Monday, 23 June 2014

ನಡುವೆ ಸುಳಿವಾತ್ಮ
‘ನನಗೆ ಸೆಮಿನಾರಿಗೆ ಬರಬಾರದಂತ ಇಲ್ಲ, ಆದರೆ.. ಎರಡು ಕಷ್ಟ ಇದೆ. ನೀವು ಬಸ್ ಚಾರ್ಜ್ ಕೊಡ್ತೀರಾ? ಯಾಕಂದ್ರೆ..’

‘ಬಸ್ ಚಾರ್ಜ್ ಅಷ್ಟೇ ಅಲ್ಲ, ನಡೆಸುತ್ತಿರುವವರು ವಿಶ್ವವಿದ್ಯಾನಿಲಯದವರು. ಅವರು ದಿನದ ಭತ್ಯೆಯನ್ನೂ, ಉಳಿಯಲು ವಸತಿ ವ್ಯವಸ್ಥೆಯನ್ನೂ ಮಾಡುತ್ತಾರೆ, ನೀವು ಬನ್ನಿ.’

‘ಅಯ್ಯೋ, ನಮಗೆಲ್ಲ ಯಾರೂ ವಸತಿ ವ್ಯವಸ್ಥೆ ಮಾಡುವುದಿಲ್ಲ, ಸುಲಭಕ್ಕೆ ರೂಮು ಕೊಡುವುದೂ ಇಲ್ಲ. ಅದ್ಕೇ..’

‘ಇಲ್ಲಮ್ಮ, ನಿಮ್ಮ ಮುಂಚಿನ ಅನುಭವ ಅನುಭವ ಹೇಗಾದರೂ ಇರಲಿ, ಖಂಡಿತವಾಗಿ ಹೇಳುತ್ತೇನೆ, ವಸತಿ ವ್ಯವಸ್ಥೆ ಮತ್ತು ಭತ್ಯೆ ಸಿಗುತ್ತದೆ, ನಾವೆಲ್ಲ ಇರುತ್ತೇವೆ, ಬರಬೇಕು..’

‘ನನ್ನ ಧ್ವನಿ ಕೇಳಿ ಬಾರಮ್ಮ ಅನ್ನಬೇಡಿ, ನನಗೆ ಹೋಗೋಬಾರೋ ಅಂದ್ರೆ ತುಂಬ ಖುಷಿ. ಪುಲ್ಲಿಂಗ ಬಳಸಿ. ಹುಡ್ಗಿಯಾಗೇ ಬೆಳೆಸಿದ್ದರು, ಆದರೆ ನಾನು ಆಪರೇಷನ್ ಮಾಡಿಸಿಕೊಂಡ ಮೇಲೆ ಗಂಡಾಗಿ ಬದಲಾಗಿದೇನೆ..’

‘ಕ್ಷಮಿಸಿ, ಪುಲ್ಲಿಂಗ ಸ್ತ್ರೀಲಿಂಗ ತಲೆಬಿಸಿಯೇ ಬೇಡ, ಬಹುವಚನ ಬಳಸುತ್ತೇನೆ. ಆಗಬಹುದೇ?’

‘ಸರಿ, ಆದ್ರೆ ನೀವು ಹೇಳಿದ ದಿನನೇ ನಂಗೆ ಸಂಗೀತ ಟೀಚರ್ ಕ್ಲಾಸ್ ಇಟ್ಟಿದಾರೆ, ಈ ವರ್ಷ ಸಂಗೀತ ಪರೀಕ್ಷೆಗೆ ಕೂತಿದೀನಿ. ಹೋದೊರ್ಷ ಡಯಾಬಿಟಿಸ್ ಹೆಚ್ಚಾಗಿ ಕೂತಿದ್ದ ಪರೀಕ್ಷೆ ಬರೆಯಕ್ಕೆ ಆಗಲಿಲ್ಲ. ಅದ್ಕೇ ಈ ವರ್ಷ ಕೂರ‍್ಲೇಬೇಕು. ಕಷ್ಟಪಟ್ಟು ಕಲೀತಿದೀನಿ. ನಾನು ಹೀಗೆ ಅಂತ ಗೊತ್ತಾದ ಮೇಲೂ ಅವ್ರು ಹೇಳ್ಕೊಡ್ತಿದಾರೆ, ಅದಕೇ ತಪ್ಪಿಸೋಕೆ ಮನಸ್ಸಿಲ್ಲ.’

ಸಂಭಾಷಣೆ ಪೂರಾ ಹೀಗೇ ಆತಂಕ, ಅನುಮಾನಗಳಲ್ಲೇ ಮುಗಿದುಹೋಯಿತು. ಅವರಿವರನ್ನು ಕೇಳಿ, ಹೇಳಿ ಅಂತೂ ತಾನು ಸೆಮಿನಾರಿಗೆ ಬರುವುದಿಲ್ಲ ಎಂದು ನಿರ್ಧಾರವಾಯಿತು! ಓ ದೇವರೇ, ಜೀವವೊಂದು ತನ್ನನ್ನೇ ತಾನು ಪಾಪಕೂಪದಲ್ಲಿ ಊಹಿಸಿಕೊಂಡು ಮುಳುಗಿದರೆ ಅದರ ಬಳಿ ಹೋಗುವುದಾದರೂ ಹೇಗೆ?

***

ಆ ರೈಲಿನಲ್ಲಿ ಕಾಲಿಟ್ಟರೆ ಅದೇನು ಬೋಗಿಯೋ, ಕಡಲೇಕಾಯಿ ಪರಿಷೆಯಾದ ಬೀದಿಯೋ ಅನುಮಾನವಾಯಿತು. ಕಾಲಬುಡದಲ್ಲಿ ಹಾಸಿನಂತೆ ಹರಡಿದ್ದ ಸೇಂಗಾ ಸಿಪ್ಪೆ, ಕಸದ ರಾಶಿ. ಕೈಲಿದ್ದ ಕಿತ್ತಳೆಹಣ್ಣು ಬಾಯಿಗೆ ಹೋಗಲೊಲ್ಲೆ ಎಂದಿತು. ಒಂದು ಗಂಟೆ ಕಳೆಯುವುದರಲ್ಲಿ ಹದಿನಾಲ್ಕು, ಹದಿನೈದರ ಆಸುಪಾಸಿನ ಹುಡುಗ ಒಂದು ಬಟ್ಟೆಯಲ್ಲಿ ಸಿಪ್ಪೆಕಸ ಒಟ್ಟುಕೂಡಿಸುತ್ತ ಬಂದ. ಎಲ್ಲ ಒಂದು, ಎರಡು ರೂ ಅವನ ಕೈಗೆ ಹಾಕಿದರು. ಬೇಡುವ ಬದಲು ಏನೋ ಕೆಲಸ ಮಾಡಿ ದುಡ್ಡು ಕೇಳುತ್ತಿದ್ದಾನಲ್ಲ, ಸಮಾಧಾನವಾಯಿತು. ನನ್ನ ಬಳಿಯಿದ್ದ ಎರಡು ಕಿತ್ತಳೆ ಅವನ ಸೇರಿದವು.

ಅವನ ಹಿಂದೇ ಆತ/ಕೆ ಬಂದ/ಳು. ಸೀರೆ ಉಟ್ಟ ದಪ್ಪ ದನಿಯ ಗಂಡಸು. ನೋಡಲು ಬಲಶಾಲಿ. ಢಾಳು ಅಲಂಕಾರ. ಗೋಟುಹಣೆಯಲ್ಲಿ ಹರಳು ಕೂರಿಸಿದ ಉದ್ದನಾಮದಂತಹ ಟಿಕ್ಲಿ. ಬಣ್ಣ ಮೆತ್ತಿದ್ದರೂ ಹೆರೆದ ಗಡ್ಡಮೀಸೆ ಕಾಣುತ್ತಿದ್ದ ಚೌಕಮುಖ. ದುಡ್ಡು ಕೊಡದಿದ್ದವರನ್ನು ತಿವಿದು, ಕಿಸೆಗೆ ಕೈಹಾಕಿ ಕಾಸು ಸೆಳೆಯುತ್ತಿದ್ದಳು. ಮತ್ತೆ ಕೆಲವರನ್ನು ಒತ್ತಿ, ಮುಟ್ಟಿ ನಕ್ಕು ಮುಂದೆ ಸರಿದಳು. ನಾನು ನಗುತ್ತ ಎರಡು ಕಿತ್ತಳೆ ಹಣ್ಣು ಕೊಟ್ಟರೆ ಗಹಗಹಿಸುತ್ತ ಸ್ವೀಕರಿಸಿ ನನ್ನ ಕೈಯನ್ನೂ, ಕಿತ್ತಳೆಯನ್ನೂ ಗಟ್ಟಿ ಅಮುಕಿದಳು.

