Wednesday, 9 July 2014

ಗರ್ಭಪಾತ - ಆ ಇನ್ನೊಂದು ಮುಖ   ಸ್ತ್ರೀ ಭ್ರೂಣಹತ್ಯೆ ಆಧುನಿಕ ಭಾರತಕ್ಕೆ ಅಂಟಿರುವ ಕಳಂಕ. ಇದು ಗರ್ಭಪಾತಕ್ಕಿರುವ ನಿಸರ್ಗ ವಿರೋಧಿ, ಮಾನವ ವಿರೋಧಿ ಮುಖ. ಲಿಂಗಾನುಪಾತ ವರ್ಷದಿಂದ ವರ್ಷಕ್ಕೆ ಕುಸಿಯುತ್ತ ಈಗ ಪ್ರತಿ ಸಾವಿರ ಗಂಡುಮಕ್ಕಳಿಗೆ ೯೧೪ ಹೆಣ್ಣುಮಕ್ಕಳಿದ್ದಾರೆ. ವರದಕ್ಷಿಣೆ, ಪಿತೃಪ್ರಧಾನ ವ್ಯವಸ್ಥೆ, ಒಂದೇ ಮಗು ಸಾಕೆಂಬ ಧೋರಣೆ, ಗಂಡುಮೋಹ ಇವೆಲ್ಲವೂ ಹೆಣ್ಣುಮಗುವಿನ ವಿರುದ್ಧ ಕೆಲಸ ಮಾಡುತ್ತಿರುವಾಗ ಸಮಕಾಲೀನ ವಿಜ್ಞಾನವೂ ಅದಕ್ಕೆ ಕೈಜೋಡಿಸಿದೆ.

   ನಿರ್ಲಿಪ್ತ ವಿಜ್ಞಾನ-ತಂತ್ರಜ್ಞಾನವನ್ನೂ ಪುರುಷ ಪ್ರಧಾನ ವ್ಯವಸ್ಥೆ ನಿಯಂತ್ರಿಸುತ್ತಿದೆ. ಆಮ್ನಿಯೋಸೆಂಟೆಸಿಸ್ ಮತ್ತು ಸೊನೋಗ್ರಫಿ ಎಂಬ ತಪಾಸಣಾ ತಂತ್ರಗಳು ಸ್ತ್ರೀಭ್ರೂಣ ಹತ್ಯೆಯ ಭಾಗವಾಗಿದ್ದು ಈ ಕಾಲದ ದುರಂತವೇ ಸರಿ. ಆಮ್ನಿಯೋಸೆಂಟೆಸಿಸ್ ತಪಾಸಣೆಯಲ್ಲಿ ಗರ್ಭಚೀಲದಲ್ಲಿ ಭ್ರೂಣದ ಸುತ್ತ ಆವರಿಸಿಕೊಂಡಿರುವ ಆಮ್ನಿಯಾಟಿಕ್ ಫ್ಲುಯಿಡ್ ಎಂಬ ದ್ರವವನ್ನು ಹೊರತೆಗೆದು ಪರೀಕ್ಷೆಗೊಳಪಡಿಸಿ ಭ್ರೂಣವು ಕ್ರೋಮೋಸೋಮ್ ಸಂಬಂಧಿ ಅನುವಂಶಿಕ ಕಾಯಿಲೆಗಳಿಂದ ಬಳಲುತ್ತಿದ್ದರೆ ಪತ್ತೆ ಮಾಡಲಾಗುತ್ತಿತ್ತು. ಅದೇ ಕ್ರೋಮೋಸೋಮ್ ಅನಾಲಿಸಿಸ್ ಈಗ ಲಿಂಗಪತ್ತೆಗೆ ಬಳಕೆಯಾಗುತ್ತಿದೆ. ಆಮ್ನಿಯೋಸೆಂಟೆಸಿಸ್ ದುಬಾರಿ ಮತ್ತು ಎಲ್ಲೆಡೆ ಲಭ್ಯವಿಲ್ಲ. ಆದರೆ ಊರೂರಿನಲ್ಲಿರುವ ಅಲ್ಟ್ರಾಸೌಂಡ್‌ಸ್ಕ್ಯಾನಿಂಗ್ ಮಶೀನುಗಳು ಲಿಂಗಪತ್ತೆಗೆ ಬಳಕೆಯಾಗುತ್ತಿವೆ. ನವದೆಹಲಿಯೊಂದರಲ್ಲೇ ೧೮೦೦ ಸ್ಕ್ಯಾನಿಂಗ್ ಕೇಂದ್ರಗಳಿವೆ!

