Saturday, 14 June 2014

ನಿಷ್ಠೆ: ಮುಷ್ಟಿಯೊಳಗಿನ ಗಂಧ




ಭೂಮಿಮೇಲಿನ ಬಹುಪಾಲು ಜೀವಿಗಳಲ್ಲಿ ಗಂಡು-ಹೆಣ್ಣು ಜೊತೆಯಾಗಿರುವುದರ ಮೂಲ ಕಾರಣ ಸಂತತಿಯನ್ನು ಬೆಳೆಸುವುದು. ಮಾನವನನ್ನು ಹೊರತುಪಡಿಸಿದರೆ ಉಳಿದಂತೆ ಸಂತತಿಯು ತನಗೆ ತಾನೇ ಬದುಕಲು ಶಕ್ತವಾದೊಡನೆ ಹೆಣ್ಣುಗಂಡು ಬೇರೆಯಾಗುತ್ತವೆ. ಇನ್ನೊಂದು ‘ಸಂತಾನೋತ್ಪತ್ತಿ ಕಾಲ’ ಬಂದಾಗ ಬೇರೆ ಸಂಗಾತಿಯೊಡನೆ ಒಗ್ಗೂಡುತ್ತವೆ. ಉಳಿದ ಪ್ರಾಣಿಗಳಿಗೆ ಹೋಲಿಸಿದರೆ ‘ಮಾನವ ಮರಿ’ ತುಂಬಾ ಪ್ರಿಮೆಚೂರ್. ತನ್ನ ತಾಯ್ತಂದೆಯರು ತಿನ್ನುವುದನ್ನು ತಿನ್ನಲಾರದ, ಕುಡಿಯಲಾರದ, ಚಲನಹೀನ ಸ್ಥಿತಿಯಲ್ಲಿರುವುದರಿಂದ ಅದಕ್ಕೆ ಹೆಚ್ಚು ಕಾಳಜಿಯ ಅಗತ್ಯವಿದೆ. ಎಂದೇ ಹೆಚ್ಚುಕಾಲದವರೆಗೆ ಅದರ ತಾಯ್ತಂದೆಯರು ಒಟ್ಟಿಗಿರುವುದು ಜೈವಿಕ ಅನಿವಾರ್ಯವೂ, ಅಗತ್ಯವೂ ಆಗಿದೆ. ಇದು ವಿಜ್ಞಾನ ಮತ್ತು ಪ್ರಕೃತಿಯ ವಾಸ್ತವ ಸತ್ಯ. ಆದರೆ ಮನುಷ್ಯರಲ್ಲಿ ಮಕ್ಕಳು ಸ್ವಯಂಸಾಮರ್ಥ್ಯ ಪಡೆದಮೇಲೂ ಸಂಬಂಧ ನಶಿಸದೇ ಪಾಲಕರು ಮಕ್ಕಳೊಟ್ಟಿಗೇ ಇರುತ್ತಾರೆ. ಇದಕ್ಕೆ ಸಂತತಿಯ ಸಂಖ್ಯೆ ಕಡಿಮೆ ಇರುವುದು, ಉತ್ತರಾಧಿಕಾರದ ಕಲ್ಪನೆ, ಲೈಂಗಿಕತೆಯನ್ನು ಸಂತಾನೋತ್ಪತ್ತಿಯ ಆಚೆ ಜೀವಮಾನ ಪರ್ಯಂತ ಮನರಂಜನೆಯ ಸಾಧನವಾಗಿ ಬಳಸುವುದು ಕಾರಣವಾಗಿವೆ.

ಮಾನವನಲ್ಲಿ ‘ಉತ್ತರಾಧಿಕಾರಿ’ಯ ಅವಶ್ಯಕತೆ ಉಂಟಾಗಿದ್ದರಿಂದ ತನ್ನದೇ ‘ಹೆಂಡತಿ-ಮಕ್ಕಳ ಸಂಸಾರ’ವನ್ನು ಕಟ್ಟಿಕೊಳ್ಳಲು ‘ಮದುವೆ’ ಕಲ್ಪನೆ ಚಾಲ್ತಿಗೆ ಬಂತು. ಹೀಗೆ ಎಷ್ಟೋ ಸಾವಿರ ವರ್ಷಗಳಿಂದ ರೂಢಿಯಲ್ಲಿರುವ ಮದುವೆ-ದಾಂಪತ್ಯ ವ್ಯವಸ್ಥೆ ಇವತ್ತು ಎಷ್ಟು ಅಂತರ್ಗತವಾಗಿದೆಯೆಂದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಮದುವೆಯಾಗಿ ಮಕ್ಕಳನ್ನು ಪಡೆಯುವುದೇ ಆತ್ಯಂತಿಕ ಗುರಿ ಎಂದು ಭಾವಿಸಲಾಗಿದೆ. ಎಂದೇ ಒಂಟಿಯಾಗಿ, ಮದುವೆಯಾಗದೇ/ಬೇಡದೇ ಇರುವವರನ್ನು ಸಮಾಜ ಅನುಮಾನದಿಂದ ನೋಡುತ್ತದೆ. ಸಂತತಿಯನ್ನು ಉತ್ಪಾದಿಸಲಾಗದ ಸಲಿಂಗ ಸಂಬಂಧವನ್ನು, ವಿವಾಹೇತರ ಸಂಬಂಧವನ್ನು ತುಚ್ಛೀಕರಿಸುತ್ತದೆ.

ಮದುವೆ ವ್ಯವಸ್ಥೆಯಲ್ಲಿ ಪ್ರಪಂಚದ ಎಲ್ಲ ದೇಶ, ಸಮುದಾಯಗಳ ಹೆಣ್ಣುಮಕ್ಕಳು ‘ಬಂಧನ’ಕ್ಕೊಳಗಾಗಿದ್ದಾರೆ. ಆದಿಮ ಬುಡಕಟ್ಟು ಸಮಾಜವನ್ನೂ ಸೇರಿಸಿ ಮನೆ ಸಂಭಾಳಿಸುವ, ಹೊತ್ತೊತ್ತಿಗೆ ಹೊಟ್ಟೆ ಬೆಂಕಿ ತಣಿಸುವ, ಮಕ್ಕಳನ್ನು ಜೋಪಾನ ಮಾಡುವ, ಅವರ ಕಲಿಕೆಗೆ ಸಂಬಂಧಿಸಿದ ಜವಾಬ್ದಾರಿಗಳೆಲ್ಲ ಹೆಣ್ಣಿನ ಹೆಗಲೇರಿವೆ. ಅಂಥ ಜವಾಬ್ದಾರಿಗಳನ್ನು ಅನಿವಾರ್ಯವೆಂದು ಒಪ್ಪಿಸಲು ‘ತಾಯ್ತನ’, ‘ಅನ್ನಪೂರ್ಣೆ’, ‘ಗೃಹಲಕ್ಷ್ಮಿ’ ಮೊದಲಾದ ಕಿರೀಟಗಳನ್ನು ಸೃಷ್ಟಿಸಲಾಗಿದೆ. ಮನೆ-ಮಕ್ಕಳು-ಸಂಪತ್ತಿನ ನಿರ್ವಹಣೆಗಳೆಂಬ ಕೊನೆ ಮೊದಲಿರದ; ಗೌರವ-ಗುರುತಿಸುವಿಕೆಯಿರದ; ದುಡಿಮೆ ಎಂದು ಪರಿಗಣಿಸಲ್ಪಡದ; ಹಣ ಗಳಿಸಿಕೊಡದ ಸೇವೆಯಲ್ಲೇ ಹೆಣ್ಣು ಮುಳುಗಿಹೋಗಿದ್ದಾಳೆ. ಜೊತೆಗೆ ಉತ್ತರಾಧಿಕಾರಿಯಾಗಿ ಒಂದೇ ತಂದೆಯ ಮಕ್ಕಳನ್ನು ಪಡೆಯುವುದು ಅವಶ್ಯವಾದ್ದರಿಂದ ಒಂದು ಹೆಣ್ಣು ಒಂದೇ ಗಂಡಿನೊಟ್ಟಿಗೆ ಇರುವುದನ್ನು ಮೌಲ್ಯವೆಂದು ಹೇಳುತ್ತಾ ಪಾತಿವ್ರತ್ಯ, ಶೀಲ ಮುಂತಾದ ಪರಿಕಲ್ಪನೆಗಳೂ ಹುಟ್ಟಿಕೊಂಡಿವೆ.

ಈ ರೀತಿಯಾಗಿ ಮಹಿಳೆಯ ದಮನದ ಮೂಲ ನೆಲೆಯೇ ‘ಮದುವೆ’ ಎಂಬ ಸಂಸ್ಥೆ ಹಾಗೂ ಅದು ಜಾರಿಗೊಳಿಸುವ ದಾಂಪತ್ಯ-ಕುಟುಂಬ ವ್ಯವಸ್ಥೆಯಲ್ಲಿದೆ ಎನ್ನುವುದು ಕಟ್ಟಾ ಸ್ತ್ರೀವಾದಿ ನಿಲುವು. ಹೆಣ್ಣಿನ ಅಪಾರ ಸಾಧ್ಯತೆಗಳನ್ನು, ಸಾಮರ್ಥ್ಯವನ್ನು ಕುಟುಂಬ ಮೊಟಕುಗೊಳಿಸಿದೆ ಹಾಗೂ ಈ ವ್ಯವಸ್ಥೆ ಆತ್ಯಂತಿಕವಾಗಿ ಬದಲಾಗದ ಹೊರತು ಯಾವುದೂ ಬದಲಾಗುವುದಿಲ್ಲ ಎನ್ನುವುದು ಅವರ ಪ್ರತಿಪಾದನೆ.

