ನಾನು
ಒಂದೇಒಂದು ಗುಟುಕನರಸಿ ಅರಳುವ ಹಕ್ಕಿಯ ಕಣ್ಣು
ಸುಡುಬಿಸಿಲಿಗೆ ಆವಿಯಾಗುವ ಶರತ್ಕಾಲದ ಗರಿಕೆ ಹನಿ
ಮುಳ್ಳಿನ ಜೊತೆಜೊತೆಯೇ ಅರಳಿ ಎಚ್ಚರಿಸುವ ಹೂವು
ಗೆಲುವಿನ ಉನ್ಮಾದ ಸೋಲಿನ ಹತಾಶೆ ಅರಿಯದ ಮಿಣುಕುಹುಳ
ನಾನು ರೂಮಿಯಲ್ಲ
ಶಂಸನೆಂಬ ತಳವಿರದ ಗುಡಾಣ ತುಂಬಿದ ಗಾಳಿ
ನಾನು ಬುದ್ಧನಲ್ಲ
ಲೋಕಕ್ಕೆ ಭಿಕ್ಷುವನಿತ್ತು ಬಿಕ್ಕುಳಿಸಿಕೊಂಡ
ಯಶೋಧರೆಯ ನಡುರಾತ್ರಿಯ ಮೌನ
ನಾನು ಅಕ್ಕ ಪಾರ್ವತಿ ಹಾಜಿಮಾ ಅಲ್ಲ
ಮೊಟ್ಟೆಯೊಡೆದು ಮರಿಯಾಗದೇ ಹೋದ
ಅವರ ಗರ್ಭಚೀಲದ ಕನಸು..
ನಾನು ಚೆ ಅಲ್ಲ
ಅವನ ಬಂದೂಕಿನ ಬಾಯಲ್ಲಿ ಗೂಡುಕಟ್ಟಿ
ನೆರೂಡನ ಹಾಡಲು ಕಾದ ಹಕ್ಕಿಯ ಕೊರಳು
ನಾನು ಬೆಟ್ಟವಲ್ಲ ಜಲಪಾತವಲ್ಲ
ಗುಹೆಯಲ್ಲ ಕಣಿವೆಯಲ್ಲ
ಕಂಡಷ್ಟೂ ದೂರ ಹಬ್ಬಿರುವ ಬಯಲಲಿ
ನಿನ್ನೊಡನಿಟ್ಟ ಹೆಜ್ಜೆಗುರುತುಗಳ ಹೊರತು
ಮತ್ಯಾವ ಆಳ ಎತ್ತರ ವಿಸ್ತಾರಗಳ ಕಲ್ಪನೆ
ಈ ಪುಟ್ಟ ಮಿದುಳಿನ ಅಳವಿನೊಳಗಿಲ್ಲ..
No comments:
Post a Comment