   ಗಂಡುಮಗುವೇ ಬೇಕೆನ್ನುವುದು ಏಷಿಯಾ ಜನರ ಕಾಯಿಲೆ. ದಕ್ಷಿಣ ಕೊರಿಯಾ, ತೈವಾನ್, ಭಾರತ ಮತ್ತು ಚೀನಾಗಳು ಸ್ತ್ರೀ ಭ್ರೂಣಹತ್ಯೆಯ ಮುಂಚೂಣಿಯಲ್ಲಿವೆ. ೧೯೭೯ರಲ್ಲಿ ಚೀನಾ ಕುಟುಂಬ ಯೋಜನೆ ಕಡ್ಡಾಯ ಮಾಡಿ ಒಂದೇ ಮಗು ಹೆರಲು ಉತ್ತೇಜಿಸಿದ ನಂತರ ಒಂದೇ ಮಗು ಸಾಕು, ಅದು ಗಂಡಾಗಿರಬೇಕೆನ್ನುವ ಪಾಲಕರು ಹೆಚ್ಚತೊಡಗಿದರು. ಅದೇ ರೋಗ ಭಾರತಕ್ಕೂ ಹಬ್ಬಿದೆ. ಪ್ರಪಂಚದಾದ್ಯಂತ ಇರುವ ಗಂಡು ಮೋಹದಿಂದ ಉತ್ತೇಜಿತನಾದ ಅಮೆರಿಕದ ರೊನಾಲ್ಡ್ ಎರಿಕ್ಸನ್ ಎಂಬ ತಜ್ಞವೈದ್ಯ, ಗರ್ಭಧಾರಣೆಗೆ ಮುನ್ನವೇ ಗಂಡುಮಗು ಆಯ್ದುಕೊಳ್ಳಬಹುದಾದ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಪೇಟೆಂಟ್ ಪಡೆದುಕೊಳ್ಳಲು ಹೊರಟಿದ್ದ! ಜಪಾನಿನ ಡಾ. ಎಹಾಚಿ ಇಜಕಾ ಶೇ. ೮೫% ಯಶಸ್ವಿ ಗಂಡು ಹೆರುವ ತಂತ್ರವನ್ನು ಪ್ರಚಾರಪಡಿಸಿದ್ದ. ಋತುಸ್ರಾವವಾದ ಯಾವ್ಯಾವ ದಿನಗಳಲ್ಲಿ ದಂಪತಿಗಳು ಹೇಗೆ ದೈಹಿಕ ಸಂಪರ್ಕ ಮಾಡಿದರೆ ಗಂಡುಮಗು ಹುಟ್ಟುತ್ತದೆಂದು ಹೇಳುವ ಚೀನೀ ಕ್ಯಾಲೆಂಡರ್ ಮಹಿಳಾ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿರುತ್ತದೆ. ಹೀಗೆ ವಿಜ್ಞಾನ ತಂತ್ರಜ್ಞಾನಗಳೂ ಲಿಂಗತಾರತಮ್ಯ ಬೆಳೆಸುವತ್ತ ಅಭಿವೃದ್ಧಿಯಾದವು.

