Monday, 7 July 2014

ಮಂಡೇಲಾ ಮತ್ತು ಆಫ್ರಿಕಾ: ನೋ ಈಸಿ ವಾಕ್ ಟು ಫ್ರೀಡಂ..ಏಳು ಬಣ್ಣ ನುಂಗಿ ಕಪ್ಪು ಕತ್ತಲಾಯಿತು


ಹೋಮೋ ಸೆಪಿಯನ್ ಎಂಬ ಎರಡು ಕಾಲಿನ ಪ್ರಾಣಿ ತನ್ನ ಪೂರ್ವಜ ಮಂಗನಿಂದ ಮೊದಲು ರೂಪುಗೊಂಡಿದ್ದೇ ಆಫ್ರಿಕಾದಲ್ಲಿ. ಆಫ್ರಿಕಾ ಎಂಬ ಅಸಂಖ್ಯ ಬುಡಕಟ್ಟು ಕುಲಗಳ ನಾಡು ಸಮೃದ್ಧ ನದಿ-ಸರೋವರ ತೀರ ಪ್ರದೇಶಗಳನ್ನೂ, ಪ್ರಪಂಚದಲ್ಲೇ ದೊಡ್ಡ ಮರುಭೂಮಿ ಸಹಾರಾವನ್ನೂ; ಚಿನ್ನ, ವಜ್ರದ ಅಮೂಲ್ಯ ಗಣಿಗಳನ್ನೂ, ಭೀಕರ ಬರಗಾಲದ ರ‍್ವಾಂಡಾ, ಈಥಿಯೋಪಿಯಾ, ಸೊಮಾಲಿಯಾಗಳನ್ನೂ; ಸಧೃಢ ಕ್ರೀಡಾಪಟುಗಳನ್ನೂ, ಜಗತ್ತಿನಲ್ಲೇ ಅತಿ ಹೆಚ್ಚು ಅಪೌಷ್ಟಿಕತೆ, ಅನಕ್ಷರತೆಯನ್ನೂ ಏಕಕಾಲದಲ್ಲಿ ಹೊಂದಿ ಕಾಮನ ಬಿಲ್ಲಿನ ಬಣ್ಣಗಳನೆಲ್ಲ ತನ್ನ ಕಗ್ಗತ್ತಲೆಯಲ್ಲಿ ಕರಗಿಸಿಬಿಟ್ಟಿದೆ. ಅಪರಿಮಿತ ಸಂಪನ್ಮೂಲದ ಹೊರತಾಗಿಯೂ ಅಂತರ್ಯುದ್ಧದಲ್ಲಿ; ಸರ್ವಾಧಿಕಾರಿಗಳ ದುಷ್ಟ ರಾಜಕಾರಣದಲ್ಲಿ; ಸಾಂಕ್ರಾಮಿಕ ರೋಗಗಳಲ್ಲಿ; ವ್ಯಾಪಾರೀ ವಸಾಹತುಶಾಹಿಗಳ ಕುಯುಕ್ತಿಯ ನಡೆಗಳಲ್ಲಿ ಸೊರಗಿ ಹೋಗಿದೆ.

ಜನಸಂಖ್ಯೆಯ ೫೦% ೧೯ ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಿರುವ ಎಳೆಯರ ಖಂಡ ಆಫ್ರಿಕಾ ಮನುಷ್ಯನ ಅತಿ ಹಳೆಯ ವಾಸಸ್ಥಳ. ಒಂದು ಬಿಲಿಯನ್ ಜನಸಂಖ್ಯೆಯಿರುವ ೫೪ ದೇಶಗಳ ಗುಚ್ಛ. ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳು ಕಳೆದ ಸಹಸ್ರಮಾನದಿಂದಲೂ ಅಲ್ಲಿ ಮುಖಾಮುಖಿಯಾಗಿವೆ. ವಸಾಹತುಶಾಹಿಗಳು ಬರುವ ಮೊದಲು ೧೦ ಸಾವಿರ ಭಿನ್ನ ಪಾಳೆಯಪಟ್ಟು-ರಾಜ್ಯಗಳಿದ್ದ ಆಫ್ರಿಕಾದಲ್ಲಿ ಬೇಟೆ ಕುಲಗಳ ಅಧೀನ ಪ್ರದೇಶದಿಂದ ಹಿಡಿದು ರಾಜ್ಯ-ಸಾಮ್ರಾಜ್ಯದ ತನಕ ವಿಭಿನ್ನ ರೂಪದ ಆಳ್ವಿಕರ ಗುಂಪುಗಳಿದ್ದವು.

ಬಹುಶಃ ಭೂಮಿಯ ಇನ್ಯಾವ ಭಾಗದಲ್ಲೂ ಕಾಣದ ಭೀಕರ ಗುಲಾಮಿ ವ್ಯಾಪಾರ ನಡೆದ ನೆಲ ಆಫ್ರಿಕಾ. ಪ್ರಾಕೃತಿಕ ಸಂಪನ್ಮೂಲಕ್ಕಿಂತ ಹೆಚ್ಚು ಗುಲಾಮರನ್ನೇ ಅಲ್ಲಿನ ಆಳ್ವಿಕರು ವ್ಯಾಪಾರದ ವಸ್ತುವಾಗಿಸಿದ್ದರು. ಅರಬ್ ಗುಲಾಮಿ ವಹಿವಾಟು ಒಂದೇ ೭ರಿಂದ ೨೦ನೇ ಶತಮಾನದವರೆಗೆ ಹಿಂದೂ ಮಹಾಸಾಗರ ದಾರಿಯಲ್ಲಿ ೧೮ ಮಿಲಿಯನ್ ಗುಲಾಮರನ್ನು; ಅಟ್ಲಾಂಟಿಕ್ ದಾರಿಯಲ್ಲಿ ೭-೧೨ ಮಿಲಿಯನ್ ಗುಲಾಮರನ್ನು ಸಾಗಾಟ ಮಾಡಿ ಹೊಸಜಗತ್ತಿಗೆ ಮಾರಿದೆ. ಒಂದರ್ಥದಲ್ಲಿ ಜಗತ್ತಿನಾದ್ಯಂತ ತುಂಬಿಕೊಂಡ ಆಫ್ರಿಕನ್ ಗುಲಾಮರಿಂದ ಕಳೆದ ಸಹಸ್ರಮಾನದಲ್ಲೇ ಆಫ್ರಿಕಾ ಜಾಗತೀಕರಣಗೊಂಡಿದೆ. ಬರಬರುತ್ತ ಹೊಸಜಗಕ್ಕೆ ಕಡಿಮೆಯಾದ ಗುಲಾಮರ ಅವಶ್ಯಕತೆ, ಗುಲಾಮಿ ಪದ್ಧತಿ ನಿಷೇಧ ಕಾಯ್ದೆಗಳು ಗುಲಾಮಿ ವ್ಯಾಪಾರ ನಿಲಿಸಿದವು. ೧೮೦೮ರಿಂದ ೧೮೬೦ರ ತನಕ ರಾಯಲ್ ನೇವಿ ಒಂದೇ ೧.೬ ಮಿಲಿಯನ್ ಗುಲಾಮರನ್ನು ಹಡಗುಗಳಿಂದ ಬಿಡಿಸಿ ವಾಪಸು ಅವರ ನಾಡಿಗೆ ಕಳಿಸಿತು. ಆದರೆ ಗುಲಾಮಿ ವ್ಯಾಪಾರ ನಿಂತಿದ್ದೇ ಆಫ್ರಿಕಾದ ಸಾಮ್ರಾಜ್ಯ-ವ್ಯಾಪಾರ-ವಹಿವಾಟಿನ ಸ್ವರೂಪವೇ ಬದಲಾಯಿತು. ಕೆಲವು ರಾಜ್ಯಗಳು ಕುಸಿದು ಅಂತರ್ಯುದ್ಧದಲ್ಲಿ ನಾಶವಾದರೆ ಮತ್ತೆ ಕೆಲ ರಾಜ್ಯಗಳು ಕೋಕೋ, ಮರಮುಟ್ಟು, ಚಿನ್ನ, ಎಣ್ಣೆಯ ವ್ಯಾಪಾರದಲ್ಲಿ ತೊಡಗಿದವು.

