಯ ನೋಡಿದರೆ ಇದು ಅರ್ಥವಾಗುತ್ತದೆ. ಇದೇ ದುಷ್ಟತನ ಮುಂದುವರೆದು ತಮಗೆ ಯಾವ ಕಾನೂನೂ ಅನ್ವಯಿಸುವುದಿಲ್ಲವೆಂದು ಹೆಣ್ಣನ್ನು ಮನಬಂದಂತೆ ಉಪಯೋಗಿಸಿಕೊಳ್ಳಲಾಗುತ್ತದೆ. ರಾಜಕಾರಣದಲ್ಲಿ ಅನಾದಿಯಿಂದ ಮಹಿಳೆಗೆ ಸಿಕ್ಕಿರುವ ಎಂಟ್ರಿ ರಾಜಮಾರ್ಗದ್ದಲ್ಲ, ಬದಲಿಗೆ ಇಂಥ ಹಿಂಬಾಗಿಲಿನ ವರಸೆಗಳೇ. ಇದರ ವಿರುದ್ಧ ಮಹಿಳೆ ಜಾಗೃತಳಾಗಬೇಕು. ರೇಪಿಸ್ಟ್ ಇರುವ ಪಕ್ಷಕ್ಕೆ, ಅಂತಹ ಜನಪ್ರತಿನಿಧಿಗಳಿಗೆ ಮತ ಹಾಕದೇ ನಿರಾಕರಿಸಬೇಕು.

ಕೀಳು ಅಭಿರುಚಿಯಲ್ಲಿ ಮಹಿಳೆಯರನ್ನು ಬಿಂಬಿಸಿ ಜಾಹೀರಾತು ತೋರಿಸುವ ವಸ್ತು, ಧಾರಾವಾಹಿ, ಸಿನಿಮಾಗಳನ್ನು ನಿರಾಕರಿಸಬೇಕು. ಇವತ್ತಿನ ಹೆಣ್ಣುಮಕ್ಕಳನ್ನು ಮುಕ್ಕಾಲು ಭಾಗ ಪ್ರಭಾವಿಸಿ ಹಾದಿ ತಪ್ಪಿಸುವವು ಜಾಹೀರಾತುಗಳು. ೫೦% ಮಾರುಕಟ್ಟೆ ಇರುವ ಮಹಿಳಾ ಸಮುದಾಯ ಮಾರುಕಟ್ಟೆ ತೋರಿಸುವ ಆಮಿಷಗಳಿಗೆ ಬಲಿಯಾಗದೇ ತಿರುಗಿ ಬಿದ್ದರೆ ಆರ್ಥಿಕ ಸಮೀಕರಣಗಳೇ ಬದಲಾಗಿಬಿಡಬಹುದು. ಇವೆಲ್ಲ ವಿಚಾರಗಳನ್ನು ಎಲ್ಲ ಮಹಿಳೆಯರಿಗೂ ತಲುಪಿಸಲು ಸಂಘಟಿತಳಾಗಬೇಕಾದ ಅವಶ್ಯಕತೆಯಿದೆ.

ದೆಹಲಿ ಅತ್ಯಾಚಾರ ಪ್ರಕರಣದ ಸಮಯದಲ್ಲಿ ಮೇಲುವರ್ಗ ಅನುಭವಿಸುವ ದೌರ್ಜನ್ಯವಷ್ಟೇ ಮಾಧ್ಯಮದ ಗಮನ ಸೆಳೆಯುತ್ತದೆ; ದಿನನಿತ್ಯ ಎಷ್ಟೋ ಶ್ರಮಿಕ, ಬಡ ಸೋದರಿಯರು ಬರ್ಬರ ಹಿಂಸೆ, ಅತ್ಯಾಚಾರಕ್ಕೊಳಗಾಗಿದ್ದು ಯಾರ ಗಮನವನ್ನೂ ಸೆಳೆಯುವುದಿಲ್ಲ ಎಂಬ ಆರೋಪ ಕೇಳಿಬಂತು. ಇಂಥ ಆರೋಪ ಸುಳ್ಳಾಗುವಂತೆ, ಮತ್ತೆ ಕೇಳದಂತೆ ಯಾವ ವರ್ಗ/ಜಾತಿ/ಧರ್ಮ/ಉದ್ಯೋಗ/ಪಕ್ಷದ ಮಹಿಳೆಯೇ ಆಗಿರಲಿ. ಯಾವ ಪ್ರಾದೇಶಿಕ/ಭಾಷಿಕ/ಸಂಘಟನಾ ಹಿನ್ನೆಲೆಯವಳೇ ಆಗಿರಲಿ - ಎಲ್ಲರೂ ಶೋಷಿತ ಮಹಿಳೆಯರ ಪರವಾಗಿ ದನಿಯೆತ್ತಬೇಕು. ಪ್ರತಿ ವ್ಯವಸ್ಥೆಯೊಳಗಿರುವ ಪುರುಷತನ ‘ಪ್ರಭುತ್ವ’ವಾಗಿ ಮಹಿಳೆಯನ್ನು ಶೋಷಣೆಗೊಳಪಡಿಸಿರುತ್ತದೆ. ಅದರ ವಿರುದ್ಧ ಎಲ್ಲ ಮಹಿಳೆಯರು ತಮ್ಮ ಉಳಿದ ಹಿನ್ನೆಲೆಯನ್ನು ಬದಿಗಿಟ್ಟು ಒಗ್ಗೂಡಿ ಹೋರಾಡಬೇಕು. ಆಗಷ್ಟೇ ಹೋರಾಟಕ್ಕೊಂದು ಪ್ರತಿಫಲ ದೊರೆಯಬಹುದು.

