ಧಾರಾವಿಯ ಸ್ಲಂ ಹಾಗೂ ಕಾಮಾಟಿಪುರ ನೋಡದಿದ್ದರೆ ಮುಂಬಯಿಯ ಭೇಟಿ ಅಪೂರ್ಣ ಎನಿಸುವ ಹೊತ್ತಿಗೆ ಆ ಲಿಸ್ಟಿಗೆ ಇನ್ನೂ ಒಂದು ಹೆಸರು ಸೇರ್ಪಡೆಯಾಗಿತ್ತು - ಅದು ಮರಾಠಿ ಕವಿ ನಾಮದೇವ ಢಸಾಳ್. ಬದುಕಿನುದ್ದಕ್ಕೂ ಹೋರಾಟವನ್ನೇ ಉಸಿರಾಗಿಸಿಕೊಂಡ ಕವಿ ನಾಮದೇವ್ ಢಸಾಳ್ ಐದು ವರ್ಷ ಕೆಳಗೆ ತಮ್ಮ ಸಮಗ್ರ ಕವನ ಸಂಕಲನದ ಮೂಲಕ ನನಗೆ ಪರಿಚಯವಾದರು. ಅವರ ಕವಿತೆಗಳನ್ನು ಓದುವಾಗ ಎದೆಗೆ ಗುದ್ದಿದ ಅನುಭವ ಹೇಗಾಯಿತೆಂದರೆ ಓದಿದ ಮೇಲೆ ಒಂದಾದ ಮೇಲೊಂದು ಕವನಗಳನ್ನು ಅನುವಾದಿಸಿದ್ದೆ. ಗೆಳೆಯ ಬಸೂ ಲಡಾಯಿ ಪ್ರಕಾಶನದಿಂದ ‘ಉರಿಯ ಪದವು’ ಸಂಕಲನವಾಗಿಯೂ ಪ್ರಕಟಿಸಿದರು. ಮೊನ್ನೆ ಭಾನುವಾರ ಕನ್ನಡ ಸಂಘವೊಂದರ ಚಟುವಟಿಕೆಯ ಭಾಗವಾಗಿ ಮುಂಬಯಿಗೆ ಹೋದಾಗ ಢಸಾಳರನ್ನು ಭೇಟಿ ಮಾಡಲು ಸಾಧ್ಯವಾಗದೇ ಇನ್ನೊಮ್ಮೆ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಹೋಗಬೇಕು, ಅವರನ್ನು ಭೇಟಿಯಾಗಬೇಕು ಎಂದುಕೊಂಡು ವಾಪಸಾಗುವಾಗಲೇ ದೊಡ್ಡಕರುಳಿನ ಕ್ಯಾನ್ಸರಿನಿಂದ ಅವರು ತೀರಿಕೊಂಡ ಸುದ್ದಿ ಬಂದಿದೆ.
ಮುಂಬಯಿ-ಮರಾಠಿ ಎಂದರೆ ಭಾಷಿಕ ಹಾಗೂ ಪ್ರಾಂತೀಯ ಸಂಸ್ಕೃತಿ-ಹೆಮ್ಮೆಗಳನ್ನೇ ಬಿಂಬಿಸುವ ಸಾಹಿತ್ಯ ಸೃಷ್ಟಿಯಾಗುತ್ತಿದ್ದ ಕಾಲದಲ್ಲಿ ಅದಲ್ಲದೇ ಇನ್ನೂ ಒಂದು ಮುಂಬಯಿ, ಮಹಾರಾಷ್ಟ್ರ ಇದೆ - ಅಲ್ಲಿ ಹಸಿವನ್ನೇ ತಮ್ಮ ಮಗು ಎಂದುಕೊಂಡ ಬಡವರಿದ್ದಾರೆ; ತಲೆಹಿಡುಕರ, ಕಾಮಪಿಪಾಸುಗಳ ಜಾಲದಲ್ಲಿ ಅನಿವಾರ್ಯವಾಗಿ ನರಳುತ್ತಿರುವ ಅಸಹಾಯಕ ವೇಶ್ಯೆಯರು ಮತ್ತು ಹಿಜಡಾಗಳಿದ್ದಾರೆ; ಸ್ಲಮ್ಮಿನಲ್ಲಿ ವಾಸಿಸುವ, ರಸ್ತೆ ಬದಿ ಚರಂಡಿಗಳಲ್ಲಿ ಬೀಡುಬಿಟ್ಟ ಲಕ್ಷಗಟ್ಟಲೆ ಜನ ಇದ್ದಾರೆ; ಸ್ವಾತಂತ್ರ್ಯ ಬಂದರೂ, ಸಂವಿಧಾನ ಬರೆಯಲ್ಪಟ್ಟರೂ ಕೋಟ್ಯಂತರ ಜನ ಅತಿ ಹೀನವಾಗಿ, ದೀನವಾಗಿ ಬದುಕುತ್ತಿದ್ದಾರೆ ಎಂದು ಸಾಹಿತ್ಯ ಲೋಕಕ್ಕೆ ಗಟ್ಟಿದನಿಯಲ್ಲಿ ಕೂಗಿ ಹೇಳಿದವರು ನಾಮದೇವ ಢಸಾಳ್. ಹೈಸ್ಕೂಲಿಗಿಂತ ಹೆಚ್ಚು ಶಿಕ್ಷಣ ಪಡೆಯದೇ ಇದ್ದರೂ ಅಂಬೇಡ್ಕರರನ್ನು ವಿಸ್ತೃತವಾಗಿ ಓದಿಕೊಂಡಿದ್ದ ಅವರು, ‘ಭಾಷೆಯ ಗುಪ್ತಾಂಗದ ಹುಣ್ಣು ನಾನು’ ಎಂದು ಕರೆದುಕೊಳ್ಳುತ್ತಲೇ ಯಾರೂ ಕಣ್ಣೆತ್ತಿ ನೋಡದ ವಸ್ತುಗಳನ್ನೆತ್ತಿಕೊಂಡು, ಆಡು ಭಾಷೆಯಲ್ಲಿ ಕವಿತೆ ರಚಿಸಿದರು. ದಲಿತ ಕೇರಿ, ಕಾಮಾಟಿಪುರ, ಕೊಳೆಗೇರಿಗಳ ಕಷ್ಟದ ಬದುಕನ್ನು ತಮ್ಮ ಕವಿತೆಗಳಲ್ಲಿ ಇದ್ದ ಹಾಗೆಯೇ ಚಿತ್ರಿಸಿ ತೋರಿಸಿದರು.
