‘ಮೇಡಂ, ಮುಂಚೆ ನನಗಿದೆಲ್ಲ ಏನೂ ಗೊತ್ತಿದ್ದಿದ್ದಿಲ್ರೀ. ನಾ ಎಷ್ಟ್ ಒಲ್ಯಾಂದ್ರೂ ಕೇಳ್ದ ನಂ ಮನ್ಯಾಗ್ ಲಗ್ಣ ಮಾಡಿದರ್ರೀ. ಈ ಊರು, ಜನ, ಅಡಿಗಿ ಇದ್ಯಾವ್ದೂ ನಂಗ ಸರೀನೇ ಬರವಲ್ದ್‌ರೀ. ಇವರನ್ನಾ ಅದ್ಯಾವ ಪರಿ ಮಾಡ್ತಾರ್ರೀ! ನನಗ ಯಾರ ಹಂತ್ರ ಹೇಳಾಕೂ ನಾಚ್ಕಿ ಬರ್ತತ್ರಿ. ನನಗ ರಾತ್ರರೇ ಯಾಕ ಆಗ್ತದೋ ಏನೋ ಅನಿಸಿಹೋಗ್ ಬಿಟ್ಟದ್ ನೋಡ್ರೀ ಖರೇವಂದ್ರೂ. ನಡು ರಾತ್ರಿ ನಿದ್ದಿಂದ ಎಬ್ಬುಸ್ತಾರ್ರೀ. ನನ ಕೈಕಾಲ್ನೆಲ್ಲ ಒತ್ತಿ ಹಿಡೀತಾರ್ರೀ. ಉಸುರು ಕಟ್ಟಿಹೋಗೂ ಹಂಗ್ ಮಾಡ್ತಾರ್ರೀ. ಹೊಲಸು ಅದೇನೇನ್ ಮಾಡ್ತಾರೋ ಏನ? ನಾನೇನ್ ಮನಷಾಳೋ ಇಲಾ ಗೊಂಬೀನೋ, ಏನಂದ್‌ಕೊಂಡಾರೋ..! ಅದೂ ಈಗ ಮದಿವ್ಯಾಗಿ ಆರ್ ತಿಂಗಳಾತ್ರೇ, ಇನಾ ಮುಟ್ಟು ನಿಲವಲ್ದು. ನೀನು ನಂದೇನ್ನೂ ಒಳಗಿಟ್ಕಳಂಗಿಲ್ಲ, ನಂಗೂ ನಿಂಗೂ ಸಂಬಂಧೇ ಇಲ್ಲ, ನಿನಗ ನನ ಮ್ಯಾಲೆ ಪ್ರೀತಿನೇ ಇಲ್ಲ, ಅದ್ಕೇ ನಿಂಗ್ ಮುಟ್ಟು ನಿಲವಲ್ದು ಅನ್ತಾರ್ರೀ.
ನಮ್ಮಕ್ಕನ್ನ ಕೇಳಿದನ್ರೀ. ಆಕಿ ಮದಿವ್ಯಾದಾಗ ಸೊಲ್ಪು ದಿನ ಹಂಗಾಗ್ತದ. ಗಣಮಕ್ಳೂ ಹಂಗ ಮಾಡ್ತಾರ, ಅಂಜಬ್ಯಾಡ. ಒಂದ್ ಕೂಸಾಗೂ ಮಟ ಹೆಂಗಾರೂ ಅಲ್ಲೇ ಉಳಿ. ಕಡಿಗೆ ಸರಿಯಾಗ್ಲಿಲ್ಲಂದ್ರ ಇಲ್ಲೇ ವಾಪಸ್ ಬಂದ್ಬಿಡುವಂತ ಅಂತ ಹೇಳ್ಯಾಳ. ನಿಂ ಹತ್ರ ಅದಕ ಬಂದೀನಿ ನೋಡ್ರೀ ಮೇಡಂ. ಅವರು ಹಂತೇಕ ಬಂದ್ ಮ್ಯಾಲ ಸಿಕ್ಕಾಪಟ್ಟೆ ಬಿಳಿಮುಟ್ಟು ಹೋಗಿ ಎಲ್ಲ ಹೊರಗೆ ಹರ‍್ದೇ ಹೋಗ್ತತ್ರೀ. ಎಲ್ಲರಿಗೂ ಹಂಗ್ ಆಗ್ತತೋ ಅಥವಾ ನಂಗ್ ಮಾತ್ರ ಹಿಂಗೋ, ಏನೂ ತಿಳಿವಲ್ದ್‌ರೀ. ನೀವು ನನಗೊಂದು ಮಗು ಬ್ಯಾಗ ಆಗೂ ಹಂಗ ಏನಾರ ಮಾಡಿ ಪುಣ್ಯ ಕಟ್ಕೊರೀ ಮೇಡಂ.
ಹೀಂಗಂತನಿ ಅಂತ ಬ್ಯಾರೆ ತಿಳಿಬ್ಯಾಡ್ರೀ. ಅವರಿಗೆ ಏನಾದ್ರೂ ನಿದ್ದಿ ಮಾತ್ರಿ ಕೊಡಕ್ಕಾಗ್ತತ್ರೇ? ದಿನಾ ಅದ$ ಪದಾ ಅಂದ್ರ ಬ್ಯಾಸ್ರ ಬರ‍್ತತ್ರೀ. ಅದ್ಕ ಮಾತ್ರಿ ಗೀತ್ರಿ ಕೊಟ್ರಾರೆ ಸುಮ್ನುಳಿತಿದ್ರನೂ ಅಂತ ಕೇಳ್ದೆ ಅಷ್ಟಾರೀ.’
