ಜೂನ್ ೨ಕ್ಕೆ ಆಂಧ್ರಪ್ರದೇಶ ರಾಜ್ಯ ಸೀಮಾಂಧ್ರ ಮತ್ತು ತೆಲಂಗಾಣ ಎಂದು ವಿಭಜನೆಗೊಳ್ಳಲಿದೆ ಅಥವಾ ಭಾರತದ ೨೯ನೇ ರಾಜ್ಯ ಅಸ್ತಿತ್ವಕ್ಕೆ ಬರಲಿದೆ. ೧೦ ವರ್ಷಗಳವರೆಗೆ ಹೈದರಾಬಾದ್ ವಿಭಜಿತ ರಾಜ್ಯಗಳ ರಾಜಧಾನಿಯಾಗಿ ಕಾರ್ಯ ನಿರ್ವಹಿಸಲಿದೆ. ಐಡೆಂಟಿಟಿ ಪ್ರಜ್ಞೆ ಗಾಢವಾಗುತ್ತ ಎಲ್ಲವೂ ಒಡೆಯುತ್ತಿರುವ ಈ ಹೊತ್ತಿನಲ್ಲಿ ತೆಲಂಗಾಣ ಜನರ ದಶಕಗಳ ಹೋರಾಟವು ಪ್ರತ್ಯೇಕ ರಾಜ್ಯ ರಚನೆಯ ರೂಪದಲ್ಲಿ ಕೊನೆಯಾಗುತ್ತಿದೆ. ದೂರ ನಿಂತು ಗಮನಿಸುವವರಿಗೆ ಒಂದೇ ಭಾಷೆಯ ಜನರ ರಾಜ್ಯವನ್ನು ಎರಡಾಗಿ ವಿಭಜಿಸಿದ್ದು ಕೇವಲ ರಾಜಕೀಯ ಕ್ರಮವಾಗಿ ಕಾಣಬಹುದು. ಆದರೆ ೫೭ ವರ್ಷ ಕೆಳಗೆ ವಿಲೀನಗೊಂಡ ಒಂದೇ ಭಾಷಿಕ ಪ್ರದೇಶಗಳು ಮತ್ತೆ ವಿಭಜನೆಗೊಳ್ಳುತ್ತಿರುವುದಕ್ಕೆ ಪ್ರಾದೇಶಿಕ ಅಸಮಾನತೆ, ತಾರತಮ್ಯ, ಅಸಮಾನ ಹಂಚಿಕೆ, ಯಾಜಮಾನ್ಯ ಮುಂತಾದ ಆರ್ಥಿಕ, ಚಾರಿತ್ರಿಕ, ಸಾಮಾಜಿಕ ಕಾರಣಗಳೂ ರಾಜಕೀಯದ ಜೊತೆ ಸೇರಿಕೊಂಡಿವೆ.
ಭಾರತದ ೨೦% ಕಲ್ಲಿದ್ದಲು ತೆಲಂಗಾಣ ನಲಗೊಂಡದ ಸಿಂಗರೇಣಿ ಗಣಿಗಳಲ್ಲಿದೆ. ಬಾಕ್ಸೈಟ್, ಮೈಕಾ, ಸುಣ್ಣಕಲ್ಲು ನಿಕ್ಷೇಪಗಳೂ ಇವೆ. ಆಂಧ್ರಪ್ರದೇಶದ ೪೫% ಕಾಡು ಹಾಗೂ ೪೧.೬% ಜನಸಂಖ್ಯೆ ತೆಲಂಗಾಣದಲ್ಲಿದೆ. ಕೃಷ್ಣಾ ನದಿಯ ೬೮% ಹಾಗೂ ಗೋದಾವರಿ ನದಿಯ ೭೯% ಜಲಾನಯನ ಪ್ರದೇಶ ತೆಲಂಗಾಣದಲ್ಲಿದೆ, ಆದರೆ ನೀರಾವರಿ ಯೋಜನೆ ಮತ್ತು ಕಾಲುವೆಗಳಲ್ಲಿ ಆಂಧ್ರ ಕರಾವಳಿ ಸಿಂಹಪಾಲನ್ನು (೭೫%) ಪಡೆಯುವುದರಿಂದ ತೆಲಂಗಾಣದ ನೆಲ ಬಂಜರಾಗಿ ಒಣಗುತ್ತಿದೆ. ಹೈದರಾಬಾದನ್ನೂ ಸೇರಿಸಿ ಶೈಕ್ಷಣಿಕ ಬಜೆಟಿನ ೯.೮% ತೆಲಂಗಾಣದ ಪ್ರಾಥಮಿಕ ಶಿಕ್ಷಣಕ್ಕೆ, ೩೭.೮% ಪದವಿ ಕಾಲೇಜುಗಳಿಗೆ ಬರುತ್ತದೆ. ಆಂಧ್ರ ಬಜೆಟಿನ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಅನುದಾನ ತೆಲಂಗಾಣಕ್ಕೆ ಸಿಗುತ್ತದೆ. ಸರ್ಕಾರಿ ನೌಕರರಲ್ಲಿ ೨೦%, ವಿಧಾನಸೌಧದಲ್ಲಿ ೧೦%, ಇಲಾಖಾ ಮುಖ್ಯಸ್ಥರಲ್ಲಿ ೫% ಜನ ಮಾತ್ರ ತೆಲಂಗಾಣ ಮೂಲದವರಾಗಿದ್ದಾರೆ. ಈ ಅಸಮಾನತೆ ಪ್ರತ್ಯೇಕ ರಾಜ್ಯ ಬೇಡಿಕೆಯ ಕಾವನ್ನು ದಶಕಗಳ ಕಾಲ ಜೀವಂತವಾಗಿರಿಸಿ ಅಂತೂ ವಿಭಜನೆಯಲ್ಲಿ ಕೊನೆಗೊಂಡಿದೆ.
ಇವತ್ತಿನ ಭಾರತೀಯ ಪ್ರಜಾಪ್ರಭುತ್ವದ ಚುನಾವಣೆ ಮತ್ತು ಫಲಿತಾಂಶ ಜನಾಭಿಪ್ರಾಯವನ್ನು ಬಿಂಬಿಸಲು ಎಷ್ಟರಮಟ್ಟಿಗೆ ಶಕ್ತವಾಗಿವೆ? ಜನರ ಸರ್ಕಾರ ಎಷ್ಟರಮಟ್ಟಿಗೆ ಜನಪರವಾಗಬಹುದಾಗಿದೆ? ಎಂಬ ಜಿಜ್ಞಾಸೆ ಎದ್ದಿರುವ ಹೊತ್ತಿನಲ್ಲಿ; ಭೂ ಹೋರಾಟವಾಗಿ ಶುರುವಾದ ತೆಲಂಗಾಣ ಸಂಘರ್ಷವು ಅವಕಾಶವಾದಿ ರಾಜಕಾರಣಿಗಳಿಗೆ ರಾಜ್ಯವನ್ನು ಕೈಯೆತ್ತಿ ಕೊಡುವುದರಲ್ಲಿ ಕೊನೆಗೊಳ್ಳುತ್ತಿದೆಯೆ ಎಂಬ ಆತಂಕವನ್ನೂ ಹುಟ್ಟುಹಾಕಿದೆ. ಶತಮಾನಗಳಿಂದ ಜಮೀನ್ದಾರೀ ಕ್ರೌರ್ಯಕ್ಕೆ ಈಡಾದ ಶ್ರಮಿಕರ ನಾಡು ತೆಲಂಗಾಣ. ಸರಿಸುಮಾರು ೯೦೦ ಜೀವಗಳ ಬಲಿತೆಗೆದುಕೊಂಡ ಹೋರಾಟದ ಬಳಿಕ ರಾಜ್ಯವೆಂಬ ಅಸ್ಮಿತೆ ಪಡೆದುಕೊಳ್ಳುತ್ತಿದೆ.
