Wednesday, 11 June 2014

ರುವಾಂಡಾ ಹತ್ಯಾಕಾಂಡ:ಎಲೈ ಮನುಷ್ಯಾ, ಮಾಡಯ್ಯಾ ಮನುಷ್ಯ ಮನುಷ್ಯತ್ವದ ಹಾಡು ಮಾತ್ರ ಹಾಡುವಂತೆ..

ಒಂದೇ ನೆಲಜಲಗಾಳಿ ಬಳಸುವ, ಒಂದೇ ಭಾಷೆಯನಾಡುವ, ಒಂದೇ ದೇಶವಾಸಿಗಳಾದ ಜನ ತಂತಮ್ಮ ಕುಲ/ಧರ್ಮದ ಅಸ್ಮಿತೆಯ ಕಾರಣವಾಗಿ ಹೊಡೆದಾಡುವುದು ವಿಶ್ವಗ್ರಾಮದ ವಿಪರ್ಯಾಸವಾಗಿದೆ. ಮನುಷ್ಯ ಮನುಷ್ಯರ ನಡುವಿನ ಸೌಹಾರ್ದದ ಸೂಕ್ಷ್ಮ ನೇಯ್ಗೆ ನಾನಾ ಕಾರಣಗಳಿಗೆ ಘಾಸಿಗೊಳ್ಳುತ್ತಿದ್ದು ವಿಶ್ವ ಮಾನವ ‘ನಾನು-ನನ್ನ’ ಎಂದು ಕುಗ್ಗಿಹೋಗುತ್ತಿರುವುದು ಕಣ್ಣ ಮುಂದಿದೆ. ಯುದ್ಧಗಳು ‘ದೇಶ’ಕ್ಕಿಂತ ಹೆಚ್ಚಾಗಿ ಧರ್ಮ/ಜನಾಂಗಗಳ ಕಾರಣಕ್ಕಾಗೇ ಸಂಭವಿಸುತ್ತಿರುವಾಗ ರುವಾಂಡಾ ಜನಾಂಗೀಯ ಹತ್ಯಾಕಾಂಡ ನಡೆದು ೨೦ ವರ್ಷವಾಗುತ್ತಿದೆ. ಭಾರತದಲ್ಲೂ ಜಾತಿ/ಧರ್ಮಾಧಾರಿತ ಹತ್ಯೆಗಳು ಹೆಚ್ಚುತ್ತಿರುವುದನ್ನು ಪರಿಗಣಿಸಿದರೆ ರುವಾಂಡಾದ ಭೀಕರ ಘಟನೆ, ಅದರ ಹೊರತಾಗಿ ಹೇಗೆ ಅದು ಸೌಹಾರ್ದದಿಂದಿದೆ ಎಂದು ಪರಿಶೀಲಿಸುವುದು ಸಮಯೋಚಿತವೆನಿಸುತ್ತದೆ.   

ಕರ್ನಾಟಕದ ಎರಡು ಜಿಲ್ಲೆಗಳಷ್ಟು ದೊಡ್ಡದಿರುವ, ೧.೨ ಕೋಟಿ ಜನಸಂಖ್ಯೆಯ ಆಫ್ರಿಕಾದ ದೇಶ ರುವಾಂಡಾ ತನ್ನ ನೆಲದ ಲಕ್ಷಾಂತರ ಜೀವಗಳನ್ನು ಎಂದಿನಿಂದ ಜನಾಂಗದ್ವೇಷಕ್ಕೆ ಕಳೆದುಕೊಳ್ಳುತ್ತ ಬಂದಿದೆ. ಅದರಲ್ಲಿ ೧೦ ಲಕ್ಷ ಅಮಾಯಕ ಟುಟ್ಸಿ ಜನರನ್ನು ಕೇವಲ ೧೦೦ ದಿನಗಳಲ್ಲಿ ಹತ್ಯೆ ಮಾಡಿದ ೧೯೯೪ರ ನರಮೇಧವು ಲಿಖಿತ ಇತಿಹಾಸ ಕಂಡ ಅತ್ಯಂತ ಭೀಕರ ಮತ್ತು ವೇಗದ ಹತ್ಯಾಕಾಂಡವೆಂದು ಗುರುತಿಸಲ್ಪಟ್ಟಿದೆ. ರುವಾಂಡಾದ ಬಹುಸಂಖ್ಯಾತ ಹುಟು ಜನಾಂಗ ಕಡಿಮೆ ಸಂಖ್ಯೆಯಲ್ಲಿರುವ ಟುಟ್ಸಿಗಳನ್ನು ‘ಮುಗಿಸಿ ಬಿಡುವ’ ಪ್ರಯತ್ನದಲ್ಲಿ ಅವರನ್ನು ಅಕ್ಷರಶಃ ಬೇಟೆಯಾಡಿ, ಕೊಲೆ ಮಾಡಿ, ಮಾನಭಂಗ ಮಾಡಿ, ಸುಟ್ಟು, ಅತ್ಯಾಚಾರಗೈದು ನಿರ್ಗತಿಕರನ್ನಾಗಿಸಿತು. ೭೦% ಟುಟ್ಸಿಗಳು ಹತ್ಯೆಯಾದ ದುರ್ಘಟನೆ ನೆನೆಸಿಕೊಂಡವರ ಎದೆಭಾರವಾಗಿಸುತ್ತದೆ. ಮನುಷ್ಯ ಮನಸಿನಲ್ಲಡಗಿದ ಹಿಂಸೆಯ ಸ್ವರೂಪ ಮತ್ತು ಪರಿಮಾಣಗಳನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.