ಇದೇ ಎದೆಯೋನಿಕಿಬ್ಬೊಟ್ಟೆಗಳ ನಡುವಿನಿಂದ ಹುಟ್ಟಿ ಬೆಳೆಯುವ ಗಂಡು ಅದು ಹೇಗೆ ಹೆರುವ ಜೀವಗಳತ್ತ ಹಿಂಸಾರೂಪಿಯಾಗಿ ತಿರುಗಿಬೀಳುತ್ತಾನೆ? ಹಾಗಾಗದಂತೆ ತಡೆಯಲು ಕುಟುಂಬದೊಳಗಿನಿಂದಲೇ ಲಿಂಗಸೂಕ್ಷ್ಮತೆ, ಲಿಂಗಸಮಾನತೆಯ ಪಾಠಗಳು ಶುರುವಾಗಬೇಕು. ಪ್ರತಿ ಅಪ್ಪಅಮ್ಮನೂ ತಮ್ಮ ಗಂಡು ಮಕ್ಕಳಿಗೆ ಜೆಂಡರ್ ಸೆನ್ಸಿಟಿವಿಟಿ ಹಾಗೂ ಹೆಣ್ಣಿನ ಮೇಲೆ ಗೌರವ ಮೂಡುವಂತೆ ನೋಡಿಕೊಳ್ಳಬೇಕು. ಹಾಗೂ ತಮ್ಮ ಹೆಣ್ಣುಮಕ್ಕಳಿಗೆ ದೇಹದ ಹೊರತಾಗಿ ಒಂದು ಅಸ್ತಿತ್ವ-ವ್ಯಕ್ತಿತ್ವ ಇದೆಯೆಂದೂ; ಅದೇ ನಿಜವಾದ ಸೌಂದರ್ಯವೆಂದೂ ಅರಿವು ಮೂಡಿಸಿ ಆತ್ಮಘನತೆಯ ಪಾಠ ಹೇಳಿಕೊಡಬೇಕು.

Friday, 11 July 2014

ಕಾರ್ಲ್ ಮಾರ್ಕ್ಸ್ ಪ್ರೇಮ ಕವಿತೆಗಳು




ಕೊನೆಯ ಸುನೀತಗಳು: ಜೆನ್ನಿಗಾಗಿ

೧.
ಗಂಧರ್ವಗಾನ ಮಾಧುರ್ಯದೊಂದಿಗೆ
ಆತ್ಮವು ಹೊಳೆಯುತ್ತಿರುವಾಗ
ಪ್ರೇಮವು ನಿನ್ನ ಪಾದಗಳಿಗರ್ಪಿಸುವ
ಈ ಎಲ್ಲ,
ಎಲ್ಲ ಎಂದರೆ ಎಲ್ಲಾ ಕವಿತೆಗಳನ್ನೂ
ಒಪ್ಪಿಸಿಕೋ.

೨.
ನನ್ನ ಮಟ್ಟಿಗೆ
ದೇಶಕಾಲಗಳ ಎಲ್ಲೆ ಮೀರಿ
ಬಹುದೂರ ದಾಟಿ ಬಂದು
ರೋಮಾಂಚನಗೊಳಿಸುವ,
ಗುಲಾಮನಾಗಿಸುವ
ದೇವಲೋಕದ ಯಾವ ಬಿರುದುಬಾವಲಿಗಳೂ
ನಿನ್ನ ಹೊಳೆಹೊಳೆವ ಕಣ್ಣುಗಳಿಗೆ
ಸಂಭ್ರಮಿಸುವ ಬೆಚ್ಚನೆಯ ಎದೆಗೆ
ಆಳದಿಂದೆದ್ದು ಉರುಳುವ ಎರಡು ಭಾವುಕ ಹನಿಗಳಿಗೆ
ಸಮವಲ್ಲ..

ಸಾವು ಅನಿವಾರ್ಯವೇ ಎಂದಾದಲ್ಲಿ
ಗಂಧರ್ವ ನಾದದಂತಹ ನಿನ್ನ ನಿಟ್ಟುಸಿರ ನಡುವೆ
ಕೊನೆಯುಸಿರೆಳೆದೇನು
ಬಹುಮಾನ ಪಡೆಯಬಹುದಾದರೆ
ನೋವುನಲಿವುಗಳೆರಡರಲ್ಲೂ
ನಿನ್ನೊಡಲಿನಲ್ಲೇ ಹೂತುಹೋಗಿ
ಸಾಂತ್ವನ ಪಡೆಯಬಯಸುವೆನು.

