Friday 11 July 2014

ಕಾರ್ಲ್ ಮಾರ್ಕ್ಸ್ ಪ್ರೇಮ ಕವಿತೆಗಳು




ಕೊನೆಯ ಸುನೀತಗಳು: ಜೆನ್ನಿಗಾಗಿ

೧.
ಗಂಧರ್ವಗಾನ ಮಾಧುರ್ಯದೊಂದಿಗೆ
ಆತ್ಮವು ಹೊಳೆಯುತ್ತಿರುವಾಗ
ಪ್ರೇಮವು ನಿನ್ನ ಪಾದಗಳಿಗರ್ಪಿಸುವ
ಈ ಎಲ್ಲ,
ಎಲ್ಲ ಎಂದರೆ ಎಲ್ಲಾ ಕವಿತೆಗಳನ್ನೂ
ಒಪ್ಪಿಸಿಕೋ.

೨.
ನನ್ನ ಮಟ್ಟಿಗೆ
ದೇಶಕಾಲಗಳ ಎಲ್ಲೆ ಮೀರಿ
ಬಹುದೂರ ದಾಟಿ ಬಂದು
ರೋಮಾಂಚನಗೊಳಿಸುವ,
ಗುಲಾಮನಾಗಿಸುವ
ದೇವಲೋಕದ ಯಾವ ಬಿರುದುಬಾವಲಿಗಳೂ
ನಿನ್ನ ಹೊಳೆಹೊಳೆವ ಕಣ್ಣುಗಳಿಗೆ
ಸಂಭ್ರಮಿಸುವ ಬೆಚ್ಚನೆಯ ಎದೆಗೆ
ಆಳದಿಂದೆದ್ದು ಉರುಳುವ ಎರಡು ಭಾವುಕ ಹನಿಗಳಿಗೆ
ಸಮವಲ್ಲ..

ಸಾವು ಅನಿವಾರ್ಯವೇ ಎಂದಾದಲ್ಲಿ
ಗಂಧರ್ವ ನಾದದಂತಹ ನಿನ್ನ ನಿಟ್ಟುಸಿರ ನಡುವೆ
ಕೊನೆಯುಸಿರೆಳೆದೇನು
ಬಹುಮಾನ ಪಡೆಯಬಹುದಾದರೆ
ನೋವುನಲಿವುಗಳೆರಡರಲ್ಲೂ
ನಿನ್ನೊಡಲಿನಲ್ಲೇ ಹೂತುಹೋಗಿ
ಸಾಂತ್ವನ ಪಡೆಯಬಯಸುವೆನು.

೩.
ಓಹ್!
ನಿನ್ನ ಅಗಲುವ ಭಯ, ನೋವು
ನನ್ನ ಆತ್ಮವನ್ನೇ ಕುಸಿದು ಬೀಳಿಸಿರುವಾಗ
ನಾ ಬರೆದ ಪುಟಗಳು ತರಗುಡುತ್ತ ನಿನ್ನ ಬಳಿ
ಮತ್ತೊಮ್ಮೆ ಹಾರಿಬರುತ್ತಿವೆ..
ನನ್ನ ಆತ್ಮವಂಚಕ ಭ್ರಮೆ
ಧೈರ್ಯದ ಹಾದಿಯಲ್ಲಿ ಸುಮ್ಮನೇ ಅಲೆಯುತ್ತಿದೆ
ಅತ್ಯುನ್ನತವಾದುದನ್ನು ಗೆದ್ದು
ಎಲ್ಲ ಆಸೆಗಳ ತೀರಿಸಿಕೊಳ್ಳಬೇಕೆಂದಲ್ಲ
ದೂರದೂರಿನಿಂದ ನಾನು
ಆಸೆ ಕನಸು ತುಂಬಿದ ಆ ಮನೆಗೆ ಹಿಂತಿರುಗಿ ಬಂದಾಗ
ನಿನ್ನ ಸಂಗಾತಿ ತನ್ನ ಅಪ್ಪುಗೆಯಲ್ಲಿ ನಿನ್ನ ಹಿಡಿದಿರಬಹುದು
ಸುಂದರಿ ನಿನ್ನ ಹೆಮ್ಮೆಯಿಂದ ತಬ್ಬಿ ಹಿಡಿಯಬಹುದು
ಆಗ ನನ್ನ ಕಡೆ ಸುಳಿದು ಬಂದೀತು
ನೋವು ಮತ್ತು ಮರೆವಿನ
ಬೆಂಕಿಯಂಥ ಸುಳಿಜ್ವಾಲೆಯೊಂದು..


