Wednesday 16 July 2014

ಬಸವನಹುಳು: ಅವಸರವೆಂದರೇನೆಂದೇ ತಿಳಿಯದ ಜೀವಿ!



ಮಳೆಯಿಲ್ಲ, ಮಳೆಯೇ ಬರಲಿಲ್ಲ, ಇಷ್ಟು ಕ್ಷೀಣ ಮಳೆಗಾಲವನ್ನು ಜೀವಮಾನದಲ್ಲೇ ನೋಡಿರಲಿಲ್ಲ ಎಂದು ಕರಾವಳಿಯ ಜನ ಗೊಣಗುವಾಗಲೇ ಒಂದು ತಿಂಗಳು ತಡವಾಗಿ ಜೋರು ಮಳೆಗಾಲ ಕಾಲಿಟ್ಟಿದೆ. ಮೃಗಶಿರಾ, ಆರಿದ್ರಾಗಳು ಕೈಕೊಟ್ಟರೂ ಪುನರ್ವಸು ನೆಲಕ್ಕೆ ಮರುಜೀವ ತಂದುಕೊಟ್ಟಿದೆ. ಒಂದೇ ಸಮ ಸುರಿಯುವ ಮಳೆಗೆ ಗೋಡೆ, ಸೂರು, ಬೇಲಿ ಎಲ್ಲವೂ ಬೂಸಲು ಹಿಡಿದು ಕಂದಾಗಿ, ಹಸಿರಾಗಿ ಕಂಗೊಳಿಸುವುದು ಒಂದು ಕಡೆಯಾದರೆ; ಅತಿ ಮಳೆಯ ಈ ದಿನಗಳಲ್ಲಿ ಕೆಲ ಅತಿಥಿಗಳು ಮನೆಯೊಳ ಹೊರಗೆಲ್ಲ ಸುಳಿದಾಡುತ್ತಿರುವುದು ನಿಮ್ಮ ಗಮನಕ್ಕೂ ಬಂದಿರುತ್ತದೆ. ಅಂತ ಒಬ್ಬ ಅತಿಥಿ ಚೇರಟೆಯಾದರೆ ಮತ್ತೊಂದು ಬಸವನಹುಳು ಅಥವಾ ಇಸ್ಕ. ಚೇರಟೆಗೆ ನಮ್ಮಂತೇ ಸದಾ ಧಾವಂತ, ಗಡಿಬಿಡಿ. ಅದು ನಿಧಾನ ಓಡಾಡಿದ್ದನ್ನು ಯಾರೂ ನೋಡಿರಲಿಕ್ಕಿಲ್ಲ. ಆದರೆ ಬಸವನಹುಳುವಿಗಾದರೋ ಅವಸರವೆಂದರೇನೆಂದೇ ಗೊತ್ತಿಲ್ಲ! ಸದಾ ಘನಗಂಭೀರ ಗಜಗಮನ. 

ನಮ್ಮ ಆಹ್ವಾನ, ವಿದಾಯ ಇಲ್ಲದೆ ಬಂದುಹೋಗುವ, ಇಷ್ಟವೋ ಅನಿಷ್ಟವೋ ನಿಯಮಿತವಾಗಿ ಸುತ್ತ ಸುಳಿವ ಎಷ್ಟೋ ಜೀವಿಗಳ ಇರವಿನ ಬಗೆಗೆ ನಮಗೆ ಗಮನವೇ ಇರುವುದಿಲ್ಲ. ಕನಿಷ್ಠ ಕುತೂಹಲವೂ ಕೆಲವೊಮ್ಮೆ ಹುಟ್ಟುವುದಿಲ್ಲ. ಅದಕ್ಕೆ ಕಾರಣ ಈ ಬದುಕಿನ ಧಾವಂತ ಮತ್ತು ನಿರ್ಲಕ್ಷ್ಯ. ಕಣ್ಣುಪಟ್ಟಿ ಕಟ್ಟಿಕೊಂಡ ಕುದುರೆ ಕಣ್ಣೆದುರು ಕಾಣುವಷ್ಟು ದೂರದ ರಸ್ತೆ ಕ್ರಮಿಸಲು ನಾಗಾಲೋಟದಲ್ಲಿ ಕ್ರಮಿಸುವ ಹಾಗೆ ದಿನರಾತ್ರಿಗಳನ್ನು ಕಳೆಯುತ್ತಿದ್ದೇವೆ. 

