Wednesday, 25 June 2014

ದಿನಚರಿಯ ಕೆಲವು ಪುಟಗಳೂ.. ಹಲವು ಪ್ರಶ್ನೆಗಳೂ..




ಅಕ್ಟೋಬರ್ ೧೦, ಗುರುವಾರ. ೨೦೧೩.

ಬೆಳಗಿನಿಂದ ಒಂಥರಾ ತಳಮಳ ಹೊಟ್ಟೆಯೊಳಗೆ ಸುಳಿಯುತ್ತಿದೆ. ಸುಮ್ಮನೆ ‘ನನ್ನ ಸತ್ಯಶೋಧನೆಯ ಕತೆ’ಯ ಒಂದು ಪುಟ ತೆಗೆದೆ: ಕೊನೆಯ ಮಗ ಹುಟ್ಟಿದ ಏಳು ವರ್ಷಗಳ ತರುವಾಯ ಸಂಪೂರ್ಣ ಬ್ರಹ್ಮಚರ್ಯ ಸ್ವೀಕರಿಸುವ ಕುರಿತು ಹೆಂಡತಿಯ ಬಳಿ ಚರ್ಚಿಸಿದ್ದನ್ನು ಗಾಂಧಿ ಬರೆದುಕೊಂಡ ಪುಟ. ಎಲ್ಲ ಖುಲ್ಲ. ಮನಸಿಗೆ ಅಕ್ಷರ ರೂಪ ನೀಡಿದಂತೆನಿಸುವ ಸಾಲುಗಳು..

ದೇವಸ್ಥಾನಕ್ಕೆ ಅಂತ ಹೊರಟು ಎಷ್ಟೋ ವರ್ಷಗಳಾಗಿದ್ದವು. ಇನ್ನೇನು ಮಧ್ಯಾಹ್ನ ಹೊರಡಬೇಕು. ಹಟ್ಟಿಕೇರಿಯ ನಾಗಯಲ್ಲಮ್ಮ ದೇವಸ್ಥಾನದಲ್ಲಿ ನಡೆಯಲಿದೆ ಎನ್ನುವ ಮಡೆಸ್ನಾನ ಕುರಿತು ಮಾತನಾಡಿ ಬರುವ ಬನ್ನಿ ಎಂದು ಯಾರು ಯಾರಿಗೋ ಹೇಳಿದ್ದೇವೆ, ಹಲವು ಕಾರಣಗಳಿಂದ ಬರಲಾರೆವೆಂದು ಆಪ್ತಮಿತ್ರರು ಹೇಳತೊಡಗಿದ್ದಾರೆ. ವಿಷ್ಣು ನಾಯ್ಕರು ಆರಾಮಿಲ್ಲದೆ ಮಲಗಿದ್ದಾರೆ. ಯಾರುಯಾರು ಬಂದಾರು?

ಹಟ್ಟಿಕೇರಿ. ಮುಂಬೈಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಅಂಕೋಲಾ ಬಳಿ ಇರುವ ಪುಟ್ಟ ಗ್ರಾಮ. ೨೨ ವರ್ಷ ಕೆಳಗೆ ರಾಧಾ ಎಂಬ ಅಂಗನವಾಡಿ ಕಾರ್ಯಕರ್ತೆಗೆ ‘ದೇವಿ’ ಮೈಮೇಲೆ ಬರುತ್ತಿದ್ದಳು. ನಂತರ ನಾಗದೇವತೆ ಮೈದುಂಬತೊಡಗಿತು. ತನ್ನ ಪುಟ್ಟ ಮನೆಯ ಜಗಲಿ ಮೇಲೆ ‘ನಾಗಯಲ್ಲಮ್ಮ’ ದೇವಿಯ ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತ, ಮೈದುಂಬಿದಾಗ ಜನ ಕೇಳುವ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಇದ್ದರು. ಕಾಯಿಲೆ, ವ್ಯಾಜ್ಯ, ಕೌಟುಂಬಿಕ ತಾಪತ್ರಯ ಹೀಗೆ ಹತ್ತು ಹಲವು ಸಮಸ್ಯೆಗಳನ್ನಿಟ್ಟುಕೊಂಡು ಬಂದವರಿಗೆ ರಾಧಾ ಉತ್ತರ ಕೊಡುತ್ತಿದ್ದರು. ಹಲವರಿಗೆ ಅವರ ಸಲಹೆ, ನಿರ್ದೇಶನಗಳು ನಿಜವಾದವು. ಬರಬರುತ್ತ ನಂಬಿ ಬರುವವರ ಸಂಖ್ಯೆ ಹೆಚ್ಚಾಗತೊಡಗಿತು.

ಫೋಟೋದಲ್ಲಿದ್ದ ದೇವರು ಕಲ್ಲಿನ ಮೂರ್ತಿಯಾಯಿತು. ಜಗಲಿ ಕಟ್ಟೆಯಲ್ಲಿ ಪುಟ್ಟ ಗುಡಿ ತಲೆಯೆತ್ತಿತು. ಕೊನೆಗೆ ಮನೆಯಿದ್ದ ಜಾಗವೇ ಮಂದಿರವಾಯಿತು. ಆಚೀಚೆ ಮನೆಗಳಿರುವ ಕೇರಿಯಲ್ಲಿ ರಸ್ತೆಗೆ ತಾಗಿಕೊಂಡೇ ಪುಟ್ಟ ಕಾಂಕ್ರೀಟ್ ದೇವಸ್ಥಾನ ಬೆಳೆಯಿತು. ಒಳಗೆ ಆಮೆಯಾಕಾರದ ಬಲಿಹಾಸು. ನಂದಿ. ಹೊರಗೊಂದು ಧ್ವಜದೀಪಕಂಬ. ನೂರಿನ್ನೂರು ಜನ ಕುಳಿತರೆ ತುಂಬಿ ತುಳುಕುವಷ್ಟು ದೊಡ್ಡ ಆವಾರ.

ನವರಾತ್ರಿಯಲ್ಲಿ ಉತ್ಸವ, ಭಜನೆ, ಪಲ್ಲಕ್ಕಿ, ತುಲಾಭಾರ ಇನ್ನಿತರ ವಿಶೇಷ ಪೂಜೆಗಳು ನಡೆಯತೊಡಗಿದವು. ಪ್ರಸಾದ ವಿನಿಯೋಗ ಮೊದಲಾಯಿತು. ಅನ್ನಸಂತರ್ಪಣೆ ರಸ್ತೆ ಮೇಲೇ ನಡೆಯಬೇಕು ಏಕೆಂದರೆ ಆಚೀಚೆ ಮತ್ತೆ ಜಾಗವಿಲ್ಲ. ಕೆಲ ಭಕ್ತಾದಿಗಳು ಮಡೆಸ್ನಾನದ ಉರುಳುಸೇವೆಯನ್ನು ಶುರುಮಾಡಬೇಕೆಂಬ ಬೇಡಿಕೆ ಇಟ್ಟ ಪರಿಣಾಮ ದಸರಾ ಹಬ್ಬದ ಕೊನೆಯ ದಿವಸ ಅನ್ನಸಂತರ್ಪಣೆ ಆದಮೇಲೆ ಉಂಡುಬಿಟ್ಟೆದ್ದ ಎಲೆಗಳ ಮೇಲೆ ಉರುಳುಸೇವೆ ಮಾಡುವ ಪರಿಪಾಠ ಈಗೆರೆಡು ಮೂರು ವರ್ಷಗಳಿಂದ ಶುರುವಾಗಿತ್ತು.

