Sunday 13 July 2014

ಅತ್ಯಾಚಾರ - ಬುನಾದಿಯಲ್ಲಿ ಹೂತು ಹೋಗಿರುವ ತಪ್ಪು ಕಲ್ಲು



ಈ ಸುಂದರವಾದ ಗ್ರಹ ಭೂಮಿ ಸಾವಿರಾರು ಕೋಟಿ ವರ್ಷಗಳ ಕೆಳಗೆ ಅಸ್ತಿತ್ವಕ್ಕೆ ಬಂತು. ಇನ್ನೆಷ್ಟೋ ಕೋಟ್ಯಂತರ ವರ್ಷಗಳ ಹಿಂದೆ ಕ್ರಿಮಿಕೀಟ ಪಶುಪಕ್ಷಿ ಪ್ರಾಣಿಗಳು ರೂಪುಗೊಂಡವು. ಮನುಷ್ಯನೆಂಬೋ ಎರಡು ಕಾಲಿನ ವಿಶಿಷ್ಟ ಪ್ರಾಣಿ ಹುಟ್ಟಿದ್ದು ಕೇವಲ ೪೦ ಸಾವಿರ ವರ್ಷಗಳ ಹಿಂದೆ. ಈ ಸಾವಿರಾರು ವರ್ಷಗಳಲ್ಲಿ ಅವನ ರೂಪ, ನಡೆ, ನುಡಿ, ಸಮಾಜ ಎಲ್ಲವೂ ಬದಲಾಗುತ್ತಲೇ ಬಂದಿದೆ. ವಿಕಾಸವಾದದ ತುತ್ತತುದಿಯಲ್ಲಿರುವ ಮನುಷ್ಯನ ಹೆಗ್ಗಳಿಕೆ ಏನೆಂದರೆ ಅವನ ಬೆನ್ನುಹುರಿ ನೆಟ್ಟಗಿದೆ ಹಾಗೂ ವಿಶ್ಲೇಷಣಾ, ವಿಚಕ್ಷಣಾ ಸಾಮರ್ಥ್ಯವಿರುವ ಮಿದುಳನ್ನು ಪಡೆದಿದ್ದಾನೆ ಎನ್ನುವುದು.

ಆದರೆ ವಿಕಾಸದ ಅತ್ಯುಚ್ಛ ಬಿಂದುವಿನಲ್ಲಿದ್ದೇನೆಂದುಕೊಳ್ಳುವ ಮಾನವ ಸಮಾಜ ಈ ೨೦೧೩ನೇ ಇಸವಿಯಲ್ಲಿ ಹೇಗಿದೆ?!

ಬಹುಶಃ ಇನ್ಯಾವ ಜೀವಿ ಪ್ರಭೇಧವೂ ತನ್ನ ಲಿಂಗಪ್ರಭೇಧವನ್ನು ನಡೆಸಿಕೊಳ್ಳದಷ್ಟು ದುಷ್ಟವಾಗಿ ಆತ ನಡೆಸಿಕೊಳ್ಳುತ್ತಿದ್ದಾನೆ. ಇನ್ಯಾವುದೇ ಜೀವಿಗಳ ಹೆಣ್ಣು ಗುಂಪು ದೌರ್ಜನ್ಯ ವಿರೋಧ, ಹಕ್ಕೊತ್ತಾಯ ಎಂದು ಸಂಘಟಿತವಾಗಬೇಕಾದ ಅಥವಾ ದನಿಯೆತ್ತಲು ಸೆಮಿನಾರು, ಬರಹ, ಪುಸ್ತಕಗಳನ್ನು ಸಿದ್ಧಗೊಳಿಸಬೇಕಾದ ಅವಶ್ಯಕತೆಯಿಲ್ಲ. ಮಿದುಳು ವಿಕಾಸವಾದಷ್ಟು ಹೃದಯ ವಿಕಾಸವಾಗದೇ ಹೋದ ಕಾರಣ ಮನುಷ್ಯ ಸಮಾಜದಲ್ಲಿ ಅತ್ಯಾಚಾರವೆಂಬ ಅನಾಗರಿಕ, ಬರ್ಬರ ಕ್ರಿಯೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಅದರ ಸ್ವರೂಪ ಅರಿಯುವಲ್ಲಿ, ವಿಶ್ಲೇಷಣೆಯಲ್ಲಿ, ತಡೆಯುವ ಕಾನೂನುಗಳಲ್ಲಿ ಏನೋ ಒಂದು ಘನಲೋಪವಾಗಿರಲೇಬೇಕು, ಏಕೆಂದರೆ ಅದು ನಿರಂತರ ನಡೆಯುತ್ತಿರುವ ಅಪರಾಧವಾಗಿದೆ.

ಅತ್ಯಾಚಾರ ಲಾ ಅಂಡ್ ಆರ್ಡರ್ ಸಮಸ್ಯೆ ಅಲ್ಲ. ಹಾಗೆಯೇ ಉಳಿದ ಅಪರಾಧಗಳನ್ನು ಚರ್ಚಿಸಿದಂತೆ ಚರ್ಚಿಸಲೂ ಬರುವುದಿಲ್ಲ. ಕಾರಣ ಅದು ಮನುಷ್ಯನ ಬೇಸಿಕ್ ಇನ್‌ಸ್ಟಿಂಕ್ಟ್‌ಗಳಲ್ಲೊಂದಾದ ಕಾಮದ ಜೊತೆ ಸಂಬಂಧ ಹೊಂದಿರುವಂಥದು. ಆ ಭೀಭತ್ಸವನ್ನು ಅತಿ ಭಾವುಕಗೊಳ್ಳದೆ, ವಿನಾಕಾರಣ ಸಿಟ್ಟಿಗೇಳದೇ ವರ್ಣಿಸುವುದು ಕಷ್ಟ. ಈ ಸಮಸ್ಯೆಯ ಸ್ವರೂಪ, ಪರಿಹಾರಗಳನ್ನು ನಿರ್ಧರಿಸುವುದರಲ್ಲಿ ಸಮಾಜದ ಆಂತರಿಕ ರಚನೆಯೂ ಕಾರಣವಾಗಿರುವುದರಿಂದ ಮತ್ತೆಮತ್ತೆ ಭಿನ್ನ ದೃಷ್ಟಿಕೋನಗಳಲ್ಲಿ ವಸ್ತುನಿಷ್ಠ ಚರ್ಚೆ ನಡೆಸುವುದು ಅನಿವಾರ್ಯ ಅಗತ್ಯವಾಗಿದೆ.

***

ಇಡೀ ಸಮಾಜ ವ್ಯವಸ್ಥೆ ಮತ್ತು ಕುಟುಂಬ ನಡೆಯುತ್ತಿರುವುದೇ ಲಿಂಗ ತಾರತಮ್ಯದ ಮೇಲೆ. ಅದರಲ್ಲೂ ಭಾರತೀಯ ಸಮಾಜ ಅರ್ಧ ಜನಸಂಖ್ಯೆಯಷ್ಟಿರುವ ಹೆಣ್ಣನ್ನು ನಾನಾ ರೀತಿ, ನೀತಿ, ನಿಯಮಗಳನ್ನು ಸೃಷ್ಟಿಸಿ ನಿಯಂತ್ರಣದಲ್ಲಿಟ್ಟುಕೊಳ್ಳುವುದರಲ್ಲೇ ರೂಪುಗೊಂಡಿರುವಂಥದು. ನಮ್ಮ ಸಮಾಜ ಮಹಿಳೆಯರನ್ನು ಎರಡೇ ದೃಷ್ಟಿಯಲ್ಲಿ ನೋಡುತ್ತದೆ: ಅವರು ಹೆಂಡತಿಯರು ಅಥವಾ ವೇಶ್ಯೆಯರು. ಈ ಎರಡನ್ನು ಬಿಟ್ಟು ಮೂರನೆಯ ಲೈಂಗಿಕ ಅಸ್ತಿತ್ವ ಅವಳಿಗಿಲ್ಲ. ಇದನ್ನು ಅವಳೂ ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಮಾಡಲಾಗಿದೆ.

ಲಿಂಗತಾರತಮ್ಯದ ಆತ್ಯಂತಿಕ ದೌರ್ಜನ್ಯ ಶೀಲ ಎಂಬ ಪರಿಕಲ್ಪನೆಯಲ್ಲಿದೆ. ಅವಳ ಗುಪ್ತಾಂಗಗಳಲ್ಲಿ ‘ಶೀಲ’ ಎಂಬ ಮೌಲ್ಯ ತುಂಬಿ ಅದನ್ನು ಕಾಪಾಡಿಕೊಳ್ಳಲು ಹೋರಾಡುವುದೇ ಬದುಕಿನ ಪರಮೋಚ್ಛ ಕರ್ತವ್ಯ ಎಂದು ಬಿಂಬಿಸಲಾಗಿದೆ. ಆದರೆ ಈ ಶೀಲದ ಪರಿಕಲ್ಪನೆ ಗಂಡಿಗೆ ಅನ್ವಯಿಸುವುದಿಲ್ಲ! ಆತನ ಗುಪ್ತಾಂಗಗಳ ಸಾಮರ್ಥ್ಯವಾದರೋ ಅವನ ಹೆಮ್ಮೆ ಮತ್ತು ಆಸ್ತಿ. ವಿನಯ, ಸಹನೆ, ಕರುಣೆ ಇತ್ಯಾದಿ ಉದಾತ್ತ ಗುಣಗಳೆಲ್ಲ ಇದ್ದರಷ್ಟೆ ಹೆಣ್ಣು ಎಂದು ಆರೋಪಿಸಿ, ಹೊಸ್ತಿಲ ಒಳಗಿನ ಕಾರ್ಯವನ್ನು ವೈಭವೀಕರಿಸಿ ಅವಳ ಮಾತು/ಹಕ್ಕು ಕಸಿದುಕೊಳ್ಳಲಾಗಿದೆ. ಮನೆ ಕೆಲಸ, ಮಕ್ಕಳನ್ನು ಹೆರುವುದು, ಗಂಡನಿಗೆ ಸುಖದಾಯಕವಾಗಿರುವುದು ಈ ಮೂರೂ ಅವಳ ಕರ್ತವ್ಯವೆಂಬಂತೆ ಬಿಂಬಿಸಲಾಗಿದೆ. ಎಷ್ಟು ಮಾಡಿದರೂ ಮುಗಿಯದ, ಯಾವ ಹೊಸತನ/ಕ್ರಿಯಾಶೀಲತೆ/ಆನಂದ ನೀಡದ ಮನೆಗೆಲಸವೆಂಬ ಬಾಂಡೆಡ್ ಲೇಬರ್‌ನ ಕಷ್ಟ, ಪ್ರಾಮುಖ್ಯತೆಯನ್ನು ಸಮಾಜವೂ ಅರಿಯದೇ; ಅವಳ ಕೆಲಸಕ್ಕೂ ಮತ್ತು ಸಮಾಜಕ್ಕೂ ಇರುವ ಸಂಬಂಧ ಅರ್ಥ ಮಾಡಿಕೊಳ್ಳದೆ ಸಾಮಾಜಿಕ-ಆರ್ಥಿಕ ವಿಚಾರಗಳಲ್ಲಿ ಮಹಿಳೆಯ ಪಾಲುದಾರಿಕೆ ಗುರುತಿಸಲು ಸಾಧ್ಯವಾಗದೇ ಹೋಗಿದೆ.

ಮಹಿಳೆಯೂ ಸಹಾ ಇವೆಲ್ಲದರ ಹೊರತಾಗಿ ತನಗೊಂದು ವ್ಯಕ್ತಿತ್ವವಿದೆ ಎಂದು ಭಾವಿಸಲೇ ಇಲ್ಲ. ತನ್ನನ್ನು ತಾನು ಪುರುಷ ದೃಷ್ಟಿಕೋನದಲ್ಲೇ ಅರ್ಥಮಾಡಿಕೊಂಡು ಇಂದಿಗೂ ಅವಳಿಗೆ ಅವಳೇ ಪರಕೀಯಳಾಗಿದ್ದಾಳೆ ಎಂದರೂ ತಪ್ಪಲ್ಲ.

ಇಂಥ ಸಮಾಜ ಅವಳನ್ನು ಸದಾ ಶರಣಾಗತ ಸ್ಥಿತಿಯಲ್ಲಿಡಲು ಅತ್ಯಾಚಾರ ಎಂಬ ಅಸ್ತ್ರ ಬಳಸಿಕೊಂಡು ಬಂದಿದೆ. ಅನಾದಿಯಿಂದಲೂ ಯುದ್ಧವಿರಲಿ, ದಂಗೆಯಿರಲಿ ಅಥವಾ ಕ್ರಾಂತಿಯಿರಲಿ; ಯಾವ ಪಕ್ಷವಾದರೂ ಸೋಲಲಿ ಅಥವಾ ಗೆಲ್ಲಲಿ - ಈ ಕ್ರೌರ್ಯ, ಉನ್ಮಾದಗಳ ಅಂತಿಮ ಬಾಧಿತಳು ಮಹಿಳೆಯೇ. ಗೆದ್ದವನಿಗೆ ಸೋತವನ ಹೆಣ್ಮಕ್ಕಳ ಮೇಲೆ ಅಸೀಮ ಅಧಿಕಾರ ತಂತಾನೇ ದಕ್ಕಿಬಿಡುತ್ತದೆ. ಸೈನಿಕರು ಹೆಣ್ಣುಗಳನ್ನು ಮನಸೋ ಇಚ್ಛೆ ಬಳಸಿಕೊಳ್ಳಬಹುದು. ಕೆಲ ಮಹಾಮಹಿಮ ರಾಜಕುಲಗಳಂತೂ ತಾವು ಯುದ್ಧಭೂಮಿಗೆ ಹೋಗುವ ಮೊದಲು ಹಣೆಗೆ ತಿಲಕವಿಟ್ಟ ಹೆಂಡತಿಯರನ್ನು ಚಿತೆಗೇರಿಸಿ ಹೋಗುತ್ತಿದ್ದವು! ಈಗಲೂ ನಾಗರಿಕ ಸಮಾಜ ಬೇರೆಬೇರೆ ಕಾರಣಗಳಿಗಾಗಿ ರೂಪಿಸಿಕೊಂಡಿರುವ ಸೈನ್ಯ/ಪೊಲೀಸ್ ಮತ್ತಿತರ ರಕ್ಷಣಾ ವ್ಯವಸ್ಥೆಗಳು ಮಹಿಳೆಯರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿವೆ. ರಕ್ಷಕ ವ್ಯವಸ್ಥೆಯೇ ಮಹಿಳಾ ವಿರೋಧಿ ವ್ಯವಸ್ಥೆಯಾಗಿ ಮಾರ್ಪಟ್ಟಿರುವುದು ನಾಗರಿಕ ಸಮಾಜದ ವಿಪರ್ಯಾಸವಾಗಿದೆ. ಹೀಗೆ ಬರೀ ಮಾನಸಿಕ, ಬೌದ್ಧಿಕ ಅತ್ಯಾಚಾರವಷ್ಟೇ ಅಲ್ಲ, ದೈಹಿಕ ಅತ್ಯಾಚಾರವನ್ನೂ ನಡೆಸಿ ಅವಳು ಪ್ರಶ್ನೆಯೆತ್ತದಂತಹ, ದಂಗೆಯೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಉಸಿರುಗಟ್ಟುವ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಅತ್ಯಾಚಾರವು ಕೇವಲ ಬಲವಂತದ ಲೈಂಗಿಕ ಕ್ರಿಯೆ ಅಲ್ಲ. ಒಬ್ಬ ವ್ಯಕ್ತಿಯಾಗಿ/ಮನುಷ್ಯಳಾಗಿ ಹೆಣ್ಣನ್ನು ನಾಶ ಮಾಡುವ; ಹೆಣ್ಣನ್ನು ನೀನು ಹೆಂಗಸು ಎಂದು ಬೆದರಿಸುವ; ಅಧಿಕಾರವಿರುವ ವರ್ಗ ಅಧಿಕಾರವಿಲ್ಲದ ವರ್ಗವನ್ನು ಹಿಡಿತದಲ್ಲಿಟ್ಟುಕೊಳ್ಳುವ ರಾಜಕೀಯ ಸಾಧನವಾಗಿದೆ. ಇಲ್ಲಿ ಪ್ರತಿಯೊಬ್ಬ ಗಂಡಸೂ ಅತ್ಯಾಚಾರ ಮಾಡಬಲ್ಲ, ಆದರೆ ಅವನು ಯಾಕೆ ಮಾಡಲಾರ ಎಂದರೆ ಕಾರಣ ಎರಡೇ - ಒಂದು ಅವನು ಕಾನೂನಿಗೆ ಹೆದರುತ್ತಾನೆ. ಸಿಕ್ಕಿಬಿದ್ದು ಶಿಕ್ಷೆ, ಅಪಮಾನವಾದರೆ ಎಂದು ಹೆದರುತ್ತಾನೆ. ಎರಡನೆಯದಾಗಿ ಅವನಿಗೆ ತನ್ನ ಶೀಲದ ಅಥವಾ ಹೆಣ್ಣಿನ ಶೀಲದ ಕುರಿತು ಗೌರವವಿದೆ.