ವಸಾಹತುಶಾಹಿ ಆಳ್ವಿಕೆಗೊಳಪಟ್ಟಮೇಲೆ ಮಾನವ ಶೋಷಣೆಯ ಹೊಸ ಅಧ್ಯಾಯ ಶುರುವಾಯಿತು. ಯೂರೋಪಿನ ಸಾಮ್ರಾಜ್ಯಶಾಹಿಗಳ ಕಾಲನಿಯಾಗಿದ್ದ ಆಫ್ರಿಕಾ ಎಷ್ಟೋ ಹಿಂಸಾತ್ಮಕ ಹೋರಾಟಗಳ ನಂತರ ಎರಡನೇ ಮಹಾಯುದ್ಧದ ಆಸುಪಾಸು ಸ್ವತಂತ್ರ ದೇಶಗಳ ಖಂಡವಾಗಿ ರೂಪುಗೊಂಡಿತು. ಆದರೆ ಆಫ್ರಿಕಾದಲ್ಲಿ ಇಂದು ಹಲವು ರಿಪಬ್ಲಿಕ್‌ಗಳಿದ್ದರೂ ಪ್ರತಿ ರಿಪಬ್ಲಿಕ್ ಒಳಗಿರುವ ಬುಡಕಟ್ಟುಗಳು ತಮ್ಮದೇ ಸ್ವಂತ ಆಡಳಿತ, ನೀತಿನಿಯಮ ಹೊಂದಿ ಮರಿ ರಿಪಬ್ಲಿಕ್‌ಗಳಂತೆ ಕಾರ್ಯ ನಿರ್ವಹಿಸುತ್ತಲಿವೆ. ರಾಷ್ಟ್ರೀಯತೆಯ ಮನೋಭಾವ ಬೆಳೆಯಗೊಡದೆ ಪರಸ್ಪರ ಅಂತರ್ಯುದ್ಧದಲ್ಲಿ ತೊಡಗಿವೆ. ಮಾನವ ಅಭಿವೃದ್ಧಿ ಸೂಚ್ಯಂಕದ ಅಂಕಿಸಂಖ್ಯೆಯ ರಸಾತಳದಲ್ಲಿವೆ. ಹೊಸಹೊಸ ಸಾಂಕ್ರಾಮಿಕ ರೋಗಗಳು ಆ ನಾಡನ್ನು ಮೊದಲು ಅಮರಿಕೊಳ್ಳುತ್ತವೆ. ಎಚ್‌ಐವಿ ಒಂದು ಮಹಾಪಿಡುಗಾಗಿ ಬಾಧಿಸುತ್ತಿದೆ. ಮನುಷ್ಯ ಕಳ್ಳಸಾಗಾಣಿಕೆ, ಮಾದಕ ವಸ್ತು ವ್ಯಾಪಾರ ಅವ್ಯಾಹತವಾಗಿ ನಡೆಯುತ್ತಿದೆ. ತೀವ್ರ ಬಡತನವಿದೆ. ಅತಿಹೆಚ್ಚು ಅಪರಾಧ ಸರಾಸರಿಯಿದೆ.

ವರ್ಣಭೇದ, ಗುಲಾಮಿ ಸ್ಥಿತಿ, ದಲ್ಲಾಳಿ, ಸರ್ವಾಧಿಕಾರಿ - ಹೀಗೆ ಹಲವು ಗುಣಗಳ ದ್ರಾವಣದಂತಿರುವ ಆಫ್ರಿಕನ್ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು, ಇವತ್ತಿನ ಇಡೀ ಆಫ್ರಿಕಾವನ್ನು ಗ್ರಹಿಸಲು ಅದರ ನೆಲ-ಜಲ-ಜನರ ಇತಿಹಾಸವನ್ನು ನೋಡಲೇಬೇಕು. ಆಗ ಮಾತ್ರ ಕಗ್ಗತ್ತಲ ಖಂಡದ ಇತಿಹಾಸದ ನಡುವೆ ಆವಾಗೀವಾಗ ಜನರನ್ನು ಒಗ್ಗೂಡಿಸುತ್ತ, ಹೋರಾಟಕ್ಕೆ ಅಣಿಗೊಳಿಸಲು ಯತ್ನಿಸಿದ ದನಿಗಳೂ; ಇಡೀ ಆಫ್ರಿಕಾ ಖಂಡವನ್ನು ಒಂದೇ ಆಗಿಸುವ ಪ್ರಯತ್ನದ ಹಲವು ಕನಸು-ಹೋರಾಟಗಳೂ, ಅದರ ವಿಶೇಷತೆಯೂ ಅರಿವಾಗುತ್ತದೆ. ಮೊನ್ನೆ ಮರೆಯಾದ ಆಫ್ರಿಕಾ ನೆಲದ ಅಮೂಲ್ಯ ವಜ್ರ ರೋಲಿಹ್ಲಾಹ್ಲಾ ಮದಿಬಾ ಮಂಡೇಲಾರಂತೆಯೇ ಸಿಸಿಲೊ, ಡೆಸ್ಮಂಡ್ ಟುಟು, ಬುಥೆಲೆಜಿ, ವಂಗಾರಿ ಮಥಾಯ್, ಅಚಿಬೆ, ಗೂಗಿ ಥಿಯಾಂಗೋರಂಥವರು ವಿಮೋಚನೆಯ ಹಾದಿಯ ಪ್ರವರ್ತಕರೆಂದು ಏಕೆ ಬಣ್ಣಿಸಲ್ಪಡುತ್ತಾರೆ ಎಂದೂ ತಿಳಿಯುತ್ತದೆ.

ರೋಲಿಹ್ಲಾಹ್ಲಾ = ‘ತೊಂದರೆ ಕೊಡುವವ’೧೯೧೮ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿದ ಮಂಡೇಲಾ ಸ್ವಾತಂತ್ರ್ಯದೆಡೆಗೆ ನಡೆಸಿದ ಪಯಣ ಒಳದಾರಿಯದಲ್ಲ. ಸಿದ್ಧವಾದ ರಾಜಮಾರ್ಗದ ಹಾದಿಯೂ ಅಲ್ಲ. ಅವರು ಭಿನ್ನವಾದ ಹಾಗೂ ಸಾಧ್ಯವಿರುವ ಹಲವು ಹಾದಿಗಳನ್ನು ಪರೀಕ್ಷಿಸಿ ತಮ್ಮ ಗುರಿಯತ್ತ ಸಾಗಿದ್ದಾರೆ. ಅವರು ಹುಟ್ಟುವ ಹೊತ್ತಿಗೆ ದಕ್ಷಿಣ ಆಫ್ರಿಕಾದ ರಾಜಕೀಯ ಚಟುವಟಿಕೆಗಳು ಬಿರುಸಾಗಿದ್ದವು. ಆಗಷ್ಟೇ ಸ್ವತಂತ್ರಗೊಂಡ ದೇಶದಲ್ಲಿ ಸೌಥ್ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎಎನ್‌ಸಿ) ತನ್ನ ಕಾರ್ಯ ಚಟುವಟಿಕೆಯನ್ನು ಆರಂಭಿಸಿತ್ತು. ‘ಈ ಸಾರ್ವಜನಿಕ ಸ್ಥಳವನ್ನು, ಸೌಲಭ್ಯವನ್ನು ಬಿಳಿಯರಷ್ಟೇ ಉಪಯೋಗಿಸಬೇಕು’ ಎಂಬ ಫಲಕ ಎಲ್ಲೆಂದರಲ್ಲಿ ಕಾಣುತ್ತಿತ್ತು. ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯಿತ್ತು. ನಿರಾಯುಧರಾಗಿದ್ದ, ನಾಗರಿಕ ದುಷ್ಟ ವರಸೆಗಳ ಅರಿವಿರದ ಹಾಗೂ ಇಂಗ್ಲಿಷ್ ಬರದ ಕರಿಯರನ್ನು ಬಿಳಿಯರು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಿದ್ದರು.

೧೯೧೩ರಲ್ಲಿ ಬಂದ ನೇಟಿವ್ಸ್ ಲ್ಯಾಂಡ್ ಆಕ್ಟ್ ಕರಿಯರು ಭೂಮಿ ಮತ್ತಿತರೆ ಸಂಪನ್ಮೂಲಗಳ ಮಾಲೀಕತ್ವ ಹೊಂದದಂತೆ ನಿರ್ಬಂಧ ವಿಧಿಸಿತು. ಇಡೀ ದೇಶದಲ್ಲಿ ೭೫% ಜನಸಂಖ್ಯೆಯಿದ್ದ ಕರಿಯರು ೭% ಸಂಪನ್ಮೂಲದ ಮೇಲಷ್ಟೇ ಹಿಡಿತ ಪಡೆದಿದ್ದರು. ವರ್ಣಭೇಧ ನೀತಿ ಉತ್ತುಂಗದಲ್ಲಿದ್ದಾಗ ಹುಟ್ಟಿದ, ಬುಡಕಟ್ಟು ಕುಲವೊಂದರ ನಾಯಕನ ವಂಶಸ್ಥನಾದ ಹುಡುಗ ರೋಲಿಹ್ಲಾಹ್ಲಾ ಮಿಷನರಿ ಶಾಲೆಗೆ ಕಳಿಸಲ್ಪಟ್ಟ. ಪ್ರತಿ ಮಗುವಿಗೂ ಹೊಸ ಹೆಸರು ಕೊಟ್ಟು ಶಾಲೆಗೆ ಸೇರಿಸಿಕೊಳ್ಳುತ್ತಿದ್ದ ಅಲ್ಲಿನ ಉಪಾಧ್ಯಾಯಿನಿ ಮದಿಬಾಗೆ ಕೊಟ್ಟ ಹೆಸರು ನೆಲ್ಸನ್. ಅವನ ಭಾಷೆಯಲ್ಲಿ ತೊಂದರೆ ಕೊಡುವವ ಎಂಬರ್ಥದ ಹೆಸರು ಹೊಂದಿದ್ದ ರೋಲಿಹ್ಲಾಹ್ಲಾಗೆ ಹೊಸ ಭಾಷೆಯು ಹೆಸರಷ್ಟೇ ಅಲ್ಲ, ತನ್ನ ಸಮುದಾಯ, ಅದರ ಕಷ್ಟ-ಹಿರಿಮೆಗಳು, ಎದುರಿಸುತ್ತಿದ್ದ ತಾರತಮ್ಯ ಎಲ್ಲವನ್ನೂ ಅರಿಯಲು ಸಹಾಯ ಮಾಡಿತು.

