Thursday 26 June 2014

ಒಂದು ಬೇಸಿಗೆ, ಒಂದಷ್ಟು ಪ್ರಶ್ನೆ: ತೇನೆಹಕ್ಕಿಗೆ ಸದಾ ತಳಮಳ..







ಬಿರುಬಿಸಿಲು ಬೆಳಗಿನ ಹತ್ತೂವರೆಗೇ ರಾಚುತ್ತಿತ್ತು. ದೆಹಲಿಯಿಂದ ಆಗ್ರಾಗೆ ಹೋಗಲು ದೇಶದಲ್ಲಿಯೇ ಅತಿದೊಡ್ಡ ಆರು ಲೇನುಗಳ ‘ಯಮುನಾ ಎಕ್ಸ್‌ಪ್ರೆಸ್‌ವೇ’ ಹಾದಿ ಹಿಡಿಯಲು ಹೊರಟಿದ್ದೆವು. ‘ಜಮುನಾ ಜಿ’ ಎಂದು ದೆಹಲಿಗರು ಕರೆಯುವ ಯಮುನಾ ನದಿಯೇ ಗಡಿ. ದೆಹಲಿ ಮುಗಿದು ಉತ್ತರಪ್ರದೇಶ ರಾಜ್ಯದ ನೋಯ್ಡಾ ಶುರುವಾಗುತ್ತದೆ. ಆದರೆ ಕ್ಷೀಣವಾಗಿ ಹರಿವ ಯಮುನೆಯನ್ನು ದಾಟಿದರೂ ದೆಹಲಿ ಪಟ್ಟಣವೇ ಮುಂದುವರಿದಂತೆ ಕಾಣುತ್ತಿದೆಯಲ್ಲ ಎಂದು ಅಚ್ಚರಿಪಡುವಾಗ ಉತ್ತರ ಪ್ರದೇಶ ಬಂತೆಂದು ಧುತ್ತನೆ ಎದುರಾದ ಪಾರ್ಕ್ ಮತ್ತು ಮೂರ್ತಿಗಳು ತಿಳಿಸಿಬಿಟ್ಟವು!