ಒಮ್ಮೆ ವಿಲೀನವಾದದ್ದು ತಿರುಗಿ ವಿಭಜನೆಯನ್ನೇಕೆ ಬಯಸಿತು? ಉತ್ತರವು ಚರಿತ್ರೆಯನ್ನು ಕಣ್ಣೆದುರು ಹರಡುತ್ತದೆ..
ಧರಣಿ ಮಂಡಲ ಮಧ್ಯದೊಳಗೆ..
ಶಾತವಾಹನರು ಮತ್ತು ಕಾಕತೀಯರ ಕಾಲದಲ್ಲಿ ‘ಸುವರ್ಣಯುಗ’ ಕಂಡಿತೆಂದು ಹೇಳಲಾದ ದಖ್ಖನ್ ಪೀಠಭೂಮಿಯ ನಡುಭಾಗ ತೆಲಂಗಾಣ ಮೂರು ಶೈವ ಕ್ಷೇತ್ರಗಳಿಂದ ಆವೃತವಾಗಿ ‘ತ್ರಿಲಿಂಗ’ ಅಥವಾ ‘ತೆಲಿಂಗ’ ದೇಶ ಎಂಬ ಹೆಸರು ಪಡೆದಿದೆ. ೧೩೦೯ರಲ್ಲಿ ಮಲ್ಲಿಕಾಫರ್ ಮತ್ತು ೧೩೧೦ರಲ್ಲಿ ಮಹಮದ್ ಬಿನ್ ತುಘಲಕನ ಕೈಯಲ್ಲಿ ಕಾಕತೀಯ ವಂಶಸ್ಥರು ಸೋಲನುಭವಿಸಿದ ನಂತರ ತೆಲಂಗಾಣವು ದೆಹಲಿ ಸುಲ್ತಾನರ ಆಳ್ವಿಕೆಗೊಳಪಟ್ಟಿತು. ನಂತರ ಬಹಮನಿ ಅರಸರು, ಗೋಲ್ಕೊಂಡದ ಕುತುಬ್‌ಶಾಹಿಗಳು, ಔರಂಗಜೇಬ್, ೧೭೧೨ರ ನಂತರ ಆಸಿಫ್ ಜಾಹಿ ನಿಜಾಂ ವಂಶದವರು ಆ ಪ್ರದೇಶವನ್ನಾಳಿದರು. ತೆಲಂಗಾಣವು ಹೈದರಾಬಾದ್ ರಾಜ್ಯ ಎಂದು ಕರೆಸಿಕೊಂಡಿತು.
ನಿಜಾಮರ ಕಾಲದಲ್ಲಿ ನೆಲದ ಒಡೆತನವನ್ನು ಪಡೆದ ಜಮೀನ್ದಾರರು ಸಣ್ಣ ಸಂಸ್ಥಾನಗಳ ‘ದೊರಾಲು’ ಆದರು. ಪೂರಾ ನೆಲ ಜಮೀನ್ದಾರರ ಒಡೆತನದಲ್ಲಿತ್ತು. ಅವರು ನಿಜಾಮನನ್ನು ಮೆಚ್ಚಿಸಲು ಅತಿ ಹೆಚ್ಚು ತೆರಿಗೆ ವಸೂಲಿ ಮಾಡಿ ಬಡ ರೈತರ ರಕ್ತ ಬಸಿದರು. ಜೀತಗಾರರಾಗಿ, ಸಾಲಪಡೆದು ತೀರಿಸಲಾರದವರಾಗಿ ಕೊನೆಯಿರದ ಕಷ್ಟಗಳಲ್ಲಿ ಕೃಷಿಕರು ದಮನಿಸಲ್ಪಟ್ಟರು. ಈ ಕ್ರೂರ ಜಮೀನ್ದಾರೀ ವ್ಯವಸ್ಥೆಯ ವಿರುದ್ಧ ಗ್ರಾಮೀಣ ತಳಸಮುದಾಯಗಳ ಬಡರೈತರು ತಿರುಗಿಬಿದ್ದರು. ವಾರಂಗಲ್ಲಿನ ಮಹಿಳೆ ಚಿತ್ಯಾಲ ಐಲಮ್ಮ (೧೯೧೯-೧೯೮೫) ಎಂಬಾಕೆ ನಾಲ್ಕೆಕರೆ ಹೊಲವನ್ನು ಜಮೀನ್ದಾರನಿಂದ ಪಡೆದುಕೊಳ್ಳಲು ಹೋರಾಟ ನಡೆಸಿದಳು. ಆಕೆಯ ಹೋರಾಟ ಹಲವು ರೈತರಿಗೆ ಸ್ಫೂರ್ತಿಯಾಯಿತು. ೧೯೪೬ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ಹೋರಾಟ ನಡೆಯಿತು. ತಮ್ಮಿಷ್ಟದಂತೆ ಬಡ್ಡಿ ಏರಿಸಿ, ಲೆಕ್ಕ ಬರೆದು, ಬಾಕಿ ತೀರಿಸಲು ಕಿಬ್ಬದಿಯ ಕೀಲು ಮುರಿವ ‘ಸಾಲ’ ಮನ್ನಾ ಆಗಬೇಕು; ಬಂಧನಕ್ಕೊಳಪಟ್ಟು ಜೀತ ಮಾಡುವವರಿಗೆ ಬಿಡುಗಡೆ ಬೇಕು; ಭೂಮಿಯ ಹಕ್ಕು ಉಳುವ ತಮಗೆ ಸೇರಬೇಕು ಎಂಬುದು ಅವರ ಮುಖ್ಯ ಬೇಡಿಕೆಗಳಾಗಿದ್ದವು. ೩೦೦೦ ಸಾವಿರ ಹಳ್ಳಿಗಳ ರೈತರು ಹೋರಾಟದಲ್ಲಿ ಪಾಲ್ಗೊಂಡರು. ಭೂಮಾಲೀಕರನ್ನು ಒಂದೋ ಕೊಲ್ಲಲಾಯಿತು ಅಥವಾ ಓಡಿಸಲಾಯಿತು. ಜಮೀನ್ದಾರರ ಖಾಸಗಿಪಡೆಗಳ ಕೈಲಿ ಸರಿಸುಮಾರು ೪೦೦೦ ರೈತರು ಹತರಾದರೂ ೧೦ ಸಾವಿರ ಎಕರೆ ಜಮೀನು ಉಳುವ ರೈತರಿಗೆ ದೊರೆಯಿತು. ‘ಆಂಧ್ರಮಹಾಸಭಾ’ ಅಡಿಯಲ್ಲಿ ಅವು ರೈತರ ಆಳ್ವಿಕೆಗೆ ಒಳಪಟ್ಟವು. ಹೀಗೆ ಭೂಸುಧಾರಣೆ ಒಂದು ಅಗತ್ಯ ಮತ್ತು ತುರ್ತು ಕ್ರಮವಾಗಿದೆ ಎಂಬುದನ್ನು ಸ್ವತಂತ್ರ ಭಾರತದ ಆಳುವವರಿಗೆ ಮನವರಿಕೆ ಮಾಡಿಕೊಟ್ಟದ್ದೇ ತೆಲಂಗಾಣ ಭೂ ಹೋರಾಟ ಎಂದು ಚರಿತ್ರೆಯಲ್ಲಿ ಗುರುತಿಸಲಾಗುತ್ತದೆ.
