Tuesday 1 July 2014

ನೆನೆವುದೆನ್ನ ಮನ - ವೈದ್ಯರ ದಿನಾಚರಣೆ



     ಡಾ. ಬಿಧಾನ್ ಚಂದ್ರ ರಾಯ್ (ಬಿ.ಸಿ.ರಾಯ್) ಅವರ ನೆನಪಿನಲ್ಲಿ ಪ್ರತಿ ವರ್ಷ ಜುಲೈ ಒಂದನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಭಾರತದ ಕಂಡ ಮೇಧಾವಿ ವೈದ್ಯ, ರಾಜಕಾರಣಿ, ಸ್ವಾತಂತ್ರ ಹೋರಾಟಗಾರ, ಉತ್ತಮ ಆಡಳಿತಗಾರರಾದ ಬಿ.ಸಿ ರಾಯ್ ಅವರು ೧೮೮೨ರ ಜುಲೈ ಒಂದರಂದು ಬಿಹಾರದ ಪಾಟ್ನಾದಲ್ಲಿ ಹುಟ್ಟಿದರು. ನಂತರ ಪಾಟ್ನಾ ಹಾಗೂ ಕೋಲ್ಕತಾಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಅವರು ಕೋಲ್ಕತಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪೂರೈಸಿ ಕೆಲಸ ಮಾಡತೊಡಗಿದರು. ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್ನಿಗೆ ತೆರಳುವ ಅವರು, ಛಲ ಬಿಡದೇ ೩೦ ಬಾರಿ ಅರ್ಜಿ ಹಾಕಿದ ಮೇಲೇ ವಿದ್ಯಾಭ್ಯಾಸಕ್ಕಾಗಿ ಸೀಟು ದೊರಕಿಸಿಕೊಳ್ಳುತ್ತಾರೆ. ಅವಕಾಶ ಸಿಕ್ಕಿದ್ದೇ ಕಠಿಣ ತಪಸ್ಸಿನ ಹಾಗೆ ಓದಿ ಕೇವಲ ೨ ವರ್ಷ ಮೂರು ತಿಂಗಳಲ್ಲಿ ಈಖಅS ಹಾಗೂ  ಒಖಅP ಪದವಿಗಳನ್ನು ಪೂರೈಸುತ್ತಾರೆ. ಇಷ್ಟು ಕಡಿಮೆ ಅವಧಿಯಲ್ಲಿ, ಹಾಗೂ ಮೆಡಿಸಿನ್ ಹಾಗೂ ಸರ್ಜರಿಗಳೆಂಬ ಎರಡು ಭಿನ್ನ ಧೃವಗಳಾದ ವೈದ್ಯಕೀಯ ಸ್ನಾತಕೋತ್ತರ ಪದವಿಗಳನ್ನು ಪೂರೈಸಿದ ಮೊದಲಿಗರು ಅವರು. ನಂತರ ಕೋಲ್ಕತಾಗೆ ಹಿಂದಿರುಗಿ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿಕೊಳ್ಳುತ್ತಾರೆ.

     ಕೆಲವೇ ವರ್ಷಗಳಲ್ಲಿ ಉನ್ನತ ಹುದ್ದೆಗೇರಿ ಕೋಲ್ಕತಾ ವಿಶ್ವವಿದ್ಯಾಲಯದ ಉಪಕುಲಪತಿ ಆಗುವ ಅವರು ಹತ್ತಾರು ಆಧುನಿಕ ವೈದ್ಯಕೀಯ ಪದ್ಧತಿಯ ಆಸ್ಪತ್ರೆಗಳನ್ನೂ, ಮೆಡಿಕಲ್ ಕಾಲೇಜುಗಳನ್ನೂ ತೆರೆಯುತ್ತಾರೆ. ಬಂಗಾಳವೆಂದರೆ ಸಾಂಕ್ರಾಮಿಕ ಕಾಯಿಲೆಗಳ ತವರೆಂದೇ ಕುಖ್ಯಾತವಾಗಿ ಬ್ರಿಟಿಷ್ ಆಫೀಸರುಗಳು ಪೋಸ್ಟಿಂಗ್ ಮೇಲೆ ಕೋಲ್ಕತಾಗೆ ಹೋಗಲು ಹೆದರುತ್ತಿದ್ದ ಕಾಲವೊಂದಿತ್ತು. ಜನರ ಆರೋಗ್ಯ ಸುಧಾರಿಸದೇ ಮತ್ಯಾವ ಸುಧಾರಣೆಗೂ ಅರ್ಥವಿಲ್ಲವೆಂದು ಅರಿತ ಅವರು ಎಲ್ಲ ಜನರ ಕೈಗೆಟುಕುವ ಹಾಗೆ ಸಾರ್ವಜನಿಕ ಆಸ್ಪತ್ರೆಗಳನ್ನು ತೆರೆದು ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಾರೆ. ಲಕ್ನೋ ವಿಶ್ವವಿದ್ಯಾಲಯ ಶುರು ಮಾಡುತ್ತಾರೆ.

