Tuesday, 10 June 2014

ಕೊಂಕಣ ಸುತ್ತಿ .. (ಲೇಖನ)ಚಲನೆಗೆ ಒಂದು ಶಕ್ತಿಯಿದೆ. ಅದು ಕಾಲದೇಶಗಳ ದಾಟಿ ಜೀವವು ವಿಹರಿಸುವಂತೆ ಮಾಡುತ್ತದೆ. ಸಮಸ್ಯೆ, ಪರಿಹಾರ, ಪರಿಣಾಮ, ಭವಿಷ್ಯ ಎಲ್ಲ ದರ್ಶನದಂತೆ ಕಣ್ಣೆದುರು ಸುಳಿಯುತ್ತವೆ. ಹೊರಜಗತ್ತನ್ನು ಕಣ್ಣುಕಿವಿಮೂಗುಗಳಿಂದ ಒಳಗಿಳಿಸಿಕೊಳ್ಳುತ್ತ ಕುಳಿತುಕೊಳ್ಳಲು ಕಿಟಕಿ ಪಕ್ಕ ಕುಂಡೆ ಊರುವಷ್ಟು ಜಾಗ ಸಿಕ್ಕರೆ ಸಾಕು, ಬ್ರಹ್ಮಾಂಡವನ್ನೇ ಸುತ್ತಬಹುದೆನಿಸುತ್ತದೆ. ಮುಂಬಯಿ ಕನ್ನಡ ಸಂಘವೊಂದರ ಕಾರ್ಯಕ್ರಮಕ್ಕೆ ಕನಕದಾಸರ ನೆಪದಲ್ಲಿ ಜಾತಿ/ಜಾತ್ಯತೀತತೆ/ಮೀಸಲಾತಿ ಅಂತೆಲ್ಲ ಮಾತನಾಡಲು ‘ಮತ್ಸ್ಯಗಂಧ’ ರೈಲಿನಲ್ಲಿ ಹೊರಟಾಗ ಹುಟ್ಟಿದ ಅಂಥ ಒಂದು ಲಹರಿ ನಿಮ್ಮೊಂದಿಗೆ..

ಮುಂಬಯಿ ಮಾಯೆ

ಬೆಂಗಳೂರು ಗೊತ್ತುಗುರಿಯಿಲ್ಲದೆ ‘ಅಭಿವೃದ್ಧಿ’ ಆಗುವ ಮೊದಲು ಉತ್ತರ ಮತ್ತು ಕರಾವಳಿ ಕರ್ನಾಟಕದ ವಲಸಿಗರ ಫೇವರಿಟ್ ಡೆಸ್ಟಿನೇಷನ್ ಮುಂಬಯಿಯಾಗಿತ್ತು. ೧೯ನೇ ಶತಮಾನದ ಆದಿಭಾಗದಲ್ಲಿ ಮುಂಬಯಿ-ಡೆಕ್ಕನ್ ರೈಲು ಸಂಪರ್ಕವಾದಾಗಿನಿಂದ ದಕ್ಷಿಣ ಭಾರತದವರ ಮುಂಬಯಿ ವಲಸೆ ಶುರುವಾಯಿತು. ಬಟ್ಟೆ ಅಂಗಡಿ, ಬೇಕರಿ ಕೆಲಸ, ಮನೆಗೆಲಸ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಕಟ್ಟಡ ಕೆಲಸ, ಡ್ರೈವರ್, ಮೀನುಗಾರಿಕೆ ಬೋಟಿಗಾಗಿ ಎಂದೆಲ್ಲ ಕರ್ನಾಟಕದ ಜನ ಮುಂಬಯಿ ಸೇರಿದ್ದಾರೆ. ಕಾಮಾಟಿಪುರ, ಸ್ಲಂ ಹಾಗೂ ಭೂಗತ ಜಗತ್ತಿನಲ್ಲೂ ಕನ್ನಡಿಗರ ಹೆಜ್ಜೆ ಗುರುತುಗಳಿವೆ. ಅದು ೧೫ ಲಕ್ಷ ಕನ್ನಡಿಗರನ್ನು ಸೆಳೆದಿಟ್ಟುಕೊಂಡಿದೆ.

ಕರಾವಳಿಗರ ಮುಂಬೈ ವಲಸೆ ೧೯೭೦ರಲ್ಲಿ ರಾಷ್ಟ್ರೀಯ ಹೆದ್ದಾರಿ-೧೭ ಆಗುವ ಮೊದಲೇ, ೧೯೯೮ರಲ್ಲಿ ಕೊಂಕಣ ರೈಲಿನ ಸಂಚಾರ ಆರಂಭವಾಗುವ ಮೊದಲೇ ಶುರುವಾಗಿತ್ತು. ರಾಮ ನಾಯಕ್ ೧೯೩೫ರಲ್ಲಿ ಮುಂಬಯಿಯ ಮೊದಲ ಉಡುಪಿ ಹೋಟೆಲ್ ಶುರುಮಾಡಿದರು. ನಂತರದ ಎರಡು ದಶಕಗಳಲ್ಲಿ ನಾಯಕ್ ಅವರದಲ್ಲದೆ ಅದೇ ಹೆಸರಿನ ಎಷ್ಟೊಂದು ಹೋಟೆಲುಗಳು ಶುರುವಾದವೆಂದರೆ ಮುಂಬಯಿಯಲ್ಲಿ ದಕ್ಷಿಣ ಭಾರತ ಆಹಾರ ಎಂದರೆ ಉಡುಪಿ ಹೋಟೆಲ್ ಎನ್ನುವಂತಾಯಿತು. ಇವತ್ತು ಮುಂಬಯಿಯ ೧೦,೯೫೨ ಲೈಸೆನ್ಸ್ ಪಡೆದ ಹೋಟೆಲುಗಳಲ್ಲಿ ೭೦% ಕರ್ನಾಟಕದವರದ್ದು. ೨೦,೦೦೦ ಕನ್ನಡಿಗರು ಹೋಟೆಲ್ ಕಾರ್ಮಿಕರು.

ಹೋಟೆಲುಗಳಷ್ಟೇ ಅಲ್ಲ, ಇನ್ನೂ ಹಲವು ಕ್ಷೇತ್ರಗಳಲ್ಲಿ ಕನ್ನಡಿಗರ ಹೆಜ್ಜೆಗುರುತಿದೆ. ಸಹಕಾರಿ ಹೌಸಿಂಗ್ ಸೊಸೈಟಿ ಶುರುಮಾಡಿದವರೂ ಕನ್ನಡಿಗರು. ಜನಸಾಮಾನ್ಯರು ರಿಯಲ್ ಎಸ್ಟೇಟಿನವರ ಜೊತೆ ಪೈಪೋಟಿಗಿಳಿಯಲು ಸಾಧ್ಯವಾಗದೆಂದು ೧೯೧೫ರಲ್ಲೇ ಸಾರಸ್ವತ ಹೌಸಿಂಗ್ ಸೊಸೈಟಿ ಶುರುವಾಯಿತು. ನಂತರ ಅಂತಹ ಹಲವಾರು ಸೊಸೈಟಿಗಳು ತಲೆಯೆತ್ತಿದವು. ಮುಂಬಯಿಯಲ್ಲಿ ಲೇಬರ್ ಯೂನಿಯನ್ ಕಟ್ಟಿದ ಪ್ರಮುಖರೂ ಕನ್ನಡಿಗರೇ. ಡಾಕ್ ಅಂಡ್ ಟ್ರಾನ್ಸ್‌ಪೋರ್ಟ್ ಯೂನಿಯನ್ ಕಟ್ಟಿದ ಪಿ.ಡಿ ಮೆಲ್ಲೋ ಅವರಿಂದ ಹಿಡಿದು, ಆಟೋರಿಕ್ಷಾ ಯೂನಿಯನ್, ಮುಂಬೈ ಮಜ್ದೂರ್ ಯೂನಿಯನ್ ಮುನ್ನಡೆಸುತ್ತಿರುವ  ಶರದ್ ರಾವ್ ತನಕ ಕನ್ನಡಿಗರಿದ್ದಾರೆ. ೨೦೦ ವರ್ಷಗಳಿಂದ ದೇಹಮಾರಾಟದ ಕೇಂದ್ರವಾಗಿರುವ ಕಾಮಾಟಿಪುರದಲ್ಲೂ ಕನ್ನಡ ನುಡಿ ಕೇಳುತ್ತದೆ.

