Friday, 13 June 2014

ಖಲೀಲ್ ಗಿಬ್ರಾನನ ಎರಡು ದೃಷ್ಟಾಂತ ಕಥೆಗಳು





ನನ್ನ ದುಃಖ ಹುಟ್ಟಿದಾಗ



ನನ್ನ ದುಃಖ ಹುಟ್ಟಿದಾಗ ಜತನದಿಂದ ಜೋಪಾನ ಮಾಡಿದೆ. ಪ್ರೀತಿ ತುಂಬಿದ ಕಾಳಜಿಯಿಂದ ಗಮನಿಸಿದೆ.

ನನ್ನ ದುಃಖ ಎಲ್ಲ ಜೀವಿಗಳಂತೆ ಬೆಳೆಯಿತು. ಬಲಶಾಲಿಯಾಗಿ, ಸುಂದರವಾಗಿ, ಅದ್ಭುತ ಆನಂದವಾಗಿ.

ನಾವು ಒಬ್ಬರನೊಬ್ಬರು ಪ್ರೀತಿಸಿದೆವು, ನನ್ನ ದುಃಖ ಮತ್ತು ನಾನು, ನಮ್ಮ ಸುತ್ತಲ ಜಗವನ್ನು ಪ್ರೀತಿಸಿದೆವು; ದುಃಖಕ್ಕೆ ಕರುಣೆಯ ಹೃದಯವಿತ್ತು, ನನ್ನ ಹೃದಯ ದುಃಖದಿಂದಾಗಿ ಕರುಣಾಪೂರಿತವಾಗಿತ್ತು.

ನಾನು ಮತ್ತು ನನ್ನ ದುಃಖ ಸಂವಾದಿಸುವಾಗ, ನಮ್ಮ ಹಗಲುಗಳಿಗೆ ರೆಕ್ಕೆ ಮೂಡಿದವು. ರಾತ್ರಿಗಳು ಕನಸುಗಳಿಂದ ಸುತ್ತುವರೆಯಲ್ಪಟ್ಟವು. ದುಃಖಕ್ಕೆ ವಾಕ್ಚಾತುರ್ಯದ ನಾಲಿಗೆ, ನನ್ನ ನಾಲಿಗೆ ದುಃಖದಿಂದ ವಾಕ್ಚಾತುರ್ಯ ಪಡೆದಿದೆ.

ನಾನು ಮತ್ತು ದುಃಖ ಒಟ್ಟಿಗೆ ಹಾಡುವಾಗ, ನಮ್ಮ ನೆರೆಹೊರೆಯವರು ತಂತಮ್ಮ ಬಾಗಿಲಲಿ ಕುಳಿತು ನಮ್ಮನ್ನು ಆಲಿಸುತ್ತಿದ್ದರು. ನಮ್ಮ ಹಾಡುಗಳು ಕಡಲಿನಂತೆ ಆಳವಾಗಿ, ಅಪರಿಚಿತ ನೆನಪುಗಳ ಮಧುರ ದನಿಯಾಗಿದ್ದವು.

ನಾವು ಒಟ್ಟಿಗೇ ನಡೆದಾಗ, ಜನ ಮೃದುವಾದ ನೋಟದಿಂದ ನಮ್ಮೆಡೆ ನೋಡುತ್ತಿದ್ದರು, ಅತಿಮಧುರ ದನಿಯಿಂದ ಪಿಸುನುಡಿಗಳನಾಡುತಿದ್ದರು. ನಮ್ಮ ಕಡೆ ಅಸೂಯೆಯಿಂದ ನೋಡುವವರೂ ಇದ್ದರು, ಏಕೆಂದರೆ ದುಃಖ ಮಹಾನ್ ಮತ್ತು ನಾನು ದುಃಖದೊಂದಿಗೆ ಹೆಮ್ಮೆಯಿಂದಿದ್ದೆ.

ಆದರೆ ನನ್ನ ದುಃಖ ತೀರಿಕೊಂಡಿತು, ಎಲ್ಲ ಜೀವಿಗಳಂತೇ, ನಾನೊಬ್ಬನೇ ಉಳಿದೆ ಚಿಂತಿಸುತ್ತಾ, ಧ್ಯಾನಿಸುತ್ತಾ.

ಈಗ ನಾನು ಮಾತನಾಡಿದರೆ ಆಡಿದ ಪದ ಕಿವಿಯ ಮೇಲೆ ಭಾರವಾಗಿ ಬೀಳುತ್ತದೆ.