ಎತ್ತರದ ಕಾಂಪೌಂಡಿನ ಒಳಗೆ ವಿಶಾಲವಾದ ಪಾರ್ಕ್. ಒಂದಷ್ಟು ಕಂಚಿನ ಮೂರ್ತಿಗಳು, ಕಲ್ಲಿನ ಆನೆಗಳು. ನಡುವೆ ದೊಡ್ಡ ಕಾರಂಜಿ. ಒಳಪ್ರವೇಶಿಸಿದರೆ ಒಂದೇ ಒಂದು ನರಹುಳದ ಸುಳಿವಿಲ್ಲದೆ ನಿರ್ಜನವಾಗಿ ಬಿಸಿಲಿನಲ್ಲಿ ರಣಗುಡುವ ಪಾರ್ಕ್. ಯಮುನಾ ನದಿಯ ದಂಡೆಗುಂಟ ನಿರ್ಮಿಸಲಾದ ‘ದಲಿತ ಪ್ರೇರಣಾ ಸ್ಥಳ್’ ೩೩ ಎಕರೆ ವಿಸ್ತಾರವಿತ್ತು. ಹಸಿರು ಕಾಡಿಗಿಂತ ಮೂರ್ತಿಗಳ, ಸ್ತಂಭಗಳ ಕಾಡಿನಂತೆ ತೋರುವ ೮೨.೫ ಎಕರೆ ಜಾಗದಲ್ಲಿ ‘ರಾಷ್ಟ್ರೀಯ ದಲಿತ ಸ್ಮಾರಕ್’ ಹರಡಿಕೊಂಡಿತ್ತು. ನಡುಮಧ್ಯ ೩೦೦ ಅಡಿ ಎತ್ತರದ ಸ್ತಂಭ, ಅದರ ಮೇಲೆ ನಾಲ್ಕೂ ದಿಕ್ಕಿಗೆ ಕೆತ್ತಲ್ಪಟ್ಟ ಆನೆಯ ಮೂರ್ತಿಗಳು. ಕೆಳಗೆ ೧೮ ಅಡಿ ಎತ್ತರದ ೧೫ ಕಂಚಿನ ಮೂರ್ತಿಗಳು. ‘ಈ ನೆಲದ ಶೋಷಿತರ ಬದುಕನ್ನು ಆತ್ಮಸಮ್ಮಾನವಾಗಿ ಪರಿವರ್ತಿಸಲು ದುಡಿದವರ ಸ್ಮಾರಕ’ ಎಂದು ವರ್ಣಿಸಲಾದ ಜಾಗದಲ್ಲಿ ಡಾ. ಬಿ. ಆರ್. ಅಂಬೇಡ್ಕರ್, ಕಾನ್ಶೀರಾಂ ಹಾಗೂ ಮಾಯಾವತಿ ಅವರ ಮೂರ್ತಿಗಳು ಎದುರಿಗೇ ಕಾಣಿಸಿದವು. ಈ ವರ್ತುಲದ ಹೊರಭಾಗದಲ್ಲಿ ಇಕ್ಕೆಲಗಳಲ್ಲೂ ೨೪ ಬೃಹತ್ ಆನೆಯ ಮೂರ್ತಿಗಳಿವೆ. ೭೦೦೦ ಮರಗಳನ್ನು ನೆಡಲಾಗಿದೆ. ರಾತ್ರಿಯೂ ಬೆಳಗುವಂತೆ ೩೦೦೦ ವಿಶೇಷ ಲೈಟುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ೨೦೧೧ರಲ್ಲಿ ಮಾಯಾವತಿ ಉದ್ಘಾಟಿಸಿದ್ದರೂ ನಿರ್ಮಾಣ ಕೆಲಸ ಪೂರ್ಣವಾಗದೇ ಸಾರ್ವಜನಿಕರ ಪ್ರವೇಶಕ್ಕೆ ಅದು ಮುಕ್ತವಾಗಿರಲಿಲ್ಲ. ೨೦೧೩ರಲ್ಲಿ ಅಖಿಲೇಶ್ ಯಾದವ್ ಮತ್ತೆ ಅದನ್ನು ಸ್ವಚ್ಛಗೊಳಿಸಿ, ತಮ್ಮ ಪಕ್ಷದ ಚಿಹ್ನೆಯಾದ ಸೈಕಲ್ ಅನ್ನು ೨೦೦ ಜನ ಬಡವರಿಗೆ (ದಲಿತರಿಗೆ) ವಿತರಿಸಿ ಸಾರ್ವಜನಿಕ ವೀಕ್ಷಣೆಗೆ ತೆರವುಗೊಳಿಸಿದ್ದಾರೆ.

ಇದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಕನಸು. ಮಿನಾರು, ಮಹಲು, ಗೋರಿ, ಸ್ಮಾರಕಗಳು ಕಿಕ್ಕಿರಿದ ಉತ್ತರಭಾರತದಲ್ಲಿ ಅವುಗಳ ನಡುವೆ ತಮ್ಮದೂ ಇರಲಿ ಎಂದು ಜನನಾಯಕರು ಇಂಥ ಸ್ಮಾರಕಗಳ ನಿರ್ಮಾಣಕ್ಕೆ ಕೈಹಾಕಿದರೇ ಎಂಬ ಪ್ರಶ್ನೆಯೇಳುತ್ತಿರುವಾಗಲೇ ಬಹುಜನರಿರಬೇಕಾದ ಸ್ಥಳವು ಸೆಕ್ಯೂರಿಟಿ ಗಾರ್ಡ್ ಹೊರತುಪಡಿಸಿ ಜನರೇ ಇಲ್ಲದೇ ಭಣಗುಡುವುದು ವಿಪರ್ಯಾಸ ಎನಿಸತೊಡಗಿತು. ೬೮೫ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸ್ಮಾರಕ ಉತ್ತರಪ್ರದೇಶದ ‘ಬಹುಜನ’ರಲ್ಲಿ ಆತ್ಮವಿಶ್ವಾಸ ತುಂಬಿರುವ ಬಗ್ಗೆಯೂ ಅನುಮಾನ ಮೂಡಿತು. ಇನ್ನೂ ಕಣ್ಣಲ್ಲೇ ತೂಗುತ್ತಿದ್ದ ಬದಾವೂಂ ಸೋದರಿಯರ ಚಿತ್ರದಿಂದ ‘ದಲಿತ ಪ್ರೇರಣಾ ಸ್ಥಳ್’ ಮತ್ತಷ್ಟು ರಣಗುಡುವಂತೆ ತೋರತೊಡಗಿತು..