ಜನಸಂಖ್ಯೆಯ ದೃಷ್ಟಿಯಿಂದ ಮುಂಬಯಿ ಭಾರತದ ಅತಿದೊಡ್ಡ ನಗರ. ೧.೩೮ ಕೋಟಿ ಜನಸಂಖ್ಯೆಯ, ೯೦ ಲಕ್ಷ ಜನ ಸ್ಲಮ್ಮುಗಳಲ್ಲಿ ವಾಸಿಸುವ ಮುಂಬಯಿಯಲ್ಲಿ ಭಾರತದ ಎಲ್ಲ ಭಾಗಗಳ ಜನ ಇದ್ದಾರೆ. ಪ್ರತಿ ಚದರ ಕಿಮೀಗೆ ೨೩,೦೦೦ ಜನ ಗಿಜಿಗುಡುವ ಮುಂಬಯಿಗೆ ಇವತ್ತಿಗೂ, ಈಗಲೂ ವಲಸೆ ನಡೆಯುತ್ತಿರುವುದಕ್ಕೆ ಕಾರಣಗಳಿವೆ. ವಾಸಿಸುವ ಜನರಿಗೆ ಅಲ್ಲಿ ಗ್ಯಾಸ್, ವಿದ್ಯುತ್, ನೀರಿಗೆ ಉಳಿದ ನಗರಗಳಷ್ಟು ಕಷ್ಟವಿಲ್ಲ. ಆರು ಮುಖ್ಯ ಸರೋವರಗಳು, ಮೂರು ನದಿ, ಒಂದು ಡ್ಯಾಮ್ ಮುಂಬಯಿಗೆ ನೀರು ಪೂರೈಸುತ್ತವೆ. ಉಳಿದ ನಗರಗಳಿಗಿಂತ ಉತ್ತಮ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಸಿಸ್ಟಂ ಇದೆ. ಪ್ರತಿನಿತ್ಯ ೬೯.೯ ಲಕ್ಷ ಜನರನ್ನು ಕರೆದೊಯ್ಯುವ ಸಬರ್ಬನ್ ರೈಲ್ವೆ ವಿಶ್ವದಲ್ಲೆ ಅತಿ ಉತ್ತಮ ಮತ್ತು ದಕ್ಷ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಸಿಸ್ಟಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಸ್ಟ್ ಬಸ್ ೪೫ ಲಕ್ಷ ಪ್ರಯಾಣಿಕರನ್ನು ಪ್ರತಿದಿನ ಸಾಗಿಸುತ್ತದೆ.

ಮುಂಬಯಿ ಜಾಗತೀಕರಣಕ್ಕೂ ಮೊದಲೇ ಮೆಟ್ರೋಪಾಲಿಟನ್ ಸಿಟಿಯಾಗಿ, ದೇಶದ ವಾಣಿಜ್ಯ ರಾಜಧಾನಿಯಾಗಿ ಬೆಳೆದಿದೆ. ದೇಶದ ೬.೧೬% ಜಿಡಿಪಿ ಉತ್ಪತ್ತಿಯಾಗುವ; ೩೩% ಆದಾಯ ತೆರಿಗೆ, ೬೦% ಕಸ್ಟಮ್ಸ್ ತೆರಿಗೆ, ೧೦% ಕೈಗಾರಿಕಾ ಉದ್ಯೋಗ, ೪೦% ವಿದೇಶಿ ವಿನಿಮಯವನ್ನು ಗಳಿಸಿಕೊಡುವ; ಕೇವಲ ಕಾರ್ಪೋರೇಟ್ ತೆರಿಗೆಯಿಂದಲೇ ೪೦೦೦ ಕೋಟಿ ಗಳಿಸಿಕೊಡುವ ಅದು ದುಡ್ಡಿನ ನಗರವೂ ಹೌದು. ಸೆಬಿ, ಎನ್‌ಎಸ್‌ಇ, ಬಿಎಸ್‌ಇ, ರಿಸರ್ವ್ ಬ್ಯಾಂಕ್, ಹಲವು ಪ್ರಮುಖ ಕಾರ್ಖಾನೆಗಳು, ಬಿಸಿನೆಸ್ ಹೌಸ್‌ಗಳು ಮುಂಬಯಿಯಲ್ಲೇ ಇವೆ. ಕುಶಲಿ, ಅರೆಕುಶಲಿ, ಕೂಲಿ, ಮನೆ ಕೆಲಸಗಾರರ ತನಕ ಎಲ್ಲರಿಗೂ ಮುಂಬಯಿಯಲ್ಲಿ ಅವಕಾಶವಿದೆ. ಧಾರಾವಿ ಒಂದರಲ್ಲೇ ೧೫,೦೦೦ ಒಂದೇ ಕೋಣೆಯ ಫ್ಯಾಕ್ಟರಿಗಳಿವೆ. ರಸ್ತೆ ಬದಿ ವ್ಯಾಪಾರ, ಡ್ರೈವರ್, ಕೂಲಿ ಕೆಲಸ ಮಾಡುವ ಲೆಕ್ಕವಿಲ್ಲದಷ್ಟು ನೀಲಿ ಕಾಲರ್ ಉದ್ಯೋಗಿಗಳು ಇದ್ದಾರೆ.

ವಲಸೆಯಾಗಿ ಹೋದ ಬಹಳಷ್ಟು ಜನರು ಸೂರು ಇದ್ದರೂ, ಇಲ್ಲದಿದ್ದರೂ ಅಲ್ಲೇ ಬೇರು ಬಿಟ್ಟಿದ್ದಾರೆ. ಆ ಬೇರುಗಳಾದರೋ ತಮ್ಮ ಮೂಲ ನೆಲದ ಸೊಗಡನ್ನು ಚಿಗುರುಹೂಹಣ್ಣುಗಳಲ್ಲಿ ಕಾಪಿಟ್ಟಿವೆ. ತಮ್ಮ ಬದುಕು ಕಟ್ಟಿಕೊಳ್ಳಲು ಮುಂಬೈಗೆ ವಲಸೆ ಹೋಗಿ, ಎಲ್ಲ ಅನಿಶ್ಚಿತತೆಗಳ ನಡುವೆಯೂ ಸೆಣಸಾಡಿ, ಅದರ ನಡುವೆಯೇ ತವರನ್ನೂ, ಸಂಸ್ಕೃತಿ-ಭಾಷೆಯನ್ನೂ ಮರೆಯದೇ ನೆನಪಿಟ್ಟುಕೊಂಡಿವೆ. ಹೀಗೆ ವಲಸೆ ಹೋದ ಕನ್ನಡಿಗರ ಅಸ್ಮಿತೆ ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಕನ್ನಡ ಸಂಘಗಳು, ಜಾತಿ ಆಧಾರಿತ ಸಂಘಗಳು ಜನ್ಮ ತಳೆದವು. ಇಲ್ಲಿ ಇನ್ನೊಂದು ವಿಶೇಷವಿದೆ: ಮುಂಬಯಿ ಕನ್ನಡ ಸಂಘಗಳನ್ನು ಕಟ್ಟಿದವರು, ಬೆಳೆಸಿದವರಲ್ಲಿ ತುಳು ಅಥವಾ ಕೊಂಕಣಿ ಮಾತೃಭಾಷೆಯಾಗಿರುವವರೇ ಹೆಚ್ಚಿದ್ದಾರೆ. ಆದರೆ ಮಹಾರಾಷ್ಟ್ರವೆಂಬ ಗಂಡನ ಮನೆಗೂ, ಕರ್ನಾಟಕವೆಂಬ ತಾಯಿ ಮನೆಗೂ ಅವಮಾನವಾಗದಂತೆ ಬದುಕಿರುವುದು ಅಲ್ಲಿನ ಕನ್ನಡಿಗರ ಹೆಚ್ಚುಗಾರಿಕೆಯಾಗಿದೆ. ನಾನು ಗಮನಿಸಿದಂತೆ ಕನ್ನಡ ಕಾರ್ಯಕ್ರಮಗಳ ಸಂಘಟಕರು ಮಾತಿನ ಕೊನೆಗೆ ಜೈ ಕನ್ನಡ, ಜೈ ಮಹಾರಾಷ್ಟ್ರ ಎಂದು ಹೇಳುತ್ತಾರೆ.

ಬಹುಶಃ ತವರು ಮನೆ ಮತ್ತು ಗಂಡನ ಮನೆ ಎರಡೂ ಅಭಿವೃದ್ಧಿಯಾಗಲೆಂದು ಹಾರೈಸುವ ಹೆಣ್ಣು ಮನಸ್ಸು ಮಾತ್ರ ಶಿವಸೇನೆಯಂಥ ಭಾಷಿಕ ಖೂಳ ಹುಲಿಯನ್ನು ಪಳಗಿಸಬಲ್ಲದು.