    ಸ್ವಾತಂತ್ರ ಚಳುವಳಿಯ ಕಾವು ಆಗ ಯಾರನ್ನೂ ಬಿಡದ ಕಾಲ. ಗಾಂಧೀಜಿಯ ಮಿತ್ರರೂ ಹಾಗೂ ವೈದ್ಯರೂ ಆಗಿದ್ದ ಬಿ.ಸಿ.ರಾಯ್ ಅವರ ನೆಚ್ಚಿನ ಸೇನಾಪತಿಗಳಲ್ಲೊಬ್ಬರು. ಪೂನಾದಲ್ಲಿ ಅಸ್ವಸ್ಥರಾಗಿ ಮಲಗಿದ್ದ ಗಾಂಧಿಯನ್ನು ನೋಡಹೋದಾಗ ‘ನೀವು ಭಾರತದ ೪೦ ಮಿಲಿಯ ಜನರಿಗೆ ಉಚಿತವಾಗಿ ಔಷಧಿ ಕೊಡುವಿರಾದರೆ ನಾನೂ ತೆಗೆದುಕೊಳ್ಳಬಯಸುವೆ’ ಎಂದು ಗಾಂಧಿ ಚಿಕಿತ್ಸೆ ನಿರಾಕರಿಸುತ್ತಾರೆ. ‘ಭಾರತದ ೪೦ ಮಿಲಿಯ ಜನರ ಬಳಿ ಹೋಗಬಲ್ಲೆನೋ ಇಲ್ಲವೋ , ಅವರ ಪ್ರತಿನಿಧಿಯಾದ ನಿಮಗೆ ಚಿಕಿತ್ಸೆ ನೀಡಬೇಕೆಂದೇ ಬಂದಿರುವೆ’ ಎಂದುತ್ತರಿಸಿದ ರಾಯ್ ಅವರ ನಿಕಟ ಸಹವರ್ತಿಯಾಗುತ್ತಾರೆ. ೧೯೨೫ರಲ್ಲಿ ರಾಜಕೀಯ ಪ್ರವೇಶಿಸಿದ ಅವರು ಬಂಗಾಳದ ಹಳೆಯ ಹುಲಿ ಸುರೇಂದ್ರನಾಥ ಬ್ಯಾನರ್ಜಿಯವರನ್ನು ಸೋಲಿಸಿದವರು. ಬಾರಕ್‌ಪೋರ್‌ನಿಂದ ಗೆದ್ದ ಬಳಿಕ ಹೂಗ್ಲಿ ನದಿಯ ನೀರು ಕಲುಷಿತಗೊಳ್ಳುತ್ತಿದ್ದು ಅದರ ಶುದ್ಧೀಕರಣ ಯೋಜನೆ ಕೈಗೊಳ್ಳಬೇಕೆಂದು ಒತ್ತಾಯ ತಂದರು. ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳ ಬಂದವರನ್ನು ತಡೆದು ನಿಲ್ಲಿಸುವ ಗಾಂಧಿ, ‘ನೀವೂ ನಮ್ಮ ಜೊತೆ ಜೈಲು ಸೇರುವುದು ಬೇಡ, ಜನಪರ ಕೆಲಸ ಮಾಡುತ್ತ ನಮ್ಮ ಬೆಂಬಲಕ್ಕಿರಿ’ ಎಂದು ಹಿಂದೆ ಕಳಿಸುತ್ತಾರೆ.

     ಸ್ವಾತಂತ್ರಾನಂತರ ೧೯೪೮ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗುವ ಅವರು ನಂತರ ೧೪ ವರ್ಷ ಕಾಲ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು. ಅವರು ಮುಖ್ಯಮಂತ್ರಿಯಾದ ಅವಧಿ ನಿರಾಶ್ರಿತರು, ಸಾಂಕ್ರಾಮಿಕ ರೋಗಗಳು, ಕೋಮುಗಲಭೆ, ನಿರುದ್ಯೋಗ ಇವೆಲ್ಲ ಬಂಗಾಳವನ್ನು ಕ್ಷೋಭೆಗೊಳಪಡಿಸಿದ್ದ ಕಾಲ. ಕೇವಲ ೩ ವರ್ಷಗಳಲ್ಲಿ ಕಟ್ಟುನಿಟ್ಟಾದ ಹಾಗೂ ಶಿಸ್ತಿನ ಆಡಳಿತದಿಂದ ಅವೆಲ್ಲವನ್ನು ತಹಬಂದಿಗೆ ತರುವ ಅವರನ್ನು ‘ಪಶ್ಚಿಮ ಬಂಗಾಳದ ಪಿತಾಮಹ’ ಎಂದೇ ಕರೆಯಲಾಗುತ್ತದೆ. ೧೯೬೧ರಲ್ಲಿ ಭಾರತ ರತ್ನ ನೀಡಲಾಗುತ್ತದೆ. ೧೯೬೨ರ ಜುಲೈ ಒಂದರ ಬೆಳಿಗ್ಗೆ ರೋಗಿಗಳನ್ನು ನೋಡಿ ಕೆಲಸ ಮಾಡುತ್ತಿದ್ದಾಗಲೇ ಕೊನೆಯುಸಿರೆಳೆದ ಕಾಯಕಜೀವಿ ಬಿ. ಸಿ. ರಾಯ್. ಅವರು ಹುಟ್ಟಿದ ಹಾಗೂ ಮರಣ ಹೊಂದಿದ ದಿನವಾದ ಜುಲೈ ಒಂದನ್ನು ವೈದ್ಯರ ದಿನವೆಂದೇ ಕರೆಯಲಾಗುತ್ತದೆ.

