Monday, 21 July 2014

ಕೇದಾರನಾಥ ದುರಂತ: ಅಭಿವೃದ್ಧಿಯ ಮಹಾ ಬಲಿ

ಜುಲೈ ೧೬-೧೭, ೨೦೧೩. ಉತ್ತರಾಖಂಡ ರಾಜ್ಯದಲ್ಲಿ ಮೇಘಸ್ಫೋಟ ಸಂಭವಿಸಿ ಮಂದಾಕಿನಿ ನದಿ ಉಕ್ಕಿತು. ಹರಿವಿನ ದಿಕ್ಕು ಬದಲಿಸಿ ಸರಸ್ವತಿ ನದಿಯೊಂದಿಗೆ ಕೂಡಿಕೊಂಡಿತು. ಕೇದಾರನಾಥ ಕಣಿವೆಯ ಎರಡೂ ಕಡೆ ನದಿ ಆವರಿಸಿತು. ೪೨೦೦ ಹಳ್ಳಿಗಳು ಬಳಿದುಕೊಂಡು ಹೋದವು. ೧೪೫ ಸೇತುವೆ ಕೊಚ್ಚಿ ಹೋದವು. ಸುಮಾರು ೩೦೦೦ ಮನೆಗಳು ನೆಲ ಕಚ್ಚಿದವು. ಕೆಟ್ಟ ಹವಾಮಾನದಲ್ಲಿ ಅನ್ನ ನೀರಿಲ್ಲದೇ ಎಲ್ಲೆಲ್ಲೋ ಸಿಕ್ಕಿಹಾಕಿಕೊಂಡ ಒಂದು ಲಕ್ಷ ಜನರನ್ನು ಭಾರತೀಯ ರಕ್ಷಣಾ ಪಡೆಯ ಯೋಧರು ಆಕಾಶಮಾರ್ಗದ ಮೂಲಕ ಸುರಕ್ಷಿತ ಸ್ಥಳ ತಲುಪಿಸಿದರು. ಹಲವರು ಮರುಜನ್ಮ ಪಡೆದವರಂತೆ ಅಪಾಯದಿಂದ ಪಾರಾಗಿ ಬಂದರೂ, ೧೨ ಸಾವಿರಕ್ಕಿಂತ ಹೆಚ್ಚು ಜನ, ೮-೯ ಸಾವಿರ ಜಾನುವಾರು ಪ್ರಾಣ ಕಳೆದುಕೊಂಡರು. ಎಷ್ಟೋ ದಿನಗಳವರೆಗೂ ಶವಗಳು, ದೇಹದ ಅರೆಬರೆ ಕೊಳೆತ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. 

ಈಗಲೂ ಆ ದಾರಿಯಲ್ಲಿ ಮಾನವ ಅಸ್ಥಿಪಂಜರಗಳು ಸಿಗುತ್ತಲಿವೆ, ಸತ್ತ ಎಷ್ಟೋ ಕಾಲದ ನಂತರ ಅಂತ್ಯ ಸಂಸ್ಕಾರಕ್ಕೊಳಗಾಗುತ್ತಲೇ ಇವೆ..