೩.
ಓಹ್!
ನಿನ್ನ ಅಗಲುವ ಭಯ, ನೋವು
ನನ್ನ ಆತ್ಮವನ್ನೇ ಕುಸಿದು ಬೀಳಿಸಿರುವಾಗ
ನಾ ಬರೆದ ಪುಟಗಳು ತರಗುಡುತ್ತ ನಿನ್ನ ಬಳಿ
ಮತ್ತೊಮ್ಮೆ ಹಾರಿಬರುತ್ತಿವೆ..
ನನ್ನ ಆತ್ಮವಂಚಕ ಭ್ರಮೆ
ಧೈರ್ಯದ ಹಾದಿಯಲ್ಲಿ ಸುಮ್ಮನೇ ಅಲೆಯುತ್ತಿದೆ
ಅತ್ಯುನ್ನತವಾದುದನ್ನು ಗೆದ್ದು
ಎಲ್ಲ ಆಸೆಗಳ ತೀರಿಸಿಕೊಳ್ಳಬೇಕೆಂದಲ್ಲ
ದೂರದೂರಿನಿಂದ ನಾನು
ಆಸೆ ಕನಸು ತುಂಬಿದ ಆ ಮನೆಗೆ ಹಿಂತಿರುಗಿ ಬಂದಾಗ
ನಿನ್ನ ಸಂಗಾತಿ ತನ್ನ ಅಪ್ಪುಗೆಯಲ್ಲಿ ನಿನ್ನ ಹಿಡಿದಿರಬಹುದು
ಸುಂದರಿ ನಿನ್ನ ಹೆಮ್ಮೆಯಿಂದ ತಬ್ಬಿ ಹಿಡಿಯಬಹುದು
ಆಗ ನನ್ನ ಕಡೆ ಸುಳಿದು ಬಂದೀತು
ನೋವು ಮತ್ತು ಮರೆವಿನ
ಬೆಂಕಿಯಂಥ ಸುಳಿಜ್ವಾಲೆಯೊಂದು..


೪.
ಜೆನಿ,
ನೀನು ತಮಾಷೆ ಮಾಡಬಹುದು
ನನ್ನ ಕವಿತೆಗಳು ‘ಜೆನಿಗೆ’ ಎಂಬ ತಲೆಬರಹ ಏಕೆ ಹೊತ್ತಿವೆಯೆಂದು..

ನನ್ನೆದೆ ನಿನಗಾಗಿ ಮಾತ್ರ ಮಿಡಿಯುವಾಗ
ನನ್ನ ಹಾಡು ನಿನಗಾಗಿ ಕಾದು ನಿರಾಶೆಗೊಳ್ಳುವಾಗ
ನೀನೇ ಹಾಡುಗಳ ಸ್ಫೂರ್ತಿ ದೇವತೆಯಾಗಿರುವಾಗ
ಪ್ರತಿ ಪದವೂ
ತನ್ನ ಮಾಧುರ್ಯಕ್ಕಾಗಿ ನಿನಗೆ ಅಭಾರಿಯಾಗಿರುವಾಗ
ದೂರದ ಚೇತನಗಳಂತೆ
ಜಾದೂವಿನಂತೆ
ಮಹಾನ್ ಅಚ್ಚರಿಯಂತೆ
ನಿನ್ನ ಹೆಸರಿನ ಪ್ರತಿ ಸ್ವರವೂ
ಏನನ್ನೋ ಧ್ವನಿಸುತ್ತ
ಮೃದು ಮಧುರವಾಗಿ ಕಂಪಿಸುವಾಗ
ಒಂದು ಉಸಿರೂ ನಿನ್ನಿಂದ ತಪ್ಪಿಸಿಕೊಳದೇ ಇರುವಾಗ
ದೇವತೆಯೇ,

ಜೆನೀ..
ನೀನು ತಮಾಷೆ ಮಾಡುತ್ತೀ
ನನ್ನ ಕವಿತೆಗಳಿಗೆ
‘ಜೆನಿಗೆ’ ಎಂಬ ತಲೆಬರಹ ಏಕೆ ಕೊಟ್ಟೆನೆಂದು..




