Monday 14 July 2014

ಇದು ಕತೆಯಲ್ಲ: ಸಿಝೋಫ್ರೇನಿಯಾ..




ಕೆಲ ವ್ಯಕ್ತಿಚಿತ್ರಗಳು ಮರೆಯಲಾರದಂತೆ ನೆನಪಲ್ಲಿ ಉಳಿದುಬಿಟ್ಟಿವೆ.

ಅವನ ಹೆಸರು ಬಸ್ಲಿಂಗಪ್ಪ. ಸದಾ ಫುಲ್ ಡ್ರೆಸ್‌ನಲ್ಲಿರುತ್ತಿದ್ದ, ಆತನ ವಿರಳ ಬಿಳಿ ತಲೆಕೂದಲು ಬೆವರು, ಎಣ್ಣೆ, ಧೂಳು ಸೇರಿ ಮಂಕಾಗಿರುತ್ತಿದ್ದವು. ಅವನ ಚರ್ಮ, ಬಟ್ಟೆ ತಮ್ಮ ಮೇಲಿನ ನಾನಾ ಕಲೆ, ಗುರುತುಗಳಿಂದ ತೊಳೆದು ತಿಂಗಳುಗಟ್ಟಲೆ ಆಗಿದೆಯೆಂದು ತಿಳಿಸುತ್ತಿದ್ದವು. ಕೈಲೊಂದು ಕೋಲು ಹಿಡಿದು ತಲೆ ತಗ್ಗಿಸಿಕೊಂಡು ಪಿಟಿಪಿಟಿ ನಡೆಯತೊಡಗಿದನೆಂದರೆ ಯಾವುದೋ ತುರ್ತು ಕೆಲಸಕ್ಕೆ ಹೊರಟಂತೆ ಕಾಣುತ್ತಿತ್ತು. ಒಂದೊಂದು ಕಾಲಿಗೆ ಒಂದೊಂದು ತೆರನ ಚಪ್ಪಲಿ-ಬೂಟು ಧರಿಸಿ, ವಿಶಿಷ್ಟ ಕಮಟು ನಾತ ಬೀರುತ್ತ ಓಡುತ್ತಿದ್ದ ಆತನ ಗಾಡಿ ಇದ್ದಕ್ಕಿದ್ದಂತೆ ನಿಂತಿತೆಂದರೆ ಅವನು ನಮ್ಮ ಮನೆ ಮುಂದೆ ಅಥವಾ ಶಾಲೆ ಮುಂದೆ ಇದ್ದಾನೆ ಅಥವಾ ತಲೆಯೆತ್ತಿ ಆಕಾಶ ನೋಡುತ್ತ ಗಹಗಹಿಸಿ ನಗುವಂಥದೇನೋ ಅವನಿಗೆ ಹೊಳೆದಿದೆ ಎಂದೇ ಅರ್ಥ.

ನಾನಾಗ ಆರನೆತ್ತೆ ಕಲಿಯುತ್ತಿದ್ದೆ. ಬಸ್ಲಿಂಗಪ್ಪನೆಂದರೆ ಒಂಥರಾ ಭಯ, ಒಂಥರಾ ಕುತೂಹಲ. ಬೊಗಳತೊಡಗುವ ನಾಯಿಗಳ ಗಲಾಟೆಯಿಂದ ಅವನು ಬಂದನೆಂದು ತಿಳಿಯುತ್ತಿತ್ತು. ಒಮ್ಮೊಮ್ಮೆ ‘ಹ..ಚಾ’ ಎಂದು ತನ್ನದೇ ಶೈಲಿಯಲ್ಲಿ ಕೂಗುತ್ತ ಬಂದು ನಮ್ಮ ಜಗಲಿ ಮೇಲೆ ಆಸೀನನಾಗಿ ಏನಾದರೂ ಸದ್ದು ಮಾಡಿ ಅಮ್ಮನನ್ನು ಕರೆಯುತ್ತಿದ್ದ. ಅದು ಬೆಳಗು ಅಥವಾ ಬೈಗಿನ ಸಮಯವಾಗಿರುತ್ತಿತ್ತು. ಬೆಳಗಾದರೆ ಅಮ್ಮ ಸ್ವಲ್ಪ ತಿಂಡಿ ಕೊಡುತ್ತಿದ್ದಳು. ಬೈಗಾದರೆ ಒಂದು ಗೆರೆ ಸೋಪು ಕೊಟ್ಟು ಸ್ನಾನ ಮಾಡಿ ಬಾ, ಊಟ ಮಾಡುವಂತೆ ಎಂದೋ; ಅಣ್ಣನ ಹಳೆಯ ಪ್ಯಾಂಟುಶರಟು ಕೊಟ್ಟು ಬಟ್ಟೆ ತೊಳಕೊಂಡು ಬಾ ಎಂದೋ ಕಳಿಸುತ್ತಿದ್ದಳು. ಒಂದೆರೆಡು ಬಾರಿ ಹರಿಯುವ ವರದೆಯಲ್ಲಿ ಗಂಟೆಗಟ್ಟಲೆ ಮಿಂದು ಶುಭ್ರನಾಗಿ ಬಂದಿದ್ದ. ಉಳಿದಂತೆ ಕೊಟ್ಟ ಸೋಪನ್ನೂ, ತಿಂಡಿಯನ್ನೂ ಒಟ್ಟಿಗೇ ಕೋಟಿನ ಕಿಸೆಗೆ ತುರುಕಿ ಇವರ ಸಾವಾಸ ಸಾಕೆಂಬಂತೆ ಮುಖಮಾಡಿ ನಡೆಯುತ್ತಿದ್ದ.

ಮನೆ ಮುಂಬಾಗಿಲಿಂದ ಒಳಗಿಣುಕಿ ಒಂದೇ ಕೋಣೆಯ ಆ ಪುಟ್ಟ ಮನೆಯಲ್ಲಿ ನಾವು ಓದಿಕೊಳ್ಳುತ್ತಿರುವುದು ಕಂಡು ಮಾತಿಗೆಳೆಯುತ್ತಿದ್ದ. ಊರ ಜಾತ್ರೆಯಲ್ಲಿ ಸ್ವಾಮಿಗಳಿಂದ ಭೇಷೆನಿಸಿಕೊಂಡ ಗುರುತಿಟ್ಟುಕೊಂಡು, ‘ನೀ ಶ್ಯಾಣಿ ಅಂತಾರ ಮಂದಿ, ಹಂಗಾರ ನನ್ ಪ್ರಶ್ನೆಗೆ ಉತ್ತರ ಹೇಳು’ ಎನ್ನುತ್ತ ಒಗಟೊಂದನ್ನು ಎಸೆಯುತ್ತಿದ್ದ. ಅವನೆದುರು ನನ್ನ ಶ್ಯಾಣೇತನ ಕರಗಿ ನೀರಾಗುತ್ತಿತ್ತು ಎಂದು ಬೇರೆ ಹೇಳಬೇಕಿಲ್ಲ.