   ಆಯ್ದ ಲಿಂಗ ಹತ್ಯೆ ಅನೈಸರ್ಗಿಕ, ಅಪರಾಧ. ಇದು ಇಂದು ನಿನ್ನೆಯ ವಿದ್ಯಮಾನವಲ್ಲ. ಮೊದಲು ಸ್ತ್ರೀ ಶಿಶುಹತ್ಯೆ ನಡೆಯುತ್ತಿತ್ತು. ಹುಟ್ಟಿದ ಹೆಣ್ಣುಮಗುವಿಗೆ ಬಿಗಿಯಾದ ಬಳೆ ತೊಡಿಸಿ ಇಲ್ಲವೇ ಬಟ್ಟೆ ಸುತ್ತಿ ಉಸಿರುಗಟ್ಟಿಸಿ ಕೊಲ್ಲುತ್ತಿದ್ದರು. ತೀವ್ರ ಅನಾದರ, ತಾರತಮ್ಯ, ನಿಷ್ಕಾಳಜಿಗೆ ಎಷ್ಟೋ ಹೆಣ್ಣುಮಕ್ಕಳು ಸಾಯುತ್ತಿದ್ದವು. ಹೆಣ್ಣುಗಳ ಮಾರಾಟವೂ ನಡೆದಿತ್ತು. ಈಗ ಒಂಭತ್ತು ತಿಂಗಳು ಹೊರುವುದು, ಹೆರುವುದು ಯಾವುದೂ ಇಲ್ಲದೇ ಹೆಣ್ಣೆಂದು ತಿಳಿದಿದ್ದೇ ‘ಕೆಲಸ ಮುಗಿಸಿಬಿಡುವ’ ಆತುರ ಹೆತ್ತವರದ್ದು. ಈ ಹತ್ಯೆಗೆ ಯಾರನ್ನು ಹೊಣೆ ಮಾಡುವುದು? ಇದರಲ್ಲಿ ನೇರವಾಗಿ ಮಗುವಿನ ಸೃಷ್ಟಿಕರ್ತರೇ ಪಾಲ್ಗೊಂಡಿರುತ್ತಾರೆ. ಹುಟ್ಟಿಸಿದವರಿಗೇ ಹೆಣ್ಣು ಏಕೆ ಬೇಡವಾಗುತ್ತಾಳೆ? ನಮ್ಮ ಜನಪದರ ಎಷ್ಟೋ ಹಾಡುಗಳಲ್ಲಿ ತಮ್ಮಂತೆ ಕಷ್ಟಪಡುವ ಹೆಣ್ಣುಜೀವ ಹುಟ್ಟಿತಲ್ಲ ಎಂದು ಹೆಣ್ಣು ಹುಟ್ಟಿದ್ದರ ಬಗೆಗೆ ದುಃಖಿಸಿದ್ದಾರೆ. ಮಾರ್ಗರೆಟ್ ಗಾರ್ನರ್ ಎಂಬ ಗುಲಾಮಿ ಮಹಿಳೆ ತನ್ನ ಮಗಳನ್ನು ಕೊಂದು ಅದಕ್ಕಾಗಿ ವಿಚಾರಣೆ ಎದುರಿಸುವಾಗ ‘ನನ್ನ ಮಗಳು ಎಂದಿಗೂ ಗುಲಾಮ ಹೆಣ್ಣಾಗಿ ನೋವನುಭವಿಸುತ್ತ ಬಾಳುವುದು ಬೇಡ. ಅದಕ್ಕೇ ಕೊಂದೆ. ನನಗೆ ಘನಘೋರ ಶಿಕ್ಷೆಯನ್ನೇ ನೀಡಿ. ಗಲ್ಲುಗಂಬಕ್ಕೆ ಹಾಡಾಡುತ್ತ ಬೇಕಾದರೂ ಹೋಗುತ್ತೇನೆ, ಆದರೆ ಬಿಡುಗಡೆ ಮಾಡಿ ಮತ್ತೆ ಗುಲಾಮಳಾಗಿ ದಯವಿಟ್ಟು ಕಳಿಸಬೇಡಿ’ ಎಂದು ಅಂಗಲಾಚುತ್ತಾಳೆ. ಅಮ್ಮನಿಗೂ ಮಗಳು ಬೇಡವಾಗುವುದು ಈ ಕಾರಣಕ್ಕೆ.

     ಸ್ತ್ರೀ ಭ್ರೂಣಹತ್ಯೆ ವಿರೋಧಿಸುವ ಭರದಲ್ಲಿ ಕೆಲ ‘ಜೀವಪರ’ ಹೋರಾಟಗಾರರು ಗರ್ಭಪಾತವನ್ನೇ ನಿಷೇಧಿಸಬೇಕೆಂಬ ಉಗ್ರಬೇಡಿಕೆ ಮುಂದಿಡುತ್ತಿದ್ದಾರೆ. ಗರ್ಭಪಾತ ವಿರೋಧಿಸಿ ಹರಿದಾಡುವ ಮೇಲ್-ಸಂದೇಶಗಳನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಆದರೆ ಎಲ್ಲ ಗರ್ಭಪಾತಗಳು ಸ್ತ್ರೀ ಭ್ರೂಣಹತ್ಯೆಯಲ್ಲ. ಗರ್ಭಪಾತ ಎಂದ ಕೂಡಲೇ ಜನರ ಭಾವುಕ ಪ್ರಜ್ಞೆ ಜಾಗೃತವಾಗುತ್ತದೆ. ಮಾಡುವವರು ನರಹಂತಕರಾಗಿಯೂ, ಮಾಡಿಕೊಳ್ಳುವಾಕೆ ರಾಕ್ಷಸಿಯಾಗಿಯೂ ಬಿಂಬಿಸಲ್ಪಡುತ್ತಾರೆ. ಕಾಮ, ಕುಟುಂಬ, ಮಹಿಳೆಗೆ ಸಂಬಂಧಿಸಿದ ಪರಂಪರಾಗತ ರೂಢಿಗಳ ಕುರಿತು ಆಧುನಿಕ ಭಾರತಕ್ಕೆ ದ್ವಂದ್ವಗಳಿವೆ. ಅಂಥವುಗಳಲ್ಲಿ ಗರ್ಭಪಾತವೂ ಒಂದು. ಮೊದಲಿನಿಂದಲೂ ಗರ್ಭಪಾತ ಕೊಲೆ, ಪಾಪಕರ ಎಂದೇ ಪರಿಗಣಿಸಲ್ಪಟ್ಟಿದೆ. ಹೆಣ್ಣು ಬಿಡುಗಡೆಯ ದಾರಿ ಎಂದು ಬಯಸಿದ್ದು, ತನ್ನ ಹಕ್ಕೆಂದು ತಿಳಿದಿದ್ದು, ಆಯ್ಕೆಯ ಅವಕಾಶವೆಂದು ಬಗೆದಿದ್ದು ಜೀವವಿರೋಧಿ ಎಂದು ಬಿಂಬಿಸಲ್ಪಟ್ಟರೆ?