ತಮ್ಮ ಮಾತು-ಕವಿತೆಗಳಲ್ಲದೆ ದಲಿತ್ ಪ್ಯಾಂಥರ್ಸ್ ಎಂಬ ಸಂಘಟನೆಯನ್ನು ಗೆಳೆಯರೊಟ್ಟಿಗೆ ಹುಟ್ಟುಹಾಕಿದ ಢಸಾಳ್ ಸಾಹಿತ್ಯದಷ್ಟೇ ಹೋರಾಟವೂ ಸಮಾಜ ಬದಲಾವಣೆಗೆ ಮುಖ್ಯ ಎಂದು ನಂಬಿದ್ದರು. ಮೊದಲಿಗೆ ಸಿಪಿಐ, ನಕ್ಸಲೈಟ್ ಚಳುವಳಿಗಳನ್ನು ಬೆಂಬಲಿಸಿದ್ದರು. ನಂತರ ಲೋಹಿಯಾ ಸಮಾಜವಾದಿಗಳನ್ನು ಬೆಂಬಲಿಸಿದ್ದರು. ೧೯೭೨ರಲ್ಲಿ ಜೆ.ವಿ.ಪವಾರ್, ರಾಜಾ ಢಾಳೆ, ಅರ್ಜುನ್ ದಾಂಗ್ಳೆ ಜೊತೆ ಸೇರಿ ದಲಿತ್ ಪ್ಯಾಂಥರ್ಸ್ ಹುಟ್ಟು ಹಾಕಿ ಮಹಾರಾಷ್ಟ್ರದುದ್ದಕ್ಕೂ ದಲಿತ ಯುವಕ, ಯುವತಿಯರನ್ನು ಸಂಘಟಿಸಿದರು. ಮಹಾರಾಷ್ಟ್ರವಷ್ಟೇ ಅಲ್ಲ, ಇತರ ರಾಜ್ಯಗಳಲ್ಲೂ ದಲಿತ ಸಂಘಟನೆ ಹುಟ್ಟಿಕೊಳ್ಳಲು ಆ ಚಳುವಳಿ ಸ್ಫೂರ್ತಿಯಾಯಿತು. ಸಂಘಟನೆಯ ಹೋರಾಟ ಕೆಲವೆಡೆ ಹಿಂಸಾಚಾರಕ್ಕೂ ತಿರುಗಿ ಮೂರು ವರ್ಷಗಳಲ್ಲಿ ಪ್ಯಾಂಥರ್ಸ್ ಮೇಲೆ ೩೬೦ ಕೇಸುಗಳು ದಾಖಲಾದವು.
