(ಚಿತ್ರ: ಪ್ಯಾಬ್ಲೋ ಪಿಕಾಸೋ)
ಓ ಕವಿತೆಯೇ,
ಕೊಡಗೆಂದರೆ ಕಿತ್ತಳೆ, ಕಾಫಿ
ಕರ್ನಾಟಕದ ಕಾಶ್ಮೀರ
ಕಾವೇರಿಯ ತವರು
ಕೊಡವರ ನಾಡು ದೇವರ ಕಾಡು
ಮಡಿಕೇರಿ ಮಂಜು ರಾಜಾ ಸೀಟು
ಕದನ ಕಲಿಗಳ ದಂಡು
ಎಂದೆಲ್ಲ ವರ್ಣಿಸಿದೆಯಲ್ಲವೇ?
ನಿಜ, ಆದರೆ
ಗೋಚರ ಅಗೋಚರ ಪಲ್ಲಕ್ಕಿಗಳನೇರಿ
ಮೈಮರೆಯಬೇಡ ಕವಿತೆಯೇ
ಪರಾಂಬರಿಸು,
ಕೊಡಗಿನ ಬಯೋಡೇಟಾ ಬದಲಾಗಿದೆ..
ಕೊಡಗೆಂದರೆ
ಕಾಪಿಶೀಮಿಗೆ ಗುಳೆ ಬಂದ
ಬಯಲನಾಡಿನ ಕಂದು ತುಟಿಗಳು;
ಲೈನುಮನೆಯ ಜೀತಕ್ಕೆ ಹರಾಜಾದ
ಜೇನು ಕುರುಬರ ಕನಸುಗಳು;
ಬೈಲುಕುಪ್ಪೆ ಬೊನ್ಸಾಯ್‌ನಲ್ಲರಳಿದ
ಟಿಬೆಟ್ ಹೂಗಳ ಬೊಕೆ;
ಹುಲಿ ಹಾವಳಿ, ಆನೆ ಹಾವಳಿ,
ದಂತಕಳ್ಳರ ಹಾವಳಿ,
ಕನ್ನಡ, ಮಲೆಯಾಳಿ ಚಳಿ..
ಕೊಡವತಿಯೆಂದರೆ
ಹಿಮ್ಮುಖ ಸೀರೆ ನಿರಿಗೆ ಚಿಮ್ಮುವ ಸೊಬಗಿಯಷ್ಟೇ ಅಲ್ಲ
ಗಡಿಯಲಿರುವ ಮಡಿಕೇರಿ ಸಿಪಾಯಿಗಾಗಿ
‘ಸುಯ್ಯುತ್ತ ಮರುಗುತ್ತ ಬಸುರಂ ಹೊಸೆದು
ಕೊನೆವೆರಳ ಮುರಿದುಕೊಳುವ’
ಅಮ್ಮ, ಮಗಳು, ಹೆಂಡತಿ..
ಕಾಫಿಬೊಡ್ಡೆಗಳ ಗುಡ್ಡದಲ್ಲಿ
ತೊಡೆ ನಡುವೆ ರಕ್ತ ಹರಿಸಿದ ಪೋರಿ
ತಲಕಾವೇರಿಯಲಿ ಹುಟ್ಟಿ
ಭಾಗಮಂಡಲದಲ್ಲಿ ನೆರೆದು
ಹೊಗೆವ ಕಲ್ಲುಗಳ ನಡುವೆ ಮಡುವಾದ ಕನ್ನಿಕೆ
ಗಗನದಿಂದ ಭರಚುಕ್ಕಿಯಾಗಿ ಧುಮುಕಿದರೂ
ಮತ್ತೆ ಕನ್ನಂಬಾಡಿಯಲ್ಲಿ
ಮತ್ತೆ ಮೆಟ್ಟೂರಿನಲ್ಲಿ
ಮತ್ತೆಮತ್ತೆ ಎಲ್ಲೆಲ್ಲೋ ಬಂದಿಯಾದ ಕಾವೇರಿ
ಸಿರಿಸಂಭ್ರಮಗಳ ಹಂಗಿನರಮನೆಯಲ್ಲಿ
ಗುಂಡು ತುಪಾಕಿಗಳ ಕಿವಿಗಡಚಿಕ್ಕುವ ಸದ್ದಿನಲ್ಲಿ
ದಿಕ್ಕೆಡದಿರು ಕವಿತೆಯೇ
ಎಚ್ಚರ, ಇದು ಅತ್ಯಾಚಾರಿಗಳ ಕಾಲ.