ಕೊಂಕಣದ ತುದಿಗಳೆರೆಡರ ನಡುವೆ ಮತ್ಸ್ಯಗಂಧ


೯೮೦ ಕಿಮೀ ರಸ್ತೆ ದೂರದ ಮುಂಬಯಿಯನ್ನು ೭೪೧ ಕಿಮೀ ದೂರದ ರೈಲು ದಾರಿಯಲ್ಲಿ ಮುಟ್ಟುವಂತೆ; ಕನಿಷ್ಠ ೨೦೦೦ ರೂ. ಬೇಕಿದ್ದ ಪ್ರಯಾಣವನ್ನು ೫೦೦ ರೂಗಳಲ್ಲಿ ಮುಗಿಸುವಂತೆ ಮಾಡಿದ್ದು ಕೊಂಕಣ ರೈಲ್ವೆ. ಕರ್ನಾಟಕ ಕರಾವಳಿಯನ್ನು ಮುಂಬಯಿಗೆ ಬೆಸೆವ ಈ ರೈಲುದಾರಿ ಪಶ್ಚಿಮಘಟ್ಟದ ಮನಮೋಹಕ ಬೆಟ್ಟಕಣಿವೆಗಳನ್ನೂ, ಅಸಂಖ್ಯ ನದಿಹಳ್ಳಗಳನ್ನೂ ಹಾದು ಮುಂಬಯಿ ತಲುಪುತ್ತದೆ. ಮರೆಯಲಾಗದ ರೈಲು ದಾರಿ ಕೊಂಕಣ ರೈಲಿನ ದಾರಿ. ವೇಗವಾಗಿ ಚಲಿಸುವ ರೈಲಿನಿಂದ ಹೊರಗೆ ಹಗಲು ಮತ್ತು ಹುಣ್ಣಿಮೆಯ ರಾತ್ರಿಗಳಲ್ಲಿ ಕಾಣುವ ದೃಶ್ಯ ಕಣ್ಣಲ್ಲಿ ನಿಂತುಬಿಡುತ್ತದೆ. ಆದರೆ ಅತ್ಯಂತ ಸುಂದರವಾಗಿರುವ ಈ ಭೌಗೋಳಿಕ ಪ್ರದೇಶ ರೈಲುಹಳಿ ಎಳೆಯಲು ದೊಡ್ಡ ಸವಾಲಾಯಿತು. ೧೯೬೬ರಿಂದ ಕೊಂಕಣ ರೈಲ್ವೆ ರೂಪುರೇಷೆ ತಯಾರಾಗಿದ್ದರೂ ಮುಂಬಯಿ ಸಮೀಪದ ದಿವಾ ಮತ್ತು ರತ್ನಗಿರಿಯ ತನಕ ಹಳಿ ಬಂದು ಅಲ್ಲೇ ನಿಂತುಬಿಟ್ಟಿತ್ತು. ೧೯೮೯ರಲ್ಲಿ ಜಾರ್ಜ್ ಫರ್ನಾಂಡಿಸ್ ರೈಲು ಮಂತ್ರಿಯಾದಾಗ ಕೊಂಕಣ ರೈಲ್ವೆ ಕಾರ್ಪೋರೇಷನ್ ಹುಟ್ಟಿಕೊಂಡು ಇ. ಶ್ರೀಧರನ್ ಮೊದಲ ಎಂಡಿಯಾದರು.

ಅಂದುಕೊಂಡ ಸಮಯಕ್ಕೆ ಸರಿಯಾಗಿ, ಕೆಲವೆಡೆ ಅದಕ್ಕಿಂತ ಮೊದಲೇ ದಕ್ಷತೆಯಿಂದ ಪ್ರಾಜೆಕ್ಟ್ ಮುಗಿಸಿದ ಶ್ರೀಧರನ್ ಕೊಂಕಣ ರೈಲ್ವೆ ಸಾಕಾರವಾಗಲು ಪ್ರಾಮಾಣಿಕವಾಗಿ ಕೆಲಸ ಮಾಡಿದ ಅಧಿಕಾರಿ. ಕೇವಲ ೫ ವರ್ಷದಲ್ಲಿ ಕೊಂಕಣ ರೈಲ್ವೆ ಕೆಲಸ ಪೂರೈಸುವ ಗುರಿಯಿಟ್ಟುಕೊಂಡು ಯುದ್ಧೋಪಾದಿಯಲ್ಲಿ ಅವರ ತಂಡ ಕೆಲಸ ಮಾಡಿತು. ೭ ವಿಭಾಗಗಳನ್ನಾಗಿಸಿ ಕೆಲಸ ಹಂಚಲಾಯಿತು. ೭೪೧ ಕಿಮೀ ದಾರಿಯಲ್ಲಿ ೨೦೦೦ ಸೇತುವೆಗಳು, ೯೧ ಸುರಂಗಗಳನ್ನು ನಿರ್ಮಿಸಬೇಕಿತ್ತು. ೪೩,೦೦೦ ಜನರಿಂದ ಭೂಸ್ವಾಧೀನ ಮಾಡಿಕೊಳ್ಳಬೇಕಿತ್ತು. ದಟ್ಟಕಾಡು, ಅತಿ ಮಳೆ, ಪ್ರವಾಹ, ಕಾಡುಪ್ರಾಣಿಗಳನ್ನೆಲ್ಲ ತಾಳಿಕೊಂಡು ಕೆಲಸ ಮಾಡಿದ ಕಾರ್ಮಿಕರಲ್ಲಿ ೭೪ ಜನ ಪ್ರಾಣ ತೆತ್ತರು. ಘನಶಿಲೆಯ ಸಹ್ಯಾದ್ರಿ ಬೆಟ್ಟ ಕೊರೆಯಲು ಸ್ವೀಡನ್ನಿನ ಯಂತ್ರಗಳು ಬಂದವು. ಆದರೆ ೯ ಮಣ್ಣಿನ ಸುರಂಗ ಕೊರೆಯಲು ವಿಶ್ವದ ಯಾವ ಟೆಕ್ನಾಲಜಿಯೂ ಲಭ್ಯವಿರಲಿಲ್ಲ. ೧೯ ಜನರನ್ನು, ನಾಲ್ಕು ವರ್ಷವನ್ನು ೯ ಮಣ್ಣು ಸುರಂಗಗಳೇ ನುಂಗಿದವು. ಕೊರೆದ ಸುರಂಗಗಳು ಕುಸಿದವು, ಕಟ್ಟಿದ್ದ ದಾರಿ ಕುಸಿಯಿತು. ಘಟ್ಟಪ್ರದೇಶ ರೈಲ್ವೆ ಇಲಾಖೆಗೆ-ಕಾರ್ಮಿಕರಿಗೆ ದೊಡ್ಡ ಸವಾಲಾಗಿ ಕಾಡಿತು.

ಗೋವಾ ತನ್ನ ಪರಿಸರ ಹಾಗೂ ಪರಂಪರೆಗೆ ಹಾನಿಯಾಗುವುದೆಂದು ಪ್ರಸ್ತಾವಕ್ಕೆ ಅಡ್ಡಬಂದು ಮುಂಬಯಿ ಹೈಕೋರ್ಟಿನಲ್ಲಿ ದಾವೆ ಹೂಡಿ ವಿಳಂಬಕ್ಕೆ ಇನ್ನೊಂದು ಕಾರಣವಾಯಿತು. ಕಟ್ಟಿದಷ್ಟೂ ಕುಸಿಯುತ್ತಿದ್ದ ಒಂದೇಒಂದು ಸುರಂಗದ ನೆಪದಿಂದ ಮಂಗಳೂರು-ಮುಂಬೈ ನೇರ ಸಂಚಾರಕ್ಕಾಗಿ ಏಕಹಳಿಯ, ವಿದ್ಯುತ್ ಚಾಲಿತ ಅಲ್ಲದ ರೈಲು ೧೯೯೮ರ ತನಕ ಕಾಯಬೇಕಾಯಿತು.

ಕೊಂಕಣ ರೈಲಿನ ಸಂಪರ್ಕ ದೊರೆತ ಮೇಲೆ ಮುಂಬಯಿ ಮತ್ತಷ್ಟು ಹತ್ತಿರವಾಗಿದೆ. ೧೨ ತಾಸುಗಳಲ್ಲಿ ೩೫೦ ರೂಪಾಯಿಗಳಲ್ಲಿ ಮುಂಬಯಿ ಮುಟ್ಟಬಹುದಾಗಿದೆ. ಈ ರೈಲ್ವೆಯ ಮತ್ತೊಂದು ವಿಶೇಷತೆ ರೋಲ್ ಆನ್- ರೋಲ್ ಆಫ್ ಟ್ರಕ್ ಸೇವೆ. ಲೋಡ್ ಆದ ಲಾರಿಗಳನ್ನು ಮುಂಬಯಿಯಿಂದ ನಡುವಿನ ಊರುಗಳಿಗೆ ಅದು ಸಾಗಿಸುತ್ತದೆ. ಗೂಡ್ಸ್ ಸಾಗಣೆ ಕಡಿಮೆಯಿದ್ದು ನಷ್ಟ ತುಂಬಿಕೊಳ್ಳಲು ರೈಲ್ವೆ ಅನುಸರಿಸಿದ ಈ ವಿಧಾನ ದೇಶದಲ್ಲೇ ಮೊದಲ ಬಾರಿ ಜಾರಿಯಾಗಿದೆ. ಸರಾಸರಿ ವರ್ಷಕ್ಕೆ ೧.೬ ಲಕ್ಷ ಟ್ರಕ್‌ಗಳನ್ನು ರೈಲು ಒಯ್ಯುತ್ತದೆ.