ಮಾತಾಡುತ್ತ ಆಡುತ್ತ ಒಮ್ಮೊಮ್ಮೆ ಹಡೆ ಪದ, ಸಾಲು, ಪದ್ಯಗಳನ್ನು ಸಟಕ್ಕನೆ ಹೇಳಿಬಿಡುತ್ತಿದ್ದ.

‘ಕಾರು ಭರ್ ಭರ್ ಭರ್
ಮೋಟರು ಟರ್ ಟರ್ ಟರ್
ಅವರೆಕಾಳು ತಿಂದೋರ ಮುಕಳಿ ಢರರರರರ..’

ಹೀಗೆ ಹೇಳಿ ಗಹಗಹಿಸಲು ಮೊದಲು ಮಾಡಿದರೆ ಎಷ್ಟೊತ್ತಾದರೂ ಅವನ ನಗು ನಿಲ್ಲುತ್ತಿರಲಿಲ್ಲ. ಕಟಬಾಯಿಯಲ್ಲಿ ಎಂಜಲು ನೊರೆ ಕೆಳಗಿಳಿದು ಸೋರುತ್ತಿದ್ದರೂ ಲೆಕ್ಕಿಸದೆ ನಾನ್‌ಸ್ಟಾಪ್ ಮಾತಾಡುತ್ತಿದ್ದವ ನಗೆ ಶುರುವಾದಾಗಲೇ ಮಾತು ನಿಲ್ಲಿಸುತ್ತಿದ್ದಿದ್ದು.

‘ಎಂಟು ಟ ಸೇರಿದವನು ಜಂಟಲ್ ಮ್ಯಾನ್. ಎಂಟು ಟ ಯಾವುವು?’ ಇದು ಅವನ ಒಂದು ಪ್ರಶ್ನೆ. ಕಾದುಕಾದು ಕೊನೆಗೆ, ‘ಪ್ಯಾಂಟ ಬೂಟ ಶರಟ ಜ್ಯಾಕೇಟ ಕೋಟ ಹ್ಯಾಟ ಸೆಂಟ ಕೈಯಾಗೊಂದು ಲಕ್ಷ್ಮೀ ಬ್ರಾಂಡ ಸಿಗರೇಟ’ ಎಂದು ತನ್ನ ವಿವರಣೆ ಮುಗಿಸಿ ಎದ್ದು ನಡೆಯುತ್ತಿದ್ದ. ಕೆಲವೊಮ್ಮೆ ಅವನ ಹರಕು ಚೀಲದಿಂದ ಮುದುರಿ ಮುದ್ದೆಯಾಗಿದ್ದ ನಾನಾಭಾಷೆಯ ನ್ಯೂಸ್ ಪೇಪರುಗಳನ್ನು ತೆಗೆದುಕೊಟ್ಟು ‘ಹಂಗಾರ ಇವನ ಓದು ನೋಡತೇನಿ’ ಎನ್ನುತ್ತಿದ್ದ. ಲಿಪಿ ಯಾವುದೆಂದೇ ತಿಳಿಯದ ಅಕ್ಷರಗಳು ನನ್ನಲ್ಲಿ ಗಾಬರಿ ಹುಟ್ಟಿಸುತ್ತಿರುವಾಗಲೇ ‘ನೀನೆಂಥಾ ಶಾಣ್ಯಾಕಿ ಆದಂಗಾತು?’ ಎಂದು ಅಣಕಿಸಿ ತಾನು ಅದನ್ನು ಓದತೊಡಗುತ್ತಿದ್ದ. ಅವನು ಸುಳ್ಳುಸುಳ್ಳೇ ಓದುತ್ತಿದ್ದನೋ, ನಿಜಕ್ಕೂ ಆ ಭಾಷೆ ಬರುತ್ತಿತ್ತೋ, ಆ ಪತ್ರಿಕೆಗಳನ್ನು ಎಲ್ಲಿಂದ ಸಂಗ್ರಹಿಸಿದನೋ ಯಾರಿಗೂ ಗೊತ್ತಿಲ್ಲ. ನನಗಂತೂ ಅವನ ಶ್ಯಾಣೇತನದ ಬಗ್ಗೆ ಯಾವ ಅನುಮಾನವೂ ಇರಲಿಲ್ಲ.

ಎಲ್ಲರಂತೆ ಏಕವಚನದಲ್ಲಿ ಸಂಬೋಧಿಸಿದರೂ ಆತನ ವಯಸ್ಸಿಗೆ ತಕ್ಕಂತೆ ಬಹುವಚನದಲ್ಲಿ ಮಾತಾಡಬೇಕಲ್ಲವೆ ಎಂಬ ಗೊಂದಲ ಮೂಡಿಸುತ್ತಿದ್ದ ಆ ವ್ಯಕ್ತಿ  ಹುಚ್ಚು ಬಸ್ಲಿಂಗಪ್ಪ. ಅದು ಅವನ ಹೆಸರೋ ಅಥವಾ ಹೆಸರೇ ನೆನಪಿಲ್ಲದವನಿಗೆ ಊರ ಜನ ಇಟ್ಟ ಹೆಸರೋ ಗೊತ್ತಿಲ್ಲ. ಅವ ತುಂಬ ಜಾಣನಾಗಿದ್ದನಂತೆ. ತುಂಬ ಓದಿ ಬೊಂಬಾಯಲ್ಲೋ, ಗುಜರಾತಲ್ಲೋ ಕೆಲಸ ಮಾಡುತ್ತಿದ್ದನಂತೆ. ಅವನ ಹೆಂಡತಿ ಯಾರ ಜೊತೆಗೋ ಓಡಿಹೋದ ಮೇಲೆ ಹೀಗಾದನಂತೆ - ಎಂದೆಲ್ಲ ಊಹಾಪೋಹಗಳು ಅವನ ಬಗ್ಗೆ ಹಬ್ಬಿದ್ದವು. ಅವನು ಮಾತ್ರ ಕೇಳಿದ ಯಾವ ಪ್ರಶ್ನೆಯನ್ನೂ ಅರ್ಥ ಮಾಡಿಕೊಂಡು ಉತ್ತರಿಸಿದವನಲ್ಲ. ಮೂರೋ ಆರೋ ತಿಂಗಳಿಗೊಮ್ಮೆ ನಮ್ಮೂರಿಗೆ ಬರುತ್ತಿದ್ದವ ಬಂದರೆ ಹತ್ತು ಹದಿನೈದು ದಿನ ಅಲ್ಲಿಲ್ಲಿ ತಂಗಿ ನಂತರ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿದ್ದ. ಮತ್ತೆ ಬರುವವರೆಗೂ ಅವನ ಇಲ್ಲದಿರುವಿಕೆ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ.

