Saturday 28 June 2014

ದೇವರ ಸ್ವಂತ ರಾಜ್ಯದೊಳಗೊಂದು ಸುತ್ತು..



ಮತ್ಸ್ಯಗಂಧಿಯರ ಪಾಡು 



ಕೇರಳ. ಆಹಾ! ಇದು ದೇವರ ರಾಜ್ಯವೇ ಇರಬೇಕು..

ಪ್ರತಿ ಸಾವಿರ ಗಂಡಿಗೆ ಸಾವಿರದ ಇಪ್ಪತ್ತು ಹೆಣ್ಣುಗಳಿರುವ ಅಪರೂಪದ ರಾಜ್ಯ. ಅರ್ಧ ಜನಸಂಖ್ಯೆಗಿಂತ ಹೆಚ್ಚು ಹೆಣ್ಣುಮಕ್ಕಳಿರುವುದರಿಂದ ಎಲ್ಲ ಕಡೆ ಎಲ್ಲ ವಯಸ್ಸಿನ ದುಡಿಯುವ ಮಹಿಳೆಯರು ಕಾಣುತ್ತಾರೆ. ಪೆಟ್ರೋಲ್ ಬಂಕ್‌ಗಳಲ್ಲಿ; ರಿಕ್ಷಾ-ಬಸ್-ದೋಣಿ ನಡೆಸುವವರಾಗಿ; ಸ್ಟೇಷನ್ ಮಾಸ್ತರಾಗಿ; ಮೀನು-ಹೂವು-ತರಕಾರಿ ಮಾರ್ಕೆಟ್ಟಿನ ಸಿಂಹಿಣಿಯರಾಗಿ; ಹೋಟೆಲ್-ಮಸಾಜ್ ಪಾರ್ಲರ್-ಅಂಗಡಿಗಳ ಮೆಲುಮಾತ ಲಲನೆಯರಾಗಿ; ಏರ್‌ಪೋರ್ಟ್-ರೈಲ್ವೆ ಸ್ಟೇಷನ್‌ಗಳ ಸ್ವಚ್ಛತಾ ಕೆಲಸಗಾರರಾಗಿ; ರಬ್ಬರ್, ಚಹಾ, ಏಲಕ್ಕಿ ತೋಟಗಳ ಕೂಲಿಗಳಾಗಿ - ಹೀಗೆ ಎಲ್ಲ ಕಡೆ ಮಹಿಳೆಯರ ದುಡಿಮೆ ಕಂಡುಬರುತ್ತದೆ. ಚಹಾ ಎಲೆ ಕೀಳುವ ಕೆಲಸದಲ್ಲಿ ಹೆಚ್ಚುಕಡಿಮೆ ಎಲ್ಲರೂ ಮಹಿಳೆಯರೇ.

ತೇಕ್ಕಡಿಯ ಆನೆ ಮಾವುತ ಹೇಳುತ್ತಿದ್ದ, ಆ ಕ್ಯಾಂಪಿನಲ್ಲಿರುವ ಎಲ್ಲ ಎಂದರೆ ಎಲ್ಲ ಆನೆಗಳೂ ಹೆಣ್ಣೇ ಅಂತೆ. ಗಂಡಾನೆಗೆ ಬೆದೆ ಬರುವುದರಿಂದ ಆರು ತಿಂಗಳು ಕೆಲಸ ಮಾಡಿದರೆ ಆರು ತಿಂಗಳು ವಿಶ್ರಾಂತಿ ಕೊಡಬೇಕಾಗುವುದೆಂದೂ, ಹೆಣ್ಣಾನೆಯಾದರೆ ಹೆಂಗಸರಂತೇ ಎಲ್ಲ ದುಡಿಮೆಗೂ ಎಲ್ಲ ಕಾಲಕ್ಕೂ ಒದಗುವುದೆಂದೂ; ಆನೆಯನ್ನೂ, ತಮ್ಮೂರ ಹೆಣ್ಣುಮಕ್ಕಳನ್ನೂ ಒಂದೇ ಉಸಿರಿನಲ್ಲಿ ಹೊಗಳಿದ. ನಿಜ, ದುಡಿಮೆ ಮಲಬಾರಿನ ಮಹಿಳೆಯರಿಗೆ ಹೊಸದಲ್ಲ. ಪ್ರತಿ ಮನೆಯ ಒಲೆಯನ್ನೂ ಬೆಚ್ಚಗಿಟ್ಟಿರುವ ಜೀವಗಳವು. ಇವತ್ತಿಗೂ ಮೀನು, ಹೂ, ತರಕಾರಿ ಮಾರುಕಟ್ಟೆಗಳಲ್ಲಿ ಹೆಣ್ಮಕ್ಕಳದೇ ರಾಜ್ಯಭಾರ. ಕೊಚ್ಚಿಯ ಜ್ಯೂ ಸಮುದಾಯದ ಮ್ಯೂಸಿಯಂನಲ್ಲಿ ಮೂರ್ನಾಲ್ಕು ಶತಮಾನ ಹಿಂದಿನ ಚಿತ್ರಗಳಿದ್ದವು. ಕೇರಳದ ಮಾರುಕಟ್ಟೆಗಳಲ್ಲಿ ನವಿಲು, ಮೀನು, ಅಕ್ಕಿರಾಶಿ, ಸಾಂಬಾರ ಪದಾರ್ಥವಿಟ್ಟುಕೊಂಡು ಕುಳಿತ ಮಹಿಳೆಯರ ಚಿತ್ರಣ ಅದರಲ್ಲಿದೆ. ಒಂದು ವಿಶೇಷ: ಚಿತ್ರಗಳಲ್ಲಿರುವವರು ತೆರೆದೆದೆಯ ಮಹಿಳೆಯರು. ಎದೆ ಮುಚ್ಚಿಕೊಳ್ಳದೇ ಬಿಡುಬೀಸಾಗಿ ಓಡಾಡುವ ಧೈರ್ಯವೇ ಅವರಿಗೆ ಎದೆಗಾರಿಕೆಯನ್ನೂ ಕೊಟ್ಟಿತೆ? ಕೊಚ್ಚಿ ಅರಮನೆಯ ಚಿತ್ರಗಳಲ್ಲಿ ರಾಜಮನೆತನದ ಹೆಣ್ಣುಮಕ್ಕಳೂ ಸೆರಗು ಹೊದೆಯದೆ ಸೀರೆಯುಟ್ಟಿದ್ದರು. ಈಗಲೂ ಒಂದು ಲುಂಗಿ ಮೇಲೊಂದು ಬ್ಲೌಸು ಧರಿಸಿದ ನಡುವಯಸ್ಸು ದಾಟಿದ ಮಹಿಳೆಯರು ಕಾಣಸಿಗುತ್ತಾರೆ.