ಬರೀ ನೂರು ದಿನಗಳಲ್ಲಿ ೧೦ ಲಕ್ಷ ಜನ ಎಂದರೆ ದಿನಕ್ಕೆ ೧೦ ಸಾವಿರ, ಗಂಟೆಗೆ ನಾನೂರು, ನಿಮಿಷಕ್ಕೆ ಏಳು!

ರಾಜಶಾಹಿಯ ಕಾಲದಿಂದ, ನಂತರ ನಾಝಿ ಹೋಲೋಕಾಸ್ಟ್, ಖ್ಮೇರ್ ರೂಜ್ ರೆಜೀಮ್, ಇರಾಕಿನ ಕುರ್ದಿಶ್ ವಿವಾದಗಳಲ್ಲೂ ಹತ್ಯಾಕಾಂಡಗಳು ನಡೆದಿವೆ. ಆದರೆ ಮಾನವಹಕ್ಕು-ಪ್ರಜಾಪ್ರಭುತ್ವ-ಸಾಮಾಜಿಕ ನ್ಯಾಯಗಳನ್ನು ವಿಶ್ವ ಪ್ರತಿಪಾದಿಸುವ ಕಾಲದಲ್ಲಿ, ದಕ್ಷಿಣ ಆಫ್ರಿಕಾ ನೆಲ್ಸನ್ ಮಂಡೇಲಾರನ್ನು ಅಧ್ಯಕ್ಷರಾಗಿ ಚುನಾಯಿಸಿ ಡೆಸ್ಮಂಡ್ ಟುಟು ‘ಸತ್ಯ ಮತ್ತು ಸಂಧಾನ’ದ ಮಾತನಾಡುತ್ತಿದ್ದ ಕಾಲದಲ್ಲಿ ಆಫ್ರಿಕಾದ ಪುಟ್ಟ ದೇಶ ರುವಾಂಡಾ ಅಮಾಯಕರನ್ನು ಸೊಳ್ಳೆ ಕೊಂದಷ್ಟು ಸಲೀಸಾಗಿ ಕೊಂದು ಬಿಸಾಡಿದ್ದು ದಿಗ್ಭ್ರಮೆ ಹುಟ್ಟಿಸುತ್ತದೆ. ಆಳುವವರು, ಆರಕ್ಷಕರು, ಸೈನ್ಯ, ಗಣ್ಯರು ಮತ್ತು ಬಹುಸಂಖ್ಯಾತರ ಬೆಂಬಲವೂ ಇದ್ದರೆ ಜನಾಂಗೀಯ ಹತ್ಯೆ ಅದೆಷ್ಟು ಭೀಕರವಾಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ.  

ಹತ್ಯಾಕಾಂಡ ಇದ್ದಕ್ಕಿದ್ದಂತೆ ಸಂಭವಿಸಲಿಲ್ಲ. ಅದು ವ್ಯವಸ್ಥಿತ. ಕಾರಣಗಳು ಚಾರಿತ್ರಿಕ. ಅದು ನಿರಂತರ ಜನಾಂಗೀಯ ಸಂಘರ್ಷದ, ಅಧಿಕಾರಕ್ಕಾಗಿನ ಕಚ್ಚಾಟದ ಅಂತಿಮ ಪರಿಣಾಮ. ಒಂದು ದೇಶದ ಆಂತರಿಕ ಸಂಘರ್ಷವನ್ನು ವಿದೇಶೀ ಹಿತಾಸಕ್ತಿಗಳು ಹೇಗೆ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತವೆ ಎನ್ನುವುದಕ್ಕೆ ಉದಾಹರಣೆ. ಜೊತೆಗೆ ಒಂದು ಸಮಾಜ ಶಾಂತಿಯಿಂದಿರಬೇಕಾದರೆ ಸೌಹಾರ್ದ ಎಷ್ಟು ಮುಖ್ಯ ಎಂದು ಪ್ರಪಂಚಕ್ಕೆ ಕಲಿಸಿದ ಪಾಠ.

ಬಂದರಪ್ಪ ಬಂದರೋ..

ರುವಾಂಡಾ ದೇಶ ಹುಟು(೮೪%), ಟುಟ್ಸಿ(೧೫%) ಮತ್ತು ಟ್ವಾ(೧%) ಎಂಬ ಮೂರು ಜನಾಂಗಗಳ ನಾಡು. ಕ್ರಿ. ಪೂ. ೮-೯ ಸಾವಿರ ವರ್ಷಗಳಷ್ಟು ಹಿಂದಿನಿಂದ ಅಲ್ಲಿ ಬೇಟೆಗಾರ ಪಿಗ್ಮಿಕುಲ ಟ್ವಾ ನೆಲೆಸಿದೆ. ಕ್ರಿ. ಪೂ. ೭೦೦ರ ಹೊತ್ತಿಗೆ ಆಚೀಚಿನ ಪ್ರದೇಶಗಳಿಂದ ಬಂಟು ಸಮುದಾಯ ವಲಸೆ ಬಂತು. ಅವರಲ್ಲಿ ಹುಟು ಕೃಷಿಕ ಸಮುದಾಯ. ಟುಟ್ಸಿಗಳು ದನಗಾಹಿಗಳು. ಅವರಿಗೆಲ್ಲ ಬಾನ್ಯಾರ‍್ವಾಂಡಾ ಆಡುಭಾಷೆ. 