***

      ವಿಯನ್ನಾ ಆಸ್ಪತ್ರೆಯ ಸೆಮಲ್ ವೈಸ್, ಹೆರಿಗೆ ಮಾಡಿಸುವವರು ಶುದ್ಧವಾಗಿ ಕೈತೊಳೆದುಕೊಳ್ಳುವುದರಿಂದ ‘ಬಾಣಂತಿ ನಂಜ’ನ್ನು ತಪ್ಪಿಸಬಹುದು ಎಂದು ತೋರಿಸಿಕೊಟ್ಟ. ಕೈ ತೊಳೆಯುವಂತಹ ಸರಳ ಎಚ್ಚರಿಕೆಯಿಂದ ಬಹುಪಾಲು ಮಹಿಳೆಯರ ಹೆರಿಗೆಯ ನಂತರದ ಸಾವು ತಪ್ಪಿಸಬಹುದೆಂದು ಅವನಿಗೆ ಮನವರಿಕೆಯಾಗಿತ್ತು. ಆದರೆ ಅವನು ಈ ವಿಚಾರವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು ಹೊರಟ ಕೂಡಲೇ ಇದೊಂದು ಅಮಾನವೀಯ ಹಾಗೂ ಅಶಿಸ್ತಿನ ವರ್ತನೆಯೆಂದು ಪರಿಗಣಿಸಿ ಅವನನ್ನು ಆಸ್ಪತ್ರೆಯ ಕೆಲಸದಿಂದಲೇ ತೆಗೆದುಹಾಕಲಾಯಿತು! ಅದು ವೈದ್ಯರು ರೋಗಿಗಳನ್ನು ಮುಟ್ಟಿದಮೇಲೆ ಕೈತೊಳೆದುಕೊಂಡರೆ ಅದು ಮಹಾಪರಾಧವೆಂದು ಪರಿಗಣಿಸುತ್ತಿದ್ದ ಕಾಲ. ಕೇವಲ ಒಂದೂವರೆ ಶತಮಾನದ ಹಿಂದಿನ ತನಕವೂ ಶಸ್ತ್ರಚಿಕಿತ್ಸಕರ ಕೈ, ಬಟ್ಟೆಬರೆ ಕೊಳಕಾಗಿದ್ದಷ್ಟೂ ಅವರು ದಕ್ಷರೆಂದು ಪರಿಗಣಿತರಾಗುತ್ತಿದ್ದರು. ರೋಗಿಗಳ ಎದುರಿಗೆ ಕೈತೊಳೆದರೆ ಅವರಿಗೆ ಅವಮಾನ ಮಾಡಿದ ಹಾಗೆಂಬ ಭಾವನೆ ತುಂಬಿದ್ದ ಕಾಲವದು.

    ವಿಜ್ಞಾನ ತಂತ್ರಜ್ಞಾನಗಳು ಈಗಿನಷ್ಟು ಮುಂದುವರೆಯದಿದ್ದ ಕಾಲದಲ್ಲಿ ಬರಿಯ ರೋಗಿಗಳ ಪರೀಕ್ಷೆಯಿಂದಲೇ ರೋಗ ಪತ್ತೆ ಹಚ್ಚುತ್ತಿದ್ದ ವೈದ್ಯರಿದ್ದರು. ನಾಡಿಬಡಿತ ಹಿಡಿದು ಮದ್ದು ಕೊಡುವ ಹಕೀಮರಿದ್ದರು. ಹಣದ ಬಗೆಗೆ ಯಾವ ಆಸೆಯಿಟ್ಟುಕೊಳ್ಳದೇ ವೈದ್ಯವೃತ್ತಿ ಎಂದರೆ ಸೇವೆ ಎಂದೇ ತಿಳಿದುಕೊಂಡವರಿದ್ದರು. ಕಷ್ಟಗಳನ್ನೆದುರಿಸಿಯೂ ವೈದ್ಯರಾಗಿ ಜನಸೇವೆಯ ಜೊತೆಗೇ ಮನುಕುಲ ಉಳಿಸುವಂಥ ಸಂಶೋಧನೆಗಳನ್ನು ಮಾಡಿದ ನೂರಾರು ರತ್ನಗಳಲ್ಲಿ ಈ ಮೂರು:

    ಯಲ್ಲಪ್ರಗಡ ಸುಬ್ಬರಾವ್; (೧೮೯೫-೧೯೪೮)



     ನಮ್ಮ ದೇಶದವರೇ ಆಗಿದ್ದೂ ಬಹುಪಾಲು ಭಾರತೀಯರಿಗೆ ಅಪರಿಚಿತರಾಗಿರುವ, ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಂಶೋಧನೆ ಮಾಡಿದ, ಅಮೆರಿಕದಲ್ಲಿ ಗೌರವಾನ್ವಿತರಾಗಿರುವ ವ್ಯಕ್ತಿಯೆಂದರೆ ಡಾ. ಯಲ್ಲಪ್ರಗಡ ಸುಬ್ಬರಾವ್.