ವಿದೇಶೀಯರಿಗೂ ಮಲಬಾರಿನ ಮಹಿಳೆಯರ ಮೇಲೆ ಆಕರ್ಷಣೆ. ಆದರೆ ಅದು ಅವರ ಶ್ರಮ ಸಾಮರ್ಥ್ಯದ ಕುರಿತಷ್ಟೇ ಅಲ್ಲ. ದಾಖಲೆಗಳ ಪ್ರಕಾರ ೧೪೯೮ರಲ್ಲಿ ವಾಸ್ಕೋಡಗಾಮ ಭಾರತಕ್ಕೆ ಮೊದಲ ಸಮುದ್ರ ಮಾರ್ಗವನ್ನು ಕಂಡುಹಿಡಿದು ಮಲಬಾರಿಗೆ ಬಂದಾಗ ಅವನ ಜೊತೆ ಬಂದ ನಾವಿಕರನೇಕರು ವಾಪಸಾಗಲು ನಿರಾಕರಿಸಿದರು. ಸ್ಥಳೀಯ ರಾಜನ ಆಸ್ಥಾನದಲ್ಲಿ ನಿಯಮಿತ ಸಂಬಳ, ಗೌರವಾನ್ವಿತ ಕೆಲಸ, ಧಾರ್ಮಿಕ ಸ್ವಾತಂತ್ರಗಳಲ್ಲದೇ ಹಲವು ಆಮಿಷಗಳು ಅವರ ನಿರ್ಧಾರಕ್ಕೆ ಕಾರಣವಾಗಿದ್ದವು. ಇಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿತ್ತು. ‘ಇಟ್ಟುಕೊಳ್ಳುವುದು’ ಹಾಗೂ ಗುಲಾಮೀ ಪದ್ಧತಿ ನಿಷೇಧಗೊಂಡಿರಲಿಲ್ಲ. ಬೇಕಾದಷ್ಟು ಹೆಣ್ಣುಗಳನ್ನು ಅನುಭವಿಸುತ್ತ, ದಿನಗಟ್ಟಲೇ ಹಾಡುತ್ತ ಕುಣಿಯಲು, ಕುಡಿದು ಮತ್ತಿನಲ್ಲಿರಲು ಅವಕಾಶವಿರುವ ಭಾರತದ ತೀರಗಳು ತಪ್ಪು ಕಾರಣಗಳಿಗಾಗಿ ಮೊದಮೊದಲು ಅವರನ್ನು ಆಕರ್ಷಿಸಿರಬಹುದು. ಆದರೆ ಕ್ರಮೇಣ ಇಲ್ಲಿಯ ರೀತಿ ರಿವಾಜುಗಳನ್ನೇ ಕಲಿತು, ಇಲ್ಲಿನ ಹಿಂದೂ ಅಥವಾ ಮುಸ್ಲಿಮ್ ಹೆಣ್ಣುಗಳನ್ನೇ ಮದುವೆಯಾಗಿ, ಭಾರತೀಯರೇ ಆಗಿಹೋದವರ ಸಂಖ್ಯೆಯೂ ಕಡಿಮೆಯಲ್ಲ. ೧೫೧೦ರಲ್ಲಿ ಮಲಬಾರಿಗೆ ಬಂದಿಳಿದ ಆಲ್ಬುಕರ್ಕ್ ತನ್ನ ಸೇನೆಯನ್ನೆದುರಿಸಿ ಹತರಾದ ಮುಸಲ್ಮಾನ ಸೇನೆಯ ಯೋಧಪತ್ನಿಯರನ್ನು ಮದುವೆಯಾಗುವಂತೆ ತನ್ನ ಸೈನಿಕರನ್ನು ಹುರಿದುಂಬಿಸಿದ್ದ. ‘ಲಕ್ಷಣವಾಗಿದ್ದ ಬಿಳಿಯ ದೇವತೆ’ಯರನ್ನು ವಧುದಕ್ಷಿಣೆ ನೀಡಿ, ಕ್ರ್ರಿಶ್ಚಿಯನ್ನರಾಗಿ ಮತಾಂತರಗೊಳಿಸಿ, ಮದುವೆ ಮಾಡಿಕೊಳ್ಳಲಾಗಿತ್ತು. ಆದರೆ ಬಲವಂತದ ಈ ಕ್ರಿಯೆಯಿಂದ ಪೋರ್ಚುಗೀಸರಿಗೆ ಅವರು ಬಯಸಿದ ದೀರ್ಘಕಾಲೀನ ಲಾಭಗಳು ದೊರಕದೇ ಇದ್ದಿದ್ದು ಬೇರೆಯೇ ವಿಷಯ.

ಹೀಗೆ ‘ಫರಂಗಿ’ ಜನರನ್ನು ಆಕರ್ಷಿಸಿದ ತೆರೆದೆದೆಯವರು ರವಿಕೆ ತೊಟ್ಟಿದ್ದು ಯಾವಾಗ? ಏಕೆ? ಆಗಿದ್ದಿದ್ದು ಈಗಿನ ನೈತಿಕ ಪೊಲೀಸ್‌ಗಿರಿಯ ಉಲ್ಟಾ ಪರಿಸ್ಥಿತಿ. ರವಿಕೆಯಿಲ್ಲದ ಅಂದಿನ ಶ್ರಮಿಕ ತಳಸಮುದಾಯಗಳ ಹೆಣ್ಣುಮಕ್ಕಳು ರವಿಕೆ ಪಡೆದಿದ್ದೊಂದು ಹೋರಾಟ. ಅದು ಒಂದು ಶತಮಾನ ನಂತರದ ಅಬ್ರಾಹ್ಮಣ ಚಳುವಳಿಯ ಮೂಲವೂ ಆಗಿರಬಹುದು. ಆ ಮಹಿಳೆಯರು ರವಿಕೆ ಧರಿಸುವುದನ್ನು ಮೇಲ್ಜಾತಿ ಪುರುಷರು ಒಪ್ಪುತ್ತಿರಲಿಲ್ಲ. ಅವರು ಚಿನ್ನ, ಚಪ್ಪಲಿ ಹಾಕಿಕೊಳ್ಳುವಂತಿರಲಿಲ್ಲ. ಛತ್ರಿ ಬಳಸುವಂತಿರಲಿಲ್ಲ. ಹಾಲು ಕರೆಯುವಂತಿರಲಿಲ್ಲ, ಸೊಂಟದ ಮೇಲೆ ಕೊಡ ಹೊರುವಂತಿರಲಿಲ್ಲ. ಮೊಣಕಾಲತನಕವಷ್ಟೇ ತುಂಡು ಬಟ್ಟೆ ಉಡಬೇಕು. ಇದನ್ನೆಲ್ಲ ವಿರೋಧಿಸಿದ ಕೇರಳದ ಶಾಣಾರ್ (ನಾಡಾರ್) ಸಮುದಾಯವನ್ನು ಉದಾಹರಣೆಗೆ ನೋಡಬಹುದು. ಆ ಸಮುದಾಯದ ಹೆಣ್ಣುಮಕ್ಕಳು ತೆರೆದೆದೆಯವರಾಗಿದ್ದರು. ಮಿಷನರಿಗಳ ಪ್ರಭಾವದಿಂದ ಮೇಲ್ವಸ್ತ್ರ ಧರಿಸತೊಡಗಿದರು. ೧೮೨೨ರಲ್ಲಿ ಬದಲಾದ ಮಹಿಳೆಯರ ದಿರಿಸಿನ ಬಗೆಗೆ ನಾಯರ್ ಸಮುದಾಯದವರು ತಕರಾರೆತ್ತಿ ಅವರ ದಟ್ಟಿಗಳನ್ನು ಕಿತ್ತೆಳೆದು ಹರಿದುಹಾಕಿದರು. ಕೋರ್ಟಿನಲ್ಲಿ ಕೇಸು ನಡೆಯಿತು. ೧೮೨೯ರಲ್ಲಿ ತಿರುವಾಂಕೂರು ಆಡಳಿತವು ಆ ಮಹಿಳೆಯರು ಮೇಲುಡುಪು ಧರಿಸುವುದನ್ನು ನಿರ್ಬಂಧಿಸಿದರೂ ಹಿಂದೂ ಮತ್ತು ಕ್ರಿಶ್ಚಿಯನ್ ಶಾಣಾರ್ ಮಹಿಳೆಯರು ಮೇಲುಡುಪು ಧರಿಸಿತೊಡಗಿದರು. ಜೊತೆಗೆ ಮೇಲ್ಜಾತಿಯವರ ಮನೆಯಲ್ಲಿ ಪುಕ್ಕಟೆ ಕೆಲಸ ಮಾಡಲು ನಿರಾಕರಿಸಿದರು. ೧೮೫೯ರಲ್ಲಿ ಮಾರುಕಟ್ಟೆಯಲ್ಲಿ ಆ ಮಹಿಳೆಯರ ಮೇಲುವಸ್ತ್ರ ಕಿತ್ತು ಹರಿದು ಮತ್ತೆ ಗಲಭೆಯಾಯಿತು. ಕೊನೆಗೆ ಸರ್ಕಾರ ಅವರು ಮೇಲುಡುಪು ಹೊದ್ದುಕೊಳ್ಳಲು ಅನುಮತಿ ಕೊಟ್ಟರೂ ಮೇಲ್ಜಾತಿ ಮಹಿಳೆಯರಂತೆ ರವಿಕೆ ಧರಿಸುವುದನ್ನು ನಿರ್ಬಂಧಿಸಿತು.