ನಾನು ಕೈಗೆ ಸಿಕ್ಕಿದ್ದನ್ನೆಲ್ಲ ಓದುವುದು ಕಂಡು ಅಮ್ಮ, ‘ಸಿಕ್ಕಾಪಟ್ಟೆ ಓದಬೇಡ, ಹುಚ್ಚು ಹಿಡಿಯುತ್ತೆ ಅಷ್ಟೆ’ ಎಂದು ಹೆದರಿಸುತ್ತಿದ್ದಳು. ಏನೇನೋ ವಿಚಾರಗಳು ತಲೆ ತುಂಬಿಕೊಂಡಾಗ ನನಗೂ ಒಮ್ಮೊಮ್ಮೆ ‘ಬಸ್ಲಿಂಗಪ್ಪನಂತೆ ಹುಚ್ಚು ಹಿಡಿದುಬಿಟ್ಟರೆ’ ಎಂಬ ಹೆದರಿಕೆಯಾಗುತ್ತಿತ್ತು.

ನಂತರ ನಾನು ಊರು ಬಿಟ್ಟೆ. ಹುಚ್ಚಿನ ಹೆದರಿಕೆ ಬಿಟ್ಟಿತು. ಆದರೆ ಅವ ಏನಾದನೋ?

***

ಈಗಲೂ ಆಕೆ ಹೆಣ್ಣು, ಹೆಣ್ತನ ಕುರಿತ ಭೀಭತ್ಸಗಳನ್ನೆಲ್ಲ ನೆನಪಿಸುತ್ತಾಳೆ..

ಬಸ್ಲಿಂಗಪ್ಪನ ಸಮಕಾಲೀನಳಾಗಿ ಆಕೆ ಬರುತ್ತಿದ್ದಳು. ಅವಳೂ, ಬಸ್ಲಿಂಗಪ್ಪನೂ ಎದುರಾದರೆ ಹೇಗಿರಬಹುದು ಎಂಬ ಮಾತು ಆವಾಗೀವಾಗ ನಮ್ಮ ಮಾತಿನಲ್ಲಿ ಸುಳಿಯುತ್ತಿತ್ತು. ಆದರೆ ಎಂದೂ ಹಾಗಾಗಲಿಲ್ಲ.

ಅದು ಲಿಂಗ ಮರೆತ ಉತ್ತುಂಗ ಸ್ಥಿತಿಯೋ, ಲಿಂಗವಿಲ್ಲದ ಶೈಶವವೋ? ತಾನುಟ್ಟ ಬಟ್ಟೆ, ಕಾಯಿಲೆ, ಹಸಿವು-ನಿದ್ರೆ-ಬಾಯಾರಿಕೆ ಯಾವುದೂ ಅರಿವಾಗದಂಥ ಸ್ಥಿತಿಯಲ್ಲಿದ್ದ ಆಕೆ ತನ್ನನ್ನು ಹೆಣ್ಣು ಎಂದು ತಿಳಿದಂತಿರಲಿಲ್ಲ. ನಮಗಾದರೂ ಆಕೆ ಹೆಣ್ಣೆಂದು ನೆನಪಾಗುತ್ತಿದ್ದಿದ್ದು ಜಡೆಗಟ್ಟಿದ ಕೂದಲು, ಜೋತು ಬಿದ್ದ ನಗ್ನ ಮೊಲೆಗಳನ್ನು ನೋಡಿದಾಗ ಅಲ್ಲ. ಬದಲಾಗಿ ಎರಡು ಕಾಲುಗಳ ನಡುವೆ ನೇತಾಡುವ ಅಂಗದಿಂದ ರಕ್ತಸ್ರಾವವಾಗಿ ಅವಳ ಹಿಂಭಾಗದ ಸೀರೆ ಕಂದು ಕಲೆಯಾಗಿರುವುದನ್ನು ಕಂಡಾಗ.

ನಡುಹರೆಯ ಮೀರಿದ ಅವಳು ಎಲ್ಲಿಯವಳೋ, ಯಾರ ಬಂಧುವೋ ಯಾರಿಗೂ ಗೊತ್ತಿಲ್ಲ. ಅವಳ ಮಕ್ಕಳು, ಸಂಸಾರದ ಬಗ್ಗೆ ಕೂಡಾ ತಿಳಿದಿರಲಿಲ್ಲ. ಅವಳನ್ನು ಆದಷ್ಟು ಬೇಗ ಊರಿನಿಂದ ಹೊರಕಳಿಸಲು ಕೆಲವು ಹೆಂಗಸರು, ಮುದುಕರು ಪ್ರಯತ್ನಿಸಿ ಕೋಲು ಹಿಡಿದು ಬೆರಸುತ್ತಿದ್ದರು. ಮೂರು ತಿಂಗಳಿಗೋ, ಆರು ತಿಂಗಳಿಗೋ ಒಮ್ಮೆ ಬರುತ್ತಿದ್ದ ಆಕೆ ತನ್ನ ಅಲೆಮಾರಿ ಹಾದಿಯಲ್ಲಿ ಒಂದಷ್ಟು ದಿನ ಒಂದು ಕಡೆ ತಂಗಿ ಮತ್ತೆ ಕಾಲು ಎಳೆದತ್ತ ನಡೆದುಬಿಡುತ್ತಿದ್ದಳು. ಹೀಗೆ ನಮ್ಮ ಹಳ್ಳಿಗೆ ಐದಾರು ಬಾರಿ ಬಂದದ್ದಿರಬಹುದು ಅಷ್ಟೆ. ಆದರೆ ತನ್ನ ದೇಹ, ಕಾಯಿಲೆಯ ಅರಿವೇ ಇರದ ಆ ನಡುವಯಸ್ಸಿನ ಮಹಿಳೆಯ ಮೇಲೆ ಅವಳ ಗರ್ಭಕೋಶ ಜಾರಿ ಕಾಲ ನಡುವೆ ನೇತಾಡುತ್ತಿದ್ದರೂ ಲೆಕ್ಕಿಸದೆ ಲೈಂಗಿಕ ದೌರ್ಜನ್ಯ ನಡೆಯುತ್ತಿತ್ತು ಎಂಬ ಸುದ್ದಿ ಹರಿದಾಡುತ್ತ ಕಿವಿ ತಲುಪಿದಾಗ ಸಿಟ್ಟು, ವಾಕರಿಕೆ, ಭಯ ಎಲ್ಲ ಒತ್ತೊತ್ತಿ ಬರುವಂತಾಗುತ್ತಿತ್ತು.