ಹೀಗೆ ದಮನಿತ ಸಮುದಾಯದ ಧಮನಿಗಳಲ್ಲಿ ಹೋರಾಟದ ಕಿಚ್ಚು ಹತ್ತಿಸಿ ಆಶಾಭಾವನೆ ಮೂಡಿಸಿದ ದಿನಗಳಲ್ಲೇ ಪ್ಯಾಂಥರ್ಸ್ ತೀವ್ರ ಆಂತರಿಕ ಭಿನ್ನಮತವನ್ನೆದುರಿಸಿತು. ಕೆಲ ನಾಯಕರು ಕಮ್ಯುನಿಸ್ಟ್ ನೀತಿಯತ್ತ ಒಲವು ತೋರಿದರು. ಕೆಲವರು ಅಧಿಕಾರ ಪಡೆವ, ತನ್ಮೂಲಕ ಬದಲಾವಣೆ ಮಾಡುವ ಕನಸು ಹೊತ್ತು ವಿವಿಧ ರಾಜಕೀಯ ಪಕ್ಷಗಳನ್ನು ಸೇರಿದರು. ತಾತ್ವಿಕ, ಸರ್ವಸಮ್ಮತ ನಾಯಕನ ಕೊರತೆ ಕಾಡಿದ ಪರಿಣಾಮ ಪ್ಯಾಂಥರ್ಸ್ ಹೋಳಾಯಿತು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಉದಯವಾಯ್ತು. ರಾಜಕೀಯ ರಂಗದಲ್ಲಿ ಎಲ್ಲರೂ ಚದುರಿದ ಕಾಯಿಗಳಾದಾಗ ದುರ್ಬಲಗೊಂಡ ರಿಪಬ್ಲಿಕನ್ ಪಕ್ಷವನ್ನು ಢಸಾಳ್ ಮುನ್ನಡೆಸಿದರು. ಪ್ಯಾಂಥರ್ಸ್ ಕೂಡ ಅದರ ಒಂದು ಭಾಗವಾಗಿ ಉಳಿಯಿತು.
ತುರ್ತುಪರಿಸ್ಥಿತಿಯ ಕಾಲದಲ್ಲಿ ಎಲ್ಲರೂ ಬೆಚ್ಚಿಬೀಳುವಂತೆ ಢಸಾಳ್ ಇಂದಿರಾಗಾಂಧಿಯನ್ನು ಬೆಂಬಲಿಸಿದರು. ಇಂದಿರಾ-ಢಸಾಳ್ ಭೇಟಿಯ ನಂತರ ಪ್ಯಾಂಥರ್ಸ್ ಮೇಲಿನ ಎಲ್ಲ ಕೇಸುಗಳನ್ನೂ ವಾಪಸು ತೆಗೆದುಕೊಳ್ಳಲಾಯಿತು. ಪ್ಯಾಂಥರ್ಸ್ ಹಿನ್ನಡೆಯ ಕಾಲವೇ ಶಿವಸೇನೆಯ ಉಚ್ಛ್ರಾಯದ ಕಾಲವೂ ಆಯಿತು ಎಂಬುದನ್ನು ಗಮನಿಸಬೇಕು. ಢಸಾಳ್ ರಾಜಿ ಅನಿವಾರ್ಯವೆಂದು ಶಿವಸೇನೆ ಜೊತೆ ಹೊಂದಾಣಿಕೆ ಮಾಡಿಕೊಂಡರು. ‘ಸಾಮ್ನಾ’ದಲ್ಲಿ ಅಂಕಣ ಬರೆದರು. ಅವರಿಗಿದ್ದ ‘ಮಯಸ್ತೇನಿಯಾ ಗ್ರೆವಿಸ್’ ಕಾಯಿಲೆಯ ದುಬಾರಿ ಚಿಕಿತ್ಸಾ ವೆಚ್ಚವನ್ನು ಶಿವಸೇನೆ ಭರಿಸಿತು. ಇವೆಲ್ಲ ಅವರ ಸಂಗಾತಿಗಳಲ್ಲಿ ಅಸಮಾಧಾನ ಮೂಡಿಸಿದವು. ಅಂಬೇಡ್ಕರ್, ಕಮ್ಯುನಿಸಂ, ಲೋಹಿಯಾ ಸಮಾಜವಾದಗಳನ್ನೆಲ್ಲ ಅರಗಿಸಿಕೊಂಡ ವ್ಯಕ್ತಿಯ ಬಲಪಂಥೀಯ ಒಲವುಗಳು ವಿವಾದಕ್ಕೆಡೆಮಾಡಿದವು. ಆದರೆ ಪ್ರಶ್ನಿಸುವವರಿಗೆಲ್ಲ ತಾಳ್ಮೆಯಿಂದಲೇ ಉತ್ತರಿಸಿದ ಢಸಾಳ್, ‘ದಲಿತರನ್ನು ಚುನಾವಣೆಗಾಗಿ ಮತಬ್ಯಾಂಕ್‌ಗಳೆಂದು ಪರಿಗಣಿಸಿ ಓಲೈಸಲಾಗುತ್ತದೆ. ಚುನಾವಣೆಗಾಗಿ ದಲಿತರನ್ನು ಒಡೆದಷ್ಟು ಮತ್ಯಾವ ಸಮುದಾಯವನ್ನೂ ಛಿದ್ರಗೊಳಿಸಿಲ್ಲ. ಇಡೀ ವ್ಯವಸ್ಥೆ ಭ್ರಷ್ಟರಿಂದ, ಅಪರಾಧಿಗಳಿಂದ ತುಂಬಿಹೋಗಿ ಸಾಂವಿಧಾನಿಕ ನೈತಿಕತೆ ಕುರಿತ ಮಾತುಗಳೆಲ್ಲ ನಾಲಿಗೆ ಮೇಲಿನ ಪದಗಳಾಗಿವೆ. ತಾರತಮ್ಯದ ಸಮಾಜದಲ್ಲಿ ಬಡವಾತಿ ಬಡವನಿಗೆ ಉಳಿವಿನ ಹಾದಿಗಳು ಬಹಳ ಕಡಿಮೆಯಿವೆ ಮತ್ತು ಅವು ಶುದ್ಧವಾಗಿಲ್ಲ. ಎಂದೇ ರಾಜಿಯಿಲ್ಲದೆ ರಾಜಕಾರಣ ಈಗ ಸಾಧ್ಯವಿಲ್ಲ’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಕವಯಿತ್ರಿ ಮಲ್ಲಿಕಾ ಅಮರ್ ಶೇಖ್ ಢಸಾಳರ ಪತ್ನಿ. ಅವರಿಗಿಂತ ೧೫ ವರ್ಷ ಕಿರಿಯಳಾದ, ಭಿನ್ನ ಸೈದ್ಧಾಂತಿಕ ನಿಲುವುಗಳನ್ನು ಹೊಂದಿದ ಆಕೆ ಢಸಾಳರ ನಡೆಗಳನ್ನು ಒಪ್ಪಲಿಲ್ಲ. ಅವರ ದಾಂಪತ್ಯ ಜೀವನವೂ ಏರಿಳಿತಗಳಲ್ಲೇ ಸಾಗಿತ್ತು. ವಿಷಮ ದಾಂಪತ್ಯದ ವಿವರಗಳಿದ್ದ ಮಲ್ಲಿಕಾರ ಆತ್ಮಕತೆಯೂ ಹೊರಬಂತು. ನಂತರ ರಾಜಕೀಯ ಕಾರಣಗಳಿಗಾಗಿ ಅದನ್ನು ವಾಪಸು ಪಡೆಯಲಾಯಿತು.
ಅವರ ನಿಲುವುಗಳನ್ನು ಕೆಲವರು ಒಪ್ಪಿ, ಹಲವರು ಪ್ರಶ್ನಿಸುತ್ತಿದ್ದ ಸಮಯದಲ್ಲೇ ಮಯಸ್ತೇನಿಯಾ ಗ್ರೆವಿಸ್ ಕಾಯಿಲೆ ಅವರ ಚಲನವಲನಗಳನ್ನು ನಿರ್ಬಂಧಿಸಿತು. ಜೊತೆಗೆ ದೊಡ್ಡ ಕರುಳಿನ ಕ್ಯಾನ್ಸರ್ ಆಗಿ ೨೦೧೪, ಜನವರಿ ೧೫ರಂದು ೬೪ ವರ್ಷ ವಯಸ್ಸಿಗೆ ಢಸಾಳ್ ದೇಹ ತಣ್ಣಗಾಯಿತು.
ಕೋಮುವಾದ ಮತ್ತು ಆರ್ಥಿಕ ಉದಾರೀಕರಣ ನೀತಿಗಳು ಜನಸಮುದಾಯಗಳನ್ನು ಧರ್ಮ-ಸಂಸ್ಕೃತಿ-ಮಾರುಕಟ್ಟೆ ಹೆಸರಿನಲ್ಲಿ ಮಂಕುಬೂದಿ ಎರಚಿ ನಿರ್ವಿಣ್ಣರಾಗಿಸಲು ಪ್ರಯತ್ನಿಸುತ್ತಿರುವ ಈ ಕಾಲದಲ್ಲಿ ಶೋಷಿತ ಸಮುದಾಯಗಳು ಎಚ್ಚೆತ್ತು ಸಂಘಟಿತರಾಗಬೇಕಿದೆ. ಜೊತೆಗೆ ರಾಜಕಾರಣದ ಆಮಿಷದ ಪಟ್ಟುಗಳಿಗೆ ಬಲಿಯಾಗದೇ ಸಮುದಾಯದ ಹಿತಾಸಕ್ತಿಯನ್ನೂ ಕಾಪಾಡಿಕೊಳ್ಳಬೇಕಿದೆ. ಇಂಥ ಹೊತ್ತಲ್ಲಿ ಹೊಸದಾಗಿ ಕಟ್ಟಹೊರಡುವವರು ಸಂಘಟನೆಯ ಆಶಯ, ರೂಪುರೇಶೆಗಳನ್ನು ನಿರ್ಧರಿಸುವಾಗ ಹಳೆಯ ಪಾಠಗಳನ್ನು ಹಿಂತಿರುಗಿ ನೋಡಬೇಕಾಗುತ್ತದೆ. ಈ ಕಾರಣಕ್ಕೆ ಢಸಾಳ್ ಮತ್ತೆ ಓದುವ ಕವಿಯೆನಿಸಿಕೊಳ್ಳುತ್ತಾರೆ, ವಿಮರ್ಶಿಸಬೇಕಾದ ಹೋರಾಟಗಾರನೆನಿಸಿಕೊಳ್ಳುತ್ತಾರೆ.