ಮಾವಿನಮರದಲ್ಲಿ ಕೇವಲ ಮಾವಿನಹಣ್ಣುಗಳಷ್ಟೇ ನೇತಾಡುವುದಿಲ್ಲ..

ದೇಶದ ಅತ್ಯಂತ ಬಡ, ಜನಭರಿತ ರಾಜ್ಯ ಉತ್ತರಪ್ರದೇಶ ೭೫ ಜಿಲ್ಲೆ, ೨೦ ಕೋಟಿ ಜನಸಂಖ್ಯೆ ಹೊಂದಿದೆ. ಹಾಗೆಯೇ ಉತ್ತರ ಪ್ರದೇಶ ಹಲವಾರು ಐತಿಹಾಸಿಕ, ಪೌರಾಣಿಕ, ಪ್ರವಾಸೀ, ಜಗತ್ಪ್ರಸಿದ್ಧ ತಾಣಗಳನ್ನು ಹೊಂದಿದೆ. ಅತಿ ಹೆಚ್ಚು ಅಪರಾಧ ಪ್ರಕರಣಗಳು ಸಂಭವಿಸುವ, ದೇಶದ ಸರಾಸರಿಗಿಂತ ಕಡಿಮೆ ಲಿಂಗಾನುಪಾತ (೯೦೮) ಹೊಂದಿರುವ ರಾಜ್ಯ ಅದು. ಹಾಗೆಯೇ ೨೦% ಜನಸಂಖ್ಯೆ ದಲಿತರಿರುವ, ಭಾರತದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯನ್ನು ಪಡೆದ ರಾಜ್ಯವೂ ಹೌದು. ಇಷ್ಟೆಲ್ಲ ಪೂರ್ವಪೀಠಿಕೆಗಳ ಹೊರತಾಗಿಯೂ ಆ ರಾಜ್ಯದಲ್ಲಿ ದಲಿತ ದೌರ್ಜನ್ಯ, ಜಾತಿದೌರ್ಜನ್ಯ ಹೆಚ್ಚೆಚ್ಚು ಸಂಭವಿಸುತ್ತಿವೆ ಎಂದು ಹೇಳದೇ ಇರಲಾಗುವುದಿಲ್ಲ. ಇತ್ತೀಚೆಗೆ ಆ ರಾಜ್ಯದಲ್ಲಿ ನಡೆದ ದಲಿತ ಸೋದರಿಯರ ಅತ್ಯಾಚಾರ-ಕೊಲೆ ಪ್ರಕರಣ ಇದಕ್ಕೆ ಸಾಕ್ಷಿಯಾಗಿದೆ.