ಆ ಜೀವ ಗೊಣಗುಡುವುದು ಬಿಟ್ಟರೆ ಪ್ರತಿಕ್ರಿಯೆಯಾಗಿ ಒಂದು ಮಾತು ಆಡಿದ್ದನ್ನು ಯಾರೂ ಕೇಳಲಿಲ್ಲ. ಯಾರ ಮನೆ ಮುಂದೆ ನಿಂತೂ ಬೇಡುತ್ತಿರಲಿಲ್ಲ. ಅವಳೆದುರು ಇಟ್ಟದ್ದನ್ನು ಬಾಯಿ ಹರಿದುಹೋಗುವಂತೆ ತುರುಕಿಕೊಳ್ಳುತ್ತಿದ್ದಳು. ಹಸಿವಾದದ್ದೂ ಗೊತ್ತಾಗುವುದಿಲ್ಲ ಎಂದರೆ ಹುಚ್ಚು ಎಂದರೆ ಹೇಗಿರಬಹುದು ಎಂದು ತುಂಬ ಭಯವಾಗುತ್ತಿತ್ತು. ಆದರೆ ಅವಳಿಗೆ ಯಾವ, ಯಾರ ಭಯವೂ ಇದ್ದಂತಿರಲಿಲ್ಲ. ಅವಳಿಗೆ ಹಗಲು-ರಾತ್ರಿಗಳಿರಲಿಲ್ಲ. ನಿದ್ರೆ-ಎಚ್ಚರಗಳಿರಲಿಲ್ಲ. ಕನಸು-ಅವಮಾನಗಳಿರಲಿಲ್ಲ. ಸಿಟ್ಟು-ಸುಖದುಃಖಗಳಿರಲಿಲ್ಲ. ಗುರುತು-ಹೆಸರಿರಲಿಲ್ಲ. ಪ್ರಾಣಿಗಳಂತೆ ಅಥವಾ ಯಾವ ಬದುಕಿನೊಂದಿಗೂ ಹೋಲಿಸಲಾಗದಂತೆ ಬಾಳಿ ಸವೆದ ಆ ಜೀವ ಕೊನೆಗೆ ಏನಾಗಿ, ಎಲ್ಲಿ ಪ್ರಾಣ ಬಿಟ್ಟಿತೋ?

ತಿಳಿಯಲೇ ಇಲ್ಲ.

***

ತಲೆಗೊಂದು ತುಂಡು, ಮೈಗೊಂದು ಮುಂಡು ಸುತ್ತಿಕೊಂಡು ತನಗಿಂತ ದೊಡ್ಡ ಗಂಟು ಹೊತ್ತು ಅವಳು ಕ್ಲಿನಿಕ್ಕಿಗೆ ಬಂದರೆ ಒಂದು ಗಂಟೆ ಕಾಲ ನನಗೆ ಪುಕ್ಕಟೆ ಆಶೀರ್ವಾದ. ವಯಸ್ಕನೊಬ್ಬ ಕಲ್ಲು ಹೊಡೆದು ಅವಳನ್ನು ರೇಗಿಸಿದ್ದು, ಸ್ವಲ್ಪವೇ ಗಾಯಗೊಂಡರೂ ಆ ಇಡೀ ಊರಿಗೆ ಶಾಪ ಹಾಕಿ ಆಕೆ ಕೂಗಾಡಿದ್ದು ಎಲ್ಲವನ್ನು ಕಣ್ಣಾರೆ ಕಂಡಿದ್ದೆನಾಗಿ ಅವಳ ಮೇಲೊಂದು ಮರುಕವಿತ್ತು. ಅವಳು ಎಲ್ಲಿಯವಳು, ಬಂಧುಗಳಾರು ಎಂದು ತಿಳಿಯಲು ವಿಫಲ ಯತ್ನ ನಡೆಸಿದ್ದೆ. ಒಂದೆರೆಡು ಸಲ ಸೀರೆ, ಸ್ವಲ್ಪ ಕಾಸು, ಮದ್ದು ಕೊಟ್ಟು ಕಳಿಸಿದ್ದೆ. ಕೊನೆಗೆ ಅವೆಲ್ಲಕ್ಕಿಂತ ಒಂದು ಕವಳ, ಹೊಟ್ಟೆಗಷ್ಟು ಏನಾದರೂ ಕೊಟ್ಟರೆ ಅದೇ ಹೆಚ್ಚು ಉಪಯುಕ್ತ ಎಂದು ತಿಳಿದುಕೊಂಡಿದ್ದೆ.

ಅವಳಿಗೆ ಅವಶ್ಯವೋ, ಇಲ್ಲವೋ ಒಂದು ಇಂಜೆಕ್ಷನ್ ಹಾಕಿ ಎಂದು ಟೇಬಲ್ ಹತ್ತಿಬಿಡುತ್ತಿದ್ದಳು. ಕವಳ ಜಗಿಜಗಿದು ಕಂದು ಹತ್ತಿದ ಅಷ್ಟೂ ಹಲ್ಲು ತೋರಿಸಿ ಗಹಗಹಿಸಿ ನಗುತ್ತಿದ್ದಳು. ಕೆಲವೊಮ್ಮೆ ಮೌನವಾಗಿ ಕುತ್ತಿಗೆ ಕೊಂಕಿಸಿ ತಿವಿದುಬಿಡುವಂತೆ ನೋಡುತ್ತಿದ್ದಳು. ಕೆಲವರಿಗೆ ಅವಳ ಮೇಲೆ ಹೆದರಿಕೆ. ಇಡೀ ಹಣೆಗೆ ಕುಂಕುಮ ಬಳಿದುಕೊಂಡ ಅವಳ ಮೈಯಲ್ಲಿ ಈ ಸುತ್ತುಮುತ್ತಲ ಊರ ದೆವ್ವಗಳೆಲ್ಲ ಸೇರಿಕೊಂಡಿವೆ ಎಂದು ಭಾವಿಸಲಾಗಿತ್ತು. ಅವಳನ್ನು ಒಳಬಿಟ್ಟುಕೊಳ್ಳಬೇಡಿ, ಚಲೋದಲ್ಲ ಎಂಬ ಸಲಹೆಗಳು ಬಂದಿದ್ದವು.

ಅವಳೋ ಮಂತ್ರದ ಧಾಟಿಯಲ್ಲೇ ಗೊಣಗೊಣಮಣಮಣ ಅನ್ನುತ್ತ ಕೊನೆಗೆ ಕೈಲಿರುವ ಸೊಪ್ಪನ್ನು ನನ್ನ ತಲೆ ಮೇಲೆ ಹಾಕಿ, ತನ್ನ ಚೀಲದಿಂದ ಕುಂಕುಮ ತೆಗೆದು ಹಣೆ ತುಂಬ ಬಳಿದು, ಕೋಲಿನಿಂದ ಆಸ್ಪತ್ರೆಯ ಸಂದು ಮೂಲೆ ತಟ್ಟಿ ಹೋಗುತ್ತಿದ್ದಳು. ಅಸ್ತಮಾ ಪೇಶೆಂಟಾದ ಆಕೆ ಏದುಸಿರು ಬಿಡುತ್ತ ನಡೆದು ಬರುವುದು, ಕೆಮ್ಮಿಕೆಮ್ಮಿ ಉಸಿರುಕಟ್ಟಿ ಒದ್ದಾಡುವುದು ನೋಡಲಾಗದೇ ಮೊದಲ ಸಲ ಬಂದಾಗ ಔಷಧಿ ಕೊಟ್ಟು ಕಳಿಸಿದ್ದೆ. ಮತ್ತೊಮ್ಮೆ ಬಂದಾಗ ನಾನೇ ಕೆಮ್ಮಿದೆನೆಂದು ತನ್ನ ಚೀಲದೊಳಗಿಂದ ಅದೇ ಬಾಟಲಿ ತೆಗೆದು ನನಗೇ ಕೊಟ್ಟಳು! ಇದು ಅವಳು ಕಲಿಸಿದ ಪಾಠ. ಜೀವ ಮತ್ತೆಮತ್ತೆ ಕಲಿಸುತ್ತಿರುವ ಪಾಠ..