ಕನ್ನಡಕ್ಕೆ: ಅನುಪಮಾ

Thursday, 10 July 2014

ಋಣಭಾರ




     
ಅವರು ಊರಿಗೇ ದೊಡ್ಡವರು. ನಾಲ್ಕಾರು ಜನ ಸೇರಿದಲ್ಲಿ ಅವರ ಮಾತೇ ಅಂತಿಮ. ರಾಜಕೀಯ ಸಭೆಗಳಿರಲಿ, ಧಾರ್ಮಿಕ ಸಮಾರಂಭಗಳಿರಲಿ, ಕೌಟುಂಬಿಕ ಕಾರ್ಯಕ್ರಮಗಳಿರಲಿ, ಎಲ್ಲ ಕಡೆ ಅವರಿರುತ್ತಾರೆ. ಇಂಥ ಸರ್ವಾಂತರ್ಯಾಮಿಗಳಿಗೆ ಹೊತ್ತಲ್ಲದ ಹೊತ್ತಲ್ಲಿ ಒಮ್ಮೊಮ್ಮೆ ಘನ ಕಾಯಿಲೆಗಳು ಬಂದುಬಿಡುತ್ತದೆ. ಆಗೆಲ್ಲ ಅವರ ಅಂತಸ್ತಿಗೆ ತಕ್ಕ ಪಂಚತಾರಾ ಆಸ್ಪತ್ರೆಗಳನ್ನು ಹುಡುಕಿಕೊಂಡು ಓಡಲು ಸಾಧ್ಯವೆ? ಆಗೆಲ್ಲ ಅವರ ಪಾದಸೇವೆಗಾಗಿ ಯಃಕಶ್ಚಿತ್ ವೈದ್ಯರೇ ಅವರ ಬಳಿ ಹೋಗಬೇಕೆಂಬುದು ಅವರ ಗುಪ್ತ ಅಪೇಕ್ಷೆ. ಅವರ ಸಹಾಯಕರು ಇದ್ದ ಕಾಯಿಲೆಯನ್ನು ಹತ್ತರಷ್ಟು ಹಿಗ್ಗಿಸಿ ನನ್ನ ಬಳಿ ಹೇಳುವಾಗಲೇ ಕಾಯಿಲೆಯ ಸ್ವರೂಪ ತಿಳಿಯುತ್ತದೆ. ಆದರೆ ಕೈತುಂಬ ಇರುವ ಜಂಜಾಟಗಳು ಹಲವು ಸಬೂಬುಗಳ ಅಸ್ತ್ರ ಒದಗಿಸಿದಾಗ, ಅವರು ಬೇರೆ ದಾರಿಯಿಲ್ಲದೇ ‘ಬಡವನ ಮನೆಗೆ ಭಾಗ್ಯಲಕ್ಷ್ಮಿ’ ಬಂದಂತೆ ನಮ್ಮ ಪುಟ್ಟ ಆಸ್ಪತ್ರೆಗೆ ಬರುತ್ತಾರೆ. ಬಂದವರಿಗೆ ಬಾಧಿಸುತ್ತಿರುವ ಶೀತನೆಗಡಿ, ಸೊಂಟನೋವು, ಉಳುಕು, ಹೊಟ್ಟೆಯಲ್ಲಿ ಗ್ಯಾಸಿನಂತಹ ಘೋರ ಕಾಯಿಲೆಗಳನ್ನು ಪತ್ತೆಹಚ್ಚಿ ಅಂತೂ ಮದ್ದು ಕೊಟ್ಟು ‘ಬೆಳಗಾಗುವ ತನಕ ತೊಂದರೆಯಾಗದ ಹಾಗೆ’ ಮಾಡಿಕೊಡುತ್ತೇನೆ. ಅವರೋ, ಅವರ ಪಾದ ಬೆಳೆಸಿದ್ದಕ್ಕೇ ನಮ್ಮ ಆಸ್ಪತ್ರೆ ಕೃತಾರ್ಥವಾಯಿತೆಂದರಿತು, ನನಗೆ ಧನ್ಯತಾ ಭಾವವನ್ನು ಉದ್ದೀಪಿಸಲೋ ಎಂಬಂತೆ ಎಷ್ಟು ಫೀಸು ಎಂದು ಮಾತಿಗಾದರೂ ಕೇಳದೇ ನಡೆದುಬಿಡುತ್ತಾರೆ. ಊರಿಗೇ ದೊಡ್ಡವರು ಅವರು..




   

ಲಕ್ಕು ಒಳಬಂದವಳೇ ಆಚೀಚೆ ನೋಡಿ ತನ್ನ ಕಂಬಳಿಕೊಪ್ಪೆಯನ್ನೊಂದು ಕಡೆ, ಕತ್ತಿಯನ್ನೊಂದು ಕಡೆ ಹಾಕಿ ಕೆಳಗೆ ನೆಲದ ಮೇಲೆ ಕುಳಿತಳು. ‘ಅಮೋ’ ಎಂಬೊಂದು ಶಬ್ದದಿಂದ ನನ್ನನ್ನು ಸಂಬೋಧಿಸಿ ಕರೆದು, ಯಾವುದೋ ಅತ್ಯಾನಂದದ ಕ್ಷಣಗಳಿಗಾಗಿ ಸಿದ್ಧಳಾಗುತ್ತಿರುವವಳಂತೆ ನೆಲದ ಮೇಲೇ ಪೀಠಸ್ಥಳ ಹಾಗೆ ಕುಳಿತಳು. ಕವಳದ ಚೀಲ ತೆಗೆಯುತ್ತಾ, ಸಾವಕಾಶದಲ್ಲಿ ಒಂದು ಕವಳ ಹಾಕಿಕೊಂಡು, ಒಂದು ಹಂತದ ರಸಾನುಭವ ದಕ್ಕಿದ್ದೇ ಎದ್ದುನಿಂತಳು. ಮೇಲೆತ್ತಿ ಕಟ್ಟಿದ್ದ ಸೀರೆಯ ಗಂಟನ್ನು ಚೂರೇ ಸಡಿಲಿಸಿ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಸುತ್ತಿದ್ದನ್ನೇನನ್ನೋ ಹೊರತೆಗೆದಳು.