ಆದರೆ ಅಂಥ ಧಾವಂತದ ಒತ್ತಡಗಳಿಂದ ನಡುನಡುವೆ ಪಾರಾಗುವುದು ತುಂಬ ಅವಶ್ಯವಿದೆ. ಅದಕ್ಕೆ ಕಣ್ಣಿಗೆ ಕಾಣಬರುವ ಸಂಗತಿಗಳತ್ತ ಒಂದು ಸಣ್ಣ ಕುತೂಹಲವನಿಟ್ಟುಕೊಂಡು ಬೆನ್ನತ್ತಿದರೆ ಸಾಕಾಗುತ್ತದೆ. 

ಹಾಗಾದರೆ ಮೆಲುಜೀವಿ, ಮೃದ್ವಂಗಿ ಬಸವನಹುಳದ ಬದುಕಿನ ಕಡೆಗೊಮ್ಮೆ ನೋಡೋಣವೇ?

ಇಸ್ಕ: ವಿಸ್ಮಯ ಪ್ರಪಂಚ

ಈ ಕಡೆ ‘ಇಸ್ಕ’ ಎನುವ, ಘಟ್ಟದ ಮೇಲೆ ಬಸವನ ಹುಳ, ಸೂಳೆಹುಳ ಎನ್ನುವ ಜೀವಿ ಮೃದ್ವಂಗಿಗಳ ಗುಂಪಿಗೆ ಸೇರಿದ್ದು. ಅವು ಬೆನ್ನು ಹುರಿಯಿಲ್ಲದ, ವಿಭಾಗಗಳ ದೇಹವುಳ್ಳ ಜೀವಿಗಳು. ಅವು ಮನುಷ್ಯನಿಗಿಂತ ೫೦ ಕೋಟಿ ವರ್ಷ ಕೆಳಗೇ ಭೂಮಿ ಮೇಲೆ ಉದಯಿಸಿದವು. ಅವು ತಮ್ಮ ಸುತ್ತ ಎಂತಹ ಪರಿಸ್ಥಿತಿಯಿದೆಯೋ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುವ ಅದ್ಭುತ ಜೀವಿಗಳು. ಅದರಲ್ಲೂ ಇಸ್ಕ ಸರ್ವಾಂತರ್ಯಾಮಿ. ಎಲ್ಲ ವಾತಾವರಣಗಳಲ್ಲೂ, ಪ್ರದೇಶಗಳಲ್ಲೂ ಅದನ್ನು ಕಾಣಬಹುದು. ಅವಕ್ಕೆ ಸೂರ್ಯನ ಬೆಳಕೆಂದರೆ ಅಷ್ಟು ಇಷ್ಟವಿಲ್ಲ. ಎಂದೇ ಮೋಡಕವಿದ ದಿನಗಳಲ್ಲಿ ಚಟುವಟಿಕೆಯಿಂದಿರುತ್ತವೆ. ಬಿಸಿಲಿರುವ ದಿನಗಳಲ್ಲಿ ಚಿಪ್ಪಿನೊಳಗೆ ಅಡಗಿ ಹೆಚ್ಚುಕಾಲ ಕಳೆಯುತ್ತವೆ. 