೧೯೩೬ರಲ್ಲಿ ಕರಿಯರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು. ಇಡೀ ಜನಸಮುದಾಯವನ್ನು ಬಿಳಿಯರು, ಕರಿಯರು ಮತ್ತು ವರ್ಣೀಯರು ಎಂದು ಮೂರು ಭಾಗ ಮಾಡಿ ಎಲ್ಲರಿಗೂ ಬೇರೆಬೇರೆ ಹಕ್ಕು, ಅಧಿಕಾರ ನೀಡಲಾಗಿತ್ತು. ವಿದ್ಯಾರ್ಥಿಯಾಗಿ ಮಂಡೇಲಾ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದ್ದರು. ೧೯೪೩ರಲ್ಲಿ ಎಎನ್‌ಸಿ ಯುತ್ ವಿಂಗ್‌ನ ಪದಾಧಿಕಾರಿಯಾದರು. ಬಸ್ ದರ ಏರಿಕೆ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದರು. ೧೯೪೮ರಲ್ಲಿ ಚುನಾವಣೆ ನಡೆದು ಸರ್ಕಾರ ರಚನೆಯಾದಾಗ ಬಿಳಿಯರಷ್ಟೇ ಮತದಾನ ಮಾಡಿದ್ದರು. ಈ ಅನ್ಯಾಯದ ವಿರುದ್ಧ ಅಲ್ಲಿನ ಭಾರತೀಯರಂತೆ ಬಂದ್, ಸತ್ಯಾಗ್ರಹದಂತಹ ಕ್ರಮಗಳ ಮೂಲಕ ಹೋರಾಟ ನಡೆಯಬೇಕೆಂದು ಮಂಡೇಲಾ ಭಾವಿಸಿದ್ದರು. ೧೯೫೦ರಲ್ಲಿ ಎಎನ್‌ಸಿಯ ಕಾರ್ಯಕಾರಿ ಸಮಿತಿ ಸೇರಿದರು.

ಇಲ್ಲಿ ಕಮ್ಯುನಿಸ್ಟ್ ಪಕ್ಷದ ಬಗೆಗೆ ಅವರ ನಿಲುವುಗಳ ಕುರಿತು ಕೆಲ ಮಾತು ಹೇಳಬೇಕು ಏಕೆಂದರೆ ಅವರ ನಿಧನದವರೆಗೂ ಎಎನ್‌ಸಿಯಾಗಲೀ, ದಕ್ಷಿಣ ಆಫ್ರಿಕಾ ಕಮ್ಯುನಿಸ್ಟ್ ಪಕ್ಷವಾಗಲೀ ಅವರ ಕಮ್ಯುನಿಸ್ಟ್ ನಂಟನ್ನು ರಾಜಕೀಯ ಕಾರಣಗಳಿಗಾಗಿ ಬಹಿರಂಗಗೊಳಿಸಿರಲಿಲ್ಲ. ಎಲ್ಲ ಬಣ್ಣದವರನ್ನೂ ಒಟ್ಟು ಹಾಕುತ್ತಿದ್ದ ಕಮ್ಯುನಿಸ್ಟ್ ಪಕ್ಷದತ್ತ ವಿದ್ಯಾರ್ಥಿ ದೆಸೆಯಲ್ಲಿ ಒಲವು ಹೊಂದಿದ್ದರೂ ಆಳವಾಗಿ ಕ್ರಿಶ್ಚಿಯನ್ ಧರ್ಮದಲ್ಲಿ ನಂಬಿಕೆ ಹೊಂದಿದ್ದ ಕಾರಣ ಹಾಗೂ ಅದು ವರ್ಗ ಸಂಘರ್ಷದ ಮಾತುಗಳನಷ್ಟೇ ಆಡುತ್ತಿದ್ದ ಕಾರಣ ಅವರು ಆ ಪಕ್ಷ ಸೇರಿರಲಿಲ್ಲ. ಎಎನ್‌ಸಿ ಮಾತ್ರ ಕರಿಯರ ವಿಮೋಚನೆಯ ಹೋರಾಟ ಮಾಡಬಹುದೇ ಹೊರತು ಉಳಿದ ಯಾವ ಗುಂಪಿನ ಹೋರಾಟವೂ ಸಿಂಧುವಲ್ಲ; ಕರಿಯರ ಬಿಡುಗಡೆಯ ಹೋರಾಟ ಕೇವಲ ಕರಿಯರಿರುವ ಎಎನ್‌ಸಿಯಿಂದಲೇ ಆಗಬೇಕೇ ಹೊರತು ಬಹುವರ್ಣೀಯ ಕಮ್ಯುನಿಸ್ಟ್ ಪಕ್ಷದಿಂದಲ್ಲ ಎಂದು ಭಾವಿಸಿ ತನ್ನ ಪಕ್ಷದೊಳ ಬಂದ ಕಮ್ಯುನಿಸ್ಟ್ ಒಲವಿನ ನಾಯಕರನ್ನೂ ವಿರೋಧಿಸುತ್ತಿದ್ದರು. ೧೯೫೦ರಲ್ಲಿ ವಾಕ್ ಸ್ವಾತಂತ್ರ್ಯ ಕುರಿತ ಹಕ್ಕೊತ್ತಾಯ ಸಮಾವೇಶ ಜರುಗಿ ವರ್ಣಭೇದ ನೀತಿಯ ವಿರುದ್ಧ ಪ್ರತಿಭಟನೆ ನಡೆದರೂ ಅದು ಎಎನ್‌ಸಿ ನೇತೃತ್ವದಲ್ಲಿ ಆಗಿಲ್ಲದೇ ಇದ್ದುದರಿಂದ ನಿರಾಕರಿಸಿದ್ದರು. ಆದರೆ ಅದೇ ವರ್ಷ ‘ಕಮ್ಯುನಿಸಂ ಸಪ್ರೆಷನ್ ಆಕ್ಟ್’ ಬಂದ ಮೇಲೆ ಯಾವ ಗುಂಪೂ ಪ್ರತಿಭಟನೆ ನಡೆಸುವುದು ಕಷ್ಟವಾಯಿತು. ಅದೇ ಹೊತ್ತಿಗೆ ಮಾರ್ಕ್ಸ್, ಎಂಗೆಲ್ಸ್, ಮಾವೋ, ಲೆನಿನ್‌ರನ್ನು ಓದಿಕೊಂಡ ಮಂಡೇಲಾ ಅಭಿಪ್ರಾಯಗಳು ಸಂಪೂರ್ಣ ಬದಲಾದವು. ೧೯೫೨ರಲ್ಲಿ ದಕ್ಷಿಣ ಆಫ್ರಿಕಾ ಕಮ್ಯುನಿಸ್ಟ್ ಪಕ್ಷ ಸೇರಿದರು.

೧೯೫೨ರಲ್ಲಿ ಎಎನ್‌ಸಿಯು ಭಾರತೀಯರು ಹಾಗೂ ಕಮ್ಯುನಿಸ್ಟ್ ಪಕ್ಷದೊಂದಿಗೆ ಸೇರಿ ಸಂಘಟಿಸಿದ ‘ಡಿಫಾಯನ್ಸ್ ಕ್ಯಾಂಪೇನ್’ನಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ೧೦ ಸಾವಿರ ಜನರೆದುರು ಮಾತನಾಡಿದ ಮಂಡೇಲಾ ಗಾಂಧಿಯ ಅಹಿಂಸಾತ್ಮಕ ಮಾರ್ಗವನ್ನು ಪ್ರತಿಪಾದಿಸಿದರು. ಎಎನ್‌ಸಿ ಸದಸ್ಯತ್ವ ಹೆಚ್ಚುತ್ತ ಹೋದಾಗ ಸರ್ಕಾರವು ಅದರ ನಾಯಕರು ಸಾರ್ವಜನಿಕ ಭಾಷಣ ಮಾಡುವುದನ್ನು ನಿಷೇಧಿಸಿತು. ಮಂಡೇಲಾರನ್ನು ಕಮ್ಯುನಿಸಂ ಪ್ರತಿಪಾದಿಸಿದ ಕಾರಣ ಕಠಿಣ ಕೆಲಸದ ಸೆರೆವಾಸದ ಶಿಕ್ಷೆ ವಿಧಿಸಿ ಬಂಧಿಸಿ, ಒಬ್ಬರಿಗಿಂತ ಹೆಚ್ಚು ಜನರೊಡನೆ ಮಾತನಾಡಬಾರದೆಂಬ ನಿರ್ಬಂಧದೊಂದಿಗೆ ಬಿಡುಗಡೆ ಮಾಡಲಾಯ್ತು. ಎಎನ್‌ಸಿ ಸಭೆಗಳಲ್ಲಿ ಅವರ ಭಾಷಣವನ್ನು ಬೇರೆಯವರು ಓದಬಹುದಿತ್ತು. ಮಂಡೇಲಾರ ನಿಕಟವರ್ತಿ ನೆಹರೂ ಬರೆದ ಸಾಲಿನ ಶೀರ್ಷಿಕೆ ಹೊತ್ತ ಅಂಥ ಒಂದು ಪ್ರಸಿದ್ಧ ಭಾಷಣ, ‘ನೋ ಈಸಿ ವಾಕ್ ಟು ಫ್ರೀಡಂ..’