ನಾನು ಸಾವರಿಸಿಕೊಳ್ಳುವುದರಲ್ಲಿ ರೈಲು ಚಲಿಸತೊಡಗಿತು. ನಿಲ್ದಾಣದಲ್ಲಿರುವವರೆಲ್ಲ ಹಿಂದೆ ಓಡುತ್ತಿರುವಂತೆ ಕಾಣುವಾಗ ಅರೆ, ಇದೇನಿದು, ಆಕೆ/ತ ಕಸಗುಡಿಸಿದ ಆ ಹುಡುಗನನ್ನು ನೆಲಕ್ಕೆ ಹಾಕಿ ತುಳಿಯುತ್ತಿದ್ದಾಳೆ. ಎದ್ದು ನಿಂತು ಬಗ್ಗಿ ನೋಡುವುದರಲ್ಲಿ ರೈಲು ವೇಗ ಹೆಚ್ಚಿಸಿಕೊಂಡಿತು.

‘ಸ್ಟೇಶನ್ನಿಗೊಬ್ಬೊಬ್ರು ಚಕ್ಕಾ ಬರತಾರ ನೋಡ್ರಿ. ಇಂವ, ಅತವ ಈಕಿ ಆಟಾಟು ದಿನಕ ಒಬ್ಬೊಬ್ಬ ಹುಡುಗನ ಸಂತೀ ಬರತಾನ. ನಾ ದಿನಾ ನೋಡತೀನಲ್ಲ, ಈ ಹುಡುಗನ್ನ ತಂದು ಭಾಳ್ ದಿನಾ ಆಗಿಲ್ಲ, ಹಿಂಗ ಒದಿಯೂದು, ಬಡಿಯೂದು, ಕೊನೀಗೆ ತರಡ ಒಡಿಯೂದು..’

ಯಾವುದೋ ಜೋಕು ಕೇಳಿದಂತೆ ಇಡೀ ರೈಲೇ ನಗತೊಡಗಿದಾಗ ಸಂಕಟವೋ, ಮತ್ತೆಂಥದೋ ಹೊಟ್ಟೆಯೊಳಗೆ ನುಲಿಯತೊಡಗಿತು.

***

ಇವೆಲ್ಲ ಹೆಣ್ಣೂ ಅಲ್ಲ, ಗಂಡೂ ಅಲ್ಲ, ಎರಡೂ ಆದ ಅಥವಾ ಎರಡೂ ಅಲ್ಲದ ಮೂರನೇ ಲಿಂಗದವರ ಕುರಿತ ಮಾತುಗಳು ಎನ್ನುವುದನ್ನು ನೀವು ಇಷ್ಟು ಹೊತ್ತಿಗಾಗಲೇ ಊಹಿಸಿರುತ್ತೀರಿ. ಲೈಂಗಿಕತೆ ಬಗ್ಗೆ ಮುಕ್ತ ಮಾತುಗಳನ್ನೇ ಆಡದ ಭಾರತೀಯ ಸಮಾಜ ಸಲಿಂಗಿಗಳ ಬಗೆಗೆ ಹೇಸಿಕೆ ಮತ್ತು ಅತಿ ಮಡಿವಂತಿಕೆ ಇಟ್ಟುಕೊಂಡಿದೆ. ಈಗಲೂ ಆಡಲು, ಬರೆಯಲು ತುಂಬ ಕಸಿವಿಸಿ, ದ್ವಂದ್ವ ಹುಟ್ಟಿಸುವ ವಿಚಾರ ಸಲಿಂಗರತಿಯದು. ಇದರಿಂದ ನಾನೂ ಹೊರತಲ್ಲ.

ಒಂದು ಕುಟುಂಬ ಬುದ್ಧಿಮಾಂದ್ಯ, ಅಂಗವಿಕಲ ಮಗುವನ್ನು ತನ್ನದೆಂದುಕೊಳ್ಳುತ್ತದೆ. ಒಂದು ಧರ್ಮ/ಜಾತಿ/ಪ್ರಾಂತ್ಯ ಅನಾಥರನ್ನು, ವಿಧವೆಯರನ್ನು, ಕೊಲೆಗಡುಕರನ್ನೂ ತನ್ನವರೆಂದುಕೊಳ್ಳುತ್ತದೆ. ಆದರೆ ಮೂರನೇ ಲಿಂಗಿಗಳನ್ನು ಯಾವ ಜಾತಿ, ಧರ್ಮ, ಕುಟುಂಬವೂ ಮುಕ್ತವಾಗಿ ತನ್ನದೆಂದು ಹೇಳಿಕೊಳ್ಳಲು ಹಿಂಜರಿಯುತ್ತವೆ. ಕಲಿತವರು, ಸಮಾಜದ ಬೇರೆಬೇರೆ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾದವರು, ಬರಹಗಾರರೂ ಸಹಾ ಸಲಿಂಗಿ ಎಂದಕೂಡಲೇ ‘ಏನೋ ಒಂಥರಾ’ ವರ್ತಿಸುವುದನ್ನು ನೋಡಬಹುದು. ಅವರ ಜೊತೆ ಒಂದು ಕೊಡೆಕೊಳೆಯೇ ಏರ್ಪಡದ ಸ್ಥಿತಿ ಇರುವುದರಿಂದಲೇ ಅವರ ದಲಿತತ್ವಕ್ಕಿರುವ ಹಲವು ಮುಖಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ.

ತನ್ನದಲ್ಲದ ‘ತಪ್ಪಿಗೆ’ ನಿರಂತರ ಅವಮಾನಕ್ಕೆ, ಕ್ರೌರ್ಯಕ್ಕೆ, ಶಿಕ್ಷೆಗೆ ಒಳಗಾಗುವ ಮೂರನೇ ಲಿಂಗಿಗಳ ಜೊತೆ ಕೆಲಕಾಲ ಒಡನಾಡಿದರೆ ಒಂದು ಅನೂಹ್ಯ ಲೋಕ ತೆರೆದುಕೊಳ್ಳುತ್ತದೆ. ಉಳಿದವರ ಗಮನ ಸೆಳೆಯುವ ಪ್ರಯತ್ನವಾಗಿ ಉತ್ಪ್ರೇಕ್ಷಿತ ನಡವಳಿಕೆ-ಅಲಂಕಾರ-ಭಾವತೀವ್ರತೆ-ಹಿಂಸೆಗಳು ಮೊದಲಿಗೇ ಎದ್ದು ಕಾಣುತ್ತವೆ. ಸಮಾಜದ ನಿರಾಕರಣೆ ಆ ಸಮುದಾಯದವರಲ್ಲಿ ಎಂಥ ಐಡೆಂಟಿಟಿ ಕ್ರೈಸಿಸ್ ಹುಟ್ಟಿಸಿದೆಯೆಂದರೆ ಅಪರಿಚಿತರಾಗಿ ಬಳಿ ಹೋದರೆ ಅಸಭ್ಯವೆನಿಸುವ ನಡವಳಿಕೆ ಕಸಿವಿಸಿ ಹುಟ್ಟಿಸುತ್ತದೆ; ಆಪ್ತವಾಗಿ ಸಂಪರ್ಕ ಏರ್ಪಟ್ಟಾಗ ಹಿಂಜರಿಕೆ, ಆತ್ಮದೂಷಣೆ, ಅನುಮಾನಗಳು ಢಿಕ್ಕಿಹೊಡೆಯುತ್ತವೆ.

ಸಮಾಜವಾದರೂ ಸಲಿಂಗಿಗಳ ಕುರಿತು ಏಕಷ್ಟು ಹಿಂಜರಿಯುತ್ತದೆ? ‘ಹಿಜ್ಡಾ ನನಮಗ’ ಎಂಬ ಬೈಗಳ ಕೇಳುತ್ತೇವೆ. ಮಕ್ಕಳಾಗದ ಸೊಸೆಯನ್ನು ಆಸ್ಪತ್ರೆಗೆ ತರುವ ಅತ್ತೆ ‘ನನ ಮಗ ಚಕ್ಕಾ ಅಲ್ಲ, ಇವ್ಳದ್ದೇ ಏನೋ ಮಿಸ್ಟೇಕು, ಸ್ವಲ್ಪ ಸರಿಮಾಡಿನೋಡಿ’ ಎನ್ನುತ್ತಾರೆ. ಬಹುಶಃ ಹೆಣ್ಣು-ಗಂಡು ಎಂಬ ಎರಡೇ ಲಿಂಗಗಳಿರುವ ಬೈನರಿ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದರಿಂದ ಮೂರನೆಯದರ ಬಗೆಗೆ ಅಸಡ್ಡೆ, ತಿರಸ್ಕಾರ ಉಳಿದುಹೋಗಿದೆಯೆ?

ಯಾವ ದೇಶದ ಚರಿತ್ರೆ-ಪುರಾಣಗಳ ತೆಗೆದು ನೋಡಿದರೂ ಮೂರನೇ ಲಿಂಗದ ಅಸ್ತಿತ್ವ ಎಲ್ಲ ಕಾಲದಲ್ಲೂ ಇರುವುದು ಕಂಡುಬರುತ್ತದೆ. ಭಾರತದಲ್ಲಿ ವಾತ್ಸಾಯನನ ಕಾಮಸೂತ್ರ ಯಾವ ಹಿಂಜರಿಕೆಯಿಲ್ಲದೆ ಸ್ಪಷ್ಟ ಮಾತುಗಳಲ್ಲಿ ಸಲಿಂಗ ಸಂಬಂಧವನ್ನು ವಿವರಿಸಿತು. ಖಜುರಾಹೋ ಸೇರಿದಂತೆ ಅನೇಕ ದೇವಾಲಯಗಳ ಶಿಲ್ಪಗಳೂ ಕೂಡಾ ಲೈಂಗಿಕತೆಯ ವಿವಿಧ ಭಂಗಿಗಳನ್ನು ನಿರೂಪಿಸುತ್ತ ಸಲಿಂಗ ಸಂಬಂಧವನ್ನೂ ಚಿತ್ರಿಸಿದವು. ಕಾವ್ಯ, ಶಿಲ್ಪ, ಸ್ಮೃತಿ, ನೀತಿಸಂಹಿತೆಗಳು ಅವರನ್ನು ಗುರುತಿಸಿವೆ. ಭಾರತೀಯ ಸಮಾಜವು ಹಿಜ್ರಾ, ಚಕ್ಕಾ, ಅರಾವಣಿ, ಸಲಿಂಗಿ ಎಂದೆಲ್ಲ ಬೇರೆಬೇರೆ  ಹೆಸರುಗಳಿಂದ ಕರೆದು, ಅವರು ಹಾಗಾಗಲು ಕಾರಣವೇನೆಂದು ರಾಮಾಯಣ-ಮಹಾಭಾರತಗಳಲ್ಲಿ ಕತೆ ಸೇರಿಸಿತು. ಅರ್ಧನಾರೀಶ್ವರ ಶಿವ, ಬಹುಚರಾದೇವಿ, ಮಹಾಭಾರತದ ಶಿಖಂಡಿ, ಕುರುಕ್ಷೇತ್ರ ಯುದ್ಧದ ಹಿಂದಿನ ದಿನ ಕೃಷ್ಣನನ್ನು ಮದುವೆಯಾದ ಅಹಿರಾವಣ, ಶಿವ-ಮೋಹಿನಿ ಸಂಗಮದಿಂದ ಹುಟ್ಟಿದ ಷಣ್ಮುಖ - ಇವರೆಲ್ಲ ದೇವರಾದರು. ಇದನ್ನೆಲ್ಲ ಗಮನಿಸಿದರೆ ಮೂರನೇ ಲಿಂಗದ ಅಸ್ತಿತ್ವ ಮತ್ತು ಸಲಿಂಗರತಿ ಭಾರತೀಯ ಸಮಾಜಕ್ಕೆ ಮೊದಲಿನಿಂದ ಗೊತ್ತಿತ್ತು. ಅವರಿಗೆ ಧಾರ್ಮಿಕ ಸ್ಥಾನ ಕಲ್ಪಿಸಲೆಂದೇ ಪುರಾಣದ ಕಥೆ, ಉಪಕಥೆಗಳನ್ನು ಸೇರಿಸಲಾಯಿತು.

ಆದರೆ ಅನಾದಿಯಿಂದ ಸಲಿಂಗಕಾಮ ನೈಸರ್ಗಿಕ ಎಂದು ಜಗತ್ತಿನ ಯಾವ ಧರ್ಮವೂ, ಸಮಾಜವೂ ಒಪ್ಪಿಕೊಳ್ಳಲಿಲ್ಲ. ಕೌಟಿಲ್ಯನ ಅರ್ಥಶಾಸ್ತ್ರ ಹೆಣ್ಣು ಯಾ ಗಂಡಿನೊಡನೆ ಯೋನಿ ಹೊರತಾದ ಲೈಂಗಿಕತೆ ಅಪರಾಧವೆಂದು ಅತಿಕಡಿಮೆ ದಂಡ ವಿಧಿಸುವಂತೆ ಸೂಚಿಸಿತು. ಮನುಸ್ಮೃತಿಯು ಸಲಿಂಗಕಾಮವನ್ನು ನಿಯಂತ್ರಿಸಬೇಕಾದ ಅಪರಾಧ ಎಂದು ಕರೆಯಿತು. ೧೮೬೦ಕ್ಕಿಂತ ಮುಂಚೆ ಸಲಿಂಗಕಾಮ ಕಾನೂನು ಪ್ರಕಾರ ಅಪರಾಧವಾಗಿರಲಿಲ್ಲ. ೧೫೪ ವರ್ಷ ಕೆಳಗೆ ೧೮೬೦ರಲ್ಲಿ ರೂಪುಗೊಂಡ ಇಂಡಿಯನ್ ಪೀನಲ್ ಕೋಡ್ ತನ್ನ ೩೭೭ನೇ ಸೆಕ್ಷನ್ ಪ್ರಕಾರ ಸಲಿಂಗರತಿಯನ್ನು ಅಪರಾಧ, ಅನೈಸರ್ಗಿಕ ಎನ್ನುತ್ತದೆ. ಆ ಕಾನೂನಿನಡಿ ಬಂಧನಕ್ಕೊಳಗಾಗಿ ಶಿಕ್ಷೆ ಪಡೆದವರ ಪ್ರಮಾಣ ಇಲ್ಲವೆನ್ನುವಷ್ಟು ಕಡಿಮೆಯಾದರೂ, ಪೊಲೀಸರು ಲೈಂಗಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಲು ಆ ಕಾನೂನು ಸಾಕಷ್ಟು ಅವಕಾಶ ಕಲ್ಪಿಸಿತು. ಸಮಾಜದಿಂದಷ್ಟೇ ಅಲ್ಲ, ಕಾನೂನಾತ್ಮಕವಾಗಿಯೂ ಮೂರನೇ ಲಿಂಗಿಗಳಿಗೆ ಅಸ್ತಿತ್ವವಿಲ್ಲದೇ ಸಲಿಂಗಕಾಮಿ ಎಂದುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಯಿತು. ಅವರು ಒಳಹೊರಗೆ ಏನು, ಹೇಗಿರಬಹುದು ಎಂಬ ದುಷ್ಟ ಕುತೂಹಲದ ಹೊರತಾಗಿ ಮತ್ತಿನ್ಯಾವ ಭಾವವೂ ಜನರಲ್ಲಿ ಸುಳಿಯಲಿಲ್ಲ. ಅವರನ್ನು ಬಳಕೆ ಮಾಡಿಕೊಳ್ಳುವವರಿಗೂ ಅವರ ಎದೆಯ ಮಾತು-ಕಷ್ಟ-ಅನುಭವಗಳನ್ನು ಕೇಳುವ ಗರಜು ಬೀಳಲಿಲ್ಲ.

ಹೀಗೆ ಎಲ್ಲ ಬಗೆಯ ತಾರತಮ್ಯ, ವಂಚನೆಗೆ ಒಳಗಾದ ಲೈಂಗಿಕ ಅಲ್ಪಸಂಖ್ಯಾತರ ಮಾನವಹಕ್ಕುಗಳನ್ನು ರಕ್ಷಿಸಬೇಕೆಂದು ಅಮರ್ತ್ಯಸೆನ್ ಹಾಗೂ ವಿಕ್ರಮ್ ಸೇಠ್ ಸೇರಿದಂತೆ ಹಲವರು ಪ್ರತಿಪಾದನೆ ಮಾಡುತ್ತಲೇ ಇದ್ದರು. ಸರ್ಕಾರೇತರ ಸಂಸ್ಥೆಗಳೂ ಕ್ರಿಯಾಶೀಲವಾಗಿದ್ದವು. ೧೯೯೪ರಲ್ಲಿ ಭಾರತ ಮೂರನೇ ಲಿಂಗವನ್ನು ಕಾನೂನು ಪ್ರಕಾರ ಗುರುತಿಸಿ ಅವರಿಗೆ ಎಲ್ಲ ಮೂಲಭೂತ ಹಕ್ಕುಗಳನ್ನೂ ನೀಡಿತು. ೧೯೯೮ರಲ್ಲಿ ಶೋಭಾ ನೆಹ್ರು ಎಂಬ ಹಿಜ್ರಾ ಹರಿಯಾಣದ ಹಿಸ್ಸಾರ್‌ನ ಪುರಸಭೆಗೆ ಆಯ್ಕೆಯಾದರು. ೨೦೦೬ರಲ್ಲಿ ಪಾಟ್ನಾ ನಗರಸಭೆ ತೆರಿಗೆ ಸಂಗ್ರಹಣಾಕಾರರ ಸಹಾಯಕರನ್ನಾಗಿ ಮೂರನೇ ಲಿಂಗಿಗಳನ್ನು ನೇಮಿಸಿ ೪% ಕಮಿಷನ್ ಕೊಡತೊಡಗಿತು. ಅತಿ ಹೆಚ್ಚು ಅತ್ಯಾಚಾರ, ಲೈಂಗಿಕ ಹಿಂಸೆ, ದೌರ್ಜನ್ಯಕ್ಕೊಳಗಾಗುವ ಸಲಿಂಗಿ ಸಮುದಾಯ ಅತ್ಯಾಚಾರ ಕಾನೂನು ಬದಲಿಸಲು ನೇಮಕವಾದ ವರ್ಮಾ ಸಮಿತಿ ಎದುರು ಹಲವು ಬಾರಿ ಹೋಯಿತು. ಆದರೆ ಬದಲಾದ ಕಾನೂನಿನಲ್ಲಿ ಆ ಸಮುದಾಯದ ಬೇಡಿಕೆಗಳಿಗೆ ಮನ್ನಣೆಯಿರಲಿಲ್ಲ. ಅದರ ಬೆನ್ನಲ್ಲೇ ಬಂದಿರುವ ಸರ್ವೋಚ್ಛ ನ್ಯಾಯಾಲಯದ ತೀರ್ಪು ದೇಶಾದ್ಯಂತ ಆ ಸಮುದಾಯದವರಷ್ಟೇ ಅಲ್ಲ, ಸರ್ಕಾರೇತರ ಮತ್ತು ಪ್ರಗತಿಪರ ಮನಸ್ಸಿನ ಸಂಘಟನೆಗಳೂ ತೀರ್ಪನ್ನು ಪ್ರಶ್ನಿಸುವಂತೆ ಮಾಡಿದೆ. ಆ ಸಮುದಾಯ ಸಂಘಟಿತವಾಗುತ್ತ, ತನ್ನ ಅನುಭವ ಹಂಚಿಕೊಳ್ಳುತ್ತ, ಬರೆಯುತ್ತ, ಹಕ್ಕುಗಳಿಗೆ ಹೋರಾಡತೊಡಗಿದೆ.