   ಸ್ತ್ರೀ ಭ್ರೂಣಹತ್ಯೆಯನ್ನು ಒತ್ತಟ್ಟಿಗಿಟ್ಟು ನೋಡಿದರೆ, ಯಾವ ಲಿಂಗದ್ದೇ ಆಗಿರಲಿ ತನಗೆ ಈ ಮಗು ಬೇಡ ಎಂದು ನಿರ್ಧರಿಸುವುದು ಮಹಿಳಾ ಹಕ್ಕು ಎಂದೇ ಪರಿಗಣಿಸಲಾಗಿದೆ. ಈ ಹಕ್ಕನ್ನು ಮಹಿಳೆ ಸುಲಭದಲ್ಲಿ ಬಿಟ್ಟುಕೊಡಲಾರಳು. ಗರ್ಭಪಾತ ಹಕ್ಕು ಕೈಜಾರಿದರೆ ಅಚಾತುರ್ಯಕ್ಕೆ ಬಸುರಾದ ಎಳೆಬಾಲೆಯರು, ಧಾರ್ಮಿಕ ಹಾಗೂ ಪಾತಿವ್ರತ್ಯದ ಪೊಲೀಸಿಂಗ್ ನಡೆಸಬಯಸುವ ಗಂಡನ ಕಾರಣದಿಂದ ಕುಟುಂಬ ಯೋಜನೆ ಅಳವಡಿಸಿಕೊಳ್ಳಲಾರದವರು, ಮರುಮದುವೆಯಾಗದ ವಿಧವೆಯರು, ಮತ್ತೆ ಮಕ್ಕಳ ಒಲ್ಲದ ಹಿರಿ ಅಮ್ಮಂದಿರು ಇವರೆಲ್ಲ ಬೇಡದ ಮಕ್ಕಳನ್ನು ಹೆರಬೇಕಾಗುತ್ತದೆ. ಗರ್ಭಪಾತ ಜನಸಂಖ್ಯಾ ನಿಯಂತ್ರಣದ ಅಥವಾ ಕುಟುಂಬ ಯೋಜನೆಯ ಮಾರ್ಗವಲ್ಲ. ಅದು ನಾವು ಸಮರ್ಥಿಸಿಕೊಳ್ಳುವ ಮಾನವ ಹತ್ಯೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಮಹಿಳೆಯ ಗರ್ಭದೊಳಗಿರುವ ಮಗುವಿನ ಕುರಿತ ಕಾಳಜಿ ಗರ್ಭ ಹೊರುವ ಮಹಿಳೆಯ ಬಗೆಗೂ ಇರಬೇಕಲ್ಲವೆ?   ಭಾರತದಲ್ಲಿ ವರ್ಷಕ್ಕೆ ಎಷ್ಟು ಗರ್ಭಪಾತಗಳಾಗುತ್ತವೆಂಬ ನಿಖರ ಅಂಕಿಅಂಶ ಲಭ್ಯವಿಲ್ಲ. ಸರ್ಕಾರ ಪ್ರತಿವರ್ಷ ೨೫ ಲಕ್ಷ ಕಾನೂನುಬದ್ಧ ಗರ್ಭಪಾತ ನಡೆಯುತ್ತದೆಂದು ಹೇಳಿದರೆ ಸರ್ಕಾರೇತರ ಸಂಸ್ಥೆಗಳ ಪ್ರಕಾರ ಈ ಸಂಖ್ಯೆ ೧.೧ ಕೋಟಿ. ಅದರಲ್ಲಿ ಅರ್ಧದಷ್ಟು ಕಾನೂನುಬಾಹಿರ ಗರ್ಭಪಾತಗಳು. ಐದನೇ ಒಂದು ಭಾಗ ಸ್ತ್ರೀ ಭ್ರೂಣಹತ್ಯೆ. ಪ್ರತಿವರ್ಷ ೨೮ ಸಾವಿರಕ್ಕಿಂತ ಅಧಿಕ ಮಹಿಳೆಯರು ಗರ್ಭಪಾತದ ಕಾಂಪ್ಲಿಕೇಷನ್‌ಗಳಿಂದ ಸಾವನ್ನಪ್ಪುತ್ತಿದ್ದಾರೆ. ೮೦% ಗರ್ಭಪಾತಗಳನ್ನು ಕುಟುಂಬ ಯೋಜನಾ ವಿಧಾನ ಅಳವಡಿಸಿಕೊಳ್ಳದ ವಿವಾಹಿತ ಸ್ತ್ರೀಯರು ಮಾಡಿಕೊಂಡರೆ, ಉಳಿದ ೨೦% ಬೇರೆ ಕಾರಣಗಳಿಗಾಗಿ ಆಗುವಂಥದು.