೧೯೫೫ರಲ್ಲಿ ಜೋಹಾನ್ಸ್‌ಬರ್ಗ್‌ನ ಕರಿಯರಿದ್ದ ಪ್ರದೇಶವೊಂದನ್ನು ನೆಲಸಮಗೊಳಿಸತೊಡಗಿದಾಗ ಅದನ್ನು ಪ್ರತಿಭಟಿಸಿದರೂ ತಡೆಯಲಾಗಲಿಲ್ಲ. ಪ್ರತಿಭಟನೆಯ ದಾರಿ ವಿಫಲವೆನಿಸಿದಾಗ ಸಶಸ್ತ್ರ ಹೋರಾಟವೇ ಮಾರ್ಗ ಎಂದು ಮಂಡೇಲಾ ಭಾವಿಸಿದರು. ಆಗಲೇ ಚೀನಾದಿಂದ ಶಸ್ತ್ರಾಸ್ತ್ರ ಸಹಾಯ ಪಡೆವ ಸಲಹೆಯನ್ನೂ ಸಂಗಾತಿಗಳ ಮುಂದಿಟ್ಟರು. ಆದರೆ ಚೀನಾ ಹೋರಾಟವನ್ನು ಬೆಂಬಲಿಸಿತಾದರೂ ಸಶಸ್ತ್ರ ಕ್ರಾಂತಿಗೆ ಸಮಯ ಸೂಕ್ತವಾಗಿಲ್ಲವೆಂದು ಹೇಳಿತು. ಸರ್ಕಾರದ ಮೇಲೆ ಒತ್ತಡ ತರಲು ಸೈನಿಕರ ಸೆಟಲ್‌ಮೆಂಟ್‌ಗಳು, ರಸ್ತೆ, ದೂರವಾಣಿ ಕಚೇರಿ, ವಿದ್ಯುತ್ ಸ್ಥಾವರ ಮೊದಲಾದ ಕಡೆ ಬಾಂಬ್ ದಾಳಿ ನಡೆಸಲಾಯಿತು. ಸಾರ್ವಜನಿಕರ ಸಾವುನೋವು ಅತಿ ಕಡಿಮೆ ಆಗಲಿ ಎಂಬ ಕಾರಣಕ್ಕೆ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಪರಸ್ಪರ ವೈರತ್ವ, ಸ್ಪರ್ಧೆ ಹೊಂದಿದ್ದ; ಹಿಂಸೆಯನ್ನೇ ಮೂಲ ಅಸ್ತ್ರವನ್ನಾಗಿಸಿಕೊಂಡಿದ್ದ ಹಲವು ಬುಡಕಟ್ಟು ಗುಂಪುಗಳೂ ವಸಾಹತುಶಾಹಿ ವಿರುದ್ಧ ಹೋರಾಟದಲ್ಲಿ ತೊಡಗಿದ್ದವು. ದೊಡ್ಡ ಪ್ರಮಾಣದ ಹಿಂಸೆ, ರಕ್ತಪಾತ ತಪ್ಪಿಸಲು ಹಾಗೂ ತಂತಮ್ಮಲ್ಲೇ ಹೊಡೆದಾಡುತ್ತಿದ್ದ ವಿಭಿನ್ನ ಪಂಗಡಗಳ ನಡುವೆ ಐಕ್ಯತೆ ತರಲು ‘ಸಾವು ನೋವು ಅತಿ ಕಡಿಮೆ ಇರುವಂತೆ ಸಶಸ್ತ್ರ ಕಾರ್ಯಾಚರಣೆ ನಡೆಸುತ್ತೇವೆ’ ಎಂದು ಮಂಡೇಲಾ ಹೇಳಿದರು.

೧೯೫೬ರಲ್ಲಿ ದೇಶದ್ರೋಹದ ಆಪಾದನೆ ಮೇಲೆ ಬಂಧನವಾಯ್ತು. ಬೇಲ್ ಮೇಲೆ ಬಿಡುಗಡೆಯೂ ಆಯಿತು. ಸಾರ್ವಜನಿಕವಾಗಿ ತಿರುಗಾಡಲು ಕರಿಯರಿಗೆ ಅನುಮತಿ ನೀಡುವ ಪಾಸ್‌ಗಳನ್ನು ರಾಶಿ ಹಾಕಿ ಸುಟ್ಟರು. ಮಂಡೇಲಾ ಡ್ರೈವರನಂತೆ ವೇಷ ಮರೆಸಿ ದೇಶ ಸುತ್ತಿದರು. ಕ್ಯಾಸ್ಟ್ರೋ ಅವರ ೨೬ ಜುಲೈ ಚಳುವಳಿಯಿಂದ ಪ್ರೇರಿತರಾಗಿ ೧೯೬೧ರಲ್ಲಿ ತೀವ್ರಗಾಮಿ ಗುಂಪು ‘ಎಂಕೆ’ ಸಂಘಟನೆಯನ್ನು ಗೆಳೆಯರೊಂದಿಗೆ ಆರಂಭಿಸಿದರು. ಎಎನ್‌ಸಿ ನಾಯಕ ಲುಥುಲಿ ೧೯೬೧ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಾಗ ಎಂಕೆ ಗುಂಪು ೫೭ ಕಡೆ ಬಾಂಬ್ ಸಿಡಿಸುವ ಮೂಲಕ ತನ್ನ ಅಸ್ತಿತ್ವ ಸಾಬೀತುಪಡಿಸಿತು.

೧೯೬೨ರಲ್ಲಿ ಸಬೊಟೇಜ್ ಕ್ಯಾಂಪೇನ್ ಶುರುವಾಯಿತು. ಮಂಡೇಲಾ ಇಡೀ ಆಫ್ರಿಕಾ ತಿರುಗಾಡಿ ಹಣ ಸಂಗ್ರಹಿಸತೊಡಗಿದರು. ಎಲ್ಲ ರಾಷ್ಟ್ರಗಳೂ ಒಗ್ಗೂಡಬೇಕಾದ ಅನಿವಾರ್ಯತೆ ಕುರಿತು ಮಾತನಾಡಿದರು. ಎಂಕೆ ಗುಂಪಿನ ಚಟುವಟಿಕೆ ರಾಷ್ಟ್ರದ್ರೋಹ ಎಂದು ಆಪಾದಿಸಿ ಮಂಡೇಲಾ ಜೊತೆ ಹಲವರನ್ನು ಬಂಧಿಸಲಾಯ್ತು. ಹೊರಗೆ ತಿರುಗಾಡಲು ನೀಡಿದ್ದ ಅನುಮತಿ ಹಿಂಪಡೆಯಲಾಯ್ತು. ಕೋರ್ಟಿನ ವಿಚಾರಣೆಯನ್ನು ತಮ್ಮ ರಾಜಕೀಯ ಭಾಷಣದ ವೇದಿಕೆಯಾಗಿಸಿಕೊಂಡು ತಾಸುಗಟ್ಟಲೇ ಮಾತಾಡುತ್ತಿದ್ದ ವಕೀಲ  ಮಂಡೇಲಾ ತಮ್ಮ ಕೇಸನ್ನು ತಾವೇ ವಾದಿಸಿದರು. ಕೊನೆಗೆ ವಿಚಾರಣೆ ಕೊನೆಗೊಂಡು ಜೀವಾವಧಿ ಜೈಲು ಶಿಕ್ಷೆ ನೀಡಲಾಯ್ತು.೧೯೬೪ರಿಂದ ೮೨ರ ತನಕ ರಾಬನ್ ದ್ವೀಪದ ಸೆರೆಮನೆಯಲ್ಲಿದ್ದ ಮಂಡೇಲಾ ಅತಿ ಕೆಳದರ್ಜೆಯ ಬಂದಿ ಎಂದು ನಮೂದಾಗಿದ್ದರು. ಆದ ಕಾರಣ ಆರು ತಿಂಗಳಿಗೊಂದು ಪತ್ರ ಮತ್ತು ಒಬ್ಬರ ಭೇಟಿ ಮಾತ್ರ ಅವರಿಗೆ ಸಾಧ್ಯವಾಗಿತ್ತು. ಗಣಿಕೆಲಸ ಮಾಡುತ್ತ ರಕ್ಷಣಾ ಕನ್ನಡಕ ಹಾಕಿಕೊಳ್ಳದೇ ಬೆಣಚುಕಲ್ಲಿನ ಮೇಲೆ ಬಿದ್ದ ಬಿಸಿಲಿನ ಪ್ರತಿಫಲನದಿಂದ ಸೂಕ್ಷ್ಮದೃಷ್ಟಿ ನಾಶವಾಯಿತು. ಜೈಲಿನಲ್ಲಿದ್ದಾಗಲೇ ಪ್ರಾಸ್ಟೇಟ್ ಗ್ರಂಥಿಯ ಆಪರೇಷನ್ ಆಯಿತು. ಟಿಬಿಯಿಂದ ಬಾಧಿತರಾಗಿ ಚಿಕಿತ್ಸೆ ಪಡೆದರು. ಜಲ್ಲಿ ಕುಟ್ಟುತ್ತ, ಸುಣ್ಣದ ಭಟ್ಟಿ-ಗಣಿಗಳಲ್ಲಿ ಕೆಲಸ ಮಾಡುತ್ತ ದಿನಗಳೆದರೂ ಇಡೀ ಜಗತ್ತಿನ ಹೋರಾಟಗಾರರ ಸಾಕ್ಷಿಪ್ರಜ್ಞೆಯಾಗಿ ಬೆಳೆದರು. ಮಂಡೇಲಾ ಬಿಡುಗಡೆಗಾಗಿ ೧೯೮೦ರ ಹೊತ್ತಿಗೆ ಅಂತರರಾಷ್ಟ್ರೀಯ ಒತ್ತಡಗಳು ಬೆಳೆಯತೊಡಗಿದರೂ ಅಮೆರಿಕಾ ಮತ್ತು ಬ್ರಿಟನ್ ಅವರನ್ನು ಕಮ್ಯುನಿಸ್ಟ್ ಭಯೋತ್ಪಾದಕ ಎಂದೇ ಪರಿಗಣಿಸಿ ಬಿಡುಗಡೆಯಾಗದಂತೆ ನೋಡಿಕೊಂಡವು.