ಕೋಮು ಸೌಹಾರ್ದ ವೇದಿಕೆ ಅದನ್ನು ವಿರೋಧಿಸಿ ಪ್ರತಿಭಟಿಸಿತು. ಸ್ಥಳೀಯರೇ ಆದ ಕೆಕೆಎಸ್‌ವಿಯ ರಮೇಶ್ ದಕ್ಷಿಣ ಕನ್ನಡದಲ್ಲಿರುವ ಮಡೆಸ್ನಾನ ಪದ್ಧತಿ ಇಲ್ಲಿ ಮುಂದುವರೆಯಲು ಬಿಡಬಾರದೆಂದು ಶತಾಯಗತಾಯ ಹೋರಾಡಿದರು. ಕಳೆದ ಬಾರಿ ಅವರೊಡನೆ ಕನ್ನಡ ಸಾಹಿತ್ಯ ಪರಿಷತ್ತೂ ಸೇರಿ ಪ್ರತಿಭಟನೆ ಉಗ್ರವಾಯಿತು. ಉರುಳುವವರ ನಡುವೆಯೇ ಹೋಗಿ, ನಿಲ್ಲಿಸಿ ಎಂದು ತಡೆಗಟ್ಟಿ, ಚಕಮಕಿ ಹೊಯ್‌ಕೈ ಆಗುವ ಮಟ್ಟಕ್ಕೆ ಹೋಯಿತು. ನಂತರ ಗ್ರಾಮಸ್ಥರು ತಮ್ಮೂರಿನಿಂದ ಅಂಕೋಲಾ ತಹಶೀಲ್ದಾರ್ ಕಚೇರಿ ತನಕ ಮೆರವಣಿಗೆ ಬಂದು ಆಫೀಸಿಗೆ ಮುತ್ತಿಗೆ ಹಾಕಿ ರಮೇಶ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ದೂರು ಕೊಟ್ಟರು. ಕೊನೆಕೊನೆಗೆ ರಮೇಶ್ ಏಕಾಂಗಿಯಾಗಿ ಕೋರ್ಟುಕಚೇರಿ, ಎಸ್‌ಪಿ ಕಚೇರಿ ಅಲೆದರು.

ಈ ವರ್ಷ ಒಳಗೊಳಗೇ ಬುಸುಗುಡುವ ಸದ್ದು ಕೇಳತೊಡಗಿತ್ತು. ಕೆಕೆಎಸ್ವಿಯ ರಮೇಶ್, ಕಸಾಪದ ರೋಹಿದಾಸ ನಾಯಕ್ ತಾವು ಮಡೆಸ್ನಾನ ನಡೆಯಲು ಬಿಡುವುದಿಲ್ಲವೆಂದು ಪತ್ರಿಕಾ ಹೇಳಿಕೆ, ಸಂದರ್ಶನ ಕೊಡುವಾಗ ಅತ್ತ ಹಟ್ಟಿಕೇರಿಯಲ್ಲಿ ತೆರೆಮರೆಯಲ್ಲಿ ತಯಾರಿ ನಡೆಯತೊಡಗಿದೆಯೆಂಬ ವದಂತಿ ಕೇಳಿಬರುತ್ತಿತ್ತು. ಧರ್ಮರಕ್ಷಕರು ಮಧ್ಯ ಪ್ರವೇಶಿಸುವ ಎಲ್ಲ ಲಕ್ಷಣಗಳು ಕಾಣತೊಡಗಿದ್ದವು. ಈ ಸಲ ಏನಾದೀತು? ದ್ವಂದ್ವ ಅಭಿಪ್ರಾಯಗಳಿದ್ದವು.

ರಮೇಶ್ ಸಂಗಡಿಗರ ಉದ್ದೇಶವನ್ನೇ ಹೊತ್ತು, ಅವರ ಪ್ರಯತ್ನಗಳಿಗೆ ಪೂರಕವಾಗಿ ಆದರೆ ಕೊಂಚ ಭಿನ್ನ ದಾರಿಯಲ್ಲಿ ಹೀಗೇಕೆ ಒಮ್ಮೆ ಪ್ರಯತ್ನಿಸಬಾರದು? ಆಕೆಯ ಬಳಿಯೇ ಹೋಗಿ ವಿಷಯ ಪ್ರಸ್ತಾಪ ಮಾಡಿ, ‘ನಾವು ನಿಮ್ಮ ಶ್ರದ್ಧೆಯ ದೇವಸ್ಥಾನ ಮುಚ್ಚಿ ಎನ್ನುವುದಿಲ್ಲ, ದಸರಾ ನಿಲ್ಲಿಸಿ ಎನ್ನುತ್ತಿಲ್ಲ. ಆದರೆ ಎಂಜಲೆಲೆ ಮೇಲೆ ಉರುಳುವುದು ಆತ್ಮವನ್ನು ಹೀನಗೊಳಿಸುವ ಕ್ರಿಯೆ, ಅದನ್ನು ನಿಲ್ಲಿಸಿ’ ಎಂದಷ್ಟೇ ಹೇಳಿದರೆ ಹೇಗೆ? ಈ ಯೋಚನೆ ಬಂದಿದ್ದೇ ಸಮಾನ ಮನಸ್ಕರನ್ನು ಸಂಪರ್ಕಿಸಿದೆವು. ಕೊನೆಗೆ ಮಡೆಸ್ನಾನ ನಡೆಯುವ ನಾಲ್ಕು ದಿನ ಮೊದಲು ಅರ್ಚಕಿ ರಾಧಾ ಅವರ ಭೇಟಿ ಮಾಡುವುದೆಂದು ನಿಶ್ಚಯವಾಯಿತು. ಅದೇ ಭಾಗದವರಾದ ಕರಾವಳಿ ಮುಂಜಾವು ಸಂಪಾದಕ ಗಂಗಾಧರ ಹಿರೇಗುತ್ತಿ ಆ ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನು ಸಂಪರ್ಕಿಸಿದರು.

ಅಕ್ಟೋಬರ್ ೧೦. ಮಧ್ಯಾಹ್ನ ಹಟ್ಟಿಕೇರಿಗೆ ನಾನು, ಗಂಗಾಧರ ಹಿರೇಗುತ್ತಿ, ಹನುಮಂತ ಹಾಲಿಗೇರಿ (ಇಬ್ಬರೂ ಪತ್ರಕರ್ತರು), ನಾಗರಾಜ ನಾಯಕ್(ನ್ಯಾಯವಾದಿ), ಶಾಂತಾರಾಂ ನಾಯಕ್, ಜಗದೀಶ ಶೀಳ್ಯ(ನಿವೃತ್ತ ಉಪನ್ಯಾಸಕರು), ಬಾಬು ಶೇಖ್(ಸಮಾಜ ಸೇವಕರು) ಹಾಗೂ ಹಟ್ಟಿಕೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮಾರುತಿ ನಾಯ್ಕ್ ಹೋದೆವು. ನಮಗಿಂತ ಕೊಂಚ ಮೊದಲೇ ಭೇಟಿ ಕೊಟ್ಟ ಪ್ರಜಾವಾಣಿಯ ಸಿದ್ಧಲಿಂಗ ಸ್ವಾಮಿ ವಸ್ತ್ರದ್ ಸೂಕ್ತ ಭೂಮಿಕೆ ಸಿದ್ಧಪಡಿಸಿಟ್ಟಿದ್ದರು. ಸಾಲಂಕೃತ ನಾಗಯಲ್ಲಮ್ಮ ದೇವಿ ಕಂಗೊಳಿಸುತ್ತಿದ್ದಳು. ಆವಾರದೊಳಗೆಲ್ಲ ಕರ್ಪೂರ, ಊದುಗಡ್ಡಿ, ಹೂವಿನ ಸಮ್ಮಿಶ್ರ ಪರಿಮಳ. ಮನೆಗೆ ಬಂದ ನೆಂಟರನ್ನು ಕರೆವಂತೆ ಒಳ ಕರೆದು ಉಪಚರಿಸಿದರು. ಪಂಚಾಮೃತ, ಪ್ರಸಾದ ಹಾಗೂ ಭಂಡಾರಗಳ ವಿನಿಯೋಗವಾಯಿತು. ನವರಾತ್ರಿಯಿಡೀ ಉಪವಾಸವಿದ್ದು ದೇವಿಯನ್ನು ಪೂಜಿಸುವುದಾಗಿ ಹೇಳಿಕೊಂಡ ರಾಧಾ ಸವದತ್ತಿ ಎಲ್ಲಮ್ಮನ ಮಣಿಸರವನ್ನೂ, ಲಿಂಗ ರುದ್ರಾಕ್ಷಿಯನ್ನೂ ಕೊರಳಲ್ಲಿ ಧರಿಸಿದ್ದರು. ಒಂದಷ್ಟು ಜನ ಕೇರಿಯವರೂ ಬಂದು ಸೇರಿದರು. ಅಲ್ಲಿ ನಡೆಯುವ ಸೇವೆಗಳ ವಿವರ, ದೇವಸ್ಥಾನದ ಮಹಿಮೆ, ರಾಧಾ ನಾಯ್ಕ್ ಅವರ ಭಕ್ತಾನುಯಾಯಿಗಳ ಸಂಖ್ಯೆಯ ಕುರಿತು ಹೇಳುತ್ತಿರುವಾಗ ಅವರಲ್ಲಿ ಕೆಲವರಿಗೆ ನಮ್ಮ ಗುರುತು ಹತ್ತಿತು.

