Monday, 28 July 2014

ಇಟ್ಟರೆ ಬೆರಣಿಯಾದೆ, ತಟ್ಟಿದರೆ ಕುರುಳಾದೆ..

ಎಂಟನೇ ಅದ್ಭುತದ ಸುತ್ತಮುತ್ತ 

ಬೇಸಿಗೆಯಿಡೀ ಕರಾವಳಿಯಲ್ಲಿ ಉರಿದಿದ್ದು ಸಾಲದೆಂಬಂತೆ ಇಲ್ಲಿ ಮಳೆ ಶುರುವಾಗುವ ಹೊತ್ತಿಗೆ ಉತ್ತರದ ಕಡೆ ಹೊರಟೆವು. ಉತ್ತರವೆಂದರೆ ಹಿಮಾಲಯಕ್ಕಲ್ಲ, ಬಿರುಬೇಸಿಗೆಯಲ್ಲಿ ಬೇಯುತ್ತಿರುವ ರಾಜಸ್ಥಾನಕ್ಕೆ, ದೆಹಲಿ-ಆಗ್ರಾ ಮಾರ್ಗವಾಗಿ. ದೆಹಲಿಯಿಂದ ಯಮುನಾ ನದಿಯ ಪೂರ್ವ ದಂಡೆಗುಂಟ ಚಲಿಸುತ್ತಿದ್ದೆವು. ಗಂಟೆ ಬೆಳಗಿನ ಹತ್ತಷ್ಟೇ, ಹೊರಗೆ ಕಾಲಿಟ್ಟರೆ ಕುಲುಮೆಯೊಳಗೆ ಇಳಿದ ಅನುಭವ.

ಆ ಬಿರುಬಿಸಿಲ ರಸ್ತೆಯಲ್ಲಿ ಹಲವು ವಿಸ್ಮಯಗಳು ಎದುರಾದವು.

ಅದು ಆರು ಲೇನುಗಳ ದೇಶದ ಅತಿ ದೊಡ್ಡ ರಸ್ತೆ - ಯಮುನಾ ಎಕ್ಸ್‌ಪ್ರೆಸ್ ವೇ. ದೆಹಲಿ ಎಷ್ಟು ಜನಭರಿತವೋ ಈ ಹೈವೇ ಅಷ್ಟೇ ಭಣಗುಡುತ್ತಿತ್ತು. ಆಚೀಚಿನ ಬಯಲುಗಳಲ್ಲಿ ಕಳ್ಳಿ ಗಿಡ, ಮರ ಜಾಲಿ, ಬಳ್ಳಾರಿ ಜಾಲಿ, ಎಕ್ಕದ ಗಿಡ, ಬೇವಿನ ಗಿಡ ಕಂಡವು. ವಿಸ್ತಾರವಾದ, ಫಲವತ್ತಾದ ಗಂಗಾಯಮುನಾ ನದೀಬಯಲುಗಳು ಮರುಭೂಮಿಯಾಗುತ್ತಿವೆಯೇ ಎಂದು ದಿಗಿಲಾಗುವಂತೆ ಮುಳ್ಳುಕಂಟಿ ಗಿಡಗಳೇ ಹೆಚ್ಚೆಚ್ಚು ಕಾಣತೊಡಗಿದವು.