ಕುಟುಂಬ ಮತ್ತು ಮದುವೆ ಕುರಿತಾದ ಮಾತುಗಳೇ ದಾಂಪತ್ಯಕ್ಕೂ, ಅದರ ನಿಭಾಯಿಸುವಿಕೆಗೆ ಅಗತ್ಯವಾದ ನಿಷ್ಠೆಗೂ ಅನ್ವಯಿಸುತ್ತವೆ.

ಒಂದು ಕತೆ ಹೀಗಿದೆ: ಒಂದು ಕಾಡು. ಅಪ್ಪ, ಅಮ್ಮ, ಎಳೆಯ ಮಗ ಚೆಂದವಾಗಿ ವಾಸಮಾಡುತ್ತಿರುತ್ತಾರೆ. ಅವರ ಮನೆಗೆ ಅತಿಥಿಯೊಬ್ಬ ಬರುತ್ತಾನೆ. ಬಂದವನು ಹಲವು ದಿನದವರೆಗೆ ಅಲ್ಲಿದ್ದು ಆತಿಥ್ಯ ಸ್ವೀಕರಿಸುತ್ತಾನೆ. ಅಂತೂ ಒಂದು ದಿನ ಆತ ಹೊರಟು ನಿಂತು ಅಪ್ಪ, ಮಗನಿಗೆ ಬೀಳ್ಕೊಡುಗೆಯ ಮಾತು ಹೇಳುತ್ತಾನೆ. ಮನೆಯೊಡತಿಗೆ ಹೇಳಿಬರಲು ಒಳಹೋದವ ಕೆಲ ಸಮಯವಾದರೂ ಹೊರಬರುವುದಿಲ್ಲ. ಅಪ್ಪ, ಮಗ ಹೊರಗೇ ನಿಂತಿರುತ್ತಾರೆ. ಕೊನೆಗೆ ಅವನು ಹೊರಬಂದಾಗ ಅವನೊಡನೆ ಮನೆಯೊಡತಿ ಗಂಟು ಕಟ್ಟಿಕೊಂಡು ನಿಂತಿರುತ್ತಾಳೆ. ಅತಿಥಿ ಮುಂದೆಮುಂದೆ ಹೋದರೆ, ಇವಳು ಅವನ ಹಿಂದೆಹಿಂದೆ. ಮಗು ಅಮ್ಮಾ ಎನ್ನುತ್ತದೆ, ಆಕೆ ಹಿಂತಿರುಗಿ ಒಮ್ಮೆ ನೋಡಿ ಮುಂದುವರೆಯುತ್ತಾಳೆ. ಮಗು ಅಪ್ಪನನ್ನು ‘ಅಪ್ಪಾ, ಅವಳೆಲ್ಲಿಗೋ ಹೋಗುತ್ತಿದ್ದಾಳೆ. ಅವಳನ್ನು ಹೋಗದಂತೆ ತಡೆಯಿರಿ’ ಎನ್ನುತ್ತ ಮತ್ತೆ ಅಮ್ಮನನ್ನು ಕೂಗುತ್ತದೆ. ಅವಳು ನಿಲ್ಲದೇ ಹೋಗುತ್ತಲೇ ಇದ್ದಾಳೆ. ‘ಅಯ್ಯೋ, ನನ್ನಮ್ಮ ಜಗಲಿ ದಾಟಿ, ಅಂಗಳ ದಾಟಿ, ಹೂದೋಟ ದಾಟಿ, ಬೇಲಿ ದಾಟಿದರೂ ಅಪ್ಪ ಏನೂ ಹೇಳುವುದಿಲ್ಲವಲ’, ಮಗು ಕಂಗಾಲಾಗುತ್ತದೆ. ಅಮ್ಮನನ್ನು ಕರೆಯುತ್ತದೆ. ಅಪ್ಪನ ಬಳಿ ಅವಳನ್ನು ತಿರುಗಿಬರುವಂತೆ ಕರೆ ಎನ್ನತೊಡಗುತ್ತದೆ. ಅಪ್ಪ, ‘ಮಗು, ಇಷ್ಟು ದಿನ ಅವಳು ನಮ್ಮನ್ನು ಯಾವ ಕೊರತೆಯೂ ಇಲ್ಲದಂತೆ ನೋಡಿಕೊಂಡಳು. ಈಗ ಅವಳಿಗೆ ಯಾಕೋ ಎಲ್ಲವನ್ನು ತೊರೆದು ಹೋಗಬೇಕೆನಿಸಿ ಹೊರಟಿದ್ದಾಳೆ. ಹೊರಟವಳನ್ನು ಇಟ್ಟುಕೊಳ್ಳಬಾರದು, ನಾ ತಡೆಯಲಾರೆ. ಆಕೆ ಹೋಗಲಿ, ಇದ್ದಲ್ಲಿಯೇ ಸುಖವಾಗಿರಲಿ’ ಎನ್ನುತ್ತಾನೆ.

ಅಮ್ಮ ಹೊರಟೇಹೋಗುತ್ತಾಳೆ.

ಆ ಮಗುವೇ ಬೆಳೆದು ದೊಡ್ಡವನಾದ ಮೇಲೆ ಮನುಸ್ಮೃತಿ ಬರೆದ ಮನು. ಬಾಲ್ಯದ ಈ ಅನುಭವದಿಂದಲೇ ಆತ ಗಂಡ, ಮಕ್ಕಳನ್ನು ಬಿಟ್ಟು ಹೆಂಗಸರು ಎಲ್ಲೂ ಹೋಗದ ಹಾಗೆ ನಾನಾ ನಿಯಮಗಳನ್ನು ಜಾರಿಗೆ ತಂದ ಎನ್ನಲಾಗುತ್ತದೆ.

ಇದು ಕಟ್ಟುಕತೆಯೋ, ಇತಿಹಾಸವೋ ಗೊತ್ತಿಲ್ಲ. ಇದೇನು ಕತೆಯೋ, ಮನುವಿಗೆ ಸಂಭವಿಸಿದ ಜೀವನದ ಘಟನೆಯೋ ಅದೂ ನಿಶ್ಚಿತವಿಲ್ಲ. ಆದರೆ ಇಷ್ಟು ಮಾತ್ರ ಸತ್ಯ, ಗಂಡುಹೆಣ್ಣು ಭೇಧವಿಲ್ಲದೆ ಎಲ್ಲರ ತಲೆಯೊಳಗೊಬ್ಬ ಮನು ಇದ್ದು ನಿರಂತರ ಹೆಣ್ಣಿಗೆ ಗಡಿಗೆರೆ ಎಳೆಯುವಲ್ಲಿ ನಿರತನಾಗಿದ್ದಾನೆ. ಈ ಮನುತನವೇ ಇಂಥದ್ದು ಎಷ್ಟೋ ಮನೆಗಳಲ್ಲಿ ಸಂಭವಿಸಿದರೂ, ಸಂಭವಿಸುತ್ತಿದ್ದರೂ ‘ನಿಷ್ಠೆ’ ಇಲ್ಲದೇ ಇರುವುದೇ ‘ಹೊಂದಾಣಿಕೆ’ ಆಗದಿರುವುದಕ್ಕೆ ಮುಖ್ಯ ಕಾರಣವೆನ್ನುತ್ತ ಬುಡಮಟ್ಟದ ತಾರತಮ್ಯ ಗುರುತಿಸಲ್ಪಡದೇ ಉಳಿದಿದೆ.


ಮದುವೆ, ದಾಂಪತ್ಯ ನಿಷ್ಠೆ ಮತ್ತು ವ್ಯಭಿಚಾರ: ಸುಡುವ ಕಾಲದ ಸಾಕ್ಷಿ..



ನಿಷ್ಠೆ ಎಂಬ ಪದವೇ ಗೊಂದಲಮಯ. ನಿಷ್ಠೆ ದೈಹಿಕ/ಲೈಂಗಿಕತೆಗಷ್ಟೇ ಸೀಮಿತವಲ್ಲ. ದಾಂಪತ್ಯ ನಿಷ್ಠೆ ಎನ್ನುವುದು ಮಾಪನವಿರದ ಮೌಲ್ಯ. ಏಕೆಂದರೆ ಕಾನೂನಾಗಲೀ, ಸಮಾಜ-ವ್ಯಕ್ತಿಯಾಗಲೀ ನಿಷ್ಠೆಯನ್ನು ಹೇರಲು ಸಾಧ್ಯವಿಲ್ಲ. ಸಂಬಂಧವೇ ಅದನ್ನು ಸೃಷ್ಟಿಸಬೇಕು. ಹೆಣ್ಣುಗಂಡು ಇಬ್ಬರೂ ಸಮಾನರಾಗಿ, ಸಮಾನ ಗೌರವದಿಂದ ಬಾಳುವ ದಿನಗಳು ಬರುವವರೆಗಿನದು ವಿಪ್ಲವ ಕಾಲ. ಅಂಥ ಸುಡುವ ಕಾಲದ ಸಾಕ್ಷಿಗಳಾಗಿ ನಾವು-ನೀವು-ಮದುವೆ-ದಾಂಪತ್ಯ ಎಲ್ಲವೂ..