    ಸುರುಳಿ ಸುರುಳಿ ಪಿಂಡಿ ಸುತ್ತಿದ್ದ ಹತ್ತತ್ತರ ನೋಟುಗಳು... . ಒಂದೊಂದನ್ನೂ ಸುರುಳಿಯಿಂದ ಹೊರತೆಗೆದು ಮಣಮಣ ತನ್ನಲ್ಲೇ ಲೆಕ್ಕ ಹಾಕಿಕೊಳ್ಳುತ್ತಾ ಕೆಳಗೆ ನೆಲದ ಮೇಲೆ ರಾಶಿ ಹಾಕಿದಳು. ಒಟ್ಟೂ ನಲವತ್ತೊಂದು ಆಗುವ ತನಕ ಧ್ಯಾನಸ್ಥಳ ಹಾಗೆ ನೆಲದ ಮೇಲೆ ನೋಟು ಸುರಿಯುತ್ತಿರುವ ಅನಕ್ಷರಸ್ಥೆ ಲಕ್ಕು! ಉಳಿದ ನಾಲ್ಕಾರು ನೋಟುಗಳನ್ನು ಹಿಂದೇ ಕೊಟ್ಟೆಯೊಳಗೆ ಹಾಕಿ, ಸೊಂಟದ ಗಂಟಿಗೆ ಸೇರಿಸಿ ಸುರುಳಿ ಸುತ್ತಿಕೊಂಡಿದ್ದ ನೋಟುಗಳನ್ನೆಲ್ಲ ಬಾಚಿ ನನ್ನ ಮುಂದೆ ಟೇಬಲ್ಲಿನ ಮೇಲೆ ಹರಡಿ ಹೊರಗೆ ಹೋಗಿ ತಂಬಾಕು ರಸ ಉಗಿದು ಬಂದಳು.

    ಅವಳನ್ನು ಇತ್ತೀಚೆಗೆ ಕಾಣದೇ ಬಹಳ ದಿನಗಳಾಗಿದ್ದವು. ಆರಾಮಿದ್ದಿರಬೇಕು, ಅದಕ್ಕೇ ಆಸ್ಪತ್ರೆಗೆ ಬಂದಿರಲಿಕ್ಕಿಲ್ಲ ಎಂದುಕೊಂಡಿದ್ದೆ. ಹೇಳತೊಡಗಿದಳು;

  ‘ನಮ್ಮಡುಗಿ ಹೆತ್ತಾಗ ನಾ ನಿಮ್ಗೆ ನಾನೂರಾ ಹತ್ರುಪಾಯಿ ಉದ್ರಿ ಮಾಡೋಗಿದ್ನಲ ಅಮ್ಮೋರೇ, ಕೊಡ್ಲಿಕ್ಕೆ ಆಗೇ ಇರ‍್ನಿಲ್ಲ. ದುಡ್ಡಿಲ್ದ ನಿಮ್ಗೆ ಮಕ ತೋರ‍್ಸುಕೆ ಮರ‍್ವಾದಿ ಆಗಿ ಇಷ್ಟ್ ದಿನ ನಾನ್ ಬರ‍್ನಿಲ್ಲ. ಕೊಟ್ರೆ ಅಷ್ಟ್ನೂ ಒಂದಪ ಕೊಡ್ಬೇಕು ಅಂತ ಒಟ್ಟ್ ಮಾಡ್ತಾ ಇದ್ದೆ. ದುಡಿಯುದ್ ಹೌದು, ದುಡುದ್ ದುಡ್ಡು ಮಾತ್ರ ಅದೆಲ್ಲಿ ಹೋಗ್ತದೋ ಏನೋ?! ಉಳುದೇ ಇಲ್ಲ. ಅಂತೂ ಇಷ್ಟ್ ದಿವ್ಸಕೆ ಒಟ್ಟಾಯ್ತು. ನಂಗೆ ಇಂದು ಬೇಕೇ ಬೇಕು ಅಂತ ಒಡೆದೀರ ಮನೇಲಿ ಹೇಳಿಟ್ಟಿದ್ದೆ,  ತಗಳಿ, ಈಗ ನಂಗೂ ಬಗೇಲಿ ಪರೀಕ್ಷೆ ಮಾಡಿ ನೋಡಿ..’ ಎನ್ನುತ್ತ ಮೇಜು ಹತ್ತಿದಳು.