ರಸ್ತೆಯ ಆಚೀಚೆ ಬಿತ್ತನೆಗೆ ಸಿದ್ಧವಾದ ಉತ್ತ ಹೊಲಗಳಿದ್ದವು. ನಡುನಡುವೆ ನಮ್ಮ ತಿರಿ, ಬಣವೆಗಿಂತ ಆಕೃತಿಯಲ್ಲಿ, ವಿನ್ಯಾಸದಲ್ಲಿ ಕೊಂಚ ಭಿನ್ನವಾದ, ಆಕರ್ಷಕವಾಗಿ ಕಟ್ಟಿದ ಧಾನ್ಯಸಂಗ್ರಹಗಳು ಕಂಡವು. ಬಣವೆಯ ಜೊತೆಗೇ ಮತ್ತೊಂದು ಆಕೃತಿ ಗಮನ ಸೆಳೆಯಿತು. ಉಳುಮೆಯಾದ ಹೊಲದ ಬದುಗಳಲ್ಲಿ, ಹಳ್ಳಿ ಮನೆಗಳ ಅಕ್ಕಪಕ್ಕದಲ್ಲಿ, ದಿಬ್ಬದ ಮೇಲೆ, ಕಂಪೌಂಡ್‌ಗೆ-ಬೇಲಿಗೆ ತಾಗಿದಂತೆ ವಿವಿಧ ಆಕಾರಗಳ ಮಣ್ಣುಬಣ್ಣದ ಪುಟ್ಟ ಗುಡ್ಡಗಳಿದ್ದವು. ದೆಹಲಿ, ನೋಯ್ಡಾ ದೂರದೂರವಾದ ಹಾಗೆ ಪ್ರತಿ ಮನೆ, ಹೊಲದಲ್ಲೂ ಅಂಥ ಹಲವು ಗೋಪುರ ಕಾಣತೊಡಗಿದವು. ಕೆಲವು ಸೂರು ಹೊದ್ದುಕೊಂಡಿದ್ದರೆ ಮತ್ತೆ ಕೆಲವು ಗೋಡೆಮೇಲೆ ಚಿತ್ತಾರ ಬರಕೊಂಡಿದ್ದವು. ಏನಿದು? ಡ್ರೈವರ್ ಕೇಳಿದರೆ ಉತ್ಸಾಹದಿಂದ ವಿವರಿಸಿದ್ದೇ ಅಲ್ಲದೆ ಸರಿಯಾಗಿ ಫೋಟೋ ತೆಗೆದುಕೊಳ್ಳಿ ಎಂದು ಒಂದೆರೆಡು ಕಡೆ ನಿಲ್ಲಿಸಿದರು.

ಅವು ಬಿಟೌಡಾ. ಸಗಣಿ ಬೆರಣಿಯ ಗೋಪುರಗಳು. ಕರ್ನಾಟಕದ ಬಯಲು ನಾಡಿನಲ್ಲಿ ಬೆರಣಿ ರಾಶಿ ಹಾಕಿದ್ದು ನೋಡಿದ್ದರೂ ಇಲ್ಲಿಯಷ್ಟು ಬೃಹತ್ ಪ್ರಮಾಣದ ಕಲಾತ್ಮಕ ಗೋಪುರಗಳನ್ನು ನೋಡಿದ ನೆನಪಾಗಲಿಲ್ಲ. ಮುಂದೆ ಮುಂದೆ ಹೋದಂತೆ ರಚನೆಯ ವಿವಿಧ ಹಂತಗಳಲ್ಲಿರುವ, ವಿಭಿನ್ನ ಆಕಾರ-ಚಿತ್ತಾರ-ಎತ್ತರ-ವಿನ್ಯಾಸ-ಬಣ್ಣದಲ್ಲಿರುವ ಗೋಪುರಗಳು ಕಾಣಿಸಿದವು. ಒಣಗಿದ ಕುಳ್ಳನ್ನು ಅಲ್ಯುಮಿನಿಯಂ ಬುಟ್ಟಿಗಳಲ್ಲಿ ತಲೆಮೇಲೆ ಹೊತ್ತು ಬ್ಯಾಲೆನ್ಸ್ ಮಾಡಿ ನಡೆವ ಹುಡುಗಿಯರು ಕಂಡರು.