    ಆಂಧ್ರಪ್ರದೇಶದ ಭೀಮಾವರಂನ ಗುಮಾಸ್ತೆಯೊಬ್ಬರ ಮಗನಾಗಿ ಜನಿಸಿದ ಸುಬ್ಬರಾವ್ ಬಡತನದ ಬವಣೆಯಲ್ಲೇ ವೈದ್ಯರಾದರು. ಕೇವಲ ಮನೋಬಲ ಹಾಗೂ ತಮ್ಮ ತಾಯಿಯ ಎಡೆಬಿಡದ ಬೆಂಬಲದೊಂದಿಗೆ ಅಪಾರ ಕನಸು ಹೊತ್ತು ಮದ್ರಾಸ್ ಮೆಡಿಕಲ್ ಕಾಲೇಜು ಸೇರುವ ಅವರು ನಂತರ ಉಷ್ಣದೇಶಗಳ ಕಾಯಿಲೆಗಳಿಗೆ ಮದ್ದು ಕಂಡುಹಿಡಿಯುವ ಉದ್ದೇಶದಿಂದ ಉನ್ನತ ವಿದ್ಯಾಭ್ಯಾಸಕ್ಕೆ ಅಮೆರಿಕಕ್ಕೆ ತೆರಳಿದರು. ತೀವ್ರ ಆರ್ಥಿಕ ಸಂಕಷ್ಟದ ನಡುವೆಯೇ ಹಾರ್ವರ್ಡ್ ಮೆಡಿಕಲ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ನಂತರ ಸಂಶೋಧನೆಗಳತ್ತ ಗಮನ ಹರಿಸಿದ ಅವರು, ಅದಕ್ಕೆ ಅನುಕೂಲಕರವೆಂದು ಅಮೆರಿಕದಲ್ಲೇ ನೆಲೆಸುತ್ತಾರೆ. ಲೆಡರ್ಲೆ ಪ್ರಯೋಗಾಲಯದಲ್ಲಿ ಕೆಲಸ ಮಾಡತೊಡಗುತ್ತಾರೆ. ವಿದ್ಯಾರ್ಥಿಯಾಗಿ ಆ ದೇಶ ಪ್ರವೇಶಿಸಿದ್ದರಿಂದ, ಮುಂದೆ ಕೆಲಸ ಮಾಡುವಾಗಲೆಲ್ಲ ವೀಸಾ ಉಳಿಸಿಕೊಳ್ಳುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಅಮೆರಿಕದ ಸುಪ್ರೀಂಕೋರ್ಟು ಭಾರತೀಯರನ್ನು ‘ಬಿಳಿಯರು’ ಅಲ್ಲವೆಂದು (ಕಲರ‍್ಡ್ ಎಂದು) ಘೋಷಿಸಿದಾಗ ಬಹಳ ಅಭದ್ರತೆ ಅನುಭವಿಸುತ್ತಾರೆ. ೨೫ ವರ್ಷ ಕಾಲ ಅಮೆರಿಕದಲ್ಲಿ ನೆಲೆಸಿದ ನಂತರವೂ ಅವರನ್ನು ‘ಪರಕೀಯ’ (ಅಲಿಯನ್) ಎಂದೇ ಪರಿಗಣಿಸಲಾಗಿರುತ್ತದೆ!

   ಹೀಗೆ ತನ್ನದಲ್ಲದ ನೆಲದಲ್ಲಿ ವ್ಯಕ್ತಿಗತ ಕಷ್ಟಗಳ ನಡುವೆಯೂ ಏಕಚಿತ್ತದಿಂದ ಸಂಶೋಧನೆ ಮುಂದುವರಿಸಿದ ಈ ಮೇಧಾವಿ, ಫಿಸ್ಕ್ ಎಂಬವರ ಜೊತೆ ಸ್ನಾಯುಸಂಕುಚನದ ಕಗ್ಗಂಟೊಂದನ್ನು ಬಿಡಿಸುತ್ತಾರೆ. ನಂತರ ಜೀವಿರೋಧಕಗಳ (ಆಂಟಿಬಯಾಟಿಕ್ಸ್) ಸಂಶೋಧನೆ ಹಾಗೂ ತಯಾರಿಯಲ್ಲಿ ವಿಶೇಷ ಆಸಕ್ತಿ ವಹಿಸುತ್ತಾರೆ. ಪಾಲಿಮಿಕ್ಸಿನ್, ಆರಿಯೋಮೈಸಿನ್, ಟೆಟ್ರಾಸೈಕ್ಲಿನ್ ಎಂಬ ಜೀವಿರೋಧಕಗಳನ್ನು ಶೋಧಿಸುತ್ತಾರೆ. ಅದರಲ್ಲೂ ಟೆಟ್ರಾಸೈಕ್ಲಿನ್ ಎಂಬುದು ಆಗ ವಿಶ್ವವನ್ನು ಕಾಡುತ್ತಿದ್ದ ಪ್ಲೇಗ್ ಮಾರಿಗೆ ರಾಮಬಾಣವೆಂದು ಸಿದ್ಧವಾಗಿ ಲಕ್ಷಾಂತರ ಜನರ ಜೀವ ಉಳಿಸಿದ ಕೀರ್ತಿ ಸುಬ್ಬರಾವ್ ಅವರಿಗೆ ಸಲ್ಲುತ್ತದೆ. ಟೆಟ್ರಾಸೈಕ್ಲಿನ್‌ನ ರೂಪಾಂತರವಾದ ಡಾಕ್ಸಿಸೈಕ್ಲಿನ್‌ನನ್ನು ಈಗ ಮಲೇರಿಯಾಕ್ಕೆ ಬಳಸಬಹುದೆಂದು ಘೋಷಿಸಲಾಗಿದೆ. ನಂತರ ಉಷ್ಣವಲಯದ ಭೇದಿ (ಟ್ರಾಪಿಕಲ್ ಸ್ಪ್ರೂ) ಹಾಗೂ ರಕ್ತಹೀನತೆಗೆ ಪರಿಹಾರವಾಗಿ ಫೋಲಿಕ್ ಆಸಿಡ್ ಎಂಬ ವಿಟಮಿನ್, ಹಾಗೂ ‘ಬಿ’ ಗುಂಪಿನ ಬಹುಪಾಲು ವಿಟಮಿನ್‌ಗಳನ್ನು ಬೆಳಕಿಗೆ ತಂದವರು ಅವರೇ. ಈಗಲೂ ಫೈಲೇರಿಯಾ (ಆನೆಕಾಲು ರೋಗ)ಕ್ಕೆ ಬಳಸಲಾಗುತ್ತಿರುವ ಡಿಇಸಿ (‘ಹೆಟ್ರಝಾನ್’)  ಮಾತ್ರೆಯನ್ನು ಸಂಶೋಧಿಸಿದ್ದು ಅವರೇ. ಒಂದು ತೆರನ ರಕ್ತದ ಕ್ಯಾನ್ಸರಿನಲ್ಲಿ ಬಳಸುವ ‘ಮೀಥೋಟ್ರೆಕ್ಸೇಟ್’ನ್ನು ಕಂಡುಹಿಡಿದು, ಕ್ಯಾನ್ಸರಿನ ಪರಿಹಾರಕ್ಕೆ ಔಷಧಿ ತಯಾರಿಸುವ ಯೋಜನೆಯಲ್ಲಿದ್ದಾಗಲೇ, ದಣಿವರಿಯದೇ ಕೆಲಸ ಮಾಡಿದ ಈ ಶ್ರಮಜೀವಿ ತಮ್ಮ ೫೩ನೇ ವಯಸ್ಸಿನಲ್ಲಿ ನಿಧನ ಹೊಂದಿದರು.