ಒಂದಿಲ್ಲೊಂದು ಪಶುಪಕ್ಷಿಕ್ರಿಮಿಕೀಟ ಕಳವಳಗೊಳಿಸುವ ಈ ಮನೆಯಲ್ಲಿ ಗೊದ್ದ ಇದ್ದರೆ ಇರುವೆ ಬರುವುದಿಲ್ಲ; ಇರುವೆ ಎದ್ದರೆ ಇಸ್ಕ ಇರುವುದಿಲ್ಲ. ಜೀವಿಗಳೆಲ್ಲ ಅಂತಹ ಆಂತರಿಕ ಹೊಂದಾಣಿಕೆಯಲ್ಲಿ ಬದುಕುತ್ತಿದ್ದರೂ ಕಳೆದಬಾರಿಯ ಅತಿ ಮಳೆಗೆ ಎಲ್ಲಿ ನೋಡಿದರಲ್ಲಿ ಇಸ್ಕದ ಸಾಮ್ರಾಜ್ಯವಾಗಿತ್ತು. ಮನೆಯ ಗೋಡೆಗಳ ಮೇಲೆ, ಮರಗಿಡಗಳ ಕಾಂಡದ ಮೇಲೆ ನೇಯ್ದಿಟ್ಟ ಹಾಗೆ ಇಸ್ಕದ ಮರಿಗಳು ಕಂಡುಬರುತ್ತಿದ್ದವು. ಕೈತೊಳೆಯಲು ನಲ್ಲಿ ತಿರುಗಿಸಿದರೆ ಅದರ ಬಾಯಲ್ಲಿ ಇಸ್ಕವಿದೆ. ಮೆಟ್ಟಿಲಿಳಿಯುವಾಗ ಆಚೀಚಿನ ಸರಳು ಹಿಡಿದುಕೊಂಡರೆ ಅಲ್ಲೊಂದು ಇಸ್ಕವಿದೆ. ಒದ್ದೆ ಕೊಡೆಯ ಬಿಚ್ಚಿ ಹಿಡಿದರೆ ಹಿಡಿಕೆಯಲ್ಲಿ ಇಸ್ಕವಿದೆ. ಎಲ್ಲೋ ನೋಡುತ್ತ ಕಾಲು ತೂರಿಸಿದ ಚಪ್ಪಲಿಯೊಳಗೆ ಇಸ್ಕ ತಣ್ಣಗೆ ಸೇರಿಕೊಂಡಿದೆ. ಒಣಹಾಕಿ ವಾರವಾದರೂ ಒಣಗದ ದಪ್ಪ ಜೀನ್ಸ್ ಪ್ಯಾಂಟಿನಲ್ಲಿ ಇಸ್ಕವಿದೆ.. 

ಎಲ್ಲೆಂದರಲ್ಲಿ ಕಾಣುವ ಇಸ್ಕ ಎಂದರೆ ಕೆಲವರಿಗೆ ಕುತೂಹಲ, ಪ್ರೀತಿ. ಹಲವರಿಗೆ ವಾಕರಿಕೆ. ಮೃದುವಾದ, ಒದ್ದೆಒದ್ದೆಯಾದ, ನಯಸಾದ, ಮೈಮೇಲೆ ಚಿಪ್ಪೂ ಇಲ್ಲದ ಕರಾವಳಿ ಇಸ್ಕಗಳು ಚಂದವೋ, ಕುರೂಪವೋ ಎನ್ನುವುದು ವ್ಯಾಖ್ಯಾನಕ್ಕೆ ಸಿಗದ ಗೊಂದಲ. ನಮ್ಮನೆಯ ಬೆಕ್ಕಿನಮರಿಗಾದರೋ ಅದರ ಬಗ್ಗೆ ನಮಗೆಷ್ಟೋ ಅಷ್ಟೇ ಕುತೂಹಲ. ಗೋಡೆ ಮೇಲಿನ ಹಲ್ಲಿ ಎಷ್ಟೊತ್ತಿಗೆ ಕೆಳಗೆ ಬಂದೀತು ಎಂದು ಅರೆತೆರೆದ ಕಣ್ಣುಗಳಲ್ಲಿ ಕನಸುತ್ತ ಕೂರುವ ಬೆಕ್ಕಿನ ಮರಿಗೆ ಎರಡು ಕೊಂಬು ಮೇಲೇರಿಸಿಕೊಂಡು ನಿಧಾನ ವಾಲಾಡುತ್ತ ಹರಿವ ಆ ಜೀವ ಜೀವವೇ ಹೌದೋ ಅಲ್ಲವೋ ಎಂಬ ಅಚ್ಚರಿ. ಆಡಿಸಬೇಕೆಂದರೆ ಆಡುವುದಿಲ್ಲ, ಚೋಟು ಹಾಕಿದರೂ ತಾಗುವುದಿಲ್ಲ. ತನ್ನ ಪಂಜಾ ಮುಟ್ಟುತ್ತಲೇ ನೆಲದ ಮೇಲೆ ಉರುಳಾಡುವುದಿಲ್ಲ, ಹೊರಳಾಡುವುದಿಲ್ಲ, ಹಾರಿ ಬೀಳುವುದಿಲ್ಲ. ಅದಕ್ಕೆ ಯಾವಾಗಲೂ ತಣ್ಣಗೆ ಹರಿವ ಈ ಜೀವಿಯ ಕುರಿತು ಭಯ, ಕುತೂಹಲ. ತಿನ್ನುವುದೋ ಬಿಡುವುದೋ ಅನುಮಾನ. ಆದರೂ ಛಲ ಬಿಡದೆ ಒಮ್ಮೆ ಅದನ್ನು ಮೂಸಿಮೂಸಿ ಕಾಲಲ್ಲಿ ಹಿಂದೆಮುಂದೆ ತಿರುಗಿಸಿ ಅದು ಡಬ್ಬ ಬೀಳುವಂತೆ ಮಾಡಿ ಬಾಯಿಗೆ ಹಾಕೇ ಬಿಟ್ಟಿತು. ಕುತ್ತಿಗೆಯನ್ನು ಆಚೆ ತಿರುಗಿಸಿ, ಈಚೆ ತಿರುಗಿಸಿ ಜಗಿದೇ ಬಿಟ್ಟಿತು. ಎಲ ಎಲಾ ಎಂದುಕೊಳುವಾಗಲೇ ಅದರ ಬಾಯೆಲ್ಲ ಸುಂಬಳವಾಯಿತಿರಬೇಕು, ಕ್ಯಾಕರಿಸಿ ವಾಂತಿ ಮಾಡಿ ಉಗಿಯಿತು. ಅದಾದನಂತರ ಬೆಕ್ಕು ಇಸ್ಕದ ಸುದ್ದಿಗೆ ಹೋದರೆ ಕೇಳಿ. 