ಮಲೆನಾಡು ಮತ್ತು ಘಟ್ಟದ ಸೆರಗಿನಲ್ಲಿ ಸಮೃದ್ಧ ಗಿಡಮರಗಳ ನಡುವೆ ಬದುಕುವವರಿಗೆ ಬೆರಣಿಯನ್ನು ಉರುವಲಾಗಿ ಕಲ್ಪಿಸಿಕೊಳ್ಳಲು ಕಷ್ಟ. ಆದರೆ ಭಾರತವಷ್ಟೇ ಅಲ್ಲ, ಪ್ರಪಂಚದಲ್ಲೇ ಅತ್ಯಂತ ಜನಪ್ರಿಯ ಗ್ರಾಮೀಣ ಇಂಧನ, ಬಡವರ ಇಂಧನ ಬೆರಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸುಲಭವಾಗಿ ಸಿಗುವ; ಅತ್ಯಂತ ಕಡಿಮೆ ಬೆಲೆಗೆ ಸಿಗುವ; ನಿಶ್ಚಿತವಾಗಿ ಸಿಗುವ; ಬೇಕೆಂದಾಗ ಒಲೆ ಹೊತ್ತಿಸಿ, ಆರಿಸಬಹುದಾದ; ಮನೆಯಲ್ಲಿ ಜಾನುವಾರಿಲ್ಲದಿದ್ದರೂ ಬೀದಿಯಲ್ಲಿ ಸಗಣಿಯಾಗಿ, ಮಾರುಕಟ್ಟೆಯಲ್ಲಿ ಬೆರಣಿಯಾಗಿ ಸಿಗುವ ಈ ಇಂಧನವನ್ನು ನಮ್ಮ ದೇಶದ ಹಳ್ಳಿಗಳ ಮುಕ್ಕಾಲುಪಾಲು ಜನಸಂಖ್ಯೆ ಈಗಲೂ ನೆಚ್ಚಿದ್ದಾರೆ. ಒಮ್ಮೆ ಬೆರಣಿ ಒಲೆಯಲ್ಲಿ ಮಾಡಿದ ಅಡಿಗೆ ರುಚಿ ನೋಡಿದರೆ ಗ್ಯಾಸ್-ಕರೆಂಟ್-ಸೀಮೆಎಣ್ಣೆ ಒಲೆಗಳನ್ನು ಬಿಟ್ಟು ನೀವೂ ಅದನ್ನೇ ಬಳಸುತ್ತೀರಿ ನೋಡಿ ಎಂದು ನಮ್ಮ ಡ್ರೈವರ್ ಹೇಳಿದ್ದು ಉತ್ಪ್ರೇಕ್ಷೆಯಿರಬಹುದಾದರೂ ಅವರ ಮಾತುಗಳಿಂದ ಸಗಣಿಯ ಪ್ರಾಮುಖ್ಯತೆ, ಉರುವಲಾಗಿ ಬೆರಣಿ ಬಳಕೆ ಎಷ್ಟು ಸಾಮಾನ್ಯ ಎಂದು ತಿಳಿದುಬಂತು.





ಪ್ರತಿ ಬೆರಣಿಯ ಮೇಲೂ, ಬೆರಣಿ ಗೋಪುರದ ಮೇಲೂ ಕಂಡುಬರುತ್ತಿದ್ದವು ಕೈಬೆರಳ ಗುರುತುಗಳು. ವಿಶೇಷವಾಗಿ ಹೇಳುವುದು ಬೇಡ, ಅವು ಹೆಣ್ಮಕ್ಕಳವೇ. ಯಾಕೆಂದರೆ ಅಡಿಗೆ ಕೆಲಸ ಯಾರದೋ, ಇಂಧನ ಹೊಂದಿಸುವ ಜವಾಬ್ದಾರಿಯೂ ಅವರದೇ ಎನ್ನುವುದು ಅಲಿಖಿತ ನಿಯಮ. ಕೃಷಿ-ಕೂಲಿ ಕೆಲಸ ಮುಗಿಸಿ ಬರುವಾಗ ದಾರಿಯಲ್ಲಿ ಒಂದು ಒಣರೆಂಬೆ ಕಂಡರೂ ಹೆಣ್ಮಕ್ಕಳು ಮನೆಗೆ ಹೊತ್ತು ತರುವವರೇ. ಮೂರು ಹೊತ್ತೂ ಹೊಟ್ಟೆಯ ಬೆಂಕಿ ತಣಿಸಲು ಏನು ಅಡಿಗೆ ಬೇಯಿಸಲಿ ಎನ್ನುವುದು ಎಷ್ಟು ತಲೆಬಿಸಿಯ ವಿಚಾರವೋ, ವರ್ಷಾವಧಿಗಾಗುವಷ್ಟು ಉರುವಲು ಸಂಗ್ರಹ ಮಾಡುವುದೂ ಅವರಿಗೆ ಅಷ್ಟೇ ದೊಡ್ಡ ಚಿಂತೆ.