      ಹಲವು ಹೊಸಪೀಳಿಗೆಯ ವಿಜ್ಞಾನಿಗಳಿಗೆ ಮಾರ್ಗದರ್ಶನ ಮಾಡಿದ್ದ ಅವರಿಗೆ ಸಂದಬೇಕಾದ ಪ್ರಶಸ್ತಿ ಗೌರವಗಳು ಅಂದಿಗೆ ಸಿಗಲಿಲ್ಲವಾದರೂ,  ಅಮೆರಿಕಾದಲ್ಲಿ ಅವರನ್ನು ಈ ಶತಮಾನದ ಶ್ರೇಷ್ಠ ವಿಜ್ಞಾನಿಯೆಂದು ಪರಿಗಣಿಸಲಾಯಿತು. ಇತ್ತೀಚೆಗೆ ಭಾರತದಲ್ಲಿ ಮತ್ತೊಮ್ಮೆ ಪ್ಲೇಗ್ ಕಾಣಿಸಿಕೊಂಡು ಟೆಟ್ರಾಸೈಕ್ಲಿನ್ ಬಳಕೆಯಾದಾಗಲೇ ಭಾರತೀಯರಿಗೆ ಯಲ್ಲಪ್ರಗಡ ಅವರ ಬಗ್ಗೆ ತಿಳಿದಿದ್ದು! ಇಂತಹ ನಮ್ಮ ವೃತ್ತಿಬಾಂಧವನ ಬಗೆಗೆ ವೈದ್ಯಲೋಕದಲ್ಲಿಯೂ ತಿಳಿಯದವರೇ ಹೆಚ್ಚಿದ್ದಾರೆ.

    ವ್ಲದಿಮಿರ್ ಹಾಫ್ಕಿನ್; (೧೮೬೦-೧೯೩೦)



     ಪ್ರಪಂಚವನ್ನೇ ತಲ್ಲಣಗೊಳಿಸುತ್ತಿದ್ದ ಕಾಲರಾ ಹಾಗೂ ಪ್ಲೇಗ್‌ಗಳೆಂಬ ಮಹಾಮಾರಿಗಳಿಗೆ ಲಸಿಕೆ ಕಂಡುಹಿಡಿದ ಕೀರ್ತಿ ವ್ಲದಿಮಿರ್ ಹಾಫ್ಕಿನ್ ಅವರಿಗೆ ಸಲ್ಲುತ್ತದೆ. ಜೋಸೆಫ್ ಲಿಸ್ಟರ್ ಎಂಬ ವೈದ್ಯವಿಜ್ಞಾನಿ ಅವರನ್ನು ‘ಮನುಕುಲದ ರಕ್ಷಕ’ ಎಂದು ಕರೆದಿದ್ದು ಅರ್ಥಪೂರ್ಣವಾಗಿಯೇ ಇದೆ.