ನೆಲದ ಮೇಲೆ ಬಣ್ಣಬಣ್ಣದ, ವಿವಿಧ ಸೈಜಿನ ಇಸ್ಕಗಳನ್ನು ನೋಡಬಹುದಾದರೂ ನೀರಿನಲ್ಲಿ ಅದಕ್ಕಿಂತ ಹೆಚ್ಚು ಪ್ರಭೇಧಗಳನ್ನು ಕಾಣಬಹುದು. ಸಿಹಿನೀರಿನ ಇಸ್ಕ ಹಾಗೂ ಉಪ್ಪು ಕಡಲಿನ ಇಸ್ಕ ಬೇರೆಬೇರೆ. ಸಮುದ್ರದ ಕೆಲ ಇಸ್ಕಗಳು ೧೫ ಇಂಚಿನಷ್ಟು ಬೆಳೆಯುತ್ತವೆ, ಎರಡು ಪೌಂಡಿನಷ್ಟು ತೂಗುತ್ತವೆ. ಕರಾವಳಿ-ಮಲೆನಾಡಿನಲ್ಲಿ ಕಾಣಬರುವ ಇಸ್ಕಗಳಿಗೆ ಬೆನ್ನ ಮೇಲೆ ಚಿಪ್ಪು ಇರುವುದಿಲ್ಲ. ಇದು ಇಸ್ಕದಲ್ಲೇ ಕಂಡು ಬರುವ ಇನ್ನೊಂದು ಪ್ರಭೇದ. 