೨೦೦೯ರಲ್ಲಿ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿ ಸಲಿಂಗ ಕಾಮವನ್ನು ಅಪರಾಧೀಕರಣಗೊಳಿಸುವುದು ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಹೇಳಿತು. ಸಲಿಂಗಕಾಮಿಯೆಂದು ಹೇಳಿಕೊಳ್ಳುವುದು ಅಪರಾಧವಲ್ಲ ಎಂದಮೇಲೆ ಅವರ ಸಂಘಟನೆಗಳು ಬಲವಾದವು. ಆದರೆ ಹೈಕೋರ್ಟ್ ತೀರ್ಪಿನ ವಿರುದ್ಧ ಹಲವರು ಧ್ವನಿಯೆತ್ತಿದರು. ಪ್ರಕರಣ ಸುಪ್ರೀಂಕೋರ್ಟಿನ ಮೆಟ್ಟಿಲೇರಿತು. ೨೦೧೨ರ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡುತ್ತ ‘sಸಲಿಂಗಕಾಮವನ್ನು ಅಪರಾಧೀಕರಣಗೊಳಿಸುವುದನ್ನು ನಿಲಿಸಬೇಕು. ಈ ಮೊದಲು ಅನೈಸರ್ಗಿಕವೆಂದು ಅಮಾನ್ಯವಾಗಿದ್ದ ಲಿವ್‌ಇನ್ ಸಂಬಂಧ, ಸಿಂಗಲ್ ಪೇರೆಂಟ್, ಕೃತಕ ಗರ್ಭಧಾರಣೆ ಇತ್ಯಾದಿಗಳನ್ನು ನ್ಯಾಯವ್ಯವಸ್ಥೆ ಮತ್ತು ಸಮಾಜ ಹೇಗೆ ಮಾನ್ಯಮಾಡಿವೆಯೋ ಹಾಗೇ ಬದಲಾಗುತ್ತಿರುವ ಕಾಲದಲ್ಲಿ ಸಲಿಂಗಕಾಮವನ್ನು ನೈಸರ್ಗಿಕ ಎಂದೇ ಭಾವಿಸಬೇಕು’ ಎಂದು ಹೇಳಿತು. ಆದರೆ ಒಂದೇ ವಾರದಲ್ಲಿ ಕೇಂದ್ರ ಗೃಹ ಸಚಿವಾಲಯವು ಸುಪ್ರೀಂಕೋರ್ಟಿನ ತೀರ್ಪಿಗೆ ವಿರುದ್ಧವಾಗಿ ಸಲಿಂಗ ಕಾಮ ಅನೈತಿಕ ಮತ್ತು ಸಾಮಾಜಿಕ ಸಂಬಂಧಗಳನ್ನೇ ಹಾಳುಮಾಡುವ ಸಂಗತಿ ಎಂದು ಬಣ್ಣಿಸಿತು. ಆದರೆ ಹಾಗೆ ಹೇಳಿದ ಮರು ವಾರದಲ್ಲಿ ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳುವುದು ತಪ್ಪೇನಲ್ಲ ಎಂದು ತಿರುವುಮುರುವು ಹೇಳಿಕೆ ಕೊಟ್ಟಿತು. ಇದನ್ನು ಗಮನಿಸಿದ ಸುಪ್ರೀಂಕೋರ್ಟ್ ‘ಅದು ಅಲ್ಲ, ಇದು ಅಲ್ಲ ಎಂದು ಕೋರ್ಟಿನ ಸಮಯ ಹಾಳುಮಾಡಬೇಡಿ’ ಎಂದು ಪರಿಶೀಲನೆಗೆ ಸಮಯ ನೀಡಿತು. ಹಲವು ಗುಂಪುಗಳು ತಂತಮ್ಮ ಅಭಿಪ್ರಾಯ ದಾಖಲಿಸಿದವು. ಕೊನೆಗೆ ಡಿ. ೧೧ರಂದು ಕೋರ್ಟು ತೀರ್ಪು ನೀಡಿ, ‘ಒಪ್ಪಿಗೆಯಿಲ್ಲದ, ಅಪ್ರಾಪ್ತರೊಡನೆಯ ಅಯೋನಿ-ಶಿಶ್ನ ಲೈಂಗಿಕತೆಯನ್ನು ಸೆಕ್ಷನ್ ೩೭೭ ಐಪಿಸಿ ಮೊದಲಿನಂತೇ ಅಪರಾಧವೆಂದು ಪರಿಗಣಿಸುತ್ತದೆ. ಅಪ್ರಾಪ್ತನೆಂದರೆ ೧೮ ವರ್ಷಕ್ಕಿಂತ ಕಡಿಮೆ ಪ್ರಾಯದ ಒಪ್ಪಿಗೆ ನೀಡುವಷ್ಟು ಪ್ರೌಢನಲ್ಲದ ವ್ಯಕ್ತಿ. ಸಂಸತ್ತು ಕಾನೂನಿಗೆ ತಿದ್ದುಪಡಿ ತರುವವರೆಗೆ ಈ ನಿರ್ದೇಶನ ಅನ್ವಯಿಸುತ್ತದೆ’ ಎಂದು ತೀರ್ಪು ನೀಡಿತು.

ಧರ್ಮಧರ್ಮಗಳ ನಡುವೆ ಮತ್ಯಾವುದೇ ವಿಷಯಕ್ಕೆ ಭಿನ್ನಮತವಿರಲಿ, ಅಸಹನೆಯಿರಲಿ, ಈ ವಿಷಯದಲ್ಲಿ ಎಲ್ಲ ಧರ್ಮಗಳೂ ಒಂದೇ ನಿಲುವು ತಳೆದವು. ಆ ಸಮುದಾಯದವರ ದಾರುಣ ಬದುಕಿಗೆ ಬೆಂಬಲವಾಗಿ ನಿಲ್ಲದ ಧರ್ಮಗಳು ಸಲಿಂಗಿಗಳ ಲೈಂಗಿಕತೆಯನ್ನು ಅಧಾರ್ಮಿಕ ಎಂದವು! ಬಾಬಾ ರಾಂದೇವ್ ತಾನು ಯೋಗದಿಂದ ಸಲಿಂಗರತಿ ಎನ್ನುವ ಕಾಯಿಲೆಯನ್ನು ಗುಣಪಡಿಸುವುದಾಗಿ ಹೇಳಿಕೊಂಡರೆ, ವಿಎಚ್‌ಪಿ ತೀರ್ಪನ್ನು ಬೆಂಬಲಿಸಿತು. ಜೊತೆಗೆ ಹಿಂದೂ, ಇಸ್ಲಾಂ, ಕ್ರೈಸ್ತ, ಯಹೂದಿ ಧರ್ಮಗಳ ಧಾರ್ಮಿಕ ಮುಖಂಡರು ಸಲಿಂಗಕಾಮಕ್ಕೆ ಧರ್ಮಸಮ್ಮತಿಯಿಲ್ಲ, ಅದು ಅನೈಸರ್ಗಿಕ ಎಂದರು.