ಇಲ್ಲಿ ನಡೆಯುತ್ತಿರುವ ಮಡೆಸ್ನಾನ ಕುರಿತು ಮಾತನಾಡಲು ಬಂದಿದ್ದೇವೆ ಎಂದ ಕೂಡಲೇ ನಾವು ‘ಅವರ’ ಕಡೆಯವರು ಎಂದು ಭಾವಿಸಿ ರಾಂಗಾದರು. ‘ನಮ್ಗೆ ಮಡೆಸ್ನಾನ ಅಂದ್ರೆ ಏನಂತ್ಲೆ ಗೊತ್ತಿಲ್ಲ. ಇಲ್ಲಿ ಅಂಥದ್ದೇನೂ ನಡಿಯುದಿಲ್ಲ. ತಮ್ ಪೋಟ ಪೇಪರ್ರಲ್ಲಿ ಬರಲಿ ಅಂತ ಅವ್ರು ಸುಂಸುಮ್ನೆ ಗಲಾಟೆ ಮಾಡಿ ಹೋಗಿದಾರೆ. ಬರಲಿ ಅವ್ರು ಈ ಸಲ’ ಎನ್ನುತ್ತ ಧ್ವನಿಗಳು ತಾರಕಕ್ಕೇರಿದವು. ಜನಪರವಾದ ಕೆಲಸ ಮಾಡುವ ಕೋಮು ಸೌಹಾರ್ದ ವೇದಿಕೆ ಮತ್ತು ರಮೇಶ್ ಬಗೆಗೆ ಅವರಿಗಿರುವ ಸಿಟ್ಟು ನೋಡಿ ಖೇದವಾಯಿತು. ಪೇಪರಿನಲ್ಲಿ ಫೊಟೋ ಬರಿಸಿಕೊಳ್ಳುವುದು ಅವರ ಉದ್ದೇಶ ಅಲ್ಲವೆಂದೂ, ಕಾನೂನು ವ್ಯಾಖ್ಯಾನ ಏನಿದೆಯೆಂದೂ ತಿಳಿಸಹೊರಟೆವು. ಸೇರಿದ ಜನರೆಲ್ಲ ಒಟ್ಟಿಗೇ ವಾದ ಮಾಡತೊಡಗಿದರು. ಮಡೆಸ್ನಾನ ಎನ್ನುವ ಪದವೇ ತಮಗೆ ಗೊತ್ತಿಲ್ಲವೆಂದರು. ಅದು ಇಲ್ಲಿ ಎಲ್ಲಿ ನಡೆಯುತ್ತಿದೆ ಎಂದು ಮರುಪ್ರಶ್ನಿಸಿದರು. ಕೊನೆಗೆ ನಮ್ಮ ವಕೀಲರು, ‘ಆಯಿತು, ನಡೆಯುತ್ತಿಲ್ಲವಾದರೆ ಒಳ್ಳೆಯದಾಯಿತು. ನಾವು ನಿಮಗೆ ಧನ್ಯವಾದ ಹೇಳಿ ಹೋಗುತ್ತೇವೆ ಅಷ್ಟೇ’ ಎಂದು ಸುಮ್ಮನಾಗಿಸಿದರು.

ಮುಕ್ಕಾಲು ತಾಸು ರಾಧಾ ಮತ್ತು ಅಲ್ಲಿ ಸೇರಿದವರೊಡನೆ ನಡೆದ ಮಾತುಕತೆಯಲ್ಲಿ ಹೀಗೆ ಹೇಳಿದೆವು: ‘ನಮಗೆ ಈ ದೇವರ ಮೂರ್ತಿ ಮೇಲೆ ನಂಬಿಕೆ ಇದೆಯೋ ಇಲ್ಲವೋ, ಆದರೆ ನಿಮ್ಮ ಮನಸಲ್ಲಿರೋ ಒಳ್ಳೆತನವೇ, ಸದಿಚ್ಛೆಯೇ ದೇವರು. ಅಂಥ ಆತ್ಮದ ದೇವ್ರನ್ನ ಎಂಜಲು ಮೇಲೆ ಉರುಳ್ಸೋದು ಕೀಳಲ್ಲವಾ? ನೀವು ಈ ದೇಶದ ಸುಪ್ರೀಂಕೋರ್ಟು, ಸಂವಿಧಾನ ಗೌರವಿಸ್ತೀರಿ ಅಂತಾದ್ರೆ ಈಗ ಮಡೆಸ್ನಾನ ನಿಷೇಧ ಆಗಿದೆ, ಮೂಢನಂಬಿಕೆ ನಿಷೇಧ ಕಾನೂನು ಬರ್ತಿದೆ ಅಂತ ತಿಳಕೊಳ್ಳಿ. ಆದ್ರೂ ಅಂಥದ್ನ ನಡೆಸಕ್ಕೆ ಹೋದ್ರೆ ರಾಜ್ಯದ ಎಲ್ಲ ಕಡೆಯಿಂದ ಸಂಘಟನೆಗಳು ಬರ್ತಾವೆ, ಪ್ರತಿಭಟನೆ ನಡೆಯುತ್ತೆ, ಸುಬ್ರಹ್ಮಣ್ಯದಲ್ಲಿ ಆಯ್ತಲ್ಲ ಹಾಗೆ ಗಲಾಟೆ ಆಗುತ್ತೆ, ಪೋಲೀಸ್ನೋರು ಬರ್ತಾರೆ. ನಿಮ್ಮ ಧಾರ್ಮಿಕ ಸ್ಥಳದಲ್ಲಿ ಅಂಥದೆಲ್ಲ ಇರ್ಬೇಕಾ?’

‘ನೀವು ಬರೀ ಹಿಂದೂಗಳ ಸುದ್ದಿಗೇ ಬರ‍್ತಿರ, ಬರಿತಿರ, ಉಳಿದೋರು ಮಾಡಿದ್ದಕ್ಕೆ ಏನಾದ್ರೂ ಹೇಳ್ತಿರಾ?’ ಎಂಬ ಪುರಾತನ ಪ್ರಶ್ನೆ ಆ ಗುಂಪಿನ ನಡುಮಧ್ಯದಿಂದ ತೂರಿಬಂತು.