ಉತ್ತರ ಪ್ರದೇಶದ ಬದಾವೂಂ ಜಿಲ್ಲೆಯ ಕತ್ರಾ ಸಾದತ್‌ಗಂಜ್ ಹಳ್ಳಿಯಲ್ಲಿ ಮೇ ೨೭ರ ರಾತ್ರಿ ಇಬ್ಬರು ಸೋದರಸಂಬಂಧಿ ಹುಡುಗಿಯರು ತಮ್ಮೂರಿನ ಏಕೈಕ ಶೌಚಾಲಯವಾದ ಬಯಲ ಕಡೆಗೆ ಹೊರಟರು. ಹಾಗೆ ಹೊರಟವರು ಮತ್ತೆ ವಾಪಸು ಬರಲಿಲ್ಲ. ಸರಿ ರಾತ್ರಿಯಾದರೂ ಅವರು ಬರಲಿಲ್ಲವೆಂದು ಒಬ್ಬಾಕೆಯ ಅಪ್ಪ ಪೊಲೀಸ್ ಸ್ಟೇಷನ್ನಿಗೆ ದೂರು ಕೊಡಲು ಹೋದರೆ ಪೊಲೀಸರು ಅವನ ಕಪಾಳಕ್ಕೆ ಬಾರಿಸಿ ವಾಪಸು ಕಳಿಸಿದರು. ಅಂತೂ ಬೆಳಗಾಯಿತು. ಆ ಮಾವಿನ ಮರದಲ್ಲಿ ಕೇವಲ ಹಣ್ಣುಗಳಷ್ಟೇ ಅಲ್ಲ, ಇಬ್ಬರು ಹುಡುಗಿಯರ ಶವಗಳೂ ನೇತಾಡುತ್ತಿದ್ದವು. ಶೌಚಕ್ಕೆಂದು ಹೋದವರನ್ನು ಏಳು ಜನರ ಗುಂಪು ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿ, ಹಿಂಸಿಸಿ ಕೊಂದು ಕೊನೆಗೆ ಮರಕ್ಕೆ ನೇತಾಡಿಸಿದ್ದರು.

ಒಟ್ಟಾದ ಜನ ಗದ್ದಲ ಎಬ್ಬಿಸಿ ಪೊಲೀಸ್ ಸ್ಟೇಷನ್ನಿಗೆ ಹೋದಮೇಲೆ ದೂರು ದಾಖಲಾಯಿತು.

ಅತ್ಯಂತ ಭೀಕರವಾದ ಈ ಘಟನೆಯಲ್ಲಿ ಅತ್ಯಾಚಾರಕ್ಕೊಳಗಾದವರು ದಲಿತ ಬಾಲಕಿಯರು. ದೌರ್ಜನ್ಯ ಎಸಗಿದವರು ಯಾದವ ಸಮುದಾಯದವರು. ಯಾವ ಜಾತಿಯಾದರೇನು, ಅತ್ಯಾಚಾರವೆಂಬ ಗುನ್ನೆಯನ್ನಷ್ಟೇ ಪರಿಗಣಿಸಬೇಕೆಂದು ಕೆಲವರು ವಾದಿಸಬಹುದು. ಆದರೆ ಜಾತಿಗೂ, ದೌರ್ಜನ್ಯಕ್ಕೂ ನೇರ ಸಂಬಂಧವಿದೆ. ದೆಹಲಿಯ ನಿರ್ಭಯಾ ಸತ್ತಮೇಲೂ ಅವಳ ಗುರುತು ನಮಗೆ ಗೊತ್ತಾಗದೇ ಗುಪ್ತವಾಗಿಡಲ್ಪಟ್ಟಿದೆ; ಮುಂಬಯಿಯ ಜರ್ನಲಿಸ್ಟ್ ಹುಡುಗಿಯ ಹೆಸರು-ಗುರುತು ಯಾರಿಗೂ ತಿಳಿದಿಲ್ಲ; ಆದರೆ ಬಡಹಳ್ಳಿಯೊಂದರ ದಲಿತ ಹುಡುಗಿಯರಾದರೋ ನೇತಾಡುವ ಸ್ಥಿತಿಯಲ್ಲಿಯೇ ಟಿವಿ ಸ್ಕ್ರೀನ್, ಪತ್ರಿಕೆಗಳ ಮುಖಪುಟಗಳಲ್ಲಿ ಜಾಗ ಪಡೆದರು.