ಒಂದು ಮಾಯಾ ಪಯಣ

 ನಸುಕು ಹರಿಯುವಾಗ ಅದ್ಯಾವುದೋ ಸ್ಟೇಶನ್ನಿನ ಬಳಿ ರೈಲು ಕರು ಹಾಕಿ ನಿಂತಿತು. ಎಷ್ಟು ಹೊತ್ತಾದರೂ ಹೊರಡಲೇವಲ್ಲದು. ಕಿಟಕಿಯ ಗಾಜುಬಾಗಿಲಿನಿಂದ ಹೊರನೋಡಿದರೆ ಜನವರಿಯ ನಸುಬೆಳಗಿನ ಜಾವದ ಚಳಿಯನ್ನು ತಡೆಯಲಾರದೇ ರೊಟ್ಟಿನ ಬಾಕ್ಸುಗಳಲ್ಲಿ ಮೈ ಹುದುಗಿಸಿಕೊಂಡು ದೇಹಗಳು ಮುರುಟಿ ಮಲಗಿದ್ದವು. ಕೆಲವರು ಚಿಂದಿ ಹೊದ್ದು ಮಲಗಿದ್ದರೆ, ಚಳಿಯ ಪರಿವೆಯೇ ಇಲ್ಲದವರಂತೆ ಅರೆನಗ್ನ ಮಕ್ಕಳು ಎದ್ದು ಕೂತಿದ್ದವು. ತಲೆ ಮೇಲೊಂದು ಸೂರು ಎಂಬ ಬೆಚ್ಚಗಿನ ಭಾವವಿಲ್ಲದೆ ಎಷ್ಟು ಜನ ನಡುಗುತ್ತ ಬದುಕಿರಬಹುದು? ಹೊಟ್ಟೆಯೊಳಗಿನ ಬೆಂಕಿಯೇ ಅಲ್ಲವೇ ಅವರನ್ನು ಚಳಿಗೆ ಹೆದರದಂತೆ ರಕ್ಷಿಸಿರುವುದು? ಕೊರೆಯುವ ಚಳಿಯಲ್ಲಿ ದೆಹಲಿಯ ಕೇಜ್ರಿವಾಲ್ ಹಳೆಯ ಬಸ್ಸುಗಳನ್ನು ರಾತ್ರಿವಾಸದ ಜಾಗಗಳಾಗಿ ಫುಟ್ಪಾತ್ ಬದಿ ಮಲಗುವವರಿಗೆ ಕೊಡುತ್ತೇವೆಂದು ಹೇಳಿದ್ದು ಉದಾತ್ತ ಯೋಜನೆಯಾಗಿ ಕಾಣಿಸಿತು. ಬಿರುಕೊಡೆದ ಚರ್ಮ, ನೆಟ್ಟ ನಿಂತ ಕೆಂಗೂದಲು, ಮಾಸಲಾದ ದೊಗಳೆ ಬಟ್ಟೆ ಹಾಕಿಕೊಂಡ ಹುಡುಗರು ಕಿಟಕಿಯಿಂದ ಯಾರೋ ನೋಡುತ್ತಿರುವುದು ಗೊತ್ತಾದದ್ದೇ ಕೈನೀಡಿ ಓಡಿಬಂದವು. ಅಪೌಷ್ಟಿಕತೆಯ ಮುಖದ ನೂರಾರು ಗೆರೆಗಳು ದೈನ್ಯ, ಹಸಿವು, ಒತ್ತಾಯವನ್ನು ಹೊರಸೂಸುತ್ತಿರುವಾಗ ಕೊಳಕಾದ ಪುಟ್ಟ ಖಾಲಿ ಬೊಗಸೆಗಳು ನನ್ನೆದುರು ಬಿಚ್ಚಿಕೊಂಡವು. ನನ್ನ ಬ್ಯಾಗಿನಲ್ಲಿ ನಾಲ್ಕೇ ಕಿತ್ತಳೆಹಣ್ಣುಗಳಿದ್ದವು.

ಆ ಹಿರಿಯರು ಮಂಕಿಕ್ಯಾಪ್, ಸ್ವೆಟರ್ ಧರಿಸಿ ನನಗಿಂತ ಮೊದಲೇ ಎದ್ದು ಕೂತಿದ್ದರು. ಇಳಿವ ತಯಾರಿಗೆಂಬಂತೆ ತಮ್ಮ ಲಗೇಜುಗಳನೆಲ್ಲ ಎದುರೇ ಇಟ್ಟುಕೊಂಡಿದ್ದರು. ಫುಟ್ಪಾತ್ ಪಕ್ಕದ ಬಡವರನ್ನು ನೋಡಿನೋಡಿ ತಮಗೆ ಹೇವರಿಕೆ ಹುಟ್ಟಿದೆ ಎಂಬ ಶೀರ್ಷಿಕೆಯಡಿ ಮಾತಾಡತೊಡಗಿದರು. ಅವರ ಲೊಕ್ಯಾಲಿಟಿಯಲ್ಲಿ ಒಂದಷ್ಟು ಜನ ಚರಂಡಿ ಮೇಲಿನ ಕಾಂಕ್ರೀಟ್ ಹಲಗೆ ಮೇಲೆ ಬೀಡುಬಿಟ್ಟರಂತೆ. ಅವರು ಬಾಂಗ್ಲಾದೇಶಿಗಳಿರಬೇಕೆಂದು ಇವರ ಅನುಮಾನ. ತಮ್ಮ ಏರಿಯಾದಲ್ಲಿ ನಿಲಿಸಿದ ಬೈಕು, ಸೈಕಲ್, ಸ್ಕೂಟರ್ ಪಾರ್ಟುಗಳು; ಕಾರಿನ ನಂಬರ್ ಪ್ಲೇಟ್, ಲೋಗೋಗಳು ಕಳುವಾಗತೊಡಗಿ ಪರದೇಶಿಗಳನ್ನು ಅಲ್ಲಿಂದ ಎಬ್ಬಿಸಲು ಒಂದಾದ ಮೇಲೊಂದು ಪತ್ರ ವ್ಯವಹಾರ ಮಾಡಿದರಂತೆ. ಅಂತೂ ಅವರನ್ನು ಎತ್ತಂಗಡಿ ಮಾಡಿಸಿದೆ ಎಂದು ನಿರಾಳವಾದರೆ ನಾಕೇ ದಿನದಲ್ಲಿ ರಸ್ತೆ ಆಚೆಬದಿಯ ಫುಟ್ಪಾತಿನಲ್ಲಿ ಮತ್ತೆ ಬಂದು ಬಿಡಾರ ಹೂಡಿದರಂತೆ.

‘ಅವ್ರು ಕಮ್ಮಿ ಅಂತ ತಿಳೀಬೇಡಿ. ಅವ್ರತ್ರ ಯಾವ ಕಾರ್ಡು ಬೇಕಾದರೂ ಇದೆ: ಬಿಪಿಎಲ್, ಆಧಾರ, ವೋಟರ‍್ಸ್ ಕಾರ್ಡ್, ರೇಷನ್ ಕಾರ್ಡ್, ಇನ್ನೂ ಏನೇನೋ. ಅವ್ರು ಪಾನ್ ಕಾರ್ಡ್ ಇಟ್ಕಂಡಿದ್ರೂ ಆಶ್ಚರ್ಯವಿಲ್ಲ..’