      ಪೋಲೆಂಡಿನಲ್ಲಿ (ರಶಿಯಾ) ಜನಿಸಿದ ಅವರು, ನಂತರ ಫ್ರಾನ್ಸಿನ ಲೂಯಿ ಪಾಶ್ಚರ್ ಪ್ರಯೋಗಾಲಯದಲ್ಲಿ ವೈದ್ಯಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ೧೮೯೨ರಲ್ಲಿ ಯೂರೋಪಿನಾದ್ಯಂತ ಕಾಲರಾ ಪಿಡುಗು ಹರಡಿತ್ತು. ಆಗ ಹಾಫ್ಕಿನ್ ಅದಕ್ಕೆ ತಾನು ಸಂಶೋಧಿಸಿದ ಲಸಿಕೆಯ ಬಗ್ಗೆ ಹೇಳಿದಾಗ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಲೂಯಿ ಪಾಶ್ಚರನೂ ಸೇರಿದಂತೆ ಯಾರೂ ಆ ಲಸಿಕೆ ಬಗ್ಗೆ ಪ್ರೋತ್ಸಾಹದಾಯಕವಾಗಿ ಪ್ರತಿಕ್ರಿಯೆ ನೀಡದಿದ್ದಾಗ, ಭಾರತದಲ್ಲಿ ಅದೇ ವೇಳೆಗೆ ಕಾಲರಾ ಹರಡುತ್ತಿದ್ದು, ಅದರ ನಿಯಂತ್ರಣಕ್ಕಾಗಿ ಇಲ್ಲಿಗೆ ಕರೆಸಲಾಗುತ್ತದೆ. ಬಂದ ವರ್ಷವೇ ಅವರ ಮೇಲೆ ಮೂಲಭೂತವಾದಿಗಳಿಂದ ಹಲ್ಲೆ ಯತ್ನ ಕೂಡ ನಡೆಯುತ್ತದೆ. ಆದರೂ ಧೈರ್ಯಗೆಡದೆ ಇಲ್ಲೇ ನಿಂತ ಅವರು ಜನರು ಲಸಿಕೆ ತೆಗೆದುಕೊಳ್ಳಲು ಹೆದರಿದಾಗ ಮೊದಲು ತಾವೇ ತೆಗೆದುಕೊಳ್ಳುತ್ತಾರೆ.  ನಂತರ ೨೫೦೦೦ ಜನ ಸ್ವಯಂ ಇಚ್ಚೆಯಿಂದ ಬಂದವರಿಗೆ ಲಸಿಕೆ ನೀಡುತ್ತಾರೆ. ಕಾಲರಾ ಪಿಡುಗು ಲಸಿಕೆ ತೆಗೆದುಕೊಂಡವರಿಗೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

     ಅದೇ ಸಮಯಕ್ಕೆ ಭಾರತದ ಮಲೇರಿಯಾ ಹಾಫ್ಕಿನ್ನರನ್ನು ಬಾಧಿಸತೊಡಗುತ್ತದೆ. ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ಯೂರೋಪಿಗೆ ಮರಳಿದ ಅವರು ೧೮೯೬ರಲ್ಲಿ ವೈದ್ಯರ ಸಲಹೆಗೆ ವಿರುದ್ಧವಾಗಿ ಮತ್ತೆ ಭಾರತಕ್ಕೆ ವಾಪಸಾಗುತ್ತಾರೆ. ಅವರು ಇಲ್ಲಿ ಬರುವ ಹೊತ್ತಿಗೆ ಮುಂಬಯಿಯಲ್ಲಿ ಪ್ಲೇಗ್ ಹಾವಳಿ ಶುರುವಾಗಿರುತ್ತದೆ. ಸರ್ಕಾರದ ಕೋರಿಕೆಯ ಮೇರೆಗೆ ಮುಂಬಯಿಯ ಗ್ರಾಂಟ್ಸ್ ಮೆಡಿಕಲ್ ಕಾಲೇಜಿನಲ್ಲಿ ತಾತ್ಕಾಲಿಕ ಪ್ಲೇಗ್ ಪ್ರಯೋಗಾಲಯ ತೆರೆಯಲಾಗುತ್ತದೆ.  ೧೮೯೭ರ ವೇಳೆಗೆ ಪ್ಲೇಗ್ ಲಸಿಕೆ ತಯಾರಾಗಿ ಅದನ್ನು ಮೊದಲು ಬೈಕುಲಾ ಜೈಲಿನ ಖೈದಿಗಳಿಗೆ ನೀಡಲಾಗುತ್ತದೆ. ನಂತರ ಪ್ಲೇಗ್ ಲಸಿಕಾ ಕಾರ್ಯಕ್ರಮ ಭಾರತದಾದ್ಯಂತ ನಡೆದು ಆ ಮಾರಣಾಂತಿಕ ಕಾಯಿಲೆಯನ್ನು ತಡೆಗಟ್ಟಲು ಯಶಸ್ವಿಯಾಗುತ್ತಾರೆ. ನಂತರ ಅದೇ ಪ್ಲೇಗ್ ಪ್ರಯೋಗಾಲಯದ ಸ್ಥಾಪಕ ನಿರ್ದೇಶಕರಾಗಿ ಸೇವೆ ಮುಂದುವರೆಸುತ್ತಾರೆ.