ಸ್ಥೂಲಕಾಯದ ಮೂವ್ವತ್ತೈದು ದಾಟಿರಬಹುದಾದ ಅವಳು ಹೇಳುತ್ತಲೇ ಇದ್ದಳು. ಕಾರಣಾಂತರಗಳಿಂದ ಊರುಕೇರಿ ಬಿಟ್ಟು ಯಾವುದೋ ಕಾಣದ ಊರಿಗೆ ಮದುವೆಯಾಗಿ ಬಂದು, ಹೊಂದಿಕೊಳ್ಳಲಾಗದೇ ದಿಕ್ಕೆಟ್ಟ ಮನಸ್ಥಿತಿ ಅವಳದಾಗಿತ್ತು. ಅವಳೂ ತಡವಾಗಿ ಮದುವೆಯಾದವಳು. ವರನೂ ನಡುಹರೆಯ ಮೀರಿದವನು. ಅವನು ಗಡ್ಡಬಿಟ್ಟು ನೋಡಲು ಸಂಭಾವಿತನಂತೇ ಕಾಣುತ್ತಿದ್ದ. ಆದರೆ ಯಾವ ಹುತ್ತದಲ್ಲಿ ಯಾವ ಹಾವೋ? ನಡುಹರೆಯ ಮೀರಿದ ಇಬ್ಬರದೂ ಮಿತಿಮೀರಿದ ನಿರೀಕ್ಷೆಗಳು. ಇಷ್ಟು ದಿನ ಸಂಗಾತಿಯಿಲ್ಲದೇ ಒದ್ದಾಡಿದ ಅವನ ದೇಹ ಈಗ ಕಟ್ಟುಬಿಚ್ಚಿದ ಕುದುರೆಯಂತೆ ಕುಣಿದಾಡುವಾಗ ನಾನು ಸಂಯಮದ ಪಾಠ ಹೇಳಿದರೆ ಉಪಯೋಗಕ್ಕೆ ಬರಲಾರದು. ಅವಳಿಗೂ ಗಂಡ, ಅವನಿಗೆ ಹೊಂದಿಕೊಂಡು ಸುಮ್ಮನಿರಬೇಕು ಎಂಬ ಭಾವನೆ ಇದ್ದಹಾಗಿರಲಿಲ್ಲ. ಬೆಳೆದು ಬಲಿತ ಆ ಮರ ಬಾಗಿಸಿದರೆ ಮುರಿಯುವಂತಿತ್ತೇ ಹೊರತು ಬಳುಕುವಂತಿರಲಿಲ್ಲ. ಅವರಿಬ್ಬರ ಬೇರೆಬೇರೆ ಭಾಷೆ, ಸಂಸ್ಕಾರ, ಇಷ್ಟಾನಿಷ್ಟಗಳು ಎಲ್ಲವೂ ಅವರ ನಡುವೆ ತೆರೆಯಾಗಿ ಹರಡಿನಿಂತವು. ಪ್ರೇಮಕಾಮವೆಂಬ ಬಿಸಿಯೂ ಆ ಮಂಜನ್ನು ಕರಗಿಸಲಾರದೇ ಹೋಯಿತು. ಎಲ್ಲಕ್ಕೂ ಕೊನೆಗೆ ಬಲಿಯಾದದ್ದು ಅವರ ದಾಂಪತ್ಯ... .
***
ದೂರದ ಜಿಲ್ಲೆಯೊಂದರಲ್ಲಿ ಕೆಲಸ ಮಾಡುವ ಅವನು ಮನೆಗೆ ಬರುವುದು ತಿಂಗಳೆರೆಡು ತಿಂಗಳಿಗೊಮ್ಮೆ. ಮದುವೆಯಾಗಿ ಬರೋಬ್ಬರಿ ಮೂರು ವರ್ಷವಾದರೂ ಮಕ್ಕಳಾಗಿಲ್ಲ. ಇದುವರೆಗೂ ನಾನವರನ್ನು ನೋಡಿರಲಿಲ್ಲ. ಇದೇ ಮೊದಲ ಬಾರಿ ನನಗೆ ಗೊತ್ತಿದ್ದ ಯಾವುದೋ ಪೇಶೆಂಟ್ ಕಡೆಯವರ ಶಿಫಾರ್ಸಿನ ಮೇರೆಗೆ ನನ್ನ ಬಳಿ ಬಂದಿದ್ದರು. ಆದರೆ ಅವರು ಮಕ್ಕಳಾಗಲಿಲ್ಲವೆಂದು ಔಷಧಕ್ಕೆ ಬಂದವರಲ್ಲ. ಏಕೆ ಬಂದರೆಂದು ತಿಳಿದ ಮೇಲೆ ನಾನೇ ಬೆಚ್ಚಿದೆ.
ಈ ಮೂರು ವರ್ಷದಲ್ಲಿ ಅವರಿಬ್ಬರ ನಡುವೆ ಇನ್ನೂ ಸಮಾಗಮ ಎಂಬುದು ನಡೆದೇ ಇಲ್ಲ!