ಹಿಮಾಲಯ ಪ್ರದೇಶದಲ್ಲಿ ಭೂ ಕುಸಿತ ಎಂದಿನಿಂದ ಸಂಭವಿಸುತ್ತಲೇ ಇದೆ. ಮೇಘಸ್ಫೋಟ, ಪ್ರವಾಹವೂ ಅಷ್ಟೇ. ಆದರೆ ಆಗೆಲ್ಲ ಹತ್ತಾರು, ನೂರಾರು ಜನ ಪ್ರಾಣ ಕಳೆದುಕೊಂಡಿದ್ದರೇ ಹೊರತು ಇಂಥ ಭಾರೀ ಅನಾಹುತ ಸಂಭವಿಸಿರಲಿಲ್ಲ. ಕಳೆದ ವರ್ಷ ಮಾತ್ರ ಈ ಮೊದಲು ಕಂಡು ಕೇಳರಿಯದ ಪ್ರಮಾಣದಲ್ಲಿ ಸಾವುನೋವು ಸಂಭವಿಸಿತ್ತು. ಎಂದೂ ಇಷ್ಟು ಕೋಪಗೊಳ್ಳದ ‘ಗಂಗಾಜಿ’ ಈಗೇಕೆ ಮುನಿದಳೆಂದು ಕೆಲವರು ಕಾರಣ ಹುಡುಕತೊಡಗಿದರು. ನೇಪಾಳಿಗಳು ತಮ್ಮ ಜೊತೆ ಹೆಂಡ, ಮಾಂಸ, ಹೆಂಗಸರನ್ನು ಕರೆತಂದು ಈ ಪ್ರದೇಶವನ್ನು ಅಪವಿತ್ರಗೊಳಿಸಿದ್ದಕ್ಕೇ ಗಂಗಾಮಾತೆಗೆ ಸಿಟ್ಟು ಬಂತು ಎಂದರು. ಧಾರ್ಮಿಕ ಮನೋಭಾವದ ಜಗತ್ತು ಹುಡುಕುವ ನೆಪಗಳೇನೇ ಇರಲಿ, ಉತ್ತರಾಖಂಡದಲ್ಲಿ ಆದದ್ದು ಕೇವಲ ಪ್ರಕೃತಿ ವಿಕೋಪವಲ್ಲ, ಅದು ಪ್ರಕೃತಿಯನ್ನು ಹೇಗೆಂದರೆ ಹಾಗೆ ಗಾಸಿಗೊಳಿಸಿದರೆ ಕೊನೆಗೆ ಅದರ ಅಪಾಯಕರ ದವಡೆಯಲ್ಲಿ ಸಿಲುಕಿ ಮನುಷ್ಯ ಹೇಗೆ ನುಚ್ಚು ನೂರಾಗುತ್ತಾನೆ ಎಂಬ ಎಚ್ಚರಿಕೆಯ ಪಾಠ. 

ದೇವಪ್ರಯಾಗ, ರುದ್ರ ಪ್ರಯಾಗ, ಗೌರೀಕುಂಡ, ಕೇದಾರನಾಥಗಳೆಂಬ ನಾಲ್ಕು ಧಾಮಗಳು ಹಿಮಾಲಯದ ಘರವಾಲ್ ಪರ್ವತಶ್ರೇಣಿಯ ಧಾರ್ಮಿಕ ಶ್ರದ್ಧಾ ಸ್ಥಳಗಳು. ಅದರಲ್ಲಿ ೧೨ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದೆಂದು ಬಣ್ಣಿಸಲ್ಪಡುವ, ೮ನೇ ಶತಮಾನದಲ್ಲಿ ಶಂಕರಾಚಾರ್ಯರಿಂದ ಪುನರುಜ್ಜೀವನಗೊಂಡದ್ದೆಂದೂ ಹೇಳಲಾಗುವ ಕೇದಾರನಾಥ ದೇವಾಲಯ ಬಹಳಷ್ಟು ಆಸ್ತಿಕರನ್ನು ಸೆಳೆಯುತ್ತದೆ. ಕೇದಾರನಾಥ ದೇವಾಲಯ ಸಮುದ್ರ ಮಟ್ಟದಿಂದ ೧೧,೭೫೫ ಅಡಿ ಎತ್ತರದಲ್ಲಿದೆ. ಹವಾಮಾನ ವೈಪರೀತ್ಯದಿಂದ ವರ್ಷದ ಆರು ತಿಂಗಳು ಏಪ್ರಿಲ್‌ನಿಂದ ನವೆಂಬರ್‌ವರೆಗೆ, ಅಕ್ಷಯ ತದಿಗೆಯಿಂದ ಕಾರ್ತೀಕ ಹುಣ್ಣಿಮೆಯವರೆಗೆ ಮಾತ್ರ ತೆರೆದಿರುತ್ತದೆ. ಉಳಿದ ಆರು ತಿಂಗಳು ಮೂರ್ತಿಯನ್ನು ಉಖಿ ಮಠಕ್ಕೆ ತಂದು ಪೂಜಿಸಲಾಗುತ್ತದೆ. ಕುತೂಹಲದ ವಿಷಯವೆಂದರೆ ಹಿಮಾಚ್ಛಾದಿತ ಶಿಖರಗಳಿಂದ ಆವೃತವಾದ ಕೇದಾರದ ಪ್ರಧಾನ ಅರ್ಚಕರು ಕರ್ನಾಟಕದ ಮಲ್ಲು ವೀರಶೈವ ಜಂಗಮ ಸಮುದಾಯದವರು. ಪರಂಪರಾನುಗತವಾಗಿ ಅಲ್ಲಿ ಕರ್ನಾಟಕದ ಅರ್ಚಕರೇ ಇದ್ದಾರೆ. ಮಂತ್ರವನ್ನು ಕನ್ನಡದಲ್ಲೂ ಹೇಳಲಾಗುತ್ತದೆ. ಈಗ ಪ್ರಧಾನ ಅರ್ಚಕರಾಗಿರುವವರು ಹರಿಹರ ತಾಲೂಕಿನ ಬಾನುವಳ್ಳಿ ಎಂಬ ಹಳ್ಳಿಯ ವಾಗೀಶ ಲಿಂಗಾಚಾರ್ಯ ಎಂಬುವವರು. 