ಧರ್ಮಾಧಿಕಾರಿ ರಾಜರ್ಷಿಗಳು
ಪಟ್ಟದ್ದೇವರುಗಳು
ಪುಂಡ ಫುಡಾರಿ ತ್ರಿಮೂರ್ತಿಗಳ
ಮಾರುವೇಷಕ್ಕೆ ಮರುಳಾಗಬೇಡ.
ದಾಕ್ಷಿಣ್ಯಕ್ಕೆ ಬಸುರಾದರೆ ಹೆರಲು ಜಾಗ ಸಿಗುವುದಿಲ್ಲ
ಅವಸರಕ್ಕೆ ಹೆತ್ತ ಮಕ್ಕಳು ಉಸಿರಾಡುವುದಿಲ್ಲ
ನೋಡು,
ಮರುಭೂಮಿಯ ಮುಳ್ಳುಕಂಟಿ ಚಿಗುರಿ ಹೂವರಳಿಸುತ್ತದೆ
ಮುಸುಕಿದ ಮಂಜು ಹನಿಗೆ ಉಸುಕೂ ಸಂಭ್ರಮಪಡುತ್ತದೆ
ದೊಂಬಿಯ ಮರುದಿನ ನಿರ್ಜನ ಶಹರದ
ರಸ್ತೆಗಳ ಇಕ್ಕೆಲದಲೂ ಮರ ಹೂವರಳಿಸಿ ನಗುತ್ತದೆ
ಅರಳೆ ಸಿಗದ ಕಾಲಕ್ಕೆ ಹಕ್ಕಿ, ನಾರು ಹೆಕ್ಕಿ ಗೂಡು ಕಟ್ಟುತ್ತದೆ
ಯಾವ ತಾಲಿಬಾನಿಗೂ ಅವು ಅಂಜುವುದಿಲ್ಲ ಗೆಳತೀ,
ನಮೋಸುರನ ಬೆದರಿಕೆಗೆ ಗಿರ್‌ನ ಕೇಸರಗಳು ದಿಗಿಲುಗೊಳ್ಳುವುದಿಲ್ಲ
ಇರುಳಲ್ಲಿ ಗೂಬೆ ಸುಮ್ಮನೆ ಕೂರುವುದಿಲ್ಲ
ಸುರನೋ ಅಸುರನೋ
ಗಡ್ಡ ನೆರೆಯದೆ ಉಳಿಯುವುದಿಲ್ಲ
ಬದಲಾಗುತ್ತವೆ ಋತು ಋತಗಳು,
ಕುಡಿದ ಮೊಲೆ ಜೋತುಬೀಳದೇ ಇರುವುದಿಲ್ಲ.
ತಾಯೇ
ಎದೆಗೆ ತಟ್ಟಿದ ನೋವ
ತುದಿಬೆರಳಿಗಂಟಿಸಿಕೊಂಡು ಬದುಕಿ ಬಿಡು
ನಿಜದ ಕೆಂಡವ ಉಡಿಯೊಳಗಲ್ಲಲ್ಲ
ಅಂಗೈಯೊಳಗಿಟ್ಟುಕೊಂಡು ಉಸಿರಾಡು
ಅವರ ಖಡ್ಗ ಕೋವಿ ತ್ರಿಶೂಲಗಳ ಕಿತ್ತೆಸೆದು ಬೆತ್ತಲಾಗಿಸಿ
ಹೊಟ್ಟೆಯೊಳಗವಿಸಿಟ್ಟುಕೋ,
ದಿವ್ಯ ಶಬುದಗಳಾಗಿಸಿ ಹೆರು
ಜೀವಕಾರುಣ್ಯದ ಮೊಲೆಹಾಲನೂಡಿಸೇ,
ಏಕೆಲಗವ್ವಾ,
ಬೆಂಕಿಯ ಮಗಳೇ,
ಬೆಳಕಾಗಿ ಉರಿ
ಬೂದಿ ಉಳಿಸದ ಹಣತೆಯಾಗಿ ಬೆಳಗಿಬಿಡು..
(ಮಡಿಕೇರಿಯಲ್ಲಿ ನಡೆದ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಓದಿದ ಕವಿತೆ.)
No comments:
Post a Comment