Thursday, 12 June 2014

ಕಡಲ ಕರುಣೆಗಾಗಿ ಕಾಯುತ್ತಾ..


nature, looking, sea, man, wallpapers

 ನಾವಿಕರೆ, ಸಾಗರದ ನಿಯಮ ಇದು. ನಿಮಗೆ ಸ್ವಾತಂತ್ರ್ಯ ಬೇಕಿದ್ದರೆ ನೀವೂ ಆವಿಯಾಗಲೇಬೇಕು.’
                                                                                                           - ಖಲೀಲ್ ಗಿಬ್ರಾನ್ 

   ಪ್ರಕೃತಿಗಿಂತ ದೊಡ್ಡ ಗುರು ಇಲ್ಲ. ಜನನಿಬಿಡ ನಗರಗಳಲ್ಲಿ ಬದುಕುವವರಿಗಿಂತ ತಮ್ಮ ಸುತ್ತ ರಮ್ಯ, ರುದ್ರ ಪ್ರಕೃತಿ ಇರುವವರು ಭಿನ್ನವಾಗಿರುತ್ತಾರೆ. ನದಿ, ಗುಡ್ಡದ ಸೆರಗು, ಕಡಲು, ದ್ವೀಪಗಳಲ್ಲಿ ಬದುಕುವ ಜನ ವಿನೀತರೂ, ಆತ್ಮಗೌರವವುಳ್ಳವರೂ, ಆಶಾಭಾವನೆಯುಳ್ಳವರೂ ಆಗಿರುತ್ತಾರೆ ಎಂದು ಛಕ್ಕನೆ ಹೊಳೆದಿದ್ದು ಆ ನಡುಮಧ್ಯಾಹ್ನ..

   ನಮ್ಮ ನಾಗರಿಕ ಚುರುಕಿನ ಸೊಕ್ಕನ್ನು ಅಂಡಮಾನ್ ಇಳಿಸತೊಡಗಿತ್ತು. ಉತ್ತರ ಅಂಡಮಾನಿನ ದಿಗ್ಲಿಪುರದ ಏರಿಯಲ್ ಬೇ ಜೆಟ್ಟಿಯಲ್ಲಿ ರಾಸ್ ಮತ್ತು ಸ್ಮಿತ್ ದ್ವೀಪಗಳಿಗೆ ಹೋಗುವ ಬೋಟಿಗಾಗಿ ಮೂರ‍್ನಾಲ್ಕು ತಾಸಿನಿಂದ ಕಾಯುತ್ತಿದ್ದೆವು. ಕಾದುಕಾದು ಬಿಸಿಲು ತಡೆಯಲಾಗದೇ ಮಕ್ಕಳು ಗೊಣಗುಟ್ಟಲು ಶುರು ಮಾಡಿದ್ದರು. ಒಬ್ಬೊಬ್ಬರೂ ನಾಲ್ಕಾರು ಎಳನೀರು ಕುಡಿದು ಕಾಯುತ್ತಿರುವಾಗ ವಯಸ್ಸಾದ ಮಹಿಳೆ ಕಣ್ಣಿಗೆ ಬಿದ್ದಳು. ಅಲ್ಲೇ ಅತ್ತ ಇದ್ದ ಬಂದರಿನ ಗುಜರಿಯಲ್ಲಿ ಏನನ್ನೋ ಅರಸುತ್ತಿದ್ದವಳು ಒಡೆದ ಪ್ಲಾಸ್ಟಿಕ್ ಕ್ಯಾನ್ ಆಯ್ದು ತಂದಳು. ಜೆಟ್ಟಿಯ ವೆಯಿಟಿಂಗ್ ರೂಮ್ ಪಕ್ಕ ಪಾಚಿಗಟ್ಟಿದ ಸಿಮೆಂಟು ಟ್ಯಾಂಕಿನಿಂದ ನೀರೆತ್ತಿ, ಟ್ಯಾಂಕಿನ ಪಕ್ಕದ ಒಡಕು ಕಟ್ಟೆಯ ಮೇಲೆ ತುದಿಗಾಲಲ್ಲಿ ಕುಳಿತು ಷರ್ಟ್ ಕುಕ್ಕುತ್ತಿದ್ದಳು. ಒಡಕು ಕ್ಯಾನಿನ ನೀರು ಸೋರುತ್ತಿತ್ತು. ಚೌಕಾಸಿ ಮಾಡಿ ನೀರು ಬಳಸಿ ಕೊಳಕಾದ ಷರ್ಟ್, ಒಂದು ಸೀರೆ, ಲಂಗ ಎಲ್ಲ ತೊಳೆದು ಗುಜರಿ ಮೇಲೇ ಹರುವಿದಳು. ನಾವು ನೋಡನೋಡುತ್ತಿದ್ದಂತೆ ತನ್ನ ತಲೆ ಮೇಲೆ ಎರಡು ಕ್ಯಾನು ನೀರು ಸುರುವಿಕೊಂಡಳು. ಬಿಳಿಗೂದಲ ಪುಟ್ಟ ಗಂಟನ್ನೂ, ಸೀರೆಯನ್ನೂ ಬಿಚ್ಚದೇ ಸ್ನಾನವಾಯಿತು. ದೋಣಿ ಕಾಯುವ ನಾಲ್ಕಾರು ಜನ ಬಿಟ್ಟು ಜೆಟ್ಟಿಯಲ್ಲಿ ಮತ್ತಾರಿಲ್ಲದ್ದನ್ನು ಖಚಿತಪಡಿಸಿಕೊಂಡು ಬ್ಲೌಸು ಬಿಚ್ಚಿದಳು. ಸೀರೆ ಉಟ್ಟಂತೇ ಒಳಲಂಗ ಕೆಳಗೆ ಬಂದು ಒಗೆಸಿಕೊಂಡಿತು. ಬಾರ್‌ಸೋಪಿನಲ್ಲಿ ಮೈತಿಕ್ಕಿದಳು. ಚಂಡಮಾರುತದ ಕಾರಣದಿಂದ ಅಂಡಮಾನಿನ ಹೋಟೆಲಲ್ಲಿ ಕರೆಂಟಿರದೇ, ಬಿಸಿನೀರು ಸಿಗದೇ ಕೊರಗುತ್ತ ಮೀಯುತ್ತಿದ್ದ ನಮಗೆ ಅವಳ ಸರಳ ಸ್ನಾನ ಪಾಠ ಹೇಳತೊಡಗಿತ್ತು.