ಅವನು ಸೋತ ದನಿಯಲ್ಲಿ ನಡುನಡುವೆ ಚಂದದ ಪುಟ್ಟ ಹೆಂಡತಿಯ ಮುಖ ನೋಡುತ್ತಾ, ಅವಳ ಮುಖಭಾವ ಗಮನಿಸುತ್ತಾ, ಸುತ್ತು ಬಳಸಿ ಹೇಳುತ್ತ ಹೋಗುತ್ತಿದ್ದ. ಅವಳ ಮೇಲೆ ಏನೂ ಆಪಾದನೆ ಹೊರಿಸದ ಹಾಗೆ, ವಸ್ತುಸ್ಥಿತಿಯನ್ನಷ್ಟೇ ಹೇಳುತ್ತ ಹೋದ. ಏನು ಹೇಳಿದರೆ ಅವಳೇನು ತಿಳಿದಾಳೋ ಎಂಬ ಕಾಳಜಿ ಅವನ ಮಾತಿನಲ್ಲಿ ಎದ್ದು ತೋರುತ್ತಿತ್ತು. ಕಲ್ಲುಮುಖ ಮಾಡಿ ಕುಳಿತ ಅವಳೋ ಹ್ಞೂಂ ಉಹ್ಞೂಂ ಎನ್ನದೇ, ಅವನ ಕಡೆಗೂ ನೋಡದೇ, ಎತ್ತಲೋ ನೋಡುತ್ತಾ ಕೆಳಮುಖ ಮಾಡಿ ಕುಳಿತುಬಿಟ್ಟಿದ್ದಳು. ಮಾತು ತನಗೆ ಸಂಬಂಧಿಸಿದ್ದೇ ಅಲ್ಲವೇನೋ ಎಂಬಷ್ಟು ನಿರ್ಭಾವುಕ ಮುಖ. ಸಂಭಾಷಣೆಯಲ್ಲಿ ಪಾಲ್ಗೊಳ್ಳುವ ಯಾವುದೇ ಇರಾದೆ ಇಲ್ಲದ ಮುಖಭಾವ.
ಒಮ್ಮುಖ ದಾರಿಯಲ್ಲಿ ದೂರ ಪ್ರಯಾಣ ಕಷ್ಟ. ಅವಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯಾವುದೂ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ಮುಂದಿನ ಒಂದೆರೆಡು ಬಾರಿ ಅವಳನ್ನು ಬೇರೆ ಏನೇನೋ ಕಾರಣಗಳಿಗಾಗಿ ಮತ್ತೆ ಬರಹೇಳಲಾಯಿತು. ಎಲ್ಲವಕ್ಕೂ ತಪಾಸಣೆಯ ನೆವಗಳು ಅಷ್ಟೇ. ಅಂತೂ ಇಂತೂ ಬೇಸಿಗೆ ರಜೆ ಮುಗಿದು ಅವಳ ಗಂಡ ಹೋಗುವುದರೊಳಗಾಗಿ ಏನಾದರೂ ರಿಪೇರಿ ಕೆಲಸ ಮಾಡಬೇಕೆಂಬ ನಮ್ಮ ಇರಾದೆಗೆ ಎಲ್ಲ ಅನುಕೂಲಗಳು ಒದಗಿದವು.
ತುಟಿಬಿಚ್ಚಿ ಮಾತನಾಡುವಷ್ಟಾದ ನಂತರ ಅವಳು ಅಷ್ಟು ವಾಚಾಳಿ ಎಂದು ನಂಬಲೇ ಸಾಧ್ಯವಿಲ್ಲ, ಅಷ್ಟು ತೆರೆದುಕೊಂಡಳು. ಬೇರೆ ಬೇರೆ ಉದಾಹರಣೆಗಳ ಮೂಲಕ ನಾವು ನಮ್ಮ ಸಫಲ ಕತೆಗಳನ್ನಷ್ಟೇ ಅವಳಿಗೆ ಹೇಳುತ್ತಾ ಹೋದೆವು. ಅವಳ ಪ್ರಕಾರ ಅವಳಿಗೆ ಗಂಡನ ಮೇಲೆ ತುಂಬಾ ಪ್ರೀತಿಯಂತೆ. ಆದರೆ ಪ್ರೀತಿಯೆಂದರೆ ಅವನ ಜೊತೆ ಮಲಗುವುದೇ ಯಾಕಾಗಿರಬೇಕು ಎಂಬ ವಾದ ಹೂಡಿದಳು. ಅವನು ರಜೆ ಹಾಕಿ ಮನೆಗೆ ಬಂದಾಗಲೆಲ್ಲ ಅವನನ್ನು ತುಂಬ ಉಪಚರಿಸಿ ಚೆನ್ನಾಗಿ ನೋಡಿಕೊಳ್ಳುತ್ತಾಳಂತೆ. ಹಗಲಿಡೀ ಅವನನ್ನು ಬಿಟ್ಟು ಆಚೆ ಕದಲುವುದೇ ಇಲ್ಲವಂತೆ. ಅವನ ಬಟ್ಟೆ ತೊಳೆದು ಒಣಗಿಸಿ ಇಸ್ತ್ರಿ ಹಾಕಿ ರೆಡಿ ಮಾಡಿ ಕೊಡುತ್ತಾಳಂತೆ. ಆದರೆ, ರಾತ್ರಿಯೆಂದರೆ ಮಾತ್ರ ಅವಳಿಗೆ ಭಯ, ಹೇಸಿಗೆ, ಅಸಹ್ಯ. ಅದೇ ಕಾರಣಕ್ಕೆ ಅವಳು ‘ಮನೆಮಾಡುತ್ತೇನೆ, ನೀನೂ ಅಲ್ಲೇ ಬಾ’ ಎಂದು ಅವನು ಎಷ್ಟು ಕರೆದರೂ ಹೋಗಿಲ್ಲವಂತೆ. ಅವಳು ಎಲ್ಲೋ ಓದಿಕೊಂಡಿದ್ದಾಳೆ, ಮತ್ತಾರೋ ಗೆಳತಿಯರು ಹೇಳಿದ್ದು ಕೇಳಿದ್ದಾಳೆ, ಮೊದಲ ರಾತ್ರಿಯೆಂದರೆ ರಕ್ತ ಹರಿಯುತ್ತದೆಂದು... ತುಂಬಾ ನೋವಾಗುತ್ತದೆಂದು... ಅಸಹ್ಯವಾದದ್ದೆಲ್ಲ ನಡೆಯುತ್ತದೆಂದು... . ರಕ್ತ ನೋಡಿದರೆ ಕಣ್ಣುಕತ್ತಲೆಯಾಗುವ, ನೋವಿಗೆ ಹೆದರುವ ಅವಳಿಗೆ ಗಂಡನ ಒಟ್ಟಿಗಿರುವ ಕಲ್ಪನೆಗೇ ವಾಂತಿ ಬಂದಂತಾಗುತ್ತದೆಯಂತೆ.