ನೆಲದ ಮೇಲೆ ಕಾಣುವ ಇಸ್ಕಗಳಲ್ಲಿ ಗಂಡು ಹೆಣ್ಣು ಬೇರೆಬೇರೆ ಅಲ್ಲ. ಅವು ಎರಡೂ ಆಗಿರುತ್ತವೆ. ಎಂದರೆ ಅಂಡವನ್ನೂ, ವೀರ್ಯಾಣುವನ್ನೂ ಹೊಂದಿರುತ್ತವೆ. ಜೀವ ಪ್ರಭೇಧದ ಆದಿಮ ಹಂತಗಳಲ್ಲಿ ಜೀವಿಗಳು ದ್ವಿಲಿಂಗಿಗಳಾಗಿರುತ್ತವೆ. ಎರಡರ ನಡುವೆ ಸಂತಾನೋತ್ಪತ್ತಿಗಾಗಿ ಕೂಡಾಟ ನಡೆಯುವಾಗ ಒಂದರ ಗರ್ಭ ಕಟ್ಟಿಸುತ್ತಲೇ ಇನ್ನೊಂದು ತಾನೂ ಗರ್ಭ ಕಟ್ಟುತ್ತದೆ. ಒಂದು ಇನ್ನೊಂದರ ಅಂಡವನ್ನು ಫಲಿತಗೊಳಿಸುತ್ತದೆ. ಎರಡು ಇಸ್ಕಗಳ ಮೇಟಿಂಗ್ ಕಾಲಾವಧಿ ಎರಡು ತಾಸು! ಗರ್ಭ ಕಟ್ಟಿದ ಮೇಲೆ ಒದ್ದೆಯಿರುವ, ನೆರಳಿರುವ, ಸಂದುಮೂಲೆಗಳಲ್ಲಿ ಮೊಟ್ಟೆಯಿಡುತ್ತದೆ. ಒಂದು ತಿಂಗಳ ನಂತರ ಮರಿ ಹೊರಬರುತ್ತದೆ. ಮರಿಗೆ ತನ್ನ ಬೆನ್ನ ಮೇಲಿನ ಚಿಪ್ಪು ಬೆಳೆಸಿಕೊಳ್ಳಲು ಕ್ಯಾಲ್ಶಿಯಂನ ಅವಶ್ಯಕತೆಯಿರುತ್ತದೆ. ಎಂದೇ ಆ ಕ್ಯಾಲ್ಶಿಯಂಗಾಗಿ ಒಡೆದು ಬಂದ ಚಿಪ್ಪನ್ನೇ ತಿಂದುಹಾಕುತ್ತದೆ. ಜೊತೆಗೆ ಆಚೀಚೆ ಉಳಿದ ಮೊಟ್ಟೆಗಳು ಕಂಡರೆ ಅದನ್ನೂ ತಿನ್ನುತ್ತದೆ. ಇಸ್ಕದ ಚಿಪ್ಪು ಕ್ಯಾಲ್ಶಿಯಂ ಕಾರ್ಬೋನೇಟಿನಿಂದಾಗಿದ್ದು ಅದು ಜೀವಮಾನ ಪರ್ಯಂತ ಬೆಳೆಯುತ್ತದೆ.

ಅದರ ನಾಲಗೆಯ ಎರಡೂ ಕಡೆ ಹಲ್ಲುಗಳಂತಹ ಅತಿಸೂಕ್ಷ್ಮ ರಚನೆಗಳಿದ್ದು ಅದು ಇಬ್ಬಾಯ ಗರಗಸದಂತೆ ಕೆಲಸ ಮಾಡುತ್ತದೆ. ಇಸ್ಕವು ನೆಕ್ಕುವುದೆಂದರೆ ಕಚ್ಚುವುದು, ನಾಲಗೆಯಿಂದ ಸವರುವುದೆಂದರೆ ಜಗಿಯುವುದು. ಕಾಲಿಲ್ಲದ ಅದು ಹೊಟ್ಟೆಯನ್ನು ನೆಲದ ಮೇಲೆ ಎಳೆಯುತ್ತ ಚಲಿಸುತ್ತದೆ. ಹಾಗೆ ಚಲಿಸುವಾಗ ಚಲನೆ ಸುಲಭವಾಗಲೆಂದು, ಮೃದು ದೇಹ ಗಾಸಿಗೊಳ್ಳದಿರಲೆಂದು ಅಂಟುದ್ರವ ಸ್ರವಿಸುತ್ತದೆ. ತನ್ನ ದಾರಿಯನ್ನು ತಾನೇ ರೂಪಿಸಿಕೊಂಡು ನಡೆಯುತ್ತದೆ. ಎಂದೇ ಅದಕ್ಕೆ ತಲೆಕೆಳಗಾಗಿ ಚಲಿಸುವುದೂ, ನೇರ ಚಲಿಸುವುದೂ ಭಿನ್ನವಲ್ಲ. ಅವಕ್ಕೆ ಕಿವಿಯಿರುವುದಿಲ್ಲ. ಆದರೆ ಕಣ್ಣು ಮತ್ತು ವಾಸನೆ ಗ್ರಹಿಸುವ ಅಂಗಗಳಿವೆ. ತಲೆಮೇಲೆ ಚಾಚಿದ ಎರಡು ಉದ್ದನೆಯ ಕೋಡು ಕಣ್ಣನ್ನು ಅದರ ತುದಿಯಲ್ಲಿ ಹೊಂದಿದ್ದರೆ; ಅದರ ಕೆಳಗಿನ ಎರಡು ಸಣ್ಣ ಚೂಪುಗಳು ವಾಸನೆ ಗ್ರಹಿಸುವ ಅಂಗವನ್ನು ಹೊಂದಿರುತ್ತವೆ.