ದೀರ್ಘಕಾಲ ಕಾಯಿಲೆಯಿಂದ ತತ್ತರಿಸಿದ ಅಶಾಂತ ಕವಿ ಜೀವ ಇನ್ನಾದರೂ ಶಾಂತಿಯಿಂದ ವಿರಮಿಸಲಿ. ಮಲ್ಲಿಕಾ ಅಮರ್ ಶೇಖ್ ಎಂಬ ಹೆಣ್ಣುಮಗಳು ಇನ್ನಾದರೂ ದನಿಯೆತ್ತುವಷ್ಟು ಮುಕ್ತಳಾಗಲಿ..
***
ಢಸಾಳರ ಎರಡು ಅನುವಾದಿತ ಕವಿತೆಗಳು ‘ಉರಿಯ ಪದವು’ ಸಂಕಲನದಿಂದ.
೧
ಎಲೈ ಮನುಷ್ಯ, ನೀ ಸಿಡಿಯಬೇಕು
ಎಲೈ ಮನುಷ್ಯ,
ನೀ ಸಿಡಿಯಬೇಕು
ಮೊತ್ತಮೊದಲು ನಿನ್ನ ಸ್ಫೋಟಿಸಿಕೋ
ಚಂಡೆಯ ಲಯಕ್ಕೆ ಹೆಜ್ಜೆ ಹಾಕು
ಹಶಿಶ್ ಸೇದು ಗಾಂಜಾ ಸೇದು
ಓಪಿಯಮ್ ಜಗಿ, ಲಾಲ್ ಪಾರಿ ಅಗಿ
ಕಾಸಿಲ್ಲದ ದಿವಾಳಿಯೆ? ಕಂಟ್ರಿ ಸಾರಾಯಿ ಕುಡಿ
ಅಗ್ಗದ ಡಾಲ್ಡಾ ಹೀರು
ಹಗಲೂ ರಾತ್ರಿ ತೂರಾಡು,
ದಿನಪೂರ್ತಿ ಕಂಠಮಟ್ಟ ಕುಡಿದೇ ಇರು
ಎಲ್ಲರಿಗೂ ಶಾಪ ಹಾಕು;
ಅವನಮ್ಮನ ಶೀಲ, ಅವನಕ್ಕನ ಹಾದರ ಹಿಡಿದು
ಎಲ್ಲರ ಬೈಯ್ಯಿ, ಕಪಾಳಕ್ಕೆ ಬಾರಿಸು, ಗುದ್ದು..
ಒಂದು ರಾಮ್‌ಪುರೀ ಚಾಕು ಕೈಗೆ ಸಿಗೋ ಹಾಗಿಟ್ಟುಕೊಳ್ಳಯ್ಯಾ
ಒಂದು ಚೂರಿ, ಕೊಡಲಿ, ಕತ್ತಿ, ಕಬ್ಬಿಣದ ರಾಡು, ಬಿದಿರು, ಹಾಕಿ ಸ್ಟಿಕ್ ಎಲ್ಲ ಇರಲಿ..
ಆಸಿಡ್ ಬಾಟಲು ಒಯ್ಯಿ
ಕಣ್ಣೆವೆ ಮಿಟುಕಿಸದೆ ಕರುಳು ಬಗೆದು ಹೊರಗೆಳೆ
ಕೊಲೆ ಮಾಡು, ನಿದ್ದೆ ಹೊಡೆಯುತ್ತಿರುವವರ ಕೊಲ್ಲು
ಮನುಷ್ಯರ ಗುಲಾಮರಾಗಿಸು
ಕುಂಡೆ ಮೇಲೆ ಚಾಟಿಯಿಂದ ಬಾರಿಸು
ರಕ್ತ ಸೋರುವ ಬೆನ್ನ ಮೇಲೆ ನಿನ್ನ ಬೇಳೆ ಬೇಯಿಸು
ನೆರೆಮನೆ ಕಳವು ಮಾಡು, ಬ್ಯಾಂಕ್ ಲೂಟಿ ಹೊಡಿ
ಗಬ್ಬುನಾರುವ ಲೇವಾದೇವಿ ಬಡ್ಡಿಮಕ್ಕಳ ತಾಯ್ಗಂಡನಾಗು
ಗೊತ್ತೇ ಆಗದಂತೆ ನೆಂಟರ ಗಂಟಲು ಸೀಳು;
ವಿಷವಿಕ್ಕು; ದುಃಸ್ವಪ್ನವಾಗು
ಯಾರ ಅಮ್ಮ ಅಕ್ಕನನ್ನಾದರೂ, ಎಲ್ಲೆಂದರಲ್ಲಿ ಅನುಭವಿಸು
ಮುದುಕಗಿದುಕರೆಂದು ಸುಲಿಗೆ ಮಾಡದೆ ಬಿಟ್ಟೀಯ ಮತ್ತೆ
ಒಬ್ಬೊಬ್ಬರಂತೆ ಎಲ್ಲರ ಕೆಡವಿ
ಸಾರ್ವಜನಿಕ ವೇದಿಕೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡು
ಸೂಳೆಗೇರಿ ಬೆಳೆಸು; ತಲೆಹಿಡುಕನ ಲಂಚದಲ್ಲಿ ಬದುಕು;
ಹೆಂಗಸಿನ ಮೂಗು, ಮೊಲೆ ತೊಟ್ಟು ಕೊಯ್ಯಿ
ಬೆತ್ತಲಾಗಿಸಿ ಕತ್ತೆ ಮೇಲೆ ಮೆರವಣಿಗೆ ಮಾಡಿ ಮರ್ಯಾದೆ ಕಳಿ
ಗೊತ್ತಾಯಿತೇನಯ್ಯಾ ಮನುಷ್ಯ?