ಸಗಣಿ ಸಂಗ್ರಹಿಸಿ, ಬೆರಣಿ ತಟ್ಟಿ, ಎರಡೂ ಬದಿ ಒಣಗಿಸಿ, ಅವನ್ನು ಕಲಾತ್ಮಕವಾಗಿ ಸುರುಳಿಸುರುಳಿಯಲ್ಲಿ ಜೋಡಿಸಿಡುವ ಕೆಲಸ ಮಾಡುತ್ತಿದ್ದ ಹೆಂಗಸರು, ಮಕ್ಕಳು ಕಾಣಿಸಿದರು. ಬಹುಶಃ ಬೇಸಿಗೆ ಒಣ ಉರುವಲು ಕೂಡಿಕೊಳ್ಳುವ ಕಾಲವಾದ್ದರಿಂದ ಈ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಬರೀ ಸೆಗಣಿಯದಾದರೆ ಉರಿಯಲು ಕಷ್ಟ ಎಂದು ಅದರೊಡನೆ ಧಾನ್ಯಗಳ ಹೊಟ್ಟು, ಹುಲ್ಲು, ಇದ್ದಿಲ ಪುಡಿಯನ್ನೂ ಸೇರಿಸುತ್ತಾರಂತೆ. ಮೂರ್ನಾಲ್ಕು ದಿನ ಒಣಗಿಸಿ, ಬೆರಣಿಯನ್ನು ವಿಶಿಷ್ಟವಾಗಿ ಜೋಡಿಸಿ, ಮೇಲೊಂದು ದಪ್ಪನೆಯ ಪದರ ಸಗಣಿಯ ಗಿಲಾಯಿ ಮಾಡುತ್ತಿದ್ದರು. ಸಗಣಿ ವಾಟರ್‌ಪ್ರೂಫ್ ಆದ್ದರಿಂದ ಹೊರಗಣ ಪದರ ಮಳೆಗಾಲದಲ್ಲೂ ಉರುವಲು ಒದ್ದೆಯಾಗದಂತೆ ತಡೆಯುತ್ತದೆ. ಕೆಲವೆಡೆ ಮಾತ್ರ ಆರೆಂಟು ಅಡಿ ಎತ್ತರದ ಗೋಪುರಗಳ ಮೇಲೆ ದಂಟಿನ ಸೂರು ಹೊದೆಸಲಾಗಿತ್ತು. ಅದರ ಗೋಡೆಗಳ ಮೇಲೆ ಥರಥರದ ಚಿತ್ರ ಚಿತ್ತಾರಗಳು, ಜನಪದ ಕಲೆಯ ವಿವಿಧ ವಿನ್ಯಾಸಗಳು ಅರಳಿದ್ದವು. ಗೋಪುರಗಳ ಕೆಳಭಾಗದಲ್ಲಿ ಸುಣ್ಣ ಬಳಿದ ಒಂದು ತಗ್ಗು ಇರುತ್ತದೆ. ಅದು ಬೆರಣಿ ಹೊರತೆಗೆಯಬೇಕಾದ ಸ್ಥಳ. ಅಲ್ಲಿಂದ ಒಂದೊಂದೇ ಬೆರಣಿ ತೆಗೆದರೆ ಗೋಪುರ ಕುಸಿಯದೇ ಅದನ್ನು ಖಾಲಿ ಮಾಡಬಹುದು ಎಂದರು.