ತಿರುವಾಂಕೂರು ಪ್ರಾಂತ್ಯದ ಶಾಣಾರ್ ಹೆಂಗಸರು ಕುಟುಂಬ ಸಮೇತ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಮೇಲೆ ಮಿಷನರಿಗಳು ಅವರಿಗೆಂದೇ ವಿಶೇಷ ಶೈಲಿಯ ಬ್ಲೌಸುಗಳನ್ನು ಹೊಲೆಸಿಕೊಟ್ಟರು. ಬೇರೆಯೇ ಆದ ಶೈಲಿ ಅವರಿಗೆ ಬೇರೆ ಐಡೆಂಟಿಟಿಯನ್ನು ಕೊಡಬಹುದೆಂದು ಮಿಷನರಿಗಳು ಭಾವಿಸಿದ್ದರು. ಆದರೆ ಅದನ್ನು ತಿರಸ್ಕರಿಸಿದ ಶಾಣಾರ್ ಹೆಂಗಸರು ಮೇಲ್ವರ್ಗದ ಮೋಪ್ಳಾ ಸ್ತ್ರೀಯರು ಹಾಗೂ ಸಿರಿಯನ್ ಕ್ರಿಶ್ಚಿಯನ್ನರು ಧರಿಸುವ ರೀತಿಯ ರವಿಕೆಯೇ ತಮಗೆ ಬೇಕೆಂದು ಪಟ್ಟುಹಿಡಿದು ಕುಳಿತರು. ತಮ್ಮ ‘ಮಾನ’ ಮುಚ್ಚಿಕೊಳ್ಳುವ ಅವಕಾಶ ಸಿಗುವುದು ಒತ್ತಟ್ಟಿಗಾದರೆ, ಮೇಲ್ಜಾತಿಗಳಿಗಿರುವ ‘ಅವಕಾಶ’ವೇ ತಮಗೂ ದೊರೆಯಲಿ ಎಂದು ಬಯಸಿದ್ದರು. ಶಾಣಾರ್ ಹೆಂಗಸರ ರವಿಕೆಯ ಬೇಡಿಕೆ ಮತಾಂತರದ ಉದ್ದೇಶಗಳಾಚೆಗೆ ವಿಸ್ತರಿಸಿಕೊಂಡಿತ್ತು.

ತನ್ನ ಎದೆಮುಚ್ಚಿಕೊಳ್ಳುವ ಬಟ್ಟೆ ತೊಟ್ಟುಕೊಳ್ಳಲೂ ಕಾನೂನಿನ ಅಪ್ಪಣೆಗೆ ಕಾಯಬೇಕೆ?! ಎದೆ, ಎದೆಗಾರಿಕೆ, ಅಕ್ಕಮಹಾದೇವಿ, ಮುಚ್ಚಿಟ್ಟುಕೊಳ್ಳುವುದು-ಬಯಲಾಗುವುದು ಏನಿದೆಲ್ಲ ಎಂದುಕೊಳ್ಳುತ್ತ ರವಿಕೆ ತೊಡದ ನಮ್ಮೂರ ಹಾಲಕ್ಕಿ ಹೆಣ್ಣುಮಕ್ಕಳ ವ್ಯಾಪಾರ ಕೌಶಲ್ಯ ಕಣ್ಣೆದುರು ಸುಳಿದು ಹೋಗುವಾಗ ಅಲಪ್ಪುರದ ಹಿನ್ನೀರಿನಲ್ಲಿ ದೋಣಿ ಲಂಗರು ಹಾಕಿ ನಿಂತಿತು. ಕೆಳಗಿಳಿದು ದಂಡೆಯ ಕಿರಿದಾದ ಏರಿಯ ಮೇಲೆ ನಡೆಯತೊಡಗಿದೆವು. ಬಲಶಾಲಿ ಗಂಡಸರು ಬಲೆಹಾಕುವ ಸಿದ್ಧತೆಯಲ್ಲಿದ್ದರೆ ಮಹಿಳೆಯರು ಕಪ್ಪೆಚಿಪ್ಪಿನ ಸಣ್ಣಗುಪ್ಪೆಯನ್ನು ಪಕ್ಕದಲ್ಲಿಟ್ಟುಕೊಂಡು ಗಾಳ ಇಳಿಬಿಟ್ಟು ಧ್ಯಾನಸ್ಥರಾಗಿ ಕುಳಿತಿದ್ದರು. ಲೈಸೆನ್ಸ್ ಸಂಖ್ಯೆ ಬರೆಯಲಾದ ನೀರಾ (ಟಾಡಿ) ಅಂಗಡಿ, ದೋಣಿಕಟ್ಟೆಯ ಬಳಿ ಗುಂಪಾಗಿ ಸೇರಿದ ಗಂಡಸರನ್ನು ಬಿಟ್ಟರೆ ಗಮನ ಸೆಳೆದವರೆಲ್ಲ ಮತ್ಸ್ಯಗಂಧಿಯರೇ. ಒಬ್ಬಾಕೆ ಕಲ್ಲಮೇಲೆ ಮೀನು ತಿಕ್ಕಿ ಚೊಕ್ಕ ಮಾಡುತ್ತಿದ್ದರೆ; ವಯಸ್ಸಾದ ಆ ಮಹಿಳೆ ತನ್ನ ಬಿಳಿಕೂದಲ ರಾಶಿಯನ್ನು ಮುಂದೆ ಇಳಿಬಿಟ್ಟು ತೊಳೆಯುತ್ತಿದ್ದರು. ಒಂದು ದೊಡ್ಡ ದೋಣಿಯನ್ನು ಇಬ್ಬರು ಹೆಣ್ಣುಮಕ್ಕಳು ಹುಟ್ಟುಹಾಕುತ್ತ ವೇಗವಾಗಿ ಎಲ್ಲಿಗೋ ಒಯ್ದರು. ಮತ್ತೊಂದು ಹುಲ್ಲುಹಸಿ ತುಂಬಿದ ಪಾತಿ ದೋಣಿಯನ್ನು ಇಳಿವಯಸ್ಸಿನ ಅಮ್ಮ ನಡೆಸಿ ತಂದು, ದೋಣಿಯನ್ನು ದಡದ ಮರಕ್ಕೆ ಕಟ್ಟಿ ಹುಲ್ಲನ್ನು ಒಳಸಾಗಿಸತೊಡಗಿದರು. ಕೆಲ ಹುಡುಗಿಯರು ಬಿಡಿಸಿದ ಮ್ಯಾಗಜೀನ್ ಕೈಲಿ ಹಿಡಿದು ನಡೆಯುತ್ತಲೇ ಓದುತ್ತ ಸಾಗಿದ್ದರು. ಎಲ್ಲರ ತಲೆಗೂದಲೂ ಇಳಿಬಿಸಿಲಿಗೆ ಮಿರಮಿರ ಮಿಂಚುತ್ತ ಈಗ ಎಣ್ಣೆಹನಿ ತೊಟ್ಟಿಕ್ಕುವುದೋ ಎಂಬ ಭಾಸ ಮೂಡಿಸುತ್ತಿತ್ತು.

ಈ ದೇವರ ರಾಜ್ಯದಲ್ಲಿ ಇನ್ನೂ ಒಂದು ವಿಶೇಷವಿದೆ: ಮಹಿಳಾ ಸಂಘ-ಸಂಸ್ಥೆ, ಫ್ಯಾಕ್ಟರಿಗಳಲ್ಲಿ ಬೆಳಿಗ್ಗೆ ಎಲ್ಲರೂ ಸೇರಿದ ಕೂಡಲೇ ಪಾಳಿಯ ಮೇಲೆ ದಿನಕ್ಕೊಬ್ಬರು ಅವತ್ತಿನ ನ್ಯೂಸ್ ಪೇಪರ್ ಓದುತ್ತಾರಂತೆ! ಎಲಎಲಾ ಮಲಬಾರಿನ ಮಹಿಳೆಯರೇ!!