ದೇಶಕ್ಕೆ ಸ್ವಾತಂತ್ರ ಬಂದು ಹೈದರಾಬಾದ್ ಸಂಸ್ಥಾನ ಭಾರತದಲ್ಲಿ ವಿಲೀನವಾಗಲು ಒಪ್ಪದೇ ಪಾಕಿಸ್ತಾನದ ಅನೆಕ್ಸ್ ಆಗಿ ಉಳಿಯಬಯಸಿತು. ಅದು ನಿಜಾಮ ಜನರ ಪರವಾಗಿ ತಾನೇ ತೆಗೆದುಕೊಂಡ ನಿರ್ಧಾರವಾಗಿತ್ತು. ಈ ಕುರಿತು ವಿಶ್ವಸಂಸ್ಥೆಯನ್ನೂ ಹೈದರಾಬಾದ್ ಸಂಪರ್ಕಿಸಿತ್ತು. ತನ್ನ ರಾಜ್ಯದ ರೈತ ಹೋರಾಟ ವಿಲೀನವಾದಿಗಳ ಜೊತೆ ಸೇರಿದಾಗ ಅವರನ್ನು ನೆಲಕಚ್ಚಿಸಲು ನಿಜಾಮನ ಖಾಸಗಿಸೈನ್ಯ ರಜಾಕಾರ ಪಡೆ ಸಕ್ರಿಯವಾಯಿತು. ಅದು ವಿಲೀನ ಬಯಸುವವರನ್ನು ಅತ್ಯಂತ ಅಮಾನುಷವಾಗಿ ಹಿಂಸಿಸಿ, ಬರ್ಬರವಾಗಿ ಕೊಂದು ಹಾಕಿತು. ಹಳ್ಳಿಗಳನ್ನು ಸುಡಲಾಯಿತು. ಹೆಂಗಸರನ್ನು ಅಪಹರಿಸಿ ಅತ್ಯಾಚಾರಗೈದು ಕೊಲೆ ಮಾಡಲಾಯಿತು. ಕೊನೆಗೆ ಭಾರತೀಯ ಸೇನೆ ‘ಆಪರೇಷನ್ ಪೋಲೋ’ ಮೂಲಕ ಐದು ದಿನದಲ್ಲಿ ಹೈದರಾಬಾದನ್ನು ವಶಪಡಿಸಿಕೊಂಡು ಭಾರತದಲ್ಲಿ ಸೇರಿಸಿಕೊಂಡಿತು.
ಆದರೆ ಶಾಂತಿಸುವ್ಯವಸ್ಥೆಯ ನೆಪದಲ್ಲಿ ರೈತ ಹೋರಾಟವೂ ತಣ್ಣಗಾಗುವಂತೆ ಮಾಡಲಾಯಿತು.
ಅದೇ ವೇಳೆ ಮದರಾಸು ರಾಜ್ಯದಲ್ಲಿ ತೆಲುಗರು ತಾರತಮ್ಯ ಎದುರಿಸುತ್ತಿದ್ದು ಅವರಿಗೆ ಬೇರೆ ರಾಜ್ಯ ರಚಿಸಬೇಕೆಂದು ಗಾಂಧಿವಾದಿ ಪೊಟ್ಟಿ ಶ್ರೀರಾಮುಲು ೧೯೫೨ರಲ್ಲಿ ಆಮರಣಾಂತ ಉಪವಾಸ ಕೈಗೊಂಡರು. ಒಮ್ಮೆ ನಿಲ್ಲಿಸಿ, ಮತ್ತೆ ಕೈಗೊಂಡ ಒಟ್ಟು ೫೩ ದಿನಗಳ ಉಪವಾಸದ ಕೊನೆಯಲ್ಲಿ ಶ್ರೀರಾಮುಲು ತೀರಿಕೊಂಡರು. ಕೂಡಲೇ ಪ್ರತ್ಯೇಕ ತೆಲುಗು ರಾಜ್ಯಕ್ಕಾಗಿ ಹೋರಾಟದ ಕಿಚ್ಚು ಹೊತ್ತಿಕೊಂಡಿತು. ಪ್ರತಿಭಟನೆಯ ತೀವ್ರತೆ ಎಲ್ಲಕಡೆ ವ್ಯಾಪಿಸುತ್ತಿದ್ದಂತೆ ಮೂರೇ ದಿನದಲ್ಲಿ ನೆಹರೂ ತೆಲುಗರಿಗೆ ಬೇರೆ ರಾಜ್ಯ ನೀಡುವುದಾಗಿ ಘೋಷಿಸಿದರು.
೧೯೫೩. ಕರ್ನೂಲು ರಾಜಧಾನಿಯಾಗಿ ೭ ಕರಾವಳಿ ಜಿಲ್ಲೆಗಳು ಹಾಗೂ ೪ ರಾಯಲಸೀಮಾ ಜಿಲ್ಲೆಗಳು ಸೇರಿ ಹೊಸ ಆಂಧ್ರ ರಾಜ್ಯ ಉದಯವಾಯ್ತು.
ಹೊಸ ರಾಜ್ಯವೇನೋ ಹುಟ್ಟಿತು, ಆದರೆ ಅಲ್ಲಿ ಮೂಲಸೌಕರ್ಯವಿರಲಿಲ್ಲ. ಅಧಿಕಾರಿಗಳಿಗೆ ಸಂಬಳ ಕೊಡುವುದಕ್ಕೆ ಹಣವಿರಲಿಲ್ಲ, ಅವರು ಟೆಂಟಿನಲ್ಲಿ ವಾಸ ಮಾಡಬೇಕಾಯಿತು. ಆಗ ರಾಜ್ಯ ಪುನರ್ವಿಂಗಡಣಾ ಸಮಿತಿ ಮುಂದೆ ಹೈದರಾಬಾದ್(ತೆಲಂಗಾಣ) ಅನ್ನೂ ಆಂಧ್ರದಲ್ಲಿ ವಿಲೀನಗೊಳಿಸಿ ತೆಲುಗು ಭಾಷಿಕರ ಒಂದು ರಾಜ್ಯ ರಚಿಸುವ ಪ್ರಸ್ತಾಪ ಬಂತು. ಪರವಿರೋಧ ಮಾತುಗಳೆರಡೂ ಕೇಳಿಬಂದವು.