ಈ ನಾಲ್ಕು ಧಾಮಗಳು ದೇವಲೋಕಕ್ಕೆ ಸೇರಿದವೆಂದೇ ಹಿಂದೂಗಳ ನಂಬಿಕೆ. ದೇವಪ್ರಯಾಗದ ಆಚೆ ದೇವರಿದ್ದಾರೆಂದು ನಂಬಲಾಗಿದೆ. ಹಿಂದೂ ಪ್ರವಾಸಿಗಳು ಇತ್ತೀಚೆಗೆ ಆ ಧಾಮಗಳಿಗೆ ಎಷ್ಟು ಸಂಖ್ಯೆಯಲ್ಲಿ ಭೇಟಿ ನೀಡತೊಡಗಿದರೆಂದರೆ ಬಹುಶಃ ದೇವರು ನಿಜವಾಗಿ ಅಲ್ಲಿದ್ದಿದ್ದರೆ ಖಂಡಿತ ಓಡಿಹೋಗಿರುತ್ತಾನೆ. ದುರಂತ ಸಂಭವಿಸಿದಾಗ ಆ ಪ್ರದೇಶದಲ್ಲಿದ್ದ ಯಾತ್ರಿಗಳ ಅಧಿಕೃತ ಸಂಖ್ಯೆ ೭೧,೪೪೦! ಅಲ್ಲಿನ ಯಾವ ಪರ್ವತವೂ ೩,೦೦೦ಕ್ಕಿಂತ ಹೆಚ್ಚು ಜನರನ್ನು ಹಿಡಿಸಲಾರದು. ಜೊತೆಗೆ ಹಿಮಾಲಯ ಪರ್ವತ ಉಕ್ಕಿನ ಬೆಟ್ಟ ಅಲ್ಲ. ಅದು ಇತ್ತೀಚೆಗೆ ಉದ್ಭವಿಸಿದ ಪರ್ವತ. (ಹೋಲಿಕೆಗಾಗಿ ಹೇಳುವುದಾದರೆ ಹಿಮಾಲಯ ೧ ಕೋಟಿ ವರ್ಷ ಹಳೆಯದು, ಅರಾವಳಿ ಪರ್ವತ ಶ್ರೇಣಿ ೧೦೦ ಕೋಟಿ ವರ್ಷ ಹಳೆಯದು!) ಅದರ ಗಾತ್ರ ಭಾರೀ ಆದರೂ ಅದು ತೀರ ಸಡಿಲ ಮಣ್ಣಿನ ಪ್ರದೇಶ. ಇತ್ತೀಚಿನವರೆಗೂ ಆ ಎತ್ತರದ ಹಿಮಾಲಯ ಪರ್ವತಶ್ರೇಣಿಯ ಇಳಿಜಾರುಗಳಲ್ಲಿ ಕೆಲವೇ ಜನ ವಿಶಿಷ್ಟ ಸ್ಥಳೀಯ ವಿನ್ಯಾಸದ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಆದರೆ ಈಗ ಪ್ರವಾಸೋದ್ಯಮ ಲಾಭದಾಯಕ ಉದ್ದಿಮೆಯಾಗಿ ಬೆಳೆಯತೊಡಗಿದ ಮೇಲೆ ದಿನನಿತ್ಯ ಸಾವಿರಾರು ಪ್ರವಾಸಿಗಳು ಬರತೊಡಗಿದರು. ಎಷ್ಟು ಜನ ಎಂದರೆ ಕೇದಾರನಾಥ ದೇವಾಲಯವೊಂದರಲ್ಲೇ ೧೦೦ ಜನ ಪುರೋಹಿತರಿದ್ದರು! ಆಚೀಚಿನ ಸಣ್ಣಪುಟ್ಟ ದೇವಾಲಯಗಳನ್ನು ಸೇರಿಸಿದರೆ ಒಟ್ಟು ೧೦೦೦ ಜನ ನೇಮಕಗೊಂಡಿದ್ದರು. ದಿನಾಲೂ ಬೇಸ್ ಕ್ಯಾಂಪಿನಿಂದ ನೋಂದಾಯಿಸಲ್ಪಟ್ಟ ೫,೫೦೦ ಕುದುರೆಗಳು, ನಾಲ್ಕು ಮನುಷ್ಯರು ಹೆಗಲ ಮೇಲೆ ಹೊತ್ತೊಯ್ಯುವ ಲೆಕ್ಕವಿಲ್ಲದಷ್ಟು ಡೋಲಿಗಳು ೧೪ ಕಿ.