ಆದರೆ ನಮ್ಮೊಳಗಿನ, ಹೊರಗಿನ ನಿಸರ್ಗವನ್ನು ನೋಡಲಾರದಷ್ಟು ಧಾವಂತದ ಈ ಬದುಕಿನಲ್ಲಿ ಯಾವುದು ನೈಸರ್ಗಿಕ, ಯಾವುದು ಅನೈಸರ್ಗಿಕ ಎಂದು ವಿಂಗಡಿಸುವುದು ಸುಲಭವಲ್ಲ. ಅದರ ಅವಶ್ಯಕತೆಯೂ ಇಲ್ಲ. ಅಗತ್ಯವಾಗಿರುವ, ಅನಿವಾರ್ಯವಾಗಿರುವ ಎಲ್ಲವೂ ನೈಸರ್ಗಿಕವೇ ಎನ್ನುವುದು ಮಾನವಹಕ್ಕು ಯುಗದ ಮಾತು.

***


ವೈದ್ಯಕೀಯವಾಗಿ ಸರಳಗೊಳಿಸಿ ಹೇಳುವುದಾದರೆ ಎಕ್ಸ್ ಎಕ್ಸ್ ಲಿಂಗ ವರ್ಣತಂತು ಹೊಂದಿರುವ ಜೀವಿ ಹೆಣ್ಣಾದರೆ, ಎಕ್ಸ್ ವೈ ಲಿಂಗ ವರ್ಣತಂತು ಹೊಂದಿರುವ ಜೀವಿ ಗಂಡಾಗಿರುತ್ತದೆ. ಪ್ರಾಣಿ ಸಾಮ್ರಾಜ್ಯದಲ್ಲಿ, ಅದರಲ್ಲೂ ಬೆನ್ನುಹುರಿಯಿಲ್ಲದ ಪ್ರಾಣಿಗಳಲ್ಲಿ (ಅಕಶೇರುಕಗಳು ಮತ್ತು ಅದಕ್ಕಿಂತ ಕೆಳ ಸ್ತರದ ಬಸವನಹುಳು, ಕೆಲ ಜಾತಿಯ ಮೀನು, ಎರೆಹುಳ ಇತ್ಯಾದಿಗಳಲ್ಲಿ) ಒಂದೇ ಪ್ರಾಣಿಯು ಎರಡೂ ಲಿಂಗಗಳ ಲೈಂಗಿಕ ಅಂಗಾಂಗಗಳನ್ನು ಹೊಂದಿರುತ್ತದೆ. ಸಂಗಾತಿಯೊಂದಿಗೆ ಕೂಡುವುದು ಎಂದರೆ ಗರ್ಭ ಕಟ್ಟುವುದು, ಕಟ್ಟಿಸಿಕೊಳ್ಳುವುದು ಎರಡೂ ಆಗಿರುತ್ತದೆ. ವಿಕಾಸದ ಮೇಲಿನ ಹಂತದಲ್ಲಿರುವ ಮಾನವ ಮತ್ತಿತರ ಪ್ರಾಣಿಗಳಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಪ್ರಭೇದಗಳು ವಿಶಿಷ್ಟವಾಗಿ, ಬೇರೆಬೇರೆಯಾಗಿ ಸೃಷ್ಟಿಯಾಗಿವೆ.

ಹೀಗಿರುತ್ತ ಸೃಷ್ಟಿಕ್ರಿಯೆಯ ಆರಂಭದ ಹಂತದಲ್ಲಿ ಕೋಶಗಳ ಒಡೆಯುವಿಕೆ-ಕೂಡುವಿಕೆಯಲ್ಲಾಗುವ ಏರುಪೇರಿನಿಂದ ಕೆಲವೊಮ್ಮೆ ಎಕ್ಸ್ ಎಕ್ಸ್ ವೈ/ ಎಕ್ಸ್ ವೈವೈ/ ಎಕ್ಸ್ ಎಕ್ಸ್ ವೈವೈ ಮಿಶ್ರಣದ ಹೆಚ್ಚುವರಿ ಲಿಂಗಕ್ರೋಮೋಸೋಮುಗಳಿರುವ ಜೀವವು ಹುಟ್ಟುತ್ತದೆ. ಅಂಥ ಜನನದ  ಪ್ರಮಾಣವೆಷ್ಟು ಎಂಬ ಅಂಕಿಅಂಶ ಸ್ಪಷ್ಟವಾಗಿಲ್ಲದಿದ್ದರೂ ಪ್ರತಿಶತ ೧-೧.೭% ಶಿಶುಗಳು ಒಂದಲ್ಲ ಒಂದು ಲಿಂಗ ಸಂಬಂಧಿ ದ್ವಂದ್ವ ಅಥವಾ ಅಸ್ಪಷ್ಟತೆಯನ್ನು ಹೊಂದಿರುತ್ತವೆ ಎನ್ನುವುದು ಒಂದು ಅಂದಾಜು. ದೇಹದೊಳಗಿನ ಅಂಗಾಂಗ ಸ್ಪಷ್ಟವಾಗಿ ಒಂದು ಲಿಂಗದ್ದಾಗಿದ್ದರೆ, ಹೊರಗಿನ ಅಂಗಾಂಗ ಮತ್ತೊಂದು ಲಿಂಗದ್ದಾಗಿರುತ್ತದೆ. ಅಥವಾ ಎರಡೂ ಲಿಂಗದ ಮಿಶ್ರ ಅಂಗಾಂಗಗಳಿರುತ್ತವೆ ಅಥವಾ ಯಾವುದೆಂದು ನಿರ್ಧರಿಸಲಾಗದಂತೆ ದ್ವಂದ್ವ ಅಂಗಾಂಗಗಳಿರುತ್ತವೆ. ಅಂಥವರಲ್ಲಿ ನೋಡಲು ಗಂಡಸಿನ ತರಹ ಇದ್ದರೂ ಶಿಶ್ನ-ವೃಷಣ ಇಲ್ಲದಿರುವುದು; ಗಡ್ಡ-ಮೀಸೆ ಇದ್ದರೂ ಮೊಲೆಯಿರುವುದು; ಒಳಗೆ ಅಂಡಕೋಶ ಇದ್ದರೂ ಹೊರಗೆ ಪುಟ್ಟ ಶಿಶ್ನವು ಇರುವುದು, ಮೀಸೆ, ಗಡ್ಡ, ಮೊಲೆ ಯಾವುದೂ ಬೆಳೆಯದಿರುವುದು - ಹೀಗೆ ಭಿನ್ನ ಮಿಶ್ರಣದ ಲಿಂಗದ್ವಂದ್ವ ಕಂಡುಬರುತ್ತದೆ.

ಹೀಗೆ ಹುಟ್ಟುವ ಮಕ್ಕಳನ್ನು ಸಾಧಾರಣವಾಗಿ ತಾಯ್ತಂದೆಯರು ಮತ್ತು ಸಮಾಜ ಯಾವುದೋ ಒಂದು ಲಿಂಗವೆಂದು ಗುರುತಿಸಿ ಬೆಳೆಸುತ್ತಾರೆ. ಆದರೆ ಹೆಣ್ಣು-ಗಂಡು ಎಂಬ ಲಿಂಗಗಳು ನಿಸರ್ಗ ಸೃಷ್ಟಿಯಾದರೆ ಹೆಣ್ತನ, ಗಂಡಸ್ತನ ಎನ್ನುವ ಲೈಂಗಿಕತೆ ಸಮಾಜದ ಸೃಷ್ಟಿ. ಆದರೂ ಅವರು ದೊಡ್ಡವರಾಗುತ್ತ ಹೋದಾಗ ತಮ್ಮ ಲೈಂಗಿಕ ಅಂಗಾಂಗ ತಾನು ಬೆಳೆಸಲ್ಪಟ್ಟ ಲಿಂಗಕ್ಕೆ ಸರಿಯಾಗಿ ಕೆಲಸ ಮಾಡುವುದಿಲ್ಲ, ತಾನು ಬೆಳೆಸಲ್ಪಟ್ಟ ಲಿಂಗತ್ವವೂ, ತನ್ನ ಆಂಗಿಕ ಲಿಂಗತ್ವವೂ ಬೇರೆ ಎಂದು ತಿಳಿದಾಗ ದಿಗ್ಭ್ರಮೆಗೊಂಡು ಹತಾಶರಾಗುತ್ತಾರೆ. ಲಿಂಗದ್ವಂದ್ವವು ವ್ಯಕ್ತಿತ್ವವನ್ನು ಉದ್ದುದ್ದ, ಅಡ್ಡಡ್ಡ ಸೀಳುತ್ತದೆ. ಮೊದಲು ಕುಟುಂಬದಿಂದ ಅವಜ್ಞೆಗೆ ಒಳಗಾಗುತ್ತಾರೆ. ಅಂಥ ವ್ಯಕ್ತಿ ತಮ್ಮ ಕುಟುಂಬದಲ್ಲಿರುವುದು ಅವಮಾನ ಎಂದು ಕುಟುಂಬ ಆದಷ್ಟು ಮುಚ್ಚಿಡಲು ಯತ್ನಿಸುತ್ತದೆ. ಎಷ್ಟೋ ಕುಟುಂಬಗಳು ಬೆಳೆದ ಮೇಲೆ ಆ ವ್ಯಕ್ತಿ ತನ್ನ ಲಿಂಗ ಬೇರೆ ಎಂದು ಘೋಷಿಸಿಕೊಳ್ಳಲು ಬಿಡುವುದಿಲ್ಲ. ಆಗ ಹಠ, ಕ್ರೌರ್ಯ, ಹಿಂಸೆ, ಮನೆ ಬಿಟ್ಟೋಡುವುದು ಶುರುವಾಗುತ್ತದೆ. ಮನೆಯಿಂದ, ಸಮಾಜದಿಂದ ತಿರಸ್ಕೃತರಾದ ಹುಡುಗರು ಒಬ್ಬ ಗುರುವಿನ ಕೈಗೆ ಸಿಕ್ಕರೆ ಆತ ನಿರ್ವಾಣ ಕ್ರಿಯೆ ನಡೆಸಿ ಹಿಜ್ರಾ ಗುಂಪಿಗೆ ಸೇರಿಸಿಕೊಳ್ಳುತ್ತಾನೆ. ಅಲ್ಲಿ ಗುರು-ಗುರು ಸೋದರರಿಂದ ನಿರಂತರ ಲೈಂಗಿಕ/ಆರ್ಥಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಕೆಲವರು ಸರ್ಜರಿ ಮಾಡಿಕೊಂಡು ತನಗೊಂದು ಸ್ಪಷ್ಟ ಲಿಂಗತ್ವ ಸಿಗಬಹುದೆಂದು ಪ್ರಯತ್ನಿಸುತ್ತಾರೆ. ಆದರೆ ಲಿಂಗ ಬದಲಾವಣೆಯ ನಂತರವೂ ತನಗೊಬ್ಬ ಆಪ್ತ ಸಂಗಾತಿ ಸಿಗದೇ; ತನ್ನದೇ ವಲಯ ಕಟ್ಟಿಕೊಳ್ಳಲಾಗದೇ ಅಸಹಾಯಕತೆಯಲ್ಲಿ ಎಷ್ಟೋ ಜನ ಬಳಲುತ್ತಾರೆ. ಸಿಗರೇಟು, ಕುಡಿತ ಎಲ್ಲ ಅಂಟುತ್ತವೆ.