ದೇಶ, ಭಾಷೆ, ರಾಜ್ಯದ ಗಡಿ ದಾಟಿದ ಮನುಷ್ಯ ಸಾವಿರಾರು ಮೈಲಿ ಬರುತ್ತಾನಾದರೂ ಯಾಕೆ? ತಾನು ಒಂದು ಹಿಡಿ ಕೂಳಿಲ್ಲದೇ ಒದ್ದಾಡುವಾಗ ಅದೇ ಭೂಮಿಯ ಮೇಲೆ ಉಳಿದವರು ಮನೆ-ಕಾರು-ಚಿನ್ನ-ಹಣ ಹೊಂದಿ ಐಷಾರಾಮದಲ್ಲಿರುವುದು ನೋಡಿದರೆ ಏನನಿಸಬಹುದು? ಎಲ್ಲ ಅಪರಾಧಗಳೂ ಹೊಟ್ಟೆಗಾಗಿಯೇ ಶುರುವಾಗುತ್ತವೆ ಎನ್ನುತ್ತದೆ ಅಪರಾಧ ಸಂಹಿತೆ. ತಮ್ಮ ಹೊಟ್ಟೆ ಪಾಲಿನ ಸಂಪತ್ತು ಗಳಿಸಿದ ಮೇಲೂ ದುಡ್ಡು ಗುಡ್ಡೆ ಹಾಕಿಕೊಳ್ಳುವ ನಮ್ಮ ನಡವಳಿಕೆಗಳು ಯಾವ ಐಪಿಸಿ ಸೆಕ್ಷನ್ನಿನಲ್ಲೂ ಸೇರುವುದಿಲ್ಲವೇಕೆ? ಬಾಂಗ್ಲಾ ದೇಶ, ಮುಸ್ಲಿಮರು, ವಲಸೆ, ಭಾಷಿಕ ಅಲ್ಪಸಂಖ್ಯಾತರು, ಸ್ಲಂ ನಿವಾಸಿಗಳ ಕಷ್ಟ ಮುಂತಾದ ಆಡದ ನನ್ನ ಎದೆ ಮಾತುಗಳ ಭಾರವನ್ನೂ, ಎಲ್ಲ ಬಣ್ಣದ, ಗಾತ್ರದ ಜನರನ್ನೂ ಹೊತ್ತ ರೈಲು ಘಟ್ಕೋಪಾರ್‌ನಲ್ಲಿ ನಿಂತು, ತೆವಳಿ, ನಿಂತು, ತೆವಳಿ ಚಲಿಸುವಾಗ ಮೊಬೈಲು ಚಾರ್ಜ್ ಖಾಲಿ ಎಂಬ ಸೂಚನೆ ಕೊಡತೊಡಗಿತು.

ಚಾರ್ಜ್ ಹಾಕಿಕೊಂಡು ಬಾಗಿಲಿಗೊರಗಿ ನಿಂತಿರುವಾಗ ಆ ಇಬ್ಬರು ಬಿಳಿಸೀರೆಯುಟ್ಟ ಹೆಣ್ಮಕ್ಕಳು ಘಲ್‌ಘಲಿರು ಗೆಜ್ಜೆಸದ್ದಿನೊಂದಿಗೆ ಬಂದರು. ಅವರ ತಲೆಯಲ್ಲಿ ಜಟೆಯಂತೆ ಬೆಳೆದ ಕೂದಲಿತ್ತು. ಕವಳ ಜಗಿದು ಕೆಂಪಾದ ತುಟಿಗಳು, ಸೊರಗಿದ ದೇಹ, ಚಂಚಲ ಕಣ್ಣುಗಳು. ಚಾಯ್‌ವಾಲಾ ಬಂದಾಗ ಒಂದು ಕಪ್ ತೆಗೆದುಕೊಳ್ಳುವುದೋ, ಎರಡೋ ಎಂಬ ವಾದದಲ್ಲಿ ಅವರು ಕನ್ನಡದವರೆಂದು  ತಿಳಿಯಿತು. ನನಗೂ ಚಾಯ್ ಬೇಕಿತ್ತು, ಮೂರು ಕಪ್ ತೆಗೆದುಕೊಂಡೆವು. ಅವರು ಕೊಡಬಂದ ದುಡ್ಡನ್ನು ಕಣ್ಣಲ್ಲೇ ನಿರಾಕರಿಸಿ ಗರಂ ಚಹಾ ಕುಡಿದೆವು. ಚಾಯ್ ಮತ್ತು ಕನ್ನಡ ಭಾಷೆ ಅವರನ್ನು ಸ್ವಲ್ಪ ಸಡಿಲಗೊಳಿಸಿದರೂ ಯಾವುದೋ ಹಿಂಜರಿಕೆ ಕಟ್ಟಿಹಾಕಿತ್ತು. ಕಣ್ಣು ದೃಷ್ಟಿ ತಪ್ಪಿಸುತ್ತಿತ್ತು.

ಸಹಜವೇ. ಹೆಮ್ಮೆಯಿಂದ ಮನೆಗೆ ಬನ್ನಿ ಎಂದು ಕರೆಯುವಂತಹ ವಿಳಾಸವನ್ನು ಅವರು ಹೊಂದಿರಲಿಲ್ಲ. ಅವರು ದೇವದಾಸಿಯರು. ಊರ ಕಡೆ ಹೋಗಿ ಹುಲಿಗಮ್ಮನ ಪೂಜೆ ಮಾಡಿಸಿ, ಬರುವಾಗ ಒಂದು ಗಿಂಡಿಯಲ್ಲಿ ತೀರ್ಥ ತಂದಿದ್ದರು. ಅದನ್ನು ನೆಲಕ್ಕಿಡುವಂತಿಲ್ಲ ಎಂದು ತಲೆಮೇಲೆ ಹೊತ್ತುಕೊಂಡಿದ್ದರು. ಅವರ ಅಸ್ಪಷ್ಟ ವಿವರಣೆಗಳ ನಡುವೆ ತಿಳಿದಿದ್ದಿಷ್ಟು: ಅವರಿಬ್ಬರು ಅಕ್ಕತಂಗಿಯರು. ಅನಕ್ಷರಸ್ಥರು. ಮೂವತ್ತು ವರ್ಷ ಕೆಳಗೇ ಮುಂಬಯಿಗೆ ಬಂದಿದ್ದಾರೆ. ಊರಿಗೆ ವರ್ಷಕ್ಕೊಮ್ಮೆ ಜಾತ್ರೆಗೆ ಹೋಗಿಬರುತ್ತಾರೆ. ಅವರಲ್ಲಿ ತಂಗಿಗೆ ಒಬ್ಬ ಮಗನಿದ್ದಾನೆ. ಅಕ್ಕನಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರನ್ನು ಮದುವೆ ಮಾಡಿಕೊಟ್ಟಿದ್ದಾರೆ. ತಂಗಿಯ ಮಗ ಅಮ್ಮನನ್ನು ಹೊರಹಾಕಿ ಅವಳ ಬದುಕು ತುಂಬ ಕಷ್ಟವಾಗಿದೆ. ಈಗ ವಯಸ್ಸಾಗಿದೆ, ಮನೆಮನೆ ತಿರುಗಿ ದುಡಿಯಲು ಆಗುವುದಿಲ್ಲ, ಇಂಥ ಹೊತ್ತಲ್ಲಿ ಹೆತ್ತ ಮಗ ‘ಎಲ್ಲ ಪ್ರಾಣಿಗಳಂಗೇ ನೀನೂ ಮಾಡಿದೆ, ಮಗನ್ನ ಸಾಕಿದ್ದೇನು ದೊಡ್ಡ ವಿಷ್ಯ’ ಎನ್ನುತ್ತಾನಂತೆ. ದೇವದಾಸಿಯರಿಗೆ ಬರುವ ಮಾಸಾಶನ, ಪುನರ್ವಸತಿ ಕುರಿತು ಅವರಿಗೆ ಗೊತ್ತಿರಲಿಲ್ಲ. ಮುಂಬಯಿಯಲ್ಲಿದ್ದು ಅದನ್ನು ಪಡೆಯುವುದು ಸಾಧ್ಯವೋ, ಕರ್ನಾಟಕದವರಿಗೆ ಮಾತ್ರವೋ ಇತ್ಯಾದಿ ವಿವರಗಳು ನನಗೆ ತಿಳಿದಿರಲಿಲ್ಲ. ಫೋನ್ ನಂಬರ್ ಕೊಡಿ ಎಂದೆ. ನನ್ನ ಹಣೆಗೆ ಬಂಡಾರವಿಟ್ಟು ಲಟ್ಟುಲಡಕಾಸಾದ ಒಂದು ಮೊಬೈಲ್ ತೋರಿಸಿದರು. ಫೋನ್ ಕೊಟ್ಟರೆ ನಂಬರ್ ತಿಳಿಯುವುದು ಹೇಗೆ?