ಕಳೆದವರ್ಷ ಗ್ಯಾಸ್ ಸಿಲಿಂಡರ್ ಬಳಕೆಯನ್ನು ನಿರ್ಬಂಧಕ್ಕೊಳಪಡಿಸಿ ಸಬ್ಸಿಡಿ ಸಿಲಿಂಡರುಗಳ ಸಂಖ್ಯೆ ವಾರ್ಷಿಕ ಆರು ಎಂದು ನಿಗದಿಗೊಳಿಸಲಾಯಿತು. ಬೇಯಿಸಿ-ಹುರಿದು-ಕರಿದು ತಿನ್ನುವ ಭಾರತೀಯ ಅಡಿಗೆ ಶೈಲಿಗೆ ವರ್ಷಕ್ಕೆ ಆರು ಸಿಲಿಂಡರ್ ಏನೇನೂ ಸಾಲದು. ಅದಕ್ಕಿಂತ ಹೆಚ್ಚು ಬೇಕಾದವರು ಪ್ರತಿ ಸಿಲಿಂಡರಿಗೆ ೯೫೨ ರೂ. ಕೊಡಬೇಕು ಎಂದು ಸರ್ಕಾರ ಪ್ರಕಟಿಸಿತು. ಆಗ ಬೆರಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿತಂತೆ. ತಿಪ್ಪೆಗೆ ಹೋಗುವ ಸಗಣಿಯೆಲ್ಲ ಬೆರಣಿಯಾಗಿ ಒಂದು ಬೆರಣಿಗೆ ಒಂದೂವರೆ ರೂಪಾಯಿಯಂತೆ ಮಾರಾಟವಾಯಿತು. ಅದುವರೆಗೆ ನಾಕಾಣೆಗೆ ಸಿಗುತ್ತಿದ್ದ ಬೆರಣಿಯೂ ತುಟ್ಟಿಯಾಯಿತು, ಕಟ್ಟಿಗೆಯಂತೂ ಕೆಜಿಗೆ ಎಂಟು ರೂಪಾಯಿಯಾಯಿತು ಎಂದರು ನಮ್ಮ ಡ್ರೈವರ್.

ಒಟ್ಟಾರೆ ಗಿಡಮರಗಳಿಲ್ಲದ ಬಯಲು ನಾಡಿನ ಜನ ಉರುವಲಿಗೆ ಮಾಡಿಕೊಂಡ ಸುಲಭ ವ್ಯವಸ್ಥೆ, ಗಿಲಾಯಿ, ಚಿತ್ತಾರ, ವಾಪಸು ತೆಗೆಯಲು ಅನುಕೂಲವಾಗುವ ಜೋಡಣೆ ಇವೆಲ್ಲ ನಾವು ನೋಡಹೊರಟ ಜಗತ್ತಿನ ಎಂಟನೇ ಅದ್ಭುತಕ್ಕೆ ಸಮನಾಗಿವೆ ಎನಿಸಿತು.

ನೀನಾರಿಗಾದೆಯೋ ಎಲೆ ಮಾನವಾ?

ಪಶುಗಣತಿ ಪ್ರಕಾರ ಭಾರತದಲ್ಲಿ ಅಂದಾಜು ೨೮.೩ ಕೋಟಿ ದನ, ಎಮ್ಮೆಗಳಿವೆ. ಅವುಗಳಿಂದ ಅಜಮಾಸು ಪ್ರತಿದಿನ ೭೦ ಕೋಟಿ ಟನ್ ಸಗಣಿ ಉತ್ಪತ್ತಿಯಾಗುತ್ತದೆ. ಸಗಣಿಯ ವ್ಯವಸ್ಥಿತ ವಿಲೇವಾರಿಗೆ ಬೆರಣಿ ಉರುವಲು ಸಹಾಯಕವಾಗಿದೆ. ಇಲ್ಲದಿದ್ದರೆ ಕಂಡಕಂಡಲ್ಲಿ ದೇಹಬಾಧೆ ತೀರಿಸಿಕೊಳ್ಳುವ ಭಾರತೀಯರ ಅಭ್ಯಾಸದಿಂದ ದುರ್ನಾತ ಬೀರುವ ಊರುಕೇರಿಗಳು ಸಗಣಿ ತೊಪ್ಪೆಯಿಂದ ತುಂಬಿ ಹೋಗುತ್ತಿದ್ದವು.