   ಬಿಸಿಲು ಕಾಯಿಸುತ್ತ ತಾನೂ ಬಟ್ಟೆ ಜೊತೆ ಒಣಗುತ್ತ ನಿಂತವಳನ್ನು ಮಾತನಾಡಿಸದೇ ಇರಲು ಸಾಧ್ಯವಾಗಲಿಲ್ಲ. ಮೆಲ್ಲ ಆಕೆಯ ಬಳಿ ಹೋದೆ. ಸ್ಪಷ್ಟವಾಗಿ ಆದರೆ ನಿಧಾನವಾಗಿ ಹಿಂದಿಯಲ್ಲಿ ಮಾತನಾಡಿದಳು. ೧೯೪೭. ಭಾರತ ವಿಭಜನೆಯ ಹೊತ್ತಿನಲ್ಲಿ ಬಂಗಾಳ ಬಿಟ್ಟ ಎಳೆಯ ಹುಡುಗಿ ಅವಳು. ಆಗ ಶಾಲೆ ಕಲಿಯಲಿಲ್ಲ. ಈಗ ಸಹಿಮಾಡಬಲ್ಲಳು. ಅವಳ ಕುಟುಂಬದಂತೆಯೇ ಸಾವಿರಾರು ಪೂರ್ವ ಪಾಕಿಸ್ತಾನದ ಗ್ರಾಮಸ್ಥರು ಕಲಕತ್ತಾಗೆ ಬಂದಾಗ ಭಾರತ ಸರ್ಕಾರ ಉತ್ತರ ಅಂಡಮಾನ್ ದ್ವೀಪಗಳಿಗೆ ಅವರನ್ನು ಕಳಿಸಿತ್ತು. ನೂರಾರು ಗ್ರಾಮಗಳು ಹಳೇ ಹೆಸರಿಟ್ಟುಕೊಂಡು ಹೊಸನೆಲದಲ್ಲಿ ಹುಟ್ಟಿದವು. ಬಂದ ಮೇಲೆ ಒಮ್ಮೆಯೂ ಬಾಂಗ್ಲಾದೇಶಕ್ಕೆ ತಿರುಗಿ ಹೋಗಿಲ್ಲ. ‘ಅಲ್ಯಾರಿದ್ದಾರೆಂದು ಹೋಗುವುದು’ ಎಂದು ಸುಮ್ಮನೆ ಕುಳಿತ ನನ್ನನ್ನೇ ಪ್ರಶ್ನಿಸಿದಳು.