೧೮ನೇ ಶತಮಾನದ ಹೊತ್ತಿಗೆ ಅಲ್ಲಿ ಸಣ್ಣಪುಟ್ಟ ರಾಜ್ಯಗಳು ತಲೆಯೆತ್ತಿದವು. ಅದರಲ್ಲಿ ಟುಟ್ಸಿಗಳು ಆಳುತ್ತಿದ್ದ ಒಂದು ರಾಜ್ಯ ಬಲಶಾಲಿಯಾಗಿ ವಿಸ್ತಾರಗೊಳ್ಳುತ್ತ ಉಳಿದವರ ಮೇಲೆ ಅಧಿಕಾರ ಸಾಧಿಸಿತು. ಆಗ ಕಾಲಿಟ್ಟವರು ವಸಾಹತುಶಾಹಿಗಳು. ಬರ್ಲಿನ್ ಕಾನ್ಫರೆನ್ಸ್ ೧೮೮೪ರಲ್ಲಿ ರುವಾಂಡಾವನ್ನು ಜರ್ಮನಿಗೆ ಕೊಟ್ಟಿತು. ಜರ್ಮನರಿಗೆ ಟುಟ್ಸಿಗಳು ಹೆಚ್ಚು ‘ಬಿಳಿಯರೂ’, ಸಮರ್ಥರೂ ಆಗಿ ಕಾಣಿಸಿದರು. ಎಂದೇ ಟುಟ್ಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಣ್ಣ ಯೂರೋಪ್ ಸೈನ್ಯವನ್ನಿಟ್ಟು ಆಡಳಿತ ನಡೆಸಿದರು. 

ಒಡೆದು ಆಳುವ ವಸಾಹತುಶಾಹಿ ನೀತಿಯಿಂದ ಹೀಗೆ ಟುಟ್ಸಿ ಮೇಲುಗೈ ಶುರುವಾಯಿತು. 

ಮೊದಲ ಮಹಾಯುದ್ಧ(೧೯೧೯) ರುವಾಂಡಾವನ್ನು ಬೆಲ್ಜಿಯಂಗೆ ಹಸ್ತಾಂತರಿಸಿತು. ಬೆಲ್ಜಿಯನ್ನರೂ ಟುಟ್ಸಿಗಳನ್ನು ಆಳುವ ಗಣ್ಯ ಕುಲವನ್ನಾಗಿಸಿದರು. ಹುಟುಗಳಿಗೆ ಸೇರಿದ ಹುಲ್ಲುಗಾವಲು ಪ್ರದೇಶಗಳನ್ನು ಕಿತ್ತುಕೊಂಡು ಟುಟ್ಸಿಗಳಿಗೆ ಕೊಟ್ಟರು. ೧೯೩೫ರಲ್ಲಿ ಜನಾಂಗಗಳನ್ನು ಗುರುತಿಸಿ ಗುರುತು ಕಾರ್ಡ್ ನೀಡಿದಾಗ ಮೂರೂ ಜನಾಂಗಗಳು ಮತ್ತಷ್ಟು ದೂರದೂರ ಸರಿದವು.

ಆಗ ಬಂದದ್ದು ಕ್ಯಾಥೊಲಿಕ್ ಚರ್ಚ್. ತಂತಮ್ಮ ಕುಲದ ಪ್ರಾಮುಖ್ಯತೆ ಹೆಚ್ಚಿಸಿಕೊಳ್ಳಲು ಜನ ಕ್ರೈಸ್ತರಾಗತೊಡಗಿದರು. ಆದರೆ ಚರ್ಚ್ ಟುಟ್ಸಿಗಳಿಗೆ ಮಣೆ ಹಾಕಿತು. ನಾಯಕರಾಗಲು ಅವಶ್ಯವಿರುವ ಶಿಕ್ಷಣ, ತರಬೇತಿ, ಭಾಷೆಯನ್ನು ಅವರಿಗೆ ಕಲಿಸಿತು.

ಹೀಗೆ ಹುಟುಗಳು ಬಹುಸಂಖ್ಯಾತರಾಗಿದ್ದರೂ ವಂಚಿತ, ದಮನಿತ, ಗಾಯಗೊಂಡ ಸಮುದಾಯವಾಗಿ ಒಂದು ಶತಮಾನ ದಾಟಿದರು. 

ಆದರೆ ಎರಡನೇ ಮಹಾಯುದ್ಧದ ನಂತರ ಸಮೀಕರಣ ತಿರುವುಮುರುವಾಯಿತು. ಹುಟುಗಳ ಮೇಲೆ ಇದ್ದಕ್ಕಿದ್ದಂತೆ ಎಲ್ಲರಿಗೆ ಪ್ರೀತಿ ಉಕ್ಕಿತು. ಮಿಷನರಿಗಳು ಹುಟುಗಳ ಅಭ್ಯುದಯ ತಮ್ಮ ಜವಾಬ್ದಾರಿಯೆಂದು ಹುಟು ಧರ್ಮಗುರುಗಳನ್ನು, ರಾಜಕೀಯ ನಾಯಕರನ್ನು ಬೆಳೆಸಿದರು. ಬೆಲ್ಜಿಯಂ ಹುಟುಗಳನ್ನು ಬೆಳೆಸಿತು. ಇದರಿಂದ ಒಂದಷ್ಟು ಕಾಲ ಅಧಿಕಾರ, ಕಾಳಜಿ, ಸವಲತ್ತು ಅನುಭವಿಸಿದ್ದ ಟುಟ್ಸಿಗಳು ಕೆರಳಿದರು. ಸಶಸ್ತ್ರ ಗುಂಪುಗಳು ಹುಟ್ಟಿದವು. 