‘ದೇವ್ರಿಗೆ ಹಿಂದೂ, ಮುಸ್ಲಿಂ ಅಂತ ಹೆಸರಿಡಬಾರ್ದು, ದೇವರು ಎಲ್ರಿಗೂ ದೇವ್ರೇ. ಅವನು ಒಬ್ನೇ. ನೋಡಿ ಇವ್ರು ಬಾಬು ಶೇಖ್ ಅಂತ, ಸಮಾಜ ಸೇವಕರು, ಈಗ ಇಲ್ಲಿ ಬಂದಿದಾರೆ. ಅವರಲ್ಲೂ ಸಹಾ ಮೊದ್ಲಿನ ಎಷ್ಟೋ ಆಚರಣೆ ನಿಲ್ಸಿದಾರೆ, ಆದರೆ ಅದು ನಮ್ಗೆ ಗೊತ್ತಾಗಿರಲ್ಲ ಅಷ್ಟೇ..’ ಎಂದೆವು. ಗುಂಪಿನಲ್ಲೊಬ್ಬ ಮುಸ್ಲಿಂ ಇದ್ದಾರೆಂದ ಕೂಡಲೇ ಮಾತಿನ ಧಾಟಿ ಬದಲಾಯಿತು. ‘ಇಲ್ಲಿಗೆ ಸಾಯಬರೂ ಬಾಳಾ ಜನ ಬರ್ತಾರೆ, ನಡ್ಕೋತಾರೆ’ ಎಂದು ಮೆದುವಾದರು.

ಕೆಲವರು, ‘ನಾವೀಗ ಆಗ್ಲೆ ಹರಕೆ ಕಟ್ಕಂಡಿದಿವಲ್ಲ, ಏನ್ಮಾಡಬೇಕು?’ ಎಂದು ದನಿಯೇರಿಸಿದರು. ‘ಎಲ್ಲಕ್ಕೂ ಒಂದು ಪರ್ಯಾಯ ಅಂತ ಇರುತ್ತೆ, ಅನುಕೂಲ ಸಿಂಧು ಅಂತ ಇರುತ್ತೆ. ಅದ್ರ ಬದ್ಲು ಏನು ಮಾಡ್ಬೇಕು ಅಂತ ಅರ್ಚಕಿ ಸೂಚಿಸ್ತಾರೆ, ಅದನ್ನೇ ಮಾಡಿದರಾಯ್ತು. ಹೇಳಿ ರಾಧಾಬಾಯಿ ಅವರೇ, ಮಡೆಸ್ನಾನ ಅಂತ ಉರುಳಲಿಕ್ಕೆ ಜನ ಬಂದ್ರೆ ಅದ್ರ ಬದಲು ಏನು ಮಾಡ್ಬಹುದು ಅಂತೀರಾ?’ ಎಂದೆವು. ಚರ್ಚೆಯ ಬಳಿಕ ‘ದೀಡು ನಮಸ್ಕಾರ’ ಮಾಡಬಹುದು ಎಂದಾಯಿತು.

‘ಪತ್ರಿಕೆಗಳೋರು ನೋಡಿ ಒಬ್ರೂ ನಿಮ್ಮಂಗೆ ಇಲ್ಲಿಗೆ ಬರಲಿಲ್ಲ, ನಮ್ಮನ್ನ ಮಾತಾಡ್ಸಲಿಲ್ಲ, ತಮಗಿಷ್ಟ ಬಂದಂಗೆ ಒಬ್ಬೊಬ್ರು ಒಂದೊಂದು ತರ ಬರ್ದಿದಾರೆ, ಯಾರು ಹೇಳಿದ್ದು ಅವ್ರಿಗೆ ಇದನ್ನೆಲ್ಲ?’ ಎಂದು ತಾವು ಕತ್ತರಿಸಿಟ್ಟುಕೊಂಡ ಪತ್ರಿಕಾ ವರದಿಗಳನ್ನು ತೋರಿಸಿದರು. ದೇವರು ಮೈಮೇಲೆ ಬರುವುದು ಮೂಢನಂಬಿಕೆ ಎಂದು ಬರೆದಿದ್ದರ ಬಗ್ಗೆ ಸಿಟ್ಟಾದರು. ‘ದೇವ್ರು ಮನುಷ್ರ ಮೈಮೇಲೆ ಬರಕ್ಕಾಗುತ್ತಾ? ದೇವ್ರು ಬಂದ್ರೆ ಮನಷ ತಡಕಂಡಾನಾ? ಈ ದೇಹ ಸುಟ್ಟು ಉರದೋಗುತ್ತೆ. ಅದೊಂದು ಗಾಳಿ ತರ, ಶಕ್ತಿ, ನಮ್ಮೊಳಗೆ ತುಂಬಕಳತ್ತೆ. ಆಗ ಅದೇನು ನುಡೀಬೇಕೋ ಹಂಗೆ ಮಾತ್ನ ನಂ ನಾಲ್ಗೆಯಿಂದ ನುಡಸುತ್ತೆ ಅಷ್ಟೇ’ ಎಂದರು.

ನಿಜ, ನಾವು ಇಂಥ ಸೂಕ್ಷ್ಮ ವಿಷಯಗಳನ್ನು ನೇರ ಅವರನ್ನು ನೋಡದೆ, ಮಾತಾಡದೆ ವರದಿ ಮಾಡಬಾರದು. ಮೊಬೈಲಿನಲ್ಲಿ ಸಂಪರ್ಕ ಸಾಧಿದರೂ ಮುಖಾಮುಖಿ ಸಂಪರ್ಕ, ಮಾತುಕತೆ ರೂಪುಗೊಳಿಸುವ ಅಭಿಪ್ರಾಯಗಳು ಬೇರೆ, ದೂರನಿಂತು ಕೇಳಿ ಮಾಡುವ ವರದಿ ಬೇರೆ ಎಂದು ಎಲ್ಲರಿಗೂ ಆ ಕ್ಷಣ ಅನಿಸಿತು.

ನಾವು ಅವರಿಗೆ ಹೇಳಬೇಕೆಂದು ಏನೇನೋ ಮಾತುಗಳನ್ನು ಸಂಗ್ರಹದಲ್ಲಿಟ್ಟುಕೊಂಡು ಹೋಗಿದ್ದೆವು. ಅವರು ಹೇಗೆ ಹೇಳಿದರೆ ಏನು ಹೇಳಬೇಕೆಂಬ ವರಸೆಗಳೆಲ್ಲ ಸಿದ್ಧವಾಗಿದ್ದವು. ಆದರೆ ಅದ್ಯಾವ ಮಾತನ್ನೂ ಎತ್ತಲಾಗಲಿಲ್ಲ. ನಾವಂದುಕೊಂಡಂತೆ ಆಡಿ ಬರಲು ಇದೇನು ಭಾಷಣ-ಸೆಮಿನಾರ್ ಅಲ್ಲವಲ್ಲ. ಆ ಕ್ಷಣ ಅಲ್ಲಿ ಸೇರುವ ಜನ, ಅವರ ಪ್ರತಿಕ್ರಿಯೆಗಳಿಗೆ ತಕ್ಕಂತೆ ನಮ್ಮ ವಿಚಾರ-ನಡೆಗಳೂ ರೂಪುಗೊಂಡವು. ಆಶಯ, ವಾಸ್ತವಗಳು ರೂಪುಗೊಳ್ಳುವುದು, ಭಿನ್ನವಾಗುವುದು ಹೀಗೇ ಇರಬಹುದೆ?