   ಆಕೆಯ ಊರು ಸಾಗರದೀಪ. ಸಾಗರದೀಪ! ಓಹ್, ಎಷ್ಟು ಚಂದದ ಹೆಸರು!!

  ‘ಅಗೋ ಅಲ್ಲಿ ಕಾಣುತ್ತಿದೆಯಲ್ಲ ಅದು ಇಸ್ಮಿತ್ ಐಲ್ಯಾಂಡ್, ಅಲ್ಲೇ ನಾವಿರುವುದು’ ಎಂದು ಕೈತೋರಿ ಸಿಮೆಂಟು ಕಟ್ಟೆಯ ಮೇಲೆ ಕೂತಳು. ಫಳಗುಡುತ್ತಿದ್ದ ಸಾಗರದ ನೀಲನೀರ ನಡುವೆ ದೂರದಲ್ಲಿ ಅವಳ ‘ಇಸ್ಮಿತ್’ ಐಲ್ಯಾಂಡ್ ಹಸಿರಾಗಿ ಕಂಗೊಳಿಸುತ್ತಿತ್ತು. ನಾನೂ ಕಟ್ಟೆಯೇರಿದೆ. ದಿಗ್ಲಿಪುರದ ಏರಿಯಲ್ ಬೇ ಸಣ್ಣ ಊರು. ಅಲ್ಲಿಂದಾಚೆ ಇರುವ ಸ್ಮಿತ್ ದ್ವೀಪದ ಹಳ್ಳಿಯೊಂದರಲ್ಲಿದ್ದ ಆ ಮಾಗಿದ ಜೀವದ ಮಾತು ಕೇಳಲು ಇದುವರೆಗೆ ಜನವೇ ಸಿಕ್ಕಿರಲಿಲ್ಲವೇನೋ ಎಂಬಂತೆ ಅವಸರವಿಲ್ಲದೆ ಒಂದೇ ಸಮ ಮಾತನಾಡತೊಡಗಿದಳು. ಅವಳ ದ್ವೀಪದಲ್ಲಿ ಐದಾರು ಹಳ್ಳಿ ಇವೆ. ಇಲ್ಲಿನ ದ್ವೀಪಗಳಲ್ಲಿ ಹೀಗೇ, ಬಂಗಾಳದಲ್ಲಿದ್ದ ಹಳ್ಳಿಗಳೇ ಇಲ್ಲೂ ಹುಟ್ಟಿಕೊಂಡಿವೆ. ದ್ವೀಪಗಳಲ್ಲಿ ಶಾಲೆ ಇದೆ. ಮೆಡಿಕಲ್ (ಆಸ್ಪತ್ರೆ) ಇದೆ. ‘ನಮಗೂ ಭೂಮಿ ಕೊಟ್ಟಿದಾರೆ. ತೆಂಗು, ಅಡಿಕೆ, ಕಬ್ಬು, ಭತ್ತ ಎಲ್ಲ ಬೆಳೀತೀವಿ. ಇತ್ತೀಚ್ಗೆ ಜಮೀನು ಮಾರಿ ಜನ ದೊಡ್ಡ ಊರ‍್ಗೆ ಹೋಗ್ತಿದಾರೆ. ನಮ್ಮ ದ್ವೀಪದ ಹುಡುಗ್ರು ಶಾಲೆ ಕಲ್ತು ದಿಗ್ಲಿಪುರ, ಕಾಳಿಘಾಟ್, ಮಾಯಾಬಂದರ್ ಅಂತ ಎಲ್ಲೆಲ್ಲೋ ಕೆಲಸ ಮಾಡ್ತಾ ಇದಾರೆ. ಹಳ್ಳೀಲಿರಕ್ಕೆ ಅವ್ರು ಕಬೂಲು ಮಾಡುತ್ತಿಲ್ಲ’ ಎಂದು ಸಣ್ಣ ದನಿಯಲ್ಲಿ ಹೇಳಿ ಮುಂಬಾಗಿ ಯಾರನ್ನೋ ನೋಡಿದಳು.