ಇವರಿಗೆ ಏನು ಮಾಡಬಲ್ಲೆ? ಇವರಂತೆಯೇ ಎರಡು ಲಕ್ಷಕ್ಕಿಂತ ಮಿಗಿಲಾಗಿರುವ ಮುಂಬಯಿಯ ಎಳೆಯ ವೇಶ್ಯೆಯರಿಗೆ ಏನು ಮಾಡಬಲ್ಲೆ? ಅಸಹಾಯಕತೆ ಹೊಟ್ಟೆಯೊಳಗೊಂದು ಸಂಕಟ ಹುಟ್ಟಿಸಿ ಕಸಿವಿಸಿಪಡುತ್ತಿರುವಾಗ ಆಚೀಚೆ ನೋಡಿದರೆ ಅವರು ಬಾಗಿಲ ಬಳಿ ಹಣಿಕಿ ಕೆಳಗೆ ಹಾರಿಯೇ ಬಿಟ್ಟರು. ಕ್ರಾಸಿಂಗಿಗೆಂದು ನಿಂತಿರುವಾಗ ಹೀಗೆ ಹಾರಿದರಲ್ಲ? ನನ್ನ ಪ್ರಶ್ನೆಗಳಿಗೆ ಹೆದರಿ ಇಳಿದರೇ? ಟಿಕೆಟ್ ಇರಲಿಲ್ಲವೇ? ಬಗ್ಗಿ ನೋಡಿದರೆ ಓಡುವ ನಡಿಗೆಯಲ್ಲಿ ರೈಲು ಹಳಿಗಳ ಮೇಲೆ ಸಾಗುತ್ತಿದ್ದಾರೆ. ಒಮ್ಮೆ ನನ್ನತ್ತ ತಿರುಗಿದವರು ಆಶೀರ್ವದಿಸುವವರಂತೆ ಎತ್ತಿದ ಕೈಬೀಸಿದರು.
ಅವರನ್ನು ಕಳಿಸಿ ನನ್ನ ಜಾಗಕ್ಕೆ ಬಂದು ಕೂತೆ. ಮುಂಬೈ ಮಿರರ್ ಮಾರಾಟಕ್ಕೆ ಬಂತು. ನಿನ್ನೆಯಷ್ಟೇ ೧೫ ವರ್ಷದ ಹುಡುಗಿಯೊಬ್ಬಳು ರೈಲಿನಿಂದ ಕೆಳಬಿದ್ದು ಎರಡೂ ಕೈ ತುಂಡಾಗಿತ್ತು. ಹಳಿ ಮೇಲೆ ಓಡಾಡುವ ಅಣ್ಣತಮ್ಮಂದಿರಾರೋ ನೋಡಿ ಎತ್ತಿ ಸ್ಟೇಷನ್ನಿಗೊಯ್ದು, ಅಲ್ಲಿಂದ ಆಸ್ಪತ್ರೆಗೆ ಸಾಗಿಸುವುದರಲ್ಲಿ ಅವಳ ಎರಡೂ ಕೈಗಳು ಸತ್ತುಹೋಗಿದ್ದವು. ಅವಳು ಪ್ರಾಣಾಪಾಯದಿಂದ ಪಾರಾಗಲು ಸೆಣಸುತ್ತಿದ್ದಳು. ಸುದ್ದಿಯ ತುಣುಕಿನತ್ತ ಹಣಿಕಿಕ್ಕಿದ ಆ ಹಿರಿಯರು ಹಳಿಗಳ ಮೇಲೆ ಓಡುವ ಬಿಳಿಸೀರೆಯ ಹೆಂಗಸರನ್ನು ತೋರಿಸುತ್ತ, ತಾವು ಇಡೀ ತಿಂಗಳು ಪಡೆವ ಸಂಬಳವನ್ನು ಮುಂಬಯಿ ವೇಶ್ಯೆಯರು ಒಂದು ಗಂಟೆಯಲ್ಲಿ ಗಳಿಸುತ್ತಾರೆ ಎನ್ನುತ್ತ ತಮ್ಮ ಕತೆ ಶುರುಮಾಡಿದರು.

ಒಮ್ಮೆ ಅವರಿನ್ನೇನು ಲೋಕಲ್ ಟ್ರೈನ್ ಇಳಿಯಬೇಕೆನ್ನುವಾಗ ಒಬ್ಬಾತ ಎದುರಿನಿಂದ ಬರುವ ರೈಲು ಹಳಿಯಡಿ ಸಿಕ್ಕಿಕೊಂಡು ರುಂಡ, ಮುಂಡ ಬೇರೆಯಾಯಿತಂತೆ. ಅವರ ಪ್ರಕಾರ ಅವನು ಆತ್ಮಹತ್ಯೆಗೆಂದೇ ರೈಲಿನಡಿ ಹೋಗಿದ್ದು. ಇವರು ನೋಡನೋಡುತ್ತಿದ್ದಂತೇ ಉಸಿರಾಡುತ್ತಿದ್ದ ಮುಂಡ ಸ್ತಬ್ಧವಾಯಿತು. ಕಣ್ಣು ಒಮ್ಮೆ ಪಟಪಟಿಸಿ ದೊಡ್ಡದಾಗಿ ತೆರೆದುಕೊಂಡು ನಿಶ್ಚಲವಾಯಿತು. ಪ್ರಾಣ ಹಾರಿಹೋದ ಘಳಿಗೆಯನ್ನು ನೋಡಿದ ಮೇಲೆ ಎಷ್ಟೋ ದಿನದವರೆಗೆ ಅವರಿಗೆ ಪಟಪಟಿಸುವ ಕಣ್ಣು ಮತ್ತು ದೀರ್ಘಶ್ವಾಸ ತೆಗೆದುಕೊಂಡ ಮುಂಡ ಕಣ್ಣೆದುರು ಬರುತ್ತಿತ್ತಂತೆ. ಇನ್ನೊಮ್ಮೆ ಸ್ಕೂಟರ್ ಸವಾರನೊಬ್ಬ ರಸ್ತೆ ಮೇಲೆ ಬಿದ್ದ. ಹಿಂದೇ ವೇಗವಾಗಿ ಬರುತ್ತಿದ್ದ ಬೈಕ್ ಅವನ ಕೈಮೇಲೆ ಹರಿದು ಹೋಯಿತು. ಇವರೂ ಸೇರಿ ಕೆಲವರು ಕೂಡಲೇ ಆಸ್ಪತ್ರೆಗೆ ಸಾಗಿಸಿದರು, ವೈದ್ಯರು ಕಡಿದು ತುಂಡಾದ ಕೈ ತಂದು ಕೊಟ್ಟರೆ ಕೂಡಿಸುವುದಾಗಿ ಹೇಳಿದಾಗ ಇವರೆಲ್ಲ ಹುಡುಕಿದರಂತೆ. ಕೊನೆಗೆ ಮೇಲೆ ಹಾರಿ ಮರದ ಕೊಂಬೆಯಲ್ಲಿ ಸಿಕ್ಕಿಕೊಂಡಿದ್ದ ಕೈಯನ್ನು ರಸ್ತೆ ಮೇಲೆ ತೊಟ್ಟಿಕ್ಕಿದ ನೆತ್ತರ ಹನಿಯಿಂದ ಆ ರಾತ್ರಿ ಗುರುತಿಸಿದರಂತೆ.

ಬೋಗಿಯ ಹೊರಗೆ ಹಣಕಿಕ್ಕಿದರೆ ಕಣ್ಣಿಗೆ ಕಾಣುವಷ್ಟು ದೂರ ಉದ್ದಾನುದ್ದ ಬಾಗಿ, ಬಳುಕಿ ಹರಡಿಕೊಂಡಿದ್ದ ರೈಲುಹಳಿಗಳು ಕಂಡವು. ರೈಲ್ವೆ ಸ್ವಚ್ಛತೆ ಬಗೆಗೆ ಇವನಿಗೆ ಯಾವತ್ತೂ ಅಸಮಾಧಾನ. ಅವು ಭಾರತದ ಅತಿದೊಡ್ಡ ತಿಪ್ಪೆಗುಂಡಿಗಳೆಂಬುದೇ ಅವನ ಅಂಬೋಣ. ಸ್ಟೇಷನ್ನಿಗೆ ಬರುವ ನೂರಾರು ಸಾವಿರ ಜನ, ಅವರು ತಂದೊಡ್ಡುವ ಕಸ ಎಲ್ಲೆಂದರಲ್ಲಿ ಹಾರಾಡುತ್ತ ಹಳಿಗಳು ಮಲಮೂತ್ರ ದುರ್ನಾತ ಬೀರುತ್ತಿರುತ್ತವೆ. ಆದರೆ ಅರೆರೆ, ಹಳಿಗಳ ನಡುವೆ ಹಚ್ಚಹಸಿರು ಕಂಗೊಳಿಸುತ್ತಿದೆಯಲ್ಲ?! ಅಷ್ಟು ದೂರದಲ್ಲಿ ಕಪ್ಪು ಮಣ್ಣನ್ನು ಹೆಣ್ಣು ಆಕೃತಿಯೊಂದು ಪಿಕಾಸಿಯಿಂದ ಎಬ್ಬಿಸುತ್ತಿದೆ. ಮತ್ತೆ ಕೆಲವರು ನೆಲದಲ್ಲಿ ಕೈಯಾಡಿಸುತ್ತಿದ್ದಾರೆ. ದೂರದಲ್ಲಿ ಪಾಲಕ್, ಮೂಲಂಗಿ ಎಲೆಗಳು ಎದ್ದು ಕಾಣುತ್ತಿವೆ!