ನಾವು ರೋಮ್ಯಾಂಟಿಕ್ ಆಗಿ ವರ್ಣಿಸುವ ಕಾಮಕ್ಕೂ, ಭೀಭತ್ಸವೆನ್ನುವ ಅತ್ಯಾಚಾರಕ್ಕೂ ನಡುವಿನ ಗೆರೆ ತುಂಬ ತೆಳುವಾಗಿದೆ. ಆ ಗೆರೆ ‘ಒಪ್ಪಿಗೆ’ ಎಂಬ ಮೋಸಗಾರ ಪದವನ್ನೊಳಗೊಂಡಿದೆ. ಮೋಸಗಾರ ಏಕೆಂದರೆ ಈ ದೇಶದಲ್ಲಿ ದೈಹಿಕ ಒಪ್ಪಿಗೆ, ಬುದ್ಧಿಪೂರ್ವಕ ಒಪ್ಪಿಗೆ, ಮನಃಪೂರ್ವಕ ಒಪ್ಪಿಗೆ ಬೇರೆಬೇರೆಯಾಗಿವೆ. ಮೌನವೂ ಒಪ್ಪಿಗೆಯೆಂದೇ ಪರಿಗಣಿಸಲ್ಪಡುತ್ತದೆ. ಅಷ್ಟೇ ಅಲ್ಲ, ಈ ಪದದ ವ್ಯಾಖ್ಯಾನವೇ ಗೊಂದಲದಿಂದ ಕೂಡಿ ಅಸ್ಪಷ್ಟವಾಗಿದೆ. ಕಾನೂನು ಪ್ರಕಾರ ೧೬ ವಯಸ್ಸಿನ ಬಾಲೆ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಬಹುದು. ಆದರೆ ಮದುವೆಯಾಗಲು ಕನಿಷ್ಠ ೧೮ ವರ್ಷವಾಗಿರಬೇಕು. ಹಾಗಾದರೆ ನಡುವಿನ ಈ ಎರಡು ವರ್ಷಗಳು ಏನು? ಮದುವೆ ಎನ್ನುವುದರ ವ್ಯಾಖ್ಯೆಯೇನು? ೧೯೮೭ರ ‘ಮಥುರಾ’ ಅತ್ಯಾಚಾರ ಕೇಸಿನ ತೀರ್ಪನ್ನು ನೋಡುವುದಾದರೆ, ಮಥುರಾ ಎಂಬ ೧೬ ವರ್ಷದ ಬುಡಕಟ್ಟು ಬಾಲೆಯ ಮೇಲೆ ಅತ್ಯಾಚಾರವಾಯಿತು. ಆಕೆಯ ಕೇಸನ್ನು ಪರಿಶೀಲಿಸಿದ ನ್ಯಾಯಾಲಯವು ಆ ಬಾಲೆಯ ಮೈಮೇಲೆ ಯಾವುದೇ ಹಿಂಸೆಯ ಕುರುಹುಗಳು ಇರಲಿಲ್ಲ, ಅವಳು ಪ್ರತಿರೋಧ ತೋರಿಲ್ಲ. ಆದ್ದರಿಂದ ಅವಳು ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಿರಬೇಕು, ಎಂದೇ  ಅದು ಅತ್ಯಾಚಾರವಾಗುವುದಿಲ್ಲ ಎಂದು ತೀರ್ಪು ನೀಡಿತು! ಒಪ್ಪಿಗೆ ಕುರಿತ ಇಂಥ ಎಲ್ಲ ಗೊಂದಲಗಳಿಂದ ದಾಖಲಾಗುವ ಬೆರಳೆಣಿಕೆಯಷ್ಟು ಕೇಸುಗಳಲ್ಲೂ ಅಪರಾಧಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಾಗುತ್ತಿದೆ.

ಇಲ್ಲಿ ಅತ್ಯಾಚಾರ ಯಾಕೆ ತಪ್ಪು? ಯಾಕೆಂದರೆ ಯಾವುದೋ ಗಂಡಿಗೆ ಸೇರಿದ ವಸ್ತುವಿನ ಮೇಲೆ ದುರಾಕ್ರಮಣ ಆಗಿದೆ ಎಂಬ ನೈತಿಕ ಕಾರಣಕ್ಕೆ. ಹೆಣ್ಣುಜೀವಕ್ಕೆ ಅಪಚಾರ ಆಗಿದೆಯೆಂದಾಗಲೀ, ಅವಳ ಇಚ್ಛೆಯ ವಿರುದ್ಧ ನಡೆದಿದೆ ಎಂದಾಗಲೀ ಅಥವಾ ಒಂದು ವ್ಯಕ್ತಿತ್ವ ನಾಶ ಮಾಡುವ ಕ್ರಿಯೆಯೆಂದಾಗಲೀ ಸಮಾಜ ಭಾವಿಸುವುದಿಲ್ಲ. ಕೇವಲ ಆಸ್ತಿಹಕ್ಕಿನ ಪ್ರಶ್ನೆಯೆಂಬಂತೆ ಅದು ಪರಿಗಣಿಸಲ್ಪಡುತ್ತದೆ. ಎಂದೇ ಯಾರದೂ ಆಸ್ತಿಯಲ್ಲದ ಅಥವಾ ಒಬ್ಬರಿಗಿಂತ ಹೆಚ್ಚು ಜನರ ಆಸ್ತಿಯಾಗಿರುವ ಹೆಣ್ಣಿನ ಮೇಲೆ ಅತ್ಯಾಚಾರ ನಡೆದರೆ ಅದು ಆಕಸ್ಮಿಕ, ಬರ್ಬರ ಎಂದು ಯಾರಿಗೂ ಅನಿಸುವುದಿಲ್ಲ. ಲೈಂಗಿಕ ಕಾರ್ಯಕರ್ತರು ಸಾಯುವಂಥ ಹಿಂಸೆ ಅನುಭವಿಸುತ್ತಾರೆ. ಅದರ ಬಗ್ಗೆ ನಾವ್ಯಾರೂ ಮಾತನಾಡುವುದಿಲ್ಲ. ಕೋರ್ಟುಗಳಲ್ಲಿ ಈ ತನಕ ಚಾಲ್ತಿಯಲ್ಲಿದ್ದ ಎರಡು ಬೆರಳ ಪರೀಕ್ಷೆ - ಟೂ ಫಿಂಗರ್ ಟೆಸ್ಟ್ - ಕೂಡಾ ಬಳಕೆಯಾಗುತ್ತಿರುವುದು ಅವಳು ಈ ಮೊದಲೇ ಲೈಂಗಿಕ ಸಂಪರ್ಕ ಹೊಂದಿರಬಹುದೇ? ಬಹಳ ಸಾರಿ ಹೊಂದಿರಬಹುದೇ? ಅವಳ ನಡತೆ ಹೇಗಿತ್ತು? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ. ಅವಳ ಮೊದಲಿನ ನಡತೆ, ಬೇರೆಯವರ ಜೊತೆ ಸಂಬಂಧ ಇವೆಲ್ಲ ಅತ್ಯಾಚಾರವೆಂಬ ಗುನ್ನೆ ಹಗುರವೋ ಭಾರವೋ ನಿರ್ಧರಿಸುವಂತಹ ಅಂಶಗಳಾಗಿವೆ!