ಭಾರತದ ಗ್ರಾಮೀಣ ಮಹಿಳೆಯರಿಗೆ ಈಗಲೂ ಗ್ಯಾಸ್ ತುಟ್ಟಿ. ಕರೆಂಟನ್ನು ನಂಬಲು ಸಾಧ್ಯವಿಲ್ಲ. ಸೋಲಾರ್ ಎಂದರೆ ಏನೋ ಎಂಥದೋ. ೧೧೦ ಕೋಟಿ ಜನಸಂಖ್ಯೆಯ ದೇಶಕ್ಕೆ ಇಂಧನ ಒದಗಿಸುವುದು ಸುಲಭದ ಮಾತಲ್ಲ. ಹಾಗಿರುವಾಗ ಬೆರಣಿಯು ಕಡಿಮೆ ಖರ್ಚಿನ, ನಿಸರ್ಗ ಸ್ನೇಹಿ, ಮರುಪೂರಣಗೊಳ್ಳಬಹುದಾದ ಇಂಧನವಾಗಿ ಒದಗಿ ಬಂದಿದೆ. ಬೆರಣಿಯನ್ನು ಉರುವಲಿಗೆ ಬಳಸುವುದರಿಂದ ಮರಗಿಡಗಳೂ ಉಳಿಯುತ್ತವೆ. ಸುಟ್ಟ ಬೂದಿ ಕ್ರಿಮಿನಾಶಕವಾಗಿ ಬಳಕೆಯಾಗುತ್ತದೆ.

ಆದರೆ ಪರಿಸರ ಸ್ನೇಹಿಯಾದ ಬೆರಣಿ ಅಷ್ಟೇನೂ ಬಳಕೆದಾರ ಸ್ನೇಹಿ ಅಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ. ಸಗಣಿಯಲ್ಲಿ ಅಸಂಖ್ಯ ಶಿಲೀಂಧ್ರ, ರೋಗಾಣುಗಳಿರುತ್ತವೆ. ಬರಿಗೈಲಿ ಮುಟ್ಟುವುದರಿಂದ ಕೆಲ ಚರ್ಮರೋಗಗಳು ಬರಬಹುದಾಗಿದೆ. ಇತ್ತೀಚೆಗೆ ಕೃಷಿಯಲ್ಲಿ ಬಳಸುತ್ತಿರುವ ರಾಸಾಯನಿಕದ ಪ್ರಮಾಣ ಮೇಲ್ಮೈ ನೀರು ಕಲುಷಿತಗೊಳಿಸುವಷ್ಟು ಅತಿಯಾಗಿದೆ. ಕೀಟನಾಶಕ ಸಿಂಪಡಿಸಿದ ಹುಲ್ಲು ತಿಂದ ಜಾನುವಾರುಗಳ ಸಗಣಿಯಲ್ಲೂ ಆರ್ಸೆನಿಕ್ ಅಂಶ ಪತ್ತೆಯಾಗಿದೆ. ಅದನ್ನು ಉರಿಸಿದಾಗ ಬರುವ ಹೊಗೆಯಲ್ಲೂ ಆರ್ಸೆನಿಕ್ ಅಂಶ ಹೆಚ್ಚಿರುವುದು ಗಂಗಾ-ಮೇಘನಾ-ಬ್ರಹ್ಮಪುತ್ರ ನದೀಬಯಲಿನ ಪ್ರದೇಶಗಳಲ್ಲಿ ನಡೆದ ಸಂಶೋಧನೆಯಿಂದ ಧೃಢಪಟ್ಟಿದೆ. ಒಲೆ ಮುಂದೆ ಕೂತು ಅದರ ಹೊಗೆ ಕುಡಿಯುವವರು ಶ್ವಾಸಕೋಶ ಸಂಬಂಧಿ ಕಾಯಿಲೆ, ಕಣ್ಣಿನ ಕಾಯಿಲೆಗೆ ತುತ್ತಾಗುತ್ತಾರೆ. ಮೊದಲೇ ಅಡಿಗೆ ಮನೆ ಎಂದರೆ ಕಿಷ್ಕಿಂಧೆ. ಬೆಳಕಿರುವುದಿಲ್ಲ, ಗಾಳಿಯಿರುವುದಿಲ್ಲ. ಅದರ ನಡುವೆ ಹೊಗೆಯೂ ತುಂಬಿಕೊಂಡರೆ ಅಲರ್ಜಿ ಅಸ್ತಮಾ, ದಮ್ಮು, ಟಿಬಿ, ಶ್ವಾಸಕೋಶ ಕ್ಯಾನ್ಸರಿನಂತಹ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರತಿವರ್ಷ ವಿಶ್ವಾದ್ಯಂತ ೧೬ ಲಕ್ಷ ಜನ ಮನೆಯೊಳಗಿನ ವಾಯುಮಾಲಿನ್ಯದ ಕಾರಣಕ್ಕೆ ಸಾಯುತ್ತಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು.