ರಸ್ತೆ ಬಗೆದು ಹಾಕು, ಸೇತುವೆ ಉಡಾಯಿಸು
ಬೀದಿ ದೀಪಗಳ ಉರುಳಿಸು
ಪೊಲೀಸ್ ರೈಲ್ವೆ ಸ್ಟೇಷನ್ನುಗಳ ಚಿಂದಿ ಮಾಡು
ಸಾಹಿತ್ಯ ಸಂಘ, ಶಾಲೆ, ಕಾಲೇಜು, ಆಸ್ಪತ್ರೆ, ವಿಮಾನ ನಿಲ್ದಾಣ
ಎಲ್ಲ ನೆಲಸಮವಾಗಲಿ
ಗ್ರೆನೇಡ್ ಬಿಸಾಡು; ಹೈಡ್ರೋಜೆನ್ ಬಾಂಬ್ ಹಾಕು
ಪ್ಲೇಟೋ, ಐನ್‌ಸ್ಟೀನ್, ಆರ್ಕಿಮಿಡಿಸ್, ಸಾಕ್ರೆಟಿಸ್
ಮಾರ್ಕ್ಸ್, ಅಶೋಕ, ಹಿಟ್ಲರ್, ಕಾಮು, ಸಾರ್ತ್ರೆ, ಕಾಫ್ಕಾ
ಬೋದಿಲೇರ್, ರಿಂಬಾಡ್, ಎಜ್ರಾ ಪೌಂಡ್, ಹಾಪ್‌ಕಿನ್ಸ್, ಗಯಟೆ
ದೋಸ್ತೊಯೇವ್ಸ್‌ಕಿ, ಮಯಕೋವ್‌ಸ್ಕಿ, ಮಾಕ್ಸಿಂ ಗಾರ್ಕಿ
ಎಡಿಸನ್, ಮ್ಯಾಡಿಸನ್, ಕಾಳಿದಾಸ, ತುಕಾರಾಮ, ವ್ಯಾಸ, ಶೇಕ್ಸ್‌ಪಿಯರ್, ಜ್ಞಾನೇಶ್ವರ..
ಚರಂಡಿಯ ಮ್ಯಾನ್‌ಹೋಲ್ ತೆಗೆದು ಈ ಎಲ್ಲರ ದೂಡಿ
ಅವರವರ ಪದಗಳ ಜೊತೆ ಕೊಳೆಸು
ಜೀಸಸ್, ಪೈಗಂಬರ್, ಬುದ್ಧ ಮತ್ತು ವಿಷ್ಣುವಿನ ಅನುಯಾಯಿಗಳ ಗಲ್ಲಿಗೇರಿಸು
ದೇವಸ್ಥಾನ, ಮಸೀದಿ, ಚರ್ಚು, ಶಿಲ್ಪ, ಮ್ಯೂಸಿಯಂ ಕೆಡವು
ಪುರೋಹಿತರ ಗುಂಡಿಟ್ಟು ಕೊಲ್ಲು
ಅವರ ರಕ್ತದಿಂದ ಶಿಲಾಶಾಸನ ಬರೆಸು
ಪ್ರಪಂಚದ ಎಲ್ಲ ಪವಿತ್ರ ಗ್ರಂಥಗಳ ಎಲ್ಲ ಪುಟ ಹರಿದು
ಹೇತವನ ಕುಂಡೆ ಒರೆಸಿಕೊಳ್ಳಲು ಕೊಟ್ಟುಬಿಡಯ್ಯಾ
ಬೇಲಿ ಗೂಟ ಕಿತ್ತು ಅಲ್ಲೇ ಹೇಲು ಉಚ್ಚೆ ಮಾಡಿ ತಿಪ್ಪೆಯೆಬ್ಬಿಸು
ಮುಟ್ಟಿನ ಬಟ್ಟೆ ಬಿಸುಡು, ಕಫ ಉಗುಳು, ಸೀನು, ಸಿಂಬಳ ಸುರಿಸು
ಸಹಿಸಬಾರದ ಗಬ್ಬು ನಾತ ಹರಡಿ ಎಲ್ಲವನ್ನೂ ಮುಗಿಸು
ಮೇಲೆ, ಕೆಳಗೆ, ನಡುವೆ - ಎಲ್ಲ ನರಕಗೊಳಿಸು
ಕೇಳಯ್ಯಾ,
ನೀನು ಮನುಷ್ಯ ರಕ್ತವನ್ನೇ ಕುಡಿ
ಮನುಷ್ಯ ಮಾಂಸವನ್ನೇ ಹುರಿದು ತಿನ್ನು