  ದ್ವೀಪದಲ್ಲಿ ಜಮೀನು ಇರುವಾಕೆ ಇಲ್ಲೇಕೆ ಬಂದು ಬಟ್ಟೆ ತೊಳೆಯುತ್ತಿದ್ದಾಳೆ? ಕೇಳಿದೆ. ಬಗ್ಗಿ ಕೈಮಾಡಿ ತೋರಿದಳು. ಅಲ್ಲಿ ೨೫ರ ಆಸುಪಾಸಿನ ಕೃಶ ಶರೀರಿಯೊಬ್ಬ ದೂರದ ಕಡಲನ್ನು ದಿಟ್ಟಿಸುತ್ತ ವೀಲ್‌ಚೇರಿನ ಮೇಲೆ ಮೌನವಾಗಿ ಕೂತಿದ್ದ. ವೀಲ್‌ಚೇರಿನ ಮೇಲಿರುವನಲ್ಲ ಎಂದು ಮುಖದಲ್ಲೇ ಪ್ರಶ್ನೆಯಾದೆ. ಕಾಯಿಲೆ ಕಸಾಲೆ ಕುರಿತು ಕೇಳಿದ್ದೇ ಕಟ್ಟುಹರಿದುಕೊಳ್ಳುವ ಮಾತಿನ ನದಿಯನ್ನು ಹಲವು ಬಾರಿ ಹಾದಿದ್ದೇನೆ. ಇಲ್ಲೂ ಹಾಗೇ ಆಯಿತು. ಬಿಡದೆ ಬಾಧಿಸುವ ಕಾಯಿಲೆ ಅನುಭವಿಸುವವರು ಎಷ್ಟು ಚಿಂತಿತರಾಗಿರುತ್ತಾರೆ ಎಂದರೆ ಯಾರ ಬಳಿ ಪರಿಹಾರ ಸಿಕ್ಕೀತೆಂದು ಮಿರಾಕಲ್ ಒಂದಕ್ಕೆ ಕಾಯುತ್ತಿರುತ್ತಾರೆ. ಎದುರಿರುವವರು ವೈದ್ಯರೋ ಅಲ್ಲವೋ, ಸೂಚಿಸುವ ಪರಿಹಾರವನ್ನು ನಂಬಲು ಸಿದ್ಧವಾಗಿರುತ್ತಾರೆ. ಅಂಥ ಅಸಹಾಯಕ ಘಳಿಗೆಗಳಲ್ಲಿ ಆಪ್ತದನಿಯ ಎರಡು ಮಾತು ಏನೋ ಸಂತೈಕೆ ನೀಡುತ್ತದೆ.

   ಅವನು ಆಕೆಯ ಒಬ್ಬನೇ ಮಗ. ಏಳು ವರ್ಷಗಳ ಕೆಳಗೆ ತೆಂಗಿನಮರ ಹತ್ತಿ ಕಾಯಿ ಕೊಯಿಲು ಮಾಡುತ್ತಿದ್ದವ ಕೆಳಗೆ ಬಿದ್ದ. ದಿಗ್ಲಿಪುರದ ಆಸ್ಪತ್ರೆಗೆ ಸೇರಿಸಿ ಮನೆ ಆಸ್ಪತ್ರೆ ಎಂದು ತಿಂಗಳುಗಟ್ಟಲೆ ತಿರುಗಾಡಿದ್ದಳು. ಏನು ಚಿಕಿತ್ಸೆ ನೀಡಿದರೂ ಸೊಂಟದ ಕೆಳಗೆ ಸ್ವಾಧೀನವಿಲ್ಲ. ಈಗ ವೀಲ್‌ಚೇರ್, ಬಿಟ್ಟರೆ ಹಾಸಿಗೆ. ಉದ್ಯೋಗವಿಲ್ಲ, ತಿರುಗಾಟವಿಲ್ಲ. ಇಡಿಯ ದಿನ ಬೀಡಿ ಎಳೆಯುವುದೇ ಕೆಲಸ ಎಂದು ನೊಂದಳು. ಗಂಡ ಎಂದು ಅಸ್ಪಷ್ಟವಾಗಿ ಏನೋ ಹೇಳಿದಳು. ನಾನೂ ಕೆದಕಲಿಲ್ಲ.