ನಂತರ ಅವರನ್ನು ಪೋಲ್ಸ್ ಮೂರ್ ಜೈಲಿನಲ್ಲಿ ಆರು ವರ್ಷ, ವಿಕ್ಟರ್ ಜೈಲಿನಲ್ಲಿ ಎರಡು ವರ್ಷ ಇಡಲಾಯ್ತು. ೧೯೮೫ರಲ್ಲಿ ರಾಜಕೀಯ ಚಟುವಟಿಕೆ ನಡೆಸಬಾರದೆಂಬ ಷರತ್ತಿನೊಂದಿಗೆ ಅವರ ಬಿಡುಗಡೆ ಮಾಡುವ ಪ್ರಸ್ತಾಪ ಬಂದಾಗ, ‘ಬಂಧಿತ ಯಾವ ಒಪ್ಪಂದಕ್ಕೂ ಬರಲಾರ, ಎಎನ್‌ಸಿ ನಿಷೇಧಿಸಲ್ಪಟ್ಟಿರುವಾಗ ನಾನಷ್ಟೇ ಬಿಡುಗಡೆಯಾಗಿ ಮಾಡುವುದಾದರೂ ಏನು’ ಎಂದು ಸ್ಪಷ್ಟವಾಗಿ ನಿರಾಕರಿಸಿದರು. ದಕ್ಷಿಣ ಆಫ್ರಿಕಾದ ಮೇಲೆ ಆರ್ಥಿಕ ದಿಗ್ಭಂಧನ ಹೇರಲಾಯಿತು. ಅಂತರರಾಷ್ಟ್ರೀಯ ಒತ್ತಡ ಹೆಚ್ಚುತ್ತ ಹೋದಾಗ ೧೯೯೦ರಲ್ಲಿ ಅವರನ್ನು ಬಿಡುಗಡೆ ಮಾಡಲಾಯ್ತು.  


***

೧೯೯೯ರಲ್ಲಿ ಸಾರ್ವಜನಿಕ ಜೀವನದಿಂದ ನಿವೃತ್ತರಾದರೂ, ನಿವೃತ್ತ ಜೀವನದಿಂದ ನಾನಿನ್ನು ನಿವೃತ್ತನಾದೆ ಎಂದು ೨೦೦೪ರಲ್ಲಿ ಘೋಷಿಸಿಕೊಂಡರೂ, ‘ದಯವಿಟ್ಟು ನೀವು ಕರೆ ಮಾಡಬೇಡಿ, ನಾನೇ ಮಾಡುತ್ತೇನೆ’ ಎಂದು ಅಂಗಲಾಚಿದರೂ, ಮೊನ್ನೆ ಡಿಸೆಂಬರ್ ಆರರಂದು ಕೊನೆಯುಸಿರೆಳೆದರೂ ಅವರಿಗೆ ನಿವೃತ್ತಿ ದೊರೆತಂತಿಲ್ಲ. ಎಲ್ಲರೂ ಒಂದಿಲ್ಲೊಂದು ರೀತಿ ಮಂಡೇಲಾರಿಂದ ಪ್ರಭಾವಿತರಾಗುತ್ತಿದ್ದಾರೆ. ಅದೇ ವೇಳೆ ಮಂಡೇಲಾ ಎಂಬ ಹಿರಿಯಜ್ಜನನ್ನು ಗಾಂಧಿ, ಅಂಬೇಡ್ಕರ್, ಮಾರ್ಟಿನ್ ಲೂಥರ್ ಕಿಂಗ್ ಮೊದಲಾದವರೊಂದಿಗೆ ಹೋಲಿಸಿ ತುಲನಾತ್ಮಕ ಅಧ್ಯಯನಗಳೂ ನಡೆಯುತ್ತಿವೆ. ತೌಲನಿಕ ಮಾತುಗಳೆಲ್ಲ ನಮ್ಮ ಭಾವುಕ ಅಗತ್ಯವನ್ನಷ್ಟೇ ಪೂರೈಸಬಲ್ಲವು.

ಆದರೂ..

‘ದಕ್ಷಿಣ ಆಫ್ರಿಕಾದ ರಾಷ್ಟ್ರಪಿತ’ ಎಂಬ ಗೌರವದಿಂದ, ಗಾಂಧಿಯ ಅಹಿಂಸಾ ತತ್ವದಿಂದ ತಾನು ಪ್ರೇರಿತ ಎಂದು ಹೇಳಿದ ಕಾರಣದಿಂದ ದಕ್ಷಿಣ ಆಫ್ರಿಕಾದ ಗಾಂಧಿ ಎಂಬ ಬಿರುದು ಅವರಿಗೆ ಸಹಜವಾಗಿ ಬಂದುಬಿಟ್ಟಿತು. ಹೋರಾಟಗಾರ ಮಂಡೇಲಾ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಹಾದಿ ಗಾಂಧಿ ಬೋಧಿಸಿದ ಅಹಿಂಸೆಗಿಂತ ಭಿನ್ನವಾಗಿರುವುದು ತಿಳಿಯುತ್ತದೆ. ಬುಡಕಟ್ಟು ಕುಲದ ಮಂಡೇಲಾಗೆ ಹೋರಾಡುವ ಗುಣ ರಕ್ತಗತವಾಗಿ ಬಂದಿತ್ತೇ ಹೊರತು ಅಹಿಂಸೆಯಲ್ಲ. ರಾಬನ್ ದ್ವೀಪದ ಜೈಲಿನಲ್ಲಿದ್ದಾಗಲೂ ಸಹವಾಸಿಗಳು ಜೈಲು ಪರಿಸ್ಥಿತಿ ಸುಧಾರಣೆಗೆ ಉಪವಾಸ ಸತ್ಯಾಗ್ರಹ ಮಾಡಿದಾಗ ಅದು ನಿರುಪಯೋಗಿ ಎಂದೇ ಮಂಡೇಲಾ ಪ್ರತಿಕ್ರಿಯಿಸಿದ್ದರು. ೧೯೯೦ರಲ್ಲಿ ಅವರ ಬಿಡುಗಡೆಯಾದಾಗಲೂ ‘ಎಎನ್‌ಸಿಯ ಶಸ್ತ್ರಸಜ್ಜಿತ ಹೋರಾಟ ನಿಂತಿಲ್ಲ. ಆದರೆ ಅದು ವರ್ಣಭೇದ ನೀತಿಯ ವಿರುದ್ಧ ರಕ್ಷಣಾತ್ಮಕವಾಗಿ ಮಾತ್ರ. ಸರ್ಕಾರ ನಮ್ಮ ಬೇಡಿಕೆಗಳಿಗೆ ಒಪ್ಪಿ ಶಸ್ತ್ರಾಸ್ತ್ರ ಹೋರಾಟಕ್ಕೆ ದಾರಿ ಮಾಡಿಕೊಡಲಾರದೆಂದೇ ಭಾವಿಸಿದ್ದೇನೆ’ ಎಂದು ಹೇಳಿದರು. ಅವರು ಅಹಿಂಸೆಯನ್ನು ನೈತಿಕ ಮಾರ್ಗ ಎಂದು ಭಾವಿಸುವುದಕ್ಕಿಂತ ಅದೊಂದು ವ್ಯಾವಹಾರಿಕ ಮಾರ್ಗವೆಂದು ನಂಬಿದ್ದರು. ಇವು ಗಾಂಧಿಗಿಂತ ಭಿನ್ನ ಅಹಿಂಸಾವಾದಿಯಾಗಿ ಮಂಡೇಲಾರನ್ನು ಕಟ್ಟಿಕೊಡುವ ಅಂಶಗಳು.