ಅಲ್ಲಿಂದ ಆ ಎರಡೂ ಜನಾಂಗಗಳು ನಿರಂತರ ಕಾದಾಟದಲ್ಲಿ ಮುಳುಗಿದವು. ಕ್ರೈಸ್ತಧರ್ಮವೂ ಅವರ ಜನಾಂಗೀಯ ಭಿನ್ನಾಭಿಪ್ರಾಯವನ್ನು ಅಳಿಸಲಿಲ್ಲ. ಒಮ್ಮೆ ಹುಟು ಮೇಲಾಟ, ಮತ್ತೊಮ್ಮೆ ಟುಟ್ಸಿ ವಿಜಯ. ಒಮ್ಮೆ ಹುಟು ಸಂಚು, ಮತ್ತೊಮ್ಮೆ ಟುಟ್ಸಿಗಳಿಂದ ಹತ್ಯಾಕಾಂಡ. 

ದೇಶ ೧೯೬೨ರಲ್ಲಿ ಬೆಲ್ಜಿಯಂನಿಂದ ಸ್ವತಂತ್ರಗೊಂಡು ಹುಟು ಪ್ರಾಬಲ್ಯದ ಸರ್ಕಾರ ಬಂತು. ಫ್ರಾನ್ಸ್, ಬೆಲ್ಜಿಯಂ ಹುಟು ಪರವಾಗಿದ್ದರೆ ಅಮೆರಿಕ ‘ರುವಾಂಡನ್ ಪೇಟ್ರಿಯಾಟಿಕ್ ಫ್ರಂಟ್’(ಆರ್‌ಪಿಎಫ್) ಎಂಬ ಸಶಸ್ತ್ರ ಗುಂಪು ಕಟ್ಟಲು ಟುಟ್ಸಿಗಳಿಗೆ ಸಹಾಯನೀಡಿತು. ನೆರೆಹೊರೆಯ ಉಗಾಂಡಾ, ಬುರುಂಡಿ, ಈಜಿಪ್ಟ್, ಜೈರೆಗಳು ಒಮ್ಮೆ ಇತ್ತ, ಒಮ್ಮೆ ಅತ್ತ. ಹೀಗೆ ಆಂತರಿಕ ಜನಾಂಗ ದ್ವೇಷದ ಜೊತೆ ಬಾಹ್ಯ ಶಕ್ತಿಗಳ ಹಿತಾಸಕ್ತಿಯೂ ಸೇರಿ ನಿರಂತರ ಚಕಮಕಿ, ನಿರಂತರ ಸಾವು, ನಿರಂತರ ವಲಸೆ ಆ ಪ್ರದೇಶದ ವಿದ್ಯಮಾನವಾಯಿತು. 

ಹೀಗಿರುತ್ತ ಉದಾರವಾದಿಗಳು ಅಧಿಕಾರಕ್ಕೆ ಬಂದು ಜುವೆನಾಲ್ ಹಬ್ಯಾರಿಮಾನ ಎಂಬ ಉದಾರವಾದಿ ಹುಟು ಅಧ್ಯಕ್ಷರಾದರು. ಅವರು ತಮ್ಮ ಸರ್ಕಾರದಲ್ಲಿ ಟುಟ್ಸಿಗಳನ್ನೂ ಸೇರಿಸಿಕೊಂಡರು. ಅದರಲ್ಲೂ ಟುಟ್ಸಿಗಳ ಆರ್‌ಪಿಎಫ್ ಸರ್ಕಾರದಲ್ಲಿ ಸಹಭಾಗಿಯಾಗಿದ್ದು ಜನಾಂಗೀಯವಾದಿ ಹುಟುಗಳಿಗೆ ಇಷ್ಟವಾಗಲಿಲ್ಲ. ಭಿನ್ನಮತ ಭುಗಿಲೆದ್ದಿತು. ಅಧ್ಯಕ್ಷರಿಂದ ‘ದೇಶ ರಕ್ಷಿಸಲು’ ಉಗ್ರ ಗುಂಪುಗಳು ಹುಟ್ಟಿದವು. ಅಧ್ಯಕ್ಷರಿಗೆ ತಿಳಿಯದಂತೆ ಸೇನೆಯೇ ಉಗ್ರತರುಣರಿಗೆ ತರಬೇತಿ ಕೊಟ್ಟಿತು. ಸರ್ಕಾರ-ಸೈನ್ಯ-ಆಡಳಿತದಲ್ಲಿ ಹುಟು ಪರ ಉಗ್ರವಾದಿಗಳೇ ತುಂಬಿದರು. ಟುಟ್ಸಿ ವಿರೋಧಿ ವಿಚಾರಗಳನ್ನು ಪ್ರಚಾರ ಮಾಡಲು ಪತ್ರಿಕೆ ಶುರುವಾಯಿತು. ಆಕಾಶವಾಣಿ ಮತ್ತು ಟೆಲಿವಿಷನ್‌ಗಳಲ್ಲಿ ಜನಾಂಗೀಯ ದ್ವೇಷ ಬೆಳೆಸುವ ಕಾರ್ಯಕ್ರಮ ಬಿತ್ತರವಾಯಿತು. ಟುಟ್ಸಿ ಗಣ್ಯರ, ಅವರ ಪರ ಇರುವ ಹುಟು ಗಣ್ಯರ ಪಟ್ಟಿ ಮಾಡಲಾಯಿತು. ಜನಾಂಗೀಯ ಗುರುತು ಪತ್ರ ನೀಡಲಾಯಿತು. ಸೇನಾಬಲ ಹೆಚ್ಚಿಸಿ ಅವಶ್ಯಕತೆಗಿಂತ ಹೆಚ್ಚೆಚ್ಚು ಶಸ್ತ್ರಾಸ್ತ್ರ ಖರೀದಿ ನಡೆಯಿತು. ‘ನಾಗರಿಕ ರಕ್ಷಣೆ’ ಹೆಸರಿನಲ್ಲಿ ಜನರಿಗೆ ಬ್ಲೇಡು, ಕತ್ತಿ, ಚಾಕು, ಕೊಡಲಿ; ಕೆಲವರಿಗೆ ಪಿಸ್ತೂಲು, ತರುಣರಿಗೆ ಎಕೆ-೪೭ ಕೊಟ್ಟರು. 