ಸಂಪದ್ಭರಿತ, ಶ್ರೀಮಂತ ನಿಜಾಮ ಆಳಿದ ತೆಲಂಗಾಣದ ರೈತರಾದರೋ ಬಡವರು ಹಾಗೂ ಅಶಿಕ್ಷಿತರಾಗಿದ್ದರು. ಕರಾವಳಿಯ ತೆಲುಗರು ಇಂಗ್ಲಿಷ್ ಕಲಿತು, ಉನ್ನತ ಶಿಕ್ಷಣ ಪಡೆದು ವ್ಯಾಪಾರ ವಹಿವಾಟು ನಡೆಸುತ್ತ ಪ್ರಭಾವಿಗಳಾಗಿದ್ದರು. ತೆಲಂಗಾಣದವರಿಗೆ ವಿಲೀನವಾದರೆ ಅಶಿಕ್ಷಿತರಾದ ತಾವು ಅಲಕ್ಷಿತರಾದೇವೆಂಬ ಅಂಜಿಕೆಯಿತ್ತು. ಆದರೆ ರೈತಹೋರಾಟ ಕಟ್ಟಿದ ಎಡಪಕ್ಷವು ವಿಲೀನದ ಪರವಾಗಿತ್ತು. ಕೊನೆಗೆ ೧೯೫೬ರಲ್ಲಿ ಉದ್ಯೋಗ/ಶಿಕ್ಷಣದಲ್ಲಿ ಮೀಸಲಾತಿ; ಕ್ಯಾಬಿನೆಟ್‌ನಲ್ಲಿ ೪೦% ತೆಲಂಗಾಣ ಮಂತ್ರಿಗಳಿಗೆ ಅವಕಾಶ; ಮುಖ್ಯಮಂತ್ರಿ -ಉಪಮುಖ್ಯಮಂತ್ರಿ ಎಂಬ ಎರಡು ಹುದ್ದೆಗಳಲ್ಲೊಂದು ತೆಲಂಗಾಣಕ್ಕೆ ಇತ್ಯಾದಿ ಅಧಿಕಾರ-ಸಮಾನ ಸಂಪನ್ಮೂಲ ಹಂಚಿಕೆಯ ಹಲವು ಭರವಸೆಗಳೊಂದಿಗೆ ಆಂಧ್ರ-ತೆಲಂಗಾಣ ವಿಲೀನವಾಗಿ ಆಂಧ್ರಪ್ರದೇಶ ಹುಟ್ಟಿತು.
ತೆಲಂಗಾಣ ಪ್ರಜಾ ಸಮಿತಿ
೧೫ ವರ್ಷ ಕಳೆಯಿತು. ತೆಲಂಗಾಣ ಭಾಗಕ್ಕೆ ಕೊಡಲಾದ ಭರವಸೆಗಳೆಲ್ಲ ಹುಸಿ ಎಂಬ ಅಸಮಾಧಾನ ಹೊಗೆಯಾಡತೊಡಗಿತು. ೧೯೬೯ರಲ್ಲಿ ಮರ್ರಿ ಚಿನ್ನಾರೆಡ್ಡಿ ನೇತೃತ್ವದಲ್ಲಿ ಹೋರಾಟ ಶುರುವಾಗಿ ತೆಲಂಗಾಣ ಪ್ರಜಾಸಮಿತಿ ಅಸ್ತಿತ್ವಕ್ಕೆ ಬಂತು. ಇಂದಿರಾಗಾಂಧಿ ಎಂಟು ಅಂಶಗಳ ಕಾರ್ಯಕ್ರಮ ಘೋಷಿಸಿದರೂ ಪ್ರತಿಭಟನೆ ನಿಲ್ಲದೆ ವಿದ್ಯಾರ್ಥಿ ಹೋರಾಟ ಪ್ರಬಲವಾಯಿತು. ಹಿಂಸಾತ್ಮಕವಾದ ಪ್ರತಿಭಟನೆಯನ್ನು ಹತ್ತಿಕ್ಕಲು ಸೇನೆ ಬಂತು. ಸುಮಾರು ೩೬೯ ವಿದ್ಯಾರ್ಥಿಗಳು ಪ್ರಾಣತೆತ್ತರು. ತೆಲಂಗಾಣಕ್ಕೆ ವಿರುದ್ಧವಾಗಿ ರಾಯಲಸೀಮಾ ಮತ್ತು ಕರಾವಳಿಯವರಿಂದ ೧೯೭೨ರಲ್ಲಿ ಜೈ ಆಂಧ್ರ ಚಳುವಳಿ ಶುರುವಾಯಿತು. ಕೊನೆಗೆ ಸಂಧಾನ ನಡೆದು, ಆರು ಅಂಶಗಳ ಸೂತ್ರಕ್ಕೆ ಒಪ್ಪಿ ಚಳುವಳಿ ಹಿನ್ನೆಲೆಗೆ ಸರಿಯಿತು.
ಇಲ್ಲಿ ಕೆಲವಿಷಯ ಗಮನಿಸಬೇಕು. ಈ ಎಲ್ಲ ಹೋರಾಟ ನಡೆಯುವ ಕಾಲದಲ್ಲಿ ತೆಲಂಗಾಣದ ಪಿ. ವಿ. ನರಸಿಂಹರಾವ್ ಪ್ರಭಾವೀ ಕಾಂಗ್ರೆಸ್ ರಾಜಕಾರಣಿಯಾಗಿ ಹೊಮ್ಮಿದರು. ೧೯೭೧-೭೩ರವರೆಗೆ ಆಂಧ್ರದ ಮುಖ್ಯಮಂತ್ರಿಯಾಗಿದ್ದರು. ನಂತರ ಕೇಂದ್ರ ಗೃಹ ಖಾತೆಯೂ ಸೇರಿದಂತೆ ಅನೇಕ ಜವಾಬ್ದಾರಿಯುತ ಸ್ಥಾನ ನಿರ್ವಹಿಸಿ ೧೯೯೧-೯೬ರವರೆಗೆ ಪ್ರಧಾನಿಯಾಗಿದ್ದರು. ಆದರೆ ಕಾಂಗ್ರೆಸ್ ಆಗ ವಿಭಜನೆಯ ಪರವಾಗಿ ಇರಲಿಲ್ಲ. ಅವರ ನಿಷ್ಠೆ ಕಾಂಗ್ರೆಸ್ ಪಕ್ಷಕ್ಕೆ ಇದ್ದಷ್ಟು ತೆಲಂಗಾಣಕ್ಕೆ ಇರಲಿಲ್ಲ. ಎಂದೇ ಕಾಂಗ್ರೆಸ್ಸಿನ ಪಿವಿ ತೆಲಂಗಾಣ ನಾಯಕರಾಗಲಿಲ್ಲ. ಸಮಸ್ಯೆಯೂ ಬಗೆಹರಿಯಲಿಲ್ಲ.
ಜೊತೆಗೇ ಅದು ಪ್ರಾದೇಶಿಕ ಪಕ್ಷಗಳು ಮುನ್ನೆಲೆಗೆ ಬಂದ ಕಾಲ. ‘ತೆಲುಗು’ ಸೆಂಟಿಮೆಂಟ್ ಬಳಸಿಕೊಂಡು ತೆಲುಗುದೇಶಂ ಪಕ್ಷ ಹುಟ್ಟಿತು. ಅದರ ಉಚ್ಛ್ರಾಯ ಕಾಲವಿದ್ದಾಗ ತೆಲಂಗಾಣ ಪ್ರಶ್ನೆ ಬದಿಗೆ ಸರಿಸಲ್ಪಟ್ಟಿತು. ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ಅದು ವಿಭಜನೆ ತೆಲಂಗಾಣ ಸಮಸ್ಯೆಗೆ ಪರಿಹಾರವಲ್ಲ ಎಂದೇ ಭಾವಿಸಿತು.