    ನಿಜ ಹೇಳಬೇಕೆಂದರೆ ಲಕ್ಕುವಿನ ಮಗಳು ಸವಿತ ಹೆರಿಗೆಯಾದಾಗ ಕೊಡಬೇಕಿತ್ತೆಂದು ಅವಳು ಹೇಳಿದ ಮೊತ್ತದ ಬಾಕಿಯನ್ನು ನಾನು ಮರೆತೇಬಿಟ್ಟಿದ್ದೆ. ಅವಳಾದರೋ ಆ ಋಣಭಾರದ ನೆನಪಲ್ಲಿ ಮೂರುವರ್ಷದಿಂದ ನನಗೆ ಮುಖತೋರಿಸದೇ ಇದ್ದಾಳೆ! ದಿನಾ ಎರಡು ಹೊರೆ - ಅದೂ ಹೆಣ್ಣು ಹೊರೆ - ಸೊಪ್ಪು ಅಥವಾ ದರಕು ಹೊತ್ತು ಬಂದ ದುಡ್ಡಿನಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆಯ ಅವಳು ಇಷ್ಟು ದುಡ್ಡು ಒಟ್ಟುಮಾಡಲು ಕಷ್ಟಪಟ್ಟಿರಬೇಕು. ಈ ಅವಧಿಯಲ್ಲಿ ಮತ್ತೆಲ್ಲೂ ಆಸ್ಪತ್ರೆಗೂ ಹೋಗಲಿಲ್ಲವಂತೆ. ಹೊಟ್ಟೆನೋವು ಶುರುವಾದರೂ ಜಂತುಮದ್ದು ಕೂಡ ತೆಗೆದುಕೊಳ್ಳಲಿಲ್ಲವಂತೆ. ‘ಈಗ ನಂಗೆ ಜಂತುಗೆ, ಶಕ್ತಿಗೆ ಎಲ್ಲ ಮದ್ದು ಕೊಡಿ’ ಎನ್ನುತ್ತ, ಎಲ್ಲ ನೆನಪಿಸಿಕೊಂಡು ಒಂದೇ ಬಾರಿ ಮದ್ದು ಕೇಳುವವಳಂತೆ ಮಲಗಿದಳು.  

    ‘ನೀನು ದುಡ್ಡು ಕೊಟ್ಟ ಹೊರ‍್ತು ಆಸ್ಪತ್ರೆಗೆ ಬರಬೇಡ ಅಂತ ನಾನು ಹೇಳಿದ್ನಾ ಲಕ್ಕು?’ ಅಂದೆ. ‘ಅಯ್ಯೋ ನೀವೆಲ್ಲಿ ಹಂಗೇಳ್ತೀರ ಅಮಾ. ತಾಯಿದ್ದಂಗೆ ಇದೀರ ನೀವು, ಆದ್ರೆ ನಂಗೇ ಮರ್ವಾದಿ. ನೀವು ನಂ ಕೈಬಾಯಿ ನೋಡ್ದೇ ಕಷ್ಟದಾಗೆ ನಿಂತಿರ‍್ತಿರಿ. ನಿಂ ದುಡ್ಡು ಇಟ್ಕಂಡ್ರೆ ತಿಂದ ಅನ್ನ ಮೈಗೆ ಹತ್ತಾತಾ?’ ಎನ್ನುತ್ತಾ ಸೀರೆಯನ್ನೆಲ್ಲ ಸರಿಮಾಡಿಕೊಂಡು ಮಲಗಿದಳು. ಅವಳಿಗೆ ಎಂಥದ್ದೂ ಕಾಯಿಲೆ ಇಲ್ಲ. ಸಣ್ಣಪುಟ್ಟ ತೊಂದರೆಗಳಷ್ಟೇ. ಹಾಗೆ ಹೇಳಿದ್ದೇ ಖುಷಿಗೊಂಡು ಎದ್ದು ಬಂದಳು.

    ಅವಳು ಪಿಂಡಿಯಿಂದ ಎಳೆದೆಳೆದು ಹೊರಹಾಕಿದ್ದರೂ ಮತ್ತೆ ಸುಂಯ್ಞನೇ ಮರುಸುರುಳಿ ಸುತ್ತಿಕೊಂಡು ಒಡತಿಯನ್ನು ಬಿಡಲಾರೆವೆಂಬಂತೆ ಮುನಿಸಿಕೊಂಡ ಹಾಗೆ ಕುಳಿತಿದ್ದವು ಹತ್ತರ ನೋಟುಗಳು. ಹೊರಹೋದ ಲಕ್ಕು ಎಂಟ್ಹತ್ತು ಬಿಳಿಸುರುಳಿ ಹೂವುಗಳನ್ನು ಹೆಣೆದ ದಂಡೆಯನ್ನು ತಂದು ನನ್ನೆದುರಿಗೆ ಇಟ್ಟಳು. ಘಮಘಮಿಸುವ ಆ ಬಿಳಿಯ ಹೂಗಳನ್ನು ನೋಡಿದರೆ ಅವು ಲಕ್ಕುವಿನ ಮನಸ್ಸನ್ನೇ ಹೊರತೆಗೆದು ಇಟ್ಟಂತೆ ಶೋಭಿಸುತ್ತಿದ್ದವು.

    ‘ಲಕ್ಕು, ನಾನು ನಿನ್ನ ಬಾಕಿ ಹಣ ಇಷ್ಟಂತ ಎಲ್ಲೂ ಬರ‍್ದೇ ಇಟ್ಟಿಲ್ಲ ಮಾರಾಯ್ತಿ. ಇಕಾ, ನಂಗೆ ಇಷ್ಟೆಲ್ಲ ದುಡ್ಡು ಬೇಡ. ಇನ್ನೂರು ರೂಪಾಯಿ ಸಾಕು, ಇದರಲ್ಲಿ ನಿನ ಮಗಳಿಗೆ ಒಂದ್ ಸೀರೆ ಉಡಿಸು’ ಎಂದು ಉಳಿದ ನೋಟುಗಳನ್ನು ಜೋಡಿಸಿ ಅವಳಿಗೆ ಕೊಡಲು ಹೋದೆ.