ಹೀಗೆ ಟುಟ್ಸಿಗಳನ್ನು ಇಲ್ಲವಾಗಿಸಲು ‘ಅಂತಿಮ ಯುದ್ಧ’ಕ್ಕೆ ಸಿದ್ಧತೆ ನಡೆಯಿತು.  

ನೆಲದ ಮೇಲಿನ ನರಕ - ‘ಸಾಯಿ ಅಥವಾ ಸಾಯಿಸು’ ಎನ್ನುವುದು ಘೋಷವಾಕ್ಯ 
ಉದಾರವಾದಿ ಅಧ್ಯಕ್ಷ ಜುವೆನಾಲ್‌ರನ್ನು ಹೊತ್ತ ವಿಮಾನವನ್ನು ರುವಾಂಡಾ ಸೇನೆ ೧೯೯೪, ಏಪ್ರಿಲ್ ೬ರಂದು ಹೊಡೆದುರುಳಿಸಿತು. ಅದು ಟುಟ್ಸಿಗಳ ಆರ್‌ಪಿಎಫ್ ದಾಳಿ ಎಂದು ಬಿಂಬಿಸಿ ಜನರನ್ನು ರೊಚ್ಚಿಗೇಳಿಸಿತು. ‘ಕಂಡಲ್ಲಿ ಟುಟ್ಸಿಗಳ ಕೊಲ್ಲಿ, ಮಕ್ಕಳನ್ನೂ ಬಿಡದೆ’ ಎಂಬ ಸಂದೇಶ ಜನಸಾಮಾನ್ಯರಿಗೂ ಹೋಯಿತು. ಆಗ ಶುರುವಾಗಿದ್ದು ಭೀಕರ ಮಾರಣಹೋಮ. 

ಪ್ರಧಾನಿ ಮತ್ತವರ ಕುಟುಂಬ ಹತ್ಯೆಯಾಯಿತು. ಉದಾರವಾದಿ ಹುಟು ಗಣ್ಯರನ್ನು, ಸೇನಾಧಿಕಾರಿಗಳನ್ನು ಕೊಲ್ಲಲಾಯಿತು. ಹುಟುಗಳು ಊರೂರು ಕೇರಿಗಳಲ್ಲಿ ತಮಗೆ ಗೊತ್ತಿರುವ ಟುಟ್ಸಿಗಳನ್ನು ಕೊಲ್ಲತೊಡಗಿದರು. ಅಕ್ಕಪಕ್ಕದವರಿಂದಲೇ ಕೊಲೆ, ಅತ್ಯಾಚಾರಗಳಾದವು. ಶಾಲೆ, ಚರ್ಚಿನಲ್ಲಿ ಅಡಗಿರುವವರನ್ನು ಹುಡುಹುಡುಕಿ, ಕಟ್ಟಡಗಳ ಮೇಲೆ ಬುಲ್ಡೋಜರ್ ಹರಿಸಿ ಕೊಂದರು. ಟುಟ್ಸಿಗಳ ಆಸ್ತಿ ಲೂಟಿಯಾಯಿತು. 

ಎಲ್ಲಕ್ಕಿಂತ ಭೀಕರ ಟುಟ್ಸಿ ಹೆಣ್ಣುಮಕ್ಕಳ ಪಾಡು.

ಬದುಕುಳಿದವರಲ್ಲಿ ಅತ್ಯಾಚಾರಕ್ಕೊಳಗಾಗದ ಟುಟ್ಸಿ ಹೆಣ್ಣೇ ಇಲ್ಲ. ೨.೫-೫ ಲಕ್ಷ ಮಹಿಳೆಯರು ಅತ್ಯಾಚಾರಕ್ಕೊಳಗಾದರು. ಮಾರಿಯಾ ಲೂಸಿ ಎಂಬಾಕೆ ನಂತರ ಹೇಳಿರುವಂತೆ, ‘ಪ್ರತಿ ದಿನ ಕನಿಷ್ಠ ಐದು ಸಲ ಅತ್ಯಾಚಾರ ಮಾಡುತ್ತಿದ್ದರು. ಸ್ಥಳೀಯರು, ಹುಟು ಸೇನಾಧಿಕಾರಿಗಳು ಇನ್ನೂ ಯಾರ‍್ಯಾರೋ ಅತ್ಯಾಚಾರ ಮಾಡುತ್ತಿದ್ದರೆ ಉಳಿದವರು ಸುತ್ತ ನಿಂತು ನೋಡುತ್ತಿದ್ದರು. ನನ್ನ ಕಾಯಲು ಒಬ್ಬ ಹುಟು ಹೆಂಗಸಿದ್ದಳು. ಅವಳು ಅತ್ಯಾಚಾರ ನಡೆಯದ ಸಮಯದಲ್ಲಿ ಹೊಲದ ಕೆಲಸ ಮಾಡುವಂತೆ ಆಜ್ಞಾಪಿಸುತ್ತಿದ್ದಳು.’