ಅವರದೇ ನೆಣ ಕರಗಿಸಿ ನೆಕ್ಕು
ಬಂಡೆಗೆ ನಿನ್ನ ಟೀಕಾಕಾರರ ಮೂಳೆ ಕುಟ್ಟಿ ಪುಡಿಪುಡಿ ಮಾಡಿ ತುಪ್ಪ ಹೀರು
ಯಾರೇ ಆಗಲಿ ಅನಾಗರಿಕ, ಕ್ರೂರ, ಸನಾತನವಾಗಬೇಕು ಹಾಗೆ
ವರ್ಗಯುದ್ಧ, ಜಾತಿಯುದ್ಧ, ಕೋಮುಯುದ್ಧ, ಪಕ್ಷಯುದ್ಧ, ಧರ್ಮಯುದ್ಧ, ಮಹಾಯುದ್ಧಗಳ ಸಂಘಟಿಸು
ಯಾವನಿಗೂ ಹೆದರದೇ ಸೊಪ್ಪು ಹಾಕದೇ ಅರಾಜಕತೆ ಹುಟ್ಟಿಸು
ಉಳದೇ, ಬೆಳೆ ಬೆಳೆಯದೇ, ಎಲ್ಲ ಉಪವಾಸ ಸಾಯುವಂಥ ಆಂದೋಲನ ಶುರುಮಾಡು
ಅವರವರನ್ನೇ ಕೊಂದುಕೊಳ್ಳಲಿ
ಕಾಯಿಲೆ ಹರಡಲಿ, ಮರಗಳ ಎಲೆ ಉದುರಿ ಬೋಳಾಗಲಿ
ಒಂದೂ ಹಕ್ಕಿ ಹಾಡದಂತೆ ನೋಡಿಕೋ
ನೋವಲ್ಲಿ ಅರಚುತ್ತ ಎಲ್ಲ ಸಾಯಬೇಕು
ಕ್ಯಾನ್ಸರ್ ಗಡ್ಡೆಯಂತೆ ಬೆಳೆಬೆಳೆದು ಜಗತ್ತು ಬಲೂನಿನಂತೆ ಉಬ್ಬಲಿ
ಹೊತ್ತಲ್ಲದ ಹೊತ್ತಲ್ಲಿ ಒಡೆದು ಮುದುಡಿ ಬಿಸಾಡು
ಇಷ್ಟಾದಮೇಲೂ
ಯಾರಾದರೂ ಬದುಕುಳಿದರೆ
ಅವರು ದರೋಡೆ ನಿಲಿಸಲಿ
ಅಸಹಾಯಕರ ಗುಲಾಮರಾಗಿಸದೇ ಇರಲಿ
ಬಿಳಿ-ಕಪ್ಪು, ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಎಂದು ಹೆಸರಿಟ್ಟು ಕರೆಯದಿರಲಿ
ಪಕ್ಷ ಕಟ್ಟದೆ, ಆಸ್ತಿ ಮನೆ ಮಾಡದೇ ಇರಲಿ
ತಾಯಿತಂಗಿಬಂಧುಗಳನೇ ಗುರುತಿಸದ ಗುನ್ನೆ ಎಸಗದಿರಲಿ
ಎಲ್ಲರಿಗೂ ಆಕಾಶ ಅಜ್ಜ, ಭೂಮಿ ಅಜ್ಜಿಯಾಗಲಿ
ಒಬ್ಬರಿಗೊಬ್ಬರು ಪ್ರೀತಿಯಿಂದ ಮುದ್ದಾಡಲಿ
ಸೂರ್ಯ ಚಂದ್ರ ನಾಚಿಕೆಯಿಂದ ಕಳಾಹೀನರಾಗುವಂತ ಒಳ್ಳೆ ಕೆಲಸ ಮಾಡಯ್ಯಾ
ಉಣ್ಣುವ ಪ್ರತಿ ಅಗುಳನ್ನೂ ಎಲ್ಲರೊಂದಿಗೆ ಹಂಚಿಕೊಳ್ಳುವಂತೆ
ಮಾನವೀಯತೆಯ ಹಾಡನ್ನು ಕಟ್ಟಿ ಹಾಡುವಂತೆ ಮಾಡಯ್ಯಾ
ಓ ಮನುಷ್ಯಾ..
ಮಾಡಯ್ಯಾ ಮನುಷ್ಯ ಮನುಷ್ಯತ್ವದ ಹಾಡು ಮಾತ್ರ ಹಾಡುವಂತೆ..