ಆದರೆ,

ನಿತ್ಯ ಪೇಪರು ಓದಿದರೇನು? ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಮಹಿಳೆಯರಿದ್ದರೇನು? ದುಡಿಯುವ ವರ್ಗಗಳ ಸರ್ಕಾರವಿದ್ದರೇನು? ಕೇರಳ ಇನ್ನೂ ಮಹಿಳಾ ಮುಖ್ಯಮಂತ್ರಿಯನ್ನು ಕಂಡಿಲ್ಲ. ಈಗಿನ ವಿಧಾನಸಭೆಯಲ್ಲೂ ಮಹಿಳಾ ಪ್ರಾತಿನಿಧ್ಯ ೫% ದಾಟಿಲ್ಲ. ವರ್ಷದಿಂದ ವರ್ಷಕ್ಕೆ ರಾಜಕಾರಣದಲ್ಲಿ ಮಹಿಳೆಯರ ಸಂಖ್ಯೆ ಕುಸಿಯುತ್ತಿದೆ. ದಾರಿಯ ಎರಡೂ ಬದಿ ಹೆಜ್ಜೆಹೆಜ್ಜೆಗೆ ಸಂಘಟನೆಗಳ ಪೋಸ್ಟರುಗಳು ಕಂಡರೂ ಅದರಲ್ಲಿ ಬೆರಳೆಣಿಕೆಯಷ್ಟೂ ಮಹಿಳೆಯರಿರಲಿಲ್ಲ. ಶಬರಿಮಲೈಯಂಥ ದೇವಸ್ಥಾನದಲ್ಲಿ ಮುಟ್ಟಾಗುವ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿಲ್ಲ. ಕೇರಳದ ನಾರಿಯರಿಗೆ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ಪ್ರವೇಶಿಸಲು ಇನ್ನೂ ಸಾಧ್ಯವಾಗಿಲ್ಲ. ಕಥಕ್ಕಳಿ, ಕಲರಿಪಯಟ್ಟು ಎಂಬ ಸ್ಥಳೀಯ, ಅನನ್ಯ ಕಲಾ ಪ್ರಕಾರಗಳು ಇಂದಿಗೂ ಕೇವಲ ಪುರುಷಪಾರಮ್ಯದ ಕ್ಷೇತ್ರಗಳು. ಮೋಹಿನಿ ಅಟ್ಟಂ ಎಂಬ ಶೃಂಗಾರ ಪ್ರಧಾನ ನೃತ್ಯ ಪ್ರಕಾರವಷ್ಟೇ ಮಹಿಳೆಯರದು! ಮಣಗಟ್ಟಲೆ ಚಿನ್ನ ಹೇರಿಕೊಂಡ ಅಥವಾ ದುಬಾರಿ ಉಡುಪಿನ ರೂಪದರ್ಶಿಗಳಾಗಿ ದೊಡ್ಡ ಫ್ಲೆಕ್ಸಿ ಬೋರ್ಡುಗಳ ತುಂಬ ಎಲ್ಲೆಲ್ಲೂ ಚಂದದ ಮಹಿಳೆಯರು!! ಕೌಟುಂಬಿಕವಾಗಿ ಮಾತೃಪ್ರಧಾನ ಸಂಸ್ಕೃತಿಯ ನಾಡಿನಲ್ಲೂ ಸಾಮಾಜಿಕ ಸ್ತರಗಳಲ್ಲಿ ಪಿತೃಪ್ರಧಾನ ವ್ಯವಸ್ಥೆಯೇ ಅಂತರ್ಗತವಾಗಿರುವುದು, ಅಧಿಕಾರದಿಂದ ಮಹಿಳೆಯನ್ನು ದೂರವೇ ಇಟ್ಟಿರುವುದು ಗಮನಾರ್ಹ.

ದೇವರ ರಾಜ್ಯದಲ್ಲಿ ಲಿಂಗ ತಾರತಮ್ಯ..

***

ನಮ್ಮ ಕಾರಿನ ಮುಂದೆ ಒಂದು ಜೀಪು ಸಾಗುತ್ತಿತ್ತು. ಇಳಿಬಿಸಿಲಿನಲ್ಲಿ ಮೂವರು ಮಹಿಳೆಯರು ಬುಟ್ಟಿ ಕವುಚಿ ಹಾಕಿ ಕುಳಿತು ಮಾತುಕತೆಯಾಡುತ್ತಿದ್ದರು. ಕುಳಿತಿದ್ದು ಬಲೆಯ ರಾಶಿಯ ಮೇಲೆ, ಕವುಚಿದ್ದು ಮೀನು ಬುಟ್ಟಿಯೇ ಇರಬೇಕು. ಬಹುಶಃ ಒಳ್ಳೆಯ ವ್ಯಾಪಾರವಾಗಿರಬೇಕು. ಏಕೆಂದರೆ ಅವರ ಭಂಗಿಯ ನಿರಾಳತೆಯಲ್ಲಿ ಕೆಲಸ ಮುಗಿಸಿದ ನೆಮ್ಮದಿಯ ಸೂಚನೆಯಿತ್ತು. ಒಬ್ಬಾಕೆ ತುಂಬ ಗಂಭೀರವಾಗಿ ತನ್ನ ಬಾರೀಕು ಕೈಕಾಲುಗಳನ್ನು ನೆಲಮುಗಿಲುಗಳತ್ತ ತಿರುಗಿಸಿ, ತುಟಿ ಉದ್ದ ಮಾಡಿ ಏನೋ ಹೇಳುತ್ತಿದ್ದಳು. ಅವಳ ಹಾವಭಾವ, ಮಾತುಗಳನ್ನು ಉಳಿದಿಬ್ಬರು ತದೇಕವಾಗಿ ಗಮನಿಸುತ್ತಿದ್ದರು.

ಡ್ರೈವರನಿಗೆ ನಿಧಾನ ಅವರ ಹಿಂದೇ ಸಾಗಲು ಹೇಳಿದೆ.

ಏನು ಮಾತನಾಡುತ್ತಿದ್ದಿರಬಹುದು ಅವರು? ವ್ಯಾಪಾರದ ಕಷ್ಟನಷ್ಟಗಳ ಕುರಿತೇ? ದಾರಿಯ ಎರಡೂ ಬದಿ ಹರಡಿಕೊಂಡ ಚಹ ತೋಟಗಳ ಕುರಿತೇ? ನಮ್ಮನ್ನೇ ಬೆಂಬಲಿಸಿ ಎಂದು ಹೆಜ್ಜೆಗೊಂದರಂತೆ ಪೋಸ್ಟರ್‌ಗಳ ಮೂಲಕ ಕೇಳುವ ವಿವಿಧ ಕಾರ್ಮಿಕ ಯೂನಿಯನ್‌ಗಳ ಕುರಿತೇ? ತಮ್ಮ ಗಂಡಮಕ್ಕಳ ಕುರಿತೇ? ಮತ್ಸ್ಯಕ್ಷಾಮದ ಕುರಿತೇ? ಬೆನ್ನ ಮೇಲಿನ ಭಾರದ ಕುರಿತೆ?

ನನ್ನೆದುರಿಗೆ ಡ್ಯಾಶ್ ಬೋರ್ಡಿನಲ್ಲಿ ಮಡಚಿಕೊಂಡ ಮಲಯಾಳ ಮನೋರಮಾ ಪೇಪರ್ ಕುಳಿತಿತ್ತು. ತೆಗೆದು ಹರಡಿದರೆ ಅಂಕಿಸಂಖ್ಯೆ ಮತ್ತು ಇಂಗ್ಲಿಷ್ ಪದಗಳನ್ನು ಹೊರತುಪಡಿಸಿ ಏನೇನೂ ತಿಳಿಯಲಿಲ್ಲ. ಜಿಲೇಬಿಯಂತೆ, ಚಕ್ಕುಲಿಯಂತೆ ಸುರುಳಿಸುರುಳಿಯಾಗಿ ಅಚ್ಚಾದ ಸಾವಿರಾರು ಅಕ್ಷರಗಳಿದ್ದರೂ ಒಂದೇ ಒಂದು ಅಕ್ಷರ ಅರ್ಥವಾಗಲಿಲ್ಲ.