   ಗರ್ಭಪಾತ ವಿಶ್ವಾದ್ಯಂತ ಎಂದಿನಿಂದ ನಡೆದುಬಂದಿರುವಂಥದ್ದು. ಐದು ಸಾವಿರ ವರ್ಷದ ಕೆಳಗೆ ಚೀನಾದ ಷೆನಾಂಗ್ ರಾಜ ಮಹಿಳೆಯರಿಗೆ ಪಾದರಸ ನೀಡಿ ಗರ್ಭಪಾತ ಮಾಡಿಸಲು ಸೂಚಿಸಿದ್ದ. ಅರಿಸ್ಟಾಟಲ್ ಪ್ರಕಾರ ಗಂಡು ಭ್ರೂಣಕ್ಕೆ ೪೦ ಹಾಗೂ ಹೆಣ್ಣು ಭ್ರೂಣಕ್ಕೆ ೯೦ ದಿನವಾದಾಗ ‘ಮಾನವ ಪ್ರಜ್ಞೆ’ ಬರುತ್ತದೆ. ಈ ಅವಧಿಗಿಂತ ಮೊದಲು ಗರ್ಭಪಾತ ಸಮ್ಮತವಾಗಿತ್ತು. ಹಿಪೋಕ್ರೆಟಿಸ್ ಪ್ರತಿಜ್ಞಾವಿಧಿಯಲ್ಲಿ ‘ಗರ್ಭಪಾತ ಮಾಡುವ ಪೆಸರಿಗಳನ್ನು ಮಹಿಳೆಗೆ ಕೊಡುವುದಿಲ್ಲ’ ಎನ್ನುವ ಅಂಶ ಇತ್ತು. ಭಾರತದಲ್ಲೂ ಸ್ಮೃತಿಗಳು ವಿಧಿಸುವ ನಿಯಮಗಳಲ್ಲಿ ಮೊದಲ ಮೂರು ವರ್ಣಗಳು ಗರ್ಭಪಾತ ಮಾಡಿಕೊಳ್ಳುವಂತಿರಲಿಲ್ಲ. ಹಾಗೇನಾದರೂ ಮಾಡಿದಲ್ಲಿ ಅವರನ್ನೂ, ಅವರಿಗೆ ಸಹಾಯ ನೀಡಿದವರನ್ನೂ ಶಿಕ್ಷೆಗೆ ಒಳಪಡಿಸಲಾಗುತ್ತಿತ್ತು.

   ಗರ್ಭಪಾತಕ್ಕೆ ಹತ್ತುಹಲವು ವಿಧಾನಗಳು ಚಾಲ್ತಿಯಲ್ಲಿದ್ದವು. ತಿನ್ನಬಾರದ್ದನ್ನು ತಿನ್ನುವುದು, ಅತಿ ಶ್ರಮದ ಕೆಲಸ ಮಾಡುವುದು, ಉಪವಾಸ, ಹೊಟ್ಟೆಗೆ ಬಿಗಿಯಾಗಿ ಬಟ್ಟೆ ಸುತ್ತುವುದು ಮತ್ತು ಬಿಸಿನೀರು ಎರಚುವುದು, ಕಾದ ಕರಟದ ಮೇಲೆ ಮಕಾಡೆ ಮಲಗುವುದು, ದೇಹದಿಂದ ರಕ್ತ ಹರಿಯಗೊಡುವುದು, ಜಜ್ಜಿದ ಈರುಳ್ಳಿ ಅಥವಾ ಹಬೆ ಮೇಲೆ ಕೂರುವುದು, ಮಾರ್ಜಕವನ್ನು ಗರ್ಭದ್ವಾರದೊಳಗೆ ತುಂಬುವುದು, ಗರ್ಭದ್ವಾರದಲ್ಲಿ ಅಥವಾ ಒಳಗೆ ಔಷಧಿ ಹಚ್ಚಿದ ಕಡ್ಡಿ ಚುಚ್ಚಿ ಗರ್ಭ ಹೊರಹಾಕಲು ಪ್ರಯತ್ನಿಸುವುದು ಇತ್ಯಾದಿ. ಇಂಥ ವಿಧಾನಗಳಿಂದ ತಾಯಿಗೆಷ್ಟು ಅಪಾಯವಿತ್ತು ಎಂದು ಯಾರಾದರೂ ಊಹಿಸಬಹುದು. ಗಾಯ, ಕೀವು, ನಂಜು, ಅವಮಾನ.. ಓಹ್, ಅದೆಷ್ಟು ತಾಯಂದಿರು ಪ್ರಾಣ ತೆತ್ತರೋ?! ಇಳಿಯದ ಬಸುರಿಗೆ ಅದೆಷ್ಟು ಜನ ಆತ್ಮಹತ್ಯೆಗೆ ಶರಣಾದರೋ?  