ಸಗಣಿ ಇಂಧನ ಬಳಕೆದಾರ ಸ್ನೇಹಿ ಆಗುವಂತೆ ಮಾಡಲು ಒಂದು ಮಾರ್ಗವಿದೆ: ಸಗಣಿಯನ್ನು ಗೋಬರ್ ಗ್ಯಾಸ್ ಆಗಿ ಪರಿವರ್ತಿಸುವುದು. ಕೈಗೆಟುಕುವ ದರ, ವಿಧಾನದಲ್ಲಿ ಗೋಬರ್ ಗ್ಯಾಸ್ ಉತ್ಪಾದಿಸಿಕೊಳ್ಳಲು; ಅದನ್ನು ಪ್ರೋತ್ಸಾಹಿಸಲು ಯೋಜನೆ ಹಮ್ಮಿಕೊಳ್ಳಬೇಕು. ಈಗ ಮನೆಯಲ್ಲಿ ನಾಲ್ಕೈದು ಜಾನುವಾರುಗಳಿದ್ದವರು ಸಬ್ಸಿಡಿ ಹಣದೊಂದಿಗೆ ಹತ್ತು ಸಾವಿರ ರೂಪಾಯಿ ಸೇರಿಸಿದರೆ ಒಂದು ಬಯೋಗ್ಯಾಸ್ ಪ್ಲಾಂಟ್ ಹಾಕಬಹುದು. ಗ್ಯಾಸ್ ತಯಾರಿ ನಂತರದ ಸ್ಲರಿಯನ್ನು ಗೊಬ್ಬರಕ್ಕೆ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ಸಗಣಿಯನ್ನು ಇಂಧನ ಮತ್ತು ಗೊಬ್ಬರ ಎರಡೂ ಆಗಿ ಬಳಸಲು ಸಾಧ್ಯವಾಗುವುದು ಈ ವಿಧಾನದ ಹೆಚ್ಚುಗಾರಿಕೆ ಎನ್ನಬಹುದು.

ಬೇರೆ ದೇಶಗಳಲ್ಲೂ ಬೆರಣಿ ಬಳಸುವರೇ ಎಂಬ ಪ್ರಶ್ನೆ ತೂರಿ ಬಂತು. ಗ್ರಾಮೀಣ ಈಜಿಪ್ಟ್‌ನ ಮನೆಯ ಗೋಡೆಗಳ ಮೇಲೆ ಬೆರಣಿ ನೋಡಿದ ನೆನಪಾಯಿತು. ಅದು ಒಂಟೆ ಸಗಣಿಯದು. ವಿಶ್ವ ಮಾಹಿತಿ ಜಾಲಾಡಿದರೆ ಬೆರಣಿಯನ್ನು ಇರಾನ್, ಚೀನಾ, ಮಂಗೋಲಿಯಾ, ಪ್ಯಾಲೆಸ್ಟೀನ್ ಸೇರಿದಂತೆ ಹಲವು ದೇಶಗಳಲ್ಲಿ ಜನ ಉರುವಲಾಗಿ ಬಳಸುತ್ತಿದ್ದಾರೆ. ವಿಶ್ವಾದ್ಯಂತ ಎರಡು ಬಿಲಿಯನ್ ಜನರ ಉರುವಲು ಸಗಣಿಯೇ ಆಗಿದೆ!