ಇಷ್ಟೇ ಅಲ್ಲ, ಅವಳಲ್ಲಿ ಇನ್ನೂ ಹಲವು ಚಿತ್ರವಿಚಿತ್ರ ತಪ್ಪು ಕಲ್ಪನೆಗಳಿದ್ದವು. ಆ ಹುಡುಗಿ ನನ್ನ ಬಳಿ ಅದನ್ನೆಲ್ಲ ಹೇಳಿಕೊಳ್ಳುವಷ್ಟು ತೆರೆದ ಮನಸ್ಸಿನವಳಿದ್ದಾಳೆ ಎಂದರೆ ಅವಳನ್ನು ಪಳಗಿಸುವುದು ಕಷ್ಟವಲ್ಲ ಎನ್ನಿಸಿತು. ಸ್ವಲ್ಪ ತಡೆ ಎಂದು ಗಂಡನಿಗೆ ಸಾವಧಾನ ಹೇಳಿದೆವು. ಲೈಂಗಿಕತೆಯಲ್ಲಿ ಆಸಕ್ತಿಯೇ ಇಲ್ಲದ ತಾನು ಹೆಣ್ಣೇ ಹೌದೋ ಅಲ್ಲವೋ ಎಂದು ತಪಾಸಣೆ ಮಾಡಿ ನೋಡಲು ಹೇಳಿದಳು. ತನ್ನ ಅಂಗಾಂಗಳು ತೀರಾ ಸಣ್ಣವಾಗಿವೆ ಎಂಬ ಮತ್ತೊಂದು ಸಂದೇಹ. ತಿಂಗಳು ತಿಂಗಳು ಸರಿಯಾಗಿ ಮುಟ್ಟಾಗುತ್ತಿದ್ದ ಅವಳು ಹೆಣ್ಣೇ ಎನ್ನುವುದಕ್ಕೆ ದೈಹಿಕವಾಗಿ ಗಟ್ಟಿ ಸಾಕ್ಷಿಗಳಿದ್ದವು. ತಮಾಷೆಯಾಗಿ ಅವನ್ನೆಲ್ಲ ಅವಳಿಗೆ ವಿವರಿಸಿ ಹೇಳಾಯಿತು. ಈ ಎಲ್ಲದನ್ನು ಪರಿಹರಿಸಿಕೊಂಡವಳು ಮತ್ತೊಂದು ಕ್ಯಾತೆ ತೆಗೆದಳು - ತನಗೆ ಮಕ್ಕಳೆಂದರೆ ತುಂಬ ಇಷ್ಟ, ಆದರೆ ಹೆರಲು ಹೆದರಿಕೆ. ಮಕ್ಕಳು ಬೇಡವಾದ್ದರಿಂದ ಅವನ ಬಳಿ ಹೋಗುವುದಾದರೂ ಏಕೆ ಎಂದಳು! ಕೊನೆಗೆ ‘ಗಂಡನ ಬಳಿಯಿದ್ದೂ ಮಕ್ಕಳಾಗದಂತೆ ಮಾಡಿಕೊಳ್ಳಲು ನೋವಿಲ್ಲದ ಬಹಳಷ್ಟು ವಿಧಾನಗಳಿವೆ, ಆ ಬಗ್ಗೆ ಅವನ ಬಳಿ ಮಾತನಾಡಿ ಮನವೊಲಿಸಿಕೋ. ನಾವೂ ಹೇಳುತ್ತೇವೆ. ನಿನ್ನ ಅಭಿಪ್ರಾಯವೂ ನಂತರ ಬದಲಾಗಬಹುದು.’ ಎಂದು ಹೇಳಿ ಒಪ್ಪಿಸಬೇಕಾಯಿತು.
ನಮ್ಮ ಕೊನೆಯ ತರಗತಿಯಲ್ಲಿ ಅವಳಿಗೆ ಸಾರಾಂಶವಾಗಿ ಮತ್ತೆಲ್ಲ ಹೇಳಿಕಳಿಸಿದೆವು; ‘ನಿನ್ನ ಬಳಿ ದೈಹಿಕ ನ್ಯೂನತೆಗಳಾವುವೂ ಇಲ್ಲ. ಕೆಲವು ತಪ್ಪು ಕಲ್ಪನೆಗಳಿಂದ ಲೈಂಗಿಕ ಕ್ರಿಯೆ ಪಾಪವೆಂದು ತಿಳಿದು ಹೀಗೆ ಮಾಡುತ್ತಿರುವೆ. ಅದೇನೂ ಪಾಪವಲ್ಲ. ಪೀಳಿಗೆಯ ಉಳಿವಿಗಾಗಿ ಸಕಲ ಜೀವರಾಶಿಗಳೂ ಅದರಲ್ಲಿ ತೊಡಗಿವೆ, ಅದೇನು ಬರಿಯ ಮಜಾಕ್ಕಾಗಿ ಅಲ್ಲ. ಅದು ಪ್ರಕೃತಿ ನಿಯಮ ಕೂಡ. ನಿನ್ನ ಗಂಡ ಪಾಪ ಒಳ್ಳೆಯವನು. ಮೂರು ವರ್ಷವಾದರೂ ಸುಮ್ಮನೇ ಕಾದಿದ್ದಾನೆ. ಮತ್ತೆ ಯಾರಾದರೂ ಆಗಿದ್ದರೆ ಇಷ್ಟು ಕಾಯುತ್ತಿರಲಿಲ್ಲ. ಮನೆಯವರ ಒತ್ತಡಕ್ಕೆ ಬೇರೆ ಮದುವೆ ಮಾಡಿಕೊಂಡಿರುತ್ತಿದ್ದರು. ನಿನಗೆ ಅವನ ಮೇಲೆ ಸಿಕ್ಕಾಪಟ್ಟೆ ಪ್ರೀತಿಯೆನ್ನುತ್ತೀ. ಆದರೆ ಇದೆಂಥಾ ಪ್ರೀತಿ? ಇದಕ್ಕೆ ಮದುವೆ ಏಕೆ ಬೇಕಾಗಿತ್ತು?’ ಎಂದೆಲ್ಲ ಸಕಲೋಪಾಯಗಳನ್ನು ಬಳಸಿ, ನೈತಿಕ ಪ್ರಶ್ನೆ ಹಾಕಿ, ಅವಳನ್ನು ಸೋಲಿಸಿ ಗೆದ್ದೆವು. ಅಥವಾ ಅವಳು ಗೆದ್ದು ನಮ್ಮನ್ನು ಸೋಲಿಸಿದಳು.