ಗುಣಪಡಿಸುವ ಮೊದಲು ನಮ್ಮ ಕಾಯಿಲೆ ನಾವು ಗುಣಪಡಿಸಿಕೊಳ್ಳಬೇಕು!

***

ಮೆಡಿಕಲ್ ಕಾಲೇಜಿನ ಹಾಸ್ಟೆಲಿನಲ್ಲಿ ನಮ್ಮ ಬ್ಲಾಕಿನಲ್ಲೇ ಮೂವರು ಮಾನಸಿಕ ಅಸ್ವಾಸ್ಥ್ಯ ವಿದ್ಯಾರ್ಥಿನಿಯರಿದ್ದರು. ಚಿಕಿತ್ಸೆ ಮೇಲಿದ್ದರಾದರೂ ಒಂದಷ್ಟು ದಿನ ಸರಿಯಿದ್ದರೆ ಕೆಲವು ಕಾಲ ಅವರ ನಡೆನುಡಿಗಳು ‘ಅತಿ’ ಮುಟ್ಟುತ್ತಿದ್ದವು. ನಿಯಮಿತವಾಗಿ ಔಷಧಿ ತೆಗೆದುಕೊಳ್ಳುತ್ತಿದ್ದರೋ ಇಲ್ಲವೋ ಎಂದು ಕೇಳುವಂತಿರಲಿಲ್ಲ, ಏಕೆಂದರೆ ಅವರು ನಮ್ಮ ಸೀನಿಯರ್‌ಗಳಾಗಿದ್ದರು. ಒಬ್ಬಾಕೆ ನನ್ನ ರೂಂ ಮೇಟ್ ಆಗಿದ್ದಾಕೆ. ಅವಳಿಗೆ ತನ್ನ ಕ್ಲಾಸ್‌ಮೇಟ್ ಒಬ್ಬನ ಮೇಲೆ ಹುಚ್ಚು ವ್ಯಾಮೋಹ. ಆದರೆ ಅದು ಒನ್‌ವೇ ಪ್ರೇಮ. ಅತಿ ಪೊಸೆಸಿವ್‌ನೆಸ್. ಅವನು ಯಾರೊಡನೆಯೂ ಮಾತಾಡುವಂತಿಲ್ಲ. ಅವನೊಡನೆ ಬೇರೆಯವರೂ ಮಾತಾಡುವಂತಿಲ್ಲ. ಒಮ್ಮೆ ಅವನ ಜೊತೆ ಮತ್ಯಾರೋ ಹುಡುಗಿ ಮಾತಾಡುವುದು ನೋಡಿ ರಸ್ತೆ ಮೇಲೇ ಜಗಳ ತೆಗೆದು ಗುದ್ದಾಡಿದ್ದಳು. ಭೂಮಿ ತಿರುಗುತ್ತಿರುವುದು, ಈ ಪ್ರಪಂಚ ನಡೆಯುತ್ತಿರುವುದು, ಮಳೆಬೆಳೆಸರ್ಕಾರ ಎಲ್ಲವೂ ಅವನಿಗಾಗೇ ಎಂಬ ಭಾವನೆ! ಉತ್ತರಭಾರತದ ಆಕೆಯ ಪಾಲಕರು ಬರುವ ತನಕ ರೂಮಿನಲ್ಲಿದ್ದ ನಮ್ಮ ತಲೆ ಚಟ್ನಿಯಾಗುತ್ತಿತ್ತು. ಇಂಥವಳೇ ಮತ್ತೊಬ್ಬಾಕೆಗೆ ಧ್ಯಾನದಿಂದ ಜಗತ್ತನ್ನೇ ಸರಿ ಮಾಡುವ ಆಸೆ. ರೂಮು ಬಾಗಿಲ ತಾಳ ಹಾಕಿ ಕುಳಿತರೆ ಗಂಟೆಗಟ್ಟಲೆ ಬಾಗಿಲು ತೆರೆಯುತ್ತಿರಲಿಲ್ಲ. ಒಮ್ಮೆ ಅವಳ ಧ್ಯಾನ ಒಂದು ದಿನ ದಾಟಿ ಅವಳ ರೂಂಮೇಟ್‌ಗಳು ವಾರ್ಡನ್‌ಗೆ ಹೇಳಿ ಬಾಗಿಲೊಡೆದು ಬೈಸಿಕೊಂಡಿದ್ದರು. ಮಗದೊಬ್ಬಾಕೆ ಹಾಸ್ಟೆಲಿನ ಸಣ್ಣಪುಟ್ಟ ಸಮಸ್ಯೆಗಳಿಗೂ ಸೀದಾ ಪ್ರೈಂ ಮಿನಿಸ್ಟರಿಗೇ ಕಾಗದ ಬರೆದು ಅಹವಾಲು ಸಲ್ಲಿಸುತ್ತಿದ್ದಳು. ಅವರುಗಳು ಸರಿಯಾದ ನಂತರವೂ ಅವರ ಹುಚ್ಚಾಟ ಕೆಲಕಾಲ ಜೋಕ್ ಆಗಿ ಚಾಲ್ತಿಯಲ್ಲಿರುತ್ತಿತ್ತು. ಅವರಿಗೇನನಿಸುತ್ತಿತ್ತೋ? ಯಾರು ಕೇಳಿದವರು?


***

ಹೀಗೆ ನಾವು ಅವರ ಅಸ್ತಿತ್ವವನ್ನು ಮರೆತೇಬಿಡುವ ಎಷ್ಟೊಂದು ಮಾನಸಿಕ ಅಸ್ವಸ್ಥತೆ/ಹುಚ್ಚು/ಸಿಝೋಫ್ರೇನಿಯಾ ಇರುವ ವ್ಯಕ್ತಿಗಳನ್ನು ನೋಡುತ್ತೇವಲ್ಲವೆ? ಎಷ್ಟೋ ಸಲ ಕತೆ ಬರೆಯ ಹೊರಟಾಗ ಅವರು ಪಾತ್ರಗಳಾಗಿ ನುಗ್ಗಿ ಬಂದದ್ದಿದೆ. ಆದರೆ ಅಂಥವರ ಕುರಿತು ಮನಮಿಡಿವ ಎಷ್ಟೊಂದು ಕತೆ, ಸಿನಿಮಾ ಎಲ್ಲ ಬಂದುಹೋಗಿವೆ. ಮತ್ತೆ ಕಥನ ವಸ್ತುವಾಗಿ ಅವರನ್ನು ಬಳಸಿಕೊಳ್ಳಬಾರದೆಂದು ಒತ್ತೊತ್ತಿ ಮುಂದೆ ಬರುವ ಅವರನ್ನು ಆಚೆ ಕಳಿಸಿದ್ದೆ. ಬರೆದು ಅವರಿಗಾಗುವುದಾದರೂ ಏನು ಎಂಬ ಪಾಪಪ್ರಜ್ಞೆಗೆ ಗೆರೆ ಎಳೆದುಕೊಂಡು ಕೂತಿದ್ದೆ.