೨
ಕ್ರೌರ‍್ಯ
ನಾನು
ಭಾಷೆಯ ಗುಪ್ತಾಂಗದ ಹುಣ್ಣು
ದುಃಖ, ಕರುಣೆ ತುಂಬಿದ ಲಕ್ಷಗಟ್ಟಲೆ ಕಣ್ಣುಗಳ
ಜೀವನ ಪ್ರೀತಿ
ನನ್ನ ಅಲುಗಿಸುತ್ತಿದೆದೆ
ನನ್ನೊಳಗಿನ ದಂಗೆಗೆ ಸಿಡಿದು ಚೂರಾಗಿದ್ದೇನೆ
ಎಲ್ಲೂ ಬೆಳದಿಂಗಳಿಲ್ಲ
ನೀರಿಲ್ಲ
ಹುಚ್ಚು ತೋಳ ಕೋರೆ ಹಲ್ಲುಗಳಿಂದ
ನನ್ನ ಮಾಂಸ ಕಿತ್ತು ಹರಿಯುತ್ತಿದೆ
ವಿಷದಂತಹ ಭಯಂಕರ ಕ್ರೌರ‍್ಯ
ಬೆನ್ನೆಲುಬಿಂದ ಹೊರಚಿಮ್ಮುತ್ತಿದೆ
ಉರಿವ ಕುರುಹುಗಳಿಂದೊಮ್ಮೆ ನನ್ನ ಬಿಡುಗಡೆಗೊಳಿಸು
ತಾರೆಗಳ ಪ್ರೇಮಿಸುವೆ ಬಿಡು
ನೇರಿಳೆ ಹೂವು ದಿಗಂತದತ್ತ ತೆರಳುತ್ತಿದೆ
ಒಡೆದ ಮುಖಗಳ ಮೇಲಿನ ಓಯಸಿಸ್ ಬಾವಿಯಾಗುತ್ತಿದೆ
ಹತ್ತಿಕ್ಕಲಾಗದ ಯೋನಿಗಳಲ್ಲಿ ಚಂಡಮಾರುತ
ಬೆಕ್ಕು ದುಃಖದ ಕೂದಲ ಬಾಚುತ್ತಿದೆ
ನನ್ನ ಆಕ್ರೋಶಕ್ಕೆ ಇರುಳು ಜಾಗ ಕೊಟ್ಟಿದೆ
ಕಿಟಕಿಯ ಕಣ್ಣುಗಳಲ್ಲಿ ಬೀದಿನಾಯಿ ಕುಣಿಯುತ್ತಿರುವಾಗ
ಕೋಳಿ ಗುಜರಿಮೊಟ್ಟೆ ಕುಟುಕುತ್ತಿದೆ
ಆತ್ಮದ ಬಾಗಿಲುಗಳು ಪಟಾರನೆ ಮುಚ್ಚಿಕೊಳ್ಳುತ್ತವೆ
ರಕ್ತತೊರೆ ಅವರಿವರಲ್ಲಿ ಹರಿದು
ವ್ಯಾಕರಣದ ಗೋಡೆಗಳಾಚೆ ನನ್ನ ದಿನ ಹುಟ್ಟುತ್ತಿದೆ
ನೆಲದ ಮೇಲೆ ಹರಡಿದ ದೇವರ ಹೊಲಸು ನಾತ
ನೋವು ರೊಟ್ಟಿ ಎರಡನ್ನೂ
ಒಂದೇ ತಂದೂರಿಯಲ್ಲಿ ಹುರಿಯುತ್ತಿದ್ದಾರೆ
ನಗ್ನ ಮೈಗಳ ಬೆಂಕಿ ಕತೆ ಪುರಾಣಗಳಲ್ಲಿ ವಿರಮಿಸಿದೆ
ಹಾದರದ ಬಂಡೆ ಜೀವಬೇರನ್ನು ಭೇಟಿಯಾಗಿ
ಕುಂಟುಕಾಲ ಮೇಲೆ ನಿಟ್ಟುಸಿರು ನಿಂತಿದೆ
ಶನಿ ಉದ್ದ ಕಾಲುವೆ ತೋಡುತ್ತಿದ್ದಾನೆ
ಹೊಸ ಚಿಗುರು ಆಸೆ ಬಾಗಿಲುಗಳ ದೂಡುತ್ತಿದೆ
ಹತಾಶೆಯ ಹೆಣ ಹೊಲಿಯಲಾಗಿದೆ
ಅಮರ ಮೂರ್ತಿಯನು ಹುಚ್ಚುಚ್ಚು ಸಿದ್ಧಾಂತಗಳು ಬೀಳಿಸುತ್ತಿವೆ
ಕವಚಗಳಿಗೆ ಧೂಳಡರುತ್ತ ಕತ್ತಲ ರುಮಾಲು ಕಳಚುತ್ತಿದೆ
ನೀನು ಕಣ್ತೆರೆ; ಇವೆಲ್ಲ ಹಳೆಯ ಮಾತುಗಳು
ಭರತಕ್ಕೆ ಖಾರಿ ತುಂಬಿಕೊಳ್ಳುತ್ತಿದೆ
ಹೆದ್ದೆರೆಗಳು ತೀರ ಮುಟ್ಟುತ್ತಿವೆ
ಆದರೂ
ವಿಷದಂತಹ ಕ್ರೌರ‍್ಯವೊಂದು ನನ್ನ ಬೆನ್ನ ತುದಿಯಿಂದ ಹರಡಿಕೊಳ್ಳುತ್ತಿದೆ
ಅದು ಸ್ಪಷ್ಟ ಮತ್ತು ತಿಳಿ; ನರ್ಮದಾ ನದಿಯ ನೀರಿನಂತೆ..
No comments:
Post a Comment