ಅಂತೂ ಒಂದು ಒಳ್ಳೆಯ ದಿನ ಮಂತ್ರಾಲಯಕ್ಕೆ ಹೋದ ಅವರು ರಾಯರ ಸಾನ್ನಿಧ್ಯದಲ್ಲಿ ಸತಿಪತಿಗಳಾಗಿದ್ದು ತಿಳಿಯಿತು. ಅಲ್ಲಿಂದಲೇ ಫೋನ್ ಮಾಡಿದ ಗಂಡನ ಖುಷಿಗೆ ನಾವೇ ಹೊಸದಾಗಿ ಮದುವೆಯಾದವರಂತೆ ಸಂಭ್ರಮ ಪಟ್ಟೆವು..!
***
‘ಮೇಡಂ, ನಂಗೆ ಮೂತ್ರ ಮಾಡುವಾಗ ಉರಿಯಾತದೆ. ‘ಅಲ್ಲಿ’ ನೋವಾತದೆ. ಇಲ್ಲಿ ಗಾಯ ಆಗದೆ, ಇಲ್ಲೆಲ್ಲ ತುರುಸ್ತದೆ.’
ಈಗ ೧೩-೧೪ ವರ್ಷ ಇರಬಹುದಾದ ಸೊಂಟಕ್ಕೆ ಎರಡು ವರ್ಷದ ತಂಗಿಯನ್ನು ಚಚ್ಚಿಕೊಂಡಿದ್ದ ಆ ಪೋರಿ ಸಣ್ಣ ದನಿಯಲ್ಲಿ ತಾನು ಹೇಳಿದ್ದು ತನಗೇ ಕೇಳಬಾರದು ಹಾಗೆ ಹೇಳುತ್ತಿದ್ದಳು. ಖಾಸಗಿತನ ಹಾಗೂ ಸಂಕೋಚ ಅತಿ ಹೆಚ್ಚಿರುವ ಹದಿಹರೆಯದ ಎಳವೆಯ ಹುಡುಗಿ, ನೋವು ಮತ್ತು ಭಯವನ್ನು ತನ್ನ ಮುಖದಲ್ಲಿ ಹೊತ್ತು ತನ್ನ ಗುಪ್ತ ಅಂಗಾಂಗಗಳ ಬಗೆಗೇ ಹೇಳುತ್ತಿದೆ! ಶಾಲೆಗೆ ಹೋಗಿದ್ದರೆ ಈ ಬಾರಿ ಎಂಟನೆತ್ತೆ ಆಗಬೇಕಿದ್ದ ಇನ್ನೂ ಮುಟ್ಟಾಗದ ಹುಡುಗಿ ಅದು.