     ಹಿಂದಿನ ತಲೆಮಾರಿನ ಅಮ್ಮಂದಿರು ಅನುಭವಿಸಿದ ಇಂಥ ದಾರುಣ ಅಸಹಾಯಕತೆಗಳು ನಮ್ಮ ದೇಶಕ್ಕಷ್ಟೇ ಸೀಮಿತವಾಗಿರಲಿಲ್ಲ. ಪ್ರಪಂಚದ ಬಹಳಷ್ಟು ದೇಶಗಳ ಹೆಂಗಸರೂ ಹೆರುವ ಯಂತ್ರಗಳಾಗಿದ್ದರು. ವಿಜ್ಞಾನ ತಂತ್ರಜ್ಞಾನದಲ್ಲಿ ಉನ್ನತಿ ಸಾಧಿಸಿ ಮಾನವಹಕ್ಕು ಜಾಗೃತಿ ಮೂಡಿದ್ದರೂ ಜನನ ನಿಯಂತ್ರಣದ ಮಟ್ಟಿಗೆ ಅಮೆರಿಕ ಸಮಾಜದ್ದು ಸನಾತನ ಧೋರಣೆಯೇ. ೧೮೫೦ರ ಸುಮಾರಿನ ಈ ಘಟನೆ ನೋಡಿ: ನ್ಯೂಯಾರ್ಕ್‌ನ ಹೊರಭಾಗದ ಒಂದು ಆರೋಗ್ಯ ಶಿಬಿರದಲ್ಲಿ ೨೮ ವರ್ಷದ ಸ್ಯಾಡಿ ಸ್ಯಾಕ್ಸ್ ಎಂಬ ಮಹಿಳೆ ತನಗೆ ಮಕ್ಕಳನ್ನು ಹೆತ್ತುಹೆತ್ತು ಸಾಕಾಗಿ ಈಗಷ್ಟೇ ಮೂರು ತಿಂಗಳ ಬಸುರನ್ನು ಗರ್ಭಪಾತ ಮಾಡಿಕೊಂಡಿದ್ದಾಗಿಯೂ, ಗ್ಯಾರಂಟಿ ಫಲಿತಾಂಶ ಇರುವ ಜನನನಿಯಂತ್ರಣದ ಬಗ್ಗೆ ತಿಳಿಸಬೇಕೆಂದೂ ಅಲವತ್ತುಕೊಂಡಳು. ಅದಕ್ಕೆ ವೈದ್ಯರು ನಸುನಗುತ್ತ, ‘ಹಾಗಾದರೆ ನಿನ್ನ ಗಂಡನನ್ನು ಮನೆ ಚಾವಣಿಯ ಮೇಲೆ ಮಲಗಲು ಹೇಳು. ಅದು ಗ್ಯಾರಂಟಿ ಗರ್ಭನಿರೋಧಕ’ ಎಂದು ಕಳಿಸಿಬಿಟ್ಟರು. ಕಣ್ಣೀರು ತುಂಬಿಕೊಂಡು ಹೊರಬಂದ ಆಕೆ ಶಿಬಿರದ ನರ್ಸ್ ಬಳಿ ಗರ್ಭನಿರೋಧಕದ ಮಾಹಿತಿ ಕೇಳಿದರೆ ಲಭ್ಯವಿರಲಿಲ್ಲ. ಕೆಲ ತಿಂಗಳುಗಳಲ್ಲೇ ಮತ್ತೊಂದು ಗರ್ಭಪಾತದ ವೇಳೆ ಸ್ಯಾಡಿ ಸತ್ತು ಹೋದಳು.