     ಹಾಗಿದ್ದೂ ೧೯೦೨ರಲ್ಲಿ ಪಂಜಾಬಿನ ೧೯ ಜನ ಹಳ್ಳಿಗರಿಗೆ ಪ್ಲೇಗ್ ವ್ಯಾಕ್ಸೀನ್ ನೀಡಿದ್ದೇ ಅವರೆಲ್ಲ ಧನುರ್ವಾಯು ಬಂದು ಅಸುನೀಗುತ್ತಾರೆ. ಅವರೆಲ್ಲ ಒಂದೇ ಬಾಟಲಿಯ ವ್ಯಾಕ್ಸೀನುಗಳನ್ನು ಪಡೆದವರೇ ಆಗಿರುತ್ತಾರೆ. ಅದಕ್ಕೆ ವಿಚಾರಣೆ ನಡೆಸಿ ಇವರನ್ನೇ ತಪ್ಪಿತಸ್ಥರೆಂದು ಪರಿಗಣಿಸಿ ಶಿಕ್ಷಾರೂಪವಾಗಿ ಇಂಗ್ಲೆಂಡಿಗೆ ಕಳಿಸಲಾಗುತ್ತದೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳ ಒತ್ತಡಕ್ಕೆ ಮಣಿದು ೧೯೦೭ರಲ್ಲಿ ಮತ್ತೆ ವಿಚಾರಣೆ ನಡೆಸಿದಾಗ, ಸಹಾಯಕ ಕೆಲಸಗಾರನು ಶುಚಿಯಿಲ್ಲದ ಬಿರಡೆ ಬಳಸಿದ್ದರಿಂದ ಆ ಬಾಟಲಿನ ವ್ಯಾಕ್ಸೀನ್ ತೆಗೆದುಕೊಂಡವರೆಲ್ಲ ಧನುರ್ವಾಯುವಿಗೆ ಒಳಗಾದರೆಂದು ತೀರ್ಪಿತ್ತು ಇವರನ್ನು ದೋಷಮುಕ್ತ ಎಂದು ಪರಿಗಣಿಸಲಾಗುತ್ತದೆ. ಕೂಡಲೇ ಭಾರತಕ್ಕೆ ಬಂದು ಕೋಲ್ಕತಾದಲ್ಲಿ ೧೯೧೪ರಲ್ಲಿ ನಿವೃತ್ತಿಯಾಗುವ ತನಕ ಸೇವೆ ಮುಂದುವರೆಸುವ ಪ್ರೊ. ಹಾಫ್ಕಿನ್ ನಂತರ ಯೂರೋಪಿಗೆ ತೆರಳುತ್ತಾರೆ.

    ಅವರ ನಿಸ್ವಾರ್ಥ ಸೇವೆಯ ದ್ಯೋತಕವಾಗಿ ಮುಂಬಯಿಯ ‘ಹಾಫ್ಕಿನ್ಸ್ ಇನ್ಸ್ಟಿಟ್ಯೂಟ್’ (ಮುಂಚಿನ ಪ್ಲೇಗ್ ಪ್ರಯೋಗಾಲಯ) ಇಂದಿಗೂ ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯನಿರತವಾಗಿದೆ. ಈಗ ಹಂದಿಜ್ವರದ ವೈರಸ್ ಪರೀಕ್ಷೆ ನಡೆಸುವ ಕೆಲವೇ ಕೆಲವು ಕೇಂದ್ರಗಳಲ್ಲಿ ಅದೂ ಒಂದಾಗಿದೆ.

   ಆಲ್ಬರ್ಟ್ ಬ್ರೂಸ್ ಸ್ಯಾಬಿನ್; (೧೯೦೬-೧೯೯೩) 