ಅವಳನ್ನು ನಾನು ಬಲ್ಲೆ. ಅವಳ ಅಮ್ಮ ಹೃದ್ರೋಗಿ ಆಗಿದ್ದರೂ, ‘ಮತ್ತೆ ಹೆರುವುದು ನಿನ್ನ ಜೀವಕ್ಕೆ ಅಪಾಯ’ವೆಂದು ವೈದ್ಯರು ಹೇಳಿದ್ದರೂ, ಒಂದಾದ ಮೇಲೊಂದರಂತೆ ಐದು ಹೆಣ್ಣು ಹೆತ್ತು ಹೆತ್ತು, ಕೊನೆಗೆ ಐದನೇ ಬಾಣಂತನದಲ್ಲಿ ಈಗ್ಗೆ ಒಂದು ವರ್ಷದ ಕೆಳಗೆ ತೀರಿಹೋಗಿದ್ದಳು. ಅವಳ ಗಂಡ ಬಂದವನು ‘ಮನೇಲಿ ಈಗ ಯಾರಿಲ್ಲ, ಕೆಲಸಕ್ಕೂ ಈ ಮಕ್ಕಳನ್ನು ಬಿಟ್ಟು ಹೋಗಲಾಗುವುದಿಲ್ಲ, ನಾನೇ ಅಡಿಗೆ ಎಲ್ಲ ಮಾಡುವುದು’ ಎಂದಾಗ ಅಚ್ಚರಿಗೊಂಡಿದ್ದೆ. ಕೇರಿಯ ಮೇಲೆ ಉಳಿದವರಾರಿಗೂ ಅವರ ಮೇಲೆ ಸದಭಿಪ್ರಾಯವಿರಲಿಲ್ಲ. ಗಾಳಿ ಬಂದರೆ ಹಾರಿಹೋಗುವಂತಿದ್ದ ಕುಡುಕ ಗಂಡನನ್ನು ಕಟ್ಟಿಕೊಂಡು ಅವಳು ಹೇಗಾದರೂ ಜೀವನ ನಿಭಾಯಿಸಿಯಾಳು ಎಂದು ನಾನು ಅಚ್ಚರಿಪಡುವಾಗ, ಅವಳ ನಿಗೂಢ ನಡತೆಯ ಬಗ್ಗೆ ಹಾಗೂ ಅವಳಿಗೆ ಸಿಗುವ ಹಣದ ಮೂಲದ ಬಗ್ಗೆ ಆಚೆ ಕೇರಿಯ ಜನ ಬೇರೆ ಬೇರೆ ಕತೆ ಹೇಳಿದ್ದರು. ಅವಳನ್ನು ನೋಡಿದರೆ, ಮಾತು ಕೇಳಿದರೆ, ಹಾಗೆನಿಸುವಂತಿರಲಿಲ್ಲ. ಯಾವ ಒತ್ತಡವೋ, ಏನು ಪರಿಸ್ಥಿತಿಯೋ ಎಂದು ನಾನು ಅವಳ ನಡತೆ, ಹಣಮೂಲ ಅವ್ಯಾವುದರ ಬಗೆಗೂ ಯೋಚಿಸದೇ ಅವಳ ಹೃದಯದ ಕಾಯಿಲೆ, ಸಂತಾನ ನಿಯಂತ್ರಣ, ದೈಹಿಕ ಆರೋಗ್ಯ ಇವುಗಳ ಬಗೆಗೇ ಹೇಳಿಕೇಳಿ ಮಾಡುತ್ತಿದ್ದೆ. ಅಂತೂ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುತ್ತೀನೆಂದು ಅವಳು ಒಪ್ಪುವ ಹೊತ್ತಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಅವಳಿಗೆ ತೀವ್ರವಾದ ಹೃದ್ರೋಗ ಹಾಗೂ ರಕ್ತಹೀನತೆ ಇರುವುದರಿಂದ ಆಪರೇಶನ್ ಮಾಡಲಾಗದೆಂದು ವಾಪಸು ಕಳಿಸಿದ್ದರು. ಇಂತಿರುವಾಗ ಹೆರುವ, ನಿಭಾಯಿಸುವ ಈ ಜಂಜಾಟಗಳಾವುವೂ ಬೇಡವೆಂಬ ಹಾಗೆ ಕೊನೇ ಬಾಣಂತನದಲ್ಲಿ ತೀರಿಹೋಗಿದ್ದಳು.
ಈಗ ಅವಳ ಗಂಡನಿಗೆ ಮತ್ತಾರು ಹೆಣ್ಣು ಕೊಡುತ್ತಾರೆ? ಆಗಲೇ ಏಳು ಕಲಿಯುತ್ತಿದ್ದ ಹಿರಿಯ ಹುಡುಗಿಯನ್ನು ಅವನು ಶಾಲೆ ಬಿಡಿಸಿದ್ದು. ಸಣ್ಣ ಮಗುವಿನ ಜವಾಬ್ದಾರಿ, ತಂಗಿಯರನ್ನು ಶಾಲೆಗೆ ಕಳಿಸುವುದು, ತಿಳಿದಷ್ಟು ಅಡಿಗೆ ಅಪ್ಪನ ಜೊತೆ ಮಾಡುವುದು, ಬಟ್ಟೆ ತೊಳೆಯುವುದು ಎಲ್ಲವನ್ನು ಮಾಡುತ್ತಿದ್ದ ಅವಳು ಪದೇಪದೇ ಆಸ್ಪತ್ರೆಗೆ ಬರುತ್ತಿದ್ದಳು. ಆ ಪುಟ್ಟ ಹುಡುಗಿಗೆ ವಯಸ್ಸಿಗೆ ಮೀರಿದ ಜವಾಬ್ದಾರಿಯಿಂದ ನಲುಗಿ ಹೋಗುತ್ತಿದೆಯೆನ್ನುವುದು ನಗೆಯಿಲ್ಲದ ಅದರ ಮುಖಭಾವದಲ್ಲೇ ತೋರಿ ಒಂಥರಾ ಸಂಕಟವಾದರೂ ಅವರ ಸಮಸ್ಯೆಗೆ ಪರಿಹಾರ ಅಷ್ಟು ಸರಳವಿರಲಿಲ್ಲ. ಅದು ಕಾಲದ ಸೊತ್ತಾಗಿತ್ತು.