ಬಹುಪ್ರಚಾರದಲ್ಲಿರುವ ರೇವತಿ, ಲಿವಿಂಗ್ ಸ್ಮೈಲ್ ವಿದ್ಯಾ ಅವರ ಆತ್ಮಕಥೆಗಳೆಲ್ಲ ಗಂಡಾಗಿ, ಅರೆಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಬದಲಾದವರ ಕಡುಕಷ್ಟದ ಜೀವನ ವಿವರಗಳಾಗಿವೆ. ಆದರೆ ಅಲ್ಲಿ ವಿಭಿನ್ನ ಗುಂಪುಗಳಿವೆ: ಗಂಡಾಗಿ ಹೆಣ್ಣಾಗಿರಬಯಸುವ, ಗಂಡಾಗಿಯೂ ಗಂಡಿನೊಡನೇ ಇರಬಯಸುವ, ಹೆಣ್ಣಾಗಿ ಕಂಡರೂ ಅರೆಗಂಡಾಗಿ ಹೆಣ್ಣಿನೊಡನೆ ಇರಬಯಸುವ; ಹೆಣ್ಣಾದರೂ ಹೆಣ್ಣಿನೊಡನೆ ಇರಬಯಸುವ - ಹೀಗೇ ದ್ವಂದ್ವ ಲಿಂಗಿ, ಏಕಲಿಂಗಿ, ಉಭಯ ಲಿಂಗಿ, ಸಲಿಂಗಿ, ಮಿಶ್ರಲಿಂಗಿ ಎಂಬ ಹಲವು ಗುಂಪುಗಳಿವೆ. ಲಿಂಗಬದಲಾವಣೆಯ ಶಸ್ತ್ರಕ್ರಿಯೆಗೊಳಗಾಗಿ ಕೆಲವರು ಶಿಶ್ನ, ಬೀಜ ತೆಗೆಸಿ ಉಡುಗೆ, ತೊಡುಗೆ, ಹಾವಭಾವಗಳಲ್ಲಿ ಪೂರಾ ಹೆಣ್ಣಿನಂತೆಯೇ ವರ್ತಿಸಿ ಗಂಡಸರ ಜೊತೆ ಇರಲು ಶುರುಮಾಡಿದರೆ; ಹುಟ್ಟುವಾಗ ಹೆಣ್ಣಿನಂತಿದ್ದ ಮತ್ತೆ ಕೆಲವರು ಶಿಶ್ನದ ಆಪರೇಷನ್‌ಗೆ ಒಳಗಾಗಿ ಗಂಡಸಾಗಿ ಬದಲಾಗುತ್ತಾರೆ. ಸರಳಗೊಳಿಸಿ ಹೇಳುವಾಗ ಇವೆಲ್ಲ ತುಂಬ ಸುಲಭ ಎನಿಸಬಹುದು. ಆದರೆ ಮಾನವದೇಹವೆಂಬ ಸೂಪರ್ ಕಂಪ್ಯೂಟರ್ ಸೂಪರ್ ಸಮಸ್ಯೆಗಳ ಸರಮಾಲೆಯನ್ನೇ ತಂದೊಡ್ಡುತ್ತದೆ.

ಈ ಮಾತುಗಳು ಹೇಳಬಯಸುವುದಿಷ್ಟೆ: ಸಲಿಂಗಿಯ ಸೃಷ್ಟಿ ಸೃಷ್ಟಿಕ್ರಿಯೆಯ ಏರುಪೇರಿನಿಂದ ಆಗುವಂಥದು. ಮನೋವೈದ್ಯದ ಪ್ರಕಾರವೂ ಅದು ವಿಕೃತಿಯಲ್ಲ. ಅನೈಸರ್ಗಿಕವಲ್ಲ, ಏಕೆಂದರೆ ನಿಸರ್ಗವೇ ಅವರನ್ನು ಸೃಷ್ಟಿ ಮಾಡಿರುವುದು. ಲೈಂಗಿಕ ಅಂಗಾಂಗವೂ, ದೇಹವೂ ಉಳಿದವರಿಗಿಂತ ಭಿನ್ನವಾಗಿರುವಾಗ ಅವರ ಲೈಂಗಿಕತೆಯೂ ಭಿನ್ನವಾಗಿರಲೇಬೇಕಾಗುತ್ತದೆ. ಎಂದೇ ಪುರುಷ-ಪುರುಷ, ಸ್ತ್ರೀ-ಸ್ತ್ರೀ ಸಂಬಂಧಗಳು ಸಂತಾನೋತ್ಪತ್ತಿಯ ಉದ್ದೇಶವಿಲ್ಲದೆ ಏರ್ಪಡುತ್ತದೆ. ಮಕ್ಕಳಿರುವ ಕುಟುಂಬವನ್ನು ಹೊಂದುವ ಸಾಧ್ಯತೆ ಇಲ್ಲವೆಂದ ಮೇಲೆ ಲೈಂಗಿಕ ಕ್ರಿಯೆ ಲೈಂಗಿಕ ತೃಪ್ತಿಗಾಗಿಯೇ ನಡೆದು, ಸಲಿಂಗಿಗಳದು ಢಾಳಾದ ಅತಿ ಲೈಂಗಿಕಾಸಕ್ತಿಯೆನಿಸುವಂತೆ ಮಾಡುತ್ತದೆ. ಸಾಂಪ್ರದಾಯಿಕ ಬೈನರಿ ಲಿಂಗತ್ವದ ಸಮಾಜಕ್ಕೆ ಅದು ವಿಕೃತಿಯಂತೆ, ಅನೈಸರ್ಗಿಕವೆಂಬಂತೆ ಕಾಣುತ್ತದೆ. ಇದಾವುದನ್ನೂ ಹೇಳಿಕೊಳ್ಳಲಾಗದ ಪ್ರಪಾತದಂಚಿನಲ್ಲಿ ಸಮಾಜ ಅವರನ್ನು ಇಷ್ಟೂ ಕಾಲ ಇಟ್ಟುಕೊಂಡುಬಂದಿದೆ.

‘ಸೃಷ್ಟಿಯ ಬೆಳೆ ಬೆಳೆಯುವಾಗ ಸೈತಾನನು ಅಲ್ಲೊಂದು ಇಲ್ಲೊಂದು ಕಳೆ ಬೀಜ ನೆಟ್ಟನು. ಬೆಳೆಯ ನಡುವಿನ ಕಳೆಯೇ ನಾವು ಅಂಗವಿಕಲರು’ ಎನ್ನುತ್ತಾನೆ ಮಲೆಯಾಳಿ ಅಂಗವಿಕಲ ಕವಿ ನಾರಾಯಣ್. ಇದೇ ಮಾತನ್ನು ಹಿಜಡಾಗಳೂ ಅನ್ವಯಿಸಿಕೊಳ್ಳುತ್ತಾರೆ.