ಆದರೆ ಜೈಲಿನಿಂದ ಬಿಡುಗಡೆಯಾಗದ ನಂತರ ಮಂಡೇಲಾ ಗಾಂಧೀತನಕ್ಕೆ ಒಲಿದಂತೆ ಕಾಣುತ್ತದೆ. ವಸಾಹತುಶಾಹಿ ಸರ್ಕಾರವನ್ನು ಮಾತುಕತೆಗೆ ಕರೆದು, ಬಹುವರ್ಣೀಯ ಚುನಾವಣೆಯನ್ನು ನಡೆಸುವಂತೆ ಒಪ್ಪಿಸಿದರು. ವರ್ಣಭೇದ ನೀತಿ ನಿಷೇಧಿಸಲ್ಪಟ್ಟಿತು. ದಕ್ಷಿಣ ಆಫ್ರಿಕಾ ಪರಮಾಣು ಅಸ್ತ್ರಗಳನ್ನು ನಾಶಗೊಳಿಸಿ ಒಪ್ಪಂದಕ್ಕೆ ಸಹಿ ಹಾಕಿತು. ೧೯೯೪ರ ಚುನಾವಣೆಯಲ್ಲಿ ಎಎನ್‌ಸಿ ಗೆಲುವು ಸಾಧಿಸಿ ಅವರು ಅಧ್ಯಕ್ಷರಾದ ಮೇಲೆ ಬಿಳಿಯರ ಮೇಲೆ ಪ್ರತೀಕಾರ ಕ್ರಮಗಳಿಗೆ ಮುಂದಾಗದೇ ‘ಸತ್ಯ ಮತ್ತು ಸಂಧಾನ ಸಮಿತಿ’ಯನ್ನು ರಚಿಸಿದರು. ಸಮಿತಿ ರಚಿಸಿದ ಮಂಡೇಲಾ ನಿರ್ಧಾರ ಮತ್ತು ಅದರೆದುರು ಹಾಜರಾಗುವ ಡಿಕ್ಲರ್ಕ್ ನಿರ್ಧಾರ ಎರಡೂ ಅವರಿಬ್ಬರೂ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಂಚಿಕೊಳ್ಳುವಂತೆ ಮಾಡಿತು. ಈ ಮೊದಲ ಮಾನವ ಹಕ್ಕುಗಳ ಉಲ್ಲಂಘನೆ ಕೇಸುಗಳ ವಿಚಾರಣೆಯನ್ನು ಅದು ಆರಂಭಿಸಿತು.

ಅವಮಾನ-ಶೋಷಣೆಯಿಂದ ಹುಟ್ಟಿದ ಕರಿಯರ ಸಿಟ್ಟು ಬಿಳಿಯರ ಮೇಲಿನ ಹಿಂಸೆಯಲ್ಲಿ ಕೊನೆಗೊಳ್ಳದಂತೆ ನೋಡಿಕೊಂಡರು. ‘ನಾನು ಬಿಳಿಯ ದುರಹಂಕಾರಿಯನ್ನು ಹೇಗೆ ಇಷ್ಟಪಡುವುದಿಲ್ಲವೋ ಹಾಗೇ ದುರಹಂಕಾರಿ ಕರಿಯರನ್ನೂ ಸಹಿಸುವುದಿಲ್ಲ’ ಎಂದು ಹೇಳಿಕೆ ಕೊಟ್ಟರು. ಈ ಮಾತುಗಳ ಹಿಂದೆ ಗಾಂಧಿತನವಿತ್ತು. ಆಫ್ರಿಕಾದ ದುಷ್ಟ ಸರ್ವಾಧಿಕಾರಿಗಳನ್ನು ಗಮನದಲ್ಲಿಟ್ಟುಕೊಂಡರೆ ಅವರೆಲ್ಲ ದಶಕಗಟ್ಟಲೆ ಆಳಿದರು; ಕೆಲವರನ್ನು ಒತ್ತಾಯದಿಂದ ಕೆಳಗಿಳಿಸಬೇಕಾಯಿತು. ಆದರೆ ಮಂಡೇಲಾ ಒಂದು ಅವಧಿಗಷ್ಟೆ ಅಧ್ಯಕ್ಷ ಪದವಿಯಲ್ಲಿದ್ದು ನಂತರ ನಿವೃತ್ತಿಯಾದರು. ಅಧಿಕಾರದೆಡೆಗಿನ ಈ ನಿಸ್ಪೃಹತೆಯಲ್ಲಿ ಗಾಂಧೀತನವಿತ್ತು. ಮನುಷ್ಯನೊಳಗಿನ ಮನುಷ್ಯನನ್ನು ನಾಶಮಾಡುವ ವರ್ಣಭೇದ ಬಿಳಿಯರು-ಕರಿಯರು ಇಬ್ಬರನ್ನೂ ಅಮಾನವೀಯಗೊಳಿಸಿದೆ ಎಂದು ಗುರುತಿಸುವಲ್ಲಿ ಗಾಂಧಿತನವಿತ್ತು. ಆತ ಅನುಸರಿಸಿದ್ದು ಗಾಂಧಿ ಅಹಿಂಸಾವಾದ ಹೌದೋ ಅಲ್ಲವೋ, ಆದರೆ ಶೋಷಿತರನ್ನು ಒಗ್ಗೂಡಿಸುತ್ತಲೇ, ಶೋಷಕರ ವಿರುದ್ಧ ನಿಷ್ಠುರ ನಿಲುವಿಟ್ಟುಕೊಳ್ಳುತ್ತಲೇ, ಎದೆಯಲ್ಲಿ ಎಲ್ಲರಿಗಾಗಿ ಕರುಣೆ ಮತ್ತು ಪ್ರೇಮ ಹೊಂದಿದ್ದ ಮಾನವತಾವಾದಿ ಎಂದಷ್ಟೇ ಅವರ ಕುರಿತು ಹೇಳಬಹುದು.

ಮಂಡೇಲಾ ಗಾಂಧಿಗಿಂತ ಭಿನ್ನ ಎಂದ ಕೂಡಲೇ ಭಾರತೀಯ ಕಣ್ಣುಗಳೆದುರು ಅಂಬೇಡ್ಕರ್ ನಿಲ್ಲುತ್ತಾರೆ. ಅಂಬೇಡ್ಕರ್ ಪ್ರಭಾವ ಅವರ ಮೇಲಿರಲಿಲ್ಲವೇ ಎಂಬ ಕುತೂಹಲ ಹುಟ್ಟುತ್ತದೆ. ಧಾರ್ಮಿಕ-ಸಾಂಸ್ಕೃತಿಕ ಅಸ್ಮಿತೆಗಳ ಮೊರೆಹೋಗದೇ, ರಾಜಕೀಯ ಕಾರಣಗಳಿಂದಲೇ ಸಮುದಾಯಗಳನ್ನು ಒಗ್ಗೂಡಿಸಿ, ಹೋರಾಟದಿಂದಲೇ ತನ್ನ ನೆಲಕ್ಕೆ ಬಿಡುಗಡೆಯನ್ನೂ, ಪ್ರಾತಿನಿಧ್ಯದ ಮೂಲಕ ಅಧಿಕಾರವನ್ನೂ ಗಳಿಸಿಕೊಟ್ಟ ಅಂಬೇಡ್ಕರರ ಹೋರಾಟದೊಂದಿಗೆ ಮಂಡೇಲಾ ಕೆಲ ಸಾಮ್ಯತೆ ಹೊಂದಿದ್ದಾರೆ. ಅಕ್ಷರ ಕಲಿಯದ ಕುಟುಂಬವೊಂದರಿಂದ ಬಂದು, ವಸಾಹತುಶಾಹಿಗಳು ಆರಂಭಿಸಿದ ಶಾಲೆಯಲ್ಲಿ ಇಂಗ್ಲಿಷ್ ಕಲಿತು, ಮುಂದೆ ಅವೇ ಶಿಕ್ಷಣ ಸಂಸ್ಥೆಗಳಲ್ಲಿ ಕಾನೂನು ವ್ಯಾಸಂಗ ಮಾಡಿ, ತನ್ನ ನೆಲದ-ಜನರ ಪರಿಸ್ಥಿತಿಯ ಅರಿವಾಗಿ, ಬಿಡುಗಡೆಯ ದಾರಿಗಾಗಿ ಹೋರಾಟ ರೂಪಿಸಿದ ಮಂಡೇಲಾ ತಾವರಿಯದೇ ಅಂಬೇಡ್ಕರರ ಹಾದಿಯನ್ನೂ ತುಳಿದಿದ್ದಾರೆ. ಅಧಿಕಾರ-ಸಂಪನ್ಮೂಲಗಳಷ್ಟೇ ಅಲ್ಲ, ಬದುಕುವ ಹಕ್ಕು, ಮತದಾನದ ಹಕ್ಕು ಮತ್ತಿತರೆ ರಾಜಕೀಯ ಹಕ್ಕುಗಳಿಂದಲೂ ವಂಚಿತವಾಗಿದ್ದ ಜನಸಮುದಾಯವೊಂದರ ಪ್ರತಿನಿಧಿಯಾಗಿ ಎಳವೆಯಿಂದಲೂ ಹೋರಾಟ ರೂಪಿಸಿದ ಮಂಡೇಲಾ ಅಂಬೇಡ್ಕರ್ ಹೇಗೆ ಭಾರತದಾದ್ಯಂತ ದಲಿತ ಸಮುದಾಯವನ್ನು ಒಂದು ಅಸ್ಮಿತೆಯಡಿ ತರಲು ಶ್ರಮಿಸಿದರೋ ಹಾಗೆಯೇ ಭಿನ್ನ ಜನಾಂಗಗಳ ಆಫ್ರಿಕನ್ನರನ್ನು ಒಂದು ಅಸ್ಮಿತೆಯಡಿ ತರಲು ಯತ್ನಿಸಿದ್ದಾರೆ.