   ಮಲಗಿಮಲಗಿ, ಕೂತುಕೂತು ಬೆನ್ನು ಕುಂಡೆಯ ಮೇಲೆಲ್ಲ ಬೆಡ್‌ಸೋರ್ ಆಗಿದೆ. ಅದರ ಚಿಕಿತ್ಸೆಗೆ ಆಗೀಗ ದಿಗ್ಲಿಪುರಕ್ಕೆ ಕರೆತರಬೇಕಂತೆ. ನಿನ್ನೆ ಡಾಕ್ಟರು ಅವನನ್ನು ನೋಡಿ ಏನು ಹೇಳಿದರು ಎಂದು ಕೇಳಿದೆ. ಇನ್ನು ಹೆಚ್ಚೇನೂ ಮಾಡಲಾಗದು, ಅವನಿಗೆ ಕಾಲು ಬರುವುದಿಲ್ಲ ಎಂದು ಖಂಡಿತ ಹೇಳಿದರಂತೆ. ಏಳು ವರ್ಷದಿಂದ ಚಿಕಿತ್ಸೆಗಾಗಿ ಅಲೆದರೂ ಮಗನಿಗೆ ಕಾಲು ಬಂದಿಲ್ಲವೆಂದೂ, ಹರಿದ್ವಾರಕ್ಕೆ ಬಾಬಾ ರಾಮದೇವ್ ಬಳಿ ಹೋಗುವ ಮನಸಾಗಿದೆಯೆಂದೂ ಹೇಳಿದಳು. ಡಾಕ್ಟರೂ ಮೊದಲು ಆ ಕೆಲಸ ಮಾಡು ಎಂದರಂತೆ. ಅವರು ಯಾವ ಭಾವದಲ್ಲಿ ಹೇಳಿದ್ದರೋ, ಈಕೆ ಅವರು ಉತ್ತೇಜಿಸಿದರೆಂದು ನಂಬಿದಂತಿತ್ತು. ತನ್ನ ಜಮೀನನ್ನು ಒಂದು ವರ್ಷ ಗೇಣಿಗೆ ಕೊಟ್ಟು ಒಬ್ಬನೇ ಮಗ ಗುಣವಾದರೆ ಆಗಲಿ ಎಂದು ಹರಿದ್ವಾರಕ್ಕೆ ಹೋಗಿಬರಲು ಉತ್ಸುಕಳಾಗಿದ್ದಳು. ಸ್ವಲ್ಪ ಗುಣವಾದರೆ ಇಲ್ಲಿರುವ ಜಮೀನು ಮಾರಿ ಅಲ್ಲೇ ಹೋಗಿರುವುದು ಎಂದು ಯೋಚಿಸಿದ್ದಳು. ಕಾಯಿಲೆ ಕಷ್ಟ ಕುರಿತು ಹೇಳಹೇಳುತ್ತಲೇ ಹಲವರು ಕಣ್ಣೀರಾಗುತ್ತಾರೆ. ಆದರೆ ಈಕೆ ಮಗನ ಕಾಯಿಲೆ ಕುರಿತು ದುಃಖಗೊಂಡಿದ್ದರೂ ಹತಾಶಳಾಗಿಲ್ಲ. ಅವಳ ಜೀವನೋದ್ದೇಶ ಅವನ ಕಾಯಿಲೆಯನ್ನು ಹೇಗಾದರೂ ಗುಣಪಡಿಸುವುದೇ ಆಗಿದೆ.