ದಿನನಿತ್ಯ ರಸ್ತೆಮೇಲೆ ಓಡಾಡುವ ವಾಹನಗಳು ಹೆಚ್ಚುತ್ತಿವೆ. ಪೆಟ್ರೋಲ್-ಡೀಸೆಲ್ ದಿನದಿನಕ್ಕೆ ತುಟ್ಟಿಯಾಗುತ್ತ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿದೆ. ಇದೇ ದರದಲ್ಲಿ ವಾಹನ-ಅಡಿಗೆ ಎರಡಕ್ಕೂ ಹೈಡ್ರೋಕಾರ್ಬನ್ ಇಂಧನ ಬಳಸಿದರೆ ಇನ್ನು ಅರ್ಧ ಶತಮಾನವೂ ಅದು ಬಾಳುವುದಿಲ್ಲ. ಮಿಲಿಯಗಟ್ಟಲೆ ವರ್ಷಗಳ ಕೆಳಗೆ ತಯಾರಾಗಿ ನೆಲದಡಿಯ ನಿದಾನವಾಗಿರುವ ತೈಲವನ್ನು, ನಮ್ಮ ಮಕ್ಕಳು-ಮೊಮ್ಮಕ್ಕಳು-ಮರಿಮಕ್ಕಳ ಪಾಲಿನ ತೈಲವನ್ನು ನಾವೀಗಲೇ ಕಬಳಿಸುತ್ತಿದ್ದೇವೆ. ತೈಲಕ್ಕಾಗಿ ಯುದ್ಧ ನಡೆಯುತ್ತಿದೆ. ತೈಲಕ್ಕಾಗಿ ಸರ್ಕಾರಗಳು ಉರುಳುತ್ತಿವೆ. ತೈಲಭರಿತ ಬಡದೇಶಗಳ ಅಧ್ಯಕ್ಷರು ‘ಹೇಳಿದ ಮಾತು’ ಕೇಳದಿದ್ದರೆ ಅವರ ವಿಮಾನ ಪತನವಾಗುತ್ತದೆ. ಹೀಗಿರುವಾಗ ಒಂದು ಪರ್ಯಾಯ ಇಂಧನ ಸೃಷ್ಟಿಸಿಕೊಳ್ಳುವುದು ಮನುಷ್ಯಕುಲದ ಉಳಿವಿಗೆ, ನಾಗರಿಕತೆಯ ಉಳಿವಿಗೆ ಅನಿವಾರ್ಯವಾಗಿದೆ. ಕಡಿಮೆ ದರದ ನಿಸರ್ಗ ಸ್ನೇಹಿ ಇಂಧನ ಪೂರೈಕೆಯ ವ್ಯವಸ್ಥೆಯನ್ನು ಜಗತ್ತಿನ ಎಲ್ಲ ದೇಶಗಳ ನಾಯಕರು, ವಿಜ್ಞಾನಿಗಳು ಅಭಿವೃದ್ಧಿಪಡಿಸಬೇಕಿದೆ.

‘ಸೇವ್ ಫ್ಯುಯೆಲ್’ ಎಂಬ ಸ್ಲೋಗನ್ನಿನೊಡನೆ ಪರ್ಯಾಯವನ್ನೂ ಸೂಚಿಸುವ ಕಾಲ ಈಗ ಬಂದಿದೆ.



No comments:

Post a Comment