ಕಾಲ ಬದಲಾಗುತ್ತ; ವಿಜ್ಞಾನ-ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸಮಾಜ ಆಧುನಿಕಗೊಳ್ಳುತ್ತ ಹೋಗುತ್ತಿರುವಾಗ ಕುಟುಂಬದ ಆರ್ಥಿಕ ಸಂಪನ್ಮೂಲ ಹೆಚ್ಚಿಸುವ ವ್ಯಕ್ತಿಯಾಗಿ ‘ಹೊರಗೆ’ ದುಡಿಯುವುದು ಮಹಿಳೆಗೆ ಅನಿವಾರ್ಯವಾಗುತ್ತಿದೆ. ಆದರೂ ಅವಳಿಗೆ ಸಾಂಪ್ರದಾಯಿಕ ಕರ್ತವ್ಯಗಳಿಂದ, ಜೈವಿಕ ಹೊಣೆಗಾರಿಕೆಯಿಂದ ವಿನಾಯಿತಿ ಇಲ್ಲದೇ ಬದಲಾದ ಕಾಲದಲ್ಲೂ ಹೆಣ್ಣಿಗೆ ಮನೆ-ಸಂಸಾರ ಎನ್ನುವುದು ಮತ್ತಷ್ಟು ಬಂಧನ ಎನಿಸತೊಡಗಿದೆ. ಜೊತೆಗೆ ಈ ಮಾಹಿತಿ ಯುಗದಲ್ಲಿ ಏರ್ಪಡುವ ಸಂಪರ್ಕಗಳು; ಸಂಬಂಧಗಳು; ಒಡನಾಟಗಳಿಂದಾಗಿ ಒಂದೇ ವ್ಯಕ್ತಿಯಿಂದ ತನ್ನ ಭಾವುಕ ಅಗತ್ಯ ಪೂರೈಸಿಕೊಳ್ಳಲಾಗದೇ ಹೆಣ್ಣಾಗಲೀ, ಗಂಡಾಗಲೀ, ದಾಂಪತ್ಯದ ಹೊರಗೆ ಸಂಬಂಧ ಹೊಂದುವುದು ಸಾಮಾನ್ಯವಾಗಿದೆ. ಅಭಿರುಚಿ-ಆಶಯ-ಗುರಿ ಸಾಧನೆಗೆ ಪೂರಕವಾಗಿ ಹತ್ತಿರವಾದ ವ್ಯಕ್ತಿಯೊಡನೆ ನಿಕಟ ಸಂಬಂಧ ಬೆಳೆಯುತ್ತಿದೆ.

ಆದರೆ ಮದುವೆ-ದಾಂಪತ್ಯವನ್ನು ಬದಲಾದ ಕಾಲದಲ್ಲಿ ಸಮಾಜ ಹೇಗೆ ಪರಿಗಣಿಸುತ್ತಿದೆ ಎಂದು ನೋಡಿದರೆ ವಸ್ತುಸ್ಥಿತಿಗೂ, ಬೋಧಿಸುವ ನೀತಿಗೂ ಅಜಗಜಾಂತರ ವ್ಯತ್ಯಾಸವಿರುವುದು ತಿಳಿದುಬರುತ್ತದೆ. ಈ ದ್ವಂದ್ವವೇ ವಿವಾಹ ಸಂಸ್ಥೆಯು ತನಗೆ ತಾನೇ ಮುಳುವಾಗಲು ಕಾರಣವಾಗಿದೆ.  ಈಗಲೂ ಮಗಳನ್ನು ಗಂಡನ ಮನೆಗೆ ‘ಕಳಿಸ’ಲಾಗುತ್ತದೆ. ಅವಳನ್ನು ‘ಕೊಡು’ವಾಗ ಅಪ್ಪಅಮ್ಮ ‘ಹೊಂದಿಕೊಂಡು ಹೋಗು’ ಎಂಬ ಕಿವಿಮಾತು ಹೇಳುತ್ತಾರೆ. ಹೊಂದಾಣಿಕೆ ಎನ್ನುವುದು ಏಕಮುಖವಾದದ್ದು ಮತ್ತು ಹೆಣ್ಣಿನ ಮೌನ/ತ್ಯಾಗ ಬಯಸುವಂಥದ್ದು ಎಂದು ಮತ್ತೆ ಹೇಳಬೇಕಿಲ್ಲ. ಆದರೆ ಈ ಹೊಂದಾಣಿಕೆ ಕೌಟುಂಬಿಕ ದೌರ್ಜನ್ಯವನ್ನು ‘ಗಂಡನಲ್ಲದೆ ಇನ್ನಾರು ಹೊಡೆದಾರು?’ ಎಂದು ಸಹಿಸಿಕೊಳ್ಳುವವರೆಗೆ; ‘ನನ ಮುಡಿಯ ಕೇದಿಗೆ ಅವಳೂ ಒಂಚಣ ಮುಡಿಯಲಿ’ ಎಂದು ಗಂಡನ ವಿವಾಹೇತರ ಸಂಬಂಧ ಸಹಿಸುವವರೆಗೆ ಮುಂದುವರೆಯುತ್ತದೆ.

ನಿಷ್ಠೆಯ ಇನ್ನೊಂದು ಅತಿ ಬಾಲ್ಯವಿವಾಹ. ಬಾಲ್ಯವಿವಾಹ ಇವತ್ತಿಗೂ ಉಳಿದುಕೊಂಡು ಬಂದಿದ್ದರೆ ಅದಕ್ಕೆ ಕಾರಣ ಹೆಣ್ಣಿನ ಮನಸ್ಸು ಮತ್ತು ದೇಹ ಬಲಿಯುವ ಮೊದಲೇ ಅದು ಒಂದು ಗಂಡಿಗೆ ಮೀಸಲಿರಬೇಕು ಎನ್ನುವುದು. ಹೆಣ್ಣು ಈ ಗೆರೆಯನ್ನು ದಾಟಿದಲ್ಲಿ ಹಾದರ-ವ್ಯಭಿಚಾರದ ಪಟ್ಟ ಕಟ್ಟಿಟ್ಟದ್ದು. ಒಂದಿಡೀ ಕುಟುಂಬದ, ಸಮುದಾಯದ ಗೌರವ ಹೆಣ್ಣುಗಳ ಯೋನಿ ಶುದ್ಧತೆಯಿಂದ, ನಿಷ್ಠೆಯಿಂದ ಅಳೆಯಲ್ಪಡುತ್ತದೆ. ಮೇಲ್ಜಾತಿ ಮೇಲ್ಜಾತಿಯಾದದ್ದು ವಿಧವಾ ಪದ್ಧತಿ, ಸತಿ ಸಹಗಮನ, ವಿಧವಾ ವಿವಾಹ ನಿಷೇಧ, ಬಾಲ್ಯವಿವಾಹ, ಮರುವಿವಾಹ ನಿಷೇಧ ಮುಂತಾದ ಹೆಣ್ಣುಗಳ ಮೇಲಿನ ಲೈಂಗಿಕ ನಿರ್ಬಂಧಗಳಿಂದಲೇ. ಆದರೆ ಈ ನಿರ್ಬಂಧ ಗಂಡಿಗಿಲ್ಲ. ಅವನು ಎಷ್ಟು ಹೆಚ್ಚು ಹೆಣ್ಣುಗಳನ್ನು ಆಳಬಲ್ಲನೋ ಅಷ್ಟು ಪುರುಷೋತ್ತಮ. ಬಹುಪತ್ನಿತ್ವವನ್ನು ಹೆಚ್ಚುಕಡಿಮೆ ಎಲ್ಲ ಧರ್ಮಗಳೂ ಮಾನ್ಯ ಮಾಡಿವೆ.