೪.
ಜೆನಿ,
ನೀನು ತಮಾಷೆ ಮಾಡಬಹುದು
ನನ್ನ ಕವಿತೆಗಳು ‘ಜೆನಿಗೆ’ ಎಂಬ ತಲೆಬರಹ ಏಕೆ ಹೊತ್ತಿವೆಯೆಂದು..

ನನ್ನೆದೆ ನಿನಗಾಗಿ ಮಾತ್ರ ಮಿಡಿಯುವಾಗ
ನನ್ನ ಹಾಡು ನಿನಗಾಗಿ ಕಾದು ನಿರಾಶೆಗೊಳ್ಳುವಾಗ
ನೀನೇ ಹಾಡುಗಳ ಸ್ಫೂರ್ತಿ ದೇವತೆಯಾಗಿರುವಾಗ
ಪ್ರತಿ ಪದವೂ
ತನ್ನ ಮಾಧುರ್ಯಕ್ಕಾಗಿ ನಿನಗೆ ಅಭಾರಿಯಾಗಿರುವಾಗ
ದೂರದ ಚೇತನಗಳಂತೆ
ಜಾದೂವಿನಂತೆ
ಮಹಾನ್ ಅಚ್ಚರಿಯಂತೆ
ನಿನ್ನ ಹೆಸರಿನ ಪ್ರತಿ ಸ್ವರವೂ
ಏನನ್ನೋ ಧ್ವನಿಸುತ್ತ
ಮೃದು ಮಧುರವಾಗಿ ಕಂಪಿಸುವಾಗ
ಒಂದು ಉಸಿರೂ ನಿನ್ನಿಂದ ತಪ್ಪಿಸಿಕೊಳದೇ ಇರುವಾಗ
ದೇವತೆಯೇ,

ಜೆನೀ..
ನೀನು ತಮಾಷೆ ಮಾಡುತ್ತೀ
ನನ್ನ ಕವಿತೆಗಳಿಗೆ
‘ಜೆನಿಗೆ’ ಎಂಬ ತಲೆಬರಹ ಏಕೆ ಕೊಟ್ಟೆನೆಂದು..




ಕನ್ನಡಕ್ಕೆ: ಅನುಪಮಾ

4 comments:

  1. ಕವಿತೆ-2 ಇಷ್ಟವಾಯಿತು. ಅಪ್ಯಾಯಮಾನ ಎನಿಸಿತು.

    ReplyDelete
  2. ಅನುವಾದ ಚೆನ್ನಾಗಿ ಮೂಡಿವೆ ಎಂದೋ ಓದಿದ ೀ ಕವನಗಳ ಬೆಚ್ಚನೆಯ ಭಾವನೆ ಮತ್ತೆ ಮೂಡಿತು. ಮಾರ್ಕ್ಸ್ ಗಿಂತ ನಾಲ್ಕು ವರ್ಷ ದೊಡ್ಡವಳಾದ ಜೆನ್ನಿ ಇಡೀ ಜೀವನದುದ್ದಕ್ಕೂ ಅನುಭವಿಸಿದ ಬಡತನದ ಸಂಕಟ ಹೇಳತೀರದ್ದು

    ReplyDelete
  3. ಈ ಚಿತ್ರಗಳು ಚೆನ್ನಾಗಿವೆ. ಯಾರದ್ದು ?

    ReplyDelete
    Replies
    1. ಅಂತರ್ಜಾಲದ ಅನಾಮಿಕನ ಚಿತ್ರ :)

      Delete