ಮೀ ಎತ್ತರದಲ್ಲಿರುವ ದೇವಸ್ಥಾನಕ್ಕೆ ಭಕ್ತಾದಿಗಳನ್ನು ಒಯ್ಯುತ್ತಲಿದ್ದವು. ಕಳೆದ ೧೦ ವರ್ಷಗಳಲ್ಲಿ ಯಾತ್ರೆಗಾಗಿ ಬರುವವರ ಸಂಖ್ಯೆ ಮೂರು ಪಟ್ಟು ಹೆಚ್ಚಿತ್ತು. ಇಷ್ಟು ಜನರ ಅವಶ್ಯಕತೆ ಪೂರೈಸಲು ನದಿದಡದಲ್ಲಿ ಸಾವಿರಾರು ಹೋಟೆಲು, ಅಂಗಡಿ, ಮುಂಗಟ್ಟುಗಳು ತಲೆಯೆತ್ತಿದ್ದವು. ಅಲ್ಲಿ ಪ್ರವಾಹ, ಭೂ ಕುಸಿತ ತುಂಬ ಸಾಮಾನ್ಯ. ಆದರೂ ಗಟ್ಟಿಯಿಲ್ಲದ ನೆಲದಲ್ಲಿ ಪಿಲ್ಲರನ್ನು ನೆಚ್ಚಿ ನದೀ ದಡದಲ್ಲೇ ಕಾಂಕ್ರೀಟ್ ಕಟ್ಟಡಗಳ ಕಾಡು ಎದ್ದಿತ್ತು.ಕೇದಾರನಾಥವಷ್ಟೇ ಅಲ್ಲ, ಎಲ್ಲೆಲ್ಲಿ ನೋಡಿದರೂ ಅಭಿವೃದ್ಧಿಯೋ ಅಭಿವೃದ್ಧಿ. ಹಿಮಾಲಯದಲ್ಲಿ ಸಾರ್ವಜನಿಕರ ಮತ್ತು ಪರಿಸರ ತಜ್ಞ/ವಿಜ್ಞಾನಿಗಳ ವಿರೋಧದ ಹೊರತಾಗಿಯೂ ಅಣೆಕಟ್ಟುಗಳು ತಲೆಯೆತ್ತತೊಡಗಿದವು. ಗಂಗಾ ನದಿ ಮತ್ತದರ ಉಪನದಿಗಳಿಗೆ ಒಟ್ಟೂ ೬೦೦ ಅಣೆಕಟ್ಟುಗಳು ಕಟ್ಟಲ್ಪಟ್ಟವು ಅಥವಾ ನಿರ್ಮಾಣ ಹಂತದಲ್ಲಿದ್ದವು. ಹಿಮಾಲಯದ ಬಹುತೇಕ ನದಿಗಳ ಪಾಡು ಇದೇ ಆಯಿತು. ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ’ ವತಿಯಿಂದ ಮೂಲೆಮೂಲೆಯ ಹಳ್ಳಿಗಳಿಗೂ ರಸ್ತೆಯಾಯಿತು. ಜೊತೆಗೆ ದಿನದಿನಾ ಹೆಚ್ಚೆಚ್ಚು ಸಂಖ್ಯೆಯಲ್ಲಿ ಬರತೊಡಗಿದ ವಾಹನಗಳಿಗೆ ಅನುಕೂಲ ಕಲ್ಪಿಸಲು ರಸ್ತೆ ಅಗಲೀಕರಣ ನಡೆಯಿತು. ಇವೆಲ್ಲ ಕಾಮಗಾರಿಗೆ ಟೆಂಡರ್ ಕರೆಯುವುದರಲ್ಲಿ ಕಾಂಟ್ರಾಕ್ಟರುಗಳು ಓಡೋಡಿ ಬಂದರು. ಬೆಟ್ಟ ಕುಸಿದೀತೋ, ನದಿ ಉಕ್ಕೀತೋ - ಯಾವ ವೈಜ್ಞಾನಿಕ ಜ್ಞಾನವಿಲ್ಲದೆ; ಪರಿಸರದ ಮೇಲೆ ಕಾಳಜಿಯಿಲ್ಲದೆ ಬೇಕೆಂದಲ್ಲೆಲ್ಲ ಬಂಡೆಗಳನ್ನು ಡೈನಮೈಟ್ ಇಟ್ಟು ಒಡೆಯಲಾಯಿತು. ಸಿಡಿವ ಬಂಡೆ ತನ್ನ ಸುತ್ತಲ ಮಣ್ಣನ್ನು ಸಡಿಲಗೊಳಿಸಿ ಮಳೆ ಸುರಿದಾಗ ಭೂಮಿ ಧಸದಸ ಕುಸಿಯುವ ಸಾಧ್ಯತೆ ಹೆಚ್ಚಾಯಿತು. ಆದರೆ ಈ ತಲೆಬಿಸಿ ಕಾಮಗಾರಿ ಮುಗಿಸುವ ತರಾತುರಿಯ ಕಂಟ್ರಾಕ್ಟರುಗಳಿಗೆ ಅಥವಾ ಪರ್ಸೆಂಟೇಜು ಲೆಕ್ಕದಲ್ಲಿ ರಸ್ತೆಯ ಟಾರು, ಜಲ್ಲಿ, ಕಲ್ಲು ಎಲ್ಲವನ್ನೂ ತಿನ್ನುವ ಅಧಿಕಾರಿಗಳಿಗೆ ತಟ್ಟಲಿಲ್ಲ. ಅವೈಜ್ಞಾನಿಕವಾಗಿ ನಡೆಯುತ್ತ ಹೋದ ನಿರ್ಮಾಣ ಕಾಮಗಾರಿಯ ಕಾರಣದಿಂದ ಭೂಕುಸಿತ ಪ್ರತಿ ವರ್ಷ ಸಂಭವಿಸತೊಡಗಿತು. ಹೀಗೆ ಮನಸೋ ಇಚ್ಛೆ ಹಸ್ತಕ್ಷೇಪ ಮಾಡಿದ್ದಕ್ಕೆ ಪ್ರತಿಕ್ರಿಯೆಯೋ ಎನ್ನುವಂತೆ ಮಹಾ ಮೇಘಸ್ಫೋಟ ಸಂಭವಿಸಿತು. ಇದ್ದಕ್ಕಿದ್ದಂತೆ ಊಹಿಸಿಕೊಳ್ಳಲಾಗದಷ್ಟು ದೊಡ್ಡ ಪ್ರಮಾಣದಲ್ಲಿ ಭಾರೀ ಮಳೆಯಾಯಿತು. ಹಿಮನದಿ ಉಕ್ಕಿತು. ಮಂದಾಕಿನಿ ಸೊಕ್ಕಿತು. ಎಲ್ಲೆಲ್ಲೂ ನೀರೇ ನೀರು. ತಕ್ಷಣಕ್ಕೆ ಬಂದು ಏರಿದ ಪ್ರವಾಹ ಕೇದಾರನಾಥ ಕಣಿವೆಯಲ್ಲಿ ಮರಗಿಡ, ಬಂಡೆಕಲ್ಲು, ಕಸಕಡ್ಡಿ, ಪಶುಪಕ್ಷಿಮನುಷ್ಯರಾದಿಯಾಗಿ ದಾರಿಗಡ್ಡ ಬಂದದ್ದನ್ನೆಲ್ಲ ಕೊಚ್ಚಿ ಹಾಕಿತು. ದೇವಸ್ಥಾನ ಮತ್ತೆ ರಿಪೇರಿಯಾಗದೇನೋ ಎನ್ನುವಷ್ಟು ಹಾಳಾಯಿತು. ರಸ್ತೆ, ಮನೆ, ಹೋಟೆಲುಗಳು ನಾಶಗೊಂಡವು. ಎಲ್ಲೆಡೆ ಮೃತದೇಹಗಳೂ, ಕಸವೂ, ಕೆಸರೂ, ಕಲ್ಲುಬಂಡೆಗಳೂ ತುಂಬಿಕೊಂಡವು. ಕೇದಾರ ಕಣಿವೆ ಕೆಮ್ಮಣ್ಣಿನ ನೀರು ಕೊಚ್ಚಿತಂದ ಅವಶೇಷಗಳಡಿಯಲ್ಲಿ ಹೂತು ಹೋಯಿತು. 