ಇವತ್ತಿಗೂ ವೇಶ್ಯಾವಾಟಿಕೆ, ದೇವದಾಸಿ ಪದ್ಧತಿ ನಮ್ಮ ನಡುವಿದೆ. ಅವುಗಳ ಇರುವಿಕೆಯೇ ನಿಷ್ಠೆ ಗಂಡಿಗೆ ಸಂಬಂಧಪಟ್ಟ ಪ್ರಶ್ನೆ ಅಲ್ಲ, ನಿಷ್ಠೆಯನ್ನು ಹೆಣ್ಣಿನ ಮೇಲೆ ಮಾತ್ರ ಸಮಾಜ ಹೇರಿದೆ ಎನ್ನಲು ಸಾಕ್ಷಿಯಾಗಿದೆ. ‘ಏಕಪತ್ನೀ ವ್ರತಸ್ಥ’ ಎನ್ನುವುದು ಗಂಡಸಿಗೆ ಗುಣವಾಚಕ, ಹೆಗ್ಗಳಿಕೆ, ಮೌಲ್ಯ. ಆದರೆ ಏಕಪತಿ ವ್ರತಸ್ಥೆ ಎಂಬ ಪದಪ್ರಯೋಗವೇ ಇಲ್ಲ. ಏಕೆಂದರೆ ಅದು ಕಡ್ಡಾಯ. ಆಕಾಶದಲ್ಲಿ ಹಾರುವ ಗಂಧರ್ವನ ನೆರಳನ್ನು ನೋಡಿ ಮೋಹಿಸಿದಳು ಎಂದು ರೇಣುಕೆಯ ತಲೆಯನ್ನು ಅವಳ ಮಗನಿಂದಲೇ ಕಡಿಸಿ ಪಾತಿವ್ರತ್ಯ ಮತ್ತು ನಿಷ್ಠೆಯನ್ನು ವೈಭವೀಕರಿಸಿದ ಸಮಾಜ ನಮ್ಮದು. ಗಂಡ ಸತ್ತರೆ ಅವನ ಚಿತೆಯೇರುವುದು ಅಥವಾ ತಲೆ ಬೋಳಿಸಿಕೊಂಡು ವಿರೂಪಗೊಳ್ಳುವುದು ಅಥವಾ ಮರುಮದುವೆಯಿಲ್ಲದೆ ಜೀವಮಾನವಿಡೀ ಒಬ್ಬಂಟಿಯಾಗಿ ಕಳೆಯುವುದು ಭಾರತೀಯ ಸಮಾಜ ಮಹಿಳೆಗೆ ವಿಧಿಸಿರುವ ಕಿರೀಟಗಳು. ಜೊತೆಗೆ ಗಂಡ ಕುಂಟನೋ, ಕುರುಡನೋ, ಹೆಳವನೋ, ಕುಡುಕನೋ, ವ್ಯಭಿಚಾರಿಯೋ - ಅವನನ್ನು ಪೊರೆಯಬೇಕಾದ್ದು ಹೆಂಡತಿಯ ಪರಮ ಕರ್ತವ್ಯ ಎಂದೇ ಇಂದಿಗೂ ಹೇಳಲಾಗುತ್ತದೆ. ಮಹಾಸತಿಯರ ಕುರಿತ ಲೆಕ್ಕವಿಲ್ಲದಷ್ಟು ಕತೆಪುರಾಣಗಳನ್ನು ಸೃಷ್ಟಿಸಲಾಗಿದೆ. ಇದನ್ನೇ ಹೆಣ್ಣು ಒಪ್ಪಿಕೊಂಡು ಬೆಳೆದಿದ್ದಾಳೆ.

ಹೀಗಿದ್ದೂ ಅಪವಾದವೆನ್ನುವಂತಹ ಸಂಬಂಧಗಳನ್ನೂ, ಲೈಂಗಿಕತೆಯನ್ನೂ ನಮ್ಮ ಪರಂಪರೆ ಹೊಂದಿದೆ. ಪುರಾಣಗಳಲ್ಲಿ ಅದಕ್ಕೆ ಪುರಾವೆ ಸಿಗುತ್ತದೆ. ಐವರು ಗಂಡಂದಿರನ್ನು ಹಂಚಿಕೊಂಡ ದ್ರೌಪದಿ, ಗಂಡನಿದ್ದೂ ಕೃಷ್ಣನಿಗೊಲಿದು ವಿವಾಹಬಾಹಿರ ಸಂಬಂಧ ಹೊಂದಿದ ರಾಧೆ, ನಿಯೋಗಕ್ಕೊಳಗಾದ ಹೆಣ್ಣುಮಕ್ಕಳು - ಇಂಥ ಪಾತ್ರಗಳು ಏಕೆ ಸೃಷ್ಟಿಯಾದವು ಎನ್ನುವುದನ್ನು ಗಮನಿಸಬೇಕು. ಹೆಣ್ಣುಗಳ ಸಂಖ್ಯೆ ಕಡಿಮೆಯಿದ್ದ ಆದಿಮ ಕುಲಗಳಲ್ಲಿ ಹೆಣ್ಣನ್ನು ಬೆಲೆಬಾಳುವ ವಸ್ತುಗಳೊಂದಿಗೆ ಅಥವಾ ಇನ್ನೊಂದು ಹೆಣ್ಣಿನೊಂದಿಗೆ ವಿನಿಮಯ ಮಾಡಿಕೊಳ್ಳುವ ಪದ್ಧತಿಯಿತ್ತು. ಆಗ ಒಂದೇ ಹೆಣ್ಣು ಅಣ್ಣತಮ್ಮಂದಿರನ್ನು ಮದುವೆಯಾಗುವ ಪದ್ಧತಿಯೂ ಇತ್ತು. ಆದರೆ ಆಳುವ ಕುಲದಲ್ಲಿ ಸಮರ್ಥ ಗಂಡಸರು ಯುದ್ಧಗಳಲ್ಲಿ ತೀರಿಕೊಂಡು ಹೆಚ್ಚುವರಿ ಹೆಣ್ಣುಗಳಿದ್ದಾಗ್ಯೂ ಒಂದೇ ಹೆಣ್ಣನ್ನು ಐವರು ವರಿಸಿರುವುದರ ಹಿಂದೆ ಉತ್ತರಾಧಿಕಾರದ ಸಮಸ್ಯೆ ಬರಬಾರದು ಹಾಗೂ ಅಣ್ಣತಮ್ಮಂದಿರಲ್ಲಿ ರಾಜ್ಯ ಹಂಚಿಹೋಗಬಾರದಂತೆ ನೋಡಿಕೊಳ್ಳುವ ರಾಜಕೀಯ ಉದ್ದೇಶ ಅಡಗಿದೆ. ಬೇರೆಬೇರೆ ಮನೆಯ ಐವರು ಗಂಡಸರೊಟ್ಟಿಗೆ ಇರಲಿಲ್ಲ ದ್ರೌಪದಿ. ಐವರು ಅಣ್ಣತಮ್ಮಂದಿರೊಟ್ಟಿಗೆ, ಸರತಿ ಪ್ರಕಾರ ಒಬ್ಬರೊಟ್ಟಿಗೆ ಒಂದೊಂದು ವರ್ಷದಂತೆ ಇದ್ದಳು. ಈ ಸರತಿ ಪದ್ಧತಿ ಹುಟ್ಟಲಿರುವ ಮಕ್ಕಳ ಪಿತೃತ್ವ ಪ್ರಶ್ನಾರ್ಹವಾಗದಂತೆ ನೋಡಿಕೊಂಡಿತು. ಮಹಾಭಾರತದಲ್ಲಿ ಮಕ್ಕಳಾಗದೇ ಇದ್ದಾಗ ಬೇರೊಬ್ಬ ಗಂಡಸಿನೊಟ್ಟಿಗೆ ಕೇವಲ ಮಕ್ಕಳನ್ನು ಪಡೆಯಲಿಕ್ಕಾಗಿ ಲೈಂಗಿಕ ಸಂಪರ್ಕ ಮಾಡುವ, ‘ನಿಯೋಗ’ ಎಂದು ಒಪ್ಪಿತವಾಗಿರುವ ಪ್ರಮೇಯವೂ ಬರುತ್ತದೆ. ಈ ವಿವಾಹಬಾಹಿರ ಲೈಂಗಿಕ ಸಂಬಂಧವನ್ನು ಸಮಾಜ ಒಪ್ಪುತ್ತಿತ್ತು ಏಕೆಂದರೆ ಅದು ದೇಹ ಸುಖಕ್ಕಾಗಿ ಕೂಡಿದ ಕೂಟವಲ್ಲ. ಬದಲು ಮಕ್ಕಳಾಗದ ಗಂಡನಿಗೆ ಉತ್ತರಾಧಿಕಾರಿಯನ್ನು ಹೆತ್ತುಕೊಡಲು ನಡೆಸಿದ್ದು. ಇದರಲ್ಲಿ ಅವಳ ಆಯ್ಕೆ, ಆಸೆ-ಇಷ್ಟದ ಪ್ರಶ್ನೆಯೇ ಬರುವುದಿಲ್ಲ. ಇಂಥವೆಲ್ಲ ಮತ್ತೆಮತ್ತೆ ಹೆಣ್ಣಿನ ಲೈಂಗಿಕತೆಯನ್ನು ಸಂತಾನೋತ್ಪತ್ತಿಗಷ್ಟೇ ಸೀಮಿತಗೊಳಿಸಿ ‘ನಿಷ್ಠೆ’ ಕಾಪಾಡಿಕೊಳ್ಳುವಂತೆ ಮಾಡಿದ ಪ್ರಯತ್ನಗಳು. ಅದೇರೀತಿ ರಾಧೆ ಗಂಡನಿದ್ದೂ ಗಂಡನಿಗೆ ತೋರಿದಷ್ಟೇ ನಿಷ್ಠೆಯನ್ನು ಕೃಷ್ಣನಿಗೆ ತೋರಿದ್ದಾಳೆ. ಆಗಲೇ ಹೆಂಡಿರನ್ನು ಪಡೆದಿದ್ದ ಕೃಷ್ಣನಿಗೊಲಿದು ಯಮುನಾ ನದೀ ತೀರದಲ್ಲಿ ಕೊನೆ ಮೊದಲಿಲ್ಲದೆ ಕಾಯುತ್ತಾ ನಿಷ್ಠೆ ಮೆರೆದಿದ್ದಾಳೆ. ಎಂದೇ ಅವಳಿಗೆ ವ್ಯಭಿಚಾರಿಯ ಪಟ್ಟದ ಬದಲು ಗೌರವ ದೊರೆತಿದೆ.