ರಾತ್ರಿ ಮತ್ತು ಬೆಳಗಿನ ಜಾವ ಅವು ತುಂಬ ಚಟುವಟಿಕೆಯಿಂದಿರುತ್ತವೆ. ಏನು ಸಿಗುವುದೋ ಅದನ್ನೇ ತಿನ್ನುವುದನ್ನು ರೂಢಿಸಿಕೊಳ್ಳುತ್ತವೆ. ಪಾಚಿ, ಚಿಗುರು, ಹೂವು, ಎಲೆಗಳನ್ನಲ್ಲದೆ ಸಣ್ಣಪುಟ್ಟ ಕ್ರಿಮಿಕೀಟಗಳನ್ನೂ ಇಸ್ಕ ತಿನ್ನುತ್ತದೆ. ಅದರ ಸರಾಸರಿ ಆಯಸ್ಸು ೧೫ ವರ್ಷ. ಎರಡು ವರ್ಷದ ಹೊತ್ತಿಗೆ ಪ್ರೌಢಾವಸ್ಥೆಗೆ ಬಂದಿರುತ್ತದೆ. ಮಳೆಗಾಲದಲ್ಲಿ ಹೊರಬೀಳುವ ಇಸ್ಕಗಳ ಕೆಲ ಪ್ರಭೇದಗಳು ಬೇಸಿಗೆಯಲ್ಲಿ, ಮತ್ತೆ ಕೆಲವು ಅತಿಚಳಿಯಲ್ಲಿ ಮೈಸುತ್ತ ಸುಂಬಳದ ಒಂದು ಪದರ ಸ್ರವಿಸಿಕೊಂಡು ನೆಲದಾಳದಲ್ಲಿ ಅಡಗಿ ಕುಳಿತಿರುತ್ತವೆ. ಹೀಗೆ ಕುಳಿತಾಗ ತನ್ನ ದೇಹದ ಕೊಬ್ಬಿನಂಶವನ್ನೇ ಬಳಸಿಕೊಂಡು ಬದುಕುಳಿಯುತ್ತವೆ. ಅವು ಹೆಚ್ಚೇನೂ ಆಹಾರವಿಲ್ಲದೆಯೂ ಬದುಕಬಲ್ಲವೆಂದೇ ಮಿಲಯಗಟ್ಟಲೆ ವರ್ಷದಿಂದ ಉಳಿದುಬಂದಿವೆ. ಆದರೂ ಅಷ್ಟು ಮಾಂಸಲವಾಗಿದ್ದು, ದೇಹದ ತೇವವನ್ನು ಹೇಗೆ ಕಾಪಾಡಿಕೊಳ್ಳುತ್ತದೆ ಎನ್ನುವುದೊಂದು ವಿಸ್ಮಯವೇ ಸರಿ.

ಈ ಜೀವಿಗಳು ಅತ್ಯಂತ ಮೃದು, ಅತ್ಯಂತ ನಿಧಾನ. ವಯಸ್ಕ ಬಸವನಹುಳು ಸೆಕೆಂಡಿಗೆ ಒಂದು ಮಿಲಿಮೀಟರಿನಷ್ಟು ಮಾತ್ರ ಮುಂದೆ ಚಲಿಸಬಲ್ಲದು. ನಿಧಾನ ಆದರೂ ನಿಯಮಿತವಾಗಿ ಗಂಟೆಗಟ್ಟಲೆ ಚಲಿಸುತ್ತದೆ. ಮಳೆಗಾಲದಲ್ಲಿ ಎಲ್ಲೆಲ್ಲೂ ಕಾಣುವ ಚೇರಟೆ ತಾಗಿದರೆ, ದೇಹರಸ ಹನಿದರೆ ಗುಳ್ಳೆ, ಉರಿ, ತುರಿಕೆ ಎಲ್ಲ ಶುರುವಾಗುತ್ತದೆ. ಆದರೆ ಇಸ್ಕ ಸ್ರವಿಸುವ ಸುಂಬಳದಂತಹ ದ್ರವಕ್ಕೆ ಯಾವ ರಿಯಾಕ್ಷನ್ನೂ ಆಗುವುದಿಲ್ಲ. ಅದರ ಆಕಾರ, ಚಲನೆ, ನಿಧಾನ, ಬಣ್ಣ ಇವೆಲ್ಲ ಒಂದು ಜಿಗುಪ್ಸೆಯ ಭಾವ ಹುಟ್ಟಿಸಬಹುದೇ ಹೊರತು ಅದರಿಂದ ಅಪಾಯವಿಲ್ಲ. 