   ‘ಅಯ್ಯೋ ಬ್ಯಾಡ್ರೋ ಅಮಾ, ಅವ್ಳಿಗೆ ಸೀರೆ ಎಲ್ಲ ತಂದಾಯ್ತು. ಅವಳೀಗ ಮತ್ತೆ ಏಳು ತಿಂಗಳ ಬಸುರಿ. ಮೊನ್ನೆ ಸೀಊಟ ಹಾಕಿ ಕಳಿಸ್ದೆ. ಈ ಸಲನಾದ್ರೂ ಒಂದ್ ಗಂಡಾದ್ರೆ ಸಾಕು. ಅಂತೂ ನೀವು ಹೋದ್ಸಲದ ಹಾಗೇ ಈ ಸಲನೂ ಒಂದ್ ಜೀವ ಎರಡು ಆಗುಹಂಗೆ ಪಾರು ಮಾಡಿಕೊಡಿ. ಈಗ ನನ್ನತ್ರ ದುಡ್ಡಿದೆ, ಕೊಟ್ಟಿದೀನಿ. ಮುಂದೆ ಅಂತಾ ಕಾಲ ಬಂದಾಗ ಉದ್ರಿ ನಿಲ್ಬೇಕಾತದೋ ಏನೋ’ ಎನ್ನುತ್ತಾ ಹೊರಹೋದವಳೇ ಕಂಬಳಿಕೊಪ್ಪೆ ಮಗುಚಿಕೊಂಡು ನಡೆದೇಬಿಟ್ಟಳು.

   ಋಣಮುಕ್ತವಾದ ಹಗುರ ಹೆಜ್ಜೆಗಳಲ್ಲಿ ಹೊರಗೆ ಆತು ನಿಲ್ಲಿಸಿದ್ದ ಸೊಪ್ಪಿನಹೊರೆಯನ್ನು ಹೊತ್ತು ಓಡಿದವಳನ್ನು ನೋಡುತ್ತಾ
ನನ್ನ ಕಣ್ಣು ಮಂಜು...





   ಅವರ ಬಳಿ ದಂಡಿಯಾಗೇನೂ ಇರುವುದಿಲ್ಲ. ಆದರೆ ಚಿಲ್ಲರೆ ಉಳಿದ ಹಣ ಕೊಡಹೋದರೆ ‘ಇರ್ಲಿ ಇಟ್ಕಳಿ’ ಎನ್ನುತ್ತ ಪರಮಾಯಿಶಿಗಾಗಿ ಉಳಿದ ಹಣ ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಅಂತಹ ಕೆಲವು ಚಹರೆಗಳು ನನ್ನ ಮನಃಪಟಲದ ಮೇಲೆ ದಾಖಲಾಗಿರುತ್ತವೆ. ಅಂತವರಿಗೆ ಹೇಳುವಾಗಲೇ ಸ್ವಲ್ಪ ಕಡಿಮೆ ಹೇಳುತ್ತೇನೆ. ನಾನೇನಾದರೂ ಕಡಿಮೆ ಹಣ ತೆಗೆದುಕೊಂಡಿದ್ದೇನೆಂದು ಅವರಿಗೆ ಅನಿಸಿದರೆ, ‘ಇಷ್ಟೇನಾ?’ ಎಂದು ಮತ್ತೆ ಮತ್ತೆ ಕೇಳಿ ಖಚಿತಗೊಳಿಸಿಕೊಳ್ಳುತ್ತಾರೆ. ‘ನಿಮ್ಗೂ ಔಸ್ತಿ ಏನು ಪುಕ್ಕಟೆ ಬರುತ್ತಾ? ಅದು ಬೆಳೆಯೂದಲ್ಲ, ನೀವೂ ದುಡ್ಕೊಟ್ಟು ತರ‍್ಬೇಕಲ್ಲಾ?’ ಎಂದು ನನ್ನ ಪರ ತಾವೇ ವಕಾಲತ್ತು ವಹಿಸುತ್ತಾರೆ. ಯಾವ ಕಾರಣಕ್ಕೂ ಕರುಣೆಯ ಹಂಗಿನಲ್ಲಿ ಸಿಲುಕಲು ಇಷ್ಟವಿಲ್ಲದ ಅವರಿಗೆ ಹಣಕಾಸಿನ ರಿಯಾಯಿತಿ, ಸಹಾಯ ಅತ್ಯಂತ ಮುಜುಗರದ್ದೆಂಬ ಹಾಗೆ ವರ್ತಿಸುತ್ತಾರೆ.