ಒಟ್ಟಾರೆ ಏಕಸಂಗಾತಿ ಅಥವಾ ಬಹುಸಂಗಾತಿಯನ್ನು ಹೊಂದುವುದು ಆಯಾಕಾಲಕ್ಕೆ ಅನಿವಾರ್ಯವಾದ ಅನುಕೂಲಸಿಂಧು ಹೊಂದಾಣಿಕೆ ಎಂದಷ್ಟೇ ಹೇಳಬಹುದು. ಆದರೆ ಕತೆ/ಪುರಾಣಗಳ ಪಾತ್ರಕ್ಕೆ ಸಿಕ್ಕಷ್ಟು ಗೌರವ ನಿಜ ಜೀವನದಲ್ಲಿ ಯಾವ ರಾಧೆಗೂ ಸಿಕ್ಕುವುದಿಲ್ಲ. ಎಲ್ಲ ಸಮಾಜಗಳೂ ಹೆಣ್ಣಿನ ವ್ಯಭಿಚಾರವನ್ನು ಮಾತ್ರ ಗುರುತಿಸಿ ಶಿಕ್ಷಿಸುತ್ತ ಬಂದಿದೆ. ಗಂಡಸು ಗುಲಾಮಳೊಂದಿಗೋ, ಅವಿವಾಹಿತಳೊಂದಿಗೋ, ವೇಶ್ಯೆಯೊಂದಿಗೋ ದೈಹಿಕ ಸಂಬಂಧವಿರಿಸಿಕೊಂಡರೆ ಅವನ ಹೆಂಡತಿಯ ದೃಷ್ಟಿಯಿಂದ ಅದು ತಪ್ಪಲ್ಲ. ಅದೇ ಆತ ವಿವಾಹಿತ ಮಹಿಳೆಯೊಡನೆ ಸಂಬಂಧ ಇರಿಸಿಕೊಂಡರೆ ‘ಮತ್ತೊಬ್ಬನ ಆಸ್ತಿ’ಯನ್ನು ಹರಣ ಮಾಡಿದ್ದಕ್ಕಾಗಿ ಅದು ಪಾಪ, ತಪ್ಪು. ಅದಕ್ಕಾಗಿ ಸಾರ್ವಜನಿಕವಾಗಿ ಹೇಯ ಶಿಕ್ಷೆಯನ್ನೇ ಕೊಡಲಾಗಿದೆ.

ಎಂದಿನಿಂದ ದಾಂಪತ್ಯ ನಿಷ್ಠೆ ಇಲ್ಲದಿರುವುದು ನಮ್ಮ ಸಮಾಜದಲ್ಲೂ ದೊಡ್ಡ ಸಮಸ್ಯೆಯಾಗಿರಬೇಕು. ಏಕೆಂದರೆ ‘ಛಲ ಬೇಕು ಶರಣಂಗೆ ಪರಸತಿಯನೊಲ್ಲೆನೆಂಬ’ ಎಂದು ವಚನ ಕಾಲವೂ ಹೇಳಿದೆ. ವ್ಯಭಿಚಾರಿ ಹೆಣ್ಣಿನ ಕ್ಷಮಾರ್ಹವಲ್ಲದ ತಪ್ಪಿಗೆ ಏನೇನು ಶಿಕ್ಷೆ ಕೊಡಬಹುದು, ಪರಸತಿಯರನ್ನು ಪುರುಷ ಏಕೆ ಲಪಟಾಯಿಸಬಾರದು ಎಂದು ಎಲ್ಲ ನೀತಿಸಂಹಿತೆಗಳೂ ಸೂಚಿಸಿವೆ. ವ್ಯಭಿಚಾರದ ಆರೋಪಕ್ಕೊಳಗಾಗಿ ದೈಹಿಕ, ಮಾನಸಿಕ ಹಿಂಸೆ ಹಾಗೂ ಭಯೋತ್ಪಾದಕ ಶಿಸ್ತು ಕ್ರಮಗಳಿಂದ ಸಾವಿರಾರು ಹೆಣ್ಣುಗಳು ಬಸವಳಿದಿದ್ದಾರೆ. ವ್ಯಭಿಚಾರಿಣಿಯನ್ನು ತನ್ನವರೆಂದು ಒಪ್ಪಿಕೊಳ್ಳಲು ಯಾರೂ ಸಿದ್ಧವಿಲ್ಲದಿದ್ದರೆ ಅವರನ್ನು ದಾಸಿಯನ್ನಾಗಿ ಮಾಡಲಾಗುತ್ತಿತ್ತು. ೧೯ನೇ ಶತಮಾನದ ಮೊದಲ ಭಾಗದ ತನಕ ಅಂಥ ದಾಸಿಯರ ಮಾರಾಟ ನಡೆಯುತ್ತಿತ್ತು. ೧೮೪೩ರಲ್ಲಿ ವ್ಯಭಿಚಾರಿಣಿಯರ ಹರಾಜನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಿತು. ಬ್ರಾಹ್ಮಣ ಮತ್ತು ವೈಶ್ಯ ಮಹಿಳೆಯರು ಮಾರಾಟಕ್ಕೆ ಬರುತ್ತಿರಲಿಲ್ಲ. ಬದಲಾಗಿ ಅವರ ಕೈಮೇಲೆ ‘ವೇಶ್ಯೆ’ ಎಂದು ಬರೆ ಎಳೆದು ಗುರುತು ಹಾಕಿ ಜಾತಿಯಿಂದ ಹೊರಹಾಕುತ್ತಿದ್ದರು. ವಿಧವೆಯರು ಬಸುರಾದರೆ ಅಥವಾ ವಿವಾಹಬಾಹಿರ ಸಂಬಂಧ ಹೊಂದಿ ಮಕ್ಕಳಾದರೆ ಜಾತಿಯಿಂದ ಹೊರಹಾಕುತ್ತಿದ್ದರು. ಅವರದೇ ಒಂದು ಉಪಜಾತಿಯಾಗಿ, ಕೀಳಾಗಿ ನೋಡಲ್ಪಡುವ ಸಮುದಾಯಗಳೆಷ್ಟೋ ಇವೆ. ಕೇರಳದಲ್ಲಿ ವ್ಯಭಿಚಾರಿ ಹೆಂಗಸರ ವಿಚಾರಣೆಗೆ ರಾಜನು ‘ಸ್ಮಾರ್ತ ವಿಚಾರಂ’ ಎಂಬ ವಿಶೇಷ ವಿಚಾರಣೆ ನಡೆಸುತ್ತಿದ್ದ. ಇದರರ್ಥ ಪಾತಿವ್ರತ್ಯ ಅತಿ ಅಗತ್ಯ ಎನ್ನುವುದನ್ನು ರಾಜ್ಯಾಧಿಕಾರವೂ ಎತ್ತಿ ಹಿಡಿದಿತ್ತು. ಈಗಲೂ ಇಲ್ಲಿ ‘ಮರ್ಯಾದಾ ಹತ್ಯೆ’ ನಡೆಯುತ್ತದೆ. ಅದಕ್ಕೆ ಸಮಾಜದ ಮೌನ ಸಮ್ಮತಿಯಿದೆ. ಮಾಡಿದ್ದಕ್ಕೆ ತಕ್ಕ ಪ್ರತಿಫಲ ಅನುಭವಿಸಿದಳು ಎಂದು ಬೋಧಿಸುವ ಕರ್ಮ ಸಿದ್ಧಾಂತವಿದೆ.