ರಾಷ್ಟ್ರೀಯ ಪಕ್ಷಗಳು ಕೆರೆ-ದಡ, ಕೆರೆ-ದಡ ಎನ್ನುತ್ತ ದ್ವಂದ್ವ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದ ಕಾಲದಲ್ಲೇ ಟಿಡಿಪಿಯ ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡು ಹೊರನಡೆದ ಕೆ. ಚಂದ್ರಶೇಖರ ರಾವ್ ೨೦೦೧ರಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಎಂಬ ಪಕ್ಷ ಕಟ್ಟಿದರು. ಟಿಆರ್‌ಎಸ್ ನಿಧಾನವಾಗಿ ಪ್ರತ್ಯೇಕ ರಾಜ್ಯ ಕಲ್ಪನೆಯನ್ನು ಭಾವನಾತ್ಮಕವಾಗಿ ಜನರಲ್ಲಿ ತುಂಬತೊಡಗಿತು. ಟಿ ನ್ಯೂಸ್ ಎಂಬ ಚಾನೆಲ್, ವೃತ್ತ ಪತ್ರಿಕೆಗಳು, ಸಂಘಗಳು ತಲೆಯೆತ್ತಿದವು. ವಿದ್ಯಾರ್ಥಿಗಳನ್ನು ಹುರಿದುಂಬಿಸಲಾಯ್ತು. ಕಾಂಗ್ರೆಸ್ ಕೂಡಾ ಟಿಆರ್‌ಎಸ್ ಜೊತೆ ಸೇರಿತು.
೨೦೦೪. ಆಂಧ್ರದಲ್ಲಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಟಿಆರ್‌ಎಸ್ ಸರ್ಕಾರದ ಸಹಭಾಗಿಯಾಯಿತು. ಆದರೆ ರಾಜ್ಯ ವಿಭಜನೆ ಕುರಿತು ಟಿಆರ್‌ಎಸ್‌ಗಿರುವಷ್ಟು ಅವಸರ ಕಾಂಗ್ರೆಸ್‌ಗಿರಲಿಲ್ಲ. ವಿಳಂಬನೀತಿ ಅನುಸರಿಸಲಾಗುತ್ತಿದೆ ಎಂದು ದೂರಿ ೨೦೦೬ರಲ್ಲಿ ಟಿಆರ್‌ಎಸ್ ಸರ್ಕಾರದಿಂದ ಹೊರಬಂತು. ೨೦೦೮ರಲ್ಲಿ ಟಿಡಿಪಿಯೂ ತನ್ನ ನಿಲುವು ಬದಲಿಸಿ ಆಂಧ್ರ ವಿಭಜನೆಗೆ ಒಪ್ಪಿತು.
೨೦೦೯ರಲ್ಲಿ ಆಂಧ್ರದಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಬಂತು. ಮುಖ್ಯಮಂತ್ರಿ ವೈಎಸ್ಸಾರ್ ಅಪಘಾತದಲ್ಲಿ ತೀರಿಕೊಂಡು ರಾಜಕೀಯ ನಾಯಕತ್ವದಲ್ಲಿ ಶೂನ್ಯ ಆವರಿಸಿದ ಕೂಡಲೇ ಕೆ ಚಂದ್ರಶೇಖರ ರಾವ್ ಪ್ರತ್ಯೇಕ ರಾಜ್ಯ ಬೇಡಿಕೆಯ ಕೂಗನ್ನು ತಾರಕಕ್ಕೇರಿಸಿದರು. ಅನಿರ್ದಿಷ್ಟ ಕಾಲಾವಧಿಯವರೆಗೆ ಉಪವಾಸ ಸತ್ಯಾಗ್ರಹ ಆರಂಭಿಸಿದರು.
‘ಬ್ಯಾಕ್‌ವರ್ಡ್ ರೀಜನ್ಸ್ ಫಂಡ್, ೨೦೦೯-೧೦’ ಪ್ರಕಾರ ಆಂಧ್ರದ ೧೩ ಜಿಲ್ಲೆಗಳನ್ನು ಹಿಂದುಳಿದವೆಂದು ಗುರುತಿಸಲಾಯಿತು. ಅದರಲ್ಲಿ ಹೈದರಾಬಾದ್ ಹೊರತುಪಡಿಸಿ ತೆಲಂಗಾಣದ ಒಂಭತ್ತೂ ಜಿಲ್ಲೆಗಳಿದ್ದವು. ‘ಸಂಪನ್ಮೂಲಭರಿತ ತೆಲಂಗಾಣ ಆಂಧ್ರವನ್ನು ಕೈತುತ್ತು ಕೊಟ್ಟು ಉಣಿಸಿದ್ದು ಸಾಕು, ನಮಗೆ ಹೊಸರಾಜ್ಯ ಬೇಕು’ ಎಂಬ ಬೇಡಿಕೆಯಿಟ್ಟು ಮಿಲಿಯನ್ ಮಾರ್ಚ್, ಚಲೋ ಅಸೆಂಬ್ಲಿ, ಸಕಲ ಜನುಲ ಸಮ್ಮೆ, ಎಂಎಲ್‌ಎಗಳ ರಾಜೀನಾಮೆ ಸಂಭವಿಸಿದವು. ಹಿಂದುಳಿದಿರುವಿಕೆಯನ್ನೇ ಮುಖ್ಯ ಕಾರಣವನ್ನಾಗಿ ಬಿಂಬಿಸಿ ಪ್ರತ್ಯೇಕ ರಾಜ್ಯಕ್ಕಾಗಿ ಪಟ್ಟು ಹಿಡಿದು ವಿದ್ಯಾರ್ಥಿ ಚಳುವಳಿ, ಸರ್ಕಾರಿ ನೌಕರರ ಬೆಂಬಲ, ಇನ್ನಿತರ ಸಂಘಟನೆಗಳ ಬೆಂಬಲ ದೊರೆಯಿತು. ಇಡೀ ತೆಲಂಗಾಣ ಬಂದ್ ಆಯಿತು. ಕೆಲವೆಡೆ ಹಿಂಸಾತ್ಮಕ ಪ್ರದರ್ಶನ ನಡೆದವು. ಆತ್ಮಹತ್ಯೆ-ಹತ್ಯೆಗಳು ಹೋರಾಟದ ಕಾವನ್ನು ಜೀವಂತ ಉಳಿಸಿದವು.
ಕೊನೆಗೆ ರಾಜ್ಯ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸಿ ಪ್ರತ್ಯೇಕ ರಾಜ್ಯ ರಚನೆಗೆ ಎಲ್ಲರೂ ಒಪ್ಪಿರುವ ಸಂದೇಶವನ್ನು ಕೇಂದ್ರಕ್ಕೆ ಕಳಿಸಿತು. ಕೇಂದ್ರ ಗೃಹ ಮಂತ್ರಿ ರಾಜ್ಯ ವಿಭಜನೆಯ ನಡಾವಳಿ ಆರಂಭಿಸುವುದಾಗಿ ಘೋಷಿಸಿದರು.
ಈಗ ಆಂಧ್ರಪ್ರದೇಶ ಎರಡಾಗಿದೆ.