ಬೋಟ್ ಹೌಸಿನಲ್ಲಿ ಹೀಗೇ ಆಗಿತ್ತು. ಚುಕ್ಕಾಣಿ ಹಿಡಿದು ಕುಳಿತ ಹಿರಿಯನಿಗೆ ಏನನ್ನಾದರೂ ಹೇಳುವ ಉಮೇದು. ಆದರೆ ಅವರಿಗೆ ಮಲಯಾಳ ಬಿಟ್ಟರೆ ಕೊಂಚ ತಮಿಳು ಬರುತ್ತಿತ್ತು ಅಷ್ಟೆ. ನಮಗೆ ಅವೆರೆಡನ್ನು ಬಿಟ್ಟು ಉಳಿದ ದಕ್ಷಿಣದ ಭಾಷೆಗಳು ಅರ್ಥವಾಗುತ್ತವೆ. ಸುತ್ತಲೂ ಏಳುವ ನೀರಿನ ಅಲೆಗಳ ಸದ್ದಿನಂತೇ ಕೊಳಪಳ ಕೊಳಪಳ ಎಂದು ಶೃತಿಬದ್ಧವಾಗಿ ಏನನ್ನೋ ಹೇಳುತ್ತಿದ್ದರು. ಆದರೆ ದ್ರಾವಿಡ ಭಾಷೆಗಳಲ್ಲಿ ಅತಿ ಕಿರಿಯದಾದ ಹಾಗೂ ಹೇರಳವಾಗಿ ಸಂಸ್ಕೃತ ಪದಗಳನ್ನೊಳಗೊಂಡ ಮಲೆಯಾಳಂ ಯಾವ ಭಾವವನ್ನೂ ಹುಟ್ಟಿಸಲಿಲ್ಲ. ಹಿನ್ನೀರು ಕುರಿತು ಬೆಳೆಯುತ್ತಲೇ ಹೋದ ಸಂದೇಹಗಳಿಗೆ ಕೊನೆಗೆ ಗೂಗಲ್‌ನಲ್ಲಿ ಉತ್ತರ ಹುಡುಕುವಂತಾಯಿತು. ಸಾವಿರಾರು ವರ್ಷಗಳಿಂದ ದಾಟದ ದ್ವೀಪಗಳಾಗಿ ಉಳಿದ ಅಕ್ಕತಂಗಿಯರ ನಡುವೆ ಈಗ ಇಂಗ್ಲಿಷ್ ಸೇತುವೆ ನಿರ್ಮಾಣಗೊಂಡಿದ್ದು ಅದನ್ನು ನೆಚ್ಚುವುದು ಅನಿವಾರ್ಯವಾಯಿತು.

ಭಾಷೆ, ಎಷ್ಟು ವಿಚಿತ್ರ! ಈ ನೆಲದಲ್ಲಿ ಹುಟ್ಟಿದ ಕಾರಣಕ್ಕೇ ಇಂಥ ಬದುಕು ಬದುಕಬೇಕಾದ, ಈ ಭಾಷೆಯನಾಡಬೇಕಾದ ಇವರು. ಆ ನೆಲದಲ್ಲಿ ಹುಟ್ಟಿ ಆ ಭಾಷೆ ಆಡುವ ಕಾರಣಕ್ಕೇ ನಾನೆಂಬ ನಾನಾಗಿರುವ ನಾನು. ಭಾಷೆ ಹೇಗೆ ಬೆಸೆಯಬಲ್ಲದೋ ಹಾಗೇ ದಾಟಲಾಗದ ಕಂದಕವೂ ಆಗಬಹುದಲ್ಲವೆ?

ಅದೇನೋ ಸರಿ, ಈ ಪುಟ್ಟ ಕಿವಿ, ಮಿದುಳಿಗೆ ಏಕಾದರೂ ಅವರಾಡುವ ಮಾತೆಲ್ಲ ವಿವರವಾಗಿ ಅರ್ಥವಾಗಬೇಕು? ಮುಖಚಹರೆ, ಹಾವಭಾವ, ಪ್ರಯಾಣದ ಅನುಭವಗಳಿಂದ ಅಷ್ಟಿಷ್ಟು ಅರ್ಥವಾದರೆ ಸಾಲದೆ? ಅವರ ಮಾತು ಅರ್ಥವಾದರೂ ನಾನೇನು ಮಾಡಬಲ್ಲೆ?


ದೇವರೇ, ನಿನ್ನ ಮಕ್ಕಳ ರಕ್ಷಿಸಿಕೋ..


ಪ್ರವಾಸೋದ್ಯಮ ಕೇರಳ ಸರ್ಕಾರದ ಮುಖ್ಯ ಆದಾಯ ಮೂಲ. ದೇಶೀ-ವಿದೇಶೀ ಪ್ರವಾಸಿಗಳೆಲ್ಲ ದಂಡುದಂಡಾಗಿ ಕೇರಳಕ್ಕೆ ಬಂದಿಳಿಯುತ್ತಾರೆ. ದಂಡೆಗುಂಟ ಇರುವ ಮನೆಗಳೆದುರು ದೋಣಿಯಲ್ಲಿ, ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಮನೆಯೆದುರು ಪಾತ್ರೆ ತಿಕ್ಕುತ್ತ, ದೇವರ ಸಾಮಾನುಗಳಿಗೆ ಹುಳಿ ಹಚ್ಚುತ್ತ, ಮೀನು ಕತ್ತರಿಸುತ್ತ, ಮತ್ಯಾರದೋ ಜೊತೆ ಏರು ದನಿಯಲ್ಲಿ ಜಗಳಾಡುತ್ತ, ಹೇನು ಹೆಕ್ಕುತ್ತ ಕುಳಿತಿರುವಾಗ ಅಪರಿಚಿತ ನಾಡಿನ, ಭಾಷೆಯ ಜನ ಸುಳಿದಾಡಿದರೆ ಮುಜುಗರವಾಗುವುದು ಸಹಜ. ಆದರೆ ಕೇರಳೀಯರದು ಘನತೆಯ ನಡವಳಿಕೆ. ಭಾಷೆಯೊಂದು ತೊಡಕಾದರೂ ಅವರು ತಮ್ಮ ಊರುಕೇರಿಯೊಳಗೆ ಪರವೂರಿನವರ ಇರುವಿಕೆ ಬಗೆಗೆ ದುಷ್ಟ ಕುತೂಹಲ ತೋರದೇ ತಮ್ಮಷ್ಟಕ್ಕೆ ತಾವಿದ್ದು ಬಿಡುತ್ತಾರೆ. ಕಣ್ಣು ಕೂಡಿದರಷ್ಟೇ ಒಂದು ಕಿರುನಗೆ. ಹಾಗೆಂದು ಸ್ನೇಹಪರರಲ್ಲ ಎನ್ನುವಂತಿಲ್ಲ, ಅತಿ ಸಲುಗೆಯ ವ್ಯಾಪಾರೀ ಹಿತಾಸಕ್ತಿಯೂ ಇಲ್ಲ.

ಪುಟ್ಟ ದೋಣಿಮೇಲೆ ಹತ್ತಿಪ್ಪತ್ತು ಜನ ಒಟ್ಟಿಗೇ ಕೂತು ಸಾಗುತ್ತಿದ್ದೆವು. ಎರಡೂ ಕಡೆ ಪುಟ್ಟಪುಟ್ಟ ಮನೆಗಳು. ಎಲ್ಲ ಮನೆಗಳೆದುರೂ ಕಾಯಿಗಳಿಂದ ತೊನೆಯುವ ತೆಂಗು, ಮಾವಿನ ಮರಗಳು. ಹಿಂದೆ ಸುಗ್ಗಿಯ ಗದ್ದೆ ಬಯಲು. ನಮ್ಮ ದೋಣಿಯಲ್ಲಿದ್ದ ವಯಸ್ಸಾದ ವಿದೇಶೀ ಮಹಿಳೆಯೊಬ್ಬರು ತಮ್ಮ ಕೈಲಿ ನಾಣ್ಯ ಹಿಡಿದು ದಡದಲ್ಲಿದ್ದ ಮಕ್ಕಳನ್ನು ಕರೆಯತೊಡಗಿದರು. ಆಡುತ್ತ, ಮೀನು ಹಿಡಿಯುತ್ತ ತಮ್ಮ ಪಾಡಿಗೆ ತಾವಿದ್ದ ಮಕ್ಕಳು ಇವರು ಕರೆದದ್ದೇ ತಡ ದೋಣಿಯ ಹಿಂದೆ ಓಡೋಡಿ ಬರತೊಡಗಿದವು. ದೋಣಿಯಲ್ಲಿದ್ದ ನಮಗೆ ದಿಗಿಲು. ಆ ಮಕ್ಕಳಿಗೆ ಹಾಗೆ ದುಡ್ಡು ಕೊಡಬಾರದೆಂದು ಕೇಳಿಕೊಂಡೆವು. ಆಕೆ ಪೆನ್ಸಿಲ್, ಬುಕ್ ಎಂದೆಲ್ಲ ಹೇಳತೊಡಗಿದರು. ಕೊನೆಗೆ ಅವರು ಕಡುಬಡವ ಮಕ್ಕಳಲ್ಲವೆಂದೂ, ಉಂಡುಡಲು ತಕ್ಕ ಮಟ್ಟಿಗೆ ಇರುವವರೆಂದೂ, ಅರೆನಗ್ನತೆ ಅವರ ವೇಷವೆಂದೂ, ಹೀಗೆ ಕೊಡುವುದು ಮಕ್ಕಳಿಗೆ ಕೆಟ್ಟ ಅಭ್ಯಾಸವೊಂದನ್ನು ರೂಢಿಸುವುದರಿಂದ ಖಂಡಿತಾ ಕೊಡಬಾರದೆಂದು ಒತ್ತಾಯಿಸಿದೆವು. ಪಡೆಯುವವನ ಪಡೆಯಬೇಕಾದ ಅನಿವಾರ್ಯತೆಯನ್ನು ಕೊಡುವಿಕೆ ತಪ್ಪಿಸಬಲ್ಲುದಾದರೆ ಮಾತ್ರ ಅಂಥ ಕೊಡುವಿಕೆಗೆ ಅರ್ಥವಿದೆ. ಇಲ್ಲದಿದ್ದರೆ ಅದು ಅವರ ಆತ್ಮಘನತೆ ನಾಶ ಮಾಡುವ ಅಪಾಯಕಾರಿ ಕ್ರಿಯೆಯಾಗುತ್ತದೆ. ದೋಣಿಯಲ್ಲಿದ್ದ ಇತರರಿಗೆ ನಮ್ಮ ಅಪೀಲು ಅರ್ಥವಾಗಿ ಕೊಡಬಾರದೆಂದು ಆಕೆಯ ಬಳಿ ಹೇಳಿದರು.