ತಲೆ ಮೇಲೆ ಹಾದುಹೋಗುವ ಎಲೆಕ್ಟ್ರಿಕ್ ಲೈನುಗಳ, ಪಕ್ಕದಲ್ಲೇ ಭರ್ರೆಂದು ಅಬ್ಬರಿಸುತ್ತ ಸಾಗುವ ಎಕ್ಸ್‌ಪ್ರೆಸ್ ರೈಲುಗಳ ಪರಿವೆಯಿಲ್ಲದೆ ಆ ಆಕೃತಿಗಳು ಹಸಿರಲ್ಲಿ ಕೈಯಾಡುತ್ತಿದ್ದವು. ಇಷ್ಟಿಷ್ಟು ಜಾಗದಲ್ಲಿ ಇವರು ನೆಲ ಅಗೆದು, ಹಸಿರುಕ್ಕಿಸುತ್ತಿರುವರಲ್ಲ ಎಂದು ಖುಷಿಯಾಯಿತು. ಆ  ಹಿರಿಯರು ರೈಲ್ವೆಯವರು ಹಳಿಗಳ ನಡುವಿನ ನೆಲವನ್ನು ಪ್ರತಿವರ್ಷ ಲೀಸಿಗೆ ಕೊಡುವರೆಂದೂ, ಅಲ್ಲಿ ಬೆಳೆದ ತಾಜಾ ತರಕಾರಿಗಳು ಸ್ಟೇಷನ್ ಹತ್ತಿರ ಮಾರಾಟಕ್ಕೆ ಬರುತ್ತವೆಂದೂ, ಮುಂಬೈಯಲ್ಲಿ ಸಬ್ಜಿ ಸಸ್ತಾ ಎಂದೂ ಹೇಳತೊಡಗಿದರು. ಈ ‘ಲೀಸ್ ರೈತ’ರ ಲಾಭನಷ್ಟ, ಕಷ್ಟ ಏನಿರಬಹುದು? ಈ ಹಿರಿಯರಿಗೆ ನನ್ನ ಮನದಲ್ಲೇಳುವ ಪ್ರಶ್ನೆಗಳು ಹೇಗೆ ತಿಳಿಯುತ್ತವೆ?

ಮತ್ತೆ ರೈಲು ನಿಧಾನ ಚಲಿಸತೊಡಗಿತು. ಆಚೆಈಚೆ ಬೆಂಕಿಪೆಟ್ಟಿಗೆಯಂತೆ ಷೆಡ್ಡುಗಳು ಕಾಣತೊಡಗಿದವು. ಏಷ್ಯಾದಲ್ಲೇ ಎರಡನೆ ಅತಿದೊಡ್ಡ ಸ್ಲಂ ಮುಂಬಯಿಯ ಧಾರಾವಿಯಲ್ಲಿದೆ. ಕೋಟ್ಯಂತರ ಖರ್ಚಿನಲ್ಲಿ ಅಂತಸ್ತುಗಟ್ಟಲೆ ಮನೆ ಕಟ್ಟಿಕೊಳ್ಳುವ ಸಿರಿವಂತರೂ ಈ ಊರಿನಲ್ಲಿದ್ದಾರೆ. ಒಂದೇ ಕೋಣೆಯ ಗೂಡುಗಳಲ್ಲಿ ಬದುಕು ಕಳೆಯುವವರೂ ಹೇರಳವಾಗಿದ್ದಾರೆ. ಮುಂಬಯಿಯ ೬೨% ಜನ ಸ್ಲಮ್ಮುಗಳಲ್ಲಿದ್ದಾರೆ. ಧಾರಾವಿಯ ೨.೩೯ ಚದರ ಕಿಮೀ ಪ್ರದೇಶದಲ್ಲಿ ೮-೧೦ ಲಕ್ಷ ಜನ ವಾಸಿಸುತ್ತಿದ್ದು ಅದು ವಿಶ್ವದಲ್ಲೇ ಅತಿಹೆಚ್ಚು ಜನಸಾಂದ್ರತೆ (ಚದರ ಕಿಮೀಗೆ ೩.೪ ಲಕ್ಷ ಜನ) ಇರುವ ಪ್ರದೇಶವಾಗಿದೆ. ಸುಮ್ಮನೇ ಒಂದು ಹೋಲಿಕೆ: ಪ್ರತಿ ಚಕಿಮೀಗೆ ಮುಂಬಯಿ ಜನಸಾಂದ್ರತೆ ೨೩೦೦೦, ಬೆಂಗಳೂರು ೭೬೦೦, ಉತ್ತರ ಕನ್ನಡ ಜಿಲ್ಲೆ ೧೪೭, ಕೊಡಗು ಜಿಲ್ಲೆ ೧೪೦! ಸ್ಲಂ ಇರಲಿ, ಅಷ್ಟು ಸೂರೂ ಇಲ್ಲದ ಅಸಂಖ್ಯ ಫುಟ್ಪಾತ್ ವಾಸಿಗಳನ್ನೂ ಮುಂಬಯಿ ಸಾಕಿಕೊಂಡಿದೆ. ಬಹುಶಃ ಭೂಮಿ ಮೇಲಿನ ಜೀವಿಗಳಲ್ಲಿ ದಾರಿದ್ರ್ಯವನ್ನು ಮೈಮೇಲೆ ಎಳೆದುಕೊಂಡವನು, ತನ್ನ ಜೊತೆಗೇ ಇತರ ಜೀವಿಗಳೂ ಹಸಿವಿನಿಂದ ನರಳುವಂತೆ ಮಾಡಿದವನೆಂದರೆ ಮನುಷ್ಯನೇ ಇರಬೇಕು ಎನಿಸಿಬಿಟ್ಟಿತು.

 ‘ಸ್ಲಂ ವಾಸಿಗಳು ಅಂತ ಅವರಿಗೆಷ್ಟು ಸವಲತ್ತು ಗೊತ್ತಾ? ಹಾಗೆ ನೋಡಿದ್ರೆ ನಾವೇ ಸ್ಲಂ ವಾಸಿಗಳು. ಅವರು ನಡೆಸೋ ಅಷ್ಟು ವ್ಯವಹಾರ ನಾವು ನಡೆಸೋಲ್ಲ. ಯಾವ್ದು ಬೇಕು ನಿಮ್ಗೆ? ಪ್ಲಾಸ್ಮಾ ಟಿವಿ? ಹೊಸಾ ಮಾಡೆಲ್ ಮೊಬೈಲು? ಡ್ರಗ್ಸ್? ಲಿಕರ್? ಕಾಲು ಮುರಿಯೋರು ಬೇಕಾ? ತಲೆ ಹಿಡಿಯೋರು ಬೇಕಾ? ತಲೆ ಹಾರಿಸೋರು ಬೇಕಾ? ಎಲ್ಲರೂ, ಎಲ್ಲವೂ ನಿಮಗೆ ಅಲ್ಲಿ ಸಿಗುತ್ತೆ. ಅವರಿಗೆ ಗೌಮೆಂಟ್ ಕಟ್ಟಿಸಿಕೊಟ್ಟಂತ ಮನೆ ಇದೆ, ಅದ್ನ ಮಾರಕಂಡು, ಬಾಡಿಗೆ ಕೊಟ್ಕಂಡು ಇದಾರೆ. ಮೂವತ್ತು ವರ್ಷದಿಂದ ಮುಂಬೈ ನಗರಪಾಲಿಕೆ ಕ್ಲರ್ಕ್ ಆಗಿ ಒಂದು ಕೋಣೆಯ ಹಳೇ ಕ್ವಾರ್ಟರ್ಸ್‌ನಲ್ಲಿ ಬದುಕಿದ್ದೆ ಸ್ವಾಮಿ ನಾನು, ಲಂಚ ತಗಳ್ಳಲಿಲ್ಲ, ಸುಳ್ಳು ಲೆಕ್ಕ ಬರೆಯಲಿಲ್ಲ. ಆದ್ರೆ ನಮಗಿವತ್ತು ಸೂರಿಲ್ಲ, ಯಾರೂ ಕೇಳೋರಿಲ್ಲ. ಯಾಕಂದ್ರೆ ನಾವು ಸರ್ಕಾರಿ ನೌಕರರು, ಕೆಲಸಕ್ಕೆ ಬರದವರು..’