ಹೊರಡುವಾಗ ಪತ್ರಿಕೆಗಳಲ್ಲಿ ಒಬ್ಬೊಬ್ಬರು ಒಂದೊಂದು ತರಹ ಬರೆಯುವುದು ಬೇಡ, ನೀವೇ ಒಂದು ಪತ್ರಿಕಾಗೋಷ್ಟಿ ಕರೆದು ಹೇಳಿಕೆ ನೀಡಿ ಎಂದೆವು. ಅದು ಅವರ ಮನಸಿನೊಳಗೆ ಹೋಗಲಿಲ್ಲ. ಕೊನೆಗೆ ಬೀಳ್ಕೊಡುತ್ತ ದಸರೆಗೆ ಬನ್ನಿ ಎಂದು ಕರೆದರು.

ಅಲ್ಲಿಂದ ಹೊರಬಂದ ಮೇಲೆ ಒಟ್ಟಿಗೇ ಚರ್ಚಿಸಿ ಹೀಗೆ ಅಭಿಪ್ರಾಯಪಟ್ಟೆವು: ಈ ಸಲಕ್ಕೆ ನಾವು ಅವರನ್ನು ನಂಬೋಣ. ಈಗ ನಡೆಸಿದ ಮಾತುಕತೆಯನ್ನೇ ಮರುದಿನ ಪತ್ರಿಕೆಗಳಲ್ಲಿ ಸುದ್ದಿಯಾಗಿ ಹಾಕೋಣ. ಮಡೆಸ್ನಾನ ಜೀವನ್ಮರಣದ ಪ್ರಶ್ನೆಯಲ್ಲ. ಕಾರಣ ಈ ಸಲಕ್ಕೆ ತಾವು ನಡೆಸುವುದಿಲ್ಲ ಎನ್ನುವ ಅವರ ಮಾತನ್ನು ನಂಬಿ ಮೊದಲೇ ಆಯೋಜಿಸಿದ ಪ್ರತಿಭಟನೆ ಕೈಬಿಡುವುದು ಒಳ್ಳೆಯದು. ನಾವೇ ಅವರನ್ನು ನಂಬುವುದರಿಂದ ಒಂದು ಮಾರಲ್ ಬೈಂಡಿಂಗ್ ಅವರ ಮೇಲಿದ್ದಂತಾಗುತ್ತದೆ. ಕೆಕೆಎಸ್‌ವಿ ಕ್ರಮಗಳು ಅವರಲ್ಲಿ ಒಂದು ಚರ್ಚೆಯನ್ನು ಹುಟ್ಟುಹಾಕಿವೆ. ಅದು ವಿರುದ್ಧ ಪರಿಣಾಮ ಬೀರದಂತೆ ನಾವು ನಡೆದುಕೊಳ್ಳಬೇಕು. ನಮ್ಮೆಲ್ಲರ ಭೇಟಿಯಿಂದ ಏನಾದರೂ ಕನ್ವಿನ್ಸ್ ಆಗಿದ್ದರೆ ಒಂದು ಆಂತರಿಕ ಚರ್ಚೆ ಮತ್ತೆ ಶುರುವಾಗುತ್ತದೆ. ಅದು ನಮ್ಮ ಆಶಯಗಳ ಪರವಾಗಿ ಇರುವಂತೆ ನೋಡಿಕೊಳ್ಳಬೇಕಾದರೆ ‘ನಾವು-ಅವರು’ ಕಂದಕ ಸೃಷ್ಟಿಯಾಗಬಾರದು. ಅಷ್ಟಕ್ಕೂ ತಮ್ಮ ನಿಯಂತ್ರಣ ಮೀರಿ ಭಕ್ತಾದಿಗಳು ನಡೆಸಿಬಿಟ್ಟರು ಎಂದೇನಾದರೂ ಅವರು ಈ ಸಲ ಮಡೆಸ್ನಾನ ನಡೆಸೇಬಿಟ್ಟಲ್ಲಿ ಮುಂದಿನ ಸಾರಿ ಜಾಥಾ, ಪ್ರತಿಭಟನೆ, ಜಾಗೃತಿ ಇನ್ನಿತರ ಮಾರ್ಗಗಳ ಕುರಿತು ಯೋಚಿಸಿದರಾಯಿತು..

ಕೂಡಲೇ ರಮೇಶ್ ಜೊತೆ ಮಾತನಾಡಿದೆವು. ಕೆಕೆಎಸ್‌ವಿ ತೆಗೆದುಕೊಂಡ ತೀವ್ರಗಾಮಿ ನಿಲುವಿನ ಹಿನ್ನೆಲೆಯಿಲ್ಲದೇ ಹೋಗಿದ್ದರೆ ಇವತ್ತು ಹೀಗೆ ಮಾತನಾಡಿ ಬರಲು ಸಾಧ್ಯವಾಗುತ್ತಿರಲಿಲ್ಲ. ಉದಾರವಾದಿ ಪ್ರಯತ್ನಗಳನ್ನೆಲ್ಲ ಅರಗಿಸಿಕೊಂಡೇ ವ್ಯವಸ್ಥೆ ಯಥಾಸ್ಥಿತಿಯನ್ನು ಕಾಯ್ದುಕೊಂಡುಬಂದಿರುತ್ತದೆ. ಅದಕ್ಕೊಂದು ಜರ್ಕ್ ನೀಡುವುದು, ಅದು ಎಚ್ಚೆತ್ತುಕೊಳ್ಳುವುದು ತತ್‌ಕ್ಷಣದ ತೀವ್ರ ಕ್ರಿಯೆಗಳಿಗೇ. ಹಾಗಂತ ಅಂಥ ಕ್ರಮಗಳನ್ನೇ ಎಷ್ಟು ಕಾಲ ನೆಚ್ಚಿಕೊಳ್ಳಬಹುದು? ರಮೇಶ್‌ಗೆ ಒಪ್ಪಿಗೆಯಾಯಿತೋ ಇಲ್ಲವೋ, ಅವರ ಪ್ರಯತ್ನಗಳಿಗೆ ಪೂರಕವಾದದ್ದೇನೋ ನಡೆಯಿತು ಎಂದು ಅನಿಸಿರಬಹುದು.

ಈ ಬಾರಿ ಏನಾಗಬಹುದು ಎಂಬ ಆತಂಕದ ನಿರೀಕ್ಷೆಯೊಂದಿಗೆ ಮನೆಗೆ ಬಂದೆವು. ಬಂದಮೇಲೂ ಒಂದೆರೆಡು ವಿಷಯ ಕೊರೆಯಹತ್ತಿತು. ಮನೆಯಲ್ಲಿ ಪೂಜೆ, ತೀರ್ಥ, ಪ್ರಸಾದಗಳ ಹರ್ಗಿಸ್ ಬೇಡವೆನ್ನುವ ನಾನು ಅಲ್ಲಿ ಕೊಟ್ಟ ಪಂಚಾಮೃತ ಸುಮ್ಮನೇ ಕುಡಿದೆನಲ್ಲ?! ನನಗದರಲ್ಲಿ ನಂಬಿಕೆಯಿಲ್ಲ ಎಂದು ಭಂಡಾರ ನಿರಾಕರಿಸಬಹುದಿತ್ತೆ? ಲಕ್ಷ್ಮೀಶ ತೋಳ್ಪಾಡಿ ದೇವನೆದುರು ನಮ್ಮ ಸ್ಥಾಪಿತ ಅಹಂಕಾರ ಕಳೆದುಕೊಳ್ಳುವ ಸಾಧನವೆಂದು ಮಡೆಸ್ನಾನ ಇನ್ನಿತರ ಆಚರಣೆಗಳನ್ನು ಬೆಂಬಲಿಸುತ್ತಾರೆ. ಆದರೆ ಮನೆಯಲ್ಲಿ ನನ್ನದೊಂದು ಸ್ಥಾಪಿತ ಅಹಂ ಇದೆ. ಅದು ನಿರೀಶ್ವರವಾದದಿಂದ ಹುಟ್ಟಿದೆ. ಅದನ್ನು ಜನರೆದುರು ಇವತ್ತು ನಾನು ಕಳಕೊಂಡಿದ್ದು ಒಳ್ಳೆಯದಕ್ಕೋ? ತೀರ್ಥ-ಭಂಡಾರ ನಿರಾಕರಿಸಿದರೆ ಜನರಿಂದ ದೂರವಾಗುವ ಅಪಾಯವನ್ನು ಮಣಿದ ಅಹಂ ತಪ್ಪಿಸಿತೆ?