ಈಜಿಪ್ಟ್‌ನ ನೈಲ್‌ಕ್ರೂಸ್ ದೃಶ್ಯ ಮೂಡಿಸಿದ ಗಾಯ ನಮ್ಮ ಕಣ್ಣಲ್ಲಿನ್ನೂ ಹಸಿಯಾಗಿತ್ತು. ನೈಲ್ ನದೀದಂಡೆಯಲ್ಲಿ ಆಡುವ ನುಬಿಯನ್ ಮಕ್ಕಳು ದೋಣಿ, ಹಡಗು ಕಂಡರೆ ಸಾಕು, ಹಿಂದೆಹಿಂದೆ ಓಡಿ ಬರುತ್ತಿದ್ದರು. ‘ಆಪಲ್, ಡಾಲರ್, ಪೌಂಡ್’ ಎಂದು ಕೂಗುತ್ತಾ ಹಡಗಿನಿಂದ ಬಿಸಾಡಬಹುದಾದ ಸಾಮಾನುಗಳಿಗಾಗಿ ಕೈಚಾಚುತ್ತ, ಬಿಸಾಡಿದ ವಸ್ತುಗಳಿಗೆ ಮುತ್ತಿಕೊಂಡು ಕಿತ್ತಾಡುತ್ತಿದ್ದವು. ಪ್ರವಾಸೋದ್ಯಮದಿಂದಾಗುವ ಅತಿಯಾದ ಎಕ್ಸ್‌ಪೋಷರ್ ಜನಸಾಮಾನ್ಯರನ್ನು ವ್ಯಾಪಾರಿಗಳಾಗಿಸಿ ಹಪಾಹಪಿಗೆ ದೂಡಬಹುದಾದ; ಅವರ ಖಾಸಗಿತನವನ್ನು ಅಪಹರಿಸಿ ಘನತೆ ನಾಶವಾಗಬಹುದಾದ ಅಪಾಯವಿರುತ್ತದೆ. ಇದಕ್ಕೆ ಉದಾಹರಣೆಯಾಗಿ ನಮ್ಮ ಸುತ್ತಲ ಹಲವಾರು ಪ್ರವಾಸಿ ಸ್ಥಳಗಳ ಜನರ ನಡವಳಿಕೆಗಳಿವೆ. ಅಂಥಲ್ಲಿ ವಾಸಿಸುತ್ತಿರುವ ಕಾರಣಕ್ಕೆ ಅಲ್ಲಿನ ಎಳೆಯ ಮಕ್ಕಳು ಆತ್ಮಗೌರವವನ್ನು ರೂಪುಗೊಳ್ಳುವುದರಲ್ಲೇ ಕಳೆದುಕೊಳ್ಳುವಂತಾದರೆ?

ದೇವರೇ, ಹಾಗಾಗದಂತೆ ನಿನ್ನ ರಾಜ್ಯದ ಮಕ್ಕಳನ್ನು ರಕ್ಷಿಸು..

ದೇವರ ಕಾಡು!

ಅದು ದೇವರ ರಾಜ್ಯವೇ ಇರಬೇಕು. ಓಹೋ! ಅದೆಷ್ಟು ದೇವದೇವತೆ ಸಂತ ಮಹಾನುಭಾವರು ಪೋಸ್ಟರುಗಳಾಗಿ, ಮೂರ್ತಿಗಳಾಗಿ, ಭಕ್ತಿಯ ಘೋಷಣೆಗಳಾಗಿ, ಭಜನೆಯ ಸಾಲುಗಳಾಗಿ, ಪ್ರಾರ್ಥನೆಯ ಕೂಗಾಗಿ ವಾತಾವರಣದಲ್ಲೆಲ್ಲ ಹರಡಿಕೊಂಡಿದ್ದಾರೆ!

ಹಿನ್ನೀರಿನಲ್ಲಿ ತೇಲುವಾಗ ಒಂದು ದಂಡೆಯಿಂದ ಶಿವನ ಭಜನೆಯೂ, ಮತ್ತೊಂದು ಕಡೆಯಿಂದ ಮಾತಾ ಅಮೃತಾನಂದಮಯಿ ಪ್ರಾರ್ಥನೆಯೂ, ಮೂರ್ನಾಲ್ಕು ದಿಕ್ಕುಗಳಿಂದ ಮಸೀದಿಯ ಪ್ರಾರ್ಥನಾ ಕರೆಯೂ ಒಮ್ಮೆಲೇ ಕೇಳತೊಡಗಿತು. ಗಂಟೆ, ಜಾಗಟೆ, ತಾರಕದ ಧ್ವನಿಗಳಲ್ಲಿ ಧರ್ಮಸಮನ್ವಯ ಮಾಡುವುದು ತ್ರಾಸದಾಯಕವೇ. ಅಂತೂ ಎಲ್ಲವೂ ಒಮ್ಮೆಲೇ ಸ್ಥಬ್ದವಾಗುವ ಹೊತ್ತಿಗೆ ದೂರದ ದೇವಾಲಯದೆದುರು ಕುದುರೆ ಮೇಲೆ ಕುಳಿತು ದುಷ್ಟನನ್ನು ಸಂಹರಿಸುತ್ತಿರುವ ಸಂತನ ಮೂರ್ತಿ(ಸೇಂಟ್ ಮೈಕೆಲ್?) ಅಸ್ಪಷ್ಟವಾಗಿ ಕಾಣಿಸಿತು. ರಸ್ತೆ ಪಕ್ಕದ ಪೋಸ್ಟರುಗಳಲ್ಲಿ ಚೆಗೆವಾರ, ಹ್ಯೂಗೋ ಚಾವೆಜ್, ಕ್ಯಾಸ್ಟ್ರೋ, ಸದ್ದಾಂ, ಅರಾಫತ್, ವಿವೇಕಾನಂದ, ಭಗತ್ ಸಿಂಗ್, ಮಾರ್ಕ್ಸ್, ಏಂಗೆಲ್ಸ್ .. .. ಬಹಳ ಜನ ರಾರಾಜಿಸುತ್ತಿದ್ದರು. ಒಂದು ಮದುವೆ ಪೋಸ್ಟರಿನಲ್ಲಿ ಹುಡುಗಹುಡುಗಿಯರ ಹಿನ್ನೆಲೆಯಲ್ಲಿ ದೊಡ್ಡದಾದ ಚೆಗೆವಾರನ ಚಿತ್ರ!

ಎಷ್ಟೊಂದು ದೇವರು ಗುದ್ದಾಡದೆ ಇಲ್ಲಿ ಪ್ರೀತಿಯಿಂದ ಬದುಕುತ್ತಿದ್ದಾರೆ! ಅವರು ಎಲ್ಲ ಕಡೆಯೂ ಏಕೆ ಹೀಗೇ ಇರಲಾರರು?