ಮೊನ್ನೆ ಮಂಗಳೂರಿಗೆ ಹೋಗುವಾಗ ಸುರಿಯುವ ಮಳೆಯಲ್ಲೂ ಏನನ್ನೋ ಆಯ್ದು ತುಂಬಿಕೊಳ್ಳುವ ನಾಲ್ಕಾರು ಹುಚ್ಚರು ರಸ್ತೆ ಬದಿ ಕಾಣಿಸಿದರು. ಕರಾವಳಿಯ ಈ ಹೈವೇಗುಂಟ ಪಯಣಿಸಿದರೆ ಒಬ್ಬರಲ್ಲ ಒಬ್ಬರು ಕಣ್ಣಿಗೆ ಬೀಳುತ್ತಾರೆ. ನಮ್ಮೂರ ಜನ ಅವರನ್ನು ‘ಪಾಕಿಸ್ತಾನದ ಐಎಸ್ಸೈ ಗೂಢಚಾರರು, ಇಲ್ಲಿನ ಸುದ್ದಿ ತಿಳಿಸಲಿಕ್ಕೆ ಹೀಗೆ ವೇಷ ಮಾಡಿಕೊಂಡು ತಿರುಗುತ್ತಾರೆ’ ಎಂದು ಮಾತಾಡಿಕೊಳ್ಳುತ್ತಾರೆ. ಯಾವ ಪಾಕಿಸ್ತಾನವೋ, ಯಾವ ಗೂಢ ಚರ್ಯೆಯೋ, ತಮ್ಮ ಮೈಮೇಲೆ ದ್ಯಾಸವಿಲ್ಲದೆ ತಿರುಗುವ ಅವರನ್ನು ಅಂಥ ಪಾತ್ರಗಳಲ್ಲಿ ಕಲ್ಪಿಸಿಕೊಳ್ಳುವಂಥ ತರಬೇತಿ ಮನಸುಗಳಿಗೆ ಕೊಟ್ಟದ್ದು ಯಾವುದು ಎಂದು ಆತಂಕವಾಗುತ್ತ ಈ ಎಲ್ಲವನ್ನು ಬರೆಯಬೇಕೆನಿಸಿತು...

ಸಿಝೋಫ್ರೇನಿಯಾ



ನಾಳಿನ ಭಯದಿಂದ, ನಾಳೆಯೆಂಬ ಗುರಿಯಿಂದ ವ್ಯಕ್ತಿಯನ್ನು ಹುಚ್ಚುತನವು ವಿಮುಕ್ತಿಗೊಳಿಸುತ್ತದೆ. ಆದರೆ ಅಷ್ಟೇ ಅಲ್ಲ, ಅದು ಇವತ್ತಿನ ಶಕ್ತಿ, ಸಾಧ್ಯತೆಗಳನ್ನೂ ಬುಡಮಟ್ಟ ಹೀರಿಬಿಡುತ್ತದೆ. ಅವರಲ್ಲಿ ಚಿಂತನಾ ಪ್ರಕ್ರಿಯೆ ವಿಫಲವಾಗುತ್ತದೆ. ಸುತ್ತಮುತ್ತಲ ಆಗುಹೋಗುಗಳಿಗೆ ಸ್ಪಂದನ, ಭಾವುಕ ಪ್ರತಿಕ್ರಿಯೆ ನಾಶವಾಗುತ್ತದೆ. ಮಾತು-ಯೋಚನೆ-ಕ್ರಿಯೆಗಳು ಒಂದಕ್ಕೊಂದು ಸಂಬಂಧವಿಲ್ಲದೆ ಹೋಗುತ್ತವೆ. ದೈನಂದಿನ ಕ್ರಿಯೆಗಳ ಕುರಿತ ಗಮನವೂ ಕಡಿಮೆಯಾಗುತ್ತದೆ. ಯಾರಿಗೂ ಕಾಣದ್ದು ಕಾಣುತ್ತ, ಕೇಳದ್ದು ಕೇಳುತ್ತ ಒಂದು ತೆರನ ಭ್ರಮೆಯಲ್ಲಿ ತೇಲಿಸಿ ಮುಳುಗಿಸುತ್ತದೆ. ವಾಸ್ತವವನ್ನು ಅವರು ಬೇರೆಯೇ ಆಗಿ ಗ್ರಹಿಸುತ್ತಾರೆ. ವಿಶ್ಲೇಷಿಸುವ ಸಾಮರ್ಥ್ಯ ನಶಿಸುತ್ತದೆ. ಯಾರೋ ಬೈದಂತೆ, ತಮ್ಮನ್ನು ಕೊಲ್ಲಲು/ಜೈಲಿಗೆ ಹಾಕಲು/ಅಪಮಾನಿಸಲು ಹುನ್ನಾರ ಮಾಡುತ್ತಿರುವಂತೆ ಭ್ರಮೆ ಹುಟ್ಟುತ್ತದೆ. ಎಲ್ಲರನ್ನು ಅನುಮಾನಿಸುತ್ತಾರೆ. ಕಣ್ಣಿಗೆ ಏನೇನೋ ಕಾಣತೊಡಗುತ್ತದೆ. ಯಾರೋ ತನ್ನನ್ನು ನಿಯಂತ್ರಿಸುತ್ತ ನಾಶಮಾಡುತ್ತಿದ್ದಾರೆಂಬ ಭಾವ ಬಲಿಯುತ್ತದೆ. ಉದ್ಯೋಗ ಸಾಧ್ಯವಾಗುವುದಿಲ್ಲ. ಸಾಮಾಜಿಕ ಸಂಬಂಧ, ಬದುಕು ಸಾಧ್ಯವಾಗುವುದಿಲ್ಲ. ವ್ಯಕ್ತಿತ್ವ ಛಿದ್ರವಾಗುತ್ತದೆ. ನಡವಳಿಕೆ ಮತ್ತು ಭಾವುಕತೆಯ ತೊಂದರೆ ಮೊದಲೇ ಕಂಡುಬಂದು ನಂತರ ಪೂರ್ಣಪ್ರಮಾಣದ ಹುಚ್ಚುತನ ಆವರಿಸುತ್ತದೆ. ಕೆಲವರಲ್ಲಿ ಹಿಂಸಾ ಪ್ರವೃತ್ತಿ ತೀವ್ರವಾಗುತ್ತದೆ. ಮತ್ತೆ ಕೆಲವರು ದಿನ-ವಾರ-ತಿಂಗಳುಗಟ್ಟಲೇ ಅಲ್ಲಾಡದೇ ಕೂತು, ಊಟತಿಂಡಿಯನ್ನೂ ಬಿಟ್ಟು ಪ್ರಾಣ ಬಿಡುತ್ತಾರೆ.