ಹೊಸತು: ಸವಾಲು ಸರಮಾಲೆ
ದೀರ್ಘ ಹೋರಾಟದ ನಂತರ ಅಂತೂ ತೆಲುಗು ಭಾಷಿಕರು ಎರಡು ರಾಜ್ಯ ಹೊಂದುತ್ತಿದ್ದಾರೆ. ಆದರೆ ಸೀಮಾಂಧ್ರ ಕುರಿತು ಬಿತ್ತಲಾದ ಅಸಹನೆಯನ್ನು ಪ್ರೀತಿ-ಸಹಬಾಳ್ವೆಯಾಗಿಸುವುದು; ಹೋರಾಟದ ನಾಯಕತ್ವ ವಹಿಸಿದ ವಿದ್ಯಾರ್ಥಿ ಮುಖಂಡರು ಹಾಗೂ ಮತ್ತಿತರ ಮುಖಂಡರಿಗೆ ಸೂಕ್ತ ಸ್ಥಾನ, ಜವಾಬ್ದಾರಿ ವಹಿಸುವುದು ಸವಾಲಿನ ವಿಷಯವಾಗಿದೆ. ನೀರಿನ ಹಂಚಿಕೆ ಸದಾ ಜೀವಂತ ವಿವಾದವಾಗಿ ಉಳಿಯುವ, ಕೋಮುರಾಜಕಾರಣ ತಲೆಯೆತ್ತುವ ಸಾಧ್ಯತೆಗಳಿವೆ.
ಆದರೆ ತೆಲಂಗಾಣವೆಂದರೆ ತೆಲುಗರಷ್ಟೇ ಅಲ್ಲ, ಹೋರಾಟವೆಂದರೆ ಟಿಆರ್‌ಎಸ್, ಕೆ. ಚಂದ್ರಶೇಖರ ರಾವ್ ಅಷ್ಟೇ ಅಲ್ಲ. ೨೦೧೨ರಲ್ಲಿ ತೆಲಂಗಾಣದ ದಲಿತ ಮತ್ತು ಮುಸ್ಲಿಂ, ಅಲ್ಪಸಂಖ್ಯಾತ ನಾಯಕರು ತಮಗೆ ಅವಿಭಜಿತ ಆಂಧ್ರವೇ ಸುರಕ್ಷಿತ ಎಂಬ ಹೇಳಿಕೆ ನೀಡಿದ್ದರು. ಈ ಗುಂಪು ತೆಲಂಗಾಣ ಜನಸಂಖ್ಯೆಯ ೪೦% ಇದೆ. ‘ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್’ ಎಂಪಿ, ಹೈದರಾಬಾದಿನ ಅಕ್ಬರುದ್ದೀನ್ ಒವೈಸಿ ವಿಭಜನೆಯ ವಿರುದ್ಧ ನಿಂತರು. ಅವರ ಪ್ರಕಾರ ರಾಜ್ಯ ವಿಭಜಿಸುವುದಾದರೆ ರಾಯಲಸೀಮಾ ಮತ್ತು ತೆಲಂಗಾಣ ಸೇರಿಸಿ ಹೈದರಾಬಾದ್ ರಾಜಧಾನಿಯಾಗಿಸಿ ಬೇರೆ ರಾಜ್ಯ ಮಾಡಬೇಕು. ಇಲ್ಲದಿದ್ದರೆ ನೀರಿನ ಹಂಚಿಕೆ ಸದಾ ಜೀವಂತ ವಿವಾದವಾಗಿ ಉಳಿಯುವ ಎಲ್ಲ ಸಾಧ್ಯತೆಗಳು ಇದೆ. ಅಲ್ಲದೇ ಈಗಿನ ಸ್ವರೂಪದಲ್ಲಿ ರಾಜ್ಯ ವಿಭಜನೆಯಾದರೆ ಕೋಮುರಾಜಕಾರಣ ತಲೆಯೆತ್ತುವ ಸಾಧ್ಯತೆಯಿದೆ. ಅವರೇಕೆ ಹಾಗೆ ಭಾವಿಸಿದರು? ಇಲ್ಲಿ ಕೆಲ ಸೂಕ್ಷ್ಮಗಳನ್ನು ಗಮನಿಸಬೇಕಿದೆ.
ತೆಲಂಗಾಣದಲ್ಲಿ ೮೪% ಹಿಂದೂಗಳು, ೧೨.೪% ಮುಸ್ಲಿಮರು, ೩.೨% ಕ್ರೈಸ್ತ ಮತ್ತಿತರ ಧರ್ಮದವರು ಇದ್ದಾರೆ. ತೆಲುಗು ಭಾಷಿಕರು ೭೬%, ಉರ್ದು ಭಾಷಿಕರು ೧೨% ಇದ್ದಾರೆ. ಆ ಪ್ರದೇಶವು ೧೯೪೮ರ ಮೊದಲು ಉರ್ದುವನ್ನು ರಾಜ್ಯಭಾಷೆಯ್ನಾಗಿ ಹೊಂದಿದ್ದು ನಂತರ ತೆಲುಗು ಮಾಧ್ಯಮದಲ್ಲಿ ಬೋಧಿಸುವ ಶಾಲೆಗಳನ್ನು ಪಡೆಯಿತು. ಈಗ ಸಾಕ್ಷರತೆ ೬೭% ಇದೆ.
ಸಾಚಾರ್ ಸಮಿತಿ ವರದಿಯಂತೆ ಆಂಧ್ರಪ್ರದೇಶ ರಾಜ್ಯದಲ್ಲಿ ಮಾತ್ರ ಸರ್ಕಾರಿ ನೌಕರಿಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ(೯%) ಅವರ ಜನಸಂಖ್ಯೆಗೆ(೮%) ಅನುಗುಣವಾಗಿದೆ. ಆದರೆ ಇದು ನಿಜಾಮತನದಲ್ಲಿ ಶಿಕ್ಷಣ/ಸಂಪತ್ತು ಪಡೆದ ಒಂದು ವರ್ಗದ ಕತೆ ಅಷ್ಟೇ. ಅಲ್ಲಿನ ಬಹುತೇಕ ಮುಸ್ಲಿಮರು ದಲಿತರಷ್ಟೇ ಅಥವಾ ಅವರಿಗಿಂತ ಹಿಂದುಳಿದಿದ್ದಾರೆ. ನಿಜಾಮನ ರಾಜ್ಯದ ರಜಾಕಾರರ ದಾಳಿಯ ನೆನಪುಗಳು ಕೆಲವರಿಗೆ ಇರಬಹುದಾದರೂ ಸಾಮರಸ್ಯದಿಂದಿರುವ ನಾಡಿನಲ್ಲಿ ಹಿಂದೂಗಳ ಕೋಮು ಭಾವನೆ ಕೆರಳಿಸುವುದು ತುಂಬ ಸುಲಭ. ಓಸ್ಮಾನಿಯಾ ವಿಶ್ವವಿದ್ಯಾಲಯದ ‘ಬೀಫ್ ಫೆಸ್ಟಿವಲ್’ ಸೃಷ್ಟಿಸಿದ ವಿವಾದ, ಸಂಗಿರೆಡ್ಡಿ ಜಿಲ್ಲೆಯ ಕೋಮುದಂಗೆಗಳ ನೆನಪಿಸಿಕೊಂಡರೆ; ಪ್ರಸ್ತುತ ಭಾರತದ ರಾಜಕಾರಣದ ದಿಕ್ಕುದೆಸೆಗಳನ್ನು ಅವಲೋಕಿಸಿದರೆ ಕೋಮುಭಾವನೆಯನ್ನು ರಾಜಕಾರಣ ಹೇಗೆ ಬಳಸಿಕೊಳ್ಳಬಹುದೆಂದು ಊಹಿಸಬಹುದು.