ಆಳದಲ್ಲಿ ಈ ಸಮಾಜ ರಚನೆ ಅತ್ಯಾಚಾರವನ್ನು ಒಪ್ಪಿಕೊಂಡಿದೆ. ಅತ್ಯಾಚಾರ ಹೆಚ್ಚುತ್ತಲೇ ಇರುವುದಕ್ಕೆ ಇದು ಕಾರಣವಾಗಿದೆ.

***

ಅತ್ಯಾಚಾರ ಎಂಬ ಮಾತು ಕೇಳಿದ ಕೂಡಲೇ ಬಹಳಷ್ಟು ಜನ ಹೆಣ್ಮಕ್ಕಳಿಗೆ ಪ್ರಚೋದಕ ಉಡುಪು ಧರಿಸದಂತೆ, ನಡುರಾತ್ರಿ, ನಿರ್ಜನ ಕತ್ತಲ ಪ್ರದೇಶಗಳಲ್ಲಿ ಒಬ್ಬರೇ ಓಡಾಡದಂತೆ; ಬಾರ್-ಪಬ್‌ಗಳಿಗೆ ಹೋಗದಂತೆ; ಗೆಳೆಯರ ಜೊತೆ ಸುತ್ತಾಡದಂತೆ ಬುದ್ಧಿ ಹೇಳಿ ಎಂಬ ಸಲಹೆ ಕೊಡುತ್ತಾರೆ. ಮಹಿಳಾ ಆಯೋಗವೂ ಸಹಿತ ಹೆಣ್ಣುಮಕ್ಕಳಿಗೆ ವಸ್ತ್ರಸಂಹಿತೆ ಬೋಧಿಸಿ ಕತ್ತಲಾದ ಮೇಲೆ ಒಬ್ಬೊಬ್ಬರೇ ತಿರುಗಬೇಡಿ ಎಂದು ಸೂಚಿಸುತ್ತದೆ. ಇಂಥ ಸಲಹೆಸೂಚನೆಗಳಿಂದ ಮತ್ತೆ ಹೆಣ್ಣನ್ನು ನಾಲ್ಕು ಗೋಡೆಗಳೊಳಗೆ ಸುರಕ್ಷಿತವಾಗಿರಿಸುವ, ಅದು ಸುರಕ್ಷಿತವೆಂದು ನಂಬಿಸುವ ಪ್ರಯತ್ನ ಶುರುವಾಗಿದೆ. ಆತ್ಮರಕ್ಷಣೆಗಾಗಿ ಕರಾಟೆ ಕಲಿಯಬೇಕು ಎಂಬಿತ್ಯಾದಿ ಮಾತು ಕೇಳಿಬರುತ್ತಿದೆ. ಇವೆಲ್ಲ ವ್ಯಕ್ತಿಗತವಾಗಿ ಎಲ್ಲೋ ಕೆಲವರಿಗೆ ಸಾಧ್ಯವಾಗಬಹುದು. ಆದರೆ ಪ್ರಚೋದನೆ ಮತ್ತು ಪರಿಹಾರ ಎರಡರಲ್ಲೂ ಇರುವುದು ಕೇವಲ ಹೆಣ್ಣಿನ ಪಾತ್ರವಲ್ಲ ಎಂದು ಸಮಾಜಕ್ಕೆ ನೆನಪಿಸಬೇಕಿದೆ.

ನಗ್ನಚಿತ್ರಗಳನ್ನು ಬಿಡಿಸುವ ಒಬ್ಬ ಕಲಾವಿದನನ್ನು ನಿಮಗೆ ಸ್ಫೂರ್ತಿ ಯಾರು ಎಂದು ಕೇಳಿದರು. ಅದಕ್ಕೆ ಆತ ನನ್ನೆದುರು ಬರುವ ಪ್ರತಿ ಹೆಣ್ಣನ್ನೂ ನಾನು ನಗ್ನವಾಗಿ ಕಲ್ಪಿಸಿಕೊಳ್ಳುತ್ತೇನೆ ಎಂದು ಹೇಳಿದ! ನೋಡುವ ಕಣ್ಣು ನಿಮ್ಮನ್ನು ನಗ್ನವಾಗಿ ಕಲ್ಪಿಸಿಕೊಳ್ಳಬಲ್ಲದಾದರೆ ಎಂಥ ಉಡುಪು ತೊಟ್ಟರೇನು? ಶಾಲೆಗೆ ಹೋಗುವ ಎಳೆಯ ಮಕ್ಕಳು, ಕೂಲಿ ಕೆಲಸ ಮಾಡುವ ಹೆಣ್ಮಕ್ಕಳು, ಶಿಫ್ಟಿನಲ್ಲಿ ದುಡಿಯುವ ಇನ್ನೆಷ್ಟೋ ಉದ್ಯೋಗಸ್ಥ ಮಹಿಳೆಯರು, ಅಸಹಾಯಕ ಮುದುಕಿಯರ ಮೇಲೆಲ್ಲ ಅತ್ಯಾಚಾರವಾಗುತ್ತಿದೆ. ಅವರೆಲ್ಲ ಸುರಕ್ಷೆಯ ನೆಪದಲ್ಲಿ ಮನೆಯಲ್ಲಿರಬೇಕೆ? ರೈಲು, ಬಸ್ಸು, ಕಾರು, ವಿಮಾನದಲ್ಲಿಯೂ ಅತ್ಯಾಚಾರ ನಡೆಯುತ್ತಿದೆ. ಅಪರಿಚಿತ ಹೆಣ್ಮಕ್ಕಳನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತದೆ? ಅವಳ ಪ್ರತಿ ನಡೆ, ಚಹರೆಗಳನ್ನೂ ಲೈಂಗಿಕಾರ್ಥದಲ್ಲಿ ನೋಡಲಾಗುತ್ತದೆ. ಸೆರಗೆಳೆದುಕೊಳ್ಳುವುದು, ಸೆರಗು ಎಳೆದುಕೊಳ್ಳದಿರುವುದು, ಸೀರೆ ನೆರಿಗೆ ಸರಿ ಮಾಡಿಕೊಳ್ಳುವುದು, ಕೂದಲು ನೇವರಿಸುವುದು, ತುಟಿ ಸವರಿಕೊಳ್ಳುವುದು ಹೀಗೆ ಪ್ರತಿ ನಡೆಯಲ್ಲೂ ಲೈಂಗಿಕ ಸಂಕೇತಗಳನ್ನು ಹುಡುಕಲಾಗುತ್ತದೆ. ಹೀಗಿರುವಾಗ ಪ್ರಚೋದನೆಗೆ ಕಾರಣ ಅವಳನ್ನು ಪ್ರಚೋದಿಸುವ, ಆಹ್ಲಾದ ನೀಡುವ ವಸ್ತುವನ್ನಾಗಿ ಬಿಂಬಿಸಿ, ಬಳಸಿಕೊಳ್ಳುತ್ತಿರುವ ವ್ಯವಸ್ಥೆಯದೇ ಆಗಿದೆ.