***


ಸದ್ಯದ ಸಾಮಾಜಿಕ ಪರಿಸ್ಥಿತಿಯಲ್ಲಿ ಹಿಜ್ಡಾಗಳಿಗೆ ಬದುಕಲು ವೇಶ್ಯಾವಾಟಿಕೆ ಅನಿವಾರ್ಯ ಎನ್ನುವಂತಹ ಸ್ಥಿತಿ ಇದೆ. ರೇವತಿ, ಲಿವಿಂಗ್ ಸ್ಮೈಲ್ ವಿದ್ಯಾ ಮೊದಲಾದವರ ಆತ್ಮಕತೆಗಳನ್ನು ಓದಿದರೆ ಸಮಾಜದ ನಿರಂತರ ನಿರಾಕರಣೆ, ಅದನ್ನು ಮೀರಲು ಆ ಜೀವಗಳು ಪಡುವ ಪ್ರಯತ್ನ, ಅಭದ್ರತೆ ಹಾಗೂ ಅದು ಹುಟ್ಟಿಸುವ ವಿಕ್ಷಿಪ್ತ ಮತ್ತು ಸೂಕ್ಷ್ಮ ವ್ಯಕ್ತಿತ್ವ - ಈ ಎಲ್ಲದರ ಪರಿಚಯವಾಗುತ್ತದೆ. ಆ ಸಮುದಾಯದೊಳಗಿನ ಕಷ್ಟಗಳನ್ನು ಉಳಿದ ಸಮಾಜ ಅರ್ಥಮಾಡಿಕೊಳ್ಳುವುದು ಕಷ್ಟವಾಗಿರುವಾಗ ಆ ಸಮುದಾಯವೂ ತನ್ನೊಳಗಿನ ಲೋಪಗಳ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎನಿಸುತ್ತಿದೆ:


 • ಸಲಿಂಗಿಗಳಲ್ಲಿಯೂ ಪುರುಷಪ್ರಾಧಾನ್ಯವಿದೆ, ಪುರುಷಪ್ರಧಾನ ಸಮಾಜದ ಎಲ್ಲ ತಾರತಮ್ಯ ಇದೆ. ಹೆಣ್ಣು ಧ್ವನಿ ಎತ್ತಲು ಅಲ್ಲಿಯೂ ಕಷ್ಟವಿದೆ. ಅಲ್ಲಿ ಗುರು ಇದ್ದಾನೆ. ಪರಂಪರೆಯಿದೆ. ವರ್ಷಕ್ಕೊಮ್ಮೆ ಅವನನ್ನು ಎಲ್ಲಿದ್ದರೂ ಭೇಟಿಯಾಗಬೇಕು. ತಪ್ಪಿದರೆ ನಾಣ್ಯದಿಂದ ಹಣೆ ಸುಡುತ್ತಾರೆ, ಏಳು ವರ್ಷ ಸಮುದಾಯದಿಂದ ಹೊರಹಾಕುತ್ತಾರೆ, ಸತ್ತರೆ ಹೆಣ ತೆಗೆಯುವುದಿಲ್ಲ ಎಂಬಿತ್ಯಾದಿ ಕಠೋರ ಶಿಕ್ಷೆಗಳಿವೆ. ಸಮುದಾಯದೊಳಗಿರುವ ಪುರುಷ ಪ್ರಾಧಾನ್ಯ, ಏಣಿಶ್ರೇಣಿ, ಪರಂಪರೆಯನ್ನು ಈ ಕಾಲದ ಸಲಿಂಗಿಗಳು ಪ್ರಶ್ನಿಸಿ ಅದರಿಂದ ಹೊರಬರಲು ಯತ್ನಿಸದಿದ್ದರೆ ಅವರನ್ನು ಪಾರಂಪರಿಕವಾಗಿ ನೋಡುವ ಸಮಾಜದ ಕಣ್ಣು ಬದಲಾಗುವುದು ಹೇಗೆ?
 • ತಮ್ಮನ್ನು ಲೈಂಗಿಕ ಕಾರ್ಮಿಕರೆಂದು ಕರೆದುಕೊಳುವ ಅವರು ಯೂನಿಯನ್ ಕಟ್ಟಿಕೊಂಡಿದ್ದಾರೆ. ಸಂತೆಯ ಸಾಮಾನುಗಳಂತೆ ವೇಶ್ಯಾವಾಟಿಕೆಗೆ ಅಪ್ರಾಪ್ತರು, ಅಸಹಾಯಕರು ಮಾರಾಟವಾಗುತ್ತಿರುವಾಗ, ಎಚ್‌ಐವಿ ಮತ್ತಿತರ ಸಾಂಕ್ರಾಮಿಕ ರೋಗಗಳು ಕಣ್ಣೆದುರು ಕುಣಿಯುವಾಗ ಈ ಕಾರ್ಮಿಕರ ಉದ್ಯೋಗವನ್ನು ಬೆಂಬಲಿಸುವುದು ಹೇಗೆ?
 • ಉಳಿದ ಸಮಾಜ ಲಿಂಗ, ಲೈಂಗಿಕತೆ, ಲಿಂಗತ್ವದ ಬಗೆಗೆ ಯೋಚಿಸುವಂತೆ ಮಾಡುವವರು ಸಲಿಂಗಿಗಳು. ಆದರೆ ಸಲಿಂಗಿ ಜೋಡಿಗಳು ಲಿಂಗತ್ವ ಮೀರಿ ಬದುಕುವುದಿಲ್ಲ. ಜೋಡಿಗಳಲ್ಲಿ ಒಬ್ಬರು ಪೂರಾ ಗಂಡು/ಗಂಡನಂತೆ, ಅವರ ಜೊತೆಗಾರರು ಪೂರಾ ಹೆಣ್ಣು ಅಥವಾ ಹೆಂಡತಿಯಂತೆ ಪಾತ್ರ ನಿರ್ವಹಿಸುತ್ತಾರೆ. ಲಿಂಗತ್ವ ಬಿಡಬೇಕೆನ್ನುವವರು ಮತ್ತದೇ ಪಾರಂಪರಿಕ ಕುಟುಂಬ ಚೌಕಟ್ಟಿನ ಲಿಂಗತಾರತಮ್ಯ, ದೌರ್ಜನ್ಯಕ್ಕೆ ತಮ್ಮನ್ನು ಈಡುಮಾಡಿಕೊಳ್ಳುತ್ತಾರೆ. ದೌರ್ಜನ್ಯಕ್ಕೆ ಮೂಲ ಕಾರಣವಾದ ಲಿಂಗತ್ವವನ್ನು ತಾವು ಮೀರದೇ ಸಮಾಜ ಮಾತ್ರ ಮೀರಬೇಕೆಂದು ಬಯಸುವುದು ಸರಿಯೆ?  
 • ಲೈಂಗಿಕಾಸಕ್ತಿಗೆ ವಿರುದ್ಧ ಲಿಂಗವು ಸುಲಭವಾಗಿ ಸಿಗದಿದ್ದರೆ ಸಲಿಂಗಕಾಮವನ್ನು ರೂಢಿಸಿಕೊಳ್ಳುವವರು ಮಿಶ್ರಲಿಂಗಿಗಳು. ಅವರದು ಅನುಕೂಲಸಿಂಧು ಲಿಂಗತ್ವ. ಕಡಿಮೆ ದುಡ್ಡಿಗೆ ಸುಲಭವಾಗಿ ಹುಡುಗರು ಸಿಕ್ಕರೆ ಸಲಿಂಗಿಗಳು, ಇಲ್ಲದಿದ್ದರೆ ಹೆಣ್ಣೇ ಬೇಕೆನ್ನುವವರು. ಕುಟುಂಬದಿಂದ ದೀರ್ಘಕಾಲ ದೂರವುಳಿವ, ಒಂಟಿಯಾಗಿರುವ ಗಂಡಸರು ಎಳೆಯ ಹುಡುಗರನ್ನು, ನಿರ್ಗತಿಕ, ಅಸಹಾಯಕ ಬಾಲಕರನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡು ಆ ತರುಣಬಾಲರ ವ್ಯಕ್ತಿತ್ವ, ಲೈಂಗಿಕತೆಯನ್ನೇ ನಾಶಮಾಡಿದ ಅಸಂಖ್ಯ ಉದಾಹರಣೆಗಳು ನಮ್ಮೆದುರಿಗಿವೆ. ಸಲಿಂಗಕಾಮ ಅಪರಾಧವಲ್ಲ ಎಂದಾದರೆ ಇಂಥ ಕಾಮಪಿಪಾಸು ಮಿಶ್ರಲಿಂಗಿಗಳು ಅಸಹಾಯಕ ಹುಡುಗರನ್ನು ನಾಶ ಮಾಡುತ್ತಲೇ ಹೋಗುತ್ತಾರೆ. ಅತ್ಯಾಚಾರವೆಂದ ಕೂಡಲೇ ಹೆಣ್ಣಿನ ಮೇಲೆ ಗಂಡಿನ ಆಕ್ರಮಣವೆಂದಷ್ಟೇ ಬಿಂಬಿತವಾಗುತ್ತದೆ. ಹಾಗಾದರೆ ಸಲಿಂಗಕಾಮ ಕಾನೂನುಬದ್ಧ ಎಂದಾದಾಗ ಆ ತರುಣ-ಬಾಲರ ಪರವಾಗಿ ಹೇಗೆ, ಯಾರು ಧ್ವನಿಯೆತ್ತುವುದು?
 • ಸಲಿಂಗಕಾಮ ಸಿಂಧು ಎಂದಾದರೆ ಅತ್ಯಾಚಾರ, ವ್ಯಭಿಚಾರ, ಒಪ್ಪಿಗೆ, ಮದುವೆ, ವಿಚ್ಛೇದನ, ಆಸ್ತಿಹಕ್ಕು ಇವುಗಳ ವ್ಯಾಖ್ಯೆ ಏನು? ಆಗಬೇಕಿರುವುದೇನು? 