ತೆಲಂಗಾಣ ಹೋರಾಟ ಆರಂಭದಲ್ಲಿ ರೈತ ಹೋರಾಟವಾಗಿ ಎಡಪಂಥೀಯರ ನಾಯಕತ್ವದಲ್ಲಿತ್ತು. ಆಗ ‘ತೆಲಂಗಾಣ’ ಎನ್ನುವುದು ಧರ್ಮವಾಗಿತ್ತೇ ಹೊರತು ಯಾರೂ ಧಾರ್ಮಿಕ ಭಾವನೆಗಳನ್ನು ಹೊಂದಿರಲಿಲ್ಲ. ಆದರೆ ಈಗ ಜನನಾಯಕತ್ವವನ್ನು ಹಿನ್ನೆಲೆಗೆ ಸರಿದಿದೆ. ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಹೋರಾಟದ ರಾಜಕಾರಣ ಹೋಳಾಗಿದೆ. ಹೋರಾಡಿದವರು ಯಾರೋ, ಬಾಧಿತರು ಯಾರೋ, ಅದನ್ನು ತಮ್ಮ ರಾಜಕೀಯ-ಅಧಿಕಾರದ ಲಾಭನಷ್ಟಗಳ ಲೆಕ್ಕಾಚಾರಕ್ಕೆ ಬಳಸಿಕೊಳ್ಳುತ್ತಿರುವವರು ಇನ್ಯಾರೋ ಆಗಿದ್ದಾರೆ.
ಮೊದಲ ರೈತ ಚಳುವಳಿಯು ನಂತರ ನಿಜಾಮನ ವಿರುದ್ಧ ಹೋರಾಟವಾಯಿತು. ವಿದ್ಯಾರ್ಥಿಗಳ, ಸರ್ಕಾರಿ ನೌಕರರ ಚಳುವಳಿಯಾಗಿ ರಾಷ್ಟ್ರೀಯ ಪಕ್ಷಗಳು ಮುನ್ನೆಲೆಗೆ ಬಂದವು. ಕ್ರಮೇಣ ಪ್ರಾದೇಶಿಕ ಪಕ್ಷಗಳ ರಾಜಕಾರಣ ಕೇಂದ್ರಕ್ಕೆ ಬಂತು. ಈ ಎಲ್ಲ ಕಾಲದಲ್ಲಿ ತೆಲಂಗಾಣ ಇಷ್ಯೂವನ್ನು ರಾಷ್ಟ್ರೀಯ ಪಕ್ಷಗಳು ಹಾಗೂ ತೆಲಂಗಾಣ ವಿಮೋಚನೆಗಾಗೇ ಹುಟ್ಟಿಕೊಂಡ ಟಿಆರ್‌ಎಸ್ ಸೇರಿದಂತೆ ಎಲ್ಲರೂ ತಮ್ಮ ಉಳಿವಿನ ಪ್ರಶ್ನೆಯಾಗಿಸಿಕೊಂಡಿದ್ದರು. ತಮಗೆ ಬೇಕೆಂದಾಗ ತೆಲಂಗಾಣವನ್ನು ಹಾಡಿ, ತಟ್ಟಿ, ಮಲಗಿಸಿ, ತಣ್ಣಗಾಗಿಸಿ; ಬೇಕೆಂದಾಗ ಉರಿಸಿ, ಜೀವಂತ ಗಾಯವಾಗಿಸಿದ್ದರು. ಎಂದೇ ಉದಯಿಸಲಿರುವ ಹೊಸ ರಾಜ್ಯದ ಮುಂದಿನ ನಡೆಗಳನ್ನು ಜಾಗರೂಕವಾಗಿ ಪರಿಶೀಲಿಸಬೇಕಿದೆ.
ಹೊಸದಾಗಿ ಹುಟ್ಟಿದ ರಾಜ್ಯಗಳ ನಾಯಕರ ಪರಮ ಭ್ರಷ್ಟತೆ, ಹಗರಣಗಳು ನಮ್ಮೆದುರು ಸಾಲುಸಾಲು ಇವೆ. ಹೀಗಿರುವಾಗ ತೆಲಂಗಾಣದ ಪ್ರಜ್ಞಾವಂತರು ರಾಜ್ಯ ವಿಭಜನೆಯೇ ಜನಹಿತದ ಅಂತಿಮ ನೆಲೆಯಲ್ಲ ಎಂಬುದನ್ನು ಮರೆಯಬಾರದು.ಈಗ ತೆಲಂಗಾಣದ ಎರಡು ಮುಖ್ಯ ಪಕ್ಷಗಳಲ್ಲಿ ಟಿಆರ್‌ಎಸ್‌ನಲ್ಲಿ ವೆಲಮ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ರೆಡ್ಡಿ ಸಮುದಾಯಗಳು ಪ್ರಾಬಲ್ಯ ಹೊಂದಿವೆ. ಅವೆರೆಡೂ ಜಮೀನ್ದಾರೀ ಕುಲಗಳು. ೬೦ ವರ್ಷ ಕೆಳಗೆ ಬಡರೈತರನ್ನು ನಿಜಾಮನ ಹೆಸರಲ್ಲಿ ಯಾವ ಜಮೀನ್ದಾರರು ಸುಲಿದು ‘ದೊರಾ’ಗಳಾಗಿದ್ದರೋ, ಈಗ ಅವರೇ ಪ್ರಜಾಪ್ರಭುತ್ವದ ಚುನಾಯಿತ ಪ್ರತಿನಿಧಿಗಳಾಗಿ ಆಳುತ್ತಿದ್ದಾರೆ. ವ್ಯತ್ಯಾಸ ಇಷ್ಟೇ, ಅವರ ಡೆಸಿಗ್ನೇಷನ್ ಬದಲಾಗಿದೆ ಎಂದು ಉದಯಿಸಲಿರುವ ಹೊಸ ರಾಜ್ಯದ ಸಂಭ್ರಮದ ನಡುವೆ ಜನರಿಗೆ ನೆನಪಿಸಬೇಕಿದೆ.
ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಪ್ರಾದೇಶಿಕ ಅಸಮಾನತೆ ಮತ್ತು ಅಸ್ಮಿತೆಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಒಡೆದುಕೊಳ್ಳಲು ತುದಿಗಾಲಲ್ಲಿ ನಿಂತಿರುವಾಗ ಈ ಸೂಕ್ಷ್ಮಗಳನ್ನು ಜನರಿಗೆ ತಿಳಿಸುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ.