ಪ್ರಚೋದನೆ ಅತಿಯಾದ ಸಂಪರ್ಕದಿಂದ ಬರುತ್ತಿದೆ. ನಾವಿಂದು ಯಾವುದನ್ನು ಮಾಹಿತಿ ಕ್ರಾಂತಿ ಅಥವಾ ಸಂಪರ್ಕ ಕ್ರಾಂತಿ ಎಂದು ಕರೆಯುತ್ತೇವೋ ಅದು ನಿಜಾರ್ಥದಲ್ಲಿ ಕ್ರಾಂತಿಯ ವಿರುದ್ಧ ನಡೆದಿರುವ ಪ್ರಾಸೆಸ್. ಸಂಪರ್ಕ ಕ್ರಾಂತಿ ಮನುಷ್ಯನಿಂದ ಮನುಷ್ಯತ್ವವನ್ನು, ಮಾನವೀಯ ಸಂಬಂಧಗಳನ್ನು ಕಸಿಯುತ್ತಿರುವ ಹಾಗೂ ಮನುಷ್ಯನನ್ನು ಕೈಕಾಲಾಡಿಸುವ ಯಂತ್ರವಾಗಿಸುತ್ತಿರುವ ಎಲ್ಲ ನಿದರ್ಶನಗಳಿವೆ.

ವಿಜ್ಞಾನ ಜೀವಪರವಾಗದೆ ಜೀವವಿರೋಧಿಯಾಗುತ್ತಿರುವುದಕ್ಕೆ ಮುಖ್ಯ ಕಾರಣ ಅದು ಜನರಲ್ಲಿ ಸೈಂಟಿಫಿಕ್ ಟೆಂಪರ್ ಬೆಳೆಸದೆ ವಿಜ್ಞಾನದ ಕೂಸಾದ ತಂತ್ರಜ್ಞಾನವನ್ನು ಅವರ ಕೈಲಿಡುತ್ತಿರುವುದು. ವಿವೇಚನೆಯಿಲ್ಲದೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ, ಅದರಲ್ಲೂ ದುಷ್ಟ ಕಾರಣಗಳಿಗಾಗಿ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಉದಾಹರಣೆಗೆ ಇತ್ತೀಚೆಗೆ ಕಾರವಾರದಲ್ಲಿ ಬಹಳ ಜನರ ಮೊಬೈಲಿನಲ್ಲಿ ಒಂದು ವೀಡಿಯೋ ಕ್ಲಿಪಿಂಗ್ ಹರಿದಾಡುತ್ತಿತ್ತೆಂದು ಪೊಲೀಸರು ತನಿಖೆ ನಡೆಸಿದರು. ತಮಿಳುನಾಡಿನ ಸಮುದ್ರ ತೀರದಲ್ಲಿ ಹೆಣ್ಣೊಬ್ಬಳಿಗೆ ಅಮಲು ಬರಿಸಿ, ಬೆತ್ತಲಾಗಿಸಿ, ಐದಾರು ಜನ ಸಾಮೂಹಿಕವಾಗಿ ಸಂಭೋಗಿಸಿದ ವೀಡಿಯೋ ಅದರಲ್ಲಿತ್ತು. ಅದನ್ನು ಡೌನ್‌ಲೋಡ್ ಮಾಡಿ, ತಮಿಳು ಸಂಭಾಷಣೆಗೆ ಕನ್ನಡ ಸಂಭಾಷಣೆ ಅಳವಡಿಸಿ, ಮೊಬೈಲಿನಿಂದ ಮೊಬೈಲಿಗೆ ಕಳಿಸಲಾಗುತ್ತಿತ್ತು. ಆದರೆ ತಮಿಳುನಾಡಿನ ಅದೇ ಸಮುದ್ರ ತೀರದಲ್ಲಿ ಸಾವಿರಾರು ಜನ ಸುನಾಮಿಗೆ ಕೊಚ್ಚಿ ಹೋಗಿದ್ದರು. ಅಲ್ಲಿ ಇನ್ನೆಷ್ಟೋ ಜಾತಿದೌರ್ಜನ್ಯಗಳು ಸಂಭವಿಸುತ್ತಿವೆ. ಅವನ್ನು ಡೌನ್‌ಲೋಡ್ ಮಾಡಿ, ಕನ್ನಡ ಮಾತು ಅಳವಡಿಸಿ ಎಲ್ಲರಿಗೂ ಹಂಚುವ, ತಂತ್ರಜ್ಞಾನವನ್ನು ಜನಜಾಗೃತಿಗೆ ಬಳಸಬೇಕೆನ್ನುವ ಯೋಚನೆ ಏಕೆ ಬರುತ್ತಿಲ್ಲ?

ಬೇರೆಯವರು ನಡೆಸುವ ಕಾಮಕ್ರಿಯೆ ನೋಡಿ ಪ್ರಚೋದನೆ ಪಡೆಯುವುದನ್ನು ವಾಯೂರಿಸಂ ಎನ್ನುತ್ತಾರೆ. ಅದೊಂದು ವಿಕೃತಿ. ಬ್ಲೂ ಫಿಲಂಗಳು ಹಾಗೂ ಮೊಬೈಲಿನಲ್ಲೂ ಹರಿದಾಡುವ ವೀಡಿಯೋ ಕ್ಲಿಪಿಂಗ್ಸ್ ವಾಯೂರಿಸಂ ಎಂಬ ವಿಕೃತಿಯನ್ನು ಹಾಗೂ ಎಳೆಯರಲ್ಲಿ ಕಾಮ ಕುರಿತ ದುಷ್ಟ ಕುತೂಹಲ/ತಪ್ಪು ಗ್ರಹಿಕೆಗಳನ್ನು ಬೆಳೆಸುತ್ತಿರುವುದು ಅತ್ಯಾಚಾರ ಹೆಚ್ಚಾಗಲು ಒಂದು ಮುಖ್ಯ ಕಾರಣವಾಗಿದೆ. ಬೆಂಗಳೂರಿನಲ್ಲಿ ಗಾರ್ಮೆಂಟ್ ಕೆಲಸ ಮಾಡುವ ೪೫ ವರ್ಷದ ಮಹಿಳೆಯೊಬ್ಬರು ಏಳು ವರ್ಷದ ಕೆಳಗೆ ಅತ್ಯಾಚಾರಕ್ಕೊಳಗಾದರು. ವಾರದ ಕೊನೆಯಲ್ಲಿ ತನ್ನೂರು ಮೈಸೂರಿಗೆ ಹೋಗುತ್ತಿದ್ದವರ ಮೇಲೆ ಏಳು ಜನರ ಗುಂಪು ರಾತ್ರಿ ಒಂಭತ್ತೂವರೆಯಿಂದ ಎರಡರ ತನಕ ಅತ್ಯಾಚಾರ ನಡೆಸಿತು. ಆಕೆಗೆ ಮೊಬೈಲಿನಲ್ಲಿದ್ದ ವೀಡಿಯೋ ಕ್ಲಿಪಿಂಗ್ಸ್ ತೋರಿಸಿ ಹೀಗೆ ಮಲಗು, ಹಾಗೆ ಮಾಡು ಎಂದು ಹೇಳುತ್ತಿದ್ದರಂತೆ. ಅವರಲ್ಲೊಬ್ಬ ೧೬-೧೭ ವರ್ಷದವ. ೨೦ ವರ್ಷದ ಮಗನಿದ್ದ ಆಕೆ ನಾನು ನಿಮ್ಮಮ್ಮನ ಹಾಗೆ ಅನಿಸುವುದಿಲ್ಲವೇನೋ ಎಂದರೆ ಆ ಹುಡುಗ, ‘ಅಂಥ ಪುರಾಣನೆಲ್ಲ ವದರಬೇಡ, ಮೊದ್ಲು ನಾ ಹೇಳಿದಂಗೆ ಸುಮ್ನೆ ಮಲ್ಕ’ ಎಂದನಂತೆ!