   ಈ ರಶಿಯನ್ ಸಂಜಾತ ಅಮೆರಿಕನ್ ವೈದ್ಯ ಎಳವೆಯಲ್ಲೇ ಅಮೆರಿಕಕ್ಕೆ ವಲಸೆ ಬಂದು ನೆಲೆಸಿದವರು. ಅಲ್ಲಿಯೇ ವೈದ್ಯಕೀಯ ವಿದ್ಯಾಭ್ಯಾಸ ಪಡೆದು ಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿರ್ವಹಣೆಯ ಕುರಿತಾಗಿ  ಕೆಲಸ ಮಾಡುತ್ತಿದ್ದರು. ಆಗೆಲ್ಲ ಅಮೆರಿಕದಲ್ಲಿ ಎಳೆಯ ಮಕ್ಕಳನ್ನೇ ಹೆಚ್ಚಾಗಿ ಬಾಧಿಸುವ ಹಾಗೂ ಕೆಲವರನ್ನು ಖಾಯಂ ಅಂಗವಿಕಲರನ್ನಾಗಿ ಕಾಡುವ ಪೋಲಿಯೋ ಒಂದು ಪಿಡುಗಾಗಿತ್ತು. ಪೋಲಿಯೋಗೆ ಲಸಿಕೆ ಕಂಡುಹಿಡಿಯಲು ಪ್ರಯೋಗಗಳು ನಡೆಯುತ್ತಿದ್ದವು. ಅಂಥ ಸಮಯದಲ್ಲೇ ಸಾಕ್ ಎಂಬ ವೈದ್ಯವಿಜ್ಞಾನಿ, ಕೊಲ್ಲಲ್ಪಟ್ಟ ಪೋಲಿಯೋ ವೈರಸ್ಸಿನಿಂದ ತಯಾರಿಸಲಾದ ಲಸಿಕೆಯೊಂದನ್ನು ಕಂಡುಹಿಡಿದರು. ಅದನ್ನು ಚುಚ್ಚುಮದ್ದಿನ ರೂಪದಲ್ಲಿ ಕೊಡಬೇಕಾಗಿತ್ತು. ಏಕೋ ಆ ಲಸಿಕೆಯ ಬಗ್ಗೆ ಮೊದಲಿನಿಂದ ಭಿನ್ನಾಭಿಪ್ರಾಯ ಹೊಂದಿದ್ದ ಸ್ಯಾಬಿನ್ ಬಾಯಿಯ ಮುಖಾಂತರ ನೀಡಬಲ್ಲಂತಹ, ಜೀವವಿರುವ ವೈರಸ್ಸುಗಳನ್ನೇ ಹೊಂದಿರುವ ಲಸಿಕೆಯೊಂದನ್ನು ಸಂಶೋಧಿಸಿದರು. ಲಸಿಕೆಯಲ್ಲಿ ವೈರಸ್ಸುಗಳು ಜೀವಂತ ಇದ್ದರೂ ಅವುಗಳ ಕಾಯಿಲೆ ಉಂಟುಮಾಡುವ ಶಕ್ತಿಯನ್ನು ಕ್ಷೀಣಗೊಳಿಸಿ, ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಮಾತ್ರ  ಬೆಳೆಸುವ ಹಾಗೆ ತಯಾರುಮಾಡಲಾಗಿತ್ತು. ಮೊದಲು ತಮ್ಮ ಎಳೆಯ ಮಕ್ಕಳಿಗೇ ಅದನ್ನು ಪ್ರಯೋಗಿಸಿದ ಸ್ಯಾಬಿನ್, ೧೯೫೫ರಿಂದ ೬೦ರವರೆಗೆ ರಶಿಯಾ, ಸಿಂಗಪುರ, ಮೆಕ್ಸಿಕೋ, ಯೂರೋಪು ಮುಂತಾದ ಕಡೆ ಲಸಿಕೆಯನ್ನು ಪರೀಕ್ಷಿಸಿದರು. ಅಂತೂ ಕೊನೆಗೆ ೧೯೬೨ರಲ್ಲಿ ಅದು ಸುರಕ್ಷಿತವೆಂದು ಅಮೆರಿಕದಲ್ಲಿ ಬಿಡುಗಡೆಯಾಗುತ್ತದೆ. ನಂತರ ವಿಶ್ವ ಆರೋಗ್ಯ ಸಂಸ್ಥೆಯೂ ಅದನ್ನು ಮಾನ್ಯಮಾಡುತ್ತದೆ.

     ಈಗ ಪ್ರಪಂಚದ ಬಹುತೇಕ ದೇಶಗಳಲ್ಲಿ ಈ ಬಾಯಿಲಸಿಕೆ ನೀಡಿ ಪೋಲಿಯೋ ಬೇನೆ ನಿರ್ಮೂಲನೆ ಮಾಡಲಾಗಿದೆ. ವಿಶ್ವಾದ್ಯಂತ ಕೇವಲ ನಾಲ್ಕು ದೇಶಗಳಲ್ಲಿ ಪೋಲಿಯೋ ಉಳಿದಿದೆ. ಅವೆಂದರೆ ನೈಜೀರಿಯಾ, ಭಾರತ, ಪಾಕಿಸ್ತಾನ, ಹಾಗೂ ಆಫ್ಘನಿಸ್ತಾನ. ಕ್ರಿ.ಶ ೨೦೦೦ನೇ ಇಸವಿಗೇ ಪೋಲಿಯೋ ನಿರ್ಮೂಲನೆ ಮಾಡುವ ಗುರಿ ಹೊತ್ತು ವಿಶ್ವಾದ್ಯಂತ ಸರ್ಕಾರಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಬಹುವಾಗಿ ಪ್ರಯತ್ನಿಸಿದ ಫಲವಾಗಿ ಪೋಲಿಯೋ ಸಂಪೂರ್ಣವಾಗಿ ನಿರ್ಮೂಲನೆಯಾಗದಿದ್ದರೂ ಇಂದು ಕೈಬೆರಳೆಣಿಕೆಯಷ್ಟು ಪೋಲಿಯೋ ಕೇಸುಗಳು ಸಿಗುತ್ತಿವೆ. ಮುಂದೊಮ್ಮೆ ಪೋಲಿಯೋ ನಿರ್ಮೂಲನೆಯಾದರೆ ಅದರ ಸಿಂಹಪಾಲು ಯಶಸ್ಸು ಸ್ಯಾಬಿನ್ನರಿಗೇ ಸಲ್ಲುತ್ತದೆ.

   ವಿಪರ್ಯಾಸವೆಂದರೆ ೧೯೮೩ರಲ್ಲಿ ಸ್ಯಾಬಿನ್ನರಿಗೇ ಪೋಲಿಯೋ ತಗುಲಿ ಅಂಗವಿಕಲರಾದರು. ದಣಿವರಿಯದ ಈ ವಿಜ್ಞಾನಿ ೧೯೯೩ರಲ್ಲಿ, ತಮ್ಮ ೮೭ನೇ ವಯಸ್ಸಿನಲ್ಲಿ ತೀರಿಕೊಂಡರು.

       



No comments:

Post a Comment