ಒಂದು ಆಚರಣೆಯನ್ನು ನಿಲ್ಲಿಸಿ ಎಂದು ಹೇಳದೇ ಅದಕ್ಕೆ ಬದಲಾಗಿ ಇನ್ನೊಂದು ಆಚರಣೆಯನ್ನು ನಡೆಸಿ ಎಂದೆವು. ನುಣುಚಿಕೊಳ್ಳುವ ಮಾತುಗಳಿಗೆ ನಾವು ಮಣಿದೆವೆ? ಮಡೆಸ್ನಾನವನ್ನಾಗಲೀ, ದೀಡು ನಮಸ್ಕಾರವನ್ನಾಗಲೀ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಒಂದು ಆಚರಣೆ ನಿಲ್ಲಿಸಿ ಇನ್ನೊಂದು ಶುರುಮಾಡಿದರೆ ಏನು ಸಾಧಿಸಿದಂತಾಯಿತು? ಹಾಗಂತ ಅವನ್ನೆಲ್ಲ ನಿಲ್ಲಿಸಿಬಿಡಿ ಎನ್ನಲು ‘ನಾವ್ಯಾರು?’

ಬರೀ ಪ್ರಶ್ನೆಗಳು.

ಮಲಗಿದರೆ ಆಕೆಯ ಮುಖವೇ ತೇಲಿ ಬರುತ್ತಿದೆ. ಸಪೂರ ಮೈಕಟ್ಟಿನ ಕೀರಲು ಗಟ್ಟಿದನಿಯ ಆಕೆ. ಹಿಂದುಳಿದ ಸಮುದಾಯಕ್ಕೆ ಸೇರಿದ ಆಕೆ. ಮಹಿಳೆಯೊಬ್ಬಳು ಅರ್ಚಕಿಯಾಗಿರುವ ಪೂಜಾಸ್ಥಳ ಕಟ್ಟಿದ ಆಕೆ. ನಾ ತಿಳಿದ ಮಹಿಳಾ ವಾದ, ಇವ ಕಲಿಸಿದ ಮಾರ್ಕ್ಸ್‌ವಾದ, ಅಂಬೇಡ್ಕರರನ್ನೆಲ್ಲ ಆಕೆಗೆ ಹೇಗೆ ಪರಿಚಯಿಸಲಿ? ಧರ್ಮ ಅಫೀಮು ಎಂದರೆ ನನ್ನ ಕಿತ್ತೆಸೆಯುತ್ತಾರೆ ಅಲ್ಲಿ. ದೇವರು-ಪೂಜೆ-ಆಚರಣೆಗಳೆಲ್ಲ ಪುರುಷ ಪ್ರಧಾನ ಸಮಾಜದ ಹುನ್ನಾರಗಳು; ಅದನ್ನು ಉಲ್ಲಂಘಿಸಿ ಈಚೆ ಬಂದರೆ ಆಗ ನಿಮಗಿರುವ ಅಪಾರ ಶಕ್ತಿ-ಸಾಧ್ಯತೆಯ ಅರಿವಾಗುತ್ತದೆ ಎಂದರೆ ಆಕೆಯೇ ನನಗೆ ಗೇಟ್ ಪಾಸ್ ಕೊಡುತ್ತಾಳೆ. ರೋಸಾ, ಅಂಬೇಡ್ಕರ್, ಶರ್ಮಿಳಾ, ಉಮಾರನ್ನು ಓದುವ ನಾನು ಅವಳೊಡನೆ ಸಂಬಂಧ ಸಾಧಿಸುವುದು ಹೇಗೆ?

ಹೇಗೆ?

ಪಟ್ಟನೆ ಹೊಳೆಯಿತು: ಬೊಟ್ಟು, ಸೀರೆ, ಹಾವಭಾವ, ಮಾತು - ಇವನ್ನೆಲ್ಲ ನನ್ನವರೊಂದಿಗೆ, ನನ್ನಂತಹವರೊಂದಿಗೆ ಸುಲಭ ಸಂವಹನವಾಗಲೆಂದೇ ಇಟ್ಟುಕೊಂಡಿರುವುದಲ್ಲವೆ? ಭಾಷೆಯ ಹಾಗೇ ನನ್ನ ಇರವೂ ಸುತ್ತಲವರೊಂದಿಗೆ ಸಂವಹನಕ್ಕಾಗಿ ಎಂದೇ ಅಲ್ಲವೇ? ಹಟ್ಟಿಕೇರಿಯಿಂದ ಎಲ್ಲರೂ ಹೊರಡುವಾಗ ಕೊನೆಯಲ್ಲಿ ನನ್ನ ಸೆರಗಿಗೆ ಆಕೆ ಹಾಕಿದ ಬಾಳೆಹಣ್ಣು-ಭಂಡಾರದ ಪೊಟ್ಟಣವನ್ನು ಇಸಕೊಂಡೆನಲ್ಲ, ಅದೇ ಆಕೆಯ ಜೊತೆ ‘ಕನೆಕ್ಟ್’ ಆಗಲು ನನಗಿದ್ದ ದಾರಿ. ಎಸ್. ಇದು ಮುಖ್ಯ - ಗೆಟ್ ಕನೆಕ್ಟೆಡ್. ಸಂಗಾತಿ ಇದನ್ನು ರಾಜಿಕೋರತನವೆಂದರೂ ಸರಿಯೇ, ಮಧ್ಯಮಮಾರ್ಗಿ ಅಥವಾ ಸೆಂಟ್ರಿಸ್ಟ್ ಎಂದರೂ ಸರಿ, ಇದು ಮುಖ್ಯ - ಗೆಟ್ ಕನೆಕ್ಟೆಡ್.

ಅಂತೂ ಕೊನೆಗೆ ಉದ್ವೇಗದಿಂದ ಕಾದ ಆ ದಿನ ಬಂದೇ ಬಂತು. ಈ ಬಾರಿ ಮಡೆಸ್ನಾನ ನಡೆಯಲಿಲ್ಲ..

ಇದು ಸೋಲುಗೆಲುವಿನ ಪ್ರಶ್ನೆಯಲ್ಲ. ಈ ಸಲ ನಡೆಯದಿರಲು ಕಾರಣಗಳೇನೇ ಇರಲಿ, ಮುಂದಿನ ಸಾರಿ ನಡೆಯದೆಂದು ಹೇಳಬರುವುದಿಲ್ಲ. ನಮ್ಮೂರಿನಲ್ಲಿ ಪ್ರತಿ ಹತ್ತತ್ತು ಕಿಲೋಮೀಟರಿಗೊಬ್ಬ ದೇವ ಮಾನವ, ದೇವಸ್ಥಾನ, ದೈವಸ್ಥಾನ ಸಿಗುತ್ತದೆ. ಹೀಗಿರುವಾಗ ಇವತ್ತು ಇಲ್ಲಿ ನಿಂತದ್ದು ನಾಳೆ ಇನ್ನೆಲ್ಲೋ, ಇನ್ನೇನೋ ಆಗಿ ಶುರುವಾಗುವ ಸಾಧ್ಯತೆಯಂತೂ ಇದ್ದೇ ಇದೆ. ಜನರನ್ನು ಹುಸಿಧಾರ್ಮಿಕತೆಯಿಂದ, ಅತಿ ಆಸ್ತಿಕತೆಯಿಂದ ಯಾವುದು ಈಚೆ ತರಬಲ್ಲದು? ಮೂಢನಂಬಿಕೆಗಳ ವಿರುದ್ಧ ಕಾನೂನು ಜಾರಿ ಇದಕ್ಕೊಂದು ಪರಿಹಾರವೆಂಬಂತೆ ನೋಡಲು ಸಾಧ್ಯವೆ?