ವಿಜ್ಞಾನ ವೈಜ್ಞಾನಿಕ ಮನೋಭಾವನ್ನಾಗಲೀ, ನೈತಿಕತೆಯನ್ನಾಗಲೀ ಬೆಳೆಸುತ್ತಿಲ್ಲ. ನೈತಿಕತೆಯ ಹಳೆಯ ವ್ಯಾಖ್ಯಾನಗಳನ್ನು ಬಿಟ್ಟುಬಿಡೋಣ. ನೈತಿಕತೆ ಎಂದರೆ ಕನಿಷ್ಟ ನಿಗ್ರಹ, ಬಳಸುವುದರ ಮುನ್ನ ಕೊಂಚ ವಿವೇಚನೆ. ಅದೇಕೆ ತಂತ್ರಜ್ಞಾನ ಬಳಸುವಾಗ ಸಾಧ್ಯವಾಗುತ್ತಿಲ್ಲ? ಮಾಹಿತಿ ಕ್ರಾಂತಿಯು ಜಗತ್ತನ್ನು, ಅದಲ್ಲಿರುವ ಬಾಧಿತರೆಲ್ಲರನ್ನು ಒಟ್ಟು ತಂದು ಇನ್ನೊಂದು ಕ್ರಾಂತಿ ನಡೆದು ಹೋಗಬೇಕಿತ್ತು. ಆದರೆ ಜೀವವಿರೋಧಿ ಮಾಹಿತಿ ಹಂಚಿಕೊಳ್ಳಲು ಅದು ಬಳಕೆಯಾಗುತ್ತಿದೆ. ಅಂತರ್ಜಾಲ ಬಳಕೆ ಮತ್ತು ವಿಸ್ತರಣೆ ನಾವು ಊಹಿಸಲಾರದ ವೇಗದಲ್ಲಿ ಆಗುತ್ತಿದೆ ಹಾಗೂ ಅದು ಯುವ ಪೀಳಿಗೆಯನ್ನು ನಮ್ಮಿಂದ ಬಲುದೂರ ಒಯ್ಯುತ್ತಿದೆ. ಇದನ್ನು ತಡೆಗಟ್ಟಲು ನಮ್ಮ ಬಳಿ ಯಾವ ಸುರಕ್ಷಾ ಕ್ರಮಗಳಿವೆ?

ಬರೀ ಮೊಬೈಲು ಬಳಕೆ ಅಷ್ಟೇ ಅಲ್ಲ, ವೈದ್ಯಕೀಯ ವಿಜ್ಞಾನವೂ ಇಂಥ ದುಷ್ಟತನದಲ್ಲಿ ಹಿಂದೆ ಬಿದ್ದಿಲ್ಲ. ಹಿಮೋಫೀಲಿಯಾದಂತಹ ಲಿಂಗ ಕ್ರೋಮೋಸೋಮುಗಳ ಜೊತೆ ಬರುವ ಕಾಯಿಲೆಗಳನ್ನು ಪತ್ತೆ ಹಚ್ಚಿ ಗರ್ಭ ತೆಗೆಯುವ ಸಲುವಾಗಿ ಅಭಿವೃದ್ಧಿಯಾದ ಲಿಂಗಪತ್ತೆ ತಂತ್ರಜ್ಞಾನ ಕೋಟಿಗಟ್ಟಲೆ ಹೆಣ್ಣುಭ್ರೂಣಗಳು ಭೂಮಿಗೆ ಬರುವುದರಲ್ಲೆ ಕಣ್ಮುಚ್ಚುವಂತೆ ಮಾಡಿವೆ. ಸುಟ್ಟುಕೊಂಡವರಿಗೆ, ಅಂಗಾಂಗ ಕಳೆದುಕೊಂಡವರಿಗೆ ಬಳಕೆಯಾಗಬೇಕಿದ್ದ ಪ್ಲಾಸ್ಟಿಕ್ ಸರ್ಜರಿ ಇವತ್ತು ಮುಖಮೈಚರ್ಮದ ಅಂದಚಂದ ಹೆಚ್ಚಿಸಲೆಂದೇ ಹೆಚ್ಚು ಬಳಕೆಯಾಗುತ್ತಿದೆ. ತೀರಾ ಆಘಾತಕಾರಿ ಎಂದರೆ ಹೈಮೆನೋಪ್ಲಾಸ್ಟಿ ಇತ್ತೀಚೆಗೆ ಜನಪ್ರಿಯವಾಗುತ್ತಿರುವುದು. ಕನ್ಯತ್ವ ಎಂದರೆ ಹೈಮೆನ್ ಅಥವಾ ಕನ್ಯಾಪೊರೆ ಇರುವುದು ಎಂದು ನಂಬುವ ‘ಕನ್ಯೆ’ಯರಿಗೆ ಯಾವ ಸ್ತ್ರೀವಾದ ಬೋಧಿಸುವುದು? ಹೇಗೆ ಇಂಥ ವೈದ್ಯಕೀಯವನ್ನು ಜೀವವುಳಿಸುವ ವಿಜ್ಞಾನದ ಒಂದು ಶಾಖೆ ಅನ್ನುವುದು?

ನೈತಿಕ ಪ್ರಜ್ಞೆ ಹಾಗೂ ವೈಚಾರಿಕತೆಯ ಅಧಃಪತನಕ್ಕೆ ತಂತ್ರಜ್ಞಾನ ನೇರ ಹೊಣೆಯಾಗಿದೆ. ಅತ್ಯಾಚಾರ ಪ್ರಕರಣ ಸಂಭವಿಸುತ್ತಲೇ ಇರುವುದಕ್ಕೆ ಇದೂ ಕಾರಣವಾಗಿದೆ.

***

ಸಮಾಜದ ಬುನಾದಿಯಲ್ಲಿ ಹೂತ ಕಲ್ಲುಗಳೇ ತಪ್ಪು ಗ್ರಹಿಕೆಗಳಿಂದ ಕೂಡಿವೆ. ಅದಕ್ಕೆ ಪರಿಹಾರವೇನು?

ಒಂದು ಹಂತದವರೆಗೆ ತಪ್ಪಿತಸ್ಥರನ್ನು ಹಿಡಿಯುವುದು, ತಕ್ಷಣದಲ್ಲಿ ಸೂಕ್ತ ಶಿಕ್ಷೆ ನೀಡುವುದು ಅತ್ಯಾಚಾರ ನಿಗ್ರಹದಲ್ಲಿ ಪಾತ್ರ ವಹಿಸಬಹುದು. ಆದರೆ ನೆನಪಿಡೋಣ, ಕಾನೂನು ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸುತ್ತದೆ. ತಪ್ಪು ಮತ್ತೆಮತ್ತೆ ಜರುಗದಂತೆ ಮಾಡುವುದು ಕಾನೂನಿನ ಹೊರತಾದ ವಿಶಾಲ ಸಾಮಾಜಿಕ ನೆಲೆಯ ಪ್ರಕ್ರಿಯೆಯೇ ಆಗಿದೆ.