ಆಸ್ಪತ್ರೆಯಿಂದ ಎಚ್‌ಐವಿ ರೋಗಿಗಳನ್ನು ಡಿಸ್ಚಾರ್ಜ್ ಮಾಡಿ ‘ರೇಪ್ ಸ್ಕ್ವಾಡ್’ಗಳನ್ನು ರಚಿಸಲಾಯ್ತು. ಅವರು ಟುಟ್ಸಿ ಹೆಣ್ಣುಗಳನ್ನು ಹುಡುಹುಡುಕಿ ಅತ್ಯಾಚಾರ ಮಾಡಿ ಎಚ್‌ಐವಿ ರೋಗವನ್ನೂ, ಬೇಡದ ಗರ್ಭವನ್ನೂ ದಯಪಾಲಿಸಿದರು. ಟುಟ್ಸಿ ಹೆಣ್ಣುಗಳ ಪ್ರಜನನ ಶಕ್ತಿ ನಾಶ ಮಾಡಲಾಯಿತು. ಅತ್ಯಾಚಾರದ ಬಳಿಕ ಬಿಸಿನೀರು, ಆಸಿಡ್, ಕೋಲು, ಚೂರಿ ಎಲ್ಲದರಿಂದ ಜನನಾಂಗಗಳ ನಾಶ ಮಾಡಲಾಯಿತು. ಗಂಡಸರ ಜನನಾಂಗ ಕತ್ತರಿಸಿ ಮೆರವಣಿಗೆ ಮಾಡಲಾಯಿತು.

ಆರು ವಾರಗಳಲ್ಲಿ ೮ ಲಕ್ಷ ಜನ ಸತ್ತರು.

ಈ ವೇಳೆಗೆ ಟುಟ್ಸಿಗಳ ಆರ್‌ಪಿಎಫ್ ಕಾರ್ಯಾಚರಣೆ ಶುರುಮಾಡಿತು. ಅಮೆರಿಕದ ಪರೋಕ್ಷ ಬೆಂಬಲದಿಂದ ರುವಾಂಡಾದ ಒಂದೊಂದೇ ಭಾಗಗಳನ್ನು ವಶಪಡಿಸಿಕೊಂಡಿತು. ಜುಲೈ ೧೮ರ ವೇಳೆಗೆ ಇಡೀ ರುವಾಂಡಾ ಅದರ ಹಿಡಿತಕ್ಕೆ ಸಿಕ್ಕಿತು. ಈ ನರಮೇಧದಲ್ಲಿ ಒಂದು ಲಕ್ಷ ಹುಟುಗಳೂ ಹತರಾದರು. ಕೊನೆಗೆ ವಿಶ್ವಸಂಸ್ಥೆಯ ಬೆಂಬಲದಿಂದ ಟುಟ್ಸಿ ಪ್ರಾಬಲ್ಯದ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂತು. 

ಕೆಲವರಿಗೆ ಶಿಕ್ಷೆ, ಹಲವರಿಗೆ ಕ್ಷಮಾದಾನ

ಒಂದಿಡೀ ಸಮುದಾಯವೇ ಅಪರಾಧಿ ಸ್ಥಾನದಲ್ಲಿರುವಾಗ, ಅಧಿಕಾರ ಸಂತ್ರಸ್ತರ ಕೈಗೆ ಬಂದಾಗ ಶಾಂತಿ ಕಾಪಾಡುವುದು, ಸಮಾಜ ಚೇತರಿಸಿಕೊಳ್ಳುವುದು ಸುಲಭವಲ್ಲ. ರುವಾಂಡಾದಲ್ಲಿ ಕೇವಲ ಮೂರು ಲಕ್ಷ ಟುಟ್ಸಿಗಳಷ್ಟೇ ಉಳಿದಿದ್ದರು. ಅವರದು ಆತ್ಮನಾಶವಾದ ಸ್ಥಿತಿ. ಜೊತೆಗೆ ಪ್ರತೀಕಾರಕ್ಕೆ ಹೆದರಿ ದೇಶಬಿಟ್ಟು ನೆರೆಯ ಜೈರೆಗೆ ಹೋದ ೨೦ ಲಕ್ಷ ಹುಟು ನಿರಾಶ್ರಿತರು; ಜೈಲಿನಲ್ಲಿದ್ದ ಒಂದು ಲಕ್ಷ ಬಂದಿಗಳು; ಸಶಸ್ತ್ರ ಉಗ್ರಗಾಮಿಗಳಿಗೆ ಬದಲಿ ಉದ್ಯೋಗ; ಎಚ್‌ಐವಿ ಸೋಂಕಿತರು; ೪೦ ಸಾವಿರ ಅನಾಥ ಮಕ್ಕಳು; ಅತ್ಯಾಚಾರದಿಂದ ಗರ್ಭಿಣಿಯರಾಗಿ ಬೇಡದ ಮಕ್ಕಳ ಹೆತ್ತವರು; ಕಡಿಮೆಯಾದ ಮಾನವ ಸಂಪನ್ಮೂಲ; ಆಸ್ತಿಹಾನಿ ಇಂಥ ಹಲವು ಸವಾಲುಗಳು ಆಳುವವರ ಎದುರಿದ್ದವು. ಜನಾಂಗೀಯ ಮತ್ತು ವಸಾಹತುಶಾಹಿ ಆಡಳಿತದಿಂದ ಪ್ರಜಾಸತ್ತಾತ್ಮಕ ಆಡಳಿತ ಪಡೆವ ಸಂಕ್ರಮಣ ಕಾಲವನ್ನು ರುವಾಂಡಾ ಪ್ರವೇಶಿಸಿತು. ಕುಸಿದ ನ್ಯಾಯವ್ಯವಸ್ಥೆಯನ್ನು ಪುನರ್‌ಸ್ಥಾಪಿಸುವುದು; ಜನರಿಗೆ ತಿಳಿಯದ ಅಥವಾ ತಿಳಿಯದಂತೆ ನೋಡಿಕೊಳ್ಳಲಾದ ಸತ್ಯಗಳನ್ನು ತಿಳಿಸಿ ಸಂತ್ರಸ್ತರಿಗೆ ಸೂಕ್ತ ನ್ಯಾಯ ಒದಗಿಸಿ ಸ್ಥೈರ್ಯ ಮೂಡಿಸುವುದೂ ಮುಖ್ಯವಾಯಿತು. ಎಂದೇ ‘ಅಂತರರಾಷ್ಟ್ರೀಯ ಅಪರಾಧ ನ್ಯಾಯ ಮಂಡಳಿ’ ರಚಿಸಲು ಸರ್ಕಾರವು ವಿಶ್ವಸಂಸ್ಥೆಯ ನೆರವು ಕೋರಿ ೧೯೯೬ರಲ್ಲಿ ಅದು ಅಸ್ತಿತ್ವಕ್ಕೆ ಬಂತು. 