ಹೀಗೇ ಸಂಸಾರದ ಚಕ್ರ ಎಳೆಯುತ್ತಿದ್ದ ಅವರು ತಮ್ಮ ಕಷ್ಟಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಹಾಗೆ ತೋರಲಿಲ್ಲ. ತೀರ ನಿಸ್ಸಹಾಯಕವಾದ ಮೇಲೆ ಮತ್ತೆ ಮಾಡುವುದಾದರೂ ಏನು? ನಮ್ಮ ಹಣೆಬರಹ ಎಂದು ಕೈಚೆಲ್ಲಿ ಜೀವವಿದ್ದದ್ದಕ್ಕೆ ಬದುಕುತ್ತಾ ಹೋಗುವುದು. ಹೊಟ್ಟೆಯೊಂದು ಹೇಗಾದರೂ ತುಂಬಿದರೆ ಪರಮ ತೃಪ್ತರು ಅವರು. ಅವಳು ನನ್ನ ಬಳಿ ಬಂದಾಗ ನಾಲ್ಕು ಒಳ್ಳೆಯ ಮಾತು ಹೇಳಿ ನನ್ನ ಕೈಲಾದ ಸಹಾಯ ಮಾಡುವುದಲ್ಲದೇ ಮತ್ತಾವುದೂ ಉಪಯೋಗಕ್ಕೆ ಬರುವಂತಿರಲಿಲ್ಲ. ಒಣ ಅನುಕಂಪದಿಂದ ಯಾವ ಲಾಭವೂ ಇಲ್ಲ. ಅವಳನ್ನು ಖುಷಿ ಪಡಿಸಲೋ ಎಂಬಂತೆ ಅವಳ ಅಪ್ಪ ಅವಳಿಗೆ ಒಳ್ಳೊಳ್ಳೆಯ ಬಟ್ಟೆ ಬರೆ, ಬಳೆ, ಚಪ್ಪಲಿ ಕೊಡಿಸುತ್ತಿದ್ದ ಎಂದು ತೋರುತ್ತದೆ. ಮೊದಲಿಗಿಂತ ಶಿಸ್ತಾಗಿ ಬರುತ್ತಿದ್ದಳು.
ಈಗ ಆ ಹುಡುಗಿ ಹೀಗೆ ಹೇಳುತ್ತಿದೆಯಲ್ಲ, ಏನಾಗಿದೆ ನೋಡೋಣವೆಂದು ಒಳಗೆ ಕರೆದೆ. ಅವಳ ಖಾಸಗಿ ಅಂಗಾಂಗಗಳೆಲ್ಲ ಗಾಯಗೊಂಡಂತಿದ್ದವು..! ಚರ್ಮ ಸುಲಿದು ಕೆಂಪಾಗಿ ದಾಸವಾಳದ ಎಸಳಿನ ಹಾಗೆ ತೋರುತ್ತಿತ್ತು. ಬಲವಂತದ ಲೈಂಗಿಕ ಕ್ರಿಯೆಯ ಪರಿಣಾಮ ಅದು ಎಂದು ತಿಳಿಯಲು ಯಾವ ನಿಪುಣ ವೈದ್ಯರಾಗಬೇಕಿಲ್ಲ, ಕಾಮನ್‌ಸೆನ್ಸ್ ಇರುವ ಯಾರಿಗೂ ತಿಳಿಯುವಂತಿತ್ತು. ಸುಮ್ಮಸುಮ್ಮನೇ ಒದ್ದೆ ಬಟ್ಟೆಯನ್ನುಟ್ಟೋ, ಸ್ವಚ್ಛತೆಯಿಲ್ಲದೆಯೋ ಆಗುವ ಸೋಂಕು ಅದಲ್ಲ. ಬಲಾತ್ಕಾರವೇ ಕಾರಣವೆಂದು ಮತ್ತೆಮತ್ತೆ ಅನಿಸಿ ಅಯಾಚಿತವಾಗಿ ನನ್ನ ಕಣ್ಣು ತುಂಬಿಬಂದವು. ಬಡವರಿಗೆ ಬದುಕು ಎಷ್ಟು ಕ್ರೂರಿಯಾಗಬಲ್ಲುದು!? ಆ ಮುಗ್ಧ ಹುಡುಗಿಯಾದರೂ ತನಗಾಗುವ ನೋವಿನ ಬಗ್ಗೆ ಹೇಳಿದಳೇ ಹೊರತು ಅದಕ್ಕೆ ಕಾರಣವೇನೆಂದು ಬಾಯಿಬಿಡಲಿಲ್ಲ. ನನ್ನ ಧೈರ್ಯದ ಮಾತುಗಳಾವುವೂ ಅವಳ ದನಿಗೆ ಜೀವ ತುಂಬಲಿಲ್ಲ.
ಹೆಂಡತಿ ಸತ್ತಿರುವ ಅವಳ ಅಪ್ಪನ ಕೆಲಸವೇ ಇದು? ಅಥವಾ ಹಣಕ್ಕಾಗಿ ಈ ಸಣ್ಣ ಹುಡುಗಿಯನ್ನು ಬಳಸಿಕೊಂಡು ಬೇರೆ ದಂಧೆ ನಡೆಸುತ್ತಿದ್ದಾನೆಯೇ? ಈ ಹುಡುಗಿಯಾದರೂ ಯಾಕೆ ಪ್ರತಿರೋಧ ತೋರಬಾರದು? ಅವಳಿಗೆ ಸಣ್ಣಪುಟ್ಟ ವಸ್ತುಗಳ ಆಮಿಷವೊಡ್ಡಿ ಹೀಗೆ ಮಾಡುತ್ತಿದ್ದಾನೆಯೋ ಅಥವಾ ಅವಳಿಗೂ ತಾನು ಕುಡಿಯುವಾಗ ಒಂದು ಕೊಟ್ಟೆ ಸಾರಾಯಿ ಕುಡಿಸಿ ಅವಳಿಗೇ ಗೊತ್ತಿಲ್ಲದಂತೆ ಇದನ್ನೆಲ್ಲ ನಡೆಸುತ್ತಿದ್ದಾನೆಯೋ? ಅಥವಾ ಇದೆಲ್ಲ ನನ್ನ ಅತಿ ಕಲ್ಪನೆಯೋ? ಆದರೆ ಕಲ್ಪನೆಯಿರಬಹುದೆಂದು ನನ್ನ ಮನಸ್ಸು ಒಪ್ಪಲು ತಯಾರಿರಲಿಲ್ಲ. ಈ ಹುಡುಗಿಯನ್ನು ಹೇಗಾದರೂ ಪಾರು ಮಾಡಬೇಕು. ಇಲ್ಲದಿದ್ದರೆ ಅರಳುವುದರೊಳಗೆ ಈ ಮೊಗ್ಗು ಒಣಗಿಹೋಗುವುದು ನಿಸ್ಸಂಶಯ. ಹೆಚ್ಚು ಸಂಬಳದ ಆಮಿಷವೊಡ್ಡಿ ನಮ್ಮಲ್ಲೇ ಕೆಲಸಕ್ಕೆ ಉಳಿಸು ಎಂದು ಹೇಳಿದರೆ? ಒಪ್ಪದಿದ್ದರೆ ಅವಳಪ್ಪನಿಗೆ ಹೆದರಿಸಬೇಕು, ಮತ್ತೊಂದು ಮದುವೆಯಾಗೆಂದು ಸೂಚಿಸಬೇಕು, ಇಲ್ಲದಿದ್ದರೆ ಅವನ ಉಳಿದ ನಾಲ್ಕು ಹೆಣ್ಣುಗಳಿಗೂ ಸಾಲಾಗಿ ಇದೇ ಗತಿ ಬರುವುದು ನಿಶ್ಚಿತ...