ಆವೇಶದಲ್ಲಿ ಕೆಲ ಮಹಿಳಾ ಸಂಘಟನೆಗಳು ಹಾಗೂ ಹೋರಾಟಗಾರರು ಅತ್ಯಾಚಾರಿಯನ್ನು ಗಲ್ಲಿಗೇರಿಸಬೇಕೆಂದು, ಅಂಥವರ ಗುಪ್ತಾಂಗವನ್ನು ಕತ್ತರಿಸಬೇಕೆಂದು ಸಲಹೆ ನೀಡುತ್ತಾರೆ. ಆದರೆ ಇದು ಅಮ್ಮ ನೀಡಬಹುದಾದ ಸಲಹೆಯಲ್ಲ. ಅಮ್ಮನೊಳಗಿನ ಪುರುಷ ವ್ಯವಸ್ಥೆ ರೂಪಿಸಿದ ಮನಸ್ಸಷ್ಟೆ ಹೀಗೆ ಯೋಚಿಸಬಲ್ಲದು. ಧನಂಜಯ ಚಟರ್ಜಿಯನ್ನು ಗಲ್ಲಿಗೇರಿಸಿದ ಮೇಲೆ ಬಂಗಾಳದಲ್ಲಿ ಅತ್ಯಾಚಾರ ಕಡಿಮೆಯಾಗಿದೆಯೆ?

ಪ್ರತಿಭಟನೆಗೆ ನಮ್ಮೆದುರು ಎರಡು ಮಾದರಿಗಳಿವೆ - ಒಂದು ಇರೋಂ ಶರ್ಮಿಳಾ ಮಾದರಿ, ಇನ್ನೊಂದು ಭನವಾರಿ ದೇವಿಯದು. ಮಣಿಪುರದಲ್ಲಿ ಸೈನ್ಯದಂತಹ ಬಲಶಾಲಿ ವ್ಯವಸ್ಥೆ ನಡೆಸಿರುವ ಅತ್ಯಾಚಾರಗಳ ವಿರುದ್ಧ ದನಿಯೆತ್ತಿ ಹೋರಾಟಕ್ಕೆ ಚಾಲನೆ ನೀಡಿದ್ದು ಇರೋಂ ಶರ್ಮಿಳಾ. ಆದರೆ ಆ ಮಾದರಿಯ ದೀರ್ಘಕಾಲೀನತೆ ಕೇವಲ ಸಂಕೇತ ಮಾತ್ರವಾದರೆ ಆ ಸಂಕೇತವನ್ನು ವ್ಯವಸ್ಥೆಯೇ ಪೋಷಿಸಿ ನುಂಗಿಬಿಡುವ ಅಪಾಯವನ್ನು ಮರೆಯುವಂತಿಲ್ಲ. ಇರೋಂ ಶರ್ಮಿಳಾ ಎಂಬ ಆಕ್ಟಿವಿಸ್ಟ್ ಅನ್ನು ಉಪವಾಸ ಕಸಿದುಕೊಂಡಿದೆ ಎಂದೇ ನನ್ನ ವೈಯಕ್ತಿಕ ಅಭಿಪ್ರಾಯ. ಇನ್ನು ಭನವಾರಿ ದೇವಿ ಎಂಬ ಬಡ, ತಳ ಸಮುದಾಯದ ದಿಟ್ಟ ಹೆಣ್ಣುಮಗಳು ಕಳೆದ ೨೧ ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆಯುತ್ತಿದ್ದರೂ ಇನ್ನೂ ಕೇಸು ಇತ್ಯರ್ಥವಾಗಿಲ್ಲ. ಏಳು ಆರೋಪಿಗಳಲ್ಲಿ ಮೂವರು ಆಗಲೇ ಸತ್ತು ಹೋಗಿದ್ದಾರೆ. ನೀರಜಾ ಭಾನೋಟ್ ಪ್ರಶಸ್ತಿ ಬಂದಾಗ ಭನವಾರಿ ಪ್ರಶಸ್ತಿಯಿಂದ ಹೊಟ್ಟೆ ತುಂಬುವುದಿಲ್ಲ, ನ್ಯಾಯ ಸಿಕ್ಕಾಗ ತುಂಬುತ್ತದೆ ಎಂದು ಹೇಳಿದ್ದರು.

ಈ ಎರಡೂ ದಾರಿಗಳು - ಉಪವಾಸ ಸತ್ಯಾಗ್ರಹದಂತಹ ಸಾಂಕೇತಿಕ ಮಾದರಿ ಹಾಗೂ ಕಾನೂನು ಹೋರಾಟ - ಪ್ರತಿರೋಧದ ಮೊದಲ ಹೆಜ್ಜೆಗಳು ಎಂದು ಭಾವಿಸುವುದಾದರೆ ನಂತರದ ಹೆಜ್ಜೆ ಮಹಿಳೆ ಸಂಘಟಿತಳಾಗುವುದರಲ್ಲಿದೆ. ಈಗ ನಮ್ಮ ಬಹುಪಾಲು ಹೆಣ್ಣುಮಕ್ಕಳು ಜೈವಿಕ ಮಹಿಳೆಯರಷ್ಟೆ ಆಗಿದ್ದಾರೆ. ಆ ಜಾಗದಲ್ಲಿ ಸಾಮಾಜಿಕ, ರಾಜಕೀಯವಾಗಿ ಸ್ಪಂದಿಸಿ ಕ್ರಿಯಾಶೀಲಳಾಗಬಲ್ಲ ಮಹಿಳೆ ಹುಟ್ಟಿಕೊಳ್ಳಬೇಕು. ಪುರುಷ ದೃಷ್ಟಿಕೋನದಲ್ಲಿ ಅಲಂಕಾರಿಕ ವಸ್ತುವಾಗಿ ತನ್ನ ವ್ಯಕ್ತಿತ್ವ ಗ್ರಹಿಸಿಕೊಳ್ಳುವುದನ್ನು ನಿಲ್ಲಿಸಿ ತನ್ನತನವನ್ನು ತಾನು ಕಂಡುಕೊಳ್ಳಬೇಕು.

ಆಗ ಮಹಿಳೆಗೆ ದಕ್ಕುವ ಒಳನೋಟಗಳೇ ಬೇರೆ.

ಮಹಿಳೆಯರ ಮುಂದೊಂದು ಸುಲಭದ ಮಾರ್ಗವಿದೆ. ಅದಕ್ಕೆ ಗಟ್ಟಿ ಮನಸ್ಸು, ದಿಟ್ಟ ವ್ಯಕ್ತಿತ್ವ ರೂಪುಗೊಳ್ಳಬೇಕು. ಅದೇ ನಿರಾಕರಣ ತತ್ವ. ನಿರಾಕರಣೆ ಎಂದರೆ ಯಾವ ವಸ್ತು, ವ್ಯಕ್ತಿ, ವಿಷಯ, ಸಿದ್ಧಾಂತ, ಪಕ್ಷದಿಂದ ಮಹಿಳೆಯ ಘನತೆಗೆ, ಮಹಿಳಾ ಗೌರವಕ್ಕೆ ಕುಂದು ಬರುತ್ತಿದೆಯೋ ಅಂಥ ಎಲ್ಲವನ್ನು ಸಾರಾ ಸಗಟಾಗಿ ಅವರು ನಿರಾಕರಿಸಬೇಕು. ನಮ್ಮ ಜನಪ್ರತಿನಿಧಿಗಳದು ಜೆಂಡರ್ ಇನ್‌ಸೆನ್ಸಿಟಿವ್ ವರ್ಗ. ತಾವೇನೋ ಮಹತ್ತರವಾದದ್ದನ್ನು ಸಾಧಿಸುತ್ತಿದ್ದೇವೆ, ಇದೆಲ್ಲ ಹೆಣ್ಣುಕುಲಕ್ಕೆ ಅರ್ಥವಾಗುವುದಿಲ್ಲ ಎಂದೇ ಅವರ ಭಾವನೆ. ರಾಜಕೀಯದಲ್ಲಿ ಮಹಿಳೆಯರಿಗೆ ನೀಡಿರುವ ಸ್ಥಾನಮಾನ ಮತ್ತು ಪ್ರಾತಿನಿಧ್ಯ ನೋಡಿದರೆ ಇದು ಅರ್ಥವಾಗುತ್ತದೆ. ಇದೇ ದುಷ್ಟತನ ಮುಂದುವರೆದು ತಮಗೆ ಯಾವ ಕಾನೂನೂ ಅನ್ವಯಿಸುವುದಿಲ್ಲವೆಂದು ಹೆಣ್ಣನ್ನು ಮನಬಂದಂತೆ ಉಪಯೋಗಿಸಿಕೊಳ್ಳಲಾಗುತ್ತದೆ. ರಾಜಕಾರಣದಲ್ಲಿ ಅನಾದಿಯಿಂದ ಮಹಿಳೆಗೆ ಸಿಕ್ಕಿರುವ ಎಂಟ್ರಿ ರಾಜಮಾರ್ಗದ್ದಲ್ಲ, ಬದಲಿಗೆ ಇಂಥ ಹಿಂಬಾಗಿಲಿನ ವರಸೆಗಳೇ. ಇದರ ವಿರುದ್ಧ ಮಹಿಳೆ ಜಾಗೃತಳಾಗಬೇಕು. ರೇಪಿಸ್ಟ್ ಇರುವ ಪಕ್ಷಕ್ಕೆ, ಅಂತಹ ಜನಪ್ರತಿನಿಧಿಗಳಿಗೆ ಮತ ಹಾಕದೇ ನಿರಾಕರಿಸಬೇಕು.