ಓ ಮುಂಬಯಿಯೇ, ಸ್ಲಮ್ಮೇ ಸ್ವರ್ಗವೆನ್ನುವ ನಿನ್ನ ಈ ಪುತ್ರ ವೈಯಕ್ತಿಕ ಹತಾಶೆ, ಕಷ್ಟಗಳನ್ನು ಸಾರ್ವತ್ರಿಕಗೊಳಿಸುತ್ತಿರುವ ಈ ಹೊತ್ತು ನನ್ನೆದೆಯ ಪ್ರತಿ ಮಾತೂ ಆ ಎದೆಬಂಡೆಗೆ ಅಪ್ಪಳಿಸಿ ಬರುತ್ತಿದೆ. ನಗರ ಅತಿಶೀತಕಾಲವನ್ನೆದುರಿಸುತ್ತಿರುವುದು ಏನಚ್ಚರಿ?

ಬಾಗಿಲ ತುದಿಗೆ ಹೋಗಿ ಮತ್ತೆ ಬಗ್ಗಿ ನಿಂತೆ. ನಾ ನಿಂತಲ್ಲಿಂದ ಹಿಂದೆ, ಮುಂದೆ ಅನತಿ ದೂರದವರೆಗೆ ಬಾಗಿ ನಿಂತ ಹಲವಾರು ಬೋಗಿಗಳ ‘ಮತ್ಸ್ಯಗಂಧ’ ರೈಲು. ಒಂದೊಂದು ಬೋಗಿಯೊಳಗೂ ನೂರಾರು ಉದ್ದೇಶ, ಭಾವ, ಬಣ್ಣ, ಭಾಷೆ ಹೊತ್ತ ನೂರಾರು ಜನರನ್ನು ತುಂಬಿಕೊಂಡ ರೈಲು. ಸಾವಿರಾರು ಕಿಲೋಮೀಟರು ದೂರ ತಲುಪಬೇಕೆನ್ನುವ ಏಕೈಕ ಗುರಿಯ ಎಂಜಿನ್ನು. ಇದೊಂದೇ ರೈಲು ನೂರು ಬಸ್ ಹಿಡಿಯುವಷ್ಟು ಜನರನ್ನು ನಿತ್ಯ ಹೊತ್ತು ತರುತ್ತದೆ. ಗುಡ್ಡಬೆಟ್ಟ ಸೀಳಿ ಕೊರೆದ ಸುರಂಗಗಳನ್ನು, ಕಡಲು ನದಿಗಳನ್ನು ದಾಟಿ ಬಂದಿದೆ. ವಿವಿಧ ಆರಾಮ, ಐಷಾರಾಮ, ತೊಂದರೆ, ತಾಪತ್ರೆಗಳಿರುವವರನ್ನೆಲ್ಲ ಮುಂದಿರುವ ಒಂದೇ ಎಂಜಿನ್ ಎಳೆಯುತ್ತದೆ.

ಎಂಜಿನ್ನಿನೊಂದಿಗಿರುವ ಭದ್ರ ಸರಪಳಿಯ ಸುರಕ್ಷಿತ ಸಂಬಂಧ, ಜೊತೆಗೆ ಹಿಂದುಮುಂದಿನವರೊಂದಿಗಿರುವ ಬಾಂಧವ್ಯ - ಇದೇ ಎಲ್ಲವನ್ನು ಒಂದೇ ಗಮ್ಯದತ್ತ ಕೊಂಡೊಯ್ಯುತ್ತದೆ. ಗುರಿ ಮುಟ್ಟಿದಾಗ ಎಲ್ಲ ಚದುರುತ್ತಾರೆ, ಖಾಲಿಯಾಗುತ್ತದೆ, ಮತ್ತೆ ತುಂಬಿಕೊಳ್ಳುತ್ತದೆ. ಖಾಲಿಯಾಗುತ್ತದೆ, ಮತ್ತೆ ತುಂಬಿಕೊಳ್ಳುತ್ತದೆ. ನಿಲ್ಲುತ್ತದೆ, ಮತ್ತೆ ಹೊರಡುತ್ತದೆ. ಎಲ್ಲವೂ ನಿಯಮಿತ, ನಿರಂತರ..

ಅರೆ! ರೈಲು ಬೋಗಿಯ ಕಾರ್ಯವಿಧಾನವೂ, ನಾವು ಕಟ್ಟಹೊರಟ ಮಹಿಳಾ ಒಕ್ಕೂಟದ ಆಶಯವೂ ಒಂದೇ ತೆರನಾಗಿದೆಯಲ್ಲವೆ? ಬೇರೆಬೇರೆ ಕೆಲಸ ಮಾಡುವ, ಬೇರೆಬೇರೆ ಕಾರಣಗಳಿಗಾಗಿ ಬೆವರು-ಕಣ್ಣೀರು ಹರಿಸುವ ಎಲ್ಲ ಮಹಿಳೆಯರು ‘ದೌರ್ಜನ್ಯ ವಿರೋಧ’ ಎಂಬ ಒಂದೇ ಉದ್ದೇಶದ ಹಿಂದೆ ಚಲಿಸಬೇಕು. ಅಂಗನವಾಡಿ-ಆಶಾ ಕಾರ್ಯಕರ್ತೆಯೋ; ವಕೀಲೆ-ವೈದ್ಯೆಯೋ; ವಿವಿಧ ಬ್ಯಾನರಿನಡಿ ಕೆಲಸ ಮಾಡುವ ಮಹಿಳಾ ಸಂಘಟನೆಗಳೋ - ಜೈವಿಕವಾಗಿ ಮಹಿಳೆ ಎಂಬ ಕಾರಣಕ್ಕೆ ಎದುರಿಸುವ ಎಲ್ಲ ದೌರ್ಜನ್ಯಗಳನ್ನು ವಿರೋಧಿಸಲು ಒಂದು ಒಕ್ಕೂಟವಾಗಿ ಒಟ್ಟಾಗಲೇಬೇಕು.

ಎಲೆ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲೇ, ನಿನ್ನ ನಿಯಮಿತತೆ, ನಿರಂತರತೆಯನ್ನು ನಮ್ಮ ಒಕ್ಕೂಟದ ಜೀವ ಚೈತನ್ಯವಾಗಿಸಲಾರೆಯಾ?

ಇಳಿಯುವ ಹೊತ್ತು ಬಂತು. ಆಚೀಚೆ ಅಡ್ಡಾಡುತ್ತಿದ್ದವಳು ಆ ಹಿರಿಯರಿಗೊಮ್ಮೆ ಹೇಳಿ ಬೀಳ್ಕೊಡುವ ಎಂದು ನೋಡಿದರೆ ಅರೆ, ಅವರು ಕಾಣುತ್ತಲೇ ಇಲ್ಲ. ನಡುವೆ ಎಲ್ಲೂ ಸ್ಟಾಪ್ ಇರಲಿಲ್ಲ. ಆದರೂ ಎಲ್ಲಿ ಇಳಿದು ಹೋದರು?

ಅಥವಾ ನನ್ನ ಸ್ವಪ್ನದೊಳಗೊಬ್ಬರು.. .. ?

***
1 comment:

  1. ಎಂಜಿನ್ನಿನೊಂದಿಗಿರುವ ಭದ್ರ ಸರಪಳಿಯ ಸುರಕ್ಷಿತ ಸಂಬಂಧ, ಜೊತೆಗೆ ಹಿಂದುಮುಂದಿನವರೊಂದಿಗಿರುವ ಬಾಂಧವ್ಯ - ಇದೇ ಎಲ್ಲವನ್ನು ಒಂದೇ ಗಮ್ಯದತ್ತ ಕೊಂಡೊಯ್ಯುತ್ತದೆ. ಗುರಿ ಮುಟ್ಟಿದಾಗ ಎಲ್ಲ ಚದುರುತ್ತಾರೆ, ಖಾಲಿಯಾಗುತ್ತದೆ, ಮತ್ತೆ ತುಂಬಿಕೊಳ್ಳುತ್ತದೆ. ಖಾಲಿಯಾಗುತ್ತದೆ, ಮತ್ತೆ ತುಂಬಿಕೊಳ್ಳುತ್ತದೆ. ನಿಲ್ಲುತ್ತದೆ, ಮತ್ತೆ ಹೊರಡುತ್ತದೆ. ಎಲ್ಲವೂ ನಿಯಮಿತ, ನಿರಂತರ... super words madam..

    ReplyDelete