***



ಮೇಲಿನ ಅನುಭವವನ್ನು ಇಲ್ಲಿ ದಾಖಲಿಸಿರುವ ಉದ್ದೇಶ ಸಾಸಿವೆಕಾಳು ಮೊನೆಯಷ್ಟು ಪ್ರಯತ್ನವನ್ನು ವೈಭವೀಕರಿಸುವುದಲ್ಲ, ಬದಲಾಗಿ ಕೋಮುವಾದಿಗಳನ್ನು ಆರೋಪಿಸಿ, ಎದುರಿಸುವುದರಲ್ಲೇ ಪ್ರತಿರೋಧದ ಮಾರ್ಗ ಕಡೆದುಕೊಂಡಿರುವ ನಾವು ಅವಕಾಶ ಸಿಕ್ಕಾಗ ನಮ್ಮ ಸುತ್ತಮುತ್ತ ಸೆಕ್ಯುಲರ್ ಪ್ರಯೋಗ ನಡೆಸಬೇಕು ಎಂದು ಆಗ್ರಹಿಸುವುದಕ್ಕಾಗಿ. ವರ್ತಮಾನ ಹೇಗಿದೆ ಎಂದರೆ ಅದು ಸ್ಪಷ್ಟತೆ ಬಯಸುತ್ತದೆ. ತತ್‌ಕ್ಷಣದ ಕ್ರಿಯೆಯನ್ನು ಬಯಸುತ್ತದೆ. ನಿಧಾನ ಮತ್ತು ಮೌನ ಈ ಎರಡೂ ನಮ್ಮ ಮೈಗೆ ಎಣ್ಣೆ ಹಚ್ಚಿ ಕೋಮುವಾದಿಗಳಿಗೆ ಕೈಯೆತ್ತಿ ಅವಕಾಶ ಬಿಟ್ಟುಕೊಡುತ್ತವೆ. ಹಾಗಾಗದಂತೆ ಪರಿಸ್ಥಿತಿಗೆ ತಕ್ಕ ಹಾಗೆ ನಮ್ಮ ನಡೆಗಳನ್ನು ಬದಲಿಸಿಕೊಳ್ಳುತ್ತ ಆರೋಗ್ಯಕರ ತಾತ್ವಿಕತೆಯನ್ನು ಜನಸಮುದಾಯದಲ್ಲಿ ಬಿತ್ತುವುದು ಇವತ್ತಿನ ಜರೂರಲ್ಲವೆ?

ಕೋಮುವಾದ ಸೃಷ್ಟಿಸಿರುವ ಮನುಷ್ಯ ಮನುಷ್ಯರ ನಡುವಿನ ಅಸಹನೆ ಇವತ್ತಿನ ದೊಡ್ಡ ಸಾಮಾಜಿಕ ಬಿಕ್ಕಟ್ಟು. ಕೋಮುವಾದದ ಅಪಾಯವೇನೆಂದರೆ ಅದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ, ಒಂದು ಜಾತಿಗೆ ಸೀಮಿತವಾಗಿಲ್ಲ, ಒಂದು ಸಂಘಟನೆಗೆ, ಸರ್ಕಾರಕ್ಕೆ ಸೀಮಿತವಾಗಿಲ್ಲ. ಕೋಮುವಾದ ಒಂದು ಮನಸ್ಥಿತಿಯಾಗಿ ರೂಪುಗೊಳ್ಳುತ್ತಿದೆ. ಮೋದಿಯಲ್ಲದಿದ್ದರೆ ಇನ್ನೊಬ್ಬ, ಆಸಾರಾಮನಲ್ಲದಿದ್ದರೆ ಮತ್ತೊಬ್ಬ ಜನಸಮುದಾಯವನ್ನು ಮರುಳುಗೊಳಿಸಿ, ಉದ್ರೇಕಿಸಿ ಭಾಷಣ ಮಾಡುತ್ತ, ಚರಿತ್ರೆ-ವರ್ತಮಾನ-ಭವಿಷ್ಯದ ಸತ್ಯಗಳನ್ನೇ ಬದಲಾಯಿಸುತ್ತಾರೆ. ಅಸಹನೆ, ದ್ವೇಷವೇ ಅವರ ಬೀಜ, ನೀರು, ಗೊಬ್ಬರ, ನೆಲ ಎಲ್ಲವೂ. ನಮೋವಾದಿಗಳ ಮಟ್ಟಿಗೆ ಮಾರ್ಕ್ ಟ್ವೇನ್ ಹೇಳುವ ‘ಅವನಲ್ಲಿರುವ ಸುಳ್ಳನ್ನು ತೆಗೆ, ನಿನ್ನ ಟೋಪಿಯ ಗಾತ್ರದಷ್ಟು ಕುಬ್ಜನಾಗುತ್ತಾನೆ ಅವನು. ಅವನಿಂದ ದ್ವೇಷವನ್ನು ತೆಗೆ, ಅವನೇ ಕಾಣೆಯಾಗುತ್ತಾನೆ’ ಎಂಬ ಮಾತು ನೂರಕ್ಕೆ ನೂರು ಸತ್ಯವಾಗಿದೆ.

ಜೊತೆಗೇ ಕೋಮುವಾದದ ಇನ್ನೊಂದು ಅಪಾಯವನ್ನೂ ಗ್ರಹಿಸಬೇಕು: ಅದು ಆಧ್ಯಾತ್ಮಿಕ ಸಂಕೇತಗಳನ್ನು, ದೇವರನ್ನು ಕಲ್ಲು-ಗಾರೆ ಮಟ್ಟಕ್ಕೆ ಇಳಿಸಿದೆ. ಮಸೀದಿ ಕೆಡವುವ, ಮಂದಿರ ಕಟ್ಟುವ ದುಷ್ಟತನ ಇದೇ ಗ್ರಹಿಕೆಯ ಮೇಲೆ ಹುಟ್ಟಿಕೊಂಡಿದೆ.