ಮನುಷ್ಯ ಜೀವಕ್ಕೆ ಅಪಾಯವಿಲ್ಲವಾದರೂ ಗಿಡಮರಗಳಿಗೆ ಲಗ್ಗೆಯಿಟ್ಟು ಬೆಳೆಹಾನಿ ಮಾಡುತ್ತದೆ. ಆಫ್ರಿಕಾದಲ್ಲಿ ದೈತ್ಯ ಬಸವನಹುಳುವಿನ ಒಂದು ಪ್ರಭೇದವಿದ್ದು ಅದು ಸುತ್ತಲ ಪರಿಸರದ ಜೀವಿಗಳಿಗಷ್ಟೇ ಅಲ್ಲ, ಮನುಷ್ಯರಿಗೂ ಅಪಾಯಕರವಾಗಿದೆ. ಅವು ಮನುಷ್ಯರಲ್ಲಿ ಮೆನಿಂಜೈಟಿಸ್ ಎಂಬ ಮಿದುಳಿನ ಪೊರೆಯ ಸೋಂಕಿಗೆ ಕಾರಣವಾದ ರೋಗಾಣುಗಳ ವಾಹಕಗಳಾಗಿವೆ. ಅಲ್ಲದೇ ವ್ಯಾಪಕ ಬೆಳೆನಾಶ ಮಾಡಬಲ್ಲವು. ಗಿಡಮರಗಳ ಹೂ, ಹಣ್ಣು, ಮಿಡಿ, ಕಾಯಿ, ಚಿಗುರು, ಎಲೆ ಎಲ್ಲವನ್ನೂ ತಿನ್ನಬಲ್ಲವು. ತೂತು ಕೊರೆದು ಫಸಲನ್ನು ಹಾಳುಗೆಡವಬಲ್ಲವು. ಅಮೆರಿಕಾ, ಯೂರೋಪಿನ ವಿಮಾನ ನಿಲ್ದಾಣ, ಹಡಗುಕಟ್ಟೆಗಳಲ್ಲಿ ಕೃಷಿ ಇಲಾಖೆಯು ಅಂಥ ಹುಳುಹುಪ್ಪಟೆಗಳು ವಿದೇಶದಿಂದ ತಮ್ಮ ದೇಶಕ್ಕೆ ಬಂದಿವೆಯೇ ಎಂದು ಕಣ್ಣಿಟ್ಟು ಕಾಯುತ್ತವೆ. ಭಾರತದ ಬಹುತೇಕ ರಾಜ್ಯಗಳಿಗೆ ಅವು ಆಗಲೇ ಬಂದಿದ್ದು ಸ್ಥಳೀಯ ಪರಿಸರಕ್ಕೆ ಮಾರಕವಾಗಲಿವೆ ಎಂಬ ಮುನ್ಸೂಚನೆಯನ್ನು ಕೊಡಲಾಗಿತ್ತು. ಕಳೆದ ವರ್ಷ ಕೇರಳದಲ್ಲಿ ಅಪಾಯಕಾರಿ ಮಟ್ಟದಲ್ಲಿ ಎಲ್ಲೆಲ್ಲೂ ಆವರಿಸಿಕೊಂಡ ಇಸ್ಕಗಳನ್ನು ಹಿಡಿದು ಉಪ್ಪುನೀರಿನಲ್ಲಿ ಹಾಕಿ ಎಂಬ ಸಲಹೆ ನೀಡಲಾಗಿತ್ತು. 