ಯಾದವರು ಆಳುವ ಜಾತಿಯಾಗಿರುವ ಉತ್ತರಪ್ರದೇಶದಲ್ಲಿ ಆ ಸಮುದಾಯಕ್ಕೆ ಈಗ ಎಲ್ಲಿಲ್ಲದ ಧೈರ್ಯ ಬಂದಿದೆ. ಆದರೆ ದಲಿತರ ಪಕ್ಷ ಆಳುವ ಪಕ್ಷವಾಗಿದ್ದಾಗ ದಲಿತರ ಆತ್ಮವಿಶ್ವಾಸ ಹೆಚ್ಚಿತೆಂದು ಹೇಳಬರುವುದಿಲ್ಲ. ದಲಿತರಿಗೆಂದೇ ಒಂದು ಪಕ್ಷ, ಅದರ ನಾಯಕಿಯೇ ಮುಖ್ಯಮಂತ್ರಿಯಾಗಿ ಇದ್ದಾಗಲೂ ಶೋಷಿತರು ನಿಸ್ಸಹಾಯಕರಾಗಿದ್ದರು. ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು. ಅಧಿಕಾರದಲ್ಲಿ ಯಾರೇ ಇರಲಿ, ಗ್ರಾಮೀಣ ಭಾಗದಲ್ಲಿ ಇವತ್ತಿಗೂ ಒಬ್ಬ ದಲಿತ ತಲೆಯೆತ್ತಿ ಆತ್ಮವಿಶ್ವಾಸದಲ್ಲಿ ನಡೆದರೆ, ಪ್ರಶ್ನೆ ಕೇಳಿದರೆ ಅವರನ್ನು ತುಳಿಯಲು ಪಾರಂಪರಿಕ ಪಾದಗಳು ಸಜ್ಜಾಗಿಯೇ ಇರುತ್ತವೆ. ಇದು ಭಾರತೀಯ ಜಾತಿಪದ್ಧತಿ ಎಂಬ ಕಟುವಾಸ್ತವ. ಆದರೆ ಮಾಯಾವತಿ ನಡೆಗಳ ಇತಿಮಿತಿಗಳೇನೇ ಇದ್ದರೂ ಆಕೆ ಬದಾಂವೋಂಗೆ ಬಂದು ಸಂತ್ರಸ್ತ ಕುಟುಂಬಗಳಿಗೆ ಪಕ್ಷದ ನಿಧಿಯಿಂದ ತಲಾ ಐದು ಲಕ್ಷ ಕೊಟ್ಟದ್ದು ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದ್ದು ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೆ ನೆರವಾಯಿತು; ಇಲ್ಲದಿದ್ದರೆ ತನಿಖೆ ಹಳ್ಳ ಹಿಡಿಯುತ್ತಿತ್ತು ಎನ್ನುವದನ್ನೂ ಅಲ್ಲಗಳೆಯುವಂತಿಲ್ಲ.

ಒಟ್ಟಾರೆ ದೇಶ ಜಾತಿವ್ಯವಸ್ಥೆಯ ಹಿಡಿತದಲ್ಲಿ ಈಗಲೂ ನಲುಗುತ್ತಿದೆ; ಅದರಲ್ಲೂ ಮಹಿಳೆ ಜಾತಿವ್ಯವಸ್ಥೆಯ ಬಲಿಪಶುವಾಗಿದ್ದಾಳೆ ಎನ್ನುವುದಕ್ಕೆ ಪುರಾವೆಯಾಗಿ ಹಲವಾರು ಪ್ರಕರಣಗಳು ಸಂಭವಿಸುತ್ತಿವೆ.

ಏನಿದು ಹೀಗೆ? ಏಕೆ ಹೀಗೆ?