ಸಾಧಾರಣವಾಗಿ ತಾರುಣ್ಯದಲ್ಲೇ ಇದು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಇಂಥದೇ ಎಂಬ ಒಂದು ಕಾರಣ ಇಲ್ಲವಾದರೂ ಗರ್ಭಸ್ಥ ಶಿಶುವಿನ ನರಮಂಡಲ ಬೆಳವಣಿಗೆಯ ಏರುಪೇರು, ನಂತರ ಜೀವನದ ಆಗುಹೋಗು ಇದಕ್ಕೆ ಕಾರಣವೆಂದು ಸಂಶೋಧನೆಗಳು ಹೇಳುತ್ತವೆ. ವಂಶಪಾರಂಪರ್ಯ ಗುಣ, ವಾತಾವರಣ, ಯೋಚನಾ ಪ್ರಕ್ರಿಯೆ ಹಾಗೂ ವ್ಯಕ್ತಿಯ ನ್ಯೂರೋ ಬಯಾಲಜಿ ಇವೆಲ್ಲದರ ಜೊತೆಗೆ ದೀರ್ಘಾವಧಿ ಒಂಟಿತನ, ನಿರುದ್ಯೋಗ, ಬಡತನ, ಅನಾಥ ಪ್ರಜ್ಞೆಗಳು ಒದಗಿಬಿಟ್ಟರೆ ಹುಚ್ಚುತನ ಆಕ್ರಮಿಸಿಬಿಡುತ್ತದೆ.

ಗಂಡಸರಲ್ಲಿ ೧೫-೨೫ ವರ್ಷಗಳು, ಮಹಿಳೆಯರಲ್ಲಿ ೨೫-೩೫ ವರ್ಷಗಳ ನಡುವಿನ ಅವಧಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ನಿಧಾನವಾಗಿ ಬಾಧಿತರ ವ್ಯಕ್ತಿತ್ವ ಬದಲಾಗುತ್ತ ಹೋಗುತ್ತದೆ. ವಿಶ್ವಾದ್ಯಂತ ಜನಸಂಖ್ಯೆಯ ಸರಾಸರಿ ೧% ವ್ಯಕ್ತಿಗಳು ಈ ಅಸ್ವಸ್ಥತೆಯಿಂದ ನರಳುತ್ತಾರೆ. ಮನೆ ಬಿಟ್ಟು ಊರು ತಿರುಗುವಂತಾದ ಮೇಲೆ ೧೦-೧೫ ವರ್ಷವಷ್ಟೇ ಜೀವಿಸುತ್ತಾರೆ. ಈ ಅಸ್ವಸ್ಥತೆ ಜೊತೆಗೆ ಕುಡಿತದಂತಹ ಚಟಗಳಿಗೆ ಬಲಿಯಾಗುವುದು, ಬೊಜ್ಜು, ಹೃದಯ ಕಾಯಿಲೆ, ಖಿನ್ನತೆ ಹಾಗೂ ಆತ್ಮಹತ್ಯೆಗಳು ಅವರ ಆಯಸ್ಸನ್ನೂ ೧೦-೧೫ ವರ್ಷ ಕಡಿಮೆ ಮಾಡುತ್ತದೆ. ಇಂಥ ಮನಸ್ಥಿತಿಯವರ ಕುರಿತು ಕುಟುಂಬವು ಕೆಲಕಾಲ ದುಃಖಿಸಿ, ಸಾಧ್ಯವಾದದ್ದನ್ನೆಲ್ಲ ಮಾಡಿ, ಸಹಜತೆಗೆ ತರಲೆತ್ನಿಸುತ್ತದೆ. ಮತ್ತೆಮತ್ತೆ ಮರುಕಳಿಸುವ, ಚಿಕಿತ್ಸೆ ಫಲಿಸದ ಅಸ್ವಸ್ಥತೆ ಕ್ರಮೇಣ ಅವರಲ್ಲಿ ಬೇಸರ ತರುತ್ತದೆ. ಆಗಲೇ ಅಂಥವರನ್ನು ಕೂಡಿ ಹಾಕುತ್ತಾರೆ. ಸರಪಳಿಯಲ್ಲಿ ಬಂಧಿಸಿಡುತ್ತಾರೆ, ಹೊಡೆಯುತ್ತಾರೆ. ತನ್ನನ್ನು ತಾನು ಮರೆತ ಅಸಹಾಯಕ ವ್ಯಕ್ತಿ ಬೇಗ ಇತರರಿಗೆ ಬೇಡದವನಾಗುತ್ತಾನೆ.

ಮೊದಮೊದಲು ಮಾನಸಿಕ ಅಸ್ವಸ್ಥರನ್ನು ಮನೆಯಿಂದ ಹೊರಗಿಡಲಾಗುತ್ತಿತ್ತು ಅಥವಾ ಅವರೇ ಮನೆ ಬಿಟ್ಟುಬಿಡುತ್ತಿದ್ದರು. ನಂತರ ಅಂಥವರನ್ನೆಲ್ಲ ಒಂದೆಡೆ ಕೂಡಿಹಾಕುವ ಅಸೈಲಮ್ ಕಟ್ಟಲಾಯಿತು. ಮಧ್ಯಯುಗದ ಇಸ್ಲಾಮಿನ ಆಳ್ವಿಕೆದಾರರು ಈಜಿಪ್ಟಿನಲ್ಲಿ ಅಂಥ ಅಸೈಲಮ್ಮುಗಳನ್ನು ಕಟ್ಟಿದರು. ಅದರಲ್ಲಿರುವವರಿಗೆ ತೋರಿಸುತ್ತಿದ್ದ ಕಾಳಜಿಗೆ ಯೂರೋಪಿಯನ್ ಪ್ರವಾಸಿಗಳು ಬೆರಗಾಗಿ ಆ ಕುರಿತು ಉಲ್ಲೇಖಿಸಿದ್ದಾರೆ. ಕ್ರಿ.ಶ.೮೭೨ರಲ್ಲಿ ಕೈರೋನಲ್ಲಿ ಅಹ್ಮದ್ ಟುಲನ್ ಅಂಥ ಮೊದಲ ಅಸೈಲಮ್ ಕಟ್ಟಿಸಿದ. ನಂತರ ಅಮೆರಿಕ, ಯೂರೋಪಿನಾದ್ಯಂತ ಅಂಥ ಹಲವು ಖಾಸಗಿ ಅಸೈಲಮ್ಮುಗಳೂ ಸಹ ತಲೆಯೆತ್ತಿದವು. ಹುಚ್ಚರನ್ನು ಒಂದೆಡೆ ಕೂಡಿಹಾಕುತ್ತಿದ್ದ ಅಸೈಲಮ್ಮುಗಳು ೧೯ನೇ ಶತಮಾನದಲ್ಲಿ ಜನಪ್ರಿಯವಾಗಿದ್ದವು. ಒಂದು ಹಂತದಲ್ಲಿ ಬ್ರಿಟನ್ನಿನ ಒಂದು ಲಕ್ಷ ಜನ ಇಂಥ ಅಸೈಲಮ್ಮುಗಳಲ್ಲಿದ್ದರು! ಸೈಕಿಯಾಟ್ರಿ ಎನ್ನು ವೈದ್ಯ ವಿಜ್ಞಾನ ಶಾಖೆ ಜನಪ್ರಿಯವಾದಂತೆ ಈ ಅಸೈಲಮ್ಮುಗಳು ಜೈಲುಗಳೆಂದೂ, ವೈದ್ಯ ಅಲ್ಲಿ ನ್ಯಾಯಾಧೀಶನೇ ಹೊರತು ವೈದ್ಯನಲ್ಲವೆಂದೂ ಟೀಕೆ ಕೇಳಿಬಂತು. ಕೊನೆಗೆ ಅಸೈಲಮ್ಮುಗಳು ಸೈಕಿಯಾಟ್ರಿ ಕ್ಲಿನಿಕ್‌ಗಳಾದವು. ಮಾನಸಿಕ ಅಸ್ವಾಸ್ಥ್ಯತೆಯ ಕಾರಣ, ಚಿಕಿತ್ಸೆಗಳು ಅಭಿವೃದ್ಧಿಗೊಂಡಂತೆ ಅಸೈಲಮ್ಮುಗಳು ಮುಚ್ಚತೊಡಗಿದವು.