ಕೇವಲ ಭಾರತೀಯ ಸಮಾಜದಲ್ಲಷ್ಟೇ ಅಲ್ಲ, ಜಗತ್ತಿನ ಬಹುಪಾಲು ಧರ್ಮಗಳು ವಿವಾಹದಲ್ಲಿ ನಿಷ್ಠೆಯಿಲ್ಲದಿರುವುದು - ಅಥವಾ ವ್ಯಭಿಚಾರವನ್ನು ಕಠೋರ ಶಿಕ್ಷೆ ನೀಡಿ ನಿರ್ಬಂಧಿಸಲು ಪ್ರಯತ್ನಿಸಿವೆ. ಆದರೂ ಕರುಣಾಳು ಏಸು ವ್ಯಭಿಚಾರ ಕುರಿತು ಏನು ಹೇಳಿದ್ದಾನೆ ಎಂಬ ಕುತೂಹಲಕ್ಕೆ ನೋಡಿದರೆ ಬೈಬಲಿನಲ್ಲಿ ಹೀಗೂ ಒಂದು ಕತೆಯಿದೆ: ‘ಅವರು ಜೀಸಸನ ಬಳಿ ಒಬ್ಬ ಮಹಿಳೆಯನ್ನು ಎಳೆತಂದರು. ‘ಆಕೆ ವ್ಯಭಿಚಾರ ಎಸಗಿದ್ದಾಳೆ, ನಮ್ಮ ಗುರು ಮೋಸೆಸ್ ಅಂಥವರನ್ನು ಕಲ್ಲು ಹೊಡೆದು ಸಾಯಿಸುವಂತೆ ಹೇಳಿದ್ದಾನೆ, ಏನು ಮಾಡುವುದು?’ ಎಂದು ಕೇಳಿದರು. ಕ್ರಿಸ್ತ ಅವರ ಮಾತು ಕೇಳಿಯೂ ಕೇಳದವರಂತೆ ಕಾಲಬೆರಳಿನಿಂದ ಮಣ್ಣಿನ ಮೇಲೆ ಏನನ್ನೋ ಬರೆಯತೊಡಗುತ್ತಾನೆ. ಅವರು ಮತ್ತೆಮತ್ತೆ ಕೇಳುತ್ತಾರೆ. ಆಗ ಕ್ರಿಸ್ತ ‘ನಿಮ್ಮಲ್ಲಿ ಯಾರು ಒಂದೂ ತಪ್ಪು ಎಸಗಿಲ್ಲವೋ ಅಂಥವರು ಆಕೆಗೆ ಮೊದಲ ಕಲ್ಲು ಹೊಡೆಯಬಹುದು’ ಎನ್ನುತ್ತಾ ತಲೆತಗ್ಗಿಸಿ ತನ್ನ ಕೆಲಸ ಮಾಡತೊಡಗುತ್ತಾನೆ. ನಿಧಾನ ಒಬ್ಬೊಬ್ಬರೇ ಜಾಗ ಖಾಲಿ ಮಾಡುತ್ತಾರೆ. ತಲೆಯೆತ್ತಿ ಜೀಸಸ್ ಅವರೆಲ್ಲ ಎಲ್ಲಿ ಹೋದರು ಎಂದು ಆ ಮಹಿಳೆಯನ್ನು ಕೇಳಿದಾಗ ಅವಳು ಅವನ ಮಾತಿನಿಂದ ಸಂಚಲನಗೊಂಡ ಅವರು ತಂತಮ್ಮ ಆತ್ಮಶೋಧನೆಗೊಳಗಾಗಿ ಅಲ್ಲಿಂದ ಮರಳಿದರು ಎಂದು ಹೇಳುತ್ತಾಳೆ. ‘ನನಗೂ ನಿನ್ನ ಮೇಲೆ ಯಾವ ದೂರುಗಳೂ ಇಲ್ಲ. ನೀನು ಹೋಗಬಹುದು, ಆದರೆ ಅದೇ ತಪ್ಪನ್ನು ಮತ್ತೆ ಮಾಡಬೇಡ’ ಎಂದು ಜೀಸಸ್ ಅವಳಿಗೆ ಹೇಳಿಕಳಿಸುತ್ತಾನೆ.

ಆದರೆ ಕರುಣೆ ಮತ್ತು ಅಂತಸ್ಸಾಕ್ಷಿಯ ಪ್ರಶ್ನೆಗಳು ಜೀಸಸ್ ಕಾಲಕ್ಕೇ ಮುಗಿದುಹೋದವು. ಕ್ರೈಸ್ತ ಧರ್ಮವೂ ಸೇರಿದಂತೆ ಬಹುತೇಕ ಧiಗಳು ವ್ಯಭಿಚಾರಕ್ಕೆ ಮರಣದಂಡನೆ ವಿಧಿಸಿವೆ. ಹೆಚ್ಚುಕಡಿಮೆ ಪ್ರಪಂಚದ ಎಲ್ಲ ಧರ್ಮಗಳು ವಿವಾಹಬಾಹಿರ ಸಂಬಂಧವನ್ನು ಕಟುಮಾತುಗಳಲ್ಲಿ ಖಂಡಿಸುತ್ತವೆ. ‘ಸ್ಟೋನಿಂಗ್ ಸುರಯ್ಯಾ’ ಸಿನೆಮಾ ಈಗಲೂ ವ್ಯಭಿಚಾರಕ್ಕೆ ಕಲ್ಲು ಹೊಡೆದು ಸಾಯಿಸುವ ಘೋರ ಮರಣದಂಡನೆಯ ಶಿಕ್ಷೆ ಇರುವುದರ ಕುರಿತು ಜಗತ್ತಿಗೆ ಹೇಳಿತು. ಈಗಲೂ ಇರಾಕ್, ಸೌದಿ ಅರೇಬಿಯಾ, ಸೊಮಾಲಿಯಾ, ಸುಡಾನ್, ಯೆಮನ್, ನೈಜೀರಿಯಾ, ಇಂಡೋನೇಷ್ಯಾ, ಪಾಕಿಸ್ತಾನಗಳಲ್ಲಿ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ಕಾನೂನಾತ್ಮಕವಾಗಿದೆ. ಬ್ರೂನಿಯ ಸುಲ್ತಾನ ಕಳೆದ ವರ್ಷದಿಂದ ಕಲ್ಲುಹೊಡೆದು ಸಾಯಿಸುವ ಶಿಕ್ಷೆಯನ್ನು ಅಧಿಕೃತವಾಗಿ ಮಾನ್ಯ ಮಾಡಿದ್ದಾನೆ. ನೆರೆಯ ಪಾಕಿಸ್ತಾನದಲ್ಲಿ ಕೋರ್ಟಿನ ಒಳಗೂ, ಹೊರಗೂ ಕಲ್ಲು ಹೊಡೆದು ಸಾಯಿಸುವ ತೀರ್ಪು ಜಾರಿಯಾಗುತ್ತಲೇ ಇದೆ.

ಉಲ್ಲಂಘನೆ: ವ್ಯವಸ್ಥೆಯ ವೈಫಲ್ಯವೋ? ಸೃಷ್ಟಿಯೋ?



ನಿಷ್ಠೆಯ ಮಾತು, ಕಠೋರ ಶಿಕ್ಷೆ, ಧರ್ಮಬೋಧೆ, ಅಪಮಾನ ಎಲ್ಲದರ ಹೊರತಾಗಿ ಉಲ್ಲಂಘನೆಗಳೂ ನಡೆಯುತ್ತಲೇ ಬಂದಿವೆ. ಎಲ್ಲ ಅಂಕಿಸಂಖ್ಯೆಗಳು ನಿಜವನ್ನೇ ಬಿಂಬಿಸಬೇಕಿಲ್ಲ; ಸತ್ಯ ಅದರಾಚೆ ಎಲ್ಲೋ ಇದೆ ಎಂದು ಒಪ್ಪಿಕೊಳ್ಳುತ್ತಲೇ ವಿಶ್ವದ ನಾನಾಭಾಗಗಳಲ್ಲಿ ನಡೆದ ಸರ್ವೇ ಪ್ರಕಾರ ವಿವಾಹೇತರ ದೈಹಿಕ ಸಂಪರ್ಕ ಹೊಂದಿರುವವರ ಸಂಖ್ಯೆ ಸರಾಸರಿ ೨೨% ಇದೆ. ವಿವಾಹಬಂಧನ ಪವಿತ್ರವಾದುದು, ವ್ಯಭಿಚಾರ ಕಾನೂನಾತ್ಮಕವಾಗಿ ಅಷ್ಟೇ ಅಲ್ಲ, ನೈತಿಕವಾಗಿಯೂ ಅಪರಾಧ ಎಂದು ಸಮಾಜ, ಧರ್ಮ ಮತ್ತು ಕಾನೂನು ಪದೇಪದೇ ಹೇಳುತ್ತ ಬಂದಾಗಲೂ ಏಕೆ ಇಷ್ಟು ಜನ ವಿವಾಹೇತರ ಸಂಬಂಧ ಹೊಂದಿದ್ದಾರೆ? ಒಂದಕ್ಕಿಂತ ಹೆಚ್ಚು ವ್ಯಕ್ತಿಗಳೊಂದಿಗೆ ದೈಹಿಕ ಸಂಬಂಧ ಇಟ್ಟುಕೊಳ್ಳುವುದನ್ನು ನಿರ್ಬಂಧಿಸಿದ ಮೇಲೂ ಹೆಚ್ಚುಕಮ್ಮಿ ಕಾಲು ಭಾಗ ಜನಸಂಖ್ಯೆ ತಾವು ಅಂಥ ಸಂಬಂಧ ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗಿರುವಾಗ ಸಮಾಜ ಏಕೆ ಬಹುಸಂಗಾತಿಗಳನ್ನು ಹೊಂದುವುದನ್ನು ತಪ್ಪಾಗಿ ಭಾವಿಸುತ್ತದೆ? ಕೇವಲ ಎಚ್‌ಐವಿ ಕಾರಣದಿಂದ ತಪ್ಪೇ? ಏಕಸಂಗಾತಿ ಸಂಬಂಧ ಎನ್ನುವುದೇ ಹುಸಿ ಮೌಲ್ಯವೇ? ಯಾಕಾದರೂ ‘ನಿಷ್ಠೆ’ಯ ಆಚೆ ಮನಸ್ಸು ಚಲಿಸುತ್ತದೆ?