ಹಿನ್ನೀರೆಂಬ ವಿಸ್ಮಯ  



ಕೇರಳದ ಅರಬ್ಬಿ ಸಮುದ್ರ ತೀರಕ್ಕೆ ೧೫ ಕಿಲೋಮೀಟರಿನಷ್ಟು ಒಳಗೆ ಸಮಾನಾಂತರವಾಗಿ ಹರಡಿಕೊಂಡ ಹಿನ್ನೀರು ಕಾಲುವೆಗಳ ಜಾಲವಿದೆ. ಅದರಲ್ಲಿ ಐದು ದೊಡ್ಡ ಸರೋವರಗಳು ನಿರ್ಮಾಣವಾಗಿವೆ. ಈ ಸರೋವರಗಳನ್ನು ಮಾನವ ನಿರ್ಮಿತ ಹಾಗೂ ನೈಸರ್ಗಿಕ ಕಾಲುವೆಗಳು ಒಟ್ಟುಗೂಡಿಸಿವೆ. ಒಂಭೈನೂರು ಕಿಲೋಮೀಟರುಗಳಷ್ಟು ಉದ್ದದ ಹಿನ್ನೀರು ಕಾಲುವೆಗಳ ಈ ಜಾಲ ಕೇರಳದ ಒಳನಾಡು ಸಾರಿಗೆಗೆ, ಪ್ರವಾಸೋದ್ಯಮಕ್ಕೆ, ಇಕಾಲಜಿಯ ಉಳಿವಿಗೆ ದೊಡ್ಡ ಪಾಲು ಸಲ್ಲಿಸಿದೆ. ಮೂವತ್ತೆಂಟು ನದಿಗಳು ಸಮುದ್ರ ಸೇರುವ ಮುಖಜ ಭೂಮಿಯ ಸ್ಥಳದಲ್ಲಿ ನದಿ ಮತ್ತು ಸಮುದ್ರದ ಅಲೆಗಳು ಸೃಷ್ಟಿಸಿದ ನೂರಾರು ಸಣ್ಣಪುಟ್ಟ ದ್ವೀಪಗಳಿವೆ. ಅವು ಈ ಕಾಲುವೆಗಳಿಂದ ಸುತ್ತುವರೆದಿದ್ದರೆ ಮತ್ತೊಂದು ಕಡೆ ಒಳಗೆ ಫಲವತ್ತಾದ ಕಪ್ಪು ಭೂಮಿಯಿದೆ. ಎಷ್ಟೋ ಕಡೆ ಕೃಷಿಭೂಮಿ ಕಾಲುವೆಗಿಂತ ತಗ್ಗುಪ್ರದೇಶದಲ್ಲಿವೆ. ಮಳೆಗಾಲ ಗದ್ದೆಯಲ್ಲಿ ನೀರು ತುಂಬಿ, ಮನೆಗಳಿಗೂ ನೀರು ನುಗ್ಗಿ ಸರ್ಕಾರದ ಪುನರ್ವಸತಿ ಕೇಂದ್ರಗಳಿಗೆ ಜನ ಸ್ಥಳಾಂತರಗೊಳ್ಳುತ್ತಾರೆ ಎಂದು ತಿಳಿಯಿತು.

ಈ ನೀರ ಕಾಲುವೆಯ ಎರಡೂ ದಡಗಳಲ್ಲಿ ದಂಡೆಗುಂಟ ಸಾಲುಮನೆ. ಸಾಲು ಮನೆಗಳ ಉದ್ದುದ್ದದ ಬೀದಿಗಳೇ ಊರುಗಳು. ಪ್ರತಿ ಮನೆಯೆದುರಿನ ಮೆಟ್ಟಿಲು ನೀರಿನಲ್ಲಿ ಕೊನೆಯಾಗುತ್ತದೆ. ಆ ಮೆಟ್ಟಿಲ ಕಟ್ಟೆ ಮೇಲೆ ಸೋಪು, ಕಲ್ಲು, ಪಾತ್ರೆ ತಿಕ್ಕುವ ಗುಂಜು, ನೆನೆಸಿಟ್ಟ ಬಟ್ಟೆ ಇತ್ಯಾದಿ. ಪ್ರತಿ ಮನೆಯ ಎದುರು ಅವರವರ ಮನೆಯ ಪಾತಿ ದೋಣಿ.

ಅಲಪ್ಪುರಂ. ಅರುಂಧತಿ ರಾಯ್, ತಕಳಿ ಶಿವಶಂಕರ್ ಪಿಳ್ಳೈ ಅವರನ್ನು ಕೊಟ್ಟ ಹಿನ್ನೀರ ನಾಡು. ಎಂದೋ ನೋಡಿದ್ದ ಚೆಮ್ಮೀನ್ ಸಿನಿಮಾ, ಕರುತ್ತಮ್ಮ ನೆನಪಾದರು. ನೀರು ನೆಚ್ಚಿದ ಜನ, ನೀರ ಮೇಲಿನ ಬದುಕು. ದೊಡ್ಡ, ಸಣ್ಣ ಬೋಟು ಬಾರ್ಜುಗಳಲ್ಲಿ ಜನ ಓಡಾಡುತ್ತಲೇ ಇದ್ದರು. ಕಾಲು ಗಂಟೆಗೊಂದರಂತೆ ಬೋಟುಗಳು ಜನರನ್ನು ಹೊತ್ತು ಬರುತ್ತಿದ್ದವು. ನಾವಿಲ್ಲಿ ಬಸ್ಸು, ರಸ್ತೆಯನ್ನು ಬಳಸಿದಂತೆ ಅವರು ಜಲದಾರಿಯ ದೋಣಿ ಬಳಸುತ್ತಾರೆ. ೨೫೦ ಕಿಲೋಮೀಟರ್ ದೂರದ ನ್ಯಾಷನಲ್ ವಾಟರ್ ವೇ ನಂ. ೩ ಕೊಲ್ಲಂ (ಕ್ವಿಲಾನ್) - ಕೊಟ್ಟಪುರಂ ನಡುವೆ ಇದೆ. ಅಲಪ್ಪುರಂ-ಕೊಟ್ಟಾಯಂ-ಎರ್ನಾಕುಲಂ ನಡುವೆ ವೆಂಬನಾಡ್ ಸರೋವರವಿದೆ. ಇದು ಭಾರತದ ಅತಿ ಉದ್ದದ ಸರೋವರ. ಈ ಸರೋವರ ಸಮುದ್ರ ಸೇರುವಲ್ಲಿ ಕೊಚ್ಚಿ ನಗರವಿದೆ.

ಸಂಜೆಯಾಗುತ್ತಿತ್ತು. ನೀರಮೇಲಿನ ದೋಣಿಮನೆಯಲ್ಲಿ ತೇಲುತ್ತಿದ್ದೆವು. ದಂಡೆಯ ಮೀನು ಅಂಗಡಿಯಲ್ಲಿ ಇನ್ನೂ ಜೀವವಿದ್ದು ಕೈಕಾಲಾಡಿಸುವ ಏಡಿ ನನ್ನ ಉಳಿಸಿ ಎಂದು ಕೇಳಿಕೊಂಡಂತೆ ಭಾಸವಾಗಿ ಕಿಂಗ್ ಪ್ರಾನ್ ಮಾತ್ರ ಖರೀದಿಸಿ ತಂದಿದ್ದೆವು. ಕರಿಮೀನು ಫ್ರೈ ಮಸಾಲೆಯ ಗಮ ಗಾಳಿಯಲ್ಲಿ ತುಂಬಿತ್ತು. ನೀರ ನಡುವೆ ತೇಲುತ್ತ ಗಾಳಿಗೆ ಮುಖವೊಡ್ಡಿ ನಿಂತಿದ್ದರೂ ರೋಮರೋಮದಿಂದ ಬಸಿಯಲು ಬೆವರು ಹೊಂಚುಹಾಕುತ್ತಿತ್ತು. ದೋಣಿಮನೆಯ ಉಪ್ಪುಪ್ಪು ನೀರಿಗೆ ಮುಖ ತೊಳೆಯುವ ಮನಸ್ಸೂ ಆಗಲಿಲ್ಲ. ಕೈಲಿ ಬೆಂಡು ಹಿಡಿದು ಈಜು ಕಲಿಯುತ್ತಿದ್ದ ಎಳೆಪೋರನೊಬ್ಬ ತಕರಾರಿನ ದನಿಯಲ್ಲಿ ಅಪ್ಪನ ಕೋಲಿಗೆ ಉತ್ತರ ಕೊಡುತ್ತಿದ್ದ. ದೋಣಿಪಕ್ಕ ದಂಡೆಯ ಮೇಲಿನ ಬಾತುಗಳು ವಟ್ಟಗಂಟಲಿನಲ್ಲಿ ಕುಂಯ್ಞೋಮರ್ರೋ ಎಂದು ಕಿರುಚಿಕೊಳ್ಳುತ್ತಿದ್ದವು. ಅದರಾಚೆ ಮನೆಯವರು ಕೀರಲು ದನಿಯ ಆಕ್ರಂದನದ ಹೊರತಾಗಿಯೂ ಕೋಲಿನಲ್ಲಿ ತಿರುಗಿಸಿ ಮುರುಗಿಸಿ ಕಪ್ಪು ಜೀವಿಯೊಂದನ್ನು ಹೊಡೆಯುತ್ತಿದ್ದರು. ಕ್ಯಾಮೆರಾ ಝೂಮ್ ಹಾಕಿ ನೋಡಿದರೆ ಬಾವಲಿ!