ಹೀಗೇ ಏನೇನೋ ಯೋಚಿಸಿಕೊಂಡು ಅವಳ ಅಪ್ಪನನ್ನು ಒಳಕರೆಸಿದೆ. ಅವನಾದರೋ ಅತಿವಿನಯ ಪ್ರದರ್ಶಿಸುತ್ತ, ಕೈಕೈ ಮುಗಿಯುತ್ತಾ, ನಾನು ಹೇಳಿದ್ದನ್ನಾವುದನ್ನೂ ಕೇಳಿಸಿಕೊಳ್ಳದೇ, ಬರೇ ಧೂರ್ತನ ಹಾಗೆ ನಗಾಡಿ ಏನೇನೋ ಬಡಬಡಿಸಿ ಹೋಗಿದ್ದ.
ಇಷ್ಟೆಲ್ಲ ಆದದ್ದೇ ನಾನು ಅವರನ್ನು ಮತ್ತೆ ನೋಡಲೇ ಇಲ್ಲ. ನನ್ನ ಬಳಿ ಮಾತ್ರ ಬರುತ್ತಿಲ್ಲವೆಂದುಕೊಂಡಿದ್ದೆ, ಇಲ್ಲ, ಅವರು ಆ ಊರನ್ನೇ ಬಿಟ್ಟು ಕೂಲಿ ಕೆಲಸಕ್ಕೆಂದು ಪಟ್ಟಣಕ್ಕೆ ಹೋದರೆಂದು ನಂತರ ತಿಳಿಯಿತು. ‘ಆ ಹುಡುಗಿಗಾದ್ರೂ ಏನ್ ಸೊಕ್ಕು ಬಂದದ್ರೋ ಅಮಾ. ಹೋಗ್ತಾ ನಮ್ಮೊಬ್ರ ಹತ್ರನೂ ಇಂತಾ ಕಡೆ ಹೋಗ್ತೀವಿ ಅಂತ ಹೇಳಿ ಹೋಗಲಿಲ್ಲ. ಅವತ್ತು ಪಾರೆಸ್ಟ್ ಗಾಲ್ಡು ಬಂದವ್ನು ಅವ್ರ ಗುಡ್ಲು ಇದ್ದ ಜಾಗ ಖಾಲಿ ಮಾಡ್ಬೇಕು, ಅದು ಅವ್ರ ಜಾಗ ಅಲ್ಲ ಅಂತ ಗಲಾಟೆ ಮಾಡಿಹೋಗಿದ್ದ. ಅದ್ಕೇ ಊರು ಬಿಟ್ಟು ಹೋದ್ರೋ, ಎಂತಾಯ್ತೋ ಅಂತೂ ಯಾರ್ಗೂ ಹೇಳ್ದ ಪರಿ ಸಾಮಾನೆಲ್ಲ ತಗಂಡ್ ಹೋಗಾರೆ. ಸಾಮಾನಾದ್ರೂ ಎಂತ ಇತ್ರಾ ಅಮಾ ಆ ಮನೇಲಿ? ಎಲ್ಲ ಒಂದ್ ಚಾದರದಾಗೆ ಸುತ್ಕಂಡ್ ಅದರಪ್ಪ ತಲೆಮೇಲೆ ಇಟ್ಕ ಹೋಗಾನಪ್ಪ. ಸಾಮಾನು ಅಂದ್ರೆ ಆ ಐದು ಮಕ್ಕಳೇ....’
ನನ್ನ ತನಿಖೆಗೆ ಹೆದರಿ ಅವನು ಊರು ಬಿಡಲಿಲ್ಲವಷ್ಟೇ?
***
ಪ್ರೇಮ ಕಾಮಗಳೆಂಬ ನೈಸರ್ಗಿಕ ಆನಂದ ಹೊಂದಲು ಏನೇನೆಲ್ಲ ದಾರಿಗಳು! ಯಾವ್ಯಾವ ಅಡೆತಡೆಗಳು!
ಮೇಲಿನ ಘಟನೆಗಳೆಲ್ಲವೂ ನಿಮ್ಮ ಮನದ ಕ್ಯಾನ್ವಾಸಿನಲ್ಲಿ ತನ್ನಷ್ಟಕ್ಕೆ ತಾನೇ ಅನೇಕ ಬಣ್ಣಗಳ ಚಿತ್ತಾರ ಮೂಡಿಸಿರುವಾಗ ಯಾವ ವಿವರಣೆಯೂ, ಚೌಕಟ್ಟೂ, ವಿಶ್ಲೇಷಣೆಯೂ ಅಗತ್ಯವಿಲ್ಲ ಎಂದೇ ಎನಿಸುತ್ತಿದೆ...
No comments:
Post a Comment