ಕೀಳು ಅಭಿರುಚಿಯಲ್ಲಿ ಮಹಿಳೆಯರನ್ನು ಬಿಂಬಿಸಿ ಜಾಹೀರಾತು ತೋರಿಸುವ ವಸ್ತು, ಧಾರಾವಾಹಿ, ಸಿನಿಮಾಗಳನ್ನು ನಿರಾಕರಿಸಬೇಕು. ಇವತ್ತಿನ ಹೆಣ್ಣುಮಕ್ಕಳನ್ನು ಮುಕ್ಕಾಲು ಭಾಗ ಪ್ರಭಾವಿಸಿ ಹಾದಿ ತಪ್ಪಿಸುವವು ಜಾಹೀರಾತುಗಳು. ೫೦% ಮಾರುಕಟ್ಟೆ ಇರುವ ಮಹಿಳಾ ಸಮುದಾಯ ಮಾರುಕಟ್ಟೆ ತೋರಿಸುವ ಆಮಿಷಗಳಿಗೆ ಬಲಿಯಾಗದೇ ತಿರುಗಿ ಬಿದ್ದರೆ ಆರ್ಥಿಕ ಸಮೀಕರಣಗಳೇ ಬದಲಾಗಿಬಿಡಬಹುದು. ಇವೆಲ್ಲ ವಿಚಾರಗಳನ್ನು ಎಲ್ಲ ಮಹಿಳೆಯರಿಗೂ ತಲುಪಿಸಲು ಸಂಘಟಿತಳಾಗಬೇಕಾದ ಅವಶ್ಯಕತೆಯಿದೆ.

ದೆಹಲಿ ಅತ್ಯಾಚಾರ ಪ್ರಕರಣದ ಸಮಯದಲ್ಲಿ ಮೇಲುವರ್ಗ ಅನುಭವಿಸುವ ದೌರ್ಜನ್ಯವಷ್ಟೇ ಮಾಧ್ಯಮದ ಗಮನ ಸೆಳೆಯುತ್ತದೆ; ದಿನನಿತ್ಯ ಎಷ್ಟೋ ಶ್ರಮಿಕ, ಬಡ ಸೋದರಿಯರು ಬರ್ಬರ ಹಿಂಸೆ, ಅತ್ಯಾಚಾರಕ್ಕೊಳಗಾಗಿದ್ದು ಯಾರ ಗಮನವನ್ನೂ ಸೆಳೆಯುವುದಿಲ್ಲ ಎಂಬ ಆರೋಪ ಕೇಳಿಬಂತು. ಇಂಥ ಆರೋಪ ಸುಳ್ಳಾಗುವಂತೆ, ಮತ್ತೆ ಕೇಳದಂತೆ ಯಾವ ವರ್ಗ/ಜಾತಿ/ಧರ್ಮ/ಉದ್ಯೋಗ/ಪಕ್ಷದ ಮಹಿಳೆಯೇ ಆಗಿರಲಿ. ಯಾವ ಪ್ರಾದೇಶಿಕ/ಭಾಷಿಕ/ಸಂಘಟನಾ ಹಿನ್ನೆಲೆಯವಳೇ ಆಗಿರಲಿ - ಎಲ್ಲರೂ ಶೋಷಿತ ಮಹಿಳೆಯರ ಪರವಾಗಿ ದನಿಯೆತ್ತಬೇಕು. ಪ್ರತಿ ವ್ಯವಸ್ಥೆಯೊಳಗಿರುವ ಪುರುಷತನ ‘ಪ್ರಭುತ್ವ’ವಾಗಿ ಮಹಿಳೆಯನ್ನು ಶೋಷಣೆಗೊಳಪಡಿಸಿರುತ್ತದೆ. ಅದರ ವಿರುದ್ಧ ಎಲ್ಲ ಮಹಿಳೆಯರು ತಮ್ಮ ಉಳಿದ ಹಿನ್ನೆಲೆಯನ್ನು ಬದಿಗಿಟ್ಟು ಒಗ್ಗೂಡಿ ಹೋರಾಡಬೇಕು. ಆಗಷ್ಟೇ ಹೋರಾಟಕ್ಕೊಂದು ಪ್ರತಿಫಲ ದೊರೆಯಬಹುದು.

ಇದೇ ಎದೆಯೋನಿಕಿಬ್ಬೊಟ್ಟೆಗಳ ನಡುವಿನಿಂದ ಹುಟ್ಟಿ ಬೆಳೆಯುವ ಗಂಡು ಅದು ಹೇಗೆ ಹೆರುವ ಜೀವಗಳತ್ತ ಹಿಂಸಾರೂಪಿಯಾಗಿ ತಿರುಗಿಬೀಳುತ್ತಾನೆ? ಹಾಗಾಗದಂತೆ ತಡೆಯಲು ಕುಟುಂಬದೊಳಗಿನಿಂದಲೇ ಲಿಂಗಸೂಕ್ಷ್ಮತೆ, ಲಿಂಗಸಮಾನತೆಯ ಪಾಠಗಳು ಶುರುವಾಗಬೇಕು. ಪ್ರತಿ ಅಪ್ಪಅಮ್ಮನೂ ತಮ್ಮ ಗಂಡು ಮಕ್ಕಳಿಗೆ ಜೆಂಡರ್ ಸೆನ್ಸಿಟಿವಿಟಿ ಹಾಗೂ ಹೆಣ್ಣಿನ ಮೇಲೆ ಗೌರವ ಮೂಡುವಂತೆ ನೋಡಿಕೊಳ್ಳಬೇಕು. ಹಾಗೂ ತಮ್ಮ ಹೆಣ್ಣುಮಕ್ಕಳಿಗೆ ದೇಹದ ಹೊರತಾಗಿ ಒಂದು ಅಸ್ತಿತ್ವ-ವ್ಯಕ್ತಿತ್ವ ಇದೆಯೆಂದೂ; ಅದೇ ನಿಜವಾದ ಸೌಂದರ್ಯವೆಂದೂ ಅರಿವು ಮೂಡಿಸಿ ಆತ್ಮಘನತೆಯ ಪಾಠ ಹೇಳಿಕೊಡಬೇಕು.

No comments:

Post a Comment