 • ಸಮಾಜದ ದೃಷ್ಟಿಕೋನ ಬದಲಾಗಬೇಕು. ಆಗಮಾತ್ರ ಅಂಥ ವ್ಯಕ್ತಿಗಳು ಮನೆಬಿಟ್ಟು ಬೇರೆ ಸಮುದಾಯವಾಗಿ ಗುಂಪುಗಳಲ್ಲಿ ಬದುಕುವ ಅನಿವಾರ್ಯತೆ ತಪ್ಪುತ್ತದೆ. ಕೌಟುಂಬಿಕ ಸುರಕ್ಷೆ ಸಿಗುತ್ತದೆ. ಇದು ಹಲವು ಸಮಸ್ಯೆಗಳಿಗೆ ಪರಿಹಾರವಾಗಿದೆ. 
 • ಲಿಂಗಬದಲಾವಣೆಯ ಶಸ್ತ್ರಚಿಕಿತ್ಸೆ ಹಾಗೂ ನಂತರದ ಕೌನ್ಸೆಲಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. 
 • ಶಿಕ್ಷಣದ ಪ್ರಾಮುಖ್ಯತೆ ಅರಿತುಕೊಳ್ಳಬೇಕು. ಔದ್ಯೋಗಿಕ ತರಬೇತಿ, ವೃತ್ತಿ ಶಿಕ್ಷಣ, ಸ್ವಉದ್ಯೋಗದತ್ತ ಗಮನ ಹರಿಸಬೇಕು. 
 • ಸಮುದಾಯ ಸುರಕ್ಷತೆಯ ವಿಶ್ವಾಸ ಹೊಂದಲು ಸಂಘಟಿತವಾಗಬೇಕು. ತಾವೂ ಈ ಸಮಾಜದ ನಾಗರಿಕರು; ಉಳಿದ ಸಮಾಜಕ್ಕೆ ಶಿಕ್ಷಣ, ಉದ್ಯೋಗ, ರಾಜಕಾರಣ, ಅಭಿವ್ಯಕ್ತಿಗಾಗಿ ಯಾವ್ಯಾವ ಹಕ್ಕುಗಳಿವೆಯೋ ಅವೆಲ್ಲ ತಮಗೂ ಇವೆ ಎಂದು ತಿಳಿಯಬೇಕು. ತಮ್ಮ ಹಕ್ಕುಗಳ ಕುರಿತು ಸಮುದಾಯದೊಳಗೊಂದು ಪ್ರಜ್ಞೆ ಮೂಡಿಸುತ್ತಲೇ ಉಳಿದ ಸಮಾಜಕ್ಕೂ ಅದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವಾಗಬೇಕು.
 • ಸ್ಪಷ್ಟ ಲಿಂಗ ಅಸ್ಮಿತೆ ಇಲ್ಲದಿರುವುದು ವ್ಯಕ್ತಿತ್ವದ ಒಂದು ದೊಡ್ಡ ಕೊರೆ ನಿಜ. ಆದರೆ ಅದರ ಆಚೆಗೂ ತಮ್ಮ ಪ್ರತಿಭೆ, ಉದ್ಯೋಗ, ಅವಕಾಶದ ಸಲುವಾಗಿ ಸಮಾಜದಲ್ಲಿ ಗುರುತಿಸುವಂತಾಗಬೇಕು.
 • ಸಮಾಜದ ಇತರೆಲ್ಲ ಸಮಸ್ಯೆ, ಸವಾಲುಗಳಲ್ಲಿಯೂ ತಮ್ಮನ್ನು ಗುರುತಿಸಿಕೊಂಡು ಮುಖ್ಯವಾಹಿನಿಯಲ್ಲಿರಬೇಕು. ಸಲಿಂಗಿ ಎಂಬ ಅಸ್ಮಿತೆಯ ಜೊತೆಜೊತೆಗೆ ಉಳಿದ ಸಮಾಜದ ಭಾಗ ತಾವೆಂದು ತಿಳಿದು ಜವಾಬ್ದಾರಿ ನಿಭಾಯಿಸಬೇಕು. ಈ ಮಾತು ಕೇವಲ ಸಲಿಂಗಿಗಳಿಗಷ್ಟೇ ಅಲ್ಲ, ಎಲ್ಲ ಶೋಷಿತರಿಗೂ ಅನ್ವಯಿಸುತ್ತದೆ.


ಘೋರ ಅತ್ಯಾಚಾರಕ್ಕೊಳಗಾಗುವ, ಸಂಗಾತಿ-ತಲೆಹಿಡುಕ-ಗಿರಾಕಿ-ಪೊಲೀಸರು ಹೀಗೆ ಎಲ್ಲ ದಿಕ್ಕಿನಿಂದಲೂ ಕೇವಲ ನಿಂದನೆ, ಬೈಗುಳ, ಅವಮಾನ, ಹಿಂಸೆಯನ್ನೇ ಎದುರಿಸುವ ಸಮುದಾಯವನ್ನು ಸಮಾಜ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು. ಹೆಚ್ಚೇನೂ ಬೇಡ, ಕನಿಷ್ಠ ಮನುಷ್ಯರಂತೆ ನಡೆಸಿಕೊಳ್ಳುವುದನ್ನು ಕಲಿಯಬೇಕು. ಲೈಂಗಿಕ ವಸ್ತುಗಳಾಗಿಸಿ ನೋಡುವ ಪರಿಪಾಠ ನಿಲ್ಲಿಸಬೇಕು. ಈ ದೇಶದಲ್ಲಿ ಯಾವುದೇ ವ್ಯಕ್ತಿಗಾದರೂ ಒಂದು ಅಯಾಚಿತ ಬೆಂಬಲ ಸಿಕ್ಕೇ ಸಿಗುತ್ತದೆ. ಅದು ಜಾತಿ ಬೆಂಬಲ. ಆದರೆ ಹಿಜಡಾಗಳಿಗೆ, ದ್ವಂದ್ವ ಲಿಂಗಿಗಳಿಗೆ ಆ ಬೆಂಬಲವೂ ಇಲ್ಲ. ಪ್ರಕೃತಿಯೇ ತೋರಿದ ತಾರತಮ್ಯಕ್ಕೆ ಇತ್ತ ಹೆಣ್ಣೂ ಅಲ್ಲದೆ, ಅತ್ತ ಗಂಡೂ ಅಲ್ಲದೆ, ನಡುವೆ ಸುಳಿವ ಆತ್ಮಗಳಾದ ಅವರು ತನ್ನ ಬಂಧುವೆಂದು ಹೇಳಿಕೊಳ್ಳಲು ಎಲ್ಲರಿಗೂ ಹಿಂಜರಿಕೆ.

ಲಿಂಗ ಕಾಲಂ ತುಂಬಲಾಗದ ಕಾರಣಕ್ಕೆ ಪ್ರಮಾಣಪತ್ರ ಸಿಗುವುದೂ ಕಷ್ಟವಾದ ಅವರ ಬದುಕು ಎಷ್ಟು ದುರ್ಭರ! ಎರಡೇ ಲಿಂಗಗಳಿರುವ ಸಮಾಜದ ಬೈನರಿ ಮಾಡೆಲ್ ಅವರನ್ನು ಇದುವರೆಗೆ ಘಾಸಿಗೊಳಿಸಿದ್ದು ಸಾಕು. ಕೋರ್ಟಿನ ತೀರ್ಮಾನ ಏನೇ ಇದ್ದರೂ ಅವರು ಮಾನವರಂತೆ ಬದುಕಲು ಅನುವು ಮಾಡಿಕೊಡುವುದೊಂದೇ ಆ ಸಮುದಾಯಗಳ ಬಿಡುಗಡೆ, ಸಬಲೀಕರಣಕ್ಕೆ ಹಲವು ದಾರಿಗಳನ್ನು ತೆರೆಯಬಹುದು..

No comments:

Post a Comment