ಆದರೆ ಪರಸ್ಪರರ ಆಕ್ರಮಣಕ್ಕೆ ಹೆದರಿ ನಿರಂತರ ನಿರಾಶ್ರಿತರಾಗಿ ಅಲೆಯುತ್ತಿರುವ ಎರಡೂ ಜನಾಂಗಗಳು ಈ ರಾಜಕೀಯ ಬದಲಾವಣೆಯನ್ನು ಹೇಗೆ ಸ್ವೀಕರಿಸಬಹುದು? ರಾಜಕೀಯ ಬದಲಾವಣೆಯ ಹಾದಿಯಲ್ಲಿ ಸಂಭವಿಸಿದ ದೌರ್ಜನ್ಯಗಳಿಗೆ ನ್ಯಾಯ ಪಡೆಯುವುದು ಹೇಗೆ? ಈ ಪ್ರಶ್ನೆಗಳನ್ನಿಟ್ಟುಕೊಂಡೇ ಡೆಸ್ಮಂಡ್ ಟುಟು ಸೇರಿದಂತೆ ಹಲವರು ‘ಸತ್ಯ ಮತ್ತು ಸಂಧಾನ ಸಮಿತಿ’ ರಚಿಸಿ ಜನಾಂಗೀಯ ಹತ್ಯೆಯ ವಿಚಾರಣೆಯನ್ನು ಕಾನೂನು ಪರಿಭಾಷೆಯಾಚೆ ನಡೆಸುವಂತೆ ಒತ್ತಾಯಿಸಿದರು. ಏಕೆಂದರೆ ‘ಸೂಕ್ತ ನ್ಯಾಯ’ ಸಿಗುವುದು ಬೂದಿಯೊಂದಿಗೆ; ಸಂಧಾನ ಕ್ರಿಯೆಯಷ್ಟೇ ವ್ಯಕ್ತಿಗಳನ್ನು ಮತ್ತು ದೇಶಗಳನ್ನು ಗಾಯದಿಂದ ಮುಕ್ತಗೊಳಿಸಿ ಭವಿಷ್ಯ ರೂಪಿಸಬಲ್ಲದು ಎಂದು ಅವರ ನಂಬಿಕೆ.

ಆಗ ರುವಾಂಡಾ ‘ಗಕಾಕಾ’ ಸಾಂಪ್ರದಾಯಿಕ ನ್ಯಾಯವ್ಯವಸ್ಥೆಯನ್ನು ಜಾರಿಗೆ ತಂದಿತು. ಕೌಟುಂಬಿಕ ಮತ್ತು ಸಣ್ಣಪುಟ್ಟ ಜಗಳ ಪರಿಹಾರಕ್ಕಾಗಿ ಆ ವ್ಯವಸ್ಥೆ ಮೊದಲಿನಿಂದ ಜಾರಿಯಲ್ಲಿತ್ತು. ೨೦೦೨ರಲ್ಲಿ ಗಕಾಕಾ ನ್ಯಾಯಾಲಯ ಶುರುವಾಗಿ ಒಟ್ಟು ೧೧ ಸಾವಿರ ಅಂಥ ಕೋರ್ಟುಗಳು ಅಸ್ತಿತ್ವಕ್ಕೆ ಬಂದವು. 

ಯಾರು ಕೊಂದರೋ, ಸುಟ್ಟರೋ, ಅತ್ಯಾಚಾರ ಎಸಗಿದರೋ, ಲೂಟಿ ಹೊಡೆದರೋ ಅವರೇ ಸಂತ್ರಸ್ತರನ್ನು ಭೇಟಿಯಾಗಿ ಕ್ಷಮೆ ಯಾಚಿಸುವುದು; ತಪ್ಪೊಪ್ಪಿ ಪಶ್ಚಾತ್ತಾಪದ ಮಾತುಗಳನ್ನಾಡುವುದು; ಹಾಗೂ ಸಂತ್ರಸ್ತರಿಗೆ ಅವರ ಬದುಕು ಕಟ್ಟಿಕೊಳ್ಳಲು ಆರ್ಥಿಕ ಹಾಗೂ ಇನ್ನಿತರ ಸಹಾಯ ನೀಡುವುದು - ಈ ಮೂರು ಅಂಶಗಳು ಗಕಾಕಾ ನ್ಯಾಯವ್ಯವಸ್ಥೆಯ ಸ್ಥಂಭಗಳು. ಇಂಥ ನ್ಯಾಯವ್ಯವಸ್ಥೆ ಶತ್ರುವಿನ ಜೊತೆಯೂ ಬದುಕಲು ಅವಕಾಶ ಕೊಡುವ ಮಾರ್ಗವಾಗಿ, ರುವಾಂಡಾಕ್ಕೆ ಅನಿವಾರ್ಯ ಉಳಿವಿನ ಮಾರ್ಗವೂ ಆಯಿತು. ಅದು ಸತ್ಯ ಮತ್ತು ಸಂಧಾನದ ಜೊತೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನ್ಯಾಯ ವ್ಯವಸ್ಥೆಯೂ ಆಗಿರುವುದರಿಂದ ಹಲವರ ಮೆಚ್ಚುಗೆ ಪಡೆಯಿತು. ಗಕಾಕಾ ನ್ಯಾಯಾಲಯದೆದುರು ತಪ್ಪೊಪ್ಪಿಕೊಂಡ ೬೦,೨೩೮ ಜನರಿಗೆ ಶಿಕ್ಷೆಯನ್ನು ಅರ್ಧಕ್ಕೆ ಕಡಿತಗೊಳಿಸಲಾಯಿತು. 