***
ಒಂದು ಭಾಷೆಯ ಕವಿಗೆ ತನ್ನ ನೆಲ ಭೌಗೋಳಿಕವಾಗಿ ಒಡೆದಾಗ ಏನೆನಿಸಬಹುದು? ಆಂಧ್ರ ವಿಭಜನೆಗೊಳ್ಳುತ್ತಿರುವ ಹೊತ್ತಿನಲ್ಲಿ ತೆಲುಗು ಕವಿಗಳಿಗೆ ಏನೆನಿಸಿರಬಹುದು? ಆಂಧ್ರದ ಕವಿ ಕೆ. ಶಿವಾರೆಡ್ಡಿಯವರು ಹುಟ್ಟಿದ್ದು ಸೀಮಾಂಧ್ರದಲ್ಲಿ. ನೆಲೆಸಿದ್ದು ತೆಲಂಗಾಣದಲ್ಲಿ. ಇದು ಬಹುತೇಕರ ಪರಿಸ್ಥಿತಿ. ಅವರ ಪ್ರಕಾರ:
‘ಆಡಳಿತಾತ್ಮಕವಾಗಿ ನೆಲ ಒಡೆದರೆ ತೆಲುಗು ಕವಿ/ಜನ ಒಡೆಯಬೇಕಿಲ್ಲ. ನಾವೆಲ್ಲ ಹುಟ್ಟುತ್ತ ಒಂದು ರಾಜ್ಯ/ಭಾಷೆ/ಊರು/ಕುಟುಂಬದವರಾಗಿ ಹುಟ್ಟುತ್ತೇವೆ. ಆದರೆ ಅರಿವು ವಿಸ್ತಾರಗೊಳ್ಳುತ್ತ ಹೋದಂತೆ ತೆಲುಗು ಕವಿ ಆಂಧ್ರದವನಷ್ಟೆ ಆಗಿರುವುದಿಲ್ಲ. ನೆರೂಡನನ್ನು ಕೇವಲ ಚಿಲಿಗೆ; ರೂಮಿಯನ್ನು ಆಫ್ಘನಿಸ್ತಾನಕ್ಕೆ ಮಿತಿಗೊಳಿಸಬಹುದೆ? ಮನುಷ್ಯನ ಮನಸ್ಸು ಮಾಗುತ್ತ ಹೋಗುವುದೆಂದರೆ ವಿಶಾಲಗೊಳ್ಳುತ್ತ ಹೋಗುವುದು, ವಿಶ್ವಪ್ರಜ್ಞೆ ಎಂದರೆ ಅದೇ.
ನಾನು ಅವಿಭಜಿತ ಆಂಧ್ರದಲ್ಲಿ ಹುಟ್ಟಿದವನು. ತೆಲಂಗಾಣ ಹೋರಾಟಕ್ಕೆ ಮೊದಲಿನಿಂದ ಬೆಂಬಲ ಸೂಚಿಸಿ ಅವರ ಜೊತೆ ಇದ್ದವನು. ಈಗ ಎರಡೂ ರಾಜ್ಯಗಳಿಗೆ ಸೇರಿದವನು. ತೆಲಂಗಾಣ ತನ್ನದೇ ಆದ ಸಂಸ್ಕೃತಿ, ಭಾಷಾಶೈಲಿ, ನುಡಿಗಟ್ಟು, ಸಮಾಜವನ್ನು ಹೊಂದಿದೆ. ಅವರಿಗೆ ಸೀಮಾಂಧ್ರ ತಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಅನ್ನಿಸಿತು, ಅದು ನಿಜವೂ. ಆ ಜನರಿಗೆ ತಮ್ಮನ್ನು ತಮ್ಮ ನಾಯಕನೇ ಆಳಲಿ ಎನಿಸಿದರೆ ಅದೂ ಸರಿಯೇ. ಅದಕ್ಕಾಗಿ ಹಲವು ಮಜಲುಗಳ ಹೋರಾಟ ಹಲವು ದಶಕಗಳಿಂದ ನಡೆಯುತ್ತಿದೆ.
ಆ ಪ್ರದೇಶದಿಂದ ಎಷ್ಟೋ ಹಾಡುಗಾರರು, ಹೋರಾಟಗಾರರು ಬಂದಿದ್ದಾರೆ. ಈಗ ತೆಲಂಗಾಣ ರಾಜ್ಯವಾಯಿತು ಎಂದರೆ ಅವರ ಕೆಲಸ ಮುಗಿಯಿತು ಎಂದು ಅರ್ಥವಲ್ಲ. ಧರ್ಮ, ಅಧಿಕಾರ ಮತ್ತು ಸಂಪತ್ತು ಶೋಷಣೆಯ ಮೂಲ ಪರಿಕರಗಳು. ಅದರ ಮೇಲೆ ಹಿಡಿತ ಹೊಂದಿರುವವರ ಪರವಾಗಿ ಕವಿ ಇರಲಾರ. ಕವಿ ಯಾವತ್ತೂ ಯಾಜಮಾನ್ಯದ ವಿರುದ್ಧ. ಸ್ಟೇಟ್ ವಿರುದ್ಧ. ಪುರೋಹಿತಶಾಹಿಯ ವಿರುದ್ಧ. ಕವಿ ಯಾವತ್ತೂ ದಮನಿತರ ಪರ. ತೆಲಂಗಾಣ ರಾಜ್ಯವಾಯಿತು ಎಂದರೆ ಅದೀಗ ಚಿನ್ನದ ನೆಲವಾಯಿತು ಎಂದ ಹಾಗೆಯೇ? ಸ್ವರ್ಗ ಭೂಮಿಗಿಳಿಯಿತು ಎಂದ ಹಾಗೆಯೇ? ಇಲ್ಲ. ಇವತ್ತಿನ ತೆಲಂಗಾಣದ ನಾಯಕತ್ವಕ್ಕೂ, ಸೀಮಾಂಧ್ರದ ನಾಯಕತ್ವಕ್ಕೂ ಏನೂ ವ್ಯತ್ಯಾಸವಿಲ್ಲ. ಒಬ್ಬ ಲೂಟಿಕೋರನ ಕೈಯಿಂದ ಇನ್ನೊಬ್ಬ ಲೂಟಿಕೋರನ ಕೈಗೆ ರಾಜ್ಯ ಒಪ್ಪಿಸಲು ಜನ ಇಷ್ಟು ಹೋರಾಡಬೇಕಾಯಿತೆ?
ಅಲ್ಲಿ ಭಾಷೆಯ, ಸಂಸ್ಕೃತಿಯ ಯಾಜಮಾನ್ಯದ ವಿರುದ್ಧ ಇದ್ದ ಅಸಮಾಧಾನವನ್ನು ರಾಜಕಾರಣ ತನ್ನ ಮೂಗಿನ ನೇರಕ್ಕೆ ಬಳಸಿಕೊಂಡಿದೆ. ಮೊದಲು ನಡೆದ ಹೋರಾಟಕ್ಕೂ ಇವತ್ತಿನ ಹೋರಾಟಕ್ಕೂ ತುಂಬ ವ್ಯತ್ಯಾಸಗಳಿವೆ. ಕೆಚ್ಚು, ಸ್ಥೈರ್ಯ, ನ್ಯಾಯಯುತ ಬೇಡಿಕೆ ಇರಬೇಕಾದ ಹೋರಾಟದಲ್ಲಿ ದ್ವೇಷವನ್ನು ಬಿತ್ತಲಾಗಿದೆ. ಅದರ ಅಪಾಯಗಳು ಈಗಾಗಲೇ ಕಾಣತೊಡಗಿವೆ.
ಹೀಗಿರುವಾಗ ಒಬ್ಬ ಕವಿಯಾಗಿ ಬದುಕುವುದೆಂದರೆ ಸುಲಭವಲ್ಲ. ಕವಿಗಳಿಗೆ ಇದು ಸವಾಲಿನ ಕಾಲ, ಕವಿಯಾಗಿರಲು ಇದು ಕಷ್ಟದ ಕಾಲ.’
No comments:
Post a Comment