ಹೀಗೇ ನಿಮಗೆ ಗೊತ್ತಿರುವ ನಿಮ್ಮೂರ ಬೀದಿಗಳ ಹುಚ್ಚರನ್ನೆಲ್ಲ ಕಲ್ಪಿಸಿಕೊಳ್ಳಿ. ಹೆಚ್ಚಾಗಿ ಅವರು ತಳವರ್ಗದವರಾಗಿರುವುದನ್ನು ಗಮನಿಸಬಹುದು. ಇದಕ್ಕೆ ಕಾರಣ ತಳವರ್ಗದ ವ್ಯಕ್ತಿಗೆ ಹುಚ್ಚು ಹಿಡಿಯಲು ಯಾವ ಸಾಮಾಜಿಕ ಸ್ಥಿತಿ/ಸಮಸ್ಯೆಗಳು ಕಾರಣವಾಗಿದ್ದವೋ ಅವು ಸಾಮಾನ್ಯವಾಗಿ ಅಪರಿಹಾರ್ಯವಾಗಿರುತ್ತವೆ. ವೈದ್ಯರಲ್ಲಿ ಒಯ್ದು ಚಿಕಿತ್ಸೆ ಕೊಡಿಸಬೇಕೆಂಬ ತಿಳುವಳಿಕೆ, ಆರ್ಥಿಕ ಸಾಮರ್ಥ್ಯ ಇಲ್ಲದ ಕಾರಣಕ್ಕೆ ಹುಚ್ಚುತನವನ್ನು ದೆವ್ವವೆಂದೋ, ಮಾಟಮಂತ್ರವೆಂದೋ ಅವರು ಭಾವಿಸುತ್ತಾರೆ. ಎಂದೇ ಬೀದಿಯಲ್ಲಿ ಕಾಣಸಿಗುವ ಹುಚ್ಚರು ಸಾಧಾರಣವಾಗಿ ತಳವರ್ಗದವರಾಗಿರುತ್ತಾರೆ.

ಈ ಕಾಯಿಲೆಗೂ ಔಷಧಿಯಿದೆ. ತುಂಬ ವಯಲೆಂಟ್ ಆಗಿರುವವರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಔಷಧಿಯು ಅವರನ್ನು ಭ್ರಮಾಧೀನ ಸ್ಥಿತಿಯಿಂದ ಬಿಡುಗಡೆ ಮಾಡುತ್ತದೆ. ಆದರೆ ಅದಷ್ಟೇ ಸಾಲದು. ಅದರ ಜೊತೆಗೆ ಕೌನ್ಸೆಲಿಂಗ್, ಕುಟುಂಬದ ಒತ್ತಾಸೆ ಹಾಗೂ ಆತ್ಮವಿಶ್ವಾಸ ಮೂಡಿಸುವಂತಹ ಉದ್ಯೋಗ-ವಾತಾವರಣದ ಅವಶ್ಯಕತೆ ತುಂಬ ಇದೆ.

೧೯೯೪ರಲ್ಲಿ ಅರ್ಥಶಾಸ್ತ್ರ ನೊಬೆಲ್ ಪಡೆದ ಜಾನ್ ನ್ಯಾಶ್ ಸಿಝೋಫ್ರೇನಿಯಾ ಚಿಕಿತ್ಸೆ ಮೇಲಿದ್ದವರು. ಅವರ ಬದುಕನ್ನು ಆಧರಿಸಿ ತೆಗೆದ ‘ಎ ಬ್ಯೂಟಿಫುಲ್ ಮೈಂಡ್’ ಚಿತ್ರ ೨೦೦೧ರಲ್ಲಿ ಅಕಾಡೆಮಿ ಪ್ರಶಸ್ತಿ ಪಡೆಯಿತು. ಸಿಝೋಫ್ರೇನಿಯಾ ಇರುವ ವ್ಯಕ್ತಿಗಳು ಬೌದ್ಧಿಕವಾಗಿ ಮೇಲ್ಮಟ್ಟದಲ್ಲಿರುತ್ತಾರೆ. ಉತ್ತಮ ನೆನಪಿನ ಶಕ್ತಿಯಿರುತ್ತದೆ. ಸೂಕ್ಷ್ಮಗ್ರಹಣ ಶಕ್ತಿಯಿರುತ್ತದೆ. ಆ ಮನಸುಗಳು ತಮ್ಮ ವಿಶ್ಲೇಷಣಾ ಸಾಮರ್ಥ್ಯವನ್ನೇನಾದರೂ ಉಳಿಸಿಕೊಂಡಲ್ಲಿ ಅದ್ಭುತವಾದುದನ್ನು ಸೃಷ್ಟಿಸಬಲ್ಲರು ಮತ್ತು ಸಾಧಿಸಬಲ್ಲರು. ಅವರಿಗೆ ಬೇಕಿರುವುದು ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಮತ್ತು ಪ್ರೀತಿಯ ಒತ್ತಾಸೆ.

ಬಯಲಲ್ಲಿದ್ದೂ ತನ್ನಿರವನ್ನು ಮರೆತ, ಪಂಜರದಲ್ಲಿರದೆಯೂ ಬಂದಿಯಾದ ಆ ಮನಸುಗಳು ಮುಕ್ತವಾಗುವುದು ಸುಲಭದ ಮಾತಲ್ಲ. ಆದರೆ ಮನುಷ್ಯ ನಿಘಂಟಿನಲ್ಲಿ ಅಸಾಧ್ಯವೆಂಬ ಯಾವುದೂ ಇಲ್ಲ.

ನೀಷೆ ಹುಚ್ಚುತನವೇ ಅನುಗ್ರಹ ಎನ್ನುತ್ತಾನೆ. ಊಂಹ್ಞೂಂ, ಅವನು ಸಿಝೋಫ್ರೇನಿಯಾಗೆ ಈ ಮಾತು ಹೇಳಿರಲಿಕ್ಕಿಲ್ಲ.




No comments:

Post a Comment