ಯಾವುದೇ ಸಂಬಂಧ ಕೆಲಕಾಲದ ನಂತರ ತಾಜಾತನ, ಸಂಚಲನೆ ಕಳೆದುಕೊಳ್ಳುತ್ತದೆ. ನವೀಕರಿಸಲು ಹೊಸಹೊಸ ನೆಲೆಗಳು ಸಿಗದಿದ್ದಲ್ಲಿ ಬೇಗನೇ ಮುಗಿದುಹೋಗುತ್ತದೆ. ದಾಂಪತ್ಯವೂ ಇಬ್ಬರ ನಡುವಿನ ಒಂದು ಸಂಬಂಧ. ಅದರ ವಿಶೇಷ ಏನೆಂದರೆ ಅದು ಲೈಂಗಿಕ ಸಂಬಂಧ, ಸಮಾಜವು ಒಪ್ಪಿ ಹರಸಿದ ಕಾನೂನಾತ್ಮಕ ಸಂಬಂಧ. ಸಂತತಿಯನ್ನು ಪಡೆಯಲಿಕ್ಕಾಗಿಯೇ ಇಬ್ಬರಿಗೆ ಸಮಾಜ ನೀಡಿದ ಹೊಣೆಗಾರಿಕೆ ದಾಂಪತ್ಯ. ಆದರೆ ಕೇವಲ ಮಕ್ಕಳ ಬೆಳೆಸಿ ದೊಡ್ಡ ಮಾಡುವುದಕ್ಕೋ ಅಥವಾ ದೈಹಿಕ ಕಾಮವಾಂಛೆಗೋ ನಿಂತುಬಿಟ್ಟರೆ ಉಳಿದ ಸಂಬಂಧಗಳಂತೆ ಅದೂ ‘ಏಳನೇ ವರ್ಷ’ಕ್ಕೆ ಬಿಕ್ಕಳಿಸಲು ಶುರುಮಾಡುತ್ತದೆ. ‘ಏಳನೇ ವರ್ಷದ ಬಿಕ್ಕಳಿಕೆ’ ಎನ್ನುವುದು ಸಂಬಂಧಗಳು ಕೆಲಕಾಲದ ನಂತರ ಮೊದಲ ಬಿಸಿ ಉಳಿಸಿಕೊಳ್ಳಲಾರವು ಎನ್ನಲು ಹೇಳುವ ಒಂದು ಮಾತು. ಏಳನೇ ವರ್ಷ ಎನ್ನುವುದು ಉತ್ಪ್ರೇಕ್ಷಿತ ಊಹೆಯೇ ಆಗಿದ್ದರೂ ಸಂಬಂಧಗಳು ಕೆಲಕಾಲದ ನಂತರ ಮೊದಲ ಬಿಸಿ ಕಳೆದುಕೊಳ್ಳುವುದನ್ನು ಎಲ್ಲರೂ ಅನುಭವಿಸಿರುತ್ತಾರೆ. ನಂತರವೂ ಅದು ಆರೋಗ್ಯಪೂರ್ಣವಾಗಿ ಮುಂದುವರೆಯಲು ಏನೋ ಒಂದು ‘ಅಂಟು’ ಬೇಕಾಗುತ್ತದೆ. ಮಕ್ಕಳು, ಸಮಾನಾಸಕ್ತಿಗಳು, ಬಂಧುಬಳಗದವರು ಇಂಥ ಅಂಟಿನ ಕೆಲಸವನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸುತ್ತಾರೆ. ಆದರೂ ಹೊಸನೆಲೆಗಳಲ್ಲಿ ಸಂಬಂಧ ನವೀಕರಣಗೊಳ್ಳುತ್ತ ಹೋಗದಿದ್ದರೆ ದಾಂಪತ್ಯ ಕುರಿತ ಅನಾದರ ಶುರುವಾಗುತ್ತದೆ.

ವ್ಯಭಿಚಾರಕ್ಕೆ ವಿಧಿಸುವ ಅತಿ ಕಠೋರ ಶಿಕ್ಷೆ ಮಾನವಹಕ್ಕು ಉಲ್ಲಂಘನೆಯಾಗಿದೆ ಎಂಬ ಕೂಗೆದ್ದಿರುವುದರಿಂದ ಈಗ ಶಿಕ್ಷಾ ಪ್ರಮಾಣ ಕಡಿಮೆಯಾಗಿದೆ. ಆದರೆ ಇವತ್ತಿಗೂ ೮೫% ಡೈವೋರ್ಸುಗಳು ವಿವಾಹಬಾಹಿರ ಸಂಬಂಧದ ಕಾರಣಕ್ಕೇ ಆಗುತ್ತಿವೆ. ಜೊತೆಗೆ ಭಾರತದ ವ್ಯಭಿಚಾರದ ವ್ಯಾಖ್ಯೆ ಮತ್ತು ಕಾನೂನಿನ ಬಗೆಗೆ ಸ್ತ್ರೀವಾದಿಗಳು ತಕರಾರು ಹೊಂದಿದ್ದಾರೆ. ಅದು ಆಧುನಿಕ ನಿಯೋಗ ಪದ್ಧತಿಯಂತಿದೆ ಎಂದು ವಾದಿಸಲಾಗುತ್ತದೆ. ಭಾರತದಲ್ಲಿ ವಿವಾಹಿತ ಮಹಿಳೆಯೊಂದಿಗೆ ‘ಅನ್ಯ’ ಪುರುಷನು ಅವಳ ಗಂಡನ ಒಪ್ಪಿಗೆ ಪಡೆಯದೇ ಲೈಂಗಿಕ ಸಂಪರ್ಕ ಹೊಂದಿದಲ್ಲಿ ಅದು ವ್ಯಭಿಚಾರ ಎನಿಸಿಕೊಳ್ಳುತ್ತದೆ. ‘ಆ’ ಗಂಡಿಗೆ ಶಿಕ್ಷೆ ವಿಧಿಸಲಾಗುತ್ತದೆ. ಅಕಸ್ಮಾತ್ ಮಹಿಳೆಯ ಗಂಡ ಸಮ್ಮತಿ ನೀಡಿದ್ದರೆ ವಿವಾಹಬಾಹಿರ ಲೈಂಗಿಕತೆ ಅಪರಾಧವಲ್ಲ! ಅಲ್ಲದೇ ವ್ಯಭಿಚಾರ ಕಾನೂನಿನಲ್ಲಿ ಹೆಣ್ಣಿಗೆ ಶಿಕ್ಷೆಯಿಲ್ಲ, ಬಹುಶಃ ಅವಳಿಗೆ ಶಿಕ್ಷೆ ನೀಡಲು ಗಂಡ ಮತ್ತು ಸಮಾಜ ಸಾಕು ಎಂಬ ಧೋರಣೆ ಇರಬಹುದು. ಒಟ್ಟಾರೆ ಗಂಡನ ಆಸ್ತಿಯಾದ ಹೆಂಡತಿಯನ್ನು ಬೇರೊಬ್ಬನಿಗೆ ಕೊಡಲು ಗಂಡ ಒಪ್ಪಿದರೆ ಅದು ಶಿಕ್ಷಾರ್ಹವಲ್ಲ. ಅವನ ಒಪ್ಪಿಗೆ ಇಲ್ಲದಿದ್ದರೆ ಅದು ಶಿಕ್ಷಾರ್ಹ. ಎಂದರೆ ಹೆಣ್ಣನ್ನೊಂದು ವಸ್ತುವಾಗಿಸಿ ಒಬ್ಬನಲ್ಲ ಇನ್ನೊಬ್ಬನ ಸುಪರ್ದಿನಲ್ಲಿರುವ ಆಸ್ತಿಯೆಂದು ಪರಿಗಣಿಸಿದಂತಾಯಿತು. ಇದು ಮಹಿಳಾ ಹಕ್ಕು ಹಾಗೂ ಘನತೆಯ ವಿರುದ್ಧ ಎಂದು ಮಹಿಳಾ ಸಂಘಟನೆಗಳು ಕಾನೂನು ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ಕೋರ್ಟು ಮೆಟ್ಟಿಲೇರಿವೆ.