ಅವನ್ನು ನಿಗ್ರಹಿಸುವ ಸುಲಭ ಉಪಾಯ ಅವು ನೆಲೆಗೊಳ್ಳುವ, ಅಡಗಿಕೊಳ್ಳುವಂತಹ ಜಾಗಗಳ ಸಂಖ್ಯೆ ಮತ್ತು ವಿಸ್ತಾರವನ್ನು ಕಡಿಮೆ ಮಾಡುವುದು. ಜೊತೆಗೆ ಅವನ್ನು ನಾಶಮಾಡಲು ಉಪ್ಪನ್ನು, ಉಪ್ಪು ನೀರನ್ನು ಬಳಸಲಾಗುತ್ತದೆ. ಏಕೆಂದರೆ ಉಪ್ಪು ಉದುರಿಸಿದರೆ ಅವು ಸಾಯುತ್ತವೆ, ಉಪ್ಪು ಇರುವ ಪದಾರ್ಥ ತಿಂದರೂ ಸಾಯುತ್ತವೆ. ಉಪ್ಪನ್ನು ಜೀರ್ಣಿಸಿಕೊಳ್ಳುವ, ತಡೆದುಕೊಳ್ಳುವ ವ್ಯವಸ್ಥೆ ಅದರ ದೇಹದಲ್ಲಿಲ್ಲ.



ಫ್ರಾನ್ಸ್ ದೇಶದಲ್ಲಿ ಇಸ್ಕವನ್ನು ಸಾಕಿ, ಬೆಳೆಸಿ, ರುಚಿರುಚಿಯಾದ ತಿನಿಸು ತಯಾರಿಸುತ್ತಾರೆ. ಅದು ಜಗಿಜಗಿದು ತಿನ್ನಬೇಕಾದ ತುಂಬ ರುಚಿಯಾದ ಮಾಂಸವಂತೆ. ನಮ್ಮ ದೇಶದ ಈಶಾನ್ಯ ರಾಜ್ಯಗಳಲ್ಲೂ ಅದರಿಂದ ಖಾದ್ಯ ತಯಾರಿಸುವರಂತೆ. ಬೇರೆ ದೇಶಗಳಲ್ಲೂ ಅದರ ರುಚಿ ಜನಪ್ರಿಯ. ಅದರಲ್ಲೂ ಬಡವರ ಆಹಾರ ಎಂದೇ ಜನಪ್ರಿಯ. ನನಗೆ ತಿಳಿದಮಟ್ಟಿಗೆ ಮೀನು, ಮಾಂಸ, ತರಕಾರಿಗೆ ಬರಗಾಲವಿಲ್ಲದ ನಮ್ಮೂರಿನಲ್ಲಿ ಅದನ್ನು ಖಾದ್ಯವಾಗಿ ಬಳಸುತ್ತಿಲ್ಲ.

***

ಈ ಭೂಮಿ ಮೇಲೆ ಎರಡು ಕಾಲಿನವರಿಗಷ್ಟೇ ಅಲ್ಲ, ನಾಲ್ಕು ಕಾಲಿನವರು, ಆರು-ಎಂಟು-ನೂರು-ಸಾವಿರ ಕಾಲಿರುವವರಿಗೂ ಸಮಾನ ಅವಕಾಶವುಂಟು. ಹಾಗೇ ರೆಕ್ಕೆಗಳಿರುವವರು, ಕಿವಿರುಗಳಿರುವವರು, ಇಲ್ಲದಿರುವವರಿಗೂ ಬದುಕುವ ಸಮಾನ ಹಕ್ಕುಗಳುಂಟು. ಕಾಲಿಲ್ಲದ ಇಸ್ಕವನ್ನು ಸಹಸ್ರಪದಿ ಕೀಳಾಗಿ ನೋಡುವುದಿಲ್ಲ. ರೆಕ್ಕೆಯಿಲ್ಲದ ಮೀನನ್ನು ಹಕ್ಕಿ ಕಡೆಗಣಿಸುವುದಿಲ್ಲ. ನೀರಿನಲ್ಲಿ ಮೀನು ಮುಕ್ತ. ಆಗಸದಲ್ಲಿ ಹಕ್ಕಿ ಮುಕ್ತ. ಯಾರ‍್ಯಾರು ಎಲ್ಲೆಲ್ಲಿರುತ್ತಾರೋ ಅಲ್ಲಲ್ಲಿಗೆ ಅವರವರೇ ರಾಜರು.

ಕಲಿಯಬೇಕಾದ ಎಷ್ಟೊಂದು ಪಾಠಗಳಿವೆ ಪ್ರಕೃತಿ ಎಂಬ ಈ ವಿಸ್ಮಯದಲ್ಲಿ?!

No comments:

Post a Comment