  ಇಂಥ ಸಾವು, ಹತಾಶೆ, ನಿಸ್ಸಹಾಯಕತೆಗಳು ಪ್ರಪಂಚದ ಕೋಟ್ಯಂತರ ಮಹಿಳೆಯರ ಕತೆಯಾಗಿತ್ತು. ಅವ್ಯಾಹತವಾಗಿ ನಡೆದರೂ ಗರ್ಭಪಾತ ನೈತಿಕ ಒಪ್ಪಿಗೆ ಪಡೆದಿರಲಿಲ್ಲ. ಕುಟುಂಬ ಯೋಜನೆ ಮತ್ತು ಗರ್ಭಪಾತ ಕಾನೂನು ಮನ್ನಣೆಯನ್ನೂ ಪಡೆದಿರಲಿಲ್ಲ. ಈಗಲೂ ಗರ್ಭಪಾತಕ್ಕೆ ಧಾರ್ಮಿಕ, ಸಾಮಾಜಿಕ, ನೈತಿಕ ನಿರ್ಬಂಧಗಳಿವೆ. ಕೆಲ ಕ್ರಿಶ್ಚಿಯನ್ ಪಂಥಗಳಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಿದ್ದರೂ ಕ್ಯಾಥೊಲಿಕ್ ಪಂಥ ಖಡಾಖಂಡಿತ ಕುಟುಂಬ ಯೋಜನೆ ವಿರೋಧಿಸುತ್ತದೆ. ಕೆಲ ಇಸ್ಲಾಂ ಸಮುದಾಯಗಳು ತಾಯಿಯ ಆರೋಗ್ಯಕ್ಕೆ ಮುಳುವಾಗುವುದಾದರೆ ಏಳು ವಾರದೊಳಗಿನ ಗರ್ಭ ತೆಗೆಯಲು ಸಮ್ಮತಿಸಿದರೆ ಕೆಲವೆಡೆ ಈ ಅವಧಿಯನ್ನು ೪ ತಿಂಗಳವರೆಗೆ ವಿಸ್ತರಿಸಲಾಗಿದೆ. ಹೀಗೆ ಧರ್ಮ, ಲೋಕರೂಢಿಗಳು ಹೆರುವವಳ ಇಷ್ಟಾನಿಷ್ಟದ ಕುರಿತು ಕಿಂಚಿತ್ತೂ ಚಿಂತಿಸದೆ ಹುಟ್ಟಲಿರುವ ಕೂಸಿಗೆ ಕುಲಾವಿ ಹೊಲಿದಿರುವುದು ಕಂಡುಬರುತ್ತದೆ.

    ೧೯ನೇ ಶತಮಾನದ ಹೊತ್ತಿಗೆ ಸ್ತ್ರೀವಾದಿ ದನಿಗಳು ಗಟ್ಟಿಯಾಗತೊಡಗಿದವು. ಹೆಣ್ಣಿಗೆ ಪುರುಷನಿಗಿರುವ ಎಲ್ಲ ನಾಗರಿಕ ಅಧಿಕಾರ ಸವಲತ್ತುಗಳೂ ಸಿಗಬೇಕು; ಮಕ್ಕಳ ನಿರ್ವಹಣೆ ಮಹಿಳೆಯ ಜೈವಿಕ ಕರ್ತವ್ಯವಾದ್ದರಿಂದ ಯಾವಾಗ, ಎಷ್ಟು ಮಕ್ಕಳು ಬೇಕೆಂದು ನಿರ್ಧರಿಸುವ ಹಕ್ಕನ್ನು ಅವಳಿಗೇ ಕೊಡಬೇಕೆನ್ನುವ ಒತ್ತಾಯ ಆರಂಭಿಕ ಮಹಿಳಾ ಹೋರಾಟಗಳಲ್ಲಿ ಕಾಣಿಸಿತು. ಕುಟುಂಬ ಯೋಜನೆ ಮತ್ತು ಜನನ ನಿಯಂತ್ರಣ ಇವೆರೆಡೂ ಮಹಿಳೆಯ ಬಿಡುಗಡೆಗೆ ಮೊದಲ ಮೆಟ್ಟಿಲುಗಳು ಎಂದೇ ಭಾವಿಸಲಾಗಿತ್ತು. ‘ಬರ್ತ್ ಸ್ಟ್ರೈಕ್- ಜನನ ಮುಷ್ಕರ’ ಎಂಬ ಹೊಸ ಆಲೋಚನೆಯನ್ನು ಮಹಿಳಾ ಚಳುವಳಿಯ ಮುಂಚೂಣಿಯಲ್ಲಿದ್ದ ಅನತೋಲ್ ಫ್ರಾನ್ಸ್ ಹಾಗೂ ರೋಸಾ ಲಕ್ಸೆಂಬರ್ಗ್ ಮುಂದಿಟ್ಟರು. ಏರುತ್ತಿರುವ ಜನಸಂಖ್ಯೆ, ಮಕ್ಕಳ ಪಾಲನೆ ಪೋಷಣೆಯಲ್ಲೇ ಸವೆದು ಹೋಗುವ ಮಹಿಳಾ ಮಾನವ ಸಂಪನ್ಮೂಲ ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು ಕೆಲ ದೇಶಗಳು ಕುಟುಂಬಯೋಜನೆ/ಗರ್ಭಪಾತಕ್ಕೆ ಸಮ್ಮತಿ ನೀಡಿದವು.