ಆದರೆ ಪಕ್ಷಪಾತ ಮತ್ತಿತರ ಲೋಪಗಳ ಬಗೆಗೆ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ೨೦೧೨ರಲ್ಲಿ ಗಕಾಕಾ ಕೋರ್ಟ್‌ಗಳನ್ನು ಸ್ಥಗಿತಗೊಳಿಸಲಾಯಿತು. 

ಕಾಳ್ಗಿಚ್ಚಿನ ನಂತರವೂ ಬಿದ್ದ ಮಳೆಗೆ ಬೀಜ ಮೊಳೆಸುವ ಭೂಮಿ 


Rwandan Workers Headed Into Rainbow

ಕಾಳ್ಗಿಚ್ಚು ಉರಿದ ನೆಲದಲ್ಲೂ ಮರುವಸಂತಕ್ಕೇ ಭೂಮಿ ನೆಲದಾಳದ ಬೀಜ ಮೊಳೆಯಿಸುತ್ತದೆ ನಿಜ. ಆದರೆ ಕಾಳ್ಗಿಚ್ಚು ಹೊತ್ತದಂತೆ ತಡೆಯುವುದೇ ಮಾನವತ್ವದ ದೊಡ್ಡ ಸವಾಲಾಗಿದೆ. ಈಗಿನ ರುವಾಂಡಾ ಸಂವಿಧಾನ ಕುಲ, ಜನಾಂಗ, ಧರ್ಮದ ಆಧಾರದ ಮೇಲಿನ ದೌರ್ಜನ್ಯವನ್ನು ನಿಷೇಧಿಸುತ್ತದೆ. ೨೦೦೩ರಲ್ಲಿ ಮೊದಲ ಚುನಾವಣೆ ನಡೆದು ಆರ್‌ಪಿಎಫ್ ಕಮ್ಯಾಂಡರ್ ಆಗಿದ್ದ ಪಾಲ್ ಕಗಾಮೆ ಅದರ ಅಧ್ಯಕ್ಷರಾಗಿದ್ದಾರೆ. 

ಭೀಕರ ಹತ್ಯಾಕಾಂಡವನ್ನು ದಾಟಿ ಬದುಕುಳಿದ ಹೆಣ್ಣುಮಕ್ಕಳು ಉರಿಯುತ್ತಿರುವ ಆಕ್ರೋಶಕ್ಕೆ ಬೂದಿಯಾಗಲಿಲ್ಲ. ಅವರು ಹಿಂಸೆಯ ಭಯಾನಕ ಕಡಲಿನೆದುರು ಈಜಿದರು. ಹಿಂಸೆ ಮತ್ತು ದ್ವೇಷದ ಅಲೆಯಲ್ಲಿ ದೇಶ ಕೊಚ್ಚಿಹೋಗದಂತೆ ನೋಡಿಕೊಂಡರು. ಭೀಕರ ನೆನಪುಗಳ ನಡುವೆಯೂ ಎಚ್ಚೆತ್ತು ಪ್ರಜಾಸತ್ತಾತ್ಮಕ ಕ್ರಿಯೆಯಲ್ಲಿ ಭಾಗಿಯಾಗಿ ಈಗಿನ ಸಂಸತ್ತಿನಲ್ಲಿ ೫೫% ಪ್ರಾತಿನಿಧ್ಯ ಪಡೆದಿದ್ದಾರೆ. ಐದು ಜನ ಯುನೆಸ್ಕೋ ಶಾಂತಿ ಪ್ರಶಸ್ತಿ ಪಡೆದಿದ್ದಾರೆ.

ಆಫ್ರಿಕಾದ ನೆಲಮೂಲ ತಾತ್ವಿಕತೆ ಉಬುಂಟಾ. ‘ನಾವು ಇರುವುದು ನೀನು ಇರುವುದರಿಂದ. ನೀನು ಇರುವುದರಿಂದಲೇ ನಾನು ಆಗಿರುವುದು’ ಎಂಬ ಸಹಬಾಳ್ವೆಯ ಆ ತಾತ್ವಿಕತೆಯೇ ಮಾನವತ್ವವನ್ನು ಪೊರೆಯಬಲ್ಲದು. ಆಗ ಮಾತ್ರ ‘ಪಶ್ಚಾತ್ತಾಪ ಮತ್ತು ಕ್ಷಮೆ’ ಹೇರಿಕೆಯಾಗದೇ ಜನರ ಆಯ್ಕೆಯಾಗುತ್ತದೆ. ದೌರ್ಜನ್ಯ ಪುನರಾವರ್ತನೆಯಾಗುವುದನ್ನು ತಡೆಯುತ್ತದೆ.


No comments:

Post a Comment