ಆದರೆ ಅಲ್ಲೂ ಭಿನ್ನತೆಗಳಿವೆ. ಅಂಬೇಡ್ಕರ್ ಎಂದೂ ಕಮ್ಯುನಿಸ್ಟ್ ಪಕ್ಷದೊಡನೆ ಸಾಗಲಿಲ್ಲ. ಸಶಸ್ತ್ರ ಕ್ರಾಂತಿಯನ್ನು ಬೆಂಬಲಿಸಲಿಲ್ಲ. ಅಂಬೇಡ್ಕರ್ ಎದುರಿಗಿದ್ದ ಶೋಷಕರು ಅವರದೇ ದೇಶಬಾಂಧವರು. ಆ ತಾರತಮ್ಯಕ್ಕೆ ಕೇವಲ ಆಳರಸರಷ್ಟೇ ಅಲ್ಲ, ಧರ್ಮವೂ ಒಪ್ಪಿಗೆ ನೀಡಿತ್ತು. ತನ್ನದೇ ದೇಶಬಾಂಧವರಿಂದ ಪಡೆಯಲಾಗದ ಹಕ್ಕುಗಳನ್ನು ದೇಶ ಆಕ್ರಮಿಸಿದ್ದ ವಸಾಹತುಶಾಹಿಗಳೊಡನೆ ಚೌಕಾಸಿ ನಡೆಸಿ ಅವರು ಪಡೆಯಬೇಕಿತ್ತು. ಎಂದೇ ಅಂಬೇಡ್ಕರ್ ಕಟ್ಟಬೇಕಿದ್ದ ಹೋರಾಟ, ಕ್ರಮಿಸಬೇಕಿದ್ದ ದಾರಿ ಭಿನ್ನವಾಗಿತ್ತು.

ಭಾರತದ ಪ್ರತಿ ಜಾತಿಯೂ ಒಂದೊಂದು ಧರ್ಮದಂತೆ ವರ್ತಿಸಿದರೆ ಆಫ್ರಿಕಾದ ಒಂದೊಂದು ಬುಡಕಟ್ಟೂ ಒಂದೊಂದು ಗಣರಾಜ್ಯದಂತೆ ವರ್ತಿಸುತ್ತದೆ. ಭಾರತದ ಜಾತಿ ಸಂಘರ್ಷ ಮತ್ತು ಆಫ್ರಿಕಾದ ಬುಡಕಟ್ಟುಗಳ ಸಂಘರ್ಷದ ಸ್ವರೂಪ ಭಿನ್ನವಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಜಾತಿರೋಗದಿಂದ ನರಳುವ ಭಾರತಕ್ಕೆ ಗಾಂಧಿ-ಅಂಬೇಡ್ಕರ್ ಮಾರ್ಗ ಸೂಕ್ತವಾದರೆ; ಅಮೆರಿಕದ ಕರಿಯ ಗುಲಾಮರಿಗೆ ಬೂಕರ್ ವಾಷಿಂಗ್ಟನ್ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಮಾರ್ಗ ಸೂಕ್ತವಾಗುತ್ತದೆ. ಆಫ್ರಿಕಾಗೆ ಮಂಡೇಲಾ, ಟುಟು, ಸಿಸುಲು, ಮಥಾಯಿಯ ಮಾರ್ಗ ಸೂಕ್ತವಾಗಿದೆ. ಇದರರ್ಥ ಜನ ಚಳುವಳಿ ಕಟ್ಟುವ ನಾಯಕರ ಬದ್ಧತೆ, ಕಾಳಜಿ, ಹೋರಾಟಗಳನ್ನು ಹೋಲಿಸಿದಂತೆ ಅವರ ಮಾರ್ಗಗಳನ್ನು ತೌಲನಿಕವಾಗಿ ನೋಡುವುದು ಸಿಂಧುವಲ್ಲ.

ಈ ಹೋಲಿಕೆಗಳೆಲ್ಲ ಒತ್ತಟ್ಟಿಗಿರಲಿ..

೯೫ ವರ್ಷ ಬದುಕಿದ, ಏರು ಹರೆಯದ ೨೭ ವರ್ಷಗಳನ್ನು ಜೈಲಿನಲ್ಲಿ ಕಳೆದ ಬುಡಕಟ್ಟು ನಾಯಕ ಮಂಡೇಲಾ ಎಲ್ಲ ಹೋರಾಟಗಾರರೊಡನೆ ಸಾಮ್ಯತೆಯನ್ನೂ, ಭಿನ್ನತೆಯನ್ನೂ ಹೊಂದಿದಂತೆ ಕಾಣಿಸುತ್ತಾರೆ. ಜೊತೆಗೆ ಮಂಡೇಲಾ ಎಂಬ ಹಿರಿಯಜ್ಜನನ್ನು ಮಂಡೇಲಾ ಆಗಿಯೇ ನೋಡಬೇಕಾದ ಅವಶ್ಯಕತೆಯನ್ನು ಮನಗಾಣಿಸುತ್ತಾರೆ.  

***

ಮಂಡೇಲಾರ ಹೋರಾಟದ ಬದುಕು ನೀಡುವ ಸ್ಫೂರ್ತಿ, ಹುಟ್ಟಿಸುವ ಭರವಸೆಗಳಿಗೆ ಯಾವ ಉತ್ತರಾಧಿಕಾರ ಕಾನೂನೂ ಅನ್ವಯಿಸದೇ ಹೋಗಬಹುದು, ಆದರೆ ಉಸಿರಾಡುವಾಗ ಮತ್ತು ನಂತರ ಅವರ ದೇಹ, ಸಂಪತ್ತುಗಳ ಮೇಲೆ ರಕ್ತಸಂಬಂಧಿಗಳ ಅಧಿಕಾರವಿರುತ್ತದೆ. ಈ ವರ್ಷ ಜೂನ್‌ನಲ್ಲಿ ಪ್ರಾಸ್ಟೇಟ್ ಕ್ಯಾನ್ಸರಿನಿಂದ ಹೆಚ್ಚುಕಮ್ಮಿ ತೀರಿಕೊಂಡಿದ್ದ ಮಂಡೇಲಾ ಡಿಸೆಂಬರ್ ಆರರವರೆಗೆ ಉಸಿರಾಡುತ್ತಿರುವಂತೆ ನೋಡಿಕೊಂಡಿದ್ದು ಉತ್ತರಾಧಿಕಾರದ ವಿವಾದವೇ ಎಂದರೂ ತಪ್ಪಲ್ಲ.

ಸಹಜವಾಗಿಯೇ ೯೫ ವರ್ಷ ತುಂಬು ಜೀವನ ನಡೆಸಿದ ಹೋರಾಟಗಾರನ ವೈಯಕ್ತಿಕ ಬದುಕು ಹಲವು ಏರಿಳಿತಗಳನ್ನು ಕಂಡಿದೆ. ಮೂರು ಮದುವೆ, ಎರಡು ವಿಚ್ಛೇದನ, ಆರು ಮಕ್ಕಳು, ಹಲವು ಮೊಮ್ಮಕ್ಕಳು-ಮರಿಮಕ್ಕಳನ್ನು ಹೊಂದಿದ್ದ ಮಂಡೇಲಾ ಹಲವರನ್ನು ಪ್ರೇಮಿಸಿ ಕೆಲವರನ್ನು ವಿವಾಹವಾದರು. ೧೯೪೪ರಲ್ಲಿ ನರ್ಸ್ ಕೋರ್ಸ್ ಓದುತ್ತಿದ್ದ ಎವೆಲಿನ್‌ರನ್ನು ವಿವಾಹವಾದರು. ಯಹೋವಾನ ಸಾಕ್ಷಿಗಳು ಎಂಬ ಕ್ರಿಶ್ಚಿಯನ್ ಧಾರ್ಮಿಕ ಪಂಥದಲ್ಲಿದ್ದ ಎವೆಲಿನ್ ಕ್ರಮೇಣ ಅವರೊಡನೆ ಭಿನ್ನಾಭಿಪ್ರಾಯ ತಳೆದು ರಾಜಕೀಯ ಸಂಪರ್ಕ, ಹೋರಾಟದಿಂದ ವಿಮುಖರಾದರು. ಎವೆಲಿನ್‌ರ ಧಾರ್ಮಿಕ ಪಂಥ ರಾಜಕೀಯ ಚಟುವಟಿಕೆಯನ್ನು ನಿಷೇಧಿಸಿದರೆ ಮಂಡೇಲಾರ ರಾಜಕೀಯ ಚಟುವಟಿಕೆ ಬೆಳೆಯುತ್ತ ಹೋಯಿತು. ಅದರ ಜೊತೆಜೊತೆಗೆ ಬೇರೆ ಮಹಿಳೆಯರೊಡನೆ ಸ್ನೇಹ-ಸಲುಗೆಯೂ ಆಯಿತು. ಮತ್ತಿಬ್ಬರು ಗೆಳತಿಯರು; ಒಬ್ಬಳೊಡನೆ ಸಂಸಾರ ನಡೆಸಿ ಮಗುವಾಗಿದ್ದು - ಈ ಎಲ್ಲದರಿಂದ ಎವೆಲಿನ್ ಬೇಸರಗೊಂಡು ೧೯೫೮ರಲ್ಲಿ ವಿಚ್ಛೇದನೆ ಪಡೆದರು.