ಎಷ್ಟು ಬರೆದರೂ, ಹೇಳಿದರೂ, ವಾದಿಸಿದರೂ ಅತ್ಯಾಚಾರ ಪ್ರಕರಣಗಳು ಸಂಭವಿಸುತ್ತಲೇ ಇವೆ. ಬದಾವೂಂ ದುರ್ಘಟನೆ ನಡೆದ ಸುತ್ತಮುತ್ತ ಮತ್ತಷ್ಟು ಅಂಥ ವರದಿಗಳನ್ನು ಓದಿದೆವು. ಉತ್ತರ ಪ್ರದೇಶದಲ್ಲಿ ಜೂ. ೨೩ರಂದು ೭ ವರ್ಷದ ಹುಡುಗಿ ಶೌಚಕ್ಕೆಂದು ಹೊರಹೋದಾಗ ಗುಂಪು ಅತ್ಯಾಚಾರ ನಡೆಸಲಾಯಿತು. ಜೂ. ೨೨ರಂದು ಇಟಾವಾದಲ್ಲಿ ೧೫ ವರ್ಷದ ಹುಡುಗಿ ನೇಣುಹಾಕಿಕೊಂಡಳು. ಜಮೀನು ವಿವಾದದ ಕಾರಣಕ್ಕೆ ಇಟಾವಾ ಹುಡುಗಿಯ ಅಕ್ಕನ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ ಗುಂಪಿನ ವಿರುದ್ಧ ಅವಳು ದೂರು ಕೊಟ್ಟು ತಿರುಗಾಡಿದ್ದಳು. ಆದರೂ ಪೊಲೀಸರು ಬಂಧಿಸಲಿಲ್ಲ. ಆ ಗುಂಪು ಇವಳನ್ನೂ ಅತ್ಯಾಚಾರ ಮಾಡುವುದಾಗಿ ಹೆದರಿಸುತ್ತಲೇ ಇತ್ತು. ಅತ್ಯಾಚಾರಕ್ಕೊಳಗಾಗುವ ಭಯಕ್ಕೇ ಇಟಾವಾ ಹುಡುಗಿ ಆತ್ಮಹತ್ಯೆಗೆ ಶರಣಾದಳು. ಬದಾವೂಂ ಆಸುಪಾಸಿನಲ್ಲೇ ವಿವಾಹಿತ ಮಹಿಳೆಯನ್ನು ಅತ್ಯಾಚಾರ ಮಾಡಿ ನೇಣಿಗೇರಿಸಲಾಯಿತು. ಮಧ್ಯಪ್ರದೇಶದ ಭಿಲಾಯಿಖೇಡಾದಲ್ಲಿ ವಿವಾಹಿತ ಆದಿವಾಸಿ ಮಹಿಳೆಯ ಮೇಲೆ ಅವಳ ಗಂಡನೂ ಸೇರಿದಂತೆ ೧೦ ಜನ ಗುಂಪು ಅತ್ಯಾಚಾರ ನಡೆಸಿ ಅವಳ ಪುಟ್ಟ ಮಗನೆದುರು ಬತ್ತಲೆ ಮೆರವಣಿಗೆ ಮಾಡಿ, ಉಚ್ಚೆ ಕುಡಿಸಿದರು. ಅದಕ್ಕೆ ಕಾರಣ ಜಮೀನು ವಿವಾದ. ಹರ‍್ಯಾಣಾದ ಭಗಾನಾ ಹಳ್ಳಿಯ ೮೦ ಕುಟುಂಬಗಳು ತಮ್ಮ ಕೇರಿಯ ನಾಲ್ವರು ಹುಡುಗಿಯರ ಮೇಲೆ ಅತ್ಯಾಚಾರ ಎಸಗಿ ರೈಲ್ವೆ ಹಳಿ ಪಕ್ಕ ಎಸೆದು ಹೋಗಿದ್ದಕ್ಕಾಗಿ ದೆಹಲಿಯ ಉರಿಯುವ ರಣಬಿಸಿಲಿನಲ್ಲಿ ಪ್ರತಿಭಟನೆಗೆ ಕುಳಿತಿದ್ದರು. ಮೇಘಾಲಯದ ಸಶಸ್ತ್ರ ಬಂಡುಕೋರರು ಲೈಂಗಿಕ ಕ್ರಿಯೆಗೆ ಸಹಕರಿಸದೆ ಪ್ರತಿರೋಧ ತೋರಿದಳೆಂದು ಒಬ್ಬಳನ್ನು ಗುಂಡುಹಾಕಿ ಕೊಂದರು. ಗುರ‍್ಗಾಂವ್‌ನ ೧೯ ವರ್ಷದ ಹುಡುಗಿ; ಬೆಂಗಳೂರಿನ ಐಟಿ ಉದ್ಯೋಗಿ; ಮಹಾರಾಷ್ಟ್ರದ ಬಸ್ ಕಂಡಕ್ಟರ್; ಜಾರ್ಖಂಡ್, ಪ. ಬಂಗಾಳ, ಜಮ್ಮು ಕಾಶ್ಮೀರ, ರಾಜಸ್ಥಾನ, ಗುಜರಾತ್ - ಹೀಗೆ ಎಲ್ಲೆಲ್ಲೂ ಅತ್ಯಾಚಾರ ಪ್ರಕರಣಗಳು ‘ದೈನಿಕ ಭಾಸ್ಕರ್’ನಲ್ಲಿ ವರದಿಯಾಗಿದ್ದವು.