ದಾಂಪತ್ಯ ನಿಷ್ಠೆ ಕುರಿತು ವ್ಯಾಖ್ಯಾನ ಮಾಡಹೊರಡುವುದು ಹಾಸ್ಯಾಸ್ಪದ, ಏಕೆಂದರೆ ಮನುಷ್ಯ, ಮಾನವ ಮನಸ್ಸು ಹೇಗೆ ಭಿನ್ನವೋ ಹಾಗೇ ಇಬ್ಬರ ನಡುವಿನ ಸಂಬಂಧದ ಸ್ವರೂಪವೂ ಭಿನ್ನವಾಗಿರುತ್ತದೆ. ದಾಂಪತ್ಯವೆಂದ ಕೂಡಲೇ ಕಣ್ಣೆದುರು ಒಂದು ದೊಡ್ಡ ಸ್ಪೆಕ್ಟ್ರಂ ಹರಡಿಕೊಳ್ಳುತ್ತದೆ. ಅರ್ಧ ಶತಮಾನ, ಅಥವಾ ಅದಕ್ಕಿಂತ ಹೆಚ್ಚು ಒಬ್ಬರಿಗೊಬ್ಬರು ಅನುಸರಿಸಿ ಬಾಳಿದವರಿಂದ ಹಿಡಿದು ಮದುವೆಯಾದ ಮರುದಿನವೇ ಬೇರೆಯಾದವರ ತನಕ; ತೀರಿಕೊಂಡ ಸಂಗಾತಿಯ ನೆನಪಲ್ಲಿ ಜೀವಮಾನವಿಡೀ ಏಕಾಂಗಿಯಾಗಿರುವವರಿಂದ ಹಿಡಿದು ಒಂದೇ ಸಮಯದಲ್ಲಿ ಹಲವರೊಡನೆ ಸಂಬಂಧ ಇಟ್ಟುಕೊಳ್ಳುವ ಮಹಾನುಭಾವರ ತನಕ ವಿಸ್ತೃತ ಸ್ವರೂಪದ ಸಂಬಂಧಗಳು ಕಾಣಸಿಗುತ್ತವೆ. ಇದರ ಆಚೆ ವಿರುದ್ಧ ಲಿಂಗಿಗಳ ನಡುವೆ ಸಂತತಿ ಮುಂದುವರೆಸುವ ಉದ್ದೇಶವಿಲ್ಲದೆ ಕೇವಲ ಲೈಂಗಿಕ ತೃಪ್ತಿಗಾಗಿಯೇ ಆಪ್ತ ಸಾಂಗತ್ಯ ಉಂಟಾಗುವುದೂ ಹೆಚ್ಚಾಗತೊಡಗಿದೆ. ಲಿವ್‌ಇನ್ ಸಂಬಂಧಗಳನ್ನು, ಸಲಿಂಗ ಸಂಬಂಧಗಳನ್ನು ಕೋರ್ಟೂ ಮಾನ್ಯ ಮಾಡುತ್ತಿದೆ. ಜೊತೆಗೆ ಆತ್ಮಸಂಗಾತವೋ, ಸಾಹಚರ್ಯವೋ ಅಥವಾ ಇಂಥ ಯಾವ ಹೆಸರಿಡಲೂ ಸಾಧ್ಯವಾಗದ ಸಂಬಂಧಗಳೆಷ್ಟೋ ಪ್ರತಿ ವ್ಯಕ್ತಿಯ ಜೀವನದಲ್ಲಿ ಒದಗಿಬರುತ್ತದೆ. ಕಾನೂನು, ಸಮಾಜ-ರೂಢಿಯ ಚೌಕಟ್ಟಿನಲ್ಲಿರದ ಸಂಬಂಧಗಳು ಕುಟುಂಬದ ಸಮಗ್ರತೆಗೆ, ದಂಪತಿಗಳ ಸಾಹಚರ್ಯಕ್ಕೆ ತೊಂದರೆ ಕೊಡದೇ ಹೋದಲ್ಲಿ ಅದೇನೂ ಘಾತಕವಲ್ಲ.

ಇಷ್ಟು ಹೇಳುತ್ತಲೇ ನಿಷ್ಠೆಯ ಮಾತನ್ನು ಒತ್ತಟ್ಟಿಗಿಟ್ಟು ಒಂದು ಎಚ್ಚರದ ಕುರಿತೂ ಅವಶ್ಯವಾಗಿ ಮಾತನಾಡಬೇಕಿದೆ: ಎಲ್ಲ ಸಂಬಂಧಗಳಲ್ಲೂ ಒಂದು ವಿಶ್ವಾಸ ಮತ್ತು ಬದ್ಧತೆ ಅವಶ್ಯವಾಗಿವೆ. ಅವೆರೆಡೂ ಇಲ್ಲದೇ ಕೇವಲ ಲೈಂಗಿಕ ಉನ್ಮಾದ ತೀರಿಸಿಕೊಳ್ಳಲೆಂದು ಹಲವು ಸಂಬಂಧಗಳನ್ನು ಏಕಕಾಲಕ್ಕೆ ಹೊಂದುವುದು ವ್ಯಕ್ತಿ/ಕುಟುಂಬ/ಸಮಾಜದ ದೃಷ್ಟಿಯಿಂದ ಘಾತಕತನವಾಗಿದೆ. ‘ಸಂಗಾತಿಯನ್ನಲ್ಲದೆ ಮತ್ತಾರನ್ನೂ ಕತ್ತೆತ್ತಿ ನೋಡಬಾರದು’ ಎಂಬ ಒಡೆತನ ಹೇಗೆ ವ್ಯಕ್ತಿತ್ವ-ಸಂಬಂಧದ ಬೆಳವಣಿಗೆಗೆ ಅಪಾಯಕಾರಿಯೋ ಹಾಗೇ ಒಂದು ಸಂಬಂಧದಲ್ಲಿ ನೆಲೆ ನಿಲ್ಲದೇ, ತೃಪ್ತಿ ಕಾಣದೇ ಖಾಯಂ ಅಲೆಮಾರಿಯಾಗಿರುವುದೂ ಅಷ್ಟೇ ಅಪಾಯಕಾರಿ. ಅದು ವ್ಯಕ್ತಿತ್ವಕ್ಕೊಂದು ಸೀಳುತನ ಒದಗಿಸುವುದಲ್ಲದೆ ಆ ವ್ಯಕ್ತಿಗಿಂತ ಹೆಚ್ಚು ಸಂಗಾತಿಯನ್ನು ಬಾಧಿಸುತ್ತದೆ.

ಮೇಲಿನ ಅಭಿಪ್ರಾಯಗಳನ್ನು ‘ಸ್ತ್ರೀವಾದಿ ದೃಷ್ಟಿಕೋನ’ ಎಂದು ಕರೆಯುವುದಕ್ಕಿಂತ ವೈಯಕ್ತಿಕ ಅಭಿಪ್ರಾಯ-ಅವಲೋಕನ ಎನ್ನುವುದು ಸೂಕ್ತ. ನಾವು ಕಲಿತ, ಅರಿತ ಸ್ತ್ರೀವಾದವೆಲ್ಲ ಮನೆಯೆಂಬ ನಾಲ್ಕು ಗೋಡೆಯ ಚೌಕಟ್ಟಿನೊಳಗೆ ಪ್ರವೇಶಿಸಿದ ಕೂಡಲೇ ಎಲ್ಲೆಲ್ಲೋ ಹಾರಿಹೋಗಿ ರೂಢಿಗತ ಪಾತ್ರಗಳಿಗೆ ಅನಿವಾರ್ಯವಾಗಿ ಅಂಟಿಕೊಳ್ಳುತ್ತಿರುವಾಗ ಮದುವೆ, ದಾಂಪತ್ಯ ಕುರಿತು ಏನೇ ಹೇಳಿದರೂ ಈ ಬರಹ ಪೂರ್ಣವಾಗುವುದಿಲ್ಲ. ಗಂಡನೆಂಬ ಕೆಂಡವನ್ನು ಉಡಿಯಲಿಟ್ಟುಕೊಂಡು ಹಾದಿ ಸವೆಸುವವರಿಗೆ ‘ನಿನಗೆ ಬೆಚ್ಚಗೆನಿಸುತ್ತಿದೆಯೋ? ಸುಟ್ಟುಕೊಂಡ ಅನುಭವವಾಗುತ್ತಿದೆಯೋ?’ ಎಂದು ಕೇಳಿದರೆ ಏನು ಉತ್ತರ ಹೇಳಬಹುದು? ಒಟ್ಟಾರೆ ದಾಂಪತ್ಯವೆಂದರೆ ಇಬ್ಬರ ನಡುವಿನ ಆಸ್ತಿ ಹಂಚಿಕೆಯ ಹೊಂದಾಣಿಕೆಯಲ್ಲ, ನಿಷ್ಠೆಯೆಂದರೆ ‘ನಿನ್ನ ಸಕಲಕ್ಕೂ ನಾನೇ ಏಕಮೇವ ವಾರಸುದಾರ’ನೆಂಬ ಹಕ್ಕು ಸಾಧನೆಯಲ್ಲ. ಬದಲಾಗಿ ದಾಂಪತ್ಯವು ಇಬ್ಬರ ನಡುವೆ ಅಂತರವನ್ನೂ, ಅಂಟನ್ನೂ ಕಾಯುವ ಮಾಯಾಜಾಲ. ನಿಷ್ಠೆ ವ್ಯಕ್ತಿಯ ಪರವಾಗಿ ಅಲ್ಲ, ನ್ಯಾಯದ ಪರವಾಗಿ ಇರಬೇಕಾದ ಮೌಲ್ಯ. ಅಂಟು, ಅಂತರ ಮತ್ತು ನ್ಯಾಯ ಹದವಾಗಿ ಮಿಳಿತಗೊಂಡು ಇಡುವ ಹೆಜ್ಜೆಗಳಲ್ಲಿ ಯಾವ ಲೆಕ್ಕಾಚಾರವೂ ಇರುವುದಿಲ್ಲ. ಅಳೆದು ತೂಗಹೊರಟಿದ್ದು ಕೈಯಿಂದ ನುಣುಚಿಹೋಗದೇ ಇರುವುದಿಲ್ಲ.

No comments:

Post a Comment