   ಭಾರತದಲ್ಲಿ ಕಾನೂನುಬದ್ಧ ಗರ್ಭಪಾತ ನಿಯಂತ್ರಣಕ್ಕಾಗಿ ಎಂಟಿಪಿ ಆಕ್ಟ್ - ೧೯೭೧ ಬಂತು. ಅದರ ಪ್ರಕಾರ ಗರ್ಭಪಾತ ಎಂದರೆ ೨೮ ವಾರ ಅವಧಿಯೊಳಗಿನ ಗರ್ಭ ತೆಗೆಸಿಕೊಳ್ಳುವುದು. ಗರ್ಭಪಾತವನ್ನು ಯಾರು, ಯಾರಿಗೆ, ಎಲ್ಲಿ ಮಾಡಬಹುದು ಎಂಬ ಸ್ಪಷ್ಟ ನಿಯಮಾವಳಿ/ನಿರ್ದೇಶನವನ್ನು ಆ ಕಾಯಿದೆ ನೀಡಿತು. ಇದರ ಪ್ರಕಾರ ತಾಯಿಯ ಪ್ರಾಣಕ್ಕೆ ಅಪಾಯವಿದ್ದರೆ; ಹುಟ್ಟಿದಲ್ಲಿ ಮಗುವಿಗೆ ವೈಕಲ್ಯ ಮತ್ತಿತರೆ ತೊಂದರೆಯಾಗುವಂತಿದ್ದರೆ; ಅತ್ಯಾಚಾರದಿಂದ ಗರ್ಭ ಧರಿಸಿದ್ದರೆ; ವಿವಾಹಿತ ಮಹಿಳೆಯಲ್ಲಿ ಕುಟುಂಬ ಯೋಜನೆ ವಿಫಲವಾಗಿ ಗರ್ಭ ಧರಿಸಿದ್ದರೆ ಗರ್ಭಪಾತಕ್ಕೆ ಅವಕಾಶವಿದೆ. ೫ ತಿಂಗಳಿಗಿಂತ ಹೆಚ್ಚು ಅವಧಿಯ ಗರ್ಭ ತೆಗೆಯಬೇಕಿದ್ದರೆ ಇಬ್ಬರು ತಜ್ಞ ವೈದ್ಯರ ಅಭಿಪ್ರಾಯವಿರಬೇಕು. ಕಾನೂನು ಅನುಮತಿ ಪಡೆದ ಸ್ಥಳದಲ್ಲಿ ಅನುಮತಿ ಪಡೆದ ವೈದ್ಯರೇ ಮಾಡಬೇಕು.


ಮನದ ಮಾತು:

    ಅಮಾನುಷ ಕೊಲೆ, ಯುದ್ಧ, ಪೋಲಿಸ್ ಹಿಂಸೆ, ಲಾಕಪ್ ಡೆತ್, ಕೌಟುಂಬಿಕ ದೌರ್ಜನ್ಯಗಳು ಇವೆಲ್ಲ ಎಂಥ ಕಠಿಣ ಕಾನೂನು ಬಂದರೂ ಕಡಿಮೆಯಾಗಲಿಲ್ಲ, ಏಕೆ? ಹಿಂಸೆ ನಮ್ಮಲ್ಲಿ ಅಂತರ್ಗತವಾಗಿದೆ. ಅದರ ಒಂದು ಮುಖ ಗರ್ಭಪಾತ. ಒಳಗೆಲ್ಲೋ ಅಡಗಿಕೊಂಡಿರುವ ಹಿಂಸೆಯನ್ನು ಹುಡುಕಿ ನಾಶ ಮಾಡಿ ಜೀವಕಾರುಣ್ಯದ ಗಿಡ ಬೆಳೆಸಬೇಕಾಗಿದೆ.

   ಅಮ್ಮಂದಿರೇ, ಭಾವೀ ಅಮ್ಮಂದಿರನ್ನು ಹುಡುಕಿ ನಾಶಮಾಡುವ ಜಾಲದಲ್ಲಿ ದಯವಿಟ್ಟು ಭಾಗಿಯಾಗಬೇಡಿ. ಗರ್ಭಪಾತಕ್ಕೆಳಸುವ ಬದಲು ಬೇಡದ ಗರ್ಭ ನಿಲ್ಲದಂತೆ ಕುಟುಂಬ ಯೋಜನೆ ಅಳವಡಿಸಿಕೊಳ್ಳಿ. ಅದು ಸಾಧ್ಯವಾಗದಿದ್ದಲ್ಲಿ ಅಥವಾ ವಿಫಲವಾದಲ್ಲಿ ತಿಂಗಳ ಸ್ರಾವ ನಾಲ್ಕೈದು ದಿನ ತಡವಾದ ಕೂಡಲೇ ಮೂತ್ರ ತಪಾಸಣೆ ಮಾಡಿಸಿ. ವೈದ್ಯರನ್ನು ಸಂಪರ್ಕಿಸಿ.  

No comments:

Post a Comment