   ನಿನ್ನೆ ಬಂದ ಅವರಿಗೆ ತೂಫಾನು ಎದ್ದ ಕಾರಣ ವಾಪಸ್ ಹೋಗಲು ಆಗಿರಲಿಲ್ಲ. ಮುಂಚೆಯೂ ಹೀಗೇ ಒಮ್ಮೆ ಮೂರು ದಿನ ದಿಗ್ಲಿಪುರದಲ್ಲೇ ಉಳಿಯುವಂತಾಗಿತ್ತು. ವೆಯಿಟಿಂಗ್ ರೂಮಿನಲ್ಲಿ ರಾತ್ರಿ ಕಳೆದು ಬೆಳಿಗ್ಗೆಯಿಂದ ಜೆಟ್ಟಿಯಲ್ಲಿದ್ದಾರೆ. ಇಂದು ತಮ್ಮೂರಿನ ದೋಣಿಯವ ಪ್ರವಾಸಿಗಳನ್ನು ಕರೆದೊಯ್ಯಲು ಬಂದಿದ್ದು ಸಂಜೆ ಹಿಂದಿರುಗುವಾಗ ತಮ್ಮನ್ನೂ ಕರೆದೊಯ್ಯುತ್ತಾನೆಂದೂ, ಅದು ಸಾಧ್ಯವಾಗದಿದ್ದರೆ ನಾಳೆ ಹೋಗುವುದೆಂದೂ ತಣ್ಣಗೆ ಹೇಳಿದಳು. ಎಲ್ಲಕ್ಕೂ ಒಂದು ಸರಳ, ಕಾಲಮಿತಿಯಿಲ್ಲದ ಕಾಂಟಿಂಜೆನ್ಸಿ ಪ್ಲಾನ್ ಆಕೆಯ ಬಳಿ ಸಿದ್ಧವಾಗಿದೆ. ದಿನವಿಡೀ ತೂಫಾನು ತಗ್ಗೀತೆಂದು ಕಾದು, ರಾತ್ರಿ ಎಲ್ಲೋ ಮಲಗೆದ್ದು, ಇದ್ದಲ್ಲೇ ಬಟ್ಟೆ ತೊಳೆದು ಮಿಂದು, ಸಂಜೆಗಾಗಿ ಕಾಯುತ್ತಿರುವ ಆ ಅಸಹಾಯಕ ಅಂಗವಿಕಲ ಮಗನ ಅಮ್ಮನ ನಿರುದ್ವಿಗ್ನತೆಯೇ!! ಕಡಲಿನ ಭರತ ಇಳಿತದ ಕಣ್ಣಾಮುಚ್ಚಾಲೆಯಲ್ಲಿ ಬೋಟು ಬರುವುದು ಮೂರು ತಾಸು ತಡವಾಗಿದ್ದಕ್ಕೆ ಒಳಗೊಳಗೇ ಕುದಿಯುತ್ತಿದ್ದ ನಾವು ದಂಗಾದೆವು. ನೆಲದ ಮೇಲಿನ ರಸ್ತೆಗಳಲ್ಲಿ ಸುಂಯ್ಞೆಂದು ತಿರುಗುವ, ಷೆಡ್ಯೂಲಿನ ಪ್ರಕಾರವೇ ಉಸಿರಾಡುವ ಯಂತ್ರಗಳಾದ ನಮ್ಮ ಮುಂದೆ ಕಡಲ ದಯೆಗಾಗಿ ಕಾಯುತ್ತಿರುವ ಆಕೆ ನಿಜಮನುಷ್ಯಳಾಗಿ ಕಂಗೊಳಿಸಿದಳು.

   ಸಣ್ಣಪುಟ್ಟ ತೊಂದರೆ ತಾಪತ್ರಯ ಎದುರಾದರೆ ಜೀವನವೇ ಬೇಜಾರು ಎಂದು ಗೊಣಗುಟ್ಟುವವರನ್ನು, ಪ್ರಾಣ ಬಿಡುವವರನ್ನು ನೋಡುತ್ತೇವೆ. ಹಾಗಿರುತ್ತ ಈಕೆಗೆ ಈ ಬದುಕಿನ ಬಗೆಗೆ ಯಾವ ನಿರೀಕ್ಷೆಯಿರಬಹುದು? ಮತ್ತೆ ಮಕ್ಕಳಿಲ್ಲ, ಸಂಸಾರವಿಲ್ಲ. ಒಂದಲ್ಲ ಒಂದು ದಿನ ಎಲ್ಲವೂ ಸರಿಹೋಗುವ ಯಾವ ಭರವಸೆಯೂ ಇಲ್ಲ. ತನಗಿಂತ ಎಳೆ ಪ್ರಾಯದ, ಬಿದ್ದು ಹೆಳವನಾಗಿರುವ ಅಸಹಾಯಕ ಮಗನ ಸೇವೆಗಾಗಿಯೇ ಬದುಕಿದ್ದಾಳೆ. ಹಣ್ಣಾಗಿರುವ ಆಕೆಗೆ ತನ್ನ ದೇಹದ ಕಾಳಜಿಯಿಲ್ಲ. ವಯಸ್ಸಿನ ಕಾಳಜಿಯೂ ಇಲ್ಲ. ತನ್ನ ನಂತರ ಮಗ ಏನು ಮಾಡಿಯಾನೆಂಬ ಕಾಳಜಿಗೆ ಹರಿದ್ವಾರಕ್ಕೆ ಹೋಗಲು ತಯಾರಾಗಿದ್ದಾಳೆ. ಎಲ್ಲಿಯ ಅಂಡಮಾನಿನ, ದಿಗ್ಲಿಪುರದ, ಸ್ಮಿತ್ ಐಲೆಂಡಿನ, ಸಾಗರದೀಪ? ಎಲ್ಲಿಯ ಹರಿದ್ವಾರ?