ಬದಾವೂಂ ಪ್ರಕರಣ ಕುರಿತು ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ತಮ್ಮ ಹೇಳಿಕೆಯಲ್ಲಿ ಅತ್ಯಾಚಾರವೇನೂ ಅಂಥ ವಿಶೇಷ ಅಪರಾಧವಲ್ಲ, ಅದು ಅತ್ಯಂತ ಸಾಮಾನ್ಯ ಅಪರಾಧ ಎಂದು ವಿವರಿಸಿದ್ದರು. ಎಸ್‌ಪಿ ನಾಯಕ ನರೇಶ್ ಅಗರವಾಲ್ ‘ಅತ್ಯಾಚಾರ ಆರೋಪ ನಿಜವಲ್ಲ, ಪ್ರಾಣಿಗಳಲ್ಲೂ ಕೂಡ ಒಪ್ಪಿಗೆಯಿಲ್ಲದೆ ಲೈಂಗಿಕ ಸಂಪರ್ಕ ಸಾಧ್ಯವಿಲ್ಲ’ ಎಂದು ಹೇಳಿದ್ದರು. ಮಧ್ಯಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಬಾಬುಲಾಲ್ ಗೌರ್ ‘ಅತ್ಯಾಚಾರ ನಡೆಸುವುದು ಒಮ್ಮೊಮ್ಮೆ ಸರಿ, ಒಮ್ಮೊಮ್ಮೆ ತಪ್ಪು’ ಎಂದು ಹೇಳಿದರು. ಛತ್ತೀಸ್‌ಗಡದ ಗೃಹಮಂತ್ರಿ ರಾಮಸೇವಕ ಪೈಕಾ (ಬಿಜೆಪಿ) ‘ಅತ್ಯಾಚಾರ ಆಕಸ್ಮಿಕವಾಗಿ ಆಗಿಬಿಡುತ್ತದೆ, ಯಾರೂ ಅದನ್ನು ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ’ ಎಂದು ಸಮರ್ಥಿಸಿಕೊಂಡರು. ಮಹಾರಾಷ್ಟ್ರದ ಗೃಹಮಂತ್ರಿ ಆರ್. ಆರ್. ಪಾಟೀಲ್ (ಎನ್‌ಸಿಪಿ) ‘ಅತ್ಯಾಚಾರ ತಡೆಗಟ್ಟಲು ಸಾಧ್ಯವೇ ಇಲ್ಲ, ಏಕೆಂದರೆ ಬಹಳಷ್ಟು ಮನೆಗಳಲ್ಲಿ ಕುಟುಂಬದಲ್ಲೇ ಅತ್ಯಾಚಾರ ಸಂಭವಿಸುತ್ತದೆ, ಅಲ್ಲೆಲ್ಲ ಪೊಲೀಸರನ್ನು ನಿಲ್ಲಿಸಬರುವುದಿಲ್ಲ’ ಎಂದರು! ನಮ್ಮ ಪ್ರಧಾನಮಂತ್ರಿಗಳು ಎಷ್ಟು ದಿನವಾದರೂ ಬದಾವೂಂ ಬಗೆಗೆ ಮಾತೇ ಆಡಲಿಲ್ಲ. ಪಕ್ಷಭೇದವಿಲ್ಲದೆ ಜನನಾಯಕರು ಮಹಿಳೆಯರನ್ನು ತಾವು ಹೇಗೆ ಪರಿಭಾವಿಸುತ್ತೇವೆಂದು ತಿಳಿಸಿಕೊಟ್ಟರು.