        ಖರ್ಚಿನ ವಿಷಯದಲ್ಲಿ ‘ಲೋಕೋ ಭಿನ್ನರುಚಿಃ.’  ಕೆಲವರು ದುಡ್ಡಿಲ್ಲದಿದ್ದರೆ ಸಾಲಮಾಡಿಯಾದರೂ ಸರಿ, ಅತ್ಯುತ್ತಮ ಸೇವೆ ದೊರಕಿಸಿಕೊಳ್ಳಲು ನೋಡಿದರೆ, ಮತ್ತೆ ಕೆಲವರು ಹೀಗೆ ಬಂದು ಹಾಗೆ ತಾನೇ ಹೋಗಬಹುದಾದ ಕಾಯಿಲೆಗೆ ಹಣ ಖರ್ಚು ಮಾಡುವುದೆಂದರೆ ಜೀವ ಹುಳ್ಳಗೆ ಮಾಡಿಕೊಳ್ಳುತ್ತಾರೆ. ಯಾವ್ಯಾವುದಕ್ಕೋ ಕೂಡಿಸಿಕೊಂಡಿರುತ್ತಾರೆ - ಮನೆಗೆ ಮಾಡು ಹೊದಿಸಲು, ಮಗಳಿಗೆ ಚಿನ್ನದ ಕಿವಿ ಬಟ್ಟು ಮಾಡಿಸಲು, ಈ ಸಲ ತಿರುಪತಿ ಯಾತ್ರೆ ಮಾಡಲು, ಹೊಸಬಟ್ಟೆ ಕೊಳ್ಳಲು, ಸಾಲ ಮರುಪಾವತಿ ಮಾಡಲು.. - ಹೀಗೇ. ಎಷ್ಟೋ ಕಾಲದಿಂದ ಸಂಗ್ರಹಿಸಿಟ್ಟ ಹಣದ ಮೇಲೆ ಕೋಳಿಪಿಳ್ಳೆಯ ಮೇಲೆ ಹದ್ದು ಎರಗುವ ಹಾಗೆ ಕಾಯಿಲೆ ಬಂದೆರಗುತ್ತದೆ. ಜೀವ ಒಂದುಳಿದು ಕಾಯಿಲೆ ಗುಣವಾದರೆ ಸಾಕು, ಉಳಿದದ್ದನ್ನೆಲ್ಲ ಕೊನೆಗೆ ಹೇಗೂ ಜೋಡಿಸಿಕೊಳ್ಳಬಹುದು ಎಂದು ಬಹಳಷ್ಟು ಜನ ಯೋಚಿಸಿದರೆ, ಕೆಲವರು ಎಲ್ಲೆಲ್ಲಿ ರಿಯಾಯ್ತಿ ಇದೆ, ಎಲ್ಲಿ ಉಚಿತ ಸೇವೆಯಿದೆ ಎಂದು ಹುಡುಕಿ ಹೊರಡುತ್ತಾರೆ. ವಿಪರ್ಯಾಸವೆಂದರೆ ಹಣವಂತರೇ ಉಚಿತ ಸೇವೆ ದೊರಕಬಹುದೆಂದು ನಿರೀಕ್ಷೆಯಲ್ಲಿರುತ್ತಾರೆ.

   ಅಷ್ಟಕ್ಕೂ ‘ಹಣವಂತ’ ಎಂಬುದೊಂದು ಸಾಪೇಕ್ಷ ಸ್ಥಿತಿ. ಹಣವಿದೆಯೋ ಇಲ್ಲವೋ ಎಂದು ಪರ್ಸು ನೋಡಿ ಬರದ ಕಾಯಿಲೆಗಳು ಮನುಷ್ಯನ ಮನಸ್ಸಿನ ಬೇರೆಬೇರೆ ಮಜಲುಗಳನ್ನು ನಗ್ನಗೊಳಿಸುತ್ತವೆ. ಕಾಯಿಲೆ ಎಂದ ಕೂಡಲೇ ಕೆಲವರಿಗೆ ಪ್ರಾಣಭಯ, ಕೆಲವರಿಗೆ ನೋವಿನಭಯ, ಹಲವರಿಗೆ ಹಣದಭಯ. ಮೊದಲೆರಡು ಭಯಗಳ ನಿವಾರಣೆ ತಮ್ಮ ಕೈಯಲ್ಲಿಲ್ಲವಾಗಿ, ಬಹುಪಾಲು ರೋಗಿಗಳು ಹಣದ ಬಗ್ಗೆಯೇ ಚಿಂತಿಸುತ್ತಾರೆ.

      ಯಾರಿಗೆ ಕೊಡಲು ಇಷ್ಟವಿದೆಯೋ, ಇಲ್ಲವೋ, ಅಂತೂ ಬೇರೆ ಬೇರೆ ವಾಸನೆ ಹೊತ್ತ ನೋಟುಗಳು ನನ್ನ ಪರ್ಸಿನಲ್ಲಿ ಸೇರಿರುತ್ತವೆ. ಬೇರೆಯವರ ಕಷ್ಟ ನೋವುಗಳೇ ಆದಾಯ ಮೂಲವಾದ ವೈದ್ಯವೃತ್ತಿ ಮಿಶ್ರ ಭಾವನೆಗಳನ್ನು ಹುಟ್ಟುಹಾಕುತ್ತದೆ. ನಮ್ಮ ಅಹಂಕಾರ ಪೋಷಣೆಗೋ, ಮತ್ತೊಂದಕ್ಕೋ ಅಂತೂ ವಿನಿಯೋಗದ ಹಲವು ಮಾರ್ಗಗಳು ಹೊಳೆಯುತ್ತವೆ..