ಕಳೆದ ವರ್ಷ ಅಷ್ಟೆಲ್ಲ ಆದರೂ ಪೂರ್ತಿ ಪುನರ್‌ನಿರ್ಮಾಣ ಕಾಮಗಾರಿ ಆಗುವ ಮೊದಲೇ ಈ ವರ್ಷವೇ ಭಕ್ತರಿಗೆ ಭೇಟಿಯ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ೨೫೦ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದುವರೆಗೆ ೨೬ ಸಾವಿರಕ್ಕಿಂತ ಹೆಚ್ಚು ಭಕ್ತರು ಕೇದಾರನಾಥಕ್ಕೆ ಬಂದಿದ್ದಾರೆ. ಈಗ ಅಲ್ಲಿ ನದಿಯ ನೀರಿನಂತೆಯೇ ಕೋಟಿಗಟ್ಟಲೆ ಹಣ ಭರಪೂರ ಹರಿದು ಬರುತ್ತಿದೆ. ರೂಪಾಯಿಯಲ್ಲಿ, ಡಾಲರುಗಳಲ್ಲಿ ಸಹಾಯವೆಂದೋ, ಸಾಲವೆಂದೋ ಕೋಟ್ಯಂತರ ಹಣ ಸಂಗ್ರಹವಾಗಿದೆ. ಎಲ್ಲೆಡೆ ಪುನರ್‌ನಿರ್ಮಾಣದ ಕೆಲಸ ನಡೆಯುತ್ತಿದೆ. 

ಆದರೆ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಭವಿಷ್ಯದಲ್ಲಿ ಇಂಥದನ್ನು ತಡೆಯಲು ಸೂಕ್ತ ಯೋಜನೆ ಹಾಕಿಕೊಳ್ಳಬೇಕು. ಯಾತ್ರಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸಬೇಕು. ಸಾಹಸ, ಜಲಕ್ರೀಡೆ, ಟ್ರೆಕಿಂಗ್ ಎಂದು ಹಿಮಾಲಯಕ್ಕೆ ಹೋಗುವವರ ಬಗ್ಗೆ ನಿಗಾ ಇಡಬೇಕು. ಬೇಸ್‌ಕ್ಯಾಂಪಿನಲ್ಲೇ ಸಾಧ್ಯವಾದಷ್ಟು ನಿಯಂತ್ರಣ, ಮಾಹಿತಿ ನೀಡಬೇಕು. ಜನರ ಮನವೊಲಿಸಿ ಅಪಾಯಕರ ಪ್ರದೇಶದಿಂದ ಸುರಕ್ಷಿತ ಸ್ಥಳಗಳಿಗೆ ಅವರನ್ನು ಕಳಿಸಬೇಕು.