ಕಳೆದ ವರ್ಷಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮಡೆಸ್ನಾನ ವಿರೋಧಿಸಿ ಎಷ್ಟೊಂದು ಪ್ರತಿಭಟನೆ ನಡೆದಿದೆ. ಟಿವಿಯಲ್ಲಿ ಮೇಲಿಂದ ಮೇಲೆ ಆ ಕುರಿತ ಚರ್ಚೆ, ವಿರೋಧ ಪ್ರಸಾರವಾಗಿದೆ. ನಮ್ಮೂರ ಪಕ್ಕದಲ್ಲೇ ಒಂದು ಸುಬ್ರಹ್ಮಣ್ಯ ಕ್ಷೇತ್ರವಿದೆ. ಅದರ ವ್ಯವಸ್ಥಾಪಕರು ಆಸ್ಪತ್ರೆಗೆ ಬರುತ್ತಿರುತ್ತಾರೆ.  ಮೊನ್ನೆ ಅವರ ಬಳಿ ‘ಎಲ್ಲೆಲ್ಲೋ ನಡೆಯುವ ಮಡೆಸ್ನಾನ ನಿಲ್ಲಿಸುವಂತೆ ಬರೆಯುತ್ತ, ಕೆಲಸ ಮಾಡುತ್ತ ಇದ್ದೇವೆ. ನಮ್ಮೂರಿನಲ್ಲಿ ಮಡೆಸ್ನಾನ ನಡೆಸಬೇಡಿ ಮತ್ತೆ’ ಎಂದೆ. ಅದಕ್ಕವರು, ‘ಮೇಡಂ, ನಿಮಗ್ಗೊತ್ತಿಲ್ಲ. ಈಗ ನಾಕೈದು ವರ್ಷದಿಂದ ಪ್ರತಿವರ್ಷ ಸುಬ್ರಹ್ಮಣ್ಯ ಷಷ್ಠಿಯ ದಿನ ಮಡೆಸ್ನಾನ ನಡೆಸಲು ಒತ್ತಡ ಹೆಚ್ಚಾಗುತ್ತಿದೆ. ಅಷ್ಟು ದೂರ ಹೋಗಿ ಮಾಡ್ಲಿಕ್ಕೆ ಆಗಲ್ಲ, ಇದೂ ಸುಬ್ರಹ್ಮಣ್ಯ ಕ್ಷೇತ್ರವೇ, ಮಡೆಸ್ನಾನಕ್ಕೆ ಅವಕಾಶ ಕೊಡಿ ಅಂತ ಮತ್ತೆಮತ್ತೆ ಹೇಳುತ್ತಿದ್ದಾರೆ. ನಾವು ಮಾಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದೇವೆ. ಅದನ್ನ ನಡೆಸೋವಷ್ಟು ಜಾಗವೂ ಇಲ್ಲ, ಪದ್ಧತಿಯೂ ಇಲ್ಲ ಎಂದು ಹೇಳುತ್ತಿದ್ದೇವೆ’ ಎಂದರು. ಪತ್ರಿಕೆ, ಟಿವಿಯಲ್ಲಿ ಮಡೆಸ್ನಾನ ಬೇಡವೆಂದು ನಡೆಸಿದ ಪ್ರತಿಭಟನೆ ಮತ್ತು ಚರ್ಚೆಯನ್ನು ಜನ ಹೀಗೆ ಅರ್ಥಮಾಡಿಕೊಂಡರೆ? ಅದು ನಡೆಸಬಾರದೆಂಬ ಜಾಗೃತಿ ಮೂಡಿಸುವ ಬದಲು ಅದು ನಡೆಯುವುದನ್ನು, ನಾಗನಂತೆ ಜನ ಉರುಳುವುದನ್ನು ನೋಡಿ ತಾವೂ ತಮ್ಮೂರ ಹತ್ತಿರದ ದೇವಸ್ಥಾನಗಳಲ್ಲಿ ಉರುಳ ಬಯಸುತ್ತಾರೆಯೇ?

ದಿನದಿಂದ ದಿನಕ್ಕೆ ಕೋಮುವಾದ ಬೆಳೆಯುತ್ತಿರುವಾಗ ಅದನ್ನು ವಿರೋಧಿಸುವ ಸೆಕ್ಯುಲರ್, ಪ್ರಗತಿಪರ ದನಿಗಳೇಕೆ ಇಷ್ಟು ಕಡಿಮೆಯಿವೆ? ನಮ್ಮ ಸೆಕ್ಯುಲರಿಸಂ ವ್ಯಾಖ್ಯಾನವೇ ತಪ್ಪಾಗಿದೆಯೇ? ಸೆಕ್ಯುಲರ್ ಎಂದರೆ ಧರ್ಮ ನಿರಪೇಕ್ಷ ಎಂದುಕೊಂಡೆವು, ಅದನ್ನು ಸಂಸ್ಕೃತಿ ನಿರಪೇಕ್ಷ ಎಂದೂ ಅರ್ಥೈಸಿಕೊಂಡೆವೆ? ಸೆಕ್ಯುಲರಿಸಂ ಎಂದರೆ ಸರಳ ಸಾಮಾಜಿಕ ನ್ಯಾಯದ ರಾಜಕಾರಣವಷ್ಟೇ ಅಲ್ಲ, ಅದಕ್ಕೊಂದು ಸಾಂಸ್ಕೃತಿಕ ಒಳನೋಟವೂ ಇರಬೇಕಾಗುತ್ತದೆ ಎಂದು ಮರೆತೆವೆ? ಏಕೆಂದರೆ ಸಂಸ್ಕೃತಿಯನ್ನು ಬಿಟ್ಟು ಮಾತನಾಡುವುದು ಕೃತಕ ಸೆಕ್ಯುಲರಿಸಂ. ಅಂಥ ಸಂದರ್ಭದಲ್ಲೇ ಹಿಂದುತ್ವ ಬೆಳೆಯುತ್ತದೆ, ಅಷ್ಟೇ ಅಲ್ಲ, ಫ್ಯಾಸಿಸ್ಟ್ ಶಕ್ತಿಯಾಗಿ ರೂಪುಗೊಳ್ಳುತ್ತದೆ. ಈಗ ಆಗುತ್ತಿರುವುದು ಅದೇ ಅಲ್ಲವೆ?

ಈ ಅನುಮಾನಗಳು ಏಕೆಂದರೆ ನಿಜವಾದ ಸೆಕ್ಯುಲರಿಸಂನ ಶಕ್ತಿ ತಳ ಸಮುದಾಯಗಳು. ಆದರೆ ಬಲಪಂಥೀಯರು ತಳಸಮುದಾಯಗಳನ್ನು ಹೈಜಾಕ್ ಮಾಡುತ್ತಿದ್ದಾರೆ. ಇವತ್ತು ಬಲಪಂಥೀಯ ಸಂಘಟನೆಗಳ ಬಹುಪಾಲು ಕಾರ್ಯಕರ್ತರು ತಳಸಮುದಾಯದವರೇ ಆಗಿದ್ದಾರೆ. ಇದನ್ನು ಕಾಲದ ವ್ಯಂಗ್ಯ ಎನ್ನಬಹುದೇ? ನಾವಿಲ್ಲಿ ಧರ್ಮಸ್ಥಳದ ವಿರುದ್ಧ ಮಾತನಾಡಿದರೆ ಪೆಟ್ಟು ತಿನ್ನಬೇಕಾಗುವುದು ಯಾವ ಜನರ ಪರವಾಗಿ ನಾವು ಮಾತನಾಡುತ್ತೇವೆಯೋ ಅದೇ ಜನರಿಂದಲೇ! ಹಾಗಾದರೆ ಜನ, ಜನಪರ ಎಂದು ನಾವು ಯಾರ ಕುರಿತು ಮಾತನಾಡುತ್ತೇವೋ ಅದೇ ಜನ ನಮ್ಮನ್ನು ಅರ್ಥಮಾಡಿಕೊಳ್ಳುತ್ತಿಲ್ಲವೆ? ಜನ ತಮ್ಮ ಪರ ಎಂದು ನಮ್ಮ ನಡೆಗಳನ್ನು ಗುರ್ತಿಸಲು ಸಾಧ್ಯವಾಗದೇ ಹೋಗಿದೆಯೆಂದರೆ ನಮ್ಮ ದಾರಿಗಳನ್ನು ಪರಾಮರ್ಶಿಸಿಕೊಳ್ಳುವ ಅಗತ್ಯವಿದೆಯೆ?

ಜೀವವೇ, ಕೇವಲ ಪ್ರಶ್ನೆ ಹುಟ್ಟಿಸಬೇಡ. ವಾಸ್ತವವಾದಿ ಹಾಗೂ ಕ್ರಿಯಾತ್ಮಕ ನೆಲೆಯಲ್ಲಿ ಯೋಚಿಸಿ ಕಾರ್ಯಪ್ರವೃತ್ತರಾಗುವುದಕ್ಕೆ ಇರುವ ಮಾರ್ಗವಾಗಿ ಕಣ್ಣೆದುರು ತೆರೆದುಕೋ..


No comments:

Post a Comment