೧೯೫೮ರಲ್ಲಿ ಸಾಮಾಜಿಕ ಕಾರ್ಯಕರ್ತೆ ವಿನ್ನಿ ಪರಿಚಯವಾಗಿ ಮದುವೆಯಾದರು. ಮದುವೆಯಾದ ಕೆಲ ವರ್ಷಗಳಲ್ಲೇ ಸೆರೆಮನೆ ಸೇರಿದ ಮಂಡೇಲಾರ ಹೋರಾಟವನ್ನು ಸಕ್ರಿಯವಾಗಿಟ್ಟಾಕೆ ವಿನ್ನಿ. ತಾನೂ ಜೈಲು ಸೇರುತ್ತ, ಬಿಡುಗಡೆಯಾಗುತ್ತ ೨೭ ವರ್ಷ ಸಂಗಾತಿಗೆ ಬೆಂಬಲವಾಗಿ ನಿಂತರು. ಜೈಲಿನಿಂದ ಹೊರಬಂದ ನಂತರ ಮಂಡೇಲಾ ಆಕೆಯ ಜೊತೆಯೇ ಇದ್ದರೂ ಬೇರೊಬ್ಬ ವ್ಯಕ್ತಿಯೊಡನೆ ವಿನ್ನಿಗಿದ್ದ ಸಂಬಂಧ, ಎಎನ್‌ಸಿಯಲ್ಲಿ ಆಕೆ ನಡೆಸಿದ ಅಕ್ರಮಗಳು, ಹಣ ದುರುಪಯೋಗ ಇಂಥ ಹಲವು ವಿಷಯಗಳಿಂದ ಇಬ್ಬರ ನಡುವೆ ಭಿನ್ನಮತ ಉಂಟಾಗಿ ೧೯೯೨ರಲ್ಲಿ ಡೈವೋರ್ಸ್ ಪಡೆದರು. ತಮ್ಮ ೮೦ನೇ ವಯಸ್ಸಿನಲ್ಲಿ, ೧೯೯೮ರಲ್ಲಿ ತಮಗಿಂತ ೨೭ ವರ್ಷ ಸಣ್ಣವರಾಗಿದ್ದ ಮೊಝಾಂಬಿಕ್‌ನ ಗ್ರಾಕಾ ಮಷೆಲ್ ಜೊತೆ ಮೂರನೇ ಬಾರಿಗೆ ವಿವಾಹವಾದರು.

***ಮಂಡೇಲಾ ೧೯೯೪ರ ಚುನಾವಣೆಗೆ ನಿಂತು ಗೆಲುವು ಸಾಧಿಸಿ, ತನ್ನ ೭೬ನೇ ವಯಸ್ಸಿನಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಕರಿಯ ಅಧ್ಯಕ್ಷರಾದರು.

ಅವರು ಅಧ್ಯಕ್ಷರಾದ ಕಾಲವಾದರೂ ಹೇಗಿತ್ತು? ವರ್ಣಭೇದ ಎಲ್ಲೆಡೆ ಕಾಣಿಸುತ್ತಿತ್ತು. ಕರಿಯರ ನಡುವಿನ ಹಿಂಸೆ ಹೆಚ್ಚುತ್ತ ಸಾವಿರಾರು ಜನ ಸಾಯುತ್ತಿದ್ದರು. ೪ ಕೋಟಿ ಜನಸಂಖ್ಯೆಯ ದಕ್ಷಿಣ ಆಫ್ರಿಕಾದ ೨.೩ ಕೋಟಿ ಜನಸಂಖ್ಯೆಗೆ ವಿದ್ಯುತ್ ಸಂಪರ್ಕವಿರಲಿಲ್ಲ, ಆರೋಗ್ಯ ಸೌಲಭ್ಯವಿರಲಿಲ್ಲ, ಶೌಚಾಲಯವಿರಲಿಲ್ಲ. ೨೦ ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ದೇಶದ ಮೂರನೇ ಒಂದು ಭಾಗ ಜನತೆ ಅನಕ್ಷರಸ್ಥರು. ೧೦% ಜನ ಎಚ್‌ಐವಿ ಪೀಡಿತರು. ಅಪರಾಧ ಅತಿ ಹೆಚ್ಚಿದ್ದು ಬಂಡವಾಳ ಹೂಡಲು ಉದ್ಯಮಿಗಳು ಧೈರ್ಯ ಮಾಡುತ್ತಿರಲಿಲ್ಲ. ನಿರುದ್ಯೋಗ ತಾಂಡವವಾಡುತ್ತಿತ್ತು. ಮಾನವ ಕಳ್ಳ ಸಾಗಣೆ, ಮಾದಕ ವಸ್ತು ವ್ಯವಹಾರ ದೇಶವನ್ನು ನುಂಗುತ್ತಿದ್ದವು. ಕಾಲು ಭಾಗದ ಬಜೆಟ್ ಹಣ ಸಾಲಕ್ಕೆ ಹೋಗುತ್ತಿತ್ತು. ೫೦% ಜನ ಬಡತನ ರೇಖೆಯ ಕೆಳಗೆ ಇದ್ದರು.

ಅಂಥ ಸೂಕ್ಷ್ಮ ಆರ್ಥಿಕ-ಸಾಮಾಜಿಕ ಪರಿಸ್ಥಿತಿಯಲ್ಲಿ ಮಂಡೇಲಾ ವಿಶ್ವಾದ್ಯಂತ ಬೀಸತೊಡಗಿದ್ದ ಆರ್ಥಿಕ ಉದಾರೀಕರಣದ ಸುಳಿಗೆ ಸಿಕ್ಕರು. ವಿದೇಶೀ ಬಂಡವಾಳ ಹರಿದು ಬರಲು ಮುಕ್ತ ಆರ್ಥಿಕ ನೀತಿಯನ್ನು ಅಪ್ಪಿಕೊಂಡರು. ಅದು ೨೧ನೇ ಶತಮಾನದಲ್ಲಿ ದಕ್ಷಿಣ ಆಫ್ರಿಕಾವನ್ನು ‘ಅಭಿವೃದ್ಧಿ’ಯತ್ತ ಕೊಂಡೊಯ್ಯುತ್ತಿದೆಯೆ? ಕರಿಯ ಜನರ ಸ್ಥಿತಿಗತಿಗಳಲ್ಲಿ ಬದಲಾಗಿದೆಯೇ? ಮಂಡೇಲಾರ ಆಡಳಿತ ಹೇಗಿತ್ತು? ಮಂಡೇಲಾರನ್ನು ಪ್ರತಿಮೀಕರಣಗೊಳಿಸದೇ ಈ ಬಗ್ಗೆ ಮುಕ್ತವಾಗಿ ಯೋಚಿಸಬೇಕಿದೆ.

೧೬೫೨ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿ ಕಾಲಿಟ್ಟ ದಿನದಿಂದ ಜನಸಂಖ್ಯೆಯ ಶೇ. ೮.೯ರಷ್ಟಿದ್ದ ಬಿಳಿಯರು ಅಲ್ಲಿನ ಎಲ್ಲ ಸಂಪನ್ಮೂಲವನ್ನು ಬಾಚಿಕೊಳ್ಳುತ್ತ, ಅದರ ಹಕ್ಕುದಾರರಾಗಿದ್ದಾರೆ. ಗ್ರೂಪ್ ಏರಿಯಾ ಆಕ್ಟ್ ದೆಸೆಯಿಂದ ಬಿಳಿಯರಲ್ಲದವರ ಮೇಲೆ ತೀವ್ರ ನಿರ್ಬಂಧ ಹೇರಿದ್ದರಿಂದ ಕರಿಯರು ಅನಿವಾರ್ಯವಾಗಿ ನಗರಗಳಿಂದ ಗ್ರಾಮೀಣ ಭಾಗಕ್ಕೆ ತೆರಳಿ ತೀವ್ರ ಬಡತನದಲ್ಲಿ ಬದುಕು ಕಳೆದಿದ್ದಾರೆ. ಈಗ ಸ್ವಾತಂತ್ರ್ಯ ಬಂದಿದೆ. ಆದರೆ ಬಹುಪಾಲು ಉದ್ದಿಮೆಗಳು, ಬೃಹತ್ ಸಂಪನ್ಮೂಲಗಳು, ವಹಿವಾಟಿನ ಮೇಲೆ ಬಿಳಿಯರ ಹಿಡಿತವೇ ಇದೆ. ಕರಿಯರ ಬಡತನ, ನಿರುದ್ಯೋಗ ಏರುತ್ತಲೇ ಇದ್ದು ಅವರ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ.

ಹಾಗಾದರೆ ಸ್ವಾತಂತ್ರ್ಯ ಬಂದು ಏನು ವ್ಯತ್ಯಾಸವಾಯಿತು?

ಇಷ್ಟೇ ವ್ಯತ್ಯಾಸ, ಎಲ್ಲಕ್ಕೂ ಕರಿಯ ಅಧ್ಯಕ್ಷರ ಅಂಕಿತ ಬೀಳುತ್ತಿದೆ!

ಬಹುಶಃ ಆಫ್ರಿಕಾ ಎಂಬ ವಜ್ರದೊಡಲ ನೆಲಕ್ಕೆ ಗಂಟುಕಳ್ಳರನ್ನು ಓಡಿಸುವವರಷ್ಟೇ ಅಲ್ಲ, ಒಳಗಿನ ಬೆಳಕು ಪ್ರತಿಫಲಿಸುವಂತೆ ಸಾಣೆ ಹಿಡಿವ ಇನ್ನಷ್ಟು ಸಾಣೆಕಾರರೂ ಅವಶ್ಯವಾಗಿದ್ದಾರೆ.

No comments:

Post a Comment