ಪ್ರಕೃತಿಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಅದನ್ನು ತನಗಿಷ್ಟ ಬಂದಂತೆ ಬದಲಿಸಿ, ಮುರಿದು, ಮತ್ತೆ ಕಟ್ಟುವುದೇ ಅಭಿವೃದ್ಧಿ ಎಂದು ಮನುಷ್ಯ ಭಾವಿಸಿದ್ದಕ್ಕೆ ಸಂಭವಿಸಿದ್ದು ಕೇದಾರನಾಥ ದುರಂತ. ನಮ್ಮ ಅಭಿವೃದ್ಧಿ ಮಾದರಿ ಕುರಿತ ಕಲ್ಪನೆಗಳನ್ನು ನಿಕಷಕ್ಕೊಡ್ಡಿಕೊಳ್ಳಬೇಕಿದೆ ಎಂದು ಪ್ರಕೃತಿ ಕೊಟ್ಟ ಎಚ್ಚರಿಕೆ ಕೇದಾರನಾಥ ದುರಂತ. 

ಧರ್ಮ ಮತ್ತು ದೇವರು ಎಂದಿನಂತೆ ಈಗಲೂ ಅಲೌಕಿಕವಾದದ್ದಕ್ಕಿಂತ ಲೌಕಿಕ ಪ್ರಾಪ್ತಿಗೇ ಹೆಚ್ಚು ಬಳಕೆಯಾಗುವವರು. ಆಧುನಿಕ ಕಾಲದಲ್ಲಿ ಅಭಿವೃದ್ಧಿ, ಸಂಪರ್ಕ, ಹಣ, ತಂತ್ರಜ್ಞಾನ ಎಲ್ಲವೂ ಅವುಗಳ ಉತ್ಕರ್ಷದ ಪರಿಕರಗಳಾಗಿವೆ. ಧರ್ಮ, ದೇವರ ಹೆಸರಿನಲ್ಲಿ ಅನ್ಯಾಯ, ಅಕ್ರಮಗಳು ಹಿಂದೆಂದಿಗಿಂತ ಹೆಚ್ಚು ಸಂಭವಿಸುತ್ತಿರುವಾಗ ‘ಎನ್ನ ಕಾಲೇ ಕಂಭ, ದೇಹವೇ ದೇಗುಲ’ ಎಂಬ ಉನ್ನತ ಆಧ್ಯಾತ್ಮಿಕತೆಯನ್ನು ಜನರಿಗೆ ಅರ್ಥ ಮಾಡಿಸುವವರಾರು? ಕೇವಲ ತೀರ್ಥಕ್ಷೇತ್ರಗಳ ದರ್ಶನದಿಂದ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ ಎಂದು ಬೋಧಿಸುವವರಾರು? ಅಸಂಖ್ಯ ಸ್ವಾಮಿ-ಮಠ-ಧಾರ್ಮಿಕ ಚಾನೆಲ್ಲುಗಳು ಜನಸಾಮಾನ್ಯರಿಗೆ ಚಮಚದಲ್ಲಿ ಉಣಬಡಿಸುತ್ತಿರುವ ಆಧ್ಯಾತ್ಮಿಕತೆಯಾದರೂ ಎಂಥದು? ಉಳ್ಳವರು, ಅಧಿಕಾರ ಹಿಡಿದವರು ದೇವರು-ಧರ್ಮ-ಬಂಡವಾಳ ಈ ಮೂರರ ಮೇಲೂ ಹಿಡಿತ ಹೊಂದಿರುವಾಗ ಜನರಿಗೆ ನೈಜ ಧಾರ್ಮಿಕತೆಯನ್ನು ತಿಳಿಸಿ ಹೇಳುವವರು ಯಾರು? 

ಸಂಭವಾಮಿ ಯುಗೇಯುಗೇ ಎಂದ ಭಗವಂತ ಇಂಥ ಅಂತರಂಗದ ದುರಸ್ತಿ ಕೆಲಸಕ್ಕಾಗಿ ಮತ್ತೆ ಹುಟ್ಟಿ ಬಂದಿದ್ದರೆ ಚೆನ್ನಾಗಿತ್ತು. ಆದರೆ ಇದು ಕಲಿಯುಗ. ಮಾಡಬೇಕಾದದ್ದು ಏನಿದ್ದರೂ ನಾವೇ ಮಾಡಿಕೊಳ್ಳಬೇಕು, ನರಮನುಷ್ಯರು.. 

No comments:

Post a Comment