ನಾನು ಹಾಡುವಾಗ ನೆರೆಯವರು ಬಂದು ಕೇಳುವುದಿಲ್ಲ.

ನಾನು ಹಾದಿಯಲಿ ನಡೆವಾಗ ಯಾರೂ ನನ್ನತ್ತ ದೃಷ್ಟಿ ಹರಿಸುವುದಿಲ್ಲ.

ನನ್ನ ನಿದ್ರೆಯಲ್ಲಿ ಮಾತ್ರ ಮರುಕ ತುಂಬಿದ ದನಿಗಳು ಪಿಸುಗುಡುವುದು ಕೇಳುತ್ತದೆ, ‘ನೋಡಲ್ಲಿ, ಇವನೇ, ಅವನ ದುಃಖ ಸತ್ತುಹೋಗಿದೆ.’

(ದಿ ಮ್ಯಾಡ್ ಮ್ಯಾನ್)



ನನ್ನ ಖುಷಿ ಹುಟ್ಟಿದಾಗ


ನನ್ನ ಖುಷಿ ಹುಟ್ಟಿದಾಗ ಅದನ್ನು ನನ್ನ ತೋಳಿನಲ್ಲಿ ಎತ್ತಿ ಹಿಡಿದು ಮನೆ ಮೇಲೆ ಹತ್ತಿ ಕೂಗಿದೆ, ‘ಎಲ್ಲ ಬನ್ನಿ, ನನ್ನ ನೆರೆಹೊರೆಯ ಬಂಧುಗಳೇ, ಬಂದು ನೋಡಿ. ಈ ದಿನ ಖುಷಿ ನನ್ನಲ್ಲಿ ಹುಟ್ಟಿದೆ. ಎಳೆಬಿಸಿಲಿನಲಿ ನಗುವ ಈ ಆನಂದದಾಯಿಯ ಎತ್ತಿಕೊಳ್ಳಿ.’

ಆದರೆ ನನ್ನ ಅಕ್ಕಪಕ್ಕದ ಮನೆಯ ಯಾರೊಬ್ಬರೂ ಖುಷಿ ನೋಡಲು ಬರಲಿಲ್ಲ. ನನಗೆ ಪರಮಾಶ್ಚರ್ಯ.

ಪ್ರತಿದಿನ, ಏಳು ಮಾಸ, ನನ್ನ ಮನೆ ಮೇಲೆ ನಿಂತು ಖುಷಿಯ ಬಗೆಗೆ ಕೂಗಿ ಹೇಳಿದೆ, ಆದರೂ ಯಾರೊಬ್ಬರೂ ಗಮನ ಹರಿಸಲಿಲ್ಲ. ನಾನು ನನ್ನ ಖುಷಿ ಒಂಟಿಯಾಗಿದ್ದೆವು, ಯಾರೂ ನೋಡದೇ, ಭೇಟಿಯಾಗುವವರು ಬರದೇ.

ಆಗ ನನ್ನ ಖುಷಿ ಪೇಲವವಾಗುತ್ತ, ಬಳಲುತ್ತ ಹೋಯಿತು. ಏಕೆಂದರೆ ನನ್ನ ಹೃದಯದ ಹೊರತಾಗಿ ಮತ್ತಾರೂ ಅದರ ಲವಲವಿಕೆಯ ನೋಡಲಿಲ್ಲ. ನನ್ನ ತುಟಿಯ ಹೊರತಾಗಿ ಮತ್ತಾರೂ ಚುಂಬಿಸಲಿಲ್ಲ.

ನನ್ನ ಖುಷಿ ಬೇರ್ಪಟ್ಟ ಏಕಾಂಗಿತನದಲ್ಲಿ ತೀರಿಕೊಂಡಿತು.

ಈಗ ನಾನು ಸತ್ತ ಖುಷಿಯನ್ನು ಸತ್ತ ದುಃಖದೊಂದಿಗೆ ನೆನೆಯುತ್ತೇನೆ. ಆದರೆ ನೆನಪು ಶರತ್ಕಾಲದ ಉದುರುವ ಎಲೆ. ಉದುರುವಾಗ ಗಾಳಿಯಲ್ಲಿ ಕೊಂಚ ಸದ್ದು ಮಾಡುತ್ತದೆ. ನಂತರ ಎಂದೆಂದೂ ನಿಶ್ಶಬ್ದ.

(ದಿ ಮ್ಯಾಡ್ ಮ್ಯಾನ್)

ಅನುವಾದ: ಅನುಪಮಾ

No comments:

Post a Comment