   ದೇವರೇ, ನೀನಿರುವೆಯಾದರೆ ಇಂಥವರ ಆತ್ಮವಿಶ್ವಾಸದಲ್ಲಿಯೇ ಇರಬೇಕು..

   ನಾವು ಜೆಟ್ಟಿ ಬಿಡುವ ಸಮಯ ಬಂತು. ಬೀಳ್ಕೊಡುವ ಎಂದು ಆಕೆಯ ಕಡೆ ತಿರುಗಿದರೆ ಅಲೆಗಳನ್ನೇ ಗಮನಿಸುತ್ತಾ ಕುಳಿತಿದ್ದಳು. ಸುಕ್ಕುಗಳ ನಡುವೆ ಹೊಳೆಯುತ್ತಿದ್ದ ಕಣ್ಣುಗಳು ಸಾಗರವನ್ನೇ ಪ್ರತಿಫಲಿಸುತ್ತಿದ್ದವು. ಜಗತ್ತು ವಿಶಾಲವಾಗಿದೆ, ಬದುಕಲು ನೂರು ದಾರಿಯಿದೆ, ಆಚೆ ತೀರ ಒಂದು ಇದ್ದೇ ಇದೆ ಎಂದು ಕಡಲು ಕಲಿಸಿದ ಪಾಠವನ್ನು ವಲಸೆ ಬದುಕಿನ ಕಷ್ಟಗಳು ಅವಳಿಗೆ ಮನದಟ್ಟು ಮಾಡಿಕೊಟ್ಟಿದ್ದವು.

   ಅವಳ ಹೆಸರೂ ಕೇಳಲಿಲ್ಲ. ಕೈಯಲ್ಲಿದ್ದ ಕ್ಯಾಮೆರಾಕ್ಕೆ ಅಂಡಮಾನನ್ನೇ ತುಂಬಿಕೊಳ್ಳುವ ಹುಂಬ ವಿಶ್ವಾಸವಿದ್ದರೂ ಫೋಟೋ ತೆಗೆಯಬೇಕೆನಿಸಲಿಲ್ಲ. ಇನ್ನು ಯಾವತ್ತೂ ನಾವು ಭೇಟಿಯಾಗಲಿಕ್ಕಿಲ್ಲ. ಯಾಕೋ ಈ ಬದುಕು, ಅದರ ಘನ ಉದ್ದೇಶಗಳ ಕುರಿತು ನಾವಾಡುವ ಮಾತುಗಳೆಲ್ಲ ಈ ಮಹಿಳೆಯ ಎದುರು, ಅಂಡಮಾನಿನ ಕಡಲಿನ ಎದುರು, ಬಟ್ಟೆಯನ್ನೇ ಜರೆಯುವ ನಗ್ನ ಆದಿವಾಸಿಗಳ ಎದುರು ನಿಸ್ತೇಜವಾಗಿ ಕಾಣತೊಡಗಿತು..

(ಲಡಾಯಿ ಪ್ರಕಾಶನ ಇತ್ತೀಚೆಗೆ ಪ್ರಕಟಿಸಿರುವ ‘ಅಂಡಮಾನ್: ಕಂಡಹಾಗೆ’ ಪುಸ್ತಕದಿಂದ)
No comments:

Post a Comment