ಅನಾದಿಯಿಂದಲೂ ಇಲ್ಲಿರುವ ರೇಪ್ ಸಂಸ್ಕೃತಿ ಈಗ ಲಿಂಗದ್ವೇಷದ ರೂಪ ಪಡೆದು ಮುಂದುವರೆಯುತ್ತಿದೆಯೆ? ಗಂಡಿನ ಸೇಡು ತೀರಿಸಿಕೊಳ್ಳುವಿಕೆಗೆ ಒಂದು ಉಪಕರಣವಾಗಿ ಹೆಣ್ಣಿನ ದೇಹ ಬಳಕೆಯಾಗುತ್ತಿದೆಯೆ? ತಮ್ಮ ‘ಆಸ್ತಿ’ಯಾದ ಹೆಣ್ಣನ್ನು ಹೇಗಾದರೂ ಬಳಸಿಕೊಳ್ಳಬಹುದು ಎಂದು ಗಂಡ, ಕುಟುಂಬ, ಸಮಾಜ ಭಾವಿಸಿವೆಯೆ? ಮಹಿಳಾ ಮಂತ್ರಿ-ಮುಖ್ಯಮಂತ್ರಿ, ಮಹಿಳಾ ಪರ ಕಾನೂನು, ಮಹಿಳಾ ಪೊಲೀಸ್ ಸ್ಟೇಷನ್, ಮಹಿಳಾ ಮೀಸಲಾತಿ, ಮಹಿಳಾ ಆಯೋಗ, ರೇಪ್ ಸೆಲ್ ಎಲ್ಲ ಇದ್ದರೂ ಮಹಿಳೆಯರ ಧೈರ್ಯ ದಿನದಿಂದ ದಿನಕ್ಕೆ ಏಕೆ ಕಡಿಮೆಯಾಗುತ್ತಿದೆ?

ಇಂಥ ಎಲ್ಲ ಪ್ರಶ್ನೆಗಳ ನಡುವೆ ಸಹಸ್ರಮಾನಗಳಿಂದ ಗೆದ್ದವ ಸೋತವನ ಹೆಣ್ಣನ್ನು ಉಪಭೋಗಿಸುವುದು ನ್ಯಾಯ ಎಂದುಕೊಂಡುಬಂದ ವ್ಯವಸ್ಥೆಯಲ್ಲಿ ಎಲ್ಲವೂ ಒಂದೇ ಸಲ ಸರಿಯಾಗಿಬಿಡುವುದಿಲ್ಲ; ದೀರ್ಘಕಾಲೀನ ನಡಿಗೆಯ ಮೊದಲ ಹೆಜ್ಜೆಗಳನ್ನಾದರೂ ಮುಂದಿಡಬೇಕಾದ ಅನಿವಾರ್ಯ ಮತ್ತು ತುರ್ತು ಪರಿಸ್ಥಿತಿ ಈಗ ಬಂದಿದೆ ಎಂದಷ್ಟೇ ಅರ್ಥವಾಯಿತು. ಸಂವಿಧಾನ ಕೈಲಿ ಹಿಡಿದು ನಿಂತ ಅಂಬೇಡ್ಕರರ ಧೀರೋದಾತ್ತ ನಿಲುವಿನ ಮೂರ್ತಿಯೂ, ನೇತಾಡುವ ಆ ಎರಡು ದೇಹಗಳೂ ಬಿರುಬಿಸಿಲಿನ ಧಗೆಯ ನಡುವೆ ಒಟ್ಟೊಟ್ಟಿಗೆ ಕಣ್ಣು ತುಂಬತೊಡಗಿದವು..



No comments:

Post a Comment