ಮುಂದಿನ ಹುಟ್ಟುಹಬ್ಬಕ್ಕೆ ಸ್ಕೂಟಿ ಕೊಡಿಸಿರೆಂದು ಕೇಳುತ್ತಿರುವ ಮಗಳ ಪ್ರಕಾರ ಅಲ್ಲಿನ ಹುಡುಗರು ಹುಟ್ಟುಹಬ್ಬಕ್ಕೆ ‘ಸ್ಪೀಡ್ ಬೋಟ್’ ಡಿಮ್ಯಾಂಡ್ ಮಾಡುತ್ತಾರೆ. ಶಾಲೆ, ಆಸ್ಪತ್ರೆ ಎಲ್ಲಿಗೇ ಹೋಗಬೇಕಾದರೂ ರಾತ್ರಿ, ಹಗಲೆನ್ನದೇ, ಚಳಿಮಳೆಯೆನ್ನದೇ ಅವರು ದೋಣಿಯನ್ನವಲಂಬಿಸಿದ್ದಾರೆ. ಕಾಯಿಲೆ, ಹೆರಿಗೆ, ಇನ್ನಿತರ ಎಮರ್ಜೆನ್ಸಿಗಳ ಸಮಯದಲ್ಲಿ ಎಷ್ಟು ಅನಾನುಕೂಲವಲ್ಲವೆ? ಆದರೆ ಅವರಿಗಿದು ಅನಾನುಕೂಲವೆನಿಸಿರಲಿಕ್ಕಿಲ್ಲ. ಹಾಗಾಗಿದ್ದಲ್ಲಿ ಇಷ್ಟು ಜನ ಇಲ್ಲಿರುತ್ತಿರಲಿಲ್ಲ. ನಾವು ರಸ್ತೆಯನ್ನವಲಂಬಿಸಿದಂತೆಯೇ ಅವರು ಕಾಲುವೆಗಳನ್ನು ಅವಲಂಬಿಸಿರಬಹುದು. ಹಿನ್ನೀರ ದಡದಲ್ಲಿ ಹುಟ್ಟಿದ ಕಾರಣಕ್ಕೆ ಇಲ್ಲಿನ ಜನರ ಬದುಕಿನ ಲಯವೇ ಬೇರೆಯಾಗಿದೆ.  

ದಕ್ಷಿಣ ಭಾರತದ ರಾಜ್ಯಗಳು ಪಕ್ಕಪಕ್ಕವೇ ಇದ್ದರೂ ಅವುಗಳ ಭಾಷೆ, ಉಡುಪು, ಊಟೋಪಚಾರ, ಆದ್ಯತೆ, ಆಚರಣೆಗಳಲ್ಲಿ ಎಷ್ಟೊಂದು ವಿಭಿನ್ನತೆ, ಅನನ್ಯತೆ? ಈ ದೇವರ ರಾಜ್ಯದಲ್ಲಿರುವ ಪ್ರತಿಯೊಂದೂ - ಅಡವಿ, ಬೆಟ್ಟ, ಬಯಲು, ಚಹಾ ತೋಟ, ಮೀನು, ಸಮುದ್ರ ತೀರ, ಜಲಾಶಯ, ಪರಂಪರೆ, ಚಾರಿತ್ರಿಕ ಸ್ಥಳ, ಮಾನವ ಸಂಪನ್ಮೂಲ - ಇವೆಲ್ಲವೂ ನಮ್ಮಲ್ಲಿವೆ. ಆದರೂ ಪ್ರವಾಸೋದ್ಯಮಕ್ಕೆ ಏಕೆ ಪ್ರಾಮುಖ್ಯತೆಯಿಲ್ಲ? ಭೂಮಿಯ ಒಳಹೊರಗಿರುವ ಸಂಪತ್ತನ್ನೆಲ್ಲ ಎರಡೂ ಕೈಗಳಲ್ಲಿ ಬಾಚಿಬಾಚಿ ಕಬಳಿಸಿದ ಬಳಿಕವೇ ಪ್ರವಾಸೋದ್ಯಮಕ್ಕೆ ಗಮನ ಕೊಡುವವರೇ ನಾವು?

ಅಮಾವಾಸ್ಯೆಯ ಇರುಳು. ಮೋಡ ತುಂಬಿದ ಚಂದ್ರ ಚಿಕ್ಕೆಗಳಿಲ್ಲದ ಆಕಾಶ. ಆದರೂ ನೀರಿನಲ್ಲಿ ಇರುಳು ಪ್ರತಿಫಲಿಸುತ್ತಿತ್ತು. ರಾತ್ರಿ ಹತ್ತಾದರೂ ಜನರನ್ನು ಸಾಗಿಸುವ ಬೋಟು ಮಾರಿಗೊಂದರಂತೆ ಎರಡೂ ದಂಡೆಗಳ ದೋಣಿ ಸ್ಟಾಪುಗಳಲ್ಲಿ ನಿಂತು ಜನರನ್ನು ಹತ್ತಿ, ಇಳಿಸಿ ಓಡಾಡುತ್ತಿತ್ತು. ಪ್ರತಿ ಬೋಟು ಎಬ್ಬಿಸಿದ ಅಲೆಯೂ ನಮ್ಮ ದೋಣಿಮನೆಯನ್ನು ಎಷ್ಟೋ ಹೊತ್ತಿನವರೆಗೆ ತೂಗುತ್ತಿತ್ತು. ಹಾಗೆಯೇ ತುಯ್ದಾಡುವ ತಹಬಂದಿಗೆ ಬರದ ಮನಸೂ..



1 comment:

  1. ಅನ್ಯಾಯವಾಗಿ ಕೇರಳಕ್ಕೆ ಸೇರಿಹೋದ ಕನ್ನಡನೆಲ ಕಾಸರಗೋಡಿನ ಭಾಷೆ ಸಂಸ್ಕೃತಿಗಳನ್ನು ಮಲಯಾಳ ಕಡ್ಡಾಯ ಹೇರಿಕೆ ಮೂಲಕನ ಕೇರಳ ಸರಕಾರ ನಾಶ ಮಾಡುತ್ತಾ ಇದೆ. ವಯನಾಡು, ಇಡುಕ್ಕಿ ಮೊದಲಾದೆಡೆ ಕೂಡ ಆದಿವಾಸಿಗಳಾದ ಕನ್ನಡಿಗರಿದ್ದು ಅವರ ಆಡುನುಡಿಯೂ ನಾಶವಾಗುತ್ತಿದೆ. ಕರ್ನಾಟಕದ ಕನ್ನಡ ಲೇಖಕರಾಗಲೀ ಸರಕಾರವಾಗಲೀ ಇದನ್ನು ಗಮನಿಸಿ ಕೇರಳದ ಭಾಷಾ ಅಲ್ಪಸಂಖ್ಯಾಕರ ಸಂರಕ್ಷಣೆಗೆ ಪ್ರಯತ್ನಿಸುತ್ತಾ ಇಲ್ಲ

    ReplyDelete