‘ಒಂದಲ್ಲ, ಒಂದಾದ ಎರಡೆರಡು ಜೀವಗಳ ಹೊತ್ತ ತಾಯೇ
ಹೇಳು, ದೇಹಕೂ ಮನಸಿಗೂ ಯಾವ ಸಂಬಂಧ?’
ಮಿಲನದ ಹಾಸಿಗೆಯ ಕೇಳಿದೆ.
ಮೈಮೇಲಿನ ಸುಕ್ಕುಗಳ ತೋರಿಸಿ
ಸುಮ್ಮನೆ ಮುಗುಳು ನಕ್ಕಿತು..
‘ನಿಷ್ಠೆ ಎಂದರೇನು?’ ಎಂದೆ.
‘ನಿಷ್ಠೆ ಕೊಳದ ಮೇಲೆ ಹಾರುವ ಹಕ್ಕಿ.
ಕೊಳ ಒಣಗಿತೆಂದು ತಾಳಲಾದೀತೇ ಹಸಿವೆ?’
ನನ್ನೆಡೆ ಕಣ್ಣು ಮಿಟುಕಿಸಿತು.
‘ಹಾಗಾದರೆ ಸಂಬಂಧ?’
‘ಅದು ಕೊಳದೊಳಗಣ ಪದುಮ.
ಜಲಬಿಂದುವಿಗೆ ಪದುಮಪತ್ರದ ಹಂಗಿಲ್ಲದಿರಬಹುದು
ನೂರು ದಳದ ಪದುಮವೋ
ಕೊನೆತನಕ ನಂಬುವುದು
ಕೆರೆಯಂಗಳದ ತೇವ.
ಜಲ ಒಣಗಿ ನೆಲ ಬಿರಿದರೆ
ಮೌನ ಗಡ್ಡೆಯಾಗಿಳಿದು
ಕಾಯುವುದು ಮತ್ತೆಂದೋ ಇಳಿಯಲಿರುವ
ವಸಂತ ಹನಿಗೆ..’
‘ಒಂದೆಂಬ ಗಳಿಗೆ ಇಷ್ಟು ಕ್ಷಣಿಕವೆ ತಾಯೇ?’
‘ಕಲ್ಲು ಕರಗಿ ನೀರಾಗುವ ಹೊತ್ತು
ಕ್ಷಣಿಕ ಶಾಶ್ವತಗಳ ಮಾತು ಬಿಡು ಮಗಳೇ.
ಒಂದುತನವೊಂದು ಅತೀತ
ಗಡಿಯಾರದ ಮುಳ್ಳುಗಳೆರಡು
ಒಂದೇ ಆಗುಳಿವ ಗಳಿಗೆಯೆಷ್ಟು?
ಕಣ್ಣುಗಳೆರಡು ಒಂದೇ ಆಗಿ ನೋಡುವ ಕಾಲ ಎಷ್ಟು?
ಹಾರು ಹಕ್ಕಿಯ ರೆಕ್ಕೆಗಳು
ಜೋಡಿ ತೇಲುವುದೆಷ್ಟು ಹೊತ್ತು?
ನನ್ನ ಮೈಮೇಲಿರುವ ಮಿಲನದ ಸುಕ್ಕುಗಳ ಆಯಸ್ಸೆಷ್ಟು?
ಇವೆಲ್ಲದರ ಲೆಕ್ಕಸಿಕ್ಕ ದಿನ,
ಒಂಟಿದೇಹ ಹೊರುವ ಹಾಸಿಗೆಗಳನೂ
ಮೈದಡವಿ ನೀ ಮಾತನಾಡಿಸಿದ ದಿನ,
ನುಡಿವ ಸತ್ಯದ ಬೆರಗಿಗೆ
ತಲೆ ಸಾವಿರ ಚೂರಾದರೂ ಚಿಂತೆಯಿಲ್ಲ
ಹೇಳುತ್ತೇನೆ ನಾನೂ
ಒಂದುತನವೆಂಬ ಒಂದಾದ ಚಣ
ಕ್ಷಣಿಕವೋ ಅನಂತವೋ ಎಂದು..’
ಹೇಳಹೇಳುತ್ತ ಹಾಸಿಗೆ
ಆಕಳಿಸುತ್ತ ಮೈಮುರಿಯುತ್ತ
ನನ್ನ ಕಣ್ಣೊಳಗಿನ ತನ್ನ ಬಿಂಬ ನೋಡುತ
ನಿದಿರೆ ಮಾಯಾವಿಯ ತೆಕ್ಕೆಯೊಳಗೆ ಲೀನವಾಯಿತು..
No comments:
Post a Comment